22 C
Karnataka
Tuesday, May 21, 2024

    ಮಾಯಾ ಬಜಾರ್ ಮತ್ತು ನಟ ಇರ್ಫಾನ್

    Must read

    ಪಿ ಕೆ ಚನ್ನಕೃಷ್ಣ

    ಹಿಂದಿಯ ಪರ್ಫೆಕ್ಟ್ ನಟ ಇರ್ಫಾನ್ ಖಾನ್ ತೀರಿಹೋದ ಸುದ್ದಿಯ ಬೇಜಾರಿನಲ್ಲಿ ನಾನು ಯಾರಲ್ಲೂ ಹೆಚ್ಚು ಮಾತನಾಡದೆ ರೂಮಿನಲ್ಲಿಯೇ ಮುದುರಿಕೊಂಡಿದ್ದೆ. ಅವಳು, ದೊಡ್ಮಗಳು ಲಹರಿ ಹಾಗೂ ಹೆಂಡತಿ ಜತೆ ಕೂತು ಇದೇ ಇರ್ಫಾನ್ ನಟಿಸಿದ್ದ ಪೀಕು, ಲಂಚ್ ಬಾಕ್ಸ್ ಮತ್ತು ಕಾರವಾನ್ ಚಿತ್ರಗಳನ್ನು ನೋಡಿದ್ದೆ. ಈ ಪೈಕಿ ಪೀಕು ಮತ್ತು ಕಾರವಾನ್ ಗಳನ್ನು ಎರಡು ಸಲ ನೋಡಿದ್ದೆ. ಈ ಚಿತ್ರಗಳೆರಡರಲ್ಲಿ ಇರ್ಫಾನ್ ಪಾತ್ರಗಳು ಒಂದೆ ತೆರನಾಗಿದ್ದರೂ ತನ್ನ ಅಮೋಘ ನಟನೆಯಿಂದ ಅವೆರಡಕ್ಕೂವಿಭಿನ್ನವಾಗಿ ಪ್ರಾಣವಾಯು ತುಂಬಿದ್ದರು.

    ಇಂಥ ಇರ್ಫಾನ್ ಸೀರಿಯಸ್ ಪ್ರೇಕ್ಷಕರಿಗೆ ಮಾತ್ರವಲ್ಲ ಮಕ್ಕಳಿಗೂ, ಹಿರಿಯರಿಗೂ ಸಿನಿಮಾವನ್ನು ಸಶಕ್ತವಾಗಿ ದಾಟಿಸಬಲ್ಲ ನಟ. ಅವರಲ್ಲಿ ತನ್ನದೊಂದು ಗುಡಿ ಕಟ್ಟಿಕೊಂಡು ತನ್ನ ಕಣ್ಣೋಟದಲ್ಲಿಯೇ ಅಗಾಧ ಆಳದ ಭಾವ ಪ್ರಪಂಚದತ್ತ ಅವರನ್ನುಕರೆದೊಯ್ಯಬಲ್ಲ ನಟಶಿಖರ ಅವರು.

    ಹಾಗಾದರೆ ಇಂಥ ಇರ್ಫಾನ್ ಗೂ ಮಾಯಾ ಬಜಾರ್ ಚಿತ್ರಕ್ಕೇನೂ ಸಂಬಂಧ ಅಂತೀರಾ? ಇರಲಿ.

    ಈಗ ಮಾಯಾ ಬಜಾರ್ ಬಗ್ಗೆ ಕೊಂಚ ಹೇಳುತ್ತೇನೆ. ಮಗಳು ಈ ಸಿನಿಮಾವನ್ನು ನೋಡೋಣ್ವ ಡ್ಯಾಡ್ ಎಂದಾಗ ನನಗೆ ಮನಸ್ಸಾಗಲಿಲ್ಲ. ಕೊನೆಗೆ ನನ್ನ ಬೇಸರವನ್ನು ಅವಳ ಮೇಲೇಕೆ ಹೇರಲಿ ಅಂದುಕೊಂಡು ಪ್ಲೇ ಮಾಡು ಮಗಳೇ ಎಂದೆ. ಮಗುವೋ ದೊಡ್ಡ ಸಂಭ್ರಮವೇ ಧಕ್ಕಿದಂತೆ ಅಮೆಜಾನ್ ಫ್ರೈಮಿನಲ್ಲಿದ್ದ ಆ ಸಿನಿಮಾವನ್ನು ಹಾಕಿದಳು. ಆಗ್ಗೆ ಅವಳೇ ಹನ್ನೊಂದು ಸಲ ನೋಡಿದ್ದಳು. ನಾನು ಕೂಡ ಹಲವಾರು ಸಲ ವೀಕ್ಷಿಸಿದ್ದೆ. ಅಷ್ಟು ಸಲ ನೋಡಿದರೂ ಮತ್ಯಾಕೆ ನೋಡುವುದು ಎಂದು ಅನಿಸಿದ್ದೇ ಇಲ್ಲ. ಚಿತ್ರ ನೋಡುತ್ತಾ ಹೋದಂತೆಲ್ಲ ಮೊದಲ ಬಾರಿಗೆ ನೋಡುತ್ತಿದ್ದೇನೆ ಎನಿಸುತ್ತಿತ್ತು. ಅದರಲ್ಲೂ ಲಕ್ಷ್ಮಣ ಕುಮಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರೇಲಂಗಿ ಅವರ ಮ್ಯಾನರಿಜಂ ಹೊಟ್ಟೆ ಉಬ್ಬುವಷ್ಟು ನಗುವಂತೆ ಮಾಡುತ್ತದೆ.

    1957ರಲ್ಲಿ ಬಿಡುಗಡೆಯಾಗಿ ಇಡೀ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರಲ್ಲಿ ಹೊಸ ಜೋಶ್ ಹುಟ್ಟುಹಾಕಿದ್ದ ಬ್ಲ್ಯಾಕ್ ಅಂಡ್ ವೈಟ್ ವರ್ಣದ ಚಿತ್ರವಿದು. ಕೃಷ್ಣನ ಪಾತ್ರದಲ್ಲಿ ಎನ್.ಟಿ. ರಾಮಾರಾವು, ಅಭಿಮನ್ಯು ಪಾತ್ರದಲ್ಲಿ ಅಕ್ಕಿನೇನಿ ನಾಗೇಶ್ವರ ರಾವು, ಶಶಿರೇಖ ಪಾತ್ರದಲ್ಲಿ ಆ ಕಾಲದ ಸ್ಟಾರ್ ನಟಿ, ಸಹಜ ನಟಿ ಸಾವಿತ್ರಿ ಹಾಗೂ ಘಟೋತ್ಕಚನಾಗಿ ಎಸ್.ವಿ. ರಂಗಾರಾವು ನಟಿಸಿದ್ದರು. ನಮ್ಮ ಬಾಗೇಪಲ್ಲಿಯಿಂದ ಆಂಧ್ರಪ್ರದೇಶಕ್ಕೆ ಹೊರಟರೆ ಸಿಗುವ ಶ್ರೀ ಕದಿರಿ ನರಸಿಂಹಸ್ವಾಮಿ ಕ್ಷೇತ್ರದ ಕದಿರಿ ಪಟ್ಟಣದ ಕೆ.ವಿ.ರೆಡ್ಡಿ ಅವರು ಈ ಚಿತ್ರವನ್ನು ಡೈರೆಕ್ಟ್ ಮಾಡಿದ್ದರು.

    ಇಂಥ ಮಾಯಾ ಬಜಾರ್ ನಮ್ಮ ತಾಯಿಗೂ ಬಲು ಇಷ್ಟದ ಸಿನಿಮಾವಾಗಿತ್ತು. ಆಕೆಯ ಜೀವಿತಾವಧಿ ತೀರುವುದರೊಳಗೆ ಟೀವಿ ಬರಲಿಲ್ಲ. ನಾನು ಮೂರೋ ಅಥವಾ ನಾಲ್ಕರಲ್ಲಿ ಓದುತ್ತಿದ್ದಾಗಲೇ ಅವರು ಹೋಗಿಬಿಟ್ಟಿದ್ದರು. ಇನ್ನು ಸಿನಿಮಾ ಎಂದರೆ ಆಯಮ್ಮನಿಗೆ ಪಂಚಪ್ರಾಣ.

    ನಮ್ಮೂರು ಪಕ್ಕದ ಬೀಚಗಾನಹಳ್ಳಿಯಲ್ಲಿದ್ದ ಶ್ರೀ ವೆಂಕಟೇಶ್ವರ ಚಿತ್ರಮಂದಿರಕ್ಕೆ ನಮ್ಮ ತಂದೆ ಹಾಗೂ ಆಕೆಯ ತಮ್ಮಂದರಿಬ್ಬರ ಜತೆ ಲೆಕ್ಕವಿಲ್ಲದಷ್ಟು ಸಲ ಹೋಗಿ ಸಿವಿಮಾ ನೋಡುತ್ತಿದ್ದರು. ಆ ಟೆಂಟಿಗೆ ಹೊಸ ಸಿನಿಮಾ ಬಂದರೆ ನಮ್ಮೂರಿನಲ್ಲಿ ಒಂದು ಪೋಸ್ಟರ್ ಪ್ರತ್ಯಕ್ಷವಾಗಿಬಿಡುತ್ತಿತ್ತು. ರೋಡಿನ ಪಕ್ಕದ ಯಾರಾದರೂ ಮನೆಯ ಗೋಡೆಯ ಮೇಲೆ ಪೋಸ್ಚರು ಬಿದ್ದಿದ್ದೇ ತಡ ನಮ್ಮ ಮನೆಯಲ್ಲಿ ಟೆಂಟಿಗೆ ಎತ್ತಿನ ಗಾಡಿ ಸಿದ್ಧವಾಗಿಬಿಡುತ್ತಿತ್ತು. ನಮ್ಮ ಊರಿಗೆ ಎರಡೇ ಫರ್ಲಾಂಗು ದೂರದಲ್ಲಿದ್ದ ಅಜ್ಜಿ ಮನೆಯಿಂದ ದೊಡ್ಡ ಮಾವ, ಚಿಕ್ಕ ಮಾವ ಬಂದುಬಿಡುತ್ತಿದ್ದರು. ಹಾಗೆ ಆ ಟೆಂಟಿನಲ್ಲಿ ಅಮ್ಮ ಮಾಯಾ ಬಜಾರ್ ಚಿತ್ರವನ್ನು ನೋಡಿದ್ದರು. ಆವತ್ತು ಜತೆಯಲ್ಲಿ ಚಿಕ್ಕ ಮಾವ, ದೊಡ್ಡಮ್ಮ, ಅಪ್ಪ ಇದ್ದರು ಅಂತ ನನ್ನ ದೊಡ್ಡ ಮಾವ ಇವತ್ತಿಗೂ ನನಗೆ ಹೇಳುತ್ತಾರೆ. ಜತೆಗೆ ಇನ್ನೊಂದು ಬಾರಿ ಅಜ್ಜಿ ಜತೆ ಅಮ್ಮ ಈ ಸಿನಿಮಾ ನೋಡಿದ್ದರಂತೆ.

    ನಾನು ಅಮ್ಮನ ಹೊಟ್ಟೆಗೆ ಬಿದ್ದ ಮೇಲೆಯೂ ನಮ್ಮ ಮನೆಯಲ್ಲಿ ಎತ್ತಿನ ಗಾಡಿಯ ಟೆಂಟ್ ಸವಾರಿ ನಿಲ್ಲಲೇ ಇಲ್ಲ ಅಂತ ಅಪ್ಪ ಹೇಳುತ್ತಲೇ ಇರುತ್ತಾರೆ. ನಾನು ಹುಟ್ಟುವ ವಾರಕ್ಕೆ ಮೊದಲು ಅಮ್ಮಅಪ್ಪನಲ್ಲಿ ಒಂದು ಆಸೆ ತೋಡಿಕೊಂಡಿದ್ದರು. ಆಗಲೂ ಅಮ್ಮ ಟೆಂಟ್ನಲ್ಲಿ ಪಿಚ್ಚರ್ ನೋಡಬೇಕು ಎಂದು ಹೇಳಿದ್ದರಂತೆ. ಅಮ್ಮನ ಮಾತಿಗೆ ಅಪ್ಪ ಇಲ್ಲವೆಂದು ಹೇಳುವಂತೆಯೇ ಇಲ್ಲ. ಕರೆದುಕೊಂಡು ಹೋಗಿ ಅದೇ ಎನ್.ಟಿ.ಆರ್ ಅವರು ಕೃಷ್ಣನಾಗಿ ನಟಿಸಿದ್ದ ಶ್ರೀಕಷ್ಣ ಪಾಂಡವೀಯಂ ಸಿನಿಮಾವನ್ನು ತೋರಿಸಿದ್ದರು. ಆಮೇಲೆ ನಾನು ಹುಟ್ಟಿದ ಮೂರು ತಿಂಗಳಿಗೆ ಮತ್ತೆ ಬೀಚಗಾನಹಳ್ಳಿ ಟೆಂಟಿಗೆ ಅಮ್ಮನ ಸವಾರಿ ನಡೆದಿತ್ತು. ಆದರೆ ಆ ಸಮಯದಲ್ಲಿ ಅಜ್ಜಿ, ಅಮ್ಮನಿಗೆ ಬೈಯ್ದು ಹೀಗೆ ಬಾಣಂತನ ಬಿಟ್ಟು ಹೊರಗೆ ಹೋಗಬಾರದು ಎಂದು ಜೋರು ಮಾಡಿದ್ದರಂತೆ. ಆದರೆ ಅಪ್ಪನಿಗೆ ಅಮ್ಮನ ಆಸೆ ಈಡೇರಿಸದೇ ಇರಲಾಗುತ್ತಿರಲಿಲ್ಲ. ಕೊನೆಗೆ ಅಮ್ಮ ತೀರಿಕೊಂಡಾಗ ಗೋಪಮ್ಮಊರಾಚೆ ಚೆನ್ನಪ್ಪನ ಬಾವಿ ಹಳ್ಳವನ್ನು ದಾಟಿಕೊಂಡು ಬೀಚಗಾನಹಳ್ಳಿ ಟೆಂಟಿಗೆ ಬಾಣಂತನದಲ್ಲೇ ಸಿನೆಮಾ ನೋಡಲು ಹೋಗಿದ್ದರು. ಅದಕ್ಕೆ ಯಾವುದೋ ಗಾಳಿ ತಗುಲಿ ದೃಷ್ಟಿ ಜಾಸ್ತಿಯಾಗಿ ಸತ್ತು ಹೋದರು ಎಂದು ನಮ್ಮೂರಿನ ಅವರಿವರು ಮಾತಾಡಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ. ಹೀಗೆ ನನ್ನ ತಾಯಿ ಸಾವಿಗೆ ಒಂದು ಕಾರಣವನ್ನು ಕೊಟ್ಟಿದ್ದರು ಊರಿನ ಜನ. ಅದೆಷ್ಟೋ ವರ್ಷ ಕಳೆದ ಮೇಲೆ ನನ್ನ ತಂಗಿ ಹುಟ್ಟಿದ ನಂತರ ಮಾಡಿಸಿಕೊಡ ಗರ್ಭನಿವಾರಕ ಶಸ್ತ್ರಚಿಕಿತ್ಸೆ ಸಮಸ್ಯೆಯಾಗಿ ಬೆಂಗಳೂರಿನ ವಿಕ್ಟ್ರೋರಿಯಾ ಆಸ್ಪತ್ರೆಯಲ್ಲಿ ಅಮ್ಮ ಇಹಲೋಕ ಬಿಟ್ಟರು ಎಂದು ಅಪ್ಪ ಹೇಳಿದ್ದರು.

    ಹೀಗೆ ನಮ್ಮ ಮನೆಯಲ್ಲಿದ್ದ ಸಿನಿಮಾ ಪ್ರೀತಿ ನನ್ನ ತಲೆಮಾರು ಬಂದರೂ ಮುಂದುವರಿದಿತ್ತು. ಅಮ್ಮ ಅನಕ್ಷರಸ್ಥೆಯಾಗಿದ್ದರು. ತೆಲುಗು ಬಿಟ್ಟರೆ ಜಗತ್ತಿನಲ್ಲಿ ಬೇರೆ ಭಾಷೆಗಳಿವೆ ಅಂತ ಗೊತ್ತಿರಲ್ಲ ಆ ತಾಯಿಗೆ. ಕನ್ನಡ ಅಂತ ಒಂದು ಭಾಷೆ ಇದೆ ಎಂದು ಅಮ್ಮನಿಗೆ ಗೊತ್ತಾಗಿದ್ದು ಪರಮ ತುಂಟನಾದ ನನ್ನನ್ನು ಸ್ಕೂಲಿಗೆ ಸಾಗಿ ಹಾಕಿದಾಗಲೇ.

    ನಮ್ಮ ಮನೆಯಲ್ಲಿ ಮೂರು ತಲೆಮಾರು ಕಾಲ ತೆಲುಗಿನ ಮಾಯಾ ಬಜಾರ್ ಸಿನಿಮಾ ಅವಿಚ್ಛಿನ್ನವಾಗಿದೆ. ಅಮ್ಮ, ಆ ನಂತರ ನಾನು, ಈಗ ಮಗಳು ಮಾಯಾ ಬಜಾರಿಗೆ ಮಾರು ಹೋಗಿದ್ದೇವೆ. ಕೃಷ್ಣ ವೇಷದ ಎನ್ಟಿಆರ್ ತೆರೆಯ ಮೇಲೆ ಬಂದರೆ ಐಯ್ ಎಂದು ಕಣ್ ಬಿಡುವ ಅವಳು ಘಟೋತ್ಕಚನ ಮಾಯಾಜಾಲವನ್ನು ಕಂಡುಜೋರಾಗಿ ಚಪ್ಪಾಳೆ ಹೊಡೆಯುತ್ತಾಳೆ. ಅಕ್ಕಿನೇನಿ-ಸಾವಿತ್ರಿ (ಅಭಿಮನ್ಯು-ಶಶಿರೇಖ) ಪ್ರಣಯವನ್ನು ನೋಡುತ್ತಾ ನನ್ನನ್ನೂ ಅವಳಮ್ಮನನ್ನು ದಿಟ್ಟಿಸುತ್ತಾಳೆ. 2 ಗಂಟೆ 55 ನಿಮಿಷದ ಸುದೀರ್ಘ ಸಿನಿಮಾವನ್ನು ಎವೆ ಇಕ್ಕದೆ ಸಿಂಗಲ್ ಬ್ರೇಕ್ ಇಲ್ಲ ನೋಡಿ ಮುಗಿಸಿದ್ದಾಳೆ. ಇವತ್ತು ಕೂಡ. ಒಂದು ಸಿನಿಮಾ ಹೀಗೆ ತಲೆಮಾರುಗಳನ್ನು ದಾಟಿಕೊಂಡು ಉಳಿಯುವುದು ಸಣ್ಣ ಮಾತೇನೂ ಅಲ್ಲ.

    ಹೀಗೆ ಇರ್ಫಾನ್ ಕೂಡ. ಮಾಯಾ ಬಜಾರ್ ಚಿತ್ರದ ಪಾತ್ರಗಳಂತೆ ಕಣ್ಣೋಟದಲ್ಲೇ ಅಗಾಧವಾಗಿ ಪ್ರೇಕ್ಷಕರನ್ನು ಹಿಡಿಟ್ಟುಬಿಡುವ ಶಕ್ತಿ ಅವರಿಗೆ ಸಿದ್ಧಿಸಿತ್ತು. ತಲೆಮಾರುಗಳ ಕಾಲ ಅಚ್ಚಳಿಯದ ಆತನ ಭಾವಪೂರ್ಣ ನಟನೆಗೆ ಕೊನೆಯಾಗಲಿ ಮೊದಲಾಗಲಿ ಇಲ್ಲ. ಅದೊಂದು ನಿರಂತರ ಝರಿ. ಇರ್ಫಾನ್ ನಟನೆ ಬಹುಭಾವನೆಗಳ ಅನಾವರಣಕ್ಕೊಂದು ಮಾದರಿ. ಸ್ಟಡಿ ಮಾಡಲು ಒಂದು ಆಕರ. ಲಂಚ್ ಬಾಕ್ಸ್, ಪೀಕು, ಕಾರಾವಾನ್ ಸೇರಿ ನಾನು ಇರ್ಫಾನ್ ಚಿತ್ರಗಳೆಲ್ಲವೂ ನಾನಿರುವ ತನಕ ಬದುಕಿರುತ್ತವೆ. ಹಾಗೆಯೇ ನನ್ನ ಮಕ್ಕಳು ಹಾಗೂ ಅವರ ಮಕ್ಕಳ ನಂತರವೂ…ಹಾಗೆಯೇ ಆಗಲಿ ಎಂದು ಹೇಳುತ್ತಾ, ಇರ್ಫಾನ್ ಗೆ ಅಕ್ಷರ ವಿದಾಯ ಕೋರುತ್ತಾ…

    ಉಳಿದಂತೆ…

    ಇರ್ಫಾನ್ ಹೋಗಿಬನ್ನಿ, ನಿಮ್ಮ ಕಂಗಳು, ಅವು ವ್ಯಕ್ತಪಡಿಸುವ ಭಾವನೆಗಳು, ಆ ಭಾವನೆಗಳ ಪ್ರಾಮಾಣಿಕತೆ ಮತ್ತು ನಿಮ್ಮ ಅಭಿನಯ… ಇವು ನಮ್ಮೊಂದಿಗೇ ಇರುತ್ತವೆ.

    ಐದು ವರುಷಗಳ ಹಿಂದೆ ಸಮಾರಂಭವೊಂದರಲ್ಲಿ ಇರ್ಫಾನ್ ವಾಚಿಸಿದ ಕವನ

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!