ಬ್ಯಾಂಕಿಂಗ್‌ ವಲಯದಲ್ಲಿ ಸಾಲದ ಬೇಡಿಕೆ ಕುಸಿಯುವುದೇ?

1
577

ವಿತ್ತೀಯ ಪೇಟೆಯಲ್ಲಿ ಸಂಪನ್ಮೂಲ ಸಂಗ್ರಹಣೆ, ವಿತರಣೆ, ಸುಧಾರಣೆಗಳು, ಫಂಡಿಂಗ್‌ ಮೂಲಕ ಹರಿದುಬರುತ್ತಿರುವ ಹಣದ ಗಾತ್ರ ಮುಂದಿನ ದಿನಗಳಲ್ಲಿ ಬ್ಯಾಂಕ್‌ ಗಳು ವಿಶೇಷವಾಗಿ ಖಾಸಗಿ ಬ್ಯಾಂಕ್‌ ಗಳು ಸಾಲಗಳ ಬೇಡಿಕೆಯ ಕೊರತೆಯನ್ನೆದುರಿಸಬಹುದೆಂದೆನಿಸುತ್ತದೆ. ಅವುಗಳು ತಮ್ಮ ಸಂಪಾದನೆಯನ್ನು ಬೇರೆ ಮೂಲಗಳಿಂದ ಹೆಚ್ಚಿಸಿಕೊಳ್ಳುವಂತಹ ಸಂದರ್ಭವನ್ನೂ ತಳ್ಳಿಹಾಕುವಂತಿಲ್ಲ. ಕೊನೆಗೆ ಸಣ್ಣ ಸಣ್ಣ ಗ್ರಾಹಕರೇ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್‌ ವಲಯದ ಅಗ್ರಮಾನ್ಯ ಗ್ರಾಹಕರಾಗುವ ಸಾಧ್ಯತೆಯಿದೆ. ಈ ದಿಶೆಯಲ್ಲಿ ಜನಸಾಮಾನ್ಯರಲ್ಲಿಯೂ ಆರ್ಥಿಕ ಸಾಕ್ಷರತೆಯ ಅಗತ್ಯತೆ ಹೆಚ್ಚಿದೆ.

ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ :ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ ಕಂಪನಿಯು ಕಾರ್ಲೈಲ್‌ ಗ್ರೂಪ್‌ ನ ಪ್ಲೂಟೋ ಇನವೆಸ್ಟ್ಮೆಂಟ್ಸ್‌ ನವರ ರೂ.3,185 ಕೋಟಿ, ಎಚ್‌ ಡಿ ಎಫ್‌ ಸಿ ಬ್ಯಾಂಕ್‌ ನ ಹಿಂದಿನ ಮುಖ್ಯಸ್ಥ ಅದಿತ್ಯ ಪುರಿಯವರ ರೂ.25 ಕೋಟಿ ಸೇರಿ ಒಟ್ಟು ರೂ.4,000 ಕೋಟಿ ರೂಪಾಯಿಗಳನ್ನು, ಪ್ರತಿ ಷೇರಿಗೆ ರೂ.390 ರಂತೆ ವಿತರಿಸಿ ತನಗೆ ಅಗತ್ಯವಿರುವ ಬಂಡವಾಳವನ್ನು ಪಡೆದುಕೊಂಡಿದೆ. ಇದರಿಂದ ಕಾರ್ಲೈಲ್‌ ಸಮೂಹವು ಸಂಸ್ಥೆಯಲ್ಲಿ ಶೇ.54.3 ರಷ್ಟರ ಭಾಗಿತ್ವವನ್ನು ಹೊಂದಿದಂತಾಗಿದೆ.

Photo by MayoFi on Unsplash

ಗಮನಿಸಿ: ಈ ಸಂಸ್ಥೆಗಳಿಗೆ ಪೇಟೆಯಲ್ಲಿ ಷೇರಿನ ದರ ರೂ.437 ರಲ್ಲಿರುವಾಗ ಷೇರನ್ನು ರೂ.390 ರಂತೆ ವಿತರಿಸಿದರೂ ಈ ಬೆಳವಣಿಗೆಗಳು ಷೇರಿನ ಬೆಲೆಯನ್ನು ವಾರಾಂತ್ಯದಲ್ಲಿ ರೂ.838 ನ್ನು ತಲುಪಿ ವಿಜೃಂಭಿಸಿದೆ. ಈ ಏರಿಕೆಯು ಸಧ್ಯದ ಕಂಪನಿಯ ಆಂತರಿಕ ಸಾಧನೆಯಿಂದಲ್ಲದೆ, ಕೇವಲ ಹೊರಗಿನ ಬೆಳವಣಿಗೆ ಮತ್ತು ನಿರೀಕ್ಷೆಗಳ ಕಾರಣದಿಂದಾಗಿದೆ. ಈ ರೀತಿ ನಿರಂತರವಾಗಿ ಗರಿಷ್ಠ ಆವರಣಮಿತಿಯಲ್ಲಿರುವ ಪರಿಸ್ಥಿತಿಯು ಅನಿರೀಕ್ಷಿತವಾದ ರೀತಿಯಲ್ಲಿ ಷೇರಿಂದ ಹೊರಬರಲು ಸಾಧ್ಯವಾಗದ ರೀತಿಯಲ್ಲಿ ಕನಿಷ್ಠ ಆವರಣಮಿತಿಗೆ ಪರಿವರ್ತನೆಯಾಗುವುದನ್ನೂ ತಳ್ಳಿಹಾಕುವಂತಿಲ್ಲ.

ಹಿಂದಿನ ವರ್ಷ ಜುಲೈನಲ್ಲಿ ಆದಿತ್ಯ ಪುರಿಯವರು ತಮ್ಮ ನಿವೃತ್ತಿಯ ಸಂದರ್ಭದಲ್ಲಿ 74.2 ಲಕ್ಷ ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌ ಷೇರುಗಳನ್ನು ಮಾರಿದ್ದರು.

ವಿತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕೆಲವು ಫಂಡಿಂಗ್‌ ಬೆಳವಣಿಗೆಗಳು:

  • ಆರೋಗ್ಯವಲಯದ ತಾಂತ್ರಿಕ ಕಂಪನಿ Breathe Well-Being ಒಂದು ದಶಲಕ್ಷ ಡಾಲರ್ ಗಳ ಸಂಪನ್ಮೂಲ ಸಂಗ್ರಹಣೆ ಮಾಡಿದೆ.
  • ಅರ್ಬನ್‌ ಕಂಪನಿ ಎಂಬ ಗೃಹೋಪಯೋಗಿ ಸೇವೆಗಳ ಕಂಪನಿ 255 ದಶ ಲಕ್ಷ ಡಾಲರ್‌ ಗಳ ಸಂಪನ್ಮೂಲ ಸಂಗ್ರಹಣೆ ಮಾಡಿದೆ.
  • ಆಫ್‌ ಬ್ಯುಸಿನೆಸ್‌ ಕಂಪನಿ B to B ವ್ಯವಹಾರಿಕ ಸಂಸ್ಥೆಯು ಜಪಾನಿನ ಸಾಫ್ಟ್‌ ಬ್ಯಾಂಕ್‌ ಮೂಲಕ 100 ರಿಂದ 150 ದಶಲಕ್ಷ ಡಾಲರ್‌ ಸಂಪನ್ಮೂಲ ಸಂಗ್ರಹಣೆ ಮಾಡಲಿದೆ.
  • B to B ಸಾಗಾಣಿಕೆ ವಲಯದ ವ್ಯವಹಾರಿಕ ಸಂಸ್ಥೆ ಲೋಕಸ್‌ 50ದಶಲಕ್ಷ ಡಾಲರ್‌ ಸಂಪನ್ಮೂಲ ಸಂಗ್ರಹಣೆ ಮಾಡಿದೆ.
  • ಕ್ರೇಜೋ ಡಾಟ್‌ ಫನ್‌ 3 ದಶಲಕ್ಷ ಡಾಲರ್‌ ಸೀಡ್‌ ಫಂಡಿಂಗ್‌ ಪಡೆದುಕೊಂಡಿದೆ
  • ಮುತೋಟ್‌ ಫೈನಾನ್ಸ್‌ ರೂ.5,000 ಕೋಟಿ ಸಂಪನ್ಮೂಲ ಸಂಗ್ರಹಣೆಯ ಗುರಿ ಹೊಂದಿದೆ.
  • ಜಪಾನಿನ ಸಾಫ್ಟ್‌ ಬ್ಯಾಂಕ್‌ 600 ರಿಂದ 700 ದಶ ಲಕ್ಷ ಡಾಲರ್‌ ನ್ನು ಫ್ಲಿಪ್‌ ಕಾರ್ಟ್‌ ನಲ್ಲಿ ಹೂಡಿಕೆ ಮಾಡಲಿದೆ.
  • ಟಾಟಾ ಮೋಟಾರ್ಸ್‌ 425 ದಶ ಲಕ್ಷ ಡಾಲರ್‌ ನ್ನು 4.35% ರ ಬಡ್ಡಿ ದರದ ಸಾಗರೋತ್ತರ ಬಾಂಡ್‌ ಗಳನ್ನು ವಿತರಿಸುವ ಮೂಲಕ ಸಂಗ್ರಹಿಸಿದೆ.
  • ಇನ್ಫೋಗೇನ್‌ ಡಿಜಿಟಲ್‌ ವೇದಿಕೆ ಕಂಪನಿಯು 200 ದಶ ಲಕ್ಷ ಡಾಲರ್‌ ಸಂಪನ್ಮೂಲ ಸಂಗ್ರಹಣೆಯ ಗುರಿ ಹೊಂದಿದೆ.
  • ನಿದ್ದೆ ಮತ್ತು ಗೃಹ ಪರಿಹಾರ ವಲಯದ ವೇಕ್‌ ಫಿಟ್‌ 50 ದಶ ಲಕ್ಷ ಡಾಲರ್‌ ಸಂಗ್ರಹಣೆಗೆ ಪ್ರಯತ್ನ ನಡೆಸುತ್ತಿದೆ.
  • ಇನ್ಫೋ ಎಡ್ಜ್‌ ಕಂಪನಿ ಬೆಂಬಲಿತ ಝೊಮೆಟೋ ಕಂಪನಿ ತನ್ನ ರೂ.8,250 ಕೋಟಿ ಮೌಲ್ಯದ ಆರಂಭಿಕ ಷೇರು ವಿತರಣೆ ಗುರಿ ಹೊಂದಿದೆ.
  • ಪೇಟಿಎಂ ಕಂಪನಿಯು 1.5 ಶತ ಕೋಟಿ ಡಾಲರ್‌ ಮೌಲ್ಯದ ಐ ಪಿ ಒ ವಿತರಿಸಲಿದೆ.
  • ಹರ್ಷ ಮೊಯಿಲಿ ರವರ 200 ದಶಲಕ್ಷ ಡಾಲರ್‌ ಗಳ ನಿಧಿ ಪರಿಸರ ವಲಯದ ತಾಂತ್ರಿಕ ಕಂಪನಿಗಳಿಗೆ ಆರ್ಥಿಕ ಬೆಂಬಲ ನೀಡಲಿದೆ
  • ಸಾರ್ವಜನಿಕ ವಲಯದ ಬ್ಯಾಂಕ್‌ ಗಳು ಸಹ ಸುಮಾರು ರೂ.9,000 ಕೋಟಿ ಯನ್ನು ಷೇರುಗಳನ್ನು QIPಗಳಿಗೆ ವಿತರಿಸುವ ಮೂಲಕ ಸಂಗ್ರಹಿಸಲಿದೆ.

ಬ್ಯಾಂಕಿಂಗ್‌ ವಲಯದ ಮೇಲಾಗುವ ಪ್ರಭಾವ:

ಈ ಎಲ್ಲಾ ಸುದ್ಧಿಗಳು ಕಂಪನಿಗಳಿಗೆ ಸುಲಭವಾಗಿ ಸಂಪನ್ಮೂಲ ಲಭ್ಯವಾಗುತ್ತಿರುವುದನ್ನು ತೋರಿಸುತ್ತದೆ. ಕೇವಲ 4.35% ರ ಬಡ್ಡಿಯಂತೆ ಟಾಟಾ ಮೋಟಾರ್ಸ್‌ 425 ದಶಲಕ್ಷ ಡಾಲರ್‌ ಹಣ ಸಂಗ್ರಹಣೆ ಮಾಡಿದೆ ಎಂದರೆ ಜಾಗತಿಕ ಮಟ್ಟದಲ್ಲಿ ಹರಿದಾಡುತ್ತಿರುವ ಹಣದ ಗಾತ್ರದ ಅರಿವಾಗುವುದು. ಹೀಗಿರುವಾಗ ಕಾರ್ಪೊರೇಟ್‌ ಗಳು ತಮ್ಮ ಯೋಜನೆಗಳ ಅನುಷ್ಠಾನಕ್ಕೆ ಅವಶ್ಯವಿರುವ ಸಂಪನ್ಮೂಲಕ್ಕಾಗಿ ಬ್ಯಾಂಕ್‌ ಗಳನ್ನು ಅವಲಂಬಿಸುವುದರ ಅಗತ್ಯವಿರುವುದಿಲ್ಲ. ಇದು ಬ್ಯಾಂಕಿಂಗ್‌ ವಲಯ ತನ್ನ ಬೆಳವಣಿಗೆಗಾಗಿ ಸಾಂಪ್ರದಾಯಿಕ ರೀಟೇಲ್‌ ಗ್ರಾಹಕರನ್ನು ಅವಲಂಬಿಸಲೇಬೇಕಾಗಿದೆ.

ಈ ಬೆಳವಣಿಗೆ ಮುಂಬರುವ ದಿನದಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳ ಮೇಲೆ ಪರಿಣಾಮ ಬೀರುವುದನ್ನು ತಳ್ಳಿ ಹಾಕುವಂತಿಲ್ಲ. ಖಾಸಗಿ ವಲಯದ ಬ್ಯಾಂಕುಗಳಿಗಿಂತ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ರಿಟೇಲ್ ಗ್ರಾಹಕರನ್ನು ಹೆಚ್ಚಿಗೆ ಅವಲಂಬಿಸಿರುವುದರಿಂದ ಮೇಲಿನ ಬೆಳವಣಿಗೆಗಳು ಅವುಗಳ ಮೇಲೆ ಪರಿಣಾಮ ಕಡಿಮೆ ಎಂದೇ ಭಾವಿಸಬಹುದಾಗಿದೆ.

1 COMMENT

LEAVE A REPLY

Please enter your comment!
Please enter your name here