26.8 C
Karnataka
Wednesday, May 20, 2026
    Home Blog Page 178

    OTTಯಲ್ಲೇ ಸಿನಿಮಾ ಬಿಡುಗಡೆ

    ಲಾಕ್ ಡೌನ್ ಹಂತ ಹಂತವಾಗಿ ಸಡಿಲಗೊಳ್ಳುತ್ತಿದ್ದರೂ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ. ಮಾಲ್‌ ಗಳು ಮುಂದಿನವಾರದಿಂದ ಆರಂಭವಾಗಬಹುದು. ಆದರೆ ಚಿತ್ರಮಂದಿರಗಳು ತೆರೆಯಲು ಇನ್ನೂ ಕೆಲದಿನಗಳಾದರು ಬೇಕಾಗಬಹುದು. ಟಾಕೀಸ್ ಗಳು ಮೇಲೂ ಪ್ರೇಕ್ಷಕರು ಮೊದಲಿನಂತೆ ಮಂದಿರಗಳತ್ತ ಧಾವಿಸುವುದು ಅನುಮಾನ. ಈ ಸಂದರ್ಭವನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸದುಪಯೋಗ ಪಡಿಸಿಕೊಂಡು ಸಿನಿಮಾಗಳನ್ನು ನೇರವಾಗಿ ರಿಲೀಸ್‌ ಮಾಡುತ್ತಿವೆ.

    <

    ಕನ್ನಡದ ಎರಡು ಚಿತ್ರಗಳು ಸೇರಿದಂತೆ ಒಟ್ಟು 7 ಸಿನಿಮಾಗಳನ್ನು ರಿಲೀಸ್‌ ಮಾಡುವುದಾಗಿ ಅಮೇಜಾನ್‌ ಪ್ರೈಮ್‌ ವಿಡಿಯೋ ಅನೌನ್ಸ್‌ ಮಾಡಿದೆ. ಕನ್ನಡದಲ್ಲಿ ಪುನೀತ್‌ರಾಜ್‌ಕುಮಾರ್‌ ನಿರ್ಮಾಣದ ‘ಫ್ರೆಂಚ್‌ ಬಿರಿಯಾನಿ’, ‘ಲಾ’ , ತಮಿಳಿನಲ್ಲಿ ಜ್ಯೋತಿಕಾ ನಟನೆ29ಯ ‘ಪೊನ್‌ ಮಗಳ್‌ ವಂದಾಳ್‌’ , ಕೀರ್ತಿ ಸುರೇಶ್‌ ನಟನೆಯ ‘ಪೆಂಗ್ವಿನ್‌’, ಅಮಿತಾಭ್ ಬಚ್ಚನ್‌ ಮತ್ತು ಆಯುಷ್ಮಾನ್‌ ಖುರಾನ ನಟನೆಯ ‘ಗುಲಾಬೋ ಸಿತಾಬೊ’, ವಿದ್ಯಾಬಾಲನ್‌ ಅವರ ‘ಶಕುಂತಲಾ ದೇವಿ’ ಮಲಯಾಳಂನ ‘ಸೂಫಿಯೆಂ ಸಂಜಾತೆಯಂ’ ಸಿನಿಮಾಗಳು ನೇರವಾಗಿ ಅಮೇಜಾನ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿವೆ.ತಮಿಳಿನಲ್ಲಿ ಜ್ಯೋತಿಕಾ ನಟನೆಯ ‘ಪೊನ್‌ ಮಗಳ್‌ ವಂದಾಳ್‌’ ಈಗಾಗಲೇ ಬಿಡುಗಡೆಯಾಗಿದೆ.

    ವಿರೋಧ

    ಚಿತ್ರಮಂದಿರಗಳನ್ನು ಬಿಟ್ಟು ನೇರವಾಗಿ ಓಟಿಟಿಯಲ್ಲಿ ಚಿತ್ರವನ್ನು ರಿಲೀಸ್‌ ಮಾಡುತ್ತಿರುವುದಕ್ಕೆ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದು, ತಮಿಳು ನಾಡಿನ ಪ್ರದರ್ಶಕರು. ‘ಪೋನ್‌ ಮಗಳ್‌ ವಂದಾಳ್‌’ ಚಿತ್ರ ಸೂರ್ಯ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರ ಸಿನಿಮಾಗಳನ್ನು ನಾವು ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂಬ ಮಾತುಗಳನ್ನು ಸಹ ಆಡಿದರು ಆದರೂ ಸೂರ್ಯ ಮತ್ತು ಜ್ಯೋತಿಕಾ ಧೈರ್ಯ ಮಾಡಿ ಅಮೇಜಾನ್‌ನಲ್ಲಿ ಸಿನಿಮಾ ರಿಲೀಸ್ ಮಾಡಿದ್ದಾರೆ. ಇನ್ನು ಕನ್ನಡದಲ್ಲಿಯೂ ಕೆಲವರು ಪುನೀತ್ ರಾಜ್‌ಕುಮಾರ್‌ ಅವರ ಬ್ಯಾನರ್‌ನಿಂದ ಈ ರೀತಿಯ ಬೆಳವಣಿಗೆ  ಆಗಬಾರದಿತ್ತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ ವಿ ಚಂದ್ರಶೇಖರ್‌. ಸದ್ಯ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇಂತಹ ಪ್ರಯತ್ನ ಓಕೆ, ಆದರೆ ಎಲ್ಲವೂ ಸರಿಯಾದ ಮೇಲೂ ಓಟಿಟಿಯಲ್ಲಿ ರಿಲೀಸ್‌ ಮಾಡಿದರೆ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

    ಇನ್ನು ಐನಾಕ್ಸ್‌ ಕೂಡಾ ಸಿನಿಮಾಗಳನ್ನು ಒಟಿಟಿಗೆ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿತ್ತು. ಇಷ್ಟೆಲ್ಲಾ ವಿಷಯಗಳ ನಡುವೆ ಮೇ 29ರಂದು ತಮಿಳಿನ ‘ಪೊಣ್‌ ಮಗಳ್‌ ವಂದಾಳ್‌’ ಅಮೇಜಾನ್‌ನಲ್ಲಿ ಬಿಡುಗಡೆಯಾಗಿ ಕೊಂಚ ಹೆಸರು ಸಹ ಮಾಡಿದೆ. 

    ಮತ್ತೊಂದು ಡೆಡ್ಲಿ ವೈರಸ್ :ವಿಜ್ಞಾನಿಗಳ ಎಚ್ಚರಿಕೆ

    ಕೋವಿಡ್-19 ಈಗಾಗಲೇ ಸಾಕಷ್ಟು ಹಾವಳಿ ಎಬ್ಬಿಸಿದೆ. ಆದರೆ ಇನ್ನಷ್ಟು ದುರ್ದಿನಗಳು ಕಾಯುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕೋಳಿ ಸಾಕಾಣಿಕೆಯಲ್ಲಿ ಎಚ್ಚರಿಕೆ ವಹಿಸದೆ ಈಗಿರುವಂತೆ ಇಕ್ಕಟ್ಟಾದ ಜಾಗದಲ್ಲಿ ಅವುಗಳನ್ನು ಸಾಕಿದರೆ ಮತ್ತೊಂದು ಡೆಡ್ಲಿ ವೈರಸ್ ಕಾಡುವ ಸಮಯ ಬರಲಿದೆ. ಮುಖ್ಯವಾಗಿ ಕೋಳಿಗಳು ಹೊರ ಸೂಸುವ ಭಾರೀ ಪ್ರಮಾಣದ ಅಮೋನಿಯಾ ಇದಕ್ಕೆ ಕಾರಣ ಎನ್ನಲಾಗಿದೆ.

    ಡಾ. ಮೈಕೆಲ್ ಗ್ರೆಗರ್

    How Not To Die  ಎಂಬ ಜನಪ್ರಿಯ  ಪುಸ್ತಕದ ಲೇಖಕ  ಡಾ. ಮೈಕೆಲ್ ಗ್ರೆಗರ್ ಎಂಬ ವಿಜ್ಞಾನಿ ತಮ್ಮ ಹೊಸ ಪುಸ್ತಕ How To Survive A Pandemic  ಎಂಬ ಪುಸ್ತಕದಲ್ಲಿ ಈ ಸಂಗತಿಯನ್ನು ಬೆಳಕಿಗೆ ತಂದಿದ್ದಾರೆ.ಅವರ ಪ್ರಕಾರ ಈ ವಿನಾಶಕಾರಿ ವೈರಸ್ (ಅಪೋಕ್ಯಾಲಿಪ್ಟಿಕ್), ಕೋವಿಡ್ -19ನಿಂದಲೂ ಅನಾಹುತಕಾರಿಯಾಗಿದ್ದು, ವಿಶ್ವದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರನ್ನು ಸಾವಿನ ದವಡೆಗೆ ನೂಕು ಸಾಮರ್ಥ್ಯ ಹೊಂದಿದೆ.

    ಸಸ್ಯಜನ್ಯ ಆಹಾರದ ಅತಿ ದೊಡ್ಡ ಪ್ರತಿಪಾದಕರಾಗಿರುವ ಗ್ರೆಗರ್, ಕೋಳಿ ಸಾಕಾಣಿಕೆಯನ್ನು ಅವಲಂಬಿಸಿ ಅದನ್ನು ತಿನ್ನುವವರೆಗೆ ಸಾಂಕ್ರಾಮಿಕ ರೋಗಗಳು ಮುಂದುವರಿಯಲಿವೆ ಎಂದು ಪ್ರತಿಪಾದಿಸಿದ್ದಾರೆ. ಆಹಾರ ಸೇರಿದಂತೆ ಪ್ರಾಣಿಗಳ ಜತೆ ನಿಕಟ ಸಂಪರ್ಕವನ್ನು ಮಾನವರು ಹೊಂದಿರುವರೆಗೆ ಸಾಂಕ್ರಾಮಿಕ ರೋಗಗಳ ಭೀತಿ ತಪ್ಪಿದ್ದಲ್ಲ. ನೋವೆಲ್ ಕೊರೊನಾ ವೈರಸ್ ಕೂಡ ಇಂತಹುದೇ ಸಮಸ್ಯೆಗೆ ಮೂಲ ಎಂದು ಹೇಳಿದ್ದಾರೆ. ಸದ್ಯದ ಮಟ್ಟಿಗೆ ಇದು ಬಾವಲಿಗಳಿಂದಲೇ ಹರಡಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ಇನ್ನಷ್ಟೇ ಸಿಗಬೇಕಾಗಿದೆ ಎಂದಿದ್ದಾರೆ.

    ಹಕ್ಕಿಜ್ವರವು 1997ರಲ್ಲಿ ಹಾಂಗ್ ಕಾಂಗ್ ನಲ್ಲಿ ಕಾಣಿಕೊಂಡು ಲಕ್ಷಾಂತರ ಕೋಳಿಗಳನ್ನು ಕೊಲ್ಲಬೇಕಾಯಿತು. ಆದರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅದು 2003 ಮತ್ತು 2009ರಲ್ಲಿ ಮತ್ತೆ ಚೀನಾದ ಹೊರಗಡೆ ರುದ್ರ ತಾಂಡವ ಆರಂಭಿಸಿತ್ತು ಎಂದು ನೆನಪಿಸಿರುವ ಅವರು, ಹೀಗಾಗಿ ಈ ವೈರಸ್ ಸಮಸ್ಯೆ ಸಂಪೂರ್ಣವಾಗಿ ಮೂಲೋತ್ಪಾಟನೆ ಆಗಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಹೀಗಾಗಿ ಇಂತಹ ಅನಾಹುತವನ್ನು ಭವಿಷ್ಯದಲ್ಲಿ ತಪ್ಪಿಸುವ ನಿಟ್ಟಿನಲ್ಲಿ ಕೋಳಿ ಸಾಕಾಣಿಕೆ ವಿಧಾನವನ್ನು ಪರಿಷ್ಕರಿಸಬೇಕು. ಬಹುತೇಕ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಇಕ್ಕಟ್ಟಾದ ಜಾಗದಲ್ಲಿ ಸಾವಿರಾರು ಕೋಳಿಯನ್ನು ಸಾಕಲಾಗುತ್ತದೆ. ಅವುಗಳಿಗೆ ರೆಕ್ಕೆ ಜಾಡಿಸಲೂ ಜಾಗ ಇಲ್ಲದಂತಹ ಪರಿಸ್ಥಿತಿ ಇದೆ. ಇದರಿಂದ ಅವುಗಳ ದೇಹದಿಂದ ಅಪಾರ ಪ್ರಮಾಣದಲ್ಲಿ ಅಮೋನಿಯಾ ಹೊರಸೂಸಲ್ಪಡುತ್ತದೆ. ಇದನ್ನು ತಪ್ಪಿಸುವಂತಹ ವ್ಯವಸ್ಥೆಯಾದರೆ ಮಾತ್ರ ಭವಿಷ್ಯದಲ್ಲಿ ಮತ್ತೊಂದು ಮಾರಣಾಂತಿಕ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಬಹುದು ಎಂದು ಗ್ರೆಗರ್ ಹೇಳಿದ್ದಾರೆ.

    ಭಾರಿ ಕುಸಿತದ ಬೆಲೆಗಳಿಂದ ಚೇತರಿಕೆ ಕಂಡ ಷೇರು ಪೇಟೆ

     ಆರ್ಥಿಕ ನಿರ್ವಹಣೆ ಈ ಲಾಕ್ಡೌನ್ ಅವಧಿಯಲ್ಲಿ ಒಂದು ಸವಾಲಾಗಿದ್ದು,  ಇದನ್ನು ಕೇವಲ ಜನಸಾಮಾನ್ಯರಲ್ಲದೆ, ಸರ್ಕಾರಗಳು, ಕಾರ್ಪೊರೇಟ್ ಗಳು ಮುಂತಾದವರೆಲ್ಲ ಎದುರಿಸಬೇಕಾಯಿತು. ಇಲ್ಲಿ ಸ್ವಲ್ಪಮಟ್ಟಿನ ನಿರಾಳತೆ ಕಂಡವರು ಮಿತವ್ಯಯಿಗಳು.  ಉಳಿತಾಯವೇ ಆಪದ್ಧನ,  ಇಂದು ಉಳಿಸಿದ ಮೊಬಲಗು ನಾಳಿನ ಜೀವನಕೆ ಮೆರಗು,  ಮುಂತಾದವುಗಳನ್ನು ಅಳವಡಿಸಿಕೊಂಡಿದ್ದವರು ಹೆಚ್ಚಿನ ತೊಂದರೆಗಳಿಂದ ಮುಕ್ತರಾಗಿದ್ದರು.   ಆದರೆ ಈ ವಿಧದವರು ತೀರಾ ವಿರಳ.  ಇದಕ್ಕೆ ಕಾರಣ ಕೇವಲ ವೆಚ್ಚಬಾಕುತನವನ್ನೇ ಜೀವನದ ಭಾಗವೆಂಬಂತೆ ಅಳವಡಿಸಿಕೊಂಡವರ ಸಂಖ್ಯೆಯೇ ಹೆಚ್ಚಾಗಿವೆ.  ಈ ಲಾಕ್ಡೌನ್ ಆರ್ಥಿಕ ಸಾಕ್ಷರತೆಯ ಬಗ್ಗೆ ಅರಿವಿರಲೇಬೇಕೆಂಬ ಅವಶ್ಯಕತೆಯನ್ನು ತಿಳಿಸಿದೆ.

    ಷೇರುಪೇಟೆ ಚಟುವಟಿಕೆಯು ಆರ್ಥಿಕ ಚಟುವಟಿಕೆಗಳಲ್ಲಿ ಮುಖ್ಯವಾದುದಾಗಿದೆ.  ಇದು ಎಷ್ಟರಮಟ್ಟಿಗೆ ಪ್ರಾಮುಖ್ಯತೆ ಪಡೆದಿದೆ ಎಂದರೆ ಲಾಕ್ಡೌನ್ ಸಮಯದಲ್ಲಿ ಇದನ್ನು ಅವಶ್ಯ ಸೇವೆಯಾಗಿ ಪರಿಗಣಿಸಲಾಯಿತು.  ಇದರ ಹಿಂದೆ ಅಡಕವಾಗಿರುವ ಅಂಶವೆಂದರೆ, ಈ ಚಟುವಟಿಕೆಯು ದೇಶದ ಬೊಕ್ಕಸಕ್ಕೆ ಮಹತ್ತರವಾದ ಕೊಡುಗೆ ನೀಡುತ್ತದೆ ಎಂಬುದು.

    ಮಾರ್ಚ್ 2020 ರಲ್ಲಿ ಒಟ್ಟು ಸಂಗ್ರಹವಾದ ಜಿ ಎಸ್ ಟಿ ಯ ಪ್ರಮಾಣ ರೂ.1.1 ಲಕ್ಷ ಕೋಟಿಯಷ್ಟಾಗಿತ್ತು.  ಆದರೆ ಈ ಲಾಕ್ಡೌನ್ ಕಾರಣ  ಏಪ್ರಿಲ್ ತಿಂಗಳಲ್ಲಿ ಭಾರಿ ಕುಸಿತ ಕಂಡಿದೆ.   ಲಾಕ್ಡೌನ್ ಕಾರಣ ಹೆಚ್ಚಿನ ವ್ಯಾವಹಾರಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ಸಂಗ್ರಹವಾದ ಜಿ ಎಸ್ ಟಿ ಯಲ್ಲಿ ಷೇರುಪೇಟೆಯ ಕೊಡುಗೆ ಅಪಾರ.


    ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಪೇಟೆಯ ಆಗುಹೋಗುಗಳ ಬಗ್ಗೆ ನಿರಂತರವಾದ ಮಾಹಿತಿಯ ಅಗತ್ಯವಾಗಿದೆ.   ಷೇರುಪೇಟೆಯು ಹಿಂದಿದ್ದ invest  and  forget  it  ಎಂಬುವುದರಿಂದ invest  and watch it ಗೆ ಪರಿವರ್ತಿತವಾಗಿದೆ.  ಈ ಪರಿವರ್ತನೆಯು ಲಾಕ್ಡೌನ್ ಕಾರಣ ಹೆಚ್ಚು ಜಾರಿಯಾಗಿದೆ.  ಕೊರೊನ ಕಾರಣ ಮಾರ್ಚ್ ೨೩ ರಂದು ಕಂಡ ಭಾರಿ ಕುಸಿತಕ್ಕೆ ಷೇರು ವಿನಿಮಯ ಕೇಂದ್ರಗಳು ಚಟುವಟಿಕೆಯನ್ನು ಸ್ಥಗಿತಗೊಳಿಸಲಾಯಿತು.  ಅಂದು ಹೆಚ್ಚಿನ ಕಂಪನಿ ಷೇರುಗಳು ವಾರ್ಷಿಕ ಕನಿಷ್ಟಕ್ಕೆ ಕುಸಿತಕ್ಕೊಳಗಾಗಿದ್ದವು.    ಆದರೆ ಕೇವಲ ಕೆಲವೇ ದಿನಗಳಲ್ಲಿ ಭಾರಿ ಕುಸಿತದ ಬೆಲೆಗಳಿಂದ ಚೇತರಿಕೆ ಕಂಡು  ಬೆಲೆಗಳು ಪುಟಿದೆದ್ದು ವಿಜೃಂಭಿಸಿವೆ.ಈ ಚೇತರಿಕೆ ಯಾವ ಪ್ರಮಾಣದಲ್ಲಿದೆ ಎಂಬುದಕ್ಕೆ ಈ ಕೆಳಗಿನ ಕೆಲವು ನಿದರ್ಶನಗಳು ಉತ್ತರಿಸುತ್ತವೆ.

    ಕಮ್ಮಿನ್ಸ್ ಇಂಡಿಯಾ:

    ಮಾರ್ಚ್ ಆರಂಭದಲ್ಲಿ ಈ ಷೇರಿನ ಬೆಲೆಯು ರೂ.500 ರ ಸಮೀಪವಿದ್ದು ಏಪ್ರಿಲ್ ಮೊದಲ ವಾರದಲ್ಲಿ ರೂ.281 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ಮೇ ಅಂತ್ಯದಲ್ಲಿ ರೂ.382 ರವರೆಗೂ ಚೇತರಿಕೆ ಕಂಡಿದೆ.  ಈ ಮಧ್ಯೆ ಅನೇಕ ಭಾರಿ ಸಣ್ಣದಾದರೂ ಗಮನಾರ್ಹ ಏರಿಕೆ ಮತ್ತು ಇಳಿಕೆಗಳಿಂದ ಕೂಡಿದ್ದು ಅಲ್ಪಕಾಲೀನ ಲಾಭಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.


    ರಿಲಯನ್ಸ್ ಇಂಡಸ್ಟ್ರೀಸ್:ಈ ಕಂಪನಿಯ ಷೇರಿನ ಬೆಲೆ ಮಾರ್ಚ್ ಆರಂಭದಲ್ಲಿ ರೂ.1360 ರ ಸಮೀಪದಲ್ಲಿದ್ದು ಮಾರ್ಚ್ 23 ರಂದು ಷೇರಿನ ಬೆಲೆ ರೂ.875 ಕ್ಕೆ ಕುಸಿಯಿತು.  ಅಲ್ಲಿಂದ ಸತತವಾದ ಏರಿಕೆಯತ್ತ ಸಾಗಿ ಮೇ 11 ರಂದು ರೂ.1,600ನ್ನು ದಾಟಿ ವಿಜೃಂಭಿಸಿತು.  ಈ ವಿಜೃಂಭಣೆಯ ಹಿಂದೆ ಕಂಪನಿಯ ಆಂತರಿಕ ಸಾಧನೆಗಿಂತ ಬಾಹ್ಯ ಬೆಳವಣಿಗೆಗಳು ಕಾರಣವಾದವು.  ಈ ಭಾರಿ ಏರಿಕೆಯ ಹಿಂದೆ ಕಂಪನಿಯ ಅಂಗ ಸಂಸ್ಥೆಯೊಂದಿಗೆ ಅನೇಕ ವಿದೇಶಿ ಕಂಪನಿಗಳ ಹೂಡಿಕೆಯ ಆಸಕ್ತಿ ಮತ್ತು ಕಂಪನಿ ಪ್ರಕಟಿಸಿದ ಹಕ್ಕಿನ ಷೇರು ವಿತರಣೆ ಯೋಜನೆಯಾಗಿದೆ.   ಆದರೆ ಈ ರೀತಿಯ ಭಾರಿ ಏರಿಕೆಗೆ ಕಂಪನಿಯ ಮಾರ್ಚ್ ತಿಂಗಳ ಸಾಧನೆ ಪೂರಕವಾಗಿಲ್ಲವೆಂಬುದು ಗಮನಾರ್ಹ.
    ನೋಸಿಲ್ :

    ಬಿ ಎಸ್ ಇ 500 ಶ್ರೇಣಿಯ ಸ್ಪೆಷಾಲಿಟಿ ಕೆಮಿಕಲ್ಸ್  ಕಂಪನಿ ಷೇರಿನ ಬೆಲೆ ರೂ.44 ರ ಸಮೀಪಕ್ಕೆ ಮಾರ್ಚ್ 24ರಂದು ಕುಸಿದು ನಂತರ ರೂ.91  ರವರೆಗೂ ಏರಿಕೆಯನ್ನು ಏಪ್ರಿಲ್ ಅಂತ್ಯದಲ್ಲಿ ತಲುಪಿ ಸುಮಾರು ಒಂದೇ ತಿಂಗಳ ಸಮಯದಲ್ಲಿ ದ್ವಿಗುಣಗೊಂಡಿದೆ.

    ಬ್ರಿಟಾನ್ನಿಯಾ ಇಂಡಸ್ಟ್ರೀಸ್ :ಈ ಕಂಪನಿಯ ಷೇರಿನ ಬೆಲೆ  ಮಾರ್ಚ್ ಆರಂಭದಲ್ಲಿ ರೂ.3,15೦ ರ ಸಮೀಪವಿದ್ದು ಮಾರ್ಚ್ 23 ರಂದು ರೂ.2,100 ರ ಸಮೀಪಕ್ಕೆ ಕುಸಿಯಿತು.  ಆದರೆ ಈ ಷೇರಿನ ಬೆಲೆ ಮೇ ಅಂತ್ಯದಲ್ಲಿ ರೂ.3,400 ಕ್ಕೆ  ಪುಟಿದೆದ್ದ ರೀತಿ, ಹೂಡಿಕೆದಾರರು ಈ ಕಂಪನಿಯ ಬಗ್ಗೆ ಹೊಂದಿರುವ ನಂಬಿಕೆಯೇ ಕಾರಣ.   ಈ ಕಂಪನಿಯು ಜೂನ್  2 ರಂದು ಮಾರ್ಚ್ 2020ರ ವರ್ಷಾಂತ್ಯದ   ತನ್ನ ಸಾಧನೆ, ಫಲಿತಾಂಶ ಪ್ರಕಟಿಸಲಿದೆ.

    ಯು ಪಿ ಎಲ್ :ಮಾರ್ಚ್ ಎರಡನೇ ವಾರದಲ್ಲಿ ರೂ.520 ರ ಸಮೀಪವಿದ್ದ ಈ ಕಂಪನಿ ಷೇರು ಮಾರ್ಚ್ 23 ರಂದು ರೂ.240 ರ ಸಮೀಪಕ್ಕೆ ಕುಸಿಯಿತು.   ಅಲ್ಲಿಂದ ಏಪ್ರಿಲ್ ಅಂತ್ಯದಲ್ಲಿ ರೂ.420 ನ್ನು ತಲುಪಿ ನಂತರ ಕೆಲವು ಕೀಟ ನಾಶಕಗಳ ಮೇಲೆ ನಿರ್ಬಂಧ ವಿಧಿಸಲಾಗುವುದು ಎಂಬ ಸುದ್ಧಿಯಿಂದ ರೂ.338 ರ ಸಮೀಪಕ್ಕೆ ಜಾರಿತು.  ನಂತರ ಕಂಪನಿ ಪ್ರಕಟಿಸಿದ  ಮಾರ್ಚ್ 2020ರ ವಾರ್ಷಿಕ ಸಾಧನೆಯ ಉತ್ತಮ ಅಂಕಿ ಅಂಶಗಳ ಕಾರಣ ಮತ್ತೆ ರೂ.419 ಕ್ಕೆ ಪುಟಿದೆದ್ದಿದೆ.

    ಎ ಸಿ ಸಿ :ಕೊರೊನ ಒತ್ತಡದಿಂದ ಮಾರ್ಚ್ 25ರಂದು ರೂ.895 ಕ್ಕೆ ಕುಸಿದಿದ್ದ ಈ ಕಂಪನಿ ಷೇರು ಮೇ ತಿಂಗಳ ಅಂತ್ಯದಲ್ಲಿ ಮತ್ತೊಮ್ಮೆ ರೂ.1,297 ಕ್ಕೆ ಪುಟಿದೆದ್ದಿದೆ.  ಈ ಮಧ್ಯೆ ಪ್ರತಿ ಷೇರಿಗೆ ರೂ.14 ರ ಲಾಭಾಂಶ ವಿತರಿಸಿದ  ಕಾರಣ ಚಟುವಟಿಕೆ ಭರಿತವಾಯಿತು.


    ಇದೆ ರೀತಿ ಪ್ರಮುಖ ಕಂಪನಿಗಳಾದ ಬಜಾಜ್ ಫೈನಾನ್ಸ್ , ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ ಏಷಿಯನ್ ಪೇಂಟ್ಸ್, ಭಾರತ್ ಫೋರ್ಜ್, ಟಾಟಾ ಸ್ಟಿಲ್, ಎಲ್ ಐ ಸಿ ಹೌಸಿಂಗ್ ಫೈನಾನ್ಸ್, ಲಾರ್ಸನ್ ಅಂಡ್ ಟೋಬ್ರೋ , ಬಯೋಕಾನ್, ಅರವಿಂದೋ ಫಾರ್ಮ, ಅಲೆಂಬಿಕ್ ಫಾರ್ಮ, ಇನ್ಫೋಸಿಸ್, ಮೈಂಡ್ ಟ್ರೀ, ಟೈಟಾನ್, ಕಾಲ್ಗೇಟ್,  ಅಲ್ಟ್ರಾಟೆಕ್,  ಇಂಡಸ್ ಇಂಡ್ ಬ್ಯಾಂಕ್,  ಐಟಿಸಿ ಯಂತಹ ಬೃಹತ್ ಕಂಪನಿಗಳು ವೈವಿಧ್ಯಮಯ ಕಾರಣಗಳಿಂದಾಗಿ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪ ಕಾಲಿನದಲ್ಲೇ ಬೃಹತ್ ಪ್ರಮಾಣದ ಲಾಭ ಗಳಿಕೆಗೆ ಕಾರಣವಾದವು.


    ಈ ಎಲ್ಲ  ಬೆಳವಣಿಗೆಗಳಿಗೆ ಪ್ರಮುಖವಾಗಿ ಕಾರಣವಾಗಿದ್ದು, ಹಣದ ಆವಶ್ಯಕತೆ ಇದ್ದಾಗ, ಬೇಕಾದಾಗ ತಕ್ಷಣ ಮಾರಾಟಮಾಡಿ ಹೊರಬರಬಹುದಾದ ಏಕೈಕ ಸ್ವತ್ತು, ಷೇರುಪೇಟೆ ಹೂಡಿಕೆ ಎಂಬುದಾಗಿದೆ.  ಇಂತಹ ಸದೃಢ ಕಂಪೆನಿಗಳಲ್ಲಿ, ಒದಗಬಹುದಾದ ಅಪಾಯದ ಅರಿವಿನಿಂದ, ತುಲನಾತ್ಮಕವಾಗಿ ಹೂಡಿಕೆ ಮಾಡಿದಲ್ಲಿ ಲಾಭಗಳಿಕೆ ಸಾಧ್ಯ.  ಆದರೆ  ಪೇಟೆಯಲ್ಲಾಗುವ ಏರು-ಪೇರುಗಳ ಬಗ್ಗೆ ನಿರಂತರವಾಗಿ ಗಮನವಿರುವುದು ಅವಶ್ಯಕವಾಗಿದೆ.  ಹೆಚ್ಚಿನ ಕಾರ್ಪೊರೇಟ್ ಬ್ರೋಕಿಂಗ್ ಹೌಸ್ ಗಳು ತಮ್ಮ ಕಕ್ಷಿದಾರರಿಗೆ ಈ ಸೌಲಭ್ಯವನ್ನು ಒದಗಿಸಲು ವಿಫಲರಾದ ಕಾರಣ ಶಾಖೆಗಳನ್ನು ಮುಚ್ಚುವ ಪರಿಸ್ಥಿತಿಗೆ ತಲುಪಿರುವುದು ದುರಂತವೇ ಸರಿ.  ಷೇರುಪೇಟೆಯ ಯಶಸ್ಸಿಗೆ ಪ್ರಮುಖವಾದ ಸಮೀಕರಣವೆಂದರೆ ‘ವ್ಯಾಲ್ಯೂ ಪಿಕ್- ಪ್ರಾಫಿಟ್ ಬುಕ್’  ಆಗಿದೆ.  ಜೊತೆಗೆ ಸಂದರ್ಭವನ್ನು ತುಲನಾತ್ಮಕವಾಗಿ ಬಳಸಿಕೊಳ್ಳುವ ಗುಣವು ಅಗತ್ಯವಾಗಿದೆ.

    ಹೂಡಿಕೆದಾರರಿಗೆ ಕಿವಿಮಾತು:

    ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಹೂವಿನಂತೆ ಅಲ್ಪಾಯುಷಿ,
    ಲಾರ್ಜ್ ಕ್ಯಾಪ್ ಷೇರುಗಳು Dry Fruits ನಂತೆ ಧೀರ್ಘಾಯುಷ್ಯ ಹೊಂದಿರುತ್ತವೆ.

    ನಿಮ್ಮ ಸ್ಮಾರ್ಟ್ ಫೋನ್ ಕಮ್ಯುನಿಕೇಶನ್‌ಗೆ ಕಾದಿದೆಯಾ ಕುತ್ತು ?

    ನಮಗೆ ಅರಿವಿಲ್ಲದಂತೆ ಭೂಮಿಯ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಅಥವಾ ಸ್ಥಿತ್ಯಂತರಗಳು ಆಗುತ್ತಲೇ ಇವೆ. ಇವುಗಳ ಪೈಕಿ ಇತ್ತೀಚಿನ ದಿನಗಳಲ್ಲಿ ಆಯಸ್ಕಾಂತೀಯ ಕ್ಷೇತ್ರದಲ್ಲಿ (ಮೆಗ್ನೆಟಿಕ್ ಕ್ಷೇತ್ರ) ಆಗಿರುವ ಬದಲಾವಣೆ ಹೆಚ್ಚು ಆತಂಕ ಮೂಡಿಸಲು ಆರಂಭಿಸಿದೆ.

    ಮ್ಯಾಗ್ನೆಟಿಕ್ ಫೀಲ್ಡ್ ಅಥವಾ ಅಯಸ್ಕಾಂತೀಯ ಕ್ಷೇತ್ರದ ಕವಚವು ಭೂಮಿಯನ್ನು ಸೂರ್ಯನಿಂದ ಹೊರ ಬರುವ ನಾನಾ ರೀತಿಯ ಅಪಾಯಕಾರಿಯಾದ ವಿಕಿರಣಗಳಿಂದ ಕಾಪಾಡುತ್ತವೆ. ಪ್ರಾಣಿ-ಪಕ್ಷಿಗಳಿಂದ ಇವು ರಕ್ಷಣೆ ನೀಡುತ್ತಿದ್ದು, ಇತ್ತೀಚಿನ ಅಧ್ಯಯನ ವರದಿಗಳ ಪ್ರಕಾರ ನಮ್ಮ ಜೀವನಾಡಿಯೇ ಆಗಿರುವ ಸ್ಮಾರ್ಟ್‌ಫೋನ್ ಗಳ ಮೇಲೂ ಇದು ವ್ಯತಿರಿಕ್ತ ಪ್ರಭಾವ ಬೀರುವ ಅಂಶ ಈಗ ಬೆಳಕಿಗೆ ಬಂದಿದೆ.

    ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡಗಳ ನಡುವೆ ಭೂಮಿಯ ಆಯಸ್ಕಾಂತೀಯ ಕ್ಷೇತ್ರವು ದುರ್ಬಲಗೊಳ್ಳುತ್ತಿದ್ದು, ಇದು ಕೃತಕ ಉಪಗ್ರಹ ಮತ್ತು ಬಾಹ್ಯಾಕಾಶ ನೌಕೆಗಳ ಮೇಲೆ ನೇರ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ ಎಂದು ಯುರೋಪಿಯನ್ ಸ್ಪೇಸ್ ಎಜೆನ್ಸಿ (ಇಎಸ್ಎ) ಸ್ವಾರ್ಮ್ ಹೇಳಿದೆ.

    ನೇರ ಪರಿಣಾಮ

    ಸದ್ಯ ಇಂಟರ್ನೆಟ್ ಮತ್ತು ಫೋನ್ ಗಳು ಕೃತಕ ಉಪಗ್ರಹಗಳ ಸಹಾಯದಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಆಗುವ ಚಿಕ್ಕ ಏರು-ಪೇರು ಕೂಡ ಒಟ್ಟಾರೆ ಸಂವಹನ (ಕಮ್ಯೂನಿಕೇಷನ್) ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಕಂಪ್ಯೂಟರ್, ಮೊಬೈಲ್ ಫೋನ್ ಸೇರಿದಂತೆ ಕೃತಕ ಉಪಗ್ರಹಗಳ ನೆರವಿನಿಂದಲೇ ಕೆಲಸ ಮಾಡುವ ಎಲ್ಲಾ ಇಲೆಕ್ಟ್ರಾನಿಕ್ ಉಪಕರಣಗಳ ಕಾರ್ಯನಿರ್ವಹಣೆ ಕಷ್ಟವಾಗುವ ಎಲ್ಲಾ ಸಾಧ್ಯತೆಗಳನ್ನು ಅವರು ಲೆಕ್ಕಾಚಾರ ಹಾಕಿದ್ದಾರೆ.

    ಆಯಸ್ಕಾಂತೀಯ ವಲಯ

    ಭೂಮಿಯ ಮೇಲ್ಮೈಯಿಂದ ಸುಮಾರು 3,000 ಕಿ.ಮೀ. ಎತ್ತರದಲ್ಲಿ ಈ ಅಯಸ್ಕಾಂತೀಯ ವಲಯವಿದೆ. ಇದು ಸೂರ್ಯ ಹೊರಸೂಸುವ ಅಪಾಯಕಾರಿ ವಿಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ. ಈ ಕುರಿತು ನಿರಂತರವಾಗಿ ಪಾಶ್ಚಿಮಾತ್ಯ ದೇಶಗಳ ನಾನಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಅಧ್ಯಯನ ಮಾಡುತ್ತಿವೆ.  ಇದರಲ್ಲಿ ಕಂಡುಕೊಂಡ ಅಂಶವೆಂದರೆ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡದ ನಡುವಿನ ಭಾಗದಲ್ಲಿ ಈ ಆಯಸ್ಕಾಂತೀಯ ವಲಯ ನಿಧಾನವಾಗಿ ದುರ್ಬಲಗೊಳ್ಳುತ್ತಿದ್ದು, ಭವಿಷ್ಯದಲ್ಲಿ ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಿರುವ ಕೃತಕ ಉಪಗ್ರಹಗಳ ಚಲನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಮಸ್ಯೆಗಳು ಎದುರಾಗಬಹುದು. ಇದು ಪರೋಕ್ಷವಾಗಿ ಈಗ ನಾವು ಸಂಪೂರ್ಣವಾಗ ಅವಲಂಬಿತರಾಗಿರುವ ಇಂಟರ್ ನೆಟ್, ಮೊಬೈಲ್ ಫೋನ್ ಕಾರ್ಯವೈಖರಿಯನ್ನು ಅಸಮತೋಲನಗೊಳಿಸಲು (ಡಿಸ್ಟರ್ಬ್) ಮಾಡಬಹುದು. ಈ ರೀತಿಯ ಬೆಳವಣಿಗೆ ಇದಕ್ಕೆ ಮೊದಲು 2,50,000 ವರ್ಷಗಳ ಮೊದಲು ಕಂಡು ಬಂದಿತ್ತು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

    ಮೋದಿಯ ಉಕ್ಕಿನ ಕೋಟೆ ಮುಂದೆ ಹರಿದ ಬಟ್ಟೆಯ ತುಂಡಿನಂತೆ ಕಾಣಿಸುತ್ತಿರುವ ಹಸ್ತ ಪಾಳಯ

    ಈ ಒಂದು ವರ್ಷದ ಮೋದಿ ಸರಕಾರದ ಸಾಧನೆಯ ಜತೆಗೆ ಪ್ರತಿಪಕ್ಷ ನಿರ್ವಹಿಸಿದ ಜವಾಬ್ದಾರಿ ಏನು ಎಂದು ಪ್ರಶ್ನಿಸ ಹೊರಟವರಿಗೆ ಹಾಸ್ಯಾಸ್ಪದ ಸಾಧನೆಗಳೇ ಕಾಣಿಸುತ್ತವೆ.

    ಮೋದಿ ೧.೦ ಸರಕಾರದ ಅವಯಲ್ಲಿ ಒಂದಷ್ಟು ಗೌರವಯುತವಾಗಿ ಕಾಣಿಸುತ್ತಿದ್ದ ಏಕೈಕ ದೊಡ್ಡ ಪ್ರತಿಪಕ್ಷ ಕಾಂಗ್ರೆಸ್,  ೨.೦ ಅವಯಲ್ಲಿ ಎಲ್ಲಾ ಸಾಮರ್ಥ್ಯ ಕಳೆದುಕೊಂಡು ಪಾತಾಳ ತಲುಪಿದೆ.

    ಕಮಲದ ಆರ್ಭಟದ ಮುಂದೆ ಸತತ ಎರಡನೇ ಬಾರಿ ಪ್ರತಿಪಕ್ಷ ಸ್ಥಾನ ಗಿಟ್ಟಿಸುವ ಯೋಗ್ಯತೆಯನ್ನೂ ಕಳೆದುಕೊಂಡ ನೂರು ವರ್ಷ ಇತಿಹಾಸ ಉಳ್ಳ ಕಾಂಗ್ರೆಸ್ ಈಗ ದಿಕ್ಕೆಟ್ಟು ಹೋಗಿದೆ. ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಮೂಲ ಸಂಘಟನಾ ಸ್ವರೂಪವನ್ನೇ ಕಳೆದುಕೊಂಡು ಚಿಂದಿಯಾಗಿರುವ ಹಸ್ತಪಾಳಯವು ಮೋದಿ ನಿರ್ಮಿಸಿದ ಉಕ್ಕಿನ ಕೋಟೆ ಮುಂದೆ ಹರಿದ ಬಟ್ಟೆಯ ತುಂಡಿನಂತೆ ಕಾಣಿಸುತ್ತಿದೆ. ತನ್ನ ಸ್ಥಿತಿಯೇ ನೆಟ್ಟಗಿಲ್ಲದಾಗ ಸರಕಾರದ ತಪ್ಪುಗಳನ್ನು ತಿದ್ದುವ ಜವಾಬ್ದಾರಿಯನ್ನು ಅದು ನಿಭಾಯಿಸುವುದಾದರೂ ಹೇಗೆ? ಹೌದು, ಈ ಒಂದು ವರ್ಷದಲ್ಲಿ ರಾಹುಲ್ ಕಾಂಗ್ರೆಸ್, ಸರಕಾರದ ವೈಫಲ್ಯಗಳನ್ನು ಟೀಕಿಸಿ ಸುದ್ದಿಯಾದದ್ದಕ್ಕಿಂತ ಹೆಚ್ಚು ರಾಹುಲ್ ಅರೆಬೆಂದ ಮಾತುಗಳಿಂದ ಅಪಹಾಸ್ಯಕ್ಕೆ ಗುರಿಯಾದದ್ದೇ ಹೆಚ್ಚು.

    ಪಕ್ಷ ಸೋತಾಗ ದಂಡನಾಯಕ ಎದೆ ಎತ್ತಿ ನಿಲ್ಲಬೇಕು. ಅಂದಾಗಲೇ ಆತನನ್ನು ನೆಚ್ಚಿದ ಸೇನಾನಿಗಳಿಗೆ  ಹೋರಾಟದ ಮರು ಹುಮ್ಮಸ್ಸು ಹೊರ ಹೊಮ್ಮಲು ಸಾಧ್ಯ. ನಮ್ಮ ಇತಿಹಾಸದುದ್ದಕ್ಕೂ ಇಂತಹ ಸೋಲಿನ ಸಾವಿರಾರು ಸಾಹಸ ಕಥೆಗಳಿವೆ. ಆದರೆ ಅವನ್ನು ಓದುವ ಅಥವಾ ಕೇಳಿ ಗ್ರಹಿಸುವ ಕನಿಷ್ಠ ತಾಳ್ಮೆಯೂ ಇಲ್ಲದ ರಾಹುಲ್ ಮಾಡಿದ್ದೇನು? ೫೨ ಎಂಪಿ ಸ್ಥಾನ ಗೆಲ್ಲುವಷ್ಟರಲ್ಲಿ  ನಿಟ್ಟುಸಿರು ಚೆಲ್ಲಿದ ಕಾಂಗ್ರೆಸ್, ಬಿಜೆಪಿಯ ದೈತ್ಯ ಬಲದ ಮುಂದೆ ಅಕ್ಷರಶಃ ಮಂಡಿಯೂರಿತು. ಆಗ ಪಕ್ಷದ ದಂಡನಾಯಕ ಎನಿಸಿದ್ದ ರಾಹುಲ್ ಮಲಗಿದರು. ಹಟ ಹಿಡಿದು ಅಧ್ಯಕ್ಷ ಸ್ಥಾನ ತೊರೆದು ಪಲಾಯನ ಮಾಡಿದರು. ಕಾರ್ಯಕರ್ತರು ಕಂಗಾಲಾದರು.  ಮುಂಚೂಣಿ ನಾಯಕತ್ವವೂ ದಿಕ್ಕೆಟ್ಟಿತು. ಅಲ್ಲಿಂದ ಇಲ್ಲಿವರೆಗೆ ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಉಳಿಯಲೇ ಇಲ್ಲ. ಅನಾರೋಗ್ಯದ ನಡುವೆ ಅನಿವಾರ್ಯವಾಗಿ ಸೋನಿಯಾ ಗಾಂಧೀಯೇ ಮರಳಿ ಅಧ್ಯಕ್ಷ ಜವಾಬ್ದಾರಿಗೆ ಹೆಗಲು ನೀಡಿದರಾದರೂ ಉತ್ಸಾಹ ಉಳಿಯಲಿಲ್ಲ.  ಇದು  ಮೋದಿಯ ಅವರ ಏಕಚಕ್ರಾಧಿಪತ್ಯವನ್ನು ಇನ್ನಷ್ಟು ಬಲಗೊಳಿಸಿತು.

    ಗಾಳಿ ಬೀಸಿದತ್ತ ಪಯಣ: ನಾವಿಕನೇ ಇಲ್ಲದಾದಾಗ ನೌಕೆ ಸಾಗುವ ದಿಕ್ಕು ನಿರ್ಧಾರವಾದೀತಾದರೂ ಹೇಗೆ? ಕಾಂಗ್ರೆಸ್‌ನಲ್ಲಿ ಆದದ್ದೂ ಇದೇ ಯಡವಟ್ಟು. ಕಾಶ್ಮೀರ ಪ್ರತ್ಯೇಕತೆಯ ೩೭೦ನೇ ವಿ ರದ್ದು, ಪೌರತ್ವ ತಿದ್ದುಪಡಿ ಕಾಯಿದೆ, ಭಯೋತ್ಪಾದನೆ ನಿಗ್ರಹ ಕಾಯಿದೆ ತಿದ್ದುಪಡಿಯಂತಹ ಮಹತ್ವದ ವಿಷಯಗಳು ಚರ್ಚೆಯ ಮುಂಚೂಣಿಗೆ ಬಂದಾಗ ಆ ಬಗ್ಗೆ ಮಾತಾಡಲು ಕಾಂಗ್ರೆಸ್ ಬಳಿ ಸ್ಪಷ್ಟ  ನಿಲುವುಗಳೇ ಇರಲಿಲ್ಲ. ತಳಮಟ್ಟದ ಕಾರ್ಯಕರ್ತನಿಂದ ಹಿಡಿದು ಹೈಕಮಾಂಡ್‌ವರೆಗೆ ತಲೆಗೊಂದು ಹೇಳಿಕೆ ನೀಡಿ, ಗೊಂದಲಕ್ಕೆ ಕೆಡವಿದರು. ಆಗಲೂ ರಾಹುಲ್ ಪ್ರಬುದ್ಧವಾಗಿ ಮಾತಾಡಲಿಲ್ಲ. ಎಳೆಯ ಮಕ್ಕಳ ರೀತಿ ರಚ್ಚೆಹಿಡಿದು, ಮತದಾರರ ವಿರುದ್ಧ ಮುನಿಸು ತೋರಿದರು. ಎಲ್ಲೋ ಮಾಧ್ಯಮದವರಿಗೆ ಎದುರಾದಾಗ ಯದ್ವಾತದ್ವ ಮಾತಾಡಿ ಆನ್‌ಲೈನ್ ಜೋಕ್‌ಗಳಿಗೆ ಕಾರಣರಾದರು.

    ಇಷ್ಟೆಲ್ಲ  ಅಲ್ಲೋಲಕಲ್ಲೋಲದ ನಡುವೆಯೂ ಪಕ್ಷದ ಹಿರಿತಲೆಗಳು ತಾವು  ಸೇಫ್ ಆದರೆ ಸಾಕು ಎನ್ನುವ ಸ್ವಾರ್ಥದ ನಿಲುವಿಗೆ ಅಂಟಿಕೊಂಡರು.  ಎಲ್ಲೊ ಒಂದಿಷ್ಟು ಬಾಯಿ ಬಿಚ್ಚಿದ ಪಿ.ಚಿದಂಬರಂ ಅವರಂಥವರು ಹಳೆಯ ಹಗರಣಗಳ ಆರೋಪದಡಿ ಜೈಲುಪಾಲಾದರು. ಇದರಿಂದ ಇಡೀ ಒಂದು ವರ್ಷ ದೇಶವು ಪ್ರತಿಪಕ್ಷಗಳಿಲ್ಲದೇ ಒಂಟಿಗಣ್ಣಿನ ಯಾನ ಮಾಡಿದೆ. ಮೋದಿ ಸರಕಾರ ತಾನು ನಡೆದದ್ದೇ ದಾರಿ ಎನ್ನುವ ಮದಗಜದ ದೌಲತ್ತು  ಪ್ರದರ್ಶನ  ಮಾಡಿದೆ.  ಕೊರೊನಾ ಈಗ ಸರಕಾರದ ಕಣ್ಣು ತೆರೆಸಿದೆ ನಿಜ, ಆದರೆ ಅದನ್ನು ಇನ್ನಷ್ಟು  ತಿವಿದು ಸರಿದಾರಿಯಲ್ಲಿ ನಡೆಸಬೇಕಾದ ಪ್ರತಿಪಕ್ಷ ಈಗಲೂ ಇಲ್ಲದಿರುವುದು ಜನರಲ್ಲಿ ನಿರಾಶೆ ಮೂಡಿಸಿದೆ. ರಾಹುಲ್ ಟ್ರೋಲಿಗರ ಬಾಯಿಗೆ ಪದೇ ಪದೇ ಆಹಾರವಾಗುವ ಅವತಾರದಿಂದ ಹೊರಬಾರದೇ ಹೋದರೆ,  ಇನ್ನೂ ನಾಲ್ಕು ವರ್ಷದ ನಂತರವೂ ಆಬ್ ಕೀ ಬಾರ್ ಮೋದಿ ಸರ್ಕಾರ್ ಗ್ಯಾರಂಟಿ.

    ರಾಮಮಂದಿರ, 370 ನೇ ವಿಧಿ ರದ್ದಿನ ನಡುವೆ ಸದ್ದು ಮಾಡದ ಆರ್ಥಿಕ ಹಿನ್ನಡೆ

    ಅಶೋಕ ಹೆಗಡೆ
    ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೇ ಕೇಂದ್ರದಲ್ಲಿರುವ ಮೋದಿ ೨.೦ ಸರಕಾರ ಶನಿವಾರ (ಮೇ ೩೦) ಮೊದಲ ವರ್ಷ ಪೂರೈಸಿದೆ. ಮೊದಲ ಅವಧಿಯ ಸಾಧನೆಯ ಆಧಾರದಲ್ಲಿಯೇ ದೇಶದ ಮತದಾರ ಎರಡನೇ ಅವಧಿಗೂ ನಿಚ್ಚಳ ಬಹುಮತದೊಂದಿಗೆ ನಿರಾತಂಕವಾಗಿ ಆಡಳಿತ ನಡೆಸುವ ಅವಕಾಶವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ನೀಡಿದ್ದಾನೆ.

    ಮೊದಲ ಅವಧಿಗೆ ಹೋಲಿಸಿದರೆ ಎರಡನೇ ಅವಧಿಯ ಆರಂಭ ಅತ್ಯಂತ ಬಿರುಸಿನಿಂದ ಕೂಡಿತ್ತು ಮಾತ್ರವಲ್ಲ ಇಡೀ ವರ್ಷದ ಅವಧಿಯಲ್ಲಿ ಹಲವು ಸಾಧನೆಗಳನ್ನು ಮಾಡಿರುವುದೂ ನಿಜ. ಆರ್ಥಿಕತೆ ವಿಚಾರಲ್ಲಿ ಕೊಂಚ ಎಡವಿದೆ ಎನ್ನುವುದನ್ನು ಬಿಟ್ಟರೆ ಮೋದಿ ೨.೦ ಆಡಳಿತದ ಬಗ್ಗೆ ಜನಸಾಮಾನ್ಯರಲ್ಲಿಅಸಮಾಧಾನವೇನೂ ಕಾಣಿಸುತ್ತಿಲ್ಲ.


    ಕೊರೊನಾ ದಾಂಗುಡಿ ಇಡುವ ಕೆಲತಿಂಗಳ ಮೊದಲು ಗತಿಕವಾಗಿಯೇ ಆರ್ಥಿಕ ಹಿಂಜರಿತದ ಸೂಚನೆಕಾಣಿಸಿಕೊಂಡಿತ್ತು. ಅದನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸವೂ ಸರಕಾರಕ್ಕೆ ಇತ್ತು. ಹಲವು ಸಂಸ್ಥೆಗಳು ಸಹ ಆರ್ಥಿಕ ಹಿಂಜರಿತವನ್ನು ಭಾರತ ಸಮರ್ಥವಾಗಿ ಮೆಟ್ಟಿನಿಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೂ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಕಾರ್ಯನಿರ್ವಹಣೆ ಅಷ್ಟು ತೃಪ್ತಿಕರವಾಗಿ ಇಲ್ಲ ಎಂಬ ಸಣ್ಣದೊಂದು ಅಸಮಾಧಾನ ಬಿಜೆಪಿಯಲ್ಲೇ ಇತ್ತು.

    ಬಜೆಟ್ ಮಂಡನೆ ಬಳಿಕ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ವಿ.ಕಾಮತ್ ಅವರನ್ನು ಹಣಕಾಸು ಖಾತೆ ಸಚಿವರಾಗಿ ನೇಮಕ ಮಾಡಲಾಗುತ್ತದೆ ಎಂಬ ವದಂತಿಗಳೂ ಹರಿದಾಡಿದ್ದವು. ಅದೇಹೊತ್ತಿಗೆ ಕಾಣಿಸಿಕೊಂಡ ಕೊರೊನಾ ನಿರ್ಮಲಾ ಸೀತಾರಾಮನ್ಅವರನ್ನು ಮುಜುಗರದಿಂದ ಪಾರುಮಾಡಿತು ಎಂದರೆ ತಪ್ಪಾಗಲಾರದು.ಆರ್ಥಿಕತೆ ನಿರ್ವಹಣೆಯಲ್ಲಿನ ‘ಲೋಪ’ವನ್ನು ಜನಸಾಮಾನ್ಯರು ಅಷ್ಟು ಗಂಭೀರವಾಗಿಪರಿಗಣಿಸದಿರುವುದಕ್ಕೆ ಹಲವು ಕಾರಣಗಳಿವೆ.

    ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಆರು ವರ್ಷಗಳಲ್ಲಿ ಗೃಹ ಸಾಲ ಬಡ್ಡಿ ದರ ಏರಿಕೆ ಕಾಣಲಿಲ್ಲ. ಸಗಟು ಹಣದುಬ್ಬರ ಏರಿಕೆಕಾಣಲಿಲ್ಲ. ಭ್ರಷ್ಟಾಚಾರದ ಪಿಡುಗು ಬಾಧಿಸಲಿಲ್ಲ. ಒಂದು ರೀತಿಯಲ್ಲಿ ನೆಮ್ಮದಿಯವಾತಾವರಣವೇ ಇತ್ತು.

    ಸಮಾನ ನಾಗರಿಕ ಸಂಹಿತೆ ಸವಾಲು: ವಾಸ್ತವಿಕವಾಗಿ ಇನ್ನು ಮುಂದಿನ ನಾಲ್ಕು ವರ್ಷ ಅತ್ಯಂತಸವಾಲಿನದ್ದು. ಏಕೆಂದರೆ ಈಗ ಬಹುತೇಕರ ಅಪೇಕ್ಷೆ ಇರುವುದು ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂಬ ಬಗ್ಗೆ. ಪೌರತ್ವ ತಿದ್ದುಪಡಿ ವಿಧೇಯಕ ಖಂಡಿಸಿದೇಶಾದ್ಯಂತ ಪ್ರತಿಭಟನೆಗಳು ನಡೆದರೂ ಅದಕ್ಕೆ ಮಣಿಯದೇ ಪರಿಸ್ಥಿತಿಯನ್ನು ಅಮಿತ್ ಶಾನಿಭಾಯಿಸಿದ ರೀತಿಯಿಂದ ಸಮಾನ ನಾಗರಿಕ ಸಂಹಿತೆಯ ಕನಸು ಚಿಗುರೊಡೆದಿದೆ.
    ಇನ್ನು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲು ವಿಧೇಯಕ ಅಂಗೀಕಾರವಾಗುವಂತೆನೋಡಿಕೊಳ್ಳುವ ಗುರುತರ ಹೊಣೆಗಾರಿಕೆಯೂ ಮೋದಿ ಸರಕಾರದ ಮೇಲಿದೆ. ಆ ಮೂಲಕ ತಾನು
    ನಿಜವಾಗಿಯೂ ಮ ಮಹಿಳಾ ಪರ ಎಂಬುದನ್ನು ಸರಕಾರ ತೋರಿಸಿಕೊಡಬೇಕಿದೆ.

    ಅದಲ್ಲದೇಕೊರೊನಾದಿಂದ ಉಂಟಾಗಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಜನರಮೇಲೆ ಭಾರ ಹಾಕದೇ ‘ಆತ್ಮನಿರ್ಭರ ಭಾರತ’ದ ಕನಸು ಸಾಕಾರಗೊಳಿಸಿಕೊಳ್ಳಬೇಕಿದೆ. ಇನ್ನೂ ಎರಡು ವರ್ಷ ಕೊರೊನಾ ಬೆಂಬಿಡದೇ ದೇಶವನ್ನು ಕಾಡಲಿದೆ ಎಂಬುದು ಕಟುವಾಸ್ತವ. ಅದರನಡುವೆಯೇ ಅಭಿವೃದ್ಧಿ ಮತ್ತು ಆರ್ಥಿಕ ಚೇತರಿಕೆಯನ್ನು ಸಾಸುವುದು ಸಲೀಸಲ್ಲ. ಆದರೆಅದನ್ನು ಸಾಸುವ ಸಾಮರ್ಥ್ಯ ಮೋದಿ ಸರಕಾರಕ್ಕೆ ಖಂಡಿತವಾಗಲೂ ಇದೆ. ದೇಶ ಉಜ್ವಲದಿನಗಳಿಗಾಗಿ ಎದುರು ನೋಡುತ್ತಿದೆ.  

    ಹರಿದ್ರಾವತಿಗೆ ಹಸಿರಿನ ಮೆರಗು;ಕೆರೆ ಉಳಿಸುವತ್ತ ಮತ್ತೊಂದು ಹೆಜ್ಜೆ

    ಸೂಳೆಕೆರೆಗೆ ಪ್ರಮುಖ ಜಲಮೂಲ ಹರಿದ್ರಾವತಿಹಳ್ಳ. ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯಲ್ಲಿ ಇದರ ಉಗಮ. ಸುಮಾರು 40 ರಿಂದ 50 ಕಿ.ಮೀ. ಹಳ್ಳದ ಪಾತ್ರದಲ್ಲಿ ಅನೇಕ ಕಿರು ಹಳ್ಳಗಳಿಂದ ನೀರನ್ನು ಸಂಗ್ರಹಿಸಿ ಬೃಹತ್ ಹಳ್ಳ ಸೂಳೆಕೆರೆ ತುಂಬಿಸುತ್ತದೆ. ಈಚೆಗೆ ರೂ.2ಕೋಟಿ ವೆಚ್ಚದಲ್ಲಿ ಭೂ ಸೇನಾ ನಿಗಮದ ಉಸ್ತುವಾರಿಯಲ್ಲಿ ಹೂಳು, ಹಳ್ಳದ ದಿಣ್ಣೆ ಅಭಿವೃದ್ಧಿ ಪಡಿಸಲಾಗಿದೆ.

    ಇದರಿಂದ ರೈತರ ತೋಟಗಳಿಗೆ ಅಂತರ್ಜಲ ಹೆಚ್ಚಲಿದೆ. ಹಳ್ಳದ ದಡದ ಪ್ರಾಕೃತಿಕ ಸೌಂದರ್ಯ ಹೆಚ್ಚಿಸಲು ಖಡ್ಗ ಸಂಘ ಈಚೆಗೆ ಸಮಾರೋಪಾದಿಯಲ್ಲಿ ‘ವನ ಮಹೋತ್ಸವ; ಕೈಗೊಂಡಿತು. ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸುಮಾರು 400 ವಿವಿಧ ಕಾಡು ಸಸಿಗಳನ್ನು ಬದುವಿನಲ್ಲಿ ನೆಡಲಾಯಿತು. ದಡ ಕುಸಿಯದಂತೆ ತಡೆಯಲು ಮರದ ಬೇರುಗಳ ಸಹಕಾರಿ. ಒತ್ತುವರಿ ತಡೆಯಲು ಸೂಕ್ತ ಪರಿಹಾರ ಎಂದು ಖಡ್ಗ ಸಂಘದ ಅಧ್ಯಕ್ಷ ರಘು ತಿಳಿಸಿದರು.

    ಸುಮಾರು 50 ಸ್ವಯಂ ಸೇವಕರು ರಾಜ್ಯದ ವಿವಿಧ ಕಡೆಯಿಂದ ಬಂದು ಗಿಡ ನೆಡುವ ಕಾರ್ಯದಲ್ಲಿ ತೊಡಗಿಕೊಂಡರು. ಸ್ಥಳಕ್ಕೆ ಆಗಮಿಸಿದ ಪಾಂಡೊಮಟ್ಟಿ ವಿರಕ್ತ ಮಠದ ಸ್ವಾಮೀಜಿ ಗಿಡ ನೆಡುವುದಷ್ಟೇ ಅಲ್ಲ… ಅವುಗಳ ಸಂರಕ್ಷಣೆಯ ಜವಾಬ್ದಾರಿ ಸಾರ್ವಜನಿಕರಲ್ಲಿ ಬರಬೇಕು ಎಂದರು.

    ಉಪ ವಿಭಾಗಧಿಕಾರಿ ಮಮತಾ ಹಿರೇಗೌಡರ್ ಕೆರೆ, ಹಳ್ಳಗಳ ಒತ್ತುವರಿ ತೆರವಿಗೆ ಎಲ್ಲರ ಸಹಕಾರ ಅಗತ್ಯ. ಪ್ರಕೃತಿ ಅಸಮೋತಲನದಿಂದ ಹಲವು ಪ್ರಾಕೃತಿಕ ದುರ್ಘಟನೆಗಳು ಸಂಭವಿಸುತ್ತಿವೆ. ಸರ್ಕಾರದ ವಿವಿಧ ಯೋಜನೆಗಳ ಮೂಲಕ ಜಲಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

    ಇದನ್ನೂ ಓದಿ:ಏಷ್ಯಾಖಂಡದ ಎರಡನೇ ಬೃಹತ್ ಕೆರೆ ಸಂರಕ್ಷಣೆಗೆ ಟೆಕ್ಕಿಗಳ ಹೋರಾಟhttps://kannadapress.com/2020/05/22/techies-fight-to-protect-asias-second-largest-lake-sulekere/

    ಮರುಕಳಿಸುವುದೇ ಫುಡ್ ಸ್ಟ್ರೀಟ್‌ನ ಗತ ವೈಭವ?

    ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ ಅಥವಾ ವಿ.ವಿ ಪುರಂ ಅಂದ್ರೆ ತಕ್ಷಣ ನೆನಪಾಗುವುದೇ ಫುಡ್ ಸ್ಟ್ರೀಟ್. ಈ ಹೈಫೈ ಉದ್ಯಾನ ನಗರಿಯಲ್ಲೂ ಹಳೆಯ ಬೆಂಗಳೂರನ್ನು ನೆನಪಿಸುವ ಅತ್ಯಂತ ಕಿರಿದಾದ ರಸ್ತೆಯಲ್ಲಿ ಸಂಜೆಯಾಗುತ್ತಿದ್ದಂತೆ ತೆರೆದುಕೊಳ್ಳುವ ಈ ಪುಟ್ಟ ಆಹಾರ ಲೋಕ ಬೆಂಗಳೂರಿಗರ ಆಹಾರ ರುಚಿಯನ್ನು ಪರಿಚಯಿಸುತ್ತದೆ. ಲಕ್ಷಗಟ್ಟಲೆ ವೇತನ ಪಡೆಯುವ ಐಟಿ ಉದ್ಯೋಗಿಗಳು, ಬಿಸ್ನೆಸ್‌ಮನ್‌ಗಳು, ಕಾರ್ಪೊರೇಟ್ ಉದ್ಯೋಗಿಗಳು, ಸದಾ ಕಾರಿನಲ್ಲೇ ತಿರುಗುತ್ತ ಕಾರಿನಿಂದ ಕೆಳಗಿಳಿಯಲೂ ಒಲ್ಲೆಯೆನ್ನುವವರು, ಕಾಲೇಜು ವಿದ್ಯಾರ್ಥಿಗಳು ಈ ಇಕ್ಕಟ್ಟಾದ ಫುಡ್ ಸ್ಟ್ರೀಟ್‌ನಲ್ಲಿ ಮಾತ್ರ ತಮ್ಮ ಅಂತಸ್ತು, ಗತ್ತು, ಗೈರತ್ತುಗಳನ್ನು ಮರೆತು ಎಲ್ಲರಲ್ಲೂ ಒಂದಾಗಿ ರುಚಿ ರುಚಿಯಾದ ತಿಂಡಿ ಸವಿದು ಸಂತೃಪ್ತರಾಗುತ್ತಾರೆ. ಅದುವೇ ಈ ಆಹಾರ ತಾಣದ ವಿಶೇಷ.

    ಅತ್ಯಂತ ಕಡಿಮೆ ಬೆಲೆಗೆ ಸುಮಾರು ಇನ್ನೂರಕ್ಕಿಂತಲೂ ಅಧಿಕ ತಿಂಡಿ ತಿನಿಸುಗಳು ಸಿಗುವ ಫುಡ್ ಸ್ಟ್ರೀಟ್ ಬೆಂಗಳೂರಿಗರಿಗೆ ಅತ್ಯಂತ ಮೆಚ್ಚಿನ ಆಹಾರ ತಾಣ. ಸ್ಥಳದಲ್ಲೇ ಬಿಸಿ ಬಿಸಿಯಾಗಿ ಮಾಡಿ ಕೊಡುವ ಮಸಾಲೆ ದೋಸೆ, ಬೆಣ್ಣೆ ದೋಸೆ, ತಟ್ಟೆ ಇಡ್ಲಿ, ಪಡ್ಡು ಚಟ್ನಿಯ ರುಚಿ, ಚಿತ್ರಾನ್ನ, ಲೆಮನ್ ರೈಸ್, ಆಗಷ್ಟೆ ಕರಿದು ತೆಗೆದ ಬಿಸಿ ಜಿಲೇಬಿ, ಗಾಜಿನ ಬಾಟಲಿಯೊಳಗಿರುವ ಕಜ್ಜಾಯ, ಕೊಬ್ಬರಿ ಮಿಠಾಯಿ, ರವೆ ಉಂಡೆ, ಫ್ರೆಶ್ ಹೋಳಿಗೆ, ಚಿರೋಟಿ ಹಾಲು, ಬಿಸಿ ಎಣ್ಣೆಯಲ್ಲಿ ಬೆಂದು ಅರಳುವ ಬಗೆ ಬಗೆಯ ಬಜ್ಜಿ, ಬೋಂಡಾ, ಮಸಾಲೆ ವಡೆ, ಮಿರ್ಚಿ, ಚಾಟ್ಸ್ ಪ್ರಿಯರಿಗೆ ಭೇಲ್‌ಪುರಿ, ಮಸಾಲ ಪೂರಿ, ದಹಿ ಪೂರಿ, ಕಟೋರಿ ಚಾಟ್, ವಡಾ ಪಾವ್, ಪಾವ್ ಭಾಜಿ, ಮಂಚೂರಿಯನ್, ಕಾರ್ನ್ ಮಸಾಲ, ರಸಗುಲ್ಲಾ, ತಣ್ಣನೆಯ ಕೆನೆಭರಿತ ಬಾದಾಮ್ ಮಿಲ್ಕ್, ಗುಲಾಬ್ ಜಾಮೂನ್, ಫ್ರೂಟ್ ಸಲಾಡ್ ವಿದ್ ಐಸ್‌ಕ್ರೀಮ್, ಫ್ರೂಟ್ ಸಲಾಡ್ ವಿದ್ ಗುಲ್ಕನ್, ಚುರುಮುರಿ, ನಿಪ್ಪಟ್ಟು ಮಸಾಲ, ಆಲೂ ಟ್ವಿಸ್ಟರ್, ವಾಸವಿ ಸ್ವೀಟ್ಸ್‌ನ ಅವರೆಕಾಯಿ ಮಿಕ್ಸ್‌ಚರ್, ಸಿಹಿ ತಿಂಡಿ, ವಿ.ಬಿ ಬೇಕರಿಯ ಕಾಂಗ್ರೆಸ್ ಬನ್, ಹನಿ ಕೇಕ್ ಇತ್ಯಾದಿಗಳು ಎಂದಿಗೂ ಮರೆಯಲಾಗದ ರುಚಿಗಳು.

    ಬೆಂಗಳೂರಿಗೆ ಬಂದವರು ಭೇಟಿ ನೀಡಲೇ ಬೇಕಾದ ಫುಡ್ ಸ್ಟ್ರೀಟ್‌ಗಳಲ್ಲಿ ಒಂದಾಗಿರುವ ಸಜ್ಜನ್ ರಾವ್ ಸರ್ಕಲ್‌ನ ಫುಡ್ ಸ್ಟ್ರೀಟ್‌ನಲ್ಲಿ ಸದ್ಯಕ್ಕೆ ತಿನಿಸುಗಳ ಘಮ ಬರುತ್ತಿಲ್ಲ. ಸತತ ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ಮುಚ್ಚಿ ಹೋಗಿದ್ದ ಈ ಫುಡ್ ಸ್ಟ್ರೀಟ್‌ನಲ್ಲಿ ಕೆಲವು ಗೂಡಂಗಡಿಗಳು ಆರಂಭಗೊಂಡಿದ್ದರೂ ಈ ಆಹಾರ ಬೀದಿ ಮೊದಲಿನ ಗತ ವೈಭವಕ್ಕೆ ಮರುಳುವುದೇ ಎಂಬುದು ಆಹಾರ ಪ್ರಿಯರ ಪ್ರಶ್ನೆಯಾಗಿದೆ. ಈಗಿನ ಲಾಕ್‌ಡೌನ್ ತೆರವಾದರೂ ಕೊರೊನಾ ವೈರಸ್ ಹರಡುವ ಭೀತಿ ನಿಂತಿಲ್ಲದ ಕಾರಣ ಈ ಫುಡ್ ಸ್ಟ್ರೀಟ್ ಸದ್ಯಕ್ಕೆ ನೀರವವಾಗಿದೆ.

    ಅಂಗಡಿಗಳು ಆರಂಭವಾದರೂ ಜನರು ಈ ಮೊದಲಿನಂತೆ ಗುಂಪುಗೂಡುವುದು ಸಾಧ್ಯವಿಲ್ಲ ಮತ್ತು ಈಗಾಗಲೇ ಅತ್ಯಂತ ಇಕ್ಕಟ್ಟಾಗಿರುವ ಈ ತಾಣದಲ್ಲಿ ಸುರಕ್ಷಿತ ಅಂತರ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವುದು ಆಗದ ಮಾತು. ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ ಜನರು ಹೊರಗಡೆಯ ಆಹಾರ ಸೇವಿಸಲು ಕೂಡಾ ಹಿಂದೇಟು ಹಾಕುತ್ತಿರುವುದರಿಂದ ಫುಡ್ ಸ್ಟ್ರೀಟ್ ತನ್ನ ಆಕರ್ಷಣೆ ಕಳೆದುಕೊಳ್ಳುವ ಸಾಧ್ಯತೆಯೆ ಹೆಚ್ಚು. ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಅಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳೂ ನಷ್ಟದಲ್ಲಿದ್ದು, ಸದ್ಯಕ್ಕೆ ಯಾರು ಕೂಡ ಮತ್ತೆ ತಮ್ಮ ಅಂಗಡಿಗಳನ್ನು ಆರಂಭಿಸುವ ಸ್ಥಿತಿಯಲ್ಲಿಲ್ಲ ಎಂದು ಸ್ಥಳೀಯ ಜನರು ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಅನೇಕ ಐಷಾರಾಮಿ ಆಹಾರ ತಾಣಗಳಿದ್ದರೂ ಸಜ್ಜನ್ ರಾವ್ ಸರ್ಕಲ್‌ನಲ್ಲಿರುವ ಫುಡ್ ಸ್ಟ್ರೀಟ್‌ನಲ್ಲಿ ನಿಂತುಕೊಂಡು ತಿನ್ನುವ ಖುಷಿಯನ್ನು ಬೇರೆ ಯಾವುದೂ ಕೊಡಲಾರದು. ಅದಕ್ಕೆ ಈ ತಾಣದಲ್ಲಿ ಅನೇಕ ರೆಸ್ಟೋರೆಂಟ್‌ಗಳಿರುವ ಚರ್ಚ್ ಸ್ಟ್ರೀಟ್‌ಗಿಂತಲೂ ಹೆಚ್ಚಿನ ಜನ ಸೇರುತ್ತಾರೆ. ನಿಲ್ಲಲು ಜಾಗವಿಲ್ಲದಿದ್ದರೆ ಕಾರಿನೊಳಗೆ ಕುಳಿತುಕೊಂಡೇ ತಿಂಡಿ ತರಿಸಿಕೊಂಡು ತಿನ್ನುವವರೂ ಇದ್ದಾರೆ. ಕೆಲವು ಸೆಲೆಬ್ರಿಟಿಗಳು ಇಲ್ಲಿಗೆ ಬಂದರೂ ಜನರು ತಮ್ಮನ್ನು ಗುರುತಿಸುತ್ತಾರೆ ಎಂದು ಹಾಗೂ ಕೆಲವರು ಇಂಥ ಚಿಕ್ಕ ತಾಣಕ್ಕೆ ಭೇಟಿ ಕೊಟ್ಟಿದ್ದು ಗೊತ್ತಾದರೆ ತಮ್ಮ ಪ್ರತಿಷ್ಠೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಐಷಾರಾಮಿ ಕಾರಿನೊಳಗೆ ಕುಳಿತುಕೊಂಡೇ ಇಲ್ಲಿನ ತಿಂಡಿಗಳನ್ನು ಸವಿದು ಹೋಗುವುದಿದೆ. ಆದರೆ ಈಗ ಈ ಫುಡ್ ಸ್ಟ್ರೀಟ್‌ನ ಆ ಹಳೆಯ ಖದರು ಮತ್ತೆ ಮರಳುವ ಸಾಧ್ಯತೆ ದೂರವಾಗಿದೆ ಎಂದು ಈ ಕಡೆ ಸುಮಾರು ಇಪ್ಪತ್ತು ವರ್ಷಗಳಿಂದ ಭೇಟಿ ನೀಡುತ್ತಿದ್ದ ಗ್ರಾಹಕ ಚಿನ್ನಸ್ವಾಮಿ ಹೇಳಿದ್ದಾರೆ.

    ಒಂದೊಮ್ಮೆ ಈಗಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದರೂ ಸರ್ಕಾರದ ಕಠಿಣ ಮಾರ್ಗಸೂಚಿಗಳು ಮುಂದುವರಿಯಲಿವೆ. ರಸ್ತೆ ಬದಿಯಲ್ಲೇ ತಿಂಡಿಗಳನ್ನು ಮಾಡುವಾಗ ಈ ಮಾರ್ಗಸೂಚಿಗಳು ಉಲ್ಲಂಘನೆಯಾಗುವ ಸಾಧ್ಯತೆಯೆ ಹೆಚ್ಚು. ಈ ಹಿಂದೆಯೇ ಜನರ ಗುಂಪಿನಿಂದಾಗಿ ಈ ಪ್ರದೇಶಲ್ಲಿ ಸಂಜೆಯ ವೇಳೆ ಜನಜಂಗುಳಿ ಹೆಚ್ಚಾಗಿ ಜಾತ್ರೆಯಂಥ ವಾತಾವರಣ ಸೃಷ್ಟಿಯಾಗುತ್ತಿತ್ತು. ಇನ್ನು ಸುರಕ್ಷಿತ ಅಂತರ ಕಾಯ್ದುಕೊಂಡು ತಿಂಡಿ ತಿನ್ನಬೇಕಾದರೆ ಕೆ.ಆರ್ ಮಾರ್ಕೆಟ್ ಮತ್ತು ಲಾಲ್‌ಬಾಗ್‌ನಿಂದಲೇ ಜನರು ಫುಡ್ ಸ್ಟ್ರೀಟ್‌ಗೆ ಕ್ಯೂ ನಿಲ್ಲಬೇಕಾದೀತು ಎಂದು ಐಟಿ ಉದ್ಯೋಗಿ ಶಾಂತಿಲಾಲ್ ಹೇಳಿದ್ದಾರೆ.

    ನಾನು ಈಗಾಗಲೇ ಫುಡ್ ಸ್ಟ್ರೀಟ್‌ನ ಫ್ರೂಟ್ ಸಲಾಡ್ ವಿದ್ ಗುಲ್ಕನ್ ಮತ್ತು ಕ್ಯಾಪ್ಸಿಕಂ ಬಜ್ಜಿ ಮಸಾಲವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಫುಡ್ ಸ್ಟ್ರೀಟ್ ಯಾವಾಗ ಓಪನ್ ಆಗುತ್ತದೊ ಎಂದು ಕಾಯುತ್ತಿದ್ದೇನೆ ಎಂದು ಕಾಲೇಜು ವಿದ್ಯಾರ್ಥಿ ಸುನಿಲ್ ಹೇಳಿದ್ದಾರೆ.

    ವಿ.ವಿ ಪುರಂ ಫುಡ್ ಸ್ಟ್ರೀಟ್ ಬೆಂಗಳೂರಿಗೆ ಒಂದು ಅಪೂರ್ವವಾದ ದೃಶ್ಯಕಾವ್ಯವನ್ನೂ ಕಟ್ಟಿಕೊಡುತ್ತದೆ. ಸಂಜೆಯಾಗುತ್ತಿದ್ದಂತೆ ಗರಿಗೆದರುವ ಈ ಪ್ರದೇಶದಲ್ಲಿ ಒಂದೆಡೆ ವಾಹನಗಳ ನಿಬಿಡತೆ, ಇನ್ನೊಂದೆಡೆ ಕಾದ ಕಾವಲಿಯಲ್ಲಿ ಚುಯ್ಯೆಂದು ದೋಸೆಯನ್ನು ಚಕಚಕನೆ ಹೊಯ್ಯುವ ಕಲಾತ್ಮಕತೆ, ಕಾದ ಎಣ್ಣೆಯಲ್ಲಿ ಹೂವಿನಂತೆ ಅರಳುವ ಬೋಂಡಾ, ಬಜ್ಜಿಯನ್ನು ನೋಡಿ ಬಾಯಿ ನೀರೂರಿಸಿಕೊಂಡು ತಮ್ಮ ಸರದಿಗೆ ಕಾಯುವ ಜನರು, ತಡ ರಾತ್ರಿ ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿದರೂ ಫುಡ್ ಸ್ಟ್ರೀಟ್‌ಗೆ ಹೋದರೆ ಏನಾದರೂ ತಿನ್ನಲು ಸಿಗುತ್ತದೆ ಎಂಬ ಜನರ ವಿಶ್ವಾಸ ಇವೆಲ್ಲವೂ ಆ ಪುಟ್ಟ ಆಹಾರ ಲೋಕದೊಂದಿಗೆ ಜನರನ್ನು ‘ವನಾತ್ಮಕವಾಗಿಯೂ ಬೆಸೆದಿವೆ. ಬೆಂಗಳೂರಿನ ಆಹಾರ ಸಂಸ್ಕೃತಿಯೇ ಮೇಳೈಸಿರುವ ಫುಡ್ ಸ್ಟ್ರೀಟ್ ಮತ್ತೆ ಆರಂಭವಾಗುವುದೇ, ಆರಂಭವಾದರೂ ಎಂದಿನ ಆಪ್ತತೆ ಅಲ್ಲಿರುವುದೇ? ಗರಿ ಗರಿ ಮಸಾಲೆ ದೋಸೆ, ಹೋಳಿಗೆಯ ಹೂರಣ ರುಚಿಸುವುದೇ? ಏನು ತಿಂದರೆ ಏನಾಗುವುದೊ ಎಂಬ ಭಯ ಬಿಟ್ಟು ಜನರು ಫುಡ್ ಸ್ಟ್ರೀಟ್‌ನ ತಿಂಡಿಗಳನ್ನು ಸವಿಯುವರೇ ಎಂಬುದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ!

    ಭಯ ಬೇಡ. ರಾಜ್ಯದತ್ತ ಮಿಡತೆ ಬರುವುದಿಲ್ಲ

    ಹಾಮಾರಿ ಕೋರನಾ ಭೀತಿಯ ನಡುವೆಯೇ ಹಸಿರನ್ನು ತಿಂದು ಕಬಳಿಸುವ ಮಿಡತೆಗಳು ರಾಜ್ಯದತ್ತ ದಾಳಿ ಇಡುತ್ತಿವೆ ಎಂಬ ಸುದ್ದಿ ರಾಜ್ಯದ ರೈತಾಪಿ ವರ್ಗವನ್ನು ಕಂಗೆಡಿಸಿತ್ತು. ಆದರೆ ಆ ಭೀತಿ ಸದ್ಯಕ್ಕೆ ದೂರವಾಗಿದೆ. ಹೀಗೆಂದು ರಾಜ್ಯ ಕೃಷಿ ಸಚಿವರು ಹೇಳಿದ್ದಾರೆ.

    ಹಾಗಾದರೆ ಈ ಮಿಡತೆ ಏನು? ಇದು ಕರ್ನಾಟಕಕ್ಕೆ ದಾಳಿ ಇಡುವ ಭೀತಿ ಎದುರುದಾದ್ದರು ಹೇಗೆ ಎಂಬದನ್ನು ತಿಳಿದುಕೊಳ್ಳುವ ಸಲುವಾಗಿ  ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ  ಕೀಟ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿ.ಎಂ. ಕಲ್ಲೇಶ್ವರ ಸ್ವಾಮಿ ಅವರನ್ನು ಕನ್ನಡಪ್ರೆಸ್.ಕಾಮ್ ಮಾತನಾಡಿಸಿತು. ಆ ಮಾತುಕತೆಯ ಸಂಗ್ರಹ ಇಲ್ಲಿದೆ

    ಕಲ್ಲೇಶ್ವರ ಸ್ವಾಮಿ

    ವಿಶ್ವದಲ್ಲಿ ಬಹಳಷ್ಟು ತರಹದ ಮಿಡತ ಪ್ರಭೇದಗಳಿದ್ದು, ಅವುಗಳಲ್ಲಿ ಸಿಸ್ಟೋಸೆರ್ಕಾರ ಗ್ರಿಗೇರಿಯಾ ಎಂಬುದು ಬಹಳ ಪ್ರಮುಖ ಮಿಡತೆಯಾಗಿದೆ ಇವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾರುತ್ತ ದೊಡ್ಡ ಪ್ರಮಾಣದಲ್ಲಿ ಯಾವುದೇ ಅಡ್ಡ ಬರುವ ಹಸಿರು ಬೆಳೆಗಳನ್ನು ತಿನ್ನುತ್ತ ಮುನ್ನುಗುತ್ತದೆ. ಒಂದು ಸಮೂಹದಲ್ಲಿ  ಪ್ರತಿ  ಚದರ ಕಿಲೋಮಿಟರ್‌ಗೆ ೧೫೦ ಮಿಲಿಯನ್ ಮಿಡತೆಗಳು ಕಂಡು ಬರಬಹುದು.

     ಇದರ ಹಾನಿಯು ಉತ್ತರ ಭಾರತದ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ನಾನಾ ಕಡೆ ಕಂಡು ಬರುತ್ತಿದೆ.  ಇವು ಮೂಲತ: ಆಫ್ರಿಕಾ, ಮಧ್ಯಪ್ರಾಚ್ಯ, ದಕ್ಷಿಣ ಮತ್ತು ನೈರುತ್ಯಾ ಏಷ್ಯಾದ ಅನೇಕ ದೇಶಗಳ ಮರುಭೂಮಿಗಳಿಂದ  ಹಾರಿಬರುತ್ತ ದಾಳಿ ಇಡುತ್ತಿವೆ.

    ಈ ತರಹದ ಹಾವಳಿ ಹಿಂದೆ ೧೯೨೬-೧೯೩೪, ೧೯೪೦-೧೯೪೮, ೧೯೪೯-೧೯೬೩, ೧೯೬೭-೬೯, ೧೯೮೭-೧೯೮೯, ೨೦೦೩-೨೦೦೫ ಮತ್ತು ೨೦೧೯-೨೦ ರಂದು ಸಂಭವಿಸಿದ್ದು ಈ ವರ್ಷ ಕೂಡ ಅತಿಯಾದ ರೀತಿಯಲ್ಲಿ ಹಾನಿಮಾಡುತ್ತಿವೆ.

    ಈ ಹರಡುತ್ತಿರುವ ಮಿಡತೆಗಳು ಕರ್ನಾಟಕಕ್ಕೆ  ಮಹಾರಾಷ್ಟ್ರದಿಂದ ಬರುವ ಸಾಧ್ಯತೆ ಇರಬಹುದು. ಆದರೆ ಈ  ಮೇಲೆ ತಿಳಿಸಿದ ವರ್ಷಗಳಲ್ಲಿ ಆದ ವರದಿಯ ಪ್ರಕಾರ ಯಾವ ವರ್ಷದಲ್ಲಿಯೂ ಇದರ ಹಾನಿಯು ದಕ್ಷಿಣ ಭಾರತಕ್ಕೆ ಬಂದಿಲ್ಲ. ಈಗಿನ ವರದಿಯ ಪ್ರಕಾರ ಗಾಳಿಯ ದಿಕ್ಕು ಉತ್ತರದ ಕಡೆ ಬೀಸುತ್ತಿರುವುದರಿಂದ ಕರ್ನಾಟಕಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ. ಆದರೆ ಗಾಳಿಯ ದಿಕ್ಕು ಬದಲಿಸಿದರೆ ಮಿಡತೆಗಳ ಸಮೂಹ ನೆಡೆ ಕರ್ನಾಟಕದತ್ತ  ತಿರುಗುವ ಸಾಧ್ಯತೆ ಬಿಟ್ಟರೆ ಬಹುತೇಕವಾಗಿ ಬರುವ ಸಾಧ್ಯತೆ  ಕಡಿಮೆ ಇದೆ.

    ಮಿಡತೆಗಳ ಸಮಗ್ರ ನಿರ್ವಹಣೆ

    ಮಿಡತೆ ಸಮೂಹದ ಮಾಹಿತಿ ಪಡೆದ  ತಕ್ಷಣ ಮಿಡತೆಗಳು ಬೆಳೆಗಳ ಮೇಲೆ ಕೂರದಂತೆ ಮಾಡಲು ಖಾಲಿಡಬ್ಬ, ಲೋಹದ ಫಲಕಗಳು, ಡ್ರಮ್, ಪಟಾಕಿ ಸಿಡಿಸುವುದು, ರೇಡಿಯೋ ಅಥವಾ ಇನ್ಯಾವುದೇ ಉಪಕರಣಗಳ ಮೂಲಕ ರೈತರು  ದೊಡ್ಡದಾಗಿ  ಶಬ್ದಮಾಡಿ ಎಚ್ಚರಿಕೆಯಿಂದ ಓಡಿಸಹುದಾಗಿದೆ

    .ಬೇವಿನ ಆಧಾರಿತ ಕೀಟನಾಶಕ (೦.೧೫% ಇಸಿ ೪೫ ಮಿ.ಲೀ./೧೫ ಲೀಟರ್ ನೀರು) ವನ್ನು ಬೆಳೆಗಳ ಮೇಲೆ ಸಿಂಪರಿಸಿದರೆ ಮಿಡತೆಗಳು ಬೆಳೆಗಳನ್ನು ತಿನ್ನದೆ  ವಿಕರ್ಷಣೆಗೆ ಒಳಗಾಗುತ್ತವೆ.

    ಬೆಳೆಗಳ ಮೇಲೆ ಕ್ಲೋರ್‌ಫೈರಿಫಾಸ್ ೧.೫ % ಡಿ.ಪಿ. ಪುಡಿಯನ್ನು ಧೂಳಿಕರಿಸಬಹುದಾಗಿದೆ. ಈ ಕೀಟನಾಶಕ ಧೂಳೀಕರಣವನ್ನು ಬೆಳಿಗ್ಗೆ ಅಥವಾ ಸಾಯಂಕಾಲದ ತಂಪಾದ ಸಮಯದಲ್ಲಿ ಮಾಡುವುದು ಸೂಕ್ತ.

    ಮಿಡತೆಗಳು ಮೊಟ್ಟೆಗಳನ್ನು ಎಲ್ಲಾ ಪ್ರದೇಶಗಳಲ್ಲಿ ನೆಲದಲ್ಲಿ  ಇಡುವುದರಿಂದ ಕ್ವಿನಾಲ್‌ಫಾಸ್ ೧.೫% ಡಿ.ಪಿ. ಆಥವಾ ಕ್ಲೋರ್‌ಪೈರಿಫಾಸ್ ೧.೫ % ಡಿ.ಪಿ. ಪುಡಿಯನ್ನು ಅಂತಹ ಪ್ರದೇಶಗಳಲ್ಲಿ ಧೂಳಿಕರಿಸುವುದು. ಇದರಿಂದ ಮೊಟ್ಟೆಯಿಂದ ಹೊರಬರುವ ಅಪ್ಸರೆಗಳು ಕೀಟನಾಶಕಕ್ಕೆ ತುತ್ತಾಗಿ ಸಾಯುತ್ತವೆ.

    ಮೊಟ್ಟೆಯಿಂದ ಹೊರಬರುವ  ಅಪ್ಸರೆ ಕೀಟಗಳು ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ನುಗ್ಗುತ್ತ ಹೋಗುತ್ತವೆ. ಇವುಗಳನ್ನು ತಪ್ಪಿಸಲು ಒಣಹುಲ್ಲನ್ನು ಅಥವಾ ಸಸ್ಯವಶೇಷಗಳನ್ನು ಸುಟ್ಟಿಹಾಕಿ ಮಿಡತೆಗಳ ಸಮೇತ ಕೊಲ್ಲುವುದು.

    ಹಾವಳಿ ಹೆಚ್ಚಾದಲ್ಲಿ ಬಿತ್ತುವ ಮುಂಚೆ ಹೊಲದ ಸುತ್ತಲು ಎರಡು ಅಗಲದ ಹಾಗೂ ಎರಡು ಅಡಿ ಹಾಳದ ಕಾಲುವೆಗಳನ್ನು  ತೋಡಿ ಅದಕೆ  ಶೇ. ೧.೫ ರ ಕ್ವಿನಾಲ್‌ಫಾಸ್ ಅಥವಾ ಶೇ. ೧.೫ರ ಕ್ಲೋರ್ ಪೈರಿಫಾಸ್ ಪಡಿಯನ್ನು ಧೂಳೀಕರಿಸುವುದು.

    ಕೀಟನಾಶಕ ಬಳಸುವಾಗ ಬಟ್ಟೆಗಳಿಂದ , ಕನ್ನಡಕದಿಂದ  ಮೈಯನ್ನು ಮತ್ತು ಕಣ್ಣುನ್ನು ಮುಚ್ಚಿಕೊಂಡು  ಮುಂಜಾಗೃತ ವಹಿಸುವುದು ಉತ್ತಮ

    ಕನ್ನಡಪ್ರೆಸ್.ಕಾಮ್ ಲೋಕಾರ್ಪಣೆ

    ವಿವಿಧ ಮಾದ್ಯಮ ಪ್ರಕಾರಗಳ ಪೈಕಿ ಡಿಜಿಟಲ್ ಮಾಧ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಓದಿನತ್ತ ಹೊಸ ತಲೆಮಾರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎಂದು ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.
    ಬೆಂಗಳೂರಿನಲ್ಲಿ ಗುರುವಾರ ನೂತನ ವೆಬ್‌ತಾಣ ‘ಕನ್ನಡಪ್ರೆಸ್.ಕಾಂ’ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಗರ-ಪಟ್ಟಣ ಎಂಬ ಎಲ್ಲೆಗಳನ್ನು ಮೀರಿ ಜಗತ್ತಿನಾದ್ಯಂತ ಬೆರಗಾಗುವ ರೀತಿಯಲ್ಲಿ ಡಿಜಿಟಲ್ ಮಾಧ್ಯಮ ವೇಗಗತಿಯಲ್ಲಿ ಬೆಳೆಯುತ್ತಿದೆ. ಇದೇ ವೇಳೆ ಮುದ್ರಣ ಮಾಧ್ಯಮವು ಕಷ್ಟಗಳ ವರ್ತುಲಕ್ಕೆ ಸಿಲುಕಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ನಾವು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ ಎಂದಿದ್ದಾರೆ.
    ಹಿರಿಯ ಪತ್ರಕರ್ತ ಶ್ರೀವತ್ಸ ನಾಡೀಗ್ ಅವರ ಸಂಪಾದಕತ್ವದಲ್ಲಿ ‘ಕನ್ನಡಪ್ರೆಸ್.ಕಾಂ’ ಬಂದಿದೆ. ಅವರ ಜತೆಗೆ ಹಾಗೂ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ನುರಿತ ಪತ್ರಕರ್ತರು ಈ ತಂಡದಲ್ಲಿರುವುದು ಗಮನಾರ್ಹ. ಹೀಗಾಗಿ ‘ಕನ್ನಡಪ್ರೆಸ್.ಕಾಂ’ ವಿನೂತನವಾಗಿ ಮೂಡಿಬರುವುದು ಖಚಿತ ಎಂಬ ವಿಶ್ವಾಸವನ್ನು ಭಟ್ಟರು ವ್ಯಕ್ತಪಡಿಸಿದ್ದಾರೆ.
    ‘ಮುದ್ರಣದ ವಿಶ್ವಾಸ-ಡಿಜಿಟಲ್‌ನ ವೇಗ’ ಎಂಬುದು ‘ಕನ್ನಡಪ್ರೆಸ್.ಕಾಂ’ನ ಸ್ಲೋಗನ್. ಇದಕ್ಕೆ ತಕ್ಕ ಹಾಗೆಯೇ ಈ ವೆಬ್ ತಾಣವು ಮುದ್ರಣದ ವಿಶ್ವಾಸವನ್ನು ಉಳಿಸಿಕೊಂಡು ತಂತ್ರಜ್ಞಾನದ ವೇಗದಲ್ಲಿ ಬೆಳೆದು ಯಶಸ್ವಿಯಾಗಲಿ ಎಂದು ಯೋಗರಾಜ್ ಭಟ್ಟರು ಶುಭ ಹಾರೈಸಿದರು.
    ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಭಾಷಣೆಕಾರ ಮಾಸ್ತಿ ‘ಕನ್ನಡಪ್ರೆಸ್.ಕಾಂ’ಕ್ಕೆ ಶುಭ ಹಾರೈಸಿದರಲ್ಲದೆ, ಅನುಭವೀ ಪತ್ರಕರ್ತರ ತಂಡವನ್ನು ಹೊಂದಿರುವ ಈ ವೆಬ್‌ತಾಣ ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ ಎಂಬ ಅಚಲ ವಿಶ್ವಾಸ ನನಗಿದೆ ಎಂದರು. ನಟ ಜೀವಾ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ‘ಕನ್ನಡಪ್ರೆಸ್.ಕಾಂ’ಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಹಿರಿಯ ಪತ್ರಕರ್ತ ಕನ್ನಡಪ್ರೆಸ್.ಕಾಂ ತಂಡದ ಪಿ.ಕೆ. ಚನ್ನಕೃಷ್ಣ ಉಪಸ್ಥಿತರಿದ್ದರು

    error: Content is protected !!