26.1 C
Karnataka
Thursday, May 21, 2026
    Home Blog Page 25

    ನೆಲದ ಸಿರಿ – ಗ್ರಾಮೀಣ ಸೊಗಡಿನ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಸಮಗ್ರ ಕೃಷಿ ಕೇಂದ್ರ

    ಬಳಕೂರು ವಿ ಎಸ್ ನಾಯಕ

    ಕೋಲೆ ಬಸವ , ರಾಟೆ, ಒಕ್ಕಣೆಯ ಕಣ, ಹಾಲು ಹಿಂಡುವಿಕೆ , ಶಕುನ ಸಾರುವ ಹಕ್ಕಿಗಳು , ಉಳುಮೆ ಮಾಡುತ್ತಿರುವ ರೈತ ಮತ್ತು ಎತ್ತುಗಳು, ಕುಂಬಾರಿಕೆ, ಕುಲುಮೆ, ವೀರಗಾಸೆ ,ಯಕ್ಷಿಣಿ , ಡೊಳ್ಳುಕುಣಿತ, ಗ್ರಾಮೀಣ ವಸ್ತುಸಂಗ್ರಹಾಲಯ ,ಪರಿಸರಸ್ನೇಹಿ ಈಜುಕೊಳ ,ಬಕಾಸುರ, ಇಂಗು ಗುಂಡಿಗಳು, ರೋಮನ್ ಎಂಪಿಥೇಟರ್ ವಿವಿಧ ಸಸ್ಯ ಪ್ರಭೇದಗಳು ದಂಡಕಾರಣ್ಯ ಸಾಕುಪ್ರಾಣಿಗಳ ಮತ್ತು ಜೇನುಸಾಕಣೆ ಇವೆಲ್ಲವನ್ನು ಮಾಗಡಿ ಸಮೀಪದ ತೋಟವೊಂದರಲ್ಲಿ ಕಾಣಬಹುದು. ಇದರ ಹೆಸರು ನೆಲದ ಸಿರಿ ಹಸಿರು ತೋಟ.

    ಬೆಂಗಳೂರಿನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿ ಬೆಂಗಳೂರು -ಮಾಗಡಿ ರಸ್ತೆಯಲ್ಲಿ ನಿರ್ಮಿಸಲಾದ ಈ ತೋಟ ವಾರಾಂತ್ಯ ವಿಹಾರಕ್ಕೆ ಹೇಿಳಿ ಮಾಡಿಸಿದ ತಾಣ. ವಿಸ್ತೀರ್ಣದಲ್ಲಿ ಚಿಕ್ಕದಾದರೂ ಚೊಕ್ಕವಾಗಿದೆ.

    ತೋಟದ ವಿಶೇಷತೆಗಳು

    ಪರಂಪರಾ ಗ್ರಾಮೀಣ ವಸ್ತುಸಂಗ್ರಹಾಲಯ
    ನಮ್ಮ ಪೂರ್ವಜರು ಬಳಸುತ್ತಿದ್ದ ಉಪಕರಣಗಳು ಸಾಮಗ್ರಿಗಳು ಮತ್ತು ಆಚಾರಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪರಂಪರಾ ಗ್ರಾಮೀಣ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಹಿಂದಿನ ಕಾಲದ ಹೊಲ ಉಳುವ ನೇಗಿಲು ಮತ್ತು ಎತ್ತುಗಳು ಟ್ರ್ಯಾಕ್ಟರ್ ಎಂಬ ಆಧುನಿಕ ಯಂತ್ರದಿಂದ ಕಣ್ಮರೆಯಾಗಿದೆ. ಹಾಗೆಯೇ ಅಡುಗೆ ಮಾಡಲು ಬಳಸುತ್ತಿದ್ದ ಮಣ್ಣಿನ ಕುಡಿಕೆ, ಬಾನ ,ಮುಚ್ಚಳಿಕೆ, ಹಂಚು ಹಿತ್ತಾಳೆ ಪಾತ್ರೆಗಳು ಮಾಯಾವಾಗಿ ಎಲ್ಲವೂ ಅಲ್ಯೂಮಿನಿಯಂ ಸ್ಟೇನ್ಲೆಸ್ ಸ್ಟೀಲ್ ಆಗಿವೆ. ನಮ್ಮ ಪೂರ್ವಿಕರು ಬಳಸುತ್ತಿದ್ದ ಪರಿಸರಸ್ನೇಹಿ ಉಪಕರಣಗಳನ್ನು ಒಂದೆಡೆ ಸೇರಿಸಿ ಮಕ್ಕಳಿಗೆ ಉಪಕರಣಗಳ ಹೆಸರು ಮತ್ತು ಅವುಗಳು ಯಾವ ಕೆಲಸಕ್ಕೆ ಬಳಕೆಯಾಗುತ್ತಿದ್ದವು ಎನ್ನುವ ವಿಚಾರವನ್ನು ಇಲ್ಲಿ ತಿಳಿಯಬಹುದಾಗಿದೆ
    ಪರಿಸರ ಸ್ನೇಹಿ ಈಜುಕೊಳ
    ಹಳ್ಳದ ಕಡೆಗೆ ನೀರು ಹರಿಯುವುದು ಎಂಬ ಗಾದೆಯಂತೆ ಕೊಳವೆಬಾವಿಗಳಿಂದ ಕೆತ್ತಲ್ಪಟ್ಟ ನೀರನ್ನು ಈ ತೊಟ್ಟಿಯಲ್ಲಿ ತುಂಬುವುದು ವಿಶೇಷ.
    ಇಂಗು ಗುಂಡಿಗಳು
    ನೆಲದ ಸಿರಿ ತೋಟದ ಪಕ್ಕದಲ್ಲಿ ಪೂರ್ವದಿಕ್ಕಿಗೆ ಹೊಂದಿಕೊಂಡು ಹಳ್ಳ ಹರಿಯುತ್ತದೆ. ಇಲ್ಲಿ ಸುಮಾರು 600 ಅಡಿ ಸಾಗಿದ ನಂತರ ಮತ್ತೊಂದು ತಡೆಗೋಡೆಯನ್ನು ನಿರ್ಮಿಸಲಾಗಿದೆ ಇಂಗುಗುಂಡಿಯ ಸುಮಾರು 18 ಲಕ್ಷ ಲೀಟರ್ ನೀರು ತುಂಬಿದ ನಂತರ ಬಿಡಲಾಗುತ್ತದೆ .ನೆಲದ ಸಿರಿ ಯಲ್ಲಿ ಸುಮಾರು 25 ಲಕ್ಷ ಲೀಟರ್ ಗಳಷ್ಟು ಮಳೆ ನೀರನ್ನು ಕೊಯ್ಲು ಮಾಡಲಾಗುತ್ತದೆ.
    ರೋಮನ್ Amphy ಥಿಯೇಟರ್
    ನೆಲದ ಸಿರಿ ತೋಟದಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅನುಕೂಲವಾಗುವ ಒಂದು ಥಿಯೇಟರ್ ನಿರ್ಮಾಣವಾಗಿದೆ.ಇದಕ್ಕೆ ರೋಮನ್ ಎಂಬ ಹೆಸರು ಕೊಡಲು ಕಾರಣ ಗ್ರೀಸ್ ದೇಶದ ರೋಮನ್ ನಗರದಲ್ಲಿ ಗುಡ್ಡದ ಇಳಿಜಾರಿನಲ್ಲಿ ಕಲ್ಲಿನ ಆಸನಗಳನ್ನು ನಿರ್ಮಿಸಿ ಕೆಳಭಾಗದ ಸಮತಟ್ಟು ನೆಲದಲ್ಲಿ ವೇದಿಕೆಯನ್ನು ನಿರ್ಮಿಸಲಾಗುತ್ತಿತ್ತು. ರಾತ್ರಿ ವೇಳೆ ನಾಗರಿಕರು ನಾಟಕಗಳನ್ನು ಈ ಆಸನದಲ್ಲಿ ಕುಳಿತು ದೀಪದ ಬೆಳಕಿನಲ್ಲಿ ನೋಡುತ್ತಿದ್ದರು. ಖರ್ಚಿಲ್ಲದೆ ನೈಸರ್ಗಿಕವಾಗಿರುವ ಭೂಭಾಗವನ್ನು ಬಳಸಿ ನಿರ್ಮಿಸಲಾಗಿದೆ.
    ನೆಲದ ಸಿರಿಯ ಇತರೆ ವಿಶೇಷತೆಗಳು
    ಶಾಂತಲಾ ನಾಟ್ಯ ಶಾಲೆ,ಸಾಲು ಪರಗೋಲಾಸ್,ತೋಟದ ಮನೆ,ಭಾಗೀರಥಿ ಕಲ್ಲು ಬಾವಿ,
    ಆಟದ ಗ್ರಾಮೀಣ ಕ್ರೀಡೆಗಳು,ಕೊಟ್ಟಿಗೆಗಳು,ದಂಡಕಾರಣ್ಯ,
    ಶಾಂತಲಾ ನಾಟಕಶಾಲೆ
    ಸುಮಾರು 600 ಚದರಡಿಗಳಷ್ಟು ವಿಸ್ತೀರ್ಣವುಳ್ಳ ನಾಟ್ಯ ಶಾಲೆಯನ್ನು ನಿರ್ಮಿಸಲಾಗಿದೆ. ಇದು ಕಡಪ ಕಲ್ಲಿನಿಂದ ತಯಾರು ಮಾಡಲಾಗಿದೆ . ಸುಂದರವಾದ ಹೂಗಳನ್ನು ಅಳವಡಿಸಲಾಗಿದೆ.
    ಸಾಲು ಪರಗೊಲಾಸ್
    ಇಲ್ಲಿ ಸುಮಾರು 150 ಅಡಿ ದೂರಕ್ಕೆ ಒಂದು ಕಾಲುದಾರಿ ನಿರ್ಮಿಸಿ ಅದಕ್ಕೆ 36 ಕಲ್ಲಿನ ಕಂಬಗಳು ಮತ್ತು 69 ಕಲ್ಲಿನ ತೊಲೆಗಳನ್ನು ಬಳಸಿ ನಿರ್ಮಿಸಲಾಗಿದೆ .ಇದರ ಮೇಲೆ ಪಡವಲ ಸೀಮೆಬದನೆ ಚಪ್ಪರದವರೆಕಾಯಿ ಹೀಗೆ ಹಲವಾರು ತರಕಾರಿಗಳನ್ನು ಹಬ್ಬಿಸಲಾಗಿರುವುದು ವಿಶೇಷ.
    ತೋಟದ ಮನೆ
    ತೋಟದ ಮನೆಯನ್ನು ದೇಶಿ ಸಂಸ್ಕೃತಿಯನ್ನು ಹೊರಗಿನಿಂದ ಕಾಣುವ ಹಾಗೆ ವಿನ್ಯಾಸ ಮಾಡಲಾಗಿದ್ದು ಒಳಭಾಗದಲ್ಲಿ 18 ಅಡಿಗಳ ಎತ್ತರದಲ್ಲಿ ಕಾಂಕ್ರೀಟಿನಿಂದ ಛಾವಣಿಯನ್ನು ನಿರ್ಮಿಸಿದ್ದಾರೆ. ಒಂದು ಭಾಗಕ್ಕೆ ಫ್ಲೋರ್ ನಿರ್ಮಿಸಿದ ರೂಪದಲ್ಲಿ ವಿನ್ಯಾಸವನ್ನು ಮಾಡಲಾಗಿದೆ.
    ಭಾಗೀರಥಿ ಕಲ್ಲಿನ ಬಾವಿ
    ನೆಲದ ಸಿರಿ ತೋಟದಲ್ಲಿ ಪೂರ್ವಜರು ನಿರ್ಮಿಸಿರುವ 200 ವರ್ಷಗಳ ಇತಿಹಾಸವಿರುವ ಸಿಹಿನೀರಿನ ಕಲ್ಲು ಬಾವಿಯೂ ಇದೆ.
    ದಂಡಕಾರಣ್ಯ
    ನೆಲದ ಸಿರಿ ತೋಟದಲ್ಲಿ ಒಂದು ಅರಣ್ಯವನ್ನು ಬೆಳೆಸುವ ಉದ್ದೇಶದಿಂದ ಬಗೆಬಗೆಯ ಕಾಡು ಮರಗಳನ್ನು ಬೆಳೆಸಲಾಗಿದೆ . ಘಮಘಮಿಸುವ ಕಾಡು ಹೂಗಳ ಪರಿಮಳ ಪಕ್ಷಿಗಳ ಕಲರವ ಹಾಡು ಬೆಳೆಸಿರುವ ಸಾರ್ಥಕತೆಯನ್ನು ಮರೆಸುತ್ತದೆ.
    ಕೊಟ್ಟಿಗೆಗಳು
    ನೆಲದ ಸಿರಿ ಯಲ್ಲಿ ಹಸು,ಎಮ್ಮೆ, ಕೋಳಿ-ಕುರಿ, ಮೇಕೆ,ಬೆಕ್ಕು,ಮೊಲ,ಮೀನು ಇತ್ಯಾದಿ ಸಾಕುಪ್ರಾಣಿಗಳನ್ನು ಪ್ರತ್ಯೇಕವಾದ ಕೊಟ್ಟಿಗೆಗಳಲ್ಲಿ ಸಾಕಲಾಗುತ್ತದೆ. ಇದರ ಉದ್ದೇಶ ಆರ್ಥಿಕ ಅವಲಂಬನೆಯ ಜೊತೆಗೆ ಮಕ್ಕಳಿಗೆ ವಿವಿಧ ಸಾಕುಪ್ರಾಣಿಗಳನ್ನು ತೋರಿಸುವುದೇ ಆಗಿದೆ ಎಂದು ಅಲ್ಲಿನ ವ್ಯವಸ್ಥಾಪಕರು ತಿಳಿಸುತ್ತಾರೆ.
    ತೋಟದ ಸಸ್ಯ ಪರಿಚಯ
    ನೆಲದ ಸಿರಿ ತೋಟದಲ್ಲಿ ಸುಮಾರು 2000ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಲಾಗಿದೆ.ತೋಟದ ಅಂಚಿನಲ್ಲಿ ಬಿದಿರು ಬೆಳೆಸಲಾಗಿದೆ. ಬೆಂಗಳೂರು ಮಾಗಡಿ ರಸ್ತೆಯಲ್ಲಿ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ಕಲುಷಿತ ಗಾಳಿ ಮತ್ತು ರಾತ್ರಿ ವೇಳೆ ಉಂಟಾಗುವ ವಾಹನಗಳ ಬೆಳಕಿನ ಮಾಲಿನ್ಯ ತಡೆಗಟ್ಟುವುದು ಆಗಿದೆ.
    ಗ್ರಾಮೀಣ ಕ್ರೀಡೆಗಳು
    ಗ್ರಾಮೀಣ ಕ್ರೀಡೆಗಳನ್ನು ಜೀವಂತ ಉಳಿಸುವುದು ಮತ್ತು ಈಗಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಿವಿಧ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಗೋಲಿ ,ಕಣ್ಣಾಮುಚ್ಚಾಲೆ ,ಮರಕೋತಿ ಆಟ ,ಕುಂಟೆಬಿಲ್ಲೆ, ಚೌಕಾಬಾರ ಇತ್ಯಾದಿ ಆಟಗಳನ್ನು ಆಡಿಸುವುದು ಇಲ್ಲಿನ ವಿಶೇಷ.
    ಟಾಸ್ಕ್ ರೂಪದಲ್ಲಿ ಗ್ರಾಮೀಣ ಕಸುಬುಗಳು
    ಗ್ರಾಮೀಣ ಕಸುಬುಗಳು ಆದ ಮಡಿಕೆ ಮಾಡುವುದು, ಕುಲುಮೆಯನ್ನು ತಯಾರಿಸುವುದು ಗೊಂಬೆ ಆಟ ಆಡುವುದು, ಕೊರವಂಜಿ ,ಬುಡಬುಡುಕಿ ಇತ್ಯಾದಿ ಗ್ರಾಮೀಣ ಕಲೆಗಳನ್ನು ಮಕ್ಕಳಿಗೆ ನುರಿತ ವ್ಯಕ್ತಿಗಳಿಂದ ಮಾಡಿಸಿ ತೋರಿಸಲಾಗುತ್ತದೆ. ಇದರಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟ ಹಾಗೆ ಆಗುತ್ತದೆ.

    ಬೆಂಗಳೂರಿನಲ್ಲಿ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಡಾ. ಗೋಪಾಲಕೃಷ್ಣ ಅವರ ಕನಸಿನ ಕೂಸು ಈ ನೆಲದ ಸಿರಿ. ಅವರ ಪ್ರಕಾರ ನಗರ ವಾಸ ನರಕವಾಸ. ಮನುಷ್ಯನ ಜೀವನ ನಗರಗಳಲ್ಲಿ ಕಲುಷಿತ ಗಾಳಿ ನೀರು ಮತ್ತು ಆಹಾರ ಸೇವನೆಯಿಂದ ಅನಾರೋಗ್ಯಕರ ವಾಗಿದೆ .ಇಷ್ಟು ಸಾಲದೇ ಒತ್ತಡದ ಜೀವನ ಆರೋಗ್ಯವಂತ ಜೀವನಕ್ಕೆ ಮಾರಕವಾಗಿದೆ . ಈ ನಿಟ್ಟಿನಲ್ಲಿ ಇಲ್ಲಿಗೆ ಬಂದಾಗ ಸ್ವಲ್ಪವಾದರು ಮನಲ್ಲೋಸ ವಾಗುತ್ತದೆ.

    ನೆಲದಸಿರಿಗೆ ಹೋಗುವವರು https://neladasiri.com ನಲ್ಲಿ ಮೊದಲೇ ನೋಂದಾಯಿಸಿಕೊಂಡು ಹೋಗುವುದು ಉತ್ತಮ.

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.


    ಸಾವಿನೂರಿನ ದಾರಿಯ ಅಧ್ಯಾತ್ಮ


    ಮಾನವ ಸ್ವಭಾವದ ಹಲವು ವೈಚಿತ್ರ್ಯಗಳನ್ನು `ಕೋವಿಡ್‌ ದಿನಚರಿ'ಯಲ್ಲಿ ಕೆ.ಸತ್ಯನಾರಾಯಣ ಅವರು ಕಟ್ಟಿಕೊಟ್ಟಿದ್ದಾರೆ. ಸಾವು ಯಾವ ಕ್ಷಣದಲ್ಲಾದರೂ ನಮ್ಮನ್ನು ಸೆಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಮೂಡುವ ಆಲೋಚನೆಗಳು ಬಹುತೇಕ ಪ್ರಾಮಾಣಿಕವೂ ಆಗಿರುವುದರಿಂದ ಅವು ಮನಸ್ಸಿಗೆ ತಟ್ಟುತ್ತವೆ.


    ಈ ಶತಮಾನ ಕಂಡಿರುವ ಅತ್ಯಂತ ಭೀಕರವಾದ ಮಾನವ ದುರಂತ ಕೊರೋನಾ ವೈರಸ್ಸಿನ ಹಾವಳಿ ಮಾಡಿರುವ ಗಾಯ ಮಾಯುವುದಕ್ಕೆ ಹಲವು ವರ್ಷಗಳೇ ಬೇಕಾಗಬಹುದು. ಸಮಾಜಜೀವಿಯಾದ ಮನುಷ್ಯ ಅನಿವಾರ್ಯವಾಗಿ ತನ್ನನ್ನೇ ತಾನು ಹೇಗೆ ಒಂದೊಂದು ದ್ವೀಪವಾಗಿ ಮಾರ್ಪಡಿಸಿಕೊಳ್ಳಬೇಕಾಗಿ ಬಂತು ಎಂಬುದು ಇದೀಗ ಬದುಕಿರುವ ಎಲ್ಲರ ಅನುಭವವೂ ಆಗಿದೆ.ಈ ಕೋವಿಡ್‌ ಆಘಾತವನ್ನು ಸೃಜನಶೀಲ ಮನಸ್ಸು ಹೇಗೆ ಪರಿಭಾವಿಸಿತು ಎಂಬುದು ಒಂದು ಕುತೂಹಲ. ಹಲವರು ಹಲವು ರೀತಿಯಲ್ಲಿ ಇದಕ್ಕೆ ಬರೆಹದ ರೂಪವನ್ನು ಕೊಟ್ಟಿದ್ದಾರೆ. ಬಹುತೇಕ ಎಲ್ಲರೂ ಮೋಡ ಕರಗಿ ನೀರಾಗಿ ಸುರಿದ ಮೇಲೆ ನಿರಭ್ರ ಆಕಾಶ ಕಾಣುವ ಹಾಗೆ ಒಳ್ಳೆಯ ದಿನ ಬಂದೇಬರುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ದುರಂತದ ಸಮಯದಲ್ಲಿ ಮಾನವನ ಸ್ವಾರ್ಥ ಹೇಗೆ ನಾಚಿಕೆಪಡುವಹಾಗೆ ಮಾಡಿತು, ಹಲವರ ಮಾನವೀಯತೆ ಹೇಗೆ ಹೃದಯ ತಟ್ಟುವ ಹಾಗೆ ಮಾಡಿತು ಎಂಬುದನ್ನು ತಮ್ಮದೇ ರೀತಿಯಲ್ಲಿ ಹೇಳಿದ್ದಾರೆ.

    ಹಿರಿಯ ಸಾಹಿತಿ ಕೆ.ಸತ್ಯನಾರಾಯಣ ಅವರು ಕೋವಿಡ್‌ನ ಸುಮಾರು 40 ದಿನಗಳ ಕಾಲ ತಮ್ಮ ಮನಸ್ಸಿನಲ್ಲಾದ ಭಯ, ಆತಂಕ, ಪಲ್ಲಟಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಹಾಗೆ ನೋಡಿದರೆ ಇದೊಂದು ಸೃಜನಶೀಲ ಕೃತಿಯಲ್ಲ. ಆ ಕ್ಷಣದಲ್ಲಿ ತಮಗೆ ಅನಿಸಿದ್ದನ್ನು ದಿನಚರಿಯ ರೂಪದಲ್ಲಿ ಬರೆದಿಟ್ಟು ಕೋವಿಡ್‌ ದಿನಚರಿ’ ಎಂಬ ಹೆಸರಿನಲ್ಲಿ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಸಾಮಾನ್ಯವಾಗಿ ದಿನಚರಿಗಳಲ್ಲಿ ಅಂದಂದು ಏನೇನು ನಡೆಯಿತು, ಅದಕ್ಕೆ ತಮ್ಮ ಪ್ರತಿಕ್ರಿಯೆ ಏನು ಎಂಬ ವಿಷಯಗಳು ನಮೂದಾಗಿರುತ್ತವೆ. ಸೃಜನಶೀಲ ಕೃತಿಯೊಂದರಲ್ಲಿ ತಕ್ಷಣದ ಆಲೋಚನೆ ಬರೆಹದ ರೂಪದಲ್ಲಿ ದಾಖಲು ಆಗುವುದಿಲ್ಲ. ಒಂದು ವಿಷಯವನ್ನು ಕುರಿತು ಮತ್ತೆ ಮತ್ತೆ ಆಲೋಚಿಸುತ್ತ ಹೀಗೆ ಬರೆದರೆ ಸರಿಯೇ, ಹಾಗೆ ಬರೆದರೆ ಉತ್ತಮವಲ್ಲವೆ ಎಂಬೆಲ್ಲ ಸೃಜನಶೀಲ ಸಾಧ್ಯತೆಗಳನ್ನು ತರ್ಕಿಸಿ ನಂತರ ಬರೆಹಕ್ಕೆ ತೊಡಗುವುದು ಮತ್ತು ಬರೆಯುತ್ತಿರುವಾಗಲೇ ಹೊಸ ತಿರುವುಗಳನ್ನು ಪಡೆದುಕೊಳ್ಳುವುದು ಇವೆಲ್ಲ ಸಾಮಾನ್ಯ. ಈ ಎಲ್ಲ ಮಿತಿಗಳ ನಡುವೆಯೂ ಮಾನವ ಸ್ವಭಾವದ ಹಲವು ವೈಚಿತ್ರ್ಯಗಳನ್ನುಕೋವಿಡ್‌ ದಿನಚರಿಯ’ಲ್ಲಿ ಕಟ್ಟಿಕೊಡಲಾಗಿದೆ. ಸಾವು ಯಾವ ಕ್ಷಣದಲ್ಲಾದರೂ ನಮ್ಮನ್ನು ಸೆಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಮೂಡುವ ಆಲೋಚನೆಗಳು ಬಹುತೇಕ ಪ್ರಾಮಾಣಿಕವೂ ಆಗಿರುವುದರಿಂದ ಅವು ಮನಸ್ಸಿಗೆ ತಟ್ಟುತ್ತವೆ. ನ್ಯಾಯಾಲಯಗಳಲ್ಲಿ ಕೂಡ ಸಾಯುತ್ತಿರುವ ವ್ಯಕ್ತಿಯ ಹೇಳಿಕೆಯನ್ನು ಪ್ರಮಾಣವೆಂದು ಪರಿಗಣಿಸಲಾಗುತ್ತದೆ.

    ನಾವು ಕೂಡ ಇದೇ ಕಾಲಘಟ್ಟದಲ್ಲಿ ಬದುಕಿರುವುದರಿಂದ ಮತ್ತು ಎಲ್ಲರ ಅನುಭವವೂ ಇದೇ ಆಗಿರುವ ಕಾರಣ ಈ ಕೃತಿಯು ಹೊಸತು ಎಂದು ಏನೂ ಅನಿಸುವುದಿಲ್ಲ. ಬಹುಶಃ ಆಲ್ಬರ್ಟ್‌ ಕಮೂನ ಪ್ಲೇಗ್‌ ಕಾದಂಬರಿಯೂ ಆ ಕಾಲದಲ್ಲಿ ಅಂಥ ಮನೋವೇದಕ ಅನ್ನಿಸುತ್ತಿರಲಿಲ್ಲವೇನೋ. ಇಂಥ ಅನುಭವಗಳ ಸಾಂದ್ರೀಕರಣಕ್ಕೆ ಕಾಲದ ಒಂದು ಅಂತರ ಅಗತ್ಯವಿರುತ್ತದೆ ಎಂಬುದು ನನ್ನ ಭಾವನೆ. ಆದರೆ ಸತ್ಯನಾರಾಯಣರ ಕೃತಿ ಸಾವಿನೂರಿನ ದಾರಿಯಲ್ಲಿ ಅಧ್ಯಾತ್ಮದ ಹಲವು ಹೊಳಹುಗಳನ್ನು ಒಳಗೊಂಡಿದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ, ಯಾವಾಗಲೂ ನಮ್ಮ ಬಗ್ಗೆಯೇ ನಾವು ಯೋಚಿಸುತ್ತ ಸುತ್ತ ಮುತ್ತಲಿನ ತಕ್ಷಣದ ಪ್ರಪಂಚದಲ್ಲಿ ನಮಗಿಂತ ಉದಾತ್ತರಾಗಿರುವವರನ್ನು ಗಮನಿಸುವುದೇ ಇಲ್ಲ. ಮೂರು ಡಾಕ್ಟರ್‌ಗಳ ಫೋಟೋ ಬಂದಿದೆ ಒಟ್ಟಿಗೇ. ಇವರೆಲ್ಲರೂ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲೇ ತೀರಿಹೋದವರು. ಒಬ್ಬರ ವಯಸ್ಸು ಮಾತ್ರ 50 ದಾಟಿದೆ. ಇವರ ಸೇವೆ, ಕಾಣಿಕೆ ಯುದ್ಧದಲ್ಲಿ ಸಾಯುವ ಸೈನಿಕರ ತ್ಯಾಗದಷ್ಟೇ ಅನುಪಮವಾದದ್ದು. ನಾವು ಗಮನಿಸುವುದಿಲ್ಲ, ಗೌರವಿಸುವುದಿಲ್ಲ. ಅವರ ಬಗ್ಗೆ ನಮಗೆ ಹಕ್ಕಿದೆಯೆಂಬ ಭಾವನೆಯಿಂದ ವರ್ತಿಸುತ್ತೇವೆ.’ ಇಂಥ ಸೂಕ್ಷ್ಮ ಅವಲೋಕನಗಳು ಅಲ್ಲಲ್ಲಿ ಓದುಗರಿಗೆ ಎದುರಾಗುತ್ತವೆ. ಹಾಗೆಯೇ ಸಾರ್ವಕಾಲಿಕ ಸತ್ಯವೆನ್ನಬಹುದಾದ ಆತ್ಮವಿಮರ್ಶೆಯೂ ಇಲ್ಲಿದೆ.

    ಒಬ್ಬರ ಸಾವಿನ ಸುದ್ದಿ ಬಂದಾಗ ನಾವು ಅವರು ಮಾಡಿರುವ ಮೌಲಿಕ ಕೆಲಸವನ್ನು ಬಹಿರಂಗವಾಗಿ ಹೇಳಿದರೂ, ಮನಸ್ಸಿನೊಳಗಡೆ ನಮಗೆ ಅವರು ಮಾಡಿರುವ ಗಾಯ, ನೋವುಗಳನ್ನು ಕುರಿತು ಕೂಡ ಯೋಚಿಸುತ್ತಿರುತ್ತೇವೆ. ಸಾಮಾಜಿಕ ಸಭ್ಯತೆ, ಸೌಜನ್ಯಕ್ಕಾಗಿ ಅದನ್ನೆಲ್ಲ ಹೇಳುವುದಿಲ್ಲ ಅಷ್ಟೇ’ ಎಂಬ ಮಾತನ್ನು ಗಮನಿಸಬೇಕು. ಹಾಗೆಯೇ, ನಮ್ಮ ದುಃಖದಲ್ಲಿ ಸಂತಾಪಗೈಯುವಿಕೆಯಲ್ಲಿ ಹೃತ್ಪೂರ್ವಕತೆ ಕಡಿಮೆ ಎಂದು ದುಃಖ ವ್ಯಕ್ತಪಡಿಸಿದಾಗಲೆಲ್ಲ ನಮಗೆ ಗೊತ್ತಾಗುತ್ತಲೇ ಇರುತ್ತದೆ. ಆದರೆ ಮತ್ತೆ ಅದೇ ಸೋಗು ಹಾಕುತ್ತೇವೆ’ ಎಂಬ ಸಾಲುಗಳಲ್ಲಿರುವ ಆತ್ಮನಿರೀಕ್ಷಣೆ ಮನಸ್ಸಿಗೆ ತಟ್ಟುತ್ತದೆ. ಮತ್ತು,ನಾವು ಸತ್ತೇ ಸಾಯುತ್ತೇವೆ, ನಮ್ಮ ಆಪ್ತರು ಕೂಡ ಇನ್ನೇನು ಸತ್ತೇ ಹೋಗುತ್ತಾರೆ ಎಂಬ ಭಾವನೆ ಗಟ್ಟಿಯಾದ ತಕ್ಷಣ, ನಾವು ಇನ್ನೂ ಕ್ರೂರಿಗಳಾಗುತ್ತೇವೆ. ನಮ್ಮ ಜೊತೆ ಯಾರೂ ಸಾಯುವುದಿಲ್ಲವೆಂಬ ಕಾರಣಕ್ಕೂ ಇರಬಹುದು’ ಎಂಬ ಹೇಳಿಕೆಯನ್ನು ಗಮನಿಸಿ. ಇಂಥ ಸಾರ್ವತ್ರಿಕವಾದ ಸತ್ಯಗಳು ಇರುವ ಕಾರಣಕ್ಕೆ ಇದು ಸಾವಿನೂರಿನ ದಾರಿಯ ಅಧ್ಯಾತ್ಮ ಎಂದೆನ್ನಿಸುವುದು.

    ಬದುಕುವ ಹಕ್ಕಿನಷ್ಟೇ ಮುಖ್ಯವಾದದ್ದು ಸಾಯುವ ಹಕ್ಕು ಕೂಡ. ನಿರ್ದಿಷ್ಟ ರೀತಿಯಲ್ಲಿ ಸಾಯಲು ಬಯಸುವ ಹಕ್ಕು ಎಂಬ ಲೇಖಕರ ಅಭಿಪ್ರಾಯಕ್ಕೆ ಭಿನ್ನ ಅಭಿಪ್ರಾಯವೂ ಸಾಧ್ಯ. ಸಾವು ಯಾವಾಗಲೂ ಆಕಸ್ಮಿಕವೇ. ತನ್ನ ಇಷ್ಟದಂತೆ ಸಾಯುವುದು ಆತ್ಮಹತ್ಯೆಯಂಥ ಸಂದರ್ಭಗಳಲ್ಲಿ ಸಾಧ್ಯ. ಕಾನೂನಿನ ಪ್ರಕಾರ ಆತ್ಮಹತ್ಯೆ ಅಪರಾಧ. ಹಕ್ಕು ಯಾವಾಗಲೂ ಅಪರಾಧವಾಗಿರಲಿಕ್ಕೆ ಸಾಧ್ಯವಿಲ್ಲ ಅಲ್ಲವೆ?

    ಕೃತಿಯಲ್ಲಿ ಸೃಜನಕ್ರಿಯೆಗೆ ಸಂಬಂಧಿಸಿದಂತೆ ಕೆಲವು ವಿಚಾರಗಳು ಇವೆ.

    1. ಓದುವುದಾಗಲಿ, ಬರೆಯುವುದಾಗಲಿ ಸಂಸಾರದ, ಜಗತ್ತಿನ ಎಲ್ಲ ಜಂಜಾಟಗಳು, ಏಳುಬೀಳುಗಳ ಮಧ್ಯೆಯೇ ನಡೆಯಬೇಕು. ಆವಾಗಲೇ ಓದು ಬರಹಕ್ಕೆ ಬೇಕಾದ ಜೀವಂತಿಕೆಯ ಒತ್ತಡ, ಚೈತನ್ಯ ಸೃಷ್ಟಿಯಾಗುವುದು.

    2. ಬರೆಯುವುದೆಂದರೆ, ಬರಹಗಾರನಾಗುವುದೆಂದರೆ ಅದು ಕೌಶಲ್ಯದ ಮಾತು ಮಾತ್ರವಲ್ಲ, ಜೈವಿಕವಾಗಿ, ಭಾವನಾತ್ಮಕವಾಗಿ ಕೂಡ ಲೇಖಕನಾದವನು ಒಂದು ವಿಶಿಷ್ಟ ವಿಭಿನ್ನ ಪ್ರಾಣಿ. ಪ್ರತಿ ಕ್ಷಣ ಮಿಡಿಯುವಂತಹ ಒಂದು ತಂತು ಅವನಲ್ಲಿರುತ್ತದೆ. ಇದು ದೇವರು ಅವನಿಗೆ ಕೊಟ್ಟ ವರ ಮತ್ತು ಶಾಪ. ಈ ವರವನ್ನು ಆತ ಹಗುರವಾಗಿ ಕಾಣಬಾರದು, ಭ್ರಷ್ಟಗೊಳಿಸಬಾರದು, ಕ್ಷುಲ್ಲಕವಾಗಿ ಕಾಣಬಾರದು. ತುಂಬಾ ಜತನದಿಂದ ಕಾಪಾಡಿಕೊಳ್ಳಬೇಕು.

    3. ಬರಹಗಾರನಾಗಬೇಕಾದರೆ ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬ ಸಾಮಾನ್ಯ ಮನುಷ್ಯ ಎಂದು ಒಪ್ಪಿಕೊಳ್ಳಬೇಕು. ನಾನು ಬರೆಯುವುದು ಕೂಡ ಬಹುಪಾಲು ಸಾಧಾರಣವಾಗಿರುತ್ತದೆ, ತಪ್ಪು ಒಪ್ಪುಗಳಿಂದ ಕೂಡಿರುತ್ತದೆ, ಯಾವತ್ತೋ ಒಂದು ದಿನ ಅರ್ಥಪೂರ್ಣವಾಗಿ ಬರೆಯಬಹುದು, ಬರೆಯದೆಯೂ ಇರಬಹುದು ಎಂಬ ಎರಡೂ ಸಾಧ್ಯತೆಗಳನ್ನು ಒಪ್ಪಿಕೊಳ್ಳಬೇಕು.

    ಇಂಥ ಚಿಂತನೆಯ ಲೇಖಕರಿಂದ ಜವಾಬ್ದಾರಿಯುತ ಬರೆಹಗಳೇ ಬರುತ್ತವೆ. ಕೃತಿಯಲ್ಲಿ ಹಲವು ವೃತ್ತಿಯವರು, ಅಧಿಕಾರಸ್ಥರ ಮನೋಧರ್ಮ ಹೇಗಿರುತ್ತದೆ ಎಂಬುದರ ಮೇಲೆ ಲೇಖಕರು ಬೆಳಕುಚೆಲ್ಲುತ್ತಾರೆ. ಕೋವಿಡ್‌ ಸಮಯದಲ್ಲಿ ಯಾವೆಲ್ಲ ವೃತ್ತಿಯವರು ಏನೇನು ಮಾಡಿಕೊಂಡಿದ್ದರೋ ಎಲ್ಲರ ಗಮನಕ್ಕೆ ಬಂದಿರುವುದು ಸಾಧ್ಯವಿಲ್ಲ. ಆದರೆ ಮಾಧ್ಯಮದವರು ಮಾತ್ರ ಕೋವಿಡ್‌ ಬಿಕ್ಕಟ್ಟಿನಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಜನರಿಗೆ ಸುದ್ದಿಯನ್ನು ತಲುಪಿಸಿದ್ದಂತೂ ನಿಜ. ಅದರಿಂದ ಜನರಿಗೆ ಎಷ್ಟು ಲಾಭವಾಯಿತೋ ಗೊತ್ತಿಲ್ಲ. ಆದರೆ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿರಬೇಕಾದರೆ ಸಕಲ ವಿದ್ಯಮಾನಗಳನ್ನು ವರದಿ ಮಾಡಿದ್ದಾರೆ ಅವರು. ಅದರಲ್ಲಿ ಹಲವು ಅತಿರೇಕಗಳೂ ಇರಬಹುದು.

    ಪತ್ರಕರ್ತರ ಬಗ್ಗೆ ಒಂದು ಮಾತನ್ನು ಸತ್ಯನಾರಾಯಣ ಅವರು ಹೀಗೆ ಹೇಳಿದ್ದಾರೆ. “ಪ್ರತಿಭೆ ಮತ್ತು ಬದ್ಧತೆಯನ್ನೇ ಮಾನದಂಡವಾಗಿಟ್ಟುಕೊಂಡರೆ, ಬಹುಪಾಲು ಪತ್ರಕರ್ತರು, ಸಂಪಾದಕರು ತೀರಾ ಸಾಧಾರಣ ಜನ. ಮಾಧ್ಯಮ ಕೆಲಕಾಲ ಅವರ ಹಿಡಿತದಲ್ಲಿ ಇರುವುದರಿಂದ ಇಲ್ಲದ ಸಾರ್ವಜನಿಕ, ಸಾಂಸ್ಕೃತಿಕ ವ್ಯಕ್ತಿತ್ವವನ್ನು ತಮಗೆ ತಾವೇ ಆರೋಪಿಸಿಕೊಳ್ಳುತ್ತಾರೆ. ಒಮ್ಮೆ ಪತ್ರಿಕೆಯಿಂದ ನಿವೃತ್ತರಾದ ಮೇಲೆ ಹೇಳಹೆಸರಿಲ್ಲದೆ ಕಳೆದುಹೋಗುತ್ತಾರೆ. ಇವರದೇ ಒಂದು ದೊಡ್ಡ ಪಡೆ…” ಈ ಮಾತು ಕೇವಲ ಪತ್ರಕರ್ತರಿಗೆ ಮಾತ್ರವಲ್ಲ, ಯಾವುದೇ ಅಧಿಕಾರಸ್ಥಾನದಲ್ಲಿದ್ದವರಿಗೂ ಅನ್ವಯಿಸುತ್ತದೆ. ಒಳ್ಳೆಯದು ಮಾಡಿದ್ದಷ್ಟೇ ನೆನಪಿನಲ್ಲಿ ಉಳಿಯುತ್ತದೆ.

    ಇತ್ತೀಚೆ ನಾನು ಅಮೆಜಾನ್‌ ಪ್ರೈಮ್‌ನಲ್ಲಿ ಒಂದು ವೆಬ್‌ ಸೀರಿಸ್‌ ನೋಡಿದೆ. ಅದು Unpaused – naya safar. ಐದು ಕಂತುಗಳಲ್ಲಿದೆ. ಕೋವಿಡ್‌ ತಲ್ಲಣಗಳನ್ನು ದೃಶ್ಯ ಮಾಧ್ಯಮದಲ್ಲಿ ಹೇಗೆ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದು ಎಂಬುದಕ್ಕೆ ಸೃಜನಾತ್ಮಕ ಪುರಾವೆ ಅದು. ಕೋವಿಡ್‌ ಸಂಬಂಧದ ನೋವಿನ ಸಂವಹನದಲ್ಲಿ ಅಕ್ಷರ ಮಾಧ್ಯಮಕ್ಕಿಂತ ದೃಶ್ಯಮಾಧ್ಯಮ ಶಕ್ತಿಯುತ ಎಂದು ಅನಿಸಿತು.
    ಹಲವು ಸೃಜನಶೀಲ ಕೃತಿಗಳನ್ನು ಪರಿಣಾಮಕಾರಿಯಾಗಿ ರಚಿಸಿರುವ ಕೆ.ಸತ್ಯನಾರಾಯಣ ಅವರಿಂದ ಇನ್ನಷ್ಟು ಕೃತಿಗಳು ಬರಲಿ.

    ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ಪಡೆಯಲು ಕ್ರಮ

    BENGALURU MAR 18

    ಮೇಕೆದಾಟು ಯೋಜನೆಗೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕೇಂದ್ರ ಪರಿಸರ ಸಚಿವಾಲಯದಿಂದ ತ್ವರಿತವಾಗಿ ಅನುಮೋದನೆ ಪಡೆದುಕೊಂಡು ಯೋಜನೆಗೆ ಚಾಲನೆ ನೀಡಲು ಕ್ರಮ ವಹಿಸಲು ಇಂದಿನ ವಿಧಾನ‌ ಮಂಡಲ ಉಭಯ ಸದನಗಳ ಸಭಾ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.

    ಅವರು ಅಂತರ ರಾಜ್ಯ ಜಲವಿವಾದಗಳ ಕುರಿತಂತೆ ಉಭಯ ಸದನಗಳ ಸಭಾ ನಾಯಕರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

    ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಗಳಲ್ಲಿ ಮೇಕೆದಾಟು ಯೋಜನೆಯ ಕುರಿತು ವಿಸ್ತೃತ ಚರ್ಚೆಯಾಗಿದೆ. ಈ ಕುರಿತು ನಡಾವಳಿಗಳಲ್ಲಿ ದಾಖಲಿಸದೆ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ಜಲಶಕ್ತಿ ಸಚಿವರು ಹಾಗೂ ಪ್ರಾಧಿಕಾರದವರೊಂದಿಗೆ ಚರ್ಚಿಸಿ, ನಡಾವಳಿಗಳಲ್ಲಿ ಚರ್ಚೆಯ ಅಂಶಗಳನ್ನು ದಾಖಲಿಸುವ ಕುರಿತು ಕ್ರಮ ವಹಿಸಲಾಗುವುದು. ಹಾಗೂ ಮುಂದಿನ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲು ಹಾಗೂ ಪರಿಸರ ಸಚಿವಾಲಯದ ತೀರುವಳಿ ಪಡೆಯಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಮುಂದಿನ ವಾರ ಜಲಸಂಪನ್ಮೂಲ ಸಚಿವರು ದೆಹಲಿಗೆ ತೆರಳಲಿದ್ದು, ಅಧಿವೇಶನ ಮುಗಿದ ತಕ್ಷಣ ತಾವು ಸ್ವತಃ ದೆಹಲಿಗೆ ತೆರಳಿ ಕೇಂದ್ರ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ಮತ್ತೆ ಅಗತ್ಯವಿದ್ದರೆ ಸರ್ವಪಕ್ಷಗಳ ನಿಯೋಗವನ್ನು‌ ನವದೆಹಲಿಗೆ ಕರೆದೊಯ್ಯಲಾಗುವುದು ಎಂದು ಅವರು ಹೇಳಿದರು.

    ಮಹಾದಾಯಿ ಯೋಜನೆಯಲ್ಲಿ ಈಗಾಗಲೇ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರಿನ ಬಳಕೆಗಾಗಿ ಯೋಜನೆ ಅನುಷ್ಠಾನಕ್ಕೆ ಪರಿಸರ ಇಲಾಖೆಯ ತೀರುವಳಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದುರ.

    ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಕುರಿತು ಕೇಂದ್ರ ಸರ್ಕಾರ ಇನ್ನೂ ಗಜೆಟ್ ಅಧಿಸೂಚನೆ ಹೊರಡಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ ಮಧ್ಯಂತರ ಅರ್ಜಿ ವಿಚಾರಣೆಯ ಪೀಠದಿಂದ ಇಬ್ಬರು ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ. ಹೊಸ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು

    ಭಾರತ ಸರ್ಕಾರದ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ, ರಾಜ್ಯಕ್ಕೆ ಹಂಚಿಕೆಯಾಗುವ ನೀರಿನ ಪ್ರಮಾಣವನ್ನು ಸ್ಪಷ್ಟ ಪಡಿಸುವಂತೆ ಕೇಂದ್ರವನ್ನು ಕೋರಲಾಗಿದೆ. ಅಲ್ಲದೆ ಈ ಯೋಜನೆಯ ತಾಂತ್ರಿಕ ವರದಿಯ ಮಾಹಿತಿಯನ್ನು ಒದಗಿಸುವಂತೆ ವಿರೋಧ ಪಕ್ಷಗಳು ಕೋರಿದ್ದು, ವರದಿ ಲಭ್ಯವಾದ ಕೂಡಲೇ ಒದಗಿಸಲಾಗುವುದು ಎಂದು ತಿಳಿಸಿದರು.

    ಈ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ, ಕಾಂಗ್ರೆಸ್ ಮುಖಂಡರಾದ ಎಚ್ ಕೆ ಪಾಟೀಲ್, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್, ಜೆಡಿ ಎಸ್ ಪಕ್ಷದ ಮುಖಂಡರಾದ ಬಂಡೆಪ್ಪ ಕಾಶೆಂಪೂರ, ಕಾನೂನು ತಜ್ಞರು ಮತ್ತು ಇತರರು ಭಾಗವಹಿಸಿದ್ದರು.
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ರಾಜ್ಯ ವಕೀಲರ ತಂಡದ ಮೋಹನ ಎಂ. ಕಾತರಕಿ ಮೊದಲಾದವರು ಉಪಸ್ಥಿತರಿದ್ದರು

    ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಪಾರ್ಥಿವ ಶರೀರ ಸೋಮವಾರ ಬೆಂಗಳೂರಿಗೆ

    BENGALURU MARCH 18
    ಇತ್ತೀಚೆಗೆ ಉಕ್ರೇನ್ ನಲ್ಲಿ ರಷ್ಯಾ ದಾಳಿ ಸಂದರ್ಭದಲ್ಲಿ ಮೃತ ಪಟ್ಟ ಹಾವೇರಿ ಜಿಲ್ಲೆಯ ಯುವಕ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ಸೋಮವಾರ ದಿನಾಂಕ 21-3-2022ರಂದು ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದರು.

    ಉಕ್ರೇನ್ ನ Kharkiv ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತ ಪಟ್ಟಿದ್ದರು. ಸಮರ ಭೂಮಿಯಿಂದ ಮೃತ ದೇಹವನ್ನು ಭಾರತಕ್ಕೆ ತರಲು ಭಾರತ ಸರ್ಕಾರ ಸರ್ವ ವಿಧದ ಪ್ರಯತ್ನವನ್ನು ನಡೆಸಿತ್ತು.

    ಏಪ್ರಿಲ್ 1 ರಿಂದ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸರ್ಕಾರಿ ಆದೇಶ ಹೊರಡಿಸಲು ಮುಖ್ಯಮಂತ್ರಿ ಸೂಚನೆ

    BENGALURU MAR 17
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯವ್ಯಯದಲ್ಲಿ ಘೋಷಿಸಿದ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನ ಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

    2022-23 ನೇ ಸಾಲಿನ ಆರ್ಥಿಕ ವರ್ಷ ಆರಂಭದ ಮೊದಲ ದಿನವಾಗಿರುವ ಏಪ್ರಿಲ್ 1 ರಿಂದಲೇ ಬಜೆಟ್ ಘೋಷಿತ ಯೋಜನೆಗಳ ಜಾರಿಗೆ ಸರ್ಕಾರಿ ಆದೇಶಗಳನ್ನು ಹೊರಡಿಸುವಂತೆ ಸರ್ಕಾರದ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತು ಖುದ್ದು ಎಲ್ಲ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಯವರು, ಆಯವ್ಯಯ ದಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಉಲ್ಲೇಖಿಸಿ, ಈ ಕುರಿತು ಇಲಾಖೆಯಿಂದ ಯೋಜನೆಯ ರೂಪುರೇಷೆಗಳ ಕುರಿತು ಪ್ರಸ್ತಾವನೆ ಸಿದ್ಧ ಪಡಿಸಿ, ಆರ್ಥಿಕ ಇಲಾಖೆಯ ಆಯವ್ಯಯ ಸಲಹೆಯಂತೆ ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಆದೇಶಗಳನ್ನು ಹೊರಡಿಸುವಂತೆ ಸೂಚಿಸಿದ್ದಾರೆ.ಅಲ್ಲದೆ, ಈ ಯೋಜನೆಗಳನ್ನು ಅತಿ ಶೀಘ್ರವಾಗಿ ಜಾರಿಗೊಳಿಸುವಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ್ದಾರೆ.

    ಪದವಿ, ನರ್ಸಿಂಗ್, ಪಿ.ಜಿ. ವಿದ್ಯಾರ್ಥಿಗಳಿಗೂ ಟ್ವಿನ್ನಿಂಗ್ ಯೋಜನೆ ವಿಸ್ತರಣೆ

    BENGALURU MAR 17

    ಸದ್ಯಕ್ಕೆ ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇರುವ ಟ್ವಿನ್ನಿಂಗ್ ಡಿಗ್ರಿ ಯೋಜನೆಯನ್ನು ಪದವಿ, ಸ್ನಾತಕೋತ್ತರ ಪದವಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅಮೆರಿಕದ ಅತ್ಯುತ್ತಮ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಿದರು.

    ವಿಕಾಸಸೌಧದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾದ ರಾಯಭಾರಿ ಕನ್ನಿಕಾ ಚೌಧರಿ ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಇದ್ದರು.

    ‘ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳು ಅಮೆರಿಕದ ಮಾಂಟ್ಗೊಮೆರಿ ಕೌಂಟಿ ಕಮ್ಯುನಿಟಿ ಕಾಲೇಜಿನಲ್ಲಿ ಓದುವ ಸಂಬಂಧ ಮಾಡಿಕೊಂಡಿದ್ದ ಒಪ್ಪಂದ ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ಇದನ್ನು ವಿಸ್ತರಿಸಬೇಕಾದ ಅಗತ್ಯವಿದ್ದು, ಇದು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಪೂರಕವಾಗಿರಲಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

    ಉದ್ದೇಶಿತ ಗುರಿಯನ್ನು ಸಾಧಿಸಬೇಕೆಂದರೆ ಅಮೆರಿಕದ ಅಥೆನ್ಸ್ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾದ ಯಾರ್ಕ್ ಕಾಲೇಜ್, ಹ್ಯಾರಿಸ್ ಬರ್ಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಇಂಡಿಯಾನಾ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ, ಹ್ಯೂಸನ್ ಯೂನಿವರ್ಸಿಟಿ, ಥಿಯಲ್ ಕಾಲೇಜು ಮತ್ತು ಅಲ್ವರ್ನಿಯಾ ಹಾಗೂ ಮಿಸರಿಕಾರ್ಡಿಯಾ ವಿ.ವಿ.ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಸೂಕ್ತ ಎಂದು ಕನ್ನಿಕಾ ಅವರು ಸಭೆಗೆ ತಿಳಿಸಿದರು.

    ಟ್ವಿನ್ನಿಂಗ್ ಕಾರ್ಯಕ್ರಮದಡಿ ನಮ್ಮ ವಿದ್ಯಾರ್ಥಿಗಳನ್ನು ಪದವಿ/ಸ್ನಾತಕೋತ್ತರ ಪದವಿಯ ನಿರ್ದಿಷ್ಟ ವರ್ಷಗಳಲ್ಲಿ ಅಮೆರಿಕದ ವಿ.ವಿ.ಗಳಿಗೇ ನೇರವಾಗಿ ಕಳುಹಿಸಿ ಕೊಡಲಾಗುವುದು. ವೇತನಸಹಿತ ಇಂಟರ್ನ್-ಶಿಪ್ ವ್ಯವಸ್ಥೆ ಇದರ ಭಾಗವಾಗಿರಲಿದೆ. ಅಲ್ಲದೆ, ಇಷ್ಟವಿರುವವರು ಅಮೆರಿಕದಲ್ಲೇ ಉದ್ಯೋಗಿಗಳಾಗಿ ನೆಲೆಯೂರಲು ಅವಕಾಶವಿರಲಿದೆ ಎಂದು ಸಚಿವರು ವಿವರಿಸಿದರು.

    ಒಡಂಬಡಿಕೆಗಳು ಜಾರಿಗೆ ಬಂದರೆ 6 ವರ್ಷಗಳ ಟ್ವಿನ್ನಿಂಗ್ ಡಿಗ್ರಿ, 5 ವರ್ಷಗಳ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿ, 4 ವರ್ಷಗಳ ಟ್ವಿನ್ನಿಂಗ್ ಸ್ನಾತಕೋತ್ತರ ಪದವಿ, ಎಂ.ಎಸ್. ನರ್ಸಿಂಗ್ (ಇಂಟಿಗ್ರೇಟೆಡ್) ಮತ್ತು ಎಂ.ಎಸ್.ಬಯೋಕೆಮಿಸ್ಟ್ರಿ (ಇಂಟಿಗ್ರೇಟೆಡ್) ಪದವಿ ಹೊಂದಲು ಅವಕಾಶ ಸಿಗಲಿವೆ ಎಂದು ಅವರು ಮಾಹಿತಿ ನೀಡಿದರು.

    ಅಲ್ಲದೆ, `ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಮತ್ತು ಆರೋಗ್ಯ ವ್ಯವಸ್ಥಾಪನಾ ಪದವಿಗಳಿಗೆ ತುಂಬಾ ಬೇಡಿಕೆ ಇದೆ. ಇದನ್ನು ಗುಣಮಟ್ಟದೊಂದಿಗೆ ಕಲಿಸಬೇಕಾದ್ದು ಅಗತ್ಯವಿದೆ. ಇಂತಹ ಕೋರ್ಸುಗಳಿಗೆ ಆಗುವ ವೆಚ್ಚ ಮತ್ತು ಅದರ ಸ್ವರೂಪ ಹೇಗಿರಬೇಕು, ಇದನ್ನು ಹೇಗೆ ಜಾರಿಗೊಳಿಸಬೇಕು ಎನ್ನುವುದನ್ನು ಅಧಿಕಾರಿಗಳು ಕೆಲವೇ ದಿನಗಳಲ್ಲಿ ಆಖೈರುಗೊಳಿಸಬೇಕು ಎಂದು ಅವರು ಹೇಳಿದರು.

    ಇಂತಹ ಒಡಂಬಡಿಕೆಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಆಯ್ಕೆಯಾಗುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ತಗುಲುವ ವೆಚ್ಚವನ್ನು ಸರಕಾರವೇ ಸಂಪೂರ್ಣವಾಗಿ ಭರಿಸಲು ಅವಕಾಶ ಇದೆ. ಅಗತ್ಯ ಬಿದ್ದರೆ ಬ್ಯಾಂಕ್ ಸಾಲಕ್ಕೆ ಕೂಡ ವ್ಯವಸ್ಥೆ ಮಾಡಲಾಗುವುದು ಎಂದು ಅವರು ನುಡಿದರು.

    ಹ್ಯಾರಿಸ್ಬರ್ಗ್ ವಿವಿ ಜತೆ ಒಡಂಬಡಿಕೆಗೆ ಬೆಂಗಳೂರು ನಗರ ವಿವಿ ಆಸಕ್ತಿ
    ಇಂಗ್ಲಿಷ್ ಕಲಿಕೆ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಇಂಟಿಗ್ರೇಟೆಡ್ ಪದವಿಗೆ ಅವಕಾಶ ಕಲ್ಪಿಸುವ ಮಹತ್ವಾಕಾಂಕ್ಷೆಯುಳ್ಳ ಒಡಂಬಡಿಕೆ ಮಾಡಿಕೊಳ್ಳುವ ಸಂಬಂಧ ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಹ್ಯಾರಿಸ್ ಬರ್ಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಪರಸ್ಪರ ಪತ್ರ ಮತ್ತು ದಾಖಲಾತಿಗಳನ್ನು ಬುಧವಾರ ವಿನಿಮಯ ಮಾಡಿಕೊಂಡಿವೆ.

    ಬೆಂಗಳೂರು ನಗರ ವಿವಿ ಪರವಾಗಿ ಕುಲಪತಿ ಡಾ.ಲಿಂಗರಾಜ ಗಾಂಧಿ ಮತ್ತು ಹ್ಯಾರಿಸ್ಬರ್ಗ್ ವಿ.ವಿ ಪರವಾಗಿ ಕನ್ನಿಕಾ ಚೌಧರಿ ಆವರು ಈ ದಾಖಲಾತಿಗಳನ್ನು ಪರಸ್ಪರ ಹಸ್ತಾಂತರಿಸಿಕೊಂಡರು.

    ಈ ಒಪ್ಪಂದ ಅಂತಿಮರೂಪ ಪಡೆದುಕೊಂಡ ನಂತರ ಬೆಂಗಳೂರು ನಗರ ವಿ.ವಿ. ವಿದ್ಯಾರ್ಥಿಗಳು ಹ್ಯಾರಿಸ್ಬರ್ಗ್ ವಿ.ವಿ.ಯಲ್ಲಿ ನಡೆಯುವ ಇಂಗ್ಲಿಷ್ ಕಲಿಕಾ ಕಾರ್ಯಕ್ರಮಗಳ ಲಾಭವನ್ನು ಪಡೆಯಬಹುದು. ಜತೆಗೆ, ಅಮೆರಿಕದ ಶೈಕ್ಷಣಿಕ ಕಾರ್ಯಕ್ರಮಗಳ ಭಾಗವಾಗಬಹುದು ಅಥವಾ ಅವುಗಳಿಗೆ ಹಾಜರಾಗಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಅಲ್ಲದೆ, ವಿದ್ಯಾರ್ಥಿ ವಿನಿಮಯ ಉಪಕ್ರಮದಡಿ ಇಲ್ಲಿನ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿ ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಇಂಟಿಗ್ರೇಟೆಡ್ ಡಿಗ್ರಿ ಅಧ್ಯಯನ ಮಾಡಬಹುದು ಎಂದು ಹೇಳಲಾಗಿದೆ.

    ಡಿ.ವಿ.ಜಿಯವರ ಅಂತಃಪುರಗೀತೆಗಳಲ್ಲಿ ಬೇಲೂರು ಮದನಿಕೆಯರು

    ಸುಮಾ ವೀಣಾ

    ವಿಶ್ವಚೇತನದ ಸ್ಪಂದನವೇ ಸೌಂದರ್ಯಂ. ಅದುವೆ ಜೀವನ, ಮೂಲ ಬಂಧುರತೆ ಬೊಮ್ಮನದು- ಎಂದು ಡಿ.ವಿ.ಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳಿರುವಂತೆ ಸೌಂದರ್ಯ  ಸೃಷ್ಠಿ ಹಾಗು ದೃಷ್ಠಿಯ ಶುಭ ಹೊನಲು. ಸೌಂದರ್ಯವನ್ನು ಹಿಗ್ಗಿಸುವ ಸಾಧನ ಶೃಂಗಾರ. ಆಧುನಿಕ ಸರ್ವಜ್ಞ ಎಂದು ಕರೆಸಿಕೊಂಡಿರುವ ಡಿ.ವಿ.ಜಿ. ಇಲ್ಲಿ ಜಗತ್ತಿನ ರಸಿಕನೇ ಆಗಿ ‘ಆಂತ:ಪುರಗೀತೆ’ ಎಂಬ ಕೃತಿಯನ್ನು  ರಚಿಸಿ ರಸಿಕರ ಕೈಗಿತ್ತಿದ್ದಾರೆ. ಕೇಶವ ಅಂತಃಪುರದ ನಾಯಕನಾದರೆ ಶಿಲಾಬಾಲಿಕೆಯರು ಆತನ ಮನದನ್ನೆಯರು. ನಾಟ್ಯ, ಸಂಗೀತ, ಕಾವ್ಯಗಳ ರಸಾಯನವೇ ಅಂತಃಪುರಗೀತೆಗಳು ಕೃತಿ. ದೇವಾಲಯವನ್ನು ಆಶ್ರಯಿಸಿ ಅದಕ್ಕೆಂದೇ ಪ್ರತ್ಯೇಕ ಕೃತಿ ರಚನೆಯಾದ ಉದಾಹರಣೆ ನಮ್ಮಲಿಲ್ಲ. ಅದಕ್ಕೆ ಅಪವಾದವೆಂಬಂತೆ ನಾಯಕ, ನಾಯಕಿಯರ ಹಾವ, ಭಾವ, ನೃತ್ಯ ವಿಲಾಸಕ್ಕೆ ಪೂರಕವಾಗಿ ಶಿಲ್ಪವನ್ನು ಆಧರಿಸಿದ ವಿಶಿಷ್ಠ ಕೃತಿ ಅಂತಃಪುರಗೀತೆಗಳು. ಕ್ರಿ.ಶ.1117ರಲ್ಲಿ ಹೊಯ್ಸಳ ವಿಷ್ಣುವರ್ಧನ ಈ ದೇವಾಲಯವನ್ನು ನಿರ್ಮಿಸಿದ್ದಾನೆ. ಈತ ಕನ್ನಡದ ಅರಸ, ಈತನ ಪತ್ನಿ ನಾಟ್ಯರಾಣಿ ಶಾಂತಲೆ ಕನ್ನಡದವಳು, ದೇವಾಲಯ ಕನ್ನಡ ನೆಲದ್ದು, ಕವಿ ಕನ್ನಡಿಗ ಕನ್ನಡಿಗರಿಗೆ ಇದಕ್ಕಿಂತ ಹೆಮ್ಮೆ ಬೇಕೇ?.

    ಕೇಶವ ದೇವಾಲಯವೆಂದರೆ ಮದನಿಕೆಯರ ಕಿನ್ನರಲೋಕ, ಕಲ್ಲಲ್ಲಿ ಅರಳಿದ ಸುಂದರ ಶಿಲ್ಪಗಳ ತವನಿಧಿ, ಸೃಷ್ಠಿಯ ಸಚರಾಚರ ವಸ್ತುಗಳು ಇಲ್ಲಿ ಅಸ್ತಿತ್ವವನ್ನು ಪಡೆದುಕೊಂಡಿವೆ. ಕುವೆಂಪು ಅವರು ಹೇಳುವಂತೆ ಇದು ಕೇವಲ “ಶಿಲೆಯಲ್ಲ ಕಲೆಯ ಬಲೆ, ದಿವ್ಯ ಕಲೆಯ ಭವ್ಯಲೋಕ”. ಚನ್ನಕೇಶವನ ಅಂತರಂಗದ ನಾಯಕಿಯ ವಿವಿಧ ಶೃಂಗಾರ ಭಾವಗಳೇ ಈ ಕೃತಿಯ ಹೂರಣ. ಭೂಮಟ್ಟದಿಂದ 12-15 ಅಡಿಗಳ ಎತ್ತರದಲ್ಲಿ ಸುಮಾರು 300 ಕೋನದಲ್ಲಿ ಮುಂಬಾಗಿ ನಿಂತಿರುವ ಈ ವಿಗ್ರಹಗಳನ್ನು ನೋಟಕರ ದೃಷ್ಠಿಕೋನದಿಂದ ಅವುಗಳ ಸೌಂದರ್ಯ ಸಹಜವಾಗಿ ಕಾಣುವಂತೆ ಪ್ರದರ್ಶಿಸಲಾಗಿದೆ. ಮದನಿಕೆಯರ ಮುಖಮುದ್ರೆ ಹಾವ ಭಾವ-ವಿಲಾಸಗಳೆ ಎರಕವಾಗಿರುವ ಇಲ್ಲಿನ ಶಿಲ್ಪಿಗಳು ಪ್ರಮಾಣಬದ್ದ ಸ್ಫುರದ್ರೂಪಿಗಳು, ಅಡಿಯಿಂದ ಮುಡಿಯವರೆಗೆ ಶಿಲಾ ಆಭರಣಗಳನ್ನೇ ತೊಟ್ಟು ಮೆರೆಯುತ್ತಿರುವ ಈ ಶಿಲ್ಪಗಳಿಗೆ ಮುಕರಮಗ್ಧೆ, ಶುಕಭಾಷಣಿ, ಮುರಳೀಧರೆ, ವೀಣಾಪಾಣಿ, ಮುರಜಾಮೋದೆ, ನಾಗವೈಣಿಕೆ, ವಿಕಟನರ್ತಿನಿ, ನೀಲಾಂಬರೆ, ವೀಟೀಧರೆ, ಜಯನಿಷಾದಿ ತಾಂಡವೇಶ್ವರಿ ಎಂದು ಕರೆದಿರುವದು ಉಚಿತವಾಗಿದೆ. ಚನ್ನಕೇಶವನ ಆಸ್ಥಾನದ ನಿತ್ಯ ನರ್ತಕಿಯರ ನಿತ್ಯೋತ್ಸವವೇ ರಸಿಕರನ್ನು ಕೇಶವನ ದಿವ್ಯಸಾನ್ನಿಧ್ಯಕ್ಕೆ ಸೆಳೆಯುತ್ತದೆ.

    ‘ಅಂತಃಪುರ ಗೀತೆ’ಗಳು ಬಿಡಿಕವಿತೆಗಳ ಸಂಗ್ರಹ ಕೃತಿ ಜೀವಂತ ಜವ್ವನೆಯರ ಅನುಪಮ ಪ್ರತಿಕೃತಿಗಳೆಂತೆ ಇರುವ ಇವರುಗಳು ವೇದಾಂತ ರಾಜಕಾರಣಕ್ಕೆ  ಇಲ್ಲಿ  ನಾಂದಿ ಹಾಡಿದ್ದಾರೆ. ಇಡೀ ವಿಶ್ವವನ್ನು ಅಂತಃಪುರವನ್ನಾಗಿಸಿ ಭಕ್ತರನ್ನು ಪ್ರೇಮಿಗಳಾಗಿಸಿಕೊಂಡಿರುವ ಕೇಶವನ ಈ ಧೀಃಶಕ್ತಿಗೆ ನಾವು ಮೌನಿಗಳಾಗಲೇಬೇಕು. ಬೇರೆ ಕಾವ್ಯಗಳಲ್ಲಿರುವಂತೆ ನಾಂದಿ ಮುಕ್ತಾಯ, ದೇವೀಸ್ತುತಿ ಮಂಗಳ ಪದ್ಯ ಅವುಗಳ ನಡುವೆ ಕಾವ್ಯ ವಸ್ತು ಹೂರಣವಾಗಿದೆ. ಸ್ವತಃ ಸಂಗೀತ ವಿದ್ವಾಂಸ ಡಿ.ವಿ.ಜಿ ತಾಳ, ರಾಗ, ಪಲ್ಲವಿ ಅನುಪಲ್ಲವಿಗಳೊಂದಿಗೆ ಸ್ಥಿತವಾಗಿರುವ ಈ ಕೃತಿ ಪ್ರಸ್ತಾವನೆಯಲ್ಲಿ ಮದನಿಕೆಯರನ್ನು ಕೇಶವನ ರಾಣಿಯರ್, ಶುಕವಾಣಿಯರ್, ಫಣಿವೇಣಿಯರ್, ಹಾಸ್ಯ ಸಂಜ್ಞೆಯ ನೀರೆಯರ್, ಸುಶರೀರೆಯರ್ ಸಲೆ  ಪಾಡುವರ್, ಕುಣಿದಾಡುವರ್ ಎಂಬ ವಿಶೇಷಣಗಳೊಂದಿಗೆ ವರ್ಣಿಸಿದ್ದಾರೆ. “ಮನುಷ್ಯ ತಾನೇ ತನ್ನ ಆತ್ಮಶಿಲ್ಪ” ಎಂಬ ಮಾತಿನಂತೆ ಚನ್ನಕೇಶವ ಡಿ.ವಿ.ಜಿಯವರ ಪ್ರಕಾರ  ರಸಿಕಾಗ್ರಗಣ್ಯ. ತನ್ನ ಮನದನ್ನೆಯವರ ಸನ್ನೆಯನರಿತು ಸ್ಪಂದಿಸುವ ಲಾವಣ್ಯಮೂರ್ತಿಯಾಗಿದ್ದಾನೆ. ಅಂದರೆ ಕೇಶವ ಲೋಕದ ಜನರ ಮನೋವಾಂಛೆಯನರಿತು ಸಕಲ ಇಷ್ಟಾರ್ಥ ಕರುಣಿಸುವವನಾಗಿದ್ದಾನೆ.

    ಕೃತಿಯ ಪ್ರಾರಂಭಕ್ಕೆ ಪ್ರಸ್ತಾವನೆ ಎಂಬ ಶೀರ್ಷಿಕೆಯಡಿ 25 ಕಂದ ಪದ್ಯಗಳ ಮೂಲಕ ಕೃತಿಗೆ ಮುಂದಡಿಯಿಡುತ್ತಾರೆ. ಬೇಲೂರ ಶಿಲಾಬಾಲಾಮಣಿಯರ್, ಮದನಿಕೆಯರ್, ಸ್ಮರಗುಣನಿಕೆಯರ್ ಮಧುಕರಣಿಕೆಯರ್, ವಿರಾಡ್ರಾಸಾವೇಶಿತಸತ್ವಶೀಲೆಯರ್ ಸಿರಿಕೇಶವನ ರಸವೈಭವಕ್ಕೆ ಒತ್ತಾಸೆಯಾಗಿದ್ದಾರೆ ಎಂದು ಹೇಳಿದ್ದಾರೆ.ನಿಜಕಾವ್ಯಕನ್ನಿಕೆಯ  ನರ್ತನ ಸೌಂದರ್ಯ  ರಸಿಕರಿಗೆ ಲಭಿಸುವುದು ‘ಮುಕುರದ ಮುಗ್ಧೆ’ ಎಂಬ ಕವಿತೆಯ ಮೂಲಕ  ಅರ್ಥಾತ್ ಅದೇ ಹೆಸರಿನ ಶಿಲ್ಪದಿಂದ “ಮುಗುಧೆಯಾದೆಯಾ ಕನ್ನೇ ಮುಕುರದ ಚೆನ್ನೇ” ಎಂದು ಪ್ರಾರಂಭವಾಗುವ ಈ ಕವಿತೆಯಲ್ಲಿ ಕನ್ನಡಿಯಲ್ಲಿ ತನ್ನ ಸೌಂದರ್ಯ ಸವಿಯುತ್ತಾ ತಿಲಕಧಾರಣೆ ಮಾಡಿಕೊಳ್ಳುವ ಸಲುವಾಗಿ ನಿಂತಿರುವ ಸುರಸುಂದರಿ. ಈಕೆಯೇ ನಾವು ಕರೆಯುವ ದರ್ಪಣಸುಂದರಿ. ತನ್ನ ರೂಪವನ್ನು ಕಂಡು ತಾನೇ ಸೋಲುವ ನೀರೇ, ಪ್ರೇಮಿ ಕೇಶವನಿಗೆ ಕಾಯುತ್ತಾಳೆ. ಆತನ ಆಗಮನ ತುಸು ತಡವಾದರೂ ಈಕೆಗೆ ಭಯವಂತೆ, ದುಃಖವಂತೆ, ಸುಂದರಿಯಾದ ನನ್ನನ್ನು ಬಿಟ್ಟು ಅವನೆಲ್ಲಿಹನೋ? ಎಂದು ಹುಸಿಕೋಪವನ್ನು ತೋರಿಸುತ್ತಾಳೆ. ಹೆಣ್ಣಿನ ಪೂರ್ವಾರ್ಜಿತ ಆಭರಣ ಲಜ್ಜೆ, ಸೃಷ್ಠಿಯ ಈ ಚೆಲುವಿನಲ್ಲಿ ಹೆಣ್ಣಿನ ಸೌಂದರ್ಯ ಇಮ್ಮಡಿಯಾಗುವುದು ಈಕೆಯ ಲಾವಣ್ಯದಿಂದಲೇ. ಅಂತಹ ಸೌಂದರ್ಯ ಭಂಗಿಯಿಂದಲೇ ಕೇಶವನನ್ನು ಕಣ್ಣಲ್ಲೇ ಹುಡುಕುವ ನಿರೀಕ್ಷಿಸುವ ಪ್ರತಿ ಇಲ್ಲಿ ಜೀವಂತವಾಗಿದೆ.

    “ಏನೆ ಶುಕಭಾಷಿಣಿ ಸುದ್ದಿಯೇನೇ ಮನೋಲ್ಲಾಸಿನೀ”  ಎಂದು ಕೇಳುವ ಶಿಲ್ಪವನ್ನು ನಾವು ಮುಂದೆ ಎದುರಾಗುತ್ತೇವೆ. ಈಕೆ ಗಿಳಿಯೊಂದಿಗೆ ಮಾತನಾಡುವ ನರ್ತಕಿ. ತನ್ನ ನಲ್ಲನಿಗೆ ಆ ಕೇಶವನಿಗೆ ಆ ಮುದ್ದುಗಿಳಿಯ ಮೂಲಕ ಸಂದೇಶವನ್ನು ಕಳುಹಿಸುತ್ತಾಳೆ. ಇಲ್ಲೀಕೆಯ ತಳುಕು ಬಳುಕನ್ನು ಬಾಯಲ್ಲೇ ಹೇಳಬೇಕೆ? ಕಿವಿಯಲ್ಲ ಕೇಳಬೇಕೇ? ಇಲ್ಲ ಕಣ್ಣಲ್ಲೇ ನೋಡಿ ತಣಿಯಲಿ ಎಂದೇ ನಿಂತಿದ್ದಾಳೆ ಈಕೆ. ಈ ಬಾಲೆಯ ಸೌಂದರ್ಯಕ್ಕೆ  ಪ್ರಭಾವಳಿಯಾಗಿರುವ ಬಳ್ಳಿಯ ಕೆತ್ತನೆಗೆ, ಸಖಿಯರ ಭಂಗಿಗಳಿಗೆ ಒಂದೆರಡು ಉಳಿ ಪೆಟ್ಟನ್ನು ಹೆಚ್ಚೇ ಕೊಟ್ಟಂತಿದೆ. ಕವಿ ಮಂತ್ರಮುಗ್ಧನಾಗಿ ಆ ಶಿಲ್ಪಕ್ಕೆ ‘ಶುಕಭಾಷಿಣಿ’ ಎಂದು ಕರೆದರೂ “ಗಿಳಿ ಬಿಟ್ಟು ಸೌಂದರ್ಯ  ವರ್ಣಿಸಲು ಇನ್ಯಾರೂ ಸಿಗಲಿಲ್ಲವೇ ?”ಎಂದು ಪ್ರಶ್ನಿಸಿದ್ದಾರೆ.

    ಜೀವನ ಪ್ರೇಮಿಗೆ ಯಾವಾಗಲೂ ವಸಂತೋತ್ಸವವೇ, ವಸಂತೋತ್ಸವ, ವಸಂತಕಾಲ ಎಂದರೆ ಎಲ್ಲರಿಗೂ ಬೇಕಾದುದೇ ಅಂತ ಜೀವನ ಪ್ರೀತಿಯನ್ನು ಸ್ಫುಟಗೊಳಿಸುವ ಶಿಲ್ಪ ಎಂದರೆ ‘ವಾಸಂತೀ’ ಎಂಬ ಶಿಲ್ಪ.  ಎಡಗೈಯ್ಯಲ್ಲಿ ವೀಳ್ಯವನ್ನು, ಬಲಗೈಯಲ್ಲಿ ಜೀರ್ಕೊಳವೆಯನ್ನು ಹಿಡಿದು ಪ್ರಿಯಕರನ ನಿರೀಕ್ಷೇಯಲ್ಲಿದ್ದಾಳೆ ರಾಕೇಂದುಮುಖಿ. ಅವಳಲ್ಲಿ ವಿರಹವೇದನೆ ಮಡುಗಟ್ಟಿದೆ. ಅಂತಹ ಭಗ್ನಹೃದಯಿಗೆ ಸಖಿಯರು ಅರ್ಥಾತ್ ಸಹಶಿಲ್ಪಗಳು, ಸಂತೋಷ ಸಂಜೀವಿನಿ ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಕೆಯನ್ನು ಸುತ್ತುವರಿದಿರುವ ಶಿಲ್ಪಗಳೆ ಅವಳನ್ನು ವಸಂತೋತ್ಸವಕ್ಕೆ ಆಹ್ವಾನಿಸುವ ಪರಿ ಎಂಥವರನ್ನು ಬೆರಗು ಗೊಳಿಸುವಂತಹದು.

    ಮುಂದಿನ ಶಿಲ್ಪಿ ‘ಕಪಿಕುಪಿತೆ’ ಈಕೆ ಸುಂದರಿ ಅಷ್ಟೇ ಕೋಪಿಷ್ಠೆಯೂ ಆಕೆಯ ಸೌಂದರ್ಯಕ್ಕೆ ಉನ್ಮಾದಕ್ಕೇರಿದ ತುಂಟಕಪಿ ತರುಣಿಯ ಸೀರೆಯನ್ನು ಎಳೆದುಹಾಕಲು ಪ್ರಯತ್ನಿಸುತ್ತಿದೆ. ಅದರೆ ಈ ತರುಣಿ ಮರದ ರೆಂಬೆಯ ತುಂಡೊಂದರಿಂದ ಮಂಗನನ್ನು ಹೊಡೆದು ಓಡಿಸಲು ಯತ್ನಿಸುವ ಪ್ರಸಂಗ ಬಿಂಬಿಸುವಂಥ ಕಪಿಕುಪಿತೆ  ಎಂಬ ಶಿಲ್ಪ ಆ ಸುಂದರಿ ಕವಿಯ ಪ್ರಕಾರ ಮಾನಭಿಮಾನಿ, ಚೆನ್ನಕೇಶವನ ಜಾಣೆ.

    ನಂತರ ನಮಗೆ ಸಿಗುವ ಶಿಲ್ಪ ‘ಲೀಲಾಕಿರಾತಿ’ ಕೋಪಗೊಂಡ ತರುಣಿ ಚಾಪಹಸ್ತಯಾಗಿ ಪಕ್ಷಿಯುಗಳದ ಚಾಪಲ್ಯ ತಪ್ಪಿಸಲು ಹೊರಟಿರುವಳು. ಆಕರ್ಣಾಂತವಾಗಿ ಬಾಣವನ್ನೆಳೆದು ಲತಾತೋರಣದಲ್ಲಿ ಕುಳಿತ ಪಕ್ಷಿದ್ವಯದತ್ತ ಬಿಡುತ್ತಿರುವ ರಮ್ಯಶಿಲ್ಪ. ಅವುಗಳ ಚಾಪಲ್ಯ ವೀಕ್ಷಣೆಯಿಂದ ತಾಪಕ್ಕೊಳಗಾದ ಈಕೆಯ ದೇಹ ಬಿಲ್ಲಿನಂತೆ ಸೆಟೆದಿರುವುದು, ಮುಖದ ತೋರಿಕೆಯ ರೌದ್ರತೆ ಮನುಷ್ಯ ಸಹಜ  ಈರ್ಷೆಯನ್ನು ಬಿಂಬಿಸುತ್ತದೆ.

    ನಂತರ ರಸಿಕರ ಕಣ್ಣೋಟ ಸೆಳೆಯುವ ಶಿಲ್ಪವೆಂದರೆ ‘ಮಂಜುಕಬರಿ’ ಹೆಣ್ಣಿನ ಅಂದವನ್ನು ಇಮ್ಮಡಿಗೊಳಿಸುವುದು ಕೇಶರಾಶಿ ಅಂತಹ ನೀಳಕೇಶರಾಶಿಯನ್ನು ಹೊಂದಿದ ಶಿಲ್ಪ ಇದು. ಕಾಶ್ಮೀರಾಗರು ತೈಲ ವಾಸನೆಗಳನ್ನು ಹೊಂದಿ, ಕೇಶರಾಶಿಯ ನಾಗಾಪಾಶವ ಸುತ್ತಿ ದೋಷವಿಲ್ಲದೆ ಚನ್ನಕೇಶವನನ್ನು ಅದರಲ್ಲಿ ಬಂಧಿಸಿಡುವ ಪ್ರಯತ್ನ ಮಾಡಿದ್ದಾಳೆ. ಅಂತಹ ಕೇಶಕ್ಕೆ ಕಾಳಿರುಳಿನ ಕಪ್ಪು ಇದೆಯಂತೆ. “ನೋಳ್ಪರ ಕಣ್ಮನಕಹುದು ಮೋಹದ ಕಪ್ಪು” ಎಂದು ಕೇಶವನಡಿಗಳನು  ನೀನಪ್ಪು ಎಂದು ಕವಿ ವರ್ಣಿಸಿದ್ದಾನೆ.

    ಮಂಜುಕಬರಿಯ ನಂತರ “ಏನೀ ಮಹಾನಂದವೇ ಓ ಭಾಮಿನಿ ಏನೀ ಸಂಭ್ರಮದಂದವೇ ಬಲ್ಚಂದವೇ” ಎಂದು ಪ್ರಾರಂಭವಾಗುವ ಈ ಕವಿತೆಯಲ್ಲಿ ಢಕ್ಕೆ ಹಿಡಿದುಕೊಂಡು ನರ್ತನ ಮಾಡುತ್ತಿರುವ  ಉನ್ಮತ್ತ ನರ್ತಕಿಯನ್ನು ಕಾಣಬಹುದು ಇವಳೇ ‘ಮುರಜಾಮೋದೆ.’ ಢಕ್ಕೆ ಹಿಡಿದುಕೊಂಡು ಆನಂದ ಪರವಶಳಾಗಿ ಅಂತಃಪುರದ ಒಡೆಯನೂ, ಗೆಳೆಯನೂ ಆಗಿರುವ ಕೇಶವನಿಗೆ ತನ್ನ ಚೆಲುವನ್ನು ಅರ್ಪಿಸುತ್ತಿದ್ದಾಳೆ ಇಲ್ಲಿ ಕೇಶವನೇ ಕೇಂದ್ರ ಬಿಂದು.

    ನಂತರದ ಶಿಲ್ಪ ‘ಕಪಟಭೈರವಿ’, ನಿಜ ಭೈರವಿಯಲ್ಲ ಕಪಟಭೈರವಿಯಾಗಿ ಕೇಶವನನ್ನೆ ಹೆದರಿಸಲು ನಿಂತ ದಿಟ್ಟೆ. ಕವಿ “ಭೈರವ ವೇಷದಿಂದ ಯಾರನ್ನು ನೀನು ಅಂಜಿಪೆ, ಶೂಲರುಂಡವನ್ನು ಕಪಾಲ, ಪಾತ್ರೆಯಾಗಿ ಹಿಡಿದು ನಿಂತಿರುವ ನಿನ್ನನ್ನು ಯಾರು ಕಂಡು ಭಯಬೀಳುತ್ತಾರೆ?” ಎಂದು ಪ್ರಶ್ನಿಸುತ್ತಾರೆ.

    “ಓ ಯವತಿ ನಿನ್ನಿಂಚರದೊಳಗೇನಿಟ್ಟಿರುವೆ….” ಎಂದು  ನರ್ತನ ಮಾಡುತ್ತಿರುವ ಶಿಲ್ಪತಾಂಡವೆ ಈಶ್ವರಿಯನ್ನು ಪ್ರಶ್ನಿಸುತ್ತಾರೆ. ಚನ್ನಕೇಶವನನ್ನು ಜಾಗೃತಗೊಳಿಸಲು ಈ ನೃತ್ಯವೇ “ಡಂಗುರ ಪೊಯ್ವುದದೇನೇ ಜನ ಜಂಗುಳಿಗೆಲ್ಲ ನೀ ಸಾರ್ವುದದೇನೆ?” ಎಂದು ಕವಿ ತಾಂಡವೇಶ್ವರಿಯನ್ನು ಪ್ರಶ್ನಿಸುತ್ತಾರೆ. ಮುಂದಿನ ಶಿಲ್ಪ ‘ಮುರಳೀಧರೆ” ಭಾವಜೀವಿಗೆ ಮನವೆ ಮಂಗಳದ ನಂದಗೋಕುಲ ಇಲ್ಲಿ ಬಾಲಿಕೆ ಕೃಷ್ಣನ ವೇಷಧಾರಿ. ಗೋಪಿಕೆಯರಲ್ಲಿ ತಾನೇ ಗೋಪಿಕೆಯಾಗಿ ನರ್ತಿಸಿದ ಚಾಪಲೆ. ಯದುವಂಶ ಕುಲತಿಲಕ ವೇಷಧಾರಣೆ ಮಾಡಿ ಮುರಳೀಗಾನ ಹೊರಡಿಸುತ್ತಿದ್ದಾಳೆ.

    ಈ ಅಂತಃಪುರದ ನಲ್ಲೆಯರಲ್ಲಿ ಮುಂದೆ ಎದುರಾಗುವವಳೇ ‘ಗಾನಜೀವನೆ’. ಮನಕ್ಕೆ ಮನವೇ ನೆಲೆ ಅದು ತನ್ನಲ್ಲಿಯೇ ನರಕದಿಂದ ನಾಕವನ್ನು ನಾಶದಿಂದ ನರಕವನ್ನು ನಿರ್ಮಿಸಿವೆ ಎಂಬ ಅಭಿಪ್ರಾಯವನ್ನು ಕವಿ ಹೊಂದಿದ್ದಾರೆ. ತನ್ನ ಜೀವನದ ಎಲ್ಲಾ ಘಟ್ಟಗಳನ್ನು ಗಾನದಲ್ಲಿಯೇ ಕಳೆಯುವ ಈಕೆ ಕಲಹಂಸೆ ಲಲಿತಸ್ವರೇ. ಹಾಲಹಲವನ್ನು ಕುಡಿದ ಶಿವನನ್ನೇ ಸೋಲಿಸಿದ ಶಿಲ್ಪ ‘ಜಗನ್ಮೋಹಿನಿ’, ಈ ಶಿಲ್ಪ ಅತ್ಯಂತ ರಮಣೀಯವಾಗಿದೆ. “ಭೂಲೋಕದ ಮಾಯಾಬ್ಧಿ ಜಗನ್ಮೋಹಿನಿ”. ಶಿಲ್ಪಿಗಳು ಕೆತ್ತಿರುವುದಕ್ಕು ಕವಿ ವಿವರಣೆ ನೀಡಿರುವುದಕ್ಕೂ ಇಲ್ಲಿ ಹಾಲು ಜೇನಿನ ಮಿಳಿತವಿದೆ. ನೃತ್ಯದಲ್ಲಿ ತೊಡಗಿರುವ ಸುಂದರಿಯ ಶರೀರ ಲತೆಯಂತೆ ಇಲ್ಲಿ ನಾಲ್ಕೈದು ಬಾಗು ಬಳಕುಗಳಿಂದ ಕೂಡಿದೆ. ನಾಟ್ಯ ಭಂಗಿಯನ್ನು ತೋರುತ್ತಿರುವ ಬಲಗೈ ತಲೆಯ ಮೇಲೆ ಬರುತ್ತದೆ. ಎಡಗೈ ಹೊರಕ್ಕೆ ತೋರುತ್ತಿದೆ. ಬಲಗಾಲಿನ ಸ್ನಾಯುಗಳು ಬಹಳ ನೈಜವಾಗಿ ಕೆತ್ತಲ್ಪಟ್ಟಿವೆ. ಅವಳ ಜಗನ್ಮೋಹಿನಿ ಅವತಾರಕ್ಕೆ ಸಹ ಶಿಲ್ಪಗಳು ರವಷ್ಟು ಹೆದರಿ ದೂರಸರಿದಂತೆ ಚಿಕ್ಕವಾಗಿ ಕೆತ್ತಲ್ಪಟ್ಟಿವೆ.

    ಕೇಶವನ ಅಂತಃಪುರದ ರಾಣಿಯರ ಮಾಯೆ ಇಲ್ಲಿಗೇ ಮುಗಿಯದು ನಂತರ ನಮಗೆ ದರ್ಶನ ನೀಡುವವಳೇ ವೀಣಾಪಾಣಿ.  ನಾವೆಲ್ಲಾ ಕೇಳಿರುವ ಬಹಳ ಪ್ರಖ್ಯಾತ ಗೀತೆ “ವೀಣಾಪಾಣಿ ವಿಶ್ವಕಲ್ಯಾಣಿ”, ಕಲ್ಯಾಣಿರಾಗ ಆದಿತಾಳದಲ್ಲಿ ಸಂಯೋಜನೆಗೊಂಡಿರುವ ಗೀತೆ. ಸಂಗೀತವನ್ನು ವಿಶ್ವದ ಮಧುರರಮ್ಯ ಭಾಷೆ ಎಂದು ಕರೆಯಬಹುದು. ಅಂತೇಯೇ ಇಲ್ಲಿ ಸ್ವರಸ್ವತಿಯ ಸ್ವರೂಪ ಹೊತ್ತ ಈಕೆ ಸಂಗಿತ ಪಾರಮ್ಯ ಮೆರೆಯುತ್ತಿದ್ದಾಳೆ. ಎಡಗೈಯಲ್ಲಿ ವೀಣೆ ಬಲಗೈಯ್ಯಲ್ಲಿ ಸಂಗೀತದ ಆಲಾಪ ಎತ್ತುತ್ತಿದ್ದಾಳೆ.

    ಕೆದರಿದ ಕೂದಲನ್ನು ದರ್ಪಣ ಹಿಡಿದುಕೊಂಡು ಮತ್ತಮತ್ತೆ ಮುಂಗುರಳನ್ನು ಸಖಿಯರ ಸಲಹೆಯೊಂದಿಗೆ ಸರಿಮಾಡಿಕೊಳ್ಳುತ್ತಿರುವ ಶಿಲ್ಪವೆಂದರೆ ಕುಟಿಲಕುಂತಲೆ. ಪ್ರಿಯಕರ ಚನ್ನಕೇಶವನಿಗೆ ತನ್ನ ಅಲಂಕಾರದಲ್ಲಾಗಲೀ ಕೇಶವಿನ್ಯಾಸದಲ್ಲಾಗಲೀ ಎಳ್ಳಷ್ಟು ದೋಷ ಸಿಗಬಾದೆಂಬುದೇ ಈಕೆಯ ಬಯಕೆ. ಈ ಮನೋಚಾಪಲೆ ರಸಿಕ ಚನ್ನಕೇಶವನಿಗೆ  ಪ್ರೀತಿಯ ರಸಧಾರೆ ಎರೆಯಲು ಸಜ್ಜಾಗುತ್ತಿದ್ದಾಳೆ. ಕವಿ ಈಕೆಯನ್ನು ಕಂಡು “ಇನಿಯನ ನೆನೆದಾರಿವಳೆ ಮಣಿಮುಕುರದಿ ನೋಡುವಳ್ ಪಣೆಯ ತಿಲಕವ ತಿದ್ದುವಳ್ ಮನವನೆ ಸೂರೆಗೊಳ್ಳುವಳ್” ಎಂದಿದ್ದಾರೆ.

    ರಾಮನಿಗೋಸ್ಕರ ಕಾದಂತಹ ಶಬರಿಯ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಅದೇ ರಾಮ ಕೇಶವನಾಗಿ ಅವತಾರ ಎತ್ತಿರುವನು ಅವನಿಗಾಗಿ ಮತ್ತೆ ಶಬರಿ ‘ರಸಿಕ ಶಬರಿ’ಯಾಗಿ ಬಂದಿದ್ದಾಳೆ. ಶುದ್ಧ ಸಾವೇರಿ ರಾಗದಲ್ಲಿ ರೂಪಕ ತಾಳದಲ್ಲಿ ರಚನೆಯಾಗಿರುವ ಈ ಗೀತೆ ಕವಿಯ ಪ್ರಭುದ್ಧತೆಗೆ ಕೈಗನ್ನಡಿ ಹಿಡಿದಂತಿದೆ. ಈ ಲೋಕದಲ್ಲಿ ರಸಿಕ ಶಬರಿಯಾಗಿ ಅವತಾರ ಎತ್ತಿರುವ ಈಕೆ ಚನ್ನಕೇಶವನ ಒಲವನ್ನು ಸ್ವೀಕರಿಸಲು ಕೈಯ್ಯಲ್ಲಿ ರಸರಸಾಲಫಲಗಳನ್ನು ಹಿಡಿದುಕೊಂಡು ಕೇಶವನೆ ರಾಮ, ರಸಿಕನೆಂದು ಬಗೆದು ಮತ್ತೊಮ್ಮೆ ಅಭಿನವಾತಾರಿಯಾಗಿ ಬಂದಿದ್ದಾಳೆ.

    ರೋಷಾವೇಷಕ್ಕೆ ಸಾಕ್ಷಿಣಿಯಾಗಿರುವ ಮುಂದಿನ ಶಿಲ್ಪ ‘ವೀರಯೋಷಿತೆ’ ಇವಳನ್ನು ಕಂಡು ಪ್ರಾಣಿ ಸಂಕುಲ ಸಹಶಿಲ್ಪಗಳು ನಿಬ್ಬೆರಗಾದಂತಿವೆ “ಕ್ಲೇಶವೇನಾಯಿತೇ ಈ ಅವತಾರ ತಳೆದಿದ್ದೀಯಲ್ಲ’ ಹಾಸ್ಯವನಾಡಿದನಾರೇ? ಆಶೆಯ ತೋರಿ ನಿರಾಶೆಯನಾರಾದರೂ ಮಾಡಿದರೆ? ಆ ಕೇಶವನೊಳ್ ಮುನಿದು ಆಕಾಶವನ್ನೇ ಇರಿಯಲು ಹೊರಟಿರುವೆಯಲ್ಲಾ” ಎಂದು ಕವಿ ನೇರ ಸಂಭಾಷಣೆಗೇ ಇಲ್ಲಿ ಇಳಿದಿದ್ದಾರೆ. ಉಗ್ರರೂಪದ ಸೌಮ್ಯನಾಯಕಿಯಾಗಿ ಈ ಶಿಲ್ಪ ಕಡೆಯಲ್ಪಟ್ಟಿದೆ.

    ‘ಪುಂವಿಡಂಬಿನಿ’  ಕೇಶವನನ್ನು ಪರೀಕ್ಷಿಸಲು ಹೊರಟ ಶಿಲ್ಪ, ರಾಗಯೋಗಿ, ನಾಟ್ಯನಿಪುಣೆ, ಸ್ವರ್ಗಹಸ್ತೆ ಕೃತಕ ಶೂಲ, ನಾಟ್ಯಸುಂದರಿ  ಮುಂತಾದ ಅದ್ಭುತ ರಮ್ಯ ಶಿಲ್ಪಗಳು ನೋಡುಗರ ಮನಸೂರೆಗೊಳ್ಳುತ್ತವೆ. ಇವೆಲ್ಲವೂ ತಮ್ಮೊಳಗೆ ತಾ ಮುಂದು ನಾ ಮುಂದು ಎಂಬ ಸೌಂದರ್ಯ, ಶೃಂಗಾರ ಪೈಪೋಟಿ ನಡೆಸುವಂತೆ ಹಿಂದಕ್ಕೂ ಮುಂದಕ್ಕೂ ಓಡಾಡಿಸುತ್ತವೆ.

    ‘ಜಯನಿಷಾದಿ’  ಎಂಬ ಹೆಸರಿನಿಂದ ಕಂಗೊಳಿಸುವ ಸುಂದರಿ ‘ಲೀಲಾನಿಷಾದಿ’, ಸಾಂಗತ್ಯ ಛಂದಸ್ಸಿನಲ್ಲಿ ರಚಿಸಲ್ಪಟ್ಟಿರುವ ಈ ಗೀತೆಯಲ್ಲಿ ಕಾಳಿ ದುರ್ಗೆಯರ ರೂಪ ಚೆಲುವೆತ್ತಂತಿದೆ. “ಕರಾಳಸಾಹಸಿಕವ ಪೋಲುತ  ನಿಂದಿಹೆ ಏಕೆ?” ಎಂಬ ಪ್ರಶ್ನೆಯನ್ನು ಇಲ್ಲಿ ಎತ್ತಿದ್ದಾರೆ. ಇಡೀ ಜಗತ್ತು ನಿನ್ನ ಒಂದು ಓರೆನೋಟಕ್ಕೆ ಸೋತು ಶರಣಾಗುವಾಗ ಈ ಹೋರಾಟ ತೋರಿಸುವ ಅಗತ್ಯ ನಿನಗೆ ಅನಗತ್ಯ ಎಂದು ಆಕೆಯನ್ನು ಕವಿ ಸಂತೈಸುವಂತೆ ಈ ಬಿಡಿ ಕವಿತೆ ಇದೆ.

    ಕಾವ್ಯದ ಮುಖ್ಯಭೂಮಿಕೆ ಇಡೀ ಬೇಲೂರಿನ ಚನ್ನಕೇಶವನ ಅಸ್ತಿತ್ವವನ್ನು ವೇದ್ಯಗೊಳಿಸಿರುವ ಭಾಗವೆಂದೆ ‘ಭಸ್ಮಮೋಹಿನಿ’, ರೂಪಕ ಕೃತಿಯೊಳಗೆ ರೂಪಕವಾಗಿದೆ. ರಾಗಮಾಲಿಕೆಯಲ್ಲಿ ಮೋಹನ, ತೋಡಿ ಮುಂತಾದ ರಾಗಗಳಿಂದ ಸಂಯೋಜನೆಗೊಂಡಿರುವ ಇದು ಚನ್ನಕೇಶವನ ಅಂತರಾಳ ತೆರೆವಲ್ಲಿ ಯಶಸ್ವಿಯಾಗಿದೆ.

    ವಿಷ್ಣು ಮೋಹಿನಿಯ ಅವತಾರ ತಳೆಯುವುದೇ ಭಸ್ಮಾಸುರನನ್ನು ಸಂಹಾರ ಮಾಡಲು. ಬೇಲೂರಿನ    ಶ್ರೀ ಚನ್ನಕೇಶವನ ದೇವಾಲಯದ ಪ್ರವೇಶದ್ವಾರದ ಎಡಕ್ಕೆ ಅಂದರೆ ಆನೆಬಾಗಿಲಿನ ಪಕ್ಕಕ್ಕೆ ಇರುವ ಮೂಲೆಯನ್ನು ಭಸ್ಮಾಸುರ ಮೂಲೆ ಎಂದು ಕರೆಯುವುದಿದೆ. ರಥೋತ್ಸವದ ಸಂದರ್ಭದಲ್ಲಿ ಇಂದಿಗೂ ಗಳಿಗೆತೇರು, ಮಡಿತೇರು ಎಂದು ಕರೆಯಲ್ಪಡುವ ರಥವನ್ನು ಭಸ್ಮಾಸುರ ಮೂಲೆಗೆ ತಂದು ನಿಲ್ಲಿಸಲಾಗುತ್ತದೆ. ಒಂದು ಇರುಳು, ರಥ ಅಲ್ಲಿದ್ದ ಬಳಿಕ ಮರುದಿನ ನಾಡರಥ ಅಥವಾ ದೊಡ್ಡರಥ ಎಳೆಯಲ್ಪಡುತ್ತದೆ. ಈ ಚನ್ನಕೇಶವನ ಅಲಂಕಾರದ ವಿಶೇಷತೆ ಎಂದರೆ ಮುಖಭಾಗ ಹೆಣ್ಣಿನ ಅಲಂಕಾರ ಶರೀರ ಭಾಗ ಗಂಡಿನ ಅಲಂಕಾರ. ಸುರಸುಂದರ ವಿಷ್ಣು ಅನ್ನುವ ಕಾರಣಕ್ಕೆ ಚನ್ನಕೇಶವ ಎಂಬ ಹೆಸರು ಬಂದಿರುವುದು. ‘ಭಸ್ಮಮೋಹಿನಿ’ ಎಂದು ಕರೆಯುವ ಅಂತಃಪುರಗೀತೆಯಲ್ಲಿ ಉಕ್ತವಾಗಿರುವ ಕವಿತೆಯಲ್ಲಿ ನಾಟ್ಯಕಲಿಸುವ ವಿಷ್ಣವನ್ನು ವರ್ಣಿಸುತ್ತದೆ. ಹಾಗೆ ಶಿಲ್ಪದರಲ್ಲಿ ತಲೆಯ ಮೇಲಿರುವ ಬಲಗೈ  ತುದಿ ಮೂಗಿನ ನೇರಕ್ಕೆ ಬಂದಿದೆ. ಎಡಗೈ ಹೆಬ್ಬೆರಳು ಮತ್ತು ನಾಟ್ಯಭಂಗಿಯಲ್ಲಿ ಮೇಲೆದ್ದಿರುವ ಎಡಗಾಲಿನ ಹೆಬ್ಬೆರಳುಗಳು ಇವೆಲ್ಲ ಒಂದೇ ಊರ್ಧ್ವರೇಖೆಯಲ್ಲಿವೆ  ಅರ್ಥಾತ್ ಭಸ್ಮಾಸುರನಿಗೆ ನರ್ತನ ಹೇಳಿಕೊಡುತ್ತಿರುವುದು. ಶಿಲಾಬಾಲಿಕೆಯರು ಅಂದಕೂಡಲೆ ನಮ್ಮ ನೆನಪಿಗೆ ಬರುವ ಶಿಲ್ಪ ಇದು. ಕೇಳುಗರು ಕೇಳಿಸಿಕೊಳ್ಳುವುದಲ್ಲ, ಓದುಗರು ಓದುವುದಲ್ಲ ಈ ನೃತ್ಯ ಚಾಪಲೆಯರನ್ನು ಕೇಶವನ ಸಖಿಯರನ್ನು ಮತ್ತೊಮ್ಮೆ ನೋಡಿ ಕೈಕುಲುಕಿ ಬರಲೇಬೇಕು. ಮೋಹಿನಿ ಮತ್ತು ಭಸ್ಮಾಸುರರ ನಡುವಿನ ಸಂಭಾಷಣೆ ಇಲ್ಲಿದೆ.

    ನಲಿವಿನ ಸುಂದರಿಯರ ವಿಚಾರ ಇಲ್ಲಿಗೇ ಮುಗಿಯದು. ಇನ್ನೂ ಮದನಿಕೆಯರು ಅವರವರ ಹಾವಭಾವ ಭಂಗಿಗಳಲ್ಲಿ ನಮ್ಮನ್ನು ರಂಜಿಸಲು ಯಾವಗಲೂ ಸಿದ್ಧರಿದ್ದಾರೆ. ಇಂತಹ ಕಿನ್ನರಲೋಕ ಹಾಸನ ಜಿಲ್ಲೆಯಲ್ಲಿದೆ. ನೋಡುಗರ ನಿರಂತರ ನೋಟಕ್ಕೆ ಮತ್ತೆ ಸಿಗುವವಳೇ  ‘ನೀಲಾಂಬರಿ’. ‘ನೀಲಾಂಬರಿ’ ರಾಗದಲ್ಲಿಯೇ ರಚಿತವಾಗಿ ಮಿಶ್ರಛಾಪು ತಾಳದಲ್ಲಿರುವ ಈ ಕೃತಿ ಚೇಳಿಗೆ ಹೆದರಿ ಭಯಕ್ಕೊಳಗಾಗಿರುವ ಬಾಲಿಕೆಯನ್ನು ಕುರಿತು ಇದೆ. ಕವಿ ಇವಳನ್ನು ಎದುರಿಸಲಾಗದೆ “ನೀಲಾಂಬರೆ ಏನಂಗ ವಿಭ್ರಾಂತಿಯೇ ಅಶಾಂತಿಯೇ” ಎಂದಿದ್ದಾರೆ. ಬಾಲಿಕೆಯೊಬ್ಬಳು ಧರಿಸುತ್ತಿರುವ ಸೀರೆಯಲ್ಲಿ ಚೇಳನ್ನು ಕಂಡು ಬೆಚ್ಚಿ ನೆಲಕ್ಕೊರಲಿದ  ಅ ಚೇಳನ್ನು ಭಯದಿಂದ ನೋಡುತ್ತಿರುವ ಶಿಲ್ಪ “ಹೆದರಬೇಡ ಕೇಶವನಿದ್ದಾನೆ” ಎಂದು ಕವಿ ಸಮಾಧಾನಿಸುತ್ತಾರೆ ತನ್ನ ಕವಿತೆಯ ಮೂಲಕ.

    ‘ಹಾವಸುಂದರಿ’ಯೂ  ಉತ್ತಮ ಶಿಲ್ಪಗಳಲ್ಲೊಂದಾಗಿದ್ದು  ‘ಶಕುನಶಾರದೆ’  ಎಂಬ ಶಿಲ್ಪದೆಡೆಗೆ ನಮಗೆ ದಾರಿ ತೋರಿಸುತ್ತದೆ. ಶಕುನದ ಮೂಲಕ ಲೋಕದ ವ್ಯಾಪಾರವನ್ನು ತಾಳೆಗರಿಗಳ ಮೂಲಕ ಹೇಳುವ ಸುಂದರಿ ಕೇಶವನ ಉಜ್ವಲ ಸಾಮ್ರಾಜ್ಯದ ಉಜ್ವಲ ಭವಿಷ್ಯ ಹೇಲುವಂತಿದೆ.

    ನಂತರದವಳೆ  ‘ವೀಟೀಧರೆ’  ಶಿಲಾಬಾಲಿಕೆಯರು ಎಂದರೆ ನಟನೆಗೆ ಹೆಸರಾದವರು. ವೀಟೀಧರೆಯಾಗಿ ಚನ್ನಕೇಶವನಿಗೆ ತಾಂಬೂಲ ನೀಡ ಬಯಸುವ ಈಕೆ ಉತ್ಸಾಹದಿಂದ ಚಿಗುರಲೆ ಹಿಡಿದುಕೊಂಡು ಸಖ ಕೇಶವನಿಗಾಗಿ ನಿರೀಕ್ಷಿಸುವಂತಿದೆ.

    ನಾಗವೀಣೆಯನ್ನು ನುಡಿಸುತ್ತ ಎದುರಾಗುವ ಶಿಲ್ಪ  ‘ನಾಗವೈಣಿಕೆ’.  ಈ ತರುಣಿ ನರನಾರಿ ಹೃದಯಂಗಳ ಸುರ ನರ್ತಕಿಯಾಗಿದ್ದಾಳೆ. ಆಸ್ತಿಕ, ನಾಸ್ತಿಕ, ಅನ್ಯಮತೀಯರನ್ನೂ ಬೆಂಬಿಡದೆ ಕಲಾಲೋಕ್ಕೆ ಸೆಳೆಯುವ ಮಿಂಚಿನ ಶಿಲ್ಪ ಭೂಷಣ ಹೆಣ್ಣು ಮಕ್ಕಳ ಸ್ವತ್ತೇ, ಸೌಂದರ್ಯ ವಿಶ್ತತತ್ವ ಆ  ಪರತತ್ವ ಭಾಸವೇ ಸೌಂದರ್ಯಂ ಅದನ್ನು ಹೆಚ್ಚಿಸುವುದ ಆಕೆಯ ಅಭರಣಗಳು ತನ್ನ  ಕೈಗಳಿಗೆ ತೊಡಲು ಹಿಡಿದ ಬಳೆ ಆಕೆಯ ಅತೀ ಸಹಜ ಭಂಗಿ ರಸಿಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಇವಳೇ ‘ಭೂಷಣಪ್ರಿಯೆ’  “ತರಣಿಗೇ ದೀಪೋತ್ಸವವೇ?” ಎಂದು  ವಿಮರ್ಶಕರು ಹೇಳಿದ್ದಾರೆ. ನನ್ನನಗಲಿ ಒಂದಿಂಚೂ ದೂರ ಸರಿಯಬೇಡ ಎಂದು ಹಾಡಿನ ಮೂಲಕ ಕೇಳುವ ಶಿಲ್ಪ  ‘ಕೇಳೀನೀರತೆ’.  ಕೇಶವನ ದಾಸಿ ಕೊರವಂಜಿ.  ಕೊರವಂಜಿ  ವೇಷವನ್ನು ಹಾಕಿ ಪದ್ಮಾವತಿಯನ್ನು ವರಿಸಲು ಬಂದವನು ಶ್ರೀನಿವಾಸ ಅಂತಹ ಕೊರವಂಜಿ ವೇಷಧಾರಿಯನ್ನು ಕವಿ “ನಟನವಾಡಿದಳ್ ತರುಣಿ ನಟನವಾಡಿದಳ್”  ಎಂದು ಪರಿಚಯಿಸಿದ್ದಾರೆ. “ಕೊರವಂಜಿ ವೇಷದಿ ಬಂದೊಡೆಂ ಶರದೈಂದಹಾಸವ ಮುಚ್ಚಿಹಿಯೇಂ” ಎಂದಿದ್ದಾಳೆ. ಆಕೆಯ ಕೈಯ ಹೇಳಿಗೆ, ಕೋಲು, ಸೊಂಟವನ್ನು ತುಸುತಗ್ಗಿಸಿ ನಿಂತಿರುವುದನ್ನು ನೋಡಿದವರು ಭಲೇ!ಬೇಷ್!  ಅನ್ನದೆ ಇರಲಾರರು. ಮುಂದಿನ ಶಿಲ್ಪ “ಕೇಶರುಷ್ಠೆ ರೋಷವಿದೇನೇ ಸಖಿ ಓ ಸುಮುಖೀ”  ಎಂದು ಕವಿತೆಯ ಸಾಲುಗಳಿವೆ. ಕೇಶವನ ಮೇಲೆ ಹುಸಿಕೋಪವ ತೋರಿಸುವ ಹುಡುಗಿ.

    ಗಂ‍ಧರ್ವ ಕನ್ನಿಕೆಯರು ಎನ್ನುವ ಇಲ್ಲಿನ ತರುಣಿಯರಲ್ಲಿ ನಮಗೆ ಮುಂದೆ ದರ್ಶನ ನೀಡುವವಳು  ‘ಪಾದಾಂಗುಳಿಯೇ’  ಕಾಲುಂಗರವನ್ನು ಹಾಕಹೋಗಿ ತುಸು ಎಡವಿದಂತಾಗಿ ಬೀಳುವ ಭಯದಿಂದ ಲತಾಂಗಿಯಾದರೂ ಲತಾಶ್ರಯಿಯಾಗುವ ಪರಿ ಎಲ್ಲರಲ್ಲೂ ಬೆರಗು ತರಿಸುವುದು. ಕೇಶವನ ಕೃಪೆಯೆ ಸಾದಾಕಾಂಕ್ಷಿಯಾದ ಈಕೆಗೆ ಸುಂದರ ಸಹಶಿಲ್ಪಗಳ ಬೆಂಗಾವಲೂ ಇದೆ. ಎಂತಹ ನರ್ತನ ಪ್ರದರ್ಶನ ಮಾಡಿದರೂ ನನ್ನ ಬಳಿ ಕೇಶವ ಸುಳಿಯುತ್ತಿಲ್ಲವೇಕೇ? ಎಂದು ವಿರಹಕ್ಕೆ ಸಿಕ್ಕಿದ ಪಾತ್ರವೇ ವಿರಹಾರ್ತೆ ನನ್ನಿಂದ ಏನಾದರೂ ದೋಷವಾಗಿದ್ದರೆ ಮನ್ನಿಸು ಓ ಪ್ರಾಣನಾಥ “ಅನುರಾಗಾಕಾಂಕ್ಷೆಯಂ ನೀಂ ಕನಲಿರ್ಪುದೆಂತು” ಎಂದು ಕವಿ ಆಕೆಯ ಮನದ ಇಂಗಿತವನ್ನು ಕೇಳಿಸಿಕೊಂಡು ಓದುಗರಿಗೆ ಹೆಳುತ್ತಿದ್ದಾರೆ. ಈ ಕಿನ್ನರಿಯ ಮನದ ಇಂಗಿತವನ್ನು ಕಂಡುಬಂದ ಕೇಶವನ್ನು ಕಂಡ ಕೂಡಲೆ ಈ ಚಾಪಲೆ ಚಿಗರೆಯಂತೆ ಸಿಗಿಯುತ್ತಾಳೆ. ತಾನೊಬ್ಬಳೆ ‘ವಿಶ್ವಸುಂದರಿ’ ಎಂದು ಕೇಶವನನ್ನು ಸಂಧಿಸುವಂತೆ ಕಡೆದಿರುವ ಶಿಲ್ಪ ‘ಚಾರುಹಾಸಿನಿ’. ಮಧ್ಯಮಾವತಿ ರಾಗದಲ್ಲಿ ರಚನೆಯಾಗಿರುವ ಕೃತಿಯ ಹೆಸರು ವಿಕಟರ‍್ತಿನಿ.  ಜಾನಪದ ಶೈಲಿಯಿಂದ ಕೂಡಿದೆ. ಗಂಡಿನ ವೇಷಧಾರಿಯಾಗಿ ನೃತ್ಯೋನ್ಮತ್ತೆಯಾಗಿ ನರ್ತಿಸುತ್ತಿರುವ ಕವಿ ಈಕೆಯನ್ನು ಮದ್ದನು ಸೇವಿಸಿ ಹುಚ್ಚಾದಳೇನೋ ಎಂದು ಕವಿ ಈಕೆಯನ್ನು ರೇಗಿಸುತ್ತಾರೆ. ಹಾಗೆಯೇ ಗಾಂಧರ್ವದೇವಿ, ಲಾಸ್ಯಸುಂದರಿಯರು ನಾಟ್ಯವ ಮೂಲಕ ಸುಂದರ, ಸಂತೃಪ್ತ ಮುಖಮುದ್ರೆಯ ಶಿಲ್ಪಗಳು ನೋಡುಗರನ್ನು ಕಿನ್ನರ ಲೋಕಕ್ಕೆ ಪ್ರಯಾಣಿಸುವಂತೆ ಮಾಡುತ್ತವೆ.

    ದೇವಾಲಯದ ನವರಂಗದ ಕಂಬಗಳ ಮೇಲೆ ಇರುವ ನಾಲ್ಕು ಮದನಿಕೆಯರಲ್ಲಿ ಆಗ್ನೇಯಕಂಬದವಳೇ   ‘ಶುಖಸಖಿ’  ಎಡತೋಳ ಮೇಲೆ ಕೂಳಿತಗಿಳಿ ಅವಳ ಕಂಠೀಹಾರವನ್ನು ಹಿಡಿದೆ. ಹಣ್ಣೊಂದರ ಆಸೆ ತೋರಿಸಿ ತನ್ನಾಭರಣ ಬಿಡಿಸಿಕೊಳ್ಳುತ್ತಿರುವ ಈಕೆಯ ಸೊಗಸು ಕೇಳಬಾರದು ನೋಡಲೇಬೇಕು. ಇವಳ ಬಲಗೈ ಬಳೆ ಹಿಂದೆ-ಮುಂದೆ ಸರಿಸಬಹುದಾಗಿದೆ. ಹೆಣ್ಣಿನ ಮನದಾಸೆಯ ಸ್ಪಷ್ಟತೆಯನ್ನು ಮಂಗಳಕರ ಒಳೆಯ ಮೂಲಕ ತಣಿಸುವಂತಿದೆ.

    ನೈರುತ್ಯ ಕಂಬದ ಮೇಲಿನ ‘ಉಲ್ಲಾಸಿನಿ’ ಹಾವಭಾವ, ಪ್ರಭಾವದಿನಾಳುವ ಸೈನಾಧಿಕಾರಿಯಾಗಿದ್ದರೆ, ‘ಭಾವದೇವಿ’  ಎಂಬ ಶಿಲ್ಪ ಚೈತನ್ಯಕ್ಕೆ ಅಧಿಪತ್ಯೆಯಾಗಿದ್ದಾಳೆ. ದ್ರೌಪದಿಯು ಅವಮಾನಕ್ಕೆ ಸೇಡುತೀರಿಸಿಕೊಳ್ಳಲೇ ಇರುವಂತೆ ಕಡೆದಿರುವ  ಶಿಲ್ಪ  ‘ವೇಣಿ ಸಂಹಾರೆ’.  ಸಖ ಕೇಶವನಿಗೆ ತನ್ನ ಒಡಲಾಳದ ನೋವನ್ನು ನಿವೇದನೆ ಮಾಡಿಕೊಂಡು ಧರೆಯ ಜನರಿಗೆ ಇಂತಹ ಅವಮಾನ, ಕಷ್ಟ, ಚಿಗುಪ್ಸೆ ಕೊಡಲುಬೇಡ ಎಂದು ನಿವೇದಿಸಿಕೊಳ್ಳುವಂತಿದೆ.

    ವಾಯುವ್ಯ ಮೂಲೆಯಲ್ಲಿ ಕಿರೀಟಧಾರಣೆ ಮಾಡಿಕೊಂಡು ನೃತ್ಯಸರಸ್ವತಿಯಾಗಿರುವ ಈ ಶಿಲ್ಪ ಮುಕ್ತಿಗೆ ಸಂಕೇತವೆಂಬಂತೆ ಇದೆ. ಕೇಶವನ ಪ್ರೀತಿಯನ್ನು ಕಾಣದೆ ಕಂಗಾಲಾಗಿ ಹೂವಿನ ಎಸಳುಗಳನ್ನು ಕಲ್ಲಮೇಲೆಸೆದು ಚಿಂತಿಸುವ ಭಾವದ ಶಿಲ್ಪಿ ಪ್ರಣಯ ವಂಚಿತೆಯದ್ದು. ಪ್ರಣಯದ ಹಸಿವಿನಿಂದ ಸಖನನ್ನು ಸಂತೃಪ್ತಗೊಳಿಸಲೆಂದು ಕಡೆದಿರುವ ಶಿಲ್ಪಿ  ‘ಕಲಹಾಂತರಿತೆ’  ರಾಜೇಂದ್ರನರಮನೆಯ ಎಲ್ಲಾ ವಿಲಾಸ ಪಡೆದುಕೊಂಡು ಸಂತೃಪ್ತಳಾಗಿರುವಂತೆ ಕಾಣುವ ಶಿಲ್ಪಿ  ವಿಲಾಸಿಕೆ.

    “ನೃತ್ತಹಾಸಿನೀ ಮತ್ತಕಾಶಿನೀ ಚಿತ್ತಜೋತ್ಸವೆ ಪ್ರತ್ಯವೇಕ್ಷಣಿ”  ಎಂದು ಕವಿಯಿಂದ ಕರೆಸಿಕೊಂಡಿರುವ ಶಿಲ್ಪ  ನೃತ್ಯಹಾಸನಿ.  ಚನ್ನಕೇಶವನಿಗೆ ಪೂರ್ಣ ನೃತ್ಯಸುಖವನ್ನು ಕೊಡುವ ಶಿಲ್ಪ. ಪೂರ್ಣಸಖನಾಗಿ ತೂರ್ಣಕರುಣೆಯಿಂದ ಚನ್ನಕೇಶವನನ್ನು ವರಿಸುತ್ತಾನೆ ಎಂಬ ಆತ್ಮವಿಶ್ವಾಸ ತೋರುವ ಶಿಲ್ಪ. ಚಕ್ರವಾಕಿ  ಎಂಬ ಶಿಲ್ಪ ಪ್ರಣಯ ಕಲ್ಪಿತೆಯಾಗಿ “ನನ್ನಿಂದಾದ ಪ್ರಮಾದವಾದರು ಏನು?” ಎಂದು  ಕೇಶವನ್ನು ಕೇಳುವಂತಿದೆ.

    ‘ಲತಾಂಗಿ’  ಶ್ರೀಲಲಿತೆಯ ಅಂತರಂಗ ಸಾಮ್ರಾಜ್ಯದ ಮಧುರಗಾನ ಎಂಬ ಅಮೃತ ತುಂಬಿ ಕೇಶವನೆ ಅಂತಃಪುರವಾಸಿನಿ ಎಂದು ಬಹುವಿಧವಾಗಿ ಹೆಮ್ಮೆ ಪಡುವ ಶಿಲ್ಪ ‘ಲತಾಂಗಿ’  ಸೌಂದರ್ಯದ ಖನಿಯಂತಿದೆ. ಡಿ.ವಿ.ಜಿ.ಯವರ ಅಂತಃಪುರಗೀತೆಗಳು ಕೃತಿಯ ಮುಂದುವರೆದ ಭಾಗ ಉಪಸಂಹಾರ. ಇಲ್ಲಿ ಪದ್ಯಗಳು ಸೌಂದರ್ಯ  ಎಂಬ ಶೀರ್ಷಿಕೆಯಲ್ಲಿವೆ. ಚಕ್ರವರ್ತಿಯ ಕಣ್ಣು ನಾಡನ್ನು, ಮಂದಿರವನ್ನು ಒಂದುಗೂಡಿಸಿ ನಾಡಗಡಿಯನ್ನು ಹಸನುಮಾಡಿ ಅದರಿಂದ ಪೂರ್ಣದ ಬೆಳೆಯನ್ನು ತೆಗೆಯುವಂತೆ ಕವಿ ತನ್ನ ಕಣ್ಣ ಅನುಭವವನ್ನು ಮಣ್ಣಕಣದಲ್ಲಿ ಹೊನ್ನನಾರಿಸುವಂತೆ ಆತ್ಮಸಂತೋಷ ಎಂಬ ವಜ್ರವನ್ನು ಸೌಂದರ್ಯ ಎಂಬ ಸರದಲ್ಲಿ ಹಿಡಿದಿಟ್ಟಿದ್ದಾರೆ. ಕಲಾಜೀವಿಗಳಿಗೆ ಕೇಳಿದ್ದನ್ನು ಕೊಡುವಂತೆ ಈ ಶಿಲ್ಪಗಳು ಇದೆ ಎಂಬುದನ್ನು ಜಯವಿಶ್ವಮೋಹನ ಎಂಬ ಕೃತಿಯಲ್ಲಿ ವಿವರಿಸಿ ಈ ಕೃತಿಯ ಓದುಗರಿಗೆ ಕೇಶವ ಆಶೀರ್ವದಿಸಲಿ ಎಂದು ಕವಿ ಕಲಾರಧಕರಾಗಿ ಇಲ್ಲಿ ಕೇಳಿಕೊಳ್ಳುತ್ತಾರೆ.

    ಬೇಲೂರಿನ ಚನ್ನಕೇಶವ ದೇವಾಲಯದ ಸುಂದರ ವರ್ಣನೆಗಳುಳ್ಳ ಬಿಡಿಕವಿತೆಗಳ ಸಂಗ್ರಹ ‘ಅಂತಃಪುರಗೀತೆ’ ಶಿಲ್ಪಕನ್ನಿಕೆಯರ ಸೌಂದರ್ಯದ ಆಧಾರದ ಮೇಲೆ ಪಡೆದ ಅಮೃತ ಕೃತಿ ‘ಅಂತಃಪುರಗೀತೆ’ ಸಂಗೀತದ ರಸಪಾಕವನ್ನು ಹದವಾಗಿ ಬೇಯಿಸಿ, ತಣಿಸಿ ಓದುಗರ ಕೈಗಿತ್ತಿದ್ದಾರೆ. ಇಲ್ಲಿ ವೈಷ್ಟವ, ಶೈವ ಎಂಬ ಮಡಿವಂತಿಕೆಯಿಲ್ಲ ಹೊಯ್ಸಳರ ಧರ್ಮಸಮನ್ವಯತೆಗೆ ಇದೊಂದು ಸಾಕ್ಷಿ. ಪ್ರತಿ ಶಿಲ್ಪದ ಪ್ರಭಾವಳಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಹೂವಿನಿಂದ ನಾರು ಸ್ವರ್ಗಕ್ಕೆ ಎಂಬ ಗಾದೆಗೆ ಆಪವಾದವೆಂಬಂತೆ ಸಹಶಿಲ್ಪಗಳಿಂದ ಮುಖ್ಯಶಿಲ್ಪಗಳ ಗಾಂಭೀರ್ಯ ಮತ್ತಷ್ಟು ಕಳೆಗಟ್ಟಿದೆ. ಜಕಣಾಚಾರ್ಯ, ಚಿಕ್ಕಹಂಪ, ಬಳ್ಳಿಗಾವೆಯ ದಾಸೋಜ, ಚಾವಣ ಇಲ್ಲಿಯ ಪ್ರಮುಖ ಶಿಲ್ಪಿಗಳು ತಮ್ಮ ಕಾರ್ಯದಲ್ಲಿ ಭೇದತೋರದೆ ಮುಖ್ಯ ಶಿಲ್ಪಗಳಂತೆ ಸಹಶಿಲ್ಪಗಳಿಗೂ ಸಮಾನ ಅಸ್ತೆ ತೋರಿಸಿದ್ದಾರೆ.

    “ಇಂಪಿಲ್ಲದೆ ಕೇದಗೆಯಂ ಕಂಪಿಲ್ಲದ, ಪೆಂಪಿಲ್ಲದ ಕುಲವಧು ಒಪ್ಪಗುವೇಂ”? ಎಂಬ ರನ್ನನ ಮಾತಿನಂತೆ ಈ ಎಲ್ಲಾ ಪರಿಭಾಷೆ ಶಿಲಾಕನ್ನಿಕೆಯರಲ್ಲಿದೆ. ಪ್ರಪಂಚದ ಪಾಪ ವಿಮೋಚನೆಗೆ ಸೌಂದರ್ಯ ಸಿದ್ಧ ಔಷಧ ಎನ್ನುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ ‘ಹಲವು ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳಲ್ಲಿ ಪಾಂಡಿತ್ಯ ಹೊಂದಿದ ಕವಿ’ ಹಾಗೆ ನಮ್ಮ ದೃಷ್ಠಿಯ ಕಲ್ಮಷವನ್ನು ತೊಡೆದುಹಾಲು ಹೃದಯಂತರಾಳದಿಂದ ವೀಕ್ಷಿಸಿ ಪಾವಿತ್ರತೆ ಪಡೆಯ ಬಹುದಾಗಿದೆ. ತನ್ನ ರಾಣಿಯರ ಮೂಲಕ ಜಗತ್ತಿನ ವಿಹಾರಕ ಎಷ್ಟು ಸೌಂದರ್ಯಸಾಗರವನ್ನು ಬೇಲೂರಿನಲ್ಲಿ ತಂದಿರಿಸಿಕೊಂಡಿದ್ದಾನೆ. ದಿವ್ಯ ಕಲೆಯ ಭವ್ಯತೆಯನ್ನು ರಸಿಕರಾಗಿ ನೋಡುಗರು ಆಸ್ವಾದಿಸಬೇಕು. ಡಿ.ವಿ.ಜಿ. ಯವರ ಪ್ರಕಾರ ನೋಡುಗರೂ ಕೂಡ ಅಂತಃಪುರವಾಸಿಗಳೇ ಆಗಿರುವವರು.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Bengaluru  Satellite Town Ring Road : ದೇವನಹಳ್ಳಿಯಿಂದ ಮೈಸೂರಿನವರೆಗೆ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣ

    BENGALURU MAR 11:

    ದೇವನಹಳ್ಳಿಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಅವರು ಇಂದು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಆಯೋಜಿಸಿದ್ದ ‘ ಶೃಂಗಸಭೆ’ ಯಲ್ಲಿ ಪಾಲ್ಗೊಂಡು ಮಾತನಾಡಿದರು.

    ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆಯನ್ನು ನಿವಾರಿಸಲು ಫೆರಿಫೆರಲ್ ರಿಂಗ್ ರಸ್ತೆಯ ಕಾಮಗಾರಿಗೆ ಸಧ್ಯದಲ್ಲಿಯೇ ಪ್ರಾರಂಭಿಸಲಾಗುವುದು. ಹೆಬ್ಬಾಳದಿಂದ ಮೈಸೂರು ರಸ್ತೆ ಫೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಅದರ ಮುಂದುವರಿದ ಭಾಗವಾಗಿ ಸೆಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಬೆಂಗಳೂರು ನಗರದಲ್ಲಿ ಉತ್ತಮ ರಸ್ತೆಗಳು, ಡ್ರೈನೇಜ್ ವ್ಯವಸ್ಥೆ, 12 ಅತಿ ಸಾಂದ್ರತೆಯಿರುವ ಕಾರಿಡಾರ್ ಗಳನ್ನು ಸರ್ಕಾರ ಅಭಿವೃದ್ಧಿಗೊಳಿಸುತ್ತಿದೆ. ಈ ಕಾರಿಡಾರ್ ಗಳಿಂದಾಗಿ ನಗರದ ಪ್ರಮುಖ ನಗರಗಳಿಗೆ ಸಿಗ್ನಲ್ ರಹಿತ ರಸ್ತೆ ಸಂಪರ್ಕ ದೊರೆಯಲಿದೆ. ಆಯಾ ವಾಹನಗಳ ಓಡಾಟಕ್ಕೆ ಆಯಾ ರಸ್ತೆಗಳನ್ನು ಅಭಿವೃದ್ಧಿಪಡಿಸಿ ವಾಹನ ದಟ್ಟಣೆಯನ್ನು ನಿವಾರಿಸಲು ಯೋಜಿಸಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು ನಗರಕ್ಕೆ ಟ್ರಾಫಿಕ್ ಪ್ಲಾನ್ನ್ನು ರೂಪಿಸಲಾಗುತ್ತಿದೆ‌ ಎಂದು ಸಿಎಂ ಹೇಳಿದರು.

    ಮಳೆನೀರು ಸರಾಗವಾಗಿ ಹರಿದುಹೋಗಲು ರಾಜಕಾಲುವೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಈ ವರ್ಷ ಇದಕ್ಕಾಗಿ 1500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.

    ಜವಾಬ್ದಾರಿಯುತ ನಾಗರಿಕ ಸಮಾಜ ಬೆಂಗಳೂರಿನ ಜೀವಾಳ :ಜವಾಬ್ದಾರಿಯುತ ನಾಗರಿಕ ಸಮಾಜ ಬೆಂಗಳೂರಿನ ಜೀವಾಳವಾಗಿದೆ. ನಗರದ ಜನರ ಸಮಸ್ಯೆಗಳ ಬಗ್ಗೆ ಅರಿತು , ಪರಿಣಾಮಕಾರಿ ಪರಿಹಾರವನ್ನು ಸೂಚಿಸುವ ಉತ್ತಮ ಹಾಗೂ ಬಲಿಷ್ಟ ನಾಗರಿಕ ಸಮಾಜದ ಅವಶ್ಯಕತೆ ಇದೆ. ನಾಗರಿಕ ಸಮಾಜಗಳು ಸರ್ಕಾರದೊಂದಿಗೆ ಚರ್ಚಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕು. ಈ ಸಮಾಜಗಳಿಂದ ವಿವಿಧ ಸ್ಥರದ ಜನರೊಂದಿಗಿನ ಸಂಪರ್ಕದಿಂದಾಗಿ ಕೆಳವರ್ಗದ ಜನರ ಜೀವನವನ್ನು ಸುಗಮಗೊಳಿಸಿದಂತಾಗುತ್ತದೆ ಎಂದರು .

    ಬೆಂಗಳೂರು ನಗರ ಅಭಿವೃದ್ಧಿ:ಭವಿಷ್ಯದ ಬೆಂಗಳೂರನ್ನು ರೂಪಿಸುವವರಿಗೆ ಬೆಂಗಳೂರಿನ ಇತಿಹಾಸದ ಜ್ಞಾನವಿರಬೇಕಾಗುತ್ತದೆ. ಮೂಲ ಬೆಂಗಳೂರಿಗೆ 8 ಪುರಸಭೆ , 110 ಗ್ರಾಮಗಳು ಸೇರಿ ಈಗ ನವೀಕೃತ ಬೆಂಗಳೂರು ಆಗಿದೆ. ಇಂತಹ ಬೆಂಗಳೂರಿಗೆ ಅಭಿವೃದ್ಧಿ, ರಸ್ತೆ, ನೀರು ಸೇರಿದಂತೆ ಉತ್ತಮ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ. ನಗರದಲ್ಲಿ ರಸ್ತೆ ಅಭಿವೃದ್ಧಿ, ನೀರು ಸರಬರಾಜುಗಳಿಗೆ ಒಂದು ನಿರ್ದಿಷ್ಟ ಪ್ಲಾನ್ ಇಲ್ಲವಾಗಿದೆ. ಆದ್ದರಿಂದ ಬೆಂಗಳೂರು ನಗರ ಯೋಜನೆಯನ್ನು ಸರಿದಾರಿಗೆ ತರಬೇಕಿದೆ ಎಂದರು.

    ಬೆಂಗಳೂರು ಆರ್ಥಿಕ ರಾಜಧಾನಿಯಾಗುವತ್ತ ಹೆಜ್ಜೆ ಹಾಕುತ್ತಿದೆ :ದೇಶದ ವಿವಿಧ ಭಾಗಗಳಿಂದ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುತ್ತಾರೆ. ದೇಶದ ಉಳಿದ ಮೆಟ್ರೋಪಾಲಿಟನ್ ನಗರಗಳಿಗಿಂತ ಬೆಂಗಳೂರು ಉತ್ತಮವಾಗಿದೆ ಎಂದು ಹಲವು ಜನರು, ಖಾಸಗಿ ಕಂಪನಿಗಳು ನಗರಕ್ಕೆ ಬರುತ್ತಿವೆ. ಮೊದಲು ಬೆಂಗಳೂರು ಐಟಿ ಬಿಟಿ ರಾಜಧಾನಿ ಎಂದು ಗುರುತಿಸಲಾಗುತ್ತಿತ್ತು. ಆದರೆ ನಿಧಾನವಾಗಿ ಬೆಂಗಳೂರು ನಗರ ಈಗ ಆರ್ಥಿಕ ರಾಜಧಾನಿಯಾಗುವತ್ತ ಹೆಜ್ಜೆ ಹಾಕುತ್ತಿದೆ. ಪರಿಹಾರ ಮಾರ್ಗವನ್ನು ಹುಡುಕದೇ ಕೇವಲ ಸಮಸ್ಯೆಗಳ ಬಗೆಗಿನ ಚರ್ಚೆಯಿಂದ ಪ್ರಯೋಜನವಿಲ್ಲ. ನಗರ ಯೋಜನೆಗಳಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ ಅದನ್ನು ವಾಸ್ತವತೆಗೆ ತರುವವನು ನಿಜವಾದ ನಗರ ಯೋಜನೆಕಾರ ಮತ್ತು ಉತ್ತಮ ಆಡಳಿತಗಾರ ಎಂದೆನಿಸುತ್ತಾನೆ. ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ನ್ನು ವಾಸ್ತವಿಕತೆಗೆ ತರಲು ಸಾರ್ವಜನಿಕರ ಸಹಯೋಗ , ಸಹಭಾಗಿತ್ವ ಅತ್ಯಗತ್ಯ ಎಂದು ತಿಳಿಸಿದರು.

    ತ್ಯಾಜ್ಯ ನಿರ್ವಹಣೆ:ಬೆಂಗಳೂರಿನಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ನಗರದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ನಿಯಂತ್ರಣ, ನಿರ್ವಹಣೆ ಮಾಡಲು ಚಿಂತಿಸಬೇಕು. ದೊಡ್ಡ ಹೊಟೆಲ್ ಗಳು, ಕಲ್ಯಾಣಮಂಟಪಗಳು, ಆಸ್ಪತ್ರೆಗಳು, ಮಾಲ್ ಗಳು ಈಗ ಆಧುನಿಕ ತಂತ್ರಜ್ಞಾನದ ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ತ್ಯಾಜ್ಯ ಸಂಸ್ಕರಣೆಯನ್ನು ಮಾಡಬಹುದಾಗಿದೆ. ಇದರಿಂದ ಉತ್ಪತ್ತಿಯಾಗುವ ಸಾವಯವ ಗೊಬ್ಬರವನ್ನು ಕೃಷಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

    ಇಂದು ವಿಶ್ವ ಕಿಡ್ನಿ ದಿನ- ಮೂತ್ರಪಿಂಡದ ಕಾಳಜಿ ಹೇಗೆ? ಖ್ಯಾತ ವೈದ್ಯರಾದ ಡಾ. ಸಂದೀಪ ಹುಯಿಲಗೋಳ ನೀಡಿದ ಸಲಹೆಗಳನ್ನು ತಪ್ಪದೇ ಓದಿ

    ಕಿಡ್ನಿ ಫೇಲ್ ಕುರಿತು ಜನರು ಭಯಪಡುವ ಅಗತ್ಯವಿಲ್ಲ, ಇದಕ್ಕೆ ಸೂಕ್ತವಾದ ಚಿಕಿತ್ಸೆಯಿದೆ ಎಂದು ಮೂತ್ರಪಿಂಡ ತಜ್ಞರಾದ ಡಾ. ಸಂದೀಪ ಹುಯಿಲಗೋಳ ಹೇಳಿದ್ದಾರೆ. ಇವರು ಬಾಗಲಕೋಟೆಯ ಜನಪ್ರಿಯ ವೈದ್ಯರು ಮತ್ತು Prepare Edutech ಎಂಬ ದೇಶದ ಮೊದಲ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಲಿಕಾ ತಾಣವಾದ preped.in ನ ಸಿಇಒ ಮತ್ತು ಸಹ-ಸ್ಥಾಪಕರು. ವಿಶ್ವ ಮೂತ್ರಪಿಂಡ ದಿನಾಚರಣೆ ಪ್ರಯುಕ್ತ (World Kidney Day ) ನಮ್ಮ ವೆಬ್ ತಾಣದ ಓದುಗರಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ, ಕಿಡ್ನಿ ತೊಂದರೆಗಳ ಕುರಿತು ಜನರಲ್ಲಿರುವ ಸಾಕಷ್ಟು ತಪ್ಪುಕಲ್ಪನೆಗಳನ್ನೂ ಈ ಲೇಖನದಲ್ಲಿ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ.

    ಕಿಡ್ನಿ ಅಥವಾ ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗ. ಶರೀರದೊಳಗಿನ ಕಲ್ಮಶಗಳನ್ನು ಬೇರ್ಪಡಿಸಿ ಹೊರಗೆ ಹಾಕುವುದು ಇದರ ಕೆಲಸ. ಸಾಮಾನ್ಯವಾಗಿ ಕಿಡ್ನಿ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿವಳಿಕೆಗಿಂತ ತಪ್ಪು ತಿಳಿವಳಿಕೆಯೇ ಹೆಚ್ಚಾಗಿವೆ. ಒಮ್ಮೆ ಕಿಡ್ನಿ ಸಮಸ್ಯೆ ಬಂದರೆ ಅದನ್ನು ಪರಿಹರಿಸಲು ಸಾಧ್ಯವಿಲ್ಲ. ಡಯಾಲಿಸಿಸ್ ಚಿಕಿತ್ಸೆ ಶುರುವಾದರೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಇದು ಭಯಕ್ಕೂ ಕಾರಣವಾಗಿದೆ. ಆದರೆ, ಕಿಡ್ನಿ ಸಮಸ್ಯೆಯ ಕುರಿತು ಇಂತಹ ತಪ್ಪು ಕಲ್ಪನೆಯ ಅಗತ್ಯವಿಲ್ಲ ಎಂದು ಕನ್ನಡದ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಇಂಗ್ಲಿಷ್ ಮತ್ತು ಕನ್ನಡ ಮಿಶ್ರಿತ ಪಾಠದ ಮೂಲಕ ಸರಳವಾಗಿ ವಿದ್ಯಾರ್ಥಿಗಳಿಗೆ ಹೇಳಿಕೊಡುವಂತಹ ವಿನೂತನ ಮೊಬೈಲ್ ಅಪ್ಲಿಕೇಷನ್ ಮತ್ತು ವೆಬ್ಸೈಟ್ ನೀಡಿದ ಡಾ. ಸಂದೀಪ ಹುಯಿಲಗೋಳ ಅಭಿಪ್ರಾಯಪಟ್ಟಿದ್ದಾರೆ.

    Study paramedical and nursing subjects in kannada with PrepEd app ಕನ್ನಡದಲ್ಲಿ ಪ್ಯಾರಾಮೆಡಿಕಲ್‌ ಮತ್ತು ನರ್ಸಿಂಗ್‌ ವಿಷಯಗಳನ್ನು ಅಧ್ಯಯನ ಮಾಡಲು ಪ್ರಿಪೆಡ್‌ ಎಜುಟೆಕ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

    ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಇದೆ, ಭಯ ಬೇಡ

    “ಕಿಡ್ನಿ ಸಮಸ್ಯೆ ಉಂಟಾಗುವ ಎಲ್ಲರೂ ಅನಗತ್ಯ ಭಯಪಡಬೇಕಾಗಿಲ್ಲ. ಕಿಡ್ನಿಗೆ ಸಂಬಂಧಿಸಿದ ಶೇಕಡ 90-95 ಸಮಸ್ಯೆಗಳು ತಾತ್ಕಾಲಿಕವಾಗಿರುತ್ತವೆ. ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಕೊಮಡು ಚಿಕಿತ್ಸೆ ಪಡೆದರೆ ಎಲ್ಲವೂ ಸರಿಯಾಗಿ ಮತ್ತೆ ಮೊದಲಿನಂತೆ ಆರೋಗ್ಯಕರ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಡಾ. ಸಂದೀಪ್ ಹೇಳಿದ್ದಾರೆ.

    ಕಿಡ್ನಿ ಸಮಸ್ಯೆ ತಿಳಿದುಕೊಳ್ಳುವುದು ಹೇಗೆ?

    “ಕಿಡ್ನಿ ತೊಂದರೆಗಳ ಬಗ್ಗೆ ಏಕೆ ತಿಳಿದುಕೊಳ್ಳಬೇಕು? ಸಮಸ್ಯೆ ಬಂದಾಗ ನೋಡೋಣ ಎಂಬ ಭಾವನೆ ಕೆಲವರಲ್ಲಿದೆ. ಇದು ದೊಡ್ಡ ತಪ್ಪು. ಏಕೆಂದರೆ, ಈ ಸಮಸ್ಯೆ ವ್ಯಕ್ತಿಗೆ ಅರ್ಥವಾಗುವುದೇ ತುಂಬಾ ತಡವಾಗಿ. ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಮೊದಮೊದಲು ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ತುಂಬಾ ತಡವಾದಗ ಕಿಡ್ನಿ ಸಮಸ್ಯೆಯ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿಲ್ಲ. ಕೈಕಾಲು ಮುಖ ಊದಿಕೊಂಡಿವೆ, ಸುಸ್ತಾಗುತ್ತಿದೆ, ಕಿಡ್ನಿ ಸಮಸ್ಯೆ ಉಂಟಾಗಿರಬಹುದು ಎಂದು ವೈದ್ಯರ ಬಳಿಗೆ ಹೋಗುವ ಹೊತ್ತಿಗೆ ಸಮಸ್ಯೆ ಸಾಕಷ್ಟು ಉಲ್ಬಣವಾಗಿರುತ್ತದೆ. ಮೊದಲೇ ತಿಳಿದಿದ್ದರೆ ಚಿಕಿತ್ಸೆ ಪಡೆಯುತ್ತಿದ್ದೇವು ಎಂದು ನಂತರ ಕೊರಗುತ್ತಾರೆ. ರೋಗ ಕೊನೆಯ ಹಂತ ತಲುಪಿದ ನಂತರ ಚಿಂತಿಸುವ ಬದಲು ಮೊದಲೇ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಉತ್ತಮ” ಎಂದು ರಾಜ್ಯದ ಪ್ರಮುಖ ಕಿಡ್ನಿ ತಜ್ಞರಾದ ಡಾ. ಸಂದೀಪ ಹುಯಿಲಗೋಳ ಸಲಹೆ ನೀಡಿದ್ದಾರೆ.

    India’s 1st study app for Paramedical & Nursing students in Kannada

    World Kidney Day- ತಪಾಸಣೆ ಮಾಡಿಸಿಕೊಳ್ಳುವುದು ಯಾಕೆ ಅಗತ್ಯ?


    ಸುಮ್ಮನೆ ಏಕೆ ತಪಾಸಣೆ ಮಾಡಿಸಿಕೊಳ್ಳಬೇಕು ಅಥವಾ ಯಾರು ತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಅದಕ್ಕೂ ಉತ್ತರವಿದೆ. ಅನುವಂಶಕವಾಗಿ ಮಧುಮೇಹ ಅಥವಾ ಕಿಡ್ನಿ ಸಮಸ್ಯೆಗಳು ಇದ್ದವರು, ಅಧಿಕ ರಕ್ತದೊತ್ತಡ ಇರುವವರು, ಹರೆಯದಲ್ಲೇ ಅತ್ಯಂತ ರಕ್ತದೊತ್ತಡದಿಂದ ಬಳಲುತ್ತಿರುವವರು ಹಾಗೂ ಕೈ ಕಾಲು ಮುಖದಲ್ಲಿ ಬಾವು ಕಾಣಿಸಿಕೊಂಡವರು ಕೂಡಲೇ, ತಡಮಾಡದೆ ತಪಾಸಣೆ ಮಾಡಿಸಿಕೊಳ್ಳಬೇಕು. ನಲವತ್ತು ವರ್ಷ ಮೇಲ್ಪಟ್ಟವರೂ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇನ್ನು ಸಣ್ಣಪುಟ್ಟ ಕಾರಣಗಳಿಗೆ ಮೇಲಿಂದ ಮೇಲೆ ನೋವು ನಿವಾರಕ ಮಾತ್ರೆ ನುಂಗುವವರು, ಧೂಮಪಾನ ಮಾಡುವವರು ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಡಾ. ಸಂದೀಪ ಹುಯಿಲಗೋಳ ಹೇಳಿದ್ದಾರೆ.

    World Kidney Day- ತಪಾಸಣೆ ದುಬಾರಿಯಲ್ಲ


    ರಕ್ತ, ಮೂತ್ರ ಅಥವಾ ರಕ್ತದೊತ್ತಡ ತಪಾಸಣೆ ಮಾಡಿಸಿಕೊಂಡರೆ ಸಾಕು. ಇದಕ್ಕೆ ತಗಲುವ ವೆಚ್ಚ ೩೦೦ರಿಂದ ೫೦೦ ರೂ. ಅಷ್ಟೇ. ಇಷ್ಟು ಹಣವನ್ನು ಏಕೆ ಖರ್ಚು ಮಾಡುವುದು ಎಂದು ಕೆಲವರು ಅಂದುಕೊಳ್ಳಬಹುದು. ಪ್ರತಿದಿನ ನಾವು ಇದಕ್ಕಿಂತ ಹೆಚ್ಚು ಖರ್ಚು ಮಾಡುವಾಗ ನಮ್ಮ ಬದುಕಿನ ಪ್ರಶ್ನೆಯಾಗಿರುವ ಕಿಡ್ನಿ ತಪಾಸಣೆ ಅತ್ಯಂತ ಅಗತ್ಯ. ತಪಾಸಣೆ ನಂತರ ಸಮಸ್ಯೆ ಇಲ್ಲದಿದ್ದರೆ ನಿಶ್ಚಿಂತೆಯಿಂದ ಮನೆಗೆ ಮರಳಬಹುದು. ಅಕಸ್ಮಾತ್ ಸಮಸ್ಯೆ ಇದ್ದರೆ ಮೊದಲ ಹಂತದಲ್ಲೇ ತಿಳಿಯಿತು ಎಂದುಕೊಂಡು ಸಕಾಲದಲ್ಲೇ ಅಗತ್ಯ ಚಿಕಿತ್ಸೆ ಪಡೆಯಬಹುದು. ಇದರಿಂದ ಕಡಿಮೆ ಸಮಯದಲ್ಲಿ ಮೊದಲಿನಂತೆ ಆರೋಗ್ಯಕರ ಬದುಕು ಸಾಧಿಸುವ ಅವಕಾಶ ಹೆಚ್ಚಿರುತ್ತದೆ. ಆರ್ಥಿಕ ಹೊರೆಯೂ ತಪ್ಪುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಆಲ್ಟ್ರಾ ಸೌಂಡ್ ಅಥವಾ ಕಿಡ್ನಿ ಬಯಾಪ್ಸಿ ಎಂಬ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಇವು ಎಲ್ಲರಿಗೂ ಅಗತ್ಯವಿರುವುದಿಲ್ಲ.

    World Kidney Day- ಕಿಡ್ನಿ ಸಮಸ್ಯೆಗೆ ಕಾರಣವೇನು?

    ದೀರ್ಘಕಾಲಿಕ ಕಿಡ್ನಿ ಸಮಸ್ಯೆಗಳು ಉಂಟಾಗಲು ಶೇ. ೩೦ರಿಂದ ಶೇ. ೪೦ರಷ್ಟು ಮಧುಮೇಹವೇ ಕಾರಣ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡವು ಕಿಡ್ನಿ ಸಮಸ್ಯೆಗೆ ಶೇ. ೫೦ರಷ್ಟು ಕಾರಣವಾಗುತ್ತದೆ ಅಧಿಕ ರಕ್ತದೊತ್ತಡವೇ ಕಿಡ್ನಿ ಸಮಸ್ಯೆಗಳಿಗೆ ಕಾರಣ ಎಂಬುದು ಜಾಗತಿಕವಾಗಿ ಸಾಬೀತಾಗಿದೆ. ಆದರೆ, ಭಾರತದಲ್ಲಿ ಮಾತ್ರ ಸಮಸ್ಯೆಗಳಿಗೆ ನಿಖರ ಕಾರಣ ತಿಳಿದಿಲ್ಲ. ಏಕೆಂದರೆ ವೈದ್ಯರ ಸಲಹೆ ಇಲ್ಲದೆ ಅನವಶ್ಯಕವಾಗಿ ಔಷಧ ಸೇವಿಸುವ ರೂಢಿ ಭಾರತದಲ್ಲಿ ಹೆಚ್ಚಾಗಿದೆ. ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದು ಮತ್ತೊಂದು ಪ್ರಮುಖ ಕಾರಣ. ಇನ್ನು ಸೋಂಕು ಹಾಗೂ ರಕ್ತದೊತ್ತಡಗಳಿಂದ ತಾತ್ಕಾಲಿಕವಾಗಿ ಕಿಡ್ನಿ ವೈಫಲ್ಯ ಆಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಕೊರೊನಾ ಭಯದಿಂದ ಎಲ್ಲರೂ ಸ್ವಯಂ ಚಿಕಿತ್ಸೆ ಮಾಡುತ್ತಿದ್ದು, ಅತಿಯಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ಇದರಿಂದಲೂ ತೊಂದರೆ ಉಂಟಾಗಬಹುದು.

    ಸಮಸ್ಯೆಯ ಲಕ್ಷಣ

    ವಿಪರೀತ ದಣಿವು, ಮೂತ್ರ ವಿಸರ್ಜನೆ ಸಂದರ್ಭದಲ್ಲಿ ಸಹಿಸಲು ಸಾಧ್ಯವಾಗದಷ್ಟು ನೋವು, ಮೂತ್ರದಲ್ಲಿ ರಕ್ತ ಬರುವುದು, ಅತಿ ಕಡಿಮೆ ಅಥವಾರ್ಝನಿ ವೈಫಲ್ಯದ ಲ ಅತಿ ಹೆಚ್ಚು ಮೂತ್ರ ವಿಸರ್ಜನೆ, ಮೂತ್ರದಲ್ಲಿ ನೊರೆ ಬರುವುದು, ಕೈಕಾಲು ಮುಖ ಕಣ್ಣು ಊದಿಕೊಳ್ಳುವುದು, ಊಟ ರುಚಿಸದೆ ಇರುವುದು ಹಾಗೂ ಅಧಿಕ ರಕ್ತದೊತ್ತಡವು ಕಿಡ್ನಿ ವೈಫಲ್ಯದ ಲಕ್ಷಣಗಳಾಗಿವೆ.

    ಕಿಡ್ನಿ ಕಾರ್ಯವೇನು? ಕಿಡ್ನಿ ಹೇಗಿರುತ್ತದೆ?


    ನಮ್ಮ ದೇಹದೊಳಗಿನ ನೀರಿನ ಅಂಶದಲ್ಲಿ ಸಮತೋಲನ ಕಾಯ್ದುಕೊಳ್ಳುವುದು, ಕಲ್ಮಶಗಳನ್ನು ಹೊರಗೆ ಹಾಕುವುದು ಹಾಗೂ ರಕ್ತದೊತ್ತಡ ನಿಯಂತ್ರಿಸುವುದು ಕಿಡ್ನಿಯ ಪ್ರಮುಖ ಕಾರ್ಯಗಳಾಗಿವೆ. ಇದರ ಜೊತೆಗೆ ರಕ್ತ ಉತ್ಪಾದನೆಗೂ ಕಿಡ್ನಿ ಕಾರಣವಾಗುತ್ತದೆ. ಏಕೆಂದರೆ, ರಕ್ತ ಉತ್ಪಾದನೆಯಾಗುವುದು ಎಲುಬಿನಲ್ಲ. ಅದಕ್ಕೆ ಬೇಕಾದ ಎರಿಥ್ರೋಪಾಯೊಟಿನ್ ಎಂಬ ಹಾರ್ಮೋನ್ ಕಿಡ್ನಿಯಿಂದ ಉತ್ಪಾದನೆಯಾಗುತ್ತದೆ. ಇನ್ನು ಎಲುಬುಗಳು ಮತ್ತು ಹಲ್ಲುಗಳಿಗೆ ಅಗತ್ಯವಿರುವ ಕಾಲ್ಷಿಯಂ ಹಾಗೂ ಪಾಸ್ಪರಸ್ ಕೂಡ ದೇಹದಲ್ಲಿ ಸಮತೋಲವಾಗಿದೆ ಎಂದರೆ ಅದಕ್ಕೆ ಕಿಡ್ನಿಯೇ ಕಾರಣವಾಗಿದೆ.
    ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ಒಂದು ಕಿಡ್ನಿಯು ಹತ್ತರಿಂದ ಹನ್ನೆರಡು ಸೆಂ.ಮೀ. ಉದ್ದ ಹಾಗೂ ನಾಲ್ಕರಿಂದ ಐದು ಸೆಂ.ಮೀ. ಅಗಲವಿರುತ್ತದೆ. ಇದರ ತೂಕ 150-200 ಗ್ರಾಂ ಇರುತ್ತವೆ. ಇವುಗಳಿಂದ ಕಲ್ಮಶ ಹೊರಗೆ ಹಾಕುವ ಕೆಲಸ ನಡೆಯುತ್ತದೆ.

    ಕಿಡ್ನಿಗಳ ಮುಖ್ಯ ಕೆಲಸವೇನು?

    ಕಿಡ್ನಿ (ಸಂಖ್ಯೆಯಲ್ಲಿ ಎರಡು ಇರುತ್ತದೆ) ದೇಹದ ಬಹುಮುಖ್ಯ ಅಂಗಗಳು. ಇವು ಮುಖ್ಯವಾಗಿ ನಾಲ್ಕು ಮುಖ್ಯ ಕೆಲಸಗಳನ್ನು ನಿರ್ವಹಿಸುತ್ತವೆ.
    • ದೇಹದಲ್ಲಿ ನೀರಿನ ಸಮತೋಲನ ಕಾಯ್ದುಕೊಳ್ಳುವಿಕೆ ಹಾಗೂ ದೇಹದ ಚಯಾಪಚಯ ಕ್ರಿಯೆಯ ಕಲ್ಮಶಗಳನ್ನು ಹೊರಹಾಕುವಿಕೆ (ಮೂತ್ರ ಉತ್ಪತ್ತಿ ಮಾಡುವುದು).
    • ರಕ್ತ ಶುದ್ಧೀಕರಣ
    • ಮೂಳೆಗಳಿಗೆ ಕ್ಯಾಲ್ಸಿಯಂ ಸಮತೋಲನ
    • ಹಿಮಗ್ಲೋಬಿನ್ ಉತ್ಪತ್ತಿ, ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವುದು.
    ಕಿಡ್ನಿ ಫೈಲೂರ್ ಎಂದರೇನು?
    ಮೇಲೆ ತಿಳಿಸಿದ ನಾಲ್ಕು ಕೆಲಸಗಳಲ್ಲಿ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿ ಇವುಗಳಲ್ಲಿ ಯಾವುದಾದರೊಂದು ಕೆಲಸಗಳಲ್ಲಿ ಏರುಪೇರಾದರೆ ಅದು ಮೂತ್ರಪಿಂಡ ವೈಫಲ್ಯ ಎನಿಸುವುದು.

    2022 World Kidney Day Theme- ೨೦೨೨ರ ಕಿಡ್ನಿ ದಿನದ ಘೋಷವಾಕ್ಯ


    ಪ್ರತಿವರ್ಷ ಕಿಡ್ನಿದಿನಕ್ಕೆ ವಿಶೇಷ ಥೀಮ್ ಅಥವಾ ಘೋಷವಾಕ್ಯ ಇರುತ್ತದೆ. ಈ ವರ್ಷ Bridge the knowledge gap to better kidney care ಎನ್ನುವುದು ಘೋಷವಾಕ್ಯವಾಗಿದೆ. ಅಂದರೆ, ಅತ್ಯುತ್ತಮ ಕಿಡ್ನಿ ಕಾಳಜಿಗಾಗಿ ಜ್ಞಾನದ ಕೊರತೆಯನ್ನು ನಿವಾರಿಸುವ ಉದ್ದೇಶವನ್ನು ಈ ವರ್ಷ ಹೊಂದಲಾಗಿದೆ.

    ಪ್ರಿಪೇರ್‌ ಎಜುಟೆಕ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ. ಪ್ರಿಪೇರ್‌ ಎಜುಟೆಕ್‌ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

    Bengaluru India Nano;ನ್ಯಾನೋ ತಂತ್ರಜ್ಞಾನಾಧಾರಿತ ಚಿಕಿತ್ಸೆ ಹೃದ್ರೋಗಿಗಳಿಗೆ ವರದಾನ: ಸ್ವಾಮಿನಾಥನ್

    BENGALURU MAR 8

    ಭಾರತದಲ್ಲಿ 45ರಿಂದ 69 ವರ್ಷದೊಳಗಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇಂಥವರಿಗೆ ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸುತ್ತಿರುವ ಚಿಕಿತ್ಸಾ ವಿಧಾನಗಳು ವರದಾನವಾಗಲಿವೆ ಎಂದು ತಂಜಾವೂರಿನ `ಶಾಸ್ತ್ರ ನ್ಯಾನೋ ತಂತ್ರಜ್ಞಾನ ಮತ್ತು ಆಧುನಿಕ ಸಂಶೋಧನಾ ಕೇಂದ್ರ’ದ ಹಿರಿಯ ನ್ಯಾನೋ ವಿಜ್ಞಾನಿ ಡಾ.ಎಸ್. ಸ್ವಾಮಿನಾಥನ್ ಅಭಿಪ್ರಾಯಪಟ್ಟರು.

    12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ದ ಎರಡನೇ ದಿನವಾದ ಮಂಗಳವಾರ ವರ್ಚುಯಲ್ ಉಪನ್ಯಾಸ ನೀಡಿದ ಅವರು, ದೇಶದಲ್ಲಿ ಶೇಕಡ 63ರಷ್ಟು ಸಾವುಗಳಿಗೆ ಹೃದಯಾಘಾತವೇ ಕಾರಣವಾಗುತ್ತಿದೆ. 2021ರಲ್ಲಿ ಜಗತ್ತಿನಲ್ಲಿ ಹೃದಯಾಘಾತದಿಂದ 17.90 ದಶಲಕ್ಷ ಜನ ಮೃತಪಟ್ಟಿದ್ದಾರೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದರು.

    ನ್ಯಾನೋ ತಂತ್ರಜ್ಞಾನ ಆಧಾರಿತವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿರುವ ಕಾರ್ಡಿಯಾಕ್ ಪಟ್ಟಿಗಳನ್ನು ಉಪಯೋಗಿಸುವ ಮೂಲಕ ಹೃದಯಾಘಾತಕ್ಕೆ ಸಮರ್ಥವಾಗಿ ಚಿಕಿತ್ಸೆ ನೀಡಬಹುದು. ಇದರ ಜತೆಗೆ, ಈ ಚಿಕಿತ್ಸೆಯಲ್ಲಿ ನ್ಯಾನೋ ಫೈಬರ್ ಗಳು ಕೂಡ ಉಪಯುಕ್ತ ಪಾತ್ರ ವಹಿಸಲಿವೆ ಎಂದು ಅವರು ವಿವರಿಸಿದರು.

    ಈ ಚಿಕಿತ್ಸಾ ವಿಧಾನವನ್ನು ಪ್ರಾಣಿಗಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷಿಸಿದ್ದು, ಸಕಾರಾತ್ಮಕ ಫಲಿತಾಂಶ ಬಂದಿದೆ. ಈ ಅಧ್ಯಯನವು ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ನಿಧಾನಗೊಂಡಿದೆ. ವಿಸ್ತೃತ ಅಧ್ಯಯನಕ್ಕೆ ವೈದ್ಯಕೀಯ ಸಂಸ್ಥೆಗಳು ನೆರವು ನೀಡಲು ಮುಂದೆಬಂದಿವೆ. ಇನ್ನು ಕೆಲವೇ ವರ್ಷಗಳಲ್ಲಿ ನ್ಯಾನೋ ತಂತ್ರಜ್ಞಾನಾಧಾರಿತ ಚಿಕಿತ್ಸೆಗಳು ಜನಪ್ರಿಯವಾಗಲಿವೆ ಎಂದು ಸ್ವಾಮಿನಾಥನ್ ಹೇಳಿದರು.
    ಅಪಘಾತ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಆಗುವ ಆಳವಾದ ಗಾಯಗಳನ್ನು ವಾಸಿ ಮಾಡಲು ಚರ್ಮ ಅಂಗಾಂಶ ಕಸಿ ವಿಧಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ಚರ್ಮರಚನಾ ಶಾಸ್ತ್ರದ ವ್ಯಾಪಕ ಅಧ್ಯಯನ ನಡೆಸಲಾಗುತ್ತಿದ್ದು, ಆಂಟೋಗ್ರಾಫ್ಟ್ ಮತ್ತು ಆಲೋಗ್ರಾಫ್ಟ್ ವಿಧಾನಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಆದರೆ, ಸದ್ಯಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನಗಳು ದುಬಾರಿಯಾಗಿವೆ ಎಂದು ಅವರು ನುಡಿದರು.

    ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು 3ಡಿ ಪ್ರಿಂಟಿಂಗ್, 3ಡಿ ಲೇಸರ್ ಪ್ರಿಂಟಿಂಗ್ ಮುಂತಾದ ಸೌಲಭ್ಯಗಳನ್ನು ಅಂತಿಮಗೊಳಿಸಲಾಗಿದೆ. ಇವು ವ್ಯಾಪಕವಾಗಿ ಬಳಕಗೆ ಬಂದರೆ, ಆರೋಗ್ಯ ಸೇವೆಗಳೆಲ್ಲವೂ ಜನರ ಕೈಗೆಟುಕುವ ದರದಲ್ಲಿ ಸಿಕ್ಕಲಿದ್ದು, ಚಿಕಿತ್ಸೆಗಳು ಕೂಡ ನಿಖರವಾಗಲಿವೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

    ಡಾ.ಅನಿಲ್ ಕುಮಾರ್ ಅವರು ವಿಚಾರಗೋಷ್ಠಿಯನ್ನು ನಿರ್ವಹಿಸಿದರು.

    error: Content is protected !!