33.2 C
Karnataka
Thursday, May 21, 2026
    Home Blog Page 30

    ಕಾಲೇಜು ರಜೆ ಫೆ.16ವರೆಗೆ ಮುಂದುವರಿಕೆ:Online ಕಲಿಕೆ ಅಭಾದಿತ

    BENGALURU FEB 11

    ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ರಜೆಯನ್ನು ಮುಂಜಾಗ್ರತಾ ಕ್ರಮವಾಗಿ ಫೆ.16ರವರೆಗೂ ಮುಂದುವರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ವಿಶ್ವವಿದ್ಯಾಲಯಗಳು, ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಇದು ಅನ್ವಯಿಸುತ್ತದೆ. ಆದರೆ, ಈ ಅವಧಿಯಲ್ಲಿ ಆನ್ಲೈನ್ ಬೋಧನೆ ಎಂದಿನಂತೆಯೇ ನಡೆಯಲಿದೆ. ಜೊತೆಗೆ, ಈಗಾಗಲೇ ನಡೆಯುತ್ತಿರುವ ಮತ್ತು ನಿಗದಿಯಾಗಿರುವ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

    ಪರಿಸ್ಥಿತಿಯನ್ನು ಅವಲೋಕಿಸಿ, ಕಾಲೇಜು ಪುನಾರಂಭದ ಬಗ್ಗೆ ಫೆ.16ರ ಹೊತ್ತಿಗೆ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಇಲ್ಲ: ಅಶ್ವತ್ಥನಾರಾಯಣ

    BENGALURU FEB 11

    ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರುತ್ತಾರೆ ಎನ್ನುವುದು ಸುಳ್ಳು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಬಗ್ಗೆ ಸುದ್ದಿಗಾರರು ಶುಕ್ರವಾರದಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸದಂತೆ ನಿರ್ಬಂಧಿಸಲಾಗುವುದು ಎಂದು ಕೆಲವರು ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ಬೋಧನಾ ವ್ಯವಸ್ಥೆಯು ಆನ್ ಲೈನ್ ರೂಪ ಪಡೆದಿರುವುದರಿಂದ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಮುಂತಾದ ಆಧುನಿಕ ತಾಂತ್ರಿಕ ಸಾಧನಗಳು ವಿದ್ಯಾರ್ಥಿಗಳ ಕಲಿಕೆಯ ಅವಿಭಾಜ್ಯ ಅಂಗವೇ ಆಗಿಹೋಗಿವೆ. ಹೀಗಿರುವುದಾಗ ನಿಷೇಧದ ಮಾತು ಎಲ್ಲಿಂದ ಬರುತ್ತದೆ’ ಎಂದು ಅವರು ಪ್ರಶ್ನಿಸಿದರು.

    ಇಂತಹ ಗಾಳಿಮಾತುಗಳನ್ನು ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ನಂಬಬಾರದು. ಆಧುನಿಕ ಸಾಧನಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮತ್ತು ಶಿಕ್ಷಣ ಪೂರೈಸುವುದು ಸರಕಾರದ ಆದ್ಯತೆಯಾಗಿದೆ. ಮೊಬೈಲ್ ಬಳಕೆ ಎಂದಿನಂತೆ ಮುಂದುವರಿಯಲಿದೆ’ ಎಂದು ಸಚಿವರು ನುಡಿದರು.

    Karnataka Schools : ಫೆಬ್ರವರಿ 14 ರಿಂದ ಹೈಸ್ಕೂಲ್ ಆರಂಭ ; ಪಿಯು ಮತ್ತು ಡಿಗ್ರಿ ಕಾಲೇಜು ಸಧ್ಯಕ್ಕಿಲ್ಲ

    BENGALURU FEB 10

    ಫೆಬ್ರವರಿ 14 ರಿಂದ ಪ್ರೌಢ ಶಾಲೆಗಳನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮುಂದಿನ ಹಂತದಲ್ಲಿ ಪಿಯು ಮತ್ತು ಡಿಗ್ರಿ ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು. ಅವರು ಇಂದು ಶಿಕ್ಷಣ ಹಾಗೂ ಗೃಹ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಇಂದು ನಡೆದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ನಾಳೆ ಉನ್ನತ ಮಟ್ಟದ ಸಭೆ :‘ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ನಾಳೆ ಸಂಜೆ ಎಲ್ಲ ಸಚಿವರು, ಡಿಸಿ, ಎಸ್‍ಪಿ, ಸಿಇಓಗಳೊಂದಿಗೆ ಸಭೆ ನಡೆಸಲಿದ್ದು, ಜಿಲ್ಲೆಗಳಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಲಾಗುವುದು. ನಾನು, ಶಿಕ್ಷಣ ಹಾಗೂ ಗೃಹ ಸಚಿವರು ನಿರಂತರ ಸಂಪರ್ಕದಲ್ಲಿರಲಿದ್ದೇವೆ. ಹಿರಿಯ ಅಧಿಕಾರಿಗಳು ಕೂಡ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಂಪರ್ಕದಲ್ಲಿರಲು ಸೂಚನೆ ನೀಡಿದೆ ’ ಎಂದರು.

    ಉಚ್ಛನ್ಯಾಯಾಲಯದ ಆದೇಶ ಬರುವವರೆಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಶಿಕ್ಷಣವನ್ನು ಮುಂದುವರೆಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಬಾರಿ ಶಾಲೆಗಳು ಪ್ರಾರಂಭವಾದಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

    ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕು:
    ಶಾಲೆಗಳ ವಸ್ತ್ರ ಸಂಹಿತೆಯ ಕುರಿತು ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಿವಾದವು ಉಚ್ಛ ನ್ಯಾಯಾಲಯದ ಮೆಟ್ಟಿಲನ್ನು ಏರಿದೆ. ಎಲ್ಲರೂ ಶಾಂತಿ ಕಾಪಾಡಿ ನ್ಯಾಯಾಲಯದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕಾಗುತ್ತದೆ ಎಂದರು.

    ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಮಕ್ಕಳಲ್ಲಿ ಗೊಂದಲ ಕಡಿಮೆಯಾಗಿದೆ. ಕಳೆದ ಯಾವುದೇ ಅಹಿತಕರ ಘಟನೆ ಎಲ್ಲಿಯೂ ನಡೆದಿಲ್ಲ. ಹೊರಗಡೆಯಿಂದ ಆಗುವ ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಯಲ್ಲಿ ಪ್ರತಿದಿನ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಅಲ್ಲಿಯವರೆಗೆ ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. ಶಾಂತಿ ಕಾಪಾಡಲು ಕಾಲೇಜಿನಲ್ಲಿ ಯಾವುದೇ ಧಾರ್ಮಿಕವಾದ ಬಟ್ಟೆಯನ್ನು ಧರಿಸುವುದು ಬೇಡ ಎಂಬ ಸೂಚನೆ ನೀಡಿದ್ದಾರೆ. ಶಾಲೆಗಳು ಪ್ರಾರಂಭಿಸುವಂತೆಯೂ ನ್ಯಾಯಾಲಯ ಸೂಚನೆ ನೀಡಲಾಗಿದೆ ಎಂದರು.

    ವಿದ್ಯಾರ್ಥಿಗಳಿಗೆ ಧನ್ಯವಾದ:
    ವಿದ್ಯಾರ್ಥಿಗಳು ಒಗ್ಗಟ್ಟಾಗಿ ವಿದ್ಯಾರ್ಜನೆ ಮಾಡಬೇಕು. ಶಾಲೆಗಳ ಹಾಗೂ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಸಂಯಮದಿಂದ ವರ್ತಿಸಿದ್ದಾರೆ. ಅವರಿಗೆ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಪದವಿ ಸೆಮಿಸ್ಟರ್ ಪರೀಕ್ಷೆ: ಒಂದು ತಿಂಗಳು ಮುಂದೂಡಲು ಮನವಿ

    BENGALURU FEB10
    ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಹೆಚ್ಚಳ ಹಾಗೂ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಬೋಧನಾ ಕಾರ್ಯ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಪದವಿ ಕೋರ್ಸುಗಳ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳಾದರೂ ಮುಂದೂಡುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಅವರು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚವರಿ ಮುಖ್ಯ ಕಾರ್ಯದರ್ಶಿ ಅವರನ್ನು ಕೋರಿದ್ದಾರೆ.

    ಈ ಬಗ್ಗೆ ಗುರುವಾರ ಪತ್ರ ಬರೆದಿರುವ ಅವರು, ‘ಕೆಲವು ವಿ.ವಿ.ಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿವೆ. ಆದರೆ, ಬೋಧನಾ ಕಾರ್ಯ ಇನ್ನೂ ಮುಗಿದಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡುವಂತೆ ರಾಜ್ಯದ ಎಲ್ಲ ವಿ.ವಿ.ಗಳಿಗೂ ನಿರ್ದೇಶಿಸಬೇಕು’ ಎಂದು ಅವರು ಕೋರಿದ್ದಾರೆ.

    JIVA WATER:ನೀವು ಸೇವಿಸುವ ನೀರಿನಲ್ಲಿ ಜೀವ ಇದೆಯೇ ? ನೀರಿಗೆ ಜೀವ ತುಂಬುವ ಜೀವ

    ಬಳ್ಳಾರಿಯ ವಿಕ್ರಮ್ ಕೊಳ್ಳೆಗಾಲ ಅರುವತ್ತು ರಾಸುಗಳ  ವಾಸವಿ ಡೈರಿ ಫಾರಂನ ಒಡೆಯ. ಪ್ರತಿ ನಿತ್ಯ ಬಳ್ಳಾರಿ ಪಟ್ಟಣದ ನೂರಾರು ಮನೆಗಳಿಗೆ ಹಾಲು ಪೂರೈಸುವುದರ ಜೊತೆಗೆ ಕರ್ನಾಟಕ ಹಾಲು ಒಕ್ಕೂಟಕ್ಕೂ ಹಾಲು ಪೂರೈಕೆ ಮಾಡುತ್ತಾರೆ.ಇದೇ ಬಳ್ಳಾರಿಯಲ್ಲಿ ಜವಳಿ ಉದ್ಯಮ ನಡೆಸುತ್ತಿರುವ ಪಶುಪತಿಗೂ ವಿಕ್ರಮ್ ಗೂ  ರೌಂಡ್ ಟೇಬಲ್ ಮೂಲಕ ಗೆಳೆತನ.

    ಒಂದು ದಿನ ಹೀಗೆ ಮಾತನಾಡುತ್ತಿರುವಾಗ ಪಶುಪತಿ ತಮಗೆ ಗೊತ್ತಾದ ಒಂದು ಉಪಕರಣದ ಬಗ್ಗೆ ಹೇಳುತ್ತಾರೆ. ಅದು ಒಂದು ಸರಳ ಸಾಧನ.  ಹೆಸರು ಜೀವ-JIVA. ನೀರಿಗೆ ಶಕ್ತಿ ತುಂಬುವ ಈ ಉಪಕರಣದ ಬಗ್ಗೆ ಅವರು ಹೇಳುತ್ತಲೆ ವಿಕ್ರಮ್ ಗೂ ಆಸಕ್ತಿ ಬೆಳೆಯುತ್ತದೆ.  ಅದರ ಬಗ್ಗೆ ಹೆಚ್ಚಿನ ವಿವರ ಪಡೆಯುತ್ತಾರೆ. ತಮ್ಮ ಫಾರಮ್ ಗೂ ಅದನ್ನು ಅಳವಡಿಸಿಕೊಳ್ಳುತ್ತಾರೆ. ಕೆಲವೇ ದಿನಗಳಲ್ಲಿ ಅದರ ಫಲಿತಾಂಶವೂ ಅವರಿಗೆ ಗೊತ್ತಾಗುತ್ತದೆ. ಹಾಲಿನ ಸಂಗ್ರಹದಲ್ಲಿ 10 ರಿಂದ 15 ಪರ್ಸೆಂಟ್ ಇಂಪ್ರೂವ್ ಆಗುತ್ತದೆ. ರಾಸುಗಳು ನೀರನ್ನು ಹೆಚ್ಚು ಸೇವಿಸಲೂ ಆರಂಭಿಸುತ್ತವೆ. ಜೀವ ಮೂಲಕ ಹರಿದ ನೀರು ಕುಡಿದ ರಾಸುಗಳ ಆರೋಗ್ಯವೂ ಸುಧಾರಿಸುತ್ತದೆ.( ಈ ವಿಡಿಯೋ ನೋಡಿ)

    ಕೊಳ್ಳೆಗಾಲ ವಿಕ್ರಮ್ ಅವರ ಅನುಭವ

    ತಮಗಿಂತ ತಮ್ಮ ಫಾರಂನಲ್ಲಿ ಕೆಲಸ ಮಾಡುವ  ನೌಕರರೇ ಇದರ ಬಗ್ಗೆ ಚೆನ್ನಾಗಿ ವಿವರಿಸಬಲ್ಲರು ಎನ್ನುತ್ತಾರೆ ವಿಕ್ರಮ್ . ಈಗ ನೌಕರರು  ಜೀವ ನೀರಿನಿಂದಲೇ ಅಡುಗೆ ಮಾಡುತ್ತಿದ್ದಾರೆ. ಈ ನೀರನ್ನು ಬಳಸುವದರಿಂದ ಅಡುಗೆ ಬೇಗ ಆಗುವುದರ ಜೊತಗೆ ರುಚಿ ಮತ್ತು ಪೌಷ್ಠಿಕವಾಗಿಯೂ ಇರುತ್ತದೆಯಂತೆ.

    ಇವರ ಫಾರಂ ನಲ್ಲಿ ಕಳೆದ  ಹದಿನೈದು ದಿನದ ಹಿಂದೆ ಜೀವ ಸಾಧನ ಅಳವಡಿಸಿರುವ ಪಂಪ್ ಸೆಟ್ ಕೊಟ್ಟು ಹೋಯಿತು. ಹೀಗಾಗಿ ರಾಸುಗಳಿಗೆ ಹಿಂದಿನ ರೀತಿಯ  ಮಾಮೂಲಿ ನೀರನ್ನೇ ಬಳಸಬೇಕಾಯಿತು.   ರಾಸುಗಳು ಈಗ ಆ ನೀರನ್ನೇ ಕುಡಿಯುತ್ತಿರುವುದರಿಂದ ಹಾಲಿನ ಇಳುವರಿ ಕಡಿಮೆಯಾಗಿದೆ. ಇದು ಜೀವ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು ಎಂದು ವಿಕ್ರಮ್ ಹೇಳುತ್ತಾರೆ. ಜೀವ ನೀರಿನ ಬಳಕೆಯ ನಂತರ ಗರ್ಭಧರಿಸದ ನಾಲ್ಕೈದು ರಾಸು ಗರ್ಭ ಧರಿಸಿವೆ. ಇದಕ್ಕೆ ಜೀವ ನೀರಿನ ಬಳಕೆ ಅವುಗಳ ಆರೋಗ್ಯದ ಮೇಲೆ ಬೀರಿದ ಪರಿಣಾಮವೇ ಕಾರಣ ಎಂದು ಖಚಿತವಾಗಿ ಹೇಳುತ್ತಾರೆ ವಿಕ್ರಮ್.

    ನಾವು ಜೀವವನ್ನು ರೈತರಿಗೆ ಕೊಡುವಾಗ ಅದರಿಂದ ಇಳುವರಿ ಹೆಚ್ಚಾಗುತ್ತದೆ.ರಾಸುಗಳು ಹೆಚ್ಚು ಹಾಲು ಕೊಡುತ್ತವೆ ಎಂದು ಹೇಳುವುದೇ ಇಲ್ಲ.  ಜೀವವನ್ನು ಅಳವಡಿಸಿಕೊಂಡು ನೀರನ್ನು ಪಡೆದು ಅದನ್ನು ಭೂಮಿಗೆ ಹಾಯಿಸಿದರೆ ಅದರ ಫಲವತ್ತತೆ ಉತ್ತಮವಾಗುತ್ತದೆ. ಹೀಗಾಗಿ ಸಹಜವಾಗಿಯೆ ಇಳುವರಿ ಹೆಚ್ಚಾಗುತ್ತದೆ.  ಜೊತೆಗೆ ಈ ನೀರನ್ನು ಸೇವಿಸುವ ರಾಸುಗಳ ಆರೋಗ್ಯ ಉತ್ತಮವಾಗಿ ಹಾಲು ಹೆಚ್ಚು ಕೊಡುತ್ತವೆ ಎನ್ನುತ್ತಾರೆ ಪಶುಪತಿ. ಪಶುಪತಿ ತಮ್ಮ ಜವಳಿ ಉದ್ಯಮದ ಜೊತೆ ಜೊತೆಗೆ ಬ್ರಾಂಡ್- ಅಂಬಾಸಿಡರ್ ಆಗಿ ಜೀವದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತಿದ್ದಾರೆ.

    ಪಶುಪತಿ ತಮ್ಮ ಮನೆಯಲ್ಲೂ ಈ ಜೀವ  ಅಳಡಿಸಿಕೊಂಡಿದ್ದಾರೆ . ಅದು ಅವರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಅವರ ಆರೋಗ್ಯ ಈಗ ಮತ್ತಷ್ಟು ಉತ್ತಮವಾಗಿದೆ.

    ಹಾಗಿದ್ದ ಮೇಲೆ ಏನಿದು ಜೀವ? ತಿಳಿಯೋಣ ಬನ್ನಿ

    ಜೀವ-JIVA- ಎನ್ನುವುದು ಒಂದು ವಿಶಿಷ್ಟ ಸರಳ ಸಾಧನ. ಅಮೆರಿಕಾದಲ್ಲಿ ನೆಲೆಸಿರುವ ನಮ್ಮ ಕೊಡಗಿನ ವಿಜ್ಞಾನಿ ಡಾ. ಕೃಷ್ಣ ಮಾದಪ್ಪ ಅವರ ಸಂಶೋಧನೆಯ ಫಲ. ನೀರನ್ನು ಹಿಡಿದಿಡದೆ ಅದನ್ನು ಸ್ವತಂತ್ರವಾಗಿ ಹರಿಯಬಿಟ್ಟಾಗ ಅದರಲ್ಲಿ ಶಕ್ತಿ ಸಂಚಯವಾಗುತ್ತದೆ ಎಂಬ ಸರಳ ಭೌತಶಾಸ್ತ್ರದ ನಿಯಮದ ಅನ್ವಯ ಸಿದ್ಧಗೊಂಡ  ಸಾಧನ. ಹಲವು ಪರೀಕ್ಷೆಗಳನ್ನು ಎದುರಿಸಿ ಅದರಲ್ಲಿ ಜಯಿಸಿ ಇದೀಗ ವಾಣಿಜ್ಯ ಉತ್ಪಾದನೆಗೆ ಸಿದ್ಧವಾಗಿರುವ  ಜಲಕ್ಕೆ ಜೀವ ತುಂಬುವ  ಸಾಧನ.(ವಿಡಿಯೋದಲ್ಲಿ ಡಾ. ಕೃಷ್ಣ ಮಾದಪ್ಪ ಅವರೇ ವಿವರಿಸಿದ್ದಾರೆ- ನೋಡಿ)

    ಇದನ್ನು ಈಗ ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿರುವ ವಿ. ಶ್ರೀನಿವಾಸನ್ ಅವರ  ಪ್ರಕಾರ ಜಲಕ್ಕೆ ಜೀವ ತುಂಬುವ ಈ ಸಾಧನ ಒಂದು ಕ್ರಾಂತಿಕಾರಿ ಆವಿಷ್ಕಾರ. ಈ ಸಾಧನ ಕೆಲಸ ಮಾಡುವ ಬಗ್ಗೆ ಅವರು ಒಂದು ಸೊಗಸಾದ ಉದಾಹರಣೆ ಕೊಡುತ್ತಾರೆ.  ಯಾವುದೇ ಜೀವಿಯನ್ನು ಹಿಡಿದಿಟ್ಟರೆ ಅವರಲ್ಲಿರುವ ಎನರ್ಜಿ ಕಳೆದು ಹೋಗುತ್ತದೆ.  ಮನುಷ್ಯನನ್ನೇ ನೋಡಿ. ಅವನನ್ನು ಒಂದು ಕೋಣೆಯಲ್ಲಿ ಬಂದಿ ಯಾಗಿಟ್ಟರೆ ಅವನಲ್ಲಿರುವ ಶಕ್ತಿಯೆಲ್ಲಾ ಕಡಿಮೆಯಾಗಿ ಮಂಕು ಬಡಿದವನಂತೆ ಆಗಿ ಬಿಡುತ್ತಾನೆ. ನೀರು ಕೂಡ ಹಾಗೆ . ಅದನ್ನು ಹಿಡಿದಿಟ್ಟಷ್ಟು ಅದರಲ್ಲಿರವ ಜೀವ ಶಕ್ತಿ ಕುಂದುತ್ತಾ ಬರುತ್ತದೆ.

    ನಾವೀಗ ನೀರನ್ನು ಅಣೆಕಟ್ಟುಗಳಲ್ಲಿ, ಮನೆಯ ಮೇಲಿನ ಓವರ್ ಹೆಡ್ ಟ್ಯಾಂಕುಗಳಲ್ಲಿ,  ದೊಡ್ಡದಾದ ಜಲ ಸಂಗ್ರಹಾರದಲ್ಲಿ ಶೇಖರಿಸಿ ಇಡುತ್ತಿದ್ದೇವೆ. ಹೀಗಾಗಿ ನೀರಿನ ಸ್ವಾಭಾವಿಕ ಶಕ್ತಿ ಕುಂದುತ್ತಾ ಬರುತ್ತದೆ.  ಈ ನೀರಿಗೆ ಒಂದಷ್ಟು ಶಕ್ತಿ ತುಂಬಿದರೆ ಅದು ಪವಾಡಗಳನ್ನು ಮಾಡಬಹಲ್ಲದು. ಹರಿವ ನದಿಯಲ್ಲಿ ಇರುವ ನೀರಿಗೆ ಇರುವ ಶಕ್ತಿ ಜಲಾಶಯದಲ್ಲಿ ಸಂಗ್ರಹಿಸಿಟ್ಟ ನೀರಿಗೆ ಇರುವುದಿಲ್ಲ. ಜೀವದಲ್ಲಿ ಹಾದು ಬಂದ ನೀರು ನದಿಯ ನೀರಿನ ಶಕ್ತಿ ಪಡೆಯುತ್ತದೆ ಎಂದು ಹೇಳುತ್ತಾರೆ ಶ್ರೀನಿವಾಸ್.

    ಮೂರು ಹಂತದಲ್ಲಿ ನೀರಿಗೆ ಜೀವ

    ಜೀವ ಸಾಧನ ಮೂರು ಹಂತದಲ್ಲಿ ಕೆಲಸ ಮಾಡುತ್ತದೆ. ವಿಡಿಯೋದಲ್ಲಿ ನೀವು ನೋಡುತ್ತಿರುವ ಹಾಗೆ ಇದೆಂದು ಸರಳ ಪೈಪಿನ ರೀತಿ ಕಾಣುತ್ತದೆ. ಸ್ಟೈನ್ ಲೆಸ್ ಸ್ಟೀಲ್ ನಿಂದ ತಯಾರಿಸಲಾಗಿದೆ. ಆದರೆ ಅದರಲ್ಲಿ ವಿಜ್ಞಾನಿ ಕೃಷ್ಣ ಅವರು ರೂಪಿಸಿರುವ ಭೌತಿಕ ಸಂರಚನೆ ಇದೆ.  ಮೊದಲು ಶಕ್ತಿ ಕಳೆದುಕೊಂಡು ಅಘಾತಕ್ಕೆ ಒಳಗಾಗಿರುವ  ನೀರು ಬಯೋ ಸೆನ್ಸರ್ ಮೂಲಕ ಈ ಕೊಳವೆ ರೀತಿಯ ಉಪಕರಣದಲ್ಲಿ ಹರಿಯುತ್ತದೆ.  2ನೇ ಹಂತದಲ್ಲಿ ನೀರಿಗೆ ಶಕ್ತಿ ತುಂಬುವ ಎಲೆಕ್ಟ್ರಾನ್ ಗಳನ್ನು ಸಕ್ರಿಯಗೊಳಿಸಲಾಗುತ್ತದೆ.  ಇಲ್ಲಿಂದ  ಮುಂದಕ್ಕೆ ಧಾವಿಸುವ   ನೀರು ತನ್ನ ಮೂಲ  ಶಕ್ತಿಯನ್ನು ಪುನಃ ಗಳಿಸಿಕೊಂಡು ಮುಂದುವರಿಯುತ್ತದೆ.ಯಾವುದೇ ರಸಾಯನಿಕವೂ ಇಲ್ಲ. ವಿದ್ಯುತ್ ಸಂಪರ್ಕವೂ ಬೇಕಾಗಿಲ್ಲ. ಭೌತ ಶಾಸ್ತ್ರದ ಸರಳ ಲೆಕ್ಕಾಚಾರದ ಮೇಲೆ ಇದು ಕೆಲಸ ಮಾಡುತ್ತದೆ.

    ರಾಸಾಯನಿಕಗಳಿಂದ ಬರಡಾದ ಭೂಮಿಗೆ ಜೀವ ಸಂಚಯ

    ನಾವು ಬೇಕೋ ಬೇಡವೋ ಎಲ್ಲ ಕಡೆ ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಭೂಮಿಗಂತೂ ಅದೆಷ್ಟೋ ರಾಸಾಯನಿಕ ತುಂಬಿದ್ದೀವೋ ಗೊತ್ತಿಲ್ಲ. ಮೊದಲು ಆ ಭೂಮಿ ಸಹಜವಾಗಿ ಫಲವತ್ತವಾಗಬೇಕು. ಅದಕ್ಕೆ ಶಕ್ತಿ ತುಂಬಿದ ನೀರು ಬೇಕು. ಆ ಕೆಲಸ ಇಲ್ಲಿ ಆಗುತ್ತಿದೆ ಎನ್ನುತ್ತಾರೆ  ಶ್ರೀನಿವಾಸ್.

    ಹಾಗೆ ನೋಡಿದರೆ ಇದೇನು ಮಿರಾಕಲ್ ಅಲ್ಲ. ಸಹಜ ವಿಜ್ಞಾನ. ನಾವು ರೈತರಿಗೂ ಅದನ್ನೇ ಹೇಳುತ್ತೇವೆ.  ಜೀವ ಜಲ ಹಾಯಿಸಿದ ಕೂಡಲೇ ಇಳುವರಿಯ ಲೆಕ್ಕ ಹಾಕಬೇಡಿ.  ಈ ನೀರಿನಿಂದ ಮೊದಲು ನಿಮ್ಮ ಭೂಮಿಯನ್ನು ಸಹಜವಾಗಿ ಫಲವತ್ತವಾಗಿ ಮಾಡಿ. ಮುಂದಿನ ದಿನಗಳ್ಲಿ  ಅದರ ಲಾಭ  ನಿಮಗೇ  ಗೊತ್ತಾಗುತ್ತದೆ ಎನ್ನುತ್ತಾರೆ  ಶ್ರೀನಿವಾಸ್. ಮೊದಲು ಹೇಳಿದ ಡೈರಿ ಫಾರಂ ನಲ್ಲೂ ಇದೇ ತತ್ವ ಅಳವಡಿಸಲಾಗಿದೆ. ಅಲ್ಲಿ ಈ ನೀರಿನಿಂದ ರಾಸುಗಳ ಆರೋಗ್ಯ ಸುಧಾರಿಸಿತು.  ಆರೋಗ್ಯವಂತ  ರಾಸು ಸಮೃದ್ಧ ಹಾಲು ನೀಡಿತು.

    ಇದನ್ನು ಕಂಡು ಹಿಡಿದಿರುವ ಕೃಷ್ಣ ಅವರೂ ಇದನ್ನೇ ಹೇಳುತ್ತಾರೆ.  ಶುದ್ಧ ಶಕ್ತಿ ತುಂಬಿದ ನೀರಿನಿಂದ   ಭೂಮಿಗೆ ಜೀವ ಬಂದರೆ ಭೂ ತಾಯಿ ರೈತರನ್ನು ಖಂಡಿತಾ ಕೈ ಬಿಡುವುದಿಲ್ಲ. ವಾಸನೆ ಇಲ್ಲದ. ಬಣ್ಣವಿಲ್ಲದ  ಆಕಾರವಿಲ್ಲದ ನೀರು ಶುದ್ಧವೇನೋ ಹೌದು ಅದರಲ್ಲಿ ಶಕ್ತಿ ಇದೆಯೇ ಎಂಬುದು ಮುಖ್ಯ. ಜೀವ ಶುದ್ಧ ನೀರಿಗೆ ಜೀವ ತುಂಬುತ್ತದೆ.

    ಜಾಗತಿಕ ವಿಜ್ಞಾನಿ ಕೃಷ್ಣ

    ಡಾ.ಕೃಷ್ಣ ಮಾದಪ್ಪ ಜಾಗತಿಕ ನೀರಿನ ಕ್ಷೇತ್ರದಲ್ಲಿ ಪ್ರಖ್ಯಾತ ಹೆಸರಾಗಿದ್ದು ಹಲವಾರು ದಶಕಗಳಿಂದ ನೀರಿನ ವರ್ತನೆಯನ್ನು ಸಂಶೋಧಿಸುತ್ತಾ ಬಂದಿದ್ದಾರೆ. 25 ವರ್ಷಗಳಿಗೂ ಮೀರಿದ ಅವರ ಸಂಶೋಧನೆಯಲ್ಲಿ ನೀರಿಗೆ ಜೀವವಿದೆ. ಅದು ಮಾನವರ ದುರ್ಬಳಕೆಯಿಂದ ಮತ್ತು ಕಾಲದ ಬದಲಾವಣೆಗಳಿಂದ ಹಾನಿಗೊಳಗಾಗಿದೆ ಮತ್ತು ಕ್ಷೀಣಿಸಿದೆ ಎಂದು ವೈಜ್ಞಾನಿಕವಾಗಿ ತೋರಿಸಿದ್ದಾರೆ.

    ಅವರ ಸಂಶೋಧನೆಯ ಫಲಿತಾಂಶವೇ ‘ಜೀವ’.ಇದು ಕ್ರಾಂತಿಕಾರಕ ನೀರಿನ ರಚನೆಯ ಡಿವೈಸ್ ಆಗಿದ್ದು ಅದು ನಾವು ಬಳಸುವ ನೀರಿಗೆ ಜೀವದ ಶಕ್ತಿಗಳನ್ನು ಮರಳಿ ತರುತ್ತದೆ. ನಮ್ಮ ಕೊಡಗಿನವರೇ  ಆದ  ಡಾ.ಕೃಷ್ಣ ಮಾದಪ್ಪ ಅವರು ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್  ಎಂಜಿನಿಯರ್ . ನಿಸರ್ಗದ ಥರ್ಮೋಡೈನಮಿಕ್ಸ್ ಮತ್ತು ಕ್ವಾಂಟಂ ಆಯಾಮದಿಂದ ಸ್ಫೂರ್ತಿ ಪಡೆದ ಅವರು ಕಳೆದ 25 ವರ್ಷಗಳಿಗೂ ಮೇಲ್ಪಟ್ಟು ಜೈವಿಕ-ಶಕ್ತಿಯ ವಿಜ್ಞಾನಗಳನ್ನು ಆವಿಷ್ಕರಿಸುತ್ತಿದ್ದಾರೆ. ಇದರಿಂದ ಅವರು ನೀರಿನ ಸಮೀಕರಣಗಳಿಗೆ ಹೊರತಾದ ವರ್ತನೆಯನ್ನು ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಆಧಾರದ ಮೇಲೆ ಕಂಡುಕೊಂಡಿದ್ದಾರೆ. ನಮ್ಮ ವೇದಗಳಲ್ಲಿ ಅಡಕವಾಗಿರುವ  ಜಲ ಶಕ್ತಿಯ ಮಹತ್ವನ್ನು ಅವರು ಅರಿತಿದ್ದಾರೆ.  ಬೆಡೋಯಿನ್ ಆದಿವಾಸಿಗಳೊಂದಿಗೂ ಜೀವಿಸಿ ನೀರಿನ  ಅಂತಃ ಶಕ್ತಿಯನ್ನು ಅರಿತಿದ್ದಾರೆ.

    ಕೃಷ್ಣ ಅವರು ಯುಎಸ್‌ಎಯ ಎಸೆನ್ಸ್ ಆಫ್ ಲೈಫ್‌ನ ಸಂಸ್ಥಾಪಕ ಮತ್ತು ಸಿಇಒ ಕೂಡಾ ಆಗಿದ್ದಾರೆ ಹಾಗೂ ಯುಎಸ್‌ಎಯ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸ್ಪಿರಿಚುಯಾಲಿಟಿ ಅಂಡ್ ಸಸ್ಟೇನಬಿಲಿಟಿಯ  ಅಧ್ಯಕ್ಷ ಹಾಗೂ ಸಹ-ಸಂಸ್ಥಾಪಕರೂ ಆಗಿದ್ದಾರೆ. ಅವರು ಸೈಕೊನ್ಯೂರೊಬಿಕ್ಸ್ ಅಥವಾ ‘ಬೆಳಕಿನ ವಿಜ್ಞಾನ’ ಮತ್ತು ಯೋಗದಲ್ಲಿ ಪಿಎಚ್.ಡಿ ಹೊಂದಿದ್ದಾರೆ. ಡಾ.ಕೃಷ್ಣ ಮಾದಪ್ಪ ಅವರಿಗೆ ಅರ್ಜೆಂಟೀನಾದ ರೋರಿಕ್  ಟ್ರೀಟಿಯು ಗ್ಲೋಬಲ್ ಅಂಬಾಸಡರ್ ಆಫ್ ಪೀಸ್ ಪುರಸ್ಕಾರ ನೀಡಿ ಗೌರವಿಸಿದೆ.

    ಕೃಷ್ಣರಿಗೆ ಜೊತೆಯಾದ ಶ್ರೀನಿವಾಸ

    ಸಂಶೋಧನೆಯೊಂದರ ಫಲ ಜನಸಾಮಾನ್ಯರಿಗೆ ತಲುಪಿದಗಾಲೇ ಅದಕ್ಕೆ ಯಶಸ್ಸು ಮತ್ತು ಸಾರ್ಥಕತೆ. ಈ ಸಮಯದಲ್ಲಿ ಕೃಷ್ಣ ಅವರಿಗೆ ಶ್ರೀನಿವಾಸ್ ಜೊತೆಯಾದರು. ಹಾಗೆ ನೋಡಿದರೆ ಕೃಷ್ಣ ಅವರಿಗೂ ಶ್ರೀನಿವಾಸ್ ಅವರಿಗೂ ಅಂಥ ಪರಿಚಯವೇನು ಇರಲಿಲ್ಲ. ಸಮಾರಂಭವೊಂದರಲ್ಲಿ ಕೃಷ್ಣ ಅವರನ್ನು ಭೇಟಿಯಾದ ಶ್ರೀನಿವಾಸ್ ಅವರ ಸಂಶೋಧನೆ ವಿವರ ಕೇಳಿದ ಕೂಡಲೇ ಪ್ರಭಾವಿತರಾದರು. ಹೌದಲ್ಲ ನಾವು ನೀರನ್ನು ಎಷ್ಟೊಂದು ವೀಕ್ ಮಾಡಿ ಬಿಟ್ಟಿದ್ದೀವಲ್ಲ  ಎಂದು ಅವರಿಗೂ ಅನ್ನಿಸುತು .ಇದು ಸಾಮಾನ್ಯರಲ್ಲಿ ಸಾಮಾನ್ಯರಿಗೆ ತಲುಪಿದಾಗಲೆ ಅದಕ್ಕೊಂದು ಅರ್ಥ ಎಂಬುದನ್ನು ಮನಗಂಡರು.  ಉದ್ಯಮಿಯಾಗಿದ್ದ ಅವರಿಗೆ ಇದನ್ನು ಎಲ್ಲರಿಗೂ ತಲುಪಿಸುವ ಕನಸು ಚಿಗರೊಡೆಯಿತು . ಇದರ  ಫಲವೇ   ಫೋರ್ಥ್ ಫೇಸ್ ವಾಟರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಉದಯ.

    ಶ್ರೀನಿವಾಸನ್ ಕೈಗಾರಿಕೋದ್ಯಮಿ, ಸಲಹೆಗಾರ, ಮಾರ್ಗದರ್ಶಿ ಮತ್ತು ಹಲವು ಸ್ಟಾರ್ಟಪ್‌ಗಳ ಹೂಡಿಕೆದಾರರಾಗಿ 30 ವರ್ಷಗಳ ಅನುಭವ ಹೊಂದಿದ್ದಾರೆ.ಅವರು ಒಇಎಂಗಳಿಗೆ ಆಟೊಮೊಟಿವ್ ಡಯಲ್‌ಗಳನ್ನು ಉತ್ಪಾದಿಸುವ ಜಾಗತಿಕ ಉದ್ಯಮ ಎಸ್‌ಜೆಎಸ್ ಸಂಸ್ಥಾಪಕ ನಿರ್ದೇಶಕರಾಗಿ ತಮ್ಮ ವೃತ್ತಿ  ಪ್ರಯಾಣ ಪ್ರಾರಂಭಿಸಿದವರು. ಈ ಕಂಪನಿ ಇತ್ತೀಚೆಗೆ ಭಾರತದ ಷೇರುಪೇಟೆಯಲ್ಲಿ ಲಿಸ್ಟ್ ಕೂಡ ಆಗಿದೆ.ಭಾರತದ ಹಲವು ಸ್ಟಾರ್ಟಪ್‌ಗಳು ಜಾಗತಿಕವಾಗಿ ದೊಡ್ಡ ಸಾಧನೆ ಮಾಡುವಲ್ಲಿ ಇವರ ಪಾತ್ರ ಹಿರಿದು.

    ಇದೀಗ ತಮ್ಮ ಅನುಭದ ಆಧಾರದ ಮೇಲೆ ಜೀವವನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ಗುರಿ ಹೊಂದಿರುವ ಶ್ರೀನಿವಾಸ್ ಜೀವ ಜಲವನ್ನು ಹಲವು ಪರೀಕ್ಷೆಗಳಿಗೂ ಒಡ್ಡಿದ್ದಾರೆ. ಮಾಮೂಲಿ ಬಾಟಲ್ ನೀರಿಗೂ ಜೀವ ತುಂಬಿದ ನೀರಿಗೂ ಇರುವ ವ್ಯತ್ಯಾಸ ಕಂಡುಕೊಂಡಿದ್ದಾರೆ.

    ನಾವು ಭೂಮಿಯನ್ನು ಸಾಕಷ್ಟು ಹಾಳು ಮಾಡಿ ಈಗ ಸಾವಯವದ ಮಂತ್ರ ಜಪಿಸುತ್ತಿದ್ದೇವೆ. ಭೂಮಿ ಫಲವತ್ತಾದರೆ ತಾನೆ ಸಾವಯವ ಕೃಷಿಯ ಫಲ ಎನ್ನುವ ಶ್ರೀನಿವಾಸ್ ಮೊದಲು ಭೂಮಿಗೆ ಶಕ್ತಿ ತುಂಬಿ ಎನ್ನುತ್ತಾರೆ. ಇದು ಸಾಧ್ಯವಾಗಬೇಕಾದರೆ ಭೂ ತಾಯಿಗೆ ಜೀವ ಇರುವ ನೀರು ಬೇಕು ಎನ್ನುತ್ತಾರೆ.

    ಜೀವ ನೀರಿನಿಂದ ಗಟ್ಟಿಯಾದ ಬೇರುಗಳು

    ಈಗಾಗಲೇ ಕರ್ನಾಟಕ, ಆಂಧ್ರ, ತಮಿಳು ನಾಡಿನಲ್ಲಿ ಜೀವ ಜಲ ದ ಪ್ರಯೋಗ ನಡೆದಿದೆ. ಉತ್ತಮ ಫಲಿತಾಂಶವೂ ವ್ಯಕ್ತವಾಗುತ್ತಿದೆ. ಈ  ಮೇಲಿನ ಚಿತ್ರ ಗಮನಿಸಿದರೆ  ಜೀವ  ನೀರನ್ನು ಉಪಯೋಗಿಸಿದ ಭೂಮಿಯಲ್ಲಿ ಬೆಳದ ಸಸ್ಯದ ಬೇರುಗಳು ಗಟ್ಟಿಯಾಗಿರುವುದನ್ನು ಗಮನಿಸಬಹುದಾಗಿದೆ.

    ಯಾಮಿ-ವಿಪಾಸ – ಜಾಹ್ನವಿ- ದಿಹಂಗ

    ನಾಲ್ಕುವಿಧದಲ್ಲಿ ಜೀವ ಸಾಧನವನ್ನು ಸಿದ್ಧಪಡಿಸಲಾಗಿದೆ. ಇವುಗಳಿಗೆ ಭಾರತದ ಪುರಾತನ ನದಿಗಳ ಹೆಸರನ್ನೇ ಇಟ್ಟಿರುವುದು ಮತ್ತೊಂದು ವಿಶೇಷ.

    ಯಾಮಿ ಹೆಸರಿನ ಸಾಧನ ಗೃಹ ಬಳಕೆಗೆ ಬಳಸಬಹುದಾಗಿದೆ.ಮನೆಯಲ್ಲೇ ಇರುವ ತೋಟ, ಮನೆಯ ಓವರ್ ಹೆಡ್ ಟ್ಯಾಂಕಿಗೆ ಇದನ್ನು ಅಳವಡಿಸಬಹದು. ಈ ವಿಡಿಯೋ ನೋಡಿ.

    ವಿಪಾಸ ಗಂಟೆಗೆ 9000 ಲೀಟರ್ ನೀರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಪುಟ್ಟ ಫಾರಂಗಳು, ಪೌಲ್ಟ್ರಿ, ಡೇರಿಗೆಳಿಗೆ ಬಳಸಬಹದು.

    ಜಾಹ್ನವಿ ಹೆಸರಿನ ಸಾಧನ ಗಂಟೆಗೆ 30 000 ಲೀಟರ್ ನೀರು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು ದೊಡ್ಡ ತೋಟಗಳಿೆಗೆ ಅನುಕೂಲ .

    ದಿಹಂಗಾ ಹೆವಿ ಡ್ಯೂಟಿ ವಾಟರ್ ಸ್ಟ್ರಕ್ಚರಿಂಗ್ ಸಾಧನವಾಗಿದ್ದ 50000 ಲೀಟರ್ ನೀರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹೆಚ್ಚು ನೀರು ಅಗತ್ಯ ಇರುವ ಭೂಮಿಗೆ ಬಳಸ ಬಹುದಾಗಿದೆ.

    ಬಳ್ಳಾರಿಯಲ್ಲಿ ಕಂಡ ಯಶಸ್ಸಿನ ಕಥೆ

    ಕರ್ನಾಟಕದ ಬಳ್ಳಾರಿಯಲ್ಲಿ40 ಸಾಧನಗಳನ್ನು ಕಳೆದ ಹಲವು ತಿಂಗಳಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಶೇಕಡ 75ರಷ್ಟು ಕೃಷಿ ಭೂಮಿಗಳಿಗೆ ಅಳವಡಿಸಲಾಗಿದೆ.ಶೇ.23ರಷ್ಟು ಮನೆಗಳಲ್ಲಿ(ತಾರಸಿ ಮತ್ತು ಹರ್ಬ್ ಗಾರ್ಡನ್‌ಗಳು) ಮತ್ತು ಶೇ.2ರಷ್ಟು ಡೈರಿ ಫಾರ್ಮ್‌ಗಳಲ್ಲಿ ಅಳವಡಿಸಲಾಗಿದೆ.ಈ ವಿಡಿಯೋದಲ್ಲಿ ಶ್ರೀನಿವಾಸ್ ಅಲ್ಲಿನ ಸಾಧನೆ ಬಣ್ಣಿಸಿದ್ದಾರೆ.

    ನಾಲ್ಕು ಎಕರೆಗಳಷ್ಟು ಭತ್ತದ ಗದ್ದೆಯಿಂದ ಈ ವರ್ಷ 185 ಚೀಲಗಳಷ್ಟು ಭತ್ತ ದೊರೆತಿದ್ದು ಕಳೆದ ವರ್ಷ 160 ಚೀಲಗಳು ಮಾತ್ರ ದೊರೆತಿತ್ತು. ಭತ್ತದ ಮೊಳಕೆಯಲ್ಲಿ ಶೇ.60ರಷ್ಟು ಹೆಚ್ಚಳ ದೊರೆತಿದೆ ಎಂದು ಹೇಳುತ್ತಾರೆ ಶ್ರೀನಿವಾಸ್.

    ಜೀವ ಪೋಷಕಾಂಶ ಪಡೆದ ಟೊಮ್ಯಾಟೊಗಳ ಪೌಷ್ಠಿಕತೆಯ ಅಂಶ ಬ್ರಿಕ್ಸ್ ಮೌಲ್ಯ· 3.5-5ರಿಂದ 9-13ಕ್ಕೆ ಹೆಚ್ಚಾಗಿದೆ. ಈ ವರ್ಷ ಅಸಹಜ ಮಳೆ ಮತ್ತು ಪ್ರವಾಹ ಬಂದಿದ್ದರೂ ಜೀವ ನೀರು ಪಡೆದ ಬೆಳೆಗಳು ಗಟ್ಟಿ ಬೇರುಗಳನ್ನು ಹೊಂದಿದ್ದು ಪೂರ್ಣ ಹಾಳಾಗುವುದನ್ನು ತಡೆದಿವೆ. ಡೈರಿ ಫಾರ್ಮ್ ಗಳು- ಹಿಂದೆ 6 ಲೀಟರ್ ಹಾಲು ಕೊಡುತ್ತಿದ್ದ ಎಮ್ಮೆಗಳು ಜೀವ· ನೀರು ನೀಡಿದ ನಂತರ ಎಲ್ಲ ಮೇವು ಇತ್ಯಾದಿ ಅದೇ ರೀತಿಯಲ್ಲಿದ್ದರೂ 7ಲೀಟರ್ ಹಾಲು ನೀಡಿವೆ. ಅವುಗಳ ಗರ್ಭ ಕಟ್ಟುವಿಕೆಯೂ ಸುಧಾರಿಸಿದೆ

    ಜೀವ ಜಲ

    ಕೃಷ್ಣ ಮಾದಪ್ಪ ಅವರ ಸಂಶೋದನೆ ಜೀವ ಜಲಕ್ಕೆ ನಿಜವಾಗಿಯೂ ಜೀವ ತುಂಬುತ್ತಿರುವುದು ಗೊತ್ತಾಗುತ್ತಿದೆ. ಹೆಚ್ಚು ಹೆಚ್ಚು ಜನರನ್ನು ಇದು ತಲುಪಬೇಕು ಎಂಬ ನಿಟ್ಟಿನಲ್ಲಿ ಅವರು ಮತ್ತು ಶ್ರೀನಿವಾಸ್ ಈಗ ಕಾರ್ಯ ತತ್ಪರರಾಗಿದ್ದಾರೆ. ಬಳಕೆ ಹೆಚ್ಚಿದಷ್ಟು ಇದರ ಫಲಿತಾಂಶ ಮತ್ತಷ್ಟು ನಿಖರವಾಗುತ್ತದೆ.

    ಜೀವ ಎಲ್ಲಿ ಸಿಗುತ್ತದೆ, ಬಳಕೆ ಹೇಗೆ ಇತ್ಯಾದಿ ಮಾಹಿತಿ ಅಗತ್ಯ ವಿದ್ದಲ್ಲಿ 9945949043 ಈ ನಂಬರಿಗೆ ವಾಟ್ಸಾಪ್ ಮಾಡುವ ಮೂಲಕ ಪಡೆಯಬಹುದು ಎಂದು ಜೀವ ವಕ್ತಾರರು ತಿಳಿಸಿದ್ದಾರೆ.

    .

    ಖಿನ್ನತೆ ಗೊಂದು ಕೊನೆ ಇರಲಿ

    ಹಿ೦ದಿ ಚಲನಚಿತ್ರ ದಿಲ್ ಹಿ ದಿಲ್ ಮೆ (ತಮಿಳಿನ ಕಾದಲಾರ್ ದಿನ೦) ನಲ್ಲಿ ಸೋನಾಲಿ ಬೇಂದ್ರೆ ಅವರೊಂದಿಗೆ ಅಭಿನಹಿಸಿದ್ದ ಹೀರೋ ಕುನಾಲ್ ಸಿ೦ಗ್ . ಈ ಚಿತ್ರದಲ್ಲಿ ಹಳ್ಳಿಯಿಂದ ಬಂದ ಒಂದು ಯುವ ಪ್ರತಿಭೆ ಮುಂಬೈನ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿಯನ್ನು ತೆಗೆದುಕೊಂಡು ತನ್ನ ಪ್ರೀತಿಯನ್ನು ಪಡೆದಂತಹ ಯುವಕನ ಚಲನಚಿತ್ರ.

    ಆ ಕಾಲದಲ್ಲಿ ಅವನ ರೂಪ ಅಭಿನಯ ಮತ್ತು ಹೇರ್ ಸ್ಟೈಲ್ಗಳಿಗೆ ಮೆಚ್ಚದವರಿಲ್ಲ. ನಾನು ಕುನಾಲ್ ಸಿ೦ಗ್ ಮತ್ತು ಸೋನಾಲಿ ಬೇ೦ದ್ರೆ ರ ದೊಡ್ಡ ಅಭಿಮಾನಿ.

    ಕಳೆದ ವರ್ಷ(2019) ನನ್ನ ಸಂಶೋಧನೆಯ ವಿಚಾರವಾಗಿ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದಾಗ ಅದೇ ಕಾದಲಾರ್ ದಿನ೦ ಚಲನಚಿತ್ರವನ್ನು SRS ಬಸ್ ನಲ್ಲಿ ಹಾಕಿದ್ದರು. ಬಾಲ್ಯದಲ್ಲಿ ನೋಡಿದ್ದ ಚಲನಚಿತ್ರವನ್ನು ನೆನಪಿಸಿಕೊಂಡು, ಆ ಹೀರೋ ಕುನಾಲ್ ಸಿಂಗ್ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಆಘಾತಕಾರಿ ಘಟನೆಯೊಂದು ತಿಳಿಯಿತು.

    ಫೆಬ್ರವರಿ 7, 2008 (ಇಂದಿಗೆ ಸರಿಯಾಗಿ 14 ವರ್ಷಗಳ ಹಿಂದೆ) ತನ್ನ ಮೂವತ್ತು ನೇ ವರ್ಷಕ್ಕೆ ಕುನಾಲ್ ಸಿಂಗ್ ಅವರು ಮುಂಬೈನ ಅಪಾರ್ಟ್ಮೆಂಟ್ ಒಂದರಲ್ಲಿ ಸಂಸಾರ ಹಾಗೂ ಪ್ರೇಮ ವೈಫಲ್ಯ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ವಿಷಯ ತಿಳಿದು ಆಘಾತವಾಯಿತು.

    ಒಂದು ಚಲನ ಚಿತ್ರದಲ್ಲಿ ದಕ್ಷಿಣ ಏಷ್ಯಾದಲ್ಲೇ ಮಿಂಚಿದ ಯುವಕನ ನಿಜ ಜೀವನದ ದಾರುಣ ಕಥೆ ವ್ಯಥೆ ಬೇಸರವೆನಿಸಿತು. ಒಂದು ಕಾಲಘಟ್ಟದಲ್ಲಿ ಅತ್ಯುನ್ನತವಾದ ಹಂತಕ್ಕೆ ಹೋದ ಹೀರೋ ಖಿನ್ನತೆ ಇ೦ದ ಆತ್ಮಹತ್ಯೆ ಮಾಡಿಕೊಂಡಿದ್ದು ಬೇಸರದ ಸಂಗತಿ.

    ಈ ಖಿನ್ನತೆ ಗೊಂದು ಕೊನೆ ಇರಲಿ. ಜೀವನ ವಿಶಾಲವಾಗಿದೆ ಏಳು ಬೀಳುಗಳನ್ನೆಲ್ಲಾ ಸಮನಾಗಿ ಸ್ವೀಕರಿಸೋಣ.

    ಮಿಸ್ ಯು ಕುನಾಲ್ ಸಿಂಗ್

    ಕಲ್ಯಾಣ ಕರ್ನಾಟಕಕ್ಕೆ 5030 ಕೋಟಿ ರೂ. ಅನುದಾನಕ್ಕೆ ಮನವಿ

    NEW DELHI FEB 7

    ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳಡಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 5030 ಕೋಟಿ ರೂ. ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.

    ಇತ್ತೀಚೆಗೆ ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಚರ್ಚಿಸಿದಂತೆ, ಆಂಧ್ರ ಪ್ರದೇಶ ರಾಜ್ಯವು ತನ್ನ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸುವಂತೆ ಮನವಿ ಮಾಡಿತ್ತು. ಅಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ದೇಶದಲ್ಲಿಯೇ ಹಿಂದುಳಿದ ಜಿಲ್ಲೆಗಳ ಸಾಲಿನಲ್ಲಿ ಸೇರಿವೆ. 371(ಜೆ) ವಿಧಿಯನ್ವಯ ಸಂವಿಧಾನ ತಿದ್ದುಪಡಿಯ ಮೂಲಕ ಈ ಭಾಗಕ್ಕೆ ವಿಶೇಷ ಸ್ಥಾನ ನೀಡಲಾಗಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸಲಾಗಿದೆ. ಆದರೆ ಈ ಭಾಗವು ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿರುವುದರಿಂದ ವಿಶೇಷ ಗಮನ ನೀಡುವ ಅಗತ್ಯವಿದೆ. ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕದಲ್ಲಿಯೂ ಈ ಜಿಲ್ಲೆಗಳು ಹಿಂದುಳಿದಿರುವುದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಡಿ 5030 ಕೋಟಿ ರೂ. ಅನುದಾನ ಒದಗಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.


    ಜಿ.ಎಸ್.ಟಿ. ಪರಿಹಾರ ಅವಧಿ ವಿಸ್ತರಣೆಗೆ ಮುಖ್ಯಮಂತ್ರಿ ಮನವಿ

    ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುವ ಜಿಎಸ್ ಟಿ ಪರಿಹಾರವನ್ನು 2024-25ರ ವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಮಾಡಿದರು.

    ಎರಡು ದಿನಗಳ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಇಂದು ಹಣಕಾಸು ಸಚಿವರನ್ನು ಭೇಟಿಯಾಗಿ, 2022ರ ಮಾರ್ಚ್ ಗೆ ಜಿ.ಎಸ್.ಟಿ. ಪರಿಹಾರದ ಅವಧಿ ಮುಕ್ತಾಯಗೊಳ್ಳಲಿದೆ. ಆದರೆ ಕೋವಿಡ್ 19 ರಿಂದಾಗಿ ರಾಜ್ಯ ಸರ್ಕಾರಗಳು ಸಂಪನ್ಮೂಲ ಕ್ರೋಢೀಕರಿಸಲು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜಿ.ಎಸ್.ಟಿ. ಪರಿಹಾರದ ಅವಧಿ ವಿಸ್ತರಿಸುವ ಮೂಲಕ ರಾಜ್ಯ ಸರ್ಕಾರಗಳ ಸಂಕಷ್ಟ ಬಗೆಹರಿಸುವಂತೆ ಮನವಿ ಮಾಡಿದರು.

    ಕಳೆದ ಎರಡು ವರ್ಷಗಳಲ್ಲಿ ಸಾಲದ ಮೂಲಕ ರಾಜ್ಯಗಳಿಗೆ ಜಿ.ಎಸ್.ಟಿ. ಪರಿಹಾರ ಒದಗಿಸಿದಂತೆ, ಮುಂದಿನ ಮೂರು ವರ್ಷಗಳೂ ಇದೇ ಕ್ರಮ ಅನುಸರಿಸುವಂತೆ ಹಾಗೂ ಜಿ.ಎಸ್.ಟಿ. ಸೆಸ್ ಸಂಗ್ರಹದಿಂದ ಈ ಸಾಲ ಮರುಪಾವತಿ ಮಾಡಬಹುದು ಎಂದು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ.

    ಮಾರ್ಗೋಸಾ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆಉಬ್ಬು: ಬಿಬಿಎಂಪಿ ಎಂಜಿನಿಯರ್ ಗಳಿಗೆ ಸಚಿವರಿಂದ ತೀವ್ರ ತರಾಟೆ

    BENGALURU FEB 8

    ಮಲ್ಲೇಶ್ವರದ ಮಾರ್ಗೋಸಾ ರಸ್ತೆಯ 15ನೇ ಅಡ್ಡರಸ್ತೆಯ ಸಿಗ್ನಲ್ ಬಳಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ಹಾಕಿರುವ ಬಿಬಿಎಂಪಿ ಅಧಿಕಾರಿಗಳನ್ನು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, `ಮಾರ್ಗೋಸಾ ರಸ್ತೆಯ ವೀಣಾ ಸ್ಟೋರ್ಸ್ ಜಂಕ್ಷನ್ ಸಮೀಪ ಹಾಕಿರುವ ರಸ್ತೆ ಉಬ್ಬು ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ರಸ್ತೆ ನಿರ್ಮಾಣದ ನಿಯಮಗಳಿಗೆ ತದ್ವಿರುದ್ಧವಾಗಿ ಮಾಡಿರುವ ಈ ರಸ್ತೆ ಉಬ್ಬಿನಿಂದಾಗಿ ಇಲ್ಲಿ ಹಲವು ಅಪಘಾತಗಳಾಗಿವೆ. ಇದನ್ನು ತ್ವರಿತವಾಗಿ ಸರಿಪಡಿಸದಿದ್ದರೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು’ ಎಂದು ಬಿಬಿಎಂಪಿ ಬೃಹತ್ ರಸ್ತೆಗಳ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರವೀಣ್ ಅವರಿಗೆ ಎಚ್ಚರಿಕೆ ನೀಡಿದರು.

    `ಈ ರಸ್ತೆ ಉಬ್ಬಿಗೆ ಬಿಳಿ ಬಣ್ಣದ ಪಟ್ಟೆಗಳನ್ನಾಗಲಿ, ರಾತ್ರಿ ಹೊತ್ತು ಈ ಉಬ್ಬು ಇರುವುದು ಗೊತ್ತಾಗುವಂತೆ ರೇಡಿಯಂ ಫಲಕಗಳನ್ನಾಗಲಿ ಅಳವಡಿಸಿಲ್ಲ. ಜೊತೆಗೆ, ಸಿಗ್ನಲ್ ಸಮೀಪದಲ್ಲೇ ಇದನ್ನು ಹಾಕಲಾಗಿದೆ. ಇಲ್ಲಿ ಅಪಘಾತಗಳು ಸಂಭವಿಸಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರೂ ಅಧಿಕಾರಿಯಾದ ನೀವು ಸ್ಥಳಕ್ಕೆ ಭೇಟಿ ನೀಡದೆ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದೀರಿ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಬಿಬಿಎಂಪಿ ಅಧಿಕಾರಿಗಳು ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ಬಿಡಬೇಕು’ ಎಂದು ಅವರು ಹರಿಹಾಯ್ದರು.

    ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳ ತಂಡವು ಸಬೂಬು ಹೇಳಲು ಮುಂದಾಯಿತು. ಇದನ್ನು ಒಪ್ಪದ ಸಚಿವರು, ದಿನವೂ ಹತ್ತಾರು ಸಾವಿರ ವಾಹನಗಳು ಚಲಿಸುವ ನಿಬಿಡ ರಸ್ತೆಯಾಗಿರುವ ಮಾರ್ಗೋಸಾ ರಸ್ತೆಯಲ್ಲಿ ಇತ್ತೀಚೆಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ಆ ಸಂದರ್ಭದಲ್ಲೇ ಯೋಜನೆ ಪ್ರಕಾರ ವೈಜ್ಞಾನಿಕ ರಸ್ತೆ ಉಬ್ಬು ಹಾಕಬೇಕಿತ್ತು. ಆ ಕೆಲಸ ಮಾಡದ ಕಾರಣಕ್ಕೆ ಹಲವು ವಾಹನ ಸವಾರರು ರಾತ್ರಿ ವೇಳೆ ಬೀಳುತ್ತಿದ್ದಾರೆ. ಈ ರೀತಿ ಇನ್ನು ಮುಂದೆ ಆಗದಂತೆ ನೋಡಿಕೊಳ್ಳಬೇಕು. ಕ್ಷೇತ್ರ ವ್ಯಾಪ್ತಿಯ ಈ ರೀತಿಯ ಕಪ್ಪು ಸ್ಥಳಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

    ಈ ರಸ್ತೆ ಉಬ್ಬಿನ ಸಮೀಪ ಇತ್ತೀಚೆಗೆ ಹಲವು ಅಪಘಾತಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಾರ್ವಜನಿಕರು ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಿದ್ದರು. ಇದಾದಮೇಲೆ ಸಚಿವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಇದರ ಜತೆಗೆ, ಸ್ಥಳಕ್ಕೆ ಭೇಟಿ ನೀಡದೆ ಕರ್ತವ್ಯಲೋಪ ಎಸಗಿರುವ ಎಂಜಿನಿಯರ್ ಪ್ರವೀಣ್ ಅವರನ್ನೂ ಸಚಿವರು ತರಾಟೆಗೆ ಕೂಡ ಎಚ್ಚರಿಕೆ ನೀಡಿದರು.

    ಮಲ್ಲೇಶ್ವರಂ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಜಯಶಂಕರ್, ಬಾಲಾಜಿ, ಸಹಾಯಕ ಎಂಜಿನಿಯರ್ ಮಾರ್ಕಂಡಯ್ಯ ಇದ್ದರು.

    ಬಯಕೆಗಳಿಲ್ಲದ ಬದುಕು ಬರಡೇ ಸರಿ

    ಸುಮಾವೀಣಾ

    ಬಯಕೆಗೆ ಬಡವರಿಲ್ಲ- ರುದ್ರಭಟ್ಟನ   ‘ಜಗನ್ನಾಥ ವಿಜಯ’ದಲ್ಲಿ ಬರುವ ಮಾತಿದು. ಬಯಕೆ ಎಂದರೆ  ಬೇಡಿಕೆಗಳು,ಆವಶ್ಯಕತೆಗಳು ಎಂದಾಗುತ್ತವೆ. ಬಯಸಿದ್ದೆಲ್ಲಾ ಸಿಗುವುದು ಸಿಗದೆ ಇರುವುದು ಬೇರೆಯ ವಿಚಾರ ಆದರೆ ಬಯಸುವುದರಲ್ಲಿ ತಪ್ಪಿಲ್ಲ.

    ತೊಟ್ಟಿಲ ಮಗುವಿನಿಂದ   ಮುಪ್ಪಿನವರವರೆಗೆ ಬಯಕೆಗಳು ನಿರೀಕ್ಷೆಗಳು  ಇದ್ದೇ ಇರುತ್ತವೆ.ಸಹಜವಾದ ಬಯಕೆಗಳು ಬದುಕನ್ನು ಸುಂದರವಾಗಿಸುತ್ತವೆ  ಅಸಹಜ ಬಯಕೆಗಳು ಮುಗ್ಗರಿಸುವಂತೆ ಮಾಡುತ್ತವೆ.  

    ಬಯಕೆಗೆ ಬಡವರಿಲ್ಲ ಎಂಬುದೊಂದು ಬಡತನಕ್ಕೆ ಸಂಬಂಧಿಸಿದ ನಾಣ್ಣುಡಿ  ಎನ್ನಬಹುದು.  ಆಕಾಶವನ್ನು ನೋಡಲು ನೂಕು ನುಗ್ಗಲೇ ? ನಾವು  ಎಲ್ಲಿ ನಿಂತರೂ ಆಕಾಶವನ್ನು ವೀಕ್ಷಿಸಬಹುದು.  ಹಾಗೆಯೇ ಬಯಕೆಯನ್ನು ಹೊಂದಲು  ಶ್ರೀಮಂತರಾಗಿರಬೇಕು ಬಡವರಾಗಿರಬೇಕು ಎನ್ನುವ ಕಟ್ಟುಪಾಡಿಲ್ಲ. ಈ ಬಯಕೆಗಳು ಸೀಮಾತೀತ,ವರ್ಗಾತೀತ.

     ‘ಬಯಕೆ’ ಎನ್ನುವುದು ಧನಾತ್ಮಕತೆಯ ಸಂಕೇತ ಎನ್ನಬಹುದು.  ಉದಾಹರಣೆಗೆ ವಿದ್ಯಾರ್ಥಿಯೊಬ್ಬ   ಉತ್ತಮ  ಅಂಕಗಳನ್ನು ಪಡೆದು  ಉತ್ತಮ ಗಳಿಕೆಹೊಂದಬೇಕು ಎಂದಾದಲ್ಲಿ ಅದಕ್ಕೆ ಪೂರಕವಾಗಿ ಆತ  ಪ್ರಯತ್ನ ಮಾಡಲೇಬೇಕಾಗುತ್ತದೆ.  ಅಂದರೆ ಬಯಕೆ ಈಡೇರಲು  ಶ್ರಮವನ್ನು  ಅಪೇಕ್ಷಿಸುತ್ತದೆ ಎಂದಾಯಿತು ಅಲ್ಲವೆ. ಅರ್ಥಾತ್ ಶ್ರಮ ನಮಗೆ ಬಯಸಿಒದ್ದನ್ನು ಕೊಡಬಹುದು ಎಂದಾಯಿತಲ್ಲವೆ?

     ಬಯಕೆಯೇ ಬದುಕು ಎಂಬಂತೆ  ಬಯಕೆಗಳು ಬದುಕುವ ಆಸೆಯನ್ನು ಜೀವಂತವಾಗಿರಿಸುತ್ತವೆ.  ಈ ಆಸೆಗಳು ನಮ್ಮನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿಸಬಹುದು.  ಬಯಕೆ ಹೊಂದಲು ನಿರ್ಬಂಧಗಳೆನ್ನುವ ಟ್ರಾಫಿಕ್ ಜಾಮನ್ನು ಧಾಟಬೇಕಿಲ್ಲ,  ಮುಂಗಡ ಚೀಟಿಯನ್ನೇನು ನಾವು ಪಡೆಯಬೇಕಿಲ್ಲ.  ಬಯಕೆಗಳಿಲ್ಲದ ಬದುಕು ಬರಡೇ ಸರಿ!  ನಮಗನ್ನಿಸಿದ್ದನ್ನು ಆಶಿಸಿ  ಈಡೇರಿಸಿಕೊಳ್ಳಬಹುದಾದ  ಬಯಕೆಗಳು ಬದುಕಿಗೆ ಅಮೃತ ಸಿಂಚನಗಳು.  

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market: ಏರಿಳಿತಗಳ ಪೇಟೆಯಲ್ಲಿ ಅರಿತು ಹೂಡಿಕೆ ಮಾಡಿ – ಅನುಸರಿಸಬೇಡಿ

    ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್ ನ ಹೆಗ್ಗುರುತಾದ ಸೆನ್ಸೆಕ್ಸ್‌ ದಿನನಿತ್ಯವೂ ಏರಿಳಿತಗಳನ್ನು ಪ್ರದರ್ಶಿಸುತ್ತಿದ್ದು, ಸೆನ್ಸೆಕ್ಸ್‌ ನಲ್ಲಿರುವ 30 ಕಂಪನಿಗಳು ಚಕ್ರಾಕರಾದಲ್ಲಿ ಚಲಿಸಿ ಎರಡು ದಿನ ಏರಿಕೆ ಕಂಡರೆ, ಮತ್ತೆರಡು/ ಮೂರು ದಿನ ಇಳಿಕೆ ಕಾಣುವ ರೀತಿ ಮ್ಯೂಸಿಕಲ್ ಚೇರ್‌ ಆಟದಂತೆ ಏರಿಳಿತಗಳನ್ನು ಪ್ರದರ್ಶಿಸುತ್ತಿದೆ.

    ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ವಲಯದ ಕಂಪನಿಗಳು, ಅವುಗಳಲ್ಲಿ ಕೆಲವು ಉತ್ತಮವಾದ, ಆಕರ್ಷಣೀಯ ಫಲಿತಾಂಶಗಳನ್ನು ಪ್ರಕಟಿಸಿದರೂ ಸಹ ಏರಿಕೆಯ ಹಂತವನ್ನು ಸ್ಥಿರಗೊಳಿಸಿಕೊಳ್ಳಲು ಅಸಮರ್ಥವಾಗಿದ್ದು ಪೇಟೆಯಲ್ಲಿ ನಡೆಯುತ್ತಿರುವ ವ್ಯವಹಾರಿಕ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.

    ಹಿಂದಿನವಾರದಲ್ಲಿ ಅಮೇರಿಕಾದ ಫೇಸ್‌ ಬುಕ್‌ ಕಂಪನಿಯ ಕಳಪೆ ಸಾಧನೆಯ ಕಾರಣ ಭಾರಿ ಮಾರಾಟದ ಒತ್ತಡಕ್ಕೊಳಗಾಗಿ ಷೇರಿನಬೆಲೆ ಭರ್ಜರಿ ದಾಖಲೆಯ ಕುಸಿತ ಕಂಡಿದೆ. ಇದಕ್ಕೆ ಆ ಕಂಪನಿಯು ನೀಡಿದ ಸಮಜಾಯಿಶಿ ಎಂದರೆ ʼ ಭಾರತದಲ್ಲಿ ಬಳಕೆದಾರರ ಬೆಂಬಲದ ಕೊರತೆಯ ಕಾರಣ ಕಂಪನಿ ಏಳ್ಗೆ ಕಾಣಲು ವಿಫಲವಾಗಿದೆʼ ಎಂದಿದೆ. ಅಂದರೆ ಒಂದು ವಿದೇಶಿ ಕಂಪನಿಯ ಏಳ್ಗೆಗೆ ಭಾರತೀಯರ ಕೊಡುಗೆ ಯಾವ ಮಟ್ಟದಲ್ಲಿದೆ ಎಂಬುದರ ಅರಿವಾಗುತ್ತದೆ.

    ಭಾರತೀಯ ಷೇರುಪೇಟೆಗಳಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಜನವರಿ 12 ರಿಂದಲೂ ನಿರಂತರವಾಗಿ ಮಾರಾಟಮಾಡುತ್ತಿವೆ. ಜನವರಿ 12 ರಿಂದಲೂ ಏಕಮುಖವಾಗಿ ಮಾರಾಟದ ಹಾದಿಯಲ್ಲಿ ರೂ.46,498 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೂ, ಸೆನ್ಸೆಕ್ಸ್‌ ಮಾತ್ರ 3,184 ಪಾಯಿಂಟುಗಳಷ್ಠು ಮಾತ್ರ ಕುಸಿದಿದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.277.22 ಲಕ್ಷ ಕೋಟಿಯಿಂದ ರೂ.267.71 ಲಕ್ಷ ಕೋಟಿಗೆ ಇಳಿದಿದೆ. ಆದರೆ 2020 ರ ಫೆಬ್ರವರಿ 20 ರಿಂದ ಮಾರ್ಚ್‌ 26 ರವರೆಗೂ ವಿದೇಶಿ ವಿತ್ತೀಯ ಸಂಸ್ಥೆಗಳು ಸುಮಾರು ರೂ.70 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ ಸೆನ್ಸೆಕ್ಸ್‌ ನಲ್ಲಿ 11,354 ಪಾಯಿಂಟುಗಳ ಇಳಿಕೆಯನ್ನುಂಟುಮಾಡಿದ್ದವು. ಆದರೆ ಈ ಬಾರಿ ರೂ.46,498 ಕೋಟಿ ಮೌಲ್ಯದ ಷೇರು ಮಾರಾಟಮಾಡಿದರೂ ಕೇವಲ 3,184 ಪಾಯಿಂಟುಗಳ ಕುಸಿತ ಕಂಡಿದೆ.

    ವಾರಾಂತ್ಯದ ಆರಂಭದ ಹೊತ್ತಿನ ಸೆನ್ಸೆಕ್ಸ್

    ಈ ರೀತಿಯ ತಾರಾತಮ್ಯಕ್ಕೆ ಮುಖ್ಯ ಕಾರಣ ನಮ್ಮ ದೇಶದ ಆಂತರಿಕ ಶಕ್ತಿ. ಅದು ಜನಸಾಮಾನ್ಯರು ಷೇರುಪೇಟೆಯತ್ತ ಗಮನಹರಿಸಿರುವುದಾಗಿದೆ. ಹಿಂದಿನ ವರ್ಷ ಅಂದರೆ 08 ನೇ ಫೆಬ್ರವರಿ 2021 ರಂದು ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕರ ಸಂಖ್ಯೆಯು 5.92 ಕೋಟಿ ಇತ್ತು. ಈ ವರ್ಷ ಫೆಬ್ರವರಿ 4 ರಂದು ಈ ಸಂಖ್ಯೆಯು 9.59 ಕೋಟಿಗೆ ಏರಿಕೆ ಕಂಡಿದೆ. ಸುಮಾರು ಶೇ.64ರಷ್ಠು ಭಾಗವಹಿಸುವವರ ಸಂಖ್ಯೆಯು ಹೆಚ್ಚಾಗಿದೆ. ಈ ಹೊಸ ಹೂಡಿಕೆದಾರರ ಪ್ರವೇಶದಿಂದ ಪೇಟೆಯತ್ತ ಹರಿದುಬರುತ್ತಿರುವ ಹಣದ ಹೊಳೆಯೊಂದಿಗೆ ಮ್ಯೂಚುಯಲ್‌ ಫಂಡ್‌ ಗಳ ಮೂಲಕ ಪ್ರತಿ ತಿಂಗಳೂ, ಈಕ್ವಿಟಿ ಆಧಾರಿತ ಎಸ್‌ ಐ ಪಿ ಹೂಡಿಕೆಯ ಸುಮಾರು ರೂ.25,000 ಕೋಟಿ ಸಂಗ್ರಹವಾಗುತ್ತಿರುವ ಹಣವೂ ಸಹ ಪೇಟೆಯತ್ತ ಹರಿದುಬರುತ್ತಿರುವುದು, ಉತ್ತಮ, ಅಗ್ರಮಾನ್ಯ ಕಂಪನಿಗಳಿಗೆ ಭಾರಿ ಬೇಡಿಕೆಯನ್ನು ಸೃಷ್ಟಿಸಿದೆ.

    ಸಂಕ್ಷಿಪ್ತವಾಗಿ ಹೇಳಬೇಕೆಂದರೆ ವಿದೇಶಿ ವಿತ್ತೀಯ ಸಂಸ್ಥೆಗಳು ಹೆಚ್ಚು ಮಾರಾಟಮಾಡುತ್ತಿದ್ದರೂ ಸಹ ಆಂತರಿಕವಾಗಿ ಬರುತ್ತಿರುವ ಹಣದ ಹೊಳೆಯು ಎಲ್ಲವನ್ನೂ ಹೀರಿಕೊಳ್ಳುತ್ತಿರುವುದರಿಂದ ಷೇರುಪೇಟೆಯ ಮೇಲೆ ಹೆಚ್ಚು ಪ್ರಭಾವಿಯಾಗುತ್ತಿಲ್ಲ. ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಎಂದರೆ 141 ದೇಶಗಳ ಗ್ಲೋಬಲ್‌ ಕಾಂಪಿಟೇಟಿವ್‌ ಇಂಡೆಕ್ಸ್‌ ನಲ್ಲಿ ಭಾರತದ ಮಾರ್ಕೆಟ್‌ ಸೈಜ್‌ – 3, ಇದು ಇಂದು ಸಕಾರಾತ್ಮಕವಾಗಿ ಪರಿಣಮಿಸಿದೆ. ದೇಶದ ಜನಸಂಖ್ಯೆ 140 ಕೋಟಿಯಲ್ಲಿ ಕೇವಲ 9.59 ಕೋಟಿ ಜನರು ಮಾತ್ರ ಷೇರುಪೇಟೆಯ ಚಟುವಟಿಕೆಯಲ್ಲಿ ಭಾಗವಹಿಸುವ ಕಾರಣ ಈ ರೀತಿಯ ಸ್ಥಿರತೆ ಕಾಣುತ್ತಿದ್ದೇವೆ. ಇದು ದ್ವಿಗುಣಗೊಂಡಲ್ಲಿ ಯಾವ ಪ್ರಮಾಣದ ಬೇಡಿಕೆ ಉಂಟಾಗಿ ಅಸ್ಥಿರತೆಗೆ ಕಾರಣವಾಗಬಹುದೇ, ಕಾದು ನೋಡಬೇಕಾಗಿದೆ.

    ಈ ವಾತಾವರಣವನ್ನು ಇತ್ತೀಚೆಗೆ ಬರುತ್ತಿರುವ ಹೊಸಪೀಳಿಗೆ ಸ್ಟಾರ್ಟ್‌ ಅಪ್‌ ಗಳು ಜನಸಾಮಾನ್ಯರನ್ನು ಆಕರ್ಷಿಸಿ ಅವರಿಗೆ ತಮ್ಮ ಷೇರುಗಳನ್ನು ಅತ್ಯಧಿಕ ಪ್ರೀಮಿಯಂನಲ್ಲಿ ವಿತರಿಸಿ, ಅವರಲ್ಲಿ ಐಪಿಒ ಎಂದರೆ ತಾತ್ಸಾರ ಭಾವನೆಯನ್ನು ಬಿತ್ತುತ್ತಿವೆ.

    ಈ ದಿಶೆಯಲ್ಲಿ ಐ ಪಿ ಒ ಗಳು ತೇಲಿಬಿಟ್ಟಾಗ ಗಮನಿಸಲೇಬೇಕಾದಂತಹ ಹಲವು ಅಂಶಗಳು ಇಂತಿವೆ.

    • ಐ ಪಿ ಒ ಮೂಲಕ ವಿತರಿಸಲಾಗುತ್ತಿರುವ ಷೇರುಗಳ ಮುಖಬೆಲೆ ಏನು? ಅದು ರೂ.1 ಅಥವಾ 2 ಆದರೆ ವಿತರಣಾ ಸಂದರ್ಭಕ್ಕೂ ಮುಂಚಿನ ದಿನಗಳಲ್ಲಿ ಮುಖಬೆಲೆ ಸೀಳಲಾಗಿದೆಯೇ? ಹೌದೆಂದಾದರೆ ಆ ಕಂಪನಿಯ ಉದ್ದೇಶವೇನೆಂಬುದರ ಅರಿವಾಗುತ್ತದೆ.
    • ಆ ಕಂಪನಿಯು ಐಪಿಒ ಗೂ ಮುಂಚಿನ ದಿನಗಳಲ್ಲಿ ಪಬ್ಲಿಕ್‌ ಲಿಮಿಟೆಡ್‌ ಕಂಪನಿಯಾಗಿದೆಯೇ? ಹೌದೆಂದಾದರೆ ಕಂಪನಿ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಣೆಯ ದೃಷ್ಟಿಯಿಂದಲೇ ಈ ಕ್ರಮಕ್ಕೆ ಮುಂದಾಗಿದೆ ಎಂದಾಗುವುದು.
    • ಐ ಪಿ ಒ ಗೂ ಮುಂಚೆ ಕಂಪನಿಯು ಯಾವ ರೀತಿಯ ಕಾರ್ಪೊರೇಟ್‌ ಫಲಗಳನ್ನು ವಿತರಿಸಿಕೊಂಡಿದೆ, ವಿಶೇಷವಾಗಿ ಅದು ವಿತರಿಸಿದ ಬೋನಸ್‌ ಷೇರಿನ ಪ್ರಮಾಣವೇನು? ಕಾರಣ ಆಗಸ್ಟ್‌ 2021 ರಲ್ಲಿ ವಿತರಿಸಿದ ವಿಜಯ್‌ ಡಯಾಗ್ನಾಸ್ಟಿಕ್ಸ್‌ ಕಂಪನಿಯು ಮೇ 2021 ರಲ್ಲಿ ಪ್ರತಿ 4 ಷೇರುಗಳಿಗೆ 5 ರಂತೆ ಬೋನಸ್‌ ಷೇರು ವಿತರಿಸಿ, ಇರುವ ಮೀಸಲು ನಿಧಿಯನ್ನು ಕರಗಿಸಿ, ನಂತರ ರೂ.531 ರಂತೆ ಐಪಿಒ ನಲ್ಲಿ ಷೇರು ವಿತರಿಸಿದೆ. ಝೊಮಾಟೋ ಕಂಪನಿಯು ಜುಲೈ 2021 ರಲ್ಲಿ ಪ್ರತಿ 1 ಷೇರಿಗೆ 6,691 ಷೇರುಗಳ ಅನುಪಾತದಲ್ಲಿ ಬೋನಸ್‌ ಷೇರು ವಿತರಿಸಿ, ಇರುವ ಮೀಸಲು ನಿಧಿಯನ್ನು ಕರಗಿಸಿ, ನಂತರ ರೂ.76 ರಂತೆ ಷೇರು ವಿತರಿಸಿದೆ. ಅಂದರೆ ಕಂಪನಿಯ ಖಜಾನೆಯಲ್ಲಿರುವ ʼರಸʼವನ್ನು ಹೀರಿಕೊಂಡು ನಂತರ ಸಿಪ್ಪೆಯಂತಹ ಸಪ್ಪೆಯ ಭಾಗವನ್ನು ಸಾರ್ವಜನಿಕರಿಗೆ ಹಂಚುವುದು ಯಾವ ನ್ಯಾಯ?
    • ಕಂಪನಿಯ ಪ್ರವರ್ತಕರಿಗೆ ಬಿದ್ದ ಷೇರಿನ ಬೆಲೆ ಏನು? ಮತ್ತು ಆ ಷೇರುಗಳನ್ನು ವಿತರಿಸುತ್ತಿರುವ ಪ್ರೀಮಿಯಂ ಏನು? ಇವುಗಳ ವ್ಯತ್ಯಾಸ ಭಾರಿ ಪ್ರಮಾಣದಲ್ಲಿದ್ದಲ್ಲಿ ಅಂತಹ ಕಂಪನಿಗಳಿಂದ ದೂರ ಉಳಿವುದೇ ಲೇಸು.
    • ಕಂಪನಿಗಳು ಹೊಸ ಷೇರುಗಳನ್ನು ಮತ್ತು ಪ್ರವರ್ತಕರಾದಿಯಾಗಿರುವವರ ಷೇರುಗಳನ್ನು ಮಾರಾಟಮಾಡುತ್ತಿರುವ ಪ್ರಮಾಣವನ್ನೂ ಸಹ ಗಮನಿಸಬೇಕು. ಕೆಲವು ಕಂಪನಿಗಳು ಕೇವಲ ಆಫರ್‌ ಫಾರ್‌ ಸೇಲ್‌ ಮೂಲಕ ಮಾತ್ರ ಷೇರು ವಿತರಿಸುವುವು. ವಿತರಿಸುವ ಪ್ರೀಮಿಯಂ ಸಹ ಅತಿ ಹೆಚ್ಚಾಗಿದ್ದು ಸಂಗ್ರಹವಾದ ಸಂಪೂರ್ಣ ಸಂಪನ್ಮೂಲವು ಪ್ರವರ್ತಕರ ಕಿಸೆಗೆ ಸೇರಿಕೊಳ್ಳುವುದು. ಇದರಿಂದ ಕಂಪನಿಗೆ ಯಾವ ರೀತಿಯ ಪ್ರಯೋಜನವಿರಲಾರದು. ಹಾಗಾಗಿ ಇಂತಹ ಕಂಪನಿಗಳಿಗೆ ಐಪಿಒ ಮೂಲಕ ಚಂದಾದಾರರಾಗುವುದಕ್ಕಿಂತ, ಆ ಕಂಪನಿಯ ಷೇರುಗಳು ಲೀಸ್ಟಿಂಗ್‌ ಆದ ಮೇಲೆ ಆಕರ್ಷಕ ಹೂಡಿಕೆ ಎನಿಸಿದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲದಿದ್ದಲ್ಲಿ ಪೇಟೆಯಲ್ಲಿ ಪರ್ಯಾಯ ಹೂಡಿಕೆ ಆನ್ವೇಷಣೆ ಮಾಡಬಹುದು. ಉದಾಹರಣೆಗೆ ವೇದಾಂತ ಫ್ಯಾಶನ್ಸ್‌ ಕಂಪನಿ ವಿತರಿಸುತ್ತಿರುವ ರೂ.1 ರ ಮುಖಬೆಲೆಯ ಷೇರಿಗೆ ರೂ.866 ಎಂದು ನಿಗದಿಪಡಿಸಿದ್ದು, ಸಂಗ್ರಹಣೆಯಾದ ಸಂಪೂರ್ಣ ರೂ.3,149 ಕೋಟಿ ಹಣವೂ ಪ್ರವರ್ತಕರ ಕಿಟ್ಟಿಗೆ ಸೇರಿಕೊಳ್ಳುವುದು. ಇದರಿಂದ ಕಂಪನಿಗೆ ಯಾವ ಪ್ರಯೋಜನವೂ ಇರುವುದಿಲ್ಲ.

    ಈ ಅಂಶಗಳು ಕೇವಲ ಮಾರ್ಗದರ್ಶನಕ್ಕಾಗಿ, ಹೊಸ ಹೂಡಿಕೆದಾರರ ಮಾಹಿತಿಗಾಗಿ ನೀಡಲಾಗಿದ್ದು, ಅಂತಿಮವಾಗಿ ಹೂಡಿಕೆದಾರರೇ ನಿರ್ಧರಿಸಬೇಕು. ಅರಿತು ಹೂಡಿಕೆ ಮಾಡಿ – ಅನುಸರಿಸಬೇಡಿ.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    error: Content is protected !!