ಮೋಸ್ಟ್ ವಾಂಟೆಡ್ ದಾವೂದ್ ಅಲಿಯಾಸ್ ದಾವೂದ್ ಇಬ್ರಾಹಿಂ ಕಸ್ಕರ್ ಎಂಬ ಪುರಾತನ ಪಾತಕಿ ಈಗ ಸಾವಿನ ಬೆಡ್ ಮೇಲೆ ಮಲಗಿದ್ದಾನೆ. ಅವನ ಜತೆಗೆ ಪತ್ನಿ ಜುಬೀನಾ ಜರೀನ್ ಅಲಿಯಾಸ್ ಮೆಹಜಬೀನ್ ಶೇಖ್ ಕೂಡ ಹಾಸಿಗೆ ಹಿಡಿದಿದ್ದಾಳೆ.ಇನ್ನೇನು ಈಗಲೋ ಆಗಲೋ ಇಹಲೋಕ ತ್ಯಜಿಸಬಹುದು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಮಡಿದ 257 ಜನರ ಆತ್ಮಗಳಿಗೆ ಅಂತಿಮ ಶಾಂತಿ ಸಿಕ್ಕಬಹುದು ಎನ್ನುವ ಸುದ್ದಿಗಳು ಮತ್ತೊಮ್ಮೆ ಹರಿದಾಡತೊಡಗಿವೆ.
ದಾವೂದ್ ಸತ್ತರೆ ಮುಕ್ಕಾಲು ಪಾಲು ಭಾರತ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ. ಆದರೆ ಪಾಪಿ ಚಿರಾಯು. ಸಮುದ್ರಕ್ಕಿಳಿದರೂ ಅವನು ಸಾಯುವುದಿಲ್ಲ. ಬದಲಿಗೆ ಇವನ ಪಾಪಕ್ಕೆ ಬೆದರಿ ಸಮುದ್ರವೇ ಮೊಳಕಾಲಿಗೆ ಇಳಿದು ಹೋಗುತ್ತದೆ. ಯಾಕೆಂದರೆ ಹಿಂದೆ ಇವನ ಬಗ್ಗೆ ಇಂತಹ ಹತ್ತಾರು ಸಾವಿನ ಊಹಾಪೋಹಗಳು ಹುಟ್ಟಿದ್ದವು. ಹುಟ್ಟಿದಷ್ಟೇ ವೇಗದಲ್ಲಿ ಸತ್ತಿದ್ದವು ಕೂಡ. ಈ ಬಾರಿಯೂ ಅದಕ್ಕಿಂತ ಭಿನ್ನ ಸುದ್ದಿ ಕೇಳುವ ಸಾಧ್ಯತೆ ಇಲ್ಲ. ಇದು ನಿಜಕ್ಕೂ ಬೇಸರದ ಸಂಗತಿ.
ಆಗಿದ್ದೇನು?:
ದಾವೂದ್ ಮತ್ತು ಅವನ ಹೆಂಡತಿ ಜುಬೀನಾಳಿಗೆ ಕೊರೊನಾ ವೈರಾಣು ಸೋಂಕು ಅಂಟಿದೆ. ಕರಾಚಿಯ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂರಲು ಹಿಡಿದು ಇಬ್ರಾಹಿಂ ಕೆಮ್ಮಿಕೆಮ್ಮಿ ಸುಸ್ತಾಗಿದ್ದಾನೆ. ವೆಂಟಿಲೇಟರ್ ಸಪೋರ್ಟ್ ಸದ್ಯ ಅವನ ಪ್ರಾಣ ಕಾಯ್ದಿದೆ. ಆದರೂ ನೋ ಚಾನ್ಸ್. ಉಳಿಯೋದಿಲ್ಲ. ಇಬ್ಬರ ಸ್ಥಿತಿಯೂ ಸೀರಿಯಸ್.
ಅವನನ್ನು ರೆಕ್ಕೆಯಲ್ಲಿಟ್ಟು ಸುಮಾರು ಮೂವತ್ತು ವರ್ಷಗಳಿಂದ ಸಲುಹಿದ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕಂಗಾಲಾಗಿದೆ ಎನ್ನುವಂತಹ ಭಾರತ ಬಾಯಿ ಚಪ್ಪರಿಸುವ ರಸಗವಳದ ಸುದ್ದಿಗಳು ಒಂದೊಂದಾಗಿ ಹೊರಬೀಳುತ್ತಲೇ ಇವೆ. ಆದರೆ ವಾಸ್ತವ ಹಾಗಿಲ್ಲ. ಭಾರತದ ನಿರೀಕ್ಷೆಯ ದಿನಗಳು ಮುಗಿದ ಹಾಗೆ ಕಾಣಿಸುತ್ತಿಲ್ಲ. ಯಾಕೆಂದರೆ, ಖುದ್ದು ದಾವೂದನ ಸೋದರ ಅನೀಸ್ ಇಬ್ರಾಹಿಂ ನೀಡಿದ ಸ್ಪಷ್ಟನೆ ವರದಿಯಾಗಿದೆ. ಅವನು ಹೇಳುವ ಪ್ರಕಾರ, ದಾವೂದ್ ಮತ್ತು ಅವನ ಹೆಂಡತಿಗೆ ಕೊರೊನಾ ಅಂಟಿಯೇ ಇಲ್ಲ. ಕರಾಚಿಯ ವಿಲಾಸಿ ಕ್ಲಿಪ್ಟನ್ ಬಡಾವಣೆಯ ತನ್ನ ಅರಮನೆಯಿಂದ ಕಳೆದ ಒಂದು ವರ್ಷದಿಂದ ಒಮ್ಮೆಯೂ ಅವನು ಹೊರಬಂದಿಲ್ಲವಂತೆ. ಕೊರೊನಾಕ್ಕಿಂತ ಮೊದಲೇ ಕಾಡಲಾರಂಭಿಸಿದ ಸಾವಿನ ಭೀತಿ ಕಟ್ಟಿಹಾಕಿದೆ.
ಅಷ್ಟಕ್ಕೂ ಅವನಿಗೆ ಸೋಂಕು ಅಂಟುವ ಸಾಧ್ಯತೆ ಇದ್ದೀತಾದರೂ ಹೇಗೆ? ಪರಿಸ್ಥಿತಿ ನಾರ್ಮಲ್ ಇರುವಾಗಲೇ ಅಪರಿಚಿತರನ್ನು ಅಥವಾ ಆಪ್ತರನ್ನು ಹತ್ತಿರ ಬಿಟ್ಟುಕೊಳ್ಳದವ ಈಗ ಕೊರೊನಾ ಕಂಪನ ಎದ್ದಿರುವಾಗ ಕ್ರಿಮಿಯನ್ನು ಕೂಡ ಹತ್ತಿರ ಬಿಟ್ಟುಕೊಳ್ಳಲಾರ. ಅಂಥವನಿಗೆ ಕೋವಿಡ್ ಕ್ರಿಮಿ ಅಂಟುವ ಸಾಧ್ಯತೆ ಇಲ್ಲ. ಇದು ಸಿಂಪಲ್ ಕಾಮನ್ ಸೆನ್ಸ್. ಹಾಗಾದರೆ ಪಾತಕಿಯ ಸೋಂಕು ಸುದ್ದಿ ಹರಡಿದ್ದು ಯಾಕೆ?
ಹೌದು, ಇಂತಹ ಲಡಾಸ್ ಸುದ್ದಿಗಳನ್ನು ಸೃಷ್ಟಿಸುವುದಕ್ಕಾಗಿಯೇ ಅವನ ಸುತ್ತ ಒಂದು ಖಯಾಲಿ ಗ್ಯಾಂಗ್ ಇದೆ. ಇಲ್ಲದ ಇಂತಹ ಸುದ್ದಿಯನ್ನು ಹುಟ್ಟು ಹಾಕಿ, ಅದಕ್ಕೆ ಭಾರತದಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆ ಆಲಿಸಿ ಆನಂದಿಸುವುದು ಇದರ ದರಿದ್ರ ಚಟ.
1955ರ ಒಂದು ಅಮಾವಾಸ್ಯೆಯ ರಾತ್ರಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸಣ್ಣಹಳ್ಳಿಯೊಂದರಲ್ಲಿ ಹುಟ್ಟಿದ ದಾವೂದ್, ಡೋಂಗ್ರಿ ಏರಿಯಾಕ್ಕೆ ಬಂದು ಡಾನ್ ಎನಿಸಿಕೊಂಡು ದೇಶ ವಿದೇಶಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಂಡ. ನಂತರ ಬಾಬ್ರಿ ಮಸೀದಿ ಧ್ವಂಸದ ಬಳಿಕ 1993ರಲ್ಲಿ ಇಡೀ ಬಾಂಬೆಗೆ ಬಾಂಬ್ ಇಟ್ಟು ವಿಕೃತಿ ಮೆರೆದ. ಜೀವ ಉಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಪಲಾಯನ ಮಾಡಿದ. ಹೈಸ್ಕೂಲ್ ಡ್ರಾಪ್ ಔಟ್ ಆಗಿ ಅಡ್ನಾಡಿ ಕೆಲಸಗಳಿಗೆ ಇಳಿದ ದಿನದಿಂದಲೂ ಅವನ ಸುತ್ತ ಇಂತಹ ಸುಳ್ಳುಪಿಳ್ಳು ಸುದ್ದಿಗಳು ರಾಶಿರಾಶಿ ಹುಟ್ಟುತ್ತಲೇ ಬಂದಿವೆ.
ಅವನಿಗೀಗ ವಯಸ್ಸಾಗಿದೆ. ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ. ಭೂಗತ ಜಗತ್ತಿನ ಮೇಲೆ ಹಿಂದಿನ ಹಿಡಿತ ಉಳಿದಿಲ್ಲ. ಇರುವ ಒಬ್ಬ ಮಗ ಮೋಯಿನ್, ಇಂಗ್ಲೆಂಡಿನ ಬಿಳಿ ಹೆಂಡ್ತಿ ಬಿಟ್ಟು ಸನ್ಯಾಸಿ (ಮೌಲಾನಾ) ಆಗಿದ್ದಾನೆ. ಮೂರನೇ ಮಗಳು ಸತ್ತು ದಶಕಗಳು ಸಂದಿವೆ. ಉಳಿದಿಬ್ಬರು ಹೆಣ್ಣುಮಕ್ಕಳ ಪೈಕಿ ಎರಡನೆಯವಳು ಅಮೆರಿಕದ ಗಂಡನ ಜತೆ ಸೆಟ್ಲ್ ಆಗಿದ್ದಾಳೆ. ಮೊದಲನೆ ಮಗಳು ಮೆಹರಿನ್ ಮಾತ್ರ ಪಾಕ್ ತಂಡದ ಮಾಜಿ ಕ್ರಿಕೆಟರ್ ಮಿಯಾಂದಾದ್ ಮಗ ಜುನೈದ್ ಜತೆ ಮದುವೆಯಾಗಿ ಕರಾಚಿ ಮತ್ತು ದುಬೈ ನಡುವೆ ಓಡಾಡಿಕೊಂಡು ಪಾತಕಿಗೆ ಅಷ್ಟಿಷ್ಟು ಸಮಾಧಾನ ತಂದಿದ್ದಾರೆ. ಇದರ ಮಧ್ಯೆ ತಮ್ಮ ಅನೀಶ್ ನ ತಲೆನೋವು ಹೆಚ್ಚಿದೆ. ಇವನಿಗೆ ಅಣ್ಣನ ಉತ್ತರಾಧಿಕಾರಿಯಾಗುವ ಹುಚ್ಚು ತಲೆಗೇರಿದೆ. ಇದರಿಂದಲೂ ದಾವೂದ್ ನ ರೋಗ ಮತ್ತು ಖಾಯಿಲೆ ಸುದ್ದಿಗಳ ಹೆಚ್ಚಾಗಿವೆ.
2016ರಲ್ಲಿ ದಾವೂದ್ ಸಾಯುತ್ತಿರುವ ಸುದ್ದಿ ಹರಡಿತ್ತು. ಗ್ಯಾಂಗ್ರಿನ್ ಆಗಿ ಕಾಲು ಕಟ್ ಮಾಡಲಾಗಿದೆ. ಹೆಚ್ಚು ಕಾಲ ಬದುಕಲಾರ ಎನ್ನುವ ಸುದ್ದಿ ಹರಡಿದ್ದವು. ಕೆಲ ತಿಂಗಳ ಬಳಿಕ ಅದು ಸುಳ್ಳಾಯಿತು. ಮಾರನೇ ವರ್ಷ ಡಿಪ್ರೆಷನ್ ಸುದ್ದಿ ಹರಡಿತು. ಹಾಸಿಗೆ ಬಿಟ್ಟು ಏಳಲಾಗುತ್ತಿಲ್ಲ. ಸಾವಿನ ಹೊಸ್ತಿಲಲ್ಲಿದ್ದಾನೆ ಎನ್ನುವ ಊಹಾಪೋಹ. ಇಂತಹ ಹತ್ತಾರು ಸುದ್ದಿಗಳು ಹುಟ್ಟಿ ಸತ್ತು ಹೋಗಿವೆ. ಆದರೆ ಪಾಪಿ ಮಾತ್ರ ಚಿರಾಯು.


