
ಎಸ್.ಕೆ. ಶೇಷಚಂದ್ರಿಕ
ಬಿಹಾರಿ ಮತದಾರನನ್ನು ದಡ್ಡ, ಪೆದ್ದ, ಕೋಲೇ ಬಸವ, ಹಿಂಸೆಯನ್ನು ಪ್ರೋತ್ಸಾಹಿಸುವಾತ ಹೀಗೆ ನಾನಾ ರೀತಿ ಬಣ್ಣಿಸುತ್ತಿದ್ದ ದೇಶದ ಒಟ್ಟಾರೆ ಮತದಾರರಿಗೆ ಬಿಹಾರಿಗ ಸಂದೇಶ ರವಾನಿಸಿದ್ದಾನೆ.
ಸ್ವತಂತ್ರ ಭಾರತದ ಐದು ದಶಕಗಳ ಇತಿಹಾಸದಲ್ಲಿ ಬಿಹಾರ ಚುನಾವಣೆ ಹಲವಾರು ದೃಷ್ಟಿಯಿಂದ ಮಹತ್ವದ್ದಾಗಿದೆ. ಇನ್ನು ಮುಂದೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಉಳಿದ ಮತದಾರರು ಬಿಹಾರ ಮತದಾರನನ್ನು ಮಾದರಿ ಎಂದು ಪರಿಗಣಿಸಿದಲ್ಲಿ ವಿಶೇಷವೇನಿಲ್ಲ.
ಯುವ ಮತದಾರರ ನಿರ್ಣಯ
ಮುಖ್ಯವಾಗಿ ಬಿಹಾರ ಚುನಾವಣೆಯಿಂದ ಕಲಿಯಬಹುದಾದ ನೀತಿ ಪಾಠವೇನು?
ಧ್ರುವೀಕರಣ ಎನ್ನಬಹುದಾದ ರೀತಿಯಲ್ಲಿ ಬಿಹಾರ ಮತದಾರನ ನಿರ್ಣಯ ಹೊರಬಿದ್ದಿದೆ. ಯುವಜನರಲ್ಲಿ ಬಹುತೇಕ ಮತದಾರರು ಬದಲಾವಣೆಗೆ ಓಗೊಟ್ಟಿದ್ದಾರೆ. ಹೊಸ ನೋಟ, ಹೊಸ ದೃಷ್ಟಿ, ಬದಲಾವಣೆ ಇದು ಬಿಹಾರಿ ಯುವ ಮತದಾರರ ಸಂದೇಶವಾಗಿದೆ.
ಬೆಂಗಳೂರಿನ ವರದಿಗಾರರ ತಂಡ ಸಮೀಕ್ಷಿಸಿದಂತೆ ಮತದಾರರಲ್ಲಿ ಮೂರು ವರ್ಗ ಸ್ಪಷ್ಟವಾಗಿದೆ.
ಯುವ ಮತದಾರರು ಕ್ರಾಂತಿ ಅಥವಾ ದಂಗೆ ಎನ್ನುವ ಪ್ರಮಾಣದಲ್ಲಿ ರಾಷ್ಟ್ರೀಯ ಜನತಾದಳದ ಯುವ ನಾಯಕ ತೇಜಸ್ವಿ ಯಾದವನನ್ನು ಬೆಂಬಲಿಸಿದ್ದಾರೆ. 75 ಕ್ಷೇತ್ರಗಳಲ್ಲಿ ಆತ ಸಾಧಿಸಿರುವ ವಿಜಯ ಇದರಿಂದ ಸ್ಪಷ್ಟವಾಗುತ್ತದೆ.
ಎರಡನೆಯ ವರ್ಗ ತಟಸ್ಥರು. ಮುಖ್ಯಮಂತ್ರಿ ನಿತೀಶ್ ಕುಮಾರರ ಬೆಂಬಲಿಗರು. ನಿತೀಶರ ವೈಯಕ್ತಿಕ ಸಚ್ಛಾರಿತ್ರವನ್ನು ನಂಬಿ, ಪಕ್ಷಕ್ಕೆ ಅಲ್ಲದಿದ್ದರೂ, ವ್ಯಕ್ತಿಗೆ ವೋಟು ಹಾಕಿದವರು. ದೇಶದ ಇಂದಿನ ಹಲವಾರು ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಬಿಹಾರದ ಸಮಾಜವಾದಿ ಮುಖ್ಯಮಂತ್ರಿ ನಿತೀಶ್ ಕುಮಾರ ಸಾವಿರಪಾಲು ಯೋಗ್ಯರು.
ಮೋದಿಯನ್ನು ಮೆಚ್ಚಿದ ಬಿಹಾರಿಗರು
ಮೂರನೆಯದು: ಬಿಹಾರದ ಇಂದಿನ ಚುನಾವಣೆಯ
ಹಿಂದಿನ ಪ್ರೇರಕಶಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ನಂಬಿದವರು. ಇವರನ್ನು ತಟಸ್ಥರು ಎಂದು ವರ್ಗೀಕರಣ ಮಾಡಿದರೂ ತಪ್ಪಲ್ಲ.
ಚರಿತ್ರಹೀನ ರಾಜಕಾರಣಿಗಳು ಇದೀಗ ದೇಶದ ಚರಿತ್ರೆಯನ್ನು ತುಂಬಿಸಿದ್ದಾರೆ.ಅಧಿಕಾರಕ್ಕೆ ಬಂದ ಕೂಡಲೇ ಹಣ ಗಳಿಸುವ ದಂಧೆ ಹೆಚ್ಚುತ್ತಿದೆ. ಅಭಿವೃದ್ಧಿ ಸಂಘಟನೆಯನ್ನು ನಡೆಸಬೇಕಾದ ಕೆಲ ಮುಖ್ಯಮಂತ್ರಿಗಳು ಹಣ-ಜಾತಿ ಸಂಘಟನೆಗೆ ಆದ್ಯತೆ ಕೊಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ನಂಬಿಕೆ ಅರ್ಹ ರಾಗಿ ಕಾಣಿಸಿದ್ದರೆ ಅಚ್ಚರಿ ಇಲ್ಲ.
ಇಂದಿನ ಬಿಹಾರದ ಚುನಾವಣೆ ಒಂದು ರೀತಿಯಲ್ಲಿ ಜನಸಾಮಾನ್ಯರು, ವಿಶೇಷವಾಗಿ ಮಹಿಳಾ ಮತದಾರರು ನರೇಂದ್ರ ಮೋದಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಕೊಟ್ಟ ಆದರ – ಗೌರವ ಎಂದರೆ ಉತ್ಪ್ರೇಕ್ಷೆಯಲ್ಲ.
ಮೋದಿಯವರ ಜನಪ್ರಿಯತೆಯನ್ನು ಎಲ್ಲರೂ ಅನುಮೋದಿಸಿದ್ದಾರೆ ಎನ್ನುವುದು ಇದರ ಅರ್ಥವಲ್ಲ. ಹೆಚ್ಚು ಜನ ಮೋದಿಯ ನಾಯಕತ್ವದಲ್ಲಿ ದೇಶದ ಭವಿಷ್ಯ, ಪ್ರಗತಿ ಮತ್ತು ಏಳಿಗೆಯನ್ನು ನಂಬಿದ್ದಾರೆ ಎನ್ನುವುದು ಬಿಹಾರಿ ಮತದಾರ ಕಲಿಸಿದ ಪಾಠ.
ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು. ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು



ಎಂದಿನಂತೆ ಶೇಷಾಚಂದ್ರಿಕಾ ರವರು ಅತ್ಯುತ್ತಮ ವಿಶ್ಲೇಷಣೆ ನೀಡಿದ್ದಾರೆ. ಅಭಿನಂದನೆಗಳು