23.7 C
Karnataka
Friday, May 22, 2026
    Home Blog Page 138

    ನ್ಯೂ ನಾರ್ಮಲ್ ತಂದ ಹೊಸ ಅವಕಾಶ- ಬೆಂಗಳೂರು ಆಚೆಗೂ ಐಟಿ ವಿಸ್ತರಣೆ

    ರಾಜಧಾನಿ ಬೆಂಗಳೂರು ನಗರವನ್ನು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಶಕ್ತಿಶಾಲಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಟ್ಟಿದ್ದು, ಅದಕ್ಕೆ ಪೂರಕವಾದ ಹೊಸ ಐಟಿ ನೀತಿಯನ್ನು (2020-25) ಬಿಡುಗಡೆ ಮಾಡಿದೆ.

    ಬೆಂಗಳೂರಿನಲ್ಲಿ ಗುರುವಾರ ಬೆಂಗಳೂರು ಟೆಕ್‌ ಸಮ್ಮಿಟ್‌ಗೆ ಪೂರ್ವಭಾವಿಯಾಗಿ ಐಟಿ ಕ್ಷೇತ್ರ ಅಭಿವೃದ್ಧಿಗೆ ಬೆಂಗಳೂರನ್ನು ಹೊರತುಪಡಿಸಿ ಎರಡನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಟಿಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ 2020-2025ರ ನೂತನ ಐಟಿ ನೀತಿಯನ್ನು ಬಿಡುಗಡೆ ಮಾಡಿದರು.

    ರಾಜ್ಯ ವಿವಿಧ ನಗರಗಳಲ್ಲಿ ಐಟಿ ಕಂಪನಿಗಳ ಸ್ಥಾಪನೆ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ಮಾನವ ಸಂಪನ್ಮೂಲ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಅಂಶಗಳನ್ನು ಐಟಿ ನೀತಿ ಒಳಗೊಂಡಿದ್ದು, ಇದರಿಂದ ನಮ್ಮ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಡಿಸಿಎಂ ಹೇಳಿದರು.

    ಈಗಾಗಲೇ ಎರಡನೇ ಹಂತದ ನಗರಗಳಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಪ್ರಯತ್ನಗಳು ನಡೆದಿವೆ. ಮುಖ್ಯವಾಗಿ ಇನ್ಪೋಸಿಸ್‌ ಕಂಪನಿ ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರು ನಗರಗಳಿಗೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ದೊಡ್ಡ ಪ್ರಯತ್ನ ಮಾಡಿತು. ಇದೇ ರೀತಿಯ ಪ್ರಯತ್ನ ಗಳು ಮುಂದಿನ ದಿನಗಳಲ್ಲಿ ರಚನಾತ್ಮಕ ವೇಗ ಪಡೆಯಲಿವೆ ಎಂದರು.

    ಮೂಲಸೌಕರ್ಯಕ್ಕೆ ಒತ್ತು:

    ಸದ್ಯಕ್ಕೆ 5ಜಿ ಹೊಸ್ತಿಲಲ್ಲಿ ಇದ್ದೇವೆ. ಆದರೆ 4ಜಿ ಯನ್ನೇ ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಪ್ರಯತ್ನ ಇನ್ನೂ ಆಗಬೇಕಿದೆ. ಕನೆಕ್ಟಿವಿಟಿ ಎನ್ನುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ಟೆಲಿಕಾಂ ಸೇವೆಗಳ ಪರಧಿಯನ್ನು ವಿಸ್ತರಿಸಬೇಕು. ಈಗಷ್ಟೇ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಗೆ ಬರುತ್ತಿರುವುದರಿಂದ ನೆಟ್‌ವರ್ಕಿಂಗ್‌ ಅತ್ಯಗತ್ಯವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಈಗ ಬಿಯಾಂಡ್‌ ಬೆಂಗಳೂರು ಉಪಕ್ರಮದಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ,ಗುಲ್ಬರ್ಗಾ, ಬೆಳಗಾವಿ ಮತ್ತು ಶಿವಮೊಗ್ಗ ನಗರಗಳತ್ತ ಟೆಲಿಕಾಂ, ಎಲೆಕ್ಟ್ರಾನಿಕ್‌ ಸಿಸ್ಟಮ್‌ ವಿನ್ಯಾಸ ಹಾಗೂ ಅಭಿವೃದ್ಧಿ (ಇಎಸ್‌ಡಿಎಂ) ಹಾಗೂ ಐಟಿ ಕಂಪನಿಗಳನ್ನು ಕಳಿಸಿ ಇಡೀ ರಾಜ್ಯದಲ್ಲಿ ಎಲ್ಲೆಡೆ ಇಂಥ ಸಂಸ್ಥೆಗಳ ಅಸ್ತಿತ್ವ ಇರುವಂತೆ ನೋಡಿಕೊಳ್ಳಲು ಸರಕಾರ ಬಲವಾಗಿ ಯತ್ನಿಸುತ್ತಿದೆ ಎಂದರು ಉಪ ಮುಖ್ಯಮಂತ್ರಿ.

    ವರ್ಕ್‌ ಫ್ರಂ ಎನಿವೇರ್‌:

    ಕೋವಿಡ್‌ ಬಂದ ಮೇಲೆ ನಮ್ಮೆಲ್ಲರ ಸಾಂಪ್ರದಾಯಿಕ ಪರಿಕಲ್ಪನೆಗಳೆಲ್ಲ ಬದಲಾಗಿಬಿಟ್ಟಿವೆ. ಸೋಂಕು ಬರುವುದಕ್ಕೂ ಮೊದಲು ವರ್ಕ್‌ ಫ್ರಂ ಹೋಮ್‌ ಎನ್ನುವುದು ವಿರಳವಾಗಿ ಬಳಸುವ ಪದವಾಗಿತ್ತು. ಕೋವಿಡ್‌ ನಂತರ ಇದು ಸರ್ವೇಸಾಮಾನ್ಯ ಎನಿಸಿತು. ಈಗ ಇನ್ನೂ ಮುಂದೆ ಹೋಗಿ ವರ್ಕ್‌ ಫ್ರಂ ಎನಿವೇರ್‌ ಆಗಿದೆ. ಇದಕ್ಕೆ ಅತ್ಯುತ್ತಮ ನೆಟ್‌ವರ್ಕಿಂಗ್‌, ಕನೆಕ್ಟಿವಿಟಿ ಮಾಡಿದರೆ ಹೆಚ್ಚಿನ ಫಲಶ್ರುತಿಯನ್ನು ಕಾಣಬಹುದು ಎಂದು ಡಿಸಿಎಂ ಹೇಳಿದರು.

    ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊರಗೆ, ಅಂದರೆ; ರಾಜ್ಯದ ಉದ್ದಗಲಕ್ಕೂ ಹೂಡಿಕೆಗೆ ಅತ್ಯುತ್ತಮ ಅವಕಾಶಗಳಿವೆ. ಒಂದೆಡೆ ಶೈಕ್ಷಣಿಕ ಕ್ಷೇತ್ರಕ್ಕೆ ಶಕ್ತಿ ತುಂಬುತ್ತಾ ಮತ್ತೊಂದೆಡೆ ಐಟಿ ಕ್ಷೇತ್ರವನ್ನು ವಿಸ್ತರಿಸುತ್ತಾ ಹೋದರೆ ಅತ್ಯುತ್ತಮ ಸಾಧನೆ ಮಾಡಬಹುದು. ಈಗಾಗಲೇ ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೂ ಮತ್ತಷ್ಟು ಮುಂದೆ ಸಾಗಲಿದೆ. ಈ ನಿಟ್ಟಿನಲ್ಲಿ ಜಾರಿಗೆ ಬರುತ್ತಿರುವ ನೂತನ ಐಟಿ ನೀತಿಯು ಈ ಕ್ಷೇತ್ರದ ವಿಕೇಂದ್ರೀಕರಣಕ್ಕೆ ಶಕ್ತಿ ತುಂಬುತ್ತದೆ ಎಂದು ತಿಳಿಸಿದರು.

    ಕೋವಿಡ್‌ ಪಿಡುಗನ್ನು ಟೆಕ್ನಾಲಜಿಯಿಂದಲೇ ಪರಿಣಾಮಕಾರಿಯಾಗಿ ಎದುರಿಸಿದ್ದೇವೆ. ಹೀಗಾಗಿ ಮುಂದುವರಿದ ದಿನಗಳಲ್ಲಿ ಇಂಥ ಕಂಪನಿಗಳೆಲ್ಲವೂ ಬೆಂಗಳೂರಿನಲ್ಲೇ ಬೀಡುಬಿಡುವುದು ಸರಿಯಲ್ಲ. ವೈಜ್ಞಾನಿಕವಾಗಿ ಎಲ್ಲ ಕ್ಷೇತ್ರಗಳನ್ನು ಎರಡನೇ ಹಂತದ ನಗರಗಳಿಗೆ ವಿಕೇಂದ್ರೀಕರಿಸಬೇಕು ಎಂಬುದು ನೂತನ ಐಟಿ ನೀತಿಯ ಆಶಯ ಎಂದು ಅವರು ಹೇಳಿದರು.

    ಹೊರಗೆ ಉತ್ತಮ ಅವಕಾಶಗಳಿವೆ:
    ಈ ಸಂದರ್ಭದಲ್ಲಿ ಮಾತನಾಡಿದ ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, “ಬೆಂಗಳೂರಿನ ಹೊರಗೂ ಐಟಿ ಕ್ಷೇತ್ರಕ್ಕೆ ಅತ್ಯುತ್ತಮ ಅವಕಾಶಗಳಿವೆ. ಶ್ರೇಷ್ಠ ಮಾನವ ಸಂಪನ್ಮೂಲವೂ ಸಿಗುತ್ತಿದೆ. ಮೇಲಾಗಿ ಯಾವುದಾದರೂ ಸಮಸ್ಯೆ ಎದುರಾದರೂ ಸಕಾಲಕ್ಕೆ ಮಧ್ಯಪ್ರವೇಶಿಸಿ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳಲು ಸರಕಾರ ಸದಾ ಸಿದ್ಧವಿದೆ” ಎಂದರು.

    “ಈಗಾಗಲೇ ರಾಜ್ಯದ ಎಲ್ಲ ಭಾಗಗಳಲ್ಲೂ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಗೆ ಸರಕಾರ ಹೆಚ್ಚು ಒತ್ತು ನೀಡಿದೆ. ಈಗ ಹೊಸದಾಗಿ ಬಿಡುಗಡೆ ಆಗುತ್ತಿರುವ ಐಟಿ ನೀತಿಯಲ್ಲೂ ಅದಕ್ಕೆ ಪೂರಕವಾದ ಅಂಶಗಳನ್ನು ಅಡಕಗೊಳಿಸಲಾಗಿದೆ” ಎಂದು ರೆಡ್ಡಿ ಮಾಹಿತಿ ನೀಡಿದರು.

    ಐಟಿ ನೀತಿಯಲ್ಲಿ ಏನಿದೆ?

    *ಆವಿಷ್ಕಾರ ಮತ್ತು ತಂತ್ರಜ್ಞಾನದಲ್ಲಿ ರಾಜ್ಯವೂ ಈಗ ಹೊಂದಿರುವ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವುದು ಹಾಗೂ ಇನ್ನೂ ಮುಂದೆ ಸಾಗುವುದು. ಅದಕ್ಕೆ ಬೇಕಾದ ಎಲ್ಲ ಉಪಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವುದು.
    *ರಾಜ್ಯದ ಉದ್ದಗಲಕ್ಕೂ ಹೂಡಿಕೆಯನ್ನು ಉತ್ತೇಜಿಸಿ ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು. ಅದಕ್ಕೆ ಅಗತ್ಯವಾದ ಕಾರ್ಯತಂತ್ರವನ್ನು ರೂಪಿಸುವುದು.
    *ಬೆಂಗಳೂರು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿ ಐಟಿ, ಟೆಲಿಕಾಂ, ಎಲೆಕ್ಟ್ರಾನಿಕ್‌ ಸಿಸ್ಟಮ್‌ ವಿನ್ಯಾಸ ಹಾಗೂ ಅಭಿವೃದ್ಧಿ (ಇಎಸ್‌ಡಿಎಂ) ಕಂಪನಿಗಳನ್ನು ಸ್ಥಾಪನೆ ಮಾಡುವುದು.
    *ಈ ಮೂಲಕ ರಾಜ್ಯವ್ಯಾಪಿ ಉದ್ಯೋಗಾವಕಾಶ ಸೃಷ್ಟಿ ಮಾಡುವುದು. ಈ ನೀತಿಯಿಂದ ಮೂಲಸೌಕರ್ಯ ಅಭಿವೃದ್ಧಿ, ಮಾರುಕಟ್ಟೆ ಅಭಿವೃದ್ಧಿ, ಪರಿಸರ ರಕ್ಷಣೆ, ಕೌಶಲ್ಯಾಭಿವೃದ್ಧಿ, ವ್ಯಾಪಾರ-ವಾಣಿಜ್ಯಾಭಿವೃದ್ಧಿ ಸಾಧ್ಯವಾಗುತ್ತದೆ.
    *ಬೆಂಗಳೂರಿನ ಹೊರಗೆ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುವ ಕಂಪನಿಗಳಿಗೆ ಸರಕಾರ ಎಲ್ಲ ರೀತಿಯ ಆರ್ಥಿಕ, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ, ಅನೇಕ ರಿಯಾಯಿತಿಗಳನ್ನು ನೀಡಲಿದೆ.

    ಐಟಿ ನೀತಿಯ ಗುರಿಗಳು:

    *ಟ್ರಿಲಿಯನ್ ಡಾಲರ್ʼಗೂ ಮೀರಿ ಡಿಜಿಟಲ್ ಆರ್ಥಿಕತೆಯಾಗಿ ಹೊರಹೊಮ್ಮುವ ಭಾರತದ ಗುರಿಗಾಗಿ ಶೇ.30ರಷ್ಟು ಕೊಡುಗೆ ನೀಡಲು ರಾಜ್ಯದ ಐಟಿ ಉದ್ಯಮವನ್ನು ಸಜ್ಜುಗೊಳಿಸುವುದು.
    *2020-2025ರ ಅವಧಿಯಲ್ಲಿ ರಾಜ್ಯದಲ್ಲಿ 60 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗದ ಅವಕಾಶ ಕಲ್ಪಿಸುವುದು.
    *ಐಟಿ ಕ್ಷೇತ್ರವನ್ನು ಆದ್ಯತೆಯ ಮೇರೆಗೆ ವಿಸ್ತರಿಸುವುದು ಹಾಗೂ ಆ ಮೂಲಕ ಎಲ್ಲ ಭಾಗಗಳ ಸಮಾನಾಂತರ ಅಭಿವೃದ್ಧಿಯನ್ನು ಸಾಧಿಸುವುದು.
    *ಐಟಿ ಉದ್ಯಮಕ್ಕೆ ಪೂರಕವಾಗಿ ಬೆಂಗಳೂರು ಹೊರಗೆ ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸುವುದು.
    *ಅಗತ್ಯ ದತ್ತಾಂಶ ಸಂರಕ್ಷಣೆಗೆ ಬೇಕಾದ ಸೈಬರ್ ಭದ್ರತಾ ನೀತಿಯನ್ನು ರೂಪಿಸುವುದು.

    (ಚಿತ್ರದಲ್ಲಿ: ರಾಜ್ಯದ ಹೊಸ ಐಟಿ‌ ನೀತಿ 2020-25 ಅನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ಬತ್ಥನಾರಾಯಣ ಬಿಡುಗಡೆ ಮಾಡಿದರು. ಐಟಿ‌ ನಿರ್ದೇಶಕಿ ಮೀನಾ ನಾಗರಾಜ, ಐಟಿ- ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ‌ ಇದ್ದರು.)

    ಶಿಕ್ಷಕರ ವರ್ಗಾವಣೆಗೆ ಕೊನೆಗೂ ಮುಹೂರ್ತ

    ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ಶಿಕ್ಷಕರ ವರ್ಗಾವಣೆಯ ವೇಳಾಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ‌. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ , ಈ ಬಾರಿ ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾದ ಶಿಕ್ಷಕರಿಗೆ ಮೊದಲ ಆದ್ಯತೆ ಇರಲಿದೆ ಎಂದಿದ್ದಾರೆ.

    ವರ್ಗಾವಣಾ‌ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಇದೇ ತಿಂಗಳ‌ 17ರಿಂದ ಪ್ರಕ್ರಿಯೆ ಪ್ರಾರಂಭವಾಗಲಿದೆ. ಶಿಕ್ಷಕ‌ಮಿತ್ರ ಮೊಬೈಲ್‌ ಆಪ್‌ ಮೂಲಕ ವರ್ಗಾವಣಾ‌ ಪ್ರಕ್ರಿಯೆ ನಿರ್ವಹಣೆಯಾಗಲಿದೆ‌ ಎಂದು ಸಚಿವರು ಹೇಳಿದ್ದಾರೆ.

    ಕಳೆದ‌ ವಿಧಾನ‌ಮಂಡಲದ ಅಧಿವೇಶನದ ಸಂದರ್ಭದಲ್ಲಿ ಶಿಕ್ಷಕ,ಶಿಕ್ಷಣ ಸ್ನೇಹಿಯಾದ ವರ್ಗಾವಣಾ ಕಾಯಿದೆಗೆ ಉಭಯ ಸದನಗಳ ಅನುಮೋದನೆಯನ್ನು ಪಡೆದಿದ್ದೆವು. ಇಂದು ಈ ಕಾಯಿದೆಯನ್ನು  ಆಧರಿಸಿದ ವರ್ಗಾವಣೆಗೆ ಚಾಲನೆ ನೀಡಿದ್ದೇವೆ. ಇದು ದೀಪಾವಳಿಗೆ ಸರ್ಕಾರ ನಮ್ಮ ಶಿಕ್ಷಕ‌ ಸಮುದಾಯಕ್ಕೆ ನೀಡುತ್ತಿರುವ ಕೊಡುಗೆ. ಶಿಕ್ಷಕರಿಗೆ ಇದು ಉಪಯೋಗವಾಗಲಿ, ನಮ್ಮ ವಿದ್ಯಾರ್ಥಿಗಳ ಒಳಿತನ್ನು ಕಾಯಲು ಇದು‌ ಪ್ರೇರಕವಾಗಲಿ ಎಂದು ಸಚಿವರು ಹೇಳಿದ್ದಾರೆ.

    ಈಗಾಗಲೇ ಅಧಿಸೂಚನೆ ಪ್ರಕಟವಾಗಿದ್ದು ಇದೇ ತಿಂಗಳ‌ 17ರಿಂದ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಂತಿಮ ಕೌನ್ಸೆಲಿಂಗ್ ಅರ್ಹತಾ ಪಟ್ಟಿ ಡಿಸೆಂಬರ್ 14ರಂದು ಪ್ರಕಟವಾಗಲಿದೆ. ಈ ಬಗ್ಗೆ ಸರ್ಕಾರ ಹೊರಡಿಸಿರುವ ಅಧಿಕೃತ ಜ್ಞಾಪನದ ಪೂರ್ಣ ಪಾಠ ಇಲ್ಲಿದೆ.

    Photo by Kimberly Farmer on Unsplash

    ಪೂರ್ಣವಾಗಿ ಜೀವಿಸದಿದ್ದರೂ ಜೀವಿಸಿದಷ್ಟೂ ಕಾಲ ಅರ್ಥಪೂರ್ಣವಾಗಿ ಜೀವಿಸಿದ್ದ

    ಕೆಲ ವರ್ಷಗಳ ಹಿಂದೆ ಅಗಲಿದ ಗುಲಾಮ , ಕಂಠೀರವ ಸಿನಿಮಾಗಳ ನಿರ್ದೇಶಕ ತುಷಾರ್ ರಂಗನಾಥ್ ಅವರನ್ನು ಅವರ ಬಹು ಕಾಲದ ಗೆಳೆಯ ಮಾಸ್ತಿ ಇಲ್ಲಿ ನೆನಪಿಸಿಕೊಂಡಿದ್ದಾರೆ.

    ಕ್ಷಮೆಯಿರಲಿ, ಲೇಖನದುದ್ದಕ್ಕೂ ರಂಗನಾಥನನ್ನು ಏಕವಚನದಲ್ಲಿಯೇ ಉಲ್ಲೇಖಿಸಿದ್ದೇಅವನೆ ಕಾರಣ ರಂಗ ನನಗೆ ಹೋಗೋ ಬಾರೋ ಅನ್ನೋವಷ್ಟು ಸಲುಗೆಯ ಗೆಳೆಯ , ಗೌರವ ನಾವಿಬ್ಬರೂ ಬೇರೆಯವರಿಗೆ ಕೊಡುತ್ತಿದ್ದೆವೇ ಹೊರತು ಪರಸ್ಪರ ಹಂಚಿಕೊಳ್ಳುತ್ತಿರಲಿಲ್ಲ .

    ರಂಗನ ಅಪ್ಪ ಪೊಲೀಸು, ಮನೆಯಲ್ಲಿ ತಾಯಿ, ಜೊತೆಗೆ ಅಕ್ಕ ತಮ್ಮ . ಜಾತಿ ಪ್ರೀತಿಗಳಲ್ಲಿ ವರ್ಗಗಳನ್ನಿಟ್ಟುಕೊಳ್ಳದಂಥ ಮಧ್ಯಮ ವರ್ಗದ ಕುಟುಂಬ. ಅಪ್ಪ ಪೊಲೀಸು ಅಂದ ಮೇಲೆ ಶಿಸ್ತಿಗೇನು ಕೊರತೆ ಇರಲಿಲ್ಲ ಹಾಗಂತ ಅವರ ತಂದೆ ಯಾವತ್ತೂ ಯಾವುದನ್ನೂ ಹೇರುತ್ತಿರಲಿಲ್ಲ .
    ಶಿಸ್ತು ತಾನಾಗೇ ರಂಗನಲ್ಲಿ ರೂಢಿಸಿಕೊಂಡಿತ್ತು , ಆಗಿನ ವಿದ್ಯಾಭ್ಯಾಸದ ಪ್ರಮುಖ ಘಟ್ಟ ಅಂತನಿಸಿಕೊಂಡಿದ್ದ ಎಸ್ಎಸ್ಎಲ್ ಸಿ ಯನ್ನು ರಂಗ ಫಸ್ಟ್ ಕ್ಲಾಸಿನಲ್ಲಿ ಪಾಸು ಮಾಡಿದ್ದ. ಮನೆಯಲ್ಲಿದ್ದ ದೊಡ್ಡ ಜವಾಬ್ದಾರಿ ಎಂದರೆ ಅಕ್ಕನ ಮದುವೆ ಅದೂ ಕೂಡ ಆಗಿತ್ತು .

    ಸಣ್ಣ ವಯಸ್ಸಿನಿಂದಲೇ ಸಿನಿಮಾಗಳು ಸಿನಿಮಾದ ಹಾಡುಗಳು ರಂಗನ ಮನಸ್ಸಿನಲ್ಲಿ ಸಿನಿಮಾಸಕ್ತಿಯನ್ನು ಮೂಡಿಸಿತ್ತು ಅನ್ಸುತ್ತೆ . ಆಗಿನಿಂದ ಅವನಲ್ಲಿದ್ದ ಸಿನಿಮಾ ಅಣು ಕಣವಾಗಿ , ಕಣ ಬೀಜವಾಗಿ , ಬೀಜ ಮೊಳಕೆಯೊಡೆದು ನಿಂತಿತ್ತು. ಮೊದಲಿನಿಂದಲೂ ಹನಿಗವನಗಳನ್ನು, ಸಣ್ಣ ಪುಟ್ಟ ಹಾಡುಗಳನ್ನು, ಸಣ್ಣ ಕಥೆಗಳನ್ನು ಓದುವುದೂ ಬರೆಯುವುದು ಮಾಡುತ್ತಿದ್ದ .

    ರಂಗ ಜೀವಕ್ಕಿಂತಲೂ ಮಿಗಿಲಾಗಿ ಇಷ್ಟಪಡ್ತಿದಿದ್ದು ಕನ್ನಡವನ್ನು . ಒಂದಷ್ಟು ದಿವಸ ಕೆಲವು ಸಂಘಟನೆಗಳ ಹಿಂಬಾಲಕರನ್ನು ನಾಯಕರನ್ನು ಭೇಟಿ ಮಾಡಿ ಮಾತನಾಡಿಸಿ ಅವರೊಂದಿಗೆ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ . ಅನಂತರ ಕನ್ನಡ ಸೇವೆ ಮಾಡುವ ರೀತಿ ಇದಲ್ಲ ಎಂದು ನಿರ್ಧರಿಸಿ , ಮನಸ್ಸನ್ನು ಮನಸ್ಸಲ್ಲಿದ್ದ ಕನ್ನಡ ಪ್ರೀತಿಯನ್ನು ಗಟ್ಟಿಮಾಡಿಕೊಂಡು ವಾಪಸ್ ಬಂದುಬಿಟ್ಟಿದ್ದ.

    ಟೀಚರು ಕಲಿಸಿದ ಕನ್ನಡ , ಬದುಕು ಕಲಿಸಿದ ಅನುಭವದೊಂದಿಗೆ ಚಿತ್ರರಂಗದ ಪ್ರವೇಶಕ್ಕೆ ಅಣಿಯಾಗುತ್ತಾನೆ. ಅಷ್ಟೊತ್ತಿಗಾಗಲೇ ಒಂದೆರೆಡು ಒಳ್ಳೆಯ ನೌಕರಿಗಳನ್ನು ಬಿಟ್ಟಿದ್ದ ರಂಗನಿಗೆ ಈ ಅವಧಿಯಲ್ಲಿ ಮನೆಯವರಿಂದ ಸಂಬಂಧಿಕರಿಂದ ವಿರೋಧ ಉಂಟಾಗಿ ಮನೆಯವರು ಇವನಲ್ಲಿನ ಸಿನಿಮಾ ಸಸಿಯನ್ನು ಕಿತ್ತೆಸೆದಾಗ ರಂಗನ ಅಕ್ಕ ಆ ಸಸಿಯನ್ನು ಪುನಃ ನೆಡುತ್ತಾರೆ , ನೀರೆರೆಯುತ್ತಾರೆ . ಆರ್ಥಿಕವಾಗಿ ಸಹಾಯ ಮಾಡಿ ಇವನ ಬೆನ್ನಿಗೆ ನಿಲ್ಲುತ್ತಾರೆ .

    ರಂಗ ಮೊದಲ ಹೆಜ್ಜೆ ಕಿರುತೆರೆಯಲ್ಲಿಡುತ್ತಾನೆ . ಬರವಣಿಗೆ ಚೆನ್ನಾಗಿದ್ದಿದ್ದರಿಂದ ಸೀರಿಯಲ್ ಗಳಲ್ಲಿ ಬರೆಯಲು ಅವಕಾಶ ಸಿಗುತ್ತದೆ ಮತ್ತು ಬಹಳ ಬೇಗ ಕಿರುತೆರೆಯನ್ನು ಅರ್ಥೈಸಿಕೊಂಡು ಗುರುತಿಸಿಕೊಳ್ಳುತ್ತಾನೆ . ಅಲ್ಲಿ ಬಿ ಸುರೇಶರ ಬಳಗದಲ್ಲಿ ಕೆಲಸ ಮಾಡುತ್ತಿದ್ದ ಯೋಗರಾಜ ಭಟ್ಟರ ಪರಿಚಯವಾಗುತ್ತದೆ ಅವರಿಂದ ಸೂರಿಯ ಸಂಗಡ ಲಭಿಸುತ್ತದೆ . ಸಮಾನ ಮನಸ್ಕ ಹಾಗೂ ಸಮಾನ ವಯಸ್ಕನಾದ ಸೂರಿಯೊಂದಿಗೆ ಒಡನಾಟ ಶುರುವಾಗುತ್ತದೆ . ಇವನಿಗಿದ್ದ ವೇಗಕ್ಕೆ ಮತ್ತು ಇವನಿಗಿದ್ದ ಹಸಿವಿಗೆ ಕಿರುತೆರೆ ಸಾಕಾಗುವುದಿಲ್ಲ . ಸಿನಿಮಾ ಬಾಗಿಲನ್ನು ಬಡಿಯಲು ಗಾಂಧೀನಗರ ಪ್ರವೇಶಿಸುತ್ತಾನೆ , ಕಾಕತಾಳೀಯವೆಂದರೆ ಅವನಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಅವಕಾಶ ಮೊದಲಬಾರಿಗೆ ಗಾಂಧೀನಗರ ಅನ್ನೋ ಸಿನಿಮಾದಲ್ಲೇ ಸಿಗುತ್ತದೆ ಲಕ್ಕೀ ಶಂಕರ್ ಅದರ ನಿರ್ದೇಶಕರು .

    ಈ ಸಿನಿಮಾದ ನಂತರ ಸೀರಿಯಲ್ನಿಂದ ಹೊರಬಂದ ಭಟ್ಟರು ಮತ್ತು ಸೂರಿ ಜೋಡಿ ಮಣಿ ಸಿನಿಮಾ ಶುರು ಮಾಡುತ್ತಾರೆ ಅದರಲ್ಲಿಯೂ ರಂಗ ಕೆಲಸ ಮಾಡುತ್ತಾನೆ . ಸಿನಿಮಾ ರಿಲೀಸ್ ಆಗಿ ಹೆಸರು ಮಾಡಿದರೂ ಬಾಕ್ಸಾಫೀಸಿನಲ್ಲಿ ಹಣ ಗಳಿಸಲು ವಿಫಲವಾಗುತ್ತದೆ .

    ಭಟ್ಟರು ಎರಡನೇ ಸಿನಿಮಾಗೆ ಇದೇ ರಂಗನ ಹೆಸರನ್ನು ಬಳಸಿ ರಂಗ ಎಸ್ಎಸ್ಎಲ್ಸಿ ಎಂದು ನಾಮಕರಣ ಮಾಡುತ್ತಾರೆ , ರಂಗ ಇದರಲ್ಲಿ ಕೆಲಸ ಮಾಡುವುದಿಲ್ಲ . ಗಾಂಧೀನಗರ ಸಿನಿಮಾ ಮಾಡುವಾಗ ಲಕ್ಕೀ ಶಂಕರ್ ರಂಗನಿಗೆ ಲಯೇಂದ್ರರನ್ನು ಪರಿಚಯಿಸುತ್ತಾರೆ . ಲಯೇಂದ್ರ ರಂಗನನ್ನು ತನ್ನ ತಮ್ಮ ಸಾಧುಕೋಕಿಲ ಬಳಿ ಕರೆದೊಯ್ಯುತ್ತಾರೆ , ಒಬ್ಬ ರೈಟರ್ ನ ತಲಾಷಿಯಲ್ಲಿದ್ದ ಸಾಧುಕೋಕಿಲರಿಗೆ ರಂಗನ ಕೆಲಸ ಗಟ್ಟಿಮೊಸರಿನಂತೆ ಕಾಣಿಸುತ್ತದೆ . ಅವರ ರಾಕ್ಷಸ ಸಿನಿಮಾಗೆ ಸಹ ನಿರ್ದೇಶಕನಾಗಿ ಸೇರ್ಪಡೆಯಾಗುತ್ತಾನೆ , ಸಹ ನಿರ್ದೇಶನದ ಜೊತೆ ರಂಗ ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ. ಸಿನಿಮಾ ಕಮರ್ಷಿಯಲ್ಲಾಗಿ ಗೆಲ್ಲುತ್ತದೆ , ಕೂಡಲೇ ದರ್ಶನ್ ಅವರು ಸಾಧುಗೆ ಸುಂಟರಗಾಳಿ ಸಿನಿಮಾ ಮಾಡಲು ಕರೆಯುತ್ತಾರೆ .

    ರಂಗ ಸುಂಟರಗಾಳಿ ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುತ್ತಾನೆ. ರಂಗ ಗೀತರಚನೆಕಾರನಾಗಿ ಕಥೆಗಾರನಾಗಿ ಪಯಣ ಮುಂದುವರೆಸುತ್ತಾನೆ , ಬದಲಾವಣೆಯ ಗಾಳಿ ಹೇಗೆ ಬೀಸುತ್ತೆ ಅಂದ್ರೆ ನೋಡುನೋಡುತ್ತಲೇ ಭಟ್ಟರು ಮುಂಗಾರು ಮಳೆ ಸುರಿಸಿ ಯಶಸ್ಸಿನ ಫಸಲು ತೆಗೆಯುತ್ತಾರೆ . ಸೂರಿ ದುನಿಯಾ ಮಾಡಿ ಇತಿಹಾಸ ನಿರ್ಮಿಸುತ್ತಾರೆ , ರಾತ್ರೋರಾತ್ರಿ ಸಹತಾರೆಗಳಂತಿದ್ದ ವಿಜಿ ಮತ್ತು ಗಣೇಶ್ ಧ್ರುವತಾರೆಗಳಾಗುತ್ತಾರೆ .

    ರಾಕ್ಷಸ ,ಸುಂಟರಗಾಳಿ ,ದುನಿಯಾ ಸಿನಿಮಾಗಳ ಯಶಸ್ಸಿನ ನಂತರ ರಂಗ ಸಾಹಿತ್ಯ ಸಂಭಾಷಣೆಯಲ್ಲಿ ತುಂಬಾ ಹೆಸರು ಮಾಡುತ್ತಾ ಹೋಗುತ್ತಾನೆ , ತನ್ನನ್ನು ತಾನು ಬಿಡುವಿಲ್ಲದ ಬರವಣಿಗೆಗೆ ತೊಡಗಿಸಿಕೊಳ್ಳುತ್ತಾನೆ . ಯಾವ ಮಟ್ಟಿಗೆ ಬೆಳೆಯುತ್ತಾನೆಂದರೆ ಯಾರನ್ನು ತನ್ನ ಆದರ್ಶ ಎಂದು ಕನವರಿಸುತ್ತಿದ್ದನೋ ಯಾರನ್ನು ನೋಡಿದರೆ ಸಾಕು ಅಂದುಕೊಳ್ಳುತ್ತಿದ್ದನೋ ಅವರ ಜೊತೆ ಔತಣಕ್ಕೆ , ಕೂಟಕ್ಕೆ , ಗೋಷ್ಠಿಗಳಿಗೆ ಸೇರುವಷ್ಟರ ಮಟ್ಟಿಗೆ ಬೆಳೆಯುತ್ತಾನೆ .

    ಬೆಳೆದಂತೆ ರಂಗನ ಮನಸ್ಸಿನಲ್ಲಿ ಒಂದು ವಿಚಾರ ತಲೆದೋರುತ್ತದೆ . ಎಷ್ಟು ದಿನ ಬೇರೆಯವರ ಕಥೆಗಳಿಗೆ ಮಾತು ಬರೆಯುವುದು ? ಬೇರೆಯವರ ಸಿನಿಮಾಗಳಿಗೆ ಹಾಡು ಬರೆಯುವುದು ? ಗೆಳೆಯರೆಲ್ಲಾ ನಿರ್ದೇಶಕರಾದರು ತಾನೂ ಅಗಬೇಕು ಎಂಬ ಉಮೇದಿಯಿಂದ ನಿರ್ದೇಶಕನಾಗಲು ಹೊರಡುತ್ತಾನೆ . ಕನಸಿನಲ್ಲಿಯೂ ಗುಲಾಮನಂತೆ ಬದುಕದ ರಂಗ ತನ್ನ ಮೊದಲ ಸಿನಿಮಾಕ್ಕೆ ಗುಲಾಮ ಎಂದು ಹೆಸರಿಡಲು ತೀರ್ಮಾನಿಸುತ್ತಾನೆ . ಕಥೆ ಸಿದ್ದಪಡಿಸಿಕೊಂಡು ನಿರ್ಮಾಪಕ ರಾಮು ಮತ್ತು ನಾಯಕ ಪ್ರಜ್ವಲ್ ದೇವರಾಜ್ ಗೆ ಹೇಳುತ್ತಾನೆ . ಸಿಂಗಲ್ ಸಿಟಿಂಗಲ್ಲಿ ಕಥೆ ಓಕೆಯಾಗುತ್ತದೆ . ಗುರುಕಿರಣ್ ಸಂಗೀತದಲ್ಲಿ ಹಾಡುಗಳೂ ಸಿದ್ದವಾಗುತ್ತದೆ , ರಭಸದಿಂದ ಚಿತ್ರೀಕರಣ ಮುಗಿದು ಸಿನಿಮಾ ತೆರೆ ಕಾಣುತ್ತದೆ . ರೌಡೀಸಂ ಬೆರೆತ ಪ್ರೇಮಕಥೆಯಾಗಿದ್ದರಿಂದ ಸಿನಿಮಾ ಭರ್ಜರಿ ಓಪನಿಂಗೇನೋ ಪಡೆಯುತ್ತದೆ ಆದರೆ ಚಿತ್ರಕಥೆಯ ಪರಿಪಾಟಲಿನಿಂದಾಗಿ ಸಿನಿಮಾ ಯಶಸ್ಸು ಪಡೆಯುವುದಿಲ್ಲ .

    ಕಾಲಿನ ಉಗುರು ಕಿತ್ತು ರಕ್ತ ಬಂದಿದ್ದರೂ ಎಲ್ಲಿ ಎಡವಿದೆನೋ ನೆನಪಿಗೆ ಬರುತ್ತಿಲ್ಲ ಎಂಬಂತಹ ಸ್ಥಿತಿ ರಂಗನದ್ದಾಗಿತ್ತು . ಗುಲಾಮ ಸೋಲಿನಿಂದ ಮೇಲೇಳಲು ರಂಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ .ಸಿನಿಮಾ ಎಂಬ ಮಾಯಾಮಹಲ್ಲಿನ ಪಡಸಾಲೆಯಲ್ಲಿ ಒಬ್ಬಂಟಿಯಾಗಿ ನಿಂತಿದ್ದ , ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೇ ಸಿನಿಮಾ ಎಂಬ ಕನಸ್ಸನ್ನು ಬೆನ್ನಟ್ಟಿ ಹಿಡಿದು, ಅದರ ಆಳ ಅಗಲಗಳನ್ನರಿತು ಕಲಿತು ಸಹಾಯಕ , ಸಾಹಿತಿ , ಸಂಭಾಷಣೆಕಾರ , ಸಹನಿರ್ದೇಶಕ, ನಿರ್ದೇಶಕನಾಗಿದ್ದ ರಂಗ ಅಂದು ಅಕ್ಷರಶಃ ಅಧೀರನಾಗಿದ್ದ .

    ಸ್ನೇಹಿತರಲ್ಲಿ ಕೆಲವರನ್ನು ಇವನೇ ದೂರವಿರಿಸಿದ ಕೆಲವರು ತಾವಾಗೇ ದೂರ ಉಳಿದರು . ಇಷ್ಟೊತ್ತಿಗಾಗಲೇ ಮನೆಯವರೊಂದಿಗೆ ಭಾಗಶಃ ಸಂಪರ್ಕ ಕಡಿದುಕೊಂಡಿದ್ದ . ಎಷ್ಟೇ ಅಗಲಿ ಮನೆಯವರಲ್ಲವೇ ಅವರು ಇವನನ್ನು ಎಂದಿ್ಗೂಗೂ ದೂರ ಮಾಡಲಿಲ್ಲ , ರಂಗನ ಪಾಲಿಗೆ ದಿಕ್ಕೇ ದಾರಿತಪ್ಪಿಸಿದಾಗಲೂ ದಿಕ್ಕಾಗಿ ಕಂಡವರು ಅವನ ಅಕ್ಕ . ಆಕೆ ಇನ್ನಿಲ್ಲದಂತೆ ಅರ್ಥಿಕವಾಗಿ ನೆರವಾದಳು . ಸುಧಾರಿಸಿಕೊಂಡ ರಂಗ ನಂತರ ಕಂಠೀರವ ಸಿನಿಮಾ ನಿರ್ದೇಶಿಸುತ್ತಾನೆ , ಅದು ತಕ್ಕ ಮಟ್ಟಿಗೆ ಯಶಸ್ಸು ಪಡೆದರೂ ರಿಮೇಕೆಂದು ನಂತರದ ಅವಕಾಶಗಳು ಕಡಿಮೆಯಾಗುತ್ತವೆ.

    ಪರಿಚಯಸ್ಥರ ಮದ್ಯೆ ಅಪರಿಚನಂತಾಗುತ್ತಾನೆ , ರಂಗನ ಮನಸ್ಸಿನಲ್ಲಿ ಆರೋಗ್ಯಕರ ಸ್ಪರ್ಧೇಯಿದ್ದರೂ ದೇಹದಲ್ಲಿ ಅರೋಗ್ಯವಿರಲಿಲ್ಲ .
    ಒಮ್ಮೆ ಹೃದಯಾಘಾತಕ್ಕೆ ಒಳಗಾಗಿ ಘಾಸಿಕೊಂಡಿದ್ದ ಹೃದಯ ಎರಡನೇ ಬಾರಿ ಸಾವಿನೊಂದಿಗೆ ಶಾಮೀಲಾಗಿಬಿಡುತ್ತದೆ .

    ಗೆಲುವಿಗೇ ಮಣೆ ಹಾಕುವ ಚಿತ್ರೋದ್ಯಮ ಹಾಗೂ ಜಗತ್ತು ಪ್ರಯತ್ನಕ್ಕೆ ಬೆನ್ನು ತಟ್ಟಿದ್ದರೆ ಬಹುಶಃ ರಂಗ ಬದುಕಿರುತ್ತಿದ್ದನೇನೋ , ಹಾಗಾಗಲಿಲ್ಲ , ರಂಗ ಕಾಲವಾಗುತ್ತಾನೆ .ಸಣ್ಣ ಮನಸ್ಸಿನ ಜನರೆದುರು ಅವನು ದೊಡ್ಡವನಾಗಿ ಕಾಣಲೇ ಇಲ್ಲ . ಕಾಣುವ ಯಾವುದೇ ಬರಹಕ್ಕಿಂತಲೂ ಮಿಗಿಲಾದದ್ದು ಕಾಣದ ಹಣೆಬರಹ .

    ಆಟಕ್ಕೆ ಹೆದರದ ಸೋಲಿಗೆ ಹೆದರದ ರಂಗ ಕ್ರೀಡಾಂಗಣದ ಪ್ರೇಕ್ಷಕರಿಗೆ ಹೆದರಿದ್ದ , ಅನಾರೋಗ್ಯದ ನೊವಿಗಿಂತ ಹೆಚ್ಚು ಬಾಧಿಸಿದ್ದು ಅವನಂದುಕೊಂಡದ್ದಾಗಲಿಲ್ಲವೆಂಬ ನೋವು .
    ರಂಗ ಬೆಂಕಿಯಂತಿರದೇ ಬೆಣ್ಣೆಯಂತಿದ್ದರೆ , ಭಾವುಕನಾಗದೇ ನಿರ್ಭಾವುಕನಾಗಿದಿದ್ದರೆ , ನಿಸ್ವಾರ್ಥವನ್ನು ಬದಿಗೊತ್ತಿ ಸ್ವಾರ್ಥದಿಂದಿದ್ದರೇ , ಸಾಧಕನಾಗದೇ ಸಮಯಸಾಧಕನಾಗಿದ್ದರೇ , ನಂಬಿಕೆಯನ್ನು ಸಹ ಅನುಮಾನದಿಂದ ನೋಡಿದ್ದರೆ ಈ ಜಗತ್ತಿನಲ್ಲಿ ಬದುಕಿರುತ್ತಿದ್ದ ಅನ್ನಿಸ್ತು .

    ಒಂದು ಕಡೆ ಸಾವಿಗೆ ಕಾರಣ ಇದಾದರೆ ಮತ್ತೊಂದು ಕಡೆ ಅರೋಗ್ಯವನ್ನು ಕಡೆಗಣಿಸಿದ್ದು ವೈದ್ಯರ ಔಷಧಿ ಸಲಹೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೂ, ಪತ್ಯೆಗಳನ್ನು ಪಾಲಿಸದಿದ್ದಿದ್ದು ಸಾವಿಗೆ ಕಾರಣವಾಯಿತು.ರಂಗ ಪೂರ್ಣವಾಗಿ ಜೀವಿಸದಿದ್ದರೂ ಜೀವಿಸಿದಷ್ಟೂ ಕಾಲ ಅರ್ಥಪೂರ್ಣವಾಗಿ ಜೀವಿಸಿದ್ದ

    ಈ ಅಂಕಣದೊಂದಿಗೆ ಪ್ರಕಟವಾಗಿರುವ ತುಷಾರ್ ರಂಗನಾಥ್ ಅವರ ಭಾವಚಿತ್ರವನ್ನು ರಚಿಸಿರುವ ಕಲಾವಿದೆ ಕಿರಣ ಆರ್ . ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಗೆದ್ದಿದ್ದು ಯಡಿಯೂರಪ್ಪ ಮತ್ತು ವಿಜಯೇಂದ್ರ!

    ಅಶೋಕ ಹೆಗಡೆ

    ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ವಾಸ್ತವಿಕವಾಗಿ ಇಲ್ಲಿ ಗೆದ್ದಿರುವುದು ಬಿಜೆಪಿಯಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ!

    ’ಆಪರೇಷನ್ ಕಮಲ’ದ ಫಲವಾಗಿ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಾಗ ಪ್ರಧಾನಿ ನರೇಂದ್ರ ಮೋದಿ, ಅಂದು ಬಿಜೆಪಿ ಅಧ್ಯಕ್ಷರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜಾಣ ಮರೆವು ತೋರಿದ್ದರು. ಸೌಜನ್ಯಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸಲಿಲ್ಲ. ಕರ್ನಾಟಕದ ಜತೆಗೇ ನಡೆದ ಉಪ ಚುನಾವಣೆ, ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ ಮಾತ್ರವಲ್ಲದೇ ಪ್ರತಿಪಕ್ಷಗಳ ನಾಯಕರನ್ನೂ ಮೋದಿ-ಶಾ ಟ್ವೀಟ್ ಮಾಡಿ ಅಭಿನಂದಿಸಿದ್ದರು. ಯಡಿಯೂರಪ್ಪ ವಿಚಾರದಲ್ಲಿ ಮಾತ್ರ ಅದೇಕೋ ಹಠಕ್ಕೆ ಬಿದ್ದವರಂತೆ ಕಠೋರ ಮೌನ ತಾಳಿಬಿಟ್ಟಿದ್ದರು. ಆದರೆ, ಮಂಗಳವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಇಬ್ಬರೂ ತರಾತುರಿಯಲ್ಲಿ ಯಡಿಯೂರಪ್ಪ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ, ಅದೂ ಮೋದಿಯವರಂತೂ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ! ಅಷ್ಟರಮಟ್ಟಿಗೆ ಅದು ಯಡಿಯೂರಪ್ಪನವರ ಗೆಲುವು.

    ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಂತಹವರು ಯಡಿಯೂರಪ್ಪ ಹೆಚ್ಚು ದಿನ ಮುಖ್ಯಮಂತ್ರಿಯಾಗಿರುವುದಿಲ್ಲ ಎನ್ನುವ ಮಾತನಾಡಿದ್ದರು. ಬೇರೆಯವರ ಕುಮ್ಮಕ್ಕಿನಿಂದ ಅವರು ಹಾಗೆ ಮಾತನಾಡಿದ್ದರು ಎನ್ನುವುದು ಸ್ಪಷ್ಟ. ಈಗ ಹಾಗೆ ಮಾತನಾಡಿದವರು, ಮಾತನಾಡಿಸಿದವರು ಇಬ್ಬರೂ ಮೌನವಾಗಿರಬೇಕು. ಯಡಿಯೂರಪ್ಪನವರನ್ನು ಕಡೆಗಣಿಸಿದರೆ ಅಪಾಯ ಮೈಮೇಲೆ ಎಳೆದುಕೊಂಡತೆಯೇ ಎನ್ನುವುದು ಈಗ ವರಿಷ್ಠರಿಗೂ ಚೆನ್ನಾಗಿಯೇ ಅರ್ಥವಾಗಿದೆ. ಇಲ್ಲಿಯವರೆಗೆ ಸಚಿವ ಸಂಪುಟ ವಿಸ್ತರಣೆ, ಅನುದಾನ ಸೇರಿ ಹಲವು ವಿಚಾರಗಳಲ್ಲಿ ಯಡಿಯೂರಪ್ಪನವರ ಕುರಿತು ತಾತ್ಸಾರ ಮಾಡುತ್ತಿದ್ದ ವರಿಷ್ಠರು, ಮೋದಿಯವರು ಈಗ ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ ಸೇರಿದಂತೆ ಕೆಲದಿನಗಳ ಹಿಂದೆ ಸಾವಿರಾರು ಕೋಟಿ ರೂ. ಅನುದಾನ ಕೇಂದ್ರದಿಂದ ಬಿಡುಗಡೆಯಾಗಿದೆ. ಇದು ನಿಜಕ್ಕೂ ಯಡಿಯೂರಪ್ಪನವರ ಗೆಲುವು.

    ಇನ್ನು ವಿಜಯೇಂದ್ರ ಅವರ ವಿಚಾರಕ್ಕೆ ಬರೋಣ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಡಿದ ಎಡವಟ್ಟಿನ ಪರಿಣಾಮ ಏನು ಎನ್ನುವುದು ವರಿಷ್ಠರಿಗೆ ಈಗ ಚೆನ್ನಾಗಿ ಅರ್ಥವಾಗಿದೆ. ಅಂದು ಹಳೆ ಮೈಸೂರು ಭಾಗದಿಂದ ವಿಜಯೇಂದ್ರ ಸ್ಪರ್ಧೆಗೆ ಅನುಮತಿ ನೀಡಿದ್ದರೆ ಆಪರೇಷನ್ ಕಮಲ ನಡೆಸುವ ಅನಿವಾರ್ಯತೆಯೇ ಬಿಜೆಪಿಗೆ ಬರುತ್ತಿರಲಿಲ್ಲ ಎನ್ನುವ ಸತ್ಯ ವರಿಷ್ಠರಿಗೆ ಈಗ ಅರ್ಥವಾಗಿದೆ. ಬಿಜೆಪಿಯ ನೆಲೆಯೇ ಇಲ್ಲದ ಮಂಡ್ಯದ ಕೆ.ಆರ್.ಪೇಟೆ, ಕಾಂಗ್ರೆಸ್-ಜೆಡಿಎಸ್‌ನ ಪ್ರಬಲ ನೆಲೆಯಾಗಿದ್ದ ತುಮಕೂರಿನ ಶಿರಾದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದು ಸಾಧಾರಣ ಸಂಗತಿಯಲ್ಲ. ಕ್ಷೇತ್ರದಲ್ಲೇ ಬೀಡುಬಿಟ್ಟು, ತಳಮಟ್ಟದ ವಾಸ್ತವಗಳನ್ನು ಅರ್ಥ ಮಾಡಿಕೊಂಡು, ಎಲ್ಲ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಗೆಲುವಿನ ರಣತಂತ್ರ ರೂಪಿಸುವುದು ಸಾಧಾರಣ ಸಂಗತಿಯಲ್ಲ. ವಿಜಯೇಂದ್ರ ವಿರುದ್ಧ ಹಿಂದಿನಿಂದ ಆರೋಪ ಮಾಡುತ್ತಿದ್ದ ನಾಯಕರೆಲ್ಲ ಈಗ ತೆಪ್ಪಗಿರಲೇಬೇಕು. ಇದು ವಿಜಯೇಂದ್ರ ಅವರ ನಿಜವಾದ ಗೆಲುವು.

    ರಾಜರಾಜೇಶ್ವರಿ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡಿದರು. ಆದರೆ ಕ್ಷೇತ್ರದಲ್ಲಿ ಮುನಿರತ್ನ ಅವರ ವೈಯಕ್ತಿಕ ಪ್ರಭಾವ ಮತ್ತು ಬಿಜೆಪಿಯ ಸಂಘಟನಾ ಶಕ್ತಿಯ ಎದುರು ಡಿಕೆ ಬ್ರದರ್ಸ್ ಸೋಲೊಪ್ಪಿಕೊಳ್ಳುವುದು ಅನಿವಾರ್ಯವಾಯಿತು. ಶಿರಾದಲ್ಲಿ ದುರ್ಬಲ ಅಭ್ಯರ್ಥಿಗಳ ವಿರುದ್ಧ ಹಳೆಹುಲಿ ಟಿ.ಬಿ.ಜಯಚಂದ್ರ ಗೆದ್ದೇ ಗೆಲ್ಲುತ್ತಾರೆ ಎಂಬ ಕಾಂಗ್ರೆಸ್‌ನ ಅತಿಯಾದ ವಿಶ್ವಾಸ, ಮುನಿರತ್ನ ವಿರುದ್ಧ ಸೇಡು ತೀರಿಸಿಕೊಳ್ಳುಬವ ಅಬ್ಬರದಲ್ಲಿ ಡಿಕೆ ಸಹೋದರರು ಶಿರಾವನ್ನು ಕಡೆಗಣಿಸಿದ್ದು ಮುಳುವಾಯಿತು. ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಮೊದಲೇ ಸೋಲೊಪ್ಪಿಕೊಂಡಿತ್ತು ಅಥವಾ ಕಾಂಗ್ರೆಸ್‌ನವರು ಹೇಳುವಂತೆ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿತ್ತು.

    ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಇಬ್ಬರ ಜವಾಬ್ದಾರಿಯೂ ಈಗ ದೊಡ್ಡದಿದೆ. ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಕ್ಷೇತ್ರಗಳಲ್ಲಿ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗಬಹುದು. ಬಹುಶಃ ಅಲ್ಲಿಯೂ ಬಿಜೆಪಿ ಗೆಲ್ಲಬಹುದು. ಆದರೆ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ಯಡಿಯೂರಪ್ಪ, ವಿಜಯೇಂದ್ರ ಮರೆಯಬಾರದು. ‘ವಿಜಯೇಂದ್ರ ಅವರು ಛಾಯಾ ಮುಖ್ಯಮಂತ್ರಿ’ ಎಂಬ ಆರೋಪ ಮತ್ತೆ ಕೇಳದಂತೆ ಇಬ್ಬರೂ ಎಚ್ಚರವಹಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟುವತ್ತ ವಿಜಯೇಂದ್ರ, ಕನಸಿನ ಆಡಳಿತ ನೀಡುವತ್ತ ಯಡಿಯೂರಪ್ಪ ಗಮನಹರಿಸಬೇಕು, ಆಗಲೇ ಅವರಿಗೂ, ಬಿಜೆಪಿಗೂ ಇಬ್ಬರಿಗೂ ಕ್ಷೇಮ.

    ಬುದ್ಧ ಬಸವ ಗಾಂಧಿ ಇಲ್ಲಿಯೇ ಇದ್ದಾರೆ

    ಬಳಕೂರು ವಿ ಎಸ್ ನಾಯಕ

    ಧ್ಯಾನಾಸಕ್ತರಾಗಿ ಕುಳಿತಿರುವ ಗಾಂಧಿ,ಮಂದಸ್ಮಿತ ನಗುವನ್ನು ಬೀರುವ ಗೌತಮ ಬುದ್ಧ, ರಾಧಾಕೃಷ್ಣ ,ಕುದುರೆಯನೇರಿದ ಶಿವಾಜಿ, ಜಗತ್ತಿಗೆ ಶಾಂತಿಯನ್ನು ಸಾರಿದ ಬಸವಣ್ಣ, ಗುರುಸಾರ್ವಭೌಮ ಶ್ರೀ ರಾಘವೇಂದ್ರ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀಬಾಲಗಂಗಾ ರನಾಥ ಸ್ವಾಮೀಜಿ, ಅಂಬೇಡ್ಕರ್ ಶಿಲ್ಪ ಹೀಗೆ ಒಂದೇ ಎರಡೇ ಒಂದು ಕ್ಷಣ ಅಲ್ಲಿ ತೆರಳಿದರೆ ಸಾಕು ಭಾವ ಪರವಶರಾಗಿ ನಿಲ್ಲುವುದಂತು ಸತ್ಯ.

    ಇಲ್ಲಿಯ ವಿಭಿನ್ನ ಶಿಲ್ಪಗಳು ನಿಜವಾಗಿಯೂ ಪ್ರತಿ ಸಾಧುಸಂತರು ಮಹಾನ್ ವ್ಯಕ್ತಿಗಳ ಇರುವಿಕೆಯನ್ನು ಸೂಚಿಸುವಂತಿದೆ. ಇಂತಹ ವಿಬಿನ್ನ ಶಿಲ್ಪಕಲಾಕೃತಿಗಳನ್ನು ರಚಿಸಿ ಜನಮಾನಸದಲ್ಲಿ ಹೆಸರು ಮಾಡಿದವರು ಕಲಾವಿದರಾದ ಕೃಷ್ಣ ನಾಯಕ್ . ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಯವರು. ಇವರಿಗೆ ಬಾಲ್ಯದಲ್ಲಿಯೇ ಕಲೆಯ ಬಗ್ಗೆ ಅಪಾರ ಆಸಕ್ತಿ. ಮನೆಯ ಮುಂದಿನ ಶರಾವತಿ ನದಿ,ಅಲ್ಲಿಯ ಬೆಟ್ಟಗುಡ್ಡಗಳೆಲ್ಲ ಇವರಿಗೆ ಪರಿಚಿತ. ಇವೆಲ್ಲವನ್ನೂ ಕಲಾ ವಸ್ತುವನ್ನಾಗಿಸಿ ಕೊಂಡ ಇವರು ತಮ್ಮ ಯೋಚನೆಯಲ್ಲಿ ವಿಭಿನ್ನ ಶಿಲ್ಪಕಲಾಕೃತಿಗಳನ್ನು ತಯಾರಿಸಿ ಇಂದು ನಾಡಿನ ಪ್ರಸಿದ್ಧ ಕಲಾವಿದರ ಸಾಲಿನಲ್ಲಿದ್ದಾರೆ.

    ಕಲಾ ಪಯಣ ಆರಂಭವಾಗಿದ್ದು ಹೀಗೆ

    ಕಲಾವಿದ ಕೃಷ್ಣ ನಾಯಕ್ ಅವರು ತಂದೆಯಿಂದ ಪ್ರೇರಿತರಾಗಿ ಮೊದಲು ಮರ ಮತ್ತು ಕಲ್ಲಿನ ಕೆತ್ತನೆಯಲ್ಲಿ ಕಾರ್ಯ ಆರಂಭಿಸಿದರು ಕೂಡ ಅವರನ್ನು ಆಕರ್ಷಿಸಿದ್ದು ಶಿಲ್ಪಕಲೆ.ಅವರಿಗೆ ತಾವು ವಿದ್ಯಾರ್ಥಿ ದೆಸೆಯಲ್ಲಿ ನೋಡಿದ ಕುದುರೆ ಲಕ್ಷ್ಮಿ ಗಣೇಶ ಇತ್ಯಾದಿ ಶಿಲ್ಪಗಳು ಆಕರ್ಷಣೆಗೆ ಒಳಗಾಗಿ ಅದೇ ಮಾದರಿಯ ಶಿಲ್ಪಗಳನ್ನು ರಚಿಸಲು ಆರಂಭಿಸಿದರು.

    ಕೃಷ್ಣ ನಾಯಕ್ ರವರು ಬೆಂಗಳೂರಿನ ನಾಗರಭಾವಿಯಲ್ಲಿ ಕ್ರಿಶ್ ಪಾರ್ಟ್ ವರ್ಲ್ಡ್ ಎಂಬ ಕಲಾ ಗ್ಯಾಲರಿಯನ್ನು ಆರಂಭಿಸಿ ಇಲ್ಲಿ ತಾವು ರಚಿಸಿದ ಮಹಾನ್ ವ್ಯಕ್ತಿಗಳ ಶಿಲ್ಪಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಲ್ಲಿ ಪ್ರವೇಶಿಸಿದವರಿಗೆ ಯಾವುದೋ ಒಂದು ಕಲಾಲೋಕಕ್ಕೆ ಪ್ರವೇಶಿಸಿದ ಅನುಭವ ಆಗುತ್ತದೆ.

    ರಾಜ್ಯದ ಮೂಲೆ ಮೂಲೆಯಲ್ಲಿ ಶಿಲ್ಪಕಲಾಕೃತಿಗಳು

    ಶ್ರೀ ಕೃಷ್ಣ ನಾಯಕ್ ರವರು ರಾಜ್ಯದ ವಿಭಿನ್ನ ಭಾಗಗಳಲ್ಲಿ ತಮ್ಮ ಕೈಚಳಕದಲ್ಲಿ ಅನೇಕ ಶಿಲ್ಪಗಳನ್ನು ರಚಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮುಂಭಾಗ ದಲ್ಲಿರುವ ಬುದ್ಧ ಬಸವಣ್ಣ ಅಂಬೇಡ್ಕರ್ ಶಿಲ್ಪಗಳು, ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಇರುವ ಬುದ್ಧನ ಶಿಲ್ಪ , ಮಲ್ನಾಡ್ ಎಂಜಿನಿಯರಿಂಗ್ ಕಾಲೇಜು ಮುಂಭಾಗದ ಗಣೇಶನ ಶಿಲ್ಪ, ತುಮಕೂರಿನ ಸಿದ್ದಗಂಗಾ ಮಠದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ ಶಿಲ್ಪ ಮತ್ತು ಬಾಲಗಂಗಾಧರ ಸ್ವಾಮೀಜಿಯವರ 9 ಅಡಿ ಎತ್ತರದ ಶಿಲ್ಪ ಇವ ಕಲಾ ಪ್ರೌಢಿಮೆಗೆ ಸಾಕ್ಷಿ .

    ಸುಮಾರು 25 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಅವರು ಬಹಳಷ್ಟು ಶಿಲ್ಪಗಳನ್ನು ರಚಿಸಿದ್ದಾರೆ. ಯಾವುದೇ ಶಿಲ್ಪಗಳನ್ನು ರಚಿಸುವುದು ಸುಲಭದ ಮಾತಲ್ಲ ಮೊದಲು ಮಣ್ಣಿನಲ್ಲಿ ಕಲಾಕೃತಿಯನ್ನು ಮಾಡಿ ಸಿಲಿಕಾನ್ ಅಲ್ಲಿ ಮಾದರಿ ಮಾಡಿದನಂತರ ಫೈಬರ್ ನಲ್ಲಿ ತಯಾರಿಸಿ ಕಂಚಿನಲ್ಲಿ ಸರಿಯಾಗಿ ಮಾಡಬೇಕಾದರೆ ಸುಮಾರು ಆರರಿಂದ ಎಂಟು ತಿಂಗಳುಗಳ ಪರಿಶ್ರಮದ ಅಗತ್ಯವಿದೆ ಎಂದು ಕೃಷ್ಣ ನಾಯಕ್ ಹೇಳುತ್ತಾರೆ.

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಮತದಾನದ ಮಹತ್ವ: ಬಿಹಾರ ಚುನಾವಣೆ ಕಲಿಸಿದ ಪಾಠ

    ಎಸ್.ಕೆ. ಶೇಷಚಂದ್ರಿಕ

    ಬಿಹಾರಿ ಮತದಾರನನ್ನು ದಡ್ಡ, ಪೆದ್ದ, ಕೋಲೇ ಬಸವ, ಹಿಂಸೆಯನ್ನು ಪ್ರೋತ್ಸಾಹಿಸುವಾತ  ಹೀಗೆ ನಾನಾ ರೀತಿ ಬಣ್ಣಿಸುತ್ತಿದ್ದ ದೇಶದ ಒಟ್ಟಾರೆ ಮತದಾರರಿಗೆ ಬಿಹಾರಿಗ ಸಂದೇಶ ರವಾನಿಸಿದ್ದಾನೆ.

    ಸ್ವತಂತ್ರ ಭಾರತದ  ಐದು ದಶಕಗಳ ಇತಿಹಾಸದಲ್ಲಿ ಬಿಹಾರ ಚುನಾವಣೆ ಹಲವಾರು ದೃಷ್ಟಿಯಿಂದ ಮಹತ್ವದ್ದಾಗಿದೆ.  ಇನ್ನು ಮುಂದೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಉಳಿದ ಮತದಾರರು ಬಿಹಾರ ಮತದಾರನನ್ನು ಮಾದರಿ ಎಂದು ಪರಿಗಣಿಸಿದಲ್ಲಿ ವಿಶೇಷವೇನಿಲ್ಲ.

    ಯುವ ಮತದಾರರ ನಿರ್ಣಯ
    ಮುಖ್ಯವಾಗಿ ಬಿಹಾರ ಚುನಾವಣೆಯಿಂದ ಕಲಿಯಬಹುದಾದ ನೀತಿ ಪಾಠವೇನು?

    ಧ್ರುವೀಕರಣ ಎನ್ನಬಹುದಾದ ರೀತಿಯಲ್ಲಿ ಬಿಹಾರ  ಮತದಾರನ ನಿರ್ಣಯ ಹೊರಬಿದ್ದಿದೆ.  ಯುವಜನರಲ್ಲಿ ಬಹುತೇಕ ಮತದಾರರು ಬದಲಾವಣೆಗೆ ಓಗೊಟ್ಟಿದ್ದಾರೆ.  ಹೊಸ ನೋಟ, ಹೊಸ ದೃಷ್ಟಿ, ಬದಲಾವಣೆ  ಇದು ಬಿಹಾರಿ ಯುವ ಮತದಾರರ ಸಂದೇಶವಾಗಿದೆ.

    ಬೆಂಗಳೂರಿನ ವರದಿಗಾರರ ತಂಡ ಸಮೀಕ್ಷಿಸಿದಂತೆ ಮತದಾರರಲ್ಲಿ  ಮೂರು ವರ್ಗ ಸ್ಪಷ್ಟವಾಗಿದೆ.

    ಯುವ ಮತದಾರರು ಕ್ರಾಂತಿ ಅಥವಾ ದಂಗೆ ಎನ್ನುವ ಪ್ರಮಾಣದಲ್ಲಿ ರಾಷ್ಟ್ರೀಯ ಜನತಾದಳದ ಯುವ ನಾಯಕ ತೇಜಸ್ವಿ ಯಾದವನನ್ನು ಬೆಂಬಲಿಸಿದ್ದಾರೆ.  75 ಕ್ಷೇತ್ರಗಳಲ್ಲಿ ಆತ ಸಾಧಿಸಿರುವ  ವಿಜಯ ಇದರಿಂದ ಸ್ಪಷ್ಟವಾಗುತ್ತದೆ.

    ಎರಡನೆಯ ವರ್ಗ ತಟಸ್ಥರು. ಮುಖ್ಯಮಂತ್ರಿ ನಿತೀಶ್ ಕುಮಾರರ ಬೆಂಬಲಿಗರು.  ನಿತೀಶರ ವೈಯಕ್ತಿಕ ಸಚ್ಛಾರಿತ್ರವನ್ನು ನಂಬಿ,  ಪಕ್ಷಕ್ಕೆ ಅಲ್ಲದಿದ್ದರೂ,  ವ್ಯಕ್ತಿಗೆ ವೋಟು ಹಾಕಿದವರು. ದೇಶದ ಇಂದಿನ ಹಲವಾರು ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಬಿಹಾರದ ಸಮಾಜವಾದಿ ಮುಖ್ಯಮಂತ್ರಿ ನಿತೀಶ್ ಕುಮಾರ ಸಾವಿರಪಾಲು ಯೋಗ್ಯರು.

    ಮೋದಿಯನ್ನು ಮೆಚ್ಚಿದ ಬಿಹಾರಿಗರು

    ಮೂರನೆಯದು: ಬಿಹಾರದ ಇಂದಿನ ಚುನಾವಣೆಯ
    ಹಿಂದಿನ ಪ್ರೇರಕಶಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ನಂಬಿದವರು.  ಇವರನ್ನು ತಟಸ್ಥರು ಎಂದು ವರ್ಗೀಕರಣ ಮಾಡಿದರೂ ತಪ್ಪಲ್ಲ.

    ಚರಿತ್ರಹೀನ ರಾಜಕಾರಣಿಗಳು ಇದೀಗ ದೇಶದ ಚರಿತ್ರೆಯನ್ನು ತುಂಬಿಸಿದ್ದಾರೆ.ಅಧಿಕಾರಕ್ಕೆ ಬಂದ ಕೂಡಲೇ ಹಣ ಗಳಿಸುವ ದಂಧೆ ಹೆಚ್ಚುತ್ತಿದೆ.  ಅಭಿವೃದ್ಧಿ ಸಂಘಟನೆಯನ್ನು ನಡೆಸಬೇಕಾದ ಕೆಲ ಮುಖ್ಯಮಂತ್ರಿಗಳು ಹಣ-ಜಾತಿ ಸಂಘಟನೆಗೆ ಆದ್ಯತೆ ಕೊಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ನಂಬಿಕೆ ಅರ್ಹ ರಾಗಿ ಕಾಣಿಸಿದ್ದರೆ ಅಚ್ಚರಿ ಇಲ್ಲ.

    ಇಂದಿನ ಬಿಹಾರದ ಚುನಾವಣೆ  ಒಂದು ರೀತಿಯಲ್ಲಿ ಜನಸಾಮಾನ್ಯರು, ವಿಶೇಷವಾಗಿ ಮಹಿಳಾ ಮತದಾರರು ನರೇಂದ್ರ ಮೋದಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಕೊಟ್ಟ ಆದರ –  ಗೌರವ ಎಂದರೆ ಉತ್ಪ್ರೇಕ್ಷೆಯಲ್ಲ.

    ಮೋದಿಯವರ ಜನಪ್ರಿಯತೆಯನ್ನು ಎಲ್ಲರೂ ಅನುಮೋದಿಸಿದ್ದಾರೆ ಎನ್ನುವುದು ಇದರ ಅರ್ಥವಲ್ಲ. ಹೆಚ್ಚು ಜನ ಮೋದಿಯ ನಾಯಕತ್ವದಲ್ಲಿ ದೇಶದ ಭವಿಷ್ಯ, ಪ್ರಗತಿ ಮತ್ತು ಏಳಿಗೆಯನ್ನು ನಂಬಿದ್ದಾರೆ ಎನ್ನುವುದು ಬಿಹಾರಿ ಮತದಾರ ಕಲಿಸಿದ ಪಾಠ.


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು

    ನಾಳೆ ಬಗ್ಗೆ ಚಿಂತೆ ಏತಕೇ ಇಂದು ಎಂದೂ ನಮ್ಮದೇ…

    ನಾಳೆ ನನ್ನ ಬದುಕಿನಲ್ಲಿ ಏನಾಗಬಹುದು ಎಂಬ ಚಿಂತೆಯಿಂದಲೇ ನಾನು ಒತ್ತಡಕ್ಕೊಳಗಾಗಿದ್ದೇನೆ. ಏನೇ ಮಾಡಿದರೂ ಯಾಕೋ ನನ್ನ ಬದುಕು ಬದಲಾಗುತ್ತಿಲ್ಲವಲ್ಲ. ನನ್ನ ಗಳಿಕೆ ಮುಂದಿನ ದಿನಗಳಿಗೆ ಸಾಲುತ್ತಿಲ್ಲ. ನಾಳೆ ಕಾಯಿಲೆ ಬಂದರೆ ಏನು ಮಾಡೋದು… ಹೀಗೆ ಇಂತಹದ್ದೇ ಅನೇಕ ಚಿಂತೆಗಳು ಈ ಕ್ಷಣವನ್ನು ಆನಂದದಿಂದ ಬದುಕಲು ಬಿಡುತ್ತಿಲ್ಲ. ಅದಕ್ಕೇನು ಮಾಡಬಹುದು… ?

    ಪ್ರತಿಯೊಬ್ಬ ವ್ಯಕ್ತಿಯನ್ನು ಕಾಡುವ ಭಯ ಅಂದರೆ ಕೊರತೆಗಳು. ನಾಳೆಯ ಬದುಕಿಗೆ ನಾನೇನು ಮಾಡಲಿ? ನಾಳೆಗೆ ಬೇಕಾದ್ದು ನನ್ನಲ್ಲಿಲ್ಲವಲ್ಲ ಎನ್ನುವ ಭಯ ಪ್ರತಿಯೊಬ್ಬ ಮನುಷ್ಯನನ್ನು ಪ್ರತಿದಿನ ಕಾಡುತ್ತಲೇ ಇರುತ್ತದೆ. ದಿನ ಬೆಳಗಾದರೆ ನಾಳೆಯ ಬಗ್ಗೆಯೇ ಯೋಚನೆ ಮಾಡುವವರು ಹೆಚ್ಚು. ಅದೆಷ್ಟೋ ನಾಳೆಗಳಿಗಾಗಿ ಕಷ್ಟಪಡುವುದರಲ್ಲಿಯೇ ಪ್ರತಿದಿನ ಕಾಲ ಕಳೆಯುತ್ತಾರೆ.
    ಪ್ರತಿಯೊಬ್ಬರೂ ನಿರಂತರ ಹೋರಾಟ ನಡೆಸುವುದು ಇಲ್ಲದ್ದನ್ನು ಹೊಂದಬೇಕು ಎಂಬ ಬಯಕೆಗೆ.

    ಸಾಂಸಾರಿಕ ಜೀವನದಲ್ಲಿ ತೊಡಗಿಸಿಕೊಂಡವನಿಗೆ ಹೆಂಡತಿ ಮಕ್ಕಳೊಡಗೂಡಿ ಖುಷಿಯಾಗಿರಲು ಐಷಾರಾಮಿ ಮನೆ ಬೇಕು, ಓಡಾಡಲು ಕಾರು ಬೇಕು, ಮಕ್ಕಳ ಭವಿಷ್ಯಕ್ಕೆಂದು ಒಂದಷ್ಟು ಹಣ ಕೂಡಿಡಬೇಕು…. ಇನ್ನೂ ಹಲವು ಆಸೆಗಳು. ಇವೆಲ್ಲದರ ಕನಸು ಕಾಣುತ್ತಿರುವಾತ ಹೇಗೋ ಅವೆಲ್ಲವನ್ನೂ ಪಡೆದುಕೊಳ್ಳುತ್ತಾನೆ ಕೂಡಾ. ಆದರೆ ಅವೆಲ್ಲದರಿಂದ ಅವನಿಗೆ ಸಂತೃಪ್ತಿ ಸಿಕ್ಕೀತಾ?
    ಇದ್ದುದರಲ್ಲಿ ಸಂತೃಪ್ತಿ ಪಡೆವ ಮನಸ್ಸು ಅವರದಲ್ಲ. ಒಂದು ಪಡೆದುಕೊಂಡ ಮೇಲೆ ಮತ್ತಿನ್ನೇನೋ ಬೇಕು ಎನ್ನುವ ಬಯಕೆ ಮನದಲ್ಲಿ ಮೂಡಿರುತ್ತದೆ.

    ಬಯಕೆಯ ಸರಮಾಲೆಯಲ್ಲಿ ಒಂದೊಂದೇ ಆಸೆ ಪೋಣಿಸಲ್ಪಟ್ಟಾಗ ಸಂತೃಪ್ತಿ ಎಂಬುದು ಕನಸಿನ ಮಾತಾಗುತ್ತದೆ.ಕೆಲವರಿಗೆ ಈ ಜಗತ್ತಿಗೆ ಎಷ್ಟು ನೀಡಿದರೂ ತೃಪ್ತಿಯಿಲ್ಲ, ಜಗತ್ತಿನಿಂದ ಎಷ್ಟು ಪಡೆದುಕೊಂಡರೂ ಸಾಕಾಗುವುದಿಲ್ಲ. “ಕಡಿಮೆಯೇ’ ಎನ್ನುವ ಮನಸ್ಥಿತಿ ಅವರದ್ದು. ಮತ್ತೆ ಅದನ್ನು ಪಡೆಯುವುದಕ್ಕಾಗಿ ಏನೇನೋ ಕಸರತ್ತು ನಡೆಸುತ್ತಿರುತ್ತಾರೆ. ಭೌತಿಕ ಜಗತ್ತಿನಲ್ಲಿ ಬಾಹ್ಯ ಬಯಕೆಗಳಿಂದ ಸಂತೃಪ್ತಿ ಹೊಂದಲು ಸಾಧ್ಯವಿಲ್ಲ.

    ಇರುವುದರಲ್ಲಿಯೇ ತೃಪ್ತಿ ಪಟ್ಟುಕೊಂಡು, ಸಿಗಲಾರದಕ್ಕೆ ಆಸೆ ಪಡುವುದರಲ್ಲಿ ಅರ್ಥ ಇಲ್ಲ. ಅದರಿಂದ ದುಃಖವೇ ಹೊರತು ಸಂತೋಷ ಅಥವಾ ಸಂತೃಪ್ತಿ ಸಿಗುವುದಕ್ಕೆ ಸಾಧ್ಯವಿಲ್ಲ. `ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು ಹರುಷಕ್ಕಿದೆ ದಾರಿಯು’ ಎಂದು ಡಿವಿಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದು ಇದೇ ಉದ್ದೇಶಕ್ಕೆ.
    ಪ್ರತಿಯೊಬ್ಬ ವ್ಯಕ್ತಿ ಕೂಡಾ ತನ್ನ ಹುಟ್ಟು, ಜೀವನ, ಜೀವನದ ಉದ್ದೇಶ, ಹಾಗೂ ಗುರಿ ಹಾಗೂ ಸಾಧನೆಯೆಡೆಗಿನ ಪ್ರಯತ್ನ ಇವೇ ಮೊದಲಾದುವುಗಳ ಬಗ್ಗೆ ಪ್ರಶ್ನಿಸಿಕೊಂಡರೆ ಜೀವನದಲ್ಲಿ ತೃಪ್ತಿ ಹೊಂದುವುದು ಕಷ್ಟವಲ್ಲ. ಇಲ್ಲವಾದರೆ ಅನಿರೀಕ್ಷಿತ ವಾಗಿ ದುಃಖ ಅನುಭವಿಸಬೇಕಾಗಬಹುದು.

    ಬದುಕಿನ ಯಾನದಲ್ಲಿ ಸಾಧಿಸಿದ ಯಶಸ್ಸು, ನಾಳೆಗೆ ಕೂಡಿಟ್ಟ ಶ್ರೀಮಂತಿಕೆ ಮುಖ್ಯವಾಗುವುದಿಲ್ಲ. ಯಾಕೆಂದರೆ ಸಾಕು ಎನ್ನುವ ಭಾವ ತೃಪ್ತಿ. ಅದು ಬಯಕೆಗಳಿಂದ ಹೊರತಾಗಿರುತ್ತದೆ. ಹಾಗಾಗಿ ನನಗೆ ತೃಪ್ತಿ ಇದೆ ಎನ್ನುವ ಭಾವ ವ್ಯಕ್ತವಾದರೆ ಅದೇ ಸಾರ್ಥಕತೆ.

    Photo by Jill Heyer on Unsplash

    ನವೆಂಬರ್‌ 17ರಿಂದ ಪದವಿ, ಎಂಜಿನಿಯರಿಂಗ್‌, ಡಿಪ್ಲೊಮೋ ಕಾಲೇಜು ಆರಂಭ; ಎಸ್‌ಒಪಿ ಬಿಡುಗಡೆ

    ಕೋವಿಡ್‌-19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ಪದವಿ, ಎಂಜನಿಯರಿಂಗ್‌ ಹಾಗೂ ಡಿಪ್ಲೊಮೋ ಕಾಲೇಜುಗಳ ತರಗತಿಗಳನ್ನು ಇದೇ ನವೆಂಬರ್‌ 17ರಿಂದ ಆರಂಭಿಸುವ ಬಗ್ಗೆ ಯುಜಿಸಿ ಮಾರ್ಗಸೂಚಿಯಂತೆ ಉನ್ನತ ಶಿಕ್ಷಣ ಇಲಾಖೆ ಎಸ್‌ಒಪಿ (ಪ್ರಮಾಣಿತ ಕಾರ್ಯಚರಣಾ ವಿಧಾನ) ಯನ್ನು ಬಿಡುಗಡೆ ಮಾಡಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆಫ್‌ಲೈನ್‌ ತರಗತಿಗಳ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

    ಈ ಎಸ್‌ಒಪಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸೂಚನೆಗಳಿದ್ದು, ಅವುಗಳ ಪ್ರಕಾರವೇ ತರಗತಿಗಳು ನಡೆಯುತ್ತವೆ. ಹಾಗೆಯೇ, ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ನಿಗದಿತ ಸೂಚನೆಗಳಿವೆ ಎಂದು ಡಿಸಿಎಂ ತಿಳಿಸಿದ್ದಾರೆ.

    ಎಸ್‌ಒಪಿಯ ಪೂರ್ಣ ಪಾಠ ಇಲ್ಲಿದೆ

    ಸ್ನಾತಕೋತ್ತರ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ:

    ಆಯ್ಕೆ 1: ಭೌತಿಕ ತರಗತಿಗಳಿಗೆ ಹಾಜರಾಗುವುದು

    • ಭೌತಿಕ ತರಗತಿಗಳನ್ನು ನವೆಂಬರ್‌ 17ರಿಂದ ಪ್ರಾರಂಭಿಸುವುದು. ಭೌತಿಕವಾಗಿ ಕಾಲೇಜಿಗೆ ಬಂದು ತರಗತಿಗಳಿಗೆ ಹಾಜರಾಗಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಅವರ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರ ಪಡೆದು ಭೌತಿಕ ತರಗತಿಗಳನ್ನು ನಡೆಸುವುದು.
    • ಭೌತಿಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯವಿರುವಂತೆ ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ಧಪಡಿಸಿಕೊಳ್ಳುವುದು.
    • ಬೋಧನಾ, ಪ್ರಯೋಗಾಲಯ ಮತ್ತು ಪ್ರಾಜೆಕ್ಟ್ ತರಗತಿಗಳನ್ನು ಅವಶ್ಯಕವಿದ್ದಲ್ಲಿ ಪಾಳಿ ವ್ಯವಸ್ಥೆಯ (shift system) ಮೇರೆಗೆ ನಡೆಸುವುದು.

    ಆಯ್ಕೆ-2: ಆನ್‌ಲೈನ್ ತರಗತಿಗಳ ಮೂಲಕ ಅಭ್ಯಾಸ ಮಾಡುವುದು:

    • ಭೌತಿಕ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ತರಗತಿಗಳನ್ನು ನಡೆಸುವುದು. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬಯಸಿದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಪ್ರತಿ ದಿನವು ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸುವುದು.
    • ಸಂಪರ್ಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯಕವಿರುವಂತೆ ತರಗತಿ ವೇಳಾ ಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ದಪಡಿಸಿಕೊಳ್ಳುವುದು.

    *ಎಲ್ಲಾ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಒಂದು ತಿಂಗಳ ಅಧ್ಯಯನ ಸಾಮಗ್ರಿಗಳನ್ನು ಪ್ರತಿ Period/ Sessionಗೆ ಸಂಬಂಧಿಸಿದಂತೆ ತಯಾರಿಸಿ ವಿದ್ಯಾರ್ಥಿಗಳಿಗೆ ಟೆಲಿಗ್ರಾಂ/ವಾಟ್ಸಾಪ್/ಇ-ಮೇಲ್ ಮೂಲಕ ಕಡ್ಡಾಯವಾಗಿ ನೀಡುವುದು. ಅಧ್ಯಯನ ಸಾಮಗ್ರಿಗಳು Video Lectures, PowerPoint Presentations, E-Notes, E-Books, Audio Books ಮತ್ತು Practice Questions ಇತ್ಯಾದಿಗಳ ರೂಪದಲ್ಲಿ ಇರತಕ್ಕದ್ದು. ಸದರಿ ಅಧ್ಯಯನ ಸಾಮಗ್ರಿಗಳನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್‌ ಮಾಡತಕ್ಕದ್ದು.

    ಸ್ನಾತಕೋತ್ತರ, ಅಂತಿಮ ವರ್ಷ ಹೊರತುಪಡಿಸಿ ಇತರೆ ವಿದ್ಯಾರ್ಥಿಗಳಿಗೆ:

    *ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವುದು. ಈ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಪ್ರತಿದಿನವೂ Contact Classes ನಡೆಸುವುದು.

    *ಸಂಪರ್ಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗ ಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯವಿರುವಂತೆ ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ದಪಡಿಸಿಕೊಳ್ಳುವುದು.

    *ಎಲ್ಲಾ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಒಂದು ತಿಂಗಳ ಅಧ್ಯಯನ ಸಾಮಗ್ರಿಗಳನ್ನು ಪ್ರತಿ Period/ Session ಗೆ ಸಂಬಂಧಿಸಿದಂತೆ ತಯಾರಿಸಿ ವಿದ್ಯಾರ್ಥಿಗಳಿಗೆ ಟೆಲಿಗ್ರಾಂ/ ವಾಟ್ಸಾಪ್/ ಇ-ಮೇಲ್ ಮೂಲಕ ಕಡ್ಡಾಯವಾಗಿ ನೀಡುವುದು. ಅಧ್ಯಯನ ಸಾಮಗ್ರಿಗಳು Video Lectures, PowerPoint Presentations, E-Notes, E-Books, Audio Books ಮತ್ತು Practice Questions ಇತ್ಯಾದಿಗಳ ರೂಪದಲ್ಲಿಇರತಕ್ಕದ್ದು. ಈ ಅಧ್ಯಯನ ಸಾಮಗ್ರಿಗಳನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್‌ ಮಾಡತಕ್ಕದ್ದು.

    ಆನ್‌ಲೈನ್/ಸಂಪರ್ಕ ತರಗತಿಗಳಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಆನ್-ಕ್ಯಾಂಪಸ್ ಹಾಗೂ ಆಫ಼್-ಕ್ಯಾಂಪಸ್ ಹಾಸ್ಟೆಲ್‌ಗಳಲ್ಲಿ ಉಳಿದು ಕೊಳ್ಳಬಹುದು.

    ಸಾಮಾನ್ಯ ಮಾರ್ಗಸೂಚಿಗಳು:

    ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲಾ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯಸಾಮಾಗ್ರಿಗಳನ್ನು ಸ್ಯಾನಿಟೈಸ್ ಮಾಡಿಸುವುದು.

    ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ 3 ದಿನಗಳ ಮುಂಚೆ ಕೋವಿಡ್-19 (RTPCR)‌ ಪರೀಕ್ಷೆಯನ್ನು ಮಾಡಿಕೊಂಡು Test Report Negative ಇದ್ದಲ್ಲಿ ಮಾತ್ರ ವಿ‍ಶ್ವವಿದ್ಯಾಲಯ / ಕಾಲೇಜುಗಳಿಗೆ ಹಾಜರಾಗುವುದು.

    ಎಲ್ಲಾ ಕಾಲೇಜುಗಳು ತಮ್ಮ ತಮ್ಮ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗೊಂದಿಗೆ Mapping ಮಾಡಿಕೊಳ್ಳವುದು.

    ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ ತನ್ನ ಸಹಪಾಠಿಗಳಲ್ಲೇನಾದರು ಕೋವಿಡ್‌ ಗೆ ಸಂಬಂಧಿಸಿದ ಲಕ್ಷಗಳನ್ನು ಕಂಡುಬಂದಲ್ಲಿ ಅದನ್ನು ಕೋವಿಡ್‌ ಕಾರ್ಯಪಡೆ / ಸೆಲ್‌ ಗಮನಕ್ಕೆ ತರುವಂತೆ ಸೂಚಿಸುವುದು.

    ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರನ್ನು ಸ್ವತ: ತಂದು ಅವರೇ ಉಪಯೋಗಿಸುವುದು.

    ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್‌ ಮತ್ತು Face Shield/ Visor ಅನ್ನು ಧರಿಸುವುದು. ಕಾಲೇಜುಗಳಲ್ಲಿ ಲೈಬ್ರರಿ ಮತ್ತು ಕ್ಯಾಂಟೀನ್‌ಗಳನ್ನು ತೆರೆಯುವಂತಿಲ್ಲ. ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎನ್‌.ಸಿ.ಸಿ ಹಾಗೂ ಎನ್‌.ಎಸ್‌.ಎಸ್‌ ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ.

    ಪ್ರವೇಶ/ ನಿರ್ಗಮನ ಕೇಂದ್ರಗಳ ಸುರಕ್ಷತಾ ಕ್ರಮಗಳು:

    ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸಾನಿಟೈಸರ್ಗಳ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು.

    ಪ್ರವೇಶ/ ನಿರ್ಗಮನ ಸ್ಥಳಗಳಲ್ಲಿ ಜನಸಂದಣಿಯನ್ನು ತಪ್ಪಿಸಬೇಕು. ವಿವಿಧ ಕೋರ್ಸುಗಳಿಗೆ ಸೀಮಿತ ವಿದ್ಯಾರ್ಥಿ ಸಂಖ್ಯೆಯನ್ನು ನಿಗಧಿಗೊಳಿಸಿ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನದ ಸಮಯಗಳನ್ನು ಅನುಸರಿಸಬೇಕು.

    ಆವರಣದ ಒಳಗೆ ಮತ್ತು ಹೊರಗೆ ಕ್ಯೂ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ನೆಲದ ಮೇಲೆ 6 ಅಡಿಗಳ ಅಂತರವಿರುವ ನಿರ್ದಿಷ್ಟ ಗುರುತುಗಳನ್ನು ಮಾಡುವುದು ಮತ್ತು ಅದನ್ನು ಪಾಲಿಸಬೇಕು.

    ಒಂದು ವೇಳೆ ಪ್ರವೇಶ/ ನಿರ್ಗಮನಕ್ಕೆ ಒಂದಕ್ಕಿಂತ ಹೆಚ್ಚು ಗೇಟ್ ಗಳನ್ನು ಸಂಸ್ಥೆಯು ಹೊಂದಿದ್ದಲ್ಲಿ, ಜನಸಂದಣಿಯನ್ನು ತಪ್ಪಿಸಲು, ಎಲ್ಲಾ ಗೇಟ್ ಗಳನ್ನು ಸಾಕಷ್ಟು ಎಚ್ಚರಿಕೆಯಿಂದ ಬಳಸಬೇಕು. ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನದ ಮೇಲ್ವಿಚಾರಣೆಯನ್ನು ಮಾಡಬೇಕು.

    ವಿದ್ಯಾರ್ಥಿ, ಬೋಧಕ, ಬೋಧಕೇತರ ಸಿಬ್ಬಂದಿಯ ಥರ್ಮಲ್‌ ತಪಾಸಣೆ, ಮುಖಗವಸು/ ಮಾಸ್ಕ್ ಧರಿಸುವುದು, ಕೈಗಳನ್ನು ಶುದ್ಧಿಗೊಳಿಸುವುದನ್ನು ಎಲ್ಲಾ ಪ್ರವೇಶ ಕೇಂದ್ರಗಳಲ್ಲಿ ಖಚಿತಪಡಿಸಿಕೊಳ್ಳಬೇಕು.

    ಜ್ವರ, ಕೆಮ್ಮು, ಉಸಿರಾಟದ ತೊಂದರೆಯ ಲಕ್ಷಣಗಳನ್ನು ಹೊಂದಿರುವವರು ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶಿಸುವುದನ್ನು ನಿಷೇಧಿಸುವುದು.

    ತರಗತಿ ಕೊಠಡಿಗಳು ಮತ್ತು ಇತರ ಕಲಿಕಾ ತಾಣಗಳು ಹೇಗಿರಬೇಕು:

    ಎಲ್ಲಾ ಕಲಿಕಾ ಸ್ಥಳಗಳಲ್ಲಿ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬೇಕು. ಆಗಾಗ್ಗೆ ಸ್ಪರ್ಶಿಸಲ್ಪಡುವ ಡೋರ್ ನಾಬ್ ಗಳು, ಎಲಿವೇಟರ್ ಬಟನ್ ಗಳು, ಹ್ಯಾಂಡ್ ರೈಲ್ ಗಳು, ಕುರ್ಚಿಗಳು, ಬೆಂಚುಗಳು, ವಾಶ್ ರೂಮ್ ಫಿಕ್ಚರ್ ಗಳು ಇತ್ಯಾದಿ, ಎಲ್ಲಾ ತರಗತಿಗಳು, ಪ್ರಯೋಗಾಲಯಗಳು, ಲಾಕರ್ ಗಳು, ಪಾರ್ಕಿಂಗ್ ಪ್ರದೇಶಗಳು ಹಾಗೂ ತರಗತಿಗಳಲ್ಲಿ ಸ್ವಚ್ಛಗೊಳಿಸುವಿಕೆ ಮತ್ತು ನಿಯತ ಸೋಂಕು ತಡೆಗಟ್ಟುವಿಕೆ (1% ಸೋಡಿಯಂ ಹೈಪೋಕ್ಲೋರೈಟ್ ಬಳಸಿ) ಪ್ರಕ್ರಿಯೆಯನ್ನು ತರಗತಿಗಳು ಪ್ರಾರಂಭವಾಗುವ ಮುನ್ನ ಮತ್ತು ದಿನದ ಕೊನೆಯಲ್ಲಿ ಕಡ್ಡಾಯಗೊಳಿಸಬೇಕು. ಬೋಧನಾ ಸಾಮಗ್ರಿಗಳು, ಕಂಪ್ಯೂಟರ್, ಲ್ಯಾಪ್ ಟಾಪ್, ಪ್ರಿಂಟರ್ ಗಳನ್ನು ನಿಯಮಿತವಾಗಿ 70% ಆಲ್ಕೋಹಾಲ್ ಸ್ವೈಪ್ ನಿಂದ ಒರೆಸಿ ಸೋಂಕು ತೆಗೆಯಬೇಕು.

    ತರಗತಿಗಳು, ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್ ಗಳು, ಗ್ರಂಥಾಲಯಗಳು ಮತ್ತು ಅಲ್ಲಿನ ಆಸನಗಳನ್ನು ಸ್ವಚ್ಚವಾಗಿಡಬೇಕು ಹಾಗೂ ಆಸನಗಳ ನಡುವೆ ಅಂತರವನ್ನು ಗುರುತಿಸಬೇಕು.

    ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು.

    ಆರೋಗ್ಯ ಸೇತು ಆ್ಯಪ್’ ಅನ್ನು ಮೊಬೈಲ್ ನಲ್ಲಿ ಅನುಸ್ಥಾಪನೆಗೊಳಿಸಿ ಬಳಸುವ ಕುರಿತು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಲಹೆ ನೀಡುವುದು.

    ಅವಶ್ಯಕತೆಗೆ ಅನುಸಾರವಾಗಿ ಜಿಲ್ಲಾ ಆರೋಗ್ಯ ಕೇಂದ್ರದ ಸಹಾಯದೊಂದಿಗೆ ವೈದ್ಯಕೀಯ ಸಮಾಲೋಚಕರನ್ನು ವಿದ್ಯಾರ್ಥಿಗಳು ಭೇಟಿಮಾಡಿ ತಮ್ಮ ಆತಂಕ, ಮಾನಸಿಕ ಒತ್ತಡ ಅಥವಾ ಭಯದ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸುವುದು.

    ಸಾಮಾಜಿಕ ಅಂತರ ಕಾಪಾಡಲು ಶಿಕ್ಷಣ ಸಂಸ್ಥೆಗಳ ಆಯಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕ, ಚಿಹ್ನೆ, ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಕು. ಸಂಸ್ಥೆಯ ಕೋವಿಡ್ ಕೋಶ/ ಕಾರ್ಯಪಡೆಯ ವಿವರಗಳನ್ನು ಪ್ರಚುರಗೊಳಿಸಬೇಕು (ತುರ್ತು ಸಂಖ್ಯೆ, ಸಹಾಯವಾಣಿ ಸಂಖ್ಯೆ, ಇಮೇಲ್ ಐಡಿ ಮತ್ತು ಸಂಪರ್ಕ).

    ಶಿಕ್ಷಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸುವುದನ್ನು ಕಡ್ಡಾಯಗೊಳಿಸುವುದು.

    ಶಿಕ್ಷಣ ಸಂಸ್ಥೆಗಳು ಅಗತ್ಯಾನುಸಾರ ಬೋಧನಾ ಸಮಯವನ್ನು ವಿಸ್ತರಿಸಬಹುದು ಅಥವಾ ಪರಿವರ್ತಿಸುವುದು.

    ತರಗತಿ ಕೊಠಡಿ, ಕಲಿಕಾ ತಾಣಗಳಲ್ಲಿ ಸ್ಥಳಾವಕಾಶದ ಲಭ್ಯತೆಯನ್ನು ಆಧರಿಸಿ, ತರಗತಿಗಳಿಗೆ ಹಾಜರಾಗಲು 50% ವರೆಗಿನ ವಿದ್ಯಾರ್ಥಿಗಳಿಗೆ ರೊಟೇಷನ್ ಆಧಾರದ ಮೇಲೆ ಅವಕಾಶ ನೀಡುವುದು.

    ಸಂದರ್ಶಕರಿಗೆ ಪ್ರವೇಶ ನೀಡಬಾರದು ಅಥವಾ ಅವರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಪ್ರವೇಶಾವಕಾಶ ನೀಡಿದಲ್ಲಿ ಸಂದರ್ಶಕರ ಸಂಪೂರ್ಣ ಸಂಪರ್ಕ ವಿವರಗಳನ್ನು ಅವನು/ ಅವಳು ಭೇಟಿ ಯಾಗುವ ವ್ಯಕ್ತಿಗಳ ಹೆಸರುಗಳ ಜೊತೆಗೆ ನಿರ್ವಹಿಸತಕ್ಕದ್ದು.

    ವಿದ್ಯಾರ್ಥಿಗೆ ಅಥವಾ ಅವರ ಮನೆಯಲ್ಲಿ ಯಾವುದೇ ವ್ಯಕ್ತಿಗೆ ಕೋವಿಡ್ ಸೊಂಕಿನ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ, ಮೂಗು ಸೋರುವುದು ಮುಂತಾದ ಲಕ್ಷಣಗಳಿದ್ದಲ್ಲಿ ವಿದ್ಯಾರ್ಥಿಯನ್ನು ಕಾಲೇಜಿಗೆ ಕಳುಹಿಸದೆ ಹಾಗೂ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆಯುವ ಬಗ್ಗೆ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅರಿವು ಮೂಡಿಸುವುದು.

    ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳಲು ಅವಕಾಶ ಕಲ್ಪಿಸತಕ್ಕದ್ದು. ಅಗತ್ಯತೆಗೆ ಅನುಸಾರ ಥರ್ಮಲ್ ಸ್ಕ್ಯಾನರ್ ಗಳನ್ನು ಒದಗಿಸಿಕೊಳ್ಳುವುದು ಮತ್ತು ಪ್ರತಿ ದಿನ ಪ್ರತಿ ವಿದ್ಯಾರ್ಥಿಯ ದೇಹದ ಉಷ್ಣತೆಯನ್ನು ಕಡ್ಡಾಯವಾಗಿ ಪರೀಕ್ಷಿಸುವುದು.

    ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶಿಸುವ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೆ ರೋಗ ಲಕ್ಷಣಗಳು ಇದ್ದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ಕ್ರಮವಹಿಸುವುದು ಹಾಗೂ ಅವರಿಗೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಲು ಸೂಚಿಸುವುದು ಮತ್ತು ಮಾರ್ಗದರ್ಶನ ನೀಡುವುದು.

    ಕಾಲೇಜಿಗೆ ಬರುವ ಪ್ರತಿ ವಿದ್ಯಾರ್ಥಿಯು ಕಡ್ಡಾಯವಾಗಿ ಮತ್ತು ಸರಿಯಾಗಿ ಮಾಸ್ಕ್ (ಮುಖ ಕವಚ) ಧರಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. ವಿದ್ಯಾರ್ಥಿಗಳು ಕಾಲೇಜಿನ ಆವರಣ, ತರಗತಿ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್, ಉಪಹಾರ ಗೃಹ, ಕ್ರೀಡಾಂಗಣ, ಬ್ಯಾಂಕ್ ಸೇರಿದಂತೆ ಯಾವುದೇ ಸ್ಥಳ ಹಾಗೂ ಸಂದರ್ಭಗಳಲ್ಲಿಯೂ ಗುಂಪು ಸೇರದೆ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸೂಚಿಸುವುದು.

    ವಿದ್ಯಾರ್ಥಿಗಳು / ಕಾಲೇಜು ಸಿಬ್ಬಂದಿ ಬಳಸಿದ ಮಾಸ್ಕ್ ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಸೂಕ್ತ ಕಸದ ತೊಟ್ಟಿ / ಬುಟ್ಟಿಗಳ ವ್ಯವಸ್ಥೆ ಮಾಡುವುದು.

    ಕಾಲೇಜಿನ ಪ್ರಾಂಶುಪಾಲರು, ಬೋಧಕರು ಮತ್ತು ಆಡಳಿತ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಅಗಿಂದಾಗ್ಗೆ ಸಾಬೂನು/ ಸ್ಯಾನಿಟೈಸರ್ ನಿಂದ ಕೈತೊಳೆದುಕೊಳ್ಳುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.

    ಕಾಲೇಜಿನ ಪ್ರಾಂಶುಪಾಲರು, ಬೋಧಕರು, ಆಡಳಿತ ಸಿಬ್ಬಂದಿಗಳಲ್ಲಿ ಯಾರಿಗಾದರೂ ಕೋವಿಡ್ ಸೊಂಕಿನ ಲಕ್ಷಣಗಳು ಇದ್ದಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸುವುದು.

    ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯಕರ, ಶುಚಿ ಮತ್ತು ಸ್ವಾಸ್ಯವಾದ ಆಹಾರ ಪದಾರ್ಥಗಳನ್ನು ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವುದು ಹಾಗೂ ವಿದ್ಯಾರ್ಥಿಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವ್ಯಾಯಾಮ, ಯೋಗ, ಸರಳ ಪ್ರಾಣಾಯಾಮಗಳನ್ನು ಸಾಮಾಜಿಕ ಅಂತರದೊಂದಿಗೆ ಮಾಡುವಂತೆ ಪ್ರೇರೇಪಿಸುವುದು.

    ಹೆಚ್ಚಿನ ಸಲಹೆ, ಮಾರ್ಗದರ್ಶನ ಮತ್ತು ಸಂಶಯಗಳ ನಿವಾರಣೆಗಾಗಿ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವುದು. ವಿದ್ಯಾರ್ಥಿಗಳ ಪೋಷಕರಿಂದ ನಿರಂತರ ಪ್ರತಿಕ್ರಿಯೆ (Continuous Feedback) ಪಡೆಯಲು ಕಾಲೇಜು ಹಂತದಲ್ಲಿ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು.

    ಕಾಲೇಜು ಹಂತದಲ್ಲಿ ಕೋವಿಡ್ ಮಾರ್ಗಸೂಚಿಗಳ ಅನುಸರಣೆ ಹಾಗೂ ಕೋವಿಡ್-19 ರ ಸಾಂಕ್ರಾಮಿಕ ಹಿನ್ನಲೆಯಲ್ಲಿ ಉದ್ಭವಿಸುವಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಬೋಧಕವರ್ಗ ಹಾಗೂ ಬೋಧಕೇತರ ಸಿಬ್ಬಂದಿಯನ್ನೊಳಗೊಂಡ ಕೋವಿಡ್ ಕಾರ್ಯಪಡೆ (Taskforce) ಯನ್ನು ಪ್ರಾಂಶುಪಾಲರು ತಮ್ಮ ಅಧ್ಯಕ್ಷತೆಯಲ್ಲಿ ರಚಿಸುವುದು.

    ವಿಶ್ವವಿದ್ಯಾಲಯ ಹಂತದಲ್ಲಿ ಕೋವಿಡ್ ಮಾರ್ಗಸೂಚಿಗಳ ಅನುಸರಣೆ ಹಾಗೂ ಕೋವಿಡ್-19ರ ಸಾಂಕ್ರಾಮಿಕ ಹಿನ್ನಲೆಯಲ್ಲಿ ಉದ್ಭವಿಸುವಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಕೋವಿಡ್ ಕಾರ್ಯಪಡೆ (Taskforce) ಯನ್ನು ರಚಿಸಲು ಉಪಕುಲಪತಿಗಳು ಕ್ರಮಕೈಗೊಳ್ಳುವುದು.

    ಪ್ರತಿ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಿಂದ ನಿಯತವಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ದತ್ತಾಂಶಗಳನ್ನು ಪಡೆಯಲು ಕ್ರಮಕೈಗೊಳ್ಳುವುದು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರ ಬಗ್ಗೆ ಸಂಬಂಧಿಸಿದ ಕಾಲೇಜು ಪ್ರಾಂಶುಪಾಲರೊAದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗೆ ಕಾಲೇಜುಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ವಿಶ್ವವಿದ್ಯಾಲಯವು ನಿಗಾವಹಿಸುವುದು.

    ಕಾಲೇಜಿನಲ್ಲಿ ಒಂದು ಪ್ರತ್ಯೇಕ ಕೊಠಡಿಯನ್ನು ಮೀಸಲಿಟ್ಟು ಅದರಲ್ಲಿ ಕೋವಿಡ್ ಪ್ರಥಮ ಚಿಕಿತ್ಸೆಗಾಗಿ ಕೋವಿಡ್ ಕಿಟ್‌ಗಳನ್ನು ಹಾಗೂ ಅಗತ್ಯತೆಗೆ ಅನುಸಾರವಾಗಿ ಪಲ್ಸ್-ಆಕ್ಸಿಮೀಟರ್‌ಗಳನ್ನು ಒದಗಿಸಿಕೊಳ್ಳುವುದು.

    ಕ್ಯಾಂಪಸ್ ನಲ್ಲಿ ಸಾಕಷ್ಟು ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

    *ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಶಿಕ್ಷಣ ಸಚಿವಾಲಯದ ವೆಬ್ ಸೈಟ್ ನಲ್ಲಿ ರಚಿಸಲಾಗಿರುವ “ಮನೋದರ್ಪಣ್” ಹೆಸರಿನ ವೆಬ್ ಪೇಜ್ ನ ಬಗ್ಗೆ ಎಲ್ಲಾ ಬೋಧಕ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಅರಿವು ಮೂಡಿಸಬೇಕು. ಈ ವೆಬ್ ಪೇಜ್ ಸಲಹೆ, ಪ್ರಾಯೋಗಿಕ ಸಲಹೆಗಳು, ಭಿತ್ತಿಪತ್ರಗಳು, ವೀಡಿಯೋಗಳು, ಮನೋಸಾಮಾಜಿಕ ಬೆಂಬಲ, FAQ ಮತ್ತು ಆನ್ ಲೈನ್ ಪ್ರಶ್ನೆ ಮಾಡುವ ಅವಕಾಶಗಳನ್ನು ಒಳಗೊಂಡಿದ್ದು, ಇವುಗಳ ಸದುಪಯೋಗ ಪಡಿಸಿಕೊಳ್ಳಲು ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ಟೆಲಿ ಕೌನ್ಸಲಿಂಗ್ ನೀಡುವ ರಾಷ್ಟ್ರೀಯ ಟೋಲ್ ಫ್ರೀ ಸಹಾಯವಾಣಿ (84454440632) ಅನ್ನು ಸ್ಥಾಪಿಸಲಾಗಿದ್ದು, ಅದನ್ನು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಬಳಸಿಕೊಳ್ಳುವುದು.

    *ಕೇಂದ್ರ ಆರೋಗ್ಯ & ಕುಟುಂಬ ಕಲ್ಯಾಣ ಸಚಿವಾಲಯದ ಕೆಳಕಂಡ ವಿಡಿಯೋ ಮತ್ತು ಡಾಕ್ಯುಮೆಂಟ್ ಲಿಂಕ್ ಗಳನ್ನು ವಿಶ್ವವಿದ್ಯಾಲಯ/ ಕಾಲೇಜು ವೆಬ್ ಸೈಟ್ ನಲ್ಲಿ ಪ್ರಕಟಿಸುವುದು ಮತ್ತು ಸದರಿ ಲಿಂಕ್ ಗಳನ್ನು ವಿದ್ಯಾರ್ಥಿಗಳು ಮತ್ತು ಬೋಧಕರೊಂದಿಗೆ ಇ-ಮೇಲ್, ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಮತ್ತು ಟ್ವಿಟರ್ ಮೂಲಕ ಹಂಚಿಕೊಳ್ಳುವುದು.

    ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ಪ್ರಾಯೋಗಿಕ ಸಲಹೆಗಳು. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ನೋಡಿ.

    ಕೋವಿಡ್‌-19ರ ಸಮಯದಲ್ಲಿ ನಮ್ಮ ಮನಸ್ಸನ್ನು ನಿಭಾಯಿಸುವ ಬಗ್ಗೆ. ಡಾಕ್ಯೂಮೆಂಟ್‌ ನೋಡಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

    Minding our minds during the COVID-19

    ಕೋವಿಡ್‌-19 ಸಮಯದಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ವಿವಿಧ ಆರೋಗ್ಯ ತಜ್ಞರ ಅಭಿಪ್ರಾಯಗಳನ್ನು ಪಾಲಿಸುವುದು. ಅದಕ್ಕೆ ಅಗತ್ಯವಾದ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

    ನಡೆವಳಿಕೆಯ ಸ್ವಾಸ್ಥ್ಯ: ಟೋಲ್ ಫ್ರೀ ಸಹಾಯವಾಣಿ – 0804611007 

    ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಜಾಗೃತಿ:

    ಕೋವಿಡ್-19 ಸೋಂಕು ಹೇಗೆ ಹರಡುತ್ತದೆ, ಸೋಂಕಿನ ಸಾಮಾನ್ಯ ಲಕ್ಷಣಗಳು ಮತ್ತು ಅದರ ಹರಡುವಿಕೆಯನ್ನು ನಿಯಂತ್ರಿಸಲು ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು.‌

    ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಉದಾಹರಣೆಗೆ, ಕೈಗಳನ್ನು ಹೇಗೆ ತೊಳೆಯುವುದು, ಕೆಮ್ಮುವುದು ಅಥವಾ ಸೀನುವುದು ಹೇಗೆ ಹಾಗೂ ಮುಖ, ಕಣ್ಣು, ಬಾಯಿ ಮತ್ತು ಮೂಗುಗಳನ್ನು ಮುಟ್ಟುವುದನ್ನು ತಪ್ಪಿಸುವುದರ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ನಿಯಮಿತವಾಗಿ ತಿಳಿಸುವುದು.

    ಸಾಮಾಜಿಕ ಅಂತರ, ಮುಖಕವಚ/ ಮಾಸ್ಕ್ ಧರಿಸುವುದು, ಸ್ವಚ್ಛತೆ ಇತ್ಯಾದಿಗಳ ಅಗತ್ಯವನ್ನು ಮನವರಿಕೆ ಮಾಡುವುದು.

    ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ಮುಂತಾದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.

    ಮಾನಸಿಕ ಆರೋಗ್ಯವನ್ನು ಸುಧಾರಿಸಲು ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಸ್ನೇಹಿತರು, ಶಿಕ್ಷಕರು ಮತ್ತು ಪೋಷಕರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಬೇಕು. ಏಕಾಗ್ರತೆ, ಸಕಾರಾತ್ಮಕ ಮನೋಭಾವ, ಉತ್ತಮ ಆಹಾರ ಸೇವನೆ, ವಿಶ್ರಾಂತಿ ಮತ್ತು ನಿದ್ರೆಗಳ ಆವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಡುವುದು.

    ಶುಚಿರುಚಿಯಾದ ಆಹಾರ ಮತ್ತು ತಾಜಾ ಹಣ್ಣುಗಳ ಸೇವನೆ, ಆಗಾಗ್ಗೆ ಬಿಸಿ ನೀರು ಕುಡಿಯುವುದು, ಜಂಕ್ ಫುಡ್ ಅಥವಾ ಇತರೆ ವಸ್ತುಗಳನ್ನು ತ್ಯಜಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು.

    ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಆಡಿಯೋ, ವಿಡಿಯೋ ಮತ್ತಿತರ ಮಾಧ್ಯಮ ಬಿಡಿಭಾಗಗಳನ್ನು ಶುಚಿಗೊಳಿಸುವಂತೆ ತಿಳಿಸುವುದು. 

    ವಿದ್ಯಾರ್ಥಿಗಳು ತಮ್ಮ ಲ್ಯಾಪ್‌ಟಾಪ್‌ಗಳು, ಆಡಿಯೋ, ವಿಡಿಯೋ ಮತ್ತು ಇತರ ಮಾಧ್ಯಮ ಪರಿಕರಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸುವಂತೆ ತಿಳಿಸುವುದು.

    ಕೋವಿಡ್-19 ನ ಸೋಂಕು, ಪರಿಣಾಮ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮುಕ್ತವಾಗಿ ಚರ್ಚಿಸುವುದು. ವೈರಸ್‌ನಿಂದ ಉಂಟಾಗುವ ಸೋಂಕಿನ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಕ್ಯಾಂಪಸ್ ನ ಸೂಕ್ತ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಸ್ಟಿಕ್ಕರ್‌ಗಳನ್ನು ಅಂಟಿಸಬೇಕು.‌

    ವಿಕಲಚೇತನರಿಗೆ ಸೂಕ್ತ ಮತ್ತು ಸಮಯೋಚಿತ ಸೌಲಭ್ಯಗಳನ್ನು ಒದಗಿಸಬೇಕು. ಜಾತಿ, ಮತ, ಲಿಂಗ ತಾರತಮ್ಯ ಮಾಡಬಾರದು.

    ಪುಸ್ತಕಗಳು, ಇತರ ಕಲಿಕಾ ಸಾಮಗ್ರಿಗಳು ಮತ್ತು ತಿನ್ನಬಹುದಾದ ವಸ್ತುಗಳನ್ನು ಹಂಚಿಕೊಳ್ಳುವುದನ್ನು ನಿರುತ್ಸಾಹಗೊಳಿಸಬೇಕು. ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ/ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸುವುದು.

    ಹಾಸ್ಟೆಲ್‌ಗಳಿಗೆ ಸಂಬoಧಿಸಿದ ಆರೋಗ್ಯ ಮಾರ್ಗಸೂಚಿಗಳನ್ನು ಸಮಾಜ ಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊರಡಿಸಲಿದ್ದು ಸದರಿ ಮಾರ್ಗಸೂಚಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಹಾಗೂ ಇತರೆ ಎಲ್ಲಾ ಹಾಸ್ಟೆಲ್‌ಗಳಲ್ಲಿಯೂ ಕಡ್ಡಾಯವಾಗಿ ಅನುಸರಿಸುವುದು.

    ಜಿಲ್ಲೆಯಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಸಾಂಕ್ರಾಮಿಕ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೋವಿಡ್ ಉಸ್ತುವಾರಿ ಮತ್ತು ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಸಮಿತಿಯ ಅಧ್ಯಕ್ಷರಾಗಿದ್ದು; ಜಿಪಂ ಸಿಇಓ, ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಸರ್ಜನ್‌, ಜಿಲ್ಲಾ ಸಾರಿಗೆ ಅಧಿಕಾರಿ (ಆರ್ಟಿಓ), ಕೆಎಸ್‌ಆರ್‌ಟಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಜಿಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಸದಸ್ಯ ರಾಗಿರುತ್ತಾರೆ.

    ಜಿಲ್ಲಾ ಮಟ್ಟದ ಸಮಿತಿಯ ಪಾತ್ರ ಮತ್ತು ಕರ್ತವ್ಯಗಳು:

    ಜಿಲ್ಲೆಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಸಾಮಾನ್ಯ ಮಾರ್ಗಸೂಚಿಗಳ ಅನುಷ್ಠಾನವನ್ನು ಪರಿವೀಕ್ಷಿಸುವುದು.

    ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅವಶ್ಯಕತೆಗನುಸಾರವಾಗಿ ಕೋವಿಡ್ ತಪಾಸಣೆ ನಡೆಸುವುದು.

    *ವಿದ್ಯಾರ್ಥಿಗಳಿಗೆ ಸಾರಿಗೆ ಮತ್ತು ಬಸ್‌ಪಾಸ್ ವ್ಯವಸ್ಥೆ ಕಲ್ಪಿಸುವುದು. ಕಾಲೇಜುಗಳಿಗೆ ಕೋವಿಡ್ ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ಒದಗಿಸುವುದು.

    ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಇತರೆ ಹಾಸ್ಟೆಲ್‌ಗಳನ್ನು ಪ್ರಾರಂಬಿಸುವುದು ಮತ್ತು ಸದರಿ ಹಾಸ್ಟೆಲ್‌ಗಳಲ್ಲಿ ಕೋವಿಡ್ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು.

    ವಿದ್ಯಾರ್ಥಿಗಳಲ್ಲಿ ಕರೋನ ಹರಡುವಿಕೆಯನ್ನು ತಡೆಗಟ್ಟುವ ಕುರಿತಂತೆ ಜಾಗೃತಿ ಮೂಡಿಸುವುದು.

    pfizer ಕಂಪೆನಿಯ ಕೋವಿಡ್ ವ್ಯಾಕ್ಸಿನ್ ಬಹುತೇಕ ಯಶಸ್ವಿ

    ಜರ್ಮನಿಯ ಬಯೋಟೆಕ್ ಕಂಪೆನಿ BioNTech ಜೊತೆ ಸೇರಿ ತಾನು ಅಭಿವೃದ್ಧಿ ಪಡಿಸಿದ ಕೋವಿಡ್ ವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗದಲ್ಲಿ ಶೇಕಡ 90ರಷ್ಟು ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡಿದೆ ಎಂದು ಅಮೆರಿಕದ ಔಷಧ ಕಂಪನಿ ಫೈಜರ್- pfizer -. ಸ್ವಲ್ಪ ಹೊತ್ತಿಗೆ ಮುಂಚೆ ಪ್ರಕಟಿಸಿದೆ.

    ಈ ಬಗ್ಗೆ ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಕಂಪೆನಿಯ ಅಧ್ಯಕ್ಷ ಮತ್ತು ಸಿಇಒ ಆಲ್ಬರ್ಟ್ ಬೌರ್ಲಾ ತಮ್ಮ ಮೂರನೆ ಹಂತದ ಪ್ರಯೋಗ ಯಶಸ್ವಿಯಾಗಿದ್ದು ಕೋವಿಡ್ ವಿರುದ್ಧದ ಸಮರದಲ್ಲಿ ವಿಜಯ ಸಾಧಿಸುವಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ ಎಂದಿದ್ದಾರೆ.ಮಾನವ ಕುಲ ಮತ್ತು ವಿಜ್ಞಾನಕ್ಕೆ ಇಂದು ತುಂಬಾ ಮಹತ್ತರವಾದ ದಿನ ಎಂದು ಬಣ್ಣಿಸಿದ್ದಾರೆ.

    ಒಟ್ಟು ಎರಡು ಡೋಸ್ ಗಳಲ್ಲಿ ಎರಡನೇ ಡೋಸ್ ನೀಡಿದ ಏಳು ದಿನಗಳ ನಂತರ ಹಾಗೂ ಮೊದಲ ಡೋಸ್ ನೀಡಿದ 28 ದಿನಗಳ ನಂತರ ರೋಗ ನಿರೋಧಕ ಶಕ್ತಿ ಕಾಣಿಸಿಕೊಂಡಿದೆ ಎಂದು ಅವರ ಹೇಳಿದ್ದಾರೆ. ಇದೀಗ 94 ವ್ಯಕ್ತಿಗಳ ಮೇಲಿನ ಫಲಿತಾಂಶದ ವಿಶ್ಲೇಷಣೆಯಿಂದ ಈ ಅಭಿಪ್ರಾಯಕ್ಕೆ ಬರಲಿದ್ದು ಮುಂದೆ ಇನ್ನೂ164 ವ್ಯಕ್ತಿಗಳ ಫಲಿತಾಂಶ ಬರಬೇಕಾಗಿದೆ.

    ಸುರಕ್ಷಿತ ಮತ್ತು ಪರಿಣಾಮಕಾರಿ ವ್ಯಾಕ್ಸಿನ್ ನೀಡುವತ್ತ ನಮ್ಮ ಗಮನ ಹರಿದಿದೆ. ಇನ್ನು ಕೆಲವೇ ದಿನದಲ್ಲಿ ಸಂಪೂರ್ಣ ಫಲಿತಾಂಶ ಸಿಗುವ ನಿರೀಕ್ಷೆ ಇದೆ ಎಂದೂ ಅವರು ಹೇಳಿದ್ದಾರೆ.

    ಕರೋನ ನಂತರವೂ ಕಾಯಂ ಆಗಲಿದೆ ವರ್ಕ್ ಫ್ರಂ ಎನಿವೇರ್

    ಕರೋನ  ವೈರಸ್  ಹಾವಳಿ ಪ್ರಾರಂಭವಾದಾಗಿನಿಂದ  ದೇಶ ಹಾಗು ಪ್ರಪಂಚದಲ್ಲಿ ಹಲವಾರು ಉದ್ಯಮಗಳು ತಾವು ನಿರ್ವಹಿಸುವ ರೀತಿ, ಕೆಲಸ ಮಾಡುವ ರೀತಿ ಯಲ್ಲಿ ಬದಲಾವಣೆ  ಕಂಡುಕೊಂಡಿರುವುದು  ಹಾಗು ಕಂಡುಕೊಳ್ಳುತ್ತಿರುವುದು,  “change is constant”  ಎನ್ನುವುದು ಸಾರ್ವಕಾಲಿಕ ಸತ್ಯ ಎಂಬುದನ್ನು ಸಾಬೀತು ಪಡಿಸುತ್ತಿದೆ. 

    ಯಾವುದೇ ಯೋಜನೆ ಕಾರ್ಯಸಾಧುವಾಗಬೇಕಾದರೆ ಆ ಯೋಜನೆಯ ಉದ್ದೇಶ ಹಾಗು ಆ ಉದ್ದೇಶ ನೆರವೇರಲು ಬರುವ ವಿಘ್ನಗಳನ್ನು ಎದುರಿಸುವುದು ಹಾಗು ನಿವಾರಿಸುವುದು ಅನಿವಾರ್ಯ.   ಕೆಲವೊಂದು ಅಪಾಯಗಳನ್ನು ಮುಂಚೆಯೇ ಕಂಡುಹಿಡಿದು ಆ ಅಪಾಯಗಳನ್ನು  ಹೇಗೆ ನಿರ್ವಹಿಸಬೇಕೆಂದು ಎಂಬುದನ್ನು   “Project Manegement”  ತಿಳಿಸಿಕೊಡುತ್ತದೆ. ಆದರೆ ಅನೀರಿಕ್ಷಿತ ಅಪಾಯ ಬಂದಾಗ  ಅದನ್ನು   ಸಕಾರಾತ್ಮಕ ಅವಕಾಶಗಳನ್ನಾಗಿ ಪರಿವರ್ತಿಸಿ ಮುಂದುವರಿಯುವ ಕಂಪನಿಗಳು  ಕೊನೆಗೆ ತಮ್ಮ ಯೋಜನೆಯನ್ನು ಯೆಶಸ್ವಿಯಾಗಿ ಪೂರೈಸುತ್ತವೆ.  ಅಂತಹದೇ ಪರಿಸ್ಥಿತಿ ಕಳೆದ ಆರು ತಿಂಗಳಿಂದ ನಾವು ನೋಡುತ್ತಿದ್ದೇವೆ. 

    ವರ್ಕ್ ಫ್ರಮ್ ಹೋಮ್ ಗೆ ಮಾನ್ಯತೆ

    ತಾಂತ್ರಿಕತೆ ಬೆಳೆದ ಮೇಲೆ  ಹಲವಾರು ಕೆಲಸಗಳನ್ನು ಮನೆ ಇಂದ ಕೆಲಸ ಮಾಡುವ ಪರಿಪಾಠ ಕಳೆದ ದಶಕದಿಂದ ಚಾಲ್ತಿಯಲ್ಲಿದ್ದರೂ ಈಗ ಅದು ನಿಜವಾಗಿದೆ.  ಅದರಲ್ಲೂ  IT  ಹಾಗು BPO  ಕಂಪನಿಗಳು ತನ್ನ ಕೆಲಸಗಾರರಿಗೆ ಇರುವಲ್ಲಿಂದಲ್ಲೇ  ಕೆಲಸ ಮಾಡುವ ಅವಕಾಶಗಳನ್ನು ಕೊಡುತ್ತಿದೆ.  ಜೊತೆಗೆ ಅದಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡುತ್ತಿದೆ.   ಆದರೆ ಈ ರೀತಿ ಮಾಡುವ ಕೆಲಸಕ್ಕೆ ಸರ್ಕಾರದಿಂದ ಮಾನ್ಯತೆ ಇಲ್ಲಿವರೆಗೆ ಇರಲಿಲ್ಲ.   ಈಗ ಆ ಮಾನ್ಯತೆ ಕೊಡುವ ಕೆಲಸವನ್ನು ಭಾರತ ಸರ್ಕಾರ ಮಾಡಿದೆ.

    ಭಾರತ ಸರ್ಕಾರದಿಂದ  IT, BT ಹಾಗು  BPO ಕಂಪನಿಗಳಿಗೆ ಸಂಬಂಧಿಸಿದಂತೆ  ಹೊಸ ಸರಳೀಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.  ಅದರನ್ವಯ   “ಮನೆಯಿಂದ ಕೆಲಸ” ಮತ್ತು “ಎಲ್ಲಿಂದಲಾದರೂ ಕೆಲಸ ಮಾಡಲು”  ಉದ್ಯೋಗ ನೀತಿಯಲ್ಲಿ ಬದಲಾವಣೆ ತಂದಿದೆ.   ಈ ಬದಲಾವಣೆ IT, BT ಹಾಗು  BPO ಕಂಪನಿಗಳಿಗೆ ಅನುಕೂಲವಾಗುವುದರ ಜೊತೆಗೆ, ಉದ್ಯೋಗಿಗಳಿಗೆ ಸ್ನೇಹಪರ ಆಡಳಿತವನ್ನು ಸೃಷ್ಟಿಸುತ್ತದೆ ಅದು ಮುಂದೆ ಲಾಭದಾಯಕವಾಗಿಯೂ ಪರಿಣಾಮ ಬೀರಲಿದೆ ಎಂದು ಭಾವಿಸಲಾಗಿದೆ.

    COVID-19 ಐಟಿ / ಬಿಪಿಓ ಸಂಸ್ಥೆಗಳನ್ನು ನೌಕರರನ್ನು ಮನೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡುವ ಈ ನೀತಿ ವಿಶೇಷವಾಗಿ ಪ್ರಸ್ತುತವಾಗಿದೆ. ಅದಕ್ಕೆ ತಕ್ಕುದಾದ ಕೆಲಸದ ಸಮಯ, ನಿರ್ವಹಣೆ, ಸಂಬಳ, ಇತ್ಯಾದಿ ಗಳನ್ನೂ ಹೇಗೆ ನಿರ್ವಹಿಸಬೇಕು ಎಂಬ ಮಾರ್ಗಸೂಚಿಯನ್ನು ಪ್ರಕಟಿಸಿದೆ.  ಇದರಿಂದ ಉದ್ಯೋಗಿಗಳಿಗೂ ಉದ್ಯೋಗದಾತರಿಗೂ ಅನುಕೂಲವಾಗಲಿದೆ. 

    ಈ ಮಾರ್ಗಸೂಚಿಗಳು ಒಎಸ್ಪಿಗಳು ಅಪ್ಲಿಕೇಶನ್ ಸೇವೆಗಳು, ಐಟಿ-ಶಕ್ತಗೊಂಡ ಸೇವೆಗಳು ಅಥವಾ ಟೆಲಿಕಾಂ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವುದೇ ರೀತಿಯ ಹೊರಗುತ್ತಿಗೆ ಸೇವೆಗಳನ್ನು ಒದಗಿಸುವ ಘಟಕಗಳಾದ, ಬಿಪಿಓಗಳು, ಕೆಪಿಒಗಳು (ಜ್ಞಾನ ಪ್ರಕ್ರಿಯೆ ಹೊರಗುತ್ತಿಗೆ), ಐಟಿ-ಇಎಸ್, ಕಾಲ್ ಸೆಂಟರ್ ಗಳಿಗೆ ಅನ್ವಯಿಸಲಿದೆ. 

    ಹೊಸ ನಿಯಮಗಳು ಐಟಿ ಆಧಾರಿತ ಉದ್ಯಮಕ್ಕೆ ಬಲವಾದ ಪ್ರೋತ್ಸಾಹವನ್ನು ನೀಡುವ ಮತ್ತು ಭಾರತವನ್ನು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಐಟಿ ನ್ಯಾಯವ್ಯಾಪ್ತಿಯಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ಹೊಂದಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.  ಈ  ಮಾರ್ಗ ಸೂಚಿಗಳು  ಐಟಿ ಕ್ಷೇತ್ರದ ಯುವ ಪ್ರತಿಭೆಗಳನ್ನು ವಿಶೇಷವಾಗಿ ಉತ್ತೇಜಿಸುತ್ತದೆ!” ಎಂದು ಸರ್ಕಾರ ತಿಳಿಸಿದೆ. 

    ಎಲ್ಲಿ ಇದ್ದರೆ ಅಲ್ಲಿಂದಲೆ ಕೆಲಸ

    ಸರ್ಕಾರಗಳು ನೀತಿ ರೂಪಿಸುತ್ತವೆ,  ಇದರಲ್ಲಿ ಇನ್ನೂ ಒಂದು ಸಕಾರಾತ್ಮಕ ಅಂಶವನ್ನು ನಾವು ಗಮನಿಸಬೇಕಾಗಿದೆ. 
    ಎಲ್ಲಕ್ಕೂ ಬೆಂಗಳೂರು ಎನ್ನುವಂತಿದ್ದ  ಜನರಿಗೆ ತಾವು ಇರುವ ಹಳ್ಳಿಯಲ್ಲೇ, ಮನೆಯಲ್ಲೇ  ಅಥವಾ ತೋಟದ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬಹುದಾಗಿದೆ.  ದೊಡ್ಡ ಊರಿಗೆ ಬಂದು ಸಾಲ ಮಾಡಿ ಮನೆ ಮಠ ಮಾಡುವ ಬದಲು ಇರುವ ಜಾಗದಿಂದಲೇ ಕೆಲಸ ಮಾಡುವುದು ಜೊತೆಗೆ ತಂದೆ ತಾಯಿ, ಬಂಧುಗಳು, ತಮ್ಮ ಹೊಲ ಗದ್ದೆಗಳನ್ನು ಬಿಟ್ಟು ಬರುವ  ಅನಿವಾರ್ಯತೆ ಇನ್ನುಮುಂದೆ ಐಟಿ  ಉದ್ಯೋಗಿಗಳಿಗೆ ಬರುವುದಿಲ್ಲ.

    ಇದೆಲ್ಲವೂ ಸರಿ, ಆದರೆ ಮಹಾನಗರಗಳಲ್ಲಿ ಇರುವಂತೆ  ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಮೊಬೈಲ್ ಇಂಟರ್ನೆಟ್ ಬಂದಿದೆ ಹೊರತು,  ಇನ್ನು ಬ್ರಾಡ್ ಬ್ಯಾಂಡ್  ಇಂಟರ್ನೆಟ್  ಸೌಲಭ್ಯ ಸಂಪೂರ್ಣವಾಗಿ ಸಿಕ್ಕಿಲ್ಲ.  ಹೈ ಸ್ಪೀಡ್ ಇಂಟರ್ನೆಟ್, ನಿರಂತರ ವಿದ್ಯುತ್  ಸೇವೆ ಇಲ್ಲದೆ ಐಟಿ  ಕೆಲಸಗಳನ್ನು  ಹಳ್ಳಿಗಳಲ್ಲಿ ನಿರ್ವಹಿಸುವುದು ಕಷ್ಟ.   ಆ ಸೌಲಭ್ಯಗಳು ದೊರೆಯಲು ಬೇಕಾದ ಮೂಲಸೌಕರ್ಯ ಕಲ್ಪಿಸುವುದು ರಾಜ್ಯಸರ್ಕಾರದ / ಸೇವೆ ಒದಗಿಸುವ  ಕೆಲಸ.  ಅಲ್ಲಿಯೂ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚು ಇರುವುದು ಕಾಣುತ್ತದೆ. 

    ಒಟ್ಟಿನಲ್ಲಿ ಈ ಹೊಸ ನಿಯಮಗಳು ನಮಗೆ ಹೆಚ್ಚು ಹೆಚ್ಚು ಉಪಯೋಗವಾಗಲಿ, ಹಳ್ಳಿಗಳಲ್ಲಿ ಪಾಳುಬಿದ್ದ ಜಮೀನಿನಲ್ಲಿ ಮತ್ತೆ ಹಸಿರು ಕ್ರಾಂತಿ ಮೂಡಲಿ,  ಹಳೆ ಮನೆಗಳು ನವೀಕರಣ ಗೊಂಡು, ವೃದ್ಧರ ಗೂಡಾಗಿದ್ದ ನಮ್ಮ ಹಳ್ಳಿಗಳಲ್ಲಿ ಹೊಸ ರಕ್ತದ ಹುಡುಗರು ಕೈಯಲ್ಲಿ ಲ್ಯಾಪ್ ಟಾಪ್ ತೆಗೆದುಕೊಂಡು  ಜಗಲಿ, ಕಟ್ಟೆ, ಹೊಲಗಳಲ್ಲಿ ಕುಳಿತು  “ಹೇಯ್ ವಾಟ್ಸ್ ದಿ ಸ್ಟೇಟಸ್” ಎನ್ನುವ ಕಾಲ ಆದಷ್ಟು ಬೇಗ ಬರುವುದು ಸಾಧ್ಯ ಎಂದು ಈ ಹೊಸ ನಿಯಮಗಳು ನಮಗೆ ತಿಳಿಸುತ್ತವೆ.

    error: Content is protected !!