33.6 C
Karnataka
Monday, May 13, 2024

    ಪ್ರಾಣ,ಅಪಾನ, ವ್ಯಾನ,ಉದಾನ, ಸಮಾನ

    Must read

    ದಿನ ಇಡೀ ಕಟ್ಟಡ ಕೆಲಸಗಳ ವೀಕ್ಷಣೆ, ಸಂಜೆ ಆರು ಗಂಟೆಯಿಂದ ರಾತ್ರಿ ಒಂಭತ್ತರ ವರೆಗೆ ನನ್ನ ಆಫೀಸಲ್ಲಿ ತಾಂತ್ರಿಕ ಸಲಹೆ. ಮನೆ,ಹೋಟೆಲ್,ಆಸ್ಪತ್ರೆ, ಗೋದಾಮುಗಳು ಅಥವಾ ಸಿಮೆಂಟ್ ಉಪಯೋಗಿಸಿ ಕಟ್ಟುವ ಯಾವುದೇ ರೀತಿಯ ಕಟ್ಟಡಗಳನ್ನು ಕಟ್ಟಿಸುವವರು ನನ್ನನ್ನು ಸಂಪರ್ಕಿಸುವ ಸಮಯ ಇದು. ಅಷ್ಟೇ ಅಲ್ಲ ನನ್ನ ತಾಂತ್ರಿಕ ಸಲಹೆಗಳ ಮೇರೆಗೆ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರರು, ಕಬ್ಬಿಣದ ಸರಳುಗಳನ್ನು ಕತ್ತರಿಸಿ,ಬಾಗಿಸಿ ತಾರಸಿಗೆ ಕಟ್ಟುವವರು, ಕೊಳಾಯಿ ಕೆಲಸದವರು, ಎಲೆಕ್ಟ್ರಿಸಿಎನ್ಸ್ ಮತ್ತು ಎಲ್ಲಾ ತರಹದ ನಿರ್ಮಾಣಕ್ಕೆ ಸಂಬಂಧ ಪಟ್ಟ ಕೆಲಸಗಾರರೂ ನನ್ನನ್ನು ಮುಖತಃ ಕಂಡು ಮುಂದಿನ ಕೆಲಸಗಳಿಗೆ ಸಲಹೆಗಳನ್ನು ತೆಗೆದುಕೊಳ್ಳುವ ಸಮಯ ಅದು.

    ಮೊದ ಮೊದಲು ಸಾಮಾನ್ಯ ಕೋಣೆಯಾಗಿದ್ದ ನನ್ನ ಈ ಸಲಹಾ ಕೊಠಡಿ ಬರಬರುತ್ತಾ ಸುಸಜ್ಜಿತ ಹವಾನಿಯಂತ್ರಿತ ಕೊಠಡಿಯಾಗಿ ಬದಲಾಗಿತ್ತು. ಬಹಳಷ್ಟು ಜನರು ಒಮ್ಮೆಲೇ ಬಂದಾಗ ಕೆಲವೊಮ್ಮೆ ಕಿರಿ ಕಿರಿ ಆದದ್ದೂ ಇದೆ. ಜೀವನದಲ್ಲಿ ಕಟ್ಟುವ ತಮ್ಮ ಕನಸಿನ ಒಂದೇ ಮನೆ ಹಾಗಿರಬೇಕು,ಹೀಗಿರಬೇಕು ಅನ್ನುವ ಯೋಚನೆಗಳೊಂದಿಗೆ ಇಡೀ ಕುಟುಂಬ ಮತ್ತು ಅವರ ಆಪ್ತರು ಬಂದು ಬಿಡುತ್ತಿದ್ದರು! ಅದು ಅಭ್ಯಾಸವಾಗಿದ್ದರೂ,ಮೊದ ಮೊದಲು ಹುರುಪಿನಿಂದ ಎಲ್ಲರ ಸಲಹೆಗಳನ್ನು ಸಮಾಧಾನದಿಂದ ಆಲಿಸುತ್ತಿದ್ದೆ. ಅದೇನು ವೃತ್ತಿ ಮದವೋ ಅಥವಾ 50 ದಾಟಿದ್ದ ಪರಿಣಾಮವೋ ಅಂತೂ ನಂತರ ಕಿರಿ ಕಿರಿ ಆಗುತ್ತಿತ್ತು.
    ಈಗ ಸುಮಾರು 8 ವರ್ಷಗಳ ಹಿಂದೆ ಅಮ್ಮನಿಗೆ ಒಂದು ಸಣ್ಣ ಶಸ್ತ್ರ ಚಿಕಿತ್ಸೆ ಆಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರೂ ಮನೆಯಲ್ಲಿ ಅವರ ಆರೈಕೆ ನಡೆದಿತ್ತು. ಗೊತ್ತಿರುವ, ಅವರ ಮನೆಯನ್ನು ನಾನೇ ಕಟ್ಟಿಸಿದ್ದ,ಪರಿಚಯದ ಡಾಕ್ಟರ್ ಒಬ್ಬರು ಮನೆಗೆ ಬಂದೇ ಅಮ್ಮನನ್ನು ಆಗಾಗ ನೋಡಿಕೊಂಡು ಹೋಗುತ್ತಿದ್ದರು. ಸುಮಾರು ಮೂರ್ನಾಲ್ಕು ತಿಂಗಳ ಕಾಲ ಅಮ್ಮ,ಅಪ್ಪನ ಸನಿಹ ನನಗೆ 50ರ ಹರೆಯದರಲ್ಲಿ ಮತ್ತೆ ಸಿಕ್ಕಿತ್ತು! ನನ್ನ ಇಬ್ಬರೂ ಮಕ್ಕಳು ಅಮ್ಮನಿಗೆ ಔಷಧಿ ತೆಗೆದು ಕಾಲ ಕಾಲಕ್ಕೆ ನೆನಪಿಸಿ ಕೊಡೋದು ಅಪ್ಪನಿಗೆ ಬಲು ಮುದ ನೀಡಿತ್ತು. ಮಂಜೂ ಮುದುಕರಿಗೆ ದೇವರು ರೋಗ,ರುಜಿನಗಳನ್ನು ಕೊಟ್ಟರೂ ಅದರಲ್ಲಿ ಇಂಥಹ ಸುಖ ಇಟ್ಟಿರುತ್ತಾನೆ ನೋಡು ಅಂದಿದ್ದರು!

    ಹಾಗೆ ಇದ್ದ ಸಮಯದಲ್ಲಿ ಮನೆಯ ಆವರಣದಲ್ಲೇ ಇದ್ದ ನನ್ನ ಆಫೀಸಿಗೆ ಅಪ್ಪ ಆಗಾಗ ಬರುತ್ತಿದ್ದರು. ಬಂದವರೇ ಈ ಹವಾನಿಯಂತ್ರಣ ಒಳ್ಳೆಯದಲ್ಲ, ಕಿಟಕಿ ತೆರೆದು ಬಿಡು ಅನ್ನುತ್ತಿದ್ದರು. ಬಳ್ಳಾರಿಯ ಬಿಸಿಲು 40 ಡಿಗ್ರಿ ದಾಟಿರುತ್ತಿತ್ತು. ರಾತ್ರಿಯಲ್ಲೂ ತಂಪು ಗಾಳಿ ಬೀಸುತ್ತಿರಲಿಲ್ಲ. ಅದಿಲ್ಲದೆ ಕೂರಲು ಅಸಾಧ್ಯ ಅನ್ನುವ ಸ್ಥಿತಿ ತಲುಪಿದ್ದರಿಂದ ನಕ್ಕು ಸುಮ್ಮನಾಗುತ್ತಿದ್ದೆ. ಅಪ್ಪ ಹಾಗೆಯೇ…ಮೊದಲಿಗೆ ಬೈಕ್ ತೆಗೆದುಕೊಂಡಾಗ ಬೈಕ್ ಏಕೆ, ಸೈಕಲ್ ಮೇಲೆ ಹೋದರೆ ಆಗದೇ…ಕಟ್ಟಡಗಳ ವೀಕ್ಷಣೆಗೆ… ಆರೋಗ್ಯ ಚೆನ್ನಾಗಿರುತ್ತದೆ ಅಂದಿದ್ದರು. ಆಗಲೂ ನಕ್ಕು ಸುಮ್ಮನಾಗಿದ್ದೆ.

    ಹಾಗೊಂದು ದಿನ ಆಫೀಸೆಲ್ಲಾ ಖಾಲಿ ಆದ ಮೇಲೆ ಒಳ ಬಂದರು. ಸ್ವಲ್ಪ ಬಳಲಿದ್ದ ನನ್ನನ್ನು ನೋಡಿ ಯಾಕೆ ಏನಾಯ್ತು, ಸಾಯಂಕಾಲ ಎಷ್ಟೊಂದು ಲವಲವಿಕೆಯಿಂದ ಇದೆಯಲ್ಲ….ಈಗೇಕೆ ಇಷ್ಟೊಂದು ಬಳಲಿದ್ದೀಯಾ ಅಂತ ಹಣೆಗೆ, ಕುತ್ತಿಗೆಯ ಕೆಳಗೆ ಕೈ ಇಟ್ಟೇ ಬಿಟ್ಟಿದ್ದರು…ನಾನು ಏನೂ ಇಲ್ಲ, ಕುಳಿತುಕೊಳ್ಳಿ ಅಂದು ತುಂಬಾ ದಿನದಿಂದ ನನ್ನನ್ನು ಕೊರೆಯುತ್ತಿದ್ದ ಒಂದು ವಿಷಯವನ್ನು ಅವರ ಹತ್ತಿರ ಪ್ರಸ್ತಾವಿಸಿದೆ.

    ಅಪ್ಪಾ, ನಾನು ಇಡೀ ದಿನ ಈ ಬಳ್ಳಾರಿಯ ಬಿಸಿಲಲ್ಲಿ ನಿಂತು ಕಟ್ಟಡಗಳಿಗೆ ತಾರಸಿ ಹಾಕಿಸಬಲ್ಲೆ ಆದರೆ ಕೆಲವೊಮ್ಮೆ ಈ ಕೊಠಡಿ ಒಳಗೆ ತಣ್ಣನೆಯ ಗಾಳಿಯಡಿ, ಸಾಯಂಕಾಲ ನಡೆಸುವ ಸಲಹಾ ಕ್ರಿಯೆ ತುಂಬಾ ಸುಸ್ತನ್ನು ತರುತ್ತದೆ, ಒಮ್ಮೊಮ್ಮೆ ನನ್ನೆಲ್ಲಾ ಶಕ್ತಿ ಹರಿದು ಹೋಗಿ ನಿಶಕ್ತನಾದೆ ಅಂತ ಅನ್ನಿಸುತ್ತೆ… ಅಂದೆ.

    ಯಾವಾಗಲೂ ಅಲ್ಲ…ಒಮ್ಮೊಮ್ಮೆ ಮಾತ್ರ. ಸುಮಾರು ನಾಲ್ಕೈದು ವರ್ಷಗಳಿಂದ ಇದನ್ನು ನಾನೇ ಗಮನಿಸಿದ್ದೇನೆ. ಸಾಯಂಕಾಲ, ನನ್ನ ಸಲಹಾ ವೇಳೆಯಲ್ಲೇ ಅಂತ ಏನೂ ಅಲ್ಲ, ಹಲವು ಸಾರಿ ಬೇರೆ ಬೇರೆ ಸಂಧರ್ಭಗಳಲ್ಲೂ ಹೀಗೆ ಕುಳಿತಾಗ ಯಾರಾದ್ರು ಬಂದು ಹೋದಾಗ ಆಗಿದ್ದನ್ನ ಸಂಕ್ಷಿಪ್ತವಾಗಿ ಹೇಳ್ತೀನಿ….ಅಂದೆ. ಹೇಳು ಅಂದರು.

    ಸಾಮಾನ್ಯವಾಗಿ ನನ್ನನ್ನು ಕಾಣಲು ಮೊದಲೇ ಕಾಲವನ್ನು ನಿರ್ಣಯಿಸಿಕೊಂಡು ಬರುವವರೂ, ಹಾಗೆಯೇ ಧಿಡೀರ್ ಅಂತ ಬರುವವರೂ ಇದ್ದಾರೆ. ಹಾಗೆ ಬರುವವರಲ್ಲಿ ಪರಿಚಿತರೂ,ಅಪರಿಚಿತರೂ ಇರ್ತಾರೆ. ಒಟ್ಟಾರೆ ಉದಾಹರಿಸಿ ಹೇಳೋದಾದ್ರೆ ಯಾರೋ ನನಗೆ ಹಣ ಕೊಡುವವರು ಬಂದಿರ್ತಾರೆ. ಅವರು ನಗುಮುಖದಿಂದ,ಅಪ್ಯಾಯತೆಯಿಂದ ಹಣ ಕೊಟ್ಟು ಸ್ವಲ್ಪ ಹೊತ್ತು ಅದು,ಇದು ಮಾತಾಡ್ತಾ ಕುಳಿತು ಹೋಗ್ತಾರೆ. ನನಗೆ ಅವರ ಬರುವು ಖುಷಿ ಕೊಟ್ಟಿರುತ್ತದೆ. ಆದರೆ ಅವರು ಬಂದು ಹಣ ಕೊಟ್ಟು ಹೋದಮೇಲೆ ಒಂದು ಥರಾ ಸುಸ್ತಿನ ಅನುಭವ ಆಗುತ್ತದೆ. ಇವರು ಬೇಗನೇ ಇಲ್ಲಿಂದ ಹೋದರೆ ಸಾಕು ಅನ್ನಿಸುತ್ತಿರುತ್ತದೆ…… ಮತ್ತೊಬ್ಬರು ಕಟ್ಟಡದಲ್ಲಿನ ಸಮಸ್ಯೆ, ಗುತ್ತಿಗೆದಾರನ ಮೇಲೆ ದೂರು, ಅದರ ಮುಖಾಂತರ ನನ್ನನ್ನೂ ದೂಷಿಸುತ್ತಾರೆ. ಆದರೂ ಅವರ ಇರುವು ನನಗೆ ಉಲ್ಲಾಸ ತರುತ್ತಿರುತ್ತದೆ. ಇನ್ನೂ ಸ್ವಲ್ಪ ಹೊತ್ತು ಕೂತುಕೊಂಡು ಮಾತಾಡಬೇಕು ಅನ್ನಿಸುತ್ತದೆ…..ಈ ಎರಡು ತೆರನಾದ ಅನುಭವಗಳನ್ನು ಸಾಕಷ್ಟು ಸಾರಿ ನಾನು ಗಮನಿಸಿದ್ದೇನೆ….ಅಂದೆ

    ಅರ್ಥ ಆಯ್ತು. ನಿನಗೆ ಹಣ ಕೊಟ್ಟವನ ಸನಿಹ ಹಿತ ಅನ್ನಿಸಬೇಕಿತ್ತು. ದೂಷಿಸುವವನ ಸನಿಹ ಕಿರಿ ಕಿರಿ ಆಗಬೇಕಿತ್ತು….ಆದರೆ ಉಲ್ಟಾ ಆಗೋದು ಯಾಕೆ ಅನ್ನೋದು ನಿನ್ನ ಸಮಸ್ಯೆ…ತಾನೇ? ಅಂದ್ರು, ನಾನು ಹೌದು ಅಂದೆ.

    ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಉಸಿರಾಡುವುದನ್ನು ಪ್ರಕೃತಿದತ್ತವಾಗಿ ರೂಢಿಸಿಕೊಂಡು ದೇಹಕ್ಕೆ ಬೇಕಾಗುವ ಶಕ್ತಿಯನ್ನು ಪಡೆದು, ಈ ದೇಹದ ದೈನಂದಿನ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳುತ್ತಾನೆ. ಈ ಶಕ್ತಿ ಹೆಚ್ಚಿಗೆ ವಿನಿಯೋಗಿಸುವುದು ಅವಶ್ಯ ಇದ್ದಾಗ ಜೋರಾಗಿ ಉಸಿರಾಡುತ್ತಾನೆ. ನೆಮ್ಮದಿಯಿಂದ ಕುಳಿತಾಗ ನಿಧಾನವಾಗಿ ಉಸಿರಾಡುತ್ತಾನೆ. ಇದು ಒಂದು ಸಾಮಾನ್ಯವಾದ, ಪ್ರತಿ ಜೀವಿಗಳಲ್ಲೂ ಇರುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಉಸಿರಾಟದ ಮುಖಾಂತರ ಎಷ್ಟೇ ಗಳಿಸಿಕೊಂಡು ವಿನಿಯೋಗಿಸಿದರೂ ದೇಹದಲ್ಲಿ ಶಕ್ತಿಯ ಒಂದಂಶ ಯಾವಾಗಲೂ ಇರಲೇ ಬೇಕು, ಜೀವಂತವಾಗಿರಲು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅದಕ್ಕೆ ಆ ವ್ಯಕ್ತಿಯ ಆರೋಗ್ಯ, ಮಾನಸಿಕ ಸ್ಥಿತಿ, ಜೀವನ ವಿಧಾನ ಮುಂತಾದ ಹಲವಾರು ಕಾರಣಗಳಿವೆ. ನಮ್ಮ ಹಿರಿಯರು ಇದನ್ನು ವಲಯ ಅಥವಾ ಇಂಗ್ಲಿಷ್ ನಲ್ಲಿ AURA ಅಂತ ಕರೆದಿದ್ದಾರೆ. ಇದನ್ನು ನೀನು ಹಣ ಗಳಿಸುವ ಹಾಗೆ ಗಳಿಸಬಹುದು ಮತ್ತು ಹಣವನ್ನು ವಿನಿಯೋಗಿಸಿದ ಹಾಗೆ ವಿನಿಯೋಗಿಸಬಹುದು. ಈ ಶಕ್ತಿ ಮೌನದಿಂದ,ನೆಮ್ಮದಿಯಿಂದ,ಧ್ಯಾನದಿಂದ, ಸದಾ ಗಳಿಸಿಕೊಂಡರೆ, ಸಿಟ್ಟು, ಅಸೂಯೆ, ದ್ವೇಷ ಮುಂತಾವುಗಳಿಂದ ವಿನಿಯೋಗವಾಗುತ್ತದೆ. ಈಗ ನೀವೆಲ್ಲಾ ಪಾಸಿಟಿವ್ ಎನರ್ಜಿ, ನೆಗೆಟಿವ್ ಎನರ್ಜಿ ಅಂತಿರಲ್ಲ ಹಾಗೆ.

    ಹಾಗೆ ಪ್ರತಿಯೊಬ್ಬರಲ್ಲೂ ಒಂದೊಂದು ಪ್ರಮಾಣದಲ್ಲಿರುವ ಈ ಶಕ್ತಿ, ವ್ಯಕ್ತಿಗಳ ನಡುವಣ ಸಂಬಂಧಗಳಿಗೂ ಮುಖ್ಯ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಈ ಶಕ್ತಿ ಸಾಧಾರಣ ಮಟ್ಟಕ್ಕಿಂತ ಹೆಚ್ಚಿಗೆ ಇರುವವರು ಯಾವುದೋ ಕಾರಣಕ್ಕೆ ಎಲ್ಲರಿಗೂ ಬೇಕಾದವರಾಗಿರುತ್ತಾರೆ.

    ಈಗ ನಿನ್ನ ಸಮಸ್ಯೆಗೆ ಇದು ಹೇಗೆ ಕಾರಣವಾಗುತ್ತೆ ಅನ್ನೋದು ನಿನ್ನ ಸಂಶಯ ಅಲ್ಲಾ?? ಹಾಗಾದ್ರೆ ಕೇಳು.

    ನಿನಗಿಂತಲೂ ಹೆಚ್ಚಿನ ಮಟ್ಟದ ಇಂತಹ ಶಕ್ತಿ ಇದ್ದವನು ನಿನಗೆ ಅಪರಿಚಿತನಾಗಲೀ, ನಿನ್ನ ಭೌತಿಕ ಇಂದ್ರಿಯಗಳಿಗೆ ಸುಖ ಕಲ್ಪಿಸುವ ಯಾವ ವಿಷಯವನ್ನೂ ಮಾಡದಿದ್ದರೂ ಅಂಥವರ ಇರುವು ನಿನಗೆ ಉಲ್ಲಾಸ ಮೂಡಿಸುತ್ತದೆ. ಕಾರಣ ಅವರ ಸನಿಹದಲ್ಲಿ ನಿನಗಿಂತಲೂ ಹೆಚ್ಚಿನ ಮಟ್ಟದಲ್ಲಿರುವ ಅವರ ಶಕ್ತಿ ಕಡಿಮೆ ಮಟ್ಟದ ನಿನ್ನ ಕಡೆ ಹರಿದು ಬರುತ್ತಿರುತ್ತದೆ.ನಿನ್ನ ವಿಜ್ಞಾನ ಹೇಳಿಲ್ಲವೇ ಶಕ್ತಿಯ ಸಂಚಯ ಹೆಚ್ಚಿನ ಮಟ್ಟದಿಂದ ಕಡಿಮೆ ಮಟ್ಟಕ್ಕೆ ಹರಿಯುತ್ತಿರುತ್ತದೆ ಅಂತ. ಹಾಗೆಯೇ ಇದು.

    ನಿನಗಿಂತಲೂ ಕಡಿಮೆ ಮಟ್ಟದ ಶಕ್ತಿ ಹೊಂದಿದ ವ್ಯಕ್ತಿ ನಿನ್ನ ಸನಿಹ ಕುಳಿತಾಗ ಅವನು ನಿನಗೆ ಹಣಕೊಟ್ಟರೂ, ನಿನಗೆ ಪ್ರಿಯವಾದ ಸಂಗತಿ ಹೇಳುತ್ತಿದ್ದರೂ ನಿನ್ನ ಶಕ್ತಿ ಅವನೆಡೆಗೆ ಹರಿಯುತ್ತಿದ್ದರಿಂದ ನಿನಗೆ ಅವನ ಇರುವು ಕಿರಿ ಕಿರಿ ಅನ್ನಿಸುತ್ತದೆ. ಎರಡು ವ್ಯಕ್ತಿಗಳ ಈ ಶಕ್ತಿಯ ಮಟ್ಟ ಒಂದೇ ಸ್ಥರದಲ್ಲಿ ಇದ್ದರೆ, ಅವರಿಬ್ಬರೂ ಒಬ್ಬರನ್ನೊಬ್ಬರ ಇರುವನ್ನು ಪ್ರೀತಿಸುತ್ತಾರೆ. ಅದರಲ್ಲೂ ಈ ರೀತಿಯ ಹವಾ ನಿಯಂತ್ರಿತ ಕೋಣೆಗಳಲ್ಲಿ ಅದರ ಪ್ರಭಾವ ಬಲು ತೀಕ್ಷ್ಣವಾಗಿರುತ್ತದೆ.ಈ ಉದ್ದೇಶಕ್ಕಾಗಿಯೇ ನಮ್ಮ ಸಂಪ್ರದಾಯಗಳಲ್ಲಿ ಯತಿಗಳನ್ನು, ಸ್ವಾಮಿಗಳನ್ನು, ಹಲವಾರು ಸಾಧಕರನ್ನು ಮುಟ್ಟುವುದು ಇರಲಿ, ಸಾಮಾನ್ಯನು ಹತ್ತಿರವೂ ಹೋಗಲು ನಿಷೇಧಿಸಿರುವುದು….ಅಂದು ಬಿಟ್ಟರು!

    ಧ್ಯಾನದಿಂದ, ಉಸಿರಾಟವನ್ನು ಕ್ರಮಬದ್ಧವಾಗಿ ಮಾಡುವ ಪ್ರಾಣಾಯಾಮದಿಂದ, ತಪಸ್ಸಿನಿಂದ ಇಂಥಹ ಶಕ್ತಿಯನ್ನು ಯೋಗಿಗಳು ಗಣನೀಯ ಮಟ್ಟದಲ್ಲಿ ಗಳಿಸಿಕೊಂಡಿರುತ್ತಾರೆ.ನಮ್ಮಂತಹ ಸಾಮಾನ್ಯರು ಒಳ್ಳೆಯ ನಡತೆಯಿಂದ, ಆರೋಗ್ಯಕರ ಜೀವನದಿಂದ ಒಂದು ಸಾಧಾರಣ ಮಟ್ಟದಲ್ಲಿ ಕಾಪಾಡಿಕೊಳ್ಳಬಹುದು.

    ಈ ಉಸಿರಾಟ ಅನ್ನೋದು ಪ್ರಕೃತಿ ಪ್ರತಿ ಜೀವಿಗಳಿಗೆ ಕೊಟ್ಟ ಶಕ್ತಿ ಸಂಚಲನ ಕ್ರಿಯೆ. ದೇಹದ ಹೊರಗಡೆ ಇರುವುದನ್ನು ಗಾಳಿ ಅಂದರೆ ಒಳಗಡೆ ಇರುವುದನ್ನ ಪ್ರಾಣ ಅಂತಾರೆ. ದೇಹದ ಬೇರೆ ಬೇರೆ ಭಾಗಗಳಲ್ಲಿ ಇರುವ ಈ ಪ್ರಾಣವನ್ನು ಪ್ರಾಣ,ಅಪಾನ, ವ್ಯಾನ,ಉದಾನ, ಸಮಾನ ಅಂತ ಪಂಚ ಪ್ರಾಣ ಅಂದಿದ್ದಾರೆ.

    ಹೊರಗಡೆ ಇರುವ ಗಾಳಿಯನ್ನು ವಾಹನದ ಚಕ್ರಗಳಲ್ಲಿಯ ರಬ್ಬರ್ ಚೀಲದಲ್ಲಿ ತುಂಬಿದಾಗ ಅದರ ಶಕ್ತಿ ಎಷ್ಟೊಂದು ಹೆಚ್ಚಾಗಿ, ಇಡೀ ವಾಹನದ ಭಾರವನ್ನು ವೇಗವಾಗಿ ಹೊತ್ತೊಯ್ಯಲು ಸಹಕಾರಿಯಾಗಿದೆ. ಹಾಗೆಯೇ ನಮ್ಮ ದೇಹದ ಕೋಟ್ಯಂತರ ಜೀವಕಣಗಳಲ್ಲಿ ಬೇರೆ ಬೇರೆ ಸ್ತರದಲ್ಲಿ ಇರುವ ವಾಯುವನ್ನು ಒಂದೇ ಸ್ಥರಕ್ಕೆ ತಂದರೆ, ಈ ದೇಹವೇ ಒಂದು ಅದ್ಭುತ ಶಕ್ತಿ ಕೇಂದ್ರವಾಗುತ್ತದೆ. ಈ ಉಸಿರಾಟದ ಕ್ರಮವೇ ನಮ್ಮ ಪರಂಪರೆಯಲ್ಲಿ ಹಠಯೋಗ ದ ಕಾಯಸಿದ್ಧಿ ಗೆ ಪ್ರೇರಣೆಯಾಗಿದೆ. ನಂತರ ಮನಃಸಿದ್ಧಿ ಗಾಗಿ ರೂಪುಗೊಂಡ ಪತಾಂಜಲಿ ಯೋಗ ದಲ್ಲಿ ಪ್ರಾಣಾಯಾಮ ವಾಗಿ ರೂಪುಗೊಂಡಿದೆ. ಈ ಕ್ರಮವಾದ ಉಸಿರಾಟದಿಂದ ಸಂಚಯಿಸಬಹುದಾದ ಶಕ್ತಿಯ ಸ್ಥರಕ್ಕೆ ಮಿತಿಯೇ ಇಲ್ಲ. ನಿನ್ನೊಳಗಿನ ಶಕ್ತಿಯನ್ನು ಹೊರಗಿನ ಪ್ರಕೃತಿಯಲ್ಲಿ ನೀನೇ ಲೀನ ಗೊಳಿಸುವಷ್ಟು ಸಾಧನೆ ಮಾಡಬಹುದು ಎಂಬುದನ್ನು ನಮ್ಮ ಸಾಕಷ್ಟು ದಾರ್ಶನಿಕರು ಸಾಧಿಸಿ ತೋರಿಸಿದ್ದಾರೆ ಎಂದು ಅಂದಿದ್ದರು.

    ಇಂತಹ ಉಸಿರಾಟವನ್ನು ಪ್ರಾಥಮಿಕ ಕ್ರಮವನ್ನಾಗಿ ಅಳವಡಿಸಿಕೊಂಡು ಮಾನವನ ಶಕ್ತಿ ಸಂಚಯಕ್ಕೆ ಅನುವು ಮಾಡಿಕೊಟ್ಟ ನಾಥ ಸಂಪ್ರದಾಯದ ಹಠಯೋಗಕ್ಕೂ, ಯೋಗ ಸಂಪ್ರದಾಯದ ಪತಾಂಜಲಿ ಯೋಗಕ್ಕೂ ನನ್ನ ಅನೇಕಾನೇಕ ನಮನಗಳು.

    ಇಂದು ವಿಶ್ವ ಯೋಗ ದಿನ…ನೆನಪಾಯ್ತು ಅಪ್ಪನ ವ್ಯಾಖ್ಯಾನ….ಎಲ್ಲರಿಗೂ ಯೋಗ ದಿನದ ಶುಭಾಶಯಗಳು.

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    2 COMMENTS

    1. ಅತ್ಯುತ್ತಮವಾಗಿದೆ ಮಂಜು….ಎಷ್ಟಾದರೂ ಮಲ್ಲಾಡಿಹಳ್ಳಿಯ ಯೋಗ ಮಹರ್ಷಿಗಳ ಶಿಷ್ಯನಲ್ಲವೇ…

    2. ವಿಶ್ವ ಯೋಗ ದಿನದ ಶುಭಾಶಯಗಳು ಮಂಜುನಾಥ ಸರ್ರವರೆ, ಲೇಖನ ಚೆನ್ನಾಗಿದೆ

    LEAVE A REPLY

    Please enter your comment!
    Please enter your name here

    Latest article

    error: Content is protected !!