25.1 C
Karnataka
Thursday, May 21, 2026
    Home Blog Page 39

    ರಾಜ್ಯದಲ್ಲಿ OMICRON : ಶುಕ್ರವಾರ ತಜ್ಞರೊಂದಿಗೆ ಸಿಎಂ ಸಭೆ; ಹೊಸ ಮಾರ್ಗಸೂಚಿ ಸಂಭವ

    NEW DELHI DEC 2

    ರಾಜ್ಯದಲ್ಲಿ-karnataka- ಎರಡು ಒಮೈಕ್ರಾನ್ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಪರಿಣತರೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-basavaraja bommai- ಅವರು ತಿಳಿಸಿದರು.

    ರಾಜ್ಯದಿಂದ NCBS ಗೆ ಕಳುಹಿಸಿದ್ದ ಮಾದರಿಯಲ್ಲಿ ಕೇಂದ್ರ ಸರ್ಕಾರವು ಇಂದು ಎರಡು ಒಮೈಕ್ರಾನ್ ಪ್ರಕರಣಗಳನ್ನು ದೃಢ ಪಡಿಸಿದೆ. ಆದರೆ ವಿವರವಾದ ಪರೀಕ್ಷಾ ವರದಿ ಬಂದಿಲ್ಲ. ಪ್ರಕರಣಗಳ ಸಂಪೂರ್ಣ ವಿವರ ಪಡೆಯುವಂತೆ ರಾಜ್ಯದ ಆರೋಗ್ಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ನಾಳೆ ಪರಿಣತರು ಹಾಗೂ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹೊಸ ಹೊಸ ತಳಿಗಳ ಸೋಂಕನ್ನು ನಿಯಂತ್ರಿಸುವ ಕುರಿತು ರಾಜ್ಯ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗುವುದು. ಕೇಂದ್ರದ ಪರಿಣತರ ಜೊತೆಗೂ ಈ ಕುರಿತು ಚರ್ಚಿಸಲಾಗುವುದು ಹಾಗೂ ಹೊಸ ಮಾರ್ಗ ಸೂಚಿಯನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

    ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಮತ್ತೊಮ್ಮೆ ಭೇಟಿಯಾಗಿದ್ದೇನೆ. ಈ ಪ್ರಕರಣದ ವಿವರ ಒದಗಿಸುವುದಾಗಿ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಪ್ರಬೇಧದ ಸೋಂಕು ತೀವ್ರ ಸ್ವರೂಪದಲ್ಲ ಎಂದು ತಿಳಿದು ಬಂದಿದೆ ಎಂದು ಅವರು ನುಡಿದರು.

    UPPER BHADRA :ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಕುರಿತು ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ : ಸಿಎಂ

    NEWDELHI DEC 2

    ಡಿಸೆಂಬರ್ 6 ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ , ಆರೋಗ್ಯ , ಕಾನೂನು ಸಚಿವರನ್ನು ಭೇಟಿಯಾದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯ 2 ನೇ ನ್ಯಾಯಾಧಿಕರಣದ ಅಧಿಸೂಚನೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಪ್ರಕಟಣೆ ಮಾಡಿ, ಟ್ರಿಬ್ಯುನಲ್‌ನ ಸಂಪೂರ್ಣ ವರದಿಯ ನಂತರ ಸುಪ್ರೀಂ ಕೋರ್ಟ್ ನ ತೀರ್ಪಿನ ಪರಿಪಾಲನೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರದಿಂದ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.

    ಗೋದಾವರಿ , ಕಾವೇರಿ, ಕೃಷ್ಣಾ ಮಹಾನದಿ ಲಿಂಕ್ ಬಗ್ಗೆ ರಾಜ್ಯದ ಅಹವಾಲನ್ನು ಕೇಳದೇ ಡಿಪಿಆರ್ ಮಾಡಬಾರದು ಹಾಗೂ ರಾಜ್ಯದ ನೀರಿನ ಪಾಲು ಎಷ್ಟು ಎಂಬುದು ನಿಗದಿ ಆಗುವ ವರೆಗೆ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಬಾರದು ಎನ್ನುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

    ಆರೋಗ್ಯ ಹಾಗೂ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಮಾಂಡವೀಯ ಭೇಟಿ:
    ಕೋವಿಡ್ ನಿರ್ವಹಣೆ ಹಾಗೂ ಕೋವಿಡ್ ಹೊಸ ತಳಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ, ರಾಜ್ಯದಲ್ಲಿ ಕೋವಿಡ್ ನಿರ್ವಹಣೆ, ಲಸಿಕೆ ಅಭಿಯಾನದ ಬಗ್ಗೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಅದನ್ನು ಮುಂದುವರೆಸಬೇಕೆಂದು ತಿಳಿಸಿದ್ದಾರೆ.
    ರಾಜ್ಯದಲ್ಲಿ ಲಸಿಕೆ ದಾಸ್ತಾನು ಸಾಕಷ್ಟಿದೆ. ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡುತ್ತದೆ. ರಾಜ್ಯಕ್ಕೆ ಕೇರಳದಿಂದ ಬರುವ ಪ್ರಯಾಣಿಕರನ್ನು ನಿಯಂತ್ರಣ ಮಾಡಿದಂತೆಯೇ ತಮಿಳುನಾಡಿನಿಂದ ಬರುವ ಪ್ರಯಾಣಿಕರ ಮೇಲೂ ನಿಗಾ ವಹಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

    ಹೆಚ್ಚುವರಿ ಡಿ ಎ ಪಿ ಗೆ ಮನವಿ

    ರಾಜ್ಯಕ್ಕೆ ಹೆಚ್ಚುವರಿ ಡಿಎಪಿಗೆ ಕೇಂದ್ರ ರಸಗೊಬ್ಬರ ಸಚಿವರಿಗೆ ಬೇಡಿಕೆ ಸಲ್ಲಿಸಲಾಗಿದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ರಾಜ್ಯಕ್ಕೆ ನಿಗದಿಯಾಗಿರುವ ೪೮ ಸಾವಿರ ಮೆ.ಟನ್ ಡಿಎಪಿಯನ್ನು ಸಂಪೂರ್ಣವಾಗಿ ಪೂರೈಸುವ ಭರವಸೆ ನೀಡಿದ್ದಾರೆ.
    ರಾಜ್ಯದಲ್ಲಿ ಕೋರ್ಟು ಮತ್ತು ಕಾನೂನಿನ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಕೇಂದ್ರ ಕಾನೂನು ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

    ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್‌ನೊಂದಿಗೆ ಮೈತ್ರಿಯ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರದ ವರಿಷ್ಠರೊಂದಿಗೆ ಸಮಾಲೋಚಿಸಿ ಬಿ.ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ನಾಯಕರಾದ ಕುಮಾರಸ್ವಾಮಿಯವರು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯಿಂದಾಗಿ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹೆಚ್ಚಾಗಿದ್ದು, ಲಸಿಕೆಯ ಕೊರತೆ ಇರುವುದನ್ನು ಗಮನಿಸಲಾಗಿದೆ. ಲಸಿಕೆ ಕೊರತೆಯನ್ನು ನೀಗಿಸಿ ಲಸಿಕೆಯನ್ನು ಲಭ್ಯವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಎಸ್.ಆರ್.ವಿಶ್ವನಾಥ್ ಅವರ ಕೊಲೆ ಸಂಚಿನ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಲ್ಲಿರುವ ಮಾಹಿತಿಗಳನ್ನು ಕಲೆಹಾಕಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    1 ಕೋಟಿ ಉದ್ಯೋಗ ಸೃಷ್ಟಿಗೆ `ಯುವ ಸಮೃದ್ಧಿ’ ಕಾರ್ಯಪಡೆ

    BENGALURU DEC 11

    ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸಂಬಂಧ ರಚಿಸಲಾಗಿರುವ ‘ಯುವ ಸಮೃದ್ಧಿ’ ಕಾರ್ಯಪಡೆಯು ಬುಧವಾರ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ‘ಕರ್ನಾಟಕ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ’ವನ್ನು ಸ್ಥಾಪಿಸಲು ಶಿಫಾರಸು ಮಾಡಿದೆ.

    ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಧ್ಯಾಂತರ ವರದಿಯನ್ನು ಸಲ್ಲಿಸಿ, ಇನ್ನು 10 ದಿನಗಳಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ ಎಂದು ತಿಳಿಸಲಾಯಿತು.

    ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮಾದರಿಯಲ್ಲೇ  ಈ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ ಕೂಡ ಸರ್ಕಾರಿ-ಖಾಸಗಿ ಪಾಲುದಾರಿಕೆಯಲ್ಲಿ ಅಸ್ತಿತ್ವಕ್ಕೆ ಬಂದು ಸೆಕ್ಷನ್ 8 ಕಂಪನಿಯಾಗಿರಬೇಕು ಎಂದು ಕಾರ್ಯಪಡೆ ಅಭಿಪ್ರಾಯಪಟ್ಟಿದೆ.

    “ಪ್ರಸ್ತುತ ರಾಜ್ಯದಲ್ಲಿ ಯಾವುದೇ ಏಕೀಕೃತ ವೃತ್ತಿ ಮಾರ್ಗದರ್ಶನ ಕೇಂದ್ರ ಇಲ್ಲವಾಗಿದೆ. ಇರುವ ಕೇಂದ್ರಗಳು ಪ್ರತ್ಯೇಕ ಘಟಕಗಳಂತೆ ಬಿಡಿ ಬಿಡಿಯಾಗಿ ಕೆಲಸ ಮಾಡುತ್ತಿವೆ. ಆದರೆ ಶಾಲಾ ಹಂತದಿಂದ ಶುರುವಾಗಿ ಕಾಲೇಜು ಹಂತ, ಮುಂದುವರಿದು ಉದ್ಯೋಗ ಗಳಿಸುವ ಹಂತದವರೆಗೆ ಮಾರ್ಗದರ್ಶನ ನೀಡುವುದಕ್ಕಾಗಿ ಸಾಮಾನ್ಯ ರೂಪುರೇಷೆ ಸಿದ್ಧಪಡಿಸುವ ಅಗತ್ಯವಿದೆ ಎಂದು ಕಾರ್ಯಪಡೆ ಪ್ರತಿಪಾದಿಸಿದೆ.

    ಡಿಜಿಟಲ್ ಕೌಶಲಗಳನ್ನು ಮೈಗೂಡಿಸಿ ಉದ್ಯಮಶೀಲತಾ ಧೋರಣೆ ಬೆಳೆಸುವುದು, ವೃತ್ತಿ ಮಾಹಿತಿ ನೀಡುವುದು ಹಾಗೂ ಮಾರ್ಗದರ್ಶನ, ಜಿಲ್ಲೆಗಳಲ್ಲಿ ಉದ್ಯಮಶೀಲ ಪರಿಸರ ನಿರ್ಮಾಣ, ಕೃಷಿ ಹಾಗೂ ಕೃಷಿ ತಾಂತ್ರಿಕತೆಗೆ ಉತ್ತೇಜನ, ಈ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲು ಕಾರ್ಯಪಡೆಯು ಸಲಹೆ ನೀಡಿದೆ.

    6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲಗಳನ್ನು ಹಾಗೂ 21ನೇ ಶತಮಾನದ ಕೌಶಲಗಳನ್ನು ಕಲಿಸುವುದಕ್ಕಾಗಿ ರಾಜ್ಯದಾದ್ಯಂತ ‘ವೈಡಬ್ಲು ಎನ್ ಎಕ್ಸ್ ಟಿ ಹಾಗೂ ಯುವ್ಹಾ’ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕೆಂದು ಸಲಹೆ ಕೊಡಲಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ/ ಪಿಯು ಮಂಡಳಿ/ ಐಟಿಐ ಗಳು ಯುನಿಸೆಫ್ ಜೊತೆ ಒಡಂಬಡಿಕೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ವಿವರಿಸಿದರು.

    ಎನ್ಇಪಿ ಅಡಿ ಪದವಿ ಮಟ್ಟದಲ್ಲಿ 8 ಕ್ರೆಡಿಟ್ ಕೋರ್ಸುಗಳನ್ನು ಪ್ರಾರಂಭಿಸಬೇಕು. ಇದಕ್ಕಾಗಿ ಪಠ್ಯಕ್ರಮ ಸಿದ್ಧಪಡಿಸಲು ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಇದನ್ನು ಅಳವಡಿಸುವುದಕ್ಕಾಗಿ ವಿಟಿಯು/ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನೇತೃತ್ವದಲ್ಲಿ ಕಾರ್ಯತಂಡ ರಚಿಸಬೇಕೆಂಬ ಸಲಹೆ ಈ ವರದಿಯಲ್ಲಿದೆ ಎಂದೂ ಸಚಿವರು ತಿಳಿಸಿದರು.

    ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ `ಕೈಗಾರಿಕೋದ್ಯಮ ಸೌಲಭ್ಯ ಪೂರೈಕೆ ಕೇಂದ್ರ’ಗಳನ್ನು ಶೀಘ್ರವೇ ಅಸ್ತಿತ್ವಕ್ಕೆ ತರಬೇಕೆಂದು ವರದಿ ಅಭಿಪ್ರಾಯಪಟ್ಟಿದೆ ಎಂದು ಅವರು ಹೇಳಿದರು.

    ಕೃಷಿ ಮತ್ತು ಕೃಷಿ ತಂತ್ರಜ್ಞಾನಕ್ಕೆ ಒತ್ತು:  ಕೃಷಿ ಮತ್ತು ಕೃಷಿ ತಂತ್ರಜ್ಞಾನದತ್ತ ಯುವಜನರನ್ನು ಸೆಳೆಯಲು ಒತ್ತು ಕೊಡಲಾಗಿದ್ದು, ಈ ನಿಟ್ಟಿನಲ್ಲಿ ರೈತ ಉತ್ಪಾದಕ ಕೇಂದ್ರಗಳನ್ನು ಕೃಷಿ ತಂತ್ರಜ್ಞಾನ ಕಂಪನಿಗಳೊಂದಿಗೆ ಬೆಸೆಯುವ ಮೂಲಕ ಈ ವಲಯದಲ್ಲಿ ಬೇಡಿಕೆಯನ್ನು ಹೆಚ್ಚಿಸಬೇಕೆಂದು ಮತ್ತು `ಕೃಷಿಕಲ್ಪ’ ಉಪಕ್ರಮದಡಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ಹಾಗೂ ಎಸ್ಆರ್ ಎಲ್ಎಂ (ಸ್ಟೇಟ್ ರೂರಲ್ ಲೈವ್ಲಿಹುಡ್ ಮಿಷನ್) ಜತೆಗೂಡಿ ಯುವಜನರಿಗೆ ರಾಜ್ಯ ಮಟ್ಟದ ಕೃಷಿ ತರಬೇತಿ ಯೋಜನೆಗೆ ಚಾಲನೆ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಸ್ವಸಹಾಯ ಗುಂಪುಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಒದಗಿಸಬೇಕೆಂದು ಸಲಹೆ ಕೊಡಲಾಗಿದೆ ಎಂದರು.

    ಕಾರ್ಯಪಡೆಯ ಸಹ ಸಂಚಾಲಕರಾದ ಉದ್ಯಮಿ ಮದನ್ ಪದಕಿ, ಕೌಶಲಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆದ ಕಾರ್ಯಕಾರ್ಯಪಡೆ  ಮುಖ್ಯ ಸ್ಥರಾದ ಎಸ್. ಸೆಲ್ವಕುಮಾರ್, ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಕಾರ್ಯಪಡೆಯ ಮತ್ತೊಬ್ಬ ಸಹ ಸಂಚಾಲಕರಾದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ನವೋದ್ಯಮ ದೂರದರ್ಶಿತ್ವ ಮಂಡಳಿಯ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಇದ್ದರು.

    ಮೇಲ್ಮನೆ : ಜೆಡಿಎಸ್ ಬಿಜೆಪಿ ಮೈತ್ರಿ ದೇವೇಗೌಡರು ದೆಹಲಿಯಿಂದ ಬಂದ ಮೇಲೆ ನಿರ್ಧಾರ : ಕುಮಾರಸ್ವಾಮಿ

    BENGALURU DEC 1

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೆಹಲಿಯಿಂದ ಬಂದ ಮೇಲೆ ವಿಧಾನ ಪರಿಷತ್‌ ಚುನಾವಣೆಯ ಮೈತ್ರಿ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

    ಮೇಲ್ಮನೆ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿಯ ತಮ್ಮ ತೋಟದಲ್ಲಿ ರಾಮನಗರ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಮತದಾರರ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

    ಜೆಡಿಎಸ್‌ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪನವರು ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ʼನವರು ನಮಗೆ ಜೆಡಿಎಸ್‌ ಪಕ್ಷದ ಮತಗಳ ಅಗತ್ಯವಿಲ್ಲ. ಅವರ ಜತೆ ಹೊಂದಾಣಿಕೆ ಪ್ರಶ್ನೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಬೇಡ ಎಂದವರ ಮನೆ ಬಾಗಿಲಿಗೆ ಹೋಗಲಿಕ್ಕೆ ಆಗುತ್ತದೆಯೇ? ಹೀಗಾಗಿ ಯಡಿಯೂರಪ್ಪ ಅವರ ಮನವಿ ಬಗ್ಗೆ ಏನು ತೀರ್ಮಾನ ಕೈಗೊಳ್ಳಬೇಕೋ ಎಂಬುದನ್ನು ಶೀಘ್ರವೇ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.

    ಮೋದಿ ಅವರ ಜತೆ ಗೌಡರು ಚುನಾವಣೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿರಬಹುದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಮೊದಲಿನಿಂದಲೂ ಪ್ರಧಾನಮಂತ್ರಿಗಳು ಮತ್ತು ದೇವೇಗೌಡರ ನಡುವೆ ಉತ್ತಮ ಬಾಂಧವ್ಯವಿದೆ. ಗೌಡರ ಬಗ್ಗೆ ಮೋದಿ ಅವರಿಗೆ ವಿಶೇಷ ಗೌರವವಿದೆ. ಅವರಿಬ್ಬರೂ ಭೇಟಿಯಾಗುವುದು ಹೊಸದೇನಲ್ಲ. ನಾನು ಸಿಎಂ ಆಗಿದ್ದಾಗ ಭೇಟಿಯಾಗಿದ್ದ ಸಂದರ್ಭದಿಂದಲೂ ನನಗೆ ಗೊತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಹಾಸನಕ್ಕೆ ಐಐಟಿ ತರುವ ವಿಚಾರದ ಬಗ್ಗೆ ಮೋದಿ ಅವರ ಜತೆ ಚರ್ಚೆ ನಡೆಸಲು ಹೋಗಿದ್ದಾರೆಂಬ ಮಾಹಿತಿ ಗಮನಿಸಿದ್ದೇನೆ. ಜತೆಗೆ, ವಿಧಾನ ಪರಿಷತ್‌ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಿರಬಹುದು. ಗೌಡರು ದೆಹಲಿಯಿಂದ ವಾಪಸ್‌ ಬಂದ ಮೇಲೆ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡುವೆ ಎಂದರು.

    What is UPA ? There is No UPA- ಯಪಿಎ ಎಂಬುದೇ ಇಲ್ಲ ಎಂದು ಸಾರಿದ ಮಮತಾ

    MUMBAI DEC 1

    ಕಾಂಗ್ರೆಸ್ ನಾಯಕತ್ವದಲ್ಲಿ ಪ್ರಾದೇಶಿಕ ಪಕ್ಷಗಳು ವಿಶ್ವಾಸ ಕಳೆದುಕೊಂಡು ನಿಧಾನವಾಗಿ ದೂರವಾಗುತ್ತಿವೆ. ಇದೀಗ ಯುಪಿಎ ಎಂಬುದೇ ಇಲ್ಲ ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಬುಧವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು ಯುಪಿಎ (ಯುನೈಟಡ್ ಪ್ರೊಗ್ರೆಸಿವ್ ಅಲೆಯನ್ಸ್ ) ಎನ್ನುವುದು ಈಗ ಇಲ್ಲ ಎಂದು ಸಾರಿದ್ದಾರೆ. What is UPA ? There is No UPA ಎಂದು ಕಿಡಿಕಾರಿದ್ದಾರೆ.

    ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಉದ್ದೇಶದಿಂದ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಹೊರಟಿರುವ ಮಮತಾ ನಿನ್ನೆಯಷ್ಟೆ ಶಿವಸೇನಾ ನಾಯಕರನ್ನು ಭೇಟಿ ಮಾಡಿದ್ದರು. ಇನ್ನು ಎರಡು ವರ್ಷ ಬಾಕಿ ಇರುವ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಗಿಂತ ಭಿನ್ನವಾದ ಪ್ರತಿಪಕ್ಷಗಳ ಒಕ್ಕೂಟ ರಚಿಸುವ ಉದ್ದೇಶವನ್ನು ಅವರು ಹೊಂದಿರುವಂತೆ ಕಾಣುತ್ತಿದೆ.

    ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆಯ ಕೆಲವು ವಾರ್ಡ್ ಗಳಲ್ಲಿ ಸಿಪಿಐ-ಎಂ ಅನ್ನು ಹಿಂದಿಕ್ಕಿ ಮುಖ್ಯ ಪ್ರತಿಪಕ್ಷವಾಗಿ ಹೊರ ಹೊಮ್ಮಿದ ಟಿಎಂಸಿ ಬಂಗಾಲದ ಆಚೆೆಗೂ ತನ್ನ ವ್ಯಾಪ್ತಿ ವಿಸ್ತರಿಸುವ ಬಗ್ಗೆ ಎದ್ದಿರುವ ಟೀಕೆ ಟಿಪ್ಪಣಿಗಳ ಬಗ್ಗೆ ಹರಿಹಾಯ್ದ ಮಮತಾ, ಕಾಂಗ್ರೆಸ್ ಪಕ್ಷ ಬಂಗಾಳದಲ್ಲಿ ಸ್ಪರ್ಧಿಸಬಹುದಾದರೆ ನಾವೇಕೆ ಗೋವಾದಲ್ಲಿ ಸ್ಪರ್ಧಿಸ ಬಾರದು ಎಂದು ಕೇಳಿದರು.

    ಶತಾಯ ಗತಾಯ ಬಿಜೆಪಿ ವಿರುದ್ಧ ಹೋರಾಡಲೇ ಬೇಕು, ಎಲ್ಲಾ ಪ್ರಾದೇಶಿಕ ಪಕ್ಷಗಳು ತಮ್ಮ ನೆೆಲೆಯಾಚೆಗಿಂದ ಹೊರಬಂದು ಬಿಜೆಪಿ ವಿರುದ್ಧ ಸಂಘಟಿತರಾಗಿ ಎದುರು ನಿಲ್ಲಬೇಕು ಎಂದರು.

    OMICRON ಕೋವಿಡ್ : ಎಲ್ಲ ಪ್ರಯಾಣಿಕರ ತಪಾಸಣೆ; ಲಾಕ್ ಡೌನ್ ಪ್ರಸ್ತಾವ ಇಲ್ಲ

    HUBBALLI DEC 1
    ಕೋವಿಡ್ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ -Basavaraja Bommai- ಅವರು ತಿಳಿಸಿದರು.ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತಮಾಡುತ್ತಿದ್ದರು.

    ಸುಮಾರು 2500 ಅಂತಾರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುತ್ತಾರೆ. ಕೆಲವರು ಮಂಗಳೂರು ವಿಮಾನ ನಿಲ್ದಾಣಕ್ಕೂ ಬರುತ್ತಾರೆ. ಕಳೆದ ಬಾರಿಯ ಅನುಭವದ ಮೇರೆಗೆ ಈಗಿನಿಂದಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

    ಅನಗತ್ಯ ಆತಂಕ ಬೇಡ ಜನರು ಕೋವಿಡ್ ಹೊಸ ತಳಿಯ ಕುರಿತು ಅನಗತ್ಯ ವಾಗಿ ಆತಂಕಕ್ಕೆ ಒಳಗಾಗಬಾರದು. ಜನರು ಈಗ ತಾನೇ ಆರ್ಥಿಕವಾಗಿ, ಸಾಮಾಜಿಕ ವಾಗಿ ಸುಧಾರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ಡಿಸೆಂಬರ್ 2 ರಂದು ದೆಹಲಿಗೆ

    ಡಿಸೆಂಬರ್ 2 ರಂದು ದೆಹಲಿಗೆ ತೆರಳಲಿದ್ದು, ಆ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿಯಲ್ಲಿರುವ ಕೋವಿಡ್ ಕಾರ್ಯಕರ್ತರು ಲಸಿಕೆ ಪಡೆದು 6 ತಿಂಗಳಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ವೈಜ್ಞಾನಿಕವಾಗಿ ಆಗಿರುವ ಪ್ರಗತಿ ಹಾಗೂ ಕೇಂದ್ರ ಸರ್ಕಾರದ ಶಿಫಾರಸ್ಸುಗಳ ಬಗ್ಗೆ ಚರ್ಚಿಸಲಿರುವುದಾಗಿ ತಿಳಿಸಿದರು.

    ಫ್ರಂಟ್ ಲೈನ್ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವುದು ಸೂಕ್ತ ಎನ್ನುವುದು ತಜ್ಞರ ಅನಿಸಿಕೆ ಕೂಡ ಆಗಿದೆ ಎಂದರು.

    ಈಗಾಗಲೇ ಒಂದು ಮಾದರಿಯನ್ನು ಕೇಂದ್ರ ದ ಎನ್.ಸಿ.ಬಿ.ಎಸ್ ಗೆ ಕಳುಹಿಸಲಾಗಿದೆ. ವರದಿ ಬಂದ ಕೂಡಲೇ ಕ್ರಮ ಜರುಗಿಸಲಾಗುವುದು ಎಂದರು. ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಹಾಗೂ ಲಸಿಕೆ ಹಾಕುವುದನ್ನು ತೀವ್ರಗೊಳಿಸಲಾಗಿದೆ.

    ವಿದೇಶಿ ಪ್ರಯಾಣಿಕರು ಹಾಗೂ ಕೇರಳ ಜಿಲ್ಲೆಯ ವಿದ್ಯಾರ್ಥಿಗಳ ಪರೀಕ್ಷೆಗೆ ಮುಖ್ಯವಾಗಿ ನಿಗಾ ವಹಿಸಿದೆ. ಎಲ್ಲಾ ಜಿಲ್ಲೆಗಳಲ್ಲಿ ಕೇರಳದ ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ ಅವರೆಲ್ಲರ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಧಾರವಾಡದ ಜಿಲ್ಲೆಯಲ್ಲಿ 306 ಜನರು ಪಾಸಿಟಿವ್ ಬಂದಿದ್ದು, 7 ದಿನಗಳ ನಂತರದ ಪರೀಕ್ಷೆಯಲ್ಲಿ ಇಬ್ಬರು ಮಾತ್ರ ಪಾಸಿಟಿವ್ ಇದ್ದಾರೆ ಎಂದರು.ಯಾರಿಗೂ ತೀವ್ರ ಲಕ್ಷಣಗಳಿಲ್ಲದೇ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು. ಸುಮಾರು 7 ಸಾವಿರ ಜನರಿಗೆ ಈಗಾಗಲೇ ಪರೀಕ್ಷೆ ಮಾಡಿದ್ದು, 500 ಮೀಟರ್ ವ್ಯಾಪ್ತಿಯೊಳಗೆ 1000 ಕ್ಕೂ ಹೆಚ್ಚು ಜನರ ಪರೀಕ್ಷೆ ಮಾಡಲಾಗಿದೆ ಎಂದರು.

    ಕಿರಿಯ ವೈದ್ಯರಿಗೆ ಶಿಷ್ಯವೇತನ

    ಕಿರಿಯ ವೈದ್ಯರು ರಾಜ್ಯಾದ್ಯಂತ ಮುಷ್ಕರ ಮಾಡಲಿರುವ ಬಗ್ಗೆ ಪ್ರಶ್ನಿಸಿದಾಗ ಈಗಾಗಲೇ ಹಣವನ್ನು ಬಿಡುಗಡೆ ಮಾಡಿದೇ. ಕೆಲವು ಕಾಲೇಜುಗಳಲ್ಲಿ ದಾಖಲೆಗಳಿಲ್ಲದೆ ಪಾವತಿಗೆ ತೊಂದರೆಯಾಗಿದೆ. ದಾಖಲೆಗಳಿದ್ದವರಿಗೆ ಕೋವಿಡ್ 19 ಹಾಗೂ ಶಿಷ್ಯವೇತನ ಪಾವತಿಸಲು ಈಗಾಗಲೇ ಸೂಚಿಸಲಾಗಿದೆ. 2-3 ದಿನಗಳಲ್ಲಿ ಎಲ್ಲರಿಗೂ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದರು.

    ಹೊಸ ತಾಲ್ಲೂಕುಗಳಿಗೆ ಮೂಲಸೌಕರ್ಯ
    ಹೊಸ ತಾಲ್ಲೂಕುಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲವೆಂದು ಹೈಕೋರ್ಟ್ ಸರ್ಕಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿ, ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಹೊಸ ತಾಲ್ಲೂಕುಗಳಿಗೆ ಒದಗಿಸಲಾಗುವುದು ಎಂದರು.

    ಬಿ.ಜೆ.ಪಿ ಅಭ್ಯರ್ಥಿ ಆಯ್ಕೆ ನಿಶ್ಚಿತ
    ವಿಧಾನ ಪರಿಷತ್ ಚುನಾವಣೆಯಲ್ಲಿ ಹಾವೇರಿಯಿಂದಲೇ ಬಿಜೆಪಿ ಬಂಡಾಯ ಅಭ್ಯರ್ಥಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅವರು ಬಿಜೆಪಿ ಎನ್ನುತ್ತಾರೆ. ಆಮೇಲೆ ಎಪಿಎಂಸಿ ಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅಧ್ಯಕ್ಷರಾಗಿದ್ದರು. ಅವರಿಗೆ ಸ್ಥಿರವಾದ ನಿಲುವಿಲ್ಲ.ಆದರೆ ಅದರಿಂದ ಯಾವ ಪರಿಣಾಮವೂ ಉಂಟಾಗುವುದಿಲ್ಲ. ನಮ್ಮ ಅಭ್ಯರ್ಥಿ ಪ್ರದೀಪ್ ಶೆಟ್ಟರು ಆಯ್ಕೆಯಾಗುವುದು ನಿಶ್ಚಿತ ಎಂದರು.

    ಮೈತ್ರಿ:
    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿರುವ ಬಗ್ಗೆ ಪ್ರಸ್ತಾಪಿಸಿದಾಗ, ದೇವೇಗೌಡರು ಹಾಗೂ ಪ್ರಧಾನಿಗಳು ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅದರಲ್ಲಿ ಸ್ಥಳೀಯವಾಗಿ ಮೈತ್ರಿ ಮಾಡಿಕೊಳ್ಳುವುದೂ ಸೇರಿದೆ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ಯವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

    ಗುತ್ತಿಗೆಗಾರರ ಕಮಿಷನ್ ವಿಚಾರದಲ್ಲಿ ತನಿಖೆಯನ್ನು ಪ್ರಧಾನ ಕಾರ್ಯದರ್ಶಿ ಗಳಿಗೆ ವಹಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ , ಟೆಂಡರ್ ಗೆ ಅನುಮತಿ ನೀಡುವ ಎಂಜಿನಿಯರ್ ಗಳು ಬೇರೆ. ಪ್ರಧಾನ ಕಾರ್ಯದರ್ಶಿ ಗಳು ಮೇಲ್ಮನವಿ ಪ್ರಾಧಿಕಾರವಾಗಿರುವುದರಿಂದ ಅವರಿಗೆ ವಹಿಸಲಾಗಿದೆ ಎಂದರು.

    ಲಾಕ್ ಡೌನ್ ಇಲ್ಲ: ಊಹಾಪೋಹಗಳಿಗೆ ಜನ ಕಿವಿಕೊಡಬಾರದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU OCT 30

    ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಇಲ್ಲ. ಈ ಕುರಿತಂತೆ ಊಹಾಪೋಹಗಳಿಗೆ ಜನ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪುನರುಚ್ಚರಿಸಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಸದ್ಯಕ್ಕೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ. ಜನಜೀವನ ಎಂದಿನಂತೆ ನಡೆಯಬೇಕು. ಹೆಚ್ಚು ಜನರು ಸೇರುವಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಘಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಕೋವಿಡ್ ಬಗ್ಗೆ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ. ಕ್ಲಸ್ಟರ್ ಆಗಿರುವಲ್ಲಿ ವಿಶೇಷ ನಿಗಾ ವಹಿಸಲಾಗಿದೆ ಎಂದರು.

    ಕೋವಿಡ್ ಪರೀಕ್ಷೆ ಹೆಚ್ಚಳ:ಕೋವಿಡ್ ಹೊಸ ತಳಿ ಒಮಿಕ್ರಾನ್ ಕುರಿತು ನಿಗಾ ಇರಿಸಲಾಗಿದೆ. ಈಗಿರುವ ಡೆಲ್ಟಾ ತಳಿಯಿಂದ ಅಲ್ಲಲ್ಲಿ ಕ್ಲಸ್ಟರ್ ಆಗಿದೆ. ಎರಡು ಹಂತಗಳಲ್ಲಿ ಇದನ್ನು ನಿಭಾಯಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡು ತ್ತಿದ್ದು, ವೈಜ್ಞಾನಿಕವಾಗಿ ಕೈಗೊಳ್ಳಬೇಕಿರುವ ಕ್ರಮಗಳನ್ನು ಕೈಗೊಂಡಿದೆ., ಹೆಚ್ಚಿನ ತನಿಖೆಗೆ ಎನ್.ಸಿ.ಬಿ.ಎಸ್ ಗೂ ಮಾದರಿಗಳನ್ನು ಕಳುಹಿಸಲಾಗಿದೆ. ವಿದೇಶಗಳಿಂದ ಬಂದಿರುವ ಪ್ರಯಾಣಿಕರ ಬಗ್ಗೆ ವಿಶೇಷ ನಿಗಾ ಇರಿಸಿದ್ದು, ಸಂಪರ್ಕಿತರ ಪತ್ತೆ ಹಾಗೂ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

    ಕ್ಲಸ್ಟರ್ ಗಳ ಬಗ್ಗೆ ಮಾರ್ಗಸೂಚಿ ಗಳನ್ನು ಬಿಡುಗಡೆ ಮಾಡಿದ್ದು, ಅಲ್ಲಿ ಪಾಲ್ಗೊಂಡಿದ್ದವರ ಪರೀಕ್ಷೆ, 7 ದಿನಗಳ ನಂತರ ಮತ್ತೊಮ್ಮೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಧಾರವಾಡದ ಎಸ್.ಡಿ.ಎಂ ಕಾಲೇಜಿನಲ್ಲಿ ಸುಮಾರು 4 ಸಾವಿರ ಜನರ ಪರೀಕ್ಷೆಯನ್ನು ಮಾಡಲಾಗಿದೆ. ಅದೇ ರೀತಿ ಮೈಸೂರು, ಹಾಸನ ಮತ್ತು ಬೆಂಗಳೂರಿನ ಆನೇಕಲ್y ನಲ್ಲಿನ ಕಸ್ಟರ್ ಗಳಲ್ಲಿ ತಪಾಸಣೆಯನ್ನು ತೀವ್ರ ಗೊಳಿಸಲಾಗಿದೆ.
    ಸಾಮಾನ್ಯ ಪರೀಕ್ಷೆಗಳನ್ನು ಹೆಚ್ಚಿಸಲೂ ಸಹ ಸೂಚನೆ ನೀಡಲಾಗಿದೆ ಎಂದರು.

    ಇಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ರಾಜ್ಯಗಳ ಜೊತೆಗೆ ನಡೆಸುವ ಪರಿಶೀಲನಾ ಸಭೆ ನಡೆಸುತ್ತಿದ್ದು, ಸಭೆಯ ನಂತರ ಪರಿಸ್ಥಿತಿ ಅವಲೋಕಿಸಿ ಕ್ರಮ ವಹಿಸಲಾಗುವುದು ಎಂದರು.

    NEP:ಎನ್ಇಪಿ ಭಾರತ ಕೇಂದ್ರಿತ; ಸಂಶೋಧನೆ, ನಾವೀನ್ಯತೆಗೆ ಒತ್ತು

    BENGALURU NOV 30

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು-New education policy 2020- ಭಾರತ ಕೇಂದ್ರಿತವಾಗಿದ್ದು, ಶಿಕ್ಷಣ ಕ್ರಮದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡುವ ಮೂಲಕ ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಯನ್ನು ಗುರಿಯಾಗಿ ಹೊಂದಿದೆ. ಇದರ ಅನುಷ್ಠಾನದಲ್ಲಿ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಎಜುಕೇಷನ್ ಪ್ರೊಮೋಷನ್ ಸೊಸೈಟಿ ಆಫ್ ಇಂಡಿಯಾ (ಇಪಿಎಸ್ಐ), ಕುಪೇಕಾ ಮತ್ತು ಕಾಮೆಡ್-ಕೆ ಸಂಘಟನೆಗಳು ಜತೆಗೂಡಿ ಮಂಗಳವಾರ ಏರ್ಪಡಿಸಿದ್ದ `ಎನ್ಇಪಿ ಜಾರಿ: ಶಿಕ್ಷಣ ಸಂಸ್ಥೆಗಳಿಗಿರುವ ಅವಕಾಶಗಳು ಮತ್ತು ಸವಾಲುಗಳು’ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಎನ್ಇಪಿ ಜಾರಿಗೊಳಿಸಲು ರಾಜ್ಯ ಸರಕಾರವು ಅಗತ್ಯ ಕ್ರಮಗಳನ್ನೆಲ್ಲ ಕೈಗೊಂಡಿದ್ದು, ಶಾಲಾ ಶಿಕ್ಷಣ, ಉನ್ನತ ಶಿಕ್ಷಣದ ಪಠ್ಯಕ್ರಮ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮತ್ತು ಸುಧಾರಣೆಗಳತ್ತ ಗಮನ ಕೇಂದ್ರೀಕರಿಸಿದೆ. ಇದಕ್ಕೆ ತಕ್ಕಂತೆ ರಾಜ್ಯದಲ್ಲಿ ಬಹುಶಿಸ್ತೀಯ ವಿಧಾನಗಳ ಮೂಲಕ ಮಾದರಿ ಕಾಲೇಜುಗಳನ್ನು ಸ್ಥಾಪಿಸುವ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

    ಎನ್ಇಪಿ ಆಶಯಕ್ಕೆ ತಕ್ಕಂತೆ ರಾಜ್ಯದಲ್ಲಿ ಇನ್ನು 10 ವರ್ಷಗಳಲ್ಲಿ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯು ಆಧುನೀಕರಣಗೊಳ್ಳಲಿದ್ದು, ವಿದ್ಯಾರ್ಥಿಕೇಂದ್ರಿತವಾಗಲಿದೆ. ಪದವಿ ಮಟ್ಟದಲ್ಲಂತೂ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಯಾವುದೇ ವಿಷಯಗಳನ್ನು ಐಚ್ಛಿಕವಾಗಿ ಓದುವ ಮಾದರಿ ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸೂಕ್ತ ವಾತಾವರಣ ನಿರ್ಮಾಣವಾಗಲಿದೆ ಎಂದು ಸಚಿವರು ಪ್ರತಿಪಾದಿಸಿದರು.

    ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಇರಬೇಕೆನ್ನುವುದು ಸರಕಾರದ ಸಂಕಲ್ಪವಾಗಿದೆ. ಇದಕ್ಕಾಗಿ 21ನೇ ಶತಮಾನದ ಅಗತ್ಯಗಳನ್ನು ಪರಿಗಣಿಸಿ, ಜಾಗತಿಕ ಗುಣಮಟ್ಟದ ಬೋಧನೆಗೆ ಒತ್ತು ನೀಡಿದ್ದೇವೆ. ಅಂತಿಮವಾಗಿ ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

    ನೂತನ ಶಿಕ್ಷಣ ನೀತಿಯಲ್ಲಿ ಹೇಳಿರುವಂತೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು ಅಸ್ತಿತ್ವಕ್ಕೆ ಬರಲಿದೆ. ಮೂರು ದಶಕಗಳ ನಂತರ ರೂಪಿಸಿರುವ ಈ ನೀತಿಯು ಲಭ್ಯತೆ, ಸಮಾನತೆ, ಗುಣಮಟ್ಟ ಮತ್ತು ಉತ್ತರದಾಯಿತ್ವಗಳನ್ನು ಪ್ರತಿಪಾದಿಸುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಲಿದೆ ಎಂದು ಅವರು ಹೇಳಿದರು.

    ಕಾರ್ಯಕ್ರಮದಲ್ಲಿ ನವದೆಹಲಿಯಲ್ಲಿರುವ ಎಐಸಿಟಿಇ ಅಧ್ಯಕ್ಷ ಡಾ.ಅನಿಲ್ ದತ್ತಾತ್ರೇಯ ಸಹಸ್ರಬುದ್ಧೆ, ವೆಲ್ಲೂರು ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮತ್ತು ಕುಲಪತಿ ಡಾ.ಜಿ.ವಿಶ್ವನಾಥ, ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ ಕುಲಪತಿ ಎಂ.ಆರ್.ಜಯರಾಂ, ಇಪಿಎಸ್ಐ ನಿರ್ದೇಶಕ ಡಾ.ಎಚ್.ಚತುರ್ವೇದಿ, ಪುಣೆಯಲ್ಲಿರುವ ಎಂಐಟಿ-ಎಡಿಟಿ ವಿವಿ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರೊ.ಮಂಗೇಶ್ ಟಿ.ಕರಾಡ್ ಉಪಸ್ಥಿತರಿದ್ದರು.

    Rain Water Harvesting :ಸಮೃದ್ಧಿಯ ನಾಳೆಗಳಿಗೆ ಇಂದು ನೀರು ಉಳಿಸಿ ಕೊಯ್ಲು ಮಾಡಲು ಶ್ರೀಪಡ್ರೆ ಕರೆ

    MANGALURU NOV 30

    ಓಡೋ ನೀರನ್ನು ನಡೆಯುವ ಹಾಗೆ ಮಾಡಿ,ನಡೆಯುವ ನೀರನ್ನು ತೆವಳುವ ಹಾಗೆ ಮಾಡಿ, ತೆವಳುವ ನೀರನ್ನು ನಿಲ್ಲಿಸಿ,ನಿಂತ ನೀರನ್ನು ಇಂಗಿಸಿ, ಜನಶಕ್ತಿಯಿಂದ ನದಿಗಳಿಗೆ ಮರುಜೀವವನ್ನು ನೀಡಬಹುದು ಎಂದು ಜಲ ಸಂರಕ್ಷಣಾ ತಜ್ಞ ಹಾಗೂ  ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಹೇಳಿದರು.

    ಮಂಗಳೂರು ವಿವಿ ಆವರಣದಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಗಳ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಈ ಸಂದರ್ಭದಲ್ಲಿ ಹ್ಯುಮಾನಿಟೀಸ್ ಬ್ಲಾಕ್ ಬಳಿ   ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮಳೆನೀರು ಕೊಯ್ಲು ವ್ಯವಸ್ಥೆ ಹಾಗೂ ಲೆಕ್ಚರ್ ಹಾಲ್ ಕಾಂಪ್ಲೆಕ್ಸ್ ಹಿಂದೆ ಎರಡು ಲಕ್ಷ ಲೀಟರ್ ಸಾಮರ್ಥ್ಯದ ಮಳೆನೀರು ಕೊಯ್ಲು ವ್ಯವಸ್ಥೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು .ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ (RUSA) ಅನುದಾನದ ಅಡಿಯಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.

    ಸರಾಸರಿ  ವಾರ್ಷಿಕ ಮಳೆ 3500 ಮಿ.ಮೀ ಸುರಿದರೆ ಒಂದು ಚ. ಮೀ. ಮೇಲೆ 3500 ಲೀಟರ್ ,ಒಂದೆಕ್ರೆಯ ಮೇಲೆ, 1.4 ಕೋಟಿ ಲೀಟರ್,ಐದು ಸೆಂಟ್ಸ್ ಮೇಲೆ , 7 ಲಕ್ಷ ಲೀಟರ್ ನಷ್ಟು ನೀರು ಸಂರಕ್ಷಿಸಿದರೆ ನೀರಿನ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಅವರು ವಿವರಿಸಿದರು.  ಸ್ಥಳದಲ್ಲೇ ಮಾಡುವ  ಮಳೆಕೊಯ್ಲಿನಿಂದ ಅನೇಕ ಲಾಭಗಳಿವೆ. ಇದು ಬಡವರಿಗೂ ಎಟಕುವಂಥದ್ದು. ಪೇಟೆ ಒಳಸುರಿ ಬೇಕಿಲ್ಲ.  ‘ಒಂದು ಬಾರಿಯ’ ಕೆಲಸ ಅಷ್ಟೆ. ಏಜೆಂಟರು, ಗುತ್ತಿಗೆದಾರರು ಬೇಕಿಲ್ಲ. ಸುಸ್ಥಿರ ಮತ್ತು ಪರಿಸರಸ್ನೇಹಿ.  ಉಳಿಸಿದ ನೀರು ಗಳಿಸಿದ್ದಕ್ಕೆ ಸಮ. ಆದುದರಿಂದ ನೀರು ಉಳಿಸುವ ಮೂಲಕ ಸಮೃದ್ಧಿಯನ್ನು ಕಾಣಬಹುದು ಎಂದರು .

    ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ . ಎಸ್ . ಯಡಪಡಿತ್ತಾಯ  ಅಧ್ಯಕ್ಷೀಯ ಭಾಷಣ ಮಾಡಿದರು, ” ಪರಿಸರ ಸ್ನೇಹಿ ಚಟುವಟಿಕೆಗಳು ಕೇವಲ ಬಾಯಿ ಮಾತಿನಲ್ಲಿ ಇರದೇ ಇಚ್ಛಾ ಶಕ್ತಿಯಿಂದ ಕಾರ್ಯರೂಪಕ್ಕೆ ತರಬೇಕು. ಶ್ರೀ ಪಡ್ರೆ  ಅವರು ಸಲಹೆ ನೀಡಿರುವಂತೆ ವಿದ್ಯಾರ್ಥಿಗಳ ಮೂಲಕ ಮಂಗಳಗಂಗೋತ್ರಿ ಆವರಣದಲ್ಲಿ ನೀರಿನ ಸಂರಕ್ಷಣೆಯ  ಸಾಕ್ಷ್ಯಚಿತ್ರವನ್ನು ಸಿದ್ಧತೆ ಮಾಡಲಾಗುವುದು;  ಆ ಮೂಲಕ ವಿದ್ಯಾರ್ಥಿಗಳಿಗೆ ಅನುಭವಿಕ  ಕಲಿಕೆಗೆ ಅವಕಾಶ ಮಾಡಿ ಕೊಡಲಾಗುವುದು. ಆದಷ್ಟು ಶೀಘ್ರದಲ್ಲಿ  ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ನ್ನು ಮಳೆನೀರು ಕೊಯ್ಲು ವಲಯವನ್ನಾಗಿ ರೂಪಿಸಲಾಗುವುದು. ನಾವು ಇಂದು ಮಾಡುವ ಸಮಾಜಮುಖಿ  ಕೆಲಸಗಳು  ಶಾಶ್ವತವಾಗಿ  ಉಳಿಯುವಂತಿರಬೇಕು. ಈ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಒಂದು ಅತ್ಯತ್ತಮ ಸಮಾಜಮುಖಿ ಮತ್ತು ಪರಿಸರ ಸ್ನೇಹಿ ಕೆಲಸ ಎಂದರು.

    ಈ ಸಂದರ್ಭದಲ್ಲಿ   ‘ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

    ಕಾರ್ಯಕ್ರಮ ಸಂಯೋಜಕ  ಪ್ರೊ. ಪ್ರಶಾಂತ ನಾಯ್ಕ   ಪ್ರಾಸ್ತಾವಿಕವಾಗಿ ಮಾತನಾಡಿ  ಸರ್ವರನ್ನು ಸ್ವಾಗತಿಸಿದರು. ಕಾರ್ಯಕಾರಿ ಅಭಿಯಂತ ಲವ  ಎಂ. ಡಂಬರ ಉಪಸ್ಥಿತರಿದ್ದರು.RUSA – ನೋಡಲ್ ಅಧಿಕಾರಿ, ಪ್ರೊ.ಕೆ.ಎಸ್.ಜಯಪ್ಪ ವಂದನಾರ್ಪಣೆ ಸಲ್ಲಿಸಿದರು.  ಡಾ.  ಸಬಿತಾ ಅವರು ಅತಿಥಿಗಳನ್ನು ಪರಿಚಯಿಸಿದರು.  ಡಾ. ಧನಂಜಯ ಕುಂಬ್ಳೆ, ಕಾರ್ಯಕ್ರಮ  ನಿರೂಪಣೆ ಮಾಡಿದರು.  ಪ್ರೊ. ಎಂ . ಕೃಷ್ಣಮೂರ್ತಿ, ವಿವಿಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು,   ಸಂಶೋಧನಾ ವಿದ್ಯಾರ್ಥಿಗಳು,  ಸ್ನಾತಕೋತ್ತರ ವಿದ್ಯಾರ್ಥಿಗಳು, ದತ್ತು ಸ್ವೀಕೃತ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

    ACB RAID:ಎಸಿಬಿ ದಾಳಿ ನಂತರ ಮುಂದೇನು?

    ವಾದಿರಾಜ ದೇಸಾಯಿ

    ‘ಆಫೀಸರ್ ಗಳ ಮನೆ ಮೇಲೆ ದಾಳಿಗಳನ್ನು ಮಾಡ್ತಾನೆ ಇರ್ತಾರೆ; ಅಲ್ಲಿ ಸಿಕ್ಕ ದುಡ್ಡು ಏನಾಗುತ್ತದೆ ? ಮುಂದೇನು…?’ಗೃಹಿಣಿಯರೂ ಸೇರಿದಂತೆ ಜನಸಾಮಾನ್ಯರನ್ನು ಈಗ ಕಾಡುತ್ತಿರುವ ಪ್ರಶ್ನೆ ಇದು.

    ಈ ಪ್ರಶ್ನೆಯ ಹಿಂದೆ ಎರಡು ಅಂಶಗಳು ಅಡಗಿವೆ . ಒಂದು ಕುತೂಹಲ , ಇನ್ನೊಂದು ದಾಳಿ ಮಾಡುವ ಅಧಿಕಾರಿಗಳು ಆ ದುಡ್ಡನ್ನು ಪಡೆಯುತ್ತಾರಾ ಎಂಬ ಸಂಶಯ.

    ಈ ವಿಷಯದ ಪ್ರಸ್ತಾಪಕ್ಕೆ ಕಾರಣ ಮೊನ್ನೆ ಮೊನ್ನೆ ನಡೆದ ಎಸಿಬಿಯ (ಭ್ರಷ್ಟಾಚಾರ ನಿಗ್ರಹ ದಳ ) ದಾಳಿಗಳು. ಕಳೆದವಾರ ಬಿಡಿಎ ಕಚೇರಿ ಮೇಲೆ ದಾಳಿ ಬೆನ್ನಲ್ಲೇ ರಾಜ್ಯಾದ್ಯಂತ 15 ಸರ್ಕಾರಿ ನೌಕರರ ಮನೆ ಮೇಲಿನ ದಾಳಿ ಮತ್ತು ಇದೇ ಸಮಯದಲ್ಲಿ ಕೊಬ್ಬರಿ ವರ್ತಕರ ಮನೆ ಹಾಗೂ ಅಂಗಡಿಗಳ ಮೇಲೆ ಆದಾಯ ತೆರಿಗೆ ದಾಳಿಯೂ ಸುದ್ದಿಯಾಯಿತು.

    ಇಂತಹ ದಾಳಿಗಳ ಬಗ್ಗೆ ಜನರು ಈಗೀಗ ಹೆಚ್ಚು ಜಾಗೃತರಾಗುತ್ತಿದ್ದಾರೆ. ಆದರೆ ಕಲ್ಯಾಣ ಕರ್ನಾಟಕದ ಕೆಲವು (ಹಿಂದುಳಿದ) ಭಾಗಗಳಲ್ಲಿ ಜಾಗೃತಿ ಇನ್ನೂ ಅಷ್ಟಾಗಿಲ್ಲ.

    ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ದಾಳಿಯ ನಂತರದ ಪ್ರಕ್ರಿಯೆಗಳ ವಿಷಯ ಬಹುತೇಕವಾಗಿ ಜನರಿಗೆ ಗೊತ್ತಾಗದೇ ಇರುವುದರಿಂದ ನಿರೀಕ್ಷಿತ ಜಾಗೃತಿ ಆಗುತ್ತಿಲ್ಲ. ಭ್ರಷ್ಟಾಚಾರದ ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದ ಒಂದೆರಡು ಪ್ರಕರಣಗಳು ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾಗಿ ಅಚ್ಚಾಗುವುದರಿಂದ ಜನರ ಗಮನ ಸೆಳೆಯುತ್ತಿಲ್ಲ.

    ದಾಳಿ ನಂತರದ ತನಿಖೆಗಳು ” ಠುಸ್” ಆಗಿ ಬಿಡುತ್ತವೆ ಎಂದು ಬಿಂಬಿಸಲಾಗುತ್ತಿದೆಯಾದರೂ , ಆ ಪ್ರಕ್ರಿಯೆಗಳನ್ನು ಅರಿತುಕೊಳ್ಳುವ ಪ್ರಯತ್ನ ಇಲ್ಲಿದೆ.

    ಸಂಪತ್ತು ಸುರಕ್ಷಿತ

    ರೇಡ್ ಸಮಯದಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು “ತನಿಖೆಯು ಪೂರ್ಣಗೊಳ್ಳುವವರೆಗೂ ತನ್ನ ವಶಕ್ಕೆ ನೀಡಬೇಕು” ಎಂದು ಎಸಿಬಿಯು ನ್ಯಾಯಾಲಯದ ಅನುಮತಿ ಕೋರುತ್ತದೆ. ಈ ಬಳಿಕವೇ ಆ ವಸ್ತುಗಳನ್ನು ಎಸಿಬಿ ಕಚೇರಿಗಳಲ್ಲಿ ಅಥವಾ ಜಿಲ್ಲಾ ಖಜಾನೆ ಕಚೇರಿಗಳಲ್ಲಿ ಭದ್ರವಾಗಿ ಇರಿಸಲಾಗುತ್ತದೆ.

    ಇದಕ್ಕೂ ಮುನ್ನ , ದಾಳಿ ನಡೆದ ಸ್ಥಳದಲ್ಲಿಯೇ, ಇಬ್ಬರು ಪಂಚರ (ಸರ್ಕಾರಿ ಉದ್ಯೋಗಿಗಳು) ಸಮ್ಮುಖದಲ್ಲೇ ಪಂಚನಾಮೆ ನಡೆಯುತ್ತದೆ. ಹೊಸ ನೋಟುಗಳಾದರೆ ಅವುಗಳ ಸೀರೀಸ್ ಸಂಖ್ಯೆ; ಹಳೆಯ ನೋಟ್ ಆದರೆ ಕಂತೆಗಳ ಸಂಖ್ಯೆ, ಒಡವೆಗಳ ತೂಕ ಎಲ್ಲವೂ ನಮೂದಿಸಲಾಗುತ್ತದೆ.

    ಎಸಿಬಿ ದಾಳಿಗಳ ಪ್ರಕರಣಗಳು ಆಯಾ ಜಿಲ್ಲಾ ಸೆಷನ್ಸ್ ಕೋರ್ಟಿನ ವ್ಯಾಪ್ತಿಗೆ ಬರುತ್ತಿದ್ದು , ಪ್ರಿನ್ಸಿಪಲ್ ಜಡ್ಜ್ ಅವರ ಕಣ್ಗಾವಲಿನಲ್ಲಿ ವಿಚಾರಣೆಯಾಗುತ್ತದೆ. ಹೀಗಾಗಿ ಹಣ, ಒಡವೆ ವಸ್ತುಗಳೆಲ್ಲ ಸುರಕ್ಷಿತವಾಗಿರುತ್ತವೆ.

    ಪೂರ್ವ ಸಿದ್ದತೆ

    ಎಸಿಬಿ ಹಾಗೂ ಐಟಿ ದಾಳಿಗಳು “ರಾಜಕೀಯಪ್ರೇರಿತ” ಎಂಬ ವಾದಕ್ಕೆ ಪುಷ್ಟಿಗಳಿದ್ದಂತಿಲ್ಲ. ಸ್ವತಂತ್ರ ತನಿಖಾ ಸಂಸ್ಥೆಯಾದ ಎಸಿಬಿಯು ದಾಳಿಗೆ ಮೊದಲು ಆರೋಪಿ ಅಧಿಕಾರಿಯ (ಅಕ್ರಮ) ಗಳಿಕೆಯ ಬಗ್ಗೆ ಎಲ್ಲ ಮಾಹಿತಿಯನ್ನು ಕಲೆ ಹಾಕಿರುತ್ತದೆ. ಸುಮಾರು ಆರು ತಿಂಗಳು ಮೊದಲೇ ಕಾರ್ಯಾಚರಣೆ ಶುರುವಾಗುತ್ತದೆ.

    ಕಚೇರಿಗೆ ಬರುವ ದೂರುಗಳನ್ನು, ಅಂದರೆ ಮೂಗರ್ಜಿ, ಸುಳ್ಳು ಹೆಸರಿನಲ್ಲಿ ಬರೆದ ಪತ್ರ (Pseudonymous petition) ಇವುಗಳನ್ನು “ಮಾಹಿತಿ” (Information) ಎಂದು ಗಣನೆಗೆ ತೆಗೆದುಕೊಳ್ಳುತ್ತಾರೆ.

    ನೌಕರರ ಘೋಷಿತ ಆದಾಯ, (ದೂರಿನಲ್ಲಿ ತಿಳಿಸಿದ ) ಗಳಿಕೆಯ ತಾಳೆ ಹಾಕುತ್ತಾರೆ. ಮನೆ , ಕಾರು, ಜಮೀನು ಇವುಗಳನ್ನು ಹೋಲಿಸಿ ನೋಡಿ, ಅವುಗಳ ಅಂದಾಜು ಮೌಲ್ಯವನ್ನು ಎಸಿಬಿ ಅಧಿಕಾರಿಗಳು ನಿರ್ಧರಿಸುತ್ತಾರೆ. ತಮ್ಮದೇ ಆದ ವಿಧಾನಗಳ ಮೂಲಕ ಸತ್ಯಾಸತ್ಯತೆಗಳನ್ನು ಪರೀಕ್ಷಿಸಿ, ಆ ಅಧಿಕಾರಿಯನ್ನು “ಟಾರ್ಗೆಟ್” ಮಾಡುತ್ತಾರೆ.

    ದೂರುದಾರರು ಯಾರು?

    ಆ ಅಧಿಕಾರಿಯ ಸಂಬಂಧಿಕರು, ಆಪ್ತಮಿತ್ರರು, ಇಲ್ಲವೇ ಹತ್ತಿರದಲ್ಲಿರುವವರು ದೂರು ನೀಡುವ ಸಾಧ್ಯತೆಯೇ ಹೆಚ್ಚು. ಕೌಟುಂಬಿಕ ಕಲಹ , ಅಧಿಕಾರಿಯಿಂದ ಪಡೆಯುತ್ತಿದ್ದ ನೆರವು ಹಠಾತ್ ನಿಂತಾಗ ಹತಾಶರಾದ ಆಪ್ತರು ದೂರು ನೀಡುವುದು ರೋಚಕವೆನಿಸುವ ಕಾರಣವೂ ಹೌದು. ಕಚೇರಿಗಳಲ್ಲಿ ಕಿರುಕುಳಕ್ಕೆ ಒಳಗಾದ ಸಿಬ್ಬಂದಿಯ ಪಾತ್ರವನ್ನು ಸಹ ಅಲ್ಲ ಗಳೆಯುವಂತಿಲ್ಲ. ಹೀಗಾಗಿ “ರಾಜಕೀಯಪ್ರೇರಿತ” ಎಂಬ ವಾದಕ್ಕೆ ಪುಷ್ಟಿ ಸಿಗುವುದಿಲ್ಲ.

    ಲಂಚ ಸ್ವೀಕರಿಸುವಾಗಿನ ( ಟ್ರ್ಯಾಪ್) ಕೇಸ್ ಗಳಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕ ಹಣವನ್ನು ಲೆಕ್ಕ ಹಾಕಲಾಗುತ್ತದೆ. ರೇಡ್ ಕೇಸ್ ಗಳಲ್ಲಿ, ಆಪಾದಿತನು ಸರ್ಕಾರಿ ಸೇವೆಗೆ ಸೇರಿದ ದಿನದಿಂದ ಪಡೆದ ಸಂಬಳವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

    ತನಿಖೆ ಪೂರ್ಣಗೊಳ್ಳಲು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಸಮಯಬೇಕು. ಲಿಖಿತ ಸಾಕ್ಷಗಳನ್ನು ಸಂಗ್ರಹಿಸಬೇಕಾಗುತ್ತದೆ.

    ಆ ಮೇಲೆ, ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ (ಚಾರ್ಜ್ ಷೀಟ್) ಸಲ್ಲಿಸುವ ಮೊದಲು ಆರೋಪಿ ಅಧಿಕಾರಿಗೆ “ವಿವರಣೆ ನೀಡಲು” ಒಂದು ಅವಕಾಶವನ್ನೂ ನೀಡುತ್ತಾರೆ. ಅಮಾಯಕರಿಗೆ ಶಿಕ್ಷೆ ಆಗಬಾರದು ಎಂಬುದು ಇದರ ಉದ್ದೇಶ.

    ನ್ಯಾಯಾಲಯದಲ್ಲಿ

    ಭ್ರಷ್ಟಾಚಾರದ ಆರೋಪ ಸಾಬೀತಾದರೆ ಅಧಿಕಾರಿಗೆ ಜೈಲು ಶಿಕ್ಷೆಯಾಗುತ್ತದೆ (ಕನಿಷ್ಠ ಮೂರು ವರ್ಷ). ತನಿಖಾಧಿಕಾರಿಯು “ಬಿ” ರಿಪೋರ್ಟ್ ಸಲ್ಲಿಸಿದರೂ ಪ್ರಿನ್ಸಿಪಲ್ ಜಡ್ಜ್ ಅದನ್ನು ಒಪ್ಪದೇ ಇರಬಹುದು. ಆರೋಪಿ ನಿರ್ದೋಷಿ ಎಂದಾದರೆ, ವಶಪಡಿಸಿಕೊಂಡಿದ್ದ ವಸ್ತುಗಳನ್ನು ಆತನಿಗೆ ಹಿಂದಿರುಗಿಸಲಾಗುತ್ತದೆ.

    ಬಹುತೇಕ ದಾಳಿ ಪ್ರಕರಣಗಳಲ್ಲಿ, ಹಣ-ಒಡವೆ ವಾಪಸ್ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಅಲ್ಲದೇ ಶಿಕ್ಷೆಗೆ ಗುರಿಯಾಗುವವರ ಪ್ರಮಾಣವೂ ಕಡಿಮೆ ಎಂದು ಹೇಳಲಾಗುತ್ತಿದೆ.
    ಒಟ್ಟಾರೆಯಾಗಿ ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿಯನ್ನು ಮೂಡಿಸಬೇಕಿದೆ. ಹಿಂದುಳಿದ ಪ್ರದೇಶಗಳ ಜನರು ಎಚ್ಚೆತ್ತು ಎಸಿಬಿ ಗೆ ದೂರು ನೀಡಲು ಮುಂದಾಗುವ ಅಗತ್ಯವಿದೆ.
    ಇನ್ನು ಅಧಿಕಾರಿಗಳಿಗೂ ಎಸಿಬಿ ದಾಳಿ, ಶಿಕ್ಷೆಯ ಭೀತಿ ಇದ್ದರೆ ವ್ಯವಸ್ಥೆ ಯಲ್ಲಿ ಸುಧಾರಣೆ ಸಾಧ್ಯವಾದೀತು.

    ಕಾನೂನಿನ ಕುಣಿಕೆ ಬಿಗಿಯಾಗಬೇಕಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?.


    (ಪೂರಕ ಮಾಹಿತಿ : ಚಂದ್ರಕಾಂತ ಭಂಡಾರೆ, ನಿವೃತ್ತ ಪೊಲೀಸ್ ಅಧಿಕಾರಿ)


    This image has an empty alt attribute; its file name is vadiraj-desai.jpg

    ಕನ್ನಡಪ್ರಭ , ವಿಜಯ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ವಾದಿರಾಜ ದೇಸಾಯಿ ನಾಡಿನ ಹಿರಿಯ ಪತ್ರಕರ್ತರು.

    error: Content is protected !!