22.7 C
Karnataka
Monday, May 20, 2024

    ಮರುಕಳಿಸುವುದೇ ಫುಡ್ ಸ್ಟ್ರೀಟ್‌ನ ಗತ ವೈಭವ?

    Must read

    ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ ಅಥವಾ ವಿ.ವಿ ಪುರಂ ಅಂದ್ರೆ ತಕ್ಷಣ ನೆನಪಾಗುವುದೇ ಫುಡ್ ಸ್ಟ್ರೀಟ್. ಈ ಹೈಫೈ ಉದ್ಯಾನ ನಗರಿಯಲ್ಲೂ ಹಳೆಯ ಬೆಂಗಳೂರನ್ನು ನೆನಪಿಸುವ ಅತ್ಯಂತ ಕಿರಿದಾದ ರಸ್ತೆಯಲ್ಲಿ ಸಂಜೆಯಾಗುತ್ತಿದ್ದಂತೆ ತೆರೆದುಕೊಳ್ಳುವ ಈ ಪುಟ್ಟ ಆಹಾರ ಲೋಕ ಬೆಂಗಳೂರಿಗರ ಆಹಾರ ರುಚಿಯನ್ನು ಪರಿಚಯಿಸುತ್ತದೆ. ಲಕ್ಷಗಟ್ಟಲೆ ವೇತನ ಪಡೆಯುವ ಐಟಿ ಉದ್ಯೋಗಿಗಳು, ಬಿಸ್ನೆಸ್‌ಮನ್‌ಗಳು, ಕಾರ್ಪೊರೇಟ್ ಉದ್ಯೋಗಿಗಳು, ಸದಾ ಕಾರಿನಲ್ಲೇ ತಿರುಗುತ್ತ ಕಾರಿನಿಂದ ಕೆಳಗಿಳಿಯಲೂ ಒಲ್ಲೆಯೆನ್ನುವವರು, ಕಾಲೇಜು ವಿದ್ಯಾರ್ಥಿಗಳು ಈ ಇಕ್ಕಟ್ಟಾದ ಫುಡ್ ಸ್ಟ್ರೀಟ್‌ನಲ್ಲಿ ಮಾತ್ರ ತಮ್ಮ ಅಂತಸ್ತು, ಗತ್ತು, ಗೈರತ್ತುಗಳನ್ನು ಮರೆತು ಎಲ್ಲರಲ್ಲೂ ಒಂದಾಗಿ ರುಚಿ ರುಚಿಯಾದ ತಿಂಡಿ ಸವಿದು ಸಂತೃಪ್ತರಾಗುತ್ತಾರೆ. ಅದುವೇ ಈ ಆಹಾರ ತಾಣದ ವಿಶೇಷ.

    ಅತ್ಯಂತ ಕಡಿಮೆ ಬೆಲೆಗೆ ಸುಮಾರು ಇನ್ನೂರಕ್ಕಿಂತಲೂ ಅಧಿಕ ತಿಂಡಿ ತಿನಿಸುಗಳು ಸಿಗುವ ಫುಡ್ ಸ್ಟ್ರೀಟ್ ಬೆಂಗಳೂರಿಗರಿಗೆ ಅತ್ಯಂತ ಮೆಚ್ಚಿನ ಆಹಾರ ತಾಣ. ಸ್ಥಳದಲ್ಲೇ ಬಿಸಿ ಬಿಸಿಯಾಗಿ ಮಾಡಿ ಕೊಡುವ ಮಸಾಲೆ ದೋಸೆ, ಬೆಣ್ಣೆ ದೋಸೆ, ತಟ್ಟೆ ಇಡ್ಲಿ, ಪಡ್ಡು ಚಟ್ನಿಯ ರುಚಿ, ಚಿತ್ರಾನ್ನ, ಲೆಮನ್ ರೈಸ್, ಆಗಷ್ಟೆ ಕರಿದು ತೆಗೆದ ಬಿಸಿ ಜಿಲೇಬಿ, ಗಾಜಿನ ಬಾಟಲಿಯೊಳಗಿರುವ ಕಜ್ಜಾಯ, ಕೊಬ್ಬರಿ ಮಿಠಾಯಿ, ರವೆ ಉಂಡೆ, ಫ್ರೆಶ್ ಹೋಳಿಗೆ, ಚಿರೋಟಿ ಹಾಲು, ಬಿಸಿ ಎಣ್ಣೆಯಲ್ಲಿ ಬೆಂದು ಅರಳುವ ಬಗೆ ಬಗೆಯ ಬಜ್ಜಿ, ಬೋಂಡಾ, ಮಸಾಲೆ ವಡೆ, ಮಿರ್ಚಿ, ಚಾಟ್ಸ್ ಪ್ರಿಯರಿಗೆ ಭೇಲ್‌ಪುರಿ, ಮಸಾಲ ಪೂರಿ, ದಹಿ ಪೂರಿ, ಕಟೋರಿ ಚಾಟ್, ವಡಾ ಪಾವ್, ಪಾವ್ ಭಾಜಿ, ಮಂಚೂರಿಯನ್, ಕಾರ್ನ್ ಮಸಾಲ, ರಸಗುಲ್ಲಾ, ತಣ್ಣನೆಯ ಕೆನೆಭರಿತ ಬಾದಾಮ್ ಮಿಲ್ಕ್, ಗುಲಾಬ್ ಜಾಮೂನ್, ಫ್ರೂಟ್ ಸಲಾಡ್ ವಿದ್ ಐಸ್‌ಕ್ರೀಮ್, ಫ್ರೂಟ್ ಸಲಾಡ್ ವಿದ್ ಗುಲ್ಕನ್, ಚುರುಮುರಿ, ನಿಪ್ಪಟ್ಟು ಮಸಾಲ, ಆಲೂ ಟ್ವಿಸ್ಟರ್, ವಾಸವಿ ಸ್ವೀಟ್ಸ್‌ನ ಅವರೆಕಾಯಿ ಮಿಕ್ಸ್‌ಚರ್, ಸಿಹಿ ತಿಂಡಿ, ವಿ.ಬಿ ಬೇಕರಿಯ ಕಾಂಗ್ರೆಸ್ ಬನ್, ಹನಿ ಕೇಕ್ ಇತ್ಯಾದಿಗಳು ಎಂದಿಗೂ ಮರೆಯಲಾಗದ ರುಚಿಗಳು.

    ಬೆಂಗಳೂರಿಗೆ ಬಂದವರು ಭೇಟಿ ನೀಡಲೇ ಬೇಕಾದ ಫುಡ್ ಸ್ಟ್ರೀಟ್‌ಗಳಲ್ಲಿ ಒಂದಾಗಿರುವ ಸಜ್ಜನ್ ರಾವ್ ಸರ್ಕಲ್‌ನ ಫುಡ್ ಸ್ಟ್ರೀಟ್‌ನಲ್ಲಿ ಸದ್ಯಕ್ಕೆ ತಿನಿಸುಗಳ ಘಮ ಬರುತ್ತಿಲ್ಲ. ಸತತ ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ಮುಚ್ಚಿ ಹೋಗಿದ್ದ ಈ ಫುಡ್ ಸ್ಟ್ರೀಟ್‌ನಲ್ಲಿ ಕೆಲವು ಗೂಡಂಗಡಿಗಳು ಆರಂಭಗೊಂಡಿದ್ದರೂ ಈ ಆಹಾರ ಬೀದಿ ಮೊದಲಿನ ಗತ ವೈಭವಕ್ಕೆ ಮರುಳುವುದೇ ಎಂಬುದು ಆಹಾರ ಪ್ರಿಯರ ಪ್ರಶ್ನೆಯಾಗಿದೆ. ಈಗಿನ ಲಾಕ್‌ಡೌನ್ ತೆರವಾದರೂ ಕೊರೊನಾ ವೈರಸ್ ಹರಡುವ ಭೀತಿ ನಿಂತಿಲ್ಲದ ಕಾರಣ ಈ ಫುಡ್ ಸ್ಟ್ರೀಟ್ ಸದ್ಯಕ್ಕೆ ನೀರವವಾಗಿದೆ.

    ಅಂಗಡಿಗಳು ಆರಂಭವಾದರೂ ಜನರು ಈ ಮೊದಲಿನಂತೆ ಗುಂಪುಗೂಡುವುದು ಸಾಧ್ಯವಿಲ್ಲ ಮತ್ತು ಈಗಾಗಲೇ ಅತ್ಯಂತ ಇಕ್ಕಟ್ಟಾಗಿರುವ ಈ ತಾಣದಲ್ಲಿ ಸುರಕ್ಷಿತ ಅಂತರ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವುದು ಆಗದ ಮಾತು. ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ ಜನರು ಹೊರಗಡೆಯ ಆಹಾರ ಸೇವಿಸಲು ಕೂಡಾ ಹಿಂದೇಟು ಹಾಕುತ್ತಿರುವುದರಿಂದ ಫುಡ್ ಸ್ಟ್ರೀಟ್ ತನ್ನ ಆಕರ್ಷಣೆ ಕಳೆದುಕೊಳ್ಳುವ ಸಾಧ್ಯತೆಯೆ ಹೆಚ್ಚು. ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಅಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳೂ ನಷ್ಟದಲ್ಲಿದ್ದು, ಸದ್ಯಕ್ಕೆ ಯಾರು ಕೂಡ ಮತ್ತೆ ತಮ್ಮ ಅಂಗಡಿಗಳನ್ನು ಆರಂಭಿಸುವ ಸ್ಥಿತಿಯಲ್ಲಿಲ್ಲ ಎಂದು ಸ್ಥಳೀಯ ಜನರು ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಅನೇಕ ಐಷಾರಾಮಿ ಆಹಾರ ತಾಣಗಳಿದ್ದರೂ ಸಜ್ಜನ್ ರಾವ್ ಸರ್ಕಲ್‌ನಲ್ಲಿರುವ ಫುಡ್ ಸ್ಟ್ರೀಟ್‌ನಲ್ಲಿ ನಿಂತುಕೊಂಡು ತಿನ್ನುವ ಖುಷಿಯನ್ನು ಬೇರೆ ಯಾವುದೂ ಕೊಡಲಾರದು. ಅದಕ್ಕೆ ಈ ತಾಣದಲ್ಲಿ ಅನೇಕ ರೆಸ್ಟೋರೆಂಟ್‌ಗಳಿರುವ ಚರ್ಚ್ ಸ್ಟ್ರೀಟ್‌ಗಿಂತಲೂ ಹೆಚ್ಚಿನ ಜನ ಸೇರುತ್ತಾರೆ. ನಿಲ್ಲಲು ಜಾಗವಿಲ್ಲದಿದ್ದರೆ ಕಾರಿನೊಳಗೆ ಕುಳಿತುಕೊಂಡೇ ತಿಂಡಿ ತರಿಸಿಕೊಂಡು ತಿನ್ನುವವರೂ ಇದ್ದಾರೆ. ಕೆಲವು ಸೆಲೆಬ್ರಿಟಿಗಳು ಇಲ್ಲಿಗೆ ಬಂದರೂ ಜನರು ತಮ್ಮನ್ನು ಗುರುತಿಸುತ್ತಾರೆ ಎಂದು ಹಾಗೂ ಕೆಲವರು ಇಂಥ ಚಿಕ್ಕ ತಾಣಕ್ಕೆ ಭೇಟಿ ಕೊಟ್ಟಿದ್ದು ಗೊತ್ತಾದರೆ ತಮ್ಮ ಪ್ರತಿಷ್ಠೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಐಷಾರಾಮಿ ಕಾರಿನೊಳಗೆ ಕುಳಿತುಕೊಂಡೇ ಇಲ್ಲಿನ ತಿಂಡಿಗಳನ್ನು ಸವಿದು ಹೋಗುವುದಿದೆ. ಆದರೆ ಈಗ ಈ ಫುಡ್ ಸ್ಟ್ರೀಟ್‌ನ ಆ ಹಳೆಯ ಖದರು ಮತ್ತೆ ಮರಳುವ ಸಾಧ್ಯತೆ ದೂರವಾಗಿದೆ ಎಂದು ಈ ಕಡೆ ಸುಮಾರು ಇಪ್ಪತ್ತು ವರ್ಷಗಳಿಂದ ಭೇಟಿ ನೀಡುತ್ತಿದ್ದ ಗ್ರಾಹಕ ಚಿನ್ನಸ್ವಾಮಿ ಹೇಳಿದ್ದಾರೆ.

    ಒಂದೊಮ್ಮೆ ಈಗಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದರೂ ಸರ್ಕಾರದ ಕಠಿಣ ಮಾರ್ಗಸೂಚಿಗಳು ಮುಂದುವರಿಯಲಿವೆ. ರಸ್ತೆ ಬದಿಯಲ್ಲೇ ತಿಂಡಿಗಳನ್ನು ಮಾಡುವಾಗ ಈ ಮಾರ್ಗಸೂಚಿಗಳು ಉಲ್ಲಂಘನೆಯಾಗುವ ಸಾಧ್ಯತೆಯೆ ಹೆಚ್ಚು. ಈ ಹಿಂದೆಯೇ ಜನರ ಗುಂಪಿನಿಂದಾಗಿ ಈ ಪ್ರದೇಶಲ್ಲಿ ಸಂಜೆಯ ವೇಳೆ ಜನಜಂಗುಳಿ ಹೆಚ್ಚಾಗಿ ಜಾತ್ರೆಯಂಥ ವಾತಾವರಣ ಸೃಷ್ಟಿಯಾಗುತ್ತಿತ್ತು. ಇನ್ನು ಸುರಕ್ಷಿತ ಅಂತರ ಕಾಯ್ದುಕೊಂಡು ತಿಂಡಿ ತಿನ್ನಬೇಕಾದರೆ ಕೆ.ಆರ್ ಮಾರ್ಕೆಟ್ ಮತ್ತು ಲಾಲ್‌ಬಾಗ್‌ನಿಂದಲೇ ಜನರು ಫುಡ್ ಸ್ಟ್ರೀಟ್‌ಗೆ ಕ್ಯೂ ನಿಲ್ಲಬೇಕಾದೀತು ಎಂದು ಐಟಿ ಉದ್ಯೋಗಿ ಶಾಂತಿಲಾಲ್ ಹೇಳಿದ್ದಾರೆ.

    ನಾನು ಈಗಾಗಲೇ ಫುಡ್ ಸ್ಟ್ರೀಟ್‌ನ ಫ್ರೂಟ್ ಸಲಾಡ್ ವಿದ್ ಗುಲ್ಕನ್ ಮತ್ತು ಕ್ಯಾಪ್ಸಿಕಂ ಬಜ್ಜಿ ಮಸಾಲವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಫುಡ್ ಸ್ಟ್ರೀಟ್ ಯಾವಾಗ ಓಪನ್ ಆಗುತ್ತದೊ ಎಂದು ಕಾಯುತ್ತಿದ್ದೇನೆ ಎಂದು ಕಾಲೇಜು ವಿದ್ಯಾರ್ಥಿ ಸುನಿಲ್ ಹೇಳಿದ್ದಾರೆ.

    ವಿ.ವಿ ಪುರಂ ಫುಡ್ ಸ್ಟ್ರೀಟ್ ಬೆಂಗಳೂರಿಗೆ ಒಂದು ಅಪೂರ್ವವಾದ ದೃಶ್ಯಕಾವ್ಯವನ್ನೂ ಕಟ್ಟಿಕೊಡುತ್ತದೆ. ಸಂಜೆಯಾಗುತ್ತಿದ್ದಂತೆ ಗರಿಗೆದರುವ ಈ ಪ್ರದೇಶದಲ್ಲಿ ಒಂದೆಡೆ ವಾಹನಗಳ ನಿಬಿಡತೆ, ಇನ್ನೊಂದೆಡೆ ಕಾದ ಕಾವಲಿಯಲ್ಲಿ ಚುಯ್ಯೆಂದು ದೋಸೆಯನ್ನು ಚಕಚಕನೆ ಹೊಯ್ಯುವ ಕಲಾತ್ಮಕತೆ, ಕಾದ ಎಣ್ಣೆಯಲ್ಲಿ ಹೂವಿನಂತೆ ಅರಳುವ ಬೋಂಡಾ, ಬಜ್ಜಿಯನ್ನು ನೋಡಿ ಬಾಯಿ ನೀರೂರಿಸಿಕೊಂಡು ತಮ್ಮ ಸರದಿಗೆ ಕಾಯುವ ಜನರು, ತಡ ರಾತ್ರಿ ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿದರೂ ಫುಡ್ ಸ್ಟ್ರೀಟ್‌ಗೆ ಹೋದರೆ ಏನಾದರೂ ತಿನ್ನಲು ಸಿಗುತ್ತದೆ ಎಂಬ ಜನರ ವಿಶ್ವಾಸ ಇವೆಲ್ಲವೂ ಆ ಪುಟ್ಟ ಆಹಾರ ಲೋಕದೊಂದಿಗೆ ಜನರನ್ನು ‘ವನಾತ್ಮಕವಾಗಿಯೂ ಬೆಸೆದಿವೆ. ಬೆಂಗಳೂರಿನ ಆಹಾರ ಸಂಸ್ಕೃತಿಯೇ ಮೇಳೈಸಿರುವ ಫುಡ್ ಸ್ಟ್ರೀಟ್ ಮತ್ತೆ ಆರಂಭವಾಗುವುದೇ, ಆರಂಭವಾದರೂ ಎಂದಿನ ಆಪ್ತತೆ ಅಲ್ಲಿರುವುದೇ? ಗರಿ ಗರಿ ಮಸಾಲೆ ದೋಸೆ, ಹೋಳಿಗೆಯ ಹೂರಣ ರುಚಿಸುವುದೇ? ಏನು ತಿಂದರೆ ಏನಾಗುವುದೊ ಎಂಬ ಭಯ ಬಿಟ್ಟು ಜನರು ಫುಡ್ ಸ್ಟ್ರೀಟ್‌ನ ತಿಂಡಿಗಳನ್ನು ಸವಿಯುವರೇ ಎಂಬುದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ!

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!