33.3 C
Karnataka
Tuesday, May 14, 2024
    Home Blog Page 179

    ಕೊರೊನಾ, ಪ್ರಕೃತಿಗೆ ಲಾಭನಾ?

    ಕೃತಿಯ ಮಡಿಲಲ್ಲಿಯೇ ಹುಟ್ಟಿದ ಅತಿಸಣ್ಣ ವೈರಸ್ ಒಂದು,ಪ್ರಕೃತಿಮಡಿಲಿನಪ್ರಾಣಿಗಳಲ್ಲಿಯೇ ದುರಂಹಂಕಾರದಿಂದ ಮೆರೆಯುತ್ತಿದ್ದ ಮನುಷ್ಯನ ಅಸ್ತಿತ್ವವನ್ನೇ ಅಲುಗಾಡಿಸಿದೆ. ಒಂದು ನಿಮಿಷವನ್ನೂ ವ್ಯರ್ಥ ಮಾಡದೆ, ‘ಉತ್ಪಾದಕತೆ’ಯ ಬಗ್ಗೆಯೇ ಕೊಟ್ಯಂತರ ಶಬ್ದಗಳನ್ನಾಡುತ್ತಿದ್ದ ಮನುಕುಲವನ್ನೇ ಕಟ್ಟಿಹಾಕಿದೆ. ಈಗ ಎಲ್ಲೆಲ್ಲೂ ಸಾವಿನ ನರ್ತನ, ಆತಂಕ, ಭಯ, ನಷ್ಟದ ಲೆಕ್ಕಾಚಾರ. ಮುಂದೇನು?

    ಕೋವಿಡ್-19 ವೈರಸ್ ಕಾಣಿಸಿಕೊಂಡ ನಂತರ ಜಗತ್ತು ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಪ್ರಮುಖವಾದುದ್ದೆಂದರೆ ಪರಿಸರ ಮಾಲಿನ್ಯ ಕಡಿಮೆಯಾಗಿರುವುದು. ಪ್ರಪಂಚದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಘೋಷಿಸಿ, ಸ್ಥಬ್ದವಾಗಿದ್ದರಿಂದ ಸಹಜವಾಗಿಯೇ ಪ್ರಕೃತಿಯ ಮೇಲಿನ ಒತ್ತಡ ಕಡಿಮೆಯಾಗಿದೆ. ಜೀವ-ಜಂತುಗಳು, ಪ್ರಾಣಿ-ಪಕ್ಷಿಗಳು ಮನುಷ್ಯರ ಭಯವಿಲ್ಲದೆ ಪ್ರಕೃತಿಯ ಮಡಿಲಲ್ಲಿ ಸ್ವತಂತ್ರವಾಗಿ ಸಂಚರಿಸುತ್ತಿವೆ. ಆಗಾಗ ಮನುಷ್ಯನ ನೆಲೆಗಳಿಗೂ ಭೇಟಿ ನೀಡಿ, ಸುದ್ದಿಯಾಗುತ್ತಿವೆ.

     ಮಾಲಿನ್ಯ (ಪಲ್ಯುಟ್) ಎಂದರೆ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನ ಪ್ರಕಾರ ಶುದ್ಧತೆ ಮತ್ತು ಪವಿತ್ರತೆಯನ್ನು ಕೆಡಿಸು; (ನೀರು ಮುಂತಾದವನ್ನು) ಕೊಳೆ ಮಾಡು, ಹೊಲಸುಗೊಳಿಸು ಎಂದರ್ಥ. ಪಲ್ಯೂಷನ್ ಎಂದರೆ ಮಲಿನೀಕರಣ, ಮಲಿನ ಮಾಡು ಎಂದು. ಪರಿಸರ ಮಾಲಿನ್ಯದ ವಿಷಯದಲ್ಲಿ ಈ ಶಬ್ದಗಳ ಅರ್ಥಗಳಿಗೆ ಒಂದಿಷ್ಟೂ ಕುಂದುಂಟಾಗದಂತೆ ಮನುಷ್ಯ ನಡೆದುಕೊಂಡು ಬಂದಿದ್ದಾನೆ. ಅಂದ ಹಾಗೆ ಮನುಷ್ಯ ಕೂಡ ಈ ಪರಿಸರದ ಭಾಗ, ಆತನೂ ಒಂದು ಪ್ರಾಣಿಯೇ!

    ಪ್ರಕೃತಿಯ ಮಡಿಲಲ್ಲಿಯೇ ಹುಟ್ಟಿದ ಅತಿಸಣ್ಣ ವೈರಸ್ ಒಂದು,ಪ್ರಕೃತಿಮಡಿಲಿನಪ್ರಾಣಿಗಳಲ್ಲಿಯೇ ದುರಂಹಂಕಾರದಿಂದ ಮೆರೆಯುತ್ತಿದ್ದ ಮನುಷ್ಯನ ಅಸ್ತಿತ್ವವನ್ನೇ ಅಲುಗಾಡಿಸಿದೆ. ಒಂದು ನಿಮಿಷವನ್ನೂ ವ್ಯರ್ಥ ಮಾಡದೆ, ‘ಉತ್ಪಾದಕತೆ’ಯ ಬಗ್ಗೆಯೇ ಕೊಟ್ಯಂತರ ಶಬ್ದಗಳನ್ನಾಡುತ್ತಿದ್ದ ಮನುಕುಲವನ್ನೇ ಕಟ್ಟಿಹಾಕಿದೆ. ಈಗ ಎಲ್ಲೆಲ್ಲೂ ಸಾವಿನ ನರ್ತನ, ಆತಂಕ, ಭಯ, ನಷ್ಟದ ಲೆಕ್ಕಾಚಾರ. ಮುಂದೇನು? ಯಾರಿಗೂ ಗೊತ್ತಿಲ್ಲ.

    ಆದರೆ ಪ್ರಕೃತಿಗೆ ಮಾತ್ರ ಲಾಭದ ಮೇಲೆ ಲಾಭ. ಬೇರೆ ದೇಶಗಳ ಕತೆ ಇರಲಿ, ನಮ್ಮ ದೇಶದಲ್ಲಿಯೇ ಕಳೆದ ಮಾರ್ಚ್ ಅಂತ್ಯಕ್ಕೆ ಮುಗಿದ ಆರ್ಥಿಕ ಸಾಲಿನಲ್ಲಿ ಹಸಿರು ಮನೆ ಮೇಲೆ ಪರಿಣಾಮ ಬೀರುವ ಅನಿಲಗಳ ಉತ್ಪಾದನೆ ಶೇ. 1.4 ರಷ್ಟು ಕಡಿಮೆಯಾಗಿದೆ. ಈ ರೀತಿ ಸಿಒ2 (CO2) ಬಿಡುಗಡೆ ಕಡಿಮೆಯಾಗಿರುವುದು ಕಳೆದ ನಾಲ್ಕು ದಶಕಗಳಲ್ಲಿಯೇ ಇದು ಮೊದಲು! ಹೊಸ ಆರ್ಥಿಕ ಸಾಲಿನಲ್ಲಿ ಇನ್ನಷ್ಟು ಕಡಿಮೆಯಾಗುವ ಸೂಚನೆ ಇದೆ. ಇಂಗಾಲ ತಜ್ಞರ ಅಂದಾಜಿನ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್ನಲ್ಲಿ ಶೇ. 15ರಷ್ಟು ಮತ್ತು ಏಪ್ರಿಲ್ನಲ್ಲಿ ಶೇ.30ರಷ್ಟು ಇಂಗಾಲ ಉತ್ಪಾದನೆ ಕಡಿಮೆಯಾಗಿದೆ. ಅಂದಹಾಗೆ ಅತಿಹೆಚ್ಚು ಇಂಗಾಲ (CO2) ಉತ್ಪಾದಿಸುವ ದೇಶಗಳ ಪೈಕಿ ಭಾರತ ಮೂರನೇಸ್ಥಾನದಲ್ಲಿದೆ.

    ನಮ್ಮ ದೇಶದಲ್ಲಿ ಮಾತ್ರವಲ್ಲ, ಅಭಿವೃದ್ಧಿಯೆಂಬ ಮರೀಚಿಕೆಯ ಬೆನ್ನು ಹತ್ತಿ, ಜಗತ್ತಿನ ನಂ.1 ಪಟ್ಟಕ್ಕಾಗಿ ಹಾತೊರೆಯುತ್ತಿರುವ ನಮ್ಮ ನೆರೆಯ ಚೀನಾದಲ್ಲಿ ಜನವರಿ ನಂತರ ಹಸಿರು ಮನೆ ಮೇಲೆ ಪರಿಣಾಮ ಬೀರುವ ಇಂಗಾಲದ ಉತ್ಪಾದನೆ ಶೇ.25ರಷ್ಟು ಕಡಿಮೆಯಾಗಿದೆ. ಕಲ್ಲಿದ್ದಲು ಬಳಕೆ ಶೇ. 40ರಷ್ಟು ಕುಸಿದಿದೆ. ಇಟಲಿಯಲ್ಲಿ ಮಾರ್ಚ್9ರಿಂದ ಲಾಕ್ಡೌನ್ ಜಾರಿಗೆ ತರಲಾಗಿದ್ದು, ಅಲ್ಲಿಯ ಸೆಟಲೈಟ್ಗಳು ಇಂಗಾಲ ಉತ್ಪಾದನೆ ತಳಮಟ್ಟಕ್ಕೆ ಇಳಿದಿರುವ ಚಿತ್ರಗಳನ್ನು ರವಾನಿಸಿವೆ.

     ಜಗತ್ತಿಗೇ ದೊಡ್ಡಣ್ಣನಂತೆ ಬೀಗುತ್ತಿದ್ದ ಅಮೆರಿಕ, ಹವಾಮಾನ ವೈಪರಿತ್ಯಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳಿಂದ ದೂರ ಉಳಿದು, ಆನೆ ನಡೆದಿದ್ದೇ ದಾರಿ ಎಂಬಂತೆ ಮೆರೆಯುತ್ತಿತ್ತು. ಈಗ ಪ್ರಕೃತಿಯೇ ಆ ದೇಶಕ್ಕೂ ಪಾಠ ಕಲಿಸಿದೆ. ಕೊಲಂಬಿಯಾ ವಿವಿಯ ಹೊಸ ಅಧ್ಯಯನದ ಪ್ರಕಾರ ಅಮೆರಿಕದ ನ್ಯೂಯಾರ್ಕ್ನಲ್ಲಿನ ಕಾರ್ಬನ್ ಮಾನೋಕ್ಸೈಡ್ನಮಟ್ಟ ಕಳೆದ ಮಾರ್ಚ್ಗೆಹೋಲಿಸಿದಲ್ಲಿ ಶೇ. 50ರಷ್ಟು ಕಡಿಮೆಯಾಗಿದೆ.

    ಇದು ಮೊದಲೇನು ಅಲ್ಲ

    ಕಳೆದ ಐವತ್ತು ವರ್ಷಗಳಲ್ಲಿ ಜಗತ್ತಿನಲ್ಲಿ ಹೀಗೆ ಇಂಗಾಲದ ಉತ್ಪಾದನೆ ಕಡಿಮೆಯಾಗಿರುವುದು ಇದು ಮೊದಲೇನೂ ಅಲ್ಲ. 1973ರ ಮೊತ್ತ ಮೊದಲ ಮತ್ತು 1979ರ ಎರಡನೇ ತೈಲಬಿಕ್ಕಟ್ಟಿನ ಸಂದರ್ಭದಲ್ಲಿ, 1991ರಲ್ಲಿ ರಷ್ಯಾದ ಒಕ್ಕೂಟ ವ್ಯವಸ್ಥೆ ಪತನಗೊಂಡಾಗ, 1997ರ ಏಷ್ಯಾ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು 2008ರ ವಿಶ್ವ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಕೂಡ ಇದೇ ರೀತಿಯಾಗಿ ಹಸಿರು ಮನೆ ಮೇಲೆ ಪರಿಣಾಮ ಬೀರುವ ಅನಿಲಗಳ ಉತ್ಪಾದನೆ ಕಡಿಮೆಯಾಗಿತ್ತು. 2009ರಲ್ಲಿ ಜಾಗತಿಕ ಸಿಒ2 ಉತ್ಪಾದನೆ ಅದರ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ.1.4 ರಷ್ಟು ಕುಸಿದಿತ್ತು. ಆದರೆ ಒಂದೇ ವರ್ಷದಲ್ಲಿ ಅಂದರೆ 2010ರಲ್ಲಿಯೇ ಶೇ. 5.2ರಷ್ಟು ಹೆಚ್ಚಳ ದಾಖಲಿಸಿತ್ತು!

    ಆಶ್ಚರ್ಯಕರ ಬೆಳವಣಿಗೆಯೆಂದರೆ, 2008 ಆರ್ಥಿಕ ಹಿಂಜರಿತದ ನಂತರ ಜಾಗತಿಕ ಅನಿಲ ಹೊರಸೂಸುವಿಕೆಯ ಪ್ರಮಾಣದಲ್ಲಿ ಅಭಿವೃದ್ಧಿಶೀಲ ದೇಶಗಳಿಗಿಂತ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲು ಹೆಚ್ಚುತ್ತಾ ಬಂದಿದೆ. 2010ರಲ್ಲಿಯೇ ಇಂಗಾಲದಂತಹ ಅನಿಗಳ ಉತ್ಪಾದನೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲು ಶೇ.50.3ರಷ್ಟಿತ್ತು. ಈಗ ಚೀನಾದ ಪಾಲೇ ಶೇ.28ರಷ್ಟು. ಅಮೆರಿಕದ ಪಾಲು ಶೇ. 14, ಮೂರನೇ ಸ್ಥಾನದಲ್ಲಿರುವ ಭಾರತದ ಪಾಲು ಶೇ.7.

     ಈಗ ಕೊರೊನಾ ವೈರಸ್ಗೆಕಾರಣವಾಗಿರುವಂತೆ ಹವಾಮಾನ ವೈಪರಿತ್ಯದ ತೊಂದರೆಗಳಿಗೂ ಚೀನಾವೇ ಕಾರಣವಾಗಿದೆ ಎಂಬುದನ್ನು ಇಲ್ಲಿ ಬಿಡಿಸಿಯೇನೂ ಹೇಳಬೇಕಾಗಿಲ್ಲ. ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದ್ದ ಭಾರತ ಕೂಡ ಚೀನಾದೊಂದಿಗೆ ಪೈಪೋಟಿಗಿಳಿದು, ಜಗತ್ತಿನ ಉದ್ಯಮಗಳನ್ನು ತನ್ನತ್ತ ಸೆಳೆಯಲು ಹೊರಟಿದೆ. ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೇರಲು ತೀವ್ರ ಪೈಪೋಟಿ ನಡೆಸಿದೆ!

    ಮುಂದೇನು?

    ಲಾಕ್ಡೌನ್ಸಂದರ್ಭದಲ್ಲಿ ಬೆಂಗಳೂರಿಗೆ ನವಿಲು, ಮಂಗಳೂರಿಗೆ ಕಾಡೆಮ್ಮೆ, ಮುಂಬಯಿಗೆ ಚಿರತೆ ಹೀಗೆ ಬೃಹತ್ನಗರಗಳಿಗೂ ವನ್ಯಜೀವಿಗಳುಲಗ್ಗೆ ಇಟ್ಟಿವೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದ ವಿವಿಧ ದೇಶಗಳೂ ಈ ವಿದ್ಯಮಾನಕ್ಕೆ ಸಾಕ್ಷಿಯಾಗಿವೆ. ಪ್ರಕೃತಿಯ ಮಡಿಲಿನ ಪ್ರವಾಸಿ ತಾಣಗಳು ವನ್ಯಜೀವಿಗಳ ಬೀಡಾಗುತ್ತಿವೆ. ವಾಯುಮಾಲಿನ್ಯ ಕಡಿಮೆಯಾಗಿರುವುದು ಎಲ್ಲರ ಅನುಭವಕ್ಕೂ ಬಂದಿದೆ. ಜಲಮಾಲಿನ್ಯಕ್ಕೆ ಹೆಸರಾದ ಗಂಗೆ, ಯಮುನೆ, ಕಾವೇರಿಗಳಲ್ಲಿ ಶುದ್ಧ ನೀರು ಹರಿಯಲಾರಂಭಿಸಿದೆ. ಮಾಲಿನ್ಯದ ಕವಚದಿಂದ ಕಾಣದಾಗಿದ್ದ ದೂರದ ಬೆಟ್ಟಗಳು ಕೈ ಬೀಸಿ ಕರೆಯುತ್ತಿವೆ. ಇದೆಲ್ಲವೂ ಪ್ರಕೃತಿ ಸಹಜ ಪ್ರಕ್ರಿಯೆಗಳು ಎನಿಸಿದರೂ, ಇದರಲ್ಲಿ ಏನೋ ಸಂದೇಶ ಅಡಗಿದೆ ಎಂಬ ವಿಶ್ಲೇಷಣೆ ಬಹಳ ಜೋರಾಗಿ ನಡೆದಿದೆ.

    ನಿಜ, ಪ್ರಕೃತಿಯ ಮೇಲೆ ಮನುಜನ ಒತ್ತಡ ಕಡಿಮೆಯಾಗಿದೆ. ಆದರೆ ಇದೆಷ್ಟು ದಿನ? ಮನುಷ್ಯ ಹೀಗೆ ಕೈ ಕಟ್ಟಿ ಬಹಳ ಸಮಯ ಕೂರುವಂತಿಲ್ಲ. ನಿಧಾನವಾಗಿಯಾದರೂ ಮೊದಲಿನ ಅಭಿವೃದ್ಧಿಯ ರೈಲನ್ನು ಏರಲೇಬೇಕು. ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗದಂತೆ ನೋಡಿಕೋಳ್ಳಬೇಕು! ಹಸಿವೆಂಬ ಮಹಾರಕ್ಕಸನನ್ನು ಮಣಿಸಿ, ಮನುಜರೆಲ್ಲರ ಸಾವನ್ನು ಮುಂದೂಡಲೇಬೇಕು. ಇದಕ್ಕೆಲ್ಲ ಈಗ ಮನೆಯಲ್ಲಿಯೇ ಕುಳಿತು ಲೆಕ್ಕಾಚಾರ ಹಾಕಲಾಗುತ್ತಿದೆ. ಕೊರೊನಾದ ಭೀತಿ ಕಡಿಮೆಯಾಗುತ್ತಿದ್ದಂತೆಯೇ ಸಮಯದ ಚೌಕಟ್ಟಿನಲ್ಲಿ ಕೆಲಸ ಆರಂಭವಾಗಿಯೇ ಬಿಡುತ್ತದೆ. ಇದು ಪ್ರಕೃತಿಯ ಮೇಲೆ ಈ ಹಿಂದಿಗಿಂತಲೂ ಹೆಚ್ಚು ಒತ್ತಡಬೀರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಲಾರಂಭಿಸಿದೆ.

    ಕುಸಿದು ಬಿದ್ದ ಆರ್ಥಿಕತೆಯನ್ನು ಎತ್ತಿ ಹಿಡಿಯುವುದು ಈಗ ಎಲ್ಲ ದೇಶಗಳ ಮುಂದಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಆಮೆ ಹೆಜ್ಜೆ ಇಟ್ಟರಾಗದು, ಆನೆಯಂತೆ ನುಗ್ಗಲೇಬೇಕಾಗಿದೆ. ಹೀಗೆ ನುಗ್ಗುವಾಗ ಪರಿಸರದ ಮೇಲೆ ಬೀಳುವ ಒತ್ತಡದ ಲೆಕ್ಕಾಚಾರ ಹಾಕುತ್ತಾ ಕೂತರೆ ‘ವಿಫಲತೆ’ಯ ಪಟ್ಟ ಗ್ಯಾರಂಟಿ. ಬಲಿಷ್ಠ ಆರ್ಥಿಕತೆಯಲ್ಲಿ ನಮ್ಮ ದೇಶ ಎಷ್ಟನೇ ಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ಮುಖ್ಯ. ಹೀಗಾಗಿಯೇ ಈಗಾಗಲೇ ಚೀನಾ ನವೀಕರಿಸಬಹುದಾದ ಇಂಧನಗಳ ಉತ್ಪಾದಿಸುವ ಯೋಜನೆಗಳನ್ನು ಪಕ್ಕಕ್ಕೆ ಸರಿಸಿದೆ. ದೇಶದಾದ್ಯಂತ ಸ್ಥಾಪಿಸಲುದ್ದೇಶಿಸಿದ್ದ ಸೋಲಾರ್ ಫಾರ್ಮ್ ಯೋಜನೆಯನ್ನು ಮುಂದೂಡಿದೆ. ಅಲ್ಲದೆ, ನಿರ್ಮಾಣ ಕಾಮಗಾರಿಗಳನ್ನು ಪ್ರೋತ್ಸಾಹಿಸಲು 3.5 ಟ್ರಿಲಿಯನ್ ಡಾಲರ್ಗಳ ಯೋಜನೆ ಘೋಷಿಸಿದೆ. ಬೇರೆ ದೇಶಗಳೂ ಇದೇ ದಾರಿಯಲ್ಲಿ ಸಾಗಿವೆ. ಕೆನಡಾ ತೈಲ ಮತ್ತು ಅನಿಲ ಉದ್ಯಮಕ್ಕೆ ಬೃಹತ್ ನೆರವಿನ ಪ್ಯಾಕೇಜ್ ಘೋಷಿಸಿದ್ದರೆ, ಅಮೆರಿಕ ತಾನೇನು ಕಡಿಮೆ ಎಂದು ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವ ಏರ್ಲೈನ್ಸ್ಉದ್ಯಮಕ್ಕೆ 60 ಶತಕೋಟಿ ಡಾಲರ್ ನೆರವು ಸೇರಿದಂತೆ 2 ಟ್ರಿಲಿಯನ್ ಡಾಲರ್ಗಳ (ಒಟ್ಟಾರೆ ಜಿಡಿಪಿಯ ಶೇ. 13ರಷ್ಟು) ಪ್ಯಾಕೇಜ್ ಪ್ರಕಟಿಸಿದೆ.

    ನಮ್ಮ ದೇಶ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಸುಸ್ಥಿರ ಅಭಿವೃದ್ಧಿಯನ್ನು ಮರೆತು, ಆರ್ಥಿಕ ಅಭಿವೃದ್ಧಿಯನ್ನೇ ಎತ್ತಿ ಹಿಡಿಯಲು ಜಿಡಿಪಿಯ ಶೇ. 10ರಷ್ಟು ಅಂದೆ 20ಲಕ್ಷ ಕೋಟಿಗಳ ಪ್ಯಾಕೇಜ್ ಪ್ರಕಟಿಸಿದೆ. ಇದೆಲ್ಲವೂ ಮತ್ತೆ ಕುಸಿದು ಬಿದ್ದಿರುವ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ನಡೆಸಿರುವ ಪ್ರಯತ್ನಗಳು. ಅಂದರೆ ಮೊದಲಿನಂತೆಯೇ ಎಲ್ಲವನ್ನೂ ‘ಸರಿ’ ದಾರಿಗೆ ತರಲಾಗುತ್ತದೆ! ಇಲ್ಲಿ ಪರಿಸರ ಮಾಲಿನ್ಯದ, ಅದರ ಪರಿಣಾಮಗಳ ವಿಷಯ ಎಲ್ಲರಿಗೂ ನಗಣ್ಯ.

     ಜಾಗತಿಕವಾಗಿ ಸೋಲಾರ್ ಬ್ಯಾಟರಿಯ ಮತ್ತು ವಿದ್ಯುತ್ವಾಹನಗಳ ಬೇಡಿಕೆ ಶೇ. 16ರಷ್ಟು ಈಗಾಗಲೇ ಕುಸಿದಿದೆ. ಈಕುಸಿತದ ಪ್ರಮಾಣ ಬಹಳ ಜಾಸ್ತಿಯಾಗುವ ನಿರೀಕ್ಷೆ ಇದೆಎಂದುಮಾರುಕಟ್ಟೆವಿಶ್ಲೇಷಕರುಹೇಳುತ್ತಿದ್ದಾರೆ. ತೈಲ ಬೆಲೆ ಕುಸಿತ ಕೂಡಇನ್ನಷ್ಟು ಅನಾಹುತಗಳಿಗೆ ಕಾರಣವಾಗಲಿದೆ. ಪರಿಸರಕ್ಕೆ, ಭೂತಾಪಮಾನಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳ ಕುರಿತು ಚರ್ಚಿಸಲು ಇನ್ನು ಕೆಲವು ವರ್ಷ ಯಾರಿಗೂ ಸಮಯವಿರುವುದಿಲ್ಲ! ಲಾಕ್ಡೌನ್ ಸಂದರ್ಭಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದ ವನ್ಯಜೀವಿಗಳು ಮುಂದೆ ಇನ್ನಷ್ಟು ನರಕಯಾತನೆ ಅನುಭಿಸಬೇಕಾಗುತ್ತದೆ, ಮತ್ತೊಂದು ಬಲಿಷ್ಠ ವೈರಾಣು ಸೃಷ್ಟಿಯಾಗುವವರೆಗೂ!

    ಆಶಾ ಕಾರ್ಯಕರ್ತರೆಂಬ ನಿಜವಾದ ಕೊರೊನಾ ವಾರಿಯರ್ಸ್‌

    • ಜಯಂತ್ ಕೆ /ಎರಡು ನಿಮಿಷದ ಓದು

    ಮಾಚಗುಂಡಾಳ. ಇದು ಯಾದಗಿರಿ ಜಿಲ್ಲೆಯ ಕುಗ್ರಾಮ. ಇಲ್ಲಿ ವೈದ್ಯಕೀಯ ಸವಲತ್ತು ಕೇಳಬೇಡಿ. ಕಾಯಿಲೆ ಬಿದ್ದರೆ 20 ಕಿ.ಮೀ ದೂರದ ತಾಲೂಕು ಕೇಂದ್ರ ಸುರಪುರಕ್ಕೆ ಹೋಗಬೇಕು. ಅರ್ಜೆಂಟ್‌ಅಂದ್ರೆ ದೇವರೇ ಗತಿ. ಇಂತಹ ಗ್ರಾಮದಲ್ಲಿ ಆ ದಿನ ರಾತ್ರಿ ಸಂಗಣ್ಣನ ಕುಟುಂಬದಲ್ಲಿ ನಡೆದದ್ದು ಗಾಬರಿ ಹುಟ್ಟಿಸಿದ ಪ್ರಕರಣ.

    ಉಂಡು ಮಲಗಿದ ಮೇಲೆ ರಾತ್ರಿ 12ರ ಸುಮಾರಿಗೆ ಸಂಗಣ್ಣನ ಹೆಂಡತಿ ಗೌರಿಗೆ ಜೋರು ಹೆರಿಗೆ ನೋವು. ಮನೆಯವರಿಗೆಲ್ಲ ದಿಗಿಲು. ಸಂಗಣ್ಣ ಚಡಪಡಿಸತೊಡಗಿದ. ಸುರಪುರಕ್ಕೆ ಕರೆದೊಯ್ಯಲು ಆ ಅಪರಾತ್ರಿ ಅನುಕೂಲವಾದರೂ ಏನಿದ್ದೀತು?  ಗೌರಿಯ ಚಿರಾಟ ಹೆಚ್ಚಿತು. ಸಂಗಣ್ಣ ದಿಕ್ಕೆಟ್ಟ. ಆ ವೇಳೆ ಚಿಮಣಿ ಹಿಡಿದು ನಿಂತ ಸಂಗಣ್ಣನ ತಾಯಿ ಸೀತಮ್ಮನಿಗೆ ನೆನಪಾದ ಹೆಸರು, ಆಶಾ ಕಾರ್ಯಕರ್ತೆ ಶಾಂತಮ್ಮ. ತಕ್ಷ ಣ ಅವರ ಮೊಬೈಲ್‌ಗೆ ಕರೆ ಮಾಡಿ ಸನ್ನಿವೇಶ ವಿವರಿಸಿದರು. 

    ನಿದ್ದೆಗಣ್ಣಲ್ಲಿ ಎಲ್ಲ ಕೇಳಿಸಿಕೊಂಡ ಶಾಂತಮ್ಮ ಮಲಗಿದ ಪತಿರಾಯನನ್ನು ಎಬ್ಬಿಸಿ ಬೈಕ್‌ಸ್ಟಾರ್ಟ್‌ಮಾಡಲು ಹೇಳಿದರು. ಹತ್ತು ನಿಮಿಷದಲ್ಲಿ ಸಂಗಣ್ಣನ ಮನೆ ತಲುಪಿದ ಶಾಂತಾ, ಕರೆಂಟ ಇಲ್ಲದ ಚಿಮಣಿ ಬೆಳಕಿನ ಮಬ್ಬುಗತ್ತಲ ಕೋಣೆಯಲ್ಲಿ ನೋವು ನೋವು ತಡೆಯದೇ ನರಳುತ್ತಿದ್ದ ಗೌರಿಯನ್ನು ಒಮ್ಮೆ ಕೂಲಂಕಷ ದಿಟ್ಟಿಸಿ ಹೊಟ್ಟೆ ಮುಟ್ಟಿದಳು. ಮಗು ಉಲ್ಟಾ ತಿರುಗಿದ್ದು ಅರಿವಾಯಿತು. ಸ್ವಲ್ಪ ಎಡವಟ್ಟಾದರೂ ತಾಯಿ ಮಗುವಿನ ಜೀವಕ್ಕೇ ಅಪಾಯ. ತಕ್ಷ ಣ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಕರೆ ಮಾಡಿದರು ಶಾಂತಾ. ಹತ್ತು ನಿಮಿಷ ಸಮಾಲೋಚನೆ ಬಳಿಕ ತನ್ನ ಬಳಿ ಇದ್ದ ವೈದ್ಯ ಸಾಮಗ್ರಿ ಬಳಸಿ ಪ್ರಸವ ಚಿಕಿತ್ಸೆ ಶುರು ಮಾಡಿದರು. ಮುಂದಿನ ಹತ್ತು ನಿಮಿಷದಲ್ಲಿ ಕತ್ತಲೆ ಕೋಣೆಯಲ್ಲಿ ಎಳೆ ಕಂದಮ್ಮನ ಪ್ರವೇಶದ ಕೀರಲು ಧ್ವನಿ ಕೋಣೆ ತುಂಬಿತು. ಸಂಗಣ್ಣ ಮತ್ತು ಸೀತಮ್ಮ ಮುಖದಲ್ಲಿ ನಗು ಅರಳಿತು.

    ಆ ಕ್ಲಿಷ್ಟ ಘಳಿಗೆ ಒಂದು ಕರೆಗೆ ಓಗೊಟ್ಟು ಬಂದು ಎರಡು ಜೀವ ಉಳಿಸಿ ಮನೆಮಂದಿಯ ನೆಮ್ಮದಿ ಕಾಯ್ದಿದ್ದರು ಶಾಂತಮ್ಮ. ಸಂಗಣ್ಣ ಅವರ ಕಾಲುಮುಟ್ಟಿ ನಮಸ್ಕರಿಸಿದ. ಸೀತಮ್ಮ ಹೊಸ ಕುಪ್ಪಸದ ತುಂಡು ಬಟ್ಟೆನೀಡಿ ಕೈಮುಗಿದು ಕೃತಜ್ಞತೆಯಿಂದ ಕಳಿಸಿಕೊಟ್ಟರು. ಶಾಂತಮ್ಮ ಸಾರ್ಥಕ ಭಾವದೊಂದಿಗೆ ಮನೆದಾರಿ ಕ್ರಮಿದರು.

    9 ಲಕ್ಷದೇಶದಲ್ಲಿ ಇರುವ ಆಶಾ ಕಾರ್ಯಕರ್ತರು
    7000ಮಾಸಿಕ ವೇತನ
    42,000ಕರ್ನಾಟಕದಲ್ಲಿರುವ ಆಶಾ ಕಾರ್ಯಕರ್ತೆಯರ ಸಂಖ್ಯೆ
    25,000ಬೆಂಗಳೂರು ನಗರ ಒಂದರಲ್ಲೇ ಇರುವ ಕಾರ್ಯಕರ್ತೆಯರು

    ****

    ಸಾರಾಯಿಪಾಳ್ಯ. ಇದು ರಾಜಧಾನಿ ನಗರ ಬೆಂಗಳೂರಿನ ನಾಗರಿಕ ಬಡಾವಣೆ. ಇಲ್ಲಿ ವೈದ್ಯಕೀಯ ಸವಲತ್ತುಗಳಿಗೆ ಕೊರತೆ ಇಲ್ಲ. ವೈದ್ಯರಿಗೂ ಬರವಿಲ್ಲ. ಇಂತಹ ಆಧುನಿಕ ಗಲ್ಲಿಯಲ್ಲಿ ಮೊನ್ನೆ ಸರಕಾರದ ಆದೇಶ ಪಾಲಿಸಿ ಕೊರೊನಾ ಸೋಂಕಿತರ ತಪಾಸಣೆಗೆ ಹೊರಟ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಅವರು ಗಲ್ಲಿ ಪ್ರವೇಶಿಸುವಾಗ ಕೈಯಲ್ಲಿ ಜೀವ ಹಿಡಿದಿದ್ದರು. ಕಣ್ಣಿಗೆ ಕಾಣದ ಸೋಂಕು ತನ್ನಂತಹ ದುಡಿದು ತಿನ್ನುವ ಮನೆಯ ಆಧಾರಸ್ತಂಭಕ್ಕೆ ಅಂಟಿದರೆ ಗತಿ ಏನು ಎನ್ನುವ ಕಳವಳ. ಆದರೂ ತನಗಿಂತ ಜನರ ಆರೋಗ್ಯ ಚೆನ್ನಾಗಿರಲೆಂಬ ಸದಾಶಯ.

    ನೆರೆದ ಜನರಿಗೆ ತಾವು ಬಂದ ಉದ್ದೇಶ ವಿವರಿಸಿ ಸಹಕರಿಸಲು ಕೈಮುಗಿದು ಕೇಳಿಕೊಂಡರು. ತಕ್ಷ ಣ ಪ್ರತಿಕ್ರಿಯಿಸದ ಜನ ಗುಸುಗುಸು ಮಾತಾಡತೊಡಗಿದರು. ಹತ್ತು ನಿಮಿಷದಲ್ಲಿ ಪುಂಡರ ಗುಂಪು ಸ್ಥಳಕ್ಕೆ ಲಗ್ಗೆ ಹಾಕಿತು. ಕೃಷ್ಣವೇಣಿ ಕಕ್ಕಾಬಿಕ್ಕಿಯಾದರು. ಏನು ನಡೆಯುತ್ತಿದೆ ಎಂದು ಅರ್ಥವಾಗುವ ಮೊದಲೇ ದಾಳಿಗೊಳಗಾದರು. ತಲೆ ಮೈಕೈಗೆ ದೊಣ್ಣೆಯ ಪೆಟ್ಟು. ಜೀವ ಉಳಿಸಿಕೊಳ್ಳಲು ಪರದಾಡಿದರು.  ಕೈಕಾಲು ಹಿಡಿದು ಬೇಡಿಕೊಂಡರು. ಕೊನೆಗೆ ಹಿರಿಯರೊಬ್ಬರು ಅವರ ನೆರವಿಗೆ ಬಂದು ಪಾರು ಮಾಡಿದರು. ಆಘಾತದಿಂದ ಜರ್ಜರಿತಗೊಂಡ ಅವರು ರೋಗಿಗಳ  ಬದಲು ತಾವೇ ಆಸ್ಪತ್ರೆ ಸೇರಿದರು.

    ಅಗತ್ಯ

    ಶಾಂತಮ್ಮ ಮತ್ತು ಕೃಷ್ಣವೇಣಿ ಅವರ ಈ ಎರಡು ದೃಶ್ಯಗಳು ಇವತ್ತಿನ ಆಶಾ ಕಾರ್ಯಕರ್ತೆಯರ ಅಗತ್ಯ ಮತ್ತು ಸಂಕಷ್ಟ ಎರಡನ್ನೂ ಬಿಂಬಿಸುತ್ತವೆ. ಸಂಕಷ್ಟದಲ್ಲಿದ್ದವರ ಸಕಾಲಿಕ ನೆರವಿಗೆ ಧಾವಿಸಿ ತಜ್ಞ ವೈದ್ಯರು ಮಾಡಲಾಗದ ಘನ ಕಾರ್ಯವನ್ನು ಈ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. 2005ರಲ್ಲಿ ಕೇಂದ್ರ ಸರಕಾರ ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌’ ಕಾರ್ಯಕ್ರಮದ ಭಾಗವಾಗಿ ‘ಆಶಾ ಕಾರ್ಯಕರ್ತೆ’ ಎನ್ನುವ ಆರೋಗ್ಯ ದೇವತೆಯನ್ನು ಸೃಷ್ಟಿ ಮಾಡಿತು.

    ‘ಅಕ್ರಿಡೇಟೆಡ್‌ ಸೋಷಿಯಲ್‌ ಹೆಲ್ತ್ ವರ್ಕರ್‌’ ಎನ್ನುವುದು ‘ಆಶಾ’ ಪೂರ್ಣ ರೂಪ. ಆರಂಭದಲ್ಲಿ ಇದೊಂದು ನಾಮಕಾವಸ್ತೆ ಸೃಷ್ಟಿ ಎನ್ನಿಸಿತ್ತು. ಆದರೆ, 2012ರಲ್ಲಿ ಗ್ರಾಮ ಭಾರತದ ಆರೋಗ್ಯ ಎಷ್ಟು ಮುಖ್ಯ ಎನ್ನುವ ಚರ್ಚೆ ಶುರುವಾಯಿತು. ಶೇ.70ರಷ್ಟು ಜನ ಇವತ್ತಿಗೂ ಗ್ರಾಮವಾಸಿಗರು. ಹಳ್ಳಿಯ ಆರೋಗ್ಯ ಹಳಿತಪ್ಪಿದರೆ ಭಾರತದ ಬುನಾದಿ ನಡುಗುತ್ತದೆ  ಎಂದು ತಜ್ಞರು ಒತ್ತಿ ಹೇಳಿದರು.

    ಇದನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಸರಕಾರ ಪ್ರತಿ ಗ್ರಾಮಕ್ಕೂ ಒಬ್ಬ ಆಶಾ ಕಾರ್ಯಕರ್ತೆಯನ್ನು ನೇಮಿಸುವ ಗುರಿ ಹಾಕಿಕೊಂಡಿತು.  ಇಂದಿಗೆ ಅವರ ಸಂಖ್ಯೆ ದೇಶದಲ್ಲಿ 9 ಲಕ್ಷ ಮೇಲ್ಪಟ್ಟಿದೆ. ಪ್ರತಿ ಮನೆಯ ಸದಸ್ಯರ ಆರೋಗ್ಯ ಕಾಳಜಿಯ  ನೊಗ ಅವರ ಹೆಗಲ ಮೇಲಿದೆ. ಕೋವಿಡ್‌19 ಸಂಕಷ್ಟದ ಈ ಸಂದರ್ಭ ಅವರು ಮನೆಮನೆಗೆ ಹೋಗಿ ಸಮೀಕ್ಷೆ ಮಾಡುವ ರಿಸ್ಕಿನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸರಕಾರ ಅವರಿಗೆ ಅದಾವ ರೀತಿಯ ಪ್ರೋತ್ಸಾಹ ಧನ ನೀಡುತ್ತದೋ  ಗೊತ್ತಿಲ್ಲ. ಆದರೆ ಅವರು ಜೀವದ ಹಂಗು ತೊರೆದು ಜನ ಕಾಳಜಿ ವಹಿಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವು ಕೇಡಿಗಳು ಅವರ ಮೇಲೆ ಹಲ್ಲೆ ನಡೆಸುವಂತಹ ಹೀನ ಕೆಲಸ ಮಾಡುತ್ತಿದ್ದಾರೆ.

    ಬಿಕ್ಕಟ್ಟಿನ ನಡುವೆ ಕಟ್ಟಿದ ಕೈಗಳು

    ಇಡೀ ದೇಶ ಕೋವಿಡ್‌ಆತಂಕ ತರಗುಟ್ಟುತ್ತಿರುವಾಗ ಆಶಾ ಕಾರ್ಯಕರ್ತೆಯರು ಅಪಾಯ ಲೆಕ್ಕಿಸದೇ ಹಗಲಿರಳು ಶ್ರಮಿಸುತ್ತಿದ್ದಾರೆ. ಆ ಮೂಲಕ ನಿಜವಾದ ಕೊರೊನಾ ವಾರಿಯರ್‌ಎನಿಸಿದ್ದಾರೆ. ಸೋಂಕು ತಡೆಯ ಜವಾಬ್ದಾರಿಯ ಜತೆಗೆ ನಿತ್ಯದ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಕಡೆಗೂ ಗಮನ ಹರಿಸಿದ್ದಾರೆ ಈ ಕಾರ್ಯಕರ್ತೆಯರು. ‘‘ತಮ್ಮ ಕುಟುಂಬದ ಯಾವೊಬ್ಬ ಸದಸ್ಯರಲ್ಲೂ ಇರಿಸದ ಗಾಢ ನಂಬಿಕೆಯನ್ನು ಮಹಿಳೆಯರು ಇವತ್ತು ನಮ್ಮ ಮೇಲೆ ಇರಿಸಿದ್ದಾರೆ. ಆದರೆ, ಕೊರೊನಾದ ಈ ಸಮಯ ಅವರ ನಂಬಿಕೆಗೆ ಪೂರ್ಣ ನ್ಯಾಯ  ಒದಗಿಸುವುದು ಕಷ್ಟವಾಗುತ್ತಿದೆ’’ ಎಂದು ಕೊರಗುತ್ತಾರೆ ಶಹಾಪುರದ ಆಶಾ ಕಾರ್ಯಕರ್ತೆ ಲಕ್ಷ್ಮೀದೇವಿ.

    ‘‘ಗರ್ಭಿಣಿಯರಿಗೆ ರೋಗ ನಿರೋಧಕ ಲಸಿಕೆ ಕೊಡುವುದು ಈಗ ನನ್ನಿಂದ ಸಾಧ್ಯವಾಗುತ್ತಿಲ್ಲ. ಜನನ ನಿಯಂತ್ರಣ ಕ್ರಮಗಳ ಕಡೆಗೂ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಮಹಿಳೆಗೆ ನೀಡುವ ಐರನ್‌ಮತ್ತು ಕ್ಯಾಲ್ಸಿಯಂ ಮಾತ್ರೆಗಳೂ ಮುಗಿದು ಹೋಗುತ್ತಿವೆ. ಪರಿಸ್ಥಿತಿ   ಡೋಲಾಯಮಾನವಾಗಿದೆ. ಇದರ ನಡುವೆ ಕೋವಿಡ್‌ಸೋಂಕಿತರ ಸಮೀಕ್ಷೆಗೆ ಹೋದರೆ ಅಲ್ಲ ಮತ್ತೊಂದು ರೀತಿಯ ತಾಪತ್ರಯ ಎದುರಿಸಬೇಕಾಗುತ್ತಿದೆ’’ ಎಂದು ಅವರು  ಸಂಕಷ್ಟ ಹೇಳಿಕೊಳ್ಳುತ್ತಾರೆ.

    …..

    ಮಾಯಾ ಬಜಾರ್ ಮತ್ತು ನಟ ಇರ್ಫಾನ್

    ಪಿ ಕೆ ಚನ್ನಕೃಷ್ಣ

    ಹಿಂದಿಯ ಪರ್ಫೆಕ್ಟ್ ನಟ ಇರ್ಫಾನ್ ಖಾನ್ ತೀರಿಹೋದ ಸುದ್ದಿಯ ಬೇಜಾರಿನಲ್ಲಿ ನಾನು ಯಾರಲ್ಲೂ ಹೆಚ್ಚು ಮಾತನಾಡದೆ ರೂಮಿನಲ್ಲಿಯೇ ಮುದುರಿಕೊಂಡಿದ್ದೆ. ಅವಳು, ದೊಡ್ಮಗಳು ಲಹರಿ ಹಾಗೂ ಹೆಂಡತಿ ಜತೆ ಕೂತು ಇದೇ ಇರ್ಫಾನ್ ನಟಿಸಿದ್ದ ಪೀಕು, ಲಂಚ್ ಬಾಕ್ಸ್ ಮತ್ತು ಕಾರವಾನ್ ಚಿತ್ರಗಳನ್ನು ನೋಡಿದ್ದೆ. ಈ ಪೈಕಿ ಪೀಕು ಮತ್ತು ಕಾರವಾನ್ ಗಳನ್ನು ಎರಡು ಸಲ ನೋಡಿದ್ದೆ. ಈ ಚಿತ್ರಗಳೆರಡರಲ್ಲಿ ಇರ್ಫಾನ್ ಪಾತ್ರಗಳು ಒಂದೆ ತೆರನಾಗಿದ್ದರೂ ತನ್ನ ಅಮೋಘ ನಟನೆಯಿಂದ ಅವೆರಡಕ್ಕೂವಿಭಿನ್ನವಾಗಿ ಪ್ರಾಣವಾಯು ತುಂಬಿದ್ದರು.

    ಇಂಥ ಇರ್ಫಾನ್ ಸೀರಿಯಸ್ ಪ್ರೇಕ್ಷಕರಿಗೆ ಮಾತ್ರವಲ್ಲ ಮಕ್ಕಳಿಗೂ, ಹಿರಿಯರಿಗೂ ಸಿನಿಮಾವನ್ನು ಸಶಕ್ತವಾಗಿ ದಾಟಿಸಬಲ್ಲ ನಟ. ಅವರಲ್ಲಿ ತನ್ನದೊಂದು ಗುಡಿ ಕಟ್ಟಿಕೊಂಡು ತನ್ನ ಕಣ್ಣೋಟದಲ್ಲಿಯೇ ಅಗಾಧ ಆಳದ ಭಾವ ಪ್ರಪಂಚದತ್ತ ಅವರನ್ನುಕರೆದೊಯ್ಯಬಲ್ಲ ನಟಶಿಖರ ಅವರು.

    ಹಾಗಾದರೆ ಇಂಥ ಇರ್ಫಾನ್ ಗೂ ಮಾಯಾ ಬಜಾರ್ ಚಿತ್ರಕ್ಕೇನೂ ಸಂಬಂಧ ಅಂತೀರಾ? ಇರಲಿ.

    ಈಗ ಮಾಯಾ ಬಜಾರ್ ಬಗ್ಗೆ ಕೊಂಚ ಹೇಳುತ್ತೇನೆ. ಮಗಳು ಈ ಸಿನಿಮಾವನ್ನು ನೋಡೋಣ್ವ ಡ್ಯಾಡ್ ಎಂದಾಗ ನನಗೆ ಮನಸ್ಸಾಗಲಿಲ್ಲ. ಕೊನೆಗೆ ನನ್ನ ಬೇಸರವನ್ನು ಅವಳ ಮೇಲೇಕೆ ಹೇರಲಿ ಅಂದುಕೊಂಡು ಪ್ಲೇ ಮಾಡು ಮಗಳೇ ಎಂದೆ. ಮಗುವೋ ದೊಡ್ಡ ಸಂಭ್ರಮವೇ ಧಕ್ಕಿದಂತೆ ಅಮೆಜಾನ್ ಫ್ರೈಮಿನಲ್ಲಿದ್ದ ಆ ಸಿನಿಮಾವನ್ನು ಹಾಕಿದಳು. ಆಗ್ಗೆ ಅವಳೇ ಹನ್ನೊಂದು ಸಲ ನೋಡಿದ್ದಳು. ನಾನು ಕೂಡ ಹಲವಾರು ಸಲ ವೀಕ್ಷಿಸಿದ್ದೆ. ಅಷ್ಟು ಸಲ ನೋಡಿದರೂ ಮತ್ಯಾಕೆ ನೋಡುವುದು ಎಂದು ಅನಿಸಿದ್ದೇ ಇಲ್ಲ. ಚಿತ್ರ ನೋಡುತ್ತಾ ಹೋದಂತೆಲ್ಲ ಮೊದಲ ಬಾರಿಗೆ ನೋಡುತ್ತಿದ್ದೇನೆ ಎನಿಸುತ್ತಿತ್ತು. ಅದರಲ್ಲೂ ಲಕ್ಷ್ಮಣ ಕುಮಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರೇಲಂಗಿ ಅವರ ಮ್ಯಾನರಿಜಂ ಹೊಟ್ಟೆ ಉಬ್ಬುವಷ್ಟು ನಗುವಂತೆ ಮಾಡುತ್ತದೆ.

    1957ರಲ್ಲಿ ಬಿಡುಗಡೆಯಾಗಿ ಇಡೀ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರಲ್ಲಿ ಹೊಸ ಜೋಶ್ ಹುಟ್ಟುಹಾಕಿದ್ದ ಬ್ಲ್ಯಾಕ್ ಅಂಡ್ ವೈಟ್ ವರ್ಣದ ಚಿತ್ರವಿದು. ಕೃಷ್ಣನ ಪಾತ್ರದಲ್ಲಿ ಎನ್.ಟಿ. ರಾಮಾರಾವು, ಅಭಿಮನ್ಯು ಪಾತ್ರದಲ್ಲಿ ಅಕ್ಕಿನೇನಿ ನಾಗೇಶ್ವರ ರಾವು, ಶಶಿರೇಖ ಪಾತ್ರದಲ್ಲಿ ಆ ಕಾಲದ ಸ್ಟಾರ್ ನಟಿ, ಸಹಜ ನಟಿ ಸಾವಿತ್ರಿ ಹಾಗೂ ಘಟೋತ್ಕಚನಾಗಿ ಎಸ್.ವಿ. ರಂಗಾರಾವು ನಟಿಸಿದ್ದರು. ನಮ್ಮ ಬಾಗೇಪಲ್ಲಿಯಿಂದ ಆಂಧ್ರಪ್ರದೇಶಕ್ಕೆ ಹೊರಟರೆ ಸಿಗುವ ಶ್ರೀ ಕದಿರಿ ನರಸಿಂಹಸ್ವಾಮಿ ಕ್ಷೇತ್ರದ ಕದಿರಿ ಪಟ್ಟಣದ ಕೆ.ವಿ.ರೆಡ್ಡಿ ಅವರು ಈ ಚಿತ್ರವನ್ನು ಡೈರೆಕ್ಟ್ ಮಾಡಿದ್ದರು.

    ಇಂಥ ಮಾಯಾ ಬಜಾರ್ ನಮ್ಮ ತಾಯಿಗೂ ಬಲು ಇಷ್ಟದ ಸಿನಿಮಾವಾಗಿತ್ತು. ಆಕೆಯ ಜೀವಿತಾವಧಿ ತೀರುವುದರೊಳಗೆ ಟೀವಿ ಬರಲಿಲ್ಲ. ನಾನು ಮೂರೋ ಅಥವಾ ನಾಲ್ಕರಲ್ಲಿ ಓದುತ್ತಿದ್ದಾಗಲೇ ಅವರು ಹೋಗಿಬಿಟ್ಟಿದ್ದರು. ಇನ್ನು ಸಿನಿಮಾ ಎಂದರೆ ಆಯಮ್ಮನಿಗೆ ಪಂಚಪ್ರಾಣ.

    ನಮ್ಮೂರು ಪಕ್ಕದ ಬೀಚಗಾನಹಳ್ಳಿಯಲ್ಲಿದ್ದ ಶ್ರೀ ವೆಂಕಟೇಶ್ವರ ಚಿತ್ರಮಂದಿರಕ್ಕೆ ನಮ್ಮ ತಂದೆ ಹಾಗೂ ಆಕೆಯ ತಮ್ಮಂದರಿಬ್ಬರ ಜತೆ ಲೆಕ್ಕವಿಲ್ಲದಷ್ಟು ಸಲ ಹೋಗಿ ಸಿವಿಮಾ ನೋಡುತ್ತಿದ್ದರು. ಆ ಟೆಂಟಿಗೆ ಹೊಸ ಸಿನಿಮಾ ಬಂದರೆ ನಮ್ಮೂರಿನಲ್ಲಿ ಒಂದು ಪೋಸ್ಟರ್ ಪ್ರತ್ಯಕ್ಷವಾಗಿಬಿಡುತ್ತಿತ್ತು. ರೋಡಿನ ಪಕ್ಕದ ಯಾರಾದರೂ ಮನೆಯ ಗೋಡೆಯ ಮೇಲೆ ಪೋಸ್ಚರು ಬಿದ್ದಿದ್ದೇ ತಡ ನಮ್ಮ ಮನೆಯಲ್ಲಿ ಟೆಂಟಿಗೆ ಎತ್ತಿನ ಗಾಡಿ ಸಿದ್ಧವಾಗಿಬಿಡುತ್ತಿತ್ತು. ನಮ್ಮ ಊರಿಗೆ ಎರಡೇ ಫರ್ಲಾಂಗು ದೂರದಲ್ಲಿದ್ದ ಅಜ್ಜಿ ಮನೆಯಿಂದ ದೊಡ್ಡ ಮಾವ, ಚಿಕ್ಕ ಮಾವ ಬಂದುಬಿಡುತ್ತಿದ್ದರು. ಹಾಗೆ ಆ ಟೆಂಟಿನಲ್ಲಿ ಅಮ್ಮ ಮಾಯಾ ಬಜಾರ್ ಚಿತ್ರವನ್ನು ನೋಡಿದ್ದರು. ಆವತ್ತು ಜತೆಯಲ್ಲಿ ಚಿಕ್ಕ ಮಾವ, ದೊಡ್ಡಮ್ಮ, ಅಪ್ಪ ಇದ್ದರು ಅಂತ ನನ್ನ ದೊಡ್ಡ ಮಾವ ಇವತ್ತಿಗೂ ನನಗೆ ಹೇಳುತ್ತಾರೆ. ಜತೆಗೆ ಇನ್ನೊಂದು ಬಾರಿ ಅಜ್ಜಿ ಜತೆ ಅಮ್ಮ ಈ ಸಿನಿಮಾ ನೋಡಿದ್ದರಂತೆ.

    ನಾನು ಅಮ್ಮನ ಹೊಟ್ಟೆಗೆ ಬಿದ್ದ ಮೇಲೆಯೂ ನಮ್ಮ ಮನೆಯಲ್ಲಿ ಎತ್ತಿನ ಗಾಡಿಯ ಟೆಂಟ್ ಸವಾರಿ ನಿಲ್ಲಲೇ ಇಲ್ಲ ಅಂತ ಅಪ್ಪ ಹೇಳುತ್ತಲೇ ಇರುತ್ತಾರೆ. ನಾನು ಹುಟ್ಟುವ ವಾರಕ್ಕೆ ಮೊದಲು ಅಮ್ಮಅಪ್ಪನಲ್ಲಿ ಒಂದು ಆಸೆ ತೋಡಿಕೊಂಡಿದ್ದರು. ಆಗಲೂ ಅಮ್ಮ ಟೆಂಟ್ನಲ್ಲಿ ಪಿಚ್ಚರ್ ನೋಡಬೇಕು ಎಂದು ಹೇಳಿದ್ದರಂತೆ. ಅಮ್ಮನ ಮಾತಿಗೆ ಅಪ್ಪ ಇಲ್ಲವೆಂದು ಹೇಳುವಂತೆಯೇ ಇಲ್ಲ. ಕರೆದುಕೊಂಡು ಹೋಗಿ ಅದೇ ಎನ್.ಟಿ.ಆರ್ ಅವರು ಕೃಷ್ಣನಾಗಿ ನಟಿಸಿದ್ದ ಶ್ರೀಕಷ್ಣ ಪಾಂಡವೀಯಂ ಸಿನಿಮಾವನ್ನು ತೋರಿಸಿದ್ದರು. ಆಮೇಲೆ ನಾನು ಹುಟ್ಟಿದ ಮೂರು ತಿಂಗಳಿಗೆ ಮತ್ತೆ ಬೀಚಗಾನಹಳ್ಳಿ ಟೆಂಟಿಗೆ ಅಮ್ಮನ ಸವಾರಿ ನಡೆದಿತ್ತು. ಆದರೆ ಆ ಸಮಯದಲ್ಲಿ ಅಜ್ಜಿ, ಅಮ್ಮನಿಗೆ ಬೈಯ್ದು ಹೀಗೆ ಬಾಣಂತನ ಬಿಟ್ಟು ಹೊರಗೆ ಹೋಗಬಾರದು ಎಂದು ಜೋರು ಮಾಡಿದ್ದರಂತೆ. ಆದರೆ ಅಪ್ಪನಿಗೆ ಅಮ್ಮನ ಆಸೆ ಈಡೇರಿಸದೇ ಇರಲಾಗುತ್ತಿರಲಿಲ್ಲ. ಕೊನೆಗೆ ಅಮ್ಮ ತೀರಿಕೊಂಡಾಗ ಗೋಪಮ್ಮಊರಾಚೆ ಚೆನ್ನಪ್ಪನ ಬಾವಿ ಹಳ್ಳವನ್ನು ದಾಟಿಕೊಂಡು ಬೀಚಗಾನಹಳ್ಳಿ ಟೆಂಟಿಗೆ ಬಾಣಂತನದಲ್ಲೇ ಸಿನೆಮಾ ನೋಡಲು ಹೋಗಿದ್ದರು. ಅದಕ್ಕೆ ಯಾವುದೋ ಗಾಳಿ ತಗುಲಿ ದೃಷ್ಟಿ ಜಾಸ್ತಿಯಾಗಿ ಸತ್ತು ಹೋದರು ಎಂದು ನಮ್ಮೂರಿನ ಅವರಿವರು ಮಾತಾಡಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ. ಹೀಗೆ ನನ್ನ ತಾಯಿ ಸಾವಿಗೆ ಒಂದು ಕಾರಣವನ್ನು ಕೊಟ್ಟಿದ್ದರು ಊರಿನ ಜನ. ಅದೆಷ್ಟೋ ವರ್ಷ ಕಳೆದ ಮೇಲೆ ನನ್ನ ತಂಗಿ ಹುಟ್ಟಿದ ನಂತರ ಮಾಡಿಸಿಕೊಡ ಗರ್ಭನಿವಾರಕ ಶಸ್ತ್ರಚಿಕಿತ್ಸೆ ಸಮಸ್ಯೆಯಾಗಿ ಬೆಂಗಳೂರಿನ ವಿಕ್ಟ್ರೋರಿಯಾ ಆಸ್ಪತ್ರೆಯಲ್ಲಿ ಅಮ್ಮ ಇಹಲೋಕ ಬಿಟ್ಟರು ಎಂದು ಅಪ್ಪ ಹೇಳಿದ್ದರು.

    ಹೀಗೆ ನಮ್ಮ ಮನೆಯಲ್ಲಿದ್ದ ಸಿನಿಮಾ ಪ್ರೀತಿ ನನ್ನ ತಲೆಮಾರು ಬಂದರೂ ಮುಂದುವರಿದಿತ್ತು. ಅಮ್ಮ ಅನಕ್ಷರಸ್ಥೆಯಾಗಿದ್ದರು. ತೆಲುಗು ಬಿಟ್ಟರೆ ಜಗತ್ತಿನಲ್ಲಿ ಬೇರೆ ಭಾಷೆಗಳಿವೆ ಅಂತ ಗೊತ್ತಿರಲ್ಲ ಆ ತಾಯಿಗೆ. ಕನ್ನಡ ಅಂತ ಒಂದು ಭಾಷೆ ಇದೆ ಎಂದು ಅಮ್ಮನಿಗೆ ಗೊತ್ತಾಗಿದ್ದು ಪರಮ ತುಂಟನಾದ ನನ್ನನ್ನು ಸ್ಕೂಲಿಗೆ ಸಾಗಿ ಹಾಕಿದಾಗಲೇ.

    ನಮ್ಮ ಮನೆಯಲ್ಲಿ ಮೂರು ತಲೆಮಾರು ಕಾಲ ತೆಲುಗಿನ ಮಾಯಾ ಬಜಾರ್ ಸಿನಿಮಾ ಅವಿಚ್ಛಿನ್ನವಾಗಿದೆ. ಅಮ್ಮ, ಆ ನಂತರ ನಾನು, ಈಗ ಮಗಳು ಮಾಯಾ ಬಜಾರಿಗೆ ಮಾರು ಹೋಗಿದ್ದೇವೆ. ಕೃಷ್ಣ ವೇಷದ ಎನ್ಟಿಆರ್ ತೆರೆಯ ಮೇಲೆ ಬಂದರೆ ಐಯ್ ಎಂದು ಕಣ್ ಬಿಡುವ ಅವಳು ಘಟೋತ್ಕಚನ ಮಾಯಾಜಾಲವನ್ನು ಕಂಡುಜೋರಾಗಿ ಚಪ್ಪಾಳೆ ಹೊಡೆಯುತ್ತಾಳೆ. ಅಕ್ಕಿನೇನಿ-ಸಾವಿತ್ರಿ (ಅಭಿಮನ್ಯು-ಶಶಿರೇಖ) ಪ್ರಣಯವನ್ನು ನೋಡುತ್ತಾ ನನ್ನನ್ನೂ ಅವಳಮ್ಮನನ್ನು ದಿಟ್ಟಿಸುತ್ತಾಳೆ. 2 ಗಂಟೆ 55 ನಿಮಿಷದ ಸುದೀರ್ಘ ಸಿನಿಮಾವನ್ನು ಎವೆ ಇಕ್ಕದೆ ಸಿಂಗಲ್ ಬ್ರೇಕ್ ಇಲ್ಲ ನೋಡಿ ಮುಗಿಸಿದ್ದಾಳೆ. ಇವತ್ತು ಕೂಡ. ಒಂದು ಸಿನಿಮಾ ಹೀಗೆ ತಲೆಮಾರುಗಳನ್ನು ದಾಟಿಕೊಂಡು ಉಳಿಯುವುದು ಸಣ್ಣ ಮಾತೇನೂ ಅಲ್ಲ.

    ಹೀಗೆ ಇರ್ಫಾನ್ ಕೂಡ. ಮಾಯಾ ಬಜಾರ್ ಚಿತ್ರದ ಪಾತ್ರಗಳಂತೆ ಕಣ್ಣೋಟದಲ್ಲೇ ಅಗಾಧವಾಗಿ ಪ್ರೇಕ್ಷಕರನ್ನು ಹಿಡಿಟ್ಟುಬಿಡುವ ಶಕ್ತಿ ಅವರಿಗೆ ಸಿದ್ಧಿಸಿತ್ತು. ತಲೆಮಾರುಗಳ ಕಾಲ ಅಚ್ಚಳಿಯದ ಆತನ ಭಾವಪೂರ್ಣ ನಟನೆಗೆ ಕೊನೆಯಾಗಲಿ ಮೊದಲಾಗಲಿ ಇಲ್ಲ. ಅದೊಂದು ನಿರಂತರ ಝರಿ. ಇರ್ಫಾನ್ ನಟನೆ ಬಹುಭಾವನೆಗಳ ಅನಾವರಣಕ್ಕೊಂದು ಮಾದರಿ. ಸ್ಟಡಿ ಮಾಡಲು ಒಂದು ಆಕರ. ಲಂಚ್ ಬಾಕ್ಸ್, ಪೀಕು, ಕಾರಾವಾನ್ ಸೇರಿ ನಾನು ಇರ್ಫಾನ್ ಚಿತ್ರಗಳೆಲ್ಲವೂ ನಾನಿರುವ ತನಕ ಬದುಕಿರುತ್ತವೆ. ಹಾಗೆಯೇ ನನ್ನ ಮಕ್ಕಳು ಹಾಗೂ ಅವರ ಮಕ್ಕಳ ನಂತರವೂ…ಹಾಗೆಯೇ ಆಗಲಿ ಎಂದು ಹೇಳುತ್ತಾ, ಇರ್ಫಾನ್ ಗೆ ಅಕ್ಷರ ವಿದಾಯ ಕೋರುತ್ತಾ…

    ಉಳಿದಂತೆ…

    ಇರ್ಫಾನ್ ಹೋಗಿಬನ್ನಿ, ನಿಮ್ಮ ಕಂಗಳು, ಅವು ವ್ಯಕ್ತಪಡಿಸುವ ಭಾವನೆಗಳು, ಆ ಭಾವನೆಗಳ ಪ್ರಾಮಾಣಿಕತೆ ಮತ್ತು ನಿಮ್ಮ ಅಭಿನಯ… ಇವು ನಮ್ಮೊಂದಿಗೇ ಇರುತ್ತವೆ.

    ಐದು ವರುಷಗಳ ಹಿಂದೆ ಸಮಾರಂಭವೊಂದರಲ್ಲಿ ಇರ್ಫಾನ್ ವಾಚಿಸಿದ ಕವನ

    ಅತಿ ಅಮೃತವಾದ ಟಿವಿ ಸುದ್ದಿ! ಖಾಲಿ ದೋಸೆಯೇ ಮಸಾಲೆ ದೋಸೆ

    ಕೊರೊನಾ ಇತಿ ವ್ಯಾಪ್ತಿಯಾಗಿರುವ ಈ ದಿನಗಳಲ್ಲಿ ಎಷ್ಟು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಸುದ್ದಿ ನೀಡಲು ಒಂದೆರಡು ನಿಮಿಷಗಳು ಸಾಕು. ಆದರೆ ಅದನ್ನೇ ಅತಿ ರಂಜಿತವಾಗಿ ನೀಡುತ್ತಿರುವ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳ ಉದ್ದೇಶವಾದರೂ ಏನು? ವೀಕ್ಷಕರನ್ನು ಹಿಡಿದಿಡಬೇಕು ಎನ್ನುವ ಉದ್ದೇಶವೇ ?  ಹೌದಾದರೆ, ಅದಕ್ಕೊಂದು ನೀತಿ-ನಿಯಮವಿದೆ. ಜನರನ್ನು ಭಯ ಪಡಿಸುವಂತಹ ಶಬ್ದಗಳ ಬಳಕೆ ಅಗತ್ಯವೇ ?

    • ಕೌಶಿಕ ಗಟ್ಟಿಗಾರು

    ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದು ಸುಭಾಷಿತ. ಕೊರೊನಾ ಸಂದರ್ಭದಲ್ಲಿ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳಿಗೆ ಇದು ಹೆಚ್ಚು ಸೂಕ್ತವಾಗಿ ಅನ್ವಯವಾಗುತ್ತಿದೆ.

    ಸರಕಾರವನ್ನು ಎಚ್ಚರಿಸುವುದು ಸಂವಿಧಾನದ ನಾಲ್ಕನೇ ಸ್ತಂಭವಾದ ಮಾಧ್ಯಮದ ಕೆಲಸ ಎನ್ನುವುದು ಕ್ಲೀಷೆಯಾದರೂ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಮೀಡಿಯಾ (ಟಿವಿ ನ್ಯೂಸ್) ಇದನ್ನು ಅತಿಯಾಗಿ ಬಳಸಿಕೊಳ್ಳುತ್ತಿವೆ. ಒಂದು ರೀತಿಯಲ್ಲಿ ಭಯೋತ್ಪಾದನೆಯನ್ನೇ ಮಾಡುತ್ತಿವೆ.

    ಭಯೋತ್ಪಾದನೆಯಲ್ಲಿ ಹಲವು ವಿಧಗಳಿವೆ. ಕಾಲ ಕಳೆದಂತೆ ಅದರ ವ್ಯಾಖ್ಯಾನವೂ ಬದಲಾಗುತ್ತಲೇ ಹೋಗುತ್ತದೆ. ಈಗ ನಡೆಯುತ್ತಿರುವ ಟಿವಿ ವಾಹಿನಿ ಭಯೋತ್ಪಾದನೆ. ಚಿಕ್ಕ ಪುಟ್ಟ ವಿಷಯಗಳನ್ನೇ ದೊಡ್ಡದಾಗಿ, ಅದಕ್ಕೆ ಒಂದಿಷ್ಟು ಮಸಾಲೆ ಸೇರಿಸಿ ಖಾಲಿ ದೋಸೆಯನ್ನು ಮಸಾಲೆ ದೋಸೆಯನ್ನಾಗಿ ಮಾಡುವ ಹೊಸ ಟ್ರೆಂಡ್ . ತಾವು ಜನರಿಗೆ ಮಾಹಿತಿಯನ್ನು ತಲುಪಿಸುವ ಮಾಧ್ಯಮ ಎಂಬುದನ್ನು ಮರೆತು, ಭಯ-ಭೀತಿಯನ್ನೇ ಹುಟ್ಟಿಸಿ ಅದನ್ನೇ ಟಿಆರ್ಪಿ ಬಂಡವಾಳವನ್ನಾಗಿಸಿಕೊಳ್ಳುವ ಹೊಸ ವಿದ್ಯಮಾನವೇ ಇದಕ್ಕೆ ಕಾರಣ.

    ಇಲ್ಲಿ ಪ್ರತಿಯೊಬ್ಬ ಸುದ್ದಿ ನಿರೂಪಕರು (ಆಂಕರ್), ವರದಿಗಾರರು ಕೂಡ ಆರೋಗ್ಯ ಪಂಡಿತರು, ಆರ್ಥಿಕ ತಜ್ಞರು. ಬ್ರಹ್ಮಾಂಡ ಜ್ಞಾನ ಪಡೆದವರು ! ಬೆಳಗ್ಗಿನಿಂದ ರಾತ್ರಿಯವರೆಗೆ ಹೇಳಬಹುದು, ಮಾಡಬಹುದು ಎಂಬ ಪುಂಕಾನುಪುಂಕ ಮಾತುಗಳೇ ಇವರ ಬಂಡವಾಳ. ಅದು ಬಿಟ್ಟು ಇನ್ ಡೆಪ್ತ್ ಅಂದರೆ ಆಳವಾದ ಸುದ್ದಿ ವಿಶ್ಲೇಷಣೆ ಇವರಲ್ಲಿ ಇಲ್ಲವೇ ಇಲ್ಲ. ಇನ್ನು ಪ್ರತಿದಿನವೂ ಕನಿಷ್ಠವೆಂದರೂ ನಾಲ್ಕೈದು ಅರ್ಧರ್ಧ ಗಂಟೆ ಪ್ರೋಗ್ರಾಂ ಕೊಡಲೇ ಬೇಕು ಎಂಬ ತಾವೇ ಸೃಷ್ಟಿಸಿಕೊಂಡ ಅನಿವಾರ್ಯತೆ. ಅದಕ್ಕೆ ತಕ್ಕುದಾಗಿ ಪ್ರೋಮೋ. ಅದಕ್ಕೊಂದು ತಮ್ಮ ಭಂಡಾರದಲ್ಲಿರುವ ಶಬ್ದಗಳ ಸುರಿಮಳೆ. ಅಂತಿಮವಾಗಿ ಘೋರಾತಿಘೋರ ಅಘೋರ ಶಬ್ದಗಳ ಬಳಕೆ. ನೋಡುಗರಿಗೆ ಇದೇನು ಎನ್ನುವ ಕುತೂಹಲ, ಅಂತಿಮವಾಗಿ ಎಲ್ಲವೂ ಶೂನ್ಯ.

    ಕೊರೊನಾ ಇತಿ ವ್ಯಾಪ್ತಿಯಾಗಿರುವ ಈ ದಿನಗಳಲ್ಲಿ ಎಷ್ಟು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಸುದ್ದಿ ನೀಡಲು ಒಂದೆರಡು ನಿಮಿಷಗಳು ಸಾಕು. ಆದರೆ ಅದನ್ನೇ ಅತಿ ರಂಜಿತವಾಗಿ ನೀಡುತ್ತಿರುವ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳ ಉದ್ದೇಶವಾದರೂ ಏನು? ವೀಕ್ಷಕರನ್ನು ಹಿಡಿದಿಡಬೇಕು ಎನ್ನುವ ಉದ್ದೇಶವೇ ?  ಹೌದಾದರೆ, ಅದಕ್ಕೊಂದು ನೀತಿ-ನಿಯಮವಿದೆ. ಜನರನ್ನು ಭಯ ಪಡಿಸುವಂತಹ ಶಬ್ದಗಳ ಬಳಕೆ ಅಗತ್ಯವೇ ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುವುದು ಸಹಜ.


    ಇನ್ನು ಸುದ್ದಿ ನಿರೂಪಕರ ವಿಷಯಕ್ಕೇ ಬಂದರೆ, ಫೋನ್ ಇನ್ ಕಾರ್ಯಕ್ರಮಗಳು, ಇದರ ಮೂಲಕ ಇಂತಹ ಶಾಸಕ, ಸಂಸದರಿಗೆ ನಾನು ಹೇಳುತ್ತೇನೆ ಎಂಬಲ್ಲಿಗೆ ನಾವು ಅಂದರೆ ಮಾಧ್ಯಮಗಳು ಸರಕಾರಕ್ಕೇ ನಿರ್ದೇಶನ ನೀಡುವ ಮಟ್ಟದಲ್ಲಿದ್ದೇವೆ ಎಂಬ ಮಾಹಿತಿಯನ್ನು ಜನ ಸಾಮಾನ್ಯರಿಗೆ ತಲುಪಿಸುವಂತಹ ಕೆಲಸ ಆಗುತ್ತಿದೆ.

    ಮಾಧ್ಯಮಗಳು ಸರಕಾರವನ್ನು ಎಚ್ಚರಿಸಬೇಕು ನಿಜ. ಆದರೆ ನಾವೇ ಸರಕಾರವಾಗುವುದಲ್ಲ. ನಾವು ಮೀಡಿಯಾ, ನಾನು ಹೇಳಿದರೆ ನಿಮಗೆ ಮನೆಗೆ ಅಕ್ಕಿ, ರೇಷನ್ ತಲುಪತ್ತದೆ ಎಂಬ ಮನೋಭಾವವು ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಅದು ಕೂಡ ಭ್ರಷ್ಟಾಚಾರವಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸದೇ ಇರುವುದಿಲ್ಲ. ಲಾಭ ಪಡೆದುಕೊಂಡವರು (ಫೋನ್ ಮೂಲಕ ಕೆಲವ ಬೆರಳೆಣಿಕೆ ಸಂಖ್ಯೆ) ಖುಷಿ ಪಡಬಹುದು. ಆದರೆ ಉಳಿದವರಿಗೆ ಮಾಧ್ಯಮವೆಂದರೆ ಏನು ಅನ್ನಿಸದಿರಲು ಸಾಧ್ಯವೇ ?

    ಸುದ್ದಿಗಳಿಗೆ ಮ್ಯೂಸಿಕ್ ಸಮೇತ ಇಮೋಷನಲ್ ಟಚ್ ಕೊಡುವ ಕೆಲಸ ಆಗುತ್ತಿದೆ. ಸುದ್ದಿ ಅಂದರೆ ಸುದ್ದಿ ಮಾತ್ರ, ಇಲ್ಲಿ ಭಾವನೆಗಳಿಗೆ ಬೆಲೆಯಿಲ್ಲ. ಪ್ರಸಿದ್ಧ ಪತ್ರಕರ್ತರೊಬ್ಬರ ಮಾತನ್ನೇ ಇಲ್ಲಿ ಉಲ್ಲೇಖಿಸುವಾದರೆ “ಪತ್ರಕರ್ತನೊಬ್ಬ ಹೃದಯದಿಂದ ಮಾತನಾಡಬಾರದು, ಮೆದುಳಿಗೆ ಕೆಲಸ ನೀಡಬೇಕು’, ಇದು ತುಂಬಾ ಸೂಕ್ತವಲ್ಲವೇ ?

    ಹಲವು ಲಾಭ

    ಹಾಗೆಂದು ಟಿವಿ ಸುದ್ದಿಗಳಿಂದ ಲಾಭ ಆಗಿಯೇ ಇಲ್ಲವೇ ? ಖಚಿತವಾಗಿಯೂ ಆಗಿದೆ. ಯಾರೇನೋ ಹೇಳಲಿ, ಮುಖ್ಯವಾಗಿ ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸ್ ಲಾಠಿ ಪ್ರಹಾರವನ್ನು ಪದೇ ಪದೇ ತೋರಿಸಿದ್ದರಿಂದಲೇ ಒಂದಿಷ್ಟು ದಿನ ಜನರು ಬೀದಿಗೆ ಇಳಿಯುವುದು ನಿಂತಿತು. ಅಷ್ಟರ ಮಟ್ಟಿಗೆ ಸುದ್ದಿ ಮಾಧ್ಯಮಗಳು ಜನರಿಗೆ ಆ ಮೂಲಕ ಕೊರೊನಾ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿವೆ ಎಂಬುದು ಅತಿಶಯೋಕ್ತಿ ಆಗಲ್ಲ ಎಂಬುದು ನನ್ನ ಅಭಿಪ್ರಾಯ.

    ಮಾಧ್ಯಮದ ಮೇಲೆ ಹಿಡಿತ

    ಜಾಗತಿಕವಾಗಿ ಶೇ. 97ರಷ್ಟು ಮಾಧ್ಯಮಗಳು ಸರಕಾರಿ ಅಥವಾ ಖಾಸಗಿ ಒಡೆತನದಲ್ಲಿವೆ. ಸರಕಾರಿ ಪ್ರಯೋಜಿತ ಮಾಧ್ಯಮಗಳು ಸರಕಾರದ ಪ್ರೊಪಗಾಂಡವನ್ನೇ ಹೆಚ್ಚು ಹೆಚ್ಚುಪ್ರಚಾರ ಮಾಡಿದರೆ, ಖಾಸಗಿ ಒಡೆತನದ ಮಾಧ್ಯಮಗಳು ಸರಕಾರದಿಂದ ಆಗುವ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಆ ಕುರಿತು ವರದಿ ಮಾಡುತ್ತಲೇ ಸಾಗುತ್ತಿವೆ. ಅದರಲ್ಲಿರುವ ಉದ್ಯೋಗಿಗಳು ಸಂಸ್ಥೆಯ ಮಾಲೀಕರ ಮನೋಭಾವಕ್ಕೆ ಅನುಗುಣವಾಗಿ ಸುದ್ದಿ ಮಾಡಲೇಬೇಕಾಗುತ್ತದೆ, ಇಲ್ಲವಾದರೆ ಕೆಲಸ ಬಿಟ್ಟು ಹೋಗಬೇಕಾದ ಅನಿವಾರ್ಯ ಸನ್ನಿವೇಶವನ್ನು ಎದುರಿಸುತ್ತಾರೆ.

    ಲಾಕ್‌ಡೌನ್: ಬಂಗಾರದಂತಹ ಬೆಳೆ ನಾಶ, ಕಟ್ಟೆಯೊಡೆದಿದೆ ರೈತರ ಆಕ್ರೋಶ

    ಚನ್ನಗಿರಿ ತಾಲ್ಲೂಕಿನ ರೈತರಿಗೆ ಕೊರೊನಾ ಲಾಕ್ ಡೌನ್ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ತರಕಾರಿ, ಹೂವು, ಹಣ್ಣು ಹೊಲದಲ್ಲಿಯೇ ನಾಶ ಮಾಡುವ ಮೂಲಕ ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ.

    ಪ್ರತಿ ವರ್ಷದಂತೆ ಪ್ರಯೋಗಶೀಲರಾಗಿ ಬೆಳೆದು ಯಶಸ್ಸು ಕಂಡಿದ್ದ ರೈತರು ಕಣ್ಣೀರು ಹಾಕಿದ್ದಾರೆ. ಭೀಮನೆರೆ ಗ್ರಾಮದ ರೈತರು ಬೀಟ್ ರೂಟ್ ಹಾಗೂ ಎಲೆಕೋಸು ಸಮೃದ್ಧವಾಗಿ ಬೆಳೆದಿದ್ದರು. ಬೆಳೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವೇಳೆಗೆ ಲಾಕ್ ಡೌನ್ ಎದುರಾಯಿತು. ಸಾರಿಗೆ ವ್ಯವಸ್ಥೆ ಇಲ್ಲದೇ ಬೆಳೆ ಹೊಲದಲ್ಲಿಯೇ ನಾಶವಾಯಿತು. ಕೆಲವರು ರಂಟೆ ಹೊಡೆದು ಅಳಿಸಿ ಹಾಕಿದರು.

    ಒಂದು ಎಕರೆಗೆ ರೂ.40 ಸಾವಿರ ಖರ್ಚು ಮಾಡಿ ಬೀಟ್ ರೂಟ್ ಬೆಳೆಯಲಾಗಿತ್ತು. ಸುಮಾರು 15 ಟನ್ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಸಗಟು ಬೆಲೆ ಕನಿಷ್ಟ ರೂ.17 ಧಾರಣೆ ಇತ್ತು. ಇದೇ ಧಾರಣೆಗೆ ಎಕರೆಗೆ ರೂ.1ಲಕ್ಷ ಆದಾಯದ ಬರುತ್ತಿತ್ತು. ಈಗ ಬೆಂಗಳೂರು ಮಾರುಕಟ್ಟೆಗೆ ಸಾಗಿಸಲು ಆಗಲಿಲ್ಲ ಹಾಗಾಗಿ ಹೊದಲ್ಲಿಯೇ ಬಿಡಲಾಯಿತು ಎನ್ನುತ್ತಾರೆ ರೈತ ಮಹೇಂದ್ರ ಗೌಡ.

    ಅದೇ ಗ್ರಾಮದಲ್ಲಿ ಹಲವು ರೈತರು ಸುಮಾರು 15 ಎಕರೆಯಲ್ಲಿ ಎಲೆ ಕೋಸು ಬೆಳೆದಿದ್ದರು. ಕೊಯ್ಲಿಗೆ ಬರುವ ವೇಳೆಗೆ ಕೊರೊನಾ ದಿಗ್ಬಂಧನ ಆರಂಭವಾಯಿತು. ಕೇವಲ ರೂ.1 ಕ್ಕೂ ಕೇಳುವವರಿಲ್ಲದೇ ಹೊಲದಲ್ಲಿಯೇ ಮಗುಚಲಾಯಿತು. ಪ್ರತಿ ಎಕರೆಗೆ ರೂ. 50 ಸಾವಿರ ಖರ್ಚು ತಗುಲಿತ್ತು. ಎಕರೆಗೆ 15 ಟನ್ ಇಳುವರಿ ಸಾಧ್ಯತೆ ಇತ್ತು. ರೂ. 8 ಬೆಲೆ ಸಿಕ್ಕಿದ್ದರೂ ಹಾಕಿದ ಬಂಡವಾಳ ವಾಪಸ್ಸು ಬರುತ್ತಿತ್ತು. ಈಗ ಕೊಳ್ಳುವವರಿಲ್ಲದೇ ರೈತ ಬರಿಗೈ ಆಗಿದ್ದಾನೆ ಎನ್ನುತ್ತಾರೆ ರೈತ ವಿಶ್ವನಾಥ್.

    ಕನಕಾಂಬರ ನಾಶ: ಪರಮೇಶ್ವರಪ್ಪ ಎಂಬ ರೈತ ತಮ್ಮ ಅಡಿಕೆ ತೋಟದಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಕನಕಾಂಬರ ಬೆಳೆದಿದ್ದರು. ಲಾಕ್ ಡೌನ್ ನಿಂದಾಗಿ ಮಾರುಕಟ್ಟೆ, ಸಾಗಣೆ ವ್ಯವಸ್ಥೆ ಇಲ್ಲದೇ ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡಿದರು.

    ಲಾಕ್ ಡೌನ್ ಪೂರ್ವದಲ್ಲಿ ನಿತ್ಯ 5 ಕೆ.ಜಿ. ಕನಕಾಂಬರ ಹೂವು ಸಿಗುತ್ತಿತ್ತು. ದಾವಣಗೆರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ರೂ.500 ರಿಂದ 600 ಬೆಲೆ ಸಿಗುತ್ತಿತ್ತು. ಒಟ್ಟು 2500-3000 ನಿತ್ಯ ವಹಿವಾಟು ನಡೆಸುತ್ತಿದ್ದೆವು. ಲಾಕ್ ಡೌನ್ ಘೋಷಣೆಯ ನಂತರ ಪ್ರತಿ ಕೆ.ಜಿ. ರೂ.100 ಕ್ಕೆ ಕುಸಿಯಿತು. ಇದರಿಂದ ಹಾಕಿದ ಬಂಡವಾಳವು ಸಿಗುತ್ತಿರಲಿಲ್ಲ.

    ಕನಕಾಂಬರ ಬಿಡಿಸಲು ಬರುವ 5 ಕೂಲಿ ಕಾರ್ಮಿಕರಿಗೆ ರೂ.200 ಕೊಡಬೇಕು. ಇದರಿಂದ ರೂ.1000 ಖರ್ಚು ಬರುತ್ತಿತ್ತು. ದಾವಣಗೆರೆಗೆ ತೆರಳಿ ಸಗಟು ವ್ಯಾಪಾರಿಗಳಿಗೆ ಕೊಡುತ್ತಿದ್ದೆವು. ಖರ್ಚು ಭರಿಸಿ ರೂ.1500 ನಿತ್ಯ ಗಳಿಕೆ ಇತ್ತು. ಲಾಕ್ ಡೌನ್ ಪರಿಣಾಮ ಕೂಲಿಗಳೂ ಬರಲಿಲ್ಲ. ದರ ಕುಸಿತದಿಂದ ನಷ್ಟವಾಯಿತು ಎನ್ನುತ್ತಾರೆ ರೈತ ಪರಮೇಶ್ವರಪ್ಪ.

    ಹಿರೇಕೋಗಲೂರಿನಲ್ಲಿಯೂ ಎಲೆಕೋಸು ಬೆಳೆದು ಮಾರುಕಟ್ಟೆ ಇಲ್ಲದೇ ನಾಶಮಾಡಲಾಗಿದೆ. ಮಾಯಕೊಂಡ ಸಮೀಪದಲ್ಲಿ ಕಲ್ಲಂಗಡಿ ಬೆಳೆದ ರೈತನಿಗೆ ಮಾರುಕಟ್ಟೆ ಇಲ್ಲದೇ ಅಪಾರ ನಷ್ಟ ಸಂಭವಿಸಿದೆ. ಈರುಳ್ಳಿ ಬೆಳೆದ ರೈತರು ಮಾರುಕಟ್ಟೆ ಇಲ್ಲದ ಕಾರಣ ಮನೆ ಬಾಗಿಲಿಗೆ ಹೊತ್ತೊಯ್ದು ಮಾರಾಟ ಮಾಡಿದರು. ಹಾಗಾರಿ ತುಸು ಆರ್ಥಿಕ ಕುಸಿತದಿಂದ ಪಾರಾದರು.

    ರೈತರ ಬವಣೆ ಹಾಗೂ ಬೆಳೆ ನಾಶದ ವರದಿಯನ್ನು ಮನಗಂಡ ತೋಟಗಾರಿಕಾ ಇಲಾಖೆ ರೈತರ ಸಹಾಯಕ್ಕೆ ಮುಂದಾದರು. ರೈತರ ಉತ್ಪಾದನೆಗಳ ಸಾರಿಗೆಗೆ ಮುಕ್ತ ಅವಕಾಶ ನೀಡಲಾಯಿತು. ಎಪಿಎಂಸಿಗಳನ್ನು ತೆರೆದು ಖರೀದಿಗೆ ವ್ಯವಸ್ಥೆ ಮಾಡಲಾಯಿತು. ಹಾಪ್ ಕಾಮ್ಸ್ ಗಳಲ್ಲಿ ಹಣ್ಣು, ತರಕಾರಿ ಮಾರಾಟ ಮಾಡಲು ರೈತರಿಗೆ ಮನವರಿಕೆ ಮಾಡಲಾಯಿತು.

    ಸಾರ್ವಜನಿಕರ ಓಡಾಟವಿಲ್ಲದೇ ಬೇಡಿಕೆ ಕುಸಿಯಿತು. ರೈತರಿಗೆ ಪೂರಕ ಬೆಲೆ ಸಿಗದಾಯಿತು. ಸಿಕ್ಕಷ್ಟೆ ಸಾಕು ಎಂಬ ನಿಲುವಿಗೆ ಬಂದರು. ತುಸು ನಷ್ಟವೆನಿಸಿದರೂ ಹಣ್ಣುಗಳನ್ನು ಮಾರಾಟಮಾಡಿದರು.

    ಮೆಕ್ಕೆಜೋಳದ ಧಾರಣೆಯು ಕೋಳಿ ಮಾರಾಟದ ದಿಗ್ಬಂಧನದಿಂದ ತೀವ್ರ ಕುಸಿದಿತ್ತು. ಈಗ ಸ್ವಲ್ಪ ಚೇತರಿಕೆ ಕಂಡಿದೆ.

    ಸ್ಯಾಂಡಲ್‌ವುಡ್‌ಗೆ ಕೊರೊನಾಘಾತ: ಟಾಕೀಸ್ ಗಳು ತೆರೆದರೂ ಪ್ರೇಕ್ಷಕರು ಬರುವುದು ಅನುಮಾನ

    ಕನ್ನಡಪ್ರೆಸ್ ವರದಿ/ ಒಂದೇ ನಿಮಿಷದ ಓದು

    ಕೊರೊನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್‌ ಆಗಿತ್ತು. ಇದರಿಂದ ಸಾಮಾನ್ಯ ಜನರಿಂದ ಹಿಡಿದ ಕೋಟ್ಯಧಿಪತಿಗಳಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಸ್ಯಾಂಡಲ್‌ವುಡ್‌ಗಂತೂ ಈ ಲಾಕ್‌ಡೌನ್‌ ಸಿಕ್ಕಾಪಟ್ಟೆ ನಷ್ಟವನ್ನುಂಟುಮಾಡಿದೆ.

    ಹೌದು, ನಿರ್ಮಾಪಕ ಸೂರಪ್ಪ ಬಾಬು ಅವರು ಹೇಳು ಪ್ರಕಾರ ಸದ್ಯ ಚಿತ್ರರಂಗದ ಮೇಲೆ ಏನಿಲ್ಲವೆಂದರು 500 ಕೋಟಿಯಷ್ಟು ಇನ್ವೆಸ್ಟ್‌ಮೆಂಟ್‌ ಇದೆ. ಆದರೆ ಆ ಹಣ ವಾಪಾಸ್ಸಾಗುವುದು ಯಾವಾಗ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಅವರು.

    ದೊಡ್ಡ ಚಿತ್ರಗಳ ಎಫೆಕ್ಟ್

    ‘ಕೆಜಿಎಫ್‌-2’, ‘ರಾಬರ್ಟ್‌’, ‘ಕೋಟಿಗೊಬ್ಬ3’, ‘ಯುವರತ್ನ’, ‘ಪೊಗರು’ , ‘ಸಲಗ’, ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳಲ್ಲಿ ಮೂರು ಚಿತ್ರಗಳಾದರೂ  ಇಷ್ಟೊತ್ತಿಗಾಗಲೇ ರಿಲೀಸ್‌ ಆಗಬೇಕಿತ್ತು. ಲಾಕ್‌ಡೌನ್‌ನಿಂದಾಗಿ ರಿಲೀಸ್‌ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನು ಕೆಲವು ಚಿತ್ರಗಳ ಕೊನೆಯ ಭಾಗದ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ. ಈ ದೊಡ್ಡ ಚಿತ್ರಗಳು ಬಿಡುಗಡೆಯಾಗದ ಹೊರತು ಸಣ್ಣ ಬಜೆಟ್‌ನ ಸಿನಿಮಾಗಳು ರಿಲೀಸ್‌ ಆಗುವುದಿಲ್ಲ. ಸದ್ಯಕ್ಕೆ ಕೊರೊನಾ ಮಾಡುತ್ತಿರುವ ಅವಾಂತರವನ್ನು ಗಮನಿಸಿದರೆ ಜುಲೈ ಕೊನೆವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಚಿತ್ರಮಂದಿರಗಳು ತೆರೆಯಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಹಾಗೇನಾದರೂ ಆದರೆ ಈ ವರ್ಷ ಅತಿ ಕಡಿಮೆ ಚಿತ್ರಗಳು ಬಿಡುಗಡೆಯಾಗುತ್ತವೆ.

    ಬೇಸಿಗೆ ರಜೆ

    ಸ್ಯಾಂಡಲ್‌ವುಡ್‌ಗೆ ಬೇಸಿಗೆ ರಜೆ ಹೆಚ್ಚು ವರಮಾನ ತಂದುಕೊಡುವ ಸಮಯ. ಈ ಸಮಯದಲ್ಲಿ ಕೊರೊನಾ ಬಂದು ಇಡೀ ಚಿತ್ರೋದ್ಯಮ ಬಂದ್‌ ಆಗಿದೆ. ಹಾಗಾಗಿ ಉತ್ತಮ ದಿನಾಂಕ ಬರುವವರೆಗೂ ಕೆಲ ನಿರ್ಮಾಪಕರು ಚಿತ್ರಗಳನ್ನು ರಿಲೀಸ್‌ ಮಾಡುವುದಿಲ್ಲ ಎನ್ನಲಾಗುತ್ತಿದೆ.

    ಚಿತ್ರಮಂದಿರಗಳು ಬಂದ್‌   

    ಇನ್ನು ಸಿನಮಾ ಹಾಲ್‌ಗಳು ಮುಚ್ಚಿರುವ ಕಾರಣ ಟಿಕೇಟ್‌ ದರದಿಂದ ಮಾತ್ರ ಲಾಸ್‌ ಆಗಿಲ್ಲ. ಅಲ್ಲಿ ನಡೆಸುವ ಕ್ಯಾಂಟೀನ್‌, ಪಾರ್ಕಿಂಗ್‌ ಸೇರಿದಂತೆ ಬಹಳಷ್ಟು ಮೂಲಗಳಿಂದ ಚಿತ್ರೋದ್ಯಮಕ್ಕೆ ಹೊಡೆತ ಬಿದ್ದಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೇಟ್‌ ದರಕ್ಕಿಂತಲೂ ಅಲ್ಲಿ ಮಾರಾಟ ಮಾಡುವ ತಿಂಡಿಯ ಬೆಲೆಗಳೇ ಹೆಚ್ಚಾಗಿರುತ್ತವೆ. ಜತೆಗೆ ಪಾರ್ಕಿಂಗ್‌ ಶುಲ್ಕದಿಂದಲೂ ಅತಿ ಹೆಚ್ಚು ಹಣವನ್ನು ಮಲ್ಟಿಪ್ಲೆಕ್ಸ್‌ ಮಂದಿ ಗಳಿಸುತ್ತಾರೆ.

    ನಟ,ನಟಿಯರ ಸಂಭಾವನೆ

    ಕಳೆದ ಎರಡು ತಿಂಗಳಲ್ಲಿ ಎಷ್ಟೋ ಜನ ನಟ, ನಟಿಯರ ಸಂಭಾವನೆ ಸಹ ಇಲ್ಲ. ಸೀರಿಯಲ್‌, ಸಿನಿಮಾಗಳಲ್ಲಿ ದಿನವೊಂದಕ್ಕೆ ಸಾವಿರಾರು ರೂಪಾಯಿ ಗಳಿಸುವ ಕಲಾವಿದರು ಕನ್ನಡದಲ್ಲಿದ್ದಾರೆ. ಶೂಟಿಂಗ್‌ ಇಲ್ಲದ ಕಾರಣ ಅವರ್ಯಾರಿಗೂ ಹಣ ಸಿಗುತ್ತಿಲ್ಲ.

    6000 ಕಾರ್ಮಿಕರಿಗೆ ಸಂಕಷ್ಟ

    ಕನ್ನಡ ಚಿತ್ರರಂಗದಲ್ಲಿ ಆರು ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ಹಿನ್ನೆಲೆಯಲ್ಲಿ ಚಿತ್ರೀಕರಣ ಬಂದ್‌ ಆಗಿದೆ.  ಇದರಿಂದ ದಿನಗೂಲಿ ನೌಕರರು ಕಂಗಾಲಾಗಿದ್ದಾರೆ. ಕಾರ್ಮಿಕರ ಸಂಕಷ್ಟಕ್ಕೆ ಸಾಕಷ್ಟು ಮಂದಿ ಬಂದಿದ್ದಾರಾದರೂ ಎಲ್ಲರೂ ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನೇ ಕಾಯುವಂತಾಗಿದೆ.

    ಕೊರೊನಾ ವೈರಸ್‌ ಮನುಷ್ಯನ ಆರೋಗ್ಯದ ಜತೆ ಆರ್ಥಿಕ ಪರಿಸ್ಥಿತಿಗೂ ಕಾಟ ಕೊಡುತ್ತಿದ್ದು, ಚಿತ್ರರಂಗದ ಮೇಲೆ ಭಾರಿ ಪರಿಣಾಮವನ್ನೇ ಬೀರಿದೆ. ಸಿನಿ ಪಂಡಿತರ ಪ್ರಕಾರ ಈ ಸಮಯದಲ್ಲಿ ಆದ ನಷ್ಟವನ್ನು ತುಂಬಿಕೊಳ್ಳಲು ಬಹಳ ಸಮಯ ಹಿಡಿಯುತ್ತದಂತೆ.

    ಕಾರ್ಮಿಕರಿಗೆ ನೆರವಿನ ಮಹಾಪೂರ

    ಲಾಕ್‌ಡೌನ್ ಹಿನ್ನೆಲೆಯಲ್ಲಿ ರಿಲಯನ್ಸ್‌ ಫೌಂಡೇಶನ್‌, ಅಮಿತಾಬ್‌ ಬಚ್ಚನ್‌, ರಾಜ್ಯ ಸರ್ಕಾರ ಸೇರಿದಂತೆ ಸಾಕಷ್ಟು ಮಂದಿ ಸಿನಿಮಾ ಕಾರ್ಮಿಕರ ನೆರವಿಗೆ ಬಂದು ನಿಂತಿದ್ದಾರೆ. ದಿನಸಿ ಕಿಟ್‌ ವಿತರಣೆ, ಆಹಾರ ವಿತರಣೆ, ಕೂಪನ್‌ಗಳ ವಿತರಣೆಯನ್ನು ಈಗಾಗಲೇ ಕಾರ್ಮಿಕರಿಗೆ ಮಾಡಲಾಗಿದೆ.

    ಕರೋನಾ ಡೈರಿ: ದೂರವಾಗಲಿ ಕತ್ತಲು

    ಹಲವು ತಲೆಮಾರುಗಳು ಕಾಣದ ಸಮಸ್ಯೆಯೊಂದು ಅದಕ್ಕಾಗಿ ಸಿದ್ದತೆಗಳಿಲ್ಲದ ಜಗತ್ತಿನ ಮೇಲೆ ತಟ್ಟನೆ ಎರಗಿದರೆ ವಿಶ್ವದ ಎಲ್ಲ ರಾಷ್ಟ್ರಗಳೂ ಅಂಧಕಾರದಲ್ಲಿ ಮುಳುಗಿಸಿಬಿಡುತ್ತವೆ.

    ಇದೀಗ ನಾವ್ಯಾರೂ ಕಂಡು ಕೇಳರಿಯದ  ಸರ್ವವ್ಯಾಪಿ ಹೊಸ ವ್ಯಾಧಿ (ಪ್ಯಾಂಡೆಮಿಕ್) ಕೋವಿಡ್-19 ಇದೇ ರೀತಿ ಜಗತ್ತನ್ನು ಅಂಧಕಾರದಲ್ಲಿ ಮುಳುಗಿಸಿ ದೇಶಗಳು ತತ್ತರಿಸುವಂತೆ ಮಾಡಿದೆ.

    ಇಂತಹ ಸರ್ವವ್ಯಾಪಿ ಹೊಸ ವ್ಯಾಧಿಗಳು ಮನುಕುಲಕ್ಕೆ ಆಗಾಗ ಅಪ್ಪಳಿಸುತ್ತಲೇ ಬಂದಿರುವುದನ್ನು ಚರಿತ್ರೆ ದೃಢಪಡಿಸುತ್ತದೆ.ಅಂತಹ ಕೆಲವನ್ನು ನೆನಪಿಸಿ ಕೊಳ್ಳಬಹುದಾದರೆ ಕೆಳಗಿನ  ವಿವರಗಳನ್ನು ಗಮನಿಸಬಹುದು.

    ಇನ್ಫ್ಲೂಯೆಂಝ ಅಥವಾ ಸ್ಪಾನಿಷ್ ಫ್ಲೂ– 1918-1920, ಜಗತ್ತಿನಲ್ಲಿ ದಾಖಲಾಗಿರುವ ಸಾವಿನ ಸಂಖ್ಯೆ 50 ಮಿಲಿಯನ್  ಆದರೆ ವಿಶ್ವದಲ್ಲಿ ಒಟ್ಟು 500 ಮಿಲಿಯನ್ ಜನರಿಗೆ ಈ ಖಾಯಿಲೆ ಬಂತು. ಇದು ಕೂಡ ವೈರಾಣುವಿನಿಂದ ಹರಡಿದ ಖಾಯಿಲೆ.

    ಎಚ್..ವಿ– 1981 ರಿಂದ ಇದುವರೆಗೆ 32 ಮಿಲಿಯನ್ ಸಾವುಗಳು ಸಂಭವಿಸಿವೆ. ಇದಕ್ಕೆ ಲಸಿಕೆಯಿಲ್ಲವಾದರೂ ಆಂಟಿ ರೆಟ್ರೊ ವೈರಲ್ ಮದ್ದಿನಂತ ಕೆಲವು ಔಷದಗಳ ಕಾರಣ ಆರೋಗ್ಯಕರವಾಗಿ ಬಹುಕಾಲ ಬದುಕಲು ಸಾಧ್ಯವಿದೆ.ವೈರಾಣುವಿನಿಂದ ಬರುವ ಖಾಯಿಲೆ.

    ಕಾಲರಾ-ಕಳೆದ  200 ವರ್ಷಗಳಲ್ಲಿ ದಾಖಲಾದ ಏಳನೆಯ ಕಾಲರಾ 1961–1975  ದಲ್ಲಿ ಕಂಡುಬಂತು. ಎಲ್ಲ ಬಾರಿಯ ಸಾವಿನ ಸಂಖ್ಯೆ ಲೆಕ್ಕ ಸಿಗದಷ್ಟು. ಇದು ಬ್ಯಾಕ್ಟೀರಿಯದಿಂದ ಬರುವಂತ ಖಾಯಿಲೆ. ಇದಕ್ಕೆ ಚಿಕಿತ್ಸೆ ಲಭ್ಯವಿದೆ. ಲಸಿಕೆಯ ಬಳಕೆಯೂ ಇದೆ.

    ಸ್ವೈನ್ ಫ್ಲೂ/ H1N1– 2009 – 2010, ರ ನಡುವಿನ ಸಾವಿನ ಸಂಖ್ಯೆ 12,469.ಆದರೆ ಪ್ರಪಂಚದಾದ್ಯಂತ 60.8 ಮಿಲಿಯನ್ ಜನರಿಗೆ ಖಾಯಿಲೆ ಬಂತು ಮತ್ತು 274,304 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.ಇದಕ್ಕೆ ಲಸಿಕೆಯ ಲಭ್ಯತೆಯಿದೆ.

    ಸಾರ್ಸ್ /Severe acute respiratory syndrome (SARS)– 2002 ರಲ್ಲಿ ಕಂಡುಬಂದ ವೈರಾಣು ಸೋಂಕು.  ಇದರಿಂದ 774 ಸಾವುಗಳು ಸಂಭವಿಸಿದವು. 8079 ಜನರಿಗೆ ಸೋಂಕು ಹರಡಿತ್ತು.ಇದಕ್ಕೆ ಲಸಿಕೆಯಿಲ್ಲ. ಗುಣಮುಖರಾಗಲು ಸಹಾಯಕ ಚಿಕೆತ್ಸೆ ನೀಡಲಾಗುತ್ತದೆ ಅಷ್ಟೆ.

    ವಿಶ್ವ ಆರೋಗ್ಯ ಸಂಸ್ಥೆ (WHO) ಹೊಸ ವ್ಯಾಧಿಗಳೆಂದು ಪ್ರತಿಬಾರಿ ಕರೆದಿರುವಾಗಲೂ ಈ ಸೋಂಕುಗಳು ಹೊಸವೇನಲ್ಲ. ಒಂದೇ ಖಾಯಿಲೆ ಅಲೆ ಅಲೆಯಾಗಿ ಬೇರೆ ಬೇರೆ ಸಮಯದಲ್ಲಿ ಬಂದು ಹೋಗಿರುವುದೂ ಇದೆ. ಹಲವು ವೈರಾಣುಗಳನ್ನು ಹೊಸದಾಗಿ ಹೆಸರಿಸಿದರು,ಈ ವೈರಾಣುಗಳು ಹೊಸವೇನಲ್ಲ. ಹೊಸ ಹೊಸ ಮರುಹುಟ್ಟಿನೊಂದಿಗೆ ಅವುಗಳು ಭಿನ್ನ ವಿಷಮತೆಯನ್ನು ತೋರುತ್ತವೆ.ಆದೆಷ್ಟು  ಬೇಗ ಅವುಗಳ ರೂಪಾಂತರವಾಗುತ್ತದೆಂದರೆ, ಅಷ್ಟೇ ವೇಗದಲ್ಲಿ ಲಸಿಕೆ, ಚಿಕಿತ್ಸೆ ಮತ್ತು ಸವಲತ್ತುಗಳನ್ನು ಸೃಷ್ಟಿಸುವುದು ಅಸಾಧ್ಯವಾಗಿಬಿಡುತ್ತದೆ.ಇದೇ ಕಾರಣಕ್ಕೆ, ಇಂತಹ ಹಲವು ಪ್ಯಾಂಡೆಮಿಕ್ ಗಳನ್ನು ಪ್ರಪಂಚ ಮೊದಲೇ ಎದುರಿಸಿದ್ದರೂ ಮತ್ತೊಂದಕ್ಕೆ ತಯಾರಾಗಿ ಕುಳಿ ತಿರುವುದು ಸಾಧ್ಯವಿಲ್ಲ. ಕೇಳರಿಯದ ಪ್ಯಾಂಡೆಮಿಕ್ ಗಳು ಬಂದಾಗ ಇದೇ ಕಾರಣಕ್ಕೆ ಮನುಕುಲ ಮೊಣಕಾಲೂರಿ ಕುಸಿದು ಸೋಲೊಪ್ಪಿಕೊಳ್ಳಬೇಕಾಗುತ್ತದೆ.  ಇಂತಹ ಹಲವು ಖಾಯಿಲೆಗಳನ್ನು ಈಗಾಗಲೇ ನಾವು ಒಪ್ಪಿಕೊಂಡುಬಿಟ್ಟಿದ್ದೇವೆ. ಕರೋನ ಕ್ಷಿಪ್ರವಾಗಿ ಹರಡಬಲ್ಲ ಆದರೆ ಸಾವಿನ ಪ್ರಮಾಣ ಕಡಿಮೆಯಿರುವ ಇಂತದ್ದೇ ಒಂದ ಸೋಂಕು.

    ಮಾರ್ಚ್ 17 ರಂದು ಯುನೈಟೆಡ್ ಕಿಂಗ್ಡಂ ನ ಮುಕ್ಯ ವೈಜ್ಞಾನಿಕ ಸಲಹೆಗಾರ ಸರ್ ಪ್ಯಾಟ್ರಿಕ್  ವ್ಯಾಲನ್ಸ್ ಈ ವಿಚಾರವನ್ನು ಬಿಂಬಿಸುವ ಒಂದು ಸಾರ್ವಜನಿಕ ಹೇಳಿಕೆ ನೀಡಿದ. “ ಪ್ರತಿ ವರ್ಷ ಫ್ಲೂ ಸಂಭಂದಿತ ವಿಚಾರವಾಗಿ ಕನಿಷ್ಠ 8000 ಜನ ಸಾಯುತ್ತಾರೆ, ಈ ವರ್ಷ ಕರೋನಾದ ಕಾರಣ ಈ ಸಂಖ್ಯೆ 20,000 ವನ್ನು ತಲುಪಿದರೆ ಅದು ನಮ್ಮ ಅದೃಷ್ಟ” ಎಂದ.ಆದರೆ ಆಗಿನ್ನೂ ಯು.ಕೆ. ಲಾಕ್ ಡೌನ್ ಪ್ರವೇಶಿಸಿರಲಿಲ್ಲ. ಇದಾದ ಆರು ದಿನಗಳ ನಂತರ ನಿಧಾನವಾಗಿ ದೇಶ ಬಾಗಿಲು ಮುಚ್ಚಿತಾದರೂ ಈ ಲೇಖನವನ್ನು ಬರೆವ ವೇಳೆಗೆ ಆ ಸಂಖ್ಯೆ 37460 ವನ್ನೂ ಮೀರಿ ಮುಂದೆ ಸಾಗಿದೆ.

    ಮೊಟ್ಟ ಮೊದಲ ಸೋಂಕು ಜನವರಿ 31 ರಂದೇ ದಾಖಲಾದರೂ ಮಾರ್ಚ್ 23 ರವರೆಗೆ ಲಾಕ್ ಡೌನ್ ಘೋಷಿಸದೆ   ದಟ್ಟವಾಗಿ ಸೋಂಕು ಹರಡುವವರೆಗೆ ಹರ್ಡ್ ಇಮ್ಯೂನಿಟಿಯ ಸಿದ್ದಾಂತ ಎತ್ತಿ ಹಿಡಿದು ಆರ್ಥಿಕ ಹಿತಾಸಕ್ತಿಗಳನ್ನು ಕಾದುಕೊಂಡ ಸರ್ಕಾರದ ನಿಲುವು ಸರಿಯೇ ಎನ್ನುವ ಪ್ರಶ್ನೆಗಳು ಮೂಡಿವೆ. ಅವಘಡದ ಅರಿವಿದ್ದರೂ ಆ ಸಂಖ್ಯೆಯನ್ನು ಸಾಧ್ಯವಾದಷ್ಟು ಬೇಗನೆ ಹದ್ದು ಬಸ್ತಿನಲ್ಲಿಡದೆ ಸೋತ ಸರ್ಕಾರವನ್ನು ವಿರೋಧ ಪಕ್ಷಗಳು ಖಂಡಿಸಿವೆ. ಸ್ವಯಂ ರಕ್ಷಾ ಕವಚಗಳ ( PPE)ಆಮದಿನಲ್ಲಿ ಆದ ಲೋಪ ದೋಶಗಳ ಬಗ್ಗೆ ಸರ್ಕಾರವನ್ನು ಬಗ್ಗು ಬಡಿಯಲಾಗುತ್ತಿದೆ. ಮೊದಲ ಕೇಸು ಪತ್ತೆಯಾದನಂತರದ ನೂರು ದಿನಗಳ ಪುನರಾವಲೋಕನವನ್ನು ನಡೆಸಿದೆ. ಪ್ರಜಾ ಧ್ವನಿ ಮತ್ತು ಮಾಧ್ಯಮಗಳು ಬಲಿಷ್ಠವಾಗಿರುವ ಈ ದೇಶದಲ್ಲಿ ವಹಿವಾಟುಗಳ ನಿಧಾನಗತಿಯ ಮರು ಆರಂಭದ ಮಾತಿನ ಜೊತೆಗೇ ಸರ್ಕಾರದ ಪ್ರತಿ ಹೇಳಿಕೆ ಮತ್ತು ಹೆಜ್ಜೆಗಳ ಅವಲೋಕನ ಶುರುವಾಗಿದೆ.

    ಒಂದು ಲಕ್ಷಕ್ಕೂ ಹೆಚ್ಚಿನ ಸಾವಿನ ಸಂಖ್ಯೆಯನ್ನು ಮೀರಿದ ಅಮೆರಿಕಾ ಈ ಕರೋನ ಪೀಡಿತ ಸಮಯದಲ್ಲಿ ಬಹಳಷ್ಟು ಟೀಕೆಗಳಿಗೆ ತುತ್ತಾಯಿತು. ಅಧ್ಯಕ್ಷ ಡೊನಾಲ್ಡ್  ಟ್ರಂಪ್ “ಎಲ್ಲವೂ ಹದ್ದು ಬಸ್ತಿನಲ್ಲಿದೆ” ಎಂದು ಹೇಳಿದ ಹಿನ್ನೆಲೆಯಲ್ಲೇ ಟೆಸ್ಟಿಂಗ್ ಕಿಟ್ ಗಳು, ವೆಂಟಿಲೇಟರ್ಗಳು, ಪಿ.ಪಿ.ಇ. ಗಳು ದೊರಕದೆ  ತಡಮಾಡಿದ್ದು ಆತಂಕವನ್ನು ಸೃಷ್ಟಸಿತು. ಆತ ಸ್ವತಃ ಹಲವು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ನಗೆಪಾಟಲಾಗಿದ್ದೂ ಉಂಟು. ಆಸ್ಪತ್ರೆಗಳನ್ನು ಪ್ರವೇಶಿಸಿದಾಗ ಅಲ್ಲಿನ ನಿಯಮಗಳನ್ನು ಪಾಲಿಸದ ಆತ ಮತ್ತು ಆತನ ಅನುಯಾಯಿ ಮೈಕ್ ಪೆನ್ಸ್ ಇಂದಿಗೂ ಮಾಧ್ಯಮಗಳ ಟೀಕೆಗೆ ತುತ್ತಾಗಿದ್ದಾರೆ.ಅತ್ಯಂತ ತ್ವರಿತ ಗತಿಯಲ್ಲಿ ಸೋಂಕು ಹರಡಿ ಪ್ರಪಂಚದಲ್ಲಿ ಸಂಭವಿಸಿರುವ 357691 ಕ್ಕೂ ಹೆಚ್ಚಿನ ಸಾವಿನ ಸಂಖ್ಯೆಗೆ ಅಮೆರಿಕಾದ ಕೊಡುಗೆ ಭಾರೀ ಪ್ರಮಾಣದಲ್ಲಿದೆ.

    ಬಂಡವಾಳ ಶಾಹಿ ಮನೋವೃತ್ತಿಯ ಟ್ರಂಪ್ ನ ಆಡಳಿತ ಶುರುವಾಗುವ ಮುಂಚಿನಿಂದಲೂ ಅಮೆರಿಕಾದ ಆರ್ಥಿಕ ಸ್ಥಿತಿ  ಉತ್ತಮವಾಗಿದ್ದು ಅವನ ಕೈ ಹಿಡಿದಿತ್ತು. ಇದೀಗ ಆರ್ಥಿಕ ಮಟ್ಟ ಧಿಡೀರನೆ ಕುಸಿದಿದ್ದು ಜನರ ಹಾಹಾಕಾರ ಮುಗಿಲು ಮುಟ್ಟಿದೆ.  ಚೈನಾದ ಜೊತೆ ಆರ್ಥಿಕ ಯುದ್ದದಲ್ಲಿದ್ದ ಟ್ರಂಪ್ ಈಗ ಚೈನಾದ ಮೇಲೆ ಮತ್ತೂ ಕೆಂಡಕಾರಿ ಪುರಾವೆಗಳಿಲ್ಲದ ಹೇಳಿಕೆ ನೀಡಿ ತನ್ನ ನೆಲವನ್ನು ಭದ್ರವಾಗಿ ಹಿಡಿಯಲು, ವಹಿವಾಟುಗಳನ್ನು ಎಂದಿನಂತೆ ಮುಂದುವರೆಸಲು ತಹ ತಹಿಸುತ್ತಿದ್ದಾನೆ.

    ಇಷ್ಟೆಲ್ಲದರ ನಡುವೆ ಕರೋನ ವೈರಸ್ಸಿನ ಮೂಲತಾಣ ಚೀನಾ ಅತ್ಯಂತ ಕಡಿಮ ಸಾವನ್ನು ವರದಿಮಾಡಿ ಅಮೆರಿಕಾದ ಮತ್ತು ಇಡೀ ಪ್ರಪಂಚದ ಉಗ್ರ ಕಣ್ಣಿಗೆ ತೆರೆದುಕೊಂಡಿದೆ.WHO ಪ್ರಕಾರ ಮೊಟ್ಟ ಮೊದಲ ಸೋಂಕು ಪ್ರಕರಣಗಳು ಚೈನಾದ ವುಹಾನ್ ನಲ್ಲಿ ದಾಖಲಾಗಿದ್ದು 31 ನೇ ಡಿಸೆಂಬರ್ ನಂದು. ಅದಕ್ಕಿಂತಲೂ ಹಿಂದಿನಿಂದಲೇ ಈ ಖಾಯಿಲೆ ಚೈನಾದಲ್ಲಿ ಶುರುವಾಗಿತ್ತು ಎನ್ನುವ ಸಂಶಯ ಎಲ್ಲರನ್ನು ಕಾಡುತ್ತಿರುವಾಗಲೇ ಕಳೆದ ವಾರ ಎಲ್ಲರನ್ನು ಬೆಚ್ಚಿ ಬೀಳಿಸುವ ಹೊಸ ಅಂಶಗಳು ಫ್ರಾನ್ಸ್ ನ ಪ್ಯಾರಿಸ್ ಮತ್ತು ಅಮೆರಿಕಾದ ಕ್ಯಾಲಿಪೋರ್ನಿಯಾಗಳಿಂದ ಭಿತ್ತರವಾಗಿದೆ.

    ಡಿಸಂಬರ್ 27 ನೇ ತಾರೀಖು ಪ್ಯಾರಿಸ್ಸಿನಲ್ಲಿ ಅಮಿರಿಷೆ ಹ್ಯಾಮರ್ ಎಂಬ 43 ವರ್ಷದ ವ್ಯಕ್ತಿ ನ್ಯೂಮೋನಿಯದ ಲಕ್ಷಣ ತೋರಿ ಆಸ್ಪತ್ರೆಗೆ ದಾಖಲಾಗಿ ಗುಣಮುಖನಾಗಿ ಮನೆಗೆ ಹೋಗಿದ್ದ.ಈತನ ಇಬ್ಬರು ಮಕ್ಕಳು ಕೂಡ ಸ್ವಲ್ಪ ಅಸ್ವಸ್ಥರಾಗಿದ್ದರು. ಆಗ ತೆಗೆದಿದ್ದ ಮೂಗಿನ ದ್ರವವನ್ನು ಮತ್ತೆ ಪರೀಕ್ಷಿಸಿದಾಗ ಆತನಿಗೆ ಕೋವಿಡ್ ಇದ್ದದ್ದು ದೃಡಪಟ್ಟಿದೆ. ಇದೇ ರೀತಿ ಕ್ಯಾಲಿಪೋರ್ನಿಯಾದ ಆಸ್ಪತ್ರಯಲ್ಲಿ ಡಿಸೆಂಬರಿನಲ್ಲಿ ಮೃತನಾದವನ ಗಂಟಲು ದ್ರವವನ್ನು ಮರುಪರೀಕ್ಷಿಸಿದಾಗ ಅವನಿಗೂ ಕೋವಿಡ್ ಇದ್ದದ್ದು ಗೊತ್ತಾಗಿದೆ. ಜರ್ಮನಿಯೂ ತಾವು ಕೋವಿಡ್ ಲಕ್ಷಣದ ರೋಗಿಗಳನ್ನು ಡಿಸೆಂಬರಿನಲ್ಲಿ ನೋಡಿದ್ದಾಗಿ ಹೇಳಿದ್ದಾರೆ.

    ಹಾಗಾದಲ್ಲಿ ಚೀನಾದಲ್ಲಿ ಕೇಸುಗಳು ದಾಖಲಾಗುವ ತಿಂಗಳಿಗೂ ಮೊದಲೇ ಯೂರೋಪು ಮತ್ತು ಅಮೆರಿಕಾದಲ್ಲಿ ಈ ಸೋಂಕು ಹರಡುತ್ತಿತ್ತು. ಅಂದರೆ ಚೈನಾದಲ್ಲಿ ನಿಜಕ್ಕೂ ಈ ಖಾಯಿಲೆ ಯಾವಾಗ ಶುರುವಾಯಿತು?ಈ ವಿಚಾರದ ಬಗ್ಗೆ ಸರಿಯಾದ ತನಿಖೆ ನಡೆಸಿಲ್ಲವೆಂಬ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಜನರ ಆಕ್ರೋಷಕ್ಕೆ ತುತ್ತಾಗಿದೆ.

    ಭಾರತದಲ್ಲಿ ಕೂಡ ಜಗತ್ತೇ ಕಣ್ತೆರೆದು ನೋಡಬಲ್ಲಂತ ಹಲವಾರು ತಪ್ಪುಗಳು ನಡೆದಿವೆ.ಸ್ಥಳದಿಂದ ಸ್ಥಳಕ್ಕೆ ಹರಡದಿರಲಿ ಎಂದು ಧಿಡೀರನೆ ಎಲ್ಲ ಸಂಚಾರ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿದ ಸರ್ಕಾರ ಮಿಲಿಯನ್ ಗಟ್ಟಲೆ ಗುತ್ತಿಗೆ ಕೆಲಸಗಾರರನ್ನು, ಕಾರ್ಮಿಕರನ್ನು ಬೀದಿಗೆಸೆದು ನಗ್ನವಾಯಿತು. ನೂರಾರು-ಸಾವಿರಾರು ಮೈಲಿ  ದೂರ ನಡೆದೇ ಹೊರಟ ಶ್ರಮಿಕವರ್ಗದ ಆರ್ತನಾದ ಜಗತ್ತಿನ ಕರುಳನ್ನು ಕಿವಿಚಿತು. ಕಾದು ಕೆಂಡವಾಗಿರುವ  ರಸ್ತೆಗಳಲ್ಲಿ ಯಾವ ಅಂತರವನ್ನೂ ಕಾಯ್ದುಕೊಳ್ಳಲಾಗದೆ ಹೊರಟ ಮಕ್ಕಳು, ಹೆಂಗಸರು, ಗರ್ಭಿಣಿಯರು, ವಯಸ್ಸಾದ ಕೂಲಿ ವಲಸೆಗಾರರು ಭಾರತದ ಕೋವಿಡ್ ಮುಖವಾಗಿ ಹೋಗಿದ್ದಾರೆ. ರಸ್ತೆ ಬದಿಗಳಲ್ಲಿ, ಅಪಘಾತಗಳಲ್ಲಿ, ಬಳಲಿಕೆ, ಖಾಯಿಲೆಗಳಲ್ಲಿ , ಹಸಿವಿನಿಂದ ಮನೆಸೇರುವ ಮೊದಲೇ ಮೃತರಾದವರು ಮತ್ತೊಂದು ರೀತಿಯಲ್ಲಿ ಸಾವಿನ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಬೆಳೆ ಬೆಳೆದು ಅದನ್ನು ಕಾದಿಡಲಾಗದ, ವಿಲೇವಾರಿ ಮಾಡಲಾಗದ ಸ್ಥಿತಿಯಲ್ಲಿರುವ ರೈತರ ಅಳಲು ದಿನನಿತ್ಯದ್ದಾಗಿದ್ದು, ಶ್ರೀಮಂತ-ಬಡವನ ನಡುವಿರುವ  ವ್ಯತ್ಯಾಸ ಕರೋನ ಕಾಲದಲ್ಲಿ ಇನ್ನೂ ಉಲ್ಬಣಿಸಿದೆ.

    ಭಾರತದ ಪ್ರಜೆಗಳ ಸರಾ ಸರಿ ವಯಸ್ಸು 30 ವರ್ಷ, ಪಾಕಿಸ್ತಾನದ್ದು 22, ನೈಜೀರಿಯಾದ್ದು 19 ಆದರೆ ಇಟಲಿಯದ್ದು 47 ವರ್ಷಗಳು.ಈ ಕಾರಣ ಸಾಮಾನ್ಯವಾಗಿ ವಯಸ್ಸಾದವರನ್ನು ಹೆಚ್ಚು ಕೊಲ್ಲುವ ಕರೋನಾ, ನಮ್ಮ ದೇಶದಲ್ಲಿ ಕಡಿಮೆ ಕಂಡುಬಂದಿದೆಯೇ ಎನ್ನುವ ವಿಶ್ಲೇಷಣೆ ನಡೆದಿದೆ.

     UK,USA ಮತ್ತಿತರ ಪಾಶ್ಚಾತ್ಯ ದೇಶಗಳಲ್ಲಿ ಸರಾಸರಿ ವಯಸ್ಸು ಇನ್ನೂ ಹೆಚ್ಚಿರುವ ಕಾರಣ, ಅತಿ ಹೆಚ್ಚು ಟೆಸ್ಟ್ ಗಳನ್ನು ಮಾಡುತ್ತಿರುವ ಮತ್ತು ಪಾರದರ್ಶಕ ವರದಿಗಳ ಕಾರಣ ಸಾವಿನ ಸಂಖ್ಯೆ ಹೆಚ್ಚು ಕೇಳಿ ಬಂದಿದೆಯೇ ಎಂಬ ಸಂವಾದಗಳು ನಡೆಯುತ್ತಿವೆ

    ಜಾಗತೀಕರಣವಾಗಿ ಜಗತ್ತಿನ ಜನರೆಲ್ಲ ದೇಶದಿಂದ ದೇಶಕ್ಕೆ ಓಡಾಡುವುದನ್ನು ಸಾಮಾನ್ಯಮಾಡಿಕೊಂಡ ಈ ಕಾಲದಲ್ಲಿ ಅದೆಷ್ಟು ಬೇಗನೆ ಸೋಂಕೊಂದು ಹರಡಬಲ್ಲದು ಎಂಬ ವಾಸ್ತವ ಜಗತ್ತನ್ನು ಬೆಚ್ಚಿಬೀಳಿಸಿದೆ. ಈ ಕರೋನಾ ಹರಡಿದ ಕತ್ತಲಲ್ಲಿ ತಪ್ಪು ಮಾಡದ ದೇಶಗಳಿಲ್ಲ. ಸಮಸ್ಯೆಯೊಂದರಿಂದ ಹೊರಬರುವ ದಾರಿಯಿಲ್ಲದಿರುವಾಗ ಪ್ರತಿದೇಶ ತಾನು ಮಾಡಿದ ತಪ್ಪುಗಳನ್ನು ತಡವಿನೋಡಿಕೊಳ್ಳುವಂತಾಗಿದೆ.

    ಹಿಂದೆಂದೂ ಕಂಡರಿಯದ ಕರೋನ ಕತ್ತಲಿನಿಂದ ಮುಕ್ತರಾಗಲು ಪ್ರತಿದೇಶಗಳು ಅಳವಡಿಸಿಕೊಂಡ ತಂತ್ರಗಳು ಭಿನ್ನವಾದರೂ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಎಡವಿ ಬಿದ್ದಿದ್ದಾರೆ. ಸಾವಿನ ನೆರಳಿನ್ನೂ ಕರಗದಿರುವಾಗ ಎರಡನೆಯ ಅಲೆಯ ಆತಂಕದಲ್ಲಿಮುಂದಿನ ದಿನಗಳನ್ನು ಎದುರುನೋಡುತ್ತಿದ್ದಾರೆ. ಸರಕಾರಗಳು ತಾವು ಮಾಡುವ ಕೆಲಸವನ್ನು ಮಾಡುತ್ತಿವೆ. ಹಾಗೆ ನಾವು ನಾಗರಿಕರು ಸರಕಾರ ಹೇಳಿದ ಮುನ್ನೆಚ್ಚರಿಕೆಗನ್ನು ಪಾಲಿಸಿ ಬಹು ಬೇಗ ಕತ್ತಲೆಯಿಂದ ಬೆಳಕಿಗೆ ಬರೋಣ.

    .

    error: Content is protected !!