25.6 C
Karnataka
Thursday, May 21, 2026
    Home Blog Page 36

    ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು: ಸಿಎಂ

    BELAGAVI DEC 22

    ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಬೆಳಗಾವಿಯ ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡದ ಹೊಸ ನಿವೇಶನದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಟ್ಟಡಗಳ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

    ಇಂದಿನ ಸವಾಲುಗಳ ಹಾಗೂ ಬದಲಾವಣೆಯ ಯುಗದಲ್ಲಿ ಫ್ಲೆಕ್ಸಿಬಲ್ ಆದ ಶಿಕ್ಷಣ ವ್ಯವಸ್ಥೆ ಅತ್ಯಂತ ಅವಶ್ಯಕ. ಪಠ್ಯದಲ್ಲಿರುವ ವಿದ್ಯೆ ಹಾಗೂ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯೆಯಲ್ಲಿ ಬಹಳಷ್ಟು ಅಂತರ ಇದೆ. ಇವರೆಡರ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸಲು ಎನ್‍ಇಪಿಯನ್ನು ಜಾರಿಗೊಳಿಸಲಾಗಿದೆ. ಇಂದಿನ ಪೀಳಿಗೆ ಯಾವುದೇ ಸವಾಲುಗಳನ್ನು ಆತ್ಮಸ್ಥೈರ್ಯ, ಧೈರ್ಯದಿಂದ ಎದುರಿಸಲು ಜ್ಞಾನದ ಬಲ ಇರಬೇಕು. ಎನ್‍ಇಪಿ ಈ ಜ್ಞಾನದ ಬಲವನ್ನು ನೀಡುತ್ತದೆ ಎಂದು ತಿಳಿಸಿದರು.

    ವಿಶ್ವವಿದ್ಯಾಲಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಬದ್ಧತೆ :
    ಕಿತ್ತೂರು ರಾಣಿ ಚೆನ್ನಮ್ಮ ಆತ್ಮಸ್ಥೈರ್ಯ, ಧೈರ್ಯದಿಂದ ಹೋರಾಡಿದ ಮೊದಲನೆಯ ಮಹಿಳಾ ಸ್ವತಂತ್ರ ಹೋರಾಟಗಾರರಾಗಿ ಬ್ರಿಟಿಷರನ್ನು ಮೆಟ್ಟಿನಿಂತದ್ದು ಈಗ ಇತಿಹಾಸ. ಬ್ರಿಟೀಷರನ್ನು ಹಿಮ್ಮೆಟ್ಟಿಸುವಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಬಹಳ ದೊಡ್ಡದು. ರಾಣಿ ಚೆನ್ನಮ್ಮನೇ ಈ ವಿಶ್ವವಿದ್ಯಾಲಯದ ಸ್ಪೂರ್ತಿ. ಈ ವಿಶ್ವವಿದ್ಯಾಲಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಬದ್ಧತೆ, ಸ್ಪಷ್ಟತೆ ವಿಶ್ವವಿದ್ಯಾಲಯದ ಪ್ರತಿಯೊಬ್ಬರಿಗೂ ಇರಬೇಕು. ವಿಭಿನ್ನ, ವಿನೂತನ ಪ್ರಯೋಗ ಕಾರ್ಯಕ್ರಮಗಳನ್ನು ರೂಪಿಸಿ, ಸಮಕಾಲೀನ ಸವಾಲುಗಳನ್ನು ಎದುರಿಸುವ ಹಾಗೂ ವೈಚಾರಿಕತೆಯಿಂದ ಸಮಾಜದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಕೇಂದ್ರಗಳಾಗಬೇಕು. ಕೇವಲ ಡಿಗ್ರಿ ಪಡೆಯಲು ಸೀಮಿತವಾಗಿರಬಾರದು. ಆಧುನಿಕ ತಂತ್ರಜ್ಞಾನ ಹಾಗೂ ಜ್ಞಾನ ಕ್ಷೇತ್ರದಲ್ಲಿನ ಬದಲಾವಣೆ ಹಾಗೂ ಬೆಳವಣಿಗೆಯ ವೇಗಕ್ಕೆ ಸರಿಸಮಾನವಾದ ಚಿಂತನೆಯನ್ನು ವಿಶ್ವವಿದ್ಯಾಲಯಗಳು ಮಾಡಬೇಕು. ಅವಿಷ್ಕಾರಗಳನ್ನು ಮಾಡುವ ಕೇಂದ್ರವಾಗಬೇಕು. ಸಂಶೋಧನೆಗಳಲ್ಲಿ ಸ್ವಂತಿಕೆ, ಹೊಸತನ ಹಾಗೂ ವಿಭಿನ್ನತೆ ಇರಬೇಕು ಎಂದು ತಿಳಿಸಿದರು.

    ತರ್ಕಬದ್ಧ ಚಿಂತನೆಗೆ ಅವಕಾಶ:ವಿಶ್ವವಿದ್ಯಾಲಯಗಳು ತರ್ಕಬದ್ಧ ಹಾಗೂ ಲ್ಯಾಟರಲ್ ಚಿಂತನೆಗೆ ಅವಕಾಶ ನೀಡುವ ಜ್ಞಾನದ ಕೇಂದ್ರವಾಗಬೇಕು. ವಿದ್ಯಾರ್ಜನೆಗೆ ಪೂರಕವಾದ ಪರಿಸರ ವಿಶ್ವವಿದ್ಯಾಲಯದಲ್ಲಿ ದೊರೆಯಬೇಕು.ವಿಶ್ವವಿದ್ಯಾಲಯದಲ್ಲಿರುವವರು ತಮ್ಮ ಸೀಮಿತ ಪ್ರಪಂಚದಿಂದ ಹೊರಗೆ ಬರಬೇಕು. ಸಂಶೋಧನೆಗಳನ್ನು ಸಮರ್ಥಿಸಿಕೊಳ್ಳದೇ ಉಳಿದವರು ಅದರ ಉಪಯುಕ್ತತೆಯನ್ನು ನಿರ್ಧರಿಸಲಿ. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳೇ ಮುಂದಾಳತ್ವ ವಹಿಸುವ ನಾಯಕ. ಅವರು ಇತರರಿಗೆ ಉದಾಹರಣೆಯಾಗಬೇಕು. ಮಾರ್ಗದರ್ಶನ ತೋರಬೇಕು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಸರ್ಕಾರ ಬೆಂಬಲಕ್ಕೆ ನಿಲ್ಲುತ್ತದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ನನ್ನ ಹೃದಯಕ್ಕೆ ಬಹಳ ಹತ್ತಿರವಾದದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ವಿಶ್ವವಿದ್ಯಾಲಯ ಜಗತ್ತಿಗೆ ಜ್ಞಾನದ ಸಂಪರ್ಕ ಕೊಂಡಿ :
    ವಿಶ್ವವಿದ್ಯಾಲಯಕ್ಕೆ ಸುಂದರ ಪರಿಸರ, ರಸ್ತೆ, ಮೂಲಸೌಕರ್ಯಗಳನ್ನು ಒಳಗೊಂಡ ಕಟ್ಟಡವನ್ನು ಒಂದು ವರ್ಷದಲ್ಲಿ ಮುಗಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಕಟ್ಟಡದ ಪ್ರತಿಯೊಂದು ಕೊಠಡಿಯು ಡಿಜಿಟಲೈಸ್ ಆಗಬೇಕು. ಜಗತ್ತಿಗೆ ಜ್ಞಾನದ ಸಂಪರ್ಕ ಕೊಂಡಿಯಂತಿರಬೇಕು. ಇದು ಜ್ಞಾನದ ಶತಮಾನ. ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ. ವಿಶ್ವವಿದ್ಯಾಲಯಗಳ ಸಂಶೋಧನೆಯನ್ನು ಇಡೀ ವಿಶ್ವ ಒಪ್ಪಿಕೊಂಡರೆ ಅದರ ಉಪಯುಕ್ತತೆ ಹೆಚ್ಚುತ್ತದೆ. ವಿಶ್ವವಿದ್ಯಾಲಯದಲ್ಲಿ ಕಳೆದ 10 ವರ್ಷದಲ್ಲಿ ಕೈಗೊಂಡಿರುವ ಪಿಹೆಚ್‍ಡಿ ಸಂಶೋಧನೆ ಹಾಗೂ ಅದರ ಉಪಯುಕ್ತತೆ ಬಗ್ಗೆ ವಿಶ್ಲೇಷಣೆಯನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಸಿಎಂ ಅಶ್ವಥ್ ನಾರಾಯಣ, ಶಶಿಕಲಾ ಜೊಲ್ಲೆ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಮಹಾಂತೇಶ ಕವಟಗಿಮಠ, ಅರುಣ ಶಾಹಪೂರ, ಹನಮಂತ ನಿರಾಣಿ, ವಿಧಾನಪರಿಷತ್ ಚುನಾವಣೆಯಲ್ಲಿ ಜಯಶಾಲಿ ಯಾಗಿರುವ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.

    ಕುಂಚದಲ್ಲಿ ಅರಳಿದ ಮಂಗಳೂರಿನ ಸೊಬಗು

    ಬಳಕೂರ. ವಿ.ಎಸ್.ನಾಯಕ

    ಕಲಾವಿದನಾದವನಿಗೆ  ನಿಸರ್ಗವು ಒಂದಲ್ಲ ಒಂದು ರೀತಿಯಲ್ಲಿ ಪ್ರೇರಣೆಯಾಗುತ್ತದೆ. ನಿಸರ್ಗದಲ್ಲಿ  ಬದಲಾವಣೆಯಾದ  ಹಲವಾರು ವಿಚಾರಗಳು ಕಲಾವಿದನ ಕುಂಚದಲ್ಲಿ ಅರಳಿ ಅದ್ಭುತ ಕಲಾಕೃತಿಗಳಾಗಿ ಹೊರಹೊಮ್ಮುತ್ತವೆ. ಕಲಾವಿದನ ಕಲ್ಪನೆಗೆ ಗಡಿಯಿಲ್ಲ ಅವನ ಮನಸ್ಸಿನ ಪರದೆಯ ಮೇಲೆ ಮೂಡಿದ ಹಲವಾರು ವಿಚಾರಗಳು ಕಲಾ ರೂಪವನ್ನು ಪಡೆದಾಗ ಒಂದು ಉತ್ತಮವಾದ ಲೋಕಕ್ಕೆ ಅಡಿಯಿಟ್ಟ ಅನುಭವ ನಮಗಾಗುತ್ತದೆ.

    ಹೀಗೆ ಕಲಾವಿದ ತಾನು ಕಂಡ ಅನುಭವಿಸಿದ  ಹಲವಾರು ವಿಚಾರಗಳನ್ನು ಕಲಾತ್ಮಕವಾಗಿ ಬಿಂಬಿಸುತ್ತಾನೆ. ಹಾಗೆಯೇ ಇಲ್ಲಿ ತಾನು ಚಿಕ್ಕಂದಿನಿಂದಲೇ ಕಂಡ  ಹಲವಾರು ಘಟನೆ ವಿಚಾರ ನಿಸರ್ಗದ ಬದಲಾವಣೆಯ ಸನ್ನಿವೇಶಗಳನ್ನು ತಮ್ಮ ಕುಂಚದ ಮೂಲಕ ಅರಳಿಸಿದ್ದಾರೆ ಕಲಾ ಶಿಕ್ಷಕ ಸುಧೀರ್ ಕುಮಾರ್. ಜಿ. 

    ಮಂಗಳೂರಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಮಂಗಳೂರಿನ ಮಹಾಲಸಾ ಚಿತ್ರಕಲಾ  ಮಹಾವಿದ್ಯಾಲಯದಿಂದ ಎಂ. ಎಫ್. ಎ. ಪದವಿಯನ್ನು ಪಡೆದುಕೊಂಡಿದ್ದಾರೆ.ಇವರು ಹುಟ್ಟಿ ಬೆಳೆದಿದ್ದು ಎಲ್ಲಾ ಮಂಗಳೂರಿನಲ್ಲಿ. ಇವರಿಗೆ ಇಲ್ಲಿನ ಪರಿಸರ  ಒಂದಲ್ಲ ಒಂದು ರೀತಿಯಲ್ಲಿ ಕಾಡಿದೆ. ತಾವು ಕಲಾವಿದರದ್ದರಿಂದ ತಾವು ಕಂಡ ಅನುಭವಿಸಿದ ಎಲ್ಲಾ ವಿಚಾರ ವಿಷಯಗಳನ್ನು ತಮ್ಮ ಚಿತ್ರಗಳಲ್ಲಿ ಬಿಂಬಿಸಿದ್ದಾರೆ.

    ಮಂಗಳೂರು ವೇಗವಾಗಿ ಬೆಳೆಯುವ ನಗರ ಆದ್ದರಿಂದ ಅಲ್ಲಿಯ ಸುತ್ತಮುತ್ತಲಿನ ಹಳೆಯ ಕಟ್ಟಡಗಳೆಲ್ಲ ದೂರವಾಗಿ ನವನವೀನವಾದ ಮಂಗಳೂರು ನಗರ ಕಾಣುತ್ತಿದೆ. ಆದರೆ ಅಂದಿನ ಅದ್ಭುತ ವಿಚಾರಗಳು ಕಲಾ ಸ್ಪರ್ಶವನ್ನು ಪಡೆದಾಗ ನಮಗೆ ಅರಿವಿಲ್ಲದಂತೆ ಹಲವಾರು ಚಿತ್ರಗಳು ಹೊರಹೊಮ್ಮುತ್ತವೆ. ಇಂತಹ ಸಂದರ್ಭದಲ್ಲಿ ಆಧುನಿಕ ಕಟ್ಟಡಗಳು ತಲೆಯೆತ್ತುತ್ತಿರುವ ಸಂದರ್ಭ  ಆಗಿನ ಕಾಲದ ಹಳೆಯ ಕಟ್ಟಡಗಳನ್ನು ಸೌಂದರ್ಯವನ್ನು ತನ್ನ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.

    ಅವರ ಕಲಾಕೃತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು  ವಿನೂತನವಾದ ವಿಚಾರಧಾರೆ ಕೊಡುವಂತಿದೆ.  ಸಾಮಾನ್ಯವಾಗಿ ಮಂಗಳೂರು ಹಳ್ಳಿಯ ಸುತ್ತಮುತ್ತಲಿನ ಎಲ್ಲಾ ವಿಚಾರಗಳನ್ನು ಚಿತ್ರಗಳಲ್ಲಿ ಬಿಂಬಿಸಿದ್ದಾರೆ.

    ಮಂಗಳೂರಿನ ಕಾಳಿಕಾಂಬಾ ರಸ್ತೆ. ಹಳೆಯ ಬಂದರು. ವೆಂಕಟರಮಣ ದೇವಾಲಯದ ಬೀದಿ. ಕ್ಲಾಕ್ ಟವರ್. ಭೈರವೇಶ್ವರ ದೇವಾಲಯ. ಸರ್ಕಾರಿ ಮಹಿಳಾ ಕಾಲೇಜು ಬಲ್ಮಟ್ಟ. ಮಾಲಿಂಗೇಶ್ವರ ದೇವಸ್ಥಾನ ಗಾಂಧಿನಗರ. ಮಂಗಳೂರಿನ ಮಣ್ಣಗುಡ್ಡ. ತುಂಬೆ ನದಿಯ ತೀರ ಹೀಗೆ ಎಲ್ಲ ವಿಚಾರಗಳನ್ನು ತಮ್ಮ ಜಲವರ್ಣ ಚಿತ್ರಗಳಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ. ಇವರ ಕಲಾತ್ಮಕತೆಯನ್ನು ಎಲ್ಲರೂ ಒಂದು ಕ್ಷಣ ಮೆಚ್ಚಲೇಬೇಕು.

    ಇವರು ಸಾಮಾನ್ಯವಾಗಿ ಏಕವ್ಯಕ್ತಿ ಕಲಾ ಪ್ರದರ್ಶನ ಸಮೂಹ ಕಲಾಪ್ರದರ್ಶನವನ್ನು ರಾಜ್ಯಮಟ್ಟದಲ್ಲಿ ಮಂಡಿಸಿದ್ದಾರೆ. ಇವರು ಹಲವಾರು ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಶಾಲಾ ಮಟ್ಟದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಮೂಲಕವಾಗಿ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಕಲಾತ್ಮಕ ಸೇವೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಹಣಕಾಸು ಪರಿಸ್ಥಿತಿ ಅವಲೋಕಿಸಿ ಖಾಸಗಿ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಕ್ರಮ

    BELAGAVI,SUVARNA VIDHANA SOUDHA DEC 21

    ರಾಜ್ಯದ ಹಣಕಾಸು ಪರಿಸ್ಥಿತಿ ಅವಲೋಕಿಸಿ 1995 ಕ್ಕೂ ಮುನ್ನ ಹಾಗೂ ನಂತರದ ಖಾಸಗಿ ಶಾಲೆಗಳನ್ನು ಸರ್ಕಾರದ ವೇತನಾನುಧನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

    ಬೆಳಗಾವಿ ಸುವರ್ಣ ಸೌಧ ಸಮಿತಿ ಸಭಾಂಗಣದಲ್ಲಿ , ವಿಧಾನ ಪರಿಷತ್ ಸಭಾಪತಿ ಬಸವರಾಜ.ಎಸ್ .ಹೊರಟ್ಟಿ
    ಅಧ್ಯಕ್ಷತೆಯಲ್ಲಿ, ಜರುಗಿದ ಖಾಸಗಿ ಅನುದಾನಿತ , ಅನದಾನ ರಹಿತ ಶಿಕ್ಷಣ ಸಂಸ್ಥೆಗಳ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು.

    ಜನವರಿ 30 ರ ಒಳಗಾಗಿ 1995 ಕ್ಕೂ ಮುನ್ನ ಸ್ಥಾಪಿಸಿದ ಖಾಸಗಿ ಶಾಲೆಗಳನ್ನು ಸರ್ಕಾರದ ಸಹಾಯಧನಕ್ಕೆ ಒಳಪಡಿಸಲು ಹಣಕಾಸು ಇಲಾಖೆಗೆ ಸೂಕ್ತ ದಾಖಲೆ ಹಾಗೂ ಅಂಕೆ ಸಂಖ್ಯೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಶಾಶ್ವತ ಅನುದಾನ ರಹಿತ ಖಾಸಗಿ ಶಾಲೆಗಳಿವೆ. ಹಣಕಾಸು ಪರಿಸ್ಥಿತಿ ಸುಧಾರಿಸಿದರೆ ಇವುಗಳಿಗೂ ಸಹ ಸಹಾಯಧನ ನೀಡಲಾಗುವುದು ಎಂದರು.

    ರಾಜ್ಯದಲ್ಲಿ ಅನುದಾನಿತ ಶಾಲೆಗಳ 500 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಜಾಹಿರಾತು ನೀತಿ ನಿಯಮ ಪಾಲನೆಯಾಗಿಲ್ಲ ಎಂದು ಶಿಕ್ಷಣ ಇಲಾಖೆ ತಡೆ ಹಿಡಿದಿದೆ. ಶಾಲಾ ಆಡಳಿತ ಮಂಡಳಿ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದ ಒಂದೊಂದು ಪತ್ರಿಕೆಯಲ್ಲಿ ನೇಮಕಾತಿ ಕುರಿತು ಜಾಹಿರಾತು ನೀಡಿವೆ. ಆದರೆ ಪ್ರತಿಕೆಗಳ ರಾಜ್ಯಪುಟಗಳಲ್ಲಿವೇ ಜಾಹಿರಾತು ಪ್ರಕಟವಾಗಬೇಕು ಎಂದು ಅಧಿಕಾರಿಗಳು ಕಡ್ಡಾಯ ಮಾಡಿ ನೇಮಕಾತಿಗೆ ತಡೆ ನೀಡಿದ್ದಾರೆ. ಇದನ್ನು ತಕ್ಷಣವೇ ಸರಿ ಪಡಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ತಿಳಿಸಿದರು.

    ಸಭಾಪತಿಗಳ ಮಾತಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ನೇಮಕಾತಿ ಜಾಹಿರಾತು ನೀಡಿರುವ ಶಾಲಾ ಆಡಳಿತ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಯಲು ಅನುಮತಿ ನೀಡಿ. ಇಂತಹದೇ ಪುಟದಲ್ಲಿ ಜಾಹಿರಾತು ಬರಬೇಕು ಎಂಬ ನಿಯಮವಿಲ್ಲ. ಯಾವುದೇ ಪುಟದಲ್ಲಿ ಜಾಹಿರಾತು ಪ್ರಕಟಗೊಂಡರು ಅದನ್ನು ಪರಿಗಣಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇಂಡೆಮ್ನಿಟಿ ಬಾಂಡ್ ನೀಡಿದರೆ ಸಾಕು

    ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಪ್ರಮಾಣ ಪತ್ರ ಪಡೆಯುವ ನಿಯಮಗಳನ್ನು ಸರಳಗೊಳಿಸಿ. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಶಿಕ್ಷಣ ಸಂಸ್ಥೆಗಳಿಂದ ಇಂಡೆಮ್ನಿಟಿ ಬಾಂಡ್(ನಷ್ಟ ಪರಿಹಾರ) ಪಡೆದು ಶಾಲೆಗಳಿಗೆ ಮಾನ್ಯತೆ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

    150 ಜನ ಸಿಬ್ಬಂದಿ ಕಾಯಂ ಗೆ ಕ್ರಮ

    ಶಿಕ್ಷಣ ಇಲಾಖೆಯಲ್ಲಿ 1997-98 ನೇ ಸಾಲಿನಲ್ಲಿ ಗುತ್ತಿಗೆ ಆಧಾರದ ಮೇಲೆ ಡಿ.ಪಿ.ಇ.ಪಿ.ಯೋಜನೆಯಡಿ ನೇಮಕೊಂಡ 150 ಜನ ಸಿಬ್ಬಂದಿಯನ್ನು ಸಕ್ರಮಗೊಳಿಸುವ ಕುರಿತಂತೆ ಕಾನೂನಾತ್ಮಕ ವಿಷಯಗಳನ್ನು ಪರಿಶೀಲಿಸಿ ಖಾಯಂಮಾತಿಗೆ ಕ್ರಮಕೈಗೊಳ್ಳುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

    ಎನ್.ಪಿ.ಎಸ್. ಯೋಜನೆಯಡಿ ಖಾಸಗಿ ಶಾಲಾ ಶಿಕ್ಷಕರು

    ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಖಾಸಗಿ ವ್ಯಕ್ತಿಗಳು ಸಹ ಪ್ರಾನ್ ಖಾತೆ ತೆರೆದು ಉಳಿತಾಯ ಮಾಡಬಹುದು. ಖಾಸಗಿ ಶಾಲಾ ಶಿಕ್ಷಕರನ್ನು ಸಹ ಎನ್.ಪಿ.ಎಸ್.ಯೋಜನೆಯಡಿ ತರಬೇಕು. ಶಾಲಾ ಆಡಳಿತ ಮಂಡಳಿಗಳು ಉದ್ಯೋಗಿಯ ವೇತನದಲ್ಲಿ ಶೇ.10 ರಷ್ಟು‌ ಹಣವನ್ನು ಕಟಾಯಿಸಿ, ಇದಕ್ಕೆ ಆಡಳಿತ ಮಂಡಳಿಯಿಂದ ಶೇ.10 ರಷ್ಟು ಹಣವನ್ನು ತುಂಬಬೇಕು. ಈ ಕುರಿತು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ತಿಳಿಸಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಪ್ರಾಥಮಿಕ ಮತ್ತು‌ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆ

    ಚನ್ನಮ್ಮ ವಿವಿ: ಡಿಪ್ಲೊಮಾ ಪಡೆದವರಿಗೆ ಬಿ.ಕಾಂ. 3ನೇ ಸೆಮಿಸ್ಟರ್ ಗೆ ಪ್ರವೇಶ, ಕಾಲಾವಧಿ 3 ದಿನ ವಿಸ್ತರಣೆ

    BELAGAVI DEC 20

    ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೊಮಾ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನೇರವಾಗಿ ಬಿ.ಕಾಂ. 3ನೇ ಸೆಮಿಸ್ಟರಿಗೆ ಪ್ರವೇಶ ಪಡೆಯಲು ಇದ್ದ ಕಾಲಾವಕಾಶವನ್ನು ಡಿ.23ರವರೆಗೆ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಸೋಮವಾರ ಇಲ್ಲಿ ಮಾತನಾಡಿದ ಅವರು, ಈ ಹಿಂದಿನ ಸೂಚನೆಯಂತೆ ಕಡ್ಡಾಯ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಬಹುದು. ರಾಣಿ ಚನ್ನಮ್ಮ ವಿವಿ ವ್ಯಾಪ್ತಿಗೆ ಬರುವ ಕಾಲೇಜುಗಳು ಇಂತಹ ವಿದ್ಯಾರ್ಥಿಗಳ ಪಟ್ಟಿಯನ್ನು ನಂತರ ವಿಶ್ವವಿದ್ಯಾಲಯಕ್ಕೆ ಕಳಿಸಿಕೊಡಬೇಕು. ಬಳಿಕ ಇಂತಹ ಪ್ರವೇಶಗಳಿಗೆ ಅನುಮೋದನೆ ಕೊಡಲಾಗುವುದು ಎಂದರು.

    ಈಗ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೂ ನಿಗದಿತ ಪಠ್ಯಕ್ರಮವನ್ನು ಸಂಪೂರ್ಣವಾಗಿ ಬೋಧಿಸಲಾಗುವುದು. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

    ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಸಚಿವರು ಈ ಕ್ರಮ ತೆಗೆದುಕೊಂಡಿದ್ದಾರೆ.

    ತಪ್ಪು ಮಾಡದವರು ಯಾರವ್ರೆ..ತಪ್ಪೇ ಮಾಡದವರು ಎಲ್ಲವರೇ…!

     ಸುಮಾ ವೀಣಾ

    ಅಬ್ದಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ–  ಅಭಿನವ ಪಂಪನೆಂದು ಬಿರುದಾಂಕಿತನಾಗಿರುವ  ನಾಗಚಂದ್ರನ   ‘ರಾಮಚಂದ್ರಚರಿತ ಪುರಾಣ’ದಿಂದ ಪ್ರಸ್ತುತ ಕಾವ್ಯದಿಂದ  ಆರಿಸಲಾಗಿದೆ. 

    ವಿಧಿಯ ಕಾರಣದಿಂದ  ಸಮುದ್ರವೂ ಸಹ  ತನ್ನ ಸೀಮಾ ರೇಖೆಯನ್ನು  ಮೀರುತ್ತದೆ  ಎಂಬ  ಅರ್ಥ ಇಲ್ಲಿದೆ.  ಸಮುದ್ರಕ್ಕೆ ನಿಶ್ಚಿತ ಎಲ್ಲೆ ಎಂಬುದು ಇರುತ್ತದೆ   ಚಂಡಮಾರುತದ ಕಾರಣಕ್ಕೋ ಇಲ್ಲ ಸುನಾಮಿ ಮುಂತಾದ ಪ್ರಕೃತಿ ವೈಪರೀತ್ಯಗಳ ಸಂದರ್ಭದಲ್ಲಿ ಸಮುದ್ರವೂ ತನ್ನ ಪರಿಧಿಯನ್ನು ದಾಟಿ  ಪ್ರಕ್ಷುಬ್ಧವಾಗಿ ಮುಂದುವರಿಯುತ್ತದೆ.  ಕಾಲಾನಂತರದಲ್ಲಿ ಶಾಂತವಾಗಿ  ಸೀಮಿತ ಪರಿಧಿಯಲ್ಲಿರುತ್ತದೆ.  ಹಾಗೆ ರಾಮಚಂದ್ರಚರಿತ ಪುರಾಣದ ರಾವಣನೂ ಕೂಡ   ಕ್ಷಣಕಾಲ ಚಿತ್ತಕ್ಷೋಭೆಗೆ ಒಳಗಾಗಿದ್ದ   ಸೀತೆಯನ್ನು ನೋಡಿದ ಕೂಡಲೆ ಅವನ ಮನಸ್ಸು ನೀತಿಯ ಗೆರೆಯನ್ನು ದಾಟಿತು ಎಂಬುದನ್ನು  ಕವಿ ಹೇಳಿದ್ದಾರೆ.

    ಮನುಷ್ಯ ತಪ್ಪನ್ನೇ ಮಾಡುವುದಿಲ್ಲ ಎಂತಲ್ಲ ತಪ್ಪುಗಳನ್ನು ಮಾಡಿಯೇ ಮಾಡುತ್ತಾನೆ ಆ ತಪ್ಪು ಎಂದು ತಿಳಿದ ಬಳಿಕ  ಆ ತಪ್ಪುಗಳನ್ನು  ತಿದ್ದಿಕೊಳ್ಳುವುದು  ಸಹಜ ಗುಣ   ಸೀತೆಯುನ್ನು ಹೊತ್ತೊಯ್ದಂಥ ತಪ್ಪನ್ನು  ತಿಳಿದ ಬಳಿಕ ರಾವಣ  ಮತ್ತೆ  ಸದ್ಭಾವವನ್ನೊಳಗೊಂಡ ಪುಣ್ಯಸತಿ ಎಂದು ಹೇಳುತ್ತಾನೆ  ತಪ್ಪುಗಳು  ಮನುಷ್ಯನನ್ನು ಗಟ್ಟಿಗೊಳಿಸುತ್ತದೆ.    ಮಾಡಿದ ತಪ್ಪುಗಳನ್ನು  ಸಮರ್ಥಿಸಿ ಕೊಳ್ಳುವುದರಲ್ಲಿ ಅರ್ಥವಿಲ್ಲ  ಅಂದರೆ ಜಟ್ಟಿಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ  ಎಂಬಂತೆ ಹುಂಬರ ಹಾಗೆ ಇರಬಾರದಷ್ಟೆ.

    ತಪ್ಪುಗಳನ್ನು   ಮಾಡಿದವರೆಲ್ಲಾ ಕೆಟ್ಟವರು   ಎಂದು ತೀರ್ಮಾನಕ್ಕೆ ಬಂದು ಅಪರಾದಿ ಸ್ತಾನದಲ್ಲಿ ನಿಲ್ಲಿಸುವುದಲ್ಲ. ಕೆಲವು ತಪ್ಪುಗಳು ಕ್ಷಮೆ ಮತ್ತು ಪ್ರಾಯಶ್ಚಿತ್ತದಿಂದ ಮಾಗುತ್ತವೆ. ತಪ್ಪುಗಳನ್ನು ಒಪ್ಪಿಕೊಂಡಲ್ಲಿ  ಮುಂದಇನ ಅನಾಹುತಗಳು ಘಟಿಸುವುದಿಲ್ಲ ಹಾಗಾಗಿಯೇ ತಪ್ಪು-ಒಪ್ಪು ಎಂಬ ಜೋಡುನುಡಿ ಚಾಲ್ತಿಯಲ್ಲಿದೆಯೇನೋ….!

    ತಪ್ಪುಗಳು  ಇಂಥ ವಯಸ್ಸಿನವರೆ  ಮಾಡಬೇಕೆಂದಿಲ್ಲ ಎಲ್ಲರೂ ತಪ್ಪು ಮಾಡುವವರೆ.   ತಪ್ಪನ್ನೇ ಮಾಡದೆ ಇರುವವರನ್ನು ಹುಡುಕ ಹೊರಟರೆ ಅದುವೆ ದೊಡ್ಡ ತಪ್ಪಾಗುತ್ತದೆ. ತಪ್ಪುಗಳು ಕಹಿ ಅನುಭವಗಳ  ತಡಿಕೆಗಳಾದಾಗ  ಸ್ವಯಂ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ.  ಮನುಷ್ಯನನ್ನು ಪರಿಪಕ್ವವಾಗಿಸುತ್ತದೆ.  ಹಾಗಾಗಿ ತಪ್ಪು ಮಾಡುವುದು  ದೋಷವಲ್ಲ     ಸಮರ್ಥನೆ ಮಾಡಿಕೊಳ್ಳುವುದು , ತಿದ್ದಿಕೊಳ್ಳದೆ ಇರುವುದು ದೋಷ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market News:ಹೂಡಿಕೆಗೂ ಮುಂಚೆ ಪರಿಶೀಲಿಸಿ, ನಿರ್ಧರಿಸುವುದೇ ಜಾಣತನ

    ಷೇರುಪೇಟೆಯ ಹೆಗ್ಗುರುತಾದ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಸೆನ್ಸೆಕ್ಸ್‌ ಶುಕ್ರವಾರದಂದು ಕಂಡ 889 ಪಾಯಿಂಟುಗಳ ಕುಸಿತವು ಹೊರನೋಟಕ್ಕೆ ಭಾರಿಯಾಗಿ ಕಂಡರೂ, 58 ಸಾವಿರದ ಮಟ್ಟದಲ್ಲಿ ಅದು ಹೆಚ್ಚಾಗಲಾರದು. ಬ್ಲಡ್‌ ಬಾತ್‌, ಬಂಡವಾಳ ನಾಶ ಮುಂತಾದ ಭಯಾನಕ ಪದಗಳಿಗೆ ಹೆದರುವ ಆವಶ್ಯಕತೆಯಿಲ್ಲ. ಆದರೆ ಅದರೊಂದಿಗೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕಗಳು ಮತ್ತು ಇತರೆ ವಲಯದ ಷೇರುಗಳು ಕಂಡಿರುವ ಕುಸಿತವು ಸ್ವಲ್ಪ ಆತಂಕವನ್ನುಂಟುಮಾಡಬಹುದಾದ ವಿಚಾರವಾಗಿದೆ.

    ಡಿಸೆಂಬರ್ 17ರ ಸೆನ್ಸೆಕ್ಸ್ ಆರಂಭದ ಗ್ರಾಫ್

    ಇದಕ್ಕೆ ಮುಖ್ಯ ಕಾರಣ ಎಂದರೆ ಜನವರಿ 1, 2021 ರಂದು ರಿಜಿಸ್ಟರ್ಡ್‌ ಕ್ಲೈಯೆಂಟ್ಸ್‌ ಸಂಖ್ಯೆ 5.89 ಕೋಟಿ ಇದ್ದು ಶುಕ್ರವಾರ 17, ಡಿಸೆಂಬರ್‌ 2021 ರಂದು ಆ ಸಂಖ್ಯೆಯು 9.03 ಕೋಟಿಗೆ ತಲುಪಿದೆ. ಅಂದರೆ ಪೇಟೆಯ ಚಟುವಟಿಕೆಯಲ್ಲಿ ಭಾಗವಹಿಸುವವರ ಆಸಕ್ತಿ ಹೆಚ್ಚು ಹೆಚ್ಚು ವೃದ್ಧಿಯಾಗುತ್ತಿದೆ. ಇದರಲ್ಲಿ ಹೆಚ್ಚಿನವರು ಷೇರುಪೇಟೆಯ ಬಗ್ಗೆ ಅರಿವಿಲ್ಲದೆ ಪ್ರಲೋಭನೆಗೊಳಗಾಗಿ, ಪ್ರಚಾರಗಳಿಂದ ಪ್ರೇರಿತರಾಗಿ ಪ್ರವೇಶಿಸಿರುವವರಿರುತ್ತಾರೆ. ಸತತವಾಗಿ ಏರಿಕೆಯನ್ನು ಕಾಣುತ್ತಿದ್ದ ಪೇಟೆಯಲ್ಲಿ ಹೂಡಿಕೆಯು ಬೆಳೆಯುತ್ತಿದ್ದ ವೇಗಕ್ಕೆ ಹರ್ಷಿತರಾಗುತ್ತಿದ್ದ ಸಮಯದಲ್ಲಿ ಅನಿರೀಕ್ಷಿತ ಮಟ್ಟದ ಕುಸಿತವನ್ನು ಕಂಡಾಗ ಖಿನ್ನತೆಗೊಳಗಾಗುವುದು ಸಹಜ. ಹಾಗಾಗಿ ಹೂಡಿಕೆಗೆ ಮುಂಚೆ ಅವಶ್ಯವಿರುವ ಅರಿವು, ಅಧ್ಯಯನ, ಚಿಂತನೆಗಳ ಪ್ರಯೋಗ ಅತ್ಯಗತ್ಯ.

    ಷೇರುಪೇಟೆ ಹೂಡಿಕೆಗೆ ಮುಂಚೆ ಅವಶ್ಯವಿರುವ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ. ಷೇರುಪೇಟೆಯಲ್ಲಿ ಹೂಡಿಕೆಗೂ ಮುಂಚೆ ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಗಳ ಆಂತರಿಕ ಸಾಧನೆಗಳ ಬಗ್ಗೆ, ಆ ಕಂಪನಿಗಳ ಉತ್ಪನ್ನಗಳಿಗಿರುವ ಬೇಡಿಕೆ, ಲಾಭ ಗಳಿಸಲು ಇರುವ ಅವಕಾಶಗಳ ಬಗ್ಗೆ, ಕಂಪನಿಯ ಮೇನೇಜ್‌ ಮೆಂಟ್‌ ಗಳ ಚಿಂತನೆ ಮತ್ತು ಅವರು ಹೊಂದಿರುವ ಹೂಡಿಕೆದಾರ ಸ್ನೇಹಿ ಗುಣದ ಮಟ್ಟ ಮುಂತಾದ ವಿಚಾರಗಳ ಬಗ್ಗೆ ಸವಿವರವಾದ ಅಧ್ಯಯನದ ಅಗತ್ಯತೆ ನಮ್ಮ ಹೂಡಿಕೆಯ ಸುರಕ್ಷತೆಯ ದೃಷ್ಟಿಯಿಂದ ಬೇಕಾಗಿದೆ.

    ಕಂಪನಿಗಳ ಉತ್ಪನ್ನವು ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ತಾಂತ್ರಿಕತೆಯ ಅಭಿವೃದ್ಧಿಯ ಕಾರಣ ದೀರ್ಘಕಾಲೀನವಾಗಿ ಬೇಡಿಕೆಯಲ್ಲಿರಬಹುದೇ ಎಂಬ ಅಂಶವೂ ಮುಖ್ಯವಾಗಿರುತ್ತದೆ. ಕಾರಣ ತಾಂತ್ರಿಕತಾ ಯುಗಕ್ಕೂ ಮುಂಚೆ ಅಂದರೆ 80 ರ ದಶಕದಲ್ಲಿ ಟೈಪ್‌ ರೈಟರ್‌ ಗಳ ಯುಗದಲ್ಲಿ ರೆಮಿಂಗ್‌ ಟನ್‌ ರ್ಯಾಂಡ್‌ ಕಂಪನಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು, 86 ರಲ್ಲಿ 1:2 ಅನುಪಾತದ ಬೋನಸ್‌ ಷೇರು ಸಹ ವಿತರಿಸಿತು. ಆದರೆ ಟೈಪ್‌ ರೈಟರ್‌ ಗಳು, ಪರ್ಸನಲ್‌ ಕಂಪ್ಯೂಟರ್‌ ಗಳ ಪ್ರವೇಶದಿಂದ, ಮೂಲೆಗುಂಪಾದ ಕಾರಣ ಕಂಪನಿಯು ಕಣ್ಮರೆಯಾಯಿತು.

    1983 ರಲ್ಲಿ ನವದೆಹಲಿಯಲ್ಲಿ ಆರಂಭಿಸಲಾದ‌ ಡಿಜಿಟಲ್ ಸ್ಟೋರೇಜ್‌ ಕಂಪನಿ ಮೋಸರ್‌ ಬೇರ್‌ ತನ್ನ ಫ್ಲಾಪಿ ಡಿಸ್ಕ್ ಉತ್ಪಾದನೆಯನ್ನು ಕಾಲಕ್ಕೆ ತಕ್ಕಂತೆ ಬದಲಿಸಿ ಅಭಿವೃದ್ಧಿಪಡಿಸಿಕೊಂಡು ಬಂದು, ರೆಕಾರ್ಡಬಲ್‌, ಡಿಜಿಟಲ್‌ ವರ್ಸಟೈಲ್‌ ಡಿಸ್ಕ್‌ ಗಳನ್ನು ತಯಾರಿಸಿ ರಪ್ತುಮಾಡುವ ಹಂತಕ್ಕೆ ತಲುಪಿತಾದರೂ, ಬದಲಾದ ಪರಿಸ್ಥಿತಿಗೆ ಬಲಿಯಾಗಿ, 2018 ರಲ್ಲಿ ಸಮಾಪನಗೊಳಿಸಿಕೊಂಡಿತು (Liquidation). ಆರಂಭಿಕ ವರ್ಷಗಳಲ್ಲಿ ವಿಜೃಂಭಿಸಿದ ಚಟುವಟಿಕೆಯನ್ನು ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಲ್ಲಿ ಪ್ರದರ್ಶಿಸಿ ನಂತರ ಮರೆಯಾಯಿತು.

    ಇನ್ನು ಕಂಪನಿಗಳ ಉತ್ಪನ್ನಗಳು ಸದಾ ಬೇಡಿಕೆಯಲ್ಲಿದ್ದಂತಹುದಾದರೆ ಮತ್ತು ಕಂಪನಿಗಳು ಷೇರುದಾರರ ಹಿತದ ನಿರ್ಣಯ ತೆಗೆದುಕೊಳ್ಳುವಂತಹವುಗಳಾದರೆ, ಷೇರಿನ ಬೆಲೆಗಳು ಕುಸಿತ ಕಂಡರೂ ಪುಟಿದೇಳುವ ಸಾಧ್ಯತೆ ಹೆಚ್ಚಿರುತ್ತದೆ.

    ಕ್ಲಾರಿಯಂಟ್‌ ಕಂಪನಿಯು, ಕೆಳಮಧ್ಯಮ ಶ್ರೇಣಿಯ ಕಂಪನಿಯಾದರೂ ಸಹ, ಎಷ್ಠರಮಟ್ಟಿಗೆ ಹೂಡಿಕೆದಾರ ಸ್ನೇಹಿ ಎಂದರೆ ಸುಮಾರು 20 ವರ್ಷಗಳಲ್ಲಿ ಪ್ರತಿ ಒಂದು ಷೇರಿಗೆ ರೂ.650 ಕ್ಕೂ ಹೆಚ್ಚಿನ ಲಾಭಾಂಶವನ್ನು ವಿತರಿಸಿದ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ ಒಂದು ತಿಂಗಳ ಹಿಂದಷ್ಠೇ ರೂ.520 ರ ಗರಿಷ್ಠದಲ್ಲಿದ್ದು, ನಂತರದಲ್ಲಿ ಶುಕ್ರವಾರ 17 ರಂದು ಷೇರಿನ ಬೆಲೆಯು ರೂ.499 ರವರೆಗೂ ಏರಿಕೆ ಕಂಡು ರೂ.482 ರ ಸಮೀಪಕ್ಕೆ ಅಂತ್ಯಗೊಂಡಿದೆ. 2020 ರಲ್ಲಿ ರೂ.151 ರೂಪಾಯಿಗಳ ಲಾಭಾಂಶ ವಿತರಿಸಿದರೆ, 2021 ರಲ್ಲಿ ಪ್ರತಿ ಷೇರಿಗೆ ರೂ.65 ರ ಲಾಭಾಂಶ ವಿತರಿಸಿದೆ. ಷೇರಿನ ಬೆಲೆಯು 2001 ರಲ್ಲಿ ರೂ.36 ರ ಕನಿಷ್ಠದ ಸಮೀಪವಿದ್ದ ಷೇರಿನ ಬೆಲೆಯು 2006 ರಲ್ಲಿ ರೂ.395 ಕ್ಕೆ ಏರಿಕೆ ಕಂಡು, 2009 ರಲ್ಲಿ ರೂ.144 ರ ಸಮೀಪಕ್ಕೆ ಇಳಿಯಿತು. 2011 ರಲ್ಲಿ ರೂ.854 ಕ್ಕೆ ಏರಿಕೆ ಕಂಡು 2013 ರಲ್ಲಿ ರೂ.371 ರವರೆಗೂ ಕುಸಿಯಿತು. 2015 ಕ್ಕೆ ರೂ.1,180 ಕ್ಕೆ ಜಿಗಿಯಿತು. 2019 ರಲ್ಲಿ ರೂ.265 ರ ಸಮೀಪಕ್ಕೆ ಕುಸಿದು 2020 ರಲ್ಲಿ ರೂ.193 ರ ಸಮೀಪಕ್ಕೆ ಜಾರಿತು. ಆದರೆ ಈ ವರ್ಷ ರೂ.642 ರವರೆಗೂ ಜಿಗಿದು ಈಗ ರೂ.482 ರ ಸಮೀಪವಿದೆ.

    ಹಿಂದೂಸ್ಥಾನ್‌ ಝಿಂಕ್‌ ಲಿಮಿಟೆಡ್ ಕಂಪನಿಯು ಆಗಷ್ಟ್‌ 17 ರಂದು ಮಧ್ಯಂತರ ಲಾಭಾಂಶ ವಿತರಣೆ ಪರಿಶೀಲನೆಯ ಕಾರ್ಯಸೂಚಿ ಪ್ರಕಟಿಸಿದಾಗ ಷೇರಿನ ಬೆಲೆ ರೂ.332 ರ ಸಮೀಪವಿದ್ದು, ಲಾಭಾಂಶ ಪರಿಶೀಲನೆಯನ್ನು ಮುಂದೂಡಿದ ಕಾರಣ ಷೇರಿನ ಬೆಲೆ ರೂ.311 ರ ವರೆಗೂ ಇಳಿದು ನಂತರದ ದಿನಗಳಲ್ಲಿ ಪುಟಿದೆದ್ದಿತು. ಸೆಪ್ಟೆಂಬರ್‌ 14 ರಂದು ಮತ್ತೊಮ್ಮೆ ಏರಿಕೆಯಿಂದ ರೂ.338 ನ್ನು ತಲುಪಿ ಅಕ್ಟೋಬರ್‌ 1 ರಂದು ರೂ.306 ಕ್ಕೆ ಕುಸಿದು 18 ರಂದು ರೂ.407.90 ರ ವಾರ್ಷಿಕ ಗರಿಷ್ಠಕ್ಕೆ ಜಿಗಿದು ರೂ.387 ರ ಸಮೀಪದಲ್ಲಿ ಕೊನೆಗೊಂಡಿದೆ. ಈ ತಿಂಗಳ 7 ರಂದು ಕಂಪನಿಯು ಪ್ರತಿ ಷೇರಿಗೆ ರೂ.18 ರಂತೆ ಲಾಭಾಂಶ ಪ್ರಕಟಿಸಿತು. ನಂತರದ ದಿನಗಳಲ್ಲಿ ರೂ.370 ರ ಸಮೀಪದವರೆಗೂ ಜಿಗಿತ ಕಂಡ ಷೇರು, ಲಾಭಾಂಶ ವಿತರಣೆಯ ನಂತರ ರೂ.335 ರ ಸಮೀಪದಲ್ಲಿ ಷೇರು ವಹಿವಾಟಾಗುತ್ತಿತ್ತು. ನಂತರ ಪೇಟೆಯ ಕುಸಿತದ ಒತ್ತಡದಿಂದ ರೂ.313 ರ ಸಮೀಪಕ್ಕೆ ಕುಸಿದಿದೆ.

    ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳ ಏರಿಳಿತಗಳ ಲಾಭವನ್ನು ವಹಿವಾಟುದಾರರು ಪಡೆದುಕೊಳ್ಳುತ್ತಿರುವಾಗ ಸಣ್ಣ ಹೂಡಿಕೆದಾರರು ಸಹ ಅಲ್ಪ ಪ್ರಮಾಣದಲ್ಲಿ ಲಾಭ ಗಳಿಸಲು ಪ್ರಯತ್ನಿಸಬಹುದು. ಆದರೆ ಸದಾ ನೆನಪಿನಲ್ಲಿಡಬೇಕಾದ ಅಂಶ ಎಂದರೆ ಪ್ರವೇಶದ ಸಂದರ್ಭದಲ್ಲಿ ದೀರ್ಘಕಾಲೀನ ಹೂಡಿಕೆಯ ದೃಷ್ಠಿಯಿದ್ದರೂ ನಂತರ ಚಟುವಟಿಕೆಯು ವ್ಯವಹಾರಿಕ ದೃಷ್ಠಿಯಿಂದ, ದೀರ್ಘಕಾಲೀನ ಎಂಬ ಮೋಹಕ ಪದದಿಂದ ದೊರೆಯುವ ಅವಕಾಶ ಕಳೆದುಕೊಳ್ಳದೆ, ʼಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ – ಇರುವೆಯಾಗಿ ಸಕ್ಕರೆ ತಿನ್ನುವುದು ಲೇಸುʼ ಎಂಬುದು. ಗಜಗಾತ್ರದ ವಹಿವಾಟಿನ ವ್ಯಾಮೋಹ ಬೇಡ, ಸೀಮಿತ ಲಾಭಕ್ಕೆ ಸೀಮಿತಗೊಳಿಸಿಕೊಂಡಲ್ಲಿ ಬಂಡವಾಳವೂ ಸುರಕ್ಷಿತ ಮತ್ತು ಮನಸ್ಸು ಮತ್ತು ದೇಹಗಳ ಸೌಖ್ಯವೂ ಸಾಧ್ಯ.

    ಸಾಧ್ಯವಾದಷ್ಠು ಹೂಡಿಕೆಗುಚ್ಚವನ್ನು ಹೆಚ್ಚು ಹೆಚ್ಚು ಕಂಪನಿಗಳಿಗೆ ವಿಸ್ತರಿಸಿರಿ ಮತ್ತು ಷೇರಿನ ದರಗಳ ಕುಸಿತಕ್ಕೆ ಕಾಯಿರಿ. ಖಂಡಿತಾ ಅವಕಾಶಗಳು ಸೃಷ್ಠಿಯಾಗುತ್ತವೆ. ಇವು ಕೆಲವು ಉದಾಹರಣೆಗಳಾಗಿ ಹೆಸರಿಸಲಾಗಿದೆ, ಹೂಡಿಕೆಗೂ ಮುಂಚೆ ಪರಿಶೀಲಿಸಿರಿ, ನಿರ್ಧರಿಸಿರಿ. ಇದು ಯಾವುದೇ ಶಿಫಾರಸ್ಸು ಅಲ್ಲ, ಕೇವಲ ನಿದರ್ಶನಕ್ಕೆ ಮಾತ್ರ.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಬೆಳಗಾವಿಯಲ್ಲಿ ಪುಂಡಾಟಿಕೆ: ಘಟನೆಯನ್ನು ಖಂಡಿಸಿದ ಮುಖ್ಯ ಮಂತ್ರಿ

    HUBBLLI DEC 18

    ಬೆಳಗಾವಿಯಲ್ಲಿ ನಿನ್ನೆ ರಾತ್ರಿ ನಡೆದ ಪುಂಡಾಟಿಕೆಯನ್ನು ಖಂಡಿಸುತ್ತೇನೆ. ಆ ಪುಂಡರನ್ನು ಸೆದೆ ಬಡಿಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಗೃಹ ಸಚಿವರಿಗೆ ಸೂಚಿಸಿದ್ದೇನೆ. ಅವರೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಕಲ್ಲು ತೂರಾಟ ಮಾಡುವುದು , ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾಗೂ ಸರ್ಕಾರಿ ವಾಹನಗಳಿಗೆ ಹಾನಿ ಉಂಟುಮಾಡುವುದು ಕಾನೂನು ಬಾಹಿರ. ಇಂಥ ಘಟನೆ ಪುನಃ ಜರುಗದಂತೆ ಇನ್ನಷ್ಟು ಕಠಿಣ ಹಾಗೂ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಪ್ರವೃತ್ತಿ ಸರಿಯಲ್ಲ ಎಂದರು.

    ರಾಷ್ಟ್ರಭಕ್ತರ ಪ್ರತಿಮೆ ಭಗ್ನಗೊಳಿಸುವುದು ದೇಶಭಕ್ತರ ಕೆಲಸವಲ್ಲ. ದೇಶಭಕ್ತರು ಎಲ್ಲಾ ಸಮುದಾಯಕ್ಕೆ ಸೇರಿದವರು. ದೇಶಕ್ಕಾಗಿ ತ್ಯಾಗ ಮಾಡಿದವರು. ಪ್ರತಿಮೆ ಸ್ಥಾಪಿಸುವುದು ಅವರನ್ನು ಗೌರವಿಸಬೇಕೆಂದೇ ವಿನಃ ಅವರ ಮುಖಾಂತರ ಸಮಾಜದಲ್ಲಿ ಕ್ಷೋಭೇ ಉಂಟುಮಾಡುವುದಲ್ಲ. ಈ ವರ್ತನೆ ಎಳ್ಳಷ್ಟೂ ಸರಿಯಲ್ಲ. ಕೆಲವು ಪುಂಡರು ಈ ರೀತಿ ಮಾಡುತ್ತಿದ್ದು ಅವರನ್ನು ಸದೆ ಬಡಿಯಲಾವುದು. ಇದು ಉದ್ದೇಶಪೂರ್ವಕವೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

    ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಬಸವರಾಜ ಬೊಮ್ಮಾಯಿ

    ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರಕರಣದ ಬಗ್ಗೆ ಮಾತನಾಡಿದರು.

    ಕೆಲವರು ಕಾನೂನು ಬಾಹಿರವಾಗಿ ಪುಂಡಾಟಿಕೆ ಮಾಡಿದ್ದಾರೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ. ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ತೆ ಕಾಪಾಡಿಕೊಳ್ಳುವುದು ಅಲ್ಲಿನ ಸರ್ಕಾರದ ಜವಾಬ್ದಾರಿ. ಅಲ್ಲಿನ ಕನ್ನಡಿಗರ ರಕ್ಷಣೆ ಹಾಗೂ ಬಸ್ಸು ಇತ್ಯಾದಿ ವಾಹನಗಳ ರಕ್ಷಣೆ ಮಾಡಲು ನಮ್ಮ ಪೋಲಿಸ್ ವiಹಾ ನಿರ್ದೇಶಕರು ಅಲ್ಲಿನ ಪೊಲೀಸ್ ಮಹಾನಿರ್ದೇಶಕರೊಂದಿಗೆ ಹಾಗೂ ಗೃಹ ಸಚಿವರು ಮಹಾರಾಷ್ಟ್ರದ ಗೃಹ ಸಚಿವರು ರೊಂದಿಗೆ ಮಾತನಾಡಲಿದ್ದಾರೆ. ಮೊದಲು ಅಧಿಕಾರಿಗಳು ಮಾತನಾಡುತ್ತಾರೆ. ನಂತರ ಅಗತ್ಯ ಬಿದ್ದರೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

    ಶಿವಸೇನೆಯ ಸಂಜಯ್ ರಾವತ್ ಅವರು ಮರಾಠಿಗಳು ಒಂದಾಗುವಂತೆ ಕರೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಜವಾಬ್ದಾರಿ ಇರುವ ಜನರು ಯಾರನ್ನೂ ಯಾವ ಸಮಯದಲ್ಲಿಯೂ ಪ್ರಚೋದನೆ ಮಾಡಬಾರದು. ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ದೇಶವನ್ನು ಒಗ್ಗೂಡಿಸಿದವರು. ಅವರ ಹೆಸರಿನಲ್ಲಿ ನಾವು ಜಗಳವಾಡಿಕೊಂಡು ಒಡಕು ಮೂಡಿಸಿದರೆ ಅದು ಅವರ ಹೋರಾಟಕ್ಕೆ ಅನ್ಯಾಯವೆಸಗಿದಂತಾಗುತ್ತದೆ. ಕಾನೂನನ್ನ ಕೈಗೆ ತೆಗೆದುಕೊಂಡು ಯಾರನ್ನೂ ಇಂತಹ ಕೆಲಸಗಳನ್ನು ಮಾಡಲು ಕುಮ್ಮಕ್ಕು ನೀಡಬಾರದು ಎಂದರು.

    Rani Channamma University :ರಾಣಿ ಚನ್ನಮ್ಮ ವಿ.ವಿ.ಕ್ಯಾಂಪಸ್ ನಿರ್ಮಾಣಕ್ಕೆ 22ರಂದು ಸಿಎಂ ಶಂಕುಸ್ಥಾಪನೆ: ಸಚಿವರಿಂದ ಸ್ಥಳ ವೀಕ್ಷಣೆ

    ಇಲ್ಲಿನ ಹಿರೇಬಾಗೇವಾಡಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪೂರ್ಣಪ್ರಮಾಣದ ಕ್ಯಾಂಪಸ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಇದೇ 22ರಂದು ಶಂಕುಸ್ಥಾಪನೆ ಮಾಡುತ್ತಿದ್ದು ಅದರ ಪೂರ್ವ ತಯಾರಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಿಸಿದರು.

    ಕ್ಯಾಂಪಸ್ ನಿರ್ಮಾಣಕ್ಕೆಂದು ಮೀಸಲಿಟ್ಟಿರುವ 125 ಎಕರೆ ಪ್ರದೇಶವನ್ನು ವೀಕ್ಷಿಸಿದ ಅವರು, ನೂತನ ಕ್ಯಾಂಪಸ್ಸಿನಲ್ಲಿ ಯಾವ್ಯಾವ ಸೌಲಭ್ಯಗಳಿರಬೇಕು ಎನ್ನುವುದನ್ನು ವಿಶ್ವವಿದ್ಯಾಲಯದ ಕುಲಪತಿ ಮತ್ತು ಇತರ ಪ್ರಮುಖರೊಂದಿಗೆ ಚರ್ಚಿಸಿದರು.

    ನೂತನ ಕ್ಯಾಂಪಸ್ ವಿದ್ಯಾರ್ಥಿಸ್ನೇಹಿಯಾಗಿ ಇರಲಿದ್ದು, ಗುಣಮಟ್ಟದ ಬೋಧನೆಗೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನಗಳನ್ನೆಲ್ಲ ಒಳಗೊಂಡಿರಲಿದೆ. ಈ ಕಾರ್ಯವನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಂಡು, ಕಿತ್ತೂರು ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ ವಿವಿ ಕುಲಪತಿ ಪ್ರೊ‌ ರಾಮಚಂದ್ರ ಗೌಡ ಮುಂತಾದವರು ಸಚಿವರ ಜತೆಗಿದ್ದರು.

    UVCE, VTU will be upgraded on par with IIT;ಎಲ್ಲ ಜಿಲ್ಲೆಗಳಲ್ಲೂ ವಿವಿ ಸ್ಥಾಪನೆ

    BELAGAVI DEC 15

    ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಇಲ್ಲದ ಜಿಲ್ಲೆಗಳಲ್ಲಿ ಆದಷ್ಟು ತ್ವರಿತವಾಗಿ ವಿ.ವಿ.ಗಳನ್ನು ಸ್ಥಾಪಿಸಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಲೆ ಎತ್ತಲಿರುವ ಈ ವಿ.ವಿ.ಗಳಲ್ಲಿ ಕುಲಪತಿಯೂ ಸೇರಿದಂತೆ ಗರಿಷ್ಠ 25 ಸಿಬ್ಬಂದಿ ಮಾತ್ರ ಇರಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ -VTU-ಆವರಣದಲ್ಲಿ ಬುಧವಾರ ನಡೆದ `ಜ್ಞಾನಯಜ್ಞ ಫೆಲೋಶಿಪ್ ವಿತರಣೆ ಮತ್ತು ವಿದ್ಯುನ್ಮಾನ ಪ್ರಮಾಣ ಪತ್ರಗಳ ಸೇವಾ ವ್ಯವಸ್ಥೆ’ (ಎಲೆಕ್ಟ್ರಾನಿಕ್ ಡಾಕ್ಯುಮೆಂಟರಿ ಡೆಲಿವರಿ) ಹಾಗೂ ಟ್ರ್ಯಾಕಿಂಗ್ ವ್ಯವಸ್ಥೆಯ ಉದ್ಘಾಟನೆ ನೆರವೇರಿಸಿ ಅವರು ಬುಧವಾರ ಮಾತನಾಡಿದರು.

    `ನೂರಾರು ಎಕರೆ ವಿಶಾಲವಾದ ಕ್ಯಾಂಪಸ್ಸುಗಳು ಈಗ ಅಪ್ರಸ್ತುತವಾಗುತ್ತಿವೆ. ಆಧುನಿಕ ತಂತ್ರಜ್ಞಾನವು ಸಮರ್ಥವಾಗಿದ್ದು, ತುಂಬಾ ಕಡಿಮೆ ಜಾಗದಲ್ಲಿ ವಿ.ವಿ.ಗಳನ್ನು ಸ್ಥಾಪಿಸಲು ಈಗ ಸಾಧ್ಯವಿದೆ. ದೊಡ್ಡದೊಡ್ಡ ವಿ.ವಿ.ಗಳನ್ನು ಆರಂಭಿಸುವ ಬದಲು ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ವಿಶ್ವವಿದ್ಯಾಲಯಗಳು ಇರುವಂತೆ ನೋಡಿಕೊಳ್ಳುವುದಕ್ಕೆ ಸರಕಾರದ ಆದ್ಯತೆ ಕೊಟ್ಟಿದೆ’ ಎಂದು ಅವರು ನುಡಿದರು.

    ಇದರ ಜತೆಗೆ ಬೆಂಗಳೂರಿನಲ್ಲಿರುವ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನು (ಯುವಿಸಿಇ) ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 10 ವರ್ಷಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    120 ಎಕರೆ ವಿಶಾಲವಾಗಿರುವ ಬೆಳಗಾವಿಯ ವಿಟಿಯು ಕೂಡ ಐಐಟಿ ಮಾದರಿಯಲ್ಲೇ ಬೆಳೆಯಬೇಕು. ಈ ನಿಟ್ಟಿನಲ್ಲಿ ಕುಲಪತಿ ಪ್ರೊ.ಕರಿಸಿದ್ಧಪ್ಪನವರು ಇನ್ನು ಒಂದು ತಿಂಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.

    ಹಾಗೆಯೇ ರಾಜ್ಯದಲ್ಲಿರುವ 17 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಎಂಜಿನಿಯರಿಂಗ್ ಓದುವವರು ಸಹಜವಾಗಿಯೇ ಈ ಕಾಲೇಜುಗಳತ್ತ ಆಕರ್ಷಿತವಾಗುವಂತೆ ಇವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇವುಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವುದರ ಜತೆಗೆ ಆಡಳಿತ ಮಂಡಳಿಯನ್ನೂ ಸ್ಥಾಪಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.

    ಸಮಾರಂಭದಲ್ಲಿ ವಿಟಿಯು ಕುಲಪತಿ ಪ್ರೊ,ಕರಿಸಿದ್ಧಪ್ಪ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕುಲಸಚಿವರಾದ ಪ್ರೊ.ಬಿ.ಇ.ರಂಗಸ್ವಾಮಿ, ಪ್ರೊ.ಎ.ಎಸ್.ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.

    22 ವಿದ್ಯಾರ್ಥಿಗಳಿಗೆ ಜ್ಞಾನಯಾನ ಫೆಲೋಶಿಪ್

    ವಿಟಿಯು ಹಮ್ಮಿಕೊಂಡಿರುವ ಜ್ಞಾನಯಾನ ಫೆಲೋಶಿಪ್ ಕಾರ್ಯಕ್ರಮದಡಿ ಸಚಿವರು, 22 ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪತ್ರ ವಿತರಿಸಿದರು.

    ಈ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೂ ತಿಂಗಳಿಗೆ 25 ಸಾವಿರ ರೂ. ನೀಡಲಾಗುವುದು. ಆಯ್ಕೆಯಾಗಿರುವ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ನ್ಯಾನೊ ತಂತ್ರಜ್ಞಾನ, ಏರೋಸ್ಪೇಸ್ ಪ್ರೊಪಲ್ಶನ್ ಎಂಜಿನಿಯರಿಂಗ್ ಮುಂತಾದ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವವರು ಇದ್ದಾರೆ ಎಂದು ಅವರು ತಿಳಿಸಿದರು.

    ಎಲೆಕ್ಟ್ರಾನಿಕ್ ಡಾಕ್ಯುಮೆಂಟರಿ ಡೆಲಿವರಿ ವ್ಯವಸ್ಥೆ

    ವಿಟಿಯು ಆರಂಭಿಸಿರುವ ಈ ಯೋಜನಯಡಿ ವಿದ್ಯಾರ್ಥಿಗಳು ತಮಗೆ ಬೇಕಾದ ಪ್ರಮಾಣಪತ್ರ, ಸಂಭಾವ್ಯ ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ವರ್ಗಾವಣೆ ಪತ್ರ, ಹೆಸರು ಬದಲಾವಣೆ, ದಾಖಲಾತಿಗಳ ಪರಿಶೀಲನೆ, ಮಾಧ್ಯಮ ಆಯ್ಕೆ ಮುಂತಾದ ಹತ್ತಾರು ಸೇವೆಗಳನ್ನು ಆನ್ ಲೈನ್ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಅಶ್ವತ್ಥನಾರಾಯಣ ಹೇಳಿದರು.

    Sri Jagannatha Daasaru:ಹರಿದಾಸ ಚರಿತೆಯ ಅನಾವರಣದ ಅಸ್ತಿಭಾರ

    ವಾದಿರಾಜ ದೇಸಾಯಿ

    ಕನ್ನಡ ನಾಡಿನಲ್ಲಿ ಹರಿದಾಸ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಕನ್ನಡಕ್ಕೆ ಹರಿದಾಸ ಸಾಹಿತ್ಯದ ಕೊಡುಗೆಯೂ ಅನನ್ಯ. ಇದನ್ನು ಪರಿಚಯಿಸುವುದಕ್ಕೆ ಚಿತ್ರ ಮಾಧ್ಯಮವನ್ನು ಸಾಧನವನ್ನಾಗಿ ಬಳಸಿಕೊಳ್ಳುವ ಪ್ರಯೋಗ ಇದೀಗ ಶುರುವಾಗಿದೆ.
    ಹೊಸ ಕಲಾವಿದರಿಗೆ ಅವಕಾಶ ನೀಡುವ ಮೂಲಕವೇ ಅಂತಹ ಪ್ರಯೋಗಕ್ಕೆ ಮಧುಸೂದನ ಹವಾಲ್ದಾರ್ ಮುಂದಾಗಿದ್ದಾರೆ.

    ತ್ರಿವಿಕ್ರಮ ಜೋಷಿ (ವಿಜಯದಾಸರು), ಪ್ರಭಂಜನ ದೇಶಪಾಂಡೆ (ಗೋಪಾಲ ದಾಸರು).

    ಹರಿದಾಸ ಸಾಹಿತ್ಯವನ್ನು ಸರಳವಾಗಿ, ಕನ್ನಡದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲ ದಾಸರು, ಜಗನ್ನಾಥ ದಾಸರ ಪಾತ್ರ ಬಲು ದೊಡ್ಡದು.
    ಈ ನಿಟ್ಟಿನಲ್ಲಿ, ಆರಂಭದಲ್ಲಿ ಜಗನ್ನಾಥ ದಾಸರ ಜೀವನ ಚರಿತ್ರೆಯನ್ನು ದೃಶ್ಯ ಮಾಧ್ಯಮದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

    ಡಾ. ಮಧುಸೂದನ ಹವಾಲ್ದಾರ್, ನಿರ್ದೇಶಕ (ಬಲಬದಿಗೆ)

    ಚಿತ್ರಕತೆ, ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಸಂಭಾಷಣೆಯಲ್ಲಿ ಇನ್ನಷ್ಟು ಸುಧಾರಣೆಯ ಅಗತ್ಯವಿತ್ತು .ಜಗನ್ನಾಥ ದಾಸರ ಪಾತ್ರದಲ್ಲಿ ಶರತ್ ಜೋಷಿ, ಅದರಲ್ಲೂ ಅಂತಿಮ ದೃಶ್ಯದಲ್ಲಿ ಭಾವತನ್ಮಯರಾಗಿ ನಟಿಸಿದ್ದನ್ನು ನೋಡಿದರೆ, ಎರಡನೇ ಭಾಗದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ನಿರೀಕ್ಷೆ ಹುಟ್ಟಿಸುತ್ತಾರೆ.

    ಗೋಪಾಲ ದಾಸರಾಗಿ ಪ್ರಭಂಜನ ದೇಶಪಾಂಡೆ ಲವಲವಿಕೆಯಿಂದ ನಟಿಸಿ, ಪಾತ್ರಕ್ಕೆ ಜೀವ ತುಂಬಿದ್ದಾರೆ.ವಿಜಯ ದಾಸರಾಗಿ ತ್ರಿವಿಕ್ರಮ ಜೋಷಿ ಅವರು ಪಾತ್ರದ (ಗುರುವಾಗಿ) ಗಾಂಭೀರ್ಯವನ್ನು ಅರಿತು ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.

    ಹಾಡುಗಳು ಚಿತ್ರದ ಹೈಲೈಟ್ಸ್. ಕೊನೆಯಲ್ಲಿ, “ಜಗನ್ನಾಥ ವಿಠ್ಠಲ” ಎಂಬ ಅಂಕಿತ ಸಿಗುವ ಸನ್ನಿವೇಶದ ಮೂಲಕ ನಿರ್ದೇಶಕರು ಮುಂದಿನ ಭಾಗದ ಬಗ್ಗೆ ಕುತೂಹಲವನ್ನು ಮೂಡಿಸುತ್ತಾರೆ.


    ಕನ್ನಡಪ್ರಭ , ವಿಜಯ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ವಾದಿರಾಜ ದೇಸಾಯಿ ನಾಡಿನ ಹಿರಿಯ ಪತ್ರಕರ್ತರು

    error: Content is protected !!