ಜುಲೈ ಅಂತ್ಯಕ್ಕೆ ಯಶವಂತಪುರ ಸಂಪೂರ್ಣ ವ್ಯಾಕ್ಸಿನೇಟೆಡ್ ಕ್ಷೇತ್ರ

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಕ್ಸಿನೇಶನ್ ಪ್ರಕ್ರಿಯೆಗೆ ಕಾರ್ಯಯೋಜನೆಯನ್ನು ರೂಪಿಸಿದ್ದು, ಜೂನ್ ಮಾಸಾಂತ್ಯದೊಳಗೆ ವ್ಯಾಕ್ಸಿನೇಶನ್ ಕಾರ್ಯವು ಒಂದು ಹಂತಕ್ಕೆ ಬರಲಿದೆ. ಜುಲೈ ಮಾಸಾಂತ್ಯದೊಳಗೆ ಯಶವಂತಪುರ ಕ್ಷೇತ್ರವು ಶೇಕಡಾ ನೂರು ವ್ಯಾಕ್ಸಿನೇಶನ್ ಪಡೆದ ಕ್ಷೇತ್ರವಾಗಲಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ ವೈಯಕ್ತಿಕವಾಗಿ ಕೊಡಮಾಡುವ 1 ಲಕ್ಷ ರೂಪಾಯಿ ಸಹಾಯಧನವನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವ್ಯಾಕ್ಸಿನೇಶನ್ ಗೆ ಸಂಬಂಧಪಟ್ಟಂತೆ ಗೊಂದಲಗಳು ಬಗೆಹರಿದಿವೆ. ಕೆಲವರು ವೃಥಾ ಆರೋಪಗಳನ್ನು ಮಾಡಿದರು, ಕೊರತೆ ಇದೆ ಎಂದೆಲ್ಲ ಹೇಳಿದರು. ಆದರೆ, ಎಲ್ಲವೂ ಸರಿ ಇದ್ದು, ನಾಳೆಯಿಂದಲೇ 1 ವಾರ್ಡ್ ಗೆ 1 ಸಾವಿರ ಜನರಿಗೆ ವ್ಯಾಕ್ಸಿನೇಶನ್ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. 18ರಿಂದ 45 ವರ್ಷದವರಿಗೂ ಲಸಿಕೆ ಲಭ್ಯವಾಗಲಿದೆ.

ವ್ಯಾಕ್ಸಿನೇಶನ್ ಬಗ್ಗೆಯ ತಪ್ಪು ಕಲ್ಪನೆ ದೂರ ಮಾಡಿಕೊಳ್ಳಿ
ವ್ಯಾಕ್ಸಿನೇಶನ್ ಬಗ್ಗೆ ಅನೇಕ ಗೊಂದಲಗಳು, ತಪ್ಪು ಕಲ್ಪನೆಗಳು ಮೂಡಿದ್ದು, ಇದನ್ನು ಎಲ್ಲರೂ ದೂರ ಮಾಡಿಕೊಳ್ಳಬೇಕು. ಜ್ವರ ಬರಲಿದೆ, ತಲೆನೋವು ಬರಲಿದೆ ಹೀಗೆ ಏನೆಲ್ಲ ಹೇಳಲಾಗುತ್ತದೆ. ಆದರೆ, ಇದು ಎಲ್ಲರಿಗೂ ಆಗುವುದಿಲ್ಲ. ಒಂದು ವೇಳೆ ಜ್ವರ ಬಂದರೂ ಸಹ ಅದಕ್ಕೆ ವೈದ್ಯರು ಮಾತ್ರೆಯನ್ನು ಕೊಟ್ಟು ಕಳುಹಿಸುತ್ತಾರೆ. ಇಂದು ದೇಶದಲ್ಲಿ ಕೋಟ್ಯಂತರ ಜನ ವ್ಯಾಕ್ಸಿನೇಶನ್ ಪಡೆದಿದ್ದಾರೆ. ಹಾಗಾಗಿ ಭಯ ಬೇಡ. ಇನ್ನು ವ್ಯಾಕ್ಸಿನೇಶನ್ ಸಿಗದು ಎಂಬ ಭಯ, ಆತಂಕ ಯಾರಿಗೂ ಬೇಡ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಪರಿಹಾರ
ಕೊರೋನಾ ಎರಡನೇ ಅಲೆ ವಿಪರೀತವಾಗಿದೆ. ಇದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಿವೆ. ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ಸಹ ನಿಯಂತ್ರಣ ಕಷ್ಟವಾಗಿದೆ. ನನ್ನ ಕ್ಷೇತ್ರದಲ್ಲಿಯೇ ಸುಮಾರು ಏಳೂವರೆ ಸಾವಿರ ಸೋಂಕು ಪ್ರಕರಣಗಳು ದಾಖಲಾಗಿದ್ದವು. ಅವರಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಯಾರೂ ಧೈರ್ಯಗೆಡಬಾರದು ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಪರಿಹಾರ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಸೋಂಕಿನ ಲಕ್ಷಣಗಳು ಕಂಡಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆದು, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಸೋಂಕು ತಗುಲಿದ್ದರೆ, ಕೂಡಲೇ ಟ್ರಯಾಜ್ ಸೆಂಟರ್ ಗಳಿಗೆ ಭೇಟಿ ಕೊಟ್ಟರೆ, ಅಲ್ಲಿರುವ ವೈದ್ಯರು ಸೋಂಕಿನ ತೀವ್ರತೆ, ಯಾವ ರೀತಿಯ ಚಿಕಿತ್ಸೆ ಅವಶ್ಯಕತೆ ಇದೆ, ಮನೆಯಲ್ಲಿದ್ದರೆ ಸಾಕೇ? ಕೋವಿಡ್ ಕೇರ್ ಸೆಂಟರ್ ಗೆ ಬರಬೇಕೇ? ಆಕ್ಸಿಜನ್ ಬೆಡ್ ಅವಶ್ಯಕತೆ ಇದೆಯೇ? ಎಂಬಿತ್ಯಾದಿ ಮಾಹಿತಿಯನ್ನು ಕೊಡುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.

ಮನೆಯತ್ತ ವೈದ್ಯರು
ಕೋವಿಡ್ ನಿಯಂತ್ರಣ ಮಾಡಲೇಬೇಕೆಂಬ ನಿಟ್ಟಿನಲ್ಲಿ ನಮ್ಮ ಕ್ಷೇತ್ರದಲ್ಲಿ ವೈದ್ಯರ ತಂಡದೊಂದಿಗೆ ಸಾಕಷ್ಟು ಶ್ರಮಿಸಲಾಗುತ್ತಿದೆ. ಹೀಗಾಗಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಹಳ್ಳಿಗಳ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಲಕ್ಷಣಗಳು ಕಂಡು ಬಂದರೆ ಅಲ್ಲಿಯೇ ಟೆಸ್ಟ್ ಮಾಡಿ, ಚಿಕಿತ್ಸೆ ಕೊಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ
ಯಶವಂತಪುರ ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಸಾವಿನ ಪ್ರಮಾಣದಲ್ಲೂ ಕಡಿಮೆಯಾಗುತ್ತಿದೆ. ಹೀಗಾಗಿ ಚಿಕಿತ್ಸೆ ಪಡೆದು ಎಲ್ಲರೂ ಗುಣಮುಖರಾಗಬೇಕು. ಜೊತೆಗೆ ವ್ಯಾಕ್ಸಿನೇಶನ್ ಪಡೆದುಕೊಳ್ಳಬೇಕು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಕಿವಿಮಾತು ಹೇಳಿದರು.

24 ಕುಟುಂಬಗಳಿಗೆ 1 ಲಕ್ಷ ರೂ. ಸಹಾಯಧನ ವಿತರಣೆ
ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಸಚಿವರಾದ ಸೋಮಶೇಖರ್ ಅವರು 1 ಲಕ್ಷ ರೂಪಾಯಿಗಳ ವೈಯಕ್ತಿಕ ಧನಸಹಾಯವನ್ನು ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ವಿತರಣೆ ಮಾಡಿದರು. ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಮಂದಿಗೆ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಮಂದಿ ಹಾಗೂ ನೆಲಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಮಂದಿಯ ಆರ್ಥಿಕವಾಗಿ ಹಿಂದುಳಿದವರ ಕುಟುಂಬ ವರ್ಗದವರಿಗೆ ಸಹಾಯಧನವನ್ನು ಸಚಿವರು ವಿತರಿಸಿದರು. ಈ ಮೂಲಕ ಒಟ್ಟು 24 ಕುಟುಂಬಗಳಿಗೆ ಭಾನುವಾರ ವೈಯಕ್ತಿಕವಾಗಿ 1 ಲಕ್ಷ ರೂಪಾಯಿಗಳ ಸಹಾಯಧನವನ್ನು ಸಚಿವರು ವಿತರಣೆ ಮಾಡಿದರು.

ಕೊರೋನಾ ವಾರಿಯರ್ಸ್ ಗಳಿಗೆ ಪ್ರೋತ್ಸಾಹಧನ ವಿತರಣೆ
ಸೋಮನಹಳ್ಳಿ, ತರಳು, ನೆಲಗುಳಿ ಗ್ರಾಮ ಪಂಚಾಯಿತಿಗಳ ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಹಾಗೂ ವಾಟರ್ ಮನ್ ಗಳಿಗೆ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಪ್ರೋತ್ಸಾಹಧನ ಮತ್ತು ಪಡಿತರ ಕಿಟ್ ಅನ್ನು ವಿತರಣೆ ಮಾಡಲಾಯಿತು.
ಕಗ್ಗಲಿಪುರ ಗ್ರಾಮ ಪಂಚಾಯಿತಿ ವತಿಯಿಂದ ಕೊರೋನಾ ವಾರಿಯರ್ಸ್ ಗಳಾದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿಗೆ 5 ಸಾವಿರ ರೂಪಾಯಿ ಪ್ರೋತ್ಸಾಹಧನ, ರೇಷನ್ ಕಿಟ್ ಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here