26.1 C
Karnataka
Thursday, May 21, 2026
    Home Blog Page 158

    ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೇ?

    ಪ್ರತಿದಿನ ಅತಿಹೆಚ್ಚಿನ ಸೋಂಕಿತರನ್ನು ವರದಿಮಾಡುತ್ತಿರುವ ದೇಶಗಳಲ್ಲಿ ದಿನವೊಂದರಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಸೋಂಕನ್ನು ವರದಿ ಮಾಡಿರುವ ಭಾರತ ಇಡೀ ವಿಶ್ವದಲ್ಲೇಅಗ್ರ ಸ್ಥಾನವನ್ನುಪಡೆದಿದೆ. ಅಮೆರಿಕಾ ಮತ್ತು ಬ್ರೆಜಿಲ್ ದೇಶಗಳನ್ನೂ ಹಿಂದಕ್ಕೆ ಹಾಕಿದೆ.

    ಆದರೆ ಭಾರತದಲ್ಲಿ ಅಥವಾ ಇಡೀ ಪ್ರಪಂಚದಲ್ಲಿ ಇದುವರೆಗೆ ವರದಿಯಾಗಿರುವಜನರಿಗಷ್ಟೇ ಸೋಂಕು ಬಂದು ಹೋಗಿದೆಯೇ? ಖಂಡಿತ ಇಲ್ಲ.ಈ ಸಂಖ್ಯೆ ಅದಕ್ಕಿಂತ ಬಹಳ ದೊಡ್ಡದಿದೆ ಎಂಬುದು ಎಲ್ಲರ ಸುಲಭ ಊಹೆ. ಯಾಕೆಂದರೆ ಶಂಕಿತರೆಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿಲ್ಲ. ಪರೀಕ್ಷೆಗಳು ಮೊದಲೆಲ್ಲ ಬಹಳ ಕಡಿಮೆ ಸಂಖ್ಯೆಯಲ್ಲಿ ನಡೆದದ್ದು ಒಂದು ಕಾರಣವಾದರೆ, ಕ್ವಾರಂಟೈನ್ ಇತ್ಯಾದಿ ಭಯಗಳು ಇನ್ನೊಂದು ಕಡೆ ಜನರನ್ನು ಕಾಡಿದ್ದು ನಿಜ.ಇದರ ನಡುವೆ ಸೋಂಕು ಬಂದಿರುವ ಎಲ್ಲರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿರುವುದು  ಪರೀಕ್ಷೆ ಮಾಡಿಸಿಕೊಳ್ಳದಿರಲು ಮತ್ತೊಂದು ದೊಡ್ಡ ಕಾರಣವಾಗಿದೆ.

    ಒಂದು ದೇಶದ ಪ್ರತಿ ಪ್ರಜೆಗೆ ಕೋವಿಡ್ ಪರೀಕ್ಷೆ ನಡೆಯದಿದ್ದರೆ ನಿಖರ ಸಂಖ್ಯೆ ತಿಳಿಯುವುದೂ ಇಲ್ಲ. ಆದರೆ ಅದು ಸಾಧ್ಯವಾಗದ ಮಾತು. ದಿನಕ್ಕೆ ಹತ್ತು ಲಕ್ಷ ಪರೀಕ್ಷೆಗಳನ್ನು ಮಾಡಿದರೂ ಅದು ಭಾರತದ ಜನಸಂಖ್ಯೆಗೆ ಕಡಿಮೆ ಎನ್ನುವ ಬಲವಾದ ಅಭಿಪ್ರಾಯಗಳು ವ್ಯಕ್ತವಾಗಿವೆ.

    ಕೋವಿಡ್ ಪರೀಕ್ಷೆಗಳ ಮತ್ತೊಂದು ವಿಲಕ್ಷಣ ವಿಚಾರವೆಂದರೆ ಅದುಈ ತಪಾಸಣೆಗಳ ಅತ್ಯಂತ  ಸೂಕ್ಷ್ಮ ಸ್ವಭಾವ. ಅಂದರೆ, ಈ ಪರೀಕ್ಷೆಯಿಂದ ಕೋವಿಡ್ ಇದೆ ಎಂದು ಗೊತ್ತಾದವರಲ್ಲಿ ಮತ್ತೊಂದು ದಿನ ಇದೇ ಪರೀಕ್ಷೆಯನ್ನು ಮಾಡಿದಾಗ ಸೋಂಕು ಇಲ್ಲ ಎನ್ನುವ ಫಲಿತಾಂಶ ಬಂದಿದೆ. ಇಲ್ಲ ಎಂದವರಲ್ಲಿ ನಂತರ ಸೋಂಕು ಇದೆ ಎನ್ನುವ ವಿಚಾರಗಳು ಪತ್ತೆಯಾಗಿವೆ. ಇದರ ಜೊತೆ ಪರೀಕ್ಷೆಗೆ ಬಂದ ಮಾದರಿಯ ಪ್ರಮಾಣ ಸಾಕಷ್ಟಿಲ್ಲ, ಮಾದರಿಯನ್ನು ತೆಗೆದ ಕ್ರಮದಲ್ಲಿ ಲೋಪವಿದೆ ಎಂದು ಫಲಿತಾಂಶ ಸಿಕ್ಕ ಸಾವಿರಾರು ಪರೀಕ್ಷೆಗಳು ಯಾವುದೇ ಫಲಿತಾಂಶ ನೀಡದೆ ವ್ಯರ್ಥವಾಗಿವೆ.

    ಹೀಗಿದ್ದೂ ನಾವು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೆ? ಕೋವಿಡ್ ಪರೀಕ್ಷೆಯ ವಿಧಾನಗಳದ್ದು  ಯಾಕಿಷ್ಟು ನವಿರು ಸ್ವಭಾವ?ಕೋವಿಡ್ ಪರೀಕ್ಷೆಗಳು ಹೇಗೆ ನಡೆಯುತ್ತವೆ?

    ಕೋವಿಡ್ ಪರೀಕ್ಷೆಯ ಹಿನ್ನೆಲೆಯೇನು?

    ಕೋವಿಡ್ ಸೋಂಕನ್ನು ವಿಶ್ವವ್ಯಾಪಿ ಹೊಸವ್ಯಾಧಿಯೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಹಿನ್ನೆಲೆಯಲ್ಲೇ ಸೋಂಕಿತರನ್ನು ಪತ್ತೆ ಹಚ್ಚಲು ತ್ವರಿತವಾಗಿ ಪರೀಕ್ಷಾ ವಿಧಾನಗಳ ಅಗತ್ಯ ಕಂಡಿತು. ಈ ಪರೀಕ್ಷೆ ಸುಲಭವಾಗಿರಬೇಕಿತ್ತು, ಹೆಚ್ಚು ಹಣ ಹೂಡಿಕೆ ಬೇಡದಂತಿರಬೇಕಿತ್ತು ಮತ್ತು ಈ ಪರೀಕ್ಷೆಯಿಂದ ಅತ್ಯಂತ ತ್ವರಿತವಾಗಿ ಸೋಂಕನ್ನು ಕಂಡುಹಿಡಿಯಲು ಸಾಧ್ಯವಿರಬೇಕಿತ್ತು.

    ಈ ಮಾಪನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮನುಕುಲ ಈ ಹಿಂದೆ ಇನ್ಫ್ಲುಯೆಂಜಾದಂತಹ ಪಿಡುಗನ್ನು ಪತ್ತೆಹಚ್ಚಿ ಅದನ್ನು ಹತ್ತಿಕ್ಕುವಲ್ಲಿ ಬಳಸುತ್ತಿದ್ದ ಮಾದರಿಯ ಟೆಸ್ಟ್ ಕಿಟ್ ಗಳನ್ನು ತಯಾರಿಸಬೇಕಾಯ್ತು. ಅದು ಬಡ ಮತ್ತು ಶ್ರೀಮಂತ ದೇಶಗಳೆರಡರಲ್ಲೂ ಅಗ್ಗದರದಲ್ಲಿ ಲಭ್ಯವಾಗಬೇಕಾಯ್ತು. ವೇಗವಾಗಿ ಸೋಂಕು ಹರಡುತ್ತಿದ್ದ ದೇಶಗಳು ನಾಗಾಲೋಟದಲ್ಲಿ ಈ ಟೆಸ್ಟ್ ಕಿಟ್ ಗಳ ಉತ್ಪಾದನೆ ಅಥವಾ ಖರೀದಿಗಿಳಿದವು. ಸೋಂಕು ನಿಧಾನವಾಗಿ ಹಬ್ಬಿದ ದೇಶಗಳಿಗೆ ಇವುಗಳನ್ನು ಉತ್ಪಾದಿಸಲು ಸ್ವಲ್ಪ ಸಮಯ ಸಿಕ್ಕಿತು.

    ಕೊರೊನಾ ಪರೀಕ್ಷೆಯ ಕಿಟ್ ಗಳನ್ನು ಬಳಸಿದ ನಂತರ ಅವುಗಳ ಪರೀಕ್ಷೆ ನಡೆಸಲು ದೊಡ್ಡ ದೊಡ್ಡ ನಗರಗಳಲ್ಲಿ ಹುಟ್ಟಿಕೊಂಡ ಪರೀಕ್ಷಾ ಕೇಂದ್ರಗಳು ಮತ್ತು ಲ್ಯಾಬೊರೇಟರಿಗಳನ್ನು ನಿಧಾನವಾಗಿ ಪ್ರತಿ ನಗರ, ಕೇಂದ್ರಗಳಿಗೆ ವಿಸ್ತರಿಸಬೇಕಾಯ್ತು. ಇಲ್ಲದಿದ್ದಲ್ಲಿ ಒಂದು ಕಡೆ ಪಡೆದ ಮೂಗು ಮತ್ತು  ಗಂಟಲು ದ್ರವಗಳ ಶೇಖರಣೆ,ಸಾಗಣೆ ಮತ್ತು ಗುಣಮಟ್ಟದ ಪರೀಕ್ಷೆಗಳಲ್ಲಿ ಅವು ಮತ್ತೊಂದು ಕಡೆ ಹೋಗಿ ಬರುವಷ್ಟರಲ್ಲಿ ಗಂಭೀರ ಲೋಪವಾಗುವ ಸಾಧ್ಯತೆಗಳಿದ್ದವು. ಈ ಪರೀಕ್ಷೆಯ ಫಲಿತಾಂಶಗಳು ತ್ವರಿತವಾಗಿ ಹೊರಬಿದ್ದು ಜನರನ್ನು ತಲುಪದಿದ್ದಲ್ಲಿ ಅವರು ತಮಗೆ ಸೋಂಕಿದೆಯೇ ಇಲ್ಲವೇ ಎನ್ನುವುದನ್ನು ತಿಳಿಯದೆ ಡೋಲಾಯನಮಾನದ ಸ್ಥಿತಿಯಲ್ಲಿರಬೇಕಾಗಿತ್ತು.ಹೀಗಾಗಿ ಕೋವಿಡ್ ಪರೀಕ್ಷೆಗಳ ಅನುಕೂಲವನ್ನು ಸೃಷ್ಟಿಸುವಲ್ಲಿ ಪ್ರತಿದೇಶಗಳು ತೆಗೆದುಕೊಂಡ ಕ್ರಮಗಳು ಅಷ್ಟಿಷ್ಟಲ್ಲ.

    ಕೋವಿಡ್ ಪರೀಕ್ಷೆ ಹೇಗೆ ನಡೆಯುತ್ತದೆ?

    ಪರೀಕ್ಷೆಗೆ ಮುನ್ನ ನಿಮ್ಮ ಕೈಗಳನ್ನು ಸ್ಯಾನಿಟೈಸರ್ ಬಳಸಿ ಶುದ್ದಗೊಳಿಸಕೊಳ್ಳಬೇಕು. ಇದರಿಂದ ನಿಮ್ಮ ಕೈಯಿಂದ ಬರಬಹುದಾದ ಕಲ್ಮಶಗಳು ಟೆಸ್ಟ್ ಕಿಟ್ ನ್ನು ಪ್ರವೇಶಿಸವುದನ್ನು ತಡೆಯಬಹುದು.ಕೈಗಳಿಗೆ ಶುದ್ಧವಾದ ಕೈಗವುಸಗಳನ್ನು ತೊಟ್ಟುಕೊಳ್ಳಬೇಕು.ಟಿಶ್ಶೂ ಅಥವಾ ಬಿಸಾಡಬಹುದಾದ ಬಟ್ಟೆಯನ್ನು ಬಳಸಿಮೂಗನ್ನು ಲಘುವಾಗಿ ಸೀದಿ ಹೆಚ್ಚಿನ ಸ್ಲೇಷ್ಮವಿದ್ದಲ್ಲಿ ಅದನ್ನು ನಿವಾರಿಸಕೊಳ್ಳಬೇಕು.

    ನಿಮಗೆ ಕೊಟ್ಟ ಕಿಟ್ ನ್ನು ಬಳಸಿನೀವೇ ಮಾದರಿ ದ್ರವವನ್ನು ತೆಗೆದುಕೊಡಬಹುದು. ಇದು ಸಾಧ್ಯವಿಲ್ಲದ ದೇಶಗಳಲ್ಲಿ ತ್ವರಿತವಾಗಿ ಮಾದರಿಗಳನ್ನು ಸಂಗ್ರಹಿಸಲು ಪರೀಕ್ಷೆಯ ಮಾದರಿಗಳನ್ನು ಸಂಗ್ರಹ ಮಾಡಿಕೊಳ್ಳುವವರೇ ನಿಮ್ಮ ಮೂಗು-ಗಂಟಲಿನ ದ್ರವವನ್ನು ತೆಗೆದುಕೊಳ್ಳಬಹುದು.

    ಗಂಟಲಿನ ಒಳಭಾಗದ ಎರಡೂ ಕಡೆ ಇಣುಕುವ ಟಾನ್ಸಿಲ್ಸ್ ಗ್ರಂಥಿಯ ಅಂಗಾಂಶದ ಮೇಲೆ ಚೆನ್ನಾಗಿ  ಅಂದರೆ ಹತ್ತು  ಸೆಕೆಂಡುಗಳ ಕಾಲಮೆತ್ತಗಿನ ತುದಿಯಿರುವ ಪರೀಕ್ಷೆಯ  ಕಡ್ಡಿಯನ್ನು ಬಳಸಿಎರಡರ ಮೇಲೂ ತೀಡಬೇಕು.ಕೆಲವರಿಗೆ ಟಾನ್ಸಿಲ್ಸ್ ತೆಗೆಯುವ ಶಸ್ತ್ರ ಚಿಕಿತ್ಸೆ ಆಗಿದ್ದಲ್ಲಿ ಅವರು ಟಾನ್ಸಿಲ್ಸ್ ಇದ್ದ ಜಾಗದಲ್ಲಿ ತೀಡಿದರೂ ಸಾಕು. ನಂತರ ಹಲ್ಲು, ನಾಲಿಗೆ ಯಾವುದಕ್ಕೂ ತಗುಲಿಸದಂತೆ ತೀಡುವ ಕಡ್ಡಿಯನ್ನು ಹೊರತೆಗೆಯಬೇಕು. ಇದೇ ತುದಿಯನ್ನು ಯಾವುದಾದರೂ ಒಂದು ಮೂಗಿನ ಹೊರಳೆಯಲ್ಲಿ ಒಂದಿಂಚು ಒಳಹೊಗಿಸಿ 10-15 ಸೆಕೆಂಡುಗಳ ಕಾಲ ಚೆನ್ನಾಗಿ ದುಂಡಗೆ  ತಿರುಗಿಸಬೇಕು.

    ಮೂಗು ನತ್ತು ಧರಿಸಿರುವವರು ಇನ್ನೊಂದು ಹೊರಳೆಯನ್ನು ಬಳಸಬಹದು. ತೀಡುವ ಕಡ್ಡಿ ಒಂದಿಂಚು  ಒಳಹೋದ ನಂತರ ಮೂಗಿನಲ್ಲಿ ಸಾಧಾರಣವಾಗಿ ತಡೆಯೊಂದು ಸಿಕ್ಕುತ್ತದೆ. ಅದಕ್ಕಿಂತ ಹೆಚ್ಚು ಒಳಹೊಗಲು ಯತ್ನಿಸಿದರೆ ನೋವಾಗುತ್ತದೆ. ಈ ಹಂತಕ್ಕಿಂತ ಒಳಕ್ಕೆ ಕಡ್ಡಿಯನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.

    ಜಾಗರೂಕವಾಗಿ ಕಡ್ಡಿಯನ್ನು ಹೊರತೆಗೆದು ಅದನ್ನು ನಿಮ್ಮ  ಹೆಸರು, ವಿಳಾಸ ಅಥವಾ ಗುರುತಿನ ಸಂಖ್ಯೆಯನ್ನು ಅಂಟಿಸಿಕೊಟ್ಟಿರುವ ನಳಿಕೆಯಲ್ಲಿ ಸೀಲ್ ಮಾಡಿ ಪರೀಕ್ಷೆಗೆ  ಕಳಿಸಬೇಕು.

    ಕೋವಿಡ್ ಪರೀಕ್ಷೆಯ ಫಲಿತಾಂಶಗಳಲ್ಲಿ ಆಗಬಹುದಾದ ಲೋಪಗಳು

    ನಾವೇ ಇದನ್ನು ಮಾಡುವಾಗ ಜತನದಿಂದ ಮತ್ತು ಕಾಳಜಿಯಿಂದ ಮಾಡಿ ಮಾದರಿಯನ್ನು ಕಳಿಸಿಕೊಡಬೇಕು.

    ಬೇರೆಯವರು ಬೆಳಗ್ಗಿನಿಂದ ಸಂಜೆಯ ತನಕ  ಜನರ ಗಂಟಲು-ಮೂಗಿನ ದ್ರವವನ್ನು ಸಂಗ್ರಹಿಸುತ್ತಿದ್ದಲ್ಲಿ ಅವರು ನಾನಾ ರೀತಿ ವರ್ತಿಸುವ ಜನರೊಂದಿಗೆ ಸಹನೆಯಿಂದಿರಬೇಕಾಗುತ್ತದೆ. ಇಂಥವರಿಗೆ ಅತ್ಯುತ್ತಮ ರಕ್ಷಣಾ ಉಡುಪುಗಳನ್ನು ನೀಡುವುದು ಕೂಡ ಅತ್ಯಗತ್ಯ. ಇಲ್ಲದಿದ್ದಲ್ಲಿ ಹತ್ತಿರಕ್ಕೆ ಬಂದು ಬಾಯಿ ತೆಗೆದು ಮುಖದ ನೇರಕ್ಕೆ ಉಸಿರು ಬಿಡುತ್ತ ನಿಲ್ಲುವ ಜನರಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುವಲ್ಲಿ ಹಲವು ತಪ್ಪುಗಳನ್ನು ಮಾಡಬಹುದು.

    ನಮ್ಮ ಮೂಗು -ಗಂಟಲಿನ ಒಳಭಾಗಗಳು ಒಣಗಿದ್ದರೆ ಹೆಚ್ಚಿನ  ದ್ರವ ಮಾದರಿ ದೊರೆಯದೆ ಪರೀಕ್ಷೆ ನಡೆಸಲು ಸಾದ್ಯವಾಗದಿರಬಹುದು. ಬೇಕಾದ ಜಾಗವನ್ನು ತಲುಪಿ ತೀಡದಿದ್ದರೆ ಅದರಿಂದಲೂ ಮಾದರಿ ದೊರೆಯದೆ ಹೋಗಬಹುದು.

    ಹೆದರಿಕೊಂಡು ತೀಡುವ ಕಡ್ಡಿಯನ್ನು ಅಂಗಾಂಶಗಳ ಸಂಪರ್ಕಕ್ಕೆ ತರದಿದ್ದರೆ ಅಥವಾ ತರಲು ಅನುವು ಮಾಡಿಕೊಡದಿದ್ದರೆ ಆಗಲೂ ಫಲಿತಾಂಶಗಳು ನಿರ್ಣಾಯಕವಾಗದೇ  ತಪ್ಪು ಫಲಿತಾಂಶ ಬರಬಹುದು.ಹೀಗೆ ಹಲವಾರು ಮನುಷ್ಯ ಸಹಜ ತಪ್ಪುಗಳ ಕಾರಣಗಳಿಂದ ಪರೀಕ್ಷೆಯ ಫಲಿತಾಂಶದಲ್ಲಿ ವ್ಯತ್ಯಾಸ ಕಂಡು ಬರಬಹುದು.

    ಪರೀಕ್ಷೆ ನಡೆಯುವ ಪ್ರಯೋಗಾಲಯ ಅಥವಾ ಲ್ಯಾಬುಗಳು  ಎರಡನೇ ಶ್ರೇಣಿ ಅಥವಾ ಮೂರನೇ ಶ್ರೇಣಿಯ ನಿಯಂತ್ರಣವಿರುವ ಕಟ್ಟಡ ಸೌಲಭ್ಯಗಳನ್ನು ಹೊಂದಿರಬೇಕು. ಹೊರಗಿನದ್ದಕ್ಕೆ ಹೋಲಿಸಿದರೆ ಪ್ರಯೋಗಾಲಯದ ಒಳಗಿನ ಗಾಳಿಯ ಒತ್ತಡ  ಋಣಾತ್ಮಕವಾಗಿರುವಂತಹ ಅನುಕೂಲಗಳಿರಬೇಕು ಇಲ್ಲದಿದ್ದರೆ ಫಲಿತಾಂಶಗಳಲ್ಲಿ ಲೋಪಗಳು ಕಾಣಿಸಬಹುದು

    ಮೂಗು ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಲು ಸಾಧ್ಯವಾಗದಿದ್ದಲ್ಲಿ ಮನುಷ್ಯರ ಉಗುಳಿನಿಂದ ಸೋಂಕಿನ ಪತ್ತೆ ಮಾಡಬಹುದು.ಉಗುಳಿನ ಮಾದರಿಯನ್ನು ಸಂಗ್ರಹಿಸುವುದು ಮೂಗು ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸುವ ವಿಧಾನಕ್ಕಿಂತ ಸುಲಭವಾದರೂ ಪರೀಕ್ಷೆ ಮಾಡಲು ಗಂಟಲು-ಮೂಗಿನ ದ್ರವಗಳನ್ನೇ ಹೆಚ್ಚು ನಂಬಲರ್ಹ ಎನ್ನಲಾಗಿದೆ.

    ಈ ಟೆಸ್ಟ್ ಕಿಟ್ ಗಳು ಆಯಾ ದೇಶದ ಗುಣಮಟ್ಟ ಮಾಪನಗಳಲ್ಲಿ ಉತ್ತೀರ್ಣರಾದ ನಂತರವೇ ಸಾರ್ವಜನಿಕರ ಬಳಕೆಗೆ  ಮಾರುಕಟ್ಟೆಗೆ ಬರುತ್ತವೆ. ಪ್ರತಿದೇಶದಲ್ಲೂ ಇವುಗಳ ಔದ್ಯಮಿಕ ಮಟ್ಟದಲ್ಲಿ ಇವುಗಳ ಬಳಕಯಾಗುತ್ತಿದೆ. ಅಲ್ಲಲ್ಲಿ ನಕಲಿ ಟೆಸ್ಟ್ ಕಿಟ್ ಗಳ ದಂಧೆ ಶುರುವಾದದ್ದು ಮತ್ತು ಆ ಮೂಲಕ ರೋಗವನ್ನು ಪತ್ತೆ ಮಾಡುವಲ್ಲಿ ಸೋತದ್ದು ಕೂಡ ನಡೆಯಿತು. ಕೆಲವು ದುಷ್ಕರ್ಮಿಗಳ ಅನೈತಿಕ ವ್ಯವಹಾರಗಳಿಂದ ನಕಲಿ ಕಿಟ್ ಗಳು ಅಸಲಿ ಕಿಟ್ ಗಳೊಡನೆ ಬೆರೆತು ವಿವಾದಾತ್ಮಕ ಫಲತಾಂಶಗಳನ್ನು ದೊರಕಿಸಿರಬಹುದು.ಇಂತಿಷ್ಟು ಹಣ ಕೊಟ್ಟರೆ ಕೋವಿಡ್ ನೆಗೆಟಿವ್ -ಎನ್ನುವ ಪ್ರಮಾಣ ಪತ್ರ ನೀಡುತ್ತ ಸಿಕ್ಕಿಹಾಕಿಕೊಂಡ ಲ್ಯಾಬ್ ಅಥವಾ ಪರೀಕ್ಷಾಲಯಗಳ ಬಗ್ಗೆಯೂ ವರದಿಗಳು ಬಂದವು.

    ಇದೆನ್ನೆಲ್ಲ ಹತ್ತಿಕ್ಕಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲು ಸರ್ಕಾರಗಳು ದುಡಿಯುತ್ತಿರುವಾಗಲೇ ಈಗಾಗಲೇ ಜಾರಿಯಲ್ಲಿರುವ ಕೋವಿಡ್ ಪರೀಕ್ಷೆಯ ಗುಣಮಟ್ಟ ಮತ್ತು ಕಾರ್ಯ ಕ್ಷಮತೆಯ ಮಾಪನಗಳೂ ನಡೆಯುತ್ತಿವೆ. ಅದಕ್ಕಾಗಿ ಹಲವಾರು ಅಧ್ಯಯನಗಳನ್ನು ಪ್ರಪಂಚದ ಹಲವೆಡೆ ಹಮ್ಮಿಕೊಳ್ಳಲಾಗಿದೆ.

    ಕೋವಿಡ್ ಪರೀಕ್ಷೆಯ ಉದ್ದೇಶಗಳೇನು?

    ಈ ಪರೀಕ್ಷೆಯ ಉದ್ದೇಶ ನಮ್ಮ ಗಂಟಲು-ಮೂಗು ದ್ರವ ಮತ್ತು ಎಂಜಲಿನ ಮಿಶ್ರಣವನ್ನು ಸಂಗ್ರಹಿಸುವುದು. ಈ ಸಂಗ್ರಹದಲ್ಲಿ ಕೋವಿಡ್ -19 ಎನ್ನುವ ವೈರಸ್ಸು ಇದೆಯೇ ಎಂದು ಪತ್ತೆ ಹಚ್ಚುವುದು.ಸೋಂಕಿತರನ್ನು ಗುರುತಿಸಿದ ನಂತರ ಅವರ ಸಂಪರ್ಕಕ್ಕೆ ಬಂದವರನ್ನು ಕಂಡುಹಿಡಿಯುವುದು. ಸೋಂಕಿತರನ್ನು ಆರೋಗ್ಯವಂತರಿಂದ ಬೇರ್ಪಡಿಸಿ ಸೋಂಕು ಹರಡದಂತೆ ರಕ್ಷಿಸುವುದು. ಸೋಂಕು ಇರುವವರಿಗೆ ಲಭ್ಯವಿರುವ ಚಿಕಿತ್ಸೆ ನೀಡುವುದು. ಇಲ್ಲವೆಂದಾದವರಿಗೆ ಧೈರ್ಯ ನೀಡುವುದು. ದೇಶವೊಂದನ್ನು ಮುಚ್ಚುವುದು ಅಥವಾ ಪ್ರಯಾಣಕ್ಕಾಗಿ ತೆರೆಯುವುದು ಇತ್ಯಾದಿ ಮಹತ್ವದ ನಿರ್ಧಾರಗಳನ್ನೆಲ್ಲ ಈ ಕೋವಿಡ್ ಪರೀಕ್ಷೆಯ ಆಧಾರದ ಮೇಲೇ ನಡೆಯುತ್ತಿರುವ ಕಾಲವಿದು.

    ಆದರೆ ಈ ಪರೀಕ್ಷೆ ನಿಜಕ್ಕೂ ಕರಾರುವಕ್ಕಾದ ನಿರ್ಣಯವನ್ನು ಕೊಡುತ್ತದೆಯೇ? ಇಲ್ಲವೆಂದಾದರೆ ಪ್ರಪಂಚವೇ ಇದನ್ನು ನಂಬಿ ನಡೆಯುತ್ತಿರುವುದು ಎಂತಹ ವಿಪರ್ಯಾಸವಲ್ಲವೇ?

    ಸರಿಯಾದ ಕ್ರಮದಲ್ಲಿ ಮಾದರಿಯನ್ನು ಸಂಗ್ರಹಿಸಿ ಕಳಿಸಿದರೂ ಪರೀಕ್ಷೆಯಫಲಿತಾಂಶಗಳಲ್ಲಿ    ವ್ಯತ್ಯಾಸ ಉಂಟಾಗುತ್ತಿರುವುದು ಕೂಡ ವರದಿಯಾಗಿದೆ. ಇದು ಹೇಗೆ?

    ಮುಖ್ಯ ವ್ಯತ್ಯಾಸ ಬರುವುದು ಸಂಗ್ರಹವಾದ ಮಾದರಿ ದ್ರವದಲ್ಲಿ. ಒಂದು ಅಧ್ಯಯನದ ಪ್ರಕಾರ ವೈರಸ್ಸಿನ  RNA ದ ಪ್ರಮಾಣ ಮೂಗಿನಿಂದ ತೆಗೆದ ದ್ರವದಲ್ಲಿ ಹೆಚ್ಚು ಕಾಣಸಿಕ್ಕಿತು ಆದರೆ ಗಂಟಲಿನಿಂದ ಪಡೆದ ದ್ರವದಲ್ಲಿ ಈ ಮಟ್ಟ ಅಷ್ಟಾಗಿ ಇರಲಿಲ್ಲ. ಆದರೆ ಈ ಅಧ್ಯಯನದಲ್ಲಿ ಕೇವಲ 12 ಜನರು ಭಾಗವಹಿಸಿದ್ದರು. ವಿಸ್ತೃತ ಮಟ್ಟದಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿ ಮೂಗು ಮತ್ತು ಗಂಟಲಿನ ದ್ರವದ ಮಾದರಿಗಳಲ್ಲಿ ಈ ವ್ಯತ್ಯಾಸ ಕಂಡುಬರಲಿಲ್ಲ.

    ಆದರೆ ಧೃಡವಾದ ಫಲಿತಾಂಶಗಳು ದೊರಕ್ಕಿದ್ದು ಮೂಗು ಮತ್ತು ಗಂಟಲಿನ ದ್ರವಗಳೆರಡೂ ಇರುವ ಮಾದರಿಗಳಿಂದ. ಇದೇ ಮಾದರಿಯ ಪರೀಕ್ಷೆಗಳನ್ನು ಬಹುತೇಕ ದೇಶಗಳು ಅಳವಡಿಸಕೊಂಡವು.

    ಕೋವಿಡ್ ಟೆಸ್ಟ್ ಕಿಟ್ ಗಳು ರೋಗವನ್ನು ಪತ್ತೆ ಹಚ್ಚುವಲ್ಲಿ ಅಥವಾ ಇಲ್ಲವೆಂದು ನಿರ್ಣಯಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಇದೇ ಕಾರಣಕ್ಕೆ ಈ ಕಿಟ್ ಗಳ ಗುಣಮಟ್ಟ ಅತ್ಯಂತ ಮುಖ್ಯವಾಗುತ್ತದೆ. ಹೀಗಾಗಿ ಅವು ಪ್ರತಿದೇಶದ ಅತ್ಯುನ್ನತ ಔಷದ ಮಂಡಳಿಗಳಿಂದ ಮಾನ್ಯತೆ ಪಡೆದು ನಂತರ ಮಾರುಕಟ್ಟೆಗೆ ಬರುತ್ತವೆ.Test  sensitivity ಅಂದರೆ  ವೈರಾಣು ಅತ್ಯಲ್ಪ ಪ್ರಮಾಣದಲ್ಲಿದ್ದರೂ ಅದನ್ನು ಈ ಕಿಟ್ ಗಳು ಕಂಡುಹಿಡಿಯಬೇಕು.  Test specificity ಅಂದರೆ ಕೋವಿಡ್ -19 ನ್ನು ಬಿಟ್ಟರೆ ಇನ್ಯಾವುದೇ ವೈರಾಣುಗಳಿದ್ದರೆ ಫಲಿತಾಂಶ ಪಾಸಿಟಿವ್ ಎಂದು ಬರಬಾರದು. ಇವೆರಡು ಗುಣಗಳಲ್ಲಿ ಯಾವುದರಲ್ಲಿ ಲೋಪವಾದರೂ ಫಲಿತಾಂಶಗಳು ಮನುಷ್ಯರಿಗೆ ಮಾರಕವಾಗುತ್ತವೆ.

    ಕೋವಿಡ್ ಪರೀಕ್ಷೆಯಿಂದ ಲಾಭಗಳೇನು?

    ಯಾವುದೇ ಪರೀಕ್ಷೆಯ ಉದ್ದೇಶ  ರೋಗವನ್ನು ಪತ್ತೆಹಚ್ಚುವುದು.ಆ ಮೂಲಕ ಸೋಂಕಿತರನ್ನು ಆರೋಗ್ಯವಂತರಿಂದ ದೂರವಿಡುವುದು, ಈಗಾಗಲೇ ಸಂಪರ್ಕಕ್ಕೆ ಬಂದಿರುವವರನ್ನು ಕ್ವಾರಂಟೈನ್ ನಲ್ಲಿರಲು ಆದೇಶಿಸಿ, ಪರೀಕ್ಷೆಗೆ ಒಳಪಡಿಸುವುದು, ಸೋಂಕಿತ ವ್ಯಕ್ತಿಗೆ ಅಗತ್ಯವಾದಲ್ಲಿ ಸಂಬಂಧಿತ ಚಿಕಿತ್ಸೆಯನ್ನು ನೀಡುವುದು.ಆ ಮೂಲಕ ಸಮುದಾಯದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸುವುದು ಇತ್ಯಾದಿ ಉತ್ತಮ ಉದ್ದೇಶಗಳಿವೆ.ಹಾಗಾಗಿ ಕೋವಿಡ್ ಪರೀಕ್ಷೆ ಅತ್ಯಗತ್ಯವಾಗಿ ಬೇಕು. ಅದರಲ್ಲೂ ವಯಸ್ಸಾದವರು, ಇತರೆ ಖಾಯಿಲೆಗಳಿರುವವರು ಮತ್ತು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರಲ್ಲಿ ಸೋಂಕನ್ನು ಮುಂಚಿತವಾಗಿಯೇ ಕಂಡುಹಿಡಿಯುವ ಮೂಲಕ ಅವರ ಜೀವಗಳನ್ನು ಉಳಿಸುವುದು ಸಾಧ್ಯವಾಗುತ್ತದೆ.

    ಇವೆಲ್ಲದರ ಜೊತೆ ಒಂದು ಪ್ಯಾಂಡೆಮಿಕ್ ನ ಶುರುವಾತು, ಹರಡುವಿಕೆ, ವೇಗ, ನಿಯಂತ್ರಣ, ಎರಡನೇ ಅಥವಾ ಮೂರನೆ ಅಲೆಗಳು ಇತ್ಯಾದಿಗಳ ಅಧ್ಯಯನಕ್ಕೂ ಕೋವಿಡ್ ಪರೀಕ್ಷೆ ಅಗತ್ಯವಾಗಿ ಬೇಕಾಗುತ್ತದೆ.

    ಒಂದು ದೇಶ ಇನ್ನೊಂದು ದೇಶದ ಪ್ರಜೆಗಳಿಗೆ ತಮ್ಮ ಬಾಗಿಲುಗಳನ್ನು ತೆರೆಯಬಹುದೇ, ಆರ್ಥಿಕ ಚಟುವಟಿಕಗಳನ್ನು ಆರಂಭಿಸಬಹುದೇ ಇತ್ಯಾದಿ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೂಡ ಕೋವಿಡ್ ಪರೀಕ್ಷೆಗಳು ಅತ್ಯಗತ್ಯವಾಗಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಆದರೆ ಪರೀಕ್ಷೆ ಕರಾರುವಕ್ಕಾದ ಮಾಹಿತಿ ನೀಡುವಲ್ಲಿ ವಿಫಲವಾದರೆ ಆ ಮೂಲಕ ಸರಣಿ ತಪ್ಪುಗಳಿಗೆ ಅನುವು ಮಾಡಿಕೊಡುತ್ತದೆ. ಹಾಗಾಗಿ ಪರೀಕ್ಷೆಗಳನ್ನು ನಡೆಸುವುದು ಅತ್ಯಗತ್ಯ.

    ಕೋವಿಡ್ ಪರೀಕ್ಷೆಯ ಮಿತಿಗಳು

    ಕೋವಿಡ್ ಪರೀಕ್ಷೆಯೆನ್ನುವುದು ಪ್ರತಿಶತ ಕರಾರುವಕ್ಕಾದ ಪರೀಕ್ಷೆಯೇನಲ್ಲ. ಇದರಲ್ಲಿ ಮಾದರಿಯನ್ನು ಸಂಗ್ರಹಿಸುವಾಗ, ಶೇಖರಿಸವಾಗ, ಪರೀಕ್ಷಿಸುವಾಗ ಮತ್ತು ವರದಿನೀಡುವಾಗ ಹಲವಾರು ದೋಷಗಳಾಗಬಹುದು.

    ಅದರಲ್ಲೂ ತ್ವರಿತವಾಗಿ ಫಲಿತಾಂಶ ನೀಡಬಹುದಾದ (Rapid ಟೆಸ್ಟ್) ಅಂದರೆ ಕೇಲವ ಅರ್ಧಗಂಟೆಯಲ್ಲಿ ಫಲಿತಾಂಶ ನೀಡಲು ಸಾಧ್ಯವಿರುವ ವಿಧಾನಗಳಿಂದ ಪರೀಕ್ಷೆಗಳ ಗುಣ ಮಟ್ಟದಲ್ಲೂ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ಬೇರೊಂದು ದೇಶದಿಂದ ಬರುವ ಪ್ರಯಾಣಿಕರ ಪರೀಕ್ಷೆಯನ್ನು ಏರ್ ಪೋರ್ಟಿನಲ್ಲೇ ಮಾಡಿದರೆನ್ನಿ. ಆಗ ಅವರ ದೇಹದಲ್ಲಿ ವೈರಾಣುಗಳು ಮೂಗು-ಗಂಟಲು ದ್ರವದಲ್ಲಿ ಅಂದುಕೊಂಡ ಪ್ರಮಾಣದಲ್ಲಿ ಇಲ್ಲದಿರಬಹುದು. ಹಾಗಾಗಿ ನೆಗೆಟಿವ್ ಬರುವ ಟೆಸ್ಟ್ ಮೂರು ದಿನಗಳ ನಂತರ ಪಾಸಿಟಿವ್ ಆಗಬಹುದು. ಆದರೆ ಆ ಜನರು ತಾವು ಕೋವಿಡ್ ಸೋಂಕಿತರಲ್ಲ ಎಂದು ಆ ವೇಳೆಗೆ ಊರೆಲ್ಲ ಓಡಾಡಿರಬಹುದು.ಈ ಕಾರಣ ಪರದೇಶದ ಪ್ರಯಾಣ ಮಾಡಿಬಂದ ಪ್ರಯಾಣಿಕರನ್ನು ಕ್ವಾರಂಟೈನ್ ನಲ್ಲಿಟ್ಟ ನಂತ72 ಗಂಟೆಗಳಲ್ಲಿ ಮತ್ತೆ ಪರೀಕ್ಷಿಸಬೇಕು ಎನ್ನುವ ಎಚ್ಚರಿಕೆಗಳನ್ನು ಅಧ್ಯಯನಕಾರರು ನೀಡಿದ್ದಾರೆ.Point of testing ಅಥವಾ ಯಾವ ಹಂತದಲ್ಲಿ ಪರೀಕ್ಷೆ ನಡೆಯಿತು ಎನ್ನುವುದುಇದೇ ಕಾರಣಕ್ಕೆ ಅತ್ಯಂತ ಮುಖ್ಯವಾಗುತ್ತದೆ.

    ಗಂಟಲು-ಮೂಗಿನ ದ್ರವದ ಕೋವಿಡ್ ಪರೀಕ್ಷೆಯಿಂದವೈರಸ್ಸಿನ ಆರ್. ಎನ್.ಎ ಅಥವಾ ಪ್ರೋಟೀನಿನ ಕುರುಹು ಆ ವ್ಯಕ್ತಿಯಲ್ಲಿದೆಯೇ ಎಂದು ಹೇಳಲು ಸಾಧ್ಯವಾಗುತ್ತದೆ. ಆದರೆ ವೈರಲ್ ಲೋಡ್, ಟಾಕ್ಸಿಸಿಟಿ ಇತ್ಯಾದಗಳ ಮಾಹಿತಿಗಳಿಗಾಗಿ ಹೆಚ್ಚಿನ ಪರೀಕ್ಷೆಗಳು ಬೇಕಾಗುತ್ತವೆ.ವೈರಸ್ಸು ನಮ್ಮ ದೇಹಕ್ಕೆ ಪ್ರವೇಶ ಕೊಟ್ಟು ಹೋಗಿರಬಹುದೇ ಎನ್ನುವ ಆಂಟಿಬಾಡಿ ಪರೀಕ್ಷೆ ಕೂಡ ಲೋಪಗಳಿಂದ ಕೂಡಿದೆ.ಆ ಬಗ್ಗೆ ಮುಂದೆ ಬರೆಯುತ್ತೇನೆ.

    ಕೋವಿಡ್ ಟೆಸ್ಟ್ ಗಳು ಮತ್ತು ವಿವಾದಗಳು

    ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನಂಜನಗೂಡಿನಲ್ಲಿ  ಡಾ.ನಾಗೇಂದ್ರ ಎನ್ನುವ ಸರ್ಕಾರಿ ವೈದ್ಯರ ಮೇಲೆ ದಿನಕ್ಕೆ ಇಂತಿಷ್ಟು ಟೆಸ್ಟ್ ಗಳನ್ನು ನಡೆಸಬೇಕೆಂಬ ಒತ್ತಡ ಇದ್ದಿತು, ಆದರೆ ಸೌಲಭ್ಯ ಇರಲಿಲ್ಲ ಎಂಬ ಆಪಾದನೆಗಳು ಕೇಳಿಬಂದವು. ಅದರ ಸತ್ಯಾ ಸತ್ಯತೆಗಳನ್ನು ಪ್ರಶ್ನಿಸದೆಯೂ ಹೇಳಬಹುದಾದರೆ, ಪ್ರತಿ ದೇಶದ ಮೇಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟ್ ನಡೆಸಬೇಕಾದ ಒತ್ತಡವಿದೆ. ವಿರೋಧ ಪಕ್ಷಗಳು, ವಿಶ್ವ ಆರೋಗ್ಯ  ಸಂಸ್ಥೆಗಳು, ಪಾಲಿಸಿ ಮೇಕರ್ ಗಳು ಸಂಖ್ಯೆಯನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈ ಗೊಳ್ಳಲು ಕೋವಿಡ್ ಮಂಡಳಿಯ ಕೆಲಸಗಾರರ ಮೇಲೆ ಒತ್ತಡ ಹೇರುತ್ತಿರುವುದು ಸುಳ್ಳಲ್ಲ.

     ಆದರೆ ಕೋವಿಡ್ ಪರೀಕ್ಷೆಯ ಫಲಿತಾಂಶದ ಗುಣಮಟ್ಟದ ಮೇಲೆ ದೊಡ್ಡ ಕಪ್ಪು ಛಾಯೆಯಿದೆ.ಇದು ಮುಂದಿನ ದಿನಗಳಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಸಾಧ್ಯತೆಗಳಿವೆ. ಏಕೆಂದರೆ ಸರಿಯಾದ ಫಲಿತಾಂಶ ನೀಡದ ಪಾಸಿಟಿವ್ ಪರೀಕ್ಷೆಗಳಿಂದ ಸುಮ್ಮ ಸುಮ್ಮನೆ ಜನಸಾಮಾನ್ಯರು ಕ್ವಾರಂಟೈನ್ ಗೆ ಒಳಗಾದರೆ, ಸುಳ್ಳು ಸುಳ್ಳೆ ನೆಗೆಟಿವ್ ಟೆಸ್ಟ್ ಗಳಿಂದ ಮತ್ತಷ್ಟು ಸೋಂಕು ಮತ್ತು ಸಾವುಗಳು ಸಂಭವಿಸಿ ಇಡೀ ದೇಶಗಳೇ ನಲುಗಬಲ್ಲವು.

    ಉದಾಹರಣೆಗೆ, ಚೈನಾ ದೇಶದಲ್ಲಿ  ಕೋವಿಡ್ ನೆಗೆಟಿವ್ ಎಂದು ಫಲಿತಾಂಶ ಬಂದಿದ್ದ 213 ಜನ  ನಾನಾ ಕಾರಣಗಳಿಂದ ಆಸ್ಪತ್ರೆಗೆ ದಾಖಲಾದರು. ಇವರಲ್ಲಿ 37 ಜನ ಮಾರಣಾಂತಿಕ ಚಿಂತಾಜನಕ ಸ್ಥಿತಿಯನ್ನು ತಲುಪಿದ್ದರು. ಇದರಿಂದ ಎಚ್ಚೆತ್ತ ಒಂದು ಅಧ್ಯಯನಕಾರರ ತಂಡ 927 ಶಂಕಿತ ಆದರೆ ಈಗಾಗಲೇ ನೆಗೆಟಿವ್ ಎಂಬ ಫಲಿತಾಂಶ ಬಂದಿದ್ದ ಜನರ ಮೇಲೆ ಅಧ್ಯಯನ  ನಡೆಸಿ ಅವರ ಗಂಟಲು ಮತ್ತು ಮೂಗಿನ ದ್ರವಗಳನ್ನು ಬೇರೆ ಬೇರೆ ರೀತಿ ಪರೀಕ್ಷಿಸಿದಾಗ ಅವರಲ್ಲಿ ಶೇಕಡಾ3-29 ರಷ್ಟು ಜನರಲ್ಲಿ ಕೋವಿಡ್ ಇದ್ದದ್ದು ಧೃಡವಾಯ್ತು.ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳನ್ನು ನಡೆಸಬೇಕು ಎನ್ನುವ ಕರೆಗೆ ಬಲ ದೊರಕಿತು.

    ಇಡೀ ಕೋವಿಡ್ ಅಧ್ಯಾಯ ಒಂದು ರೀತಿಯಲ್ಲಿ  ಕಾಲದ ಜೊತೆಗಿನ ಸ್ಪರ್ಧೆಯ ರೀತಿಯಲ್ಲಿ ಸಾಗುತ್ತಿರುವುದು ಕೂಡ ಮತ್ತೊಂದು ದೊಡ್ಡ ಕಾರಣ.

     ಇವೆಲ್ಲದರ ಜೊತೆ ಪ್ಯಾಂಡೆಮಿಕ್ ಶುರುವಾಗಿ 8 ತಿಂಗಳುಗಳೇ ಕಳೆದಿದ್ದರೂ,ಯಾವುದೇ ಲಕ್ಷಣಗಳಿಲ್ಲದ ರೀತಿಯ ಕೋವಿಡ್ ಸೋಂಕಿತರನ್ನು ಹೇಗೆ ಪತ್ತೆ ಹಚ್ಚುವುದು?- ಎನ್ನುವುದು ಮಾತ್ರ ಇನ್ನೂ ಒಂದು ಯಕ್ಷಪ್ರಶ್ನೆಯಾಗೇ ಉಳಿದಿದೆ. ಉತ್ತರ ಸಿಗದಿದ್ದಲ್ಲಿ ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುವುದಿಲ್ಲ.ಸೋಂಕು ಹರಡುವುದನ್ನೂ ತಡೆಯಲಾಗುವುದಿಲ್ಲ.

     ಮನುಷ್ಯರ ಮೂಲಕ ಜರುಗಬಲ್ಲ, ತಡೆಯಬಲ್ಲ ಎಲ್ಲ ತಪ್ಪುಗಳನ್ನು ಹತೋಟಿಯಲ್ಲಿಟ್ಟು, ಉತ್ತಮ ಪ್ರಯೋಗಾಲಯದ ವ್ಯವಸ್ಥೆಗಳನ್ನು  ಕಲ್ಪಿಸಿ, ಉತ್ತಮ ಟೆಸ್ಟ್ ಕಿಟ್ ಗಳನ್ನು ಬಳಸುವುದರ ಜೊತೆ   ಟೆಸ್ಟ್ ಫಲಿತಾಂಶ ಏನೇ ಆಗಿದ್ದರೂ ಪಾಲಿಸಬೇಕಾದ ನಿಯಮಗಳು ಒಂದೇ ಆಗಿವೆ. ಅಂದರೆ ಟೆಸ್ಟ್ ಪಾಸಿಟಿವ್ ಆಗಿರಲಿ ,ನೆಗೆಟಿವ್ ಆಗಿರಲಿ, ನಮ್ಮಲ್ಲಿ ಲಕ್ಷಣಗಳಿರಲಿ, ಇಲ್ಲದಿರಲಿ ಒಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾದುಕೊಳ್ಳುವುದು, ಮಾಸ್ಕ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಇತ್ಯಾದಿಗಳನ್ನು ಇದೇ ಕಾರಣಕ್ಕೆ ಮುಂದುವರೆಸಬೇಕಾದ ಜರೂರು ಅಗತ್ಯ ಮಾತ್ರ ಹಾಗೇ ಉಳಿದಿದೆ.ಇದೊಂದೇ ಸಧ್ಯಕ್ಕಿರುವ ಸರಳ ಉಪಾಯ.

    ಹಿರಿಯ ಮಿತ್ರ ಶೇಷನಾರಾಯಣ

    ಶೇಷನಾರಾಯಣ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಾದಂಬರಿ, ಸಣ್ಣ ಕಥೆ , ಅನುವಾದ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ ಪ್ರತಿಭಾವಂತ. ಆದರೆ ವಿಮರ್ಶಕರಿಂದ ಅವರ ಸಾಹಿತ್ಯಕ್ಕೆ ದೊರಕಬೇಕಾದ ಮನ್ನಣೆ ಸಿಗಲಿಲ್ಲ.ಕಳೆದ ವರ್ಷ ಇದೇ ಆಗಸ್ಟ್ ತಿಂಗಳಲ್ಲಿ ನಮ್ಮಿಂದ ದೂರವಾದ ಶೇಷನಾರಾಯಣ ಅವರನ್ನು ಅವರ ಬಹುಕಾಲದ ಗೆಳೆಯ ಸಾಹಿತಿ ಈಶ್ವರಚಂದ್ರ ಇಲ್ಲಿ ನೆನಪಿಸಿಕೊಂಡಿದ್ದಾರೆ.

    ಈಶ್ವರಚಂದ್ರ

    ನಾನು ಶೇಷನಾರಾಯಣ ಅವರನ್ನು ನೋಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಬಿಎಂಶ್ರೀ ಅಚ್ಚುಕೂಟದಲ್ಲಿ. ಅವರು ಅಲ್ಲಿ ಮ್ಯಾನೇಜರಾಗಿದ್ದರು. ಆ ವೇಳೆಗೆ ನಾನು ಅವರ ‘ಮೊಲ್ಲೆ ಮಲ್ಲಿಗೆ’ ಕಥಾ ಸಂಕಲನವನ್ನು ಓದಿ ಮೆಚ್ಚಿಕೊಂಡಿದ್ದೆ. ನನ್ನ ಒಂದು ಕಥಾಸಂಕಲನವನ್ನು ಮುದ್ರಿಸಲು ಸಾಧ್ಯವೇ ಎಂದು ವಿಚಾರಿಸಲು ಹೋಗಿದ್ದೆ. ಅಲ್ಲಿ ಕನ್ನಡ ನಿಘಂಟುವಿನ ಕೆಲಸ ಭರದಿಂದ ನಡೆಯುತ್ತಿತ್ತು. ಹೊರಗಿನ ಕೆಲಸಗಳನ್ನು ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ.

    ಅಲ್ಲದೆ ಲೇಖಕನೊಬ್ಬ ಸ್ವಂತ ಹಣದಿಂದ ಪುಸ್ತಕ ಪ್ರಕಟಿಸಿ ಕೈ ಸುಟ್ಟುಕೊಳ್ಳುವುದು ಸೂಕ್ತವಲ್ಲ , ಯಾರಾದರೂ ಪ್ರಕಾಶಕರನ್ನು ಹಿಡಿಯಿರಿ ಎಂದು ಅವರು ಸಲಹೆ ಕೊಟ್ಟರು. ಹೀಗೆ ಪ್ರಾರಂಭವಾದ ನಮ್ಮ ಸ್ನೇಹ ಸುಮಾರು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಅವಿರತವಾಗಿ ಮುಂದುವರಿಯಿತು. ಅವರು ವಿಕಾಸ ಮುದ್ರಣ ಎಂಬ ದೊಡ್ಡ ಮುದ್ರಣಾಲಯವನ್ನು ಸ್ಥಾಪಿಸಿದರು. ಅದು ಲೇಖಕರು ಸೇರುವ ಒಂದು ತಾಣವೇ ಆಯಿತು .ನಾವು ಕೆಲವು ಸ್ನೇಹಿತರು ಸೇರಿ ಆರಂಭಿಸಿದ ಅಭಿರುಚಿ ಪ್ರಕಾಶನದ ಕೆಲವು ಪುಸ್ತಕಗಳನ್ನು ಅವರು ಅಚ್ಚುಕಟ್ಟಾಗಿ ಮುದ್ರಿಸಿದರು. ಉತ್ತಮ ಮುದ್ರಣಕ್ಕೆ ಅವರ ಮುದ್ರಣಾಲಯ ಪ್ರಸಿದ್ಧವಾಯಿತು. ಎಲ್ಲಾ ಕಡೆಯಿಂದ ಲೇಖಕರು ಬಂದು ತಮ್ಮ ಪುಸ್ತಕಗಳನ್ನು ಅಲ್ಲಿ ಮುದ್ರಿಸಲು ಕೊಟ್ಟರು. ಕೆಲವರು ಹಣ ಕೊಡಲಿಲ್ಲ. ಸಾಲ ಬೆಳೆಯಿತು. ಅದು ‘ ಮನೆಹಾಳ ಬಡ್ಡಿಯ ಸಾಲ ‘ ಎಂದು ಶೇಷನಾರಾಯಣ ಹೇಳುತ್ತಿದ್ದರು. ಅವರು ವ್ಯವಹಾರ ಕುಶಲಿಯಲ್ಲದ ಭೋಳೆ ಮನುಷ್ಯ. ಎಲ್ಲರನ್ನೂ ನಂಬುತ್ತಿದ್ದರು ಅದರಿಂದ ನಷ್ಟ ಅನುಭವಿಸುವಂತಾಯಿತು. ಅನಿವಾರ್ಯವಾಗಿ ಮುದ್ರಣಾಲಯವನ್ನು ಮುಚ್ಚಿದರು.

    ಶೇಷನಾರಾಯಣ ಅವರದು ಆರಂಭದಿಂದಲೂ ಕಷ್ಟದ ಜೀವನ. ಜಲ್ಲಿಕಲ್ಲಿನ ಮೇಲೆ ಪೇಪರ್ ಹಾಸಿಕೊಂಡು ಮಲಗುತ್ತಿದ್ದ ದಿನಗಳನ್ನು ಆಗಾಗ ನೆನೆಯುತ್ತಿದ್ದರು. ಹಿರಿಯ ಪತ್ರಕರ್ತರೊಡನೆ ಮತ್ತು ಮುದ್ರಣಾಲಯಗಳಲ್ಲಿ ಕೆಲಸಮಾಡಿ ಗಳಿಸಿದ ಅನುಭವದಿಂದ ಸ್ವಂತ ಮುದ್ರಣಾಲಯವನ್ನು ಸ್ಥಾಪಿಸಿದರೂ ಅದೃಷ್ಟ ಅವರಿಗೆ ಒಲಿಯಲಿಲ್ಲ.

    ಶೇಷನಾರಾಯಣ ಆಗಾಗ ನಮ್ಮ ಮನೆಗೆ ಭೇಟಿ ಕೊಡುತ್ತಿದ್ದರು. ಹಾಗೆ ಬಂದಾಗಲೆಲ್ಲ ತಮ್ಮ ಹೊಸ ಪುಸ್ತಕವೊಂದನ್ನು ನನಗೆ ಕೊಡುತ್ತಿದ್ದರು. ‘ ಶ್ರೀ ಈಶ್ವರಚಂದ್ರ ಅವರಿಗೆ, ವಿಶ್ವಾಸದಿಂದ, ಶೇನಾ ‘ ಎಂದು ತಮ್ಮ ವಿಶಿಷ್ಟ ಶೈಲಿಯ ಅಕ್ಷರದಲ್ಲಿ ಬರೆದಿರುತ್ತಿದ್ದರು. ಅವರು ಮೂಲತಃ ಕಾದಂಬರಿಕಾರರು. ಹದಿನೇಳು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ‘ಬೀಸು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ‘ಅಯೋಧ್ಯೆಯಲ್ಲಿ ರಾಮನಿಲ್ಲ’ ಅವರ ವಿಶಿಷ್ಟವಾದ ರಾಜಕೀಯ ಕಾದಂಬರಿ. ಪ್ರಾಣಿಗಳನ್ನು ಪಾತ್ರಗಳನ್ನಾಗಿ ಮಾಡಿಕೊಂಡು ಅವರು ಕಥೆ, ಕಾದಂಬರಿಗಳನ್ನು ರಚಿಸಿರುವುದುಂಟು. ಅವರು ಆರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ವಿಭೀಷಣ’ ನಾಟಕವಾದರೆ, ‘ಬಾಲಮುರಳಿ’ ಮಕ್ಕಳ ಪುಸ್ತಕ. ಒಬ್ಬ ಮುದ್ರಕನಾಗಿ ಸಾಹಿತಿಗಳ ಒಡನಾಟದಲ್ಲಿ ಆದ ಅನುಭವಗಳನ್ನು ‘ಛಾಪಕನ ಛಾಪು’ ಕೃತಿಯಲ್ಲಿ ನಿರೂಪಿಸಿದ್ದಾರೆ.

    ‘ಕಾವೇರಿ : ಒಂದು ಚಿಮ್ಮು ಒಂದು ಹೊರಳು’ ಎಂಬ ಅವರ ಕೃತಿ ಕಾವೇರಿ ಜಲವಿವಾದದ ಸಂಪೂರ್ಣ ಚಿತ್ರವನ್ನು ನೀಡುತ್ತದೆ. ಈ ಪುಸ್ತಕವನ್ನು ಅವರೇ ತಮಿಳಿಗೆ ಅನುವಾದ ಮಾಡಿ ತಮಿಳರ ಕೆಂಗಣ್ಣಿಗೆ ಗುರಿಯಾಗಿರುವುದೂ ಉಂಟು.

    ಶೇಷನಾರಾಯಣ ಉತ್ತಮ ಅನುವಾದಕರೂ ಹೌದು. ಸುಮಾರು ಹತ್ತು ಕೃತಿಗಳನ್ನು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ . ಅವುಗಳಲ್ಲಿ ‘ಪಾರ್ಥಿಬನ ಕನಸು’, ‘ಒಂದು ಕಡಲ ತೀರದ ಗ್ರಾಮದಲ್ಲಿ’ ಮುಖ್ಯವಾದವು. ‘ಹದಿನೆಂಟನೆಯ ಅಕ್ಷರೇಖೆ’ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಪಾತ್ರವಾಗಿದೆ. ಅವರು ಮಾಸ್ತಿಯವರ ಸಣ್ಣಕಥೆಗಳನ್ನು ‘ಮಾಸ್ತಿ ಸಿರು ಕತೈಗಳ್’ ಎಂಬ ಹೆಸರಿನಲ್ಲಿ ತಮಿಳಿಗೆ ಅನುವಾದಿಸಿದ್ದಾರೆ. ಎಸ್ ಎಲ್ ಭೈರಪ್ಪ ಅವರ ದಾಟು ಕಾದಂಬರಿಯನ್ನು ‘ತಾಂಡು’ ಎಂಬ ಹೆಸರಿನಲ್ಲಿ ತಮಿಳಿಗೆ ಅನುವಾದಿಸಿದ್ದಾರೆ. ಕನ್ನಡ ಮತ್ತು ತಮಿಳು ಭಾಷೆಗಳ ನಡುವಣ ಸೇತುವಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತಮಿಳರು ಅವರನ್ನು ಸನ್ಮಾನಿಸಿದ್ದಾರೆ.

    ಕರ್ನಾಟಕದಲ್ಲಿ ವಿಮರ್ಶಕರು ಶೇಷನಾರಾಯಣರಿಗೆ ನ್ಯಾಯ ಸಲ್ಲಿಸಲಿಲ್ಲ. ರಾಜ್ಯೋತ್ಸವ ಪ್ರಶಸ್ತಿಯನ್ನು ಕೊನೆಯ ಕ್ಷಣದಲ್ಲಿ ಎರಡನೆಯ ಪಟ್ಟಿಯಲ್ಲಿ ಪ್ರಕಟಿಸಿದ ಕಾರಣದಿಂದ ಅವರು ಪ್ರಶಸ್ತಿ ಪ್ರದಾನ
    ಸಮಾರಂಭಕ್ಕೆ ಹೋಗಲಿಲ್ಲ. ಅನಂತರ ಮನೆಯಲ್ಲಿಯೇ ಅವರಿಗೆ ಸನ್ಮಾನ ಮಾಡಿದರು. ಸರ್ಕಾರದಿಂದ ಬರುತ್ತಿದ್ದ ವೃಧ್ಧಾಪ್ಯ ವೇತನ ಕೂಡ ಇದ್ದಕ್ಕಿದ್ದಂತೆ ನಿಂತು ಹೋಯಿತು. ಅವರು ಯಾರನ್ನೂ ಯಾಚಿಸಲಿಲ್ಲ . ಎಲ್ಲ ನೋವುಗಳನ್ನು ನುಂಗಿಕೊಂಡು ನಗುತ್ತಿದ್ದರು. ಅವರನ್ನು ನೆನೆದಾಗ ಆ ನಗುವಿನ ಚಿತ್ರವೇ ಮನಸ್ಸಿನಲ್ಲಿ ಮೂಡುತ್ತದೆ.

    ಶೇಷನಾರಾಯಣ ಅವರು ತಮ್ಮ ಕೊನೆಯ ಕೆಲವು ವರ್ಷಗಳನ್ನು ಪತ್ನಿ ಶ್ರೀಮತಿ ಸುಭದ್ರ ಮತ್ತು ನಾಲ್ಕು ಮಕ್ಕಳೊಡನೆ ಲಕ್ಕಪ್ಪಾ ಲೇಔಟಿನ ಸಿಂಗಾಪುರ ಬಡಾವಣೆಯಲ್ಲಿ ನೆಮ್ಮದಿಯಿಂದ ಕಳೆದರು. ಮಕ್ಕಳು ಅವರನ್ನ ಕಾಳಜಿಯಿಂದ ನೋಡಿಕೊಂಡರು. ಅಕ್ಕಪಕ್ಕದ ರಸ್ತೆಗಳಲ್ಲಿ ಮಕ್ಕಳು ಕಟ್ಟಿದ ನಾಲ್ಕೂ ಮನೆಗಳಿಗೆ ಓಡಾಡಿಕೊಂಡು ಗೆಲುವಿನಿಂದಲೇ ಇದ್ದರು. ದಿನಾಂಕ 07.08.2019 ರಂದು ತಮ್ಮ 92ನೇ ವಯಸ್ಸಿನಲ್ಲಿ ತೀರಿಕೊಂಡರು. ಇದೀಗ ಒಂದು ವರ್ಷ ಕಳೆದಿದೆ ಪ್ರಥಮ ಪುಣ್ಯತಿಥಿಯಂದು ಈ ಹಿರಿಯ ಮಿತ್ರರನ್ನು ನೆನೆಯುತ್ತಾ ಹಿಂದಿನ ಸ್ನೇಹ ಪ್ರಸಂಗಗಳೆಲ್ಲ ಸ್ಮೃತಿಪಟಲದಲ್ಲಿ ಹಾದುಹೋಗುತ್ತವೆ.

    ನಂದಿ ಬೆಟ್ಟದಲ್ಲಿ ಹುಚ್ಚು ಸಾಹಸ

    ನಮ್ಮ ವೇದಿಕೆ ಅಂಕಣಕ್ಕೆ ಹಲವಾರು ಲೇಖನಗಳು ಹರಿದು ಬರುತ್ತಿವೆ. ಹುಡುಗು ಬುದ್ಧಿ ಎಂಥ ಅವಾಂತರಗಳ ಮಾಡಿಸಬಲ್ಲದು ಎಂಬುದಕ್ಕೆ ಈ ಲೇಖನದ ಘಟನೆ ಒಂದು ಉದಾಹರಣೆ. ಈ ಲೇಖನವನ್ನು ಕಳುಹಿಸಿದ ದಾವಣಗೆರೆಯ ಮಮತಾ ವೀರಯ್ಯ ಹೀಗೆ ಬರೆಯುತ್ತಾರೆ…..ಇದು ನನ್ನ ತಾತ ಜಿ. ಚಂದ್ರಯ್ಯ ಬರೆದ ಲೇಖನ. ತಮ್ಮ 90 ರ ವಯಸ್ಸಿನಲ್ಲಿ ನಿನ್ನೆ ಅವರ ವ್ಯಾಸಂಗ ಬದುಕಿನಲ್ಲಿ ನಲ್ಲಿ ನಡೆದ ಒಂದು ಘಟನೆ ಬರೆದಿದ್ದಾರೆ . 13 ವರ್ಷಗಳ ಹಿಂದೆ ಗ್ಯಾಂಗ್ರಿನ್ ಗೆ ತುತ್ತಾಗಿ ತಮ್ಮ ಒಂದು ಕಾಲು ಕಳೆದುಕೊಂಡಿದ್ದಾರೆ. ಇಂದಿಗೂ ಬತ್ತದ ಸಾಹಿತ್ಯ ಪ್ರೇಮ .ಇವರು ಮೂಲತಃ ಚನ್ನಗಿರಿ ತಾಲ್ಲೂಕಿನ ಸೋಮಲಾಪುರದವರು ಕಳೆದ 35 ವರ್ಷಗಳಿಂದ ಕುಟುಂಬದವರೊಂದಿಗೆ ಮೈಸೂರಿನಲ್ಲಿ ವಾಸವಾಗಿದ್ದಾರೆ. ಇವರನ್ನು ಪರಿಚಯಿಸಬೇಕೆಂದು ಮನ ಮಿಡಿಯಿತು. ಇವರ ಬರಹ ಓದಿ ಪ್ರತಿಕ್ರಿಯಿಸಿ ನಮ್ಮ ಬಾಲ್ಯದ ಇಂತಹ ಸಾಹಸವನ್ನು ಮೆಲುಕುಹಾಕೋಣ.

    ಜಿ. ಚಂದ್ರಯ್ಯ

    ಇದು ನಡೆದು ಇಂದಿಗೆ 64 ವರ್ಷಗಳಾಯಿತು, 1956ನೇ ಇಸವಿ. ನನಗೆ ಆಗ ಸುಮಾರು 25 ವರ್ಷ. ಬೆಂಗಳೂರಿನ ಗೌರ್ನಮೆಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೈನಲ್ ವರ್ಷದ ಅವಧಿ. ಕಾಲೇಜಿನಿಂದ ನಂದಿಬೆಟ್ಟದ ಹತ್ತಿರ ಸರ್ವೆ ಕ್ಯಾಂಪ್ ಹಾಕಿದ್ದರು. ನಾವುಗಳು ಸುಮಾರು ನೂರು ಹುಡುಗರಿದ್ದೆವು. ನಂದಿಬೆಟ್ಟದ ಹತ್ತಿರ ಇರುವ ಭೋಗನಂದೀಶ್ವರ ದೇವಾಲಯದಲ್ಲಿ ನಮ್ಮ ಕ್ಯಾಂಪ್ ಇತ್ತು. ಅದರ ಪಡಸಾಲೆಯಲ್ಲಿ ನಾವು ಮಲಗುತ್ತಿದ್ದೆವು.

    ಒಂದು ದಿನ ನಾನೂ ಸೇರಿ ಕೆಲವು ಹುಡುಗರು ನಂದಿಬೆಟ್ಟವನ್ನು ಬಂಡೆಯ ಮೇಲಿಂದಲೇ ಹತ್ತಬೇಕೆಂದು ತೀರ್ಮಾನಿಸಿದೆವು. ನಾವೆಲ್ಲರೂ 22ರಿಂದ 25 ವರ್ಷದೊಳಗಿದ್ದೆವು. ನಮಗೆ ಆಗ ಯಾವ ಟ್ರೆಕಿಂಗ್ ಆಗಲೀ ಬೆಟ್ಟ ಹತ್ತುವ ಟ್ರೈನಿಂಗ್ ಆಗಲೀ ಇರಲಿಲ್ಲ. ಏನೋ ಹುಮ್ಮಸ್ಸು – ಹುಡುಗುತನ.

    ಸುಮಾರು 25-30 ಹುಡುಗರು ಬೆಟ್ಟ ಹತ್ತಲು ಸಾಯಂಕಾಲ ನಾಲ್ಕು ಘಂಟೆಗೆ ಹೊರೆಟೆವು. ಬೆಟ್ಟದ ತಳದಿಂದ  ಸುಮಾರು 5000 ಸಾವಿರ ಅಡಿ ಎತ್ತರ ಪೂರ್ತಿ ಬಂಡೆಗಳು.ಸುಮಾರು ಹುಡುಗರು ಅರ್ಧಕ್ಕಿಂತ ಕಡಿಮೆ ಎತ್ತರದಲ್ಲೇ ಆಗುವುದಿಲ್ಲ ಎಂದು ಇಳಿದುಹೋದರು. ಎತ್ತರವಾದಂಗೆ ಬಂಡೆ ಬಹಳ ಸ್ಟೀಪ್ ಆಗುತ್ತಾ ಹೋಯಿತು. ಇನ್ನೂ ಕೆಲವರು ಸ್ವಲ್ಪ ಹತ್ತಿ ಅವರೂ ಇಳಿದುಹೋದರು. ಕೊನೆಗೆ ಎಂಟು ಜನ ಮಾತ್ರ ಉಳಿದುಕೊಂಡೆವು.

    ಹತ್ತಲೇ ಬೇಕೆಂದು ನಮ್ಮ ತೀರ್ಮಾನ. ಮೇಲೆ ಹತ್ತುವುದು ಕಷ್ಟವಾದರೂ ಕೆಳಗಿಳಿಯುವುದು ಇನ್ನೂ ಅಪಾಯವಾಗಿತ್ತು. ತುಂಬಾ ಇಳಿಜಾರು. ಬಂಡೆ ಮೇಲೆ ತೆವಳುತ್ತಾ ಮೇಲೇರಿದೆವು. ಆಗ ಸ್ವಲ್ಪ ಸಣ್ಣದಾಗಿ ಮಳೆ ಬಂತು. ಬಂಡೆ ಜಾರಲಿಕ್ಕೆ ಶುರುವಾಯಿತು. ನಾವಿನ್ನು ಬೆಟ್ಟದ ಕೆಳಗೆ ಬೀಳುತ್ತೇವೆಂದು ತಿಳಿದು ನಮ್ಮ ಕೊನೆ ಇವತ್ತೇ ಎಂದೆನಿಸಿತು. ಒಂದು ಕಡ್ಡಿ ಸಿಕ್ಕರೂ ಆಸರೆಗೆ ಹಿಡಿದುಕೊಳ್ಳಬೇಕೆಂಬ ಮನಸ್ಸು. ಹಾಗೇ ಬಂಡೆಮೇಲೆ ಮಲಗಿ ತೆವಳುತ್ತಾ ಮೆಲ್ಲಮೆಲ್ಲನೆ ಮೇಲೇರುತ್ತಾ ಹೋದೆವು. ನಮ್ಮಕಥೆ ಮುಗಿಯಿತು ಎಂದು ಹೆದರಿಕೆಯಾಯಿತು. ಏನೋ ಹುಚ್ಚು ಧೈರ್ಯ ಮಾಡಿದೆವು.  ಮರಣವೇ ಸಿದ್ಧ ಎಂದಮೇಲೆ ಹೆದರಿಕೆ ಏಕೆ? 

    ಆಗಲೇ ಕತ್ತಲಾಯಿತು. ಕೊನೆಗೆ  ಬಂದಾಗ ಸುಮಾರು 8-9 ಅಡಿಯ ಕಲ್ಲಿನ ಗೋಡೆಯ ಬುಡಕ್ಕೆ ಬಂದೆವು.ಒಬ್ಬರು ನಿಂತು ಇನ್ನೊಬ್ಬರು ಅವರ ಸಪೋರ್ಟ್ ಇಂದ ಕಲ್ಲಿನ ಸಂಧಿ ಹಿಡಿದುಕೊಂಡು ಮೂರು ಜನ ಮೇಲೆ ಹತ್ತಿದೆವು. ಬಂಡೆಯ ಆಚೆಕಡೆ ಧುಮಕಿ ಹತ್ತಿರವೇ ಇದ್ದ ಹೋಟೆಲ್ಗೆ ಹೋಗಿ ಹೇಳಿದೆವು.ಅವರಲ್ಲಿ ಕೆಲವರು ಲಾಟೀನು ಹಿಡಿದು  ಹಗ್ಗ ತಂದು ಉಳಿದ ಐವರನ್ನು ಮೇಲಕ್ಕೆ ಎಳೆದರು. 
    ಏನಾದರೂ ಹಾವುಗಳದ್ದರೆ ನಿಮ್ಮ ಗತಿ ಏನಾಗುತ್ತಿತ್ತು  ಅಂತ ಹೇಳಿ ನಮ್ಮ ಹುಚ್ಚು ಸಾಹಸಕ್ಕೆ ಚೆನ್ನಾಗಿ ಬೈದರು.ಆಮೇಲೆ ಅಲ್ಲೇ ಹೋಟೆಲಿನಲ್ಲಿ ಊಟ ಮಾಡಿದೆವು. ಒಂದು ರೂಪಾಯಿಗೆ ಫುಲ್ ಊಟ, ಅನ್ನ, ಸಾರು, ಪಲ್ಯ ಹಪ್ಪಳ ಮತ್ತು ಮಜ್ಜಿಗೆ. ನಂತರ ರಸ್ತೆಯ ಮೂಲಕ ಕೆಳಗೆ ಬಂದೆವು. ಕೆಳಗೆ ಇದ್ದ ಎಲ್ಲರಿಗೂ ಗಾಬರಿಯಾಗಿತ್ತು. ನಮ್ಮ ಲೆಕ್ಚರರ್ಸ್ ಬಾಯಿಗೆ ಬಂದ ಹಾಗೆ ಬೈದರು. ನಾವು ಸುಮ್ಮನೆ ಬೈಸಿಕೊಂಡು ನಿಂತಿದ್ದೆವು.

    ಮೊದಲು ಹತ್ತಿದ ಮೂವರಲ್ಲಿ ನಾನು , ಕೃಷ್ಣಪ್ಪ ಮತ್ತು ಮೂರನೇ ಹೆಸರು ಮರೆತುಹೋಗಿದೆ, ಬಹುಶಃ ಬಸವರಾಜು ಇರಬೇಕು. ಈ ಸುದ್ದಿಯನ್ನು ಕೇಳಿದವರೆಲ್ಲಾ ಇದುವರೆಗು ಯಾರೂ ಬಂಡೆಯ ಕಡೆಯಿಂದ ಮೇಲೇರಿದ್ದನ್ನು ಕೇಳೇಯಿಲ್ಲ ಎಂದರು. ಪಕ್ಕದಲ್ಲೇ ಟಿಪ್ಪು ಡ್ರಾಪ್ ಇತ್ತು. ಅನೇಕರು ನಂಬಲೇ ಇಲ್ಲ.

    ಬೆಟ್ಟ ಹತ್ತುವ ಟ್ರೈನಿಂಗ್ ಏನೂ ಇಲ್ಲದೇ, ಯಾವ ಸಲಕರಣೆಯೂ ಇಲ್ಲದೇ ನಾವು ಹತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ಮೈ ಝಂ ಎನಿಸುತ್ತದೆ. ಮರಣ ಗ್ಯಾರಂಟಿ ಎಂದು ತಿಳಿದುಕೊಂಡಮೇಲೆ ಒಂದು ಹುಚ್ಚು ಧೈರ್ಯ ಬರುತ್ತದೆ. 
    ಏಕೋ ನೆನೆಪು ಬಂತು, ಬರೆದು ಇಡಬೇಕೆಂದು ಮನಸ್ಸು ಮಾಡಿದೆ.

    Photo by Sebin Thomas on Unsplash

    ರಾಜ್ಯ ಸಭೆಗೆ ಖರ್ಗೆ ಆಯ್ಕೆಯೇ ಕಾಂಗ್ರೆಸ್ ಭಿನ್ನಮತಕ್ಕೆ ಕಾರಣವಾಯಿತೇ ?


    ಕಾಂಗ್ರೆಸ್ ಏನೇ ಸಮಜಾಯಿಸಿ ಕೊಟ್ಟುಕೊಳ್ಳಲಿ, ಆದರೆ ಪಕ್ಷದೊಳಗೆ ಭಿನ್ನಮತ ಉಲ್ಭಣಿಸಿರುವುದಂತೂ ಸತ್ಯ. ಕಾಂಗ್ರೆಸ್ ನ ಒಳಗೆ ಭಿನ್ನಮತ ಭುಗಿಲೇಳಲು ಕಾರಣಗಳಾದರೂ ಏನು ? ಕೇವಲ ನಾಯಕತ್ವ ಬದಲಾವಣೆಯ ಆಗ್ರಹವೇ ? ಅಥವಾ ಇನ್ನೇನಾದರೂ ಅಘೋಷಿತ ಅಂಶಗಳು ಇವೆಯೇ ? ಹೌದು, ಈ ಪ್ರಶ್ನೆ ಏಳಲು ಸಾಕಷ್ಟು ಕಾರಣಗಳಿವೆ.

    ರಾಜ್ಯಸಭೆ ಚುನಾವಣೆ

    ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆಗೆ ಸ್ಥಾನ ಕಲ್ಪಿಸಲಾಯಿತು. ಸ್ಥಳೀಯ ನಾಯಕರಿಗೂ ಗೊತ್ತಿಲ್ಲದ ರೀತಿಯಲ್ಲಿ ಏಕಾಏಕಿ ಖರ್ಗೆಯವರ ಅಭ್ಯರ್ಥಿತನವನ್ನು ಘೋಷಿಸಿ ಟಿಕೆಟ್ ನೀಡಲಾಯಿತು. ಒಟ್ಟು ನಾಲ್ಕು ಸೀಟುಗಳ ಪೈಕಿ ಒಂದು ಸೀಟು ಕಾಂಗ್ರೆಸ್ ಗೆ ದಕ್ಕಿತು. ಇನ್ನೊಂದು ನಮ್ಮವರೇ ಆದ ಮಾಜಿ ಪ್ರಧಾನಿ ದೇವೇಗೌಡರಿಗೆ ಲಭಿಸಿತು ಬಿಡಿ.

    ಆದರೆ 2014 ಮತ್ತು 2019ರ ನಡುವೆ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ (ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಇಲ್ಲದಿದ್ದರೂ) ಸಮರ್ಥವಾಗಿ ತನ್ನ ವಾಗ್ಝರಿಯಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯನ್ನು ತಬ್ಬಿಬ್ಬು ಮಾಡಿದವರು ಖರ್ಗೆ. ಆದರೆ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಹೀಗಾಗಿ ಲೋಕಸಭೆಯಲ್ಲಿ ಸದ್ಯದ ಮಟ್ಟಿಗೆ ಕಾಂಗ್ರೆಸ್ ನ್ನು ಪ್ರಬಲವಾಗಿ ಸಮರ್ಥಿಸಿಕೊಂಡು ಬಿಜೆಪಿಯ ವಾಕ್ಚಾತುರ್ಯದ ಯುದ್ಧದಲ್ಲಿ ಸಮದಂಡಿಯಾಗಿ ನಿಲ್ಲುವ ನಾಯಕರು ಇಲ್ಲ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ. ಆದರೆ ರಾಜ್ಯಸಭೆಯಲ್ಲಿ ಸದ್ಯದ ಮಟ್ಟಿಗಂತೂ ಇಲ್ಲ. ಮುಂದಿನ ಜೂನ್ ವೇಳೆಗೆ ಅದೇನಾದರೂ ಸಾಧನೆಯಾಗಬಹುದೇನೋ ?

    ಹೀಗಾಗಿ ರಾಜ್ಯಸಭೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಪ್ರತಿನಿಧಿಸುವ, ಪ್ರತಿತಂತ್ರ ರೂಪಿಸುವ, ಮಾತಿನ ಓಘದ ಮೂಲಕ ಬಿಜೆಪಿಯನ್ನು ಕಟ್ಟಿಹಾಕುವ ನಾಯಕರು ಬೇಕಾಗಿತ್ತು. ಇದಕ್ಕಾಗಿಯೇ ಏಕಾಏಕಿ ಖರ್ಗೆ ಅವರನ್ನು ಕಾಂಗ್ರೆಸ್ ರಾಜ್ಯಸಭೆಗೆ ಆಯ್ಕೆ ಮಾಡಿತು. ಇದಕ್ಕಾಗಿ ಸಿದ್ಧರಾಮಯ್ಯ ಸೇರಿದಂತೆ ಯಾವ ನಾಯಕರ ಮಾತನ್ನೂ ಆಲಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.

    ಆತಂಕದ ಕಿಡಿ

    ಖರ್ಗೆ ಆಯ್ಕೆಯಾಗುವ ಮೊದಲು ಗಾಂಧಿ ಕುಟುಂಬದ ನಿಷ್ಠಾವಂತ ರಾಜೀವ್ ಗೌಡ ಹೆಸರು ಕೇಳಿ ಬರುತ್ತಿತ್ತು. ಐಐಎಂನ ಮಾಜಿ ಪ್ರೊಫೆಸರ್ ಆಗಿದ್ದ ಗೌಡ, ರಾಹುಲ್ ಗಾಂಧಿಯವರಿಗೆ ತೀರಾ ನಿಕಟವರ್ತಿಯಾಗಿದ್ದರು. ಆದಾಗ್ಯೂ, ಖರ್ಗೆಯ ಅಭ್ಯರ್ಥಿತನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿತ್ತು. ಇದುವೇ ಕಾಂಗ್ರೆಸ್ ಒಳಗಿನ ನಾಯಕತ್ವ ಬದಲಾವಣೆಯ ಭಿನ್ನಮತಕ್ಕೆ ಮೂಲ ಕಾರಣವಾಯಿತೇ ?

    ಯಾಕೆಂದರೆ, ಖರ್ಗೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಸಮರ್ಥವಾಗಿ ತುಂಬುತ್ತಿದ್ದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್ ಒಂದು ರೀತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಯಾವಾಗ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರೋ ಆಗ, ಸಹಜವಾಗಿಯೇ ಕಾಂಗ್ರೆಸ್ ರಾಜ್ಯಸಭೆಯಲ್ಲಾದರೂ ಸಮರ್ಥ ಪ್ರತಿಪಕ್ಷ ನಾಯಕನ ಹುಡುಕಾಟದಲ್ಲಿತ್ತು. ಆಗ ಸಿಕ್ಕಿದವರೇ ಖರ್ಗೆ.

    ಸಹಿ ಸಂಗ್ರಹ ಅಭಿಯಾನ

    ಮಲ್ಲಿಕಾರ್ಜುನ ಖರ್ಗೆಯವರು ಯಾವಾಗ ರಾಜ್ಯಸಭೆಗೆ ಆಯ್ಕೆಯಾದರೋ ಆಗ, ತಮ್ಮ ಪಟ್ಟ ಅಲುಗಾಡುತ್ತಿರುವ ವಾಸನೆಯನ್ನು ಗುಲಾಂ ನಬಿ ಆಜಾದ್ ಗ್ರಹಿಸಿದರು ಎಂದೇ ಹೇಳಬೇಕಾಗುತ್ತದೆ. ಯಾಕೆಂದರೆ, ನಾಯಕತ್ವದ ಬದಲಾವಣೆಯ ಆಗ್ರಹವನ್ನು ಮಾಡಿ ಪತ್ರ ಬರೆದವರ ಪೈಕಿ ಆಜಾದ್ ಅವರೇ ಮುಖ್ಯ ಭೂಮಿಕೆಯಲ್ಲಿದ್ದರು. ಉಳಿದವರು ಅವರನ್ನು ಅನುಸರಿಸಿದರು ಅಷ್ಟೇ. ಅದಕ್ಕಾಗಿಯೇ ರಾಹುಲ್ ಗಾಂಧಿ ಅವರು ಬಿಜೆಪಿಯ ಷಡ್ಯಂತ್ರದ ಅಂಗವಾಗಿ ಈ ಪತ್ರವನ್ನು ಬರೆಯಲಾಗಿದೆ ಮತ್ತು ಅದನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸಲಾಗಿದೆ ಎಂದು ಪರೋಕ್ಷವಾಗಿ ಆಜಾದ್ ಮೇಲೆ ಕಿಡಿ ಕಾರಿದ್ದು.

    ಆಜಾದ್ ಆತಂಕ

    ಗುಲಾಂ ನಬಿ ಆಜಾದ್ ಅವರ ರಾಜ್ಯಸಭೆ ಸದಸ್ಯತ್ವ ಮುಂದಿನ ವರ್ಷದ ಫೆಬ್ರವರಿಗೆ ಅಂತ್ಯವಾಗುತ್ತದೆ. ಆ ಬಳಿಕ ಮುಂದೇನು ? ಸದ್ಯ, ನಾಮ್ ಕೇ ವಾಸ್ತೆ ಅಧಿವೇಶನ ನಡೆಯಬಹುದಷ್ಟೇ. ಆದರೆ ಮುಂದಿನ ದಿನಗಳಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಆ ಸಂದರ್ಭದಲ್ಲೇ ಆಜಾದ್ ಅವರ ಸದಸ್ಯತ್ವ ಅವಧಿ ಕೊನೆಗೊಳ್ಳುತ್ತದೆ. ಆಗ ಸಹಜವಾಗಿಯೇ ಖರ್ಗೆ, ಪ್ರತಿಪಕ್ಷದ ನಾಯಕನಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. ಅದೇ ರೀತಿ ಮತ್ತೊಂದು ಅವಧಿಗೆ ಆಜಾದ್ ಗೆ ಅವಕಾಶ ಸಿಗುತ್ತದೆಯೋ ಎಂಬುದು ಸ್ಪಷ್ಟವಿಲ್ಲ.

    ಹೀಗಾಗಿಯೇ ಅಧಿಕಾರವಿಲ್ಲದಿದ್ದರೆ ಹಪಹಪಿಗೆ ಬೀಳುವ ಹಳೆಯ ಹುಲಿಗಳು ಮತ್ತೆ ಕಣಕ್ಕಿಳಿದಿದ್ದಾರೆ ಎಂದೇ ವಿಶ್ಲೇಷಿಸಬೇಕಾಗುತ್ತದೆ.
    ಸೋನಿಯಾ ಗಾಂಧಿ ಅವರು ಈ ತಿಂಗಳ ಆರಂಭದಲ್ಲಿ ಪಕ್ಷದ ರಾಜ್ಯಸಭಾ ಸದಸ್ಯರ ಸಭೆ ನಡೆಸಿದ್ದರು. ಬಳಿಕ ಮುಖ್ಯವಾಗಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ನಡೆಯುವ 24 ಗಂಟೆಗಳ ಮೊದಲು ಸಹಿ ಸಂಗ್ರಹ ಅಭಿಯಾನದ ಪತ್ರಗಳು ಸೋರಿಕೆಯಾಗಿದವು !

    ಇಲ್ಲಿ ಮತ್ತೊಂದು ವಿಷಯವನ್ನು ಉಲ್ಲೇಖಿಸಲೇಬೇಕು. ದಕ್ಷಿಣ ಭಾರತ (ಮಹಾರಾಷ್ಟ್ರ ಬಿಟ್ಟು) ಕಾಂಗ್ರೆಸ್ ನಲ್ಲಿ ಉನ್ನತ ಸ್ಥಾನ ಪಡೆದವರೇ ಕಡಿಮೆ ಅಥವಾ ಇಲ್ಲವೆಂದೇ ಹೇಳಬಹುದು. ಉತ್ತರ ಭಾರತದ ಲಾಬಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆಯಾ ?

    ಕಾಂಗ್ರೆಸ್ ತಳಮಳಕ್ಕೆ ಕಾರಣವಾದರು ಏನು?

    ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ವಿರುದ್ಧವೇ ಭಿನ್ನ ಧ್ವನಿ ಕೇಳಲಾರಂಭಿಸಿದೆ. ನಿನ್ನೆ 23 ನಾಯಕರು ಕಾಂಗ್ರೆಸ್ ಅಧ್ಯಕ್ಷರಿಗೆ ಬರೆದ ಪತ್ರದಿಂದ ಆರಂಭವಾದ ಈ ಬೆಳವಣಿಗೆ ಸೋನಿಯಾ ಗಾಂಧೀ ಅವರಲ್ಲಿ ಮತ್ತೆ ವಿಶ್ವಾಸ ವ್ಯಕ್ತಪಡಿಸುವುದರೊಂದಿಗೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಈ ಬೆಳವಣಿಗೆಗೆ ಕಾರಣಗಳಾದರು ಏನು? ಈ ಹಿಂದೆಯೂ ಇಂಥ ಬೆಳವಣಿಗೆಗಳು ಕಾಂಗ್ರೆಸ್ ನಲ್ಲಿ ನಡೆದ ಉದಾಹರಣೆ ಗಳಿವಿಯೆ? ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ಮತ್ತು ಕನ್ನಡ ಪ್ರೆಸ್ .ಕಾಮ್ ಸಂಪಾದಕ ಶ್ರೀವತ್ಸ ನಾಡಿಗ್ ನಡೆಸಿದ ಪಾಡ್ಕಾಸ್ಟ್ ಇಲ್ಲಿದೆ.

    ಆಲಿಸಿ ..ಪ್ರತಿಕ್ರಿಯಿಸಿ.

    ರಾಷ್ಟ್ರೀಯ ಶಿಕ್ಷಣ ನೀತಿ – 2020 ರಲ್ಲಿ ಇರುವುದಾದರು ಏನು



    ಮೂಲಭೂತವಾಗಿ ಮಾನವನ ಸಾಮರ್ಥ್ಯವನ್ನು ಹೆಚ್ಚಿಸಲು, ಸಮಾಜ ಮತ್ತು ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣ ಬಹಳ ಮುಖ್ಯ. ಆರ್ಥಿಕ ಬೆಳವಣಿಗೆಗೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆ, ವೈಜ್ಞಾನಿಕ ಪ್ರಗತಿಗೆ ಶಿಕ್ಷಣ ಬಹಳ ಮುಖ್ಯ. ನಮ್ಮ ದೇಶವು ವಿಶ್ವದಲ್ಲಿ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶ. ಮುಂಬರುವ ದಶಕಗಳಲ್ಲಿ , ಮುಂದಿನ ಯುವ ಪೀಳಿಗೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಮತ್ತು ಅವಶ್ಯಕತೆಗೆ ಅನುಗುಣವಾಗಿ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ನಿಜವಾಗಲೂ ಶಿಕ್ಷಣ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಈ ದಿಶೆಯಲ್ಲಿ ಭಾರತ ಸರ್ಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು.

    ಭಾರತ ಸರ್ಕಾರದ ಸಚಿವ ಸಂಪುಟವು 29ನೇ ಜುಲೈ 2020 ರಂದು ನಡೆದ ಸಭೆಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ( NEP 2020) ನ್ನು ಅಂಗೀಕರಿಸಿತು. 1986ರ ಶಿಕ್ಷಣ ನೀತಿಯನ್ನು ಪಲ್ಲಟಗೊಳಿಸಿದ ಈ ಹೊಸ ಶಿಕ್ಷಣ ನೀತಿಯು 21ನೇ ಶತಮಾನದ ಮೊಟ್ಟ ಮೊದಲ ಶಿಕ್ಷಣ ನೀತಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.ಇಸ್ರೊದ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿಯು ನೀಡಿರುವ ಶಿಪಾರಸ್ಸುಗಳ ಮೇರೆಗೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದ ಸುಮಾರು ಎರಡು ಲಕ್ಷ ಸಲಹೆಗಳನ್ನು ಪರಿಶೀಲಿಸಿ, ನೀತಿಯನ್ನು ರಚಿಸಿರುವುದು ಇದರ ವೈಶಿಷ್ಟ್ಯ.

    ಚಾರಿತ್ರಿಕವಾಗಿ ಮೊಟ್ಟ ಮೊದಲ ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿಯು 1968 ರಲ್ಲಿ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಇಚ್ಛೆಯ ಮೇರೆಗೆ ಜಾರಿಗೆ ಬಂದಿತು. 1968ರ ರಾಷ್ಟ್ರೀಯ ಶಿಕ್ಷಣ ನೀತಿಯ ಸಮಿತಿ ಅಧ್ಯಕ್ಷರಾಗಿ ಶಿಕ್ಷಣ ತಜ್ಞ ಪ್ರೊ. ಡಿ ಎಸ್ ಕೊಠಾರಿಯವರು ಕಾರ್ಯನಿರ್ವಹಿಸಿದ್ದರು. ನಂತರ 1986ರಲ್ಲಿ ಎರಡನೆಯ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜೀವ್‍ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಅವರ ಒಪ್ಪಿಗೆ ಮತ್ತು ಆದೇಶದ ಮೇರೆಗೆ ಜಾರಿಗೆ ಬಂದಿತು. ಪುನಃ 1986 ರ ಶಿಕ್ಷಣ ನೀತಿಯನ್ನು 1992 ರಲ್ಲಿ ಪರಿಷ್ಕರಿಸಲಾಯಿತು.ಸುಮಾರು 34 ವರ್ಷಗಳ ಬಳಿಕ ಈಗ 2020 ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಗೆ ಬಂದಿದೆ.

    ಇಕ್ವಿಟಿ, ಗುಣಮಟ್ಟ, ಕೈಗೆಟಕುವಿಕೆ ಮತ್ತು ಹೊಣೆಗಾರಿಕೆ.

    ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯೊಂದಿಗೆ ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸುವುದು ನೀತಿಯ ಮೂಲ ಉದ್ದೇಶವಾಗಿರುತ್ತದೆ. ನೀತಿಯ ಆಧಾರ ಸ್ತಂಭಗಳು ಇಕ್ವಿಟಿ, ಗುಣಮಟ್ಟ, ಕೈಗೆಟಕುವಿಕೆ ಮತ್ತು ಹೊಣೆಗಾರಿಕೆ.

    ನೀತಿಯ ಅವಲೋಕನ – ಪ್ರಮುಖಾಂಶಗಳು

    ಶಾಲಾ ಶಿಕ್ಷಣ

    ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ ಮಾಡಲಾಗಿದೆ. ಇನ್ನು ಮುಂದೆ 10+2 ಶಿಕ್ಷಣದ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ಇದನ್ನು 5+3+3+4 ರಂತೆ ವಿಂಗಡಣೆ ಮಾಡಲಾಗಿದೆ. ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ, ಗ್ರಹಣ ಸಾಮರ್ಥ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ. ಈ ವಿನ್ಯಾಸದ ಆಧಾರದ ಮೇಲೆ ಪಠ್ಯಕ್ರಮದ ಚೌಕಟ್ಟನ್ನು ರೂಪಿಸಲಾಗಿದೆ.

    ಅ) ಬುನಾದಿ ಹಂತ ( Foundation stage ) ( 3 – 8 ವರ್ಷಗಳು ) ಇನ್ನು ಮುಂದೆ ಮಕ್ಕಳ ಶಿಕ್ಷಣದ ಹಕ್ಕು ಮೂರನೇ ವಯಸ್ಸಿನಿಂದಲೇ ಪ್ರಾರಂಭವಾಗುತ್ತದೆ. ಶಾಲೆಯ ಮೊದಲ ಐದು ವರ್ಷಗಳು ಬುನಾದಿಯ ಹಂತ. ಮೂರು ವರ್ಷದ ಅಂಗನವಾಡಿ ಅಥವಾ ಪೂರ್ವ ಶಾಲಾ ಹಂತ ( 3 – 6 ವ ) ಮತ್ತು 1 ನೇ ಹಾಗೂ 2 ನೇ ತರಗತಿಗಳು ಈ ಹಂತದಲ್ಲಿ ಸೇರಿವೆ. ಈ ಹಂತದಲ್ಲಿ ಜಾರಿ ಮಾಡಿರುವ ಪ್ರಮುಖ ಬದಲಾವಣೆಯೆಂದರೆ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ( Early childwood care and Education – ECCE ) ಅಡಿಯಲ್ಲಿ ಇದುವರೆವಿಗೂ ಗಣನೆಗೆ ತೆಗದುಕೊಳ್ಳದ ಮೂರು ವರ್ಷದ ಮಕ್ಕಳ ಶಿಕ್ಷಣವನ್ನು ಮುಖ್ಯವಾಹಿನಿಗೆ ಸರಿಸಿರುವುದು. ಈ ಹಂತದಲ್ಲಿ ಆಟ ಚಟುವಟಿಕೆಗಳ ಮೂಲಕ ಶಿಕ್ಷಣ, ಅನ್ವೇಷಣೆ ಆಧಾರಿತ ಕಲಿಕೆ, ವರ್ಣಮಾಲೆಗಳು, ಭಾಷೆಗಳು, ಸಂಖ್ಯೆಗಳು, ಎಣಿಕೆ, ಬಣ್ಣಗಳು, ಆಕಾರಗಳು, ಚಿತ್ರಕಲೆ, ಇತ್ಯಾದಿ, ಸೂಕ್ಷ್ಮತೆ, ಉತ್ತಮ ನಡವಳಿಕೆ ಮತ್ತು ಸೌಜನ್ಯ ಇವುಗಳಿಗೆ ಒತ್ತು ನೀಡಲಾಗುತ್ತದೆ.

    ಆ) ಪೂರ್ವ ಸಿದ್ಧತಾ ಹಂತ ( Preparatory stage ) ( 8 – 11 ವರ್ಷಗಳು ) ಈ ಹಂತದಲ್ಲಿ 3 ರಿಂದ 5 ನೇ ತರಗತಿಯವರೆಗಿನ ಶಿಕ್ಷಣವು ಒಳಗೊಂಡಿದೆ. ಈ ಹಂತದಲ್ಲಿ ಆಟ ಚಟುವಟಿಕೆಗಳ ಮೂಲಕ ಶಿಕ್ಷಣ, ಹೊಸತನ್ನು ಕಂಡುಹಿಡಿಯುವ ಮೂಲಕ ಬೆಳವಣಿಗೆ ಹಾಗೂ ಸೃಜನಾಶೀಲಾತ್ಮಕ ಕಲಿಕೆಯನ್ನು ಪ್ರಾರಂಭಿಸಲು ಒತ್ತು ನೀಡಲಾಗುವುದು.

    ಇ) ಮಧ್ಯಮ ಹಂತ ( Middle school stage ) ( 11- 14 ವರ್ಷಗಳು )
    ಈ ಹಂತದಲ್ಲಿ 6 ರಿಂದ 8 ನೇ ತರಗತಿಯ ವರೆಗಿನ ಶಿಕ್ಷಣವನ್ನು ನೀಡಲಾಗುವುದು. ವಿಷಯಗಳ ಪರಿಕಲ್ಪನೆ ಮತ್ತು ಭೋದನೆಗೆ ಒತ್ತು ನೀಡಲಾಗುವುದು. ಈ ಹಂತದಲ್ಲಿ 6 ನೇ ತರಗತಿಯಿಂದ ವೃತ್ತಿ ಪರ ಶಿಕ್ಷಣವನ್ನು ಮುಖ್ಯವಾಹಿನಿ ಶಿಕ್ಷಣದ ಜೊತೆಗೆ ಸಂಯೋಜಿಸಿರುವುದು ನೀತಿಯ ವೈಶಿಷ್ಟ್ಯತೆ.

    ಈ) ಪ್ರೌಢ ಹಂತ ( Secondary stage ) ( 14 – 18 ವರ್ಷಗಳು )
    ಈ ಹಂತದಲ್ಲಿ 9 ನೇ ತರಗತಿಯಿಂದ 12 ನೇ ತರಗತಿಯ ವರೆಗಿನ ವಿದ್ಯಾಭ್ಯಾಸವನ್ನು ನೀಡಲಾಗುವುದು. ಈ ಹಂತದಲ್ಲಿ ವಿಮರ್ಶಾತ್ಮಕ ಚಿಂತನೆ, ವಿಷಯಗಳ ಆಳವಾದ ಅಧ್ಯಯನ, ಜೀವನದ ಆಸೆ ಆಕಾಂಕ್ಷೆಗಳಿಗೆ ಗಮನ. ಜೀವನೋಪಾಯ ಮತ್ತು ಉನ್ನತ ಶಿಕ್ಷಣದ ತಯಾರಿ, ಈ ಅಂಶಗಳಿಗೆ ಒತ್ತು ನೀಡಲಾಗುವುದು. ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗುವುದು.

    ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಿ, 2030 ರ ವೇಳೆಗೆ ಪೂರ್ವ ಶಾಲೆಯಿಂದ ಪ್ರೌಢಶಾಲೆಯ ಹಂತದವರೆಗೆ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳ ನೊಂದಣಿಯನ್ನು ಸಾಧಿಸುವುದು ( 100% ಜಿಇಆರ್ ). ಇದರಿಂದ ಶಾಲೆಯಿಂದ ಹೊರಗೆ ಉಳಿದಿರುವ ಎರಡು ಕೋಟಿ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಉದ್ದೇಶ.

    ಕನಿಷ್ಠ 5 ನೇ ತರಗತಿಯವರೆಗೆ ಮಾತೃ ಭಾಷೆ / ಸ್ಥಳೀಯ ಭಾಷೆಯಲ್ಲಿ ಶಿಕ್ಷಣವನ್ನು ನೀಡುವುದು.

    ತ್ರಿ ಭಾಷಾ ಸೂತ್ರವನ್ನು ಮುಂದುವರಿಸಲಾಗಿದೆ.

    ಭಾರತೀಯ ಶಾಸ್ತ್ರೀಯ ಭಾಷೆಗಳನ್ನು ಮತ್ತು ಸಾಹಿತ್ಯವನ್ನು ಐಚ್ಛಿಕವಾಗಿ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ.

    ಶಾಲಾ ಪೂರ್ವ ಕಲಿಕೆಯಿಂದ ಪ್ರೌಢ ಶಿಕ್ಷಣದವರೆಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣಕ್ಕೆ ಖಾತರಿಯನ್ನು ನೀಡಲಾಗಿದೆ. ಪಠ್ಯ ಕ್ರಮದಲ್ಲಿ ನೈತಿಕ, ಮಾನವೀಯ ಮತ್ತು ಸಂವಿಧಾನಿಕ ಮೌಲ್ಯಗಳು, ಭಾರತೀಯ ಎಥೋಸ್, ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.

    ಜೀವನದ ಮೌಲ್ಯಗಳ ಕಲಿಕೆಗೆ ಹೆಚ್ಚು ಪ್ರಾಧಾನ್ಯತೆ.

    ಎಲ್ಲಾ ಹಂತಗಳ ಕಲಿಕೆಯ ವಿಧಾನದಲ್ಲಿ ಸೃಜನಾತ್ಮಕ, ವಿಮರ್ಶಾತ್ಮಕ ಚಿಂತನೆ ಹಾಗೂ ಕಲ್ಪನಾ ಶಕ್ತಿಯ ವೃದ್ಧಿ ಮತ್ತು ಅದರಂತೆ ಗ್ರಹಿಸುವ ಶಕ್ತಿಯ ಬೆಳವಣಿಗೆಗೆ ಒತ್ತು ನೀಡಲಾಗಿದೆ.

    ಬಹಳ ಮುಖ್ಯವಾಗಿ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಏಕರೂಪ ನಿಯಮಗಳು ಅನ್ವಯವಾಗಲಿವೆ.

    ರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರದ ಪ್ರೇಮ್ ವರ್ಕ್‍ನ್ನು ತಯಾರಿಸುವ ಗುರಿಯನ್ನು ಹೊಂದಲಾಗಿದೆ.

    ಸಾರಾಂಶ ಮೌಲ್ಯ ಮಾಪನದ ಬದಲು ( summative Assesment ) ನಿರಂತರ ರಚನಾತ್ಮಕ ಮೌಲ್ಯ ಮಾಪನದ ( Formative assessment ) ವನ್ನು ಎಲ್ಲಾ ಹಂತಗಳಲ್ಲಿ ಅಳವಡಿಸಲು ಸೂಚಿಸಲಾಗಿದೆ.

    ಪ್ರತಿ ವರ್ಷ ಪರೀಕ್ಷೆಗಳು ಇರುವುದಿಲ್ಲ. ಬದಲಿಗೆ ಮೂರು, ಐದು ಮತ್ತು ಎಂಟನೇ ತರಗತಿಯಲ್ಲಿ ಮಾತ್ರ ಪರೀಕ್ಷೆ ಇರುತ್ತದೆ. ಹತ್ತು ಮತ್ತು ಹನ್ನೆರಡನೇ ತರಗತಿಗಳಿಗೆ ಪರೀಕ್ಷಾ ಮಂಡಳಿಗಳಿಂದ ಪರೀಕ್ಷೆಯನ್ನು ನಡೆಸಲಾಗುತ್ತದೆ.

    ಬಹಳ ಮುಖ್ಯವಾಗಿ ಹೇಳುವುದಾದರೆ, ಬಹು ಶಿಸ್ತೀಯ ( multidisciplinary ) ಮತ್ತು ಬಹು ಭಾಷೆಯನ್ನುಕಲಿಯುವಂತೆ ಮಕ್ಕಳನ್ನು ತಯಾರು ಮಾಡ ಬೇಕೆಂಬುವುದು ಈ ನೀತಿಯ ಗುರಿ.
    ಇನ್ನು ಮುಂದೆ ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು, ಕೌಶಲ ಮತ್ತು ಶೈಕ್ಷಣಿಕ ವಿಷಯಗಳ ನಡುವೆ ಕಠಿಣವಾದ ವ್ಯತ್ಯಾಸ ಮತ್ತು ಅಡ್ಡ ಗೋಡೆಗಳು ಇರುವುದಿಲ್ಲ.

    5 ರಿಂದ 10 ಕಿಲೋ ಮೀಟರ್ ತ್ರಿಜ್ಯವುಳ್ಳ ಪ್ರದೇಶದಲ್ಲಿ ಒಂದರಂತೆ, ಶಾಲಾ ಸಂಕೀರ್ಣಗಳನ್ನು ಸ್ಥಾಪಿಸಲಾಗುವುದು. ಈ ಸಂಕೀರ್ಣದಲ್ಲಿ ಪೂರ್ವ ಶಾಲಾ ತರಗತಿಯಿಂದ ಪ್ರೌಢಶಾಲಾ ಮಟ್ಟದವರೆವಿಗೆ ತರಗತಿಗಳಿದ್ದು, ಉತ್ತಮ ಮಟ್ಟದ ಮೂಲ ಭೂತ ಸೌಕರ್ಯಗಳನ್ನು ಹೊಂದಿರುತ್ತವೆ.

    ಉನ್ನತ ಶಿಕ್ಷಣ

    ಉನ್ನತ ಶಿಕ್ಷಣದಲ್ಲಿ 2035 ರ ವೇಳೆಗೆ ಶೇ 50 ರಷ್ಟು ಸರಾಸರಿ ದಾಖಲಾತಿ ಅನುಪಾತವನ್ನು ( ಜಿಇಆರ್ ) ಮುಟ್ಟುವ ಗುರಿಯನ್ನು ಹೊಂದಲಾಗಿದೆ.

    2035 ರ ವೇಳೆಗೆ ವಿಶ್ವ ವಿದ್ಯಾಲಯಗಳಿಂದ ಕಾಲೇಜುಗಳು ಸಂಯೋಜನೆ ಪಡೆಯುವ ಪದ್ಧತಿ ಇರುವುದಿಲ್ಲ ( No affiliation system ). ಆ ವೇಳೆಗೆ ಪ್ರತಿಯೊಂದು ಮಹಾ ವಿದ್ಯಾಲಯವು ಬಹು ಶಿಸ್ತೀಯ ( multidisciplinary ) ಮತ್ತು ದೊಡ್ಡ ಮಟ್ಟದ ಕಾಲೇಜಾಗಿ ಹಂತ ಹಂತವಾಗಿ ಬೆಳೆದು, ಕನಿಷ್ಟ ಮೂರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡ ಬೇಕಾಗುತ್ತದೆ. ಈ ಮಹಾವಿದ್ಯಾಲಯಗಳು ಉತ್ತಮ ಗುಣ ಮಟ್ಟವನ್ನು ಹೊಂದಿದ್ದು, ಪದವಿಗಳನ್ನು ನೀಡುವ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಾಗಿ ಬೆಳೆಯ ಬೇಕಾಗುತ್ತದೆ.

    2035 ರ ವೇಳೆಗೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲು ದೊಡ್ಡಮಟ್ಟದ ( 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ) ಬಹು ವಿಷಯಗಳ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.

    2035 ರ ವೇಳೆಗೆ ಒಂದೇ ವಿಷಯದಲ್ಲಿ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ ( single faculty colleges and universities ). ಈಗಿರುವ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಮಹಾ ವಿದ್ಯಾಲಯಗಳು ಬಹು ಶಿಸ್ತೀಯ ಶಿಕ್ಷಣ ಸಂಸ್ಥೆಗಳಾಗಿ ಬದಲಾಗಲು ಅವಶ್ಯಕತಾ ಕ್ರಮಗಳನ್ನು ತೆಗದುಕೊಳ್ಳಲು ಸೂಚಿಸಲಾಗಿದೆ.
    ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳನ್ನು ಎರಡು ರೀತಿಯಲ್ಲಿ ವಿಂಗಡಿಸಲು ತೀರ್ಮಾನಿಸಲಾಗಿದೆ.

    ಅ) ಜಾಗತಿಕ ಮಟ್ಟದ ಸಂಶೋಧನೆಗೆ ಒತ್ತು ನೀಡುವ ಹಾಗೂ ಉತ್ತಮ ಮಟ್ಟದ ಭೋದನೆಯನ್ನು ಮಾಡುವ ವಿಶ್ವ ವಿದ್ಯಾಲಯಗಳು ( Research Intensive univerities )

    ಆ) ಭೋದನಗೆ ಒತ್ತು ಕೊಟ್ಟು, ಗಮನಾರ್ಹ ಸಂಶೋಧನೆಯನ್ನು ನಡೆಸುವ ವಿಶ್ವ ವಿದ್ಯಾಲಯಗಳು ( Teaching Intensive universities ). ಜೊತೆಗೆ, ಪದವಿಗಳನ್ನು ನೀಡುವ ಬಹು ಶಿಸ್ತೀಯ ಸ್ವಾಯತ್ತ ಮಹಾವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತವೆ.
    ಇನ್ನು ಮುಂದೆ ಎಂ. ಫಿಲ್ ಕೋರ್ಸ್ ಇರುವುದಿಲ್ಲ. ಈ ಕೋರ್ಸ್‍ಗೆ ತಿಲಾಂಜಲಿ ನೀಡಲಾಗಿದೆ.

    ವಿಶ್ವ ವಿದ್ಯಾಲಯಗಳಲ್ಲಿ ಮತ್ತು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಮಟ್ಟದ ಸಂಶೋಧನೆಗೆ ಪ್ರಾಧಾನ್ಯತೆ ನೀಡುವ ಸಲುವಾಗಿ ರಾಷ್ಟ್ರೀಯ ಸಂಶೋಧನಾ ಪೌಂಢೇಶನ್ ಸ್ಥಾಪಿಸಲು ಉದ್ದೇಶಿಸಲಾಗಿದೆ.

    ಪದವಿ ಶಿಕ್ಷಣದಲ್ಲಿ ನಾಲ್ಕು ವರ್ಷಗಳ ಅವಧಿಯನ್ನು ಹೊಂದಿರುವ ಪದವಿಯ ಶಿಕ್ಷಣವನ್ನು ಕಾರ್ಯ ರೂಪಕ್ಕೆ ತರಲು ಉದ್ದೇಶಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ವಿವಿಧ ಬಗೆಯ ನಿರ್ಗಮನ ಆಯ್ಕೆಯ ಅವಕಾಶಗಳನ್ನು ನೀಡಲಾಗಿದೆ. ಅಂದರೆ 2 ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಡಿಪ್ಲೊಮೊ ಪ್ರಮಾಣ ಪತ್ರ, ಒಂದು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಸರ್ಟಿಫಿಕೇಟ್ ಕೋರ್ಸ್ ಪ್ರಮಾಣ ಪತ್ರವನ್ನು ನೀಡಲಾಗುವುದು. ನಾಲ್ಕು ವರ್ಷದ ವ್ಯಾಸಂಗ ಮುಗಿದ ನಂತರ ಒಂದು ವರ್ಷದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯ ಬಹುದು.

    ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ( NTA ) ಏಕ ರೀತಿಯ ಸಾಮಾನ್ಯ ಪರೀಕ್ಷೆಯನ್ನು ನಡೆಸಲಿದೆ.
    ಆನ್‍ಲೈನ್ ಶಿಕ್ಷಣ, ದೂರ ಶಿಕ್ಷಣಗಳಿಗೆ ಉತ್ತೇಜನ ನೀಡಲಾಗಿದೆ.ಒಟ್ಟು ಆಂತರಿಕ ಉತ್ಪನ್ನದ ( ಜಿಡಿಪಿ ) ಶೇ 6 ರಷ್ಟನ್ನು ಶಿಕ್ಷಣಕ್ಕೆ ವ್ಯಯ ಮಾಡಲು ಸೂಚಿಸಲಾಗಿದೆ.

    ತಾಂತ್ರಿಕ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
    ಜಾಗತಿಕ ಮಟ್ಟದಲ್ಲಿ ಮೊದಲ ನೂರು Rank ಪಟ್ಟಿಯಲ್ಲಿ ಸ್ಥಾನಗಳಿಸಿರುವ ವಿದೇಶಿ ವಿಶ್ವ ವಿದ್ಯಾಲಯಗಳಿಗೆ ನಮ್ಮ ದೇಶದಲ್ಲಿ ಕ್ಯಾಂಪಸ್ ಸ್ಥಾಪಿಸಲು ಅನುಮತಿ ನೀಡಲಾಗುವುದು.
    ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕಲೆ, ಸಂಗೀತ, ನೃತ್ಯ, ಚಿತ್ರಕಲೆ, ನಾಟಕ, ಸಾಹಿತ್ಯ ಸೇರಿದಂತೆ ಹಲವು ವಿಷಯಗಳ ಬೋಧನೆಗೆ ಒತ್ತು ನೀಡಲಾಗುವುದು.
    ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು “ಭಾರತೀಯ ಉನ್ನತ ಶಿಕ್ಷಣ ಮಂಡಳಿ” ಸ್ಥಾಪನೆಯಾಗಲಿದೆ.

    ಶಿಕ್ಷಕರ ಶಿಕ್ಷಣ

    ಬೋಧನಾ ಕ್ರಮ ಮತ್ತು ಅಭ್ಯಾಸದಲ್ಲಿ ಉನ್ನತ ಗುಣಮಟ್ಟದ ತರಬೇತಿ ನೀಡುವ ಸಲುವಾಗಿ ಇನ್ನು ಮುಂದೆ ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ ( Integrated B.Ed course ) ಕಾರ್ಯ ಕ್ರಮವನ್ನು ಬಹು ಶಿಸ್ತಿನ ( Multi disciplinary ) ವಿದ್ಯಾ ಸಂಸ್ಥೆಗಳಲ್ಲಿ ನೀಡಲಾಗುವುದು. ಇದರಲ್ಲಿ ವಿಷಯ ಮತ್ತು ಶಿಕ್ಷಕರ ತರಬೇತಿ ಕೋರ್ಸುಗಳು ಸೇರಿವೆ. 2030 ರ ನಂತರ 4 ವರ್ಷಗಳ ಬಿ.ಎಡ್ ಕೋರ್ಸ್‍ನ್ನು ಶಿಕ್ಷಕರಿಗೆ ಕಡ್ಡಾಯ ಮಾಡಲಾಗುತ್ತದೆ. ಪದವಿ ಪಡೆದವರಿಗೆ ಎರಡು ವರ್ಷದ ಬಿ. ಎಡ್ ಕೋರ್ಸ್ ಲಭ್ಯವಿರುತ್ತದೆ.


    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವೈದ್ಯಕೀಯ ಮತ್ತು ಕಾನೂನು ಶಿಕ್ಷಣಗಳನ್ನು ಹೊರತು ಪಡಿಸಿ, ಉಳಿದ ಎಲ್ಲಾ ಶಿಕ್ಷಣ ಪದ್ಧತಿಗಳಿಗೆ ಅನ್ವಯವಾಗುತ್ತದೆ. ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಲು , ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ರಾಜ್ಯ ಶಿಕ್ಷಣ ಮಂಡಳಿಗಳು, ನಿಯಂತ್ರಣ ಸಂಸ್ಥೆಗಳು, ಭೋದಕರು, ಹೀಗೆ ಹಲವಾರು ಸಂಸ್ಥೆಗಳು ಎಲ್ಲರೂ ಸಹ ಒಟ್ಟಿಗೆ ಕೈಗೂಡಿಸಿ ಆಸಕ್ತಿಯಿಂದ ಕಾರ್ಯ ನಿರ್ವಹಿಸ ಬೇಕಾಗಿದೆ. ಮುಂದಿನ ದಶಕಗಳಲ್ಲಿ ಭಾರತೀಯ ಶಿಕ್ಷಣವು ಯುವ ಪೀಳಿಗೆಗೆ ಅನುಕೂಲವಾಗಲೆಂಬ ಆಶಯ. ಭಾರತ ಸರ್ಕಾರವೇ ದಾಖಲಿಸಿರುವಂತೆ 2030 – 40 ರ ದಶಕದ ವೇಳೆಗೆ ಹೊಸ ಶಿಕ್ಷಣ ನೀತಿಯು ಸಂಪೂರ್ಣವಾಗಿ ಕಾರ್ಯ ರೂಪಕ್ಕೆ ಬರುವ ಇಚ್ಚೆಯನ್ನು ಹೊಂದಲಾಗಿದೆ. ಕಾರ್ಯ ರೂಪಕ್ಕೆ ತರುವಾಗ ನಮ್ಮ ಎದುರು ನಿಲ್ಲುವ ಸವಾಲುಗಳಿಗೆ ಉತ್ತರ ಕಂಡುಕೊಂಡು ಮುನ್ನಡೆಯ ಬೇಕಾಗಿದೆ.

    Photo by olia danilevich from Pexels

    ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಮುಂದುವರಿಕೆ

    ಎಲ್ಲವೂ ಊಹಿಸಿದಂತೆ ಆಗಿದೆ. ಸಂಜೆಯವೆರಗೂ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೋನಿಯಾ ಗಾಂಧೀ ಅವರೆ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕೆಂಬ ನಿರ್ಧಾರಕ್ಕೆ ಬಂದಿದೆ.

    ದಿನ ನಿತ್ಯದ ವ್ಯವಹಾರ ನೋಡಿಕೊಳ್ಳಲು ಪಕ್ಷದ ಅಧ್ಯಕ್ಷರಿಗೆ ಸಹಾಯ ಮಾಡಲು ಸಮಿತಿಯೊಂದನ್ನು ನೇಮಿಸಲು ಕೂಡ ನಿರ್ಧರಿಸಿದೆ. ಮುಂದಿನ ಆರು ತಿಂಗಳ ಒಳಗೆ ಸೇರಲಿರುವ ಎಐಸಿಸಿ ಸಭೆ ಮುಂದಿನ ಕಾರ್ಯತಂತ್ರವನ್ನು ರೂಪಿಸಲಿದೆ.

    ಪಕ್ಷದ ಹುದ್ದೆ ಬೇಡವೆಂದೆ ಕುಳಿತ್ತಿದ್ದ ಸೋನಿಯಾ ಗಾಂಧೀ ಕೊನೆಗೆ ಎಲ್ಲರ ಒತ್ತಾಯಕ್ಕೆ ಮಣಿದು ಮುಂದುವುರಿಯಲು ಸಮ್ಮಿತಿಸಿದರು. ಪಕ್ಷದಲ್ಲಿ ಯಾವುದೇ ಸಮಸ್ಯೆ ಬಂದರೂ ಅದು ಪಕ್ಷದ ವೇದಿಕೆಯಲ್ಲೇ ಇತ್ಯರ್ಥವಾಗಬೇಕೆಂದರು.

    ಬೆಳಿಗ್ಗೆಯಿಂದ ಹಲವು ಹೇಳಿಕೆ ಪ್ರತಿಹೇಳಿಕೆಗಳಿಂದ ತೀವ್ರ ಕುತೂಹಲ ಕಂಡಿದ್ದ ಸಭೆ ಕೊನೆಗೆ ನಿರೀಕ್ಷಿಸಿದ ನಿರ್ಧಾರವನ್ನೆ ತೆಗೆದುಕೊಂಡಿದೆ.

    .

    ಹೊಸ ನಾಯಕರ ಆಯ್ಕೆ ಕಾಂಗ್ರೆಸ್ ಗೆ ಸುಲಭದ ಹಾದಿಯಲ್ಲ

    ಹೊಸ ಅಧ್ಯಕ್ಷರನ್ನು ಹುಡುಕಿಕೊಳ್ಳುವಂತೆ ಸೋನಿಯಾ ಗಾಂಧೀ ಸೂಚಿಸಿದ್ದಾರೆಂಬ ಸುದ್ದಿ ಆ ಪಕ್ಷದಲ್ಲಿ ಆಂತರಿಕ ತಳಮಳ ಹುಟ್ಟು ಹಾಕಿದೆ.23 ಕಾಂಗ್ರೆಸ್ ನಾಯಕರು ಅಮೂಲಾಗ್ರ ಬದಲಾವಣೆಗೆ ಒತ್ತಾಯಿಸಿ ಬರೆದ ಪತ್ರ ಇದಕ್ಕೆ ಕಾರಣ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಗಾಂಧೀ ಕುಟುಂಬ ಹೊರತು ಪಡಿಸಿ ಉಳಿದವರನ್ನು ಅಧ್ಯಕ್ಷರನ್ನಾಗಿ ಕಾಣುವುದು ಸುಲಭವೆ ಎಂಬುದು ಈಗಿನ ಪ್ರಶ್ನೆ.

    2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕೂಡಲೇ ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿತ್ತು. ಆದರೆ ವಸ್ತುಸ್ಥಿತಿ ಹಾಗಾಗಿರಲಿಲ್ಲ. ನೆಹರು ಕುಟುಂಬದ ಕುಡಿಗಳ ಹಿಂದೆ ಬಿದ್ದಿದ್ದ ಆಪ್ತ ಸಮೂಹ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.

    ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ಕಾಂಗ್ರೆಸ್ ನಲ್ಲಿ ನಿರ್ವಾತ ವಾತಾವರಣ ನಿರ್ಮಾಣವಾಗಿತ್ತು. ಅದನ್ನು ಸಮರ್ಥವಾಗಿ ತುಂಬಿದವರು ಮಾಜಿ ಪ್ರಧಾನಿ ಪಿ. ವಿ. ನರಸಿಂಹ ರಾಯರು. ಪಕ್ಷಕ್ಕೆ ಒಂದು ರೀತಿಯಲ್ಲಿ ಗೆಲುವನ್ನೇ ತಂದುಕೊಟ್ಟು ಅಲ್ಪ ಮತವಿದ್ದರೂ ಐದು ವರ್ಷ ತುಟಿ ಬಿಚ್ಚದೆ ಆಡಳಿತ ಮಾಡಿದವರು.

    ಹೊಸ ಚಿಂತನೆ
    ಜತೆಗೆ ಜಾಗತೀಕರಣಕ್ಕೆ ಭಾರತವನ್ನು ತೆರೆದುಕೊಳ್ಳುವಂತೆ ಮಾಡಿ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಭಾರತವನ್ನು ಸೃಷ್ಟಿಸುವಲ್ಲಿ ಪಿವಿಎನ್-ಮನಮೋಹನ್ ಸಿಂಗ್ ಜೋಡಿ ಕೆಲಸ ಮಾಡಿತು. ಆದರೆ ಏನು ಲಾಭ ? ಕಾಂಗ್ರೆಸ್ ನ ಹಳೆ ತಲೆಗಳು (ಬೇಕೆಂದೇ ಹಳೆ ಹುಲಿಗಳು ಶಬ್ದ ಬಳಕೆ ಮಾಡಿಲ್ಲ) ಮತ್ತೆ ಲಾಭದ ಲಾಬಿಯನ್ನು ಹುಟ್ಟು ಹಾಕಿದವು. ಹೀಗಾಗಿ ಕಾಂಗ್ರೆಸ್ ಗಾಧಿ ಮತ್ತೆ ನೆಹರು ಕುಟುಂಬಕ್ಕೆ ಒಲಿದು ಬಂತು, ಮತ್ತು ಅದರಲ್ಲಿ ಸೋನಿಯಾ ಗಾಂಧಿಯವರು ತಾವು ಎಷ್ಟು ಸಮರ್ಥರು ಎಂಬುದನ್ನು ಎರಡು ಅವಧಿಯಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬರುವ ಮೂಲಕ ತೋರಿಸಿಕೊಟ್ಟರು. ನಾನಾ ಪಕ್ಷಗಳನ್ನು ಒಗ್ಗೂಡಿಸಿಕೊಂಡರೂ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡುವ ಮೂಲಕ ಎದುರಾಳಿ ಪಕ್ಷಕ್ಕೆ ಎದ್ದೇಳಲು ಸಾಕಷ್ಟು ವರ್ಷಗಳೇ ಬೇಕಾದ ರೀತಿ ಮಾಡಿದರು ಎಂಬುದು ನಿಜ.

    ಈಗಿರುವ ಪ್ರಶ್ನೆ

    ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಹಾಗೂ ಮಾತನಾಡಬಹುದು. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ಧ ಶತಮಾನದಷ್ಟು ಹಳೆಯ ಕಾಂಗ್ರೆಸ್ ನಲ್ಲೇ ಆಂತರಿಕ ಪ್ರಜಾಪ್ರಭುತ್ವ ಇದೆಯಾ ಎಂಬುದು.
    ಮಹಾತ್ಮಾ ಗಾಂಧೀಜಿಯವರ ಮಾತು ಇಲ್ಲಿ ಸ್ಮರಣಾರ್ಹ. “ಪ್ರಜಾತಂತ್ರದ ಸ್ಫೂರ್ತಿ ಎಂಬುದು ಎಲ್ಲಾ ನೀತಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ತಾಂತ್ರಿಕ ವಿಷಯವಲ್ಲ. ಇದು ಎಲ್ಲರಿಗೂ ಮಾತನಾಡುವ ಹಕ್ಕು ಕೊಡುವ ಸ್ವಾತಂತ್ರ್ಯ. ಇದು ಹೃದಯದಲ್ಲಿ ಬದಲಾವಣೆಯನ್ನು ತರುವಂತಹದ್ದಾಗಿರಬೇಕು”.
    ಆದರೆ ಕಾಂಗ್ರೆಸ್ ನಲ್ಲಿ ಈಗ ಅದು ಇದೆಯಾ ? ಇಲ್ಲ ಎಂದೇ ಹೇಳಬೇಕಾಗುತ್ತದೆ.

    ಈಗೇನೋ 23-25 ಹಿರಿಯ ನಾಯಕರು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು, ಹೊಸ ಅಧ್ಯಕ್ಷರನ್ನು ಪ್ರಜಾತಂತ್ರ ರೀತಿಯಲ್ಲಿ ಅಂದರೆ ಮತದಾನದ ಮೂಲಕ ಆಯ್ಕೆ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಸುಲಭದ ದಾರಿಯಲ್ಲ

    ಒಂದು ವೇಳೆ, ಇಷ್ಟು ನಾಯಕರ ಮನವಿಗೆ 74 ವರ್ಷ ವಯಸ್ಸಾಗಿರುವ ಸೋನಿಯಾ ಗಾಂಧಿ ಮಣೆ ಹಾಕಿದರೂ, ಹುಟ್ಟಿನಿಂದಲೇ ನೆಹರು ಕುಟುಂಬವನನ್ನು ಓಲೈಸುತ್ತಲೇ ಬದುಕು ಕಟ್ಟಿಕೊಂಡ, ಸಕಲ ಸೌಭಾಗ್ಯ ಅನುಭವಿಸಿದ ಒಂದು ವರ್ಗ ಇದನ್ನು ಒಪ್ಪುತ್ತದೆಯಾ ? ಒಪ್ಪಿದರೂ ಮುಂದಿನ ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ಹೇಗೆ ಹೊಸಕಿ ಹಾಕಬೇಕು ಎಂಬ ತಂತ್ರವನ್ನು ರೂಪಿಸದಿರಲು ಸಾಧ್ಯವಿಲ್ಲವೇ ? ಎಂಬೆಲ್ಲಾ ಪ್ರಶ್ನೆಗಳ ಸರಣಿ ಉದ್ಭವಿಸುತ್ತಲೇ ಹೋಗುತ್ತದೆ.

    ವಂಶಾಡಳಿತದ ಸರಣಿ
    ಇಲ್ಲಿ ಇನ್ನೊಂದು ವಿಷಯ ತುಂಬಾ ಮುಖ್ಯವಾಗುತ್ತದೆ. ಕರ್ನಾಟಕ ಕಾಂಗ್ರೆಸ್ ನ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ಸ್ಥಾಪನೆಗೊಳ್ಳಲು ಎಷ್ಟು ಮೀನ-ಮೇಷ ಎಣಿಸಬೇಕಾಯಿತು ? ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಈ ಮಟ್ಟಕ್ಕೆ ಅವರು ಏರಬೇಕಾದರೆ ಅದಕ್ಕೆ ಪರೋಕ್ಷವಾಗಿ ಸಾಕಷ್ಟು ವಿರೋಧವನ್ನು ಎದುರಿಸಲೇಬೇಕಾಯಿತು. ಕೊನೆಗಂತೂ ಕೆಪಿಸಿಸಿ ಅಧ್ಯಕ್ಷರಾದರು ಬಿಡಿ, ಆದರೆ, ಕಾಂಗ್ರೆಸ್ ನ ಪ್ರತಿಯೊಂದು ಹಂತವನ್ನು ಗಮನಿಸಿದರೂ ಅಲ್ಲಿ ಇರುವುದು ವಂಶಾಡಳಿತ (ಡೈನೆಸ್ಟಿ ಪಾಲಿಟಿಕ್ಸ್) ರಾಜಕೀಯ. ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್, ಜ್ಯೋತಿರಾಧಿತ್ಯ ಸಿಂಧ್ಯಾ ಹೀಗೆ ಪಟ್ಟಿ ಮಾಡಿದರೆ ಎಲ್ಲರೂ ರಾಜಕೀಯ ಹಿನ್ನೆಲೆಯುಳ್ಳ ಅಪ್ಪ-ಅಮ್ಮನನ್ನುಹೊಂದಿದವರೇ ಅಲ್ಲವೇ ?

    ನಮ್ಮೂರ ಗಣಪನ ನೋಡುವುದೆ ಹಬ್ಬ

    ಮೂರು ದಿನ ದೀಪ ಆರಬಾರದು, ರಾತ್ರಿ,ಹಗಲು… ಎರಡೂ ದೀಪಗಳಿಗೆ ಖಾಲಿ ಆದಾಗಲೆಲ್ಲ ಪಕ್ಕದಲ್ಲಿರುವ ಶೀಶೆಯಿಂದ ಎಣ್ಣೆ ಹಾಕ್ತಾ ಇರಬೇಕು.ಎರಡು ರಾತ್ರಿ ಇರಬೇಕು, ಯಾರ್ಯಾರು ಇಲ್ಲೇ ಇರ್ತೀರಿ….ಅಂತ ದ್ಯಾಮಣ್ಣ ಮೇಷ್ಟ್ರು ಕೇಳಿದ್ರು ಅಂದ್ರೆ, ನಾನಿರ್ತೀನಿ ಸಾ…ನಾನಿರ್ತೀನಿ ಸಾ ಅಂತ ನನ್ನನ್ನು ಸೇರಿಸಿ,ನನ್ನ ಹಲವಾರು ಗೆಳೆಯರು ಕೈ ಎತ್ತುತ್ತಿದ್ದೆವು.

    ಮ್ಮೂರ ಶಾಲೆಯಲ್ಲಿ ಗಣಪತಿ ಹಬ್ಬಕ್ಕೆ ಗಣಪನನ್ನು ಕೂಡಿಸುವ ಸಲುವಾಗಿ ,ಪೂರ್ವಬಾವೀ ತಯಾರಿ ನಡೆಸುವ ಸಲುವಾಗಿ ಶಾಲೆಯಲ್ಲಿ ಒಂದು ಕೋಣೆಯಲ್ಲಿ ಜಮೆ ಆಗಿರುತ್ತಿದ್ದ ನಮ್ಮನ್ನು ಐದನೇ ತರಗತಿಯ ಕ್ಲಾಸ್ ಟೀಚರ್ ಆಗಿದ್ದ ಆಗಲೇ 55 ದಾಟಿದ್ದ ದ್ಯಾಮಣ್ಣ ಮಾಸ್ತರರು ಕೂಡಿ ಹಾಕಿ ಕೇಳಿದರು ಅಂದ್ರೆ ಹತ್ತಿರದಲ್ಲೇ ಗಣಪತಿ ಹಬ್ಬ ಬಂದಿದೆ, ಶಾಲೆಯಲ್ಲಿ ಗಣಪತಿ ಕೂಡಿಸುವ ಕಾರ್ಯಕ್ರಮ ಪ್ರಾರಂಭ ಗೊಂಡಿವೆ ಅಂತ ನಮ್ಮ ಮನಸ್ಸುಗಳು ಪುಳಕ ಗೊಳ್ಳುತ್ತಿದ್ದವು.

    ಇಡೀ ನಮ್ಮ ಊರಲ್ಲಿ ಶಾಲೆಯ ಗಣಪನೂ ಸೇರಿ ಮತ್ತೆರೆಡು ಗಣಪತಿಗಳು ಪ್ರಸಿದ್ದಿ. ಒಂದು ಪೂಲೆಪ್ಪ ಶೆಟ್ಟಿ ಹೋಟೆಲ್ ದು ಮತ್ತೊಂದು ಚನ್ನವೀರಯ್ಯ ಸ್ವಾಮಿ ಮನೆಯದ್ದು. ನಮ್ಮ ಮನೆಯೂ ಸೇರಿ,ಮನೆ ಮನೆಗಳಲ್ಲಿ ಗಣಪ ಇರುತ್ತಿರಲಿಲ್ಲ. ಅಪ್ಪ ತನ್ನ ಶಾಲೆಯ ಗಣಪನನ್ನು ಕೂಡಿಸುವಲ್ಲಿ ಬ್ಯುಸಿ ಇರುತ್ತಿದ್ದುದರಿಂದ ನಮ್ಮ ಮನೆಯಲ್ಲೂ ಗಣಪ ಕೂಡುತ್ತಿರಲಿಲ್ಲ.

    1ನೇ ತರಗತಿಯಿಂದ 4ನೇ ತರಗತಿ ವರೆಗೆ ಪ್ರತಿಯೊಬ್ಬರೂ 5 ಪೈಸೆ, 5,6 ಮತ್ತು 7ನೇ ತರಗತಿಯವರು 10 ಪೈಸೆ ಗಣಪನ ದೇಣಿಗೆ ಕೊಡಬೇಕು. ಅವುಗಳನ್ನೆಲ್ಲ ಕ್ಲಾಸ್ ಲೀಡರ್ ಗಳು ಸಂಗ್ರಹಿಸಿಕೊಂಡು ಇಟ್ಕೋಬೇಕು. ಈ ಪ್ರಕ್ರಿಯೆ 3-4 ದಿನದ ಮುಂಚೆಯೇ ಶುರು ಆಗಬೇಕು ಮತ್ತು ಗಣಪತಿ ಕೂಡುವ ಹಿಂದಿನ ದಿನಕ್ಕೆ ಮುಗಿಯಬೇಕು. 7ನೇ ಕ್ಲಾಸಿನ ಲೀಡರ್ ಬುಡ್ಡೆನಹಳ್ಳಿ ರಂಗಪ್ಪನಿಗೆ ಎಲ್ಲರೂ ಕೊಡಬೇಕು. ಹೆಡ್ಮಾಸ್ಟರ್ ಸಯ್ಯದ್ ಮಹಮ್ಮದ್ ಅವರು ದ್ಯಾಮಣ್ಣ ಮಾಸ್ತರನ್ನು ಉಸ್ತುವಾರಿಕೆಗೆ ನೇಮಿಸುತ್ತಿದ್ದರು. ನಮ್ಮ ಶಾಲೆಗೆ ಮೊದಲನೇ Graduate Head Master ಅಂತ ಬಂದಿದ್ದ ಸಯ್ಯದ್ ಮಾಸ್ಟರ್ ತುಂಬಾ ಸ್ಟ್ರಿಕ್ಟ್ ಮತ್ತು 5ನೇ ಕ್ಲಾಸ್ ನಿಂದ ಇಂಗ್ಲಿಷ್ ಹೇಳುವವರು. ಕೈಯಲ್ಲಿ ಯಾವಾಗಲೂ ಬೆತ್ತ, ಬಿಳೀ ಪೈಜಾಮ, ಬಿಳೀ ಶರ್ಟು. ಅಪ್ಪನೆಂದರೆ ಇವರಿಗೆ ಪ್ರೀತಿ, ಅಪ್ಪನಿಗೂ ಅಭಿಮಾನ. ಮಾತಿಗೊಮ್ಮೆ ನಮ್ಮೂರ ಶಾಲೆಗೆ Graduate Head Master ಬಂದಿರೋದು ಹೆಮ್ಮೆ ಅನ್ನುವ ರೀತಿ ಅವರ ನುಡಿಗಳು. ಅಪ್ಪ ಆಗ ಪಕ್ಕದ ಗೌರಿಪುರದ ಶಾಲೆಯಲ್ಲಿ ಇದ್ದರು. ಬಿಳೀ ಕಚ್ಛೆ,ಬಿಳೀ ಅಂಗಿ ತೊಟ್ಟು, ಎತ್ತರದ ನಿಲುವಿನ ವಿಭೂತಿ ಧಾರಿ ದ್ಯಾಮಣ್ಣ ಮಾಸ್ಟ್ರು ಸೊವೇನಹಳ್ಳಿ ಯಿಂದ ದಿನಾಲೂ ಬರ್ತಿದ್ದರು. ಹಾಗಾಗಿ ಕೂಡ್ಲಿಗಿಯಿಂದ ಗಣಪನನ್ನು ಖರೀದಿಸಿ ತರುವುದು ಅವರ ಜವಾಬ್ದಾರಿ.

    ಆಗ ನಮ್ಮೂರ ಶಾಲೆಯ ಒಟ್ಟು ಗಣತಿ 40 ದಾಟುತ್ತಿರಲಿಲ್ಲ…ಒಂದೂವರೆ ರೂಪಾಯಿಗೆ ಮೀರದ ಒಂದಡಿ ಗಣಪ, ಕಾಯಿ,ಕರ್ಪುರ,ಊದಿನಕಡ್ಡಿ,ದೀಪಕ್ಕೆ ಎಣ್ಣೆ, ಮೂರ್ನಾಲ್ಕು ಲೀಟರ್ ಮಂಡಕ್ಕಿ…ಇವು ಗಣಪತಿ ಹಬ್ಬದ ಬಜೆಟ್…ಬಣ್ಣ ಇಲ್ಲದ ಮಣ್ಣಿನ ಗಣಪಗಳೇ ಹೆಚ್ಚು ಆಗ. ಎಂಟಾಣೆ ಹೆಚ್ಚಿಗೆ ಕೊಟ್ಟು ಬಣ್ಣ ಇದ್ದ ಗಣಪನನ್ನು ದ್ಯಾಮಣ್ಣ ಮಾಸ್ಟ್ರು ಹಿಂದಿನ ದಿನ ತಂದರು ಎಂದರೆ,ಶಾಲೆಗೆಲ್ಲ ಸಂಭ್ರಮ. ಪೇಪರ್ ನಲ್ಲಿ ಮುಚ್ಚಿಟ್ಟಿರುತ್ತಿದ್ದ ಆ ಗಣಪನನ್ನು ನೋಡೋದೇ ಹಬ್ಬ ನಮಗೆಲ್ಲ.

    ಬೊಮ್ಮಘಟ್ಟದ ಶಾಲೆ

    ಸಾಲಾಗಿ ನಾಲ್ಕು ಕೋಣೆಗಳಿದ್ದ ನನ್ನೂರ ಶಾಲೆಯಲ್ಲಿ, 1,2 ಒಂದು ಕೋಣೆಯಲ್ಲಿ, 3,4 ಮತ್ತೊಂದು ಕೋಣೆಯಲ್ಲಿ, 5,6 ಇನ್ನೊಂದರಲ್ಲಿ, 7 ಮಾತ್ರ ಹೆಡ್ಮಾಸ್ಟರ್ ರೂಮ್ ಕಮ್ ಆಫೀಸ್ ಅನ್ನುವ ಕೋಣೆಯಲ್ಲಿ. ಸಾಮಾನ್ಯವಾಗಿ ಕೊನೆಯ ಕೋಣೆ, ಆಫೀಸ್ ಪಕ್ಕ ಗಣಪತಿಯನ್ನು ಕೂಡಿಸುತ್ತಿದ್ದೆವು. ಶ್ರಾವಣ ಮಾಸ ಮುಗಿಯುತ್ತ ಬರುತ್ತಿದ್ದ ಆ ದಿನಗಳಲ್ಲಿ, ಮಳೆ ಜೋರು ಬಂದರೆ, ಕೋಣೆಗಳು ಸೋರುತ್ತಿದ್ದವು, ಹಾಗೆ ಸೋರದ ಜಾಗ ನೋಡಿ ಕೂಡಿಸುತ್ತಿದ್ದೆವು.

    ಗಣಪತಿ ಬಂದ ದಿನವೇ ಶಾಲೆ ಮುಗಿದ ನಂತರ ಕೋಣೆಯಲ್ಲಿ ಇರುತ್ತಿದ್ದ ಟೇಬಲ್, ಅದರ ಮೇಲೆ ಕುರ್ಚಿ ಇಟ್ಟು, ಎರಡೂ ಕಡೆ ಬಾಳೆ ಕಂಬ,ಅಥವಾ ತೆಂಗಿನ ಗರಿಗಳನ್ನು ಇಟ್ಟು, ಕುರ್ಚಿಗೆ ಒಂದು ಬಿಳೀ ಬಟ್ಟೆ ಹಾಸಿದೆವು ಅಂದ್ರೆ ಗಣಪನ ಪೀಠ ಸಿದ್ಧವಾದಂತೆ. ಅದನ್ನೇ ಕಣ್ತುಂಬಾ ನೋಡ್ತಾ ಸಂಭ್ರಮಗೊಂಡು ಮನೆಗೆ ಹೋದರೆ,ನಿದ್ದೆಯೇ ಬರ್ತಿದ್ದಿಲ್ಲ ಅವತ್ತೆಲ್ಲ!

    ಆಗಸ್ಟ್ 15,ಜನವರಿ 26 ಬಿಟ್ಟರೆ ಬೆಳಿಗ್ಗೆ ಬೇಗನೇ ಶಾಲೆಯ ಬಯಲಲ್ಲಿ ಸೇರುತ್ತಿದ್ದೆಂದರೆ ಈ ಗಣಪನ ಹಬ್ಬಕ್ಕೇ. ಊರ ದಕ್ಷಿಣಕ್ಕೆ,ಎತ್ತರದ ಸ್ಥಳದಲ್ಲಿ, ಉತ್ತರಕ್ಕೆ ಮುಖ ಮಾಡಿ ನಿಂತಿದ್ದ ನಾಲ್ಕು ಕೋಣೆಗಳ ಮುಂದೆ 6ಅಡಿ ವಾರಾಂಡ ಹೊಂದಿದ್ದ,ಮಂಗಳೂರು ಹೆಂಚಿನ ಮಾಳಿಗೆಯ ಕಲ್ಲಿನ ಕಟ್ಟಡ ನನ್ನ ಶಾಲೆ. ಮುಂದಿನ ವಿಶಾಲ ಬಯಲು, ಇಡೀ ತಾಲೂಕಲ್ಲೇ ಯಾವ ಶಾಲೆಗೂ ಇರಲಿಲ್ಲ. ಊರಿಂದ ಹೊರಗೇ ಎನ್ನುವಷ್ಟು ದೂರದಲ್ಲಿತ್ತು. ಹೂ,ಎಣ್ಣೆ ಬತ್ತಿ,ದೀಪ ಹಿಡಿದು ಹುಡುಗಿಯರು ಬಂದರೆ, ಹಾಸಲು ಜಮಖಾನ,ತೆಂಗಿನ ಗರಿ,ಜಾಗಟೆ,ಗಂಟೆ ಮುಂತಾದುವುಗಳನ್ನು ಹೊತ್ತು ಹುಡುಗರು ಬರುತ್ತಿದ್ದರು. ಸಯ್ಯದ್ ಮೇಷ್ಟ್ರು ಆಗಲೇ ಇರುತ್ತಿದ್ದರು. ಗಾಂಧೀಜಿ, ನೆಹರು ಫೋಟೋಗಳ ಜೊತೆ ಲಕ್ಷ್ಮಿ,ಗಣಪ ಸರಸ್ವತಿಯರು ಇದ್ದ ಒಂದು ಫೋಟೋವನ್ನು ಬೀರುವಿನಿಂದ ತೆಗೆದು ಕೊಡುತ್ತಿದ್ದರು.

    ರೇವಣ ಸಿದ್ದಯ್ಯ,ದ್ಯಾಮಣ್ಣ,ಶಾಮಸುಂದರ್ ರಾವ್,ಅಗ್ರಹಾರದ ಶರಣಪ್ಪ,ರಾಮದುರ್ಗದ ಕೃಷ್ಣಮೂರ್ತಿ, ಶೆಲಿಯಪ್ಪನ ಹಳ್ಳಿಯ ಷಣ್ಮುಖಪ್ಪ ಮಾಸ್ಟರ್ ಗಳ ವೃಂದ ಒಬ್ಬೊಬ್ಬರಾಗಿ ಬರುತ್ತಿದ್ದರು. ಅಕ್ಕ ಪಕ್ಕದ 2,3 ಕಿ.ಮೀ ದೂರದ ಹಳ್ಳಿಗಳಿಂದ ನಮ್ಮ ಗೆಳೆಯರೂ ಬರುತ್ತಿದ್ದರು. ಬೆಳಗಿನ 9 ಘಂಟೆಗೆಲ್ಲ ಗಣಪನ ಹಬ್ಬದ ಸಡಗರ ಶಾಲೆಯ ಆವರಣದ ತುಂಬಾ ಪಸರಿಸುತ್ತಿತ್ತು.

    ಒಗೆದ,ಶುಭ್ರಗೊಂಡ ಬಟ್ಟೆಗಳನ್ನು ಹಾಕಿಕೊಂಡು,ಢಾಳಾಕಾರವಾಗಿ ಕೊಬ್ಬರಿ ಎಣ್ಣೆ ತಲೆಗೆ ಹಚ್ಚಿ ಬಾಚಿದ ತಲೆಗಳೊಂದಿಗೆ ಎಲ್ಲರೂ ಗಣಪನ ಪೀಠದ ಮುಂದೆ ನೆರೆದಿರುತ್ತಿದ್ದೆವು. ನಮ್ಮ ಗೆಳೆಯನೇ ಆದ ಗರಗದ ರಾಮಾಚಾರಿ ಮೊಮ್ಮಗ ಗುರುರಾಜ ಆಗತಾನೇ ಮುಂಜಿ ಮಾಡಿಸಿಕೊಂಡು ಮುಖಕ್ಕೆಲ್ಲ ಮುದ್ರೆ ಹೊತ್ತಿಸಿಕೊಂಡು, ಬರೀ ಮೈಯಲ್ಲಿ ಗಣಪನನ್ನು ಸಿಂಗರಿಸುತ್ತ ಹತ್ತಿರ ಕೂತಿರುತ್ತಿದ್ದ. ಏನೇನೋ ಮಂತ್ರ ಹೇಳ್ತಿದ್ದ, ಶುಕ್ಲಾಮ್ ಭರಧರಮ್  ಬಿಟ್ಟು ಬೇರೆ ನಮಗೆ ಅರ್ಥ ಆಗ್ತಿರಲಿಲ್ಲ.

    ಕರ್ಪೂರ,ಊದಿನಕಡ್ಡಿ ಪರಿಮಳಗಳೊಂದಿಗೆ ತುಂಬಿದ್ದ ಆ ಕೊಠಡಿ ನಮಗೆ ದೇವಸ್ಥಾನವಾಗಿ ಕಾಣುತ್ತಿತ್ತು. ಬುಡ್ಡೆನಹಳ್ಳಿ ಪಾಂಡು,ಪೂಜಾರಿ ಕಿಟ್ಟ  ನಮ್ಮ ಜೊತೆಯ ಸೊಗಸಾದ ಹಾಡುಗಾರರು  ಆಗ.  ….ಪಾರ್ವತಿ ಮಾತೆಯ ಮಗನಾಗಿ ಜನಿಸಿದ ಗಣಪತಿ…….ಅಂತ ಹಾಡಿನ ಜೊತೆ ಇನ್ನೂ ಮೂರ್ನಾಲ್ಕು ಗಣಪನ ಹಾಡುಗಳನ್ನು ತಯಾರು ಮಾಡಿಕೊಂಡು ಬಂದು ಹಾಡುತ್ತಿದ್ದರು. ಗುರು ಮಂತ್ರ ಜೋರಾಗಿ ಹೇಳಿದನೆಂದ್ರೆ, ಜಾಗಟೆ,ಶಂಖ ರೆಡಿಮಾಡಿಕೊಂಡ ತಂಡ ಜೋರಾಗಿ ಜಾಗಟೆ ಬಾರಿಸಿ,ಶಂಖ ಊದುತ್ತಿದ್ದರು. ಕಿಟ್ಟ ಇದರ ಉಸ್ತುವಾರಿ. ಎಲ್ಲರೂ…ಬೆನಕ,ಬೆನಕ ಏಕದಂತ ಪಚ್ಛೆಕಲ್ಲು ಪಾಣಿಪೀಠ….ಅಂತ ಶುರುಮಾಡಿ…… ಒಪ್ಪಿದ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು ಅಂತ ಕಿವಿ ಹಿಡಿದುಕೊಂಡು ಮೇಲೆ,ಕೆಳಗೆ ಕುಳಿತು ಎದ್ದೆವೆಂದರೆ ಗಣಪನ ಶಾಲೆಯ ಪೂಜೆ ಮುಗಿತು.
    ಒಡೆದ ತೆಂಗಿನಕಾಯಿಗಳ ಕೊಬ್ಬರಿಯನ್ನು ಸಣ್ಣ ಸಣ್ಣ ಚೂರು ಮಾಡಿ,ಬೆಲ್ಲದ ಚೂರಿನೊಂದಿಗೆ ಮಂಡಕ್ಕಿಗೆ ಬೆರೆಸಿ, ಅದನ್ನು ಎಲ್ಲರಿಗೂ ಪ್ರಸಾದ ಅಂತ ಶಾಮಸುಂದರ್ ಮೇಷ್ಟ್ರು ಕೊಡ್ತಿದ್ದರು.

    ತಿಂದು ಬಯಲಿಗೆ ಬಂದರೆ ದಿನ ಇಡೀ ಕಬ್ಬಡ್ಡಿ,ಖೊಖೊ, ಮೂರುಕಾಲಿನ ಓಟ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಓಡುವುದು, ಸೂಜಿಗೆ ದಾರ ಪೋಣಿಸುವುದು ಹೀಗೆ ವಿಧ,ವಿಧ ಆಟಗಳು. ಅಗ್ರಹಾರದ ಶರಣಪ್ಪ ಮೇಷ್ಟ್ರ ಫೈನಲ್ ಗೆ ಬಂದ ತಂಡಗಳ ಕಬ್ಬಡ್ಡಿ ಆಡಿಸುವುದಂತೂ ನಮಗೆ ವರ್ಲ್ಡ್ ಕಪ್. ಒಬ್ಬೊಬ್ಬ ಮೇಷ್ಟ್ರು ಒಂದೊಂದು ಆಟ ಆಡಿಸಿ,ಗೆದ್ದವರ ಹೆಸರು ಬರೆದುಕೊಳ್ಳುತ್ತಿದ್ದರು. ಅದರಲ್ಲೇ ಶಾಲೆಯ ಚಾಂಪಿಯನ್ನಗಳೂ ಇರುತ್ತಿದ್ದರು!

    ಕೂಡ್ಲಿಗಿ ಬಸ್ ಡಿಪೋದ ಗಣಪತಿ ಸುತ್ತ ಭಾರೀ ಪ್ರಸಿದ್ಧಿ. ಅವತ್ತು ಊರಿಗೆ ಬಸ್ಸುಗಳು ಬರ್ತಿರಲಿಲ್ಲ. ಸಾಯಂಕಾಲ ನಾವೇ ಎಂಟತ್ತು ಹುಡುಗರು ಗುಂಪು ಮಾಡಿಕೊಂಡು ಯಾವ್ಯಾವ ಮನೆಗಳಲ್ಲಿ ಗಣಪ ಇರುತ್ತಿದ್ದನೋ ಅಲ್ಲೆಲ್ಲಾ ಹೋಗಿ, ಸಾಲಾಗಿ ನಿಂತುಕೊಂಡು ಮೂರ್ನಾಲ್ಕು ಗಣಪನ ಹಾಡು ಹಾಡಿ ಮತ್ತೆ ಇಪ್ಪತ್ತೊಂದು ನಮಸ್ಕಾರ ಹಾಕಿ ಬರೋದು. ಹಾಗೆ ಪ್ರತೀ ಗಣಪನ ಮುಂದೆ ಹಾಕಿದ ನಮಸ್ಕಾರಗಳಿಗೆ ಲೆಕ್ಕವೇ ಇಲ್ಲ. ಕೆಲವು ಅವತ್ತೇ ಕೆರೆ ಸೇರುವ ಗಣಪಗಳಿದ್ದರೆ,ಅವುಗಳಿಗೆ ಮೊದಲೇ ನಮಸ್ಕಾರ. ಮೂರು ದಿನಕ್ಕೆ ಹೋಗುವ ಗಣಪಗಳಿಗೆ ನಾಳೆ ಹೋಗುವ ಅಂದು ಕೊಳ್ಳುತ್ತಿದ್ದೆವು.

    ಪೂಲೆಪ್ಪ ಶೆಟ್ಟಿ ಹೋಟೆಲಿನ ಗಣಪನದ್ದೇ ಒಂದು ಸ್ಪೆಷಲ್ ಏನಂದ್ರೆ, ಗಣಪ ಒಂದು ವರ್ಷ ಪೂರ್ತಿ ಹೋಟಲ್ ನಲ್ಲಿ ಇರ್ತಿದ್ದ. ಹೋದ ವರ್ಷದ ಹಳೆಯ ಗಣಪನನ್ನು ಈ ವರ್ಷ ಕೆರೆಗೆ ಹಾಕುವುದು. ಅಲ್ಲದೆ ವರ್ಷ ಇಡೀ ಶುಕ್ರವಾರಗಳ  ಸಾಯಂಕಾಲ ಮಂಡಕ್ಕಿ ಬೆಲ್ಲ ಹಂಚುತ್ತಿದ್ದರು,ಹುಡುಗರಿಗೆ.

     ಕತ್ತಲಾಗುವುದರೊಳಗೆ ಮನೆಯಲ್ಲಿರಬೇಕು, ಯಾರೂ ಚಂದ್ರನನ್ನು ನೋಡಬಾರದು ಇವತ್ತು ಅಂತ ಅಮ್ಮ,ಅಪ್ಪ ಹೇಳಿದ್ದ ಮಾತುಗಳು ನೆನಪಿಗೆ ಬಂದು, ಸ್ವಲ್ಪ ಕತ್ತಲಾದರೂ ತಲೆತಗ್ಗಿಸಿಕೊಂಡು,ಅಪ್ಪಿ ತಪ್ಪಿಯೂ ಆಕಾಶದ ಕಡೆ,ಚಂದ್ರನ ಕಡೆ ನೋಡ್ತಿರಲಿಲ್ಲ. ಅಪ್ಪನ ಶಮಂತಕೋಪಾಖ್ಯಾನ ಕಥೆಯಲ್ಲಿ ಹೊಟ್ಟೆತುಂಬಾ ಕಡಬು ತಿಂದು,ಹೊಟ್ಟೆ ಹೊಡೆದು,ಸಿಕ್ಕ ಹಾವನ್ನು ಹೊಟ್ಟೆಗೆ ಸುತ್ತಿಕೊಂಡ ಗಣಪನನ್ನು ನೆನೆಸಿಕೊಂಡು ನಗುವುದೇ ನಗುವುದು. ಸಿಟ್ಟಾದ ಗಣಪ,ಅವನ ಅವಸ್ಥೆ ನೋಡಿ ನಕ್ಕ ಚಂದ್ರನನ್ನು ಶಪಿಸಿದ್ದು ಕೇಳಿ ಗಂಭೀರವಾಗುವುದು. ಜೊತೆಗೆ ಅಪ್ಪ ಗಣಪನಿಗೆ ಮದುವೆ ಏಕೆ ಆಗಲಿಲ್ಲ ಅಂತ ಕಥೆ ಹೇಳ್ತಿದ್ದರು.

    ಕೃಷ್ಣ, ಕರಡಿ (ಜಾಂಬವಂತ) ಯುದ್ಧ ಮಾಡೋದು, ಸೋಲದೆ ಹೋದಾಗ,ಕೃಷ್ಣ ರಾಮನಾಗಿ ತೋರೋದು,ಜಾಂಬವತಿಯನ್ನು ಕೃಷ್ಣ ಮದುವೆ ಆಗೋದು,ಮತ್ತೆ ಶಮಂತಕ ಮಣಿ ಸಿಕ್ಕಾಗ ಆಗ್ತಿದ್ದ ಖುಷಿ ಎಲ್ಲಾ ಕೇಳಿ ನಾವು ದ್ವಾಪರ,ತೇತ್ರಾಯುಗಕ್ಕೆ ಹೋಗಿಬಿಟ್ಟಿರುತ್ತಿದ್ದೆವು.

    ಮೂರ್ನಾಲ್ಕು ದಿನ ಗಣಪನ ಕಥೆ ಶಾಲೆ,ಮನೆಗಳಲ್ಲಿ ಕೇಳ್ತಿದ್ದರೆ,ಈ ಶಿವನಿಗೆ ಯಾಕೆ ಅಷ್ಟು ಸಿಟ್ಟು ಬರಬೇಕು ಮಗನ ಮೇಲೆ ಅಂತ ಅನ್ನಿಸುತ್ತಿತ್ತು.  ಆದರೆ ನಮ್ಮ ಅಜ್ಜಿ ಬೇರೆಯದೇ ಕಥೆ ಹೇಳುತ್ತಿದ್ದರು. ಭೂಮಿ ಗೌರಮ್ಮನ ತವರು ಮನೆ. ಗೌರಮ್ಮ ತವರು ಮನೆಗೆ ಬಂದಿರ್ತಾಳೆ, ಮಗ ಗಣಪ ಅಮ್ಮನನ್ನು ಕರೆದುಕೊಂಡು ಕೈಲಾಸಕ್ಕೆ ಹೋಗಲು ಭೂಮಿಗೆ ಬರ್ತಾನೆ. ಹಾಗೆ ಬಂದವನು ಭೂಮಿಯ ಮೇಲೆ ಮಳೆ,ಬೆಳೆ,ಹಸಿರು ನೋಡಿ ತನ್ನ ಅಪ್ಪನಿಗೆ ವರದಿ ಒಪ್ಪಿಸುತ್ತಾನೆ….ಅಂತ…ಎಳೆ ಮೆದುಳಿಗೆ ಇಂತಹ ಕಥೆಗಳು ನಾಟಿ, ಶಿವ, ಗೌರಿ,ಗಣಪ ಎಲ್ಲ ನಮ್ಮ ಪಕ್ಕದ ಮನೆಯವರೇ ಎನ್ನುವಂತಹ ಕಲ್ಪನೆ,ಸಮಾಧಾನ, ಮುದ ನೀಡುತ್ತಿತ್ತು.

    ನಮ್ಮೂರಲ್ಲಿ ಆಗ ಸಾಮೂಹಿಕ ಗಣಪ ಇರಲಿಲ್ಲ. ಪೆಂಡಾಲ್,ಆರ್ಕೆಸ್ತ್ರಾ ಇಲ್ಲ. ಆದರೂ ಗಣಪನ ಹಬ್ಬ ನಮಗೆ ಅಳಿಯದ ನೆನಪುಗಳಲ್ಲಿ ಸೇರಿದೆ. ತುಂಬಾ ಸಂಭ್ರಮದಿಂದ ಮಾಡಿದ್ದೆವು ಅಂತ ಅನ್ನಿಸ್ತಿದೆ.


    ಒಂದು ಇಂಥ ಗಣಪತಿ ಹಬ್ಬ ಮುಗಿಸಿ, ಸಡಗರದಿಂದ ಗಣಪನನ್ನು ನಮ್ಮೂರ ಕೆರೆಯ ನೀರಲ್ಲಿ  …ಈ ವರ್ಷ ಹೋಗಯ್ಯ…ಬರೋ ವರ್ಷ ಬಾರಯ್ಯ…..ಚಿಕ್ಕೆರೆಗೆ ಎದ್ದ,…ಹಿರೇಕೆರೆಗೆ ಬಿದ್ದ….ಅಂತ ಮುಳುಗಿಸಿ ಶಾಲೆಗೆ ಬಂದಾಗ, ಸಯ್ಯದ್ ಮೇಷ್ಟ್ರು ಎಲ್ಲರಿಗೂ ಪೆಪ್ಪರಮೆಂಟ್ ಕೊಟ್ಟು, ಸುತ್ತಲೂ ಕರೆದುಕೊಂಡು ಎಲ್ಲರ ತಲೆಮೇಲೆ ಕೈ ಆಡಿಸುತ್ತಾ,ಕಣ್ಣಲ್ಲಿ ನೀರು ತಂದುಕೊಂಡು, ನಾಳೆಯಿಂದ ನಾನು ಶಾಲೆಗೆ ಬರಲ್ಲ,ಹೋಗ್ತಿದ್ದೇನೆ ಅಂತ ಭಾವಪರವಶರಾಗಿದ್ದರು.
    ರೈಲ್ವೇ ಇಲಾಖೆಯಲ್ಲಿ ಅವರಿಗೆ ನೌಕರಿ ಸಿಕ್ಕು, ಗುಂತಕಲ್ಲಿಗೆ ಹೋದರು. ಅವತ್ತೇ ಕೊನೆ ಮತ್ತೆ ನನಗೆ ಅವರನ್ನು ನೋಡುವ ಭಾಗ್ಯ ಸಿಕ್ಕಿಲ್ಲ.

    ಅವರ ಜಾಗಕ್ಕೆ ಹರಪನಹಳ್ಳಿಯಿಂದ ನಾಗಭೂಷಣ್ ನಮ್ಮೂರ ಶಾಲೆಗೆ Graduate Head Master ಆಗಿ ಬಂದಿದ್ದರು. ಸದ್ದಿಲ್ಲದೆ ಜರುಗುತ್ತಿರುವ ಈ ವರ್ಷದ ಕರೊನಾ ನನ್ನ ಬಾಲ್ಯದ ಸದ್ದಿಲ್ಲದ ಗಣಪನನ್ನು ನೆನಪಿಗೆ ತಂದ. ಅಷ್ಟೇ ಅಲ್ಲ,ಇಂತಹ ಒಂದು ಗಣಪತಿ ಹಬ್ಬದಂದೇ ಗೌರಿಪುರ ಶಾಲೆಯ ಗಣಪತಿ ಮುಂದೆ ನನಗೆ ಅಪ್ಪ ತನ್ನ ತೊಡೆಯ ಮೇಲೆ ಕೂಡಿಸಿಕೊಂಡು ಪ್ರಥಮವಾಗಿ ಅಕ್ಷರ ಅಭ್ಯಾಸ ಮಾಡಿಸಿದ್ದರಂತೆ.

    Photo by Shubham Belwate on Unsplash

    ನಮೋ ಗಜಾನನ ಗಿರಿಜಾನಂದನ

    ಇಂದು ಎಲ್ಲೆಡೆ ಗಣಪತಿ ಹಬ್ಬದ ಸಂಭ್ರಮ. ನಿಮ್ಮ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಈ ಪಾಡ್ಕಾಸ್ಟ್ ಅನ್ನು ಸಾದರ ಪಡಿಸುತ್ತಿದ್ದೇವೆ. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡತಿ ಶ್ರುತಿ  ಕೋಡನಾಡ್ ಅವರು ತಮ್ಮ ಸುಮಧುರ ಗಾಯನದಲ್ಲಿ ಗಣೇಶ ಭಕ್ತಿ ಸಂಗೀತವನ್ನು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ.

    ಮೂಲತಃ ಚಿತ್ರದುರ್ಗದವರಾದ ಶ್ರುತಿ ಕೋಡನಾಡ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಗಮಕ ಕಲೆಯನ್ನು ಗಮಕ ಕಲಾನಿಧಿ ಶ್ರೀಮತಿ ಚಂಪಕಾ ಶ್ರೀಧರ್ ಇವರಲ್ಲಿ  ಅಭ್ಯಾಸ ಮಾಡಿದ್ದಾರೆ.ಚಿಕ್ಕವಯಸ್ಸಿನಲ್ಲೇ ತಮ್ಮ ತಾಯಿ ಗಮಕಿ ಶ್ರೀಮತಿ ಮಂಜುಳಾ ದತ್ತಾತ್ರೇಯ ಅವರಿಂದ ಗಮಕ ಕಲೆಗೆ ಪರಿಚಿತರಾಗಿರುತ್ತಾರೆ.

    ತಮ್ಮ  ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಗಮಕ ವಾಚನ ಹಾಗೂ ರೂಪಕ ಕಾರ್ಯಕ್ರಮಗಳನ್ನು  ನೀಡಿದ್ದು, ಪ್ರಮುಖವಾಗಿ ಹೊಸಳ್ಳಿಯಲ್ಲಿ ಗಮಕ ಗಂಧರ್ವ ಶ್ರೀ ಕೇಶವಮೂರ್ತಿರವರ ಸಮ್ಮುಖದಲ್ಲಿ ಗಮಕ ವಾಚನ ಮತ್ತು ೯ನೇ ಅಖಿಲ ಕರ್ನಾಟಕ  ಗಮಕ ಕಲಾ  ಸಮ್ಮೇಳನ(೨೦೧೩)ರಲ್ಲಿ ‘ಕುವೆಂಪು ರಾಮಾಯಣದರ್ಶನಂ’ ಗಮಕ ರೂಪಕದಲ್ಲಿ ಭಾಗವಹಿಸಿರುತ್ತಾರೆ.

     ಹಲವೆಡೆ ಶಾಸ್ತ್ರೀಯ ಸಂಗೀತ  ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಮತ್ತು ಆಕಾಶವಾಣಿಯಲ್ಲೂ ಹಾಡಿರುತ್ತಾರೆ.ಇವರು ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿದ್ದು ನೃತ್ಯ, ನಾಟಕ, ಕರಕುಶಲ ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.

    ಪ್ರಸ್ತುತ ಶ್ರುತಿಯವರು ತಮ್ಮ ಪತಿ ಅಂಜನ್ ರಾಘವೇಂದ್ರ ಅವರೊಂದಿಗೆ ಅಮೇರಿಕಾದ  ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದು ಅಲ್ಲಿನ ಕನ್ನಡ ಸಂಘ ಹಾಗೂ ವಿವಿಧ ಸಂಸ್ಥೆಗಳಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

    ಪಾಡ್ಕಾಸ್ಟ್ ನಿರೂಪಣೆ ಭಾರತಿ ಅವರದ್ದು.

    ಆಲಿಸಿ ಪ್ರತಿಕ್ರಿಯಿಸಿ.

    error: Content is protected !!