26.9 C
Karnataka
Sunday, July 5, 2026
    Home Blog Page 17

    ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿನಿಂತ ವಿಭಿನ್ನ ಕಲಾಕೃತಿಗಳ ಗುಚ್ಛ

    ಬಳಕೂರು ವಿ ಎಸ್ ನಾಯಕ

    ಬೆಂಗಳೂರಿನ ವಿಷ್ಣುವರ್ಧನ್ ಮುಖ್ಯರಸ್ತೆಯಲ್ಲಿರುವ ಚಿತ್ರಕಲಾ ಮಹಾವಿದ್ಯಾಲಯ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಬಂದ ಕಲಾಸಕ್ತರಿಗೆ ಒಂದು ಕ್ಷಣ ಕಲಾ ಸಂತೆಗೆ ಬಂದ ಅನುಭವವಾಗಿತ್ತು. ಅಲ್ಲಿನ ಚಿತ್ರಕಲಾ ಗ್ಯಾಲರಿಯಲ್ಲಿ ಒಂದಕ್ಕಿಂತ ಒಂದು ವಿಬಿನ್ನ ಕಲಾಕೃತಿಗಳು ಎಲ್ಲರ ಮನಸೂರೆಗೊಳ್ಳುವಂತೆ ಇತ್ತು. ಇಷ್ಟಕ್ಕೆಲ್ಲ ಕಾರಣ ಚಿತ್ರಕಲಾ ಮಹಾವಿದ್ಯಾಲಯದ ಬಿ. ವಿ. ಎ. ಕಲಾ ಅಂತಿಮ ವಿಭಾಗದ ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿನಿಂತ ವಿಭಿನ್ನ ಕಲಾಕೃತಿಗಳ ಗುಚ್ಛ.

    ಒಂದಕ್ಕಿಂತ ಒಂದು ಆಕರ್ಷಣೀಯ ಒಂದಕ್ಕಿಂತ ಒಂದು ವಿಭಿನ್ನ ವಿಶೇಷವಾದ ಅರ್ಥಪೂರ್ಣ ಕಲಾತ್ಮಕ ನೋಟಗಳನ್ನು ಒಳಗೊಂಡ ಕಲಾಕೃತಿಗಳ ಸರಣಿ ಒಂದು ವಿಸ್ಮಯಕಾರಿ ಕಲಾಲೋಕಕ್ಕೆ ಕಾಲಿಟ್ಟ ಅನುಭವವಾಗುತ್ತಿತ್ತು.

    ಚಿತ್ರಕಲಾ ಮಹಾವಿದ್ಯಾಲಯದ ಕಲಾ ಗ್ಯಾಲರಿಯಲ್ಲಿ ಸುಮಾರು 150 ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಸಂದೇಶವನ್ನು ನೀಡುವಂತೆ ಇತ್ತು. ಕಲಾ ಪ್ರದರ್ಶನವನ್ನು ವೀಕ್ಷಿಸಲು ಬಂದ ಹಲವಾರು ಕಲಾಸಕ್ತರು ವಿದ್ಯಾರ್ಥಿಗಳ ಕೈಚಳಕದಲ್ಲಿ ಮೂಡಿಬಂದ ಕಲಾಕೃತಿಗಳ ಬಗ್ಗೆ ಪ್ರಶಂಸೆಯನ್ನು ಮಾಡಿದಾಗ ಅಲ್ಲಿಯ ಕಲಾ ವಿದ್ಯಾರ್ಥಿಗಳಿಗೆ ಒಂದು ಕ್ಷಣ ಸಂತೋಷ ಸಂಭ್ರಮದಲ್ಲಿ ಮುಳುಗಿದಂತೆ ಕಾಣುತ್ತಿದ್ದರು.

    ಇಷ್ಟಕ್ಕೆಲ್ಲ ಕಾರಣ ಏನಿರಬಹುದು ಎಂದು ತಿಳಿದರೆ ಪ್ರತಿವರ್ಷದಂತೆ ಚಿತ್ರಕಲಾ ಮಹಾವಿದ್ಯಾಲಯ ದಲ್ಲಿ ಅಂತಿಮ ವರ್ಷದಲ್ಲಿ ಓದಿದ ಕಲಾ ವಿದ್ಯಾರ್ಥಿಗಳ ಕಲಾ ಸಂತೆ ನಡೆಯುತ್ತದೆ. ಈ ವರ್ಷವೂ ಕೂಡ ದೃಶ್ಯ ಉತ್ಸವ ಈ ಕಲಾ ಜಾತ್ರೆ ವಿಭಿನ್ನವಾಗಿಮೂಡಿಬಂದಿರುವುದು ವಿಶೇಷ.ಬಿ. ವಿ. ಎ. ಅಂತಿಮ ವರ್ಷದ ಕಲಾ ವಿದ್ಯಾರ್ಥಿಗಳಿಗೆ ಇಷ್ಟು ವರ್ಷ ತಾವು ಕಲಿತ ಅನುಭವದ ಮೇರೆಗೆ ತಮ್ಮ ಮನಸ್ಸಿನಲ್ಲಿ ಮೂಡಿದ ವಿಭಿನ್ನ ವಿಚಾರಧಾರೆಯನ್ನು ಕಲಾಕೃತಿಗಳ ಮೂಲಕವಾಗಿ ರಚಿಸುವ ಕಾರ್ಯವನ್ನು ನೀಡಲಾಗಿತ್ತು.

    ಕಲಾ ವಿದ್ಯಾರ್ಥಿಗಳು ಇಂದಿನ ಮತ್ತು ಹಿಂದಿನ ವಿಷಯ ವಸ್ತುಗಳನ್ನು ತೆಗೆದುಕೊಂಡು ಕಲಾ ಶಿಕ್ಷಕರಾದ ಮುನಿ ಮೋಹನ್ ಮತ್ತು ರಘುರಾಮ್ ರವರ ಸಾರಥ್ಯದಲ್ಲಿ ಮತ್ತು ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಾಬು ಜತ್ತಕರ್ ಅವರ ಮಾರ್ಗದರ್ಶನದಲ್ಲಿ ಈ ಕಲಾ ಸಂತೆ ವಿಶೇಷವಾಗಿ ನಡೆಯುತ್ತದೆ. ಸುಮಾರು 30 ಕಲಾ ವಿದ್ಯಾರ್ಥಿಗಳ ಕೈಚಳಕದಲ್ಲಿ 150 ಕ್ಕಿಂತಲೂ ಹೆಚ್ಚು ಕಲಾಕೃತಿಗಳು ವಿಭಿನ್ನ ಸಂದೇಶಗಳನ್ನು ನೀಡುವ ಕಲಾಕೃತಿಗಲಾಗಿದ್ದು ಇಂತಹ ಉತ್ತಮ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಳ್ಳಬೇಕಾದರೆ ಉತ್ತರಹಳ್ಳಿ ಮುಖ್ಯರಸ್ತೆ ಶ್ರೀನಿವಾಸಪುರ ದಲ್ಲಿರುವ ಚಿತ್ರಕಲಾ ಮಹಾವಿದ್ಯಾಲಯ ಕಲಾ ಪರಿಷತ್ತಿನ ಕಲಾಗ್ಯಾಲರಿ ಗೆ ಭೇಟಿ ನೀಡಲೇ ಬೇಕು. ದ್ರಶ್ಯ ಉತ್ಸವ ಇಲ್ಲಿ ಇದೇ ತಿಂಗಳ 29 ರವರೆಗೆ ನಡೆಯಲಿದ್ದು ತಮ್ಮ ಬಿಡುವಿನ ಸಮಯದಲ್ಲಿ ಬಂದು ಭೇಟಿಕೊಡಬಹುದು.


    ಪ್ರವೇಶ ಉಚಿತ,ಪ್ರದರ್ಶನದ ಸ್ಥಳ:ಚಿತ್ರಕಲಾ ಮಹಾವಿದ್ಯಾಲಯ
    ಕರ್ನಾಟಕ ಚಿತ್ರಕಲಾ ಪರಿಷತ್ತು,ಉತ್ತರಹಳ್ಳಿ ಮುಖ್ಯರಸ್ತೆ
    ಶ್ರೀನಿವಾಸಪುರ ಓಂಕಾರ್ ಆಶ್ರಮದ ಹತ್ತಿರ ಬೆಂಗಳೂರು

    ಏರಿಳಿತಗಳನ್ನು ಕಾಣುತ್ತಿರುವ ಷೇರು ಪೇಟೆ

    ಷೇರು ಪೇಟೆಯಲ್ಲಿ ಹೆಚ್ಚಿನ ಕಂಪನಿಗಳ ಷೇರುಗಳು ಭಾರಿ ಏರಿಳಿತಗಳನ್ನು ಕಾಣುತ್ತಿವೆ. ಇದು ಹೆಚ್ಚಿನ ಅಸ್ಥಿರತೆ ಮತ್ತು ಹೂಡಿಕೆದಾರರ ನಂಬಿಕೆಯ ಕೊರತೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಜಾಗತಿಕ ಮಟ್ಟದಲ್ಲಾಗುತ್ತಿರುವ ಬೆಳವಣಿಗೆಳು, ಬದಲಾವಣೆಗಳು, ಒತ್ತಡಗಳಾಗಿವೆ. ಆದರೂ ಕೆಲವು ಕಂಪನಿಗಳು ಆಕರ್ಷಕವಾದ ಕುಸಿತಗಳನ್ನು, ಚೇತರಿಕೆಯನ್ನು ಪ್ರದರ್ಶಿಸುವುದರೊಂದಿಗೆ ಹತ್ತಾರು ಅವಕಾಶಗಳನ್ನು ಒದಗಿಸಿವೆ.

    • ಆರ್‌ ಇ ಸಿ ಲಿಮಿಟೆಡ್‌ ಕಂಪನಿಯು ಈಗಾಗಲೇ ಪ್ರತಿ ಷೇರಿಗೆ ರೂ.4.80 ರಂತೆ ಲಾಭಾಂಶ ಘೋಷಿಸಿದೆ. ಈಗ ಅದರೊಂದಿಗೆ ಈ ತಿಂಗಳ 30 ರಂದು ಕಂಪನಿಯ ಆಡಳಿತ ಮಂಡಳಿಯು ಷೇರುದಾರರಿಗೆ ಬೋನಸ್‌ ಷೇರು ವಿತರಣೆಯನ್ನು ಪರಿಶೀಲಿಸಲಿದೆ ಎಂದು ಪ್ರಕಟಿಸಿದೆ.
    • ಮೋರ್ಗನ್‌ ಸ್ಟಾನ್ಲಿ ಇನ್ವೆಸ್ಟ್‌ ಮೆಂಟ್‌ ಫಂಡ್ಸ್‌ ನ ಎಮರ್ಜಿಂಗ್‌ ಲೀಡರ್‌ ‌ ಈಕ್ವಿಟಿ ಫಂಡ್ ಸೋಮವಾರದಂದು 13.14 ಲಕ್ಷ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಷೇರನ್ನು ರೂ.800 ರಂತೆ ಮಾರಾಟ ಮಾಡಿದೆ.
    • ಬಜಾಜ್‌ ಆಟೋ ಲಿಮಿಟೆಡ್‌ ಕಂಪನಿಯು ಈ ಹಿಂದೆ 14 ನೇ ಜೂನ್‌ ನಂದು ಷೇರು ಹಿಂಕೊಳ್ಳುವಿಕೆಯನ್ನ ಪರಿಶೀಲಿಸುವ ಕಾರ್ಯ ಸೂಚಿ ಪ್ರಕಟಿಸಿತ್ತು. ಅಂದು ಷೇರಿನ ಬೆಲೆ ರೂ.3,890 ರಿಂದ ಆರಂಭವಾಗಿ ರೂ.4,000 ನ್ನು ತಲುಪಿ ನಂತರ ಇಳಿಕೆ ಕಾಣತೊಡಗಿತು. ಈ ಇಳಿಕೆ ಕಾಣಲು ಕಾರಣ ಕಂಪನಿಯು ತನ್ನ ಷೇರು ಹಿಂಕೊಳ್ಳುವಿಕೆ ಯೋಜನೆ ಪರಿಶೀಲನೆಯನ್ನು ಮುಂದೂಡಿತ್ತು. ಹಾಗಾಗಿ ಷೇರಿನ ಬೆಲೆ ರೂ.3,684 ರ ಸಮೀಪ ಕೊನೆಗೊಂಡಿತು. ನಂತರ 20 ನೇ ಸೋಮವಾರದಂದು ರೂ.3,577 ರವರೆಗೂ ಕುಸಿದಿತ್ತು. ಕಂಪನಿಯು 22 ರಂದು ಬುಧವಾರ ಸಂಜೆ ಮತ್ತೊಮ್ಮೆ ಆಡಳಿತ ಮಂಡಳಿಯು 27 ರಂದು ಸಭೆಸೇರಿ ಷೇರು ಹಿಂಕೊಳ್ಳುವ ಯೋಜನೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಕಾರ್ಯ ಸೂಚಿ ಪ್ರಕಟಿಸಿದ ಕಾರಣ ಗುರುವಾರ ಷೇರಿನ ಬೆಲೆ ಪುಟಿದೆದ್ದಿತು. ಅಂದು ರೂ.3,795 ರಗಡಿ ದಾಟಿತು. ಶುಕ್ರವಾರ ರೂ.3,841 ರವರೆಗೂ ಏರಿಕೆ ಕಂಡು ರೂ.3,812 ರ ಸಮೀಪ ಕೊನೆಗೊಂಡಿತು. ಅಂದರೆ ಕೆಲವು ಬೆಳವಣಿಗೆಗಳಿಗೆ ಪೇಟೆ ಎಷ್ಟು ತೀಕ್ಷ್ಣವಾಗಿ ಸ್ಪಂಧಿಸುವುದು ಎಂಬುದನ್ನು ಈ ಬೆಳವಣಿಗೆ ತಿಳಿಸುತ್ತದೆ.
    • ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಮೇ ತಿಂಗಳಲ್ಲಿ ತನ್ನ ವಾರ್ಷಿಕ ಫಲಿತಾಂಶ ಪ್ರಕಟಿಸಿದ್ದು ಆಕರ್ಷಣೀಯ ಅಂಕಿ ಅಂಶಗಳನ್ನು ಸಾಧಿಸಿದೆ. ಆದರೂ ಆ ಸಂದರ್ಭದಲ್ಲಿ ಕಂಪನಿಯು ಅಂತಿಮ ಲಾಭಾಂಶ ಪ್ರಕಟಣೆಯನ್ನು ಮಾಡಿರಲಿಲ್ಲವಾದ್ದರಿಂದ ನಂತರದ ದಿನಗಳಲ್ಲಿ ಸ್ವಲ್ಪ ಕುಸಿತಕ್ಕೊಳಗಾಗಿ ನಂತರ ಚೇತರಿಸಿಕೊಂಡಿತು. ಕಂಪನಿಯ ಆಡಳಿತ ಮಂಡಳಿಯು 28 ರಂದು ಸಭೆ ಕರೆದಿದ್ದು ಅಂದು ಅಂತಿಮ ಲಾಭಾಂಶ ಪ್ರಕಟಣೆಯ ಕಾರ್ಯ ಸೂಚಿ ಹೊರಡಿಸಿದೆ. ಘೋಷಣೆಯು ಸ್ವಲ್ಪ ವಿಳಂಬವಾದರೂ ಆಕರ್ಷಣೀಯ ಅಂಶ ಹೊರಬೀಳಬಹುದು.
    • ಕೆನರಾ ಬ್ಯಾಂಕ್‌ ತನ್ನ ಆಡಳಿತ ಮಂಡಳಿಯ ಸಭೆಯಲ್ಲಿ ರೂ.9,000 ಕೋಟಿ ಮೌಲ್ಯದ ಸಂಪನ್ಮೂಲ ಸಂಗ್ರಹಣೆ ಮಾಡಲು ನಿರ್ಧರಿಸಿದೆ.
    • ಗ್ಲೆನ್‌ ಮಾರ್ಕ್‌ ಫಾರ್ಮಸ್ಯುಟಿಕಲ್ಸ್‌ ಲಿಮಿಟೆಡ್‌ ಕಂಪನಿಯ ಘಟಕವು ಅಮೇರಿಕಾದ ಎಫ್‌ ಡಿ ಎ ಯ ತನಿಖೆಗೊಳಪಟ್ಟಿದ್ದು, ಇದರಿಂದ 6 ಅಬ್ಸರ್ವೇಷನ್ ಗಳನ್ನು ಎಫ್‌ ಡಿ ಎ ನೀಡಿದೆ. ಈ ಕಾರಣದಿಂದಾಗಿ ಷೇರಿನ ಬೆಲೆಯು 23 ರಂದು ರೂ.351 ರವರೆಗೂ ಕುಸಿದಿತ್ತು. ಆದರೆ ಶುಕ್ರವಾರದಂದು ಪೇಟೆಯ ಚಟುವಟಿಕೆಯು ಚುರುಕಾದ ಕಾರಣ ರೂ.385 ರವರೆಗೂ ಜಿಗಿಯಿತು.
    • ಹಿಕಾಲ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆಯು ಕಂಪನಿಯ ಫಲಿತಾಂಶವು ಆಕರ್ಷಣಿಯವಲ್ಲದ ಕಾರಣ ಕಳೆದ ಒಂದು ತಿಂಗಳಲ್ಲಿ ರೂ.400 ರ ಸಮೀಪದಿಂದ ವಾರ್ಷಿಕ ಕನಿಷ್ಠ ರೂ.215 ರ ಸಮೀಪಕ್ಕೆ ಕುಸಿದಿತ್ತು. ಈ ವಾರದ ಆರಂಭದಿಂದಲೂ ಸ್ವಲ್ಪ ಚೇತರಿಸಿಕೊಂಡು ಶುಕ್ರವಾರದಂದು ರೂ.233 ರಿಂದ ರೂ.253 ರವರೆಗೂ ಏರಿಕೆ ಕಂಡಿದೆ.
    • ಇನ್ವೆಸ್ಕೋ ಮ್ಯುಚುಯಲ್‌ ಫಂಡ್‌ ಶುಕ್ರವಾರದಂದು ತನ್ನ ಇನ್ವೆಸ್ಕೋ ಟ್ಯಾಕ್ಸ್‌ ಪ್ಲಾನ್‌ ಯೋಜನೆಯ 3,39,349 ರೆಪ್ಕೋ ಹೋಮ್‌ ಫೈನಾನ್ಸ್‌ ಲಿಮಿಟೆಡ್‌ ಕಂಪನಿಯ ಷೇರನ್ನು ಗಜಗಾತ್ರದ ವಹಿವಾಟಿನಲ್ಲಿ ರೂ.117 ರಂತೆ ಮಾರಾಟ ಮಾಡಿದೆ. ನಂತರದಲ್ಲಿ ಷೇರಿನ ಬೆಲೆಯು ಚೇತರಿಸಿಕೊಂಡು ರೂ.131 ರ ಸಮೀಪ ಕೊನೆಗೊಂಡಿದೆ.
    • ಹೀರೋ ಮೋಟೊ ಕಾರ್ಪ್‌ ಲಿಮಿಟೆಡ್‌ ಕಂಪನಿಯು ತನ್ನ ದ್ವಿಚಕ್ರವಾಹನಗಳಾದ ಸ್ಕೂಟರ್‌ ಮತ್ತು ಮೋಟಾರ್‌ ಸೈಕಲ್‌ ಗಳ ಬೆಲೆಯನ್ನು ಪ್ರತಿ ಘಟಕಕ್ಕೆ ರೂ.3,000 ದಂತೆ ಜುಲೈ ಒಂದರಿಂದ ಬೆಲೆ ಹೆಚ್ಚಿಸಲಿದೆ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ತಾನೊಂದು ಬಗೆದರೆ ದೈವವೊಂದು ಬಗೆದಂತೆ

    ಕಡವರನೆಡಹಿ ಸಂಧಿಸಿದ ಕಡುನಡವನಂತೆ– ಉಪಮಾಲೋಲ ಲಕ್ಷ್ಮೀಶನ  ‘ಜೈಮಿನಿ ಭಾರತ’ದ  ‘ಚಂದ್ರಹಾಸನ ಬಾಲ್ಯ’ದಲ್ಲಿ ಉಲ್ಲೇಖವಾಗಿರುವ    ಮಾತಿದು.  ಕುಳಿಂದಕ ಎನ್ನುವ ಮಹಾರಾಜ ಬೇಟೆ ನಿಮಿತ್ತ ಕಾಡಿಗೆ ಬಂದಿರುವಾಗ  ಕಾಡಿನ ನಡುವೆ ರೋಧಿಸುತ್ತಿದ್ದ ಮಗುವನ್ನು ಪಡೆದಾಗ ರಾಜನಿಗಾದ ಸಂತೋಷವನ್ನು ವಿವರಿಸುವ ಸಂದರ್ಭದಲ್ಲಿ ಕವಿ ಈ ಮಾತುಗಳನ್ನಾಡಿದ್ದಾನೆ. 

    ಮಕ್ಕಳಿಲ್ಲದ ರಾಜನಿಗೆ ಕಾಡಿನ ನಡುವೆ ಬೆರಳನ್ನು  ಕಳೆದುಕೊಂಡು  ಅಸಾಧ್ಯವಾದ ನೋವಿನ ನಡುವೆಯೂ  ಹರಿನಾಮಸ್ಮರಣೆ ಮಾಡುತ್ತಿದ್ದ ಬಾಲಕನ  ಸಾಂಗತ್ಯ  ಅತ್ಯಂತ ಖುಷಿ ಕೊಡುತ್ತದೆ . ಕಡು ಬಡವನೊಬ್ಬ  ದಾರಿಯಲ್ಲಿ ನಡೆದುಹೋಗುವಾಗ ಅಕಸ್ಮಾತ್ ಎಡವಿ ಪಡೆಯುವ ದ್ರವ್ಯದ ಗಂಟು ಹೇಗೆ ಸಂತೋಷ ನೀಡುತ್ತದೆಯೋ ಹಾಗೆ ಕುಳಿಂದಕನಿಗೆ   ಅಕಸ್ಮಿಕ  ಎಂಬಂತೆ ಮಗು ಸಿಕ್ಕಿದ್ದು ಅವರ್ಣನೀಯ ಆನಂದ ತರುತ್ತದೆ.

    ಇಂದಿನ ದಿನಮಾನಗಳಲ್ಲಿ ಅನ್ನಾಹಾರಗಳಿಲ್ಲದೆ ಇದ್ದವರು ಮಾತ್ರ ಬಡವರು ಎನ್ನುವಂತಿಲ್ಲ. ವಿಶಾಲ ಚಿಂತನೆ ಮಾಡಿದರೆ ಅವಕಾಶ ದೇಹಿಗಳೂ ಬಡವರೇ ಸರಿ! ಪೈಪೋಟಿ ಯಿಂದ ಕೂಡಿರುವ ಜಗತ್ತು ಇದು. ಆರೋಗ್ಯಕರ ಪೈಪೋಟಿ  ಇಲ್ಲವೇ ಇಲ್ಲ. ಆನಾರೋಗ್ಯಕರ ಪೈಪೋಟಿ ಇರುವಂಥದ್ದು .ಹೀಗಿರುವಾಗ  ನಿಜಕ್ಕೂ ಪ್ರತಿಭಾವಂತನಿಗೆ ತನ್ನ ಸಾಮರ್ಥ್ಯವನ್ನು  ತೋರಿಸಲು ಅವಕಾಶ ಸಿಕ್ಕರೆ ಅಪರಿಮಿತ ಸಂತೋಷವಾಗುತ್ತದೆ. 

    ಯಾವ ನಿರೀಕ್ಷೆಯೂ ಇಲ್ಲದೆ  ನಮ್ಮ ನಿರೀಕ್ಷೆಗೂ ಮೀರಿದ್ದನ್ನು ಆಕಸ್ಮಿಕವಾಗಿ ಪಡೆಯುವುದೆಂದರೆ  ಸಂತೋಷದ ವಿಚಾರವೆ ಅಲ್ವೆ!   ಬದುಕಿನಲ್ಲಿ ಎಲ್ಲವೂ ನಿರೀಕ್ಷೆಯಂತೆ ಆಗುತ್ತದೆ ಎನ್ನುವುದು ಸುಳ್ಳು. ‘ತಾನೊಂದು ಬಗೆದರೆ ದೈವವೊಂದು ಬಗೆದಂತೆ’ ಎಂಬಂತೆ ಅಪಸವ್ಯಗಳಾಗುವುದೇ  ಹೆಚ್ಚು. ಅವುಗಳ ನಡುವೆ ಇಂಥ ಅನಿರೀಕ್ಷಿತಗಳು  ಸಂತಸದ ಕಡಲಿನಂತೆಯೇ ಭಾಸವಾಗುತ್ತದೆ.

    ಲಕ್ಷ್ಮೀಶ ಕವಿ ಇಲ್ಲಿ  ಕಡುಬಡವ  ಬಂದರೆ ತೀವ್ರ ಬಯಕೆಯನ್ನು ಹೊಂದಿದ್ದವನು    ಎಂಬ ಅರ್ಥದಲ್ಲಿ ಬಳಸಿರುವುದು ಕವಿಯ  ಪ್ರತಿಭೆಗೆ ಹಿಡಿದಿರುವ ಕೈಗನ್ನಡಿ ಎನ್ನಬಹುದು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ ಚೊಚ್ಚಲ ‘ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ

    5 ಲಕ್ಷ ರೂ. ನಗದುಸಹಿತ ಸೋಮವಾರ ಪ್ರಶಸ್ತಿ ಪ್ರದಾನ

    BENGALURU JUNE 25

    ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ಸರಕಾರವು ಕೊಡಮಾಡುತ್ತಿರುವ ‘ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ತಕಾಶ್ ಪಡುಕೋಣೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಜೂನ್ 27ರ ಸೋಮವಾರ ವಿಧಾನಸೌಧದಲ್ಲಿ ನಡೆಯಲಿರುವ ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಮೂವರಿಗೂ ತಲಾ 5 ಲಕ್ಷ ರೂಪಾಯಿ ನಗದುಸಹಿತ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿ ಕೊಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

    ಸಚಿವ ಅಶ್ವತ್ಥ ನಾರಾಯಣ ಅವರು, ಮೂವರು ಪುರಸ್ಕೃತರ ಪೈಕಿ ಹಿರಿಯರಾದ ಕೃಷ್ಣ ಅವರನ್ನು ಶನಿವಾರ ಅವರ ಮನೆಯಲ್ಲಿ ಭೇಟಿಯಾಗಿ, ಕೆಂಪೇಗೌಡ ಜಯಂತಿಗೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಬೇಕೆಂದು ಸರಕಾರದ ಪರವಾಗಿ ಆಹ್ವಾನಿಸಿದರು. ಇದಕ್ಕೆ ಕೃಷ್ಣ ಅವರು ಸಮ್ಮತಿಸಿ, ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಮೂವರೂ ಪುರಸ್ಕೃತರು ಬೆಂಗಳೂರಿನ ಬೆಳವಣಿಗೆಗೆ ಮತ್ತು ಕೀರ್ತಿಗೆ ತಮ್ಮದೇ ಆದ ಅನನ್ಯ ವಿಧಾನಗಳ ಮೂಲಕ ಅನುಪಮ ಕೊಡುಗೆ ನೀಡಿದ್ದಾರೆ’ ಎಂದು ಬಣ್ಣಿಸಿದರು.

    ಸಾಧಕರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರದ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಇದರಲ್ಲಿ ಉದ್ಯಮಿ ಮೋಹನದಾಸ್ ಪೈ, ವಿವೇಕಾನಂದ ಯೂತ್ ಮೂವ್ ಮೆಂಟ್ ಸ್ಥಾಪಕ ಆರ್.ಬಾಲಸುಬ್ರಹ್ಮಣ್ಯಂ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅವರು ಸದಸ್ಯರಾಗಿದ್ದರು. ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ವಿನಯದೀಪ್ ಅವರು ಸದಸ್ಯ ಕಾರ್ಯದರ್ಶಿ ಆಗಿದ್ದರು.

    ಗ್ರಾಮೀಣ ಬ್ಯಾಂಕ್ ಗಳ ನೇಮಕ: ಅರ್ಜಿ ಸಲ್ಲಿಕೆ ಸೋಮವಾರವೇ ಕಡೇ ದಿನ

    ಐಬಿಪಿಎಸ್ ಮೂಲಕ ಗ್ರಾಮೀಣ ಬ್ಯಾಂಕುಗಳಲ್ಲಿ 8,106 ಹುದ್ದೆಗಳಿಗೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.2017ರಲ್ಲಿ ಐಬಿಪಿಎಸ್, ನೇಮಕಕ್ಕೆ ಅಧಿಸೂಚನೆ ಹೊರಡಿಸಿದಾಗ 15,332 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. 2018ರಲ್ಲಿ ಅದು ಕೇವಲ 10,190ಕ್ಕೆ ಇಳಿಯಿತು. 2019 ರಲ್ಲಿ 8,400 ಹಾಗೂ 2020 ರಲ್ಲಿ 9638 ಹುದ್ದೆಗಳಿಗೆ ಪರೀಕ್ಷೆ ನಡೆಸಿದರೆ 2021 ರಲ್ಲಿ 12,810 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿತು. ಇದೀಗ 2022ನೇ ಸಾಲಿನ 8,106 ಹುದ್ದೆಗಳಿಗೆ ನೇಮಕ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ವರ್ಷ ದಿಂದ ವರ್ಷಕ್ಕೆ ನೇಮಕಾತಿಯಲ್ಲಿ ಇಳಿಮುಖವಾಗಿರೋದನ್ನ ಸ್ಪಷ್ಟವಾಗಿ ಕಾಣಬಹುದು.

    ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿ ಹುದ್ದೆ ಗಳಿಗೆ ಅರ್ಜಿ ಕರೆಯಲಾಗಿದೆ.
    ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ದೇಶದ 43 ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್ ಆರ್ ಬಿ) ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್ ) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ.

    ಜೂನ್ 7ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜೂನ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಪರೀಕ್ಷೆ ನಡೆಸಿ, ನವೆಂಬರ್ನಲ್ಲಿ ಸಂದರ್ಶನ ನಡೆಸಲು ಐಬಿಪಿಎಸ್ ನಿರ್ಧರಿಸಿದೆ. ರಾಜ್ಯದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಐಬಿಪಿಎಸ್ ನೀಡಿದೆ.

    ಹುದ್ದೆ ವಿವರ:

    ಈ ಬಾರಿ 8,106 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಪ್ರಕಟಿಸಲಾಗಿದೆ. ಇದರಲ್ಲಿ
    ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಹುದ್ದೆಗಳ ಸಂಖ್ಯೆಯೇ 4483, ಆಫೀಸರ್ ಸ್ಕೇಲ್-I ರ ಹುದ್ದೆ 2676, ಆಫೀಸರ್ ಸ್ಕೇಲ್-II ರ ಹುದ್ದೆ 867 ಮತ್ತು ಆಫೀಸರ್ ಸ್ಕೇಲ್-IIIರ 80 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿನ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ನಡೆಯಲಿದೆ. ರಾಜ್ಯದ ಎರಡು ಬ್ಯಾಂಕುಗಳಲ್ಲಿ 832 ಹುದ್ದೆಗಳು ಖಾಲಿ ಇವೆ, ಇದರಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ಸಂಖ್ಯೆಯೇ 173, ಆಫೀಸರ್ ಸ್ಕೇಲ್-Iರ 429 ಮತ್ತು ಆಫೀಸರ್ ಸ್ಕೇಲ್-II ರ 230 (ಜನರಲ್ ಬ್ಯಾಂಕಿಂಗ್) ಹುದ್ದೆಗಳಿಗೆ ನೇಮಕ ನಡೆಯಲಿದೆ.

    ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ?

    ಪೂರ್ವಭಾವಿ ಪರೀಕ್ಷೆ:

    ಬೆಂಗಳೂರು,ಬೆಳಗಾವಿ,ಬೀದರ,ದಾವಣಗೆರೆ ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಡ್ಯ ಮೈಸೂರು,ಶಿವಮೊಗ್ಗ,ಮಂಗಳೂರು ಮತ್ತು ಉಡುಪಿ.

    ಮುಖ್ಯಪರೀಕ್ಷೆ:

    ಬೆಂಗಳೂರು,ಬೆಳಗಾವಿ, ದಾವಣಗೆರೆ ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮೈಸೂರು,ಶಿವಮೊಗ್ಗ.

    ಅರ್ಜಿ ಶುಲ್ಕ:

    ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್ಸಿ/ಎಸ್ಟಿ/ವಿಕಲಚೇತನರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ.ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆನ್ ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

    ವಯೋಮಿತಿ:

    ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗೆ 18ರಿಂದ 28 ವರ್ಷ. ಆಫೀಸರ್ ಸ್ಕೇಲ್-I ಹುದ್ದೆಗೆ ಅಭ್ಯರ್ಥಿಗಳು 18ರಿಂದ 30 ವರ್ಷದೊಳಗಿನವರಾಗಿರಬೇಕು ಆಫೀಸರ್ ಸ್ಟೇಲ್- II ಹುದ್ದೆಗೆ 21ರಿಂದ 32 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಹಾಗೂ ಆಫೀಸರ್ ಸ್ಟೇಲ್ – III ಹುದ್ದೆಯ ಆಕಾಂಕ್ಷಿಗಳು 21ರಿಂದ 40 ವರ್ಷದೊಳಗಿನವರಾಗಿರಬೇಕು.

    ಪರೀಕ್ಷಾ ಪೂರ್ವ ತರಬೇತಿ:

    ಐಬಿಪಿಎಸ್ ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್ ) ಮತ್ತು ಆಫೀಸರ್ ಸ್ಕೇಲ್-I ಹುದ್ದೆಗಳಿಗೆ ತರಬೇತಿ ಪಡೆಯಬಹುದು. ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು,ತರಬೇತಿ ಸ್ಥಳದ ಖರ್ಚು ವೆಚ್ಚಗಳನ್ನು ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.

    ಅರ್ಹತೆಗಳೇನು?

    ಆಫೀಸ್ ಅಸಿಸ್ಟೆಂಟ್: ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಸ್ಥಳೀಯ ಭಾಷೆಯನ್ನು ತಿಳಿದಿರಬೇಕಾದುದು ಅವಶ್ಯಕ. ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕು.

    ಆಫೀಸರ್ ಸ್ಕೇಲ್-I: ಕೃಷಿ, ತೋಟಗಾರಿಕೆ, ಅರಣ್ಯ, ಪ್ರಾಣಿಶಾಸ್ತ್ರ, ಪಶು ವಿಜ್ಞಾನ, ಅಗ್ರಿಕಲ್ಟರ್ ಎಂಜಿನಿಯರಿಂಗ್, ಪಿಸಿಕಲ್ಟರ್, ಅಗ್ರಿಕಲ್ಟರ್ ಮಾರ್ಕೆಟಿಂಗ್ ಆ್ಯಂಡ್ ಕೋ-ಆಪರೇಷನ್, ಇನ್ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್ ಮೆಂಟ್ ಲಾ, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ-ಈ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಪಡೆದವರು ಆಫೀಸರ್ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

    ಆಫೀಸರ್ ಸ್ಕೇಲ್ – II: ಅಂಗೀಕೃತ ವಿವಿಯಿಂದ ಶೇಕಡಾ 50 ಅಂಕಗಳೊಂದಿಗೆ ಪದವಿ ಪಡೆದಿರುವುದು ಕಡ್ಡಾಯ. ಆಫೀಸರ್ ಸ್ಕೇಲ್-I ಗೆ ತಿಳಿಸಿದ ವಿಷಯಗಳಲ್ಲಿ ಪದವಿ ಪಡೆದಿದ್ದರೆ ನೇಮಕದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಎರಡು ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು. ಆಫೀಸರ ಸ್ಕೇಲ್-II ನ ಸ್ಪೆಷಲಿಸ್ಟ್ ಆಫೀಸರ್ಗಳಾದ ಇನ್ ಫಾರ್ಮೇಷನ್ ಆಫೀಸರ್, ಚಾರ್ಟಡ್ ಅಕೌಂಟೆಂಟ್, ಲಾ ಆಫೀಸರ್, ಟ್ರೇಸರಿ ಆಫೀಸರ್, ಮಾರ್ಕೆಟಿಂಗ್ ಆಫೀಸರ್ ಮತ್ತು ಅಗ್ರಿಕಲ್ಚರ್ ಆಫೀಸರ್ ಹುದ್ದೆಗಳಿಗೆ ಪದವಿ ಮತ್ತು ಒಂದು ವರ್ಷದ ಸೇವಾನುಭವ ಹೊಂದಿರಬೇಕು.

    ಆಫೀಸರ್ ಸ್ಕೇಲ್-III: ಮಾರ್ಕೆಂಟಿಂಗ್ ಫೈನಾನ್ಸ್, ಅಗ್ರಿಕಲ್ಚರ್ ಹಾರ್ಟಿಕಲ್ಟರ್, ಫಾರೆಸ್ಟ್ರಿ ಅಗ್ರಿಕಲ್ಟರ್, ಅಗ್ನಿಕಲ್ಚರಲ್ ಮಾರ್ಕೆಟಿಂಗ್, ಕೊ ಆಪರೇಷನ್, ಇನ್ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್ಮೆಂಟ್ ಮತ್ತು ಕಾನೂನು ವಿಷಯವ ಶೇ. 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ ಬ್ಯಾಂಕ್ ಅಥವ ವಿತ್ತೀಯ ಸಂಸ್ಥೆಗಳಲ್ಲಿ ಐದು ವರ್ಷ ಕಾರ್ಯನಿರ್ವಹಿಸಿ ಅನುಭವ ಹೊಂದಿರಬೇಕು.

    ಈ ಬಾರಿಯ ಬದಲಾವಣೆಗಳೇನು?:

    ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:

    ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಸ್ಥಳದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಆಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು.

    ಮುಖ್ಯ ಸೂಚನೆಗಳು:

    ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆ ಎರಡಕ್ಕೂ ಅರ್ಜಿ ಸಲ್ಲಿಸಬಹುದು. ಆದರೆ ಆಫೀಸರ್ ಕೇಡರ್ ನಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

    ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್-Iಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕಾದುದು ಕಡ್ಡಾಯ.
    ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್-I ಕ್ಕೆ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಹೊಂದಿರುವುದು ಅವಶ್ಯ. 8ನೇ ತರಗತಿಯವರೆಗೆ ಅಥವಾ ಅದಕ್ಕೂ ಮೇಲ್ಪಟ್ಟು ಸ್ಥಳೀಯ ಭಾಷೆಯ ಮಾಧ್ಯಮದಲ್ಲಿ ಓದಿದವವರನ್ನು ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಪಡೆದ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ.

    ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಯು ಪ್ರವೇಶಪತ್ರದ ಜತೆಗೆ ನೀಡಲಾಗುವ ’ಮಾಹಿತಿ ಕೈಪಿಡಿ’ಯಲ್ಲಿ ಇರುತ್ತದೆ. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಮೆರಿಟ್ ಲಿಸ್ಟ್ ಸಿದ್ಧಪಡಿಸುವಾಗ ಅಭ್ಯರ್ಥಿಯು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಈ ಹುದ್ದೆಯ ನೇಮಕ ಪ್ರಕ್ರಿಯೆಯಲ್ಲಿ ಸಂದರ್ಶನ ಇರುವುದಿಲ್ಲ. ಆಫೀಸರ್ ಸ್ಟೇಲ್-1 ಹುದ್ದೆಗೆ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಅಂತಿಮ ಆಯ್ಕೆ ಪಟ್ಟೆ ಪ್ರಕಟಿಸಲಾಗುತ್ತದೆ.

    ಹೆಚ್ಚಿನ ಮಾಹಿತಿಯನ್ನು ಐಬಿಪಿಎಸ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಪಡೆದು ಅರ್ಜಿ ಸಲ್ಲಿಸಿ.
    ಲಿಂಕ್: https://www.ibps.in/

    ಹೆಚ್ಚಿನ ಮಾಹಿತಿಗೆ ವೆಬ್: https://www.ibps.in/

    ಮಲ್ಲೇಶ್ವರಂ ದೋಬಿ ಘಾಟ್ ಗೆ ಮಂತ್ರಾಲಯ ಶ್ರೀಗಳ ಭೇಟಿ

    BENGALURU JUE 22

    ಮಂತ್ರಾಲಯದ ಶ್ರೀಗಳಾದ ಸುಬುಧೀಂದ್ರತೀರ್ಥ ಸ್ವಾಮಿಗಳು ಮಲ್ಲೇಶ್ವರಂನಲ್ಲಿರುವ ದೋಬಿ ಘಾಟ್ ಗೆ ಭೇಟಿ ನೀಡಿ, ಅಲ್ಲಿಯ ಬಟ್ಟೆ ಶುಚಿಗೊಳಿಸಲು ಇರುವ ಆಧುನಿಕ ವ್ಯವಸ್ಥೆಯನ್ನು ತಮ್ಮ ಶ್ರೀಮಠದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಂದ ಮಾಹಿತಿ ಪಡೆದುಕೊಂಡರು.

    ಬುಧವಾರ ಶಾಸಕರನ್ನು ಸಂಪರ್ಕಿಸಿ, ದೋಬಿ ಘಾಟಿಗೆ ಭೇಟಿ ನೀಡುವ ಆಸಕ್ತಿ ವ್ಯಕ್ತಪಡಿಸಿದ ಅವರು, ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಬಂದರು.

    ದೋಬಿ ಘಾಟಿನಲ್ಲಿ ಅಳವಡಿಸಿ ಅತ್ಯಾಧುನಿಕ ಯಾಂತ್ರೀಕೃತ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ಇಲ್ಲಿನ ಸೌಲಭ್ಯಗಳು ಮತ್ತು ಇದರಿಂದ ಮಡಿವಾಳ ಸಮುದಾಯದವರಿಗೆ ಆಗಿರುವ ಅನುಕೂಲಗಳನ್ನು ಅರಿತುಕೊಂಡರು. ಶ್ರೀಗಳು ಯಾವುದೇ ಮಡಿವಂತಿಕೆ ಇಲ್ಲದೆ, ತಮ್ಮಲ್ಲಿಗೇ ಬಂದಿದ್ದನ್ನು ಕಂಡು ಆ ಸಮುದಾಯವರು ಹರ್ಷಚಿತ್ತರಾದರು.

    ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, `ಮಡಿವಾಳ ಸಮುದಾಯದ ಸದಸ್ಯರು ಬಟ್ಟೆಗಳನ್ನು ಒಗೆದು, ಶುಚಿಗೊಳಿಸಿದ ನಂತರವಷ್ಟೇ ಮಡಿಯ ಕಲ್ಪನೆ ಮತ್ತು ಸಂಪ್ರದಾಯಕ್ಕೆ ಮಹತ್ತ್ವ ಬರುತ್ತದೆ. ಇದು, ಇಡೀ ಸಮಾಜವನ್ನೇ ಶುದ್ಧವಾಗಿಡಬೇಕೆನ್ನುವ ಸಂಕೇತ’ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀಗಳು ಸುಮಾರು ಮುಕ್ಕಾಲು ಗಂಟೆ ಕಾಲ ದೋಬಿ ಘಾಟ್ ಸೌಲಭ್ಯಗಳ ಬಗ್ಗೆ ಕೇಳಿ, ತಿಳಿದುಕೊಂಡರು.

    ಜತೆಯಲ್ಲಿದ್ದ ಸಚಿವರು, ಅಗತ್ಯ ಮಾಹಿತಿ ನೀಡಿ ಶ್ರೀಗಳಿಗೆ ನೆರವು ನೀಡಿದರು.

    ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಜೆಡಿಎಸ್ ಪಕ್ಷದಿಂದ ಶಾಸಕರಾದ ಶ್ರೀನಿವಾಸ ಗೌಡ, ಗುಬ್ಬಿ ಶ್ರೀನಿವಾಸ್ ಉಚ್ಚಾಟನೆ

    BENGALURU JUNE 21

    ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ.

    ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ್ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಹಾಗೆಯೇ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಇಬ್ಬರೂ ಶಾಸಕರನ್ನು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲು ತಕ್ಷಣವೇ ವಿಧಾನಸಭಾಧ್ಯಕ್ಷರಿಗೆ ದೂರು ನೀಡಲು ಕೂಡ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಾಳೆ ಅಥವಾ ನಾಡಿದ್ದರ ಒಳಗಾಗಿ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ಸಭೆಯಲ್ಲಿ ಸುದೀರ್ಘ ಚರ್ಚೆ:
    ರಾಜ್ಯಸಭೆ ಚುನಾವಣೆಯಲ್ಲಿ ನಡೆದ ಬೆಳೆವಣಿಗೆಗಳ ಬಗ್ಗೆ ಕೊಟ್ ಕಮಿಟಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಯಿತು.

    ಮಾಜಿ ಪ್ರಧಾನಿಗಳು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಜಪ್ರುಲ್ಲಾ ಖಾನ್, ಎಂ.ಕೃಷ್ಣಾರೆಡ್ಡಿ, ರಾಜಾ ವೆಂಕಟಪ್ಪ ನಾಯಕ, ಕೆ.ಎಂ.ತಿಮ್ಮರಾಯಪ್ಪ, ಟಿ.ಎ.ಶರವಣ, ಶಾರದಾ ಪೂರ್ಯನಾಯಕ್, ರೂತ್ ಮನೋರಮಾ, ವಿ.ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್, ವಿಲ್ಸನ್ ರೆಡ್ಡಿ, ಸುಧಾಕರ ಲಾಲ್, ಹೆಚ್.ಎಂ.ರಮೇಶ್ ಗೌಡ, ಆರ್.ಪ್ರಕಾಶ್, ಸಯ್ಯದ್ ಶಫಿ ಉಲ್ಲಾ, ನಾಸಿರ್ ಉಸ್ತಾದ್ ಹಾಗೂ ಕೋರ್ ಕಮಿಟಿ ಸಂಚಾಲಕರಾದ ಕೆ.ಎನ್.ತಿಪ್ಪೇಸ್ವಾಮಿ ಅವರು ಭಾಗವಹಿಸಿದ್ದರು.

    ಈ ಸಭೆಯಲ್ಲಿ ಎಚ್.ಡಿ.ದೇವೇಗೌಡರು ಹಾಗೂಎಚ್.ಡಿ.ಕುಮಾರಸ್ವಾಮಿ ಅವರು ಕೆಲವು ಮಹತ್ವದ ಅಂಶಗಳ ಬಗ್ಗೆ ಪಕ್ಷದ ಪ್ರಮುಖರಿಗೆ ಸಲಹೆ, ಸೂಚನೆಗಳನ್ನು ನೀಡಿದರು.

    ಮುಂದಿನ ವರ್ಷದಿಂದ ಒಂದೇ ಸಿಇಟಿ; ಕಾಮೆಡ್-ಕೆ ರದ್ದತಿಗೆ ಖಾಸಗಿ ಕಾಲೇಜುಗಳ ಒಲವು, ಎಂಜಿನಿಯರಿಂಗ್ ಶುಲ್ಕ ಶೇ.10ರಷ್ಟು ಮಾತ್ರ ಹೆಚ್ಚಳ

    BENGALURU JUNE 22

    ತಾನು ಈಗ ಪ್ರತ್ಯೇಕವಾಗಿ ನಡೆಸುತ್ತಿರುವ ಕಾಮೆಡ್-ಕೆ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಿ, ಸರಕಾರದ ಸಿಇಟಿ ವ್ಯವಸ್ಥೆಯಡಿಗೆ ವಾಪಸ್ ಬರಲು ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ (ಕ್ಯುಪೇಕಾ) ಆಸಕ್ತಿ ತೋರಿದೆ. ಈ ಸಂಬಂಧ ಒಪ್ಪಂದ ಆದ ಮೇಲೆ ಮುಂದಿನ ವರ್ಷದಿಂದ ಒಂದೇ ಸಿಇಟಿ ಮಾಡಲಾಗುವುದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಜೊತೆಗೆ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಯಥಾಸ್ಥಿತಿಯಲ್ಲಿದ್ದ ಎಂಜಿನಿಯರಿಂಗ್ ಶಿಕ್ಷಣ ಶುಲ್ಕವನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಹೊರೆಯಾಗದಂತೆ
    ಕೇವಲ ಶೇ.10ರಷ್ಟು ಮಾತ್ರ ಹೆಚ್ಚಿಸಲು ನಿರ್ಧರಿಸಲಾಗಿದೆ. ಶೇ.25ರಷ್ಟು ಶುಲ್ಕ ಏರಿಕೆ ಮಾಡಬೇಕೆಂಬ ಕ್ಯುಪೇಕಾ ಬೇಡಿಕೆ ಕಾರ್ಯಸಾಧುವಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಕ್ಯುಪೇಕಾ ಪ್ರತಿನಿಧಿಗಳ ಜತೆ ವಿಕಾಸಸೌಧದಲ್ಲಿ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಶುಲ್ಕ ಹೆಚ್ಚಳವು ಖಾಸಗಿ ಕಾಲೇಜುಗಳಲ್ಲಿ ಇರುವ ಸರಕಾರಿ ಎಂಜಿನಿಯರಿಂಗ್ ಸೀಟುಗಳಿಗೆ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇದನ್ನು ಮೀರಿ ಹೆಚ್ಚಿನ ಶುಲ್ಕ ವಸೂಲು ಮಾಡಿದರೆ ಅಂತಹ ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಕ್ಯುಪೇಕಾ ಪ್ರತಿನಿಧಿಗಳು ಕೂಡ ಒಪ್ಪಿಕೊಂಡಿದ್ದಾರೆ’ ಎಂದರು.

    ಖಾಸಗಿ ಕಾಲೇಜುಗಳು ದುಬಾರಿ ಶುಲ್ಕದ ಮ್ಯಾನೇಜ್ಮೆಂಟ್ ಸೀಟುಗಳಿಗಾಗಿ ತಾವೇ ನಡೆಸುತ್ತಿರುವ ಕಾಮೆಡ್-ಕೆ ಪರೀಕ್ಷೆಯನ್ನು ನಿಲ್ಲಿಸುವ ಸುಳಿವು‌ ನೀಡಿವೆ. ಇದರ ಸಾಧ್ಯತೆಗಳನ್ನು ಪರಿಶೀಲಿಸಲು ಉನ್ನತ ಸಮಿತಿ ರಚಿಸಲಾಗುವುದು. ಇದನ್ನು ಆಧರಿಸಿ, ಕ್ಯುಪೇಕಾ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.

    ಕಾಮೆಡ್-ಕೆ ಸ್ಥಗಿತಗೊಂಡರೆ, ಸರಕಾರವು ಸಿಇಟಿಯನ್ನು ಅಖಿಲ ಭಾರತ ವ್ಯಾಪ್ತಿಯಲ್ಲಿ ನಡೆಸಲಿದೆ. ಇದರಲ್ಲಿ ವಿದ್ಯಾರ್ಥಿಗಳು ಪಡೆಯುವ ರಾಂಕಿಂಗ್ ಆಧರಿಸಿ, ಈಗಿನಂತೆಯೇ ಸೀಟು ಹಂಚಲಾಗುವುದು. ಇದರಿಂದ ಈಗ ಆಗುತ್ತಿರುವ ಗೊಂದಲ ಮತ್ತು ಅಪವ್ಯಯ ಎರಡೂ ನಿವಾರಣೆ ಆಗಲಿವೆ ಎಂದು ಸಚಿವರು ನುಡಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕ್ಯುಪೇಕಾ ಅಧ್ಯಕ್ಷರೂ ಆದ ವಿಧಾನ ಪರಿಷತ್ತಿನ ಸದಸ್ಯ ಮಂಜುನಾಥ ಭಂಡಾರಿ ಸೇರಿದಂತೆ ಇತರ ಪದಾಧಿಕಾರಿಗಳು ಇದ್ದರು.

    ಪ್ರಾಣ,ಅಪಾನ, ವ್ಯಾನ,ಉದಾನ, ಸಮಾನ

    ದಿನ ಇಡೀ ಕಟ್ಟಡ ಕೆಲಸಗಳ ವೀಕ್ಷಣೆ, ಸಂಜೆ ಆರು ಗಂಟೆಯಿಂದ ರಾತ್ರಿ ಒಂಭತ್ತರ ವರೆಗೆ ನನ್ನ ಆಫೀಸಲ್ಲಿ ತಾಂತ್ರಿಕ ಸಲಹೆ. ಮನೆ,ಹೋಟೆಲ್,ಆಸ್ಪತ್ರೆ, ಗೋದಾಮುಗಳು ಅಥವಾ ಸಿಮೆಂಟ್ ಉಪಯೋಗಿಸಿ ಕಟ್ಟುವ ಯಾವುದೇ ರೀತಿಯ ಕಟ್ಟಡಗಳನ್ನು ಕಟ್ಟಿಸುವವರು ನನ್ನನ್ನು ಸಂಪರ್ಕಿಸುವ ಸಮಯ ಇದು. ಅಷ್ಟೇ ಅಲ್ಲ ನನ್ನ ತಾಂತ್ರಿಕ ಸಲಹೆಗಳ ಮೇರೆಗೆ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರರು, ಕಬ್ಬಿಣದ ಸರಳುಗಳನ್ನು ಕತ್ತರಿಸಿ,ಬಾಗಿಸಿ ತಾರಸಿಗೆ ಕಟ್ಟುವವರು, ಕೊಳಾಯಿ ಕೆಲಸದವರು, ಎಲೆಕ್ಟ್ರಿಸಿಎನ್ಸ್ ಮತ್ತು ಎಲ್ಲಾ ತರಹದ ನಿರ್ಮಾಣಕ್ಕೆ ಸಂಬಂಧ ಪಟ್ಟ ಕೆಲಸಗಾರರೂ ನನ್ನನ್ನು ಮುಖತಃ ಕಂಡು ಮುಂದಿನ ಕೆಲಸಗಳಿಗೆ ಸಲಹೆಗಳನ್ನು ತೆಗೆದುಕೊಳ್ಳುವ ಸಮಯ ಅದು.

    ಮೊದ ಮೊದಲು ಸಾಮಾನ್ಯ ಕೋಣೆಯಾಗಿದ್ದ ನನ್ನ ಈ ಸಲಹಾ ಕೊಠಡಿ ಬರಬರುತ್ತಾ ಸುಸಜ್ಜಿತ ಹವಾನಿಯಂತ್ರಿತ ಕೊಠಡಿಯಾಗಿ ಬದಲಾಗಿತ್ತು. ಬಹಳಷ್ಟು ಜನರು ಒಮ್ಮೆಲೇ ಬಂದಾಗ ಕೆಲವೊಮ್ಮೆ ಕಿರಿ ಕಿರಿ ಆದದ್ದೂ ಇದೆ. ಜೀವನದಲ್ಲಿ ಕಟ್ಟುವ ತಮ್ಮ ಕನಸಿನ ಒಂದೇ ಮನೆ ಹಾಗಿರಬೇಕು,ಹೀಗಿರಬೇಕು ಅನ್ನುವ ಯೋಚನೆಗಳೊಂದಿಗೆ ಇಡೀ ಕುಟುಂಬ ಮತ್ತು ಅವರ ಆಪ್ತರು ಬಂದು ಬಿಡುತ್ತಿದ್ದರು! ಅದು ಅಭ್ಯಾಸವಾಗಿದ್ದರೂ,ಮೊದ ಮೊದಲು ಹುರುಪಿನಿಂದ ಎಲ್ಲರ ಸಲಹೆಗಳನ್ನು ಸಮಾಧಾನದಿಂದ ಆಲಿಸುತ್ತಿದ್ದೆ. ಅದೇನು ವೃತ್ತಿ ಮದವೋ ಅಥವಾ 50 ದಾಟಿದ್ದ ಪರಿಣಾಮವೋ ಅಂತೂ ನಂತರ ಕಿರಿ ಕಿರಿ ಆಗುತ್ತಿತ್ತು.
    ಈಗ ಸುಮಾರು 8 ವರ್ಷಗಳ ಹಿಂದೆ ಅಮ್ಮನಿಗೆ ಒಂದು ಸಣ್ಣ ಶಸ್ತ್ರ ಚಿಕಿತ್ಸೆ ಆಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರೂ ಮನೆಯಲ್ಲಿ ಅವರ ಆರೈಕೆ ನಡೆದಿತ್ತು. ಗೊತ್ತಿರುವ, ಅವರ ಮನೆಯನ್ನು ನಾನೇ ಕಟ್ಟಿಸಿದ್ದ,ಪರಿಚಯದ ಡಾಕ್ಟರ್ ಒಬ್ಬರು ಮನೆಗೆ ಬಂದೇ ಅಮ್ಮನನ್ನು ಆಗಾಗ ನೋಡಿಕೊಂಡು ಹೋಗುತ್ತಿದ್ದರು. ಸುಮಾರು ಮೂರ್ನಾಲ್ಕು ತಿಂಗಳ ಕಾಲ ಅಮ್ಮ,ಅಪ್ಪನ ಸನಿಹ ನನಗೆ 50ರ ಹರೆಯದರಲ್ಲಿ ಮತ್ತೆ ಸಿಕ್ಕಿತ್ತು! ನನ್ನ ಇಬ್ಬರೂ ಮಕ್ಕಳು ಅಮ್ಮನಿಗೆ ಔಷಧಿ ತೆಗೆದು ಕಾಲ ಕಾಲಕ್ಕೆ ನೆನಪಿಸಿ ಕೊಡೋದು ಅಪ್ಪನಿಗೆ ಬಲು ಮುದ ನೀಡಿತ್ತು. ಮಂಜೂ ಮುದುಕರಿಗೆ ದೇವರು ರೋಗ,ರುಜಿನಗಳನ್ನು ಕೊಟ್ಟರೂ ಅದರಲ್ಲಿ ಇಂಥಹ ಸುಖ ಇಟ್ಟಿರುತ್ತಾನೆ ನೋಡು ಅಂದಿದ್ದರು!

    ಹಾಗೆ ಇದ್ದ ಸಮಯದಲ್ಲಿ ಮನೆಯ ಆವರಣದಲ್ಲೇ ಇದ್ದ ನನ್ನ ಆಫೀಸಿಗೆ ಅಪ್ಪ ಆಗಾಗ ಬರುತ್ತಿದ್ದರು. ಬಂದವರೇ ಈ ಹವಾನಿಯಂತ್ರಣ ಒಳ್ಳೆಯದಲ್ಲ, ಕಿಟಕಿ ತೆರೆದು ಬಿಡು ಅನ್ನುತ್ತಿದ್ದರು. ಬಳ್ಳಾರಿಯ ಬಿಸಿಲು 40 ಡಿಗ್ರಿ ದಾಟಿರುತ್ತಿತ್ತು. ರಾತ್ರಿಯಲ್ಲೂ ತಂಪು ಗಾಳಿ ಬೀಸುತ್ತಿರಲಿಲ್ಲ. ಅದಿಲ್ಲದೆ ಕೂರಲು ಅಸಾಧ್ಯ ಅನ್ನುವ ಸ್ಥಿತಿ ತಲುಪಿದ್ದರಿಂದ ನಕ್ಕು ಸುಮ್ಮನಾಗುತ್ತಿದ್ದೆ. ಅಪ್ಪ ಹಾಗೆಯೇ…ಮೊದಲಿಗೆ ಬೈಕ್ ತೆಗೆದುಕೊಂಡಾಗ ಬೈಕ್ ಏಕೆ, ಸೈಕಲ್ ಮೇಲೆ ಹೋದರೆ ಆಗದೇ…ಕಟ್ಟಡಗಳ ವೀಕ್ಷಣೆಗೆ… ಆರೋಗ್ಯ ಚೆನ್ನಾಗಿರುತ್ತದೆ ಅಂದಿದ್ದರು. ಆಗಲೂ ನಕ್ಕು ಸುಮ್ಮನಾಗಿದ್ದೆ.

    ಹಾಗೊಂದು ದಿನ ಆಫೀಸೆಲ್ಲಾ ಖಾಲಿ ಆದ ಮೇಲೆ ಒಳ ಬಂದರು. ಸ್ವಲ್ಪ ಬಳಲಿದ್ದ ನನ್ನನ್ನು ನೋಡಿ ಯಾಕೆ ಏನಾಯ್ತು, ಸಾಯಂಕಾಲ ಎಷ್ಟೊಂದು ಲವಲವಿಕೆಯಿಂದ ಇದೆಯಲ್ಲ….ಈಗೇಕೆ ಇಷ್ಟೊಂದು ಬಳಲಿದ್ದೀಯಾ ಅಂತ ಹಣೆಗೆ, ಕುತ್ತಿಗೆಯ ಕೆಳಗೆ ಕೈ ಇಟ್ಟೇ ಬಿಟ್ಟಿದ್ದರು…ನಾನು ಏನೂ ಇಲ್ಲ, ಕುಳಿತುಕೊಳ್ಳಿ ಅಂದು ತುಂಬಾ ದಿನದಿಂದ ನನ್ನನ್ನು ಕೊರೆಯುತ್ತಿದ್ದ ಒಂದು ವಿಷಯವನ್ನು ಅವರ ಹತ್ತಿರ ಪ್ರಸ್ತಾವಿಸಿದೆ.

    ಅಪ್ಪಾ, ನಾನು ಇಡೀ ದಿನ ಈ ಬಳ್ಳಾರಿಯ ಬಿಸಿಲಲ್ಲಿ ನಿಂತು ಕಟ್ಟಡಗಳಿಗೆ ತಾರಸಿ ಹಾಕಿಸಬಲ್ಲೆ ಆದರೆ ಕೆಲವೊಮ್ಮೆ ಈ ಕೊಠಡಿ ಒಳಗೆ ತಣ್ಣನೆಯ ಗಾಳಿಯಡಿ, ಸಾಯಂಕಾಲ ನಡೆಸುವ ಸಲಹಾ ಕ್ರಿಯೆ ತುಂಬಾ ಸುಸ್ತನ್ನು ತರುತ್ತದೆ, ಒಮ್ಮೊಮ್ಮೆ ನನ್ನೆಲ್ಲಾ ಶಕ್ತಿ ಹರಿದು ಹೋಗಿ ನಿಶಕ್ತನಾದೆ ಅಂತ ಅನ್ನಿಸುತ್ತೆ… ಅಂದೆ.

    ಯಾವಾಗಲೂ ಅಲ್ಲ…ಒಮ್ಮೊಮ್ಮೆ ಮಾತ್ರ. ಸುಮಾರು ನಾಲ್ಕೈದು ವರ್ಷಗಳಿಂದ ಇದನ್ನು ನಾನೇ ಗಮನಿಸಿದ್ದೇನೆ. ಸಾಯಂಕಾಲ, ನನ್ನ ಸಲಹಾ ವೇಳೆಯಲ್ಲೇ ಅಂತ ಏನೂ ಅಲ್ಲ, ಹಲವು ಸಾರಿ ಬೇರೆ ಬೇರೆ ಸಂಧರ್ಭಗಳಲ್ಲೂ ಹೀಗೆ ಕುಳಿತಾಗ ಯಾರಾದ್ರು ಬಂದು ಹೋದಾಗ ಆಗಿದ್ದನ್ನ ಸಂಕ್ಷಿಪ್ತವಾಗಿ ಹೇಳ್ತೀನಿ….ಅಂದೆ. ಹೇಳು ಅಂದರು.

    ಸಾಮಾನ್ಯವಾಗಿ ನನ್ನನ್ನು ಕಾಣಲು ಮೊದಲೇ ಕಾಲವನ್ನು ನಿರ್ಣಯಿಸಿಕೊಂಡು ಬರುವವರೂ, ಹಾಗೆಯೇ ಧಿಡೀರ್ ಅಂತ ಬರುವವರೂ ಇದ್ದಾರೆ. ಹಾಗೆ ಬರುವವರಲ್ಲಿ ಪರಿಚಿತರೂ,ಅಪರಿಚಿತರೂ ಇರ್ತಾರೆ. ಒಟ್ಟಾರೆ ಉದಾಹರಿಸಿ ಹೇಳೋದಾದ್ರೆ ಯಾರೋ ನನಗೆ ಹಣ ಕೊಡುವವರು ಬಂದಿರ್ತಾರೆ. ಅವರು ನಗುಮುಖದಿಂದ,ಅಪ್ಯಾಯತೆಯಿಂದ ಹಣ ಕೊಟ್ಟು ಸ್ವಲ್ಪ ಹೊತ್ತು ಅದು,ಇದು ಮಾತಾಡ್ತಾ ಕುಳಿತು ಹೋಗ್ತಾರೆ. ನನಗೆ ಅವರ ಬರುವು ಖುಷಿ ಕೊಟ್ಟಿರುತ್ತದೆ. ಆದರೆ ಅವರು ಬಂದು ಹಣ ಕೊಟ್ಟು ಹೋದಮೇಲೆ ಒಂದು ಥರಾ ಸುಸ್ತಿನ ಅನುಭವ ಆಗುತ್ತದೆ. ಇವರು ಬೇಗನೇ ಇಲ್ಲಿಂದ ಹೋದರೆ ಸಾಕು ಅನ್ನಿಸುತ್ತಿರುತ್ತದೆ…… ಮತ್ತೊಬ್ಬರು ಕಟ್ಟಡದಲ್ಲಿನ ಸಮಸ್ಯೆ, ಗುತ್ತಿಗೆದಾರನ ಮೇಲೆ ದೂರು, ಅದರ ಮುಖಾಂತರ ನನ್ನನ್ನೂ ದೂಷಿಸುತ್ತಾರೆ. ಆದರೂ ಅವರ ಇರುವು ನನಗೆ ಉಲ್ಲಾಸ ತರುತ್ತಿರುತ್ತದೆ. ಇನ್ನೂ ಸ್ವಲ್ಪ ಹೊತ್ತು ಕೂತುಕೊಂಡು ಮಾತಾಡಬೇಕು ಅನ್ನಿಸುತ್ತದೆ…..ಈ ಎರಡು ತೆರನಾದ ಅನುಭವಗಳನ್ನು ಸಾಕಷ್ಟು ಸಾರಿ ನಾನು ಗಮನಿಸಿದ್ದೇನೆ….ಅಂದೆ

    ಅರ್ಥ ಆಯ್ತು. ನಿನಗೆ ಹಣ ಕೊಟ್ಟವನ ಸನಿಹ ಹಿತ ಅನ್ನಿಸಬೇಕಿತ್ತು. ದೂಷಿಸುವವನ ಸನಿಹ ಕಿರಿ ಕಿರಿ ಆಗಬೇಕಿತ್ತು….ಆದರೆ ಉಲ್ಟಾ ಆಗೋದು ಯಾಕೆ ಅನ್ನೋದು ನಿನ್ನ ಸಮಸ್ಯೆ…ತಾನೇ? ಅಂದ್ರು, ನಾನು ಹೌದು ಅಂದೆ.

    ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಉಸಿರಾಡುವುದನ್ನು ಪ್ರಕೃತಿದತ್ತವಾಗಿ ರೂಢಿಸಿಕೊಂಡು ದೇಹಕ್ಕೆ ಬೇಕಾಗುವ ಶಕ್ತಿಯನ್ನು ಪಡೆದು, ಈ ದೇಹದ ದೈನಂದಿನ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳುತ್ತಾನೆ. ಈ ಶಕ್ತಿ ಹೆಚ್ಚಿಗೆ ವಿನಿಯೋಗಿಸುವುದು ಅವಶ್ಯ ಇದ್ದಾಗ ಜೋರಾಗಿ ಉಸಿರಾಡುತ್ತಾನೆ. ನೆಮ್ಮದಿಯಿಂದ ಕುಳಿತಾಗ ನಿಧಾನವಾಗಿ ಉಸಿರಾಡುತ್ತಾನೆ. ಇದು ಒಂದು ಸಾಮಾನ್ಯವಾದ, ಪ್ರತಿ ಜೀವಿಗಳಲ್ಲೂ ಇರುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಉಸಿರಾಟದ ಮುಖಾಂತರ ಎಷ್ಟೇ ಗಳಿಸಿಕೊಂಡು ವಿನಿಯೋಗಿಸಿದರೂ ದೇಹದಲ್ಲಿ ಶಕ್ತಿಯ ಒಂದಂಶ ಯಾವಾಗಲೂ ಇರಲೇ ಬೇಕು, ಜೀವಂತವಾಗಿರಲು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅದಕ್ಕೆ ಆ ವ್ಯಕ್ತಿಯ ಆರೋಗ್ಯ, ಮಾನಸಿಕ ಸ್ಥಿತಿ, ಜೀವನ ವಿಧಾನ ಮುಂತಾದ ಹಲವಾರು ಕಾರಣಗಳಿವೆ. ನಮ್ಮ ಹಿರಿಯರು ಇದನ್ನು ವಲಯ ಅಥವಾ ಇಂಗ್ಲಿಷ್ ನಲ್ಲಿ AURA ಅಂತ ಕರೆದಿದ್ದಾರೆ. ಇದನ್ನು ನೀನು ಹಣ ಗಳಿಸುವ ಹಾಗೆ ಗಳಿಸಬಹುದು ಮತ್ತು ಹಣವನ್ನು ವಿನಿಯೋಗಿಸಿದ ಹಾಗೆ ವಿನಿಯೋಗಿಸಬಹುದು. ಈ ಶಕ್ತಿ ಮೌನದಿಂದ,ನೆಮ್ಮದಿಯಿಂದ,ಧ್ಯಾನದಿಂದ, ಸದಾ ಗಳಿಸಿಕೊಂಡರೆ, ಸಿಟ್ಟು, ಅಸೂಯೆ, ದ್ವೇಷ ಮುಂತಾವುಗಳಿಂದ ವಿನಿಯೋಗವಾಗುತ್ತದೆ. ಈಗ ನೀವೆಲ್ಲಾ ಪಾಸಿಟಿವ್ ಎನರ್ಜಿ, ನೆಗೆಟಿವ್ ಎನರ್ಜಿ ಅಂತಿರಲ್ಲ ಹಾಗೆ.

    ಹಾಗೆ ಪ್ರತಿಯೊಬ್ಬರಲ್ಲೂ ಒಂದೊಂದು ಪ್ರಮಾಣದಲ್ಲಿರುವ ಈ ಶಕ್ತಿ, ವ್ಯಕ್ತಿಗಳ ನಡುವಣ ಸಂಬಂಧಗಳಿಗೂ ಮುಖ್ಯ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಈ ಶಕ್ತಿ ಸಾಧಾರಣ ಮಟ್ಟಕ್ಕಿಂತ ಹೆಚ್ಚಿಗೆ ಇರುವವರು ಯಾವುದೋ ಕಾರಣಕ್ಕೆ ಎಲ್ಲರಿಗೂ ಬೇಕಾದವರಾಗಿರುತ್ತಾರೆ.

    ಈಗ ನಿನ್ನ ಸಮಸ್ಯೆಗೆ ಇದು ಹೇಗೆ ಕಾರಣವಾಗುತ್ತೆ ಅನ್ನೋದು ನಿನ್ನ ಸಂಶಯ ಅಲ್ಲಾ?? ಹಾಗಾದ್ರೆ ಕೇಳು.

    ನಿನಗಿಂತಲೂ ಹೆಚ್ಚಿನ ಮಟ್ಟದ ಇಂತಹ ಶಕ್ತಿ ಇದ್ದವನು ನಿನಗೆ ಅಪರಿಚಿತನಾಗಲೀ, ನಿನ್ನ ಭೌತಿಕ ಇಂದ್ರಿಯಗಳಿಗೆ ಸುಖ ಕಲ್ಪಿಸುವ ಯಾವ ವಿಷಯವನ್ನೂ ಮಾಡದಿದ್ದರೂ ಅಂಥವರ ಇರುವು ನಿನಗೆ ಉಲ್ಲಾಸ ಮೂಡಿಸುತ್ತದೆ. ಕಾರಣ ಅವರ ಸನಿಹದಲ್ಲಿ ನಿನಗಿಂತಲೂ ಹೆಚ್ಚಿನ ಮಟ್ಟದಲ್ಲಿರುವ ಅವರ ಶಕ್ತಿ ಕಡಿಮೆ ಮಟ್ಟದ ನಿನ್ನ ಕಡೆ ಹರಿದು ಬರುತ್ತಿರುತ್ತದೆ.ನಿನ್ನ ವಿಜ್ಞಾನ ಹೇಳಿಲ್ಲವೇ ಶಕ್ತಿಯ ಸಂಚಯ ಹೆಚ್ಚಿನ ಮಟ್ಟದಿಂದ ಕಡಿಮೆ ಮಟ್ಟಕ್ಕೆ ಹರಿಯುತ್ತಿರುತ್ತದೆ ಅಂತ. ಹಾಗೆಯೇ ಇದು.

    ನಿನಗಿಂತಲೂ ಕಡಿಮೆ ಮಟ್ಟದ ಶಕ್ತಿ ಹೊಂದಿದ ವ್ಯಕ್ತಿ ನಿನ್ನ ಸನಿಹ ಕುಳಿತಾಗ ಅವನು ನಿನಗೆ ಹಣಕೊಟ್ಟರೂ, ನಿನಗೆ ಪ್ರಿಯವಾದ ಸಂಗತಿ ಹೇಳುತ್ತಿದ್ದರೂ ನಿನ್ನ ಶಕ್ತಿ ಅವನೆಡೆಗೆ ಹರಿಯುತ್ತಿದ್ದರಿಂದ ನಿನಗೆ ಅವನ ಇರುವು ಕಿರಿ ಕಿರಿ ಅನ್ನಿಸುತ್ತದೆ. ಎರಡು ವ್ಯಕ್ತಿಗಳ ಈ ಶಕ್ತಿಯ ಮಟ್ಟ ಒಂದೇ ಸ್ಥರದಲ್ಲಿ ಇದ್ದರೆ, ಅವರಿಬ್ಬರೂ ಒಬ್ಬರನ್ನೊಬ್ಬರ ಇರುವನ್ನು ಪ್ರೀತಿಸುತ್ತಾರೆ. ಅದರಲ್ಲೂ ಈ ರೀತಿಯ ಹವಾ ನಿಯಂತ್ರಿತ ಕೋಣೆಗಳಲ್ಲಿ ಅದರ ಪ್ರಭಾವ ಬಲು ತೀಕ್ಷ್ಣವಾಗಿರುತ್ತದೆ.ಈ ಉದ್ದೇಶಕ್ಕಾಗಿಯೇ ನಮ್ಮ ಸಂಪ್ರದಾಯಗಳಲ್ಲಿ ಯತಿಗಳನ್ನು, ಸ್ವಾಮಿಗಳನ್ನು, ಹಲವಾರು ಸಾಧಕರನ್ನು ಮುಟ್ಟುವುದು ಇರಲಿ, ಸಾಮಾನ್ಯನು ಹತ್ತಿರವೂ ಹೋಗಲು ನಿಷೇಧಿಸಿರುವುದು….ಅಂದು ಬಿಟ್ಟರು!

    ಧ್ಯಾನದಿಂದ, ಉಸಿರಾಟವನ್ನು ಕ್ರಮಬದ್ಧವಾಗಿ ಮಾಡುವ ಪ್ರಾಣಾಯಾಮದಿಂದ, ತಪಸ್ಸಿನಿಂದ ಇಂಥಹ ಶಕ್ತಿಯನ್ನು ಯೋಗಿಗಳು ಗಣನೀಯ ಮಟ್ಟದಲ್ಲಿ ಗಳಿಸಿಕೊಂಡಿರುತ್ತಾರೆ.ನಮ್ಮಂತಹ ಸಾಮಾನ್ಯರು ಒಳ್ಳೆಯ ನಡತೆಯಿಂದ, ಆರೋಗ್ಯಕರ ಜೀವನದಿಂದ ಒಂದು ಸಾಧಾರಣ ಮಟ್ಟದಲ್ಲಿ ಕಾಪಾಡಿಕೊಳ್ಳಬಹುದು.

    ಈ ಉಸಿರಾಟ ಅನ್ನೋದು ಪ್ರಕೃತಿ ಪ್ರತಿ ಜೀವಿಗಳಿಗೆ ಕೊಟ್ಟ ಶಕ್ತಿ ಸಂಚಲನ ಕ್ರಿಯೆ. ದೇಹದ ಹೊರಗಡೆ ಇರುವುದನ್ನು ಗಾಳಿ ಅಂದರೆ ಒಳಗಡೆ ಇರುವುದನ್ನ ಪ್ರಾಣ ಅಂತಾರೆ. ದೇಹದ ಬೇರೆ ಬೇರೆ ಭಾಗಗಳಲ್ಲಿ ಇರುವ ಈ ಪ್ರಾಣವನ್ನು ಪ್ರಾಣ,ಅಪಾನ, ವ್ಯಾನ,ಉದಾನ, ಸಮಾನ ಅಂತ ಪಂಚ ಪ್ರಾಣ ಅಂದಿದ್ದಾರೆ.

    ಹೊರಗಡೆ ಇರುವ ಗಾಳಿಯನ್ನು ವಾಹನದ ಚಕ್ರಗಳಲ್ಲಿಯ ರಬ್ಬರ್ ಚೀಲದಲ್ಲಿ ತುಂಬಿದಾಗ ಅದರ ಶಕ್ತಿ ಎಷ್ಟೊಂದು ಹೆಚ್ಚಾಗಿ, ಇಡೀ ವಾಹನದ ಭಾರವನ್ನು ವೇಗವಾಗಿ ಹೊತ್ತೊಯ್ಯಲು ಸಹಕಾರಿಯಾಗಿದೆ. ಹಾಗೆಯೇ ನಮ್ಮ ದೇಹದ ಕೋಟ್ಯಂತರ ಜೀವಕಣಗಳಲ್ಲಿ ಬೇರೆ ಬೇರೆ ಸ್ತರದಲ್ಲಿ ಇರುವ ವಾಯುವನ್ನು ಒಂದೇ ಸ್ಥರಕ್ಕೆ ತಂದರೆ, ಈ ದೇಹವೇ ಒಂದು ಅದ್ಭುತ ಶಕ್ತಿ ಕೇಂದ್ರವಾಗುತ್ತದೆ. ಈ ಉಸಿರಾಟದ ಕ್ರಮವೇ ನಮ್ಮ ಪರಂಪರೆಯಲ್ಲಿ ಹಠಯೋಗ ದ ಕಾಯಸಿದ್ಧಿ ಗೆ ಪ್ರೇರಣೆಯಾಗಿದೆ. ನಂತರ ಮನಃಸಿದ್ಧಿ ಗಾಗಿ ರೂಪುಗೊಂಡ ಪತಾಂಜಲಿ ಯೋಗ ದಲ್ಲಿ ಪ್ರಾಣಾಯಾಮ ವಾಗಿ ರೂಪುಗೊಂಡಿದೆ. ಈ ಕ್ರಮವಾದ ಉಸಿರಾಟದಿಂದ ಸಂಚಯಿಸಬಹುದಾದ ಶಕ್ತಿಯ ಸ್ಥರಕ್ಕೆ ಮಿತಿಯೇ ಇಲ್ಲ. ನಿನ್ನೊಳಗಿನ ಶಕ್ತಿಯನ್ನು ಹೊರಗಿನ ಪ್ರಕೃತಿಯಲ್ಲಿ ನೀನೇ ಲೀನ ಗೊಳಿಸುವಷ್ಟು ಸಾಧನೆ ಮಾಡಬಹುದು ಎಂಬುದನ್ನು ನಮ್ಮ ಸಾಕಷ್ಟು ದಾರ್ಶನಿಕರು ಸಾಧಿಸಿ ತೋರಿಸಿದ್ದಾರೆ ಎಂದು ಅಂದಿದ್ದರು.

    ಇಂತಹ ಉಸಿರಾಟವನ್ನು ಪ್ರಾಥಮಿಕ ಕ್ರಮವನ್ನಾಗಿ ಅಳವಡಿಸಿಕೊಂಡು ಮಾನವನ ಶಕ್ತಿ ಸಂಚಯಕ್ಕೆ ಅನುವು ಮಾಡಿಕೊಟ್ಟ ನಾಥ ಸಂಪ್ರದಾಯದ ಹಠಯೋಗಕ್ಕೂ, ಯೋಗ ಸಂಪ್ರದಾಯದ ಪತಾಂಜಲಿ ಯೋಗಕ್ಕೂ ನನ್ನ ಅನೇಕಾನೇಕ ನಮನಗಳು.

    ಇಂದು ವಿಶ್ವ ಯೋಗ ದಿನ…ನೆನಪಾಯ್ತು ಅಪ್ಪನ ವ್ಯಾಖ್ಯಾನ….ಎಲ್ಲರಿಗೂ ಯೋಗ ದಿನದ ಶುಭಾಶಯಗಳು.

    B R Ambedkar School Of Economics -ಬೇಸ್ ವಿವಿ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಮೋದಿ; ಅಂಬೇಡ್ಕರ್ ಪ್ರತಿಮೆ ಅನಾವರಣ, ಮೇಲ್ದರ್ಜೆಗೇರಿಸಿರುವ 150 ಐಟಿಐ ಉದ್ಘಾಟನೆ

    BENGALURU JUNE 20

    ಇಲ್ಲಿನ ಜ್ಞಾನಭಾರತಿ ಆವರಣದಲ್ಲಿರುವ `ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ’ದ (ಬೇಸ್) ನೂತನ ಕ್ಯಾಂಪಸ್ಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

    ಎರಡು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಸೋಮವಾರ ಬೆಂಗಳೂರಿಗೆ ಬಂದಿಳಿದ ಮೋದಿಯವರ ಈ ಕಾರ್ಯಕ್ರಮದಲ್ಲಿ ಭಾಷಣಗಳಿರಲಿಲ್ಲ; ಘೋಷಣೆಗಳಿರಲಿಲ್ಲ. ಮೌನದ ಚೆಲುವಿನಲ್ಲಿ ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದುದ್ದಕ್ಕೂ ಬೇಸ್ ಕ್ಯಾಂಪಸ್ಸಿನಲ್ಲಿ ಅವ್ಯಕ್ತ ಸಂಭ್ರಮ ಮನೆಮಾಡಿತ್ತು.

    ಕೊಮ್ಮಘಟ್ಟದಿಂದ ನೇರವಾಗಿ ಬೇಸ್’ ಕ್ಯಾಂಪಸ್ ತಲುಪಿದ ಪ್ರಧಾನಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗೌರವಾದರಗಳಿಂದ ಬರಮಾಡಿಕೊಂಡರು. ಬಳಿಕ ಮೋದಿ ಅವರು ಮೊದಲಿಗೆ,ಬೇಸ್’ ಆವರಣದಲ್ಲಿ ಪ್ರತಿಷ್ಠಾಪಿಸಿರುವ 22 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಮೂಲಕ ಸಂವಿಧಾನ ಶಿಲ್ಪಿ ಮತ್ತು ಅರ್ಥಶಾಸ್ತ್ರಜ್ಞ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಸೂಕ್ತ ಸ್ಮರಣೆಯ ಸಂಕೇತವನ್ನು ಸಮರ್ಪಿಸಿದ ಭಾವ ನೆರೆದಿದ್ದವರಲ್ಲಿ ಮನೆ ಮಾಡಿತ್ತು.

    ಇದಾದ ಬಳಿಕ ಬೇಸ್’ ಕ್ಯಾಂಪಸ್ಸಿನ ಆಡಳಿತ ವಿಭಾಗಕ್ಕೆ ತೆರಳಿದ ಅವರು, 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 13 ಬ್ಲಾಕ್ ಗಳನ್ನು ಲೋಕಾರ್ಪಣೆ ಮಾಡಿದರು. ಅಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರುಬೇಸ್’ ಪರಿವಾರದ ಪರವಾಗಿ ಅಂಬೇಡ್ಕರರ ಚಿಕ್ಕ ಪ್ರತಿಮೆಯನ್ನು ಪ್ರಧಾನಿಗೆ ಉಡುಗೊರೆಯಾಗಿ ಕೊಟ್ಟರು. ಪ್ರಧಾನಿ ಇದನ್ನು ಹರ್ಷಚಿತ್ತರಾಗಿ ಸ್ವೀಕರಿಸಿದರು.

    ಮೋದಿ ಅವರ ವೇಳಾಪಟ್ಟಿಯೆಂದರೆ, ಅಲ್ಲಿ ಅರೆನಿಮಿಷವೂ ವ್ಯರ್ಥವಾಗುವ ಪ್ರಶ್ನೆಯೇ ಇಲ್ಲ! ಇದಕ್ಕೆ ತಕ್ಕಂತೆ, ರಾಜ್ಯ ಸರಕಾರವು ಟಾಟಾ ಸಮೂಹದ ನೆರವಿನೊಂದಿಗೆ 4,736 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಿರುವ 150 ಸರಕಾರಿ ಐಟಿಐಗಳನ್ನು ರಾಜ್ಯಕ್ಕೆ ಸಮರ್ಪಿಸಿದರು. ಮೋದಿಯವರು ಇವುಗಳ ಚಾಲನೆಗೆ ಗುಂಡಿ ಒತ್ತುತ್ತಿದ್ದಂತೆಯೇ, ರಾಜ್ಯಾದ್ಯಂತ ಇರುವ ಐಟಿಐಗಳೆಲ್ಲ ನೂತನ ಅಧ್ಯಾಯಕ್ಕೆ ತೆರೆದುಕೊಂಡು, ಕ್ರಿಯಾಶೀಲವಾದವು. ಇದನ್ನು ಕಂಡು, ಮೋದಿ ಸಂತಸ ಪಟ್ಟರು.

    ಕ್ಷಣಾರ್ಧದಲ್ಲಿ ವಿದ್ಯಾರ್ಥಿಗಳ ಬಳಿಗೆ ಹೋದ ಅವರು, ಅವರೊಂದಿಗೆ ಐದಾರು ನಿಮಿಷ ಕಳೆದು, ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಿದರು. ಹಾಗೆಯೇ, ಕ್ಯಾಮರಾ ಕ್ಲಿಕ್ ಗಳಿಗೆ ಸಾಕ್ಷಿಯಾದರು. ಆದರೆ, ಏಕೋ ಸಮಾಧಾನವಾಗದೆ, `ಅಲ್ಲಿರುವ ಮೆಟ್ಟಲ ಬಳಿಗೆ ನೀವೆಲ್ಲ ಬನ್ನಿ. ಅಲ್ಲಿ ಫೋಟೋ ಸೆಷನ್ ಆಗಲಿ’ ಎಂದು ಹೇಳಿ, ಉನ್ನತೀಕರಿಸಿರುವ ಐಟಿಐ ಮಾದರಿಯನ್ನು ವೀಕ್ಷಿಸಲು ತೆರಳಿದರು. ಅಲ್ಲಿ ನಿಯೋಜಿತರಾಗಿದ್ದ ಸಿಬ್ಬಂದಿಯಿಂದ ಐಟಿಐ ಸಾಧನ-ಸಲಕರಣೆಗಳ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು.

    ಇಲ್ಲಿಂದ, ಕ್ಯಾಂಪಸ್ಸಿನ ಮೆಟ್ಟಿಲುಗಳ ಬಳಿ ತೆರಳಿದ ಅವರು, ಇನ್ನೊಮ್ಮೆ ಕ್ಯಾಮರಾಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಬಂಧಿ’ಯಾದರು. ಇವೆಲ್ಲದರ ಮಧ್ಯೆಯೇ ಕಾರ್ಯಕ್ರಮದಲ್ಲಿದ್ದ ಗಣ್ಯರಿಗೆ ಕೈ ಮುಗಿದು, ಅವರೊಂದಿಗೆ ಅರೆಘಳಿಗೆ ಮಾತನಾಡುತ್ತಲೇ ಮುಂದಡಿ ಇಡುತ್ತ ಹೋದರು. ಬೇಸ್ ಕ್ಯಾಂಪಸ್ಸಿನಿಂದ ಪುನಃ ಕೊಮ್ಮಘಟಕ್ಕೆ ಹೊರಟಾಗಲೂ ಮೋದಿ, ಎಲ್ಲರಿಗೂ ವಂದನೆಗಳನ್ನು ಅರ್ಪಿಸಿ, ತಮ್ಮ ಸುಸಂಸ್ಕೃತಿಯನ್ನು ಪ್ರದರ್ಶಿಸಿದರು. ಕೇವಲ ಒಂದು ಗಂಟೆ ಕಾಲಕ್ಕೂ ಕಡಿಮೆ ಅವಧಿಯಲ್ಲಿಬೇಸ್’ ಆವರಣ ಉಜ್ವಲ ಅಧ್ಯಾಯಕ್ಕೆ ಸಾಕ್ಷಿಯಾಯಿತು!

    ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನಗಳ ಉನ್ನತಾಧ್ಯಯನಕ್ಕೆ ಮೀಸಲಾಗಿರುವ `ಬೇಸ್’ ವಿ.ವಿ.ಯಲ್ಲಿ ಇನ್ನು ಮೂರು ವರ್ಷಗಳಲ್ಲಿ 1,100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಲಭ್ಯವಾಗಲಿದೆ. ಹಾಗೆಯೇ, ಮೇಲ್ದರ್ಜೆಗೇರಿಸಿರುವ ಐಟಿಐಗಳಿಂದ 1.70 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.

    ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಸೋಮಣ್ಣ, ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಶ್ರೀರಾಮುಲು, ಕುಲಪತಿ ಡಾ.ಭಾನುಮೂರ್ತಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಉಪಸ್ಥಿತರಿದ್ದರು.

    ಮಿದುಳು ಅಧ್ಯಯನ ಕೇಂದ್ರದ ಉದ್ಘಾಟನೆ
    ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ
    ಇದಕ್ಕೂ ಮುನ್ನ ಮೋದಿ, ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್ಸಿ) 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಿದುಳು ಅಧ್ಯಯನ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು. ಈ ಕೇಂದ್ರಕ್ಕೆ ಮೋದಿಯವರೇ 2015ರ ಫೆ.18ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

    ಈ ಕೇಂದ್ರವು, ಕರ್ನಾಟಕ ಮತ್ತು ಭಾರತದ ಗ್ರಾಮೀಣ ಭಾಗಗಳಲ್ಲಿ ನಡೆಸುತ್ತಿರುವ ಪ್ರಮುಖ ಸಂಶೋಧನೆಗಳತ್ತ ಗಮನ ಕೇಂದ್ರೀಕರಿಸಲಿದ್ದು, ಡಿಮೆನ್ಶಿಯಾ ಕಾಯಿಲೆಗೆ ವೈದ್ಯಕೀಯ ಪರಿಹಾರ ಕಂಡುಹಿಡಿಯಲಿದೆ.

    ಇದಾದ ಬಳಿಕ ಅವರು, ಐಐಎಸ್ಸಿ ಆವರಣದಲ್ಲಿ ತಲೆಯೆತ್ತಲಿರುವ 800ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯದ `ಬಾಗ್ಚಿ-ಪಾರ್ಥಸಾರಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ಯ ಬೃಹತ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಆಸ್ಪತ್ರೆಯ ನಿರ್ಮಾಣಕ್ಕೆ, ಉದ್ಯಮಿಗಳಾದ ಸುಸ್ಮಿತಾ ಮತ್ತು ಸುಬ್ರತೋ ಬಾಗ್ಚಿ ಹಾಗೂ ರಾಧಾ ಮತ್ತು ಎನ್.ಎಸ್.ಪಾರ್ಥಸಾರಥಿಯವರು 425 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ.

    ಈ ಆಸ್ಪತ್ರೆ ಕಾರ್ಯಾರಂಭ ಮಾಡತೊಡಗಿದರೆ, ಐಐಎಸ್ಸಿಯಲ್ಲಿ ಅಂತರ್ಶಿಸ್ತೀಯ ತರಬೇತಿ, ಸಂಶೋಧನೆ, ಮತ್ತು ಕ್ಯಾನ್ಸರ್ ಹಾಗೂ ಹೃದ್ರೋಗಗಳಂಥ ಕಾಯಿಲೆಗಳಿಗೆ ಚಿಕಿತ್ಸೆ ಸಾಧ್ಯವಾಗಲಿದೆ. ಜೊತೆಗೆ, ಪ್ಲಾಸ್ಟಿಕ್ ಸರ್ಜರಿ, ರೋಬೋಟಿಕ್ ಸರ್ಜರಿ, ಅಂಗಾಂಗ ಕಸಿ ಕೂಡ ನಡೆಯಲಿದೆ.

    ಕ್ಯಾಪ್ಶನ್

    error: Content is protected !!