24.2 C
Karnataka
Thursday, May 21, 2026
    Home Blog Page 166

    ಕೋವಿಡ್-19 : ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

    ಈ ಹಿಂದಿನ ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ ವ್ಯಾಕ್ಸಿನ್..!’ ಲೇಖನದಲ್ಲಿ ಕೋವಿಡ್-19 ವಿರುದ್ಧ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗಳು ಹಾಗೂ ಅದರ ಹಿಂದಿರುವ ಸೂತ್ರ, ಕಾರ್ಯವಿಧಾನ, ಪ್ರಾಯೋಗಿಕ ಫಲಿತಾಂಶಗಳ ಕುರಿತು ಒಂದು ಅವಲೋಕನ ಮಾಡಿದ್ದೆವು. ಅದರ ಮುಂದಿನ ಭಾಗವಾಗಿ ರೋಗನಿರೋಧಕ ಶಕ್ತಿಯ ಮಹತ್ವ, ಅದನ್ನು ಹೆಚ್ಚಿಸುವ ವಿಧಾನಗಳು, ಲಸಿಕೆಯ ಹಿನ್ನೆಲೆ,ಹೊಸ ಉತ್ಪನ್ನಗಳ ಕ್ಲಿನಿಕಲ್ ಟ್ರಯಲ್ಸ್ ನಡೆಸುವ ಕುರಿತು ಒಂದು ಕಿರುಚಿತ್ರಣ.

    ಹೊಸ ತಳಿಯ ಕೊರೊನಾವೈರಸ್ ವಕ್ಕರಿಸಿದ ನಂತರ ಪತ್ರಿಕೆ, ರೇಡಿಯೋ, ಜಾಲತಾಣ, ದೃಶ್ಯ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಇಮ್ಮ್ಯೂನಿಟಿ (ರೋಗನಿರೋಧಕ ಶಕ್ತಿ) ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಹರಿದುಬರುತ್ತಿವೆ. ಪ್ರಬಲವಾದ ಇಮ್ಯುನಿಟಿ ಇದ್ದರೆ ಕೋವಿಡ್-19 ಅನ್ನು ಹಿಮ್ಮೆಟಿಸಬಹುದು ಎಂದು ಜನರಲ್ಲಿ ನಂಬಿಕೆ ಮೂಡಿಸಿದೆ. ನಮ್ಮ ರೋಗನಿರೋಧಕ ಶಕ್ತಿಯ ಮಹತ್ವದ ಬಗ್ಗೆ ಸರಳವಾಗಿ ಅರ್ಥ ಮಾಡಿಕೊಳ್ಳಲು ಏಡ್ಸ್ ಮೇಲೆ ಒಂದು ಪಕ್ಷಿ ನೋಟವನ್ನು ಬೀರಬೇಕು.

    ಏಡ್ಸ್ ಕೂಡ ಕೋವಿಡ್-19 ತರಹ ಆರ್.ಎನ್.ಎ. ವೈರಸ್‌ ಸೋಂಕಿನಿಂದ ಉಂಟಾಗುವ ಕಾಯಿಲೆ. ಏಡ್ಸ್ (AIDS) ಇದರ ವಿಸ್ತೃತ ರೂಪ ಅಕ್ವೈರ್ಡ್ ಇಮ್ಯುನೊ-ಡಿಫಿಷಿಯನ್ಸಿ ಸಿಂಡ್ರೋಮ್ (Acquired Immunodeficiency Syndrome). ಏಡ್ಸ್ ಪೀಡಿತ ವ್ಯಕ್ತಿಯನ್ನು ಹಿಂಡಿ ಹಿಪ್ಪಿ ಮಾಡುವ ರೋಗಾಣುವಿನ ಹೆಸರು, ಹ್ಯುಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ; ಸಂಕ್ಷಿಪ್ತವಾಗಿ, ಎಚ್ಐವಿ (HIV). ಈ ವೈರಸ್ ವಿಶೇಷತೆಯೇನೆಂದರೆ ದೇಹದ ರೋಗನಿರೋಧಕ ಶಕ್ತಿಯನ್ನು ನಾಶಪಡಿಸುತ್ತದೆ. ಕೊರೊನಾವೈರಸ್ ಮುಖ್ಯವಾಗಿ ಶ್ವಾಸಕೋಶದ ಅಲ್ವಿಯೋಲಾರ್ ಕೋಶಗಳಿಗೆ ಸೋಂಕು ತಗುಲಿದರೆ, ಎಚ್ಐವಿ ರೋಗಾಣುಗಳನ್ನು ಹೊಡೆದೋಡಿಸುವಲ್ಲಿ ಬಹುಮುಖ್ಯ ಕಾರ್ಯ ನಿರ್ವಹಿಸುವ ‘ಸಿಡಿ4 ಟಿ-ಲಿಂಫೋಸೈಟ್ಸ್’ ಎಂಬ ಕೋಶಗಳನ್ನು ಆಕ್ರಮಿಸಿ ರೋಗನಿರೋಧಕ ಶಕ್ತಿಯನ್ನೇ ಹಾನಿಗೊಳಿಸುತ್ತದೆ.

    ಪ್ರತಿರಕ್ಷಣಾ ವ್ಯವಸ್ಥೆಯೇ ಕುಸಿದು ಬಿದ್ದಾಗ ಏನಾಗುತ್ತದೆ..?

    ರೋಗಾಣುಗಳಿಂದ ದೇಹವನ್ನು ಕಾಪಾಡುವ ಪ್ರತಿರಕ್ಷಣಾ ವ್ಯವಸ್ಥೆಯೇ ಕುಸಿದು ಬಿದ್ದಾಗ ಏನಾಗುತ್ತದೆ..? ಸಿಕ್ಕಿದ್ದೆ ಅವಕಾಶವೆಂದು ದೇಹವನ್ನು ಆಕ್ರಮಿಸುವ ಎಲ್ಲಾ ರೋಗಾಣುಗಳು ತಾಮುಂದು ನಾಮುಂದು ಎಂದು ಕಾಯಿಲೆಗಳು ಏಡ್ಸ್ ರೋಗಿಯನ್ನು ಆವರಿಸುತ್ತವೆ. ಎಷ್ಟೇ ಪ್ರಭಾವಶಾಲಿ ಔಷಧಿಗಳಿದ್ದರೂ ಕಾಯಿಲೆಗಳನ್ನು ಗುಣಪಡಿಸುವಲ್ಲಿ ರಕ್ಷಣಾವ್ಯೂಹದ ಪಾತ್ರವೇ ಪ್ರಾಥಮಿಕವಾದದ್ದು. ದೇಹವನ್ನು ಆಕ್ರಮಿಸುವ ರೋಗಾಣುಗಳೆಂಬ ಶತ್ರುಗಳ ವಿರುದ್ಧ ಚಕ್ರವ್ಯೂಹದಂತೆ ಭದ್ರಕೋಟೆಯಾಗಿ ಈ ರಕ್ಷಣಾವ್ಯೂಹ ನಮ್ಮನ್ನು ಸದಾ ರಕ್ಷಿಸುತ್ತದೆ. ಇಷ್ಟು ಪ್ರಬಲವಾದ ಭದ್ರಕೋಟೆ ಇರುವಾಗಲೂ ಮತ್ತೇಕೆ ಆಗೊಮ್ಮೆ ಈಗೊಮ್ಮೆ ಶೀತ, ನೆಗಡಿ, ಚಿಕುನ್‌ಗುನ್ಯಾ, ಡೆಂಗ್ಯೂ, ಡಿಫ್ತಿರಿಯಾ, ಕಾಲರ ಮುಂತಾದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದು? ಏಕೆಂದರೆ, ಎಲ್ಲದಕ್ಕೂ ಒಂದು ಮಿತಿ ಎಂಬುದಿದೆ.

    ಇದನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ನೀವೊಬ್ಬ ಪೈಲ್ವಾನ್ ದಿಟ್ಟುಕೊಳ್ಳಿ; ನಿಮ್ಮ ಸಾಮರ್ಥ್ಯಕ್ಕೆ ಒಮ್ಮೆಲೆ ಐದು ಜನರಿಗೆ ಹೊಡೆದು ಸೋಲಿಸಬಹುದು. ಆದರೆ ಒಟ್ಟಿಗೆ ಐವತ್ತು ಜನರು ಕುಸ್ತಿಗೆ ಬಂದರೆ ಹೊಡೆದುರುಳಿಸಲು ಸಾಧ್ಯವಿದೆಯೇ..? ಸಿನಿಮಾದಲ್ಲಿ ಒಟ್ಟಿಗೆ ಐವತ್ತಲ್ಲ, ನೂರು ದಾಂಡಿಗರು ಧುಮುಕಿದರು, ‘ಹೀರೋಗಳು’ ಗುರುತ್ವಾಕರ್ಷಣೆ ನಿಯಮಕ್ಕೆ ವಿರುದ್ಧವಾಗಿ ಗಾಳಿಯಲ್ಲಿ ಸೆಣಸಾಡಿ ಒಬ್ಬಂಟಿಯಾಗಿ ಸದೆಬಡಿಯುತ್ತಾರೆ; ಅದೆಲ್ಲ ಫ್ಯಾಂಟಸಿಗೆ ಮಾತ್ರ ಸೀಮಿತ.

    ರೋಗಾಣು ಮತ್ತು ಪ್ರತಿರಕ್ಷಣಾ ಶಕ್ತಿಯ ನಡುವಿನ ಹೋರಾಟ

    ಮಾನವನ ದೇಹದಲ್ಲಿ ಲಕ್ಷಾಂತರ ಸೂಕ್ಷ್ಮಜೀವಿಗಳು ವಾಸವಾಗಿರುತ್ತವೆ ಎಂಬುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ..! ಆದರೆ ಅವುಗಳೆಲ್ಲವೂ ರೋಗಗಳನ್ನು ಉಂಟುಮಾಡುವುದಿಲ್ಲ. ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ಸ್ಪರ್ಶಿಸುವ ವಸ್ತುಗಳಲ್ಲಿ ಸ್ವಲ್ಪಮಟ್ಟಿನ ಕಣ್ಣಿಗೆ ಕಾಣದ ರೋಗಾಣುಗಳು ಇದ್ದೇ ಇರುತ್ತವೆ. ಪ್ರತಿ ದಿನ ಪ್ರತಿ ಕ್ಷಣವೂ, ಕಲುಷಿತಗೊಂಡಿರುವ ಗಾಳಿ,ನೀರು, ಆಹಾರ, ಸ್ಪರ್ಶಿಸುವ ವಸ್ತು ಅಥವಾ ನಮ್ಮ ಕೈಗಳಿಂದಲೇ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸುತ್ತಿದ್ದಂತೆ, ನಮ್ಮಲ್ಲಿರುವ ರಕ್ಷಣಾವ್ಯೂಹ ಅವುಗಳಿಂದ ಯಾವುದೇ ರೋಗ ತಟ್ಟದಂತೆ ನಿರಂತರವಾಗಿ ಕಾಪಾಡುತ್ತಿರುತ್ತದೆ. ಆದ್ದರಿಂದಲೇ ಈ ರಕ್ಷಣಾವ್ಯೂಹವನ್ನು
    ರೋಗನಿರೋಧಕ ಶಕ್ತಿ ಅಥವಾ ಪ್ರತಿರಕ್ಷಣಾ ವ್ಯವಸ್ಥೆ ಅಂತಲೂ ಹೆಸರಿಸಲಾಗಿದೆ.

    ಕುಡಿಯುವ ನೀರಿನಲ್ಲಿ ಹತ್ತರಷ್ಟು, ಬೇಡ ಇಪ್ಪತ್ತರಷ್ಟು ಸೂಕ್ಷ್ಮಜೀವಿಗಳು ಇವೆ ಅಂತಿಟ್ಟುಕೊಳ್ಳೋಣ. ರೋಗನಿರೋಧಕ ಶಕ್ತಿ ಆ ಇಪ್ಪತ್ತರಷ್ಟು ಸೂಕ್ಷ್ಮಜೀವಿಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುತ್ತದೆ. ಒಂದೊಮ್ಮೆ ತುಂಬಾ ಕಲುಷಿತಗೊಂಡಿರುವ ನೀರನ್ನು ಕುಡಿದರೆ, ಅಂದರೆ ಅದರಲ್ಲಿ 20ಕ್ಕಿಂತಲೂ ಜಾಸ್ತಿ ಪ್ರಮಾಣದಲ್ಲಿ ರೋಗಾಣುಗಳು ಇದ್ದರೆ, ನಮ್ಮ ರಕ್ಷಣಾವ್ಯೂಹ ಅವುಗಳಿಗೆ ಶರಣಾಗಬಹುದು, ಶರಣಾಗಿ ಕಾಯಿಲೆಗೆ ನಾಂದಿ ಹಾಡಬಹುದು. ಸೂಕ್ಷ್ಮಜೀವಿಗಳು ವೇಗವಾಗಿ ವಂಶಾಭಿವೃದ್ಧಿ ಮಾಡುವುದರಿಂದ, ಅವುಗಳ ಸಂಖ್ಯೆಯನ್ನು ಹತೋಟಿಗೆ ತರಲು ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವು ಸಾಕಾಗದೆ ಇರಬಹುದು. ಒಂದು ಕಡೆಯಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯು ನೂರಾರು ರೋಗಾಣುಗಳನ್ನು ನಾಶಪಡಿಸುತ್ತಿದ್ದರೆ, ಇನ್ನೊಂದು ಕಡೆಯಿಂದ ಅವುಗಳ ಪುನರುತ್ಪಾದನೆ ವೇಗವಾಗಿ ಆಗುತ್ತಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ರೋಗಾಣುಗಳ ನಡುವಿನ ಹೋರಾಟದಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯು ಕೆಲವು ಬಾರಿ ವಿಫಲವಾಗಬಹುದು. ಕ್ರಮೇಣ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.

    ಇಂತಹ ಸಮಯದಲ್ಲೇ ನಾವು ವೈದ್ಯರನ್ನು ಭೇಟಿಯಾಗಿ ಆಂಟಿಬಯೋಟಿಕ್ (ಬ್ಯಾಕ್ಟೀರಿಯಾಗಳನ್ನು ಕೊಲ್ಲಲು), ಆಂಟಿವೈರಲ್ (ವೈರಾಣುಗಳನ್ನು ಕೊಲ್ಲಲು) ಔಷಧಿಗಳಿಗೆ ಮೊರೆ ಹೋಗುವುದು. ಈ ಔಷಧಗಳು ರೋಗಕಾರಕ ಸೂಕ್ಷ್ಮಾಜೀವಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಕೊಲ್ಲುತ್ತವೆ. ಆ ಮೂಲಕ ನಾವು ರೋಗಲಕ್ಷಣಗಳಿಂದ ಬಚಾವ್ ಆಗುತ್ತೇವೆ. ಆದರೆ ರೋಗಲಕ್ಷಣಗಳು ನಿಂತಿದ್ದರೂ ಕೆಲವು ರೋಗಾಣುಗಳು ದೇಹದಲ್ಲಿ ಅಡಗಿರುತ್ತವೆ.ವೈದ್ಯರು ಬರೆದುಕೊಟ್ಟ ಕೋರ್ಸನ್ನು ಸಂಪೂರ್ಣಗೊಳಿಸದೆ ಔಷಧಿ ತೆಗೆದುಕೊಳ್ಳುವುದನ್ನು ಅರ್ಧಕ್ಕೆ ನಿಲ್ಲಿಸಿದರೆ ಉಳಿದಿರುವ
    ರೋಗಾಣುಗಳು ಅವೇ ಔಷಧಿಗಳ ವಿರುದ್ಧ ಪ್ರತಿರೋಧವನ್ನು ಬೆಳೆಸಿ ಮುಂದೆ ಇನ್ನೂ ಮಾರಕವಾಗಬಹುದು; ಹಾಗೂ ಚಿಕಿತ್ಸೆಯ ಅವಧಿಯಲ್ಲಿ ಅದೇ ರೋಗಾಣುವಿನಿಂದ ಮರು-ಸೋಂಕು ಆಗಬಹುದು; ಈ ಎರಡು ಕಾರಣಕ್ಕಾಗಿ ಸೋಂಕು ಉಂಟಾದಾಗ ಔಷಧಿಗಳನ್ನು ಕೆಲವು ದಿನಗಳ ಅವಧಿಗೆ ಒಂದು ಕೋರ್ಸ್ ಆಗಿ ನೀಡಲಾಗುತ್ತದೆ.

    ಅಂದಹಾಗೆ, ರೋಗನಿರೋಧಕ ಶಕ್ತಿಯ ಸಾಮರ್ಥ್ಯ ಎಲ್ಲರಲ್ಲಿಯೂ ಒಂದೇ ತೆರನಾಗಿರುವುದಿಲ್ಲ; ಕೆಲವರಲ್ಲಿ ಪ್ರಬಲವಾಗಿರಬಹುದು, ಇನ್ನು ಕೆಲವರಲ್ಲಿ ಸ್ವಲ್ಪ ದುರ್ಬಲ ಇರಬಹುದು, ಮತ್ತೆ ಕೆಲವರಲ್ಲಿ ತುಂಬಾ ದುರ್ಬಲವಾಗಿರಬಹುದು. ಅದು ಅವರವರ ದೇಹಪ್ರಕೃತಿ, ಆಹಾರ ಪದ್ಧತಿ, ವಯಸ್ಸು, ಶೈಶವಾವಸ್ಥೆಯಲ್ಲಿ ಪಡೆದ ತಾಯಿ ಎದೆ ಹಾಲಿನ ಪ್ರಮಾಣ, ಒಳ್ಳೆಯ ಅಭ್ಯಾಸಗಳು (ವ್ಯಾಯಾಮ, ಯೋಗಾಭ್ಯಾಸ), ದುಶ್ಚಟಗಳು (ಧೂಮಪಾನ, ಮಧ್ಯಪಾನ, ಗುಟ್ಕಾ ತಂಬಾಕು, ಮಾದಕ ವಸ್ತುಗಳ ಸೇವನೆ) ಇನ್ನಿತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

    ಉತ್ತಮ ಅಭ್ಯಾಸಗಳು ಆರೋಗ್ಯಕ್ಕೆ ಪೂರಕವಾಗಿದ್ದರೆ ದುರಾಭ್ಯಾಸಗಳು ಪ್ರತಿರಕ್ಷಣಾ ವ್ಯವಸ್ಥೆಯ ಶಕ್ತಿಯನ್ನೂ ಕುಂದಿಸುವುದರಿಂದ ಅನಾರೋಗ್ಯಕ್ಕೆ ದಾರಿಯಾಗಿವೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಇತ್ತೀಚಿನ
    ಸಂಶೋಧನೆಯ ಪ್ರಕಾರ, ನಿದ್ರಾಹೀನತೆ, ಮಾನಸಿಕ ಒತ್ತಡ, ಆತಂಕ, ಸಹ ರಕ್ಷಣಾವ್ಯೂಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂಬುದು
    ತಿಳಿದುಬಂದಿದೆ.

    ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮಾರ್ಗಗಳು:

    ಧೂಮಪಾನ, ಮದ್ಯಪಾನ ಮುಂತಾದ ದುಶ್ಚಟಗಳನ್ನು ತ್ಯಜಿಸುವುದು ಅಥವಾ ಮಿತಗೊಳಿಸುವುದು, ನಿಯಮಿತವಾಗಿ ವ್ಯಾಯಾಮ/ಯೋಗಾಸನ/ಧ್ಯಾನ ಮಾಡುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಸಾಕಷ್ಟು ನಿದ್ರೆ ಮಾಡುವುದು (7-8 ಗಂಟೆ), ಒತ್ತಡವನ್ನು ಕಡಿಮೆಗೊಳಿಸುವುದು, ಮೈ, ಕೈ, ಬಾಯಿಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಇಂತಹ ಸರಳ ಜೀವನಶೈಲಿಯ ಶಿಸ್ತನ್ನು ಪಾಲಿಸಿದರೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ವರ್ಧಿಸಬಹುದು.

    ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರ ಪದಾರ್ಥಗಳು ಹೀಗಿವೆ: ಕಪ್ಪುದ್ರಾಕ್ಷಿ (ಆಂಥೋಸಯಾನಿನ್ ಎಂಬ ಫ್ಲೇವನಾಯ್ಡ್‌ನ ಸಮೃದ್ಧವಾಗಿದೆ; ಸಂಶೋಧನೆಯ ಪ್ರಕಾರ ಫ್ಲೇವನಾಯ್ಡ್‌ ಗಳು ಶ್ವಾಸಕೋಶಗಳ ಪ್ರತಿರಕ್ಷಣಾ ರಕ್ಷಣಾ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ). ಅರಿಶಿನ (ಕರ್ಕ್ಯುಮಿನ್ ಅಂಶ ಇದ್ದು, ಇದು ಉತ್ತಮ
    ಆಂಟಿಆಕ್ಸಿಡೆಂಡ್ ಮತ್ತು ಉರಿಯೂತ- ನಿರೋಧಕ ಗುಣಗಳನ್ನು ಹೊಂದಿದೆ), ಗೆಣಸು ( ವಿಟಮಿನ್ ಎ ಯ ಮೂಲವಾಗಿರುವ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ), ಪಾಲಕ್ (ಫ್ಲೇವನಾಯ್ಡ್ ಗಳು ಕ್ಯಾರೊಟಿನಾಯ್ಡ್ ಗಳು, ವಿಟಮಿನ್ ಸಿ, ವಿಟಮಿನ್ ಇ ಹೇರಳವಾಗಿದೆ). ಶುಂಠಿ (ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ), ಬೆಳ್ಳುಳ್ಳಿ (ಆಲಿಸಿನ್ ಅಂಶ ಹೊಂದಿದ್ದು ಶೀತ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ). ಗ್ರೀನ್ ಟೀ (ಅಲ್ಪ ಪ್ರಮಾಣದ ಕೆಫೀನ್ ಇದ್ದು ಚಹಾ ಅಥವಾ ಕಾಫಿಗೆ ಪರ್ಯಾಯವಾಗಿ ಕುಡಿಯಬಹುದು), ಸೂರ್ಯಕಾಂತಿ ಬೀಜಗಳು (ವಿಟಮಿನ್ ಇ ಜೊತೆಗೆ ಮ್ಯಾಂಗನೀಸ್, ಮೆಗ್ನೀಸಿಯಮ್
    ಮತ್ತು ಫೈಬರ್ ಕೂಡ ಸಾಕಷ್ಟು ಇವೆ). ಕಿತ್ತಳೆ, ಕಿವಿಫ್ರೂಟ್ (ವಿಟಮಿನ್ ಸಿ ಸಮೃದ್ಧವಾಗಿದೆ). ಎಣ್ಣೆಯುಕ್ತ ಮೀನುಗಳು (ಸಾಲ್ಮನ್/ಭೂತಾಯಿ, ಟ್ಯೂನ, ಪಿಲ್‌ಚಾರ್ಡ್ಸ್ ಮತ್ತು ಇತರ ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ.) ಪೇರಳೆ,ನೆಲ್ಲಿಕಾಯಿ, ದಾಳಿಂಬೆ, ಹರಿವೆ ಇತರ ಹಸಿರು ತರಕಾರಿಗಳು, ಹಣ್ಣು ಹಂಪಲುಗಳು (ವಿಟಮಿನ್, ಫ್ಲವನೋಯ್ಡ್ಸ್ ಮುಂತಾದ ಪೋಷಕಾಶಗಳಿಂದ ಹೇರಳವಾಗಿವೆ. ಇಂತಹ ಆಹಾರಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ನಿಯಮಿತವಾಗಿ ಬಳಸಿಕೊಂಡರೆ
    ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು.

    ರೋಗನಿರೋಧಕ ಶಾಸ್ತ್ರದ ಪಿತಾಮಹರು

    ಇದೀಗ ವಿಶ್ವಾದ್ಯಂತ ಹೆಮ್ಮಾರಿಯಂತೆ ಕಾಡುತ್ತಿರುವ ಕೋವಿಡ್-19 ತರಹವೇ, 19-20 ಶತಮಾನದಲ್ಲಿ ಲಕ್ಷಾಂತರ ಜನರ ಬಲಿತೆಗೆದುಕೊಂಡ ಒಂದು ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆ ಸಿಡುಬು. ಇದು ಕೂಡ ಕೋವಿಡ್-೧೯ ಅಂತೆ ಒಂದು ವೈರಸ್ (ವೇರಿಯೊಲಾ ಮೇಜರ್ ಮತ್ತು ವೇರಿಯೊಲಾ ಮೈನರ್) ಸೋಂಕಿನಿಂದ ಉಂಟಾಗುವ ಕಾಯಿಲೆ. ಸೋಂಕಿತ ವಯಸ್ಕರಲ್ಲಿ 20-60% ಮತ್ತು ಸೋಂಕಿತ ಮಕ್ಕಳಲ್ಲಿ 80% ಕ್ಕಿಂತ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಈ ವೈರಸ್ ವಿರುದ್ಧ ಕೊನೆಗೂ ಒಂದು ಅಸ್ತ್ರವನ್ನು ಅಭಿವೃದ್ಧಿಪಡಿಸಿ, ಅಂತಿಮವಾಗಿ 1977 ರಲ್ಲಿ ಸಿಡುಬು ನಿರ್ಮೂಲನೆಗೊಳಿಸಲಾಯಿತು.

    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.‌ಒ) 1980 ರಲ್ಲಿ ರೋಗವನ್ನು ಜಾಗತಿಕವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಘೋಷಿಸಿತು. ಸಿಡುಬು ಎಂಬ ಮಹಾಮಾರಿಯನ್ನು ನಿರ್ಮೂಲನೆ ಮಾಡಿದ ಆ ಅಸ್ತ್ರವೇ ವ್ಯಾಕ್ಸಿನ್. ದೇಹದ ರೋಗ ನಿರೋಧಕ ಶಕ್ತಿಯ ಬಗ್ಗೆ ಬಹಳ ಹಿಂದಿನಿಂದಲೂ ಜನರಿಗೆ ಸ್ವಲ್ಪ ತಿಳಿವು ಇದ್ದಿದ್ದರೂ, 1798 ರಲ್ಲಿ ಅದಕ್ಕೆ ಒಂದು ವೈಜ್ಜಾನಿಕ ರೂಪು ನೀಡಿ ಲಸಿಕೆ ಎಂಬ ಪರಿಕಲ್ಪನೆ ಜಗತ್ತಿಗೆ ನೀಡಿದ ಅನೇಕ ವಿಜ್ಞಾನಿಗಳಲ್ಲಿ ಪ್ರಮುಖರು ಎಡ್ವರ್ಡ್ ಜೆನ್ನರ್ (1749 –1823). ಮುಂದೆ, ಸಂಶೋಧನೆಯ ಮೂಲಕ ಅದಕ್ಕೆ ಇನ್ನಷ್ಟು ಹೊಳಪು ನೀಡಿದ್ದು ಲೂಯಿಸ್ ಪಾಶ್ಚರ್ (1822 –1895).

    ಆದ್ದರಿಂದ ಎಡ್ವರ್ಡ್ ಜೆನ್ನರ್ ಅವರನ್ನು ರೋಗನಿರೋಧಕ ಶಾಸ್ತ್ರದ ಪಿತಾಮಹ (Father of Immunology) ಎಂದು ಮತ್ತು ಲೂಯಿಸ್
    ಪಾಶ್ಚರ್ ಅವರನ್ನು ಆಧುನಿಕ ರೋಗನಿರೋಧಕ ಶಾಸ್ತ್ರದ ಪಿತಾಮಹ (Father of Modern Immunology) ಎಂಬ ಮನ್ನಣೆ
    ನೀಡಲಾಗಿದೆ. ಈ ಇಬ್ಬರು ಮಹಾನ್ ವಿಜ್ಞಾನಿಗಳ ಸಾಧನೆ, ಸಂಶೋಧನೆಗಳ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು, ಆಸಕ್ತರು ಇಲ್ಲಿ ನೀಡಿರುವ
    ಯು-ಟ್ಯೂಬ್ ಚಾನೆಲ್‌ಗಳಿಗೆ ಕ್ಲಿಕ್ ಮಾಡಬಹುದು.

    ಹೊಸ ಉತ್ಪನ್ನಗಳಿಗೆ ಅನುಮತಿಯ ರೂಪುರೇಷೆ
    ಹೊಸ ಔಷಧಿ ಮತ್ತು ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಪ್ರಯೋಗಶಾಲೆಯಲ್ಲಿ ಜೀವಕೋಶಗಳ (ಇನ್ ವಿಟ್ರೊ) ಮತ್ತು ಇಲಿ, ಹೆಗ್ಗಣ, ಗಿನಿಯಿಲಿ, ಮೊಲ ಇನ್ನಿತರ ಪ್ರಾಯೋಗಿಕ ಪ್ರಾಣಿಗಳ ಮೇಲೆ (ಇನ್ ವಿವೊ) ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜೊತೆಗೆ,ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಬಳಸಿ ‘ಡ್ರಗ್-ಟಾರ್ಗೆಟ್ ಇಂಟರ್ಯಾಕ್ಷನ್’ ಅಧ್ಯಯನವನ್ನೂ (ಇನ್ ಸಿಲಿಕೊ ಪ್ರಯೋಗ) ಮಾಡಲಾಗುತ್ತದೆ.

    ಈ ಎಲ್ಲಾ ಪೂರ್ವ-ಕ್ಲಿನಿಕಲ್ ಪ್ರಯೋಗಗಳು ಸಕಾರಾತ್ಮಕ ಫಲಿತಾಂಶದೊಂದಿಗೆ ಪೂರ್ಣಗೊಂಡರೆ ಅವುಗಳನ್ನು ಮಾನವನ
    ಮೇಲೆ ಪ್ರಯೋಗಗಳಿಗೆ ಒಳಪಡಿಸಲಾಗುತ್ತದೆ. ಇದನ್ನೇ ಕ್ಲಿನಿಕಲ್ (ಹ್ಯೂಮನ್ ) ಟ್ರಯಲ್ಸ್ ಅನ್ನುವುದು. ನಾಲ್ಕು ಹಂತದ ಕ್ಲಿನಿಕಲ್ ಟ್ರಯಲ್ಸ್ ನಲ್ಲಿ ಹೊಸ ಉತ್ಪನ್ನವು ಯಾವುದೇ (ಗಂಭೀರ) ಅಡ್ಡಪರಿಣಾಗಳಿಲ್ಲದೆ ಕಾಯಿಲೆಯನ್ನು ಗುಣಪಡಿಸುವಲ್ಲಿ ಅಥವಾ ತಡೆಹಿಡಿಯುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪರವಾನಿಗೆ / ಅನುಮೋದನೆ ನೀಡಲಾಗುತ್ತದೆ.

    ಹೊಸ ಔಷಧಿಗಳನ್ನು ಪರೀಕ್ಷಿಸಲು ಮತ್ತು ಅನುಮೋದಿಸಲು ಒಂದು ನಿರ್ದಿಷ್ಟ ಸಮಯದ ಮಿತಿ ಇರುವುದಿಲ್ಲ. ಕ್ಲಿನಿಕಲ್ ಪ್ರಯೋಗಗಳ ಎಲ್ಲಾ 3 ಹಂತಗಳನ್ನು ಪೂರ್ಣಗೊಳಿಸಲು ಸುಮಾರು 10 ರಿಂದ 15 ವರ್ಷಗಳು ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು.ಅಂತಾರಾಷ್ಟ್ರೀಯ ಮಟ್ಟದಲ್ಲಿ, ಮಾನವ ಮತ್ತು ಪಶುವೈದ್ಯಕೀಯ ಹೊಸ ಉತ್ಪನ್ನಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ ಮೂಲಕ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ‘ಯು. ಎಸ್. – ಫುಡ್ ಎಂಡ್ ಡ್ರಗ್ ಎಡ್ಮಿನಿಸ್ಟ್ರೇಷನ್’ ಸಂಸ್ಥೆಯು ಹೊತ್ತಿದೆ.

    ಕ್ಲಿನಿಕಲ್ ಪ್ರಯೋಗಗಳ ನಾಲ್ಕು ಹಂತಗಳು:

    ಒಂದನೇ ಹಂತ: ಔಷಧದ ಸರಿಯಾದ ಪ್ರಮಾಣ (ಡೋಸ್) ಕಂಡುಹಿಡಿಯಲು , ಸುರಕ್ಷತೆ ಮತ್ತು ಅಡ್ಡಪರಿಣಾಮಗಳನ್ನು ನಿರ್ಣಯಿಸಲು
    ಆರೋಗ್ಯವಂತ 20 ರಿಂದ 80 ಜನರ ಸಣ್ಣ ಗುಂಪಿನ ಮೇಲೆ ಪ್ರಾಯೋಗಿಕ ಚಿಕಿತ್ಸೆಯನ್ನು ನಡೆಸಲಾಗುತ್ತದೆ.

    ಎರಡನೇ ಹಂತ: 100 ರಿಂದ 300 ಜನರ ಮೇಲೆ ನಡೆಸುವ ಪ್ರಯೋಗದ ಈ ಹಂತವು ಒಂದು ನಿರ್ದಿಷ್ಟ ರೋಗ ಅಥವಾ ಸ್ಥಿತಿಯನ್ನು ಹೊಂದಿರುವ ಜನರಲ್ಲಿ ಔಷಧವು ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಪ್ರಾಥಮಿಕ ಡೇಟಾವನ್ನು ಪಡೆಯಲಾಗುತ್ತದೆ. ಈ ಪ್ರಯೋಗಗಳು ಅಲ್ಪಾವಧಿಯ ಅಡ್ಡಪರಿಣಾಮಗಳನ್ನು ಒಳಗೊಂಡಂತೆ ಸುರಕ್ಷತೆಯನ್ನು ಅಧ್ಯಯನ ಮಾಡುವುದನ್ನು ಮುಂದುವರಿಸುತ್ತವೆ ಮತ್ತು ಇದು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬಹುದು.
    ಮೂರನೇ ಹಂತ: ಸುಮಾರು 3,000 ವಿಭಿನ್ನ ಜನರ ಮೇಲೆ ಅಧ್ಯಯನ ನಡೆಸಿ ಹೊಸ ಉತ್ಪನ್ನದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಹಂತದಲ್ಲಿ ಇತರ ಷಧಿಗಳೊಂದಿಗೆ ಸಂಯೋಜನೆ ಮಾಡಿಯೂ ಪರೀಕ್ಷಿಸಲಾಗುತ್ತದೆ.ಫಲಿತಾಂಶಗಳು ಸಕಾರಾತ್ಮಕವಾಗಿದ್ದಾರೆ ಸಾರ್ವಜನಿಕರ ಬಳಕೆಗೆ ಪ್ರಾಯೋಗಿಕ ಔಷಧಿ/ಲಸಿಕೆಯಾಗಿ ಬಿಡುಗಡೆಗೊಳಿಸಲು ಅನುಮತಿಯನ್ನು ನೀಡಲಾಗುತ್ತದೆ.
    ನಾಲ್ಕನೇ ಹಂತ: ಅನುಮೋದನೆಗೊಂಡ ಹೊಸ ಉತ್ಪನ್ನದ ರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮೇಲ್ವಿಚಾರಣೆಯನ್ನು ದೊಡ್ಡ,ವೈವಿಧ್ಯಮಯ ಜನಸಂಖ್ಯೆಯಲ್ಲಿ ಮಾಡಲಾಗುತ್ತದೆ. ಮುಖ್ಯವಾಗಿ ಔಷಧದ ದೀರ್ಘಕಾಲದ ಅಡ್ಡಪರಿಣಾಮಗಳ ಮೇಲೆ ಗಮನ ಇರಿಸಲಾಗುತ್ತದೆ. ಅಡ್ಡಪರಿಣಾಮಗಳೇನಾದರೂ ಕಂಡುಬಂದಲ್ಲಿ ಆ ಹೊಸ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗುತ್ತದೆ.

    ವೈದ್ಯಕೀಯ ತುರ್ತುಸ್ಥಿತಿ ಇದ್ದರೆ, ಫಾಸ್ಟ್ ಟ್ರ್ಯಾಕ್ನಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಅವಕಾಶವಿದೆ. ವಿಶ್ವಾದ್ಯಂತ, ಹೊಸ ತಳಿಯ ಕೊರೊನಾವೈರಸ್ (SARS-CoV-2) ಆರೋಗ್ಯ, ಆರ್ಥಿಕತೆ ಮತ್ತು ಸಮಾಜದ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳು ಅಂತಹ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ
    ನಡೆಯುತ್ತಿರುವ ಎಲ್ಲಾ ಪ್ರಯೋಗಗಳು ಮತ್ತು ಕ್ಲಿನಿಕಲ್ ಟ್ರಯಲ್ಸ್ ಗಳು ಯಶಸ್ವಿಯಾಗಲಿ ಮತ್ತು ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸಲು ಶೀಘ್ರವಾಗಿ ಜನರನ್ನು ತಲುಪಲಿ ಎಂದು ಆಶಿಸೋಣ.

    ಹಿತ್ತಲ ಗಿಡ ಮದ್ದಲ್ಲವೆ?

    ಆಯುರ್ವೇದ ಔಷಧಿಗಳು, ಗಿಡಮೂಲಿಕೆಗಳ ಚಿಕಿತ್ಸೆ, ಮನೆಮದ್ದುಗಳು ಮತ್ತು ಇತರ ಅನೇಕ ಪೂರಕ ಚಿಕಿತ್ಸಾ ವಿಧಾನಗಳು ಕೋವಿಡ್ -19 ಅನ್ನು ತಡೆಗಟ್ಟುವ ಮತ್ತು ಗುಣಪಡಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ, ಮುಖ್ಯವಾಗಿ
    ಭಾರತದಲ್ಲಿ ಸಂವೇದನೆ ಮತ್ತು ಸಾರ್ವಜನಿಕರಲ್ಲಿ ಒಂದು ಹೊಸ ಆಶಾಕಿರಣವನ್ನು ಮೂಡಿಸಿರುವುದಂತೂ ಸತ್ಯ. ಹಾಗೆಯೇ,’ಹಿತ್ತಲ ಗಿಡ ಮದ್ದಲ್ಲ’ ಎಂಬ ಧೋರಣೆಯ ವಿರುದ್ಧ ಟೀಕೆಗಳೂ ಕೇಳಿಬರುತ್ತಿರುವುದೂ ಅಷ್ಟೇ ದಿಟ.

    Photo by CDC from Pexels

    ಹಿಂದಿನ ಓದು : ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ ವ್ಯಾಕ್ಸಿನ್..!

    ಇಸ್ಕಾನ್ ನಲ್ಲಿ ಈ ಬಾರಿ ಡಿಜಿಟಲ್ ಜನ್ಮಾಷ್ಟಮಿ

    ಒಂದು ಕಡೆ ಭಕ್ತರ ಸಾಲು..ಮತ್ತೊಂದು ಕಡೆ ಒಳ ಹೋಗಲು ಸರತಿ ಕಾಯುತ್ತ ನಿಂತಿರುತ್ತಿದ್ದ ಕಾರುಗಳು..ಮತ್ತೊಂದೆಡೆ ಬಸ್ಸುಗಳಿಂದ ಇಳಿದು ಪರಮಾತ್ಮನ ದರ್ಶನಕ್ಕೆಂದು ಓಡುತ್ತಿದ್ದ ಪ್ರವಾಸಿಗರ ಗುಂಪು….ಯಾವುದಕ್ಕೂ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ನಿಯೋಜಿತವಾಗಿರುವ ಸ್ವಯಂ ಸೇವಕರು….ಇದು ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ಮಂದಿರದಲ್ಲಿ ನಿತ್ಯ ಕಾಣುತ್ತಿದ್ದ ದೃಶ್ಯ. ಆದರೆ ಕಳೆದ ಮೂರು ತಿಂಗಳಿಂದ ಈ ದೃಶ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಕಾರಣ ಕೋವಿಡ್ 19.

    ಇನ್ನು ಜನ್ಮಾಷ್ಟಮಿ, ವೈಕುಂಠ ಏಕಾದಶಿ ಬಂತೆಂದರೆ ಮಂದಿರದ ಮುಂದೆ ಭಕ್ತರ ದಂಡು. ಮೈಲುದ್ದದ ಸಾಲು. ಮಂದಿರಕ್ಕೆ ಹೋಗಲು ವಿವಿಧ ಬಣ್ಣದ ಪಾಸುಗಳು. ಯಾರಿಗೂ ಯಾವುದೇ ರೀತಿಯ ಅಡಚಣೆಯಾಗದಂತೆ ತೆಗೆದುಕೊಳ್ಳುತ್ತಿದ್ದ ಮುತುವರ್ಜಿ. ಆದರೆ ಈ ಬಾರಿ ಸ್ವಲ್ಪ ಬದಲಾಗಿದೆ. ಕಾರಣ ಕೋವಿಡ್ 19.

    ಈ ಬಾರಿ ಎಲ್ಲವೂ ಆನ್ ಲೈನ್ . ಶಾಲಾ ತರಗತಿಗಳು ಆನ್ ಲೈನ್ , ಕಾರ್ಪೋರೇಟ್ ಮೀಟಿಂಗ್ ಗಳು ಆನ್ ಲೈನ್ ಅಷ್ಟೇ ಏಕೆ ರಾಜಕೀಯ ಭಾಷಣಗಳೂ ಆನ್ ಲೈನ್, ಕೆಲಸವೂ ಆನ್ ಲೈನ್ . ದೇವರ ಪ್ರಾರ್ಥನೆಯೂ ಆನ್ ಲೈನ್. ಇದು ಕೋವಿಡ್ ತಂದಿಟ್ಟ ಅನಿವಾರ್ಯತೆ.

    ಹಾಗಾಗಿಯೇ ಇಸ್ಕಾನ್ ಕೂಡ ಸಂಭ್ರಮದ ಕೃಷ್ಣ ಜನ್ಮಾಷ್ಟಮಿಯನ್ನು ಈ ಬಾರಿ ಡಿಜಿಟಲೀಕರಣ ಗೊಳಿಸಿದೆ. ಮನೆಯೇ ಮಂತ್ರಾಲಯ ಎಂಬುದನ್ನು ಸಾಕಾರಗೊಳಿಸುತ್ತಿದೆ.ಮನೆಯಲ್ಲೇ ಕುಳಿತು ಜನ್ಮಾಷ್ಟಮಿಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಕಲ್ಸಿಸಿದೆ.

    ಸಂಪೂರ್ಣ ಡಿಜಿಟಲ್

    ಆಗಸ್ಟ್ 11 ಮತ್ತು 12 ರಂದ ನಡೆಯುವ ಈ ಬಾರಿಯ ಜನ್ಮಾಷ್ಟಮಿ ಸಂಪೂರ್ಣ ಡಿಜಿಟಲ್ ಆಗಿರುತ್ತದೆ ಎನ್ನುತ್ತಾರೆ ಇಸ್ಕಾನ್ ನ ಮಾಧ್ಯಮ ವಕ್ತಾರ ಕುಲಶೇಖರ ದಾಸ ಪ್ರಭು.ಫೇಸ್ ಬುಕ್ , ಯೂ ಟ್ಯೂಬ್ , ಇನ್ಸ್ ಸ್ಟಾ ಗ್ರಾಮ್ ,ಟ್ವಿಟರ್ ಹೀಗೆ ಎಲ್ಲಿ ಸಾಧ್ಯವಾಗುತ್ತೋ ಅಲ್ಲಿಂದಲೆ ಶ್ರೀಕೃಷ್ಣನ ದರ್ಶನ ಭಾಗ್ಯ ಪಡೆಯಬಹುದೆಂದು ಅವರು ಕನ್ನಡಪ್ರೆಸ್ .ಕಾಮ್ ಗೆ ತಿಳಿಸಿದ್ದಾರೆ.

    ಮುಂಜಾನೆ ಶ್ರೀ ರಾಧಾಕೃಷ್ಣಚಂದ್ರ ದೇವರಿಗೆ ನೆಡಯುವ ತೆಪ್ಪೋತ್ಸವ, ನಂತರದ ಅಭಿಷೇಕ,ನಾನಾ ರೀತಿಯ ಸೇವೆಗಳು ಎಲ್ಲವೂ ಲೈವ್ ಆಗಿ ಬಿತ್ತರವಾಗಲಿವೆ. ನೀವಿರುವ ಕಡೆಯಲ್ಲೇ ಮೊಬೈನಲ್ಲೇ ಪರಮಾತ್ಮನ ದರ್ಶನ ಪಡೆಯಬಹುದು.

    ಈ ಬಾರಿಯ ಮತ್ತೊಂದು ವಿಶೇಷವೆಂದರೆ ಹೆಸರಾಂತ ಕಲಾವಿದರ ಲೈವ್ ಸಂಗೀತ ಕಚೇರಿಗಳು.ಕು.ಸೂರ್ಯ ಗಾಯತ್ರಿ ಅವರಿಂದ ಶಾಸ್ತೀಯ ಸಂಗೀತ,ಶ್ರೀಮತಿ ಅನುರಾಧ ಪೌಡ್ವಾಲ ಮತ್ತು ಅನೂಪ್ ಜಲೋಟ ಅವರಿಂದ ಭಜನೆ. ಎಂ. ಎಸ್ ಸುಬ್ಬಲಕ್ಷ್ಮಿ ಅವರ ಮೊಮ್ಮಕ್ಕಳ ಸಂಗೀತ ಕಚೇರಿಯೂ ನಡೆಯಲಿದೆ. ಆಗಮ ಬ್ಯಾಂಡ್ ಸೇರಿದಂತೆ ವಿವಿಧ ಬ್ಯಾಂಡ್ ಗಳಿಂದ ಕೃಷ್ಣ ಗೀತೆಗಳ ಪ್ರಸ್ತುತಿ ಇದೆ.

    ಬೆಂಗಳೂರು ಇಸ್ಕಾನ್ ಅಧ್ಯಕ್ಷರಾದ ಮಧು ಪಂಡಿತ ದಾಸ ಅವರು ಡಾ. ಕಸ್ತೂರಿ ರಂಗನ್ ,ಅನುಪಮ್ ಖೇರ್ ಮತ್ತು ಹೇಮಾ ಮಾಲಿನಿ ಅವರೊಂದಿಗೆ ಚರ್ಚೆ ನಡೆಸುವುದು ಈ ಬಾರಿಯ ವಿಶೇಷ ಕಾರ್ಯಕ್ರಮಗಳಲ್ಲಿ ಒಂದು. ಇಸ್ಕಾನ್ ಆಹಾರ ಏಕೆ ರುಚಿಕರ ಎಂಬುದರ ಬಗ್ಗೆ ಖ್ಯಾತ ಬಾಣಸಿಗ ಸಂಜೀವ್ ಕುಮಾರ್ ಅವರೊಂದಿಗೆ ಚರ್ಚೆ ಮತ್ತೊಂದು ವಿಶೇಷ.

    ಮಕ್ಕಳಿಗಾಗಿಯೂ ಕಾರ್ಯಕ್ರಮಗಳು ಇವೆ. ಸಾರ್ವಜನಿಕರೊಂದಿಗೆ ಫೋನ್ ಇನ್ ಕಾರ್ಯಕ್ರಮ ಕೂಡ ಇದೆ. ಇದಲ್ಲದೆ ಅಷ್ಟಮಿ. ದಿನ108 ಖಾದ್ಯಗಳನ್ನು ಒಳಗೊಂಡ ವಿಶೇಷ ರಾಜಭೋಗವನ್ನು ಭಗವಂತನಿಗೆ ಅರ್ಪಿಸಲಾಗುದು. ಕೋವಿಡ್ ನಿವಾರಣೆಗೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗವುದು .ಜೊತೆಗೆ ನಾನಾ ಆನಾಥಶ್ರಮಗಳಲ್ಲಿ ಇಸ್ಕಾನ್ ವತಿಯಿಂದ ಜನ್ಮಾಷ್ಟಮಿ ಆಚರಿಸಲಾಗುವುದು.

    ಶತ ಶತಮಾನಗಳು ಕಳೆದರೂ ಬಂಧ ಕಳೆದುಕೊಳ್ಳದ ಸಂಬಂಧಗಳು

    ಓದು, ಕೆಲಸ ,ಮನೆ ,ಗಾಡಿ ,ಲೋನು ,ಮದುವೆ ,ಮಕ್ಕಳು, ಭೋಗ್ಯ ,ಬಾಡಿಗೆ, ಸ್ವಂತ ….ಹೀಗೇ ಬದುಕು ಯಾಂತ್ರಿಕವಾಗಿಯೂ, ಯಾರಿಗಿಂತ ನಾವೇನು ಕಡಿಮೆ ಅಂತ ಸ್ಪರ್ಧಾತ್ಮಕವಾಗಿಯೂ ನಡೆಯುತ್ತಿರುತ್ತದೆ .ಒಂದು ಕಡೆ ಜ್ಞಾನವನ್ನೇ ಓವರ್ ಟೇಕ್ ಮಾಡಿಕೊಂಡು ತಂತ್ರಜ್ಞಾನವು ಬೆಳೆಯುತ್ತಿದೆ. ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆಗಳಾದ್ರೂ ಜೀವನ ಶೈಲಿಯಲ್ಲಿ ಏನೇ ಮಾರ್ಪಾಡುಗಳಾದ್ರೂ ಬದಲಾಗದೇ ಇರೋದು ಅಂದ್ರೆ ಮೂರೇ ಪ್ರಶ್ನೆ ತಿಂಡಿ ಏನು ? ಏನ್ ಸಾರು ? ರಾತ್ರಿ ಊಟಕ್ಕೇನಿದೆ ? ಪ್ರತಿದಿನ ತಪ್ಪದೇ ಈ ಪ್ರಶ್ನೆಕೇಳೇ ಕೇಳ್ತೀವಿ ಮನೆಯವರು ಆನ್ಸರ್ ಮಾಡೇ ಮಾಡ್ತಾರೆ .

    ಪ್ರಪಂಚದ ನಾನಾ ಕಡೆ ಸಾವಿರಾರು ರೀತಿಯ ತಿಂಡಿ ತಿನಿಸುಗಳು, ಊಟ ವಗೈರೆ ಸಿಗಬಹುದು. ಆದರೆ ನಮ್ಮ ದೇಶದ ಅದರಲ್ಲೂ ಈ ದಕ್ಷಿಣ ಭಾರತದ ಆಹಾರ ಶೈಲಿ ಇದೆಯಲ್ಲ ಅದು ನಿಜಕ್ಕೂ ಕೇಳ್ತಿದ್ರೇನೇ ಬಾಯಲ್ಲಿ ನೀರೂರುತ್ತೆ ಮತ್ತೆ ತಿನ್ನೋ ನಾಲಿಗೆಯಿಂದಾನೆ ಹೆಮ್ಮೆಯಿಂದ ಹೇಳ್ಬಹುದು ನಾವು ನಿಜಕ್ಕೂ ಊಟದ ವಿಚಾರದಲ್ಲಿ ಅದೃಷ್ಟ ಮಾಡಿದ್ವಿ ಅಂತ .

    ನಮ್ಮಲ್ಲಿ ತುಂಬಾ ಕುತೂಹಲ ಅಂತ ಅನ್ನಿಸೋದು ಈ ಕಾಂಬಿನೇಷನ್ಗಳು ಇಡ್ಲಿ-ವಡೆ , ಪೂರಿ ಸಾಗು , ಖಾರಾಬಾತ್ -ಕೇಸರಿ ಬಾತ್ , ಪಲಾವ್ – ಮೊಸರು ಬಜ್ಜಿ , ಮಸಾಲ್ ದೋಸೆ -ಆಲೂಗಡ್ಡೆ ಪಲ್ಯ , ಈರುಳ್ಳಿದೋಸೆ -ಗಟ್ಟಿ ಚಟ್ನಿ .

    ಪಾಕಪ್ರವೀಣರು ಆಗಿನಿಂದಲೂ ಈ ಐಟಮ್ಗೆ ಇದನ್ನೇ ಹಾಕ್ಕೋಬೇಕು ಅಂತ ತೋರಿಸ್ಕೊಂಡು ಬಂದಿದಾರೆ , ಪಾಕಪ್ರಿಯರಾದ ನಾವುಗಳೂ ಅದನ್ನೇ ಚಪ್ಪರಿಸ್ಕೊಂಡು ಹೋಗ್ತಿದೀವಿ.

    ಕಾಂಬಿನೇಷನ್ ಕರೆಕ್ಟಾಗಿ ಮಾಡಿಲ್ಲ ಅಂದ್ರೆ ನಮ್ ಪಾಲಿಗೆ ಅದನ್ನು ಮಾಡದೋವ್ರು ಅಡಿಗೆಯವರೆ ಅಲ್ಲ. ಅಸಲಿಗೆ ಅದು ಹೋಟಲ್ಲೇ ಅಲ್ಲ.
    ಖಾಲಿ ಆಗಿದೆ ಬದಲಾಗಿ ಇದು ತಗೋಳಿ ಅಂತ ಒಂದು ಪಕ್ಷ ಹೋಟೆಲ್ಲಲ್ಲಿ ಆದ್ರೆ ನಡೆದುಹೋಗುತ್ತೆ , ಆದರೆ ಮನೆಗಳಲ್ಲಿ ಕಾಂಬಿನೇಷನ್ ಮಾಡದೇ ಹೋದ್ರೆ ಮುಗಿದೋಯ್ತು. ಕಾಲದಿಂದ ನಡ್ಕೊಂಡು ಬರ್ತಿದ್ದ ಸಂಪ್ರದಾಯಾನೇ ಮುರಿದಂಗ್ ಆಡ್ತಾವಿ .ಬಸ್ಸಾರಿಗೆ ಪಲ್ಯ , ಉಪ್ಸಾರಿಗೆ ಖಾರ , ಬೇಳೇಸಾರಿಗೆ ಸಂಡಿಗೆ , ಸೊಪ್ಪಿನ ಸಾರಿಗೆ ಉಪ್ಪಿನ ಕಾಯಿ ……

    ತುಂಬಾ ಜನ ಮನೆ ಊಟವನ್ನೇ ಇಷ್ಟ ಪಡಕ್ಕೆ ಕಾರಣ ಸಹ ಇದೇ….. ಮನೆಯವರಿಗೆ ತಿನ್ನೋವ್ರ ಇಷ್ಟ ಗೊತ್ತಿರುತ್ತೆ ಮತ್ತೆ ಅವರಿಗೆ ಮಾಡಕ್ಕೆ ಆಯ್ಕೆ ಇರುತ್ತೆ .ಚಟ್ನಿ ಅಂದ್ರೆ ಅದರಲ್ಲಿ ಕಾಯಿ ಚಟ್ನಿ , ಶೇಂಗಾ ಚಟ್ನಿ, ನೆಲಗಡಲೇ ಚಟ್ನಿ, ಪುದೀನ ಚಟ್ನಿ .ಪಲ್ಯ ಅಂದೊಡನೆ ಸೊಪ್ಪಿನ ಪಲ್ಯ , ಬೆಂಡೇಕಾಯಿ ಪಲ್ಯ, ಹುರುಳೀಕಾಯಿ ಪಲ್ಯ , ಬಾಳೇಕಾಯಿ ಪಲ್ಯ .
    ಬೋಂಡ ಅಂದ್ರೆ ಈರುಳ್ಳಿ ಬೋಂಡ , ಸಬ್ಬಕ್ಕಿ ಸೊಪ್ಪಿನ ಬೋಂಡ .
    ಪಾಯಸ ಅಂದ್ರೆ ಶಾವಿಗೆ ಪಾಯಸ , ಸಬ್ಬಕ್ಕಿ ಪಾಯಸ , ಗಸಗಸೆ ಪಾಯಸ , ಹೆಸರುಬೇಳೆ ಪಾಯಸ .

    ಮನೆಗಳಲ್ಲಿ ಇಡ್ಲಿ ದೋಸೆ ಅಂದ್ರೆ ಏನ್ ಚಟ್ನಿ ಅಂತ ಚಿಕ್ಕ ಮಕ್ಕಳೂ ಕೇಳ್ತಾವೆ.
    ಇದೆಲ್ಲಾ ಸಾಧಾರಣ ದಿನಗಳದ್ದಾಯ್ತು ಇನ್ನು ಹಬ್ಬ ಹರಿದಿನಗಳದ್ದು ಬೇರೆಯದೇ ವಿಶೇಷ.

    ಸಂಕ್ರಾಂತಿ ಅಂದ್ರೆ ಪೊಂಗಲ್ಲು ಅದರಲ್ಲಿ ಸಿಹಿ ಖಾರ ಎರಡೂ , ಯುಗಾದಿಗೆ ಬೇಳೆ ಒಬ್ಬಟ್ಟು ಮತ್ತು ಒಬ್ಬಟ್ಟಿನದ್ದೇ ಸಾರು, ಗಣೇಶನ ಚತುರ್ಥಿಗೆ ಕಡುಬು , ದೀಪಾವಳಿಗೆ ಕಜ್ಜಾಯ. ರಂಜಾನಿಗೆ ಬಿರಿಯಾನಿ , ಕ್ರಿಸ್ಮಸ್ಗೆ ಕೇಕು .
    ಶಾಖಾಹಾರ ವಿಭಾಗವೇ ದೊಡ್ಡದಿದೆ ಇನ್ನು ಮಾಂಸಾಹಾರ…. ಅದು ಬರೆದರೆ ಪುಸ್ತಕವೇ ಆದೀತು .

    ಹಬ್ಬಕ್ಕೂ ಆಹಾರಕ್ಕೂ ನಡುವೆ ಅಧ್ಭುತವಾದ ನಂಟಿದೆ .ಆ ದಿನ ದೇವರಿಗೆ ಏನಿಷ್ಟ , ಏನಕ್ಕಿಷ್ಟ ಅದರ ಹಿಂದಿರುವ ಕತೆ ಏನು… ಶ್ರೇಷ್ಠತೆ ಏನು… ಹೀಗೆ ಪ್ರತಿಯೊಂದನ್ನು ಹಿರಿಯರು ಪುರಾವೆ ಸಹಿತ ತಿಳಿಸಿದ್ದಾರೆ .
    ಇದಲ್ಲದೇ ಯಾವ ಕಾಲದಲ್ಲಿ ಯಾವುದು ತಿನ್ನಬೇಕು , ತಿಂದ್ರೆ ಆರೋಗ್ಯಕ್ಕೆ ಯಾವ ರೀತಿ ಅನುಕೂಲ ಆಗುತ್ತೆ ಅಂತಾನೂ ಹಿರಿಯರು ಮಾಡಿ ತಿನ್ನಿಸಿ ತಿಳಿಸಿದ್ದಾರೆ .ಹಬ್ಬ ಅನ್ನೋದು ನಮ್ಮ ಆಚಾರವಾದರೆ , ಹಬ್ಬದೂಟ ಅನ್ನುವುದು ಅದಕ್ಕೂ ಮೀರಿದ ಉಪಚಾರ .

    ಚದುರಿಹೋದ ಮನೆಯವರನ್ನು , ಹಲವು ಮನಸ್ಸುಗಳನ್ನು ಒಂದು ಕಡೆ ಸೇರಿಸೋ ಅಗಾಧವಾದ ಶಕ್ತಿ ಒಂದು ಅಡುಗೆ ಮನೆಗಿದೆ .ಸೌಂದರ್ಯವನ್ನು ನೋಡಿದಾಗ ಕಣ್ಣು , ಸಂಗೀತವನ್ನು ಕೇಳಿದಾಗ ಕಿವಿ, ಸುವಾಸನೆಯನ್ನು ಆಸ್ವಾದಿಸಿದಾಗ ಮೂಗು , ಆಹಾರದ ರುಚಿಯನ್ನು ಸವಿದಾಗ ನಾಲಿಗೆ ಸ್ವರ್ಗವನ್ನು ನೆನಪಿಸುತ್ತದೆ .

    ಒಂದಂತೂ ಸತ್ಯ …..
    ಸಿಕ್ಕಿದ್ದನ್ನೆಲ್ಲಾ ತಿನ್ನೋಕಾಗಲ್ಲ , ತಿನ್ನೋದನ್ನೆಲ್ಲಾ ಆಹಾರ ಅನ್ನಕ್ಕಾಗಲ್ಲ, ಯಾಕಂದ್ರೆ “ಆಹಾರ ಅನ್ನೋದು ಪದ್ದತಿ ” .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಅಗತ್ಯದ ಕೆಲಸಗಾರರ ಪೂರೈಕೆಯಾಗದ ಅಗತ್ಯಗಳು

    ಬದುಕಿನ ಹೃದಯದ ಬಡಿತಕ್ಕೆ ಹಲವು ಮಿಡಿತಗಳ ಪೂರೈಕೆಯಾಗುತ್ತಿರಬೇಕು. ಇಲ್ಲದಿದ್ದರೆ ಅದು ಸ್ಥಗಿತವಾಗಿ ಜೀವನದಲ್ಲಿ ಆಹಾಕಾರ ಶುರುವಾಗುತ್ತದೆ.ಇಂದಿನ ಜಗತ್ತು ಹಿಂದೆಂದಿಗಿಂತಲೂ ಸಂಕೀರ್ಣವಾಗಿದೆ.ಬದುಕಿನಲ್ಲಿ, ಹೆಚ್ಚು, ಹೆಚ್ಚು ಸಮಯ ಸಿಗುತ್ತದ್ದಂತೆ ಅದಕ್ಕಿನ್ನ ಹೆಚ್ಚು ಅನಗತ್ಯ ಕೆಲಸಗಳನ್ನು,ಹವ್ಯಾಸಗಳನ್ನು ಸೃಷ್ಬಿಸಿಕೊಂಡು ಬಿಟ್ಟಿದ್ದೇವೆ.ಹಾಗಾಗಿ ಇಂದಿನ ಕಾಲದ  ‘ಅಗತ್ಯದ ಬದುಕು ‘ ಎನ್ನುವ ಅರ್ಥಕ್ಕೆ ಬಹು ದೊಡ್ಡ ವ್ಯಾಪ್ತಿಯಿದೆ.

    ಕೋವಿಡ್ ನ ಕಾರಣವಾಗಿ ’ ಅಗತ್ಯ ಕೆಲಸಗಾರರು ’ ಮತ್ತು‘ಅಗತ್ಯವಾದಷ್ಟು ಬದುಕು ‘ ಎಂದರೆ ಏನು ಎಂದು ಎಲ್ಲರೂ ತಿಳಿಯುವಂತಾಗಿದೆ. ಜೊತೆ ಜೊತೆಯಲ್ಲೇ ಬದುಕನ್ನು ನಡೆಸಲುಸಮಾಜದ ಎಲ್ಲರೂ ಬೇಕು ಎನ್ನುತ್ತಿದ್ದ ವಿಶಾಲ ಅರ್ಥಕ್ಕೆ ಕಡಿವಾಣ ಬಿದ್ದು, ಬದುಕಿನ ಮೂಲಭೂತ ಅಗತ್ಯಗಳೇನು ಎನ್ನುವುದನ್ನು ಅರಿಯಲು ಲಾಕ್ ಡೌನ್ ಅನುವುಮಾಡಿಕೊಟ್ಟಿದೆ. ಅಗತ್ಯ ಕೆಲಸಗಾರರು ಯಾರು ಎನ್ನುವುದನ್ನು ಪ್ರತಿದೇಶದ ಜನರು ಅರಿಯುವಂತಾಗಿದೆ. ಅಗತ್ಯ ಕೆಲಸಗಾರರು ( Essential workers) ಎಂದು ಕರೆಸಿಕೊಳ್ಳುವ ಇವರಿಗೆ ಹಿಂದೆಂದೂ ಸಿಗದ ಗೌರವ ಮತ್ತು ಮನ್ನಣೆಗಳು ದೊರೆತಿವೆ.

    ಕೈ ತುಂಬ ಕೆಲಸ, ಹೊಟ್ಟೆಯ ತುಂಬ ಊಟ, ಸಂಸಾರ, ನಿದ್ದೆ -ಇವಿಷ್ಟೇ ಸಾಧಾರಣವಾದ ದಿನವೊಂದರಲ್ಲಿ ಇರುತ್ತಿದ್ದ ಕಾಲ ಮುಗಿದಿದೆ. ಸಾಧಾರಣ ದಿನವೊಂದರ ಸ್ವರೂಪವೇ ಬದಲಾಗಿದೆ. ಅಗತ್ಯಗಳೂ ಬದಲಾಗಿವೆ. ಹೀಗಾಗಿ ನಾವೆಲ್ಲ ಪ್ರಗತಿಯ ಪ್ರತಿ ಉತ್ಪಾದನೆಗೆ ಹರಕೆಯ ಕುರಿಗಳಂತೆ ಗ್ರಾಹಕರಾಗಿದ್ದೇವೆ.ಹೊಸ ಹೊಸ ಆವಿಷ್ಕಾರಗಳನ್ನು ನಮ್ಮದಾಗಿಸಿಕೊಳ್ಳುವ ಕನಸಿನಲ್ಲೇ ನಮ್ಮ ದುಡಿಮೆಯನ್ನು ಕೇಂದ್ರೀಕರಿಸಿಕೊಂಡಿದ್ದೇವೆ. ಇದು ಬದಲಾವಣೆಗೆ ಸದಾ ತುಡಿವ ಮನುಷ್ಯನ ಸಹಜ ವರ್ತನೆ.’ಇರುವುದನ್ನೆಲ್ಲ ಹಿಂದಿಕ್ಕಿ ಇಲ್ಲದುದರೆಡೆಗೆ ತುಡಿವುದೇ ಜೀವನ ’-ಎನ್ನುವ ಸರ್ವಕಾಲಿಕ ಮಾತಿನಂತೆ.

    ದೊಡ್ಡ ಚಿತ್ರಣವೊಂದರಲ್ಲಿ ಕೆಲವೆಲ್ಲ ವಿಚಾರಗಳು ಗೌಣವಾದರೂ ನಮ್ಮ ಹಲವು ಅಗತ್ಯಗಳು ಸುತ್ತ ಮುತ್ತಲಿನ ಜಗತ್ತಿನ ಮೇಲೆ ಅವಲಂಬಿತವಾಗಿವೆ. ಈ ಕಾರಣ ಜಗತ್ತಿನೊಂದಿಗೆ ನಾವು ಒಪ್ಪಂದ ಮಾಡಿಕೊಳ್ಳುತ್ತ  ಸಾಗುತ್ತೇವೆ. ಒಂದು ಅರ್ಥದಲ್ಲಿ ಬೇರೆ ವಿಧಿಯೂ ಇಲ್ಲ.ಉದಾಹರಣೆಗೆ ಮೂಲಭೂತ ಶಿಕ್ಷಣ,ಮಾಹಿತಿಗಳು, ಓದು,ಬರಹ,ವ್ಯಾಪಾರ,ಕೆಲಸಗಳು, ಮನರಂಜನೆಗಳು ಎಲ್ಲವೂ ಅಂತರ್ಜಾಲ ಮಾಧ್ಯಮಕ್ಕೆ ಶರಣಾಗಿರುವಾಗ, ಎಷ್ಟು ಜನರು, ಎಷ್ಟು ಕಾಲ ಬದಲಾವಣೆಗಳನ್ನು ವಿರೋಧಿಸಬಲ್ಲರು? ಸ್ಮಾರ್ಟ್ ಫೋನ್ ಗಳು, ಖಾಸಗೀ ಮನರಂಜನೆಯ ಚಾನಲ್ ಗಳು , ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಇವೆಲ್ಲ ಬದುಕಿಗೆ ವೇಗವನ್ನು ನೀಡುತ್ತಲೇ ಸಾಗಿವೆ.ಅವುಗಳ ಮೇಲೆ ನಮ್ಮ ಅವಲಂಬನೆ ಹೆಚ್ಚಾದಂತೆಲ್ಲ ನಮ್ಮ ಅಗತ್ಯಗಳ ಪರಿಧಿಯೂ ಹಿಗ್ಗಿದೆ. ಹೀಗಾಗಿ ನಮ್ಮ ಸಾಮಾನ್ಯ ಬದುಕಿನ ಇಂದಿನ ಮೂಲಭೂತ ಅಗತ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ.

    ಸಾಮಾಜಿಕ ಸಂಸ್ಕೃತಿಗಳನ್ನು ಆಧರಿಸಿಆಯಾ ದೇಶಗಳು ತಮ್ಮ ’ಅಗತ್ಯ ಕೆಲಸಗಾರರನ್ನು ’ ಹೆಸರಿಸಿವೆ.ಇವುಗಳಲ್ಲಿ ಹಲವು ಸಣ್ಣ ಪುಟ್ಟ ವ್ಯತ್ಯಾಸಗಳಿವೆ. ಹೀಗಿದ್ದೂ.ಜಾಗತೀಕರಣದ ಕಾರಣ ಇಂದಿನ ಜಗತ್ತಿನ ಬಹುತೇಕ ಎಲ್ಲ ದೇಶಗಳ ಜನರ ಅಗತ್ಯಗಳು ಒಂದೇ ಆಗುತ್ತ ಸಾಗಿವೆ.

    ಯಾರು ಅಗತ್ಯ ಕೆಲಸಗಾರರು?

    ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಾರರು,ಆಹಾರ ಸರಬರಾಜು ಸರಪಳಿಯಲ್ಲಿರುವ  ಅಂದರೆ ಬೆಳೆವವರು,ಉತ್ಪಾದಕರು, ಆಹಾರದ ಕಾರ್ಖಾನೆ, ಪ್ಯಾಕ್ ಮಾಡುವವರು, ಟ್ರಾನ್ಸ್ ಪೋರ್ಟ್ ನ ವ್ಯವಹಾರದವರು ಇನ್ನಿತರ ಎಲ್ಲ  ಕೆಲಸಗಾರರು, ಪೊಲೀಸರು,ಲಾಯರುಗಳು ಮತ್ತುಕಾನೂನು ಮಂಡಳಿ, ಸ್ವಚ್ಛತೆಯನ್ನು ಕಾಪಾಡುವ ಕೆಲಸಗಾರರು, ಆಡಳಿತ ವರ್ಗದವರು, ಅಂಚೆ ಕೆಲಸಗಾರರು,ಶೈಕ್ಷಣಿಕ ಇಲಾಖೆಯ ಎಲ್ಲ ಕೆಲಸಗಾರರು,ಸತ್ತವರನ್ನು ಹೂಳುವವರು, ಸಮಾಜಕ್ಕೆ ಕಣ್ಣಾಗಿ ಕೆಲಸಮಾಡುವ ಎಲ್ಲ ಮಾಧ್ಯಮದವರು, ಸಂಪರ್ಕ ವ್ಯವಸ್ಥೆಯ ಜಾಲದವರು, ಮನೆಯೊಂದು ನಡೆಯಲು ಬೇಕಿರುವ ನೀರು, ವಿದ್ಯುತ್,ಗ್ಯಾಸ್ ಇತ್ಯಾದಿ ಅತ್ಯಗತ್ಯಗಳನ್ನು ಪೂರೈಸುವ ಸರಪಳಿಯಲ್ಲಿರುವ ಎಲ್ಲರು, ಹಲವು ಬಗೆಯ ಸಾರಿಗೆ ವ್ಯವಸ್ಥೆಗಳ ಕೆಲಸಗಾರರು, -ಇತ್ಯಾದಿ ಜನರು ಅಗತ್ಯ ಕೆಲಸಗಾರರ ಪಟ್ಟಿಯಲ್ಲಿದ್ದಾರೆ.

    ಸ್ವಂತ ಉದ್ಯೋಗ ಅಥವಾ ಖಾಸಗೀ ಸಂಸ್ಥೆಯ ಅಗತ್ಯ ಕೆಲಸಗಾರರಿಗೆ ಲಾಕ್ ಡೌನ್ ಸಮಯದಲ್ಲಿ ಕೆಲಸ ಮಾಡಲು ಪರವಾನಗಿ ಇದ್ದರೂ ಕೆಲಸ ಮಾಡಬೇಕೇ ಇಲ್ಲವೇ -ಎನ್ನುವ ಬಗ್ಗೆ ತಮ್ಮದೇ ನಿಲುವನ್ನು ತಳೆಯಬಹುದಾಗಿದೆ. ಮತ್ತೆ ಕೆಲವರ ಜತೆ ಸರ್ಕಾರಗಳು ಇಂತಿಷ್ಟು ಎಂದು ಮಾತಾಡಿ ಒಪ್ಪಂದ ಮಾಡಿಕೊಂಡಿವೆ (ಉದಾಹರಣೆಗೆ-ಖಾಸಗೀ ಆಸ್ಪತ್ರೆಗಳು). ಸರ್ಕಾರದಿಂದ ಆರ್ಥಿಕ ಸಹಾಯ ಪಡೆದು ಕೊಳ್ಳುತ್ತಿರುವ ಸ್ವಂತ ಉದ್ಯೋಗ ಉಳ್ಳ ಜನರು ಸರ್ಕಾರದ ಆದೇಶಗಳ ಪ್ರಕಾರ ಕೆಲಸವನ್ನು ಮಾಡಬೇಕಿದೆ.

    ಆದರೆ ಬಹುತೇಕ ದೇಶಗಳಲ್ಲಿ, ಸ್ವಂತ ಉದ್ಯೋಗವುಳ್ಳ ಜನರು ವೈಯಕ್ತಿಕ ಆಸಕ್ತಿಗಳ ಕಾರಣ ತಾವೇ ಮುಗಿಬಿದ್ದು  ತಮ್ಮ ಅಗತ್ಯದ ಗಳಿಕೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲವೇ ಕೆಲಸಕ್ಕೆ ಮರಳಲು ಕಾಯುತ್ತಿದ್ದಾರೆ.ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜನರು ಸರ್ಕಾರದ ಆದೇಶ ಮತ್ತು ಲಾಕ್ ಡೌನ್ ನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಲಾಕ್ ಡೌನ್ ನ್ನು ತೆರವುಗೊಳಿಸಿ ಎಲ್ಲ ಉದ್ಯಮಗಳನ್ನು ಮತ್ತೆ ಸಹಜ ಸ್ಥಿತಿಗೆ ತರಲು ಆಗ್ರಹಿಸುತ್ತಿದ್ದಾರೆ.ಕೆಲಸಕ್ಕೆ ಮರಳಲು ಅನುಮತಿ ಕೋರಿ ತಮ್ಮ ಆರೋಗ್ಯವನ್ನು ಕಡೆಗಣಿಸಿ ಇಂಥವರು ರಸ್ತೆಗಿಳಿದು ಮೆರವಣಿಗೆ ನಡೆಸಿದ್ದಾರೆ.

    ಇವರ ತುರ್ತು ಅಗತ್ಯ ಸಮಾಜಕ್ಕಿಲ್ಲದಿದ್ದರೂ ಸಮಾಜದ ಸಹಜ ಆಗು ಹೋಗುಗಳ ಸುತ್ತ ತಮ್ಮ ಬದುಕನ್ನು ಕಟ್ಟುಕೊಂಡ ಇವರಿಗೆ ಸಮಾಜದ ಅಗತ್ಯವಿದೆ. ತುರ್ತಾಗಿ ಹೊಟ್ಟೆ ಹೊರೆಯುವ ಅಥವಾ ಪರಿಹಾರ ಧನದ ಜರೂರತ್ತಿದೆ.

    ಅಗತ್ಯ ಕೆಲಸಗಾರರ ಬವಣೆಗಳು

    ಅಗತ್ಯ ಕೆಲಸಗಾರರಿಗೆ ಹೊಟ್ಟೆ ಹೊರೆಯಲು ದಾರಿಯಿದೆ.ಆದರೆ,ಅವರ ಆರೋಗ್ಯ ಅಪಾಯದಲ್ಲಿದೆ.ಆದರೆ ಆರೋಗ್ಯ ಸಂಬಂಧೀ ಬೇಡಿಕೆಗಳನ್ನು ಮುಂದಿಟ್ಟರೆ ಕೆಲಸಗಳನ್ನು ಕಳೆದುಕೊಳ್ಳುವ ಆತಂಕ ಅವರಿಗಿದೆ. ಕಂಡರಿಯದ ಈ ಕೋವಿಡ್ ಪರಿಸ್ಥಿತಿಯಲ್ಲಿ ಅವರ ಮೇಲೆ ಬಹಳ ಕೆಲಸದ ಒತ್ತಡವಿದೆ. ಅಕಸ್ಮಾತ್ ಕೆಲಸದ ರೀತಿ -ನೀತಿಯನ್ನು ಪ್ರಶ್ನಿಸಿದರೆ ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಸ್ಥಾನವನ್ನು ತುಂಬಲು ನಿರುದ್ಯೋಗಿಗಳ ದಂಡೇ ಸರದಿಯಲ್ಲಿ ನಿಂತಿದ್ದಾರೆ.

    ಎಲ್ಲ ಸಮಾಜಗಳಲ್ಲಿ, ಹೊಡೆತ ಬೀಳುತ್ತಿರುವುದು ಅಗತ್ಯ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರವ ಮೂರು ಮತ್ತು ನಾಲ್ಕನೇ ದರ್ಜೆಯ ಕೆಲಸಗಾರರ ಮೇಲೆ. ಕಾಯಂ ಕೆಲಸದ ಆದೇಶ ಇಲ್ಲದವರ ಮೇಲೆ. ಅರೆಕಾಲಿಕ ಉದ್ಯೋಗಸ್ಥರ ಮೇಲೆ.ಕೆಲಸಗಾರರ ಯೂನಿಯನ್ ಇತ್ಯಾದಿಗಳ ಬೆಂಬಲವಿಲ್ಲದವರ ಕಾರಣ ಅವರ ಮೇಲೆ ಇನ್ನಿಲ್ಲದ ಒತ್ತಡಗಳಿವೆ.ಶೋಷಣೆಗಳೂ ನಡೆದಿವೆ.

    ಉದಾಹರಣೆಗೆ, ಏಪ್ರಿಲ್ ನಲ್ಲಿ ಒಂದು ದೊಡ್ಡ ಸುದ್ದಿಯಾದದ್ದು ಜೊಮ್ಯಾಟೊ ದ ಪಿಜ್ಜಾ ಸರಬರಾಜು ಮಾಡುತ್ತಿದ್ದ ಅರೆಕಾಲಿಕ ಸಮಯದ ಉದ್ಯೋಗಿಯೊಬ್ಬನು ಕರೋನ ಸೋಂಕಿತ ಎಂದು ತಿಳಿದ ಕೂಡಲೇ ಆತನೂ ಸೇರಿದಂತೆ ಆತ ಪಿಜ್ಜಾ ತಲುಪಿಸಿದ 72 ಕುಟುಂಬದವರು ಕ್ವಾರಂಟೈನ್ ಗೆ ಒಳಪಟ್ಟದ್ದು.ಅವನ ಜೊತೆ ಕೆಲಸಮಾಡುತ್ತಿದ್ದ 17 ಮಂದಿಯೂ 14 ದಿನ ಕ್ವಾರೈಂಟೈನ್ ಗೆ ಒಳಪಟ್ಟದ್ದು.

    ಭಾರತದಲ್ಲಿ ಮಾರ್ಚ್ 24 ರಂದೇ ಲಾಕ್ ಡೌನ್ ಶುರುವಾಗಿತ್ತು. ಆದರೆ,  ಸಾಮಾಜಿಕ ಅಂತರದ ಲಕ್ಷುರಿ ಅಥವಾ ವಿಶೇಷ ಸವಲತ್ತು ಡೆಲವರಿ ಬಾಯ್  ಆಗಿದ್ದ ಈತ ಮತ್ತು ಈತನಂತಹ ಮಿಲಿಯನ್ ಗಟ್ಟಲೆ ಜನರಿಗೆ ದೊರೆತಿರಲಿಲ್ಲ. ಏಪ್ರಿಲ್ 14 ರಂದು ಈತ ಕರೋನ ಸೋಂಕಿತ ಎಂದು ಖಾತರಿಯಾಗುವ  ವೇಳೆಗೆ ಈತ ಹಲವರ ಸಂಪರ್ಕಕ್ಕೆ ಬಂದಾಗಿತ್ತು.

    ಈ ಘಟನೆ ತಕ್ಷಣ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿತು.

    ಪಿಜ್ಜಾ ಡೆಲಿವರಿ ಅಥವಾ ಆಹಾರ ಸರಬರಾಜು ಅಗತ್ಯ ಸೇವೆಯ ಕೆಳಗೆ ಬಂದರೂ, ಯಾವುದೇ ಉದ್ಯೋಗದ ಗುತ್ತಿಗೆ, ರಕ್ಷಣೆ, ರಜಾಗಳು, ಪಿಂಚಣಿ ಇಲ್ಲದ ಆತನ ಆರೋಗ್ಯಕ್ಕೆ ಯಾವುದೇ ರಕ್ಷಣೆಯಿರಲಿಲ್ಲ. ಇತ್ತ ಉದ್ಯೋಗದಾತ, ಅತ್ತ ಪೋಲೀಸರು, ಜೊತೆಗೆ ಬೇಜವಾಬ್ದಾರೀ  ಗ್ರಾಹಕರು ಎಲ್ಲರನ್ನೂ ಮೌನವಾಗಿ ಸಹಿಸಿಕೊಳ್ಳಬೇಕಾದ ಕಟು ವಾಸ್ತವವನ್ನು ಅಗತ್ಯ ಕೆಲಸಗಾರರು ಎದುರಿಸುತ್ತಿದ್ದರು.

    ಸರ್ಕಾರದ ನಿಯಮಗಳ ಬಗ್ಗೆ ಅಷ್ಟೇನೂ ತಿಳಿವಳಿಕೆ ಇಲ್ಲದಿರುವುದು,ಕಡಿಮೆ ಆದಾಯ, ತುಟ್ಟಿ ಕಾನೂನು ಮತ್ತು ಆರೋಗ್ಯ ರಕ್ಷಣೆ ಎಲ್ಲವೂ ಇಂತಹ ಕೆಲಸಗಾರರನ್ನುಇಂದಿಗೂ ನಲುಗಿಸಿವೆ.ಉದ್ಯೋಗ ನೀಡುವ ಸಂಸ್ಥೆಗಳು ಅಕಸ್ಮಾತ್ ಕೆಲಸಗಾರರಿಗೆ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಿದರೂ ಅವರ ಕುಟುಂಬದವರಿಗೆ ಸೋಂಕು ಹರಡಿದರೆ ಅದಕ್ಕೆಯಾರೂ ಜವಾಬ್ದಾರಿ ಹೊರುವುದಿಲ್ಲ. ಹಾಗಾಗಿ ಅಗತ್ಯ ಕೆಲಸಗಾರರಷ್ಟೇ ಅಲ್ಲದೆ ಅವರ ಇಡೀ ಕುಟುಂಬಗಳು ತಮ್ಮ ಆರೋಗ್ಯದ ವಿಚಾರದಲ್ಲಿ ಆತಂಕಗಳನ್ನು ಎದುರಿಸಿದ್ದಾರೆ.

    ನಮ್ಮ ದೇಶದಲ್ಲಿ ಆರ್ಥಿಕ ವ್ಯತ್ಯಾಸಗಳು ಹೆಚ್ಚಿರುವ ಕಾರಣ ಶ್ರೀಮಂತರು ಬಡವರಿಂದ ಅತ್ಯಂತ ಬೇಗನೆ ಅಂತರ ನಿರ್ಮಿಸಿಕೊಂಡರು. ಆದರೆ ಬಡವರು ಶ್ರೀಮಂತರ ಬೇಡಿಕೆಗಳನ್ನು ಪೂರೈಸಲು ತಮ್ಮ ಆರೋಗ್ಯವನ್ನು ಕಡೆಗಣಿಸಿ ದುಡಿಯದೆ ವಿಧಿಯಿರಲಿಲ್ಲ. ಮೇಲು-ಕೀಳುಗಳಲಂಬವಾದ (vertical) ಅಂತರ ಸುಲಭವಾದರೂ, ಸಾಮಾಜಿಕವಾಗಿ ಮಟ್ಟಸವಾದ (Horizontal) ಅಂತರವನ್ನು ಕಾಪಾಡುವುದು ಸುಲಭವಾಗಲಿಲ್ಲ.ಈ ಡೆಲಿವರಿಯ ಮನುಷ್ಯ ರಾಜ್ಯ ,ಅಥವಾ ದೇಶವನ್ನು ಬಿಟ್ಟು ಎಲ್ಲಿಯೂ ಹೋಗಿರದಿದ್ದರೂ, ಗ್ರಾಹಕರಿಂದಲೋ ಮತ್ತೊಬ್ಬರಿಂದಲೋ ಸೋಂಕನ್ನು ಪಡೆದಿದ್ದ.ಆದರೆ ಹೊಟ್ಟೆ ಹೊರೆಯಲು ಇದ್ದ ಈ ಅರೆಕಾಲಿಕ ಕೆಲಸವನ್ನು ಅವನು ನಿಲ್ಲಿಸಲು ಸಾಧ್ಯವಿರಲಿಲ್ಲ. ಆರೋಗ್ಯ ಸೇತುವಿನಂತಹ ಆಪ್ ನ್ನು ಕೆಲಸಗಾರರು ಹೊಂದಿದ್ದರೂ, ಗ್ರಾಹಕರಿಗೆ ಅದರ ಕಡ್ಡಾಯವಿರಲಿಲ್ಲ.ಏಪ್ರಿಲ್ ನ ಕರೋನಾ ಕಾಲದಲ್ಲಿ ನಮ್ಮ ದೇಶದ 55.1% ಕುಟುಂಬಗಳಿಗೆ ಎರಡು ಹೊತ್ತಿನ ಊಟವನ್ನಷ್ಟೇ ಮಾಡಲು ಸಾಧ್ಯವಾಗಿದೆ ಎಂಬುದನ್ನು ಒಂದು ಸಮೀಕ್ಷೆ ತಿಳಿಸಿದೆ.ಈ ಸಮೀಕ್ಷೆಯಲ್ಲಿ5,500 ಕುಟುಂಬಗಳು ಭಾಗವಹಿಸಿದ್ದವು.ಇವರಲ್ಲಿ ಶೇಕಡಾ ಶೇಕಡ 60 ಜನರ ಉದ್ಯೋಗಕ್ಕೂ ಸಂಚಕಾರ ಬಂದಿತ್ತು.

     ವಿಶ್ವದ ಹಲವು ದೇಶಗಳಲ್ಲಿಯೂ ಅಗತ್ಯ ಕೆಲಸಗಾರರು ಎದುರಿಸಿದ ಸಮಸ್ಯೆಗಳು ಈ ರೀತಿಯವೇ ಆಗಿವೆ. ಸರ್ಕಾರದ ಆಶ್ವಾಸನೆ, ಯೋಜನೆಗಳು, ಭರವಸೆಗಳು ಒಂದೆಡೆಯಾದರೆ, ನಿಜಗಳು ಮತ್ತೊಂದು ಚಿತ್ರವನ್ನು ಕಟ್ಟಿಕೊಡುತ್ತವೆ.

    ಉದಾಹರಣೆಗೆ ಅಮೆರಿಕಾದಲ್ಲಿ ಅಗತ್ಯ ವಸ್ತುಗಳನ್ನು ಆನ್ ಲೈನ್ ಗ್ರಾಹಕರಿಗೆ ಸರಕನ್ನು ತಲುಪಿಸುವ ಸಂಸ್ಥೆಯೊಂದರ ಅರೆಕಾಲಿಕ ಉದ್ಯೋಗಿಗಳಲ್ಲಿ ಕೆಲಸದ ಒತ್ತಡ ನೂರುಪಟ್ಟಾಯಿತು. ಕೋವಿಡ್ ಕಾರಣ ಅವರ ವಹಿವಾಟು ನೂರಾರು ಪಟ್ಟು ಹಿಗ್ಗಿತು.ಸಾವಿರಾರು ಜನರಿಗೆ ಹೊಸ ಉದ್ಯೋಗಾವಾಕಾಶಗಳೂ ಹುಟ್ಟಿಕೊಂಡವು. ಆದರೆ ಸಾಮಾಜಿಕ ಅಂತರ, ಕೆಲಸದಲ್ಲಿನ ಆರೋಗ್ಯ ಮೂರಾಬಟ್ಟೆಯಾಯಿತು.ಹೆಚ್ಚಿದಬೇಡಿಕೆಗಳನ್ನು ಪೂರೈಸಲು ಹಲವರನ್ನು ವೇರ್ ಹೌಸ್ ಕೆಲಸ ಬಿಡಿಸಿ ಡೆಲಿವರಿ ಕೆಲಸಕ್ಕೆ ಹಚ್ಚಲಾಯಿತು. ಆಫೀಸಿನಲ್ಲಿ ಕೆಲಸ ಮಾಡುವವರು ಮನೆಯಿಂದ ಕೆಲಸ ಮಾಡಿದರೆ, ನೆಲ ಗೆಲಸಗಾರರಿಗೆ ಮಾತ್ರ ಸಾಮಾನ್ಯ ರಕ್ಷಣೆಯಲ್ಲೂ ಕೊರತೆಯಿತ್ತು.ಈ ಬೃಹತ್ ಸಂಸ್ಥೆಯ ಹಲವು ಸೋಂಕಿತರ ವಿಚಾರವನ್ನು ಗುಟ್ಟಾಗಿಡಲಾಯಿತೆಂಬ ಗುಮಾನಿ ಕೆಲಸಗಾರರಲ್ಲಿ ಹರಡಿತು.

    ಇಟಲಿ ಮತ್ತು ಸ್ಪೇನಿನ ಸಂಸ್ಥೆಗಳು ಸೋಂಕಿತರು ಪತ್ತೆಯಾದ ನಂತರ ಅವರನ್ನು ಮನೆಗೆ ಕಳಿಸಿದರೇ ಹೊರತು ವೇರ್ ಹೌಸ್ ಗಳನ್ನು ಮುಚ್ಚಲು ನಿರಾಕರಿಸಿದರು.ನ್ಯೂಯಾರ್ಕಿನ ವೇರ್ ಹೌಸ್ ನ ಒಬ್ಬನಿಗೆ ಸೋಂಕು ಪತ್ತೆಯಾದ ನಂತರ ಅವರು ಆತ ಕೆಲಸಮಾಡುತ್ತಿದ್ದ ಜಾಗವನ್ನು ಒಂದು ಪಾಳಿಯ ಲೆಕ್ಕಕ್ಕೆಮಾತ್ರ ಮುಚ್ಚಲು ಒಪ್ಪಿದ್ದು. ಒಂದೇ ಸೂರಿನಡಿ ಕೆಲಸಮಾಡುತ್ತಿದ್ದ ಸಹೋದ್ಯೋಗಿಯೊಬ್ಬನ ಕರೋನ ಸಾವಿನ ನಂತರವಂತೂ ಅಲ್ಲಿನ ಕೆಲಸಗಾರರಲ್ಲಿ ಈ ಬಗ್ಗೆ ದಟ್ಟ ಅಸಮಾಧಾನ ಶುರುವಾಯಿತು.

    ಜನದಟ್ಟಣೆಯ ಜಾಗದ ಅಲ್ಲಿನ ಕೆಲಸ, ಕೆಲಸದ ಮಧ್ಯೆ ಪ್ರತಿಬಾರಿ ಕೈ ತೊಳೆಯಲು ಸಾಧ್ಯವಾಗದ ಕೆಲಸದ ಗತಿ, ಆರೋಗ್ಯ ತಪಾಸಣೆಗಿಲ್ಲದ ಸೌಲಭ್ಯಗಳು ಜೊತೆಗೆ ಮುರಿದು ಬಿದ್ದ ವಿಶ್ವಾಸಗಳು ಅಮೆರಿಕಾದ ಅಗತ್ಯಕೆಲಸಗಾರರನ್ನು ರಸ್ತೆಗಿಳಿಸಿತು.ಅವರು ಮುಷ್ಕರ ಆರಂಭಿಸಿದರು. ಅರೆಕಾಲಿಕ ಗುತ್ತಿಗೆಯ ಇವರಿಗೆ ಯಾವ ಯೂನಿಯನ್ ಗಳ ಬೆಂಬಲವೂ ಇರಲಿಲ್ಲ. ಕೊನೆಗೆ ಆ ಸಂಸ್ಥೆ ತನ್ನ ಕೆಲಸಗಾರರ ಹಲವು ಒತ್ತಡಗಳಿಗೆ ಮಣಿಯಬೇಕಾಯಿತು.ಹಲವು ಬದಲಾವಣೆಗಳನ್ನು ಜಾರಿಗೆ ತರಬೇಕಾಯಿತು.

     ಭಾರತದಲ್ಲಿ ನಾನಾ ವಸ್ತುಗಳನ್ನು ಡೆಲಿವರಿ ಮಾಡುವ ಸಂಸ್ಥೆಗಳು ಲಾಕ್ಡೌನಿನ ಸಮಯದಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡರೇ ಹೊರತು ಕಳೆದುಕೊಳ್ಳಲಿಲ್ಲ. ಬಹುತೇಕ ದೇಶಗಳಲ್ಲಿ ಅಂತರ್ಜಾಲ ಮಾರುಕಟ್ಟೆಗಳೇ ಕರೋನ ಕಾಲದಲ್ಲಿ ಅತ್ಯಧಿಕ ವಹಿವಾಟು ನಡೆಸಿದ್ದು.

    ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲ ಅಗತ್ಯಕೆಲಸಗಾರರು ಆತಂಕದಲ್ಲೇ ಕೆಲಸಮಾಡುತ್ತಿದ್ದಾರೆ.ಆಟೋ-ಟ್ಯಾಕ್ಸಿಗಳನ್ನು ಓಡಿಸುವವರು, ಬಸ್ಸು-ಲಾರಿಯ ಚಾಲಕರು, ಅಂಚೆ ಮತ್ತು ಕುರಿಯರ್ ನವರು, ಬರಹ ಮತ್ತು ದೃಶ್ಯ ಮಾಧ್ಯಮದವರು, ಹಣ್ಣು-ತರಕಾರಿ ಮಾರುವವರು,ಹೋಟೆಲಿನವರು,ಗ್ರಾಹಕರನ್ನು ಇದುರಿಸುವ ಪ್ರತಿ ಅಂಗಡಿ-ಮಳಿಗೆಯವರು,ನಮ್ಮ  ದಿನನಿತ್ಯದ ಅಗತ್ಯಗಳನ್ನು ಪೂರೈಸುವಕಾರ್ಖಾನೆಗಳಲ್ಲಿ ಕೆಲಸಮಾಡುವವರು, ಅವುಗಳನ್ನು ನಮ್ಮ ಮನೆಬಾಗಿಲಿಗೇ ತಲುಪಿಸುವ ಎಲ್ಲರೂ ಕೋವಿಡ್ ನ ಆತಂಕದಲ್ಲೇ ದಿನಶುರುಮಾಡಿ-ದಿನವನ್ನು ಮುಗಿಸುತ್ತಿದ್ದಾರೆ. ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವುದು ಕೇವಲ ಉಳ್ಳವರಿಗೆ ಸಾಧ್ಯವಾಗಿದೆ. ಆದರೆ ಅಗತ್ಯ ಕೆಲಸಗಾರರಿಗೆ ಇರಬೇಕಾದ ಸಾಮಾಜಿಕ ರಕ್ಷಣೆ ಮಾತ್ರ ಇಲ್ಲವಾಗಿದೆ.

    ಇವರ ಅಗತ್ಯ ಸೇವೆಗಳನ್ನು ನಾವು ಇನ್ನಿಲ್ಲದಂತೆ ನಿಸ್ಸಂಕೋಚವಾಗಿ ಬಳಸಿಕೊಳ್ಳುತ್ತಿರುವಾಗಲೇ ಇವರ ಆರೋಗ್ಯ ಮತ್ತು ಆರ್ಥಿಕ ಅಗತ್ಯಗಳು ಮೂಲೆಗುಂಪಾಗಿವೆ. ಹಲವು ಸಂಸ್ಥೆಗಳು ಅವರಿಗೊಂದಿಷ್ಟು ಹೆಚ್ಚುವರಿ ಹಣ ನೀಡಿದರು. ಮತ್ತೆ ಕೆಲವರಿಗೆ ಅವರಿಗೆ ಕೋವಿಡ್ ಬಂದರೆ ಆಸ್ಪತ್ರೆಯ ಖರ್ಚನ್ನ ಭರಿಸುವುದಾಗಿ ಹೇಳಿದರು. ಆದರೆ ಅವರು ತಪಾಸಣೆಗೆ ಹೋದದಿನ ಮತ್ತು ಪರೀಕ್ಷೆಯ ಫಲಿತಾಂಶ ಸಿಗುವವರೆಗಿನ ದಿನಗಳ ದಿನಗೂಲಿಯನ್ನು ಕತ್ತರಿಸಿದರು.ಕೋವಿಡ್ ಪರೀಕ್ಷೆಯ ವೆಚ್ಚವೂ ಕೆಲಸಗಾರರೇ ಭರಿಸಬೇಕಾಯಿತು .ಅಕಸ್ಮಾತ್ ಅವರ ಕುಟುಂಬದ ಸದಸ್ಯರಿಗೆ ಕೋವಿಡ್ ಬಂದರೆ ಅದರ ಖರ್ಚಿಗೆ ಯಾರೂ ಜವಾಬ್ದಾರಿಯನ್ನು ಹೊರಲು ಮುಂದೆ ಮುಂದಿಲ್ಲ.

    ಕೋವಿಡ್ ನ ಬಿಕ್ಕಟ್ಟಿನಲ್ಲಿ ಒದಗಿದ ಅವಕಾಶದಿಂದ ಲಾಭಮಾಡಿಕೊಂಡ ಹಲವು ಕಂಪನಿಗಳುಅವರ ಜೊತೆ ಕೆಲಸಮಾಡುವ ಅಗತ್ಯ ಕೆಲಸಗಾರರ ಜೊತೆ ಈ ಲಾಭವನ್ನು ಹಂಚಿಕೊಂಡಿದ್ದು ದೂರದ ಮಾತಾಯಿತು.ಅಗತ್ಯ ಕೆಲಸಗಾರರ ಅಗತ್ಯಗಳ ಆರೈಕೆಗೆ ನಿಂತ ಸಂಸ್ಥೆಗಳು ಬಹಳ ಕಡಿಮೆ. ಅಗತ್ಯ ಕೆಲಸಗಾರರು ಹಲ್ಲು ಕಚ್ಚಿ, ತುಟಿಬಿಚ್ಚದೆ, ಆತಂಕದಲ್ಲಿ ಕೆಲಸ ಮಾಡಿದ್ದೇ ಹೆಚ್ಚು.

    ಸಾರ್ವಜನಿಕರ ಹೊಣೆಗಳು

    ಅಗತ್ಯ ಕೆಲಸಗಾರರ  ಆರೋಗ್ಯದ ಆತಂಕಗಳನ್ನು ಕಡಿಮೆ ಮಾಡುವಲ್ಲಿ ಸಾರ್ವಜನಿಕರ ಪಾತ್ರವೂ ಹಿರಿದು. ಅಗತ್ಯ ಕೆಲಸಗಾರರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಅವರ ಕೆಲಸವನ್ನು ಸುಗಮಗೊಳಿಸಲು ಇತರರು ಸಹಕರಿಸಬೇಕಿದೆ.

    ಅಗತ್ಯ  ಕೆಲಸಗಾರರ ಮೇಲೆ ಅನಗತ್ಯ ಬೇಡಿಕೆಗಳ ಹೊಣೆಯನ್ನು ಕಡಿಮೆ ಮಾಡಲು ನಾವು ಸಹಕರಿಸಬಹುದಾಗಿದೆ.ಉದಾಹರಣೆಗೆ ಮೆಡಿಕಲ್ ಸಪ್ಪ್ಲೈ, ಸ್ಯಾನಿಟೈಸರ್ ಗಳು, ಮಾಸ್ಕ್ ಗಳ ಅಗತ್ಯವನ್ನು ಪೂರೈಸಲು ಅನುವು ಮಾಡಿಕೊಟ್ಟು ತತ್ ಕ್ಷಣಕ್ಕೆ ಬೇಡದ ವಸ್ತುಗಳನ್ನು ನಂತರ ತರಿಸಿಕೊಳ್ಳಬಹುದಿದೆ.

    ಅಗತ್ಯ ಕೆಲಸಗಾರರನ್ನು ಅನಗತ್ಯವಾಗಿ ಪೊಲೀಸರು ರಸ್ತೆಯಲ್ಲಿ ತಡೆಯುವುದು, ಶೋಷಿಸುವುದು ಇವನ್ನು ಕಡಿಮೆ ಮಾಡಲು ಆಗ್ರಹಿಸಬಹುದಿದೆ. ಸ್ವತಃ ಮುಖಗವಸುಗಳನ್ನು ಧರಿಸಿ ಅಗತ್ಯ ಕೆಲಸಗಾರರೊಡನೆ ವ್ಯವಹರಿಸಬಹುದಿದೆ.ಅವರ ವೇತನದಲ್ಲಿ ಹೆಚ್ಚಳ ಅಥವ ಅವರಿಗೆ ಒಂದಿಷ್ಟು ಹೆಚ್ಚು ಟಿಪ್ಸ್ ಕೊಡುವ ಮೂಲಕ ನಮ್ಮ ಅಭಿನಂದನೆಗಳನ್ನು ಸಲ್ಲಿಬಹುದಾಗಿದೆ. ಅವರ ಕೋವಿಡ್ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ರಿಯಾಯಿತಿಯನ್ನು ತೋರಿಸಬಹುದಾಗಿದೆ. ಅವರ ಮಾನಸಿಕ  ಆತಂಕಗಳನ್ನು ಅರ್ಥಮಾಡಿಕೊಂಡು ಅನಗತ್ಯ ಕೆಲಸಗಳ ಹೊರೆ ಅವರ ಮೇಲೆ ಬೀಳದಂತೆ ನೋಡಿಕೊಳ್ಳಬಹುದಾಗಿದೆ.

    ಅಗತ್ಯ ಕೆಲಸಗಾರರು ನಾವು ಸುರಕ್ಷಿತವಾಗಿರಲು, ನಮ್ಮ ಜೀವನದ ಅಗತ್ಯಗಳಿಗೆ ಧಕ್ಕೆಯಾಗದಿರಲು ತಮ್ಮ ಜೀವಗಳನ್ನು ಒತ್ತೆಯಿಟ್ಟು ಕೆಲಸಮಾಡುತ್ತಿದ್ದಾರೆ. ವೈರಸ್ಸಿನ ದಾಳಿಯಿಂದ ನಮ್ಮನ್ನು ರಕ್ಷಿಸುತ್ತಿದ್ದಾರೆ.ಅವರನ್ನು ಬಲಿಪಶುಗಳಂತೆ ಬಳಸಿಕೊಳ್ಳದಿರಲು ಸರ್ಕಾರ, ಉದ್ಯೋಗದಾತರು, ಪೊಲೀಸರು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ಪ್ರಯತ್ನಿಸಬೇಕಿದೆ.

    Photo by Anna Shvets from Pexels

    ಅತಿವೃಷ್ಟಿ

    ವಿರಾಮದ ಓದಿಗೆ ಉತ್ತಮ ಸಣ್ಣ ಕಥೆಗಳನ್ನು ಪ್ರಕಟಿಸಿ ಎಂಬ ನಮ್ಮ ಓದುಗರ ಒತ್ತಾಸೆಗೆ ಒಪ್ಪಿ ಕಥಾ ಲೋಕ ಎಂಬ ಹೊಸ ವಿಭಾಗ ಆರಂಭಿಸುತ್ತಿದ್ದೇವೆ. ಮುಂಬೈ ಕನ್ನಡತಿ ಅಪರ್ಣಾ ರಾವ್ ಬರೆದ ಅತಿವೃಷ್ಟಿ ಈ ಅಂಕಣದ ಮೊದಲ ಕಥೆ. ಈ ಮಳೆಗಾಲದ ಬೆಚ್ಚನೆಯ ಓದಿಗೆ 2005ರ ಮುಂಬೈ ಮಹಾಮಳೆಯ ಕಥೆ . ಆನ್ ಲೈನ್ ಪತ್ರಿಕೆಗಳಲ್ಲಿ ಇದೇ ಪ್ರಥಮ ಬಾರಿಗೆ animated illustration ಬಳಸಿದ್ದೇವೆ. ಇದನ್ನು ರಚಿಸಿದವರು ನಾಡಿನ ಪ್ರತಿಭಾವಂತ ಕಲಾವಿದ ಕಿರಣ್ ಮಾಡಾಳು. ಇನ್ನು ಓದುವ ಸಂತಸ ನಿಮ್ಮದು.

    2005 ರ ಜುಲೈ 26 !

    ನಿಂತಿದೆ. ಅಲ್ಲಾ.. ಅಸಲಿಗೆ ಅಸಹಾಯಕವಾಗಿ ಮಲಗಿದೆ. ಹೂಂ. ನನ್ನನ್ನು ಯಾರೂ ಕ್ಷಣ ಮಾತ್ರವೂ ನಿಲ್ಲಿಸುವವರಿಲ್ಲ ಎಂದು ಬೀಗುತ್ತಿದ್ದ ಮುಂಬೈ ಯಾವುದೋ ಧೈತ್ಯ ಶಕ್ತಿಗೆ ಡಿಕ್ಕಿ ಹೊಡೆದಂತೆ, ತನ್ನ ಅವಯವಗಳನ್ನೆಲ್ಲಾ ಮುರಿದುಕೊಂಡಂತೆ ಬಿದ್ದಿದೆ. ಸಮುದ್ರ ಯಾವುದೋ ನೆಲ ಯಾವುದೋ ಕಾಣದಂತೆ ಮುಂಬೈಯ ಏಳು ದ್ವೀಪಗಳೂ ಜಲಾವೃತವಾಗಿವೆ. ಕಳೆದ ಎರಡು ದಿನದಿಂದ ಸುರಿದ ಮಳೆಗೆ ಜನಜೀವನವೆಲ್ಲಾ ಇರುವೆಗಳಂತೆ ಹಾದಿ ತಪ್ಪಿ ಚಿಲ್ಲಾಪಿಲ್ಲಿಯಾಗಿ ಓಡುತ್ತಿದ್ದಾರೆ. ದಿನಃ ಪ್ರತಿ ಬದುಕು ಕಟ್ಟಿಕೊಳ್ಳಲು ಎದ್ದು ಶಿಸ್ತಿನಲ್ಲಿ ಓಡುತ್ತಿದ್ದರೋ ಅದನ್ನೆಲ್ಲಾ ಬಿಟ್ಟಲ್ಲೇ ಬಿಟ್ಟು ಜೀವ ಉಳಿಸಿಕೊಳ್ಳಲು ಎತ್ತರದ ಸ್ಥಳ ಹುಡುಕಿ ಓಡುತ್ತಿದ್ದಾರೆ. ಎಲ್ಲಿ ನೋಡಿದರೂ ನೀರು ನೀರು.

    ಹಾಗೆ ನೋಡಿದರೆ ಮುಂಬೈ ಜನರಿಗೆ ಮಳೆಗಾಲದಲ್ಲಿ ಎಲ್ಲಾ ಕಡೆ
    ನೀರು ತುಂಬಿಕೊಳ್ಳುವುದು ಹೊಸದೇನಲ್ಲ. ತಗ್ಗಿನ ಚಾಳ್, ಜೋಪಡಿಗಳಲ್ಲಿ ಜನ ತಮ್ಮ ಕಾಲಿನ ಮಂಡಿಯ ತನಕ ನೀರಲ್ಲಿ ಮುಳುಗಿಸಿಕೊಂಡೇ ಮನೆ ಕೆಲಸ ಮಾಡಿಕೊಳ್ಳುತ್ತಾರೆ. ಎಲ್ಲವನ್ನೂ ಮಂಚ ಟೇಬಲ್ ಮೇಲಿರಿಸಿಕೊಂಡು ಸಾಮಾನ್ಯವೆನ್ನುವಂತೆ ದಿನಚರಿ ನಡೆಸುವವರಿದ್ದಾರೆ. ಮಲಗಲೆಂದೇ ಗುಡಿಸಲುಗಳಲ್ಲೂ ಊಪರ್ ಮಾಲಾ ಕಟ್ಟಿಕೊಂಡಿರುತ್ತಾರೆ.

    ಆದರೆ ..ಇವತ್ತಿನ ನೀರಿನ ರಭಸ ಸಾಮಾನ್ಯದ್ದಾಗಿರಲಿಲ್ಲ. ಅರಿವಿಗೂ ಬರುವ ಮುನ್ನವೇ ಕೂತು ಕೂತಂತೆಯೇ ಕೊಚ್ಚಿಕೊಂಡು ಹೋಗುತ್ತಿರುವಂತದ್ದು. ಆ ರಭಸಕ್ಕೆ ಕಾರು ಲಾರಿಗಳೇ ಕೊಚ್ಚಿ ಹೋಗುತ್ತಿರುವಾಗ ಮನುಷ್ಯನ ಪಾಡೇನು?

    ಮುಂಬೈ ಬದುಕೆಂದರೆ ‘ಟೈಮ್ ಈಸ್ ಮನಿ’ ಎನ್ನುವ ಮಾತು ಉತ್ಪ್ರೇಕ್ಷೆ ಏನಲ್ಲ. ಇಲ್ಲಿ ತುರುಸಿಕೊಳ್ಳಲೂ ಜನರಿಗೆ ಪುರುಸೊತ್ತಿಲ್ಲ. ಲೋಕಲ್ ಟ್ರೈನ್ ಅವಘಡದಲ್ಲಿ ಸತ್ತವನ ಶವ ಸ್ಟ್ರೆಚರ್ ಅಲ್ಲಿ ಸಾಗಿಸುತ್ತಿದ್ದರೂ ಪಕ್ಕದಲ್ಲೇ ಅದನ್ನು ಕಂಡರೂ ‘ಅಯ್ಯೋ ಪಾಪ ‘ ಅನ್ನಲೂ ಪುರುಸೊತ್ತಿಲ್ಲದವರಂತೆ ಜನ ತಮ್ಮ ತಮ್ಮ ಸಮಯದ ಟ್ರೈನ್ ಹಿಡಿಯಲು ಓಡುವವರು. ಯಾವ ಗಂಭೀರ ವಿಷಯವೂ ಮುಂಬೈಯನ್ನು ನಿಲ್ಲಿಸುವುದಿಲ್ಲ ಎನ್ನುವ ಒಣ ಹೆಮ್ಮೆ ಸುಮ್ಮನೆ ಬಂದಿದ್ದೆ?

    ಇವತ್ತೂ ಸಹ ಹವಾಮಾನ ಇಲಾಖೆ ‘ಹೈ ಟೈಡ್” ಬಗ್ಗೆ ಎಲ್ಲಾ ಮಾಧ್ಯಮಗಳಲ್ಲೂ ಎಚ್ಚರಿಕೆ ಕೊಟ್ಟೇ ಇತ್ತು. ಜನರಿಗೆ ಇದೆಲ್ಲಾ ಯಾವ ಲೆಕ್ಕ. ಮೀನುಗಾರರಿಗೆ ಮಾತ್ರ ಆ ಎಚ್ಚರಿಕೆ ಎಂದುಕೊಂಡು ಎಂದಿನಂತೆ ಅಂದೂ ಎರಡು ದಿನದಿಂದ ಸುರಿಯುತ್ತಿದ್ದ ಮಳೆಗೆ ಹೆದರದೆ ತಮ್ಮ ತಮ್ಮ ಕೆಲಸಕ್ಕೆ ಓಡಿದ್ದರು.

    ಇವರೆಲ್ಲರ ಅಸಡ್ಡೆಗೆ ಸಿಟ್ಟುಗೊಂಡಂತೆ ಸಮುದ್ರ ಮಧ್ಯಾಹ್ನ ಸುಮಾರು ಒಂದೂವರೆ ಹೊತ್ತಿಗೆ ಎತ್ತೆತ್ತರದ ಅಲೆಗಳನ್ನು ಎಬ್ಬಿಸಿ ರುದ್ರ ತಾಂಡವ ಆಡತೊಡಗಿ ಎಗ್ಗಿಲ್ಲದಂತೆ ತನ್ನ ಮಿತಿ ದಾಟಿ ರಸ್ತೆ ರಸ್ತೆಗೂ ಮನೆ ಮನೆಗೂ ನೀರು ನುಗ್ಗತೊಡಗಿತು. ಎಂದಿನಂತೆ ಮಾಮೂಲಿಯಾಗಿ ಮನೆ ಕೆಲಸ ಮಾಡಿಕೊಂಡಿದ್ದವರಿಗೆ ಮುನ್ಸೂಚನೆಯೂ ಕೊಡದಂತೆ ನೀರು ನುಗ್ಗಿತ್ತು. ಮನೆಯೇ ಸಮುದ್ರ ಸೇರಿತೋ .ಸಮುದ್ರವೇ ಮನೆಗೆ ಬಂದಿತೋ ತಿಳಿಯದ ಅಯೋಮಯ. ಮನೆಯಲ್ಲಿದ್ದವರಿಗೆ ತಾನೀಗ ಏನೇನು ಎತ್ತಿಟ್ಟುಕೊಂಡು, ಯಾವ ಸಾಮಾನುಗಳನ್ನು ಕಾಪಾಡಿಕೊಳ್ಳಲಿ ಎಂಬ ವಿವೇಚನೆಗೂ ಸಮಯ ಕೊಡಲಿಲ್ಲ.

    ಯಾರೋ ಕೆಲ ಪುಣ್ಯಾತ್ಮರು ಅದೃಷ್ಟವಶಾತ್ ಮನೆ ಡಾಕ್ಯುಮೆಂಟ್ಸ್ ತೀರಾ ಆವಶ್ಯಕ ಕಾಗದ ಪತ್ರ, ಒಡವೆ ದುಡ್ಡು ಉಳಿಸಿಕೊಂಡವರು ಕೊಂಚ ನೆಮ್ಮದಿಯಿಂದ ಜಾಗ ಸಿಕ್ಕ ಕಡೆ ಸೇರಿಕೊಂಡರು. ಏನೂ ಸಿಗದವರು, ಕೈಲಾಗದವರನ್ನು ಹಾಸಿಗೆ ಹಿಡಿದ ವೃದ್ದರನ್ನು ಬದುಕಿಸಿಕೊಳ್ಳಲು‌ ಸಿಕ್ಕ ಸಿಕ್ಕವರನ್ನು ಸಹಾಯಕ್ಕಾಗಿ ಗೋಗರಿಯುತ್ತಿದ್ದರು. ಇದರಲ್ಲೆಲ್ಲಾ ಅದೃಷ್ಟವಂತರೆಂದರೆ ಬಹು ಮಹಡಿ ಕಟ್ಟಡಗಳಲ್ಲಿ ಹೊರಗೆಲ್ಲೂ ಹೋಗದೆ ಉಳಿದವರು. ಅವರ ಮನೆಗಳಲ್ಲಿ ಅತ್ಯವಶ್ಯಕ ಸಾಮಾನುಗಳು ಏನಿದ್ದವೋ ಅದಷ್ಟೇ ನಿಜವಾದ ಆಸ್ತಿ ಅವರಿಗೂ ಅಂದು. ಅಲ್ಲೂ ವಿದ್ಯುತ್ ಇಲ್ಲ. ಅದಿಲ್ಲದೆ ನೀರೂ ಕೂಡ ಇಲ್ಲ.

    ಈ ಪ್ರವಾಹಕ್ಕೆ ಬಡವ ಬಲ್ಲಿದ ಎಂಬ ಭೇದವಿಲ್ಲವಷ್ಟೇ.‌ ಸಿಲೆಬ್ರಿಟಿಗಳ ಏರಿಯಾ ಅನ್ನಿಸಿಕೊಂಡ ಜುಹು ಬಾಂದ್ರಾ ಪರಿಸರಗಳು ನೀರಲ್ಲೇ ಮುಳುಗೇಳುತ್ತಿದೆ. ಅಲ್ಲಿಯ ಜನಗಳಿಗೆ ಮೊದಲಿನಿಂದಲೂ ಅಂಧೇರಿಯಾಚೆಯ ನಗರವಾಸಿಗಳನ್ನು ಕಂಡರೆ ಒಂದು ರೀತಿ ಅಸಡ್ಡೆ. ‘ ಬಾಪ್ ರೇ. ಉದರ್ ಕೌನ್ ಜಾಯೇಗಾ.. ಅಂಧೇರಿ ಸೇ ಆಗೇ ತೋ ತಬೇಲೇ ಹೀ ಹೈ.. ಆ ಬದಿ ಎಲ್ಲಾ ಹಳ್ಳಿಗರ ಪ್ರದೇಶ’ ಎಂದು ಆಡಿಕೊಳ್ಳುವುದು ಮಾಮೂಲಿನ ವಿಷಯ.

    2005 ರ ಜುಲೈ 26 ನೇ ತಾರೀಖು ಅಂಥವರ ಆ ಗಮಂಡ್ ಅನ್ನೂ ಮುಳುಗಿಸಿತ್ತು. ಇದ್ದದ್ದರಲ್ಲಿ ಗೋರೇಗಾಂವ್ ನ ಒಂದಷ್ಟು ಜಾಗಗಳಲ್ಲಿ ನೀರು ತೀರಾ ಎಲ್ಲವನ್ನೂ ಮುಳುಗಿಸಿರಲಿಲ್ಲ. ತಗ್ಗಿನ ಪ್ರದೇಶದ ಚಾಲಿ ಮನೆಗಳು ಮುಳುಗಿದ್ದು ಬಿಟ್ಟರೆ, ಎಸ್ ವಿ ರೋಡ್ ಬದಿಯ ಎತ್ತರದ ಜಾಗಗಳು ಇದ್ದದ್ದರಲ್ಲಿ ಸುರಕ್ಷಿತವಾಗಿತ್ತು. ಆದರೂ‌ ಅಲ್ಲಿಯೂ ಮಂಡಿಯ ವರೆಗಿನ ನೀರಿನಲ್ಲಿ ಜನ ಪರದಾಡಿ ಸಾಧ್ಯವಾದಷ್ಟು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದವರಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಅದುವರೆಗೂ ಕಂಜೂಸಿತನದಲ್ಲೇ ವ್ಯವಹರಿಸುತ್ತಿದ್ದ ವ್ಯಾಪಾರಿಗಳು ಎನ್ನಿಸಿಕೊಂಡವರೂ ‘ನಾಳೆ’ ಎಂಬುದೇ ಇಲ್ಲವೇನೋ ಎಂಬ ಜ್ಞಾನೋದಯ ಆದಂತೆ ದಯಾವಾನ್ ಗಳಾಗಿ ನೀರಿನ ಬಾಟಲಿಗಳು, ಪ್ಯಾಕ್ ಮಾಡಿದ ಆಹಾರಗಳನ್ನು, ವಡಾ ಪಾವ್ ಸಮೋಸಾಗಳನ್ನು ಆ ಮಳೆಯಲ್ಲಿಯೂ ಜನರನ್ನು ಕರೆ ಕರೆದು ಹಂಚುತ್ತಿದ್ದರು. ಇನ್ನು ಬಿಲ್ಡಿಂಗ್ ಗಳಲ್ಲಿ ಇದ್ದವರೂ ಸಹ ಆಗೊಮ್ಮೆ ಈಗೊಮ್ಮೆ ನೋಡಿದ್ದ ಒಮ್ಮೆಯೂ ಮುಖತಃ ಮಾತನಾಡದವರಿಗೂ ಸಹ ಮನೆಯಲ್ಲಿ ಕರೆದು ಆಶ್ರಯ ನೀಡುವ ದೃಶ್ಯವೂ ಕಾಣುತ್ತಿತ್ತು. ದೇವಸ್ಥಾನ ಶಾಲೆ ಕಾಲೇಜುಗಳು ಮನೆ ಮಠ ಕಳೆದುಕೊಂಡವರಿಗೆ ಆಶ್ರಯ ತಾಣಗಳಾದವು.

    ಎಲ್ಲಕ್ಕಿಂತ ಘೋರ ಎಂದರೆ ‘ಆರೇ’ ಡೈರಿಗೆ ಹಾಲು ಒದಗಿಸುವ ಬೃಹತ್ ತಬೆಲಾ ಸಂಕುಲಗಳಲ್ಲಿ ಕಟ್ಟಿ ಹಾಕಿದ್ದ ಮೂಕ ಎಮ್ಮೆ ಹಸುಗಳು ಈಜಿ ತಪ್ಪಿಸಿಕೊಳ್ಳಲೂ ದಾರಿ ಕಾಣದೆ ಇದ್ದಲ್ಲಿಯೇ ನೀರಿನಲ್ಲಿ ಮುಳುಗಿ ಹೋರಾಡಿ ಮರಣವಪ್ಪಿದ್ದವು.

    ಇದ್ಯಾವುದರ ಅರಿವೇ ಇಲ್ಲದಂತೆ ಹೌಸಿಂಗ್ ಸೊಸೈಟಿಯ ಕಟ್ಟಡಗಳಲ್ಲಿ ಮನೆಯಲ್ಲೇ ಉಳಿದಿದ್ದ ಜನ ಸುತ್ತಲಿನ ಜನರ ದಾರುಣತೆಗೆ ಕರಗಿ ತಮ್ಮಿಂದಾದ ಸಹಾಯ ಮಾಡುತ್ತಿದ್ದರು. ಯಾವ ಜಾತಿ ಯಾವ ಅಂತಸ್ತೂ ಅವತ್ತು ಯಾರಿಗೂ ನೆನಪಾಗುತ್ತಿಲ್ಲ. ಹೀಗೇ ಮುಂದುವರೆದು ನಾವೂ ಮುಳುಗುವ ಪರಿಸ್ಥಿತಿ ಎದುರಾದರೆ, ತಮ್ಮಲ್ಲಿರುವ ವಸ್ತುಗಳೂ ಉಳಿಯುವುದು ಅನುಮಾನ ಎಂದು ಭಾವಿಸಿದ ಜನ ಮಾಡಿದ ಅಡಿಗೆಯನ್ನೋ ಮತ್ತೊಂದನ್ನೋ ಧಾರಾಳವಾಗಿ ಹಂಚಿಕೊಳ್ಳುತ್ತಿದ್ದರು.

    ಹೋಟೆಲ್ ಗಳಿಂದ ತಮ್ಮ ಅಂಗಡಿಗಳಿಂದ ತಿನಿಸು ಸಾಮಾನು ಎತ್ತಿ ಎತ್ತಿ ರಸ್ತೆಯ ಜನರಿಗೆ ಕೊಡಲು ಆರಂಭಿಸಿದ್ದರು. ರಸ್ತೆಯ ಚಾಯ್ ವಾಲಾ ಕೂಡ ವ್ಯಾಪಾರ ಮರೆತು ಸಿಕ್ಕಿದವರಿಗೆಲ್ಲಾ ಚಾಯ್ ಹಂಚುತ್ತಿದ್ದ.

    ಒಟ್ಟಿನಲ್ಲಿ ಗಾಂಧೀಜಿ ಕನಸಿನ ರಾಮರಾಜ್ಯ ಆ ದಿನದ ಮಟ್ಟಿಗಾದರೂ ಹುಟ್ಟಿಕೊಂಡಿತ್ತು.

    ‍* * * * *

    ಪಗರಾವ್ ಬಿಲ್ಡಿಂಗ್ ನ ಕಾಳೆ ಫ್ಯಾಮಿಲಿಯ ಏಕ ಮಾತ್ರ ಪುತ್ರಿ ತೃಪ್ತಿ ಅಂದು ಕಾಲೇಜಿಗೆ ಹೋದವಳು ಸಂಜೆ ಆರಾದರೂ ಮರಳಿರಲಿಲ್ಲ. ಹನ್ನೆರಡೂವರೆಗೆಲ್ಲಾ ಕಾಲೇಜು ಮುಗಿದು ಹೆಚ್ಚೆಂದರೆ ಎರಡರ ಒಳಗೆ ದಿನಾ ಮನೆ ತಲುಪುವವಳು ಅವಳು.. ಕಾಳೆ ದಂಪತಿಗಳಿಗೆ ಮದುವೆ ಆದ ಹದಿನೇಳು ವರ್ಷದ ನಂತರ ಹುಟ್ಟಿದ ಮಗು ಅವಳು. ಟೆಸ್ಟ್ ಟ್ಯೂಬ್ ಬೇಬಿ ಅಂತೆ ಕಂತೆಗಳು ಬೇರೆ.. ಅಂಥಾ ಅವಳ ಅಮ್ಮ ಸುಮನ್ ಅಂದು ನಿಂತಲ್ಲಿ ನಿಲಲಾರದವರಾಗಿದ್ದರು. ಮಗಳು ಮನೆಗೆ ಬಂದಿಲ್ಲ. ಬಹಳ ಕಾಳಜಿಯಿಂದ ಬೆಳೆಸಿದ ಕಾರಣಕ್ಕೋ ಏನೋ ವ್ಯವಹಾರ ಜ್ಞಾನ ಸರಿಯಾಗಿ ಬೆಳೆಯದ ಹುಡುಗಿ. ಮನೆ ಕಾಲೇಜು ಬಿಟ್ಟರೆ ಅಪ್ಪ ಅಮ್ಮನೇ ಅವಳ ಪ್ರಪಂಚ. ಅದೇನೋ.. ಅಕ್ಕ ಪಕ್ಕದವರ ಜೊತೆಯೂ ಬೆರೆಯುವುದು ತೀರಾ ಕಡಿಮೆ. ಅಂತವಳು ಈ ಮಳೆಯಲ್ಲಿ ಎಲ್ಲಿ ಸಿಕ್ಕಿಕೊಂಡಳೋ? ಎಂಬ ಚಿಂತೆ ಅವರಿಗೆ. ಎಲ್ಲೋ ಒಂದು ಕಡೆ‌ ಸುರಕ್ಷಿತ ಅನ್ನುವ ಸುದ್ದಿಯಾದರೂ ಸಿಕ್ಕರೆ ನೆಮ್ಮದಿ. ಹೇಗೆ ತಿಳಿದುಕೊಳ್ಳುವುದು? ಮಗಳಿಗೆ ಮೊಬೈಲ್ ಕೂಡ ಕೊಡಿಸಿಲ್ಲ. ಅನುಕೂಲವಿಲ್ಲವೆಂದೇನಿಲ್ಲ. ತಂದೆ ಸಿಎ. ಪ್ರಕಾಶ ಕಾಳೆಗೆ ಅವೆಲ್ಲಾ ದುಂದು ವೆಚ್ಚ ಅನ್ನುವ ಭಾವನೆ.

    ಪ್ರಕಾಶ್ ಕಾಳೆ ತಮ್ಮ ಮನೆಯ ಹತ್ತಿರದಲ್ಲೇ ಆಫೀಸು ಇಟ್ಟುಕೊಂಡವರು. ಮಧ್ಯ ವಯಸ್ಸು ದಾಟಿರುವ ಹಂತದಲ್ಲಿ ದೂರ ಪಾರ ಬೇಡ ಎಂದು ಫೋರ್ಟಿನಲ್ಲಿದ್ದ ಆಫೀಸ್ ಮುಚ್ಚಿ ಮನೆಗೆ ಹತ್ತಿರವೇ ಮಾಡಿಕೊಂಡಿದ್ದರು. ಅವರ ಶಿಷ್ಯ ವೃಂದವೂ ಸಾಕಷ್ಟಿತ್ತು. ಅಂದೂ ಕೂಡ ಎಂದಿನಂತೆ ಮನೆಗೆ ಬಂದವರಿಗೆ ಮಗಳು ಮನೆಗೆ ಬಂದಿಲ್ಲ ಎನ್ನುವ ವಿಷಯ ತಿಳಿಯುತ್ತಿದ್ದಂತೆ ತಮ್ಮ ಶಿಷ್ಯರನ್ನು ಸ್ಟೇಷನ್ನಿಗೆ ಅಟ್ಟಿದ್ದರು. ಅಲ್ಲಿ ಹೋದವರಿಗೆ ಟ್ರೇನ್ ಓಡಾಟ ಮಳೆಯ ಆರ್ಭಟಕ್ಕೆ ಟಪ್ಪಾಗಿದ್ದು ತಿಳಿದು ವಿಷಯ ಮುಟ್ಟಿಸಿದರು. ಇವರ ಚಡಪಡಿಕೆ ಹೆಚ್ಚಾಯಿತು. ಹಾಳಾದ್ದು ಟಿವಿ ಕೂಡ ಇಲ್ಲ ಏನಾಗುತ್ತಿದೆ ಅನ್ನುವ ನ್ಯೂಸ್‌ ನೋಡಲಿಕ್ಕಾದರೂ. ಕಾಳೆಗೆ ಏನು ಮಾಡಬೇಕು ತೋಚದೆ ಇದ್ದಕ್ಕಿದ್ದಂತೆ ಪ್ಯಾಂಟ್ ತೊಡೆಯವರೆಗೂ ಮಡಚಿ, ಕೊಡೆ ಹಿಡಿದು ಬಿಲ್ಡಿಂಗ್ ಇಂದ ಇಳಿದು ಮುಂದೆ ಹೋಗಿ ರಸ್ತೆ ಕೊನೆಗೆ ನಿಂತು ಆತಂಕದಿಂದ ಸ್ಟೇಷನ್ ರಸ್ತೆಯ ಕಡೆಗೆ ನೋಡುತ್ತಿದ್ದರು.

    ಇತ್ತ ತಾಯಿ ಸುಮನ್ ಗ್ಯಾಲರಿಯಲ್ಲಿ ನಿಂತು ದೂರದಲ್ಲಿ ಕಾಣುವ ಗಂಡನತ್ತಲೇ ದೃಷ್ಟಿ ನೆಟ್ಟಿದ್ದರು. ಮಧ್ಯೆ ಮಧ್ಯೆ ಮುಂಬಾಗಿಲಿಗೆ ಬಂದು ಹೊರಗಿನಿಂದ ಬರುತ್ತಿರುವ ಫ್ಲಾಟಿನ ಇತರರನ್ನು ಲೋಕಲ್ ಟ್ರೇನ್ ಬಗ್ಗೆ ವಿಚಾರಿಸುವರು. ಹಾಗೆ ನೋಡಿದರೆ ಏರಿಯಾ ಬಿಟ್ಟು ಹೊರ ಹೋದವರು ಯಾರೂ ವಾಪಸ್ ಬಂದಿರಲಿಲ್ಲ. ಇಲ್ಲಿ ಓಡಾಡುತ್ತಿದ್ದವರೆಲ್ಲಾ ಅಲ್ಲಲ್ಲಿಯೇ ಸುತ್ತ ಮುತ್ತಲೇ ಇದ್ದವರು. ಒಟ್ಟಿನಲ್ಲಿ ಜನಗಳ ನಡುವೆ ಏನೇನೋ ಊಹಾಪೋಹಗಳು ಒಂದಷ್ಟು. ಬರೀ ಮುಳುಗಿದ ಮನೆಗಳವರ ಬಗ್ಗೆಯೇ ಮಾತು. ಆ ನಡುವೆ ಆಗೊಮ್ಮೆ ಈಗೊಮ್ಮೆ ಫೈರ್ ಬ್ರಿಗೆಡ್ ಆಂಬುಲೆನ್ಸ್ ಸದ್ದು, ತೃಪ್ತಿಯ ಅಮ್ಮನನ್ನು ಮತ್ತಷ್ಟು ಅಧೀರ‌ಗೊಳಿಸುತ್ತಿತ್ತು. ಎಲ್ಲಾ ಕಡೆ ಕತ್ತಲು ಬೇರೆ ಆವರಿಸಿದೆ. ಬೀದೀ ದೀಪಗಳೂ ಇಲ್ಲ. ಮುನ್ನೂರು ಅರವತ್ತು ದಿನವೂ ಜಗಜಗಿಸುವ ಮುಂಬೈ ಜೊತೆಗೆ ಅಂದು ಕಸ್ತಿ ಕಟ್ಟಿ ಕತ್ತಲು ಗೆದ್ದಿದೆ.ಇಷ್ಟರವರೆಗೂ ಕೆಲಸವೇ ಇಲ್ಲದೆ ಬಿದ್ದಿದ್ದ ಕ್ಯಾಂಡಲ್ಗಳಿಗೆ ಅವತ್ತು ಎಲ್ಲಿಲ್ಲದ ಡಿಮಾಂಡ್. ಒಂದೊಂದು ಫ್ಲೋರ್ ನವರೂ ಕ್ಯಾಂಡಲ್ ಹಚ್ಚಿ ಮನೆಗೆ ಬರುವವರ ದಾರಿ ಕಾಯುತ್ತಿದ್ದರು.

    ಸದಾ ಮನೆಯೊಳಗೇ ಅವಿತುಕೊಳ್ಳುವ , ಅಮವಾಸ್ಯೆಗೋ ಪೌರ್ಣಮಿಗೋ ಒಮ್ಮೆ ಮಾತ್ರ ತಮ್ಮದೇ ಬಿಲ್ಡಿಂಗ್ ಜನರನ್ನು ಕಂಡು ‘ಕಶಿ ಹೋ’ ‘ಕೈಸೆ ಹೋ’ ಅನ್ನುತ್ತಲೇ ಕೈ ಬೀಸಿ ಸಾಗಿ ಹೋಗುವ ಜನ ಇವತ್ತು ಮಾತ್ರ ಪುರುಸೊತ್ತೇ ಪುರುಸೊತ್ತಾಗಿರುವವರಂತೆ ಸಿಕ್ಕವರ ಜೊತೆ ಮಾತಿಗಿಳಿದಿದ್ದರು. ಯಾವ ರಸ್ತೆಯಲ್ಲಿ ಎಷ್ಟು ಅಡಿ ನೀರು ತುಂಬಿದೆ ಎಂಬುವುದರ ಬಗ್ಗೆ, ರಸ್ತೆಯಲ್ಲಿ ತೇಲಿ ಬರುತ್ತಿರುವ ಗ್ಯಾಸ್ ಸಿಲಿಂಡರ್, ಪ್ರಾಣಿಯ ಶವ, ಮುಳುಗಿದ ವಾಹನಗಳ ಬಗ್ಗೆ, ಸತ್ತು ಹೋದ ಜನರ ಬಗ್ಗೆ. ದುಡ್ಡು ಕಳೆದುಕೊಂಡವರ ಬಗ್ಗೆ ಎಲ್ಲೆಲ್ಲೂ ಚರ್ಚೆ. ಶ್ರೀಮಂತಿಕೆಯ ಭಾರಿ ಧಿಮಾಕಿನಿಂದ‌ ಯಾರ ಅಗತ್ಯವೂ ಇಲ್ಲವೆಂಬಂತೆ ಇದ್ದ ಜನರೂ ಅಂದು ಒಂದು ಜೊತೆ ಬಟ್ಟೆಯೂ ಇಲ್ಲದೆ ಬೀದಿ ಪಾಲಾದ ಬಗ್ಗೆ ರಂಜನೀಯವಾಗಿ ಕೈ ಬಾಯಿ ತಿರುಗಿಸುತ್ತಾ ಮಾತಾಡಿಕೊಳ್ಳುತ್ತಿದ್ದರು.

    ಬಾಕಿ ಸಮಯದಲ್ಲಾಗಿದ್ದರೆ ತೃಪ್ತಿಯ ಅಮ್ಮನಿಗೆ ಬಹಳಾ ಆಸಕ್ತಿ ಇಂಥಾ ಮಾತುಗಳಲ್ಲಿ. ಅವರ ಮಾತಿನ ಭರಾಟೆ ಎಷ್ಟೆಂದರೆ ಬೇರೆಯವರಿಗೆ ಆಡಲು ಅವಕಾಶವೇ ಕೊಡುತ್ತಿರಲಿಲ್ಲ. ಆಕೆ ಗವರ್ನಮೆಂಟ್ ಶಾಲೆಯ ಪ್ರಾಧ್ಯಾಪಕಿ ಆಗಿದ್ದವರು ತೃಪ್ತಿ ಹುಟ್ಟಿದ ಮೇಲೆ ಕೆಲಸ ಬಿಟ್ಟಿದ್ದರು. ಸದಾ ಮಾತಾಡುವ ವೃತ್ತಿಯಿಂದ ಬಂದವರಾದ್ದರಿಂದ ಮನೆಯಲ್ಲಿ ಸುಮ್ಮನೆ ಕೂರುವುದು ಅವರಿಗೇ ಅಸಾಧ್ಯವಾಗಿತ್ತು. ಮಾತಿಗೆ ಯಾರಾದರು ಸಿಕ್ಕರೆಂದರೆ ಮುಗಿಯಿತು. ಯಾವುದೇ ಕಾರಣಕ್ಕೊ ಬಿಡುತ್ತಿರಲಿಲ್ಲ. ಸಾಮಾನ್ಯವಾಗಿ ಬೇರೆಯವರ ಜೊತೆ ಮಾತನಾಡುವ ವ್ಯವಧಾನ ಇಲ್ಲದವರು ಮುಂಬೈ ಫ್ಲಾಟ್ ಸಂಸ್ಕೃತಿಯ ಜನ. ಇವರನ್ನು ಕಂಡ ಕೂಡಲೇ ತಪ್ಪಿಸಿಕೊಂಡು ಹೋಗುತ್ತಿದ್ದರು.

    ಅದರಲ್ಲೂ ಎದುರು ಮನೆಯ ಶೇಟೆ ಹೆಂಡತಿಗೆ ಇವರನ್ನು ಕಂಡರೆ ಅಷ್ಟಕ್ಕಷ್ಟೇ. ಇವರ ಜೊತೆ ಮಾತಿಗೆ ನಿಂತರೆ ಮುಗಿಯಿತು. ಮನೆಯೇ ಹತ್ತಿ ಉರಿದರೂ ಬಿಡುವ ಹೆಂಗಸಲ್ಲ. ಅತೀ ಮಾತು ಎಂದು ಮೂಗು ಮುರಿದು ಬಾಗಿಲು ಧಡಾರ್ ಅಂತ ಹಾಕುವವರು. ಅಂಥವರು ಇವತ್ತಿನ ಇವರ ತಳಮಳ ಕಂಡು ಕನಿಕರಿಸಿ, ಗಳಿಗೆಗೊಮ್ಮೆ ‘ ತೃಪ್ತಿ ಆಲಿ ಕಾಯ್? ‘ ಅಂತ ಮತ್ತೆ ಮತ್ತೆ ವಿಚಾರಿಸುತ್ತಿದ್ದರು. ‘ಅಜೂನ್ ಆಲಿ ನಾಯ್” ಎಂದು ಇವರು ಸಪ್ಪಗೆ ಉತ್ತರಿಸುತ್ತಿದ್ದರು. ಕಣ್ಣೆಲ್ಲಾ ಬೀದಿಯ ಕಡೆಗೇ. ರಾತ್ರಿ ಒಂಬತ್ತು ಹೊಡೆಯುತ್ತಿದ್ದಂತೆ ಆಕೆಯ ಕಣ್ಣಲ್ಲಿ ಕಂಡೂ ಕಾಣದ ಹಾಗೆ ನೀರು. ಧೃತಿ ಗೆಟ್ಟಿಲ್ಲ ಎಂದು ತೋರಿಸಿಕೊಳ್ಳುವ ವರಸೆ ಮಾತ್ರ ಹೆಡ್ ಮಿಸ್ ನಂತೆ. ಆಕೆ ಮಗಳು ತೃಪ್ತಿಯನ್ನು ಒಬ್ಬಳೇ ಎಲ್ಲೂ ಬಿಟ್ಟವರೇ ಅಲ್ಲ. ಹೆಚ್ಚು ನೆಂಟರೊಂದಿಗೂ ಒಡನಾಟ ಇಲ್ಲದ ಅವರ ಮನೆಗೆ ಬಂದು ಹೋಗುವರೂ ಕಡಿಮೆ. ಬಾರಹ್ವಿ ವರೆಗೂ ಕಾಳೆಯವರು ಜೊತೆಯಲ್ಲಿಯೇ ಹೋಗಿ ಮಗಳನ್ನು ಬಿಟ್ಟು ಬರುತ್ತಿದ್ದರು. ಅವಳು ಒಳ್ಳೆಯ ಅಂಕ ಪಡೆದು ಎಂಜಿನಿಯರಿಂಗ್ ಸೇರಿದ ಮೇಲೆ ಸಾಂತಾಕ್ರೂಜ್ ತನಕ ಹೋಗಿ ಬಿಡೋದು ಕಷ್ಟ ಆಗಿ ಕಡೆಗೆ ಸ್ಟೇಷನ್ ತನಕ ತಲುಪಿಸಿ ಬರುತ್ತಿದ್ದರು. ಅಷ್ಟು ಕಾಳಜಿ ಮಗಳ ಮೇಲೆ. ಅವಳು ಬರುವಾಗ ಹೇಗೂ ಅಂತೂ ಸ್ಟೇಷನ್ ಇಂದ ಏಳು ನಿಮಿಷದ ದಾರಿಯನ್ನು ಒಬ್ಬಳೇ ನೆಡೆದು ಬರುತ್ತಿದ್ದಳು. ಆ ಸಮಯದಲ್ಲಿ ಸುಮನ್ ರಸ್ತೆಯ ಕಡೆ ಕಣ್ಣು ನೆಟ್ಟು ನಿಲ್ಲುತ್ತಿದ್ದರು. ಅಪರೂಪಕ್ಕೆ ಹುಟ್ಟಿದ ಮಗಳು. ಅಂತಹವಳು ಇಂದು ರಾತ್ರಿ ಒಂಬತ್ತಾದರೂ ಮನೆ ಸೇರದಿರುವುದು ತಂದೆ ತಾಯಿಗೆ ಆತಂಕ ತರದಿದ್ದೀತೆ? ಪೋಲಿಸ್ ಸ್ಟೇಷನ್ ಗೂ ಎಡತಾಕಿ ಬಂದದ್ದಾಯ್ತು. ಅವರು ಎಲ್ಲಾ ಟ್ರೈನ್ ಸ್ಥಗಿತವಾದ ಕಾರಣ ಪ್ಯಾಸಂಜರ್ ಗಳೆಲ್ಲಾ ಎಲ್ಲೆಲ್ಲಿ ಇದ್ದಾರೋ ಅಲ್ಲಲ್ಲೇ ಸುರಕ್ಷಿತ ಸ್ಥಳ ಹುಡುಕಿಕೊಂಡಿರುವುದಾಗಿಯೂ ವಿಷಯ ತಿಳಿದರೆ ತಿಳಿಸುವುದಾಗಿಯೂ ಹೇಳಿ ಕಳಿಸಿದ್ದರು.

    ಅದೇ ಆತಂಕದಲ್ಲಿ ಒದ್ದಾಡುತ್ತಿರುವಂತೆಯೇ ಮನೆಯ ಲ್ಯಾಂಡ್ ಲೈನ್ ಅಲ್ಲೂ ಜೀವ ಬಂದು ಟ್ರಿನ್ ಗುಟ್ಟಿತ್ತು. ಎದ್ದು ಓಡಿದರು ಸುಮನ್. ಗದ್ದಲದ ನಡುವೆ ತೃಪ್ತಿಯ ಧ್ವನಿ. ಯಾರದ್ದೂ ಮೊಬೈಲ್ ಪಡೆದು ಮಾತಾಡುತ್ತಿರುವುದಾಗಿ ಹೇಳಿ, ತಾನು ಹಳಿಯ ಮಧ್ಯದಲ್ಲಿ ನಿಂತಿರುವ ಟ್ರೈನ್ ಅಲ್ಲೇ ಸಿಕ್ಕಿಕೊಂಡಿರುವುದಾಗಿಯೂ, ಸುತ್ತಲೂ ನೀರು ತುಂಬಿರುವ ಕಾರಣ ಕೆಳಗೆ ಇಳಿಯಲಾಗುತ್ತಿಲ್ಲ. ನೆಲ ಕಾಣುತ್ತಿಲ್ಲ.. ರಾತ್ರಿಯೆಲ್ಲಾ ಸ್ನೇಹಿತೆಯರ ಜೊತೆ ಅಲ್ಲಿಯೇ ಇರಬೇಕಾಗುತ್ತದೆಂದೂ, ಬೆಳಗಿನ ಜಾವ ನೀರು ಇಳಿದ ಮೇಲಷ್ಟೇ ಹೊರ ಬರುವ ಸಾಧ್ಯತೆ ಇದೆ ಎಂದು ಹೇಳಿ ಮುಂದಿನ ಮಾತಿಗೆ ಅವಕಾಶ ಇಲ್ಲದವಳಂತೆ ಫೋನ್ ಇಟ್ಟಿದ್ದಳು.

    ಅಂತೂ ಮಗಳು ಸುರಕ್ಷಿತವಾಗಿ ಇರುವುದು ತಿಳಿದು ಇಬ್ಬರಿಗೂ ಪ್ರಾಣ ಬಂದಂತಾಯ್ತು. ಮೊದಲ ಬಾರಿ ತಾವು ಮಗಳಿಗೆ ಮೊಬೈಲ್ ಕೊಡಿಸದೇ ತಪ್ಪು ಮಾಡಿದೆವು ಅನ್ನಿಸತೊಡಗಿತು. ಇನ್ನೊಬ್ಬರ ಬಳಿ ಸಹಾಯ ಕೇಳಲೂ ಹಿಂಜರಿಯುವ ಮಗಳು ಪಾಪ ಹೇಗಿರಬಹುದು ಎಂದು ನೆನೆದೇ ದುಃಖ ಪಟ್ಟರು. ಅದಕ್ಕೆ ಕಾರಣ ತಾವೇ ಎಂಬುದು ಒಪ್ಪಿಕೊಳ್ಳಲೇ ಬೇಕಿತ್ತು. ಅಕ್ಕ ಪಕ್ಕದವರು ಎಲ್ಲಿಗಾದರೂ ಜೊತೆಗೆ ಕರೆದೊಯ್ಯಲು ಬಯಸಿದರೂ ಕಳಿಸುತ್ತಿರಲಿಲ್ಲ. ವಯಸ್ಸಾದ ಇಬ್ಬರ ನಡುವೆ ಈ ಪುಟ್ಟ ಹುಡುಗಿ ಹೋಗುವುದನ್ನು ನೋಡಿ ಜನ ಆಡಿಕೊಳ್ಳುವವರೂ ಇದ್ದರು. ಆಗೆಲ್ಲಾ ಇಂಥ ಪರಿಸ್ಥಿತಿ ಬರಬಹುದು ಎಂದು ಕನಸಿನಲ್ಲೂ ಊಹಿಸಿದವರಲ್ಲ. ಬೆಳಗಿನವರೆಗೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದರು. ಬೆಳಗಿನ ಐದೂವರೆ ಸುಮಾರಿಗೆ ಮೇಲಿನ ಮನೆಯ ವಿಕಾಸ್ ರಾನಡೆ ದಾದರ್ ನ ಕೆಲಸದ ಸ್ಥಳದಿಂದ ಹಿಂದಿರುಗಿದ್ದ. ಇಪ್ಪತ್ತೆರಡು ಘಂಟೆಗಳ ನಂತರ. ಕಾಳೆ ದಂಪತಿಗಳಿಬ್ಬರೂ ಬಾಗಿಲಲ್ಲೇ ಅವನನ್ನು ನಿಲ್ಲಿಸಿ ಹೊರಗಿನ ಪರಿಸ್ಥಿತಿ ಬಗ್ಗೆ ವಿಚಾರಿಸಿದರು. ಅವನಂತೂ ತನ್ನ ಸಾಹಸ ಗಾಥೆಯನ್ನು ವರ್ಣಿಸಿ ಹೇಳಿದ. ತಾನು ಕುತ್ತಿಗೆಯ ತನಕದ ನೀರಿನಲ್ಲಿ ಜನಗಳ ಗುಂಪಿನೊಂದಿಗೆ ರೈಲ್ವೆ ಹಳಿಯ ಮೇಲೆಯೇ ರಾತ್ರಿಯೆಲ್ಲಾ ನಡೆದು ಬಂದು ಈಗ ತಲುಪುತ್ತಿರುವುದಾಗಿಯೂ, ಆ ದಾರಿಯಲ್ಲಿ ಸತ್ತ ಪ್ರಾಣಿ,ವಾಹನಗಳು, ಕಸ ಎಲ್ಲವೂ ತೇಲಿ ಹೋಗುತ್ತಿರುವುದಾಗಿಯೂ, ವಿಧಿ ಇಲ್ಲದೆ ಒಬ್ಬರಿಗೊಬ್ಬರು ಕೈ ಹಿಡಿದು ರೈಲ್ವೆ ಪಟ್ರಿಯ ಮೇಲೆ ಧೈರ್ಯಮಾಡಿ ಬಿದ್ದು ಎದ್ದು ನಡೆದು ಬಂದೆವು ಎಂದು ಹೇಳುತ್ತಿದ್ದ. ಅವನ ವೇಷ ಅವನ ಮಾತಿಗೆ ಪುಷ್ಟಿ ಕೊಡುತ್ತಿತ್ತು. ಮತ್ತೆ ಮಗಳ ಪರಿಸ್ಥಿತಿಯ ಬಗ್ಗೆ ಇವರಿಗೆ ಆತಂಕ.

    ಹಾಗೂ ಹೀಗೂ ಹನ್ನೆರಡರ ಆಸುಪಾಸಿಗೆ ನೀರಿನ ಮಟ್ಟ ಇಳಿದು, ಕಡೆಗೂ ಮಗಳು ತೃಪ್ತಿ ಸುಸ್ತಾಗಿ ಮನೆ ಸೇರಿದಳು. ಅವಳಪ್ಪ ಅಮ್ಮ ಮೈಎಲ್ಲಾ ತಡಕಾಡಿ ಮಗಳಿಗೆ ಹೆಚ್ಚೇನೂ ತೊಂದರೆ ಆಗಿಲ್ಲವೆಂಬುದನ್ನು ಧೃಢಪಡಿಸಿಕೊಂಡು ನೀಳ ಉಸಿರು ಬಿಟ್ಟರು. ತೃಪ್ತಿ ಬಂದದ್ದು ತಿಳಿಯುತ್ತಲೇ ಬಾಗಿಲು ತೆರೆದು ಶೇಟೆ ಮನೆಯವರು ‘ ಆಗಾ! ಆಲಿ ತೃಪ್ತಿ’ ಎಂದು ಹೇಳಿ ಸಂತಸ ಪಟ್ಟರು. ಬಿಲ್ಡಿಂಗಿನ ಎಲ್ಲರೂ ತೃಪ್ತಿಯನ್ನು ವಿಚಾರಿಸುವವರೇ. ಅವಳೂ ಸುಸ್ತಿನಲ್ಲೇ ತಾನು ಪಟ್ಟ ಹಿಂಸೆ ತಡೆ ತಡೆದು ಹೇಳುತ್ತಿದ್ದಳು. ಇಡೀ ರಾತ್ರಿ ಬೆಳಕಿಲ್ಲದ ಲೋಕಲ್ ಟ್ರೈನಲ್ಲಿ ನೀರು ತುಂಬಿ ಅದರಲ್ಲಿಯೇ ಕಾಲು ಇಳಿಬಿಟ್ಟುಕೊಂಡು ಹಿಡಿ ಜಾಗದಲ್ಲಿ ಕೂತಿದ್ದು. ಕುಡಿಯಲು ನೀರೂ ಸಿಗದೇ ಒದ್ದಾಡಿದ್ದು, ಶೌಚಕ್ಕೆ ಹೋಗಲೂ ಅವಕಾಶ ಇಲ್ಲದೆ ನಿಂತಲ್ಲಿಯೇ ಮುಗಿಸಿಕೊಂಡಿದ್ದು, ಪಟ್ಟ ಕಷ್ಟ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಹೇಳಿದಳು.ಮನೆಗೆ ವಿಷಯ ಮುಟ್ಟಿಸಲು ಲೋಕಲ್ ಟ್ರೈನ್ ನ ಒಳಗಿದ್ದ ಜನರ ಅಲ್ಪ ಸ್ವಲ್ಪ ಚಾರ್ಜ್ ಇದ್ದ ಕೆಲವೇ ಮೊಬೈಲುಗಳು ತಮ್ಮ ಬದುಕಿನ ಕೊಂಡಿಯಾಗಿದ್ದರ ಬಗ್ಗೆ ಹೇಳಿ ಕಡೆಗೆ ಒಳ ಸೇರಿದಳು. ಅದುವರೆಗೂ ಮೂಕವಾಗಿದ್ದ ಸುಮನ್ ವಾಕ್ ಲಹರಿ ತಡೆ ಇಲ್ಲದಂತೆ ಮತ್ತೆ ಮುಂದುವರೆಯಿತು. ಮಗಳು ಹೇಳುತ್ತಿದ್ದ ಪರಿಸ್ಥಿತಿಯ ಗಾಂಭೀರ್ಯ ಇನ್ನೂ ಅವರಿಗೆ ಅರ್ಥವಾದಂತಿರಲಿಲ್ಲ. ಹೋಗುವ ಬರುವರಿಗೆಲ್ಲಾ ಮಗಳ ಕತೆ ಹೇಳುತ್ತಾ ನಿಂತರು.

    ಹೆಂಡತಿಯ ಮಾತಿಗೆ ತಡೆ ಹಾಕಲು ತ್ರಾಣವಿಲ್ಲದ ಪ್ರಕಾಶ್ ಕಾಳೆ ಮಗಳನ್ನು ವಿಚಾರಿಸಿಕೊಳ್ಳಲು ಒಳಗೆ ಹೋದರು.ತೃಪ್ತಿಗೆ ಚೇತರಿಸಿಕೊಳ್ಳಲು ಮೂರ್ನಾಲ್ಕು ದಿನವೇ ಹಿಡಿಯಿತು.

    ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಕಡೆದುಕೊಂಡಿದ್ದ ಮನೆಗಳಿಗೆ ಹಾಗೂ ಹೀಗೂ ಕರೆಂಟ್ ಬಂದು ಟೀವಿ ಫೋನ್ ಕೆಲಸ ಮಾಡತೊಡಗಿತು. ಆಗ ಎಲ್ಲರಿಗೂ ಪ್ರವಾಹದಿಂದಾದ ಅವಘಡಗಳ ಬಗ್ಗೆ ನೋಡಲು ಅರಿಯಲು ಸಿಕ್ಕಿದ್ದು. ಎರಡು ಸಾವಿರ ಜನ ಅವತ್ತೊಂದೇ ದಿನದಲ್ಲಿ ಸಾವನ್ನಪ್ಪಿದ್ದು, ಮೂಕ ಪ್ರಾಣಿಗಳು ಮನುಷ್ಯ ಮಾಡಿದ ತಪ್ಪಿಗೆ ಬಲಿಯಾಗಿದ್ದು, ಲೆಕ್ಕಕ್ಕೆ ಸಿಗದಷ್ಟು ಸರಕಾರೀ ಹಾಗು ನಾಗರಿಕರ ವಾಹನಗಳು ಮುಳುಗಿ ಹಾಳಾಗಿದ್ದು.. ಲಕ್ಷಾಂತರ ಜನ ಮನೆ ಆಸ್ತಿ ಕಳೆದುಕೊಂಡಿದ್ದು.. ಎಲ್ಲವನ್ನೂ ಟೀವಿಯಲ್ಲಿ ನೋಡುತ್ತಾ ನೋಡುತ್ತಾ ತೃಪ್ತಿಯ ತಾಯಿ ಸುಮನ್ ಕಣ್ಣಲ್ಲಿ ಆಗ ಧಾರಾಕಾರ ನೀರು. ಇಂಥಾ ಪರಿಸ್ಥಿತಿಯಲ್ಲೂ ಮಗಳು ನಮಗೆ ಸಿಕ್ಕಳಲ್ಲಾ ಎಂದು ಸಂತೋಷದಿಂದ ಹೋಗಿ ಮಗಳನ್ನು ಅಪ್ಪಿಕೊಂಡಳು. ತಂದೆಯಂತೂ ಅಂದೇ ಮಗಳಿಗೆ ಹೊಸ ಮೊಬೈಲ್ ಖರೀದಿಸಿ ತಂದು ಕೊಟ್ಟರು. ಅದನ್ನು ಕಂಡ ತೃಪ್ತಿಯ ಮುಖದಲ್ಲಿ ಸಾವಿರ ವೋಲ್ಟ್ ಬಲ್ಪಿನ ಹೊಳಪು. ಏನೋ ಬಚ್ಚಿಟ್ಟುಕೊಳ್ಳಲೂ ಆಗದ, ಹೇಳಲೂ ಆಗದ ಸಂತೋಷ. ಪಕ್ಕದ ಮನೆಯ ಮಾಮಿಗೆ ಓಡಿ ಹೋಗಿ ತೋರಿಸಿದಳು. ಅವಳಿಂದಲೇ ಅದನ್ನು ಬಳಸುವ ವಿಧಾನ ಎಲ್ಲಾ ಕೇಳಿ ತಿಳಿದುಕೊಂಡಳು. ಅರುಣಾ ಮಾಮಿಯ ಮುಖದಲ್ಲಿ ಕಿರುನಗು.

    ಮಾರನೆ ದಿನ ಅರುಣಾ ಮಾಮಿ ಬಟ್ಟೆ ಒಣ ಹಾಕಲು ಬಾಲ್ಕನಿಗೆ ಬಂದಾಗ
    ಪಕ್ಕದ ಮನೆಯ ಗ್ಯಾಲೆರಿಯಲ್ಲಿ ಇವಳಿಗೆ ಬೆನ್ನು ಮಾಡಿ ಕೂತಿದ್ದ ತೃಪ್ತಿ ಮೊಬೈಲ್ ಅಲ್ಲಿ ಮಾತಾಡುತ್ತಿದ್ದಳು. ಮಾತು ಮಧ್ಯೆ ಮಧ್ಯೆ ನಗು ಸಂಭ್ರಮ ನಡೆಯುತ್ತಿತ್ತು. ಅವಳ ಮಾತೆಲ್ಲವೂ ಸ್ಪಷ್ಟವಾಗಿ ಕೇಳುತ್ತಿತ್ತು. ‘ತೂ ಕಬ್ ಮಿಲ್ನೇ ವಾಲೇ ಹೋ ಬೋಲೋ. ನಹೀ.. ಮೈ ನಹಿ ಆಯೇಗಿ’. ಮತ್ತೆ ನಗು. ‘ಪತಾ ಚಲೇಗಾನಾ ಘರ್ ಮೆ .. ಉಸ್ ದಿನ್ ತುಮ್ ರಾತ್ ಭರ್ ಟ್ರೈನ್ ಮೇ ಮೇರಾ ಹಾತ್ ಪಕಡ್ಕೆ ಬೈಟೆ ಥೇನಾ.. ಮಾಲೂಮ್ ಪಡ್ನೇ ದೋ ಘರ್ ಮೇ.. ದೋನೋ ಕೊ ಮಾರ್ ಡಾಲೇಂಗೇ. ಬಾತ್ ಕರ್ತಾ ಹೈ ಸಾಲಾ.. ಚಲ್ ಫಟ್ಟು ಕಯೀಕಾ’ ಅಲೆಅಲೆಯಾಗಿ ನಗು.. ‘ ರಖ್ ಅಭಿ ಫೋನ್.. ಸುನ್ ಸುನ್. ಕಲ್ ಮೆ ಪಾರ್ಲಾ ಮೆ ಉತರ್ಕೆ ಫೋನ್ ಕರೆಗೀ. ಉಟಾನಾ ಧ್ಯಾನ್ ಸೆ.. ಸೈಲೆಂಟ್ ಪೆ ಡಾಲ್ಕೆ ಮತ್ ಗೂಮ್.. ಸಮಜಾ? ರಕ್ತೀ ಹ್ಞೂ .. ಚಲ್ ಅಭಿ ಮಮ್ಮಿ ಬುಲಾರಾಹಿ ಹೈ’ ಎಂದೆಲ್ಲಾ ಮಾತನಾಡುತ್ತಾ ಪ್ರೀತಿಯ ರಂಗು ತುಂಬಿದ ನಗುವನ್ನು ನಗುತ್ತಾ ಒಳಗೆ ಹೋದಳು. ಈ ಕೆಸರಿನಲ್ಲಿ ಅರಳುತ್ತಿದ್ದ ಕಮಲವನ್ನು ಕಂಡು ಅರುಣಾ ಮಾಮಿಗೆ ವಿಚಿತ್ರ ಭಾವ.

    ಸಂಜೆ ಸುಮಾರಿಗೆ ಅರುಣಾ ಮಾಮಿ ತೃಪ್ತಿಯ ಮನೆಗೆ ಬೆಲ್ ಮಾಡಿ ಒಳ ಹೋದಳು. ಮಾತಿಗೆ ಒಬ್ಬರು ಸಿಕ್ಕ ಸಂತೋಷದಲ್ಲಿ ಸುಮನಾ ಹಿಗ್ಗಿ ಸ್ವಾಗತಿಸಿದಳು. ಅಲ್ಲೇ ಸೋಫಾ ಮೇಲೆ ಉರುಳಿದ್ದ ತೃಪ್ತಿ ಯಾವುದೋ ಭಾವ ಪ್ರಪಂಚದಲ್ಲಿ ತೇಲಾಡುತಿದ್ದಳು. ಅರುಣಾ ಮಾಮಿ ಅವಳನ್ನು ಎಚ್ಚರಿಸುತ್ತಾ.. ‘ ತೃಪ್ತಿ.. ಸುಭ್ಹೆ ಗ್ಯಾಲರಿ ಕೆ ವಹಾ ತುಮ್ ಫೋನ್ ಪೆ ಕಿಸ್ ಸೆ ಬಾತ್ ಕರ್ ರಹೀ ಥಿ?’ ಅಂದಳು. ತೃಪ್ತಿ ಜಗ್ಗನೆ ಬೆಚ್ಚಿ ಎದ್ದಳು. ಅವಳ ಮುಖದ ತುಂಬಾ ಗಾಭರಿಯೋ ಗಾಭರಿ. ತನ್ನ ಗುಟ್ಟೆಲ್ಲವೂ ಅರುಣಾ ಮಾಮಿಗೆ ತಿಳಿದೇ ಹೋಗಿದೆ. ಅದನ್ನು ಅಮ್ಮನ ಬಳಿ ಇನ್ನೇನು ಹೇಳೇ ಬಿಡುತ್ತಾಳೆ ಎಂಬ ಆತಂಕ. ಅರುಣಾ ಮಾಮಿ ಕೂಡ ಅವಳ ಅಂತರಂಗವನ್ನೇ ಬಗಿಯುವಂತೆ ದೀರ್ಘವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾಳೆ. ತೃಪ್ತಿಗೆ ಈಗ ಹೇಗೆ ಮುಚ್ಚಿಸಲಿ ಇವಳ ಬಾಯನ್ನು ಅಂದುಕೊಳ್ಳುತ್ತಿರುವಾಗಲೇ ಮನೆಯೊಳಗೆ ಪ್ರಕಾಶ್ ಕಾಳೆ ಬಂದರು. ಮನೆಗೆ ಬಂದಿದ್ದ ಅರುಣಾಳನ್ನು ನೋಡಿ ‘ ಕ್ಯಾ ಅರುಣಾ ..ಬಹುತ್ ದಿನ್ ಕೆ ಬಾದ್’ ಅನ್ನುತ್ತಾ ಶೂ ಕಳಚುತ್ತಿದ್ದಂತೆ, ತೃಪ್ತಿ ಮತ್ತಷ್ಟು ಹೆದರಿ ಅರುಣಾ ಮಾಮಿಗೆ ಹಿಂದಿನಿಂದ ಏನೇನೋ ಸನ್ನೆ ಮಾಡಿದಳು. ಇವಳು ಗಮನಿಸಿಯೂ ಗಮನಿಸದಂತೆ ‘ ಕುಚ್ ನಹಿ ಅಂಕಲ್.. ಆಪ್ ಸೆ ಕುಚ್ ಬಾತ್ ಕರ್ನೀ ಥಿ’ ಅನ್ನುತ್ತಿದ್ದಂತೆ, ತೃಪ್ತಿಗೆ ಜ್ಞಾನ ತಪ್ಪುವುದೊಂದು ಬಾಕಿ. ‘ ಅಲ್ಲೇ ಚೇರಿನ ಮೇಲೆ ಕೂತು ‘ಅಚ್ಚಾ.. ಬೋಲ್ನಾ ಅರುಣಾ’ ಅಂದ ಪ್ರಕಾಶ್ ಕಾಳೆಗೆ ಅರುಣಾ ತೃಪ್ತಿಯ ಕಡೆ ನೋಡುತ್ತಲೇ. ‘ ತೃಪ್ತಿ ತೋ..’ ಅನ್ನುತ್ತಿದ್ದಂತೆ, ತೃಪ್ತಿ ಜೋರಾಗಿ ‘ಅರುಣಾ ಮಾಮಿ’ ‘ ಮುಜೆ ಕುಚ್ ಬೋಲ್ನಾ ಥಾ ಆಪಸೇ’ ಎಂದು ಕಿರುಚಿದಳು. ಅವಳಪ್ಪ. ‘ ರುಖ್ ನಾ ತೃಪ್ತಿ .. ಬಾದ್ ಮೆ ಬೋಲೋ’ ಪಹೆಲೇ ಸುನ್ ನೇ ದೋ..’ ಎಂದು ಸಿಡುಕಿದರು. ಮನಸ್ಸಿನಲ್ಲೇ ನಗುತ್ತಾ ಅರುಣಾ.. ‘ ವಹೀ ಅಂಕಲ್.. ತೃಪ್ತಿ ಅಭಿ ಭಗವಾನ್ ಕಿ ದಯಾ ಸೆ ಸಹಿ ಸಲಾಮತ್ ಘರ್ ಪಹುಂಚ್ಗಯಿ ಹೈ.’ ‘ತೋ.. ಆಪ್ ವಹೀ ಖುಷಿ ಮೆ ಕುಚ್ ಪೈಸೆ ದೇದೋನಾ.. ಜೋ ಬೇಘರ್ ಹುಯೇ ಹೈ ಉನಕೋ.. ನಯೇ ಬೆಡ್ ಶೀಟ್ , ಕಪಡಾ,, ಕುಚ್ ಬರ್ತನ್ ದೇನೇಕೇ ಲಿಯೇ. ಹಾಮಾರೆ ಕುಚ್ ಲೋಗ್ ಪೈಸೆ ಇಕ್ಕಟ್ಟಾ ಕರ್ ರಹೇ ಹೈ. ಆಪ್ ಭಿ ಖುಷಿ ಸೆ ಕುಚ್ ಮದತ್ ಕರ್ದೋ’ ಎಂದು ಹೇಳಿ ನಗುತ್ತಾ ತೃಪ್ತಿಯ ಮುಖ ನೋಡಿದಳು. ಇನ್ನೇನು ಮುಗಿದೇ ಹೋಯಿತು ಎನ್ನುವಂತಿದ್ದವಳ ಮುಖದಲ್ಲಿ ಜೀವ ಬಂದಿತು. ಇವಳ ಕಡೆ ನೋಡಿ ದಯನೀಯವಾಗಿ ನಕ್ಕಳು. ಇವಳೂ ಪ್ರತಿಯಾಗಿ ಅಭಯದ ನಗೆ ನಕ್ಕಳು. ಪ್ರಕಾಶ್ ಕಾಳೆ ಒಳಗೆ ಹೋಗಿ ಸಂತೋಷದಿಂದ ಎರಡು ಸಾವಿರ ರುಪಾಯಿ ಚೆಕ್ ತಂದು ಅರುಣಾಳ ಕೈಗಿಟ್ಟರು. ಅರುಣಾ ಎಲ್ಲರಿಗೂ ಥ್ಯಾಂಕ್ಸ್ ಹೇಳಿ ಹೊರಟಳು. ಮಾತಿಗೆ ಸರಿಯಾಗಿ ಸಿಗದೇ ಹೊರಟದ್ದು ನೋಡಿ ಅಸಮಾಧಾನದಿಂದಲೇ ತೃಪ್ತಿ ತಾಯಿ ಸುಮನ್ ‘ ಇತ್ನಾ ಕ್ಯಾ ಜಲ್ದಿ ಹೈ .. ರುಕೋ ನಾ’ ಅನ್ನುತ್ತಿದ್ದರೂ ತೃಪ್ತಿ ‘ ಜಾನೆ ದೋನಾ ಮಾ.. ಮಾಮಿಕೋ ಕಾಮ್ ಹೈ.ಕ್ಯೂ ಪಕಡ್ ಕೆ ರಕ್ತೀ ಹೋ’ ಅಂದಳು. ಅರುಣಾ ಜೋರಾಗಿ ನಗುತ್ತಾ ಮತ್ತೊಮ್ಮೆ ಬರುವುದಾಗಿ ಹೇಳಿ ಹೊರ ಬಂದಳು. ಬಾಲ್ಕನಿಯಲ್ಲಿ ನಿಂತ ತೃಪ್ತಿಯನ್ನು ಮೋಡದ ಮರೆಯಿಂದ ಬಂದ ಚಂದ್ರ ನೋಡಿ ನಗುತ್ತಿದ್ದ.

    ಕಿರಣ್ ಮಾಡಾಳು

    ಈ ಕಥೆಯೊಂದಿಗೆ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಈ ಕಿರಣ್ ಫೈನ್ ಆರ್ಟ್ಸ್ ಪದವೀಧರ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.

    ಶ್ರಾವಣ ಬಂತು ನಾಡಿಗೆ

    ಕೋವಿಡ್ ನಡುವೆಯೇ ನಾಡಿಗೆ ಶ್ರಾವಣ ಅಡಿ ಇಟ್ಟಿದೆ. ಶ್ರಾವಣವೆಂದರೆ ಹಬ್ಬಗಳ ಸಾಲಿನ ಆರಂಭ. ಸಹಜವಾಗಿಯೆ ಎಲ್ಲೆಡೆ ಸಡಗರ. ಆದರೆ ಈ ವರುಷ ಈ ಸಂಭ್ರಮಕ್ಕೆ ತುಸು ಕಡಿವಾಣ. ಹಾಗೆಂದ ಮಾತ್ರಕ್ಕೆ ಹಬ್ಬಗಳ ಆಚರಣೆಯನ್ನೇ ಬಿಡಲಾದೀತೆ ಕನ್ನಡಪ್ರೆಸ್.ಕಾಮ್ ನ ಈ ಪಾಡ್ಕಾಸ್ಟ್ ನಲ್ಲಿ ನೆನಪಿನ ಮೆರವಣಿಗೆ ಇದೆ. ಕನ್ನಡ ಕಾವ್ಯ ಗಾಯನವೂ ಇದೆ. ಕೇಳುವ ಸಡಗರ ನಿಮ್ಮದಾಗಲಿ. ಭಾರತಿ ಎಸ್ ಎನ್,ಜಯಶೀಲಾ ಮತ್ತು ಸುಮನ್ ಗಿರಿಧರ ಭಾಗವಹಿಸಿದ್ದಾರೆ. ಶ್ಯಾಮಲಾ ಅವರು ನೀವು ಕೇಳುವ ಹಾಡಿಗೆ ದನಿಯಾಗಿದ್ದಾರೆ .

    ಇದನ್ನೂ ಓದಿ 1.ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ,ಆದರೂ ಭರವಸೆ ಒಂಚೂರು ಮಾಸಿಲ್ಲ

    2.ಆಷಾಢ ಕಳೆದು ಶ್ರಾವಣ ಬಂದೀತವ್ವ…ಅಣ್ಣಾ ಬರಲೇ ಇಲ್ಲ ಕರಿಯಾಕ

    ಆಷಾಢ ಕಳೆದು ಶ್ರಾವಣ ಬಂದೀತವ್ವ.. ಅಣ್ಣಾ ಬರಲೇ ಇಲ್ಲ ಕರಿಯಾಕ

    “ಆಷಾಢಮಾಸ ಬಂದೀತವ್ವ
    ಖಾಸ ಅಣ್ಣ ಬರಲಿಲ್ಲ ಕರಿಯಾಕ..
    ಎಷ್ಟು ನೋಡಾಲಿ ಅಣ್ಣಾನ ದಾರಿ…
    ಸುವ್ವನಾರೀ..ಸುವ್ವಾರೀ…..”


    ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣು ,ಮೊದಲ ಆಷಾಢದಲ್ಲಿ
    ಮತ್ತೆ ತವರಿಗೆ ತೆರಳವಳು.ಆ ಹೆಣ್ಣಿನ ಮನದ ತುಮುಲದ ಸನ್ನಿವೇಶವನ್ನ ನಮ್ಮ ಜನಪದರು ಮನಮುಟ್ಟುವಂತೆ ಬಣ್ಣಿಸಿಬಿಟ್ಟಿದ್ದಾರೆ.

    ಈಗ ಆಷಾಢ ಕಳೆದು ಶ್ರಾವಣಕ್ಕೆ ಕಾಲಿರಿಸಿದ್ದೇವೆ. ಅದೇ ಹೆಣ್ಣಿನ ತುಮುಲವನ್ನ ನಮ್ಮ ಇಡೀ ಸಮಾಜವೇ ಹೊಂದುವ ಸ್ಥಿತಿ ಬಂದಿದೆ ಅನಿಸುತ್ತದೆ. ಕಾರಣ ಬಹಳ ಸ್ಪಷ್ಟ. ಕೋವಿಡ್ ನ ಹಾವಳಿ.ಪರಸ್ಪರ ಒಡನಾಟಕೂಡದು. ಸಾಮಾಜಿಕ ಅಂತರ,ಮುಖ ಕವಚ,ಇತ್ಯಾದಿ ನಡೆವಳಿಕೆ-ನಿಬಂಧನೆಗಳ ಸರಪಳಿ ನಮ್ಮ ದೇಹಕ್ಕೇ ಧರಿಸಿಯಾಗಿದೆ. ವರ್ತಮಾನದಲ್ಲಿ ಪಾಲನೆ ಅನಿವಾರ್ಯ.

    ಒಂದು ಕ್ಷಣ, ಕಳೆದ ವರ್ಷದ ಶ್ರಾವಣದ ಚಿತ್ರ ನೆನಪಿಸಿಕೊಳ್ಳೋಣ
    ಮಂಗಳಗೌರಿ,ವರಮಹಾಲಕ್ಷ್ಮಿ, ನಾಗರ ಪಂಚಮಿ, ಕೃಷ್ಣಾಷ್ಟಮಿ….ಇತ್ಯಾದಿ..ಒಂದೇಎರಡೆ?. ಹಬ್ಬಗಳ ಸಾಲು ಸಾಲು.ಶ್ರಾವಣದ ಅಸ್ತಿತ್ವವೇ ಹಬ್ಬಗಳಾಚರಣೆ, ಮಹತ್ವವನ್ನ ಸಾರುತ್ತದೆ. ಆಷಾಢದಲ್ಲಿ ಮೋಡಮುಸುಕಿದ ವಾತಾವರಣ. ನಂತರವೇ ಶ್ರಾವಣ. ಅಲ್ಲಲ್ಲಿ ಚದುರಿದಂತೆ ಮಳೆ ಶುರುವಾಗಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತವೆ. ನದಿಗಳೂ ತುಂಬಿ ಭೋರ್ಗರೆಯುತ್ತವೆ. ಸುತ್ತಲೆಲ್ಲವೂ ವರ್ಷ ಋತುವಿನ ರಿಂಗಣ.

    “ಬಾನ ಕಣ್ಣಿನ ತುಂಬ ನೀರಾಡಿತು ;
    ಮನೆಮನೆಯ ಬಾಗಿಲನು ಮಳೆ ತಟ್ಟಿತು ;
    ಉತ್ತ ಮಣ್ಣಿನ ಕನಸು ಕೆನೆಗಟ್ಟಿತು;
    ಶ್ರಾವಣ ಭಾದ್ರಪದ-ವರ್ಷ ಋತು”

    ಎಂದು ಋತುಪಲ್ಲವ ಕವಿತೆಯಲ್ಲಿ ಕವಿ ಕೆಎಸ್ ನರಸಿಂಹಸ್ವಾಮಿ ಅವರು ಋತುಗಳ ಚಹರೆಯನ್ನ ಕಡೆದಿಟ್ಟಿದ್ದಾರೆ.ಋತುಗಳ ನಡೆ ತಪ್ಪಿಲ್ಲ.ಒಂದಲ್ಲ ಒಂದು ರೀತಿ ನಿಸರ್ಗ ತನ್ನ ಸಹಜ ಪ್ರಕ್ರಿಯೆ ತಾಳಿಕೊಂಡೇ ಸಾಗುತ್ತದೆ.
    ದುರಂತವೆಂದರೆ ಈ ಬಾರಿಯ ನಿಸರ್ಗ ನಮಗೆ ಪ್ರಕೋಪ ತಂದಿದೆ.
    ಅದೂ ನಿಸರ್ಗದ ಮೇಲೆ ಆರೋಪ ಮಾಡುವ ಹಾಗಿಲ್ಲ. ಮನುಜರೇ ಮಾಡಿಕೊಂಡ ಸ್ವಯಂಕೃತಾಪರಾಧ.

    ಕೋವಿಡ್ ನ…ಹಾವಳಿಯಿಂದಾಗಿ ನಮಗೆ ನಾವೇ ಅತ್ಯಂತ ಎಚ್ಚರಿಕೆಯಿಂದ ಹಬ್ಬಗಳನ್ನ ಆಚರಿಸುವ ಹೊಣೆ ನಮ್ಮದಾಗಿದೆ.ಸಾಮಾನ್ಯ ಹಬ್ಬಗಳನ್ನ ಮನೆಮಂದಿ,ನೆರೆಹೊರೆಯವರೂ ಕೂತು ಕಲೆತು ಆಚರಿಸುವ ಪರಿಪಾಠವಿದೆ. ಆದರೆ ಇವತ್ತಿನ ವಿದ್ಯಮಾನ ಅದಕ್ಕೆ ಸಹಕರಿಸುತ್ತಿಲ್ಲ. ಮನೆಮಂದಿ ಮಾತ್ರ
    ಈಗಿನ ಹಬ್ಬಗಳ ಸವಿಯನ್ನ ತಮ್ಮದಾಗಿಸಿಕೊಳ್ಳಬಹುದಾಗಿದೆ.ಏಕೆಂದರೆ ಕುಟುಂಬದ ಸದಸ್ಯರ ಹೊರತಾಗಿ ಬೇರೆಯವರನ್ನ ಆಮಂತ್ರಿಸಿದರೆ ಕೊರೋನ ಸಾಂಕ್ರಾಮಿಕದ ಆತಂಕವನ್ನೂ ಕರೆದುಕೊಂಡಂತಾಗಿಬಿಡುತ್ತದೆ.

    ಆಷಾಡದವರೆಗೂ ನವದಂಪತಿಗಳಾಗಿದ್ದವರು,ಆ಼ಷಾಢಪೂರ್ತ ಬೇರೆಬೇರೆಯಾಗಿಯೇ ಇರಬೇಕೆಂಬ ಸಾಂಪ್ರದಾಯಿಕ ಕಟ್ಟಳೆಯಿದೆ. ಆಷಾಢದಲ್ಲಿ ಅತ್ತೆ ಸೊಸೆ ಒಂದೇಬಾಗಿಲಲ್ಲಿ ಓಡಾಡಬಾರದು ಎಂದೂ ಹೇಳುವುದುಂಟು. ಇದಕ್ಕೆಲ್ಲ ಅಂದಂದಿನ ಕಾಲದ ಅರ್ಥವಿತ್ತು.ಈಗ ಸಾಮಾಜಿಕ ಚಿತ್ರವೇ ಬದಲಾಗಿದೆ. ದುಡಿಯುವ ದಂಪತಿಗಳು ಈ ಸಂಕಲೆಯಿಂದ ಅನಿವಾರ್ಯ ಹೊರ ಬರಬೇಕಾಗುತ್ತದೆ. ಪರಿಸ್ಥಿತಿ ಹಾಗಿದೆ.
    ಪ್ರಸ್ತುತ ಸಣ್ಣಕುಟುಂಬಗಳೇ ಈಗ ಕಾಣಸಿಗುವುದು. ಗಂಡ ಹೆಂಡತಿ,ಒಂದು ಅಥವಾ ಎರಡು ಮಗು. ನಗರವಾಸಿಗಳಾದರಂತೂ ಅವಲಂಬಿತರ ಪಾಡು ದೇವರೇ ಬಲ್ಲ.

    ವರ್ತಮಾನದಲ್ಲಿ ಹಬ್ಬ,ಆಚರಣೆ..ಎಲ್ಲವೂ ಮನಸ್ಸಿನ ಸ್ಥಿತಿ ಎಂದರೆ
    ಅಚ್ಚರಿಯಲ್ಲ.. ಹಿರಿಯರು ಒಂದು ಜಾಣ ಮಾತು ಹೇಳಿದ್ದಾರೆ.
    ಉಂಡಿದ್ದೇ ಉಗಾದಿ ಮಿಂದಿದ್ದೇ ದೀಪಾವಳಿ ಅಂತ.ಈ ಮಾತು
    ಮನಸ್ಸಿನ ವ್ಯಾಪಾರಕ್ಕೆ ಸಂಬಂಧಿಸಿದೆ ಇಂದು ಎಲ್ಲ ಕುಟುಂಬಗಳೂ ಹಬ್ಬ ಅಂದರೆ ಉಂಡು,ಉಟ್ಟು ಖುಷಿ ಪಡಬೇಕೆಂದು ಬಯಸುತ್ತವೆ.
    ಸಾಮಾಜಿಕವಾಗಿ ,ಸಾಂಸ್ಕೃತಿಕವಾಗಿ ನಾವು ಸಮೃದ್ಧರು. ಆರ್ಥಿಕವಾಗಿ
    ಸ್ವಲ್ಪ ಏರುಪೇರಾಗುತ್ತದೆ,ನಿಜ. ಯಾವುದೇ ಆಚರಣೆಗೆ ಮೊದಲು
    ನಮ್ಮ ಸಾಮಾಜಿಕ ಆವರಣ ತಿಳಿಯಾಗಿರಬೇಕು.ಆಗ ಮಾತ್ರ ನಾವು ಆಚರಣೆಗಳಲ್ಲಿ ಪಾಲ್ಗೊಂಡು ಅದರ ಸವಿ ಅನುಭವಿಸಬಹುದು.
    ಇಲ್ಲದಿದ್ದರೆ ಸಡಗರ,ಸಂತಸ ನಮ್ಮಮೈಮನಗಳಲ್ಲಿ ಸುಳಿದಾಡುವುದಿಲ್ಲ.
    ಭೂಕಂಪ, ಪ್ರವಾಹ, ಕ್ಷಾಮ,ಯುದ್ಧ, ಇತ್ಯಾದಿಗಳ ಅನುಭವ ನಮಗೆ ಆಗಿದೆ. ಅವುಗಳಿಗೆ ತುತ್ತಾದ ಸಮುದಾಯದ ಬಗ್ಗೆ ನಾವು ಅನುಕಂಪ ಪಟ್ಟಿದ್ದೇವೆ. ಅಂತಹ ಸಂದರ್ಭಗಳಲ್ಲಿ ನಮಗೆ ಸಾರ್ವಜನಿಕವಾಗಿ ಹಬ್ಬ,ಉತ್ಸವಗಳ
    ಸಡಗರ ಹಿತವೆನಿಸುವುದಿಲ್ಲ.

    ಈಗ ಅಂಥದೇ ನೈಸರ್ಗಿಕ ಪ್ರಕೋಪ ನಮ್ಮನ್ನ ಕಾಡುತ್ತಿದೆ. ನಮ್ಮ ದೇಶದ
    ಯಾವುದೋ ಊರು,ಯಾವುದೋ ಪ್ರದೇಶ,ಯಾರೋ ಒಂದಿಷ್ಟು ಜನ,ಜಾನುವಾರು,ಆಸ್ತಪಾಸ್ತಿ ಹಾನಿ ಮಾಧ್ಯಮಗಳ ಮುಖೇನ ಸುದ್ದಿಯಾಗಿ ತಲುಪುತ್ತಿತ್ತು. ಓದಿ, ವೀಕ್ಷಿಸಿ ತುಟಿಯನುಕಂಪ ವ್ಯಕ್ತಪಡಿಸುತ್ತದ್ದೆವು.

    ಈಗ ಆ ಭಯಾನಕ ಆತಂಕ,ತಲ್ಲಣ ನಮ್ಮ ಮನೆಯಂಗಳದಲ್ಲೇ ಇದೆ.
    ಯಾರಿಗೆ ಹೇಳುವುದು? ಈ ನಡುವೆ ಶ್ರಾವಣ ಶುರುವಾಗಿದೆ.
    ಕವಿ ಬೇಂದ್ರೆ ಅವರು

    “ಬಂತು ಶ್ರಾವಣ ಬಂತು ಕಾಡಿಗೆ, ಬಂತುನಾಡಿಗೆ,ಬಂತು ಬೀಡಿಗೆ…
    ಕಡಲಿಗೆ ಬಂತು ಶ್ರಾವಣಾ| ಕುಣಿದ್ಹಾಂಗ ರಾವಣಾ|
    ಕುಣಿದಾವ ಗಾಳಿ| ಭೈರವನ ರೂಪತಾಳಿ…

    ಕವಿ ಕಂಡ ಶ್ರಾವಣ ಆಗ ಆಪ್ಯಾಯಮಾನ. ನಿಸರ್ಗದ ಸೌಂದರ್ಯವನ್ನ ಕಂಡು ಉನ್ಮತ್ತರಾಗಿ ಹಾಡಿದರು.ಆ ಕವಿತೆಯ ಸಾಲಿನಲ್ಲಿ “ರಾವಣಾ.”ಎಂಬ ಪ್ರತಿಮೆಯೂ ಇದೆ. ಕೋವಿಡ್ ವೈರಾಣುವಿನ ಸ್ವಚ್ಛಂದ
    ವಿಹಾರ ನನಗೆ ರಾವಣನ ರೂಪವೇ ಅನಿಸುತ್ತದೆ. ವೈರಾಣು ಪರಿಣಾಮದಲ್ಲಿ ಜ್ಯಾಮಿತಿ ಲೆಕ್ಕಾಚಾರದಂತೆ ಉಲ್ಬಣಿಸುತ್ತಿದೆ. ಸಾವಿರ,ಲಕ್ಷ,ಕೋಟಿ ಜೀವಗಳ ಹನನ ಮಾಡುತ್ತಿದೆ. ರಾವಣನ ಕುಣಿದಾಟ ನಾವು ನೋಡಿಲ್ಲ.ಅವನೊಬ್ಬ ಖಳನಾಯಕ ಕೆಲವರಿಗೆ ಪ್ರತಿನಾಯಕ. ಕವಿತೆ ಓದಿ ಆನಂದಿಸಿದೆ.ಕವಿಯ ಧ್ವನಿ ಅಮರ. ಅದರ ಅನುಭವ ,ಕವಿಸಮಯಕ್ಕೆ ಪ್ರಯಾಣಿಸಲು ಮನಸ್ಸಿಗೆ ಸ್ವಲ್ಪ ಹಿಂಜರಿಕೆ. ಯಾಕೆಂದರೆ ಮನೆಯಂಗಳವೇ ಕ್ವಾರಂಟೈನ್ ಆಗುವ ,ಮನೆಯೊಳಗೇ ಸೀಲ್ ಡೌನ್ ಆಗಿಬಿಡುವ ಸಂದರ್ಭಗಳು,
    ಆ ದುರ್ದಿನಗಳು ಯಾರಿಗೆ ಯಾವಾಗ ಒದಗುವುದೋ ನಮ್ಮರಿವಿಗೆ ಬರುತ್ತಿಲ್ಲ.

    ನಮ್ಮ ಆರೋಗ್ಯ,ನಮ್ಮ ಜಾಗೃತಿ, ವೈದ್ಯಕೀಯ ವಿಜ್ಞಾನದ ಮಾಹಿತಿಗಳನ್ನ ಚಾಚೂ ತಪ್ಪದೇ ಪಾಲಿಸಿ ಮತ್ತೆ ನಮ್ಮ ಸಂಸ್ಕೃತಿ ಆಚರಣೆಗಳ ಮೊದಲಿನ ಸ್ಥಿತಿಯನ್ನ ಕಾಣುವ ಕನಸು ನಮ್ಮದಾಗಿರಲಿ. ಅಂತಹ ಕನಸು ನನಸಾಗಿಸೋಣ. ಸಾಮೂಹಿಕ ಪ್ರಯತ್ನದಿಂದ ಕೋವಿಡ್ ….ತೊಲಗಿಸೋಣ.

    ಸದ್ಯ ಸಾಮಾಜಿಕವಾಗಿ ಶ್ರಾವಣದ ಸಮಯದಲ್ಲಿ ಸೂತಕದ ಛಾಯೆ
    ಆವರಿಸಿದಂತಾಗಿದೆ ಅಂತ ಅಂದರೂ ಅದೊಂದು ಮನಸ್ಸಿನ ಸ್ಥಿತಿ ಅಂದಮೇಲೆ …..ಮುಂದೆ ಏನೂ ಹೊಳೆಯುವುದಿಲ್ಲ. ಆದರೂ…ಕ್ಷೇಮ ಎನ್ನುವ ಅಣ್ಣಇನ್ನೂ ಯಾಕ ಬಂದಿಲ್ಲ.. ಕರಿಯಾಕ…!? ಎನ್ನುವ ಪ್ರಶ್ನೆ
    ಇಡೀ ಜನಪದ ಗೀತೆಯ ಪಲ್ಲವಿಯೇ ಕೇಳುವಂತಾಗಿದೆ ನಮ್ಮ ಸ್ಥಿತಿ.

    ಇದನ್ನೂ ಓದಿ ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ , ಆದರೂ ಭರವಸೆ ಒಂಚೂರು ಮಾಸಿಲ್ಲ

    ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ, ಆದರೂ ಭರವಸೆ ಒಂಚೂರೂ ಮಾಸಿಲ್ಲ

    ರವಿ-ಇಳೆಯರ ಪುರಾತನ ಪ್ರೇಮವ, ಸರಸವ ಕಂಡು ಹೊಟ್ಟೆಕಿಚ್ಚಾಗುವ ಮಳೆರಾಯ ಪ್ರೇಮಿಗಳಿಬ್ಬರನ್ನು ವಿರಹದ ಬೇಗುದಿಯಲ್ಲಿ ಬೇಯುವಂತೆ ಮಾಡಿ ಕೊನೆಗೂ ತಾನೇ ಸುಸ್ತಾಗಿ ತನ್ನಬ್ಬರವ ತಗ್ಗಿಸುವಾಗ ಆಷಾಢ ಮುಗಿಯಲು ಬಂತೆಂದೇ ಅರ್ಥ. ಸಿಡಿಲು ಮಿಂಚಿನಾರ್ಭಟಕೆ ತತ್ತರಿಸಿದ ರವಿಯೂ ಅಳುಕುತ್ತಲೇ ಕಾರ್ಮೋಡದ ಬೆನ್ನಮರೆಯಿಂದ ಇಣುಕಿ ಇಳೆಗೆ ಕಣ್ಮಿಟಕಿಸುವಾಗ ಅವಳಲ್ಲೂ ನಾಚಿಕೆಯ ಹೂಮೊಗ್ಗು. ಶ್ರಾವಣದಲಿ ತನ್ನ ಸೇರಲು ಬರುವ ಇನಿಯನಿಗಾಗಿ ಇಳೆಯ ಅಲಂಕಾರವೇನು ಕಮ್ಮಿಯೇ?

    ತಿಳಿನೀರ ಕೊಳದಲಿ ಮಿಂದು, ಪಾರಿಜಾತದ ಘಮಲಿನ ಅತ್ತರು ಪೂಸಿಕೊಂಡು, ಪಚ್ಚೆ ಹಸಿರಿನ ಸೀರೆ ಕುಪ್ಪಸವ ತೊಟ್ಟು, ಬಣ್ಣಬಣ್ಣದ ಹೂವಿನ ಕಂಠಿಹಾರ, ಮಲ್ಲಿಗೆ-ಸೇವಂತಿಯ ಬೆಂಡೋಲೆ ಧರಿಸಿ, ಚಿಗುರೆಲೆಯ ಡಾಬು, ಕಾಲ್ಗೆಜ್ಜೆ ಧರಿಸಿದ ಅವಳು ಅಬ್ಬಾ! ಭುವನ ಮನಮೋಹಿನಿಯೇ. ಪ್ರಖರ ಬೆಳಕಿಂದ ಛಾಯೆಯನ್ನು ಮಂಕಾಗಿಸಿದ ರವಿಯೂ ಕೂಡ ಇಳೆಯಂತಹ ಪ್ರೇಮಿಕೆ ಮುಂದೆ ತಂಪನೆಯ ಶಿಶಿರ. ಸುದೀರ್ಘ ವಿರಹದಿಂದ ಬಳಲಿದ ಪ್ರೇಮಿಗಳ ಮಿಲನದ ಪ್ರತೀಕವೆಂಬಂತೆ ಮನೆಮನೆಯಲ್ಲೂ, ಮನದಲ್ಲೂ ಹಬ್ಬವೇ ಹಬ್ಬ.

    ಶ್ರಾವಣ ಎಂದೊಡನೇ ನನಗೆ ಮೊದಲು ನೆನಪಾಗುವುದು ನಾ ಕಳೆದ ಬಾಲ್ಯ, ತವರು, ಅಲ್ಲಿನ ಆಚರಣೆ ಹಬ್ಬ ಹರಿದಿನ ಇವೇ. ಶ್ರಾವಣದ ಶುರುವಿನಲ್ಲಿಯೇ ಅಮ್ಮ ‘ಮಂಗಳಗೌರಿ’ ವೃತವನ್ನು ಅದೇಷ್ಟು ಶೃದ್ಧಾಭಕ್ತಿಯಿಂದ ಮಾಡುತ್ತಿದ್ದಳು ಅಂದರೆ, ದೇವಿಯೇ ನಮ್ಮನೆ ಬಾಗಿಲಿಗೆ ಬಂದು ಬಾಗಿನ ತೆಗೆದುಕೊಂಡು ಹೋಗುಬಿಡುವಳೇನೋ ಎಂಬಷ್ಟು ತೀವ್ರವಾಗಿ.

    ಶ್ರಾವಣದ ಮೊದಲ ಮಂಗಳವಾರ ಕಳಶವಿಟ್ಟು, ಅದಕ್ಕೆ ಹಸಿರು ಕುಪ್ಪಸದಿಂದ ಸೀರೆಯುಡಿಸಿ, ತನ್ನ ಆಭರಣಗಳನ್ನು ಹಾಕಿ, ಅರಶಿನ ಲೇಪದ ಮೇಲೆ ಕುಂಕುಮದ ಬೊಟ್ಟಿಟ್ಟು, ಕೊನೆಗೆ ಕಪ್ಪನೆಯ ಬೊಟ್ಟು ಕಾಡಿಗೆಯಿಟ್ಟು ಲಟಕ್ಕೆಂದು ನೆಟಿಕೆ ಮುರಿದಾಗ ದೇವಲೋಕದಲ್ಲಿ ದೇವಿ ಮುದದಿಂದ ನಕ್ಕಿರಲೂಬಹುದು. ಅಮ್ನೋರಿಗೆ ಹೆಸರುಬೇಳೆ ಪಾಯಸವಿಷ್ಟ, ನೆನೆಸಿಟ್ಟ ಕಡಲೆಯಿಷ್ಟ, ಅಂಬೋಡೆ ಇಷ್ಟ ಅಂತೆಲ್ಲ ಅಡುಗೆ ಮಾಡುವಾಗ ಅಮ್ಮನ ಮಮತೆ ಕಾಣಿಸುತ್ತಿತ್ತು ಅವಳಲ್ಲಿ. ನನ್ನ ಕಷ್ಟಕ್ಕೆಲ್ಲಾ ನೀನೇ ಮಡಿಲು ಎಂಬಂತ ಹಾಡನ್ನು ಗುನುಗುತ್ತಾ ತುಪ್ಪದಾರತಿಯೆತ್ತುತ್ತಾ ಕಣ್ತುಂಬಿಕೊಳ್ಳುವಾಗ ಅಲ್ಲೊಬ್ಬ ಅಮಾಯಕ ಮಗಳಿರುತ್ತಿದ್ದಳು. ಕುಂಕುಮದ ದಿನ ಅಚಾನಕ್ ಹಿರಿಮುತ್ತೈದೆ ಬಂದರಂತೂ ಮೊಗವೆಲ್ಲಾ ಹೂವಾಗಿ ಅವರಿಗೆ ಉಡಿ ತುಂಬಿ ಕಾಲಿಗೆ ಬೀಳುವಾಗ ಅಲ್ಲೊಬ್ಬ ಮುಗುದ ಹೆಣ್ಣಿನ ಪ್ರತಿರೂಪವಿರುತ್ತಿತ್ತು. ಹೀಗೇ ಅಮ್ಮನಿಗೆ ಶ್ರಾವಣವೆಂದರೆ ಮಂಗಳಗೌರಿ. ನನಗೋ ಶ್ರಾವಣವೆಂದರೆ ಇವೆಲ್ಲಕ್ಕಿಂತ ಮಿಗಿಲಾದ ಒಂದು ಪುಳಕವಿತ್ತು. ಅದಕ್ಕೆ ಕಾರಣ ಕೃಷ್ಣಾಷ್ಟಮಿ.

    ಅಜ್ಜಿ ಹೇಳುತ್ತಿದ್ದ ಕಥೆ ಕೇಳಿಯೇ ಕೃಷ್ಣನೆಡೆಗೆ ಅವ್ಯಕ್ತ ಭಾವಬಂಧನವೊಂದು ಶುರುವಾಗಿದ್ದು. ಕೃಷ್ಣನೆಂದರೆ ಬಾಲ್ಯಸಖ, ಹರೆಯದ ಬಿಸುಪಿಗೆ ರಂಗು ತುಂಬುದವ, ಹೊಕ್ಕಳಿಗೆ ನವಿಲುಗರಿಯಿಂದ ಕಚಗುಳಿಯಿಟ್ಟು ನವಿರುಕಂಪನವ ತಂದ ಪೋರ. ಕೃಷ್ಣನೆಡೆಗಿನ ಮೋಹವ ಬಣ್ಣಿಸಲು ಪುಟವೇ ಸಾಲದು ನನಗೆ. ಹೀಗೆ ಮನಸಾರೆ ಮೋಹಿಸಿದ, ಪ್ರೇಮಿಸಿದ ಕೃಷ್ಣನೇ ಮಡಿಲಿಗಿಳಿದ ಮೇಲೆ ಕಣ್ಮಿಂಚಲಿ ಕೊಲ್ಲುವವನ ಕಣ್ಣಲ್ಲೀಗ ಮಾದಕತೆಯೆಲ್ಲಾ ಕರಗಿ ಮಮತೆಯೆ ಸೆಲೆ ತುಂಬಿದೆ. ನಡುಬಳಸಿ ಕಚಗುಳಿಯಿಟ್ಟು ನಿಂತಲ್ಲೇ ನೀರಾಗಿಸುವವನ ಬೆರಳುಗಳೀಗ ಮಡಿಲಲ್ಲಿ ಮಲಗಲು ಸೆರಗೆಳೆಯುತ್ತದೆ. ಕೆಂದುಟಿಗಳ ಮಧುವ ಹೀರಿ ಸೊಕ್ಕುವ ಹವಳ್ದುಟಿಗೀಗ ಎದೆಗಡಿಗೆಯ ಹಾಲನ್ನು ಖಾಲಿಯಾಗಿಸುವ ತವಕ. ಕಾಲಕ್ಕೆ ತಕ್ಕಂತೆ ನನ್ನೊಡನೆ ತನ್ನ ಪಾತ್ರವನ್ನೇ ಬದಲಿಸಿ ನನ್ನೊಡನೆ ನೆರಳಾಗಿರುವ ನನ್ನ ಮಗ ಕೃಷ್ಣನ ಜನುಮದಿನ ಅಮ್ಮನಿಗೆ ಹಬ್ಬವಲ್ಲದೇ ಮತ್ತೇನು?

    ನಾಗರಪಂಚಮಿ ಸಮೀಪಿಸುವಾಗಲೋ, ಜಟುಕನ ಪೂಜೆಯ ಸಮಯದಲ್ಲೋ ಹಿರಿ ನಾಗರವೊಂದು ಊರಿನ ಮನೆಯಂಗಳದಲ್ಲೋ, ತುಳಸೀಕಟ್ಟೆಯ ಸುತ್ತಲೋ, ಬಾವಿಯ ಸಮೀಪವೋ ಕಾಣಿಸಿಕೊಂಡು ಮಾಯವಾಗುತ್ತಿದ್ದ. ನನ್ನಮ್ಮ ಅಜ್ಜಿಯರಂತೂ ಅಪರೂಪಕ್ಕೆ ಮನೆಗೆ ಬಂದ ನೆಂಟರಂತೆ ನಾಗರಹಾವನ್ನು ಮಾತನಾಡಿಸುವ ಪರಿ ನನಗೀಗಲೂ ಅಚ್ಚರಿಯೇ.

    ಹಾವಿನ ಬಳಿಯೇ ನಿಂತು ‘ನೋಡು ಮಗಾ, ನೀ ಮಕ್ಳು ಮರಿ ಇಪ್ಪು ಜಾಗ್ದಲ್ಲೆಲ್ಲಾ ಸುಮ್ಸುಮ್ನೆ ತಿರುಗುಲಾಗ. ನಡೆ ನಡೆ ನಿಮ್ಮನೇಗ್ ಹೋಗು ನಡೆ ಈ ಜಾಗೆಲ್ಲಾ ಶುದ್ಧಿಲ್ಲೆ ಮಾರಾಯಾ’ ಎಂದೆಲ್ಲಾ ಹಲಬುತ್ತಿದ್ದರು. ಅವನೂ ಅಮ್ಮನ ಮಾತು ಕೇಳುವ ವಿಧೇಯ ಮಗನಂತೆ ಪಕ್ಕದ ಮನೆಗೆ ತೆರಳುತ್ತಿದ್ದ. ಅಲ್ಲಿಯೂ ಬಾಳೆಗೊನೆ, ಹಣ್ಕಾಯಿ, ಹಾಲಾಭಿಷೇಕದ ಲಂಚ ಪಡೆದು ಮುಂದೆ ತೆರಳುತ್ತಿದ್ದ. ಇದ್ಯಾವುದೂ ಸಾಲದಂತೇ ಹಾವಿನ ಹುತ್ತವಿರುವ ಗುತ್ತಿನ ಜಾಗದ ತನಕ ದೂರ್ವೆ, ಕರ್ಪೂರ ಬೆರೆಸಿದ ಗೋಮಯದ ನೀರು ಸಂಪ್ರೋಕ್ಷಿಸಿ ನಾಗರು ತೆರಳುವ ಜಾಗದಲ್ಲಿ ಮೈಲಿಗೆಯಾಗದಂತೆ ಎ‍‍ಚ್ಚರವಹಿಸುತ್ತಿದ್ದರು. ಇದೇ ಸಮಯದ ಲಾಭ ಪಡೆಯುತ್ತಿದ್ದ ಶತಮಡಿಯ ನನ್ನಜ್ಜಿಯಂತೂ ‘ನಿಂಗಾ ಸಮಾ ಮಡಿ-ಮೈಲಿಗೆ ಮಾಡ್ತ್ರಿಲ್ಲೆ, ಅದ್ಕೆ ಎಚ್ರಿಕೆ ಕೊಡುಲ್ ಬಂದಿದ್ದಾ ನೆನ್ಪ್ಟಕಳಿ’ ಅಂತೆಲ್ಲಾ ಬೆದರಿಸಿ ಮುಂದೆರಡು ವಾರ ಮಡಿಮಡಿಯೆಂದು ತನ್ನ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಳು.

    ಹೀಗೆ ಹಾವಿನ ಕುರಿತು ಭಯಕ್ಕಿಂತ ಹೆಚ್ಚು ಒಲವಿನಿಂದಲೇ ಬೆಳೆದ ನಮಗೆ ನಾಗರಪಂಚಮಿಯೆಂದರೆ ಸಡಗರವೇ. ಆಷಾಢದ ಮಳೆಗೆ ಸೊಂಪಾಗಿ ಬೆಳೆದ ಮದರಂಗಿಯನ್ನು ಕೊಯ್ದು ತಂದು ಆರಿಸಿ, ನುಣ್ಣಗೆ ರುಬ್ಬಿ, ಅದಕ್ಕೆ ಲಿಂಬೆರಸ, ಚಾಕಣ್ಣಿನ ರಸ ಬೆರೆಸಿಡುತ್ತಿದ್ದಳು ಅಮ್ಮ. ಮರುದಿನ ಬೆಳಿಗ್ಗೆ ಮನೆಯವರೆಲ್ಲಾ ಅದನ್ನು ಹಚ್ಚಿಕೊಂಡು, ಕೊನೆಗೆ ಅಪ್ಪನನ್ನೂ ಕಾಡಿಸಿ ಅವರ ಹೆಬ್ಬೆರಳಿಗೆ ಹಚ್ಚಿ ಸಂಭ್ರಮಿಸುವ ಖುಶಿಯೇ ಬೇರೆ. ಎಣ್ಣೆಸ್ನಾನದ ನಂತರ, ಸಣ್ಣಜ್ಜನೊಡನೆ ನಾಗರಕಲ್ಲಿಗೆ ತೆರಳಿ ಹಾಲೆರೆದು, ಹಣ್ಕಾಯಿ ಮಾಡಿಸಿ, ಅಮ್ಮ ಮಾಡಿದ ವಿಶೇಷ ಭೋಜನವುಂಡು ಮಲಗಿದರೆ ಜೊಂಪು ಜೊಂಪು ನಿದ್ರೆಯಲ್ಲೆಲ್ಲಾ ಮದರಂಗಿಯದ್ದೇ ರಂಗು.

    ಇನ್ನು ರಕ್ಷಾಬಂಧನ ಬಂದರಂತೂ ನನಗೂ, ತಂಗಿಗೂ ಒಳಗೊಳಗೇ ಅಳುಕು, ಕಸಿವಿಸಿ, ಸಂಕಟ. ಸ್ವಂತಕ್ಕೆ ಸೋದರರಿಲ್ಲದೇ ಮರುದಿನ ಶಾಲೆಯಲ್ಲಿ ತಮ್ಮ ಸೋದರರು ಕೊಟ್ಟ ಉಡುಗೊರೆಯನ್ನು ತೋರಿಸಿ ತೋರಿಸಿ ಉರಿಸುವ ಹುಳುಕು ಗೆಳತಿಯರ ಮುಂದೆ ನಾವಿಬ್ಬರೂ ಸಪ್ಪೆ ಸಪ್ಪೆ. ಕೊನೆಗೆ ಅಜ್ಜಿಯ ಉಪಾಯದಿಂದ ಚಿಕ್ಕಪ್ಪಂದರಿಗೆ ರಾಖೀ ಕಟ್ಟಿ, ಅವರು ದೊಡ್ಡ ಮನಸು ಮಾಡಿ ಕೊಡುವ ಹತ್ತು ರೂಪಾಯಿಯನ್ನೇ ನೂರು ಎಂಬಷ್ಟು ವೈಭವೀಕರಿಸಿ ಸಂಭ್ರಮಿಸುವುದು ಶುರುವಾದ ಮೇಲೆ ಮನಸು ಸ್ವಲ್ಪ ತಂಪಾಯ್ತು.

    ಈಗಲೂ ನನ್ನ ಒಡನಾಟಕ್ಕೆ ಸಿಗುವ ಪುರುಷರಲ್ಲಿ ನಾನು ಹುಡುಕುವುದು ಶುದ್ಧ ಅಂತಃಕರಣದಿಂದ ನನ್ನನ್ನು ಹಚ್ಚಿಕೊಳ್ಳುವ ಸೋದರ ಮನಸುಗಳನ್ನು. ಇಂದು ಬೆಂಗಳೂರಿನಿಂದ ಹಿಡಿದು ಮಂಗಳೂರಿನ ತನಕ, ಕುಮಟಾದಿಂದ ಶೃಂಗೇರಿಯ ತನಕ ನನ್ನನ್ನು ಮನಸಾ ಗೌರವಿಸುವ, ಅಕ್ಕರೆಯಿಂದ ಕಾಣುವ ಅನೇಕ ಅಣ್ಣ ತಮ್ಮಂದಿರು ನನಗಿದ್ದಾರೆ. ಅವರಲ್ಲಿ ಯಾರು ಬಳಿಯಿರುತ್ತಾರೋ ಅವರಿಗೆ ಆರತಿಯೆತ್ತಿ, ಸಿಹಿ ತಿನಿಸಿ, ರಾಖಿ ಕಟ್ಟುತ್ತೇನೆ. ಅವರು ಕೊಡುವ ಸಣ್ಣಪುಟ್ಟ ಉಡುಗೊರೆಯಿಂದ ಸಿಗುವ ಸುಭದ್ರತೆಯ ಭಾವವನ್ನು ಎದೆಯ ಕಪಾಟಿನಲ್ಲಿ ಕಾಪಿಡುತ್ತೇನೆ. ನನಗೀಗ ಮುಂಚಿನೆಂತೆ ರಕ್ಷಾಬಂಧನವೆಂದರೆ ಬೇಸರವಿಲ್ಲ, ದುಗುಡವೂ ಇಲ್ಲ. ಈಗದೊಂದು ಮುಗುದ್ ಮನಸುಗಳ ಬೆಸೆವ ಭಾವದ ಹಬ್ಬ.

    ಹೀಗೆ ಶ್ರಾವಣವೆಂದರೆ ಶುದ್ಧತೆಯ, ಪ್ರೀತಿಯ, ಮಿಲನದ, ಬೆಸುಗೆಯ, ನಂಬಿಕೆಯ, ವಿವಿಧ ಭಾವಗಳ ಮೇಳೈಸುವಿಕೆಯ ಹಬ್ಬ. ಎಲ್ಲಕ್ಕಿಂತ ಮಿಗಿಲಾಗಿ ಶ್ರಾವಣವೆಂದರೆ ತವರು. ತವರಿಗೆ ತೆರಳಿ ಅಮ್ಮನ ಮಡಿಲಿನ ಬಿಸುಪಲಿ ಮಿಂದೆದ್ದು, ಅವಳ ಮಂಗಳಗೌರಿಯನ್ನು ಕಂಡು ಮಾತಾಡಿಸಿ, ಅವಳ ಪ್ರಸಾದದ ಉಡಿ ತುಂಬಿಸಿಕೊಂಡು, ಅಮ್ಮ ಯಾವ ತರಹದ ಸೀರೆ ಕೊಟ್ಟಿರಬಹುದೆಂಬ ಕಾತುರತೆಯಿಂದ ತೆರೆದು ನೋಡುವ ಬೆರಗಿಲ್ಲ. ಅಪ್ಪ ತಂಗಿಯ ಜೊತೆ ಕೂತು ಪಟ್ಟಾಂಗದ ಲೊಟ್ಟೆ ಹೊಡೆವ ಗಮ್ಮತ್ತಿಲ್ಲ. ಹೀಗಾಗಿ ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ. ಆದರೂ ಭರವಸೆಯೊಂಚೂರೂ ಮಾಸಿಲ್ಲ. ಈ ಸಲದ ಶ್ರಾವಣಕ್ಕೆ ಜಗದಿರುಳು ಕಳೆವ ಶಕ್ತಿಯಿರಲಿ, ನೆಮ್ಮದಿಯ ಬೆಳಕು ಹರಿಯಲಿ, ಎಲ್ಲವೂ ಮುಂಚಿನಂತಾಗಲಿ ಎಂದು ತವರಿನ ಸೆಳೆತದ ಮಗಳೊಬ್ಬಳು ಆಶಿಸುವುದು.

    ಕೆಟ್ಟ ಮುಖದ ಕಾಡುಪಾಪ, ಅಂಧವಿಶ್ವಾಸವೇ ಶಾಪ

    ಕಾಡುಪಾಪ!

    ಪುಟ್ಟದಾದ ಜನರ ಕಣ್ಣಿಗೆ ಕಾಣದೇ ಪೊದೆಗಳಲ್ಲಿ ಅಡಗಿಕೊಂಡಿರುವ ಈ ಪುಟ್ಟ ಪ್ರಾಣಿಯು ಪ್ರಾಣಿಪ್ರಿಯರು, ಛಾಯಾಗ್ರಾಹಕರ ಬಹಳ ಕುತೂಹಲದ ಪ್ರಾಣಿ. ಕರ್ನಾಟಕದ ಕೆಲವೇ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಸ್ಲೆಂಡರ್ ಲೋರಿಸ್ ಎಂದು ಇಂಗ್ಲಿಷಿನಲ್ಲಿ ಕರೆಸಿಕೊಳ್ಳುವ ಈ ಪ್ರಾಣಿಗಳು ಸುಲಭಕ್ಕೆ ಮನುಷ್ಯರ ದೃಷ್ಟಿಗೆ ಬೀಳುವುದಿಲ್ಲ.

    ದಕ್ಷಿಣ ಭಾರತದಲ್ಲಿ ಈ ಅಪರೂಪದ ಪ್ರಾಣಿಗಳು ಕಾಣುವ ಕೆಲವೇ ಪ್ರದೇಶಗಳಲ್ಲಿ ತುಮಕೂರು ಬಳಿಯ ನಾಗವಲ್ಲಿ ಬಳಿಯ ಗ್ರಾಮಗಳೂ ಸೇರಿವೆ. ಚಾಮರಾಜನಗರ ಜಿಲ್ಲೆಯಲ್ಲಿಯೂ ಕೆಲವು ಕಡೆ ಕಾಣಸಿಗುತ್ತವೆ. ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಕಾಣುವ ಇವುಗಳು ಈಗಾಗಲೇ ಅಳಿವಿನ ಅಂಚಿನಲ್ಲಿವೆ.

    ತುಮಕೂರು ಜಿಲ್ಲೆ ವೈವಿಧ್ಯಮಯ ಸಸ್ಯಸಂಕುಲ, ಪ್ರಾಣಿಪ್ರಭೇದಕ್ಕೆ ಖ್ಯಾತಿ ಪಡೆದಿದೆ. ಎಷ್ಟೋ ವಿಜ್ಞಾನಿಗಳು, ಪರಿಸರ ಪ್ರೇಮಿಗಳೂ ಇವುಗಳನ್ನು ವೀಕ್ಷಿಸಲು, ಅಧ್ಯಯನ ನಡೆಸಲು ಸಹಜವಾಗಿಯೇ ಇಲ್ಲಿಗೆ ಬರುತ್ತಾರೆ. ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಪ್ರಯಾಣಿಸಿದರೆ ದೊರೆಯುವ ನಾಗವಲ್ಲಿ ಗ್ರಾಮದಲ್ಲಿ `ಕಾಡುಪಾಪಗಳ ತಾಣ ನಾಗವಲ್ಲಿ ಗ್ರಾಮಕ್ಕೆ ಸುಸ್ವಾಗತ’ ಎಂಬ ಫಲಕ ಕಾಣುತ್ತದೆ.

    ಇದು ಈ ಪ್ರದೇಶದಲ್ಲಿನ ಈ ವಿಶಿಷ್ಟ ಪ್ರಾಣಿಗಳ ಕುರಿತು ಅರಿವನ್ನು ಮೂಡಿಸಲು ಹಾಕಿದ್ದರೂ ಪ್ರಾರಂಭದಲ್ಲಿ ನಾಗವಲ್ಲಿಯ ಸುತ್ತಮುತ್ತ ಹೆಬ್ಬೂರು, ಬಳ್ಳಗೆರೆ, ದೊಮ್ಮನಕಟ್ಟೆ, ಸೀನಪ್ಪನಹಳ್ಳಿ ಮುಂತಾದ ಊರುಗಳಲ್ಲಿ ರೈತರು ಹೊಲಗಳ ಬದಿಯಲ್ಲಿ ಕಾಡುಪಾಪ ಕಂಡುಬಂದರೆ ಕಷ್ಟಪಟ್ಟು ಹಿಡಿದು ಈ ಬೋರ್ಡ್ ಬರೆಸಿ ಕಾಡುಪಾಪಗಳ ಕುರಿತು ಅಧ್ಯಯನ ನಡೆಸುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ವಿ. ಗುಂಡಪ್ಪನವರಲ್ಲಿಗೆ ತರಲು ಪ್ರಾರಂಭಿಸಿದರು. ನಂತರ ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಯಿತು.

    ನಾಗವಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚದುರಿದಂತೆ ರೈತರ ತೋಟ, ಹೊಲ, ತೊರೆ ಹಾಗೂ ಹಳ್ಳಗಳಿವೆ. ಇವುಗಳ ಮಧ್ಯದಲ್ಲಿ ಗಿಡ, ಮರ, ಪೊದೆಗಳನ್ನು ಕಾಣಬಹುದು. ಕಾಡುಪಾಪಗಳು ಇಂತಹ ಕೃಷಿಪ್ರದೇಶದ ಸುತ್ತಮುತ್ತಲಿನಲ್ಲೇ ಕಂಡುಬಂದಿವೆ.

    ಈ ಕೃಷಿಭೂಮಿಗಳಲ್ಲಿ ಸಾಕುಪ್ರಾಣಿಗಳಾದ ದನ, ಎಮ್ಮೆ, ಕುರಿ, ಮೇಕೆಗಳು ಓಡಾಡುವುದು ಸಹಜ. ಇವುಗಳು ಹಾಕುವ ಸಗಣಿ, ಗಂಜಲದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಅದರ ಜೊತೆಗೆ ಕೀಟಗಳೂ ವೃದ್ಧಿಸುತ್ತವೆ. ಈ ಕೀಟಗಳೇ ಕಾಡುಪಾಪಗಳಿಗೆ ಆಹಾರವಾಗುತ್ತವೆ. ತೋಟ, ಗದ್ದೆಗಳಿಗೆ ಹಾಕುವ ಕಾಂಪೋಸ್ಟ್ ಗೊಬ್ಬರದಿಂದಲೂ ಈ ಕೀಟಗಳು ವೃದ್ಧಿಯಾಗುತ್ತವೆ. ಅಲ್ಲದೆ ಬೆಳೆಗಳನ್ನು ತಿನ್ನಲು ಬರುವ ಚಿಟ್ಟೆ, ಪತಂಗ, ಕಂಬಳಿಹುಳುಗಳೂ ಕಾಡುಪಾಪಗಳಿಗೆ ಆಹಾರ. ಇಂತಹ ಬೆಳೆಹಾನಿ ಮಾಡುವ ಕೀಟಗಳನ್ನು ತಿನ್ನುವ ಮೂಲಕ ಕಾಡುಪಾಪಗಳು ಕೀಟ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ.

    ವಿಶೇಷ ಎಂದರೆ ಕೋತಿ, ಅಳಿಲುಗಳ ಹಾಗೆ ಇವು ಬೆಳೆಗಳನ್ನು ನಾಶ ಮಾಡುವುದಿಲ್ಲ. ರೈತರಿಗೆ ಯಾವುದೇ ತೊಂದರೆ ಕೊಡದೆ ಸಾಧ್ಯವಿದ್ದಷ್ಟು ಅವರಿಗೆ ನೆರವಾಗುತ್ತಾ ಬದುಕುತ್ತವೆ. ಅವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲು ಕೃಷಿಭೂಮಿಯ ಪೊದೆಗಳೇ ಆಧಾರ. ಪೊದೆಗಳಲ್ಲಿ ಯಾರಿಗೂ ಕಾಣದಂತೆ ಪ್ರಯಾಣಿಸುತ್ತವೆ.

    ಕೃಷಿಪ್ರದೇಶದಲ್ಲಿರುವ ನೀರಿನ ಮೂಲಗಳು, ಪಂಪ್ಸೆಟ್ ಬಳಿಯ ನೀರಿನ ತೊಟ್ಟಿಗಳು, ಹಳ್ಳಗಳು, ಸಣ್ಣ ಕೆರೆ, ಕಟ್ಟೆಗಳು ಹಾಗೂ ಚೆಕ್ ಡ್ಯಾಂಗಳನ್ನು ಇವುಗಳಿಗೆ ಪ್ರಮುಖ ನೀರಿನ ಮೂಲಗಳಾಗಿವೆ.

    ಇಲ್ಲಿನ ತೆಂಗು, ಅಡಿಕೆ, ಬಾಳೆ, ಮಾವು, ಹೂವು, ತರಕಾರಿ ತೋಟಗಳು ಸಾಕಷ್ಟು ಕೀಟಗಳ ಆವಾಸ ಸ್ಥಾನಗಳಾಗಿವೆ. ಇದರಿಂದ ಕಾಡುಪಾಪಗಳಿಗೆ ಸಾಕಷ್ಟು ಕೀಟಗಳು ದೊರೆಯುತ್ತವೆ. ಇದರಿಂದಲೂ ಕಾಡುಪಾಪಗಳು ಈ ಪ್ರದೇಶದಲ್ಲಿ ಹೆಚ್ಚಾಗಿವೆ ಎಂದರೆ ತಪ್ಪಾಗಲಾರದು.

    ಕಾಡುಪಾಪಗಳ ಮೊದಲ ವೈರಿಗಳೆಂದರೆ ಮಾನವ. ಇದರ ಮಾಂಸಕ್ಕಾಗಿ, ಕಣ್ಣುಗಳಿಗಾಗಿ, ಔಷಧಿಗಾಗಿ ಇವುಗಳನ್ನು ಕೊಲ್ಲುತ್ತಿದ್ದಾನೆ. ಕಾಡುಪಾಪಗಳು ಕಂಡುಬಂದರೆ ಹಾರಿ ಬಂದು ಕಣ್ಣು ಮುಖವನ್ನು ಕುಕ್ಕುತ್ತವೆ. ಕಾಡುಬೆಕ್ಕು, ಪುನಗುಬೆಕ್ಕು, ಗೂಬೆಗಳು, ನರಿಗಳು ಕಾಡುಪಾಪವನ್ನು ಕೊಂದು ತಿನ್ನುತ್ತವೆ.

    ಕಾಡುಪಾಪ ಇಂದು ವಿಪತ್ತಿನಲ್ಲಿದೆ. ಒಂದು ಕಾಲದಲ್ಲಿ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇದಕ್ಕೆ ನೆಲೆ ಇತ್ತು. ಕಾಡುಪಾಪಗಳು ನೈಸರ್ಗಿಕ ಆವಾಸಗಳಲ್ಲಿ ಎಷ್ಟಿವೆ ಎಂಬುದನ್ನು ಕರಾರುವಕ್ಕಾಗಿ ತಿಳಿಯುವುದು ಕಷ್ಟ. ಏಕೆಂದರೆ ಇದರ ಕ್ರಮ ಉದ್ದವಾದ ಕ್ಷೇತ್ರ ಅಧ್ಯಯನ ಅಷ್ಟಕಷ್ಟೆ, ಇದು ಚಿಕ್ಕದಾಗಿದ್ದು, ನಿಶಾಚರಿ ಪ್ರಾಣಿಯಾಗಿದ್ದು ಹೆಚ್ಚಾಗಿ ರಾತ್ರಿ ಸಂಚಾರಿಗಳು, ಅಲ್ಲದೆ ಹೆಚ್ಚಾಗಿ ಒಂಟಿಯಾಗಿರುತ್ತದೆ. ನೈಸರ್ಗಿಕ ಆವಾಸಗಳಲ್ಲಿ ಇದರ ಪರಿಸರ ನಡವಳಿಕೆಗಳ ಬಗ್ಗೆ ಸುದೀರ್ಘವಾಗಿ ಅಧ್ಯಯನಗಳು ನಿಗೂಡವೆಂದೇ ಹೇಳಬಹುದು. ಇದರ ಬಗ್ಗೆ ಪೂರ್ಣವಾದ ಅಧ್ಯಯನ ಆಗಬೇಕಷ್ಟೆ. ಐ.ಯು.ಸಿ.ಎನ್. ಸಂಸ್ಥೆಯವರು ಇದನ್ನು ಕೆಂಪುಪಟ್ಟಿಯಲ್ಲಿ ಸೇರಿಸಿದ್ದಾರೆ.

    ಎಲ್ಲಾ ಕಡೆ ನೈಸರ್ಗಿಕ ಆವಾಸಗಳು ಕ್ಷೀಣಿಸಿ, ಹಲವಾರು ಬದಲಾವಣೆಗಳಾಗಿ, ಕಾಡುಪಾಪಗಳ ಉಳಿವಿಗೆ ಅಸಾಧ್ಯವಾಗುತ್ತಿವೆ. ಹೆಚ್ಚುತ್ತಿರುವ ಜನಸಂಖ್ಯೆ, ಬೆಳೆಯುತ್ತಿರುವ ಹಳ್ಳಿಗಳು, ಗೋಮಾಳಗಳನ್ನು ಕೃಷಿಗೆ ಬಳಸಿಕೊಳ್ಳುತ್ತಿರುವುದು. ಇದಲ್ಲದೆ ಹೊಲಗಳನ್ನು ನೀರಾವರಿಯನ್ನಾಗಿ ಮಾಡುತ್ತಿರುವುದರಿಂದ ಬದುಗಳಲ್ಲಿದ್ದ ಮರಗಳೆಲ್ಲಾ ಕಣ್ಮರೆಯಾಗುತ್ತಿವೆ. ತೊರೆ, ಹಳ್ಳದ ಸಾಲುಗಳು, ಒತ್ತುವರಿಯಾಗಿ, ಅಲ್ಲಿದ್ದ ಪೊದೆ, ಗಿಡಮರಗಳು ಬಿದಿರು, ಸೀಗೆಮೆಳೆ ಕಣ್ಮರೆಯಾಗುತ್ತಿವೆ. ಇದರಿಂದ ಕಾಡುಪಾಪಗಳ ಬದುಕು ದುಸ್ತರವಾಗುತ್ತಿದೆ.

    ಕ್ಷೀಣಿಸುತ್ತಿರುವ ಈ ಜೀವಸಂತತಿಗೆ ಇಂದು ಮೌಲ್ಯ ಹೆಚ್ಚಿದೆ. ಇದರಿಂದ ಕಾಡುಪಾಪದ ಕಳ್ಳ ಸಾಗಾಣಿಕೆಯೂ ಹೆಚ್ಚಿದೆ. ಮಾಟ ಮಂತ್ರದಲ್ಲಿ ಕಾಡುಪಾಪದ ಕಣ್ಣು ಬಳಸುತ್ತಾರೆ. ಕಣ್ಣಿನ ದೋಷ ಇರುವವರು ಈ ಚಿಕ್ಕ ಪ್ರಾಣಿಯ ಕಣ್ಣು ತಿಂದರೆ ವಾಸಿಯಾಗುತ್ತದೆ ಎಂಬ ಮೂಢ ನಂಬಿಕೆ ಇದೆ. ಕೆಲವು ಪ್ರದೇಶದ ಸ್ಥಳೀಯ ಜನರಲ್ಲಿನ ತಪ್ಪು ಗ್ರಹಿಕೆ ಎಂದರೆ ಕಾಡುಪಾಪದ ದೇಹದ ಎಲ್ಲಾ ಭಾಗಳಲ್ಲಿ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಇದೆ. ಇನ್ನೂ ಕೆಲವೆಡೆ ಈ ಪ್ರಾಣಿಯ ಕೆಟ್ಟ ಮುಖ ನೋಡಬಾರದು, ಒಳ್ಳೆಯದಾಗುವುದಿಲ್ಲ ಎಂದೆಲ್ಲಾ ಹೇಳುತ್ತಾರೆ. ಈ ಅಂಧವಿಶ್ವಾಸವೇ ಇವುಗಳ ಮೂಲಕ್ಕೆ ಕೊಡಲಿಯಾಗಿದೆ.

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ ವ್ಯಾಕ್ಸಿನ್

    ಕೋವಿಡ್-19 ಮಹಾಮಾರಿಯನ್ನು ಕಟ್ಟಿಹಾಕಲು ಸಮಾರೋಪಾದಿಯಲ್ಲಿ ಭಾರತವು ಸೇರಿದಂತೆ ಜಗತ್ತಿನಾದ್ಯಂತ ಲಸಿಕೆಯ ಸಂಶೋಧನೆಗಳು ನಡೆಯುತ್ತಿದ್ದು, ಸಕಾರಾತ್ಮಕ ಫಲಿತಾಂಶದೊಂದಿಗೆ ಭರವಸೆಯನ್ನು ಮೂಡಿಸಿದೆ. ಲಸಿಕೆ ಅಭಿವೃದ್ಧಿಯ ಹಿಂದಿರುವ ಸೂತ್ರ, ಕಾರ್ಯವಿಧಾನ, ಪ್ರಾಯೋಗಿಕ ಫಲಿತಾಂಶ, ಕ್ಲಿನಿಕಲ್ ಟ್ರಯಲ್ಸ್ ಮುಂತಾದವುಗಳ ಕುರಿತು ಒಂದು ಅವಲೋಕನ.

    ಆಹಾರವನ್ನು ಜೀರ್ಣಿಸಲು ಜೀರ್ಣಾಂಗವ್ಯೂಹ, ಜೀರ್ಣವಾಗದೆ ಉಳಿದ ಕಲ್ಮಶಗಳನ್ನು ಹೊರಹಾಕಲು ವಿಸರ್ಜನಾಂಗವ್ಯೂಹ, ದೇಹದ ಅಂಗಾಂಗಗಳ ನಡುವೆ ಸಂವಹನಕ್ಕಾಗಿ ನರವ್ಯೂಹ, ಪೀಳಿಗೆಯನ್ನು ಮುಂದುವರಿಸಲು ಸಂತಾನೋತ್ಪತ್ತಿವ್ಯೂಹ, ಹೀಗೆ ಪ್ರಾಣಿಗಳ ಜೀವಂತಿಕೆಗೆ ವಿವಿಧ ವ್ಯೂಹಗಳು, ವ್ಯವಸ್ಥೆಗಳು ಇರುವಂತೆ, ದೇಹವನ್ನು ಪ್ರವೇಶಿಸುವ ರೋಗಾಣುಗಳ ವಿರುದ್ಧ ಹೋರಾಡಿ ರಕ್ಷಿಸಲು ಸುಸಜ್ಜಿತವಾದ ಒಂದು ರಕ್ಷಣಾವ್ಯೂಹವಿದೆ. ಆಕ್ರಮಣಕಾರರಿಂದ ದೇಶವನ್ನು ರಕ್ಷಿಸಲು ಇರುವ ಮಿಲಿಟರಿಯಲ್ಲಿ ಭೂಸೇನೆ, ನೌಕಾಪಡೆ, ವಾಯುಪಡೆ. ಕೋಸ್ಟ್ ಗಾರ್ಡ್, ಮದ್ದುಗುಂಡುಗಳು, ಯುದ್ಧ ವಾಹನಗಳು, ಫಿರಂಗಿ, ಕ್ಷಿಪಣಿ, ವಿಮಾನವಾಹಕ ನೌಕೆ, ಗಸ್ತು ಹಡಗುಗಳು, ಟ್ಯಾಂಕ್‌ಗಳು, ಯುದ್ಧ ವಿಮಾನಗಳು ಮುಂತಾದ ವ್ಯವಸ್ಥೆ, ಶಸ್ತ್ರಾಸ್ತ್ರಗಳಿರುವಂತೆಯೇ ದೇಹವನ್ನು ಆಕ್ರಮಿಸುವ ಬ್ಯಾಕ್ಟೀರಿಯಾ, ವೈರಾಣು, ಪ್ರೊಟೊಜೋವಾ, ಶಿಲೀಂಧ್ರಗಳ ವಿರುದ್ಧ ಹೋರಾಡಲು ರಕ್ಷಣಾವ್ಯೂಹದಲ್ಲಿ ನಿಷ್ಕ್ರಿಯ ರೋಗನಿರೋಧಕ ಶಕ್ತಿ, ಸಕ್ರಿಯ ರೋಗನಿರೋಧಕ ಶಕ್ತಿ, ಬಿಳಿ ರಕ್ತ ಕಣಗಳು, ಪ್ರತಿಕಾಯಗಳು (Antibodies), ಪೂರಕ ವ್ಯವಸ್ಥೆ (Complement system), ದುಗ್ಧರಸ ವ್ಯವಸ್ಥೆ (Lymphatic system), ಗುಲ್ಮ (Spleen), ಮೂಳೆ ಮಜ್ಜೆ (Bone marrow), ಥೈಮಸ್, ಬಿ-ಲಿಂಫೋಸೈಟ್ಸ್, ಟಿ-ಲಿಂಫೋಸೈಟ್ಸ್, ಮ್ಯಾಕ್ರೋಫೇಜಗಳು, ಸೈಟೊಕಿನ್ಸ್ ಹೀಗೆ ಬಗೆಬಗೆಯ ಅಂಗಾಂಶ, ಕೋಶ, ಅಣುಗಳ ರೂಪದಲ್ಲಿ ಶಸ್ತಾಸ್ತ್ರಗಳಿವೆ. ಇವುಗಳೆಲ್ಲವೂ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಿ ಸಂಕೀರ್ಣವಾದ ಒಂದು ಸರಪಳಿ ಕ್ರಿಯೆಯ ಮೂಲಕ ದೇಹವನ್ನು ದಾಳಿಮಾಡುವ ಶತ್ರು(ರೋಗಾಣು)ಗಳಿಂದ ನಮ್ಮನ್ನು ಸದಾ ರಕ್ಷಿಸುತ್ತಿರುತ್ತವೆ.

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು
    ಜಗತ್ತಿನಾದ್ಯಂತ ಸಮಾರೋಪಾದಿಯಲ್ಲಿ ಒಂದು ಕಡೆ ವಿಜ್ಞಾನಿಗಳು ಕೋವಿಡ್ -19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ವೈರಸ್ (SARS-CoV-2) ವಿರುದ್ಧ ಔಷಧಿಯನ್ನು ಕಂಡುಹಿಡಿಯಲು ಸಂಶೋಧನೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಸಂಶೋಧಕರು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಲಸಿಕೆ ಮತ್ತು ಔಷಧಿಗೆ ಏನು ವ್ಯತ್ಯಾಸ? ಲಸಿಕೆಯು ರೋಗ ಬರದಂತೆ ತಡೆಗಟ್ಟುವ ಕೆಲಸ ಮಾಡಿದರೆ ಔಷಧಿಗಳು ಬಂದನಂತರ ಗುಣಪಡಿಸುತ್ತವೆ. ‘ಯಾವುದೇ ರೋಗರುಜಿನ ಇರಬಹುದು, ‘ಗುಣಪಡಿಸುವುದಕ್ಕಿಂತ ತಡೆಗಟ್ಟುವುದೇ ಉತ್ತಮ’.

    ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎಂಬ ಗಾದೆ ರೋಗಾಣು ವಿರುದ್ಧ ವ್ಯಾಕ್ಸಿನ್ ಅಭಿವೃದ್ಧಿಪಡಿಸುವ ತಾಂತ್ರಿಕತೆಗೆ ಪೂರಕವಾಗಿದೆ. ಅಂದರೆ, ಯಾವ ರೋಗಾಣುವಿನ ಸೋಂಕಿನಿಂದ ಕಾಯಿಲೆ ಉಂಟಾಗುವುದೋ ಅದೇ ರೋಗಾಣುವನ್ನು ಬಳಸಿಕೊಂಡು ಅದರ ವಿರುದ್ಧ ಶಸ್ತ್ರವನ್ನು ಸಜ್ಜುಗೊಳಿಸುವುದು, ಅರ್ಥಾತ್ ಲಸಿಕೆಯನ್ನು ಅಭಿವೃದ್ಧಿ ಪಡಿಸುವುದು. ವೈರಿಯ ವಿರುದ್ಧ ಹರಿತವಾದ ಶಸ್ತ್ರಗಳನ್ನು ತಯಾರಿಟ್ಟುಕೊಂಡು ವೈರಿಯು ಆಕ್ರಮಿಸಿದ ತಕ್ಷಣ ಅದನ್ನು ನಾಶಗೊಳಿಸುವುದು, ಅಂದರೆ ಸೋಂಕು ಉಂಟಾದರೂ ಕಾಯಿಲೆ ಬರದಂತೆ ತಡೆಯುವುದೇ ಇಲ್ಲಿರುವ ಸೂತ್ರ. ಇದರ ಹೆಗ್ಗಳಿಕೆ ನಿಸರ್ಗದ ಕಾರ್ಯವಿಧಾನ ಮತ್ತು ಅದನ್ನು ಅರ್ಥಮಾಡಿಕೊಂಡು ವ್ಯಾಕ್ಸಿನ್ ಎಂಬ ಪರಿಕಲ್ಪನೆ ನೀಡಿದ ವಿಜ್ಞಾನಿಗಳಿಗೆ ಸಲ್ಲುತ್ತದೆ.
    ಲಸಿಕೆಗಳ ಉತ್ಪಾದನೆ ಹಿಂದಿರುವ ರಹಸ್ಯ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವಿಧಾನವೇ ಆಗಿದೆ. ಹಾಗಾಗಿ, ಮೊದಲು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ ಸ್ವಲ್ಪ ಹೊತ್ತು ಗಮನಹರಿಸೋಣ.

    ದೇಹವನ್ನು ಪ್ರವೇಶಿಸುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಅಂದರೆ ಅವುಗಳನ್ನು ಕೊಲ್ಲಲ್ಲು ಅಥವಾ ನಿಷ್ಕ್ರಿಯಗೊಳಿಸಲು ರಕ್ಷಣಾವ್ಯೂಹವು ಪ್ರತಿಕಾಯ (ಆಂಟಿಬಾಡಿ) ಗಳನ್ನು ಅಸ್ತ್ರವನ್ನಾಗಿ ಬಳಸುತ್ತದೆ. ಇಂಗ್ಲೀಷ್ ವರ್ಣಮಾಲೆಯ ‘ವೈ’ ಆಕಾರದ ಈ ಅಸ್ತ್ರಗಳನ್ನು (ಪ್ರತಿಕಾಯಗಳು) ಉತ್ಪತ್ತಿ ಮಾಡುವ ಕೆಲಸ ಬಿ-ಲಿಂಫೋಸೈಟ್ಸ್ (ಬಿ-ಕೋಶಗಳು) ಎಂಬ ಬಿಳಿ ರಕ್ತ ಕಣಗಳದ್ದು. ರಕ್ತದಲ್ಲಿ ಕೋಟ್ಯಂತರ ಬಗೆಯ ಬಿ-ಕೋಶಗಳಿದ್ದು, ಪ್ರತಿಯೊಂದು ಒಂದು ನಿರ್ದಿಷ್ಟ ರೋಗಾಣುವನ್ನು ಗುರುತಿಸಿ, ಅದರ ವಿರುದ್ಧ ನಿಖರವಾದ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ. ಒಂದು ನಿರ್ದಿಷ್ಟವಾದ ಕೀಲಿಯಿಂದ ಮಾತ್ರ ಬೀಗವನ್ನು ಹೇಗೆ ತೆರೆಯಬಹುದೋ ಹಾಗೆಯೇ ಒಂದು ನಿರ್ದಿಷ್ಟವಾದ ಬಿ-ಕೋಶವು ದೇಹವನ್ನು ಪ್ರವೇಶಿಸಿದ ಸೂಕ್ಷ್ಮಜೀವಿಯನ್ನು ಗುರುತಿಸುತ್ತದೆ. ಇದಕ್ಕೆ ಬಿ-ಕೋಶಗಳ ಮೇಲ್ಮೈಯಲ್ಲಿರುವ ರಿಸೆಪ್ಟರ್ (ಗ್ರಾಹಕ)ಗಳು ನೆರವಾಗುತ್ತದೆ. ಸೂಕ್ಶ್ಮಜೀವಿಗಳ ಹೊರಕವಚದಲ್ಲಿರುವ ಪ್ರೊಟೀನ್/ಗ್ಲೈಕೋಪ್ರೋಟೀನ್ (ಪ್ರತಿಜನಕ / ಆಂಟಿಜೆನ್) ಆಕಾರಕ್ಕೆ ಯಾವ ಬಿ-ಕೋಶವು ತನ್ನ ರಿಸೆಪ್ಟರ್ ಗಳ ಮೂಲಕ ನಿಖರವಾಗಿ ಅಂಟಿಕೊಳ್ಳುತ್ತದೆಯೋ ಅದು ಆಯ್ಕೆಯಾಗುತ್ತದೆ. ಆಕ್ರಮಣಕಾರಿಯನ್ನು ನಿಖರವಾಗಿ ಗುರುತಿಸಿ ಆಯ್ಕೆಯಾದ ಬಿ-ಕೋಶವು ತಕ್ಷಣಕ್ಕೆ ಸಕ್ರಿಯವಾಗಿ ತನ್ನಂತೆ ಇರುವ ಲಕ್ಷಾಂತರ ಕೋಶಗಳನ್ನು ಉತ್ಪತ್ತಿ ಮಾಡಲು ವಿಭಜನೆಗೊಳ್ಳುತ್ತದೆ (ಕ್ಲೋನಲ್ ಆಯ್ಕೆ).

    ರಕ್ತದ ಪ್ಲಾಸ್ಮಾದಲ್ಲಿರುವ ಈ ಕೋಶಗಳನ್ನು ಪ್ಲಾಸ್ಮಾ ಬಿ-ಕೋಶಗಳು ಎಂದು ಕರೆಯಲಾಗುವುದು. ಅವುಗಳೆಲ್ಲವೂ ರಾಶಿ ರಾಶಿ ನಿರ್ದಿಷ್ಟ ಪ್ರತಿಕಾಯಗಳನ್ನು ಬಿಡುಗಡೆ ಮಾಡುತ್ತವೆ. ಪ್ರತಿಕಾಯಗಳು ಸೂಕ್ಷ್ಮಜೀವಿಯ ಮೇಲೆ ಮುಗಿಬಿದ್ದು ಅವುಗಳನ್ನು ಕೊಲ್ಲುತ್ತವೆ ಅಥವಾ ನಿಷ್ಕ್ರಿಯಗೊಳಿಸುತ್ತವೆ. ಅಂತಿಮವಾಗಿ, ನಾವು ಕಾಯಿಲೆ ಉಂಟಾಗದಂತೆ ಬಚಾವ್ ಆಗುತ್ತೇವೆ ಅಥವಾ ಬೇಗನೆ ಚೇತರಿಸಿಕೊಳ್ಳುತ್ತೇವೆ.

    ಪ್ಲಾಸ್ಮಾ ಚಿಕಿತ್ಸೆಯ ಹಿನ್ನೆಲೆ

    ಕೋವಿಡ್ -19 ಗೆ ಕೇಳಿಬರುತ್ತಿರುವ ಪ್ಲಾಸ್ಮಾ ಚಿಕಿತ್ಸೆಯ ಹಿನ್ನೆಲೆಯು ಇದೇ ಆಗಿದೆ. ಈಗಾಗಲೇ ಕೋವಿಡ್ -19 ನಿಂದ ಗುಣಮುಖರಾದ ವ್ಯಕ್ತಿಗಳ ರಕ್ತದ ಪ್ಲಾಸ್ಮಾದಲ್ಲಿ ಸಾಕಷ್ಟು ಕೊರೊನಾವೈರಸ್ ವಿರುದ್ಧ ಪ್ರತಿಕಾಯಗಳು, ಪ್ಲಾಸ್ಮಾ ಬಿ-ಕೋಶಗಳು ಶೇಖರಣೆಯಾಗಿದ್ದು ಅವರಿಂದ ಪ್ಲಾಸ್ಮಾವನ್ನು ಸಂಗ್ರಹಿಸಿ ಹೊಸ ಕೋವಿಡ್ -19 ರೋಗಿಗಳಿಗೆ ನೀಡುವುದು. ಆದರೆ, ಇದರಲ್ಲಿಯೂ ಕೆಲವು ಪ್ರತಿಕೂಲ ಪರಿಣಾಮಗಳು ಇದ್ದು, ಸರಿಯಾಗಿ ಪರೀಕ್ಷೆಗೆ ಒಳಪಡಿಸಿಯೇ ಪ್ಲಾಸ್ಮಾ ಥೆರಪಿಯನ್ನು ಬಳಸಿಕೊಳ್ಳಬೇಕು.

    ರಕ್ತದಲ್ಲಿ ಬಿ-ಕೋಶಗಳು ಇರುವಂತೆ, ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಆಂಟಿಬಾಡಿ ಉತ್ಪತ್ತಿ ಮಾಡಲು ಟಿ-ಕೋಶಗಳೂ ಇವೆ. ಬಿ-ಕೋಶಗಳು ಬ್ಯಾಕ್ಟೀರಿಯಾ ಮತ್ತು ವೈರಾಣು ಎರಡರ ವಿರುದ್ಧವೂ ಪ್ರತಿಕಾಯಗಳನ್ನು ಸ್ರವಿಸಿದರೆ, ಟಿ-ಕೋಶಗಳು ವೈರಾಣುಗಳ ಮೇಲೆ ಇರುವ ಪ್ರತಿಜನಕಗಳನ್ನು ಮಾತ್ರ ಗುರುತಿಸಿ ಅವುಗಳ ವಿರುದ್ಧ ಪ್ರತಿಕಾಯಗಳನ್ನು ಸ್ರವಿಸುತ್ತವೆ. ಈ ಕಾರ್ಯವಿಧಾನಗಳ ಜೊತೆಗೆ, ಇಂಟರ್ಫೆರಾನ್ಸ್ ಎಂಬ ಸಂದೇಶವಾಹಕ ಪ್ರೋಟೀನ್ ಅಣು ಇದ್ದು, ವೈರಲ್ ಸೋಂಕಿನ ವಿರುದ್ಧ ಹೋರಾಡುವಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

    ರೋಗನಿರೋಧಕ ಶಕ್ತಿಯ ಹೋರಾಟ ಇಷ್ಟಕ್ಕೇ ಸೀಮಿತವಾಗಿಲ್ಲ. ಒಂದು ಬ್ಯಾಕ್ಟೀರಿಯಾ ಅಥವಾ ವೈರಾಣುವಿನ ವಿರುದ್ಧ ಹೋರಾಡಲು ಆಯ್ಕೆಯಾದ ಬಿ-ಕೋಶ ಮತ್ತು ಟಿ-ಕೋಶಗಳು ಭವಿಷ್ಯದಲ್ಲಿ ಅದೇ ರೋಗಾಣುವನ್ನು ನೆನಪಿಟ್ಟುಕೊಳ್ಳಲು ಮೆಮೊರಿ ಕೋಶಗಳನ್ನೂ ಉತ್ಪತ್ತಿ ಮಾಡುತ್ತದೆ. ರಕ್ತದಲ್ಲಿ ಶೇಖರಣೆಯಾಗಿರುವ ಮೆಮೊರಿ ಕೋಶಗಳು ದೀರ್ಘಕಾಲದವರೆಗೆ ಇರುತ್ತವೆ. ಒಂದೊಮ್ಮೆ ಭವಿಷ್ಯದಲ್ಲಿ ಅದೇ ರೋಗಾಣುವಿನಿಂದ ಮತ್ತೊಮ್ಮೆ ಸೋಂಕು ಉಂಟಾದರೆ, ತಕ್ಷಣಕ್ಕೆ ಈ ಮೆಮೊರಿ ಕೋಶಗಳು ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿ ತ್ವರಿತಗತಿಯಲ್ಲಿ ಅವುಗಳನ್ನು ಕೊಲ್ಲುತ್ತವೆ. ಎಷ್ಟು ವೇಗವಾಗಿ ಈ ಪ್ರಕ್ರಿಯೆ ನಡೆಯುತ್ತದೆ ಅಂದರೆ, ಸೋಂಕು ಉಂಟಾಗಿದ್ದರೂ ಗಮನಕ್ಕೆ ಬರುವುದಿಲ್ಲ. ಕೊಟ್ಲೆ, ನೀರುಕೊಟ್ಲೆ, ಚಿಕ್ಕಮ್ಮ, ಸೀತಾಳ ಸಿಡುಬು, ಅಮ್ಮ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ಚಿಕನ್ಪಾಕ್ಸ್ ವೆರಿಸೆಲ್ಲಾ ಜೋಸ್ಟರ್ (Varicella zoster) ಎಂಬ ವೈರಾಣುವಿನಿಂದ ಹರಡುವ ಅಂಟುರೋಗವನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

    ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಈ ಕಾಯಿಲೆಯು ಹೆಚ್ಚಿನ ಸಂದರ್ಭಗಳಲ್ಲಿ ಒಂದು ಸಲ ಉಂಟಾದರೆ ಮತ್ತೊಮ್ಮೆ ಜೀವನದಲ್ಲಿ ಆ ಕಾಯಿಲೆ ಆವರಿಸುವುದಿಲ್ಲ. ಏಕೆಂದರೆ, ಮೊದಲ ಸಲ ಸೋಂಕು ಉಂಟಾದಾಗಲೇ ಆ ವೈರಾಣುವಿನ ವಿರುದ್ಧ ಪ್ರತಿಕಾಯಗಳು ಮತ್ತು ಮೆಮೊರಿ ಕೋಶಗಳು ರಕ್ತದಲ್ಲಿ ಸದಾ ತಯಾರಾಗಿರುತ್ತವೆ.ಲಸಿಕೆಗಳ ಉತ್ಪಾದನೆ ಮತ್ತು ವ್ಯಾಕ್ಸಿನೇಷನ್ ಮಾಡುವ ಹಿಂದಿನ ತತ್ವ ಇದೇ ಆಗಿರುತ್ತದೆ. ಯಾವ ರೋಗಾಣುವಿನಿಂದ ಕಾಯಿಲೆ ಬರುತ್ತದೋ ಅವುಗಳನ್ನು ಮೊದಲೇ ದೇಹದೊಳಗೆ ಪರಿಚಯಿಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪೂರ್ವ ತಯಾರಿ ಮಾಡಿಟ್ಟಿರುವುದು. ಒಂದೇ ವ್ಯತ್ಯಾಸ ಅಂದರೆ, ಇಲ್ಲಿ ಜೀವಂತ ರೋಗಾಣುಗಳ ಬದಲು ನಿಷ್ಕ್ರಿಯಗೊಳಿಸಿದ ರೋಗಾಣುವನ್ನು ದೇಹದೊಳಗೆ ತೂರಿಸುವುದು. ರೋಗಾಣುವನ್ನು ನಿಷ್ಕ್ರಿಯಗೊಳಿಸಿರುವುದರಿಂದ ಅವುಗಳು ದೇಹದಲ್ಲಿ ದ್ವಿಗುಣಗೊಳ್ಳಲು ಮತ್ತು ಕಾಯಿಲೆಯನ್ನು ಉಂಟುಮಾಡಲು ಸಾಧ್ಯವಿಲ್ಲ.

    ವ್ಯಾಕ್ಸಿನ್ ತಯಾರಿಕೆಗೆ ವಿವಿಧ ವಿಧಾನ

    ಆದರೆ, ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸುವ ಅಂಶ (ಪ್ರತಿಜನಕ) ನಿಷ್ಕ್ರಿಯಗೊಳಿಸಿದ ರೋಗಾಣುವಿನಲ್ಲಿರುತ್ತದೆ. ಹಾಗಾಗಿ, ಮೇಲೆ ತಿಳಿಸಿರುವ ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸಲು ಪ್ರಕ್ರಿಯೆಗಳು ನಡೆದು, ಅದರ ವಿರುದ್ಧ ಪ್ರತಿಕಾಯ ಮತ್ತು ಮೆಮೋರಿ ಕೋಶಗಳು ಸನ್ನದ್ಧವಾಗಿರುವಂತೆ ಮಾಡಲಾಗುತ್ತದೆ. ಇದು ಒಂದು ರೀತಿಯಲ್ಲಿ, ‘ಮುಂದೆ ಇತರಹದ ಶತ್ರುಗಳು ದೇಹವನ್ನು ಆಕ್ರಮಿಸಬಹುದು, ಯಾವುದಕ್ಕೂ ನೀನು ತಯಾರಾಗಿರು’ ಎಂದು ನಮ್ಮ ಪ್ರತಿರಕ್ಷಣಾ ಶಕ್ತಿಗೆ ಮನವರಿಕೆ ಮಾಡಿಕೊಟ್ಟಂತೆ. ಕೆಲವು ರಾಸಾಯನಿಕ, ಅತಿಯಾದ ಶಾಖ ಅಥವಾ ವಿಕಿರಣಕ್ಕೆ ತೆರೆದಿಟ್ಟು ರೋಗಾಣುಗಳನ್ನು ನಿಷ್ಕ್ರಿಯ/ ಕ್ಷೀಣಗೊಳಿಸಲಾಗುತ್ತದೆ. ಅಥವಾ ಅದರ ಮೇಲಿರುವ ಪ್ರೊಟೀನ್ / ಗ್ಲೈಕೋಪ್ರೋಟೀನ್ ಗಳನ್ನು ಮಾತ್ರ ಪ್ರತಿಜನಕಗಳಾಗಿ ವ್ಯಾಕ್ಸಿನ್ ಉತ್ಪಾದನೆಗೆ ಬಳಸಿಕೊಳ್ಳಬಹುದು. ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸಲು ನಿರ್ಜಿವ ಅಥವಾ ನಿಷ್ಕ್ರಿಯಗೊಳಿಸದ ರೋಗಾಣುಗಳು ಅಥವಾ ಅವುಗಳಿಂದ ಪಡೆದ ಪ್ರತಿಜನಕಗಳನ್ನೇ ಲಸಿಕೆಗಳು (ವ್ಯಾಕ್ಸಿನ್) ಎಂದು ಕರೆಯಲಾಗುವುದು.

    ವ್ಯಾಕ್ಸಿನ್ ತಯಾರಿಕೆಗೆ ವಿವಿಧ ವಿಧಾನಗಳಿದ್ದು ಯಾವ ಕಾಯಿಲೆಗೆ ಯಾವ ವಿಧಾನದಲ್ಲಿ ತಯಾರಿಸಿದ ವ್ಯಾಕ್ಸಿನ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುವುದನ್ನು ಪ್ರಾಯೋಗಿಕ ಅಧ್ಯಯನದ ಮೂಲಕ ತಿಳಿಯಲಾಗುತ್ತದೆ. ಭವಿಷ್ಯದಲ್ಲಿ ಬರಬಹುದಾದ ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಿಸಲು ಲಸಿಕೆಗಳನ್ನು (ವಾಕ್ಸಿನ್ಸ್) ಬಾಯಿಯ ಮೂಲಕ ಅಥವಾ ಚುಚ್ಚುಮದ್ದು ನೀಡಿ ದೇಹಕ್ಕೆ ಪರಿಚಯಿಸುವುದನ್ನು ವ್ಯಾಕ್ಸಿನೇಷನ್ ಅಥವಾ ಇಮ್ಯುನೈಝೇಷನ್ ಎಂದು ಕರೆಯಲಾಗುತ್ತದೆ.

    ಪೋಲಿಯೊ, ಹೆಪಟೈಟಿಸ್ ಬಿ, ಡಿಫ್ತಿರಿಯಾ, ಟೆಟನಸ್, ರೋಟವೈರಸ್ 2, ದಡಾರ, ಮಂಪ್ಸ್ , ರುಬೆಲ್ಲಾ, ಹ್ಯೂಮನ್ ಪ್ಯಾಪಿಲೋಮ ವೈರಸ್ ಮುಂತಾದ ರೋಗಾಣುಗಳ ವಿರುದ್ಧ ಕಾಲಕಾಲಕ್ಕೆ ಬಾಲ್ಯದಲ್ಲಿ ನೀಡುವ ಲಸಿಕೆಗಳನ್ನು ಇವೇ ಸೂತ್ರದ ಆಧಾರದ ಮೇಲೆ ಉತ್ಪಾದಿಸಲಾಗುತ್ತವೆ. ಭವಿಷ್ಯದಲ್ಲಿ ಸೋಂಕು ಉಂಟಾದರೂ ಆ ರೋಗಾಣುಗಳಿಂದ ಕಾಯಿಲೆಗಳು ಉದ್ಭವವಾಗದಂತೆ ಲಸಿಕೆಗಳು ತಡೆಹಿಡಿಯುತ್ತವೆ. ಲಸಿಕೆಯ ಚುಚ್ಚುಮದ್ದನ್ನು ನೀಡಿದಾಗ ಆ ಸ್ಥಳದಲ್ಲಿ ಸ್ವಲ್ಪ ನೋವು, ಊದಿಕೊಳ್ಳುವುದು, ಕೆಂಪಾಗುವುದು, ಕೆಲವು ಬಾರಿ ಜ್ವರ, ಕಿರಿಕಿರಿ, ಅರೆನಿದ್ರಾವಸ್ಥೆ ಮತ್ತು ದದ್ದು ಸೇರಿದಂತೆ ಅಡ್ಡ ಪರಿಣಾಮಗಳು ಆಗಬಹುದು. ಅವುಗಳು ಹೈಪರ್-ಇಮ್ಯೂನ್ ರಿಯಾಕ್ಷನ್ ಅಥವಾ ಅಲರ್ಜಿ ಪ್ರತಿಕ್ರಿಯೆ ಆಗಿದ್ದು ತಾತ್ಕಾಲಿಕವಾಗಿರುತ್ತದೆ. ಆದರೆ ಲಸಿಕೆಗಳು ತುಂಬಾ ಶುದ್ಧವಾಗಿರಬೇಕು; ಯಾವುದೇ ಸೂಕ್ಷ್ಮಜೀವಿ ಅಥವಾ ಕಲ್ಮಶಗಳಿಂದ ಕಲುಷಿತಗೊಂಡಿರಬಾರದು. ಅಶುದ್ಧವಾಗಿದ್ದರೆ ಅದು ಅಪಾಯಕಾರಿಯಾಗುವ ಸಾಧ್ಯತೆ ಇದೆ.

    ವಿಶ್ವಾದ್ಯಂತ ಕೋವಿಡ್-೧೯ನಿಂದ ಆಗುತ್ತಿರುವ ಸಾವು-ನೋವುಗಳನ್ನು ಪರಿಗಣಿಸಿ ವೈದ್ಯಕೀಯ ತುರ್ತು ನೆಲೆಯಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಯು ತ್ವರಿತಗತಿಯಲ್ಲಿ ನಡೆಯುತ್ತಿದ್ದು 12-18 ತಿಂಗಳುಗಳಲ್ಲಿ ಯಶಸ್ವಿಗೊಳಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ತಜ್ಞರು ಅಂದಾಜಿಸಿದ್ದಾರೆ.

    ಲಸಿಕೆಗಳ ಅಭಿವೃದ್ಧಿ ವೇಗ

    ಕೋವಿಡ್-19 ಗೆ ಔಷಧಿ ಮತ್ತು ಲಸಿಕೆಗಳನ್ನು ವೇಗವಾಗಿ ಅಭಿವೃದ್ಧಿಗೊಳಿಸಲು ಯು. ಎಸ್. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (NIH) 18 ಕ್ಕೂ ಹೆಚ್ಚು ಔಷಧೀಯ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಪಡೆದುಕೊಂಡಿದೆ. ಅನೇಕ ರಾಷ್ಟ್ರಗಳ ಫಾರ್ಮಸ್ಯುಟಿಕಲ್ ಕಂಪನಿಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಕೇಂದ್ರಗಳು ಕೋವಿಡ್-19 ತಡೆಹಿಡಿಯಲು ಈಗಾಗಲೇ ಸುಮಾರು 200 ಲಸಿಕೆಗಳನ್ನು ಉತ್ಪಾದಿಸಲಾಗಿದ್ದು ಪ್ರಾಯೋಗಿಕ ಹಂತದಲ್ಲಿವೆ.

    ಅವುಗಳಲ್ಲಿ ಕೆಲವು (AZD1222 SARS-CoV-2 Vaccine; Pfizer-BioNTech’s BNT162 SARS-CoV-2 Vaccine; ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ SARS-CoV-2 Vaccine) ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಳು ಸಕಾರಾತ್ಮಕ ಫಲಿತಾಂಶ ನೀಡಿದ್ದು, ಕ್ಲಿನಿಕಲ್ (ಹ್ಯೂಮನ್) ಟ್ರಯಲ್ಸ್ ಹಂತದಲ್ಲಿವೆ. ಕೊರೊನಾವೈರಸ್ (SARS-CoV-2 ) ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವ ಜಾಗತಿಕ ಓಟಕ್ಕೆ ಸೇರ್ಪಡೆಯಾಗಿರುವ ಭಾರತೀಯ ಸಂಶೋಧಕರು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್.ಐ.ವಿ.) ಸಹಭಾಗಿತ್ವದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಕೋವಾಕ್ಸಿನ್ (COVAXIN) ಎಂಬ ಹೆಸರಿನ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಕೋವಾಕ್ಸಿನ್ ಅನ್ನು ಈಗಾಗಲೇ ಪ್ರಾಣಿಗಳ ಮೇಲೆ ಯಶಸ್ವಿ ಅಧ್ಯಯನ ನಡೆಸಿ, 1,100 ಜನರ ಮೇಲೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲು ಪ್ರಾರಂಭಿಸಲಾಗಿದೆ.

    ಅದೇ ರೀತಿ ಅಹಮದಾಬಾದ್ ಮೂಲದ ಝೆಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಸಂಸ್ಥೆಯು ಕೂಡ SARS-CoV-2 ವಿರುದ್ಧ ಲಸಿಕೆಯೊಂದನ್ನು ಉತ್ಪಾದಿಸಿದ್ದು ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತ ಸರ್ಕಾರದ ಕೇಂದ್ರೀಯ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ ’ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)’ ಇದರಿಂದ ಒಪ್ಪಿಗೆಯನ್ನು ಪಡೆದುಕೊಂಡಿದೆ. ರಷ್ಯಾದ ಸೆವಿನೋವ್ ವಿಶ್ವವಿದ್ಯಾಲಯವು ಸಂಶೋಧಿಸಿದ ಕೋವಿಡ್ -19 ಲಸಿಕೆಯು ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಶುಭ ಸುದ್ದಿ ಇದೀಗ ಸಂಚಲನ ಉಂಟುಮಾಡಿದೆ.

    ದೇಸಿ ಅಥವಾ ವಿದೇಶಿ, ಜಗತ್ತಿನಾದ್ಯಂತ ಪೆಡಂಭೂತವಾಗಿ ಕಾಡುತ್ತಿರುವ ಕರೋನವೈರಸ್ ಅನ್ನು ಕಟ್ಟಿಹಾಕಲು ಔಷಧಿ ಮತ್ತು ಲಸಿಕೆಗಳು ಪ್ರಾಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ತೇರ್ಗಡೆ ಹೊಂದಿ ಆದಷ್ಟು ಬೇಗನೇ ಜನರ ಸೇರಲಿವೆ ಎಂದು ಆಶಾವಾದಿಯಾಗಿರೋಣ. ಅಲ್ಲಿಯ ತನಕ ಕೋವಿಡ್ -19 ಮಹಾಮಾರಿಯ ವಿರುದ್ಧ ನಾವೆಲ್ಲರೂ ವಿಶೇಷ ಜಾಗೃತಿ ವಹಿಸಲೇಬೇಕು.

    ಇನ್ನು ಹೆಚ್ಚಿನ ಓದು : ಕೊರೋನಾ ವ್ಯಾಕ್ಸಿನ್ ತಯಾರಾಗಲು ಇನ್ನೆಷ್ಟು ಸಮಯ ಬೇಕು

    Photo by Miguel Á. Padriñán from Pexels

    error: Content is protected !!