24.1 C
Karnataka
Friday, May 22, 2026
    Home Blog Page 139

    ಕೋವಿಡ್-19 ಲಸಿಕೆ ಅಭಿವೃದ್ಧಿಯ ಹಾದಿಯಲ್ಲಿ ಸಾಕಷ್ಟು ಪ್ರಗತಿ

    ಇಪ್ಪತ್ತಕ್ಕೂ ಹೆಚ್ಚು ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಲು ಈಗಾಗಲೇ  ಲಸಿಕೆಗಳು  ಇದ್ದು,  ಡಿಫ್ತಿರಿಯಾ, ಟೆಟನಸ್, ಪೆರ್ಟುಸಿಸ್, ಇನ್ ಫ್ಲುಯೆಂಜ , ದಢಾರ ಮುಂತಾದ ಸಾಂಕ್ರಾಮಿಕ  ರೋಗಗಳಿಂದ  ಪ್ರತಿ ವರ್ಷ ಸುಮಾರು  2-3 ದಶಲಕ್ಷ ಸಾವುಗಳನ್ನು ತಡೆಯಲಾಗುತ್ತಿದೆ. ಅಂತೆಯೇ, ಕೋವಿಡ್-19   ತಡೆಗಟ್ಟುವ ಲಸಿಕೆಯನ್ನು ಅಭಿವೃದ್ಧಿಪಡಿಸಲು  ಅಭೂತಪೂರ್ವ ವೇಗದಲ್ಲಿ ಕೆಲಸಗಳು  ನಡೆಯುತ್ತಿವೆ. ಲಸಿಕೆ ‌ಇನ್ನೇನು ಬಂದೇ ಬಿಡ್ತು ಎಂಬ ಸುದ್ದಿ ಹಲವಾರು ಪ್ರಶ್ನೆಗಳನ್ನು ಹುಟ್ಟಿ ಹಾಕಿತು. ಅವುಗಳಿಗೆ ಜೀವ ವಿಜ್ಞಾನಿ ಡಾ. ಪ್ರಶಾಂತ್ ನಾಯ್ಕ್ ಉತ್ತರ ಹುಡುಕಿದ್ದಾರೆ.

    ಲಸಿಕೆ ತಯಾರಿಕೆ ಈಗ ಯಾವ ಹಂತದಲ್ಲಿವೆ?ನಮಗೆಲ್ಲಾ ಸಿಗುವುದು ಯಾವಾಗ ?

    ಪ್ರಸ್ತುತ, ಪೈಪೋಟಿಯಲ್ಲಿ  ವಿವಿಧ  ದೇಶಗಳಿಂದ  100 ಕ್ಕೂ ಹೆಚ್ಚು ಕೋವಿಡ್-19     ಲಸಿಕೆಗಳನ್ನು    ಅಭಿವೃದ್ಧಿ ಪಡಿಸುವಲ್ಲಿ  ಸಂಶೋಧನೆಗಳು ನಡೆಯುತ್ತಿದ್ದು,     ಇವುಗಳಲ್ಲಿ ಹಲವಾರು ಮಾನವ ಪ್ರಯೋಗ (ಕ್ಲಿನಿಕಲ್ ಟ್ರಯಲ್ಸ್) ಹಂತದಲ್ಲಿವೆ.  ಕೊರೊನಾವೈರಸ್ ನ್ನು  ಕಟ್ಟಿಹಾಕುವ ಸಲುವಾಗಿ  ಲಸಿಕೆ ಅಭಿವೃದ್ಧಿಯ ಕಾರ್ಯವನ್ನು  ವೇಗಗೊಳಿಸಲು ವಿಶ್ವ ಅರೋಗ್ಯ ಸಂಸ್ಥೆಯ ( WHO) ವಿಜ್ಞಾನಿಗಳು, ವ್ಯಾವಹಾರಿಕ ಮತ್ತು ಜಾಗತಿಕ ಆರೋಗ್ಯ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಎಸಿಟಿ (ACT) ಆಕ್ಸಿಲರೇಟರ್ (The Access to COVID-19 Tools Accelerator) ಒಂದನ್ನು ಈಗಾಗಲೇ  ಸ್ಥಾಪಿಸಿದ್ದು,  ಅದರ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ   ಕೆಲಸ ಕಾರ್ಯಗಳು ನಡೆಯುತ್ತಿವೆ.

    ‘ಕೋವಿಡ್ -19 ಪ್ರಿವೆನ್ಷನ್ ಟ್ರಯಲ್ಸ್ ನೆಟ್‌ವರ್ಕ್’ (COVPN)ನ್ನು ಸಹ ಸ್ಥಾಪಿಸಲಾಗಿದ್ದು  ಇದು ಕ್ಲಿನಿಕಲ್ ಟ್ರಯಲ್ ನೆಟ್‌ವರ್ಕ್‌ಗಳನ್ನು ಸಂಯೋಜಿಸುವ  ಕಾರ್ಯವನ್ನು ನಿರ್ವಹಿಸುತ್ತಿದೆ.

    ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಕಂಡುಬಂದ  ನಂತರ, ಎಲ್ಲಾ ದೇಶಗಳ ಜನರನ್ನು  ಕೊರೊನಾವೈರಸ್ ಸೋಂಕಿನಿಂದ ರಕ್ಷಿಸಲು ವಿಶ್ವ ಅರೋಗ್ಯ ಸಂಸ್ಥೆಯುCOVAX   ಲಸಿಕೆಗಳನ್ನು ಎಲ್ಲಾ ದೇಶಗಳಿಗೂ ಸಮಾನವಾಗಿ ಸಿಗುವಂತೆ ಮಾಡಲು ಕಾರ್ಯಯೋಜನೆ ರೂಪಿಸಿದೆ. ಅದರಲ್ಲಿಯೂ ಮುಖ್ಯವಾಗಿ  ಹೆಚ್ಚು  ಅಪಾಯದಲ್ಲಿರುವ ದೇಶದ ಜನರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಿಸಿದೆ.

    ಕ್ಲಿನಿಕಲ್ ಪ್ರಯೋಗಗಳ  ಫಲಿತಾಂಶ ಯಾವಾಗ ಪ್ರಕಟ ಆಗಬಹುದು?

    ಇಂಥದೇ ಸಮಯದಲ್ಲೇ ಎಂದು ಹೇಳುವುದು ಕಷ್ಟ. ಅನೇಕ ಸಂಭಾವ್ಯ ಲಸಿಕೆಗಳನ್ನು ಅಧ್ಯಯನ ಮಾಡಲಾಗುತ್ತಿದ್ದು ದೊಡ್ಡ ಮಟ್ಟದಲ್ಲಿ ನಡೆಸುತ್ತಿರುವ ಕೆಲವು  ಕ್ಲಿನಿಕಲ್ ಪ್ರಯೋಗಗಳ  ಫಲಿತಾಂಶ 2020 ರ ಕೊನೆಯಲ್ಲಿ ಅಥವಾ 2021 ರ ಆರಂಭದಲ್ಲಿ   ಪ್ರಕಟವಾಗಬಹುದು.  ವಿಶ್ವದ ಅನೇಕ ದೇಶಗಳಲ್ಲಿ ಕೋವಿಡ್ -19 ಲಸಿಕೆ  ಅಭಿವೃದ್ಧಿಯ ಕಾರ್ಯ ತ್ವರಿತಗತಿಯಲ್ಲಿ  ನಡೆಯುತ್ತಿದ್ದರೂ  ಸುರಕ್ಷಿತ ಮತ್ತು ಪರಿಣಾಮಕಾರಿ ಕೋವಿಡ್ -19 ಲಸಿಕೆ ಯಾವಾಗ ಬಿಡುಗಡೆಗೆ  ಸಿದ್ಧವಾಗಲಿದೆ ಎಂಬುದು ಇನ್ನೂ  ಸ್ಪಷ್ಟವಾಗಿ  ತಿಳಿದಿಲ್ಲ;  ಕಡಿಮೆ ಪಕ್ಷ  2021 ರ ಮಧ್ಯಭಾಗದ ಸಮಯದಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ.  

    ಲಸಿಕೆ ಸಿದ್ಧವಾದ ಕೂಡಲೆ ಎಲ್ಲರಿಗೂ ಸಿಗುವುದೆ ?

    ಇಲ್ಲ. ತಕ್ಷಣವೆ ಅಂದರೆ ಸಿದ್ಧವಾದ ಮಾರನೇ ದಿನವೇ ಎಲ್ಲರಿಗೂ ಸಿಗುವುದಿಲ್ಲ. ಕೋವಿಡ್  -19 ಲಸಿಕೆ (ಕೊವ್ಯಾಕ್ಸ್) ಸಿದ್ಧವಾದರೂ ಕೂಡ ಅದನ್ನು   ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವ ಮೊದಲು   ಹಲವಾರು ಪ್ರಮುಖ ಸವಾಲುಗಳನ್ನು ಜಯಿಸಬೇಕು:

    • ಮೂರನೇ ಹಂತದ   ಕ್ಲಿನಿಕಲ್ ಪ್ರಯೋಗಗಳನ್ನು ದೊಡ್ಡ ಮಟ್ಟದಲ್ಲಿ ನಡೆಸಿ ಲಸಿಕೆಗಳು  ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಬೇಕು. 
    • ಲಸಿಕೆ ಸುರಕ್ಷತೆಯ ಕುರಿತು  ಜಾಗತಿಕ ತಜ್ಞರ  ಸಲಹಾ ಸಮಿತಿಯ ಚರ್ಚೆಗೆ  ಒಳಪಡಿಸಬೇಕು;  ವಿಶ್ವ  ಅರೋಗ್ಯ ಸಂಸ್ಥೆಯು  ಲಸಿಕೆಗಳನ್ನು ಪೂರ್ವಭಾವಿ ಅರ್ಹತೆಗಾಗಿ    ಪರಿಗಣಿಸುವ ಮೊದಲು, ಲಸಿಕೆ ತಯಾರಿಸಿದ ದೇಶದಲ್ಲಿ  ಅಲ್ಲಿನ ಔಷಧಿ ನಿಯಂತ್ರಕ ಮಂಡಳಿ / ಪ್ರಾಧಿಕಾರದಿಂದ  ಪರಿಶೀಲನೆ ಮತ್ತು ಅನುಮೋದನೆ ಸೇರಿದಂತೆ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಪುರಾವೆಗಳ ಬಗ್ಗೆ ಸರಣಿ ವಿಮರ್ಶೆಗಳಾಗಬೇಕು.   
    • ವಿಶ್ವ  ಅರೋಗ್ಯ ಸಂಸ್ಥೆಯಿಂದ  ಸಂಯೋಜಿತವಾದ  SAGE (Scientific Advisory Group for Emergencies) ಎಂದು ಕರೆಯಲ್ಪಡುವ ತಜ್ಞರ  ಸಮಿತಿಯು ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳನ್ನು ವಿಶ್ಲೇಷಿಸಿ,  ರೋಗದ ಪುರಾವೆಗಳು, ಬಾಧಿತ ವಯಸ್ಸಿನವರು, ಅಪಾಯಕಾರಿ ಅಂಶಗಳು ಮತ್ತು ಇತರ ಮಾಹಿತಿಯೊಂದಿಗೆ ಲಸಿಕೆಗಳನ್ನು ಬಳಸಬಹುದೇ   ಮತ್ತು ಹೇಗೆ ಬಳಸಬೇಕು ಎಂಬುವುದರ ಬಗ್ಗೆ  ಶಿಫಾರಸ್ಸು  ಮಾಡಬೇಕು.  
    • ವಿಶ್ವ  ಅರೋಗ್ಯ ಸಂಸ್ಥೆಯ  ಶಿಫಾರಸುಗಳ ಆಧಾರದ ಮೇಲೆ ಲಸಿಕೆಗಳನ್ನು ರಾಷ್ಟ್ರೀಯ ಬಳಕೆಗಾಗಿ ಅನುಮೋದಿಸಬಹುದೇ ಎಂಬುದನ್ನು ಆಯಾ ದೇಶಗಳು ತೀರ್ಮಾನಿಸಬೇಕು . ಲಸಿಕೆಗಳ ಹಂಚಿಕೆಯ ಮತ್ತು  ಬಳಸುವ ವಿಧಾನದ ಬಗ್ಗೆ ನೀತಿ ನಿಯಮಾವಳಿಗಳನ್ನು  ರಚಿಸಬೇಕು.
    • ಕೋವಿಡ್-19 ಒಂದು ಜಾಗತಿಕ ಮಾಹಾಮಾರಿ ಆಗಿರುವುದರಿಂದ ವಿಶ್ವದಾದ್ಯಂತ  ಜನರಿಗೆ ತಲುಪಿಸಲು ಲಸಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಒಂದು ಪ್ರಮುಖ ಮತ್ತು ಮಹತ್ವದ  ಸವಾಲಾಗಿರುತ್ತದೆ.
    • ಅಂತಿಮ ಹಂತವಾಗಿ, ಸಮರ್ಪಕವಾದ ಸ್ಟಾಕ್ ನಿರ್ವಹಣೆ, ಸಂಗ್ರಹಣೆ ಮತ್ತು ತಾಪಮಾನ ನಿಯಂತ್ರಣದೊಂದಿಗೆ ಲಸಿಕೆಗಳನ್ನು ಸುವ್ಯವಸ್ಥಿತವಾಗಿ ಎಲ್ಲಾ   ಜನರಿಗೂ ಸಿಗುವಂತೆ ಮಾಡುವುದು ಒಂದು   ಮಹತ್ತರವಾದ  ಸವಾಲು.   

    ಯಾವ ಯಾವ ಸಂಸ್ಥೆಗಳು ಈಗ ಲಸಿಕೆ ತಯಾರಲ್ಲಿ ಇವೆ?

    ಕೊರೊನಾವೈರಸ್ ವಿರುದ್ಧ  ಲಸಿಕೆ ಅಭಿವೃದ್ಧಿಯ  ಕಾರ್ಯದಲ್ಲಿ ಮುಂಚೂಣಿಯಲ್ಲಿರುವ  ಸಂಸ್ಥೆಗಳು, ಇನೋವಿಯೊ (Inovio), ಮಾಡರ್ನಾ (Moderna), ಕ್ಯೂರ್‌ವಾಕ್ (CureVac), ಇನ್‌ಸ್ಟಿಟ್ಯೂಟ್ ಪಾಶ್ಚರ್ (Institute Pasteur) / ಮೆರ್ಕ್ (Merck) / ಥೆಮಿಸ್ (Themis), ಅಸ್ಟ್ರಾಜೆನೆಕಾ/ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ (AstraZeneca/University of Oxford), ನೊವಾವಾಕ್ಸ್ (Novavax), ಹಾಂಗ್ ಕಾಂಗ್ ವಿಶ್ವವಿದ್ಯಾಲಯ (University of Hong Kong), ಕ್ಲೋವರ್ ಬಯೋಫಾರ್ಮಾಸ್ಯುಟಿಕಲ್ಸ್ (Clover Biopharmaceuticals) ಮತ್ತು ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ / ಸಿಎಸ್‌ಎಲ್ (Queensland/CSL). ಎಲ್ಲಾ    ದೇಶಗಳಿಗೂ   ಕಡಿಮೆ ಬೆಲೆಯಲ್ಲಿ   ಕೋವಿಡ್-19 ಲಸಿಕೆ ಸಿಗುವಂತೆ ಮಾಡುವ ಮುಖ್ಯ ಗುರಿಯೊಂದಿಗೆ  ವಿಶ್ವ ಅರೋಗ್ಯ ಸಂಸ್ಥೆಯು  ಈ  ಎಲ್ಲಾ ಸಂಸ್ಥೆಗಳೊಂದಿಗೆ  ಕೈಜೋಡಿಸಿದೆ.   

    ಮಾಡರ್ನಾದ mRNA-1273, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾದ AZD1222, ಹಾಗೂ  ಫಿಜರ್ ಮತ್ತು ಬಯೋಟೆಕ್‌ನ BNT162 ಲಸಿಕೆಗಳು ಈಗಾಗಲೇ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದ್ದು, ಸಕರಾತ್ಮಕ  ಫಲಿತಾಂಶಕ್ಕಾಗಿ   ಜಾಗತಿಕ ಗಮನವನ್ನು ಪಡೆದುಕೊಂಡಿದೆ.  

    ನ್ಯಾನೊಪಾರ್ಟಿಕಲ್ ಆಧಾರಿತ ಲಸಿಕೆ ಹಾಗೆಂದರೇನು?

    1 ರಿಂದ 100 ನ್ಯಾನೋ ಮೀಟರ್ ಸೈಜ್ ನಲ್ಲಿರುವ ಇವು ಬರಿಯ ಕಣ್ಣಿಗೆ ಕಾಣುವುದಿಲ್ಲ.ಈ ನ್ಯಾನೊಪಾರ್ಟಿಕಲ್ ಆಧಾರಿತ ಉತ್ಪನ್ನಗಳು  ವೈದ್ಯಕೀಯ ಮತ್ತು ಔಷಧೀಯ  ಕ್ಷೇತ್ರಗಳಲ್ಲಿ   ಕ್ರಾಂತಿಯನ್ನು   ಉಂಟುಮಾಡುತ್ತಿರುವುದು  ಇತ್ತೀಚಿನ ವರ್ಷಗಳ  ಬೆಳವಣಿಗೆ.

    ವಾಷಿಂಗ್ಟನ್ ವಿಶ್ವವಿದ್ಯಾಲಯ ಸ್ಕೂಲ್ ಆಫ್ ಮೆಡಿಸಿನ್   ಇಲ್ಲಿನ  ವಿಜ್ಞಾನಿಗಳ ತಂಡವು  ನ್ಯಾನೊಪಾರ್ಟಿಕಲ್ ಆಧಾರಿತವಾಗಿ ಕೋವಿಡ್-19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವ  ನಿಟ್ಟಿನಲ್ಲಿ  ನಡೆಸಿದ ಅಧ್ಯಯನವು ಒಂದು ಆಶಾದಾಯಕ ಫಲಿತಾಂಶವನ್ನು ನೀಡಿದೆ.  ಕೊರೊನಾವೈರಸ್  ಹೊರಮೈಯಲ್ಲಿರುವ ಸ್ಪೈಕ್ ಪ್ರೊಟೀನ್ ರಚನೆಯಂತೆ  ನ್ಯಾನೋಪಾರ್ಟಿಕಲ್ ಗಳನ್ನು  ವಿನ್ಯಾಸಗೊಳಿಸಿ  ಇಲಿಗಳಿಗೆ  ನೀಡಿದಾಗ   ಅದು  ಅತ್ಯಂತ ಪರಿಣಾಮಕಾರಿಯಾದ  ಬಿ-ಸೆಲ್ ರೋಗನಿರೋಧಕ ಪ್ರತಿಕ್ರಿಯೆಯನ್ನು ತೋರಿಸಿದೆ.  ಅಂದರೆ,  ಸಾಂಪ್ರದಾಯಿಕ ಲಸಿಕೆಗಳಿಗೆ ಹೋಲಿಸಿದರೆ ಆರು ಪಟ್ಟು ಕಡಿಮೆ ಪ್ರಮಾಣದಲ್ಲಿ  ಚುಚ್ಚುಮದ್ದು  ನೀಡಿದರೂ  ಹತ್ತು ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿ  ಕೊರೊನವೈರಸ್ ಗಳನ್ನು  ತಟಸ್ಥಗೊಳಿಸುವ ಪ್ರತಿಕಾಯಗಳನ್ನು  ಉತ್ಪಾದಿಸಿರುವುದು ಪ್ರಾಯೋಗಿಕವಾಗಿ ನಿರೂಪಿತವಾಗಿದೆ. 

    ಇತ್ತೀಚೆಗೆ  ಪ್ರತಿಷ್ಠಿತ  ‘ಸೆಲ್ ‘ ಜರ್ನಲ್ ನಲ್ಲಿ ಪ್ರಕಟಗೊಂಡ ಈ  ಸಂಶೋಧನಾ  ವರದಿಯು  ಜಗತ್ತಿನಾದ್ಯಂತ ಒಂದು ಹೊಸ ಸಂಚಲನವನ್ನು  ಉಂಟುಮಾಡಿದೆ. ಇಲ್ಲಿಗಳ ಮೇಲೆ ನಡೆದ ಈ ಪ್ರಯೋಗದ ಫಲಿತಾಂಶವು ಮಾನವನಲ್ಲಿಯೂ ಅಡ್ಡ ಪರಿಣಾಮಗಳಿಲ್ಲದೆ  ಅಷ್ಟೇ ಪರಿಣಾಮಕಾರಿಯಾಗಿ ಕಂಡುಬಂದರೆ  ನ್ಯಾನೊಪಾರ್ಟಿಕಲ್ ಲಸಿಕೆಯ ಮೂಲಕ  ಮುಂದಿನ ದಿನಗಳಲ್ಲಿ ಕೊರೊನಾವೈರಸ್ ಹಾವಳಿಗೆ ಒಂದು ಬ್ರೇಕ್  ಹಾಕಲು ಸಾಧ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ.

    ರಷ್ಯಾದಲ್ಲಿ ಈಗಾಗಲೇ ಲಸಿಕೆ ಸಿದ್ಧವಾಗಿದೆ ಎನ್ನುತ್ತಾರಲ್ಲ ಅದು ನಿಜವೆ?

    ಹೌದು. ಅಲ್ಲಿ ಈವರೆಗೆ ಕೇವಲ ಎರಡು ಕೊರೊನಾವೈರಸ್ ಲಸಿಕೆಗಳನ್ನು ಅನುಮೋದಿಸಲಾಗಿದೆ. ಮಾಸ್ಕೋದ ಗಮಲೇಯಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ   ಸ್ಪುಟ್ನಿಕ್ ವಿ (Sputnik V) ಲಸಿಕೆಯನ್ನು   ರಷ್ಯಾ   ಫಡರೇಷನ್  ಆರೋಗ್ಯ ಸಚಿವಾಲಯವು ಆಗಸ್ಟ್ 11 ರಂದು ಅನುಮೋದಿಸಿದೆ.  ಇದನ್ನು 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸದೇ  ಇರುವುದರಿಂದ   ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ತಜ್ಞರು ಸಾಕಷ್ಟು ಕಳವಳ ವ್ಯಕ್ತಪಡಿಸಿರುತ್ತಾರೆ.  ಇದರ ಜೊತೆಗೆ,   ರಷ್ಯಾದ ಎರಡನೇ ಲಸಿಕೆ, ಎಪಿವಾಕ್ ಕೊರೊನಾ (EpiVacCorona) 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳ  ಫಲಿತಾಂಶದ ಮೊದಲೇ   ಅಲ್ಲಿನ ಸರ್ಕಾರದ ಅನುಮೋದನೆಯನ್ನು ಪಡೆದುಕೊಂಡಿದೆ.  ಎಪಿವಾಕ್ ಕೊರೊನಾ “ಪರಿಣಾಮಕಾರಿ” ಎಂದು ಸಾಬೀತಾಗಿರುವುದರಿಂದ ರಷ್ಯಾದ ಅಧಿಕಾರಿಗಳು 2021 ರ ವೇಳೆಗೆ ಕೊರೊನಾವೈರಸ್ ವಿರುದ್ಧ ಸಾಮೂಹಿಕ ವ್ಯಾಕ್ಸಿನೇಷನ್ ಮಾಡಲು ಸಿದ್ಧತೆ ನಡೆಸಿರುವುದು  ವರದಿಯಾಗಿದೆ.  

    ಭಾರತದಲ್ಲಿ ಲಸಿಕೆಗಳು ತಯಾರಾಗುತ್ತಿವೆಯೆ?

    ಹೌದು. ಭಾರತದಲ್ಲೂ ಲಸಿಕೆ ಕುರಿತ ಪ್ರಯೋಗಗಳು ನಡೆಯುತ್ತಿವೆ.”ಭಾರತವು ವಿಶ್ವದ ಅತಿದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ  ಮಾಡುವ ರಾಷ್ಟ್ರಗಳಲ್ಲಿ  ಒಂದಾಗಿರುವುದರಿಂದ, ಕೊರೊನಾವೈರಸ್  ಪ್ರಸರಣದ ಸರಪಳಿಯನ್ನು ಮುರಿಯಲು ಲಸಿಕೆ ಅಭಿವೃದ್ಧಿಪಡಿಸುವ  ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡುವುದು ದೇಶದ ನೈತಿಕ ಹೊಣೆಗಾರಿಕೆ” ಎಂದು ಐ.ಸಿ.ಎಂ.ಆರ್. ಮಹಾನಿರ್ದೇಶಕರಾಗಿರುವ  ಡಾ. ಬಲರಾಮ್ ಭಾರ್ಗವ ಅವರು  ಹೇಳಿರುವುದು ಉಲ್ಲೇಖನೀಯ.  

    ಈ ಹಿನ್ನೆಲೆಯಲ್ಲಿ  ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿ.ಸಿ.ಜಿ.ಐ.) ಸ್ಥಳೀಯ  ಎರಡು ಲಸಿಕೆಗಳನ್ನು ಮೊದಲ ಮತ್ತು  ಎರಡನೆಯ ಕ್ಲಿನಿಕಲ್  ಪ್ರಯೋಗಗಳಿಗೆ ಅನುಮತಿಯನ್ನು ನೀಡಿದೆ.  ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್,   ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐ.ಸಿ.ಎಂ.ಆರ್.) ಸಹಯೋಗದೊಂದಿಗೆ   ಮತ್ತು ಝೆಡೆಸ್  ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಪ್ರಾಯೋಗಿಕ ಲಸಿಕೆಗಳಿಗೆ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ.

    “ಐ.ಸಿ.ಎಂ.ಆರ್. ಸಹಭಾಗಿತ್ವದೊಂದಿಗೆ   ಭಾರತ್ ಬಯೋಟೆಕ್ ಕಂಪನಿಯು ಅಭಿವೃದ್ಧಿಪಡಿಸುತ್ತಿರುವ  ಕೊವ್ಯಾಕ್ಸಿನ್  ಈವರೆಗಿನ  ಆಧ್ಯಯನಗಳಿಂದ  ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಕಂಡುಬಂದಿದ್ದು   ಕೊನೆಯ ಹಂತದ ಪ್ರಯೋಗಗಳು ಈ ತಿಂಗಳಿನಿಂದ  ಪ್ರಾರಂಭವಾಗಲಿದೆ ಮತ್ತು  2021 ರ  ಫೆಬ್ರವರಿಯಲ್ಲಿಯೇ ಬಿಡುಗಡೆಯಾಗಲಿದೆ” ಎಂದು ಇತ್ತೀಚೆಗೆ ವರದಿಯಾಗಿದೆ. 

    ಏರಿಕೆಯಾಗುತ್ತಿರುವ ಚೇತರಿಕೆಯ ಸಂಖ್ಯೆ

    ಪ್ರಸ್ತುತ, ಭಾರತದಲ್ಲಿ  ಕೋವಿಡ್- 19 ನಿಂದ  ಗುಣಮುಖರಾದವರ  ಸಂಖ್ಯೆಯು  78,68,968 ಕ್ಕೆ ಏರಿದ್ದು,   ಇದು ರಾಷ್ಟ್ರೀಯ ಚೇತರಿಕೆ ಪ್ರಮಾಣವನ್ನು ಶೇಕಡಾ 92.49 ಕ್ಕೆ ಏರಿಕೆಯಾಗಿರುವುದು ಒಂದು ಸಮಾಧಾನದ ವಿಷಯ.  ಕೊರೊನಾವೈರಸ್ ಮಹಾಮಾರಿಯನ್ನು ಕಟ್ಟಿಹಾಕಲು ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಲಸಿಕೆಯು ಆದಷ್ಟು ಬೇಗ ಬಿಡುಗಡೆಯಾಗಲಿದೆ ಎಂದು ಆಶಿಸೋಣ.

    ಇದನ್ನೂ ಓದಿ: ಮುಳ್ಳನ್ನುಮುಳ್ಳನ್ನುತೆಗೆಯುವ ತಂತ್ರವೇ ವ್ಯಾಕ್ಸಿನ್

    ಸ್ಮಾಲ್‌ – ಮಿಡ್‌ ಕ್ಯಾಪ್‌ ವಿಜೃಂಭಣೆ ಹೂವಿನ ರೀತಿ ಅಲ್ಪಾಯು, ಲಾರ್ಜ್‌ ಕ್ಯಾಪ್‌ ಡ್ರೈ ಫ್ರೂಟ್ಸ್‌ ರೀತಿ ದೀರ್ಘಾಯು

    ಕಾರ್ಪೊರೇಟ್‌ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಅವುಗಳ ವೇಗ ಹೆಚ್ಚಾಗಿದೆ ಎಂದು ಬಹಳಷ್ಟು ಜನರಿಗೆ ಅನಿಸಿರಬಹುದು. ಅದಕ್ಕೆ ತಕ್ಕಂತೆ ಷೇರುಪೇಟೆಗಳು ಪ್ರದರ್ಶಿಸುತ್ತಿರುವ ಅಸ್ಥಿರತೆಯು ಪೂರಕವಾದಂತಿದೆ. ಆದರೆ ಇದರ ಹಿಂದೆ ಅಡಕವಾಗಿರುವ ಅಂಶವೆಂದರೆ ಪೇಟೆಯ ಈ ರೀತಿಯ ಸೂಚ್ಯಂಕಗಳ, ಷೇರಿನ ಏರಿಳಿತಗಳ ಹಿಂದೆ ಪೇಟೆಯೊಳಗೆ ಹರಿದುಬರುತ್ತಿರುವ ವಿದೇಶಿ ವಿತ್ತೀಯ ಸಂಸ್ಥೆಗಳಿಂದ, ಸ್ವದೇಶಿ ಹೂಡಿಕೆದಾರರಿಂದ ಹರಿದು ಬರುತ್ತಿರುವ ಹಣದ ಹೊಳೆಯಾಗಿದೆ. ಈ ಕಾರಣ ಪೇಟೆಯಲ್ಲಿ ಬೇಡಿಕೆ ಹೆಚ್ಚಾಗುವಂತೆ ಮಾಡಿ ಷೇರುಗಳ ಬೆಲೆಗಳು ಗಗನಕ್ಕೆ ಚಿಮ್ಮುವಂತಾಗಿದೆ. ಯಾವುದೇ ಏರಿಕೆ ಸ್ಥಿರತೆ ಕಾಣಬೇಕಾದಲ್ಲಿ ಅದಕ್ಕೆ ಆಂತರಿಕವಾದ ಸಾಧನೆಯ ಬೆಂಬಲವಿರಬೇಕು. ಜೊತೆಗೆ ಕಂಪನಿಗಳ ಕಾರ್ಪೊರೇಟ್‌ ನೀತಿಪಾಲನೆಯೂ ಸುಸ್ಥಿತಿಯಲ್ಲಿರಬೇಕು. ಸಾಮಾನ್ಯವಾಗಿ ಸಾರ್ವಜಿನಿಕ ವಲಯದ ಕಂಪನಿಗಳು ಹೆಚ್ಚಾಗಿ ರಭಸದ ಏರಿಳಿತಗಳನ್ನು ಪ್ರದರ್ಶಿಸಲಾರವು. ಕಾರಣ ಅವುಗಳಲ್ಲಿ ಕಾರ್ಪೊರೇಟ್‌ ನೀತಿಪಾಲನಾ ಮಟ್ಟ ಹೆಚ್ಚಾಗಿರುತ್ತದೆ.

    ಕರೋನಾದ ಪ್ರಭಾವದಿಂದ ದೇಶದ ಆರ್ಥಿಕತೆ ಕುಂಟಿತವಾಗಿತ್ತು. ಸರ್ಕಾರಗಳು ತಮ್ಮ ಬೊಕ್ಕಸವನ್ನು ಕರಗಿಸಬೇಕಾಯಿತು. ಆ ಸಮಯದಲ್ಲಿ ಕಾರ್ಪೊರೇಟ್‌ ಗಳ ಆದಿಯಾಗಿ ಎಲ್ಲರೂ ಒತ್ತಡಗಳನ್ನೆದುರಿಸಬೇಕಾಯಿತು. ಕೆಲವರಿಗೆ ಆರ್ಥಿಕ ತೊಂದರೆಯಾದರೆ, ಕೆಲವರಿಗೆ ದವಸ ಧಾನ್ಯಗಳ ಚಿಂತೆ. ಆ ಸಂದರ್ಭದಲ್ಲಿ ದಶಕಗಳಿಂದಲೂ ಅಸ್ಥಿತ್ವವಿರುವ ಕಂಪನಿಗಳೂ ಸಹ ತನ್ನ ನೌಕರವೃಂದಕ್ಕೆ ಸಂಬಳ ನೀಡಲು ಆಗದೆ ಕಡಿತಗೊಳಿಸಿದ ನಿದರ್ಶನಗಳುಂಟು. ಅಂದರೆ ಕಾರ್ಪೊರೇಟ್‌ ಗಳು ಇಷ್ಟು ವರ್ಷ ಗಳಿಸಿದ ಹಣವೆಲ್ಲಿ. ಕೇವಲ ಅಲಂಕಾರಿಕಾ ಪ್ರಚಾರ ಮಾತ್ರವೇ?. ಈಗ ಕೆಲವು ತಿಂಗಳುಗಳಿಂದ ಕಾರ್ಪೊರೇಟ್‌ ಗಳು ಸಂಪನ್ಮೂಲ ಸಂಗ್ರಹಣೆಯೇ ಹೆಚ್ಚಿನ ಪ್ರಾಮುಖ್ಯತೆ ನೀಡಿವೆ. ಬ್ಯಾಂಕ್‌ ಬಡ್ಡಿದರ ಕಡಿತವಾಗಿರುವ ಈ ಸಂದರ್ಭದ ಪ್ರಯೋಜನ ಪಡೆಯಲು ಹೆಚ್ಚಿನ ಕಾರ್ಪೊರೇಟ್‌ ಗಳು ಪ್ರಯತ್ನಿಸುತ್ತಲೂ ಇರಬಹುದು. ತಮ್ಮ ಚಟುವಟಿಕೆಯನ್ನು ವಿಸ್ತರಿಸುವ ಯೋಜನೆಗಳಿಗಾಗಿ ಸಂಗ್ರಹಿಸಿದ ಹಣವನ್ನು ಪೋಲಾಗದಂತೆ, ಸರಿಯಾಗಿ ಬಳಕೆಯಾಗಬೇಕು. ಅಲಂಕಾರಿಕ ಪ್ರಚಾರದ ಈ ಸಮಯದಲ್ಲಿ ಕಾರ್ಪೊರೇಟ್‌ ಗಳು ಸುಸೂತ್ರವಾಗಿ, ನೀತಿಪಾಲನೆ್ಯಿಂದ ಚಟುವಟಿಕೆ ನಡೆಸಿ, ಸಂಗ್ರಹಿಸಿದ ಸಂಪನ್ಮೂಲ ಉದ್ದೇಶಿತ ಕಾರ್ಯಕ್ಕೆ ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸದಲ್ಲಿ ಅವು ಹೂಡಿಕೆದಾರರಲ್ಲಿ, ಜನಮನಗಳಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತವೆ.

    ಎಸ್ ಸಿ ಸಿ ಬಿ ಗಳ ಗೊಂದಲ
    ಕಾರ್ಪೊರೇ ಟ್‌ ಗಳ ದುರಾಸೆ ಹೇಗೆ ಅವುಗಳ ಏಳ್ಗೆಗೆ ಮಾರಕವಾಗುತ್ತದೆ ಎಂಬುದಕ್ಕೆ 2010 -11 ರ ಸಮಯದಲ್ಲಿ ಉತ್ತಮ ಕಂಪನಿಗಳು ಹೇಗೆ ಬಲಿಯಾದವು ಎಂಬುದರ ಬಗ್ಗೆ ಆಲೋಚಿಸುವುದು ಅಗತ್ಯ. ಅನೇಕ ಕಂಪನಿಗಳು ತಮ್ಮ ವಿವಿಧ ಯೋಜನೆಗಳಿಗಾಗಿ ‌ ಫಾರಿನ್‌ ಕರೆನ್ಸಿ ಕನ್ವರ್ಟಬಲ್ ಬಾಂಡ್ಸ್‌ ಯೋಜನೆ ಮೂಲಕ ಸಂಪನ್ಮೂಲ ಸಂಗ್ರಹಣೆ ಮುಂದಾದವು. ಮುಂದೆ ಈ ಬಾಂಡ್‌ ಗಳನ್ನು ಪೂರ್ವ ನಿಗದಿತ ದರದಲ್ಲಿ ಷೇರುಗಳಾಗಿ ಪರಿವರ್ತಿಸುವ ಆಯ್ಕೆ ಇರುತ್ತದೆ.

    ಎಫ್‌ ಸಿ ಸಿ ಬಿ ವಿತರಣೆಯಲ್ಲಿ ಸಾಮಾನ್ಯವಾಗಿ ಅಂದಿನ ಷೇರಿನ ಬೆಲೆಗೆ ಶೇ.20 ರಿಂದ 30 ರಷ್ಟು ಪ್ರೀಮಿಯಂ ನಲ್ಲಿ ಪರಿವರ್ತನಾ ಬೆಲೆಯಾಗಿ ನಿಗದಿಪಡಿಸುವರು. ಆ ಸಮಯದಲ್ಲಿ ಕಂಪನಿಗಳಾದ ಗ್ಲೆನ್‌ ಮಾರ್ಕ್‌ ಫಾರ್ಮ, ಭಾರತಿ ಏರ್‌ ಟೆಲ್‌, ಸನ್ ಫಾರ್ಮ, ಎನ್‌ ಐ ಐ ಟಿ ಯಂತಹ ಕಂಪನಿಗಳು ಸುಲಭವಾಗಿ ಪರಿವರ್ತನೆಗಳನ್ನು ನಿರ್ವಹಿಸಿದವು. ಹೂಡಿಕೆದಾರರು ಆಕರ್ಷಕ ಲಾಭ ಗಳಿಸಿಕೊಂಡರು. ಆದರೆ ಕಂಪನಿಗಳಾದ ಆಂಟೆಕ್‌ ಆಟೋ, ಆಂಟೆಕ್‌ ಇಂಡಿಯಾ, ಅಬ್ಬಾನ್‌ ಆಫ್‌ ಶೋರ್‌, ಭಾರತಿ ಶಿಪ್‌ ಯಾರ್ಡ್‌, ಬಜಾಜ್‌ ಹಿಂದೂಸ್ಥಾನ್‌, ಹೆಚ್‌ ಸಿ ಸಿ, ಪುಂಜ್‌ ಲಾಯ್ಡ್‌, ವೀಡಿಯೋಕಾನ್‌, ಜಿ ಟಿ ಎಲ್‌ ಇನ್ಫ್ರಾ, ರೋಲ್ಟಾ , ಆರ್ಚಿಡ್‌ ಕೆಂ, ರಿಲಯನ್ಸ್‌ ಕಮ್ಯುನಿಕೇಷನ್‌, ಜೆ ಪಿ ಅಸೋಸಿಯೇಟ್ಸ್‌, ಮುಂತಾದ ಕಂಪನಿಗಳು ಪರಿವರ್ತನಾ ಬೆಲೆಗಳನ್ನು ಅಂದಿನ ಬೆಲೆಗಿಂತ ಅತಿ ಹೆಚ್ಚಿನ ಬೆಲೆಗಳಲ್ಲಿ ನಿಗದಿಪಡಿಸಿದ ಕಾರಣ ಆಪತ್ತಿಗೊಳಗಾದವು. ಈ ಎಫ್‌ ಸಿ ಸಿ ಬಿ ಗಳ ಪರಿವರ್ತನಾ ಬೆಲೆಗಳು ಇಂತಿವೆ.

    ಆಂಟೆಕ್‌ ಇಂಡಿಯಾ ( ಈಗಿನ ಕ್ಯಾಸ್ಟೆಕ್ಸ್‌ ಟೆಕ್ನಾಲಜೀಸ್‌ ) ಷೇರಿನ ಬೆಲೆ ಸುಮಾರು ರೂ.60 ರಲ್ಲಿದ್ದಾಗ FCCBs ಪರಿವರ್ತನಾ ಬೆಲೆಯನ್ನು ರೂ.120.ಅಬ್ಬಾನ್‌ ಆಫ್‌ ಶೋರ್‌ ಷೇರಿನ ಬೆಲೆ ರೂ.800 ರ ಸಮೀಪದಲ್ಲಿದ್ದಾಗ ಪರಿವರ್ತನಾ ಬೆಲೆ ರೂ. 2,789 ಎಂದು ನಿಗದಿಪಡಿಸಿತ್ತು.ಭಾರತಿ ಶಿಪ್‌ ಯಾರ್ಡ್‌ ಷೇರಿನ ಬೆಲೆ ರೂ.250 ರ ಸಮೀಪವಿದ್ದಾಗ ಪರಿವರ್ತನಾ ಬೆಲೆ ರೂ.498 ಎಂದು ನಿಗದಿಪಡಿಸಿತ್ತು.
    ಹೆಚ್‌ ಸಿ ಸಿ ಕಂಪನಿಯು ತನ್ನ ಷೇರಿನ ಬೆಲೆ ರೂ.60 ರ ಸಮೀಪವಿದ್ದಾಗ ರೂ.248 ರಂತೆ ಪರಿವರ್ತಿಸುವ ದರವಾಗಿ ನಿಗದಿಪಡಿಸಿತ್ತು.
    ಇಂಡಿಯಾ ಸೀಮೆಂಟ್‌ ಷೇರಿನ ಬೆಲೆ ರೂ.115 ರಲ್ಲಿದ್ದಾಗ ರೂ.306 ರಂತೆ ಪರಿವರ್ತಿಸುವುದಾಗಿ ಪ್ರಕಟಿಸಿತ್ತು.
    ವೀಡಿಯೋಕಾನ್‌ ಕಂಪನಿ ಷೇರಿನ ಬೆಲೆ ರೂ.260 ರ ಸಮೀಪವಿತ್ತು ಆ ಕಂಪನಿ ಪರಿವರ್ತನಾ ಬೆಲೆಯನ್ನು ರೂ.449 ಎಂದು ನಿಗದಿಪಡಿಸಿತು.

    ಇದೇ ರೀತಿ ಜಿ ಟಿ ಎಲ್‌ ಇನ್ಫ್ರಾ ಕಂಪನಿಯ ಪರಿವರ್ತನಾ ಬೆಲೆಯನ್ನು ರೂ.53 ರಂತೆ, ರೋಲ್ಟಾ ಕಂಪನಿ ಷೇರಿನ ಪರಿವರ್ತನಾ ಬೆಲೆ ರೂ.368.50 ಯಂತೆ, ಆರ್ಚಿಡ್‌ ಫಾರ್ಮ ಕಂಪನಿ ಷೇರಿನ ಪರಿವರ್ತನಾ ಬೆಲೆ ರೂ.348 ಎಂದು ನಿಗದಿಪಡಿಸಿವೆ. ಇನ್ನು ರಿಲಯನ್ಸ್‌ ಕಮ್ಯುನಿಕೇಷನ್‌ ಷೇರು ರೂ.661 ರಂತೆ, ಜೆ ಪಿ ಅಸೋಸಿಯೇಟ್ಸ್‌ ರೂ.165 ರಂತೆ ಪರಿವರ್ತಿಸುವ ಬೆಲೆ ನಿಗದಿಪಡಿಸಿದವು.

    ಈ ಪರಿವರ್ತನೆ ಮಾಡಿ ದರ ನಿಗದಿ ಮಾಡಿದ ಕಂಪೆನಿಗಳು ಕಳೆದ ಹತ್ತು ವರ್ಷಗಳಲ್ಲಿ ಯಾವ ರೀತಿಯಲ್ಲಿ ಬದಲಾವಣೆ ಕಂಡುಕೊಂಡಿವೆ ಎಂಬುದನ್ನು ಗಮನಿಸಬೇಕು. ಕ್ಯಾಸ್ಟೆಕ್ಸ್‌ ಟೆಕ್ನಾಲಜೀಸ್‌ ಪ್ರತಿ ಷೇರಿನ ಬೆಲೆ 36 ಪೈಸೆಗಳಲ್ಲಿ, ಅಬ್ಬಾನ್‌ ಆಫ್‌ ಶೋರ್‌ ಷೇರಿನ ಬೆಲೆ ರೂ.23 ರಲ್ಲಿ, ಹೆಚ್‌ ಸಿ ಸಿ ಷೇರಿನ ಬೆಲೆ ರೂ.5 ರ ಸಮೀಪ, ವಿಡಿಯೋಕಾನ್‌ ಷೇರಿನ ಬೆಲೆ ರೂ.4 ರ ಸಮೀಪ, ಜಿ ಟಿ ಎಲ್‌ ಇನ್ಫ್ರಾ ಷೇರಿನ ಬೆಲೆ 60 ಪೈಸೆಗಳಲ್ಲಿ, ರೋಲ್ಟಾ ಷೇರಿನ ಬೆಲೆ ರೂ.4.25 ರ ಸಮೀಪವಿದೆ.

    ಕಂಪನಿಗಳ ಮೇನೇಜ್ಮೆಂಟ್‌ ಗಳ ಹಣದಾಹಕ್ಕೆ ವಿದೇಶಿ ಹೂಡಿಕೆದಾರರಲ್ಲದೆ ಅಂದಿನ ವರ್ಣರಂಜಿತ ವಿಶ್ಲೇಷಣೆಗಳಿಂದ ಪ್ರೇರಿತರಾದ ಬಹು ಸಂಖ್ಯಾತ ಸಣ್ಣ ಹೂಡಿಕೆದಾರರು ಬಲಿಯಾಗಿ ಸಾಕಷ್ಟು ಹಾನಿಗೊಳಗಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮಸಾಲಾ ಬಾಂಡ್‌ ಯೋಜನೆ ತೇಲಿಬರಲು ಕಾರಣವಾಯಿತು. ಸ್ಮಾಲ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಕಂಪನಿಗಳ ವಿಜೃಂಭಣೆ ಹೂವಿನ ರೀತಿ ಅಲ್ಪಾಯು, ಲಾರ್ಜ್‌ ಕ್ಯಾಪ್‌ ಕಂಪನಿಗಳು ಡ್ರೈ ಫ್ರೂಟ್ಸ್‌ ರೀತಿ ದೀರ್ಘಾಯುವಾಗಿರುತ್ತವೆ. ಎಲ್ಲವಕ್ಕೂ exceptions ಇರುತ್ತದೆ ಆದರೆ exceptions are not examples ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ರಿಯಲ್‌ ಟೈಮ್‌ ನಿರ್ಧಾರಗಳು ಇಂದಿನ ಅಗತ್ಯವೆಂಬುದನ್ನು ನೆನಪಿನಲ್ಲಿಡಬೇಕು. ಹೂಡಿಕೆ ಮಾಡಿದ ಬಂಡವಾಳ ಸುರಕ್ಷಿತಗೊಳಿಸಿಕೊಳ್ಳಬೇಕು.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಬೈಡನ್ ಮತ್ತು ಭಾರತದ ಸಂಬಂಧ ಹೇಗಿರಬಹುದು

    ಜೋ  ಬೈಡನ್ ಅಮೆರಿಕ ಅಧ್ಯಕ್ಷರಾಗುವುದು ನಿಶ್ಚಿತವಾಗಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗುವುದು ಸನ್ನಿಹಿತವಾಗಿದೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರನ್ನು ಕಾಡುತ್ತಿರುವ ಪ್ರಶ್ನೆ- ಬೈಡನ್ ಆಯ್ಕೆಯಿಂದ ಭಾರತಕ್ಕೆ ಆಗುವ ಲಾಭ ಏನು? ಮುಂದೆ  ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಹೇಗಿರಬಹುದು? ಬೈಡನ್ ಕೂಡ ಹಿಂದಿನ ರೀತಿಯಲ್ಲೇ ರಾಜತಾಂತ್ರಿಕ ಮತ್ತು ಸ್ನೇಹ ಸಂಬಂಧವನ್ನು ಮುಂದುವರಿಸುತ್ತಾರ?

    ಭಾರತಕ್ಕೂ  ಹಾಗೂ ಅಮೆರಿಕಕ್ಕೂ ವಿಶೇಷ ಸಂಬಂಧ. ಅದರಲ್ಲೂ ಐಟಿ ಉದ್ಯಮ ಬೆಳೆದಂತೆ ಈ ಸಂಬಂಧ ವಿಸ್ತರಿಸುತ್ತಾ ಹೋಯಿತು. ಅಮೆರಿಕಕ್ಕೆ ಹೋಗುವವರು ಬರುವವವರು ಹೆಚ್ಚಾಯಿತು. ಅನೇಕ ಕುಟುಂಬಗಳಿಗೆ ಅಮೆರಿಕ ಎನ್ನುವುದು ನಡುಮನೆ ಅಡುಗೆಮನೆಯಷ್ಟೆ ಹತ್ತಿರವಾಯಿತು. ಹೀಗಾಗಿ ಅಮೆರಿಕಾದಲ್ಲಿ ಏನಾಗುತ್ತದೆ ಎಂಬುದು ಭಾರತದ ಹಲವಾರು ಕುಟುಂಬಗಳಿಗೆ ಮುಖ್ಯವಾಗುತ್ತದೆ.

    ಭಾರತ ಅಮೆರಿಕ ಸಂಬಂಧ

    ಭಾರತದೊಡನೆ ಇಷ್ಟು ದಿನ ಇದ್ದ ಸಂಬಂಧವನ್ನು ಬೈಡನ್  ಏಕಾ ಏಕಿ ಬದಲಿಸಿ ಬಿಡ್ತಾರ ?- ನನಗೆ ಬದಲಿಸುತ್ತಾರೆ ಎನ್ನಲು ಯಾವ ಕಾರಣವೂ ಕಾಣಿಸುತ್ತಿಲ್ಲ. ಈಗಿನ ಭಾರತವನ್ನು ಡೆಮಕ್ರಾಟಿಗರೇ ಆಗಲಿ ರಿಪಬ್ಲಿಕನ್ನರೇ ಆಗಲಿ ಕಡೆಗಣಿಸುವಂತೆಯೇ ಇಲ್ಲ. ಅತಿ ದೊಡ್ಡ ಗ್ರಾಹಕ ಮಾರುಕಟ್ಟೆ ಆಗಿರುವ ಭಾರತವನ್ನು ದೂರ ಮಾಡಿಕೊಳ್ಳುವ ಸ್ಥಿತಿಯಲ್ಲಿ ಯಾವ ದೇಶವೂ ಇಲ್ಲ.

    ಹಾಗಾದರೆ ಬೈಡನ್ ಅವರನ್ನು ಭಾರತದ ಫ್ರೆಂಡ್ ಎಂದು ಭಾವಿಸಬಹುದೆ?

    ಈ ಪ್ರಶ್ನೆಗ ಉತ್ತರ ಪಡೆಯಲು ನಾನು ಹಲವಾರು ಹಿಂದಿನ ಪತ್ರಿಕಾ ವರದಿಗಳು , ಘಟನೆಗಳನ್ನು ಅವಲೋಕಿಸಿದೆ. ನನ್ನ ಅಂದಾಜಿನ ಪ್ರಕಾರ ಆ ರೀತಿ ಭಾವಿಸಲು ತೊಂದರೆ ಇಲ್ಲ. ಟೈಮ್ಸ್ ನಿಯತಕಾಲಿಕ ಕೂಡ ಇದೇ ಅಭಿಪ್ರಾಯವನ್ನು ಹೇಳುತ್ತದೆ. ಬರಾಕ್ ಒಬಮಾ ಆಡಳಿತದಲ್ಲಿ ಉಪಾಧ್ಯಕ್ಷ ರಾಗುವುದಕ್ಕೂ ಮುನ್ನಾ ದಿನಗಳಿಂದಲೇ ಬೈಡನ್ ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಾ ಬಂದಿದ್ದಾರೆ.

    ಉಪಾಧ್ಯಕ್ಷರಾಗಲು  ಮೂರು ವರ್ಷಗಳ ಮುನ್ನವೇ ಅಂದರೆ 2006ರಲ್ಲಿ ರಿಡಿಫ್ ಇಂಡಿಯಾ ಕ್ಕೆ ನೀಡಿದ ಸಂದರ್ಶನದಲ್ಲಿ  2020 ರ ವೇಳೆಗೆ  ವಿಶ್ವದಲ್ಲಿ ಅತ್ಯಂತ ಸ್ನೇಹ ಪ್ರೀತಿ ಹೊಂದಿರುವ ಎರಡು ರಾಷ್ಟ್ರಗಳೆಂದರೆ ಅದು ಭಾರತ ಮತ್ತು ಅಮೆರಿಕಾ ಆಗಿರಬೇಕು ಎಂಬುದು ತಮ್ಮ ಕನಸು ಎಂದು ಬೈಡನ್ ಅಭಿಪ್ರಾಯ ಪಟ್ಟಿದ್ದರು.

    2008ರಲ್ಲಿ ಸೆನೆಟರ್ ಆಗಿದ್ದ ಒಬಮಾ  ಭಾರತ -ಅಮೆರಿಕ ನ್ಯೂಕ್ಲಿಯರ್ ಒಪ್ಪಂದದ ಪರವಾಗಿಲ್ಲದೆ ಇದ್ದರೂ  ರಿಪಬ್ಲಿಕನ್ ಮತ್ತು ಡೆಮಕ್ರಾಟಿಕ್  ಇಬ್ಬರ ಮನವೊಲಿಸಿ ಅಮೆರಿಕ ಕಾಂಗ್ರೆಸ್ (ನಮ್ಮ ಸಂಸತ್ತಿನ ರೀತಿ) ಒಪ್ಪಂದಕ್ಕೆ  ಅಂಕಿತ ನೀಡುವಂತೆ ನೋಡಿಕೊಂಡಿದ್ದು ಬೈಡನ್.

    ನಂತರ ಅವರು ಉಪಾಧ್ಯಕ್ಷರಾದ ಸಮಯದಲ್ಲಿ ಭಾರತ ಅಮೆರಿಕ ಸಂಬಂಧ ಬಲಗೊಳ್ಳಲು ತುಂಬಾನೆ ಶ್ರಮ ಹಾಕಿದ್ದರು.  ವಿಶ್ವ ರಾಷ್ಟ್ರ ಸಂಸ್ಥೆಯ ಭದ್ರತಾ ಮಂಡಳಿ ಭಾರತಕ್ಕೆ  ಸದಸ್ಯತ್ವ ನೀಡಬೇಕು ಎಂಬ ಬೇಡಿಕೆಗೆ ಅಮೆರಿಕದ ಅಧಿಕೃತ ಬೆಂಬಲವನ್ನು ಘೋಷಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು. ಒಬಮಾ – ಬೈಡನ್ ಜೋಡಿ ಭಾರತವನ್ನು ಪ್ರಮುಖ ಡಿಫೆನ್ಸ್ ಪಾರ್ಟನರ್ ಎಂದು  ಅಮೆರಿಕ ಭಾವಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು.ಈ ಒಂದು ಸ್ಥಾನದಿಂದ  ಭಾರತದೊಂದಿಗೆ ಅತ್ಯಂತ ರಕ್ಷಣಾ ಸೂಕ್ಷ್ಮ  ತಂತ್ರಗಾರಿಕೆಯನ್ನು ಹಂಚಿಕೊಳ್ಳಲು  ಸಹಾಯವಾಯಿತು. ತನ್ನ ಪಾರಂಪರಿಕ ಮಿತ್ರ ರಾಷ್ಟ್ರಗಳನ್ನು ಹೊರತು ಪಡಿಸಿ ಮತ್ತೊಂದು ರಾಷ್ಟ್ರಕ್ಕೆ ಅಂಥ ಸ್ಥಾನಮಾನವನ್ನು ಅಮೆರಿಕ ನೀಡಿದ್ದು ಅದೇ ಪ್ರಥಮ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಅಭಿಪ್ರಾಯ ಪಟ್ಟಿದೆ.

    ಚೀನಾ- ಭಾರತ ಗಡಿ ವಿವಾದ

     ಟ್ರಂಪ್ ಆಡಳಿತ ಇತ್ತೀಚಿನ ಭಾರತ ಚೀನಾ ಗಡಿ ವಿವಾದದಲ್ಲಿ ಬಹಿರಂಗವಾಗಿಯೇ  ಭಾರತದ ಬೆಂಬಲಕ್ಕೆ ಇತ್ತು. ಅದೇ ನೀತಿ ಮುಂದುವರಿಯುವ ನಿರೀಕ್ಷೆಯಲ್ಲಿ ಭಾರತ ಇದೆ. ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆಯನ್ನು ತರಲು ಭಾರತೊಂದಿಗೆ ಕೆಲಸಮಾಡಲಾಗುವುದು.  ಚೀನಾ ಸೇರಿದಂತೆ ಯಾವುದೇ  ದೇಶಗಳು ನೆರೆಯವರೊಂದಿಗೆ ಸುಖಾಸುಮ್ಮನೆ  ಉದ್ವಿಗ್ನ ಸ್ಥಿತಿ ನಿರ್ಮಿಸಬಾರದು ಎಂಬ ಅಂಶ  ಬೈಡನ್  ಪ್ರಚಾರ ಸಾಮಗ್ರಿಯಲ್ಲಿದೆ.

    ವಲಸೆ ವೀಸಾ

    ಟ್ರಂಪ್ ಆಡಳಿತದಲ್ಲಿ ಇದು ಭಾರತೀಯರನ್ನು ಆತಂಕಕ್ಕೆ ದೂಡಿದ ಸಂಗತಿ.  ಇಮ್ಮಿಗ್ರೇಷನ್  ಬಗ್ಗೆ ರಿಪಬ್ಲಿಕ್ ರಿಗೆ ಹೋಲಿಸಿದರೆ ಡೆಮಾಕ್ರಾಟಿಕ್ ಗಳದು ಉದಾರ ನೀತಿ. ಅಧ್ಯಯನ, ಕೆಲಸ ಮತ್ತು ನೆಲೆಸಲು ಹೋಗುವ ಭಾರತೀಯರ ಬಗ್ಗೆ ಬೈಡನ್ ಮೃದು ಧೋರಣೆ ಅನುಸರಿಸುತ್ತಾರೆ ಎಂದು ಭಾವಿಸಲಾಗಿದೆ.

    ಕುಟುಂಬ ಆಧಾರಿತ ವಲಸಗೆ ಬೆಂಬಲ ನೀಡುವ ಭರವಸೆಯನ್ನು ಬೈಡನ್ ನೀಡಿದ್ದಾರೆ. ಕಾಯಂ ವೀಸಾ ಗಳ ಸಂಖ್ಯೆ ಹೆಚ್ಚಿಸುವುದು, ಕುಶಲ ಕೆಲಸ ಕರ್ಮಿಗಳಗೆ ನೀಡುವ ತಾತ್ಕಾಲಿಕ ವೀಸಾ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಕೆಲಸ ಆಧಾರಿತ ಗ್ರೀನ್ ಕಾರ್ಡ್ ನೀಡುವಲ್ಲಿನ ನಿರ್ಬಂಧವನ್ನು ತೆರವು ಮಾಡುವ  ಭರವಸೆ ನೀಡಿದ್ದಾರೆ.ಆದರೆ ಈಗಾಗಲೇ ಟ್ರಂಪ್ ಆಡಳಿತ ಹೇರಿರುವ ಕಠಿಣ ಕಾನೂನುಗಳನ್ನು ಸಡಿಲಿಸುವುದು ಸುಲಭದ ಕೆಲಸ ಅಲ್ಲ.

    ಭಯೋತ್ಪಾದನೆ ಬಗ್ಗೆ ಬೈಡನ್ ನಿಲುವು

    ಈ ಹಿಂದೆ ಒಬಮಾ ಮತ್ತು ಬೈಡನ್ ಜೋಡಿ ಭಯೋತ್ಪಾದನೆ ವಿರುದ್ಧ ಸಮರ ಸಾರಲು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಾಚೆಗಿನ ಭಯೋತ್ಪಾದನೆಯ ಪ್ರಶ್ನೆ ಬಂದಾಗ ಇದುವರೆಗೆ ಅಮೆರಿಕಾ ಅನುಸರಿಸಕೊಂಡು ಬಂದಿರುವ ನೀತಿಯನ್ನೇ ಬೈಡನ್ ಕೂಡ ಮುಂದುವರಿಸುತ್ತಾರೆ ಎಂಬ ಆಶಯವನ್ನು ಭಾರತ ಹೊಂದಿದೆ.

    ಜಮ್ಮು ಕಾಶ್ಮೀರದ ಬಗ್ಗೆ

    ಜಮ್ಮು ಕಾಶ್ಮೀರದ ಇತ್ತೀಚನ ಬೆಳವಣಿಗೆಗಳ ಬಗ್ಗೆ ಟ್ರಂಪ್ ಆಡಳಿತ ಪರೋಕ್ಷವಾಗಿ ಭಾರತಕ್ಕೆ ಬೆಂಬಲವನ್ನೇ ನೀಡಿತ್ತು. ಒಂದೆರಡು ಹೇಳಿಕೆಗಳನ್ನು ನೀಡಿದ್ದು ಬಿಟ್ಟರೆ ಹೆಚ್ಚೂ ಕಡಿಮೆ ತಟಸ್ಥವಾಗಿಯೇ ಇತ್ತು. ಆದರೆ ಈ ಬಗ್ಗೆ ಡೆಮಾಕ್ರಾಟ್ ಪಕ್ಷಕ್ಕೆ ಸೇರಿದ ಬೈಡನ್ ತೀಕ್ಣವಾಗಿ ಪ್ರತಿಕ್ರಿಯಿಸಬಹುದು ಎಂದು ಭಾರತ ಭಾವಿಸಿದೆ.

    ಮೋದಿ ಟ್ರಂಪ್ ನಡುವಿನ ಸಂಬಂಧ ಮಧುರವಾಗಿತ್ತು. ಅದೇ ಸಂಬಂಧ ಬೈಡನ್ ಜೊತೆಯೂ ಮುಂದುವರಿಯಬಹುದೆ?

    ಬೈಡನ್ ಆಯ್ಕೆಯನ್ನು ಭಾರತದ ಪ್ರಧಾನಿಗಳು ಸಹಜವಾಗಿಯೇ ಸ್ವಾಗತಿಸಿದ್ದಾರೆ. ರಾಜಕೀಯ ಸಂಬಂಧಗಳು ಬೇರೆ ರಾಜತಾಂತ್ರಿಕ ಸಂಬಂಧಗಳು ಬೇರೆ. ಮೋದಿಯ ಟೆಕ್ಸಾಸ್ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿದ್ದರು ಎಂಬ ಮಾತ್ರಕ್ಕೆ ಬೈಡನ್ ಜೊತೆ ಸಂಬಂಧ ಮಧುರವಾಗಿರುವುದಿಲ್ಲ ಎಂದು ಈಗಲೇ ಭಾವಿಸಬೇಕಿಲ್ಲ.

    ಹಾಗಾದರೆ ಭಾರತದ ಪಾಲಿಗೆ ಬೈಡನ್ ಅವರು ಸಿಹಿಯೋ ಕಹಿಯೋ?

    ಕಳೆದ ಇಪ್ಪತ್ತು ವರುಷಗಳಿಂದ ಅಮೆರಿಕಾದ ಅಧ್ಯಕ್ಷರಾದವರವೆಲ್ಲಾ ಮಧುರ ಸಂಬಂಧವನ್ನೇ ಇಟ್ಟು ಕೊಂಡು ಬಂದಿದ್ದಾರೆ, ಬಿಲ್ ಕ್ಲಿಂಟನ್, ಬುಷ್, ಒಬಮಾ, ಟ್ರಂಪ್ ಒಬ್ಬರಿಗಿಂತ ಒಬ್ಬರು ಭಾರತದೊಂದಿಗೆ ಸ್ನೇಹವನ್ನು ವೃದ್ಧಿಸುತ್ತಲೇ ಬಂದಿದ್ದಾರೆ.  ಹೀಗಾಗಿ ಬೈಡನ್ ಕೂಡ ಇದೇ ಮೇಲ್ಪಂಕ್ತಿಯಲ್ಲಿ ಸಾಗುತ್ತಾರೆ ಎಂದು ಭಾವಿಸಬಹುದಾಗಿದೆ.

    ಬೈಡನ್ ಬಗ್ಗೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಹೇಳುವುದೇನು

    ಬೈಡನ್ ತುಂಬಾ ಸಂಭಾವಿತ. ಭಾರತೊಂದಿಗೆ ಸಂಬಂಧ ತುಂಬಾ ಮಧುರವಾಗಿಯೇ ಇರುತ್ತದೆ  ಎಂದು ನಾನಂತೂ ಭಾವಿಸುತ್ತೇನೆ ಎನ್ನುತ್ತಾರೆ  ಜಯರಾಮ್ ನಾಡಿಗ್. ಕಳೆದ  ನಲವತ್ತು ವರುಷಗಳಿಂದ ಅಮೆರಿಕದ ಟೆಕ್ಸಾಸ್ ನಲ್ಲಿ ನೆಲೆಸಿರುವ ಅವರು ಅಮೆರಿಕ ರಾಜಕೀಯವನ್ನು ಆಸಕ್ತಿಯಿಂದ ಗಮನಿಸುತ್ತಾ ಬಂದಿದ್ದಾರೆ.

    ಬೈಡನ್ ಯಾವುದೇ ಒಂದು ಕಡೆ ವಾಲದ ವ್ಯಕ್ತಿ . ಆದರೆ ಭಾರತದ ವಿಷಯ ಬಂದಾಗ   ಭಾರತದ ಪರವಾಗಿ ಇರುತ್ತಾರೆ ಎಂಬ ವಿಶ್ವಾಸ ಇದೆ ಎನುತ್ತಾರೆ. ಬೈಡನ್ ದೀಪಾವಳಿಯನ್ನು ಕೂಡ ಆಚರಿಸುತ್ತಾರೆ. ಕಳೆದ ವರ್ಷ ಅನೇಕ ಭಾರತೀಯರು ಅದರಲ್ಲಿ ಭಾಗವಹಿಸಿದ್ದರು ಎಂಬದನ್ನು ನೆನಪಿಸಿಕೊಳ್ಳುತ್ತಾರೆ.

    ಅನೇಕ ಭಾರತೀಯ ಸಲಹೆಗಾರರು ಬೈಡನ್  ಗೆ ಇದ್ದಾರೆ. ಡಾ. ವಿವೇಕ ಮೂರ್ತಿ ಎಂಬ ಭಾರತೀಯ ಅವರ ಖಾಸಗಿ ವೈದ್ಯಕೀಯ ಪಡೆಯಲ್ಲಿದ್ದಾರೆ.

    ಗೂಗಲ್ , ಅಮೆಜಾನ್, ಮೈಕ್ರೋಸಾಫ್ಟ್ ನಂಥ ಕಂಪೆನಿಗಳು ಬೈಡನ್ ಆಯ್ಕೆಯನ್ನು ಸ್ವಾಗತಿಸಿವೆ. ಇದು ಬೈಡನ್ ವಲಸೆ ನೀತಿ ಮೃದುವಾಗಿರುತ್ತದೆ ಎಂಬುದರ ದ್ಯೋತಕ ಎನ್ನುತ್ತಾರೆ.

    ಕಮಲಾ ಹ್ಯಾರಿಸ್ ಬಹಿರಂಗವಾಗಿ ಭಾರತದ ಮೇಲಿನ ಪ್ರೀತಿಯನ್ನು ಸಾರದಿದ್ದರೂ ಅಂತರಂಗದೊಳಗೆ ಭಾರತದ ಮೇಲಿನ  ಪ್ರೀತಿ ಇದ್ದೇ ಇರುತ್ತದೆ ಎಂದು ಅವರು ಹೇಳುತ್ತಾರೆ.

     ಬೈಡನ್ ತುಂಬಾ ಸರಳ ವ್ಯಕ್ತಿ.  ಸೆನೆಟರ್ ಆಗಿದ್ದಾಗಲು ತಮ್ಮ ಮಕ್ಕಳನ್ನು ಶಾಲೆಯಿಂದ ಅವರೇ ಪಿಕ್ ಮಾಡುತ್ತಿದ್ದರು. ಅವರ ಈಗಿನ ಪತ್ನಿ ಶಿಕ್ಷಕಿ. ಈಗಲೂ ಕೂಡ ಅದೇ ಕೆಲಸ ಮಾಡುತ್ತಾರೆ. ಅದಲ್ಲದೆ ಭಾರತವನ್ನು ಯಾರು ಅಲಕ್ಷಿಸುವ ಸ್ಥಿತಿಯಲ್ಲಿ ಇಲ್ಲ ಎಂದೂ ಜಯರಾಮ್ ಹೇಳುತ್ತಾರೆ.

    we did it Joe ಸಂತಸ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್

    ಅಮೆರಿಕದ ನೂತನ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಫಲಿತಾಂಶ ಗೊ್ತ್ತಾದ ತಕ್ಷಣ ಜೋ ಬೈಡನ್ ಗೆ ಫೋನ್ ಮಾಡಿದ ಅವರು ತಾವು ಅಂತೂ ಸಾಧಿಸಬಿಟ್ಟೆವು ಎಂದಿದ್ದಾರೆ. ಟ್ವಿಟರ್ ನಲ್ಲಿರುವ ಆ ವಿಡಿಯೋ ಇಲ್ಲಿದೆ.

    ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡೆನ್

    ಜೋ ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಎಪಿ ಮತ್ತು ಸಿಎನ್ ಎನ್ ಗಳು ನೂತನ ಅಧ್ಯಕ್ಷರಾಗಿ ಬಿಡೆನ್ ಹೊರಹೊಮ್ಮಿರುವುದನ್ನು ಖಚಿತ ಪಡಿಸಿವೆ.

    ಅಸೋಸಿಯೇಟಡ್ ಪ್ರೆಸ್, ಬೈಡನ್ 290 ಮತ್ತು ಟ್ರಂಪ್ 214 ಎಲೆಕ್ಟರ್ಸ್ ಮತಗಳನ್ನು ಪಡೆದಿರುವುದಾಗಿ ಪ್ರಕಟಿಸಿದೆ. ಬಹುಮತಕ್ಕೆ 270 ಮತಗಳು ಸಾಕು. ಫಲಿತಾಂಶವನ್ನು ಪ್ರಶ್ನಿಸಿ ಟ್ರಂಪ್ ನ್ಯಾಯಾಲಯದ ಮೆಟ್ಟೆಲೇರುವ ಸಾಧ್ಯತೆಗಳು ನಿಚ್ಚಳವಾಗಿದೆ.

    ರಾಯಚೂರು, ಮಹಾರಾಣಿ, ನೃಪತುಂಗ, ಮಂಡ್ಯ ನೂತನ ವಿವಿಗಳಿಗೆ ಕುಲಪತಿಗಳ ನೇಮಕ

    ರಾಜ್ಯದಲ್ಲಿ ಮೂರು ನೂತನ ಕ್ಲಸ್ಟರ್ ವಿಶ್ವವಿದ್ಯಾನಿಯ ಹಾಗೂ ರಾಯಚೂರು ವಿಶ್ವವಿದ್ಯಾಲಯಕ್ಕೆ ಕುಲಪತಿಗಳನ್ನು ನೇಮಿಸಿ ರಾಜ್ಯಸರಕಾರ ಅಧಿಸೂಚನೆ ಹೊರಡಿಸಿದೆ.

    ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜು,ಮಹಾರಾಣಿ ಕಲೆ ವಿಜ್ಞಾನ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಹಾಗೂ ಶ್ರೀಮತಿ ವಿಎಚ್ ಡಿ ಹೋಂ ಸೈನ್ಸ್ ಸೆಂಟ್ರಲ್ ಇನ್ಸ್ಟಿಟ್ಯೂಟ್ ಅನ್ನು ಸೇರಿಸಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವನ್ನು(non affiliating university) ರಚಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾನಿಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಎಲ್ . ಗೋಮತಿ ದೇವಿ ಅವರನ್ನು ಈ ವಿವಿಯ ಮೊದಲ ಕುಲಪತಿಯನ್ನಾಗಿ ನೇಮಿಸಲಾಗಿದೆ.

    ಅದೇ ರೀತಿ ಬೆಂಗಳೂರಿನ ಸರಕಾರಿ ವಿಜ್ಞಾನ ಕಾಲೇಜನ್ನು ಬೆಂಗಳೂರು ವಿವಿಯಿಂದ ಬೇರ್ಪಡಿಸಿ ನೃಪತುಂಗ ವಿಶ್ವವಿದ್ಯಾಲಯವನ್ನು (Unitary in nature) ಸ್ಥಾಪಿಸಲಾಗಿದೆ. ಬಾಗಲಕೋಟೆ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಎಸ್ . ಬಲ್ಲಿ ಅವರನ್ನು ಈ ವಿಶ್ವವಿದ್ಯಾಲದ ಮೊದಲ ಕುಲಪತಿಯಾಗಿ ನೇಮಿಸಲಾಗಿದೆ.

    ಅದೇ ರೀತಿ ಮಂಡ್ಯ ಸರಕಾರಿ ಕಾಲೇಜನ್ನು ಮೈಸೂರು ವಿವಿಯಿಂದ ಬೇರ್ಪಡಿಸಿ ಮಂಡ್ಯ ವಿಶ್ವವಿದ್ಯಾಲಯವನ್ನು(non affiliating university) ಸ್ಥಾಪಿಸವಾಗಿದೆ. ಬೆಂಗಳೂರು ಎಸ್ ಜೆ ಬಿ ಇನ್ಸ್ ಸ್ಟಿಟ್ಯೂಟ್ ನ ಪ್ರಿನ್ಸಿಪಾಲ್ ಡಾ. ಪುಟ್ಟರಾಜು ಅವರನ್ನು ಈ ವಿವಿಯ ಮೊದಲ ಕುಲಪತಿಗಳಾಗಿ ನೇಮಿಸಲಾಗಿದೆ.

    ರಾಯಚೂರು ವಿವಿ

    ಗುಲ್ಬರ್ಗಾ ವಿವಿಯನ್ನು ವಿಭಜಿಸಿ ರಾಯಚೂರು ವಿವಿಯನ್ನು ಸ್ಫಾಪಿಸಲಾಗಿದ್ದು ಕರ್ನಾಟಕ ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಹರೀಶ ರಾಮಸ್ವಾಮಿ ಅವರನ್ನು ಈ ವಿವಿಯ ನೂತನ ಕುಲಪತಿಗಳಾಗಿ ನೇಮಿಸಲಾಗಿದೆ. ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಜಿ. ಕೊಟ್ರೇಶ್ವರ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದೆ.

    ರಾಮನ್ ಪರಿಣಾಮ ಘೋಷಣೆ ಆಗಿದ್ದೆ ನಮ್ಮ ಬೆಂಗಳೂರಲ್ಲಿ

     ಭಾರತ ದೇಶಕ್ಕೆ ವಿಜ್ಞಾನದಲ್ಲಿ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಭೌತಶಾಸ್ತ್ರಜ್ಞ ಸರ್ ಸಿ. ವಿ ರಾಮನ್ ಹುಟ್ಟು ಹಬ್ಬ ಶನಿವಾರ (ನವೆಂಬರ್ 7)

    ಶಾಲೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜ್ಞಾನ ಹೊಂದಿರುವ ನಾಗರಿಕರು, ಸಾಮಾನ್ಯವಾಗಿ ಸರ್ ಸಿ. ವಿ. ರಾಮನ್‍ರವರ ಹೆಸರನ್ನು ಕೇಳಿಯೇ ಇರುತ್ತಾರೆ. ನಮ್ಮ ದೇಶಕ್ಕೆ ಮಾತ್ರವಲ್ಲದೆ, ಏಷ್ಯಾ ಖಂಡಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಭೌತಶಾಸ್ತ್ರದ ವಿಜ್ಞಾನಿ ಸರ್ ಸಿ. ವಿ ರಾಮನ್. ಇವರ ಪೂರ್ಣ ಹೆಸರು ಚಂದ್ರಶೇಖರ್ ವೆಂಕಟರಾಮನ್. ನಾಳೆ ನವೆಂಬರ್ 7, 2020 ಅವರ 132 ನೇ ಜನ್ಮ ದಿನಾಚರಣೆ. ಅವರ ಜೀವನ ಚರಿತ್ರೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಳನ್ನು ಪುನರ್ ಮನನ ಮಾಡುವುದು ನಮ್ಮೆಲ್ಲರ ಕರ್ತವ್ಯ. ನನಗಂತೂ ಅವರು ಸ್ಥಾಪಿಸಿ, ಬೆಳಸಿದ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನೆ ಮಾಡಿ, ಪಿ. ಎಚ್‍ಡಿ ಪದವಿಯನ್ನ ಪಡೆದಿದ್ದು ನನ್ನ ಜೀವನದ ಮಹಾ ಭಾಗ್ಯವೆಂದು ತಿಳಿದಿದ್ದೇನೆ.

     ವಿಜ್ಞಾನದಲ್ಲಿ ಒಂದು ಮಾತಿದೆ. Nature can only described but cannot be explained ( ಪ್ರಕೃತಿಯನ್ನು ವಿವರಿಸಬಹುದು ಆದರೆ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ ). ಅದೇ ರೀತಿ ರಾಮನ್ ಮತ್ತು ಅವರ ಸಾಧನೆಗಳನ್ನು ವಿವರಿಸಬಹುದು, ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ರಾಮನ್‍ರು ಪ್ರಾಮಾಣಿಕತೆ, ಪಾರದರ್ಶಕತೆ, ಸಂಶೋಧನಾಶಕ್ತಿ, ಕಾರ್ಯ ತತ್ಪರತೆಗಳ ಸ್ವರೂಪ. ಇಷ್ಟು ಗುಣಗಳನ್ನು ಒಬ್ಬ ವ್ಯಕ್ತಿಯಲ್ಲಿ ಕಾಣುವುದು ವಿರಳ. 

    ವೆಂಕಟರಾಮನ್‍ರವರು 1888 ನವೆಂಬರ್ ಏಳನೇ ತಾರೀಖು ತಿರುಚಿರಾಪಲ್ಲಿ ಸಮೀಪದಲ್ಲಿರುವ ತಿರುವೈಕ್ಕಾವಲ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಈ ಊರು ಈಗ ನಮ್ಮ ಪಕ್ಕದ ತಮಿಳುನಾಡು ರಾಜ್ಯದಲ್ಲಿದೆ. ಅವರ ತಂದೆ ಆರ್. ಚಂದ್ರಶೇಖರ್ ಅಯ್ಯರ್ ಮತ್ತು ತಾಯಿ ಪಾರ್ವತಿ ಅಮ್ಮಾಳ್. ಚಂದ್ರಶೇಖರ್ ಅಯ್ಯರ್ ಅವರು ಸ್ಥಳೀಯ ಶಾಲೆಯಲ್ಲಿ ಉಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಯ್ಯರ್ ದಂಪತಿಗಳಿಗೆ ಐದು ಪುತ್ರರು ಮತ್ತು ಮೂರು ಪುತ್ರಿಯರು. ರಾಮನ್ ಎರಡನೆಯ ಮಗುವಾಗಿ ಜನಿಸಿದರು.

    ಬಾಲ್ಯದಲ್ಲೇ ಆಸಕ್ತಿ 

    ರಾಮನ್‍ರವರು ಮೂರು ವರ್ಷದ ಮಗುವಾಗಿದ್ದಾಗ, ಅವರ ತಂದೆಯವರಿಗೆ ವಿಶಾಖಪಟ್ಟಣದ ಎ.ವಿ. ನರಸಿಂಹರಾವ್ ಕಾಲೇಜಿನಲ್ಲಿ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಉಪನ್ಯಾಸಕರ ಹುದ್ದೆ ದೊರಕಿತು. ಇವರ ತಂದೆ ಉಪನ್ಯಾಸಕರಾದ ಕಾರಣ ಮನೆಯಲ್ಲಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರಕ್ಕೆ ಸಂಬಂಧಪಟ್ಟ ಹಲವಾರು ಪುಸ್ತಕಗಳಿದ್ದವು. ಇದರಿಂದ ರಾಮನ್‍ರವರಿಗೆ ವಿಜ್ಞಾನದಲ್ಲಿ ಆಸಕ್ತಿ ಬೆಳೆಯಲು ಸಾಧ್ಯವಾಯಿತು.

    ರಾಮನ್ ಮೊದಲಿನಿಂದಲೂ ಬಹಳ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಹನ್ನೊಂದನೇ ವಯಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆ, ಹದಿಮೂರನೇ ವಯಸ್ಸಿನಲ್ಲಿ ಎಫ್. ಏ ( ಈಗಿನ ಪಿಯುಸಿ ) ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಪ್ರವೇಶ ಪಡೆದರು. ಹದಿನೈದನೇ ವಯಸ್ಸಿನಲ್ಲಿ ಬಿ. ಎ. ಪದವಿ, ಹದಿನೆಂಟನೇ ವಯಸ್ಸಿನಲ್ಲಿ ಎಂ. ಎ ಪದವಿಗಳನ್ನು ಗಳಿಸಿದರು. ಆಂಗ್ಲ ಭಾಷೆ ಮತ್ತು ಭೌತಶಾಸ್ತ್ರದಲ್ಲಿ ಬಂಗಾರದ ಪದಕಗಳನ್ನು ಪಡೆದರು. ರಾಮನ್‍ರ ಆಳವಾದ ಜ್ಞಾನವನ್ನು ಅರಿತಿದ್ದ ಪ್ರಾಧ್ಯಾಪಕರುಗಳು, ವಿಜ್ಞಾನ ವಿಷಯದ ತರಗತಿಗಳ ಹಾಜರಾತಿಯಿಂದ ರಾಮನ್‍ರವರಿಗೆ ವಿನಾಯಿತಿ ನೀಡಿದ್ದರು.

    1906 ರಲ್ಲಿ ರಾಮನ್‍ರು ಹದಿನಾರನೇ ವಯಸ್ಸಿನಲ್ಲಿಯೇ ವಿದ್ಯಾರ್ಥಿಯಾಗಿದ್ದಾಗ, The Philosophical Magazine ಎಂಬ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕೆಯಲ್ಲಿ ತಮ್ಮ ಚೊಚ್ಚಲ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದರು. ಪ್ರಿಸ್ಮ್‍ನ ( prism ) ಕೋನವನ್ನು ಅಳೆಯುವಾಗ, ಬೆಳಕಿನ ವಿವರ್ತನೆ ಪಟ್ಟಿಗಳನ್ನು ಗಮನಿಸಿದರು. ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ಪ್ರಬಂಧವನ್ನು ಪ್ರಕಟಿಸಿ, ಎಲ್ಲರ ಗಮನ ಸೆಳೆದರು. ಅದೇ ವರ್ಷ ದ್ರವಗಳ ಮೇಲ್ಮೈ ಸೆಳೆತ ಕುರಿತಂತೆ ಎರಡನೇ ಪ್ರಬಂಧವನ್ನು ಪ್ರಕಟಿಸಿದರು. 

    1906 ರಲ್ಲಿ ಎಂ. ಎ. ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ( civil services ) ಮೊದಲ rank ಗಳಿಸಿ, 1907 ರಲ್ಲಿ Assistant Accountant  General   ಹುದ್ದೆಗೆ ನೇಮಕಗೊಂಡು, ಆಗಿನ ಕಲ್ಕತ್ತಾದಲ್ಲಿ ಹಣಕಾಸು ಇಲಾಖೆಯಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಕಲ್ಕತ್ತೆಗೆ ಹೋಗುವ ಮುಂಚೆ, ಲೋಕಸುಂದರಿ ಅಮ್ಮಾಳ್ ಅವರ ಜೊತೆ ರಾಮನ್‍ರು ವಿವಾಹವಾದರು.

    ಸಂಶೋಧನೆ ಪುನರಾರಂಭ

    ಕಲ್ಕತ್ತಾದಲ್ಲಿ ರಾಮನ್‍ರ ವೃತ್ತಿಯ ದಾರಿಯೇ ಬದಲಾಯಿತು. ಒಂದು ದಿನ ಸಂಜೆ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ, ಬೌವ್ ಬಜಾರ್ ಸ್ಟ್ರೀಟ್‍ನಲ್ಲಿ “Indian Association for Cultivation of Science” ಎಂಬ ಫಲಕ ರಾಮನ್‍ರ ಕಣ್ಣಿಗೆ ಕಂಡಿತು. ರಾಮನ್‍ರು ಕದ ತಟ್ಟಿದಾಗ, ಅಸುತೋಷ್‍ಡೆ ಎಂಬ ನೌಕರ ಬಾಗಿಲನ್ನು ತೆರೆದು, ರಾಮನ್‍ರನ್ನು ಅಸೋಸಿಯೇಶನ್ ಕಾರ್ಯದರ್ಶಿಗಳಾದ ಅಮೃತ ಲಾಲ್ ಸರ್ಕಾರ್ ಬಳಿಗೆ ಕರೆದುಕೊಂಡು ಹೋಗಿ ಪರಿಚಯಿಸಿದರು. ರಾಮನ್‍ರು ಸಂಶೋಧನೆಯನ್ನು ಮುಂದುವರೆಸುವ ಇಂಗಿತವನ್ನು ವ್ಯಕ್ತಪಡಿಸಿದರು. ಅಮೃತ್‍ ಲಾಲ್ ಸರ್ಕಾರ್‍ರವರು ಬಹಳ ಸಂತೋಷದಿಂದ ಒಪ್ಪಿಕೊಂಡು, ಬೀಗದ ಕೈಗಳನ್ನು ರಾಮನ್‍ರವರಿಗೆ ನೀಡಿದರಂತೆ. ಅಂದಿನಿಂದ ರಾಮನ್‍ರ ಸಂಶೋಧನಾ ಕಾರ್ಯ ಪುನರಾರಂಭವಾಯಿತು.

    ರಾಮನ್‍ರ ಕಾರ್ಯಶ್ರದ್ಧೆ ಅಪಾರ ಮತ್ತು ಅಸಮಾನಾಂತರ. ಹೊಸದಾಗಿ ವಿವಾಹವಾಗಿದ್ದರೂ ಸಹ, ಅವರು ಹೆಚ್ಚು ಕಾಲ ಸಂಶೋಧನೆ ಮತ್ತು ಕಚೇರಿ ಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದರು. ಬೆಳಿಗ್ಗೆ 5.30 ರಿಂದ 9.30 ರವರವಿಗೆ ಸಂಶೋಧನೆ, 10 ರಿಂದ 5 ಗಂಟೆಯವರೆಗೆ ಕಚೇರಿ ಕೆಲಸ, ಪುನಃ ಸಂಜೆ 10 ಗಂಟೆವರೆವಿಗೆ ಸಂಶೋಧನೆ, ಹೀಗೆ ನಡೆಯುತ್ತಿತ್ತು ಅವರ ದಿನಚರಿ.

    ಭಾರತೀಯ ತಂತಿ ವಾದ್ಯಗಳು, ಕಂಪನಗಳು, ಹಾಡುವ ಜ್ವಾಲೆಗಳು          ( Singing flames ), ಸಂಗೀತ ಶಬ್ಧಗಳ ಭೌತಶಾಸ್ತ್ರ, ಪಿಟೀಲಿನ ಅಕೌಸ್ಟಿಕ್ಸ್,  ಮೃದಂಗ, ತಬಲ ಮತ್ತು ಪಾಶ್ಚಿಮಾತ್ಯ ಡ್ರಮ್ಸ್, ಇವುಗಳಿಗಿರುವ ವ್ಯತ್ಯಾಸ ಹೀಗೆ ಹಲವಾರು ವಿಷಯಗಳ ಬಗ್ಗೆ ಸಂಶೋಧನೆ ನಡೆಸಿ, ಅವರೇ ಪ್ರಾರಂಭಿಸಿದ Bulletin of Indian Association ನಿಯತಕಾಲಿಕೆಯಲ್ಲಿ ಪ್ರಕಟಿಸಿದರು. ರಾಮನ್‍ರ ಪಾಂಡಿತ್ಯವನ್ನು ಗಮನಿಸಿದ ಕಲ್ಕತ್ತಾ ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದ ಸರ್ ಅಶುತೋಷ್ ಮುಖರ್ಜಿಯವರು, ರಾಮನ್‍ರವರಿಗೆ ವಿಶ್ವ ವಿದ್ಯಾಲಯದಲ್ಲಿ ಪ್ರತಿಷ್ಠಿತ ಪಾಲಿತ್ ಚೇರ್ ಆಫ್ ಫಿಸಿಕ್ಸ್‍ಗೆ ನೇಮಿಸಿ, ಭೌತಶಾಸ್ತ್ರದ ಪ್ರಾಧ್ಯಾಪಕ ಹುದ್ದೆಯನ್ನು ನೀಡಿದರು. ಸಂಬಳ ಅರ್ಧದಷ್ಟು ಕಡಿಮೆಯಾದರೂ ಸಹ, ರಾಮನ್‍ರು Assistant Accountant General ಹುದ್ದೆಗೆ ರಾಜೀನಾಮೆ ನೀಡಿ, ಪ್ರಾಧ್ಯಾಪಕ ಹುದ್ಧೆಯನ್ನು ಒಪ್ಪಿಕೊಂಡರು. 

    1921 ರಲ್ಲಿ ಬಹಳ ಮುಖ್ಯವಾದ ಘಟನೆ ನಡೆಯಿತು. ಸರ್ ಅಶುತೋಷ್ ಮುಖರ್ಜಿಯವರ ಒತ್ತಡಕ್ಕೆ ಮಣಿದು ರಾಮನ್‍ರು ಆಕ್ಸ್ಪರ್ಡ್‍ನಲ್ಲಿ ನಡೆದ ಯೂನಿವರ್ಸಿಟೀಸ್ ಕಾಂಗ್ರೆಸ್‍ನಲ್ಲಿ ಭಾಗವಹಿಸಲು ಇಂಗ್ಲೆಂಡಿಗೆ ಪ್ರಯಾಣಿಸಿದರು. ಅಲ್ಲಿ ವಿಶ್ವ ಪ್ರಖ್ಯಾತ ವಿಜ್ಞಾನಿಗಳಾದ ಜೆ. ಜೆ ಥಾಮ್‍ಸನ್, ರುದರ್‍ ಪೋರ್ಡ್, ಬ್ರ್ಯಾಗ್ ಮುಂತಾದವರನ್ನು ಭೇಟಿಮಾಡಿ ವಿಚಾರ ವಿನಿಮಯ ಮಾಡಲು ಅವಕಾಶ ದೊರೆಯಿತು. ಇಂಗ್ಲೆಂಡಿನಲ್ಲಿ ವಾಸವಾಗಿದ್ದ ಕೆಲವೇ ದಿನಗಳಲ್ಲಿ ಸೆಂಟ್ ಪಾಲ್ಸ್ ಕ್ಯಾಥೆಡರಲ್‍ನ “Whispering Gallery” ಕುರಿತಂತೆ ಸಂಶೋಧನೆಯನ್ನು ನಡೆಸಿ, ಎರಡು ಪ್ರಬಂಧಗಳನ್ನು ಪ್ರಕಟಿಸಿದರು.

    ರಾಮನ್‍ರು ತಾಯಿನಾಡಿಗೆ ವಾಪಸ್ಸು ಬರಬೇಕಾದರೆ, ಹಡಗಿನಲ್ಲಿ ಪ್ರಯಾಣಿಸುತ್ತಾ ಮೆಡಿಟರೇನಿಯನ್ ಸಮುದ್ರದ ಭವ್ಯತೆಯನ್ನು ಆನಂದಿಸಿ, ಮುಖ್ಯವಾಗಿ ಅದರ ನೀಲಿ ಬಣ್ಣದ ಬಗ್ಗೆ ಚಿಂತನೆ ಮಾಡಿದರು. Rayleigh ಎಂಬ ವಿಜ್ಞಾನಿ ನೀಲಿ ಬಣ್ಣದ  ಆಕಾಶ ನೀರಿನ ಮೇಲ್ಮ್ಯೆನಲ್ಲಿ ಪ್ರತಿಫಲಿಸುವುದರಿಂದ, ಸಮುದ್ರದ ನೀರು ನೀಲಿ ಬಣ್ಣವಾಗಿ ಕಾಣುತ್ತದೆ ಎಂಬುವುದಾಗಿ ಪ್ರತಿಪಾದಿಸಿದ್ದರು. ರಾಮನ್‍ರು ಬಹಳ ಸರಳವಾಗಿ ನಿಕಾಲ್ ಪ್ರಿಸ್ಮನ ಸಹಾಯದಿಂದ Rayleigh ಯವರ ವಾದ ಸರಿಯಿಲ್ಲ ಎಂದು ತೋರಿಸಿ ಕೊಟ್ಟರು. ನೀರಿನ ಅಣುಗಳು ಬೆಳಕನ್ನು ಚದುರಿಸುವುದರ ಪರಿಣಾಮವಾಗಿ ಸಮುದ್ರದ ನೀರು ನೀಲಿ ಬಣ್ಣವಾಗಿ ಕಾಣುತ್ತದೆ ಎಂದು ವಾದಿಸಿದರು.

    ರಾಮನ್ ಸಂಶೋಧನಾ ಸಂಸ್ಥೆ

    1924 ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು. ನಂತರ ಮುಖರ್ಜಿಯವರು ರಾಮನ್‍ರ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ, ಸಹಜವಾಗಿ ನೊಬೆಲ್ ಪ್ರಶಸ್ತಿ ಎಂದು ಉತ್ತರಿಸಿದರಂತೆ. ಭಾರತಕ್ಕೆ ಹಿಂದಿರುಗಿದ ನಂತರ, ರಾಮನ್‍ರು ದ್ರವಗಳಿಂದ ಬೆಳಕಿನ ಚದುರುವಿಕೆ ( Scattering of Light by Liquids ) ವಿಷಯದ ಬಗ್ಗೆ ಆಳವಾದ ಸಂಶೋಧನೆಯನ್ನು ನಡೆಸಿದರು. ಇದರ ಫಲವಾಗಿ, 1928 ರ ಫೆಬ್ರವರಿ 28 ರಂದು “ರಾಮನ್ ಪರಿಣಾಮ” ( Raman Effect ) ದ ಆವಿಷ್ಕಾರವಾಯಿತು. ಸರಳವಾಗಿ ರಾಮನ್ ಪರಿಣಾಮವನ್ನು ವಿವರಿಸುವುದಾದರೆ, ಏಕವರ್ಣೀಯ ಬೆಳಕನ್ನು ( Monochromatic Light ) ಪಾರದರ್ಶಕ ಮಾಧ್ಯಮದಲ್ಲಿ ಹಾಯಿಸಿದಾಗ, ಚದುರಿದ ಬೆಳಕಿನ ಕಿರಣಗಳಲ್ಲಿ , ಆಪಾತ ಬೆಳಕಿನ ಆವೃತ್ತಿಯ ಜೊತೆಗೆ, ಅದಕ್ಕಿಂತ ಕಡಿಮೆ ಮತ್ತು ಹೆಚ್ಚು ಆವೃತ್ತಿಯುಳ್ಳ ಕಿರಣಗಳು ಉಂಟಾಗುತ್ತವೆ.

    ಬೆಂಗಳೂರಲ್ಲಿ ಪ್ರಕಟಣೆ

    ಬಹಳ ಸಂತೋಷಕರ ವಿಷಯವೆಂದರೆ, ಈ ಆವಿಷ್ಕಾರದ ಬಗ್ಗೆ ಮಾರ್ಚ್ 16 ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಈಗಿರುವ ಭೌತಶಾಸ್ತ್ರ ವಿಭಾಗದ ಕೊಠಡಿಯಲ್ಲಿ ಜರುಗಿದ ಸಮಾರಂಭದಲ್ಲಿ ರಾಮನ್ ಪ್ರಕಟಣೆ ಮಾಡಿದರು. ಆ ಕೊಠಡಿಗೆ ಈಗ ರಾಮನ್ ಹಾಲ್ ಎಂದು ಹೆಸರಿಡಲಾಗಿದೆ. ಈ ಆವಿಷ್ಕಾರವನ್ನು ರಾಮನ್‍ರೇ ಪ್ರಾರಂಭಿಸಿದ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್‍ನ ಎರಡನೇ ಸಂಪುಟದಲ್ಲಿ ಪ್ರಕಟಿಸಿದರು. ಆರ್ ಡಬ್ಲ್ಯೂ ವುಡ್‍್ರ ಪ್ರಕಾರ ರಾಮನ್ ಪರಿಣಾಮ ಬೆಳಕಿನ ಕ್ವಾಂಟಮ್ ಸಿದ್ಧಾಂತವನ್ನು ಮನಗಾಣಿಸುವ ಉತ್ತಮವಾದ ಸಾಕ್ಷಿಯಾಗಿದೆ. ಈ ಆವಿಷ್ಕಾರದ ರೂವಾರಿ ಸರ್ ಸಿ. ವಿ ರಾಮನ್‍ರಿಗೆ 1930 ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. ಭಾರತ ದೇಶಕ್ಕೆ ವಿಜ್ಞಾನ ಕ್ಷೇತ್ರದ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ದೊರೆಯಿತು. ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ. ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷ್ಯಾದ ವಿಜ್ಞಾನಿ ಎಂಬ ಕೀರ್ತಿಯು ಸಹ ರಾಮನ್‍ರಿಗೆ ಸಲ್ಲುತ್ತದೆ.

    ರಾಮನ್‍ರಿಗೆ ನೊಬೆಲ್ ಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎಂಬ ಅಪಾರ ಆತ್ಮ ವಿಶ್ವಾಸವಿತ್ತು. ಸಾಮಾನ್ಯವಾಗಿ ನೊಬೆಲ್ ಪ್ರಶಸ್ತಿಗಳನ್ನು ಅಕ್ಟೋಬರ್ ತಿಂಗಳಿನಲ್ಲಿ ಪ್ರಕಟಿಸಲಾಗುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತದೆ. 1930 ರ ಜುಲೈ ತಿಂಗಳಿನಲ್ಲಿಯೇ ಸ್ಟಾಕ್‍ಹೊಂಗೆ ಹೋಗಲು ಎರಡು ಟಿಕೆಟ್‍ಗಳನ್ನು ಬುಕ್ ಮಾಡಿದ್ದರಂತೆ. ಇದು ರಾಮನ್‍ ರ ಆತ್ಮ ವಿಶ್ವಾಸಕ್ಕೆ ಸಾಕ್ಷಿ. ರಾಮನ್‍ರು ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದರು.

    1933 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ( Indian Institute of Science ) ನಿರ್ದೇಶಕರಾಗಿ ನೇಮಕಗೊಂಡು ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು. ರಾಮನ್‍ರು ಒಳ್ಳೆಯ ವಾಗ್ಮಿಯೂ ಆಗಿದ್ದರು. ಅವರ ಭಾಷಣವನ್ನು ಕೇಳಲು ಸಾವಿರಾರು ಜನರು ಸೇರುತ್ತಿದ್ದರಂತೆ. 1934 ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸನ್ನು ಸ್ಥಾಪಿಸಿದರು. ಈಗಲೂ ಸಹ ಈ ಸಂಸ್ಥೆಯು ಪ್ರತಿಷ್ಠಿತ ಸಂಸ್ಥೆಯಾಗಿ ಹೆಸರು ಉಳಿಸಿಕೊಂಡಿದೆ. 1948 ರಲ್ಲಿ ನಿವೃತ್ತಿ ಹೊಂದಿದ ಸರ್ ಸಿ. ವಿ ರಾಮನ್‍ರು ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ, ಸಂಶೋಧನೆಯನ್ನು ಮುಂದುವರಿಸ ಬೇಕೆಂಬ ಹಂಬಲವನ್ನು ಹೊಂದಿದ್ದರು. ಇದರ ಫಲವಾಗಿ 1948 ರಲ್ಲಿ ಬೆಂಗಳೂರಿನ ಮೇಕ್ರಿ ಸರ್ಕಲ್ ಬಳಿ ಮೈಸೂರು ಮಹಾರಾಜರು ನೀಡಿದ ಹತ್ತು ಎಕರೆ ಜಮೀನಿನಲ್ಲಿ ರಾಮನ್ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದರು. ಯಾರ ಹಂಗೂ ಇಲ್ಲದೆ, ಸ್ವತಂತ್ರವಾಗಿ ಅವರ ಜೀವನದ ಕೊನೆ ಘಳಿಗೆಯವರೆವಿಗೆ ವಿಜ್ಞಾನದ ಸೇವೆಯನ್ನು ಮಾಡಿದ ಮಹಾನ್ ವ್ಯಕ್ತಿ.

    ರಾಮನ್ ಬೆಳಕಿನ ಚದುರುವಿಕೆಯ ಜೊತೆಗೆ, ಪಕ್ಷಿಗಳ ಗರಿಗಳ ಬಣ್ಣ, ಚಿಟ್ಟೆಗಳ ಬಣ್ಣ, ಚಿಪ್ಪುಗಳ ಬಣ್ಣ, ಶ್ರವಣಾತೀತ ತರಂಗಗಳಿಂದ ಬೆಳಕಿನ ವಿವರ್ತನೆ ( Diffraction of light by Ultrasonic Waves ), ಅಕೌಸ್ಟೊ – ಆಪ್ಟಿಕ್ ಪರಿಣಾಮ, ಘನ ವಸ್ತುಗಳ  ಥರ್ಮಾ – ಆಪ್ಟಿಕ್, ಮಾಗ್ನಟೊ – ಆಫ್ಟಿಕ್ ಗುಣ ಲಕ್ಷಣಗಳು, ಖನಿಜ, ಸ್ಪಟಿಕ ಮತ್ತು ರತ್ನಗಳ ವರ್ಣ ವೈವಿಧ್ಯತೆ ಹೀಗೆ ಹಲವಾರು ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸಿದರು. ರಾಮನ್ ಸಂಶೋಧನಾ ಸಂಸ್ಥೆಯಲ್ಲಿ, ರಾಮನ್‍ರು ಪ್ರಪಂಚದ ಹಲವಾರು ದೇಶಗಳಿಂದ ಸಂಗ್ರಹಿಸಿದ  ಖನಿಜ, ಸ್ಪಟಿಕ ಮತ್ತು ರತ್ನಗಳನ್ನು ಅದ್ಬುತವಾದಂತ ರಾಮನ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ರಾಮನ್‍ರವರಿಗೆ ಅನೇಕ ಗೌರವ ಡಾಕ್ಟರೇಟ್ ಮತ್ತು ವೈಜ್ಞಾನಿಕ ಸೊಸೈಟಿಯ ಸದಸ್ಯತ್ವಗಳನ್ನು ನೀಡಿ ಗೌರವವನ್ನು ಸೂಚಿಸಲಾಗಿದೆ. ಅವರ ಸದಸ್ಯತ್ವದಿಂದ, ಸಂಸ್ಥೆಗೆ ಗೌರವ ಎಂಬ ಮಾತನ್ನು ಹೇಳಲು ಬಯಸುತ್ತೇನೆ.

    ರಾಮನ್‍ರವರಿಗೆ ವಿಜ್ಞಾನದ ಸೇವೆ ಆಂತರಿಕ ಅಗತ್ಯವಾಗಿತ್ತು. ವಿಜ್ಞಾನ ಅವರ ದೇಹ ಮತ್ತು ಮನಸ್ಸುಗಳ ಭಾಗವಾಗಿತ್ತು ಎಂದರೆ ಅತಿಶಯೋಕ್ತಿಯಾಗಲಾರದು. ವಿಜ್ಞಾನದ ಸೇವೆ ಅವರಿಗೆ ಸಂತೋಷದಾಯಕ ಅನುಭವವಾಗಿತ್ತು. ಇಂತಹ ಮೇರು ವಿಜ್ಞಾನಿ, ಭಾರತ ರತ್ನ ( 1954 ರಲ್ಲಿ ಭಾರತ ಸರ್ಕಾರ ಭಾರತ ರತ್ನ ಬಿರುದು ನೀಡಿದೆ ), ಸರಳ ಜೀವಿ, 21 ನವೆಂಬರ್ 1970 ರಂದು ಇಹ ಲೋಕವನ್ನು ತ್ಯಜಿಸಿದರು. ಭಾರತದ ವಿಜ್ಞಾನದಲ್ಲಿ ಅವರ ಹೆಸರು ಚಿರಸ್ಮರಣೀಯ. 

    ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯಲ್ಲಿರುವ ರಾಮನ್ ಮರ. ಅವರ ಸಮಾಧಿ ಸ್ಥಳದಲ್ಲಿ ಈ ಮರ ಇದೆ.

    ನಮ್ಮ ದೇಶದಲ್ಲಿ ರಾಮನ್ ಪರಿಣಾಮದ ಆವಿಷ್ಕಾರದ ಜ್ಞಾಪಕಾರ್ಥವಾಗಿ, ಪ್ರತಿ ವರ್ಷವು ಪೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.

    ಅವರ ಜನ್ಮ ದಿನಾಚರಣೆಯ ದಿನ ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ವಿಶೇಷವಾಗಿ, ವಿಜ್ಞಾನದ ವಿದ್ಯಾರ್ಥಿಗಳು ಕಡ್ಡಾಯವಾಗಿ ನೆನೆಯ ಬೇಕಾಗಿದೆ.

    ಮುಂದಿನ ವರ್ಷಗಳಲ್ಲಿ ರಾಮನ್‍ರ ಸ್ಪೂರ್ತಿದಾಯಕ ಕಾರ್ಯದಿಂದ ಉತ್ತೇಜನಗೊಂಡು, ಇನ್ನೊಬ್ಬ ರಾಮನ್ ಹುಟ್ಟಿ ಬರಲೆಂದು ಆಶಿಸೋಣ.  

    ಯಾವುತ್ತು ಪ್ರಕಟವಾಗುತ್ತೆ ಅಮೆರಿಕ ರಿಸಲ್ಟ್

    ಬಿಡೆನ್ 264 ಟ್ರಂಪ್ 214

    ಚುನಾವಣೆ ನಡೆದು ಮೂರು ದಿನ ಆದರೂ ಅಮೆರಿಕದ ನೂತನ ಅಧ್ಯಕ್ಷರು ಯಾರಾಗಬಹುದು ಎಂಬುದು ಇನ್ನೂ ಗೊತ್ತಾಗಿಲ್ಲ.ಕೌಂಟಿಂಗ್ ಶುರುವಾದ ಆರೇಳು ಗಂಟೆಯಲ್ಲಿ ಫಲಿತಾಂಶ  ತಿಳಿಯುವ ಭಾರತೀಯರಿಗೆ ಇದು ವಿಚಿತ್ರವಾಗಿ ಕಾಣುತ್ತಿದೆ. ನಮ್ಮಲ್ಲಿ ಆಗಿದ್ರೆ ಇಷ್ಟು ಹೊತ್ತಿಗೆ ಮೂರು ನಾಲ್ಕು ಎಲೆಕ್ಷನ್ ರಿಸಲ್ಟ್ ಕೊಡ್ತಿದ್ವಿ. ಎಲ್ಲದರಲ್ಲೂ ಮುಂದಿರುವ ಅಮೆರಿಕ ಇಲ್ಲಿ ಏಕೆ  ಹೀಗೆ ? ಭಾರತಕ್ಕೆ ಹೋಲಿಸಿದರೆ ಕಡಿಮೆ ಮತದಾರರಿರುವ ಅಲ್ಲಿ ವಾರಗಟ್ಟಲೆ ವೋಟ್ ಕೌಂಟ್ ಮಾಡುತ್ತಿರುವುದನ್ನು ಕಂಡು ಭಾರತೀಯರು ಅಚ್ಚರಿ ಪಡುತ್ತಿದ್ದಾರೆ. ಅಸಲಿಗೆ  ತಡವಾಗುತ್ತಿರುವುದಕ್ಕೆ ಕಾರಣವಾದರು ಏನು?. ಇಲ್ಲಿದೆ ನಿಮ್ಮ ಸಂದೇಹಗಳಿಗೆ ಉತ್ತರ.

    ಅಮೆರಿಕಾದಲ್ಲಿ ನಮ್ಮಂತೆ ಮತದಾನಕ್ಕೆ ಯಂತ್ರಗಳನ್ನು ಬಳಸುವುದಿಲ್ಲವೆ? ನಮ್ಮ ಬಿಇಎಲ್ ನವರಿಗೆ ಹೇಳಿದರೆ ಅವರಿಗೂ ರೆಡಿ ಮಾಡಿ ಕೊಡ್ತಿದ್ದರಲ್ವಾ?

    ಅಲ್ಲಿನ ಕಾನೂನು ಮತ ಯಂತ್ರಕ್ಕೆ ಅವಕಾಶ ನೀಡುವುದಿಲ್ಲ. ಈಗಲೂ ಬ್ಯಾಲಟ್ ಪೇಪರ್ ಅನ್ನೇ ಅವರು ಬಳಸುವುದು. ನಮ್ಮಲ್ಲೂ ಯಂತ್ರಗಳು ಬರುವ ಮೊದಲು ಫಲಿತಾಂಶ ಹೀಗೆ ತಡವಾಗುತ್ತಿತ್ತು. ಉತ್ತರ ಪ್ರದೇಶದ ಅನೇಕ ಕ್ಷೇತ್ರಗಳ ಎಣಿಕೆ ಮೂರು ದಿನವಾದರು ಮುಗಿಯುತ್ತಿರಲಿಲ್ಲ. ರೆಡಿಯೋದಲ್ಲಿ ಮೂರು ದಿನವಾದರು ಲೀಡಿಂಗ್ ನದೇ ಸುದ್ದಿ ಇರುತ್ತಿತ್ತು.

    ಸರಿ ಬ್ಯಾಲೆಟ್ ಪೇಪರ್ ಬಳಸ್ತಾರೆ ಒಪ್ಪೋಣ. ಆದರೂ ಇಷ್ಟೊಂದು ಡಿಲೇನಾ?

    ಹೌದು . ಈ ಬಾರಿ ತಡವಾಗಿದೆ. ಅದಕ್ಕೆ ಕಾರಣ ಕೋವಿಡ್. ಇದರ ಕಾರಣದಿಂದ ಮತಗಟ್ಟಗೆ ಬಂದು ವೋಟ್ ಮಾಡುವುದರಿಂದ ಕೋರಿಕೆ ಸಲ್ಲಿಸಿದ ಎಲ್ಲರಿಗೂ ವಿನಾಯ್ತಿ ನೀಡಲಾಗಿತ್ತು. ಮತಗಟ್ಟೆಗೆ ಬರಲು ಆಗದವರು ತಾವು ಅಂಚೆ ಮೂಲಕ ಮತಪತ್ರಗಳನ್ನು ತರಿಸಿಕೊಂಡು ಮತದಾನ ಮಾಡಿ ಅದನ್ನು ಮರು ಅಂಚೆ ಮಾಡಿದ್ದಾರೆ. ಈ ಹಿಂದೆ ಕೆಲವರು ಮಾತ್ರ ಆ ಸೌಲಭ್ಯ ಬಳಸುತ್ತಿದ್ದರು.

    ಮತದಾನದ ದಿನಕ್ಕೆ ಮುಂಚಿತವಾಗಿಯೆ ಮತಹಾಕಬಹುದಿತ್ತೆ?

    ಹೌದು. ಅಂಚೆಯ ಮೂಲಕ ಕಳಿಸಲು ಆಗದವರು ಮುಂಚಿತವಾಗಿಯೇ ಅಂದರೆ ವೋಟಿಂಗ್ ದಿನಕ್ಕೆ ಮುಂಚಿತವಾಗಿ ನಿಗದಿತ ಕೇಂದ್ರಕ್ಕೆ ಬಂದು ಮತಹಾಕುವ ಅವಕಾಶ ಕಲ್ಪಿಸಿತ್ತು. ಹೀಗಾಗಿ ಚುನಾವಣೆ ದಿನಕ್ಕೆ ಮುನ್ನವೆ  ಶೇಕಡ 73. 4(ಕಳೆದ ಚುನಾವಣೆಗೆ ಹೋಲಿಸಿ)  ರಷ್ಟು ಮತದಾನ ಆಗಿತ್ತು. ಈ ರೀತಿ ಮೊದಲೆ ಹಾಕಿದ ಮತಗಳು, ಅಂಚೆಗೆ ಹಾಕಿದ ಮತಗಳು ಎಣಿಕೆ ಕೇಂದ್ರ ತಲುಪಲು ತಡವಾಗಿದೆ. ಬಿರುಸಿನ ಸ್ಪರ್ಧೆ ಇರುವುದರಿಂದ ಎಲ್ಲಾ ಮತಗಳನ್ನು ಎಣಿಸಲೇ ಬೇಕಾಗಿದೆ.

    ಆದರೆ ಕೆಲವು ರಾಜ್ಯಗಳ ಫಲಿತಾಂಶ ಪ್ರಕಟವಾಗಿದ್ದು ಹೇಗೆ?

    ಕೆಲವು ರಾಜ್ಯಗಳು ಚುನಾವಣೆ ದಿನಕ್ಕೆ ಮುನ್ನವೆ ಸ್ವೀಕಾರವಾದ ಮತಗಳ ಎಣಿಕೆ ಆರಂಭಿಸಲು ಅನುಮತಿ ನೀಡಿದ್ದವು. ಕೆಲವು ರಾಜ್ಯಗಳು ಅಧಿಕೃತ ಮತದಾನದ ದಿನದ ವರೆಗೂ ಎಣಿಕೆ ಮಾಡಲು ಅವಕಾಶ ನೀಡಲಿಲ್ಲ. ಹೀಗಾಗಿ ಅಲ್ಲಿ ನವೆಂಬರ್ 3 ರ ನಂತರದಿಂದಲೇ ಎಣಿಕೆ ಶುರುವಾಗಿದೆ,

    ಉದಾಹರಣಗೆ ಫ್ಲಾರಿಡಾ ಅಲ್ಲಿನ ರಾಜ್ಯ ಸರಕಾರ ಮೊದಲೆ ಎಣಿಕೆಗೆ ಅನುಮತಿ ನೀಡಿತ್ತು, ಹೀಗಾಗಿ ಅಲ್ಲಿ  ಫಲಿತಾಂಶ ಬೇಗ ಪ್ರಕಟವಾಯಿತು. ಪೆನಿಸಲ್ವೇನಿಯ ಮೊದಲೆ ಎಣಿಸಲು ಒಪ್ಪಲಿಲ್ಲ.

    ಅಂಚೆ ಮೂಲಕ ಮತ ಎಣಿಕೆ ಏಕೆ ತಡ?

    ಈ ಬಾರಿ ಇವುಗಳ ಸಂಖ್ಯೆಯೇ ಹೆಚ್ಚಾಗಿದೆ. ಮತ ಎಣಿಕೆ ಮಾಡುವ ಮುನ್ನ ಸಹಿಗಳನ್ನು ಟ್ಯಾಲಿ ಮಾಡಿ ಖಚಿತ ಪಡಿಸಿಕೊಳ್ಳಬೇಕು. ಕೆಲವು ಕಡೆ ಪೋಸ್ಟಲ್ ಬ್ಯಾಲೆಟ್ ಪಡೆದವರು ಅದನ್ನು ಚಲಾಯಿಸದೆ ಮತದಾನಕ್ಕೆ ಬಂದು ಚಲಾಯಿಸಿರುತ್ತಾರೆ. ಅಂಥ ಕಡೆ ಅವರಿಂದ ಡಬಲ್ ಮತದಾನ ಆಗಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ.

    ಆನ್ ಲೈನ್ ಮತದಾನಕ್ಕೆ ಅವಕಾಶ ಇತ್ತೆ?

    ಆನಲೈನ್ ಮತದಾನಕ್ಕೆ ಅವಕಾಶ ಇರಲಿಲ್ಲ.

    ಇನ್ನು ಯಾವ ರಾಜ್ಯಗಳ ಫಲಿತಾಂಶ ಪ್ರಕಟವಾಗಬೇಕು?

    ಜಾರ್ಜೀಯ – 16 ಪ್ರತಿನಿಧಿ (ಎಲೆಕ್ಟರ್ಸ್ ) ವೋಟುಗಳು

    ಸದ್ಯ ಟ್ರಂಪ್ ಮುಂದಿದ್ದಾರೆ. ಆದರೆ ಅಂತರ ಕಡಿಮೆ ಆಗುತ್ತಿದೆ. ಕೇವಲ 2000  ಮತಗಳ ವ್ಯತ್ಯಾಸವಿದೆ.  ಇನ್ನು 15000 ವೋಟುಗಳು ಎಣಿಕೆಯಾಗಬೇಕು. ಉಳಿದಿರುವ ಮತಗಳು ಅಟ್ಲಾಂಟ ಮತ್ತು ಸವನ್ನಾ ಪ್ರಾಂತ್ಯದ ಅಂಚೆಮತಗಳು.ಇವು ಬಿಡನ್ ಪರ ವಾಲುವ ಸಂಭವವೇ ಹೆಚ್ಚು ಎಂದು ಅಂದಾಜಿಸಲಾಗಿದೆ. ಇಂದು ರಾತ್ರಿಯ ವೇಳೆಗೆ ಪ್ರಕಟ ಆಗಬಹುದು

    ಪೆನಿಸಲ್ವೇನಿಯ -20 ಪ್ರತಿನಿಧಿ (ಎಲೆಕ್ಟರ್ಸ್ ) ವೋಟುಗಳು

    ಸಧ್ಯ ಟ್ರಂಪ್ ಮುಂದೆ ಇದ್ದಾರೆ.  ಅರ್ಧ ಮಿಲಿಯನ್ ಇದ್ದ ಲೀಡ್  ಈಗ 23000ಕ್ಕೆ ಇಳಿದಿದೆ. ಬೆಳಿಗ್ಗೆ 550000 ಮತಗಳ ಎಣಿಕೆ ಇತ್ತು. ರಾತ್ರಿ ಮುಗಿಯಬಹುದು. ಈ ರಾಜ್ಯದಲ್ಲಿ ಪಾರಂಪರಿಕವಾಗಿ ಡೆಮಾಕ್ರಾಟಿಕ್ ಗಳೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ.

    ಅರಿಝೋನ—11 ಪ್ರತಿನಿಧಿ (ಎಲೆಕ್ಟರ್ಸ್ ) ವೋಟುಗಳು

    ಬಿಡೆನ್ 47 000 ಮತಗಳಿಂದ ಮುಂದೆ ಇದ್ದಾರೆ. ಆದರೆ ಟ್ರಂಪ್ ಕೂಡ ಬಿರುಸಿನ ಸ್ಫರ್ಧೆ ನೀಡಿದ್ದಾರೆ. ಇನ್ನೂ 4 ಲಕ್ಷಕ್ಕೂ ಹೆಚ್ಚಿನ ಮತ ಎಣಿಕೆ ಆಗಬೇಕು. ಯಾರಿಗೆ ಹೋಗಬಹುದು ಎಂಬುದು ಅಸ್ಪಷ್ಟ . ಇಬ್ಬರಿಂದಲೂ ಸ್ಪರ್ಧೆ ಇದೆ.

    ನೆವೆಡಾ- 6 ಪ್ರತಿನಿಧಿ (ಎಲೆಕ್ಟರ್ಸ್ ) ವೋಟುಗಳು

    ಬಿಡನ್ ಮುಂದೆ ಇದ್ದಾರೆ.  ಇನ್ನೂ 1 90 000 ಮತ ಎಣಿಕೆ ಆಗಬೇಕಿದೆ. ಇವು ಲಾಸ್ ವೇಗಸ್ ಇರುವ ಕ್ಲಾರ್ಕ್ ಕಂಟ್ರಿ ಮತಗಳು.ಇನ್ನು 51 000 ಮತಗಳು ನಾಳೆ ಕೇಂದ್ರಕ್ಕೆ ಸೇರುತ್ತವೆ. ವೀಕೆಂಡ್ ವೇಳೆಗೆ  ಫಲಿತಾಂಶ ಪ್ರಕಟ ಆಗಬಹುದು. ಪೋಸ್ಟಲ್ ಬ್ಯಾಲಟ್ ಗಳು ಬಿಡನ್ ಪಾಲಾಗಬಹುದು. ಆದರೆ  ಮತದಾನ ದಿನ ಟ್ರಂಪ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದರೆ ಪರಿಸ್ಥಿತಿ ಬದಲಾಗಬಹುದು.

    ಹಾಗಾದರೆ ಫೈನಲ್ ರಿಸಲ್ಟ್ ?

    ಈಗಿನ ಸ್ಥಿತಿ ನೋಡಿದರೆ ಈ ವಾರಾಂತ್ಯ ಆಗಬಹುದು

    ಬಿಹಾರ ಯಾರಿಗೆ ಸಿಗುವುದು ಗೆಲುವಿನ ಹಾರ

    ಜನತಂತ್ರದ ಪ್ರಮುಖ ಪ್ರಕ್ರಿಯೆ ಚುನಾವಣೆ. ದೇಶದ ಸುಮಾರು 19 ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಆಯಾ ರಾಜ್ಯಗಳಿಗೆ ಹೋಗಿ ಸಮೀಕ್ಷಿಸುವುದು ಅತಿ ಪ್ರಯಾಸಕರ. ಬೆಂಗಳೂರಿನ ವರದಿಗಾರರ ತಂಡವೊಂದು ಕಳೆದ 25 ವರುಷಗಳಿಂದ ಚುನಾವಣೆ ಜನಾಭಿಪ್ರಾಯ ಸಮೀಕ್ಷೆ ನಡೆಸುತ್ತಾ ಬಂದಿದೆ. ಬಹುಶಃ ವರದಿಗಾರಿಕೆ ಕ್ಷೇತ್ರದಲ್ಲಿ ಬೆಂಗಳೂರು ತಂಡದ ಕಾರ್ಯ ರಾಷ್ಟ್ರಮಟ್ಟದ ದಾಖಲೆಯಾಗಿದ್ದಾರೆ ಅಚ್ಚರಿ ಇಲ್ಲ. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಈ ತಂಡದ ನೇತೃತ್ವ ವಹಿಸುತ್ತಾ ಬಂದಿದ್ದಾರೆ.

    ಎಸ್ .ಕೆ. ಶೇಷಚಂದ್ರಿಕ

    ದೇಶಾದ್ಯಂತ ಜನಮನದಲ್ಲಿ ಅಪಾರ ಕುತೂಹಲ ತುಂಬಿದ ಬಿಹಾರ ವಿಧಾನಸಭೆ ಚುನಾವಣೆಯ ಪ್ರಕ್ರಿಯೆಗಳಿಗೆ ಇನ್ನೇನು ತೆರೆ ಬೀಳಲಿದೆ.  ಇಂದು ಶುಕ್ರವಾರ ಅಂತಿಮ ಹಂತದ ಮತದಾನ ಪೂರ್ಣಗೊಳ್ಳಲಿದ್ದು,  ನವೆಂಬರ್ 10 ಮಂಗಳವಾರ ಫಲಿತಾಂಶ ಹೊರಬೀಳಲಿದೆ.

    ಇನ್ನು ಉಳಿದ ಪ್ರಶ್ನೆಯೆಂದರೆ ಈಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರರು ಗೆಲ್ಲುವರೇ? ಅಥವಾ 12 ವರುಷದ ಅವರ ಆಡಳಿತ ಕೊನೆಗೊಳ್ಳುವುದೇ?.

    ಇದಕ್ಕಿಂತ ಹೆಚ್ಚಿನ ಕುತೂಹಲದ ಪ್ರಶ್ನೆ ಎಂದರೆ ಬಿಹಾರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಆರ್ ಜೆಡಿಯ ತೇಜಸ್ವಿ ಯಾದವನ ಭವಿಷ್ಯವೇನು?

    ಸಮೀಕ್ಷೆಗಳ ಅಭಿಪ್ರಾಯ

    ಬೆಂಗಳೂರಿನ ವರದಿಗಾರರ ತಂಡವಾಗಿ ಬಿಹಾರದಲ್ಲಿ ನಾವು ಇಂದಿನ ಚುನಾವಣೆಯೂ ಸೇರಿದಂತೆ  ನಾಲ್ಕು ಬಾರಿ ಜನಾಭಿಪ್ರಾಯ ಸಮೀಕ್ಷೆ ನಡೆಸಿದ್ದೇವೆ.  ಕಳೆದ  ಮೂರು ಸಂದರ್ಭಗಳಲ್ಲಿ 2005-2010 ಮತ್ತು 2015ರ ಚುನಾವಣೆಗಳಲ್ಲಿ ಬಿಹಾರದ ತುಂಬೆಲ್ಲ ಮುದ್ದಾಂ  ಓಡಾಡಿ ಜನಪ್ರತಿಕ್ರಿಯೆ ಸಂಪಾದಿಸಿದ್ದೆವು.   ಈ ಬಾರಿ ನಮಗೆ ಕೋವಿಡ್ ಅಡ್ಡ ಬಂತು.  ಎರಡು ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದೆವು.

    ಈ ಎಲ್ಲಾ ಆತಂಕಗಳು ನಮ್ಮ ಸಮೀಕ್ಷೆಗೆ ಅಡ್ಡಿ ಬರಲಿಲ್ಲ.  ಕಳೆದ  ಮೂರು ಚುನಾವಣೆಗಳ ಸಂದರ್ಭದಲ್ಲಿ ಬಿಹಾರದ ಹಲವೆಡೆಗಳಲ್ಲಿ, ಮೂವತ್ತೊಂದು ಜಿಲ್ಲಾ ಕೇಂದ್ರಗಳಲ್ಲಿ, ನಗರ- ಪಟ್ಟಣಗಳಲ್ಲಿ,  ಸ್ಥಳೀಯ ಜನ ಹಾಗೂ ಮಾಧ್ಯಮ ಮಿತ್ರರ ದೊಡ್ಡ ಬಳಗ ನಮಗೆ ನಿರಂತರ ಮಾಹಿತಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನಮ್ಮ ನೆಟ್ ವರ್ಕ್ ಬಗೆಗೆ ನಮಗೆ ಖಚಿತ ನಂಬಿಕೆ ಇದೆ.

    ನಮ್ಮಂತೆಯೇ ರಾಷ್ಟ್ರಮಟ್ಟದ ಸಮೀಕ್ಷಕರು ಕೋವಿಡ್ ನಿಂದ  ಜನಾಭಿಪ್ರಾಯ ಸಂಗ್ರಹದಲ್ಲಿ ಸಾಂದರ್ಭಿಕ ತೊಡಕು ಆತಂಕಗಳನ್ನು ಎದುರಿಸಿದ್ದಾರೆ. 

    ಹಿನ್ನೆಲೆಯಲ್ಲಿ ಮೋದಿ ಪವಾಡ

    ಬಹುತೇಕ ಸಮೀಕ್ಷೆಗಳು ಜೆಡಿಯು ಪಕ್ಷದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಬಾರಿ ಬಹುಮತಗಳಿಸಲಾರರು ಎಂದೇ ಅಭಿಪ್ರಾಯ ಪಟ್ಟಿವೆ.ಇದೇ ಪ್ರಮಾಣದಲ್ಲಿ ತೇಜಸ್ವಿಯಾದವರ ಘಟಬಂಧನದ ಪ್ರಧಾನ ಪಕ್ಷ ಆರ್ ಜೆಡಿ ಯು ಬಹುಮತಕ್ಕೆ ಸಮೀಪವಾಗುವುದೆಂಬ ಅಭಿಪ್ರಾಯ ಸಮೀಕ್ಷೆಗಳಲ್ಲಿದೆ.  ತೇಜಸ್ವಿಯವರ ಚುನಾವಣಾ ಗಳಲ್ಲಿ ನಿತೀಶರ ಸಭೆಗಳಿಗಿಂತ ಇಮ್ಮಡಿ ಮತದಾರರು ಜಮಾಯಿಸುತ್ತಿರುವುದು ಇದಕ್ಕೆ ಕಾರಣವೆನ್ನುವುದು ಸ್ಪಷ್ಟವಾಗಿದೆ. ಈ ಮಧ್ಯೆ ಅಪ್ಪನ ಸಾವಿನ ಅನುಕಂಪ ಗಿಟ್ಟಿಸುತ್ತಿರುವ ಚಿರಾಗ್ ಪಾಸ್ವಾನ್ ತಮ್ಮ ಪಕ್ಷ ಬಿಜೆಪಿಯ ಬಿ ಟೀಮ್ ಅಲ್ಲ ಎಂದಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರಿಗೆ ಬಿಜೆಪಿ ಮೇಲೆ ಕೋಪವಿಲ್ಲ. ನಿತೀಶ ಅವರ ಮೇಲೆಯೆ ಅವರಿಗೆ ಅಸಮಾಧಾನ.

    ಎನ್ ಡಿಎ ನೇತೃತ್ವದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ವರ್ಚಸ್ಸು ಈ ಬಾರಿ ಬಿಹಾರ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವುದೆಂದು ಮತದಾರರು ಅಭಿಪ್ರಾಯಪಡುತ್ತಿದ್ದಾರೆ. ಮೋದಿಯ  ಹವಾ ಇಲ್ಲದಿದ್ದರೂ ವ್ಯಕ್ತಿತ್ವದ ಆಕರ್ಷಣೆ ಬಲವಾಗಿ ಅಚ್ಚೊತ್ತಿದೆ.  ವಿಶೇಷವೆಂದರೆ ಮೋದಿಯವರನ್ನು ಪ್ರತಿರೋಧಿಸುವ ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳು ಸಹಿತ ಪ್ರಧಾನಮಂತ್ರಿಯ ಪಾತ್ರದ ಬಗೆಗೆ ಹೆದರಿದಂತಿದೆ.

    ಸುಲಿಗೆಕೋರರ ಹಾವಳಿ

    ಈ ಎಲ್ಲಾ ಬೆಳವಣಿಗೆಗಳ ನಡುವೆ ಸುಲಿಗೆಕೋರರಂತಿರುವ  ಹಲವು ಅಭ್ಯರ್ಥಿಗಳು ಚುನಾವಣೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ  ಜಯಗಳಿಸುವ ಭೀತಿಯಲ್ಲಿವೆ.  ಬಿಹಾರದ ಮತದಾರರಿಗೆ ನೀತಿಬಾಹಿರ ರಾಜಕಾರಣಿಗಳ ಸ್ಪರ್ಧೆ  ಭಾರಿ ಚಿಂತೆಯುಂಟುಮಾಡಿದೆ. ಕ್ರಿಮಿನಲ್ ಆಪಾದನೆಗಳನ್ನು ಹೊತ್ತ  ಶೇ.37ರಷ್ಟು ಅಭ್ಯರ್ಥಿ ಗಳು ಈ ಬಾರಿ ರಾಜಕೀಯ ಪಕ್ಷಿಗಳನ್ನು ಪ್ರತಿನಿಧಿಸುತ್ತಿದ್ದಾರೆ.

    ಕೊಲೆ ಹಿಂಸೆ ಅತಿಕ್ರಮಣ ಮಹಿಳೆಯರ ಮೇಲೆ ಅತ್ಯಾಚಾರಗಳಿಗಿಂತ ಈ ಕ್ರಿಮಿನಲ್ ಅಭ್ಯರ್ಥಿಗಳು ನಡೆಸುತ್ತಿರುವ ದುರಾಚಾರವೆಂದರೆ ಹಫ್ತಾ ಮಾದರಿಯಲ್ಲಿ ಸುಲಿಗೆ ಹಾಗೂ ವಸೂಲಿ.  ರಾಷ್ಟ್ರೀಯ ಕ್ರಿಮಿನಲ್ ದಾಖಲೆ (ಎನ್ ಸಿ ಆರ್ ಬಿ)  ಮಾಹಿತಿಯಂತೆ ಬಿಹಾರದಲ್ಲಿ ‘ಹಫ್ತಾ’  ವಸೂಲಿ ದಂಧೆ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. 

    ವಿಚಿತ್ರ ಹಾಗೂ ವಿಷಾದದ ಸಂಗತಿಯೆಂದರೆ ವಸೂಲಾತಿಯೆನ್ನುವ ಹಗಲು ದರೋಡೆ ಬಗೆಗೆ ಪ್ರಧಾನಿಯಾಗಲೀ, ಮುಖ್ಯಮಂತ್ರಿಯಾಗಲೀ, ಹತ್ತು ಲಕ್ಷ ಉದ್ಯೋಗ ಸೃಷ್ಟಿಸುವ ಆರ್ ಜೆಡಿ ನಾಯಕ ತೇಜಸ್ವಿ ಆಗಲಿ ಚಕಾರವೆತ್ತಿಲ್ಲ.

    ಮೋದಿ ಪ್ರಭಾವಳಿ

    ಮೊದಲೇ ಹೇಳಿದಂತೆ ಬಿಹಾರದಲ್ಲಿ ಎನ್ ಡಿ ಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಒಲವು, ಸಿಟ್ಟು ಎಲ್ಲವೂ ಮತದಾರರಲ್ಲಿ ಇದೆ. ಇದನ್ನು ಪೂರ್ವಗ್ರಹ ಎಂದರು ಆದೀತು. ಮತದಾದರರು ತಮ್ಮದೆ ಆದ ಅಭಿಪ್ರಾಯವನ್ನು ಮೋದಿ ಬಗ್ಗೆ ಈಗಾಗಲೇ ಹೊಂದಿದ್ದಾರೆ. ಇದು ಫಲಿತಾಂಶದ ಮೇಲೆ ಪ್ರಭಾವ ಬೀರುವುದು ನಿಶ್ಚಿತ. ಮೋದಿ ಕೂಡ ಈ ಕೋವಿಡ್ ನಡುವೆಯೂ ಮೂರು ಬಾರಿ ಬಿಹಾರವನ್ನು ಸುತ್ತಿ ಬಂದಿದ್ದಾರೆ. ಬಹಿರಂಗ ಪ್ರಚಾರ ಅಂತ್ಯವಾಗುವ ಕಳೆದ ಭಾನುವಾರ ಕೂಡ ನಾಲ್ಕು ಸಭೆಗಳಲ್ಲಿ ಮಾತಾನಾಡಿದರು.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಿಮಾಚಲದವರಾದರು ಅವರು ಹುಟ್ಟಿದ್ದು ಬಿಹಾರದಲ್ಲಿ. ಅವರು ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ದೊಡ್ಡ ಚುನಾವಣೆ ಇದು. ಅಮಿತ್ ಷಾ ಸಾಲು ಸಾಲಾಗಿ ಪಕ್ಷಕ್ಕೆ ಗೆಲುವನ್ನು ತಂದಿದ್ದರು.ನಡ್ಡಾ ಅವರಿಗೆ ಬಿಹಾರವೇ ಮೊದಲು ಸವಾಲು. ಬಿಹಾರ ಅವರಿಗೆ ಗೆಲುವಿನ ಹಾರ ತರುವುದೆ ಕಾದು ನೋಡಬೇಕು.

    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.

    ಆಹಾ ಕಾಫೀ

    ಬೆಳಗ್ಗೆ ಇನ್ನೂ ಹಾಸಿಗೆಯಲ್ಲಿರುವಂತೆಯೇ ಅಡುಗೆ ಕೋಣೆಯಲ್ಲಿ ಉಕ್ಕುವ ಹಾಲಿಗೆ ಕಾಫಿ ಪುಡಿ ಹಾಕಿದಾಗ ಹೊರಸೂಸುತ್ತೆ ನೋಡಿ ಪರಿಮಳ .
    ಹಾಸಿಗೆಯಿಂದ ಹಂಗೇ ಎದ್ದುಬಂದು ಹಾಲಲ್ಲಿ ಕೂತ್ಕೋಬೇಕು ಹಂಗ್ ಮಾಡುತ್ತೆ ಈ ದ್ರವರೂಪದ ಉಲ್ಲಾಸ . ಭಾಗಶಃ ಮನೆ ಮಂದಿಯ ದಿನದ ಮೊದಲ ಚಟುವಟಿಕೆ ಈ ಕಾಫಿ .

    ಬಿಸಿ ಕಾಫಿಯ ಲೋಟವನ್ನ ತುಟಿಯ ಹತ್ತಿರ ತೆಗೆದು ಕೊಂಡು ಹೋಗುತ್ತಿದ್ದಂತೆ ಮೊದಲು ಮೂಗು ಆ ಪರಿಮಳವನ್ನು ಆಸ್ವಾದಿಸುತ್ತದೆ .
    ಈ ಉಸಿರಿಂದಲೇ ಬಿಸಿ ಕಾಫಿಯನ್ನ ಉರುಬಿ ಮೊದಲ ಗುಟುಕನ್ನು ನೊರೆ ಸಮೇತ ನಿಧಾನವಾಗಿ ಹೀರಿದಾಗ, ಅದು ನಾಲಿಗೆಯಾದಿಯಾಗಿ ಗಂಟಲಿನಿಂದ ದೇಹ ಹೊಕ್ಕು ಒಂದು ತರಹದ ಸಿಹಿ ಒಗುರು ಮಿಶ್ರಿತ ಆಹ್ಲಾದಕರವಾದ ಅನುಭವ ಉಂಟಾಗುತ್ತದೆ .ಗಂಟೆಗಟ್ಟಲೇ ನಿದ್ದೆ ಮಂಪರಿಂದ ಮಂಕಾಗಿದ್ದ ದೇಹದ ನರ ನಾಡಿಗಳು ನವೀಕರಣಗೊಂಡಂತಾಗುತ್ತವೆ .

    ಕಾಫೀ ಪ್ರಿಯರಲ್ಲಿ ಒಬ್ಬೊಬ್ಬರದು ಒಂದೊಂದು ವಿಧಾನವಿದೆ ಕೆಲವರು ನನಗೆ ಬಿಸಿ ಕುಡೀದಿದ್ರೆ ಕುಡದಂಗಾಗಲ್ಲ ಅಂತಾರೆ . ಕೆಲವರು ನಾನು ತಣ್ಣಗಾದ್ ಮೇಲೇನೆ ಕುಡಿಯೋದು ಅಂತಾರೆ . ಕೆಲವರು ಸೊರ್ರ್ ಅಂತ ಸೌಂಡ್ ಮಾಡ್ಕೊಂಡು ಕುಡೀತಾರೆ . ಕೆಲವರು ಸುಮಾರು ಹೊತ್ತು ಗ್ಲಾಸಲ್ಲಿ ಇಟ್ಕೊಂಡು ಸ್ವಲ್ಪ ಸ್ವಲ್ಪವೇ ಕುಡೀತಾರೆ .ಕಾಫಿ ಮಾಡ್ಕೊಂಡು ಕುಡಿಯೋದಕ್ಕಿಂತಾ ಯಾರಾದ್ರೂ ಮಾಡ್ಕೊಟ್ರೆ ಕುಡಿಯೋ ಮಜಾನೇ ಬೇರೆ .

    ಕಾಫಿ ಪಾನೀಯ ಅನ್ನೋ ಪದಕ್ಕೂ ಮೀರಿದ್ದು . ಅದನ್ನ ಮಾಡೋದು ನಿಜವಾಗ್ಲೂ ಕಲೆ .ಇಷ್ಟು ಹಾಲಿಗೆ ಇಷ್ಟೇ ನೀರು ಇಂತಿಷ್ಟೇ ಕಾಫಿಪುಡಿ , ಸಕ್ಕರೆ, ಹೀಗೇ ಅದರದೇ ಆದ ಅನುಪಾತ ಗೊತ್ತಿರಬೇಕು ಆಗಷ್ಟೇ ಅತ್ಯುತ್ತಮ ಕಾಫಿ ತಯಾರಿಸಲು ಸಾಧ್ಯ .‌ ಕೆಲವರು ಮಾಡೋ ಕಾಫಿ ಕುಡೀತಿದ್ರೆ ಸ್ವರ್ಗವೇ ಸ್ವಾದವಾಗಿದೆಯೇನೋ ಅನ್ನಿಸುತ್ತದೆ .

    ಸಣ್ಣವರಿದ್ದಾಗಿಂದಲೂ ನಮ್ಮೆಷ್ಟೋ ಮುಂಜಾನೆಗಳ ಅದೆಷ್ಟೂ ಸಂಜೆಗಳ ತಿಂಡಿ ಈ ಕಾಫಿ ಬಿಸ್ಕೆಟ್ , ಕಾಫಿ ಬನ್ನು . ಶನಿವಾರ ಬೆಳ್ಬೆಳಿಗ್ಗೆ ಬಿಳಿ ಅಂಗಿ ಖಾಕಿ ಚಡ್ಡಿ ಯೂನಿಫಾಮ್ ಧರಿಸಿ ಹಾಲ್ನಲ್ಲಿ ಕೆಳಗೆ ಚಪ್ಪಂಕಾಲ್ ಹಾಕ್ಕೊಂಡು ಅಮ್ಮಕೊಟ್ಟ ಗ್ಲೂಕೋಸ್ ಬಿಸ್ಕೆಟ್ಟನ್ನು ಬಿಸಿ ಕಾಫಿಯೊಂದಿಗೆ ಮೆಲ್ಲುತ್ತಿದ್ದರೇ ಅಬ್ಬಾ ಸುಖಾನುಭವ .

    ಅದರದೊಂದು ಪ್ರೋಸಸ್ ಇದೆ ಬಿಸ್ಕೆಟ್ನ ಕಾಫೀಲಿ ಜಾಸ್ತೀನು ನೆನಸಬಾರದು ಕಡಿಮೇನೂ ನೆನೆಸಬಾರದು , ಜಾಸ್ತಿ ನೆನೆಸಿದ್ರೆ ಪುಟುಕ್ ಅಂತ ಮುರಿದು ಕಾಫಿಗ್ಲಾಸಿನಲ್ಲಿ ಬಿದ್ದುಬಿಡುತ್ತದೆ .

    ಕಾಫಿ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆಯೇ …..ಹೊಟೆಲ್ಗಳಿಗೆ , ಕಾಫಿ ಕಾರ್ನರ್ಗಳಿಗೆ, ಕಾಂಡಿಮೆಂಟ್ಸ್ಗಳಿಗೆ ಇದು ವ್ಯಾಪಾರ .ಕಾಫಿ ಬೆಳೆಗಾರರಿಗೆ ವ್ಯವಸಾಯ .ಕಾಫಿ ಮಾರಾಟಗಾರರಿಗೆ ವ್ಯವಹಾರ .ಯಾವಾಗ್ ಕಾಫಿ ಕುಡೀತೀವೋ ಅನ್ನೊವ್ರಿಗೆ ಜಪ ,ಕಾಫಿಗೋಗಿದಾರೆ ಅನ್ನೋವ್ರಿಗೆ ನೆಪ .
    ಕಾಫಿ ಕಾಸ್ ಕೊಡೀ ಅನ್ನೋವ್ರಿಗೆ ಲಂಚ .

    ಹುಡುಗಿ ಕೈಯಲ್ಲಿ ಕಾಫಿ ಕಳಿಸಿ ಅನ್ನೊವ್ರಿಗೆ ಸಂಬಂಧ .
    ಕಾಫಿ ಕುಡ್ಕೊಂಡ್ ಹೋಗೀ ಅನ್ನೋವ್ರಿಗೆ ಉಪಚಾರ .
    ಒಂದು ಗ್ಲಾಸ್ ಕಾಫಿ ಮಾಡ್ಕೊಟ್ಬಿಡು ಅನ್ನೋವ್ರಿಗೆ ಉಪಕಾರ .
    ಅವರ ಯೋಗ್ಯತೇಗೆ ಒಂದು ಗ್ಲಾಸ್ ಕಾಫೀನೂ ಕೊಡ್ಲಿಲ್ಲ ಅನ್ನೋವ್ರಿಗೆ ಅವಮಾನ .
    ಬರ್ತೀನಿ ಕಾಫಿ ಕೊಡುಸ್ತೀಯ ಅನ್ನೋವ್ರಿಗೆ ಬಹುಮಾನ.
    ಒಳ್ಳೇ ಕಡೆ ಕಾಫೀ ಕುಡಿಯೋಣ ಅನ್ನೋವ್ರ್ದು ಹುಡುಕಾಟ ……

    ಇಷ್ಟೆಲ್ಲಾ ಗುಡ್ ವಿಲ್ ಇರೋ ಅಂತ ಕಾಫಿ ನ ಯಾರಾದ್ರೂ ಕೆಡಸಿದ್ರೆ ಕಾಫಿಪ್ರಿಯರಿಗೆ ತುಂಬಾನೇ ಸಿಟ್ಟು ಬರುತ್ತೆ ಕಲಗಚ್ಚು ಮಾಡಿಟ್ಟಿದ್ದ . ಡಬ್ಬಾ ಥರ ಇತ್ತು . ಒಂದು ಬಂಡಿ ಸಕ್ಕರೆ ಹಾಕಿ ಪಾನಕ ಮಾಡಿಟ್ಟಿದ್ದ . ಕಾಫೀಗೆ ಹಾಲೇ ತೋರ್ಸಿಲ್ಲ ಹಿಂಗೆಲ್ಲಾ ಬಯ್ಕೋತಾರೆ .

    ಜಗತ್ತಲ್ಲಿ ಅಪ್ಪನಿಗೆ ಮಾಡಲು ತುಂಬಾನೇ ಚಟಗಳಿವೆ ಆದರೆ ಅಮ್ಮನಿಗೆ ಇರುವ ಏಕೈಕ ಚಟವೆಂದರೆ ಅದು ಒಂದು ಲೋಟ ಕಾಫಿ ಮಾತ್ರ .

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    error: Content is protected !!