ಕೋವಿಡ್ ಜಾಸ್ತಿ ಆದ ಹಿನ್ನೆಲೆಯಲ್ಲಿ ಮೊನ್ನೆ ಶನಿವಾರ ಬೆಂಗಳೂರು ಬಿಟ್ಟು ನೂರಾರು ಮಂದಿ ತಮ್ಮ ತಮ್ಮ ಊರಿನತ್ತ ಹೊರಟಾಗ ಮೂರು ನಾಲ್ಕು ವರುಷಗಳ ಹಿಂದೆ ಪರಪಂಚ ಸಿನಿಮಾಕ್ಕೆ ಯೋಗರಾಜ ಭಟ್ಟರು ಬರೆದಿದ್ದ ಈ ಹಾಡು ಇದ್ದಕ್ಕಿದಂತೆ ವೈರಲ್ ಆಯಿತು. ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ………..ವಾಪಸ್ಸು ಹೋಗು ಮಗನೆ….ಸೀದಾ ನಡಿ ಬಸ್ಸು ಹಿಡಿ ...ಎಂಬ ಈ ಹಾಡಿನಲ್ಲಿ ಪಟ್ಟಣಕ್ಕೆ ಬಂದು ಒದ್ದಾಡುತ್ತಿರುವವರ ಬದುಕನ್ನು ಭಟ್ಟರು ಚೆನ್ನಾಗಿ ವರ್ಣಿಸಿದ್ದರು.
ನನಗೂ ಈ ಹಾಡನ್ನು ಮತ್ತೊಮ್ಮೆ ಕೇಳಿದ ಮೇಲೆ ಹೌದಲ್ಲವೆ ಎಂದು ಅನ್ನಿಸಿತು. ಕೋಟಿ ವಿದ್ಯೆಯಲ್ಲಿ ಮೇಟಿ ವಿದ್ಯೆ ಮೇಲು ಎಂದಿದ್ದ ನಮ್ಮ ಹಿರಿಯರ ಮಾತಲ್ಲಿದ್ದುದು ಸ್ವಂತ ಮತ್ತು ಸ್ವಾವಲಂಬನೆಯ ಬದುಕಿನೆಡೆಗಿದ್ದ ಅವರ ಅನುಭವದ ಸಾರ. ವೃತ್ತಿಗಳನ್ನು ವಂಶ ಪಾರಂಪರ್ಯ ಮಾಡಿ,ಸಮಾಜದಲ್ಲಿ ವೃತ್ತಿ ಗೌರವಕ್ಕೆ ಚ್ಯುತಿ ಬರದ ಹಾಗೆ,ಸಾಮರಸ್ಯ ಕಂಡುಕೊಂಡಿದ್ದ ನಮ್ಮ ಪೂರ್ವಿಕರ ಬದುಕು, ಸಮಾಜ ಆರೋಗ್ಯಕರವಾಗಿತ್ತು. ವೃತ್ತಿಗಳಲ್ಲಿ ಒಡೆಯ,ಸೇವಕನ ಮಧ್ಯೆ ಅಂತಹ ದೊಡ್ಡ ಕಂದಕ ಇರಲಿಲ್ಲ. ಕಾರಣ ವಂಶ ಪಾರಂಪರ್ಯ ವೃತ್ತಿ. ಮಗನೊ,ಸೋದರ ಸಂಬಧಿಯೊ ಹೆಚ್ಚಾಗಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದುದರಿಂದ ಈಗಿನಂತಹ ಕಿರುಕುಳ,ವೃತ್ತಿ ಬೇಸರ,ಖಿನ್ನತೆ, ಸೇವಕತನದ ಮನೋಭಾವ,ಒಡೆತನದ ಗತ್ತು ಮುಂತಾದುವುಗಳಿಗೆ ಆಸ್ಪದ ಇರಲಿಲ್ಲ.
ವೃತ್ತಿಯೇ ಜೀವನ ಆಗಿರಲಿಲ್ಲ
ವೃತ್ತಿಯೇ ಜೀವನ ಆಗಿರಲಿಲ್ಲ,ಜೀವನಕ್ಕಾಗಿ ವೃತ್ತಿ ಆಗಿತ್ತು ಆಗ. ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಅನ್ನುವ ಮೂಲಕ ಕ್ರಮ ಶಿಕ್ಷಣಕ್ಕಿಂತಲೂ ಲೋಕ ಜ್ಞಾನದ ಕಡೆಗೆ ಹೆಚ್ಚು ಗಮನ ಹರಿಸಿ,ಬದುಕನ್ನು ಸಾರ್ಥಕವಾಗಿ ಅನುಭವಿಸಿ,ಅನಂದಿಸಿದ್ದರು. ಅವರ ಜೀವನ ಕ್ರಮದಲ್ಲಿ ಪ್ರತಿ ಹಂತದಲ್ಲೂ ಒಂದು ಅರ್ಥಗರ್ಭಿತವಾದ ಸಂಯಮವನ್ನು,ಅಂತರವನ್ನು ಕಾಯ್ದುಕೊಂಡು ಆರೋಗ್ಯಕರವಾದ ಸಮಾಜದ ನಿರ್ಮಾತೃಗಳಾಗಿ ಬಾಳಿರುವುದನ್ನು ಕಾಣುತ್ತೇವೆ. ಆಗಿನ ವೃತ್ತಿ ಎಂದರೆ ಸಮಾಜಕ್ಕೆ ಉಪಕಾರವಾಗುವಂಥ ಹುದ್ದೆ ಆಗಿರುತ್ತಿತ್ತು. ಹಾಗಾಗಿ ವೃತ್ತಿಯಲ್ಲಿ ಮೇಲಿರಿಮೆ,ಕೀಳರಿಮೆ ಎನ್ನುವಂತಹದು ಇರಲಿಲ್ಲ. ಏನಾದ್ರೂ ಇದ್ದರೆ,ಅವುಗಳು ಅನಿವಾರ್ಯ ಮಾತ್ರ ಎಂದು ಹೇಳಲು ಹಬ್ಬ,ಜಾತ್ರೆ,ಮದುವೆ ಮುಂತಾದ ಸಮಾರಂಭಗಳಲ್ಲಿ,ಸಮಾಜದ ಎಲ್ಲ ವೃತ್ತಿ ಪರರನ್ನು ಒಳಗೊಂಡ ವ್ಯವಸ್ಥೆ ಇರುತ್ತಿತ್ತು ಮತ್ತು ಅಂತಹ ಅಸಮಾಧಾನವನ್ನು ಇಲ್ಲವಾಗಿಸುತ್ತಿತ್ತು. ನಿಜಕ್ಕೂ ಅದ್ಭುತ ಎನ್ನಿಸುವಂತ ಸಾಮಾಜಿಕ ವ್ಯವಸ್ಥೆಯನ್ನು ನಮ್ಮ ಪೂರ್ವಿಕರು ಕಟ್ಟಿಕೊಂಡಿದ್ದರು.
ಈ ವೃತ್ತಿ ಪರತೆಯೇ ನಂತರದ ಜಾತಿ ವ್ಯವಸ್ಥೆಗೆ ಭದ್ರ ಬುನಾದಿ ಆಯ್ತು ಅಂತ ಸಮಾಜ ಶಾಸ್ತ್ರಜ್ಞರ ಅಭಿಪ್ರಾಯ. ಇರಬಹುದು. ಆಶ್ವರ್ಯ ಇಲ್ಲ. ಎಂಜಿನಿಯರ್ ಆದ ನಾನು ಎಂಜಿನಿಯರನ್ನೇ ಮದುವೆ ಆಗಲು ಬಯಸುವುದು,ಹಲವಾರು ಬದುಕಿನ ಮಗ್ಗಲುಗಳನ್ನು ಅನಾಯಾಸ ಮಾಡುವ ಪ್ರಯತ್ನವೇ ಹೊರತು,ಯಾರನ್ನೋ ಹೀಯಾಳಿಸಲೊ,ಕೀಳರಿಮೆಯಿಂದ ನೋಡುವುದೋ ಅಲ್ಲ.
ವ್ಯವಸ್ಥೆ ಯಾವುದೇ ಇರಲಿ,ದೋಷಗಳಿರುವುದು ಸಾಮಾನ್ಯ.ಕಾರಣ ಮನುಷ್ಯ ಇನ್ನು ವಿಕಾಸಗೊಳ್ಳುತ್ತಿದ್ದಾನೆಯೇ ಹೊರತು,ಪರಿಪೂರ್ಣನಾಗಿಲ್ಲ. ಇಂತಹ ಸಮೃದ್ಧ,ವೃತ್ತಿಪರತೆಯ,ಸ್ವಾವಲಂಬಿ ಬದುಕನ್ನು ಅನುಭವಿಸುತ್ತಿದ್ದ ಸಮಾಜಕ್ಕೆ ಮೇಲು,ಕೀಳು ಎಂಬ ಸೋಂಕು ತಗುಲಿತು. ಕೆಲವೆಡೆ ಅಮಾನವೀಯ ಮಟ್ಟಕ್ಕೂ ತಲುಪಿತು. ಹೊರಗಿನಿಂದ ಬಂದ ಅಕ್ರಮಣಕಾರರ ಅನ್ನಿಸಿಕೆಗಳು,ಇದೇ ಸಮಾಜದ ಅಂಗವಾಗಿದ್ದ ಕೆಲವು ವೃತ್ತಿ ಪರರಿಗೆ ಅನುಕೂಲಕರವಾಗಿ ಕೇಳಿಸಿತು. ಸಮಾಜದಲ್ಲಿ ವಿಕಲತೆ ಉಂಟಾಯ್ತು. ವಂಶ ಪಾರಂಪರ್ಯವಿದ್ದ ವೃತ್ತಿಗಳು ಪಲ್ಲಟವಾದವು,ಕನಿಷ್ಠ ಮಟ್ಟದ ಅಂತರವನ್ನಿಟ್ಟುಕೊಂಡು. ವೃತ್ತಿ ಗೌರವಗಳೂ ಎಲ್ಲ ಕಾಲದಲ್ಲೂ ಸಮ ಇತ್ತೆಂದು ಹೇಳಲು ಆಗಲ್ಲ. ದನ ಕಾಯುವುದು ಒಂದು ಕಾಲದಲ್ಲಿ ಶ್ರೇಷ್ಠ ಎನಿಸಿದ್ದು ,ಮತ್ತೊಂದು ಕಾಲದಲ್ಲಿ ಸಮಾಜದ ರಕ್ಷಣೆಗೆ ಅಂತ ಬೇರೆಯವರನ್ನು ಕೊಲ್ಲುವ ವೃತ್ತಿ ಶ್ರೇಷ್ಠ ಎನ್ನಿಸಿಕೊಳ್ಳುತ್ತದೆ.
ವೃತ್ತಿ ಬದಲಾವಣೆಗೆ ಶಾಸ್ತ್ರಗಳು ಅವಕಾಶ ಕೊಟ್ಟಿದ್ದರೂ,ಅಂದಿನ ಸಾಮಾಜಿಕ ವ್ಯವಸ್ಥೆ ಅಷ್ಟೊಂದು ಬೆಂಬಲಿಸಿಲ್ಲ ಅಂತ ಕಾಣುತ್ತದೆ.ಅದಕ್ಕೆ ಪರ,ವಿರೋಧ ಕಾರಣಗಳು ಸಮ ಪ್ರಮಾಣದಲ್ಲಿವೆ. ಬ್ರಿಟಿಷರು ಬಂದರು. ಸಮಾನತೆಯ ಹೆಸರಲ್ಲಿ ದೇಶದ ಉದ್ದಗಲಕ್ಕೂ ಬೇರುಬಿಟ್ಟಿದ್ದ ಈ ವೃತ್ತಿಪರತೆಯ ಸಮಾಜವನ್ನು,ಅವರ ಒಡೆದು ಆಳುವ ನೀತಿಗೆ ಅನುವುಗೊಳಿಸಿಕೊಂಡು ಬೇರೆಯದೇ ರೀತಿಯ ಸಮಾಜದ ಉಗಮಕ್ಕೆ ನಾಂದಿ ಹಾಡಿದರು. ವೃತ್ತಿಪರತೆ ಯೋಗ್ಯತೆ ಆಧರಿಸಿ ಇರಬೇಕು,ವಂಶಪಾರಂಪರ್ಯ ಸಲ್ಲದು ಎನ್ನುವಂತಹ ಅಭಿಪ್ರಾಯವನ್ನು ಬಲವಾಗಿ ಬೆಂಬಲಿಸಿದ ಸಮಾಜವೊಂದರ ನಿರ್ಮಾಣಕ್ಕೆ ಕಾರಣ ಆಯ್ತು. ಅದನ್ನು ಕೆಲವು ಸಮಾಜ ತಜ್ಞರು ನವ ಸಮಾಜ ಎಂದರು.
ಈ ನವಸಮಾಜದಲ್ಲಿ ವೃತ್ತಿಪರತೆಯಿಂದ ಉಂಟಾಗಿದ್ದ ಮೇಲು,ಕೀಲುಗಳು ಕಡಿಮೆಯಾಗಿ, ತಜ್ಞರು ಹೇಳಿದ ಹಾಗೆ ಸಮಾನತೆ ಉಂಟಾಗಿದ್ದು ನಿಜವಾದರೂ, ವೈಯಕ್ತಿಕವಾಗಿ ಆಯ್ಕೆ ಮಾಡಿಕೊಂಡ ವೃತ್ತಿ ಜೀವನಗಳಲ್ಲಿ ಹೇಳಲಾಗದ,ಅನುಭವಿಸಲಾಗದ ನೋವುಗಳು ಪ್ರಾರಂಭವಾದವು. ಅವುಗಳಿಗೆ ಖಿನ್ನತೆ,ಒತ್ತಡ,ವೃತ್ತಿ ಅಸಮಾಧಾನ ಅಂತಾನೂ ಹೆಸರಿಸಿದರು. ಅಷ್ಟೇ ಅಲ್ಲ ಇವುಗಳಿಗೆ ಸಂಬಂಧಿಸಿದ ಹಾಗೆ ಹಲವಾರು ಹತ್ಯೆಗಳು,ಆತ್ಮಹತ್ಯೆ ಗಳು ಸಮಾಜದಲ್ಲಿ ಸಾಮಾನ್ಯವಾದವು. ಯಾವ ವ್ಯವಸ್ಥೆಯೂ ಋಣಾತ್ಮಕ ಗುಣಗಳಿಗೆ ಅತೀತವಾಗಿಲ್ಲವಾದರೂ ತೀರಾ ಯುವ ಜನಾಂಗದ ಜೀವನಕ್ರಮಕ್ಕೇ ಮಾರಕ ವಾಗುತ್ತೆ ಅಂತಾದರೆ,ಅದನ್ನು ಗಂಭೀರವಾಗಿ ತೆಗೆದು ಕೊಳ್ಳಲೇ ಬೇಕು.
ವೃತ್ತಿ ಆಯಿತು ನೌಕರಿ
ಸಮಾಜದ ಬೇಡಿಕೆ ಪೂರೈಸಲು ಆರಂಭಗೊಂಡಿದ್ದ ವೃತ್ತಿಗಳು,ನವಸಮಾಜದಲ್ಲಿ ಜೀವನಕ್ಕಾಗಿ ಅನಿವಾರ್ಯವಾಯ್ತು. ಈಗ ಸರಕಾರಗಳು,ಖಾಸಗಿ ಒಡೆತನದ ಸಂಘ ಸಂಸ್ಥೆಗಳು ವೃತ್ತಿಗಳ ಬದಲಿಗೆ ನೌಕರಿಗಳನ್ನು ಕೊಡುವವರಾದರು. ಸಮಾನತೆಯ ನಿಲುವಿನಲ್ಲಿ ಉಂಟಾದ ನೌಕರಿ ವಿತರಣೆಯ ಅಸಮಾನತೆ ನಿವಾರಣೆಗೆ ಮತ್ತೆ ಜಾತಿಯ ಆಧಾರದಲ್ಲಿ ಆಯ್ಕೆಯ ಪ್ರಕ್ರಿಯೆ ನಾನಾ ತರಹದ ಸಮಸ್ಯೆಗಳಿಗೆ ನಾಂದಿ ಹಾಡಿತು. ಮೇಲು,ಕೀಳು ಇಲ್ಲೂ ತಪ್ಪಲಿಲ್ಲ!! ಮೇಲು,ಕೀಳೆಂಬುದು ಮನುಷ್ಯನ,ಸಮಾಜದ ಮಾನಸಿಕ ಭ್ರಮೆಯೇ ಹೊರತು ಅದಕ್ಕೆ ಬೌದ್ಧಿಕ ಅಸ್ತಿತ್ವ ಎನ್ನುವುದು ಇಲ್ಲ ಎನ್ನುವುದನ್ನು ತೋರಿಸಲು,ಆಧುನಿಕತೆಯ ನವಸಮಾಜವೂ ಎಡವಿತು. ಅದರ ಕಾರಣಗಳೇ ಒಂದು ಕಾಂಡ ಆಗುತ್ತೆ. ನನ್ನ ಉದ್ದೇಶ ಅದಲ್ಲ. ಹಳತನ್ನು ಬಿಟ್ಟು ಏನೇ ಹೊಸತನ್ನು ರೂಢಿಸಿಕೊಂಡರೂ,ಆಯ್ಕೆ ಮಾಡಿಕೊಂಡರೂ ಹಳತಿನ ಅಡ್ಡಪರಿಣಾಮಗಳನ್ನು ದಾಟಿ ಬರುವಂತಿರಬೇಕು. ಆದರೆ ನಮ್ಮ ನವಸಮಾಜದಲ್ಲಿ,ವಿದ್ಯಾಭ್ಯಾಸದ ಕ್ರಮದಲ್ಲಿ,ನೌಕರಿ ಗಳಿಸಿಕೊಳ್ಳುವ ಪ್ರಕ್ರಿಯೆಗಳಲ್ಲಿ,ಜೀವನ ಎನ್ನುವುದೊಂದು ಇದೆ,ಅದನ್ನು ಸವೆಯಲು ಏನೆಲ್ಲಾ ಬೇಕು,ಅವೆಲ್ಲವನ್ನೂ ಕಳೆದುಕೊಂಡು ಯಂತ್ರಗಳಾಗುತ್ತಿದ್ದೇವೆ ಎನ್ನುವ ಎಲ್ಲ ಲಕ್ಷಣಗಳೂ ಗೋಚರಿಸತೊಡಗಿದವು.
ಸಮಾಜ ತಜ್ಞರು ಪ್ರತಿ ಸಮಸ್ಯೆಗೂ ಜನಸಂಖ್ಯೆ ಕಾರಣ ಅಂತ ಹೇಳಿ 10-12 ಒಡಹುಟ್ಟಿದವರೊಂದಿಗಿದ್ದ ಸಂಸಾರಗಳನ್ನು 2ಕ್ಕೆ ತಂದದ್ದು ಆಯ್ತು. ಸಮಸ್ಯೆ ದೊಡ್ಡದಾಯ್ತೇ ಹೊರತು ಪರಿಹಾರ ಸಿಗಲಿಲ್ಲ. 2-3 ಎಕರೆ ಭೂಮಿ ಹೊಂದಿ, ಕೈಕೆಲಸ ಅಂತ ಕರಿಸಿಕೊಂಡ ಸಮಾಜ ಮುಖಿ ವೃತ್ತಿ ಮಾಡಿಕೊಂಡು 10-12 ಮಕ್ಕಳೊಂದಿಗೆ ಸಂತೃಪ್ತಿ ಜೀವನ ಸಾಗಿಸಿದ್ದ ನಮ್ಮ ಹಿರಿಯರೊಂದಿಗೆ,ಇಂದಿನ 50 ಸಾವಿರ ಸಂಬಳದ,ಗಂಡ ಹೆಂಡತಿಯ ಎರಡು ನೌಕರಿಯ,2 ಮಕ್ಕಳ ಜೀವನ ಹೋಲಿಸಿಕೊಂಡ್ರೆ,ನಾವು ಕಳೆದುಕೊಂಡದ್ದು ಏನು ಅಂತ ಸ್ಪಷ್ಟವಾಗುತ್ತದೆ. ಒಂದು ಬೇಕೆಂದರೆ,ಮತ್ತೊಂದನ್ನು ಕಳೆದುಕೊಳ್ಳಬೇಕು ಎಂಬಂತಹ ಸಮಾಧಾನ ಹೇಳಿಕೊಳ್ಳುತ್ತ ಒಂದು ತಲೆಮಾರು ಕಳೆದು ಹೋಯ್ತು. ಸಿಕ್ಕಿದ್ದಕ್ಕಿಂತ ಕಳೆದುಕೊಂಡದ್ದೇ ಅಮೂಲ್ಯವಾದದ್ದು ಅಂತ ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ತಯಾರಾಗಲು ಸಮಯ ಇಲ್ಲ!!
ಬದಲಾವಣೆ ಜಗದ ನಿಯಮ ಜಗದ ಕ್ರಿಮಿಯಾದ ಮಾನವನೂ ಅದಕ್ಕೆ ಹೊರತಲ್ಲ. ಆದರೆ ವಿವೇಕದ ಬದಲಾವಣೆ ಇಲ್ಲದಿದ್ದರೆ,ಈಗಿನ ರೀತಿ ಮದುವೆಯಾದ 3 ತಿಂಗಳಿಗೆ ವಿಚ್ಛೇದನ, ಅತೀ ಸಣ್ಣದು ಎಂದೆನ್ನಿಸುವ ಒತ್ತಡವನ್ನು ತುಂಬಾ ದೊಡ್ಡವರಾದ IAS ಅಧಿಕಾರಿಗಳು,ಚಿತ್ರನಟರು ತಾಳದೆ ಆತ್ಮಹತ್ಯೆಗೆ ಶರಣಾಗುವುದು, ತನ್ನ ಮನೆ,ಹೆಂಡತಿ,ಮಕ್ಕಳು ಎನ್ನುವ ಸಂಕುಚಿತತೆ ತುಂಬಾ ವಿದ್ಯಾವಂತರು ಅಂತ ಅನ್ನಿಸಿಕೊಂಡವರಿಂದ ಬಿತ್ತರ ಗೊಳ್ಳುವುದು ಸಾಮಾನ್ಯವಾಗುತ್ತದೆ. ಆಗಿದೆ ಕೂಡ.
ಇದಕ್ಕೆಲ್ಲ ಕಾರಣ ಸ್ವಯಂ ಬುದ್ಧಿ ಇಲ್ಲದ ಅಂಧಾನುಕರಣೆ, ಹುಸಿ ಪ್ರತಿಷ್ಠೆ,ಮೌಲ್ಯಯುತ ಜೀವನಕ್ಕೆ ಬೇಕಾದ ಮಾನವೀಯ ಸರಕುಗಳ ಕೊರತೆ. ನಾಲ್ಕು ಗೋಡೆಗಳ ಮಧ್ಯೆಯಿಂದ (ಈಗಂತೂ online education ಅಂತೆ) ಕೆಲಸಕ್ಕೆ ಬಾರದ ವಿಷಯಗಳನ್ನು ತಲೆಯಲ್ಲಿ ಒತ್ತಡ ಎನ್ನುವಷ್ಟು ತುರುಕಿಕೊಂಡು,ನೈಸರ್ಗಿಕವಾಗಿ ನಮ್ಮಲ್ಲಿರುವ ಮಾನವೀಯ ಗುಣಗಳನ್ನು ಕಳೆದುಕೊಂಡು, ಜೀವಂತ ಯಂತ್ರಗಳಾಗಿ,ವಿಶ್ವವಿದ್ಯಾಲಯ ಕೊಡುವ ಕಾಗದ ವನ್ನು ಜೀವ ಮಾನದ ಸಾಧನೆ ಅಂತ ಭಾವಿಸಿ ಹೊರಗೆ ಬರುತ್ತಿರುವುದು. ಬರುವಾಗ ತರುವ ಪ್ರತಿಷ್ಠೆ,ಸೊಕ್ಕು,ಅಮಾನವೀಯ ಅವತಾರ ತಾನು ಬಾಳಲು,ಸಮಾಜ ಬದುಕಲು ಎಷ್ಟರಮಟ್ಟಿಗೆ ಅನುಕೂಲವಾಗಬಹುದು ಎಂಬುದರ ಪರಿವೆಯೇ ಇಲ್ಲದೆ ಇರುವುದು ನಂತರದ ಎಲ್ಲ ಅನಾಹುತಕ್ಕೆ ಕಾರಣ.
ಕರೊನ ಕಾರಣದಿಂದ ಇಂತಹ ಬಹಳಷ್ಟು ಮಂದಿ ನೌಕರಿ ಕಳೆದುಕೊಂಡು ಜೀವನ ಕೊನೆಯಾಯ್ತು ಅಂದುಕೊಂಡು,ಇಷ್ಟು ದಿನ ಸಾಕಿದ್ದ ಜಾಗಕ್ಕೂ,ಸಂಸ್ಥೆ ಗೂ ಹಿಡಿಶಾಪ ಹಾಕುತ್ತ ಮರಳಿ ಮನೆಕಡೆಗೆ ಅಂತ ಬರ್ತಿದ್ದಾರೆ. ಅವರಿಗೆ ಗೊತ್ತಿಲ್ಲ. ಆವರಂದು ಕೊಂಡ ಮನೆ,ಊರು, ಸಮಾಜ,ಹಿರಿಯರನ್ನು ಕಳೆದುಕೊಂಡು ತುಂಬಾ ದಿನಗಳಾಗಿವೆ ಎಂದು! ಮುಂದಿನ ದಿನಗಳಲ್ಲಿ ಇಂತಹವರ ಆತ್ಮಹತ್ಯೆಗಳು ಹೆಚ್ಚಾದರೂ ಆಶ್ಚರ್ಯ ಪಡಬೇಕಿಲ್ಲ. ಹೇಗೂ ಬೈಯುವುದಕ್ಕೆ ಕರೊನ ಇದೆ,ಚಿಂತೆ ಇಲ್ಲ.
ಇವರಿಗೆ ಸ್ವಲ್ಪ ಪ್ರಾಪಂಚಿಕ ಜ್ಞಾನ ಇದ್ದರೆ,ಯಾರನ್ನೂ ಬಯ್ಯದೆ ನಗು ನಗುತ್ತಾ ಮುಂದಿರುವ ಭಾಗ್ಯದ ಬಾಗಿಲನ್ನು ತೆರೆಸುಕೊಂಡು ಬದುಕುವ ಬಗ್ಗೆ ತಿಳಿಸಬಯಸುತ್ತೇನೆ ಇಲ್ಲಿ.
ಯಾವ ಸರ್ಕಾರಗಳೂ ದೇಶದ ಎಲ್ಲ ವಿದ್ಯಾವಂತರಿಗೆ ನೌಕರಿ ಕೊಡುವಷ್ಟು ಶಕ್ತರಲ್ಲ,ಅದು ಅಸಾಧ್ಯವೂ ಕೂಡ. ಕರೊನಾದಿಂದ ದೇಶದಲ್ಲಿ ಏರ್ಪಟ್ಟಿರುವ ಖಾಲಿ ಜಾಗಗಳಲ್ಲಿ ಎಲ್ಲೆಲ್ಲಿ ನೀವು ತುಂಬಿಕೊಳ್ಳಬಹುದು ಎನ್ನುವ ಆಲೋಚನೆಯನ್ನೊಮ್ಮೆ ತಣ್ಣನೆಯ ತಲೆಯಿಂದ ನೀವೇ ಮಾಡಿಕೊಂಡು ತುಲನೆ ಮಾಡಿ. ಯಾರಾದ್ರೂ ನಿಮಗೆ ಕರೆದು ನೌಕರಿ ಕೊಡಬೇಕು ಅನ್ನುವ ಮನೋಭಾವವನ್ನು ದಯಮಾಡಿ ಹೊರಹಾಕಿ,ದೂರ ತಳ್ಳಿ. ಆತ್ಮ ನಿರ್ಭರ ಎನ್ನುವ ಅಸ್ತ್ರವನ್ನು ಸರ್ಕಾರ ನಿಮ್ಮ ಕೈಗೆ ಕೊಡುತ್ತಿದೆ.
ಅತಿರಥ ವೀರರಾದ ನೀವುಗಳು ಬಾಡಿಗೆ ಸೈನಿಕರಾಗಿ ಯಾರ್ಯಾರಿಗೋ ಯುದ್ಧ ಮಾಡಿದ್ದು ಸಾಕು. ನಿಮ್ಮ ಸಾಮ್ರಾಜ್ಯವನ್ನು ಕಟ್ಟಿ ಕೊಳ್ಳಿ. ನಿಮ್ಮಲ್ಲಿರುವ ಎಲ್ಲ ರೀತಿಯ ಶಕ್ತಿಗೂ ಪ್ರಕಟಗೊಳ್ಳಲು ಇದು ಸಕಾಲ. ಉದಾಹರಿಸಿ ಹೇಳುವುದಾದ್ರೆ ಚೀನಾ ದೇಶದ 59ಕ್ಕೂ ಹೆಚ್ಚು app ಗಳನ್ನು ಸರ್ಕಾರ ನಿರ್ಬಂಧಿಸಿದ ವಿಷಯವನ್ನೇ ತೆಗೆದು ಕೊಂಡು ಯೋಚಿಸಿ. ನಿಮ್ಮಲ್ಲಿನ ಎಷ್ಟೋ ಜನಕ್ಕೆ ಈ app ಗಳಿಗೆ ಬದಲಾಗಿ ಅದೇ ಕೆಲಸದ ಪರ್ಯಾಯ app ಮಾಡುವ ಶಕ್ತಿ ಇರಬಹುದು. ಮತ್ತೂ ಕೆಲವರಿಗೆ ಬೇರೆಯವರಿಂದ ಮಾಡಿಸುವ ಕಲೆ ಗೊತ್ತಿರಬಹುದು,ಮತ್ತೂ ಕೆಲವರಿಗೆ ಇದರಿಂದ ದೇಶದಲ್ಲಿ ಉಂಟಾಗಿರುವ ತೊಂದರೆಯ ತೀವ್ರತೆಯನ್ನು ಯಾವ ರೀತಿ ನೀಗಿಸಬಹುದು ಎನ್ನುವ ಅಂಶದಲ್ಲಿ ಪರಿಣಿತಿ ಹೊಂದಿರಬಹುದು. ನಿಮ್ಮನ್ನು ನೀವು ಹೊರಹಾಕಿ ಕೊಳ್ಳಲು ಇದು ಹೇಳಿ ಮಾಡಿಸಿದ ಸಕಾಲ.
Necessity is mother of Invention ಇಷ್ಟು ದಿನ ಯಾರೋ ಕರೆದು ನೌಕರಿ ಕೊಟ್ಟರೆಂದು ನಿಮ್ಮನ್ನೇ ಕಳೆದುಕೊಂಡಿರುವ ನೀವು ಧೈರ್ಯಗೆಡಬೇಡಿ. ನಿಮ್ಮನ್ನೇ ನಂಬಿಕೊಂಡಿರುವ ನಿಮ್ಮ ಸಂಸಾರಗಳಿವೆ. ಸೋಲನ್ನೂ ಸುಲಭವಾಗಿ ಒಪ್ಪಿಕೊಳ್ಳಬಾರದು. ಮತ್ತು ಸಾವೆಂದೂ ಯಾವ ಸಮಸ್ಯೆಗೂ ಉತ್ತರವಾದ ಉದಾಹರಣೆ ಇಲ್ಲ. ಜೀವಂತ ಇದ್ದ ನಾವು ಏನೂ ಮಾಡಲು ಆಗಲಿಲ್ಲ ಅಂದ್ರೆ,ಸತ್ತಾದ್ರೂ ಏನು ಸಾಧಿಸುವುದು, ಸುಡುಗಾಡಿಗೆ ಭಾರವಾಗಿ??
ಮೀನನ್ನು ಮರ ಏರುವ ಸಾಮರ್ಥ್ಯ ದಿಂದ,ಯೋಗ್ಯತೆ ನಿರ್ಧರಿಸಿ, ಮಂಗಕ್ಕೂ,ಮೀನಿಗೂ ಸಮಾನತೆ ಕಲ್ಪಿಸುವ ಭರದಲ್ಲಿ ಕಳೆದುಹೋಗಿರುವ ನಾವು,ನಮ್ಮ ತನವನ್ನು ನಾವೇ ತಿಳಿದು ಜಗತ್ತಿಗೆ ತೋರಿಸಬೇಕು. ಮರ ಏರುವಲ್ಲಿ ವಿಫಲರಾದರೇನು,ಈಜುವುದರಲ್ಲಿ ಸಿದ್ಧಹಸ್ತವಿರುವ ನಾವು ನೀರನ್ನು ಹುಡುಕಿ ಹೋಗೋಣ. ಯಾರೋ ಮೂರ್ಖ ಮರ ಏರುವ ಸ್ಪರ್ಧೆ ಇಟ್ಟರೆ,ಭಾಗ ವಹಿಸುವ ಮೀನಿನಂತಹ ನಾವು ಶತಮೂರ್ಖರಲ್ಲವೇ??? ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ದೂರಲೇ? ಅದಕ್ಕೆ ನಿಜವಾಗಲೂ ಸಮಯ ಇದೆಯಾ ನಮ್ಮಲ್ಲಿ? ದೂರುತ್ತಾ ಕುಳಿತರೆ,ನಿನ್ನ ಜೀವನ ನಿನ್ನಿಂದ ದೂರ ಆಗುತ್ತೆ. Lets start fresh…Cheer up…
ಚಿತ್ರ ಸೌಜನ್ಯ : Steve Halama on Unsplash



Mr.Manjunath Bommagatta article explains threadbare the present situation. It is said crisis always outnumber celebrations and humanity has faced more serious epidemics and will come out stronger in future as Mr.Manjunath Bommagatta has concluded well let us start fresh….cheer up.
Good article.
ಸತ್ಯದ ದರ್ಶನ. ತುಂಬಾ ಮಾರ್ಮಿಕವಾಗಿ ಬರೆದಿದ್ದೀಯ. ಅದ್ಭುತ ಲೇಖನ. ನಮಗೆ ಊಹೆಗೂ ನಿಲುಕದ ಚಿಂತನೆಗಳ ಸಾರ. ಬಾಲ್ಯ ಹಾಗೂ ದಶಕಗಳ ಹಿಂದಿನ ಜೀವನ ವಿಧಾನದ ವಿವರಣೆ ಸೂಪರ್
ನಿಜ.ಕಳೆದು ಕೊಳುವ ಭಯದಲಿ ಮುಂದಿನ ದಿನಗಳ ಭಯ ಕಾಡುತ್ತದೆ. ಆಗ ನಮಗೇ ನಾವೇ ಧೈರ್ಯ ತಂದು ಕೊಂಡು ಹೊಸ ಬದುಕಿಗೆ ಹೊಂದಿ ಕೊಳ್ಳಬೇಕು. ಆದರೆ ಅದಕೆ ಸಮಯ ಬೇಕು. ಕಾರಣ ಸಂಸಾರದ ಭಾರ ಎದುರಿಗೆ ಇರುತ್ತದೆ .ಒಳೆ ಲೇಖನ ಬಿ.ಎಮ್
ವಾವ್ ಅದ್ಭುತ ವಾದ ನಿರೂಪಣೆ. ನಮ್ಮ ಮತ್ತು ನಮ್ಮ ಪೂರ್ವಿಕರ ನಡುವೆ ಇರುವ ಜೀವನ ಶೈಲಿ ನಡುವಿನ ವೆತ್ಯಾಸ ಮತ್ತು ತೃಪ್ತಿ ಅತೃಪ್ತಿ ನಡುವಿನ ವಿಚಾರ ವನ್ನು ಎಲ್ಲರಿಗೂ ತಿಳಿದುಕೂಳ್ಳುವಂತೆ ಮಾಡಿದಿರಾ. ಹಾಗೂ ಪ್ರಸ್ತುತ ಪರಿಸ್ಥಿಯಿಂದ ಕಂಗಾಲಾಗಿರುವ ಜನರಿಗೆ. ದಾರಿ ದೀಪ ದಂತ್ತೆ ಇದೆ ನಿಮ್ಮ ಬರವಣಿಗೆ. ನಿಜಕ್ಕೂ ನಿನ್ನ ಬರವಣಿಗೆ ಯ ಶ್ಯಲಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುವಂತೆ ಇದೆ. ಧನ್ಯವಾದಗಳು. ಬೇರೆ ಬೇರೆ ವಿಷಯ ಗಳ ಅನಾವರಣ ವಾಗಲಿ. ಓಕೆ
Nice lines Anna
I have become ur fan
Nice and useful for present situation of disappointed persons . Thanqu
ಮನ ಮುಟ್ಟುವ ಸಾಲುಗಳು,
ತುಂಬಾ ಅಧ್ಭುತ ಲೇಖನ.
ಓದುಗರಿಗೆ, ಇಷ್ಟ ಪಟ್ಟವರಿಗೆ,ನಿಮ್ಮ ಅನಿಸಿಕೆಗಳನ್ನು ಇಲ್ಲಿ ತಿಳಿಸಿ ಅಭಿಮಾನದಿಂದ ಪ್ರೋತ್ಸಾಹಿಸಿದ ಎಲ್ಲ ಸಹೃದಯಿಗಳಿಗೆ ನನ್ನ ನಮನಗಳು. ಪ್ರಕಟಿಸಿ ಪ್ರೋತ್ಸಾಹ ನೀಡಿದ ಕನ್ನಡಪ್ರೆಸ್.ಕಾಮ್ ಗೆ ವಿಶೇಷ ನಮನಗಳು.
ಒಳಿತು ಮಾಡು ಮನುಜ, ಬದುಕು ಇರುವುದು ಮೂರು ದಿವಸ ಎಂದು ಅನುಭಾವಿಯ ಮಾತು ಎಷ್ಟು ಸತ್ಯ. ಅಂತೆಯೇ ನಾವು ಇತರರನ್ನು ದೊರುತ್ತ ಕುಳಿತರೆ ನಾವೇ ಬದುಕಿನಿಂದ ದೂರ ವಾಗುತ್ತೇವೆ ಎಂಬ ಮಾರ್ಮಿಕ ಮಾತುಗಳ ಮೂಲಕ ಉತ್ತಮವಾದ ಬರಹ ಬರೆದ ಶ್ರೀ ಮಂಜುನಾಥ್ ಬೊಮ್ಮಘಟ್ಟ ಇವರಿಗೆ ಅಭಿನಂದನೆಗಳು 🙏
ಅತಿರಥ ವೀರರಾದ ನೀವುಗಳು ಬಾಡಿಗೆ ಸೈನಿಕರಾಗಿ ಯಾರ್ಯಾರಿಗೋ ಯುದ್ಧ ಮಾಡಿದ್ದು ಸಾಕು. ನಿಮ್ಮ ಸಾಮ್ರಾಜ್ಯವನ್ನು ಕಟ್ಟಿ ಕೊಳ್ಳಿ.
Tumba ishtavaytu ee saalu👌.. Very well said sir…👍
ನಿನ್ನ ಅನುಭವ ಮತ್ತು ನೀನೀಗ ಸಾಧಿಸಿರುವ ಯಶಸ್ಸಿನ ಪ್ರತಿರೂಪವೇ ಬರವಣಿಗೆಯ ರೂಪದಲ್ಲಿ ಹೊರಬಂದಿದೆ ಗೆಳೆಯ. ಇಂದಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಮುಂದಿನ ದಾರಿ ಕಾಣದಂತಾಗಿರುವ ಹಲವಾರು ನೊಂದ ಅಸಹಾಯಕರಿಗೆ ನವಚೈತನ್ಯ ತುಂಬುವ ಲೇಖನ.
👏👏👏🙏
ಉತ್ಕೃಷ್ಟವಾದ ಸಾಲುಗಳು, ಬದಲಾವಣೆ ಜಗದ ನಿಯಮ ಅದರಂತೆ ಮೌಲ್ಯಾಧಾರಿತ ಜೀವನಕ್ರಮವನ್ನು ಬದಲಾದ ವಿಶ್ವಕ್ಕೆ ಸಾರುತ್ತಿವೆ ಈ ನಿಮ್ಮ ಸಾಲುಗಳು
ಅಧ್ಬುತ ವಿನ್ಯಾಸ ನಿವಾಸಗಳನ್ನು ಮಾಡುವ, ವ್ರುತ್ತಿಪರ ಇಂಜಿನಿಯರ್ ಆದರೂ ನಿಮ್ಮ ಬರಹ ಅಭೂತಪೂರ್ವ. ಸ್ವದೇಶಿ, ಸ್ವಾವಲಂಬನೆ, ಆತ್ಮನಿರ್ಭರವನ್ನು ಸಾರಿದ ನಮ್ಮ ಪ್ರಧಾನಿ, ಇದು ಸೂಕ್ತ ಬರಹ ಅನಿಸುತ್ತದೆ.
ಅತ್ಯಧ್ಬುತ ಮತ್ತು ಅರ್ಥಪೂರ್ಣವಾದ ಲೇಖನ.
ಮಂಜುನಾಥ ಬೊಮ್ಮಘಟ್ಟರವರಿಗೆ ಧನ್ಯವಾದಗಳು.
ಈಗಿನ ಪರಿಸ್ಥಿತಿಗೆ ಸರಿಯಾದ ಬರಹ, ನಮ್ಮ ಪೂರ್ವಿಕರಿಂದ ಹಿಡಿದು ಇಲ್ಲಿವವರೆಗೂ ಉಂಟಾದ ಜೀವನ ಶೈಲಿಯ ಬದಲಾವಣೆ , ಈಗ ಉದ್ಬವಿಸಿರುವ ಪರಿಸ್ಥಿತಿ ಮತ್ತು ಇದರಿಂದ ಕಂಗಾಲಾಹಿರುವ ಜನರಿಗೆ ಧೈರ್ಯತುಂಬುವ, ನವಚೈತನ್ಯ ತುಂಬುವ ಬರಹವಾಗಿದೆ.
ಧನ್ಯವಾದಗಳು,ತಮ್ಮ ಕಳಕಳಿಯ ಅನಿಸಿಕೆ ಮೆಚ್ಚುಗೆಯಾಯ್ತು.