ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಾಷ್ಕೆಂಟ್ ನಲ್ಲಿ ನಿಧನರಾದ ದಿನದ ನೆನಪು ನನ್ನ ಮನಸಿನಲ್ಲಿ ಚಿರಸ್ಮರಣೀಯವಾಗಿ ಉಳಿದಿದೆ .ಅಂದು ಜನವರಿ 11,1966. ನಾನು ನವದೆಹಲಿಯ ಆಕಾಶವಾಣಿ ಭವನದಲ್ಲಿದ್ದ ಪ್ರೆಸ್ ಇನ್ ಫರ್ಮೇಷನ್ ಬ್ಯುರೋ – ಪಿಐಬಿ ಕಚೇರಿಯಲ್ಲಿ- ಅಸಿಸ್ಟೆಂಟ್ ಜರ್ನಲಿಸ್ಟ್. ಇದು ಭಾರತ ಸರ್ಕಾರದ ವಾರ್ತಾ ಸೇವೆಯ ಮುಖ್ಯ ಕೇಂದ್ರ. ಹಾಗೂ ಕೇಂದ್ರ ಸರಕಾರದ ಮುಖವಾಣಿ.
ಪಿಐಬಿ ಒಂದು ಅಂಗವಾದ ಪ್ರೆಸ್ ಫೆಸಿಲಿಟೀಸ್ ನಲ್ಲಿ ನಾನು ಸೇವಾ ನಿಯೋಜಿತನಾಗಿದ್ದೆ. ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಪತ್ರಿಕೆಗಳು ಮತ್ತು ಪಿಟಿಐ, ಯುಎನ್ ಐ ಮತ್ತಿತರ ನ್ಯೂಸ್ ಏಜೆನ್ಸಿಗಳಿಗೆ ವಾರ್ತೆ- ಮಾಹಿತಿ ಒದಗಿಸುವುದು ಪಿಐಬಿಯ ಮುಖ್ಯ ಕೆಲಸ . ಆಗ ಟೆಲಿವಿಷನ್ ಇನ್ನೂ ಭಾರತಕ್ಕೆ ಕಾಲಿಟ್ಟಿರಲಿಲ್ಲ. ಫಿಲ್ಮ್ ಡಿವಿಜನ್ ವಾರಾಂತ್ಯಕ್ಕೆ ಬಿಡುಗಡೆ ಮಾಡುತ್ತಿದ್ದ ಇಂಡಿಯನ್ ನ್ಯೂಸ್ ರೀಲ್ ಗಳು ಸಿನೆಮಾ ಮಂದಿರಗಳ ಮೂಲಕ ‘ಲೈವ್’ ದೃಶ್ಯ ತೋರಿಸುತ್ತಿತ್ತು. ಆಕಾಶವಾಣಿಯೊಂದೇ ದೇಶದ ಪ್ರಮುಖ ಸುದ್ದಿ ಬಿಂದು.
ಈ ಹಿನ್ನೆಲೆಯಲ್ಲಿ ಜನವರಿ 11ರಂದು ರಾತ್ರಿ ಹತ್ತು ಗಂಟೆವರೆಗೆ ಕೆಲಸ ಮುಗಿಸಿ ಕಾರಿನಲ್ಲಿ ನನ್ನ ರೂಮಿಗೆ ಡ್ರಾಪ್ ತೆಗೆದುಕೊಳ್ಳಲು ಸಿದ್ಧನಾಗುತ್ತಿದ್ದೆ. ವಾಹನ ಬರುವುದು ತಡವಾಗಿತ್ತು. ಸುಂದರ್ ರಾಜನ್ ಅವರು ನಮ್ಮ ಹಿರಿಯ ಸಹೋದ್ಯೋಗಿ. ಇನ್ನೇನು ಬೀಗ ಹಾಕಿ ಹೊರಡಲು ಸನ್ನದ್ಧರಾದಾಗ ವಾರ್ತಾಧಿಕಾರಿಯ ಮೇಜಿನ ಮೇಲಿದ್ದ ಹಾಟ್ ಲೈನ್ ಸದ್ದು ಮಾಡಿತು. ಜೊತೆಗೆ ಸೈರನ್ ಕೂಗಿನೊಂದಿಗೆ ವಿದೇಶಾಂಗ ವ್ಯವಹಾರದ ಪಬ್ಲಿಸಿಟಿ ವಿಭಾಗದ ಅಧಿಕಾರಿಗಳ ತಂಡ ನಾನಿದ್ದಲ್ಲಿಗೆ ಧಾವಿಸಿ ಬಂದಿತು. ಏನು ಅನಾಹುತದ ಮುನ್ಸೂಚನೆ ಸ್ಪಷ್ಟವಾಯಿತು. ರಷ್ಯಾದಲ್ಲಿ ಅಧಿಕೃತ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿತು.
ಸುದ್ದಿ ಆಘಾತ ನಿಜ. ಅಂತೆಯೇ ನಮ್ಮ ಕರ್ತವ್ಯ ಪ್ರಜ್ಞೆ ಜಾಗೃತವಾಯಿತು ಅಂಥ ದಿನಗಳಲ್ಲಿ ಟೆಲೆಕ್ಸ್ ಯಂತ್ರವೊಂದರ ಬಿಟ್ಟರೆ ಮತ್ತಾವುದೇ ತಾಂತ್ರಿಕ ಯಾಂತ್ರಿಕ ಸಾಧನ ಇರಲಿಲ್ಲ. ಇಡೀ ದೇಶಕ್ಕೆ ಅಧಿಕೃತ ಮಾಹಿತಿ ನೀಡುವ ಜವಾಬ್ದಾರಿ ನಮಗೆ ಅರಿವಿಲ್ಲದಂತೆಯೇ ನಮಗೆ ಬಂದಿತ್ತು. ದಿಲ್ಲಿಯ ವರದಿಗಾರರೆಲ್ಲ ಪಿಐಬಿಗೆ ಮುತ್ತಿಗೆ ಹಾಕಿದರು. ಕ್ಷಣ ಕ್ಷಣದ ಮಾಹಿತಿಯನ್ನು ಲೌಡ್ ಸ್ಪೀಕರ್ ಮೂಲಕ ತಿಳಿಸುವ ವ್ಯವಸ್ಥೆಯಾಯಿತು.
ಇನ್ಫರ್ಮೇಷನ್ ಆಫೀಸರ್ ಡೆಸ್ಕ್ ನಲ್ಲಿ ಕೂತವನು ಕುರ್ಚಿ ಬಿಟ್ಟು ಎದ್ದುದ್ದು ಬೆಳಿಗ್ಗೆ ಎಂಟು ಗಂಟೆಗೆ.ಪುನಃ ಕುಳಿತು ಮಾಹಿತಿ ವಿತರಣೆಗೆ ಧಾವಿಸಿದ್ದು ಕೆಲವೇ ನಿಮಿಷಗಳ ನಂತರ. ದಿ. ಲಾಲಬಹುದ್ದೂರ್ ಶಾಸ್ತ್ರಿ ಅವರ ಪಾರ್ಥಿವ ಶರೀರ ನವದೆಹಲಿಗೆ ಬಂದು ಸಾರ್ವಜನಿಕ ಗೌರವ ಅರ್ಪಣೆ, ಅಂತಿಮ ಯಾತ್ರೆ ಇದೆಲ್ಲವೂ ಮುಗಿಯುವವರೆಗೆ ಸತತವಾಗಿ 40 ಗಂಟೆ ಕೆಲಸ ಮಾಡಿದ್ದೆವು. ಅದಾವ ದೈತ್ಯ ಶಕ್ತಿ ಪಿಐಬಿಯಲ್ಲಿದ್ದ ನಮಗೆ ಬಂದಿತ್ತೋ ತಿಳಿಯದು.
ಈ ಸಂದರ್ಭದಲ್ಲಿ ನಮ್ಮೊಂದಿಗೆ ಇದ್ದು ಸೇವೆ ಸಲ್ಲಿಸಿದ ಮಹನೀಯ ಅಧಿಕಾರಿಯೆಂದರೆ ಟಿ. ಕಾಶಿನಾಥ.ಭಾರತ ಸರ್ಕಾರ ಅಧಿಕೃತ ಫೋಟೋ ಡಿವಿಜನ್ ನ ಮುಖ್ಯಸ್ಥ ಕಾಶಿನಾಥರು ಕನ್ನಡಿಗರು. ರಾಷ್ಟ್ರಮಟ್ಟದ ಖ್ಯಾತ ಫೋಟೊಗ್ರಾಫರ್ . ಅಂದಿನ ದಿನಗಳಲ್ಲಿ ರಾಷ್ಟ್ರೀಯ ನ್ಯೂಸ್ ಏಜೆನ್ಸಿಗಳಿಗೆ, ದೇಶ ವಿದೇಶದ ಪತ್ರಿಕೆಗಳಿಗೆ ಫೋಟೋ ಫೋಟೊ ರವಾನಿಸಿದ ಮಹನೀಯರು ಇವರು. ಜೊತೆಜೊತೆಗೆ ಮಾಹಿತಿ ಒದಗಿಸುವ ಕೆಲಸ ನನ್ನದಾಗಿತ್ತು. ಇದು ನಾನು ಪುಣ್ಯ ಜೀವಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ.
ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು. ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.
ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸಂಸ್ಥೆಯ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್ ಪೈ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜೂಭಾಯ್ ವಾಲ ಅವರು ಪ್ರದಾನ ಮಾಡಿದರು.
ರಾಜಭವನದಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ವಜೂಭಾಯ್ ವಾಲ ಅವರು, ಪೈ ಅವರಿಗೆ ಈ ಪದವಿಯನ್ನು ಪ್ರದಾನ ಮಾಡಿದರಲ್ಲದೆ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಪೈ ಅವರ ಸೇವೆ ಅನುಕರಣೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮೋಹನ್‌ದಾಸ್ ಪೈ ಅವರು, ಇನ್ಫೋಸಿಸ್‌ನಂಥ ಪ್ರತಿಷ್ಠಿತ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಆ ಕಂಪನಿಗೆ ಆರ್ಥಿಕ ಸದೃಢತೆಯನ್ನು ತಂದುಕೊಟ್ಟವರು. ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಲ್ಲುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದರು.
ಸಂಶೋಧನೆಗೆ ಹೆಚ್ಚು ಒತ್ತು ಬೇಕೆಂದ ಪೈ:
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಮೋಹನ್‌ದಾಸ್ ಪೈ; ಶೈಕ್ಷಣಿಕವಾಗಿ ರಾಜ್ಯವು ಉನ್ನತ ಮಟ್ಟದಲ್ಲೇ ಇದ್ದರೂ ಸಂಶೋಧನೆಗೆ ಇನ್ನಷ್ಟು ಒತ್ತು ನೀಡಲೇಬೇಕು. ಕೊನೆಪಕ್ಷ 100 ಕೋಟಿ ರೂ.ಗಳಷ್ಟು ಮೊತ್ತವನ್ನಾದರೂ ಸಂಶೋಧನಾ ಕ್ಷೇತ್ರಕ್ಕೇ ಮೀಸಲಿಡಬೇಕು. ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಆರ್ಥಿಕ ಸಹಕಾರವನ್ನು ಒದಗಿಸಬೇಕು. ಆಗ ಮಾತ್ರ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ಬರುತ್ತದೆ ಹಾಗೂ ದೇಶದ ಅಭಿವೃದ್ಧಿಗೆ ವೇಗ ಬರುತ್ತದೆ ಎಂದರು.
ಶಾಲೆ-ಕಾಲೇಜುಗಳಲ್ಲಿ ಕಲಿಯುವ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಉದಾರವಾಗಿ ಒದಗಿಸಬೇಕು. ಮೂಲಸೌಕರ್ಯಗಳನ್ನು ಪರಿಣಾಮಕಾರಿ ಒದಗಿಸಬೇಕು ಎಂದು ಪೈ ಮನವಿ ಮಾಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರ ಗೌಡ, ಕುಲಸಚಿವ ಪ್ರೊ.ಬಸವರಾಜ್ ಪದ್ಮಶಾಲಿ, ವಿಶೇಷ ಕರ್ತವ್ಯಾಧಿಕಾರಿ ಡಾ. ಎಂ. ಜಯಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕ್ರಿಕೆಟಿಗ ವಿರಾಟ್ ಕೋಹ್ಲಿ ಮತ್ತು ಅನುಶ್ಕಾ ಶರ್ಮಾ ದಂಪತಿಗಳಿಗೆ ಹೆಣ್ಣು ಮಗುವಾಗಿದೆ. ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ತಮ್ಮ ಕುಟುಂಬಕ್ಕೆ ಹೊಸ ಸದಸ್ಯೆಯ ಸೇರ್ಪಡೆಯಾಗಿದೆ ಎಂದು ವಿರಾಟ್ ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳೆಲ್ಲರ ಹಾರೈಕೆ, ಪ್ರೀತಿ, ವಿಶ್ವಾಸಗಳಿಗೆ ಧನ್ಯವಾದ ಅರ್ಪಿಸಿರುವ ವಿರಾಟ್ , ಅನುಷ್ಕಾ ಮತ್ತು ಮಗು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.
ನಮ್ಮ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ವಿರಾಟ್, ಈ ಸಂದರ್ಭದಲ್ಲಿ ತಮ್ಮ ಸಂತಸದ ಖಾಸಗಿ ಕ್ಷಣಗಳಿಗೆ ಗೌರವ ಕೊಟ್ಟು ಅಭಿಮಾನಿಗಳು ಸಹಕರಿಸುತ್ತಾರೆಂಬ ಆಶಯ ವ್ಯಕ್ತಪಡಿಸಿದ್ದಾರೆ.
ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್ ಮತ್ತು ಡಿಪ್ಲೊಮೋ ತರಗತಿಗಳ ಎಲ್ಲ ವರ್ಷಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಇದೇ 15ರಿಂದ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
ಈ ಸಂಬಂಧ ಬೆಂಗಳೂರಿನಲ್ಲಿ ಸೋಮವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಸಿಎಂ ಅವರು, ಅಂತಿಮ ವರ್ಷದ ಆಫ್‌ಲೈನ್ ತರಗತಿಗಳು ಈಗಾಗಲೇ ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿವೆ. ಉಳಿದಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಕೂಡ ತಮಗೂ ನೇರ ತರಗತಿಗಳನ್ನು ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದರು. ಅದರಂತೆ, ಈ ತಿಂಗಳಿನಿಂದಲೇ ತರಗತಿಗಳನ್ನು ಆರಂಭ ಮಾಡುತ್ತಿದ್ದೇವೆ ಎಂದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಥಮ, ದ್ವಿತೀಯ ಹಾಗೂ ಮೂರನೇ ವರ್ಷದ ಆಫ್‌ಲೈನ್ ತರಗತಿಗಳು ಕೂಡ ಇದೇ ದಿನ ಶುರುವಾಗುತ್ತಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಇದರ ಜತೆಗೆ, ತರಗತಿಗಳು ಆರಂಭವಾಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ತೆರೆಯಲಾಗುತ್ತಿದೆ. ಕಾಲೇಜುಗಳ ಬಸ್ ವ್ಯವಸ್ಥೆಯೂ ಪುನಾರಂಭವಾಗುತ್ತಿದೆ ಎಂದ ಅವರು, ಕೋವಿಡ್ ಮಾರ್ಗಸೂಚಿಯಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕಾಲೇಜುಗಳಲ್ಲಿ ಕೋವಿಡ್ ತಪಾಸಣೆ, ಸ್ಯಾನಿಟೈಸ್ ವ್ಯವಸ್ಥೆ, ದೈಹಿಕ ಅಂತರ ಪಾಲನೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೂ ಇರುತ್ತವೆ ಎಂದರು.
ಬಸ್ ಪಾಸ್ ಬಗ್ಗೆಯೂ ಕ್ರಮ:
ಈಗಾಗಲೇ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಬಸ್ ಪಾಸ್‌ಗಳನ್ನು ತ್ವರಿತವಾಗಿ ವಿತರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಯು ಒಪ್ಪಿದ್ದು, ಆಯಾ ಕಾಲೇಜುಗಳು ತಮ್ಮ ವ್ಯಾಪ್ತಿಯಲ್ಲಿರುವ ಸಾರಿಗೆ ವಿಭಾಗೀಯ ಕಚೇರಿಗಳ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಆದಷ್ಟು ಬೇಗ ಬಸ್‌ಪಾಸ್‌ಗಳ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಎನ್ ಸಿ ಸಿ ಮತ್ತು ಎನ್ ಎಸ್ ಎಸ್ ತರಬೇತಿಗೂ ಅವಕಾಶ ನೀಡಲಾಗಿದೆ. ಎನ್ ಸಿ ಸಿ ಕೂಡ ಪರೀಕ್ಷೆ ಗಳನ್ನು ಆಯೋಜಿಸಬೇಕಾಗಿದ್ದು ಇದಕ್ಕಾಗಿ ಅಲ್ಪಾವಧಿಯ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಬಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಮೂರು ದಿನಗಳ ಹಾಗೂ ಸಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಐದು ದಿನಗಳ ಶಿಬಿರ ನಡೆಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಹೇಳಿದರು.
ಪ್ರತ್ಯೇಕ ಎಸ್‌ಒಪಿ:
ಪೂರ್ಣ ಪ್ರಮಾಣದಲ್ಲಿ ಹಾಸ್ಟೆಲ್‌ಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಸಿದ್ಧಪಡಿಸುವಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳನ್ನು ಕೋರಲಾಗಿದೆ. ಕಾಲೇಜುಗಳಲ್ಲಿ ಗ್ರಂಥಾಲಯ, ಕ್ಯಾಂಟೀನ್, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾಕೂಟ ಆಯೋಜನೆಗೂ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.
ಪರೀಕ್ಷೆ ವೇಳಾಪಟ್ಟಿ ಶೀಘ್ರ:
ಅಂತಿಮವಾಗಿ, ಏಕಕಾಲಕ್ಕೆ ಎಲ್ಲೆಡೆ ಆಫ್‌ಲೈನ್‌ನಲ್ಲಿಯೇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ ಸರಕಾರಿ-ಖಾಸಗಿ ವಲಯದ ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಆದಷ್ಟು ಬೇಗ ಪರೀಕ್ಷೆ ದಿನದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು ಉಪ ಮುಖ್ಯಮಂತ್ರಿ.
ಪದವಿ ಮತ್ತು ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವ ಕುರಿತ ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ಹಿಂದುಳಿದ ವರ್ಗಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ ಸುರಪುರ್, ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ ವಸಂತ ಕುಮಾರ್ ಮುಂತಾದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು
ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಮರುಗುವ ಪಾಲ್ಗೆ ಅಳೆಯ ಪನಿಯಂ ಬೆರೆಸಿದವೊಲ್– ‘ಕವಿರಾಜಮಾರ್ಗ’ದಲ್ಲಿ ಉಲ್ಲೇಖವಾಗಿರುವ ಮಾತಿದು. “ಮರುಗುವ ಪಾಲ್ಗೆ ಅಳೆಯ ಪನಿಯಂ ಬೆರೆಸಿದವೊಲ್” ಕುದಿಯುವ ಹಾಲಿಗೆ ಅಳೆಯ ಅಂದರೆ ಮಜ್ಜಿಗೆಯ ಹನಿಗಳನ್ನು ಬೆರಸಿದಂತೆ ಎಂದು . ಇರುವ ಸುಂದರ,ವಾತಾವರಣ, ಸಂಸಾರ ಹಾಳು ಮಾಡುವ ಜನರನ್ನು ಕುರಿತು ಈ ಮಾತನ್ನು ಹೇಳಲಾಗಿದೆ.
ನಮ್ಮ ಸಮಾಜದಲ್ಲಿ ಇಂಥ ಕುಹಕಿಗಳು ಅದೆಷ್ಟೋ ಜನರು ಸಿಗುತ್ತಾರೆ. “ಹಾಲಿನಂಥ ಸಂಸಾರಕ್ಕೆ ಹುಳಿ ಹಿಂಡಿದರು” ಎಂಬ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಜೀವನ ಎಂಬ ಬಂಡಿ ಅಂದರೆ ಈ ಬದುಕು ನಂಬಿಕೆ ಮತ್ತು ವಿಶ್ವಾಸ ಎಂಬ ಹಳಿಗಳ ಮೇಲೆ ನಡೆಯುವುದು. ಇಂಥ ಬಂಡಿಗಳ ಪ್ರಯಾಣಿಕರ ಮನಸ್ಸುಗಳನ್ನು ಯಾರೋ ಹೇಳುವ ಎರಡು ಚಾಡಿ ಮಾತುಗಳು, ವ್ಯಂಗ್ಯದ ಮಾತುಗಳು ಒಡೆದು ಛಿದ್ರ ಮಾಡುತ್ತವೆ ಎಂದರೆ ಏನರ್ಥ ಅಲ್ವೆ! ಇದು ವಿಕೃತ ಸಂತೋಷಕ್ಕೊಂದು ಉದಾಹರಣೆ. ಜೊತೆಗೆ ನಮ್ಮ ಸಮಾಜದ ಅಘೋಷಿತ ಮನಸ್ಥಿತಿಯೂ ಹೌದು.
“ಉಪಕಾರ ಮಾಡುವ ಬದಲು ಅಪಕಾರ ಮಾಡುವ” , “ಹಣ್ಣು ಕೊಟ್ಟರೆ ಕಣ್ಣು ಕೀಳುವ ಮನಸ್ಥಿತಿ” ಇರುವವರನ್ನು ಕುರಿತು ಈ ಮಾತನ್ನು ಹೇಳಬಹುದು. ತಮಗೆ ಇಲ್ಲದ ಸಂತೋಷ . ನೆಮ್ಮದಿ, ಬದುಕು, ಸವಲತ್ತುಗಳು ಇತರರಿಗೆ ಇವೆ ಎಂದು ತಿಳಿದಾಗ ಅದನ್ನು ಕೆಡಿಸಿ ಹೊಲಸೆಬ್ಬಿಸುವ ಜನರು ಅನೇಕರಿರುತ್ತಾರೆ.
ಇತರರಿಗೆ “ನಮ್ಮಿಂದ ಸಹಾಯ ಆಗದೆ ಇದ್ದರೂ ಸಾಯೋಹಾಗೆ ಮಾಡಬಾರದು!” ಎನ್ನುವಂತೆ ತಮ್ಮ ಜೀವನದಲ್ಲಿ ಸುಧಾರಣೆಗಳನ್ನು ತಂದುಕೊಳ್ಳುವತ್ತ ಗಮನಬಹರಿಸಬೇಕೇ ವಿನಃ ಇತರರ ಸ್ವಚ್ಛಂದ ಬಾಳನ್ನು ನಷ್ಟಮಾಡುವುದರಲ್ಲಿ ಅರ್ಥವಿಲ್ಲ. ಚಿತ್ತ ಸಮಾಧಾನದಿಂದ ಇರಬೇಕು . “ತಾವೂ ಬದುಕಿ ಇತರರನ್ನು ಬದುಕಗೊಡಬೇಕು” ಎಂಬ ಯೂನಿವರ್ಸಲ್ ಸತ್ಯಕ್ಕೆ ಪೂರಕವಾಗಿ ಇರಬೇಕು.
“ಮರುಗುವ ಪಾಲ್ಗೆ ಅಳೆಯ ಪನಿಯಂ ಬೆರೆಸಿದವೊಲ್” ಎಂಬ ಮಾತು ಬದುಕಿನಲ್ಲಿ ಆಗಬಹುದಾದ ದುರಂತದ ಎಚ್ಚರಿಕೆಯನ್ನು ಕೊಡುತ್ತದೆ. ಅನವಶ್ಯಕವಾದುದ್ದನ್ನು ಎಳೆದು ತರುವುದಕ್ಕಿಂತ ಅವಶ್ಯವಾದುದ್ದನ್ನು ಉಳಿಸಿಕೊಂಡು ಹೋಗುವುದು ಮುಖ್ಯ ಅಲ್ಲವೆ! ಚಂದದ ಹೂವನ್ನು ಹಾಗೆ ನೋಡಿ ಸಂತೋಷಿಸು ಸೌಧರ್ಮಿಕೆ ಅತ್ಯಂತ ಮುಖ್ಯ ಅನ್ನಿಸುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಈಗಿನ ಸಂಕೀರ್ಣಮಯ ಜಗತ್ತಿನಲ್ಲಿ ಎಲ್ಲವೂ ತೇಲಾಡುವ ಪರಿಸ್ಥಿತಿ ಇರುವಾಗ ಪರಂಪರಾಯುತವಾಗಿ ಮುಂದುವರೆಯುತ್ತಿರುವ ಕೆಲವು ಭಾವನಾತ್ಮಕ ಚಟುವಟಿಕೆಗಳಿಂದ ದೂರವಾಗುವುದೇ ಸವಾಲಾದಂತಿದೆ.
ಬ್ಯಾಂಕ್ ಬಡ್ಡಿದರ, ಪೆಟ್ರೋಲ್, ಬಸ್ ಪ್ರಯಾಣದ ದರ, ಷೇರುಪೇಟೆಗಳ ಚಲನೆ ಎಲ್ಲವೂ ತೇಲಾಡುವ ಪರಿಸ್ಥಿತಿಯಲ್ಲಿರುವಾಗ ನಮ್ಮ ನಿರ್ಧಾರಗಳನ್ನು ಸಹ ಹೆಚ್ಚು ತೇಲಾಡುವಂತೆ ಮಾಡುತ್ತಿದೆ. ಈ ಸಮಯದಲ್ಲಿ ದೀರ್ಘಕಾಲೀನ ಯೋಜನೆ ಎಂದು ಹೂಡಿಕೆ ಮಾಡಿದರೂ, ಅನಿರೀಕ್ಷಿತವಾಗಿ ತೇಲಿಬಂದ ಅವಕಾಶಗಳನ್ನು ಬಳಸಿಕೊಳ್ಳುವುದು ಹೂಡಿಕೆಯ ಯಶಸ್ಸಿನ ಗುಟ್ಟು.ಕರಗುತ್ತಿರುವ ಬ್ಯಾಂಕ್ ಬಡ್ಡಿದರ ಉಂಟುಮಾಡಿದೆ ಉಳಿತಾಯ ಯೋಜನೆಗಳ ಬರ. ಮ್ಯೂಚುಯಲ್ ಫಂಡ್ ಒದಗಿಸಿವೆ ವೈವಿಧ್ಯಮಯ ಯೋಜನೆಗಳು. ಆದರೆ ನಮ್ಮ ಅನುಕೂಲಕ್ಕೆ ತಕ್ಕಂತಹ ಯೋಜನೆ ಆಯ್ಕೆ ನಿರ್ವಹಣೆ ನಮ್ಮದಾಗಿದೆ. ಆಯ್ಕೆ, ನಿರ್ವಹಣೆ ಸರಿಯಾಗಿದ್ದರೆ ಉತ್ತಮ ಫಲಾನುಭವಿಗಳಾಗಬಹುದು.
ಒಂದುಕಾಲದಲ್ಲಿಬೆಂಗಳೂರಿನಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲ್ಪ ಸಮಯದಲ್ಲೇ ತಲುಪಬಹುದಿತ್ತು. ಹೊರ ಊರುಗಳಿಗೆ ಹೋಗಲು ದೀರ್ಘ ಸಮಯಬೇಕಾಗುತ್ತಿತ್ತು.ಆದರೆ ಈಗ ಪರಿಸ್ಥಿತಿ ತದ್ವಿರುದ್ಧ. ಇಂದು ಮೂರೂವರೆ ಗಂಟೆಯೊಳಗೆ ದಾವಣಗೆರೆ ತಲುಪಬಹುದು. ಆದರೆ ಪೀಕ್ ಅವರ್ ನಲ್ಲಿ ಜಯನಗರದಿಂದ ದೇವನಹಳ್ಳಿ ಏರ್ ಪೋರ್ಟ್ ತಲುಪುವುದೇ ಒಮ್ಮೊಮ್ಮೆ ದೀರ್ಘಾವಧಿ ಆಗಿಬಿಡುತ್ತದೆ.
ಆಗಿನ ದಿನಗಳಲ್ಲಿ ಸುದ್ಧಿ ಸಮಾಚಾರಗಳು ಈಗಿನಷ್ಟು ತ್ವರಿತವಾಗಿ ಜನರನ್ನು ತಲುಪುತ್ತಿರಲಿಲ್ಲ. ಆಗ ಬೆಳವಣಿಗೆಗಳು, ಘಟನೆಗಳು ಮುಂತಾದವುಗಳನ್ನು ತಲುಪಿಸಲು ಮುದ್ರಣಮಾಧ್ಯಮವನ್ನೇ ಅವಲಂಬಿಸಬೇಕಿತ್ತು. ಈಗಿನಂತೆ ದೂರವಾಣಿ, ಸನಿಹವಾಣಿ, ಮಿಂಚಂಚೆ, ಸಾಮಾಜಿಕಜಾಲ ತಾಣಗಳು ಇರಲಿಲ್ಲ. ಹಾಗಾಗಿ ಎಲ್ಲವೂ ಮಂದಗತಿಯಲ್ಲಿರುತ್ತಿದ್ದ ಕಾರಣ ದೀರ್ಘಾವಧಿ ಎಂಬುದಕ್ಕೆ ಪ್ರಾಶಸ್ತ್ಯವಿತ್ತು.
ಈಗ ವೇಗವಾದ ಬದಲಾವಣೆಗಳ ಕಾರಣ ಜೀವನ ಶೈಲಿಗಳೂ ಸಹ ಹೆಚ್ಚಿನ ಬದಲಾವಣೆಗಳನ್ನು ಕಂಡು ವಾಣಿಜ್ಯೀಕರಣದತ್ತ ತಿರುಗಿವೆ. ವಿಶೇಷವಾಗಿ ಭಾರತವು ಜಾಗತೀಕರಣಕ್ಕೆ ತೆರೆದುಕೊಂಡಾಗ ಈ ವ್ಯವಹಾರಿಕ ಚಿಂತನೆಗಳು ಹೆಚ್ಚು ತಾಂಡವವಾಡುತ್ತಿವೆ. ಇದರ ಪ್ರಭಾವವೇ ನಗರದಲ್ಲೇ ಓಡಾಡಲು ಹೆಚ್ಚು ಸಮಯ ಬೇಕಾಗುತ್ತದೆ ಆದರೆ ಹೊರ ಊರಿಗೆ ಹೋಗಲು ಮೊದಲಿಗಿಂತ ಕಡಿಮ ಸಮಯ ಸಾಕಾಗುತ್ತದೆ.
ಮ್ಯೂಚುಯಲ್ ಫಂಡ್ ಗಳೆಂದರೇನು?
ಹಲವಾರು ಹೂಡಿಕೆದಾರರು ಒಂದೇ ಗುರಿಯೊಂದಿಗೆ ಹಣವನ್ನು ಸೇರಿಸಿ, ಕಾರ್ಪೊರೇಟ್ ಶೈಲಿಯಲ್ಲಿ, ಹೂಡಿಕೆ ಅನುಪಾತಕ್ಕೆ ತಕ್ಕಂತೆ ರೂ.10 ರ ಮುಖಬೆಲೆಯಲ್ಲಿ ಘಟಕಗಳನ್ನು (UNITS) ಪಡೆಯುವರು. ಈ ರೀತಿ ಸಂಗ್ರಹಿಸಿದ ಹಣವನ್ನು ಷೇರುಗಳಲ್ಲಿ, ಬಾಂಡ್ ಗಳಲ್ಲಿ, ಮತ್ತಿತರ ಸೆಕ್ಯುರಿಟೀಸ್ ಗಳಲ್ಲಿ ತೊಡಗಿಸಿ ಅದನ್ನು ನಿರ್ವಹಿಸಲು ನಿಧಿ ನಿರ್ವಾಹಕರನ್ನು ನೇಮಿಸಲಾಗುವುದು. ಈ ಹೂಡಿಕೆಯಿಂದ ಬಂದ ಲಾಭವನ್ನು ಘಟಕಗಳನ್ನು ಹೊಂದಿರುವ ಹೂಡಿಕೆದಾರರಿಗೆ ವೆಚ್ಚಗಳ ನಂತರದ ಹಣವನ್ನು ಲಾಭಾಂಶವನ್ನಾಗಿ ವಿತರಿಸಲಾಗುವುದು. ತಮ್ಮ ಹೂಡಿಕೆಯನ್ನು ನಿರ್ವಹಿಸಲು ಸಮಯವಿಲ್ಲದಿದ್ದರೆ, ಅರಿವಿಲ್ಲದಿದ್ದರೆ,ಅಂತಹವರ ಪರವಾಗಿ ಹೂಡಿಕೆ ನಿರ್ವಹಿಸಲು ಹೊರಗುತ್ತಿಗೆಯ ರೀತಿ ನಿಯಂತ್ರಿತ, ವೃತ್ತಿಪರ ಅನಭವಸ್ಥರ ಸಂಸ್ಥೆಗೆ ನೀಡಬಹುದು. ಆ ನಿಯಂತ್ರಿತ ಸಂಸ್ಥೆಯೇ ಮ್ಯೂಚುಯಲ್ ಫಂಡ್ ಹೌಸ್. ಆದರೆ ಆ ನಿಯಂತ್ರಿತ ಸಂಸ್ಥೆ ನಿರ್ವಹಿಸುವ ನಿಮ್ಮ ಹೂಡಿಕೆಗೆ ಗ್ಯಾರಂಟಿ ಇರುವುದಿಲ್ಲ. ಆದರೆ ಪೇಟೆಯ ಏರಿಳಿತಗಳ ಲಾಭ ಪಡೆಯಲು ಹೆಚ್ಚಿನ ಯೋಜನೆಗಳು ಸಮಯಾಧಾರಿತವಾಗಿರದೆ, ಬೇಕಾದಾಗ ನಗದೀಕರಣಗೊಳಿಸಿ ಕೊಳ್ಳಬಹುದಾಗಿದೆ.
ಮ್ಯೂಚುಯಲ್ ಫಂಡ್ ಚಟುವಟಿಕೆಯ ಚಕ್ರ:
ಈ ರೀತಿ ಗಳಿಸಿದ ಲಾಭವನ್ನು ಬೇಕಾದರೆ ಪುನರ್ ಹೂಡಿಕೆ ಮಾಡಲೂ ಅವಕಾಶವಿರುತ್ತದೆ. ಒಂದು ಘಟಕದ ಆಂತರಿಕ ಸಾಧನೆಯನ್ನುಮಾಪನ ಮಾಡಲು ನೆಟ್ ಅಸ್ಸೆಟ್ ವ್ಯಾಲ್ಯು (NAV) ಎನ್ನುವರು. ರೂ.10ರ ಯುನಿಟ್ ಗೆ ಆಂತರಿಕ ಸಾಧನೆಯಾಧರಿಸಿ ಮೌಲ್ಯ ಕಟ್ಟುವರು. ಆ ಯೋಜನೆಯಡಿ ಹೂಡಿಕೆ ಮಾಡಿದ ಸ್ವತ್ತುಗಳ ಮಾರ್ಕೆಟ್ ಬೆಲೆಯನ್ನು ಘಟಕಗಳಿಂದ ಭಾಗಿಸಿದಾಗ ಬರುವ ಒಂದು ಘಟಕದ ಬೆಲೆಯೇ ಎನ್ ಎ ವಿ ಯಾಗಿರುತ್ತದೆ. ಒಂದು ಘಟಕದ ಎನ್ ಎ ವಿ ಯು ರೂ.10ಕ್ಕಿಂತ ಹೆಚ್ಚಾದರೆ ಅದು ಲಾಭದಲ್ಲಿರುವ ಹೂಡಿಕೆ ಎಂದು, ಒಂದು ವೇಳೆ ಹೂಡಿಕೆಯು ಹಾನಿಗೊಳಗಾದರೆ ಅದರ ಎನ್ ಎ ವಿ ಯೂ ಸಹ ಮುಖಬೆಲೆಯೊಳಗೆ ಕುಸಿಯುತ್ತದೆ.
ಮ್ಯುಚುಯಲ್ ಫಂಡ್ ಗಳನ್ನು ನಿರಂತರವಾಗಿ ಖರೀದಿಸಲು ಅವಕಾಶವಿದ್ದರೆ ಅದು ಓಪನ್ ಎಂಡೆಡ್ ಫಂಡ್ ಎಂದು ಮತ್ತು ನಿಗದಿತ ಅವಧಿಯವರೆಗೂ ಮಾತ್ರ ಮಾರಾಟ ಮಾಡುವುದಾದರೆ ಅದು ಕ್ಲೋಸ್ಡ್ ಎಂಡ್ ಫಂಡ್ ಎನ್ನುವರು. ಫಂಡ್ ನ ಘಟಕಗಳನ್ನು ಆಯಾ ಫಂಡ್ ಗಳು ಹಿಂದಿರುಗಿಸುವಾಗ (redemption) ಅಂದಿನ ಎನ್ ಎ ವಿ ಆಧರಿಸಿ ಹಣ ನೀಡುತ್ತವೆ. ಕೆಲವು ಯೋಜನೆಗಳು ಸ್ಟಾಕ್ ಎಕ್ಷ್ ಚೇಂಜ್ ಗಳಲ್ಲಿಯೂ ವಹಿವಾಟಿಗೆ ನೋಂದಾಯಿಸಿ ಕೊಂಡಿರುತ್ತವೆ. ಅವುಗಳನ್ನು ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಎನ್ನುವರು.
ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಹೇಗೆ ಲಾಭದಾಯಕ:
*ಈ ಫಂಡ್ ಗಳು ನಿರ್ವಹಿಸುವ ನಿಧಿಯ ಗಾತ್ರ ಅತಿ ಹೆಚ್ಚಾಗಿರುವುದರಿಂದ, ವಹಿವಾಟಿನ ವೆಚ್ಚವು ಕಡಿಮೆಯಾಗಿರುತ್ತದೆ. ಅಲ್ಲದೆ ಆ ನಿಧಿಯನ್ನು ವೈವಿಧ್ಯಮಯ ಯೋಜನಗಳಲ್ಲಿ ತೊಡಗಿಸಲು ಅನುಕೂಲವಾಗುವುದರಿಂದ ಅಪಾಯದ ಪ್ರಮಾಣ ಕಡಿಮೆಯಾಗಿರುತ್ತದೆ.
* ಈ ಫಂಡ್ ಗಳನ್ನು ನಿರ್ವಹಿಸುವವರು ವೃತ್ತಿಪರ ನೈಪುಣ್ಯತೆಯುಳ್ಳವರಾದ್ದರಿಂದ ಉತ್ತಮ ಸಾಧನೆ ತೋರಬಹುದು.
* ಆವಶ್ಯಕತೆ ಇದ್ದಾಗ, ಬೇಕೆನಿಸಿದಾಗ ಮ್ಯುಚುಯಲ್ ಫಂಡ್ ಘಟಕಗಳನ್ನು, ತೆರಿಗೆ ರಿಯಾಯಿತಿ ಯೋಜನೆಗಳು, ಕ್ಲೋಸ್ಡ್ ಎಂಡ್ ಯೋಜನೆಗಳನ್ನು ಹೊರತುಪಡಿಸಿ, ಎನ್ ಎ ವಿ ಆಧಾರಿತ ಬೆಲೆಯಲ್ಲಿ ಹಿಂದಿರುಗಿ ಹಣ ಪಡೆಯಬಹುದು.
* ನಿಯಂತ್ರಿತ ವ್ಯವಸ್ಥೆಯಾದ್ದರಿಂದ ಸುರಕ್ಷಿತ. ಆದರೆ ಹೂಡಿಕೆಗೆ ಗ್ಯಾರಂಟಿ ಎಂಬುದಿಲ್ಲ.
ಮ್ಯೂಚುಯಲ್‌ಫಂಡ್‌ಗಳ ವಿಧಗಳು:
ಫಂಡ್ ಗಳಲ್ಲಿ ಅವುಗಳು ವಿನಿಯೋಗಿಸುವ ಶೈಲಿಯಾಧರಿಸಿ ವೃದ್ಧಿ (ಗ್ರೋಥ್) ಯೋಜನೆ, ಆದಾಯ ತರುವ ಯೋಜನೆ, ಸಮತೋಲನಾ ಯೋಜನೆ, ವಿತ್ತೀಯ ಪೇಟೆಗಳ ಯೋಜನೆ, ತೆರಿಗೆ ರಿಯಾಯಿತಿ ಯೋಜನೆ, ಸೂಚ್ಯಂಕಗಳಾಧರಿತ (Index) ಯೋಜನೆ, ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುವ ನಿಧಿ (ETF), ಅಲ್ಲದೆ ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್, ಸ್ಮಾಲ್ ಕ್ಯಾಪ್, ವಿವಿಧ ವಲಯಾಧರಿತ ಅಂದರೆ ಫಾರ್ಮ , ಐಟಿ, ಬ್ಯಾಂಕಿಂಗ್, ಸಾರ್ವಜನಿಕ ವಲಯ ಕಂಪನಿಗಳ ನಿಧಿ, ಇನ್ಪ್ರಾ, ರಿಯಾಲ್ಟಿ, ಎಫ್ ಎಂ ಸಿ ಜಿ, ಅವಕಾಶಗಳ ನಿಧಿ ಮುಂತಾದ ವಲಯಾಧಾರಿತ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡುವ ವಿಧಗಳಾಗಿ ವಿಂಗಡಿಸಲಾಗಿದೆ. ಆದ್ದರಿಂದ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆಗೆ ಮುನ್ನ ಯಾವ ವಲಯದ ನಿಧಿಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿದು ನಿರ್ಧರಿಸಬೇಕು.
ಎಸ್ ಐ ಪಿ ಹೂಡಿಕೆ:
ಎಸ್ ಐ ಪಿ ಎಂದರೆ ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ನಿಯತಕಾಲಿಕವಾಗಿ ಹೂಡಿಕೆ ಮಾಡಲು ಅವಕಾಶ ಒದಗಿಸುವ ವಿಧವಾಗಿದೆ. ಸಾಮಾನ್ಯವಾಗಿ ಈ ಯೋಜನೆಯಲ್ಲಿ ಮಾಸಿಕ ಕಂತುಗಳಲ್ಲಿ ಹೂಡಿಕೆ ಮಾಡುವುದರಿಂದ ಪೇಟೆಗಳ ಏರಿಳಿತಗಳನ್ನಾಧರಿಸಿದ ಎನ್ ಎ ವಿ ಗಳನ್ನು ಸರಾಸರಿಯಾಗಿಸುವ ಕಾರಣ ಇದು ಸಮತೋಲನಾತ್ಮಕ ವಿಧವೆನಿಸುತ್ತದೆ. ಈ ವಿಧದಲ್ಲಿ ಮಾಡಿದ ಹೂಡಿಕೆಯನ್ನು ಭಾಗಶ: ಅಥವಾ ಪೂರ್ಣವಾಗಿ ಹಿಂಪಡೆಯಲು ಸಾಧ್ಯವಿದೆ. ಮಾಸಿಕ ಕಂತುಗಳನ್ನು ಎಲೆಕ್ಟ್ರಾನಿಕ್ ಅಥವಾ ಪೋಸ್ಟ್ ಡೇಟೆಡ್ ಚೆಕ್ಕುಗಳ ಮೂಲಕವೂ ಪಾವತಿ ಮಾಡಬಹುದು. ಆದರೆ ಒಂದು ಮುಖ್ಯವಾದ ಅಂಶವನ್ನು ಗಮನದಲ್ಲಿರಿಸಬೇಕಾದುದೇನೆಂದರೆ ಇಲ್ಲಿನ ಹೂಡಿಕೆಯಾದಿಯಾಗಿ ಯಾವ ಮ್ಯೂಚುಯಲ್ ಫಂಡ್ ಯೋಜನೆಗಳಲ್ಲೂ, ಕ್ಯಾಪಿಟಲ್ ಪ್ರೊಟೆಕ್ಷನ್ ಫಂಡ್ ಸೇರಿ, ಗ್ಯಾರಂಟಿ ಎಂಬುದಿಲ್ಲ. ಎಲ್ಲವೂ ಪೇಟೆಯ ಏರಿಳಿತಗಳಿಗನುಗುಣವಾಗಿರುತ್ತದೆ. ಹೆಚ್ಚಿನ ಯೋಜೆನಗಳು ಈಕ್ವಿಟಿ ಷೇರುಗಳ ಮೇಲೆ ಹೂಡಿಕೆ ಮಾಡುವುದರಿಂದ ಷೇರುಪೇಟೆಯ ಏರಿಳಿತಗಳಿಗನುಗುಣವಾಗಿ ಎನ್ ಎ ವಿ ಪ್ರದರ್ಶಿತವಾಗುತ್ತದೆ. ಇದುವರೆಗೂ ಡೆಟ್ (DEBT) ಫಂಡ್ ಗಳು ಸುರಕ್ಷಿತವೆಂಬ ಭಾವನೆ ಇತ್ತು. ಆದರೆ ಅವೂ ಸಹ ಇತ್ತೀಚಿನ ದಿನಗಳಲ್ಲಿ ಹೆಚ್ಚು ಒತ್ತಡವನ್ನೆದುರಿಸುತ್ತಿರುತ್ತವೆ.-
ಎಸ್ ಐಪಿಕಾರ್ಯವಿಧಾನ
ಮ್ಯೂಚುಯಲ್ಫಂಡ್ನಿಯಂತ್ರಕರುಮತ್ತುAMFI
ವಿತ್ತೀಯ ಪೇಟೆಗಳ ನಿಯಂತ್ರಕ ಸಂಸ್ಥೆಯಾದʼ ಸೆಬಿʼ ಮ್ಯೂಚುಯಲ್‌ಫಂಡ್‌ಗಳನ್ನೂ ಸಹ ನಿಯಂತ್ರಿಸುತ್ತದೆ. ಸೆಬಿ (ಮ್ಯೂಚುಯಲ್‌ಫಂಡ್) ರೆಗ್ಯುಲೇಷನ್ಸ್ 1996 ಮೂಲಕ ಸೆಬಿಗೆ ನಿಯಂತ್ರಣ ಆಧಿಕಾರ ನೀಡಲಾಗಿದೆ ಮ್ಯೂಚುಯಲ್ ಫಂಡ್‌ಗಳು ಸೆಬಿಯೊಂದಿಗೆ ನೋಂದಾಯಿಸಿಕೊಂಡಮೇಲೆಯೇ ತಮ್ಮ ಚಟುವಟಿಕೆಗಳನ್ನುಆರಂಭಿಸಬೇಕು. ಇದಲ್ಲದೆ ಮ್ಯೂಚುಯಲ್ ಫಂಡ್‌ಗಳು ತಮ್ಮದೇ ಆದ ಸಂಘಟನೆಯನ್ನು ಹೊಂದಿದೆ ಅದು ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ(AMFI). ಮ್ಯೂಚುಯಲ್ ಫಂಡ್ ಇಂಡಸ್ಟ್ರಿಯನ್ನು ಆರೋಗ್ಯಕರವಾದ, ನೈತಿಕತೆಯಾಧಾರಿತ ವೃತ್ತಿಪರತೆಯೊಂದಿಗೆ ಅಭಿವೃಧ್ಧಿಪಡಿಸುವ ಹೊಣೆ ಹೊತ್ತ ಸ್ವನಿಯಂತ್ರಣ ಸಂಸ್ಥೆಇದಾಗಿದೆ. ಸರ್ಕಾರ,ನಿಯಂತ್ರಕರ ಮತ್ತು ಮ್ಯೂಚುಯಲ್ ಫಂಡ್ ಇಂಡಸ್ಟ್ರಿಯ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಮ್ಯೂಚುಯಲ್ ಫಂಡ್ ಸಲಹೆಗಾರರಾಗಲು AMFI ಯಿಂದ ಸರ್ಟಿಫಿಕೇಷನ್ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕಾದುದು ಕಡ್ಡಾಯ.
ಮ್ಯೂಚುಯಲ್ಫಂಡ್ಗಳಲ್ಲಿಯಾರುಹೂಡಿಕೆಮಾಡಬಹುದು:
ಮ್ಯೂಚುಯಲ್ ಫಂಡ್‌ಗಳಲ್ಲಿ18 ವರ್ಷದ ಮೇಲಿನವರು ಯಾರು ಬೇಕಾದರೂ ತೊಡಗಿಸಬಹುದು. ಗೃಹಿಣಿಯರೂ ಸಹ ಹೂಡಿಕೆ ಮಾಡಬಹುದು. ಅನಿವಾಸಿ ಭಾರತೀಯರೂ ಸಹಹೂಡಿಕೆ ಮಾಡಬಹುದಾಗಿದೆ. ಕನಿಷ್ಠರೂ.1000 ದಿಂದ ಹೂಡಿಕೆ ಆರಂಭಿಸಬಹುದು. SIP ಯಲ್ಲಿಹೂಡಿಕೆಯನ್ನುಪ್ರತಿ ತಿಂಗಳು ರೂ.100 ರಿಂದಲೂ ಆರಂಭಿಸಲು ಅವಕಾಶವಿದೆ. ಆದರೆ ನಿಗದಿತ ಪ್ರಮಾಣದಲ್ಲಿ ಲಾಭ ಸಿಕ್ಕೇಸಿಗುತ್ತದೆ ಎಂಬಭ್ರಮೆಬೇಡ. ಷೇರುಪೇಟೆ, ಬಾಂಡ್ ಪೇಟೆಗಳ ಏರಿಳಿತಕ್ಕನುಗುಣವಾಗಿ ಎನ್‌ಎವಿ ಬದಲಾಗುತ್ತಿರುತ್ತದೆ. ಪೇಟೆಗಳು ಇಳಿಕೆಯಲ್ಲಿದ್ದಾಗ ಒಂದೇ ಬಾರಿ ಹೂಡಿಕೆ ಮಾಡಲು ಸದವಕಾಶ. ಅದೇ ಪೇಟೆಗಳು ಏರಿಕೆಯಲ್ಲಿದ್ದಾಗ ಲಾಭದ ನಗದೀಕರಣ ಮಾಡುವುದು ಸೂಕ್ತ.
ಹೂಡಿಕೆಗಳ ಯಶಸ್ಸಿನ ಸುಲಭ ಸೂತ್ರ:
ಇಂದಿನ ಚಟುವಟಿಕೆಯ ಶೈಲಿಯು ಎಲ್ಲವನ್ನೂ ವ್ಯಾಪಾರದ ದೃಷ್ಠಿಯಿಂದ ಕಾಣುವುದಾಗಿದೆ. ಬ್ಯಾಲನ್ಸ್‌ಶೀಟ್‌ನತ್ತಲೇ ಎಲ್ಲರ ಗಮನ, ಅದರಲ್ಲೂ ಲಾಭ ನಷ್ಟದ ವಿಚಾರವೇ ಹೆಚ್ಚುಆದ್ಯತೆ. ಅದಕ್ಕನುಗುಣವಾಗಿ ನಿಶ್ಚಯಿಸಿದ ಗುರಿ ತಲುಪಲು ಸತತಪ್ರಯತ್ನಗಳು ನಿರಂತರವಾಗಿದ್ದುಈದಿಶೆಯಲ್ಲಿ ಸಾಗಲು ಆಯ್ಕೆ ಮಾಡಿಕೊಳ್ಳುವ ಮಾರ್ಗ ಮಾತ್ರ ನಗಣ್ಯವಾಗಿದೆ.
ಗುರಿ ಸಾಧನೆಗೆ ಅನುಸರಿಸುವ ಮಾರ್ಗಕ್ಕೆ ನಿಂಬಂಧನೆಗಳಿಲ್ಲದ ಕಾರಣ ಸ್ಪರ್ಧಾತ್ಮಕ ಸಂದರ್ಭದಲ್ಲಿ ಎಡುವುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಹೂಡಿಕೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ. ನಮ್ಮ ಹೂಡಿಕೆಯ ಸುರಕ್ಷತೆಯ ಮೇಲೆ ಸದಾ ನಿಗಾ ವಹಿಸಿರುವುದು ಅನಿವಾರ್ಯವಾಗಿದೆ. ಉಲ್ಲಾಸಭರಿತ ಯಶಸ್ಸಿಗೆ ಸರಳ ಸೂತ್ರ:ಶ್ವಾನ ನಿದ್ದೆ, ಬಕ ದ್ಯಾನ, ಗಜ ಸ್ನಾನ ಅಂದರೆ ನಮ್ಮ ಎಲ್ಲಾ ಚಟುವಟಿಕೆಗಳ, ಅದರಲ್ಲೂ ವಿತ್ತೀಯ ಚಟುವಟಿಕೆಗಳ ಮೇಲೆ, ನಾಯಿ ಹೇಗೆ ಮಲಗ್ಗಿದ್ದರೂ ಸದಾ ಎಚ್ಚರಿಕೆಯಲ್ಲಿರುವುದೋ ಹಾಗಿದ್ದರೆ ಒಳಿತು, ನಮ್ಮ ಹೂಡಿಕೆಗಳು ಅನಿರೀಕ್ಷಿತವಾಗಿ ಒದಗಿಸುವ ಅಧಿಕ ಲಾಭದ ಸಂದರ್ಭಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಬಕಪಕ್ಷಿಯ ರೀತಿ ಹಠವಿದ್ದಲ್ಲಿ ಮಾತ್ರ ಚಟುವಟಿಕೆಯು ಗಜ ಸ್ನಾನದ ತೃಪ್ತಿಯನ್ನು ಪಡೆಯಲು ಸಾಧ್ಯ.
ಸಾಮಾನ್ಯವಾಗಿ ಗೃಹಿಣಿಯರು ಸಮತೋಲನಾ ಮನಸ್ಕರಾಗಿರುವುದರಿಂದ, ಎಸ್ ಐ ಪಿ ವಿಧದಲ್ಲಿ ತಮ್ಮ ಉಳಿತಾಯದ ಹಣವನ್ನು ಹೂಡಿಕೆಮಾಡಿ, ಫಂಡ್ ಯೋಜನೆಯೊಳಗಿನ ಆಗು ಹೋಗುಗಳನ್ನು ತುಲನಾತ್ಮಕವಾಗಿ ತೂಗಿ ನಿರ್ಧರಿಸುವುದರಿಂದ, ಇದು ಉತ್ತಮ ಉಳಿತಾಯ ಮಾರ್ಗವೆನ್ನಬಹುದು.
ನೆನಪಿಡಿ: ಮ್ಯೂಚುಯಲ್ ಫಂಡ್ ಗಳಲ್ಲೂ ಸಹ ಗ್ಯಾರಂಟೀ ಎಂಬುದಿಲ್ಲ. ಪೇಟೆಯ ಏರಿಳಿತಗಳಿಗನುಗುಣವಾಗಿ ಯೋಜನೆಗಳ ಎನ್ ಎ ವಿ ಬದಲಾಗುತ್ತಿರುತ್ತದೆ. ಅದರಂತೆ ನಗದೀಕರಿಸಬಹುದಾದ ಯೂನಿಟ್ ಗಳ ಮೊತ್ತವೂ ಸಹ ಏರಿಳಿತ ಕಾಣುತ್ತದೆ.
ಇಂದಿಗೆ ಸರಿಯಾಗಿ ಒಂದು ವಾರಕ್ಕೆ ಅಂದರೆ ಸಂಕ್ರಾಂತಿ ಹಬ್ಬ ಮುಗಿದ ಎರಡೇ ದಿನಕ್ಕೆ ಭಾರತದಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಜನವರಿ 16ರಿಂದ ಭಾರತಾದ್ಯಂತ ಲಸಿಕೆ ಹಾಕುವ ಕೆಲಸ ಶುರು. ಇದು ವಿಶ್ವದ ಅತಿದೊಡ್ಡ ಲಸಿಕೆ ಹಾಕುವ ಕಾರ್ಯಕ್ರಮವಾಗಲಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
On 16th January, India takes a landmark step forward in fighting COVID-19. Starting that day, India’s nation-wide vaccination drive begins. Priority will be given to our brave doctors, healthcare workers, frontline workers including Safai Karamcharis. https://t.co/P5Arw64wVt
ಮೊದಲ ಹಂತದಲ್ಲಿ ಪೌರ ಕಾರ್ಮಿಕರು ಸೇರಿದಂತೆ ಆರೋಗ್ಯ, ಪೊಲೀಸ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವ ಕೊರೋನಾ ಸೇನಾನಿಗಳು ವ್ಯಾಕ್ಸಿನ್ ಪಡೆಯಲಿದ್ದಾರೆ. ಇವರ ಸಂಖ್ಯೆ ಅಂದಾಜು 3ಕೋಟಿ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ಹಾಗೂ ಕೆಲವು ರೋಗದಿಂದ ಬಳತ್ತಿರುವವರಿಗೆ ಆದ್ಯತೆ ನೀಡಲಾಗುವುದು. ಇವರ ಸಂಖ್ಯೆ ಅಂದಾಜು 27 ಕೋಟಿ.
ಕಳೆದವಾರ ಕೋವಿಶಿಲ್ಡ್ ಮತ್ತು ಕೋ ವಾಕ್ಸಿನ್ ಬಳಕೆಗೆ ಭಾರತ ಅನುಮತಿ ನೀಡಿತ್ತು
ಈಗಾಗಲೇ ಪದವಿ, ಸ್ನಾತಕೋತ್ತರ, ಡಿಪ್ಲೊಮೋ ಮತ್ತು ಎಂಜಿನಿಯರಿಂಗ್ ತರಗತಿಗಳ ಅಂತಿಮ ವರ್ಷದ/ಸೆಮಿಸ್ಟರ್ ನ ಆಫ್‌ಲೈನ್ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿರುವ ಬೆನ್ನಲ್ಲೇ ಇದೇ ತರಗತಿಗಳ ಪ್ರಥಮ- ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಸಂಕ್ರಾಂತಿ ಹಬ್ಬದ ನಂತರ ಆರಂಭಿಸಲಾಗುವುದು. ಈ ಸಂಬಂಧ ವರದಿ ನೀಡುವಂತೆ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸರಕಾರಿ- ಖಾಸಗಿ ವಲಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ಉನ್ನತ ಶಿಕ್ಷಣ ಸೇರಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಉಪ ಮುಖ್ಯಮಂತ್ರಿಗಳು ಈ ಮಾಹಿತಿ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕುಲಪತಿಗಳು ನೇರ ತರಗತಿಗಳನ್ನು ಆರಂಭಿಸುವಂತೆ ಸರಕಾರಕ್ಕೆ ಸಲಹೆ ನೀಡಿದರು. ಹೀಗಾಗಿ ಅದಕ್ಕೆ ಸಂಬಂಧಿಸಿದ ವರದಿಯನ್ನು ಕೂಡಲೇ ಕಳಿಸುವಂತೆ ಕೋರಲಾಗಿದೆ. ನಂತರ ಮೊದಲ ಮತ್ತು ದ್ವಿತೀಯ ವರ್ಷದ ನೇರ ತರಗತಿಗಳನ್ನು ಸಂಕ್ರಾಂತಿ ಹಬ್ಬದ ನಂತರ ಯಾವ ದಿನದಿಂದ ಆರಂಭಿಸಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.
ಈಗಾಗಲೇ ಅಂತಿಮ ವರ್ಷದ ವಿದ್ಯಾರ್ಥಿಗಳ ನೇರ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಆ ಯಶಸ್ಸಿನ ಹಿನ್ನೆಲೆಯಲ್ಲಿ ಉಳಿದ ತರಗತಿಗಳನ್ನು ಶುರು ಮಾಡಲಾಗುವುದು. ಯುಜಿಸಿ ಮತ್ತು ಕೋವಿಡ್ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪರೀಕ್ಷೆ ಮತ್ತು ಮುಂದಿನ ಶೈಕ್ಷಣಿಕ ವರ್ಷ
ಮುಖ್ಯವಾಗಿ ಈ ಸಭೆಯಲ್ಲಿ 2021-22ರ ಶೈಕ್ಷಣಿಕ ವರ್ಷವನ್ನು ಯಾವಾಗಿನಿಂದ ಆರಂಭಿಸಬೇಕು ಎಂಬ ಬಗ್ಗೆ ಮಹತ್ವದ ಚರ್ಚೆ ನಡೆಯಿತು. ಮೇ ತಿಂಗಳ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಉನ್ನತ ಶಿಕ್ಷಣದ ಶೈಕ್ಷಣಿಕ ವೇಳಾಪಟ್ಟಿಯನ್ನು ರೂಪಿಸಲಾಗುವುದು ಎಂದರು ಡಿಸಿಎಂ.
ಹಾಗೆಯೇ, ಆನ್‌ಲೈನ್ ಪರೀಕ್ಷೆಗಳಿಗಿಂತ ಪೆನ್ ಮತ್ತು ಪೇಪರ್ ಆಧಾರಿತ ಆಫ್‌ಲೈನ್ ಪರೀಕ್ಷೆಯೇ ಉತ್ತಮ ಎಂದು ವಿಟಿಸಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಸೇರಿದಂತೆ ಎಲ್ಲ ಕುಲಪತಿ, ಕುಲ ಸಚಿವರು ಸಲಹೆ ಮಾಡಿದರು. ಇದನ್ನು ಸರಕಾರ ಗಂಭೀರವಾಗಿ ಪರಿಶೀಲಿಸಲಿದೆ. ಯುಜಿಸಿ ನಿಯಮದಂತೆ ಮಾರ್ಚ್‌ನಲ್ಲಿ ಪರೀಕ್ಷೆ ಮುಗಿಯಬೇಕಾಗುತ್ತದೆ. ಆದರೆ, ಇನ್ನು ಹಲವಾರು ವಿವಿಗಳ ವ್ಯಾಪ್ತಿಯಲ್ಲಿ ಪಾಠಗಳು ಮುಗಿಯದ ಕಾರಣ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ, ಶೀಘ್ರವೇ ಈ ಬಗ್ಗೆ ಅಂತಿಮ ಮಾಹಿತಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಬಸ್ ಪಾಸ್ ಮತ್ತು ಹಾಸ್ಟೆಲ್ ಸೌಲಭ್ಯ
ವಿದ್ಯಾರ್ಥಿಗಳ ಬಸ್ ಪಾಸ್ ಬಗ್ಗೆ ಇರುವ ಗೊಂದಲದ ಬಗ್ಗೆ ಶೀಘ್ರದಲ್ಲಿಯೇ ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಅವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಹಳೆಯ ಪಾಸ್ ಇಟ್ಟುಕೊಂಡೇ ಓಡಾಡಬಹುದಾ? ಇಲ್ಲವಾ? ಎಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದ ಡಿಸಿಎಂ, ಉಳಿದಂತೆ ತರಗತಿಗಳು ಆರಂಭವಾದ ಮೇಲೆ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುವುದು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
ಈ ಆನ್‌ಲೈನ್ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಸೇರಿದಂತೆ ರಾಜ್ಯದ ಎಲ್ಲ ವಿವಿಗಳ ಕುಲಪತಿ, ಕುಲ ಸಚಿವರು ಪಾಲ್ಗೊಂಡಿದ್ದರು.
ಡಿಸಿಎಂ ಅವರು ರಾಮನಗರದಿಂದಲೇ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ್ದರು.
ಅಮೆರಿಕಾದ ಅಧ್ಯಕ್ಷ ಗದ್ದುಗೆ ಅದನ್ನು ಅಲಂಕರಿಸಿದ ವ್ಯಕ್ತಿತ್ವಗಳನ್ನು ಅವಿರತವಾಗಿ ಬದಲಾಯಿಸಿದೆ. ಅಧ್ಯಕ್ಷ ಸ್ಥಾನದ ಜವಾಬ್ದಾರಿ ಮತ್ತು ಕರ್ತವ್ಯಗಳಿಗೆ ಅಧ್ಯಕ್ಷರುಗಳನ್ನು ಅದು ಬದ್ಧರಾಗಿಸಿದ್ದೇ ಹೆಚ್ಚು. ಅತಿದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆಯ ಮುಂದೆ ಆತ ಕುಬ್ಜನೂ, ವಿಧೇಯನೂ ಆಗುವಂತೆ ಮಾಡಬಲ್ಲ ಶಕ್ತಿ ಆ ಪದವಿಗಿದೆ.
ಆದರೆ ಅತಿಕ್ರಮಣದ ಶೈಲಿಯಲ್ಲಿ ಆಡಳಿತ ನಡೆಸುತ್ತಿರುವ ಅತ್ಯಂತ ವಿವಾದಾಸ್ಪದ ವ್ಯಕ್ತಿತ್ವದ ಟ್ರಂಪ್ ನ ಕಥೆಯೇ ಬೇರೆ. ಹಲವು ಊಹಾಪೋಹಗಳ ನಡುವೆ ಪ್ರತಿ ಸ್ಪರ್ಧಿಗಿಂತ ಕಡಿಮೆ ಮತ ಗಳಿಸಿದರೂ ಎಲೆಕ್ಟೋರಲ್ ಮತಗಳ ಹೆಚ್ಚಳದ ಕಾರಣ ಆಯ್ಕೆಯಾಗಿ ಈ ಪದವಿಯನ್ನು ಅಲಂಕರಿಸಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಳ್ಳೆಯದಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡಿದ ವ್ಯಕ್ತಿ. ವಿಭಿನ್ನ ಧಾಟಿಯ ಆಳ್ವಿಕೆ ನಡೆಸುತ್ತ ಸುತ್ತ ಮುತ್ತಲಿನ ಹಲವು ಸಲಹೆಗಾರರನ್ನು, ರಾಜ ತಾಂತ್ರಿಕರನ್ನು ಕೆಲಸದಿಂದ ವಜಾ ಮಾಡುತ್ತಲೇ ಇತರರ ಬಾಯಿ ಮುಚ್ಚಿಸಿದ ವ್ಯಕ್ತಿ. ಒಬ್ಬ ಮುಖಂಡನಾಗಿ ಆತನ ನಡವಳಿಕೆ, ಬಳಸಿದ ಭಾಷೆ, ಯೋಚನೆ ಮಾಡದೆ ನಡೆದುಕೊಳ್ಳುವ ವ್ಯಕ್ತಿತ್ವ, ಸೃಷ್ಟಿಸಿದ ವಿವಾದಗಳು ಅಮೆರಿಕಾವನ್ನು ಈ ನಾಲ್ಕು ವರ್ಷಗಳಲ್ಲಿ ಆಳವಾಗಿ ಒಡೆಯುವುದರ ಜೊತೆ ನಗೆಪಾಟಲಾಗಿಸಿದ್ದೇ ಹೆಚ್ಚು.
ಟ್ರಂಪ್ ನ ನಿರಂತರ ವಿರೋದಾಭಾಸಗಳ ಹೇಳಿಕೆಗಳು ಮತ್ತು ನಿರಂಕುಶ ಆಳ್ವಿಕೆ ಅಮೆರಿಕಾದ ಈ ಕಡು ಬಲ ಪಂಥೀಯ ಜನರ ಮೇಲೆ ಮಾತ್ರ ಮಾಯಾ ಜಾಲವನ್ನೇ ಬೀಸಿರುವುದು ಸುಳ್ಳಲ್ಲ. ಹಾಗಾಗಿ ಇತ್ತೀಚೆಗಿನ ಚುನಾವಣೆಯಲ್ಲಿ ಟ್ರಂಪ್ ಸೋತರೂ ಇಡೀ ಅಮೆರಿಕಾದ ಇತಿಹಾಸದಲ್ಲಿ ಕೇಳರಿಯದಷ್ಟು ಮತಗಳಿಸುವಲ್ಲಿ ಎರಡನೇ ಸ್ಥಾನವನ್ನು ಆತ ತಲುಪುವಂತೆ ಮಾಡಿತು. ಅದಕ್ಕಾಗಿ ರಿಪಬ್ಲಿಕನ್ ಪಕ್ಷ ಆತನ ನೇತೃತ್ವವವನ್ನು ಒಪ್ಪಿಕೊಳ್ಳಲೇಬೇಕು ಎನ್ನುವ ಸ್ಥಿತಿ ಇರುವಾಗಲೇ ಇದೇ ಬುಧವಾರ ಟ್ರಂಪ್ ನ ಹಿಂಬಾಲಕರು ನಡೆಸಿದ ದಾಂಧಲೆ ಇಡೀ ರಿಪಬ್ಲಿಕನ್ ಪಕ್ಷವನ್ನೇ ಇಬ್ಭಾಗವಾಗಿಸಿ ಒಡೆದಿದೆ. ಸ್ವತಃ ಉಪಾಧ್ಯಕ್ಷ ಮೈಕ್ ಪೆನ್ಸ್ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾನೆ. ಅಮೆರಿಕನ್ ರಿಪಬ್ಲಿಕ್ ಮತ್ತು ಟ್ರಂಪ್ ರಿಪಬ್ಲಿಕ್ ಎಂದು ರಿಪಬ್ಲಿಕನ್ ಪಾರ್ಟಿ ಒಡೆದುಹೋಗಿದೆ. ಅಧಿಕಾರ ಕಳೆದುಕೊಂಡು ಇನ್ನು ಹನ್ನೆರಡು ದಿನಗಳಲ್ಲಿ ಕೆಳಗಿಳಿಯಬೇಕಾಗಿರುವ ಟ್ರಂಪ್ ಪ್ರಪಂಚದ ಬಹುತೇಕ ನಾಯಕರಿಂದ ಟೀಕಿಸಲ್ಪಟ್ಟಿದ್ದಾನೆ.
ಕಳೆದ ವರ್ಷದ ನವೆಂಬರ್ ತಿಂಗಳ ಚುನಾವಣೆ ನಡೆಯುವುದಕ್ಕಿಂತ ಮುಂಚಿನಿಂದಲೂ “ಈ ಚುನಾವಣೆಯಲ್ಲಿ ತಾನು ಸೋತರೆ ಅದು ನ್ಯಾಯಯುತ ಚುನಾವಣೆಯಲ್ಲ, ಅದನ್ನು ತಾನು ಒಪ್ಪುವುದಿಲ್ಲ. ದೇಶ ಹಿಂಸೆಗೆ ತಿರುಗುತ್ತದೆ “ -ಎನ್ನುವ ಮುನ್ಸೂಚನೆಯ ನೀಡಿದ್ದ ಟ್ರಂಪ್ ಚುನಾವಣೆಯಲ್ಲಿ ಸೋತ ನಂತರ ತನ್ನ ಉಳಿದ ದಿನಗಳಲ್ಲಿ ತೀವ್ರ ಹತಾಶೆಯ ಹಂತ ತಲುಪಿದ್ದಾರೆ. ದಿನ ಕಳೆದಂತೆಲ್ಲ ಆತನ ವಂದಿ ಮಾಗಧರೆಲ್ಲ ಒಬ್ಬೊಬ್ಬರಾಗಿ ದೂರಾಗುತ್ತಿರುವ ಕಾರಣ ಕೊನೆಯ ಅಸ್ತ್ರವಾಗಿ ತನ್ನ ಕಟ್ಟಾ ಅನುಯಾಯಿಗಳನ್ನು ಉದ್ರೇಕಿಸಿ ಅವರನ್ನು ದೇಶದ ಶಾಂತಿಯನ್ನು ಕದಡಲು ಉಪಯೋಗಿಸಿಕೊಳ್ಳುವ ಹೀನಾಯ ಸ್ಥಿತಿಯನ್ನು ತಲುಪಿದ್ದಾರೆ. ಅತ್ಯಂತ ಕುಟಿಲತೆಯಿಂದ ತನ್ನ ಈ ಅನುಯಾಯಿಗಳ ಮೆದುಳನ್ನು ತಿರುಚಿ ಅವರನ್ನು ದೇಶ ಭಕ್ತರೆಂತಲೂ, ಕ್ರಾಂತಿಕಾರಿಗಳೆಂದೂ ಕರೆದು ಹೊಗಳುತ್ತ ರಾಜಧಾನಿಯ ಸಂವಿಧಾನ ಸ್ಥಾನದಲ್ಲೇ ಅರಾಜಕತೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿ ಕಳಂಕಿತರಾಗಿದ್ದಾರೆ.
ಒಟ್ಟು ನಾಲ್ವರು ಪ್ರಜೆಗಳ ಸಾವಿನ ರಕ್ತ ಕೈ ಗೆ ಅಂಟಿರುವಾಗಲೂ ಸ್ವಾರ್ಥ ದ ಹೇಳಿಕೆ ನೀಡುತ್ತಿರುವ ಕಾರಣ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಈತನನ್ನು 12 ಗಂಟೆಗಳ ಕಾಲ ಅಮಾನತು ಮಾಡಿತ್ತು. ಇದೀಗ ಶರತ್ತುಗಳನ್ನು ಹಾಕಿ ಟ್ರಂಪ್ ಹಲವು ಟ್ವೀಟ್ ಗಳನ್ನು ರದ್ದು ಮಾಡಿದ ಮೇಲಷ್ಟೆ ಮತ್ತೆ ತನ್ನ ಖಾತೆಯನ್ನು ಬಳಸಲು ಅನುಮತಿ ನೀಡಿದೆ. ಫೇಸ್ ಬುಕ್ ಅನಿರ್ದಿಷ್ಠ ಕಾಲ ಈತನ ಖಾತೆಯನ್ನು ಮುಚ್ಚಿದೆ.
ನ್ಯಾಯಯುತವಾಗಿ ನಡೆದ ಚುನಾವಣೆಯ ವಿರುದ್ಧ ಯಾವ ಸಾಕ್ಷಿಗಳು ಇಲ್ಲದಾಗ್ಯೂ ತನ್ನ ಸೋಲನ್ನು ಒಪ್ಪಲಾಗದ ಟ್ರಂಪ್ ನ ಮಾನಸಿಕ ಸ್ವಾಸ್ಥ್ಯ ದ ಬಗ್ಗೆಯೂ ಹಲವರಲ್ಲಿ ಗುಮಾನಿ ಎದ್ದು ಆ ಕಾರಣ ತತ್ ಕ್ಷಣವೇ ಆತನನ್ನು ಅಧಿಕಾರದಿಂದ ತೆಗೆಯಬೇಕೆಂಬ ವಿಚಾರಕ್ಕೆ ಅಮೆಂಡ್ ಮೆಂಟ್ 25 ರ ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
25 ನೇ ಅಮೆಂಡ್ ಮೆಂಟನ್ನು ಯಾವಾಗ ಬಳಸಲಾಗುತ್ತದೆ?
ಹುದ್ದೆಯಲ್ಲಿರುವ ಅಮೆರಿಕಾದ ಅಧ್ಯಕ್ಷನಿಗೆ ಅಕಸ್ಮಾತ್ ಸಾವಾದಲ್ಲಿ, ಖಾಯಿಲೆಯಾದಲ್ಲಿ, ಧೀರ್ಘ ಕಾಲ ಆಸ್ಪತ್ರೆಗೆ ಹೋಗಬೇಕಾದಲ್ಲಿ, ಮರೆವಿನ ಖಾಯಿಲೆ ಇತ್ಯಾದಿ ಆದಲ್ಲಿ ಆತನ ಸಮ್ಮತಿಯನ್ನು ಕೇಳದೆ ಅಧ್ಯಕ್ಷನನ್ನು ಕೆಳಗಿಳಿಸಿ, ಉಪಾಧ್ಯಕ್ಷನನ್ನು ಅಧ್ಯಕ್ಷ ಪದವಿಗೆ ಏರಿಸಲಾಗುತ್ತದೆ. ಸ್ವತಃ ಅಧ್ಯಕ್ಷನೇ ತನಗೆ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ಬರೆದು ತಿಳಿಸಿದಾಗ ಅಥವಾ ಅಂಗವಿಹೀನತೆ ಉಂಟಾದಲ್ಲಿ ಈ ಬದಲಾವಣೆ ಸಾಧ್ಯ. ಅಕಸ್ಮಾತ್ ಉಪಾಧ್ಯಕ್ಷ ನನ್ನು ಬದಲಾಯಿಸಬೇಕಾದ ತುರ್ತಿನಲ್ಲಿ ಕೂಡ ಇದನ್ನು ಬಳಸಬಹುದಿದೆ.
ಆದರೆ, ಗದ್ದುಗೆ ಬಿಡಲಾಗದ ಮಾನಸಿಕ ಖಾಯಿಲೆ ಅಥವಾ ವ್ಯಕ್ತಿತ್ವ ವ್ಯಾಧಿ ಯ ವಿಕಲತೆಯ ಅಡಿಯಲ್ಲಿ ಡೊನಾಲ್ಡ್ ಟ್ರಂಪ್ ನನ್ನು ಕೆಳಗಿಳಿಸಬಹುದೇ ಅದರಲ್ಲೂ ಅಧಿಕಾರ ಹಸ್ತಾಂತರಕ್ಕೆ ಇನ್ನು ಕೇವಲ 12 ದಿನವಿರುವಾಗ ಎನ್ನುವ ವಿಚಾರ ಬರಿಯ ಚರ್ಚೆಗೆ ಸೀಮಿತವಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.
ಬುಧವಾರನಡೆದದ್ದೇನು?
ಮಧ್ಯಾಹ್ನದ ವೇಳೆಗೆ ಶ್ವೇತ ಭವನದ ಹತ್ತಿರವೇ ಇರುವ ಎಲ್ಲಿಪ್ಸ್ ಮೈದಾನದಲ್ಲಿ ’ ಅಮೆರಿಕಾವನ್ನು ರಕ್ಷಿಸಿ” ಎನ್ನುವ ಟ್ರಂಪ್ ನ ಭಾಷಣ ಕೇಳಲು ಸಾವಿರಾರು ಅನುಯಾಯಿಗಳನ್ನು ಒಗ್ಗೂಡಿಸಲಾಯಿತು. ಇವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್-“ ಪೆನ್ಸಿಲ್ವೇನಿಯಾ ರಸ್ತೆಯ ಮೂಲಕ ನಡೆದು ಕ್ಯಾಪಿಟಲ್ ಭವನದಲ್ಲಿ ಬಿಡೆನ್ ಮುಂದಿನ ಅಧ್ಯಕ್ಷರೆಂದು ಪ್ರಮಾಣ ಪತ್ರ ಬರೆದು ನಮ್ಮ ಗೆಲುವನ್ನು ಕಸಿದುಕೊಳ್ಳುತ್ತಿರುವ ಬಲಹೀನರಿಗೆ ಬುದ್ಧಿ ಕಲಿಸೋಣ “- ಎಂಬ ಭಾಷಣ ಮಾಡಿದ್ದಾರೆ.
ಕ್ಯಾಪಿಟಲ್ ಎನ್ನುವ ಈ ಕಟ್ಟಡದಲ್ಲಿ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೆಟಿವ್ ಚುನಾಯಿತರು ಕೆಲಸ ಮಾಡುತ್ತಾರೆ. ಇಲ್ಲಿಗೆ ಸುಮಾರು ಒಂದು ಗಂಟೆಯ ನಂತರ ಮಾರಕಾಸ್ತ್ರ ಸಹಿತ ಬಂದ ಈ ಉದ್ರೇಕಿತ ಗುಂಪು ಪೋಲೀಸರ ಜೊತೆ ಹಣಾ ಹಣಿ ಮಾಡಿ ಕ್ಯಾಪಿಟಲ್ ಬಿಲ್ಡಿಂಗ್ ನ್ನು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಕಾನೂನಿನ ಎಲ್ಲ ನಿಯಮಗಳನ್ನು ಮುರಿದು ಇಡೀ ಕಟ್ಟಡದ ಕಿಟಕಿ-ಬಾಗಿಲುಗಳನ್ನು ಪುಡಿ-ಪುಡಿ ಮಾಡಿ ವಿಧ್ವಂಸಕ ಕೃತ್ಯಕ್ಕಿಳಿದಿದ್ದಾರೆ. ಸಂವಿಧಾನ ಮತ್ತು ಪ್ರಜಾ ಪ್ರಭುತ್ವಕ್ಕೆ ಮಸಿ ಬಳಿದಿದ್ದಾರೆ.
ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು, ಸೆಕ್ಯೂರಿಟಿ ಆಫೀಸರುಗಳು ಅಲ್ಲಿನ ಪದಾಧಿಕಾರಿಗಳನ್ನೆಲ್ಲ ಸುರಕ್ಷಿತವಾಗಿಡಲು ಸತತವಾಗಿ ಎರಡು ಗಂಟೆ ಹೆಣಗಾಡಿದ್ದಾರೆ. ಬಾಗಿಲುಗಳಿಗೆ ತಡೆ ಗೋಡೆಗಳನ್ನು ನಿರ್ಮಿಸಿ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹದಿನಾಲ್ಕು ಜನ ಪೊಲೀಸರಿಗೆ ಗಾಯಗಳಾಗಿ ಇಬ್ಬರು ತೀವ್ರ ಹಾನಿಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.ಮೂರು ಗಂಟೆಯ ವೇಳೆಗೆ ಪೊಲೀಸರ ಮೇಲೆ ಕೆಮಿಕಲ್ಸ್,ಪೆಪ್ಪರ್ ಸ್ಪ್ರೇ , ಕುರ್ಚಿ ಇತ್ಯಾದಿಗಳನ್ನು ಎಸೆದು ಒಳನುಗ್ಗುತ್ತಿದ್ದವರಲ್ಲಿದ್ದ ಮಹಿಳೆಗೆ ಪೋಲೀಸರ ಗುಂಡ ತಾಕಿ ಆಕೆ ಅಸುನೀಗಿದ್ದಾಳೆ.
ಇದೆಲ್ಲದರ ವರದಿ ಇಡೀ ಅಮೆರಿಕಾವನ್ನು ಶಾಕ್ ಗೆ ತಳ್ಳಿ ಜೋ ಬಿಡೆನ್ ಅಧ್ಯಕ್ಷ ಟ್ರಂಪ್ ಇಂತಹ ನಾಚಿಕೆ ಗೇಡಿನ ಆಕ್ರಮಣಕ್ಕೆ ಪ್ರಚೋದನೆ ನೀಡಿದ್ದನ್ನು ಖಂಡಿಸಿ ಇದಕ್ಕೆ ಕೊನೆಹಾಡಲು ಟ್ರಂಪ್ ಗೆ ಕರೆ ನೀಡಿದ್ದಾರೆ. ಬಹಳಷ್ಟು ಕಟು ಖಂಡನೆಗಳು ಮತ್ತು ಒತ್ತಡ ಬಂದ ನಂತರವಷ್ಟೆ ತಮ್ಮ ತಮ್ಮ ಮನೆಗಳಿಗೆ ಮರಳುವಂತೆ ತನ್ನ ಬೆಂಬಲಿಗರಿಗೆ ಟ್ರಂಪ್ ಆದೇಶ ನೀಡಿದ್ದು.
ಟ್ರಂಪ್ ಈ ಗಲಭೆ ಕೋರರನ್ನು ಪೇಟ್ರಿಯಾಟ್ಸ್ ಎಂದು ಟ್ವೀಟ್ ಮಾಡಿ ಹೊಗಳಿ ಅತ್ಯಂತ ನಿರ್ಲಜ್ಜಿತ ಅಧ್ಯಕ್ಷನೆನಿಸಿಕೊಂಡರು. ಟ್ವಿಟ್ಟರ್ ಆತನ ಖಾತೆಯನ್ನು ಅಮಾನತು ಮಾಡಿದೆ. ನೂರಾರು ಜನರಿಗೆ ಸಣ್ಣ ಪುಟ್ಟ ಅಪಘಾತಗಳಾದರೆ, ಮಾನಸಿಕವಾಗಿ ಆತಂಕ, ಶಾಕ್ ನಿಂದ ಅಮೆರಿಕಾವಿರಲಿ, ಇಡೀ ಪ್ರಪಂಚವೇ ಅಮೆರಿಕಾವನ್ನು ನೋಡಿ ಧಿಗ್ಭ್ರಮೆಗೊಂಡಿದೆ.
ಸಾಯಂಕಾಲ ಸುಮಾರು 5.40 ರ ಹೊತ್ತಿಗೆ ಕ್ಯಾಪಿಟಲ್ ಬಿಲ್ಡಿಂಗ್ ನ್ನು ವಶಕ್ಕೆ ತಗೊಂಡ ನ್ಯಾಷನಲ್ ಗಾರ್ಡ್ ಟ್ರೂಪ್, ಸಿಬಿಐ, ಪೊಲೀಸರು, ಸೆಕ್ಯೂರಿಟಿಯವರ ಸಹಾಯಕ್ಕೆ ಬಂದಿದ್ದಾರೆ. ನಿಧಾನಕ್ಕೆ ಅಲ್ಲಿನ ಕಾಂಗ್ರೆಸಿಗರನ್ನು ಹೊರ ಕಳಿಸಿದ್ದಾರೆ. 6 ಗಂಟೆಯಿಂದ ಕರ್ಫ್ಯೂ ಹೇರಿದ್ದಾರೆ. ಸುಮಾರು 68 ಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಗುರುವಾರ ಕರ್ಫ್ಯೂ ಮುರಿದ ಎಂಭತ್ತು ಜನರನ್ನು ಬಂಧಿಸಿದ್ದಾರೆ. ಇವತ್ತು ಬೆಳಿಗ್ಗೆಯ ವೇಳೆಗೆ ಬಂದ ಒಬ್ಬ ಪೊಲೀಸನ ಸಾವಿನ ಸುದ್ದಿ ಜನರನ್ನು ಮತ್ತಷ್ಟು ವಿಶಾದಕ್ಕೆ ತಳ್ಳಿದೆ.
ಅಮೆರಿಕಾದ ಈ ಚಾರಿತ್ರಿಕ ಕಟ್ಟಡದ ಮೇಲೆ ಅಮೆರಿಕಾದ ಪ್ರಜೆಗಳೇ ದಾಳಿ ನಡೆಸಿರುವುದು ಇದೇ ಮೊದಲು.
1814 ರ ದಾಳಿಯಲ್ಲಿ ಅಥವಾ ಸಣ್ಣ ಯುದ್ಧದಲ್ಲಿ ಬ್ರಿಟಿಷರು ಈ ಕಟ್ಟಡವನ್ನು ಸುಡಲು ಯತ್ನಿಸಿದ್ದರು. 1915 ರಲ್ಲಿ ಜರ್ಮನ್ ಪ್ರಾಧ್ಯಾಪರಕನೊಬ್ಬ ನಾಲ್ಕು ಡೈನಮೈಟ್ ಕಡ್ಡಿಗಳನ್ನು ಸ್ಪೋಟಿಸಿದ್ದ. ಅಮೆರಿಕಾ ಬ್ರಿಟನ್ ಮೂಲಕ ಜರ್ಮನಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತಿದೆ ಎನ್ನುವುದು ಈತನ ಆಕ್ಷೇಪಣೆಯಾಗಿತ್ತು.
1954 ಪೋರ್ಟೋರಿಕನ್ ನ್ಯಾಷನಲ್ ಪಾರ್ಟಿ ಗೆ ಸೇರಿದ ನಾಲ್ವರು ಗುಂಡಿನ ದಾಳಿ ನಡೆಸಿದ್ದರು. ಅವರು ತಮ್ಮ ದೇಶದ ಸ್ವಾತಂತ್ರ್ಯವನ್ನು ಆಗ್ರಹಿಸಿದ್ದರು.
1998 ರಲ್ಲಿ ಮಾನಸಿಕ ಸ್ವಾಸ್ಥ್ಯ ಸರಿಯಿಲ್ಲದ ವ್ಯಕ್ತಿಯೊಬ್ಬ ಕ್ಯಾಪಿಟಲ್ ಬಿಲ್ಡಿಂಗ್ ನ ಇಬ್ಬರು ಪೊಲೀಸರ ಮೇಲೆ ಗುಂಡನ್ನು ಹಾರಿಸಿದ್ದ.
ಅಮೆರಿಕಾವನ್ನು ರಕ್ಷಿಸಿ ಎನ್ನುವ ಬಾವುಟ ಹಿಡಿದ ಜನರೇ ಅಲ್ಲಿನ ಕಾನೂನು ಮತ್ತು ಕಟ್ಟಲೆಗಳನ್ನು ಮುರಿದು, ಸುಳ್ಳು ಸುದ್ದಿಯ ಊಹಾ ಪೋಹಗಳನ್ನು ನಂಬಿ್ “ ಜಗತ್ತೇ ನಿರ್ನಾಮವಾಗುತ್ತಿದೆ ಆದ್ದರಿಂದ ನಾವೇ ಈ ಜಗತ್ತಿನ ಕೊನೆಯ ಆಶಾಕಿರಣಗಳು, ಡೊನಾಲ್ಡ್ ಟ್ರಂಪ್ ನಮ್ಮ ನಾಯಕ “ ಎಂದು ಎಗ್ಗಿಲ್ಲದೆ ವರ್ತಿಸಿರುವುದು ಜನತಂತರ ಪ್ರೇಮಿಗಳಿಗೆ ಆಘಾತ ತಂದಿದೆ. ಟ್ರಂಪ್ ತಾನು ಕಾನೂನು ಬದ್ಧವಾಗಿ ಅಧಿಕಾರ ಹಸ್ತಾಂತರಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರೂ ಅದರ ಬೆನ್ನ ಹಿಂದೆಯೇ ’ ಅನ್ಯಾಯದ ವಿರುದ್ಧ ಹೋರಾಡುವುದನ್ನು ಮುಂದುವರೆಸುತ್ತೇನೆ ಎಂದು ಹೇಳಿರುವುದು ಅಮೆರಿಕಾದಲ್ಲಿ ಇಂತಹ ಆಘಾತಕಾರೀ ವಿಚಾರಗಳು ಮುಂದುವರೆಯಬಹುದಾದ ಸಾಧ್ಯತೆಗಳನ್ನು ಹೆಚ್ಚಿಸಿದೆ.
ಈ ಮಧ್ಯೆ ಗಲಭೆಕೋರರ ಗುಂಪಿನಲ್ಲಿ ಭಾರತದ ಬಾವುಟ ಹಿಡಿದ ವ್ಯಕ್ತಿಯೊಬ್ಬರು ಕಾಣಿಸಿದ್ದು, ಭಾರತದ ಬಾವುಟವನ್ನು ಇಲ್ಲಿಗೆ ತಂದಿರುವ ಔಚಿತ್ಯವನ್ನು ಪ್ರಶ್ನಿಸಿ ಜಗತ್ತಿನ ಎಲ್ಲ ಭಾರತೀಯರು ತೀವ್ರ ಅಸಮಾಧಾನ,ಕೋಪ ವ್ಯಕ್ತಪಡಿಸಿದ್ದಾರೆ.
ಅಂತಃಕರಣದ ಕವಿ ಡಾ.ಎಚ್. ಎಸ್. ವೆಂಕಟೇಶ ಮೂರ್ತಿ ಅವರನ್ನು ಸಾಹಿತಿಯಾಗಿ ಬಲ್ಲವರಿಗೆ ಅವರೊಲ್ಲಬ್ಬ ಕಲಾವಿದನು ಅಡಗಿದ್ದಾನೆ ಎಂಬುದು ಗೊತ್ತಿಲ್ಲ. ಕೆಲ ದಿನಗಳ ಹಿಂದೆ ಹಸಿರು ರಿಬ್ಬನ್ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದಿದ್ದ ಕವಿಗಳು ಈಗ ಅಭಿನಯಕ್ಕೆ ಇಳಿದಿದ್ದಾರೆ. ಅವರು ನಟಿಸಿರುವ ಅಮೃತವಾಹಿನಿ ಚಲನಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಮತ್ತೊಬ್ಬ ಸುಪ್ರಸಿದ್ಧ ಕತೆಗಾರ ರಾಘವೇಂದ್ರ ಪಾಟೀಲರು ಬರೆದ ಕಥೆ ಆಧರಿಸಿದ ಚಿತ್ರ ಇದು. ಕೆ. ನರೇಂದ್ರಬಾಬು ನಿರ್ದೇಶಿಸಿದ್ದಾರೆ. ಕವಯತ್ರಿ ಮಾಲಿನಿ ಗುರುಪ್ರಸನ್ನ ಕನ್ನಡಪ್ರೆಸ್.ಕಾಮ್ ಗಾಗಿ ನಡೆಸಿದ ಈ ವಿಶೇಷ ಸಂದರ್ಶನದಲ್ಲಿ ಕವಿ, ನಟನೆಯೊಂದಿಗಿನ ತಮ್ಮ ನಂಟು , ಸಿನಿಮಾ ನಟನೆಯಲ್ಲಿನ ಸವಾಲುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಇಂದು ನೀವು ನಟಿಸಿರುವ ಅಮೃತವಾಹಿನಿ ಚಲನಚಿತ್ರ ಬಿಡುಗಡೆಯಾಗುತ್ತಿದೆ. ಮೊದಲಿಗೆ ಶುಭಾಶಯಗಳು.
ಧನ್ಯವಾದ ಮಾಲಿನಿ.
ಈಗ ಅಭಿನಯ ಕ್ಷೇತ್ರಕ್ಕೂ ಕಾಲಿಟ್ಟಿದ್ದೀರಿ.. ಹೇಗನ್ನಿಸುತ್ತಿದೆ.?
ಬರವಣಿಗೆಯಲ್ಲಿ ಅಭಿನಯವೇ ಇದೆಯಲ್ಲವೇ? ಕಾವ್ಯ, ಕಥೆ ಬರೆಯುವಾಗ ಅನೇಕ ಪಾತ್ರಗಳು ಬರುತ್ತವೆ. ಆ ಪಾತ್ರ ನಾನಾಗದೇ ಬರಹದಲ್ಲಿ ಸಹಜತೆ ಬರುವುದಿಲ್ಲ. ಬುದ್ಧಚರಿತವನ್ನೇ ನೋಡು, ರಾಹುಲನ ಮಾತುಗಳನ್ನು ನಾನು ಬರೆಯಬೇಕಾದರೆ ರಾಹುಲನನ್ನು ನಾನು ಆವಾಹಿಸಿಕೊಳ್ಳಬೇಕು. ಸೀತೆಯಾಗಬೇಕಾದರೆ ಸೀತೆಯ ಹೆಣ್ತನವನ್ನು ನಾನು ಪಡೆಯದಿದ್ದರೆ ಸಹಜತೆ ಬರುವುದಿಲ್ಲ. ಕವಿಯ ಮನಸ್ಸು ಅನೇಕ ಸ್ಥರಗಳಲ್ಲಿ ಸಂಚಾರ ಮಾಡುತ್ತಿರುತ್ತದೆ. ವಿಫುಲ ರೂಪ ಧಾರಿಣಿ ಕವಿಯ ಮನಸ್ಸು ಎಂದು ಕುವೆಂಪು ಹೇಳಿಲ್ಲವೇ. ಹಾಗೆ ಬರವಣಿಗೆ ಎಂಬುದು ಅಂತರಂಗದಲ್ಲಿ ಅಭಿನಯ . ಸಿನಿಮಾ ನಾಟಕ ಎಂಬುದು ಬಹಿರಂಗದಲ್ಲಿ ತೋರಿಸಬೇಕಾದ್ದು.ಕವಿತೆ ಕಷ್ಟ ಏಕೆಂದರೆ ಅದರಲ್ಲಿ ಬರುವ ಎಲ್ಲಾ ಪಾತ್ರಗಳನ್ನೂ ಕವಿ ಅಭಿನಯಿಸಬೇಕು. ಆದರೆ ಇಲ್ಲಿ ತನಗೆ ಸಿಕ್ಕ ಒಂದು ಪಾತ್ರವನ್ನು ಆವಾಹಿಸಿಕೊಂಡರಾಯಿತು. ಸಾಹಿತ್ಯದಲ್ಲೂ , ಸಿನೆಮಾದಲ್ಲೂ ಪರಾನುಕಂಪಿ ಅಥವಾ ಸಹಾನುಭೂತಿ ಅಂದರೆ ನಾನು ನೀನಾಗುವಿಕೆ ಬಹಳ ಮುಖ್ಯ .ನಿನ್ನ ದುಃಖ ನನ್ನದಾಗಿಸಿಕೊಳ್ಳುವುದು, ನಿನ್ನ ಸಮಸ್ಯೆ ನನ್ನದೂ, ನಿನ್ನ ನಗು ನನ್ನದೇ .. ಹೀಗಾಗಿ ಇಷ್ಟು ವರ್ಷ ಬರಹಗಳ ರೂಪದಲ್ಲಿ ಒಳಗೆ ನಡೆಯುತ್ತಿದ್ದ ಅಭಿನಯ ಈಗ ಹೊರಗೆ ಬಂದಿದೆ ಅಷ್ಟೇ .
ಅಮೃತವಾಹಿನಿಯ ಸ್ಥಿರ ಚಿತ್ರ
ನಿಮಗೆ ಹಿಂದೆ ಈ ರಂಗದ ಅನುಭವ ಇತ್ತಾ? ಹಿಂದೆ ನೀವು ಮಲ್ಲಾಡಿಹಳ್ಳಿಯಲ್ಲಿ ಬಂಡವಾಳವಿಲ್ಲದ ಬಡಾಯಿ ಎಂಬ ನಾಟಕದಲ್ಲಿ ಅಭಿನಯಿಸಿದ್ದಿರಿ ಎಂದು ಕೇಳಿ ಬಲ್ಲೆ. ಅದಕ್ಕೂ ಹಿಂದೆ ಏನಾದರೂ?
ಹೂ ಹೂ .. ನಿನ್ನ ತಂದೆ ಚಿದಂಬರ ರಾಯರು ನಿರ್ದೇಶಿಸಿದ್ದ ನಾಟಕ ಅದು. ಅದರಲ್ಲಿ ನಾನೂ ಬಣ್ಣ ಹಚ್ಚಿದ್ದೆ. ಅದಕ್ಕೂ ಹಿಂದೆ ನಾನು ಮಾಧ್ಯಮಿಕ ತರಗತಿಯಲ್ಲಿ ಓದುತ್ತಿದ್ದಾಗ ಸೈಂಧವ ಎಂದೊಂದು ನಾಟಕ ಬರೆದು ನಾನು ಈಶ್ವರಚಂದ್ರ ಅದನ್ನು ನಮ್ಮ ಮನೆಯ ಹಿತ್ತಲಿನಲ್ಲಿ ಪ್ರಯೋಗಿಸಿದ್ದೆವು. ನಮ್ಮ ಅಜ್ಜಿಗಳೇ ಅದಕ್ಕೆ ಪ್ರೇಕ್ಷಕರು. ನಾವಿಬ್ಬರೇ ನಟರು. ಅಲ್ಲೇ ಹೋದಿಗ್ಗೆರೆಯ ಹತ್ತಿರ ಗಂಗೂರು ಎಂಬ ಊರಿನಲ್ಲಿ ಬೊಂಬೆಮೇಳ ಬಹಳ ಪ್ರಸಿದ್ಧಿ. ಅದನ್ನು ನೋಡಲು ಹೋಗುತ್ತಿದ್ದೆ. ಅಲ್ಲಿಂದ ನನಗೆ ಈ ರಂಗದ ಕುರಿತು ಆಸಕ್ತಿ ಮೂಡಲಾರಂಭಿಸಿತು.
ಸಿನಿಮಾ ಬಗ್ಗೆ ?
ನನ್ನ ಪ್ರೌಢಶಾಲಾ ಹಂತದಿಂದ ಈ ಸಿನಿಮಾ ನೋಡುವ ಆಸಕ್ತಿ ವಿಪರೀತ ಹೆಚ್ಚಾಯಿತು.ರಾಜ್ ಕುಮಾರ್ ನನಗೆ ಬಹಳ ಇಷ್ಟದ ನಟ. ಅಶ್ವಥ್ ಕೂಡ ನನಗೆ ಬಹಳ ಇಷ್ಟ .
ನೀವು ನಿರ್ದೇಶನಕ್ಕೂ ಕೈ ಹಾಕಿದಿರಿ..
ಹಾಗೆ ನೋಡಿದರೆ ನಿರ್ದೇಶನವೂ ನನಗೇನು ಹೊಸತಲ್ಲ . ಹಿಂದೆ ಕಾಲೇಜಿನಲ್ಲಿ ಜಿ.ಕೆ. ಗೋವಿಂದರಾಯರು ನಿವೃತ್ತರಾದ ನಂತರ ನನ್ನ ಮೇಲೆ ನಾಟಕಗಳನ್ನು ಆಡಿಸುವ ಜವಾಬ್ದಾರಿ ಬಿದ್ದಿತ್ತು. .ಆಗ ಮಕ್ಕಳಿಗೆ ನಾನೇ ಅಭಿನಯಿಸಿ ತೋರಿಸಬೇಕಿತ್ತು ಕೂಡಾ. ಎಷ್ಟೋ ಬಾರಿ ನಾಟಕಗಳನ್ನು ನಾನೇ ಬರೆದು ಆಡಿಸುತ್ತಿದ್ದೆ.
ನಿಮ್ಮ ಅನೇಕ ನಾಟಕಗಳು ಹೀಗೆ ಹುಟ್ಟಿದ್ದಿರಬೇಕು ಅಲ್ಲವೇ?
ಹೌದು. ನಾನು ಅನೇಕ ಏಕಾಂಕಗಳನ್ನು ಮಕ್ಕಳಿಗಾಗಿಯೇ ಬರೆದೆ. ನೀವು ಪೂರ್ಣ ಪ್ರಮಾಣದ ನಾಟಕಗಳನ್ನು ಬರೆಯಬೇಕು ಎಂದು ಶ್ರೀನಿವಾಸ ಪ್ರಭು ಒತ್ತಾಯ ಮಾಡಿದರು. ಆಗ ನಾನು ಹೆಜ್ಜೆಗಳು ನಾಟಕ ಬರೆದೆ . ನಾಟಕ ಬರೆಯುವಾಗ ನಾವು ಅಭಿನಯಿಸಿಕೊಂಡೆ ಬರೆಯಬೇಕಾಗುತ್ತದೆ. ಅಂದರೆ ಅಭಿನಯವನ್ನು ನಾವು ಪ್ರೇಕ್ಷಕರೆದುರು ಮಾಡದೇ ಇರಬಹುದು. ನಮ್ಮೊಳಗಿನ ಕಲಾವಿದನನ್ನು ತೃಪ್ತಿ ಪಡಿಸಬೇಕಾಗುತ್ತದೆ. ಹೀಗೆ ಕಲಾವಿದ ಹೊರಗೆಲ್ಲೋ ಇರುವುದಿಲ್ಲ. ಒಳಗಿರುವವನನ್ನು ಹೊರಗೆ ತಂದು ನಿಲ್ಲಿಸಬೇಕಷ್ಟೆ .
ಎಚ್ ಎಸ್ ವಿ ಮತ್ತು ವತ್ಸಲಾ ಮೋಹನ್
ಈಗ ನೀವು ಅಮೃತವಾಹಿನಿ ಚಲನಚಿತ್ರದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದೀರಿ . ನಿಮಗೆ ಕಷ್ಟವೆನ್ನಿಸಿತಾ ನಿರ್ವಹಣೆ. ? ನಿಮಗೆ ಸವಾಲು ಎನ್ನಿಸಿದ್ದು ಯಾವಾಗ?
ನನಗೆ ಅಭಿನಯ ಕಷ್ಟ ಎನ್ನಿಸಲೇ ಇಲ್ಲ. ಸವಾಲು ಎನ್ನಿಸಿದ್ದು ಟೆಕ್ನಿಕಲ್ ವಿಷಯಗಳು ಅಷ್ಟೇ. ನಾನು ಪಾಠ ಮಾಡುವಾಗ ರನ್ನ, ಕುಮಾರವ್ಯಾಸ ಪದ್ಯಗಳನ್ನು ವಿವರಿಸುವಾಗ ಅಭಿನಯಿಸಿಯೇ ಪಾಠ ಮಾಡುತ್ತಿದ್ದೆ. ಅದು ಧ್ವನಿಯಲ್ಲಿನ ಅಭಿನಯ . ಈಗ ನನಗೆ ಆಂಗಿಕ ಅಭಿನಯ ಮಾಡಬೇಕಾಗಿ ಬಂತು. ಅಭಿನಯಕ್ಕೆ ದೇಹವನ್ನು ಹೇಗೆ ಬಳಸಬೇಕು ಎಂಬುದು ಸವಾಲಾಗಿತ್ತು. ನನಗೆ ಅದೃಷ್ಟವಶಾತ್ ವಯಸ್ಸಾದವನ ಪಾತ್ರವೇ ಸಿಕ್ಕಿದ್ದರಿಂದ ಮುಪ್ಪಿನ ಅಭಿನಯವನ್ನು ಮುಪ್ಪೇ ಕಲಿಸಿಕೊಟ್ಟಿತು. ನಾನು ಸುಮ್ಮನೆ ನನ್ನ ಪಾಡಿಗೆ ಇದ್ದರೂ ಪಾತ್ರವೇ ನಾನಾಗಿಬಿಡುತ್ತಿದ್ದೆ. ತರುಣನಿಗೆ ವಯಸ್ಸಾದವನ ಪಾತ್ರಕ್ಕೆ ದೇಹ ಒಗ್ಗಿಸಿಕೊಳ್ಳುವುದು ಕಷ್ಟ. ನನಗೆ ಅದು ಸಮಸ್ಯೆ ಆಗಲಿಲ್ಲ.
ಟೆಕ್ನಿಕಲ್ ತೊಂದರೆ ಅಂದರೆ?
ನಾಟಕದಲ್ಲಿ ಮಾಡುವಷ್ಟು ಸುಲಭ ಅಲ್ಲ ಚಿತ್ರದಲ್ಲಿ ಮಾಡುವುದು . ಅಭಿನಯಿಸುವಾಗ ಕ್ಯಾಮೆರಾದಿಂದ ಅಂತರ ಕಾಪಾಡಿಕೊಳ್ಳುವುದು ಮುಂತಾದವು. ತಾಂತ್ರಿಕವಾದ ತೊಡಕುಗಳನ್ನು ನಿವಾರಿಸಿಕೊಳ್ಳುವುದೇ ಕಷ್ಟ. ಮೂರಡಿಗಿಂತ ಮುಂದೆ ಬರಬೇಡಿ ಎನ್ನುತ್ತಾರೆ . ನನಗೆ ಪಾತ್ರದ ಎಕ್ಸ್ಪ್ರೆಶನ್ ನೆನಪಿಡಬೇಕು, ಮಾತುಗಳನ್ನು ನೆನಪಿಡಬೇಕು, ಮೂವ್ಮೆಂಟ್ ನೆನಪಿಡಬೇಕು . ಮೊದಲೆರಡನ್ನು ನಿಭಾಯಿಸುವುದು ಸುಲಭ ಮೂರನೆಯದೇ ಕೊಂಚ ಕಷ್ಟವಾಗಿದ್ದು.
ಕವಿಯಿಂದ ಅಭಿನಯ ಹೊರ ತೆಗೆದ ನಿರ್ದೇಶಕ ಕೆ. ನರೇಂದ್ರಬಾಬು
ಅಂತರ ಬಿಟ್ಟು ಮತ್ತಿನ್ನೇನು ಸವಾಲು?
ನಾಟಕದಲ್ಲಿ ಎದುರಿಗೆ ಒಬ್ಬ ಇದ್ದೇ ಇರುತ್ತಾನೆ. ಇಲ್ಲಿ ಕಲ್ಪಿಸಿಕೊಂಡು ಮಾತನಾಡಬೇಕು. ಆ ತನ್ಮಯತೆ ಬರಿಸಿಕೊಳ್ಳಬೇಕು. ಹೊಸ ರೀತಿಯ ಕಲೆ ಇದು. ಇದಕ್ಕೆ ಅಡಾಪ್ಟ್ ಆಗಬೇಕಿತ್ತು. ಕ್ಯಾಮೆರಾ ಕಡೆ ನೋಡುವಂತಿಲ್ಲ. ಏನೋ ಮಾತನಾಡುವಾಗ ದೃಷ್ಟಿ ಬದಲಾಯಿಸುವಂತಿಲ್ಲ..
ನೀವು ನಿರ್ದೇಶಕರಾಗಿ ಕೆಲಸ ಮಾಡಿದವರು. ಅದು ನಿಮಗೆಷ್ಟು ಸಹಕಾರಿಯಾಯಿತು?
ಬಹಳಷ್ಟು. ಅದರಿಂದಲೇ ನಾನು ಈ ಧೈರ್ಯ ಮಾಡಿದ್ದು .
ನಿರ್ದೇಶಕನಾಗಿ ಹೇಳುವುದಕ್ಕೂ ನಟನಾಗಿ ನಿರ್ವಹಿಸುವುದಕ್ಕೂ ಅನೇಕ ವ್ಯತ್ಯಾಸ ಇದೆ ಅಲ್ಲವೇ ?
ಖಂಡಿತ. ನಿರ್ದೇಶಕ ತನ್ನ ನಿರೀಕ್ಷೆಗಳನ್ನು ನಟನ ಮುಂದಿಡುತ್ತಾನೆ. ಅದನ್ನು ಸಾಕಾರಗೊಳಿಸುವುದು ನಟ. ಆ ನಿರೀಕ್ಷೆಯನ್ನು ಮುಟ್ಟುವುದು ನಟನ ಸವಾಲು.
ಈ ಪಾತ್ರ ಹೇಗಿತ್ತು? ನಿಮಗೆ ತೃಪ್ತಿ ಕೊಟ್ಟಿತಾ?
ತುಂಬಾ ತೃಪ್ತಿ ಕೊಟ್ಟಿದೆ. ನನ್ನ ಸ್ವಭಾವಕ್ಕೆ ಹೊಂದಿಕೊಂಡಿದ್ದರಿಂದ ನನಗೆ ತುಂಬಾ ಕಷ್ಟ ಆಗಲಿಲ್ಲ. ಹೊಸಹೊಸ ಅನುಭವಗಳು ದಕ್ಕಿವೆ. ಡಬ್ಬಿಂಗ್ ಅನುಭವ ಬಹಳ ಕುತೂಹಲಕಾರಿಯಾಗಿತ್ತು, ಅಷ್ಟೇ ಕಷ್ಟ ಕೂಡಾ. ಶೂನ್ಯದಲ್ಲಿ ಆಕೃತಿ ನಿರ್ಮಾಣ ಮಾಡಿದ ಹಾಗೆ ಸಿನಿಮಾದಲ್ಲಿ ನಟನೆ. .
ನಿಮ್ಮ ಮುಂದಿನ ಪಯಣದ ಬಗ್ಗೆ? ಮತ್ತೆ ನೀವು ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸುತ್ತೀರಾ? ಈ ಪಯಣ ಮುಂದುವರಿಯುತ್ತದೆಯೇ?
ಖಂಡಿತಾ ಇಲ್ಲ. ನನಗೆ ಅಭಿನಯಿಸುವ ಯಾವುದೇ ಇರಾದೆ ಇಲ್ಲ. ಆದರೆ ಮತ್ತೊಂದು ಸಿನಿಮಾ ಮಾಡಬೇಕು ಎಂಬ ಆಸೆ ಖಂಡಿತವಾಗಿಯೂ ಇದೆ.. ಏಕೆಂದರೆ ಅದೊಂದು ವಂಡರ್ಫುಲ್ ಎಕ್ಸ್ಪೀರಿಯೆನ್ಸ್. ಬೇರೆಯವರಿಂದ ಅಭಿನಯ ತೆಗೆಸುವುದಕ್ಕೂ ನಾನೇ ಅಭಿನಯ ಮಾಡುವುದಕ್ಕೂ ವ್ಯತ್ಯಾಸ ಇದೆ. ಇನ್ನು ಅಭಿನಯ ಕಷ್ಟ.