27.9 C
Karnataka
Sunday, May 24, 2026
    Home Blog Page 83

    ಕೈಗೆಟಕುವುದನ್ನು ಕಿಸೆಗೆ ಸೇರಿಸುವುದೇ ಒಳಿತು

    ಮ್ಯುಚುಯಲ್‌ ಫಂಡ್‌ ಹೂಡಿಕೆದಾರರ ಸಂಖ್ಯೆಯು ನಾಲ್ಕು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಮ್ಯುಚುಯಲ್‌ ಫಂಡ್‌ ಗಳ ಸ್ವತ್ತು 34 ಲಕ್ಷ ಕೋಟಿ ತಲುಪಿರುವ ಅಂಶ ಮತ್ತು ಎಸ್‌ ಐ ಪಿ ಹೂಡಿಕೆಯು ರೂ.9,000 ಕೋಟಿಗೆ ಹಿಂದಿರುಗಿದೆ. ಸೆಂಟ್ರಲ್‌ ಡಿಪಾಜಿಟರಿ ಸರ್ವಿಸಸ್‌ ಲಿ ತನ್ನ ಖಾತೆದಾರರ ಸಂಖ್ಯೆಯನ್ನು ನಾಲ್ಕು ಕೋಟಿ ದಾಟಿದೆ. ಅಂತಾರಾಷ್ಟ್ರೀಯ ರೇಟಿಂಗ್‌ ಸಂಸ್ಥೆ , ಫಿಚ್‌ ಭಾರತದ ಆರ್ಥಿಕ ವರ್ಷ 2022 ರ ಬೆಳವಣಿಗೆಯನ್ನು ಹಿಂದಿನ 12.8% ನಿಂದ 10 ಕ್ಕೆ ಮೊಟಕುಗೊಳಿಸಿದೆ. ಜೂನ್‌ ತಿಂಗಳ ಜಿ ಎಸ್‌ ಟಿ ಸಂಗ್ರಹಣೆ ಎಂಟು ತಿಂಗಳ ನಂತರ ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ನ್ಯಾಶನಲ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ಪ್ರಕಟಣೆಯ ಪ್ರಕಾರ ಅದರ ಹಿಂದಿನ ಸದಸ್ಯ ಸಂಸ್ಥೆಗಳಾದ ಸಧ್ಯ ಡಿಫಾಲ್ಟರ್‌ ಎಂದು ಘೋಷಿತವಾಗಿರುವ ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ಲಿ, ಅನುಗ್ರಹ್‌ ಸ್ಟಾಕ್‌ ಅಂಡ್‌ ಬ್ರೋಕಿಂಗ್‌ ಪ್ರೈ ಲಿ., ಬಿ ಎಂ ಎ ವೆಲ್ತ್‌ ಕ್ರಿಯೇಟರ್ಸ್‌ ಲಿ., ಗಳ ಮೇಲಿನ ಕ್ಲೇಮ್ಸ್‌ ಗಳನ್ನು ಸಲ್ಲಿಸಲು ಕರೆ ಕೊಟ್ಟಿದೆ. ಇಂತಹ ಅಸಹಜ ವಾತಾವರಣದಲ್ಲೂ ಷೇರುಪೇಟೆಯ ಸೂಚ್ಯಂಕಗಳು ದಾಖಲೆಯ ಮಟ್ಟದಲ್ಲಿ ಸಾಗುತ್ತಿರುವುದು ಹೂಡಿಕೆದಾರರ ನಿರ್ಧಾರದ ಸಾಮರ್ಥ್ಯಕ್ಕೆ ಸವಾಲಾಗಿದೆ.

    ಸಂಪನ್ಮೂಲ ಸಂಗ್ರಹಣೆಗೆ ಹೆಚ್ಚು ಮನ್ನಣೆ:

    REC ಕಂಪೆನಿಯ ಕಾರ್ಪೋರೆಟ್ ಆಫೀಸ್

    ರೂರಲ್‌ ಎಲೆಕ್ಟ್ರಿಫಿಕೇಷನ್‌ ಕಾರ್ಪೊರೇಷನ್‌ ಕಂಪನಿಯು 400 ದಶಲಕ್ಷ ಡಾಲರ್‌ ಗಳನ್ನು, ಶೇ.2.75 ರಂತೆ , ಬಾಂಡ್‌ ಗಳ ಮಾರಾಟದ ಮೂಲಕ ಸಂಗ್ರಹಣೆ ಮಾಡಿದೆ. ಜೂನ್‌ ಮೂರನೇ ವಾರದಲ್ಲಿ ಸಾರ್ವಜನಿಕ ವಲಯದ ಎನ್‌ ಎಂ ಡಿ ಸಿ ಕಂಪನಿಯು ತನ್ನ 4 ನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿತು. ಅದರ ಪ್ರಕಾರ ತನ್ನ ಲಾಭವನ್ನು 8 ಪಟ್ಟು ಹೆಚ್ಚಾಗಿತ್ತು. ಆ ಕಾರಣ ಷೇರಿನ ಬೆಲೆ ರೂ.174 ರ ಸಮೀಪದಿಂದ ರೂ.190 ರ ಸಮೀಪಕ್ಕೆ ಜಿಗಿಯಿತು. ಈ ತೇಜಿ ವಾತಾವರಣವನ್ನು ಸದವಕಾಶವೆಂದು ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದಡಿ ಎನ್‌ ಎಂ ಡಿ ಸಿ ಷೇರುಗಳನ್ನು ರೂ.165 ರ ಮೂಲ ಬೆಲೆಯಲ್ಲಿ, ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟ ಮಾಡಿ ರೂ.3,700 ಕೋಟಿ ಸಂಪನ್ಮೂಲ ಸಂಗ್ರಹಣೆ ಮಾಡಿಕೊಂಡಿತು. ಷೇರಿನ ಬೆಲೆ ರೂ.165/66 ರ ಸಮೀಪಕ್ಕೆ ಕುಸಿಯಿತು.

    ಐಪಿಒ ಗಳ ಸುದ್ಧಿ:

    ನೀತಿ ಆಯೋಗವು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಯುನೈಟೆಡ್‌ ಇಂಡಿಯಾ ಇನ್ಶೂರನ್ಸ್‌ ನ್ನು ಖಾಸಗೀಕರಣ ಮಾಡಲು ಶಿಫಾರಸು ಮಾಡಿದೆ. ಪಿರಾಮಲ್‌ ಕ್ಯಾಪಿಟಲ್‌ ಸಂಸ್ಥೆಯು ರೂ.1,000 ಕೋಟಿ ಮೌಲ್ಯದ ಎನ್‌ ಸಿ ಡಿ ಗಳನ್ನು ತೇಲಿಬಿಡಲಿದೆ. ಹಿಂದಿನವಾರವಷ್ಠೆ ಜಿ ಆರ್‌ ಇನ್‌ ಫ್ರಾ, ಕ್ಲೀನ್‌ ಸೈನ್ಸ್‌ ಕಂಪನಿಗಳು ಐ ಪಿ ಒ ಮೂಲಕ ಷೇರು ವಿತರಿಸಿವೆ. ಈ ವಾರ ಆಹಾರವನ್ನು ತಲುಪಿಸುವ ಝೊಮಟೊ ಲಿಮಿಟೆಡ್‌ ರೂ.9,375 ಕೋಟಿ ಮೌಲ್ಯದ ಷೇರುಗಳನ್ನು 14 ರಿಂದ ವಿತರಣೆ ಮಾಡಲಿದೆ. ಇದರಲ್ಲಿ ಹೂಡಿಕೆದಾರ ಸಂಸ್ಥೆ ನೌಕರಿ ಡಾಟ್‌ ಕಾಂ ನ ಇನ್‌ ಫೋ ಎಡ್ಜ್‌ ಸಂಸ್ಥೆ ರೂ.375 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಿದೆ.

    ಇನ್ ಫೋ ಎಡ್ಜ್‌ ಸಂಸ್ಥೆ ಖರೀದಿಸಿದ ಈ ಷೇರುಗಳ ಬೆಲೆ ( acqusition price) ರೂ.1.16 ಈ ಕಂಪನಿಯ red herring ಪ್ರಾಸ್ಪೆಕ್ಟಸ್‌ ನ 30 ನೇ ಪುಟದ ಮಾಹಿತಿ ಪ್ರಕಾರ ಕಂಪನಿಯ ಷೇರು ಬಂಡವಾಳ ಕೇವಲ ರೂ.3.1 ಲಕ್ಷ, revenues from operation : ರೂ.1,993.789 ಕೋಟಿ, net asset value of share: ರೂ. 15.09. ಈ ಗಾತ್ರದ ವಹಿವಾಟಿಗೆ ತೆರಿಗೆ ಮತ್ತು ಇತರೆ ತಗಾದೆಗಳ ಪ್ರಮಾಣ ಹೆಚ್ಚೆನಿಸುತ್ತದೆ. ಮುಖ್ಯವಾಗಿ ಈ ಕಂಪನಿಯು ಸೇವಾ ವಲಯದಲ್ಲಿರುವುದರಿಂದ ತನ್ನ ಚಟುವಟಿಕೆಯಲ್ಲಿ ಭಾರಿ ಪ್ರಮಾಣದ ಹೂಡಿಕೆಯ ಅಗತ್ಯವಿರುವುದಿಲ್ಲ. ರೂ.1 ರ ಮುಖಬೆಲೆ ಷೇರನ್ನು ರೂ.76 ರಲ್ಲಿ ವಿತರಿಸುವುದು ಹೆಚ್ಚೆನಿಸುತ್ತದೆ.

    ಪೇಟೆಗಳು ಉತ್ತುಂಗದಲ್ಲಿರುವುದರಿಂದ ಎಲ್ಲವೂ ಆಕರ್ಷಣೀಯವಾಗಿ ಕಂಡರೂ, ಆಂತರಿಕವಾಗಿ ವಿತರಣೆಬೆಲೆ ಹೆಚ್ಚು. ಇತ್ತೀಚೆಗೆ ಬರುತ್ತಿರುವ ಹೆಚ್ಚಿನ ಐಪಿಒ ಗಳು ವಿತರಣೆಯಲ್ಲಿ ಭಾಗಿಯಾಗಿರುವವರಿಗಿಂತ, ಹಿಂದಿನ ಹೂಡಿಕೆದಾರರಿಗೆ ಮತ್ತು ಪ್ರವರ್ತಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶವೇ ಹೆಚ್ಚಾಗಿದ್ದಂತಿದೆ ಎಂದು ಭಾಸವಾಗುತ್ತದೆ.

    ಗರಿಷ್ಠದಲ್ಲಿರುವ ಸೂಚ್ಯಂಕಗಳ ಈ ಸಂದರ್ಭದಲ್ಲಿ ಮುಂದೇನಾಗಬಹುದು?

    ಲೀಸ್ಟಿಂಗ್‌ ನ ಆರಂಭಿಕ ದಿನಗಳಲ್ಲಿ ಮಾರಾಟಮಾಡುವುದು ಕ್ಷೇಮ ಎಂದೆನಿಸುತ್ತದೆ. ಪೇಟೆಯಲ್ಲಿ ಹರಿದಾಡುವ ಹಣದ ಕಾರಣ ಉತ್ಸಾಹದ ಅಮಲಿನಲ್ಲಿ ತೇಲಾಡುತ್ತಿರುವ ಷೇರುಪೇಟೆಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಮಾರಾಟದ ಹಾದಿ ಹಿಡಿದಂತಿದೆ. ಈಗ ವ್ಯವಹಾರಗಳು ಲಾಕ್‌ ಡೌನ್‌ ತೆರವಿನ ಕಾರಣ ಆರಂಭವಾಗುತ್ತಿದ್ದು, ಪೇಟೆಯಲ್ಲಿ ಹೂಡಿಕೆ ಮಾಡಿದ ಹಣ ಕ್ರಮೇಣ ಹಿಂದಿರುಗಬಹುದು. ದೈನಂದಿನ ಅಗತ್ಯಗಳ ಬೆಲೆಗಳ ಏರಿಕೆಯಾಗುತ್ತಿರುವುದರಿಂದ ಹಣದುಬ್ಬರದ ನಿಯಂತ್ರಣ ಕ್ರಮವಾಗಿ ಆರ್‌ ಬಿ ಐ ಬಿಗಿ ನೀತಿ ಅಳವಡಿಕೆಯಾಗುವುದರಿಂದ ಪೇಟೆಗಳಲ್ಲಿ ಮಾರಾಟದ ಒತ್ತಡ ಹೆಚ್ಚಬಹುದು. ಮುಖ್ಯವಾಗಿ ಜೂನ್‌ ಅಂತ್ಯದ ತ್ರೈಮಾಸಿಕದಲ್ಲಿ ಸುಮಾರು ಎರಡು ತಿಂಗಳ ಲಾಕ್‌ ಡೌನ್‌ ಇದ್ದ ಕಾರಣ ಕಾರ್ಪೊರೇಟ್‌ ಫಲಿತಾಂಶಗಳು ಪ್ರೋತ್ಸಾಹದಾಯಕವಾಗಿರಲಾರದು. ಈ ಎಲ್ಲಾ ಕಾರಣಗಳು ಪೇಟೆಯ ಮೇಲೆ ಒತ್ತಡ ಹೇರಿದರೆ ಪರಿಸ್ಥಿತಿ ಊಹೆಗೂ ನಿಲುಕದಂತಾಗಬಹುದು. ಹಾಗಾಗಿ ಹೆಚ್ಚಿನ ಆಸೆಗೆ ಆಸ್ಪದಕೊಡದೆ, ದುರಾಸೆಯೇ ವಿನಾಶಕ್ಕೆ ಮೂಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಕೈಗೆಟಕುವುದನ್ನು ಕಿಸೆಗೆ ಸೇರಿಸುವುದೇ ಒಳಿತಲ್ಲವೇ?

    ಟಾಟಾ ಮೋಟಾರ್ಸ್‌ ಕಂಪನಿಯ ಜೆ ಎಲ್‌ ಆರ್‌ ಗೆ ʼಚಿಪ್‌ ʼ ಕೊರತೆಯು ಮುಂದುವರೆಯುವ ಕಾರಣ ಈ ವರ್ಷದ ಮೊದಲೆರಡು ತ್ರೈಮಾಸಿಕಗಳಲ್ಲಿ ಕಂಪನಿ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚುಎಂಬ ನಿರೀಕ್ಷೆಯ ಕಾರಣ ಷೇರುಪೇಟೆಯಲ್ಲಿ ಈ ವಾರ ರೂ.358 ರ ಗರಿಷ್ಠದಿಂದ ರೂ.302 ರವರೆಗೂ ಕುಸಿದು ನಂತರ ರೂ.306 ರ ಸಮೀಪ ಕೊನೆಗೊಂಡಿತು. ಹೀಗಿರುವಾಗ ಕೆಲವು ಬ್ರೋಕಿಂಗ್‌ ಕಂಪನಿಗಳು ವ್ಯಕ್ತಪಡಿಸಿದ ಮತ್ತು ನೀಡಿದ ಟಾರ್ಗೆಟ್‌ ಗಳು ಮಾತ್ರ ಹೆಚ್ಚಿನ ಬದಲಾವಣೆ ಇಲ್ಲ. ಅಂದರೆ ಒಂದು ಪ್ರಮುಖ ಕಂಪನಿಯ ಷೇರಿನ ಬೆಲೆ ಕುಸಿತ ಕಂಡರೂ ಅದರ ಬೆಂಬಲಕ್ಕೆ ಅನೇಕ ಕಂಪನಿಗಳು ಸಿದ್ದವಿರುತ್ತವೆ ಎನ್ನಬಹುದು.

    ಈ ದಿಶೆಯಲ್ಲಿ ಹಿಂದಿನ ವಾರದ ಲೇಖನದಲ್ಲಿ ಹೆಸರಿಸಿದ್ದ ಡಿ ವಿ ಆರ್‌ ಗಳ ಬಗ್ಗೆ ಹೆಚ್ಚಿನ ಓದುಗರು ವಿವರಣೆ ಕೇಳಿದ್ದರು. ಟಾಟಾ ಮೋಟಾರ್ಸ್‌ ಷೇರಿನ ಕುಸಿತದ ಸಂದರ್ಭದಲ್ಲಿ, ಷೇರಿನ ಅನಕೂಲಗಳೆಲ್ಲವನ್ನೂ ಹೊಂದಿರುವ, ಕೇವಲ ಓಟಿಂಗ್‌ ಹಕ್ಕನ್ನು ಈಕ್ವಿಟಿ ಷೇರಿನ ಶೇ.25% ರಷ್ಠನ್ನು ಮಾತ್ರ ಡಿವಿಆರ್‌ ಗಳು ಪಡೆದುಕೊಂಡಿರುತ್ತವೆ. ಇದಕ್ಕೆ ಬದಲಾಗಿ ಶೇ.5% ರಷ್ಟರ ಡಿವಿಡೆಂಡ್‌ ನ್ನು ಹೆಚ್ಚಾಗಿ ನೀಡಲಾಗುವುದು. ಈ ವಿಶೇಷ ಗುಣವಿರುವುದು ಇದುವರೆಗೂ ಹೆಚ್ಚಿಗೆ ಬೆಳಕಿಗೆ ಬರದೆಯಿರುವುದಕ್ಕೆ ಮುಖ್ಯ ಕಾರಣ ಟಾಟಾ ಮೋಟಾರ್ಸ್‌ ಕಂಪನಿಯು 2016 ರಿಂದಲೂ ಡಿವಿಡೆಂಡ್‌ ವಿತರಿಸಿಲ್ಲ. ಈಗ ಕಂಪನಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಡಿವಿಡೆಂಡನ್ನು ನಿರೀಕ್ಷಿಸಬಹುದಲ್ಲವೇ?

    ನೆನಪಿನಲ್ಲಿಡಿ: ಆಸೆಯೇ ದು:ಖ ಕ್ಕೆ ಮೂಲ – ಅತಿಯಾಸೆಯೇ ವಿನಾಶಕ್ಕೆ ಮೂಲ

    ನಿರ್ಮಲಾ ಸೀತಾರಾಮನ್ ಮನೆಯಲ್ಲಿ ಮಹಿಳಾ ಮಂತ್ರಿಗಳ ಚಹಾಕೂಟ

    ಕೇಂದ್ರ ಸಚಿವ ಸಂಪುಟ ಪುನಾರಚನೆ ಬಳಿಕ ಮೋದಿ ಕ್ಯಾಬಿನೆಟ್‌ನಲ್ಲಿ 11 ಮಹಿಳಾ ಮಂತ್ರಿಗಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಈ ಹನ್ನೊಂದು ಮಂದಿಯನ್ನು ಒಂದೆಡೆ ಸೇರಿಸಿದ್ದರು.

    ಸಂಪುಟದ ಎಲ್ಲಾ ಮಹಿಳಾ ಮಂತ್ರಿಗಳಿಗೆ ಚಹಾ ಕೂಟ ಏರ್ಪಡಿಸಿದ್ದರು. ಕರ್ನಾಟಕದ ಶೋಭಾ ಕರಂದ್ಲಾಜೆ ಸೇರಿ ಎಲ್ಲಾ ಮಹಿಳಾ ಸಚಿವರು ಈ ಚಹಾ ಕೂಟದಲ್ಲಿ ಭಾಗವಹಿಸಿದ್ದರು.

    ವಿಸ್ಟಾಡೋಮ್‌ ಬೋಗಿಗಳ ಸಂಚಾರ ಆರಂಭ

    ವಿಸ್ಟಾಡೋಮ್‌ ಬೋಗಿಗಳನ್ನು ಹೊಂದಿರುವ ಯಶವಂತಪುರ- ಮಂಗಳೂರು ವಿಶೇಷ ರೈಲಿಗೆ ಇಂದು ಸಂಸದ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಇಂದು 88 ಪ್ರಯಾಣಿಕರು ಈ ವಿಶೇಷ ಬೋಗಿಯಲ್ಲಿ ಪಯಣಿಸಿ ಪಶ್ಚಿಮ ಘಟ್ಟಗಳ ರಮಣೀಯ ಸೌಂದರ್ಯ ಸವಿದರು.

    ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್ , ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ್ ಶೆಟ್ಟಿ, ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ ಉಪಸ್ಥಿತರಿದ್ದರು.

    ಪ್ರಕೃತಿ ಹಾಗೂ ಕಡಲತೀರದ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್‌ ಕೋಚ್‌ಗಳನ್ನು ಜೋಡಿಸಲಾಗುತ್ತಿದೆ. ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರ ಪಾಲಿಗೆ ಸ್ವರ್ಗ. ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಛಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಸಾಕಷ್ಟು ಮಂದಿ ಮನವಿ ಮಾಡಿದ್ದರು. ಅದರ ಪ್ರತಿಫಲದಿಂದ ವಿಸ್ಟಾಡೋಮ್‌ ರೈಲು ಸಂಚಾರ ಆರಂಭವಾಗಿದೆ.

    ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ. ಮಾರ್ಗಮಧ್ಯದಲ್ಲಿಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು

    ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

    ಸೋಸಲೆ ವ್ಯಾಸರಾಜ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ನೂತನ ಕಟ್ಟಡಕ್ಕೆ ಇಂದು ಸೋಸಲೆ ವ್ಯಾಸರಾಜ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಶಂಕುಸ್ಥಾಪನೆಯನ್ನು ನೆರೆವೇರಿಸಿದರು.

    20ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಾಲ್ಕುಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ವಿದ್ಯಾಪೀಠದ ನಾಲ್ಕು ಅಂತಸ್ತಿನ ಕಟ್ಟಡ 12 ಪಾಠಶಾಲಾ ಕೊಠಡಿಗಳು, ಗ್ರಂಥಾಲಯ, ಸಂಶೋಧನಾ ಕೇಂದ್ರ, ಕಂಪ್ಯೂಟರ್ ಲ್ಯಾಬ್, ಆಡಳಿತ ಕಚೇರಿ, ಸಭಾಂಗಣ, 4 ವೇದ ಪಾಠಶಾಲೆಗಳು, ವಿದ್ಯಾರ್ಥಿನಿಲಯ, ಪಾಕಶಾಲೆ, ಭೋಜನಾಲಯ, ಆಡಿಯೋವಿಷುಯಲ್ ಕೊಠಡಿಗಳು ಹಾಗೂ 5000ಚದರಡಿ ಒಳಾಗಣ ಕ್ರೀಡಾಂಗಣವನ್ನು ಹೊಂದಿರುತ್ತದೆ.

    ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಶ್ರೀಪಾದರು ಹಿಂದಿನ ನಮ್ಮ ಪೂರ್ವಜರು ವೇದಾಧ್ಯಯನ ತಮ್ಮ ಜೀವನದ ಅವಿಭಾಜ್ಯ ಅಂಗ ಎಂಬ ಸತ್ಯವನ್ನು ಕಂಡುಕೊಂಡಿದ್ದರು. ಇದರ ಅಧ್ಯಯನವೇ ನಮ್ಮ ಜೀವನದ ಹೆಗ್ಗುರಿಯಾಗಬೇಕು ಎಂಬ ಸಂದೇಶವನ್ನೂ ನಮ್ಮ ಹಿರಿಯರು ಕೊಟ್ಟಿದ್ದಾರೆ. ಈ ದೃಷ್ಟಿಯಿಂದ ಈ ಪರಂಪರೆಯನ್ನು ಶಾಶ್ವತವಾಗಿ ಮುಂದುವರೆಸಿಕೊಂಡು ಹೋಗಬೇಕಾದ ಕಾರ್ಯಗಳನ್ನು ಮಾಡುವುದೇ ವಿದ್ಯಾಪೀಠಗಳ ಕರ್ತವ್ಯ ಆಗಬೇಕು ಎಂದರು.

    ನಮ್ಮ ಶ್ರೀಮಠದ ವ್ಯಾಸತೀರ್ಥವಿದ್ಯಾಪೀಠ ಇದೇ ರೀತಿಯ ಉನ್ನತ ದೃಷ್ಟಿಯನ್ನು ಇಟ್ಟು ಕೊಂಡು ಹೊರಟಿರುವಂತಹದ್ದು.ಧರ್ಮ ಸಂಸ್ಕೃತಿಗೆ ದೊಡ್ಡದಾದ ಕೊಡುಗೆಯನ್ನು ನಿಡಿರುವುದು ನಮ್ಮ ಭಾರತ. ಅದರಲ್ಲಿಯೂ ಕೂಡ ನಮ್ಮ ವೇದಾಂತ ವಿದ್ಯೆ ನಮ್ಮ ಅನೇಕ ಜೀವನದ ಸಮಸ್ಯೆಗಳನ್ನು ನಾಶಪಡಿಸುತ್ತದೆ. ಭವಿಷ್ಯದಲ್ಲಿ ನಾವು ಕಾಣಬೇಕಿರುವುದು ಈ ಬೆಳಕನ್ನು, ಉಳಿದೆಲ್ಲಾ ಬೆಳಕುಗಳು ನಂದಿಹೋಗುತ್ತದೆ. ವಿದ್ಯೆಯ ಬೆಳಕು ಮಾತ್ರ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ತಂದೆ ತಾಯಿಗಳು ಕೊಟ್ಟ ದೇಹ ಈ ಜನ್ಮಕ್ಕೆ ಕೊನೆ ಆದರೆ ಗುರುಗಳಿಂದ ಪಡೆದ ವಿದ್ಯೆ ಜನ್ಮ ಜನ್ಮಾಂತರಕ್ಕೆ ಮುಂದೆ ಬರುತ್ತದೆ. ವಿದ್ಯೆ, ವಿದ್ಯೆಯಿಂದ ಪಡೆದ ನೈತಿಕ ಸಂಸ್ಕಾರ ಇವೆಲ್ಲವೂ ನಮ್ಮ ಜೀವನಕ್ಕೆ ಅವಶ್ಯವಾಗಿ ಬೇಕು, ಈ ಆದ್ದರಿಂದ ನಮ್ಮ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯವಿರುವುದಾದರೆ ಅದು ಆಧುನಿಕ ಶಿಕ್ಷಣದಿಂದಲ್ಲ, ಸಾಂಪ್ರದಾಯಿಕ ಶಿಕ್ಷಣ ಪದ್ದತಿಯ ಮೂಲಕ. ನಮ್ಮ ವಿದ್ಯಾಪೀಠದಲ್ಲಿ ಉಪನಯನವಾದ ವಿದ್ಯಾರ್ಥಿಗಳಿಗೆ ವೇದಾಧ್ಯಯನದೊಂದಿಗೆ ಲೌಕಿಕ ವಿದ್ಯೆಯನ್ನು ಕಲಿಸಲಾಗುತ್ತದೆ. ಇದರಿಂದ ಸಮಾಜಕ್ಕೆ ದೊಡ್ಡದಾದ ವಿದ್ಯಾಲಾಭ ಆಗುತ್ತಿದೆ ಹಾಗೂ ಆಗಲಿದೆ ಎಂದು ತಿಳಿಸಿದರು.

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ ರಾಜೀವ್, ಮಾಜಿ ವಿಧಾನ ಪರಿಷತ್ ಸದಸ್ಯ ಗೊ.ಮಧುಸೂದನ, ವ್ಯಾಸತೀರ್ಥವಿದ್ಯಾಪೀಠದ ಮ್ಯಾನೇಜಿಂಗ್ ಟ್ರಸ್ಟಿ ವಿದ್ವಾನ್ ಪಿ. ಎಸ್ ಶೇಷಗಿರಿ ಆಚಾರ್ಯ, ವ್ಯಾಸತೀರ್ಥವಿದ್ಯಾಪೀಠದ ಪ್ರಾಂಶುಪಾಲರಾದ ಡಾ|| ಸಿ.ಹೆಚ್. ಶ್ರೀನಿವಾಸಮೂರ್ತಿ ಆಚಾರ್ಯ, ಡಾ|| ಆನಂದತೀರ್ಥಾಚಾರ್ಯ ನಾಗಸಂಪಿಗೆ ಹಾಗೂ ಸೋಸಲೆ ವ್ಯಾಸರಾಜ ಮಠದ ದಿವಾನರಾದ ಎಲ್.ಎಸ್ ಬ್ರಹ್ಮಣ್ಯಾಚಾರ್ಯ, ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳಾದ ಡಾ.ಡಿ.ಪಿ ಮಧುಸೂದನಚಾರ್ಯ, ಮುರಳೀಧರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಬಿತ್ತಿದಂತೆ ಬೆಳೆ

    ಬಿದಿರೆಲೆಯೊಳ್ ರಸಮನರಸುವ ಕಳ್ಳಿಯ  ಪಾಲೊಳ್ ಬೆಣ್ಣೆಯನರಸುವ- ನಯಸೇನನ ಧರ್ಮಾಮೃತದಲ್ಲಿ ಉಲ್ಲೇಖವಾಗಿರುವ  ಮಾತಿದು.  ಬಿದಿರ  ಎಲೆ ಅಷ್ಟೊಂದು ರಸಭರಿತವಾಗಿರುವುದಿಲ್ಲ  ಹಣ್ಣಾಗಿ ಬಿದ್ದರೂ  ಬಹುಬೇಗ  ಒಣಗಿ ಹೋಗುತ್ತದೆ. 

    ಬಿದಿರಿನ ಗುಣವೇ ಅಂಥದ್ದು ಬಹುತೇಖ ಶುಷ್ಕ ಗುಣವುಳ್ಳ ಸಸ್ಯ.  ಇದು ಸಂಪೂರ್ಣ ಒಣಗಿದ ನಂತರ ಅಲಂಕಾರಿಕ  ವಸ್ತುಗಳು , ಪೀಠೋಪಕರಣಗಳಾಗಿ  ಮಾತ್ರ  ಇದರ ಉಪಯೋಗವಿದೆ.ಇನ್ನುಳಿದಂತೆ ಕಳ್ಳಿ  ದಟ್ಟವಾಗಿ ಪೊದೆಯಾಗಿ ಬೆಳೆಯುವ ಸಸ್ಯ ಆರ್ದ್ರ ಗುಣವುಳ್ಳದ್ದು ಆದರೆ ಪ್ರಯೋಜನವಿಲ್ಲ.  ಕಳ್ಳಿ ಎಲೆಯನ್ನು ಕೊಯ್ದಾಗ ಹಾಲಿನಂಥ ದ್ರವ ಒಸರಿದರೂ  ಪ್ರಯೋಜನವಿಲ್ಲ.  ಕ್ಷಾರ ಗುಣವುಳ್ಳದ್ದಾಗಿದ್ದು ಕೈಗೆ, ಕಣ್ಣಿಗೆ ತಾಗಿದರೆ ಅಪಾಯವುಂಟಾಗುತ್ತದೆ.  ಯಾವುದೇ ಉಪಯೋಗಕ್ಕೆ   ಬಾರದಿರುವ  ಬೇಲಿಯಾಗಿ  ಕೆಲವು ಪ್ರದೇಶಗಳಲ್ಲಿ ಮಾತ್ರವಿರುವ  ಸಸ್ಯವಿದು.

    ನಮ್ಮ ನಿರೀಕ್ಷೆಯೂ ಅನುಚಿತವಾಗಿರಬಾರದು ಎಂಬುದನ್ನು ಈ ಮಾತು ಹೇಳುತ್ತದೆ.  ನಾಯಿ ಮತ್ತು ಸಿಂಹ, ಹುಲಿ ಮತ್ತು  ಬೆಕ್ಕು ಒಂದೇ ಜಾತಿಗೆ ಸೇರಿದ ಪ್ರಾಣಿಗಳು  ಅದಕ್ಕೆ ನಾಯಿಯನ್ನು ಗ್ರಾಮಸಿಂಹ  ಎಂದು ಕರೆಯುವುದಿದೆ. 

    “ಬಿತ್ತಿದಂತೆ ಬೆಳೆ” ಎಂಬಂತೆ  ನಾವು ಏನನ್ನು ಬಿತ್ತಿರುತ್ತೇವೆಯೋ  ಅಂಥ ಬೆಳೆಯೇ ಬರುತ್ತದೆ ಅದು ತಪ್ಪಾಗಲು ಸಾಧ್ಯವಿಲ್ಲ ಇದನ್ನು ಬಿಟ್ಟು ಇನ್ನೇನನ್ನೋ ಅರಸುತ್ತಾ ಹೋದರೆ ಅದು ತಪ್ಪಾಗುತ್ತದೆ.  ಹಾಗೆಯೇ   ಯೋಗ್ಯವಾದುದರಲ್ಲಿ ಮಾತ್ರ ಯೋಗ್ಯವಾದದ್ದನ್ನು ಕಾಣಬಹುದು  ಎಲ್ಲದರಲ್ಲೂ ಯುಕ್ತವಾದದ್ದನ್ನೆ ಅರಸುತ್ತೇವೆ ಅಂದರೆ ಅದು ನಮ್ಮ ಮೂರ್ಖತನ.

    ಕಾಗೆಗೂ  ಕೋಗಿಲೆಗೂ , ನವಿಲಿಗೂ ಕೆಂಬೂತಕ್ಕೂ ವ್ಯತ್ಯಾಸವಿದೆ.  ಸಹಜವಾಗಿ  ಅಂತರ್ಗತವಾಗಿರುವ ಗುಣಗಳನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ.  ಹುಟ್ಟಿನಿಂದಲೇ ಉಪಯೋಗಿ,ಬಹುಪಯೋಗಿ, ಅಪಾಯಕಾರಿ  ಮೊದಲಾದ  ವಿಶೇಷಣಗಳನ್ನು ಹೊಂದಿದೆ ಎಂದಮೇಲೆ ಮತ್ತೂ ಅವುಗಳಲ್ಲಿ ಅತೀ ನಿರೀಕ್ಷೆ ಇರಿಸಿಕೊಳ್ಳುವುದು ಸಲ್ಲ  ಎಂಬುದನ್ನು  ನಯಸೇನನ “ಬಿದಿರೆಲೆಯೊಳ್ ರಸಮನರಸುವ ಕಳ್ಳಿಯ  ಪಾಲೊಳ್ ಬೆಣ್ಣೆಯನರಸುವ” ಎಂಬ ಮಾತಿನಿಂದ ತಿಳಿಯಬಹುದು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪದಗ್ರಹಣ

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಅವರು,ಇಂದು ಬೆಳಿಗ್ಗೆ 10.30ಕ್ಕೆ ಪದಗ್ರಹಣ ಮಾಡಿದರು.

    ಕರ್ನಾಟಕದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಅವರು ನೂತನ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಿದರು.

    ನಿರ್ಗಮಿತ ರಾಜ್ಯಪಾಲ ವಜುಬಾಯಿ ವಾಲಾ , ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಸಂಪುಟದ ಹಿರಿಯ ಸಹೋದ್ಯೋಗಿಗಳು ಉಪಸ್ಥಿತರಿದ್ದರು.

    ದಾವಣಗೆರೆಯಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣ

    ದಾವಣಗೆರೆಯಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಉದ್ದೇಶವಿದ್ದು, ಇದಕ್ಕಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ದಾವಣಗೆರೆ ಜಿಲ್ಲಾ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕೆಂಬ ಉದ್ದೇಶವಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಚರ್ಚೆಯಾಗಿದೆ. 9 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುವ ಉದ್ದೇಶವಿದೆ. ರಾಜ್ಯದಲ್ಲಿ 18 ಹಾಗೂ ಈಗ ಆರಂಭವಾಗುತ್ತಿರುವ ಹೊಸ ನಾಲ್ಕು ಮೆಡಿಕಲ್ ಕಾಲೇಜುಗಳು ಜಿಲ್ಲಾಕೇಂದ್ರಗಳಲ್ಲೇ ಇವೆ. ತಾಲೂಕು ಮಟ್ಟದಲ್ಲಿ ಕಾಲೇಜು ಇಲ್ಲ. ಈ ಬಗ್ಗೆ ಮನವಿ ಬಂದಿದ್ದು, ಪರಿಶೀಲಿಸಲಾಗುವುದು ಎಂದರು.

    ರಾಜ್ಯದಲ್ಲಿ ಈವರೆಗೆ ಎರಡೂವರೆ ಕೋಟಿ ಲಸಿಕೆ ನೀಡಲಾಗಿದೆ. ಆಗಸ್ಟ್ ವೇಳೆಗೆ ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಲಸಿಕೆ ಬರಲಿದೆ. ಈ ಬಗ್ಗೆ ಕೇಂದ್ರದಿಂದ ಆಶ್ವಾಸನೆ ದೊರೆತಿದೆ. ರಾಜ್ಯದಲ್ಲಿ ಎರಡೂವರೆ ಕೋಟಿ ಹಾಗೂ ಕೇಂದ್ರ ಸರ್ಕಾರ 38 ಕೋಟಿ ಜನರಿಗೆ ಲಸಿಕೆ ನೀಡಿದೆ. ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ನೀಡಲಿದ್ದು, ಜೊತೆಗೆ ಜನಸಾಮಾನ್ಯರಿಗೂ ನೀಡಲಾಗುವುದು ಎಂದರು.

    60-70% ಜನರು ಕೋವಿಡ್ ನ ಎರಡೂ ಲಸಿಕೆ ಪಡೆಯುವವರೆಗೆ ಜನರು ಎಚ್ಚರಿಕೆಯಿಂದಿರಬೇಕು. ಕೇರಳದಲ್ಲಿ 15 ಸಾವಿರವರೆಗೂ ಪ್ರಕರಣ ಕಂಡುಬರುತ್ತಿದೆ. ಮಹಾರಾಷ್ಟ್ರ, ಕೇರಳ ಗಡಿಗಳನ್ನು ಹಂಚಿಕೊಳ್ಳುವುದರಿಂದ ಅಲ್ಲಿ ಹೆಚ್ಚಾದಾಗ ರಾಜ್ಯದಲ್ಲೂ ಪ್ರಕರಣ ಏರುತ್ತದೆ. ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಉಂಟಾಗುತ್ತಿದ್ದು, ಇದಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಸರ್ಕಾರ ಬಿಗಿ ಕ್ರಮ ಕೈಗೊಂಡಾಗ ವಿವಿಧ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. 10 ಲಕ್ಷ ಜನಸಂಖ್ಯೆಗೆ 50 ಕ್ಕಿಂತ ಹೆಚ್ಚು ಪ್ರಕರಣ ಕಂಡುಬರಬಾರದು. ಈಗಲೂ ರಾಜ್ಯದಲ್ಲಿ ಒಂದೂವರೆ ಲಕ್ಷ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

    ಕೋವಿಡ್ ಮೂರನೇ ಅಲೆ ಬರಲೇಬೇಕು ಎಂದೇನಿಲ್ಲ. ಮಕ್ಕಳಿಗೆ ಹೆಚ್ಚು ಸೋಂಕು ಬರಲೇಬೇಕು ಎಂದೇನಿಲ್ಲ. ನಾವು ಎಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ. ಮಕ್ಕಳಿಗೆ ಸೋಂಕು ಬಂದರೂ ತೀವ್ರ ಸಮಸ್ಯೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೂ ಮಕ್ಕಳ ಬಗ್ಗೆ ಹೆಚ್ಚು ನಿಗಾ ಇರಿಸಬೇಕು. ಮೂರನೇ ಅಲೆಗೆ ಸಿದ್ಧತೆಯಾಗಿ 23 ಸಾವಿರ ಕೋಟಿ ರೂ. ಖರ್ಚು ಮಾಡಲು ಪ್ರಧಾನಿಗಳು ತೀರ್ಮಾನಿಸಿದ್ದು, ರಾಜ್ಯಕ್ಕೆ ಒಂದೂವರೆ ಸಾವಿರ ಕೋಟಿ ರೂ. ಬರಲಿದೆ. ಪ್ರತಿ ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಈ ಮೂಲಕ ಕ್ರಮ ವಹಿಸಲಾಗುವುದು ಎಂದರು.

    ಹೊಸ ಸರ್ಕಾರಿ ಆಸ್ಪತ್ರೆ

    ಚಿಗಟೇರಿ ಸಾರ್ವಜನಿಕ ಆಸ್ಪತ್ರೆ 1961 ರಲ್ಲಿ ಆರಂಭವಾಗಿದ್ದು, ಚಿಗಟೇರಿ ಕುಟುಂಬದವರು ಉಚಿತವಾಗಿ ಜಾಗ ನೀಡಿದ್ದರು. ಈ ಕಟ್ಟಡ ಹಳೆಯದಾಗಿದ್ದು, ಕೆಲ ದೂರುಗಳು ಬಂದಿವೆ. ವೈದ್ಯರು, ನರ್ಸ್, ಗ್ರೂಪ್ ಡಿ ನೌಕರರು ಕಡಿಮೆ ಇದ್ದಾರೆ. ಸಾವಿರ ಹಾಸಿಗೆಗಳ ಸಾಮರ್ಥ್ಯಕ್ಕನುಗುಣವಾಗಿ ಸಿಬ್ಬಂದಿ ಇಲ್ಲ. ಇಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ಮುಖ್ಯಮಂತ್ರಿಗಳು ನಿರ್ಧರಿಸಿರುವುದರಿಂದ ಆವರಣದಲ್ಲಿ ಎಷ್ಟು ಜಮೀನಿದೆ, ಎಷ್ಟು ಸ್ಥಳ ಇದೆ ಎಂದು ವೀಕ್ಷಿಸಿದ್ದೇನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಸೂಚಿಸಲಾಗಿದೆ. ಮುಂದಿನ ವಾರ ಸಭೆ ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. 29 ಎಕರೆ ಜಾಗ ಹಾಗೂ ಇನ್ನೊಂದು 6 ಎಕರೆ ಇದೆ. ಈ ಬಗ್ಗೆ ಸರ್ವೆ ನಡೆಸಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದರು.

    ಸಚಿವರು ಹೇಳಿದ ಇತರೆ ಅಂಶಗಳು

    ದಾವಣಗೆರೆ ನಗರ ಪ್ರದೇಶದಲ್ಲಿ ಮೂರ್ನಾಲ್ಕು ಎಕರೆ ಲಭ್ಯವಿದ್ದರೆ ಜಯದೇವ ಹೃದ್ರೋಗ ಸಂಸ್ಥೆ ನಿರ್ಮಿಸಬಹುದು. ಅದಕ್ಕಾಗಿ ಜಾಗ ನಿಗದಿಪಡಿಸಲು ಕೋರಿದ್ದೇನೆ.

    250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಜ್ಯ ಸರ್ಕಾರ ಮೇಲ್ದರ್ಜೆಗೇರಿಸುತ್ತಿದೆ. ಇನ್ನೂ 250 ಕೇಂದ್ರಗಳನ್ನು ಕೇಂದ್ರದ ಅನುದಾನದಲ್ಲಿ ಮೇಲ್ದರ್ಜೆಗೇರಿಸಬೇಕೆಂದು ಕೋರಲಾಗಿದೆ. ರಾಜ್ಯದಲ್ಲಿ 2,500 ಕೇಂದ್ರಗಳಲ್ಲಿ ಐದು ವರ್ಷಗಳಲ್ಲಿ ಎಲ್ಲವನ್ನೂ ಮೇಲ್ದರ್ಜೆಗೇರಿಸುವ ಉದ್ದೇಶವಿದೆ.

    75% ಕೇಂದ್ರ ಸರ್ಕಾರ ಲಸಿಕೆ ನೀಡಲಿದ್ದು, 25% ಅನ್ನು ಖಾಸಗಿ ವಲಯ ಖರೀದಿಸಬಹುದು. ಇದರಲ್ಲಿ ಲಸಿಕೆ ಉತ್ಪಾದಕರಿಗೆ ಸಂಬಂಧಿಸಿದ ಕೆಲ ಸಮಸ್ಯೆಗಳಿವೆ. ಲಸಿಕೆ ನೀತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. 7-8 ದಿನಗಳಲ್ಲಿ ಪೂರೈಕೆ ಸಮಸ್ಯೆ ಬಗೆಹರಿಯಲಿದೆ.

    ದಾಖಲೆ ನೀಡಿದರೆ ಅಕ್ರಮ ಗಣಿಗಾರಿಕೆ ತನಿಖೆ : ಸಚಿವ ಮುರುಗೇಶ್ ನಿರಾಣಿ ಹೇಳಿಕೆ

    ಮಂಡ್ಯ ಜಿಲ್ಲೆ ಬೇಬಿಬೆಟ್ಟದ ಸುತ್ತಮುತ್ತಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅವರ ಬಳಿ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಲಿ. ನಾವು ಸಮಗ್ರ ತನಿಖೆಗೆ ಆದೇಶ ಮಾಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಅವರು ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿರುವ ಮಾಹಿತಿಯಂತೆ ಕಳೆದ ನಾಲ್ಕು ತಿಂಗಳಿನಿಂದ ಕೆಆರ್ಎಸ್ ಅಣೆಕಟ್ಟಿನ ಸುತ್ತಲ ಭಾಗ ಇಲ್ಲವೇ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

    ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದ ನಂತರ ನಾನೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೆ. ಕೆಲವರು ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರಿಂದ ಸ್ಥಗಿತಗೊಳಿಸಲು ಸೂಚನೆ ಕೊಟ್ಟಿದ್ದೆ ಎಂದರು.

    ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರಿಂದಲೇ ಅಂಥವರಿಗೆ ದಂಡ ವಿಧಿಸಿ ಯಾವುದೇ ತರಹದ ಚಟುವಟಿಕೆಗಳು ನಡೆಯದಂತೆ ನಿರ್ಬಂಧ ಹಾಕಲಾಗಿದೆ. ಒಂದು ವೇಳೆ ಈಗಲೂ ಅಲ್ಲಿ ಅಕ್ರಮವಾಗಿ ಯಾವುದೇ ರೀತಿಯ ಕಲ್ಲು ಗಣಿಗಾರಿಕೆ ಚಟುವಟಿಕೆಗಳು ನಡೆಯುತಿರುವುದರ ಬಗ್ಗೆ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಲಿ. ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಕೆ ಆರ್ ಎಸ್ ಅಣೆಕಟ್ಟು ಸುತ್ತಮುತ್ತ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಕಾನೂನು ಕೈಗೊಳ್ಳಲಾಗಿದ್ದು, ಈಗಾಗಲೇ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಸೂಚನೆ ಕೊಡಲಾಗಿದೆ ಎಂದರು.
    ಕಳೆದ 70 ವರ್ಷಗಳಿಂದಲೂ ಇಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇದೆ. ಹೀಗಾಗಿ ಯಾವ ರಾಜಕಾರಣಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಇಬ್ಬರ ಬಗ್ಗೆಯೂ ಅಪಾರ ಗೌರವವಿದೆ. ಹಾದಿಬೀದಿಯಲ್ಲಿ ಜಗಳ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

    ಇಬ್ಬರೂ ಬುದ್ದಿವಂತರು. ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಈಗ ನಡೆಯುತ್ತಿರುವ ಸಂಘರ್ಷಕ್ಕೆ ಅವರು ಪೂರ್ಣ ವಿರಾಮ ಹಾಕಬೇಕು. ರಾಜಕಾರಣಿಗಳು ಹಾದಿಬೀದಿಯಲ್ಲಿ ಮಾತನಾಡಬಾರದು. ಶೀಘ್ರವೇ ಹಿರಿಯರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಮನವಿ ಮಾಡಿದರು.

    ದೇಶಾದ್ಯಂತ ಸ್ಥಾಪನೆಯಾಗಲಿವೆ 1,500ಕ್ಕಿಂತ ಹೆಚ್ಚಿನ ಆಮ್ಲಜನಕ ಉತ್ಪಾದನೆ ಘಟಕಗಳು

    ದೇಶಾದ್ಯಂತ ಆಮ್ಲಜನಕ ಉತ್ಪಾದನೆ, ಪೂರೈಕೆ ಮತ್ತು ಲಭ್ಯತೆ ಮತ್ತು ಘಟಕಗಳ ಸ್ಥಾಪನೆಯ ಪ್ರಗತಿ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿಂದು ಉನ್ನತ ಮಟ್ಟದ ಪರಾಮರ್ಶೆ ಸಭೆ ನಡೆಯಿತು.

    ದೇಶಾದ್ಯಂತ ಸ್ಥಾಪನೆಯಾಗುತ್ತಿರುವ ಪಿಎಸ್ಎ (Pressure Swing Adsorption) ಆಕ್ಸಿಜನ್ ಉತ್ಪಾದನಾ ಘಟಕಗಳ ನಿರ್ಮಾಣ ಪ್ರಗತಿ ಕುರಿತು ಅಧಿಕಾರಿಗಳು ಪ್ರಧಾನ ಮಂತ್ರಿ ಅವರಿಗೆ ವಿವರ ನೀಡಿದರು. ದೇಶಾದ್ಯಂತ 1,500ಕ್ಕಿಂತ ಹೆಚ್ಚಿನ ಪಿಎಸ್ಎ ಆಕ್ಸಿಜನ್ ಘಟಕಗಳು ತಲೆಎತ್ತಲಿದ್ದು, ಈ ಘಟಕಗಳ ನಿರ್ಮಾಣಕ್ಕೆ ಪಿಎಂ ಕೇರ್ ನಿಧಿ, ಸಾರ್ವಜನಿಕ ವಲಯದ ಘಟಕಗಳು ಮತ್ತು ವಿವಿಧ ಸಚಿವಾಲಯಗಳು ಅನುದಾನ ಒದಗಿಸುತ್ತಿವೆ.

    ಪಿಎಂ ಕೇರ್ ನಿಧಿಯಿಂದ ಅನುದಾನ ಪಡಿದಿರುವ ಪಿಎಸ್ಎ ಆಕ್ಸಿಜನ್ ಘಟಕಗಳು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಕೇಂದ್ರಗಳಲ್ಲಿ ತಲೆಎತ್ತಲಿವೆ. ಪಿಎಂ ಕೇರ್ ನಿಧಿಯ ಅನುದಾನ ಪಡೆದ ಈ ಎಲ್ಲಾ ಘಟಕಗಳು ಕಾರ್ಯಾಚರಣೆ ಆರಂಭಿಸಿದರೆ 4 ಲಕ್ಷಕ್ಕಿಂತ ಹೆಚ್ಚಿನ ಆಕ್ಸಿಜನೇಟೆಡ್ ಬೆಡ್ ಗಳಿಗೆ ಆಮ್ಲಜನಕ ಪೂರೈಸಲಿವೆ ಎಂದು ಅಧಿಕಾರಿಗಳು ಪ್ರಧಾನ ಮಂತ್ರಿ ಅವರಿಗೆ ಮಾಹಿತಿ ನೀಡಿದರು.

    ಈ ಎಲ್ಲಾ ಘಟಕಗಳು ಆದಷ್ಟು ಬೇಗ ಕಾರ್ಯಾಚರಣೆ ಆರಂಭಿಸುವುದನ್ನು ಖಾತ್ರಿ ಪಡಿಸಬೇಕು. ಇವು ಆಯಾ ರಾಜ್ಯ ಸರ್ಕಾರಗಳ ಜತೆ ನಿಕಟ ಸಂಪರ್ಕ ಸಾಧಿಸಿ, ಕಾರ್ಯಾಚರಣೆ ನಡೆಸುವುದನ್ನು ಖಚಿತಪಡಿಸಬೇಕು ಎಂದು ಪ್ರಧಾನಿ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಆಕ್ಸಿಜನ್ ಘಟಕಗಳ ತ್ವರಿತ ನಿರ್ಮಾಣ ಪ್ರಗತಿ ಕುರಿತು ರಾಜ್ಯ ಸರ್ಕಾರಗಳ ಉನ್ನತ ಅಧಿಕಾರಿಗಳ ಜತೆ ನಿಕಟ ಮತ್ತು ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಪ್ರಧಾನ ಮಂತ್ರಿ ಅವರಿಗೆ ಮನವರಿಕೆ ಮಾಡಿದರು.

    .ಆಕ್ಸಿಜನ್ ಘಟಕಗಳಲ್ಲಿ ಕಾರ್ಯ ನಿರ್ವಹಿಸಲು ಮತ್ತು ಕಾರ್ಯಾಚರಣೆ ನಿರ್ವಹಣೆ ನಿಗಾ ವಹಿಸಲು ಆಸ್ಪತ್ರೆ ಸಿಬ್ಬಂದಿಗೆ ಸಾಕಷ್ಟು ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲೂ ತರಬೇತಾದ ಸಿಬ್ಬಂದಿ ಲಭ್ಯವಾಗುವುದನ್ನು ಖಾತ್ರಿಪಡಿಸುವಂತೆ ಪ್ರಧಾನಿ ಅವರು, ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ತ್ಕ್ಷೇತ್ರದ ತಜ್ಞರು ಈಗಾಗಲೇ ತರಬೇತಿ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ದೇಶಾದ್ಯಂತ ಸುಮಾರು 8 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಪ್ರಧಾನಿ ಅವರಿಗೆ ತಿಳಿಸಿದರು.

    ದೇಶಾದ್ಯಂತ ಆಕ್ಸಿಜನ್ ಘಟಕಗಳ ಕಾರ್ಯದಕ್ಷತೆ ಮತ್ತು ಕಾರ್ಯ ನಿರ್ವಹಣೆ ಮೇಲೆ ನಿಗಾ ಇಡಲು ಐಒಟಿ (Internet of Things – IoT) ತಂತ್ರಜ್ಞಾನ ಅಳವಡಿಸುವಂತೆ ಪ್ರಧಾನ ಮಂತ್ರಿ ಅವರು ಸಲಹೆ ನೀಡಿದರು. ಆಕ್ಸಿಜನ್ ಘಟಕಗಳ ಕಾರ್ಯ ನಿರ್ವಹಣೆಗಾಗಿ ಐಒಟಿ ತಂತ್ರಜ್ಞಾನ ಅಳವಡಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಪ್ರಧಾನಿ ಅವರ ಗಮನಕ್ಕೆ ತಂದರು.

    ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


    ಪಿಯುಸಿ ಸೀಟುಗಳ ಹೆಚ್ಚಳಕ್ಕೆ ಕ್ರಮ – ಸಚಿವ ಸುರೇಶ್ ಕುಮಾರ್

    ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪರೀಕ್ಷೆಗೆ ನೊಂದಾಯಿಸಿದ ಎಲ್ಲ ವಿದ್ಯಾರ್ಥಿಗಳನ್ನು ಪಿ.ಯು.ಸಿ ತರಗತಿಗಳ ಪ್ರವೇಶಕ್ಕೆ ಅವಕಾಶ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

    ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಕುರಿತು ರಾಜ್ಯದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಶುಕ್ರವಾರ ಡಿ.ಎಸ್.ಇ.ಆರ್.ಟಿ ಯಲ್ಲಿ “ಬನ್ನಿ ವಿದ್ಯಾರ್ಥಿಗಳೇ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಬರೆಯೋಣ” ಎಂಬ ಧ್ಯೇಯದೊಂದಿಗೆ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳೊಂದಿಗೆ ವಿಡಿಯೋಕಾನ್ಫೆರೆನ್ಸ್ ಮೂಲಕ ನಡೆದ ಮುಕ್ತ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆ/ ಸಲಹೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಎಲ್ಲರೂ ಪಾಸಾಗುವುದರಿಂದ ಪಿಯು ಪ್ರವೇಶ ಸಮಸ್ಯೆಯ ಕುರಿತು ಯಾರಿಗೂ ಯಾವುದೇ ಆತಂಕ ಬೇಡವೇ ಬೇಡ ಎಂದರು.

    “ಈಗಾಗಲೇ ವಿದ್ಯಾರ್ಥಿಗಳಾದ ನೀವು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧವಾಗಿರುವುದರಿಂದ ಧೈರ್ಯದಿಂದ ಪರೀಕ್ಷೆ ಬರೆಯುವುದರತ್ತ ಗಮನ ಹರಿಸಿ ನಾವು ನಿಮ್ಮನ್ನು ಪಿಯುಸಿ ತರಗತಿಗಳಿಗೆ ಪ್ರವೇಶ ನೀಡಲು ಎಲ್ಲ ವ್ಯವಸ್ಥೆ ಮಾಡುತ್ತೇವೆ” ಎಂದರು.

    ರಾಜ್ಯದ ಸರ್ಕಾರಿ ಪಿಯು ಕಾಲೇಜಗಳಲ್ಲಿ ಪಿಯು ಸೀಟುಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಖಾಸಗಿ ಶಾಲೆಗಳಿಂದ ಪಿಯು ಸೀಟುಗಳ ಹೆಚ್ಚಳದ ಕೋರಿಕೆಗಳು ಬಂದರೆ ಪರಿಗಣಿಸಿ ಎಲ್ಲ ವಿದ್ಯಾರ್ಥಿಗಳಿಗೂ ಪಿಯುಸಿ ಸೀಟು ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಶಾಲೆಗಳಿಗೆ ಕುಡಿಯುವ ನೀರು-ಶೌಚಾಲಯ ವ್ಯವಸ್ಥೆ:
    ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಗಳಿಲ್ಲದ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪಕವಾದ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಸಚಿವರು ಹೇಳಿದರು.

    ಡಿವೈಸರ್ ಪೂರೈಕೆ- ಇಂಟರ್ನೆಟ್ ಬಲಪಡಿಸಲು ಕ್ರಮ:
    ಗ್ರಾಮೀಣ ಪ್ರದೇಶದ ಹಲವಾರು ಮಕ್ಕಳು ಈ ಪರ್ಯಾಯ ಬೋಧನೆಯ ವಿಧಾನಗಳಾದ ದೂರದರ್ಶನ ಚಂದನಾ, ಮೊಬೈಲ್, ಲ್ಯಾಪ್ ಟಾಪ್ ಸೌಲಭ್ಯದ ಮೂಲಕ ನೀಡುವ ತರಗತಿಗಳಿಗೆ ಉಪಕರಣಗಳಿಲ್ಲದೇ ವಂಚಿತವಾಗಿದ್ದಾರೆ. ಹಾಗೆಯೇ ಈ ಸೌಲಭ್ಯವಿದ್ದವರಿಗೆ ಇಂಟರ್ನೆಟ್-ಅಂತರ್ಜಾಲ ವ್ಯವಸ್ಥೆ ಬಲಯುತವಾಗಿಲ್ಲದೇ ಇರುವುದರಿಂದ ತರಗತಿಗಳನ್ನು ಸರಿಯಾಗಿ ಆಲಿಸಲಾಗುತ್ತಿಲ್ಲ ಎಂಬ ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಕುರಿತು ಇಂತಹ ಸೌಲಭ್ಯಗಳನ್ನು ಹೇಗೆ ಒದಗಿಸಬೇಕೆಂಬ ಕುರಿತು ಚಿಂತನೆ ನಡೆಸುತ್ತಿದೆ.

    ಹಲವಾರು ತಾಲೂಕುಗಳಲ್ಲಿ ಬಿಇಒ ಹಂತದಲ್ಲಿ ಮೊಬೈಲ್ ಬ್ಯಾಂಕ್ ಮೂಲಕ ದಾನಿಗಳಿಂದ ಮೊಬೈಲ್ ಫೋನ್ ಗಳನ್ನು ಸಂಗ್ರಹಿಸಲಾಗುತ್ತಿದೆ. ರೋಟರಿ ಮತ್ತಿತರ ಸಂಸ್ಥೆಗಳಿಂದ ಇದಕ್ಕೆ ಅಗತ್ಯವಾದ ಉಪಕರಣಗಳನ್ನು ಪಡೆಯಲು ಕ್ರಮ ವಹಿಸಲಾಗಿದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಬಲಯುತಗೊಳಿಸಲು ಅನುವಾಗುವಂತೆ ಇಂಟರ್ನೆಟ್ ಒದಗಿಸುವ ಸಂಸ್ಥೆಗಳ ಸಭೆ ಕರೆಯಲು ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಲ್ಲಿ ಟಿ.ವಿ.:
    ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಲ್ಲಿ ಟಿ.ವಿ. ವ್ಯವಸ್ಥೆ ಮಾಡಿ ಅಲ್ಲಿಗೆ ಯಾರ ಮನೆಯಲ್ಲಿ ಟಿ.ವಿ. ಸೆಟ್ ಇಲ್ಲವೋ ಅಂತಹ ಮಕ್ಕಳು ತಮ್ಮ ತರಗತಿಗೆ ನಿಗದಿಪಡಿಸಿದ ಪಠ್ಯಗಳನ್ನು ದೂರದರ್ಶನ ಚಂದನಾ ವಾಹಿನಿ ವೀಕ್ಷಿಸುವಂತಹ ವೇದಿಕೆಯನ್ನು ಕಲ್ಪಿಸುವ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಅದು ಪ್ರಗತಿಯಲ್ಲಿದೆ ಎಂದೂ ಸಚಿವರು ತಿಳಿಸಿದರು.

    ಪರೀಕ್ಷೆ ಬರೆಯಲು ಉತ್ಸುಕರಾಗಿದ್ದೇವೆ:
    ಅನೇಕ ರಾಜ್ಯಗಳು ಮಂಡಳಿ ಪರೀಕ್ಷೆಯನ್ನು ರದ್ದು ಮಾಡಿದ ಸಂದರ್ಭದಲ್ಲಿ ಯಾವುದೇ ರೂಪದಲ್ಲೇ ಆಗಲಿ ಪರೀಕ್ಷೆ ನಡೆಸುವ ಮೂಲಕ ನಮ್ಮ ಆತ್ಮವಿಶ್ವಾಸ ಮೂಡಿಸಿದ್ದಲ್ಲದೇ ನಮ್ಮ ಪ್ರತಿಭೆ, ಸಾಮರ್ಥ್ಯ ಪ್ರದರ್ಶನಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟು, ಪರೀಕ್ಷೆಯಿಲ್ಲದೇ ಉತ್ತೀರ್ಣರಾದವರೆಂದು ಜೀವನವಿಡೀ ಕಾಡುತ್ತಿದ್ದ ಮುಜುಗರ/ ತಪ್ಪಿತಸ್ಥ ಭಾವನೆಯಿಂದ ನಮ್ಮನ್ನು ಮುಕ್ತಗೊಳಿಸಿದ್ದಕ್ಕೆ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಇಂದು ಸಂವಾದದಲ್ಲಿ ಭಾಗಿಯಾದ ಮಕ್ಕಳು ಹರ್ಷ ವ್ಯಕ್ತಪಡಿಸಿದರು.

    ಈಗಾಗಲೇ ಪರೀಕ್ಷಾ ಮಂಡಳಿಯಿಂದ ಕಳಿಸಿದ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಒಎಂಆರ್ ಶೀಟ್ ಗಳಲ್ಲಿ ಉತ್ತರಿಸಿದ್ದೇವೆ. ನಮಗೆ ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಕ್ಕಳು ಅಭಿಪ್ರಾಯಪಟ್ಟರು. ಪರೀಕ್ಷೆ ಅಂಕಗಳು, ಪರೀಕ್ಷಾ ಸಮಯ ಕುರಿತು ತಮ್ಮ ಆತಂಕ/ಗೊಂದಲಗಳನ್ನು ನಿವಾರಿಸಿಕೊಂಡ ಮಕ್ಕಳು ರಫ್ ವರ್ಕ್ ಗೆ ಪ್ರಶ್ನೆ ಪತ್ರಿಕೆಯೊಂದಿಗೆ ಹೆಚ್ಚುವರಿ ಹಾಳೆಗಳನ್ನು ಒದಗಿಸುವ ಮಂಡಳಿ ಕ್ರಮವನ್ನು ಮುಕ್ತಕಂಠದಿಂದ ಸ್ವಾಗತಿಸಿ ಹರ್ಷವ್ಯಕ್ತಪಡಿಸಿದರು. ಬಹುತೇಕ ಮಕ್ಕಳು ಪರೀಕ್ಷಾ ವೇಳೆ ನಿಗದಿ ಕುರಿತು ಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷೆ ಕುರಿತು ಕೈಗೊಂಡ ವಿವಿಧ ಕ್ರಮಗಳು, ಪರೀಕ್ಷಾ ಪಾವಿತ್ರ್ಯತೆಯ ಕ್ರಮಗಳನ್ನು ಮಕ್ಕಳು ಶ್ಲಾಘಿಸಿದರು.

    ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ತಮ್ಮೂರಿಗೆ ಇನ್ನು ಪೂರ್ಣಪ್ರಮಾಣದಲ್ಲಿ ಬಸ್ ಸಂಚಾರವಿಲ್ಲದೇ ಇರುವುದರಿಂದ ಬಸ್ ಸೌಲಭ್ಯ ಒದಗಿಸುವ ಕುರಿತ ಅವಳ ಆತಂಕ ನಿವಾರಿಸಿದ ಸಚಿವರು ಬಸ್ ಸೌಲಭ್ಯ ಒದಗಿಸುವ ಕುರಿತು ಇಂದು ನಿಮ್ಮ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗುವುದು. ನೀವು ಪರೀಕ್ಷೆ ತಯಾರಾಗುವುದಕ್ಕೆ ಮಾತ್ರವೇ ತಮ್ಮ ಏಕಾಗ್ರತೆ ಇರಲಿ ಎಂದು ಸುರೇಶ್ ಕುಮಾರ್ ಅಭಯ ನೀಡಿದರು.

    ಪರೀಕ್ಷೆ ಬರೆಯಲು ಸಾಕ್ಷಿ:
    ಕಾರವಾರ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷಿ ಎಂಬ ವಿದ್ಯಾರ್ಥಿನಿ, ʼನೀವು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತದೆ ಮತ್ತು ಪರೀಕ್ಷೆ ಬರೆಯುವ ಮೂಲಕವೇ ನಮ್ಮ ಸಾಮಥ್ರ್ಯ ಸಾಬೀತು ಪಡಿಸಲು ಅವಕಾಶ ನೀಡಿರುವುದರಿಂದ ನಾವೆಲ್ಲ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಲು ಸಿದ್ಧವಾಗಿರುವುದಕ್ಕೆ ನಾನೇ ಸಾಕ್ಷಿʼ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದಾಗ ಮುಕ್ತ ಸಂವಾದದಲ್ಲಿ ಭಾಗಿಯಾದ ರಾಜ್ಯದ 1000ಕ್ಕೂ ಹೆಚ್ಚು ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿ ತಾವೆಲ್ಲ ಪರೀಕ್ಷೆ ಬರೆಯಲು ದಿನಗಣನೆ ಮಾಡುತ್ತಿರುವುದನ್ನು ಮುಕ್ತವಾಗಿ ಹಂಚಿಕೊಂಡರು.

    ಪರೀಕ್ಷೆ ನಡೆಸದೇ ಹೋಗಿದ್ದರೆ ನಾವು ಕೊರೋನಾ ಬ್ಯಾಚ್ ನಲ್ಲಿ ಪರೀಕ್ಷೆ ಬರೆಯದೇ ಪಾಸಾದವರೆಂಬ ಒಂದು ಅಪಖ್ಯಾತಿ ನಮ್ಮ ಮೇಲೆ ಉಳಿದುಬಿಡುತ್ತಿತ್ತೇನೋ ಎಂಬ ಆತಂಕ ನಮ್ಮಲ್ಲಿ ಉಳಿಯದಂತೆ ಮಾಡಿದ್ದಕ್ಕೆ ನಾವು ಕರ್ನಾಟಕ ಸರ್ಕಾರಕ್ಕೆ ನಮ್ಮ ಕೃತಜ್ಞತೆಗಳನ್ನು ತಿಳಿಸಲು ಈ ವೇದಿಕೆಯನ್ನು ಮೊದಲು ಬಳಸಿಕೊಳ್ಳುತ್ತೇವೆಂದು ಅನೇಕ ಮಕ್ಕಳು ಹೇಳಿದ್ದು ವೈಯಕ್ತಿಕವಾಗಿ ನಮ್ಮ ಅಧಿಕಾರಿಗಳು, ಶಿಕ್ಷಕರು ಮತ್ತು ನಮಗೆಲ್ಲರಿಗೂ ಅತ್ಯಂತ ಖುಷಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

    ಇಳಿಮುಖವಾದ ಕೊರೋನಾ- ಭಯ ಬೇಡ:

    ನಾವು ಪರೀಕ್ಷೆ ಮಾಡಲು ಮುಂದಾದಾಗ ನಮ್ಮ ಮುಖ್ಯಮಂತ್ರಿಯವರು ಕೊರೋನಾ ಪ್ರಕರಣಗಳು ಕಡಿಮೆಯಾದರೆ ಮಾತ್ರವೇ ಪರೀಕ್ಷೆ ಮಾಡಲು ಮುಂದಾಗುತ್ತೇವೆ ಎಂದು ಹೇಳಿದಂತೆ ಈಗ ನಾವು ಪರೀಕ್ಷೆ ನಡೆಸಲು ಮುಂದಾಗಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕಳೆದ ವರ್ಷ ಪರೀಕ್ಷೆ ನಡೆಸಿದಾಗ ಕೊರೋನಾ ಪಾಸಿಟಿವಿಟಿ ದರ 13.2ರಷ್ಟಿದ್ದರೆ ಅದು ಈ ವರ್ಷ 1.7ರ ಆಸುಪಾಸಿನಲ್ಲಿದೆ, ಈ ಬಾರಿಯ ಪರೀಕ್ಷೆ ಕಳೆದ ಬಾರಿಯ ಪರೀಕ್ಷೆಗಿಂತ ಹೆಚ್ಚಿನ ಸುರಕ್ಷಿತ ವಾತಾವರಣದಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ದ್ವಿಗುಣವಾಗಿವೆ. ಪರೀಕ್ಷಾ ಕೊಠಡಿಗಳು ಮೂರು ಪಟ್ಟು ಹೆಚ್ಚಾಗಿವೆ. ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ. ಕೇವಲ ಎರಡೇ ದಿನಗಳ ಕಾಲ ಪರೀಕ್ಷೆ ನಡೆಯುವುದರಿಂದ ಯಾವುದೇ ತೊಂದರೆಗೆ ಅವಕಾಶವೇ ಇಲ್ಲ. ರಾಜ್ಯದ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಮತ್ತು ಪರೀಕ್ಷೆಗಳು ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿರುವ ಕುರಿತು ನಮಗೆಲ್ಲಾ ಭರವಸೆಯಿದ್ದು ತಮ್ಮ ಪೋಷಕರು ನಮ್ಮನ್ನು ಧೈರ್ಯವಾಗಿ ಪರೀಕ್ಷೆಗೆ ಕಳಿಸಲು ಉತ್ಸುಕರಾಗಿದ್ದಾರೆಂದು ಮಕ್ಕಳು ಹೇಳಿದರು.

    ರಾಜ್ಯದ 34ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಕಚೇರಿ ಮತ್ತು ಡಯಟ್ ಕೇಂದ್ರಗಳಲ್ಲಿ ಹಾಜರಿದ್ದ ಮಕ್ಕಳು ಸಚಿವರೊಂದಿಗೆ ಪರೀಕ್ಷೆ ಕುರಿತ ತಮ್ಮ ಶಂಕೆಗಳನ್ನು ನಿವಾರಿಸಿಕೊಂಡರು. 90 ಮಕ್ಕಳು ನೇರವಾಗಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

    ಶೇ. 98ರಷ್ಟು ಸಿಬ್ಬಂದಿ ವ್ಯಾಕ್ಸಿನೇಷನ್:
    ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ 1,33,926 ಸಿಬ್ಬಂದಿಗಳಲ್ಲಿ 1,30,522 ಮಂದಿ ಮೊದಲ ಡೋಸ್ ಕೊರೋನಾ ವ್ಯಾಕ್ಸಿನೇಷನ್ ಪಡೆದಿದ್ದಾರೆ. 48,938 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಶೇ. 98 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. 3404 ಮಂದಿ ಇನ್ನೆರೆಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆಂದು ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪರೀಕ್ಷೆ ನಡೆಸಲು ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ:
    ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆ ಇಲ್ಲವೇ ಹಠದ ವಿಷಯವಲ್ಲ. ಪರೀಕ್ಷೆ ಕೈಬಿಡುವುದು ಯಾರಿಗೇ ಆಗಲಿ ಸುಲಭದ ಸಂಗತಿ. ಆದರೆ ನಾವು ನಮ್ಮ ಮಕ್ಕಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ ಅವರ ಮುಂದಿನ ಶಿಕ್ಷಣ ಅಯ್ಕೆಯ ಅನುಕೂಲಕ್ಕಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸಚಿವರು ಪುನರುಚ್ಛರಿಸಿದರು. ಪರೀಕ್ಷೆ ನಡೆಸುವುದರಲ್ಲಿ ಶಿಕ್ಷಣ ಇಲಾಖೆಯ ಯಾವುದೇ ರಹಸ್ಯ ಕಾರ್ಯಸೂಚಿಯೇನಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

    ರಾಜ್ಯದ ಆರೋಗ್ಯ ಇಲಾಖೆ ಮತ್ತು ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿದ ನಿರ್ದೇಶನದ ಆಧಾರದಲ್ಲೇ ಅವರು ರೂಪಿಸಿದ ಎಸ್ಒಪಿಯನ್ವಯವೇ ಪರೀಕ್ಷೆ ನಡಯುತ್ತಿದೆ. ಅದಕ್ಕೆ ರಾಜ್ಯದ ಮುಖ್ಯಮಂತ್ರಿಯವರೂ ಅನುಮೋದನೆ ನೀಡಿದ್ದಾರೆಂದೂ ಸುರೇಶ್ ಕುಮಾರ್ ತಿಳಿಸಿದರು.

    ಶೀಘ್ರವೇ ಕಾರ್ಯಪಡೆ ಕಾರ್ಯಾರಂಭ:
    ಬರುವ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ನಿರಂತರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಲು ಸಾಶಿಇ ಆಯುಕ್ತರ ನೇತೃತ್ವದಲ್ಲಿ ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ಶಿಕ್ಷಣದ ಮುಂದುವರಿಕೆ ಕುರಿತಂತೆ ಕ್ರಿಯಾಯೋಜನೆಯನ್ನು ರೂಪಿಸಲಿದೆ ಎಂದು ಸಚಿವರು ವಿವರಿಸಿದರು.

    ಜುಲೈ ಕೊನೇ ವಾರದಲ್ಲಿ ಪಿಯುಸಿ ಫಲಿತಾಂಶ:

    ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳನ್ನು ಜುಲೈ 20ರ ಆಸುಪಾಸಿನಲ್ಲಿ ಪ್ರಕಟಿಸಲಾಗುವುದು ಎಂದು ಸುರೇಶ್ ಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
    ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಎಲ್ಲ ಜಿಲ್ಲೆಗಳ ಡಿಡಿಪಿಐಗಳು, ಡಯಟ್ ಪ್ರಾಚಾರ್ಯರು ಭಾಗವಹಿಸಿದ್ದರು.

    error: Content is protected !!