30.5 C
Karnataka
Friday, May 10, 2024

    ಗ್ರಾಮೀಣ ಬ್ಯಾಂಕ್ ಗಳ ನೇಮಕ: ಅರ್ಜಿ ಸಲ್ಲಿಕೆ ಸೋಮವಾರವೇ ಕಡೇ ದಿನ

    Must read

    ಐಬಿಪಿಎಸ್ ಮೂಲಕ ಗ್ರಾಮೀಣ ಬ್ಯಾಂಕುಗಳಲ್ಲಿ 8,106 ಹುದ್ದೆಗಳಿಗೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.2017ರಲ್ಲಿ ಐಬಿಪಿಎಸ್, ನೇಮಕಕ್ಕೆ ಅಧಿಸೂಚನೆ ಹೊರಡಿಸಿದಾಗ 15,332 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. 2018ರಲ್ಲಿ ಅದು ಕೇವಲ 10,190ಕ್ಕೆ ಇಳಿಯಿತು. 2019 ರಲ್ಲಿ 8,400 ಹಾಗೂ 2020 ರಲ್ಲಿ 9638 ಹುದ್ದೆಗಳಿಗೆ ಪರೀಕ್ಷೆ ನಡೆಸಿದರೆ 2021 ರಲ್ಲಿ 12,810 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿತು. ಇದೀಗ 2022ನೇ ಸಾಲಿನ 8,106 ಹುದ್ದೆಗಳಿಗೆ ನೇಮಕ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ವರ್ಷ ದಿಂದ ವರ್ಷಕ್ಕೆ ನೇಮಕಾತಿಯಲ್ಲಿ ಇಳಿಮುಖವಾಗಿರೋದನ್ನ ಸ್ಪಷ್ಟವಾಗಿ ಕಾಣಬಹುದು.

    ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಲ್ಲಿ ಹುದ್ದೆ ಗಳಿಗೆ ಅರ್ಜಿ ಕರೆಯಲಾಗಿದೆ.
    ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ದೇಶದ 43 ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್ ಆರ್ ಬಿ) ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್ ) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ.

    ಜೂನ್ 7ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜೂನ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಪರೀಕ್ಷೆ ನಡೆಸಿ, ನವೆಂಬರ್ನಲ್ಲಿ ಸಂದರ್ಶನ ನಡೆಸಲು ಐಬಿಪಿಎಸ್ ನಿರ್ಧರಿಸಿದೆ. ರಾಜ್ಯದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಐಬಿಪಿಎಸ್ ನೀಡಿದೆ.

    ಹುದ್ದೆ ವಿವರ:

    ಈ ಬಾರಿ 8,106 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಪ್ರಕಟಿಸಲಾಗಿದೆ. ಇದರಲ್ಲಿ
    ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಹುದ್ದೆಗಳ ಸಂಖ್ಯೆಯೇ 4483, ಆಫೀಸರ್ ಸ್ಕೇಲ್-I ರ ಹುದ್ದೆ 2676, ಆಫೀಸರ್ ಸ್ಕೇಲ್-II ರ ಹುದ್ದೆ 867 ಮತ್ತು ಆಫೀಸರ್ ಸ್ಕೇಲ್-IIIರ 80 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿನ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ನಡೆಯಲಿದೆ. ರಾಜ್ಯದ ಎರಡು ಬ್ಯಾಂಕುಗಳಲ್ಲಿ 832 ಹುದ್ದೆಗಳು ಖಾಲಿ ಇವೆ, ಇದರಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ಸಂಖ್ಯೆಯೇ 173, ಆಫೀಸರ್ ಸ್ಕೇಲ್-Iರ 429 ಮತ್ತು ಆಫೀಸರ್ ಸ್ಕೇಲ್-II ರ 230 (ಜನರಲ್ ಬ್ಯಾಂಕಿಂಗ್) ಹುದ್ದೆಗಳಿಗೆ ನೇಮಕ ನಡೆಯಲಿದೆ.

    ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ?

    ಪೂರ್ವಭಾವಿ ಪರೀಕ್ಷೆ:

    ಬೆಂಗಳೂರು,ಬೆಳಗಾವಿ,ಬೀದರ,ದಾವಣಗೆರೆ ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಡ್ಯ ಮೈಸೂರು,ಶಿವಮೊಗ್ಗ,ಮಂಗಳೂರು ಮತ್ತು ಉಡುಪಿ.

    ಮುಖ್ಯಪರೀಕ್ಷೆ:

    ಬೆಂಗಳೂರು,ಬೆಳಗಾವಿ, ದಾವಣಗೆರೆ ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮೈಸೂರು,ಶಿವಮೊಗ್ಗ.

    ಅರ್ಜಿ ಶುಲ್ಕ:

    ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್ಸಿ/ಎಸ್ಟಿ/ವಿಕಲಚೇತನರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ.ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆನ್ ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

    ವಯೋಮಿತಿ:

    ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗೆ 18ರಿಂದ 28 ವರ್ಷ. ಆಫೀಸರ್ ಸ್ಕೇಲ್-I ಹುದ್ದೆಗೆ ಅಭ್ಯರ್ಥಿಗಳು 18ರಿಂದ 30 ವರ್ಷದೊಳಗಿನವರಾಗಿರಬೇಕು ಆಫೀಸರ್ ಸ್ಟೇಲ್- II ಹುದ್ದೆಗೆ 21ರಿಂದ 32 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಹಾಗೂ ಆಫೀಸರ್ ಸ್ಟೇಲ್ – III ಹುದ್ದೆಯ ಆಕಾಂಕ್ಷಿಗಳು 21ರಿಂದ 40 ವರ್ಷದೊಳಗಿನವರಾಗಿರಬೇಕು.

    ಪರೀಕ್ಷಾ ಪೂರ್ವ ತರಬೇತಿ:

    ಐಬಿಪಿಎಸ್ ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್ ) ಮತ್ತು ಆಫೀಸರ್ ಸ್ಕೇಲ್-I ಹುದ್ದೆಗಳಿಗೆ ತರಬೇತಿ ಪಡೆಯಬಹುದು. ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು,ತರಬೇತಿ ಸ್ಥಳದ ಖರ್ಚು ವೆಚ್ಚಗಳನ್ನು ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.

    ಅರ್ಹತೆಗಳೇನು?

    ಆಫೀಸ್ ಅಸಿಸ್ಟೆಂಟ್: ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಸ್ಥಳೀಯ ಭಾಷೆಯನ್ನು ತಿಳಿದಿರಬೇಕಾದುದು ಅವಶ್ಯಕ. ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕು.

    ಆಫೀಸರ್ ಸ್ಕೇಲ್-I: ಕೃಷಿ, ತೋಟಗಾರಿಕೆ, ಅರಣ್ಯ, ಪ್ರಾಣಿಶಾಸ್ತ್ರ, ಪಶು ವಿಜ್ಞಾನ, ಅಗ್ರಿಕಲ್ಟರ್ ಎಂಜಿನಿಯರಿಂಗ್, ಪಿಸಿಕಲ್ಟರ್, ಅಗ್ರಿಕಲ್ಟರ್ ಮಾರ್ಕೆಟಿಂಗ್ ಆ್ಯಂಡ್ ಕೋ-ಆಪರೇಷನ್, ಇನ್ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್ ಮೆಂಟ್ ಲಾ, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ-ಈ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಪಡೆದವರು ಆಫೀಸರ್ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

    ಆಫೀಸರ್ ಸ್ಕೇಲ್ – II: ಅಂಗೀಕೃತ ವಿವಿಯಿಂದ ಶೇಕಡಾ 50 ಅಂಕಗಳೊಂದಿಗೆ ಪದವಿ ಪಡೆದಿರುವುದು ಕಡ್ಡಾಯ. ಆಫೀಸರ್ ಸ್ಕೇಲ್-I ಗೆ ತಿಳಿಸಿದ ವಿಷಯಗಳಲ್ಲಿ ಪದವಿ ಪಡೆದಿದ್ದರೆ ನೇಮಕದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಎರಡು ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು. ಆಫೀಸರ ಸ್ಕೇಲ್-II ನ ಸ್ಪೆಷಲಿಸ್ಟ್ ಆಫೀಸರ್ಗಳಾದ ಇನ್ ಫಾರ್ಮೇಷನ್ ಆಫೀಸರ್, ಚಾರ್ಟಡ್ ಅಕೌಂಟೆಂಟ್, ಲಾ ಆಫೀಸರ್, ಟ್ರೇಸರಿ ಆಫೀಸರ್, ಮಾರ್ಕೆಟಿಂಗ್ ಆಫೀಸರ್ ಮತ್ತು ಅಗ್ರಿಕಲ್ಚರ್ ಆಫೀಸರ್ ಹುದ್ದೆಗಳಿಗೆ ಪದವಿ ಮತ್ತು ಒಂದು ವರ್ಷದ ಸೇವಾನುಭವ ಹೊಂದಿರಬೇಕು.

    ಆಫೀಸರ್ ಸ್ಕೇಲ್-III: ಮಾರ್ಕೆಂಟಿಂಗ್ ಫೈನಾನ್ಸ್, ಅಗ್ರಿಕಲ್ಚರ್ ಹಾರ್ಟಿಕಲ್ಟರ್, ಫಾರೆಸ್ಟ್ರಿ ಅಗ್ರಿಕಲ್ಟರ್, ಅಗ್ನಿಕಲ್ಚರಲ್ ಮಾರ್ಕೆಟಿಂಗ್, ಕೊ ಆಪರೇಷನ್, ಇನ್ಫಾರ್ಮೇಷನ್ ಟೆಕ್ನಾಲಜಿ, ಮ್ಯಾನೇಜ್ಮೆಂಟ್ ಮತ್ತು ಕಾನೂನು ವಿಷಯವ ಶೇ. 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ ಬ್ಯಾಂಕ್ ಅಥವ ವಿತ್ತೀಯ ಸಂಸ್ಥೆಗಳಲ್ಲಿ ಐದು ವರ್ಷ ಕಾರ್ಯನಿರ್ವಹಿಸಿ ಅನುಭವ ಹೊಂದಿರಬೇಕು.

    ಈ ಬಾರಿಯ ಬದಲಾವಣೆಗಳೇನು?:

    ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:

    ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಸ್ಥಳದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಆಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು.

    ಮುಖ್ಯ ಸೂಚನೆಗಳು:

    ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆ ಎರಡಕ್ಕೂ ಅರ್ಜಿ ಸಲ್ಲಿಸಬಹುದು. ಆದರೆ ಆಫೀಸರ್ ಕೇಡರ್ ನಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

    ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್-Iಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕಾದುದು ಕಡ್ಡಾಯ.
    ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್-I ಕ್ಕೆ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಹೊಂದಿರುವುದು ಅವಶ್ಯ. 8ನೇ ತರಗತಿಯವರೆಗೆ ಅಥವಾ ಅದಕ್ಕೂ ಮೇಲ್ಪಟ್ಟು ಸ್ಥಳೀಯ ಭಾಷೆಯ ಮಾಧ್ಯಮದಲ್ಲಿ ಓದಿದವವರನ್ನು ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯ ಪಡೆದ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ.

    ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಯು ಪ್ರವೇಶಪತ್ರದ ಜತೆಗೆ ನೀಡಲಾಗುವ ’ಮಾಹಿತಿ ಕೈಪಿಡಿ’ಯಲ್ಲಿ ಇರುತ್ತದೆ. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಮೆರಿಟ್ ಲಿಸ್ಟ್ ಸಿದ್ಧಪಡಿಸುವಾಗ ಅಭ್ಯರ್ಥಿಯು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಈ ಹುದ್ದೆಯ ನೇಮಕ ಪ್ರಕ್ರಿಯೆಯಲ್ಲಿ ಸಂದರ್ಶನ ಇರುವುದಿಲ್ಲ. ಆಫೀಸರ್ ಸ್ಟೇಲ್-1 ಹುದ್ದೆಗೆ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಅಂತಿಮ ಆಯ್ಕೆ ಪಟ್ಟೆ ಪ್ರಕಟಿಸಲಾಗುತ್ತದೆ.

    ಹೆಚ್ಚಿನ ಮಾಹಿತಿಯನ್ನು ಐಬಿಪಿಎಸ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಪಡೆದು ಅರ್ಜಿ ಸಲ್ಲಿಸಿ.
    ಲಿಂಕ್: https://www.ibps.in/

    ಹೆಚ್ಚಿನ ಮಾಹಿತಿಗೆ ವೆಬ್: https://www.ibps.in/

    ಆರ್.ಕೆ. ಬಾಲಚಂದ್ರ
    ಆರ್.ಕೆ. ಬಾಲಚಂದ್ರ
    ಕೊಡಗು ಲೀಡ್‌ ನ ಬ್ಯಾಂಕ್‌ ನ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಆರ್‌ ಕೆ ಬಾಲಚಂದ್ರ ಅವರು ಖ್ಯಾತ ತರಬೇತಿದಾರರೂ ಹೌದು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಳೆದ 35 ವರ್ಷಗಳಿಂದ ಉಚಿತ ತರಬೇತಿ ನೀಡುತ್ತಾ ಬಂದಿರುವ ಅವರು, 30 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆಯಲು ಕಾರಣರಾಗಿದ್ದಾರೆ. ಸರಕಾರಿ ಉದ್ಯೋಗದ ಬಗ್ಗೆ ಮಾಹಿತಿ ನೀಡುವ ʼಗೌರ್ಮೆಂಟ್‌ ಜಾಬ್‌ ಪಡೆಯುವುದು ಹೇಗೆʼ ಎಂಬ ಕೃತಿ ಬರೆದಿದ್ದಾರೆ. ಚಿಕ್ಕಮಗಳೂರಿನ ಕಾರ್ಪೋರೇಷನ್‌ ಬ್ಯಾಂಕ್‌ ಸ್ವ ಉದ್ಯೋಗ ತರಬೇತಿ ಕೇಂದ್ರವನ್ನು ಅತ್ಯುತ್ತಮ ಕೇಂದ್ರವಾಗಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ, ಮೈಸೂರಿನ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಅಂಕಣ ಬರೆಯುತ್ತಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!