22 C
Karnataka
Tuesday, May 21, 2024

    ಮನುಷ್ಯನ ಸಹಜ ಹುಟ್ಟು ಗುಣಗಳನ್ನು ಅಳವಡಿಸಿಕೊಳ್ಳಲು ಇದೆಂಥ ಕಸರತ್ತು

    Must read

    ಮನುಷ್ಯ ಸಕಾರಾತ್ಮಕವಾಗಿ ಯೋಚನೆ ಮಾಡಬೇಕು. ಆಶಾವಾದಿಯಾಗಬೇಕು. ಧೈರ್ಯದಿಂದ ಇರಬೇಕು. ಯಾರು ಹುಚ್ಚ ಅಂದರೂ ಚಿಂತೆ ಮಾಡದೆ ಸದಾ ನಗಬೇಕು,ಕರುಣೆ, ಪ್ರೀತಿ ಇರಬೇಕು. ಸದಾ ಸರ್ವರಿಗೂ ಒಳ್ಳೆಯದಾಗಬೇಕೆಂಬ ಆಶಯ ಹೊಂದಿರಬೇಕು, ಎಲ್ಲಾ ಬಲ್ಲವನು ನಾನು ಅನ್ನುವ ಹಮ್ಮು ಬೇಡ, ಮುಗ್ಧ ಮಗುವಿನ ಮನಸ್ಸಿನ ಹಾಗೆ ಪ್ರತಿಯೊಂದರ ಕಡೆ ಪೂರ್ವಗ್ರಹ ಪೀಡಿತ ಆಗದೆ, ಕುತೂಹಲ ಭರಿತ ನೋಟ ಇರಬೇಕು. ಹೀಗಿದ್ದರೆ ನಮ್ಮ ದೇಹದಲ್ಲಿನ ರಸ ಉತ್ಪತ್ತಿ ಗ್ರಂಥಿಗಳು ಸರಾಗವಾಗಿ ಕೆಲಸ ಮಾಡಿ, ಆರೋಗ್ಯ ಸುಸ್ಥಿತಿಯಲ್ಲಿದ್ದು, ಜೀವನ ಲವಲವಿಕೆಯಿಂದ ಕೂಡಿ ಸಂತೋಷಮಯವಾಗಿರುತ್ತದೆ…..

    Photo by chaitanya pillala on Unsplash

    ಇತ್ತೀಚೆಗೆ ಕರೊನಾ ಬಂದಾಗಿನಿಂದ ಯಾವ ವೈದ್ಯರನ್ನ ಕೇಳಿ, ಮನಃಶಾಸ್ತ್ರಜ್ಞರನ್ನು ಕೇಳಿ, ಅಧ್ಯಾತ್ಮ ಬೋಧಕರನ್ನು ಕೇಳಿ, ಕೊನೆಗೆ ಬಾಯ್ತುಂಬ ತಾಂಬೂಲ ಮೆಲ್ಲುತ್ತ ಎಲೆ,ಬೇರು, ಬೀಜ ಅಂತ ಕಾಡಲ್ಲಿ ಅರಸಿ ತಂದು ಅರೆದು ಔಷಧಿ ಅಂತ ಕೊಡುವ ಮಾಸಿದ ಬಟ್ಟೆಗಳ, ಒರಟು ಭಾಷೆಯ ನಾಟಿ ವೈದ್ಯರನ್ನ ಕೇಳಿ, ಇದನ್ನೇ ಹೇಳೋದಾ?!

    ನನಗೆ ಆಶ್ಚರ್ಯವಾಗಿ ಸುಮ್ಮನೆ ಅವಲೋಕಿಸಿದೆ. ಮನುಷ್ಯನ ಸಹಜ ಹುಟ್ಟು ಗುಣಗಳನ್ನು ಅಳವಡಿಸಿಕೊಳ್ಳಲು ಇಂದಿನ ಸುಧಾರಿತ ಜನಾಂಗ ಯಾಕೆ ಇಷ್ಟು ಕಷ್ಟ ಪಡಬೇಕು ಅಥವಾ ಪಡುತ್ತಿದೆ ಅಂತ. ಇವರು ಹೇಳುತ್ತಿರುವ,ಇಂದು ಮಾನವರಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಈ ಅಂಶಗಳನ್ನು ಪಡೆಯಲು ಕೋಟಿ ಹಣ ಬೇಕಿಲ್ಲ ಅಥವಾ ಅನ್ನ,ನೀರು ಬಿಟ್ಟು ಕಠಿಣ ತಪಸ್ಸು ಮಾಡಬೇಕಿಲ್ಲ. ಆದರೂ ಇಡೀ ಮಾನವಕುಲ ಇಂದು ಇವುಗಳ ಕೊರತೆಯಿಂದ ನರಳುತ್ತಿರುವುದಾದರೂ ಏತಕ್ಕೆ?

    ನಾಗರಿಕತೆ, ಅಭಿವೃದ್ಧಿ, ಮುಂದುವರಿಕೆಯ ಭಾಗವಾಗಿ ನಾವು ನಮ್ಮ ಹುಟ್ಟುಗುಣಗಳನ್ನು ದೂರಮಾಡಿಕೊಂಡು, ನಮ್ಮದಲ್ಲದ್ದನ್ನ, ನಮಗೆ ಆಗದ್ದನ್ನ ಮೈಗೂಡಿಸಿಕೊಂಡು ಬಿಟ್ಟವಾ?! ನಮಗೆ ಒಗ್ಗದ್ದನ್ನು ನಮಗೆ ತಿಳಿಯದ ಹಾಗೆ ಅನುಸರಿಸಿ, ನಮ್ಮ ಸಹಜತೆಯನ್ನು ಕಳೆದುಕೊಂಡು ಬಿಟ್ಟವಾ? ಇದು ಬೇಕಿತ್ತಾ?!

    ನಾಗರಿಕತೆ ಹೆಸರಲ್ಲಿ ಬಟ್ಟೆ ಹೊದ್ದ ದಿನದಿಂದ ಮಾನವ ಬದಲಾಗಿಬಿಟ್ಟನೇನೋ, ತನ್ನನ್ನು ಮುಚ್ಚಿಕೊಳ್ಳುವುದನ್ನ ಕಲಿತು. ಸಹಜತೆಯಿಂದ ದೂರವಾಗುವ ನಡಿಗೆ ಅಂದೇ ಆರಂಭವಾಗಿರಬೇಕು. ಇಡೀ ವಿಕಸತೆಯಲ್ಲಿ ಮಾನವ ತನ್ನ ಈ ಸಹಜತೆಯನ್ನು ಹೇಗೆ ಮುಚ್ಚಿಡಬೇಕು ಎಂಬುದಕ್ಕೇ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತಿದೆ. ಪರಿಣಾಮ ಇಂದು ಬಲವಂತವಾಗಿ ನಗುವುದನ್ನು ಅಭ್ಯಸಿಸುತ್ತಿದ್ದೇವೆ!

    ಸುಮ್ಮನೆ ಯೋಚಿಸಿ, ಇಂದಿಗೂ ಈಗಲೂ ಇಡೀ ಪ್ರಪಂಚ ನಶಿಸಿ ಹೋದರೂ ನನಗೇನೂ ಆಗುವುದಿಲ್ಲ. ಸಾವು ಸುತ್ತಲಿದ್ದವರಿಗೆ ಬರಬಹುದೇ ವಿನಾ ನನಗೆ ಬರಲ್ಲ ಅನ್ನುವ ನಮ್ಮ ಹುಟ್ಟು ಸ್ವಭಾವ ಇದೆಯಲ್ಲ ಇದಕ್ಕಿಂತಲೂ ಸಕಾರಾತ್ಮಕ ಯೋಚನೆ, ಧೈರ್ಯ, ಆಶಾವಾದಿ ಪ್ರವೃತ್ತಿ ಬೇರೆ ಎಲ್ಲಿಯಾದರೂ ಇರಲು ಸಾಧ್ಯವಾ? ಆದರೂ ಮೈಗೂಡಿಸಿಕೊಳ್ಳುವ ಮಟ್ಟಕ್ಕೆ ನಾವು ಬೆಳೆದುಬಿಟ್ಟಿರುವುದು ವಿಪರ್ಯಾಸ ಅಲ್ಲವಾ?

    ಈ ಧೈರ್ಯ, ಸಕಾರಾತ್ಮಕ ಯೋಚನೆ, ಆಶಾವಾದಕ್ಕೆ ಮೂಲಕಾರಣ ಮರುಘಳಿಗೆಯ ಅಜ್ಞಾನ. ಹೌದು ನಾಳೆ ಏನಾಗುತ್ತೋ ಗೊತ್ತಿಲ್ಲ ಅಂತಲೇ ಇಂದು ಸಂತೋಷದಿಂದ ಇರಲು ಸಾಧ್ಯವಾಗಿದೆ. ಆದರೆ ಮುಂದುವರೆದ ಮನುಷ್ಯನ ಹಂಬಲ ಏನು ಗೊತ್ತಾ?ಆ ನಾಳೆಯನ್ನು ಇಂದೇ ತಿಳಿದುಕೊಳ್ಳೋದು!ಹೀಗಿದ್ದಾಗ ಇನ್ನು ನಮ್ಮನ್ನು ಯಾರು ಪಾರು ಮಾಡಬೇಕು? ಆ ಸೃಷ್ಟಿಸಿದವನೂ ನಿನ್ನ ಕರ್ಮ ಅಂತ ಕೈಬಿಟ್ಟು ತುಂಬಾ ದಿನವಾಗಿರಬೇಕು.

    ಪ್ರಕೃತಿಗೆ ವಿರುದ್ಧವಾದದ್ದನ್ನ ಯೋಚಿಸುತ್ತಾ, ಸಾಧಿಸುವುದು ಮನುಷ್ಯನ ಸಾಧನೆ ಆಗಿ ಎಲ್ಲ ತರಹದ ಅಸೌಖ್ಯಕ್ಕೆ ಕಾರಣ ಆಗಿದೆ. ಮನಃಶಾಂತಿ ಬಿಡಿ, ದೂರದ ಮಾತಾಯ್ತು. ಇಂದು ನಿದ್ರೆ,ಹಸಿವಿಗೆ ಮಾನವ ಪರದಾಡುತ್ತಿದ್ದಾನೆ! ಆದರೂ ತನ್ನ ವಿರುದ್ಧ ದಿಕ್ಕಿನ ಪಯಣ ಅವನಲ್ಲಿ ಅರಿವಾಗದಿರುವುದು ಅಚ್ಚರಿ. ಇಂತಹ ಮುಂದುವರಿಕೆ ನಮಗೆ ಬೇಕಾ?!

    ನಾನು ಸಹಜವಾಗಿ ಇರುವಾಗಲೆಲ್ಲ ನನ್ನ ಅಮ್ಮ, ಅಪ್ಪ, ಗುರುಗಳು, ಹಿರಿಯರು ಆಕ್ಷೇಪಿಸಿರುವುದು ನನ್ನಲ್ಲಿ ಜೀವಂತವಾಗಿವೆ. ಅಮ್ಮ ಅಂತೂ ಮಾತೆತ್ತಿದರೆ, ನಾಲ್ಕು ಜನಕ್ಕೆ ಅಂಜಿ ಜೀವನ ಮಾಡಬೇಕು ಕಣೋ ಅನ್ನುತ್ತಾ ನನ್ನ ಸಹಜತೆಯನ್ನು ದಮನಿಸುವ ಪ್ರಯತ್ನದಲ್ಲೇ ಜೀವನ ಸವೆಸಿದರು. ಎಲ್ಲರೊಡನೆ ನಗುತ್ತಾ ಇರೋದನ್ನ ಅಮ್ಮ ಆಕ್ಷೇಪಿಸಿದರೆ, ಅಪ್ಪ ನನ್ನ ಸಹಜ ಗುಣಗಳಿಗೆ ಕಡಿವಾಣ ಹಾಕುತ್ತಿದ್ದರು. ಏನೋ ನೆನಸಿಕೊಂಡು ಕ್ಲಾಸಲ್ಲಿ ನಕ್ಕಿದ್ದ ನನ್ನನ್ನು ನನ್ನ ಗುರುಗಳು ಇಡೀ ದಿನ ತರಗತಿಯ ಹೊರಗೆ ನಿಲ್ಲಿಸಿದ್ದರು. ಆದರೂ ಇವರೆಲ್ಲರೂ ನನ್ನನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಅಗ್ರ ಗಣ್ಯರು. ಈಗ ಮಾತ್ರ ವೈದ್ಯರು, ಮನಃಶಾಸ್ತ್ರಜ್ಞರು,ಅಧ್ಯಾತ್ಮ ಚಿಂತಕರು ಇವರು ಮಾಡಬೇಡ ಅಂದದ್ದನ್ನು ಮಾಡಿ ಅಂತ ಹೇಳ್ತಿದ್ದಾರೆ. ಎಲ್ಲೋ ಎಡವುತ್ತಿಲ್ಲವಾ ನಾವೆಲ್ಲ?

    Photo by Jem Sahagun on Unsplash

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    5 COMMENTS

    1. I enjoy reading your thoughts & thought process and get enlightened while reading. Good wishes for furthering your thought process and sharing it with us 🙏

    2. ಚಿಕ್ಕದಾಗಿ, ಚೊಕ್ಕವಾಗಿ ಅರ್ಥಗರ್ಭಿತವಾಗಿದೆ…ಚಿಂತನೆ ಮಾಡಿ ಸಹಜವಾಗಿ ಜೀವಿಸಬೇಕಲ್ಲವೆ ಮಿತ್ರ…

    LEAVE A REPLY

    Please enter your comment!
    Please enter your name here

    Latest article

    error: Content is protected !!