29.5 C
Karnataka
Monday, May 25, 2026
    Home Blog Page 107

    ಕುಶ ಈಗ ಬಂಧ ಮುಕ್ತ

    ಕುಶ ಆನೆಯನ್ನು ದುಬಾರೆ ಶಿಬಿರದಿಂದ ಕರೆದೊಯ್ದು ನಿನ್ನೆ ಸಂಜೆ ಅರಣ್ಯ ಪ್ರದೇಶ ದಲ್ಲಿ ಬಿಡುಗಡೆ ಮಾಡಲಾಗಿದೆ, ಇದರಿಂದ ಕುಶ ಬಂಧಮುಕ್ತ ನಾಗಿದ್ದಾನೆ ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ಅರಣ್ಯ ಇಲಾಖೆಯ ವಶದಲ್ಲಿದ್ದ ಆನೆ ಕುಶ ನನ್ನು ಸ್ವತಂತ್ರವಾಗಿ ಅರಣ್ಯದಲ್ಲಿ ಬಿಡಲು ಈ ಹಿಂದೆ ನಡೆದ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು,ಅದರಂತೆ ಅಗತ್ಯ ಸಿದ್ಧತೆಗಳನ್ನು ನಡೆಸಿ ಕುಶ ನನ್ನು ಬಿಡುಗಡೆ ಮಾಡಬೇಕಾದ ಪ್ರದೇಶವನ್ನು ಗುರುತಿಸಿ, ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ.

    ವಲಯಾರಣ್ಯಾಧಿಕಾರಿ ಅನನ್ಯ ಕುಮಾರ್ ಜೆ, ಉಪ ವಲಯ ಅರಣ್ಯಾಧಿಕಾರಿ ಕೆ ಪಿ ರಂಜನ್ ಹಾಗೂ ಅರಣ್ಯ ಪಶುವೈದ್ಯಾಧಿಕಾರಿ ಡಾಕ್ಟರ್ ವಾಸಿಂ ಮಿರ್ಜಾ ಹಾಗೂ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಕುಶ ಬಿಡುಗಡೆಯ ಸಂದರ್ಭದಲ್ಲಿ ಹಾಜರಿದ್ದು ಬೀಳ್ಕೊಟ್ಟರು.

    2018ರಲ್ಲಿ ಚೆಟ್ಟಳ್ಳಿ ಕಂಡಕೆರೆ ವ್ಯಾಪ್ತಿಯಲ್ಲಿ ಈ ಆನೆ ಜನರಿಗೆ ಕಿರುಕುಳ ನೀಡುತ್ತಿತ್ತು ಎಂಬ ಆರೋಪದ ಮೇಲೆ ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಬಳಿಕ ಅದಕ್ಕೆ ‘ಕುಶ’ ಎಂದು ನಾಮಕರಣ ಮಾಡಿ ದುಬಾರೆ ಆನೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿತ್ತು. ದುಬಾರೆ ಶಿಬಿರದಲ್ಲಿದ್ದ ‘ಕುಶ’ ಆನೆ 2019ರಲ್ಲಿ ಶಿಬಿರದಿಂದ ಚೈನು ಮತ್ತು ಬೇಡಿಯನ್ನು ತುಂಡರಿಸಿ ಕಾಡಿಗೆ ಓಡಿ ಹೋಗಿತ್ತು. ಸುಮಾರು 17 ಆನೆಗಳ ಗುಂಪಿನೊಂದಿಗೆ ಸೇರಿಕೊಂಡಿತ್ತು. ಇಲಾಖೆಯವರು ಸೆರೆಹಿಡಿಯಲು ನಡೆಸಿದ ಎಲ್ಲಾ ಪ್ರಯತ್ನ ವಿಫಲವಾಗಿತ್ತು. ಕೊನೆಗೆ 2019ರಲ್ಲಿ ಮತ್ತೆ ಸೆರೆ ಹಿಡಿಯಲಾಗಿತ್ತು.

    ಸ್ವತಂತ್ರವಾಗಿದ್ದ ಆನೆಯನ್ನು ಬಂಧಿಸಿ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿ ಪ್ರಿಯರು ದೂರುತ್ತಿದ್ದರು. ಹೀಗಾಗಿ ಇದನ್ನು ವಾಪಸ್ಸು ಕಾಡಿಗೆ ಬಿಡುವಂತೆ ಅರಣ್ಯ ಮಂತ್ರಿ ಲಿಂಬಾವಳಿ ಆದೇಶಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

    ಮೊನ್ನೆ ಭಾನುವಾರ ಪರಿಸರ ಕಾರ್ಯಕರ್ತೆ ಮತ್ತು ಸಂಸದೆ ಮೇನಕಾ ಗಾಂಧೀ ಸಚಿವರ ಸೂಚನೆಯನ್ನು ಪಾಲಿಸದ ಅರಣ್ಯ ಸಿಬ್ಭಂದಿ ಬಗ್ಗೆ ಹರಿಹಾಯ್ದಿದಿದ್ದರು.

    ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಶೈಕ್ಷಣಿಕ ವೇಳಾಪಟ್ಟಿ; ಭೌತಿಕ ತರಗತಿ ತಡವಾದರು ಎಂದಿನಂತೆ ಆನ್ ಲೈನ್ ಶಾಲೆ

    ಈ ವರ್ಷದ ಅಂದರೆ 2021-22 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ವರ್ಷವನ್ನು ನಿಗದಿ ಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಕೋವಿಡ್ ಕಾರಣದಿಂದ ಭೌತಿಕ ತರಗತಿಗಳ ಆರಂಭ ತಡವಾದರು ಆನ್ ಲೈನ್ ಮತ್ತಿತರ ಪರ್ಯಾಯ ಮಾರ್ಗಗಳ ಮೂಲಕ ಶೈಕ್ಷಣಿಕ ಚಟುವಟಿಕೆ ನಡೆಸಲು ಸೂಚಿಸಲಾಗಿದೆ.

    ಇದರ ಅನ್ವಯ ಜುಲೈ 1 ರಿಂದ ಅಕ್ಟೋಬರ್ 9 ರವರೆಗೆ ಮೊದಲ ಅವಧಿಯಾಗಿದ್ದುಅಕ್ಟೋಬರ್ 21 ರಿಂದ 2022ರ ಏಪ್ರಿಲ್ 30ರವರೆಗೆ ಎರಡನೇ ಅವಧಿಯಾಗಿರುತ್ತದೆ.

    ಅಕ್ಟೋಬರ್ 10ರಿಂದ ಅಕ್ಟೋಬರ್ 20ರವರೆಗೆ ದಸರಾ ರಜೆ ಹಾಗೂ 2022 ರ ಮೇ 1 ರಿಂದ ಮೇ 28ರವರೆಗೆ ಬೇಸಿಗೆ ರಜೆ ನಿಗದಿ ಮಾಡಲಾಗಿದೆ.

    ಈ ಬಗ್ಗೆ ಹೊರಡಿಸಿರುವ ಸುತ್ತೋಲೆಯ ಪೂರ್ಣ ಪಾಠ ಇಲ್ಲಿದೆ. ಅದರ ಜೊತೆಗೆ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2021-22 ನೇ ಸಾಲಿಗೆ ದಾಖಲಾತಿ ಮತ್ತು ಶುಲ್ಕ ಪಡೆಯುವ ಬಗ್ಗೆ ಹೊರಡಿಸಿರುವ ಸುತ್ತೋಲೆಯೂ ಇದೆ.

    ಇವೆಲ್ಲಾ ಸರಿಯಾಗೋದು ಯಾವಾಗ?

    ಶಿವಪ್ರಸಾದ್ ಬೋಳಂತೂರು

    ದಿನಕಳೆದಂತೆಲ್ಲಾ ನಿರಾಳವಾಗಿ ಸಾಗುತ್ತಿದ್ದ ಜೀವನ ಇಂದು ಕಳೆಗುಂದಿದೆ. ನೆಮ್ಮದಿಯ ಭರವಸೆ ಕಳಕೊಂಡಿದೆ. ಅಭಿವೃದ್ದಿಯ ಹೊಂಗನಸ ತೆರೆದಿಟ್ಟು, ಮೇರುಶಿಖರವಾಗಲೋಸುಗ ಆ ದಿಕ್ಕಿನಲ್ಲಿ ಅಂಬೆಗಾಲಿಡುತ್ತಿದ್ದಂತೆ, ದೇಶ ಜಾರದಿದ್ದರೂ ಕಾಲೆಳೆಯುವ ಪ್ರಯತ್ನ ಕೆಲವರಿಂದ ಸದ್ದಿಲ್ಲದೆ ನಡೆಯುತ್ತಿದೆ. ಯಾರಿಗೇನು ನೀಡಿತ್ತು ಭಾರತವೆಂದಾದರೆ, ಸಂಸ್ಕೃತಿ ನೀಡಿಲ್ಲವೆ, ಬಂದ ಪಯಣಿಗರಿಗೆ ನೆಲೆಯನಿತ್ತಿಲ್ಲವೆ, ಕಷ್ಟದಲ್ಲಿ ಸಹಾಯಹಸ್ತ ಚಾಚಿಲ್ಲವೆ…ಆದರೂ ಇನಿತಿದೇಕೆ ಸಂಕಷ್ಟ!

    ವೇದೋಪನಿಷತ್ತು, ಧರ್ಮಗ್ರಂಥವನ್ನು ನೀಡಿ, ಅದರೊಳಗಿನ ಗಂಧಪರಿಮಳವನ್ನು ಪಸರಿಸಿ, ಆಘ್ರಾಣಿಸಿದ ಮೇಲೂ ಧೈರ್ಯವನ್ನೇಕೆ ಕಳೆದುಕೊಂಡಿತು ನನ್ನ ದೇಶ! ಮತ್ತೇಕೆ ನನ್ನವರು ಅಪಪ್ರಚಾರದಲಿ ಸಿಲುಕಿ, ನಲುಗಿ ಪ್ರಾಣವನ್ನೆ ಬಿಡುವಷ್ಟು ಅಬಲರಾಗುತ್ತಿದ್ದಾರೆ! ಮನೆಯೊಳಗೆ ಕುಳಿತಂತೆ ಭವಿಷ್ಯದ ಕೆಟ್ಟ ಕನಸು ಕಾಣುತ್ತಾ, ಪೂರ್ವಜರು ಕೊಟ್ಟಿಹ ಕೊಡುಗೆಗಳನ್ನು ನೆನೆಯದೆ ಭವಿಷ್ಯದ ಚಿಂತಕರಾಗುವಲ್ಲಿ ಮುನ್ನುಡಿ ಬರೆಯುತ್ತಿದ್ದಾರೆ. ಬಿಟ್ಟೂಬಿಡದೆ ಸಂಕಷ್ಟ ಎದುರಾಗಿರುವಾಗ, ದುಃಖದಲ್ಲಿ ಕುಂದಿ ಅಬಲರಾಗಿರುವ ನಿಶ್ಯಕ್ತ ಜೀವಗಳಿಗೆ ಶಕ್ತಿ ತುಂಬಿ ಸಬಲರನ್ನಾಗಿಸಬೇಕಿದೆ.

    ಕೊರೋನಾ ಬಂದಾಗಿನಿಂದಲೂ ನಾವು ಕೈಗೊಳ್ಳುವ ಕೆಲಸಕ್ಕೆ ನೂರೆಂಟು ವಿಘ್ನ! ಕಷ್ಟಪಟ್ಟು ಪದವಿ ಗಳಿಸಿ ಸಣ್ಣಪುಟ್ಟ ಉದ್ಯೋಗದಲ್ಲಿರುವವರು ಮುಂದೇನು ಕತೆಯೋ ಎಂಬಂತೆ ಚಿಂತಿಸುತ್ತಾರೆ! ಕತ್ತಲ ಚಿಮಣಿ ದೀಪದ ಬೆಳಕಲ್ಲೋ, ಜಗಲಿಯ ಅಂಚಲ್ಲೋ ಕುಳಿತು ಬೀಡಿ ಕಟ್ಟಿ, ಮನೆಗೆ ದಿನಸಿ ಸಾಮಾನು ಹೊಂದಿಸುತ್ತಿದ್ದವರ ಗೋಳು ಸಾಮಾನ್ಯವಾಗಿಬಿಟ್ಟಿದೆ. ಜೋತುಬಿದ್ದಿರುವ ಹುಬ್ಬಿನೆಡೆಯ ಆಸೆಯ ಕಂಗಳಲಿ ಪೆನ್ಷನ್ ಹಣಕ್ಕಾಗಿ ಕಾದು ಕುಳಿತಿರುವ ಸುಕ್ಕುಗಟ್ಟಿರುವ ಕೈಗಳು ಇನ್ನೆಷ್ಟು ಕಾಯಬೇಕೋ! ಪಟ್ಟಿ ಮಾಡುತ್ತಾ ಹೋದಂತೆ ಸಾಲು ಸಾಲು ಸಂಕಷ್ಟಗಳು, ಚಿಂತಿಸುತ್ತಾ ಕೂತಂತೆ ಭವಿಷ್ಯವೇ ಹಾಳಾಯಿತೆಂಬ ಅಳುಕು. ಸರ್ವ ರೋಗಕ್ಕೂ ಸರಾಯಿ ಮದ್ದು ಎಂದು ಬೀಗುತ್ತಿದ್ದವರು ಕೊರೋನಾದೆದುರು ಬಾಗಲೇಬೇಕಾಯಿತು. ಶಾಲೆಯ ಸವಿ ಕ್ಷಣಗಳನ್ನು ಮೆಲುಕು ಹಾಕಬೇಕಿದ್ದ ಮುಗ್ಧ ಮನಸುಗಳು ಆನ್‌ಲೈನ್ ಕ್ಲಾಸಿಗೆ ಹೊಂದಿಕೊಂಡಿವೆ. ಇವರೆಲ್ಲರದು ಒಂದೇ ಪ್ರಶ್ನೆ “ಇದೆಲ್ಲ ಸರಿ ಆಗೋದು ಯಾವಾಗ?”

    ಧೈರ್ಯ ಕಳಕೊಂಡ ಮನಗಳಿಗೆ ಈ ಬರಹ ಸಾಂತ್ವನದ ಜೋಗುಳ. ಎದೆಗುಂದದಿರಿ ನನ್ನವರೇ, ಕಲಿಯಬೇಕಾದ ಸಾಕಷ್ಟು ಜೀವನ ಪಾಠ ಪ್ರಕೃತಿ ಕಲಿಸಿತು. ಮತ್ತೆ ಹೊಸ ದಿನಗಳಿಗಾಗಿ ನಾವು ನಮ್ಮ ಮನಸ್ಸು ಬದಲಿಸಿಕೊಳ್ಳಬೇಕು. ನಮ್ಮಿಂದ ಆಗುವಷ್ಟು ನಾವೇ ನಮಗೆ ಧೈರ್ಯ ತಂದುಕೊಳ್ಳಬೇಕು. ಋಣಾತ್ಮಕವಾಗಿ ಚಿಂತಿಸುವವರಿಂದ ದೂರವಿರಬಹುದು. ಬಿಡುವಿನ ಸಮಯದಲ್ಲಿ ಮನೆಯವರೊಂದಿಗೆ ಬೆರೆಯಿರಿ, ಸ್ನೇಹಿತರೊಂದಿಗೆ ಹರಟೆ ಹೊಡೆಯಿರಿ, ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿ. ಪರೀಕ್ಷೆಯ ದಿನ ಸಮೀಪ ಬಂದಾಗ ಪುಸ್ತಕ ಓದುತ್ತಿದ್ದಂತೆ, “ಅದು ಮಾಡಬೇಕು, ಇದು ಸಾಧಿಸಬೇಕು” ಎಂದು ಕಾಡುವ ಆಲೋಚನೆಗಳನ್ನು ಸಾಕಾರಗೊಳಿಸಿ. ಮನಸ್ಸನ್ನು ಬೇಜಾರಿಗೆ ನೂಕದಿರಿ. ಮನೆಯಲ್ಲೇ ಇರಿ, ಆರಾಮಾಗಿರಿ. ಅತಿಯಾಗಿ ಚಿಂತಿಸದಿರಿ.

    ನಮ್ಮ ಭಾರತ ಹಿಂದೆಂದೂ ಕಂಡಿರದ ಸಂಕಷ್ಟಕ್ಕೆ ತುತ್ತಾಗಿರಬಹುದಾದರೂ, ಮನೆಮನದಲ್ಲೆಲ್ಲೂ ನಂಬಿಕೆಯ ಪ್ರೇಮ ಬಹು ಗಟ್ಟಿಯಾಗಿರಲಿ. ನಮಗೆ ಅರಿವಿಲ್ಲದಂತೆ ಎಲ್ಲಾ ನಡೆದು ಹೋಯಿತು. ಕೃಷ್ಣ ವಾಣಿಯಂತೆ, “ಆದದ್ದೆಲ್ಲ ಒಳ್ಳೆಯದಕ್ಕೆ ಆಗುತ್ತಿದೆ,ಆಗುವುದೆಲ್ಲಾ ಒಳ್ಳೆಯದೇ ಆಗಿದೆ, ಮುಂದೆ ಆಗಲಿರುವುದೂ ಒಳ್ಳೆಯದೇ ಆಗಲಿದೆ”. ಭಗವದ್ಗೀತೆಯ ಈ ಮಾತುಗಳು ಅನಂತ ಸತ್ಯವೆಂದು ತಿಳಿದಿದ್ದರೂ ದಿನನಿತ್ಯದ ಜೀವನದಲ್ಲಿ ಆ ಮಾತುಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿ ಸುಖಾಸುಮ್ಮನೆ, “ಹೀಗೆ ಆಗಬಾರದಿತ್ತು” ಎಂದು ವಿಷಾದಿಸುತ್ತೇವೆ.

    ಸಂಸ್ಕೃತದಲ್ಲಿ ಸ್ವರ್ಣದಂತ ಸುಭಾಷಿತವಿದೆ. “ಚಿಂತಾ ಚಿತಾ ಸಮಾನಾsಸ್ತಿ ಬಿಂದುಮಾತ್ರ ವಿಶೇಷತ್ಹ|, ಸಜೀವಂ ದಹತೇ ಚಿಂತಾ ನಿರ್ಜೀವಂ ದಹತೆ ಚಿತಾ”||: ಚಿಂತೆ ಮತ್ತು ಚಿತೆಯಲ್ಲಿ ಕೇವಲ ಅನುಸ್ವಾರದ ವ್ಯತ್ಯಾಸವಿದೆ. ಚಿಂತೆಯೂ ಜೀವವಿರುವವರನ್ನು ಸುಟ್ಟರೆ, ಚಿತೆ ನಿರ್ಜೀವಿಯನ್ನು ಸುಡುತ್ತದೆ. ಹಾಗಾಗಿ ಅತಿಯಾಗಿ ಚಿಂತಿಸದೆ ನಮ್ಮ ಮನಸ್ಸಿಗೆ ಧೈರ್ಯ ತಂದುಕೊಂಡರೆ ಮಾತ್ರ ಬದಲಾವಣೆ ಸಾಧ್ಯ.

    Photo by Sarah Kilian on Unsplash


    ಶಿವಪ್ರಸಾದ್ ಬೋಳಂತೂರು, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ಪ್ರಥಮ ಬಿ.ಎ ( ಪತ್ರಿಕೋದ್ಯಮ ವಿಭಾಗ)ವಿದ್ಯಾರ್ಥಿ

    ಕೋವಿಡ್ : ಸಕ್ರಿಯ ಪ್ರಕರಣಗಳು ಇಳಿಕೆ

    ಇಂದು ಬೆಳಿಗ್ಗೆ ವರದಿಯಾದಂತೆ ದೇಶದ ಕೋವಿಡ್ ಸ್ಥಿತಿ ಈ ರೀತಿ ಇದೆ.

    ಪ್ರಕರಣಗಳು ಇಳಿಮುಖವಾಗಿ ಮುಂದುವರಿಯುತ್ತಿರುವ ನಿಟ್ಟಿನಲ್ಲಿ, ಭಾರತದ ಸಕ್ರಿಯ ಪ್ರಕರಣಗಳು 16,35,993 ಕ್ಕೆ ಇಳಿದಿದೆ; ಸತತ 8 ದಿನಗಳಿಂದ 2 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ

    ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 77,420 ರಷ್ಟು ಕಡಿಮೆಯಾಗಿವೆ.

    ದೈನಂದಿನ ಹೊಸ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ನಿರಂತರ ಪ್ರವೃತ್ತಿಯನ್ನು ಕಾಯ್ದುಕೊಂಡು ಭಾರತವು ಕಳೆದ 24 ಗಂಟೆಗಳಲ್ಲಿ 1.32 ಲಕ್ಷ ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡಿದೆ.

    ದೇಶಾದ್ಯಂತ ಈವರೆಗೆ 2.65 ಕೋಟಿಗೂ ಹೆಚ್ಚು ಜನರು ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ.

    ಕಳೆದ 24 ಗಂಟೆಗಳಲ್ಲಿ 2,07,071 ರೋಗಿಗಳು ಚೇತರಿಸಿಕೊಂಡಿದ್ದಾರೆ.

    ಸತತ 22 ದಿನಗಳವರೆಗೆ ದೈನಂದಿನ ಹೊಸ ಪ್ರಕರಣಗಳಿಗಿಂತ ದೈನಂದಿನ ಚೇತರಿಕೆಯ ಪ್ರಮಾಣಗಳು ಹೆಚ್ಚಾಗಿವೆ.

    ನಿರಂತರ ಇಳಿಮುಖವಾಗುತ್ತಿರುವ ನಿಟ್ಟಿನಲ್ಲಿ, ರಾಷ್ಟ್ರೀಯ ಚೇತರಿಕೆಯ ಪ್ರಮಾಣವು 93.08% ರಷ್ಟು ಹೆಚ್ಚಾಗಿದೆ.

    ಸಾಪ್ತಾಹಿಕದ ದೃಢಪಟ್ಟ ಪ್ರಕರಣದ ಪ್ರಮಾಣವು ಪ್ರಸ್ತುತ 7.27% ಆಗಿದೆ.

    ದೈನಂದಿನ ದೃಢಪಟ್ಟ ಪ್ರಕರಣದ ದರ 6.38%, ಸತತ 11 ದಿನಗಳವರೆಗೆ 10% ಕ್ಕಿಂತ ಕಡಿಮೆ ಇದೆ.

    ಕೋವಿಡ್ ಪರೀಕ್ಷಾ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಾಗಿದೆ. ಒಟ್ಟು 35.7 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

    ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಲ್ಲಿ ಇದುವರೆಗೆ 22.41 ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ .(ವರದಿ :ಪಿಐಬಿ)

    ಬಾಲುಗಾರು ಎಂಬ ಶ್ರುತಿಬ್ರಹ್ಮ


    ಕಳೆದ 2020ರಲ್ಲಿ ನಮ್ಮನ್ನಗಲಿದ ಗೀತಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ ಇಂದು. ಚೆನ್ನೈ ಹತ್ತಿರದ ತಾಮರೈಪಾಕಂನಲ್ಲಿನ ತಮ್ಮ ತೋಟದಲ್ಲಿ ತಣ್ಣಗೆ ಮಲಗಿರುವ ಅವರ ನೆನಪುಗಳು ಮನ್ವಂತರಗಳು ದಾಟಿದರೂ ಅಳಿಯಲಾರವು. ಕೊರೋನಾದಿಂದ ಕಂಗೆಟ್ಟ ನಮಗೆ ಅವರ ಗಾಯನ ಒಂದು ಮೆಡಿಸಿನ್‌ ಮಾತ್ರವಲ್ಲ, ಮುನ್ನಡೆಯಲೊಂದು ಸ್ಫೂರ್ತಿ ಹಾದಿ. https://cknewsnow.com ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪಿ. ಕೆ. ಚನ್ನಕೃಷ್ಣ ಅವರು ಈ ಗಾನಗಾರುಡಿಗನನ್ನು ನೆನಪಿಸಿಕೊಂಡು ಬರೆದ ಲೇಖನ ನಮ್ಮ ಓದುಗರಿಗಾಗಿ ಇಲ್ಲಿದೆ.


    ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ.
    ಎಲ್ಲರ ಪಾಲಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇನ್ನೂ ಅನೇಕರಿಗೆ ಎಸ್ಪಿಬಿ, ಮತ್ತೂ ಅನೇಕಾನೇಕರಿಗೆ ಪ್ರೀತಿಯ ಬಾಲು.
    -1-
    ಶ್ರುತಿಬ್ರಹ್ಮ!!!
    ಅಚ್ಚರಿಯೇನೂ ಇಲ್ಲ. ಅವರು ಸಾಕ್ಷಾತ್ ಶ್ರುತಿಬ್ರಹ್ಮರೇ. ನಮ್ಮ ನೆಲದ ಸಂಗೀತಲೋಕದ ಐಸಿರಿ, ಸ್ವರಬ್ರಹ್ಮ ಹಂಸಲೇಖ ಅವರು ಬಾಲು ಅವರನ್ನು ಕರೆಯುವ ಪರಿ, ತಮ್ಮ ಹೃದಯದಲ್ಲಿ ಅವರನ್ನು ಪ್ರತಿಷ್ಠಾಪನೆ ಮಾಡಿಕೊಂಡಿರುವ ರೀತಿ ಇದು. ಅಷ್ಟೇ ಅಲ್ಲ, ಅವರ ಮಾತುಗಳಲ್ಲೇ ಹೇಳುವುದಾದರೆ, “ಇಂದು ಅವರ (ಎಸ್ಪಿಬಿ) ಹುಟ್ಟುಹಬ್ಬ. ನನ್ನ ಪಾಲಿಗಿದು ಸಂಸ್ಕೃತಿಯೇ ಜನ್ಮವೆತ್ತಿದ ದಿನ! ನಾಡಿನ ಪಾಲಿಗೆ ಸಾಮರಸ್ಯವೇ ಜನಿಸಿದ ದಿನ. ಒನ್ ಎಸ್ಪಿಬಿ ಫಾರ್ 500 ಯಿಯರ್ಸ್!!!”

    ಆಹಾ.. ಎಂತಹ ನುಡಿಗಳು. ಅವರ ಮಾತುಗಳಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸರಸ್ವತಿ ಪುತ್ರರಾದ ಅವರ ನಾಲಗೆಯ ಮೇಲೆ ಬಾಲು ಎಂಬ ಶ್ರುತಿಯೂ ಹೀಗೆ ಸಾಕ್ಷಾತ್ಕಾರವಾಗಿತ್ತು.

    //ಉಮಂಡುಗು ಮಂಡುಘನ
    ಗರಜೇ ಬದುರಾ//

    ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರಕ್ಕಾಗಿ ಅಪ್ಪಟ ಹಿಂದೂಸ್ಥಾನಿಯ ರಾಗ ‘ಮೇಘ’ದಲ್ಲಿ ಬಾಲು ಅವರು ಹಾಡಿದ ಈ ಚೀಜು ನಮ್ಮ ಪಾಲಿನ ಅನರ್ಘ್ಯ ಸ್ವರಧಾರೆ. ಆ ಮಹಾ ಗಾನಯೋಗಿಯ ದಿವ್ಯಕೃಪೆಯಿಂದ ಈ ವಿರಳ ಗಾಯಕನ ಹೃದಯದಿಂದ ಉಕ್ಕಿಹರಿದ ಗಾನಗಂಗೆಯೇ ಈ ಆಲಾಪ. ಕನ್ನಡಮ್ಮನ ಕಿರೀಟಕ್ಕೆ ರಾಷ್ಟ್ರಪ್ರಶಸ್ತಿಯ ಗರಿಯಿಟ್ಟ ಅನನ್ಯ ಗಾಯನವದು.
    “ಬಾಲುಗಾರು… ಅದ್ಭುತಃ”, ಹಂಸಲೇಖ ಅವರೇ.. ತಮಗೆ ಕೂಡ ಸಾವಿರ ಶರಣು..
    -2-
    ಅದು ಹೈದರಾಬಾದ್. ಕಾರ್ಯಕ್ರಮ, ʼಶಿರಿಡಿ ಸಾಯಿʼ ಚಿತ್ರದ ಆಡಿಯೋ ಲೋಕಾರ್ಪಣೆ. ವೇದಿಕೆಯ ಮುಂಭಾಗದಲ್ಲಿ ತೆಲುಗು ಚಿತ್ರರಂಗದ ಪಾಲಿನ ಜ್ಞಾನಕೋಶ ಅಕ್ಕಿನೇನಿ ನಾಗೇಶ್ವರ ರಾವ್ ಅವರೇ ಕೂತಿದ್ದರು. ಅವರ ಪಕ್ಕದಲ್ಲಿ ಅಕ್ಕಿನೇನಿ ನಾಗಾರ್ಜುನ, ಅವರ ಪತ್ನಿ ಅಮಲ, ಹಿರಿಯ ನಿರ್ದೇಶಕ ಕೆ.ರಾಘವೇಂದ್ರ ರಾವು, ನಟ ಶ್ರೀಕಾಂತ್, ನಿರ್ಮಾಪಕರಾದ ಅಲ್ಲು ಅರವಿಂದ್, ದಿಲ್ ರಾಜು ಸೇರಿದಂತೆ ತೆಲುಗು ಚಿತ್ರರಂಗದ ಚಿಕ್ಕ-ದೊಡ್ಡವರೆಲ್ಲರೂ ಸೇರಿದ್ದರು. ಅದು ಆ ಚಿತ್ರದ ಕ್ಲೈಮ್ಯಾಕ್ಸ್ ಗೀತೆ.

    // ಭಕ್ತಲು ಮೀರು, ಮೀ ಭಕ್ತಿಕಿ ಬಾನಿಸ ನೇನು
    ಸೂರ್ಯಚಂದ್ರುಲು ಚುಕ್ಕಲು ನೇನೈ ಕನಬಡುತುಂಟಾನು
    ಮಿಮ್ಮು ಕನಿಪೆಡುತುಂಟಾನು… //

    ( // ಭಕ್ತರು ನೀವು, ನಿಮ್ಮ ಭಕ್ತಿಗೆ ಅಡಿಯಾಳು ನಾನು
    ಸೂರ್ಯಚಂದ್ರರು, ನಕ್ಷತ್ರಗಳು ನಾನಾಗಿ ಕಾಣಿಸುತ್ತಿರುವೆ
    ನಿಮ್ಮೆಲ್ಲರನು ನೋಡಿಕೊಳ್ಳುತ್ತಿರುತ್ತೇನೆ.. // )

    ಮಹಾ ಸಮಾಧಿಯಾಗುವ ಮುನ್ನ ಬಾಬಾ ಅವರು ತಮ್ಮ ಭಕ್ತಸಮೂಹಕ್ಕೇ ಹೇಳುವ ಸಾಲುಗಳಿವು. ಒಂದೆಡೆ ಭಕ್ತಿಯ ಪರಾಕಾಷ್ಠೆ, ಮತ್ತೊಂದೆಡೆ ಭಕ್ತರನ್ನು ಸಾಂತ್ವನಗೊಳಿಸುವ ಅವತಾರಪುರುಷನ ಅಂತಿಮ ಕ್ಷಣಗಳು.. ಆರ್ದ್ರತೆಯ ಮಹಾಸಾಗರದಂತೆ ಉಕ್ಕುವ ಹಾಡಿಗೆ ಜೀವತುಂಬಿದ್ದರು ಬಾಲು. ಪಲ್ಲವಿಯ ಮೂರು ಸಾಲು ಮುಗಿಯುವ ಮುನ್ನವೇ ಇಡೀ ಸಭಾಂಗಣ ಸೂಜಿಬಿದ್ದರೂ ಕೇಳುವಷ್ಟು ನಿಶ್ಯಬ್ದವಾಗಿತ್ತು. ಕಿಕ್ಕಿರಿದಿದ್ದ ಸಭಿಕರ ಕಣ್ಣಾಲಿಗಳು ತುಂಬಿಹೋಗಿದ್ದವು. ಅವರ ಸ್ವರಾಲಾಪಕ್ಕೆ ಸ್ವತಃ ಅಕ್ಕಿನೇನಿ ಅವರೇ ಮೂಕವಿಸ್ಮಿತರಾಗಿಬಿಟ್ಟರು. ಸಂಗೀತ ನಿದೇಶಕ ಕೀರವಾಣಿ ಮೌನಮೂರ್ತಿಯಾಗಿಬಿಟ್ಟರು.

    ಇಂಥ ಬಾಲು ಅವರ ಬಗ್ಗೆ ಹೇಳಲು ಇಂತಹ ಸಾವಿರಾರು ಉದಾಹರಣೆಗಳಿವೆ, ಸ್ವಾರಸ್ಯಗಳಿವೆ. ಅವರ ಸ್ವರಯಾತ್ರೆಯಲ್ಲಿ ಕಾಣುತ್ತಿರುವ ಮೈಲುಗಲ್ಲುಗಳು, ಹೆಜ್ಜೆಗುರುತುಗಳನ್ನು ಲೆಕ್ಕಿಸುತ್ತ ಹೋಗುವುದು ಎಂದರೆ ಗಜಪಯಣದ ಹಿಂದೆ ಇರುವೆ ನಡೆದಂತೆ. 1966ರಿಂದ ಅವರತವಾಗಿ ಹಾಡಿದ ಅವರ ಸ್ವರಕ್ಕೆ ಧಣಿವಿರಲಿಲ್ಲ, ಆ ಜೀವಿಗೆ ಸ್ವರದ ಹಸಿವು ಬಿಟ್ಟರೆ ಬೇರೇನೂ ಇರಲಿಲ್ಲ.

    ಕನ್ನಡದಲ್ಲಿ ʼಗಾನಯೋಗಿ ಪಂಚಾಕ್ಷರಿ ಗವಾಯಿʼ, ʼಗಡಿಬಿಡಿ ಗಂಡʼ, ʼಪ್ರೇಮಲೋಕʼ, ʼಚೈತ್ರದ ಪ್ರೇಮಾಂಜಲಿʼ, ʼಮೈಸೂರ ಮಲ್ಲಿಗೆʼ, ʼಅಮೃತವರ್ಷಿಣಿʼ, ʼನಮ್ಮೂರ ಮಂದಾರ ಹೂವೇʼ… ಒಂದೇ ಎರಡೇ.

    ಕವಿ ಕೆಎಸ್ ನರಸಿಂಹಸ್ವಾಮಿ ಅವರ ಸರ್ವಕಾಲೀನ ವಿರಹಗೀತೆ..
    // ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ
    ನಿನ್ನೊಳಿದೆ ನನ್ನ ಮನಸು
    ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
    ನಿನ್ನೊಲುಮೆ ನನ್ನ ಕಂಡೂ… //

    ಹುಣ್ಣಿಮೆಯಲಿ ಉಕ್ಕುವ ಕಡಲಿನಂತೆಯೇ ಈ ಗೀತೆಯಲ್ಲಿ ಬಾಲು ಅವರ ಸ್ವರಗಳ ಭಾವಶರಧಿಯಲ್ಲಿ ಕನ್ನಡಿಗರೆಲ್ಲರೂ ಮಿಂದಿದ್ದು ಸುಳ್ಳಲ್ಲ.

    ನಮ್ಮ ಸ್ವರಬ್ರಹ್ಮರೇ (ಹಂಸಲೇಖ) ಬರೆದು ರಾಗ ಸಂಯೋಜಿಸಿದ ’ಮಹಾಕ್ಷತ್ರಿಯ’ ಚಿತ್ರದ “ಈ ಭೂಮಿ ಬಣ್ಣದ ಬುಗುರಿ..” ಹಾಡು ಬಾಲು ಅವರಿಗಾಗಿಯೇ ಜನ್ಮತಾಳಿತೇನೋ ಎನ್ನುವ ಹಾಗಿದೆ ಅವರ ಸ್ವರಾಲಾಪನೆ.

    ಇನ್ನು ತೆಲುಗಿಗೆ ಬಂದರೆ ಅವರು ಹಾಡಿದ್ದೆಲ್ಲವೂ ಅಮೃತವೇ. ‘ಶಂಕರಾಭರಣಂ’, ‘ಸ್ವಾತಿಮುತ್ಯಂ’, ‘ಸಿರಿವೆನ್ನೆಲ’, ‘ಗೀತಾಂಜಲಿ’, ‘ರೋಜಾ’, ‘ಜಗದೇಕವೀರುಡು ಅತಿಲೋಕ ಸುಂದರಿ’, ‘ಅನ್ನಮಯ್ಯ’, ‘ಶ್ರೀರಾಮದಾಸು’ ʼಶಿರಿಡಿ ಸಾಯಿʼ ಸೇರಿದಂತೆ ಅನೇಕಾನೇಕ ಚಿತ್ರಗಳ ಅಪರೂಪದ ಗೀತೆಗಳಿಗೆ ಅವರು ಉಸಿರನ್ನೇ ತುಂಬಿಸಿಟ್ಟಿದ್ದಾರೆ. ತೆಲುಗಿನ ʼಫಲಾಸʼ ಚಿತ್ರಕ್ಕಾಗಿ ಹಾಡಿದ ‘ಓ ಸೊಗಸರಿ, ಪ್ರಿಯ ಲಾಹಿರಿʼ ಅವರ ಕೊನೆಯ ಗೀತೆ. ಹದಿನಾರರ ಬಾಲು ಅವರನ್ನು ಮತ್ತೊಮ್ಮೆ ನಮ್ಮ ಕಣ್ಮುಂದೆ ನಿಲ್ಲಿಸುವ, ಅವರ ತುಂಟತನದಿಂದ ಕಚಗುಳಿ ಇಡುವ ಈ ಹಾಡನ್ನು ದುರದೃಷ್ಟವಶಾತ್‌ ಸಿನಿಮಾದಂದ ಕೈಬಿಡಲಾಗಿತ್ತು.

    ತಮಿಳಿನ ’ಕೇಳಡಿ ಕಣ್ಮಣಿ’ ಚಿತ್ರಕ್ಕಾಗಿ ಅವರೇ ನಟಿಸಿ ಹಾಡಿದ ’ಮಣ್ಣಿಲ್ ಇಂದ ಕಾದಲನ್ರೀ’ ಹಾಗೂ ’ತೇವರ್ ಮಗನ್’ ಚಿತ್ರದಲ್ಲಿನ ಅವರ ಗಾಯನ.. ವ್ಹಾಹ್.. ವರ್ಣನೆಗೆ ಅಕ್ಷರಗಳೇ ಸೋಲುತ್ತಿವೆ. ಭಾಗ್ಯರಾಜಾ ನಿರ್ದೇಶನದ ʼಕಾದಲ್‌ ಓಯುಯಂʼ ಸಿನಿಮಾದಲ್ಲಿ ಅವರು ಹಾಡಿದ “ಸಂಗೀತಂ ಜಾಜಿಮುಲ್ಲೈ ಕಾಣುಮಿಲ್ಲೈ” ಬಾಲು ಅವರ ಶೃತಿ & ಸ್ವರಶಕ್ತಿಗೆ ಸಾಕ್ಷಿ. ಹಿಂದಿಯಲ್ಲಿ ʼಏಕ್ ದುಜೇ ಕೇಲಿಯೇʼ, ʼಮೈನೆ ಪ್ಯಾರ್ ಕಿಯಾʼ, ʼಸಾಜನ್ʼ, ʼಹಮ್ ಆಪ್ಕೆ ಹೈ ಕೌನ್ʼ ಚಿತ್ರಗಳ ಹಾಡುಗಳಂತೂ ಎವರ್‌ಗ್ರೀನ್‌- ಅದ್ಭುತ ಮೆಲೋಡಿಗಳು.

    ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ, ಭೋಜಪುರಿ ಸೇರಿ ಅನೇಕ ಭಾಷೆಗಳಲ್ಲಿ 40ರಿಂದ 45 ಸಾವಿರ ಹಾಡುಗಳನ್ನು ಅವಿಚ್ಛಿನ್ನವಾಗಿ, ಅಮೋಘವಾಗಿ ಹಾಡಿರುವ ಬಾಲು ಅವರು ಬಹುಮುಖ ಪ್ರತಿಭೆ. 1996ರಲ್ಲಿ ಅವರು ನಿರ್ಮಿಸಿ, ಕಮಲ್ ಹಾಸನ್ ನಟಿಸಿದ್ದ ’ಶುಭಸಂಕಲ್ಪಂ’ ಚಿತ್ರವು, ಸಿನಿಮಾಗಳ ಬಗ್ಗೆ ಅವರಿಗಿದ್ದ ಸದಭಿರುಚಿಗೆ ಸಾಕ್ಷಿ. ಕನ್ನಡದ ’ಮುದ್ದಿನಮಾವ’, ತೆಲುಗಿನ ’ಪ್ರೇಮ’, ತಮಿಳಿನ ’ಕೇಳಡಿ ಕಣ್ಮಣಿ’, ’ಕಾದಲನ್’ ಚಿತ್ರಗಳಲ್ಲಿ ಅವರದ್ದು ಕಚಗುಳಿ ಇಡುವ ಅಪರೂಪದ ನಟನೆ. ಮತ್ತೂ ಬೇಕಾದಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

    ತೆಲುಗು ಕವಿ, ನಟ ತೆನಕಳ್ಳ ಭರಣಿ ಅವರ ’ಮಿಥುನಂ’ ಚಿತ್ರದಲ್ಲಿನ ʼಅಪ್ಪದಾಸುʼ ಪಾತ್ರ ಬಾಲು ಅವರ ನಟನಾ ಪ್ರತಿಭೆಯ ಗೌರಿಶಂಕರ. ಎರಡೇ ಪಾತ್ರಗಳ ಆ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮೀ ಅವರ ಪರಮ ಮುಗ್ಧ, ಕಂಜ್ಯೂಸ್ ಪತಿಯಾಗಿ ಕಾಣಿಸಿಕೊಂಡ ಅವರ ‌ʼನವರಸʼ ಪೋಷಣೆಯನ್ನು ಕಣ್ತುಂಬಿಕೊಳ್ಳಲೇಬೇಕು.

    ಬಾಲು ಅವರದ್ದು ಬರೆದಷ್ಟೂ ಮುಗಿಯದ ಮಹಾಕಾವ್ಯ. ಅವರಿಗೆ ಅವರೇ ಸಾಟಿ. ಆ ಸ್ವರಕ್ಕೆ ಆ ಸ್ವರವೇ ಪೋಟಿ. ಮಹಾನುಭಾವ ಶ್ರೀ ಕೋದಂಡಪಾಣಿಯವರು ಹಾಗೂ ಸ್ವರ ಸರಸ್ವತಿ ಎಸ್. ಜಾನಕಿ ಅವರಿಬ್ಬರೂ ಇಲ್ಲದಿದ್ದರೆ ಇವತ್ತು ಬಾಲಸುಬ್ರಹ್ಮಣ್ಯಂ ಎಂಬ ಹೆಸರೇ ಇರುತ್ತಿರಲಿಲ್ಲ.

    ಮಹಾ ವಾಗ್ಗೇಯಕಾರ ಶ್ರೀ ತ್ಯಾಗಯ್ಯ ಅವರು ಬರೆದು ಹಾಡಿದ ಈ ಕೀರ್ತನೆಯನ್ನು ಇಲ್ಲಿ ಉಲ್ಲೇಖಿಸಬಹುದು.
    // ಎಂದರೋ ಮಹಾನುಭಾವುಲು
    ಅಂದರಿಕೀ ವಂದನಮುಲು… //
    (ಎಷ್ಟೋ ಮಹಾನುಭಾವರು / ಎಲ್ಲರಿಗೂ ವಂದನೆಗಳು)

    ಬಾಲು ಎಂಬ ಮಹಾನುಭಾವರಿಂದ ಸಂಗೀತ ಲೋಕ ಸಮೃದ್ಧವಾಗಿದೆ. ಇವತ್ತು (ಜೂನ್ 4) ಹುಟ್ಟುಹಬ್ಬ ಆಚರಿಕೊಂಡು ಇನೊಂದು ವಸಂತಕ್ಕೆ ಕಾಲಿಡಬಹುದಾಗಿದ್ದ ಅವರು ಕಳೆದ ವರ್ಷ ಕೋವಿಡ್‌ ಮಾರಿಗೆ ತುತ್ತಾದರು. ವೈರಸ್‌ ಮಾರಿ ವಕ್ಕರಿಸಿಕೊಳ್ಳುವ ಮುನ್ನ ನಮ್ಮ ಜಯಂತ್‌ ಕಾಯ್ಕಿಣಿ ಬರೆದಿದ್ದ ʼವೈರಿ ಕೊರೊನಾʼ ಹಾಡಿ ಮನೆಯೊಳಗೇ ಸ್ವರಕಟ್ಟಿದ್ದ ಆ ಮಹಾನ್‌ ಹಾಡುಗಾರ ಅದೇ ವರ್ಷ ಸೆಪ್ಟೆಂಬರ್‌ 24ರಂದು ಮೌನಕ್ಕೆ ಜಾರಿ, ಬದುಕು ನಿಲ್ಲಿಸಿಬಿಟ್ಟರು.

    ಕೊನೆ ಮಾತು..
    ಮಹಾನ್ ವಾಗ್ಗೇಯಕಾರರಾದ ʼಅನ್ನಮಯ್ಯʼ ಅವರ ಜೀವನ ಚೆರಿತೆಯಲ್ಲಿ ಒಂದು ಪ್ರಸಂಗ ಬರುತ್ತದೆ. ಒಮ್ಮೆ ನಾರದರು ಮಾರುವೇಷದಲ್ಲಿ ಬಂದು, ʼಅನ್ನಮಯ್ಯʼ ಅವರ ಹರಿಭಕ್ತಿಗೆ ಮೆಚ್ಚಿ ತಮ್ಮ ತಂಬೂರಿಯನ್ನೇ ಅವರಿಗೆ ಕಾಣೀಕೆಯಾಗಿ ಕೊಟ್ಟು ಹೀಗೆ ಹೇಳಿದರಂತೆ..

    “ಮರ್ಭಾಕ್ತಾಹಃ ಯತ್ರ ಗಾಯಂತಿ ತತ್ರತಿಷ್ಠಾಮಿ ನಾರದ..”
    “ನಾರದ, ನಾನು ವೈಕುಂಠದಲ್ಲೂ ಇರಲ್ಲ, ಯೋಗಿಗಳ ಹೃದಯದಲ್ಲೂ ಇರುವುದಿಲ್ಲ. ಎಲ್ಲಿ ನನ್ನ ಭಕ್ತರು ಹಾಡುತ್ತಿರುವರೋ ಅಲ್ಲಿ ಪಟ್ಟಾಗಿ ಕೂತುಬಿಟ್ಟಿರುತ್ತೇನೆ. ನನಗೆ ಗಾಯನವೆಂದರೆ ಅಷ್ಟು ಪ್ರಾಣ.” ಸ್ವತಃ ಶ್ರೀಹರಿಯೇ ನನ್ನೊಂದಿಗೆ ಹೀಗೆ ಹೇಳಿದ್ದು ಎಂದು ನಾರದರು ಹೇಳುತ್ತಾರೆ..

    ಗಾಯನವೆಂದರೆ ಶ್ರೀಹರಿಗೇ ಏಕೆ? ಶ್ರೀಸಾಮಾನ್ಯನಿಗೂ ಪರಮಇಷ್ಟ. ಶಾಸ್ತ್ರೀಯ ಸಂಗೀತದ ಪ್ರವೇಶವೇ ಇಲ್ಲದೇ ಸಪ್ತಸ್ವರಗಳನ್ನು ಆ ಸಾಮಾನ್ಯನ ಹೃದಯಕ್ಕೆ ಆಳವಾಗಿ ದಾಟಿಸಿದ ಬಾಲು ಮಹಾನ್ ಗಾಯಕರು ಎನ್ನದಿರಲು ಸಾಧ್ಯವೇ?

    ನಮ್ಮ ದೇಶ ಕಂಡ ಸಿನಿಮಾ ಜಗತ್ತಿನ ಯುಗದ ಗಾಯಕ ಎಸ್‌ಪಿಬಿ ಅವರಿಗೆ ಜನ್ಮದಿನ ಶುಭಾಶಯಗಳು. ವಿನಮ್ರ ಸಮಸ್ಕಾರಗಳು.

    ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಎರಡು ದಿನ ಎಸ್ಎಸ್ ಎಲ್ ಸಿ ಪರೀಕ್ಷೆ

    ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಸೂಕ್ತ ದಿನಾಂಕಗಳಂದು ಎರಡು ದಿನಗಳ ಮಟ್ಟಿಗೆ ಅತ್ಯಂತ ಸರಳೀಕರಣಗೊಳಿಸಿ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸಮಾಜದ ವಿವಿಧ ಸ್ತರಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಸಮಾಜದ ವಿವಿಧ ಗಣ್ಯ ವ್ಯಕ್ತಿಗಳು, ಹಿಂದಿನ ಶಿಕ್ಷಣ ಸಚಿವರು, ಮಾಧ್ಯಮದ ಮಿತ್ರರು, ಸಚಿವ ಸಂಪುಟದ ಸಹೋದ್ಯೋಗಿಗಳು, ಮಾನ್ಯ ಮುಖ್ಯಮಂತ್ರಿಗಳೂ ಸೇರಿದಂತೆ ಹಲವರೊಂದಿಗೆ ಈ ಕುರಿತು ಸಮಾಲೋಚನೆ ಮಾಡಲಾಗಿದೆ ಎಂದರು.

    ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು, ಅದೇ ಸಂದರ್ಭದಲ್ಲಿ ಅವರ ಆರೋಗ್ಯಕ್ಕೂ ಸಮಸ್ಯೆಯಾಗಬಾರದೆನ್ನುವ ಮಧ್ಯಮ ಪಥವೊಂದನ್ನು ಹುಡುಕಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಪರೀಕ್ಷೆ ನಡೆಸುವುದು ನಮ್ಮ ಪ್ರತಿಷ್ಠೆಯಾಗಬಾರದು ಆದರೆ ನಮ್ಮ ನಿಲುವು ಮಕ್ಕಳನ್ನು ಇಕ್ಕಟ್ಟಿಗೆ ಸಿಕ್ಕಿಸಬಾರದೆನ್ನುವ ಪ್ರಜ್ಞೆ ನಮ್ಮ ನಿರ್ಧಾರಗಳನ್ನು ನಿಯಂತ್ರಿಸಿದೆ ಎಂದು ಅವರು ಹೇಳಿದರು.

    ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ದಾಖಲಾಗಿರುವ ದ್ವಿತೀಯ ಪಿಯುಸಿ ಹೊಸ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರು ಈ ಹಿಂದೆ ಪ್ರಥಮ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅಂಕಗಳನ್ನು ನೀಡಿ ಪ್ರಕಟಗೊಳಿಸಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಇಲಾಖೆಯು ಮುಂದಿನ ದಿನಗಳಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಿದೆ ಹಾಗೂ ಜೂನ್ ಮಾಸಾಂತ್ಯಕ್ಕೆ ಫಲಿತಾಂಶ ಪ್ರಕಟಣೆ ಮಾಡಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.

    ಈ ರೀತಿ ನೀಡಿದ ಫಲಿತಾಂಶವು ಯಾವುದೇ ವಿದ್ಯಾರ್ಥಿಗೆ ತೃಪ್ತಿಕರವಾಗದೇ ಇದ್ದಲ್ಲಿ ಕೋವಿಡ್ ಅಲೆ ನಿಯಂತ್ರಣಕ್ಕೆ ಬಂದ ನಂತರ ಇಲಾಖೆಯು ನಡೆಸುವ ಪರೀಕ್ಷೆಗೆ ಹಾಜರಾಗಬಹುದು ಎಂದು ಸಚಿವರು ಹೇಳಿದರು ಪ್ರಸ್ತುತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳ ಫಲಿತಾಂಶವನ್ನು ಮೇಲೆ ತಿಳಿಸಿದಂತೆ ಪ್ರಕಟಿಸಲು ಯಾವುದೇ ಸ್ಪಷ್ಟ ದಾಖಲೆಗಳು ಲಭ್ಯವಿಲ್ಲದ ಕಾರಣ ಈ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇಲಾಖೆ ನಡೆಸುವ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ ಎಂದು ಅವರು ತಿಳಿಸಿದರು.

    ಎಸ್ಎಸ್ ಎಲ್ ಸಿ ಪರೀಕ್ಷೆಗಳ ವಿವರ:

    ಕೋವಿಡ್-19ರ ಪರಿಸ್ಥಿತಿಯಲ್ಲಿ 06 ವಿಷಯಗಳಿಗೆ ಸುದೀರ್ಘ ಅವಧಿಗೆ ಪರೀಕ್ಷೆಗಳನ್ನು ನಡೆಸಿದಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆರೂ ದಿನಗಳು ಬರುವುದು ಕಷ್ಟಸಾಧ್ಯವಾಗಿರುತ್ತದೆ. ಹಿಂದಿನ ಸಾಲಿನ ಕಲಿಕಾ ಗುಣಮಟ್ಟದ ಮಾನದಂಡ ನಮ್ಮಲ್ಲಿ ಇಲ್ಲದಿರುವ ಕಾರಣ ಮತ್ತು ಮುಂದಿನ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಯು ಮುಖ್ಯವೆನ್ನುವ ಸಮಾನ ಅಭಿಪ್ರಾಯಗಳ ಕಾರಣ, ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸ್ತುತ ಕೋವಿಡ್-19ರ ಪರಿಸ್ಥಿತಿ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪ್ರಸ್ತುತ ಸಾಲಿಗೆ ಸರಳೀಕರಿಸಿ ಕೇವಲ ಎರಡು ದಿನಗಳಲ್ಲಿ (ಒಂದು ದಿನ ಕೋರ್ ವಿಷಯಗಳು ಮತ್ತೊಂದು ದಿನ ಭಾಷಾ ವಿಷಯಗಳು) ಪರೀಕ್ಷೆಯನ್ನು ನಡೆಸಲಾಗುತ್ತದೆ.

    ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆ

    ಕೇವಲ ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು. ಉತ್ತರ ಪತ್ರಿಕೆಯು OMR (Optical Mark Reader) ರೂಪದಲ್ಲಿರುವುದು. ಪ್ರತಿ ವಿಷಯಕ್ಕೆ ಗರಿಷ್ಠ 40 ಅಂಕಗಳಿಗೆ ಸೀಮಿತಗೊಳಿಸಿ ಪರೀಕ್ಷೆಯನ್ನು ನಡೆಸಲಾಗುವುದು.

    ಒಟ್ಟು 03 ಕೋರ್ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು. ಇದರಲ್ಲಿ ಭಾಗ- 1 ಗಣಿತ, ಭಾಗ- 2 ವಿಜ್ಞಾನ ಮತ್ತು ಭಾಗ- 3ರಲ್ಲಿ ಸಮಾಜ ವಿಜ್ಞಾನದ ಪ್ರಶ್ನೆಗಳಿರುತ್ತವೆ. ಪರೀಕ್ಷಾ ಸಮಯವನ್ನು ಬೆಳಿಗ್ಗೆ 10.30 ರಿಂದ 01.30 ಗಂಟೆಯವರೆಗೆ ನಿಗಧಿಪಡಿಸಿ, ಒಟ್ಟು 3 ಗಂಟೆಯ ಕಾಲಾವಕಾಶ ಇರಲಿದೆ.

    ಹಾಗೆಯೇ ಒಟ್ಟು 03 ಭಾಷಾ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು. ಇದರಲ್ಲಿ ಭಾಗ -1 ಪ್ರಥಮ ಭಾಷೆ, ಭಾಗ- 2 ದ್ವಿತೀಯ ಭಾಷೆ ಮತ್ತು ಭಾಗ -3ರಲ್ಲಿ ತೃತೀಯ ಭಾಷೆಯ ಪ್ರಶ್ನೆಗಳಿರುತ್ತವೆ. ಪರೀಕ್ಷಾ ಸಮಯವನ್ನು ಅಪರಾಹ್ನ 10.30 ರಿಂದ 01.30 ಗಂಟೆಯವರೆಗೆ ನಿಗದಿಪಡಿಸಿ, ಒಟ್ಟು 3.00 ಗಂಟೆಯ ಕಾಲಾವಕಾಶ ನೀಡಲಾಗುವುದು.

    ಕೋರ್ ಮತ್ತು ಭಾಷಾ ವಿಷಯಗಳ ಪರೀಕ್ಷೆಗಳ ನಡುವೆ ಮೂರು ದಿನಗಳ ಅಂತರ ನೀಡಲಾಗುವುದು. ಎಲ್ಲ ಮಾದರಿಯ ವಿದ್ಯಾರ್ಥಿಗಳೂ ಇದೇ ವಿಧಾನ ಅನ್ವಯವಾಗುತ್ತದೆ.

    ಪ್ರತಿ ವಿಷಯಕ್ಕೆ CCERF, CCERR ವಿದ್ಯಾರ್ಥಿಗಳಿಗೆ ಗರಿಷ್ಠ 80 ಅಂಕಗಳಿಗೆ ಮತ್ತು CCEPF, CCEPR, NSR, NSPR ವಿದ್ಯಾರ್ಥಿಗಳಿಗೆ ಗರಿಷ್ಠ 100 ಅಂಕಗಳಿಗೆ ಪರಿವರ್ತಿಸಿ, ಪ್ರತಿ ವಿಷಯದಲ್ಲಿ ವಿದ್ಯಾರ್ಥಿಯು ಪಡೆದ ಅಂಕಗಳನ್ನು ಅದಕ್ಕೆ ಅನುಗುಣವಾಗಿ ಪರಿವರ್ತಿಸಲಾಗುವುದು. ಇದರ ಜೊತೆಗೆ CCERF, CCERR ವಿದ್ಯಾರ್ಥಿಗಳಿಗೆ ಅಂತರಿಕ ಅಂಕಗಳನ್ನು ಸೇರ್ಪಡಿಸಿ ಪ್ರಸ್ತುತ ನಿಯಮದಂತೆ ಫಲಿತಾಂಶ ಪ್ರಕಟಿಸಲಾಗುವುದು.

    ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿಧಧ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣತಾ ಅಂಕಗಳನ್ನು ನೀಡಿ ಉತ್ತೀರ್ಣಗೊಳಿಸಲಾಗುವುದು. ಮುಂದುವರೆದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕಗಳ ಆಧಾರದ ಮೇಲೆ ಎ, ಬಿ ಹಾಗೂ ಸಿ ಗ್ರೇಡ್ ಗಳನ್ನು ನೀಡಲಾಗುವುದು.

    ಪರೀಕ್ಷೆಗೆ ಮುಂಚಿತವಾಗಿ ಮಾದರಿ ಪ್ರಶ್ನೆಪತ್ರಿಕೆ ಪ್ರಕಟ

    ಪರೀಕ್ಷೆಗೆ ಮುಂಚಿತವಾಗಿ ಮಾದರಿ ಪ್ರಶ್ನೆಪತ್ರಿಕೆಯನ್ನು ಮಂಡಳಿ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಹಾಗೆಯೇ ಶಾಲೆಗಳಿಗೆ ತಲುಪಿಸಲಾಗುವುದು.

    ಹಿಂದಿನ ಸಾಲುಗಳಲ್ಲಿ ಸುಮಾರು 3000 ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಪ್ರಸ್ತುತ ವರ್ಷದಲ್ಲಿ ಪರೀಕ್ಷಾ ಕೇಂದ್ರಗಳನ್ನು ದ್ವಿಗುಣಗೊಳಿಸಿ, ಅಂದರೆ ಸುಮಾರು 6000 ಅದಕ್ಕೂ ಮೇಲ್ಪಟ್ಟು ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆ ನಡೆಸಲಾಗುವುದು.

    ಒಂದು ಕೊಠಡಿಗೆ ಗರಿಷ್ಠ 12 ವಿದ್ಯಾರ್ಥಿಗಳಂತೆ, ಒಂದು ಡೆಸ್ಕ್ ಗೆ ಕೇವಲ ಒಬ್ಬ ವಿದ್ಯಾರ್ಥಿಯಂತೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳ ನಡುವೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಲಾಗುವುದು.

    ಹಾಸ್ಟೆಲ್ಗಳ/ವಸತಿ ಶಾಲೆಗಳ/ವಲಸೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಬದಲಾವಣೆ ಅವಕಾಶ ಕಲ್ಪಿಸಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡಲು ಕಳೆದ ಸಾಲಿನ ಎಸ್ಓಪಿ ಯನ್ನು ಸೂಕ್ತ ಮಾರ್ಪಾಡುಗಳೊಂದಿಗೆ, ಆರೋಗ್ಯ ಇಲಾಖೆಯ ಸಲಹೆಯೊಂದಿಗೆ ಪರೀಕ್ಷೆ ನಡೆಸಲಾಗುವುದು.

    ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಯವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗುವುದು.

    ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು. ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಎನ್95 ಮಾಸ್ಕ್ ಕಡ್ಡಾಯವಾಗಿ ಧರಿಸಲು ವ್ಯವಸ್ಥೆ ಮಾಡಲಾಗುವುದು.

    ಆರೋಗ್ಯ ಇಲಾಖೆಯ ಸಲಹೆ ಪಡೆದು 20 ದಿನಗಳ ಮುಂಚಿತವಾಗಿ ಪರೀಕ್ಷೆಯು ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.

    ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪಿಯು ನಿರ್ದೇಶಕಿ ಆರ್. ಸ್ನೇಹಲ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

    ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ ಜಯಾ


    ಕನ್ನಡ ಸಿನಿಮಾ, ಕಿರುತೆರೆಯ ಹಿರಿಯ ನಟಿ ಬಿ.ಜಯಾ (75 ವರ್ಷ) ಇಂದು (ಜೂನ್‌ 3) ಅಗಲಿದ್ದಾರೆ. ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದರು. ಚಿತ್ರಪಥ.ಕಾಮ್ ಜಾಲ ತಾಣದ ಪ್ರಧಾನ ಸಂಪಾದಕ ಶಶಿಧರ ಚಿತ್ರದುರ್ಗ ಅವರು ಈ ಹಿರಿಯ ಕಲಾವಿದೆಯ ಚಿತ್ರಯಾತ್ರೆಯನ್ನು ಇಲ್ಲಿ ದಾಖಲಿಸಿದ್ದಾರೆ.


    ಬಿ.ಜಯಾ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ ಹಾಸ್ಯನಟಿ. ಬಾಲಕೃಷ್ಣ, ನರಸಿಂಹರಾಜು ಮತ್ತು ದ್ವಾರಕೀಶ್‌ ಅವರೊಂದಿಗಿನ ಜಯಾರ ಪಾತ್ರಗಳು ಬಹು ಜನಪ್ರಿಯ. ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿರುವ ಹೆಗ್ಗಳಿಕೆ ಅವರದು. 350ಕ್ಕೂ ಹೆಚ್ಚು ಸಿನಿಮಾಗಳು, ಹತ್ತಾರು ಧಾರಾವಾಹಿಗಳ ಸಾವಿರಾರು ಸಂಚಿಕೆಗಳಲ್ಲಿ ಅಭಿನಯಿಸಿದ್ದಾರೆ.

    ಜಯಾ ಅವರ ತಂದೆ ಬಸಪ್ಪನವರು ರಂಗಭೂಮಿ ಕಲಾವಿದರು. ಪುತ್ರಿಯನ್ನು ನಟಿಯಾಗಿ ರೂಪಿಸಬೇಕೆನ್ನುವ ಇರಾದೆ ಅವರದಾಗಿತ್ತು. ತಂದೆಯ ಒತ್ತಾಸೆಯಂತೆ ಜಯಾ ರಂಗಭೂಮಿ ಪ್ರವೇಶಿಸಿದರು. ಆಗ ಅವರಿಗೆ ಹತ್ತು ವರ್ಷ. ‘ಚಾಮುಂಡೇಶ್ವರಿ ನಾಟಕ ಮಂಡಳಿ’ಯಲ್ಲಿ ಪ್ರಹ್ಲಾದ, ಬಾಲಭೋಜ, ಕೃಷ್ಣ, ಋಷಿಕೇಶ, ಸನಕಾದಿಗಳ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರು ನಟನೆ ಜೊತೆಗೆ ಸಂಗೀತ, ನೃತ್ಯ ಕಲಿತರು.

    ‘ಕುಲಗೌರವ’ ಚಿತ್ರದಲ್ಲಿ ರಾಜಕುಮಾರ್, ನರಸಿಂಹರಾಜು ಅವರೊಂದಿಗೆ,’ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಪನಾ ಜೊತೆ
    ‘ಮಹದೇಶ್ವರ ಪೂಜಾಫಲ’ದಲ್ಲಿ ದ್ವಾರಕೀಶ್ ಜೊತೆ
    | ಚಿತ್ರ ಸೌಜನ್ಯ: ಚಿತ್ರಪಥ.ಕಾಮ್ ಸಂಗ್ರಹ


    ‘ಭಕ್ತ ಪ್ರಹ್ಲಾದ’ (1958) ಚಿತ್ರದ ಪುಟ್ಟ ಪಾತ್ರದೊಂದಿಗೆ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಮುಂದೆ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದ ಅವರು ಮದರಾಸಿನಲ್ಲಿದ್ದಾಗ ಹಲವಾರು ರೇಡಿಯೋ ನಾಟಕಗಳಲ್ಲೂ ಪಾಲ್ಗೊಂಡಿದ್ದರು. ಆಗ ಬೆರಳೆಣಿಕೆಯಷ್ಟೇ ಕನ್ನಡ ಚಿತ್ರಗಳು ತಯಾರಾಗುತ್ತಿದ್ದುದು. ಕನ್ನಡ ಚಿತ್ರ ತಾರೆಯರು ಜೀವನೋಪಾಯಕ್ಕಾಗಿ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ ಕಟ್ಟಿದ್ದರು. ಬಿ.ಜಯಾ ಅವರು ಕೂಡ ಈ ತಂಡದ ಕಲಾವಿದೆಯಾಗಿ ರಾಜ್ಯದ ಹಲವೆಡೆ ನಾಟಕಗಳ ಪ್ರದರ್ಶನ ನೀಡಿದ್ದರು.

    1983ರಲ್ಲಿ ‘ಕುಮಾರೇಶ್ವರ ನಾಟಕ ಸಂಘ’ ಕಟ್ಟಿದ ಬಿ.ಜಯಾ ಅವರು 1992ರವರೆಗೆ ಕಂಪನಿ ನಡೆಸಿದರು.

    ದೈವಲೀಲೆ, ವಿಧಿ ವಿಲಾಸ, ಬೆಳ್ಳಿಮೋಡ, ನ್ಯಾಯವೇ ದೇವರು, ಚಿನ್ನದ ಗೊಂಬೆ, ಪ್ರತಿಜ್ಞೆ, ಮಹದೇಶ್ವರ ಪೂಜಾಫಲ, ಮಣ್ಣಿನ ಮಗ, ಶ್ರೀಕೃಷ್ಣ ದೇವರಾಯ, ಕುಲಗೌರವ, ಪೂರ್ಣಿಮಾ, ನಗುವ ಹೂವು, ಮುಕ್ತಿ, ಜೀವನ ಜೋಕಾಲಿ, ದೇವರು ಕೊಟ್ಟ ತಂಗಿ, ಗಂಧದ ಗುಡಿ, ಶುಭಮಂಗಳ, ದಾರಿತಪ್ಪಿದ ಮಗ, ಪ್ರೇಮದ ಕಾಣಿಕೆ… ಜಯಾ ಅವರ ಕೆಲವು ಪ್ರಮುಖ ಚಿತ್ರಗಳು. ‘ಮಹಾನ್‌ ಮರೆಗುಳಿಗಳು’ ಸರಣಿಯಿಂದ ಶುರುವಾದ ಅವರ ಕಿರುತೆರೆ ನಂಟು ಇತ್ತೀಚಿನವರೆಗೂ ಜಾರಿಯಲ್ಲಿತ್ತು.

    ‘ಗೌಡ್ರು’ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ (2012), ಚಿತ್ರಪ್ರೇಮಿಗಳ ಸಂಘ, ಕನ್ನಡ ಟೆಲಿವಿಷನ್ ಅಸೋಸಿಯೇಷನ್ ಗೌರವ ಸೇರಿದಂತೆ ಹತ್ತಾರು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

    ಕೋವಿಡ್: ಇಂದಿನ ಸ್ಥಿತಿ ಗತಿ

    ಇಂದು ಬೆಳಿಗ್ಗೆ ವರದಿಯಾದಂತೆ ದೇಶದ ಕೋವಿಡ್ ಸ್ಥಿತಿ ಗತಿ.

    ಸೋಂಕಿನ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 17,13,413ಕ್ಕೆ ಇಳಿಕೆಯಾಗಿದೆ.

    ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳ ಅವಧಿಯಲ್ಲಿ 80,232ರಷ್ಟು ಇಳಿಕೆಯಾಗಿದೆ.

    ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1.34 ಲಕ್ಷ ಹೊಸ ದೈನಿಕ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ದೈನಿಕ ಹೊಸ ಪ್ರಕರಣಗಳಲ್ಲಿ ಇಳಿಕೆ ಮುಂದುವರಿದಿದೆ

    ದೇಶಾದ್ಯಂತ 2.64 ಕೋಟಿ ಜನರು ಈವರೆಗೆ ಕೋವಿಡ್ 19ರಿಂದ ಗುಣಮುಖರಾಗಿದ್ದಾರೆ, ಕಳೆದ 24 ಗಂಟೆಗಳಲ್ಲಿ 2,11,499 ರೋಗಿಗಳು ಚೇತರಿಸಿಕೊಂಡಿದ್ದಾರೆ.

    ಸತತ 21ನೇ ದಿನವೂ ದೈನಿಕ ಹೊಸ ಪ್ರಕರಣಗಳಿಗಿಂತ, ಚೇತರಿಕೆಯೇ ಹೆಚ್ಚಾಗಿದೆ.

    ನಿರಂತರ ಚೇತರಿಕೆಯ ಹಿನ್ನೆಲೆಯಲ್ಲಿ ಚೇತರಿಕೆ ದರ ಶೇ.92.79ಕ್ಕೆ ಹೆಚ್ಚಳವಾಗಿದೆ.

    ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ ಶೇ.7.66 ಆಗಿದೆ.

    ದೈನಿಕ ಪಾಸಿಟಿವಿಟಿ ದರ ಶೇ.6.21ಆಗಿದ್ದು, ಸತತ 10ನೇ ದಿನವೂ ಶೇ.10ಕ್ಕಿಂತ ಕಡಿಮೆ ಇದೆ.

    ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಗಿದ್ದು, ಒಟ್ಟು 35.3 ಕೋಟಿ ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ.

    ಈವರೆಗೆ ದೇಶಾದ್ಯಂತದ ಲಸಿಕಾ ಅಭಿಯಾನದಲ್ಲಿ 22.10 ಕೋಟಿ ಲಸಿಕಾ ಡೋಸ್ ನೀಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 22 ಲಕ್ಷ ಲಸಿಕೆ ನೀಡಲಾಗಿದೆ. (ವರದಿ ಪಿಐಬಿ)

    ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು, ಸಿಬ್ಬಂದಿಗೆ ಬಮುಲ್ ನಿಂದ 8 ಕೋಟಿ ನೆರವು

    ಬಮುಲ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಯ ನೆರವಿಗೆ ಧಾವಿಸಿರುವ ಬಮುಲ್ ಸಂಸ್ಥೆಯು, ಕೋವಿಡ್ ಸಂಕಷ್ಟದ ಕಾಲದಲ್ಲಿ ನೆರವನ್ನು ನೀಡಿದೆ. ಸುಮಾರು 8 ಕೋಟಿ ರೂ. ಅಧಿಕ ಮೊತ್ತವನ್ನು ಇದಕ್ಕಾಗಿ ವಿನಿಯೋಗಿಸಿದ್ದು, ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಸೋಮಶೇಖರ್ , ಬಮುಲ್ ವತಿಯಿಂದ ಉತ್ತಮ ಕಾರ್ಯವನ್ನು ಮಾಡಲಾಗುತ್ತಿದೆ. ಇಂಥ ಕೊರೋನಾ ಸಂಕಷ್ಟ ಕಾಲದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ನೆರವಿನ ಅಗತ್ಯವಿದೆ ಎಂದು ಮನಗಂಡಿರುವುದು ಉತ್ತಮ ನಡೆಯಾಗಿದೆ. ಒಟ್ಟಾರೆಯಾಗಿ ಬಮುಲ್ ವ್ಯಾಪ್ತಿಯ ಕಚೇರಿಗಳ ಸಿಬ್ಬಂದಿಗೆ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಕಿ, 4.50 ಕೋಟಿ ರೂಪಾಯಿ ವೆಚ್ಚದಲ್ಲಿ ತುಪ್ಪ, ಹಾಲು ವಿತರಕರಿಗೆ 3.6 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಹಾಲು ಹಾಗೂ ಉಚಿತ ಮೆಡಿಕ್ಲೈಮ್ (ವೈದ್ಯಕೀಯ ವಿಮೆ) ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

    ಬಮುಲ್ ವ್ಯಾಪ್ತಿಯಲ್ಲಿನ ಎಲ್ಲ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ಈ ಸೌಲಭ್ಯ ದೊರೆಯಲಿದೆ. ಇದರಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ಇವರ ನೆರವಿಗೆ ದಾವಿಸಲಾಗಿದ್ದು, ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶ ಇದಾಗಿದೆ. ಇದೇ ಮಾದರಿಯಲ್ಲಿ ಉಳಿದ ಹಾಲು ಉತ್ಪಾದಕ ಸಂಘಗಳೂ ತಮ್ಮ ಸೇವೆಯನ್ನು ಮಾಡಲಿ ಎಂದು ಸಚಿವರು ತಿಳಿಸಿದರು.

    ವೈದ್ಯರ ನಡಿಗೆ ಜನರ ಕಡೆಗೆ

    ವೈದ್ಯರ ನಡಿಗೆ ಜನರ ಕಡೆಗೆ ಎಂಬ ಕಾರ್ಯಕ್ರಮವನ್ನು ಮಾಡಿ, ವೈದ್ಯರು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಅಲ್ಲದೆ, ಸೂಕ್ತ ಚಿಕಿತ್ಸೆಯನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದಲ್ಲದೆ, ಚೆನ್ನೇನಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಅಲ್ಲಿ ಈಗಾಲಗೇ ನೂರಾರು ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಹೀಗಾಗಿ ಸೋಂಕು ತಗುಲಿದರೆ ಯಾರೂ ಆತಂಕಗೊಳ್ಳುವುದು ಬೇಡ, ಮನೆಯಲ್ಲಿ ಇರುವುದೂ ಬೇಡ. ಕೋವಿಡ್ ಕೇರ್ ಸೆಂಟರ್ ಗೆ ದಾವಿಸಿ 8-10 ದಿನವಿದ್ದರೆ ಸಾಕು ಸೂಕ್ತ ಚಿಕಿತ್ಸೆ ದೊರೆಯುವುದಲ್ಲದೆ, ಊಟೋಪಚಾರವೂ ಲಭಿಸಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

    ನಿರ್ಲಕ್ಷ್ಯ ಬೇಡ, ಎಲ್ಲರೂ ಚಿಕಿತ್ಸೆ ಪಡೆಯಿರಿ

    ಮೊದಲನೇ ಅಲೆ ಇಷ್ಟು ತೊಂದರೆ ಕೊಟ್ಟಿರಲಿಲ್ಲ. ಆದರೆ, ಎರಡನೇ ಅಲೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಯಾರಿಗೂ ಎರಡನೇ ಅಲೆಯ ತೀವ್ರತೆ ಗೊತ್ತಿರಲಿಲ್ಲ. ನನ್ನ ಜೊತೆಗೆ 20 ವರ್ಷಗಳಿಂದ ಇದ್ದವರು ಸಹ ಕೊರೋನಾ ತೀವ್ರತೆಗೆ ಬಲಿಯಾಗಿದ್ದಾರೆ. ಹೀಗಾಗಿ ಆದರೆ, ಜ್ವರ, ನೆಗಡಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ಚಿಕಿತ್ಸೆ ಪಡೆಯಿರಿ, ಮನೆಯಲ್ಲೇ ಸ್ವ ಔಷಧಿ ಮಾಡಿಕೊಂಡವರಿಗೆ ಸಮಸ್ಯೆಯಾಗಿ ಮೃತಪಟ್ಟವರ ಪ್ರಮಾಣ ಹೆಚ್ಚಿದೆ. ಹಾಗಾಗಿ ಎಲ್ಲರೂ ಚಿಕಿತ್ಸೆ ಪಡೆಯಿರಿ. ನನ್ನ ಯಶವಂತಪುರ ಕ್ಷೇತ್ರದಲ್ಲಿ ಏಳೂವರೆ ಸಾವಿರ ಜನರಿಗೆ ಕೋವಿಡ್ ಸೋಂಕು ಬಂದಿದ್ದು, ಈಗಾಗಲೇ ಆರೂವರೆ ಸಾವಿರ ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವರು ತಿಳಿಸಿದರು.

    ಎಲ್ಲ ಗ್ರಾಮ, ವಾರ್ಡ್ ಗಳಲ್ಲೂ ವ್ಯಾಕ್ಸಿನೇಶನ್ ಗೆ ಅನುಕೂಲವನ್ನು ಮಾಡಿಕೊಡಲಾಗುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಸಹ ನಿಂತುಕೊಂಡು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬೇಕು. ಇನ್ನು ತೊಂದರೆಯಲ್ಲಿರುವವರಿಗೆ ಪಡಿತರ ಕಿಟ್ ಅನ್ನು ಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಯಾರಿಗೆ ತೊಂದರೆಯಾಗಿದೆಯೋ ಅವರ ಸಹಾಯಕ್ಕೆ ಧಾವಿಸುವ ಕೆಲಸಕ್ಕೆ ಆಗುತ್ತಿದೆ. ಇಸ್ಕಾನ್ ದೇವಸ್ಥಾನದಿಂದ ಅನುಕೂಲ ಬೇಕಿದ್ದ ಕಡೆ ಸುಮಾರು 2 ಸಾವಿರ ಮಂದಿಗೆ ಭೋಜನ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ಸಚಿವರಾದ ಸೋಮಶೇಖರ್ ಮಾಹಿತಿ ನೀಡಿದರು.

    ಕೆಎಂಎಫ್ ಎಂಡಿ ಸತೀಶ್ ಸೇರಿದಂತೆ ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಕೋವಿಡ್-19ಗೆ ಪ್ರವೇಶ ನೀಡದ ಮೈಸೂರು ತಾಲ್ಲೂಕಿನ 14 ಹಳ್ಳಿಗಳು

    ಈಗಲೂ ಶೂನ್ಯ ಕೋವಿಡ್ ಪ್ರಕರಣ


    ಗ್ರಾಮೀಣ ಭಾಗದಲ್ಲೇ ಹೆಚ್ಚು ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ನಡುವೆ ಮೈಸೂರು ತಾಲ್ಲೂಕಿನ 14 ಗ್ರಾಮಗಳಲ್ಲಿ ಕೋವಿಡ್ ಪ್ರಕರಣ ಶೂನ್ಯವಾಗಿದ್ದು, ಕೋವಿಡ್-19ಗೆ ಪ್ರವೇಶ ನೀಡದ ಹಳ್ಳಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮೈಸೂರು ತಾಲ್ಲೂಕು ವ್ಯಾಪ್ತಿಗೆ ಒಳಪಡುವ 37 ಗ್ರಾಮ ಪಂಚಾಯತಿಗಳಲ್ಲಿ 11 ಗ್ರಾಮ ಪಂಚಾಯತಿಗೆ ಸೇರುವ 14 ಗ್ರಾಮಗಳಲ್ಲಿ ಇದುವರೆಗೂ ಒಂದೂ ಕೋವಿಡ್ ಪ್ರಕರಣಗಳು ದಾಖಲಾಗದೆ ಕೊರೊನಾ ಮುಕ್ತವಾಗಿದ್ದು, ಇದು ಇತರೆ ಹಳ್ಳಿಗಳಿಗೆ ಮಾದರಿಯಾಗಿದೆ.

    ತಾಲ್ಲೂಕಿನ ಮಾದಗಳ್ಳಿ, ರಾಯನಕೆರೆ, ಕಟ್ಟೆಹುಂಡಿ, ಕುಂಬ್ರಳ್ಳಿ, ಚಿಕ್ಕೇಗೌಡನಹುಂಡಿ, ಕೃಷ್ಣಪುರ, ರಾಮನಹಳ್ಳಿ, ಗುಡುಮಾದನಹಳ್ಳಿ, ಇನಮ್ ಉತ್ತನಹಳ್ಳಿ, ಲಕ್ಷ್ಮೀಪುರ, ಮಾಕನಹುಂಡಿ, ಹಂಚ್ಯಾಹುಂಡಿ, ಹೊಸಹುಂಡಿ, ಗುರುಕಾರಪುರ ಗ್ರಾಮಗಳು ಕೊರೊನಾ ಸೋಂಕಿಗೆ ಪ್ರವೇಶ ನೀಡದ ಗ್ರಾಮಗಳಾಗಿವೆ.

    ಮಾರ್ಗಸೂಚಿಗೆ ಆದ್ಯತೆ ನೀಡಿದ ಗ್ರಾಮಸ್ಥರು: ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಜೊತೆಗೆ ಗ್ರಾಮಸ್ಥರೂ ಕೂಡ ಸ್ವಂ ಮಾರ್ಗಸೂಚಿಗಳನ್ನು ಕಟ್ಟನಿಟ್ಟಾಗಿ ಪಾಲಿಸಿದ ಫಲವಾಗಿ ಈ ಗ್ರಾಮಗಳು ಕೋವಿಡ್ ಸೋಂಕಿನಿಂದ ದೂರ ಉಳಿದವು.

    ಇಲ್ಲಿನ ಜನರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗದೆ ಇರುವುದು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗುವುದು, ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಅನೇಕ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡಿದ ಪರಿಣಾಮದಿಂದಾಗಿ ಕೋವಿಡ್ ಈ ಗ್ರಾಮಗಳಿಗೆ ಕಾಲಿಡಲಿಲ್ಲ.

    ಗ್ರಾಮ ಪಂಚಾಯತಿಗಳಿಂದ ಜಾಗೃತಿ:ಗ್ರಾಮ ಪಂಚಾಯತಿ ವತಿಯಿಂದ ಕೋವಿಡ್ ಹರಡದಂತೆ ಮುಂಜಾಗ್ರತ ಕ್ರಮವಹಿಸಲು ಡಂಗೂರ ಸಾರುವ ಮೂಲಕ ಗ್ರಾಮಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸ್ವತಃ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿ ಮನೆ ಮನೆ ಬಾಗಿಲಿ ಹೋಗಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

    ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಿ ದೈಹಿಕ ಅಂತರ ಕಾಪಾಡುವುದು ಮತ್ತು ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡುತ್ತಿದ್ದಾರೆ. ಒಂದೆರಡು ಹಳ್ಳಿಗಳಲ್ಲಿ ಮಾತ್ರ ಲಕ್ಷಣ ಕಾಣಿಸಿಕೊಂಡ ಎರಡು ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.

    ಆಶಾ, ಅಂಗನವಾಡಿ ಕಾರ್ಯಕರ್ತೆಯರ ಅವಿರತ ಶ್ರಮ:
    ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಚುರುಕಾಗಿ ಕೆಲಸ ಮಾಡುತಿದ್ದಾರೆ. ಪ್ರತಿನಿತ್ಯ ಗ್ರಾಮದ ಮನೆ ಮನೆಗೆ ತೆರಳಿ ಪಲ್ಸ್ ಆಕ್ಸಿ ಮೀಟರ್, ಥರ್ಮಲ್ ಸ್ಕ್ರಿನಿಂಗ್‌ನಿಂದ ಆರೋಗ್ಯ ಸ್ಥಿರತೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.


    ಜನರು ಮುಂಜಾಗ್ರತ ಕ್ರಮ ಅನುಸರಿಸುವುದರ ಜೊತೆಗೆ, ಗ್ರಾಮ ಪಂಚಾಯಿತಿಗಳ ಶ್ರಮದಿಂದ ಸೋಂಕು ಹರಡದಂತೆ ನೋಡಿಕೊಳ್ಳಲಾಗಿದೆ. ಇಲ್ಲಿವರೆಗೆ ಯಾರಿಗೂ ಸೋಂಕು ತಗುಲಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ.

    ಎಂ.ಎಸ್.ರಮೇಶ್,ಕಾರ್ಯನಿರ್ವಾಹಕ ಅಧಿಕಾರಿ,
    ಮೈಸೂರು ತಾಲ್ಲೂಕು ಪಂಚಾಯತಿ


    error: Content is protected !!