ಬೆಂಗಳೂರು ವಿಜಯನಗರದ ಶ್ರೀಧರ್ ತಿಂಗಳಿಗೊಮ್ಮೆಯಾದರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಬರಲೇ ಬೇಕು. ಆಗಲೇ ಅವರಿಗೆ ಸಮಾಧಾನ. ಇದು ಇಂದು ನಿನ್ನೆಯ ಅಭ್ಯಾಸವಲ್ಲ. ಹಲವಾರು ವರ್ಷಗಳಿದ ಅವರು ಇದನ್ನು ತಪ್ಪಿಸಿದವರಲ್ಲ. ಶ್ರೀಧರ್ ಒಬ್ಬರೇ ಅಲ್ಲ ಇಂಥ ಹಲವಾರು ಭಕ್ತರು ಇದ್ದಾರೆ.ಕೆಲವರು ತಿಂಗಳಿಗೊಮ್ಮೆ, ಇನ್ನು ಹಲವರು ವಾರಕ್ಕೊಮ್ಮೆ ಹೋಗಿ ದರ್ಶನ ಪಡೆದುಕೊಂಡು ಬರಲೇ ಬೇಕೆಂಬ ನಿಯಮ ಹಾಕಿಕೊಂಡಿದ್ದಾರೆ.
ತಿಮ್ಮಪ್ಪನೂ ಹಾಗೆ. ಭಕ್ತರನ್ನು ಪ್ರೀತಿಯಿಂದ ಬರಮಾಡಿಕೊಂಡು ಇಷ್ಟಾರ್ಥ ಈಡೇರಿಸುವ ಕರುಣಾಮಯಿ. ಹಾಗಾಗಿಯೇ ಭಕ್ತರಲ್ಲಿ ಗೋವಿಂದನ ಬಗ್ಗೆ ಅಪಾರ ಪ್ರೀತಿ. ಇಂಥ ತಿಮ್ಮಪ್ಪನಂಥ ತಿಮ್ಮಪ್ಪನನ್ನೇ ಕೋರೋನಾ ಭಕ್ತರಿಂದ ದೂರ ಮಾಡಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ 80 ದಿನಗಳಿಂದ ಭಕ್ತರಿಂದ ದೂರವಾಗಿದ್ದ ವೆಂಕಣರಮಣ ನಾಳೆ ಸೋಮವಾರದಿಂದ ಮತ್ತೆ ದರ್ಶನ ಭಾಗ್ಯ ಕರುಣಿಸಲಿದ್ದಾನೆ. ಏಳು ಕೊಂಡಲವಾಡ, ಗೋವಿಂದ ಗೋವಿಂದ ಎಂಬ ನಾಮ ಸ್ಮರಣೆ ಮತ್ತೆ ಕೇಳಿಬರಲಿದೆ.
ಕೊರೋನಾ ಮುಂಚಿನ ದಿನಗಳಲ್ಲಿ ಪ್ರತಿನಿತ್ಯ ಸರಾಸರಿ 75000 ದಿಂದ ಒಂದು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ಕೊಡುತ್ತಿದ್ದರು. ಗಂಟೆಗಟ್ಟಲೆ ಪರಮಾತ್ಮನ ದರ್ಶನಕ್ಕೆ ಕಾದು ಕುಳಿತಿರುತ್ತಿದ್ದರು. ಧರ್ಮ ದರ್ಶನ, ವಿಐಪಿ ದರ್ಶನ, ಬ್ರೇಕ್ ಅಪ್ ದರ್ಶನ ಹೀಗೆ ಅವರ ಭಕ್ತಿಭಾವಕ್ಕೆ ತಕ್ಕಂತೆ ದರ್ಶನಗಳು. ತಿಪ್ಪಪ್ಪನ ಹುಂಡಿಗೆ ಸರಾಸರಿ ನಿತ್ಯ 3.18 ಕೋಟಿ ಅಂದರೆ ಪ್ರತಿ ಸೆಕೆಂಡಿಗೆ ರೂ 368.38 ಸಂಗ್ರಹವಾಗುತ್ತಿತ್ತು. ಇದಲ್ಲದೆ ಬೆಟ್ಟದ ಮೇಲಿನ ಹೊಟೇಲ್ ಗಳು, ಅಂಗಡಿಗಳು, ಪ್ರವಾಸಿ ವಾಹನಗಳು ,ಬೀದಿ ಬದಿ ವ್ಯಾಪಾರಿಗಳು ಎಲ್ಲವೂ ಭಕ್ತರನ್ನೇ ಅವಲಂಬಿಸಿದ್ದವು. ಕೊರೊನಾದಿಂದಾಗಿ ಅವರೆಲ್ಲರಿಗೂ ಗೋವಿಂದನ ಭಜನೆ ಮಾಡುವುದಲ್ಲದೆ ಬೇರೆ ಏನೂ ಉಳಿದಿರಲಿಲ್ಲ. ಟಿಟಿಡಿ ಮೇ 21ರಂದು 400 ಕೋಟಿ ರೂ.ಗಳಷ್ಟು ನಷ್ಟವಾಗಿದ್ದರೂ ತನ್ನ 8000 ಕಾಯಂ ನೌಕರರು ಸೇರಿದಂತೆ 23000 ನೌಕರರಿಗೆ ಯಾವುದೇ ರೀತಿಯ ವೇತನ ಕಡಿತ ಮಾಡುವುದಿಲ್ಲ ಎಂದು ಪ್ರಕಟಿಸಿತು.
ಬಾಗಿಲನು ತೆರೆದ ಏಳು ಬೆಟ್ಟಗಳ ಒಡೆಯ
ಇದೀಗ ಸೋಮವಾರದಿಂದ ದರ್ಶನ ಆರಂಭವಾಗಲಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಟಿಟಿಡಿ ನೌಕರರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಚಿತವಾಗಿ ಬುಕ್ ಮಾಡಿದ ನೌಕರರು ಮತ್ತು ಅವರ ಕುಟುಂಬದವರಿಗೆ ಇದೇ 8 ಮತ್ತು 9ರಂದು ದರ್ಶನಕ್ಕೆ ಅವಕಾಶ. ಅದರಲ್ಲೂ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಅವಕಾಶ ಇಲ್ಲ. ಜೂನ್ 10 ರಂದು ಸ್ಥಳೀಯರಿಗೆ , 11ರಿಂದ ಸರ್ವ ಭಕ್ತರಿಗೂ ಅವಕಾಶ.
ಕಂಟೈನ್ಮೆಂಟ್ ಪ್ರದೇಶದವರನ್ನು ಹೊರತು ಪಡಿಸಿ ಉಳಿದವರಿಗೆ ಅವಕಾಶ. ಪ್ರತಿದಿನ ಬೆಳಿಗ್ಗೆ 6-30 ರಿಂದ ಸಂಜೆ 7.30ರವರೆಗೆ ಮಾತ್ರ ದರ್ಶನ . ಗಂಟೆಗೆ 300 ಜನರಿಗೆ ಅವಕಾಶ. ಪ್ರತಿ ಭಕ್ತರಿಗೂ ಹರ್ಬಲ್ ಸ್ಯಾನಿಟೈಸರ್ ಕೊಡಲಾಗುವುದು. ದೇಹದ ಉಷ್ಣತೆ ಚೆಕ್ ಮಾಡಲಾಗುವುದು. ಕೋವಿಡ್ ಸುರಕ್ಷತಾ ಕ್ರಮಗಳ ಪ್ರಕಟಣೆ ಸದಾ ಕಾಲವೂ ಇರುತ್ತದೆ. ಕೋವಿಡ್ ನಿಯಮಗಳ ಪಾಲನೆ ಕಡ್ಡಾಯ. ವಸತಿ ಗೃಹಗಳನ್ನು ದಿನ ಬಿಟ್ಟು ದಿನದ ಆಧಾರದಲ್ಲಿ ಕೊಡಲಾಗುವುದು. ಒಂದು ರೂಮಿನಲ್ಲಿ ಇಬ್ಬರು ಭಕ್ತರಿಗೆ ಮಾತ್ರ ಅವಕಾಶ. ಅವರೂ 24 ಗಂಟೆ ಮಾತ್ರ ಇರಬಹುದು. ಮದುವೆಗೆ ಕೋವಿಡ್ ನಿಯಮಗಳ ಪ್ರಕಾರ ಮಾತ್ರ ಅನುಮತಿ.
ಮುಂದಿದೆ ಸವಾಲು
ಕೆಲವೇ ಗಂಟೆಗಳನ್ನು ಹೊರತು ಪಡಿಸಿ ದಿನದ 24ಗಂಟೆಯೂ ಭಕ್ತರಿಗೆ ದರ್ಶನ ನೀಡುತ್ತಿದ್ದ ತಿಮ್ಮಪ್ಪನ ದರ್ಶನಕ್ಕೆ ಈಗ ಸಮಯ (ಬೆಳಿಗ್ಗೆ 6.30ರಿಂದ ರಾತ್ರಿ 7.30) ನಿಗದಿಯಾಗಿರುವುದರಿಂದ ಸಾಗರದಂತೆ ಹರಿದು ಬರುವ ಭಕ್ತರನ್ನು ನಿಯಂತ್ರಿಸಿ ಅವರಿಗೆಲ್ಲಾ ಸಮಯ ನಿಗದಿ ಮಾಡುವುದು ದೊಡ್ಡ ಸವಾಲು. ತಿರುಪತಿಯ ಸರತಿಯ ಸಾಲಿನ ಪದ್ಧತಿ ವಿಶ್ವದಲ್ಲೇ ಹೆಸರು ವಾಸಿ. ಆದರೆ ಈಗ ಕೋವಿಡ್ ಕಾರಣದಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ದೇವರ ಮುಂದೆ ಭಕ್ತಿ ಪರವಶರಾಗುವ ಭಕ್ತರನ್ನು ಮುಂದೆ ಕಳಿಸುವುದು ದೊಡ್ಡ ಸವಾಲು. ಸಾಮಾನ್ಯ ದಿನಗಳಲ್ಲಿ ಭಗವಂತನ ಮುಂದೆ ನಿಂತಿದ್ದ ಭಕ್ತರನ್ನು ಜರಗಂಡಿ ಎಂದು ಬೆನ್ನು ಹಿಡಿದು ತಳ್ಳಬೇಕಾದ ಸ್ಥಿತಿ ಇತ್ತು, ಈಗ ಇದು ಸವಾಲಿನ ಕೆಲಸವೇ ಸರಿ ಎನ್ನುತ್ತಾರೆ ದೇವಾಲಯದಲ್ಲಿ ಈ ಹಿಂದೆ ಸ್ವಯಂ ಸೇವಕಿಯಾಗಿ ಕೆಲಸಮಾಡಿದ್ದ ಶಾಂತಾ ಪ್ರಕಾಶ್ . ಹೀಗಾಗಿ ಟಿಟಿಡಿ ಸಿಬ್ಬಂದಿಗೆ ಸುರಕ್ಷತಾ ಕಿಟ್ ಗಳನ್ನು ನೀಡಬೇಕಾಗುತ್ತದೆ. ಅದನ್ನು ಸಮರ್ಪಕ ಸಂಖ್ಯೆಯಲ್ಲಿ ನೀಡಬೇಕಾದ ಹೊಣೆ ಟಿಟಿಡಿ ಮೇಲಿದೆ,
ವಿಐಪಿ ಭಕ್ತರು!
ತಿಮ್ಮಪ್ಪನಿಗೂ ದೇಶದ ವಿಐಪಿಗಳಿಗೂ ಅವಿನಾಭಾವ ಸಂಬಂಧ. ಅವರೆಲ್ಲರೂ ಬಂದಾಗ ಗಂಟೆಗಟ್ಟಲೇ ಸಾಮಾನ್ಯ ಭಕ್ತರು ಸರತಿಯಲ್ಲೇ ನಿದ್ದೆ ಮಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಈಗ ನಿರ್ದಿಷ್ಟ ಅವಧಿಯ ದರ್ಶನ ಇರುವುದರಿಂದ ಇದನ್ನು ಟಿಟಿಡಿ ಹೇಗೆ ಹ್ಯಾಂಡಲ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ದರ್ಶನ ಆರಂಭವಾಗುತ್ತಿದ್ದಂತೆ ಈ ದಂಡು ತಿರುಮಲಕ್ಕೆ ಆಗಮಿಸುವುದು ಖಂಡಿತಾ. ಇವರಿಗೆಲ್ಲಾ ಕಡ್ಡಾಯವಾಗಿ ಸಮಯ ನಿಗದಿ ಮಾಡಲೇಬೇಕು. ಇವರ ಕಾರಣದಿಂದ ಸಾಮಾನ್ಯ ಭಕ್ತರು ದರ್ಶನದಿಂದ ವಂಚಿತರಾಗಬಾರದು.
ಅಂತಾರಾಜ್ಯ ಭಕ್ತರು
ತಿರುಮಲಕ್ಕೆ ಬರುವ ಭಕ್ತರಲ್ಲಿ ಅಂತಾರಾಜ್ಯ ಪ್ರಯಾಣಿಕರು ಅಧಿಕ. ಇದನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆನ್ ಲೈನ್ ನಲ್ಲಿ ದರ್ಶನಕ್ಕೆ ಅವಕಾಶ ಸಿಕ್ಕ ಮಾತ್ರಕ್ಕೆ ಅದು ಆಂಧ್ರಪ್ರದೇಶ ಪ್ರವೇಶಿಸಲು ಸಿಕ್ಕ ರಹದಾರಿ ಎಂದು ಭಾವಿಸಬಾರದು. ಅಂತಾರಾಜ್ಯ ಪ್ರವಾಸಕ್ಕೆ ಇರುವ ಕೋವಿಡ್ ನಿಯಾಮವಳಿಗಳೇ ಅನ್ವಯವಾಗುತ್ತದೆ. ಈ ಬಗ್ಗೆ ಭಕ್ತಾದಿಗಳು ಮೊದಲೇ ಪ್ರಯಾಣಕ್ಕೆ ಅನುಮತಿ ಪಡೆಯಬೇಕು ಎಂದು ಟಿಟಿಡಿ ಸ್ಫಷ್ಟ ಪಡಿಸಿದೆ. (ಚಿತ್ರ ಕೃಪೆ :ಟಿಟಿಡಿ )



ಗೋವಿಂದನ ನಾಮ ಸ್ಮರಣೆಗೆ ಕೋಟಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನದಿಂದ ಪುನಿತರಾಗಲು ಕಾತುರದಿಂದ ಎದುರು ನೋಡುತ್ತಿದ್ದಾರೆ. ಲೇಖನ ಸಮಗ್ರ ಮಾಹಿತಿ ನೀಡಿದೆ.
Govinda Hare Govinda