ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಸಾಗುವ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಈ ಬಾರಿ ಚಾಮುಂಡಿಬೆಟ್ಟದಿಂದ ಅಲಂಕೃತ ವಾಹನದಲ್ಲಿ ನಾದಸ್ವರ ವಿವಿಧ ಕಲಾತಂಡಗಳ ಜೊತೆಗೆ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತಿದೆ.
ವಿಜಯದಶಮಿಯ ದಿನವಾದ ಶುಕ್ರವಾರ ಬೆಳಗ್ಗೆ 8:00 ಗಂಟೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡುವರು.
ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿ ತರುವ ಅಲಂಕೃತ ವಾಹನದೊಂದಿಗೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷ, ಚಂಡೆ, ನವದುರ್ಗೆಯರು ಸಾಗುವರು. ತಾವರಕಟ್ಟೆ, ಇಟ್ಟಿಗೆಗೂಡು, ಹಾರ್ಡಿಂಚ್ ವೃತ್ತದ ಮೂಲಕ ಅರಮನೆ ಪ್ರವೇಶಿಸಲಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್. ನಾಗೇಂದ್ರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಮೈಸೂರು ಮಹಾನಗರ ಪಾಲಿಕೆಯ ಸದಸ್ಯರುಗಳು, ಮತ್ತಿತರ ಗಣ್ಯರು ಸೇರಿ ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡುವರು.
ಬೆಂಗಳೂರು ರಾಜಾಜಿನಗರ 2ನೇ ಹಂತದಲ್ಲಿರುವ ಶುಭಾ ಪ್ರಕಾಶ್ ಅವರು ತಲೆ ತಲಾಂತರದಿಂದ ಬಂದ ಗೊಂಬೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ . ಈ ಬಾರಿ ಅವರ ಮನೆಯ ಗೊಂಬೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರ ಸ್ಲೈಡ್ ಶೋ ಇಲ್ಲಿದೆ.
ಕನ್ನಡಪ್ರೆಸ್ .ಕಾಮ್ ನ ದಸರಾ ಸಂಗೀತೋತ್ಸವ ಅಂತಿಮ ಹಂತದದತ್ತ ಬಂದಿದ್ದು ಆಯುಧ ಪೂಜೆಯಾದ ದಿನವಾದ ಇಂದು ಎರಡು ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.
ಮೊದಲ ಕಾರ್ಯಕ್ರಮವನ್ನು ಲಕ್ಷ್ಮಿ ಶ್ರೇಯಾಂಷಿ , ಶಶಿಕಲಾ ಮತ್ತು ಆನಂದ್ ನಾಯ್ಕ್ ನಡೆಸಿಕೊಟ್ಟಿದ್ದಾರೆ.
ಶಾಸ್ತ್ರೀಯ ಮತ್ತು ಸುಗಮ ಸಂಗೀತದಲ್ಲಿ ಅತೀವ ಆಸಕ್ತಿ ಹೊಂದಿರುವ ಲಕ್ಷ್ಮಿ ಶ್ರೇಯಾಂಷಿ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಅವರ ಬಳಿ ಸುಗಮ ಸಂಗೀತ ಕಲಿತ್ತಿದ್ದಾರೆ. ಶಾಸ್ತ್ತೀಯ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ. ಚಂದನ ವಾಹಿನಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಆರ್ ವಿ ಕಾಲೇಜಿನಲ್ಲಿ ಉದ್ಯೋಗದಲ್ಲಿರುವ ಶಶಿಕಲಾ ಅವರು ಕೂಡ ಮಂಜುಳಾ ಗುರುರಾಜ್ ಅವರ ಬಳಿ ಸುಗಮ ಸಂಗೀತ ಅಭ್ಯಾಸ ಮಾಡಿದ್ದಾರೆ. ವೃತ್ತಿಯಿಂದ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಆನಂದ್ ನಾಯ್ಕ್ ಅವರು ಹಿಂದೂಸ್ತಾನಿ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ. ಚಂದನ ಸೇರಿದಂತೆ ಹಲವು ವಾಹಿನಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ನಿನ್ನ ನಂಬಿದೆ ದೇವನೆ ದೇವರ ದೇವ
ಈ ದಿನದ ಮತ್ತೊಂದು ಕಾರ್ಯಕ್ರಮವನ್ನು ಅರುಣ್ ಕುಮಾರ್. ಶ್ಯಾಮಲಾ, ಜಯಶೀಲ , ಮಮತಾ ಮತ್ತು ಭಾರತಿ ಅವರು ನಡೆಸಿಕೊಟ್ಟಿದ್ದಾರೆ.
ಅರುಣ್ ಕುಮಾರ್ ಕರೋಕೆ ಸಂಗೀತದಲ್ಲಿ ಸುಪ್ರಸಿದ್ಧರು. ಹಿಂದೀ, ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಗೀತೆಗಳನ್ನು ಸೊಗಸಾಗಿ ಹಾಡಬಲ್ಲರು. ಶ್ಯಾಮಲಾ ಅವರು ಭಕ್ತಿ ಗೀತೆಗಳನ್ನು ಭಾವ ತುಂಬಿ ಹಾಡಬಲ್ಲರು. ಜಯಶೀಲ ಅವರು ಆರ್ .ಕೆ ಪದ್ಮನಾಭ ಅವರ ಬಳಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಮಮತಾ ಅವರು ದಾಸರ ಪದಗಳನ್ನು ಭಕ್ತಿ ತುಂಬಿ ಹಾಡುತ್ತಾರೆ. ಭಾರತಿ ಅವರು ಸುಗಮ ಸಂಗೀತವನ್ನು ಅಚ್ಚು ಕಟ್ಟಾಗಿ ಹಾಡುತ್ತಾರೆ,
ಆಲಿಸಿ , ವೀಕ್ಷಿಸಿ ಹಾಗೇಯೇ ನಮ್ಮ ಚಾನಲ್ ಗೆ subscribe ಆಗಿರಿ.
ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡತಿ ಶ್ರುತಿ ಕೋಡನಾಡ್ ಅವರು ಇಂದಿನ ನವರಾತ್ರಿ ಸಂಗೀತ ಸಂಜೆಯನ್ನು ನಡೆಸಿಕೊಟ್ಟಿದ್ದಾರೆ.
ಮೂಲತಃ ಚಿತ್ರದುರ್ಗದವರಾದ ಶ್ರುತಿ ಕೋಡನಾಡ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಗಮಕ ಕಲೆಯನ್ನು ಗಮಕ ಕಲಾನಿಧಿ ಶ್ರೀಮತಿ ಚಂಪಕಾ ಶ್ರೀಧರ್ ಇವರಲ್ಲಿ ಅಭ್ಯಾಸ ಮಾಡಿದ್ದಾರೆ.ಚಿಕ್ಕವಯಸ್ಸಿನಲ್ಲೇ ತಮ್ಮ ತಾಯಿ ಗಮಕಿ ಶ್ರೀಮತಿ ಮಂಜುಳಾ ದತ್ತಾತ್ರೇಯ ಅವರಿಂದ ಗಮಕ ಕಲೆಗೆ ಪರಿಚಿತರಾಗಿರುತ್ತಾರೆ.
ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಗಮಕ ವಾಚನ ಹಾಗೂ ಹಾಗೂ ರೂಪಕ ಕಾರ್ಯಕ್ರಮಗಳನ್ನು ನೀಡಿದ್ದು, ಪ್ರಮುಖವಾಗಿ ಹೊಸಳ್ಳಿಯಲ್ಲಿ ಗಮಕ ಗಂಧರ್ವ ಶ್ರೀ ಕೇಶವಮೂರ್ತಿರವರ ಸಮ್ಮುಖದಲ್ಲಿ ಗಮಕ ವಾಚನ ಮತ್ತು ೯ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ(2013)ರಲ್ಲಿ ‘ಕುವೆಂಪು ರಾಮಾಯಣದರ್ಶನಂ’ ಗಮಕ ರೂಪಕದಲ್ಲಿ ಭಾಗವಹಿಸಿರುತ್ತಾರೆ.
ಹಲವೆಡೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಮತ್ತು ಆಕಾಶವಾಣಿಯಲ್ಲೂ ಹಾಡಿರುತ್ತಾರೆ.ಇವರು ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿದ್ದು ನೃತ್ಯ, ನಾಟಕ, ಕರಕುಶಲ ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.
ಪ್ರಸ್ತುತ ಶ್ರುತಿಯವರು ತಮ್ಮ ಪತಿ ಅಂಜನ್ ರಾಘವೇಂದ್ರ ಅವರೊಂದಿಗೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದು ಅಲ್ಲಿನ ಕನ್ನಡ ಸಂಘ ಹಾಗೂ ವಿವಿಧ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇಂದಿನ ಸಂಚಿಕೆಯಲ್ಲಿ ದುರ್ಗಾಷ್ಟಮಿ ಬಗ್ಗೆ ಭಾರತಿ ಅವರು ನೀಡಿರುವ ವಿವರಣೆಯೂ ಅಡಕವಾಗಿದೆ.
ಆಲಿಸಿ, ವೀಕ್ಷಿಸಿ ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ subscribe ಆಗಿರಿ
ಸಹಕಾರ ಸಚಿವರು ಹಾಗೂ ಮೈಸೂರು -MYSURU_ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್- S T SOMASHEKAR_ ಅವರು ಬುಧವಾರ ಟಾಂಗಾದಲ್ಲಿ ನಗರ ಪ್ರದಕ್ಷಿಣೆ ಹಾಕುವ ಮೂಲಕ ಟಾಂಗಾ ಸವಾರಿ ಮಾಡಲು ಪ್ರವಾಸಿಗರಿಗೆ ಪರೋಕ್ಷವಾಗಿ ಪ್ರೇರೇಪಿಸಿದರು.
ಒಂದು ಕಾಲದಲ್ಲಿ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದ ಟಾಂಗಾ ಸವಾರಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಅದರಲ್ಲೂ ದಸರಾ ಸಂದರ್ಭದಲ್ಲಿ ಟಾಂಗಾದಲ್ಲಿ ಮೈಸೂರು ಸುತ್ತುವ ಪ್ರವೃತ್ತಿ ಕಡಿಮೆಯಾಗುತ್ತಿರುವ ದಿನಗಳಲ್ಲಿ ಸಚಿವರ ಟಾಂಗಾ ಸವಾರಿ ಮೈಸೂರಿನ ಜನತೆಯನ್ನು ಆಕರ್ಷಿಸಿತು.
ನಗರದ ಗವರ್ನಮೆಂಟ್ ಹೌಸ್ ನಿಂದ ಅರಮನೆ -MASURU PALACE_ವೇದಿಕೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸಚಿವರು ನಗರದ ದೀಪಾಲಂಕಾರ, ದಸರಾ ನೋಡಲು ಆಗಮಿಸಿದ ಪ್ರವಾಸಿಗರನ್ನು ಕಂಡು ಸಂತಸಪಟ್ಟರು.
ಸಚಿವರು ಟಾಂಗಾ ಸವಾರಿ ವೇಳೆ ಮೂಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಅರಣ್ಯ ವಸತಿ ಮತ್ತು ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಹಲವರು ಜೊತೆಯಲ್ಲಿದ್ದರು.
BENGALURU OCT 13 ರಾಜ್ಯದ ಗಡಿ ಭಾಗಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ದಸರಾ ಮುಗಿದ ಕೂಡಲೇ ಕೋವಿಡ್ ತಜ್ಞರ ಸಮಿತಿಯ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಕರ್ನಾಟಕಕ್ಕೆ ಹೊಂದಿಕೊಂಡಿರುವ ಕೇರಳ ಮತ್ತು ಮಹಾರಾಷ್ಟ್ರ ದಲ್ಲಿ ಇರುವ ಕೋವಿಡ್ ಪರಿಸ್ಥಿತಿ ಬಗ್ಗೆ ತಜ್ಞರು ಮೌಲ್ಯಮಾಪನ ಮಾಡುತ್ತಿದ್ದಾರೆ. ದಸರಾ ಹಬ್ಬದ ಬಳಿಕ ಕೋವಿಡ್ ತಜ್ಞರ ಸಭೆ ಕರೆಯಲಾಗುವುದು. ಗಡಿ ಜಿಲ್ಲೆಗಳಲ್ಲಿ ಈಗಿರುವ ನಿರ್ಬಂಧಗಳನ್ನು ಸಡಿಲಮಾಡುವ ಕುರಿತು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ಸಂಬಂಧವೂ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು. 2 ವರ್ಷದಿಂದ 18 ವರ್ಷಗಳ ವಯೋಮಾನದವರಿಗೆ ಕೋವಿಡ್ ಲಸಿಕೆ ಹಾಕುವ ಕುರಿತು ಪ್ರಯೋಗ ಕೊನೆ ಹಂತದಲ್ಲಿದೆ. ಅದಕ್ಕೆ ಎಲ್ಲಾ ರೀತಿಯ ಒಪ್ಪಿಗೆ ದೊರೆತ ತಕ್ಷಣ ಮಕ್ಕಳು ಮತ್ತು ಯುವ ವಯಸ್ಕರಿಗೆ ಲಸಿಕೆ ಹಾಕಲಾಗುವುದು. ಒಟ್ಟಾರೆ ಲಸಿಕೆ ಹಾಕುವುದರಲ್ಲಿ ಕರ್ನಾಟಕ ಮುಂದಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ಪ್ರಕರಣಗಳನ್ನು ದಾಖಲಿಸಿ, ಚಾರ್ಜ್ ಶೀಟ್ ಹಾಕಲಾಗಿರುವ ಬಗ್ಗೆ ಸುದ್ದಿಗಾರರು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ , ಪೊಲೀಸ್ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಮಕ್ಕಳಿಗೆ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರದ ಪ್ರಮಾಣೀಕರಣದ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಉಡುಪಿಯಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳು ಮತ್ತು ಹದಿ ಹರೆಯದವರಿಗೆ ಕೋವಿಡ್ ಲಸಿಕೆ ಪರೀಕ್ಷೆ ಕೊನೆಯ ಹಂತ ತಲುಪಿದೆ. ಇದಕ್ಕೆ ಒಪ್ಪಿಗೆ ಸಿಕ್ಕ ತಕ್ಷಣ ಲಸಿಕೆ ಹಾಕಲಾಗುವುದು ಎಂದರು.
ಈಗಾಗಲೇ ಲಸಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಮುಂದಿದ್ದು, ಸುಮಾರು 82 ರಷ್ಟು ಮೊದಲನೇ ಡೋಸ್ ಹಾಗೂ ಶೇ. 37 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಶೇ 90 ರಷ್ಟು ಮೊದಲನೇ ಹಾಗೂ ಶೇ 75 ರಷ್ಟು ಎರಡನೇ ಡೋಸ್ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದೆ ಎಂದರು.
ಮತಾಂತರ ನಿಷೇಧ ಕಾಯ್ದೆ:ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಚಿಂತನೆ ಮಾಡಿದ್ದು, ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ಈ ಕಾಯ್ದೆಯ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಆದಷ್ಟು ಬೇಗನೆ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುವುದೆಂದು ಮುಖ್ಯಮಂತ್ರಿಗಳು ತಿಳಿಸಿದರು
ಕನ್ನಡಪ್ರೆಸ್.ಕಾಮ್ ದಸರಾ ಗೊಂಬೆ ಹಬ್ಬಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಇನ್ ಬಾಕ್ಸ್ ಬಿರಿಯುವಷ್ಟು ಗೊಂಬೆ ಚಿತ್ರಗಳು ನಮ್ಮನ್ನು ತಲುಪತ್ತಿವೆ. ಇಂದು ಕೆಲವು ಗೊಂಬೆ ಮನೆಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.
ಇಂದು ದುರ್ಗಾಷ್ಟಮಿ. ದುರ್ಗೆಯು ಪಾರ್ವತಿಯ ಮತ್ತೊಂದು ರೂಪ . ಶಕ್ತಿ ಸ್ವರೂಪಿಣಿಯಾದ ಪಾರ್ವತಿಯನ್ನು ದುರ್ಗೆ, ಚಾಮುಂಡೇಶ್ವರಿ, ಕಾಳಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.ಕರ್ನಾಟಕದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ನಿರ್ಮಾಣವಾದ ಮಹಿಷಮರ್ದಿನಿಯರ ಶಿಲ್ಪಗಳ ಬಗ್ಗೆ ತಿಳಿದುಕೊಳ್ಳೋಣ.
ಆಶ್ವಯುಜ ಮಾಸದ ಶುದ್ಧ ಪಾಡ್ಯದಿಂದ ದಶಮಿವರೆಗೆ ಆಚರಿಸುವ ಹಬ್ಬಕ್ಕೆ ದಶಹರ ,ದಶರಾತ್ರಿ ಅಥವಾ ದಸರ ಎಂದು ಹೆಸರು .ಕೆಲವು ಪ್ರದೇಶಗಳಲ್ಲಿ ಈ ಹಬ್ಬವನ್ನು ಒಂಬತ್ತು ದಿನಗಳು ಮಾತ್ರ ಆಚರಿಸುವುದರಿಂದ ನವರಾತ್ರಿ ಎಂದೂ ಕರೆಯುತ್ತಾರೆ.ದೇವತೆಗಳಿಗೂ ದಾನವರಿಗೂ ನಡೆದ ಸಮರದಲ್ಲಿ ದೇವತೆಗಳು ದಾನವರನ್ನು ಸಂಹರಿಸಿ ವಿಜಯ ಪಡೆದುದರ ಪ್ರತೀಕವಾಗಿ ಈ ಹಬ್ಬವನ್ನು ಅನಾದಿಕಾಲದಿಂದಲೂ ಆಚರಿಸುತ್ತಾ ಬಂದಿರುವುದನ್ನು ಗುರುತಿಸಬಹುದು.
ನವರಾತ್ರಿಯಲ್ಲಿ ಆಶ್ವಯುಜ ಅಷ್ಟಮಿಯಂದು ದುರ್ಗೆಯ ಆರಾಧನೆಯನ್ನು ಮಾಡುತ್ತಾರೆ.ದುರ್ಗೆಯು ಪಾರ್ವತಿಯ ಮತ್ತೊಂದು ರೂಪ .ಶಕ್ತಿ ಸ್ವರೂಪಿಣಿಯಾದ ಪಾರ್ವತಿಯನ್ನು ದುರ್ಗೆ, ಚಾಮುಂಡೇಶ್ವರಿ, ಕಾಳಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.ಆಕೆಯು ಮಹಿಷನನ್ನು ಸಂಹರಿಸಿದುದರಿಂದ ಮಹಿಷಮರ್ದಿನಿಯಾದಳು.
ದುರ್ಗೆಯು ಮಹಿಷಾಸುರನನ್ನು ಮೈಸೂರಿನಲ್ಲಿ ಕೊಂದಳೆಂಬ ಐತಿಹ್ಯವಿದೆ.ಈ ಐತಿಹ್ಯಕ್ಕೆ ಪೂರಕವೆನ್ನು ವಂತೆ ರಾಜ್ಯದ ಹಲವಾರು ದೇವಾಲಯಗಳಲೆಲ್ಲಾ ಸುಂದರವಾದ ಮಹಿಷಮರ್ದಿನಿಯರ ವಿಗ್ರಹಗಳಿವೆ.
ರಾಜ್ಯದ ಬೇರೆ ಊರುಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ನಿರ್ಮಾಣವಾದ ಮಹಿಷಮರ್ದಿನಿಯರ ಶಿಲ್ಪಗಳು ಇಲ್ಲಿವೆ.
1 ಐಹೊಳೆಯ ಮಹಿಷಮರ್ದಿನಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿಗೆ ಸೇರಿರುವ ಐಹೊಳೆಯ ದುರ್ಗಾ ದೇವಾಲಯದ ಹೊರಭಿತ್ತಿಯಲ್ಲಿರುವ ದೇವಕೋಷ್ಠದಲ್ಲಿ ಈ ವಿಗ್ರಹವಿದೆ.ತಿಳಿಹಳದಿಬಣ್ಣದ ಮರಳುಗಲ್ಲಿನಿಂದ ನಿರ್ಮಿಸಲಾಗಿರುವ ಬಾದಾಮಿ ಚಾಲುಕ್ಯ ಶೈಲಿಯ ಈ ವಿಗ್ರಹವು ಪ್ರಾಚೀನತೆಯ ದೃಷ್ಟಿಯಿಂದ ಮಹತ್ವ ಪೂರ್ಣವಾಗಿದ್ದು ಸುಮಾರು ಏಳನೆಯ ಶತಮಾನಕ್ಕೆ ಸೇರುವುದು.ಅಷ್ಠಭುಜಗಳ ದೇವಿಯು ತನ್ನೆಡಗಾಲನ್ನು ಮಹಿಷನ ಮೇಲಿಟ್ಟು ತುಳಿದು,ಬಲಗೈಯಲ್ಲಿರುವ ತ್ರಿಶೂಲ ದಿಂದ ತಿವಿಯುತ್ತಿರುವಳು.ಆಕೆಯ ವಾಹನವಾದ ಸಿಂಹವು ದೇವಿಯ ಬಲಪಾದದ ಬಳಿ ಇದೆ.
2.ಹಳೇಆಲೂರಿನ ವಿಜಯಕಾಳಿ ಚಾಮರಾಜನಗರ ಜಿಲ್ಲೆ ಹಾಗೂ ಅದೇತಾಲ್ಲೂಕಿನ ಸುವರ್ಣನದಿ( ಹೊನ್ನ ಹೊಳೆ) ತೀರದಲ್ಲಿರುವ ಒಂದು ಗ್ರಾಮ ಹಳೆಆಲೂರು. ಚಾಮರಾಜನಗರ – ಯಳಂದೂರು ರಸ್ತೆಯಲ್ಲಿ,ಚಾಮರಾಜನಗರದಿಂದ ಸುಮಾರು ಒಂಬತ್ತು ಕಿ.ಮೀ.ದೂರದಲ್ಲಿದೆ.ಇಲ್ಲಿ ಹತ್ತನೆಯ ಶತಮಾನಕ್ಕೆ ಸೇರುವ ಆರ್ಕೇಶ್ವರ ದೇವಾಲಯವಿದೆ. ಈ ದೇವಾಲಯದ ಆವರಣದಲ್ಲಿ ಇಲ್ಲಿ ದೊರೆತ ಹಲವಾರುಶಿಲ್ಪಗಳನ್ನು ಪುರಾತತ್ವ ಇಲಾಖೆಯವರು ಬಹಳ ಅಚ್ಚು ಕಟ್ಟಾಗಿ ಜೋಡಿಸಿರುವರು.
ಇಲ್ಲಿರುವ ಚಾಮುಂಡಿಯ ಶಿಲ್ಪವು ಬಹಳ ಭಿಭತ್ಸವಾಗಿದೆ. ಕೋರೆದಾಡೆ,ಕೆದರಿದ ಕೂದಲು,ಕೆಂಡದಂತ ಕಣ್ಣುಗಳು ,ರೌದ್ರತೆಯನ್ನು ಸೂಸುತ್ತಿರುವ ಈ ಅಷ್ಟಭುಜೆ ದುರ್ಗೆಯ ಶಿಲ್ಪವನ್ನು ವಿದ್ವಾಂಸರುಗಳು ಬಾಳರೆತ್ತ ಬಟಾರಿ ಎಂತಲೂ ಇದನ್ನು ವಿಜಯಕಾಳಿಯ ಶಿಲ್ಪವೆಂತಲೂ ಕರೆದಿರುವರು.ಕಣ ಶಿಲೆಯಲ್ಲಿ ಮಾಡಿರುವ ಈ ದೇವಿಯು ಸುಮಾರು ಒಂಬತ್ತನೆಯ ಶತಮಾನಕ್ಕೆ ಸೇರಿದ್ದು ತನ್ನ ರೌದ್ರತೆಯಿಂದ ಗಮನ ಸೆಳೆಯುತ್ತದೆ.
3.ಕೂಡಲೂರಿನ ವೈಷ್ಣವಿದುರ್ಗೆ ರಾಮನಗರ ಜಿಲ್ಲೆ,ಚನ್ನಪಟ್ಣಣ ತಾಲ್ಲೂಕು,ಕೂಡ್ಲೂರು ಗ್ರಾಮವು ಚನ್ನಪಟ್ಟಣದಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ.ಇಲ್ಲಿ ಹಲವಾರು ದೇವಾಲಯಗಳಿವೆ.ಇವುಗಳಲ್ಲಿ ಬಹಳ ದೇವಾಲಯಗಳು ಗಂಗರಸರ ಕಾಲಕ್ಕೆ ಸೇರುವುದು. ಕೂಡ್ಲೂರಿನ ಕಲ್ಯಾಣಿಯ ಸಮೀಪ ಒಂದು ಸುಂದರ ದುರ್ಗೆಯ ಶಿಲ್ಪವಿದೆ ,ಕಣ ಶಿಲೆಯಿಂದ ಮಾಡಿದ ದುರ್ಗೆಯು ಬಹಳ ಸತ್ವಶಾಲಿಯಾಗಿದೆ.ದುರ್ಗೆಯು ಅತ್ಯಂತ ಮನೋಹರವಾಗಿ ಅಷ್ಟಭುಜೆಯಾಗಿದ್ದು ಹಸನ್ಮುಖಳಾಗಿರುವಳು. ದೇವಿಯ ಮೇಲಿನ ಕೈಗಳಲ್ಲಿ ಶಂಖ ,ಚಕ್ರಗಳನ್ನು ಹಿಡಿದಿರುವಳು. ಈಕೆಯು ಧರಿಸಿರುವ ವಸ್ತ್ರಗಳು ,ಆಯುಧಗಳು ಗಮನ ಸೆಳೆಯುವುದು.ಕೂಡ್ಲೂರಿನ ದುರ್ಗೆಯು ಸುಮಾರು ಒಂಬತ್ತು- ಹತ್ತನೆಯ ಶತಮಾನಕ್ಕೆ ಸೇರುವಳು.
4. ಕುಣಿಗಲ್ಲಿನ ದುರ್ಗೆ ತುಮಕೂರು ಜಿಲ್ಲೆಗೆ ಸೇರಿದ ತಾಲ್ಲೂಕು ಕೇಂದ್ರವಾದ ಕುಣಿಗಲ್ಲಿನ ಸೋಮೇಶ್ವರ ದೇವಾಲಯದಲ್ಲಿರುವ ಈ ವಿಗ್ರಹವು ಗಂಗರ ಶೈಲಿಯಲ್ಲಿರುವ ಒಂದು ಅತ್ಯುತ್ತಮ ವಿಗ್ರಹವೆಂದು ಹೇಳಬಹುದು. ಚತುರ್ಭುಜಗಳ ದೇವಿಯು ಚಕ್ರ,ಶಂಖ,ಬಿಲ್ಲು ಹಾಗೂ ಖಡ್ಗಗಳನ್ನು ಧರಿಸಿದ್ದಾಳೆ.ಕತ್ತರಿಕಾಲನ್ನು ಹಾಕಿಕೊಂಡು ತ್ರಿಭಂಗಿಯಲ್ಲಿ ಮಹಿಷನ ಮೇಲೆ ನಿಂತಿರುವ ದೇವಿಯ ಎಡಬಲಗಳಲ್ಲಿ ಜಿಂಕೆ ಹಾಗೂ ಸಿಂಹಗಳಿವೆ.ಇದುಕ್ರಿ.ಶ.ಸುಮಾರು ಒಂಬತ್ತನೆಯ ಶತಮಾನದ ವಿಗ್ರಹವಾಗಿದೆ.
5. ಮುನವಳ್ಳಿಯ ಮಹಿಷಮರ್ದಿನಿ ಮುನವಳ್ಳಿಯು ಬೆಳಗಾವಿ ಜಿಲ್ಲೆ ,ಸವದತ್ತಿ ತಾಲ್ಲೂಕಿನಲ್ಲಿದ್ದು ಸವದತ್ತಿಯಿಂದ ೧೪ ಕಿ.ಮೀ ದೂರದಲ್ಲಿ ಮಲಪ್ರಭಾ ದಂಡೆಯ ಮೇಲಿರುವ ಗ್ರಾಮ .ಶಾಸನಗಳಲ್ಲಿ ಮುನಿಪುರ,ಮುನೀಂದ್ರವಳ್ಳಿ ಮುನೋಳಿ ಎಂದು ಕರೆದಿರುವ ಮುನವಳ್ಳಿಯಲ್ಲಿ ಸುಂದರವಾದ ಪಂಚಲಿಂಗೇಶ್ವರ ದೇವಾಲಯವಿದೆ.ಬಹು ದೊಡ್ಡ ಆವರಣ ಹೊಂದಿರುವ ಮುನವಳ್ಳಿಯ ಪಂಚಲಿಂಗೇಶ್ವರ ದೇವಾಲಯದ ನವರಂಗದಲ್ಲಿ ಹನ್ನೊಂದನೆಯ ಶತಮಾನಕ್ಕೆ ಸೇರುವ ಚಾಮುಂಡೇಶ್ವರಿಯ ಮೂರ್ತಿಯಿದೆ.ಅಷ್ಟಭುಜಗಳನ್ನು ಹೊಂದಿರುವ ದೇವಿಯು ಸುಮಾರು ನಾಲ್ಕು ಅಡಿ ಎತ್ತರದಲ್ಲಿದ್ದು ಕೈಗಳಲ್ಲಿ ಶಂಖ,ಚಕ್ರ,ಬಿಲ್ಲು ಬಾಣ ಮುಂತಾದ ಆಯುಧಗಳನ್ನು ಧರಿಸಿದ್ದು ಸಿಂಹವಾಹನೆಯಾಗಿರುವಳು.ಕೋಣದ ತಲೆಯಿಂದ ಹೊರಬರುತ್ತಿರುವ ಮಹಿಷನನ್ನು ಒಂದು ಕೈನಲ್ಲಿ ಅದುಮಿಕೊಂಡು ಮತ್ತೊಂದು ಕೈಯಲ್ಲಿರುವ ತ್ರಿಶೂಲದಿಂದ ಚುಚ್ಚಿಕೊಲ್ಲುತ್ತಿರುವಳು. ಮುನವಳ್ಳಿಯ ಚಾಮುಂಡೇಶ್ವರಿಯ ಕಾಲವು ಸುಮಾರು ಹನ್ನೊಂದನೆಯ ಶತಮಾನದ ಕಲ್ಯಾಣಿಚಾಲುಕ್ಯರ ಕಾಲಕ್ಕೆ ಸೇರುವುದು.
6. ಅಘಲಯದ ಮಹಿಷಮರ್ದಿನಿ ಮಂಡ್ಯ ಜಿಲ್ಲೆ ,ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯದಲ್ಲಿ ಹೊಯ್ಸಳರು ನಿರ್ಮಿಸಿದ ಸುಂದರ ಮಲ್ಲೇಶ್ವರ ದೇವಾಲಯ ವಿದೆ.ದೇವಾಲಯವು ಮೂರು ಗರ್ಭಗೃಹವನ್ನು ಹೊಂದಿದ್ದು ಪ್ರತಿ ಗರ್ಭಗೃಹಗಳಲ್ಲಿ ಶಿವಲಿಂಗಗಳಿವೆ. ಗರ್ಭಗೃಹಗಳ ಮುಂದಿರುವ ನವರಂಗದ ಇಕ್ಕಡೆಗಳಲ್ಲಿ ತಲಾ ಒಂದು ಗಣಪತಿ ಹಾಗೂ ಮಹಿಷಮರ್ದಿನಿಯರ ಸುಂದರ ಮೂರ್ತಿಗಳಿವೆ.ಹೊಯ್ಸಳ ಶೈಲಿಯ ಬಳಪದ ಕಲ್ಲಿನ ಈ ವಿಗ್ರಹವು ಅಷ್ಟಭುಜಗಳನ್ನು ಹೊಂದಿದ್ದು ಅತ್ಯದ್ಭುತ ಶಿಲ್ಪವಾಗಿ ಕಲಾತ್ಮಕ ವಾಗಿದೆ.ತನ್ನ ಎಡಗಾಲಿನಲ್ಲಿ ಮಹಿಷಾಸುರನನ್ನು ತುಳಿದಾಗ ಕೂಡಲೆ ಹೊರಬಂದು ತನ್ನ ನಿಜರೂಪಧಾರಣೆ ಮಾಡಿರುವ ರಕ್ಕಸನನ್ನು ಎಡಗೈಯಲ್ಲಿ ಹಿಡಿದು ತ್ರಿಶೂಲದಿಂದ ಇರಿದಿದ್ದಾಳೆ ದೇವಿ.ರಕ್ಕಸನ ಜೊತೆಗಾರನನ್ನು ತನ್ನ ಖಡ್ಗದಿಂದ ತಿವಿದು ಸಂಹಾರ ಮಾಡಿರುವಳು.ಹೊಯ್ಸಳ ಶೈಲಿಯ ಅತ್ಯಂತ ಸುಂದರವಾದ ಈ ವಿಗ್ರಹವು ೧೩ ನೆಯ ಶತಮಾನದ್ದಾಗಿದೆ.
7.ಯಳಂದೂರಿನ ಮಹಿಷಮರ್ದಿನಿ
ಚಾಮರಾಜನಗರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾದ ಯಳಂದೂರಿನಲ್ಲಿ ಗೌರೀಶ್ವರ ದೇವಾಲಯವಿದೆ. ಈ ದೇವಾಲಯದ ವಿಶೇಷವಿರುವುದೇ ಇಲ್ಲಿಯ ಸುಂದರವಾದ ಮುಖ ಮಂಟಪ. ಕ್ರಿ.ಶ.೧೬೫೪ ಹದಿನಾಡು ಪ್ರಾಂತ್ಯದ ದೊರೆ ಮುದ್ದುಭೂಪಾಲನಿಂದ ಈ ಕಲಾತ್ಮಕ ಮುಖಮಂಟಪ ಸ್ಥಾಪಿಸಲ್ಪಟ್ಟಿತು.ಸುಮಾರು ಹನ್ನೆರಡು ಅಡಿ ಎತ್ತರದ ಪ್ರವೇಶ ದ್ವಾರದಲ್ಲಿರುವ ಮಹಿಷಮರ್ದಿನಿಯ ಶಿಲ್ಪವು ಬಹಳ ಸೊಗಸಾಗಿದೆ. ಹಲವಾರು ಬಾಹುಗಳಲ್ಲಿ ಆಯುಧಗಳನ್ನು ಧರಿಸಿರುವ ದೇವಿಯು ಕೋಣದಿಂದ ಹೊರಬಂದ ಮಹಿಷನನ್ನು ಸಂಹರಿಸುತ್ತಿರುವಳು. ದೇವಿಯು ರಕ್ಕಸನನ್ನು ಚುಚ್ಚಿದ ಕತ್ತಿಯು ದೇಹದಿಂದ ಹೊರಬಂದಂತೆ ಹಾಗೂ ಈಕೆಯ ವಾಹನವಾದ ಸಿಂಹವು ಒಬ್ಬ ರಕ್ಕಸನ ಕಾಲನ್ನು ಕಚ್ಚಿಹಿಡಿದಂತೆ ನೈಜವಾಗಿ ಚಿತ್ರಿಸಲಾಗಿದೆ. ಶಿಲ್ಪದಲ್ಲಿ ಚಲನಶೀಲತೆಯನ್ನು ಗುರುತಿಸಬಹುದು.
8. ನಂಜನಗೂಡಿನ ಚಾಮುಂಡೇಶ್ವರಿ ಮೈಸೂರು ಜಿಲ್ಲೆಯ ನಂಜನಗೂಡುನಲ್ಲಿ ಕಪಿಲ ನದಿ ತೀರದಲ್ಲಿ ಒಂದು ಚಾಮುಂಡೇಶ್ವರಿಯ ದೇವಾಲಯ ವಿದೆ.ಮೈಸೂರಿನ ಚಾಮುಂಡೇಶ್ವರಿ ದೇವಾಲಯದಷ್ಟೇ ಪ್ರಸಿದ್ಧವಾದ ಈ ದೇವಾಲಯವು ಮೂಲತಃ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಾಣವಾಗಿದ್ದು ಇತ್ತೀಚೆಗೆ ಪುನರುತ್ಥಾನಗೊಂಡಿದೆ. ಅಷ್ಟಭುಜಗಳನ್ನು ಹೊಂದಿರುವ ಮಹಿಷಮರ್ದಿನಿಯು ಸಿಂಹವಾಹಿನಿಯಾಗಿರುವಳು.ದೇವಿಯು ನಾಲ್ಕು ಅಡಿ ಪೀಠದ ಮೇಲೆ ಆಸೀನಳಾಗಿರುವಳು.ಮಹಿಷಮರ್ದಿನಿಗೆ ವಿಜಯದಶಮಿಯ ಶುಭದಿನ ಬಹಳ ವಿಶೇಷ. ನವರಾತ್ರಿಯ ಹತ್ತೂ ದಿನವು ವಿಶೇಷ ಅಲಂಕಾರಗಳನ್ನು ಮಾಡುತ್ತಾರೆ. ಸಪ್ತಮಿಯ ದಿನದ ಕಾಳರಾತ್ರಿಯ ಅಲಂಕಾರ ಬಹಳ ಭವ್ಯವಾಗಿರುತ್ತದೆ.ಮೈಸೂರಿನ ಚಾಮುಂಡೇಶ್ವರಿ ತೇರಿನ ದಿನವೆ ಇಲ್ಲಿ ಸಂಜೆ ದೀವಿಗೆ ರಥೋತ್ಸವ ಬಹಳ ವೈಭವವಾಗಿ ಜರುಗುತ್ತದೆ.ನಂಜನಗೂಡಿನ ನಂಜುಂಡೇಶ್ವರನಿಗೆ ನಡೆಯುವ ಎಲ್ಲಾ ರಥಗಳು ಈ ಚಾಮುಂಡೇಶ್ವರಿಯ ದೇವಾಲಯದ ಮುಂದೆ ಹಾದು ಹೋಗಿ ದೇವಿಯ ಪೂಜೆ ಸಲ್ಲಿಸಿ ಮುಂದೆಸಾಗುವುದು ಇಲ್ಲಿಯ ಸಂಪ್ರದಾಯ.
9. ಬೆಂಗಳೂರು ನಗರ್ತರ ಪೇಟೆಯ ಚಾಮುಂಡೇಶ್ವರಿ ಬೆಂಗಳೂರಿನ ಕೇಂದ್ರದಲ್ಲಿರುವ ನಗರ್ತರ ಪೇಟೆಯಲ್ಲಿ ಅನೇಕ ದೇವಾಲಯಗಳಿವೆ.ಇಲ್ಲಿರುವ ಚಾಮುಂಡೇಶ್ವರಿ ದೇವಾಲಯವೂ ಸಹಾ ಅಪಾರ ಸಂಖ್ಯೆಯ ಭಕ್ತ ವೃಂದವನ್ನು ಹೊಂದಿರುವುದು .ಸುಮಾರು ೨೫೦ ವರ್ಷಗಳ ಹಿಂದಿನ ದೇವಿಯು ಎಂಟು ಬಾಹುಗಳನ್ನು ಹೊಂದಿದ್ದು ದೇವಿಯ ಬಲಗಡೆ ಆಕೆಯ ವಾಹನ ಸಿಂಹವಿದೆ.ಇಲ್ಲಿ ಕೋಣವು ದೇವಿಯ ವಿರುದ್ಧ ದಿಕ್ಕಿನಡೆ ಮುಖಮಾಡಿರುವುದು ವಿಶೇಷ.
ಕೆಂಗೇರಿ ಚಕ್ರಪಾಣಿ ಅವರು ನಾಡಿನ ಹಿರಿಯ ಛಾಯಗ್ರಾಹಕರು ಹಾಗೂ ಇತಿಹಾಸ ಸಂಶೋಧಕರು. ಸಹಪಾಠಿ ಮುನಿ ಅಂಜನಪ್ಪನವರ ಪ್ರೇರಣೆಯಿಂದ ಛಾಯಾಗ್ರಹಣವನ್ನು ಹವ್ಯಾಸವಾಗಿ ಬೆಳೆಸಿಕೊಂಡ ಚಕ್ರಪಾಣಿ ಅದನ್ನು ದೇವಾಲಯಗಳ ಚಿತ್ರೀಕರಣಕ್ಕೆ ಬಳಸಿಕೊಂಡರು. ಇತಿಹಾಸ ತಜ್ಞ ಡಾ.ಎಚ್. ಎಸ್ .ಗೋಪಾಲರಾವ್. ಡಾ. ದೇವರಕೊಂಡಾರೆಡ್ಡಿ, ಡಾ. ಪಿ.ವಿ .ಕೃಷ್ಣಮೂರ್ತಿ,ಡಾ. ಕೆ. ಆರ್. ಗಣೇಶ್ ಅವರ ಮಾರ್ಗದರ್ಶನದಿಂದ ದೇವಾಲಯಗಳ ಇತಿಹಾಸ ಅಧ್ಯಯನದಲ್ಲಿ ಆಸಕ್ತಿ ಬೆಳೆಯಿತು. ದೂರಸಂಪರ್ಕ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಹೋದ್ಯೋಗಿಗಳ ಒತ್ತಾಸೆಯಂತೆ ತಾವು ಸೆರೆಹಿಡಿದ ಛಾಯಚಿತ್ರಗಳ ಪ್ರದರ್ಶನ ಏರ್ಪಡಿಸಲು ಆರಂಭಿಸಿದರು. ಈಗ ಅವರಬಳಿ 2000ಕ್ಕೂ ಹೆಚ್ಚು ಛಾಯಚಿತ್ರಗಳ ಸಂಗ್ರಹ ಇದೆ. ನಾಡಿನಾದ್ಯಂತ ಈ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗವನ್ನು ಕಟ್ಟಿಕೊಂಡು ಅದರ ಮೂಲಕ ಮಿತ್ರರನ್ನು ಪುರಾತನ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಪರಿಚಯಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರದಲ್ಲಿ ತೊಡಗಿಕೊಂಡಿರುವ ಧರ್ಮಸ್ಥಳದ ಶ್ರೀ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್ ಇವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.
ಕನ್ನಡಪ್ರೆಸ್.ಕಾಮ್ ದಸರಾ ಸಂಗೀತೋತ್ಸವ ಇಂದು ವಿಶಿಷ್ಟ ಗೀತೆಗಳೊಂದಿಗೆ ಪ್ರಸ್ತುತವಾಗುತ್ತಿದೆ. ಕನ್ನಡ ದಾಸ ಸಾಹಿತ್ಯದ ಮಹನೀಯರ ಕೃತಿಗಳನ್ನು ಡಾ. ಸುಚೇತಾ ಸುಶ್ರಾವ್ಯವಾಗಿ ಹಾಡು ಮೂಲಕ ನಮ್ಮ ಸಂಗೀತೋತ್ಸವನ್ನು ಮತ್ತೊಂದು ಎತ್ತರಕ್ಕೆ ತಲುಪಿಸಿದ್ದಾರೆ.
ವೃತ್ತಿಯಿಂದ ದಂತ ವೈದ್ಯೆಯಾಗಿರುವ ಡಾ. ಸುಚೇತಾ ಅವರಿಗೆ ಸಂಗೀತದಲ್ಲಿ ಆಸಕ್ತಿ. ಹೀಗಾಗಿ ಪತಿಯ ಜೊತೆ ಸೇರಿ ಸಾರಂಗ ಸಂಗೀತ ಶಾಲೆ ನಡೆಸುತ್ತಿದ್ದಾರೆ. ವಿದ್ವಾನ್ ಪಲ್ಲವಿ ಸಿ ವರದರಾವ್, ಸರೋಜ ಸಿದ್ಧಾಂತಿ ಮತ್ತು ವಿದುಷಿ ವೃಂದಾ ಆಚಾರ್ಯ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದಾರೆ.
ಶ್ರೀವ್ಯಾಸರಾಯರು
ಶ್ರೀ ಅಣ್ಣಮಾಚಾರ್ಯರು
ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ
ಹೆಳವನಕಟ್ಟೆ ಗಿರಿಯಮ್ಮ
ಶ್ರೀನಾರಾಯಣ ತೀರ್ಥರು
ಶ್ರೀಪುರಂದರದಾಸರು
ಶ್ರೀಶ್ರೀಪಾದರಾಜರು
ಶ್ರೀವಾದಿರಾಜ ತೀರ್ಥರು
ಇಂದಿನ ಸಂಚಿಕೆಯನ್ನು ಶ್ರೀವ್ಯಾಸರಾಯರ ಗಜಮುಖನೆ ಸಿದ್ಧಿದಾಯಕನೆ ವಂದಿಸೆ ಶರಣು ಎನ್ನುವವ ಕೃತಿಯ ಮೂಲಕ ಆರಂಭಿಸುವ ಸುಚೇತಾ ಮುಂದೆ ಶ್ರೀ ನಾರಾಯಣ ತೀರ್ಥರ ಸಕಲಲೋಕ ಧಾರಾ ಕೃತಿಯನ್ನು ಭಾವತುಂಬಿ ಹಾಡಿದ್ದಾರೆ.
ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಸ್ವಾಮಿಗಳ ತ್ರಿಪುರ ಮಾಲಿನಮ್ ವಂದೇ ಕೃತಿಯನ್ನು ಹಾಡಿದ ನಂತರ ಹೆಳವನಕಟ್ಟೆ ಗಿರಿಯಮ್ಮನ ಈತ ರಂಗನಾಥ ಹರಿಯು ಆತ ಲಿಂಗನಾಥ ಹರನು ಎಂಬ ಗೀತೆಯನ್ನು ಹಾಡಿ ಭಕ್ತಿಪೂರ್ವಕವಾಗಿ ನಮಿಸುತ್ತಾರೆ. ನಂತರ ಶ್ರೀಅಣ್ಣಮಾಚಾರ್ಯರ ಭಾವಮು ಲೋನ ಭಾಹ್ಯಮುಲಂದುನು ಎಂದು ಭಾವ ತುಂಬಿ ಹಾಡುತ್ತಾರೆ.
ಇದಾದ ನಂತರ ಶ್ರೀವಾದಿರಾಜ ತೀರ್ಥರ ಸಾರಿದೆನೋ ನಿನ್ನ ವೆಂಕಟರನ್ನ ಎಂದು ಹರಿಯನ್ನು ಕೊಂಡಾಡುತ್ತಾ ಶ್ರೀ ಶ್ರೀಪಾದರಾಜರ ಬಾರೋ ನಮ್ಮ ಮನೆಗೆ ಎಂದು ಶ್ರೀಮನ್ನಾರಾಯಣನನ್ನು ಮನೆಗೆ ಕರೆಯುತ್ತಾರೆ.
ದಾಸ ಶ್ರೇಷ್ಠ ಶ್ರೀಪುರಂದರದಾಸರ ದೇವಕಿ ನಂದನ ನಂದ ಮುಕುಂದ ಹಾಡಿನೊಂದಿಗೆ ಇಂದಿನ ಕಛೇರಿಗೆ ಮಂಗಳ ಹಾಡುತ್ತಾರೆ.
ಆಲಿಸಿ. ವೀಕ್ಷಿಸಿ ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ subscribe ಮಾಡಿ.