23.2 C
Karnataka
Sunday, July 5, 2026
    Home Blog Page 2

    ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಟ್ರಯಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅಶ್ವಿನಿ ಗಣಪತಿ

    BENGALURU :

    2024 ರ ಅಕ್ಟೋಬರ್ 23 ರಿಂದ 27 ರವರೆಗೆ ದಕ್ಷಿಣ ಕೊರಿಯಾದ ಉಲ್ಜುನಲ್ಲಿ ನಡೆಯಲಿರುವ ಏಷ್ಯಾ ಪೆಸಿಫಿಕ್ ಟ್ರಯಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ತಂಡಕ್ಕೆ ಬೆಂಗಳೂರಿನ ಅಲ್ಟ್ರಾ ಮ್ಯಾರಥಾನ್ ಓಟಗಾತಿ ಅಶ್ವಿನಿ ಗಣಪತಿ ಭಟ್ ಸೇರ್ಪಡೆಯಾಗಿದ್ದಾರೆ. ಇವರು ತಂಡದಲ್ಲಿರುವ ಕರ್ನಾಟಕದ ಏಕೈಕ ಸದಸ್ಯರಾಗಿದ್ದಾರೆ.

    ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಅರ್ಹತಾ ಆದೇಶವನ್ನು ನಿಗದಿಪಡಿಸಿದೆ ಮತ್ತು ಆಯ್ಕೆಗಾಗಿ ITRA ಸ್ಕೋರ್‌ಗಳನ್ನು ಬಳಸಿದೆ. ಎಎಫ್‌ಐ ವೆಬ್‌ಸೈಟ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.

    ಭಾರತ ತಂಡವು 80 ಕಿಮೀ ಉದ್ದದ ಟ್ರಯಲ್ ವಿಭಾಗದಲ್ಲಿ 3 ಪುರುಷರು ಮತ್ತು ಒಬ್ಬ ಮಹಿಳೆ (ಅಶ್ವಿನಿ) ಒಳಗೊಂಡಿದ್ದರೆ, 40 ಕಿಲೋಮೀಟರ್‌ಗಳ ಶಾರ್ಟ್ ಟ್ರಯಲ್ ವಿಭಾಗದಲ್ಲಿ 5 ಪುರುಷರು ಮತ್ತು ಒಬ್ಬ ಮಹಿಳೆ ಇದ್ದಾರೆ.

    ಟ್ರಯಲ್ ಓಟವು ಯಾವುದೇ ಒರಟು, ಅರಣ್ಯ, ಪರ್ವತಗಳ ಭೂಪ್ರದೇಶದಲ್ಲಿ ನಡೆಯುವ ಕ್ರೀಡೆಯಾಗಿದೆ. ಚಾಂಪಿಯನ್‌ಶಿಪ್, ನಿರ್ದಿಷ್ಟವಾಗಿ, ದಕ್ಷಿಣ ಕೊರಿಯಾದ ಪರ್ವತ ಪ್ರದೇಶದಲ್ಲಿ ಹೊಂದಿಸಲಾಗಿದೆ ಮತ್ತು ಗಮನಾರ್ಹ ಆರೋಹಣ/ಅವರೋಹಣಗಳನ್ನು ಒಳಗೊಂಡಿದೆ.

    ಜುಲೈ 2022 ರಲ್ಲಿ ಬೆಂಗಳೂರಿನಲ್ಲಿ ನಡೆದ 400 ಮೀಟರ್ ಟ್ರ್ಯಾಕ್‌ನಲ್ಲಿ ನಡೆದ 24 ಗಂಟೆಗಳ ಏಷ್ಯಾ ಓಸೇನಿಯಾ ಚಾಂಪಿಯನ್‌ಶಿಪ್‌ನಲ್ಲಿ ಅಶ್ವಿನ್ ಭಾರತೀಯ ತಂಡದ ಭಾಗವಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

    ವಿಶ್ವ ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ

    MYSURU

    ಸಂಗೀತ ಲೋಕದ ವಿಶ್ವ ಶ್ರೇಷ್ಠ ಸರೋದ್ ವಾದಕ ಪದ್ಮಶ್ರೀ ಪುರಸ್ಕೃತ, ಉಸ್ತಾದ್ ಆಲಿ ಅಕ್ಬರ್‌ ಖಾನ್‌ ಅವರ ಶಿಷ್ಯ ಪಂಡಿತ್ ರಾಜೀವ್ ತಾರಾನಾಥ್ ನಿಧನ ಹೊಂದಿದ್ದಾರೆ.

    ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜೀವ್‌ ತಾರಾನಾಥ್‌ ಅವರು ಇಂದು (ಜೂನ್ 11) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ವಿಶ್ವದ ಶ್ರೇಷ್ಠ ಸರೋದ್ದ ವಾದಕರಲ್ಲಿ ಒಬ್ಬರೆನಿಸಿರುವ ರಾಜೀವ್ ತಾರಾನಾಥರು ಜನಿಸಿದ ದಿನ ಅಕ್ಟೋಬರ್ 17, 1932. ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು ನಮ್ಮ ಕರ್ನಾಟಕದವರೇ ಆದ ರಾಜೀವ್ ತಾರಾನಾಥರು.ರಾಜೀವ್ ತಾರಾನಾಥರು ತಮ್ಮ ಪ್ರಾರಂಭಿಕ ಪಾಠಗಳನ್ನು ತಮ್ಮ ತಂದೆ ಪಂಡಿತ ತಾರಾನಾಥರಿಂದ ಪಡೆದರು. ಕೇವಲ ಒಂಭತ್ತು ವರ್ಷದವರಿದ್ದಾಗ ಅವರು ಪ್ರಥಮ ಸಂಗೀತ ಕಚೇರಿಯನ್ನು ನಡೆಸಿದರು. ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು.

    ರಾಜೀವ್ ತಾರಾನಾಥರು ಸಾಹಿತ್ಯದಲ್ಲಿ ಪಿ.ಎಚ್.ಡಿ ಪದವಿ ಪಡೆದವರಾದರೂ, ತಮಗಿದ್ದ ಇಂಗ್ಲಿಷ್ ಪ್ರಾಧ್ಯಾಪಕತನವನ್ನು ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕೊಲ್ಕಾತಾಗೆ ತೆರಳಿ ಅಲ್ಲಿ ಉಸ್ತಾದ್ ಅಲಿ ಅಕಬರ್ ಖಾನ್ ಅವರ ಶಿಷ್ಯರಾದರು. 2009ರ ವರ್ಷದಲ್ಲಿ ಅಲಿ ಅಕ್ಬರ್ ಖಾನರು ನಿಧನರಾಗುವವರೆಗೆ ರಾಜೀವ್ ತಾರಾನಾಥರು ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಅಕ್ಬರ್ ಅಲಿ ಖಾನ್ ಅವರಲ್ಲದೆ ಪಂಡಿತ ರವಿಶಂಕರ್, ಅನ್ನಪೂರ್ಣಾದೇವಿ, ಉಸ್ತಾದ್ ಆಶಿಶ್ ಖಾನರ ಮಾರ್ಗದರ್ಶನವನ್ನು ಸಹಾ ರಾಜೀವ್ ತಾರಾನಾಥರು ತಮ್ಮದಾಗಿಸಿಕೊಂಡವರು.

    ಹಲವೊಂದು ಪ್ರಖ್ಯಾತ ಚಲನಚಿತ್ರಗಳಿಗೂ ಸಂಗೀತ ನೀಡಿರುವ ರಾಜೀವ್ ತಾರಾನಾಥರ ನಿರ್ದೇಶನದಲ್ಲಿ ಮೂಡಿಬಂದ ಪ್ರಮುಖ ಚಿತ್ರಗಳೆಂದರೆ ಕನ್ನಡದ ಸಂಸ್ಕಾರ , ಅನುರೂಪ, ಶೃಂಗಾರ ಮಾಸ, ಪೇಪರ್ ಬೋಟ್, ಮಲಯಾಳಂನ ಕಾಂಚನ ಸೀತಾ ಮತ್ತು ಕಟವ್ ಮುಂತಾದವು.

    ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ: ಮೈಸೂರಿನ ಕಾರಂಜಿ ಕೆರೆಯಲ್ಲಿ ಮತ್ಯ್ಸಾಗಾರ ನಿರ್ಮಾಣಕ್ಕೆ ಸಮ್ಮತಿ

    BENGALURU

    ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಾಲಿ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

    ವಿಕಾಸ ಸೌಧದ ಸಚಿವರ ಕಾರ್ಯಾಲಯದಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ 156ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾಜ್ಯದಲ್ಲಿರುವ ವಿವಿಧ ಮೃಗಾಲಯಗಳಿಗೆ ಪ್ರವಾಸಿಗರನ್ನು ಹೆಚ್ಚು ಸೆಳೆಯಲು ಮತ್ತು ಆದಾಯ ಹೆಚ್ಚಿಸಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಪರಾಮರ್ಶಿಸಿದರು.

    ಮೈಸೂರು ಶ್ರೀ ಚಾಮರಾಜೇಂದ್ರ ಮಾಲಯ ಹಾಗೂ ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಸಾರ್ವಜನಿಕ, ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಅಕ್ವೇರಿಯಂ (ಮತ್ಸ್ಯಾಗಾರ) ನಿರ್ಮಿಸಲು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚನಾ ಸಂಸ್ಥೆ ಆಯ್ಕೆ ಮಾಡಲು 15 ದಿನಗಳ ಒಳಗಾಗಿ ಪ್ರಸ್ತಾವನೆ ಮಂಡಿಸಲು ಸೂಚಿಸಲಾಯಿತು.

    ಮೃಗಾಲಯ ಪ್ರಾಧಿಕಾರದ ವಾರ್ಷಿಕ ವರದಿಯನ್ನು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬಿಡುಗಡೆ ಮಾಡಿದರು.


    ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮತಿಸಲಾಯಿತು.

    ಅದೇ ರೀತಿ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಪಿಪಿಪಿ ಮಾದರಿಯಲ್ಲಿ ಸಿಹಿ ನೀರು ಮತ್ತು ಉಪ್ಪು ನೀರಿನ ಮತ್ಸ್ಯಾಗಾರಗಳನ್ನು ನಿರ್ಮಿಸಲು ಈಗಾಗಲೇ ನಡೆದಿರುವ ಪರಿಕಲ್ಪನೆ ಅಧ್ಯಯನ ವರದಿ ಮತ್ತು ಕಾರ್ಯಸಾಧ್ಯತೆ ವರದಿ ಪರಿಶೀಲಿಸಿ ಜಾಗತಿಕ ಮಾನದಂಡಗಳ ರೀತ್ಯ ಮತ್ಸ್ಯಾಗಾರ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.
    ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಆಗದಂತೆ ಮತ್ತು ಮೃಗಾಲಯದಲ್ಲಿರುವ ವನ್ಯಜೀವಿಗಳು ಸೋಂಕು ಇತ್ಯಾದಿಯಿಂದ ಸಾವಿಗೀಡಾಗದಂತೆ ಕ್ರಮ ವಹಿಸಲು ಪಶುವೈದ್ಯರ ನೇಮಕಾತಿಯ ಬಗ್ಗೆ ಚರ್ಚಿಸಿ, ವೈದ್ಯರ ನೇಮಕಾತಿಗೆ ಅನುಮೋದನೆ ನೀಡಲಾಯಿತು.
    ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸ್ಥಳೀಯ ಪಶುವೈದ್ಯಾಧಿಕಾರಿಗಳ ಸೇವೆ ಪಡೆಯಲು ಘಟನೋತ್ತರ ಅನುಮೋದನೆ ನೀಡಲಾಯಿತು.

    ಇತರ ನಿರ್ಣಯಗಳು:

    • ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ, ಪಕ್ಷಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಒದಗಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು,, ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೀರು ಹರಿಸು ಕ್ರಮ ಕೈಗೊಳ್ಳಲು ಸಮ್ಮತಿ.

    • ಬನ್ನೇರುಘಟ್ಟ ಉದ್ಯಾನದಲ್ಲಿ ನೇರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು 21 ಸಾವಿರ ಮಾಸಿಕ ವೇತನ ಮೀರಿದ 153 ಸಿಬ್ಬಂದಿಗೆ ಸಿ.ಜಿ.ಎಚ್.ಎಸ್. ದರದಂತೆ ವೈದ್ಯಕೀಯ ವೆಚ್ಚ ಭರಿಸಲು ಅನುಮೋದನೆ.

    • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ರಣಹದ್ದು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸ್ಯಾಟಲೈಟ್ ಕೇಂದ್ರವಾಗಿ ಕಾರ್ಯನಿರ್ವಹಣೆಗೆ ಅನುಮೋದನೆ.

    • ಗದಗ ಮೃಗಾಲಯದ ವಿಸ್ತರಣೆ ಮತ್ತು ಅಭಿವೃದ್ಧಿಗೆ 13.20 ಎಕೆ ಜಮೀನು ಭೂಸ್ವಾಧೀನ ಮತ್ತು ಮೃಗಾಲಯದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟ ಪೂರೈಕೆಗೆ ಸಮ್ಮತಿ.

    ದೇವರನ್ನು ತೋರಿಸಿದ ಸನ್ಯಾಸಿ

    ಒಂದು ದಿನ ಒಬ್ಬ ಸನ್ಯಾಸಿಯು ನದಿ ತೀರದಲ್ಲಿ ಧ್ಯಾನ ಮಾಡುತ್ತಿದ್ದರು.ಒಬ್ಬ ಯುವಕ ಅವರ ಬಳಿಗೆ ಬಂದು ಅವರ ಧ್ಯಾನಕ್ಕೆ ಅಡಚಣೆಯನ್ನು ಉಂಟು ಮಾಡಿ , “ಗುರುಗಳೆ ನಾನು ನಿಮ್ಮ ಶಿಷ್ಯನಾಗಲು ಬಯಸುತ್ತಿದ್ದೇನೆ” ಎಂದು ಹೇಳಿದ.ಆಗ ಆ ಸನ್ಯಾಸಿಯು “ಏಕೆ?” ಎಂದು ಕಾರಣ ಕೇಳಿದರು.

    ಆ ಯುವಕ ನಾನು ದೇವರನ್ನು ಹುಡುಕುತ್ತಿದ್ದೇನೆ ಎಂದು ಹೇಳುತ್ತಾನೆ.

    ಗುರುಗಳು ಏಕಾಏಕಿ ಜಿಗಿದು ನಿಂತರು. ಆ ಯುವಕನ ಕತ್ತನ್ನು ಹಿಡಿದುಕೊಂಡು, ಎಳೆದು ತಂದು, ನದಿಯಲ್ಲಿ ಬಿಡುತ್ತಾರೆ. ಅವನ ತಲೆಯನ್ನು ಹಿಡಿದುಕೊಂಡು ನೀರಿನೊಳಗೆ ಮುಳುಗಿಸುತ್ತಾರೆ. ಒಂದು ನಿಮಿಷ ಅವನನ್ನು ಹಾಗೇ ನೀರಿನಲ್ಲಿ ಮುಳುಗಿಸುತ್ತಾರೆ. ಅವನಿಗೆ ಉಸಿರು ಕಟ್ಟಿದಂತಾಗುತ್ತದೆ. ಆನಂತರ ಆ ತೊಂದರೆಯಿಂದ ಸುಧಾರಿಸಿಕೊಳ್ಳಲು ಅವನಿಗೆ ಅವಕಾಶ ನೀಡುತ್ತಾರೆ.

    ನಂತರ ಆ ಸನ್ಯಾಸಿಯು ಆ ಯುವಕನನ್ನು ನದಿಯಿಂದ ಎಳೆದು ಹೊರ ತರುತ್ತಾರೆ. ಆ ನೀರಿನಿಂದಾಗಿ ಆ ಯುವಕನಿಗೆ ಉಸಿರು ಕಟ್ಟಿದಂತಾಗುತ್ತದೆ. ಉಸಿರಾಡಲು ಕಷ್ಟವಾಗಿ ಕೆಮ್ಮುತ್ತಿರುತ್ತಾನೆ. ಅಂತಿಮವಾಗಿ ಅವನನ್ನು ಆರಾಮಾಗಿ ಬಿಟ್ಟು ಆ ಸನ್ಯಾಸಿ ಹೇಳುತ್ತಾರೆ :“ಈಗ ಹೇಳು.. ನಿನ್ನನ್ನು ನೀರಿನಲ್ಲಿ ಮುಳುಗಿಸಿದಾಗ ಎಲ್ಲದಕ್ಕಿಂತ ಅತಿ ಮುಖ್ಯವಾಗಿ ನಿನಗೆ ಬೇಕೆನಿಸಿದ್ದು ಯಾವುದು..??”

    ಆಗ ಯುವಕ “ಗಾಳಿ” ಎಂದು ಉತ್ತರಿಸುತ್ತಾನೆ..

    “ಚೆನ್ನಾಗಿದೆ.. ಈಗ ಮನೆಗೆ ಹೋಗು.. ಗಾಳಿಗಿಂತ ದೊಡ್ಡ ದೇವರು ನಿನಗೆ ಬೇಕು ಅಂತ ಅನಿಸಿದಾಗ ಮತ್ತೆ ನನ್ನ ಹತ್ತಿರ ಬಾ” ಎಂದು ಹೇಳುತ್ತಾರೆ ಆ ಸನ್ಯಾಸಿ.

    ಆಪತ್ಕಾಲದಲ್ಲಿ ಒದಗುವವರೆ ದೇವರು ಎಂಬುದರ ಅರಿವು ಯುವಕನಿಗೆ ಆಗುತ್ತದೆ.

    ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಇನ್ನು ಮುಂದೆ ನ್ಯಾಕ್‌ (NAAC) ಸಂಸ್ಥೆಯಿಂದ ಅವಳಿ ಮಾನ್ಯತಾ ಪದ್ಧತಿ

    .ಪೀಠಿಕೆ:- ದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಎನ್‌ ಇ ಪಿ 2020 ರ ಪರಮೋಚ್ಛ ಉದ್ಧೇಶವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿ  ಬೋಧನಾ-ಕಲಿಕೆ, ಸಂಶೋಧನೆ, ಸೃಜನಶೀಲತೆಯ ಬೆಳವಣಿಗೆ, ಪ್ರೇರಿತ ಶಿಕ್ಷಕರು, ಉದ್ಯೋಗ ಕೌಶಲ್ಯಗಳು, ಶೈಕ್ಷಣಿಕ ವಾತಾವರಣ, ಭೌತಿಕ ಸೌಲಭ್ಯಗಳ  ಜೊತೆಗೆ ಮೌಲ್ಯಮಾಪನ ಮತ್ತು ಮಾನ್ಯತೆಯು ಸಹ ಬಹಳ ಮುಖ್ಯ ಮತ್ತು ಅದರ ಅವಿಭಾಜ್ಯ ಅಂಗವಾಗಿದೆ. ಮೌಲ್ಯಮಾಪನ ಮಾಡಿ, ಮಾನ್ಯತೆಯನ್ನು ನೀಡುವ ಕಾರ್ಯವನ್ನು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು (ನ್ಯಾಶನಲ್‌ ಅಸೆಸ್‌ಮೆಂಟ್‌ ಅಂಡ್‌ ಅಕ್ರೆಡಿಟೇಶನ್‌ ಕೌನ್ಸಿಲ್-NAAC) ಕಳೆದು ಮೂವತ್ತು ವರ್ಷಗಳಿಂದಲೂ ಮಾಡುತ್ತಾ ಬಂದಿದೆ.

    ಎನ್‌ ಇ ಪಿ 2020 ರ ಉದ್ದೇಶಗಳ ಅನುಗುಣವಾಗಿ ಮೌಲ್ಯಮಾಪನ ಮತ್ತು ಮಾನ್ಯತಾ ಪ್ರಕ್ರಿಯೆಯನ್ನು ಬಲಪಡಿಸುವ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಭಾರತ ಸರ್ಕಾರದ ವತಿಯಿಂದ 2022 ರಲ್ಲಿ ಡಾ. ಕೆ. ರಾದಾಕೃಷ್ಣನ್‌, ವಿಶ್ರಾಂತ ಅಧ್ಯಕ್ಷರು, ಇಸ್ರೊ, ಇವರ ನೇತೃತ್ವದಲ್ಲಿ ಸಮಗ್ರ ಸಮಿತಿಯನ್ನು ರಚಿಸಲಾಯಿತು. ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲಾ ಪಾಲುದಾರರ ಅಭಿಪ್ರಾಯಗಳನ್ನು ಮತ್ತು ಪ್ರತ್ಯುತ್ತರಗಳನ್ನು ಸಂಗ್ರಹಿಸಿ, ಸಮಿತಿಯು ಅಂತಿಮ ವರದಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ಜನವರಿ 2024 ರಲ್ಲಿ ಸಲ್ಲಿಸಿತು. ಸಮಿತಿಯ ಶಿಪಾರಸ್ಸುಗಳನ್ನು ಅಂಗೀಕರಿಸಿ, ಹೊರಡಿಸಿದ ಸರ್ಕಾರದ ಆದೇಶದ ಮೇರೆಗೆ ನ್ಯಾಕ್‌ ಸಂಸ್ಥೆಯು ಈಗಿರುವ ಶ್ರೇಣೀಕರಣದ ಮಾನ್ಯತೆಯ ಬದಲಿಗೆ ಅವಳಿ ಮಾನ್ಯತೆಯನ್ನು  ಎರಡು ಹಂತಗಳಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ.

    ಚಾಲ್ತಿಯಲ್ಲಿರುವ ಶ್ರೇಣಿಕರಣದ ಮಾನ್ಯತೆಯ ಪದ್ಧತಿ

    ಈಗ ಚಾಲ್ತಿಯಲ್ಲಿರುವ ಶ್ರೇಣೀಕರಣದ ಮಾನ್ಯತೆಯ ಪದ್ಧತಿಯಲ್ಲಿ ಪಠ್ಯಕ್ರಮ, ಬೋಧನಾ-ಕಲಿಕೆ, ಸಂಶೋಧನೆ ಮತ್ತು ನಾವೀನ್ಯತೆ, ಭೌತಿಕ ಸೌಲಭ್ಯಗಳು ಮತ್ತು ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ ಬೆಂಬಲಿತ ಸೌಕರ್ಯಗಳು, ಆಳ್ವಿಕೆ, ನಾಯಕತ್ವ ಮತ್ತು ನಿರ್ವಹಣೆ, ಸಂಸ್ಥೆಯ ಮೌಲ್ಯಗಳು ಹೀಗೆ ಏಳು ಮಾನದಂಡಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಮೌಲ್ಯಮಾಪನ ಮಾಡಲಾಗುತ್ತಿದೆ. ಶೇಕಡಾ 70 ರಷ್ಟು ದತ್ತಾಂಶ ಆಧಾರಿತ ಮತ್ತು ಉಳಿದ ಶೇಕಡಾ 30 ಅಂಕಗಳಿಗೆ ಸಮಾನ ಸ್ಕಂದರ ತಂಡದಿಂದ ಭೌತಿಕ ಪರಿಶೀಲನೆ ನಡೆಸಿ ಎರಡು ಹಂತಗಳ ಫಲಿತಾಂಶಗಳನ್ನು ಕ್ರೌಢೀಕರಿಸಿ ಶ್ರೇಣೀಕರಣದ ಮಾನ್ಯತೆಯನ್ನು ನೀಡಲಾಗುತ್ತಿದೆ.  A++ನಿಂದ D ವರೆವಿಗೂ ಎಂಟು ಗ್ರೇಡ್‌ ಗಳ ಪದ್ಧತಿಯಲ್ಲಿ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡಲಾಗುತ್ತಿದೆ.

    ಶ್ರೇಣೀಕರಣದ ಮಾನ್ಯತಾ ಪದ್ಧತಿಯನ್ನು ಪರಿಷ್ಕರಿಸಿ ನೂತನ ಅವಳಿ ಮಾನ್ಯತಾ ಪದ್ಧತಿಯನ್ನು ರೂಪಿಸಲು ಮುಖ್ಯ ಕಾರಣಗಳು 

    ಎನ್‌ ಇ ಪಿ 2020 ರ ದೃಷ್ಟಿಕೋನಕ್ಕೆ ಅನುಗುಣವಾಗಿ ಮೌಲ್ಯಮಾಪನ ಪದ್ಧತಿಯನ್ನು ಮಾರ್ಪಾಡು ಮಾಡುವುದು, ಉತ್ತಮ ಶ್ರೇಣಿಯನ್ನು ಪಡೆಯಲು (A++ ಮತ್ತು A+) ಶಿಕ್ಷಣ ಸಂಸ್ಥೆಗಳ ನಡುವೆ ಇದ್ದಂತಹ ಅನಾರೋಗ್ಯಕರ ಪೈಪೋಟಿ ಮತ್ತು ನಂತರದ ದಿನಗಳಲ್ಲಿ ಶ್ರೇಣಿಗಳ ಹೆಸರಿನಲ್ಲಿ ನಡೆಸುತ್ತಿದ್ದ ವ್ಯಾಪಾರೀಕರಣವನ್ನು ತಡೆಯುವುದು, ಮೌಲ್ಯಮಾಪನ ಕಾರ್ಯವನ್ನು ಸರಳೀಕರಣಗೊಳಿಸಿ ಮೌಲ್ಯಮಾಪನ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳು  ಭಾಗವಹಿಸಲು ಉತ್ತೇಜಿಸುವುದು ಮತ್ತು ಅದರ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು (ಸೆಪ್ಟಂಬರ್‌ 30, 2023 ರ ವರೆಗೆ ದೇಶದಲ್ಲಿರುವ 43796 ಕಾಲೇಜುಗಳ ಪೈಕಿ ಕೇವಲ 9479 ಕಾಲೇಜುಗಳು ಮಾನ್ಯತೆ ಪಡೆದಿವೆ), ಹಸ್ತ ಚಾಲಿತ ಒಳಗೊಳ್ಳುವಿಕೆಯನ್ನು ಕಡಿಮೆ ಮಾಡಿ ತಂತ್ರಜ್ಞಾನ ಚಾಲಿತ ಮತ್ತು ಆಧುನಿಕ ವ್ಯವಸ್ಥೆಯೊಂದಿಗೆ ಅನುಮೋದನೆ ನೀಡುವುದು, ಪಾರದರ್ಶಕತೆಯನ್ನು ಕಾಪಾಡುವುದು, ಮಾನ್ಯತೆಯ ಗುಣಮಟ್ಟವನ್ನು ಹೆಚ್ಚಿಸಿ, ಶ್ರೇಷ್ಠತೆ ಮತ್ತು ಜಾಗತಿಕ ಮೆಚ್ಚುಗೆಯನ್ನು ಪಡೆಯಲು ಮಾರ್ಗದರ್ಶನ ನೀಡುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಅವಳಿ ಮಾನ್ಯತೆಯನ್ನು ಜಾರಿಗೊಳಿಸಿ ಸಮಾನತೆಯನ್ನು ತರುವುದು.

    ನೂತನ ಅವಳಿ ಮಾನ್ಯತೆ ಮತ್ತು ಪ್ರಬುದ್ಧತೆ ಆಧಾರಿತ ಶ್ರೇಣಿಕರಣ ಮಾನ್ಯತೆ.

    ಮೊದಲನೆಯದಾಗಿ, ಈಗ ಚಾಲ್ತಿಯಲ್ಲಿರುವ ಶ್ರೇಣೀಕರಣ ಮಾನ್ಯತೆಯ ಬದಲು “ಮಾನ್ಯತೆ ಹೊಂದಿದೆ ಅಥವಾ ಹೊಂದಿಲ್ಲ” ಎಂಬ ಅವಳಿ ಮಾನ್ಯತಾ ಪದ್ಧತಿಯನ್ನು ಅಳವಡಿಸಲಾಗುತ್ತದೆ. ಈ ಪದ್ಧತಿಯನ್ನು ಮುಂದಿನ ನಾಲ್ಕು ತಿಂಗಳುಗಳಲ್ಲಿ ನ್ಯಾಕ್‌ ಸಂಸ್ಥೆಯು ಜಾರಿ ಮಾಡಲಿದೆ. ಈ ಪದ್ಧತಿಯಲ್ಲಿ  ಹತ್ತು ನಿಯತಾಂಕಗಳನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಆ ಹತ್ತು ನಿಯತಾಂಕಗಳು ಯಾವುವೆಂದರೆ, ಪಠ್ಯಕ್ರಮ, ಅಧ್ಯಾಪಕರ ಸಂಪನ್ಮೂಲಗಳು, ಬೋಧನೆ-ಕಲಿಕಾ ಪದ್ಧತಿ, ಸಂಶೋಧನೆ ಮತ್ತು ಆವಿಷ್ಕಾರಗಳು, ಸಹ ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳು, ಸಮುದಾಯದ ಬಗ್ಗೆ ಕಾಳಜಿ, ಹಸಿರು ಉಪಕ್ರಮಗಳು, ಆಳ್ವಿಕೆ ಮತ್ತು ಆಡಳಿತ, ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಆರ್ಥಿಕ ಸಂಪನ್ಮೂಲಗಳು ಹಾಗೂ ನಿರ್ವಹಣೆ. ಈ ನಿಯತಾಂಕಗಳಿಗೆ ಸಂಬಂಧಿಸದಂತೆ ಅಧ್ಯಯನಾಧಾರಿತ ಮೌಲ್ಯಮಾಪನ ಮಾಡಿ, ನಿಗದಿತ ಕನಿಷ್ಠ ಅಂಕ ಅಥವಾ ಅದಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಸಂಸ್ಥೆಗಳಿಗೆ “ಮಾನ್ಯತೆ ಹೊಂದಿದೆ” ಎಂದು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

                ಎರಡನೆಯದಾಗಿ, ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವ ಮತ್ತು ಗುಣಮಟ್ಟದ ರೇಖೆಯನ್ನು ಮೇಲೇರಿಸಲು ಅನುಕೂಲವಾಗುವಂತೆ ಪ್ರಬುದ್ಧತೆ (ಮೆಚ್ಯೂರಿಟಿ) ಆಧಾರಿತ ಮಾನ್ಯತೆಯನ್ನು ಈ ವರ್ಷದ ಡಿಸೆಂಬರ್‌ ವೇಳೆಗೆ ನ್ಯಾಕ್‌ ಸಂಸ್ಥೆಯು ಅನುಷ್ಠಾನ ಮಾಡಲಿದೆ. ಈ ಪದ್ಧತಿಯಲ್ಲಿ ಹಂತ 1 ರಿಂದ ಹಂತ 4 ರ ವರೆಗೆ ರಾಷ್ಟ್ರೀಯ ಉತ್ಕೃಷ್ಟತಾ ಸಂಸ್ಥೆಗಳಾಗಿ ಬೆಳೆಯಲು, ನಂತರ ಹಂತ 5- ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆಗೆ ಹೆಸರುವಾಸಿಯಾದ ಹಾಗೂ ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ಸಂಸ್ಥೆಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಮೌಲ್ಯಮಾಪನ ಮಾಡಿ, ಮಾನ್ಯತೆಯನ್ನು ನೀಡಲಾಗುತ್ತದೆ.  ಮೇಲೆ ವಿವರಿಸಿದ ಎರಡು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶಿಕ್ಷಣ ಸಂಸ್ಥೆಗಳ ಕಾರ್ಯ ವಿಧಾನಗಳು, ಶೈಕ್ಷಣಿಕ ಕಲಿಕಾ ಫಲಿತಾಂಶಗಳು ಮತ್ತು ಸಂಸ್ಥೆಯ ಗುಣಮಟ್ಟದ ಮೇಲೆ ಇವುಗಳ ಪರಿಣಾಮಗಳ ಆಧಾರಿತ ಮೌಲ್ಯಮಾಪನ ನಿಯತಾಂಕಗಳನ್ನು ರೂಪಿಸಲಾಗುತ್ತದೆ.

    ನೂತನ ಪದ್ಧತಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಿರುವ ಇನ್ನಿತರ ಬದಲಾವಣೆಗಳು

    ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ಈಗ ಚಾಲ್ತಿಯಲ್ಲಿರುವ ಒಂದು ಗಾತ್ರ ಎಲ್ಲರಿಗೂ ಸರಿ ಹೊಂದುತ್ತದೆ (ಒನ್‌ ಸೈಜ್‌ ಫಿಟ್ಸ್‌ ಆಲ್) ಮಾದರಿಯ ಬದಲು, ನಮ್ಮ ದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳ ವೈವಿಧ್ಯತೆ (ಉದಾಹರಣೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಸಂಸ್ಥೆಗಳ ನಡುವೆ ಇರುವ ವ್ಯತ್ಯಾಸಗಳು), ಸಂಸ್ಥೆಗಳ ದೃಷ್ಠಿಕೋನ ಮತ್ತು ಪರಂಪರೆಗಳನ್ನು ಪರಿಗಣಿಸಿ ವರ್ಗೀಕರಣ ಮಾಡಲಾಗುತ್ತದೆ.

                ಇನ್ನಿತರ ಬದಲಾವಣೆಗಳೆಂದರೆ, ಮೌಲ್ಯಮಾಪನ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಮಾನ್ಯತೆಯ ಅವಧಿಯನ್ನು 6 ವರ್ಷಗಳಿಗೆ ಏರಿಸುವುದು, ಮಾನ್ಯತೆಯನ್ನು ಹೊಂದಲು ಅನರ್ಹವಾದ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವುದು, ಒಂದು ರಾಷ್ಟ್ರ ಒಂದು ಡೇಟಾ (ಅಂಕಿ ಅಂಶಗಳ ಮಾಹಿತಿ) ವೇದಿಕೆಯನ್ನು ರಚಿಸುವುದು, ನಂಬಿಕೆಯ ಮತ್ತು ವಿಶ್ವಾಸಾರ್ಹ ಮೇರೆಗೆ ಸಂಸ್ಥೆಗಳ ಅಂಕಿ ಅಂಶಗಳನ್ನು ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕೆಂಬ ನಿಯಮವನ್ನು ಜಾರಿಗೊಳಿಸಿ, ತಪ್ಪು ಮಾಹಿತಿ ನೀಡಿದ ಪಕ್ಷದಲ್ಲಿ ಕಠಿಣ ಶಿಕ್ಷೆಯನ್ನು ನೀಡುವುದು ಮತ್ತು ಪರಿಶೀಲನೆಗಾಗಿ ಭೌತಿಕ ಭೇಟಿಗಳನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳು ಹಾಗೂ ಇನ್ನಿತರ ಪಾಲುದಾರರ ಅಭಿಪ್ರಾಯಗಳಿಗೆ ಹೆಚ್ಚು ಒತ್ತು ನೀಡುವುದು.

    ಅವಳಿ ಮಾನ್ಯತಾ ಪದ್ಧತಿಯ ಅನನುಕೂಲಗಳು

                ಬಹಳಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಅವಳಿ ಮೌಲ್ಯಮಾಪನ ಪದ್ಧತಿಯನ್ನು ಸ್ವಾಗತಿಸಿದರೆ, ಕೆಲವು ಶಿಕ್ಷಣ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಬಹುದು. ಏಕೆಂದರೆ, A+ ಶ್ರೇಣಿ ಪಡೆಯಲು ಅರ್ಹವಿರುವ ಕಾಲೇಜಿಗೂ ಮತ್ತು B+ ಶ್ರೇಣಿ ಪಡೆಯಬಹುದಾದಂತಹ ಕಾಲೇಜಿಗೂ “ಮಾನ್ಯತೆ ಹೊಂದಿದೆ” ಎಂಬ ಒಂದೇ ತರಹದ  ಪ್ರಮಾಣ ಪತ್ರವನ್ನು ನೀಡಿದರೆ, ಸಾಮಾನ್ಯ ಜನತೆಯ ದೃಷ್ಠಿಯಲ್ಲಿ ಎರಡು ಕಾಲೇಜುಗಳಲ್ಲಿನ ವ್ಯತ್ಯಾಸವು ಕಂಡುಬರುವುದಿಲ್ಲ. ಕಾಲೇಜುಗಳ ಆಯ್ಕೆಯ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಬಹುದು. ಜೊತೆಗೆ, ಶಿಕ್ಷಣ ಸಂಸ್ಥೆಗಳು ನಿರುತ್ಸಾಹವನ್ನು ವ್ಯಕ್ತಪಡಿಸಬಹುದು. ಈ ಸಮಸ್ಯೆಯನ್ನು ನಿವಾರಿಸಲು ಮತ್ತು ಉತ್ಕೃಷ್ಠ ಸಂಸ್ಥೆಗಳಾಗಿ ಬೆಳೆಯಲು ಮೆಚ್ಯೂರಿಟಿ ಆಧಾರಿತ ಮಾನ್ಯತಾ   ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

    ಮುಂದಿನ ಹದಿನೈದು ವರ್ಷಗಳಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಮೌಲ್ಯಮಾಪನ ಮತ್ತು ಮಾನ್ಯತೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅತ್ಯುತ್ತಮ ಮಟ್ಟಕ್ಕೆ ಏರಿ, ಪದವಿಗಳನ್ನು ನೀಡುವ ಸ್ವಾಯತ್ತ ಸಂಸ್ಥೆಗಳಾಗಿ ಬೆಳೆಯ ಬೇಕೆಂಬುದೇ  ಸರ್ಕಾರದ ಆಶಯವಾಗಿದೆ.

    ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SIDBI) ಅಸಿಸ್ಟೆಂಟ್‌ ಮ್ಯಾನೇಜರ್ ಹುದ್ದೆ

    ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನ  ( SIDBI) ಹಿನ್ನಲೆ:

    SIDBI ಸಂಸತ್ತಿನ ಕಾಯಿದೆಯ ಅಡಿಯಲ್ಲಿ ಸ್ಥಾಪಿಸಲಾದ ಪ್ರಧಾನ ಹಣಕಾಸು ಸಂಸ್ಥೆಯಾಗಿದೆ. ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪ್ರಚಾರ, ಹಣಕಾಸು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ಏಳೂವರೆ ದಶಕಗಳಿಂದ ಭಾರತದ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭವಾಗಿದೆ. SIDBI ಕೈಗಾರಿಕಾ ವಲಯದಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಚೈತನ್ಯಕ್ಕೆ ನೀಡಿದ ಕೊಡುಗೆಯಿಂದ ದೇಶದಾದ್ಯಂತ ಕೈಗಾರಿಕಾ ಅಭಿವೃದ್ಧಿಯ ವಿಸ್ತರಿಸುವಿಕೆಗೆ ಕಾರಣವಾಗಿದೆ. MSME ಗಳ ಹಣಕಾಸು, ಪ್ರಚಾರ ಮತ್ತು ಅಭಿವೃದ್ಧಿಯ ವಿವಿಧ ಯೋಜನೆಗಳಿಗಾಗಿ SIDBI ಕಾರ್ಯನಿರ್ವಹಿಸುತ್ತಿದೆ.

    ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ಐಡಿಬಿಐ) ಖಾಲಿ ಇರುವ ಗ್ರೇಡ್ ‘A’ ವೃಂದದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ನವೆಂಬರ್ 28 ರೊಳಗೆ ಅರ್ಜಿ ಸಲ್ಲಿಸಬಹುದು. ಜನರಲ್ ಸ್ಟ್ರೀಮ್ ನ ಒಟ್ಟು 50 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳಿಗೆ 8, ಎಸ್‌ಟಿ ಅಭ್ಯರ್ಥಿಗಳಿಗೆ  4, ಒಬಿಸಿ ವರ್ಗಕ್ಕೆ 11, ಆರ್ಥಿಕ ದುರ್ಬಲ ವರ್ಗದವರಿಗೆ 5 ಮತ್ತು ಸಾಮಾನ್ಯ ವರ್ಗಕ್ಕೆ 22 ಹುದ್ದೆಗಳನ್ನು ಮೀಸಲಿಡಲಾಗಿದೆ.

    ಆನ್ ಲೈನ್ ಪರೀಕ್ಷೆ(ಅಗತ್ಯವಿದ್ದಲ್ಲಿ) ಗುಂಪು ಚರ್ಚೆ, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ನೇಮಕ ಪ್ರಕ್ರಿಯೆಗಳು ನಡೆಯಲಿವೆ ಎಂದು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಬ್ಯಾಂಕ್ ತಿಳಿಸಿದೆ.

    ನವೆಂಬರ್ 08, 2023 ಕ್ಕೆ ವಯಸ್ಸಿನ ಮಿತಿ:

    ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳನ್ನು ಮೀರಿರಬಾರದು. ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸರಕಾರದ ನಿಯಮಾವಳಿ ಪ್ರಕಾರ ಸಡಿಲಿಕೆಯು ಈ ಕೆಳಗಿನಂತೆ ಇರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ 5 ವರ್ಷ ಇತರೆ ಹಿಂದುಳಿದ ವರ್ಗಗಳಿಗೆ (ನಾನ್-ಕ್ರೀಮಿ ಲೇಯರ್) 3 ವರ್ಷಗಳು. ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳು.

    ಅರ್ಹತೆಗಳೇನು?

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಕನಿಷ್ಠ ಶೇಕಡಾ 60 ಅಂಕಗಳನ್ನು (ಎಸ್ಸಿ/ಎಸ್ ಟಿ/ವಿಶೇಷ ಚೇತನರು ಶೇಕಡಾ 55) ಪಡೆದಿರಬೇಕು.

    ಅಥವಾ

    ಸಿಎ/ಸಿಎಸ್/ಸಿಡಬ್ಲೂಎ/ಸಿಎಫ್ಎ/ ಸಿಎಂಎ ಅಥವಾ ಕಾನೂನಿನಲ್ಲಿ/ಇಂಜಿನಿಯರಿಂಗ್ ನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಕನಿಷ್ಠ ಶೇಕಡಾ 60% ಅಂಕಗಳನ್ನು (ಎಸ್ಸಿ/ಎಸ್ ಟಿ/ವಿಶೇಷ ಚೇತನರು ಶೇಕಡಾ 55) ಪಡೆದಿರಬೇಕು.

    ಶೈಕ್ಷಣಿಕ ಅರ್ಹತೆಯ ನಂತರ ಕೆಲಸದ  ಅನುಭವ:

    ಇದರೊಂದಿಗೆ ಅಭ್ಯರ್ಥಿಗಳು ಕನಿಷ್ಠ 2 ವರ್ಷ ವಾಣಿಜ್ಯ ಬ್ಯಾಂಕುಗಳು / ಅಖಿಲ ಭಾರತ ಹಣಕಾಸು ಸಂಸ್ಥೆ( All India Financial Institution ) ನಲ್ಲಿ  MSME ಸಾಲ ವಿಭಾಗದಲ್ಲಿ(ವೈಯಕ್ತಿಕ ಸಾಲ, ಶೈಕ್ಷಣಿಕ ಸಾಲ, ವಾಹನ ಸಾಲ, ವಸತಿ ಸಾಲ, ಇತ್ಯಾದಿ ಹೊರತುಪಡಿಸಿ)  ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.

    ಅಥವಾ

    ಮೂರು ವರ್ಷಗಳ ಪ್ರಮುಖ NBFCಗಳಲ್ಲಿ ವ್ಯವಸ್ಥಿತವಾದ MSME ಸಾಲದಲ್ಲಿ ವೈಯಕ್ತಿಕವಲ್ಲದ ಸಾಲ / ಕಾರ್ಪೊರೇಟ್ ಸಾಲ ನೀಡಿದ ಸೇವಾನುಭವ ಹೊಂದಿರಬೇಕು.

    ಅರ್ಜಿ ಶುಲ್ಕ ಏಷ್ಟು?:

    ಎಸ್‌ಸಿ/ಎಸ್‌ಟಿ/ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆದರೆ, 175 ರೂ, ಇಂಟಿಮೇಷನ್‌ ಫೀ ಪಾವತಿಸಬೇಕು. ಉಳಿದ ಎಲ್ಲಾ ವರ್ಗದವರು ಇಂಟಿಮೇಷನ್ ಫೀ ಸೇರಿಸಿ 1,100 ರೂ. ಪಾವತಿಸಬೇಕು. ಎಸ್‌ಐಡಿಬಿಐ ಸಿಬ್ಬಂದಿಯಾಗಿದ್ದಲ್ಲಿ ಸಂಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ (ರುಪೇ / ವೀಸಾ / ಮಾಸ್ಟರ್ ಕಾರ್ಡ್ / ಮೆಸ್ಟ್ರೋ), ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್, IMPS, ನಗದು ಕಾರ್ಡ್‌ಗಳು / ಮೊಬೈಲ್ ವ್ಯಾಲೆಟ್‌ಗಳು ಬಳಸಿಕೊಂಡು ಆನ್ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್ ನಲ್ಲಿ ಮಾತ್ರ.

    ಪರೀಕ್ಷಾ ಪೂರ್ವ ತರಬೇತಿ:

    ಎಸ್‌ಸಿ/ಎಸ್‌ಟಿ/ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 10 ದಿನಗಳ ಪರೀಕ್ಷಾ ಪೂರ್ವ ತರಬೇತಿಯನ್ನು ಬ್ಯಾಂಕ್ ವತಿಯಿಂದ ನೀಡಲಾಗುತ್ತದೆ. ಆನ್‌ ಲೈನ್ ಮೂಲಕವೇ ತರಬೇತಿ ಇರುತ್ತದೆ. ತರಬೇತಿಯ ಅಗತ್ಯವಿದ್ದಲ್ಲಿ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಉಲ್ಲೇಖಿಸಬೇಕು.

    ಪರೀಕ್ಷಾಕೇಂದ್ರ: (ಪರೀಕ್ಷೆ ನಡೆದಲ್ಲಿ) ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು ಮಾತ್ರ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 28, 2023

    ಸಂದರ್ಶನ ಮತ್ತು ಗುಂಪು ಚರ್ಚೆ ನಡೆಯುವ ದಿನಾಂಕ: ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿ 2024

    ನೇಮಕ ಹೇಗೆ?

    ಆನ್ ಲೈನ್ ಪರೀಕ್ಷೆ(ಅಗತ್ಯವಿದ್ದಲ್ಲಿ) ಸಂದರ್ಶನ ಮತ್ತು ಗುಂಪು ಚರ್ಚೆ.

    ವೇತನ: ರೂ.44,500- ರೂ. 89,150

    ಹೊಸದೇನು ಗಮನಿಸಿ:

    • ಈ ಹಿಂದೆ ಎಲ್ಲ ಬ್ಯಾಂಕ್ ಹಾಗೂ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಫೋಟೋ, ಸಹಿ, ಎಡ ಹೆಬ್ಬೆರಳಿನ ಗುರುತು, ಕೈ ಬರಹದ ಘೋಷಣೆ ಮಾತ್ರ ಅಪ್ ಲೋಡ್ ಮಾಡಲಾಗುತ್ತಿತ್ತು. ಪಡೆದ ಅಂಕಗಳನ್ನು ಶೈಕ್ಷಣಿಕ ಕಾಲಂ ನಲ್ಲಿ ಮಾಹಿತಿ ನೀಡಬೇಕಾಗಿತ್ತು. ಆದರೆ ಈ ಪರೀಕ್ಷೆಗೆ ಶೈಕ್ಷಣಿಕ ಮಾಹಿತಿಗಳ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.

    ಅಪ್‌ಲೋಡ್ ಮಾಡುವ ವಿಧಾನ:

    • ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಅಭ್ಯರ್ಥಿಗಳಿಗೆ ಪ್ರತಿಯೊಂದಕ್ಕೂ ಪ್ರತ್ಯೇಕ ಲಿಂಕ್‌ಗಳುಒದಗಿಸಲಾಗುತ್ತಿದೆ.ಇವುಗಳಲ್ಲಿಫೋಟೋ,ಸಹಿ,ಎಡ ಹೆಬ್ಬೆರಳಿನ ಗುರುತು, ಕೈ ಬರಹದ ಘೋಷಣೆ, ವೈಯಕ್ತಿಕ ಮಾಹಿತಿ(Bio Data), ಶೈಕ್ಷಣಿಕ ಪ್ರಮಾಣಪತ್ರ ಮತ್ತು ಸಂಬಂಧಿತ ಕ್ಷೇತ್ರದಲ್ಲಿರುವ ಅನುಭವ / ಕೆಲಸದಿಂದ ನಿರ್ಗಮಿಸಿದ್ದಲ್ಲಿ ರಿಲೀವಿಂಗ್ ಪತ್ರ.  ಎಲ್ಲವನ್ನು ಅವುಗಳಿಗೆ ಸಂಬಂಧಿಸಿದ ಆಯಾಯ ಲಿಂಕ್ ಗಳನ್ನು ಕ್ಲಿಕ್ ಮಾಡಿ ಪ್ರತಿಯೊಂದು ಮಾಹಿತಿ ಯನ್ನು ಅಪ್ಲೋಡ್ ಮಾಡೋದನ್ನಮರೆಯಬೇಡಿ..

    ಆಯ್ಕೆ ವಿಧಾನ:

    • ಆಯ್ಕೆ ಪ್ರಕ್ರಿಯೆಯು ಗುಂಪು ಚರ್ಚೆ ಮತ್ತು ಸಂದರ್ಶನ ಮೂಲಕ ನಡೆಯುತ್ತದೆ.
    • ಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಿದ ನಂತರ,ಪೂರ್ವಭಾವಿಯಾಗಿ ಅರ್ಜಿ ನಮೂನೆಯಲ್ಲಿ ನಮೂದಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅದಕೆ ಪೂರಕವಾಗಿ ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಪರಿಶೀಲಿಸಿ ನಿಗದಿಪಡಿಸಿದ ಅರ್ಹತೆ, ಸೂಕ್ತತೆ/ಅನುಭವ, ಇತ್ಯಾದಿಗಳ ಮೇಲೆ ಅರ್ಹ ಅಭ್ಯರ್ಥಿ  ಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
    • ಪೂರ್ವಭಾವಿ ಸ್ಕ್ರೀನಿಂಗ್ ನಂತರ ಆಯ್ಕೆಯಾದವರು ಮೂಲ ದಾಖಲೆಗಳ ಪರಿಶೀಲನೆಗೆ ಒಳಪಟ್ಟಿರುತ್ತಾರೆ.
    • ನಂತರ ಬ್ಯಾಂಕ್ ಆನ್‌ಲೈನ್ ಸೈಕೋಮೆಟ್ರಿಕ್ ಪರೀಕ್ಷೆ ಅಥವಾ ವ್ಯಕ್ತಿತ್ವ, ಸಂವಹನದ ರೀತಿ, ಸ್ಪಷ್ಟತೆ ಮತ್ತುಸಮಸ್ಯೆ-ಪರಿಹರಿಸುವಿಕೆನಿರ್ಣಯಿಸುವ  ನವೀನತೆ, ದಕ್ಷತೆಯ ಬಗ್ಗೆ ಕಾಳಜಿ,ಇವುಗಳಿಗೆ ಸಂಬಂದಿಸಿದಂತೆ ಯಾವುದು ಸೂಕ್ತವಾಗಿದೆಯೋ ಅಂತಹ ಪರೀಕ್ಷೆಯನ್ನು ನಡೆಸುತ್ತದೆ.
    • ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡುವ ಇಚ್ಛೆ,ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಹುದ್ದೆಗೆ ಸೂಕ್ತತೆ ಇತ್ಯಾದಿ. ಅಭ್ಯರ್ಥಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂದರ್ಶನದ ಸಮಿತಿಯ ಮುಂದೆ ನೀಡಲಾಗುವುದು.
    • ಸೈಕೋಮೆಟ್ರಿಕ್ ಪರೀಕ್ಷೆ ಯನ್ನು ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳನ್ನು ಗುಂಪು ಚರ್ಚೆ ಮತ್ತು ಸಂದರ್ಶನಕ್ಕೆ ಹಾಜರಾಗಲು ಕರೆಯಲಾಗುವುದು, ಇದು SIDBI ಯ ವಿವಿಧ ಕಚೇರಿಗಳಲ್ಲಿ ನಡೆಯುತ್ತದೆ. ಅಭ್ಯರ್ಥಿಯು ಮೊದಲು ಗುಂಪು ಚರ್ಚೆಗೆ ಹಾಜರಾಗಬೇಕು ಮತ್ತು ನಂತರ ಅದೇ ದಿನ ಸಂದರ್ಶನಕ್ಕೆ ಹಾಜರಾಗಬೇಕು.
    • ಗುಂಪು ಚರ್ಚೆ ಮತ್ತು ಸಂದರ್ಶನಕ್ಕೆ ಗರಿಷ್ಠ ಅಂಕಗಳು 100. ಪಡೆಯಬೇಕಾದ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸuತ್ತದೆ. ಗುಂಪು ಚರ್ಚೆಯಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನದ ಅರ್ಹತೆಗಾಗಿ ಪರಿಗಣಿಸ ಲಾಗುವುದು.
    • ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಅಭ್ಯರ್ಥಿಯು ಗಳಿಸಿದ ಸಂಯೋಜಿತ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.
    • ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆಯನ್ನು ಆಧರಿಸಿ ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ನಡೆಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ.ಆನ್‌ಲೈನ್ ಪರೀಕ್ಷೆ ಸೂಕ್ತವೆಂದು ಭಾವಿಸಿದರೆ ಮಾತ್ರ ಪರೀಕ್ಷೆ ನಡೆಸಲಾಗುವುದು.ಪರೀಕ್ಷಾ ಕೇಂದ್ರಗಳ ತಾತ್ಕಾಲಿಕ ಪಟ್ಟಿ ಯಲ್ಲಿ ಬೆಂಗಳೂರು ಪರೀಕ್ಷಾ ಕೇಂದ್ರವಿದೆ. (ಪರೀಕ್ಷೆ ಅಗತ್ಯ ವಿರುವ ಸಂದರ್ಭದಲ್ಲಿ ಮಾತ್ರ ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ನಡೆಸ ಲಾಗುತ್ತದೆ).
    • ಇದೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವರದಾನ ವಾಗಬಹುದು. ಪರೀಕ್ಷೆ ನಡೆಯದಿದ್ದಲ್ಲಿ ಕೇವಲ ಸೈಕೋಮ್ಯಾಟ್ರಿಕ್ ಟೆಸ್ಟ್ ಗುಂಪು ಚರ್ಚೆ ಹಾಗೂ ಸಂದರ್ಶನ ಮಾತ್ರ ನಡೆಯಲಿದೆ.
    • ಗುಂಪು ಚರ್ಚೆ ಮತ್ತು ಸಂದರ್ಶನವು ಲಕ್ನೋ, ಮುಂಬೈ, ನವದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾ ದಲ್ಲಿ ಮಾತ್ರ ನಡೆಯಲಿದೆ.

    ವಿವರಗಳಿಗೆ: https://sidbi.in or www.sidbi.in

    ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಪೂರ್ಣವಾಗಿ ಅಧಿಸೂಚನೆಯನ್ನುಓದಿಕೊಳ್ಳಬೇಕು. ನೇಮಕ ಸಂಬಂಧ ಎಲ್ಲಾ ಮಾಹಿತಿಯನ್ನು SIDBI ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತದೆ.

    ಪಾಪದ ಫಲ ಹತ್ತಿರಕ್ಕೆ ಬಂದಾಗ

     ಸುಮಾವೀಣಾ

    ಏನೆನಾಗದೋ  ಪಾಪದ ಫಳಂ ಎಯ್ದೆವಂದ  ದೆವಸದೊಳಾರ್ಗಂ?(ಪಾಪದ ಫಲ ಹತ್ತಿರಕ್ಕೆ ಬಂದ  ಯಾರ್ಯಾರಿಗೆ ಏನೇನಾಗುತ್ತದೋ)ಯುಧಿಷ್ಠಿರನು ದ್ರೌಪದಿಯನ್ನು  ಜೂಜಿನಲ್ಲಿ ಪಣವಾಗಿರಿಸಿ  ಸೋತನಂತರದಲ್ಲಿ  ಆದಿಕವಿ ಪಂಪ  ಈ ಉದ್ಗಾರವನ್ನು ತೆಗೆಯುತ್ತಾನೆ.

    ಈ ಸಂದರ್ಭದಲ್ಲಿ ದ್ರೌಪದಿ  ಪಣವಾಗಿದ್ದಾಳೆ  ಪಾಂಡವರು ಸೋಲುತ್ತಾರೆ. ಅವಮಾನದ ಸೇಡಿಗೆ  ಕೆರಳಿ  ಆಕೆ ಪ್ರತಿಜ್ಞೆ ಮಾಡುತ್ತಾಳೆ… ಮುಡಿ ಬಿಚ್ಚುತ್ತಾಳೆ.   ಬಿಚ್ಚಿದ ಮುಡಿಯನ್ನು ಮತ್ತೆ ಕಟ್ಟುವಲ್ಲಿವರೆಗಿನ  ಸಮಯ ಬಲು ದೀರ್ಘದ್ದು ಅವಳು  ಪ್ರತಿಜ್ಞೆ ಈಡೇರಿಸಿಕೊಳ್ಳುವ ದಿವಸದ ವರೆಗೆ   ಯಾರ್ಯಾರು ಏನೇನನ್ನು ಅನುಭವಿಸಬೆಕಾಗುತ್ತದೆಯೋ ಎನ್ನುವ  ಅರ್ಥದಲ್ಲಿ ಕವಿ “ಪಾಪದ ಫಲ ಹತ್ತಿರಕ್ಕೆ ಬಂದ  ಯಾರ್ಯಾರಿಗೆ ಏನೇನಾಗುತ್ತದೋ?” ಎಂಬ ಮಾತನ್ನು ಬಳಸಿದ್ದಾನೆ.

     ಸೋದಾಹರಣವಾಗಿ ನೋಡುವುದಾದರೆ ಅದೃಷ್ಟ, ದೈವಬಲ,  ಪಡೆದುಕೊಂಡು ಬಂದಿರುವುದು, ಹಣೆಬರಹ,ದುರಾದೃಷ್ಟ   ಇತ್ಯಾದಿ ಮಾತುಗಳನ್ನು ಒಳ್ಳೆಯದಾಗಲಿ ಇಲ್ಲವೆ ಕೆಟ್ಟದಾಗಲಿ ಬಳಸುತ್ತೇವೆ.  ಕೆಟ್ಟ ಕೆಲಸ ಮಾಡುವವರಿಗೆ ತಕ್ಷಣ ಕೆಟ್ಟದ್ದಾಗುತ್ತದೆ ಶಿಕ್ಷೆ ಆಗುತ್ತದೆ ಎಂಬುದೇನು ಇಲ್ಲ.  ವೈಯಕ್ತಿಕ ಹಾಗು ಸಾಮಾಜಿಕ ಬದುಕನ್ನು ನಡೆಸುವಾಗ ಒಳ್ಳೆಯದು ಕೆಟ್ಟದ್ದು ಎಲ್ಲವೂ ಇದ್ದದ್ದೆ. ಇದನ್ನು ಒತ್ತಟ್ಟಿಗಿರಿಸಿದರೆ   ಶಿಷ್ಟ ಬದುಕಿಗೂ  ಈ ಮಾತು ಅನ್ವಯ. ಯಾವುದೋ ಆಫೀಸಿನಲ್ಲಿ ಕೆಲಸ ಮಾಡುತ್ತಿರುತ್ತಾರೆ  ಲೆಕ್ಕ ಪತ್ರದ ಶಾಖೆ ಇರಬಹುದು  ಇಲ್ಲ ಸರಕಾರಿ   ದಾಸ್ತಾನು ಮಳಿಗೆಗಳು  ಇತ್ಯಾದಿಗಳು ಇರಬಹುದು….  ಏನೋ ಲೆಕ್ಕ ಪತ್ರದಲ್ಲಿ, ದಾಖಲೆಯಲ್ಲಿ, ದಾಸ್ತಾನಿನಲ್ಲಿ  ವ್ಯತ್ಯಾಸವಾಗುತ್ತದೆ ಅದನ್ನು ಮೊದಲ ಹಂತದಲ್ಲಿ ಸರಿಪಡಿಸಿದರೆ ಸರಿ! ಆನಂತರ ಅದನ್ನು ಸರಿ ಪಡಿಸಲು ಕಷ್ಟ.

    ಹೇಳಿ ಕೇಳಿ ಇದು ಆನ್ಲೈನ್ ಯುಗ. ಇಂಥ ಸಣ್ಣ  ದೋಷಗಳೆ ಬೆಳೆದು ದೊಡ್ಡವಾಗಿರುತ್ತವೆ  ಆ ತಪ್ಪುಗಳು ಒಮ್ಮೆಗೆ ಸಿಕ್ಕಿಬಿದ್ದರೆ    ತೊಂದರೆಯೇ …! ಸಂಬಂಧ ಪಟ್ಟ ವ್ಯಕ್ತಿ ಬದಲಾಗಿ      ಇಡಿ ಕಛೇರಿಯವರೆ ಹೊಣೆಗಾರರಾಗಬಹುದು . ಹಾಗೆಯೇ ರೈಲು ಹಳಿಯಮೇಲೆ ಚಲಿಸುವಾಗ ತೊಂದರೆ ಏನೂ  ಇರುವುದಿಲ್ಲ  ಸ್ವಲ್ಪ ವೆತ್ಯಾಸವಾದರೂ  ಅನಾಹುತಗಳಾಗುತ್ತವೆ  ತಪ್ಪು ಒಬ್ಬರಿಂದ ಆಗುವುದಾದರೂ ಶಿಕ್ಷೆ  ಅಮಾಯಕರಿಗಾಗುತ್ತದೆ. ಮಹಾಭಾರತ ಯುದ್ಧದಲ್ಲಿ  ಪ್ರಾಣ ತೆತ್ತವರಲ್ಲಿ  ದಾಯಾದಿಗಳು , ವೈರಿಗಳು  ಮಾತ್ರವಿರಲಿಲ್ಲ  . ಜೋಳವಾಳಿಯ  ಹೆಸರಿನಲ್ಲಿ ಅಮಾಯಕರೂ ಪ್ರಾಣ ತೆರಬೇಕಾಯಿತು. 

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ

    ವಾಮಮಾರ್ಗದಿಂದ ಪಡೆದುಕೊಂಡದ್ದು  ಸುಲಭವಾಗಿ ದಕ್ಕುವುದಿಲ್ಲ

    ಸುಮಾವೀಣಾ

    ಬಡಿಗಂಡನಿಲ್ಲ  ಪಾಲನೆ ಕಂಡಂ (ಬಡಿಗೆ ಕಾಣಲಿಲ್ಲ  ಹಾಲು ಮಾತ್ರ ಕಂಡಿತು)- ಪಂಪನ ವಿಕ್ರಮಾರ್ಜುನ ವಿಜಯಂ ದ  ಸಪ್ತಮಾಶ್ವಾಸದಲ್ಲಿ   ಉಲ್ಲೇಖವಾಗಿರುವ ಮಾತು. 

    ದುರ್ಯೋಧನ ಜೂಜಿನ ಗೆಲುವಿನಿಂದ ಬಂದ   ರಾಜ್ಯವನ್ನು  ನೋಡಿ  ಹಿಗ್ಗುತ್ತಾನೆಯೇ ವಿನಾ ಅದರಿಂದ ಮುಂದಾಗುವ   ಶಾಶ್ವತ   ಅಪಕೀರ್ತಿಯನ್ನು  ಮುಂಗಾಣಲಿಲ್ಲ   ಎಂದು ವಿವರಿಸುವಲ್ಲಿ “ಬಡಿಗಂಡನಿಲ್ಲ  ಪಾಲನೆ ಕಂಡಂ” ಎನ್ನುವ ಮಾತು ಬಂದಿದೆ.

    ಅಂದರೆ ಬೆಕ್ಕು ಕದ್ದು  ಹಾಲನ್ನು  ಕುಡಿಯುವಾಗ ದೊಣ್ಣೆಯನ್ನು  ಕಾಣದೆ ಹಾಲನ್ನು ಮಾತ್ರ ಕಂಡಿತು ಎಂಬುದಾಗಿ  ಆಡು ಮಾತಿನಲ್ಲಿ ಹೇಳಬಹುದು.  ವಾಮಮಾರ್ಗದಿಂದ ಪಡೆದುಕೊಂಡದ್ದು  ಸುಲಭವಾಗಿ ದಕ್ಕುವುದಿಲ್ಲ  ಎಂಬುದೇ ಇದರ ತಾತ್ಪರ್ಯ.

    ಇಂದಿನ ದಿನಮಾನಗಳಲ್ಲಿಯೂ ಅಪರಾಧ ಕೃತ್ಯಗಳನ್ನು  ಮಾಡುವಾಗ   ಹೇಗಾದರೂ ಸರಿ!  ತಪ್ಪೋ? ಸರಿಯೋ? ನ್ಯಾಯವೋ ?ಅನ್ಯಾಯವೋ ?ಅಂದುಕೊಂಡಿದ್ದನ್ನು ಮಾಡಿ ಬಿಡಬೇಕು ಅನ್ನುವಲ್ಲಿಗೆ ಮಾತ್ರ   ಅವರ ಆಲೋಚನೆಗಳು ಸೀಮಿತವಾಗಿರುತ್ತವೆ ತದನಂತರ ಬರುವ  ಸಮಸ್ಯೆಗಳು, ಮಾನಾಪಮಾನ, ಶಿಕ್ಷೆಗಳ ಬಗ್ಗೆ  ಕಿಂಚಿತ್ ಯೋಚನೆಯನ್ನೂ ಮಾಡುವುದಿಲ್ಲ   ಅದೊಂದು ಉನ್ಮಾದದಲ್ಲಿ ಪಾಪ ಕೃತ್ಯಗಳನ್ನು ಎಸಗಿ ಬಿಡುತ್ತಾರೆ .  ಕಾನೂನಿನ  ಸಂಚನೆಗಳನ್ನು ಎದುರಿಸುವಾಗ  ಪಶ್ಚಾತ್ತಾಪ ವಾಗುತ್ತದೆ.  ಪಾಪಕೃತ್ಯ ಮಾಡುವುದು ಅಲ್ಪ ಕಾಲದಲ್ಲಿಯೇ ಆದರೂ ಅದರ ಪರಿಣಾಮ ದೀರ್ಘಕಾಲದ್ದೆನ್ನುವ  ಸತ್ಯವನ್ನು ಮನಗಾಣಬೇಕಿದೆ.  

     ಹಾಲನ್ನು ಕುಡಿಯುವ ಬೆಕ್ಕು  ಕೇವಲ ಅದರ ಬಗ್ಗೆಯೇ ಯೋಚನೆ ಮಾಡುತ್ತಿರುತ್ತದೆ  ಆದರಲ್ಲೆ ಇರುವ ಅದಕ್ಕೆ ಹೊಡೆಯಲೆಂದೇ ಇರಿಸಿರುವ  ಬಡಿಗೆ ಬಗ್ಗೆ ಯೋಚನೆ ಮಾಡುವುದಿಲ್ಲ.

    ಕವಿಯ  ಶಬ್ದಚಮತ್ಕಾರವನ್ನು  ಪದಜಿಜ್ಞಾಸುಗಳು ಗಮನಿಸಬೇಕು ‘ಬಡಿಗೆ ಕಂಡನಿಲ್ಲ’   ಎಂಬಲ್ಲಿ  ಕ>ಗ ಆಗುವುದು ಒಂದೆಡೆಯಾದರೆ ,ಬಡಿಯುವ ಗಂಡ  ಅಂದರೆ  ಒದಗುವ ಆಪತ್ತಿನ ಬಗ್ಗೆ ಅದು ಯೋಚಿಸುವುದಿಲ್ಲ  ಎಂಬ ಅರ್ಥವನ್ನು ಅಡವಾಗಿಸಿದ್ದಾನೆ. ಬೆಕ್ಕು ಇಲ್ಲಿ ಪ್ರತಿಮೆ ಮಾತ್ರ ಹೆಚ್ಚೆಂದರೆ ಅದಕ್ಕೆ ಹೊಟ್ಟೆ ಹಸಿವನ್ನು ಇಂಗಿಸಿಕಳ್ಳುವ ಚಿಂತಯೆ ಅಷ್ಟೆ .

     ಮನುಷ್ಯ ಹಾಗಾಲ್ಲ   ಸ್ವಾರ್ಥಿಯಾಗಿರುತ್ತಾನೆ. ಒಳಗೊಳಗೆ ಕುತಂತ್ರ ನಡೆಸಿ  ತಮಗೆ ಲಾಭ ಮಾಡಿಕೊಳ್ಳುವವರನ್ನು  ಬೆಕ್ಕಿಗೆ ಹೋಲಿಸುವುದಿದೆ ಯಾವುದೇ ಕೆಲಸ ಮಾಡಬೇಕಾದರೂ ದೂರಾಲೋಚನೆಗಳು ಇರಬೇಕು  ದೂರಾಲೋಚನೆಗಳು ಮುಂಬರುವ ವಿಪತ್ತುಗಳ ದಿಕ್ಸೂಚಿಗಳಾಗುತ್ತವೆ  ಹಾಗಾದಾಗ ದುರಾಲೋಚನೆಗಳು  ಇಲ್ಲವಾಗುತ್ತವೆ , ಸರ್ವಕಾಲಕ್ಕೂ ಅನ್ವಯವಾಗುವ ಎಚ್ಚರವನ್ನು ಪಂಪ  ದುರ್ಯೋಧನನ ಪಾತ್ರದ ಮೂಲಕ  ಪ್ರಮಾಣೀಕರಿಸಿದ್ದಾನೆ.  

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ

    ಪುತ್ರ ಶೋಕ ನಿರಂತರ

     ಸುಮಾ ವೀಣಾ

    ನೀಂ ಕ್ರಮ ವಿಪರ್ಯಮಂ ಮಾಡುವುದೆ– ರನ್ನನ ಗದಾಯುದ್ಧದ ಸಂಜಯವಚನದಲ್ಲಿ  ಈ ಮಾತಿದು.  ದುರ್ಯೋಧನ ಭೀಷ್ಮರನ್ನು ಭೇಟಿಯಾಗಲು  ಸಂಜಯನ  ಸಂಗಡ ಯುದ್ಧಭೂಮಿಯಲ್ಲಿ ನಡೆದುಬರುವಾಗ  ತನ್ನ ಮಗನ ಶವವನ್ನು ಕಂಡು  ಕಡು ನೋವಿನಿಂದ ಹೇಳುವ  ಮಾತು.

    ತಂದೆಯಾದವನಿಗೆ ಸಂಸ್ಕಾರ ಮಾಡುವುದು ಮಗನ ಜವಾಬ್ದಾರಿ ಇಲ್ಲಿ  ನಿನಗೇ ಸಮಸ್ಕಾರ ಮಾಡಬೇಕಾಯಿತಲ್ಲ   ಎನ್ನುವಲ್ಲಿ ಅವನ ಮನಸ್ಸು ಶೋಕ ಸಾಗರವೇ ಆಗಿತ್ತು ಎನ್ನಬಹುದು .ಯುಧ್ದಭೂಮಿಯಲ್ಲಿ  ಹೋರಾಟ ಮಾಡಿ ಮಡಿದ ಮಗನಿಗೆ ತಂದೆ ಹೇಳುವ ಮಾತು  ಆಂತಃಕರಣವನ್ನು ಕಲಕುತ್ತದೆ.

    ಇಂದಿನ ದಿನ ದಿನಮಾನಗಳಲ್ಲಿ  ಇಂತಹುದೆ ನೋವು ಬೇರೆ ಬೇರೆ ಕಾರಣದಿಂದ ತಂದೆ-ತಾಯಿಯರನ್ನು ಕಾಡುತ್ತಿರುವುದು ಸಾಮಾನ್ಯವಾಗಿದೆ. ಮೊದಲನೆಯದಾಗಿ ಬೆಳೆದುನಿಂತ ಮಕ್ಕಳನ್ನು ನೋಯಿಸಬಾರದು ಅನ್ನುವ ಕಾರಣಕ್ಕೆ ಅವರು ಕೇಳಿದ ಬೈಕ್ ಕೊಡಿಸುವುದು ಮಕ್ಕಳು   ಅತೀವೇಗದಲ್ಲಿ  ಚಾಲನೆ ಮಾಡಿ ಅಪಘಾತಗಳನ್ನು ಮಾಡಿಕೊಂಡು  ನಿತ್ಯ ನೋವನ್ನು ಕೊಡುತ್ತಾರೆ. ದುಖದಲ್ಲೇ   ಹೆತ್ತವರೇ ಮಕ್ಕಳ ಅಂಗಾಂಗಗಳನ್ನು ದಾನ  ಮಾಡುತ್ತಿದ್ದಾರೆ. ದುಶ್ಚಟಗಳಿಗೆ ದಾಸರಾಗಿ ಅದರಿಂದ ಹೊರಬರಲಾರದೆ  ಖಿನ್ನತೆಗೊಳಗಾಗಿ ಮಾನಸಿಕ ಅಸ್ವಸ್ಥರಾಗಿ ತಂದೆ ತಾಯಿಯರಿಗೆ ಹೊರೆಯಾಗಿರುವ ಮಕ್ಕಳ ಉದಾಹರಣೆಗಳು  ಎಷ್ಟೋಇವೆ.

    ಮೂರನೆಯದಾಗಿ ಇಂದಿನ ಜೀವಶೈಲಿ .ವೇಗದ ಬದುಕು,  ಅಶಿಸ್ತಿನ ಆಹಾರ ಪದ್ಧತಿ, ಮಾನಸಿಕ ಒತ್ತಡ  ಇದರಿಂದಾಗಿ  ವಯೋಸಹಜವಾಗಿ ಬರುವ ಕಾಯಿಲೆಗಳು ಅಪವಯಸ್ಸಿನಲ್ಲೆ ಬಂದು ಯುವಜನಾಂಗವನ್ನು  ಕಾಡುತ್ತಿವೆ.  ಹೃದ್ರೋಗ, ನರರೋಗ , ಡಯಾಬಿಟಿಸ್ ನಂತಹ ಸಮಸ್ಯೆ ಎದುರಿಸುವ   ಹೆತ್ತವರನ್ನು ಮಕ್ಕಳು  ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು  ಆದರೆ ಕ್ರಮ ವಿಪರ್ಯಯವಾಗಿದೆ .ಪೋಷಕರೆ ಮಕ್ಕಳನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗುವ ಹಾಗಾಗಿದೆ.  

    ಛಲವನ್ನೇ ಸವಾಲಾಗಿ ಸ್ವೀಕರಿಸಿದ ದುರ್ಯೋಧನ ಮಗನನ್ನು ಕಳೆದುಕೊಂಡರೆ ಇಂದಿನ  ತಂದೆ ತಾಯಿಗಳು  ಬಹುಪಾಲು  ಇಂದಿನ ಜೀವನಶೈಲಿಯ  ಕಾರಣದಿಂದ  ಮಕ್ಕಳನೋವಿನಲ್ಲಿ ದಿನದೂಡಬೇಕಾದ ಸಂದರ್ಭವಿದೆ. ಮಹಾಭಾರತದ ದುರ್ಯೋಧನ ಹೇಳಿದ ಮಾತಿನ ಸಂದರ್ಭ ಹಾಗು  ಇಂದಿನ ಸಂದರ್ಭ ಬೇರೆಯಾಗಿರಬಹುದು ಆದರೆ  ನೋವು ಪುತ್ರ ಶೋಕ ನಿರಂತರ ಎನ್ನುವ ಮಾತಿನಲ್ಲಿಯೇ  ಅಂತರ್ಗತವಾಗಿದೆ. “ನೀಂ ಕ್ರಮವಿಪರ್ಯಮಂ ಮಾಡುವುದೇ”  ಎಂಬ ಮಾತು ಇಂದಿಗೂ ಅನ್ವಯಿಸುವ ಮಾತು ಅಲ್ವೆ!

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ

    ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು

    ಕಣ್ಮಲರರಿಯದೆ ಮನಂ ಅರಿದುದು– ನೇಮಿಚಂದ್ರ   ಕವಿಯ ‘ಲೀಲಾವತಿ ಪ್ರಬಂಧ’ದಲ್ಲಿ ಉಲ್ಲೇಖವಾಗಿರುವ ಮಾತಿದು.ಕಣ್ಣರಿಯದಿದ್ದರೂ  ಮನಸ್ಸು,ಕರುಳು ಅರಿವುದು ಎಂಬ ಮಾತು   ಎಲ್ಲರಿಗು ತಿಳಿದಿರುವಂಥದ್ದೆ.  ಪ್ರತಿಭೆ ಎಂಬುದು ದೃಗ್ಗೋಚರವಲ್ಲ  ಹೃದ್ಗೋಚರ  ಎಂಬಂತೆ ಹೃದಯಕ್ಕೆ ತಿಳಿಯುವಂತಹ ಮಾತನ್ನು ಕುರಿತು ಈ ಮಾತಿದೆ. 

    ಕಂಡದ್ದೆಲ್ಲವನ್ನು ಸಾಕ್ಷಿಯ ಹಿನ್ನೆಲೆಯಿಂದಲೇ ವಿವೇಚಿಸುತ್ತೇವೆ ಎಂದು ತೀರ್ಮಾನಕ್ಕೆ ಬರಲಾಗದು.ಮನಸ್ಸಿನ ಸೂಕ್ಷ್ಮ  ಸಂವೇದನೆಯ ಹಿನ್ನೆಲೆಯಿಂದಲೂ ಅವಲೋಕಿಸಬಹುದು.  ಬುದ್ಧಿಯ ಮಾತು ಎಲ್ಲಾ ಸಂದರ್ಭಕ್ಕೂ ಹೊಂದಿಕೆಯಾಗುವುದಿಲ್ಲ. ಹೃದಯದಿಂದ  ಮನಸ್ಸಿನ ಸಂಚಲನಕ್ಕೆ ಆ ಭಾವಕ್ಕೆ ಸ್ಪಂದಿಸಲೇಬೇಕಾಗುತ್ತದೆ. ಸಂಬಂಧಗಳು ತಮಗೆ ತಿಳಿಯದಂತೆ ಅವಿನಾಭಾವ ಬಂಧವನ್ನು ಹೊಂದಿರುತ್ತದೆ.

    ಮನುಷ್ಯ ಸಮಾಜ ಸುಸ್ಥಿತಿಯಲ್ಲಿ ಇರಬೇಕೆಂದರೆ  ಆತನ ಸಂಬಂಧದಲ್ಲಿಯೂ ಅನ್ಯೋನ್ಯತೆ ಇರಬೇಕು. ಕಣ್ಣಿಗೆ ಕಂಡಿದ್ದು ಸತ್ಯವಲ್ಲ. ಪರೀಕ್ಷಕ  ದೃಷ್ಟಿಯಿಂದ ಈಕ್ಷಿಸಿದರೆ ಸತ್ಯಾಸತ್ಯತೆಗಳ ಅರಿವಾಗುತ್ತದೆ. 

    ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತನ್ನು ಇಲ್ಲಿ ಸಂವಾದಿಯಾಗಿ ನೋಡಬಹುದು. ಕಣ್ಣಿಗೆ ಕಂಡದ್ದೆಲ್ಲ ಸತ್ಯವೆಂದು  ಭಾವಿಸಲಾಗದು ಮೇಲ್ನೋಟಕ್ಕೆ ಸತ್ಯದ ಛಾಯೆ ಹೊಂದಿದ್ದರೂ  ಅದು ಸುಳ್ಳಾಗಬಹುದು ಹಾಗಾಗಿ ಯಾವುದೇ ವಿಚಾರದಲ್ಲಿ ಆತುರದ  ತೀರ್ಮಾನಕ್ಕೆ ಬಾರದೆ   ಸಂದರ್ಭವನ್ನು ಕೂಲಂಕಷವಾಗಿ  ಪರಿಶೀಲಿಸಬೇಕಾಗುತ್ತದೆ.   ಯಾವುದೇ ತೀರ್ಮಾನಕ್ಕೆ ಬರಬೇಕಾದರೂ ಜಾಗೃತೆಯ ಎಚ್ಚರ ಬೇಕೆಂಬುದನ್ನು ಪ್ರಸ್ತುತ ಮಾತು ಹೇಳುತ್ತದೆ. ಯಾರೇ ಆಗಲಿ ವಿವೇಚನಾಯುಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ತಿಳಿವಿಗಿಂತ ತಾಳುವಿಕೆಗಿಂತ ಹೆಚ್ಚಿನದಿಲ್ಲ  ಅಲ್ವ!

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ

    error: Content is protected !!