ಷೇರುಪೇಟೆಯ ಚಟುವಟಿಕೆಯಲ್ಲಿ ಹೂಡಿಕೆಯ ಉದ್ದೇಶವಾಗಿದ್ದಲ್ಲಿ ಆಯ್ಕೆಗಳು ಅನೇಕ ವಿಧಗಳಲ್ಲಿ ಲಭ್ಯವಿರುತ್ತವೆ. ಕೆಲವರಿಗೆ ನಿಯತಕಾಲಿಕವಾಗಿ ಆದಾಯದ ನಿರೀಕ್ಷೆ ಇದ್ದರೆ, ಕೆಲವರಿಗೆ ಹೂಡಿಕೆಯು ದೀರ್ಘಕಾಲೀನವಾಗಿ ಉತ್ತಮ ಬೆಳವಣಿಗೆಯ ನಿರೀಕ್ಷೆ, ಮತ್ತೆ ಕೆಲವರಿಗೆ ವ್ಯವಹಾರಿಕ ರೀತಿ ಚಟುವಟಿಕೆ ನಡೆಸುವ ಹಂಬಲ. ಹೀಗೆ ಹತ್ತಾರು ಚಿಂತನೆಗಳು ಪೇಟೆಗೆ ಬಹುಮುಖ ಚಾಲನೆ ನೀಡುತ್ತವೆ. ಇವುಗಳೆಲ್ಲದರ ಮಧ್ಯೆ ಸುರಕ್ಷತೆಗೆ ಆಧ್ಯತೆ ನೀಡುವುದು ಅಗತ್ಯ. ಕಾರಣ ಷೇರುಪೇಟೆಯ ಚಟುವಟಿಕೆಯ ರಭಸದಲ್ಲಿ ಭಾವನಾತ್ಮಕ ನಿರ್ಧಾರಗಳಿಗೊಳಗಾದಲ್ಲಿ ಹೂಡಿಕೆ ಹಣವು ಕರಗುವುದರ ವೇಗ ಅತಿ ಹೆಚ್ಚು.
ವರ್ಷಾಂತ್ಯದ ಸೆನ್ಸೆಕ್ಸ್
*2021 ರ ಜನವರಿ 1 ರಂದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ನೋಂದಾಯಿತ ಗ್ರಾಹಕರ ಸಂಖ್ಯೆ 5.89 ಕೋಟಿ ಇತ್ತು. ಕಾಕತಾಳೀಯ ಎಂಬಂತೆ ಡಿಸೆಂಬರ್ 31 ರಂದು ಅದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯದಿನದಂದು 5.89 ಕೋಟಿಯಿದೆ. ಆದರೆ ಡಿಸೆಂಬರ್ 31 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.9.18 ಕೋಟಿಗೆ ಏರಿಕೆಯಾಗಿದೆ. ಅಂದರೆ ಶೇ.50 ಕ್ಕೂ ಹೆಚ್ಚಿನ ಬೆಳವಣಿಗೆಯಾಗಿದೆ. ಅಂದರೆ ನೋಂದಾಯಿತ ಗ್ರಾಹಕರ ಸಂಖ್ಯೆ ಈ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಪೇಟೆಯಲ್ಲಿ ವೈವಿಧ್ಯಮಯ ಚಿಂತನೆಯಿಂದ ಏರಿಳಿತಗಳನ್ನು ಕಾಣಬಹುದಾಗಿದೆ. ಈ ರಭಸದ ಏರಿಳಿತಗಳು ಸೃಷ್ಟಿ ಮಾಡುವ ಅನೇಕ ಅವಕಾಶಗಳು ಮಿಂಚಿನಂತೆ ಪ್ರತ್ಯಕ್ಷವಾಗಿ, ಸಿಡಿಲಿನಂತೆ ಮಾಯವಾಗುತ್ತಿರುವುದನ್ನು ಕಾಣುತ್ತಿದ್ದೇವೆ.
*20ನೇ ಡಿಸೆಂಬರ್ 2021 ರಂದು ಸೆನ್ಸೆಕ್ಸ್ 1,189 ಪಾಯಿಂಟುಗಳ ಕುಸಿತ ಕಂಡಾಗ ಹೆಚ್ಚಿನ ಹೂಡಿಕೆದಾರರ ಜಂಗಾಬಲವನ್ನೇ ಕುಸಿಯುವಂತೆ ಮಾಡಿತು. ಅಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.252.57 ಲಕ್ಷ ಕೋಟಿಗೆ ಜಾರಿತ್ತು. ಅದೇ 14 ನೇ ಡಿಸೆಂಬರ್ ನಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.265.97 ಲಕ್ಷ ಕೋಟಿಯಲ್ಲಿತ್ತು. 29, ಡಿಸೆಂಬರ್ 2021 ರಂದು ಮತ್ತೆ ರೂ.266 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ನವೆಂಬರ್ 17,2021 ರಂದು ರೂ.271.08 ಲಕ್ಷ ಕೋಟಿಯಲ್ಲಿದ್ದ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.252.57 ಲಕ್ಷಕ್ಕೆ ಕುಸಿದು ಮತ್ತೆ ರೂ.266 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಮಾರ್ಕೆಟ್ ನಲ್ಲಿ ವಹಿವಾಟು ಸೀಮಿತವಾದ ರೀತಿಯಲ್ಲಿ ನಡೆಯುತ್ತಿದ್ದು ಚಕ್ರಾಕಾರದ ಶೈಲಿಯಲ್ಲಿದೆ.
*ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಆಡಳಿತ ಮಂಡಳಿಯು ಈ ತಿಂಗಳ 8 ರಂದು ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿದೆ. ಈ ಕಾರಣ ಈ ಷೇರಿನ ಬೆಲೆಯು ಹೆಚ್ಚು ತೂಗುಯ್ಯಾಲೆಯಲ್ಲಿ ಏರಿಳಿತ ಕಂಡಿತು. ಇದರ ಅಂಸ ಸಂಸ್ಥೆ ಸಿ ಡಿ ಎಸ್ ಎಲ್ ಸಹ ಹೆಚ್ಚಿನ ಏರಿಳಿತ ಪ್ರದರ್ಶಿಸಿತು.
*ಮಜ್ ಗಾಂವ್ ಡಾಕ್ ಶಿಪ್ ಬ್ಯುಲ್ಡರ್ಸ್ ಕಂಪನಿಯು ಪ್ರತಿ ಷೇರಿಗೆ ರೂ.7.10 ರ ಡಿವಿಡೆಂಡ್ ಘೋಷಿಸಿದೆ. ನಿಗದಿತ ದಿನಾಂಕ 7ನೇ ಜನವರಿ 2022.
* ಈ ತಿಂಗಳಲ್ಲಿ ಟಿಸಿಎಸ್, ವಿಪ್ರೋ, ಹೆಚ್ ಸಿ ಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಬಜಾಜ್ ಸಮೂಹದ ಕಂಪನಿಗಳು, ಡಾಕ್ಟರ್ ರೆಡ್ಡೀಸ್ ಲ್ಯಾಬ್ ಮುಂತಾದ ಅಗ್ರಮಾನ್ಯ ಕಂಪನಿಗಳು ತಮ್ಮ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸುವ ಕಾರ್ಯಸೂಚಿ ಘೋಷಿಸಿವೆ. ಟಿಸಿಎಸ್, ಎಚ್ ಸಿ ಎಲ್ ಟೆಕ್ನಾಲಜೀಸ್ ನಂತಹ ಕಂಪನಿಗಳು ಡಿವಿಡೆಂಡ್ ಘೋಷಿಸುವ ನಿರ್ಧಾರವನ್ನೂ ಸಹ ಪ್ರಕಟಿಸಿವೆ.
ವಿಸ್ಮಯಕಾರಿ ಗುಣ:
ಹೂಡಿಕೆ ಮಾಡುವಾಗ ಕಂಪನಿಯು ಉತ್ತಮ ವಲಯದಲ್ಲಿದ್ದು, ಕಂಪನಿಯ ಆಡಳಿತ ಮಂಡಳಿಯು ಹೂಡಿಕೆದಾರರ ಸ್ನೇಹಿಯಾಗಿದ್ದರೆ ಯಾವ ರೀತಿ ಕಂಪನಿಯ ಷೇರುಗಳು ಕುಸಿತದಿಂದ ಪುಟಿದೇಳಬಹುದೆಂಬುದಕ್ಕೆ ಉದಾಹರಣೆ ಇಂತಿದೆ.
ಎವರೆಸ್ಟ್ ಕ್ಯಾಂಟೋ ಸಿಲಿಂಡರ್ ಲಿಮಿಟೆಡ್: ಈ ಕಂಪನಿ 2005 ರಲ್ಲಿ ಪ್ರತಿ ಷೇರಿಗೆ ರೂ.160 ರಂತೆ ರೂ.10 ರ ಮುಖಬೆಲೆಯ ಆರಂಭಿಕ ಷೇರು ವಿತರಣೆ ಮಾಡಿತು. 2007 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲಾಯಿತು. 2008 ರಲ್ಲಿ ಷೇರಿನ ಬೆಲೆಯು ರೂ,380 ರ ಸಮೀಪಕ್ಕೆ ಜಿಗಿದಿದ್ದು 2009 ರಲ್ಲಿ ರೂ.238 ರ ಸಮೀಪದಲ್ಲಿತ್ತು. ಅಲ್ಲಿಂದ ಏಕಮುಖವಾಗಿ ಇಳಿಕೆ ಕಂಡು 2013 ರಿಂದ 2015 ರವರೆಗೂ ಹಲವು ಬಾರಿ ಏಕ ಅಂಕಿಯ ಬೆಲೆಗೆ ಕುಸಿದಿತ್ತು. 2020 ರಲ್ಲಿ ರೂ.10 ರ ಸಮೀಪವೂ ಇತ್ತು. ಈ ವರ್ಷ ಷೇರಿನ ಕನಿಷ್ಠಬೆಲೆಯು ರೂ.40 ರ ಸಮೀಪವಿದ್ದು ಶುಕ್ರವಾರದಂದು ರೂ.239 ರ ವಾರ್ಷಿಕ ಗರಿಷ್ಠಕ್ಕೆ ಜಿಗಿತ ಕಂಡು ತನ್ನ ದಶಕದ ಹಿಂದಿನ ಬೆಲೆಗಳನ್ನು ದಾಟಿ ವಿಭಿನ್ನತೆಯನ್ನು ಪ್ರದರ್ಶಿಸಿದೆ.
ಡಿಸೆಂಬರ್ ತಿಂಗಳಲ್ಲಿಯೂ ಜಿ ಎಸ್ ಟಿ ಸಂಗ್ರಹಣೆಯು ರೂ.1.29 ಲಕ್ಷ ಕೋಟಿಗೆ ತಲುಪಿದೆ. ಕಳೆದ ಆರು ತಿಂಗಳಿನಿಂದಲೂ ಸತತವಾಗಿ ರೂ.1.00 ಲಕ್ಷ ಕೋಟಿಗೂ ಹೆಚ್ಚು ಸಂಗ್ರಹಣೆಯಾಗುತ್ತಿದೆ.
ಕೊನೆಯದಾಗಿ ಈಗಾಗಲೇ ಪೇಟೆಗಳು ಉತ್ತುಂಗದಲ್ಲಿರುವುದರಿಂದ, ಸಧ್ಯ ಓಮೈಕ್ರಾನ್ ಸಾಂಕ್ರಾಮಿಕವು ಹೆಚ್ಚಾಗುತ್ತಿರುವುದರಿಂದ ಅತ್ತ ಕಡೆಯೂ ಗಮನಹರಿಸಿ ಎಚ್ಚರಿಕೆಯ ವಹಿವಾಟು ನಡೆಸುವುದು ಇಂದಿನ ಅಗತ್ಯವಾಗಿದೆ. ಶುಭವಾಗಲಿ.
ಇದುಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ಮಾಡಿದುದಂ ನಾವುಣ್ಣುದೆ ಪೋಕುಮೆ– ನಾವು ಮಾಡಿದ ಕರ್ಮಾಕರ್ಮಗಳಿಗೆ ನಾವೆ ಹೊಣೆಗಾರರು ಅದರಲ್ಲಿ ಪಾಲು ಯಾರಿಗೂ ಇಲ್ಲ ಎಂಬರ್ಥ ಇಲ್ಲಿದೆ. ನಾವು ಮಾಡಿದ ಅಡುಗೆಯನ್ನು ನಾವೆ ಸೇವಿಸಬೇಕು. ಉಪ್ಪು ತಿಂದವನು ನೀರು ಕುಡಿಯಲೆ ಬೇಕು ಎನ್ನುವ ಅರ್ಥ ಇಲ್ಲಿ ಬರುತ್ತದೆ.
ಮೂಲತಃ ಈ ಮಾತನ್ನು ಜನ್ನನ “ಯಶೋಧರಾ ಚರಿತೆ” ಕಾವ್ಯದಿಂದ ಆರಿಸಿದೆ. ಈ ಕಾವ್ಯವು ಯಶೋಧರ ಎಂಬ ಅಯೋಧ್ಯೆಯ ರಾಜ ಹಾಗು ಅವನ ತಾಯಿಯಾದ ಚಂದ್ರಮತಿಯು ಒಂದು ಜನ್ಮದಲ್ಲಿ ಮಾಡುವ ಸಂಕಲ್ಪವನ್ನು ಮಾಡಿದ್ದರಿಂದ ನಾನಾ ಜನ್ಮಗಳನ್ನು ಎತ್ತಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿ ಬರುತ್ತದೆ.
ಅದರಲ್ಲಿ ಮಾರಿದತ್ತನ ವರ್ಣನೆ ಸಂದರ್ಭದಲ್ಲಿ ಅಭಯರುಚಿ ಮತ್ತು ಅಭಯಮತಿಯರು ಮಾರಿದತ್ತನ ಮುಂದೆ ಮಾರಿಗೆ ಬಲಿಯಾಗಲು ಬಂದು ನಿಲ್ಲಬೇಕಾದ ಪ್ರಸಂಗ. ಆ ಸಂದರ್ಭದಲ್ಲಿ ಅಣ್ಣ ತಂಗಿಯರ ಸಂಭಾಷಣೆಯ ಸಂದರ್ಭದಲ್ಲಿ ಅಭಯಮತಿ ಈ ಮಾತುಗಳನ್ನಾಡುತ್ತಾಳೆ.
ನಾವು ಮಾಡಿದ ಕರ್ಮದ ಪ್ರತಿಫಲವನ್ನು ನಾವೆ ಸ್ವೀಕರಿಸಬೇಕು ಅದು ಬೇರೆಯವರ ಹೆಗಲಿಗೆಣೆಯಲ್ಲ ಎಂಬುದು “ಮಾಡಿದುದಂ ನಾವುಣ್ಣುದೆ ಪೋಕುಮೆ” ಎಂಬ ಮಾತಿನ ಮೂಲಕ ಸ್ಪಷ್ಟವಾಗಿ ಗ್ರಾಹ್ಯವಾಗುತ್ತದೆ. ಒಳ್ಳೆಯದೆ ಆಗಲಿ ಕೆಟ್ಟದ್ದೆ ಆಗಲಿ ಎಲ್ಲವೂ ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತಿರುತ್ತದೆ. ಹಾಗಾಗಿ ಒಳ್ಳೆಯ ಆಲೋಚನೆ ಎಂದಿಗೂ ಕ್ಷೇಮವೆ ಅದೇ ಕೆಟ್ಟ ಕೆಲಸ ಮಾಡುವುದಿರಲಿ ಕೆಟ್ಟ ಆಲೋಚನೆ ಮಾಡಿದರೂ ಅದಕ್ಕೆ ಪ್ರಾಯಶ್ಚಿತ್ತಪಡ ಬೇಕಾಗುತ್ತದೆ ಎಮಬುದು ಈ ಮಾತಿನಿಂದ ತಿಳಿಯುತ್ತದೆ. ಸದಾ ಒಳ್ಳೆಯ ಆಲೋಚನೆ ಒಳ್ಳೆಯ ಕೆಲಸವನ್ನೆ ಮಾಡಬೇಕು ಎಂಬುದು ಇದರ ಗೂಡಾರ್ಥ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.
ಕೊರೋನಾ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ..ಮತ್ತೆ ಲಾಕ್ ಡೌನ್ ಹೇರುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗದಿರಲು ಜನರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸ ಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ತಿಳಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ಕರೋನಾ, ಒಮೈಕ್ರಾನ್ ಕೇಸ್ ಹೆಚ್ಚಾಗ್ತಿದೆ. ಮಹಾರಾಷ್ಟ್ರ ಅದರಲ್ಲಿಯೂ ಮುಂಬೈಯಲ್ಲಿ ಪ್ರಕರಣಗಳು ಹೆಚ್ಚುತ್ತಿದೆ. ಮುಂಬೈ ಮತ್ತು ಕರ್ನಾಟಕದ ವಹಿವಾಟು ಜಾಸ್ತಿಯಿರುವ ಕಾರಣ ಗಡಿಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಲು ಈಗಾಗಲೇ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.ಅವರು ಇಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊರೋನಾ ಎದುರಿಸಲು ಸಕಲ ಸಿದ್ಧತೆ: ಕೊರೋನಾ ವನ್ನು ನಿರ್ಬಂಧಿಸುವ ಜೊತೆಗೆ ಕೊರೋನಾವನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ. ಕಳೆದ ಬಾರಿ ಸಂಭವಿಸಿದ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸಂಬಂಧಪಟ್ಟ ಆಕ್ಸಿಜನ್ ಸರಬರಾಜು ಕಂಪನಿಗಳೊಂದಿಗೆ ಸಂಯೋಜಿಸಿ ಸಮರ್ಪಕ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಲಾಗಿದೆ. ಜಿಲ್ಲಾ ಹಾಗು ತಾಲ್ಲೂಕು ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಮತ್ತು ಹೆಚ್ಚುವರಿ ಬೆಡ್, 4000 ಐಸಿಯುಗಳನ್ನು ಇಡೀ ರಾಜ್ಯದಲ್ಲಿ ಸಿದ್ಧಪಡಿಸಲು ಕ್ರಮ ವಹಿಸಲಾಗಿದೆ. ಸಮರ್ಪಕ ಔಷಧಿಪೂರೈಕೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ : ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಸಿ ತೀರ್ಮಾನ ಕೈಗೊಳ್ಳಲಾಗುವುದು. ಕರೋನಾ ಸ್ಥಿತಿಗತಿ, ಸಧ್ಯದಲ್ಲಿಯೇ ಕರೋನಾ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.ಬೆಂಗಳೂರು ನಗರದಲ್ಲಿ ಕರೋನಾ ಬೆಳವಣಿಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಎರಡು ಡೋಸ್ ಕಡ್ಡಾಯ ಲಸಿಕೆ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಕರ್ನಾಟಕ ಪ್ರವೇಶಕ್ಕೆ ಅನುಮತಿಸಲಾಗುವುದು. ಬೆಳಗಾವಿ ಚೆಕ್ ಪೋಸ್ಟ್ ಜೊತೆಗೆ ಅಕ್ಕಪಕ್ಕದ ಚೆಕ್ ಪೋಸ್ಟ್ಗಳನ್ನೂ ಬಿಗಿಗೊಳಿಸಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸುಮಾರು 11 ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ. ಬೆಳಗಾವಿಯಲ್ಲೂ ಚೆಕ್ ಪೋಸ್ಟ್ ಗಳನ್ನು ಮಾಡಲಾಗುವುದು. ಪ್ರಯಾಣಿಕರಿಗೆ ಸಣ್ಣಪ್ರಮಾಣದ ತೊಂದರೆಯಾದರೂ ಬೆಳಗಾವಿ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಲಸಿಕಾ ಅಭಿಯಾನ
ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಲಸಿಕಾಕರಣ ಕಾರ್ಯಕ್ರಮವನ್ನು ಯೋಜನಾಬದ್ಧವಾಗಿ ಶಿಸ್ತಿನಿಂದ ಕಾರ್ಯಗತಗೊಳಿಸಲು ಸೂಚನೆ ನೀಡಲಾಗಿದೆ. ಮಕ್ಕಳನ್ನು ಸುರಕ್ಷಾ ಚಕ್ರದೊಳಗೆ ತರುವ ಮಾನ್ಯ ಪ್ರಧಾನಮಂತ್ರಿಗಳ ಆಶಯದ ಈ ಕಾರ್ಯಕ್ರಮಕ್ಕೆ ಜನವರಿ 3 ರಂದು ಚಾಲನೆ ನೀಡಲಾಗುವುದು. ಜನವರಿ 10 ರಂದು ಕೊ -ಮಾರ್ಬಿಡಿಟಿ ಇರುವ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟಿರುವ ವ್ಯಕ್ತಿಗಳಿಗೆ ಲಸಿಕಾಕರಣವನ್ನು ಮಾಡಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸಹಕಾರ ವಾರಪತ್ರಿಕೆಯ ವಿಶೇಷ ಸಂಚಿಕೆ ಹಾಗೂ 2022 ರ ಕ್ಯಾಲೆಂಡರನ್ನು ಇಂದು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್, ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರೂ ಆದ ಜಿ.ಟಿ. ದೇವೇಗೌಡ, ಶಾಸಕರಾದ ಶಿವರಾಜ್ ಪಾಟೀಲ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎನ್. ಅರುಣ್‍ಕುಮಾರ್, ಕಾರ್ಯದರ್ಶಿಯಾದ ಲಕ್ಷ್ಮಿಪತಯ್ಯ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು
ಸರಕಾರವು ಅತಿಥಿ ಉಪನ್ಯಾಸಕರ ಪರವಾಗಿಯೇ ಇದ್ದು, ಅವರ ವೇತನವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸುತ್ತಿದೆ. ಸಂಬಂಧಿತ ಸಮಿತಿಯ ವರದಿ ಬಂದ ಕೂಡಲೇ ಸಾಧ್ಯವಿರುವ ಎಲ್ಲ ಪರಿಹಾರ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು. ತಕ್ಷಣ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಅತಿಥಿ ಉಪನ್ಯಾಸಕರನ್ನು ನೇರವಾಗಿ ಕಾಯಂ ಮಾಡುವುದು ಸಾಧ್ಯವಿಲ್ಲ. ಇದಕ್ಕೆ ಉಮಾದೇವಿ ಪ್ರಕರಣದ ತೀರ್ಪು ಅಡಚಣೆಯಾಗಿದೆ. ಆದರೂ ನಾವು ಅತಿಥಿ ಉಪನ್ಯಾಸಕರಿಗೆ ಕೊರೋನಾ ಸಮಯದಲ್ಲೂ ವೇತನ ಕೊಟ್ಟಿದ್ದೇವೆ. ಮುಷ್ಕರನಿರತ ಉಪನ್ಯಾಸಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’’ ಎಂದರು.
ಸರಕಾರಿ ಕಾಲೇಜುಗಳಲ್ಲಿ ಕಡಿಮೆ ಉಪನ್ಯಾಸಕರು ಇದ್ದ ಕಾರಣಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ಇವರು ಸರಕಾರದ ಗಮನಕ್ಕೆ ತಾರದೆಯೇ ಮುಷ್ಕರಕ್ಕೆ ಇಳಿದಿರುವುದು ಸರಿಯಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಮೇಕೆದಾಟು- ಕಾಂಗ್ರೆಸ್ ನಾಟಕ
ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ನಾಟಕವಾಡುತ್ತಿದೆ. ಅದು ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯು ಈ ನಾಟಕದ ಒಂದು ಭಾಗವಷ್ಟೆ ಎಂದು ಸಚಿವರು ಲೇವಡಿ ಮಾಡಿದರು.
ನೀರಾವರಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪರಿಣಿತರಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಭಗೀರಥನಿದ್ದಂತೆ. ಮೇಕೆದಾಟು ವಿಚಾರದಲ್ಲಿ ಸರಕಾರದ ನಿಲುವನ್ನು ಸದನದಲ್ಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ತಾನು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದ ಕಾಂಗ್ರೆಸ್, ಈಗ ಗದ್ದಲ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹರಿಹಾಯ್ದರು.
ಕಾಂಗ್ರೆಸ್ ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದು, ಜನರನ್ನು ದಿಕ್ಕು ತಪ್ಪಿಸುತ್ತಿದೆ. ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಅನುಕೂಲವಾಗಲಿದ್ದು, ಸರಕಾರವು ಇದನ್ನು ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಕುಡಿಯುವ ನೀರಿನ ಪೂರೈಕೆ ಉದ್ದೇಶದ ಈ ಯೋಜನೆಯನ್ನು ಜಾರಿಗೆ ತರದೆ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಅಶ್ವತ್ಥನಾರಾಯಣ ಹೇಳಿದರು.
ಗ್ರಾಹಕರ ಹಕ್ಕುಗಳು ಮತ್ತು ಅವರ ಹಿತರಕ್ಷಣೆ – ಎರಡೂ ಸಮಾಜದಲ್ಲಿ ಅತ್ಯಂತ ಮುಖ್ಯವಾಗಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇವುಗಳಿಗೆ ಒತ್ತು ಕೊಡಲಾಗಿದೆ. ಈ ಮೂಲಕ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುವುದಕ್ಕೆ ಅಗತ್ಯವಾದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
`ಅಖಿಲ ಭಾರತೀಯ ಗ್ರಾಹಕ ಪಂಚಾಯತಿ’ಯ ರಾಜ್ಯ ಘಟಕವು ಗಿರಿನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಹಕ ಜಾಗೃತಿ ಪಕ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಬದಲಾವಣೆ ಬರಬೇಕೆಂದರೆ ಅದಕ್ಕೆ ಶಿಕ್ಷಣ ವ್ಯವಸ್ಥೆಯೇ ಆಧಾರಸ್ತಂಭವಾಗಿದೆ; ಹೀಗಾಗಿ ಎನ್ಇಪಿಯಲ್ಲಿ ಸಕಾರಾತ್ಮಕ ಮತ್ತು ಪರಿಪೂರ್ಣ ಬೆಳವಣಿಗೆಗೆ ಗಮನ ಹರಿಸಲಾಗಿದೆ. ಇದರಿಂದ ಪ್ರತಿಯೊಬ್ಬರೂ ಸಮಾಜಕ್ಕೆ ಉತ್ತರದಾಯಿಗಳಾಗಿ ಇರಲಿದ್ದಾರೆ ಎಂದರು.
ಸಮಾಜದಲ್ಲಿ ಆಹಾರ, ಆರೋಗ್ಯ, ಶಿಕ್ಷಣ, ವಸತಿ ಮತ್ತು ವ್ಯಾಪಾರ ಈ ಐದು ಕ್ಷೇತ್ರಗಳು ಅತ್ಯಂತ ಪ್ರಮುಖವಾಗಿವೆ. ಎಬಿಜಿಪಿ ಸಂಸ್ಥೆಯ ರಾಜ್ಯ ಘಟಕವು ಸಕ್ರಿಯವಾಗಿದೆ. ಆದರೆ, ಒಂದು ವ್ಯವಸ್ಥೆಯಾಗಿ ನಾವು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ವಿಚಾರದಲ್ಲಿ ತುಂಬಾ ಹಿಂದಿದ್ದೇವೆ. ಜನಹಿತದ ಈ ಕಾರ್ಯಕ್ಕೆ ಸಂಘಸಂಸ್ಥೆಗಳು ಕೈಜೋಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸಮಾಜದ ಬಗ್ಗೆ ಕಳಕಳಿಯುಳ್ಳವರ ಆಗ್ರಹಕ್ಕೆ ಮಣಿದೇ ಸರಕಾರಗಳು ಗ್ರಾಹಕ ರಕ್ಷಣಾ ಕಾಯ್ದೆಯನ್ನು ತಂದಿವೆ. ಸಂಸ್ಥೆಯು ಈ ನಿಟ್ಟಿನಲ್ಲಿ ಯಾವುದಾದರೂ ಯೋಜನೆಯನ್ನು ರೂಪಿಸಿದ್ದರೆ ಸರಕಾರವು ಅದಕ್ಕೆ ಅಗತ್ಯ ಬೆಂಬಲ ನೀಡಲಿದೆ ಎಂದು ಸಚಿವರು ನುಡಿದರು.
ಸಮಾರಂಭದಲ್ಲಿ ಎಬಿಜಿಪಿ ಅಧ್ಯಕ್ಷ ನಾರಾಯಣಭಾಯ್, ದತ್ತಾತ್ರಿ ನಾಡಿಗೇರ್, ನ್ಯಾಷನಲ್ ಲಾ ಸ್ಕೂಲ್ ಸಂಸ್ಥೆಯ ಡಾ.ಅಶೋಕ್ ಪಾಟೀಲ್, ಡಾ.ಕಿಶೋರ್ ಮುಂತಾದವರು ಉಪಸ್ಥಿತರಿದ್ದರು.
ಒಮೈಕ್ರಾನ್ ಪ್ರಕರಣಗಳನ್ನು ನಿಯಂತ್ರಣಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಆರೋಗ್ಯ ಮೂಲಸೌಕರ್ಯಗಳಾದ ಔಷಧಿ, ಐಸಿಯು ಬೆಡ್‍ಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಷಯ ತಿಳಿಸಿದರು.ಇಡೀ ದೇಶದಲ್ಲಿಯೇ ಒಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ದೇಶದ 8 ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಒಂದು ಎಂದು ಕೇಂದ್ರಸರ್ಕಾರ ಗುರುತಿಸಿದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದರು.
ಹಿಂದೂ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಹಿಂದೂ ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತಮಾಡುತ್ತಿದ್ದೇವೆ, ಡಿ.ಕೆ.ಶಿವಕುಮಾರ್ ರವರ ಹೇಳಿಕೆಯು ಹಿಂದೂ ದೇವಸ್ಥಾನ ಹಾಗೂ ಹಿಂದೂ ಭಕ್ತರ ವಿರುದ್ಧ ಅವರಿಗಿರುವ ಮನೋಭಾವ ವ್ಯಕ್ತ ಪಡಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಜನಸ್ಪಂದನೆಯ ದೃಷ್ಟಿಯಿಂದ ನಮ್ಮ ಸರ್ಕಾರ ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಜಿಲ್ಲೆಗಳಲ್ಲಿ ಉತ್ತಮ ಆಡಳಿತವನ್ನು ನೀಡಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ, ಬದಲಾವಣೆ ಬಗ್ಗೆ ಚಿಂತಿಸದೇ, ನೀವೇ ಬದಲಾವಣೆ ತನ್ನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-Basavaraja Bommai- ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.
ಇಂದು ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಒಂದು ತಿಂಗಳಲ್ಲಿ 14 ಲಕ್ಷ ರೈತರಿಗೆ ಪರಿಹಾರ:ಸರ್ಕಾರ ಜನರ ಸಮಸ್ಯೆಗಳಿಗೆ ಧಾವಿಸುವ ಮೂಲಕ ತನ್ನ ಜೀವಂತಿಕೆಯನ್ನು ಮೆರೆಯುತ್ತದೆ. ಅಕಾಲಿಕ ಮಳೆಯಿಂದುಂಟಾದ ಬೆಳೆಹಾನಿಗೆ ಪರಿಹಾರ ಆ್ಯಪ್ ಮೂಲಕ 48 ಗಂಟೆಯೊಳಗೆ ಬೆಳೆ ಪರಿಹಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಕ್ಷಮತೆಯಿಂದ ಶೇ.83 ರಷ್ಟು ಪರಿಹಾರ ರೈತರಿಗೆ ನೀಡಲು ಸಾಧ್ಯವಾಗಿದೆ. ಸಂಕಷ್ಟಗಳು, ರಾಜ್ಯ ಸರ್ಕಾರದ ತೀರ್ಮಾನ ಹಾಗೂ ಜಿಲ್ಲಾಡಳಿತದ ಕ್ರಿಯಾಶೀಲತೆಯಿಂದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಒಂದು ತಿಂಗಳಲ್ಲಿ 14 ಲಕ್ಷ ರೈತರಿಗೆ ಪರಿಹಾರ ನೀಡಿರುವು ಗಣನೀಯ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸವಾಲುಗಳನ್ನು ಒಗ್ಗಟ್ಟಾಗಿ ಎದುರಿಸಿ, ತಂಡ ಸ್ಫೂರ್ತಿಯಿಂದ ಕೆಲಸ ಮಾಡಬೇಕು. ಕೋವಿಡ್‍ನ ಸಂದರ್ಭದಲ್ಲಿ ಜಿಲ್ಲಾಡಳಿತ ಅತ್ಯಂತ ಜಾಗರೂಕತೆ ಹಾಗೂ ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಬಾಕಿ ಇರುವ ನ್ಯಾಯಾಲಯ ಪ್ರಕರಣಗಳು :5 ವರ್ಷಗಳಿಂದ ಬಾಕಿ ಇರುವ ಜಮೀನು ವ್ಯಾಜ್ಯ ಹಾಗೂ ನ್ಯಾಯಾಲಯ ಪ್ರಕರಣಗಳು ರೈತರ ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸುತ್ತದೆ. ತಹಶೀಲ್ದಾರ, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಬಾಕಿಯಿರುವ ಕೋರ್ಟ್ ಪ್ರಕರಣಗಳು ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಇದಕ್ಕೆ ಅವಶ್ಯಕತೆಯಿದ್ದಲ್ಲಿ ಹೆಚ್ಚುವರಿ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ನಿಯೋಜನೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಒಟ್ಟಾರೆ ಕನಿಷ್ಟ ಒಂದು ವರ್ಷದೊಳಗೆ ಎಲ್ಲಾ ನ್ಯಾಯಾಲಯ ಪ್ರಕರಣಗಳು ವಿಲೇವಾರಿ ಆಗಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಸವಾಲುಗಳಿಗೆ ಸಕಾರಾತ್ಮಕ ಪರಿಹಾರ :ಗೋಮಾಳ, ಬಗರಹುಕಂ, ಡೀಮ್ಡ್ ಅರಣ್ಯ ಪ್ರದೇಶಗಳ ವ್ಯಾಜ್ಯಗಳಿಗೆ ಕಾನೂನು ಪರಿಹಾರ ನೀಡಬೇಕು. ಇದರಿಂದಾಗಿ ಜನರು ಅನಿಶ್ಚಿತತೆಯ ಬದುಕು ಬದುಕುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ನಿಶ್ಚಿತವಾದ, ಸ್ಪಷ್ಟವಾದ ಆಡಳಿತ, ಗೊಂದಲಗಳಿಲ್ಲದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಜಿಲ್ಲಾಧಿಕಾರಿಗಳು ಸವಾಲುಗಳಿಗೆ ಸ್ಪಷ್ಟತೆಯಿಂದ ಸಕಾರಾತ್ಮಕವಾದ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದರು.
ಸಹಾನುಭೂತಿಯಿಂದ ಬಡವರ ಕೆಲಸ
ಉತ್ತಮ ಸ್ಪಂದನೆ ಹಾಗೂ ಸಕಾರಾತ್ಮಕ ಮನೋಭಾವದಿಂದ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕು. ಅಧಿಕಾರಕ್ಕೆ ಹೊಣೆಗಾರಿಕೆ ಇರುತ್ತದೆ. ಜಿಲ್ಲೆಗಳಲ್ಲಿ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಪ್ರತಿ ತಿಂಗಳು ತಪ್ಪದೇ ವರದಿ ಮಾಡಬೇಕು ಎಂದು ಸೂಚಿಸಿದರು.
ಬಡವರ ಕೆಲಸವನ್ನು ಸಹಾನುಭೂತಿಯಿಂದ ಮಾಡಬೇಕು. ಎಸ್‍ಸಿ, ಎಸ್ ಟಿ, ಓಬಿಸಿ ಹಾಗೂ ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು. ಜಿಲ್ಲಾಡಳಿತದ ಉತ್ತಮ ಕಾರ್ಯಗಳಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಕಾನೂನಿನ ವ್ಯಾಪ್ತಿಯಲ್ಲಿ ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಂದು , ಜಿಲ್ಲೆಯಲ್ಲಿ ನಿಮ್ಮದೇ ಹೆಜ್ಜೆಗುರುತುಗಳನ್ನು ಮೂಡಿಸಿ ಎಂದು ತಿಳಿಸಿದರು. ನಿಮ್ಮ ಎಲ್ಲ ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲ ಇರುತ್ತದೆ. ಆದರೆ ದುರುದ್ದೇಶಪೂರಿತ ನಡೆ, ನಡವಳಿಕೆಗೆ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಗಳು ಕೇವಲ, ಸರ್ಕಾರದ ಅಥವಾ ಸಚಿವಾಲಯದ ಪ್ರತಿನಿಧಿಗಳಷ್ಟೇ ಅಲ್ಲ. ತಳಹಂತದ ವ್ಯವಸ್ಥೆ, ಜನತೆ, ಅವರಸಮಸ್ಯೆಯ ಭಾಗವಾಗಿಯೂ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮುಖ್ಯಸ್ಥರ ಹೊಣೆಯೊಂದಿಗೆ ತಳಹಂತದ ಜನರ ಸೇವೆಯ ಜವಾಬ್ದಾರಿಯೂ ನಿಮ್ಮದಾಗಿದೆ ಎಂದು ತಿಳಿಸಿದರು.
ನಿಮಗೆ ಹೆಚ್ಚಿನ ವಿವೇಚನಾ ಅಧಿಕಾರವಿದ್ದು, ಜವಾಬ್ದಾರಿಯೂ ಹೆಚ್ಚಿದೆ. ಬಡವರ ಹಿತಕ್ಕಾಗಿ ನಿಮ್ಮ ವಿವೇಚನಾಧಿಕಾರವನ್ನು ಬಳಸಿ. ಅಧಿಕಾರ ನಿಮ್ಮನ್ನು ವಿನಮ್ರರನ್ನಾಗಿಸಬೇಕು. ನ್ಯಾಯಾಲಯ ವಿಷಯಗಳಲ್ಲಿ ನಿಮ್ಮ ವಿವೇಚನೆಯನ್ನು ಕಾನೂನು ಪ್ರಕಾರ ಬಳಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿ, ತಹಸೀಲ್ದಾರರ ಪಾತ್ರವನ್ನು ಹಾಗೂ ಕಾರ್ಯನಿರ್ವಹಣೆಯನ್ನು ಅರಿತು ಕಾರ್ಯ ಹಂಚಿಕೆ ಮಾಡಿದರೆ, ಜಿಲ್ಲಾಧಿಕಾರಿಗಳ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ ಅವರು, ಜಿಲ್ಲೆಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ತಪ್ಪದೇ ನಡೆಯಬೇಕು. ಜಿಲ್ಲಾಧಿಕಾರಿಗಳು ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ಒತ್ತುವರಿ ತೆರವು ಕಾರ್ಯಕ್ಕಾಗಿ ಮೀಸಲಿಡಬೇಕು. ಬಡವರ ಪರ ಕೆಲಸ ಮಾಡುವಾಗ ನಕಾರಾತ್ಮಕ ಚಿಂತನೆ ಬೇಡ ಎಂದು ತಿಳಿಸಿದರು.
ಜನವರಿ 26 ರಂದು ಜನರ ಬಾಗಿಲಿಗೆ ಸರ್ಕಾರ ಸವಲತ್ತು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರೈತರ ಮನೆಬಾಗಿಲಿಗೆ ದಾಖಲಾತಿಗಳನ್ನು ನೀಡುವ ವಿನೂತನ ಕಾರ್ಯಕ್ರಮವಾಗಿದೆ. ಜಿಲ್ಲಾಧಿಕಾರಿಗಳು ಒಂದು ದಿನದ ಅವಧಿಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ರೈತರ ದಾಖಲಾತಿಗಳನ್ನು ಅವರ ಮನೆಬಾಗಿಲಿಗೆ ನೀಡುವ ಕಾರ್ಯಕ್ರಮವನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದರು.
ಗ್ರಾಮವಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ಜಿಲ್ಲಾಧಿಕಾರಿಗಳಿಗೆ ಹಲವು ಯೋಜನೆಗಳಲ್ಲಿ ಸೂಚಿಸಿರುವ ಗುರಿಗಳನ್ನು ತಲುಪಬೇಕು ಎಂದು ತಿಳಿಸಿ , ಬೆಳೆಪರಿಹಾರ ವಿತರಿಸುವಲ್ಲಿ ಜಿಲ್ಲಾಡಳಿತ ತೋರಿದ ದಕ್ಷತೆಯನ್ನು ಕಂದಾಯ ಸಚಿವರು ಪ್ರಶಂಸಿಸಿದರು
ಸಭೆಯಲ್ಲಿ ಸಚಿವ ಸಂಪುಟದ ಇತರ ಸದಸ್ಯರು, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇಂದು ಮುಂಜಾನೆಯೇ ಬೆಂಗಳೂರು ನಗರದಿಂದ ಮಾಗಡಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಮೂಲಕ ಸಂಚರಿಸಿ ಸರಳತೆಯನ್ನು ಮೆರೆದ ಮಾಜಿ ಸಚಿವ ಸುರೇಶ್ ಕುಮಾರ್-sureshkumar- ಅವರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬಸವೇಶ್ವರ ನಗರದ ತಮ್ಮ ಮನೆಯಿಂದ ಮಾಗಡಿ ರಸ್ತೆಯ ಸುಮನಹಳ್ಳಿ ಬಸ್ ನಿಲ್ದಾಣದವರೆಗೂ ಒಬ್ಬರೇ ನಡೆದು ಬಂದು ಅಲ್ಲಿಂದ ತಮ್ಮೊಬ್ಬ ಸ್ನೇಹಿತರೊಂದಿಗೆ ಬಿ.ಎಂ.ಟಿ.ಸಿ ಬಸ್ ಹತ್ತಿದ ಅವರು ತಾವರೆಕೆರೆಯವರೆಗೂ ಬಸ್ ನಲ್ಲಿ ಸಂಚರಿಸಿ ಬಸ್ ಪ್ರಯಾಣಿಕರ ಕುಶಲೋಪರಿ ವಿಚಾರಿಸಿದ್ದಾರೆ.
ನಿರ್ವಾಹಕರು ಬೇಡವೆಂದರೂ ಕೇಳದೇ ತಮ್ಮ ಜೊತೆಗಿದ್ದ ಒಬ್ಬರೇ ಸ್ನೇಹಿತರದ್ದೂ ಸೇರಿದಂತೆ ತಲಾ ಇಪ್ಪತ್ತು ರೂಪಾಯಿ ಕೊಟ್ಟು ಟಿಕೇಟು ಪಡೆದು ಮಾದರಿಯಾಗಿದ್ದಾರೆ. ತಮ್ಮೊಂದಿಗೆ ಅಂಗರಕ್ಷಕರನ್ನು ಸಹ ಕರೆದೊಯ್ಯದೇ ತಮ್ಮ ಎಂದಿನ ಸರಳ ನಡೆಯನ್ನು ಅವರು ಅನುಸರಿಸಿದ್ದಾರೆ.
2022ರ ಹೊಸ ವರ್ಷದ ಮೊದಲ ದಿನವೇ ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಈ ವ್ಯಂಗ್ಯಚಿತ್ರ ಉತ್ಸವವು ಬೆಳಗ್ಗೆ 11ಕ್ಕೆ ಉದ್ಘಾಟನೆಯಾಗಲಿದೆ. ಇಲ್ಲಿ ಪ್ರದರ್ಶನವಾಗುತ್ತಿರುವ ದೊಡ್ಡ ಅಳತೆಯ ಕ್ಯಾರಿಕೇಚರ್ (ವ್ಯಂಗ್ಯ ಭಾವಚಿತ್ರ) ಗಳ ಪ್ರದರ್ಶನವು ಜನವರಿ 22ರವರೆಗೂ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ.
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಾಗೂ ಚತ್ತೀಸ್‍ಗಢದ ಕಾರ್ಟೂನ್ ವಾಚ್' ಮಾಸಪತ್ರಿಕೆಯ ಸಹಯೋಗದಲ್ಲಿ ಈವ್ಯಂಗ್ಯಚಿತ್ರ ಉತ್ಸವ-2022′ ನಡೆಯುತ್ತಿದೆ. ಇದರ ಉದ್ಘಾಟನೆಯನ್ನು `ಕಾರ್ಟೂನ್ ವಾಚ್’ ಕಾರ್ಟೂನ್ ಪತ್ರಿಕೆಯ ಸಂಪಾದಕರಾದ ತ್ರಿಯಂಬಕ ಶರ್ಮ ಅವರು ನಡೆಸಿ ಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ನಾಡಿನ ನಾಲ್ಕು ಹಿರಿಯ ವ್ಯಂಗ್ಯಚಿತ್ರಕಾರರಿಗೆ ಜೀವನಮಾನದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ದೊಡ್ಡ ಅಳತೆಯ ಕ್ಯಾರಿಕೇಚರ್ ಗಳ ಪ್ರದರ್ಶನ! ಈ ವ್ಯಂಗ್ಯಚಿತ್ರ ಉತ್ಸವದ ಅಂಗವಾಗಿ ದೇಶದಲ್ಲೇ ಅಪರೂಪದ ಒಂದು ಪ್ರಯೋಗಕ್ಕೆ ನಾಡಿನ ವ್ಯಂಗ್ಯಚಿತ್ರಕಾರರು ಮುಂದಾಗಿದ್ದಾರೆ. ಎರಡು ಅಡಿ ಅಗಲ ಹಾಗೂ 3 ಅಡಿ ಉದ್ದದ ಕಪ್ಪು-ಬಿಳುಪಿನ ಕ್ಯಾರಿಕೇಚರ್ ಪ್ರದರ್ಶನಗೊಳ್ಳಲಿವೆ.
ಇದರಲ್ಲಿ ನಾಡಿನ ಹೆಸರಾಂತ 21 ವ್ಯಂಗ್ಯಚಿತ್ರಕಾರರಾದ ಬಿ ಜಿ ಗುಜ್ಜಾರಪ್ಪ, ವೈ ಎಸ್ ನಂಜುಂಡಸ್ವಾಮಿ, ರಾ ಸೂರಿ, ಸತೀಶ್ ಆಚಾರ್ಯ, ಚಂದ್ರನಾಥ್ ಆಚಾರ್ಯ, ಜಿ ಎಸ್ ನಾಗನಾಥ್, ರಘುಪತಿ ಶೃಂಗೇರಿ, ಮನೋಹರ್ ಆಚಾರ್ಯ, ಜೈರಾಮ್ ಉಡುಪ, ಜೀವನ್ ಶೆಟ್ಟಿ, ಜೇಮ್ಸ್ ವಾಜ್ , ಸುಭಾಶ್‍ಚಂದ್ರ, ರವಿ ಪೂಜಾರಿ, ಯತೀಶ್ ಸಿದ್ದನಕಟ್ಟೆ, ಚಂದ್ರಗಂಗೊಳ್ಳಿ, ಸಂಕೇತ್ ಗುರುದತ್ತ, ಸತೀಶ್ ಬಾಬು, ಶೈಲೇಶ್ ಉಜಿರೆ, ಗೀಚಾ ಬೋಳ್ಕಟ್ಟೆ, ಪ್ರಸನ್ನ ಕುಮಾರ್, ಎಂ ಎನ್ ದತ್ತಾತ್ರಿ ಭಾಗವಹಿಸುತ್ತಿದ್ದು ಒಟ್ಟು 42 ಕ್ಯಾರಿಕೇಚರ್ ಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.
ನಾಲ್ವರು ವ್ಯಂಗ್ಯಚಿತ್ರಕಾರರಿಗೆ ಜೀವನಮಾನದ ಪ್ರಶಸ್ತಿ ಪ್ರದಾನ
ನಾಡಿನ ಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಕೆ ಆರ್ ಸ್ವಾಮಿ, ವಿ ಜಿ ನರೇಂದ್ರ, ಬಿ ಜಿ ಗುಜ್ಜಾರಪ್ಪ (ಗುಜ್ಜಾರ್) ಹಾಗೂ ಜಿ ಎಸ್ ನಾಗನಾಥ್ ಅವರುಗಳು ಈ ಜೀವನಮಾನದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ನಾಲ್ವರು ಹಿರಿಯ ಕಲಾವಿದರ ಕಿರು ಪರಿಚಯವು ಹೀಗಿವೆ.
ಕೆ ಆರ್ ಸ್ವಾಮಿ :ಕನ್ನಡ ನಾಡು ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಲ್ಲಿ ಕೆ ಆರ್ ಸ್ವಾಮಿ ಅವರು ಅಗ್ರಪಂಕ್ತಿಯಲ್ಲಿದ್ದಾರೆ. ಇವರು ಇತ್ತೀಚಿಗಷ್ಟೇ 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಯೋಮಾನದಲ್ಲೂ ತಮ್ಮ ನೆಚ್ಚಿನ ಹವ್ಯಾಸವಾದ ಕಾರ್ಟೂನ್ ರಚನೆಯನ್ನು ಮಾತ್ರ ಬಿಟ್ಟಿಲ್ಲ. ವೃತ್ತಿಯಲ್ಲಿ ಇಂಜಿನಿಯರ್, ಕರ್ನಾಟಕ ವಿದ್ಯುನ್ಮಂಡಲಿಯಲ್ಲಿ 32 ವರ್ಷಗಳು ಸೇವೆ ಸಲ್ಲಿಸಿದ್ದಾರೆ. ವೃತ್ತಿಯಿಂದ ನಿವೃತ್ತಿ ಹೊಂದಿದ್ದರೂ ಪ್ರವೃತ್ತಿಯಲ್ಲಿನ ಉತ್ಸಾಹ ಮಾತ್ರ ಇಮ್ಮಡಿಗೊಂಡಿದೆ. ಸತತ ನಾಲ್ಕೈದು ದಶಕಗಳಿಂದ ಕಾರ್ಟೂನ್ ರಚನೆಯಲ್ಲಿ ತೊಡಗಿರುವ ಸ್ವಾಮಿ ಅವರು ಈಗಲೂ ಲವಲವಿಕೆಯಿಂದ ಇದ್ದಾರೆಂದರೆ ಅದಕ್ಕೆ ಈ ನಗೆ ಗುಳಿಗೆಯೆ ಸಿದ್ಧೌಷಧಿ ಎನ್ನಲಡ್ಡಿಯಿಲ್ಲ.
ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಇವರ ಕಾರ್ಟೂನ್ ಗಳು ಪ್ರಕಟಗೊಂಡಿವೆ. ಆಗಿನ ಕಾಲದಿಂದ ಹಿಡಿದು ಈ ಕಾಲಘಟ್ಟದವರಗೂ ಇವರು ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದಾರೆ. ಪೆನ್ನು-ಪೇಪರ್ ನಿಂದ ಆರಂಭಗೊಂಡ ಇವರ ವ್ಯಂಗ್ಯಚಿತ್ರದ ಅಭ್ಯಾಸ ತಂತ್ರಜ್ಞಾನ ಯುಗದಲ್ಲೂ ಅಷ್ಟೇ ಸ್ಪಷ್ಟ ಹಾಗೂ ವಿಭಿನ್ನವಾಗಿ ಮೂಡಿ ಬರುತ್ತಿದೆ. ಇವರ ಕಾರ್ಟೂನ್‍ಗಳಲ್ಲಿ ಮಾತಿಗಿಂತ ಚಿತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದು ಇವರ ವಿಶೇಷತೆ. ಕೆ ಆರ್ ಸ್ವಾಮಿ ಅವರು ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಮಾವ(ಅಮ್ಮನ ತಮ್ಮ). ಸ್ವಾಮಿ ಅವರ ಕತೆ ಹೇಳುವ ಶೈಲಿಯನ್ನು ಕಾಸರವಳ್ಳಿ ಅವರು ಮೆಚ್ಚುತ್ತಾರೆ ಅಲ್ಲದೆ ತಮ್ಮ ಕೆಲವು ಚಿತ್ರಗಳಲ್ಲಿ ಸ್ವಾಮಿ ಅವರ ವ್ಯಂಗ್ಯಚಿತ್ರದ ವಸ್ತುಗಳನ್ನು ಬಳಸಿಕೊಂಡಿದ್ದಾರಂತೆ!
ಇಳಿವಯಸ್ಸಲ್ಲೂ ಉತ್ಸಾಹದ ಚಿಲುಮೆಯಂತೆ ಸದಾ ಚಟುವಟಿಕೆಯಲ್ಲಿರುವ ಸ್ವಾಮಿ ಅವರು ತಮ್ಮ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈ ದಿನಮಾನಕ್ಕೂ ಹೊಂದಿಕೊಂಡಿದ್ದಾರೆ.
ವಿ.ಜಿ.ನರೇಂದ್ರ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ರೂವಾರಿ ವಿ.ಜಿ. ನರೇಂದ್ರ ಅವರಿಗೆ ಶಾಲಾ ದಿನಗಳಲ್ಲೇ ವ್ಯಂಗ್ಯಚಿತ್ರ ಕಲೆಯ ಗೀಳು ಅಂಟಿಕೊಂಡಿತ್ತು. ಇವರನ್ನು ಮೊದಲು ಆಕರ್ಷಿಸಿದ್ದು ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಅವರ ವ್ಯಂಗ್ಯಚಿತ್ರಗಳು. 1965ರಲ್ಲಿ ಇವರ ಮೊದಲ ವ್ಯಂಗ್ಯಚಿತ್ರ ಕರ್ಮವೀರ' ವಾರಪತ್ರಿಕೆಯಲ್ಲಿ ಪ್ರಕಟವಾಯ್ತು. ಅಲ್ಲಿಂದ ವ್ಯಂಗ್ಯಚಿತ್ರ ರಚನೆಯು ಆರಂಭವಾಯ್ತು. ವಿಜ್ಞಾನದ ಪದವಿಯ ನಂತರ ವೃತ್ತಿಗಾಗಿ ಮುಂಬೈ ಸೇರಿದರು. ಅಲ್ಲಿ ಇಲ್ಲಸ್ಟ್ರೇಡೆಡ್ ವೀಕ್ಲಿ ಆಫ್ ಇಂಡಿಯಾ, ಧರ್ಮಯುಗ ಮತ್ತಿತರ ಪತ್ರಿಕೆಗೆ ವ್ಯಂಗ್ಯಚಿತ್ರಗಳನ್ನು ಬರೆದರು. ಆನಂತರ ಭಾರತದ ಪ್ರಥಮ ಕಾಮಿಕ್ ಫೀಚರ್ ಸಿಂಡಿಕೇಟ್,ರಂಗ ರೇಖಾ ಫೀಚರ್ಸ್’ ಸೇರಿದರು. ಇವರ ರಿಪೋರ್ಟರ್ ಸಂಜು' ಉದಯವಾಣಿ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳ 15 ದಿನಪತ್ರಿಕೆಗಳಲ್ಲಿ ಪ್ರಕಟವಾಗಲು ಪ್ರಾರಂಭವಾಯ್ತು. ಮುಂದೆಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ರಾಜಕೀಯ ವ್ಯಂಗ್ಯಚಿತ್ರ ಬರೆಯಲು ಅವಕಾಶವಾಯ್ತು. ಅಲ್ಲಿ ಬರೆದ ವ್ಯಂಗ್ಯಚಿತ್ರಗಳು ಭಾರತದ ವ್ಯಂಗ್ಯಚಿತ್ರ ಪಿತಾಮಹ ಶಂಕರ್ ಅವರ ಗಮನ ಸೆಳೆದವು ಅಲ್ಲದೇ ಮೆಚ್ಚಿಕೊಂಡು ನರೇಂದ್ರ ಅವರನ್ನು ‘ಶಂಕರ್ಸ್ ವೀಕ್ಲಿ’ ಸೇರಲು ಅಹ್ವಾನಿಸಿದರು. 1973ರಲ್ಲಿ ಅವರು ‘ಶಂಕರ್ಸ್ ವೀಕ್ಲಿ’ ಸೇರಿದರು. ಇದು ಅವರ ಬದುಕಿನಲ್ಲಿ ದೊರೆತ ದೊಡ್ಡ ತಿರುವು. ಶಂಕರ್ಸ್ ವೀಕ್ಲಿ' ಪ್ರಕಟಣೆ ನಿಂತ ನಂತರ ನರೇಂದ್ರ ಅವರು ಬೆಂಗಳೂರಿಗೆ ಬಂದುಸಂಯುಕ್ತ ಕರ್ನಾಟಕ’ದಲ್ಲಿ 11 ವರ್ಷಗಳು ಸ್ಟಾಫ್ ವ್ಯಂಗ್ಯಚಿತ್ರಕಾರರಾದರು. ನಂತರದಲ್ಲಿ `ಕನ್ನಡ ಪ್ರಭ’ ಸೇರಿ 20 ವರ್ಷಗಳು ಸುದೀರ್ಘ ಸೇವೆಯ ನಂತರ 2007ರಲ್ಲಿ ನಿವೃತ್ತಿಯಾದರು.
1977ರಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಸ್ಥಾಪನೆಯಾದಾಗ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದ ನರೇಂದ್ರ ಅವರು 1978ರಲ್ಲಿ ಅದರ ಅಧ್ಯಕ್ಷರೂ ಆದರು. 2001ರಿಂದ ಅವರು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟೀಯಾಗಿ ವ್ಯಂಗ್ಯಚಿತ್ರಕಲೆಯ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ. ದೇಶ-ವಿದೇಶದ ವ್ಯಂಗ್ಯಚಿತ್ರಕಾರರನ್ನು ಗುರುತಿಸಿ ಅವರಿಗೆ ತಮ್ಮ ಸಂಸ್ಥೆಯ ಮೂಲಕ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟು ವ್ಯಂಗ್ಯಚಿತ್ರ ಕ್ಷೇತ್ರವನ್ನು ವಿಸ್ತಾರಗೊಳಿಸುತ್ತಿದ್ದಾರೆ. ನರೇಂದ್ರ ಅವರು ಯಾವುದೇ ವಯೋಮಾನದ ಹಂಗಿಲ್ಲದೇ ಈ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಬಿ ಜಿ ಗುಜ್ಜಾರಪ್ಪ(ಗುಜ್ಜಾರ್): ತುಮಕೂರು ಜಿಲ್ಲೆಯ ಬಾಣಗೆರೆಯ ಗುಜ್ಜಾರ್ ಅವರು ತಮ್ಮ ವಿದ್ಯಾಭ್ಯಾಸದ ದಿನಗಳಿಂದಲೇ ಚಿತ್ರ ರಚನೆ ಹಾಗೂ ಕಾರ್ಟೂನ್ ಸ್ಟ್ರಿಪ್‍ಗಳನ್ನು ಅಭ್ಯಾಸಿಸುತ್ತಾ ಬಂದಿದ್ದಾರೆ. ಇತಿಹಾಸದಲ್ಲಿ ಎಂಎ ಮಾಡಿ ಹಲವೆಡೆ ಕೆಲಸ ಮಾಡಿದ್ದಲ್ಲದೇ ಪ್ರಶಿಕ್ಷಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಆದರೆ ಚಿತ್ರ ರಚನೆಯ ಸೆಳೆತವು ವೃತ್ತಿಯನ್ನು ಬದಲಿಸುವಂತೆ ಮಾಡಿತು. ಲಂಕೇಶ್ ಪತ್ರಿಕೆಯಿಂದ ಕಾರ್ಟೂನ್ ಕ್ಷೇತ್ರಕ್ಕೆ ಬಂದರು. ಅಲ್ಲಿಂದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ ಹಾಗೂ ಮಯೂರ ಪತ್ರಿಕೆಗಳಿಗೆ ಮುಖ್ಯ ಕಲಾವಿದರಾಗಿ ಸೇರ್ಪಡೆಯಾದರು. ಅಲ್ಲಿ ಹಲವಾರು ವರ್ಷಗಳು ನಿರಂತರವಾಗಿ ಸಾಂದರ್ಭಿಕ ಚಿತ್ರ ಹಾಗೂ ಕಾರ್ಟೂನ್ ರಚನೆಯಲ್ಲಿ ತೊಡಗಿದರು.
ನಂತರದಲ್ಲಿ ಬೆಂಗಳೂರಿನ ಕಿರ್ಲೋಸ್ಕರ್ ಮಲ್ಟಿ ಮೀಡಿಯಾದಲ್ಲಿ ಹಿರಿಯ ಕಲಾವಿದರಾಗಿ ಅನಿಮೇಶನ್ ಕಾರ್ಯವನ್ನು ನಿರ್ವಹಿಸಿದರು ಹಾಗೂ ದೆಹಲಿಯ ಎನ್‍ಐಐಟಿಯಲ್ಲಿ ಕೆಲಸ ಮಾಡಿದ್ದಾರೆ. ಆ್ಯನಿಮೇಶನ್ ಕ್ಷೇತ್ರದಲ್ಲೂ ತೊಡಗಿದ್ದಾರೆ. ಅಲ್ಲದೇ ನಾಡಿನ ದಿಗ್ಗಜರ ಪುಸ್ತಕಗಳಿಗೆ ಮುಖಪುಟ, ಒಳಪುಟಗಳಿಗೆ ಚಿತ್ರ ರಚನೆ ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಸರ್ಕಾರ ಹಾಗೂ ಸರ್ಕಾರೇತರದ ಹಲವಾರು ಕಾರ್ಯಕ್ರಮಗಳಿಗೆ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ರೈಲ್ವೆ ಇಲಾಖೆಯ ಹಲವಾರು ಯೋಜನೆಗಳಿಗೆ ಮುಖ್ಯ ಚಿತ್ರಕಾರರಾಗಿ ಗುರುತಿಸಿಕೊಂಡಿದ್ದಾರೆ.
ವ್ಯಂಗ್ಯಚಿತ್ರವನ್ನಷ್ಟೇ ಅಲ್ಲದೇ ಪೇಟಿಂಗ್ ಅನ್ನು ಮಾಡುತ್ತಿದ್ದು ಅವು ದೇಶ-ವಿದೇಶಗಳ ಆನ್ಲೈನ್ ತಾಣಗಳಲ್ಲಿ ದೊಡ್ಡ ಹೆಸರು ಮಾಡಿವೆ. ಇವರ ವಿಭಿನ್ನ ಶೈಲಿಯ ಕ್ಯಾರಿಕೇಚರ್ ಗಳು ಸಹ ದೇಶ-ವಿದೇಶಗಳ ಆನ್ಲೈನ್ ತಾಣಗಳಲ್ಲಿ ಇವೆ. ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಲ್ಲದೇ ಹೊಸ ಪೀಳಿಗೆ ಚಿತ್ರಕಲಾ ಉತ್ಸಾಹಿ ಯುವಕರನ್ನು ಪ್ರೋತ್ಸಾಹಿಸುತ್ತಾ ಹುರಿದುಂಬಿಸುತ್ತಾ ಬಂದಿದ್ದಾರೆ. ಈ ಕಾರ್ಟೂನ್ ಕ್ಷೇತ್ರಕ್ಕೆ ಬರಲು ಡೆಕ್ಕನ್ ಹೆರಾಲ್ಡ್ ಗ್ರೂಪ್‍ನ ಬಿ.ವಿ. ರಾಮಮೂರ್ತಿ ಅವರು ನನಗೆ ಸ್ಪೂರ್ತಿ ಎನ್ನುತ್ತಾರೆ. ಗುಜ್ಜಾರ್ ಅವರು ಬರೆದ ಮಾಜಿ ಪ್ರಧಾನಿ ಎ. ಬಿ. ವಾಜಪೇಯಿ ವ್ಯಂಗ್ಯ ಭಾವ ಚಿತ್ರವು ಪ್ರಧಾನಿಯವರ ಮನೆಯ ಗೋಡೆಯಲ್ಲಿದೆ.
ಪುಸ್ತಕ ಮಾಲಿಕೆಯಲ್ಲಿ 16 ರಾಷ್ಟ್ರೀಯ, ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಪ್ರಕಟಣೆಗೊಂಡಿದೆ. ಅಲ್ಲದೇ ಬಾಪು ಹಾಗೂ ಬುದ್ಧನ ಸಂದೇಶ ಸಾರುವ ಚಿತ್ರ ಸಹಿತ ಪುಸ್ತಕಗಳ ಪ್ರಕಟಣೆಯನ್ನು ಮಾಡಿದ್ದು ಕಾಮಿಕ್ಸ್ ಲೋಕಕ್ಕೂ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ. ನಿರಂತರ ಚಿತ್ರರಚನೆಯಲ್ಲಿ ತೊಡಗಿರುವ ಗುಜ್ಜಾರ್ ಸದಾ ಹೊಸತನದ ಹುಡುಕುವಿಕೆಯತ್ತ ಚಿಂತಿಸುತ್ತಾರಲ್ಲದೇ ಹೊಸ ಹೊಸ ತಂತ್ರಜ್ಞಾನದ ತಿಳುವಳಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ತಾವು ಕಲಿತದ್ದನ್ನು ಆಸಕ್ತರಿಗೂ ಪರಿಚಯಿಸುತ್ತಾರೆ.
ಜಿ ಎಸ್ ನಾಗನಾಥ್ :ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯಿದ್ದ ಕಾರಣ ದಾವಣಗೆರೆಯಲ್ಲಿ ವಾಣಿಜ್ಯಕಲೆಯನ್ನು ಅಭ್ಯಾಸಿಸಿದರು. ಆನಂತರ ಖ್ಯಾತ ಆ್ಯಡ್ ಏಜೆಂನ್ಸಿಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ ಮುಂದೆ ಬೆಂಗಳೂರಿನ ಕಿರ್ಲೋಸ್ಕರ್ ಮಲ್ಟಿಮೀಡಿಯಾದಲ್ಲಿ ಹಿರಿಯ ಕಲಾವಿದರಾಗಿ ಅನಿಮೇಶನ್ ಕಾರ್ಯವನ್ನು ನಿರ್ವಹಿಸಿದರಲ್ಲದೇ ಮುಂದುವರಿದು ಹಲವಾರು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಹಿರಿಯ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿಯಲ್ಲಿ ವೆಬ್ ಡಿಸೈನರ್, ಅನಿಮೇಟರ್, ಇಲ್ಲಸ್ಟ್ರೇಟರ್‍ಗಳನ್ನೂ ಪ್ರವೃತ್ತಿಯಲ್ಲಿ ವ್ಯಂಗ್ಯಚಿತ್ರವನ್ನೂ ಮಾಡುತ್ತಾ ಬಂದಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ.
ಪಿಯುಸಿ ಓದುವಾಗಲೇ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿದ್ದು. ಮೊದಲ ವ್ಯಂಗ್ಯಚಿತ್ರವು 1985ರಲ್ಲಿ `ಸುಧಾ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಲ್ಲಿಂದ ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕ್ಯಾರಿಕೇಚರ್‍ಗಳಲ್ಲೂ ಪರಿಣತಿ ಪಡೆದಿದ್ದು ಸ್ಪಾಟ್ ಕ್ಯಾರಿಕೇಚರ್ ರಚನೆಯನ್ನೂ ರೂಡಿಸಿಕೊಂಡಿದ್ದಾರೆ.
ಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಆರ್ ಕೆ ಲಕ್ಷ್ಮಣ್ ಅವರ ಮುಂದಾಳತ್ವದಲ್ಲಿ 1996ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ವ್ಯಂಗ್ಯಚಿತ್ರ ಕಾರ್ಯಗಾರದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರುವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.