23.5 C
Karnataka
Monday, May 20, 2024

    ಬಾಲುಗಾರು ಎಂಬ ಶ್ರುತಿಬ್ರಹ್ಮ

    Must read


    ಕಳೆದ 2020ರಲ್ಲಿ ನಮ್ಮನ್ನಗಲಿದ ಗೀತಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ ಇಂದು. ಚೆನ್ನೈ ಹತ್ತಿರದ ತಾಮರೈಪಾಕಂನಲ್ಲಿನ ತಮ್ಮ ತೋಟದಲ್ಲಿ ತಣ್ಣಗೆ ಮಲಗಿರುವ ಅವರ ನೆನಪುಗಳು ಮನ್ವಂತರಗಳು ದಾಟಿದರೂ ಅಳಿಯಲಾರವು. ಕೊರೋನಾದಿಂದ ಕಂಗೆಟ್ಟ ನಮಗೆ ಅವರ ಗಾಯನ ಒಂದು ಮೆಡಿಸಿನ್‌ ಮಾತ್ರವಲ್ಲ, ಮುನ್ನಡೆಯಲೊಂದು ಸ್ಫೂರ್ತಿ ಹಾದಿ. https://cknewsnow.com ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪಿ. ಕೆ. ಚನ್ನಕೃಷ್ಣ ಅವರು ಈ ಗಾನಗಾರುಡಿಗನನ್ನು ನೆನಪಿಸಿಕೊಂಡು ಬರೆದ ಲೇಖನ ನಮ್ಮ ಓದುಗರಿಗಾಗಿ ಇಲ್ಲಿದೆ.


    ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ.
    ಎಲ್ಲರ ಪಾಲಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇನ್ನೂ ಅನೇಕರಿಗೆ ಎಸ್ಪಿಬಿ, ಮತ್ತೂ ಅನೇಕಾನೇಕರಿಗೆ ಪ್ರೀತಿಯ ಬಾಲು.
    -1-
    ಶ್ರುತಿಬ್ರಹ್ಮ!!!
    ಅಚ್ಚರಿಯೇನೂ ಇಲ್ಲ. ಅವರು ಸಾಕ್ಷಾತ್ ಶ್ರುತಿಬ್ರಹ್ಮರೇ. ನಮ್ಮ ನೆಲದ ಸಂಗೀತಲೋಕದ ಐಸಿರಿ, ಸ್ವರಬ್ರಹ್ಮ ಹಂಸಲೇಖ ಅವರು ಬಾಲು ಅವರನ್ನು ಕರೆಯುವ ಪರಿ, ತಮ್ಮ ಹೃದಯದಲ್ಲಿ ಅವರನ್ನು ಪ್ರತಿಷ್ಠಾಪನೆ ಮಾಡಿಕೊಂಡಿರುವ ರೀತಿ ಇದು. ಅಷ್ಟೇ ಅಲ್ಲ, ಅವರ ಮಾತುಗಳಲ್ಲೇ ಹೇಳುವುದಾದರೆ, “ಇಂದು ಅವರ (ಎಸ್ಪಿಬಿ) ಹುಟ್ಟುಹಬ್ಬ. ನನ್ನ ಪಾಲಿಗಿದು ಸಂಸ್ಕೃತಿಯೇ ಜನ್ಮವೆತ್ತಿದ ದಿನ! ನಾಡಿನ ಪಾಲಿಗೆ ಸಾಮರಸ್ಯವೇ ಜನಿಸಿದ ದಿನ. ಒನ್ ಎಸ್ಪಿಬಿ ಫಾರ್ 500 ಯಿಯರ್ಸ್!!!”

    ಆಹಾ.. ಎಂತಹ ನುಡಿಗಳು. ಅವರ ಮಾತುಗಳಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸರಸ್ವತಿ ಪುತ್ರರಾದ ಅವರ ನಾಲಗೆಯ ಮೇಲೆ ಬಾಲು ಎಂಬ ಶ್ರುತಿಯೂ ಹೀಗೆ ಸಾಕ್ಷಾತ್ಕಾರವಾಗಿತ್ತು.

    //ಉಮಂಡುಗು ಮಂಡುಘನ
    ಗರಜೇ ಬದುರಾ//

    ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರಕ್ಕಾಗಿ ಅಪ್ಪಟ ಹಿಂದೂಸ್ಥಾನಿಯ ರಾಗ ‘ಮೇಘ’ದಲ್ಲಿ ಬಾಲು ಅವರು ಹಾಡಿದ ಈ ಚೀಜು ನಮ್ಮ ಪಾಲಿನ ಅನರ್ಘ್ಯ ಸ್ವರಧಾರೆ. ಆ ಮಹಾ ಗಾನಯೋಗಿಯ ದಿವ್ಯಕೃಪೆಯಿಂದ ಈ ವಿರಳ ಗಾಯಕನ ಹೃದಯದಿಂದ ಉಕ್ಕಿಹರಿದ ಗಾನಗಂಗೆಯೇ ಈ ಆಲಾಪ. ಕನ್ನಡಮ್ಮನ ಕಿರೀಟಕ್ಕೆ ರಾಷ್ಟ್ರಪ್ರಶಸ್ತಿಯ ಗರಿಯಿಟ್ಟ ಅನನ್ಯ ಗಾಯನವದು.
    “ಬಾಲುಗಾರು… ಅದ್ಭುತಃ”, ಹಂಸಲೇಖ ಅವರೇ.. ತಮಗೆ ಕೂಡ ಸಾವಿರ ಶರಣು..
    -2-
    ಅದು ಹೈದರಾಬಾದ್. ಕಾರ್ಯಕ್ರಮ, ʼಶಿರಿಡಿ ಸಾಯಿʼ ಚಿತ್ರದ ಆಡಿಯೋ ಲೋಕಾರ್ಪಣೆ. ವೇದಿಕೆಯ ಮುಂಭಾಗದಲ್ಲಿ ತೆಲುಗು ಚಿತ್ರರಂಗದ ಪಾಲಿನ ಜ್ಞಾನಕೋಶ ಅಕ್ಕಿನೇನಿ ನಾಗೇಶ್ವರ ರಾವ್ ಅವರೇ ಕೂತಿದ್ದರು. ಅವರ ಪಕ್ಕದಲ್ಲಿ ಅಕ್ಕಿನೇನಿ ನಾಗಾರ್ಜುನ, ಅವರ ಪತ್ನಿ ಅಮಲ, ಹಿರಿಯ ನಿರ್ದೇಶಕ ಕೆ.ರಾಘವೇಂದ್ರ ರಾವು, ನಟ ಶ್ರೀಕಾಂತ್, ನಿರ್ಮಾಪಕರಾದ ಅಲ್ಲು ಅರವಿಂದ್, ದಿಲ್ ರಾಜು ಸೇರಿದಂತೆ ತೆಲುಗು ಚಿತ್ರರಂಗದ ಚಿಕ್ಕ-ದೊಡ್ಡವರೆಲ್ಲರೂ ಸೇರಿದ್ದರು. ಅದು ಆ ಚಿತ್ರದ ಕ್ಲೈಮ್ಯಾಕ್ಸ್ ಗೀತೆ.

    // ಭಕ್ತಲು ಮೀರು, ಮೀ ಭಕ್ತಿಕಿ ಬಾನಿಸ ನೇನು
    ಸೂರ್ಯಚಂದ್ರುಲು ಚುಕ್ಕಲು ನೇನೈ ಕನಬಡುತುಂಟಾನು
    ಮಿಮ್ಮು ಕನಿಪೆಡುತುಂಟಾನು… //

    ( // ಭಕ್ತರು ನೀವು, ನಿಮ್ಮ ಭಕ್ತಿಗೆ ಅಡಿಯಾಳು ನಾನು
    ಸೂರ್ಯಚಂದ್ರರು, ನಕ್ಷತ್ರಗಳು ನಾನಾಗಿ ಕಾಣಿಸುತ್ತಿರುವೆ
    ನಿಮ್ಮೆಲ್ಲರನು ನೋಡಿಕೊಳ್ಳುತ್ತಿರುತ್ತೇನೆ.. // )

    ಮಹಾ ಸಮಾಧಿಯಾಗುವ ಮುನ್ನ ಬಾಬಾ ಅವರು ತಮ್ಮ ಭಕ್ತಸಮೂಹಕ್ಕೇ ಹೇಳುವ ಸಾಲುಗಳಿವು. ಒಂದೆಡೆ ಭಕ್ತಿಯ ಪರಾಕಾಷ್ಠೆ, ಮತ್ತೊಂದೆಡೆ ಭಕ್ತರನ್ನು ಸಾಂತ್ವನಗೊಳಿಸುವ ಅವತಾರಪುರುಷನ ಅಂತಿಮ ಕ್ಷಣಗಳು.. ಆರ್ದ್ರತೆಯ ಮಹಾಸಾಗರದಂತೆ ಉಕ್ಕುವ ಹಾಡಿಗೆ ಜೀವತುಂಬಿದ್ದರು ಬಾಲು. ಪಲ್ಲವಿಯ ಮೂರು ಸಾಲು ಮುಗಿಯುವ ಮುನ್ನವೇ ಇಡೀ ಸಭಾಂಗಣ ಸೂಜಿಬಿದ್ದರೂ ಕೇಳುವಷ್ಟು ನಿಶ್ಯಬ್ದವಾಗಿತ್ತು. ಕಿಕ್ಕಿರಿದಿದ್ದ ಸಭಿಕರ ಕಣ್ಣಾಲಿಗಳು ತುಂಬಿಹೋಗಿದ್ದವು. ಅವರ ಸ್ವರಾಲಾಪಕ್ಕೆ ಸ್ವತಃ ಅಕ್ಕಿನೇನಿ ಅವರೇ ಮೂಕವಿಸ್ಮಿತರಾಗಿಬಿಟ್ಟರು. ಸಂಗೀತ ನಿದೇಶಕ ಕೀರವಾಣಿ ಮೌನಮೂರ್ತಿಯಾಗಿಬಿಟ್ಟರು.

    ಇಂಥ ಬಾಲು ಅವರ ಬಗ್ಗೆ ಹೇಳಲು ಇಂತಹ ಸಾವಿರಾರು ಉದಾಹರಣೆಗಳಿವೆ, ಸ್ವಾರಸ್ಯಗಳಿವೆ. ಅವರ ಸ್ವರಯಾತ್ರೆಯಲ್ಲಿ ಕಾಣುತ್ತಿರುವ ಮೈಲುಗಲ್ಲುಗಳು, ಹೆಜ್ಜೆಗುರುತುಗಳನ್ನು ಲೆಕ್ಕಿಸುತ್ತ ಹೋಗುವುದು ಎಂದರೆ ಗಜಪಯಣದ ಹಿಂದೆ ಇರುವೆ ನಡೆದಂತೆ. 1966ರಿಂದ ಅವರತವಾಗಿ ಹಾಡಿದ ಅವರ ಸ್ವರಕ್ಕೆ ಧಣಿವಿರಲಿಲ್ಲ, ಆ ಜೀವಿಗೆ ಸ್ವರದ ಹಸಿವು ಬಿಟ್ಟರೆ ಬೇರೇನೂ ಇರಲಿಲ್ಲ.

    ಕನ್ನಡದಲ್ಲಿ ʼಗಾನಯೋಗಿ ಪಂಚಾಕ್ಷರಿ ಗವಾಯಿʼ, ʼಗಡಿಬಿಡಿ ಗಂಡʼ, ʼಪ್ರೇಮಲೋಕʼ, ʼಚೈತ್ರದ ಪ್ರೇಮಾಂಜಲಿʼ, ʼಮೈಸೂರ ಮಲ್ಲಿಗೆʼ, ʼಅಮೃತವರ್ಷಿಣಿʼ, ʼನಮ್ಮೂರ ಮಂದಾರ ಹೂವೇʼ… ಒಂದೇ ಎರಡೇ.

    ಕವಿ ಕೆಎಸ್ ನರಸಿಂಹಸ್ವಾಮಿ ಅವರ ಸರ್ವಕಾಲೀನ ವಿರಹಗೀತೆ..
    // ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ
    ನಿನ್ನೊಳಿದೆ ನನ್ನ ಮನಸು
    ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
    ನಿನ್ನೊಲುಮೆ ನನ್ನ ಕಂಡೂ… //

    ಹುಣ್ಣಿಮೆಯಲಿ ಉಕ್ಕುವ ಕಡಲಿನಂತೆಯೇ ಈ ಗೀತೆಯಲ್ಲಿ ಬಾಲು ಅವರ ಸ್ವರಗಳ ಭಾವಶರಧಿಯಲ್ಲಿ ಕನ್ನಡಿಗರೆಲ್ಲರೂ ಮಿಂದಿದ್ದು ಸುಳ್ಳಲ್ಲ.

    ನಮ್ಮ ಸ್ವರಬ್ರಹ್ಮರೇ (ಹಂಸಲೇಖ) ಬರೆದು ರಾಗ ಸಂಯೋಜಿಸಿದ ’ಮಹಾಕ್ಷತ್ರಿಯ’ ಚಿತ್ರದ “ಈ ಭೂಮಿ ಬಣ್ಣದ ಬುಗುರಿ..” ಹಾಡು ಬಾಲು ಅವರಿಗಾಗಿಯೇ ಜನ್ಮತಾಳಿತೇನೋ ಎನ್ನುವ ಹಾಗಿದೆ ಅವರ ಸ್ವರಾಲಾಪನೆ.

    ಇನ್ನು ತೆಲುಗಿಗೆ ಬಂದರೆ ಅವರು ಹಾಡಿದ್ದೆಲ್ಲವೂ ಅಮೃತವೇ. ‘ಶಂಕರಾಭರಣಂ’, ‘ಸ್ವಾತಿಮುತ್ಯಂ’, ‘ಸಿರಿವೆನ್ನೆಲ’, ‘ಗೀತಾಂಜಲಿ’, ‘ರೋಜಾ’, ‘ಜಗದೇಕವೀರುಡು ಅತಿಲೋಕ ಸುಂದರಿ’, ‘ಅನ್ನಮಯ್ಯ’, ‘ಶ್ರೀರಾಮದಾಸು’ ʼಶಿರಿಡಿ ಸಾಯಿʼ ಸೇರಿದಂತೆ ಅನೇಕಾನೇಕ ಚಿತ್ರಗಳ ಅಪರೂಪದ ಗೀತೆಗಳಿಗೆ ಅವರು ಉಸಿರನ್ನೇ ತುಂಬಿಸಿಟ್ಟಿದ್ದಾರೆ. ತೆಲುಗಿನ ʼಫಲಾಸʼ ಚಿತ್ರಕ್ಕಾಗಿ ಹಾಡಿದ ‘ಓ ಸೊಗಸರಿ, ಪ್ರಿಯ ಲಾಹಿರಿʼ ಅವರ ಕೊನೆಯ ಗೀತೆ. ಹದಿನಾರರ ಬಾಲು ಅವರನ್ನು ಮತ್ತೊಮ್ಮೆ ನಮ್ಮ ಕಣ್ಮುಂದೆ ನಿಲ್ಲಿಸುವ, ಅವರ ತುಂಟತನದಿಂದ ಕಚಗುಳಿ ಇಡುವ ಈ ಹಾಡನ್ನು ದುರದೃಷ್ಟವಶಾತ್‌ ಸಿನಿಮಾದಂದ ಕೈಬಿಡಲಾಗಿತ್ತು.

    ತಮಿಳಿನ ’ಕೇಳಡಿ ಕಣ್ಮಣಿ’ ಚಿತ್ರಕ್ಕಾಗಿ ಅವರೇ ನಟಿಸಿ ಹಾಡಿದ ’ಮಣ್ಣಿಲ್ ಇಂದ ಕಾದಲನ್ರೀ’ ಹಾಗೂ ’ತೇವರ್ ಮಗನ್’ ಚಿತ್ರದಲ್ಲಿನ ಅವರ ಗಾಯನ.. ವ್ಹಾಹ್.. ವರ್ಣನೆಗೆ ಅಕ್ಷರಗಳೇ ಸೋಲುತ್ತಿವೆ. ಭಾಗ್ಯರಾಜಾ ನಿರ್ದೇಶನದ ʼಕಾದಲ್‌ ಓಯುಯಂʼ ಸಿನಿಮಾದಲ್ಲಿ ಅವರು ಹಾಡಿದ “ಸಂಗೀತಂ ಜಾಜಿಮುಲ್ಲೈ ಕಾಣುಮಿಲ್ಲೈ” ಬಾಲು ಅವರ ಶೃತಿ & ಸ್ವರಶಕ್ತಿಗೆ ಸಾಕ್ಷಿ. ಹಿಂದಿಯಲ್ಲಿ ʼಏಕ್ ದುಜೇ ಕೇಲಿಯೇʼ, ʼಮೈನೆ ಪ್ಯಾರ್ ಕಿಯಾʼ, ʼಸಾಜನ್ʼ, ʼಹಮ್ ಆಪ್ಕೆ ಹೈ ಕೌನ್ʼ ಚಿತ್ರಗಳ ಹಾಡುಗಳಂತೂ ಎವರ್‌ಗ್ರೀನ್‌- ಅದ್ಭುತ ಮೆಲೋಡಿಗಳು.

    ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ, ಭೋಜಪುರಿ ಸೇರಿ ಅನೇಕ ಭಾಷೆಗಳಲ್ಲಿ 40ರಿಂದ 45 ಸಾವಿರ ಹಾಡುಗಳನ್ನು ಅವಿಚ್ಛಿನ್ನವಾಗಿ, ಅಮೋಘವಾಗಿ ಹಾಡಿರುವ ಬಾಲು ಅವರು ಬಹುಮುಖ ಪ್ರತಿಭೆ. 1996ರಲ್ಲಿ ಅವರು ನಿರ್ಮಿಸಿ, ಕಮಲ್ ಹಾಸನ್ ನಟಿಸಿದ್ದ ’ಶುಭಸಂಕಲ್ಪಂ’ ಚಿತ್ರವು, ಸಿನಿಮಾಗಳ ಬಗ್ಗೆ ಅವರಿಗಿದ್ದ ಸದಭಿರುಚಿಗೆ ಸಾಕ್ಷಿ. ಕನ್ನಡದ ’ಮುದ್ದಿನಮಾವ’, ತೆಲುಗಿನ ’ಪ್ರೇಮ’, ತಮಿಳಿನ ’ಕೇಳಡಿ ಕಣ್ಮಣಿ’, ’ಕಾದಲನ್’ ಚಿತ್ರಗಳಲ್ಲಿ ಅವರದ್ದು ಕಚಗುಳಿ ಇಡುವ ಅಪರೂಪದ ನಟನೆ. ಮತ್ತೂ ಬೇಕಾದಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

    ತೆಲುಗು ಕವಿ, ನಟ ತೆನಕಳ್ಳ ಭರಣಿ ಅವರ ’ಮಿಥುನಂ’ ಚಿತ್ರದಲ್ಲಿನ ʼಅಪ್ಪದಾಸುʼ ಪಾತ್ರ ಬಾಲು ಅವರ ನಟನಾ ಪ್ರತಿಭೆಯ ಗೌರಿಶಂಕರ. ಎರಡೇ ಪಾತ್ರಗಳ ಆ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮೀ ಅವರ ಪರಮ ಮುಗ್ಧ, ಕಂಜ್ಯೂಸ್ ಪತಿಯಾಗಿ ಕಾಣಿಸಿಕೊಂಡ ಅವರ ‌ʼನವರಸʼ ಪೋಷಣೆಯನ್ನು ಕಣ್ತುಂಬಿಕೊಳ್ಳಲೇಬೇಕು.

    ಬಾಲು ಅವರದ್ದು ಬರೆದಷ್ಟೂ ಮುಗಿಯದ ಮಹಾಕಾವ್ಯ. ಅವರಿಗೆ ಅವರೇ ಸಾಟಿ. ಆ ಸ್ವರಕ್ಕೆ ಆ ಸ್ವರವೇ ಪೋಟಿ. ಮಹಾನುಭಾವ ಶ್ರೀ ಕೋದಂಡಪಾಣಿಯವರು ಹಾಗೂ ಸ್ವರ ಸರಸ್ವತಿ ಎಸ್. ಜಾನಕಿ ಅವರಿಬ್ಬರೂ ಇಲ್ಲದಿದ್ದರೆ ಇವತ್ತು ಬಾಲಸುಬ್ರಹ್ಮಣ್ಯಂ ಎಂಬ ಹೆಸರೇ ಇರುತ್ತಿರಲಿಲ್ಲ.

    ಮಹಾ ವಾಗ್ಗೇಯಕಾರ ಶ್ರೀ ತ್ಯಾಗಯ್ಯ ಅವರು ಬರೆದು ಹಾಡಿದ ಈ ಕೀರ್ತನೆಯನ್ನು ಇಲ್ಲಿ ಉಲ್ಲೇಖಿಸಬಹುದು.
    // ಎಂದರೋ ಮಹಾನುಭಾವುಲು
    ಅಂದರಿಕೀ ವಂದನಮುಲು… //
    (ಎಷ್ಟೋ ಮಹಾನುಭಾವರು / ಎಲ್ಲರಿಗೂ ವಂದನೆಗಳು)

    ಬಾಲು ಎಂಬ ಮಹಾನುಭಾವರಿಂದ ಸಂಗೀತ ಲೋಕ ಸಮೃದ್ಧವಾಗಿದೆ. ಇವತ್ತು (ಜೂನ್ 4) ಹುಟ್ಟುಹಬ್ಬ ಆಚರಿಕೊಂಡು ಇನೊಂದು ವಸಂತಕ್ಕೆ ಕಾಲಿಡಬಹುದಾಗಿದ್ದ ಅವರು ಕಳೆದ ವರ್ಷ ಕೋವಿಡ್‌ ಮಾರಿಗೆ ತುತ್ತಾದರು. ವೈರಸ್‌ ಮಾರಿ ವಕ್ಕರಿಸಿಕೊಳ್ಳುವ ಮುನ್ನ ನಮ್ಮ ಜಯಂತ್‌ ಕಾಯ್ಕಿಣಿ ಬರೆದಿದ್ದ ʼವೈರಿ ಕೊರೊನಾʼ ಹಾಡಿ ಮನೆಯೊಳಗೇ ಸ್ವರಕಟ್ಟಿದ್ದ ಆ ಮಹಾನ್‌ ಹಾಡುಗಾರ ಅದೇ ವರ್ಷ ಸೆಪ್ಟೆಂಬರ್‌ 24ರಂದು ಮೌನಕ್ಕೆ ಜಾರಿ, ಬದುಕು ನಿಲ್ಲಿಸಿಬಿಟ್ಟರು.

    ಕೊನೆ ಮಾತು..
    ಮಹಾನ್ ವಾಗ್ಗೇಯಕಾರರಾದ ʼಅನ್ನಮಯ್ಯʼ ಅವರ ಜೀವನ ಚೆರಿತೆಯಲ್ಲಿ ಒಂದು ಪ್ರಸಂಗ ಬರುತ್ತದೆ. ಒಮ್ಮೆ ನಾರದರು ಮಾರುವೇಷದಲ್ಲಿ ಬಂದು, ʼಅನ್ನಮಯ್ಯʼ ಅವರ ಹರಿಭಕ್ತಿಗೆ ಮೆಚ್ಚಿ ತಮ್ಮ ತಂಬೂರಿಯನ್ನೇ ಅವರಿಗೆ ಕಾಣೀಕೆಯಾಗಿ ಕೊಟ್ಟು ಹೀಗೆ ಹೇಳಿದರಂತೆ..

    “ಮರ್ಭಾಕ್ತಾಹಃ ಯತ್ರ ಗಾಯಂತಿ ತತ್ರತಿಷ್ಠಾಮಿ ನಾರದ..”
    “ನಾರದ, ನಾನು ವೈಕುಂಠದಲ್ಲೂ ಇರಲ್ಲ, ಯೋಗಿಗಳ ಹೃದಯದಲ್ಲೂ ಇರುವುದಿಲ್ಲ. ಎಲ್ಲಿ ನನ್ನ ಭಕ್ತರು ಹಾಡುತ್ತಿರುವರೋ ಅಲ್ಲಿ ಪಟ್ಟಾಗಿ ಕೂತುಬಿಟ್ಟಿರುತ್ತೇನೆ. ನನಗೆ ಗಾಯನವೆಂದರೆ ಅಷ್ಟು ಪ್ರಾಣ.” ಸ್ವತಃ ಶ್ರೀಹರಿಯೇ ನನ್ನೊಂದಿಗೆ ಹೀಗೆ ಹೇಳಿದ್ದು ಎಂದು ನಾರದರು ಹೇಳುತ್ತಾರೆ..

    ಗಾಯನವೆಂದರೆ ಶ್ರೀಹರಿಗೇ ಏಕೆ? ಶ್ರೀಸಾಮಾನ್ಯನಿಗೂ ಪರಮಇಷ್ಟ. ಶಾಸ್ತ್ರೀಯ ಸಂಗೀತದ ಪ್ರವೇಶವೇ ಇಲ್ಲದೇ ಸಪ್ತಸ್ವರಗಳನ್ನು ಆ ಸಾಮಾನ್ಯನ ಹೃದಯಕ್ಕೆ ಆಳವಾಗಿ ದಾಟಿಸಿದ ಬಾಲು ಮಹಾನ್ ಗಾಯಕರು ಎನ್ನದಿರಲು ಸಾಧ್ಯವೇ?

    ನಮ್ಮ ದೇಶ ಕಂಡ ಸಿನಿಮಾ ಜಗತ್ತಿನ ಯುಗದ ಗಾಯಕ ಎಸ್‌ಪಿಬಿ ಅವರಿಗೆ ಜನ್ಮದಿನ ಶುಭಾಶಯಗಳು. ವಿನಮ್ರ ಸಮಸ್ಕಾರಗಳು.

    ಚನ್ನಕೃಷ್ಣ ಪಿ ಕೆ
    ಚನ್ನಕೃಷ್ಣ ಪಿ ಕೆhttps://cknewsnow.com/
    ಸಿಕೆ ನ್ಯೂಸ್ ನೌ.ಕಾಮ್ ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ
    spot_img

    More articles

    1 COMMENT

    1. ಗೀತ ಗಾರುಡಿಗನಿಗೆ ನನ್ನ ನಮನಗಳು . ನೆನಪಿನ ಬುತ್ತಿ ಬಿಚ್ಚಿದ ಲೇಖನ ತುಂಬಾ ಸುಲಲಿತವಾಗಿ ಓದಿಸಿಕೊಂಡು ಹೋಯಿತು. ಲೇಖಕರಿಗೆ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!