25.1 C
Karnataka
Friday, May 22, 2026
    Home Blog Page 141

    ಕನ್ನಡ ಹಂಗಲ್ಲ ಹಿಂಗೆ

    ಸಂತೇಬೆನ್ನೂರು ಫೈಜ್ನಟ್ರಾಜ್


    ಕನ್ನಡ ಎನೆ ಕುಣಿದಾಡುವುದೆನ್ನೆದೆ
    ಕನ್ನಡ ಎನೆ ಕಿವಿ ನಿಮಿರುವುದು!
    ಕಾಮನ ಬಿಲ್ಲನು ಕಾಣುವ ಕವಿಯೊಲು
    ತೆಕ್ಕನೆ ಮನ ಮೈ ಮರೆಯುವುದು.
    —ಕುವೆಂಪು

    ಈ ಕವಿ ನುಡಿ ಕೇಳದ ಕನ್ನಡಿಗರಿಲ್ಲ.ಒಂದು ಭಾಷೆಯ ಬಗ್ಗೆ ಇದಕ್ಕಿಂತ ಅಭಿಮಾನದ ಬರಹ ಮತ್ತೊಂದಿರಲಾರದೆಂದು ನನ್ನ ಅನಿಸಿಕೆ.
    ಕನ್ನಡ ಬಲು ಸುಂದರ ಭಾಷೆ. ಸಹೋದರ ಭಾಷೆಗಳಾದ ತೆಲಗು, ತಮಿಳು,ಮಲೆಯಾಳಂ ಮುಂತಾದ ಭಾಷೆಗಳಲ್ಲಿ ನಮ್ಮ ಕನ್ನಡ ನೋಡಲು,ಓದಲು,ಬರೆಯಲು,ಮಾತನಾಡಲು ಹಾಗೇ ಕಲಿಯಲು ಸೊಗಸಾದ ಭಾಷೆ.ಎರಡು ಸಾವಿರ ವರುಷಗಳ ಪರಂಪರೆ ಹೊಂದಿದ ಕನ್ನಡ ಅಂದಿನಿಂದ ಇಂದಿನವರೆಗೂ ಅದು ನಶಿಸುತ್ತದೆ ಎಂಬ ಹುಯಿಲಿದೆ. ಬಳಸದ ಭಾಷೆ ಸಾಯುತ್ತದೆ ಎಂಬ ಸತ್ಯ ಭಾಷಾ ಪಂಡಿತರಿಗೂ ಗೊತ್ತು. ಆದರೆ ಇಂದು ಕನ್ನಡದ ಸ್ವರೂಪ ಬದಲಾಗಿದೆ .ಶಿಷ್ಟಾಚಾರ,ಭಾಷಾ ಮಡಿವಂತಿಕೆ ಮಾಯವಾಗಿ ‘ಹೆಂಗಾದ್ರೂ ನಡಿತದೆ’ ಅನ್ನೋ ಮಟ್ಟಕ್ಕೆ ಬಂದು ನಿಂತು ಕನ್ನಡ ಭಾಷೆ ‘ಹೀಗೂ ಉಂಟೆ’ಅನ್ನುವಂತಾಗಿದೆ.ಇದಕ್ಕೆ ಮುಖ್ಯ ಕಾgಣಗಳು ಎರೆಡು;ಒಂದು- ಕಡಿಮೆ ಓದು,ಭಾಷಾ ಜ್ಞಾನ ಇಲ್ಲದಿರುವುದು,ಪದ ಭಂಡಾರದ ಕೊರತೆ,ಸಾಮಾಜಿಕವಾಗಿ ಬೆರೆಯದಿರುವುದು, ದೈನಂದಿನ, ನಿಯತಕಾಲಿಕಗಳನ್ನು ಓದದೇ ಇರುವುದು!

    ಎರಡನೇ ಕಾರಣ ಶಿಕ್ಷಕರ ಅದರಲ್ಲೂ ಪ್ರಾಥಮಿಕ-ಪ್ರೌಢ ಶಾಲಾ ಕೆಲವು ಶಿಕ್ಷಕರ ಕಲಿಸುವ ಅವೈಜ್ಞಾನಿಕ ಕ್ರಮದಿಂದಾಗಿ ಮಕ್ಕಳು ಅಪೂರ್ಣ ಕಲಿತು ಅಪಭ್ರಂಶದಲ್ಲಿ ತೊಡಗುತ್ತಾರೆ. ಗ್ರಾಂಥಿಕ ಭಾಷೆ ಮತ್ತು ಗ್ರಾಮ್ಯ ಭಾಷೆಯ ವ್ಯತ್ಯಾಸ ತಿಳಿಸದಿರುವುದು, ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕಗಳ ಮಹತ್ವ ಹೇಳದೇ ಬರಿ ಉರುಹೊಡೆದಂತೆ ಪಾಠ ಮುಗಿಸಿದಾಗ ಮಗು ಭಾಷಾ ವೈಶಿಷ್ಟ್ಯತೆ ಗ್ರಹಿಸದೇ ಮುಂದೆ ತಾನು ಬೆಳೆದು ತಪ್ಪು ಪ್ರಯೋಗವೇ ಸರಿ ಪ್ರಯೋಗವೆಂದು ಭ್ರಮಿಸಿ ಭಾಷಾಹತ್ಯೆಯ ನಿರಂತರ ಕ್ರಿಯೆ ಯಾವ ಎಗ್ಗು-ಸಿಗ್ಗಿಲ್ಲದೇ ಮಾಡುತ್ತಾ ಹೋಗುತ್ತಾನೆ.

    ಸಮೀಕ್ಷೆಯೊಂದರ ಪ್ರಕಾರ ಭಾಷೆಯ ಹದ ತಪ್ಪಿದ್ದು ಮೊಬೈಲ್ ಬಂದ ಮೇಲೆ.ಸಂದೇಶ ಟೈಪಿಸುವಾಗ ಆಗೋ ತಪ್ಪುಗಳು, ಅದನ್ನು ಸ್ವೀಕರಿಸಿದ ವ್ಯಕ್ತಿ ಇದರ ರೂಪವೇ ಹೀಗೆಯೇನೋ ಎಂದು ತಾನೂ ಅದೇ ಮಾದರಿಗೆ ಜೋತು ಬಿದ್ದು ಭಾಷಾ ಕೊಲೆಗೆ ಕೈ ಜೋಡಿಸುತ್ತಾನೆ!

    ಸಿನಿಮಾ ಭಾಷೆ

    ಇನ್ನು ಸಿನಿಮಾ ಭಾಷೆಗೆ ಬಂದರೆ ಇದು ನಮ್ಮ ಕನ್ನಡವಾ? ಅನ್ನುವ ಅನುಮಾನ ಕಾಡುತ್ತದೆ.ಆ ಸಂಭಾಷಣೆ,ಆ ಸಾಹಿತ್ಯ,ಅದನ್ನು ನಮ್ಮ(?) ಕೆಲವು ಕನ್ನಡದ ನಟರು ಒಪ್ಪಿಸುವ ಶೈಲಿ ಆಹಾ ದೇವರಿಗೇ ಪ್ರೀತಿ!ಅಮ್ಮನ್,ಅಕ್ಕನ್,ಮಚ್ಚಾ,ಶಿಷ್ಯ,ಡಗಾರ್,ಪೀಸು,ಡೌ,ಕುರುಪು,ಲಾಂಗು,ಮಂಚಾಲೋ, ಕೆಂಚಾಲೋ… . ಇಂಥಾ ಅಸಂಖ್ಯಾತ ಪದ ಪುಂಜಗಳು ಕನ್ನಡ ಸಿನಿಮಾಗಳಲ್ಲಿ ರಾರಾಜಿಸುತ್ತಿವೆ.ಅವುಗಳನ್ನು ಅನುಸರಿಸುವ ನಮ್ಮ ಮಕ್ಕಳಿಗೆ ‘ಹಾಗಲ್ಲ ಹೀಗೆ’ ಅಂದರೆ ನಮ್ಮನ್ನೇ‘ಗುಲ್ಡು’ಎಂಬಂತೆ ನೋಡುತ್ತಾರೆ.

    ಕನ್ನಡ ಕಥೆಗಳು, ಕಾವ್ಯಗಳು, ಮಹಾಕಾವ್ಯಗಳು, ರಾಮಾಯಣ, ಮಹಾಭಾರತ, ವೇದ ಉಪನಿಷತ್ ಗಳ ಅಲ್ಪ-ಸ್ವಲ್ಪ ಗಂಧಗಾಳಿಯೂ ಇಲ್ಲದೇ ಗಲ್ಲಿಗಳಲ್ಲಾಡುವ ತಳಬುಡವಿಲ್ಲದ ಭಾಷೆಯೇ ನಿಜವಾದ ಕನ್ನಡ ಎಂಬಂತೆ ನೀಡುತ್ತಾ ಹೋದರೆ ಮುಂದಿನ ಪೀಳಿಗೆ ಇದೇ ನಮ್ಮ ಕನ್ನಡ ಅಂತ ಬೀಗುವುದಿಲ್ಲವೇ? ಹಾಗಾದರೆ ನಾವೇನು ಮಾಡಬೇಕು? ಪಾಲಕರು ಸಾಮಾನ್ಯವಾಗಿ ಈಗ ಸಾಕ್ಷರರೇ ಆಗಿರುತ್ತಾರೆ.ಅವರು ಬಾಲ್ಯದಿಂದಲೇ ಮಗುವಿಗೆ ಓದುವ ಹವ್ಯಾಸಕ್ಕೆ ಹಚ್ಚಬೇಕು.ಹೊಸ ಹೊಸ ಪದಗಳ ಪರಿಚಯ ಮಾಡಿಸಬೇಕು.ಸಿಕ್ಕ-ಸಿಕ್ಕಿದ್ದನ್ನು ಓದುವ ಅಭಿರುಚಿ ಬೆಳೆಸಬೇಕು.ಹಾಡುಗಾರಿಕೆಗೆ ತೊಡಗಿಸಿದರೆ ಭಾವ ಶುದ್ಧಿ,ಕಂಠಶುದ್ಧಿ,ಸಾಹಿತ್ಯ ಶುದ್ಧಿಯಾಗುತ್ತದೆ. ದಿನ ಪತ್ರಿಕೆಗಳನ್ನು ಗಟ್ಟಿಯಾಗಿ ಓದಿಸುವ ರೂಢಿ ಮಾಡಬೇಕು.ಕನ್ನಡದ ಸಾಹಿತಿಗಳನ್ನು, ಪಂಡಿತರನ್ನು,ವಾಗ್ಮಿಗಳನ್ನು,ಹಿರಿಯರನ್ನು ಕರೆಸಿ ಮಾತನಾಡಿಸಬೇಕು. ಅವರ ಮಾತುಗಳನ್ನು ಆಲಿಸಬೇಕು.ಆ ಭಾಷಾ ಏರಿಳಿತ ಅರ್ಥ ಮಾಡಿಸಬೇಕು. ಶಿಕ್ಷಕರೂ ಸಹಾ ಈ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಾ ಹೋದಾಗ ಮಾತ್ರ ಕನ್ನಡ ಶುದ್ಧವಾಗಿ ಉಳಿದೀತೇನೋ.. ..!

    ನುಡಿ ಹಬ್ಬ

    ಕನ್ನಡ ರಾಜ್ಯೋತ್ಸವ ನಾಡಿನ ಹಬ್ಬ ಹೌದು, ಆದರೆ ಎಷ್ಟು ಮಂದಿ ಆಚರಿಸುತ್ತಾರೆ? ಯುಗಾದಿ ದೀಪಾವಳಿ ಹಿಂದೂಗಳಿಗೆ, ರಂಜಾನ್,ಬಕ್ರೀದ್ ಮುಸಲ್ಮಾನರಿಗೆ, ಕ್ರಿಸ್ ಮಸ್ ಕ್ರೈಸ್ತರಿಗೆ ಮೀಸಲಾದ ಹಬ್ಬಗಳು. ಆದರೆ ಕನ್ನಡ ರಾಜ್ಯೋತ್ಸವ ಅವರೆಲ್ಲರನ್ನು ಒಳಗೊಂಡ ನುಡಿ ಹಬ್ಬ. ಅವರೆಲ್ಲರೂ ಒಳಗೊಂಡು ಆಚರಿಸುತ್ತಿದ್ದೇವಾ? ನಮ್ಮ ನಾಡು, ನಮ್ಮ ನುಡಿ ಜಲ, ನೆಲಗಳೆಂಬ ಅಭಿಮಾನ ಇಲ್ಲಿ ವಾಸಿಸುವವರಿಗಿದೆಯಾ? ಕನ್ನಡ ಕವಿಗಳ ಬಗ್ಗೆ, ಕನ್ನಡ ನಾಡಿನಲ್ಲಿರುವ ದೇವಾಲಯಗಳು, ಶಿಲ್ಪಗಳು, ಕನ್ನಡ ನಾಡಿನಲ್ಲಿ ಹರಿಯುವ ನದಿಗಳು, ಕನ್ನಡ ಸಾಧಕರು.. .. .. ಈ ಎಲ್ಲಾ ಮಾಹಿತಿ ನಮ್ಮ ಈಗಿನ ಮಕ್ಕಳಿಗಿದೆಯಾ?

    ಒಬ್ಬ ಕವಿಯ ಒಂದು ಪ್ರಸಿದ್ಧ ಕವನದ ಸಾಲನ್ನು ಉದ್ಧರಿಸಿ ಭಾಷಣ ಬಿಗಿದರೆ ಕನ್ನಡ ಕಂಪು ಸೂಸಿತಾ? ಕನ್ನಡ ಪುಸ್ತಕಗಳನ್ನು ನಮ್ಮ ಮಕ್ಕಳು ಎಷ್ಟು ಬಲ್ಲರು. ಎಷ್ಟು ಓದುತ್ತಾರೆ, ಕಡೆಗೆ ಕನ್ನಡ ಪತ್ರಿಕೆಗಳು ಯಾವುವು, ದಿನ, ವಾರ, ಪಾಕ್ಷಿಕ,ಮಾಸಿಕ, ದ್ವೈ ಮಾಸಿಕ, ತ್ರೈಮಾಸಿಕ, ವಾರ್ಷಿಕ,ಸ್ಮರಣ ಸಂಚಿಕೆ ಇತ್ಯಾದಿಗಳ ಸಣ್ಣ ಪರಿಚಯವಾದರೂ ನಮ್ಮ ಸುತ್ತಲಿನ ಕನ್ನಡಿಗರಿಗಿದೆಯಾ?

    ಇವೆಲ್ಲವೂ ಪ್ರಶ್ನೆಗಳು ಕೇವಲ ಪ್ರಶ್ನೆಗಳಾಗಿ ಉಳಿಯುತ್ತವೆ ಅಷ್ಟೇ! ಕನ್ನಡ ಉಳಿಯವುದು ,ಅಳಿಯುವುದು ಇಲ್ಲಿನ ಪ್ರಶ್ನೆ ಅಲ್ಲ. ಈಗಿರುವ ಮಕ್ಕಳಿಗೆ ಕನ್ನಡ ಕಲಿಸುವ, ಕನ್ನಡ ಪರಿಚಯಿಸುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅದು ಕನ್ನಡ ಮೇಷ್ಟ್ರ ಕೆಲಸ ಅಂತ ಕನ್ನಡಿಗರು ಮೂಗು ಮುರಿಯುವಂತಿಲ್ಲ. ಕನ್ನಡ ನಾಡಿನ ಆಡೋ ಮಗುವಿಂದ ಹಿಡಿದು ಅಲ್ಲಾಡೋ ಮುದುಕನವರೆಗೂ ಕನ್ನಡ ಜೀರ್ಣಿಸಿಕೊಂಡು ಅದನ್ನೇ ಮುಂಬರುವ ಪೀಳಿಗೆಗಾಗಿ ಕಕ್ಕಬೇಕಿದೆ!?

    ಸಾಮಾಜಿಕ ಜಾಲತಾಣದ ಕನ್ನಡವೇ ಮುಂದೆ ಅಧಿಕೃತ ಕನ್ನಡ ಭಾಷೆ ಎಂದು ನಮ್ಮ ಮಕ್ಕಳು ತಿಳಿಯುವ ಮುನ್ನ ನಾವು ಜಾಗೃತಗೊಳ್ಳಬೇಕಿದೆ.
    ಕನ್ನಡ ಪದ್ಯ ಕೇಳಿಸುವ, ಕನ್ನಡ ಪುಸ್ತಕ ಓದಿಸುವ, ಕನ್ನಡ ಗುಡಿಗಳಿಗೆ ಕರೆದೊಯ್ಯುವ, ನದಿಗಳ ಪರಿಚಯ ಮಾಡಿಸುವ, ಕನ್ನಡ ಭಾಷೆಯ ಮಹತ್ವ ಅರ್ಥೈಸುವ, ಕೆಲಸಗಳು ಸಧ್ಯ ಆಗಬೇಕಿದೆ. ಸರ್ಕಾರ ಇದಕ್ಕೆ ಯಾವುದೇ ಅನುದಾನ ,ಹಣ,ಯೋಜನೆ ಎಂತದ್ದೂ ಇದಕ್ಕಾಗಿ ಮಾಡುವುದು ಕನಸಿನ ಮಾತು.

    ನಮ್ಮ ನಡುವಿನ ಕನ್ನಡವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಜವಾಬುದಾರಿ ನಮ್ಮ ಮೇಲಿದೆ. ಕತೆ, ಕವಿತೆ, ಕಾದಂಬರಿ, ಲೇಖನ ಬರೆಯುವುದು ಬೇಕಿಲ್ಲ. ನಮ್ಮೊಳಗಿನ ಭಾವಬಂದುತ್ವ ದಾಟಿಸುವ ಸಣ್ಣ ಕೆಲಸವಾದರೂ ಮಾಡೋಣ.ಕನ್ನಡದ ಜೊತೆಗೇ ಬಾಳೋಣ!

    ಸಂತೆಬೆನ್ನೂರು ಫೈಜ್ನಟ್ರಾಜ್ ವೃತ್ತಿಯಿಂದ ಶಿಕ್ಷಕ. ಪ್ರವೃತ್ತಿಯಿಂದ ಕವಿ, ಕಥೆಗಾರ , ಸಾಹಿತಿ.

    ಚಿರನಿದ್ರೆಗೆ ಜಾರಿದ ಜೇಮ್ಸ್ ಬಾಂಡ್ 007 ಶಾನ್ ಕಾನರಿ

    ಬಾಂಡ್ ಜೇಮ್ಸ್ ಬಾಂಡ್ ಎನ್ನುತ್ತಾ ಹಲವು ದಶಕಗಳಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಶಾನ್ ಕಾನರಿ ತಮ್ಮ 90ನೆಯ ವಯಸ್ಸಿನಲ್ಲಿ ಇಂದು ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

    ಕೆಲಕಾಲದಿಂದ ಅಸ್ವಸ್ಥರಾಗಿದ್ದ ಕಾನರಿ ಬಹಮಾಸ್ ನಲ್ಲಿ ಶಾಂತವಾಗಿ ಚಿರನಿದ್ರೆಗೆ ಜಾರಿದರು ಎಂದು ಅವರ ಪುತ್ರ ತಿಳಿಸಿದ್ದಾಗಿ ಬಿಬಿಸಿ ವರದಿ ಮಾಡಿದೆ.

    ಅನ್ ಟಚಬಲ್ಸ್ ನಲ್ಲಿ ಅವರು ಅಭಿನಯಿಸಿದ್ದ ಐರಿಶ್ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ದಿ ಹಂಟ್ ಫಾರ್ ರೆಡ್ ಅಕ್ಟೋಬರ್, ಇಂಡಿಯಾನ ಜೋನ್ಸ್, ಲಾಸ್ಟ್ ಕ್ರುಸೇಡ್ ಮತ್ತು ದಿ ರಾಕ್ ಆತನ ಪ್ರಮುಖ ಚಿತ್ರಗಳ ಸಾಲಿಗೆ ಸೇರುತ್ತದೆ.

    ಚಿರತೆಯಂತೆ ಓಡುವ, ಶತ್ರುಗಳನ್ನು ಮುಲಾಜಿಲ್ಲದೆ ಸಾಯಿಸುವ, ಹುಡುಗಿಯರೊಂದಿಗೆ ಲಲ್ಲೆ ಹೊಡೆಯುವ ಜೇಮ್ಸ್ ಬಾಂಡ್ 007 ಆಗಿ ಕಾನರಿ ಅಭಿನಯವನ್ನು ನೋಡೇ ಸವಿಯಬೇಕು.

    ಶಾನ್ ಕಾನರಿ ಹುಟ್ಟಿದ್ದು 1930ರ ಆಗಸ್ಟ್ 25. ಇವರ ತಂದೆ ಫ್ಯಾಕ್ಟರಿಯೊಂದರ ಕೆಲಸಗಾರ. 13 ವರ್ಷಕ್ಕೆ ಶಾಲೆಗೆ ಶರಣು ಹೊಡೆದ ಸೀನ್ ಕ್ಯಾನರಿ ಮಾಡದ ಕೆಲಸಗಳಿಲ್ಲ. ಹಾಲು ವಿತರಿಸಿದ ,ಕ್ಯಾಫಿನ್ ಗಳಿಗೆ ಬಣ್ಣ ಬಳಿಯುವ ಕೆಲಸವನ್ನೂ ಮಾಡಿದ. ಆಮೇಲೆ ನೌಕದಳ ಸೇರಿದ. ಅಲ್ಸರ್ ಕಾರಣದಿಂದ ಆ ಕೆಲಸವನ್ನು ಬಿಡಬೇಕಾಯಿತು, ಮುಂದೆ ಟ್ರಕ್ ಡ್ರೈವರ್ ಆದ, ಲೈಫ್ ಗಾರ್ಡ್ ಕೆಲಸ ಮಾಡಿದ. ದೇಹ ದಾರ್ಢ್ಯ ಪಟುವಾದ. 1953 ರಲ್ಲಿ ಇಂಥದೇ ಸ್ಪರ್ಧೆಗೆಂದು ಲಂಡನ್ ಗೆ ಬಂದ. ಅಲ್ಲಿಂದ ಅವನ ದಾರಿ ಬದಲಾಯಿತು. ಸಣ್ಣ ಪುಟ್ಟ ಪಾತ್ರಗಳನ್ನು ನಾಟಕಗಳಲ್ಲಿ ಮಾಡತೊಡಗಿದ. ಹಾಗೆ ಸಿನಿಮಾದಲ್ಲಿ ಪಾತ್ರ ಗಿಟ್ಟಿಸಿದ. ಮುಂದೆ ಜೇಮ್ಸ್ ಬಾಂಡ್ 007ನಾಗಿ ಜನಪ್ರಿಯನಾದ.

    ಭೀಮಸೇನಾ….ವೇದಾ ಪಾತ್ರದ ಬಗ್ಗೆ ಆರೋಹಿ ಹೇಳಿದ್ದೇನು

    .

    ಮೊನ್ನೆ ಅಮೆಜಾನ್  ಪ್ರೈಮ್ ನಲ್ಲಿ ಬಿಡುಗಡೆಯಾದ ಭೀಮಸೇನಾ  ನಳಮಹರಾಜ  ಸಿನಿಮಾದಲ್ಲಿ ನಿರ್ದೇಶಕ ಕಾರ್ತಿಕ್ ಸರಗೂರು ಅಡುಗೆ ಮತ್ತು ಭಾವನೆಗಳನ್ನು ಹದವಾಗಿ ಬೆರೆಸುವಲ್ಲಿ ಸಫಲರಾಗಿದ್ದಾರೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅರವಿಂದ ಅಯ್ಯರ್, ಆರೋಹಿ ನಾರಾಯಣ್ , ಅಚ್ಯುತಕುಮಾರ್ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

    ಈ ಚಿತ್ರದ ಒಂದು ಪ್ರಮುಖ ಪಾತ್ರ ವೇದವಲ್ಲಿ. ಅದನ್ನು ಸಮರ್ಥವಾಗಿ ನಿಭಾಯಿಸಿದ್ದು  ಆರೋಹಿ ನಾರಾಯಣ್.  ವಯಸ್ಸಿಗೆ ಮೀರಿದ ಪಾತ್ರವಾದರು ಅದನ್ನು ಒಪ್ಪವಾಗಿ ಒಪ್ಪಿಸಿದ್ದಾರೆ. ಅವರೊಂದಿಗೆ ಕನ್ನಡಪ್ರೆಸ್.ಕಾಮ್ ನಡೆಸಿದ ಸಂದರ್ಶನದ ಆಯ್ದ ಭಾಗ.

    ಭೀಮಸೇನ ನಳಮಹಾರಾಜ ಸಿನಿಮಾ ವೈಯಕ್ತಿಕವಾಗಿ ನಿಮಗೆ ಏನನ್ನಿಸಿತು ?

    ನನಗಂತೂ ಇದೊಂದು ಮರೆಯಲಾಗದ ಅನುಭವ. ವೇದವಲ್ಲಿ ಪಾತ್ರಕ್ಕೇ ತುಂಬಾನೆ ಚೆನ್ನಾಗಿ ನಾನು ಕನೆಕ್ಟ್ ಆದೆ.   ಪ್ರತಿಯೊಬ್ಬರು ತಮ್ಮ ಪ್ರೀತಿ ಪಾತ್ರರ ಬಗ್ಗೆ ವಹಿಸಿಬೇಕಾದ ಕಾಳಜಿ, ಅವರ ಅಗತ್ಯಗಳೇನು ಎಂಬುದನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆ . ಅದು ಆಗದಿದ್ದಾಗ ಆಗುವ ಅನಾಹುತಗಳೇನು ಎಂಬುದನ್ನು ಈ ಚಿತ್ರ ನವಿರಾಗಿ ಹೇಳುತ್ತದೆ. ನಾವು ಅಡುಗೆ ಮಾಡುವಾಗ ಅದಕ್ಕೆ ಸರಿಯಾದ ಮಸಾಲೆಗಳನ್ನು ಬೆರಸಿ ಅದನ್ನು ರುಚಿಕಟ್ಟಾದ ಡಿಶ್  ಆಗಿ ಮಾಡುತ್ತೇವೆ, ಇಲ್ಲೂ ಹಾಗೆ  ವಿವಿಧ ಪಾತ್ರಗಳು, ನಾನು ಭಾವನೆಗಳು ಮಿಳಿತವಾಗಿ ಪರಿಪೂರ್ಣ ಕಥೆಯಾಗಿದೆ.

    ಇದು ನಿಮ್ಮ ಮೂರನೇ ಸಿನಿಮಾ. ಚಿಕ್ಕ ವಯಸ್ಸಿನ ನೀವು ತಾಯಿ ಪಾತ್ರವನ್ನು ಹೇಗೆ ನಿಭಾಯಿಸಿದಿರಿ?

    ನನಗೇನು ಕಷ್ಟ ಅಂಥ ಅನ್ನಿಸಲಿಲ್ಲ.ಈ ಪಾತ್ರದ ಬಗ್ಗೆ ನನಗೆ ಮೊದಲೆ ಹೇಳಿದ್ದರು.ಹೀಗಾಗಿ ಪಾತ್ರವನ್ನು ಅರ್ಥ ಮಾಡಿಕೊಂಡಿದ್ದೆ. ನಾನು ಸಿನಿಮಾದಲ್ಲಿ ಮಗುವೊಂದಿಗೆ ಮಗುವಾಗಿದ್ದೆ.  ತಾಯಿ ಎನ್ನುವುದಕ್ಕಿಂತ ನಾವು ಸ್ನೇಹಿತರಂತೆ ಸಿನಮಾದಲ್ಲಿ ನಟಿಸಿದೆವು. ಸಿನಿಮಾ ನೋಡಿದ ಮೇಲೆ ನನಗೂ ಹಾಗೆ ಅನ್ನಿಸಿತು.

    ವೇದಾ ಪಾತ್ರ ತುಂಬಾ ತೀವ್ರತೆ, ಖಿನ್ನತೆ ಮತ್ತು ಮಾನಸಿಕ ಗೊಂದಲಗಳ ಸಂಗಮ. ಇಂಥ ಪಾತ್ರಕ್ಕೆ ಹೇಗೆ ಸಜ್ಜಾದಿರಿ?

    ಇಂಥ  ಪಾತ್ರಗಳು ಬಂದಾಗ ಅದನ್ನು ಕಲಾವಿದೆಯಾದವಳು ಅನುಭವಿಸಿ ನಟಿಸಬೇಕು. ಅದು ಸಾಧ್ಯವಾಗದಿದ್ದಾಗ ಪಾತ್ರಕ್ಕೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ನಿರ್ದೇಶಕರಿಂದ ಪಾತ್ರದ ಆಳ ಅಗಲಗಳ ಸಂಪೂರ್ಣ ವಿವರ ಪಡೆದು ಅದಕ್ಕೆ ತಕ್ಕಂತೆ ನನ್ನನ್ನು ನಾನು ಸಿದ್ಧ ಪಡಿಸಿಕೊಂಡೆ.

    ನಿಮ್ಮ ಹಿಂದಿನ ಚಿತ್ರ ದೃಶ್ಯದಲ್ಲಿ ನಿಮ್ಮ ಪಾತ್ರಕ್ಕೆ ಅಂಥ ಹೆಚ್ಚಿನ ಸ್ಕೋಪ್ ಇರಲಿಲ್ಲ. ಅದಕ್ಕೆ ಹೋಲಿಸಿದರೆ ಇದು ಪೂರ್ಣ ಪ್ರಮಾಣದ, ಅಭಿನಯಕ್ಕೆ ಸಾಕಷ್ಟು ಸ್ಕೋಪ್ ಇದ್ದ ಪಾತ್ರ. ಇವೆರಡು ಪಾತ್ರವನ್ನು ಹೇಗೆ ನೋಡುತ್ತೀರಿ?

    ದೃಶ್ಯದ ಮುಗ್ಧ ಕಾಲೇಜು ಹುಡುಗಿಯ ಪಾತ್ರವೇ ಆಗಲಿ, ಭೀಮಸೇನಾದ   ಭಾವನೆಗಳು ತುಂಬಿದ ಗಟ್ಟಿಗಿತ್ತಿ ಹುಡುಗಿಯ ಪಾತ್ರವೆ ಆಗಲಿ ಎರಡನ್ನು ನಾನು ವೈಯಕ್ತಿಕ ನೆಲೆಯಲ್ಲೇ ಕನೆಕ್ಟ್ ಮಾಡಿಕೊಳ್ಳಬಲ್ಲೆ.  ಆದರೆ ನನಗೆ ಎರಡನೆಯದೆ ತುಂಬಾ ಇಷ್ಟವಾಗುತ್ತದೆ.  ಇಂಥ ಬೋಲ್ಡ್ ಪಾತ್ರಗಳನ್ನು ಮಾಡಲು ಅವಕಾಶಗಳು ಸಿಗುವುದು ಕಡಿಮೆ. ಎಲ್ಲರಿಗೂ  ಸಿಗುವುದಿಲ್ಲ. ಸಾಮಾನ್ಯವಾಗಿ ಪಾತ್ರಗಳನ್ನು ಅಭಿನಯಿಸುವ ಕಲಾವಿದರಿಗೆ ಫಿಟ್ ಆಗುವಂತೆ ರೂಪಿಸಿರಲಾಗುತ್ತದೆ. ಆದರೆ  ಈ ಪಾತ್ರ ತುಂಬಾನೆ ಭಿನ್ನ.

    ಸಿನಿಮಾದಲ್ಲಿ ನಿಮ್ಮದು ಅತ್ಯಂತ ಪ್ರಮುಖ ಪಾತ್ರ.ಉತ್ತಮವಾದುದ್ದನ್ನೇ ಕೊಡಬೇಕೆಂಬ ನಿಟ್ಟಿನಲ್ಲಿ ಒತ್ತಡಗಳನ್ನು ಎದುರಿಸಿದಿರಾ?

    ಹೀಗೇ ಅಭಿನಯಿಸಬೇಕೆಂಬ ಒತ್ತಡವೇನು ಇರಲಿಲ್ಲ. ಪಾತ್ರಕ್ಕೆ ತಕ್ಕಂತೆ ಅಭಿನಯಿಸುವ ಸ್ವಾತಂತ್ರ್ಯ ಇತ್ತು. ಮೊದಲೇ ಸ್ಕ್ರಿಪ್ಟ್ ಕೊಡದಿದ್ದರೂ ಪಾತ್ರದ ಬಗ್ಗೆ ನಿರ್ದೇಶಕರು ವಿವರಿಸಿದ್ದರು. ಹೀಗಾಗಿ ನಮ್ಮ ತನವನ್ನು ಅಳವಡಿಸಿಕೊಂಡು ಸೆಟ್ ನಲ್ಲೇ ಪಾತ್ರವನ್ನು ಅನುಭವಿಸಿ ಅಭಿನಯಿಸಲು ಸಲೀಸಾಯಿತು.

    ಮುಂದೆ?

    ಕತೆಗಳನ್ನು ಕೇಳುತ್ತಿರುವೆ. ನನಗೆ ಸೂಕ್ತವಾದ ಪಾತ್ರ ಸಿಗಬೇಕು. ಕಮರ್ಷಿಯಲ್ ಸಿನಿಮಗಳಲ್ಲೂ ಅಭಿನಯಿಸುವ ಯೋಚನೆ ಇದೆ. ನೋಡಬೇಕು.

    ಅಮೆಜಾನ್ ಪ್ರೈಮ್ ಗೆ ಸೇರಬೇಕೆ ಹಾಗಾದರೆ ಈ ಕೆಳಗಿನ ಲಿಂಕ್ ಒತ್ತಿ.

    ಬೆಂಗಳೂರು ಬಳಿಯೇ ಇದೆ ದಕ್ಷಿಣ ಭಾರತದ ಜಲಿಯನ್ ವಾಲ್ ಬಾಗ್

    ಕರ್ನಾಟಕದ ನಾಗರಿಕರು ಸಾಮಾನ್ಯವಾಗಿ ವಿದುರಾಶ್ವತ್ಥದ ಹೆಸರನ್ನು ಕೇಳಿಯೇ ಇರುತ್ತಾರೆ. ಕಾರಣ ಇದು ಪುಣ್ಯಕ್ಷೇತ್ರವಾಗಿ ಬಹಳ ಪ್ರಸಿದ್ಧವಾದ ಸ್ಥಳ. ಚಾರಿತ್ರಿಕವಾಗಿಯೂ ಸಹ ಖ್ಯಾತಿಯನ್ನು ಪಡೆದ ಊರು. ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಪುಟಗಳಲ್ಲಿ ವಿದುರಾಶ್ವತ್ಥದ ಹೆಸರು ಚಿರಸ್ಮರಣೀಯ.

    ವಿದುರಾಶ್ವತ್ಥ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಪುಟ್ಟ ಹಳ್ಳಿ . ಗೌರಿಬಿದನೂರು ಪಟ್ಟಣದಿಂದ ಕೇವಲ ಆರು ಕಿ. ಮೀ ದೂರದಲ್ಲಿದೆ. ಊರು ಸಣ್ಣದಾದರೂ ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಖ್ಯಾತಿಯನ್ನು ಪಡೆದಿರುವ, ಉತ್ತರ ಪಿನಾಕಿನಿ ನದಿಯ ದಂಡೆಯ ಮೇಲಿರುವ ಕ್ಷೇತ್ರ.

    ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್

    ಐತಿಹಾಸಿಕವಾಗಿ ವಿದುರಾಶ್ವತ್ಥ ಬಹಳ ಮಹತ್ವವನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದು ಖ್ಯಾತಿಯನ್ನು ಪಡೆದಿದೆ. 1919 ರಲ್ಲಿ ಪಂಜಾಬಿನ ಅಮೃತಸರದಲ್ಲಿ ಸಾಮೂಹಿಕ ಹತ್ಯೆ ನಡೆದ ರೀತಿಯಲ್ಲಿಯೇ, ಏಪ್ರಿಲ್ 25, 1938 ರಂದು ವಿದುರಾಶ್ವತ್ಥದಲ್ಲಿ ಚಿಕ್ಕ ಪ್ರಮಾಣದಲ್ಲಿ ಸಾಮೂಹಿಕ ಹತ್ಯೆ ನಡೆಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಈ ಘೋರ ಘಟನೆ ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದೆ.

    1938 ರ ಏಪ್ರಿಲ್ 22 ರಿಂದ 25 ರ ವರೆಗೆ ಜಾತ್ರೆ ನಡೆದಿದ್ದ ಸಂದರ್ಭ. 1929 ರ ಪೂರ್ಣ ಸ್ವರಾಜ್ ಘೋಷಣೆ, 1934 ರಲ್ಲಿ ಸ್ಥಾಪನೆಗೊಂಡ ಮೈಸೂರು ಪ್ರಜಾಪಕ್ಷವು ಪೂರ್ಣ ಸ್ವರಾಜ್‍ಗೆ ಮಾಡಿದ ಬೇಡಿಕೆ ಹಾಗೂ ಗಾಂಧೀಜಿಯವರಿಂದ ಪ್ರೇರಿತಗೊಂಡ ಸಾವಿರಾರು ದೇಶ ಪ್ರೇಮಿಗಳು, ಸ್ವಾತಂತ್ರ್ಯ ಯೋಧರು ನೆರದಿದ್ದರು. ಎನ್. ಸಿ ತಿಮ್ಮಾರೆಡ್ಡಿ, ಎನ್. ಸಿ ನಾಗಯ್ಯರೆಡ್ಡಿ, ಟಿ. ರಾಮಾಚಾರ್, ಶ್ರೀನಿವಾಸ ರಾವ್ ಮುಂತಾದವರು ಮುಂದಾಳತ್ವವನ್ನು ವಹಿಸಿದ್ದರು. ಧ್ವಜ ಸತ್ಯಾಗ್ರಹ ( Flag satyagraha ) ವನ್ನು ಆಯೋಜಿಸಲಾಗಿತ್ತು. ಸುಮಾರು ಹತ್ತು ಸಾವಿರ ಜನರು, ಶಾಂತಿಯುತವಾಗಿ ಹೆಜ್ಜೆಹಾಕುತ್ತಾ, ಕಾಂಗ್ರೆಸ್ ನ ರಾಷ್ಟ್ರೀಯ ಧ್ವಜವನ್ನು ಆರೋಹಣ ಮಾಡಲು ಪ್ರಯತ್ನಿಸಿದರು. ಪಲಿಸರು ಲಾಠಿ ಚಾರ್ಜ್ ಮಾಡಿದಾಗ, ಪ್ರತಿಭಟನೆ ತೀವ್ರವಾಯಿತು. ಪೊಲೀಸರು ಕಾರಣವಿಲ್ಲದೆ, ಗುಂಡುಗಳನ್ನು ಹಾರಿಸಿದಾಗ, ಹತ್ತು ಜನರು ಮೃತಪಟ್ಟರು ಮತ್ತು ಮೂವತ್ತೈದು ಜನರು ಗಾಯಗೊಂಡರು. ಇದು ಸತ್ಯಾಗ್ರಹಿಗಳ ಮೇಲೆ ನಡೆದ ಹೇಯ ಕೃತ್ಯ.

    ಮಹಾತ್ಮ ಗಾಂಧೀಜಿಯವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾರವರಿಗೆ ಪತ್ರ ಬರೆದು, ಸರ್ಕಾರವು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಆಚಾರ್ಯ ಕೃಪಲಾಣಿಯವರನ್ನು ಸರ್ಕಾರದೊಂದಿಗೆ ಚರ್ಚಿಸಲು ಹಾಗೂ ಮಿರ್ಜಾರವರನ್ನು ಭೇಟಿಮಾಡಲು ಕಳುಹಿಸಿಕೊಟ್ಟರು. ವಿಶಿಷ್ಟವಾಗಿ, ಈ ಪ್ರಕರಣ ಬಿಬಿಸಿ ಹಾಗೂ ಇತರ ಬ್ರಿಟಿಷ್ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಇದರ ಫಲವಾಗಿ 1939 ರ ಮೇ ತಿಂಗಳಿನಲ್ಲಿ ಪಟೇಲ್ – ಮಿರ್ಜಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಒಪ್ಪಂದದ ಪ್ರಕಾರ ಕಾಂಗ್ರೆಸ್ ರಾಷ್ಟ್ರೀಯ ಧ್ವಜವನ್ನು ಹಾರಿಸಲು ಇದ್ದಂತಹ ನಿರ್ಬಂಧವನ್ನು ತೆಗೆದು ಹಾಕಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಜಯದ ಪ್ರತೀಕವಾಗಿ, 1939 ರ ಮೇ ತಿಂಗಳಿನಲ್ಲಿ, ಎರಡನೇ ಕಾಂಗ್ರೆಸ್ ಅಧಿವೇಶನವನ್ನು ವಿದುರಾಶ್ವತ್ಥದಲ್ಲಿ ನಡೆಸಲಾಯಿತು. ಗಾಂಧೀಜಿಯವರು ನಂದಿ ಬೆಟ್ಟಕ್ಕೆ ಭೇಟಿ ನೀಡಿ, ಘಟನೆಯ ಬಗ್ಗೆ ಚರ್ಚಿಸಿ, ಸತ್ಯಾಗ್ರಹಿಗಳಿಗೆ ಉತ್ಸಾಹವನ್ನು ತುಂಬಿ, ಇನ್ನಷ್ಟು ಹುರಿದುಂಬಿಸಿದರು.

    1973 ರಲ್ಲಿ ಈ ಘಟನೆ ನಡೆದ ಸ್ಥಳದಲ್ಲಿ ಮರಣ ಹೊಂದಿದ ಹುತಾತ್ಮರ ಗೌರವಾರ್ಥಕವಾಗಿ, ಸ್ಮಾರಕವನ್ನು ನಿರ್ಮಿಸಲಾಯಿತು. ಹುತಾತ್ಮರ ಹೆಸರುಗಳನ್ನು ಸಹ ಫಲಕದಲ್ಲಿ ಕೆತ್ತಿಸಲಾಗಿದೆ. 2004 ರಲ್ಲಿ ವೀರ ಸೌಧವನ್ನು ನಿರ್ಮಿಸಲಾಗಿದೆ. ಈ ವೀರ ಸೌಧದಲ್ಲಿ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದಂತೆ, ಅದ್ಭುತವಾದ ಫೋಟೋ ಗ್ಯಾಲರಿ ಮತ್ತು ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಪ್ರತಿಯೊಬ್ಬ ಭಾರತೀಯನು ಭೇಟಿ ಕೊಡಲೇ ಬೇಕಾದ ಸ್ಥಳ, ವಿಶೇಷವಾಗಿ ವಿದ್ಯಾರ್ಥಿ / ನಿಯರು.ವೀರಸೌಧದ ಸುತ್ತಲೂ, ಮಕ್ಕಳ ಉದ್ಯಾನವನ, ತೆರೆದ ಸಭಾಂಗಣ ಹಾಗೂ ಸ್ವಾತಂತ್ರ್ಯ ವೀರರ ಪುತ್ಥಳಿಗಳನ್ನಿಡಲಾಗಿದೆ.

    ಸತ್ಯಾಗ್ರಹದ ಜ್ಞಾಪಕಾರ್ಥವಾಗಿ, ಸ್ಥಳೀಯ ಫ್ರೌಡಶಾಲೆಗೆ Satyagraha Memorial High School ಎಂದು ನಾಮಕರಣ ಮಾಡಲಾಗಿದೆ.

    ಪುಣ್ಯಕ್ಷೇತ್ರವಾಗಿಯೂ ಸುಪ್ರಸಿದ್ಧ

    ವಿದುರಾಶ‍್ವತ್ಥ ಕ್ಷೇತ್ರ ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ. ಅಶ್ವತ್ಥ ನಾರಾಯಣ ಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದ ಪವಿತ್ರ ಭೂಮಿ. ವಿದುರಾಶ್ವತ್ಥ ಎನ್ನುವ ಹೆಸರು, ಊರಿನಲ್ಲಿರುವ ದೊಡ್ಡ ಅಶ್ವತ್ಥ ಮರದಿಂದ ಬಂದಿದೆ. ಈ ಅಶ್ವತ್ಥ ಮರವು ಧೃತರಾಷ್ಟ್ರ ರಾಜನ ಆಸ್ಥಾನಿಕ ವಿದುರನಿಂದ ನೆಡಲ್ಪಟ್ಟಿದ್ದರಿಂದ ಈ ಊರಿಗೆ ವಿದುರಾಶ್ವತ್ಥ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ.

    ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಈ ಸ್ಥಳವು ನಾಗರ ಪ್ರತಿಷ್ಠೆ ಮಾಡಲು ಬಹಳ ಹೆಸರುವಾಸಿಯಾಗಿದೆ. ಈ ಸ್ಥಳದಲ್ಲಿ ನಾಗರ ಪ್ರತಿಷ್ಠೆ ಮಾಡಿ ಪೂಜಿಸಿದರೆ, ಸರ್ಪ ದೋಷ ಅಥವಾ ನಾಗ ದೋಷ ನಿವಾರಣೆಯಾಗಿ, ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಅಪಾರ ನಂಬಿಕೆ. ಆದುದರಿಂದಲೆ, ವಿದುರಾಶ‍್ವತ್ಥದಲ್ಲಿ ಸಾವಿರಾರು ನಾಗರ ಪ್ರತಿಮೆಗಳನ್ನು ನಾವು ನೋಡಬಹುದು.

    ವೈಯಕ್ತಿವಾಗಿ ನನಗೆ ಹೆಮ್ಮೆಯ ವಿಷಯವೇನೆಂದರೆ, ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಪುಟಗಳಲ್ಲಿ  ಖ್ಯಾತಿಗಳಿಸಿರುವ ಗೌರಿಬಿದನೂರು ತಾಲ್ಲೂಕು ನನ್ನ ಸ್ವಂತ ತಾಲ್ಲೂಕು.

    ವಿದುರಾಶ್ವತ್ಥಕ್ಕೆ, ಬಸ್ಸು, ರೈಲು ಅಥವಾ ವೈಯುಕ್ತಿಕ ವಾಹನ, ಇವುಗಳಲ್ಲಿ ಯಾವುದನ್ನಾದರೂ ಉಪಯೋಗಿಸಿ ಪ್ರಯಾಣಿಸ ಬಹುದು. ತಪ್ಪದೆ ಭೇಟಿ ನೀಡಿ. (ಚಿತ್ರಗಳು: ವಿ.ಎಲ್. ಪ್ರಕಾಶ್)

    ಹೊಸಬೆಳಕು ಮೂಡುತಿದೆ….ಮತ್ತೆ ಕೈಗೆ ಬರಲಿದೆ ಚಾಕ್‌ಪೀಸ್‌, ಡಸ್ಟರ್‌!

    .

    ಕಣ್ಣ ಮುಚ್ಚಲು ರೆಪ್ಪೆಯಡಿಯಲಿ
    ಮನವ ಸೋಂಕುವ ಕತ್ತಲು
    ಕನಸಿನಂಗಳ ಒರೆಸಿ ಬೆಳಗುತ
    ಸಜ್ಜು ನಾಳೆಯ ಕಟ್ಟಲು…

    ಕತ್ತಲೆಂಬುದು ಶಾಶ್ವತವಲ್ಲ, ಅದು ಜಗದ ಅಂತ್ಯವೂ ಅಲ್ಲ, ಅದು ಬೆಳಕಿನ ಹಾದಿಗೆ ಮುನ್ನುಡಿಯಷ್ಟೆ…ಅದೆಷ್ಟು ನಿಜವಲ್ಲವೇ…ನಮ್ಮ ಜೀವನವೆಂಬ ಸುಂದರ ಯಾನದಲ್ಲಿ ಕಷ್ಟಗಳೆಂಬ ಕತ್ತಲು ಸುಳಿಯಿತೆಂದು ಸರಿದು ಮರೆಯಾಗಲು ಸಾಧ್ಯವೇ? ಖಂಡಿತಾ ಇಲ್ಲ. ಜೀವನದ ಅಚ್ಚರಿಗಳನ್ನು ಕಣ್ತುಂಬಿಕೊಳ್ಳುತ್ತಾ ಭವಿಷ್ಯದ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಾರಿ ಕೊರೋನಾ ಆಘಾತ ನೀಡಿದೆ. ಆದರೀಗ ಕತ್ತಲು ಸರಿದು ಬೆಳಕು ಮೂಡುವ ಸಮಯ ಬಂದೇಬಿಟ್ಟಿದೆ.

    ಹೌದು…ಮೊದಮೊದಲು ಕೊರೋನಾದ ಕತ್ತಲು ಕವಿದರೂ ಆನ್‌ಲೈನ್‌ ಪಾಠವೆಂಬ ಚಂದಿರನಿದ್ದಾನಲ್ಲ ಎಂಬ ಹುಂಬ ಧೈರ್ಯವಿತ್ತು. ಹೊಸತನ ಮೂಡಿಸುವ ಸಹಜ ಕುತೂಹಲವದು…ಆದರೆ ಬರುಬರುತ್ತಾ ಅಮಾವಾಸ್ಯೆಯ ಅನುಭವ. ಆನ್‌ಲೈನ್‌ ಪಾಠದ ಕುತೂಹಲ ಮರೆಯಾಗಿತ್ತು. ಅದೊಂದು ಹೊರೆಯಾಗತೊಡಗಿತು. ಕಾಲೇಜ್‌ ಕಾರಿಡಾರ್‌, ಸ್ನೇಹಿತರು ನೆನಪಾಗತೊಡಗಿದರು. ಈಗ ಕ್ಲಾಸ್‌ ಯಾವಾಗ ಆರಂಭವಾಗುತ್ತೆ ಎಂಬ ಮೂಲಪ್ರಶ್ನೆ!

    ಕೊರೋನಾ ಕತ್ತಲಲ್ಲಿ ಉಪನ್ಯಾಸಕರಿಗೂ ವಿದ್ಯಾರ್ಥಿಗಳೇ ಮಿಂಚುವ ನಕ್ಷತ್ರಗಳು, ಆ ನಕ್ಷತ್ರಗಳಲ್ಲೇ ಬೆಳಕು ಕಾಣುವ ಪ್ರಯತ್ನ. ತಂತ್ರಜ್ಞಾನದ ಬಲೆಯಲ್ಲಿ ಸಿಲುಕಿ ನಲುಗಿದ ಹಿರಿಯರು ಒಂದೆಡೆಯಾದರೆ, ತಮ್ಮೆಲ್ಲಾ ಪಟ್ಟುಗಳನ್ನು ಪ್ರಯೋಗಿಸಿಯೂ ತರಗತಿ ಪಾಠಗಳಿಗೆ ಆನ್‌ಲೈನ್‌ ಸಮವಲ್ಲ ಎಂದು ಕಂಡುಕೊಂಡವರು ಹಲವರು. ಕಂಪ್ಯೂಟರ್‌/ ಮೊಬೈಲ್‌ ತೆರೆಯ ಮೇಲಿನ ಪುಟ್ಟ ಕೋಣೆಗಳಲ್ಲಿ ವಿದ್ಯಾರ್ಥಿಗಳನ್ನು ನೋಡಿ, ಅವರ ಧ್ವನಿ ಕೇಳಿ ಖುಷಿಪಟ್ಟು ಪಾಠವೊಪ್ಪಿಸುವ ಸಂಕಟ ಹೇಳಲಾದೀತೇ?

    ನವೆಂಬರ್‌ 17 ರಿಂದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಹೊಸ ಬೆಳಕಿನ ಸೂಚನೆ ನೀಡಿದೆ. ಆಭರಣವಿಲ್ಲದ ಮದುವಣಗಿತ್ತಿಯಂತಿದ್ದ ಕಾಲೇಜ್‌ ಕಾರಿಡಾರ್‌ಗಳಲ್ಲಿ ಕನಸು ಕಂಗಳ, ಉತ್ಸಾಹಿ ಮನಸ್ಸುಗಳ ವಿದ್ಯಾರ್ಥಿಗಳು ಕಂಡಾರೆಂಬ ಭರವಸೆ ಮೂಡಿದೆ. ಇನ್ನು ಒಮ್ಮೆಯೂ ತಮ್ಮ ಕಾಲೇಜಲ್ಲಿ ಪಾಠ ಕೇಳದ ಹೊಸಬರನ್ನು ಮುಖತಃ ನೋಡಲು ಅವರಂತೆಯೇ ಅಧ್ಯಾಪಕರೂ ಕಾತರರಾಗಿದ್ದಾರೆ. ಕಾಲೇಜೆಂಬ ಕಟ್ಟಡ ಆರೇಳು ತಿಂಗಳುಗಳ ಬಳಿಕ ಜೀವಂತಿಕೆ ಪಡೆದುಕೊಳ್ಳಲಿದೆ.ಅಧ್ಯಾಪಕರ ಕೈಗೆ ಮತ್ತೆ ಚಾಕ್‌ ಪೀಸ್‌ ಡಸ್ಟರ್‌ ಬರಲಿದೆ.

    ಆನ್‌ಲೈನ್‌ನಲ್ಲಿ ಕಾಡುವ ಏಕತಾನತೆಯ ಭಾವ ಮರೆಯಾಗಲಿದೆ ಎಂಬ ಕಲ್ಪನೆಯೇ ರೋಮಾಂಚಕ. ನಗುವ, ಅಳುವ, ಮೌನದಲ್ಲಿ ಲೀನವಾಗುವ, ಖುಷಿಯಲ್ಲಿ ತೇಲುವ ವಿದ್ಯಾರ್ಥಿಗಳಲ್ಲಿ ನಮ್ಮನ್ನು ನಾವು ಕಳೆಯುವ ದಿನಗಳು ಹತ್ತಿರವಾಗಿವೆ. ಅವರ ಕೇಳುವ/ ಕೇಳದ ಪ್ರಶ್ನೆಗಳಿಗೆ ಉತ್ತರಿಸುವ, ಹೇಳದ ಸಮಸ್ಯೆಗಳಿಗೆ ಕಿವಿಯಾಗುವ, ಅವರ ಮಿತಿಯಿಲ್ಲದ ಖುಷಿಯಲ್ಲಿ ನಾವೂ ಸಂಭ್ರಮಿಸಲಿದ್ದೇವೆ. ಒಂದಷ್ಟು ಗದರುವ, ಒಂಚೂರು ಹೊಗಳುವ ಅನಿವಾರ್ಯ ಪರಿಪಾಠ ಮತ್ತೆ ಆರಂಭವಾಗಲಿದೆ.

    ಆನ್‌ಲೈನ್‌ನಲ್ಲಿ ನೋಡಲಾಗದ ವಿದ್ಯಾರ್ಥಿಗಳ ಭಾವ-ಭಂಗಿ, ಕೇಳಲಾಗದೆ ಇದ್ದ ಭಾಷೆಯ ಸೊಗಡನ್ನು ಅರ್ಥಮಾಡಿಕೊಳ್ಳುವ, ಸ್ಪಂದಿಸುವ ದಿನಗಳು ಮತ್ತೆ ಬಂದಿವೆ. ಪ್ರತಿ ವ್ಯಕ್ತಿಯೂ ಅನನ್ಯವೆಂಬುದು ಸಾರ್ವಕಾಲಿಕ ಸತ್ಯ. ಈ ಅನನ್ಯತೆಯನ್ನು ಅರಿಯುವ, ಎಲ್ಲೋ ಹುದುಗಿರುವ ಪ್ರತಿಭೆಯ ಅನಾವರಣಕ್ಕೆ ಕಾಲ ಕೂಡಿ ಬಂದಿದೆ. ಈಗಲೇ ಅಲ್ಲದಿದ್ದರೂ ಮತ್ತೆ ಕಾಲೇಜಿನ ವೇದಿಕೆಗಳಲ್ಲಿ ವಿದ್ಯಾರ್ಥಿಗಳು ಮಿಂಚಲಿದ್ದಾರೆ. ಎದುರಲ್ಲಿ ನಮಸ್ಕರಿಸಿ, ಮರೆಯಲ್ಲಿ ಬಗೆಬಗೆಯ ಅಡ್ಡಹೆಸರಿಟ್ಟು ಕರೆದು ಕಾಡುವ ವಿದ್ಯಾರ್ಥಿಗಳನ್ನು ಎದುರಿಸಲೂ ಅಧ್ಯಾಪಕರೂ ಸಿದ್ಧರಾಗಲೇಬೇಕು!

    ಅದೇನೇ ಇರಲಿ, ಕಾಲೇಜು ಜೀವನ ವಿದ್ಯಾರ್ಥಿಗಳ ಜೀವನದಲ್ಲಿ ಅಮೂಲ್ಯ ಘಟ್ಟ. ಇಲ್ಲಿ ಅವರು ಹಲವರಿಂದ ಪ್ರೇರಣೆ ಪಡೆಯುತ್ತಾರೆ. ಅನುಭವಗಳಿಂದ ಪಾಠ ಕಲಿಯುತ್ತಾರೆ. ಹಲವು ಬಾರಿ ಹೆತ್ತವರಿಗಿಂತಲೂ ಸ್ನೇಹಿತರು, ಅಧ್ಯಾಪಕರು ನೆರವಾಗಬಹುದು. ಹೆತ್ತವರಿಗೆ ತಿಳಿಯದ ವಿದ್ಯಾರ್ಥಿಗಳ ನಡವಳಿಕೆಯನ್ನು ಶಿಕ್ಷಕರು ಗಮನಿಸಿ ತಿದ್ದುತ್ತಾರೆ. ಕಾಲೇಜ್‌ನ ಲೈಬ್ರೆರಿ, ಆಟದ ಮೈದಾನ, ಸಾಂಸ್ಕೃತಿಕ ಚಟುವಟಿಕೆಗಳು, ಚುನಾವಣೆ, ಸಾಹಿತ್ಯ, ಸಂಶೋಧನೆ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುತ್ತವೆ. ಹೀಗಾಗಿ ಕಾಲೇಜು ದಿನಗಳು ನಾಳೆಯನ್ನು ಕಟ್ಟಲು ಬಹು ಅಮೂಲ್ಯ.

    ಈ ಮಧ್ಯೆ ನಾವು ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ʼನ್ಯೂ ನಾರ್ಮಲ್‌ʼ ಅನ್ನುವುದು ಅಷ್ಟೇನೂ ಸುಲಭವಲ್ಲ ಎಂಬುದು. ಇದಕ್ಕೆ ಒಗ್ಗಿಕೊಳ್ಳಲು ಸಮಯ ಬೇಕು, ನಮ್ಮನ್ನು ಇನ್ನೂ ಬಿಟ್ಟು ಹೋಗದ ಕೊವಿಡ್‌-19 ವಿರುದ್ಧ ವಹಿಸಬೇಕಾದ ಎಚ್ಚರಿಕೆ ಕಿರಿಕಿರಿ ಉಂಟುಮಾಡುವುದು ಗ್ಯಾರಂಟಿ. ಜೊತೆಗೆ ಭವಿಷ್ಯದಲ್ಲಿ ಆನ್‌ಲೈನ್‌ ಶಿಕ್ಷಣವೆಂಬುದು ನಮ್ಮ ಜೊತೆಗಿರಲಿದೆ. ಆದರೂ ಸಂಪೂರ್ಣವಾಗಿ ತಂತ್ರಜ್ಞಾನದ ಆಳಾಗಿರದೆ ಮಾತನ್ನಷ್ಟೇ ಅಲ್ಲದೆ, ಮಾತಿನ ಹಿಂದಿನ ಭಾವವನ್ನು, ಹಾವಭಾವಗಳನ್ನು ಅರ್ಥಮಾಡಿಕೊಳ್ಳಲು ತರಗತಿ ಪಾಠ ಅನುಕೂಲವಾಗಲಿದೆ.

    ಕತ್ತಲು ಕವಿದು ಬೆಳಕಾಗುವಷ್ಟರಲ್ಲಿ ನಾವು ಕೆಲವನ್ನು ಕಳೆದುಕೊಳ್ಳಬೇಕಾಗಬಹುದು. ಆದರೆ ನಮ್ಮ ಭರವಸೆ ಮುದುಡದಿರಲಿ. ಮೂಡುವ ಹೊಸಬೆಳಕಲ್ಲಿ ನಮ್ಮ ಕತ್ತಲ ಕನಸುಗಳನ್ನು ನನಸಾಗಿಸೋಣ.

    (ತರಗತಿಗಳು ಪುನಃ ಆರಂಭವಾಗುವ ಈ ಸಂದರ್ಭದಲ್ಲಿ ಶಿಕ್ಷಕನಾಗಿ ನನಗನಿಸಿರುವುದನ್ನು ಶಬ್ದ ರೂಪಕ್ಕೆ ಇಳಿಸುವ ಪ್ರಯತ್ನವಿದು.)

    ಮೊದಲರ್ಧವನ್ನು ಸಹಿಸಿಕೊಂಡರೆ ದ್ವಿತೀಯಾರ್ಧದಲ್ಲಿ ಒಳ್ಳೆಯ ಊಟ ಗ್ಯಾರಂಟಿ

    ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಪ್ರೇಕ್ಷಕರಿಗೂ ಮನೆಯಲ್ಲೇ ಕೂತು ಒಟಿಟಿಯಲ್ಲಿ ಸಿನಿಮಾ ನೋಡುವ ವೀಕ್ಷಕನಿಗೂ ವ್ಯತ್ಯಾಸವಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಪ್ರೇಕ್ಷಕ ಮನೆಯಲ್ಲಿ ನೋಡುವಾಗ ವೀಕ್ಷಕನಾಗಿ ಬದಲಾಗುತ್ತಾನೆ. ಅವನೂ ನೋಡುವ ವಿಧಾನವೂ ಬದಲಾಗುತ್ತದೆ. ಚಿತ್ರ ಮಂದಿರದಲ್ಲಿ ಒಂದಿಷ್ಟು ಅಡೆತಡೆ ಇಲ್ಲದೆ ಚಿತ್ರದಲ್ಲೇ ಧ್ಯಾನಸ್ಥನಾಗುವ ಪ್ರೇಕ್ಷಕ  ಮನೆಯಲ್ಲಿ ನೋಡುವಾಗ ಒಂದಿಷ್ಟು ಡಿಸ್ಟರ್ಬನ್ಸ್ ಗೆ ಒಳಗಾಗುವುದು ಸಹಜ.

    ಸಿನಿಮಾ ನೋಡುತ್ತಿರುವಾಗಲೇ ಲ್ಯಾಂಡ್ ಲೈನ್ ಬಡಿದುಕೊಳ್ಳುತ್ತದೆ.  ಇದ್ದಕ್ಕಿದ್ದಂತೆ ಕುಕ್ಕರ್ ವಿಷಲ್ ಹಾಕುತ್ತದೆ. ವೈಫೈ ಸ್ಲೋ ಆಗುತ್ತದೆ. ಹೀಗಾಗಿ ಒಂದು ಸಿನಿಮಾವನ್ನು ಹಲವಾರು ಸಿಟ್ಟಿಂಗ್ ಗಳಲ್ಲಿ ನೋಡುವವರೆ ಅಧಿಕ. ಇಂಥ ಸಂದರ್ಭದಲ್ಲಿ ಒಟಿಟಿಗಾಗಿ ಸಿನಿಮಾ ಮಾಡುವ  ನಿರ್ದೇಶಕನ ಮುಂದೆ ದೊಡ್ಡ ಸವಾಲಿರುತ್ತದೆ.  ವೀಕ್ಷಕ ಒಂದೇ ಸಿಟ್ಟಿಂಗ್ ನಲ್ಲಿ ನೋಡುವ ಹಾಗೆ ಚಿತ್ರವನ್ನು ನಿರೂಪಿಸಬೇಕಾಗುತ್ತದೆ.

    ಚಿತ್ರಮಂದಿರದಲ್ಲಿ ಪ್ರೇಕ್ಷಕ ಅಸಹಾಯಕ. ಇಷ್ಟವಿಲ್ಲದ  ದೃಶ್ಯಗಳನ್ನು ಮುಂದಕ್ಕೆ ಹಾಕುವ ಸ್ವಾತಂತ್ರ್ಯವಿಲ್ಲ. ಕಷ್ಟವೋ ಸುಖವೋ ನೋಡಲೇ ಬೇಕು.  ಇಲ್ಲಿ ಹಾಗಲ್ಲ.  ವೀಕ್ಷಕನ ಕೈಯಲ್ಲಿ ರಿಮೋಟ್ ಇರುತ್ತದೆ.  ಸಿನಿಮಾ ಕೂತೂಹಲ ಮೂಡಿಸದಿದ್ದರೆ ಅವನ ಮುಂದೆ ನೂರಾರು  ಸಿನಿಮಾಗಳು, ವೆಬ್ ಸೀರೀಸ್ ಗಳು ಸಾಲು ಗಟ್ಟಿರುತ್ತವೆ.

    ಇಂದು ಬಿಡುಗಡೆಯಾದ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಭೀಮಸೇನ ನಳಮಹಾರಾಜ ಸಿನಿಮಾವನ್ನು ವೀಕ್ಷಿಸಿದ ನಂತರ ಇಷ್ಟು ಬರೆಯಬೇಕಾಯಿತು. ದೊಡ್ಡ ಹೆಸರುಗಳಿದ್ದ  ಈ ಸಿನಿಮಾ ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ , ಹೇಮಂತ ಕುಮಾರ್ ಎಂಬ ನಿರ್ಮಾಪಕರು , ಜೀರಂಬೆಯಂಥ ಚಿತ್ರ ನಿರ್ದೇಶಿಸಿದ  ಕಾರ್ತಿಕ್ ಸರಗೂರಂಥ ನಿರ್ದೇಶಕರು, ಅಚ್ಯುತಕುಮಾರರಂಥ ಕಲಾವಿದರು ತುಂಬಿದ್ದರಿಂದ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿತ್ತು.  ಆದರೆ ಒಟಿಟಿಯಲ್ಲಿ ಸ್ಯೂಟಬಲ್ ಬಾಯ್, ಮಿರ್ಜಾಪುರ್ ಸೀಸನ್2 ನಂಥ ವೇಗದ ಓಟಕ್ಕೆ ಒಗ್ಗಿಕೊಂಡ ವೀಕ್ಷಕ  ಈ ಚಿತ್ರದ ಕೊನೆಯಲ್ಲಿ ತೆರೆದುಕೊಳ್ಳುವ ಸೀಕ್ರೇಟ್ ಗಾಗಿ ಸಮಯ ವ್ಯಯಿಸುವಷ್ಟು ಉದಾರಿಯಾಗಿರುತ್ತಾನೆಯೇ ಎಂಬುದು ಪ್ರಶ್ನೆ.

    ಸಿಟ್ಟಿನ ಭರದಲ್ಲಿ ಆಗುವ ಅವಾಂತರಗಳು  ಅದರ ನಡುವೆ ಅರಳುವ ಪ್ರೇಮಕತೆಯೇ ಚಿತ್ರದ ಕತೆ. ಈ ಕತೆ ಹೊಸದಂತೂ ಅಲ್ಲ. ಅದನ್ನು ಬೇರೆ ರೀತಿಯಲ್ಲಿ ಹೇಳುವ ಪ್ರಾಮಾಣಿಕ ಪ್ರಯತ್ನ ನಿರ್ದೇಶಕರಿಂದ ಆಗಿದೆ ಎಂಬುದು ಗೋಚರವಾಗುತ್ತದೆ. ಅದಕ್ಕೆ ಹೊಂದಾಣಿಕೆಯಾಗುವಂತೆ ಸುಂದರ ಪರಿಸರ ಚಿತ್ರವನ್ನು ಸಹನೀಯ ಮಾಡುತ್ತದೆ.

    ಓಲ್ಡೇಜ್ ಹೋಮ್ ನ ಕೇರ್  ಟೇಕರ್ ಸಾರಾಳ ಪ್ರವೇಶದೊಂದಿಗೆ  ಆರಂಭವಾಗುವ ಚಿತ್ರ ಆಕೆಯನ್ನು ರೆಸಾರ್ಟ್ ವೊಂದಕ್ಕೆ ಕರೆದೊಯ್ಯುವದರೊಂದಿಗೆ ಮುಂದುವರಿಯುತ್ತದೆ. ಅಲ್ಲಿ ಆಕೆ ಭೇಟಿಯಾಗುವ ಲತ್ತೇಶನೆಂಬ ಅಡುಗೆ ಭಟ್ಟನ ಮತ್ತು ವೇದವಲ್ಲಿ ನಡುವಿನ ಪ್ರೇಮ ಕಥೆಯೊಂದಿಗೆ ಸಾಗುತ್ತದೆ. ಮಧ್ಯ ಮಧ್ಯ ಸಿಗುವ ಕುತೂಹಲದ ತಿರುವುಗಳು ಊಟದ ನಡುವೆ ಬರುವ ಸರ್ ಪ್ರೈಸ್ ಡಿಷ್ ಗಳು.  ಈ  ರೆಸಾರ್ಟ್ನಲ್ಲಿ ಮೃಷ್ಟಾನ್ನ ಭೋಜನವೇನೋ ಸಿಗುತ್ತದೆ. ಆದರೆ ಆ ಭೋಜನ ಸವಿಯಲು ಅದೇ ರೆಸಾರ್ಟ್ ಗೆ ಮತ್ತೆ ಬರಬೇಕು ಎಂದು ಅನ್ನಿಸುವುದಿಲ್ಲ.

    ಚಿತ್ರದ ದೃಶ್ಯಗಳು ಕಣ್ತುಂಬುತ್ತವೆ.  ಲತ್ತೇಶನಾಗಿ ಅರವಿಂದ ಅಯ್ಯರ್,    , ಅರೋಹಿಯಾಗಿ ಅರೋಹಿ ನಾರಾಯಣ್, ಸಾರಾಳಾಗಿ ಪ್ರಿಯಾಂಕ ತಿಮ್ಮೇಶ್  ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.  ಅಚ್ಯುತಕುಮಾರ ರಂಥ ಕಲಾವಿದರಿಂದ ಇನ್ನಷ್ಟು ಉತ್ತಮ ಕೆಲಸ ತೆಗೆಯುವಲ್ಲಿ ನಿರ್ದೇಶಕರು ಸೋತಿದ್ದಾರೆ. ಬಾಲ ಕಲಾವಿದೆ ಮನ ಗೆಲ್ಲುತ್ತಾಳೆ . ಹೇಮಂತಕುಮಾರರ ಎಲ್ಲಾ ಸಿನಿಮಾಗಳಲ್ಲೂ ಕೇಳುವ  ಮಾದರಿಯ  ಸಂಗೀತವೇ ಇಲ್ಲೂ  ಧ್ವನಿಸುತ್ತದೆ.

    ಮೊದಲರ್ಧವನ್ನು ಸಹಿಸಿಕೊಂಡರೆ ದ್ವಿತೀಯಾರ್ಧದಲ್ಲಿ ಒಳ್ಳೆಯ ಊಟ ಗ್ಯಾರಂಟಿ.ಓಟಿಟಿಗಾಗಿಯೇ ಸಿನಿಮಾ ಮಾಡುವವರು ಕತೆ ಹೇಳುವ ವ್ಯಾಕರಣವನ್ನು ಕೊಂಚ ಬದಲಿಸಿಕೊಂಡರೆ ವೀಕ್ಷಕ ಎಂಥ ಅಡೆತಡೆಗಳ ನಡುವೆಯೂ ಒಂದೇ ಸಿಟ್ಟಿಂಗ್ ನಲ್ಲಿ ಚಿತ್ರ ನೋಡಿ ಮುಗಿಸಬಹುದು.

    ಅಮೆಜಾನ್ ಪ್ರೈಮ್ ಗೆ ಸೇರಬೇಕೆ ಹಾಗಾದರೆ ಈ ಕೆಳಗಿನ ಲಿಂಕ್ ಒತ್ತಿ.

    ಬದುಕೆಂಬ ಸ್ಪರ್ಧೆಗೆ ಒಗ್ಗಿಸುವ ಕತೆಗಳು

    ಆವಾಗೆಲ್ಲಾ ಸ್ಕೂಲು ಅಂದ್ರೆ ಅದೇನೋ ಹಿಂಸೆ , ಒಂಥರ ಜೈಲಾನುಭವ . ನಿಜವಾಗಲೂ ಮನಸ್ಸಿಗೆ ಖುಷಿ ಕೊಡ್ತಿದ್ದಿದ್ದೇ ಟೀಚರ್ಸ್ ಆಗಾಗ ಹೇಳುತ್ತಿದ್ದ ಕತೆಗಳು .

    ನಮ್ಮ ಕ್ಲಾಸ್ ಟೀಚರ್ ಅಚಾನಕ್ಕಾಗಿ ರಜೆ ಹೋದಾಗ , ಪಕ್ಕದ ಕ್ಲಾಸಿನ ಟೀಚರ್ ನಮ್ಮ ಕ್ಲಾಸನ್ನು ಅವರ ಕ್ಲಾಸನ್ನು ಕಂಬೈನ್ಡ್ ಮಾಡಿ ಗಲಾಟೆ ಮಾಡದಂತೆ ಹೇಳಿ ನಮ್ಮನ್ನ ಸುಮ್ಮನಿರಿಸಲು ” ಒಂದೂರಲ್ಲಿ …..” ಅಂತ ಕತೆ ಹೇಳಕ್ಕೆ ಶುರು ಮಾಡ್ತಿದ್ದಂಗೇ ಅದೇನೋ ಖುಷಿ , ಅದೆಂತದ್ದೋ ಆನಂದ ತುಟಿಕ್ ಪಿಟಕ್ ಅನ್ದಂಗೆ ಮೈಮರೆತು ಕೂತ್ಬಿಡ್ತಿದ್ವಿ .
    ಇಷ್ಟಕ್ಕೂ ನಮ್ ಟೀಚರ್ ಗಳ ಕತೆ ಶುರು ಆಗ್ತಿದ್ದ ವಾತಾವರಣಾನೇ ತುಂಬಾ ಮಜಾ ಇರ್ತಿತ್ತು . ದಿನದ ಕೊನೇ ಪೀರಿಯಡ್ ನಲ್ಲಿ, ಸ್ಪೋರ್ಟ್ಸ್ ಪಿರಿಯಡ್ಡಲ್ಲಿ, ಮಳೆ ಬರ್ತಿದ್ದಾಗ , ಶನಿವಾರದ ಅರ್ಧ ದಿನಗಳಲ್ಲಿ ಹೀಗೆ …

    ಅವರುಗಳ ಪ್ರತೀ ಕತೆಯ ಆರಂಭ ಒಂದೂರಲ್ಲಿ ಒಬ್ಬ ರಾಜ ಇದ್ನಂತೆ , ಒಂದು ಕಾಡಲ್ಲಿ ಒಂದು ಸಿಂಹ ಇತ್ತಂತೆ , ಒಂದು ಹಳ್ಳೀಲಿ ಒಬ್ಬ ರೈತ ಇದ್ನಂತೆ …. ಅಂತಾನೇ ಶುರು ಆಗ್ತಿತ್ತು .ಅವರು ಹೇಳೋ ಕತೆ ನಮ್ಮ ಸಿಲಬಸ್ಸಲ್ಲಿ ಇದ್ದೂ ಅದೇನಾದ್ರೂ ಪರೀಕ್ಷೆಯಲ್ಲಿ ಬಂದ್ಬಿಟ್ರೆ ಅಂತೂ ಮುಗಿದೋಯ್ತು ಆನ್ಸರ್ ಷೀಟಲ್ಲಿ ಹಂಗೇ ಭಟ್ಟೀ ಇಳಿಸ್ಬಿಡ್ತಿದ್ವಿ .

    ಇನ್ನು ಮನೆಯ ಹತ್ತಿರ ಸಂಜೆ ಕರೆಂಟ್ ಹೋದಾಗ ಗೆಳೆಯನ ಅಮ್ಮನೋ ಅವರ ಅಜ್ಜಿಯೋ ,ತಾತನೋ ನಮ್ಮನ್ನೆಲ್ಲಾ ಸುತ್ತಲೂ ಕೂರಿಸಿಕೊಂಡು ಹೇಳುತ್ತಿದ್ದ ಕತೆಗಳು ನಮ್ಮನ್ನು ಅಲುಗಾಡಲಿಕ್ಕೂ ಬಿಡುತ್ತಿರಲಿಲ್ಲ ಅಷ್ಟು ತನ್ಮಯತೆಯಿಂದ ಕೇಳುತ್ತಿದ್ದೆವು .

    ನೆಂಟರ ಮನೆಗೆ ಹೋದಾಗ ಅವರ ಮನೆಯ ಮಕ್ಕಳೊಂದಿಗೆ ತಡರಾತ್ರಿಯಾದರೂ ನಿದ್ದೆ ಮಾಡದೇ ಸುಮ್ಮನೆ ಹಾಲಿನಲ್ಲಿ ವಟಗುಡುತ್ತಿದ್ದಾಗ ಅವರಮ್ಮ ಹೇಳುತ್ತಿದ್ದ ಕತೆಯನ್ನು ಕೇಳಿಸಿಕೊಂಡು ಅವರ ಮನೆಯ ಮೇಲ್ಚಾವಣಿಯನ್ನು ನೋಡಿಕೊಂಡೇ ಮಲಗಿಬಿಡುತ್ತಿದ್ದೆವು . ಬೆಳಿಗ್ಗೆ ಎದ್ದು ಪುನಃ ಆ ಕತೆಯ ಬಗ್ಗೆ ವಿಚಾರಿಸುತ್ತಿದ್ದೆವು .

    ಅರ್ಧದಷ್ಟು ನೀರಿದ್ದ ಹೂಜಿಗೆ ಕಲ್ಲುಗಳನ್ನಾಕಿ ಮೇಲೆ ಬಂದ ನೀರನ್ನು ಕುಡಿಯುವ ಜಾಣ ಕಾಗೆ ಕತೆ . ಅರಣ್ಯದಲ್ಲಿ ರಾಮನಿಗಾಗಿ ವರ್ಷಾನುಗಟ್ಟಲೇ ಕಾದ ಶಬರಿ ಕತೆ . ಮಾತಿಗೆ ತಪ್ಪದ ಪುಣ್ಯಕೋಟಿ ಗೋವಿನ ಕತೆ . ಕುರಿಗಾಹಿಯೊಬ್ಬ ಪ್ರತಿದಿನ ತೋಳ ಬಂತು ತೋಳ ಎಂದು ಸುಳ್ಳೇ ಅರಚುತ್ತಿರುತ್ತಾನೆ ಒಮ್ಮೆ ನಿಜವಾಗಿಯೂ ತೋಳ ಬಂದುಬಿಡುತ್ತದೆ ಆಗವನು ಕೂಗಿದಾಗ ಯಾರೂ ಅವನ ಮಾತನ್ನು ನಂಬುವುದಿಲ್ಲ ಎಂಬುವವನ ಕತೆ . ತನ್ನ ಕೋಳಿಯಿಂದಲೇ ಬೆಳಗಾಗುತ್ತಿದೆಯೆಂದು ಭ್ರಮೆಯಲ್ಲಿದ್ದ ಜಂಭದ ಅಜ್ಜಿಯೊಂದು ಕೊನೆಗೆ ಅದನ್ನು ಕಾಡಿನಲ್ಲಿ ಬಿಟ್ಟು ಬಂದು ಪಶ್ಚಾತ್ತಾಪ ಪಡುವ ಕತೆ . ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ಹೆಚ್ಚು ಚಿನ್ನದ ಮೊಟ್ಟೆಗಳಿಗಾಗಿ ಒಮ್ಮೇಲೆ ಕೊಂದ ಆಸೆಬುರುಕನ ಕತೆ . ಹಾಲಿನ ವ್ಯಾಪಾರಿಯ ಹಣದ ಚೀಲವನ್ನು ಎತ್ತೊಯ್ದ ಕೋತಿಯು ಮರದ ಮೇಲಿಂದ ಒಂದು ನಾಣ್ಯವನ್ನು ನದಿಗೆ ಒಂದು ನಾಣ್ಯವನ್ನು ದಡಕ್ಕೆ ಎಸೆದು ಹಾಲಿಂದು ಹಾಲಿಗೆ ನೀರಿಂದು ನೀರಿಗೆ ಎಂದು ಹೇಳುವ ಕತೆ . ನರಿ ಮತ್ತು ಹುಳಿದ್ರಾಕ್ಷಿ ಕತೆ . ಏನ್ ಬೇಕಾದ್ರೂ ಮಾಡ್ತಿದ್ದ ಅಂತ ತಿಳಿಸಕ್ಕೆ ಆಂಜನೇಯ ಸಂಜೀವಿನಿ ಪರ್ವತವ ಹೊತ್ತುತಂದ ಕತೆ . ಶ್ರೀ ಕೃಷ್ಣ ಮತ್ತು ಆತನ ಬಡವ ಗೆಳೆಯ ಕುಚೇಲನ ಕತೆ . ದಶರಥನ ಶಬ್ಧವೇಧಿ ವಿದ್ಯೆಯ ಪರಿಪಾಟಿಲಿನಿಂದ ಶ್ರವಣಕುಮಾರನನ್ನು ಕೊಂದ ಕತೆ . ಈಶ್ವರನೇ ಗಣಪನ ಕತ್ತು ತುಂಡರಿಸುವ ಕತೆ . ಭಕ್ತ ಕುಂಬಾರ ಭಕ್ತಿ ಪರವಶನಾಗಿ ಮಗನನ್ನೇ ಮಣ್ಣಿನಲ್ಲಿ ತುಳಿಯುವ ಕತೆ . ದ್ರೋಣಾಚಾರ್ಯರು ತನ್ನ ಶಿಷ್ಯನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ಪಡೆಯುವ ಕತೆ ….ಹೀಗೆ ಒಂದಾ ಎರಡಾ ನೂರಾರು ಕತೆಗಳು.

    ಇದಲ್ಲದೇ ಚಂದಮಾಮ ಬಾಲಮಿತ್ರದ ಕತೆಗಳು .
    ಸಾಲದೆಂಬಂತೆ ಪಾಶ್ಚಿಮಾತ್ಯರ ಹೀಮ್ಯಾನು , ಸ್ಪೈಡರ್ ಮ್ಯಾನು , ಸೂಪರ್ಮ್ಯಾನ್ಗಳ ಕತೆಗಳು ಅವರುಗಳ ವಿಶೇಷ ಪೋಷಾಕು … ಅಲ್ಲಾವುದ್ದೀನನ ಅದ್ಭುತ ದೀಪ .ತೇಲುವ ಜಮ್ಖಾನ ಹೀಗೇ ಸಾಲು ಸಾಲು ಅರೇಬಿಯನ್ ಕತೆಗಳು .ಕೇಳಿದ್ದು ಕೊಡುವ ಅಕ್ಷಯ ಪಾತ್ರೆ , ಸೇವಿಸಿದರೆ ಸಾವೇ ಬರದ ಅಮೃತದ ಕತೆ .

    ಉಫ್ ……. ರಾಜ , ರಾಣಿ , ಮಂತ್ರಿ, ಸೇನಾಧಿಪತಿ, ಕೃಷ್ಣದೇವರಾಯ , ರಾಮ , ಕೃಷ್ಣ , ತೆನಾಲಿ ರಾಮಕೃಷ್ಣ , ಅಕ್ಬರ್, ಬೀರ್ಬಲ್ ಇವರೆಲ್ಲಾ ಪಾತ್ರಧಾರಿಗಳಾಗಿ …. ಹುಲಿ , ಸಿಂಹ , ಆನೆ , ಆಮೆ , ಕರಡಿ , ನರಿ , ಕುರಿ , ಮೊಸಳೆ ಇವೆಲ್ಲಾ ಪಾತ್ರಗಳಾಗಿ ….ಮೊದಲಿನಿಂದಲೂ ನಮಗೆ ನಂಬಿಸಿ ನಮ್ಮ ತಲೆಗೆ ತುಂಬಿಸಿ ನಮನ್ನು ಸದೃಢಗೊಳಿಸಿ ಈ ಜಗತ್ತಿನಲ್ಲಿ ನಿಲ್ಲಿಸಿದ್ದವು .

    ಕತೆಯ ರೂಪದಲ್ಲಿ ನಮ್ಮೊಳಗೆ ನೈತಿಕತೆಯನ್ನು ತುಂಬಿ ಬದುಕೆಂಬ ಸ್ಪರ್ಧೆಗೆ ಒಗ್ಗಿಸಿದ್ದ ಈ ಎಲ್ಲಾ ಕತೆಗಾರರಿಗೂ ಅನಂತಾನಂತ ವಂದನೆಗಳು.

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಕೊರೋನಾ ಸೋಂಕಿನ ನಾನಾವತಾರಗಳು

    ಕೊರೋನಾ ತಟ್ಟದ ದೇಶವಿಲ್ಲ, ನಷ್ಟವನ್ನು ಅನುಭವಿಸಿಲ್ಲದ ಸಮಾಜವಿಲ್ಲ– ಎನ್ನುವಂತೆ ಈ ಹೊಸವ್ಯಾಧಿ ತನ್ನ ಅಲೆಗಳನ್ನು ಇಡೀ ಭೂಗೋಲಕ್ಕೇ ಅಪ್ಪಳಿಸಿದೆ.

    ಪ್ರಪಂಚವೆಂಬುವ ಈ ದೊಡ್ಡ ಹಡಗಿನ 195 ಕ್ಯಾಪ್ಟನ್ ಗಳು ಅವರವರದೇ ಕೋಣೆಯಲ್ಲಿ ಕುಳಿತು ತಮಗೆ ತಿಳಿದಂತೆ ಹುಟ್ಟುಹಾಕುತ್ತ ಸಾಗುತ್ತಿದ್ದಾರೆ.ಎಲ್ಲರ ಮೇಲೂ ತಮ್ಮ ದೇಶಗಳಲ್ಲಿ ಕೊರೋನಾ ಸಾವುಗಳನ್ನು ಮತ್ತು ಆರ್ಥಿಕ ನಷ್ಟಗಳನ್ನು ಕಡಿಮೆ ಮಾಡುವ ಗುರುತರ ಜವಾಬ್ದಾರಿಯಿದೆ. ಇವರೆಲ್ಲ ತಮ್ಮ ಶಕ್ತಿಯಿದ್ದಷ್ಟು ದೇಶಗಳನ್ನು ಮುನ್ನೆಡುಸುತ್ತ ನಾಯಕತ್ವಕ್ಕೆ ಎದುರಾದ ಸಮಸ್ಯೆಗೆ ಎದೆಕೊಟ್ಟು ನಿಂತಿದ್ದಾರೆ. ಕೈಲಾಗದವರು ಎಂದಿನಂತೆ ತಮ್ಮದೇ ಮಿತಿಯಲ್ಲಿ ನಿಟ್ಟುಸಿರಿಟ್ಟಿದ್ದಾರೆ.

    ಲಕ್ಷಾಂತರ ಜನರು ಸತ್ತರು ಪರವಾಗಿಲ್ಲ ತಮ್ಮ ಮರು ಆಯ್ಕೆಯಾದರೆ ಸಾಕು ಎಂದು ಸಾವು ಮತ್ತು ನೋವಿನ ಸಾಧ್ಯತೆಗಳ ನಡುವೆ ಸಿಲುಕಿ ನಲುಗಿರುವ ಜನರನ್ನು ಒಡೆದು ಆಳುವ ರಾಜಕೀಯವನ್ನು ಕೆಲವರು ಮಾಡುತ್ತಿದ್ದಾರೆ. ಜನಸಾಮಾನ್ಯರ ಬವಣೆಯ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಏಕ ಪಕ್ಷೀಯ ನಿಲುವಿನ ರಾಜಕಾರಣಿಗಳು ಇದೇ ಕಾರಣಕ್ಕೆ ವಿಶ್ವದಾದ್ಯಂತ ಟೀಕೆಗೊಳಗಾಗಿದ್ದಾರೆ.

    ಆಫ್ರಿಕಾದ 54 ದೇಶಗಳು, ಏಶಿಯಾದ 48 ದೇಶಗಳು,ಯೂರೋಪನ 44 ದೇಶಗಳು, ಲ್ಯಾಟಿನ್ ಅಮೆರಿಕಾದ 33 ದೇಶಗಳು, ಉತ್ತರ ಅಮೆರಿಕಾದ 2 ಮತ್ತು ಓಶಿಯಾನದ 14 ದೇಶಗಳು ಕೊರೋನಾ ಯಾನದಲ್ಲಿ ಅಲ್ಪ-ಸ್ವಲ್ಪ ಸಮಯ ವ್ಯತ್ಯಾಸದಲ್ಲಿ ತಮ್ಮ ಯಾತ್ರೆ ಶುರುಮಾಡಿದ ಕಾರಣ ಎಲ್ಲರೂ ಒಂದೇ ಬಗೆಯ ನೀರಿನಲ್ಲಿಲ್ಲ. ಕೆಲವರು ಮೊದಲ ಅಲೆಯ ಜೊತೆಗಿನ ಹೊಡೆದಾಟವಾದರೆ, ಮತ್ತೆ ಹಲವರು ಎರಡನೆಯ ಅಲೆಯನ್ನು ಎದುರಿಸುತ್ತಿದ್ದಾರೆ. ಹಾಗಂತ ಎಲ್ಲರೂ ಒಂದೇ ಬಗೆಯ ಹೋರಾಟ ನಡೆಸಿಲ್ಲ. ಇನ್ನೂ ಆಶ್ಚರ್ಯವೆಂದರೆ ಪ್ರಪಂಚದ ಅತ್ಯಂತ ಶ್ರೀಮಂತ ಮತ್ತು ಶಕ್ತ ರಾಷ್ಟ್ರವಾದ ಅಮೆರಿಕಾ ಜಗತ್ತೇ ಅಚ್ಚರಿಪಡುವಂತೆ ಕೊರೋನಾ ಹೋರಾಟದಲ್ಲಿ ಮುಗ್ಗರಿಸಿಬಿದ್ದಿದೆ.  ‘ಕೋವಿಡ್ ರಾಜಕೀಯ ‘ ದೇಶದ ಜನತೆಯನ್ನು ಇಬ್ಭಾಗವಾಗಿಸಿದೆ. ಅಕ್ಟೋಬರ್ 24 ರಂದು ಅಂದರೆ ಅಮೆರಿಕಾದ ಚುನಾವಣೆಯ ಹತ್ತು ದಿನಗಳ ಹಿಂದೆ ಕೂಡ ದಿನವೊಂದರಲ್ಲಿ 80,000 ಕ್ಕೂ ಹೆಚ್ಚು ಹೊಸ ಸೋಂಕುಗಳು ಅಮೆರಿಕಾದಲ್ಲಿ ಪತ್ತೆಯಾಗುತ್ತಿವೆ.

    ಈ ಕಾರಣ ಅಲ್ಲಿನ ಪರಿಣಿತರು ಕೊರೋನಾ ಮುಗಿಯುವ ವೇಳೆಗೆ ಅಮೆರಿಕಾದಲ್ಲಿ ಅಧಿಕೃತವಾಗಿ ಮೂರು ಲಕ್ಷಕ್ಕೂ ಹೆಚ್ಚು ಜನರು ಕೊರೋನಾ ಕಾರಣ ಸಾಯಬಹುದೆಂಬ ಅಂದಾಜಿಸಿದ್ದರೆ ಅನಧಿಕೃತವಾಗಿ ಆದರೆ ವಾಸ್ತವದಲ್ಲಿ ಈ ಸಂಖ್ಯೆ ಅರ್ಧ ಮಿಲಿಯನ್ ತಲುಪಲಿದೆ ಎನ್ನುವ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.

    ಇನ್ನು ಕೆಲವು ದೇಶಗಳು ಪುಟ್ಟವಾದರೂ ಈ ಹೋರಾಟದಲ್ಲಿ ಅಮೋಘವಾದ ಕಟ್ಟು ನಿಟ್ಟಾದ ನಿರ್ಧಾರಗಳನ್ನು ತೆಗೆದುಕೊಂಡು ಅತ್ಯಂತ ಕಡಿಮೆ ನಷ್ಟದೊಂದಿಗೆ  ಇದುವರೆಗಿನ ಕೊರೋನಾ ಪೀಡಿತ ಜೌಗಿನಿಂದ ಹೊರಬಂದಿದ್ದಾರೆ ಮತ್ತು ತಮ್ಮ ಪ್ರಜೆಗಳಲ್ಲಿ  ಭರವಸೆಗಳನ್ನು ಮೂಡಿಸಿದ್ದಾರೆ.

    ವೈರಾಣುವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ನ್ಯೂಝಿಲ್ಯಾಂಡ್ ನ ಲೇಬರ್ ಪಕ್ಷದ ಪ್ರಧಾನಿ ಶ್ರೀಮತಿ ಜಸಿಂಡ ಅರ್ಡೆನ್ ಳ ಸರ್ಕಾರ ಅಕ್ಟೋಬರ್ 17 ರಂದು ಅತ್ಯಧಿಕ ಮತಗಳೊಡನೆ ಮರು ಆಯ್ಕೆಯಾಗಿ ಬಂದಿತು. ಒಂದು ಎಲೆಕ್ಷನ್  ನಲ್ಲಿ ಗೆಲ್ಲಲು ಬಹಳ ಕಾರಣಗಳಿರಬಹುದಾದರೂ ಕೋವಿಡ್ ಪ್ಯಾಂಡೆಮಿಕ್ ಬಂದಾದ ನಂತರ  ನಡೆಯುತ್ತಿರುವ/ ನಡೆಯಲಿರುವ ಎಲ್ಲ ಚುನಾವಣೆಗಳ ಫಲಿತಾಂಶದಲ್ಲಿ ಕೋವಿಡ್ ಅತ್ಯಂತ ಮುಖ್ಯ ಪಾತ್ರವನ್ನು ವಹಿಸುತ್ತಿದೆ ಮತ್ತು ವಹಿಸಲಿದೆ. ಗೆದ್ದು ಬಂದ ಪ್ರತಿ ರಾಜಕೀಯ ಪಕ್ಷಗಳಿಗೆ ಕೋವಿಡ್ ದಾಳಿಯಿಂದುಂಟಾದ ಆರ್ಥಿಕ ಹಾನಿಯಿಂದ ತಮ್ಮ ತಮ್ಮ ದೇಶಗಳನ್ನು ಹೊರನಡೆಸುವುದು ಕೂಡ ಅತ್ಯಂತ ಕಠಿಣ ಅಗ್ನಿಪರೀಕ್ಷೆಯಾಗಲಿದೆ. ಇನ್ನು ಆಳುವ ಪಕ್ಷಗಳಂತೂ ಕೊರೋನಾ ಕೇಂದ್ರಿತ ವಿಚಾರಗಳ ಸುತ್ತಲೇ ತಮ್ಮ ಎಲ್ಲ ಕಾರ್ಯ ಚಟುವಟಿಕೆಗಳನ್ನು ಕೇಂದ್ರೀಕರಿಸಬೇಕಿದೆ.

    ಕಾರಣ ಇಷ್ಟೆ. ಕೊರೋನಾ ಬರೀ ಜನರಿಗೆ ಮಾತ್ರ ಸೋಂಕನ್ನು ಹರಡಲಿಲ್ಲ. ಬದಲು ಜಗ್ತತಿನ ರಾಜಕೀಯಕ್ಕೂ ಸೋಂಕನ್ನು ಹರಡಿದೆ.ಕೊರೋನಾ ಸೋಂಕನ್ನೇ ಅಸ್ತ್ರಗಳನ್ನಾಗಿ ಬಳಸಿಕೊಂಡು ರಾಜಕೀಯ ಹೊಸ ನಗ್ನಾವತಾರವನ್ನು ಜನರಿಗೆ ತೋರಿಸಿದೆ. ಎಲ್ಲ ರಾಜಕೀಯ ಚರ್ಚೆ,ರಾಜಕೀಯ ವಿರೋಧ ಮತ್ತು ಸ್ಪರ್ಧೆಗಳಿಗೆ ಇದೀಗ ಕೊರೋನ ಹೊಸ ಆಯಾಮಗಳನ್ನು ಸೃಷ್ಟಿಸಿದೆ. ಅಮೆರಿಕಾದ ಪ್ರಜಾ ಪ್ರಭುತ್ವದ ಮಹತ್ತರ ಚುನಾವಣೆಯ ಪ್ರತಿ ಚರ್ಚೆಗಳು ಕೊರೋನಾ ಸಂಬಂಧಿತ ವಿಚಾರಗಳ ಬಗ್ಗೆಯೇ ಕೇಂದ್ರೀಕೃತವಾಗಿದೆ.

    ಹಲವು ದೇಶಗಳು , ಹಲವು ಕೋವಿಡ್ ತಂತ್ರಗಳು

    ಪ್ರಪಂಚದ ದೇಶಗಳು ಕೊರೋನಾವನ್ನು ಎದುರಿಸಲು ವಿಶಾಲ ಅರ್ಥದಲ್ಲಿ ಒಟ್ಟು  19 ಬಗೆಯ ಭಿನ್ನ ದೋರಣೆಗಳನ್ನು ಅಥವಾ ತಂತ್ರಗಳನ್ನು ಅನುಸರಿಸಿದವು ಎನ್ನಲಾಗಿದೆ. ಈ ಬಗ್ಗೆ ಅಧ್ಯಯನಗಳನ್ನು ನಡೆಸಿ ಇಲ್ಲಿಯವರೆಗೆ ಯಾವ ದೇಶಗಳು ಉತ್ತಮ ನಿಭಾವಣೆ ತೋರಿದ್ದಾವೆ ಎನ್ನುವ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಆರೋಗ್ಯ  ಸಂಬಂಧಿತ ಘಟಕವೊಂದು ತನ್ನ ಮೊದಲ ವರದಿಯನ್ನು ಸಲ್ಲಿಸಿದೆ.

    ಆ ವರದಿಯ ಪ್ರಕಾರ ಕೊರೋನಾ ನಿಭಾವಣೆಯಲ್ಲಿ ದಾರುಣವಾಗಿ ಮತ್ತು ನಿಸ್ಸಂಶಯವಾಗಿ  ಸೋತ ದೇಶವೆಂದರೆ ಅದು ಅತ್ಯಂತ ಶಕ್ತಿಯುತ ದೇಶವಾದ ಅಮೆರಿಕಾ- ಎಂದು ಈ ವರದಿ ಹೇಳುತ್ತದೆ.

    ಅಷ್ಟೇ ಅಲ್ಲ, ಮಿಕ್ಕ 14 ದೇಶಗಳಿಗೆ ಹೋಲಿಸಿದರೆ, ಯಾವುದೇ ಕಾರಣಗಳಿಂದ ಸತ್ತವರ ಸಂಖ್ಯೆ ಅಂದರೆ, ಪ್ರತಿ ಲಕ್ಷ ಜನಕ್ಕೆ ಎನ್ನುವ ಲೆಕ್ಕದಲ್ಲಿ ಕೊರೋನಾ ಪರೀಕ್ಷೆಯಿಲ್ಲದೆ ಇನ್ಯಾವುದೋ ಕಾರಣಕ್ಕೆ ಸತ್ತರು ಎಂಬಂತ ಸಾವುಗಳು ಕೂಡ ಅಮೆರಿಕಾದಲ್ಲಿಯೇ ಅತ್ಯಧಿಕವಾಗಿವೆ.

    ಕೊರೋನಾ ವಿಚಾರದಲ್ಲಿ ಯಾವುದೇ ಲಾಕ್ ಡೌನ್ ಇಲ್ಲದೆ ಮತ್ತು ಅತಿಕಡಿಮೆ ನಿರ್ಬಂಧಗಳ ಮೂಲಕ ನಿಭಾಯಿಸಿದ ಸ್ವೀಡನ್ನಿನಂಥ ದೇಶಕ್ಕೆ ಹೋಲಿಸಿದರೂ ಅಮೇರಿಕಾದಲ್ಲಿ ಕೋವಿಡ್ ಸಾವಿನ ಸಂಖ್ಯೆ ಶೇಕಡ 29 ಜಾಸ್ತಿಯಿರುವುದು ಬಹುತೇಕ ಅಮೆರಿಕನ್ನರಿಗೆ ನುಂಗಲಾರದ ತುತ್ತಾಗಿದೆ.

    ಇಟಲಿಗಿಂತ ಮುಂದುವರೆದ ದೇಶವಾದರೂ ಮೇ 10 ರ ನಂತರ ಇಟಲಿಯಲ್ಲಿ ನಡೆದ ಮಾರಣಹೋಮದಷ್ಟು ಕಡಿಮೆ ಸಾವು ಸಂಭವಿಸಿದ್ದಿದ್ದರೆ ಇನ್ನೂ ಒಂದು ಲಕ್ಷ ಜನರ ಜೀವಗಳನ್ನು ಅಮೆರಿಕಾದಲ್ಲಿ ಉಳಿಸಬಹುದಿತ್ತು ಎನ್ನುವ ಈ ಅಧ್ಯಯನಕಾರರು  ’ಅತ್ಯಂತ ಗಂಭೀರವಾದ ’ ತಪ್ಪುಗಳು ಅಮೆರಿಕಾದಲ್ಲಿ ನಡೆದವು ಎಂಬುದನ್ನು ಒಪ್ಪುತ್ತಾರೆ.

    ಸರ್ವಾಧಿಕಾರ ಅಥವಾ ಮಿಲಿಟರಿ ಆಡಳಿತಗಳಿರುವ ದೇಶಗಳ ಮುಖಂಡರುಗಳ ಸಿಂಹಾಸನಗಳನ್ನೂ ಕೊರೋನಾ ಅಲೆಗಳು ಅಲುಗಿಸಿವೆ. ಅಲ್ಲಿ ರಸ್ತೆಗಿಳಿದು ಹೋರಾಟ ನಡೆಸುತ್ತಿರುವವರು ಪ್ರತಿಪಕ್ಷ ಅಥವಾ ವಿರೋಧಿಗಳು ಮಾತ್ರವಲ್ಲ ಬದಲು ತಮ್ಮ ಹೊಟ್ಟೆಪಾಡಿಗೆ ಹೊಡೆತ ಬಿದ್ದಿರುವ ಸಾಮಾನ್ಯ ಜನರು. ಹಾಗಾಗಿ ಇದೀಗ ಕೊರೋನಾ ಸಂಭಂದಿತ ವಿಚಾರಗಳು ಪ್ರಜೆಗಳು ಮತ್ತು ಪ್ರಭುಗಳನ್ನು ತನ್ನ ಸೆಳೆತದ ವರ್ತುಲದಲ್ಲಿ ಇಟ್ಟುಕೊಂಡಿದೆ.

    ಈಗಾಗಲೇ ರಾಜಮನೆತನದ ಆಡಳಿತಾಧಿಕಾರಕ್ಕೆ ವಿರೋಧವಿದ್ದ ಥೈಲ್ಯಾಂಡಿನಲ್ಲಿ ಕೊರೋನಾ ಅತಿದೊಡ್ಡ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. ಅಲ್ಲಿನ ರಾಜಮನೆತನ ಮತ್ತು ಮಿಲಿಟರಿ ಶಕ್ತಿಗಳು ಕೊನೆಗೊಂಡು ಹೊಸ ಬಗೆಯ ಅಡಳಿತವನ್ನು ಆಗ್ರಹಿಸಿರುವ ಲಕ್ಷಾಂತರ ಜನರು ಬೀದಿಗಿಳಿದಿದ್ದಾರೆ. ಇದರ ಹಿಂದೆ ಕೋವಿಡ್ ಸೃಷ್ಟಿಸಿರುವ ಆರ್ಥಿಕತೆಯ ಅರಾಜಕತೆ ಈಗ ಮೂಲ ಇಂಧನವಾಗಿ ಕೆಲಸಮಾಡುತ್ತಿದೆ ಎನ್ನಲಾಗಿದೆ.

    ಜಗತ್ತಿನ  ಜನರನ್ನು ಕಾಡುವ ಇನ್ನಿತರ ನೂರಾರು ಬಗೆಯ ಸಮಸ್ಯೆಗಳನ್ನೆಲ್ಲ ಹಿಂದಕ್ಕೆ ಸರಿಸಿ ಕೋವಿಡ್ ಇದೀಗ ತಾನೇ ಅಗ್ರಜನಂತೆ ಮೆರೆಯುತ್ತಿದೆ. ಸಧ್ಯಕ್ಕೆಇಡೀ ಪ್ರಪಂಚವನ್ನೇ ತನ್ನ ಕಿರುಬೆರಳಿನ ಮೇಲೆ ಕೊರೋನಾ ವೈರಸ್ಸು ಬುಗರಿಯಂತೆ ತಿರುಗಿಸುತ್ತಿದೆ ಎಂದರೆ ಅಡ್ಡಿಯಿಲ್ಲ.

    ಚಳಿಗಾಲ ಮತ್ತು ಕೋವಿಡ್ ವೈರಸ್ಸಿನ ವರ್ಧನೆ

    ಈ ನಡುವೆ ಚಳಿಗಾಲದ ಶುರುವಿನಿಂದ ಮತ್ತಷ್ಟು ಕಸುವು ತುಂಬಿಕೊಳ್ಳಲು ಕೋವಿಡ್ ತಯಾರಾಗಿದೆ.ಅದನ್ನು ಬಗ್ಗು ಬಡಿಯಲು ದೇಶ ವಿದೇಶಗಳು ಮತ್ತೆ ಸಜ್ಜಾಗಬೇಕಾಗಿದೆ. ಏಕೆಂದರೆ ನಮ್ಮ ಉಸಿರಾಟಕ್ಕೆ ತೊಂದರೆ ಕೊಡಬಲ್ಲ ವೈರಾಣುಗಳು ಚಳಿಗಾಲದಲ್ಲಿ ಜಾಸ್ತಿ ವೃದ್ಧಿಯಾಗುವುದು ಸರ್ವೇ ಸಾಮಾನ್ಯ. ಚಳಿಯ ದೇಶಗಳಲ್ಲಿ ಕೋವಿಡ್ ಇಲ್ಲದ ಸಮಯದಲ್ಲೂ  ಚಳಿಗಾಲ ಅತಿಹೆಚ್ಚಿನ ವೈರಾಣು ಸೋಂಕುಗಳನ್ನು ಮತ್ತು ಸಾವುಗಳನ್ನು ನೋಡುತ್ತವೆ.ಅದರ ಜೊತೆಗೆ ಈ ವರ್ಷ ಚಳಿಗಾಲದ ಶುರುವಾತಿನಲ್ಲಿಯೇ ಕೋವಿಡ್ ನ ಎರಡನೆಯ ಅಲೆ ಕಾಳ್ಗಿಚ್ಚಿನಂತೆ ಯೂರೋಪಿನ ದೇಶಗಳಲ್ಲಿ ಹರಡುತ್ತಿದೆ.

    ಈ ಕಾರಣ ಅಕ್ಟೋಬರ್ 12 ರಂದೇ ಇಂಗ್ಲೆಂಡ್, ಇಡೀ ದೇಶ ಕೊರೋನಾದ ಎರಡನೆಯ ಅಲೆಯ ಮಾಧ್ಯಮಿಕ ಅಪಾಯದಲ್ಲಿದೆ ಎಂದು ಘೋಷಿಸಿತು. ಪಕ್ಕದ ಪುಟ್ಟ ದೇಶ ವೇಲ್ಸ್ ಎರಡನೇ ರಾಷ್ಟ್ರೀಯ ಲಾಕ್ ಡೌನ್ ಅನ್ನು ಘೋಷಿಸಲು ಅನುವಾಗಿದ್ದೇವೆ ಎಂಬ ಹೇಳಿಕೆ ನೀಡಿತು. ಅಕ್ಟೋಬರ್ 23 ರಿಂದ 17 ದಿನಗಳ ಎರಡನೇ ಲಾಕ್ ಡೌನ್ ನ್ನು ಕೂಡ ಶುರುಮಾಡಿತು. ಅಕ್ಟೋಬರ್  14 ರಂದು ಉತ್ತರ ಐರ್ಲ್ಯಾಂಡ್ ಎರಡು ವಾರಗಳ ಎರಡನೇ ಅರೆ ಲಾಕ್ ಡೌನ್ ಅನ್ನು ಘೋಷಿಸಿತು.ಫ್ರಾನ್ಸ್, ಜರ್ಮನಿ ದೇಶಗಳು ಅಂದೇ ಕರ್ಫ್ಯೂ ಘೋಷಿಸಿದವು. ಅಕ್ಟೋಬರ್ 24 ರ ವೇಳೆಗೆ ಫ್ರಾನ್ಸಿನ ಅಸ್ಪತ್ರೆಯ ಅರ್ಧಕ್ಕಿಂತ ಹೆಚ್ಚು ತೀವ್ರನಿಘ ಘಟಕದ  ಬೆಡ್ಡುಗಳು ರೋಗಿಗಳಿಂದ ತುಂಬಿಹೋದವು.

    ಪೋಲ್ಯಾಂಡ್ ದೇಶ 19 ಅಕ್ಟೋಬರ್ ವೇಳೆಗೆ ಕೋವಿಡ್ ಆಸ್ಪತ್ರೆಯ ಮಂಚಗಳ ತೀವ್ರ ಅಭಾವವನ್ನು ಘೋಷಿಸಿತು.ಮೇಲಿನ ಈ ಯೂರೋಪಿಯನ್ ದೇಶಗಳ ಜೊತೆಗೆ ಇನ್ನಿತರ ಯೂರೋಪಿಯನ್ ದೇಶಗಳು ಚಳಿಗಾಲದಲ್ಲಿ ಆಸ್ಪತ್ರೆಗಳಿಗೆ ಕೊರೋನಾ ರೋಗಿಗಳ ನೂಕು ನುಗ್ಗಲಾಗದಿರಲಿ ಎಂಬ ಎಚ್ಚರಿಕೆಗಳನ್ನು ವಹಿಸಿವೆ.

    ಭಾರತ ಇನ್ನೂ ಮೊದಲ ಅಲೆಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಹಂತದಲ್ಲಿರುವಾಗಲೇ ಮೇಲಿನ ಹಲವು ದೇಶಗಳು ಎರಡನೆಯ ಅಲೆಯ ಉಗಮ ಸ್ಥಾನಗಳನ್ನು ಹತ್ತಿಕ್ಕಲು ಮತ್ತು ನಿಯಂತ್ರಿಸಲು ಟೊಂಕಕಟ್ಟಿ ನಿಂತಿದ್ದಾರೆ. ಮತ್ತೊಂದು ಮಾರಣ ಹೋಮ ನಡೆಯದಂತೆ ತಡೆಯುವುದೇ ಅವರ ಉದ್ದೇಶವಾಗಿದೆ.ಅದನ್ನು ನೋಡಿದಾಗ ಸ್ವಲ್ಪ ಹಿಂದಿರುವ ಭಾರತ ಕ್ರಮಿಸಬೇಕಾದ ಹಾದಿ ಕೂಡ ಬಹಳ ದೊಡ್ಡದಿದೆ ಎನ್ನುವುದು ವೇದ್ಯವಾಗುತ್ತದೆ.ಈ ಮಧ್ಯೆ ಲಸಿಕೆಯೊಂದು ಲಭ್ಯವಾದರೆ ಭಾರತದ ಪರಿಸ್ಥಿತಿ ಎರಡನೆಯ ಅಲೆಯ ಕಾಟವಿಲ್ಲದೆ ಸುಧಾರಿಸಬಹುದೇನೋ?

    ಹಲವು ಬಗೆಯ ಕಿಚ್ಚುಗಳನ್ನು ಒಡಲಲ್ಲಿಟ್ಟುಕೊಂಡು, ಕೊರೋನಾದ ಹೊಸ ಆಘಾತವನ್ನು ಆಶ್ಚರ್ಯಕರ ರೀತಿಯ ಸಮಾಧಾನದಲ್ಲಿ ಎದುರಿಸುತ್ತಿರುವ ಭಾರತದಲ್ಲಿ  ಸಾವಿನ ಸಂಖ್ಯೆ ಅಧಿಕೃತ ವರದಿಗಳ ಪ್ರಕಾರ ಮೊದಲಿಂದಲೂ ಕಡಿಮೆಯಿದ್ದದ್ದು ಜನರಲ್ಲಿ  ಧೈರ್ಯವನ್ನು ಹೆಚ್ಚಿಸಿದೆ. ಸಾವು ಮತ್ತು ಸೋಂಕಿನ ಸಮಸ್ಯೆಗಳು ಕಡಿಮೆಯಾಗುತ್ತಿರುವುದು ಮನಸ್ಸಿಗೆ ಒಂದಷ್ಟು ಸಮಾಧಾನವನ್ನು ಸೃಷ್ಟಿಸಿದೆ.ಜೊತೆಗೆ ಅತ್ಯಧಿಕ ಕ್ಷೇತ್ರಗಳಿಂದ ಆಯ್ಕೆಯಾಗಿ ಬಂದಿರುವ ಸರ್ಕಾರ ಅಧಿಕಾರದಲ್ಲಿರುವ ಕಾರಣ ಇದ್ದದ್ದರಲ್ಲಿ ಕೊರೋನ ಸಂಬಂಧಿತ ರಾಜಕೀಯ ಗೊಂದಲಗಳು ಕಡಿಮೆ ಎನ್ನಬಹುದು. ಆದರೆ  ಚುನಾವಣೆ ಇತ್ಯಾದಿ ರಾಜಕೀಯ ಸನ್ನಿವೇಶಗಳು ಮೇಲೆದ್ದಕೂಡಲೇ ಕೊರೋನಾ ಸಂಬಂಧಿತ ಸಮಸ್ಯೆಗಳನ್ನು ಗೌಣೀಕರಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಅಪವಾದಕ್ಕೆ ಭಾರತದ ರಾಜಕಾರಣವೂ ಹೊರತಾಗಿಲ್ಲ. ಕೋವಿಡ್ ಶುರುವಾಗುವ ಮೊದಲೇ ಆರ್ಥಿಕ ಹಿನ್ನೆಡೆಯಲ್ಲಿದ್ದ ಭಾರತಕ್ಕೆ ಕೋವಿಡ್ ಸಮಸ್ಯೆಗಳು ಕರಾಳತೆಯನ್ನು ಬೆರೆಸಿರುವ ಕಾರಣ ಕೋವಿಡ್ ನ ಉಪಸ್ಥಿತಿಯನ್ನು ಕಡೆಗಣಿಸಿ ಜೀವನ ಸಾಗಿಸಬೇಕಾದ ಅನಿವಾರ್ಯ ಅಗತ್ಯಗಳಿವೆ.

    ಈ ನಡುವೆ ಭಾರತದ ನವರಾತ್ರಿ, ದೀಪಾವಳಿ ಮತ್ತು ಪಾಶ್ಚಾತ್ಯರ ಹಾಲೋವೀನ್ ಮತ್ತು ಕ್ರಿಸ್ಮಸ್ . ಎಲ್ಲವೂ ವರ್ಚುಯಲ್ ಸಂಭ್ರಮಕ್ಕೆ ಮಿತಗೊಂಡಿವೆ. ಮನಸ್ಸಿನ ಸಮಾಧಾನಕ್ಕೆ ಈ ಹಬ್ಬಗಳು ಕೇವಲ ನೋಟಕ್ಕೆ ಸಿಕ್ಕುವಷ್ಟು ದಕ್ಕಿದರೂ ಸಾಕೆನ್ನುವಂತಾಗಿರುವುದು ಸುಳ್ಳಲ್ಲ.

    ಕೋವಿಡ್ ಕಾರಣ ಭವಿಷ್ಯ ನಿಜಕ್ಕೂ ಬದಲಾಗಬಲ್ಲದೇ?

    ಇಂಗ್ಲೆಂಡಿನ  ವೇಮತ್ ಎನ್ನುವ ಸಮುದ್ರ ತಟದ ನಗರದಲ್ಲಿ ’ ಬ್ಲಾಕ್ ಡೆತ್ ಈ  ಬಂದರಿನ ಮೂಲಕ 1348 ರಲ್ಲಿ ಇಂಗ್ಲೆಂಡಿಗೆ ಬಂದಿತು.  ಇಂಗ್ಲೆಂಡಿನ 30-50%  ಜನರನ್ನು ಅದು ಕೊಂದಿತು “ ಎಂಬ ಫಲಕವಿದೆ. ಆಗ ಬ್ಲಾಕ್ ಡೆತ್ ಕ್ರೈಮಿಯಾ ಅಥವಾ ಚೀನಾ ದೇಶಗಳಿಂದ ಬಂದಿತು ಎಂದು ನಂಬಲಾಗಿತ್ತು.

    ಶತಮಾನಗಳ ನಂತರ ಯೂರೋಪಿಯನ್ ಅನ್ವೇಷಕರು ಕೊಂಡುಹೊಯ್ದು ನೀಡಿದ ಖಾಯಿಲೆಗಳು ಇತರೆ ಖಂಡಗಳ ಕೆಲವು ಮೂಲವಾಸಿಗಳನ್ನೇ ಇಲ್ಲವಾಗಿಸಿದ್ದೂ ಇದೆ. ಹೀಗೆ ನೂರಾರು ವರ್ಷಗಳಿಂದ ಮನುಕುಲವನ್ನು ಕಾಡುತ್ತಿರುವ ಇಂಥಹ ವಿಶ್ವವ್ಯಾಪಿ ಹೊಸವ್ಯಾಧಿಗಳು ಬಹುಬಾರಿ ಪ್ರಪಂಚದ ಇತಿಹಾಸವನ್ನು ಬದಲಿಸಿವೆ. ಆಗಲೂ ಈಗಿನ ಕಾಲದಂಥವೇ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಲ್ಲೋಲ ಕಲ್ಲೋಲಗಳು ಸೃಷ್ಟಿಯಾಗಿದ್ದವೆಂಬುದನ್ನು ಮರೆಯಲು ಸಾಧ್ಯವಿಲ್ಲ.

    ಆದರೆ  ಇಂದಿನ ಆಧುನಿಕ ಸಮಾಜದಲ್ಲಿ ಇಂದಿಗೂ ಹಲವು ಮಹತ್ತರ ಮತ್ತು ಮೂಲಭೂತವಾದ ತಾರತಮ್ಯಗಳು ಉಳಿದುಕೊಂಡಿರುವುದನ್ನು ನೋಡಿದಾಗ ಇದು ಮನುಷ್ಯರ ಮೂಲಭೂತ ಗುಣ ಸ್ವಭಾವಗಳ ಮೇಲೆ ಬೆಳಕು ಚೆಲ್ಲುತ್ತವೆ. ಬದಲಾವಣೆಗಳು ನಡೆದಂತೆಲ್ಲ ಒಂದಷ್ಟು ಸ್ವಾರ್ಥ ಮತ್ತು ಹಿನ್ನಡೆತ ಕಾದಿರುತ್ತದೇನೋ ಎನ್ನಿಸುತ್ತದೆ. ಆದರೆ ಪ್ರತಿಬಾರಿ, ಮತ್ತೆ ಆ ತಪ್ಪುಗಳನ್ನೆಲ್ಲ ಸರಿಪಡಿಸುವತ್ತ ಮನುಷ್ಯತ್ವ ತುಡಿಯುವುದನ್ನು ನಾವು ಕಾಣಬಹುದು.

    ಚುನಾವಣೆಗಳು, ಯುದ್ಧ, ಸ್ವಾರ್ಥ, ವಂಚನೆ, ಹಣ ಇಂಥ ವಿಚಾರಗಳಲ್ಲೇ ಮತ್ತೆ ಮತ್ತೆ ಮುಳುಗುವ ಈ ಸಾಮಾನ್ಯ ಪ್ರಪಂಚ ಕೋವಿಡ್ ನಂತಹ ಹೊಸ ಪಿಡುಗುಗಳು ಬಂದಾಗ ಅಥವಾ ಪ್ರಕೃತಿ ವಿಕೋಪಗಳು ಕಾಣಿಸಿಕೊಂಡಾಗ ಒಂದಷ್ಟು ಕಾಲ ಆ ಬಗ್ಗೆಯೇ ಗಮನಹರಿಸಬೇಕಾದ ಅನಿವಾರ್ಯತೆಗೆ ತಳ್ಳಲ್ಪಡುತ್ತವೆ.ಆದರೆ ಇವೆಲ್ಲ ಆತಂಕಗಳು ಸ್ವಲ್ಪ ತಹಬದಿಗೆ ಬಂದ ಕೂಡಲೇ ತನ್ನ ಎಂದಿನ ಸ್ವರೂಪಕ್ಕೆ ಮರಳಿಬಿಡಲು ತಹ ತಹಿಸುತ್ತದೆ.

    ಭೂತಕಾಲದ ಈ ವಿಚಾರಗಳನ್ನು ಗಮನಿಸಿದಾಗ ಇಂದಿನ ಕೋವಿಡ್ ತಂದಿರುವ ಮಾನವೀಯ ಬದಲಾವಣೆಗಳು ನಿಧಾನವಾಗಿ ಮಾಸಲಾಗಿ ಮನುಷ್ಯನ ಮೂಲಭೂತ ವರ್ಣಗಳೇ ಮತ್ತೆ ಭವಿಷ್ಯತ್ತಿನಲ್ಲಿ ಮೆರೆಯುತ್ತವೇನೋ ಎಂಬ ಜಿಗ್ನಾಸೆಗಳು ಕಾಡದಿರುವುದಿಲ್ಲ. ಹಾಗೆಯೇ ಪ್ಲೇಗ್ ನ ಕಾಲಕ್ಕೆ ಹೋಲಿಸಿದರೆ ಇಂದಿನ ಪ್ರಪಂಚ ಗುರುತಿಸಲಾಗದಷ್ಟು ಬದಲಾಗಿರುವುದನ್ನು ನೋಡಿದಾಗ ಆಶಾವಾದದ ಒರತೆ ಬತ್ತುವುದೂ ಇಲ್ಲ.

    ಕೊರೋನಾ ಹೊಸದು ಆದರೆ ಜಗತ್ತು ಹಳೆಯದು !?

    ಏನೇ ಇದ್ದರೂ ಕೋವಿಡ್ ಮತ್ತೊಂದು ಮುಖ್ಯ ಪ್ರಶ್ನೆಯನ್ನು ಎತ್ತುತ್ತದೆ.

    ಈಗಿನ ಪ್ರಪಂಚದಲ್ಲಿರುವಂಥ ಸಾಮಾಜಿಕ ಮತ್ತು ಆರ್ಥಿಕ ವ್ಯತ್ಯಾಸಗಳು ಹೀಗೇ ಮುಂದುವರೆದರೆ ಯಾವುದೇ ಪ್ರಾಪಂಚಿಕ ಸಮಸ್ಯೆಗಳನ್ನು ದೇಶಗಳು ಒಂದೇ ರೀತಿಯಲ್ಲಿ ನಿಭಾಯಿಸಲಾರವು. ಇನ್ನು, ಸ್ವಾರ್ಥ, ಜಂಭ , ರಾಜಕೀಯ ಹುನ್ನಾರಗಳು- ಕೊರೋನಾ ಇದ್ದರೂ ಹೋದರೂ ಮುಂದುವರೆಯುವಂಥವು. ಇದೇ ಕಾರಣಕ್ಕೆ ಪ್ರಪಂಚವನ್ನು ಈ ಸಂದರ್ಭದಲ್ಲಿ ಕೊರೋನಾ ಒಗ್ಗೂಡಿಸುವುದಕ್ಕಿಂತ  ಒಡೆದು ತೋರಿಸಿದ್ದೇ ಹೆಚ್ಚು ಎನ್ನಿಸುತ್ತದೆ.

    ಜನರ  ನಡುವಿನ ರಾಜಕೀಯ, ಆರ್ಥಿಕ ಮತ್ತು ಬೌದ್ಧಿಕ ವ್ಯತ್ಯಾಸಗಳು ಮತ್ತು ದೇಶಗಳ ನಡುವಿನ ರಾಜಕೀಯ ಮತ್ತು ಆರ್ಥಿಕ ವ್ಯತ್ಯಾಸಗಳನ್ನು ಎತ್ತಿಹಿಡಿಯುವುದರಲ್ಲೇ ಕೋವಿಡ್  ಹೆಚ್ಚು ಯಶಸ್ವಿಯಾಗಿದೆ. ಕೊರೋನಾಗೆ ವ್ಯಾಕ್ಸಿನ್ ದೊರೆಯುವಂತಾದಾಗ ಕೂಡ ಇವೇ ಭಿನ್ನತೆಗಳು ಮುಂದುವರೆಯುವುದರಲ್ಲಿ ಅನುಮಾನವಿಲ್ಲ.

    ಈ ವ್ಯತ್ಯಾಸಗಳು ನಿಯಂತ್ರಣವಿಲ್ಲದಂತೆ ಬೆಳೆಯುವುದು ಮನುಷ್ಯರ ಉಳಿವಿಗೆ ಸಂಚಕಾರವಾಗಬಲ್ಲದು.ಈ ಕಾರಣದಿಂದಾಗಿ ಪ್ರಪಂಚದ ಐದು ಸಾವಿರ ಅಧ್ಯಯನಕಾರರು, ವಿಚಾರವಂತರು ಇಂತಹ ತಾರತಮ್ಯಗಳನ್ನು ಕಡಿಮೆಮಾಡುವ ಗಮ್ಯದೆಡೆಗೆ ತಮ್ಮ ಕೆಲಸಗಳನ್ನು ಕೇಂದ್ರೀಕರಿಸುವ ವಿಚಾರಕ್ಕೆ ಒಗ್ಗೂಡಿ ಸಹಿ ಹಾಕಿದ್ದಾರೆ. ಇದರಲ್ಲಿ ಜನಾಂಗೀಯ ದ್ವೇಷ ಇತ್ಯಾದಿ ಮೂಲ ಭೂತ ವಿಚಾರಗಳೂ ಇವೆ.ವಿಶ್ವಸಂಸ್ಥೆಗೆ ಹಲವು ದೇಶಗಳು ಒಗ್ಗೂಡಿ ಬಿಲಿಯನ್ ಗಟ್ಟಲೆ ಹಣವನ್ನು ನೀಡಿ ಸಮಾನತೆಯ ಅಸಮತೋಲನ ಮತ್ತಷ್ಟು ಹೆಚ್ಚಾಗದಿರುವಂತಹ ಎಚ್ಚರಿಕೆಗಳನ್ನು ರೂಪಿಸುವ ಯೋಜನೆಗಳನ್ನು ಜಾರಿಗೆ ತರುವಂತೆ ಆಗ್ರಹಿಸಿವೆ.

    ಜನಸಾಮಾನ್ಯರ ಪ್ರತಿಕ್ರಿಯೆಗಳು

    ಉದ್ದೇಶಗಳು ಭಿನ್ನವಾದರೂ, ಸರ್ಕಾರಗಳು ಕೊರೋನಾ ಸಮಸ್ಯೆಯನ್ನು ಗಂಭೀರವಾಗಿ ಅಥವಾ ಅತ್ಯಂತ ಲಘುವಾಗಿ ತೆಗೆದುಕೊಂಡಂತೆಯೇ ಪ್ರತಿ ದೇಶದ ಜನರು ಅಥವಾ ಪ್ರತಿ ವ್ಯಕ್ತಿ ಕೊರೋನಾ ಸಮಸ್ಯೆಯನ್ನು ತಮ್ಮದೇ ಕೋನಗಳಿಂದ ನೋಡಿದ್ದಾರೆ.ನಾನಾ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ.ಹೇಗೆ ನಿಭಾಯಿಸಬೇಕು ಎನ್ನುವುದು ಅವರವರ ಆಯ್ಕೆಯಾಗುತ್ತಿದೆ. ಕೆಲವರು ಕೊರೊನಾ ಇಲ್ಲವೇ ಇಲ್ಲವೆನ್ನುವಂತ ವರ್ತನೆಯಲ್ಲಿ ನಡೆದುಕೊಳ್ಳುತ್ತಿದ್ದರೆ ಮತ್ತೆ ಕೆಲವರು ಅದರಿಂದ ದೂರವಿರಲು, ಅದನ್ನು ತಡೆಗಟ್ಟಲು ಇನ್ನಿಲ್ಲದ ಸಾಹಸಗಳನ್ನು ಮಾಡುತ್ತಿದ್ದಾರೆ.

    ಇತ್ತೀಚೆಗೆ ನಾನು ಭೇಟಿ ಮಾಡಿದ ಮಧ್ಯ ವಯಸ್ಸಿನ ವ್ಯಕ್ತಿಯೋರ್ವರು ಅವರಿಗೆ ತಿಳಿದ ಚಿಕ್ಕ ವಯಸ್ಸಿನ ಕೆಲವರು ಕಳೆದ ಆರು ತಿಂಗಳಿಂದ ಮನೆ ಬಿಟ್ಟು ಹೊರಗೆ ಬಂದಿಲ್ಲದ ವಿಚಿತ್ರದ ಬಗ್ಗೆ ಹೇಳಿಕೊಂಡು ನಗಾಡಿದರು. ತಮ್ಮ ಕಾಂಪೌಂಡಿನಲ್ಲಿ, ಕೈ ದೋಟದಲ್ಲಿ ಕೂಡ ಕಾಲಿಡದೆ ತಮ್ಮನ್ನು ತಾವು ಕೈದಿಗಳನ್ನಾಗಿ ಮಾಡಿಕೊಂಡ ಈ ಜನರ ಮಾನಸಿಕ ಸ್ವಾಸ್ಥ್ಯ ಮತ್ತು ದೈಹಿಕ ಸ್ವಾಸ್ಥ್ಯಗಳು ನಿಜಕ್ಕೂ ಹಾಳಾಗಬಹುದಾದ ಸಾಧ್ಯತೆಗಳ ಬಗ್ಗೆ ಕಾಳಜಿಯ ಮಾತುಗಳನ್ನಾಡಿದರು.

    ಅದೇ ದಿನ ಭೇಟಿ ಮಾಡಿದ ಕೆಲವರು ಹಿರಿಯರು ಎಗ್ಗೇ ಇಲ್ಲದಂತೆ ಮೈ ಮೇಲೆ ಬೀಳುವಷ್ಟು ಹತ್ತಿರಕ್ಕೇ ಬರುವ ಚಿಕ್ಕ ವಯಸ್ಸಿನವರ  ಮೇಲೆ ತೀವ್ರ ಅಸಮಾಧಾನಗಳನ್ನು ವ್ಯಕ್ತಗೊಳಿಸಿದರು. ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲದೆ ಓಡಾಡುವ ಕಿರಿಯ ವಯಸ್ಸಿನವರು ಕೊರೊನಾ ಕ್ಯಾರಿಯರ್ಸ್ ಆಗಿರುವ ಸಾಧ್ಯತೆಗಳು ಅವರನ್ನು ಹೊರಗೆ ಬರಲು ಕೂಡ  ಹೆದರುವಂತೆ ಮಾಡಿರುವುದನ್ನು ಹೇಳಿಕೊಂಡು  ಆತಂಕವನ್ನ ವ್ಯಕ್ತಪಡಿಸಿದರು.

    ಭಿನ ಭಿನ್ನ ದೇಶಗಳಂತೆಯೇ, ಬೇರೆ ಬೇರೆ ಜನರ ನಡುವೆ ಈ ಕೋವಿಡ್ ಪರಿಸ್ಥಿಯ ಬಗ್ಗೆ ಸಾಮ್ಯವಾದ ನಡವಳಿಕೆಗಳಿಲ್ಲ. ಜನರ ಓದು, ಪದವಿ, ಹಣ ಮತ್ತು ಸವಲತ್ತುಗಳು ಅವರ ನಡವಳಿಕೆಗಳನ್ನು ಬಿಂಬಿಸುತ್ತಲೂ ಇಲ್ಲ.

    ಆದರೆ ಮಿಕ್ಕ ಬಹುತೇಕರು ಕಾಲದ ಗೊಂಬೆಗಳಾಗಿ ನಿಯಮಗಳನ್ನು ಪಾಲಿಸುತ್ತ, ಬದುಕಿನ ಸಮತೋಲನಗಳನ್ನು ಕಾಯ್ದುಕೊಳ್ಳಲು ದುಡಿಯುತ್ತಿದ್ದಾರೆ. ಲೋಕದ ಚಿತ್ರ-ವಿಚಿತ್ರಗಳನ್ನು ಕಣ್ಣು ತುಂಬಿಕೊಳ್ಳುತ್ತ ಮುಂಬರುವ  ’ಮೊದಲಿನಂತಹ ’ ದಿನಗಳ ಹಾದಿಯನ್ನು ಕಾಯುತ್ತಿದ್ದಾರೆ.

    Photo by Anna Shvets from Pexels

    ಮಂಡಲ ಚಿತ್ರಕಲೆಯಲ್ಲಿ ಪರಿಣಿತೆ ಗಾಯತ್ರಿ ನಾಯಕ್

    ಬಳಕೂರ. ವಿ.ಎಸ್.ನಾಯಕ

    ಮಂಡಲ ಚಿತ್ರಕಲೆ ಒಂದು ವಿಭಿನ್ನ ಪ್ರಕಾರ. ಅಲ್ಲಲ್ಲಿ ಕಾಣುವ ಚುಕ್ಕೆಗಳು, ಇವುಗಳ ಮಧ್ಯೆ ವ್ರತ್ತಾಕಾರದ ಆಕೃತಿ. ಕಲಾವಿದನ ಕೈಚಳಕದಿಂದ ಮೂಡಿಬರುವಂತಹ ಈ ಅದ್ಭುತ ಕಲಾಪ್ರಕಾರವನ್ನು
    ಕಲಾಸಕ್ತರು ಒಮ್ಮೆಲೇ ನೋಡಿದರೆ ಚಕಿತರಾಗುವುದು ನಿಶ್ಚಿತ. ವಿಭಿನ್ನ ಪ್ರಕಾರದ ಕಲೆಯಾದ ಈ ಮಂಡಲಕಲೆಯಲ್ಲಿ ಪರಿಣಿತರಾದವರು, ಮಂಗಳೂರಿನ ಊರ್ವ ನಿವಾಸಿ, ಗಾಯತ್ರಿ ನಾಯಕ್.

    ಎಂಜಿನಿಯರಿಂಗ್ ಪದವೀಧರೆಯಾಗಿದ್ದರೂ ಇವರನ್ನು ಸೆಳೆದದ್ದು ಮಂಡಲಕಲೆ. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಇವರು ನಂತರದ ದಿನಗಳಲ್ಲಿ ಮಂಡಲ ಕಲೆಯ ಕಡೆ ಆಕರ್ಷಿತರಾದರು. ಮಂಡಲ ಚಿತ್ರಗಳನ್ನು ಸಾಮಾನ್ಯವಾಗಿ ಹೋಮ, ಯಾಗ-ಯಜ್ಞಗಳ ಆಚರಣೆಯ ಸಂದರ್ಭದಲ್ಲಿ ದೇವತೆಗಳನ್ನು ಆಹ್ವಾನ ಮಾಡಲು ಪುರೋಹಿತರು ಬಿಡಿಸುವುದು ವಾಡಿಕೆ.ಅದೇ ಸಿದ್ಧಾಂತ ಆಧರಿಸಿ ಈ ಚಿತ್ರಕಲೆ ಬಂದಿರುವುದು ವಿಶೇಷ. ನಾನಾ ಶಾಂತಿ, ಪೂಜೆ, ಹೋಮ-ಹವನಗಳಲ್ಲಿ ಈ ಮಂಡಲಗಳನ್ನು ದೇವರ ಪ್ರತಿಷ್ಠಾಪನೆಗೆ ಬಿಡಿಸುವುದು ಪ್ರಾರಂಭಿಕ ಹಂತ. ಈ ಸಂದರ್ಭಗಳಲ್ಲಿ ಕೆಲ ಬಣ್ಣಗಳನ್ನು ಸಾಂಕೇತಿವಾಗಿ ಬಳಸಿ ಮಂಡಲಗಳನ್ನು ಬಿಡಿಸುವುದು, ಅದಕ್ಕೆ ತಕ್ಕಂತೆ ವಿವಿಧ ಬಣ್ಣಗಳನ್ನು ಉಪಯೋಗಿಸಿ ಪೂಜೆ ಮಾಡುವುದು ಪದ್ಧತಿ.
    ಹಿಂದಿನ ದಿನಗಳಲ್ಲಿ ಇಂತಹ ಪೂಜೆಗೆ ಇಂತಹುದೇ ಆಕಾರ, ಬಣ್ಣ, ಇತ್ಯಾದಿ ಅರ್ಥದಲ್ಲಿ ಚಿತ್ರ ರಚಿಸುತ್ತಿದ್ದರು.

    ಮಂಡಲ ಚಿತ್ರಕಲೆಯಲ್ಲಿ ಬಣ್ಣಗಳ ಬಳಕೆ ಹೇಗೆ?

    ಮಂಡಲ ಕಲೆಯಲ್ಲಿ ನಮ್ಮ ಮನಸ್ಸಿಗೆ ಬಂದಂತೆ ಬಣ್ಣಗಳನ್ನು ಬಳಿಯಬಾರದು. ಧಾರ್ಮಿಕ ಆಚರಣೆಗಳಿಗಾಗಿ ಮಂಡಲಗಳನ್ನು ಬಿಡಿಸಬೇಕಾದಲ್ಲಿ ಸಂದರ್ಭಾನುಸಾರ ನಿಯಮಗಳನ್ನು ಅನುಸರಿಸಬೇಕಾಗಿ ಬರುತ್ತದೆ. ಉದಾಹರಣೆಗೆ ಹೇಳುವುದಾದರೆ, ಶ್ರೀಯಂತ್ರಕ್ಕೆ ತನ್ನದೇ ಆದಂತಹ ಆಕೃತಿ, ಬಣ್ಣ ಹಾಗೆ ಬುದ್ಧನ ಕಲಾಕೃತಿಗಾಗುವಾಗ ಒಂದೇ ರೀತಿಯ ಬಣ್ಣಗಳ ಸಂಯೋಜನೆಯಲ್ಲಿ ಬಿಡಿಸಬೇಕಾಗುವುದು.

    ಸಾಮಾನ್ಯವಾಗಿ ಧಾರ್ಮಿಕ ಆಚರಣೆಗಳಲ್ಲಿ ಬಿಡಿಸುವ ಓಂ ಮಂಡಲ ಹಾಗೂ ಏಳು ಚಕ್ರಮಂಡಲದಂತಹ ರಚನೆಗಳನ್ನು ಬಿಡಿಸುವಾಗ ಬಳಸಲಾಗುವ ಒಂದೊಂದು ಬಣ್ಣಕ್ಕೂ ತನ್ನದೇ ಆದಂತಹ ವಿಶಿಷ್ಟ ಕಲ್ಪನೆ ಹಾಗೂ ಅರ್ಥವಿರುತ್ತದೆ. ತದಂತೆ ಒಂದು ನಿರ್ದಿಷ್ಟ ಪದ್ದತಿಯನ್ನು ಆಧಾರವಾಗಿಟ್ಟುಕೊಂಡು ಶಾಸ್ತ್ರೀಯವಾಗಿ ರಚಿಸುವ ಬದ್ಧತೆಯೂ ಇರುತ್ತದೆ. ಆದರೆ ಧಾರ್ಮಿಕವಲ್ಲದ ಮಂಡಲಗಳನ್ನು ಬಿಡಿಸುವಾಗ ನಮ್ಮದೇ ಆದಂತಹ ಕ್ರಿಯಾತ್ಮಕ ಶೈಲಿಯಲ್ಲಿ, ವೀಕ್ಷಿಸುವವನ ಕಣ್ಣರಳಿಸುವಂತಾಗಲು, ವಿಭಿನ್ನ
    ರೀತಿಯಲ್ಲಿ ಸುಂದರವಾಗಿ ಬಿಡಿಸಬಹುದು. ಉದಾಹರಣೆಗಾಗಿ, ವಿವಿಧ ಬಣ್ಣಗಳ ಹೂವಿನ ಆಕೃತಿಯಲ್ಲಿ ಮಂಡಲಗಳನ್ನು ಬಿಡಿಸುವಾಗ ಆಯಾಯ ಹೂವಿನ ಸಂಯೋಜಿತ ಬಣ್ಣಗಳನ್ನೇ ಬಳಸಲಾಗುತ್ತದೆ. ಈ ಸ್ಲೈಡ್ ಶೋ ನೋಡಿ.

    ಸಾಂಪ್ರದಾಯಿಕ ಮಂಡಲಗಳಲ್ಲಿ ಬಣ್ಣಗಳ ಬಳಕೆ

    ಶ್ರೀಮತಿ ಗಾಯತ್ರಿಯವರು ಸಾಂಪ್ರದಾಯಿಕ ಮಂಡಲಗಳನ್ನು ಬಿಡಿಸುವುದರಲ್ಲಿ ಎತ್ತಿದಕೈ. ಇವರು ವಿಶೇಷವಾಗಿ ಕಲ್ಲು, ಕ್ಯಾನವಾಸ್ ಹಾಗೂ ಸೀಡಿಗಳ ಮೇಲೆ ಬಿಡಿಸಿರುವಂತಹ ಮಂಡಲಗಳನ್ನು ನೋಡುವುದೇ ಕಣ್ಣಿಗೆ ಒಂದು ಆನಂದ. ಕಪ್ಪು ಬಣ್ಣದಲ್ಲಿ ಮಂಡಲಗಳನ್ನು ವಿಭಿನ್ನ ರೀತಿಯಲ್ಲಿ ಬಿಡಿಸುವ ಇವರ ನಿಪುಣತೆ ಈ ಕಲೆಯ ಕ್ಷೇತ್ರದಲ್ಲಿ ಇವರಿಗೆ ಒಂದು ವಿಶಿಷ್ಟ ಸ್ಥಾನಮಾನ ದೊರಕಿಸಿಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು.

    ಮಂಡಲಕಲೆ ಧ್ಯಾನದಲ್ಲಿ ಬಳಕೆ

    ಮಂಡಲಕಲೆ ಒಂದು ಸೂಕ್ಷ್ಮ ಕಲೆ ಎಂದೇ ಹೇಳಬಹುದು. ಚಿತ್ರಕಾರನು ಏಕಾಗ್ರ ಚಿತ್ತತೆಯಿಂದ ಮಂಡಲಗಳನ್ನು ಬಿಡಿಸುವ ಅಗತ್ಯತೆಯು ಪ್ರಮುಖಗಿರುವಾಗ, ಗಾಯಯತ್ರಿಯವರು ಹೇಳುವಂತೆ, ಇದೊಂದು ರೀತಿಯಲ್ಲಿ ಧ್ಯಾನಾಭ್ಯಾಸವೇ ಸರಿ.

    ಚುಕ್ಕೆಗಳ ಬಳಕೆ

    ಮಂಡಲಕಲೆಯನ್ನು “ಚುಕ್ಕೆ ಚಿತ್ರ “(Dot Painting) ಎಂದು ಕರೆಯುತ್ತಾರೆ. ಚಿಕ್ಕ ಚಿಕ್ಕ ಚುಕ್ಕಿಗಳನ್ನು ಪೋಣಿಸಿ ಒಂದು ಕಲಾಕೃತಿಯ ರೂಪವನ್ನು ಕೊಡುವಲ್ಲಿ ಸಾಮಾನ್ಯವಾಗಿ 7-8 ಗಂಟೆ ತಗಲುವುದೂ ಇದೆ. ಒಂದು ಸುಂದರವಾದ ಮಂಡಲವನ್ನು ಸಣ್ಣ ಚುಕ್ಕೆಗಳನ್ನು ಪೋಣಿಸಿ ಬಿಡಿಸಲು ಹೆಚ್ಚಿನ ಸಮಯ ಹಾಗೂ ದೊಡ್ಡ ಚುಕ್ಕೆಗಳನ್ನು ಪೋಣಿಸಿ ಕಡಿಮೆ ಸಮಯ ತಗಲುತ್ತದೆ.

    ಹೀಗೆ ವಿಭಿನ್ನ ಮತ್ತು ವಿಶಿಷ್ಟ ರೀತಿಯ ಮಂಡಲ ಕಲಾಕೃತಿಗಳನ್ನು ಬಿಡಿಸಿ ನಾಡಿನ ವಿವಿದೆಡೆ ಕಲಾಪ್ರದರ್ಶನಗಳನ್ನು ನಡೆಸಿಕೊಟ್ಟಿರುವ ಗಾಯತ್ರಿಯವರು ತನ್ಮೂಲಕ ಅಪಾರ ಜನಪ್ರಿಯತೆ
    ಸಂಪಾದಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಆಸಕ್ತರಿಗೆ ಸಂತೋಷದಿಂದ ಕಲಿಸುವ ಇವರು, ಈ ಕಲೆಯನ್ನು ಪೋಷಿಸಿ, ಜನಪ್ರಿಯಗೊಳಿಸುವುದು, ತನ್ಮೂಲಕ ಈ ಪ್ರಾಚೀನ ಕಲೆಯನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಿಡುವುದು ತನ್ನ ಪರಮ ಗುರಿ ಎಂದು ಹೇಳುತ್ತಾರೆ.

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.


    ಕೊರೊನಾ ಲಸಿಕೆಗೆ ಇನ್ನು ಕೆಲ ದಿನ ಕಾಯಲೇಬೇಕು

    ವಿಶ್ವದಾದ್ಯಂತ ಇಂದು ದಿಢೀರ್ ಕೊರೊನಾ ವೈರಸ್ ಲಸಿಕೆ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿಯೋ ಸುದ್ದಿ. ಆದರೆ ಸಂಪೂರ್ಣ ಅನುಮೋದನೆ ಪಡೆದ ಲಸಿಕೆ ಬಿಡುಗಡೆಯಾಗಲು ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

    ಲಂಡನ್ ನ ಪ್ರಮುಖ ಆಸ್ಪತ್ರೆಯು ಮುಂದಿನ ತಿಂಗಳು ಕೊರೊನಾ ವೈರಸ್ ಲಸಿಕೆಯ ಮೊದಲ ಬ್ಯಾಚ್ ಅನ್ನು ಸ್ವೀಕರಿಸಲು ಸಜ್ಜಾಗಿದೆ. ಅಲ್ಲಿನ “ಸನ್” ಪತ್ರಿಕೆ, ನ್ಯಾಷನಲ್ ಹೆಲ್ತ್ ಸರ್ವೀಸ್ ಈ ಲಸಿಕೆಯನ್ನು ನವೆಂಬರ್ 2ರಿಂದ ನೀಡಲು ಪ್ರಾರಂಭಿಸಲಿದೆ ಎಂದು ವರದಿ ಮಾಡಿದೆ. ಆದರೆ ಅದು ಅಂತಿಮ ಪ್ರಯೋಗಾತ್ಮಕ ಹಂತಕ್ಕಾಗಿ ಆಸ್ಪತ್ರೆ ಸಿಬ್ಬಂದಿಗೆ ಮಾತ್ರ ನೀಡಲಾಗುತ್ತದೆ. ಸಾರ್ವಜನಿಕರಿಗೆ ಅಲ್ಲ ಎಂದು ಲಂಡನ್ ನ ವೈದ್ಯಕೀಯ ಮೂಲಗಳು ಕನ್ನಡಪ್ರೆಸ್.ಕಾಮ್ ಗೆ ತಿಳಿಸಿವೆ.

    ಆದರೂ ಇದು ಇಡೀ ವಿಶ್ವಕ್ಕೆ ಬಾಧಿಸುತ್ತಿರುವ ಕೊರೊನಾ ವೈರಸ್ ವಿರುದ್ಧ ಮಾನವರ ಹೋರಾಟದ ಯಶಸ್ಸಿನ ಕುರಿತು ಭರವಸೆ ಮೂಡಿಸುತ್ತಿರುವ ಸುದ್ದಿಯಾಗಿದೆ. ಲಸಿಕೆ ನಿಜಕ್ಕೂ ಪೂರ್ಣ ರೀತಿಯಲ್ಲಿ ಸಜ್ಜಾಗಿದೆಯೇ ಎನ್ನುವುದರ ಕುರಿತು ಸ್ಪಷ್ಟತೆ ಇಲ್ಲ. ಆದಾಗ್ಯೂ ಈ ಕುರಿತು ಬಹಳ ಚರ್ಚೆ ನಡೆಯುತ್ತಿದೆ ಮತ್ತು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

    ಈ ಲಸಿಕೆಯನ್ನು ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ಯೂನಿವರ್ಸಿಟಿ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಲಸಿಕೆ ಯುವಜನರು ಹಾಗೂ ವೃದ್ಧರಲ್ಲಿಯೂ ಸದೃಢವಾದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿವೆ ಎಂದು ಹೇಳಲಾಗಿದೆ. ಭಾರತದಲ್ಲಿ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಮೂರನೇ ಹಂತ ತಲುಪಿವೆ. ಇಲ್ಲಿಯವರೆಗಿನ ಪರೀಕ್ಷೆಗಳಲ್ಲಿ ಅಡ್ಡ ಪರಿಣಾಮಗಳು ಕಡಿಮೆ ಕಾಣಿಸಿದ್ದು ಇದು ಕೋವಿಡ್-19ಕ್ಕೆ ರಾಮಬಾಣವಾಗಲಿದೆ ಎಂಬ ವಿಶ್ವಾಸ ಎಲ್ಲರಲ್ಲೂ ತಂದಿದೆ.

    ಜಾಗತಿಕ ಲಸಿಕೆ ಕಂಡುಹಿಡಿಯುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಆಸ್ಟ್ರಾಜೆನೆಕಾ ಈ ಔಷಧವು ವೃದ್ಧರಲ್ಲಿಯೂ ಅಡ್ಡ ಪರಿಣಾಮಗಳನ್ನು ಕಡಿಮೆ ತೋರಿಸಿದೆ ಎಂದು ಹೇಳಿದೆ.

    ಇದೇ ಸಂದರ್ಭದಲ್ಲಿ ಯು.ಎಸ್.ನ ಔಷಧ ತಯಾರಿಕಾ ಸಂಸ್ಥೆ ಪಿಫೈಜರ್, ಜರ್ಮನಿಯ ಔಷಧ ಕಂಪನಿ ಬಯೋಎನ್ ಟೆಕ್ ನೊಂದಿಗೆ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಇದು ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಗಳಿಗೆ 42,113 ಸ್ವಯಂಸೇವಕರನ್ನು ನೋಂದಣಿ ಮಾಡಿಕೊಂಡಿದೆ. ಈ ಸಂಸ್ಥೆ ಕೂಡಾ ನವೆಂಬರ್ ಅಂತ್ಯಕ್ಕೆ ಅಧಿಕೃತ ಮಾನ್ಯತೆಯನ್ನು ಕೋರಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಈ ವರ್ಷಾಂತ್ಯಕ್ಕೆ ಲಸಿಕೆ ದೊರೆಯುವ ನಿರೀಕ್ಷೆ ಇದೆ.

    ಆದರೆ ಕೊರೊನಾ ವೈರಸ್ ಮಾತ್ರ ಈ ಯಾವುದಕ್ಕೂ ಹಿಂಜರಿಯದೆ ತನ್ನ ಬೇಟೆ ವಿಸ್ತರಿಸುತ್ತಿದೆ. ಭಾರತದಲ್ಲಿ 36,470 ಪ್ರಕರಣಗಳು ವರದಿಯಾಗಿದ್ದು 488 ಮರಣಗಳು ಹಾಗೂ ಒಟ್ಟು ಪ್ರಕರಣಗಳ ಸಂಖ್ಯೆ 79,46,429ಕ್ಕೆ ಏರಿಸಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳು 6,25,857 ಆಗಿವೆ.

    ಕೆಲ ಜನಪ್ರಿಯ ರಾಜ್ಯ ಸರ್ಕಾರಗಳು ಕೂಸು ಹುಟ್ಟುವ ಮುನ್ನವೇ ಉಚಿತ ಲಸಿಕೆಯ ಕುಲಾವಿ ನೀಡುತ್ತಿವೆ.

    error: Content is protected !!