24.4 C
Karnataka
Tuesday, May 14, 2024

    ವಿನಮ್ರತೆಯೇ ಸಾಧನೆಯ ಮೂಲಮಂತ್ರ

    Must read

    ಸಾಧನಾ…. ನಿತ್ಯ ಸಾಧನಾ.

    ಗೆಲುವಿಗಾಗಿ ಪ್ರತಿಯೊಬ್ಬರೂ ಗುನುಗುವ ಹಾಡಿದು. ಮೊದಲು ಹೊಟ್ಟೆ ಆಮೇಲೆ ಬಟ್ಟೆ. ನಂತರ ಸಾಧನೆಗಾಗಿಯೇ ಎಲ್ಲರ ದುಡಿಮೆ.

    ನನ್ನ ತಂದೆ ಯಾವಾಗಲು ಹೀಗೆ ಹೇಳುತ್ತಿದ್ದರು- “ಹೊಟ್ಟೆಯೆಂಬುದು ಇಲ್ಲದಿದ್ದರೆ ಜಗತ್ತಿನಲ್ಲಿ ಎಲ್ಲರೂ ಸೋಮಾರಿಗಳಾಗುತ್ತಿದ್ದರು”. ಅದು ಅಕ್ಷರಶಃ ನಿಜ. ಲಕ್ಷಾಂತರ ಮಂದಿ ಹಳ್ಳಿಯಿಂದ ನಗರ ಸೇರುತ್ತಾರೆ. ಕೆಲವರು ನಗರದಿಂದ ಮರಳಿ ಹಳ್ಳಿಯೂ ಸೇರುತ್ತಾರೆ. ನನ್ನನ್ನೂ ಸೇರಿ ಸಾಧನೆಗಾಗಿ ನಗರ/ಹಳ್ಳಿ ಸೇರಿದ ಎಲ್ಲರ ಮನದ ಬಯಕೆ ಒಂದೇ. ಅದು “ಏನನ್ನಾದರೂ ಸಾಧನೆ ಮಾಡಬೇಕು” ಎನ್ನುವುದು.

    ಈ ಸಾಧನೆಯೆಂಬುದು ಕೆಲವರದು ನಿರ್ದಿಷ್ಟವಾಗಿದ್ದರೆ ಇನ್ನಿತರದು ಜೀವನ ಬಂದಹಾಗೆಯೇ ಸ್ವೀಕರಿಸಿ ಕಾಲವು ತೋರಿಸಿದ ದಿಕ್ಕಿನಲ್ಲಿ ಸಾಧನೆ ಮಾಡುವದು.ಸಾಧನೆವೆಂಬುದು ಒಂದೇ ದಿನದಲ್ಲಿ ಫಲಿತಾಂಶ ಸಿಗುವಂತಹ ಪರೀಕ್ಷೆಯಲ್ಲ. ಮಾನವನ ಈ ಸಾಧನೆಯೆಂಬ ಹಾದಿಯಲ್ಲಿ ಹಲವಾರು ಹಂತಗಳು. ಒಂದೊಂದು ಹಂತಗಳಲ್ಲಿಯೂ ಸಾವಿರಾರು ಮೆಟ್ಟಿಲುಗಳು.

    ಒಬ್ಬ ಯಾವದೇ ವಿಶ್ವಶ್ರೇಷ್ಠ ಸಾಧಕರು ಅಂದುಕೊಂಡಿದ್ದನ್ನು ಸಾಧಿಸಿ ಜಗತ್ಪ್ರಸಿದ್ಧರಾಗ ಬೇಕಾದರೆ ಎಷ್ಟೋ ದಶಕಗಳ ಹಂತಗಳ ಶ್ರಮ ಇರುತ್ತದೆ. ಯಾವುದೇ ಕಾಲಮಾನದವರನ್ನಾದರು ತೆಗೆದುಕೊಳ್ಳಿ, ಅವರ ಸಾಧನೆಯ ಬಗ್ಗೆ ಒಮ್ಮೆ ತಿರುವಿ ಹಾಕಿದಾಗ ಒಂದು ತಕ್ಕಡಿಯಲ್ಲಿ ಅವರ ಸಾಕಷ್ಟು ಪರಿಶ್ರಮ, ಬುದ್ದಿ, ಶಿಸ್ತು ಸಂಯಮಗಳನ್ನು ಇಟ್ಟುಕೊಂಡು ತೂಗಿದರೆ ಇನ್ನೊಂದು ಕಡೆ ಸಮನಾಗಿ ತೂಗುವ ಗುಣವೇ “ವಿನಮ್ರತೆ”.

    ಸಾಧನೆಯ ಹಾದಿಯಲ್ಲಿ ಹಂತಗಳನ್ನು ದಾಟಿದಾಗ ನಮ್ಮಲ್ಲಿ ಬುದ್ಧಿ ಜ್ಞಾನ ಸಾಮರ್ಥ್ಯ ಶಿಸ್ತು ಸಂಯಮಗಳು ದ್ವಿಗುಣವಾಗುತ್ತಾ ಹೋಗುತ್ತವೆ. ಮೊದಲನೇ ತಕ್ಕಡಿಯಲ್ಲಿ ನಾವಿಟ್ಟ ಗುಣಗಳು ಗುಣಿಸಲ್ಪಡುತ್ತವೆ. ಆದರೆ ಇನ್ನೊಂದು ತಕ್ಕಡಿಯಲ್ಲಿ ವಿನಮ್ರತೆಯನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಸಾಧನೆಯನ್ನು ಹಂತಹಂತವಾಗಿ ಮುಟ್ಟುತ್ತಿರುವಾಗ ವಿನಮ್ರತೆ ದೂರವಾಗಿ ದರ್ಪ, ಸೊಕ್ಕು, ಅನ್ಯತಾ ಮನೋಭಾವ ಇತ್ಯಾದಿಗಳು ಬರಬಾರದು. ಎರಡನೇ ಮಹಡಿಯಲ್ಲಿ ಇರುವ ವಿನಮ್ರತೆ ಮಾಯವಾದರೆ ಸಾಧನೆಗೆ ಒಂದೇ ಹಂತ ಹಿಂದೆಯಿದ್ದರೂ ಮರಳಿ ಮಣ್ಣಿಗೆ ಬೀಳುತ್ತೇವೆ. ಹಂತ ಹಂತಗಳಲ್ಲಿ ಆತ್ಮವಿಶ್ವಾಸ ದ್ವಿಗುಣವಾಗಬೇಕೇ ಹೊರತು ದರ್ಪವಲ್ಲ.

    ಈ ಕುರಿತಾಗಿ ನಾನು ಚಿಕ್ಕವನಿದ್ದಾಗ ಓದಿದ ಕವಿ ಪಂಜೆ ಮಂಗೇಶ ರಾಯರು ಬರೆದ ಈ ಸಾಲಿನ ತುಣುಕುಗಳನ್ನು ನೋಡೋಣ.

    ಏರುವನು ರವಿ ಏರುವನು
    ಬಾನೊಳು ಸಣ್ಣಗೆ ತೋರುವನು
    ಏರಿದವನು ಚಿಕ್ಕವನಿರಬೇಕೆಲೆ
    ಎಂಬಾ ಮಾತನು ಸಾರುವನು

    ಮೇಲಿನ ಸಾಲುಗಳಲ್ಲಿ ಕವಿಗಳು ಸೂರ್ಯನನ್ನು ಕುರಿತು ಏರುವಾಗ ಬೆಳಕು ಕೊಡುತ್ತಾನೆ ಮತ್ತು ಏರಿದವನು ಚಿಕ್ಕನಾಗಿರಬೇಕೆ೦ಬುದಾಗಿ ತೋರಿಸುತ್ತಾನೆ. ಇದೇ ವಿನಮ್ರತೆಯ ಮೂಲಮಂತ್ರ. ಮೇಲೆ ಹೋದಷ್ಟು ವಿನಮ್ರತೆಯನ್ನು ಮರೆಯಬಾರದು. ಅದೇ ಇನ್ನೂ ಹೆಚ್ಚು ಮೇಲೆ ಹೋಗುವಂತೆ ಸಹಾಯ ಮಾಡುತ್ತದೆ. ಕಾಲು ಎಳೆಯುವವರು ನಿಮ್ಮ ಕಾಲು ಕೆಳಗೆ ಇರುತ್ತಾರೆ. ಅಂಥವರ ಮೇಲೆ ಅನುಕಂಪವಿರಲಿ. ವಿನಮ್ರತೆ ನಿಮ್ಮ ಮನದಲ್ಲಿರಲಿ.

    ಕೋಟೆಯನ್ನು ಕಟ್ಟುವದು ರಾಜ್ಯದ ಪ್ರಜೆಗಳ ರಕ್ಷಣೆಗೆ ಹೊರೆತು ಅರಸನು ಮೆರೆಯುವುದಕ್ಕಲ್ಲ ಎಂಬುದನ್ನು “ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು” ಎಂಬ ಹಾಡಿನೊಂದಿಗೆ ವರನಟ ಡಾ. ರಾಜಕುಮಾರ ಅವರು ಹಾಡಿದ್ದನ್ನು ಇನ್ನೂ ಸ್ಮರಿಸಬಹುದು. ಯೋಗವು ಯಾವಾಗಾದರೊಮ್ಮೆ ಬರಬಹುದು, ಯೋಗ್ಯತೆ ಗಳಿಸಿಕೊಂಡರೆ ನಿತ್ಯ ಸಾಧನೆ ಸರಳ.

    ಯಾವುದೇ ಹುದ್ದೆ, ಅಧಿಕಾರ, ಜವಾಬ್ದಾರಿ ಅಂತಸ್ತಿನಲ್ಲಿದ್ದವರೂ ವಿನಮ್ರತೆಯನ್ನು ಉಳಿಸಿಕೊಂಡು ಹೋದರೆ ಇನ್ನೂ ಹೆಚ್ಚು ಬೆಳೆಯಬಹುದು. ಸಾಧನೆಗಳನ್ನು ಮಾಡುತ್ತಾ ಮುಂದುವರೆಯಬಹುದು.

    ದೀರ್ಘ ಸಾಧನೆಗಾಗಿ ಕೆಲಸ ಮಾಡಿ ಸಾಧಕರಾಗೋಣ ಹೊರತು ಸಮಯ-ಸಾಧಕರಾಗುವದು ಬೇಡ.

    ವಿನಮ್ರತೆ ಸಾಧನೆಗೆ ಪೂರಕ.

    Photo by Ben White on Unsplash

    ಡಾ. ಮಲ್ಲಿಕಾರ್ಜುನ ಎಚ್ ಎಂ
    ಡಾ. ಮಲ್ಲಿಕಾರ್ಜುನ ಎಚ್ ಎಂ
    ಬೆಂಗಳೂರಿನ ಚನ್ನಸಂದ್ರದಲ್ಲಿರುವ ಆರ್ ಎನ್ ಎಸ್ ಐ ಟಿ ಯಲ್ಲಿ ವಿದ್ಯುನ್ಮಾನ ಹಾಗೂ ಉಪಕರಣಗಳ ವಿಭಾಗದಲ್ಲಿ ಉಪನ್ಯಾಸಕರಾಗಿರುವ ಮಲ್ಲಿಕಾರ್ಜುನ ಪ್ರವೃತ್ತಿಯಿಂದ ಸಂಶೋಧಕರು ಮತ್ತು ಬರಹಗಾರರು. ಮೆದುಳಿನ ತರಂಗಗಳು, ನಿದ್ರಾಹೀನತೆ, ಖಿನ್ನತೆ ಈ ವಿಷಯಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಮನೋ ವೈಜ್ಞಾನಿಕ ಹಾಗೂ ವ್ಯಕ್ತಿತ್ವ ವಿಕಸನ ಬರಹಗಳನ್ನು ಸೊಗಸಾಗಿ ಬರೆಯುತ್ತಾರೆ.
    spot_img

    More articles

    47 COMMENTS

    1. Very Good Article sir😍

      ದೀರ್ಘ ಸಾಧನೆಗಾಗಿ ಕೆಲಸ ಮಾಡಿ ಸಾಧಕರಾಗೋಣ ಹೊರತು ಸಮಯ-ಸಾಧಕರಾಗುವದು ಬೇಡ.

      ಮುಂದಿನ ಪೀಳಿಗೆಗೆ ಅದ್ಭುತವಾದ ಮಾತು

    2. ನಿಂತ ನೀರಿನಂತಾಗಬಾರದು ಮನುಷ್ಯನ ಜೀವನ – ಅದು ಹರಿಯುತ್ತಲೇ ಇರಬೇಕು – ಗುರಿ ಮುಟ್ಟಬೇಕು. ತಾನು ಮಾಡುವ ಸಾಧನೆಯು ಸಮಾಜದ ಒಳಿತಿಗಾಗಿ ಇರಬೇಕು.

      ತುಂಬಾ ಅರ್ಥಪೂರ್ಣವಾಗಿದೆ ನಿಮ್ಮ ಲೇಖನ. ಧನ್ಯವಾದಗಳು ಮಲ್ಲಿಕಾರ್ಜುನ ಸರ್.

    3. ಪ್ರಾಧ್ಯಾಪಕ ಮಲ್ಲಿಕಾರ್ಜನ ಗುರುಗಳೇ ಅರ್ಥಪೂರ್ಣವಾದ ಬರಹ ಒದಗಿಸಿದ್ದಕ್ಕೆ ಧನ್ಯವಾದಗಳು… ಹಾಗೂ ಕನ್ನಡ ಪ್ರೆಸ್ಸ್ . ಕಾಮ್ ಪ್ರಕಟಿಸಿದ್ದಕ್ಕೆ ನಿಮಗೂ ಕೂಡ ಧನ್ಯವಾದಗಳು….

    4. ಎಲ್ಲಾ ಹಂತಗಳಲ್ಲಿ ಆತ್ಮವಿಶ್ವಾಸ ದ್ವಿಗುಣವಾಗಬೇಕೇ ಹೊರತು ದರ್ಪವಲ್ಲ ಎಂಬ ಮಾತು ನಿಜ ಸರ್ ವ್ಯಕ್ತಿತ್ವವನ್ನು ತೋರಿಸುತ್ತದೆ. 🙏

    5. ಪ್ರಸಕ್ತ ಸ್ಥಿತಿಯನ್ನು ಗಮನಿಸಿದರೆ ಈ ಲೇಖನ ತುಂಬಾನೇ ಚೆನ್ನಾಗಿದೆ, ಮತ್ತು ಆರ್ಥ ಪೂರ್ಣವಾಗಿದೆ. ಲೇಖಕರು, ಜೀವನದಲ್ಲಿ ಬರುವ ಎಲ್ಲಾ ಹಂತಗಳನ್ನು ಗಮನಿಸಿ, ಅನುಭವಿಸಿ ಬರೆದಂತಿದೆ.
      ಇನ್ನೂ ಹೆಚ್ಚೆಚ್ಚು ಪ್ರಚಲಿತ ವಿಚಾರಗಳನ್ನು ಪ್ರಕಟಿಸಲಿ, ಹಾಗೂ ಲೇಖಕರಿಗೆ ನನ್ನ ಹಾರ್ದಿಕ ಧನ್ಯವಾದಗಳು.

    6. ತುಂಬಾ ಚನ್ನಾಗಿ ಬರ್ದಿದ್ದೀರಾ ಕೃತಜ್ಞತೆಗಳು ಡಾ. ಮಲ್ಲಿಕಾರ್ಜುನ

    7. ತುಂಬಾ ಚನ್ನಾಗಿ ಬರ್ದಿದ್ದೀರಾ ಕೃತಜ್ಞತೆಗಳು ಡಾ. ಮಲ್ಲಿಕಾರ್ಜುನ ಅವರಿಗೆ

    8. ಪ್ರತಿಯೊಬ್ಬ ಮನುಷ್ಯನಲ್ಲಿ ಇರಲೇಬೇಕಾದ ವಿನಮ್ರತೆ ಎಂಬ ಗುಣದ ಬಗ್ಗೆ ಓದುಗರಿಗೆ ನಿಮ್ಮ ಬರವಣಿಗೆಯ ಮೂಲಕ ಮನಮುಟ್ಟುವಂತೆ ಹೇಳಿದ್ದೀರಿ. ಧನ್ಯವಾದಗಳು ಸರ್.

    9. ಸುಂದರವಾದ ಬರಹ. ಲೇಖಕರು ವಿನಮ್ರತೆಯ ಮಹತ್ವವನ್ನು ಸೊಗಸಾಗಿ ಹೇಳಿದ್ದಾರೆ.

    10. ಮಿತ್ರ ಡಾ.ಮಲ್ಲಿಕಾರ್ಜುನ್ ನಿಮ್ಮ ಪ್ರಥಮ ಅಂಕಣ ತುಂಬಾ ಸೊಗಸಾಗಿ ಮೂಡಿ ಬಂದಿದೆ, ಶುಭಾಶೆಯಗಳೊಂದಿಗೆ ನನ್ನ ಹಾರೈಕೆಗಳು.
      ಮಲ್ಲಿ ನಿಮ್ಮ ಅಂಕಣ ಸಾಧಕರಿಗೆ ಒಂದು ಟಾನಿಕು, ಸಾಧಿಸಬೇಕೆಂಬ ಛಲವನ್ನುಟ್ಟುಸುವ ರೀತಿಯಲ್ಲಿದೆಯೆಂದರೆ ಉತ್ಪ್ರಕ್ಷೆಯಾಗಲಾರದೆಂದು ನನ್ನ ಅನಿಸಿಕೆ. ಸಾಧನೆಯ ಹಾದಿಯಲ್ಲಿ ನಿದ್ದೆ ಮಾಡುವ ಯುವ ಪೀಳಿಗೆಗೆ, ನಮ್ಮ ಕೈಲಾಗುವುದಿಲ್ಲ ವೆಂದು ಕೈಚೆಲ್ಲುವವರಿಗೆ ಒಂದು ಪ್ರೇರಣೆ.
      ಈ ನಿಮ್ಮ ಪ್ರಯತ್ನ ನಿರಂತರವಾಗಿ ಸಾಗಲೆಂದು ನನ್ನ ಆಸೆ.
      ಇಂತಿ
      ಸದಾ ನಿಮ್ಮ
      ಡಾ.ಸೀನಪ್ಪ

    11. ತುಂಬಾ ಚನ್ನಾಗಿ ಮತ್ತು ಆರ್ಥ ಪೂರ್ಣವಾಗಿ ಬರ್ದಿದ್ದೀರಾ ಡಾ. ಮಲ್ಲಿಕಾರ್ಜುನ ಅವರೇ.. ಹೇಗೆ ಹೆಚ್ಚೆಚ್ಚು ವಿಚಾರಗಳನ್ನು ತಾವು ಪ್ರಕಟಿಸಲಿ..ಧಾನ್ಯವಾದಗಳು..

    12. ತುಂಬಾ ಚೆನ್ನಾಗಿದೆ,
      ಅರ್ಥ ಗರ್ಭಿತವಾಗಿದೆ,
      ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಅನ್ವಯಮಾಡಿಕೊಳ್ಳುವಂತದ್ದು,
      ಧನ್ಯವಾದಗಳು ಗೆಳೆಯ……ಮಲ್ಲು.

    13. ಸೂಕ್ತ ವಿಷಯ, ಆವಶ್ಯಕ ವಿಚಾರ
      ಹೀಗೆ ಬರೆಯುತ್ತಾ ಇರಿ.
      Good luck.

    14. Very nice thought provoking article which is applicable to everyone in life. We expect more such article from you sir. All the best sir

    LEAVE A REPLY

    Please enter your comment!
    Please enter your name here

    Latest article

    error: Content is protected !!