ನೆರಳು ಬೆಳಕಿನ ಆಟದ ಮನೆಯಂತಹ ನನ್ನ ಮನಸ್ಸೆಂಬ ಮೈದಾನದಲ್ಲಿ ಹಾಕಿದ್ದ ಕುರ್ಚಿಗಳಲ್ಲಿ ಕುಳಿತು ಕಳೆದುಹೋದ ನಿಮ್ಮ ನಡುವೆ ನಾನೂ ಒಬ್ಬನಾಗಿ ಕಂಡುಕೊಂಡ ಸತ್ಯವೆಷ್ಟೊ ಸಾಕ್ಷಿಯಾದ ಸಂಭ್ರಮಗಳೆಷ್ಟೊ .
ಅದು ನನ್ನ ಸುದೀರ್ಘ ಬದುಕಿನ ಸಂತೋಷದ ದಿನಗಳು, ತನ್ನ ತಂದೆಯ ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಮೊದಲ ಬಾರಿಗೆ ನನನ್ನು ನೋಡಲು ಬಂದ ಮಗುವಿನ ಕಣ್ಣಲ್ಲಿ ಕಂಡ ರೋಮಾಂಚನ, ಮುನಿದು ಕುಳಿತ ಪ್ರೇಮಿಯ ಕೆನ್ನೆಗೆ ಯಾರೂ ಕಾಣದಂತೆ ಸಿಹಿ ಮುತ್ತನ್ನಿಟ್ಟ ಹುಡುಗನಲ್ಲಿ ಕಂಡ ಸಾರ್ಥಕತೆಯ ನಡುವೆ ಮುನಿಸು ಮರೆತ ಗೆಳೆಯರುಗಳೆಷ್ಟೊ ದಿಗಿಲು ಮರೆತ ದಂಪತಿಗಳೆಷ್ಟೊ ಹೀಗೆ ದಿನಕ್ಕೊಂದು ಕತೆ ಹೇಳುವ ದಿವ್ಯ ದೃಷ್ಟಿ ಇರುವ ಅಜ್ಜಿಯ ಹಾಗೆ ನಿಮಗೆಲ್ಲ ಕತೆ ಹೇಳುತ್ತಾ, ಕಪ್ಪು ಬಿಳುಪಿನ ಬಣ್ಣ ಬಣ್ಣದ ಕತೆಗಳನ್ನ ತೋರಿಸುತ್ತ ನಿಮ್ಮದೇ ಜೀವನದಲ್ಲಿ ನೆಡೆದ ಅವಿಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾದದ್ದು ನನ್ನ ಅದೃಷ್ಟವಲ್ಲದೆ ಇನ್ನೇನು?
ಅಷ್ಟೇ ಅಲ್ಲ ಮಹಾನ್ ನಟರ ನಿಮ್ಮ ನೆಚ್ಚಿನ ತಾರೆಯರ ಸಿನಿಮಾ ಬಿಡುಗಡೆಯ ದಿನವಂತೂ ತಳಿರು ತೋರಣಗಳಿಂದ ಸಿಂಗಾರಗೊಂಡು, ತಮಟೆ ಜಾಗಟೆಗಳ ಅಭಿಮಾನಿಗಳ ಜಯಘೋಷದ ಪುಷ್ಪವರ್ಷದಲ್ಲಿ ಮಿಂದೆದ್ದು ನಾನು ನಾನಾಗಿದ್ದಕ್ಕೆ ಎಷ್ಟು ಹೆಮ್ಮೆಪಟ್ಟಿದ್ದೆ .
ಆದರೆ ಈಗ ಏನೆಂದುಹೇಳುವುದು ಇದ್ದಕ್ಕಿದ್ದಂತೆ ಮನುಕುಲಕ್ಕೆ ಧೂಮಕೇತುವಿನಂತೆ ಬಂದೆರಗಿದ ಮಹಾಮಾರಿಯಿಂದಾಗಿ ದೇಶಾನುದೇಶಗಳೇ ನಲುಗಿ ಹೋಗಿದೆಯಂತೆ, ಜನಜೀವನವೇ ಅಸ್ತವ್ಯಸ್ತವಾಗಿದೆಯಂತೆ, ಇನ್ನು ನನ್ನಂತ ಬಡಪಾಯಿಯ ಕಥೆ ? ಕಣ್ಣು ಬಿಟ್ಟಷ್ಟು ದೂರ ಬರಿ ಕತ್ತಲು, ಮುಚ್ಚಿದ ಕಿಟಕಿ ಬಾಗಿಲು ಮುರಿದು ಬಿದ್ದ ಸೀಟುಗಳ ನಡುವೆ ಮನರಂಜನೆಯೆಂಬ ಕೀರಲಾದ ನನ್ನ ಕ್ಷೀಣ ಧ್ವನಿ ಕೇಳುದಾದರೂ ಹೇಗೆ ಇರಲಿ ಕೇಳಿಸುದಾದರೂ ಯಾರಿಗೆ ಇರಲಿ !
ಎಂತೆಂತಹದೋ ಭೀಕರ ಭೀಬತ್ಸಗಳನ್ನ ಮೆಟ್ಟಿ ನಿಂತ ಈ ರೋಗ ಒಂದು ಲೆಕ್ಕವೇ ? ಆಯುರ್ವೇದ ವೈದ್ಯವಿಜ್ಞಾನ ಹಾಗೂ ಪ್ರಕೃತಿದತ್ತವಾದ ಆತನ ಬುದ್ದಿ ಮತ್ತೆಯ ಸಹಾಯದಿಂದ ಇನ್ನೇನು ಕೆಲವೇ ಕೆಲವು ಸಮಯದಲ್ಲಿ ಆತ ಮೊದಲಿನಂತಾಗಬಲ್ಲ ಎಂಬ ವಿಶ್ವಾಸ ನನಗಿದೆ ಯಾಕೆಂದರೆ ನನಗಂತೂ ನಮ್ಮ ಸಂಭ್ರಮದ ದಿನಗಳನ್ನ ಸಿಂಗಾರಗೊಂಡು ಬರಮಾಡಿಕೊಳ್ಳುವ ಬೆಳಗಿನ ಜಾವದ ಕನಸು ಆದಷ್ಟು ಬೇಗ ನನಸಾಗುದೆಂಬ ವಿಶ್ವಾಸವಿದೆ. ಅಂದಹಾಗೆ ನಾನ್ಯಾರು ಅಂತ ಗೊತ್ತಾಯ್ತಲ್ಲ,
ಸದ್ಯಕ್ಕೆ ನೀವು ಮರೆತಿರುವ
ಇಂತಿ ನಿಮ್ಮ
ಚಿತ್ರಮಂದಿರ
ಗುರುದತ್ ಗಾಣಿಗ

ಕೋವಿಡ್ ಕಾರಣದಿಂದ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ತೆರೆಯುವ ದಿನ ಇನ್ನು ಎಂದೋ ಗೊತ್ತಿಲ್ಲ. ಚಿತ್ರಮಂದಿರವೊಂದರ ಸ್ವಗತವನ್ನು ಇಲ್ಲಿ ಹೇಳಿರುವವರು ಯುವ ನಿರ್ದೇಶಕ ಗುರುದತ್ ಗಾಣಿಗ. ಸುದೀಪ್ ಅವರ ಸಹಾಯಕರಾಗಿ ಅವರ ಬಳಿ ಕೆಲಸಕ್ಕೆ ಸೇರಿಕೊಂಡ ಗುರುದತ್ ಕೆಲವೇ ದಿನಗಳಲ್ಲಿ ತಮ್ಮ ಪ್ರತಿಭೆಯಿಂದ ಸುದೀಪ್ ಅವರ ನಿರ್ದೇಶನ ತಂಡದಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಮಾಣಿಕ್ಯ, ರನ್ನ, ಮುಕುಂದ ಮುರಾರಿ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ ಸುದೀಪ್ ಅವರೇ ಇವರನ್ನು ಅಂಬರೀಷ್ ಅವರ ಕೊನೆಯ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೋ ಗೆ ನಿರ್ದೇಶಕರಾಗಿ ಆಯ್ಕೆ ಮಾಡಿದರು. ಆ ಚಿತ್ರದಲ್ಲಿ ಅಂಬರೀಷ್, ಸುಹಾಸಿನಿ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರನ್ನು ಹ್ಯಾಂಡಲ್ ಮಾಡಿ ತಾವೊಬ್ಬ ಅದ್ಭುತ ತಂತ್ರಜ್ಞ ಎಂಬುದನ್ನು ನಿರೂಪಿಸಿದರು. ಸದ್ಯ ತಮ್ಮ ಎರಡನೇ ಚಿತ್ರದ ಸ್ಕ್ರಿಪ್ಟ್ ರಚನೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಮೂಲತಃ ಕುಂದಾಪುರದವರು ಗುರುದತ್



ಚಿತ್ರ ಮಂದಿರದ ಗತ ವೈಭವ ಮತ್ತೆ ಅದ್ದೂರಿಯಾಗಿ ಮರಳಲಿ.