ಹಾಸನ ಜಿಲ್ಲೆಯ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕರಾದ ಆರ್.ಪಿ ವೆಂಕಟೇಶ್ ಮೂರ್ತಿ ಅವರು 2020 ನೇ ಸಾಲಿನ ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆರ್.ಪಿ ವೆಂಕಟೇಶ್ ಮೂರ್ತಿ ಅವರು ಪತ್ರಿಕಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ಸಾಮಾಜಿಕ ಕಳಕಳಿಯ ಕಾರ್ಯಗಳು , ರೈತ ಚಳುವಳಿ ಹಾಗೂ ಪರಿಸರ ಕಾಳಜಿಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಆರ್.ಪಿ ವೆಂಕಟೇಶ್ ಮೂರ್ತಿ ಅವರು ಖಾದ್ರಿ ಶಾಮಣ್ಣ ಪ್ರಶಸ್ತಿ ಪಡೆಯುತ್ತಿರುವ 28 ನೇ ಪತ್ರಕರ್ತರಾಗಿದ್ದಾರೆ .ಈ ಪ್ರಶಸ್ತಿ 15 ಸಾವಿರ ರೂಪಾಯಿ ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಕಳೆದ ಬಾರಿ ಈ ಪ್ರಶಸ್ತಿ ಗೆ ತರಂಗ ಪತ್ರಿಕೆಯ ಡಾ ಯು.ಬಿ ರಾಜಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿತ್ತು. ಕೋವಿಡ್ ಕಾರಣಗಳಿಂದ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿರಲಿಲ್ಲ. ಈ ಬಾರಿ ಇಬ್ಬರೂ ಸಾಧಕರನ್ಮು ಒಟ್ಟಿಗೆ ಸನ್ಮಾನಿಸಿ ಪ್ರಶಸ್ತಿ ನೀಡಲಾಗುವುದು ಎಂದು ಖಾದ್ರಿ ಶಾಮಣ್ಣ ಟ್ರಸ್ಟ್ ನ ಟ್ರಸ್ಟಿ ಎಚ್.ಅರ್. ಶ್ರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ರಾಂಪುರ ಗ್ರಾಮದವರಾದ ಆರ್.ಪಿ ವೆಂಕಟೇಶ ಮೂರ್ತಿ ಅವರು 1976 ರಿಂದ ಪತ್ರಿಕಾ ರಂಗದಲ್ಲಿದ್ದಾರೆ.ಜೊತೆಗೆ ಅನೇಕ ಸಾಮಜಿಕ ಕಾರ್ಯಗಳಲ್ಲಿ ತೊಡಗಿದ್ದರೆ ಅವರು ಪತ್ರಕರ್ತನೂ ಒಬ್ಬ ರೈತ ಎಂದು ಕರೆದುಕೊಂಡಿರುವುದು ಅಪರೂಪದ ಸಂಗತಿ. ಸಾಮಾನ್ಯವಾಗಿ ಪತ್ರಕರ್ತರನ್ನು ಬುದ್ಧಿಜೀವಿಗಳು ಎಂದು ಕರೆಯುವುದುಂಟು. ನಿಜವಾದ ಮಣ್ಣಿನ ಮಗ ಪತ್ರಕರ್ತನಾಗಿ `ಜನತಾ ಮಾಧ್ಯಮ’ ದಿನಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಬಿಎಸ್ಸಿ ಮತ್ತು ಎಲ್ ಎಲ್ ಬಿ ಪದವಿ ಗಳಿಸಿ , ಜೆಪಿ ಚಳವಳಿಯಿಂದ ಸ್ಪೂರ್ತಿ ಪಡೆದು ರೈತ ಚಳವಳಿಯಲ್ಲಿ ಭಾಗವಹಿಸಿ ಹಲವು ಹೋರಾಟಗಳನ್ನು ನಡೆಸಿದ್ದಾರೆ.
ಮಂಜುನಾಥ ದತ್ತ,ಜೇಬರ್ ಹಾಗೂ ವಾಸುದೇವನ್ ಅವರ ಒಡನಾಟದಲ್ಲಿ ಜೀವನ ಹಾದಿ ಕಂಡ ವೆಂಕಟೇಶ್ ಮೂರ್ತಿ ಅವರು ಈಗ ಬಾಗಿದ ಬಾಳೆಗೊನೆ ರೀತಿ ಇದ್ದಾರೆ. ಅದು ಎಷ್ಟೇ ಬಲಿತು ಪಕ್ವವಾಗಿದ್ದರೂ ನೆಲದ ಕಡೆ ನೋಡುತ್ತದೆಯೇ ಹೊರತು ಆಕಾಶದತ್ತ ತಲೆ ಎತ್ತುವುದಿಲ್ಲ. ಈಗಲೂ ಅವರ ದೃಷ್ಟಿ ಮಣ್ಣಿನತ್ತ ಇದೆ. ಅವರಿಗೆ ಈ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ಸಂತಸ ವ್ಯಕ್ತಪಡಿಸುತ್ತದೆ ಎಂದು ಖಾದ್ರಿ ಶಾಮಣ್ಣ ಟ್ರಸ್ಟ್ ನ ಟ್ರಸ್ಟಿ ಎಚ್ ಅರ್.ಶ್ರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆ ಇಲ್ಲದೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಿಇಟಿ, ನೀಟ್ ಅಂಕಗಳನ್ನು ಮಾತ್ರ ಪರಿಗಣಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಕೊಟ್ಟಿರುವ ಸಲಹೆ ಬಗ್ಗೆ ಸದ್ಯದಲ್ಲೇ ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.
ಸುರೇಶ್ ಕುಮಾರ್ ಅವರು ಉತ್ತಮ ಸಲಹೆ ನೀಡಿದ್ದಾರೆ. ಎಂಜಿನೀಯರಿಂಗ್ & ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಇಂತಿಷ್ಟು ಅಂಕಗಳನ್ನು ಪಡೆಯಬೇಕಾಗಿತ್ತು. ಈಗ ಆ ಅಂಕ ಪರಿಗಣಿಸುವ ಬದಲು ಸಿಇಟಿ ರಾಂಕ್ ಪರಿಗಣಿಸುವ ಸಲಹೆಯನ್ನು ಅವರು ನೀಡಿದ್ದಾರೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು, ಉನ್ನತ ಶಿಕ್ಷಣ ತಜ್ಞರ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು ಡಿಸಿಎಂ.
ಅಲ್ಲದೆ, ಈ ಬದಲಾವಣೆ ಮಾಡಬೇಕಾದರೆ ಕಾಯ್ದೆಯ ತಿದ್ದುಪಡಿಯನ್ನೂ ಮಾಡಬೇಕು. ಈ ಬಗ್ಗೆ ಕಾನೂನು ತಜ್ಞರು ಹಾಗೂ ಮುಖ್ಯಮಂತ್ರಿಗಳ ಜತೆಯೂ ಮಾತುಕತೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸರ್ಕಾರದ ನೀತಿಗಳು ಮತ್ತು ಕೋವಿಡ್ ಮುಂತಾದ ಕಾರಣಗಳಿಂದಾಗಿ ಇಂದು ರೈತರ ಬಳಿ ಬಿತ್ತನೆ ಚಟುವಟಿಕೆಗಳಿಗೆ ಕೈಯಲ್ಲಿ ಹಣವಿಲ್ಲದಂತಾಗಿದೆ. ಹಾಗಾಗಿ ರೈತರಿಗೆ ಬೀಜ, ಗೊಬ್ಬರವನ್ನು ಉಚಿತವಾಗಿ ನೀಡಲು ಕ್ರಮವಹಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೂಡಲೇ ಸಾಲ ವಿತರಣೆ ಚಟುವಟಿಕೆಗಳನ್ನು ಆರಂಭಿಸಬೇಕು. ಹೆಸರು, ಉದ್ದು, ಅಲಸಂಡೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಸೋಯಾ, ಶೇಂಗಾ ಮುಂತಾದ ಎಣ್ಣೆ ಬೀಜಗಳನ್ನು ಹೇಗಾದರೂ ಮಾಡಿ ಸಂಗ್ರಹಿಸಿ ಬೇಡಿಕೆ ಇದ್ದಷ್ಟು ನೀಡಲು ಕೂಡಲೇ ಸಮರೋಪಾದಿಯಲ್ಲಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪತ್ರದ ಮುಖ್ಯಾಂಶಗಳು : ಈ ವರ್ಷ ಕೇವಲ ಶೇ. 19, ಅಂದರೆ 410 ಕ್ವಿಂಟಾಲ್ ಹೆಸರು ಕಾಳು ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಗೆ ವಿತರಣೆ ಮಾಡಲಾಗಿದೆ. ಕಳೆದ ವರ್ಷ ತುಮಕೂರಿಗೆ 851 ಕ್ವಿಂಟಾಲ್ ಕಾಳನ್ನು ವಿತರಿಸಿದ್ದರೆ ಈ ವರ್ಷ ಕೇವಲ 90 ಕ್ವಿಂಟಾಲ್ ವಿತರಿಸಲಾಗಿದೆ. ಹಾಸನಕ್ಕೆ 618 ಕ್ವಿಂಟಾಲಿಗೆ ಬದಲಾಗಿ 87.5 ಕ್ವಿಂಟಾಲ್, ಮೈಸೂರಿಗೆ 418 ಕ್ವಿಂಟಾಲ್ ಬೇಡಿಕೆಗೆ ಬದಲಾಗಿ 165.50, ಚಾಮರಾಜನಗರಕ್ಕೆ 222 ಕ್ವಿಂಟಾಲಿನ ಬದಲು 67.5 ಕ್ವಿಂಟಾಲ್ ನೀಡಲಾಗಿದೆ. ಇದನ್ನು ದ್ರೋಹವೆನ್ನದೆ ಇನ್ನು ಯಾವ ಭಾಷೆಯಲ್ಲಿ ಹೇಳಬೇಕು?
ಈ ವರ್ಷದ ಪೂರ್ವ ಮುಂಗಾರಿನಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಸರಾಸರಿಗಿಂತ ಶೇ. 15-20 ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಸರ್ಕಾರ ಬಿತ್ತನೆ ಬೀಜ ಸರಬರಾಜು ಮಾಡದೆ ತೊಂದರೆ ಮಾಡಿದೆ. ನನಗಿರುವ ಮಾಹಿತಿಯ ಪ್ರಕಾರ ಈ ವರ್ಷ ಬೇಡಿಕೆಯನ್ನು ಅಂದಾಜು ಮಾಡದೆ, ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜವನ್ನು ಸಂಗ್ರಹಣೆ ಮಾಡಿಕೊಳ್ಳದೆ ಮೈಮರೆಯಲಾಗಿದೆ. ಕಡೆಗೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಳೆದ ವರ್ಷ ಬಿತ್ತನೆ ಬೀಜ ಪಡೆದ ರೈತರಿಗೆ ಈ ವರ್ಷ ನೀಡಲಾಗದು ಎಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಹೇಳಿ ಕಳಿಸಿದ್ದಾರೆ. ಕೃಷಿ ಇಲಾಖೆಯೂ ಸಹ ಸುತ್ತೋಲೆಗಳನ್ನು ಹೊರಡಿಸಿದೆ.
ಈಗ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿತ್ತನೆ ಕೆಲಸಗಳು ಪ್ರಾರಂಭವಾಗುತ್ತವೆ. ಅಲ್ಲಿಗೂ ಸಹ ಸಾಕಷ್ಟು ಪ್ರಮಾಣದ ಬಿತ್ತನೆ ಕಾಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಬರುತ್ತಿವೆ.ನನಗೆ ಇರುವ ಮಾಹಿತಿ ಪ್ರಕಾರ ಕೃಷಿ ಇಲಾಖೆ 8391 ಕ್ವಿಂಟಾಲಿಗೆ ಬದಲು ಕೇವಲ 5000 ರಿಂದ 5500 ಕ್ವಿಂಟಾಲ್ ಹೆಸರು ಕಾಳನ್ನು ವಿತರಿಸಲು ಈಗ ಹೊರಟಿದೆ. ಇದು ಸರಿಯಾದ ಕ್ರಮವಲ್ಲ.
ಇದೆಲ್ಲದರಿಂದ ಆಗುವ ಪರಿಣಾಮಗಳೇನು? ರೈತರಿಗೆ ಸಮರ್ಪಕ ಬಿತ್ತನೆ ಬೀಜ ಸಿಗದೆ ಬಿತ್ತನೆ ಮಾಡದಿದ್ದರೆ ಅಥವಾ ರೈತರು ತಮ್ಮ ಬಳಿ ಇದ್ದ ಗುಣಮಟ್ಟವಿಲ್ಲದ ಬೀಜಗಳನ್ನು ಬಿತ್ತನೆ ಮಾಡಿದರೆ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಇದರಿಂದ ರೈತರಿಗೆ ಆದಾಯ ಖೋತಾ ಆಗುತ್ತದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಕಾಳುಗಳನ್ನು ಬಳಸುವ ಗ್ರಾಹಕರಿಗೆ ಸುಲಭದ ದರದಲ್ಲಿ ಕೈಗೆಟುಕದೆ ದ್ವಿದಳ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡಲಾರಂಭಿಸುತ್ತಾರೆ. ಇದರಿಂದ ಒಟ್ಟಾರೆ ರಾಷ್ಟ್ರದ ಜನರ ಆರೋಗ್ಯದ ಮಟ್ಟ ಕುಸಿತವಾಗುತ್ತದೆ.
ನಿಜವಾದ ರಾಷ್ಟ್ರಪ್ರೇಮವೆಂದರೆ ತನ್ನ ಜನರಿಗೆ ಉತ್ತಮ ಆಹಾರವನ್ನು ನೀಡಿ ಸದೃಢರಾಗಿಸುವುದೂ ಹೌದಲ್ಲವೆ? ಕೇವಲ ಬಾಯಿ ಮಾತಿನಲ್ಲಿ ರಾಷ್ಟ್ರಪ್ರೇಮದ ಮಾತನಾಡಿ ಅದಾನಿ, ಧಮಾನಿ, ಅಂಬಾನಿಗಳ ಕೈಗೆ ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಯನ್ನು ಕೊಟ್ಟು, ಹಸಿರು ಶಾಲನ್ನು ಹೆಗಲ ಮೇಲೆ ಹಾಕಿಕೊಂಡರೆ ಅದು ರೈತ ಪ್ರೇಮವಾಗುತ್ತದೆಯೇ? ವೇಷಗಳನ್ನು ಧರಿಸಿ ಘೋಷಣೆಗಳನ್ನು ಕೂಗಿದರೆ ಅದು ರಾಷ್ಟ್ರಪ್ರೇಮವಾಗುತ್ತದೆಯೇ? ಸುಳ್ಳು ಘೋಷಣೆಗಳ ಕೆಸರಿನಲ್ಲಿ ಮುಳುಗಿಸಿ ಜನರನ್ನು ಭೀಕರ ಶೋಷಣೆ ಮಾಡುವುದರಿಂದ ದೇಶ ಪ್ರಗತಿ ಹೊಂದಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಈ ಬಾರಿಯ ದ್ವಿತೀಯ ಪಿಯು ಫಲಿತಾಂಶ ಘೋಷಣಾ ಪ್ರಕ್ರಿಯೆಯಲ್ಲಿ ಆಯಾ ವಿದ್ಯಾರ್ಥಿಗಳ ಪ್ರಥಮ ಪಿಯು ಹಾಗೂ ಎಸ್.ಎಸ್.ಎಲ್.ಸಿ ಅಂಕಗಳನ್ನು ಮಾನದಂಡಗಳಾಗಿ ಪರಿಗಣಿಸಲಾಗುತ್ತಿದ್ದು, ವೃತ್ತಿಪರ ಕೋರ್ಸಿಗೆ ಪ್ರವೇಶ ಕಲ್ಪಿಸುವ ಸಿ.ಇ.ಟಿ.ಪರೀಕ್ಷೆಗೆ ಪಿಯು ಫಲಿತಾಂಶ ಪರಿಗಣಿಸಿ ವೇಟೇಜ್ ನೀಡುವ ಪ್ರಕ್ರಿಯೆಯನ್ನು ಕೈಬಿಟ್ಟು, ಕೇವಲ ಸಿ.ಇ.ಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರಾಂಕಿಂಗ್ ಗೆ ಪರಿಗಣಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿ ಸಚಿವ ಸುರೇಶ್ ಕುಮಾರ್ ಅವರು ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥ ನಾರಾಯಣ್ ಅವರನ್ನು ಕೋರಿದ್ದಾರೆ. ಈ ಬಗ್ಗೆ ಅವರು ಬರೆದ ಪತ್ರದ ಅಂಶಗಳು ಕೆಳಕಂಡಂತಿವೆ.
ಮಾನ್ಯ ಉಪಮುಖ್ಯಮಂತ್ರಿಗಳೇ,
ದಿನಾಂಕ 04.06.2021ರಂದು ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಪಡಿಸುವ ತೀರ್ಮಾನವನ್ನು ನಾವು ತೆಗೆದುಕೊಂಡಿದ್ದೇವೆ. ಕೋವಿಡ್ ಪ್ರಸರಣದ ತೀವ್ರತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಗಳ ನಡುವೆ ಸಮತೋಲನ ತರಲು ಈ ರೀತಿಯ ನಿರ್ಧಾರವು ಅವಶ್ಯಕವಾಗಿತ್ತು. ಅದನ್ನು ತಮ್ಮೊಂದಿಗೂ ನಾನು ಹಂಚಿಕೊಂಡಿದ್ದೇನೆ.
ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ತೇರ್ಗಡೆ ಮಾಡುವ ನಿರ್ಧಾರದ ಹಿಂದೆ ನಾವು ನಿರ್ದಿಷ್ಟವಾದ ತರ್ಕವನ್ನು ಅನುಸರಿಸಿದ್ದೇವೆ. ಈ ವಿದ್ಯಾರ್ಥಿಗಳ ಮೊದಲ ಪಿಯು ಅಂಕಗಳಲ್ಲದೇ ಎಸ್.ಎಸ್.ಎಲ್.ಸಿ ಫಲಿತಾಂಶವನ್ನೂ ಪರಿಗಣಿಸಿ ಅದಕ್ಕೆ ಸಮನಾದ ಸೂಕ್ತ ಮೌಲ್ಯವನ್ನು ಸೇರ್ಪಡಿಸಿ ಗ್ರೇಡಿಂಗ್ ಫಲಿತಾಂಶವನ್ನು ನೀಡಲು ಸಹ ನಿರ್ಧಾರ ಮಾಡಿದ್ದೇವೆ. ಅಲ್ಲದೇ ಯಾವುದೇ ವಿದ್ಯಾರ್ಥಿಯು ತನ್ನ ಫಲಿತಾಂಶದ ಬಗ್ಗೆ ತೃಪ್ತಿ ಹೊಂದದೇ ಇದ್ದಲ್ಲಿ ಕ್ಲಪ್ತ ಸಮಯದಲ್ಲಿ ನಡೆಸಲಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆಯೆಂದೂ ಘೋಷಿಸಿದ್ದೇವೆ. ಇಂದಿನ ಸಂದರ್ಭದಲ್ಲಿ ಇದಕ್ಕಿಂತ ಪ್ರಸ್ತುತವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟ ಸಾಧ್ಯವಾಗಿರುತ್ತದೆ.
ಸಾಮಾನ್ಯವಾಗಿ ದ್ವಿತೀಯ ಪಿಯು ಅಂಕಗಳನ್ನು ಸಿಇಟಿ ಪರೀಕ್ಷೆಗೆ ಪರಿಗಣಿಸಿ ಸೂಕ್ತ ವೇಟೇಜ್ ಕಲ್ಪಿಸುವ ಮೂಲಕ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಈ ಬಾರಿಯ ಗ್ರೇಡಿಂಗ್ ಫಲಿತಾಂಶವು ವಿದ್ಯಾರ್ಥಿಗಳ ಪ್ರತಿಭೆಯನ್ನು ಖಚಿತವಾಗಿ ವ್ಯಕ್ತಪಡಿಸಿದರೂ ಅವರಿಗೆ ಅದನ್ನು ನಿರಾಕರಿಸಿ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಿದೆ. ಹಾಗಾಗಿ, ಈ ಬಾರಿಯ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶವನ್ನು ಸಿ.ಇ.ಟಿ ಪರೀಕ್ಷೆಗೆ ಗಣನೆಗೆ ತೆಗೆದುಕೊಳ್ಳುವಾಗ, ಈ ಫಲಿತಾಂಶವನ್ನು ಪ್ರಶ್ನಿಸಿ ಇನ್ನೊಮ್ಮೆ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಅನನುಕೂಲವಾಗಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ.
ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಈ ಬಾರಿಗೆ ಸೀಮಿತಗೊಂಡಂತೆ ತಮ್ಮ ಇಲಾಖೆಯು ನಡೆಸಲು ಉದ್ದೇಶಿಸಿರುವ ವೃತ್ತಿಪರ ಕೋರ್ಸ್ ದಾಖಲಾತಿಗೆ ಸಂಬಂಧಿಸಿದ ಸಿ.ಇ.ಟಿ.ಪರೀಕ್ಷೆಗೆ ವೇಟೇಜ್ ನೀಡುವ ಪ್ರಕ್ರಿಯೆಯನ್ನು ತಾವು ಕೈಬಿಟ್ಟು, ಕೇವಲ ಸಿ.ಇ.ಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರಾಂಕಿಂಗ್ ಗೆ ಪರಿಗಣಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿ ತಮ್ಮನ್ನು ಕೋರುತ್ತೇನೆ. ಈ ಕುರಿತಂತೆ ನಾನು ತಮ್ಮೊಂದಿಗೆ ಖುದ್ದಾಗಿ ಮಾತನಾಡಿರುವ ಅಂಶವನ್ನು ಸಹ ಇಲ್ಲಿ ಸ್ಮರಿಸುತ್ತಿದ್ದೇನೆ.
ಜೂನ್ ಐದು ಮತ್ತೆ ಬಂದಿದೆ. ವಿಶ್ವ ಪರಿಸರ ದಿನಾಚರಣೆಯ ಮಹೋತ್ಸವದ ಸಂದರ್ಭ. ಪರಿಸರ ಸಂರಕ್ಷಣೆಯ ಕುರಿತು ಅನೇಕ ಚಳವಳಿಗಳು ಕಾರ್ಯಕ್ರಮಗಳು ನಡೆಯುತ್ತವೆ.ನಾಗರಿಕ ಸಮಾಜದ ನಾವು ಅಭಿವೃದ್ಧಿಯ ಮಂತ್ರ ಜಪಿಸಿ ಉನ್ನತಿಯತ್ತ ಸಾಗುತ್ತಿವೆ ಎಂದುಕೊಂಡೇ ಅವನತಿಯ ಹಾದಿ ಹಿಡಿದಿದ್ದೇವೆ. ಕೊರೊನಾ ಸಂದರ್ಭದಲ್ಲಿ ಆಹಾರ ಪ್ಯಾಕೆಜ್, ಔಷಧಿ, ಸಂಸ್ಕಾರ ಇತ್ಯಾದಿ ಕಾರಣಕ್ಕೆ ಪ್ಲಾಸ್ಟಿಕ್ ಅನಿವಾರ್ಯವಾಗಿ ಬಳಕೆಯಾಗುತ್ತಿದೆ.ಪರಿಸರ ಸಂರಕ್ಷಣೆಯ ಸಂಬಂಧ ಆಧುನಿಕ ಸವಾಲುಗಳೇ ಎದುರಾಗಿವೆ.ಕಳೆದು ಹೋದದ್ದನ್ನು ಅಷ್ಟು ಸುಲಭವಾಗಿ ಗಳಿಸಲು ನಮ್ಮಿಂದ ಸಾಧ್ಯವಿಲ್ಲ ಇರುವುದನ್ನು ಹೇಗೆ ಜೋಪಾನ ಮಾಡಿಕೊಳ್ಳುವುದು ಎಂಬುದರ ಕಡೆಗೆ ನಮ್ಮ ಯೋಚನಾಲಹರಿ ಇರಬೇಕು.
ಬಿರುಬೇಸಗೆಯ ಕಾಲ ಕಳೆದ ಸಾಲಿಗೆ ಹೋಲಿಸಿಕೊಂಡರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇದೆ. ದೇಹವನ್ನು ತಂಪಾಗಿಡುವ ಎಳನೀರಿನಂತಹ ಪಾನೀಯದ ಕಡೆ ನಮ್ಮ ಗಮನ ಸ್ಟ್ರಾಇಲ್ಲದೆ ಕುಡಿಯಲಾರೆವು. ಸ್ಟ್ರಾ ಇಲ್ಲದೆಯೂ ಎಳನೀರಿನ ಸವಿ ಸವಿಯಬಹುದಲ್ಲವೇ ಹಾಗೆ ಬೇರೆ ಬೇರೆ ತಂಪು ಪಾನೀಯಗಳನ್ನು ಕುಡಿಯುವ ಸಂದರ್ಭದಲ್ಲಿಯೂ ಸ್ಟ್ರಾಗಳನ್ನೇ ಬಳಸುತ್ತೇವೆ. ಇವೂ ಪ್ಲಾಸ್ಟಿಕ್ ಅಲ್ಲವೇ ಇದನ್ನು ಬಿಟ್ಟರೆ ಪ್ರಕೃತಿಯ ಒಡಲಿಗೆ ನಾವು ನಿರಂತರವಾಗಿ ಸೇರಿಸುತ್ತಿರುವ ನಿಧಾನ ವಿಷ ಒಂದರ್ಥದಲ್ಲಿ ನಿಧನ ವಿಷವನ್ನು ಸೇರಿಸುವುದನ್ನು ತಡೆಯಬಹುದಲ್ಲವೇ. ಸ್ಟಾçಗಳನ್ನು ಎಳನೀರು ಮಾರಾಟಗಾರರು ಧೂಳಿನ ನಡುವೆಯೇ ಇಟ್ಟಿರುತ್ತಾರೆ ನಾವದರಲ್ಲಿ ಎಳನೀರು ಸೇವಿಸಿದರೆ ಹಣಕೊಟ್ಟು ಧೂಳನ್ನು ಸೇವಿಸಿದಂತಾಗುತ್ತದೆ. ಈ ರೀತಿಯ ಚಿಕ್ಕ ಚಿಕ್ಕ ಸಮಸ್ಯೆಗಳೇ ಬಹು ದೊಡ್ಡವಾಗಿ ಕಾಡುವುದು.ಹಾಗೆ ಚಾಕಲೇಟ್ ಪೊಟ್ಟಣ ಕೂಡ. ಚಾಕಲೇಟ್ ಬಹಳ ಚಿಕ್ಕವಾಗಿ ಉದರಕ್ಕೆ ಸಿಹಿಯನ್ನು ಕೊಟ್ಟರೂ ಅದನ್ನು ಪ್ಯಾಕ್ ಮಾ್ಡಿದ ಪ್ಲಾಸ್ಟಿಕ್ ಭೂಮಿಗೆ ನುಂಗಲಾರದ ತುತ್ತು. ವಿಷಕಾರಿ ಪ್ಲಾಸ್ಟಿಕ್ ಭೂಮಿಯ ಒಡಲನ್ನು ಸೇರಿರುವುದರಿಂದ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ ಪೋಲಾಗಿ ಹೋಗುತ್ತಿದೆ.
ಶುಭ ಸಮಾರಂಭಗಳಲ್ಲಿ ಮಾವಿನ ಎಲೆಯ ತೋರಣಗಳನ್ನು ನಾವು ಈಗ ಕಾಣುತ್ತಿಲ್ಲ. ಎಲ್ಲವೂ ಪ್ಲಾಸ್ಟಿಕ್ ಮಯ. ಅದರದ್ದೇ ತೋರಣಗಳನ್ನು ಇಳಿ ಬಿಟ್ಟಿರುತ್ತೇವೆ.ಹಬ್ಬ ಹರಿದಿನಗಳಲ್ಲಿ ಮಾವಿನ ಎಲೆ ಕಟ್ಟಲು ಹಂಚಿ ಕಡ್ಡಿಗಳನ್ನು ಬಳಸುತ್ತಿದ್ದೆವು ಆದರೆ ಈಗ ಸುಲಭ ಎಂದು ತಗಡಿನ ಸ್ಟಾಪ್ಲರ್ ಪಿನ್ಗಳನ್ನು ಹೊಡೆದು ತೋರಣ ಕಟ್ಟಿ ಒಣಗಿದ ಮೇಲೆ ರಸ್ತೆಗೆ ಎಸೆಯುತ್ತೇವೆ.ಅಪ್ಪಿ ತಪ್ಪಿ ದನಕರುಗಳ ಶರೀರಕ್ಕೆ ಸ್ಟಾಪ್ಲರ್ ಪಿನ್ಗಳು ಸೇರಿದರೆ ಅವುಗಳಿಗೆ ಯಮ ಯಾತನೆ. ಅದರ ಬದಲು ತೋರಣ ಚುಚ್ಚಲು ನಾವು ಊದು ಬತ್ತಿಯ ಕಡ್ಡಿಗಳನ್ನು ಬಳಸಬಹುದು.
ಐಸ್ಕ್ರೀಂಗಳು ಅವುಗಳ ಬೇರೆ ಬೇರೆ ವಿಧಗಳು ಚಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಆಕರ್ಷಿಸಿವೆ. ಆ ಕಪ್ಗಳೆಲ್ಲಾ ಪ್ಲಾಸ್ಟಿಕ್ಕೇ. ಐದಾರುವರ್ಷಗಳ ಹಿಂದೆ ಐಸ್ಕ್ರೀಂಗಳು ಖರೀದಿಸುವಾಗ ಮಟ್ಕ ಕುಲ್ಫಿ ಎಂಬ ಐಸ್ಕ್ರೀಂನ್ನು ಸಣ್ಣ ಕುಡಿಕೆಯಲ್ಲೇ ಪ್ಯಾಕ್ ಮಾಡಿರುತ್ತಿದ್ದರು. ಆದರೀಗ ಮಡಿಕೆ ಆಕಾರದ ಪ್ಲಾಸ್ಟಿಕ್ ಕಂಟೇನರ್ಳಲ್ಲಿ ಸಿಗುತ್ತಿದೆ. ನೀರು, ಕಾಫಿ, ಟೀ ಕಪ್ಗಳು ಪ್ಲಾಸ್ಟಿಕ್ ನವೇ ಇವುಗಳ ನಿಯಂತ್ರಣದ ಕುರಿತು ಯೋಚಿಸಬೇಕಾಗಿದೆ. ಇತ್ತೀಚೆಗೆ ಪತ್ರಿಕೆ ಓದುವಾಗ ಹರ್ಯಾಣದ ಐಸ್ಕ್ರೀಂಪಾರ್ಲರಿನ ಮಾಲೀಕರು ತೆಂಗಿನ ಚಿಪ್ಪಿನಿಂದ ವಿನ್ಯಾಸ ಗೊಳಿಸಿದ ಕಪ್ಗಳಲ್ಲಿ ಸರ್ವ್ ಮಾಡಿಸುತ್ತಾರೆ ಎಂದಿತ್ತು ಇದಂತೂ ಒಳ್ಳೆಯ ಯೋಚನೆ ಅನ್ನಿಸಿತು.ಕಾರಣ ಮನೆಗಳಲ್ಲಿ ತೆಂಗಿನ ಕಾಯಿ ಬಳಸಿದ ನಂತರ ಚಿಪ್ಪನ್ನು ಎಸೆಯುತ್ತಾರೆ ಕಾರಣ ಒಲೆಗಳು ಇಲ್ಲ ಅನ್ನುವ ಕಾರಣಕ್ಕೆ. ನಗರ ಪ್ರದೇಶದ ತೊಂಭತ್ತು ಪ್ರತಿಶತ ನಾಗರಿಕರೆಲ್ಲಾ ಸ್ನಾನದ ನೀರಿಗೆ ಸೋಲಾರ್, ಎಲೆಕ್ಟ್ರಿಕ್ ಗೀಝರ್, ಗ್ಯಾಸ್ ಗೀಝರ್ ಬಳಸುವುದು.
ಕಾಗದಕ್ಕೆ ತತ್ವಾರವಿರುವಂತಹ ಕಾಲ ನಾವು ಬಳಸುವ ಪ್ರತಿಯೊಂದು ಕಾಗದವೂ ಅರಣ್ಯ ನಾಶದ ಸಂಕೇತವೇ ಆಗಿದೆ. ಅದರಲ್ಲೂ ಮದುವೆ ಆಮಂತ್ರಣ ಪತ್ರಿಕೆಗಳಿಗೆ ಬಳಸುವ ಕಾಗದ ವ್ಯರ್ಥ.ದುಬಾರಿ ಕಾಗದ ಬಾರಿ ಬೆಲೆ ಕೊಟ್ಟರೂ ಉಪಯೋಗ ನೂರರಲ್ಲಿ ಎರಡು ಭಾಗ ಮಾತ್ರ , ಅದರಲ್ಲಿ ಪ್ಲಾಸ್ಟಿಕ್ಕಿನ ತೆಳು ಹೊದಿಕೆಯಿರುತ್ತದೆ. ಅದರ ಬದಲು ಕರವಸ್ತ್ರ, ಟವಲ್ ಇತ್ಯಾದಿಗಳಲ್ಲಿ ಮುದ್ರಿಸಿಕೊಟ್ಟರೆ ಅನುಕೂಲ ಬಟ್ಟೆಯ ಮೇಲಿನ ಮುದ್ರಣ ಒಂದರೆರಡು ಬಗೆತದ ಬಳಿಕ ಹೋಗುತ್ತದೆ ನಂತರ ಮನೆಯ ಉಪಯೋಗಕ್ಕೆ ಬರುತ್ತದೆ. ಈ ಪರಿಕಲ್ಪನೆ ಸಾಕಾರವಾದರೆ ಒಂದಷ್ಟು ಜನರಿಗೆ ಉದ್ಯೋಗ ದೊರೆತಂತಾಗುತ್ತದೆ. ಕಾಗದದ ಬಳಕೆಯನ್ನು ಸಲೀಸಾಗಿ ನಿರಾಕರಿಸಲು ಸಾಧ್ಯವಿಲ್ಲ ವ್ಯರ್ಥವಾಗುವ ಕಬ್ಬಿನ ಸಿಪ್ಪೆಯನ್ನು ಕಾಗದದ ತಯಾರಿಕೆಯಲ್ಲಿ ಯಥೇಚ್ಚವಾಗಿ ಬಳಸಿಕೊಳ್ಳಬಹುದು.
ಅತ್ಯಂತ ಪಾಯಕಾರಿ ಬೆಳವಣಿಗೆ ಎಂದರೆ ಟಿಶ್ಯು ಪೇಪರ್ ಬಳಕೆ. ಇವುಗಳು ಮರದ ಇರುಳಿನಿಂದಲೇ ಮಾಡುವುದು ಹಾಗೆ ಮರದ ತಿರುಳಿನಿಂದ ಬಿಳಿಯ ಬಣ್ಣಕ್ಕೆ ತರಬೇಕೆಂದರೆ ಹೈಡ್ರೋಜನ್ ಪೆರಾಕ್ಸ್ಐಡ್, ಸೋಡಿಯಂ ಕ್ಲೋರೈಡ್, ಕ್ಯಾಲ್ಸಿಯಂ ಹೈಪೋಕ್ಲೋರೈಡ್ಗಳನ್ನು ಬಳಸಿತುತ್ತಾರೆ. ಇವುಗಳು ಆರೋಗ್ಯಕ್ಕೆ ಮಾರಕ . ಇದೇ ಟಿಶ್ಯು ಪೇಪರ್ಗಳನ್ನು ಚಂಪಾಕಲಿಯಂತಹ ಸಿಹಿ ತಿಂಡಿಗಳಲ್ಲಿ ಕಲಬೆರಕೆಯಾಗಿ ಬಳಸುವುದಿದೆ. ಇಂತಹ ಟಿಶ್ಯು ಪೇಪರ್ ಬದಲಿಗೆ ಕರವಸ್ತ್ರ,ಟವಲ್ ಬಳಸಬಹುದಲ್ಲವೇ. ಗಣೇಶನ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಬದಲು, ರಾಸಾಯನಿಕ ಬಣ್ಣಗಳ ಮೂರ್ತಿಗಳ ಬದಲು ಮಣ್ಣಿನಸ್ವಾಭಾವಿಕ ಮೂರ್ತಿಗಳನ್ನು ಮಾಡಿ ಪೂಜಿಸಿದರೆ ಪರಿಸರ ಜಾಗೃತಿ ವಹಿಸಿದಂತೆ ಆಗುತ್ತದೆ.
ಮಳೆ ಬಾರದೆ ಬೆಳೆ ಇಲ್ಲ ಅಂತರ್ಜಲದ ಮಟ್ಟ ತೀರಾ ಕುಸಿದಿರುತ್ತದೆ ಹಾಗಾಗಿ ಕುಡಿಯುವ ನೀರನ್ನು ಹಣ ಕೊಟ್ಟು ವ್ಯರ್ಥ ಮಾಡುವುದು ಬದಲಾಗಬೇಕು. ಮದುವೆ,ಮುಂಜಿ ಗೃಹಪ್ರವೇಶ,ಯಾವುದೇ ಸಮಾರಂಭವಾಗಲಿ ಕುಡಿಯುವ ನೀರಿನ ಬಾಟಲಿಗಳನ್ನು ಕೊಡುತ್ತಾರೆ ಇದರಲ್ಲಿ ಎರಡು ದುರುಪಯೋಗ ಒಟ್ಟಿಗೆ ಇದೆ ಒಂದು ಪ್ಲಾಸ್ಡಿಕ್ ದುರುಪಯೋಗ ಇನ್ನೊಂದು ಕುಡಿಯುವ ನೀರಿನ ದುಂದು ವೆಚ್ಚ. ನೀರು ಕುಡಿದು ಎಸೆಯುವ ಬಾಟಲಿಗಳ ಕತ್ತಿನ ಭಾಗ ಕತ್ತರಿಸಿ ತಳಭಾಗದಲ್ಲಿ ರಂಧ್ರ ಕೊರೆದು ಮಣ್ಣು ತುಂಬಿಸಿ ಬೀಜ ಹಾಕಿ ಖಾಲಿ ಇರುವ ಜಾಗಗಳಿಗೆ ಹಾಕಿದರೆ ಶೇಕಡಾ ನೂರರಷ್ಟು ಅಲ್ಲದೇ ಇದ್ದರೂ ನಲವತ್ತು –ಐವತ್ತು ಭಾಗವಾದರೂ ಬೀಜವೊಡೆದು ಸಸಿಗಳಾಗಿ ಮರಗಳಾಗಬಹುದು.
ಶಾಲಾ ಕಾಲೇಜಿನ ಮಕ್ಕಳು ಬಳಸುವ ಲೇಖನ ಸಾಮಾಗ್ರಿಗಳೂ ಸಂಪೂರ್ಣ ಪ್ಲಾಸ್ಟಿಕ್ ಮಯವೇ ಎಲ್ಲಾ ಉಪಯೋಗಿಸಿ ಎಸೆಯುವ ಸಾಧನೆಗಳೇ ಉದಾಹರಣೆಗೆ ಪುಸ್ತಕಗಳಿಗೆ ಹಾಕುವ ರ್ಯಾಪರ್, ಪೆನ್,ಸ್ಕೇಲ್, ಶಾರ್ಪನರ್,ಕ್ಲಚ್ ಪೆನ್ಸಿಲ್ ಇತ್ಯಾದಿ. ಬಳಸಿ ಎಸೆಯಬಹುದಾದ ಪೆನ್ಗಳು ಮಕ್ಕಳ ಬರವಣಿಗೆಯ ಸೌಂದರ್ಯ ಕಸಿದಿದೆ ಎನ್ನುವುದು ನನ್ನ ಅನಿಸಿಕೆ. ಅದರ ಬದಲು ಇಂಕ್ ಪೆನ್ಗಳಲ್ಲಿ ಬರೆಯವ ಅಭ್ಯಾಸಕ್ಕೆ ಮರುಚಾಲನೆ ದೊರೆತರೆ ಮಕ್ಕಳ ಅಕ್ಷರವೂ ದುಂಡಾಗುತ್ತದೆ ವಿಷಕಾರಿ ಪ್ಲಾಸ್ಟಿಕ್ ಬಳಕೆ ತುಸು ತಪ್ಪಿದಂತಾಗುತ್ತದೆ.
ಆಹಾರ ಪದಾರ್ಥಗಳನ್ನು ಹೋಟೆಲ್ಗಳಲ್ಲಿ ಪ್ಲಾಸ್ಟಿಕನಲ್ಲೇ ಸುತ್ತಿ ಕೊಡುವುದು ಸಾಮಾನ್ಯವಾಗಿದೆ ಅದರಲ್ಲೂ ಕಪ್ಪಬಣ್ಣದ ಪ್ಲಾಸ್ಟಿಕ್ನಲ್ಲಿ ನ್ಯೂಸ್ ಪೇಪರಗಳಲ್ಲಿ ತಿನ್ನುವ ತಿಂಡಿಗಳನ್ನು ಕೊಡುವುದು ಅತ್ಯಂತ ಅಪಾಯಕಾರಿ ಹಾಗೆ ಮನೆಗಳಲ್ಲಿ ಬೇಳೆ ಕಾಳುಗಳನ್ನು ತುಂಬಿಸಿಡುವ ಪ್ಲಾಸ್ಟಿಕ್ ಡಬ್ಬಿಗಳು ಇದರ ಬಗ್ಗೆ ಗೃಹಿಣಿಯರು ಎಚ್ಚರ ವಹಿಸಬೇಕು.ಹಿಂದೆ ಬಾಳೆ ಎಲೆ, ಮುತ್ತುಗದ ಎಲೆ, ಅಡಿಕೆ ಹಾಳೆಗಳಲ್ಲಿ ಕಟ್ಟುತ್ತ ಇದ್ದರು. ನ್ಯೂಸ್ ಪೇಪರಗಳಲ್ಲಿ ಸುತ್ತಿದ ಬಜ್ಜಿ, ಬೋಂಡಾಗಳು ಕ್ಯಾನ್ಸರನ ರಹದಾರಿ ಎಂದು ತಮಿಳುನಾಡಿನ ಸರಕಾರ ಈ ಕುರಿತು ಬೀದಿ ಬದಿ ತಿಂಡಿ ತಿನಿಸು ವ್ಯಾಪಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದನ್ನು ಇಲ್ಲಿ ನೆನೆಯ ಬಹುದು. ಹಾಗೆ ಹೋಟಲ್ಗಳ ಇಡ್ಲಿ ಪ್ಲಾಸ್ಟಿಕ್ ಸಹಿತ ಬೆಂದಿರುತ್ತದೆ ಅದೂ ಕ್ಯಾನ್ಸರ್ ಕಾರಕ ಎಂಬುದು ಈಗ ಜಗಜ್ಜಾಹೀರಾಗಿದೆ. ಈ ಬಗ್ಗೆ ಗ್ರಾಹಕರು ಜಾಗೃತವಾಗಬೇಕು.
ಮಣ್ಣಿನ ಪಾತ್ರೆಗಳ ಉಪಯೋಗವನ್ನು ಮಾಡಿದಷ್ಟೂ ನಮಗೇ ಅನುಕೂಲ.ಇದು ಅಗತ್ಯ ಅಲಂಕಾರ ಎರಡಕ್ಕೂ ಉಪಯೋಗಕ್ಕೆ ಬರುತ್ತದೆ. ಅಲ್ಲುಮಿನಿಯಂ, ಸ್ಟೇನ್ಲೆಸ್ ಸ್ಟೀಲ್, ಕೋಟೆಡ್ ಪಾತ್ರೆಗಳು , ನಾನ್ಸ್ಟಿಕ್ ಕುಕ್ ವೇರ್ಗಳು ಆರೋಗ್ಯಕ್ಕೆ ಅಪಾಯಕಾರಿ.ಐಷಾರಾಮಿ ಹೋಟೆಲ್ಗಳಲ್ಲಿ ಮಣ್ಣಿನ ಪಾತ್ರೆ, ತಾಮ್ರದ ಬಡಿಸುವ ಪಾತ್ರೆಗಳೇ ಹೆಚ್ಚಾಗಿವೆ.ಇವುಗಳಲಿ ಆಹಾರದ ಪೋಷಕಾಂಶ ನಾಶವಾಗುವುದಿಲ್ಲ. ಅದರಲ್ಲೂ ಮಣ್ಣಿನಲ್ಲಿರುವ ಲವಣಗಳು ಆಮ್ಲೀಯ ಆಂಶಗಳನ್ನಿ ಹೀರಿಕೊಳ್ಳುತ್ತವೆ. ನಮ್ಮ ಹಿರಿಯರಿಗೆ ಇವುಗಳ ಉಪಯೋಗ ತಿಳಿದಿದ್ದ ಕಾರಣದಿಂದಲೇ ತುಪ್ಪದ ಕುಡಿಕೆ, ಸುಣ್ಣದ ಕುಡಿಕೆ, ನೀರಿನ ಗಡಿಗೆ,ಸಾರಿನ ಮಡಿಕೆ,ಮೊಸರಿನ ಮಡಿಕೆ, ಸಾಮಾನ್ಯವಾಗಿದ್ದವು.
ತ್ರಿಪದಿ ಕವಿ ಸರ್ವಜ್ಞನ ಭಾವ ಚಿತ್ರವನ್ನು ನೋಡಿದರೆ,ಆತನ ಕೈಯಲ್ಲಿ ಮಣ್ಣಿನ ಪಾತ್ರೆಇರುವುದನ್ನು ಕಾಣಬಹುದು ಅದನ್ನೇ ಆತ “ಕರದಿ ಕಪ್ಪರವುಂಟು” ಎಂದಿರುವುದು. ಹಾಗೆ ಋಷಿಮುನಿಗಳ ಕೈಯಲ್ಲಿ ಹಿತ್ತಾಳೆಯ ಕಮಂಡಲು ಕಾಣ ಬಹುದು ಇವುಗಳ ನೀರು ಅರೋಗ್ಯಕ್ಕೆ ಅನುಕೂಲವಿತ್ತು ಆದರೀಗ ಹಳೆ ಕಾಲದ ತಾಮ್ರ ಹಿತ್ತಾಳೆ ಪಾತ್ರೆ . ಕಂಚಿನ ಪಾತ್ರೆಗಳನ್ನು ತೂಕಕ್ಕೆ ಹಾಕಿ ಕೈತೊಳೆದುಕೊಳ್ಲುತ್ತದ್ದೇವೆ. ಕುಡಿಯುವ ನೀರಿನ ಶೇಖರಣೆಯೂ ಪ್ಲಾಸ್ಟಿಕ್ನಲ್ಲಾಗುತ್ತಿದೆ.
ಹಿರಿಯರು ಅಡುಗೆ ಮಾಡುವಾಗ, ಬಾಳೆ, ಅರಿಶಿಣ.ಹಲಸು ಇತ್ಯಾದಿ ಎಲೆಗಳನ್ನು ಬಳಸುತ್ತಿದ್ದರು ಅದರಲ್ಲೂ ಕಡುಬು ಮಾಡುವಾಗ ಈಗೆಲ್ಲ ಪ್ಲಾಸ್ಟಿಕ್ ಮೌಲ್ಡ್ ಬಂದಿವೆ .ಹಿಂದೆ ಊಟಕ್ಕೆ ಹಾಗು ಅಡುಗೆಗಳಲ್ಲಿ ಬಾಳೆ ಎಲೆಗಳನ್ನು, ಅಡಿಕೆ ಹಾಳೆಗಳನ್ನು,ಮುತ್ತುಗದ ಎಲೆ ಇತ್ಯಾದಿಗಳನ್ನು ಬಳಕೆ ಮಾಡುತ್ತಿದ್ದವು. ಈಗ ಅದೆಲ್ಲವನ್ನು ಕಳೆದು ಬಾಳೆ ಎಲೆಯ ಆಕಾರವನ್ನು ಹೋಲುವ ಪೇಪರ್ ಮೇಲೆ ತಿನ್ನುವಂತಾಗಿದೆ. ಒಂದು ಕಾಲದಲ್ಲಿ ಬಾಳೆ ಎಲೆ ಆಹಾರವನ್ನು ಸುತ್ತುವ ಪರಿಕರವಾಗಿತ್ತು. ಆದರೆ ಈಗ ಫುಡ್ ರ್ಯಾಪರ್ಗಗಳು ಸಿಗುತ್ತದೆ. ಪರ್ಚ್ಮೆಂಟ್ ಪೇಪರ್, ಅಲ್ಯುಮಿನಿಯಂ ಫಾಯಿಲ್ ರೀತಿಯಲ್ಲಿ ಆಹಾರ ಒಣಗಿಸಲು ಅಂಟಿಸಲು ಮತ್ತು ಬಿಸಿಯನ್ನು ಕಾಯ್ದಿಡಲು ಬಳಸುತ್ತಿದ್ದೇವೆ.
ಬಾಳೆ ಎಲೆಯ ಮೇಲೆ ಬಿಸಿ ಊಟ ಬಡಿಸಿದಾಗ ಅದರಲ್ಲಿರುವ ಪೋಷಕಾಂಶಗಳು ನಮ್ಮ ಶರೀರವನ್ನು ಸೇರುತ್ತಿದ್ದವು, ಜೀರ್ಣ ಕ್ರಿಯೆ ಸುಲಭವಾಗಿ ಆಗುತ್ತಿತ್ತು. ಇದರಿಂದ ಬಿಳಿ ಕೂದಲಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಬಾಳೆ ಎಲೆಯಲ್ಲಿ ಇರುವ ಎಪಿಗ್ಯಾಲೊಕೋಟ್ಟಟಿನ್ ಪಾಲಿಫೆನೇಲ್‌ಗಳು ಪ್ರಕೃತಿದತ್ತವಾದ ಆಂಟಿ ಆಕ್ಸಿಡೆಂಟ್‌ಗಳು ಇದು ತ್ವಚೆಗೆ ಉತ್ತಮ ಪೋಷಕಾಂಶ ನೀಡುತ್ತಿದ್ದವು. ಇದೆಲ್ಲವನ್ನು ಬಿಟ್ಟು ನಾವು ಆಧುನಿಕತೆಯ ಹೆಸರಿನಲ್ಲಿ ವಿಷ ಆಹಾರವನ್ನೇ ಸೇವನೆ ಮಾಡುತ್ತಿದ್ದೇವೆ. ಥಾಯ್ಲೆಂಡ್ ಸರ್ಕಾರ ಆಹಾರ ಪದಾರ್ಥಗಳು ಹಣ್ಣು ತರಕಾರಿಗಳನ್ನು ಸುತ್ತಲು ಕಡ್ಡಾಯವಾಗಿ ಬಾಳೆ ಎಲೆಗಳನ್ನೇ ಬಳಸಬೇಕು ಎಂದು ನಿಯಮ ಜಾರಿ ಮಾಡಿರುವಂತೆ ನಮ್ಮ ಸರಕಾರವೂ ನಿಯಮ ತರಬೇಕು. ಸಾಧ್ಯ ಆದಷ್ಟೂ ಬಟ್ಟೆ ಬ್ಯಾಗ್ ಗಳ ಉಪಯೋಗ ಬಂದರೆ ಚೆನಾಗಿರುತ್ತದೆ. ಸರಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಆದರೆ ಈಗ ಸಿಗುತ್ತಿರುವ ಬಟ್ಟೆ ಬ್ಯಾಗಿನಲ್ಲೂ ಕಲಬೆರಕೆ ಇದೆ ಬಿಸಿಗೆ ಹಿಡಿದರೆ ಪ್ಲಾಸ್ಟಿಕ್ ಜಿನುಗಿದಂತೆ ಜಿನುಗುತ್ತದೆ.
ಗೃಹಾಲಂಕಾರಕ್ಕೆ ನಾವೀಗ ಪ್ಲಾಸ್ಟಿಕ್ ಹೂಗಳನ್ನು ಬಳಸುತ್ತಿದ್ದೇವೆ.ಅದನ್ನು ಬಿಟ್ಟು ಮನೆಗಳಲ್ಲಿ ನಮಗೆ ಬೇಕಾದ ಹೂಗಳನ್ನು ಸಾಧ್ಯವಾದಷ್ಟೂ ಬೆಳೆಯಬಹುದು. ಹಾಗಾಗಿ ತಾರಸಿ ತೋಟಗಳ ಟ್ರೆಂಡ್ ಇತ್ತೀಚೆಗೆ ಬಹಳ ಮಾನ್ಯತೆ ಪಡೆಯುತ್ತಿದೆ.ಹಾಗಾಗಿ ಮನುಷ್ಯ ಯಾವುಕ್ಕೆ ಪ್ಲಾಸ್ಟಿಕ್ ಅನ್ನು ಪರ್ಯಾಯ ತೆಗೆದುಕೊಂಡಿದ್ದೇವೋ ಅವವೇ ಆಯ್ಕೆಗಳಿಗೆ ಮತ್ತೆ ಹಿಂದಿರುಗಿದರೆ ಪರಿಸರ ಹಾನಿ ಆರೋಗ್ಯ ಹಾನಿ ಎರಡೂ ತಪ್ಪುತ್ತದೆ. ಪರಿಸರ ಹಾನಿಯಲ್ಲಿ ಪ್ಲಾಸ್ಡಿಕ್ದೇ ಸಿಂಹ ಪಾಲು ಇದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾದುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ವಿಶಾಲಾರ್ಥದಲ್ಲಿ ಜೀವಿಗಳ ಬದುಕು, ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಸುತ್ತಲಿನ ಸ್ಥಿತಿ ಹಾಗೂ ಘಟಕಗಳ ಒಟ್ಟಾರೆ ಅಂಶಗಳ ಮೊತ್ತವೇ ಪರಿಸರ. ಸೃಷ್ಟಿ ಉಗಮದ ನಂತರ ಭೌಗೋಳಿಕ ಬದಲಾವಣೆಯಲ್ಲಿನ ಸಹಜ ಪರಿಸ್ಥಿತಿಯಲ್ಲಿ ಜೀವಿಗಳ ಉಗಮ. ಏಕಕೋಶ ಜೀವಿಯಿಂದ ಮಿಲಿಯನ್ ಮಿಲಿಯನ್ ವರ್ಷಗಳ ನಂತರ ಆದಿಮಾನವನ ಅಸ್ತಿತ್ವದ ಆರಂಭ. ಸ್ವಾಭಾವಿಕ ಪರಿಸರ ಜೀವಿಯಾಗಿದ್ದ ಮಾನವನಲ್ಲಿ ಆಧುನಿಕತೆ ಜಾಗೃತಿಯೇ ಪರಿಸರದ ವಿನಾಶದ ಮೊದಲ ಹೆಜ್ಜೆ.
ವಿಜ್ಞಾನ, ತಾಂತ್ರಿಕತೆಯ ಸೋಗಿನಲ್ಲಿ ಪರಿಸರ ವಿನಾಶದ ತೀವ್ರತೆ ಪಡೆಯಿತು. 21ನೇ ಶತಮಾನದ ವೇಳೆಗೆ ಭೂ ಭಾಗದ ಶೇ.80 ಕಾಡು ನಾಶವಾಗಿದೆ ಎಂಬುದು ಒಂದು ಅಂದಾಜು. ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಶೇ.33 ರಷ್ಟು ಅರಣ್ಯವಿದ್ದರೆ ಅಗತ್ಯ ಪ್ರಮಾಣದ ಮಳೆ ಬೀಳುವುದು. ಸದ್ಯ ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಶೇ.25 ಭಾಗ ಅರಣ್ಯ ವ್ಯಾಪಿಸಿದೆ. ಅಲ್ಪ ಪ್ರಮಾಣದಲ್ಲಿ ಅರಣ್ಯ ಪ್ರದೇಶ ವೃದ್ಧಿಸಿರುವುದು ಸಮಾಧಾನಕರ ಅಂಶ.
ಅರಣ್ಯ ನಾಶಕ್ಕೆ ಪ್ರಮುಖ ಕಾರಣಗಳು:
ವ್ಯವಸಾಯಕ್ಕಾಗಿ ಕಾಡು ನಾಶ. ವಾಣಿಜ್ಯ ಉದ್ದೇಶಕ್ಕಾಗಿ ಮರದಿಮ್ಮಿಗಳ ರವಾನೆ. ಗಣಿಗಾರಿಕೆ, ಜನಸಂಖ್ಯಾ ಸ್ಪೋಟ, ನಗರೀಕರಣ, ಔದ್ಯೋಗಿಕರಣ, ಜಲಾಶಯಗಳ ನಿರ್ಮಾಣ, ಅರಣ್ಯ ಬೆಂಕಿಗಾಹುತಿಗಳಿಂದ ಅರಣ್ಯ ತೆರವುಗಳ್ಳುತ್ತಿದೆ. 2018 ರಲ್ಲಿ ಭಾರತದಲ್ಲಿ 19310 ಹೆಕ್ಟೇರ್ ಅರಣ್ಯ ನಾಶವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಕಾಡು ನಾಶಗೊಳಿಸಿ ವ್ಯವಸಾಯ ಭೂಮಿಗೆ ಪರಿವರ್ತನೆ ಹೆಚ್ಚುತ್ತಿದೆ. ಅರಣ್ಯದ ಸಾಂದ್ರತೆ ಕುಂಠಿತಗೊಳ್ಳುತ್ತಿದೆ. ವನ್ಯ ಜೀವಿಗಳು ನಾಡು ಪ್ರವೇಶಿಸುತ್ತಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ.
ಅರಣ್ಯದ ಪ್ರಯೋಜನಗಳು
ಆಹಾರ, ಅರಿವೆಯ ಮೂಲಾಧಾರ, ಭೂ ಸವಕಳಿ ತಡೆಯುವುದರ ಮೂಲಕ ಮಣ್ಣಿನ ಫಲವತ್ತತೆ ಕಾಪಾಡುವುದು. ಪ್ರವಾಹ ನಿಗ್ರಹಿಸುವುದು. ಮರಗಳ ಬೇರು ನೀರು ಹೀರಿ ನೀರಾವಿ ಮೂಲಕ ವಾತಾವರಣ ಸೇರುಸುವುದು. ವಾತಾವರಣ ನಿಯಂತ್ರಿಸುವುದು. ಇಂಗಾಲದ ಡೈ ಆಕ್ಸ್ಯೆಡ್ ಹೀರುವ ಮೂಲಕ ಜಾಗತಿಕ ತಾಪಮಾನ ಸ್ಥಿರವಾಗಿರಿಸುವುದು. ಹಸಿರು ಮನೆ ಅನಿಲಗಳ ಮೂಲಕ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಪೂರಕ. ಕಡಲ ತೀರದ ತೆಂಗಿನ ಮರಗಳು ಬಿರುಗಾಳಿ ತಿರುಗಿಸುವುವು. ಜೀವಿಗಳ ಜೀವಾನಿಲ ಆಮ್ಲಜನಕ ಉತ್ಪಾದಿಸುವ ಕಾರ್ಖಾನೆಗಳು.
ಅರಣ್ಯ ನಾಶ ತಡೆಯಲು ಕ್ರಮಗಳು
ಕಾಡು ಕಡಿಯುವುದನ್ನು ನಿಯಂತ್ರಿಸಬೇಕು. ಅರಣ್ಯ ಬೆಂಕಿ ತಡೆಯಬೇಕು. ಮರು ಅರಣ್ಯೀಕರಣಕ್ಕೆ ಕ್ರಮ. ಕೃಷಿ ಭೂಮಿ ಪರಿವರ್ತನೆಗೆ ತಡೆ. ಅರಣ್ಯ ರಕ್ಷಣೆಗೆ ಸಾರ್ವಜನಿಕ ತಿಳಿವಳಿಕೆ ರೂಪಿಸುವುದು. ಅರಣ್ಯಗಳ್ಳರನ್ನು ಶಿಕ್ಷಿಸುವುದು. ಹೆದ್ದಾರಿ ನಿರ್ಮಾಣಗಳನ್ನು ತಡೆಯುವುದು. ವಿದ್ಯುತ್ ಸಂಪರ್ಕಕ್ಕಾಗಿ ಮರಗಳ ಮಾರಣ ಹೋಮ ತಡೆಯುವದು.
ಪರಿಸರ ಉಳಿಸಲು ಪ್ರಮುಖ ಕರ್ತವ್ಯಗಳು
ಜಲ ವಿದ್ಯುತ್ ಬದಲು ಸೌರ ವಿದ್ಯುತ್ ಬಳಸಬೇಕು. ಅನಗತ್ಯವಾಗಿ ಶಕ್ತಿ ಪೋಲು ಮಾಡದೆ ಸಂರಕ್ಷಣೆ ಮಾಡಲು ಶಿಕ್ಷಣ ನೀಡಬೇಕು.
ಜಲ ಮೂಲಗಳನ್ನು ಉಳಿಸಬೇಕು. ಮಳೆ ನೀರನ್ನು ಸಂರಕ್ಷಿಸಬೇಕು. ಮಳೆಕೊಯ್ಲು ವಿಧಾನ ಕಡ್ಡಾಯಗೊಳಿಸಬೇಕು.
ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ. ಅನಗತ್ಯ ವಾಹನ ಬಳಕೆ ನಿರ್ಬಂಧಿಸಬೇಕು.
ಸಾವಯವ ಗೊಬ್ಬರ ಬಳಕೆ ಹೆಚ್ಚಿಸಬೇಕು.
ಮರಗಿಡಗಳ ನೆಡಲು ಶಿಕ್ಷಣ ನೀಡಬೇಕು. ರಿಸೈಕಲ್ ಹಾಗೂ ಪುನರ್ ಉಪಯೋಗಿಸವ ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕು.
ಮಳೆ ಕಾಡುಗಳನ್ನು ರಕ್ಷಿಸಬೇಕು. ಸರ್ಕಾರ, ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರ ಸಹಭಾಗಿತ್ವದಿಂದ ಪರಿಸರ ಉಳಿವು ಸಾಧ್ಯ.
ಪರಿಸರದಲ್ಲಿ ಸಿಕ್ಕಿದ್ದನ್ನೆಲ್ಲಾ ಬಾಚುವ ಪ್ರವೃತ್ತಿಯಿಂದ ವಿನಾಶದತ್ತ ಸಾಗುತ್ತಿದ್ದೇವೆ. ಮುಂದಿನ ಪೀಳಿಗೆಗೆ ಹಣ, ಅಂತಸ್ತಿಗಿಂತಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನೀರು, ಶುದ್ಧಗಾಳಿ, ಫಲವತ್ತಾದ ಭೂಮಿ ಇಲ್ಲವಾದಲ್ಲಿ ಜೀವಿಗಳ ಅಸ್ತಿತ್ವವೇ ಇಲ್ಲ. ಬುದ್ದಿ ಜೀವಿಗಳಾದ ಮಾನವ ಪ್ರಬೇಧವೇ ಪರಿಸರದ ಬಗ್ಗೆ ಮುಂದಾಲೋಚನೆ ಇಲ್ಲ. ಮಕ್ಕಳಿಗೆ ಪರಿಸರದ ಪಾಠ ಹೇಳಿಕೊಟ್ಟಲ್ಲಿ ಪರಿಸರ ದಿನಾಚರಣೆಗೆ ಅರ್ಥವಿದೆ.
ತೋವಿನಕೆರೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ, ಸಿದ್ಧರಬೆಟ್ಟ ಪರ್ವತಶೃಂಗಗಳ ಸೆರಗಿನಲ್ಲಿರುವ ಒಂದು ಗ್ರಾಮ. ಹೋಬಳಿ ಕೇಂದ್ರವಾಗುವ ಎಲ್ಲ ಅರ್ಹತೆಗಳನ್ನೂ ಪಡೆದಿದ್ದರೂ ಬರೀ ಗ್ರಾಮವಾಗೇ ಉಳಿದಿರುವ ಈ ಹಳ್ಳಿಯ ಹೃದಯ ಭಾಗವಾದ ತುಮಕೂರು-ಮಧುಗಿರಿ-ಕೊರಟಗೆರೆ ವೃತ್ತದಲ್ಲಿ ನಿಂತು ಪಶ್ಚಿಮಕ್ಕೆ ನೋಡಿದರೆ ನಳನಳಿಸುವ ಸಮೃದ್ಧಿಯಾದ ಹಸಿರು ಬೇಲಿಯ ತೋಟವೊಂದು ಕಾಣುತ್ತದೆ. ಅದು ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರ ಪದ್ಮರಾಜು ಅವರ ತೋಟ. ಇವರಿಗೆ ತೋಟಗಾರಿಕೆ ಮತ್ತು ಬೇಸಾಯದಲ್ಲಿ ಅಪಾರವಾದ ಆಸಕ್ತಿ.
ಪದ್ಮರಾಜು
ಬಿ.ಕಾಂ. ಪದವೀಧರರಾದ ಪದ್ಮರಾಜು ಅರಸಿ ಬಂದ ನೌಕರಿಯನ್ನು, ಬೆಂಗಳೂರಿನ ಆಕರ್ಷಣೆಯನ್ನು ಬಿಟ್ಟು ತೋಟಗಾರಿಕೆಗೆ ಬಂದಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 4-5 ಗಂಟೆ ಕಾಲ ತೋಟದಲ್ಲಿ ಕೆಲಸ ಮಾಡುವ ಇವರು ಸಹಜ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಖುಷಿಯಾಗಿ ಅಳವಡಿಸಿಕೊಂಡಿದ್ದಾರೆ. ಹಿತಮಿತವಾದ ಫ್ರೂನಿಂಗ್(ಸವರುವಿಕೆ) ಇವರ ಕೃಷಿ ಶೈಲಿ. ತೋಟದ ಅಗೆತ, ಬೇಸಾಯ ತೀರಾ ತೀರಾ ಕಮ್ಮಿ. ಎಲ್ಲಾ ಅಲ್ಲೇ ಮುಚ್ಚುವಿಕೆ. ಇದರಿಂದ ತೋಟದಲ್ಲಿ ಅಪಾರವಾದ ಬಯೋಮಾಸ್ ಕಾಣಬಹುದು. ತೋಟ ಕಾಲು ಶತಮಾನದಿಂದ ಒಂದು ಹದಕ್ಕೆ, ಲಯಕ್ಕೆ ಒಗ್ಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆರುನೂರು ಅಡಿ ಆಳದ ಬೋರ್‌ವೆಲ್‌ಗಳಲ್ಲಿ ಎರಡು ಇಂಚು ನೀರಿನ ಲಭ್ಯವಿದೆ. ಐವತ್ತು ಅಡಿ ಆಳದ ತೆರೆದ ಕಲ್ಲುಬಾವಿ ಇದ್ದರೂ ಜಲ ಬತ್ತಿಹೋಗಿದೆ. ಆದರೂ ಮುಚ್ಚಿಸುವ ತಪ್ಪು ನಿರ್ಧಾರ ಮಾಡಿಲ್ಲ.
ಸಹಜ, ಸಾವಯವ ಪದ್ಧತಿಯ ಅರಿವಿಲ್ಲದವರಿಗೆ ಇವರ ತೋಟ ಆಕರ್ಷಕವಾಗಿ ಕಾಣುವುದಿಲ್ಲ. ಸ್ಯಾದರಿಯಂತೆ ಗೋಚರಿಸುತ್ತದೆ. ಎರಡು ಮುಕ್ಕಾಲು ಎಕರೆಯಲ್ಲಿ ಐದುನೂರು ಅಡಿಕೆ, ನಲವತ್ತು ತೆಂಗು, ಹತ್ತು ಹಲಸು, ನಲವತ್ತು ತೇಗ, ಬೇಲಿಯಲ್ಲಿ ಅಪಾರವಾಗಿ ಶ್ರೀಗಂಧ ಮತ್ತು ಗ್ಲಿಸೀಡಿಯಾ, ಬೇವು ಹೀಗೆ ಒಟ್ಟು ಎರಡು ಸಾವಿರ ಮರಗಿಡಗಳನ್ನು, ನಲವತ್ತು ಜಾತಿಯ ಸಸ್ಯಪ್ರಭೇದಗಳನ್ನು ಕಾಣಬಹುದಾಗಿದೆ. ನಿತ್ಯ ಉಪಯೋಗಿಯಾದ ಕರಿಬೇವು, ಮಸಾಲೆ ಎಲೆಗಿಡ, ಸಿಮರುಬ, ನೇರಳೆ, ಮಾವು, ಸೀಬೆ, ಬಾಳೆ, ನುಗ್ಗೆ, ಗೆಣಸು, ಮೆಣಸು ಮಾತ್ರವಲ್ಲದೆ, ಔಷಧ ಸಸ್ಯಗಳು ಉಂಟು. ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಮುನ್ನೂರು ವೆನಿಲ್ಲಾ ಸಸ್ಯಗಳನ್ನು ಬೆಳೆದು ಆರ್ಥಿಕವಾಗಿಯೂ ಸದೃಢರಾದರು.
`ಒಂದು ಕೇಜಿಗೆ ಮೂರು ಸಾವಿರ ರೂಪಾಯಿ ಗಳಿಸಿದ್ದುಂಟು’ ಎಂಬುದಾಗಿ ತುಂಬಾ ಹೆಮ್ಮೆಯಿಂದ ಹೇಳುವ ಪದ್ಮರಾಜು `ಕಾಲಕ್ಕೆ ತಕ್ಕಂತೆ ನಮ್ಮ ರೈತರು ನಮ್ಮ ಜಮೀನಿನಲ್ಲಿ, ತೋಟಗಾರಿಕೆಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ’ ಎಂಬುದನ್ನು ಹೀಗೆ ವಿವರಿಸುತ್ತಾರೆ;
`ಸಕಾಲಕ್ಕೆ ಮಳೆ, ನೀರು, ಇದ್ದಾಗ ತಂದೆ ಕಾಲದಲ್ಲಿ ಆಹಾರ ಬೆಳೆಗಳಾದ ರಾಗಿ, ಜೋಳ, ಹುರುಳಿ, ಅವರೆ, ತೊಗರಿ, ಶೇಂಗಾ ಇತ್ಯಾದಿಗಳನ್ನು ದಿಣ್ಣೆ ಹೊಲದಲ್ಲಿ ಬೆಳೆದೆವು. ಇತ್ತೀಚಿನ (ಎರಡು ದಶಕದಿಂದ) ಅನಿಶ್ಚಿತ ಮಳೆ, ಅಂತರ್‌ಜಲದ ಕುಸಿತದ ಕಾರಣದಿಂದ ತೋಟಗಾರಿಕೆಗೆ ಒತ್ತು ಕೊಟ್ಟಿದ್ದೇವೆ. ನಮ್ಮ ದಿಣ್ಣೆ ಹೊಲವನ್ನು ಹೊರತುಪಡಿಸಿ, ಎರಡೂ ಮುಕ್ಕಾಲು ಎಕರೆ ತೋಟಗಾರಿಕೆಯ ಎರಡು ದಶಕದ ಅನುಭವದಿಂದ ಹೇಳುವುದಾದರೆ ವಾರ್ಷಿಕ ನಿರ್ವಹಣಾ ವೆಚ್ಚ ಕಳೆದು ಮೂರು ಲಕ್ಷ ರೂಪಾಯಿಗೆ ಮೋಸವಿಲ್ಲ. ಮುಖ್ಯವಾಗಿ ಅಡಿಕೆ, ತೆಂಗಿನ ಬೆಳೆಯ ಬೆಲೆಯಲ್ಲಿ ಏರುಪೇರಾಗುವುದರಿಂದ ಒಂದು ವರ್ಷ ಮೂರು ಲಕ್ಷ, ಇನ್ನೊಂದು ವರ್ಷ ಐದಾರು ಲಕ್ಷ ಸಿಗಬಹುದು. ಏನೇ ಏರುಪೇರಾದರೂ ಸರಾಸರಿ ಮೂರು ಲಕ್ಷ ಗ್ಯಾರಂಟಿ. ಆದುದರಿಂದ ನಮ್ಮ ಮನೆಯ ಮೂಲಭೂತ ಸೌಲಭ್ಯಗಳಿಗೆ ಕೊರತೆ ಇಲ್ಲ. ಇನ್ನು ನಮ್ಮ ತೋಟದ ನಲವತ್ತು ತೆಂಗಿನ ಮರಗಳಲ್ಲಿ ಇಪ್ಪತ್ತೈದು ನಲವತ್ತು ವರ್ಷ ಮೀರಿದವು. ಅವುಗಳಿಂದ ಹದವಾದ ಕಾಯಿಗಳನ್ನು ಆಯ್ದ ಸಸಿಗಳನ್ನು ಬೆಳೆಸುತ್ತೇವೆ. ಪ್ರತಿವರ್ಷ ಒಂದು ಸಾವಿರಕ್ಕೂ ಮಿಗಿಲಾಗಿ ಪ್ರತಿ ಸಸಿಗೆ ಬೆಳವಣಿಗೆ ಆಧರಿಸಿ ಇನ್ನೂರು-ಇನ್ನೂರೈವತ್ತು ರೂಪಾಯಿಗೆ ಮಾರುತ್ತೇವೆ. ಸ್ಥಳೀಯ ರೈತರ ಬೇಡಿಕೆಯನ್ನು ಪೂರ್ಣವಾಗಿ ಪೂರೈಸಲಾಗುತ್ತಿಲ್ಲ.’
ಪದ್ಮರಾಜು ಅವರ ಈ ಮಾತುಗಳನ್ನು ಕೇಳುತ್ತಿದ್ದರೆ ಸಹಜವಾಗಿ `ರೈತರೇಕೆ ಬಡವರು? ರೈತರೇಕೆ ಸಾಲ ಮಾಡುತ್ತಾರೆ? ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಏಕಿಲ್ಲ?’ ಮುಂತಾಗಿ ಅನೇಕ ಪ್ರಶ್ನೆಗಳು ಏಳುತ್ತವೆ. ಈ ಕುರಿತು ಮೂರು ದಶಕದಿಂದ ಕೃಷಿಯ ಒಡನಾಟ ಮತ್ತು ಪತ್ರಿಕಾ ಮಾಧ್ಯಮದ ಸಂಪರ್ಕವಿರುವ ಇವರು ಸಾವಿರಾರು ವರದಿ, ಲೇಖನ, ಟಿಪ್ಪಣಿಗಳನ್ನು ಬರೆದಿದ್ದಾರೆ. ಅಷ್ಟು ಮಾತ್ರವಲ್ಲದೆ ತಮ್ಮ ತೋಟದಲ್ಲೇ ಹತ್ತಾರು ವಿಚಾರ ಸಂಕಿರಣಗಳನ್ನು, ಕಮ್ಮಟಗಳನ್ನು, ಪ್ರಾತ್ಯಕ್ಷಿಕೆಗಳನ್ನು ನಡೆಸಿದ್ದಾರೆ. ರೈತರಲ್ಲಿ ಅರಿವು ಮತ್ತು ಆತ್ಮವಿಶ್ವಾಸ ತುಂಬಲು ಶ್ರಮಿಸಿದ್ದಾರೆ.
ಕಳೆದ ಒಂದು ದಶಕದಿಂದ ತೋವಿನಕೆರೆಯ `ಹಳ್ಳಿಸಿರಿ’ ಮಹಿಳಾ ಸಂಘಟನೆ ಜೊತೆ ಒಡನಾಟ ಇಟ್ಟುಕೊಂಡಿರುವ ಪದ್ಮರಾಜು ಈ ಏರಿಯಾದಲ್ಲಿ ಹಲಸಿನ ಕ್ರಾಂತಿಗೆ ಕಾರಣರಾಗಿದ್ದಾರೆ. ಹಲಸಿನ ಮೌಲ್ಯವರ್ಧನೆ ಇವರ ಮಂತ್ರ. ಹಿರೇಹಳ್ಳಿಯ ತೋಟಗಾರಿಕಾ ಕೇಂದ್ರಕ್ಕೆ ನಿರ್ದೇಶಕರಾಗಿ ಕರುಣಾಕರನ್ ಅವರು ಆಗಮಿಸಿದ್ದು `ಹಳ್ಳಿಸಿರಿ’ ಗೆ ನಿಜವಾಗಿಯೂ ಸಿರಿಯೇ ಬಂದAತಾಗಿದೆ. ಹಲಸಿನಿಂದ ಮುನ್ನೂರು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು ಎಂಬುದನ್ನು ಶ್ರೀಪಡ್ರೆಯವರು ತಮ್ಮ ಹಲಸಿನ ಅಧ್ಯಯನದಲ್ಲಿ ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಹಳ್ಳಿಸಿರಿ ಸಂಸ್ಕೃತಿಗೆ ತೊಂಬತ್ತು ಖಾದ್ಯಗಳನ್ನು ತಯಾರಿಸುವುದು ಗೊತ್ತಿದ್ದರೂ, ತುಂಬಾ ಜನಪ್ರಿಯವಾದ ಹದಿನೈದು ಖಾದ್ಯಗಳನ್ನು ತಮ್ಮ ಪ್ರಾತ್ಯಕ್ಷಿಕಾ ಕಾರ್ಯಕ್ರಮಗಳಲ್ಲಿ ಮತ್ತು ಹಲಸಿನ ಔತಣಕೂಟಗಳಲ್ಲಿ ರುಚಿ ತೋರಿಸುತ್ತಾರೆ. ಪದ್ಮರಾಜುರವರು ಈ ಅರ್ಧ ವರ್ಷದಲ್ಲಿ ಹಲಸಿನ ಕುರಿತು ವಾಟ್ಸಪ್‌ನಲ್ಲಿ ಮಾಹಿತಿ ನೀಡಿರುವುದೇ ಒಂದು ಕೃತಿಯಾಗುತ್ತದೆ. ಹಲಸಿಗೆ ನವಕಲ್ಪವೃಕ್ಷ ಎಂಬುವ ಹೆಸರು ಪ್ರಾಪ್ತವಾಗಿದೆ. ಹಲಸನ್ನ ಕುರಿತು ಯಾಕಿಷ್ಟು ವ್ಯಾಮೋಹ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ:` ಹಲಸು ಮಳೆ ಕಡಿಮೆ ಬೀಳುವ ಒಣಪ್ರದೇಶದಲ್ಲೂ ಸಮೃದ್ಧಿಯಾಗಿ ಬೆಳೆಯುತ್ತದೆ. ಹೆಚ್ಚಿನ ಪೌಷ್ಠಿಕಾಂಶಗಳಿಂದ ಕೂಡಿದೆ. ಹಲವು ಖಾದ್ಯಗಳ ತಯಾರಿಕೆಯ ಸಾಧ್ಯತೆಯಿಂದ ಮೌಲ್ಯವರ್ಧನೆ. ನಮ್ಮ ಬಯಲು ಸೀಮೆಯ ರೈತರನ್ನು ಬರದಿಂದ ಮುಕ್ತಿಗೊಳಿಸಲು ಇರುವ ಸುಲಭೋಪಾಯ.’
ಹಲಸಿನ ಅಭಿಯಾನವನ್ನೇ ಆರಂಭಿಸಿರುವ ಪದ್ಮರಾಜುರವರಿಗೆ ಕೃಷಿ ವಿಶ್ವವಿದ್ಯಾಲಯದೊಂದಿಗೆ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಜಿಕೆವಿಕೆ) ಭಾರಿ ನಂಟು. ಜಿಕೆವಿಕೆ ವಿದ್ಯಾರ್ಥಿಗಳು ತಮ್ಮ ಪದವಿ ಅಧ್ಯಯನದ ಕೊನೆಯ ವರ್ಷ ಮೂರು ತಿಂಗಳು ಗ್ರಾಮವಾಸ್ತವ್ಯ ಮಾಡಿ, ರೈತರೊಂದಿಗೆ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವುದು ಮತ್ತು ಸಂವಾದ ಮಾಡುವುದು ಕಡ್ಡಾಯ. ಅಂಥ ಗ್ರಾಮ ವಾಸ್ತವ್ಯಗಳು ತೋವಿನಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಆಗಿವೆ, ಆಗುತ್ತಿವೆ. ಹೀಗಾಗಿ ತೋವಿನಕೆರೆಗೂ, ಜಿಕೆವಿಕೆಗೂ ಅವಿನಾಭಾವ ಸಂಬಂಧ ಏರ್ಪಟ್ಟಿದೆ.
ರೈತ ಆತ್ಮಹತ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಗೆ ಪದ್ಮರಾಜು ಉತ್ತರ: `ಎಲ್ಲ ರೈತರ ಆತ್ಮಹತ್ಯೆಗಳು ಸಾಲಬಾಧೆಗೆ ಅಲ್ಲ. ರೈತ ಸಾಲದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಿಲ್ಲ. ಸಾಲಮನ್ನಾ ಒಂದೇ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಕೆಲ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ, ಬರದ ಸಂದರ್ಭದಲ್ಲಿ ಮಾತ್ರ ಸರ್ಕಾರ ವಿವೇಚನೆಯಿಂದ ಸಾಲಮನ್ನಾ ಮಾಡಬೇಕಷ್ಟೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವುದು ಗಂಭೀರ ವಿಚಾರವಾಗಿದೆ’. ಹೀಗೆ ಅಭಿಪ್ರಾಯಪಡುತ್ತಾ ಅವರು ಬೆಳೆವಿಮೆ ಜಾಗೃತಿಗೆ ಮುಂದಾಗಿದ್ದಾರೆ.
ಇಂದು ಕೋವಿಡ್ ಸಂಕಷ್ಟ ನಮ್ಮ ಪರಿಸರ ಪ್ರಿಯರ, ರೈತರ ಬದುಕನ್ನು ಸಹ ಹಿಂಡಿ ಹಿಪ್ಪೆ ಮಾಡಿದೆ. ಇಂತಹ ದುರ್ಭರ ಸನ್ನಿವೇಶದಲ್ಲಿ ಇಂದು (ಜೂನ್ ೫) ವಿಶ್ವ ಪರಿಸರ ದಿನಾಚರಣೆ ಆಚರಿಸುವಂತಹ ಸ್ಥಿತಿ ಬಂದಿದೆ. ಹೀಗಿರುವಾಗ ರೈತರಿಗೆ ನಿಮ್ಮ ಸಂದೇಶವೇನು ಎಂದು ಕೇಳಿದಾಗ, `ರೈತ ಶ್ರಮಜೀವಿ. ಕಷ್ಟಸಹಿಷ್ಣು. ಆತ್ಮಹತ್ಯೆ ಪ್ರಶ್ನೆ ಬೇಡ. ಆತ್ಮಸ್ಥೈರ್ಯದ ಬಗ್ಗೆ ಮಾತನಾಡಿ, ಬರೆಯಿರಿ, ಬದುಕಿ’. ಇದು ಅವರ ಅನಿಸಿಕೆ. ಎಂಥ ಬುದ್ಧಿವಾದ! ಅಲ್ಲವೇ?
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.
ಇಂದಿನ ಸಂದರ್ಭದಲ್ಲಿ, ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವು ಇನ್ನಷ್ಟು ಸಮಗ್ರವಾಗಲು, ಹಾಗೂ ಹೆಚ್ಚು ನ್ಯಾಯಯುತವಾಗಲು ಈ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಫಲಿತಾಂಶಗಳನ್ನೂ ಅವಲೋಕಿಸಿ, ಸೂಕ್ತ ಮೌಲ್ಯವನ್ನು ಕಲ್ಪಿಸುವ ಮೂಲಕ ಫಲಿತಾಂಶ ಘೋಷಣೆ ಮಾಡಬೇಕೆಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಕರ್ನಾಟಕ ಪ್ರೌಢ ಶಿಕ್ಷಣಪರೀಕ್ಷಾ ಮಂಡಳಿಯ ವತಿಯಿಂದ ಅಂಕಿ ಅಂಶಗಳನ್ನು ಪಡೆದು, ಪ್ರಥಮ ಪಿಯು ಅಂಕಗಳೊಂದಿಗೆ ಸೂಕ್ತ ರೀತಿಯಲ್ಲಿ ಹೊಂದಿಸಿ ಜೂನ್ ಮಾಸಾಂತ್ಯಕ್ಕೆ ಗ್ರೇಡಿಂಗ್ ಫಲಿತಾಂಶಗಳನ್ನು ಘೋಷಿಸುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮನುಷ್ಯನು ಸ್ವಾರ್ಥ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ಪೃಕೃತಿಯ ಮೇಲೆ ಮಾಡಿದ ದಬ್ಬಾಳಿಕೆಯಿಂದ ಈಗಾಗಲೇ ಅನೇಕ ವನ್ಯಜೀವಿಗಳು ನಾಶಹೊಂದಿವೆ, ಇನ್ನೂ ಅನೇಕ ಜೀವಿಗಳು ವಿನಾಶದಂಚಿನಲ್ಲಿವೆ. ಮಾತ್ರವಲ್ಲ, “ಮಾಡಿದ್ದುಣ್ಣು ಮಹರಾಯ ಅನ್ನುವಂತೆ”, ಮನುಷ್ಯನೇ ಈಗ ಪರಿಸರ ಮಾಲಿನ್ಯದಿಂದ ಉಂಟಾದ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಡೆಂಗ್ಯು ಜ್ವರ, ಚಿಕನ್‌ಗೂನ್ಯ, ಮಲೇರಿಯ, ಇಲಿಜ್ವರ ಮುಂತಾದ ಸಾಂಕ್ರಾಮಿಕ ರೋಗಗಳಿಗೆ, ಮಿತಿ ಮೀರಿದ ಪರಿಸರ ಮಾಲಿನ್ಯದಿಂದ ಉಂಟಾಗಿರುವ ಭೂಮಂಡಲದ ತಾಪಮಾನ ಏರುವಿಕೆ ಮತ್ತು ಹವಾಮಾನ ಬದಲಾವಣೆಯೇ ಮುಖ್ಯ ಕಾರಣವೆಂದು ತಿಳಿದು ಬಂದಿದೆ. ಪರಿಸರ ಮಾಲಿನ್ಯದಿಂದ ಕ್ಯಾನ್ಸರ್ ಮತ್ತು ಉಸಿರಾಟ-ಸಮಸ್ಯೆಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಇಷ್ಟು ಮಾತ್ರವಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಉಂಟಾಗುತ್ತಿರುವ ಅಕಾಲಿಕ ಮಳೆ, ನೆರೆ, ಕ್ಷಾಮ, ಸಮುದ್ರಕೊರೆತ, ಬರಗಾಲದಂತಹ ದುಸ್ಥಿತಿಗಳಿಂದ ಅನೇಕ ಕಷ್ಟನಷ್ಟ, ಸಾವು ನೋವುಗಳನ್ನು ಅನುಭವಿಸುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಇನ್ನಷ್ಟು ಭೀಕರ ದುರಂತಗಳಿಗೆ ಕಾಲ ಸನ್ನಿಹಿತವಾಗಬಹುದು.
COVID-19 ಸಾಂಕ್ರಾಮಿಕದ ಮೊದಲ ಮತ್ತು ಎರಡನೇ ಅಲೆಗಳ ಅವಧಿಯಲ್ಲಿ, ವಾಯುಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದು ಅನೇಕ ಸಂಶೋಧನೆಗಳಿಂದ ನಿರೂಪಿತವಾಗಿದೆ. ಮಾತ್ರವಲ್ಲ, ವಲಸೆ ಪಕ್ಷಿಗಳೂ ಸೇರಿದಂತೆ ಅನೇಕ ವನ್ಯಜೀವಿಗಳ ಬದುಕು ಮರುಸ್ಥಿತಿಗೆ ಬಂದಿರುವುದು ವರದಿಯಾಗಿವೆ. ಪರಿಸರದ ಅವನತಿಗೆ ನಾವು ಮನುಷ್ಯರೇ ಕಾರಣ ಅನ್ನುವುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಈಗಾಗಲೇ ನಾವು ಮರು ಸ್ಥಿತಿಗೆ ತರಲಾರದಷ್ಟು ಪರಿಸರವನ್ನು ಸಾಕಷ್ಟು ಹಾನಿ ಮಾಡಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರದ ನೈರ್ಮಲ್ಯವನ್ನು ಕಾಪಾಡಲು ಮತ್ತು ಸಂರಕ್ಷಿಸಲು ಕಾರ್ಯಪ್ರವೃತ್ತರಾಗಬೇಕಾಗಿರುವುದು ತುಂಬಾ ಅವಶ್ಯ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅನೇಕ ದೇಶಗಳ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದ ಕಾರ್ಯತಂತ್ರಗಳನ್ನು ರೂಪಿಸುತ್ತಿರುವುದು ಸಮಾಧಾನದ ವಿಷಯ.
ಪರಿಸರ ಸಂರಕ್ಷಣೆ ಅಂದ ತಕ್ಷಣ ಸರಕಾರ, ಸಂಸ್ಥೆ, ಕೈಗಾರಿಕೋದ್ಯಮಿ, ಬಂಡವಾಳ ಶಾಹಿಗಳ ಅಥವಾ ಇನ್ನಾವುದೋ ದೇಶದ ಕಡೆಗೆ ಕೈ ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ. ಬದಲಾಗಿ ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಮೂಹಿಕವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ನಮಗೆ ಬದುಕಲು ಆಮ್ಲಜನಕ, ನೀರು, ಆಹಾರ, ನೆಲೆ ಎಲ್ಲವನ್ನೂ ನೀಡುವ ಪರಿಸರವನ್ನು ಸಂರಕ್ಷಿಸಲು ನಾವು ಕಾರ್ಯೋನ್ಮುಖರಾಗಬೇಕಿದೆ. ನಮ್ಮ ದೈನಂದಿನ ಜೀವನದಲ್ಲಿ ಪರಿಸರ-ಸ್ನೇಹಿ ಚಟುವಟಿಕೆಗಳನ್ನು ಅಳವಡಿಸಿಕೊಂಡು ನಮಗೆ ಆಸರೆಯಾಗಿರುವ ಭೂಮಿಯನ್ನು ಉಳಿಸಿ ಕೊಳ್ಳುವಲ್ಲಿ ಅಳಿಲುಸೇವೆ ಸಲ್ಲಿಸೋಣ.
ಪರಿಸರ–ಸ್ನೇಹಿಚಟುವಟಿಕೆಗಳು:
ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಉಳಿಸಿ ಬೆಳೆಸೋಣ. ಹಣ್ಣುಹಂಪಲು ನೀಡುವ ಗಿಡಗಳನ್ನು ನೆಟ್ಟರೆ, ಮುಂದೆ ವನ್ಯಜೀವಿಗಳಿಗೆ ಮುಖ್ಯವಾಗಿ ಪಕ್ಷಿಗಳಿಗೆ ಆಹಾರ ಸಿಗುತ್ತದೆ.
ನೀರನ್ನು ಅನಗತ್ಯವಾಗಿ ವೆಚ್ಚ ಮಾಡದಿರೋಣ.
ಮನೆ ಕಚೇರಿಗಳಲ್ಲಿ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿ ನೀರು ಸೋರುತ್ತಿದ್ದರೆ ತಕ್ಷಣ ಅದನ್ನು ನಿಲ್ಲಿಸೋಣ.
ಮಳೆನೀರನ್ನು ಆದಷ್ಟು ಸಂಗ್ರಹಿಸಿ ಉಪಯೋಗಿಸೋಣ. ನಮ್ಮ ಮನೆ ತೋಟಗಳಲ್ಲಿ ಮಳೆಕೊಯ್ಲು ಮಾಡುವ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡೋಣ.
ಹಳೆಯ ಕಾಗದ, ಪುಸ್ತಕಗಳನ್ನು ಸುಡದೆ, ಮರು ಮಾರಾಟ ಮಾಡಿ, ಅವನ್ನು ಪುನ: ಕಾಗದ ತಯಾರಿಸಲು ಬಳಸಬಹುದು, ಇದರಿಂದ ಅನೇಕ ಮರಗಳನ್ನು ಸಂರಕ್ಷಿಸಬಹುದು.
ಜೈವಿಕ ತ್ಯಾಜ್ಯಗಳಿಂದ ಅಡುಗೆ ಅನಿಲವನ್ನು ಉತ್ಪಾದಿಸಿ, ಜಾಗತಿಕ ತಾಪಮಾನ ಬಿಸಿಯೇರುವಿಕೆಗೆ ಕಾರಣಗಳಲ್ಲಿ ಒಂದಾದ ಮಿಥೇನ್ ಅನಿಲವನ್ನು ನಿಯಂತ್ರಿಸೋಣ.
ಮನೆಯ ಸುತ್ತಮುತ್ತ, ಬಾಲ್ಕನಿಯಲ್ಲಿ ಗಿಡಗಳನ್ನು ಬೆಳೆಸೋಣ. ಇದರಿಂದ ಮನೆಯ ಸೌಂದರ್ಯವೂ ಹೆಚ್ಚುತ್ತದೆ, ತಾಜಾ ಮಾಲಿನ್ಯರಹಿತ ಆಮ್ಲಜನಕವೂ ಸಿಗುತ್ತದೆ.
ಕಟ್ಟಡಗಳನ್ನು (ಮನೆ, ಅಂಗಡಿ, ಮಾಲ್, ಕಚೇರಿ) ಕಟ್ಟುವ ಹಂತದಲ್ಲೇ ಶಕ್ತಿ ಮತ್ತು ಸಂಪನ್ಮೂಲವನ್ನು ಉಳಿಸುವ ತಂತ್ರ – ಸಾಮಾಗ್ರಿಗಳನ್ನು ಬಳಸೋಣ.
ಮದುವೆ, ಧಾರ್ಮಿಕ ಮತ್ತು ಇನ್ನಿತರ ಶುಭ ದಿನಗಳಲ್ಲಿ ಪರಿಸರಕ್ಕೆ ಧಕ್ಕೆ ತರುವ ಆಚರಣೆಗಳನ್ನೆಲ್ಲ ಕಡಿಮೆಗೊಳಿಸೋಣ.
ವಿದ್ಯುತ್ಬಳಕೆಯನ್ನು ಮಿತಗೊಳಿಸೋಣ (ಅಗತ್ಯವೆನಿಸಿದಾಗ ಮಾತ್ರ ಫ್ಯಾನ್, ಹವಾ ನಿಯಂತ್ರಣ, ಬಳಸೋಣ, ಕೊಠಡಿ ಹಾಗೂ ಮನೆ ಕಚೇರಿಯಿಂದ ಹೊರಬರುವ ಮುನ್ನ ಸ್ವಿಚ್ ಗಳನ್ನು ಮರೆಯದೆ ಆರಿಸುವುದು ಇತ್ಯಾದಿ).
ಸೌರಶಕ್ತಿ, ಎಲ್ ಇ ಡಿ ಬಲ್ಬ್ಗ ಳನ್ನು ಬಳಸೋಣ.
ವಾಹನಗಳನ್ನು ಸುಸ್ಥಿತಿಯಲ್ಲಿಟ್ಟಿರೋಣ ಮತ್ತು ಸಿ.ಎನ್.ಜಿ ಇಂಧನವನ್ನು ಬಳಸಿ ವಾಯು ಮಾಲಿನ್ಯವನ್ನು ಕಡಿಮೆಗೊಳಿಸೋಣ.
ವಿದ್ಯುತ್-ಚಾಲಿತ ವಾಹನಗಳನ್ನು ಬಳಸುವ ಬಗ್ಗೆ ಆಸಕ್ತಿ ವಹಿಸೋಣ.
ನಾವು ಬಳಸುವ ಎಲ್ಲ ವಸ್ತುಗಳನ್ನು ಮರುಚಕ್ರೀಕರಣಗೊಳಿಸಲು ಸಾಧ್ಯವಿದೆ. ಘನತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಿ ಮರುಚಕ್ರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗೋಣ ಮತ್ತು ಕೈಜೋಡಿಸೋಣ.
ಮಿತಬಳಕೆ, ಮರುಬಳಕೆ ಮತ್ತು ಮರುಚಕ್ರೀಕರಣ ಎಂಬ ನೀತಿಯನ್ನು ಪಾಲಿಸಿ ತ್ಯಾಜ್ಯದ ಹೊರೆ ಕಡಿಮೆ ಮಾಡೋಣ.
ಸಾಧ್ಯವಾದಷ್ಟು ಸಾವಯವ ಕೃಷಿಯನ್ನು ಅವಲಂಬಿಸಿ (ಎರೆಗೊಬ್ಬರ, ಜೈವಿಕ ಕ್ರಿಮಿನಾಶಕ ಬಳಕೆ, ಸಂಯೋಜಿತ ಕೀಟ ನಿರ್ವಹಣೆ ಇತ್ಯಾದಿ), ಆಧುನಿಕ ಕೃಷಿ ಪದ್ಧತಿಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಕಡಿಮೆಗೊಸೋಣ.
ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗೋಣ.
ಮಳೆನೀರು ವ್ಯರ್ಥ ಸಮುದ್ರ ಸೇರದಂತೆ ಜಮೀನಿನಲ್ಲೇ ಇಂಗಿಸೋಣ.
ಸಾಧ್ಯವಾದಷ್ಟು ಸಾರ್ವಜನಿಕ ವಾಹನಗಳಲ್ಲಿ (ಬಸ್/ರೈಲು) ಪ್ರಯಾಣಿಸೋಣ.
ಸಮೀಪದ ತಿರುಗಾಟಕ್ಕೆ ಕಾಲ್ನಡಿಗೆ, ಸೈಕಲ್ ಸವಾರಿ ಮಾಡೋಣ, ಇದು ಪರಿಸರ ಮಾತ್ರವಲ್ಲ ಆರೋಗ್ಯದ ದೃಷ್ಠಿಯಿಂದಲೂ ಉತ್ತಮ.
ಪ್ಲಾಸ್ಟಿಕ್ ಕೈಚೀಲಗಳನ್ನು ಅವಲಂಬಿತವಾಗದೇ, ಬಟ್ಟೆಯ/ನಾರಿನ ಚೀಲಗಳನ್ನು ಬಳಸೋಣ.
ನಾವು ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು (ಕೈಚೀಲ, ಲೋಟ, ತಟ್ಟೆ, ಚಮಚ, ಐಸ್ಕ್ರೀಮ್ ಕಪ್ ಇತ್ಯಾದಿ) ಅಲ್ಲಲ್ಲಿಯೇ ಎಸೆಯದೇ ಅವುಗಳನ್ನು ಪುನರ್- ಬಳಕೆಗೊಳಿಸಲು (ರೀಸೈಕ್ಲಿಂಗ್) ಹಿಂದಿರುಗಿಸೋಣ.
4 ಅಥವಾ 5 ಸ್ಟಾರ್ ಲೇಬಲ್ ಇರುವ ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಇನ್ನಿತರ ಗೃಹೋಪಯೋಗಿ ಉಪಕರಣಗಳನ್ನು ಬಳಸಿ ವಿದ್ಯುತ್ ಶಕ್ತಿಯನ್ನು ಉಳಿಸೋಣ.
ಉಡುಗೊರೆ / ನೆನಪಿನ ಕಾಣಿಕೆಗಳನ್ನು ನೀಡುವಾಗ ಪರಿಸರಸ್ನೇಹಿ ವಸ್ತುಗಳನ್ನೇ/ ಪರಿಸರ ಸಂರಕ್ಷಣಾ ಪುಸ್ತಕ, ಗಿಡಗಳನ್ನು ಕೊಡೋಣ. ಸ್ಥಳಿಯ ಪರಿಸರ-ಸ್ನೇಹಿ ಕರಕುಶಲ ಮಾದರಿಗಳನ್ನು ಖರೀದಿಸೋಣ ಮತ್ತು ಪ್ರೋತ್ಸಾಹಿಸೋಣ.
“ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಪರಿಸರದ ಬಗ್ಗೆ ಕಾಳಜಿಯನ್ನು ಹುಟ್ಟಿಸಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಿವು ಮೂಡಿಸಿ, ಪರಿಸರಸ್ನೇಹಿ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಲು ಹುರಿದುಂಬಿಸಲು ಹೆತ್ತವರು / ಪೋಷಕರು ಮತ್ತು ಶಿಕ್ಷಕರು ಆಸಕ್ತಿ ತೋರಬೇಕು.
ಕೋವಿಡ್-೧೯ ಸುರಕ್ಷತೆಯ ದೃಷ್ಟಿಯಿಂದ ಬಳಸುವ ಫೇಸ್ ಮಾಸ್ಕ್ ಗಳನ್ನು ಸಿಕ್ಕಿದಲ್ಲಿ ಎಸೆಯದೆ, ಅದು ಒಂದು ಅಪಾಯಕಾರಿ ಜೈವಿಕ ತ್ಯಾಜ್ಯ ಆಗಿರುವುದರಿಂದ ವಿಲೇವಾರಿ ಮಾಡುವ ಬಗ್ಗೆ ವಿಶೇಷ ಜಾಗೃತಿ ವಹಿಸೋಣ.
ಪರಿಸರ ಸಂಘ, ಕೂಟಗಳನ್ನು ರಚಿಸಿಕೊಂಡು ತಮ್ಮ ಸುತ್ತಲ ಸ್ಥಳಗಳನ್ನು ಹೆಚ್ಚು ಚೊಕ್ಕವಾಗಿಟ್ಟುಕೊಳ್ಳಲು ಸೂಕ್ತವಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಕಾರ್ಯರೂಪಕ್ಕೆ ತರೋಣ.
ಮಾಡುತ್ತಿರುವ ಪರಿಸರ-ಸ್ನೇಹಿ ಕಾರ್ಯ-ಚಟುವಟಿಕೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ಇತರರನ್ನೂ ಹುರಿದುಂಬಿಸೋಣ.
ವಿಶ್ವ ಪರಿಸರ ದಿನಾಚರಣೆ: 2021 : ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 5 ಒಂದು ಮಹತ್ವಪೂರ್ಣವಾದ ದಿನ; ವಿಶ್ವ ಪರಿಸರ ದಿನಾಚರಣೆ. ಇದು ಪರಿಸರ ಮತ್ತು ಅದರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಎಚ್ಚರಿಸುವ ದಿನ. ಇದು ವಿಶ್ವ ಸಂಸ್ಥೆಯ – ಪರಿಸರ ಕಾರ್ಯಕ್ರಮದ ಅಡಿಯಲ್ಲಿ ನಡೆಯುವ ಜಾಗತಿಕ ಒಂದು ಅಭಿಯಾನ. 1974 ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಇದು ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಹೊರಹೊಮ್ಮುವ ಪರಿಸರ ಸಮಸ್ಯೆಗಳಿಗೆ ಪರಿಹಾರ ಮತ್ತು ವನ್ಯಜೀವಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ಬೃಹತ್ ಅಭಿಯಾನವಾಗಿದೆ. ‘ಮರುಕಲ್ಪಿಸಿ, ಮರುಸೃಷ್ಟಿಸಿ. ಮರುಸ್ಥಾಪಿಸಿ’ (Reimagine. Recreate. Restore) ಎಂಬ ಧ್ಯೇಯವನ್ನು ಇಟ್ಟುಕೊಂಡು ‘ವಿಶ್ವಸಂಸ್ಥೆ – ಪರಿಸರ ಕಾರ್ಯಕ್ರಮ’ ವು (United Nations – Environment Programme; UN-EP) ಈ ವರ್ಷದ ವಿಶ್ವ ಪರಿಸರ ದಿನವನ್ನು ಆಚರಿಸಿಲು ಕರೆನೀಡುವುದರ ಜೊತೆಗೆ ‘ಪರಿಸರ ವ್ಯವಸ್ಥೆಯ ಮರುಸ್ಥಾಪನೆ: 2021-2030’ (Ecosystem Restroration:2021-30) ಎಂಬ ಹತ್ತು ವರ್ಷದ ಒಂದು ಬೃಹತ್ ಕಾರ್ಯಯೋಜನೆಗೆ ಚಾಲನೆ ನೀಡಿದೆ. ದಶಕದ ಈ ಅವಧಿಯಲ್ಲಿ ಪ್ರತಿ ಭೂಖಂಡ ಮತ್ತು ಸಮುದ್ರದಲ್ಲಿ ಮಾನವ ನಿರ್ಮಿತ ಪರಿಸರ ವ್ಯವಸ್ಥೆಗಳ ಅವನತಿಯನ್ನು ತಡೆಯಲು, ಮತ್ತು ಅದನ್ನು ಹಿಮ್ಮುಖಗೊಳಿಸಬೇಕೆಂಬ ಉದ್ದೇಶವನ್ನು ಹೊಂದಿದೆ. ಆ ಮೂಲಕ ಇದು ಬಡತನವನ್ನು ನಿರ್ಮೂಲನೆಗೊಳಿಸಲು, ಹವಾಮಾನ ಬದಲಾವಣೆಯನ್ನು ಉಪಶಮನಗೊಳಿಸಲು ಮತ್ತು ವನ್ಯಜೀವಿಗಳ ಸಂತತಿ ನಿರ್ವಂಶವಾಗುವುದನ್ನು ತಡೆಯಲು ಸಹಕಾರಿಯಾಗುವುದು ಎಂದು ಆಶಿಸಲಾಗಿದೆ. ಇದು ಯಶಸ್ವಿಯಾಗಬೇಕಿದ್ದರೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರಿಗೂ ಮಹತ್ತರವಾದ ಜವಾಬ್ದಾರಿ ಇದೆ. ಈ ಜವಾಬ್ದಾರಿಯಿಂದ ನುಣುಚಿಕೊಂಡರೆ, ಅದರ ವ್ಯತಿರಿಕ್ತ ಪರಿಣಾಮ ಮುಂದೆ ನಾವೇ ಎದುರಿಸಬೇಕಾಗುತ್ತದೆ.ವಿಶ್ವ ಪರಿಸರ ದಿನಾಚರಣೆಯ ಹೆಚ್ಚಿನ ಮಾಹಿತಿಗಾಗಿ UN-EP ವೆಬ್‌ಸೈಟ್‌ಗೆ ಪ್ರವೇಶಿಸಬಹುದು: https://www.un.org/en/observances/environment-day
ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಭೂಮಿಯು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಯನ್ನು ಪೂರೈಸಲು ಅಲ್ಲ- ಮಹಾತ್ಮ ಗಾಂಧಿ.
ನೀರು ಅತ್ಯಂತ ಅಮೂಲ್ಯ ಸರಕು ಮತ್ತು ಈ ಭೂಮಿಯ ಎಲ್ಲ ಜನರಿಗೆ ಉಡುಗೊರೆಯಾಗಿದೆ ಮತ್ತು ಅದನ್ನು ಸಮಾನವಾಗಿ ಹಂಚಿಕೊಳ್ಳಬೇಕು – ಬುದ್ಧ.
ನಮ್ಮ ಕೈಯಲ್ಲಿ ಇಂದು ನಮ್ಮ ಭವಿಷ್ಯ ಮಾತ್ರವಲ್ಲ, ಜೊತೆಗೆ ನಮ್ಮೊಂದಿಗೆ ಈ ಭೂಮಿಯಲ್ಲಿರುವ ಎಲ್ಲ ಜೀವಿಗಳ ಭವಿಷ್ಯವೂ ಅಡಗಿದೆ – ಡೇವಿಡ್ ಅಟೆನ್ ಬರೋ.
ಪ್ರತಿಯೊಂದು ಜೀವಕ್ಕೂ ಇನ್ನೊಂದು ಪೂರಕವಯ್ಯ, ಜೀವಜೀವದ ನಂಟು ಬೃಹ್ಮಗಂಟು – ಗೋಪಾಲಕೃಷ್ಣ ಅಡಿಗ.
ಜಗತ್ತು ಬದಲಾಗಬೇಕೆಂದು ಎಲ್ಲರೂ ಬಯಸುತ್ತಾರೆ, ತಾನು ಬದಲಾಗಬೇಕೆಂದು ಯಾರೂ ಯತ್ನಿಸುವುದಿಲ್ಲ – ಲಿಯೋ ಟಾಲ್‌ಸ್ಟಾಯ್.
ಪರಿಸರ ಯಾರೊಬ್ಬರ ಆಸ್ತಿ ಅಲ್ಲ, ಅದು ಪ್ರತಿಯೊಬ್ಬನಿಗೂ ಅವಶ್ಯ, ಉತ್ತಮ ಪರಿಸರವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ – ಡಾ. ಶಿವರಾಮ ಕಾರಂತ.
ಮಾನವ ಜೀವಿಯ ಕಾರಣದಿಂದ ಭೂಮಿಯೊಂದು ರೋಗಗ್ರಸ್ತ ಗ್ರಹವಾಗಿದೆ. ಅದಕ್ಕೆ ತುರ್ತಾಗಿ ಚಿಕಿತ್ಸೆ ಬೇಕಾಗಿದೆ. ಬರಲಿರುವ ದುರಂತಕ್ಕೆ ತಡೆಯೊಡ್ಡದ್ದಿದ್ದರೆ ಇಡೀ ಪ್ರಥ್ವಿಯೇ ಜೀವಗಳ ವಾಸಕ್ಕೆ ಅನರ್ಹವಾಗಲಿದೆ- ಕೆ.ವಿ. ನಾರಾಯಣ.
ಈ ಪೃಥ್ವಿಯನ್ನು ನಮ್ಮ ತಾತ ಮುತ್ತಾತರಿಂದ ನಾವು ವಂಶ ಪಾರಂಪರ್ಯವಾಗಿ ಪಡೆದಿದ್ದೇವೆ. ನಮ್ಮ ಮಕ್ಕಳು ಮೊಮ್ಮಕ್ಕಳಿಗೆಂದು ನಾವಿದನ್ನು ಕಲುಷಿತಗೊಳಿಸಿಟ್ಟು ಹೋಗಬಾರದು – ನಾಗೇಶ ಹೆಗ್ಡೆ.
ಪರಿಸರ-ಸ್ನೇಹಿ ಕೆಲಸಗಳೆಂದರೆ ಬೀಜ ಬಿತ್ತಿದಂತೆ. ಅದು ಬೆಳೆದು ಫಲ ಕೊಡುವುದಲ್ಲದೆ ಮತ್ತೆ ಬೀಜವನ್ನು ಒದಗಿಸುತ್ತದೆ- ಕೆ. ಎಸ್. ನಿಸಾರ್ ಅಹಮದ್.
ಸುದೀರ್ಘ ಕಾನೂನು ಸಮರದಲ್ಲಿ ನಮ್ಮ ಹೆಮ್ಮೆಯ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್ ಆರ್ ಟಿ ಸಿ ಹೆಸರು ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಪಾಲಾಗಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಬದಲಿ ಹೆಸರು ಸೂಚಿಸಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಸ್ವಾರಸ್ಯಕರ ಚರ್ಚೆ ಶುರುವಾಗಿದೆ.
ಪರ್ತಕರ್ತ ಹ. ಚ. ನಟೇಶ ಬಾಬು‘KSRTC’ ಅನ್ನೋದು ಇನ್ಮೇಲೆ ಕೇರಳ ಸ್ವತ್ತು. ಹೋಗಲಿ ಬಿಡಿ ಒಂದು S ತೆಗೆದು ‘KRTC'(Karnataka Road Transport Corporation) ಮಾಡಿಕೊಳ್ಳೋಣ. ನೋ ಪ್ರಾಬ್ಲಂ ಎಂದು ಆರಂಭಿಸಿದ ಚರ್ಚೆಗೆ ಪ್ರತಿಕ್ರಿಯಿಸಿರುವ ಶ್ರೀಧರ ಬಾಣಾವರ ಅವರು Ka Ra Ra Sa Sam ಅಂತ ಇಂಗ್ಲಿಷ್ ನಲ್ಲಿ ಯಾಕಾಗಬಾರದು.? ನನ್ನ ಮಗಳಿಗೆ ನನ್ನ ಹೆಸರಿನ ಮೊದಲಕ್ಷರ (ಶ್ರೀ)Sri ಎಂದು S ಬದಲಿಗೆ ನಾಲ್ಕು ದಶಕಗಳ ಹಿಂದೆ ಇಟ್ಟಿದ್ದೇನೆ. ಏನೂ ತೊಂದರೆ ಆಗಿಲ್ಲ ಎಂದಿದ್ದಾರೆ.
ಇದೇ ಚರ್ಚೆಯಲ್ಲಿ ಭಾಗವಹಿಸಿರುವ ಹಿರಿಯ ಪತ್ರಕರ್ತ ಎಂ. ಜಯರಾಮ ಅಡಿಗ ಅವರು ..State ಪದವನ್ನು ಎಲ್ಲ ಸರ್ಕಾರಿ ನಿಗಮ -Corporation-ಗಳಲ್ಲಿ Karnataka ಪದದ ಮುಂದೆ ಸೇರಿಸುವ ನಿಯಮ ಅನುಸರಣೆ ಇದೆ. (ಸರ್ಕಾರಿಮಂಡಳಿ-Board-ಗಳಿಗೆ ಹಾಗೇನಿಲ್ಲ).ಯಾವುದೇ ಖಾಸಗಿ ಸಂಸ್ಥೆ ‘ಕರ್ನಾಟಕ….ಸಂಸ್ಥೆ’ ಹೆಸರಿಟ್ಟು ಕೊಂಡರೆ ಕರ್ನಾಟಕದ ಮುಂದೆ ರಾಜ್ಯ-State-ಪದಸೇರಿಸಿಕೊಳ್ಳಬಾರದೆಂಬ ನಿರ್ಬಂಧ. ಉದಾ: ನೀವು ಕರ್ನಾಟಕ ಪುಸ್ತಕ ಸಂಸ್ಥೆ Karataka Book House ಪ್ರಾರಂಭಿಸಿದರೆ ಅದನ್ನು ಕರ್ನಾಟಕ ರಾಜ್ಯ ಪುಸ್ತಕ ಸಂಸ್ಥೆ Karnataka State Book House ಎಂಬ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮೂಲಕ ಹೆಸರು ಬದಲಾವಣೆ ಸಂದರ್ಭದಲ್ಲಿ ಎದುರಾಗುವ ಸವಾಲನ್ನು ವಿವರಿಸಿದ್ದಾರೆ.
ಈ ಚರ್ಚೆ ಮುಂದುವರಿದಿದ್ದು ಹಲವಾರು ಹಲವು ರೀತಿಯ ಹೆಸರು ಸೂಚಿಸಿದ್ದಾರೆ.
ರಾ ಸು ವೆಂಕಟೇಶನಮ್ಮದೀಗ ಕದಂಬ ಸಾರಿಗೆ ಸಂಸ್ಥೆ /ಕರುನಾಡ ಸಾರಿಗೆ ಎಂದಾಗಲಿ!. ಎಂದು ಆರಂಭಿಸಿರುವ ಚರ್ಚೆಗೆ ಹಲವಾರು ಮಂದಿ ದನಿಗೂಡಿಸಿದ್ದಾರೆ.ಕೆಲವರು ಸುವರ್ಣ ಕರ್ನಾಟಕ ಸಾರಿಗೆ ಎಂದಾಗಲಿ ಎಂಬ ಸಲಹೆಯನ್ನು ನೀಡಿದ್ದಾರೆ. ಇಲ್ಲೂ ಚರ್ಚೆ ಮುಂದುವರಿದಿದೆ.
ಆತಂಕ ಬೇಡ
ಕೇರಳ ಎಸ್‌ಆರ್‌ಟಿಸಿಯು, ಕೆಎಸ್ಆರ್‌ಟಿಸಿ / ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿನ ಸುದ್ದಿ ಪ್ರಕಟವಾಗಿದೆ. ಒಂದು ವೇಳೆ ಅಂತಹ ನೋಟಿಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ.
ಈ ಮಧ್ಯೆ ಕೆಎಸ್ ಆರ್ ಟಿ ಸಿ ಎಂಬ ಹೆಸರು ಕೈ ತಪ್ಪುತ್ತಿದೆ ಎಂದು ಕನ್ನಡಿಗರು ಪಡುತ್ತಿರುವ ಆತಂಕಕ್ಕೆ ಸಾರಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ
ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರು ಕರ್ನಾಟಕದಿಂದ ಕೈತಪ್ಪಿದೆ ಎಂಬ ಆತಂಕ ಪಡಬೇಕಾಗಿಲ್ಲ. ಕೇರಳ ಸರ್ಕಾರವು ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ನಮ್ಮ ಕರ್ನಾಟಕ ಸರ್ಕಾರವು ಈ ಬಗ್ಗೆ ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.
ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರನ್ನು ಮುಂದೆಯೂ ಕರ್ನಾಟಕವು ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದು ಸವದಿ ಅವರು ಕಟುವಾಗಿ ಪ್ರತ್ಯುತ್ತರ ನೀಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ “ಕೆಎಸ್‌ಆರ್‌ಟಿಸಿ” ಎಂದು ಬಳಸುವಂತಿಲ್ಲವೆಂದು,ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿರವರು ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ಮಾಧ್ಯಮಗಳ ವರದಿಗಳನ್ನು ಇಂದು ಕೂಲಂಕಶವಾಗಿ ಪರಿಶೀಲಿಸಲಾಗಿದೆ. ಆದರೆ ಸಾರಿಗೆ ಸಂಸ್ಥೆಗೆ ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟರಿ ರವರಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶ ಇಂದಿನವರೆಗೂ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆ ಎಸ್ ಆರ್ ಟಿ ಸಿ ಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣಪತ್ರದ ವಿರುಧ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ ಎಂಬುದು ತಿಳಿದುಬಂದಿದೆ.ಏತನ್ಮಧ್ಯೆ, ಸದರಿ ಮಂಡಳಿಯನ್ನು .4.04.2021 ರ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಲಾಗಿದೆ ಮತ್ತು ಇಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿಯ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ ಮತ್ತು ಕೆಎಸ್‌ಆರ್‌ಟಿಸಿಯು ತನಗೆ ನೀಡಲಾಗಿರುವ ಟ್ರೇಡ್‌ಮಾರ್ಕ್‌ಗಳನ್ನು ಬಳಸಲಾಗುವುದಿಲ್ಲ ಎಂಬ ಸುದ್ದಿ-ವರದಿಗಳು ಸತ್ಯಕ್ಕೆ ದೂರವಾಗಿದೆ ಮತ್ತು ಇದನ್ನು ಕಾನೂನಾತ್ಮಕವಾಗಿ ಒಪ್ಪಲಾಗದು.
ಆದ್ದರಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಕಾನೂನಾತ್ಮಕ ಅಡೆತಡೆಯಾಗಲಿ ಅಥವಾ ನಿಷೇಧವಾಗಲೀ ಇಲ್ಲ ಎಂಬುದನ್ನು ಗಮನಿಸಬೇಕು ಎಂದು ಸವದಿಯವರು ಸಮಜಾಯಿಷಿ ನೀಡಿದ್ದಾರೆ.
ಕೇರಳ ಎಸ್‌ಆರ್‌ಟಿಸಿಯು, ಕೆಎಸ್ಆರ್‌ಟಿಸಿ / ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿನ ಸುದ್ದಿ ಪ್ರಕಟವಾಗಿದೆ. ಒಂದು ವೇಳೆ ಅಂತಹ ನೋಟಿಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಾವು ಪ್ರಸ್ತುತ ನಮ್ಮ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ. ಆದ್ದರಿಂದ ಆತಂಕಪಡಬೇಕಾಗಿಲ್ಲ ಎಂದು ಸವದಿ ಅವರು ತಿಳಿಸಿದ್ದಾರೆ.