23.5 C
Karnataka
Monday, May 20, 2024

    ಕೊರೋನ ಕಾಲದಲ್ಲಿ ಕನ್ನಡ ಸಾಹಿತ್ಯ ತೆಗೆದುಕೊಂಡ ತಿರುವು

    Must read

    ಕಾಲ ಅಥವಾ ಸಮಯದ ಬಗ್ಗೆ ಜನರಲ್ಲಿ ಇರುವ ಹಲವು ಅಭಿಪ್ರಾಯಗಳನ್ನು 2020 ಬದಲಿಸಿದೆ.
    ಕರೋನ ಕಾಟದಿಂದ ಜನರ ಓಡಾಟ ನಿಂತಿತೇನೋ ನಿಜ. ಆದರೆ ಅವರ ಆಲೋಚನೆಗಳ, ಕಲ್ಪನೆಗಳ, ಚಿಂತನೆಗಳ ಓಘವನ್ನು ನಿಲ್ಲಿಸಲು ಸಾಧ್ಯವೇ?

    ಈ ಸಮಯದಲ್ಲಿ ಬ್ರೇಕಿಂಗ್ ನ್ಯೂಸ್ ಗಳು, ವಾಣಿಜ್ಯ, ಕೃಷಿ, ಸಿನಿಮಾ, ಶಿಕ್ಷಣ, ಟೆಕ್ನಾಲಜಿ, ಆರೋಗ್ಯದ ಕುರಿತಾದ ಎಲ್ಲ ವರ್ತಮಾನಗಳೂ ಕರೋನ ವಿಚಾರದ ಸುತ್ತಲೇ ತಿರುಗುತ್ತಿರುವುದು ನಿಜ. ಹಾಗಾದರೆ ಸೃಜನಶೀಲ ಸಾಹಿತ್ಯ?

    ಸಾಹಿತ್ಯಕ್ಕೆ ಪ್ರೇರೇಪಣೆ ಬೇಕು. ಅದು ಸುತ್ತ ಮುತ್ತಲಿನ ಆಗು-ಹೋಗುಗಳಿಂದ, ಮಾನಸಿಕ ಪ್ರಪಂಚದ ಕಲ್ಪನೆಗಳಿಂದ ಅಥವಾ ವೈಯಕ್ತಿಕ ಚಿಂತನೆಯ ಗರಡಿಯ ಪಟ್ಟುಗಳಿಂದ ಹುಟ್ಟುವಂತದ್ದು. ಆಂತರ್ಯಕ್ಕೂ ಬಾಹ್ಯಕ್ಕೂ ಮುರಿಯಲಾರದ ಸಂಬಂಧವಿದೆ. ಅಂತಹ ಸಾಹಿತ್ಯಕ್ಕೆ ಏನಾಯಿತು?

    ಸಾಹಿತ್ಯ ಮತ್ತು ಕಲೆಗಳಿಗೆ ಬೇಡಿಕೆಯಿರುವುದು, ಹೊಟ್ಟೆ-ಬಟ್ಟೆಗಳ ಚಿಂತೆ ಮುಗಿದ ನಂತರ. ಕೋವಿಡ್ ನ ಕಾರಣ ಪ್ರಪಂಚವೇ ನಲುಗುತ್ತಿದೆ ಎಂದಾದಾಗ ಈ ಎರಡೂ ವಿಚಾರಗಳು ಮೂಲೆಗೆ ಸೇರಿದ್ದುಸಹಜ.ಆದರೆ, ಮನೆಯಿಂದ ಹೊರಬರಲಾಗದ ಜನರಿಗೆ ಚೆನ್ನಾದ ಮನರಂಜನೆ ನೀಡಿ ಅವರ ಮಾನಸಿಕ ಆರೋಗ್ಯವನ್ನು ಕಾಪಾಡಿದ್ದು ಕೂಡ ಇವೇ ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು!

    ಎಲ್ಲ ರಂಗಗಳಂತೆ ಸಾಹಿತ್ಯವೂ ಒಂದು ದೊಡ್ಡ ಉದ್ಯಮ. ಪುಸ್ತಕ ಮಳಿಗೆಗಳು, ಪ್ರಿಂಟಿಂಗ್ ಪ್ರೆಸ್
    ಗಳು,ಸಾಹಿತ್ಯಕ ಸಂಘಟನೆಗಳು, ಪ್ರಕಾಶಕರ ಚಟುವಟಿಕೆಗಳು ಮತ್ತು ಸಾಹಿತ್ಯಮಂದಿರಗಳನ್ನೇ
    ನೆಚ್ಚಿಕೊಂಡು ಜೀವನ ಸಾಗಿಸುವ ಸಾವಿರಾರು ಜನರಿದ್ದಾರೆ. ಅವರಿಗೆ ವಸ್ತುಗಳನ್ನು, ಒದಗಿಸುವ,
    ಮಾರಾಟ ಮಾಡುವ ಸರಪಳಿಯನ್ನು ನಂಬಿ ಬದುಕುವ ದೊಡ್ಡ ಸಮುದಾಯವೇ ಇದೆ.ಕೊರೊನಾ ಕಾಲದಲ್ಲಿ ಇವರೆಲ್ಲರ ದುಡಿತ ಮತ್ತು ಹೊಟ್ಟೆಪಾಡಿಗೆ ಹೊಡೆತ ಬಿದ್ದದ್ದೂ ನಿಜ. ಆದರೆ ಮೂಲ ಸಾಹಿತ್ಯ ಮತ್ತು ಕಲೆಗಳ ಒರತೆಗಳು ಬತ್ತಲಿಲ್ಲ. ಬದಲಿಗೆ ಅವು ಬೇರೊಂದು ಮಾರ್ಗವನ್ನು ಹುಡುಕಿಕೊಂಡಿವೆ.

    ಲಾಕ್ ಡೌನಿನ ಈ ಸಮಯದಲ್ಲಿ ಸಾಹಿತ್ಯ ಮತ್ತು ಕಲೆಯ ವಿಚಾರವಾಗಿ ಅಂತರ್ಜಾಲ ಮತ್ತು
    ಸಾಮಾಜಿಕ ಜಾಲತಾಣಗಳು ಇದೀಗ ಮುಂಚೂಣಿಗೆ ಬಂದು ಹಿಂದೆಂದಿಗಿಂತಲೂ ಹೆಚ್ಚು
    ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿವೆ.
    ಲಾಕ್ ಡೌನ್ ಸಾಹಿತ್ಯ ಲಾಕ್ ಡೌನಿನಲ್ಲಿ ಮುದ್ರಿತ ಪುಸ್ತಕ ಸಾಹಿತ್ಯ ಕ್ವಾರಂಟೈನಿನಲ್ಲಿ ವಿರಮಿಸಿದ್ದು ನಿಜ.ಉದಾಹರಣೆಗೆ ತರಂಗದಂತಹ ವಾರಪತ್ರಿಕೆ ಮೂರುವಾರಗಳ ಕಾಲ ನಿಂತೇ ಹೋಗಿತ್ತು.ಕೋವಿಡ್ ನ ಕಾರಣ ಹಲವು
    ಹಬ್ಬಗಳ ಸಾಮೂಹಿಕ ಆಚರಣೆ ರದ್ದಾದವು. ಅಂಗಡಿಗಳು ಬಾಗಿಲು ಮುಚ್ಚಿದವು. ದಿನಪತ್ರಿಕೆ,
    ವಾರಪತ್ರಿಕೆಗಳಂತ ನಿಯತಕಾಲಿಕಗಳಿಗೆ ಬರುವ ಜಾಹೀರಾತಿನ ಹಣ ಬಹುತೇಕ
    ಇಲ್ಲವಾಯಿತು.ಪತ್ರಿಕೆಗಳು ತೆಳ್ಳಗಾದವು. ಪತ್ರಿಕೆಗಳಲ್ಲಿ ಕೆಲಸಮಾಡುತ್ತಿದ್ದ ಹಲವರ ಕೆಲಸಗಳು ಇಲ್ಲವಾದವು. ಕೆಲಸವನ್ನು ಉಳಿಸಿಕೊಂಡ ಇತರರ ಮೇಲೆ ಒತ್ತಡ ಇನ್ನೂ ಹೆಚ್ಚಾಯಿತು. ಅವುಗಳ ಮುದ್ರಣ, ಸಾಗಾಣಿಕೆ ಮತ್ತು ವಿತರಣೆಗಳು ದುಸ್ತರವಾದವು. ಪುಸ್ತಕ ಮುದ್ರಣ,ಸಾಹಿತ್ಯ ಸಮ್ಮೇಳನಗಳು,ಪುಸ್ತಕ ಬಿಡುಗಡೆಯ ಸಮಾರಂಭ, ಮಾರಾಟ ವ್ಯವಸ್ಥೆ ಮತ್ತು ಮಳಿಗೆಗಳು, ಸಾಹಿತ್ಯ ಸ್ಪರ್ಧೆಗಳು, ಕವಿ
    ಸಮ್ಮೇಳನಗಳು, ಅಭಿನಂದನಾ ಸಮಾರಂಭಗಳು, ವಿಚಾರ ಸಂಕಿರಣಗಳು ಎಲ್ಲವೂ ಈ ವರ್ಷ ಹಿನ್ನಡೆ ಪಡೆದವು.

    ಹಲವು ಆಯೋಜನೆಗಳು, ಹೊಸ ಯೋಜನೆಗಳು ಬಹುತೇಕ ನೆಲಕಚ್ಚಿದವು. ಮುದ್ರಣದ ಬಹುತೇಕ
    ಕೆಲಸಗಳು ನಿಂತವು. ಈ -ಪುಸ್ತಕಗಳ ಹೊರತಾಗಿ ಇತರೆ ಪುಸ್ತಕಗಳನ್ನು ಹೊರತರುವ ಹಲವು
    ಆಲೋಚನೆಗಳು ಇವತ್ತಿಗೂ ಅರ್ಧದಲ್ಲಿಯೇ ನಿಂತಿವೆ. ಬಹುತೇಕ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ನಿಲ್ಲದೆ ಬರುತ್ತಿವೆಯಾದರೂ ಅವುಗಳ ತಳಹದಿಯೂ ಒಮ್ಮೆ ಕಂಪಿಸಿದ್ದು ಸುಳ್ಳಲ್ಲ.ಶಾಸ್ತ್ರೀಯವಾದ ದಾರಿಯಲ್ಲಿ ಸಾಗುತ್ತಿದ್ದ ಮುದ್ರಿತ ಸಾಹಿತ್ಯದ ಹಾದಿಯಲ್ಲಿ ದೊಡ್ಡದೊಂದು ಕಲ್ಲುಬಂಡೆ ಬಿದ್ದಂತಾಗಿ ಮುಂದಿನ ದಾರಿಗಳು ಹಲವು ರೀತಿಯಲ್ಲಿ ಮುಚ್ಚಿಹೋಗಿವೆ. ಆದರೆ ಸಾಹಿತ್ಯ ರಂಗಕ್ಕೆ ಎಲ್ಲವೂ ನಿರಾಸೆ ತರುವ ವಿಚಾರಗಳಾಗಲಿಲ್ಲ.ಬದಲಿಗೆ ಕನ್ನಡ ಸಾಹಿತ್ಯ ರಂಗ ಈಗಾಗಲೇ ಕ್ರಮಿಸಬೇಕೆಂದಿದ್ದ ಆದರೆ ಮೀನ -ಮೇಷ ಎಣಿಸುತ್ತಿದ್ದ ದಾರಿಗಳು ಹಠಾತ್ತನೆ
    ತೆರೆದುಕೊಂಡಿವೆ.

    ಸಾಹಿತ್ಯಕ್ಕೆ ಕೋವಿಡ್ ಪ್ರೇರಣೆ

    ವಿರಾಮವೇ ಇಲ್ಲ, ರಾಮ ರಾಮ
    ಎಂದವರಿಗೆಲ್ಲ ಆರಾಮ
    ಏನೆಂದು ತೋರಿದ ಲಾಕ್ ಡೌನ್
    ಹದುಳಗೊಳಿಸಿದೆ ಕಾಲವನ್ನ

    ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ಗಿಂಡಿ ತೆರೆದುಕೊಳ್ಳುತ್ತದಂತೆ. ಕರೋನದ ಕಾಲದಲ್ಲಿಯೂ ಇದೇ ನಡೆದಿದೆ.ಸಾಹಿತ್ಯವನ್ನು ಓದಲು ಸಮಯವೇ ಇಲ್ಲ ಎನ್ನುತ್ತಿದ್ದವರಿಗೂ ಸಮಯ ದೊರೆತು ಸಾಹಿತ್ಯಕ್ಕೆ ಹೊಸ ಜಿಗಿತವನ್ನು ನೀಡಿದೆಯೆಂದರೆ ತಪ್ಪಾಗಲಾರದು.ಅಂತೆಯೇ ಸಾಹಿತ್ಯ ಸೆಲೆಯ ಹರಿವು ತನ್ನ ಎಂದಿನ ಮಾರ್ಗದಿಂದ ತಿರುವನ್ನು ತೆಗೆದುಕೊಂಡು
    ಬೇರೊಂದು ಮಾರ್ಗದಲ್ಲಿ ಸಾಹಿತ್ಯ ಪ್ರಿಯರ ಕಣ್ಣಿಗೆ ಬೆಳಕನ್ನು ತರಲು ತವಕಿಸುತ್ತಿರುವುದನ್ನು
    ಕಾಣಬಹುದು. ವ್ಯಕ್ತಿತಃ ಭೇಟಿಯಾಗಿ ಆಗಬೇಕಿದ್ದ ಸಮಾರಂಭಗಳೆಲ್ಲ ಇದೀಗ ವರ್ಚುಯಲ್ ಮೀಟ್
    ಗಳಾಗಿ ಬದಲಾಗಿವೆ.ಎಲ್ಲ ಭೇಟಿಗಳು ಅಂತರ್ಜಾಲದ ಮೂಲಕವೇ ನಡೆದಿವೆಯೇ ಹೊರತುನಿಂತುಹೋಗಲಿಲ್ಲ. ಬದಲಾಗಿ ಇ- ಪುಸ್ತಕಗಳು, ವರ್ಚುಯಲ್ ಬಿಡುಗಡೆಗಳು ಹೆಚ್ಚಾಗಿವೆ. ಹಿಂದೆಲ್ಲಇಂತಹ ಪ್ರಯತ್ನಗಳ ಬಗ್ಗೆ ಮೂಗು ಮುರಿಯುತ್ತಿದ್ದ ಜನ ಇದೀಗ ಅವುಗಳ ನಾನಾ ಉಪಯೋಗಗಳನ್ನು ಮನಗಾಣಲು ಶುರುಮಾಡಿದ್ದಾರೆ. ಅದಕ್ಕೆ ಸಹಾಯ ಮಾಡಲು ಈ ರಂಗದಲ್ಲಿ ಆಸಕ್ತಿಯಿರುವ ಎಲ್ಲ ಓದುಗರು, ಪ್ರಕಾಶಕರು, ಆಯೋಜಕರು, ಸಂಘ ಸಂಸ್ಥೆಗಳು ಶ್ರಮಿಸಿದ್ದಾರೆ. ಬರಹಗಾರರು ವಾಟ್ಸಾಪ್ಪಿನಲ್ಲಿಯೇ ಹಲವು ಕವಿತೆ, ಕಥೆ, ಜೋಕ್ ಗಳನ್ನು ಬರೆದು ಹರಿಬಿಟ್ಟರು.ಫೇಸ್ಬುಕ್ ಬರಹಗಳು, ಆಡಿಯೋ ಮತ್ತು ವೀಡಿಯೋ ಓದುಗಳು ಹೆಚ್ಚಾದವು.ಇನ್ನು ಆನ್ಲೈನ್ ಮೀಟ್ ಗಳಂತೂಅತ್ಯಧಿಕ ಸಂಖ್ಯೆಯಲ್ಲಿ ನಡೆದವು. ಆಗೆಲ್ಲ ಕರೋನ ತಂದ ಬದಲಾವಣೆಗಳ ವಿಚಾರವೇ ಅವರಿಗೆ
    ವಸ್ತುವಾಯಿತು. ಲಾಕ್ ಡೌನ್ ಸಮಯ ವೇದಿಕೆಯನ್ನೊದಗಿಸಿತು. ಮನೆಯಲ್ಲಿ ಕುಳಿತು ತಮ್ಮಮಿದುಳಿಗೆ ವ್ಯಾಯಾಮ ನೀಡಬಯಸಿದ ಜನರು ಪ್ರೇಕ್ಷಕರಾದರು.

    ಕೋವಿಡ್ 19 ತಂದ ಸಾವು, ನೋವು, ಆರ್ಥಿಕ ನಷ್ಟ, ಕಷ್ಟಗಳು, ಹಣದಿಂದಲೇ ನಿರ್ಧಾರವಾದ ಶ್ರಮಿಕ ವಲಸೆ ಕೆಲಸಗಾರರ ಜೀವದ ಬೆಲೆಗಳು, ರೈತಾಪಿ ಜನರ ಆಕ್ರಂದನಗಳು ಬಹಳಷ್ಟು ಕವಿಗಳನ್ನು,ಅಂಕಣಗಾರರ ಬರಹಗಳನ್ನು ಪ್ರಭಾವಿಸಿದವು.

    ಬೆಳಗಾದರೆ ಮುಗೀತು ರಾತ್ರಿ ಬರುತ್ತೆ ಎಂದವರು ಮತ್ತೊಂದು ಬೆಳಗಾಯಿತೆ?
    ನಾಳೆನ ಭವಿಷ್ಯ ಉಳಿದೀತೆ ?
    ಎಂದು ಚಿಂತಿಸಿದ್ದಾರೆ ನಿದ್ರೆ ಬರದೆ…..

    ಲಾಕ್ ಡೌನಿನ ಸಮಯದಲ್ಲಿ ಚಿಂತನೆಕಾರರು ಸಮಯದ ಮೌಲ್ಯದ ಮರುಪರೀಶೀಲನೆಗೆ ಸಾಹಿತ್ಯ ಮುಖೇನ ಕರೆನೀಡಿದರು. ಮೊದಲೆಲ್ಲ ಸಂಸಾರದ ಜಂಜಾಟದಲ್ಲಿ ಸಮಯವಿಲ್ಲದೆ ಕೈಬಿಟ್ಟಿದ್ದ ಹವ್ಯಾಸಗಳನ್ನು ಜನರು ಮತ್ತೆ ಮೈ ಗೂಡಿಸಿಕೊಂಡರು. ಇಂತಹ ಸಮಯದಲ್ಲಿ ತಮ್ಮ ಬದುಕಿನ ಹಲವು ಹಳೆಯ ನೆನಪುಗಳಿಗೆ ಮತ್ತೆ ಭೇಟಿ ನೀಡಿದರು.ಮಕ್ಕಳ ಜೊತೆ ಒಂದಷ್ಟು ಹೆಚ್ಚಿನ ಸಮಯವನ್ನುಕಳೆದರು. ಜೊತೆಗೆ ಒಳಗೊಳಗೇ ಹುಟ್ಟಿದ ಆತಂಕಗಳಿಗೂ ಸಾಹಿತ್ಯ ರೂಪ ಕೊಟ್ಟು, ಅಬ್ಬಾ. ಕಾಲ ಏನೇನನ್ನೆಲ್ಲ ಬದಲಿಸಬಲ್ಲದು ಎಂದು ಉದ್ಗರಿಸಿದರು.

    ಏರುತ್ತದೆ ಬಿಸಿ ಕಡಿಮೆಯಾದರೆ ಕಾಲ
    ತುಸು ಹೆಚ್ಚೇ ಆದರೆ ಪಾದಕ್ಕೆ ಚಳಿ
    ತಟಸ್ಥವಾದರೆ ಉಡುಗಿ ಬಿಡುತ್ತದೆ ಬಲ
    ಎಲ್ಲವೂ ಕರೋನ ಕಾಲದ ಮಹಿಮೆ…

    ದೊರಕಿರುವ ಸಮಯವನ್ನು ತಮ್ಮ ವಯಕ್ತಿಕ ಆಸಕ್ತಿಗಳಲ್ಲಿ ತೊಡಗಿಸಿಕೊಂಡು ಹೊಸ
    ಭರವಸೆಗಳೊಂದಿಗೆ ಹೊರಬರಲು ಕರೆನೀಡಿದರು. ಪರಿಣಾಮವಾಗಿ ಅದೆಷ್ಟು ಸಾಹಿತ್ಯ ಚಟುವಟಿಕೆಗಳು ನಡೆದವೆಂದರೆ, ಸಮಾಜ ಸಹಜವಾಗಿದ್ದ ಸಮಯದಲ್ಲೇ ಹೆಚ್ಚು ಬಿಡುವು ಸಿಗುತ್ತಿತ್ತು ಎನ್ನುವ ಲೆಕ್ಕಕ್ಕೆ ಇಂದು ಬರಹಗಾರರು ಮತ್ತು ಓದುಗರು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಪುರುಸೊತ್ತೇ ಇಲ್ಲ ಸ್ವಂತ ಕೆಲಸಕ್ಕೆ
    ಎಂದು ಮರುಗಿದ್ದ ಜನರು
    ಕೆಲಸದಲ್ಲಾದರು ಸಿಗುತ್ತಿತ್ತು ಸ್ವಲ್ಪ ಬಿಡುವು
    ಎನ್ನುತ್ತಿದ್ದಾರೆ ಬೇಸತ್ತು ದಾರಿ ತೋರದಲ್ಲ?

    ಸತ್ಯನಾರಾಯಣ ಎನ್ನುವವರು ’ ಕರೋನ ಕಥೆಗಳು ’ ಎನ್ನವ ಪುಸ್ತಕವನ್ನೇ ಹೊರತಂದರು.
    ಡುಂಡಿರಾಜ್ ರವರು “ ಕೊರೊನಾರೀ..ಸಹೋದರ. “ ಎನ್ನುವ ಹನಿಗವನಗಳ ಹೊಸದೊಂದು
    ಪುಸ್ತಕವನ್ನು ಹೊರತಂದರು. ಇನ್ನು ಅಮೆರಿಕದಲ್ಲಿ ವೈದ್ಯ ಬರಹಗಾರರಾಗಿರುವ ಗುರುರಾಜ ಕಾಗಿನೆಲೆಯವರು ವೈದ್ಯಕೀಯ ಕರೋನಾ ಸ್ಟೋರೀಸ್ ಗೆ ತಯಾರಾಗುತ್ತಿದ್ದಾರೆ. ಬಿಡಿ ಕಥೆ ಮತ್ತುಕವನಗಳಂತೂ ಯಥೇಚ್ಛವಾಗಿ ಪ್ರಕಟಗೊಂಡಿವೆ. ಬರಹಗಾರರು ಕರೋನದ ಸುತ್ತ ನಡೆದಘಟನೆಗಳು,ಬದಲಾದ ಪರಿಸ್ಥಿತಿಗಳು,ಸಾವು-ನೋವು, ಆರ್ಥಿಕ ನಷ್ಟಗಳು, ಅನುಭವಗಳು ಮತ್ತು ತಮ್ಮಕಲ್ಪನೆಗಳನ್ನು ಬೆರೆಸಿ ತಮ್ಮ ಸೃಜನಶೀಲತೆಯನ್ನು ಮೆರೆದರು. ಕೊರೊನಾ ಡೈರಿ ಎನ್ನುವ ಹೆಸರಿನಲ್ಲಿಈ ಒಂದು ಅಂಕಣ ಬರುತ್ತಿರುವುದು ಕೂಡ ಮತ್ತೊಂದು ಉದಾಹರಣೆ. ಕೆಲವರು ಪುಸ್ತಕ ಬಿಡುಗಡೆಯನ್ನು
    ತಮ್ಮ ಸಂಸಾರದವರ ಜೊತೆ ದೇವರ ಎದುರಿನಲ್ಲಿ ಮುಗಿಸಿ ಮುನ್ನೆಡೆದರು.ಪುಸ್ತಕ ಮಳಿಗೆಗಳು
    ವರ್ಚುಯಲ್ ವೇದಿಕೆಗಳ ಮೂಲಕ ಮಾರಾಟಕ್ಕೆ ಒತ್ತುಕೊಟ್ಟರು. ಒಟ್ಟಿನಲ್ಲಿ ಕೊರೊನಾದ ಪ್ರಸ್ತುತಿ
    ಇಲ್ಲದೆ ದೈನಂದಿನ ಆಗು-ಹೋಗುಗಳನ್ನು ಅವಲೋಕಿಸಬಹುದಾದ ವಿಚಾರಗಳು ಅತ್ಯಂತ ವಿರಳ

    ಎನ್ನಬಹುದಾದ ಕಾಲವಿದು.ಭವಿಷ್ಯದಲ್ಲಿ ಇನ್ನೂ ಬಹುಕಾಲ ಕರೋನ ವಿಷಯವಿರುವ ಸಾಹಿತ್ಯವನ್ನು,ಕಲಾ ವಿಚಾರಗಳನ್ನು ನಾವು ನೋಡತ್ತೇವೆ ಎನ್ನುವುದರಲ್ಲಿ ಅನುಮಾನವಿಲ್ಲ.
    ಕರೋನ ಪೀಡಿತ ಕಾಲದಲ್ಲಿ ದೊರೆತ ಬಿಡುವಿನ ಸಮಯವೂ ಇದಕ್ಕೆ ಇಂಬಾಗಿ ನಿಂತದ್ದು ದೊಡ್ಡ
    ಕೊಡುಗೆಯಾಯಿತು.

    ಇದೇ ಸಮಯದಲ್ಲಿ ಕನ್ನಡಪ್ರೆಸ್.ಕಾಂ ಜಾಲತಾಣ ಅಸ್ತಿತ್ವಕ್ಕೆ ಬಂದಿತು.ಅಲ್ಪಕಾಲದಲ್ಲಿಯೇ ಅತ್ಯುದ್ಭತವಾಗಿ ಜನಪ್ರಿಯವಾಗಿದ್ದನ್ನು ನಾವಿಲ್ಲಿ
    ನೆನೆಯಬಹುದು.

    ಬೆಂಗಳೂರು ರಾಮನಗರ ಗ್ರಾಮಾಂತರ ಶಾಖೆಯ ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ವಿಭಾಗದ
    ಪದಾಧಿಕಾರಗಳು ಹೊರಬಂದು ಪುಸ್ತಕ ಕೊಳ್ಳಲಾಗದ ಸಾಹಿತ್ಯಾಭಿಮಾನಿಗಳ ಮನೆ ಮನೆಯ ಬಾಗಿಲು ತಟ್ಟಿ 10,500 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದಾರೆ. ಅಕ್ಕಿ-ಬೇಳೆಯನ್ನು ಸರ್ಕಾರ ಒದಗಿಸುತ್ತಿದೆ ಆದರೆ ಸಾಹಿತ್ಯದ ಹಸಿವನ್ನು ತೀರಿಸಲು ಯಾರಿದ್ದಾರೆ ಹೇಳಿ ?- ಎನ್ನುವ ಇವರ ಕಾಳಜಿ
    ಮನೆ ಮನೆ ಮಾತಾಯಿತು. ಸ್ವತಃ ಬರಹಗಾರರೂ, ಕಸಾಪ ಅಧ್ಯಕ್ಷರೂ ಆದ
    ವೈ.ಜಿ.ಹೆಚ್.ಜಯದೇವರದು “ ಲಾಕ್ ಡೌನಿನ ಕಾಲದಲ್ಲಿ ಜನರಿಗೆ ಸಮಯ ಸಿಕ್ಕಿರುವುದರಿಂದ ಜನರು ಖಂಡಿತ ಸಾಹಿತ್ಯ ಓದುತ್ತಾರೆ “ ಎನ್ನುವ ಸಮಯೋಚಿತ ವಿವೇಕ ಮತ್ತು ಉತ್ಸಾಹವನ್ನು ತೋರಿ ಮಾದರಿಯಾದರು.

    ಕಹಳೆ, ಮುದ್ದಣ, ಛಂದ ಇತ್ಯಾದಿ ಸಂಸ್ಥೆಗಳು ಕರೋನ ಪಿಡುಗನ್ನು ಕಾರಣವನ್ನಾಗಿ ನೀಡಿ ಕೈ ಚೆಲ್ಲಿ ಕೂರದೆ ಬರಹಗಾರರನ್ನು ಉತ್ತೇಜಿಸಲು ಎಂದಿನಂತೆ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿಉತ್ತೇಜಿಸಿದ್ದಾರೆ. ಬರಹಗಾರರು ಹಿಂದೆಂದಿಗಿಂತಲೂ ಹೆಚ್ಚು ಬ್ಯುಸಿಯಾಗಿ ದೇಸೀಯ ಮತ್ತು ಅಂತರರಾಷ್ಟ್ರೀಯ ಕನ್ನಡಿಗರನ್ನು ಅಂತರ್ಜಾಲದ ಮೂಲಕ ತಲುಪಿದ್ದಾರೆ. ಅನಿವಾಸಿ ಕನ್ನಡಿಗರಾದ ನಮಗೆ ಹಿಂದೆಲ್ಲ ವರ್ಷಕ್ಕೆ ಎರಡೋ-ಮೂರೋ ಎನ್ನುವಂತೆ ಸಾಹಿತಿಗಳೊಂದಿಗೆ ಬೆರೆಯುವ ಅವಕಾಶಗಳಿರುತ್ತಿದ್ದವು. ಆದರೆ ಇದೀಗ ಬಹುತೇಕ ಪ್ರತಿ ವಾರಾಂತ್ಯದಲ್ಲಿ ಎಲ್ಲ ಬಗೆಯ ಬರಹಗಾರರು ಮತ್ತು ಕಲಾಕಾರರ ಜೊತೆ ಬೆರೆಯುವ ಅವಕಾಶಗಳು ದೊರೆಯುತ್ತಿವೆ. ಯಾವ ಮೀಟ್ ಅನ್ನು ಆಯ್ಕೆಮಾಡಿಕೊಳ್ಳುವುದು ಅಥವಾ ಬಿಡುವುದು ಎನ್ನುವಂತಾಗಿದೆ!

    ಸಾಹಿತ್ಯಕ್ಕೆ ದೊರೆತ ಹೊಸ ಸ್ವರೂಪಗಳು
    ಕರೋನ ಕಾಲದಲ್ಲಿ ಅಂತರ್ಜಾಲ ಮೂಲದಲ್ಲಿ ಸಾಹಿತ್ಯದ ಹೊಸ ಚೈತನ್ಯವನ್ನು ಪಡೆದಿದೆ. ಇ-
    ಪುಸ್ತಕಗಳು, ಆಡಿಯೋ ಪುಸ್ತಕಗಳು, ಫೇಸ್ಬುಕ್ಕಿನ ಕವನ-ಕಥಾ ವಾಚನಗಳು ಇತ್ಯಾದಿ ಹೊಸ
    ಪರಿಪಾಠಗಳು ದಿಡೀರನೆ ಹೆಚ್ಚಾಗಿವೆ. ತಮ್ಮ ತಮ್ಮ ಊರೋ, ಕೇರಿಯಲ್ಲೋ ನಡೆಯುತ್ತಿದ್ದ ಸಾಹಿತ್ಯ
    ಚಟುವಟಿಕೆಗಳು ಅಂತರ್ಜಾಲದ ಮೂಲಕ ಹಲವು ಪರಿಧಿಗಳನ್ನು ದಾಟಿವೆ.
    ಝೂಮ್,ಗೂಗಲ್ ಅಥವಾ ಏರ್ ಮೀಟ್ ಗಳು ಸಾಹಿತಿ-ಕಲಾವಿದರನ್ನು ಅಭಿಮಾನಿಗಳ
    ಮನೆಯೊಳಕ್ಕೇ ಕರೆತಂದವು. ಈ ರೀತಿಯ ಭೇಟಿಗಳ ಬಗ್ಗೆ ಮುಜುಗರವಿದ್ದ ಜನರು, ಹಳೆಯ ಮತ್ತು ಹೊಸತಲೆಮಾರಿನವರು ಎಲ್ಲ ಒಟ್ಟುಗೂಡಿ ಈ ಕಾರ್ಯದಲ್ಲಿ ಭಾಗವಹಿಸಿದರು. ಸಾಮಾಜಿಕ
    ಜಾಲತಾಣಗಳು ಸಾಹಿತ್ಯದ ಗಂಧವನ್ನು ಹರಡಲು ಸಹಕಾರಿಯಾದವು.

    ಆಶ್ಚರ್ಯ ಎಂಬಂತೆ ಹೊಸದರ ಜತೆ ಹಳೆಯ ಸಾಹಿತ್ಯವೂ ಮತ್ತೆ ಹೊಸ ಮಾಧ್ಯಮಗಳಲ್ಲಿ ಮರುಹುಟ್ಟು ಪಡೆಯಿತು. ’ರೂಪ ಯಾವುದಾದರೇನು, ಭಾವ ನವ ನವೀನ …’ ಎನ್ನುವಂತೆ ಒಟ್ಟಾರೆ ಸಾಹಿತ್ಯ
    ಸೊರಗಲಿಲ್ಲ. ಮತ್ತೆ ಬರುವ ಸಹಜ ಬದುಕಿನಲ್ಲಿ ಏನನ್ನು ಮಾಡಬಹುದ ಎಂಬ ಹೊಸ
    ಯೋಜನೆಗಳೊಂದಿಗೆ ಸಧ್ಯದ ಟೆಕ್ನಾಲಜಿಯ ಲಾಭವನ್ನು ಎಲ್ಲ ಸಾಹತ್ಯ ಪ್ರಿಯರೂ ಅನುಭವಿಸಿದರು.ಇವೆಲ್ಲ ಮನುಷ್ಯನ ಸೃಜನಶೀಲತೆಗಿರುವ ಸ್ಥಿತಿಸ್ಥಾಪಕತ್ವ ಗುಣಗಳನ್ನು (Resilience)
    ತೋರಿಸುವ ವಿಚಾರಗಳ ದಿಟ್ಟಪ್ರದರ್ಶನಗಳಾಗಿವೆ.

    ಡಿಜಿಟಲ್ ಲೋಕದಲ್ಲಿ ಕನ್ನಡ ಸಾಹಿತ್ಯದ ಭವಿಷ್ಯ?

    ಲಾಕ್ಡೌನ್ ಸಮಯ ಓದುವುದನ್ನು ನಿಲ್ಲಿಸಿಯೇ ಬಿಟ್ಟಿದ್ದ ಹಲವರನ್ನು ಮತ್ತೆ ಓದುವತ್ತ ಕರೆತಂದದ್ದು ನಿಜ.ಅದರಿಂದ ಸಾಹಿತ್ಯಕ್ಕೆ ಲಾಭವೇ ಆಗಿದೆ. ಓದುವ ಕಾಲ ಹೆಚ್ಚಾದ ಕಾರಣ, ಸ್ವತಃ ತಾವು ಬರೆದ ಅಥವಾ ಇತರರು ಬರೆದ ಸಾಹಿತ್ಯ ವಿಮರ್ಶೆಗಳು ಕೂಡ ಹೆಚ್ಚಾದವು. ಡಿಜಿಟಲ್ ಲೋಕದಲ್ಲಿ ಕನ್ನಡ
    ಸಾಹಿತ್ಯದ ಭವಿಷ್ಯಕ್ಕಾಗಿ ದುಡಿಯುತ್ತಿರುವ ಋತುಮಾನ, ಬುಕ್ ಬ್ರಮ್ಹ, ವಿವಿಡ್ಲಿಪಿ, ಮೈ ಲ್ಯಾಂಗ್, ಪ್ರತಿಲಿಪಿ ಮತ್ತಿತರ ಹತ್ತಾರು ಅಂತರ್ಜಾಲ ವೇದಿಕೆಗಳು, ಇನ್ನಿತರ ತಾಂತ್ರಿಕ ಪತ್ರಿಕೆಗಳು ಕನ್ನಡದ ಜನರಿಗೆ ಸಾಹಿತ್ಯವನ್ನು ಒದಗಿಸಲು ಶ್ರಮಪಡುತ್ತಿರುವ ಯುವಕ ಯುವತಿಯರು ಮತ್ತು ಇವರೊಡನೆ
    ತಮ್ಮ ಸಾಮರಸ್ಯವನ್ನು ಬೆಸೆದುಕೊಂಡಿರುವ ಪ್ರಕಾಶಕರು ಹಲವು ಕಾರ್ಯಕ್ರಮಗಳನ್ನು ಸಾಹಿತ್ಯ

    ಪ್ರಿಯರಿಗಾಗಿ ಯೋಜಿಸಿದರು. ಪುಸ್ತಕಗಳ ಡಿಜಿಟಲ್ ಬಿಡುಗಡೆ ಮತ್ತು ನೇರ ಪ್ರಸಾರವೂ ಇತ್ತೀಚೆಗೆ
    ಜನಪ್ರಿಯವಾಗುತ್ತಿವೆ. ವಿವಿಡ್ಲಿಪಿ “ಥಟ್ಟಂತ ಹೇಳಿ… ’ ಯಂತ ಕ್ವಿಝ್ ಕಾರ್ಯಕ್ರಮವನ್ನು ಅಂತರ್ಜಾಲದ ಫೇಸ್ಬುಕ್ ಮತ್ತು
    ಯೂಟ್ಯೂಬ್ ಗಳ ಮೂಲಕ ಅಮೆರಿಕಾದ ಶರಾವತಿ ಕನ್ನಡ ಕೂಟಕ್ಕೂ, ಇಂಗ್ಲೆಂಡಿನ ಸಾಹಿತ್ಯ ಪ್ರೇಮಿಗಳ ವೇದಿಕೆಯಾದ ಅನಿವಾಸಿ.ಕಾಂ ನ ಮೂಲಕ ಅಲ್ಲಿನ ಕನ್ನಡಿಗರಿಗೂ ತಲುಪಿಸಿತು. ಇಂಗ್ಲೆಂಡಿಗೇ ಬಂದು ಮಾತನಾಡಬೇಕಿದ್ದ ಜಯಂತ ಕಾಯ್ಕಿಣಿಯವರ ಪ್ರವಾಸ ಸಾಧ್ಯವಾಗದೆ ಕೊನೆಗೆ ಝೂಮ್ ವೇದಿಕೆಯ ಮೂಲಕ ಇಲ್ಲಿನ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆಗಳ ಬಗ್ಗೆ ಉಪನ್ಯಾಸ ನೀಡಿದರು.
    ಪ್ರಸಿದ್ದ ಚಲನಚಿತ್ರ ತಾರೆಯರು, ಹಾಡು ಬರೆಯುವವರು, ನಿರ್ದೇಶಕರು, ಸಂಗೀತಕಾರರು,
    ವಾದ್ಯವೃಂದದವರು,ಮೈಸೂರಿನ ಮಹಾರಾಜರು ಕೊನೆಗೆ ಹಲವು ಮಠಾಧಿಪತಿಗಳು ಮನೆಯಲ್ಲಿ
    ಬಂಧಿಗಳಾದ ಕನ್ನಡಿಗರನ್ನು ತಲುಪಿ ಸಮುದಾಯ ಭಾವವನ್ನು ಜೀವಂತವಾಗಿಟ್ಟುಕೊಳ್ಳುವ ಜೊತೆ
    ಜೊತೆಯಲ್ಲೆ ಜನರ ಮನಸ್ಸಿನಲ್ಲಿ ತಾವು ಮರೆತುಹೋಗದಂತೆ ಉಳಿಯಲು ಪ್ರಯತ್ನಿಸಿದ್ದಾರೆ. ತಮ್ಮ ಅಭಿಮಾನಿಗಳ ಕೋರಿಕೆಗಳಿಗೆ ಸ್ಪಂದಿಸಿದ್ದಾರೆ. ಕರ್ನಾಟಕದ ಪ್ರತಿ ಪ್ರಸಿದ್ದ ಸಾಹಿತ್ಯ ತಾರೆಯರು ತಮ್ಮ
    ಅಭಿಮಾನಿಗಳೊಂದಿಗೆ ಡಿಜಿಟಲ್ ದರ್ಶನ ನೀಡಿದ್ದಾರೆ.

    ಕನ್ನಡ ಸಾಹಿತ್ಯ ತೆಗೆದುಕೊಂಡಿರುವ ಈ ಹೊಸ ತಿರುವು ತಾತ್ಕಾಲಿಕವಾಗದೆ ಇನ್ನು ಮುಂದೆ ಹೆಚ್ಚು
    ಹೆಚ್ಚಾಗಿ ಡಿಜಿಟಲ್ ಮಾಧ್ಯಮವನ್ನೇ ಅನುಸರಿಸಬಹುದು ಎನ್ನುವ ಅಭಿಪ್ರಾಯಗಳನ್ನು ಹಲವರಲ್ಲಿ ಇದೀಗ ನೋಡಬಹುದಾಗಿದೆ.
    ಪ್ರಕಾಶಕರು ಕೂಡ ಪುಸ್ತಕಗಳನ್ನು ಮುದ್ರಿಸಲು ತಗಲುವ ಖರ್ಚುಗಳು, ಅವನ್ನು ಸಾಗಿಸುವ,
    ಉದ್ಘಾಟಿಸುವ, ಮಾರಾಟಮಾಡಲು ನಡೆಸುವ ಮಳಿಗೆಗಳ. ಸಂಭಾವನೆಗಳ ಇತ್ಯಾದಿ ಖರ್ಚುಗಳ
    ಗೊಂದಲದಿಂದ ಹೊರಬರಲು ಕಾಯುತ್ತಿದ್ದರು. ಈ -ಮಾರುಕಟ್ಟೆಯ ಉಪಯೋಗವನ್ನು ಅವರುಗಳು ಕರೋನ ಕಾಲದಲ್ಲಿ ಪ್ರಯೋಗಕ್ಕೆ ಒರೆ ಮಾಡಿ ನೋಡಲು ಸಾಧ್ಯವಾಯಿತು.
    ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ಕಾರಣ ಮತ್ತು ಸಂಪ್ರದಾಯಬದ್ದವಾಗಿ ಮುದ್ರಿತ
    ಪುಸ್ತಕಗಳನ್ನು ಓದಲು ಇಷ್ಟಪಡುವ ಕನ್ನಡ ಓದುಗರ ಕಾರಣ ಇ- ಪುಸ್ತಕಗಳು ರ್ಯಾಯವಾದ
    ಮಾರುಕಟ್ಟೆಯನ್ನಷ್ಟೇ ಸೃಷ್ಟಿಸಲು ಸಾಧ್ಯವಾಗುವುದು ಎನ್ನುವುದನ್ನು ಅವರು ಅರಿತರು. ಆದರೆ ಇದೊಂದು ಪರ್ಯಾಯ ಮಾರುಕಟ್ಟೆಯಾಗಬಲ್ಲದು ಎಂಬ ಹೊಸ ಭರವಸೆಯನ್ನು ಕರೋನ ಕಾಲ
    ಅವರಲ್ಲಿ ಮೂಡಿಸಿದೆ ಎಂದರೆ ತಪ್ಪಾಗಲಾರದು.

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    4 COMMENTS

    1. ಲೇಖನ ತುಂಬಾ ಚೆನ್ನಾಗಿದೆ. ಒಂದು ಸಂಪೂರ್ಣ ಓದಿನ ಅನುಭವ ನೀಡಿತು. ಮಾಹಿತಿಪೂರ್ಣವಾಗಿದೆ. ಅಭಿನಂದನೆಗಳು.

    2. ಕರೋನಾ ಸೃಷ್ಟಿಸಿದ ಅನೇಕ ಸ್ಥಿತ್ಯಂತರಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಾದ ಸಂಚಲವನ್ನು ತುಂಬಾ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಅಭಿನಂದನೆಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!