25.1 C
Karnataka
Saturday, August 22, 2026
    Home Blog Page 128

    ಇಷ್ಟು ವರ್ಷ ಬರಹಗಳ ರೂಪದಲ್ಲಿ ಒಳಗೆ ನಡೆಯುತ್ತಿದ್ದ ಅಭಿನಯ ಈಗ ಹೊರಗೆ ಬಂದಿದೆ


    ಅಂತಃಕರಣದ ಕವಿ ಡಾ.ಎಚ್. ಎಸ್. ವೆಂಕಟೇಶ ಮೂರ್ತಿ ಅವರನ್ನು ಸಾಹಿತಿಯಾಗಿ ಬಲ್ಲವರಿಗೆ ಅವರೊಲ್ಲಬ್ಬ ಕಲಾವಿದನು ಅಡಗಿದ್ದಾನೆ ಎಂಬುದು ಗೊತ್ತಿಲ್ಲ. ಕೆಲ ದಿನಗಳ ಹಿಂದೆ ಹಸಿರು ರಿಬ್ಬನ್ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದಿದ್ದ ಕವಿಗಳು ಈಗ ಅಭಿನಯಕ್ಕೆ ಇಳಿದಿದ್ದಾರೆ. ಅವರು ನಟಿಸಿರುವ ಅಮೃತವಾಹಿನಿ ಚಲನಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಮತ್ತೊಬ್ಬ ಸುಪ್ರಸಿದ್ಧ ಕತೆಗಾರ ರಾಘವೇಂದ್ರ ಪಾಟೀಲರು ಬರೆದ ಕಥೆ ಆಧರಿಸಿದ ಚಿತ್ರ ಇದು. ಕೆ. ನರೇಂದ್ರಬಾಬು ನಿರ್ದೇಶಿಸಿದ್ದಾರೆ. ಕವಯತ್ರಿ ಮಾಲಿನಿ ಗುರುಪ್ರಸನ್ನ ಕನ್ನಡಪ್ರೆಸ್.ಕಾಮ್ ಗಾಗಿ ನಡೆಸಿದ ಈ ವಿಶೇಷ ಸಂದರ್ಶನದಲ್ಲಿ ಕವಿ, ನಟನೆಯೊಂದಿಗಿನ ತಮ್ಮ ನಂಟು , ಸಿನಿಮಾ ನಟನೆಯಲ್ಲಿನ ಸವಾಲುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.


    ಇಂದು ನೀವು ನಟಿಸಿರುವ ಅಮೃತವಾಹಿನಿ ಚಲನಚಿತ್ರ ಬಿಡುಗಡೆಯಾಗುತ್ತಿದೆ. ಮೊದಲಿಗೆ ಶುಭಾಶಯಗಳು.

    ಧನ್ಯವಾದ ಮಾಲಿನಿ.

    ಈಗ ಅಭಿನಯ ಕ್ಷೇತ್ರಕ್ಕೂ ಕಾಲಿಟ್ಟಿದ್ದೀರಿ.. ಹೇಗನ್ನಿಸುತ್ತಿದೆ.?

    ಬರವಣಿಗೆಯಲ್ಲಿ ಅಭಿನಯವೇ ಇದೆಯಲ್ಲವೇ? ಕಾವ್ಯ, ಕಥೆ ಬರೆಯುವಾಗ ಅನೇಕ ಪಾತ್ರಗಳು ಬರುತ್ತವೆ. ಆ ಪಾತ್ರ ನಾನಾಗದೇ ಬರಹದಲ್ಲಿ ಸಹಜತೆ ಬರುವುದಿಲ್ಲ. ಬುದ್ಧಚರಿತವನ್ನೇ ನೋಡು, ರಾಹುಲನ ಮಾತುಗಳನ್ನು ನಾನು ಬರೆಯಬೇಕಾದರೆ ರಾಹುಲನನ್ನು ನಾನು ಆವಾಹಿಸಿಕೊಳ್ಳಬೇಕು. ಸೀತೆಯಾಗಬೇಕಾದರೆ ಸೀತೆಯ ಹೆಣ್ತನವನ್ನು ನಾನು ಪಡೆಯದಿದ್ದರೆ ಸಹಜತೆ ಬರುವುದಿಲ್ಲ. ಕವಿಯ ಮನಸ್ಸು ಅನೇಕ ಸ್ಥರಗಳಲ್ಲಿ ಸಂಚಾರ ಮಾಡುತ್ತಿರುತ್ತದೆ. ವಿಫುಲ ರೂಪ ಧಾರಿಣಿ ಕವಿಯ ಮನಸ್ಸು ಎಂದು ಕುವೆಂಪು ಹೇಳಿಲ್ಲವೇ. ಹಾಗೆ ಬರವಣಿಗೆ ಎಂಬುದು ಅಂತರಂಗದಲ್ಲಿ ಅಭಿನಯ . ಸಿನಿಮಾ ನಾಟಕ ಎಂಬುದು ಬಹಿರಂಗದಲ್ಲಿ ತೋರಿಸಬೇಕಾದ್ದು.ಕವಿತೆ ಕಷ್ಟ ಏಕೆಂದರೆ ಅದರಲ್ಲಿ ಬರುವ ಎಲ್ಲಾ ಪಾತ್ರಗಳನ್ನೂ ಕವಿ ಅಭಿನಯಿಸಬೇಕು. ಆದರೆ ಇಲ್ಲಿ ತನಗೆ ಸಿಕ್ಕ ಒಂದು ಪಾತ್ರವನ್ನು ಆವಾಹಿಸಿಕೊಂಡರಾಯಿತು. ಸಾಹಿತ್ಯದಲ್ಲೂ , ಸಿನೆಮಾದಲ್ಲೂ ಪರಾನುಕಂಪಿ ಅಥವಾ ಸಹಾನುಭೂತಿ ಅಂದರೆ ನಾನು ನೀನಾಗುವಿಕೆ ಬಹಳ ಮುಖ್ಯ .ನಿನ್ನ ದುಃಖ ನನ್ನದಾಗಿಸಿಕೊಳ್ಳುವುದು, ನಿನ್ನ ಸಮಸ್ಯೆ ನನ್ನದೂ, ನಿನ್ನ ನಗು ನನ್ನದೇ .. ಹೀಗಾಗಿ ಇಷ್ಟು ವರ್ಷ ಬರಹಗಳ ರೂಪದಲ್ಲಿ ಒಳಗೆ ನಡೆಯುತ್ತಿದ್ದ ಅಭಿನಯ ಈಗ ಹೊರಗೆ ಬಂದಿದೆ ಅಷ್ಟೇ .

    ಅಮೃತವಾಹಿನಿಯ ಸ್ಥಿರ ಚಿತ್ರ

    ನಿಮಗೆ ಹಿಂದೆ ಈ ರಂಗದ ಅನುಭವ ಇತ್ತಾ? ಹಿಂದೆ ನೀವು ಮಲ್ಲಾಡಿಹಳ್ಳಿಯಲ್ಲಿ ಬಂಡವಾಳವಿಲ್ಲದ ಬಡಾಯಿ ಎಂಬ ನಾಟಕದಲ್ಲಿ ಅಭಿನಯಿಸಿದ್ದಿರಿ ಎಂದು ಕೇಳಿ ಬಲ್ಲೆ. ಅದಕ್ಕೂ ಹಿಂದೆ ಏನಾದರೂ?

    ಹೂ ಹೂ .. ನಿನ್ನ ತಂದೆ ಚಿದಂಬರ ರಾಯರು ನಿರ್ದೇಶಿಸಿದ್ದ ನಾಟಕ ಅದು. ಅದರಲ್ಲಿ ನಾನೂ ಬಣ್ಣ ಹಚ್ಚಿದ್ದೆ. ಅದಕ್ಕೂ ಹಿಂದೆ ನಾನು ಮಾಧ್ಯಮಿಕ ತರಗತಿಯಲ್ಲಿ ಓದುತ್ತಿದ್ದಾಗ ಸೈಂಧವ ಎಂದೊಂದು ನಾಟಕ ಬರೆದು ನಾನು ಈಶ್ವರಚಂದ್ರ ಅದನ್ನು ನಮ್ಮ ಮನೆಯ ಹಿತ್ತಲಿನಲ್ಲಿ ಪ್ರಯೋಗಿಸಿದ್ದೆವು. ನಮ್ಮ ಅಜ್ಜಿಗಳೇ ಅದಕ್ಕೆ ಪ್ರೇಕ್ಷಕರು. ನಾವಿಬ್ಬರೇ ನಟರು. ಅಲ್ಲೇ ಹೋದಿಗ್ಗೆರೆಯ ಹತ್ತಿರ ಗಂಗೂರು ಎಂಬ ಊರಿನಲ್ಲಿ ಬೊಂಬೆಮೇಳ ಬಹಳ ಪ್ರಸಿದ್ಧಿ. ಅದನ್ನು ನೋಡಲು ಹೋಗುತ್ತಿದ್ದೆ. ಅಲ್ಲಿಂದ ನನಗೆ ಈ ರಂಗದ ಕುರಿತು ಆಸಕ್ತಿ ಮೂಡಲಾರಂಭಿಸಿತು.

    ಸಿನಿಮಾ ಬಗ್ಗೆ ?

    ನನ್ನ ಪ್ರೌಢಶಾಲಾ ಹಂತದಿಂದ ಈ ಸಿನಿಮಾ ನೋಡುವ ಆಸಕ್ತಿ ವಿಪರೀತ ಹೆಚ್ಚಾಯಿತು.ರಾಜ್ ಕುಮಾರ್ ನನಗೆ ಬಹಳ ಇಷ್ಟದ ನಟ. ಅಶ್ವಥ್ ಕೂಡ ನನಗೆ ಬಹಳ ಇಷ್ಟ .

    ನೀವು ನಿರ್ದೇಶನಕ್ಕೂ ಕೈ ಹಾಕಿದಿರಿ..

    ಹಾಗೆ ನೋಡಿದರೆ ನಿರ್ದೇಶನವೂ ನನಗೇನು ಹೊಸತಲ್ಲ . ಹಿಂದೆ ಕಾಲೇಜಿನಲ್ಲಿ ಜಿ.ಕೆ. ಗೋವಿಂದರಾಯರು ನಿವೃತ್ತರಾದ ನಂತರ ನನ್ನ ಮೇಲೆ ನಾಟಕಗಳನ್ನು ಆಡಿಸುವ ಜವಾಬ್ದಾರಿ ಬಿದ್ದಿತ್ತು. .ಆಗ ಮಕ್ಕಳಿಗೆ ನಾನೇ ಅಭಿನಯಿಸಿ ತೋರಿಸಬೇಕಿತ್ತು ಕೂಡಾ. ಎಷ್ಟೋ ಬಾರಿ ನಾಟಕಗಳನ್ನು ನಾನೇ ಬರೆದು ಆಡಿಸುತ್ತಿದ್ದೆ.

    ನಿಮ್ಮ ಅನೇಕ ನಾಟಕಗಳು ಹೀಗೆ ಹುಟ್ಟಿದ್ದಿರಬೇಕು ಅಲ್ಲವೇ?

    ಹೌದು. ನಾನು ಅನೇಕ ಏಕಾಂಕಗಳನ್ನು ಮಕ್ಕಳಿಗಾಗಿಯೇ ಬರೆದೆ. ನೀವು ಪೂರ್ಣ ಪ್ರಮಾಣದ ನಾಟಕಗಳನ್ನು ಬರೆಯಬೇಕು ಎಂದು ಶ್ರೀನಿವಾಸ ಪ್ರಭು ಒತ್ತಾಯ ಮಾಡಿದರು. ಆಗ ನಾನು ಹೆಜ್ಜೆಗಳು ನಾಟಕ ಬರೆದೆ . ನಾಟಕ ಬರೆಯುವಾಗ ನಾವು ಅಭಿನಯಿಸಿಕೊಂಡೆ ಬರೆಯಬೇಕಾಗುತ್ತದೆ. ಅಂದರೆ ಅಭಿನಯವನ್ನು ನಾವು ಪ್ರೇಕ್ಷಕರೆದುರು ಮಾಡದೇ ಇರಬಹುದು. ನಮ್ಮೊಳಗಿನ ಕಲಾವಿದನನ್ನು ತೃಪ್ತಿ ಪಡಿಸಬೇಕಾಗುತ್ತದೆ. ಹೀಗೆ ಕಲಾವಿದ ಹೊರಗೆಲ್ಲೋ ಇರುವುದಿಲ್ಲ. ಒಳಗಿರುವವನನ್ನು ಹೊರಗೆ ತಂದು ನಿಲ್ಲಿಸಬೇಕಷ್ಟೆ .

    ಎಚ್ ಎಸ್ ವಿ ಮತ್ತು ವತ್ಸಲಾ ಮೋಹನ್

    ಈಗ ನೀವು ಅಮೃತವಾಹಿನಿ ಚಲನಚಿತ್ರದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದೀರಿ . ನಿಮಗೆ ಕಷ್ಟವೆನ್ನಿಸಿತಾ ನಿರ್ವಹಣೆ. ? ನಿಮಗೆ ಸವಾಲು ಎನ್ನಿಸಿದ್ದು ಯಾವಾಗ?

    ನನಗೆ ಅಭಿನಯ ಕಷ್ಟ ಎನ್ನಿಸಲೇ ಇಲ್ಲ. ಸವಾಲು ಎನ್ನಿಸಿದ್ದು ಟೆಕ್ನಿಕಲ್ ವಿಷಯಗಳು ಅಷ್ಟೇ. ನಾನು ಪಾಠ ಮಾಡುವಾಗ ರನ್ನ, ಕುಮಾರವ್ಯಾಸ ಪದ್ಯಗಳನ್ನು ವಿವರಿಸುವಾಗ ಅಭಿನಯಿಸಿಯೇ ಪಾಠ ಮಾಡುತ್ತಿದ್ದೆ. ಅದು ಧ್ವನಿಯಲ್ಲಿನ ಅಭಿನಯ . ಈಗ ನನಗೆ ಆಂಗಿಕ ಅಭಿನಯ ಮಾಡಬೇಕಾಗಿ ಬಂತು. ಅಭಿನಯಕ್ಕೆ ದೇಹವನ್ನು ಹೇಗೆ ಬಳಸಬೇಕು ಎಂಬುದು ಸವಾಲಾಗಿತ್ತು. ನನಗೆ ಅದೃಷ್ಟವಶಾತ್ ವಯಸ್ಸಾದವನ ಪಾತ್ರವೇ ಸಿಕ್ಕಿದ್ದರಿಂದ ಮುಪ್ಪಿನ ಅಭಿನಯವನ್ನು ಮುಪ್ಪೇ ಕಲಿಸಿಕೊಟ್ಟಿತು. ನಾನು ಸುಮ್ಮನೆ ನನ್ನ ಪಾಡಿಗೆ ಇದ್ದರೂ ಪಾತ್ರವೇ ನಾನಾಗಿಬಿಡುತ್ತಿದ್ದೆ. ತರುಣನಿಗೆ ವಯಸ್ಸಾದವನ ಪಾತ್ರಕ್ಕೆ ದೇಹ ಒಗ್ಗಿಸಿಕೊಳ್ಳುವುದು ಕಷ್ಟ. ನನಗೆ ಅದು ಸಮಸ್ಯೆ ಆಗಲಿಲ್ಲ.

    ಟೆಕ್ನಿಕಲ್ ತೊಂದರೆ ಅಂದರೆ?

    ನಾಟಕದಲ್ಲಿ ಮಾಡುವಷ್ಟು ಸುಲಭ ಅಲ್ಲ ಚಿತ್ರದಲ್ಲಿ ಮಾಡುವುದು . ಅಭಿನಯಿಸುವಾಗ ಕ್ಯಾಮೆರಾದಿಂದ ಅಂತರ ಕಾಪಾಡಿಕೊಳ್ಳುವುದು ಮುಂತಾದವು. ತಾಂತ್ರಿಕವಾದ ತೊಡಕುಗಳನ್ನು ನಿವಾರಿಸಿಕೊಳ್ಳುವುದೇ ಕಷ್ಟ. ಮೂರಡಿಗಿಂತ ಮುಂದೆ ಬರಬೇಡಿ ಎನ್ನುತ್ತಾರೆ . ನನಗೆ ಪಾತ್ರದ ಎಕ್ಸ್ಪ್ರೆಶನ್ ನೆನಪಿಡಬೇಕು, ಮಾತುಗಳನ್ನು ನೆನಪಿಡಬೇಕು, ಮೂವ್ಮೆಂಟ್ ನೆನಪಿಡಬೇಕು . ಮೊದಲೆರಡನ್ನು ನಿಭಾಯಿಸುವುದು ಸುಲಭ ಮೂರನೆಯದೇ ಕೊಂಚ ಕಷ್ಟವಾಗಿದ್ದು.

    ಕವಿಯಿಂದ ಅಭಿನಯ ಹೊರ ತೆಗೆದ ನಿರ್ದೇಶಕ ಕೆ. ನರೇಂದ್ರಬಾಬು

    ಅಂತರ ಬಿಟ್ಟು ಮತ್ತಿನ್ನೇನು ಸವಾಲು?

    ನಾಟಕದಲ್ಲಿ ಎದುರಿಗೆ ಒಬ್ಬ ಇದ್ದೇ ಇರುತ್ತಾನೆ. ಇಲ್ಲಿ ಕಲ್ಪಿಸಿಕೊಂಡು ಮಾತನಾಡಬೇಕು. ಆ ತನ್ಮಯತೆ ಬರಿಸಿಕೊಳ್ಳಬೇಕು. ಹೊಸ ರೀತಿಯ ಕಲೆ ಇದು. ಇದಕ್ಕೆ ಅಡಾಪ್ಟ್ ಆಗಬೇಕಿತ್ತು. ಕ್ಯಾಮೆರಾ ಕಡೆ ನೋಡುವಂತಿಲ್ಲ. ಏನೋ ಮಾತನಾಡುವಾಗ ದೃಷ್ಟಿ ಬದಲಾಯಿಸುವಂತಿಲ್ಲ..

    ನೀವು ನಿರ್ದೇಶಕರಾಗಿ ಕೆಲಸ ಮಾಡಿದವರು. ಅದು ನಿಮಗೆಷ್ಟು ಸಹಕಾರಿಯಾಯಿತು?

    ಬಹಳಷ್ಟು. ಅದರಿಂದಲೇ ನಾನು ಈ ಧೈರ್ಯ ಮಾಡಿದ್ದು .

    ನಿರ್ದೇಶಕನಾಗಿ ಹೇಳುವುದಕ್ಕೂ ನಟನಾಗಿ ನಿರ್ವಹಿಸುವುದಕ್ಕೂ ಅನೇಕ ವ್ಯತ್ಯಾಸ ಇದೆ ಅಲ್ಲವೇ ?

    ಖಂಡಿತ. ನಿರ್ದೇಶಕ ತನ್ನ ನಿರೀಕ್ಷೆಗಳನ್ನು ನಟನ ಮುಂದಿಡುತ್ತಾನೆ. ಅದನ್ನು ಸಾಕಾರಗೊಳಿಸುವುದು ನಟ. ಆ ನಿರೀಕ್ಷೆಯನ್ನು ಮುಟ್ಟುವುದು ನಟನ ಸವಾಲು.

    ಈ ಪಾತ್ರ ಹೇಗಿತ್ತು? ನಿಮಗೆ ತೃಪ್ತಿ ಕೊಟ್ಟಿತಾ?

    ತುಂಬಾ ತೃಪ್ತಿ ಕೊಟ್ಟಿದೆ. ನನ್ನ ಸ್ವಭಾವಕ್ಕೆ ಹೊಂದಿಕೊಂಡಿದ್ದರಿಂದ ನನಗೆ ತುಂಬಾ ಕಷ್ಟ ಆಗಲಿಲ್ಲ. ಹೊಸಹೊಸ ಅನುಭವಗಳು ದಕ್ಕಿವೆ. ಡಬ್ಬಿಂಗ್ ಅನುಭವ ಬಹಳ ಕುತೂಹಲಕಾರಿಯಾಗಿತ್ತು, ಅಷ್ಟೇ ಕಷ್ಟ ಕೂಡಾ. ಶೂನ್ಯದಲ್ಲಿ ಆಕೃತಿ ನಿರ್ಮಾಣ ಮಾಡಿದ ಹಾಗೆ ಸಿನಿಮಾದಲ್ಲಿ ನಟನೆ. .

    ನಿಮ್ಮ ಮುಂದಿನ ಪಯಣದ ಬಗ್ಗೆ? ಮತ್ತೆ ನೀವು ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸುತ್ತೀರಾ? ಈ ಪಯಣ ಮುಂದುವರಿಯುತ್ತದೆಯೇ?

    ಖಂಡಿತಾ ಇಲ್ಲ. ನನಗೆ ಅಭಿನಯಿಸುವ ಯಾವುದೇ ಇರಾದೆ ಇಲ್ಲ. ಆದರೆ ಮತ್ತೊಂದು ಸಿನಿಮಾ ಮಾಡಬೇಕು ಎಂಬ ಆಸೆ ಖಂಡಿತವಾಗಿಯೂ ಇದೆ.. ಏಕೆಂದರೆ ಅದೊಂದು ವಂಡರ್ಫುಲ್ ಎಕ್ಸ್ಪೀರಿಯೆನ್ಸ್. ಬೇರೆಯವರಿಂದ ಅಭಿನಯ ತೆಗೆಸುವುದಕ್ಕೂ ನಾನೇ ಅಭಿನಯ ಮಾಡುವುದಕ್ಕೂ ವ್ಯತ್ಯಾಸ ಇದೆ. ಇನ್ನು ಅಭಿನಯ ಕಷ್ಟ.

    ಚಿತ್ರಗಳು: ಮನು

    ಬದುಕೆಂಬ ಪ್ರಯಾಣದಲ್ಲಿ ಬಾಲ್ಯದ ಶಾಲಾ ಪ್ರವಾಸ ಅತ್ಯಮೂಲ್ಯ

    ಮೇಷ್ಟ್ರು ಶಾಲೆಯಲ್ಲಿ ಪಾಠ ಮಾಡ್ತಿರೋವಾಗ ಮಧ್ಯೆ ಅಟೆಂಡರ್ ತಂದ ಒಂದು ಮೆಮೋ ಇಡೀ ಶಾಲೆಯ ಅಷ್ಟೂ ಮಕ್ಕಳ ಮನಸ್ಸಿನಲ್ಲಿ ಸಂಚಲನ ಸೃಷ್ಟಿ ಮಾಡಿಬಿಡುತ್ತಿತ್ತು . ಅದೇನಿತ್ತು ಅಂತಹ ವಿಶೇಷ ಆ ಮೆಮೋನಲ್ಲಿ ಅಂದ್ರೆ ಟೂರಿನ ಸುದ್ದಿ , ಶೈಕ್ಷಣಿಕ ಪ್ರವಾಸ .

    ಮಾಸ್ತರು ಮೆಮೋವನ್ನು ಸ್ಪಷ್ಟವಾಗಿ ಓದಿ ಎಷ್ಟು ಸ್ಥಳಗಳು , ಯಾವ ಯಾವ ಊರು , ಅಲ್ಲಿನ ವಿಶೇಷತೆ ಏನು , ಪ್ರವಾಸದ ಶುಲ್ಕ ಎಷ್ಟು , ಹೊರಡುವ ದಿನಾಂಕ ಹಿಂದಿರುಗುವ ದಿನಾಂಕ ಯಾವುದು , ಏನು ಎತ್ತ ಅಂತೆಲ್ಲಾ ಸಂಕ್ಷಿಪ್ತವಾಗಿ ಓದಿ ಹೇಳುತ್ತಿದ್ದರು .

    ನಾವು ಶಾಲೆ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದಂತೆ ಮೊದಲಿಗೆ ಅಮ್ಮನಿಗೆ ಟೂರಿನ ಬಗ್ಗೆ ಹೇಳುತ್ತಿದ್ದೆವು , ಅಮ್ಮನ ಬಾಯಿಂದ ಬರುತ್ತಿದ್ದ ಮೊದಲನೇ ಪದವೇ…. ನಿಮ್ ಮೇಷ್ಟ್ರುಗಳಿಗೆ ಮಾಡಕ್ಕೆ ಇನ್ನೇನೂ ಕೆಲಸ ಇಲ್ವಾ ? ಅಂತ ! ಸುಮ್ನೆ ಓದ್ಕೋ ಹೋಗು ಈ ವಯಸ್ಸಿಗೇ ಟೂರೂ ಗೀರು ಅಂತೆಲ್ಲಾ ಹೋಗ್ಬಾರ್ದು ಅಲ್ಲೆಲ್ಲಾ ನೀರು ಇರುತ್ತೆ .
    ನಮಗೆ ಅಲ್ಲೇ ಭ್ರಮನಿರಸನ ಆಗೋಗೋದು . ನಾವು ಆಗ್ಲೇ ಅಲ್ಲೇ ಹಠ ಶುರುಮಾಡ್ಬಿಡ್ತಾಇದ್ವಿ ಆಗ ಅಮ್ಮ ……. ನಿಮ್ಮಪ್ಪ ಬರ್ತಾರಲ್ಲ ಪರ್ಮೀಷನ್ ತಗೊಂಡು ಧಾರಾಳವಾಗಿ ಹೋಗಪ್ಪ ಯಾರು ಬೇಡ ಅಂದ್ರು , ಅಂತ ಹೇಳಿ ಕೈ ತೊಳ್ಕೊಂಬಿಡೋವ್ರು .‌

    ಸಂಜೆ ಮನೆಗೆ ಬಂದ ಅಪ್ಪನ ಮನಸ್ಥಿತಿ ನೋಡಿ ಕೇಳೋಣ ಅನ್ಕೊಂಡು ಕೇಳಕ್ಕಾಗದೇ ಒದ್ದಾಡಿ ಭಯ ಪಟ್ಟು ಅಮ್ಮನನ್ನು ಮನಸ್ಸಿನಲ್ಲಿಯೇ ಬೈಕೊಂಡು ಉಂಡು ಮಲಗಿಬಿಡುತ್ತಿದ್ದೆವು .

    ಮಾರನೇ ದಿನ ಮೇಷ್ಟ್ರು… ಯಾರ್ ಯಾರು ಬರ್ತಿದೀರೋ ಟೂರಿಗೆ ಅಂತ ಒಂದು ನೂರು ಪೇಜಿನ ಹೊಚ್ಚಹೊಸಾ ನೋಟ್ ಬುಕ್ಕು ಪೆನ್ನು ಹಿಡಿದು ನೊಂದಣಿಗೆ ತಯಾರಾಗಿಬಿಡೋವ್ರು. ಒಂದಿಬ್ಬರು ದುಡ್ಡು ಕೊಟ್ಟು ಹೆಸರು ಬರೆಸಿಬಿಡೋವ್ರು ನಮ್ ಕಣ್ಣಿಗೆ ಅವರು ಅದೃಷ್ಟವಂತರಂತೆ ಕಾಣೋವ್ರು .

    ಮನೆಯಲ್ಲಿ ಕೊನೆಗೆ ಧೈರ್ಯ ಮಾಡಿ ಅಪ್ಪನ ಹತ್ತಿರ ಪ್ರವಾಸದ ಅಹವಾಲನ್ನು ಇಡುತ್ತಿದ್ದೆವು . ಅಪ್ಪ ಕಳಿಸಲು ಸಾಧ್ಯಾನೇ ಇಲ್ಲ ಅಂತ ಕಡ್ಡಿತುಂಡು ಮಾಡಿದಂಗೆ ಹೇಳಿಬಿಡೋವ್ರು . ಶಾಲೆಯಲ್ಲಿ ಎಲ್ಲಾ ಹೋಗ್ತಿದಾರೆ , ಹದಿಮೂರು ಸ್ಥಳಗಳಂತೆ , ಹುಷಾರಾಗಿ ಕರ್ಕೊಂಡೋಗ್ತಾರಂತೆ ಹೀಗೆ ಏನೇ ಹೇಳಿದರೂ . ಕೊನೆಗೆ ಒಂದೆರಡೊತ್ತು ಊಟ ಬಿಟ್ಟು ಸತ್ಯಾಗ್ರಹ ಕೈಗೊಂಡು ಅತ್ತು ಸುರಿದು ಏನೇ ಮಾಡಿದ್ರೂ ಅಪ್ಪ ಕರಗುತ್ತಿರಲಿಲ್ಲ .

    ಕೊನೆಗೆ ನಮ್ಮನ್ನ ಕಳಿಸಲ್ಲ ಅಂತ ನಾವೇ ತೀರ್ಮಾನಿಸಿ ಶಾಲೆಯಲ್ಲಿ ಪೆಚ್ಚುಮೋರೆಯೊಂದಿಗೆ ಪ್ರವಾಸಕ್ಕೆ ಹೋಗುವವರ ಚಟುವಟಿಕೆ ಉತ್ಸಾಹ ಕಂಡು ಖುಷಿ ಪಡುತ್ತಿದ್ದೆವು .

    ಪ್ರವಾಸಕ್ಕೆ ತೆರಳುವರ ಖುಷಿಯೋ ಹೇಳತೀರದ್ದು ಮನೆಯಲ್ಲಿ ಚಕ್ಕುಲಿ ನಿಪ್ಪಟ್ಟು, ಕೋಡುಬಳೆ ,ರವೆಉಂಡೆ….ಹೀಗೆ ತರಹೇವಾರಿ ತಿನಿಸುಗಳನ್ನು ಮಾಡಿಸಿಕೊಂಡು ಅದನ್ನು ಡಬ್ಬಿಗಳಲ್ಲಿ ಪಟ್ಟಣ ಕಟ್ಟಿಸಿಕೊಂಡು ಸಿದ್ದವಾಗುತ್ತಿದ್ದರು .

    ಟೂರಿಗೆ ಹೊರಡುವ ದಿನ ಮುಂಜಾನೆ ಶಾಲೆಯ ಬಳಿಯೇ ಬಸ್ಸು ಬರುತ್ತಿತ್ತು , ಅದಕ್ಕೆ ಟೀಚರ್ರು ಮತ್ತು ಒಂದಿಬ್ಬರು ವಿದ್ಯಾರ್ಥಿನಿಯರು ಪೂಜೆ ಸಲ್ಲಿಸುತ್ತಿದ್ದರು . ಮಕ್ಕಳು ಸಂಭ್ರಮದಿಂದ ಕಿಟಕಿ ಬಳಿ ಕೂರುತ್ತಿದ್ದರು . ನಾವು ಟೂರಿಗೆ ಹೋಗದಿದ್ದರು ಆ ಕುತೂಹಲವನ್ನು ಕಣ್ತುಂಬಿಕೊಳ್ಳಲು ಹೋಗುತ್ತಿದ್ದೆವು . ಟೀಚರ್ಗಳು ತಮ್ಮೊಂದಿಗೆ ತಮ್ಮ ಮಕ್ಕಳನ್ನೂ ಕರೆದೊಯ್ಯುತ್ತಿದ್ದರು .

    ನಾವು ಹೋಗಲಿಲ್ಲ ಅನ್ನೋ ಬೇಸರ ನಮ್ಮಲ್ಲಿದ್ದರು ಮೂರು ದಿನದ ರಜೆಯಲ್ಲಿ ಅದನ್ನು ಮರೆತುಬಿಡುತ್ತಿದ್ದೆವು . ಪ್ರವಾಸ ಮುಗಿಸಿ ಬಂದವರು ಶಾಲೆಯಲ್ಲಿ ಅನುಭವದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರೆ ನಾವು ಮಿಕ ಮಿಕ ನೋಡುತ್ತಿದ್ದೆವು . ಟೀಚರ್ರ ಆದೇಶದ ಮೇರೆಗೆ ಆ ಮಕ್ಕಳು ಪ್ರವಾಸದ ಬಗ್ಗೆ ಒಂದು ಪುಟಕ್ಕೂ ಮೀರದಂತೆ ಪ್ರಬಂಧ ಬರೆಯುತ್ತಿದ್ದರು . ನಾವು ಅದನ್ನ ಕುತೂಹಲದಿಂದ ಓದುತ್ತಿದ್ದೆವು . ಅವರ ಬರವಣಿಗೆಯಲ್ಲಿ ಪ್ರವಾಸವನ್ನು ಅನುಭವಿಸುತ್ತಿದ್ದೆವು .

    ಏನೇ ಹೇಳಿ ಬದುಕೆಂಬ ಪ್ರಯಾಣದಲ್ಲಿ ಬಾಲ್ಯದ ಶಾಲಾ ಪ್ರವಾಸವು ಅತ್ಯಮೂಲ್ಯ.

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಸಂಕ್ರಾಂತಿಗೆ ಜನಸೇವಕ ಯೋಜನೆ ಪುನರಾರಂಭ

    ನಾಗರಿಕರ ಮನೆಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಜನಸೇವಕ ಯೋಜನೆಯನ್ನು ಜನವರಿ 15ಕ್ಕೆ ಬೆಂಗಳೂರಿನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಪ್ರಾರಂಭಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಇಂದು ಬೆಂಗಳೂರು ನಗರದ ಸಂಬಂಧಿತ ಕ್ಷೇತ್ರಗಳ ಶಾಸಕರ ಸಭೆ‌ ನಡೆಸಿ ಸಹಕಾರ ಕೋರಿದ ಸಚಿವರು ಸರ್ಕಾರದ ಈ‌ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಯಶವಂತಪುರ‌ ಕ್ಷೇತ್ರದಲ್ಲಿ‌ ಜನಸೇವಕ:

    ಈ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೂ ಜನಸೇವಕ ಯೋಜನೆಯನ್ನು ವಿಸ್ತರಿಸಲಾಗುತ್ತಿದ್ದು, ಬಿಬಿಎಂಪಿಯ ಖಾತಾ ವರ್ಗಾವಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಸೇವೆಗಳು,  ಆಧಾರ್ ಕಾರ್ಡಿನಲ್ಲಿನ ದೋಷಗಳ ತಿದ್ದುಪಡಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಒಟ್ಟು 55 ಸೇವೆಗಳನ್ನು ಈ ಯೋಜನೆಯಡಿ  ಒದಗಿಸಲಾಗುತ್ತದೆಯೆಂದರು.

    ಇಸ್ಟ್ಯಾಂಪ್ ಸೇವೆ:

    ಅತಿ ಶೀಘ್ರದಲ್ಲಿಯೇ ಮುದ್ರಾಂಕ ಇಲಾಖೆಯ ಇಸ್ಟಾಂಪ್ ಮತ್ತು ಸಾರಿಗೆ ಇಲಾಖೆಯ ಸೇವೆಗಳನ್ನು ಸಹ ಜನಸೇವಕ ಯೋಜನೆಯಡಿಯಲ್ಲಿ ತರಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ‌ ಮಾಡಲು ಆಲೋಚಿಸಲಾಗುತ್ತಿದೆ ಎಂದು ಅವರು ಹೇಳಿದರು.

    ಜನಸೇವಕ ಯೋಜನೆಯ ಬಗ್ಗೆ ಸ್ಥಳೀಯ ವಾಟ್ಸಾಪ್, ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ‌ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದು, ಕ್ಷೇತ್ರ ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು, ವಿವಿಧ ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಪ್ರಚಾರಕ್ಕೆ ಅನುವು ಮಾಡುವುದು ಸೇರಿದಂತೆ ಈ ಮಹತ್ವದ ನಾಗರಿಕ ಸೇವಾ ಯೋಜನೆಯ ಸಮರ್ಪಕ ಹಾಗೂ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಬೇಕೆಂದು ಸಚಿವರು ಬೆಂಗಳೂರು ನಗರದ ಶಾಸಕರನ್ನು ಸಚಿವ ಸುರೇಶ್‌ಕುಮಾರ್ ಮನವಿ ಮಾಡಿದರು.

    ಇಂದಿನ ಸಭೆಯಲ್ಲಿ ಸಹಕಾರ ಸಚಿವರಾದ.ಎಸ್.ಟಿ.ಸೋಮಶೇಖರ್, ಶಾಸಕ ಸತೀಶ್‌ ರೆಡ್ಡಿ, ಇ ಆಡಳಿತ ಇಲಾಖೆಯ ಅಪರ‌ ಮುಖ್ಯ ಕಾರ್ಯದರ್ಶಿ ರಾಜೀವ ಚಾವ್ಲಾ, ಬೆಂಗಳೂರು ನಗರದ ಅಪರ ಜಿಲ್ಲಾಧಿಕಾರಿ, ಬಿಬಿಎಂಪಿ ವಿಶೇಷ ಆಯುಕ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಫ್ಯಾಮಿಲಿ ಮ್ಯಾನ್ ಸೀಸನ್ -2 ಇದೇ ಫೆಬ್ರವರಿ 12ಕ್ಕೆ ರಿಲೀಸ್

    ಸೀಸನ್ 1 ರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವೆಬ್ ಸಿರೀಸ್ ಫ್ಯಾಮಿಲಿ ಮ್ಯಾನ್ ಸೀಸನ್ 2 ರ ಬಿಡುಗಡೆ ದಿನಾಂಕವನ್ನು ಅಮೆಜಾನ್ ಪ್ರೈಮ್ ಇಂದು ಪ್ರಕಟಿಸಿದೆ. ಫೆಬ್ರವರಿ 12 ರ ಶುಕ್ರವಾರ ಬಹು ನಿರೀಕ್ಷಿತ ಫ್ಯಾಮಿಲಿ ಮ್ಯಾನ್ 2 ಬಿಡುಗಡೆಯಾಗಲಿದೆ.

    ಕುಟುಂಬ ಪ್ರೇಮಿಯಾಗಿ ಜೊತೆಗೆ ಇಂಟೆಲಿಜೆನ್ಸ್ ಅಧಿಕಾರಿ ಶ್ರೀಕಾಂತ್ ತಿವಾರಿ ಆಗಿ ಮನೋಜ್ ಬಾಜ್ಪೇಯಿ ಅದ್ಭುತ ಅಭಿನಯ ನೀಡಿದ್ದ ಫ್ಯಾಮಿಲಿ ಮ್ಯಾನ್ 1 ತೀವ್ರ ಕುತೂಹಲ ಕೆರಳಿಸಿತ್ತು. ಎಲ್ಲರೂ ಒಂದೇ ಸಿಟ್ಟಿಂಗ್ ನಲ್ಲಿ ಎಲ್ಲಾ ಎಪಿಸೋಡ್ ಗಳನ್ನು ನೋಡುವಂತೆ ಮಾಡಿ ಸೀಸನ್ 2 ಕ್ಕೆ ಕಾಯುವಂತೆ ಮಾಡಿತ್ತು.

    ಮೊದಲ ಸೀಸನ್ ನಷ್ಟೇ ಎರಡನೇ ಸೀಸನ್ ಕೂಡ ಕುತೂಹಲಕಾರಿಯಾಗಿದೆ. 16 ತಿಂಗಳಿಂದ ನಮ್ಮ ನೆಚ್ಚಿನ ವೀಕ್ಷಕರು ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕೋವಿಡ್ ಕಾರಣದಿಂದ ಬಿಡುಗಡೆಗೆ ಸ್ವಲ್ಪ ಸಮಯ ಹಿಡಿಯಿತು ಎಂದು ನಿರ್ದೇಶಕರಾದ ರಾಜ್ ಮತ್ತು ಡಿಕೆ ತಿಳಿಸಿದ್ದಾರೆ.

    ಮನೋಜ್ ಬಾಜ್ಪೇಯಿ ಜೊತೆ ಸಮಂತ ಅಕ್ಕಿನೇನಿ, ಪ್ರಿಯಾಮಣಿ, ಸೀಮಾ ಬಿಸ್ವಾಸ್, ದರ್ಶನ್ ಕುಮಾರ್ ಮತ್ತಿತರರು ನಟಿಸಿದ್ದಾರೆ.

    ಸಂಕ್ರಾಂತಿಗೆ ಮೊದಲೇ ಭಾರತದಲ್ಲಿ ಲಸಿಕೆ

    ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದ್ದೆ ಆದರೆ ಜನವರಿ 13ರಂದು ಭಾರತದಲ್ಲಿ ಮೊಟ್ಟ ಮೊದಲ ಕೋವಿಡ್ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

    ತುರ್ತು ಬಳಕೆಗೆ ಅನುಮತಿ ಸಿಕ್ಕ ಹತ್ತು ದಿನದಲ್ಲಿ ನಾವು ಲಸಿಕೆ ಹಾಕುವ ಕೆಲಸಕ್ಕೆ ಸಿದ್ಧ ಎಂದು ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ . ಅಂದರೆ ಜನವರಿ 3 ರಂದು ಈ ಅನುಮತಿ ಸಿಕ್ಕಿರುವುದರಿಂದ 10 ದಿನ ಕಳೆದರೆ ಜನವರಿ 13 ರಂದು ಮೊದಲ ಲಸಿಕೆ ಹಾಕಬಹುದು ಎಂದು ಭಾವಿಸಲಾಗಿದೆ.

    ಆದರೆ ಅಂತಿಮವಾಗಿ ಕೇಂದ್ರ ಸರಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು ಅನುಮತಿ ನೀಡಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿರುವುದಾಗಿ ವರದಿಯಾಗಿದೆ.

    ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಕಳೆದ ಭಾನುವಾರ ಆಕ್ಸ್ ಫರ್ಡ್ ಅಸ್ಟ್ರಜೆನಿಕಾ ತಯಾರಿಕೆಯ ಕೋವಿಶೀಲ್ಡ್ ಮತ್ತು ಭಾರತ್ ಬಯೋ ಟೆಕ್ ನ ಕೋ ವ್ಯಾಕ್ಸಿನ್ ನ ತುರ್ತು ಬಳಕೆಗೆ ಭಾರತ ಅನುಮತಿ ನೀಡಿತ್ತು.

    ವಿನಮ್ರತೆಯೇ ಸಾಧನೆಯ ಮೂಲಮಂತ್ರ

    ಸಾಧನಾ…. ನಿತ್ಯ ಸಾಧನಾ.

    ಗೆಲುವಿಗಾಗಿ ಪ್ರತಿಯೊಬ್ಬರೂ ಗುನುಗುವ ಹಾಡಿದು. ಮೊದಲು ಹೊಟ್ಟೆ ಆಮೇಲೆ ಬಟ್ಟೆ. ನಂತರ ಸಾಧನೆಗಾಗಿಯೇ ಎಲ್ಲರ ದುಡಿಮೆ.

    ನನ್ನ ತಂದೆ ಯಾವಾಗಲು ಹೀಗೆ ಹೇಳುತ್ತಿದ್ದರು- “ಹೊಟ್ಟೆಯೆಂಬುದು ಇಲ್ಲದಿದ್ದರೆ ಜಗತ್ತಿನಲ್ಲಿ ಎಲ್ಲರೂ ಸೋಮಾರಿಗಳಾಗುತ್ತಿದ್ದರು”. ಅದು ಅಕ್ಷರಶಃ ನಿಜ. ಲಕ್ಷಾಂತರ ಮಂದಿ ಹಳ್ಳಿಯಿಂದ ನಗರ ಸೇರುತ್ತಾರೆ. ಕೆಲವರು ನಗರದಿಂದ ಮರಳಿ ಹಳ್ಳಿಯೂ ಸೇರುತ್ತಾರೆ. ನನ್ನನ್ನೂ ಸೇರಿ ಸಾಧನೆಗಾಗಿ ನಗರ/ಹಳ್ಳಿ ಸೇರಿದ ಎಲ್ಲರ ಮನದ ಬಯಕೆ ಒಂದೇ. ಅದು “ಏನನ್ನಾದರೂ ಸಾಧನೆ ಮಾಡಬೇಕು” ಎನ್ನುವುದು.

    ಈ ಸಾಧನೆಯೆಂಬುದು ಕೆಲವರದು ನಿರ್ದಿಷ್ಟವಾಗಿದ್ದರೆ ಇನ್ನಿತರದು ಜೀವನ ಬಂದಹಾಗೆಯೇ ಸ್ವೀಕರಿಸಿ ಕಾಲವು ತೋರಿಸಿದ ದಿಕ್ಕಿನಲ್ಲಿ ಸಾಧನೆ ಮಾಡುವದು.ಸಾಧನೆವೆಂಬುದು ಒಂದೇ ದಿನದಲ್ಲಿ ಫಲಿತಾಂಶ ಸಿಗುವಂತಹ ಪರೀಕ್ಷೆಯಲ್ಲ. ಮಾನವನ ಈ ಸಾಧನೆಯೆಂಬ ಹಾದಿಯಲ್ಲಿ ಹಲವಾರು ಹಂತಗಳು. ಒಂದೊಂದು ಹಂತಗಳಲ್ಲಿಯೂ ಸಾವಿರಾರು ಮೆಟ್ಟಿಲುಗಳು.

    ಒಬ್ಬ ಯಾವದೇ ವಿಶ್ವಶ್ರೇಷ್ಠ ಸಾಧಕರು ಅಂದುಕೊಂಡಿದ್ದನ್ನು ಸಾಧಿಸಿ ಜಗತ್ಪ್ರಸಿದ್ಧರಾಗ ಬೇಕಾದರೆ ಎಷ್ಟೋ ದಶಕಗಳ ಹಂತಗಳ ಶ್ರಮ ಇರುತ್ತದೆ. ಯಾವುದೇ ಕಾಲಮಾನದವರನ್ನಾದರು ತೆಗೆದುಕೊಳ್ಳಿ, ಅವರ ಸಾಧನೆಯ ಬಗ್ಗೆ ಒಮ್ಮೆ ತಿರುವಿ ಹಾಕಿದಾಗ ಒಂದು ತಕ್ಕಡಿಯಲ್ಲಿ ಅವರ ಸಾಕಷ್ಟು ಪರಿಶ್ರಮ, ಬುದ್ದಿ, ಶಿಸ್ತು ಸಂಯಮಗಳನ್ನು ಇಟ್ಟುಕೊಂಡು ತೂಗಿದರೆ ಇನ್ನೊಂದು ಕಡೆ ಸಮನಾಗಿ ತೂಗುವ ಗುಣವೇ “ವಿನಮ್ರತೆ”.

    ಸಾಧನೆಯ ಹಾದಿಯಲ್ಲಿ ಹಂತಗಳನ್ನು ದಾಟಿದಾಗ ನಮ್ಮಲ್ಲಿ ಬುದ್ಧಿ ಜ್ಞಾನ ಸಾಮರ್ಥ್ಯ ಶಿಸ್ತು ಸಂಯಮಗಳು ದ್ವಿಗುಣವಾಗುತ್ತಾ ಹೋಗುತ್ತವೆ. ಮೊದಲನೇ ತಕ್ಕಡಿಯಲ್ಲಿ ನಾವಿಟ್ಟ ಗುಣಗಳು ಗುಣಿಸಲ್ಪಡುತ್ತವೆ. ಆದರೆ ಇನ್ನೊಂದು ತಕ್ಕಡಿಯಲ್ಲಿ ವಿನಮ್ರತೆಯನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಸಾಧನೆಯನ್ನು ಹಂತಹಂತವಾಗಿ ಮುಟ್ಟುತ್ತಿರುವಾಗ ವಿನಮ್ರತೆ ದೂರವಾಗಿ ದರ್ಪ, ಸೊಕ್ಕು, ಅನ್ಯತಾ ಮನೋಭಾವ ಇತ್ಯಾದಿಗಳು ಬರಬಾರದು. ಎರಡನೇ ಮಹಡಿಯಲ್ಲಿ ಇರುವ ವಿನಮ್ರತೆ ಮಾಯವಾದರೆ ಸಾಧನೆಗೆ ಒಂದೇ ಹಂತ ಹಿಂದೆಯಿದ್ದರೂ ಮರಳಿ ಮಣ್ಣಿಗೆ ಬೀಳುತ್ತೇವೆ. ಹಂತ ಹಂತಗಳಲ್ಲಿ ಆತ್ಮವಿಶ್ವಾಸ ದ್ವಿಗುಣವಾಗಬೇಕೇ ಹೊರತು ದರ್ಪವಲ್ಲ.

    ಈ ಕುರಿತಾಗಿ ನಾನು ಚಿಕ್ಕವನಿದ್ದಾಗ ಓದಿದ ಕವಿ ಪಂಜೆ ಮಂಗೇಶ ರಾಯರು ಬರೆದ ಈ ಸಾಲಿನ ತುಣುಕುಗಳನ್ನು ನೋಡೋಣ.

    ಏರುವನು ರವಿ ಏರುವನು
    ಬಾನೊಳು ಸಣ್ಣಗೆ ತೋರುವನು
    ಏರಿದವನು ಚಿಕ್ಕವನಿರಬೇಕೆಲೆ
    ಎಂಬಾ ಮಾತನು ಸಾರುವನು

    ಮೇಲಿನ ಸಾಲುಗಳಲ್ಲಿ ಕವಿಗಳು ಸೂರ್ಯನನ್ನು ಕುರಿತು ಏರುವಾಗ ಬೆಳಕು ಕೊಡುತ್ತಾನೆ ಮತ್ತು ಏರಿದವನು ಚಿಕ್ಕನಾಗಿರಬೇಕೆ೦ಬುದಾಗಿ ತೋರಿಸುತ್ತಾನೆ. ಇದೇ ವಿನಮ್ರತೆಯ ಮೂಲಮಂತ್ರ. ಮೇಲೆ ಹೋದಷ್ಟು ವಿನಮ್ರತೆಯನ್ನು ಮರೆಯಬಾರದು. ಅದೇ ಇನ್ನೂ ಹೆಚ್ಚು ಮೇಲೆ ಹೋಗುವಂತೆ ಸಹಾಯ ಮಾಡುತ್ತದೆ. ಕಾಲು ಎಳೆಯುವವರು ನಿಮ್ಮ ಕಾಲು ಕೆಳಗೆ ಇರುತ್ತಾರೆ. ಅಂಥವರ ಮೇಲೆ ಅನುಕಂಪವಿರಲಿ. ವಿನಮ್ರತೆ ನಿಮ್ಮ ಮನದಲ್ಲಿರಲಿ.

    ಕೋಟೆಯನ್ನು ಕಟ್ಟುವದು ರಾಜ್ಯದ ಪ್ರಜೆಗಳ ರಕ್ಷಣೆಗೆ ಹೊರೆತು ಅರಸನು ಮೆರೆಯುವುದಕ್ಕಲ್ಲ ಎಂಬುದನ್ನು “ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು” ಎಂಬ ಹಾಡಿನೊಂದಿಗೆ ವರನಟ ಡಾ. ರಾಜಕುಮಾರ ಅವರು ಹಾಡಿದ್ದನ್ನು ಇನ್ನೂ ಸ್ಮರಿಸಬಹುದು. ಯೋಗವು ಯಾವಾಗಾದರೊಮ್ಮೆ ಬರಬಹುದು, ಯೋಗ್ಯತೆ ಗಳಿಸಿಕೊಂಡರೆ ನಿತ್ಯ ಸಾಧನೆ ಸರಳ.

    ಯಾವುದೇ ಹುದ್ದೆ, ಅಧಿಕಾರ, ಜವಾಬ್ದಾರಿ ಅಂತಸ್ತಿನಲ್ಲಿದ್ದವರೂ ವಿನಮ್ರತೆಯನ್ನು ಉಳಿಸಿಕೊಂಡು ಹೋದರೆ ಇನ್ನೂ ಹೆಚ್ಚು ಬೆಳೆಯಬಹುದು. ಸಾಧನೆಗಳನ್ನು ಮಾಡುತ್ತಾ ಮುಂದುವರೆಯಬಹುದು.

    ದೀರ್ಘ ಸಾಧನೆಗಾಗಿ ಕೆಲಸ ಮಾಡಿ ಸಾಧಕರಾಗೋಣ ಹೊರತು ಸಮಯ-ಸಾಧಕರಾಗುವದು ಬೇಡ.

    ವಿನಮ್ರತೆ ಸಾಧನೆಗೆ ಪೂರಕ.

    Photo by Ben White on Unsplash

    ಸೋಲಿಗರನ್ನು ಆರ್ಥಿಕವಾಗಿ ಕಾಡಿದ ಕೋವಿಡ್

    ಬಿಳಿಗಿರಂಗನ ಬೆಟ್ಟದ ಹುಲಿ ಮೀಸಲು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಮಾತ್ರವಲ್ಲ, ಸೋಲಿಗ ಸಮುದಾಯಕ್ಕೆ ಸೇರಿದ ಬುಡಕಟ್ಟು ಜನರಿಗೂ ಆಶ್ರಯ ನೀಡಿದೆ. ಇಲ್ಲಿರುವ ಸೋಲಿಗರು ಅರಣ್ಯ ಪ್ರದೇಶಕ್ಕೆ ಸಮೀಪವೇ ವಾಸಿಸುತ್ತಿದ್ದಾರೆ. ಈ ಜನಾಂಗ ಕಾಡಿನ ಕೆಲಸ ಮತ್ತು ಕೂಲಿ ಕೆಲಸದಲ್ಲಿ ತೊಡಗಿಕೊಂಡಿದೆ. ಅರಣ್ಯಕ್ಕೆ ಅಂಟಿಕೊಂಡಿರುವ ಕನ್ನೇರಿ ಕಾಲೋನಿಯಲ್ಲಿ ಸುಮಾರು 230 ಮನೆಗಳಿದ್ದು ಸುಮಾರು 700 ಸೋಲಿಗರು ವಾಸಿಸುತ್ತಿದ್ದಾರೆ.

    ಕಳೆದ ವರ್ಷ ಮನುಕುಲವನ್ನು ಕಾಡಿದ ಕೋವಿಡ್ 19 ಸೋಂಕು ಇವರಿಗೆ ತಟ್ಟಿಲ್ಲವಾದರು ದಿನನಿತ್ಯದ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡಿತ್ತು. ಇದೀಗ ಪರಿಸ್ಥಿತಿ ಸುಧಾರಿಸುತ್ತಿದೆ. ಈ ಮೀಸಲು ಅರಣ್ಯದಲ್ಲಿ ಮರಗಳ ನಡುವೆ ಶತ ಶತ ಮಾನಗಳಿಂದ ಬೆಳೆದಿರುವ ಕಳೆಯದೆ ಒಂದು ದೊಡ್ಡ ಸಮಸ್ಯೆ. ಇದು ಅರಣ್ಯದ ಬೆಳವಣಿಗೆಗೆ ಮಾತ್ರವಲ್ಲ ಆನೆ, ಜಿಂಕೆಯಂಥ ಸಸ್ಯಾಹಾರಿ ಪ್ರಾಣಿಗಳಿಗೂ ತೊಂದರೆ ಉಂಟುಮಾಡುತ್ತದೆ. ಇದನ್ನು ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಅರಣ್ಯ ಇಲಾಖೆಯೆ ಜೊತೆ ಸೋಲಿಗರು ಕೆಲಸ ಮಾಡುತ್ತಾರೆ. ಇದರಲ್ಲಿ ಶೇಕಡ 60ರಷ್ಟು ಮಂದಿ ತೊಡಗಿಕೊಂಡಿದ್ದಾರೆ. ಈ ಕೆಲಸಕ್ಕಾಗಿ ಅವರಿಗೆ 250 ರಿಂದ 300 ರೂಪಾಯಿ ದಿನಗೂಲಿ ಸಿಗುತ್ತದೆ. ಪೊನ್ನಪ್ಪ ಎಂಬ ಸೋಲಿಗ ಇಲ್ಲಿ ಸಿಗುವ ಲ್ಯಾಂಟೆನಾ ದಿಂದ ಸೋಫಾ ತಯಾರಿಸುತ್ತಾನೆ. ಒಂದು ಸೋಫಾ 16000 ದಿಂದ 18000ಕ್ಕೆ ಮಾರಾಟವಾಗುತ್ತದೆ. ಇನ್ನು ಅನೇಕರು ಜೇನು ಸಂಗ್ರಹಿಸಿ ಸಂಸ್ಕರಿಸುತ್ತಾರೆ.

    ಲಾಕ್ ಡೌನ್ ಸಮಯದಲ್ಲಿ ಈ ಉತ್ಪನ್ನಗಳಿಗೆ ಬೇಡಿಕೆ ಕುಸಿಯಿತು. ಪಟ್ಟಣಗಳಿಗೆ ಸರಬರಾಜು ನಿಂತು ಹೋಯಿತು. ಈ ಸಮಯದಲ್ಲಿ ಅನೇಕರಿಗೆ ಆರ್ಥಿಕ ಸಂಕಷ್ಟವೂ ಎದುರಾಯಿತು. ಹಲವರಿಗೆ ಕೆಲಸವೂ ಇಲ್ಲದಂತೆ ಆಯಿತು. ಇಲ್ಲಿನ ಉತ್ಪನ್ನಗಳಿಗೆ ಬೆಂಗಳೂರು, ಚಾಮರಾಜನಗರ ಮತ್ತು ಮೈಸೂರಿನಲ್ಲಿ ಒಳ್ಳೆಯ ಬೇಡಿಕೆ ಇದೆ. ಈಗ ಪರಿಸ್ಥಿತಿ ನಿಧಾನವಾಗಿ ಮತ್ತೆ ಹಳಿಗೆ ಬರುತ್ತಿದೆ.

    ಇಲ್ಲಿನ ಸೋಲಿಗರು ಅಡವಿ ಹೆಸರಿನಲ್ಲಿ ಜೇನು ಉತ್ಪಾದಿಸುತ್ತಾರೆ. ಕಳೆದ ಆರು ತಿಂಗಳಲ್ಲಿ ಈ ಉದ್ಯಮ 2.5 ಲಕ್ಷ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ. ಕೋವಿಡ್ ಕಾರಣದಿಂದ ನಮ್ಮ ಉತ್ಪನ್ನಗಳನ್ನು ಪೇಟೆಗೆ ಒಯ್ದು ಮಾರಲು ಕಷ್ಟವಾಯಿತು. ಗ್ರಾಹಕರು ಅಂಗಡಿಗಳಿಗೆ ಬರುತ್ತಿರಲಿಲ್ಲ. ಹೀಗಾಗಿ ಕೋವಿಡ್ ಪೂರ್ವದ ಮಾರಾಟ ಗುರಿಯನ್ನು ಈ ಅವಧಿಯಲ್ಲಿ ತಲುಪಲು ಸಾಧ್ಯವಾಗಲಿಲ್ಲ ಎಂದು ಅಡವಿಯಲ್ಲಿ ಕೆಲಸ ಮಾಡುವ ಕುಮಾರ ಹೇಳುತ್ತಾರೆ.

    ಜಗತ್ತನ್ನೇ ಕಾಡಿದ ಕೋವಿಡ್ ಸೋಂಕು ಸೋಲಿಗರನ್ನು ಮುಟ್ಟಲೇ ಇಲ್ಲ. ಇಲ್ಲಿ ಕೋವಿಡ್ ಸೋಂಕಿತರೇ ಇಲ್ಲ. ಹೊರ ಜಗತ್ತಿನೊಂದಿಗೆ ಇವರ ಸಂಪರ್ಕ ಕಡಿಮೆ ಇರುವುದು ಇದಕ್ಕೆ ಒಂದು ಕಾರಣ. ಜೊತೆಗೆ ಪ್ರಕೃತಿಯೊಂದಿಗಿನ ಒಡನಾಟ ಮತ್ತು ಅವರ ಆಹಾರ ಪದ್ಧತಿಯೂ ಮತ್ತೊಂದು ಕಾರಣ. ಕೋವಿಡ್ ಕಾಲದಲ್ಲಿ ಇವರಿಗೆ ಆಹಾರ ಪದಾರ್ಥಗಳ ಪೂರೈಕೆ ಅಡ್ಡಿಯಾಗದಂತೆ ಅರಣ್ಯ ಇಲಾಖೆ ಎಲ್ಲಾ ವ್ಯವಸ್ಥೆ ಮಾಡಿತ್ತು. ಹೀಗಾಗಿ ಅಕ್ಕಿ , ರಾಗಿ ಇತ್ಯಾದಿ ದಿನ ನಿತ್ಯದ ವಸ್ತುಗಳು ಯಾವುದೇ ಅಡ್ಡಿಯಾಗದೆ ಸರಬರಾಜಾಯಿತು.

    ಅದೃಷ್ಟವಶಾತ್ ಯಾರು ಸೋಂಕು ಪೀಡಿತರಾಗಲಿಲ್ಲ. ನಮ್ಮ ಮನೆಗಳ ಬಳಿಯೇ ಆರೋಗ್ಯ ಸೇವೆ ಬೇಕು ಎಂಬುದು ಇಲ್ಲಿನವರ ಆಗ್ರಹ . ಈಗ ಚಿಕಿತ್ಸೆ ಬೇಕೆಂದರೆ ಇವರು ಆಸ್ಪತ್ರೆಗೆಂದು 25 ಕಿ.ಮೀ ಸಾಗಬೇಕು.

    ಕೋವಿಡ್ ಕಾರಣದಿಂದ ತೊಂದರೆಗೆ ಒಳಗಾದವರೆಂದರೆ ವಿದ್ಯಾರ್ಥಿಗಳು. ಇವರು ಆನ್ ಲೈನ್ ಕ್ಲಾಸ್ ಪಡೆಯಲು ನೆಟ್ ವರ್ಕೂ ಇಲ್ಲ. ಮೂಲ ಸೌಲಭ್ಯವೂ ಇಲ್ಲ. ವಿದ್ಯಾಗಮ ನಡೆಸಲು ಕಾಡು ದಾಟಿ ಬರಬೇಕಾದ ಶಿಕ್ಷಕರೂ ಬರಲಿಲ್ಲ.

    ಈಗ ಪರಿಸ್ಥಿತಿ ಸುಧಾರಿಸುತ್ತಿರುವದರಿಂದ ಎಲ್ಲವೂ ಸಹಜ ವಾಗುವ ನಿರೀಕ್ಷೆಯಲ್ಲಿ ಸೋಲಿಗ ಸಮುದಾಯವಿದೆ.

    ಸಂಖ್ಯೆಯಲ್ಲಿ ಅಡಗಿದೆ ಬ್ರಹ್ಮಾಂಡದ ಸೂತ್ರ;2021ರಲ್ಲಿ ಏನೆಲ್ಲಾ ಇದೆ ಗೊತ್ತಾ

    ಬೆಂಗಳೂರು ಮೂಲದ ಗಣಿತಜ್ಞ ಕೆ. ವಿ ನಾರಾಯಣ ಹೊಸ ವರ್ಷ 2021 ರ ಸಂಖ್ಯೆಯಲ್ಲಿನ ಕೆಲವು ಸೋಜಿಗಗಳನ್ನು ಪತ್ತೆ ಮಾಡಿದ್ದಾರೆ.

    ಕೆ.ವಿ ನಾರಾಯಣ.

    2021 ಎನ್ನುವುದು 21ನೇ ಶತಮಾನದ 21ನೇ ವರ್ಷ. ಅಧಿಕ ವರ್ಷವಲ್ಲದ 2021 ಶುಕ್ರವಾರದಂದು ಆರಂಭವಾಗಿ ಶುಕ್ರವಾರವೇ ಮುಕ್ತಾಯವಾಗುತ್ತದೆ.

    2021ರ ಕ್ಯಾಲೆಂಡರ್ ಮತ್ತು 2010ರ ಕ್ಯಾಲೆಂಡರ್ ಒಂದೇ ರೀತಿ. ಯಾವುದೇ ಬದಲಾವಣೆ ಇಲ್ಲ.ಇದೇ ಕ್ಯಾಲೆಂಡರ್ 2027 ಮತ್ತು 21 ನೇ ಶತಮಾನದ ಕೊನೆಯ ವರ್ಷವಾದ 2100 ರಲ್ಲಿ ಪುನರಾವರ್ತನೆಯಾಗುತ್ತದೆ.

    2021 ಎರಡು ಅವಿಭಾಜ್ಯ ಸತತ ಸಂಖ್ಯೆಗಳಾದ 43 ಮತ್ತು 47 ರ ಗುಣಕಾರದಿಂದ ಉತ್ಪನ್ನವಾಗುವ ಸಂಖ್ಯೆ. ಅದೇ ರೀತಿ 2021 ಭಾಗವಾಗುವುದು 1,43,47 ಮತ್ತು 2021ರಿಂದಲೇ. ಈ ನಾಲ್ಕನ್ನು ಸೇರಿಸಿದರೆ 2112 ಆಗುತ್ತದೆ. ಈ 2112 ಸಂಖ್ಯೆಯ ಚಮತ್ಕಾರ ನೋಡಿ ಅದನ್ನು ಹೇಗೆ ಓದಿದರು 21 – 21ಆಗುತ್ತದೆ. ಇಂಗ್ಲಿಷಿನಲ್ಲಿ ಇಂಥ ಸಂಖ್ಯೆಯನ್ನು palindrome numbers ಎನ್ನುತ್ತಾರೆ.

    ಫೈಥಾಗೋರಸ್

    ಪ್ರಖ್ಯಾತ ಗಣಿತಜ್ಞ,ಗ್ರೀಕ್ ತತ್ವಜ್ಞಾನಿ ಫೈಥಾಗೋರಸ್ ನ ಮೇಲೆ ಕೆ. ವಿ .ನಾರಾಯಣ ಅವರಿಗೆ ತುಂಬು ಅಭಿಮಾನ. ಬ್ರಹ್ಮಾಂಡದ ಕಲ್ಪನೆ ಅಡಗಿರುವದೆ ಸಂಖ್ಯೆಯಲ್ಲಿ ಎಂಬ ಫೈಥಾಗೋರಸ್ ನ ಮಾತನ್ನು ನಾರಾಯಣ ಉಲ್ಲೇಖಿಸುತ್ತಾರೆ. ಎಲ್ಲವೂ ಸಂಖ್ಯೆಯ ಮೇಲೆ ಅವಲಂಬಿತ. ಬ್ರಹ್ಮಾಂಡದ ಸೂತ್ರವೆ ನಂಬರ್ ಎನ್ನುತ್ತಾರೆ ಅವರು.

    ಮೂವತ್ತೈದು ವರ್ಷಗಳ ಕಾಲ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಗಣಿತ ಬೋಧಿಸಿದ್ದ ನಾರಾಯಣ ಅವರಿಗೆ ಗಣಿತದ ಮೇಲೆ ಪ್ರಾಣ. ಅವಿಭಾಜ್ಯ ಸಂಖ್ಯೆಗಳ ಮೇಲೆ ಪುಸ್ತಕವನ್ನು ಕೂಡ ಬರೆದಿದ್ದಾರೆ. ಪ್ರತಿ ಹೊಸ ವರ್ಷದಲ್ಲೂ ಅದರ ಸಂಖ್ಯೆಯಲ್ಲಿ ಅಡಗಿರುವ ಚಮತ್ಕಾರಗಳನ್ನು ಅಧ್ಯಯನ ಮಾಡಿ ಅದನ್ನು ಸಾರ್ವಜನಿಕರ ಮುಂದಿಡುತ್ತಾ ಬಂದಿದ್ದಾರೆ.

    Photo by Vladislav Murashko from Pexels

    ಸಮಾಜದ ಬಗ್ಗೆ ಕಾಳಜಿ ಇರುವವರೇ ದೊಡ್ಡವರು


    “ನಿಡಿಯರ್ಗಂ ನಿಡಿಯರೊಳರ್”(ದೊಡ್ಡವರಿಗೂ ದೊಡ್ಡವರಿರುತ್ತಾರೆ). ಸರ್ವಕಾಲಕ್ಕೂ ಅನ್ವಯವಾಗುವ  ಈ ಮಾತು ಆದಿಕವಿ ಪಂಪನ  ಲೌಖಿಕ ಕೃತಿ ‘ಪಂಪಭಾರತ’ದಲ್ಲಿ ಉಲ್ಲೇಖವಾಗಿದೆ. ‘ವ್ಯಕ್ತಿಗಿಂತ ವ್ಯಕ್ತಿ  ಮಿಗಿಲು’ ,’ಮರಕ್ಕಿಂತ ಮರದೊಡ್ಡದು’, ‘ಬೆಟ್ಟಕ್ಕಿಂತ ಬೆಟ್ಟ ದೊಡ್ಡದು’ , ‘ಗುಡ್ಡಕ್ಕೆ ಗುಡ್ಡವೆ ಅಡ್ಡ’   ಎಂಬ ಮಾತುಗಳನ್ನು ಇಲ್ಲಿ ಸಾಮಯಿಕವಾಗಿ ನೆನಪಿಸಿಕೊಳ್ಳಬಹುದು. 

    ದೊಡ್ಡವರು, ಹಿರಿಯರು ಎಂದರೆ ವಯಸ್ಸಿನಲ್ಲೋ,ಬುದ್ಧಿಯಲ್ಲೋ, ಆಚಾರದಲ್ಲೋ,ಅಂತಸ್ತಿನಲ್ಲೋ, ಜನಬಳಕೆಯಲ್ಲೋ, ತೋಳ್ಬಲದಲ್ಲೋ ಎಂಬ ಚರ್ಚೆ ಬಂದೇ ಬರುತ್ತದೆ. ಹಣದ ಅಹಂನಿಂದ ಬೀಗುವವರನ್ನು “ಬಹಳ ದೊಡ್ಡಸ್ತಿಕೆಯವರು, ಗತ್ತು ಬಿಡಲ್ಲ, ಮಾತಾಡಲ್ಲ” ,ಎಂದೇ ಪರಿಚಯಿಸಿಕೊಂಡಿರುತ್ತೇವೆ.’ದೊಡ್ಡವರ ಸಣ್ಣ ಗುಣ’ ಎಂಬ ಟೀಕೆಗಳನ್ನೂ ಕೆಲವೊಮ್ಮೆ ಕೇಳೀದ್ದೇವೆ.   ಈ ತರ್ಕವನ್ನು ಒಮ್ಮೆ ಬದಿಗಿರಿಸಿ   “ನಿಡಿಯರ್ಗಂ ನಿಡಿಯರೊಳರ್ “ಎಂಬ ಮಾತನ್ನು ಒಂದು ಚಿಕ್ಕ ಕತೆಯೊಂದಿಗೆ  ಅನುಸಂಧಾನ ಮಾಡೋಣ.

    ಬಹಳ ವರ್ಷಗಳ ಹಿಂದೆ ದೇವಗಿರಿ ಎಂಬ  ಊರಿನಲ್ಲಿ  ಶ್ವೇತವರ್ಮನೆಂಬ ರಾಜ ಬಹಳ ನಿಷ್ಠಯಿಂದ ರಾಜ್ಯಭಾರ ಮಾಡುತ್ತಿದ್ದ.  ಆತನ ಜನಪ್ರಿಯತೆಯೂ ಅಷ್ಟೇ ಇತ್ತು . ಇಂಥ ಶ್ವೇತವರ್ಮ ಇದ್ದಕ್ಕಿದ್ದ ಹಾಗೆ ಜಡನಾಗಿ ,ಲವಲವಿಕೆಯಿಲ್ಲದೆ ಚಿಂತಿಸುತ್ತಾ ಕುಳಿತುಬಿಡುತ್ತಾನೆ.

    ಇಂಥ  ಚಿಂತಾಮಗ್ನ ರಾಜನನ್ನು  ಕಂಡ ಮಂತ್ರಿ ರಾಜನನ್ನು ಕುರಿತು “ ಮಹಾಪ್ರಭುಗಳೇ ನಿಮ್ಮ  ನೆಮ್ಮದಿ ಕೆಡಿಸಿರುವ  ಆ ಘನಚಿಂತೆ  ಯಾವುದು?” ಎನ್ನುತ್ತಾನೆ.ಆಗ ಮಹಾರಾಜ “ನಮ್ಮ ರಾಜ್ಯದಲ್ಲಿ  ಅಪ್ರಾಮಾಣಿಕರು, ಅಸತ್ಯವಂತರು, ಪಿಸುಣರು, ವಿಶ್ವಾಸ ದ್ರೋಹಿಗಳು ಹೆಚ್ಚಾಗುತ್ತಿದ್ದಾರೆ. ಇವರ ನಡುವೆ ಯಾರಾದರೂ ಒಳ್ಳೆಯ ವ್ಯಕ್ತಿ ಸಿಗಬಹುದೇ?” ಎಂದರೆ ಮಂತ್ರಿ  ಆತ್ಮ ಪ್ರಶಂಸೆಯಿಂದ “ನಾನೇ ಇದ್ದೇನಲ್ಲ?” ಎನ್ನುತ್ತಾನೆ. 

    ಮಂತ್ರಿಯ  ಆ ಮಾತುಗಳನ್ನೊಪ್ಪದ ರಾಜ  “ನಿನಗಿಂತಲೂ ಒಳ್ಳೆಯವರು ಇಲ್ಲವೇ?”  ಎಂದಾಗ ಮಂತ್ರಿ  “ಹೌದು ಮಹಾರಾಜರೇ ಸಿಗುತ್ತಾರೆ. ಅಲ್ಲಿ ವೃದ್ಧೆಯೊಬ್ಬರಿದ್ದಾರೆ ಅವರಿಗೆ  ಸುಮಾರು ಎಂಬತ್ತರ ವಯಸ್ಸಿರಬಹುದು. ಆಧ್ಯಾತ್ಮ, ಧ್ಯಾನಗಳನ್ನು ತೊರೆದು  ಲೋಕದ ಜನರ ಕಾಳಜಿಯಿಂದ ಬಾವಿಯೊಂದನ್ನು ತೋಡಿಸುತ್ತಿದ್ದಾರೆ.  ಈಕೆ ಶ್ರೇಷ್ಠ ಅನ್ನಿಸುತ್ತದೆ” ಎನ್ನುತ್ತಾನೆ. ರಾಜ ಶ್ವೇತವರ್ಮನಿಗೆ ಅತ್ಯಂತ ಸಂತಸವಾಗುತ್ತದೆ. ದುಷ್ಟ ಜನರ ನಡುವೆಯೂ ಇಂಥ ಸಾಧ್ವಿ  ವೃದ್ಧೆಯ ಮನಸ್ಥಿತಿಯನ್ನು ಕಂಡಾಗ ಮರುಭೂಮಿಯಲ್ಲಿ ನೀರು ಸಿಕ್ಕಷ್ಟೇ ನೆಮ್ಮದಿಯಾಗುತ್ತದೆ.

    ಹೌದು! ಯಾರು ಸ್ವಾರ್ಥ ಮರೆತು ಜನಕಲ್ಯಾಣದ ಬಗ್ಗೆ ಯೋಚಿಸುತ್ತಾರೋ , ತಮ್ಮಂತೆ ಪರರು ಎಂದು ವ್ಯಕ್ತಿಗತವಾದ ಗೌರವವನ್ನು ಯಾರು ಕೊಡುತ್ತಾರೋ ಅವರೇ ನಿಜವಾಗಿಯೂ ದೊಡ್ಡವರು.   ಹಣದ ಹಿಂದೆ, ಹೆಸರಿನ ಹಿಂದೆ ಹೋಗುವವರಲ್ಲ ದೊಡ್ಡ ಜನಗಳು. ಸಮಾಜದ ಜನರ ಬಗ್ಗೆ ಕಾಳಜಿ ಇರುವವರು ದೊಡ್ಡ ಜನಗಳು. ಸ್ವಹಿತ ಮರೆತು, ಪರರಹಿತ, ಲೋಕದ ಕಾಳಜಿ ಮಾಡುವವರು  ಹಿರಿಯರು.  ಇಂಥ ಹಿರಿಯರು ಮುನ್ನೆಲೆಗೆ ಬರುವುದೇ ಇಲ್ಲ ತಮ್ಮ ಪಾಡಿಗೆ ತಮ್ಮ  ಸಮಾಜೋದ್ಧಾರದ ಕೆಲಸ  ಮಾಡುತ್ತಿರುತ್ತಾರೆ. ತಮ್ಮಂಥ ಜನರೇನಾದರೂ ಸಿಕ್ಕರೆ ಅವರಿಗೆ ತಲೆಬಾಗುತ್ತಾರೆ.  ಇಂಥ ವ್ಯಕ್ತಿಗಳು ನಮ್ಮನಿಮ್ಮ ನಡುವೆ ಖಂಡಿತಾ ಇದ್ದಾರೆ. ಯಾವುದೇ ಹಮ್ಮುಬಿಮ್ಮು ಇಲ್ಲದೆ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ.

    ಬಹುಶಃ ಇಂಥ ಜನಗಳ ಸಂಖ್ಯೆ ಪಂಪನ ಕಾಲದಲ್ಲಿ ಬಹಳವಿದ್ದರೇನೋ ಹಾಗಾಗಿ  “ನಿಡಿಯರ್ಗಂ ನಿಡಿಯರೊಳರ್ “ಎಂಬ ಸಾರ್ವಕಾಲಿಕ ಮಾತನ್ನು ದಾಖಲಿಸಿದ್ದಾನೆ.   ಪಂಪನ ಕಾಲಕ್ಕಿಂತ ನಾವು ಸಾಕಷ್ಟು ಮುಂದೆ ಬಂದಿದ್ದೇವೆ. ಆದರೆ ಶ್ರೇಷ್ಟತೆಯ ಪ್ರಾಮುಖ್ಯತೆ ಎಲ್ಲೂ ಮುಕ್ಕಾಗಿಲ್ಲ.  ಗುಣದ  ಹಿರಿತನವನ್ನು   ಕೆಲವರಾದರೂ ಹಾಗೆ ಉಳಿಸಿಕೊಂಡಿದ್ದಾರೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ವಿಸ್ಮಯಿಕಾರಿ ಪೇಟೆಯಲ್ಲಿ ಅರಿತು ಹೂಡುವವನೆ ಜಾಣ

    ಷೇರುಪೇಟೆ ಹೂಡಿಕೆಯು ಬ್ಯಾಂಕ್‌ ಡಿಪಾಸಿಟ್‌ ನಂತಲ್ಲ. ಡಿಪಾಸಿಟ್‌ ಗಳಲ್ಲಿ ಒಂದು ನಿರ್ದಿಷ್ಟ ಅವಧಿಯ ನಂತರ ಇಂತಿಷ್ಠೇ ಹೆಚ್ಚುವರಿ ಹಣ ಲಭಿಸುವುದೆಂದು ನಿಖರವಾಗಿ ಲೆಕ್ಕ ಹಾಕಬಹುದು. ಆದರೆ ಷೇರುಪೇಟೆಯಲ್ಲಿ ಹೂಡಿಕೆಯ ಫಲಿತಾಂಶವನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ ಎಂಬುದನ್ನು 2020 ರ ಬೆಳವಣಿಗೆಗಳು ಬಿಂಬಿಸಿವೆ.

    ಕೇವಲ 10 ತಿಂಗಳ ಸಮಯದಲ್ಲಿ ಸೆನ್ಸೆಕ್ಸ್‌ ಸುಮಾರು ಶೇಕಡ 85ಕ್ಕೂ ಹೆಚ್ಚಿನ ಏರಿಕೆ ಕಂಡಿದೆ. ಇದಕ್ಕೆ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಗಳೇನು ಹೊರತಲ್ಲ. ಈಗಿನ ರಭಸದ ಏರಿಕೆಯು ಕೇವಲ ಸಾಂಕೇತಿಕವೆನ್ನುವಷ್ಟಾಗಿದೆ. ಕಾರಣ ಕೇವಲ ಪೇಟೆಯೊಳಗೆ ಹರಿದುಬರುತ್ತಿರುವ ಹಣವೇ ಈ ಏರಿಕೆಗೆ ಮೂಲವಾಗಿದ್ದು ಅದಕ್ಕನುಗುಣವಾಗಿ ವಿಶ್ಲೇ಼ಷಣೆಗಳು ಹೊರಹೊಮ್ಮುತ್ತಿವೆ. ಈ ರೀತಿಯ ವಾತಾವರಣದಲ್ಲಿ ಸಣ್ಣಹೂಡಿಕೆದಾರರು / ರೀಟೇಲ್‌ ಹೂಡಿಕೆದಾರರು ಅಂತಹ ಹಿಡಿತಕ್ಕೊಳಗಾಗದೆ ಎಚ್ಚರದಿಂದ ಚಟುವಟಿಕೆ ನಿರ್ವಹಿಸಬೇಕು.

    ಬೊರೊಸಿಲ್‌ ರಿನ್ಯೂವಬಲ್ಸ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆಯು ಕಳೆದ ಮಾರ್ಚ್‌ ತಿಂಗಳಲ್ಲಿ ರೂ.28 ರಲ್ಲಿತ್ತು. ಡಿಸೆಂಬರ್‌ ತಿಂಗಳಲ್ಲಿ ಎರಡನೇ ವಾರದಲ್ಲಿ ರೂ.127 ರ ಸಮೀಪಕ್ಕೆ ಚೇತರಿಸಿಕೊಂಡಿತು. ಆ ಸಂದರ್ಭದಲ್ಲಿ ಕಂಪನಿಯು ಪ್ರತಿ ರೂ.1 ರ ಮುಖಬೆಲೆಯ ಷೇರನ್ನು ರೂ.133.19 ರಲ್ಲಿ ಕ್ವಾಲಿಫೈಡ್‌ ಇನ್ಸ್ಟಿಟ್ಯೂಷನ್‌ ಪ್ಲೇಸ್ಮೆಂಟ್‌ ಮಾಡಲು ನಿರ್ಧರಿಸಿತ್ತಾದರೂ ಅಂತಿಮವಾಗಿ ರೂ.126.55 ರಂತೆ ಡಿಸ್ಕೌಂಟ್‌ ನಲ್ಲಿ ವಿತರಿಸಿತು. ಪ್ರತಿ ಷೇರಿಗೆ ರೂ.126.55 ರಂತೆ ವಿತರಿಸಿದ ನಂತರ ಷೇರಿನ ಬೆಲೆಯಲ್ಲಿ ನವಚೇತನ ಉಂಟಾಗಿ ದಿನೇ ದಿನೇ ಏರಿಕೆ ಕಂಡು ರೂ.323 ನ್ನು ವರ್ಷಾಂತ್ಯದ ದಿನ ದಾಖಲಿಸಿತು.

    ಆದರೆ 2021 ರ ಆರಂಭದ ದಿನವೇ ಕುಸಿತದಿಂದ ಕೆಳಗಿನ ಆವರಣ ಮಿತಿಯನ್ನು ತಲುಪಿತು. ಸೋಜಿಗವೆಂದರೆ ಏರುಗತಿಯಲ್ಲಿ ಡಿಸೆಂಬರ್‌ 23 ರಂದು 223 ರೂಪಾಯಿಗಳಲ್ಲಿ ಸುಮಾರು 8 ಲಕ್ಷ ಷೇರುಗಳು, 24 ರಂದು 7.63 ಲಕ್ಷ ಷೇರುಗಳ ವಹಿವಾಟು ಪ್ರದರ್ಶಿಸಿದ ಈ ಷೇರು ಡಿಸೆಂಬರ್‌ 30 ರಂದು 8 ಲಕ್ಷಕ್ಕೂ ಹೆಚ್ಚಿನ ಷೇರು, 31 ರಂದು 7.99 ಲಕ್ಷ ಷೇರುಗಳ ವಹಿವಾಟು ಪ್ರದರ್ಶಿಸದ ನಂತರ ಹೊಸ ವರ್ಷದ ಆರಂಭದ ದಿನ ನಡೆದ 23 ಸಾವಿರ ಷೇರಿನ ವಹಿವಾಟಿಗೆ ನೆಲಕಚ್ಚಿದೆ. ಕೇವಲ ಒಂದೇ ವಾರದಲ್ಲಿ ಷೇರು ಅಸಹಜ ಚಟುವಟಿಕೆಗೆ ಗುರಿಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    ಅತ್ಯಧಿಕ ಪ್ರಮಾಣದ ಡಿವಿಡೆಂಡ್‌ ವಿತರಿಸಿದ ಕಂಪನಿ

    ಮೆಜೆಸ್ಕೊ ಷೇರು ಪ್ರತಿ ಷೇರಿಗೆ ರೂ.974 ರಂತೆ ಡಿವಿಡೆಂಡ್‌ ನ್ನು ಘೋಷಿಸಿತು. ಷೇರಿನ ಬೆಲೆಯೂ ರೂ.970 ರಲ್ಲಿದ್ದರೂ ಅದು ಬೇಡ ನನಗೆ ಏಕೆಂದರೆ ಆ ಲಾಭಾಂಶದ ಮೇಲೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಹೂಡಿಕೆದಾರರು ಹೆದರಿದರು. ಆದರೆ ಕಂಪನಿಯು ಪ್ರಕಟಿಸಿದಂತೆ ನಿಖರವಾಗಿ ಡಿಸೆಂಬರ್‌ ಅಂತ್ಯದೊಳಗೆ ಲಾಭಾಂಶವನ್ನು ವಿತರಿಸಿದೆ. ಈ ಸಂದರ್ಭದಲ್ಲಿ ಕಂಪನಿಯು ತನ್ನ ಮುಂದಿನ ಚಟುವಟಿಕೆಯ ಮುನ್ನೋಟವನ್ನು ಸಹ ಪ್ರಕಟಿಸಿದ್ದರೂ ಪೇಟೆಯಲ್ಲಿ ಬೆಂಬಲ ದೊರೆಯಲಿಲ್ಲ.

    ಈ ಕಂಪನಿಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಜೂನ್‌ ಅಂತ್ಯದ ತ್ರೈಮಾಸಿಕದಲ್ಲಿ ಶೇ.13.05 ರಷ್ಟಿದ್ದು, ಸೆಪ್ಟೆಂಬರ್‌ ಅಂತ್ಯದ ತ್ರೈಮಾಸಿಕದಲ್ಲಿ ಅದು ಶೇ.15.20 ಕ್ಕೆ ಏರಿಕೆ ಕಂಡಿದೆ. ಶೇ.4.1 ರಷ್ಠು ಪ್ರವರ್ತಕರ ಭಾಗಿತ್ವವು ಪ್ಲೆಡ್ಜ್‌ ಆಗಿದ್ದರೂ ಸಹ ಈ ಪ್ರಮಾಣದ ಡಿವಿಡೆಂಡ್‌ ನೀಡಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಕಾರ್ಪೊರೇಟ್‌ ಫಲಗಳ ಬಗ್ಗೆ ಹೆಚ್ಚು ಆದ್ಯತೆ ಇಲ್ಲದ ಈಗಿನ ದಿನಗಳಲ್ಲಿ‌ ಅತ್ಯಧಿಕ ಪ್ರಮಾಣದ ಡಿವಿಡೆಂಡ್‌ ವಿತರಿಸಿದ ಕಂಪನಿ ಎಂಬ ಕಾರ್ಪೊರೇಟ್ ದಾಖಲೆಯನ್ನು ನಿರ್ಮಿಸಿದ ಕಂಪನಿ ಇದಾಗಿದೆ. ಡಿಸೆಂಬರ್‌ ಮದ್ಯಂತರದಿಂದಲೂ ಎಕ್ಸ್‌ ಚೇಂಜ್‌ ನಲ್ಲಿ ನಡೆದ ಗಜಗಾತ್ರದ ವಹಿವಾಟುಗಳನ್ನು ಗಮನಿಸಿದಾಗ ಪ್ರವರ್ತಕರು ತಮ್ಮ ಭಾಗಿತ್ವದ ಭಾಗವನ್ನು ಪುನರ್ವಿಂಗಡನೆ ಮಾಡಿದ್ದಾರೆ. ಈ ಕ್ರಮ ಆದಾಯ ತೆರಿಗೆಯ ಯೋಜನೆಯ ಲಾಭ ಪಡೆಯಲೂ ಇರಬಹುದು. ಈ ಗಜಗಾತ್ರದ ವಹಿವಾಟುಗಳಲ್ಲಿ ಗಿಫ್ಟ್‌ ಗಳ ಮೂಲಕವೂ ಹಲವಾರು ವಹಿವಾಟುಗಳು ದಾಖಲೆಯಾಗಿದೆ. ಇದು ಕಂಪನಿಯ ಪ್ರವರ್ತಕರ ಭಾವನೆಗೆ ಹಿಡಿದ ಕನ್ನಡಿಯಾಗಿದೆ.

    ಈ ಸಂದರ್ಭದಲ್ಲಿ ಕಾನೂನಾತ್ಮಕ ತೊಡಕುಗಳು ಹೇಗೆ ಕಂಪನಿಗಳನ್ನು ತೊಂದರೆಗೆ ದೂಡಬಹುದು ಎಂಬುದಕ್ಕೆ ಈ ಕೆಳಗಿನ ನಿದರ್ಶನದಿಂದ ತಿಳಿಯಿರಿ.

    2008 ರ ಡಿಸೆಂಬರ್‌ ತಿಂಗಳ 16 ರಂದು ಅಂದಿನ ತಾಂತ್ರಿಕ ವಲಯದ ದಿಗ್ಗಜ ಕಂಪನಿಯಾಗಿದ್ದ ಸತ್ಯಂ ಕಂಪ್ಯೂಟರ್‌ ಕಂಪನಿಯ ಪ್ರವರ್ತಕರು ತೆಗೆದುಕೊಂಡ ಒಂದು ಜಾರಿಗೊಳಿಸಲಾಗದ ನಿರ್ಧಾರದಿಂದ ಮಾರನೆದಿನ ಷೇರಿನ ಬೆಲೆ ರೂ.222 ರಿಂದ 113 ರವರೆಗೂ ಕುಸಿಯಿತು. ಈ ಭರ್ಜರಿ ಕುಸಿತದ ಕಾರಣ ಕಂಪನಿಯು ಕಾರ್ಪೋರೇಟ್‌ ನೀತಿಪಾಲನೆಯಲ್ಲಿ ಲೋಪವೆಸಗಿದೆ ಎಂಬ ಭಾವನೆಯಾಗಿದೆ. ಕುಸಿತದ ಹಿಂದಿನ ದಿನ ಕಂಪನಿಯ ಪ್ರವರ್ತಕರು ಶೇ.8.27 ರಷ್ಟರ ಭಾಗಿತ್ವವನ್ನು ಹೊಂದಿದ್ದರು. ಅದನ್ನು ಸಂಪೂರ್ಣವಾಗಿ ಒತ್ತೆಇಟ್ಟು ಸಾಲಪಡೆದಿದ್ದರು. ಷೇರಿನಬೆಲೆ ಭಾರಿ ಕುಸಿತಕ್ಕೊಳಗಾದ ಕಾರಣ ಫೈನಾನ್ಶಿಯರ್ಸ್‌ ಒತ್ತೆ ಇಟ್ಟ ಭಾಗಕ್ಕೆ ಮಾರ್ಜಿನ್‌ ಹಣ ತುಂಬಲು ಪ್ರವರ್ತಕರು ವಿಫಲಗೊಂಡಕಾರಣ ಒತ್ತೆ ಇಟ್ಟ ಷೇರಿನಲ್ಲಿ ಸ್ವಲ್ಪ ಭಾಗವನ್ನು ಫೈನಾನ್ಶಿಯರ್ಸ್‌ ಮಾರಾಟಮಾಡಲೇಬೇಕಾಯಿತು. ಇದರ ಫಲವಾಗಿ ಪ್ರವರ್ತಕರ ಭಾಗಿತ್ವವು ಶೇ.8.27 ರಿಂದ ಶೇ.4.4 ಕ್ಕೆ ಕುಸಿಯಿತು. ಈ ಬೆಳವಣಿಗೆಯು ಮಾರ್ಕೆಟ್‌ ರೆಗ್ಯುಲೇಟರ್‌ ʼಸೆಬಿʼ ತಕ್ಷಣ ಕಾರ್ಯಪ್ರವೃತ್ತವಾಗಿ, ಕಂಪನಿಗಳು ತಮ್ಮ ಪ್ರವರ್ತಕರು ಒತ್ತೆ ಇಟ್ಟ ಭಾಗಿತ್ವವನ್ನು ಪ್ತತಿ ತ್ರೈಮಾಸಿಕದಲ್ಲೂ ಪ್ರಕಟಿಸಬೇಕೆಂಬ ಪ್ರಮುಖ ನಿಯಮವನ್ನು ಜಾರಿಗೊಳಿಸಿತು.

    2020 ರಲ್ಲಿ ಮೆಜೆಸ್ಕೊ ಕಂಪನಿಯ ಪ್ರವರ್ತಕರು ಶೇ.36.77 ರಷ್ಟರ ಭಾಗಿತ್ವವನ್ನು ಹೊಂದಿದ್ದಾರೆ. ಅದರಲ್ಲಿ ಶೇ.4.1 ರಷ್ಟು ಒತ್ತೆ ಇಡಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಷೇರಿನ ಬೆಲೆ ರೂ.980 ರ ಸಮೀಪದಿಂದ ರೂ.15 ರ ಸಮೀಪಕ್ಕೆ ಕುಸಿದಾಗ ಫೈನಾನ್ಶಿಯರ್ಸ್‌ ಗೆ ಸಹಜವಾಗಿ ಭಾರಿ ಪ್ರಮಾಣದ ಮಾರ್ಜಿನ್‌ ಹಣ ತುಂಬಬೇಕಾಗಿರುತ್ತದೆ. ಅಥವಾ ಬಂದ ಡಿವಿಡೆಂಡ್‌ ಹಣದಿಂದ ಒತ್ತೆ ಇಟ್ಟ ಷೇರುಗಳನ್ನು ಬಿಡಿಸಿಕೊಂಡಿರಲೂ ಬಹುದು. ಆದರೆ ಈ ರೀತಿ ಷೇರುದಾರರಿಗೆ ಗಜಗಾತ್ರದ ಡಿವಿಡೆಂಡ್‌ ನ್ನು ವಿತರಿಸಿದಾಗ ಲಿಸ್ಟಿಂಗ್‌ ಆದ ಸ್ಟಾಕ್‌ ಎಕ್ಸ್‌ ಚೇಂಜ್‌ ಗಳು ವಿಧಿಸಿದ ಸರ್ಕ್ಯುಟ್‌ ಫಿಲ್ಟರ್ಗಳನ್ನು ಸಡಿಲಗೊಳಿಸಲೇಬೇಕು. ಐ ಪಿ ಒ ಗಳು ಲೀಸ್ಟಿಂಗ್‌ ಆದ ಮೊದಲ ದಿನ ಹೇಗೆ ಮಾರ್ಕೆಟ್‌ ಗಳು ಅವುಗಳ ಬೆಲೆ ನಿಗದಿಪಡಿಸುತ್ತವೆಯೋ ಅದೇ ರೀತಿಯ ವ್ಯವಸ್ಥೆ ಇದ್ದಲ್ಲಿ ನ್ಯಾಯಸಮ್ಮತವಾಗುತ್ತದೆ. ಈಗಿನ ಪದ್ದತಿಯಲ್ಲಿ ಆರೋಗ್ಯವಾಗಿರುವ ಕಂಪನಿಗಳೂ ಆಪತ್ತಿಗೊಳಗಾಗುವ ಸಾಧ್ಯತೆಗಳು ಉದ್ಭವವಾಗಬಹುದು.

    ವಿಸ್ಮಯಕಾರಿ ಪೇಟೆ

    ಷೇರುಪೇಟೆಯು ವಿಸ್ಮಯಕಾರಿ ಎಂಬುದು ಹಿಂದಿನಿಂದ ಬಂದ ನಂಬಿಕೆಯಾಗಿದೆ. ಆದರೆ ಈಗಿನ ದಿನಗಳಲ್ಲಿ ಅದು ವಿಸ್ಮಯಕಾರಿ ವ್ಯವಹಾರಿಕ ವ್ಯವಸ್ಥೆಯಾಗಿದೆ. ಕೆಲವು ಕಂಪನಿಗಳು ಅಲ್ಪಕಾಲದಲ್ಲೇ ಅಪಾರ ಲಾಭಗಳಿಸಿಕೊಡುವ ಸಾಧ್ಯತೆಯನ್ನು ಒದಗಿಸುತ್ತವೆ. ಹಾಗಂತ ಎಲ್ಲಾ ಕಂಪನಿಗಳೂ ಲಾಭದಾಯಕ ಎಂಬ ಕಲ್ಪನೆ ಬೇಡ. ಸದ್ಯ ಸೆನ್ಸೆಕ್ಸ್‌, ನಿಫ್ಟಿ, ಮತ್ತು ವಿವಿಧ ಉಪ ಸೂಚ್ಯಂಕಗಳೂ ಗರಿಷ್ಠಮಟ್ಟಕ್ಕೆ ಜಿಗಿತ ಕಂಡಿದ್ದರೂ ಕೆಲವು ಪ್ರಮುಖ ಕಂಪನಿಗಳು ಕೆಲವು ವರ್ಷಗಳ ಹಿಂದಿನ ಬೆಲೆಯನ್ನು ತಲುಪಲು ಸಾಧ್ಯವಾಗಿಲ್ಲ.

    ಕೆಲವು ಉದಾಹರಣೆಗಳು

    ಅರವಿಂದ್‌ ಲಿಮಿಟೆಡ್‌ 2019 ರ ಜನವರಿಯಲ್ಲಿ ಸುಮಾರು ರೂ.100 ರಲ್ಲಿದ್ದು ಈಗ ರೂ.48 ರ ಸಮೀಪದಲ್ಲೇ ಇದೆ.

    ಕೆನರಾ ಬ್ಯಾಂಕ್‌ 2020 ರ ಜನವರಿಯಲ್ಲಿ ಸುಮಾರು ರೂ.200 ಕ್ಕೂ ಹೆಚ್ಚಿದ್ದು ಈಗ ರೂ.133 ರ ಸಮೀಪದಲ್ಲಿದೆ.

    ಕ್ಯಾಸ್ಟ್ರಾಲ್‌ 2018 ರ ಆಗಸ್ಟ್‌ ನಲ್ಲಿ ಸುಮಾರು ರೂ.170 ರಲ್ಲಿತ್ತು ಈಗ ರೂ.122 ರ ಸಮೀಪದಲ್ಲಿದೆ.

    ಕೋಲ್‌ ಇಂಡಿಯಾ 2018 ರ ಡಿಸೆಂಬರ್‌ ನಲ್ಲಿ ರೂ.250 ರ ಸಮೀಪವಿತ್ತು ಈಗ ರೂ.135 ರ ಸಮೀಪದಲ್ಲಿದೆ.

    ಗೋವಾ ಕಾರ್ಬನ್‌ 2018 ರ ಏಪ್ರಿಲ್‌ ನಲ್ಲಿ ರೂ.1,000 ಕ್ಕೂ ಹೆಚ್ಚಿತ್ತು ಈಗ ಕೇವಲ ರೂ.280 ರ ಸಮೀಪದಲ್ಲಿದೆ.

    ಲಾ ಒಪಾಲಾ ಆರ್‌ ಜಿ ಕಂಪನಿ ಷೇರಿನ ಬೆಲೆ 2018 ರ ಏಪ್ರಿಲ್‌ ನಲ್ಲಿ ರೂ.290 ರಲ್ಲಿತ್ತು ಆದರೆ ಈಗ ಅದು ರೂ.235 ರ ಸಮೀಪವಿದೆ.

    ರೇನ್‌ ಇಂಡಸ್ಟೃೀಸ್‌ 2018 ರ ಮೇ ನಲ್ಲಿ ರೂ.315 ರ ಸಮೀಪದಲ್ಲತ್ತು, ಈಗ ರೂ.144 ರ ಸಮೀಪದಲ್ಲಿದೆ.

    ಎಸ್‌ ಎಂ ಎಲ್‌ ಇಸುಜು ಎಂಬ ಕಂಪನಿ 2017 ರ ಏಪ್ರಿಲ್‌ ನಲ್ಲಿ ರೂ.1,040 ರಲ್ಲಿದ್ದು, ಈಗ ರೂ.475 ರ ಸಮೀಪದಲ್ಲೇ ಇದೆ.

    ಸ್ಟರ್ಲೈಟ್‌ ಟೆಕ್ನಾಲಜೀಸ್‌ ಕಂಪನಿ ಷೇರಿನ ಬೆಲೆ ಮಾರ್ಚ್‌ 2019 ರಲ್ಲಿ ರೂ.215 ರ ಸಮೀಪವಿದ್ದು ಈಗ ರೂ.180 ಸಮೀಪವಿದೆ.

    ಟಾಟಾ ಮೋಟಾರ್ಸ್‌ ಸೆಪ್ಟೆಂಬರ್‌ 2015 ರಲ್ಲಿ ರೂ.290 ರಲ್ಲಿತ್ತು, ಆದರೆ ಈಗ ರೂ.185 ರ ಸಮೀಪದಲ್ಲಿದೆ.

    ಈಕ್ವಿಟಾಸ್‌ ಹೋಲ್ಡಿಂಗ್ಸ್‌ ಕಂಪನಿ ಷೇರಿನ ಬೆಲೆ ಮಾರ್ಚ್‌ 2017 ರಲ್ಲಿ 160 ರ ಸಮೀಪವಿತ್ತು, ಆದರೆ ಈಗ ರೂ.68 ರ ಸಮೀಪವಿದೆ.

    ಆದಿತ್ಯ ಬಿರ್ಲಾ ಕ್ಯಾಪಿಟಲ್‌ ಕಂಪನಿ ಷೇರಿನ ಬೆಲೆ ಡಿಸೆಂಬರ್‌ 2017 ರಲ್ಲಿ ರೂ.185 ರ ಸಮೀಪವಿತ್ತು ಈಗ ರೂ.90 ರ ಸಮೀಪವಿದೆ.

    ಗ್ಲೆನ್‌ ಮಾರ್ಕ್‌ ಫಾರ್ಮ ಷೇರಿನ ಬೆಲೆ ಏಪ್ರಿಲ್‌ 2019 ರಲ್ಲಿ ರೂ.650 ರಲ್ಲಿದ್ದು ಈಗ ರೂ.500 ರ ಸಮೀಪವಿದೆ.

    ಮೇಲಿನ ಕಂಪನಿಗಳು ಕೇವಲ ವಾಸ್ತವದ ಪರಿಚಯಕ್ಕಾಗಿ ನೀಡಲಾಗಿದೆಯೇ ಹೊರತು ಯಾವುದೇ ಶಿಫಾರಸು, ಅಥವಾ ಚಟುವಟಿಕೆಗೆ ಪ್ರೇರಣೆಯಿಂದಲ್ಲ.

    ಚಟುವಟಿಕೆಗೆ ಮುನ್ನ ಅರಿತು ನಿರ್ಧರಿಸಿರಿ. ಹೊಸ ವರ್ಷದಲ್ಲಿ ಆರ್ಥಿಕ ಸಾಕ್ಷರತಯನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳೋಣ.

    error: Content is protected !!