22.2 C
Karnataka
Sunday, June 14, 2026
    Home Blog Page 117

    ಕಾಲದೊಂದೊಂದೇ ಹನಿ…


    ಕನ್ನಡದ ಹೆಸರಾಂತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ ಕಾಲದೊಂದೊಂದೇ ಹನಿ… ಪುಸ್ತಕ ಇಂದು ಇನ್ನು ಸ್ವಲ್ಪ ಹೊತ್ತಿನಲ್ಲಿ ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಲೋಕಾರ್ಪಣೆ ಆಗಲಿದೆ. ಈ ಕೃತಿಯ ಒಂದು ಅಧ್ಯಾಯವನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.


    ಅಧ್ಯಾಯ 27. ಮನೆ

    ಕುವೆಂಪು ಅವರು ತಮ್ಮ ‘ಅನಿಕೇತನ’ ಪದ್ಯದಲ್ಲಿ ‘ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು’ ಎನ್ನುವ ಸಾಲುಗಳನ್ನು ಬರೆಯುತ್ತಾರೆ. ನಾವೆಲ್ಲ ಸಾಮಾನ್ಯವಾಗಿ ಮಕ್ಕಳಾಗಿದ್ದಾಗ ಹಿರಿಯರು ಇದನ್ನು ಮಾಡಬೇಡ ಎಂದು ಹೇಳಿದ್ದನ್ನೇ ಮಾಡುವ ಆಸೆಯಿದ್ದ ಹಾಗೆ, ನನಗೆ ಮನೆಯನ್ನು ಕಟ್ಟಿ ನೋಡುವ ಒಂದು ಆಸೆ ನನ್ನಲ್ಲಿ ಹುಟ್ಟಿಕೊಂಡಿತು.

    ನಾವು ವಾಸಿಸುತ್ತಿದ್ದ ಮನೆ ಜೀರ್ಣಾವಸ್ಥೆಯನ್ನು ತಲುಪಿ, ಯಾವಾಗ ನೆಲಕ್ಕೆ ಉರುಳಿ ಬೀಳಬಹುದು ಎನ್ನುವ ಭಯದಲ್ಲಿಯೇ ಬದುಕುವ ಪರಿಸ್ಥಿತಿಯಿತ್ತು. ಮನೆಯ ಮಾಡಿನ ಬಿದಿರಿನ ಗಳಗಳೆಲ್ಲ ತುಂಡಾಗಿ ಒಂದೊಂದಾಗಿ ಬೀಳಲು ಆರಂಭವಾಗಿದ್ದವು. ಮಾಡಿಗೆ ಹೊದಿಸಿದ್ದ ಮುಳಿಹುಲ್ಲು ಆಗಾಗ ಹಾರಿಹೋಗಿ, ಶಿಶುನಾಳ ಶರೀಫರು ‘ಸೋರುತಿಹುದು ಮನೆಯ ಮಾಳಿಗೆ’ ಎನ್ನುವ ಪದ್ಯವನ್ನು ಇಂತಹ ಮನೆಯನ್ನು ನೋಡಿಯೇ ಬರೆದಿರಬಹುದು ಎನ್ನುವ ಕಲ್ಪನೆ ಕೂಡಾ ನನಗೆ ಬಂದಿತ್ತು. ಮನೆಗೆ ಹೊದಿಸುತ್ತಿದ್ದ ಮುಳಿಹುಲ್ಲು ಕೂಡಾ ಆಗ ಕಡಿಮೆಯಾಗುತ್ತಾ ಬಂದಿತ್ತು ಹಾಗೂ ಅದರ ಮೌಲ್ಯ ವರ್ಷವರ್ಷವೂ ಜಾಸ್ತಿಯಾಗುತ್ತಲೇ ಇತ್ತು. ಲಭ್ಯತೆ ಕೂಡಾ ಕಡಿಮೆಯಾಗಿದ್ದಲ್ಲದೆ, ಅದನ್ನು ಹೊದಿಸುವ ಕೂಲಿಯೂ ಪ್ರತಿವರ್ಷ ಹೆಚ್ಚುತ್ತಲೇ ಇತ್ತು.

    ಇಂತಹ ಪರಿಸ್ಥಿತಿಯಲ್ಲಿ ಹೇಗಾದರೂ ಒಂದು ಗಟ್ಟಿಯಾದ ಒಂದು ಮನೆ ಕಟ್ಟಿಕೊಳ್ಳಬೇಕು ಯೋಚನೆ ನನಗೆ ಬಂತು. ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಸಲುವಾಗಿ ವರ್ಷವರ್ಷ ಒಂದೊಂದೇ ಕೆಲಸಗಳನ್ನು ಮಾಡುತ್ತ ಬಂದೆ. ಮೊದಲನೆಯ ವರ್ಷ ಮನೆಯ ಜಾಗಕ್ಕೆ ಬೇಕಾದ ನೆಲವನ್ನು ಸಮತಟ್ಟುಗೊಳಿಸಿ, ಅದರಿಂದ ತೆಗೆದ ಮಣ್ಣನ್ನು ತೋಟಕ್ಕೆ ಹಾಕಿಸಿದೆ. ಅದರಿಂದಾಗಿ ಮನೆಯ ಜಾಗ ಸಿದ್ಧವಾಗಿದ್ದರ ಜೊತೆಗೆ, ತೋಟಕ್ಕೆ ಹೊಸ ಮಣ್ಣು ಸಹ ದೊರಕಿತು. ನಂತರ ಒಂದು ಕೆರೆ ತೆಗೆದು ತೋಟಕ್ಕೆ ನೀರು ಹಾಯಿಸಲು ಒಂದು ಪಂಪ್ ಹಾಕಿಸಿ, ಮನೆಗೆ ಸಮತಟ್ಟು ಮಾಡಿದ ಜಾಗದಲ್ಲಿ ಒಂದು ನೀರಿನ ಟ್ಯಾಂಕ್ ಮಾಡಿಸಿದೆ. ಅಷ್ಟಲ್ಲದೇ ಮನೆಗೆ ಒಂದು ಕಚ್ಚಾಮಾರ್ಗದ ವ್ಯವಸ್ಥೆಯನ್ನು ಪೂರ್ವಭಾವಿಯಾಗಿ ಮಾಡಿಸಿದೆ. ಹಳೆಯ ಮನೆಗೆ ಬರುವಾಗ ಹೊಳೆ ಮತ್ತು ಸಂಕವನ್ನು ದಾಟಿಕೊಂಡು ಬರಬೇಕಾಗಿತ್ತು. ಹೊಸ ಮನೆಯ ಜಾಗಕ್ಕೆ ಸ್ವಲ್ಪ ಸುತ್ತಿ ಬಳಸಿ ಮನೆಯವರೆಗೂ ಮಾರ್ಗದ ವ್ಯವಸ್ಥೆಯನ್ನು ಮಾಡಿಸಿದೆ. ಅದರ ನಂತರದ ವರ್ಷ ಮನೆಗೆ ಬೇಕಾಗುವಂತಹ ಕೆಂಪು ಕಲ್ಲು ಕಡಿಸಿ, ಸುಮಾರು ಏಳು ಸಾವಿರ ಕಲ್ಲುಗಳನ್ನು ಸಂಗ್ರಹ ಮಾಡಿ ಇಟ್ಟುಕೊಂಡೆ.

    ಇಷ್ಟೆಲ್ಲ ತಯಾರಿಗಳಾಗಿದ್ದರೂ ಮನೆ ಕಟ್ಟಿಸಲು ಬೇಕಾಗುವ ಧೈರ್ಯ ನನಗೆ ಬಂದಿರಲಿಲ್ಲ. ಅದಕ್ಕೆ ಬೇಕಾದ ಬಂಡವಾಳ ನನ್ನ ಹತ್ತಿರ ಇರಲಿಲ್ಲ. ಆ ಸಮಯದಲ್ಲಿ ನಮ್ಮ ಕುಟುಂಬದವರೊಬ್ಬರ ಮನೆಯನ್ನು ಕಟ್ಟಿಸಲಿಕ್ಕೆ ಮಂಗಳೂರಿನಿಂದ ಜಗದೀಶ್ ಎನ್ನುವ ಕಾಂಟ್ರಾಕ್ಟರ್ ಒಬ್ಬರು ಬಂದಿದ್ದರು. ನಾನು ಅವರನ್ನು ಭೇಟಿ ಮಾಡಲು ಹೋದವನು ನನಗೂ ಒಂದು ಮನೆ ಆಗಬೇಕಿತ್ತು ಎಂದು ಹೇಳಿದೆ. ನಾಲ್ಕು ದಿನ ಕಳೆದ ಮೇಲೆ ಅವರು ನಮ್ಮ ಮನೆಗೆ ನನ್ನನ್ನು ಹುಡುಕಿಕೊಂಡು ಬಂದರು. ಮನೆ ಬೇಕು ಎಂದು ಹೇಳಿದ್ದಿರಲ್ಲ, ಮಾಡಿಸಿಬಿಡೋಣ ಎಂದು ಹೇಳಿದರು. ಆಗ ನಾನು ಮನೆಯ ಪೂರ್ವಭಾವಿ ತಯಾರಿಗಳೆಲ್ಲ ಆಗಿವೆ, ಆದರೆ ಉಳಿದ ಕೆಲಸಕ್ಕೆ ನನ್ನಲ್ಲಿ ಹಣವಿಲ್ಲ ಎಂದು ನಾನು ಅವರ ಹತ್ತಿರ ಹೇಳಿದೆ. ಅವರು ಎಷ್ಟು ಹಣ ಇದೆ ಎಂದು ಕೇಳಿದಾಗ ಇಪ್ಪತ್ತು ಸಾವಿರ ರೂಪಾಯಿಗಳಿರುವುದಾಗಿ ಹೇಳಿದೆ. ನನ್ನ ಜಮೀನಿನ ಸ್ವಲ್ಪ ಭಾಗವನ್ನು ಸರಕಾರ ಮಾರ್ಗ ಮಾಡುವ ಸಲುವಾಗಿ ವಶಪಡಿಸಿಕೊಂಡು ಪರಿಹಾರವಾಗಿ ನೀಡಿದ್ದ ಹಣವನ್ನು ನಾನು ಬ್ಯಾಂಕಿನಲ್ಲಿ ಇಟ್ಟಿದ್ದೆ. ಆ ಹಣಕ್ಕೆ ಸ್ವಲ್ಪ ಬಡ್ಡಿ ಸೇರಿ ಅದು ಇಪ್ಪತ್ತು ಸಾವಿರ ಆಗಿತ್ತು. ಅದರ ಜೊತೆಗೆ ಆ ವರ್ಷದ ಅಡಿಕೆ ಕೂಡಾ ಇತ್ತು. ಅಡಿಕೆಗೆ ಬೆಲೆ ಜಾಸ್ತಿ ಇರದಿದ್ದರೂ ಸ್ವಲ್ಪ ಹಣ ಅದರಿಂದ ಸಿಗುತ್ತಿತ್ತು. ಅದನ್ನು ಅವರಿಗೆ ಹೇಳಿ ಸುಮಾರು ಒಂದು ಲಕ್ಷ ಖರ್ಚಿನಲ್ಲಿ ಒಂದು ಚಿಕ್ಕ ಹಂಚಿನ ಮನೆಯನ್ನು ಮಾಡಲು ಸಾಧ್ಯವಾದರೆ ಮಾಡಿಕೊಡಿ ಎಂದು ಹೇಳಿದೆ. ಆಗ ಅವರು ಹಂಚಿನ ಮನೆಗೆ ಮರವನ್ನು ಕೊಂಡುಕೊಳ್ಳಲು ತುಂಬಾ ಖರ್ಚಾಗುವ ಕಾರಣ ಕಾಂಕ್ರೀಟ್ ಮನೆಯನ್ನೇ ಮಾಡುವುದು ಒಳ್ಳೆಯದು ಎಂದು ಹೇಳಿದರು. ಈಗ ನಿಮ್ಮ ಹತ್ತಿರ ಎಷ್ಟು ದುಡ್ಡು ಇದೆಯೋ ಅದಕ್ಕೆ ತಕ್ಕ ಹಾಗೆ ಕಾಮಗಾರಿಯನ್ನು ಆರಂಭಿಸೋಣ, ಆಮೇಲೆ ಆದಾಗ ಅದನ್ನು ಮುಂದುವರಿಸೋಣ ಎಂದು ಜಗದೀಶ್ ಅವರು ನನಗೆ ಧೈರ್ಯವನ್ನು ತುಂಬಿದರು. ಸರಿ ಎಂದು ನಾನು ಒಪ್ಪಿಕೊಂಡು ಇಪ್ಪತ್ತು ಸಾವಿರ ರೂಪಾಯಿಯಲ್ಲಿ ಜಲ್ಲಿ, ಸಿಮೆಂಟುಗಳನ್ನು ತಂದು ಕೆಲಸ ಆರಂಭ ಮಾಡಿದೆವು.

    ಕೆಲಸ ಮುಂದುವರೆದಂತೆ ನಮಗೆ ಹಣಕಾಸಿನ ಕಷ್ಟಗಳು ಆರಂಭವಾದವು. ಆಗ ಸುಳ್ಯದ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಂಡೆ. ಇಪ್ಪತ್ತೈದು ಸಾವಿರದಲ್ಲಿ ಪಾಲು ಬಂಡವಾಳ ಕಳೆದು ಇಪ್ಪತ್ಮೂರು ಸಾವಿರ ರೂಪಾಯಿ ಕೈಗೆ ಸಿಕ್ಕಿತು. ನನ್ನ ತಮ್ಮನ ಹೆಸರಿನಲ್ಲಿ ಇನ್ನೊಂದು ಸಾಲ ಮಾಡಿ ಅದರ ಇಪ್ಪತ್ಮೂರು ಸಾವಿರವನ್ನು ಸೇರಿಸಿಕೊಂಡೆ. ಉಳಿದ ಹಣವನ್ನು ಹೊಂದಿಸುವುದಕ್ಕಾಗಿ ಜಿ ಪಿ ಎಫ್ (ಗವರ್ನ್ಮೆಂಟ್ ಪ್ರೊವಿಡೆಂಟ್ ಫಂಡ್) ನಿಂದ ಸಾಲವನ್ನು ಪಡೆದುಕೊಂಡೆ. ನನ್ನಲ್ಲಿದ್ದ ಎಲ್ ಐ ಸಿ ಪಾಲಿಸಿಗಳಿಂದಲೂ ಸ್ವಲ್ಪ ಸಾಲ ಸಿಕ್ಕಿತು. ನನ್ನ ತಮ್ಮನ ಹತ್ತಿರವೂ ಅವನ ಹತ್ತಿರ ಇದ್ದ ಎಲ್ ಐ ಸಿ ಪಾಲಿಸಿಗಳಿಂದ ಸಾಲವನ್ನು ತೆಗೆಯಲು ಹೇಳಿದಾಗ, ಅವನು ಅಷ್ಟು ಆಸಕ್ತಿಯನ್ನು ತೋರಿಸಲಿಲ್ಲ. ನಮ್ಮ ಮನೆಯ ಹತ್ತಿರವಿದ್ದ ವಿಜಯಾ ಬ್ಯಾಂಕ್ ಮ್ಯಾನೇಜರ್ ಪರಿಚಯ ನನಗೆ ಇತ್ತು. ಅವರ ಹತ್ತಿರ ಹೋಗಿ ಸಾಲವನ್ನು ಕೊಡಲು ಸಾಧ್ಯವಿದೆಯೇ ಎಂದು ವಿಚಾರಿಸಿದೆ. ಮನೆ ಕಟ್ಟುತ್ತಿದ್ದ ಜಾಗದ ಭೂ ಪರಿವರ್ತನೆ ಆಗಬೇಕಾಗಿದ್ದ ಕಾರಣ ಮನೆಯ ಸಲುವಾಗಿ ಸಾಲ ಕೊಡಲು ಅಗವುದಿಲ್ಲ, ಬೇರೆ ಯಾವುದಾದರೂ ಸಾಲ ಕೊಡಲು ಸಾಧ್ಯವಿದೆಯೇ ಎಂದು ನೋಡುತ್ತೇನೆ ಎಂದು ಅವರು ಹೇಳಿದರು. ಆಮೇಲೆ ಅವರು ತೋಟಕ್ಕೆ ಮಣ್ಣು ಹಾಕುವ ಕಾರಣಕ್ಕೆ ಕೃಷಿ ಅಭಿವೃದ್ಧಿಯ ಹೆಸರಿನಲ್ಲಿ ಸ್ವಲ್ಪ ಸಾಲವನ್ನು ಮಂಜೂರು ಮಾಡಿದರು. ಹೀಗೆ ಬೇರೆಬೇರೆ ಕಡೆಗಳಿಂದ ಹಣದ ವ್ಯವಸ್ಥೆಯನ್ನು ಮಾಡಿಕೊಂಡರೂ, ಒಂದು ಲಕ್ಷದಲ್ಲಿ ಮುಗಿಸಬೇಕೆಂದುಕೊಂಡಿದ್ದ ಮನೆಯ ಖರ್ಚು ಏರುತ್ತಲೇ ಹೋಯಿತು. ಹಾಗೆ ಎರಡು-ಎರಡೂವರೆ ಲಕ್ಷ ದಾಟಿದ ಖರ್ಚನ್ನು ನೋಡಿದ ನನಗೆ ನಿಜವಾದ ಮನೆ ಕಟ್ಟಿಸುವ ಕಷ್ಟ ಅರ್ಥವಾಯಿತು.

    ಆರಂಭ ಮಾಡಿದ ಕೆಲಸವನ್ನು ಮಧ್ಯದಲ್ಲಿ ನಿಲ್ಲಿಸಲಾಗದೇ ಸಾಧ್ಯವಿದ್ದ ಎಲ್ಲ ಮೂಲಗಳಿಂದ ಸಾಲವನ್ನು ಪಡೆದುಕೊಂಡೆ. ಮನೆ ಕೆಲಸ ಮುಗಿಯುತ್ತಿದ್ದಂತೆಯೇ ಹಣಕಾಸಿನ ಅಡಚಣೆಯೂ ಜಾಸ್ತಿಯಾಗುತ್ತ ಹೋಯಿತು. ಮನೆಯ ಫ್ಲೋರಿಂಗಿಗೆ ಜಗದೀಶ್ ಅವರು ಹೇಳಿದಂತೆ ಕಡಪಾ ಮತ್ತು ಶಾಬಾದ್ ಕಲ್ಲುಗಳನ್ನು ಹಾಕುವುದು ಎಂದು ನಿರ್ಧಾರ ಮಾಡಿದೆವು. ಧಾರವಾಡದಲ್ಲಿದ್ದ ನನ್ನ ಭಾವನಿಗೆ ಫೋನ್ ಮಾಡಿ ಕೇಳಿದಾಗ ಅವರು ಅಲ್ಲಿಗೆ ಬಂದರೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು. ನಾನು ಜಗದೀಶ್ ಅವರೊಂದಿಗೆ ಧಾರವಾಡಕ್ಕೆ ಹೋಗಿ, ಹುಬ್ಬಳ್ಳಿಯಿಂದ ನಮಗೆ ಬೇಕಾದ ಕಲ್ಲುಗಳನ್ನು ತಂದೆವು. ಅಷ್ಟಾಗಿಯೂ ಮನೆ ಕಟ್ಟಿಸುವ ಕೆಲಸದ ಖರ್ಚು ಮುಗಿದಿರಲಿಲ್ಲ. ನಮ್ಮ ಮನೆಯ ಸಮೀಪದ ಶ್ರೀಮಂತ ಬಂಧುಗಳೊಬ್ಬರ ಹತ್ತಿರ ಐದು ಸಾವಿರ ರೂಪಾಯಿಗಳನ್ನು ಹದಿನೈದು ದಿನಗಳ ಸಲುವಾಗಿ ಸಾಲವಾಗಿ ತೆಗೆದುಕೊಂಡು ಬಂದೆ. ಹದಿನೈದು ದಿನಗಳು ಕಳೆದ ಮೇಲೆ ಅವರ ಸಾಲವನ್ನು ಮರಳಿ ಕೊಡಲಾಗದ ಪರಿಸ್ಥಿತಿಯಲ್ಲಿ ಅವರ ಹತ್ತಿರ ಹೋಗಿ ಕಷ್ಟವನ್ನು ಹೇಳಿಕೊಂಡೆ. ಅವರು ಪರವಾಗಿಲ್ಲ ತಡವಾಗಿಯೇ ಕೊಡಿ ಎಂದು ಹೇಳಿದರು. ಅಷ್ಟೇ ಅಲ್ಲದೆ ಮನೆ ಕೆಲಸ ಮುಗಿದಮೇಲೆ ಹಣವನ್ನು ಮರಳಿ ಕೊಡುವಾಗ ಬಡ್ಡಿಯ ಹಣವನ್ನು ಕೂಡಾ ಅವರು ತೆಗೆದುಕೊಳ್ಳಲಿಲ್ಲ. ಮತ್ತೊಬ್ಬ ಶ್ರೀಮಂತ ಬಂಧುಗಳಲ್ಲಿ ಕೇಳಿದಾಗ ಅವರು ಕಷ್ಟದಲ್ಲಿ ಐದು ಸಾವಿರ ಕೊಟ್ಟು, ಹದಿನೈದು ದಿನಗಳೊಳಗೆ ಹಿಂದಿರುಗಿಸಬೇಕೆಂದು ಆದೇಶಿಸಿದರು. ಹದಿನೈದು ದಿನಗಳ ನಂತರ ಅವರ ಹಣವನ್ನು ಅವರ ಸೂಚನೆಯಂತೆ ಹಿಂದಿರುಗಿಸಿದೆ. ಎರಡನೇ ಶ್ರೀಮಂತರು ಹಣದೊಂದಿಗೆ ಬಡ್ಡಿಯನ್ನೂ ತೆಗೆದುಕೊಂಡರು. ನಮ್ಮವರೆಲ್ಲ ಹೀಗೆ ಸಮಯದ ಗಡುವು, ಬಡ್ಡಿಯ ಲೆಕ್ಕಾಚಾರದಲ್ಲಿ ಹಣ ಕೊಟ್ಟರೆ, ಬ್ರಾಹ್ಮಣೇತರರೊಬ್ಬರು ನಿಮಗೆ ಯಾವಾಗ ಬೇಕಾದರೂ ಹಣವನ್ನು ಕೇಳಿ ತೆಗೆದುಕೊಂಡು ಹೋಗಿ, ಅನುಕೂಲವಾದಾಗ ಮರಳಿ ಕೊಡಿ ಎಂದು ಹೇಳಿ ಆಗಾಗ ಹಣವನ್ನು ಕೊಟ್ಟು ಸಹಾಯ ಮಾಡಿದ್ದರು. ಹೀಗೆ ಕಷ್ಟಪಟ್ಟು ಹಣವನ್ನು ಹೊಂದಿಸಿ ಸುಮಾರು ಮೂರೂವರೆ ಲಕ್ಷ ಖರ್ಚು ಮಾಡಿ ಮನೆಯನ್ನು ಕಟ್ಟಿ ಮುಗಿಸಿದೆ.

    ಅದೇ ಸಮಯದಲ್ಲಿ ಚೊಕ್ಕಾಡಿಯ ರಾಮ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿತ್ತು. ಅದರಲ್ಲಿ ಊರಿನ ಕೆಲವು ಹಿರಿಯರೆಲ್ಲ ಸೇರಿಕೊಂಡು ನನಗೆ ಒಂದು ಸನ್ಮಾನ ಮಾಡಬೇಕು ಎಂದು ನಿಶ್ಚಯ ಮಾಡಿಕೊಂಡರು. ಆ ಸನ್ಮಾನ ಸಮಾರಂಭಕ್ಕೆ ಲಕ್ಷ್ಮೀಶ ತೋಳ್ಪಾಡಿ, ಬನ್ನಂಜೆ ಗೋವಿಂದಾಚಾರ್ಯ, ಖ್ಯಾತ ಯಕ್ಷಗಾನ ಆರ್ಥಧಾರಿ ಪ್ರಭಾಕರ ಜೋಶಿ ಅವರೆಲ್ಲ ಬಂದಿದ್ದರು. ಜೋಶಿಯವರು ಅಭಿನಂದನಾ ಭಾಷಣ ಮಾಡುತ್ತ ‘ನಮ್ಮ ಚೊಕ್ಕಾಡಿಯವರಿಗೆ ಸರಸ್ವತಿ ಒಳಿದಿದ್ದಾಳೆ, ಆದರೆ ಲಕ್ಷ್ಮಿ ಇನ್ನೂ ಒಲಿದಿಲ್ಲ’ ಎಂದು ಹೇಳಿದರು. ನಾನು ತಕ್ಷಣ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಲಕ್ಷ್ಮಿಯನ್ನು ತೋರಿಸಿ ‘ಲಕ್ಷ್ಮಿ ಕೂಡಾ ಒಲಿದಿದ್ದಾಳೆ, ನನ್ನ ಪಕ್ಕದಲ್ಲೇ ಕುಳಿತುಕೊಂಡಿದ್ದಾಳೆ, ಹಾಗಾಗಿ ನನ್ನೊಂದಿಗೆ ಇಬ್ಬರೂ ಇದ್ದಾರೆ’ ಎಂದು ಹೇಳಿದೆ. ಸಂಜೆ ಸಮಾರಂಭ ಮುಗಿದ ಮೇಲೆ ಅವರೆಲ್ಲರೂ ಬಂದು ಹೊಸ ಮನೆಯ ಕಾಮಗಾರಿಯನ್ನು ನೋಡಿ ಹರಸಿದರು. 1991 ನೇ ಇಸವಿಯ ಮೇ ಮಧ್ಯಭಾಗದಲ್ಲಿ ಹೊಸ ಮನೆಯ ಒಕ್ಕಲು ಆಯಿತು. ಆದರೂ ಕುವೆಂಪು ಅವರ ‘ಕೊನೆಯನೆಂದೂ ಮುಟ್ಟದಿರು’ ಸಾಲಿನಂತೆ, ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿತ್ತು. ಹಳೆಯ ಮನೆಯಲ್ಲಿದ್ದ ಕೆಲವೇ ಕೆಲವು ಮರಗಳನ್ನು ಹೊಸ ಮನೆಗೆ ಬಳಸಿಕೊಂಡು, ಸಂಬಂಧಿಕರ ಮನೆಯಲ್ಲಿದ್ದ ಹಳೆಯ ಮರಗಳನ್ನು ತೆಗೆದುಕೊಂಡು ಬಂದು ಹೇಗೋ ಕಷ್ಟಪಟ್ಟು ಮನೆಯ ಕೆಲಸವನ್ನು ಮಾಡಿ ಮುಗಿಸಿದೆ. ಮನೆ ಕಟ್ಟಿ ಮುಗಿದಿದ್ದರೂ ನಂತರದ ತಾಪತ್ರಯಗಳೆಲ್ಲ ಹಾಗೆಯೇ ಉಳಿದಿದ್ದವು. ಮನೆ ಕಟ್ಟಲು ಮಾಡಿದ್ದ ಸಾಲವನ್ನೆಲ್ಲ ಸಂಬಳದ ದುಡ್ಡಿನಿಂದ, ಅಲ್ಪಸ್ವಲ್ಪ ಕೃಷಿಯ ಆದಾಯದಿಂದ ತೀರಿಸಬೇಕಾಗಿತ್ತು. ಸುಮಾರು ಹತ್ತು ವರ್ಷಗಳ ಕಷ್ಟದ ನಂತರ ಎಲ್ಲ ಸಾಲವನ್ನೂ ತೀರಿಸಿಕೊಂಡೆ. ಆದರೂ ತೊಂದರೆಯಿಲ್ಲದ ಒಂದು ನೆಲೆ ನಮ್ಮ ಮನೆಯವರಿಗೆ ಸಿಕ್ಕಿತು ಎನ್ನುವುದೇ ಒಂದು ಸಂತೋಷದ ಸಂಗತಿ.

    ಆ ಸಂದರ್ಭದಲ್ಲಿ ಬಂದ ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡ ನನ್ನ ಹೆಂಡತಿ ಮತ್ತು ತಾಯಿಯವರ ಸಹಕಾರ ತುಂಬಾ ದೊಡ್ಡದು ಎನ್ನುವುದು ನನ್ನ ಭಾವನೆ. ಆಗ ಮನೆ ನೋಡಲಿಕ್ಕೆ ಬಂದಿದ್ದ ನಮ್ಮ ಊರಿನವರೊಬ್ಬರು ‘ಅಯ್ಯೋ, ಇಷ್ಟು ದೊಡ್ಡ ಮನೆ ನಿನಗೆ ಬೇಕಿತ್ತಾ’ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ಆ ಮಾತು ಕೇಳಿ ನನಗೆ ಬಹಳ ಆಶ್ಚರ್ಯವಾಗಿತ್ತು. ನಾವು ಮೂರು ಜನ ಅಣ್ಣ-ತಮ್ಮಂದಿರಿಗೆ ಅಗತ್ಯವಿದ್ದಷ್ಟು ದೊಡ್ಡ ಮನೆ ಮಾತ್ರ ನಮ್ಮದಾಗಿತ್ತು. ಹಾಗೆ ನನ್ನನ್ನು ಪ್ರಶ್ನಿಸಿದವರ ದೊಡ್ಡ ಮನೆ ಈಗಲೂ ಇದೆ ಎನ್ನುವುದು ಕೂಡಾ ಸತ್ಯದ ಸಂಗತಿ. ಅವರ ಆ ಪ್ರಶ್ನೆ ಮುಂದೆ ನನ್ನ ಬದುಕಿನಲ್ಲಿ ಯಾವ ತಿರುವುಗಳನ್ನೆಲ್ಲ ಪಡೆದುಕೊಂಡು ದಾಂಧಲೆಯನ್ನೆಬ್ಬಿಸಿತು ಎಂಬುದು ನನ್ನ ಬದುಕಲ್ಲಿ ಮರೆಯಲಾಗದ ಸಂಗತಿಯಾಗಿದೆ. ಅದರ ವಿವರ ಮುಂದೆ ಬರಲಿದೆ.


    ಚೊಕ್ಕಾಡಿ ಅವರ ಭಾವಚಿತ್ರ ಸೆರೆಹಿಡಿದದ್ದು ಶಿವ ಸುಬ್ರಹ್ಮಣ್ಯ

    ಕುವೆಂಪು ಸಾಹಿತ್ಯದಲ್ಲಿ ಜೀವ ಸೆಲೆ ತುಂಬಿದ ವಿಶ್ವಮಾನವ

    ಕುವೆಂಪು ಸಾಹಿತ್ಯದಲ್ಲಿ ಜೀವ ಸೆಲೆ ತುಂಬಿದ ವಿಶ್ವಮಾನವ. ಜನ ಸಾಮಾನ್ಯರ ಒಡನಾಡಿಯಾಗಿ ಬದುಕಿದ ಚೇತನ. ಅರಿಷಡ್ವರ್ಗಗಳನ್ನು ಮೇರೆ ಮೀರದಂತೆ ನಿಗ್ರಹಿಸಿದ ದೇವತಾ ಮನುಷ್ಯ. ಕುವೆಂಪು ಸಾಹಿತ್ಯವನ್ನು ಮಕ್ಕಳು, ಮೊಮ್ಮಕ್ಕಳಿಗೆ ರುಚಿಸುವಂತೆ ಮಾಡಿದಲ್ಲಿ ಅನಿಕೇತನವಾದೀತು. ಇಲ್ಲವಾದರೆ ವಿಗ್ರಹ ಪೂಜೆಯ ಬ್ರಹ್ಮರಥೋತ್ಸವವಾಗಿ ಉಳಿಯಲಿದೆ ಎಂದು ಸಾಹಿತಿ ಡಾ.ಆನಂದ ಋಗ್ವೇದಿ ತಿಳಿಸಿದರು.

    ಸಾಹಿತಿ ಫೈಜ್ನಟ್ರಾಜ್ ನೇತೃತ್ವದಲ್ಲಿ ಪ್ರತಿ ತಿಂಗಳ ಕೊನೆ ಭಾನುವಾರ ಸಂತೇಬೆನ್ನೂರಿನಲ್ಲಿ ನಡೆಯುವ ಮಾಸದ ಮಾತು ಸಾಹಿತ್ಯದ ಕಾರ್ಯಕ್ರಮದಲ್ಲಿ ಈ ಸಾಲಿನ ಮೇರು ಕವಿಗಳ ಪರಿಚಯ ಕಾರ್ಯಕ್ರಮದಲ್ಲಿ ಕುವೆಂಪು ಕುರಿತು ದಾವಣಗೆರೆ ಸಾಹಿತಿ ಆನಂದ ಋಗ್ವೇದಿ ಮಾತನಾಡಿದರು.

    ಕುವೆಂಪು ಸಾಹಿತ್ಯ ಟೀಕಿಸಲು ಸಾವಿರ ವಿಷಯಗಳಿದ್ದರೆ ಪ್ರೀತಿಸಲು ಲಕ್ಷ ವಿಷಯಗಳಿವೆ. ಬೆಂದ್ರೆಗೆ 46 ವಯಸ್ಸಿನಲ್ಲಿಯೂ ಕಾಯಂ ಕೆಲಸವಿಲ್ಲ ಎಂಬ ಬೇಸರ ಕುವೆಂಪು ಅವರಿಗಿತ್ತು. ಬರವಣಿಗೆ ಹಾಗೂ ಓದಿನಲ್ಲಿ ಶಿಸ್ತುಬದ್ಧ ಜೀವನ ಶೈಲಿ ರೂಢಿಸಿಕೊಂಡಿದ್ದ ಮಹಾನ್ ಚೇತನ ಕುವೆಂಪು ಎಂದು ಬಣ್ಣಿಸಿದರು.

    ಮೇರು ಕವಿ ಕುವೆಂಪು ಮಕ್ಕಳಿಗೆ ಕಿಂದರ ಜೋಗಿ ಪರಿಚಯಿಸಿ, ಪಂಡಿತೋತ್ತಮರಿಗೆ ರಾಮಯಣದರ್ಶನಂವನ್ನು ಬರೆಯುವ ವೈಶಿಷ್ಟತೆ ಇತ್ತು. ಕವಿ ಪ್ರತಿಭೆ ದೃಷ್ಟಿಯಿಂದ ಸಣ್ಣ ಸಂಗತಿಯನ್ನು ವಿಶೇಷ ಚಿತ್ರಿಸುವ ಕೌಶಲ ಅಡಗಿತ್ತು.

     ಕುವೆಂಪು ಮನೆ ದೊಡ್ಡ ಮನೆತನ. ಚಿಕ್ಕ ವಯಸ್ಸಿನಲ್ಲೇ ತಾಯಿ ಕಳೆದುಕೊಂಡರು. ಮಲತಾಯಿ ಬಂದ ಮೇಲೆ ಕೇವಲ ಐದನೇ ತರಗತಿ ನಂತರ ಕುಪ್ಪಳಿ ಮನೆ ತೊರೆದು ರಾಮಕೃಷ್ಣಾಶ್ರಮ ಸೇರಿದರು. ಬಿ.ಎ. ಮುಗಿಸಿ ಕುಪ್ಪಳಿಗೆ ಬಂದದ್ದು ತಂದೆಗೆ ಆನಾರೋಗ್ಯದ ಕಾರಣ. ತಾಯಿ ಮನೆ ಸಮೀಪದ ಹಿರೇ ಕೂಡಿಗೆಗೆ ಬರುತ್ತಿದ್ದರು. ‘ನನ್ನ ಮನೆ’ ಎಂದು ಬರೆದ್ದದ್ದು ಭಾವನಾತ್ಮಕ ಕವನ. ಪಾಶ್ಚ್ಯತೀಕರಣದ ಅನುಕರಣೆಯಲ್ಲಿ ಕುಪ್ಪಳಿಯನ್ನು ಸರ್ಕಾರ ಸ್ಮಾರಕಗೊಳಿಸಿದೆ. ಕುಪ್ಪಳಿ ಮನೆ  ಅವರಿಗೆ ಸುಮಧುರ ಅನುಭವ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸಂಕಟ ಮರೆಯಲು ಕವಿಶೈಲದಲ್ಲಿ ಕಾಲ ಕಳೆಯುತ್ತಿದ್ದರು ಕುವೆಂಪು. ಕವಿಶೈಲದಲ್ಲಿ ನನಗೆ ಸಂಭ್ರಮಕ್ಕಿಂತ ಸಂಕಟ ಪಡುವ ಮಗು ನೆನಪಾಗುತ್ತದೆ. ಆ ಅಳು ಮುವತ್ತು ಕವನ ಸಂಕಲದಲ್ಲಿ ದಾಖಲಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ಮೇರು ಕೃತಿಯಲ್ಲಿ ಐಕ ಮತ್ತು ಪೀತ ಕಾಡಿನ ಬೆಳದಿಂಗಳಲ್ಲಿ ಓಡಾಡುತ್ತಾರೆ. ಚಂದಿರನ ಬೆಳಕು, ಕಾಡು ಅದ್ಭುತ ಚಿತ್ರಣ ಎಂಬ ಬೆರಗು ಬೇಡ. ಬಡವರಿಗೆ ಹಸಿವು ನೀಗಿಸುವುದಷ್ಟೆ ಮುಖ್ಯ. ಇದನ್ನು ಅದ್ಬುತವಾಗಿ ಚಿತ್ರಿಸಿದ್ದರು ಕುವೆಂಪು ಎಂದು ಅವರು ಹೇಳಿದರು.

    ಸವಾಲುಗಳು ನಡುವೆ ಮತ್ತೊಂದು ವಿಶ್ವ ರಂಗದಿನ

    ಮೆಳೇಹಳ್ಳಿ ದೇವರಾಜ್

    ಮನುಷ್ಯನ ಶಬ್ದ ಪ್ರಪಂಚದ ಆಚೆಗಿನ ದಿನಗಳಲ್ಲಿ ಸಂವಹನ ಆಂಗಿಕವಾಗಿತ್ತು,ಅಂದರೆ ಅಭಿನಯವೇ ಆಗಿತ್ತು. ಪ್ರಾಕೃತಿಕ ಬದಲಾವಣೆ ವಿಸ್ಮಯಗಳನ್ನ ಇಡೀ ಸಮೂಹ ಅಭಿನಯಿಸಿ ತೋರಿಸುತಿತ್ತು. ಕಾಲಾಂತರದಲ್ಲಿ ನೋಡುವ-ಆಡುವ ಎಂಬ ವರ್ಗೀಕರಣವಾಗಿ ನಂತರದಲ್ಲಿ ಬಿಡುವಿನ ವೇಳೆಯಲ್ಲಿ ಬೇಸರ ಕಳೆಯುವ ಸಾಧನವಾಯಿತು.

    ಜಗತ್ತಿನಲ್ಲಿ ಎಲ್ಲಾ ಮನುಷ್ಯ ಜೀವಿಯು ರಂಗಭೂಮಿ ಬಾಂಧವ್ಯ ಹೊಂದಿದ್ದಾರೆ, ಮನುಷ್ಯ ತಾನು ಊಟ ಮಾಡುವ ತಟ್ಟೆ, ವಾಸಿಸುವ ಮನೆ, ತೊಡುವ ಉಡುಗೆ ಸುಂದರವಾಗಿರಬೇಕೆಂದು ಬಯಸುತ್ತಾನೆ. ಬದುಕಿನ ಈ ಸೌಂದರ್ಯ ಪ್ರಜ್ಞೆಯು ರಂಗದ ಬಂಧವನ್ನ ಸೂಚಿಸುತ್ತದೆ.
    ಸ್ಥಳ, ಆಚರಣೆ, ಸಂಪ್ರದಾಯ, ಕಾಲಗಳಿಗೆ ತಕ್ಕಂತೆ ಹೊಸ ಹೊಸ ಪ್ರಕಾರಗಳು ಹುಟ್ಟಿಕೊಳ್ಳುತ್ತ ಕರ್ನಾಟಕ ರಂಗಸಂಪತ್ತಿನ ಸಮೃದ್ಧ ಕ್ಷೇತ್ರವಾಯಿತು. ಇಂದಿಗೂ ಕೂಡ ಜನಪದ ರಂಗಭೂಮಿಯಲ್ಲಿ ಕರ್ನಾಟಕವೇ ಮೊದಲು.

    ಆಧುನಿಕವಾಗಿಯೂ ಎಲ್ಲಾ ರಾಜ್ಯಗಳಿಗಿಂತ ಹೆಚ್ಚು ರಂಗ ತರಬೇತಿ ಶಾಲೆಗಳನ್ನು ಕರ್ನಾಟಕ ಹೊಂದಿದೆ. ಆರು ರಂಗಾಯಣ ಕಾರ್ಯ ನಿರ್ವಹಿಸುತ್ತಿವೆ ಎರಡು ನಿರ್ಮಾಣ ಹಂತದಲ್ಲಿವೆ . ಪ್ರತಿ ದಿನ ಹೊಸ ಕಲಾವಿದ, ಹೊಸ ರಂಗ ಪಠ್ಯ, ಹೊಸ ರಂಗ ಪ್ರಯೋಗ ಸಿದ್ದಗೊಳ್ಳತ್ತಲೇ ಇವೆ. ಅಂತಾರಾಷ್ಟ್ರೀಯವಾಗಿ ಭಾರತವನ್ನು ಪ್ರತಿನಿಧಿಸುವಷ್ಟು ಶ್ರೀಮಂತವಾಗಿದೆ ಕನ್ನಡ ರಂಗಭೂಮಿ.

    ರಂಗಭೂಮಿ ದಿನ

    ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷ ದಿನಗಳಂತೆ ರಂಗಭೂಮಿಗೂ ಒಂದು ವಿಶೇಷ ದಿನ ಬೇಕು ಎಂದು ಇಂಟರ್ ನ್ಯಾಷನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ ಪ್ರತಿ ವರ್ಷವೂ ಮಾರ್ಚ್ 27ರ ದಿನವನ್ನು ಅಂತಾರಾಷ್ಟ್ರೀಯ ರಂಗಭೂಮಿ ದಿನವಾಗಿ ಘೋಷಿಸಿತು. ಈ ದಿನ ವಿಶ್ವದ ಪ್ರಸಿದ್ಧ ರಂಗ ತಜ್ಞರನ್ನು ಆಯ್ಕೆ ಮಾಡಿ ರಂಗ ಸಂದೇಶ ನೀಡಿಸುವ ಪರಿಪಾಠ ಇದೆ. ಈ ವರ್ಷ ವಿಶೇಷವಾಗಿ ರಂಗನಟಿಗೆ ಈ ಅವಕಾಶ ದೊರೆತಿದೆ. ಯುನೈಟೆಡ್ ಕಿಂಗ್ಡಮ್ ನ ಹೆಲೆನ್ ಮಿರ್ರೇನ್ ರಂಗ ಸಂದೇಶ ನೀಡಿದ್ದಾರೆ.

    ಸಾಕಷ್ಟು ಸವಾಲುಗಳು

    ನಮ್ಮ ಮುಂದೆ ಸವಾಲುಗಳು ಸಾಕಷ್ಟು ಇವೆ. ರಂಗ ತರಬೇತಿ ಪಡೆದ ಕಲಾವಿದರ ದುಡಿಸಿಕೊಳ್ಳಬೇಕು. ಜಿಲ್ಲೆಗೊಂದು ರಂಗಾಯಣ ಆಗಬೇಕು. ಹಿರಿಯ ಕಲಾವಿದರ ಮಾಸಾಶನ ಹೆಚ್ಚಬೇಕು,ತಾಲ್ಲೂಕಿಗೊಂದು ರಂಗಮಂದಿರ ಬೇಕು. ಜಿಲ್ಲಾ ರಂಗಮಂದಿರಗಳ ನಿರ್ವಹಣೆ ಸಮರ್ಪಕವಾಗಬೇಕು. ರಾಜ್ಯದ ಎಲ್ಲಾ ರಂಗಮಂದಿರಗಳು ಏಕರೂಪ ಬಾಡಿಗೆ ಇರಬೇಕು. ಹೀಗೆ ಬೇಕುಗಳ ನಡುವೆಯೂ ನಾವು ಸಂಭ್ರಮಿಸೋಣ ನನ್ನದೇ ಎಂಬ ಭಾವ ತೀವ್ರತೆಯಿಂದ ಹೊರಗಿದ್ದು ನಮ್ಮದು ಎಂಬ ಭಾವಾನುಸಂಧಾನಕ್ಕಾಗಿ.

    Photo by Rob Laughter on Unsplash


    ತುಮಕೂರು ತಾಲ್ಲೂಕು ಮೆಳೇಹಳ್ಳಿಯ ದೇವರಾಜ್ ಕರ್ನಾಟಕದ ಸುಪ್ರಸಿದ್ಧ ರಂಗ ನಿರ್ದೇಶಖರು.ಇಪ್ಪತ್ತು ವರ್ಷಗಳಿಂದ ನಟನೆ, ನಿರ್ದೇಶನ, ನಾಟಕ ರಚನೆ ಮತ್ತು ಸಂಘಟನೆಯಲ್ಲಿ ತೊಡಗಿದ್ದಾರೆ.
    ನಿರ್ದೇಶಸಿದ ನಾಟಕಗಳು-ದೂತವಾಕ್ಯ, ಸೇವಂತಿ ಪ್ರಸಂಗ, ಕೇಳು ಜನಮೇಜಯ, ಮತ್ತವಿಲಾಸ, ತೆರೆಗಳು, ಬಲಿಯಾದಳು ಭಾಗೀರಥಿ, ಯಾರಿಗೂ ಹೇಳೊಣು ಬ್ಯಾಡ, ಸಾಯೋಆಟ, ಅಂಗುಲಿಮಾಲ, ಕಾಲಜ್ಙಾನಿ ಕನಕ,ದೊರೆ ಈಡಿಪಸ್, ಹಳಿಯ ಮೇಲಿನ ಸದ್ದು, ಮೈಲಾರ ಮಹದೇವ ಇತ್ಯಾದಿ.ಸಂಪನ್ಮೂಲ ವ್ಯಕ್ತಿಯಾಗಿ-ಎನ್ ಎಸ್ ಡಿ ಆರ್ ಆರ್ ಸಿ ಬೆಂಗಳೂರು, ರಂಗಾಯಣ ಮೈಸೂರು, ರಂಗ ಅಧ್ಯಯನ ಕೇಂದ್ರ ಕುಂದಾಪುರ, ಎಂ ಇ ಎಸ್ ರಂಗಶಾಲೆ ಬೆಂಗಳೂರು, ಅಭಿನಯ ಶಿವಮೊಗ್ಗ, ಎನ್ ಎಸ್ ಡಿ ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸಿದ್ದಾರೆ.
    ಪ್ರಯೋಗ ಪ್ರಮುಖ ಸ್ಥಳ-ಪುಣೆ,ದೆಹಲಿ, ಹೈದರಾಬಾದ್, ಮಲೆಷ್ಯಾ ಮತ್ತು ಕರ್ನಾಟಕ.


    ಬೆಳಗಾವಿ: ಬಿಜೆಪಿಯಿಂದ ಮಂಗಳಾ ಅಂಗಡಿ ಸ್ಪರ್ಧೆ

    ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದಿ.ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.

    ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಪ್ರತಾಪ ಗೌಡ ಪಾಟೀಲರಿಗೂ, ಬಸವಕಲ್ಯಾಣದಿಂದ ಶರಣು ಸಲಗರ ಅವರಿಗೂ ಟಿಕೆಟ್ ನೀಡಲಾಗಿದೆ.

    ಕರ್ನಾಟಕ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದ ಕೆ. ರತ್ನಪ್ರಭಾ ಅವರಿಗೆ ತಿರುಪತಿ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ.

    ಅನುದಾನರಹಿತ ಶಿಕ್ಷಕರಿಗೆ ಟಿಬಿಎಫ್ ಆಜೀವ ಸದಸ್ಯತ್ವ

    ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಆಜೀವ ಸದಸ್ಯರನ್ನಾಗಿ ನೇಮಕ  ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಮಂಗಳವಾರ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ  ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘ ಹಾಗೂ ವಿವಿಧ  ಶಿಕ್ಷಕ ಸಂಘಟನೆಗಳ ಹೋರಾಟ ಸಮನ್ವಯ ಸಮಿತಿಯ ಬೃಹತ್ ಸಂಖ್ಯೆಯ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು,  ಕೊರೋನಾದಂತಹ ಸಂಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಕರು ತೀವ್ರ ಸಂಕಷ್ಟ ಅನುಭವಿಸಿದ್ದರಿಂದಾಗಿ ಎಲ್ಲ ಶಿಕ್ಷಕರಂತೆ ಕಷ್ಟಕಾಲದ ತತ್ಕ್ಷಣದ ನೆರವಿಗೆ ಶಿಕ್ಷಣ ನಿಧಿಯ ಸದಸ್ಯತ್ವ ನೀಡಿ ಆ ಮೂಲಕ ನಿಧಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರಿಗೆ ದೊರೆಯುವ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.

    ಶಿಕ್ಷಕರೆಂದರೆ ಎಲ್ಲರೂ ಶಿಕ್ಷಕರೇ, ಎಲ್ಲರೂ ನಮ್ಮ ಮಕ್ಕಳ ಹಿತಕ್ಕೆ ದುಡಿಯುತ್ತಾರೆ.  ಅದರಲ್ಲಿ ಎರಡು ಮಾತೇ ಇಲ್ಲ, ಹೀಗಿರುವಾಗ ಶಿಕ್ಷಕರ ಕಲ್ಯಾಣ ನಿಧಿಗೆ ಖಾಸಗಿ ಅನುದಾನ ರಹಿತ ಸಂಸ್ಥೆಗಳ ಶಿಕ್ಷಕರನ್ನು ಯಾವ ರೀತಿಯಲ್ಲಿ ಹಾಗೆಯೇ ಯಾವ ಮಾನದಂಡದ ಮೂಲಕ  ಸದಸ್ಯತ್ವ ನೀಡುವ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಇದು ಅಧಿಕೃತಗೊಳ್ಳಲಿದೆ ಎಂದು ಸಚಿವರು ಹೇಳಿದರು.

    ಈಗಾಗಲೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಸದಸ್ಯತ್ವ ನೀಡುವ ಕುರಿತು ರೂಪಿಸಿರುವ ನಿಯಮಗಳನ್ನು ವಿಸ್ತೃತವಾಗಿ ಅವಲೋಕಿಸಿ ಅಂತಿಮಗೊಳಿಸಲಾಗುವುದೆಂದು  ಎಂದು ಸುರೇಶ್ ಕುಮಾರ್ ತಿಳಿಸಿದರು.

    1995-2000ವರೆಗಿನ ಶಾಲೆಗಳಿಗೆ ಅನುದಾನ:
    ಶಿಕ್ಷಣ ಕ್ಷೇತ್ರದ ಪ್ರಮುಖ ಬೇಡಿಕೆಯಾದ ಖಾಸಗಿ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿಯೂ ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಸಿಎಂ ಅವರಿಗೆ ಪ್ರಮುಖವಾಗಿ ಇದನ್ನು ಪರಿಗಣಿಸಬೇಕೆಂದು ಕೋರಿದ್ದೆ. ಕೋವಿಡ್ ಸಂಕಷ್ಟದ ಸಮಯವಾದ್ದರಿಂದ ಬಜೆಟ್ ನಲ್ಲಿ ಅದಕ್ಕೆ ಅನುದಾನ ಹಂಚಿಕೆಯಾಗಿಲ್ಲ. ಆ ನಂತರವೂ ನಾನು ಸಿಎಂ ಅವರೊಂದಿಗೆ ಚರ್ಚಿಸಿದ್ದು ಪೂರಕ ಬಜೆಟ್ ನಲ್ಲಿ ಅನುದಾನ ಹಂಚಿಕೆ ಮಾಡಿ ಬಜೆಟ್ ಕುರಿತ ಚರ್ಚೆಯಲ್ಲಿ ಕನಿಷ್ಠ ಐದು ವರ್ಷದ ಅಂದರೆ  1995-2000ವರೆಗಿನ ಶಾಲೆಗಳಿಗೆ ಅನುದಾನ ನೀಡುವ ಘೋಷಣೆ ಮಾಡಬೇಕೆಂದು ಕೋರಿದ್ದೇನೆ.  ಈ ಕುರಿತು ಮತ್ತೊಮ್ಮೆ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ಸ್ಪಷ್ಟವಾದ ಭರವಸೆ ಪಡೆಯುವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    1995 ರಿಂದ 2000 ವರೆಗಿನ 5 ವರ್ಷಗಳ ಅವಧಿಯಲ್ಲಿ 685 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಮತ್ತು 211 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳು ಇದ್ದು, ಅವುಗಳನ್ನು ಅನುದಾನಕ್ಕೊಳಡಪಡಿಸುವ ನಿಟ್ಟಿನಲ್ಲಿ 138.39 ಕೋಟಿ ರೂ.ಗಳ ಹಣದ ಅಗತ್ಯವಿರುವುದನ್ನು ಇಲಾಖೆ ಅಂದಾಜಿಸಿದೆ ಎಂದು ಸಚಿವರು ತಿಳಿಸಿದರು.

    ಜ್ಯೋತಿ ಸಂಜೀವಿನಿ ವಿಸ್ತರಣೆ:

    ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲಾ ಸಿಬ್ಬಂದಿಗೂ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶದಿಂದ ಜ್ಯೋತಿ ಸಂಜೀವಿನಿ ವ್ಯಾಪ್ತಿಗೆ ಒಳಪಡಿಸುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಆರ್ ಆರ್ ವಿನಾಯ್ತಿ- ನಿಯಮಗಳ ಸರಳೀಕರಣ:

    ರಾಜ್ಯದಲ್ಲಿನ ಖಾಸಗಿ ಅನುದಾನಿತ/ಅನುದಾನರಹಿತ  ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಭಾಷೆ, ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳನ್ನು ಅನುಮತಿಸುವ ಸಂದರ್ಭದಲ್ಲಿ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರದ ಅಗತ್ಯತೆಯ ಆರ್ ಆರ್. ನವೀಕರಣವನ್ನು ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ವಿನಾಯ್ತಿ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಹಾಗೆಯೇ ಸುರಕ್ಷತಾ ಪ್ರಮಾಣಗಳ ಅಗತ್ಯತೆಯ ಸರಳೀಕರಣ ಮಾಡುವ  ಕುರಿತಂತೆ ಪರಿಶೀಲಿಸಿ, ವರದಿ ಸಲ್ಲಿಸಲು ಎಸ್.ವಿ. ಸಂಕನೂರು ಅವರ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿದ್ದು, ಮೂರ್ನಾಲ್ಕು ವಾರಗಳೊಳಗೆ ಸಮಿತಿ ವರದಿ ನೀಡಲಿದ್ದು, ವರದಿಯನ್ವಯ  ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

    ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೆರವು:

    ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಖಾಸಗಿ ಶಾಲೆಗಳಿಗೆ ನೆರವು  ನೀಡುವ ಮೂಲಕ ಸಾಧ್ಯವಾದಷ್ಟು ಸಹಾಯ ಹಸ್ತ ಚಾಚಬೇಕೆಂಬ ಉದ್ದೇಶವಿದ್ದು, ಈ ಕುರಿತು ಮಂಡಳಿಯ ನಿಯಮಗಳಲ್ಲಿ ಅವಕಾಶ ಕಲ್ಪಿಸುವ ಸಂಬಂಧದಲ್ಲಿ ಯೋಜನಾ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಶೀಘ್ರವೆ ಸಭೆ ನಡೆಸಲಾಗುವುದೆಂದು ಅವರು ಹೇಳಿದರು.

    ಈಗಾಗಲೇ ಕೋವಿಡ್ ಸಂಕಷ್ಟದಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದರಿಂದ ಮಕ್ಕಳು ಪರೀಕ್ಷೆಗೆ ಸಿದ್ಧವಾಗುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮತ್ತು ಮೌಲ್ಯಮಾಪನದಂತಹ ಸಮಯದಲ್ಲಿ ಯಾವುದೇ ಮುಷ್ಕರಗಳಿಗೆ ಎಡೆ ಮಾಡಬಾರದೆಂದು ಸಚಿವರು ಮನವಿ ಮಾಡಿದರು. ಶಿಕ್ಷಕ ಸಂಘಟನೆಗಳ ಪ್ರತಿನಿಧಿಯು ಸಚಿವರ ಮನವಿಗೆ ಸ್ಪಂದಿಸಿ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವುದೇ ಪ್ರತಿಭಟನೆ ಮಾಡುವುದಿಲ್ಲ ಎಂಬ ಭರವಸೆ ನೀಡಿದರು.

    ವಿಧಾನಪರಿಷತ್ ಸಭಾಪತಿ ಬಸವರಾಜ ಎಚ್. ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಇಲಾಖೆಯ ಅಧಿಕಾರಿಗಳಾದ ಕುಮಾರ ನಾಯಕ್, ವಿ. ಅನ್ಬುಕುಮಾರ್, ಸ್ನೇಹಲ್  ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ರೂಪ್ಸಾ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

    ನಾವು ಬದುಕಬೇಕು. ಇತರರ ಬದುಕನ್ನೂ ಹಸನುಗೊಳಿಸಬೇಕು; ಮೋದಿ ಇದನ್ನೇ ಅನುಸರಿಸುತ್ತಾರೆ

    ದು.ಗು. ಲಕ್ಷ್ಮಣ

    ಕಳೆದೊಂದು ವರ್ಷ ಪೂರ್ತಿ ಕೋವಿಡ್ ಹೆಮ್ಮಾರಿ ಕಾಡಿದ ಪರಿ ವರ್ಣಿಸಲಸದಳ. ಈ ಹೆಮ್ಮಾರಿಯ ನಿಯಂತ್ರಣಕ್ಕಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಬೇಕಾಗಿ ಬಂತು. ಲಾಕ್‌ಡೌನ್ ಎಂದರೇನೆಂದು ಸಾಮಾನ್ಯ ಜನರಿಗೆ ಅದರ ಬಿಸಿ ತಟ್ಟಿದ್ದು ಆವಾಗಲೇ. ಕೋವಿಡ್ ಹೆಮ್ಮಾರಿ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯವಾಗಿದ್ದಿರಬಹುದು. ಆದರೆ ಇದರಿಂದಾದ ಅನಾಹುತಗಳು ಅಷ್ಟಿಷ್ಟಲ್ಲ. ವ್ಯಾಪಾರ ವಹಿವಾಟುಗಳಿಲ್ಲದೆ ಅಂಗಡಿ, ಹೋಟೆಲ್‌ಗಳು ಹೇಳತೀರದಷ್ಟು ನಷ್ಟ ಅನುಭವಿಸಿವೆ. ಸಣ್ಣಪುಟ್ಟ ವರ್ತಕರು, ಬೀದಿಬದಿಯ ವ್ಯಾಪಾರಿಗಳು ಸರ್ವನಾಶ ಹೊಂದಿದರು. ಬಹಳಷ್ಟು ಮಂದಿ ಕೆಲಸ, ಇದ್ದ ನೆಲೆ ಎರಡನ್ನೂ ಕಳೆದುಕೊಂಡು ತ್ರಿಶಂಕುವಾದರು. ಶೈಕ್ಷಣಿಕ ವಲಯ ಈಗಲೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ವಾತಾವರಣ ನಿರ್ಮಾಣವಾಗಿಲ್ಲ. ಸಣ್ಣ ಮಕ್ಕಳ ಮೇಲೆ ಈ ಶೂನ್ಯ ವರ್ಷವು ಉಂಟುಮಾಡಿರುವ ಮಾನಸಿಕ ದುಷ್ಪರಿಣಾಮ ಬಲು ಭೀಕರ. ಯಾವ ವಲಯವೂ ಈ ಒಂದು ವರ್ಷದಲ್ಲಿ ಬೆಳವಣಿಗೆಯನ್ನು ದಾಖಲಿಸಿಲ್ಲ. ಕೆಲವು ವಲಯದಲ್ಲಿ ಕೊಂಚ ಮಟ್ಟಿನ ಚೇತರಿಕೆ ಪ್ರಮಾಣ ನಗಣ್ಯವೆನಿಸುವಷ್ಟು ಕಂಡಿದೆ, ಅಷ್ಟೆ.

    ಹೀಗಿರುವಾಗಲೇ ಇದೀಗ ದೇಶದಾದ್ಯಂತ ಕೊರೋನಾ ವೈರಸ್‌ನ ಎರಡನೇ ಅಲೆ ಮತ್ತೆ ಅಪ್ಪಳಿಸಿದೆ. ಅನೇಕ ರಾಜ್ಯಗಳಲ್ಲಿ (ಕರ್ನಾಟಕವೂ ಸೇರಿದಂತೆ) ಹೊಸ ಸೋಂಕು ಹರಡುವಿಕೆ ಹಚ್ಚಿದೆ. ಮತ್ತೆ ಲಾಕ್‌ಡೌನ್, ನೈಟ್ ಕರ್ಫ್ಯೂ, ಸಭೆ ಸಮಾರಂಭ, ಮದುವೆ ಮುಂಜಿಗಳಿಗೆ ನಿಷೇಧ/ ನಿರ್ಬಂಧ ಹೇರಬೇಕೆ ಎಂಬ ಗಂಭೀರ ಪ್ರಶ್ನೆಗೆ ಚಾಲನೆ ದೊರೆತಿದೆ.

    ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಕೊರೋನಾ ವೈರಸ್ ಮತ್ತೆ ಅಟ್ಟಹಾಸದ ದಾಳಿ ನಡೆಸಿರುವುದು ಕಡಿಮೆ ಭಯಾನಕ ಸಂಗತಿಯಂತೂ ಖಂಡಿತ ಅಲ್ಲ. ಕೊರೋನಾ ದಾಳಿ ಮಾಡಿತ್ತು ಎಂಬುದನ್ನೇ ಮರೆತು ಬಿಂದಾಸ್ ಆಗಿ ಮಾಸ್ಕ್ ಧರಿಸದೆ, ಸ್ಯಾನಿಟೈಸರ್ ದ್ರಾವಣದ ಗೋಜಿಲ್ಲದೆ ಎಲ್ಲೆಂದರಲ್ಲಿ ತಿರುಗಾಡುವ ಜನರನ್ನು ನೋಡಿದರೆ ಕೋವಿಡ್‌ನ ಎರಡನೇ ಅಲೆ ಅದೆಂಥ ಅನಾಹುತಗಳನ್ನು ಸೃಷ್ಟಿಸಲಿದೆಯೋ ಎಂದು ಗಾಬರಿಯಾಗುವುದು ಸಹಜ.

    ಜನರು ಹೀಗೆ ಬಿಂದಾಸ್ ಆಗಿ ಅಡ್ಡಾಗಾಲು ಕಾರಣಗಳಿಲ್ಲದಿಲ್ಲ. ಲಾಕ್‌ಡೌನ್ ತೆರವಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಜರುಗಿದ್ದು ಸರ್ಕಾರಿ ಕಾರ್ಯಕ್ರಮಗಳು ಹಾಗೂ ರಾಜಕೀಯ ಸಭೆ ಸಮಾರಂಭಗಳು. ಇಂಥ ಕಡೆ ಮಾಸ್ಕ್ ಧರಿಸಬೇಕೆಂಬ ಬಗ್ಗೆ ಸರ್ಕಾರಕ್ಕೇ ಎಚ್ಚರಿಕೆಯಿರಲಿಲ್ಲ. ಯಾವುದೇ ಕೊರೋನಾ ಮುನ್ನೆಚ್ಚರಿಕೆಗಳಿಲ್ಲದೆ ಸಾಕಷ್ಟು ಸರ್ಕಾರಿ, ರಾಜಕೀಯ ಸಮಾರಂಭಗಳು ನಡೆದುಹೋಗಿವೆ. ಆದರೆ ಸರ್ಕಾರ ಜನಸಾಮಾನ್ಯರ ಮದುವೆಗಳಿಗೆ ನೂರು, ಐನೂರು ಎಂದೆಲ್ಲ ಸಂಖ್ಯಾಮಿತಿ ಹೇರಿ, ಮದುವೆಮನೆಗಳಿಗೆ ಮಾರ್ಷಲ್‌ಗಳನ್ನೂ ಕಳಿಸಿ ಕಿರಿಕಿರಿ ಮಾಡಿದ್ದು ಮಾತ್ರ ವಿಪರ್ಯಾಸದಲ್ಲಿ ವಿಪರ್ಯಾಸ. ನೂರು ಮಂದಿ ಸೇರಿದರೆ ವೈರಸ್ ದಾಳಿಯಾಗುತ್ತದೆ; ಆದರೆ ಸಾವಿರಾರು, ಲಕ್ಷಾಂತರ ಮಂದಿ ಸೇರುವೆಡೆ ವೈರಸ್ ಹರಡುವುದಿಲ್ಲ ಎಂಬುದು ಮಾತ್ರ ಬಲು ಸೋಜಿಗವೇ ಸರಿ!

    ಸರ್ಕಾರ ಕೋವಿಡ್‌ನ ಕಠಿಣ ನಿರ್ಬಂಧಗಳನ್ನು ಮೊದಲು ತಾನು ಪಾಲಿಸಿದರೆ ಜನರೂ ಅದನ್ನು ಅನುಸರಿಸುತ್ತಾರೆ. ಸರ್ಕಾರವೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದರೆ ಜನರೇಕೆ ಅದನ್ನು ಅನುಸರಿಸುತ್ತಾರೆ? ಗಾದೆಯೇ ಇದೆಯಲ್ಲ- ಯಥಾ ರಾಜಾ ತಥಾ ಪ್ರಜಾ. ಯಾವುದೇ ಸಂದರ್ಭವಿರಲಿ, ಪ್ರಧಾನಿ ಮೋದಿ ಇತ್ತೀಚಿನವರೆಗೂ ಮಾಸ್ಕ್ ಧರಿಸದೆ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅದರಿಂದಾಗಿ ದೇಶದ ಜನರಿಗೆ ತಾವೂ ಹೀಗೆಯೇ ಮಾಸ್ಕ್ ಧರಿಸಬೇಕು ಎಂದು ಮನವರಿಕೆಯಾಗುವುದು ಸ್ವಾಭಾವಿಕ. ಆದರೆ ನಮ್ಮ ರಾಜ್ಯದ ನಾಯಕರು ಹೇಗೆಲ್ಲ ವರ್ತಿಸಿದರು ಎಂಬುದನ್ನು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುವ ದೃಶ್ಯಾವಳಿಗಳೇ ಹೇಳುತ್ತವೆ! ?

    ಎರಡನೇ ಅಲೆ ಎದ್ದಿದೆಯೆಂದು ಈಗ ಮತ್ತೆ ಲಾಕ್‌ಡೌನ್‌ನಂತಹ ಕಠಿಣ ನಿರ್ಬಂಧ ಹೇರಿದರೆ ರಾಜ್ಯ, ದೇಶ ಸರ್ವನಾಶ ಹೊಂದುವುದು ನಿಶ್ಚಿತ. ಅದರ ಬದಲಿಗೆ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚಿಸುವುದು, ಲಸಿಕೆ ಅಭಿಯಾನಕ್ಕೆ ಇನ್ನಷ್ಟು ರಭಸ ತಂದುಕೊಡುವುದು, ಕೇರಳ-ಮಹಾರಾಷ್ಟ್ರ- ತಮಿಳುನಾಡು ಗಡಿಗಳಲ್ಲಿ ಇನ್ನಷ್ಟು ನಿಗಾವಹಿಸುವುದು, ಸರ್ಕಾರದ್ದಿರಲಿ, ಖಾಸಗಿಯದ್ದಿರಲಿ ಯಾವುದೇ ಕಾರ್ಯಕ್ರಮಗಳಿಗೆ ಸಂಖ್ಯಾ ಮಿತಿಯನ್ನು ಕಡ್ಡಾಯವಾಗಿ ಜಾರಿ ಮಾಡುವುದು ಮೊದಲಾದ ಗರಿಷ್ಟ ನಿಯಂತ್ರಣ ಕ್ರಮ ಕೈಗೊಳ್ಳುವ ಅಗತ್ಯ ತುರ್ತಾಗಿದೆ. ಸಾರ್ವಜನಿಕರು ಕೂಡ ಸ್ವಯಂ ನಿರ್ಬಂಧ ವಿಧಿಸಿಕೊಂಡು ಆದಷ್ಟು ಮನೆಯೊಳಗೇ ಇರುವುದು ಸೂಕ್ತ. ಹಾಗೆ ಮಾಡದಿದ್ದರೆ ಎರಡನೇ ಅಲೆ ಏನೇನು ಅನಾಹುತಗಳನ್ನು ಸೃಷ್ಟಿಸಲಿದೆಯೋ ಯಾರೂ ಊಹಿಸುವಂತಿಲ್ಲ.


    ಕೋವಿಡ್ ಹೆಮ್ಮಾರಿ ದೇಶದ ಪ್ರಗತಿಯನ್ನು ರಸಾತಳಕ್ಕೆ ತಳ್ಳಿರುವುದು ನಿಜ. ಆದರೆ ಕೋವಿಡ್ ಕಾರಣದಿಂದಾಗಿಯೇ ಇಂದು ಭಾರತದ ಕೀರ್ತಿ ಜಗದಗಲಕ್ಕೆ ಪಸರಿಸಿರುವುದೂ ಅಷ್ಟೇ ನಿಜ. ಅಮೆರಿಕಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್‌ನಂಥ ಬಲಾಢ್ಯ ದೇಶಗಳು ಕೋವಿಡ್ ನಿಯಂತ್ರಿಸಲು ಈಗಲೂ ಹೆಣಗುತ್ತಿರುವಾಗಲೇ ಭಾರತ ಮಾತ್ರ ಅಷ್ಟರೊಳಗೇ ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಉತ್ಪಾದಿಸಿ, 70 ದೇಶಗಳಿಗೆ ಪೂರೈಸಿ ದಾಖಲೆ ನಿರ್ಮಿಸಿರುವುದು ಕಡಿಮೆ ಸಾಧನೆಯಲ್ಲ. ಈಗಾಗಲೇ 70 ದೇಶಗಳಿಗೆ 5 ಕೋಟಿ 85ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಭಾರತ ರವಾನಿಸಿದೆ. ಈ ಪೈಕಿ ಸುಮಾರು 80ಲಕ್ಷ ಡೋಸ್‌ಗಳಷ್ಟು ಲಸಿಕೆ 35 ದೇಶಗಳಿಗೆ ಉಚಿತವಾಗಿ ಪೂರೈಕೆಯಾಗಿದೆ. ಸುಮಾರು 3 ಕೋಟಿ 39 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಶುಲ್ಕಸಹಿತವಾಗಿ 15ದೇಶಗಳಿಗೆ ಪೂರೈಸಿದೆ. ಸುಮಾರು 1 ಕೋಟಿ 64 ಲಕ್ಷ ಡೋಸ್‌ಗಳಷ್ಟು ಲಸಿಕೆ 18 ದೇಶಗಳಿಗೆ ಕೋವ್ಯಾಕ್ಸ್ ಸೌಲಭ್ಯ ಒಪ್ಪಂದದಂತೆ ರವಾನೆಯಾಗಿದೆ. ಕಳೆದ ಜನವರಿ 20ರಿಂದಲೇ ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಮೊದಲಾದ ನೆರೆಯ ದೇಶಗಳಿಗೆ ಕೊರೋನಾ ಲಸಿಕೆಯ ಪೂರೈಕೆ ಆರಂಭಗೊಂಡಿದೆ. ನಮ್ಮನ್ನು ನಖಶಿಖಾಂತವಾಗಿ ದ್ವೇಷಿಸುವ ಭಾರತದ ಪರಮವೈರಿ ಪಾಕಿಸ್ತಾನಕ್ಕೂ ಇದೇ ಮಾರ್ಚ್ ತಿಂಗಳಲ್ಲಿ ಭಾರತದಿಂದ 4.5 ಕೋಟಿ ಡೋಸ್ ಲಸಿಕೆ ಉಚಿತವಾಗಿ ರವಾನೆಯಾಗಲಿದೆ!

    ಪಾಕಿಸ್ತಾನ ಸದ್ಯ ಚೀನಾದಿಂದ ಪೂರೈಕೆಯಾದ ಕೋವಿಡ್ ಲಸಿಕೆಯನ್ನು ಬಳಸುತ್ತಿದೆ. ಆದರದು ತೀರಾ ದುಬಾರಿ. ಲಸಿಕೆಯೊಂದಕ್ಕೆ 2000ರೂ. ಬೆಲೆ ತೆರಬೇಕಾಗಿದೆ. ಪಾಕಿಸ್ತಾನ ಸರ್ಕಾರದ್ದು ಈಗ ತೀರಾ ಆರ್ಥಿಕ ದುಸ್ಥಿತಿ. ಹಾಗಾಗಿ ಭಾರತದಿಂದ ಉಚಿತ ಲಸಿಕೆಯ ಬೇಡಿಕೆಯ ಪ್ರಸ್ತಾಪ ಸಲ್ಲಿಸಿದೆ. ಭಾರತ ಪೂರೈಸುವ ಲಸಿಕೆಯಿಂದ ದೇಶದ ಶೇ.20ರಷ್ಟು ಮಂದಿಗೆ ಲಸಿಕೆ ಹಾಕಬಹುದು. ಭಾರತದ ಲಸಿಕೆಯ ಬಗ್ಗೆ ಪಾಕ್ ಪ್ರಜೆಗಳಿಗೆ ವಿಶ್ವಾಸವಿದೆ. ಆದರೆ ಚೀನಾದಿಂದ ಪಡೆದ ಲಸಿಕೆಯ ಬಗ್ಗೆ ಅನುಮಾನ ಮಾತ್ರ ಇದೆ.

    ಭೂತಾನ್, ಮಾಲ್ಡೀವ್ಸ್, ಫಿಜಿ ಸೇರಿದಂತೆ ಭಾರತದಿಂದ ಲಸಿಕೆ ಪಡೆದ ಅಲ್ಲಿಯ ಪ್ರಜೆಗಳು ಭಾರತದ ತ್ರಿವರ್ಣ ಬಾವುಟ ಹಿಡಿದು, ಮೆರವಣಿಗೆ ಮಾಡಿ ಭಾರತಕ್ಕೆ, ಭಾರತದ ಪ್ರಧಾನಿಗೆ ಉಘೇ ಉಘೇ ಹೇಳುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಸಡಗರ, ಸಂಭ್ರಮದಿಂದ ನಲಿದಿದ್ದಾರೆ.

    ಆದರೆ ಇಲ್ಲಿ ಭಾರತದಲ್ಲಿ ಮಾತ್ರ ತಾವು ಪ್ರಗತಿಪರರೆಂದು ತಮಗೆ ತಾವೆ ಹಣೆ ಪಟ್ಟಿ ಅಂಟಿಸಿಕೊಂಡ ಕೆಲವರು ದಿನಬೆಳಗಾದರೆ ಪ್ರಧಾನಿ ಮೋದಿಯನ್ನು ನಿಂದಿಸುತ್ತಾ, ಮೋದಿ ಜನವಿರೋಧಿ ಎಂದು ಜರೆಯುತ್ತಾ ದೇಶದ ಮಾನ ಹರಾಜು ಹಾಕುವುದರಲ್ಲೇ ವಿಕೃತ ಸಂತಸ ಕಾಣುತ್ತಿದ್ದಾರೆ.

    ವಿಪರ್ಯಾಸವೆಂದರೆ ಇದೇ ಅಲ್ಲವೆ?

    ನಾವು ಬದುಕಬೇಕು. ಇತರರ ಬದುಕನ್ನೂ ಹಸನುಗೊಳಿಸಬೇಕು. ಇದೇ ನಮ್ಮ ಪ್ರಾಚೀನ ಭಾರತೀಯ ಪರಂಪರೆ ನಮಗೆ ಹೇಳಿಕೊಟ್ಟ ಪಾಠ. ಮೋದಿ ಅದನ್ನೇ ಅನುಸರಿಸುತ್ತಾರೆ.

    .
    • ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

    ಸಂಭಾವ್ಯ ಕೋವಿಡ್‌ 2ನೇ ಅಲೆ; ‌ ತರಗತಿಗಳು ನಿಲ್ಲದು, ನಿಗದಿತ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ ಎಂದ ಡಿಸಿಎಂ

    ಕೋವಿಡ್‌ ಎರಡನೆ ಅಲೆ ಕಾರಣಕ್ಕೆ ಪದವಿ ಕೋರ್ಸುಗಳ ತರಗತಿಗಳು ನಿಲ್ಲುವುದಿಲ್ಲ ಹಾಗೂ ಪರೀಕ್ಷೆಗಳು ಕೂಡ ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

    ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಉನ್ನತ ಶಿಕ್ಷಣ ವಿಭಾಗದ ಪರಿಸ್ಥಿತಿಯನ್ನು ಅವಲೋಕನ ನಡೆಸಿದ ಅವರು; ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ನಡೆಯಲಿವೆ. ಸರಕಾರ ಹೊರಡಿಸಿರುವ ಮಾದರಿ ವೇಳಾಪಟ್ಟಿಯಂತೆ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ವೇಳಾಪಟ್ಟಿ ಅನುಸಾರ ಹಾಲಿ ನಡೆಯುತ್ತಿರುವ ಆಫ್‌ʼಲೈನ್‌ ತರಗತಿಗಳನ್ನು ಹಾಗೆಯೇ ಮುಂದುವರಿಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಹಾಗೂ ಮಹಾವಿದ್ಯಾಲಯಗಳಿಗೆ ಸೂಚನೆ ನೀಡಲಾಯಿತು ಎಂದು ಡಿಸಿಎಂ ಅವರು ಮಾಹಿತಿ ನೀಡಿದರು.

    ವಿಶ್ವವಿದ್ಯಾಲಯಗಳು, ಕಾಲೇಜುಗಳು,  ಪಾಲಿಟೆಕ್ನಿಕ್‌ಗಳು ಮತ್ತು ಇನ್ನಿತರೆ ಶಿಕ್ಷಣ ಸಂಸ್ಥೆಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಎರಡನೇ ಅಲೆ ಬೀರುವ ಪರಿಣಾಮಗಳ  ಮಹತ್ವದ ಸಮಾಲೋಚನೆ ನಡೆಸಿದ್ದೇನೆ. ಮುಖ್ಯಮಂತ್ರಿ ಜತೆಗೂ ಚರ್ಚಿಸಿದ್ದೇನೆ. ಇಲ್ಲಿಯವರೆಗೆ ಆನ್‌ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ನಡೆಸಿರುವ ಬಗ್ಗೆ ಹಾಗೂ ಈಗ ನಡೆಯುತ್ತಿರುವ ಹೈಯ್ಯರ್‌ ಸೆಮಿಸ್ಟರ್‌ ಪರೀಕ್ಷೆಗಳ ಬಗ್ಗೆ ಮತ್ತು ನಡೆಯಬೇಕಾದ ಲೋಯರ್‌ ಸೆಮಿಸ್ಟರ್‌ ಪರೀಕ್ಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಎಲ್ಲಾ ವಿಶ್ವವಿದ್ಯಾಲಯಗಳಿಂದ ಪಡೆದ ಮಾಹಿತಿಯನ್ನು ಪರಾಮರ್ಶಿಸಲಾಯಿತು ಎಂದರು.

    ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ನಡೆಸುತ್ತಿರುವ ಹಾಸ್ಟೆಲ್‌ಗಳನ್ನು ಮುಂದುವರಿಸಲು ಆಯಾ ಇಲಾಖೆಗಳನ್ನು ಕೋರಲಾಗುವುದು. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ, ಮಹಾವಿದ್ಯಾಲಯಗಳಲ್ಲಿ  ಹಾಗೂ ಹಾಸ್ಟೆಲ್‌ʼಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಸಿಎಂ ಸೂಚಿಸಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ  ಮುಖ್ಯ ಕಾರ್ಯದರ್ಶಿ ಕುಮಾರನಾಯಕ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಭಾಗಿಯಾಗಿದ್ದರು.

    ಸಿಇಟಿ, ನೀಟ್‌ ಜತೆಗೆ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ಕೋಚಿಂಗ್‌; ‘ಗೆಟ್‌-ಸೆಟ್‌ ಗೋ’ ವ್ಯವಸ್ಥೆಗೆ ಚಾಲನೆ

    ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್‌ ನೀಡಲಾಗುವ ʼಗೆಟ್‌-ಸೆಟ್‌ ಗೋʼ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

    ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ʼಗೆಟ್‌-ಸೆಟ್‌ ಗೋʼ (GetCETgo) ವ್ಯವಸ್ಥೆಗೆ ಚಾಲನೆ ಕೊಟ್ಟರಲ್ಲದೆ; “ಈವರೆಗೆ ಸಿಇಟಿ ಮತ್ತು ನೀಟ್‌ಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಹೆಚ್ಚುವರಿಯಾಗಿ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ತರಬೇತಿ ಕೊಡಲಾಗುವುದು. ಈ ಸೌಲಭ್ಯವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು” ಎಂದರು.

    ಉನ್ನತ ಶಿಕ್ಷಣ ಇಲಾಖೆ ಕೈಗೊಂಡಿರುವ ಈ ಉಪ ಕ್ರಮದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜತೆಗೆ; ಸಮಗ್ರ ಕಲಿಕಾ ವ್ಯವಸ್ಥೆ‌ (ಎಲ್‌ಎಂಎಸ್) ಕೂಡ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಅವರ ಕೈಗೊಂಡ ಕ್ರಮಗಳು ಮೆಚ್ವುವಂತಹದ್ದು ಎಂದು ಮುಖ್ಯಮಂತ್ರಿಗಳು ಹೇಳಿದರು.

    ವರ್ಷಪೂರ್ತಿ ಗೆಟ್‌ ಸೆಟ್‌ ಗೋ:ಈ ಸಂದರ್ಭದಲ್ಲಿ ʼಗೆಟ್‌ ಸೆಟ್‌ ಗೋʼ ಬಗ್ಗೆ ಸಮಗ್ರ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು; “ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಬರುವ ಶೈಕ್ಷಣಿಕ ವರ್ಷದಿಂದ ಇಡೀ ವರ್ಷಪೂರ್ತಿ ʼಗೆಟ್‌ ಸೆಟ್‌ ಗೋʼ ಮೂಲಕ ಕೋಚಿಂಗ್‌ ವ್ಯವಸ್ಥೆ ಇರುತ್ತದೆ” ಎಂದರು.

    ಐಐಟಿಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪ್ರಮಾಣವನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಹೆಜ್ಜೆ ಇಡಲಾಗುತ್ತಿದೆ. ಜೆಇಇ, ನೀಟ್‌ ಪರೀಕ್ಷೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಹೆಚ್ಚು ರಾಂಕ್‌ಗಳನ್ನು ಪಡೆಯುವ ನಿಟ್ಟಿನಲ್ಲಿ ಇದು ಸಹಕಾರಿ ಆಗಲಿದೆ. ಜತೆಗೆ; ಯಾವ ವಿದ್ಯಾರ್ಥಿಯೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕದಂತೆ ವರ್ಷವಿಡೀ ಗೆಟ್‌ ಸೆಟ್‌ ಗೋ ಮೂಲಕ ಅಧ್ಯಯನ ಮಾಡಬಹುದು ಎಂದು ಡಿಸಿಎಂ ಹೇಳಿದರು.

    ಕಲಿಕೆ ಸುಲಭ ಮತ್ತು ಸರಳ:ಕಲಿಕೆ, ಪರಿಷ್ಕರಣೆ ಹಾಗೂ ಪರೀಕ್ಷೆ ಪರಿಕಲ್ಪನೆಯಲ್ಲಿ ʼಗೆಟ್‌ ಸೆಟ್‌ ಗೋʼ ಕೋಚಿಂಗ್‌ ವ್ಯವಸ್ಥೆ ರೂಪಿಸಲಾಗಿದ್ದು, ಇದರಲ್ಲಿ ನೀಟ್‌, ಜೆಇಇ, ಸಿಇಟಿ ಪರೀಕ್ಷಾರ್ಥಿಗಳಿಗೆ ಅತ್ಯಗತ್ಯವಾದ ಅಧ್ಯಯನ ಸಾಮಗ್ರಿಯ ಜತೆಗೆ ವಿಡಿಯೋಗಳು, ಪಠ್ಯ ಸಾರಾಂಶ, ಸಂವಾದಾತ್ಮಕ ಪರೀಕ್ಷೆಗಳು ಇರುತ್ತವೆ. ಇಡೀ ದೇಶದಲ್ಲಿಯೇ ವಿದ್ಯಾರ್ಥಿಗಳಿಗಾಗಿ ಇಂಥ ಉಪಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕ ಆಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

    ಆಕ್ಸೆಸ್‌ ಹೇಗೆ? ʼಗೆಟ್‌ ಸೆಟ್‌ ಗೋʼ ಆನ್‌ಲೈನ್‌ ಫ್ಲಾಟ್‌ಫಾರಂಗೆ ಸುಲಭವಾಗಿ ಪ್ರವೇಶ ಪಡೆಯಬಹುದು. ಕರ್ನಾಟಕವೂ ಸೇರಿದಂತೆ ಸಿಇಟಿ ಬರೆಯಲಿಚ್ಚಿಸುವ ದೇಶದ ಯಾವ ವಿದ್ಯಾರ್ಥಿ ಬೇಕಾದರೂ ತನ್ನ ವಿವರಗಳನ್ನು ನಮೂದಿಸಿ ಆಕ್ಸಿಸ್‌ ಮಾಡಬಹುದು. ವೆಬ್‌ಸೈಟ್‌, ಯುಟ್ಯೂಬ್‌ ಅಥವಾ ಗೆಟ್‌ ಸೆಟ್‌ ಗೋ ಆಪ್‌ ಮೂಲಕ ಕೋಚಿಂಗ್‌ ಪಡೆಯಬಹುದು. ಈ ಆಪ್‌ ಅಂಡ್ರಾಯಿಡ್‌, ಐಓಎಸ್‌ನಲ್ಲೂ ಲಭ್ಯ. ಇದಕ್ಕೆ ಗೂಗಲ್‌ ಆಪ್ ಸ್ಟೋರ್‌ನಲ್ಲಿ 4.3 ರೇಟಿಂಗ್‌ ಇದೆ‌. ವಿದ್ಯಾರ್ಥಿಗಳು getcetgo.in ವೆಬ್ ಪೋರ್ಟ್, ಗೂಗಲ್ ಪ್ಲೇಸ್ಟೋರ್ ಆಯಂಡ್ರಾಯ್ಡ್ ಆಪ್ GetCETGO ಮೂಲಕ ಮಾಹಿತಿ ಪಡೆಯಬಹುದು ಹಾಗೂ ತಮ್ಮ ವಿವರಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಡಿಸಿಎಂ ತಿಳಿಸಿದರು.

    ಕಳೆದ ವರ್ಷ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದ ದೀಕ್ಷಾ ಸಂಸ್ಥೆಯವರೇ ಈ ವರ್ಷವೂ ತರಬೇತಿ ನೀಡುತ್ತಿದ್ದು, ವಿದ್ಯಾರ್ಥಿ ಮತ್ತು ಪೋಷಕರು ಇನ್ನೂ ಕೋವಿಡ್‌ ಸಂಕಷ್ದದಿಂದ ಹೊರಬಾರದ ಹಿನ್ನೆಲೆಯಲ್ಲಿ ಸರಕಾರ ʼಗೆಟ್‌-ಸೆಟ್‌ ಗೋʼ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಿದೆ. ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆಗೂ ತಯಾರಿ ನಡೆಸುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ಅತ್ಯುತ್ತಮ ಕೋಚಿಂಗ್‌ ನೀಡಲಾಗುವುದು ಎಂದು ಅವರು ತಿಳಿಸಿದರು.


    ಕಾಲೇಜುಗಳು ಸ್ಥಗಿತ ಇಲ್ಲ

    ಯಾವುದೇ ಕಾರಣಕ್ಕೂ ಆರಂಭವಾಗಿರುವ ಕಾಲೇಜುಗಳನ್ನು ಸ್ಥಗಿತ ಮಾಡುವುದಿಲ್ಲ. ಈಗಾಗಲೇ ಒಂದು ವರ್ಷ ವ್ಯರ್ಥವಾಗಿರುವುದು ಸಾಕು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಬಿಎಂಎಸ್‌ ಕಾಲೇಜ್‌ ಸೇರಿ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟೀವ್‌ ಬಂದಿದೆ ಎಂದು ಸುದ್ದಿಗಾರರು ಕೇಳಿದೆ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ: “ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಕ್ಲಾಸ್‌ ಕಡ್ಡಾಯವಲ್ಲ, ಆಫ್‌ಲೈನ್‌ ಅಥವಾ ಆನ್‌ಲೈನ್‌ನಲ್ಲೂ ಹಾಜರಾಗಬಹುದು. ಆದರೆ, ಹಾಜರಾತಿ ಕಡ್ಡಾಯ. ಆಯಾ ಶಿಕ್ಷಣ ಸಂಸ್ಥೆಗಳು ಇನ್ನೂ ಉತ್ತಮವಾಗಿ ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸಬೇಕು. ಪರಿಣಾಮಕಾರಿಯಾಗಿ ಪರೀಕ್ಷೆ ಮಾಡಬೇಕು. ಸ್ಯಾನಿಟೈಸೇಷನ್‌, ಮಾಸ್ಕ್‌, ದೈಹಿಕ ಅಂತರ ಕಾಪಾಡಿಕೊಳ್ಳುವತ್ತ ಹೆಚ್ಚು ನಿಗಾ ಇಡಬೇಕು” ಎಂದು ಸಲಹೆ ಮಾಡಿದರು.

    ಯಾವುದೇ ಕಾರಣಕ್ಕೂ ಶೈಕ್ಷಣಿಕ ವರ್ಷ ವ್ಯತ್ಯಯ ಆಗಬಾರದು. ಪರಿಸ್ಥಿತಿಯನ್ನು ಎದುರಿಸಲು ಎಲ್ಲ ತಯಾರಿಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ಮಾಡಿಕೊಳ್ಳಬೇಕು. ಈಗಾಗಲೇ ವ್ಯಾಕ್ಸಿನ್‌ ಬಂದಿದೆ. ಎರಡನೇ ಅಲೆ ಎದ್ದಿದೆ ಎನ್ನುವ ಕಾರಣಕ್ಕೆ ಆಫ್‌ಲೈನ್‌ ತರಗತಿಗಳನ್ನು ಸ್ಥಗಿತ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

    ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್‌ ಕುಮಾರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರನಾಯಕ್‌, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖ್ಯಸ್ಥ ವೆಂಕಟರಾಜು ಮುಂತಾದವರು ಉಪಸ್ಥಿತಿರಿದ್ದರು.


    ನೀರನ್ನು ಉಳಿಸದಿದ್ದರೆ ಭವಿಷ್ಯದಲ್ಲಿ ಕಾದಿದೆ ಅಪಾಯ


    ಮಾರ್ಚ್ 22, ವಿಶ್ವ ಜಲ ದಿನ, ಜಗತ್ತಿನಾದ್ಯಂತ , ನೀರಿನ ಮಹತ್ವ ಮತ್ತು ಅದರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ‘ಮೌಲ್ಯಯುತ ನೀರು’ ಎಂಬ ಕೇಂದ್ರ ವಿಷಯದೊಂದಿಗೆ 2021 ರ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ. “ಬಾಯಾರಿದ ಮನುಷ್ಯನಿಗೆ ಒಂದು ಹನಿ ನೀರು ಚಿನ್ನದ ಚೀಲಕ್ಕಿಂತ ಹೆಚ್ಚು ಅಮೂಲ್ಯವಾದದ್ದು”. ನೀರಿನ ಮೌಲ್ಯವನ್ನು ಅರಿತುಕೊಂಡು ಅದರ ಸಂರಕ್ಷಣೆಯಲ್ಲಿ ಕೈಜೋಡಿಸೋಣ. “ಹನಿ- ಹನಿ ಸೇರಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ” ಎಂಬ ಮಾತಿನಂತೆ ಪ್ರತಿಯೊಬ್ಬರ ಕೊಡುಗೆಯು ದೊಡ್ಡ ಮಟ್ಟದಲ್ಲಿ ಜಲಸಂರಕ್ಷಣೆಗೆ ಸಹಾಯವಾಗುತ್ತದೆ. ಜಲಶಕ್ತಿ ಅಭಿಯಾನದ ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸುತ್ತಿರುವ ಕೆರೆಹೂಳೆತ್ತುವ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ನಾವೆಲ್ಲರೂ ಭಾಗಿಯಾಗೋಣ.


    ಇಡೀ ವಿಶ್ವದಲ್ಲಿ ಭೂಗ್ರಹದಲ್ಲಿ ಮಾತ್ರ ನಾವು ಜೀವಿಗಳನ್ನು ಕಾಣಬಹುದು ಮತ್ತು ಇಲ್ಲಿ ಜೀವಿಗಳು ಉದಯಿಸಿ ವಿಕಾಸ ಹೊಂದುವಂತಹ ಪರಿಸರ, ವಾತಾವರಣ ಇದೆ. ಇತರೆ ಯಾವ ಗ್ರಹದಲ್ಲೂ ಇಂತಹ ಒಂದಕ್ಕೊಂದು ಜೈವಿಕ ಮತ್ತು ಅಜೈವಿಕ ಅಂಶಗಳ ಸಮ್ಮಿಲನದಿಂದ ಪೂರಕವಾಗಿರುವ ಪರಿಸರ ಇದೆ ಎಂಬುದರ ಬಗ್ಗೆ ಸದ್ಯಕ್ಕೆ ನಿಖರ ಮಾಹಿತಿ ಇಲ್ಲ. ಭೂಮಿಯಲ್ಲಿ ಜೀವಿಗಳು ಹುಟ್ಟಲು ಮತ್ತು ವಿಕಾಸ ಹೊಂದಲು ಕಾರಣವಾದ ಅಂಶಗಳನ್ನು ಕೆದಕಿದರೆ ನಮಗೆ ನೀರಿನ ಮಹತ್ವವನ್ನು ಅರಿತುಕೊಳ್ಳಬಹುದು. ಇತರ ಗ್ರಹಗಳಲ್ಲಿ ಜೀವಿಗಳು ಉದಯಿಸದೆ ಇರಲು ಅಲ್ಲಿದ್ದಂತಹ ಅಂಶಗಳು ಯಾವುದು ಎಂಬುದರ ಬಗ್ಗೆ ತಿಳಿದುಕೊಂಡರೆ ನಮಗೆ ಭೂಮಿಯಲ್ಲಿ ಕಂಡು ಬರುವ ಪರಿಸರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಹುದು.

    ಭೂಮಿಯು ಸೌರವ್ಯೂಹದಲ್ಲಿಯ ಇತರ ಕಾಯಗಳಂತೆ ಸುಮಾರು 4,500 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿತು. ಇತರ ಗ್ರಹಗಳು ಇದೇ ಸಮಯದಲ್ಲಿ ರೂಪುಗೊಂಡರೂ ಇಲ್ಲಿ ಜೀವಿಗಳು ಉಗಮವಾಗಲಿಲ್ಲ. ಜೀವಿಗಳ ಉಗಮಕ್ಕೆ ಇಲ್ಲಿರುವ ವಿಶೇಷತೆಗಳು ಏನೆಂದರೆ:

    1. ಭೂಮಿ ಸೂರ್ಯನಿಂದ ಇರುವ ದೂರ ಬೇರೆ ಗ್ರಹಗಳಿಗೆ ಹೋಲಿಸಿದರೆ ಅತೀ ಹತ್ತಿರವೂ ಅಲ್ಲ, ಅತೀ ದೂರವೂ ಅಲ್ಲ (ಭೂಮಿಯು ಸೂರ್ಯನನ್ನು ಸರಾಸರಿ 92,955,807 ಮೈಲುಗಳಷ್ಟು (149,597,870 ಕಿಮೀ) ಅಂತರದಲ್ಲಿ ಸುತ್ತುತಿರುತ್ತದೆ. ಇದರಿಂದಾಗಿ ಇಲ್ಲಿ ಜೀವಪೋಷಕ ರಾಸಾಯನಿಕಗಳು ಉತ್ಪತ್ತಿಯಾಗಲು ಅವಕಾಶವಾಗುವಂತಹ ಉಷ್ಣತೆಯ ವ್ಯಾಪ್ತಿ ಇದೆ. ಇದು ಪೋಷಕಾಂಶಗಳ ಸಾಗಾಣಿಕೆಗೆ ನೀರಿನಂತಹ ದ್ರವ ಮಾಧ್ಯಮ ಮತ್ತು ನೀರನ್ನು ಭೂಮಿಯಲ್ಲಿ ದ್ರವ ರೂಪದಲ್ಲೇ ಉಳಿಸಿಕೊಳ್ಳವುದಕ್ಕೆ ಸಹಕಾರಿಯಾಗಿದೆ.

    2. ಜೀವಿಗಳಿಗೆ ಆಧಾರವಾಗಿದ್ದುಕೊಂಡು ಅವುಗಳನ್ನು ಉಳಿಸಿಕೊಂಡು ಹೋಗಬಲ್ಲ ವಾಯುಮಂಡಲ ಮತ್ತು ಜೀವರಾಶಿಗೆ ಅಪಾಯವಾಗಬಲ್ಲ ಸೂರ್ಯನ ಅಪಾಯಕಾರಿ ವಿಕಿರಣಗಳು ಭೂಮಿಗೆ ಬಾರದಂತೆ ತಡೆಯುವ ರಕ್ಷಾಕವಚ (ಕಾಂತಗೋಳ ವ್ಯಾನ್ ಆಲನ್ ಬೆಲ್ಟ್ ಮತ್ತು ಓಜೋನ್ ಪದರ) ಇವೆ.

    ಜಲಚಕ್ರ

    By John Evans and Howard Periman, USGS – http://ga.water.usgs.gov/edu/watercycle.html, Public Domain, https://commons.wikimedia.org/w/index.php?curid=26818355

    ಭೂಮಿ ಸೃಸ್ಟಿಯಾದ ಸುಮಾರು 800 ಮಿಲಿಯನ್ ವರ್ಷಗಳ ನಂತರ ಭೂಮಿಯ ಸಂಪೀಡನೆಯಿಂದಾಗಿ ಭೂಮಿಯ ಉಷ್ಣತೆಯು ಹೆಚ್ಚಾಗಿ ಭೂಮಿಯು ದ್ರವಿಸುವುದಕ್ಕೆ ಪ್ರಾರಂಭವಾಯಿತು. ಇದರಿಂದಾಗಿ ಭೂಮಿಯ ವಿಭೇದಿಕರಣಕ್ಕೆ ಅವಕಾಶವಾಯಿತು. ಭೂಮಿಯ ವಿಭೇದಿಕರಣದಿಂದಾಗಿ ಭಾರ ಧಾತುಗಳು ಭೂಮಿಯ ಒಳಗರ್ಭಕ್ಕೂ, ಹಗುರ ಧಾತುಗಳು ಹೊರ ಬಾಗಕ್ಕೂ ಬಂದವು ಮತ್ತು ಅನಿಲಗಳು ಮತ್ತು ನೀರಾವಿ ಬಿಡುಗಡೆಯಾಗಿ ವಾಯುಮಂಡಲ ಉಂಟಾಯಿತು. ಮುಂದೆ ಸೂರ್ಯನು ಭೂಮಿಯನು ಅಸಮವಾಗಿ ಬಿಸಿ/ತಂಪು ಮಾಡುವ ಮೂಲಕ ವಾಯುಮಂಡಲದ ಅನಿಲಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುವಂತೆ ಮಾಡಿತು ಹಾಗೂ ತಣ್ಣನೆಯಾಗಿ ನೀರಾವಿಯು ಮೋಡವಾಗಿ ಮಳೆಯಾಗಿ ಭೂಮಿಯನ್ನು ಸೇರಿತು. ಮುಂದೆ ಮಳೆನೀರು ತಗ್ಗಾದ ಜಾಗಳಿಗೆ ಸೇರಿ ಸಮುದ್ರ, ಸಾಗರಗಳಾದವು. ತದನಂತರ ಈ ಪ್ರಕ್ರಿಯೆಗಳು ಜಲಚಕ್ರದ ಮೂಲಕ ನಿರಂತರವಾಗಿ ನಡೆಯುತ್ತಾ ಇದೆ.

    ಇದೇ ಸಮಯದಲ್ಲಿ ಗುಡುಗು ಮಿಂಚುಗಳಿಂದಾದ ವಿದ್ಯುತ್ ವಿಸರ್ಜನೆಗಳಿಂದ ಉಂಟಾದ ಕಾರ್ಬನ್, ಹೈಡ್ರೋಜನ್ ಮತ್ತು ನೈಟ್ರೋಜನ್‍ಗಳ ಸಂಕೀರ್ಣ ಅಣುಗಳು ಮಳೆಯೊಂದಿಗೆ ಸಾಗರವನ್ನು ಸೇರಿಕೊಂಡು ಮೊದಲ ಜೀವಿಗಳ ಉದಯವಾಯಿತು. ವಾತಾವರಣದಲ್ಲಿದ್ದ ಹೆಚ್ಚುವರಿ ಕಾರ್ಬನ್ ಡೈಆಕ್ಸೈಡ್ ನೀರಿನೊಂದಿಗೆ ಕರಗಿ ಕಾರ್ಬೋನೇಟ್ ಶಿಲೆಗಳ ರೂಪದಲ್ಲಿ ಭೂಮಿಗೆ ಹಿಂತಿರುಗಿರುವುದರಿಂದ ಹಸಿರುಮನೆ ಪರಿಣಾಮ ಕಡಿಮೆಯಾಯಿತು. ಆದಿ ರೂಪದ ಜೀವಿಗಳು ಕಡಲಲ್ಲಿ ಉದ್ಭವಿಸುವುದಕ್ಕೂ ಅವು ಬದುಕುಳಿಯುವುದಕ್ಕೂ ನೀರಿನ ಪಾತ್ರ ಅಮೂಲ್ಯವಾಯಿತು. ಮುಂದೆ ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆಯಾಗುತ್ತಾ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತಾ ಹೋಗಿ ಜೀವಿಗಳ ಉಳಿವಿಗೆ, ಬದುಕಿಗೆ ಅನುಕೂಲಕರವಾದ ಪರಿಸರ/ವಾತಾವರಣ ಸೃಸ್ಟಿಯಾಯಿತು.

    ಈ ಮೇಲಿನ ಅಂಶಗಳಿಂದ ಜೀವಿಗಳು ಸೃಷ್ಟಿಯಾಗಲು ಮತ್ತು ವಿಕಾಸಹೊಂದಲು ನೀರಿನ ಮಹತ್ವವನ್ನು ಅರಿಯಬಹುದು. ಆದುದರಿಂದ, ನೀರಿನಿಂದಲೇ ಜೀವನ, ಜೀವನವೆಂದರೆ ನೀರು. ನೀರು ಇಲ್ಲದಿದ್ದರೆ ಜೀವನವಿಲ್ಲ ಎಂದು ಹೇಳುವಷ್ಟು ನೀರಿನ ಪ್ರಾಮುಖ್ಯತೆ ಪ್ರತಿಯೊಂದು ಜೀವಿಗೂ ಇದೆ. ಮನುಷ್ಯನ ದೇಹದಲ್ಲಿ ಶೇ 65 ಭಾಗ ನೀರಾದರೆ, ಅಂಬಲಿ ಮೀನಿನ ದೇಹವು ಶೇ 95 ಭಾಗ ನೀರು ಇದೆ. ಅದೇ ರೀತಿ ಜಲವಾಸದ ಸಸ್ಯಗಳಲ್ಲಿ ಶೇಕಡಾ 70 ರಿಂದ 80 ಭಾಗ ನೀರು ಇದ್ದರೆ, ಶುಷ್ಕಪ್ರದೇಶದ ಕೆಲವು ಸಸ್ಯಗಳಲ್ಲಿ ಕೇವಲ ಪ್ರತಿಶತ 4 ರಿಂದ 5 ರಷ್ಟು ಮಾತ್ರ ನೀರನ್ನು ಉಳಿಸಿಕೊಂಡು ಬದುಕುತ್ತವೆ.

    ಭೂಮಿಯ ಸುಮಾರು ಶೇ 70 ಭಾಗ ನೀರಿನಿಂದ ಆವರಿಸಿಕೊಂಡಿದೆ. ಈ 70 ಶೇಕಡಾ ನೀರಿನಲ್ಲಿ ಶೇ 97.5 ಸಮುದ್ರದಲ್ಲಿದೆ. ಉಪ್ಪುನೀರಿನ ರೂಪವಲ್ಲದೆ ಉಳಿದ ಶೇಕಡಾ 2.5 ನೀರಿನಲ್ಲಿ 90 ಶೇಕಡಾ ನೀರು ಮಂಜುಗಡ್ಡೆಯ ರೂಪದಲ್ಲಿದೆ. ಇನ್ನುಳಿದ ಶೇಕಡಾ 0.26 ಭಾಗ ನೀರು ಮಾತ್ರ ಭೂಚರ ಜೀವಿಗಳಿಗೆ ಬಳಸಲು ಯೋಗ್ಯವಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಏನೆಂದರೆ ನೀರು ಭೂಮಿಯಲ್ಲಿ ಎಲ್ಲಾ ಕಡೆ ಸಮ ಪ್ರಮಾಣದಲ್ಲಿ ವಿತರಣೆಯಾಗಿಲ್ಲ. ಇರುವ ಪ್ರಮಾಣದ ಎಲ್ಲಾ ನೀರು ಬಳಸಲು ಯೋಗ್ಯವೂ ಅಲ್ಲ ಎಂಬುದು.

    ಒಂದು ಲೆಕ್ಕದಲ್ಲಿ ಇದು ಒಂದು ವರವೂ ಹೌದು, ಶಾಪವೂ ಹೌದು. ಏಕೆಂದರೆ ಭೂಮಿಯಲ್ಲಿ ನೀರು ಅಸಮ ಪ್ರಮಾಣದಲ್ಲಿ ವಿತರಣೆಯಾಗಿರುವುದರಿಂದ ಭೌಗೋಳಿಕ ವೈವಿಧ್ಯತೆ, ಹವಾಮಾನ ವೈವಿಧ್ಯತೆ, ಆವಾಸಸ್ಥಾನ ವೈವಿಧ್ಯತೆ ಮತ್ತು ಜೀವವೈವಿಧ್ಯತೆಗಳನ್ನು ಕಾಣುತ್ತೇವೆ.ಶಾಪ ಏಕೆಂದರೆ, ಭೂಮಿಯ ಶೇಕಡ 70 ಭಾಗ ನೀರು ಆವರಿಸಿದ್ದರೂ ಅವುಗಳು ನಮ್ಮ ಬಳಕೆಗೆ ಉಪಯೋಗವಾಗದಿರುವುದು. ಬರಗಾಲದ ದಿನಗಳಲ್ಲೂ ಈ ನೀರನ್ನು ಬಳಸಲು ಸಾಧ್ಯವಾಗದು. ಒಂದು ವೇಳೆ, ಭೂಮಿಯಲ್ಲಿರುವ ಬಳಸಲು ಯೋಗ್ಯವಾದಂತಹ ಶೇ 0.26 ನೀರು ಜಲಮಾಲಿನ್ಯದಿಂದ ಬಳಸಲು ಅಯೋಗ್ಯವಾದರೆ ನಮ್ಮ ಗತಿಯನ್ನು ಊಹಿಸಲೂ ಸಾಧ್ಯವಿಲ್ಲ. ಮಾತ್ರವಲ್ಲ, ನಮ್ಮಿಂದಾಗಿ ಇತರ ಜೀವಿಗಳೂ ಸಾಯಬೇಕಾಗುತ್ತದೆ. ಹಾಗಾಗಿ ನಮ್ಮ ಜೀವಜಲವಾಗಿರುವ ನೀರನ್ನು ಬೇಕಾಬಟ್ಟಿ ಬಳಸದೇ, ಉಳಿಸಿ ಸಂರಕ್ಷಿಸುವುದು ನಮ್ಮ ಪ್ರಾಥಮಿಕ ಕರ್ತವ್ಯಗಳಲ್ಲಿ ಒಂದಾಗಬೇಕು.

    ಮನೆಯಲ್ಲಿ ಮಳೆನೀರು ಕೊಯ್ಲು ಮಾಡುವ ಒಂದು ಸರಳ ವಿಧಾನ

    ಪ್ರಕೃತಿ ಎಲ್ಲರಿಗೂ ಎಲ್ಲವನ್ನೂ ಒಂದೇ ಸಮನಾಗಿ ನೀಡಿಲ್ಲ. ಹಾಗಂತ ಯಾವುದಕ್ಕೂ ಕೊರತೆಯನ್ನು ಮಾಡಿಲ್ಲ. ಪ್ರಕೃತಿಯು ನಮಗೆ ನೀಡಿರುವ ಬಳಸಲು ಯೋಗ್ಯವಾದ ಶೆಕಡಾ 0.26 ನೀರನ್ನು ಮಾತ್ರ ನೀಡಿದೆ ಎಂದು ನಾವು ನಿಸರ್ಗವನ್ನು ದೂಷಿಸುವಂತಿಲ್ಲ. ಏಕೆಂದರೆ, ಈ ನೀರನ್ನು ನಾವು ಪ್ರಾಮಾಣಿಕವಾಗಿ ಬಳಸಿ, ಉಳಿಸಿದರೆ, ಆ ಸ್ವಲ್ಪ ಪ್ರಮಾಣದ ನೀರೇ ಬೇಕಾದಷ್ಟು ಸಾಕಾಗುತ್ತದೆ. ಹಾಗಾದರೆ ಇತ್ತೀಚಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಗಳಿಗೆ ನಾವೇ ಹೊಣೆ ಎಂದಾಯಿತು. ನಾವು ಮಾಡುವ ನೀರಿನ ಅಪವ್ಯಯ, ಜಲ ಮಾಲಿನ್ಯ, ಇರುವಾಗ ಅಪರಿಮಿತ ಅಥವಾ ವಿವೇಚನಾರಹಿತ ಬಳಕೆ, ಅರಣ್ಯ ನಾಶ, ನಿಸರ್ಗದ ನೀರನ್ನು ಸಂರಕ್ಷಿಸುವ ಮೂಲ ನಾಶಮಾಡಿ ಅಂತರ್ಜಲದ ಅಪಾರಬಳಕೆ, ಜನಸಂಖ್ಯಾ ಸ್ಫೋಟ, ನಗರೀಕರಣ ಇತ್ಯಾದಿ ಜಲಕ್ಷಾಮಕ್ಕೆ ಕಾರಣವಾಗುತ್ತಿದೆ.

    ಹಾಗಾದರೆ ನೀರಿನ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು? ನೀರು ಒಂದು ಬರಿದಾಗದ ಸಂಪನ್ಮೂಲ. ನಾವು ನೀರನ್ನು ಅದರ ಮೂಲದಿಂದ ಬಳಸಿದಾಗ ಮಾತ್ರ ಅದು ಬೇಸಿಗೆ ಕಾಲದಲ್ಲಿ ಬರಿದಾಗುತ್ತದೆ. ಮತ್ತೆ ಪುನಃ ಮಳೆಗಾಲದಲ್ಲಿ ತುಂಬುತ್ತದೆ. ಪುನಃ ಬೇಸಿಗೆ ಕಾಲದಲ್ಲಿ ಬರಿದಾಗುತ್ತದೆ. ªಹೀಗೆ ಬೇಸಿಗೆ ಕಾಲದಲ್ಲಿ ಖಾಲಿಯಾದ ನೀರು ಎಲ್ಲಿಗೆ ಹೋಯಿತು ಮತ್ತು ಮಳೆಗಾಲದಲ್ಲಿ ಆ ನೀರು ಎಲ್ಲಿಂದ ಬಂತು? ಏಕೆಂದರೆ ನೀರು ಆಗಲೇ ಭೂಗ್ರಹದಲ್ಲಿ ಸೃಸ್ಟಿಯಾಗಿದೆ. ಪುನ: ಸೃಷ್ಟಿ ಮಾಡಲು ಸಾದ್ಯವಿಲ್ಲ, ಮಾತ್ರವಲ್ಲ, ಲಯಗೊಳಿಸಲೂ ಸಾಧ್ಯವಿಲ್ಲ. ಹೀಗೆ ನೀರು ಒಂದು ರೂಪದಿಂದ ಇನ್ನೊಂದು ರೂಪವಾಗಿ ಪರಿವರ್ತನೆಯಾಗಿ ಬರಿದಾದ ಕಡೆ ತುಂಬುವುದಕ್ಕೆ ಜಲಚಕ್ರ ಎನ್ನುವರು. ಜಲಚಕ್ರವು ನೀರನ್ನು ಎಲ್ಲಾ ಕಡೆಗೆ ಹಂಚುವುದಲ್ಲದೆ ನೀರನ್ನು ಪ್ರಕೃತಿದತ್ತವಾಗಿ ಶುದ್ಧೀಕಣಗೊಳಿಸುತ್ತದೆ.

    ಜಲಚಕ್ರ ಎಂದರೆ, ನೀರು ಸಮುದ್ರ, ಸರೋವರ ನದಿ ಕೊಳ ಪ್ರಾಣಿ ಸಸ್ಯಗಳಿಂದ ಆವಿಯಾದ ನೀರು ವಾತಾವರಣದಲ್ಲಿ ಮೋಡವಾಗಿ ಸಾಂದ್ರೀಕರಣ ಹೊಂದಿ ಮಳೆಯಾಗಿ ಪುನಃ ಭೂಮಿಯನ್ನು ಸೇರುವುದು ಎಂಬುವುದನ್ನು ಅರಿತೆವು. ಜಲಚಕ್ರದಲ್ಲಿ ನೀರು ಕ್ರಮಬದ್ಧವಾಗಿ ಎಲ್ಲಾಕಡೆ ಹಂಚಬೇಕಾದರೆ ಸರಿಯಾದ ಪ್ರಮಾಣದಲ್ಲಿ ಕಾಡು ಬೇಕು ಮತ್ತು ಜಲಚಕ್ರದ ಮೂಲಕ ಎಲ್ಲಾ ಕಡೆ ಹಂಚಿಕೆಯಾದ ಶುದ್ದ ನೀರನ್ನು ಪುನಃ ಅದರ ಮೂಲಸ್ಥಾನವಾದ ಸಮುದ್ರಕ್ಕೆ ಹೋಗಲು ಬಿಡದೆ ಭೂಮಿಯಲ್ಲೇ ಶೇಖರಣೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಏಕೆಂದರೆ ಆಧುನಿಕತೆ ಮತ್ತು ಅಭಿವೃದ್ಧಿಯ ಭರಾಟೆಯಲ್ಲಿ ನಾವು ಕಾಡುನಾಶ, ನಮ್ಮ ಹಿರಿಯರು ದೂರದೃಷ್ಟಿಯಿಂದ ಕಟ್ಟಿಸಿದ ಕೆರೆಕುಂಟೆಗಳನ್ನು ನಾಶ ಮಾಡಿದ್ದೇವೆ. ಅಲ್ಲದೆ, ನಗರೀಕರಣ, ಕಾಂಕ್ರಿಟೀಕರಣ, ಡಾಮರೀಕರಣ, ಹೀಗೆ ಹಲವು ಯೋಜನೆಗಳಿಂದ ನೀರು ಭೂಮಿಯಲ್ಲಿ ಸ್ವಾಭಾವಿಕವಾಗಿ ಸಂಗ್ರಹಗೊಳ್ಳುವ ನೈಸರ್ಗಿಕ ವಿಧಾನವನ್ನು ನಾಶ ಮಾಡುತ್ತಿದ್ದೇವೆ. ಇದಕ್ಕೆ ಪರ್ಯಾಯವಾಗಿ ನಾವು ಏನನ್ನಾದರೂ ಮಾಡಲೇಬೇಕು. ಇಲ್ಲದಿದ್ದರೆ ಸದ್ಯ ಭವಿಷ್ಯದಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಇನ್ನು ನಮ್ಮಲ್ಲಿ ಈಗಾಗಲೇ ಇರುವ ನೀರಿನ ಸದ್ಭಳಕೆಯ ಕ್ರಮವನ್ನು ಅಳವಡಿಸಿಕೊಳ್ಳುವುದು. ಇಲ್ಲಿ ಸದ್ಭಳಕೆ ಅಂದರೆ ಮುಖ್ಯವಾಗಿ ನೀರನ್ನು ಮಿತವಾಗಿ ಬಳಸುವುದು ಎಂದರ್ಥ. ಅರ್ಥಾತ್, ಎಷ್ಟು ಉಪಯೋಗಕ್ಕೆ ಅವಶ್ಯವೋ ಅಷ್ಟನ್ನೇ ಮಾತ್ರ ಬಳಸುವುದು. ಉಳಿತಾಯಕ್ಕಾಗಿ ನೀರನ್ನು ಬಳಸದೇ ಇರಲು ಸಾಧ್ಯವಾಗದೆ ಇರಬಹುದು. ಬದಲಾಗಿ, ನೀರನ್ನು ಪೋಲು ಮಾಡದಿರುವುದು ಮತ್ತು ಮರುಬಳಕೆ ಮಾಡುವುದು.

    ನೀರಿನ ಬಗ್ಗೆ ಪ್ರಮುಖವಾದ ಇನ್ನೊಂದು ಸಮಸ್ಯೆಯೆಂದರೆ, ಜಲಮಾಲಿನ್ಯ. ಪರಿಸರದ ಪ್ರತಿಯೊಂದು ಘಟಕವೂ ಇಂದು ಕಲುಷಿತಗೊಂಡಿದೆ. ನೆಲ, ಜಲ, ವಾಯು, ಪರಿಸರ ಪ್ರತಿಯೊಂದು ಘಟಕವು, ಆವಾಸಸ್ಥಾನಗಳು ಕಲುಷಿತಗೊಂಡಿವೆ. ಪರಿಸರದ ಘಟಕಗಳು ಮಾಲಿನ್ಯ ಆಗುವುದು ಎಂದರೇನು? ಪರಿಮಿತಿಗಿಂತ ಯಾವುದೇ ಒಂದು ಪದಾರ್ಥವು/ರಾಸಾಯನಿಕವು ಹೆಚ್ಚಾಗಿ ಅದು ಜೈವಿಕ ಮತ್ತು ಅಜ್ಯೆವಿಕ ಅಂಶಗಳಲ್ಲಿ ಅನಪೇಕ್ಷಿತ ಬದಲಾವಣೆಗಳಿಗೆ ಕಾರಣವಾದರೆ ಅದನ್ನು ಪರಿಸರ ಮಾಲಿನ್ಯ ಎನ್ನುತ್ತೇವೆ. ಎಲ್ಲಾ ಘಟಕಗಳಿಗಿಂತ ನೀರು ಬಹಳ ಬೇಗ ಕಲುಷಿತಗೊಳುತ್ತದೆ. ಕಾರಣ, ನೀರು ಒಂದು ಸಾರ್ವತ್ರಿಕ ದ್ರಾವಕ. ನೀರಿನಲ್ಲಿ ಹೆಚ್ಚಿನ ವಸ್ತುಗಳು ಕರಗುತ್ತವೆ. ಈ ಗುಣದಿಂದಾಗಿ ಜೀವಿಗಳು ಪೋಷಕಾಂಶದ ಸಾಗಾಣಿಕೆಗೆ ನೀರನ್ನು ಬಳಸಿಕೊಂಡಿದೆ. ನೀರು ಜೀವಿಗಳಿಗೆ ಮುಖ್ಯವಾಗಿ ಪೋಷಕಾಂಶಗಳ ಸಾಗಾಣಿಕೆಗೆ ಮತ್ತು ರಾಸಾಯನಿಕ ಕ್ರಿಯೆಗಳಿಗೆ ಮಾಧ್ಯಮವಾಗಿ ಸಹಾಯಕವಾಗುತ್ತದೆ. ನೀರಿನ ಸಾರ್ವತ್ರಿಕ ದ್ರಾವಕ ಗುಣವು ಜೀವಿಗಳಿಗೆ ಅನುಕೂಲಕರವಾಗಿದ್ದರೆ, ಅದರೆ ಇದೇ ಗುಣ ಮಾಲಿನ್ಯ ವಿಷಯವನ್ನು ಪರಿಗಣಿಸಿದರೆ ಪ್ರತಿಕೂಲವೂ ಆಗಿದೆ. ನೀರಿನ ಸಾರ್ವತ್ರಿಕ ದ್ರಾವಕ ಗುಣದಿಂದಾಗಿ ಇತರ ದ್ರಾವಕಗಳಿಗಿಂತ ಅದು ಬೇಗನೆ ಮಾಲಿನ್ಯವಾಗುತ್ತದೆ. ಹಾಗಾಗಿ ನೀರನ್ನು ಕಲುಷಿತಗೊಳಿಸುವ ಮಾಲಿನ್ಯಕಾರಿಗಳನ್ನು ನೀರಿನ ಮೂಲದಿಂದ ಆದಷ್ಟೂ ದೂರ ಇಡಬೇಕು.

    ಜಲಚಕ್ರದಲ್ಲಿ ನಮ್ಮನ್ನೂ ತೊಡಗಿಸಿಕೊಳ್ಳಲು ಸಾಧ್ಯವಿದ್ದು, ಆ ಮೂಲಕ ನೀರನ್ನು ಸಂರಕ್ಷಿಸಬಹುದು:

    · ಸಿಹಿನೀರಿನ ನೈಸರ್ಗಿಕ ಮೂಲಗಳಾದ ತೆರದಬಾವಿ, ಕೆರೆ, ನದಿ ಸರೋವರವನ್ನು ಯಥಾಸ್ಥಿಯಲ್ಲಿ ಕಾಪಾಡಿಕೊಂಡು ಬರುವುದು.

    · ಸಾಧ್ಯವಾದಷ್ಟೂ ಕಾಡನ್ನು ಬೆಳೆಸುವುದು ಮತ್ತು ಮುಖ್ಯವಾಗಿ ಸ್ವಾರ್ಥಕ್ಕಾಗಿ ಗಿಡಮರಗಳನ್ನು ಕಡಿಯುವುದನ್ನು ತಡೆಗಟ್ಟುವುದು.

    · ಮಳೆನೀರನ್ನು ಇಂಗಿಸುವುದರ ಮೂಲಕ ಅಂತರ್ಜಲ ಮಟ್ಟವನ್ನು ಏರಿಸುವುದು.

    · ಮಳೆನೀರು ಕೊಯ್ಲು, ಈ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗುವಂತೆ ಮಾಡುವುದು.

    · ಎಲ್ಲಾ ಮನೆಯವರು ಮಳೆಗಾಲದಲ್ಲಿ ನಳ್ಳಿ ನೀರು ಬಳಸದೆ, ಮಳೆಕೊಯ್ಲು ಮುಖಾಂತರ ಸಂಗ್ರಹಿಸಿದ ನೀರನ್ನು ಬಳಸಬೇಕು.

    · ಮನೆಯ ವ್ಯಾಪ್ತಿಯ ಕಂಪೌಂಡು ಸುತ್ತಮುತ್ತ ಬಿದ್ದ ನೀರನ್ನು ಹೊರಗೆ ಹೋಗದಂತೆ ಇಂಗುಗುಂಡಿ ಮಾಡಿ ನೀರನ್ನು ಇಂಗಿಸುವುದು.

    · ಹೂಳು ತುಂಬಿರುವ ಕೆರೆಗಳ ಹೂಳು ತೆಗೆಯುವ ಕಾರ್ಯದಲ್ಲಿ ಭಾಗಿಯಾಗುವುದು.

    · ಬೇಸಿಗೆಯಲ್ಲಿ ನೀರು ಸಿಗದೆ ಪಕ್ಷಿಗಳ ಪ್ರಾಣಕ್ಕೆ ಅಪಾಯವಿದೆ ಎಂದು ಸೂಚಿಸುವ ವರದಿಗಳಿವೆ. ನಾವು ಮನೆಯ ಹೊರಗೆ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಪಕ್ಷಿಗಳನ್ನು ಉಳಿಸೋಣ.

    ನೀರಿನ ಮಾಲಿನ್ಯವನ್ನು ತಡೆಗಟ್ಟುವುದು:

    · ನೀರಿನ ಮೂಲದಲ್ಲಿರುವ ಜಲಚರಗಳು ನೀರಿಗೆ ಸೇರಿದ ಮಾಲಿನ್ಯಕಾರಿಗಳನ್ನು ತಕ್ಕಮಟ್ಟಿಗೆ ಸೇವಿಸಿಕೊಂಡು ನೀರನ್ನು ಶುದ್ಧಿಕರಿಸುತ್ತವೆ (ಜೈವಿಕ ಶುದ್ಧೀಕರಣ). ಇದು ಒಂದು ಹಂತ ತಲುಪಿದ ಮೇಲೆ ಜಲಚರಗಳು ಸಾಯುತ್ತವೆ. ಹಾಗಾಗಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವಾಗ ಅದರಲ್ಲಿರುವ ಮಲಿನಕಾರಿಗಳನ್ನು ಬೇರ್ಪಡಿಸಬೇಕು.

    · ದೊಡ್ಡ ದೊಡ್ಡ ಕೈಗಾರಿಕೆಗಳು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿದ್ದರೆ ನಾವು ನಮ್ಮ ಮನೆಯಲ್ಲಿ ಉಂಟಾಗುವ ಮಾಲಿನ್ಯ ನೀರನ್ನು ಸಂಗ್ರಹಿಸಿ ಅದರಲ್ಲಿರುವ ಕಲ್ಮಷಗಳನ್ನು ಬೇರ್ಪಡಿಸಿ ಆ ನೀರನ್ನು ಮರುಬಳಕೆ ಮಾಡಬಹುದು. ಮುಖ್ಯವಾಗಿ ಇಂತಹ ನೀರನ್ನು ಮನೆಯಲ್ಲಿ ಹೂವಿನ ಗಿಡಗಳಿಗೆ, ತೋಟಕ್ಕೆ ಬಳಸಬಹುದು.

    ‘ವಿಶ್ವ ಸಂಸ್ಥೆಯ ವಾಟರ್ ಡಾಕ್ಯುಮೆಂಟ್ಸ್’ ಪ್ರಕಾರ ಈಗಿರುವ ಜೀವನಶೈಲಿಯಂತೆ ನೀರನ್ನು ಬಳಸುತ್ತಾ ಹೋದರೆ, 2030 ಹೊತ್ತಿಗೆ ಪ್ರಪಂಚದಾದ್ಯಂತ ಶೇಕಡಾ 47 ರಷ್ಟು ಜನಸಂಖ್ಯೆಯು ನೀರಿನ ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ‘ನೀರು ಭೂತಾಯಿಯ ಅನರ್ಘ್ಯ ರತ್ನ’. ಮನುಷ್ಯನೂ ಸೇರಿದಂತೆ ಎಲ್ಲಾ ಕೋಟ್ಯಾನುಕೋಟಿ ಜೀವಿಗಳಿಗೆ ಬದುಕಲು ಆಶ್ರಯ ನೀಡಿರುವ ಭೂಮಿಯ ಒಂದು ಅಮೂಲ್ಯ ಆಸ್ತಿ ನೀರು. ನೀರಿಲ್ಲದೇ ಯಾವ ಜೀವಿಯೂ ಬದುಕಲಾರದು. ಆದುದರಿಂದ ನೀರಿನ ಬಗ್ಗೆ ಅಸಡ್ಡೆ ತೋರಿಸದೇ ಅದರ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಂಡು ಭವಿಷ್ಯದಲ್ಲಿ ಬರುವ ನೀರಿನ ಹಾಹಾಕಾರವನ್ನು ತಪ್ಪಿಸಲು ಈಗಿಂದಲೇ ನಾವು ಕಾರ್ಯತತ್ಪರಾಗಬೇಕು. ಇಲ್ಲದಿದ್ದರೆ ಶೀಘ್ರ ಭವಿಷ್ಯದಲ್ಲಿ ಅನಾಹುತ ತಪ್ಪಿದಲ್ಲ.

    ಸ್ಫೂರ್ತಿಯ ಆಶಾಕಿರಣ

    ಯಾವುದೇ ಫಲಾಪೇಕ್ಷೆ ಇಲ್ಲದೆ ಸಾವಿರಾರು ಗಿಡಮರಗಳನ್ನು ನೆಟ್ಟು ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತಿ ಪಡೆದ ಪದ್ಮಶ್ರೀ ಪುರಸ್ಕೃತೆ ತಿಮ್ಮಕ್ಕ; 1999-2000 ಮತ್ತು 2003 ರಲ್ಲಿ ತೀವ್ರವಾದ ಬರಗಾಲಗಳಿಂದ ತತ್ತರಿಸಿದ್ದ ರಾಜಸ್ಥಾನ ಗ್ರಾಮಗಳಲ್ಲಿ ಅಲ್ಲಿನ ಜನರ ಪಾಲುದಾರಿಕೆಯಿಂದ ಕಿರು ಅಣೆಕಟ್ಟುಗಳನ್ನು ನಿರ್ಮಿಸಿ ಮಳೆನೀರು ಕೊಯ್ಲು ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಫಲರಾದ ಅಮ್ಲಾ ರುಯಿಯಾ; ಬಿಹಾರದ ಹಳ್ಳಿಯೊಂದರಲ್ಲಿ 1997 ರಲ್ಲಿ ಸ್ವಯಂ ಸಹಾಯ ಗುಂಪು ಒಂದನ್ನು ಸ್ಥಾಪಿಸಿ ಅಲ್ಲಿನ ಮಹಿಳೆಯರನ್ನು ಆರ್ಥಿಕ ಸ್ವಾಲಂಬಿ ಮಾಡುವುದರ ಜೊತೆಗೆ ಶ್ರಮದಾನದ ಮೂಲಕ ಮಳೆನೀರು ಕೊಯ್ಲು ಮತ್ತು ಹಸಿರೀಕರಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ‘ಬಿಹಾರದ ಹಸಿರು ಮಹಿಳೆ’ ಎಂದೇ ಖ್ಯಾತಿ ಪಡೆದಿರುವ ಜಯ ದೇವಿ, ಬರಪೀಡಿತ ಪೂರ್ವ ರಾಜಸ್ಥಾನದಲ್ಲಿ ವ್ಯಾಪಕವಾದ ನೀರಿನ ಸಂರಕ್ಷಣಾ ಪ್ರಯತ್ನಗಳನ್ನು ಕೈಗೊಂಡು ಸಮುದಾಯ ನಾಯಕತ್ವಕ್ಕಾಗಿ 2001 ರ ರಾಮನ್ ಮ್ಯಾಗ್ಸೆಸೆ (Ramon Magsaysay) ಪ್ರಶಸ್ತಿಯನ್ನು ಪಡೆದು ‘ವಾಟರ್ ಮ್ಯಾನ್’ ಎಂದೇ ಖ್ಯಾತಿ ಹೊಂದಿರುವ ರಾಜೇಂದ್ರ ಸಿಂಗ್, ಸಾಗರ ತಾಲೂಕಿನ ನೀಚಡಿ ಗ್ರಾಮದ ಯುವಕರ ಕೆರೆಹೂಳು ತೆಗೆಯುವ ಯಶೋಗಾಥೆ, ಇಂತಹ ಅನೇಕ ಘಟನೆಗಳು ಮತ್ತು ಧೀಮಂತ ವ್ಯಕ್ತಿಗಳು ಜಲ ಸಂರಕ್ಷಣೆಯಲ್ಲಿ ಅವರು ವಹಿಸಿರುವ ಪಾತ್ರ, ನೀಡಿರುವ ಕೊಡುಗೆ ಸ್ಫೂರ್ತಿಯುತವಾದದ್ದು.

    Photo by mrjn Photography on Unsplash

    ಮನುಷ್ಯನ ಬಾಳು ಯಾವತ್ತಿಗೂ ಹುಲ್ಲುಗರಿಕೆಯ ತುದಿಯ ಮೇಲಿನ ನೀರಿನ ಹನಿ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಮಾನಸವಾಳೆಂಬುದು ಪನಿಪುಲ್- ಕನ್ನಡದ ಮೊದಲ ಗದ್ಯ ಕೃತಿ ‘ವಡ್ಡಾರಾಧನೆ’ಯಲ್ಲಿ ಬರುವ ಮಾತು.   ಹೊಸಗನ್ನಡದಲ್ಲಿ ಇದರರ್ಥ ಮನುಷ್ಯನ ಬಾಳು ಯಾವತ್ತಿಗೂ ಹುಲ್ಲುಗರಿಕೆಯ ತುದಿಯ ಮೇಲಿನ   ನೀರಿನ ಹನಿಯಂತೆ ಎಂದು.  ಹಾಗಾಗಿ ಮನುಷ್ಯ ಎಂದಿಗೂ ನಶ್ವರ!  ಶಾಶ್ವತವಲ್ಲವೆಂದರ್ಥ ಅಲ್ಲವೇ!.

     “ಜಾತಸ್ಯ ಹಿ ಧ್ರುವೋ  ಮೃತ್ಯುಃ  ಧ್ರುವಂ ಜನ್ಮ ಮತಸ್ಯ ಚ |”  ಅಂದರೆ  ಎಲ್ಲೆಲ್ಲಿ ಜೀವವಿದೆಯೋ  ಅಲ್ಲಿ ಮೃತ್ಯು ಕೂಡ   ಖಚಿತವಾಗಿರುತ್ತದೆ.  ಮನುಷ್ಯ ಮಾತ್ರವಲ್ಲದೆ  ಸಕಲ ಜೀವಿಗಳೂ ಹುಟ್ಟಿದ ಮೇಲೆ ಸಾವಿಗೆ ಶರಣಾಗಲೇಬೇಕು.   ದೇಹ ರೂಪಿ ಈ ಬದುಕಿನಲ್ಲಿ ಅನೇಕ ಕಷ್ಟಕೋಟಲೆಗಳು,ಅಪಸವ್ಯಗಳು ,ವ್ಯಾಧಿಗಳು  ಭಾಧಿಸುತ್ತವೆ  ಇಂಥ ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ  ನನ್ನ ಶರೀರ, ನನ್ನಕಡೆಯವರು ಮಾತ್ರ, ಅಧಿಕಾರ ನನ್ನದೆ ಎಂದು  ಪ್ರತಿಕ್ಷಣದಲ್ಲಿ “ನನ್ನ” ಎಂಬ ಪದವನ್ನು ಸಮರ್ಥಿಸಿಕೊಳ್ಳುವುದು  ಹೆಡ್ಡತನ.  ಹಾಗೊಂದು ವೇಳೆ ಇವುಗಳೆ ಆದ್ಯತೆ ಎನ್ನುವುದಾದರೆ ಅದು ದುರಹಂಕಾರದ ಪರಮಾವಧಿಯೇ ಸರಿ!. 

    ಹುಟ್ಟಿನ ನಂತರ ಸಾವು ಬರುವಂತೆ ಬದುಕಿಗೆ ವ್ಯಾಮೋಹಗಳು ಆವರಿಸಿಕೊಂಡ ನಂತರ ಪ್ರಾಯಶ್ಚಿತ್ತ  ಆಗಲೇಬೇಕು.   “ಹುಟ್ಟಿದ್ದೇವೆ! ಸಾಯುತ್ತೇವೆ!” ಅನ್ನುವುದೂ  ಪ್ರತಿಷ್ಟೆಯೇ ಸರಿ! ಆದರೆ ಬದುಕಿರುವಾಗ  ನಮ್ಮೀ ದೇಹದಿಂದ  ಉಪಕಾರವಾಗದೇ ಇದ್ದರೂ ಅಪಕಾರವಾಗದೇ ಇರುವಂತೆ, ಸನ್ಮಾನವಾಗದಿದ್ದರೂ ಅವಮಾನವಾಗದಂತೆ ಎಚ್ಚರವಹಿಸುವುದು ಮನುಷ್ಯನ ನಿಜವಾದ ಗುಣ . ಇಲ್ಲವಾದರೆ ಮನುಷ್ಯ ಮಾತುಬಾರದ ವಿವೇಚನಾ ಶಕ್ತಿ ಇಲ್ಲದ ಪ್ರಾಣಿಗಳಿಗೆ ಯಕಃಶ್ಚಿತ್ ಜಂತುಗಳಿಗೆ ಸಮ.

    ಸ್ವಾರ್ಥಪರಚಿಂತನೆ,ಅರ್ಥವೇ ಮುಖ್ಯವೆಂದರೆ ಅದು ವ್ಯರ್ಥ ಬದುಕು. ಹುಟ್ಟಿದ ಪ್ರತಿಯೊಂದು ಜೀವಿಯೂ ಹಸಿವು,ನಿದ್ದೆ ನೀರಡಿಕೆಗಳನ್ನು ನೀಗಿಸುಕೊಳ್ಳುತ್ತವೆ ಆದರೆ ವಿವೇಕಯುತನಾದ ಮನುಷ್ಯ ಜ್ಞಾನ ಎಂಬ ಹಸಿವನ್ನು ತಣಿಸಿಕೊಳ್ಳಬೇಕು.  ನಾವೇನೇ  ಲಾಗಹಾಕಿದರೂ, ಕಸರತ್ತುಗಳನ್ನು ಮಾಡಿದರೂ ಈ  ಜಗತ್ತಿನಲ್ಲಿ ಶಾಶ್ವತವಾಗಿರಲು ಸಾಧ್ಯವಿಲ್ಲ. “ಕೋಟೆ ಕಟ್ಟಿ ಮೆರೆದವರೆಲ್ಲಾ ಏನೇನಾದರು ” ಎಂಬ ಮಾತೂ ಇದೆಯಲ್ಲ. ಜೀವ ಕ್ಷಣಿಕ ಅಗೋಚರವಾದದ್ದು, ಹುಲ್ಲುಕಡ್ಡಿಯ ಮೇಲೆ ನಿಂತ  ನೀರ ಹನಿಯ ಹಾಗೆ ಯಾವಕ್ಷಣವಾದರೂ  ಜಾರಬಹುದು  ಹಾಗೆ ಮನುಷ್ಯನ ಬದುಕೂ. “ಈಗ ಸೌಖ್ಯವಾಗಿದ್ದಾರೆ” ಎಂದು ಕೊಂಡವರು ಮರುಕ್ಷಣವೇ ಉಸಿರು ಚೆಲ್ಲಬಹುದು!ಇನ್ನೆಲ್ಲೋ ಏಳದಂತೆ ಬೀಳಬಹುದು!

    ಗ್ಯಾರಂಟಿ,ವಾರಂಟಿ  ಎರಡೂ ಇಲ್ಲದ ಬದುಕಿನಲ್ಲಿ  ಉತ್ತಮ ಸಂಸ್ಕಾರವಿರಲಿ,ಸಜ್ಜನಿಕೆಯಿರಲಿ,ಸೌಧರ್ಮಿಕೆಯಿರಲಿ. “ಹುಟ್ಟಿದ ಮೇಲೆ ಸಾಯುತ್ತೇವೆ” ಎಂಬ ಸತ್ಯ ಗೊತ್ತಿದ್ದರೂ ಕೃತ್ರಿಮತೆಯಿಂದ ಪ್ರತಿಕ್ಷಣ ಸಾಯುವುದಕ್ಕಿಂತ  ಸಜ್ಜನಿಕೆಯಿಂದ ನಡೆದುಕೊಂಡು ಅಳಿದ ಮೇಲೂ ಬದುಕೋಣ!

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    error: Content is protected !!