23.5 C
Karnataka
Monday, May 20, 2024

    UPPER BHADRA :ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಕುರಿತು ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ : ಸಿಎಂ

    Must read

    NEWDELHI DEC 2

    ಡಿಸೆಂಬರ್ 6 ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ , ಆರೋಗ್ಯ , ಕಾನೂನು ಸಚಿವರನ್ನು ಭೇಟಿಯಾದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯ 2 ನೇ ನ್ಯಾಯಾಧಿಕರಣದ ಅಧಿಸೂಚನೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಪ್ರಕಟಣೆ ಮಾಡಿ, ಟ್ರಿಬ್ಯುನಲ್‌ನ ಸಂಪೂರ್ಣ ವರದಿಯ ನಂತರ ಸುಪ್ರೀಂ ಕೋರ್ಟ್ ನ ತೀರ್ಪಿನ ಪರಿಪಾಲನೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರದಿಂದ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.

    ಗೋದಾವರಿ , ಕಾವೇರಿ, ಕೃಷ್ಣಾ ಮಹಾನದಿ ಲಿಂಕ್ ಬಗ್ಗೆ ರಾಜ್ಯದ ಅಹವಾಲನ್ನು ಕೇಳದೇ ಡಿಪಿಆರ್ ಮಾಡಬಾರದು ಹಾಗೂ ರಾಜ್ಯದ ನೀರಿನ ಪಾಲು ಎಷ್ಟು ಎಂಬುದು ನಿಗದಿ ಆಗುವ ವರೆಗೆ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಬಾರದು ಎನ್ನುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

    ಆರೋಗ್ಯ ಹಾಗೂ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಮಾಂಡವೀಯ ಭೇಟಿ:
    ಕೋವಿಡ್ ನಿರ್ವಹಣೆ ಹಾಗೂ ಕೋವಿಡ್ ಹೊಸ ತಳಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ, ರಾಜ್ಯದಲ್ಲಿ ಕೋವಿಡ್ ನಿರ್ವಹಣೆ, ಲಸಿಕೆ ಅಭಿಯಾನದ ಬಗ್ಗೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಅದನ್ನು ಮುಂದುವರೆಸಬೇಕೆಂದು ತಿಳಿಸಿದ್ದಾರೆ.
    ರಾಜ್ಯದಲ್ಲಿ ಲಸಿಕೆ ದಾಸ್ತಾನು ಸಾಕಷ್ಟಿದೆ. ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡುತ್ತದೆ. ರಾಜ್ಯಕ್ಕೆ ಕೇರಳದಿಂದ ಬರುವ ಪ್ರಯಾಣಿಕರನ್ನು ನಿಯಂತ್ರಣ ಮಾಡಿದಂತೆಯೇ ತಮಿಳುನಾಡಿನಿಂದ ಬರುವ ಪ್ರಯಾಣಿಕರ ಮೇಲೂ ನಿಗಾ ವಹಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

    ಹೆಚ್ಚುವರಿ ಡಿ ಎ ಪಿ ಗೆ ಮನವಿ

    ರಾಜ್ಯಕ್ಕೆ ಹೆಚ್ಚುವರಿ ಡಿಎಪಿಗೆ ಕೇಂದ್ರ ರಸಗೊಬ್ಬರ ಸಚಿವರಿಗೆ ಬೇಡಿಕೆ ಸಲ್ಲಿಸಲಾಗಿದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ರಾಜ್ಯಕ್ಕೆ ನಿಗದಿಯಾಗಿರುವ ೪೮ ಸಾವಿರ ಮೆ.ಟನ್ ಡಿಎಪಿಯನ್ನು ಸಂಪೂರ್ಣವಾಗಿ ಪೂರೈಸುವ ಭರವಸೆ ನೀಡಿದ್ದಾರೆ.
    ರಾಜ್ಯದಲ್ಲಿ ಕೋರ್ಟು ಮತ್ತು ಕಾನೂನಿನ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಕೇಂದ್ರ ಕಾನೂನು ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

    ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್‌ನೊಂದಿಗೆ ಮೈತ್ರಿಯ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರದ ವರಿಷ್ಠರೊಂದಿಗೆ ಸಮಾಲೋಚಿಸಿ ಬಿ.ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ನಾಯಕರಾದ ಕುಮಾರಸ್ವಾಮಿಯವರು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯಿಂದಾಗಿ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹೆಚ್ಚಾಗಿದ್ದು, ಲಸಿಕೆಯ ಕೊರತೆ ಇರುವುದನ್ನು ಗಮನಿಸಲಾಗಿದೆ. ಲಸಿಕೆ ಕೊರತೆಯನ್ನು ನೀಗಿಸಿ ಲಸಿಕೆಯನ್ನು ಲಭ್ಯವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಎಸ್.ಆರ್.ವಿಶ್ವನಾಥ್ ಅವರ ಕೊಲೆ ಸಂಚಿನ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಲ್ಲಿರುವ ಮಾಹಿತಿಗಳನ್ನು ಕಲೆಹಾಕಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!