ಕಾವೇರುತ್ತಿದೆ ಅಮೆರಿಕಾ ಅಧ್ಯಕ್ಷ ಚುನಾವಣೆ : ಟ್ರಂಪ್ ಗೆ ಸಿಗುವುದೆ ಮತ್ತೊಂದು ಅವಕಾಶ

3
345

ನಿಂತ ನೆಲ ಕಂಪಿಸಿದರೆ  ಯಾರಾದರೂ ಏನು ಮಾಡಬಹುದು? ತಮಗೆ ಇದುವರೆಗೆ ಆಧಾರ ನೀಡಿದವರನ್ನೇ ಭದ್ರವಾಗಿ ಕಚ್ಚಿ ಹಿಡಿಯಬಹುದು ಅಷ್ಟೇ.

ಕರೋನ ಪೀಡಿತ ಇಂದಿನ ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಕೂಡ ಸಧ್ಯಕ್ಕೆ ಇದನ್ನೇ ಮಾಡುತ್ತಿದ್ದಾರೆ. ತನ್ನ ಕಟ್ಟಾ ಬೆಂಬಲಿಗರ ಮತಗಳನ್ನು ಮಾತ್ರವೇ ಎಣಿಸುತ್ತ ಮರುಚುನಾವಣೆಗೆ ತಯಾರಿ ನಡೆಸಿದ್ದಾರೆ.

ಆದರೆ ಅವನ ಈ ಯುಕ್ತಿ ಫಲವನ್ನು ನೀಡಬಲ್ಲದೇ?

ಇಂದಿನ ಅಮೆರಿಕಾ ಹಿಂದಿನಂತಿಲ್ಲ. ಇತ್ತ ಕರೋನ ಅತ್ತ ಜನಾಂಗೀಯ ಕದನ- ಎರಡೂ  ಅಮೆರಿಕಾವನ್ನು ಸೀಳಿ ಇಬ್ಭಾಗವಾಗಿಸಿವೆ. ಅದಕ್ಕಿಂತ ಹೆಚ್ಚಾಗಿ ಕಾಲ ಕೆಳಗೆ ಭದ್ರತೆಯನ್ನು ಒದಗಿಸಿದ್ದ ಆರ್ಥಿಕತೆ ಥಟ್ಟನೆ ಜಾರಿ ಹೋಗಿದೆ. ಕಳೆದ ಮೂರು ತಿಂಗಳ ಕರೋನ ವೈರಸ್ಸಿನ ಕಾರಣ, ಬೆಳೆದಿರುವ ನಿರುದ್ಯೋಗ ಸಮಸ್ಯೆ ಅಮೆರಿಕಾ ಈ ಹಿಂದೆ ಎದುರಿಸಿದ ಎರಡು ವರ್ಷಗಳ ಮಹಾ ಆರ್ಥಿಕ ಕುಸಿತಕ್ಕಿಂತ ಹೆಚ್ಚಿನ ಉದ್ಯೋಗಗಳನ್ನು ಕಸಿದಿದೆ. ಫೆಬ್ರವರಿಯಲ್ಲಿ 6.2 ಮಿಲಿಯನ್ ನಿರುದ್ಯೋಗಿಗಳಿದ್ದರೆ ಮೇ ವೇಳೆಗೆ ಅದು 20.5 ಮಿಲಿಯನ್ ಗಳಿಗೆ ಏರಿತು. ಇದೀಗ ಅರೆ ಬರೆ ಚೇತರಿಕೆಯನ್ನು ಕಾಣುತ್ತಿದ್ದರೂ ಸಮಸ್ಯೆಯ ಉಲ್ಬಣತೆ ಹಲವು ರೂಪಗಳಲ್ಲಿ ಅಮೆರಿಕನ್ ಜನತೆಯನ್ನು ತಟ್ಟುತ್ತಿವೆ.

ಜಾರ್ಜ್ ಫ್ಲಾಯ್ಡ್ ನ ಹತ್ಯೆಯ ನಂತರ ಭುಗಿಲೆದ್ದ ಸಮಸ್ಯೆ ಇನ್ನೂ ಹಸಿ ಗಾಯವಾಗಿದ್ದು ಅಮೆರಿಕಾದ ಹುಟ್ಟಿನ ಮೂಲವನ್ನೇ ಕೆಣಕಿದೆ.ಅಮೆರಿಕಾ ಖಂಡವನ್ನು ಕಂಡುಹಿಡಿದು ಮೂಲ ಅಮೆರಿಕನ್ನರ ಜನಾಂಗೀಯ ನಾಶಕ್ಕೆ ಕಾರಣನಾದ ಕ್ರಿಸ್ಟೋಫರ್ ಕೊಲಂಬಸ್ಸನ ಪ್ರತಿಮೆಯನ್ನು ಬಾಲ್ಟಿಮೋರ್ ನಗರದ ಜನರು ಸಾಂಕೇತಿಕವಾಗಿ ಹೊಡೆದುರುಳಿಸಿದ್ದಾರೆ.

ಅಮೆರಿಕಾದಲ್ಲಿ ದಿನದಲ್ಲಿ ಐವತ್ತು ಸಾವಿರ ಹೊಸ ಕರೋನ ಸೋಂಕುಗಳು ಪತ್ತೆಯಾಗುತ್ತಿದ್ದರೆ ಸುಮಾರು 1.3 ಲಕ್ಷಕ್ಕೂ ಹೆಚ್ಚು ಜನರು ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ.ಸಾವು, ನೋವು, ಹೋರಾಟಗಳ ನಡುವಿನ ಈ ಪರಿಸ್ಥಿತಿಯಲ್ಲಿ ನವೆಂಬರ್ ಮೂರರ ಚುನಾವಣೆಗೆ ಅಮೆರಿಕಾ ತಯಾರಾಗುತ್ತಿದೆ. ಆದರೆ  ಬಿಗಡಾಯಿಸಿರುವ ಈ ಸಂದರ್ಭ ದಲ್ಲಿ ರಿಪಬ್ಲಿಕ್ ಪಕ್ಷ ಮರುಚುನಾವಣೆಯಲ್ಲಿ ಬದುಕುಳಿಯಲು ಹೋರಾಡಬೇಕಿದೆ.

ಜುಲೈ 4 ರಂದು ಅಮೆರಿಕಾದ 244 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಟ್ರಂಪ್ ದೇಶವನ್ನುದ್ದೇಶಿಸಿ ಮಾಡಿದ ಭಾಷಣ ತನ್ನ ಕಟ್ಟಾ ಬೆಂಬಲಿಗರನ್ನು ಹುರಿದುಂಬಿಸುವ ಹಾಗಿತ್ತೇ ಹೊರತು ಹೆಚ್ಚಿನ ಮತಗಟ್ಟೆಯನ್ನು ಸೃಷ್ಟಿಸಿಕೊಳ್ಳುವ ಯಾವುದೇ  ಪ್ರಯತ್ನವನ್ನು ಮಾಡಿದಂತೆ ತೋರಲಿಲ್ಲ. ಅಮೆರಿಕಾ ಪ್ರಪಂಚದಲ್ಲೇ ಅತ್ಯಂತ ಅಭಿಮಾನ ಪಡಬಹುದಾದ ಶ್ರೇಷ್ಠ ದೇಶ ಎಂದು ಟ್ರಂಪ್ ಬಣ್ಣಿಸಿದರೂ ಕೇವಲ ಶೇಕಡ 17 ಸಾರ್ವಜನಿಕರು ಮಾತ್ರ ಇಂದಿನ ಅಮೆರಿಕಾದ ಸ್ಥಿತಿ ಈಗಲೂ ಉತ್ತಮವಾಗಿದೆ ಎಂದು ನಂಬುತ್ತಾರೆ. ಶೇಕಡ 47ಜನರು ಭವಿಷ್ಯದ ಬಗ್ಗೆ ಭರವಸೆಯಿದೆಯೆಂದರೆ, ಶೇಕಡ 53 ಅಂದರೆ ಅರ್ಧಕ್ಕಿಂತಲೂ ಹೆಚ್ಚು ಜನರು ಭರವಸೆಯಿಲ್ಲವೆಂಬ ಹತಾಶೆಯ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ಡೆಮೋಕ್ರಟ್ ಗಳಿರಲಿ ಟ್ರಂಪ್ ನ ರಿಪಬ್ಲಿಕ್ ಕ್ಯಾಂಪಿನಲ್ಲೂ ಬಿರುಗಾಳಿ ಬೀಸುತ್ತಿದೆ. ಆತನ ನಡತೆ ಮತ್ತು ರಾಷ್ಟ್ರಾಭಿಮಾನವನ್ನು ಪ್ರಶ್ನಿಸಿ ಆತನ ಹತ್ತಿರದ ಸಹವರ್ತಿಗಳು ಹಲವು ಪುಸ್ತಕಗಳನ್ನು ಹೊರತಂದಿದ್ದಾರೆ. ಟ್ರಂಪ್ ವಿರೋಧಿ ರಿಪಬ್ಲಿಕನ್ ಗಳದೇ ಒಂದು ಪಡೆ ನಿರ್ಮಾಣವಾಗಿದೆ.ಹೀಗಾಗಿ ಕೋವಿಡ್ ಮಾರಣಹೋಮದ ನಡುವೆಯೇ ಜೂನ್ 20 ರಂದು ಟ್ರಂಪ್ ನಡೆಸಲು ಯತ್ನಿಸದ ಮೊದಲ ಮರು ಚುನಾವಣಾ ಸಭೆಯಲ್ಲಿ 19,000 ಜನರ ಬದಲು ಕೇವಲ 6000 ಜನರು ಮಾತ್ರವೇ ಭಾಗವಹಿಸಿದ್ದು ಆತನ ಪಕ್ಷದವರಿಗೆ ಶುಭ ಶಕುನದಂತೆ ಕಂಡಿಲ್ಲದಿದ್ದರೆ ಆಶ್ಚರ್ಯವಿಲ್ಲ.

ಹೀಗಿದ್ದೂ ಜನಪ್ರಿಯತೆಯ ಲೆಕ್ಕಕ್ಕೆ ರಿಪಬ್ಲಿಕ್ (ವಿರೋಧ ಪಕ್ಷ) ಗಳ ನಾಯಕ ಜೋ ಬಿಡೆನ್ ಶೇಕಡ 54  ಇದ್ದರೆ ಟ್ರಂಪ್ ಶೇಕಡ 44 ಮತಗಳಿಸಿದ್ದಾರೆ. ಆದರೆ ಈ ಮತಗಳಲ್ಲಿ ಅತ್ಯಂತ ಆಸಕ್ತಿದಾಯಕ ವಿಚಾರಗಳಿವೆ. ಬಿಡೆನ್ ಗೆ ಮತಹಾಕಿರುವ ಶೇಕಡ 33 ಜನ ಮಾತ್ರ  ಆತನನ್ನು ನಾಯಕನೆಂದು ಮೆಚ್ಚಿ ಮತ ಹಾಕಿದ್ದರೆ, ಶೇಕಡ 67 ಟ್ರಂಪ್ ನನ್ನು ತಡೆಯುವ ಕಾರಣವನ್ನ ಮುಂದೊಡ್ಡುತ್ತಾರೆ. ಆದರೆ ಟ್ರಂಪ್ ಗೆ ಮತಹಾಕಿದ ಶೇಕಡ76 ಜನ ಮುಖ್ಯವಾಗಿ ಅವರಿಗಾಗಿಯೇ ಮತ ಚಲಾಯಿಸಿದ್ದಾರೆ.

 ಚುನಾವಣೆಗೆ ಮುನ್ನ  ನಡೆದ ಮತ್ತೊಂದು ಸರ್ವೆಯಲ್ಲಿ ಎಳೆಯ ವಯಸ್ಸಿನ (16-22) ನ  ಶೇಕಡ 67 ಮತದಾರರು ಟ್ರಂಪ್ ದುರ್ಬಲ ಅಧ್ಯಕ್ಷ ಎಂದರೆ, ಶೇಕಡ42 ಜನ ಆತನನ್ನು ಕೆಟ್ಟ ಅಧ್ಯಕ್ಷನೆಂದಿದ್ದಾರೆ.ಕೇವಲ ಶೇಕಡ 9 ಜನರು ಆತ ಸಾಧಾರಣ ಅಧ್ಯಕ್ಷ ಎಂದಿದ್ದಾರೆ.

ಬಿಡೆನ್ ವಿಚಾರಕ್ಕೆ  ಶೇಕಡ 28 ಆತನನ್ನು ಗ್ರೇಟ್ ಲೀಡರ್ ಎಂದು ನಂಬುತ್ತಾರೆ. ಶೇಕಡ 29 ಜನ ಆತನನ್ನು ಸಾಧಾರಣ ಎಂದರೆ ಶೇಕಡ 43 ಜನರು ಆತ ಕೆಟ್ಟ ಅಧ್ಯಕ್ಷನಾಗುತ್ತಾನೆ ಎಂದಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಇಬ್ಬರೂ ಅಭ್ಯರ್ಥಿಗಳು 70 ವರ್ಷಕ್ಕೂ ಮೇಲ್ಪಟ್ಟ ಹಿರಿಯರು. ಆದರೆ, ಚಟುವಟಿಕೆ, ಶಕ್ತಿ ಮತ್ತು  ಶಕ್ತ ಭಾಷಣ ಮಾಡುವ ವಿಚಾರಕ್ಕೆ ಟ್ರಂಪ್ ಗೇ ಹೆಚ್ಚಿನ ಅಂಕಗಳು ದೊರೆತಿವೆ.

2016 ರಲ್ಲಿ ಟ್ರಂಪ್ ಚುನಾಯಿತ ನಾದ ಸಮಯದಿಂದಲೂ ಟ್ರಂಪ್ ನ ಅನುಯಾಯಿಗಳು ಅವರಿಗೇ ತಮ್ಮ ನಿಯತ್ತನ್ನು  ಮುಂದುವರೆಸಿದ್ದಾರೆ. ಇತರರು ತೀಕ್ಷ್ಣವಾಗಿ ಖಂಡಿಸುತ್ತಲೇ ಇದ್ದಾರೆ. ಈ ಕಾರಣ  ಟ್ರಂಪ್ ನ ಭಾಷಣಗಳು ಅನುಯಾಯಿಗಳಿಗ ಮಾತ್ರ ಸೀಮಿತವಾಗಿದ್ದರೆ ಆಶ್ಚರ್ಯವಿಲ್ಲ.ಮಾಧ್ಯಮಗಳ ಮೇಲೆ ಹರಿಹಾಯವುದನ್ನೂ ಟ್ರಂಪ್ ನಿಲ್ಲಿಸಿಲ್ಲ.

ಅಮೆರಿಕಾದ ಚುನಾವಣೆ ಮತ್ತು ಫಲಿತಾಂಶಗಳು ಇಡೀ ಪ್ರಪಂಚದ ಮೇಲೆ ಪರಿಣಾಮವನ್ನು ಬೀರಬಲ್ಲದು. ಈ ಕಾರಣ ಎಲ್ಲ ದೇಶಗಳೂ ಅಮೆರಿಕಾದ ಚುನಾವಣೆಯನ್ನು ಅತ್ಯಂತ ಆಸಕ್ತಿಯಿಂದ ನಿರುಕಿಸುತ್ತಾರೆ. ಹಲವು ಅಂತರ ರಾಷ್ಟ್ರೀಯ ಒಪ್ಪಂದಗಳು, ಶಾಂತಿ, ಕದನಗಳು ಎಲ್ಲವೂ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷನ ನಿಲುವನ್ನು ಅವಲಂಬಿಸಿವೆ. ಮನಕಲಕುವ ಕರೋನ ಪರಿಸ್ಥಿತಿಯ ನಡುವೆಯೇ ಚುನಾವಣೆಗೆ ನಿಧಾನವಾಗಿ ಕಾವೇರುತ್ತಿದೆ.

ಇವೆಲ್ಲದರ ನಡುವೆ ನಮ್ಮ ಅರಿವಿಗೇ ಬರದಂತೆ ಪ್ರಪಂಚದಲ್ಲಿ ನಾಲ್ಕನೆಯ ಕೈಗಾರಿಕಾ ಕ್ರಾಂತಿ (4th Industrial revolution) ಈ ಕ್ಷಣದಲ್ಲೂ  ವಿಕಸಿಸುತ್ತಿದೆ. ಸಮಾನತೆ ಮತ್ತು  ನೈಸರ್ಗಿಕ ಸಂಪತ್ತುಗಳನ್ನು ಉಳಿಸಿಕೊಳ್ಳುವ ಹೋರಾಟಗಳು ಎಲ್ಲ ದೇಶಗಳ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಲು ಶುರುಮಾಡಿವೆ.

3 COMMENTS

  1. ರಿಪಬ್ಲಿಕ್ ನಾಯಕ ಬಿಡೆನ್ “ಭಾರತದೊಂದಿಗೆ ನಮ್ಮ ಬಾಂಧವ್ಯ” ಉತ್ತಮವಾಗಿರುವಂತೆ ಕಾಯ್ದುಕೊಳ್ಳುವುದು ನಮ್ಮ ಲಕ್ಷ್ಯ ಆಗಿರುತ್ತದೆ ಎಂದು ಹೇಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪಾತ್ರವನ್ನು ಮನವರಿಕೆ ಮಾಡಿಸುತ್ತಿರುವುದು ಪ್ರಶಂಶನೀಯವಾಗಿದೆ.
    ಅಮೆರಿಕದ ನವೆಂಬರ್ ಅಧ್ಯಕ್ಷೀಯ ಚುನಾವಣೆ ಭಾರತಕ್ಕೂ ತುಂಬಾ ಮಹತ್ವದ್ದು.
    ಉತ್ತಮ ಲೇಖನ

  2. ಅಮೇರಿಕಾದ ರಾಜಕೀಯ ನಮಗೂ ತಿಳಿವಂತೆ ಮಾಡಿದ ಲೇಖಕರಿಗೆ ವಂದನೆಗಳು. ಆದರೆ ಈ ಬಾರಿ ಮರು ಅವಕಾಶ ಸಿಗುವುದು ಸುಲಭದ ಮಾತಲ್ಲ. ಅವರ ನಡೆ ತುಂಬಾ ಜನಕೆ ಸಮಾಧಾನವಿಲ್ಲ. ನನ್ನ ಮಗಳು ಅಮೇರಿಕಾ ವಾಸಿ . ಹಾಗಾಗೀ ಚೂರು ತಿಳಿಯುತ್ತದೆ

LEAVE A REPLY

Please enter your comment!
Please enter your name here