29.5 C
Karnataka
Monday, May 25, 2026
    Home Blog Page 108

    ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು; ರಾಜ್ಯದ ಪಬ್ಲಿಕ್ ಪರೀಕ್ಷೆಗಳ ಬಗ್ಗೆ ಶೀಘ್ರ ನಿರ್ಧಾರ

    ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಇಂದು ಪ್ರಧಾನಿ ನೇರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರಿಗಳ ಮಹತ್ವದ ಸಭೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಪಡಿಸಲು ನಿರ್ಧರಿಸಲಾಯಿತು.

    ಫಲಿತಾಂಶ ಪ್ರಕಟಿಸಲು ಸಧ್ಯದಲ್ಲೇ ಸೂಕ್ತ ಮಾನದಂಡ ರಚಿಸಲಾಗವುದು. ಕೋವಿಡ್ ಸಂಕಟದ ಸಮಯದಲ್ಲಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯೇ ಮುಖ್ಯ ಎಂದು ಸಭೆ ಅಭಿಪ್ರಾಯ ಪಟ್ಟಿತು.

    ರಾಜ್ಯದಲ್ಲಿ ಶೀಘ್ರ ನಿರ್ಧಾರ

    ಕೇಂದ್ರ ಸರಕಾರದ ಈ ನಿರ್ಧಾರ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ . ಕರ್ನಾಟಕದ ಮಟ್ಟಿಗೆ ಪರಿಸ್ಥಿತಿಯನ್ನು ಅವಲೋಕಿಸಿ ಶೀಘ್ರ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಕೇಂದ್ರೀಯ ಮಂಡಳಿಯು ಪರೀಕ್ಷೆ ರದ್ದು‌ ಮಾಡಿರುವ ಹಿನ್ನೆಲೆ, ರಾಜ್ಯ ಪಠ್ಯಕ್ರಮ ಅನುಸರಿಸಿ‌ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿಗಳು, ಮೌಲ್ಯಮಾಪನದ ಅವಶ್ಯಕತೆ‌ ಕುರಿತಂತೆ ಈಗಾಗಲೇ ರೂಪಿತವಾಗಿರುವ ಅಭಿಪ್ರಾಯಗಳ ವಿಸ್ತೃತ ಚರ್ಚೆ‌ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ..

    ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ನಾಳೆಯಿಂದಲೇ ವ್ಯಾಕ್ಸಿನ್

    ವಿದೇಶದಲ್ಲಿ ಉದ್ಯೋಗ ಮಾಡುವ ಮತ್ತು ವ್ಯಾಸಂಗ ಮಾಡುತ್ತಿರುವವರಿಗೆ ಸಿಹಿ ಸುದ್ದಿ. ಆದ್ಯತಾ ಗುಂಪಿನ ಕೋಟಾದಲ್ಲಿ ಅವರಿಗೆ ಮಂಗಳವಾರದಿಂಲೇ ಲಸಿಕೆ ನೀಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

    ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, “ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಮಂಗಳವಾರ 3 ಗಂಟೆಗೆ ಈ ವರ್ಗದವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು. ಅವಶ್ಯಕತೆ ಇದ್ದವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು” ಎಂದು ಕೋರಿದರು.

    ಸದ್ಯದ ಸಂದರ್ಭದಲ್ಲಿ ವಿದೇಶಕ್ಕೆ ಹೋಗಬೇಕಾದರೆ ಲಸಿಕೆ ಪಡೆಯಲೇಬೇಕು ಹಾಗೂ ಆ ಕುರಿತ ‘ಪ್ರಮಾಣ ಪತ್ರ’ವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಹೀಗಾಗಿ ವಿದೇಶದಲ್ಲಿ ಉದ್ಯೋಗ ಹಾಗೂ ವಿದ್ಯಾಭ್ಯಾಸದಲ್ಲಿ ನಿರತರಾಗಿರುವವರಿಂದ ಲಸಿಕೆ ಬೇಡಿಕೆ ಇತ್ತು. ಈಗ ಸರಕಾರ ಅವರ ಬೇಡಿಕೆಯನ್ನು ಪರಿಗಣಿಸಿದ್ದು, ಎಲ್ಲರಿಗೂ ಕೋವೀಶೀಲ್ಡ್ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.

    ಲಸಿಕೆ ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಹಾಗೂ ವಿದೇಶದಲ್ಲಿನ ತಮ್ಮ ಕೆಲಸ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೂರಕ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯ. ಅಲ್ಲದೆ, ಸದ್ಯಕ್ಕೆ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರ ಎರಡನೇ ಡೋಸ್ ಅಂತರವನ್ನು ಇವರ ಅನುಕೂಲಕ್ಕಾಗಿ 12 ವಾರಗಳಿಂದ ಒಂದು ತಿಂಗಳಕ್ಕೆ ಕುಗ್ಗಿಸಲಾಗಿದೆ. ಇದು ಇವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಮುಖ್ಯವಾಗಿ ವ್ಯಾಕ್ಸಿನ್ ನೀಡಿದ ಬಗ್ಗೆ ಇವರಿಗೆ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವುದು. ಅದು ಎರಡನೇ ಡೋಸ್ ಪಡೆದಾಕ್ಷಣ  ನೀಡಲಾಗುತ್ತದೆ ಎಂದು ಡಿಸಿಎಂ ಹೇಳಿದರು.

    ಇದೇ ರೀತಿ ಆಯಾ‌ ಜಿಲ್ಲೆಗಳಲ್ಲಿ ಕೂಡ ಈ ರೀತಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು‌ ಹೇಳಿದರು.

    ಕೈಗಾರಿಕಾಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ

    ಕೈಗಾರಿಕೆಗಳ ಜತೆ ಒಡಂಬಡಿಕೆಗೆ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ಅವಕಾಶ


    ಕೋವಿಡ್‌ ಸವಾಲಿನ ನಡುವೆಯೂ ಈ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದ್ದು, ಕೈಗಾರಿಕಾಭಿವೃದ್ಧಿಗೆ ಬಹಳಷ್ಟು ಪೂರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ತುಮಕೂರಿನ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ ʼಶಿಕ್ಷಣ ಮತ್ತು ಕೈಗಾರಿಕೆʼ ಕುರಿತ ಅಂತಾರಾಷ್ಟ್ರೀಯ ಮಟ್ಟದ ವರ್ಚುಯಲ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದೇಶದ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳು ಮತ್ತು ಪೋಷಕರು ಎದುರಿಸುವ ಎಲ್ಲ ಸಮಸ್ಯೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉತ್ತರವಿದೆ ಎಂದರು.

    ನೂತನ ನೀತಿಯ ಪ್ರಕಾರ ಇಡೀ ಸಮಾಜವನ್ನು ಶಿಕ್ಷಣ ಸಂಸ್ಥೆಗಳು ಮುನ್ನಡೆಸುತ್ತವೆ ಹಾಗೂ ಅದೇ ಸಂಸ್ಥೆಗಳನ್ನು ಕೈಗಾರಿಕೆಗಳು ಹಿಂಬಾಲಿಸಬೇಕಾಗುತ್ತದೆ. ಏಕೆಂದರೆ, ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕುಶಲತೆಯುಳ್ಳ ಮಾನವ ಸಂಪನ್ಮೂಲವು ಶಿಕ್ಷಣ ಸಂಸ್ಥೆಗಳಿಂದಲೇ ಬರಬೇಕಾಗುತ್ತದೆ ಎಂದು ಡಿಸಿಎಂ ಪ್ರತಿಪಾದಿಸಿದರು.

    ಇದೇ ನಿಟ್ಟಿನಲ್ಲಿ, ಈಗಾಗಲೇ ಶಿಕ್ಷಣ ನೀತಿ ಜಾರಿಗೆ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಲಾಗಿದ್ದು, ಕೋವಿಡ್‌ ಕಾರಣದಿಂದ ಕೊಂಚ ವಿಳಂಬವಾಗಿದೆ. ಗುಣಮಟ್ಟದ ಬೋಧನೆ ಮತ್ತು ಗುಣಮಟ್ಟದ ಕಲಿಕೆಗೆ ನೀತಿ ಪೂರಕ ಹಾಗೂ ಬಹು ವಿಷಯಗಳ ಕಲಿಕೆಗೆ ಮುಕ್ತ ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.

    ಮೂಲಸೌಕರ್ಯ ಒಡಂಬಡಿಕೆಗೆ ಅವಕಾಶ:

    ಶೈಕ್ಷಣಿಕ ಸಂಸ್ಥೆಗಳು ಜಾಗತಿಕ ಗುಣಮಟ್ಟದ ಮೂಲಸೌಕರ್ಯಗಳನ್ನು ಹೊಂದಿರಬೇಕು ಎಂಬುದೇನೋ ನಿಜ. ಆದರೆ, ಈ ಬಗ್ಗೆ ಸರಕಾರ ಉದಾರವಾಗಿದೆ. ಎಲ್ಲ ಸೌಲಭ್ಯಗಳನ್ನು ಶಿಕ್ಷಣ ಸಂಸ್ಥೆಗಳೇ ಮಾಡಿಕೊಳ್ಳಬೇಕೆಂದು ತಾಕೀತು ಮಾಡಲಾಗುತ್ತಿಲ್ಲ. ಬದಲಿಗೆ ಸೌಕರ್ಯಗಳನ್ನು ಅಭಿವೃದ್ಧಿ ಮಾಡಿಕೊಳ್ಳಲು ಕೈಗಾರಿಕಾ ಸಂಸ್ಥೆಗಳು ಅಥವಾ ಯಾವುದೇ ಜಾಗತಿಕ ಶಿಕ್ಷಣ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಳ್ಳಲು ಸರಕಾರ ಮುಕ್ತ ಅವಕಾಶ ನೀಡಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಒಂದು ವರ್ಷ ಇಂಟರ್ನ್‌ಶಿಪ್

    ಕೈಗಾರಿಕೆಗಳಿಗೆ ಗುಣಮಟ್ಟದ ಮಾನವ ಸಂಪನ್ಮೂಲ ಸಿಗಬೇಕೆಂಬ ಕಾರಣಕ್ಕೆ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಓದುವ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ. ಇದಕ್ಕೆ ನ್ಯಾಸ್ಕಾಂ ಸೇರಿದಂತೆ ಎಲ್ಲ ಕೈಗಾರಿಕಾ ಪ್ರಾತಿನಿಧಿಕ ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿವೆ ಎಂದು ಡಿಸಿಎಂ ನುಡಿದರು.

    ಡಿಪ್ಲೊಮಾ ಪಠ್ಯ ಪರಿಷ್ಕರಣೆ:

    ಎಐಸಿಟಿ ಮಾನದಂಡದ ಪ್ರಕಾರ ಈಗಾಗಲೇ ಐಟಿಐ, ಜಿಟಿಟಿಸಿ, ಡಿಪ್ಲೊಮಾ ಪಠ್ಯವನ್ನು ಸಂಪೂರ್ಣವಾಗಿ ಪರಿಷ್ಕರಣೆ ಮಾಡಲಾಗಿದೆ. ಈಗಾಗಲೇ ಹೊಸ ಪಠ್ಯದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆಂದು ಡಿಸಿಎಂ ಹೇಳಿದರು.

    ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಕುಲಪತಿ ಡಾ.ಜಿ.ಪರಮೇಶ್ವರ, ಉಪ ಕುಲಪತಿ ಡಾ.ಬಾಲಶೆಟ್ಟಿ, ಸಿದ್ಧಾರ್ಥ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್‌ ಮುಂತಾದವರು ಸಮಾವೇಶದಲ್ಲಿ ಭಾಗಿಯಾಗಿದ್ದರು.

    ಉಪಕಾರ ಮಾಡಲು ಸಾಧ್ಯವಾಗದೇ ಇದ್ದರೂ ಉಪದ್ರವ ಮಾಡುವ ಗೋಜಲಿಗೆ ಹೋಗಬಾರದು

    ಸುಮಾ ವೀಣಾ

    ಮದ್ದಳೆಯ ಹೊಕ್ಕಿಲಿಯಂತೆ– ಈ ಮಾತು ಮೂರನೆ ಮಂಗರಸನ ‘ನೇಮಿಜಿನೇಶ’ ಕೃತಿಯಲ್ಲಿ ಬರುತ್ತದೆ.   “ಮದ್ದಳೆಯ ಹೊಕ್ಕಿಲಿಯಂತೆ” ಇದೊಂದು ಅರ್ಥಧ್ವನಿಯುಳ್ಳ ವಾಕ್ಯ. “ ಆವಕಡೆಯೆಂದು ಕಾಣದೆ ತಲಹಳಂಗೊಳುತ್ತಾ ವನಾಂತರದೊಳು  ಮದ್ದಳೆಯ ಹೊಕ್ಕಿಲಿಯಂತೆ “ ಎಂದಿದೆ.

    ಮದ್ದಳೆ   ತಾಳವಾದ್ಯದ ಒಂದು ಬಗೆ  ಅಂಥ ತಾಳ ವಾದ್ಯದೊಳಕ್ಕೆ ಪ್ರವೇಶಿಸಿದ    ಇಲಿಯನ್ನು   ವಿಷಮ ಪರಿಷ್ಥಿತಿಯನ್ನು  ಎದುರಿಸುವ ಮಾನವರಿಗೆ ಹೋಲಿಸಿ ಹೇಳುವುದಿದೆ.  ಒಂದುವೇಳೆ ಅಂಥ ಪರಿಸ್ಥಿತಿಯಲ್ಲಿ  ಸಿಕ್ಕರೆ ಅಲ್ಲಿಯೇ  ಇರಲಾಗದು ತಪ್ಪಿಸಿಕೊಂಡು ಹೊರಬರಲಾಗದು ಅತ್ತ ಪುಲಿ ಇತ್ತ ದರಿ ಎನ್ನುವ ಹಾಗಾಗುತ್ತದೆ.

    ಏನೇ ಕೆಲಸ ಮಾಡಬೇಕಾದರೂ ಪೂರ್ವತಯಾರಿಯೊಂದಿಗೆ ಮಾಡಬೇಕು ಇಲ್ಲವಾದರೆ ಅರ್ಥನಷ್ಟ,ಸಮಯನಷ್ಟ ಉಂಟಾಗುತ್ತದೆ. ಹಾಗೆ ಸಮಸ್ಯೆಯೊಂದರಲ್ಲಿ ಸಿಕ್ಕು ತಹತಹ ಪಡುವ   ಜನರನ್ನು ಈ ಮಾತು ಉದಾಹರಿಸುತ್ತದೆ. ಇನ್ನು ಇನ್ಯಾರದೋ ಮಾತಿನಿಂದ ಪ್ರಲೋಭನೆಗೊಂಡು ಅವರ ಮಾತಿಗೆ ಮರುಳಾಗಿ  ತೊಳಲಾಟದಲ್ಲಿ ಸಿಲುಕುವವರನ್ನು , ಗೊತ್ತು ಗುರಿಯಿಲ್ಲದ ಸ್ಥಳ, ವಿಷಜಾಲದಲ್ಲಿ ಸಿಲುಕು ಮೋಸ ಹೋಗುವವರನ್ನು ಕಂಡಾಗ  ಮದ್ದಳೆಯೊಳಗೆ ಸಿಲುಕಿದ  ಇಲಿಯದೇ ಪರಿಸ್ಥಿತಿ. ಅಪ್ಪಿ ತಪ್ಪಿ ಏನೋ ಕುತೂಹಲದಿಂದ ಇಲಿಗಳು ಮದ್ದಳೆ ಪ್ರವೇಶಿಸಿದರೆ ಅದನ್ನು ಉಪಯೋಗಿಸುವವರು  ಬಿಡುತ್ತಾರೆಯೇ ಅದನ್ನು ಹಿಡಿದು ಕೊಲ್ಲುವವರೆಗೆ ಬಿಡುವುದಿಲ್ಲ.   ಇಲ್ಲಿ  ಇಲಿಯ ಚೆಲ್ಲಾಟದಿಂದ ಮದ್ದಳೆ ನುಡಿಸುವವರಿಗೂ ನಷ್ಟ  ಇಲಿಗೂ ಪ್ರಾಣಭೀತಿ  ಒಟ್ಟಾರೆ ಉಭಯ ಭೀತಿ.

    ಯಾರಿಗಾದರೂ ನಾವು ಉಪಕಾರ  ಮಾಡಲು ಸಾಧ್ಯವಾಗದೇ ಇದ್ದರೂ ಉಪದ್ರವ ಮಾಡುವ ಗೋಜಲಿಗೆ ಹೋಗಬಾರದು. ಹಾಗಾದರೆ ಈ ರೀತಿಯ ಕಷ್ಟಗಳು ಎದುರಾಗುತ್ತವೆ ಎಂಬ ಎಚ್ಚರಿಕೆಯನ್ನು ಮೂರನೆಯ ಮಂಗರಸ ಕೊಟ್ಟಿದ್ದಾನೆ.  ಈ ವಾಕ್ಯವನ್ನು ಓದುವಾಗ ವೀರ ಅಭಿಮನ್ಯು ನೆನಪಿಗೆ ಬರುತ್ತದೆ ದ್ರೋಣಾಚಾರ್ಯರು  ರಚಿಸಿದ ಚಕ್ರವ್ಯೂಹದಲ್ಲಿ  ಪ್ರವೇಶಿಸುತ್ತಾನೆ ಆದರೆ ಹೊರಗೆ ಬರಲಾಗುವುದಿಲ್ಲ ಧಿರೋದಾತ್ತತೆಯಿಂದ  ಹೋರಾಡುತ್ತಾನೆ ಮಡಿಯುತ್ತಾನೆ.  ಆದರೆ ಮದ್ದಳೆಯಲ್ಲಿ ಸಿಕ್ಕ ಇಲಿಗೆ  ಹೋಲಿಸಲಾಗುವುದಿಲ್ಲ.  ಕಾರಣ  ತನ್ನವರಿಗಾಗಿ  ಪ್ರವೇಶಿಸಿದ ಅಭಿಮನ್ಯವಿನಲ್ಲಿ  ಹೋರಾಟದ ಛಲವಿತ್ತೇ  ವಿನಃ ಅನ್ಯ ಆಲೋಚನೆಗಳಿರಲಿಲ್ಲ. 

    ಈಗಿನ ಕೊರೋನಾ ಕಾಲಕ್ಕೂ ಇದನ್ನು ಹೋಲಿಸ ಬಹುದು. ಸರಕಾರ ಮಾಡಿರುವ ನಿಯಮಗಳನ್ನು ಪಾಲಿಸದೆ ಕೊರೋನಾ ಎಂಬ ಮದ್ದಳೆಯಲ್ಲಿ ಸೇರಿದಂತ ಇಲಿಯಂತೆ ನಾವಾಗವುದು ಬೇಡ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಮುಂತಾದ ನಿಯಮಗಳನ್ನು ಪಾಲಿಸಿ ಕೊರೋನವನ್ನು ಹೊಡೆದೋಡಿಸೋಣ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಸ್ಮಾಲ್‌ ಕ್ಯಾಪ್‌, ಮಿಡ್‌ ಕ್ಯಾಪ್‌ ಗಳಲ್ಲಿ ಹೂಡಿಕೆಗೆ ಮುನ್ನ ಹೆಚ್ಚಿನ ಚಿಂತನೆ ಅಗತ್ಯ

    ಮುಂಜಾನೆ ಪ್ರಭಾತೇ ಕರದರ್ಶನಂ ಎಂದು ಜಾಗೃತಗೊಂಡಾಗಲಿಂದಲೂ ನಮ್ಮ ಗೊಂದಲಮಯ ಶೈಲಿ ಜೀವನ ಆರಂಭವಾಗುವುದೇ ಮೊದಲಿಗೆ ಪೆಪ್ಸೋಡೆಂಟ್‌ ಬಳಸಲೋ ಅಥವಾ ಕ್ಲೋಸ್‌ ಅಪ್‌ ಬಳಸಲೋ ಎಂದು .ನಂತರ ಅಡುಗೆ ಮನೆಯತ್ತ ಧಾವಿಸಿದಾಗ ಅಲ್ಲಿಯೂ ನಿರ್ಧರಿಸಲಸಾಧ್ಯವಾದ ಆಯ್ಕೆಗಳು, ಮುಂಜಾನೆ ಉಲ್ಲಾಸಭರಿತರಾಗಿರಲು ತಾಜಾ ಟೀ ರೂಬಿ ಟೀ, ರೆಡ್‌ ಲೇಬಲ್‌, 3 ರೋಸಸ್‌, ತಾಜ್‌ ಮಹಲ್‌ ಟೀ, ಬ್ರೂ, ಬೂಸ್ಟ್‌, ಹಾರ್ಲಿಕ್ಸ್‌ ಲೈಟ್‌, ಹಾರ್ಲಿಕ್ಸ್‌ ವುಮನ್‌ ( ಪುಟಾಣಿಗಳಿಗೆ ಹಾರ್ಲಿಕ್ಸ್‌ ಜೂನಿಯರ್) ಗಳಲ್ಲಿ ಆಯ್ಕೆ ಮಾಡಿ ಕುಡಿದು ಹೊರಬರುವಷ್ಠರಲ್ಲಿ ಸಮಯದ ಅಭಾವದ ಕಾರಣ ಪತ್ರಿಕೆಗಳತ್ತ ಕಣ್ಣಾಯಿಸಿ ಮುಂದಿನ ದಿನಚರಿಯತ್ತ ಸಾಗುವುದು.

    ಬಾತ್‌ ರೂಂ ನತ್ತ ಸಾಗಿದಾಗ ಅಲ್ಲಿ ಕ್ಲಿನಿಕ್‌ ಪ್ಲಸ್‌, ಡೋವ್‌ ಶಾಂಪೂ, ಸನ್‌ ಸಿಲ್ಕ್‌, ಗಳಲ್ಲಿ ಯಾವುದಾದರೊಂದು ಆಯ್ಕೆ ಮಾಡಿಕೊಂಡ ನಂತರ ಲಿರಿಲ್‌, ಪಿಯರ್ಸ್‌, ಹಮಾಮ್‌, ರೆಕ್ಸೊನಾ, ಲಕ್ಸ್‌, ಡೋವ್‌, ಲೈಫ್‌ ಬಾಯ್‌ ಗಳಲ್ಲಿ ಆಯ್ಕೆ ಮಾಡಿಕೊಳ್ಳುವುದು. ಬಾತ್‌ ರೂಂ ನಿಂದ ಹೊರಬಂದಮೇಲೆ ಪಾಂಡ್ಸ್‌ ಡ್ರೀಂ ಫ್ಲೋ ಪೌಡರ್‌, ಗ್ಲೋ ಅಂಡ್‌ ಲೌಲಿ, ಲ್ಯಾಕ್ಮೆ ಪರ್ಫೆಕ್ಟ್‌, ಆಕ್ಸೆ ಸಿಗ್ನೇಚರ್‌ , ವ್ಯಾಸಲೀನ್‌ ಗಳನ್ನು ಬಳಸಿ ಟ್ರಿಂ ಆಗಿ ಮನೆಯ ಸಭಾಂಗಣದಲ್ಲಿ ಕುಳಿತು ಟಿ ವಿ ನೋಡೋಣ ಎಂದು ಆನ್‌ ಮಾಡಿದಾಗ ಲಿರಿಲ್‌, ಹಾರ್ಲಿಕ್ಸ್‌, ಗ್ಲೋ ಅಂಡ್‌ ಲೌಲಿಗಳೊಂದಿಗೆ ಕಲೆ ಹೋಗಲಾಡಿಸಲು ಸರ್ಫ್‌ , ಹೊಸ ವಿಚಾರದ ವೀಲ್‌, ರಿನ್‌ ನ ಜಾಹಿರಾತು ಹೀಗೆ ಸಾಗಿದ ಲಾಕ್‌ ಡೌನ್‌ ದಿನಚರಿಯಲ್ಲಿ ಮಧ್ಯೆ ಮಧ್ಯೆ ಬೇಸರವೆನಿಸಿದಾಗ knorr noodles ಅಥವಾ kwality walls ಐಸ್‌ ಕ್ರೀಂ, ಸವಿಯುವ ಮೂಲಕ ದಿನ ಕಳೆಯುವುದೇ ಮನೆಯಲ್ಲಿಯೇ ಇರಿ ಮನರಂಜನೆ ತೆಗೊಳ್ಳಿ ಎಂದಂತಾಗಿದೆ.

    ಬೆಂಗಳೂರಿನಲ್ಲಿರುವ ಹಿಂದೂಸ್ಥಾನ್‌ ಯುನಿಲೀವರ್‌ ನ ಸಂಶೋಧನ ಕೇಂದ್ರ

    ಇದೇನು ಇಷ್ಚು ಐಟಂಗಳ ಪ್ರಚಾರ ಮಾಡುತ್ತಿರುವೆನೆಂದು ಭಾವಿಸಬೇಡಿ. ಇದು ನಮ್ಮ ನಿತ್ಯದಲ್ಲಿ ಪ್ರತಿಯೊಂದು ಕ್ರಿಯೆಗಳಲ್ಲಿ ತೇಲಿಬಿಡಲಾಗುತ್ತಿರುವ ವ್ಯವಹಾರಿಕ ಪ್ರಕ್ರಿಯೆಗಳು. ಮೇಲೆ ಹೆಸರಿಸಿದ ಎಲ್ಲಾ ಉತ್ಪನ್ನಗಳೂ ಅಂತಾರಾಷ್ಟ್ರೀಯ ದೈತ್ಯ ಕಂಪನಿ ಹಿಂದೂಸ್ಥಾನ್‌ ಯುನಿಲೀವರ್‌ ನ ಉತ್ಪನ್ನಗಳಾಗಿವೆ. ಇವುಗಳೊಂದಿಗೆ ಅನ್ನಪೂರ್ಣ, ಡೊಮೆಕ್ಸ್‌, ಮುಂತಾದ ದಿನಬಳಕೆಯ ಸಾಮಾಗ್ರಿಗಳು ಸಹ ಈ ಕಂಪನಿಯ ಉತ್ಪನ್ನಗಳಾಗಿವೆ. ಸಾಮಾನ್ಯವಾಗಿ ಒಂದು ಕಂಪನಿ ಒಂದೇ ಬ್ರಾಂಡನ್ನು ಅಳವಡಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಒಂದೇ ಕಂಪನಿ ಗ್ರಾಹಕರ ಚಿಂತನೆಗಳನ್ನೇ ಬಂಡವಾಳವಾಗಿಸಿಕೊಂಡು, ತನ್ನದೇ ಉತ್ಪನ್ನಗಳ ಮೇಲೆ ಸ್ಪರ್ಧಾತ್ಮಕ ವಾತಾವರಣ ನಿರ್ಮಿಸಿ ಜಯಶಾಲಿಯಾಗುತ್ತಿದೆ. ಇದು ಒಂದು ಮಾರ್ಕೆಟಿಂಗ್‌ ತಂತ್ರವಾಗಿದೆ. ಈ ಕಂಪನಿಯಲ್ಲಿ ಕಳೆದ ಮೂರು ನಾಲ್ಕು ದಶಕಗಳಲ್ಲಿ ವಿವಿಧ ವಲಯದ ಕಂಪನಿಗಳು ವಿಲೀನಗೊಂಡಿವೆ. ಕೆಲವು ಕಂಪನಿಗಳು ಸ್ವಾಧೀನಗೊಳಿಸಿಕೊಳ್ಳಲಾಗಿದೆ. ಹಾಗಾಗಿ ಈ ಮಟ್ಟದ ಬೆಳವಣಿಗೆ ಸಾಧ್ಯವಾಗಿದೆ. ಗ್ರಾಹಕರ ದಿನಬಳಕೆಯ ಸಾಮಾಗ್ರಿ ವಲಯದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದೆ.

    ಹಿಂದೂಸ್ಥಾನ್‌ ಯುನಿಲೀವರ್‌ ಕಂಪನಿಯು ಈ ಮಟ್ಟದ ಗಜಗಾತ್ರಕ್ಕೆ ಬೆಳೆಯಲು ಅದರಲ್ಲಿ ವಿಲೀನಗೊಂಡಿರುವ ಬ್ರೂಕ್‌ ಬಾಂಡ್‌, ಲಿಪ್ಟನ್‌, ಲ್ಯಾಕ್ಮೆ,ಪಾಂಡ್ಸ್, ಇಂದುಲೇಖ, ಕಿಸಾನ್‌, ಕ್ವಾಲಿಟಿ ವಾಲ್ಸ್‌, ಗ್ಲಾಕ್ಸೋ ಸ್ಮಿತ್‌ ಕ್ಲೈನ್‌ ಕನ್ಸೂಮರ್ಸ್‌ ಕಂಪನಿಗಳ ಕೊಡುಗೆಯೂ ಅಪಾರವಾಗಿದೆ.

    ಭಾರತದ ಶ್ರೀಮಂತರ ಪಟ್ಟಿಯಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್‌ ಕಂಪನಿಯ ರೂ.10 ರ ಮುಖಬೆಲೆ ಷೇರು ರೂ.2,100 ರ ಸಮೀಪದಲ್ಲಿ ವಹಿವಾಟಾಗುತ್ತಿದೆ. ಆದರೆ ರೂ.1 ರ ಮುಖಬೆಲೆಯ ಹಿಂದೂಸ್ಥಾನ್‌ ಯುನಿಲೀವರ್‌ ಷೇರಿನ ಬೆಲೆ ರೂ.2,300 ನ್ನು ದಾಟಿರುವುದು ಈ ಕಂಪನಿಯ ಮಟ್ಟವನ್ನು ತೋರಿಸುತ್ತದೆ. ಅಲ್ಲದೆ ಈ ಕಂಪನಿಯು ಈ ತಿಂಗಳ 14 ರಂದು ನಿಗದಿಪಡಿಸಿರುವ ಡಿವಿಡೆಂಡ್‌ ರೂ.17.00 ಸೇರಿ ಒಟ್ಟು ರೂ.40.50 ಪೈಸೆಯಷ್ಠು ಡಿವಿಡೆಂಡ್‌ ವಿತರಿಸಿದಂತಾಗುತ್ತದೆ.

    ಸಾಮಾನ್ಯವಾಗಿ ಷೇರುಪೇಟೆಯ ಹೂಡಿಕೆಗೆ ತೊಡಗಿಸಿಕೊಂಡವರಲ್ಲಿ ತಮ್ಮ ಹೂಡಿಕೆ ಗುಚ್ಚದಲ್ಲಿ ಕೆಲವೇ ಕೆಲವು ಆಯ್ದ ಕಂಪನಿಗಳಿರಲಿ ಎಂಬ ಭಾವನೆ ಇರುತ್ತದೆ. ಇದರಿಂದ ಅಪಾಯವು ಹೆಚ್ಚಾಗುವ ಸಾಧ್ಯತೆಯಿದೆ. ಕಾರಣ ಸೀಮಿತ ವಲಯದ ಹೂಡಿಕೆಯಾದ್ದರಿಂದ ಅಲ್ಲಿ ಉಂಟಾಗುವ ಏರುಪೇರುಗಳು ಭಾರಿ ಪ್ರಮಾಣದಲ್ಲಿ ಪ್ರಭಾವಿಯಾಗುತ್ತದೆ. ಆದರೆ ಹೂಡಿಕೆ ಗುಚ್ಚದಲ್ಲಿ ಅನೇಕ ಕಂಪನಿಗಳ ಷೇರುಗಳಿದ್ದರೆ, ವಲಯವಾರು ಬದಲಾವಣೆಗಳು ಸೀಮಿತವಾದ್ದರಿಂದ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ. ಬಹುಕಂಪನಿಗಳ ಹೂಡಿಕೆಗುಚ್ಚವು ಗೊಂದಲಗಳ ಸಮಯದಲ್ಲಿ ಒಂದು ರೀತಿಯ ಷಾಕ್‌ ಅಬ್ಸಾರ್ಬರ್‌ ರೀತಿ ಕೆಲಸ ಮಾಡುತ್ತದೆ.

    ಸಧ್ಯ ಪೇಟೆಗಳು ಗರಿಷ್ಠದಲ್ಲಿರುವ ಕಾರಣ ಸಣ್ಣ ಸಣ್ಣ ಕಾರಣಗಳಿಗೂ ಭಾರಿ ಏರುಪೇರು ಪ್ರದರ್ಶಿತವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹ್ಯಾಪಿಯೆಸ್ಟ್‌ ಮೈಂಡ್ಸ್‌ ‌ ಟೆಕ್ನಾಲಜೀಸ್ ‌ ಷೇರಿನ ಇತ್ತೀಚಿನ ಚಲನೆಯಾಗಿದೆ.

    ಈ ಕಂಪನಿಯು ಈ ತಿಂಗಳ ಎರಡನೇ ವಾರದಲ್ಲಿ ಪ್ರಕಟಿಸಿದ ತನ್ನ ಫಲಿತಾಂಶದ ಸಮಯದಲ್ಲಿ ರೂ.860 ರ ಸಮೀಪದಲ್ಲಿದ್ದು, ಪ್ರಕಟವಾದ ನಂತರ ರೂ.740 ರ ಸಮೀಪಕ್ಕೆ ಕುಸಿಯಿತು. 26 ರಂದು ರೂ.770 ರ ಸಮೀಪದಿಂದ ರೂ.809 ಕ್ಕೆ ಜಿಗಿಯಿತು, 27 ರಂದು ರೂ.873 ಕ್ಕೆ ಜಿಗಿಯಿತು. 28 ರಂದು ರೂ.910 ನ್ನು ತಲುಪಿ ರೂ.873 ರಲ್ಲಿ ಕೊನೆಗೊಂಡಿದೆ.

    ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಷೇರಿನ ಬೆಲೆ ಗರಿಷ್ಠ ಹಂತದಲ್ಲಿದ್ದಾಗ ಪ್ರದರ್ಶಿತವಾದ ವಹಿವಾಟಿನ ಗಾತ್ರ ಮಾತ್ರ ಅಸಹಜ ಪ್ರಮಾಣದ್ದಾಗಿದೆ. ಈ ಕಂಪನಿ ಘೋಷಿಸಿದ ಫಲಿತಾಂಶದಲ್ಲಿ ಪ್ರತಿ ಷೇರಿಗೆ ರೂ.3 ರ ಡಿವಿಡೆಂಡ್‌ ಗೆ ಜೂನ್‌ ಅಂತ್ಯದಲ್ಲಿ ನಿಗದಿತ ದಿನವಾಗಿದ್ದರೂ ಕೇವಲ ಮೂರುದಿನಗಳಲ್ಲಿ ರೂ.140ರಷ್ಠು ಏರಿಕೆ ಕಂಡಿರುವುದು ಅಸಹಜವಲವೇ? ಈ ಪರಿಸ್ಥಿತಿಯ ಲಾಭಪಡೆದುಕೊಳ್ಳುವುದು ಕರಗತ ಮಾಡಿಕೊಂಡಲ್ಲಿ ಮಾತ್ರ ಷೇರುಪೇಟೆಯಲ್ಲಿ ಯಶಸ್ಸು ಕಾಣಲು ಸಾಧ್ಯ.

    ಈ ಹಂತದಲ್ಲಿ ಕೆಳ ಮಧ್ಯಮ ಮತ್ತು ಮಧ್ಯಮ ವಲಯದ ಕಂಪನಿಗಳನೇಕವು ಕಂಡರಿಯದ ರೀತಿಯಲ್ಲಿ ಏರಿಕೆ ಪ್ರದರ್ಶಿಸಿವೆ. ಈ ಸಮಯದಲ್ಲಿ ಅಂತಹವುಗಳಿಂದ ದೂರವಿದ್ದಲ್ಲಿ ಮಾತ್ರ ಬಂಡವಾಳ ಸುರಕ್ಷಿತ. HIL Ltd ಕಂಪನಿಯು ಕಳೆದ ಒಂದೇ ತಿಂಗಳಲ್ಲಿ ರೂ.3,380 ರಿಂದ ರೂ.5,049 ರವರೆಗೂ ಏರಿಕ ಕಂಡಿದೆ. ಕಂಪನಿ ಸಾಧನೆಯು ಉತ್ತಮವಾಗಿದ್ದರೂ ಈ ಪ್ರಮಾಣದ ಏರಿಕೆ ಸಹಜವೆನಿಸದು. ರೂ.825 ರ ವಾರ್ಷಿಕ ಕನಿಷ್ಠದಲ್ಲಿದ್ದ ಈ ಷೇರು ರೂ.5,000 ದ ಗಡಿಯನ್ನು ದಾಟಿರುವುದು ಅಸಹಜವಲ್ಲವೇ? Praj Industries ಷೇರಿನ ಬೆಲೆ 2020 ರಲ್ಲಿ ರೂ.43 ರ ಕನಿಷ್ಠದಲ್ಲಿದ್ದ ಷೇರು ರೂ.398 ರವರೆಗೂ ಜಿಗಿದು ರೂ.334 ರ ಸಮೀಪವಿದೆ. ಈ ರೀತಿ ಅಸಹಜ ರೀತಿಯ ಚಟುವಟಿಕೆಗಳಲ್ಲಿರುವ ಅನೇಕ ಕಂಪನಿಗಳಿಂದ ದೂರವಿರುವುದೇ ಒಳಿತು. ಇಲ್ಲವಾದಲ್ಲಿ ದೀರ್ಘಕಾಲೀನ ಹೂಡಿಕೆದಾರರಾಗದೆ, ಶಾಶ್ವತ ಹೂಡಿಕೆದಾರರಾಗಬಹುದು.

    Angel Broking ಕಂಪನಿಯ ಷೇರು ರೂ.306 ರಲ್ಲಿ ವಿತರಣೆಯಾಗಿದ್ದು, ಅಕ್ಟೋಬರ್‌ ತಿಂಗಳಲ್ಲಿ ವಿತರಣೆಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿದ್ದ ಈ ಷೇರು ಕಳೆದ ಒಂದೇ ತಿಂಗಳಲ್ಲಿ ರೂ.355 ರ ಸಮೀಪದಿಂದ ರೂ.788 ರವರೆಗೂ ಜಿಗಿದು ರೂ.745 ರ ಸಮೀಪ ಕೊನೆಗೊಂಡಿದೆ. ಕೇವಲ ಒಂದೇ ತಿಂಗಳಲ್ಲಿ ದ್ವಿಗುಣಗೊಂಡಿರುವ ಈ ಸ್ಮಾಲ್‌ ಕ್ಯಾಪ್‌ ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ.

    ಮೂರು ವರ್ಷಗಳ ಹಿಂದೆ ರೂ.98 ರಂತೆ ಖರೀದಿಸಿದ ಅರವಿಂದ್‌ ಲಿಮಿಟೆಡ್‌,ರೂ.90 ರಂತೆ ಖರೀದಿಸಿದ ಗುಜರಾತ್‌ ಮಿನರಲ್ ಡೆವೆಲಪ್ಮೆಂಟ್‌ ಕಾರ್ಪೊರೇಷನ್‌,ರೂ.1,030 ರಲ್ಲಿ ಖರೀದಿಸಿದ ಗೋವಾ ಕಾರ್ಬನ್‌, ರೂ.93 ರಲ್ಲಿ ಖರೀದಿಸಿದ ಕೇಸೋರಾಂ ಇಂಡಸ್ಟ್ರೀಸ್‌, ರೂ.290 ರಂತೆ ಖರೀದಿಸಿದ ಲಾ ಓಪಾಲ ಆರ್‌ ಜಿ,ರೂ.315 ರಲ್ಲಿ ಖರೀದಿಸಿದ ರೇನ್‌ ಇಂಡಸ್ಟ್ರೀಸ್‌, ರೂ.800 ರಲ್ಲಿ ಖರೀದಿಸಿದ ಅಪೆಕ್ಸ್‌ ಫ್ರೋಜನ್‌, ಮುಂತಾದವು ಖರೀದಿಸಿದ ಬೆಲೆಯನ್ನು ಇದುವರೆಗೂ ತಲುಪದೆ, ಹೂಡಿಕೆದಾರರು ಕಾಯುತ್ತಿರುವುದು ಸಾಮಾನ್ಯವಾಗಿದೆ. ಈ ಪಟ್ಟಿಗೆ ಹೆಲ್ತ್‌ ಕೇರ್‌ ಗ್ಲೋಬಲ್‌, ಯೂನಿಕೆಂ ಲ್ಯಾಬೊರೆಟರೀಸ್‌, ಆದಿತ್ಯ ಬಿರ್ಲಾ ಕ್ಯಾಪಿಟಲ್‌, ಓರಿಯಂಟಲ್‌ ಕಾರ್ಬನ್‌, ಈಕ್ವಿಟಾಸ್‌ ಹೋಲ್ಡಿಂಗ್ಸ್‌, ಮುಂತಾದ ದೊಡ್ಡ ಪಟ್ಟಿಯೇ ಇದೆ. ಹಾಗಾಗಿ ಈ ಹಂತದಲ್ಲಿ ಅಗ್ರಮಾನ್ಯ ಕಂಪನಿಗಳನ್ನು ಹೊರತು ಪಡಿಸಿ ಸ್ಮಾಲ್‌ ಕ್ಯಾಪ್‌, ಮಿಡ್‌ ಕ್ಯಾಪ್‌ ಗಳಲ್ಲಿ ಹೂಡಿಕೆಗೆ ಮುನ್ನ ಹೆಚ್ಚಿನ ಚಿಂತನೆ ಅಗತ್ಯ.

    ಹೆಚ್ಚಿನ ಕಂಪನಿಗಳು ವಾರ್ಷಿಕ ಗರಿಷ್ಠದಲ್ಲಿರುವ ಸಮಯದಲ್ಲಿ ಕೈಲಿರುವ ಹಣವನ್ನು ಯಾವ ರೀತಿ ಹೂಡಿಕೆ ಮಾಡಬಹುದು ಎಂಬುದೇ ಸಮಸ್ಯೆಯಾಗಿದೆ. ಹರಿದಾಡುವ ಹಣ ಹೆಚ್ಚಿದೆ. ಹೂಡಿಕೆಗೆ ಕೇವಲ ಕೆಲವೇ ಕಂಪನಿಗಳಿವೆ. ಹೇಗೆ ನಿರ್ಧರಿಸುವುದು. ಪ್ರತಿ ತಿಂಗಳೂ ಮಾಸಾಂತ್ಯದಲ್ಲಿ ಬರುವ ಚುಕ್ತಾ ಚಕ್ರದ ಕಾರಣ ಷೇರಿನ ಬೆಲೆಗಳು ಭಾರಿ ಕುಸಿತ ಅಥವಾ ಅಸ್ವಾಭಾವಿಕ ಏರಿಕೆ ಪ್ರದರ್ಶಿಸುತ್ತವೆ. ಇದಕ್ಕೆ ಪೂರ್ವಾಬಾವಿಯಾಗಿ ಆ ತಿಂಗಳಲ್ಲಿ ಅತಿಯಾದ ಚಟುವಟಿಕೆಯಿಂದ ಕುಸಿದಿರುತ್ತವೆ ಅಥವಾ ಏರಿಕೆ ಕಂಡಿರುತ್ತವೆ. ಆ ತಿಂಗಳಲ್ಲಿ ಬ್ಯಾಂಕಿಂಗ್‌ ವಲಯದ ಷೇರುಗಳು, ವಿಶೇಷವಾಗಿ ಸೆನ್ಸೆಕ್ಸ್‌ ನಲ್ಲಿರುವ ಷೇರುಗಳು ಭಾರಿ ಕುಸಿತಕ್ಕೊಳಗಾದಾಗ ಖರೀದಿಸಿದಲ್ಲಿ, ಚುಕ್ತಾ ಚಕ್ರದೊಳಗೆ ಅಥವಾ ನಂತರದಲ್ಲಿ ಭಾರಿ ಚೇತರಿಕೆ ಕಾಣುವುದು ಈಗಿನ ವಹಿವಾಟಿನ ವಿಧವಾಗಿದೆ.

    ಅದೇ ರೀತಿ ಟೆಕ್ನಾಲಜಿ ವಲಯದ ಕಂಪನಿಗಳು, ಫಾರ್ಮಾ ವಲಯದ ಕಂಪನಿಗಳು ಸಹ ಭಾರಿ ಏರಿಳಿತಗಳನ್ನು ಪ್ರದರ್ಶಿಸುತ್ತಿವೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಿರ್ಧರಿಸುವುದು ಸಾಧ್ಯವಿಲ್ಲದಿದ್ದಲ್ಲಿ ಪ್ರತಿ ಷೇರಿಗೆ ರೂ.58 ರ ಡಿವಿಡೆಂಡ್‌ ಘೋಷಿಸಿರುವ BPCL, ಪ್ರತಿ ಷೇರಿಗೆ ರೂ.22.75 ರಂತೆ ಡಿವಿಡೆಂಡ್‌ ವಿತರಿಸಲಿರುವ Hindustan Petroleum Corporation Ltd, ಕಂಪನಿಗಳಲ್ಲಿ ಹೂಡಿಕೆ ಮಾಡಿದಲ್ಲಿ ಡಿವಿಡೆಂಡೂ ಸಿಗುತ್ತದೆ ಜೊತೆಗೆ ಷೇರಿನ ಬೆಲೆ ಹೆಚ್ಚಳಕ್ಕೆ ಅವಕಾಶವಿದ್ದು, ಅಧಿಕ ಲಾಭವನ್ನೂ ಪಡೆಯಬಹುದಾಗಿದೆ.

    ಕಂಪನಿಗಳು ಆಕರ್ಷಕ ಲಾಭಗಳಿಸಿದರೂ ಅದಕ್ಕೆ ತಕ್ಕಂತೆ ಡಿವಿಡೆಂಡ್‌ ಗಳನ್ನು ವಿತರಿಸುವಲ್ಲಿ ವಿಫಲವಾಗುತ್ತಿವೆ. ಅಂದರೆ ಷೇರುಪೇಟೆಯಲ್ಲಿ ಹೂಡಿಕೆಯ ಹಣ ವೃದ್ಧಿ ಕಾಣಬೇಕಾದರೆ, ಖರೀದಿಸಿದ ಷೇರನ್ನು ಲಾಭಕ್ಕೆ ಮಾರಾಟಮಾಡಿದಲ್ಲಿ ಮಾತ್ರ ಸಾಧ್ಯ. ಮ್ಯುಚುಯಲ್‌ ಫಂಡ್‌, ವಿತ್ತೀಯ ಸಂಸ್ಥೆಗಳು, ವೆಂಚರ್‌ ಕ್ಯಾಪಟಲಿಸ್ಟ್‌, ಪ್ರೈವೇಟ್‌ ಈಕ್ವಿಟಿ ಇನ್ವೆಸ್ಟರ್‌ ಗಳ ಈ ದಿನಗಳಲ್ಲಿ ಯಾವುದೇ ಷೇರಿನ ಬಗ್ಗೆ ಭಾವನಾತ್ಮಕ ನಂಟು ಬೇಡ. ವಹಿವಾಟನ್ನು ಸಣ್ಣ ಪ್ರಮಾಣದ ಅಂದರೆ 50, 100 ರ ಸಂಖ್ಯೆಯ ಷೇರುಗಳಲ್ಲಿ ನಡೆಸಿದಲ್ಲಿ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ. ಚಟುವಟಿಕೆಯಲ್ಲಿ ಚಿಂತನೆ, ವಿಶ್ಲೇಷಣೆಗಳಿಗೆ ತೆರೆದಿಡು ಮನ, ಸ್ವಾವಲಂಭಿ ನಿರ್ಧಾರದಮೇಲಿರಲಿ ಸದಾ ನಿಮ್ಮ ಗಮನ.

    ಶಾಸಕರ ಸ್ವಭಾವ


    ಈ ಸ್ವಭಾವ ಚಿತ್ರವನ್ನು ಸದ್ಯದಲ್ಲೇ ಪ್ರಕಟವಾಗಲಿರುವ ನಾಡಿನ ಹೆಸರಾಂತ ಕಥೆಗಾರ ಕೆ. ಸತ್ಯನಾರಾಯಣ ಅವರು ಬರೆದ ಕಪಾಳಮೋಕ್ಷ ಪ್ರವೀಣ ಸ್ವಭಾವ ಚಿತ್ರಗಳ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ. ಈ ಪುಸ್ತಕವನ್ನು ಕನ್ನಡದ ಪ್ರಸಿದ್ಧ ಪ್ರಕಾಶಕರಾದ ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆಯವರು ಪ್ರಕಟಿಸುತ್ತಿದ್ದಾರೆ. ಈ ಅಧ್ಯಾಯ ಅವರ ಸಂಪರ್ಕಕ್ಕೆ ಬಂದ ಆಗಿನ ಜನಪ್ರತಿನಿಧಿಗಳ ಚಿತ್ರಣವನ್ನು ಕಟ್ಟಿಕೊಡುತ್ತದೆ.



    ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್‌ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್‌ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್‌ ನೀಡಿದೆ.


    ಶಾಸಕರು, ಸಂಸದರು, ಕಾರ್ಪೊರೇಟರ್‌ಗಳು ಇವರನ್ನೆಲ್ಲ ಹತ್ತಿರದಿಂದ, ದೂರದಿಂದ, ಓರೆನೋಟದಿಂದ ಕಾಣುವ, ಭೇಟಿ ಮಾಡುವ ಅವಕಾಶಗಳು ಬಂದಾಗಲೆಲ್ಲ, ಇಂತಹವರೆಲ್ಲ ವಿಶೇಷ ಜನ ಎಂದು ನನಗನಿಸುವುದೇ ಇಲ್ಲ. ಅವರನ್ನು ನಮ್ಮಂತೆಯೇ ಬಗೆದು ಸಮಾನರಾಗಿ ಕಾಣಲು ಹೊರಟರೆ, ಅವರಿಗೂ ಒಂದು ರೀತಿಯ ಮುಜುಗರ.

    ಕೊಲ್ಹಾಪುರದಲ್ಲಿದ್ದಾಗ ಒಬ್ಬ ಸಂಸದರ ಷರ್ಟಿನ ವಿನ್ಯಾಸ ಚೆನ್ನಾಗಿದೆ ಎಂದು ಹೇಳಿದ್ದಕ್ಕೆ ಅವರು ಸಿಟ್ಟು ಮಾಡಿಕೊಂಡರು. ಇನ್ನೊಬ್ಬರು ಹಾಕಿಕೊಂಡಿರುವ ಬಟ್ಟೆ ಚೆನ್ನಾಗಿದ್ದರೆ, ಯಾರಾದರೂ ಹೊಗಳೇ ಹೊಗಳುತ್ತಾರಲ್ಲವೇ? ಆವಾಗ ಬಟ್ಟೆ ಹಾಕಿಕೊಂಡವರಿಗೂ ಖುಷಿಯಾಗುತ್ತದಲ್ಲವೇ ಎಂಬುದೇ ಪ್ರಶ್ನೆ. ಇನ್ನೊಂದು ಸಲ ಬೋರಿವಿಲಿಯಲ್ಲಿ ಒಬ್ಬ ಶಾಸಕರು ನನ್ನ ರೀತಿಯೇ ಎರಡು ಸಲ ಪಾನ್‌ ಹಾಕಿಕೊಂಡು ತುಟಿ ಕೆಂಪಾದ ಮೇಲೆ ನಾಲಿಗೆಯಿಂದ ತುಟಿ ಸವರಿಕೊಳ್ಳುತ್ತಾ ಸುಖ ಅನುಭವಿಸುತ್ತಿದ್ದರು. ಶಾಸಕರು, ಅವರ ಪಕ್ಕದಲ್ಲಿ ನಾನು, ನನ್ನ ಪಕ್ಕದಲ್ಲಿ ಸಹೋದ್ಯೋಗಿ. ಸಹೋದ್ಯೋಗಿ ಹತ್ತಿರ ನಾನು ಶಾಸಕರ ಬಗ್ಗೆ ಪಿಸುಮಾತಿನಲ್ಲಿ ಹೇಳಿದಾಗ, ಇಲ್ಲ, ಇಲ್ಲ, ಹಾಗೆ ಮಾತನಾಡಬಾರದು ಎಂದು ತುಟಿಯ ಮೇಲೆ ಬೆರಳಿಟ್ಟುಕೊಂಡರು.

    ಏಕೆ ಹೀಗಾಗುತ್ತದೆ? ನನ್ನ ಅಧಿಕಾರ ಸ್ಥಾನದ ಬಗ್ಗೆ, ಬರಹಗಾರನಾಗಿರುವೆನೆಂಬ ಆತ್ಮವಿಶ್ವಾಸದಿಂದ ಹೀಗಾಗುತ್ತದೆಯೇ ಎಂದು ಮತ್ತೆ ಮತ್ತೆ ಯೋಚಿಸಿದಾಗ ಹೊಳೆದದ್ದು, ನಾನು ಬಾಲ್ಯದಲ್ಲಿ, ಯೌವ್ವನದಲ್ಲಿ ಕಂಡ ಜನಪ್ರತಿನಿಧಿಗಳ ಸ್ವಭಾವ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದೆಯೆಂಬುದು. ಇದೆಲ್ಲ ತೀರಾ ಹಿಂದಿನ ಕಾಲದ ಸಮಾಚಾರ ಎಂದು ತಿಳಿಯಬಾರದು. ತೀರಾ 1978, 1979ರಲ್ಲೂ ನಾನು ಒಂದು ಗೊಬ್ಬರದ ಅಂಗಡಿಯ ಮುಂದಿನ ಜಗುಲಿಯಲ್ಲಿ ಕುಳಿತುಕೊಂಡು ಶಾಸಕರೊಬ್ಬರ ಜೊತೆ ದಿನಪತ್ರಿಕೆ ಓದುತ್ತಿದ್ದೆ. ನನ್ನ ಹತ್ತಿರ ಒಂದು ಪುಟ ಇದ್ದರೆ, ಅವರ ಹತ್ತಿರ ಇನ್ನೊಂದು ಪುಟ. ಮುಂದಿನ ಪುಟದಲ್ಲಿದ್ದ ಸುದ್ದಿ ಮುಂದುವರೆದಿದ್ದರೆ, ಅವರು ನಾನು ಆ ಪುಟ ಓದಿ ಮುಗಿಸುವ ತನಕ ಕಾಯುತ್ತಿದ್ದರು.

    ಜನಪ್ರತಿನಿಧಿಗಳ ಬಗ್ಗೆ ವಿಶೇಷ ಸಲಿಗೆಯಿದು ಎಂದು ಭಾವಿಸಬಾರದು. ನಮ್ಮ ಶಾಸಕರು ಪಕ್ಕದ ಗ್ರಾಮದಲ್ಲಿದ್ದವರು. ಅದೊಂದು ಸುಂದರವಾದ ಹಸಿರುವಾಣಿ ಗ್ರಾಮ. ಎಲ್ಲರ ಮನೆಯಲ್ಲೂ ಹಿತ್ತಲ ತುಂಬಾ ತರಕಾರಿಯಿತ್ತು. ತರಕಾರಿ ಅಂಗಡಿಯೇ ಇರಲಿಲ್ಲ. ಹಾಗಂತ ಅಂಚೆ ಕಚೇರಿಯೂ ಇರಲಿಲ್ಲ. ನಮ್ಮೂರಿನಲ್ಲಿದ್ದ ಅಂಚೆ ಕಚೇರಿಗೇ ಅವರ Post ಕೂಡ ಬರುತ್ತಿತ್ತು. ನಮ್ಮೂರ ಅಂಚೆ ಕಚೇರಿ ಕೂಡ Sub-Post Office ಮಾತ್ರವಷ್ಟೇ! ಇಡೀ ಗ್ರಾಮಕ್ಕೆ ಸೇರಿ ಒಂದು ನಾಲ್ಕೈದು ಕಾಗದಗಳು ಬರುತ್ತಿದ್ದವು ಅಷ್ಟೆ. ಪಕ್ಕದ ಗ್ರಾಮದ ನಾಯಕರು ಶಾಸಕರಾದರು ನೋಡಿ, ಬೆಂಗಳೂರು, ದೆಲ್ಲಿ, ಮೈಸೂರು ಎಲ್ಲ ಕಡೆಯಿಂದಲೂ ಅವರಿಗೆ ಕಾಗದಗಳು, ಪುಸ್ತಕಗಳು, ಪತ್ರಿಕೆಗಳು, ಗೆಜೆಟ್‌. ಪೋಸ್ಟ್‌ ಬ್ಯಾಗ್‌ ಗಾತ್ರ ಮಾತ್ರ ಊದುತ್ತಲೇ ಇತ್ತು. ಬ್ಯಾಗ್‌ನಿಂದ ಶಾಸಕರಿಗೆ ಸೇರಿದ ಎಲ್ಲ ಟಪಾಲನ್ನು ತೆಗೆದು ಒಂದು ಕಡೆ ಹರಡುವರು. ಅದನ್ನು ನೋಡಲೇ ಒಂದು ಸಂತೋಷ. ಗೆಜೆಟ್ಟನ್ನ ನಾನು ಮೊದಲು ನೋಡಿದ್ದು ಅಲ್ಲೇ. ಅದರ ಮೇಲೆ ಶಾಸಕರ ಹೆಸರು, ವಿಳಾಸ ನೋಡಿ ಪುಳಕಿತನಾಗುತ್ತಿದ್ದೆ. ಶಾಸಕರು ಎದುರಿಗೆ ಸಿಕ್ಕಾಗಲೆಲ್ಲ ಸೆಲ್ಯೂಟ್‌ ಹೊಡೆಯುವಾಗ ಗೆಜೆಟ್‌ ಕೂಡ ಕಣ್ಣೆದುರಿಗೆ ಬರೋದು.

    ಈ ಶಾಸಕರು ದಿನವೂ ಎದುರಾಗುತ್ತಿದ್ದರು. ಎಸ್ಸೆಸ್ಸಲ್ಸಿ ಪರೀಕ್ಷೆ ಯಾವಾಗ, ಪಿಯುಸಿ ಪರೀಕ್ಷೆ ಯಾವಾಗ, ಯಾರು ಸಪ್ಲಿಮೆಂಟರಿ ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ವಿವರಗಳು ಅವರಿಗೆ ಗೊತ್ತಿರುತ್ತಿತ್ತು. ಈ ಸಲವಾದರೂ ಪಾಸ್‌ ಮಾಡಿಕೊ, ಸುಮ್ಮನೆ ಮಾರ್ಚ್‌-ಸೆಪ್ಟೆಂಬರ್‌, ಸೆಪ್ಟೆಂಬರ್‌-ಮಾರ್ಚ್‌ ಅಂತ ದಂಡಯಾತ್ರೆ ಮಾಡಬೇಡ ಎಂದು ಗದರುತ್ತಿದ್ದರು. ಶಾಸಕರನ್ನು ನಿಲ್ಲಿಸಿಕೊಂಡು ಮನೆಯೊಳಗೆ ಆಗುತ್ತಿರುವ ದಾಯಾದಿ ಜಗಳವನ್ನೋ, ಗದ್ದೆಗೆ ನೀರು ಬಿಡುವುದರಲ್ಲಿ, ಕೊರಚುವದರಲ್ಲಿ ಮೂಡಿದ ತಗಾದೆಯನ್ನೋ ಗಂಟೆಗಟ್ಟಲೆ ಒಪ್ಪಿಸುವುರು, ಇದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡು ಒಂದು ನ್ಯಾಯವನ್ನು ಕೂಡ ಶಾಸಕರು ಹೇಳುತ್ತಿದ್ದರು. ಯಾವ ಮದುವೆಗೆ ಬಂದಾಗ ಶಾಸಕರು ಎಷ್ಟು ಮುಯ್ಯಿ ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂಬುದನ್ನು ಊರಿನವರೆಲ್ಲ ಗಮನಿಸಿರುತ್ತಿದ್ದುದರಿಂದ, ಉಡುಗೊರೆ ನೀಡುವವರೆಲ್ಲ ಒಂದು ಸಮಾನತೆಯ ಸೂತ್ರವನ್ನು ಅನುಸರಿಸಲೇ ಬೇಕಾಗುತ್ತಿತ್ತು. ಸಣ್ಣ-ಪುಟ್ಟ ವ್ಯವಹಾರಗಳಿಗೂ ಶಾಸಕರ ಒತ್ತಾಸೆಗೆ, ಶಿಫಾರಿಸ್‌ಗೆ ಜುಲುಮೆ ಮಾಡುತ್ತಿದ್ದರು. ತಾಲೂಕ್‌ ಆಫೀಸಿಗೆ, ಜಿಲ್ಲಾಧಿಕಾರಿ ಕಚೇರಿಗೆ ಶಾಸಕರನ್ನು ಮುಂದಿಟ್ಟುಕೊಂಡು ಹೋಗಿಯೇ ಅಹವಾಲು ಹೇಳುತ್ತಿದ್ದರು. ಇಂಥ ಕಚೇರಿಗಳಲೆಲ್ಲ ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡು ಬಂದು ನಂತರ ಶಾಸಕರಿಗೆ ಅದರ ಬಗ್ಗೆ ದೂರು ಹೇಳಿ, ಅಧಿಕಾರಿಗೋ, ಗುಮಾಸ್ತರಿಗೋ ಕೊಟ್ಟಿರುವ ಲಂಚದ ಬಾಬ್ತನ್ನು ಹಿಂತಿರುಗಿ ಪಡೆಯಲು ಪ್ರಯತ್ನಿಸುತ್ತಿದ್ದರು. ಇಂತಹ ಕ್ಯಾತೆ, ಮಧ್ಯಸ್ಥಿಕೆಗೆ ಶಾಸಕರು ಒಪ್ಪದೆ, ಪದೇ ಪದೇ ಮನಸ್ತಾಪವಾಗೋದು.

    ಇನ್ನೊಬ್ಬ ಶಾಸಕರಂತೂ ಬೆಳಿಗ್ಗೆ ಎದ್ದು ಸ್ನಾನ ಮಾಡಿ, ಪೂಜೆ ಮಾಡಿ, ನಾಷ್ಟಾ ಮುಗಿಸಿ, ಪೇಟ ಕಟ್ಟಿಕೊಂಡು, ಮನೆಯ ಮುಂದಿನ ಅಂಗಳದಲ್ಲಿ ನೂಲು ಮಂಚದ ಮೇಲೆ ಕೂರುತ್ತಿದ್ದರು. ನಾವು ಕಾಲೇಜಿಗೆ ಅವರ ಮನೆಯ ಮುಂದೆಯೇ ಹಾದು ಹೋಗಬೇಕಾಗಿತ್ತು. ಪ್ರತಿದಿನ ಬೆಳಿಗ್ಗೆ ಹೀಗೆ ಶಾಸಕರು ಜನಸೇವೆಗೆ ರೆಡಿಯಾಗಿ ಕುಳಿತಿದ್ದನ್ನು ನೋಡುತ್ತಿದ್ದರಿಂದ ರಾಜಕೀಯ ವಿಜ್ಞಾನದ ತರಗತಿಗಳಲ್ಲಿ ಜನಪ್ರತಿನಿಧಿಗಳ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು ಹೇಳುತ್ತಿದ್ದ ಎಲ್ಲ ಸಂಗತಿಗಳೂ ನಮ್ಮ ಶಾಸಕರಿಗೂ ಹದಿನಾರಾಣೆ ಅನ್ವಯವಾಗುತ್ತಿತ್ತು. ಮೇಷ್ಟರು ಪುಸ್ತಕದಿಂದ ಹೇಳುತ್ತಿದ್ದುದಕ್ಕೂ, ಕಣ್ಣೆದುರಿಗೆ ಕಾಣುತ್ತಿರುವುದಕ್ಕೂ ಯಾವ ಬಿರುಕೂ ಕಾಣುತ್ತಿರಲಿಲ್ಲ. ಯಾವುದೇ ಸ್ತರದ ಸಾರ್ವಜನಿಕರು ಬಂದು ಕೂಗಲಿ, ಯಾವ ಕೆಲಸವೇ ಇರಲಿ, ಅವರೊಂದಿಗೆ ಶಾಸಕರು ಹೊರಟುಬಿಡುತ್ತಿದ್ದರು. ಕರೆದುಕೊಂಡು ಹೋಗಲು ಬಂದವರು ನಡೆದುಕೊಂಡು ಬಂದಿದ್ದರೆ, ಇವರದೂ ನಡಿಗೆಯೇ! ಜಟಕಾ ಅಂದರೆ ಜಟಕಾ, ಕಾರು ಇದ್ದರೆ ಕಾರು, ಬೆಂಗಳೂರಿಗೆ ಹೋಗಬೇಕು ಸರ್ಕಾರಿ ಬಸ್‌ನಲ್ಲಿ ಅಂದರೆ ಅದಕ್ಕೂ ಸೈ. ಬಸ್‌ ಹತ್ತಿದಾಗ ಎಲ್ಲ ಸೀಟುಗಳು ಭರ್ತಿಯಾಗಿದ್ದರೆ, ಯಾರಾದರೂ ಎದ್ದು ಶಾಸಕರಿಗೆ ಕೂರಲು ಅನುಕೂಲ ಮಾಡಿಕೊಡುತ್ತೀವೆಂದರೆ, ಅದಕ್ಕೂ ಒಪ್ಪುತ್ತಿರಲಿಲ್ಲ. ಹೀಗೆ ಓಡಾಡುವಾಗ ಮಧ್ಯಾಹ್ನದ ಊಟದ ಸಮಯವಾದರೆ, ಪ್ರಜೆಗಳ ಜೊತೆಯೇ ಊಟ. ಅಧಿಕಾರಿಗಳ ಬಳಿ ಹೋಗಿ, ನೋಡಿ ಇವರು ನಮ್ಮವರು, ಕೆಲಸ ಮಾಡಿಕೊಡಿ ಎಂಬ ಬೇಡಿಕೆ, ಆಗ್ರಹ.

    ಒಂದು ಸಲ ಈ ಶಾಸಕರು ಊಟಕ್ಕೆ ಕೂತಿದ್ದರು. ಹಿಟ್ಟನ್ನು ಸೊಪ್ಪಿನ ಹುಳಿಗೆ ಅದ್ದಿ ಇನ್ನೇನು ಬಾಯಿಗೆ ಹಾಕಿಕೊಳ್ಳಬೇಕು ಅನ್ನುವ ಹೊತ್ತಿಗೆ ಜನರ ಒಂದು ಗುಂಪು ನುಗ್ಗಿತು. ಗ್ರಾಮದಲ್ಲಿ ಪೊಲೀಸರಿಂದ ಹಲ್ಲೆ. ಮಾನ್ಯರು ಊಟವನ್ನು ಮಾಡಲೇ ಇಲ್ಲ. ಎದ್ದು ಜನರ ಜೊತೆ ಎಸ್‌ಪಿ ಬಂಗಲೆಗೆ ಹೋದರು. ಸಾಹೇಬರು ಊಟ ಮಾಡುತ್ತಿದ್ದಾರೆ ಅಂದರೆ. ನಾನು ಕೂಡ ಊಟ ಮಾಡುತ್ತಿದ್ದವನು, ಮಧ್ಯದಲ್ಲಿ ಎದ್ದು ಬಂದಿದ್ದೇನೆ ಎಂದು ಬಂಗಲೆ ಒಳಗೆ ನುಗ್ಗಿದರು. ಸಾಹೇಬರು ಶಾಸಕರನ್ನು ಊಟಕ್ಕೆ ಆಹ್ವಾನಿಸಿರು. ಎಂತಹ ಅಧಿಕಾರಿಯನ್ನಾದರೂ ಏಕವಚನದಲ್ಲಿ ಆದರೆ ಪ್ರೀತಿಯಿಂದ, ಗೌರವದಿಂದ ಮಾತನಾಡಿಸುತ್ತಿದ್ದ ಶಾಸಕರು, ಇಲ್ಲ, ನಾನು ಮುಂದಿನ ತುತ್ತು ತಿನ್ನಬೇಕಾದರೆ ನೀನು ನಾನು ಬಂದ ಕೆಲಸ ಮಾಡಿಕೊಟ್ಟ ಮೇಲೇ ಎಂದು ಷರತ್ತು ಹಾಕಿ, ಅಲ್ಲಿಂದಲೇ ಗ್ರಾಮಕ್ಕೆ ಸಂದೇಶ ರವಾನಿಸಲು ಒಬ್ಬ ಇನ್‌ಸ್ಪೆಕ್ಟರನ್ನು ಮೋಟರ್‌ ಸೈಕಲ್‌ನಲ್ಲಿ ಕಳಿಸಿದರು. 

    ಇಂತಹ ಶಾಸಕರು ಬಯಲು ನಾಟಕ ನೋಡಲು ಬಂದಾಗ ಊರಿನ ಜನರು ನಟಿ-ನಟಿಯರಿಗೆ ಮುಯ್ಯಿ ಮಾಡುವಾಗ ಅವರ ವಸ್ತ್ರಗಳಿಗೆ ನೋಟನ್ನು ಪಿನ್‌ ಸಮೇತ ಚುಚ್ಚುತ್ತಿದ್ದರಲ್ಲ ಹಾಗೆಯೇ ಇವರಿಗೂ ಮುಯ್ಯಿ ಮಾಡುತ್ತಿದ್ದರು. ಈ ಶಾಸಕರಿಂದ ಕೆಲಸ ಆಗುತ್ತಿತ್ತೇ ಅಂದರೆ ಬಹುಪಾಲು ಸಂದರ್ಭಗಳಲ್ಲಿ ಇಲ್ಲ ಎಂಬುದೇ ಖಚಿತವಾದ ಉತ್ತರ. ಆದರೆ ಮನುಷ್ಯ ಜನಾನುರಾಗಿ. ಕ್ಷೇತ್ರದ ಎಲ್ಲ ಕುಟುಂಬಗಳೂ ಗೊತ್ತು. ಯಾರು ಯಾವ ಮನೆಯವರು, ಯಾವ ಬೀದಿಯವರು ಎಂಬುದು ಕೂಡ ಗೊತ್ತು. ಇವರ ವಿರುದ್ಧ ಚುನವಾಣೆಗೆ ನಿಲ್ಲುತ್ತಿದ್ದವರು, ಆಡಳಿತ ಪಕ್ಷದವರು, ಪದಾಧಿಕಾರಿಗಳು, ವಕೀಲರು ಜನರ ಜೊತೆ ಬೆರೆಯುವುದೇ ಕಷ್ಟ. ಪಕ್ಷದಲ್ಲಿ ಪ್ರಭಾವವಿದ್ದುದರಿಂದ ಕೆಲಸ ಆಗುತ್ತಿತ್ತು. ಆದರೆ ಜನ ಇವರ ಹತ್ತಿರ ಹೋಗುವುದಕ್ಕೆ ಇಷ್ಟ ಪಡುತ್ತಿರಲಿಲ್ಲ. ಚುನಾವಣೆ ಸಮಯ ಬಂದಾಗ ಈತನ ಪ್ರಚಾರವೂ ಜೋರಾಗಿರುವುದು. ಆದರೆ ಗೆಲ್ಲುತ್ತಿರಲಿಲ್ಲ. ಗೆಲ್ಲುತ್ತಿದ್ದವರು ಹಳೆ ಕಾಲದ ಮನೋಭಾವದ ಜನಾನುರಾಗಿ ಶಾಸಕರು. ಈ ಗ್ರಾಮದ ಮತ್ತು ಗ್ರಾಮ್ಯದ ಶಾಸಕರಿಗೆ ತಾನು ಆಧುನಿಕನಲ್ಲ, ಪದವೀಧರನಲ್ಲ ಎಂಬ ಪ್ರಜ್ಞೆ ಇತ್ತು. ಚುನಾವಣೆಯಲ್ಲಿ ಎದುರು ನಿಲ್ಲುತ್ತಿರುವವನು ವಿದ್ಯಾವಂತ, ಬುದ್ಧಿವಂತ, ಮುಂದೆ ಬರುತ್ತಾನೆ ಎಂಬುದೂ ಗೊತ್ತಿತ್ತು. ಯಾವುದಾದರೂ ಸಾರ್ವಜನಿಕ ಸಮಾರಂಭದಲ್ಲಿ ಶಾಸಕರಾಗಿ ಇವರಿಗೇ ಅಗ್ರ-ಅಧಿಕೃತ ಸ್ಥಾನ ಕೊಟ್ಟು ಕೂರಿಸಿದ್ದರೂ ಎದುರಾಳಿ ಬಂದಾಗ, ಆತನ ಆಧುನಿಕ ವ್ಯಕ್ತಿತ್ವಕ್ಕೆ ಗೌರವ ಕೊಟ್ಟು ಎದ್ದು ನಿಲ್ಲುತ್ತಿದ್ದರು. ಚೆನ್ನಾಗಿದ್ದೀರಾ ಗೌಡರೇ ಎಂದು ಕುಶಲೋಪರಿ ಕೇಳುತ್ತಿದ್ದರು.

    ನಮ್ಮ ಗ್ರಾಮ್ಯ ಶಾಸಕರು ವಿಧಾನಸಭೆಯಲ್ಲಿ ಮಾತನಾಡಿದ ದಿವಸವೋ, ಪ್ರಶ್ನೆ ಕೇಳಿದ ದಿವಸವೋ ಪತ್ರಿಕೆಯಲ್ಲಿ ವರದಿಯಾದ ದಿವಸ ಆ ಪುಟವನ್ನು, ಸಾಲುಗಳನ್ನು ಹತ್ತು ಹತ್ತು ಸಲ ಓದುತ್ತಿದ್ದೆವು. ಶಾಸಕರು ದಿನವೂ ಎದುರಾಗುತ್ತಿದ್ದ ಮಾಮೂಲಿ ವ್ಯಕ್ತಿಯಾದರೂ, ವಿಧಾನಸಭೆಯಲ್ಲಿ ಮಾತನಾಡಿ ವಾಪಸ್‌ ಬಂದ ಸಂದರ್ಭದಲ್ಲಿ ಮತ್ತೆ ಹೋಗಿ ಅವರನ್ನೇ ವಿಶೇಷ ವ್ಯಕ್ತಿ ಎಂದು ನೋಡುತ್ತಿದ್ದೆವು. ನಿಜವಾಗಿಯೂ ಅವರ ಮುಖದಲ್ಲಿ ಒಂದು ಕಳೆ ಇರೋದು.

    ಪಕ್ಕದ ಪಾಂಡವಪುರದಿಂದ ಶಾಸಕರಾಗಿ ಆಯ್ಕೆಯಾಗಿರುವವರು ಪಕ್ಷೇತರರಾದರೂ, ಕಾಂಗ್ರೆಸ್ಸಿನವರಿಗಿಂತ ಗಾಂಧೀವಾದಿಯೆಂದು, ಸೈಕಲ್‌ನಲ್ಲಿ ಓಡಾಡುತ್ತಾರೆಂದು, ಹೊಲ-ಗದ್ದೆ ಕೆಲಸ ಮಾಡಲು ಪಟಾಪಟಿ ಚಡ್ಡಿಯಲ್ಲಿ ಕೂಲಿಕಾರರ ಜೊತೆ ತಾವೂ ಸಮನಾಗಿ ನಿಲ್ಲುತ್ತಾರೆಂದು ಕೇಳಿದ್ದೆವು. ಇಂತಹ ಶಾಸಕರನ್ನು ಒಮ್ಮೆ ಹೋಗಿ ನೋಡಿಕೊಂಡು ಬರಲೇಬೇಕು ಎಂದು ಮೇಷ್ಟರು ಸೂಚಿಸಿದ್ದರಿಂದ ನಾವೆಲ್ಲಾ ನೆಲೆಮನೆ ಗ್ರಾಮಕ್ಕೆ ಹೋದರೆ, ಮಹಾನುಭಾವರು ಕೇವಲು ನೀರು ಗದ್ದೆಗೆ ಇಳಿದಿರಲಿಲ್ಲ ಅಷ್ಟೆ. ಜನರ ಒಂದು ಸಣ್ಣ ಗುಂಪಿನೊಡನೆ ಗದ್ದೆ ಬದುವಿನಲ್ಲಿದ್ದ ಹೊಂಗೆ ಮರದ ಕೆಳಗಿ ಕುಳಿತುಕೊಂಡು ಮಾತುಕತೆಯಲ್ಲಿ ತಲ್ಲೀನರಾಗಿದ್ದರು. ಇವರೇ ಶಾಸಕರು ಅಂತ ಒಬ್ಬರು ಗುರುತು ಹೇಳಿದ ಮೇಲೆ ನಮಗೆ ಗೊತ್ತಾಯಿತು. ಮುಂದಿನ ವಾಕ್ಯ ನಿಮಗೆ ಗೊತ್ತೇ ಇದೆ. ನಂತರದ ಚುನಾವಣೆಯಲ್ಲಿ ಇವರು ಗೆಲ್ಲಲಿಲ್ಲ. ಸೋತೆ ಎಂದು ಬೇಸರ ಕೂಡ ಮಾಡಿಕೊಳ್ಳಲಿಲ್ಲ. ತಾವಾಯಿತು ತಮ್ಮ ಹೊಲ-ಗದ್ದೆ ಕೆಲಸವಾಯಿತು, ಚರಕದಲ್ಲಿ ನೂಲುವುದಾಯಿತು. 1969ರಲ್ಲಿ ಗಾಂಧಿ ಶತಮಾನೋತ್ವವ ಆದಾಗ ನಮ್ಮ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾನ್ಯರು ಮಾಡಿದ ಭಾಷಣದಿಂದ ನಾವು ವಿದ್ಯಾರ್ಥಿಗಳಿರಲಿ, ಕಾಲೇಜು ಮೇಷ್ಟರುಗಳು ಕೂಡ ಪ್ರಭಾವಿತರಾಗಿದ್ದೆವು.

    ಇವರೆಲ್ಲ ಇಷ್ಟೊಂದು ಜನರ ಜೊತೆ ಬೆರೆಯುತ್ತಿದ್ದರಿಂದ ಭ್ರಷ್ಟರಾಗಿರುವುದು, ಆಸ್ತಿ ಮಾಡಿಕೊಳ್ಳುವುದು ಕೂಡ ಕಷ್ಟವಿತ್ತು. ಅದೂ ಅಲ್ಲದೆ, ಸಾರ್ವಜನಿಕರು ಕೂಡ ಇವರನ್ನು ಜನಪ್ರತಿನಿಧಿಗಳೆಂದು ಒಪ್ಪಿ ಗೌರವ ತೋರಿಸುತ್ತಿದ್ದುದು ನಿಜವಾದರೂ, ಇವನು ಜನಪ್ರತಿನಿಧಿ ನಿಜ, ಆದರೆ ಅದಕ್ಕಿಂತ ಮುಖ್ಯವಾಗಿ ನಮ್ಮವನು, ನಮಗೆ ಆಗಿ ಬರುವವನು ಎಂಬ ನಂಬಿಕೆ ಪ್ರಧಾನವಾಗಿತ್ತು. ಹಾಗಾಗಿ ಇವರ ಹಣದ ವಹಿವಾಟು, ಆಸ್ತಿ ವ್ಯವಹಾರದಲ್ಲಿ ಸಣ್ಣ-ಪುಟ್ಟ ಬದಲಾವಣೆಗಳಾದರೂ ಊರವರಿಗೆಲ್ಲ ಗೊತ್ತಾಗಿಬಿಡುತ್ತಿತ್ತು. ಜನರ ಬಾಯಿಗೆ ಬೀಳಲು ಶಾಸಕರು ಕೂಡ ಹೆದರುತ್ತಿದ್ದರು. ಜಿಲ್ಲಾ ಕೇಂದ್ರದಲ್ಲೋ, ಬೆಂಗಳೂರಿನಲ್ಲೋ ಮನೆ ಮಾಡಿಕೊಂಡು ವಾಸಿಸುತ್ತಾ, ಚುನಾವಣೆ ಸಮಯದಲ್ಲಿ ಮಾತ್ರ ಭೇಟಿ ನೀಡುವ ಕ್ರಮ ಇನ್ನೂ ಜಾರಿಗೆ ಬಂದಿರಲಿಲ್ಲ.

    ಇಂತಹ ಶೀಲ-ಸ್ವಭಾವಗಳ ಜನಪ್ರತಿನಿಧಿಯನ್ನು ವ್ಯಕ್ತಿತ್ವ ನಿರ್ಮಾಣವಾಗುವ ನಿರ್ಣಾಯಕ ವರ್ಷಗಳಲ್ಲಿ ನೋಡಿದ್ದರಿಂದ ಮುಂದೆ ಕೂಡ ನನಗೆ ಇವರನ್ನು ವಿಶೇಷ ವ್ಯಕ್ತಿಗಳೆಂದು ಪರಿಗಣಿಸುವ ಮನೋಭಾವವೇ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಬಂದ ನಾನು ಮುಂದೆ ಮೈಸೂರಿನಲ್ಲಿ ಓದುವಾಗ ನಮ್ಮ ವಿಭಾಗದ ಸಮಾರಂಭಕ್ಕೆ ಹಿಂದೆ ಅರ್ಥ ಸಚಿವರಾಗಿದ್ದು ನಂತರ ವಿರೋಧಪಕ್ಷದ ನಾಯಕರಾಗಿದ್ದವರನ್ನು ಹೋಟೆಲಿನಿಂದ ಕರೆದುಕೊಂಡು ಹೋಗುವಾಗ, ಕಾರಿನಲ್ಲಿ ಹಿಂದುಗಡೆ ಸೀಟಿನಲ್ಲಿ ಅವರ ಪಕ್ಕವೇ ಕುಳಿತುಕೊಳ್ಳಲು ಹೊರಟೆ. ಮುಖ ಸಿಂಡರಿಸಿಕೊಂಡ ಮಹಾನುಭಾವರು, ಹೋಗಿ ಮುಂದೆ ಡ್ರೈವರ್‌ ಪಕ್ಕದಲ್ಲಿ ಕುಳಿತುಕೊ ಎಂದು ಸೂಚಿಸಿದರು. ಹಾಗಿದ್ದರೂ ಮುಂದೆ ಅವರ ವರ್ತನೆ ಮತ್ತು ಮಾತುಕತೆ ಎಲ್ಲ ಸೌಜನ್ಯಪೂರ್ಣವಾಗಿಯೇ ಇತ್ತು. ನೀನು ಪ್ರಜೆ ಆಗಿರುವುದರಿಂದ ನನ್ನಿಂದ ದೂರವಿರು ಎಂದು ಹೇಳಿಸಿಕೊಂಡಂತಹ ಸಂದರ್ಭ ಬಹಳ ಅಪರೂಪ. ಒಂದು ಸಂದರ್ಭದಲ್ಲಿ ನಾಯಕರೊಬ್ಬರು ಹೋಟೆಲ್‌ ಮುಂದೆ ಸಿಕ್ಕಿ ನನಗೆ ಬೇಕಾಗಿದ್ದ ಶಿಫಾರಸ್‌ ಪತ್ರವೊಂದನ್ನು ಕಾರಿನ ಬಾನೆಟ್‌ ಮೇಲೆ ನೋಟ್‌ಪ್ಯಾಡ್‌ ಇಟ್ಟುಕೊಂಡು ಬರೆದುಕೊಟ್ಟರು.

    ಮುಂದೆ ನಾನು ಕೇಂದ್ರ ಸರ್ಕಾರದಲ್ಲಿ ಅಧಿಕಾರಿಯಾದ ಮೇಲೂ ಭೇಟಿ ಮಾಡಿದ, ಒಡನಾಡಿದ ಬಹುಪಾಲು ಜನಪ್ರತಿನಿಧಿಗಳು, ನಾಯಕರು ಸೌಜನ್ಯದಿಂದಲೇ ವರ್ತಿಸುತ್ತಿದ್ದರು. ಇದಕ್ಕೆ ಬಹುಪಾಲು ನಾನು ಅಧಿಕಾರಿಯಾಗಿದ್ದುದು ಕಾರಣವಾಗಿರಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಒಡನಾಡುವಾಗ ಯಾರು ಯಾವ ರೀತೀಯಲ್ಲಿ ವರ್ತಿಸಬೇಕೆಂಬುದಕ್ಕೆ ಮಾದರಿಗಳಿರುತ್ತವೆ, ಸೂತ್ರಗಳಿರುತ್ತವೆ. ಅದರ ಪ್ರಕಾರವೇ ಎಲ್ಲವೂ ನಡೆದುಕೊಂಡು ಹೋಗುತ್ತದೆ. ಇದು ನಿಜವಾದರೂ, ನಾನು ಇದುವರೆಗೆ ಬರೆದಿರುವುದೆಲ್ಲ ಗಾಂಧಿಯುಗದ, ಸ್ವಾತಂತ್ರ್ಯ ಚಳುವಳಿಯ ಪ್ರಭಾವ ಇನ್ನೂ ತೀವ್ರವಾಗಿದ್ದ ೧೯೬೦ರ ದಶಕದ, ೭೦ರ ದಶಕದ ಮೊದಮೊದಲ ವರ್ಷಗಳ ಕನಸಿನ ಯುಗದ ಶಾಸಕರ, ಜನಪ್ರತಿನಿಧಿಗಳ ಸ್ವಭಾವ ಚಿತ್ರವೆಂದು ತಪ್ಪು ತಿಳಿಯಬಾರದು. ಬೆಂಗಳೂರಿನಲ್ಲಿ ಕೂಡ ನಮ್ಮ ಬಡಾವಣೆಯಲ್ಲಿದ್ದ ಒಬ್ಬ ಶಾಸಕರು ಬೆಳಿಗ್ಗೆ ಎದ್ದು ಸೀಲ್‌, ಸ್ಟ್ಯಾಂಪ್‌ ಪ್ಯಾಡ್‌, ಲೆಟರ್‌ ಹೆಡ್‌ ಇಟ್ಟುಕೊಂಡು ಕುಳಿತುಕೊಂಡು ಗಂಟೆಗಟ್ಟಲೆ ಶಿಫಾರಸ್‌ ಪತ್ರಗಳನ್ನು ಬರೆದುಕೊಡುತ್ತಿದ್ದರು. ನಾನು ಒಮ್ಮೆ ಯಾವುದೋ ಒಂದು ದಾಖಲೆಯನ್ನು ದೃಢೀಕರಿಸಿಕೊಳ್ಳಲು ಇವರ ಸಹಿ ಪಡೆಯಲು ಹೋದಾಗ, ರಿಕ್ಷಾ ಚಾಲಕನೊಬ್ಬನಿಗೆ ನನ್ನ ಕೆಲಸ ಮಾಡಿಕೊಡುವುದಕ್ಕಿಂತ ಮುಂಚೆ ಒಂದು ಶಿಫಾರಸ್‌ ಪತ್ರ ಬರೆದುಕೊಟ್ಟರು. ಅದನ್ನು ಓದಿದ ರಿಕ್ಷಾ ಚಾಲಕ ಹೀಗೆ ಬರೆದುಕೊಟ್ಟರೆ ಕೆಲಸ ಆಗುವುದಿಲ್ಲ, ಇನ್ನೂ Strong ಆಗಿ ಬರೆದುಕೊಡಿ ಎಂದು ರೇಗಿ ಜುಲುಮೆ ಮಾಡಿ ಮತ್ತೊಂದು ಶಿಫಾರಸ್‌ ಪತ್ರ ಬರೆಸಿಕೊಂಡ. ಇದೇ ಬಡಾವಣೆಯಲ್ಲಿದ್ದ ಸಂಸದರೊಬ್ಬರು ಯಾವಾಗಲೂ ಗಾಂಧಿ ಬಜಾರ್‌, ಶಂಕರಪುರಂ, ಚಾಮರಾಜಪೇಟೆ ಬೀದಿ ಬೀದಿಗಳಲ್ಲಿ ತಮ್ಮ ಸಹಚರರೊಡನೆ ಪಟಪಟ ನಡೆದುಕೊಂಡೇ ಓಡಾಡೋರು. 

    ತುರ್ತು ಪರಿಸ್ಥಿತಿ ಸಮಯದಲ್ಲಿ ಶ್ರೀಮಂತ, ಸಜ್ಜನ ಶಾಸಕರೊಬ್ಬರು ಒಂದು ಸಂಘಟನೆಯ ಕೆಲಸಕ್ಕೆ ಅವರ ಬಂಗಲೆಯ ಹಿಂದಿನ ಔಟ್‌ ಹೌಸನ್ನು ಬಿಟ್ಟುಕೊಟ್ಟರು. ನಾವೆಲ್ಲ ಅಲ್ಲಿಗೆ ಹೋದಾಗ, ಮಾನ್ಯರು ತಮ್ಮ ದಿವಾನ್‌ಖಾನೆಯಿಂದ ಬಂದು ನಮ್ಮೊಡನೆಯೇ ಬೆರೆಯುತ್ತಿದ್ದರು. ಮುಂದೆ ಅವರು ಸಚಿವರು, ಪಕ್ಷದ ಅಧ್ಯಕ್ಷರೂ ಆದರು. ಕೆಲವು ವರ್ಷಗಳ ನಂತರ ಇಪ್ಪತ್ತು ಮೂವತ್ತು ಜನರು ಭಾಗವಹಿಸಿದ್ದ ಒಂದು ಸಾಹಿತ್ಯ ಪರಿಷತ್ತಿನ ಆಪ್ತ ಸಮಾರಂಭದಲ್ಲಿ ಸಿಕ್ಕಿದ್ದೆವು. ನಮಸ್ಕಾರ ಹೇಳಿ, ಹಿಂದಿನ ಗುರುತನ್ನು ನಾನು ಹೇಳುವ ಮುನ್ನವೇ ಅವರೇ ಎಲ್ಲ ವಿವರಗಳನ್ನು ನೆನೆಸಿಕೊಂಡರು. 

    ನಾಗಪುರದಲ್ಲಿ ಎರಡು ಮೂರು ವರ್ಷ ಕೆಲಸ ಮಾಡುತ್ತಿದ್ದಾಗ ನಾನು ದೆಹಲಿಗೆ ಹೋಗುವ ರೈಲಿನಲ್ಲೇ ಆಡ್ವಾಣಿಯವರು ಕೂಡ ಅನೇಕ ಸಲ ಪ್ರಯಾಣ ಮಾಡುತ್ತಿದ್ದರು. ಸಹ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುತ್ತಿದ್ದರು. ಪ್ರಯಾಣದುದ್ದಕ್ಕೂ ಓದುತ್ತಿದ್ದ ಅವರಿಗೆ ರಾತ್ರಿ ದೀಪವನ್ನು ಹೆಚ್ಚು ಹೊತ್ತು ಉರಿಸುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗಬಹುದಲ್ಲವೇ ಎಂದು ಯಾವಾಗಲೂ ಪರಿತಪಿಸುತ್ತಿದ್ದರು. ಪ್ರಯಾಣದುದ್ದಕ್ಕೂ ಸಿಗುವ ಸ್ಟೇಷನ್‌ಗಳಲ್ಲಿ ಅವರನ್ನು ಭೇಟಿ ಮಾಡಲು ನೂರಾರು ಕಾರ್ಯಕರ್ತರು ಬಂದುಬಿಡುತ್ತಿದ್ದರು. ಅವರ‍್ಯಾರೂ ರೈಲಿನೊಳಗೆ ಬರದಂತೆ, ದಾಂದಲೆ ಮಾಡದಂತೆ ಇವರೇ ಎಚ್ಚರಿಸುತ್ತಿದ್ದರು. ಮತ್ತೆ ರೈಲು ಹೊರಟ ಮೇಲೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಎಲ್ಲರೊಡನೆ ಮಿತವಾಗಿ ಬೆರೆಯುತ್ತಾ ತಮ್ಮ ಪಾಡಿಗೆ ತಾವಿರುತ್ತಿದ್ದರು.

    ಸಮಕಾಲೀನ ಜನಪ್ರತಿನಿಧಿಗಳನ್ನು ಕುರಿತು ಕೂಡ ನನಗೆ ಇದೇ ರೀತಿಯ ಸ್ವಭಾವ ಚಿತ್ರ ಬರೆಯಲು ಆಸೆಯಾಗುತ್ತದೆ. ಹಾಗೆ ನಾನೆ ಬರೆಯಲಾರೆ ಎಂಬುದು ಕೂಡ ಗೊತ್ತಿದೆ. ಆದರೆ ಹಾಗೆ ಬರೆಯಲು ಸಾಧ್ಯವಾಗದೆ ಇರುವುದಕ್ಕೆ ಜನಪ್ರತಿನಿಧಿಗಳು ಮಾತ್ರ ಕಾರಣವಲ್ಲ, ನಾವು, ನೀವು ಮತ್ತು ಸಮಾಜ ಹಾಗೂ ಕಾಲಧರ್ಮ ಕೂಡ ಕಾರಣವಾಗಿರಬಹುದು ಎಂದು ಹೊಳೆದಾಗ ಇದು ಸ್ವಭಾವ ಚಿತ್ರದ ಬರವಣಿಗೆಗೆ ಸಂಬಂಧಪಟ್ಟ ಸಂಗತಿ ಮಾತ್ರವಲ್ಲ ಎಂಬುದು ಹೊಳೆದಾಗ, ಮನಸ್ಸಿಗೆ ಖೇದವಾಗುತ್ತದೆ.

    ಎರಡನೇ ವರ್ಷಕ್ಕೆ ಕನ್ನಡಪ್ರೆಸ್.ಕಾಮ್

    ಪ್ರಿಯ ಓದುಗರೇ,

    ಒಂದು ವರ್ಷದ ಹಿಂದೆ ಇದೇ ದಿನ. ಆಗಷ್ಟೇ ಲಾಕ್ ಡೌನ್ ತೆರವಾಗಿ ಚಟುವಟಿಕೆಗಳು ಶುರುವಾಗುತ್ತಿದ್ದ ಸಮಯ. ವರ್ಕ್ ಫ್ರಮ್ ಹೋಮ್ ಗಳು, ಆನ್ ಲೈನ್ ತರಗತಿಗಳು , ಪರೀಕ್ಷೆ ನಡೆಯುವುದೋ ಇಲ್ಲವೋ ಗೊಂದಲ ಎಲ್ಲವೂ ಈಗ ಹೇಗಿದಿಯೋ ಆಗಲೂ ಹಾಗೆಯೇ ಇತ್ತು. ಆದರೆ ಸ್ವಲ್ಪ ದಿನದಲ್ಲೇ ಪರಿಸ್ಥಿತಿ ಮೊದಲಿನಂತೆ ಆಗುವ ಆಶಾ ಭಾವನೆಯಂತೂ ಇತ್ತು.

    ಇಂಥ ಸಂದರ್ಭದಲ್ಲೇ ವರ್ಷದ ಹಿಂದೆ -ಮೇ 29,2020- ನಾನು ಕನ್ನಡಪ್ರೆಸ್.ಕಾಮ್ ಅನ್ನು ಶುರುಮಾಡಿದ್ದು. ಹಿರಿಯ ನಿರ್ದೇಶಕ ಯೋಗರಾಜ ಭಟ್ಟರು ಲೋಕಾರ್ಪಣೆಗೊಳಿಸಿದ್ದರು. ಆ ದಿನ ಬರೆದ ಸಂಪಾದಕೀಯದಲ್ಲಿ ಬರೆದಿದ್ದ ಕೆಲ ಸಾಲು ಹೀಗಿತ್ತು….ಶುದ್ಧ ಪತ್ರಿಕೋದ್ಯಮದ ಆಶಯದೊಂದಿಗೆ ಕನ್ನಡಪ್ರೆಸ್.ಕಾಮ್ ಆರಂಭವಾಗುತ್ತಿದೆ. ನಿಮ್ಮ ಬೆಂಬಲ ಸದಾ ಇರಲಿ. ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ಕನ್ನಡಪ್ರೆಸ್ . ಕಾಮ್ ಅನ್ನು ನಿಮ್ಮ ಮಡಿಲಿಗೆ  ಹಾಕುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

    ಆದರೆ ವರ್ಷ ಕಳೆದರೂ ಕೋವಿಡ್ ಕಾರ್ಮೋಡ ಚದುರಿಲ್ಲ. ಇನ್ನೇನು ಮೋಡ ಸರಿಯುತ್ತಿದೆ ಎಂಬ ಸಂದರ್ಭದಲ್ಲಿ ಎರಡನೇ ಅಲೆ ಅಬ್ಬರಿಸಿತು. ಹೆಚ್ಚಿನ ಅವಾಂತರಗಳನ್ನೇ ಮಾಡಿ ಸಧ್ಯ ತಣ್ಣಗಾಗುವ ಲಕ್ಷಣಗಳನ್ನು ತೋರುತ್ತಿದೆ. ಈ ಸಂದರ್ಭದಲ್ಲಿ ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ನಾವು ಎರಡನೇ ವರ್ಷಕ್ಕೆ ಅಡಿ ಇಡುತ್ತಿದ್ದೇವೆ. ಈ ಬಾರಿ ನೂರಕ್ಕೂ ನೂರಷ್ಟು ಕೋವಿಡ್ ದೂರವಾಗುತ್ತದೆ ಮತ್ತೆ ಅದು ಮತ್ತೆಂದು ಮನುಕುಲವನ್ನು ಕಾಡುವುದಿಲ್ಲ ಎಂಬ ವಿಶ್ವಾಸವಂತೂ ಇದೆ.

    ಈ ಒಂದು ವರ್ಷದಲ್ಲಿ ನಾನು ಎಣಿಸಿದಕ್ಕಿಂತಲೂ ಹೆಚ್ಚು ಪ್ರೀತಿಯಿಂದ ಕನ್ನಡಪ್ರೆಸ್.ಕಾಮ್ ಅನ್ನು ನೀವು ಪ್ರೀತಿಸಿದ್ದೀರಿ. ಒಪ್ಪಿಕೊಂಡಿದ್ದೀರಿ. ಮೆಚ್ಚಿದ್ದೀರಿ. ಕಾಮೆಂಟ್ ಮಾಡಿದ್ದೀರಿ. ಇದಕ್ಕಾಗಿ ಮೊದಲಿಗೆ ನಿಮ್ಮೆಲ್ಲರಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು.

    ಈ ಒಂದು ವರ್ಷದ ಅವಧಿಯಲ್ಲಿ ಡಿಜಿಟಲ್ ಮಾಧ್ಯಮದ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡಿದ್ದೇವೆ. ಪಾಡ್ಕಾಸ್ಟ್ ಅನ್ ಕನ್ನಡ ಪತ್ರಿಕೋದ್ಯಮಕ್ಕೆ ಪರಿಚಯಿಸಿದ ಹೆಮ್ಮೆಯೂ ನಮಗಿದೆ. ಆಡಿಯೋ ವಿಡಿಯೋ ಮತ್ತು ಟೆಕ್ಸ್ಟ್ ಈ ಮೂರು ಸಾಧ್ಯತೆಗಳನ್ನು ಬಳಸಿಕೊಂಡಿದ್ದೇವೆ. ಭಾರತ ಮಾತ್ರವಲ್ಲ ದೂರದ ಇಂಗ್ಲೆಂಡ್, ಅಮೆರಿಕಾ , ಕೆನಡಾ , ಆಸ್ಛ್ರೇಲಿಯಾ ಮತ್ತು ಕೊಲ್ಲಿ ರಾಷ್ಷ್ರಗಳಲ್ಲೂ ನಮ್ಮ ಓದುಗ ಬಳಗ ವಿಸ್ತರಿಸಿದೆ.

    ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಲೇಖಕ ಬಂಧುಗಳು ನಾನು ಕೇಳಿದಾಗ, ಕೆಲವು ವೇಳೆ ನಾನು ಕೇಳುವ ಮುನ್ನವೇ ತಮ್ಮ ವಿದ್ವತ್ ಪೂರ್ಣ ಲೇಖನಗಳನ್ನು ಬರೆದು ಕಳಿಸಿದ್ದಾರೆ. ವೈಯಕ್ತಿಕವಾಗಿ ನಾನು ಅವರುಗಳ ಹೆಸರುಗಳನ್ನು ಪ್ರಸ್ತಾಪಿಸಲು ಹೊರಟರೆ ಪಟ್ಟಿ ದೊಡ್ಡದಾಗುತ್ತದೆ. ಅವರಿಗೆಲ್ಲಾ ನಾನು ಈ ಮೂಲಕ ಹೃದಯ ತುಂಬಿದ ಧನ್ಯವಾದ ಅರ್ಪಿಸುವೆ. ಕನ್ನಡಪ್ರೆಸ್ ನ ಈ ಯಾತ್ರೆಯಲ್ಲಿ ನಿಮ್ಮ ಕೊಡುಗೆ ದೊಡ್ಡದು ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ ನಿಮ್ಮ ಲೇಖನಗಳಿಂದ ಕನ್ನಡಪ್ರೆಸ್.ಕಾಮ್ ಮತ್ತಷ್ಟು ಶ್ರೀಮಂತವಾಗಲಿ ಎಂದಷ್ಟೇ ಹೇಳಬಲ್ಲೆ.

    ಮುಂದಿನ ದಿನಗಳಲ್ಲಿ ಈ ಜಾಲತಾಣವನ್ನು ಮತ್ತಷ್ಟು ವೈಶಿಷ್ಟಪೂರ್ಣವಾಗಿ ಮಾಡಬೇಕೆಂಬ ಹಂಬಲವಂತೂ ಇದೆ. ಅದಕ್ಕಾಗಿ ಈ ಜಾಲತಾಣಕ್ಕೆ ಸಾಂಸ್ಥಿಕ ಸ್ವರೂಪ ಕೊಡುವ ಕೆಲಸ ಆರಂಭಿಸಿದ್ದೇನೆ. ನಾಡಿನ ಕೆಲವು ಹೆಸರಾಂತ ಪತ್ರಕರ್ತರು ಕೈ ಜೋಡಿಸುವರಿದ್ದಾರೆ. ಅದರ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವೆ.

    ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ. ನಮ್ಮ ಯಾತ್ರೆಯೆ ಎರಡನೇ ವರ್ಷದ ಮೊದಲ ದಿನವಾದ ಇಂದು ಶುದ್ಧ ಪತ್ರಿಕೋದ್ಯಮಕ್ಕೆ ನಮ್ಮನ್ನು ಪುನಃ ಸಮರ್ಪಿಸಿಕೊಳ್ಳುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳಿಗೆ ಎಂದಿನಂತೆ ಸದಾ ಸ್ವಾಗತ.

    ಶ್ರೀವತ್ಸ ನಾಡಿಗ್,ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

    ಮಿಂಚಿನ ಓಟದ ರಾಜು

    ಸುಮಾರು 30-35 ವರ್ಷಗಳ ಹಿಂದಿನ ಮಾತು. ಮೈಸೂರಿನ ಪತ್ರಿಕೋದ್ಯಮ ಒಂದು ರೀತಿ ಸಾಂಪ್ರದಾಯಕ ಚೌಕಟ್ಟಿನಲ್ಲಿಸಿಕ್ಕಿಹಾಕಿಕೊಂಡಿದ್ದ ಕಾಲಘಟ್ಟವದು. ಅಂತಹ ಸಂದರ್ಭದಲ್ಲಿಒಂದು ಕಡೆ ಪತ್ರಿಕೆಗಳ ಕಾಂಟೆಂಟ್‌ ವಿಚಾರದಲ್ಲಿ ಬದಲಾವಣೆ ಗಾಳಿ ಬೀಸಿ ಚಲನಶೀಲತೆ ದೊರೆತಾಗ ಮತ್ತೊಂದು ಕಡೆ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿಯೂ ಇಂಥದ್ದೇ ಕಾರ್ಯ ನಡೆದಿತ್ತು. ಇದರಲ್ಲಿಮುಂಚೂಣಿಯಲ್ಲಿದ್ದ ಪ್ರಮುಖರಲ್ಲಿ ನೇತ್ರಾ ರಾಜು ಕೂಡ ಒಬ್ಬರು.ಮೈಸೂರಿನಲ್ಲಿ ಮೇ 21 ರಂದು ಬದುಕೆಂಬ ರಂಗಸ್ಥಳದಿಂದ ನಿರ್ಗಮಿಸಿದ ರಾಜು ಮೈಸೂರಿನ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿಇಂತಹ ಚಲನಶೀಲತೆಗೆ ಗಟ್ಟಿಯಾಗಿ ನಿಂತವರು.

    ಅದು 1990ರ ದಶಕದ ಆರಂಭದ ವರ್ಷಗಳು. ದೇಶದಲ್ಲಿಉದಾರೀಕರಣದ ಗಾಳಿ ಬೀಸುತ್ತಿತ್ತು. ದಲಿತ, ರೈತ, ಬಂಡಾಯ ಚಳವಳಿ ಕಾವು ಪಡೆದಿತ್ತು. ಮೈಸೂರಿನ ಪತ್ರಿಕೋದ್ಯಮವು ಪತ್ರಿಕೆಗಳ ವಸ್ತು ವಿಷಯದಲ್ಲಿಮಗ್ಗಲು ಬದಲಿಸಿತ್ತು. ಹೊಸ ತಲೆಮಾರಿನ ಪತ್ರಕರ್ತರು ಪತ್ರಿಕಾ ಕ್ಷೇತ್ರ ಪ್ರವೇಶಿಸಿದ್ದರು. ಸಹಜವಾಗಿ ಹೊಸತನಕ್ಕೆ ತುಡಿದರು. ಇದು ಪತ್ರಿಕೆಗಳ ಕಾಂಟೆಂಟ್‌ನಲ್ಲಿಅಭಿವ್ಯಕ್ತವಾಗಿತ್ತು. ಆಗ ಛಾಯಾಚಿತ್ರ ಪತ್ರಿಕೋದ್ಯಮವೂ ತನ್ನ ಸಾಂಪ್ರದಾಯಕ ಚೌಕಟ್ಟಿನಲ್ಲೇ ಹೆಚ್ಚಾಗಿ ಗಿರಕಿ ಹೊಡೆಯುತ್ತಿತ್ತು. ಇಂತಹ ವೇಳೆ ಇದನ್ನು ಭೇದಿಸಿ ತಮ್ಮ ವಿಭಿನ್ನ ಶೈಲಿಯ ಫೋಟೋ ಜರ್ನಲಿಸಂನಲ್ಲಿ ಹೆಜ್ಜೆ ಗುರುತನ್ನು ದಾಖಲಿಸಿದವರು ನೇತ್ರಾರಾಜು.

    ಮೊದಲು ಇದಕ್ಕೆ ಚಾಲನೆ ಕೊಟ್ಟು ಕೆಲವು ವರ್ಷಗಳ ಕಾಲ ಆ ನಿಟ್ಟಿನಲ್ಲಿಸಾಗಿ ನಂತರ ಬೆಂಗಳೂರಿನಲ್ಲಿತಮ್ಮ ವೃತ್ತಿ ಜೀವನ ಮುಂದುವರಿಸಿದವರು ಹೆಸರಾಂತ ಪತ್ರಿಕಾ ಛಾಯಾಗ್ರಾಹಕ , ಸಾಗ್ಗೆರೆ ರಾಮಸ್ವಾಮಿ. ಮೈಸೂರಿನಲ್ಲಿಇದಕ್ಕೂ ಮುನ್ನ ಇಂತಹ ಪ್ರಯತ್ನಗಳು ನಡೆದಿರಲಿಲ್ಲಎಂದೇನೂ ಈ ಮಾತಿನ ಅರ್ಥವಲ್ಲ. ಆದರೆ, ಪತ್ರಿಕೆಗಳಲ್ಲಿಫೋಕಸ್‌ ಆಗಿ ಆ ಪ್ರಯತ್ನಗಳು ನಡೆಯಲು ಆರಂಭವಾಗಿದ್ದು 1990ರ ದಶಕದ ನಂತರ. ಎರಡು ಸಾವಿರದ ಇಸವಿ ನಂತರ ಅದು ಮತ್ತಷ್ಟು ಚಲನಶೀಲತೆ, ವಿಭಿನ್ನತೆ ಪಡೆದಿದ್ದು ಈಗ ಇತಿಹಾಸ.

    ನೇತ್ರಾ ರಾಜು ಅವರು ಸೆರೆಹಿಡಿದ ಚಿತ್ರ

    ಹೆಸರಾಂತ ಪತ್ರಿಕಾ ಛಾಯಾಗ್ರಾಹಕರಾದ ಮೈಸೂರಿನ ಎಸ್‌.ಎಂ.ಜಂಬುಕೇಶ್ವರ್‌, ಪ್ರಗತಿ ಗೋಪಾಲಕೃಷ್ಣ, ನಾಗೇಶ್‌ ಪಾಣತ್ತಲೆ, ಅನುರಾಗ್‌ ಬಸವರಾಜ್‌, ಶ್ರೀರಾಮ್‌, ಮಧುಸೂದನ್‌ ಹೀಗೆ ಮೈಸೂರಿನ ಅನೇಕ ಪತ್ರಿಕಾ ಛಾಯಾಗ್ರಾಹಕರು, ಈ ಹಿಂದೆ ಮೈಸೂರಿನಲ್ಲಿಕರ್ತವ್ಯ ನಿರ್ವಹಿಸಿದ ಪ್ರಜಾವಾಣಿಯ ವಿಶ್ವನಾಥ ಸುವರ್ಣ ಅವರು ಇದಕ್ಕೆ ತಮ್ಮದೇ ಆದ ಕಾಣಿಕೆ ನೀಡಿರುವುದು ಮೈಸೂರಿನ ಪತ್ರಿಕಾ ಇತಿಹಾಸದ ಪುಟಗಳಲ್ಲಿದಾಖಲಾಗಿದೆ.

    ಆಗೆಲ್ಲಾ1990ರ ದಶಕದಲ್ಲಿಸಂಯುಕ್ತ ಕರ್ನಾಟಕ ಹಾಗೂ ನಂತರ ಕನ್ನಡಪ್ರಭದ ಮೈಸೂರು ಜಿಲ್ಲಾವರದಿಗಾರನಾಗಿದ್ದ ನಾನು ಸುದ್ದಿ ಹಾಗೂ ಲೇಖನಗಳ ಫೋಟೋಗಳಿಗೆ ಹೆಚ್ಚಾಗಿ ಇಬ್ಬರ ಮೇಲೆ ಅವಲಂಬನೆ ಆಗುತ್ತಿದ್ದೆ. ಮೊದಲನೆಯದು ಪ್ರಗತಿ ಗೋಪಾಲಕೃಷ್ಣ. ಮತ್ತೊಬ್ಬರು ನೇತ್ರಾರಾಜು. ಆಗಾಗ್ಗೆ ಅನುರಾಗ ಬಸವರಾಜ್‌ ಕೂಡ ಫೋಟೋ ಕೊಡುತ್ತಿದ್ದದು ಉಂಟು. ಆಗ ಸಂಯುಕ್ತ ಕರ್ನಾಟಕ ಹಾಗೂ ಕನ್ನಡಪ್ರಭ ಪತ್ರಿಕೆಗಳಿಗೆ ಅವರದೇ ಪ್ರತ್ಯೇಕ ಫೋಟೋ ಜರ್ನಲಿಸ್ಟ್‌ಗಳಿರಲಿಲ್ಲ.

    ನೇತ್ರಾ ರಾಜು ತಮ್ಮ ಚಿಕಿತ್ಸಕ ದೃಷ್ಟಿಯಿಂದ ಸಮಾಜದ ಓರೆಕೋರೆಯನ್ನು ತಿದ್ದಲು ಪ್ರಯತ್ನಿಸಿದವರು. ತಮ್ಮ ಕಣ್ಣು ಮುಂದಿರುವ ವಸ್ತು ವಿಷಯವನ್ನು ವಿಭಿನ್ನ ಶೈಲಿಯಲ್ಲಿಮುಂದಿಡುವ ಕಲೆ ರಾಜು ಅವರಿಗೆ ಕರಗತವಾಗಿತ್ತು. ತಮ್ಮ ಫೋಟೋಗಳಿಗೆ ಯಾವತ್ತೂ ಬೈಲೈನ್‌ ಡಿಮಾಂಡ್‌ ಮಾಡಲಿಲ್ಲ. ಫೋಟೋ ಪಡೆದವರು ಕೊಟ್ಟಷ್ಟು ರೊಕ್ಕವನ್ನು ಕಿಸೆಗೆ ಹಾಕಿಕೊಳ್ಳುತ್ತಿದ್ದರು. ಫೋಟೋಗೆ ಕೊಟ್ಟ ಹಣ ಕಡಿಮೆಯಾಗಿದ್ದರೂ ಮರುಮಾತಾಡುತ್ತಿರಲಿಲ್ಲ. ತಮ್ಮ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾದರೆ ಮುಗುಳ್ನಕ್ಕು ಸುಮ್ಮನಾಗಿ ಬಿಡುತ್ತಿದ್ದರು. ಸನ್ಮಾನ, ಪ್ರಶಸ್ತಿಗಳೆಂದರೆ ಅವರು ಗಾವುದ ದೂರ.

    ಹಾಗೇ ನೋಡಿದರೆ ರಾಜು ಪ್ರೆಸ್‌ ಫೋಟೋಗ್ರಾಫರ್‌ಗಳ ಗುಂಪಿನಲ್ಲಿಕಾಣಿಸಿಕೊಂಡಿದ್ದು ತುಂಬಾ ಕಡಿಮೆ. ನಿಂತ ಜಾಗದಲ್ಲಿಹೆಚ್ಚು ಕಾಲ ನಿಲ್ಲುತ್ತಿರಲಿಲ್ಲ. ಚಹಾಗೆ ಕರೆದರೆ ಸರ್‌, ಅರ್ಜೆಂಟ್‌ ಕೆಲಸ ಇದೆ . ಇನ್ನೊಂದು ಸಲ ಟೀ ಕುಡಿಯೋಣ ಅಂತ ತಕ್ಷಣ ಜಾಗ ಖಾಲಿ ಮಾಡುತ್ತಿದ್ದರು. ಅಂತಹ ಅರ್ಜೆಂಟ್‌ ಕೆಲಸ ಏನೂ ಇರುತ್ತಿರಲಿಲ್ಲ. ತನ್ನ ಕ್ಯಾಮರಾ ಕಣ್ಣಲ್ಲಿಮತ್ತೊಂದು ದೃಶ್ಯವನ್ನು ಸೆರೆ ಹಿಡಿಯುವ ತುಡಿತ ಅದಾಗಿರುತ್ತಿತ್ತು ಅಷ್ಟೇ.

    ಅದೊಂದು ರೀತಿ ನಿರಂತರ ತಳಮಳದ ಸ್ಥಿತಿ. ನಿರಂತರ ತಳಮಳ ಇಲ್ಲದವನು ಕ್ರಿಯೇಟಿವ್‌ ಆಗಿರಲಾರ ಎಂಬ ಮಾತಿದೆ. ಅಂತಹ ತಳಮಳದಲ್ಲೇ ರಾಜು ಅದ್ಬುತ ಛಾಯಾಚಿತ್ರಗಳನ್ನು ಸಮಾಜದ ಮುಂದಿಟ್ಟಿದ್ದರು. ರಾಜು ಅಂತರ್ಮುಖಿಯಾಗಿದ್ದರು. ಆದರೆ, ಅವರು ಸೆರೆ ಹಿಡಿದ ಫೋಟೋಗಳು ಹೃದಯದ ಮಾತಾಗಿರುತ್ತಿದ್ದವು. ಅವರ ಫೋಟೋಗಳು ದೃಶ್ಯ ಕಾವ್ಯವಾಗಿರುತ್ತಿದ್ದವು, ಬಂಡಾಯದ ಕಿಚ್ಚಿನ ಅಭಿವ್ಯಕ್ತವಾಗಿರುತ್ತಿದ್ದವು, ಸಮಸಮಾಜದ ನಿರ್ಮಾಣದ ಆಶಯಗಳನ್ನು ಹೊತ್ತಿರುತ್ತಿದ್ದವು.

    ರಾಜು ಶ್ರಮಜೀವಿಯಾಗಿದ್ದರು.ನರಹಂತಕ ವೀರಪ್ಪನ್‌ ಸೆರೆ ಹಿಡಿಯುವ ಕಾರ್ಯಾಚರಣೆ ಕವರೇಜ್‌ ಎಂದರೆ ರಾಜು ಅವರಿಗೆ ಎಲ್ಲಿಲ್ಲದ ಹಿಗ್ಗು. ಕಾಡುಮೇಡು ಅಲೆಯಬಹುದು ಎಂಬ ಖುಷಿಯೋ ಖುಷಿ.
    ರಾಜು ತುಂಬಾ ಸಂಕೋಚದ ಸ್ವಭಾವದವರಾಗಿದ್ದರು. ಅಂದು ರಾತ್ರಿ ಒಬ್ಬರೇ ತೋಟದ ಮನೆಯಲ್ಲಿದ್ದಾಗ ಹೃದಯಾಘಾತವಾಗಿದ್ದರೂ ಮಧ್ಯರಾತ್ರಿಯಲ್ಲಿಏಕೆ ಮತ್ತೊಬ್ಬರಿಗೆ ತೊಂದರೆ ಕೊಡ್ಬೇಕು, ಬೆಳಗ್ಗೆ ಹೇಳಿದರಾಯಿತು ಎಂದು ಸುಮ್ಮನಾಗಿದ್ದಾರೆ. ಅಷ್ಟರಮಟ್ಟಿಗೆ ಅವರದು ಭಿಡೆ ಸ್ವಭಾವ ಅಂತೀರೋ ಅಥವಾ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವೋ ಗೊತ್ತಿಲ್ಲ.

    ಹೃದಯಾಘಾತವಾಗಿ ಎಷ್ಟೋ ತಾಸುಗಳ ನಂತರ ಅವರು ಆಸ್ಪತ್ರೆಗೆ ಬಂದಿದ್ದರು. ವೈದ್ಯರು, ಬದುಕಿಸುವ ಪ್ರಯತ್ನ ನಡೆಸಿದರೂ ಕೈಗೂಡಲಿಲ್ಲ. ತಮ್ಮ ಕ್ಯಾಮರಾ ಕ್ಲಿಕ್ಕಿಸಲು ಮಿಂಚಿನಂತೆ ಓಡಾಡುತ್ತಿದ್ದ ರಾಜು, ಜವರಾಯನ ಕರೆಗೂ ಮಿಂಚಿನಂತೆ ಓಡಿದ್ದರು.
    ರಾಜು ನಿಧನರಾದಾಗ ಅವರಿಗೆ 62 ವರ್ಷವಾಗಿತ್ತು. ಸಾಯುವ ವಯಸ್ಸಲ್ಲ.

    ನೇತ್ರಾ ಕಣ್ಮುಚ್ಚಿರಬಹುದು. ಆದರೆ, ಅವರ ಫೋಟೋಗಳು ಸದಾ ಮಾತಾಡುತ್ತಿರುತ್ತವೆ.

    ಜಗವೆಲ್ಲಾ ಮಲಗಿರಲು ಯಾರಿಗೂ ತಿಳಿಯದಂತೆ ಅರಮನೆಯಿಂದ ಹೊರಟೇ ಬಿಟ್ಟ

    ರತ್ನಾ ಶ್ರೀನಿವಾಸ

    ರಾಜಕುಮಾರ ಸಿದ್ದಾರ್ಥ ಜನಿಸಿದ್ದು ವೈಶಾಖ ಮಾಸದ ಹುಣ್ಣಿಮೆ. ಈಗಿನ ನೇಪಾಳದಲ್ಲಿರುವ  ಲುಂಬಿನಿ ಗ್ರಾಮದಲ್ಲಿ ಶುದ್ಧೋಧನ, ಮಾಯಾದೇವಿಯರ ಮಗನಾಗಿ ಜನಿಸಿದನು. ಈತ ಜನುಮತಹ ಕ್ಷತ್ರಿಯ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಸಿದ್ದಾರ್ಥ ಗೌತಮಿಯ ಆರೈಕೆಯಲ್ಲಿ ಬೆಳೆಯುತ್ತಾನೆ. ಆದುದರಿಂದ ಸಿದ್ದಾರ್ಥ ಗೌತಮ  ಎಂದು ಕರೆಯಲ್ಪಡುತ್ತಾನೆ.

    ತಂದೆಗೆ ಮಗ ಚಕ್ರವರ್ತಿ ಆಗಬೇಕು ಎಂಬ ಮಹದಾಸೆ. ಹಾಗಾಗಿ ಮಗ ರಾಜಭೋಗವಿಲಾಸ ಗಳಲ್ಲಿ ಸದಾ ಓಲಾಡುತ್ತಿರುವಂತೆ ವ್ಯವಸ್ಥೆ ಮಾಡಿದರು.ಸಿದ್ಧಾರ್ಥನ  ವಿದ್ಯಾಭ್ಯಾಸದ  ನಂತರ, ಪ್ರಾಪ್ತ ವಯಸ್ಕರಾದಾಗ  ಸುಂದರಿ ರಾಜಕುಮಾರಿ ಯಶೋಧರೆಯೊಂದಿಗೆ ವಿವಾಹವಾಗುತ್ತದೆ. ರಾಹುಲನೆಂಬ ಮುದ್ದು ಮಗನೂ ಜನಿಸುತ್ತಾನೆ.

    ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿದ್ದರೂ ಮನುಕುಲವನ್ನು ಸತತವಾಗಿ ಬಾಧಿಸುತ್ತಿರುವ ವೇದನೆ  ಸಿದ್ದಾರ್ಥನ ಮನವನ್ನು ಆವರಿಸಿ ಅದರ  ನಿವಾರಣೆಯ ಮಾರ್ಗ ಶೋಧಿಸಲು ಮನಸ್ಸು ಕಾತರಿಸುತ್ತಿತ್ತು. ಸಂಸಾರ ಬಂಧನದಲ್ಲಿದ್ದರೆ ಕಾರ್ಯಸಾಧನೆ ಅಸಾಧ್ಯ ಎಂದು ಮನಗೊಂಡು  ಆ ಸಂಕೋ ಲೆಯನ್ನು ಕಡಿದೊಗೆಯಲು ನಿರ್ಧರಿಸಿದ .

    ಹುಣ್ಣಿಮೆಯ ಮಧ್ಯರಾತ್ರಿ ಚೆಲುವೆ ಮಡದಿ, ಮುದ್ದುಮಗ, ತಂದೆ,ತಾಯಿ,ಪ್ರಜೆಗಳು ಎಲ್ಲರನ್ನೂ,ಎಲ್ಲವನ್ನೂ ಅಗಲಿ ಜಗವೆಲ್ಲಾ ಮಲಗಿರಲು ಯಾರಿಗೂ ತಿಳಿಯದಂತೆ ಅರಮನೆಯಿಂದ ಹೊರಟೇ ಬಿಟ್ಟ.

    ಜ್ಞಾನೋದಯದ ಮೊದಲ ಹಂತ ಅಜ್ಞಾನದ ನಿವಾರಣೆ.
    ಜ್ಞಾನಾರ್ಜನೆಯ ಉದ್ದೇಶದಿಂದ ಸಿದ್ದಾರ್ಥ ಊರೂರು ಅಲೆದಾಡಿ ಪಂಡಿತರೊಂದಿಗೆ ಒಡನಾಡಿ,ಅಧ್ಯಯನ,ತರ್ಕ-ವಿಮರ್ಶೆ,ವಿಚಾರ ವಿನಿಮಯಗಳ  ಮೂಲಕ ಅಗಾಧ ಜ್ಞಾನ ಸಂಪಾದಿಸಿದ.

    ಯಾವಾಗ ಜನನ,ಮರಣ, ರೋಗ  ರುಜಿನ,ವೃದ್ಧಾಪ್ಯ  ಇತ್ಯಾದಿ ಕೊನೆಯೆ ಇಲ್ಲದ ಪೀಡೆಗಳಿಗೆ ಒಳಪಟ್ಟಿರುವುದರ ಹಿಂದೆ ಪರದಾಡುವುದು ವ್ಯರ್ಥ ಎಂದು ಮನವರಿಕೆ ಆದಮೇಲೆ ಅವುಗಳಿಂದ ಮುಕ್ತಿ ಹೊಂದುವ ಮಾರ್ಗವನ್ನು ಹುಡುಕಲು ಪ್ರಯತ್ನಿಸಿದ. ಶಾಂತಿ  ಶೋಧನೆಗಾಗಿ ಪರಮಾನಂದ ಪಡೆಯಲು ಲೋಕ ಸಂಚಾರಿ ಸನ್ಯಾಸಿಯಾಗಿ ಅಲೆದಾಡಿದ . ಸಿದ್ದಾರ್ಥ ಬಾಹ್ಯಪ್ರಪಂಚವನ್ನು ಪೂರ್ಣ ಮರೆತು ಅಂತರ್ಮುಖಿಯಾಗಿ,ಸುದೀರ್ಘ  ಚಿಂತನೆಯಲ್ಲಿ ತಲ್ಲೀನನಾದ. ಸರ್ವರೀತಿಯ ಬಯಕೆ,ಕಾಮನೆ, ಆಶೋತ್ತರಗಳನ್ನು ಮನಸ್ಸಿನ ಅಂತರಾಳದಿಂದ ದೂರಮಾಡಿ  ದೃಢಚಿತ್ತನಾದ. ಎಲ್ಲ ರೀತಿಯ ಭಯ, ಭ್ರಾಂತಿ, ಮಾಯೆ, ಗಳಿoದ ಮನಸ್ಸನ್ನು ಮುಕ್ತಗೊಳಿಸಿದ. ಕೇವಲ  ಮೈತ್ರಿ ,ಸೌಹಾರ್ದತೆ,  ಸಕಲ ಜೀವ ರಾಶಿಗಳಲ್ಲು ಕರುಣೆ,ದಯೆ, ಅನುಕಂಪ,ಉದಾತ್ತ ಧ್ಯೇಯಗಳು  ಆವರಿಸಿ ಬುದ್ಧಿ ಸುಜ್ಞಾನದ ಬೆಳಕಿನಲ್ಲಿ ಶೋಭಾಯಮಾನ ವಾಯಿತು. ಅಲೌಕಿಕ ಶಾಂತಿ, ಸಚಿತ್ ಆನಂದದ ಅನುಭವವಾಗಿ ಜ್ಞಾನದ ದಿವ್ಯಜ್ಯೊತಿಯಿಂದ ಮುಖಮಂಡಲ ತೇಜೋಮಯವಾಯಿತು. ರಾಜಕುಮಾರ ಸಿದ್ದಾರ್ಥ ಬುದ್ಧನಾಗಿ ಪರಿವರ್ತನೆಗೊಂಡನು.

    ತನ್ನ ಸ್ವ ಸಾಮರ್ಥ್ಯದಿಂದ ಅತ್ಯುನ್ನತ ಜ್ಞಾನ  ಪಡೆದು ಜಗತ್ತಿಗೆ  ಪರಮ ಸತ್ಯವನ್ನು ಬೋಧಿಸಿದ ಮಹಾಗುರು.ಅಷ್ಟಾಂಗ ಮಾರ್ಗವನ್ನು ತೋರಿಸಿಕೊಟ್ಟರು.ಜಗಜ್ಯೋತಿ ಬುದ್ಧನಾದ. ಜನರಲ್ಲಿ ಸಮಾನತೆ,ಸಮತಾಭಾವನೆಗಳನ್ನು ಪ್ರಚೋದಿಸಿ, ಎಲ್ಲಾ ವರ್ಗದ ಜನರನ್ನು ತನ್ನೆಡೆ  ಆಕರ್ಷಿಸಿ ಅವರಿಗೆ ನೀತಿ,ಬೋಧಙನೆಗಳನ್ನಿತ್ತು ಮನು ಕುಲವನ್ನು ಉದ್ಧರಿಸಿದ ಮಹಾಪುರುಷ ಬುದ್ಧ.

    ಬೌದ್ಧ  ಧರ್ಮದ ಸಂಸ್ಥಾಪಕ ಗೌತಮ ಬುದ್ಧನ  ಜನ್ಮ ದಿನವನ್ನು ಬುದ್ಧ ಪೂರ್ಣಿಮ, ಅಥವಾ  ಬುದ್ಧಜಯಂತಿ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.ಈ ದಿನ ಬುದ್ಧನ ಜೀವನ ಮತ್ತು ಬೋಧನೆಗಳನ್ನು ಕುರಿತು ಎಲ್ಲೆಡೆ ಪ್ರವಚನ ನಡೆಯುತ್ತದೆ.ರಾಜಕುಮಾರ ಸಿದ್ದಾರ್ಥ ಜನಿಸಿದ್ದು ವೈಶಾಖ ಪೂರ್ಣಿಮ. ಜ್ಞಾನೋದಯ ಪಡೆದಿದ್ದೂ, ಆತನ ಕೊನೆಯ ನಿರ್ವಾಣವೂ ವೈಶಾಖ ಶುದ್ಧ ಪೂರ್ಣಿಮವೇ ಆಗಿದೆ.


    ಬುದ್ಧಂ  ಶರಣಂ ಗಚ್ಛಾಮಿ
    ದ ಮ್ಮo  ಶರಣಂ  ಗಚ್ಛಾಮಿ
    ಸಂ ಘಂ  ಶರಣಂ ಗಚ್ಛಾಮಿ

    ಚಿತ್ರಗಳು : ಕಲಾವಿದ ಕೃಷ್ಣ ನಾಯಕ್ ಅವರ ಶಿಲ್ಪ ಕಲೆ

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    ಕಲಾ ಚತುರೆ ರಕ್ಷಾ.ಆರ್.ಪೂಜಾರಿ

    ಬಳಕೂರು ವಿ ಎಸ್ ನಾಯಕ

    ಇವರಿಗೆ ಚಿಕ್ಕಂದಿನಿಂದಲೇ ಕಲೆಯ ಸೆಳೆತ. ನನ್ನ ಬಾಲ್ಯದಲ್ಲಿ ಕಂಡಿದ್ದನ್ನು ಅನುಭವಿಸಿದ್ದನ್ನು ಮನಸ್ಸಿನ ಪುಟದಲ್ಲಿ ಗುಪ್ತವಾಗಿ ಇಟ್ಟುಕೊಂಡಿದ್ದರು. ಇದರ ಅಭಿವೃದ್ಧಿಗೆ ಸಾಕಾರವಾಯಿತು ಕಲೆ. ಕಲೆಯೆಂಬ ಬಲೆಯಲ್ಲಿ ಸಿಲುಕಿದ ಇವರು ವಿಭಿನ್ನ ರೀತಿಯಲ್ಲಿ ವಿಶಿಷ್ಟವಾದ ಕಲಾ ಯಾತ್ರೆಯನ್ನು ಆರಂಭಿಸಿದರು. ಹೀಗೆ ಹಲವಾರು ರೀತಿಯ ಕಲಾಕೃತಿಗಳನ್ನು ರಚಿಸಿ ಮೆಚ್ಚುಗೆ ಪಡೆದವರು ರಕ್ಷಾ ಆರ್ ಪೂಜಾರಿ.

    ಉಡುಪಿ ಜಿಲ್ಲೆಯ ಕಾಪು ಇವರ ಜನ್ಮಸ್ಥಳ. ಬಾಲ್ಯದಲ್ಲಿಯೆ ಹಲವಾರು ಕಲೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಇವರಿಗೆ ವಿಶಿಷ್ಟವಾದ ಕಲಾಕೃತಿಗಳನ್ನು ರಚಿಸಬೇಕು ಎಂಬ ಆಶಯ ಮೂಡಿತು. ಇವರು ಕೆಲವೊಂದು ದಿನ ಆಸ್ಪತ್ರೆಯಲ್ಲಿ ಸ್ವಾಗತಕಾರರ ಆಗಿ ಕಾರ್ಯ ಮಾಡುತ್ತಿದ್ದಾಗ ಅಲ್ಲಿ ಬಿಡುವಾದಾಗ ಸಮಯ ವ್ಯರ್ಥ ಮಾಡದೇ ಹಲವಾರು ರೀತಿಯ ವಿಶಿಷ್ಟವಾದ ಕಲಾಕೃತಿಗಳನ್ನು ಪೆನ್ಸಿಲ್ ಸ್ಕೆಚ್ ನಲ್ಲಿ ಆರಂಭಿಸಿದರು. ಇವರು ರಚಿಸಿದ ಹಲವಾರು ಕಲಾಕೃತಿಗಳು ಎಲ್ಲರಿಗೂ ಮೆಚ್ಚುಗೆಯಾದವು. ಅಭಿನಂದನೆಗಳ ಮಹಾಪೂರ ಹರಿದು ಬಂತು. ಏನಾದರೂ ಸಾಧಿಸಬೇಕು ಎಂಬ ಛಲ ಅವರಲ್ಲಿ ಮೂಡಿತು.

    ಅಂದು ಆರಂಭವಾದ ಕಲಾ ಯಾತ್ರೆ ಮುಂದುವರೆಯಿತು. ಇದಕ್ಕೆ ಇವರ ತಂದೆ-ತಾಯಿಯ ಪ್ರೋತ್ಸಾಹ ಬಹಳ ಸಿಕ್ಕಿತು. ಇವರು ಮಧುಬನಿ ಶೈಲಿ, ಆಕ್ರಿಲಿಕ್. ಜಲವರ್ಣ ಮಾಧ್ಯಮ. ಪೋರ್ಟ್ರೇಟ್ ಹೀಗೆ ವಿಭಿನ್ನ ರೀತಿಯ ಕಲರ್ ಕೃತಿಗಳನ್ನು ರಚಿಸಿದ ಹಿರಿಮೆ ಇವರದು. ಇವರು ರಚಿಸಿದ ಮುಖ್ಯ ಕಲಾಕೃತಿಗಳು ಎಂದರೆ ಕೃಷ್ಣ ರಾಧೆ. ಯಕ್ಷಗಾನ, ಕೋಳಿಅಂಕ ಕಂಬಳ ಗಣಪತಿ ಮತ್ತು ಅಮೂರ್ತ ಶೈಲಿಯ ಕಲಾಕೃತಿಗಳು ಸೇರಿದಂತೆ ಒಟ್ಟು 800 ಕಲಾಕೃತಿಗಳನ್ನು ರಚಿಸಿದ್ದಾರೆ.

    ಪ್ರಸ್ತುತ ಇವರು ಮೂಡಬಿದ್ರೆಯ ಆಳ್ವಾಸ್ ನಲ್ಲಿ ಬಿ ವಿ ಎ ಅಧ್ಯಯನ ಮಾಡುತ್ತಿದ್ದಾರೆ. ಇವರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕಲರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇವರಿಗೆ ರಾಜ್ಯಮಟ್ಟದ ಕಲಾ ಸ್ಪರ್ಧೆ ಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಕೊಲ್ಲಾಪುರದಲ್ಲಿ ನಡೆದ ರಾಷ್ಟ್ರಮಟ್ಟದ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರು ಮಣಿಪಾಲ್ ಶಿರ್ವ ಮಲ್ಪೆ ಹಲವಾರು ಕಡೆ ಏಕವ್ಯಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. ರಕ್ಷಾ ಪೂಜಾರಿ ಹೇಳುವ ಹಾಗೆ ಕಲೆಯು ಎಂಥವರನ್ನಾದರೂ ಕೂಡ ಬದಲಾಯಿಸುತ್ತದೆ ಇಂತಹ ಅದ್ಭುತ ಶಕ್ತಿ
    ಕಲೆಯಲ್ಲಿದೆ.

    ತನ್ನ ಬಿಡುವಿನ ಸಮಯದಲ್ಲಿ ಕಲಾಸಕ್ತರಿಗೆ ಕಲೆಯನ್ನು ಹೇಳು ಕೊಡುವುದರ ಮೂಲಕ ಸೇವೆಯನ್ನು ಸಲ್ಲಿಸಬೇಕು ಎಂದುಕೊಂಡಿದ್ದೇನೆ ಎಂದು ಹೇಳುತ್ತಾರೆ ಗುರುವಿಲ್ಲದೆ ಗರಿ ಮೂಡಿಸಿಕೊಂಡ ಕಲಾವಿದರಾದ ರಕ್ಷ ಶೆಟ್ಟಿ ಅವರನ್ನು ಅಭಿನಂದಿಸೋಣ.

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    error: Content is protected !!