28 C
Karnataka
Sunday, May 19, 2024

    ಹೊಸಬೆಳಕು ಮೂಡುತಿದೆ….ಮತ್ತೆ ಕೈಗೆ ಬರಲಿದೆ ಚಾಕ್‌ಪೀಸ್‌, ಡಸ್ಟರ್‌!

    Must read

    .

    ಕಣ್ಣ ಮುಚ್ಚಲು ರೆಪ್ಪೆಯಡಿಯಲಿ
    ಮನವ ಸೋಂಕುವ ಕತ್ತಲು
    ಕನಸಿನಂಗಳ ಒರೆಸಿ ಬೆಳಗುತ
    ಸಜ್ಜು ನಾಳೆಯ ಕಟ್ಟಲು…

    ಕತ್ತಲೆಂಬುದು ಶಾಶ್ವತವಲ್ಲ, ಅದು ಜಗದ ಅಂತ್ಯವೂ ಅಲ್ಲ, ಅದು ಬೆಳಕಿನ ಹಾದಿಗೆ ಮುನ್ನುಡಿಯಷ್ಟೆ…ಅದೆಷ್ಟು ನಿಜವಲ್ಲವೇ…ನಮ್ಮ ಜೀವನವೆಂಬ ಸುಂದರ ಯಾನದಲ್ಲಿ ಕಷ್ಟಗಳೆಂಬ ಕತ್ತಲು ಸುಳಿಯಿತೆಂದು ಸರಿದು ಮರೆಯಾಗಲು ಸಾಧ್ಯವೇ? ಖಂಡಿತಾ ಇಲ್ಲ. ಜೀವನದ ಅಚ್ಚರಿಗಳನ್ನು ಕಣ್ತುಂಬಿಕೊಳ್ಳುತ್ತಾ ಭವಿಷ್ಯದ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಾರಿ ಕೊರೋನಾ ಆಘಾತ ನೀಡಿದೆ. ಆದರೀಗ ಕತ್ತಲು ಸರಿದು ಬೆಳಕು ಮೂಡುವ ಸಮಯ ಬಂದೇಬಿಟ್ಟಿದೆ.

    ಹೌದು…ಮೊದಮೊದಲು ಕೊರೋನಾದ ಕತ್ತಲು ಕವಿದರೂ ಆನ್‌ಲೈನ್‌ ಪಾಠವೆಂಬ ಚಂದಿರನಿದ್ದಾನಲ್ಲ ಎಂಬ ಹುಂಬ ಧೈರ್ಯವಿತ್ತು. ಹೊಸತನ ಮೂಡಿಸುವ ಸಹಜ ಕುತೂಹಲವದು…ಆದರೆ ಬರುಬರುತ್ತಾ ಅಮಾವಾಸ್ಯೆಯ ಅನುಭವ. ಆನ್‌ಲೈನ್‌ ಪಾಠದ ಕುತೂಹಲ ಮರೆಯಾಗಿತ್ತು. ಅದೊಂದು ಹೊರೆಯಾಗತೊಡಗಿತು. ಕಾಲೇಜ್‌ ಕಾರಿಡಾರ್‌, ಸ್ನೇಹಿತರು ನೆನಪಾಗತೊಡಗಿದರು. ಈಗ ಕ್ಲಾಸ್‌ ಯಾವಾಗ ಆರಂಭವಾಗುತ್ತೆ ಎಂಬ ಮೂಲಪ್ರಶ್ನೆ!

    ಕೊರೋನಾ ಕತ್ತಲಲ್ಲಿ ಉಪನ್ಯಾಸಕರಿಗೂ ವಿದ್ಯಾರ್ಥಿಗಳೇ ಮಿಂಚುವ ನಕ್ಷತ್ರಗಳು, ಆ ನಕ್ಷತ್ರಗಳಲ್ಲೇ ಬೆಳಕು ಕಾಣುವ ಪ್ರಯತ್ನ. ತಂತ್ರಜ್ಞಾನದ ಬಲೆಯಲ್ಲಿ ಸಿಲುಕಿ ನಲುಗಿದ ಹಿರಿಯರು ಒಂದೆಡೆಯಾದರೆ, ತಮ್ಮೆಲ್ಲಾ ಪಟ್ಟುಗಳನ್ನು ಪ್ರಯೋಗಿಸಿಯೂ ತರಗತಿ ಪಾಠಗಳಿಗೆ ಆನ್‌ಲೈನ್‌ ಸಮವಲ್ಲ ಎಂದು ಕಂಡುಕೊಂಡವರು ಹಲವರು. ಕಂಪ್ಯೂಟರ್‌/ ಮೊಬೈಲ್‌ ತೆರೆಯ ಮೇಲಿನ ಪುಟ್ಟ ಕೋಣೆಗಳಲ್ಲಿ ವಿದ್ಯಾರ್ಥಿಗಳನ್ನು ನೋಡಿ, ಅವರ ಧ್ವನಿ ಕೇಳಿ ಖುಷಿಪಟ್ಟು ಪಾಠವೊಪ್ಪಿಸುವ ಸಂಕಟ ಹೇಳಲಾದೀತೇ?

    ನವೆಂಬರ್‌ 17 ರಿಂದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಹೊಸ ಬೆಳಕಿನ ಸೂಚನೆ ನೀಡಿದೆ. ಆಭರಣವಿಲ್ಲದ ಮದುವಣಗಿತ್ತಿಯಂತಿದ್ದ ಕಾಲೇಜ್‌ ಕಾರಿಡಾರ್‌ಗಳಲ್ಲಿ ಕನಸು ಕಂಗಳ, ಉತ್ಸಾಹಿ ಮನಸ್ಸುಗಳ ವಿದ್ಯಾರ್ಥಿಗಳು ಕಂಡಾರೆಂಬ ಭರವಸೆ ಮೂಡಿದೆ. ಇನ್ನು ಒಮ್ಮೆಯೂ ತಮ್ಮ ಕಾಲೇಜಲ್ಲಿ ಪಾಠ ಕೇಳದ ಹೊಸಬರನ್ನು ಮುಖತಃ ನೋಡಲು ಅವರಂತೆಯೇ ಅಧ್ಯಾಪಕರೂ ಕಾತರರಾಗಿದ್ದಾರೆ. ಕಾಲೇಜೆಂಬ ಕಟ್ಟಡ ಆರೇಳು ತಿಂಗಳುಗಳ ಬಳಿಕ ಜೀವಂತಿಕೆ ಪಡೆದುಕೊಳ್ಳಲಿದೆ.ಅಧ್ಯಾಪಕರ ಕೈಗೆ ಮತ್ತೆ ಚಾಕ್‌ ಪೀಸ್‌ ಡಸ್ಟರ್‌ ಬರಲಿದೆ.

    ಆನ್‌ಲೈನ್‌ನಲ್ಲಿ ಕಾಡುವ ಏಕತಾನತೆಯ ಭಾವ ಮರೆಯಾಗಲಿದೆ ಎಂಬ ಕಲ್ಪನೆಯೇ ರೋಮಾಂಚಕ. ನಗುವ, ಅಳುವ, ಮೌನದಲ್ಲಿ ಲೀನವಾಗುವ, ಖುಷಿಯಲ್ಲಿ ತೇಲುವ ವಿದ್ಯಾರ್ಥಿಗಳಲ್ಲಿ ನಮ್ಮನ್ನು ನಾವು ಕಳೆಯುವ ದಿನಗಳು ಹತ್ತಿರವಾಗಿವೆ. ಅವರ ಕೇಳುವ/ ಕೇಳದ ಪ್ರಶ್ನೆಗಳಿಗೆ ಉತ್ತರಿಸುವ, ಹೇಳದ ಸಮಸ್ಯೆಗಳಿಗೆ ಕಿವಿಯಾಗುವ, ಅವರ ಮಿತಿಯಿಲ್ಲದ ಖುಷಿಯಲ್ಲಿ ನಾವೂ ಸಂಭ್ರಮಿಸಲಿದ್ದೇವೆ. ಒಂದಷ್ಟು ಗದರುವ, ಒಂಚೂರು ಹೊಗಳುವ ಅನಿವಾರ್ಯ ಪರಿಪಾಠ ಮತ್ತೆ ಆರಂಭವಾಗಲಿದೆ.

    ಆನ್‌ಲೈನ್‌ನಲ್ಲಿ ನೋಡಲಾಗದ ವಿದ್ಯಾರ್ಥಿಗಳ ಭಾವ-ಭಂಗಿ, ಕೇಳಲಾಗದೆ ಇದ್ದ ಭಾಷೆಯ ಸೊಗಡನ್ನು ಅರ್ಥಮಾಡಿಕೊಳ್ಳುವ, ಸ್ಪಂದಿಸುವ ದಿನಗಳು ಮತ್ತೆ ಬಂದಿವೆ. ಪ್ರತಿ ವ್ಯಕ್ತಿಯೂ ಅನನ್ಯವೆಂಬುದು ಸಾರ್ವಕಾಲಿಕ ಸತ್ಯ. ಈ ಅನನ್ಯತೆಯನ್ನು ಅರಿಯುವ, ಎಲ್ಲೋ ಹುದುಗಿರುವ ಪ್ರತಿಭೆಯ ಅನಾವರಣಕ್ಕೆ ಕಾಲ ಕೂಡಿ ಬಂದಿದೆ. ಈಗಲೇ ಅಲ್ಲದಿದ್ದರೂ ಮತ್ತೆ ಕಾಲೇಜಿನ ವೇದಿಕೆಗಳಲ್ಲಿ ವಿದ್ಯಾರ್ಥಿಗಳು ಮಿಂಚಲಿದ್ದಾರೆ. ಎದುರಲ್ಲಿ ನಮಸ್ಕರಿಸಿ, ಮರೆಯಲ್ಲಿ ಬಗೆಬಗೆಯ ಅಡ್ಡಹೆಸರಿಟ್ಟು ಕರೆದು ಕಾಡುವ ವಿದ್ಯಾರ್ಥಿಗಳನ್ನು ಎದುರಿಸಲೂ ಅಧ್ಯಾಪಕರೂ ಸಿದ್ಧರಾಗಲೇಬೇಕು!

    ಅದೇನೇ ಇರಲಿ, ಕಾಲೇಜು ಜೀವನ ವಿದ್ಯಾರ್ಥಿಗಳ ಜೀವನದಲ್ಲಿ ಅಮೂಲ್ಯ ಘಟ್ಟ. ಇಲ್ಲಿ ಅವರು ಹಲವರಿಂದ ಪ್ರೇರಣೆ ಪಡೆಯುತ್ತಾರೆ. ಅನುಭವಗಳಿಂದ ಪಾಠ ಕಲಿಯುತ್ತಾರೆ. ಹಲವು ಬಾರಿ ಹೆತ್ತವರಿಗಿಂತಲೂ ಸ್ನೇಹಿತರು, ಅಧ್ಯಾಪಕರು ನೆರವಾಗಬಹುದು. ಹೆತ್ತವರಿಗೆ ತಿಳಿಯದ ವಿದ್ಯಾರ್ಥಿಗಳ ನಡವಳಿಕೆಯನ್ನು ಶಿಕ್ಷಕರು ಗಮನಿಸಿ ತಿದ್ದುತ್ತಾರೆ. ಕಾಲೇಜ್‌ನ ಲೈಬ್ರೆರಿ, ಆಟದ ಮೈದಾನ, ಸಾಂಸ್ಕೃತಿಕ ಚಟುವಟಿಕೆಗಳು, ಚುನಾವಣೆ, ಸಾಹಿತ್ಯ, ಸಂಶೋಧನೆ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುತ್ತವೆ. ಹೀಗಾಗಿ ಕಾಲೇಜು ದಿನಗಳು ನಾಳೆಯನ್ನು ಕಟ್ಟಲು ಬಹು ಅಮೂಲ್ಯ.

    ಈ ಮಧ್ಯೆ ನಾವು ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ʼನ್ಯೂ ನಾರ್ಮಲ್‌ʼ ಅನ್ನುವುದು ಅಷ್ಟೇನೂ ಸುಲಭವಲ್ಲ ಎಂಬುದು. ಇದಕ್ಕೆ ಒಗ್ಗಿಕೊಳ್ಳಲು ಸಮಯ ಬೇಕು, ನಮ್ಮನ್ನು ಇನ್ನೂ ಬಿಟ್ಟು ಹೋಗದ ಕೊವಿಡ್‌-19 ವಿರುದ್ಧ ವಹಿಸಬೇಕಾದ ಎಚ್ಚರಿಕೆ ಕಿರಿಕಿರಿ ಉಂಟುಮಾಡುವುದು ಗ್ಯಾರಂಟಿ. ಜೊತೆಗೆ ಭವಿಷ್ಯದಲ್ಲಿ ಆನ್‌ಲೈನ್‌ ಶಿಕ್ಷಣವೆಂಬುದು ನಮ್ಮ ಜೊತೆಗಿರಲಿದೆ. ಆದರೂ ಸಂಪೂರ್ಣವಾಗಿ ತಂತ್ರಜ್ಞಾನದ ಆಳಾಗಿರದೆ ಮಾತನ್ನಷ್ಟೇ ಅಲ್ಲದೆ, ಮಾತಿನ ಹಿಂದಿನ ಭಾವವನ್ನು, ಹಾವಭಾವಗಳನ್ನು ಅರ್ಥಮಾಡಿಕೊಳ್ಳಲು ತರಗತಿ ಪಾಠ ಅನುಕೂಲವಾಗಲಿದೆ.

    ಕತ್ತಲು ಕವಿದು ಬೆಳಕಾಗುವಷ್ಟರಲ್ಲಿ ನಾವು ಕೆಲವನ್ನು ಕಳೆದುಕೊಳ್ಳಬೇಕಾಗಬಹುದು. ಆದರೆ ನಮ್ಮ ಭರವಸೆ ಮುದುಡದಿರಲಿ. ಮೂಡುವ ಹೊಸಬೆಳಕಲ್ಲಿ ನಮ್ಮ ಕತ್ತಲ ಕನಸುಗಳನ್ನು ನನಸಾಗಿಸೋಣ.

    (ತರಗತಿಗಳು ಪುನಃ ಆರಂಭವಾಗುವ ಈ ಸಂದರ್ಭದಲ್ಲಿ ಶಿಕ್ಷಕನಾಗಿ ನನಗನಿಸಿರುವುದನ್ನು ಶಬ್ದ ರೂಪಕ್ಕೆ ಇಳಿಸುವ ಪ್ರಯತ್ನವಿದು.)

    ಗುರುಪ್ರಸಾದ್‌ ಟಿ.ಎನ್‌
    ಗುರುಪ್ರಸಾದ್‌ ಟಿ.ಎನ್‌
    ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯವರಾದ ಗುರುಪ್ರಸಾದ್ ಟಿ ಎನ್ ಜನಪ್ರಿಯ ಸುದ್ದಿ ವಾಹಿನಿ ಟಿವಿ 9ನಲ್ಲಿ ಎರಡು ವರ್ಷ, ಆಂಗ್ಲ ದೈನಿಕ ಡೆಕ್ಕನ್‌ಹೆರಾಲ್ಡ್‌‌‌ನಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಿಂದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ ಪತ್ರಿಕೋದ್ಯಮ ಉಪನ್ಯಾಸಕರಾಗಿದ್ದಾರೆ. ಸುಮಾರು ಹದಿನೈದಕ್ಕೂ ಹೆಚ್ಚು ಡಾಕ್ಯುಮೆಂಟರಿಗಳಿಗೆ ಹಿನ್ನೆಲೆ ಧ್ವನಿ ನೀಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಭಾಷಾಂತರದಲ್ಲಿ ವಿಶೇಷ ಆಸಕ್ತಿ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!