25.8 C
Karnataka
Wednesday, May 20, 2026
    Home Blog Page 174

    ನಟಿ ಮಯೂರಿ ಮದುವೆ

    ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ ತಮ್ಮ ಬಹು ಕಾಲದ ಗೆಳೆಯ ಅರುಣ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆೆ. ಬೆಂಗಳೂರಿನ ಜೆಪಿ ನಗರದ ತಿರುಮಲಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಶುಕ್ರವಾರ ವಿವಾಹ ಸಮಾರಂಭ ನಡೆಯಿತು. ಅರುಣ್ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಮೀಪದ ಬಂಧುಗಳು ಮತ್ತು ಸ್ನೇಹಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಮದುವೆಯ ಚಿತ್ರ ಸಂಚಯಇಲ್ಲಿದೆ. (ಚಿತ್ರಗಳು: ಮನು)

    ಬದುಕು ನಾವು ಅಂದುಕೊಂಡಂತೆ ತೀರಾ ನಿರ್ದಯಿ ಅಲ್ಲ

    ಕೆಲವರಿಗೆ ಜೀವನದುದ್ದಕ್ಕೂ ಒಂದಾದ ಮೇಲೊಂದರಂತೆ ಕಷ್ಟಗಳು ಎದುರಾಗುತ್ತಲೇ ಇರುತ್ತದೆ, ಇನ್ನು ಕೆಲವರ ಬದುಕು ದುರಂತಗಳಿಂದಲೇ ಕೂಡಿರುತ್ತದೆ. ಆದಾಗ್ಯೂ ಬದುಕಿನ ಬಗ್ಗೆ ಎಂದಿಗೂ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ. ತನ್ನ ಗುರಿ ತಲುಪುವವರೆಗೂ ಕಾರ್ಯಪ್ರವೃತ್ತರಾಗುತ್ತಾರೆ. ಇದು ಒಂದು ಕೆಟಗರಿಯವರಾದರೆ, ಮತ್ತೊಂದು ವರ್ಗಕ್ಕೆ ಸೇರಿದವರು ಬದುಕಿನಲ್ಲಿನಡೆಯುವ ಎಲ್ಲಾ ಘಟನೆಗಳನ್ನು ನೆನೆದು ವಿಧಿಬರಹಕ್ಕೆ ಶರಣಾಗಿಬಿಡುತ್ತಾರೆ.
    ಪ್ರತಿಯೊಬ್ಬರಿಗೂ ಕೂಡಾ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಸಮಸ್ಯೆಗಳು ಮನುಷ್ಯನಿಗಲ್ಲದೇ ಮರಗಿಡಗಳಿಗೆ ಬರುತ್ತವೆಯೇ? ನಾವಂದುಕೊಂಡಂತೆ ಯಾರ ಬದುಕೂ ಕೂಡಾ ಹೂವಿನ ಹಾಸಿಗೆಯಾಗಿರುವುದಿಲ್ಲ. ಏನೋ ಸಾಧಿಸಬೇಕು ಎಂದುಕೊಂಡವರಲ್ಲಿ ಕೆಲವರಿಗೆ ಸಂಪನ್ಮೂಲಗಳ ಕೊರತೆ ಕಾಡಬಹುದು, ಮತ್ತೆ ಕೆಲವರಿಗೆ ಎಲ್ಲಾ ಇದ್ದೂ ಏನೂ ಸಾಧಿಸಲು ಸಾಧ್ಯವಾಗದೇ ಇರಬಹುದು. ಹಾಗಂತ ಬದುಕಿನ ಬಗ್ಗೆ ನಿರಾಶಾವಾದಿಗಳಾಗಬಾರದು.

    ಆಲ್ಟರ್‍ನೇಟಿವ್ ಇದೆ
    ಬದುಕು ನಾವಂದುಕೊಂಡಂತೆ ತೀರಾ ನಿರ್ದಯಿ ಅಲ್ಲ. ಪ್ರತಿಯೊಂದಕ್ಕೂ ಮತ್ತೊಂದು ಬದಲಿ ವ್ಯವಸ್ಥೆ ಇದ್ದೇ ಇರುತ್ತದೆ. ಹಲವು ಆಯ್ಕೆಗಳು ಇರುತ್ತವೆ. ಆದರೆ ನಾವು ಕಳೆದುಕೊಂಡ ಜಾಗದಲ್ಲೇ ಆಯ್ಕೆಗಳನ್ನು ಹುಡುಕಬಾರದು. ಬದುಕಿನಲ್ಲಿ ಕಷ್ಟಗಳು ಎದುರಾದಾಗ, ಕೆಲಸ ಕಳೆದುಕೊಂಡು ನಿರಾಸೆಗಳುಂಟಾದಾಗ ಅದಕ್ಕೊಂದು ಸೂಕ್ತವಾದ ಆಲ್ಟರ್‍ನೇಟಿವ್ ಹುಡುಕಿಕೊಂಡು ಬಿಡಬೇಕು.

    ನಕ್ಷತ್ರಗಳೆಡೆಗಿನ ನೋಟ

    ಭವಿಷ್ಯದ ಸುಂದರ ದಿನಗಳ ಬಗ್ಗೆ ಕನಸು ಕಾಣಲಾರದಷ್ಟು ಯಾರೂ ಕೂಡಾ ಬಡವರಲ್ಲ. ಬದುಕಿನ ಬಗ್ಗೆ ಸಕಾರಾತ್ಮಕ ಭಾವ ಹೊಂದಬೇಕು. ಎಷ್ಟೇ ಕಷ್ಟ ಬಂದರೂ ತಾನಿಟ್ಟ ಗುರಿಯ ಮರೆಯಬಾರದು.
    ಒಂದು ಜನಪದ ಕಥೆ ಹೀಗಿದೆ. ಬದುಕಿನಲ್ಲಿ ಒಬ್ಬ ವ್ಯಕ್ತಿ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ನಾಲ್ಕೈದು ದಿನ ಹಸಿವಿನಿಂದಲೇ ಬಳಲುತ್ತಾನೆ. ಕೊನೆಗೆ ಕಾಡಿನೊಳಗೆ ಹೋಗಿ ತನ್ನ ಜೀವನ ಕೊನೆಗಾಣಿಸಲು ಮುಂದಾಗುತ್ತಾನೆ. ಆಗ ಅವನ ಮುಂದೆ ದೇವರು ಪ್ರತ್ಯಕ್ಷನಾಗಿ, ಯಾಕೆ ಏನಾಯ್ತು ಸಾಯುವ ನಿರ್ಧಾರ ಏಕೆ ಎಂದು ಪ್ರಶ್ನಿಸುತ್ತಾನೆ. ಆಗ ಆ ವ್ಯಕ್ತಿ ತನ್ನ ಕಷ್ಟವನ್ನು ತೋಡಿಕೊಳ್ಳುತ್ತಾನೆ. ಆಗ ದೇವರು ಹೇಳುತ್ತಾನೆ, “ಪ್ರತಿಯೊಬ್ಬರೂ ಕೂಡಾ ಅವರವರ ಬದುಕನ್ನು ಅವರವರೇ ರೂಪಿಸಿಕೊಳ್ಳಬೇಕು’ ಎಂದು.


    ಅಷ್ಟೊತ್ತಿಗೆ ಆ ಕಾಡಿನಲ್ಲಿ ಹಸಿದ ವಯಸ್ಸಾದ ನರಿಯೊಂದು ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿರುವುದನ್ನು ಆತ ಗಮನಿಸುತ್ತಾನೆ. ಆ ವ್ಯಕ್ತಿ ನರಿಯನ್ನು ಹಿಂಬಾಲಿಸುತ್ತಾನೆ. ದೂರದಲ್ಲಿ ಸಿಂಹ ತಾನು ಬೇಟೆಯಾಡಿದ ಜಿಂಕೆಯನ್ನು ತಿನ್ನುತ್ತಿರುತ್ತದೆ. ಹೊಟ್ಟೆ ತುಂಬಿದ ಬಳಿಕ ಸಿಂಹ ಅಲ್ಲಿಂದ ಹೊರಟು ಹೋಗುತ್ತದೆ. ತಕ್ಷಣವೇ ಹಸಿದ ನರಿ, ಸಿಂಹ ತಿಂದು ಬಿಟ್ಟ ಎಂಜಲು ಆಹಾರವನ್ನು ಸೇವಿಸಲು ಅಲ್ಲಿಗೆ ನೆಗೆಯುತ್ತದೆ. ಇದನ್ನು ಗಮನಿಸಿದ ವ್ಯಕ್ತಿ ದೇವರನ್ನು ಮತ್ತೆ ಪ್ರಶ್ನಿಸುತ್ತಾನೆ, “ನೋಡು ನೀನು, ಹಸಿದ ನರಿಯ ಹೊಟ್ಟೆಗೂ ಆಹಾರ ಸಿಗುವಂತೆ ಮಾಡಿದೆ. ನನ್ನನ್ನು ಯಾಕೆ ಈ ರೀತಿ ಬಳಲುವಂತೆ ಮಾಡಿದೆ?’ ಎಂದು.


    ಆಗ ದೇವರು ಉತ್ತರಿಸುತ್ತಾನೆ, “ನೀನೂ ಸಿಂಹವೇ, ನಿನ್ನನ್ನು ನಾನು ತೋಳನನ್ನಾಗಿ ಮಾಡಿಲ್ಲ’ ಎಂದು.

    ಈ ಮಾತಿನ ಮರ್ಮವನ್ನು ಯಾರು ಬೇಕಾದರೂ ಅರ್ಥೈಸಿಕೊಳ್ಳಬಹುದು. ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವಾತ ಬಾಳುತ್ತಾನೆ. ಸಿಂಹ ತಾನೇ ಬೇಟೆಯಾಡಿ ಹೊಟ್ಟೆ ಬಿರಿಯುವಷ್ಟು ಆಹಾರ ಹುಡುಕಿಕೊಳ್ಳುತ್ತದೆ. ಆದರೆ ತೋಳ ತಿಂದಿದ್ದು ಹಂಗಿನ ಆಹಾರ.


    ಜವಾಬ್ದಾರಿ ಮನದಲ್ಲಿದ್ದರೆ ಯಾರೂ ಕೂಡಾ ತನ್ನ ಪ್ರಯತ್ನವನ್ನು ಕೈಬಿಡುವುದಿಲ್ಲ. ಕಳೆದುಕೊಂಡುದುದರ ಬಗ್ಗೆ ಪಶ್ಚಾತ್ತಾಪಪಟ್ಟುಕೊಳ್ಳದೆ ಸಾಧಿಸಬೇಕೆಂಬ ಛಲ ಮತ್ತು ಅದರೆಡೆಗಿನ ಪ್ರಯತ್ನ ಜೀವನವೆಂಬ ಹೋರಾಟದಲ್ಲಿ ಯಶಸ್ವಿಯಾಗುವಂತೆ ಮಾಡುತ್ತದೆ. ಹಾಗೆಯೇ ನಕ್ಷತ್ರಗಳನ್ನು ಮುಟ್ಟುವ ಆತನ ಕನಸುಗಳನ್ನು ಯಾರು ತಾನೇ ತಡೆಯುವುದಕ್ಕೆ ಸಾಧ್ಯ? ಅಲ್ಲವೇ?

    ಚಿತ್ರ ಸೌಜನ್ಯ: freestocks.org from Pexels

    ಪ್ರಶಾಂತ್ ನೀಲ್ ಹಿಂದೆ ಬಿದ್ದಿರುವ ತೆಲುಗು ನಿರ್ಮಾಪಕರು

    ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ಪ್ರತಿಭಾವಂತ ನಿರ್ದೇಶಕರಿದ್ದಾರೆ, ಆದರೆ ಕೆಲವರ ಹೆಸರು ಮಾತ್ರ ಎಲ್ಲ ಭಾಷೆಯ ಇಂಡಸ್ಟ್ರಿಗೂ ಗೊತ್ತಾಗುತ್ತದೆ. ಆ ಸಾಲಿಗೆ ಕೆಜಿಎಫ್‌ ಖ್ಯಾತಿಯ ಪ್ರಶಾಂತ್‌ ನೀಲ್‌ ಹೆಸರು ಸೇರಿದೆ ಏಕೆಂದರೆ ಇವರ ಕಾಲ್‌ಶೀಟ್‌ಗಾಗಿ ಪಕ್ಕದ ತೆಲುಗು ಚಿತ್ರರಂಗದಿಂದ ಭಾರಿ ಡಿಮಾಂಡ್‌ ಬಂದಿದೆ.

    ಸಾಮಾನ್ಯವಾಗಿ ನಾಯಕರ ಹುಟ್ಟು ಹಬ್ಬಕ್ಕೆ ಪುಟಗಟ್ಟಲೇ ಜಾಹಿರಾತು ನೀಡುವ ನಿರ್ಮಾಪಕರು ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಹುಟ್ಟು ಹಬ್ಬಕ್ಕೆ ಕನ್ನಡದ ಖ್ಯಾತ ದಿನಪತ್ರಿಕೆಗಳಿಗೆ ಪೂರ್ಣ ಪುಟ, ಅರ್ಧಪುಟಗಳ ಜಾಹಿರಾತನ್ನು ನೀಡಿದೆ. ಅದು ಯಾರ್ಯಾರು ಅಂತೀರಾ.  ‘ರಂಗಸ್ಥಳಂ’ , ‘ಶ್ರೀಮಂತುಡು’, ‘ಜನತಾ ಗ್ಯಾರೇಜ್‌’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ, ಸದ್ಯ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮೈತ್ರಿ ಮೂವಿ ಮೇಕರ್ಸ್‌ ಮತ್ತು ‘ಭರತ್‌ ಅನೇ ನೇನು’ , ‘ಆರ್‌ಆರ್‌ಆರ್‌’ ಸಿನಿಮಾ ನಿರ್ಮಾಪಕ ಡಿವಿವಿ ಪ್ರೊಡಕ್ಷನ್‌ ಹೌಸ್‌ಗಳಿಂದ ಈ ಜಾಹಿರಾತು ಪ್ರಕಟವಾಗಿದೆ. ಅಲ್ಲದೆ ಸೆನ್ಸೇಶನಲ್ ಡೈರೆಕ್ಟರ್‌, ಬಾಕ್ಸ್‌ ಆಫೀಸ್‌ ಮಾನ್ ಸ್ಟರ್‌, ಹೀಗೆ ಸಿನಿಮಾ ಹೀರೋಗಳಿಗೆ ಕರೆಯಬಹುದಾದ ಟೈಟಲ್‌ಗಳನ್ನು ನಿರ್ದೇಶಕರೊಬ್ಬರಿಗೆ ನೀಡಲಾಗಿದೆ.

    ಹೌದು ಸದ್ಯ ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಕೆಲಸದಲ್ಲಿ ಬಿಝಿ ಇರುವ ಪ್ರಶಾಂತ್‌ ನೀಲ್‌ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎಂಬ ಮಾಹಿತಿಯನ್ನು ಅವರ ಅಪ್ತರು ಹೇಳುತ್ತಾರೆ. ಅವರು ಒಪ್ಪಿಕೊಳ್ಳದೆ ಅಷ್ಟು ದೊಡ್ಡ ನಿರ್ಮಾಣ ಸಂಸ್ಥೆಗಳು ಜಾಹಿರಾತು ಯಾಕೆ ಕೊಡುತ್ತವೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಚಾಪ್ಟರ್‌-2 ಆದ ಮೇಲೆ ಶ್ರೀಮುರುಳಿ ಜತೆ ಸಿನಿಮಾ ಮಾಡುತ್ತಾರೆ ಎಂದು ಆದರೆ ಈಗ ಜೂ . ಎನ್‌ಟಿಆರ್‌ಗೆ ಮಾಡುತ್ತಾರೆ ಎಂದು ಸುದ್ದಿಯಾಗಿದೆ. ಇದರ ಬೆನ್ನಲ್ಲೆ ಜಾಹಿರಾತುಗಳು ಬಂದಿರುವುದು, ನೀಲ್‌ ಈ ವರ್ಷ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಡುವುದು ಪಕ್ಕಾ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಒಬ್ಬ ನಿರ್ದೇಶಕನ ಬಗ್ಗೆ ಇಷ್ಟೆಲ್ಲಾ ಸುದ್ದಿಗಳು ಇದೇ ಮೊದಲಬಾರಿಗೆ ಹಬ್ಬಿದ್ದು, ಇದು ಕನ್ನಡದ ಹೆಮ್ಮೆ ಎಂದು ಸಹ ಹೇಳಲಾಗುತ್ತಿದೆ.

    ದುಡ್ಡು ಇದ್ದವರಿಗೆ ಕೃಷಿ ಭೂಮಿ: ರೈತರ ಮೇಲಾಗುವ ಪರಿಣಾಮ ಏನು?

    ಈ ವರೆಗೆ ಕೃಷಿಕನಲ್ಲದ ವ್ಯಕ್ತಿ ಜಮೀನು ಖರೀದಿಸಲು ಅವಕಾಶ ಇರಲಿಲ್ಲ. ಇನ್ನುಮುಂದೆ ರಾಜ್ಯದಲ್ಲಿರುವ ಕೃಷಿಕರಲ್ಲದವರೂ ಯಾವುದೇ ಅಡೆತಡೆ ಇಲ್ಲದೆ ಜಮೀನು ಖರೀದಿಸಬಹುದು. ಇಂಥ ಅವಕಾಶ ಕಲ್ಪಿಸಲು ಕರ್ನಾಟಕ ಭೂ ಸುಧಾರಣ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದೆ. ಕೈಗಾರಿಕೋದ್ಯಮಿಗಳು ಈ ತಿದ್ದುಪಡಿಯನ್ನು ಸ್ವಾಗತಿಸಿದ್ದರೆ ರೈತ ಮುಖಂಡರು ಇದೊಂದು ವಿನಾಶಿಕಾರಿ ನಡೆ ಎಂದು ಬಣ್ಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದ ನಾಯಕ ಕೆ.ಟಿ . ಗಂಗಾಧರ್ ಅವರೊಂದಿಗೆ ಕನ್ನಡಪ್ರೆಸ್ .ಕಾಮ್ಚನ್ನಗಿರಿ ಸುಧೀಂದ್ರ ನಡೆಸಿದ ಪಾಡ್ಕಾಸ್ಚ್ ಇದು. ಆಲಿಸಿ ನಿಮ್ಮಅಭಿಪ್ರಾಯ ತಿಳಿಸಿ

    ಕೋವಿಡ್ ವಿರುದ್ಧ ಯೋಗಿ ಸಾರಿದ ಸಮರ

    ಕೋವಿಡ್-19 ನಿಯಂತ್ರಣದ ಕುರಿತಂತೆ ಸುಮಾರು ಮೂರುವರೆ ಕೋಟಿ ಜನಸಂಖ್ಯೆ ಇರುವ, ಕೇವಲ ಎರಡು ರಾಜ್ಯಗಳ ಜತೆ ಗಡಿ ಹಂಚಿಕೊಂಡಿರುವ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತೆಗೆದುಕೊಂಡ ಕ್ರಮಗಳ ಬಗ್ಗೆ ಅದ್ಧೂರಿಯ ಪ್ರಚಾರ ದೊರೆಯುತ್ತಲೇ ಸಾಗಿದೆ. ಆದರೆ ದೇಶದ ಅತಿದೊಡ್ಡ ರಾಜ್ಯ ಸುಮಾರು 20 ಕೋಟಿ ಗೂ ಹೆಚ್ಚು ಜನಸಂಖ್ಯೆಯುಳ್ಳ, ಕೈಗಾರಿಕೆಗಳು ಸಮೃದ್ಧವಾಗಿರುವ, ನಾನಾ ರಾಜ್ಯಗಳು ಮತ್ತು ನೇಪಾಳದ ಜತೆ ಗಡಿ ಹಂಚಿಕೊಂಡಿರುವ ಉತ್ತರ ಪ್ರದೇಶವು ಯಾವ ರೀತಿ ಈ ಸೋಂಕಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು ಎಂಬುದರ ಬಗ್ಗೆ ಅಷ್ಟಾಗಿ ಪರಿಚಯ ಆಗಿಲ್ಲ.

    ಸಂಡೇ ಗಾರ್ಡಿಯನ್ ಇರಬಹುದು, ಪಾಕಿಸ್ತಾನ ಮೂಲದ ಡಾನ್ ಪತ್ರಿಕೆಯ ಸಂಪಾದಕರ ಸ್ವತಃ ಟ್ವೀಟ್ ಇರಬಹುದು, ಯೋಗಿಯ ಕಾರ್ಯಕ್ಷಮತೆಗೆ ಶಹಬ್ಬಾಸ್ ಗಿರಿ ಕೊಟ್ಟಿರುವುದಂತೂ ಸುಳ್ಳಲ್ಲ. ಹಾಗಾದರೆ ಈ ಸಾಂಕ್ರಾಮಿಕದ ವೇಗ ತಡೆಯಲು ಕೈಗೊಂಡ ಕ್ರಮಗಳಾದರೂ ಏನು ?

    ಸವಾಲಿನ ತ್ವರಿತ ಅರಿವು

    ಕೋವಿಡ್-19 ಹಾವಳಿಯ ಕುರಿತಂತೆ ಜಿಲ್ಲಾಡಳಿತದೊಂದಿಗೆ ಯೋಗಿ ವೀಡಿಯೊ ಕಾನ್ಫರೆನ್ಸ್ ನಡೆಸುತ್ತಿದ್ದ ಸಂದರ್ಭವದು. ಆಗ ಚೀಟಿಯೊಂದರಲ್ಲಿ ಬಂದ ಸಂದೇಶ ಅವರನ್ನು ಅಲುಗಾಡಿಸಿತ್ತು. ಆನಂದ್ ವಿಹಾರ್ ಬಸ್ ನಿಲ್ದಾಣದಲ್ಲಿ ಕೊರೊನಾ ಹಾವಳಿಯ ಬೆಳವಣಿಗೆಯ ತುಂಡು ವಿವರ ಅದರಲ್ಲಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಯೋಗಿ, ಅಲ್ಲಿ ಕೂಡಲೇ ಅಧಿಕಾರಿಯೊಬ್ಬರನ್ನು ನಿಯೋಜಿಸಿದರು. ಈ ರೀತಿ ಎದುರಾಗಿರುವ ಬೃಹತ್ ಸವಾಲನ್ನು ತಕ್ಷಣವೇ ಮನಗಾಣುವ ಜಾಣ್ಮೆಯನ್ನು ಪ್ರದರ್ಶಿದರು. ರಾಷ್ಟ್ರೀಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದರೂ, ತಕ್ಷಣವೇ ಗಾಝಿಯಾಬಾದ್ ಸೇರಿದಂತೆ ನಾನಾ ಕಡೆಗಳಿಗೆ ಬಸ್ ಗಳನ್ನು ಕಳುಹಿಸಿದರು. ಒಂದು ರಾತ್ರಿ ಕಳೆಯುವುದರೊಳಗೆ ವ್ಯವಸ್ಥೆ ಸಿದ್ಧವಾಗಿತ್ತು. ಅಂದು ರಾತ್ರಿ ಎಲ್ಲವನ್ನೂ ಪರಿಶೀಲಿಸಿದ ಬಳಿಕವಷ್ಟೇ ಮುಂಜಾನೆ 3 ಗಂಟೆ ಸುಮಾರಿಗೆ ಯೋಗಿ ನಿದ್ರೆಗೆ ಜಾರಿದರು ಎಂದು ಮೂಲಗಳು ಹೇಳುತ್ತಿವೆ.

    ದೆಹಲಿ, ಬಿಹಾರ, ಉತ್ತರ ಪ್ರದೇಶಗಳಿಂದ ಬಂದ ಸುಮಾರು 1.5 ಲಕ್ಷದಷ್ಟಿದ್ದ ವಲಸೆ ಕಾರ್ಮಿಕರು ಒಂದೆಡೆ ಜಮಾವಣೆಯಾಗಿದ್ದರು. ಒಂದೆಡೆ ಸೋಂಕು ತಡೆಯುವ ಸವಾಲು, ಇನ್ನೊಂದೆಡೆ ಅವರ ನೋವಿಗೆ ಸ್ಪಂದಿಸಲೇಬೇಕಾದ ಅನಿವಾರ್ಯತೆ ಇವರೆಡನ್ನೂ ಅವರು ಸಮರ್ಪಕವಾಗಿ ನಿವಾರಿಸುವಲ್ಲಿ ಯಶಸ್ವಿಯಾದರು. ಇದರ ಹಿಂದೆ ಅವರ ಪ್ರಜ್ಞಾಪೂರ್ವಕ ಯೋಚನಾ ಶಕ್ತಿ ಇದ್ದುದೆ ಕಾರಣ ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಮೃಂತ್ಯುಜಯ ಕುಮಾರ್ ಹೇಳುತ್ತಾರೆ.

    ಪರಿಸ್ಥಿತಿಯ ಅವಲೋಕನ ಮತ್ತು ಅದರ ಸಮಗ್ರ ವಿವರ ನೀಡುವುದಕ್ಕಾಗಿಯೇ ಹಿರಿಯ ಐಎಎಸ್ ಅಧಿಕಾರಿಗಳನ್ನು ಅವರು ನೇಮಕ ಮಾಡಿದ್ದರು. ಅವರು 24 ಗಂಟೆಗಳೂ ಯೋಗಿ ಆದಿತ್ಯನಾಥ್ ಗೆ ವರದಿ ಸಲ್ಲಿಸುತ್ತಲೇ ಇರಬೇಕಾಗಿತ್ತು.

    ಪೂರ್ವಭಾವಿ ತಯಾರಿ

    ಲಖನೌ ಮೂಲದ ಅಧಿಕಾರಿ ವೃಂದದ ಪ್ರಕಾರ ಫೆಬ್ರವರಿ ತಿಂಗಳಲ್ಲೇ ಅಪಾಯ ಸುಳಿವನ್ನು ಯೋಗಿ ಕಂಡು ಕೊಂಡಿದ್ದು, ಆಗಲೇ ಪೂರ್ವಭಾವಿ ಸಿದ್ಧತೆಯನ್ನು ಆರಂಭಿಸಿದ್ದರಂತೆ. ಭಾರತದಲ್ಲಿ ಮೊದಲ ಪ್ರಕರಣ ಜನವರಿ 30ರಂದು ಪತ್ತೆಯಾಯಿತು. ಆಗಲೇ ಬೇಕಾದ ವ್ಯವಸ್ಥೆಯ ವಿಚಾರ ವಿಮರ್ಶೆ ನಡೆಸದಿದ್ದರೆ 20 ಕೋಟಿ ಜನರನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. 

    ಗ್ರಾಮ, ಬ್ಲಾಕ್ ಹಂತದಲ್ಲೇ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ಅವಕಾಶವಾದ ಪ್ರಾಥಮಿಕ ತರಬೇತಿಯನ್ನೂ ಕೂಡ ನೀಡಲಾಯಿತು. ಭಾರತ-ನೇಪಾಳ ಗಡಿಯಲ್ಲಿ ಥರ್ಮೋ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಯಿತು. ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಂಟ್ರೋಲ್ ರೂಂ ಸ್ಥಾಪನೆಯಾಯಿತು. ಯಾವ ಹಂತದಲ್ಲೂ ಕೊರೊನಾ ಹಾವಳಿ ಕುರಿತ ಅಗತ್ಯ ಮಾಹಿತಿ ತಪ್ಪಿಹೋಗದಂತೆ ಎಚ್ಚರ ವಹಿಸಲಾಯಿತು ಎಂದು ಯೋಗಿ ಕಚೇರಿಯ ಅಧಿಕಾರಿಗಳು ವಿವರಿಸುತ್ತಾರೆ.

    ಪ್ರತಿಚದರ ಅಡಿಗೆ 828 ಜನಸಂಖ್ಯೆಯ ದೇಶದ ಅತಿದೊಡ್ಡ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳಲು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೈಯಕ್ತಿಕವಾಗಿ ಮುಂದಾಗಿದ್ದರು. ಇದಕ್ಕಾಗಿ ಟೀಮ್ 11 ಹೆಸರಿನ 11 ಜನ ಅಧಿಕಾರಿಗಳ ಪ್ರತ್ಯೇಕ ತಂಡವನ್ನೇ ರಚಿಸಿದ್ದರು. ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಒಬ್ಬನೇ ಒಬ್ಬನೂ ಕೋವಿಡ್-19 ಹಾವಳಿಯಿಂದ ಸಮಸ್ಯೆ ಎದುರಿಸುವಂತಾಗಬಾರದು ಎಂಬುದು ಅವರ ಧ್ಯೇಯವಾಗಿತ್ತು. ಹೀಗಾಗಿ ಹಾವಳಿ ನಿಯಂತ್ರಣದ ನಿಟ್ಟಿನಲ್ಲಿ ಅಧಿಕಾರಗಳು, ಸಚಿವರನ್ನು ನೆಚ್ಚಿಕೊಳ್ಳದೆ ತಾವೇ ಸ್ವತಃ ನಿರ್ದೇಶನಗಳನ್ನು ನೀಡುತ್ತಿದ್ದರು. ಇದರಿಂದ ಅಧಿಕಾರಿಶಾಹಿಯಲ್ಲಿ ಆಗುವ ಗೊಂದಲ ತಪ್ಪಿಹೋಯಿತು ಎಂದು ಮೃತ್ಯುಂಜಯ ಕುಮಾರ್ ಹೇಳುತ್ತಾರೆ.

    ಬಡವರಿಗೆ ಸಹಾಯ

    ದಿನಗೂಲಿ ನೌಕರರ ಸಮಸ್ಯೆಗಳ ಅರಿವಿದ್ದ ಯೋಗಿ, ಇವರಿಗೆ ಆರ್ ಟಿಜಿಎಸ್ ವ್ಯವಸ್ಥೆಯ ಮೂಲಕ ಆರ್ಥಿಕ ನೆರವು ನೀಡಲು ಮಾ. 17ರಂದೇ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಿದ್ದರು. ಇದರ ಮೂಲಕ ಪ್ರತಿಯೊಬ್ಬರ ಖಾತೆಗೂ 1,000 ರೂ. ವರ್ಗಾವಣೆಯಾಗಿ 20.37 ಲಕ್ಷ ನೋಂದಾಯಿತ ಕಾರ್ಮಿಕರು ಇದರ ಲಾಭ ಪಡೆದರು. ಜತೆಗೆ ಕೇವಲ 15 ದಿನಗಳಲ್ಲಿ 15 ಲಕ್ಷ ಇತರ ಕಾರ್ಮಿಕರ ಡೇಟಾಬೇಸ್ ಸಿದ್ಧಪಡಿಸಿ ಅವರಿಗೆ ಕೂಡ ನೆರವು ಒದಗಿಸಲಾಯಿತು. ಇನ್ನು ಉಚಿತ ಪಡಿತರ ವಿತರಣೆ ಬಿಡಿ, 51 ಆಸ್ಪತ್ರೆಗಳು ಸಿದ್ಧವಾದರೆ, 19 ಕೋವಿಡ್ ವಿಂಗ್ ರಚನೆಯಾಯಿತು. ತರಕಾರಿ, ಹಾಲು ಸೇರಿದಂತೆ ಆವಶ್ಯಕ ವಸ್ತುಗಳ ಸಾಗಣೆಗಾಗಿಯೇ ರಾಜ್ಯಾದ್ಯಂತ 43,000 ವಾಹನಗಳು ಸಿದ್ಧವಾದವು. ಮಾ. 22ರ ಸುಮಾರಿಗೆ 16 ಜಿಲ್ಲೆಗಳಲ್ಲಿ ಕೊರನಾ ಹಾವಳಿಯ ಲಕ್ಷಣ ಕಂಡು ಬಂದ ಕೂಡಲೇ  ಗೊಂದಲವಿಲ್ಲದೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ನೇರ ನಿರ್ದೇಶನ ನೀಡಿದರು.

    ಸದ್ದಿಲ್ಲದ ಕ್ರಮಕ್ಕೆ ಶ್ಲಾಘನೆ

    ಹೀಗೆ ಯಾವುದೇ ಸದ್ದುಗದ್ದಲವಿಲ್ಲದೆ ಜಾಗರೂಕತೆಯಿಂದ ಮತ್ತು ಪೂರ್ವಾಲೋಚನೆಯಿಂದ ಕೊರೊನಾ ತಡೆಗೆ ಕೈಗೊಂಡ ಯೋಗಿ ಕ್ರಮ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಅತೀವ ಶ್ಲಾಘನೆಗೆ ಪಾತ್ರವಾಗಿದೆ.

    <

    ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ಡಾನ್ ಸಂಪಾದಕ ಫಹಾದ್ ಹುಸೇನ್ ಕೂಡ ಈಗ ಯೋಗಿ ಕೆಲಸ ಮೆಚ್ಚಿದ್ದಾರೆ. ಲಾಕ್ ಡೌನ್ ಅನ್ನು ಸಮರ್ಪಕವಾಗಿ ನಿರ್ವಹಿಸಿದ್ದು ಇದಕ್ಕೆ ಕಾರಣ ಎಂದಿರುವ ಅವರು, ಪಾಕಿಸ್ತಾನ ಮತ್ತು ಉತ್ತರ ಪ್ರದೇಶಗಳಲ್ಲಿ ಕೋವಿಡ್-19ನಿಂದ ಆಗಿರುವ ಸಾವಿನ ಪ್ರಮಾಣವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಯಾಕೆಂದರೆ ಪಾಕ್ 20.8 ಕೋಟಿ ಜನಸಂಖ್ಯೆ ಹೊಂದಿದ್ದರೆ, ಉತ್ತರ ಪ್ರದೇಶ 22.5 ಕೋಟಿ ಜನಸಂಖ್ಯೆ ಹೊಂದಿದೆ. ಈ ವ್ಯತ್ಯಾಸವನ್ನು ನೋಡಿ ನಮ್ಮವರೂ ಪಾಠ ಕಲಿಯಬೇಕು ಎಂದಿದ್ದಾರೆ. ಮಹಾರಾಷ್ಟ್ರದ ಕುರಿತು ಕೂಡ ಗ್ರಾಫ್ ನೀಡಿರುವ ಅವರು, ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಚಿಕ್ಕದಾಗಿರುವ ಮಹಾರಾಷ್ಟ್ರ ಯಾವ ರೀತಿ ವಿಫಲವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

    ಸರಕಾರಿ ಅಂಕಿ ಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಇದುವರೆಗೆ 12,088 ಪ್ರಕರಣಗಳು ವರದಿಯಾಗಿವೆ. ಒಟ್ಟು 7,292 ಜನರು ಗುಣಮುಖರಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಸಕ್ರಿಯ ವೈರಸ್ ಪೀಡಿತರ ಪ್ರಮಾಣ 4,451ರಲ್ಲಿದೆ.

    ಕರೋನಾ ಕಾಲದ ಮಾನವೀಯತೆ

    ರಾಜ್ಯ ಅಥವಾ ಪ್ರಾಂತ್ಯವೊಂದಕ್ಕೆ, ಚಂಡಮಾರುತವೋ, ಬರಗಾಲವೋ ಅಪ್ಪಳಿಸಿದರೆ ಇತರೆ ಎಲ್ಲ ರಾಜ್ಯಗಳು ಅವುಗಳ ನೆರವಿಗೆ ಧಾವಿಸುತ್ತವೆ. ದೇಶವೊಂದಕ್ಕೆ ಸುನಾಮಿಯಂತಹದ್ದು ಬಂದೆರಗಿದರೆ ದೇಶ -ವಿದೇಶದ ಮನಗಳು ಮಿಡಿದು ಸಹಾಯ ಹಸ್ತ ಚಾಚುತ್ತವೆ. ಕರೋನದಂತ ವಿಶ್ವವ್ಯಾಪಿ ಹೊಸವ್ಯಾಧಿಯೊಂದು ಪ್ರಪಂಚವನ್ನೇ ತತ್ತರಿಸುವಂತೆ ಮಾಡುವುದರ ಜೊತೆಗೆ,ಎಲ್ಲ ಸಂಪರ್ಕ ವ್ಯವಸ್ಥೆಗಳೂ ಸ್ಥಗಿತವಾದರೆ ಯಾರು ಯಾರಿಗೆ ಸಹಾಯ ಮಾಡಬಹುದು?

     ತಲೆಮಾರುಗಳು ಕಂಡರಿಯದ ಮಹಾಮಾರಿಯೊಂದು ಕಾಣಿಸಿದಾಗ ಕಷ್ಟ ಕಾಲಕ್ಕೆ ಎಂದೇ ಇರುವ ಹಲವು ವ್ಯವಸ್ಥೆಗಳು ಪ್ರಯೋಜನಕ್ಕೆ ಬಾರದಾದವು.ಜಗತ್ತಿನ ಬಹುತೇಕ ಎಲ್ಲ ದೇಶಗಳಿಗೆ ಅಲೆ ಅಲೆಯಾಗಿ ಅಪ್ಪಳಿಸುತ್ತಲೇ ಇರುವ ಈ ಕರೋನ ಸಮಯದಲ್ಲಿ ದೇಶಗಳು ಇತರ ದೇಶಗಳಿಗೆ ಬಾಗಿಲು ಮುಚ್ಚಿದ್ದೇ ಮೊದಲ ಹೆಜ್ಜೆಯಾಯಿತು. ನೆರವಿನ ಕೆಲವು ಬಾಗಿಲುಗಳನ್ನು ತೆರೆದಿಟ್ಟುಕೊಂಡರೂ ಬೇರೆಡೆಯಿಂದ ಮನುಷ್ಯ ಮುಖೇನ ಬರಬಹುದಾದ ನೇರ ನೆರವುಗಳು ಸಾಧ್ಯವಾಗಲಿಲ್ಲ.

    ಅಷ್ಟಕ್ಕೂ ಪ್ರತಿ ದೇಶದ ಜನರಿಗೆ ಅವರದೇ ದೇಶಕ್ಕೆ ನೆರವು ನೀಡಬೇಕಾದ ಆದ್ಯ ಕರ್ತವ್ಯಗಳಿದ್ದವು.ಪ್ರತಿ ಸರಕಾರಕ್ಕೂ ತಮ್ಮದೇ ದೇಶಕ್ಕೆ ಬಂದ ವಿಪತ್ತಿನಿಂದ ಪಾರಾಗುವ, ಆರ್ಥಿಕ ಬಿಕ್ಕಟ್ಟುಗಳಿಂದ ಹೊರಬರುವ, ಜೀವಗಳನ್ನು ಉಳಿಸುವ ಜವಾಬ್ದಾರಿಗಳು ಬೆನ್ನೇರಿದವು. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಇತರೆ ಜನಸಾಮಾನ್ಯರ ಹಿತಕ್ಕಾಗಿ ಮೆರೆದ ಮಾನವೀಯತೆಯ ಕಥೆಗಳು ಮನುಷ್ಯತ್ವದ ಹಿರಿಮೆಗಳ ಮತ್ತೊಂದು ಮಹಾ ದರ್ಶನವನ್ನು ಮಾಡಿಸಿದೆ.

    ಕೋವಿಡ್-19 ಮನುಕುಲವನ್ನು ಅಲ್ಲೋಲ ಗೊಳಿಸಿದ ಜೊತೆ ಜೊತೆಯಲ್ಲೇ ಮಾನವೀಯತೆಯು ಅದಕ್ಕೆ ಸರಿ ಸಮನಾಗಿ ಪ್ರಪಂಚದಾದ್ಯಂತ ಎದ್ದು ನಿಂತ ಹಲವು ಪರಿಗಳು ಅಸದಳವೆನಿಸಿದವು. ಈ ಮಾನವರು ತಮ್ಮ ತಮ್ಮದೇ ರೀತಿಯಲ್ಲಿ ಸಮಸ್ಯೆಯನ್ನು ಮಿತಗೊಳಿಸಲು ನೀಡಿದ ಸೇವೆ, ಸಹಕಾರ, ಶ್ರಮದಾನ, ದಾನ, ಮೆರೆದ ಕರ್ತವ್ಯ ಪ್ರಜ್ಞೆಗಳು ಮನುಷ್ಯತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು.  ಆತಂಕದಿಂದ ತಲ್ಲಣಗೊಂಡ ಮನಸ್ಸುಗಳನ್ನು ಸಂತಸದ, ಮೆಚ್ಚುಗೆಯ, ಕೃತಜ್ಞತೆಯ ಬೆಚ್ಚಗಿನ  ಹನಿಗಳಿಂದ ಒದ್ದೆಯಾಗಿಸಿದವು.

    ಮಾಧ್ಯಮಗಳು ಸುದ್ದಿ ಮಾಡಿದ್ದು ಪ್ರಸಿದ್ಧ ಸಿನಿಮಾತಾರೆಗಳು, ಉದ್ಯಮಿಗಳು, ಶ್ರೀಮಂತರು, ಸಮಾಜ ಸೇವಕ ಸಂಸ್ಥೆಗಳು, ಸೆಲೆಬ್ರಿಟಿಗಳು ನೀಡಿದ ದೊಡ್ಡ ಮೊತ್ತದ ಹಣ, ಊಟ, ಮೃಗಾಲಯದ ಪ್ರಾಣಿಗಳ ಉಸ್ತುವಾರಿಗೆ ನೀಡಿದ ದೇಣಿಗೆ, ನಿರಾಶ್ರಿತ ಬಡಜನರಿಗೆ, ವಲಸಿಗ ಕಾರ್ಮಿಕರ ಊಟಕ್ಕೆ, ರೈತರ ಸಂಕಷ್ಟಗಳಿಗೆ, ಮತ್ತಿತರ ಸಹಾಯಕ ಕೆಲಸಗಳಿಗೆ ಹಲವು ಮೂಲಗಳ ಮುಖೇನ ಭರ್ಜರಿ ಕೊಡುಗೆಗಳನ್ನು ನೀಡಿದ ಬಗ್ಗೆ. ಇದರ ಅಗತ್ಯವೂ ಇದೆಯೆನ್ನಿ. ಇವರ ದಾನಗಳು ಸರಕಾರಗಳು ಕರೋನ ಸಂಬಂಧಿತ ಸಮಸ್ಯೆಗಳನ್ನು ಸಂಭಾಳಿಸಲು ನೆರವಾದವು. ಇವರುಗಳ ಕೊಡುಗೆಯನ್ನು ನೆನೆಯದಿರಲು ಸಾಧ್ಯವಿಲ್ಲ.

    ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರ ಮನಮುಟ್ಟುವ ಅತ್ಯುತ್ತಮ ಸೇವಾ ಮನೋಭಾವಗಳ ಹಲವು ಉದಾಹರಣೆಗಳು ಹರಿದಾಡಿದವು. ಮಾಧ್ಯಮಗಳೂ ಜೊತೆಗೂಡಿದವು. ದೇಶೀಯ, ವಿದೇಶೀಯ ಸುದ್ದಿಗಳು ಮತ್ತು ವಿಡಿಯೋಗಳು ಎಲ್ಲ ಜನರ ಮಾನವೀಯ ಆಶಯಗಳನ್ನು, ಒಬ್ಬರಿಗೆ ಒಳಿತು ಮಾಡಬೇಕೆನ್ನುವ ಮನುಷ್ಯನ ಉನ್ನತ ಧ್ಯೇಯಗಳನ್ನು ಎತ್ತಿಹಿಡಿದವು. ಒಬ್ಬನ ಕಷ್ಟಕಾಲದಲ್ಲಿ ಇನ್ನೊಬ್ಬನು ಅವನನ್ನು ಬಗ್ಗು ಬಡಿಯದೆ ಮಾನವೀಯತೆಗಳನ್ನು ಮೆರೆದ ಉದಾಹರಣೆಗಳು ಮನೆಮಾತಾದವು.

    ಉದಾಹರಣೆಗೆ ಮೈಸೂರಿನ ಹಳ್ಳಿಯೊಂದರ ಮಹಿಳೆಯೊಬ್ಬಳು ತನಗೆ ಅಕಸ್ಮಿಕ ಸಿಕ್ಕ ಎರಡನೇ  ಉಚಿತ ಊಟದ ಪೊಟ್ಟಣವನ್ನು ಮತ್ತೊಬ್ಬರಿಗೆ ಸಿಗಲಿ ಎನ್ನುವ ಆಶಯದೊಂದಿಗೆ ಹಿಂತುರುಗಿಸಿ ಸಧ್ಬುದ್ದಿಯನ್ನು ಮೆರೆದಳು. ದೇಶವನ್ನೆಲ್ಲ ಕೊಳ್ಳೆಹೊಡೆದು ತಾವೊಬ್ಬರೇ ನುಂಗಿಬಿಡೋಣ ಎನ್ನುವಂತಹ ಮನೋಭಾವದ ಜನರ ಬಗ್ಗೆ ಇತರರು ಮನಸ್ಸಿನಲ್ಲೇ ಮತ್ತೊಮ್ಮೆ ಬಹಿಷ್ಕಾರ ಹಾಕುವಂತೆ ಮಾಡಿದಳು.

    ಅಸಂಖ್ಯಾತ ಜನರುಯಾವುದೇ ಹೆಸರು ಪ್ರಶಸ್ತಿಗಳ ಹಂಗಿಲ್ಲದೆ ಇತರೆ ಜನರಿಗೆ ಅನ್ನ ಹಾಕಿದರು. ಬೀದಿಬದಿಯ ನಾಯಿ,ಬೆಕ್ಕುಗಳ ಹಸಿವನ್ನು ಹಿಂಗಿಸಿದರು. ದನ- ಕರು- ಪ್ರಾಣಿ ಪಕ್ಷಿಗಳಿಗೆ ನೀರುಡಿಸಿದರು. ಹಸಿವಿನಿಂದ ಕಂಗೆಟ್ಟ ಕೋತಿಗಳಿಗೆ ಆಹಾರ ನೀಡಿದರು. ಹಲವು ಸಣ್ಣ ಪುಟ್ಟ ಅಂಗಡಿಗಳು, ಹೋಟೆಲಿಗರು, ರೆಸ್ಟೋರೆಂಟುಗಳು ತಮಗಾದ ಮಟ್ಟಗಳಲ್ಲಿ ಜನರಿಗೆ ಊಟಗಳನ್ನು ನೀಡಿ ವಸತಿಯನ್ನು ಕಲ್ಪಿಸಿದರು. ಮನುಷ್ಯರಿಂದ ದೂರವಿರಬೇಕಾದ ಸಂಧರ್ಭದಲ್ಲಿ ಮನುಷ್ಯತ್ವದಿಂದ ದೂರಾಗದ ಇವರು ಬೇಡಿದವರ ಪಾಲಿಗೆ ದೇವರುಗಳಾದರು.ತಮ್ಮ ಊಟವನ್ನೇ ಇತರರಿಗೆ ನೀಡಿದ ಮಹಾನ್ ಘಟನೆಗಳು ನಡೆದವು. ಭಾರತದ ಅತ್ಯುನ್ನತ ಮೌಲ್ಯಗಳಿಗೆಲ್ಲ ಈ ಕಾಲದಲ್ಲಿ ಜೀವ ಬಂದದ್ದು ಕಣ್ಣಿಗೆ ಕಟ್ಟಿತು.ಕರೋನ ಕಾಲದಲ್ಲಿ ಹೀಗೆ ಅಸಂಖ್ಯಾತ  ಜನರು ದೇಶದಾದ್ಯಂತ ಮಾನವೀಯತೆಯನ್ನು ಮೆರೆದರು.

    ಸ್ಪೇನಿನಮ್ಯಾಡ್ರಿಡ್ ನಗರದ ಒಬ್ಬ ಸಾಧಾರಣ ಟ್ಯಾಕ್ಸಿ ಚಾಲಕ ಆಸ್ಪತ್ರೆಗೆ ಬಂದು ಹೋಗುತ್ತಿದ್ದ ಎಲ್ಲ ಕರೋನ ರೋಗಿಗಳನ್ನು ಉಚಿತವಾಗಿ ಓಡಾಡಿಸುತ್ತಿದ್ದ. ಈ ಕಷ್ಟದ ಸಮಯದಲ್ಲಿ ಹಣ ತೆಗೆದುಕೊಳ್ಳದೆ ತನ್ನದೇ ದುಡ್ಡಿನಲ್ಲಿ ಇಂಧನ ತುಂಬಿಸಿ ಓಡಾಡಿಸುತ್ತ ಆನಾಮಧೇಯನಾಗಿ ತನ್ನದೇ ರೀತಿಯಲ್ಲಿ ಸಹಾಯ ಮಾಡುತ್ತ ಜನ ಸೇವೆ ಮಾಡುತ್ತಿದ್ದ. ಪ್ರತಿ ರೋಗಿಯ ರವಾನೆಯ ನಂತರ ಟ್ಯಾಕ್ಸಿಯನ್ನು ಶುದ್ಧಗೊಳಿಸುತ್ತಿದ್ದ. ವೈಯಕ್ತಿಕವಾಗಿ ಜನರೇ ಹೊರಗೆ ಬರದ ಸಮಯದಲ್ಲಿ ಅವನ ಆದಾಯ ಮೂಲಕ್ಕೇ ಕೊಡಲಿ ಬಿದ್ದರೂ ಸೇವೆಯ ವಿಚಾರದಲ್ಲಿ ಆತ ಹಿಂದುಳಿದಿರಲಿಲ್ಲ.ಇದನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು ಒಂದಷ್ಟು ಹಣವನ್ನು ಒಟ್ಟುಗೂಡಿಸಿ ಆತನಿಗೆ ಟ್ಯಾಕ್ಸಿ ಬೇಕೆಂದು ಫೋನಾಯಿಸಿದರು. ಇದಾವ ಅರಿವೂ ಇಲ್ಲದೆ ಕಂದಿ ಹೋಗಿದ್ದ ಆತನ ಟ್ಯಾಕ್ಸಿ ವ್ಯವಹಾರವನ್ನು ಲೆಕ್ಕಿಸದೆ ತನ್ನ ಉಚಿತ ಸೇವೆಯನ್ನು ಮುಂದುವರೆಸಲು ನಿಷ್ಕಾಮ ಮನಸ್ಸಿನಿಂದ ಬಂದ ಅವನನ್ನು ಆಸ್ಪತ್ರೆಯ ಬಾಗಿಲಲ್ಲೇ ಎಲ್ಲರೂ ಕೈ ಚಪ್ಪಾಳೆಯ ಮೂಲಕ ಸ್ವಾಗತಿಸಿ ತಮ್ಮ ಮೆಚ್ಚುಗೆಯ ಜೊತೆ ಸಂಗ್ರಹಿಸಿದ ಹಣವನ್ನು ನೀಡಿದರು.ಇದರಿಂದ ಮೂಕ ವಿಸ್ಮಿತನಾದ ಅವನ ಕಣ್ಣುಗಳಿಂದ ಆನಂದ ಭಾಷ್ಪಗಳು ಸುರಿದವು. ಗಾರ್ಡಿಯನ್ ಪತ್ರಿಕೆಯ ಈ ವಿಡಿಯೋ ನೋಡಿದ

    3.2 ಮಿಲಿಯನ್ ಮಂದಿಯ ಕಣ್ಣುಗಳೂ ತೇವವಾದವು.ಇಲ್ಲಿ ಮನುಷ್ಯ ಇನ್ನೊಬ್ಬನಿಗೆ ನೆರವಾದ್ದು, ಅದನ್ನು ಇತರರು ನೇರವಾಗಿ ಅಭಿನಂದಿಸಿದ್ದು ಮಾನವನ ಉತ್ತಮ ಮುಖಗಳಿಗೆ ಕನ್ನಡಿ ಹಿಡಿಯಿತು. ಮಿಲಿಯನ್ ಗಟ್ಟಲೆ ಇತರೆ ಜನರ ಉತ್ತಮ ಭಾವನೆಗಳನ್ನು ಬಡಿದೆಬ್ಬಿಸಿತು.

    ಸ್ಕಾಟ್ ಲ್ಯಾಂಡಿನಲ್ಲಿ ಸಣ್ಣದೊಂದು ಅಂಗಡಿಯ ದಂಪತಿಗಳು ಕರೋನ ಕಿಟ್ ಗಳನ್ನು ಜನರಿಗೆ ದಾನ ಮಾಡಿದರು.ಇತ್ತ ಇಂಗ್ಲೆಂಡಿನಲ್ಲಿ ಜನ ಸೇವೆ ಮಾಡಲು ವಯಸ್ಸು ಅಥವಾ ಸ್ಥಿತಿವಂತಿಕೆಗೆ ಲೆಕ್ಕವೇ ಇಲ್ಲ ಎಂದು ಸಾಬೀತು ಪಡಿಸಿದವನು ಸೇನೆಯಿಂದ ನಿವೃತ್ತನಾದ ಕ್ಯಾಪ್ಟನ್ ಟಾಂ ಮೂರ್ ಎನ್ನುವ 99  ವರ್ಷದ ಹಣ್ಣು ಹಣ್ಣು ಮುದುಕ.

    ಭಾರತ, ಬರ್ಮ, ಸುಮಾತ್ರ  ದೇಶಗಳಲ್ಲಿ ಎರಡನೇ ಮಹಾಯುದ್ದದ ಕಾಲದಲ್ಲಿ ಬ್ರಿಟನ್ನಿನ ಪರವಾಗಿ ಕೆಲಸ ಮಾಡಿದ್ದ ಈತ ಇಂತದೇ ಪ್ಯಾಂಡೆಮಿಕ್ ಒಂದು (1918-20 ರ ಸ್ಪಾನಿಶ್ ಫ್ಲೂ)  ಪ್ರಪಂಚವನ್ನು ಸತಾಯಿಸುತ್ತಿದ್ದಾಗಲೇ ಏಪ್ರಿಲ್ 30, 1920 ರಲ್ಲಿ ಹುಟ್ಟಿದವನು.ತನ್ನ ಜೀವಿತದಲ್ಲಿ ಎರಡನೇ ಪ್ಯಾಂಡಮಿಕ್ ನೋಡಿದವನು. ಸರ್ಕಾರ 70 ರ ಮೇಲ್ಪಟ್ಟವರನ್ನು ಯಾರೊಡನೆಯೂ ಬೆರೆಯದಿರಲು ಸಲಹೆ ನೀಡಿದ್ದರೂ ಜನರಿಗೆ ಕೈಲಾದ ಸಹಾಯ ಮಾಡದೆ ಸುಮ್ಮನಿರಲು ಈತನ ಮನಸ್ಸಿನ ತುಡಿತ ಬಿಡಲಿಲ್ಲ. ತನ್ನ ಮಗಳ ಸಹಾಯದಿಂದ ಒಂದು ಲಕ್ಷದಷ್ಟು (£1000) ಹಣವನ್ನು ದೇಣಿಗೆ ಎತ್ತುವ ಗುರಿಹೊತ್ತು ಒಂದು ಸಾಮಾಜಿಕ ತಾಣವನ್ನು ಆರಂಬಿಸಿದ.ತನ್ನ ಮನೆಯ ಕಾಂಪೌಂಡಿನಲ್ಲಿ ನೂರು ಬಾರಿ ಓಡಾಡಲು ಪಣತೊಟ್ಟ. ಓಡಾಡಲು ಝಿಮ್ಮರ್ ಫ್ರೇಂ ಹಿಡಿಯಬೇಕಿದ್ದ ಈತ ಅದನ್ನು ಹಿಡಿದೇ 2.5 ಕಿ.ಮೀ ನಡೆದಾಡಿದ. ನೂರು ವರ್ಷದ ಈತನ ಈ ಆಮೋಘ ಮಾನಸಿಕ ಸಂಕಲ್ಪ ಅದೆಷ್ಟು ಜನರಲ್ಲಿ ಸಹಾಯ ಮಾಡುವ ಮನಸ್ಸನ್ನು ಸೃಷ್ಟಿಸಿತೆಂದರೆ, £1000 ದ ಬದಲು1.5 ಮಿಲಿಯನ್ ಜನರು £32,795,065  ಮಿಲಿಯನ್ ಹಣವನ್ನು ದಾನಕ್ಕೆ ನೀಡಿದರು. ದಾನಗಳನ್ನು ಗೌರವಿಸುವ ಗಿಫ್ಟ್ ಏಡ್ ಎನ್ನುವ ಯೋಜನೆಯಡಿ £6,173,663.31 ಹಣ ಇದಕ್ಕೆ ಸೇರಿಕೊಂಡಿದೆ. ಎಲ್ಲವೂ ಸೇರಿ ಹತ್ತಿರ ಹತ್ತಿರ 39 ಮಿಲಿಯನ್ ಪೌಂಡುಗಳ ಮೊತ್ತ ದಾನಕಾರ್ಯಕ್ಕೆ ದೊರಕಿತು.ಇಂಗ್ಲೆಂಡಿನ ರಾಣಿ 100ವರ್ಷದ ಈ ಅತಿ ಮಾನವನಿಗೆ ಮೇ 20 ರಂದು ನೈಟ್ ಹುಡ್ ಬಿರುದನ್ನು ನೀಡಿ ಗೌರವಿಸಿದಳು. ’ಯು ವಿಲ್ ನೆವರ್ ವಾಕ್ ಅಲೋನ್ ’ ಎಂದು ಇವನನ್ನು ಕುರಿತು ಮಾಡಿದ ಹಾಡು ಯು.ಕೆ ನಂಬರ್ ಒನ್ ಆಗಿ, ಅತಿಹೆಚ್ಚು ವಯಸ್ಸಿನ ವ್ಯಕ್ತಿ ಈ ಪಟ್ಟಕ್ಕೇರಿದ ದಾಖಲೆಯನ್ನೂ ಸೃಷ್ಟಿಸಿದೆ.

    ಕ್ಯಾಪ್ಟನ್ ಟಾಂ ಆಷ್ಟೂ ಹಣವನ್ನು  ಇನ್ನೂರಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ದಾನಮಾಡಿದ್ದಾನೆ.ಅಂತೆಯೇ ಚಿಕ್ಕ ವಯಸ್ಸಿನವರು ತೋರಿದ ಮಾನವೀಯತೆಗಳು ಕೂಡ ಸುದ್ದಿ ಮಾಡಿವೆ. ಇತ್ತೀಚೆಗೆ ರಾಂಚಿಯ 12 ವರ್ಷದ ನಿಹಾರಿಕಾ ದ್ವಿವೇದಿ ತನ್ನ ಉಳಿತಾಯದ ಹಣವನ್ನೆಲ್ಲ ಮೂವರು ವಲಸೆ ಕಾರ್ಮಿಕರ ವಿಮಾನ ಪ್ರಯಾಣಕ್ಕೆ ದೇಣಿಗೆಯಾಗಿ ನೀಡಿದ್ದಾಳೆ. 48,000 ರೂಪಾಯಿ ದೇಣಿಗೆ ನೀಡಿದ ಈಕೆ ಮೂವರು ಕಾರ್ಮಿಕರು ಕರೋನ ಕಾಲದಲ್ಲಿ ಮನೆಗೆ ಬಂದು ಸೇರಲು ನೆರವಾಗಿದ್ದಾಳೆ.

    ಮತ್ತೆ ಕೆಲವರು ಆಗಾಗಲೇ ಬುಕ್ ಮಾಡಿದ್ದ ಕಲಾ ಪ್ರದರ್ಶನಗಳ, ಆಟೋಟಗಳ ಪ್ರದರ್ಶನಗಳು ರದ್ದಾದ ಕಾರಣ ಹಿಂತಿರುಗಿ ಬಂದ ಹಣವನ್ನು ಕರೋನಾ ಕಾರ್ಯಾರ್ಥ ದಾನ ಮಾಡಿದ್ದಾರೆ.

    ಸಮುದಾಯದ ಜನರು ತಮ್ಮ ಏರಿಯಾದಲ್ಲಿ ಬದುಕಿರುವ ಎಲ್ಲ ವಯಸ್ಸಾದ, ಕೈ ಲಾಗದವರ ಕಷ್ಟ ಸುಖಕ್ಕೆ ನೆರವಾಗಿ ಹೊರಗೆ ಓಡಾಡಲಾಗದ ಅವರ ಮನೆಗಳಿಗೆ ಆಹಾರ ಮತ್ತು ಔಷದಗಳನ್ನು ತಲುಪಿಸಿದ್ದಾರೆ. ಮನೆಗಳಲ್ಲೇ ಮಾಸ್ಕ್ ಗಳನ್ನು ಹೊಲಿದು ಜನರಿಗೆ ವಿತರಿಸಿದ್ದಾರೆ. ಊಟ ತಿಂಡಿಗಳ ಸರಬರಾಜನ್ನು ಕೋವಿಡ್ ಶ್ರಮಿಕರಿಗೆ ತಲುಪಿಸಿದ್ದಾರೆ.

    ಇದು ವ್ಯಕ್ತಿಗಳು ಮಾಡಿದ ಸೇವೆಯಾದರೆ ಹಲವು ಸಂಘ ಸಂಸ್ಥೆಗಳು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ದಾದಿಯರು, ವೈದ್ಯರು, ಆಂಬ್ಯುಲೆನ್ಸ್ದ್ ಡ್ರೈವರ್ ಗಳು, ಅಂಚೆಯವರು ಹೀಗೆ ಎಲ್ಲ ಅತ್ಯಗತ್ಯ ಕೆಲಸಗಾರರಿಗೆ ಉಚಿತ ಊಟ, ತಿಂಡಿ, ಕಾಫಿಯ ಜೊತೆಗೆ ಅವರು ಖರೀದಿಸಿದ ಎಲ್ಲ ವಸ್ತುಗಳಿಗೆ ಒಂದು ಮಟ್ಟದ ರಿಯಾಯತಿ ನೀಡಿದ್ದಾರೆ. ಅವರು ಕ್ಯೂಗಳಲ್ಲಿ ನಿಂತು ಕಾಯದಂತೆ ಅವರಿಗೆ ವಿಶೇಷ ಪ್ರವೇಶ ನೀಡಿದ್ದಾರೆ.

    ಹಣದ ಸಹಾಯವಲ್ಲದೆ ಶ್ರಮದಾನ ಮಾಡಿದವರ ಸಂಖ್ಯೆ ಎಣಿಸಲಾಗದಷ್ಟು ಜನರಿಂದ ಬಂದಿತು. ಅದರಲ್ಲೂ ಕರೋನ ರೋಗಿಗಳ ನಿಭಾವಣೆ, ಚಿಕಿತ್ಸೆ, ಶುಶ್ರೂಷೆ ಇತ್ಯಾದಿಗಳಿಗೂ ಇವರು ಮುಂದಾದರು. ಉದಾಹರಣೆಗೆ ಯುನೈಟೆಡ್ ಕಿಂಗ್ಡಂ ನಲ್ಲಿ ಕರೋನ ರೋಗಿಗಳಿಗಾಗಿಯೇ ನಾಲ್ಕು ಹೊಸ ಆಸ್ಪತ್ರೆಗಳನ್ನು ತೆರೆದರು. ಹರಿದು ಬರಲಿರುವ ಕರೋನ ಸೋಂಕಿತರ ಮಹಾಪೂರವನ್ನು ನಿಭಾಯಿಸಲು ಈಗಾಗಲೇ ಸೇವೆಯಿಂದ ನಿವೃತ್ತರಾದ ನರ್ಸ್, ಡಾಕ್ಟರ್ಗಳು, ಫೋನುಗಳಲ್ಲಿ ಕರೆ ಸ್ವೀಕರಿಸಲು ಜನರು ಮತ್ತು  ಸಮುದಾಯಗಳಲ್ಲಿ ಇರುವ 1.5 ಮಿಲಿಯನ್ ಹೊರಬರಲಾಗದ ಜನರಿಗೆ ಸಹಾಯ ಮಾಡಲು ಸ್ವಯಂ ಸೇವಕರಿಗಾಗಿ 25 ಮಾರ್ಚ ರಂದು 250,000 ಸಾವಿರ ಜನರ ಅಗತ್ಯವಿದೆಯೆಂದು ಕರೆನೀಡಿತು. ಇದಕ್ಕೆ ಜನತೆ ಅದ್ಭುತವಾದ ಸ್ಪಂದನೆ ನೀಡಿತು. ಎರಡೇ ದಿನದಲ್ಲಿ 670,000 ಜನ ಸಹಾಯ ಮಾಡುತ್ತೇವೆಂದು ತಮ್ಮ ವಿವರಗಳನ್ನು ನೋಂದಾಯಿಸಿದರು.

    ಶೂ ರಿಪೇರಿ ಮಾಡುವ ಅಂಗಡಿಯಿಂದ ಹಿಡಿದು ಇನ್ನೂ ಹಲವರು ತಮ್ಮ ವೃತ್ತಿಪರ ಸರ್ವೀಸ್ ಗಳನ್ನು ಕರೋನವನ್ನು ಓಡಿಸಲು ಪಣತೊಟ್ಟ ಎಲ್ಲರಗೂ ಉಚಿತವಾಗಿ ನೀಡಲು ತಯಾರಾದರು. ಸ್ವೀಡನ್ನಿನ ಐಕಿಯಾ ಎನ್ನುವ ರೀಟೈಲರ್ ತನ್ನಲ್ಲಿ ಬರ್ಡ್ ಫ್ಲೂ ಕಾರಣ ತರಿಸಿಕೊಂಡಿದ್ದ ಆದರೆ ಖರ್ಚಾಗದೆ ಉಳಿದಿದ್ದ 50,000 ಫೇಸ್ ಮಾಸ್ಕ್ ಗಳನ್ನು  ಉಚಿತವಾಗಿ ಹಂಚಿದರು.

    ಹಲವು ಮ್ಯೂಸಿಶಿಯನ್ ಗಳು ಲಾಕ್ ಡೌನಿನ ಕಾರಣ ಮನೆಯಲ್ಲೇ ಉಳಿದಿದ್ದ ಜನರ ಮೂಡ್ ನ್ನು  ಸಡಿಲಗೊಳಿಸಲು ರಸ್ತೆಗಳಿಗೆ ಇಳಿದು ವಾದ್ಯಬಾರಿಸಿದರು. ಮನೆಗಳಲ್ಲೇ ತಮ್ಮ ಶೋ ಗಳನ್ನು ಮಾಡಿ ಉಚಿತವಾಗಿ ಅಂತರ್ಜಾಲದ ಮೂಲಕ ಭಿತ್ತರಿಸಿ ಸಹಕರಿಸಿದರು. ಸಾಹಿತಿಗಳು, ಕವಿಗಳು ಮತ್ತಿತರ ಎಲ್ಲ ಬಗೆಯ ಜನರು ಸೋಶಿಯಲ್ ಪ್ಲಾಟ್ ಫಾರಂ ಗಳ ಮೂಲಕ ರಂಜಿಸುವ ಮೂಲಕ ಜನರ ಮನೆ ಮತ್ತು ಮನಗಳನ್ನು ಹೊಕ್ಕರು.ಆಟಗಾರರೂ ಈ ನಿಟ್ಟಿನಲ್ಲಿ ಹಿಂದುಳಿಯಲಿಲ್ಲ. ಕಲಾವಿದರು, ಸಿನಿಮಾ ತಾರೆಗಳು, ಬಹುತೇಕ ಎಲ್ಲ ಉಳ್ಳವರೂ ತಮ್ಮ ದೇಣಿಗೆ ಮತ್ತು ಸೇವೆಯನ್ನು ನೀಡಿದವರೇ.

    ಇನ್ನು ತಮ್ಮ ಪ್ರಾಣ ಹೋಗುವ ಸಾಧ್ಯತೆಗಳಿದ್ದರೂ ಕರ್ತವ್ಯಕ್ಕಾಗಿ ಹಗಲಿರುಳು ದುಡಿದ ವೈದ್ಯ, ದಾದಿ, ಪ್ಯಾರಮೆಡಿಕ್ ಗಳು, ಟ್ರಾಲಿಯನ್ನು ತಳ್ಳುವವರಿಂದ ಲ್ಯಾಬುಗಳಲ್ಲಿ ಪರೀಕ್ಷೆ ಮಾಡುವ ಸಿಬ್ಬಂದಿಯವರೆಗೆ ಎಲ್ಲರೂ ಜನರ ಬದುಕಿಗಳಿಗಾಗಿ ಹೋರಾಡಿದರು. ಈ ಕಾರಣ ಪ್ರಪಂಚವೇ ಇವರಿಗೆ ಆಭಾರಿಯಾಗಿದೆ.ಇವರಿಗಾಗಿ ಎಲ್ಲರ ಮನಗಳೂ ಮಿಡಿದವು.

    ಪ್ರತಿ ದೇಶದಲ್ಲಿ ನಿಯಮ , ಕಟ್ಟಲೆ, ಶಿಸ್ತುಗಳನ್ನು ಕಾಪಾಡಲು ಶ್ರಮಿಸಿದ ಪೋಲೀಸರು ಮತ್ತು ಅವರಿಗೆ ಪೂರಕ ಸಿಬ್ಬಂದಿಗಳು ಕೂಡ ಅಭಿನಂದನಾರ್ಹರೇ.

    ಕರೋನ ರೋಗಿಗಳ ಸೇವಗಾಗಿ ಆರೋಗ್ಯ ಸಂಬಂಧಿತ ಎಲ್ಲ ದುಡಿಮೆಗಾರರಿಗಾಗಿ ಪ್ರತಿದೇಶಗಳೂ ನಿಂತು ಚಪ್ಪಾಳೆ ತಟ್ಟಿದ್ದು ಕೂಡ ಇಂಥದ್ದೇ ಮಾನವೀಯ ಅಭಿನಂದನೀಯ ಗುಣದಿಂದ. ಚಪ್ಪಾಳೆ ತಟ್ಟಿಸಿಕೊಂಡವರ ಜೊತೆಗೆ ಚಪ್ಪಾಳೆ ತಟ್ಟಿದವರೂ ಕರೋನ ಕಾಲದಲ್ಲಿ ಮಾನವತೆಯನ್ನು ಮೆರೆದವರೇ.

    ಆದರೆ ಸಾವು ನೋವುಗಳ ಈ ಕಾಲದಲ್ಲಿ ಅಪಾರ ಹಣ ಖರ್ಚು ಮಾಡಿ ಹೆಲಿಕ್ಯಾಪ್ಟರಿನಿಂದ ಪುಷ್ಪವೃಷ್ಟಿ ಮಾಡಿ ರಾಜಕೀಯ ಪ್ರದರ್ಶನಕ್ಕಿಳಿದ ಅಮೆರಿಕಾ ಮತ್ತು ಅದನ್ನು ಕರಾರುವಕ್ಕಾಗಿ ಕಾಪಿ ಕ್ಯಾಟ್ ನಂತೆ ಅನುಸರಿಸಿದ ಭಾರತದ ಧೋರಣೆಗಳು ಪ್ರಪಂಚದಾದ್ಯಂತ ಖಂಡನೆಗೊಳಗಾದವು.

    ಗಂಡಸು ಹೆಂಗಸೆನ್ನದೆ, ಚಿಕ್ಕವರು ಹಿರಿಯರೆನ್ನದೆ, ಬಡವರು ಶ್ರೀಮಂತರು ಎನ್ನದೇ , ಸಾಮಾನ್ಯ ಸಿಲೆಬ್ರಿಟಿ ಎನ್ನದೆ ವ್ಯಕ್ತಿಗಳು, ಸಂಸ್ಥೆಗಳು, ಸಮುದಾಯಗಳು ಕರೋನ ಕಾಲದಲ್ಲಿ ನೆರವಾದ್ದರಿಂದಲೇ ನಾವು ಮತ್ತೊಂದು ಪ್ಯಾಂಡೆಮಿಕ್ ನಿಂದ ಹೊರಬರಲು ಸಹಾಯವಾಗುತ್ತಿದೆ.ಕರೋನಾ ಖಾಯಿಲೆಯಿಂದ ಗುಣ ಮುಖರಾದವರು ವೀರರಲ್ಲ.ಈ ರೋಗ ಬಂದಿಲ್ಲದಿದ್ದರೂ, ಬಂದು ಗುಣಮುಖರಾದ ನಂತರವೂ ಅದರ ವಿರುದ್ದ ನಿಂತು ಮಾನವೀಯತೆಯ ದೃಷ್ಟಿಯಿಂದ ಮನುಷ್ಯರ ಸೇವೆ ಮಾಡಿದ ಪ್ರತಿಯೊಬ್ಬ ಮಾನವನೂ ಅದರ ವಿರುದ್ಧ ಹೋರಾಡಿದ ವೀರನೇ.

     ಕರೋನ ಕಾಲದಲ್ಲಿ ಸಾಮಾನ್ಯ ಮನುಷ್ಯನ ನಡತೆಯಲ್ಲಿ ಏನೇ ಲೋಪ ಕಂಡು ಬಂದಿದ್ದರೂ ಒಟ್ಟಾರೆ ಚಿತ್ರದಲ್ಲಿ ಆತನ ಮನುಷ್ಯತ್ವ, ಪರೋಪಕಾರ, ದಾನ ಎಲ್ಲವೂ ಎದ್ದು ನಿಂತಿವೆ.ಆ ಬಗ್ಗೆ ಸಮಾಧಾನ, ಅಭಿಮಾನ ಮತ್ತು ಸಂತೋಷ ಆಗುವುದು ಅತ್ಯಂತ ಸಹಜ.

    ಪರಿಷತ್ ಚುನಾವಣೆ ಈ ನಾಲ್ವರಿಗೆ ಫುಲ್ ಟೆನ್ಷನ್

    ಅಶೋಕ ಹೆಗಡೆ
    ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳ ಜೂನ್ ೨೯ರಂದು ನಡೆಯುವ ಚುನಾವಣೆಯು ಬಿಜೆಪಿ, ಕಾಂಗ್ರೆಸ್‌ಗಳಲ್ಲಿ ತಳಮಳ ಹುಟ್ಟುಹಾಕಿದೆ.

    ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವಾಗ ಎರಡೂ ಪಕ್ಷಗಳ ಹೈಕಮಾಂಡ್‌ಗಳು ಅನುಸರಿಸಿದ ವಿಧಾನವೇ ಅದಕ್ಕೆ ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.ಬಿಜೆಪಿಯಲ್ಲಿ ಎಲ್ಲರಿಗಿಂತ ಹೆಚ್ಚು ಒತ್ತಡಕ್ಕೆ ಸಿಲುಕಿರುವವರು ನಾಲ್ಕು ಮಂದಿ.ಮೊದಲನೆಯವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಳಿದ ಮೂವರೆಂದರೆ ಆಪರೇಷನ್
    ಕಮಲಕ್ಕೆ ಒಳಗಾಗಿದ್ದ ಎಂ.ಟಿ.ಬಿ. ನಾಗರಾಜ್, ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್.

    ಈ ಮೂವರನ್ನೂ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಮಾಡಬೇಕಾದ `ಹೊಣೆಗಾರಿಕೆ’ಯಡಿಯೂರಪ್ಪನವರ ಮೇಲಿದೆ. ಆರ್.ಶಂಕರ್ ಅವರಿಗಂತೂ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ ನೀಡದೇ, ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಭರವಸೆ ನೀಡಲಾಗಿತ್ತು. ವಿಶ್ವನಾಥ್ ಅವರು ಸೋಲುವ ಸಾಧ್ಯತೆ ಇರುವುದರಿಂದ ಸ್ಪರ್ಧಿಸಿದಂತೆ ಖುದ್ದು ಯಡಿಯೂರಪ್ಪ ಸಲಹೆ ಮಾಡಿದ್ದರು. ಅದನ್ನು ಲೆಕ್ಕಿಸದೆ ಹುಣಸೂರಿನಲ್ಲಿ ಸ್ಪರ್ಧಿಸಿ ವಿಶ್ವನಾಥ್ ಸೋತರು. ಹೊಸಕೋಟೆಯಲ್ಲಿ ಎಂಟಿಬಿ ಸೋಲಲು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡರ ಪಾತ್ರವೂ ಇದೆ ಎನ್ನುವುದು ಸ್ಪಷ್ಟ. ಹಾಗೆಯೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದರ ಹಿಂದೆ ವಿಶ್ವನಾಥ್, ಎಂಟಿಬಿ ಕೊಡುಗೆ ದೊಡ್ಡದಿದೆ.


    ಇದು ಯಡಿಯೂರಪ್ಪನವರ ರಾಜಕೀಯ ಬದುಕಿನ ಸಂಧ್ಯಾಕಾಲ ಎನ್ನುವುದನ್ನು ಅರ್ಥ ಮಾಡಿಕೊಂಡು ವರಿಷ್ಠರು ಇದೊಂದು ಬಾರಿ ನಾಲ್ವರೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ
    ನೀಡಿದರೆ ಈ ಮೂವರೂ ಎಮ್ಮೆಲ್ಸಿಗಳಾಗುವುದು ನಿಶ್ಚಿತ. ನಾಲ್ಕನೇಯವರಾಗಿ ಆಪರೇಷನ್ ಕಮಲದ ರೂವಾರಿ ಸಿ.ಪಿ.ಯೋಗೇಶ್ವರ್‌ಗೆ ಅದೃಷ್ಟ ಒಲಿಯಬಹುದು ಅಥವಾ ವರಿಷ್ಠರ ಜತೆ ಸಂಘರ್ಷ
    ಬೇಡವೆಂದು ನಾಲ್ಕನೇ ಅಭ್ಯರ್ಥಿ ಆಯ್ಕೆಯನ್ನು ಯಡಿಯೂರಪ್ಪನವರು ವರಿಷ್ಠರಿಗೇ ಬಿಡಬಹುದು.

    ಇನ್ನು ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡುವುದು ಬೇಡವೆಂದು ಹೈಕಮಾಂಡ್ ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಎಂದು ಘೋಷಿಸಿತು. ರಾಜ್ಯ ನಾಯಕರು ಚರ್ಚೆಯ ಹಂತದಲ್ಲಿರುವಾಗಲೇ ಖರ್ಗೆ ಹೆಸರು ಘೋಷಣೆಯಾದ್ದರಿಂದ ಯಾರೂ ತುಟಿ ಬಿಚ್ಚಲಿಲ್ಲ. ವಿಧಾನ ಪರಿಷತ್‌ಗೂ ಅದೇ ಮಾನದಂಡ ಅನುಸರಿಸಬಹುದು ಎಂಬ ನಿರೀಕ್ಷೆಯಿಂದ ರಾಜ್ಯ ನಾಯಕರು ಅಷ್ಟಾಗಿ ತಲೆ ಕೆಡಿಸಿಕೊಂಡಂತೆ
    ಕಾಣಿಸುತ್ತಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಮಾತ್ರ ಕಾರ್ಯಕರ್ತರಿಗೆ ಮಣೆ ಹಾಕುವ ಪರಂಪರೆಯನ್ನು ಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ. ಅದು ಈ ಸಲ ಪಾಲನೆಯಾಗುತ್ತದೆಯೇ ನೋಡಬೇಕು.


    ಹಾಲಿ ಸದಸ್ಯ ಎಂ.ಸಿ.ವೇಣುಗೋಪಾಲ್  ತಮಗೆ ಕೇವಲ ೨೧ ತಿಂಗಳ ಅವಕಾಶ ಸಿಕ್ಕಿದ್ದರಿಂದ ಇನ್ನೊಂದು ಪೂರ್ಣಾವಧಿಗೆ ಅವಕಾಶ ನೀಡಬೇಕೆಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೇ ಪತ್ರ ಬರೆದಿದ್ದಾರೆ. ತುಮಕೂರು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರಾದ ನಜೀರ್ ಅಹಮದ್, ಅಬ್ದುಲ್ ಜಬ್ಬಾರ್, ಮಾರ್ಗರೆಟ್ ಆಳ್ವ ಪುತ್ರ ನಿವೇದಿತ್
    ಆಳ್ವ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

    ಕಾಂಗ್ರೆಸ್ ವರಿಷ್ಠರು ಸ್ವಲ್ಪ ಚಾಣಾಕ್ಷತೆ ತೋರಿಸಿದ್ದರೆ ಪರಿಷತ್‌ನಲ್ಲಿ ಇನ್ನೊಂದು ಸ್ಥಾನ ಗೆಲ್ಲುವ ಅವಕಾಶವಿತ್ತು. ರಾಜ್ಯಸಭೆಯಲ್ಲಿ ದೇವೇಗೌಡರಿಗೆ ಬೆಂಬಲ ನೀಡುತ್ತೇವೆ, ಪರಿಷತ್ ಸ್ಥಾನ ನಮಗೆ ಬಿಟ್ಟುಕೊಡಿ ಎಂದು ಚೌಕಾಸಿ ಮಾಡಬಹುದಿತ್ತು. ಏಕಾಏಕಿ ಗೌಡರಿಗೆ ಬೆಂಬಲ ಸೂಚಿಸಿ ಒಂದು ಸ್ಥಾನ ಕಳೆದುಕೊಂಡಿತು.

    ಅನಾಯಾಸವಾಗಿ ಸಿಕ್ಕಿರುವ ಒಂದು ಸ್ಥಾನ ಜೆಡಿಎಸ್‌ಗೆ ಯಾವ ರೀತಿ `ಸಂಪನ್ಮೂಲ’ ತಂದುಕೊಡುತ್ತದೆ ಎಂಬುದಷ್ಟೇ ಈಗಿನ ಪ್ರಶ್ನೆ. ಒಂದೊಮ್ಮೆ ನಿಷ್ಠಾವಂತ ಕಾರ್ಯಕರ್ತರಿಗೆ ಜೆಡಿಎಸ್ ಟಿಕೆಟ್ ನೀಡಿದರೆ ಮಾತ್ರವೇ ಅದು
    ದೊಡ್ಡ ಸುದ್ದಿಯಾಗುತ್ತದೆ.

    ರವಿಕೆ ಕಣದಲ್ಲಿದೆ ಸಂಬಂಧಗಳನ್ನು ಸೇರಿಸೋ ಅಗಾಧ ಶಕ್ತಿ

    ಮನೆಯಲ್ಲಿ ಹೆಂಗಸರು ಬಟ್ಟೆಗಳನ್ನು ಜೋಡಿಸಿದ ಅಲಮೆರಾವನ್ನು ತೆರೆದ ತಕ್ಷಣ ಅದರೊಳಗಿನಿಂದ ಒಂದು ಬ್ಲೌಸ್ ಪೀಸು ಕೆಳಗೆ ಬೀಳುತ್ತದೆ . ಜಾರಿ ಬಿದ್ದ ಬ್ಲೌಸ್ ಪೀಸನ್ನು ಕೈಲಿ ಹಿಡಿದ ಆಕೆ ಅದನ್ನು ಯಾರು ಕೊಟ್ಟಿದ್ದು ಅಂತ ನೆನಪಿಸಿಕೊಂಡು ಸಣ್ಣ ಫ್ಲ್ಯಾಶ್‌‌‌ಬ್ಯಾಕಿಗೆ ಜಾರುತ್ತಾರೆ .

    ಗೃಹ ಪ್ರವೇಶದಲ್ಲೋ , ಸತ್ಯನಾರಾಯಣ ಪೂಜೆಯಲ್ಲೋ , ನಿಶ್ಚಿತಾರ್ಥದಲ್ಲೋ, ಸಂಬಂಧಿಕರ ಮನೆಗೆ ಹೋದಾಗಲೋ, ಅರಿಷಿಣ ಕುಂಕುಮದ ಜೊತೆಗೋ ಆ ಕುಪ್ಪುಸದ ಕಣ ಕೊಟ್ಟಿರುತ್ತಾರೆ . ಅದನ್ನು ಕೈಲಿ ಹಿಡಿದ ಕೂಡಲೇ ಆ ಹೆಂಗಸಿನ ಮನದಲ್ಲಿ ಹತ್ತು ಆಲೋಚನೆಗಳು ಓಡುತ್ತವೆ. ಅದಕ್ಕೆ ಯಾವ ಸೀರೆ ಮ್ಯಾಚ್ ಆಗುತ್ತೆ , ಮ್ಯಾಚ್ ಆಗದೇ ಇದ್ರೆ ಯಾವ ರೇಂಜಿನ ಸೀರೆ ತಗೋಬಹುದು , ಯಾವಾಗ್ ತಗೋಬೇಕು , ಕುಪ್ಸ ಯಾರ್ ಹತ್ರ ಹೊಲಿಸಬೇಕು , ಯಾವ ವಿನ್ಯಾಸದಲ್ಲಿ ಹೊಲಿಸಬೇಕು, ಅದನ್ನ ಯಾವ ಫಂಕ್ಷನ್ನಿಗೆ ಹಾಕ್ಕೊಂಡ್ರೆ ಚೆನ್ನಾಗಿರುತ್ತೆ ಹೀಗೆ ಹತ್ತುಹಲವಾರು ಆಲೋಚನೆಗಳು ರೇಸುಕುದುರೆಗಳಂತೆ ಓಡುತ್ತವೆ .

    ಅದೊಂದು ಸಣ್ಣ ರವಿಕೆ ಬಟ್ಟೆಯ ತುಂಡಾಗಿದ್ದರೂ ಇದು ಎಷ್ಟೋ ತುಂಡಾದ ಸಂಬಂಧಗಳನ್ನ ಸೇರಿಸೋ ಅಗಾಧ ಶಕ್ತಿ ಹೊಂದಿದೆ , ಒಂದು ಮನೆಯ ಹೆಂಗಸರು ತಮ್ಮ ಮನೆಗೆ ಬರುವ ಬೇರೆ ಮನೆಯ ಹೆಂಗಸರಿಗೆ ಸಲ್ಲಿಸುವ ಗೌರವ ಇದಾಗಿರುತ್ತದೆ .ಕೋಟಿಗಟ್ಟಲೇ ಆದಾಯವಿದ್ದವರೂ ಸಹ ಸಲ್ಲಿಸುವ ಗೌರವ ಇದಾಗಿದೆ. ಬ್ಲೌಸ್ ಪೀಸು ಒಂದು ಸಣ್ಣ ಸಂಪ್ರದಾಯ. ಒಂದು ಸಣ್ಣ ಉಡುಗೊರೆ. ಒಂದು ಸಣ್ಣ ಸತ್ಕಾರವಾದರೂ ಸಹ ಅದನ್ನು ಪಡೆಯುವ ಹೆಣ್ಣಿಗೆ ಅದು ಬಲು ದೊಡ್ಡ ಮಟ್ಟದ ಸಂತಸ ಉಂಟು ಮಾಡುತ್ತದೆ .

    ಆಕೆ ಅದೆಷ್ಟೇ ದೊಡ್ಡ ಶ್ರೀಮಂತಳಾಗಿದ್ದರೂ ಆಕೆಯ ಬಳಿ ಎಷ್ಟೇ ಬೆಲೆಬಾಳುವ ವಸ್ತುಗಳು ಒಡವೆಗಳು ಸೀರೆಗಳಿದ್ದರೂ ಸಹ ಈ ಒಂದು ಬ್ಲೌಸ್ ಪೀಸು ಕೊಡುವ ಸಂತಸ ನಿಜಕ್ಕೂ ಅಪಾರವಾದದದ್ದು .

    ನಾಲ್ಕೈದು ಮಂದಿ ಒಟ್ಟಿಗೆ ಹೋಗಿದ್ದಾಗ ಅವರಿಗೆಲ್ಲಾ ಇದು ಲಭಿಸಿದಾಗಲಂತೂ ಅವರುಗಳು ಓರೆಗಣ್ಣಿನಲ್ಲೇ ಪಕ್ಕದವರಿಗೆ ಯಾವ ಕಲರಿನದು ಸಿಕ್ಕಿದೆ ಎಂದು ನೋಡಿಕೊಂಡುಬಿಟ್ಟಿರುತ್ತಾರೆ. ಮತ್ತೆ ಪ್ರತಿ ಸಾರಿ ಇದು ಅಲೆಮಾರಿನಿಂದ ಕೆಳಗೆ ಬೀಳಲು ಕಾರಣವೇನೆಂದರೆ ಅದನ್ನು ಒಳಗೆ ಇಟ್ಟುಬಿಟ್ಟರೆ ಮರೆತುಹೋಗುತ್ತೇವೆ ಕಾಣೋ ಥರ ಇಟ್ರೆ ಬೇಗ ಹೊಲೆಯಲು ಹಾಕುತ್ತೇವೆ ಎಂದು ಕಾಣುವ ಥರ ಇಟ್ಟಿರುತ್ತಾರೆ.

    ಆದರೆ ವಾಸ್ತವವೇನೆಂದರೆ ಇವರುಗಳು ಯಾವುದೇ ಕಾರಣಕ್ಕೂ ಅದನ್ನು ಮರೆಯುವುದಿಲ್ಲ , ಮತ್ತೆ ಅದು ಬ್ಲೌಸಾಗಿ ಸಿದ್ದವಾದ ನಂತರ ಅದನ್ನು ಹಲವಾರು ಬಾರಿ ಧರಿಸಿ , ಲೆಕ್ಕವಿಲ್ಲದಷ್ಟು ಸಲ ಒಗೆದು ಒಣಹಾಕಿ ಅದು ಇನ್ನೇನು ಬಣ್ಣ ಮಾಸಿ ಬಿಸಾಡುವ ಹಾಗಾದರೂ ಇವರು ಆ ಬ್ಲೌಸು ಪೀಸು ಯಾರು ಕೊಟ್ಟಿದ್ದು ಎಲ್ಲಿ ಕೊಟ್ಟಿದ್ದು ಎಂಬುದನ್ನು ಸಂಧರ್ಭ ಸಹಿತವಾಗಿ ವಿವರಿಸುತ್ತಾರೆ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ

    ಗಡಿಯಿಂದ ಚೀನಾ ಸೇನೆ ಹಿಂದೆ ಸರಿದಿದ್ದೇಕೆ

    ಲಡಾಖ್ ಗಡಿಯಲ್ಲಿ ನಿರ್ಮಾಣವಾದ ಪ್ರಕ್ಷುಬ್ಧ ಪರಿಸ್ಥಿತಿ ನಿಧಾನವಾಗಿ
    ತಿಳಿಯಾಗುತ್ತಿದೆ. ಭಾರತ ಮತ್ತು ಚೀನಾ ಎರಡೂ ದೇಶಗಳು ಮೂರು
    ಪ್ರಮುಖ ಪ್ರದೇಶಗಳಿಂದ ಸೇನೆಯನ್ನು ಭಾಗಶಃ ಹಿಂದಕ್ಕೆ
    ತೆಗೆದುಕೊಳ್ಳುವ ಒಪ್ಪಂದಕ್ಕೆ ಬಂದಿವೆ.
    ಹಠಮಾರಿ ಚೀನಾ ಈ ಸಂದರ್ಭದಲ್ಲೂ ಯಾಕೆ ಇಂತಹ ಒಪ್ಪಂದಕ್ಕೆ
    ಸಹಮತ ಸೂಚಿಸಿತು ಎಂಬುದನ್ನು ಯೋಚಿಸಿದರೆ ಅದಕ್ಕೆ ಹಲವು
    ಉತ್ತರಗಳು ಸಿಗುತ್ತವೆ. ಮುಖ್ಯವಾಗಿ ಈ ಹಿಂದೆ ಅಂದರೆ ನೆಹರೂ
    ಕಾಲದಲ್ಲಿ ನಡೆದ ದುರಾಕ್ರಮಣದಂತಹ ಸನ್ನಿವೇಶ ಈಗಿಲ್ಲ. ಭಾರತ
    ಸೇನಾ ಬಲದಲ್ಲಿ ಸಾಕಷ್ಟು ಪ್ರಾವಿಣ್ಯತೆ ಪಡೆದಿದೆ. ಮೇಲ್ನೋಟಕ್ಕೆ
    ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ತನ್ನ ಸೇನಾ ಬಲ
    ಹೆಚ್ಚಿಸಿಕೊಂಡಿದೆ ಎಂದು ಸಾಮಾನ್ಯವಾಗಿ ವಿಶ್ಲೇಷಿಸಲಾ
    ಗುತ್ತಿದೆಯಾದರೂ, ಭಾರತ ಮುಖ್ಯ ಗುರಿ ಯಾವತ್ತೂ ಚೀನಾ ಸೇನಾ
    ಸಾಮರ್ಥ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ
    ಪಾಕಿಸ್ತಾನದ ಗಡಿಯೊಳಗೆ ನೇರ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ
    ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರನ್ನು
    ಅಷ್ಟು ಲಘುವಾಗಿ ಚೀನಾ ಪರಿಗಣಿಸುತಿಲ್ಲ.
    ಹೆಚ್ಚು ಪರಿಣತಿ
    ಭಾರತದ ಸೇನೆಯ ಪ್ರಮುಖ ಸಾಧನೆಯೆಂದರೆ ಗುಡ್ಡಗಾಡು
    ಪ್ರದೇಶದಲ್ಲಿ ಯುದ್ಧ ಮಾಡುವ ಹೆಚ್ಚಿನ ಪರಿಣತಿಯನ್ನು
    ಕಾಲಾನುಕಾಲಕ್ಕೆ ಮೈಗೂಡಿಸಿಕೊಂಡು ಬಂದಿರುವುದು. ಮುಖ್ಯವಾಗಿ
    ಟಿಬೇಟಿಯನ್ ಗಡಿಯಂತಹ ಹಿಮಾಚ್ಛಾದಿತ ಪರ್ವತ ಪ್ರದೇಶದಲ್ಲಿ
    ಭಾರತದ ಸೇನೆ ಈ ಹಿಂದಿಗಿಂತಲೂ ಹೆಚ್ಚು ಸಂಘಟನಾತ್ಮಕ
    ಯುದ್ಧವನ್ನು ಮಾಡಲು ಶಕ್ತವಾಗಿದೆ. ಇದು ಕೇವಲ ಭಾರತೀಯಭಕ್ತರ ವೃಥಾ ಆಲಾಪವಲ್ಲ, ಅಥವಾ ನಮ್ಮ ಹೆಗ್ಗಳಿಕೆಯ ಬಗ್ಗೆ ನಾವೇ
    ಬೆನ್ನುತಟ್ಟಿಕೊಳ್ಳುವ ಮಾತಲ್ಲ.
    “ಪ್ರಸಕ್ತ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಮೆರಿಕ, ರಷ್ಯಾ,
    ಚೀನಾ ಅಥವಾ ಐರೋಪ್ಯ ದೇಶಗಳಿಗೆ ಹೋಲಿಸಿದರೆ ಭಾರತವು
    ಪ್ರಸ್ಥಭೂಮಿ ಮತ್ತು ಪರ್ವತ ಪ್ರದೇಶಗಳ ಯುದ್ಧದಲ್ಲಿ ಹೆಚ್ಚು
    ಪರಿಣತಿಯನ್ನು ಸಾಧಿಸಿದೆ’ ಎಂದು ಆಧುನಿಕ ಯುದ್ಧ ಸಾಮಗ್ರಿ ಕುರಿತು
    ವರದಿ ಮಾಡುವ ನಿಯತಕಾಲಿಕದ ಸಂಪಾದಕರಾದ ಹ್ವಾಂಗ್ ಗೌಝಿ
    ಅಭಿಪ್ರಾಯ ಪಟ್ಟಿದ್ದಾರೆ.
    ಭಾರತ ಮತ್ತು ಚೀನಾ ಗಡಿ ಭಾಗದ ಉದ್ವಿಗ್ನತೆಯನ್ನು
    ಶಮನಗೊಳಿಸುವ ನಿಟ್ಟಿನಲ್ಲಿ ಸೇನಾ ಪಡೆಯನ್ನು ಹಂತ ಹಂತವಾಗಿ
    ವಾಪಸ್ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಈ ಲೇಖನ
    ಪ್ರಕಟವಾಗಿದೆ.
    ಗಡಿ ಉದ್ವಿಗ್ನತೆ
    ಮುಖ್ಯವಾಗಿ ಟಿಬೇಟ್ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ
    ತನ್ನ ಸೇನಾ ಬಲವನ್ನು ಭಾರತ ವಿಸ್ತರಿಸಿದೆ. ಸದ್ಯ ಭಾರತವು ಪರ್ವತ
    ಪ್ರದೇಶಗಳ ಯುದ್ಧದಲ್ಲಿ ಪರಿಣಿತರಾದ ಎರಡು ಲಕ್ಷ ಯೋಧನ್ನು 12
    ವಿಭಾಗಗಳಲ್ಲಿ ಹೊಂದಿದೆ. ಇದು ಜಗತ್ತಿನಲ್ಲೇ ಅತಿ ಹೆಚ್ಚು ದೊಡ್ಡ
    ಪರ್ವತ ಪ್ರದೇಶ ಯುದ್ಧ ಪರಿಣಿತ ಯೋಧರ ತಂಡ ಎಂದು
    ಪರಿಗಣಿಸಲಾಗಿದೆ ಎಂದವರು ತಮ್ಮ ಅಭಿಪ್ರಾಯಕ್ಕೆ ಪೂರಕ ಮಾಹಿತಿ
    ನೀಡಿದ್ದಾರೆ.
    1970ರ ದಶಕದಲ್ಲಿ ಈ ನಿಟ್ಟಿನಲ್ಲಿ ಭಾರತ ಮುಂದಡಿಯಿಟ್ಟಿತ್ತು.
    ಆಗ 50,000 ಯೋಧರು ಇಂತಹ ಸಾಮರ್ಥ್ಯ ಹೊಂದಿದ್ದರೆ ಈಗ
    ಅದು ಮೂರು ಪಟ್ಟು ಆಗಿದೆ. ಅದರಲ್ಲೂ ಮುಖ್ಯವಾಗಿ ಇಂತಹ
    ಯುದ್ಧದ ಪರಿಣತಿ ಪ್ರತಿ ಯೋಧನಿಗೂ ಮುಖ್ಯ ಎಂದು ಮನಗಂಡಿರುವ
    ಭಾರತ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅಂತಿಮವಾಗಿ ವೃತ್ತಿಮತ್ತು ಹವ್ಯಾಸಿ ಪರ್ವತಾರೋಹಿಗಳನ್ನು ಸೇನೆಗೆ ಸೇರ್ಪಡೆಗೊಳಿಸಲು
    ಆರಂಭಿಸಿತು ಎಂದವರು ಹೇಳುತ್ತಾರೆ.
    ಸಿಯಾಚಿನ್ ಪ್ರದೇಶ
    ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಹೆಸರಾಗಿರುವ ಮತ್ತು
    ಸದಾ ಹಿಮಾಚ್ಛಾದಿತವಾಗಿರುವ (ಮೈನಸ್ ಡಿಗ್ರಿ) ಸಿಯಾಚಿನ್ ನಲ್ಲಿ
    ಭಾರತ ನೂರಕ್ಕೂ ಹೆಚ್ಚು ಔಟ್ ಪೋಸ್ಟ್ ಗಳನ್ನು ರಚಿಸಿದೆ. 6ರಿಂದ
    7 ಸಾವಿರ ಯೋಧರು ಅಲ್ಲಿ ದಿನ ನಿತ್ಯ ಗಡಿ ಕಾವಲು ಕಾಯುತ್ತಿದ್ದಾರೆ.
    6,748 ಮೀಟರ್ ಎತ್ತರದಲ್ಲಿ ಸೇನಾ ಠಾಣೆಯನ್ನೂ ನಿರ್ಮಿಸಿರುವುದು
    ಪರ್ವತ ಯುದ್ಧ ಪ್ರವೀಣತೆಯಲ್ಲಿ ಭಾರತದ ಮೇಲುಗೈಗೆ
    ಸಾಕ್ಷಿಯಾಗಿದೆ.
    ಪ್ರಬಲ ಸೇನಾ ಪಡೆ
    ಹಿಂದಿನ ಭಾರತವು ಇಂದಿನ ಭಾರತವಲ್ಲ. ಎಂ. 777 ಯುದ್ಧ ವಿಮಾನ,
    155 ಎಂಎಂ ಲೈಟ್ ಟ್ಯಾಂಕ್, ಚಿನೂಕ್ ಹೆವ್ವಿ ಟ್ರಾನ್ಸ್ ಪೋರ್ಟ್
    ಹೆಲಿಕಾಪ್ಟರ್ ಗಳು ಭಾರತ ಸೇನೆಯ ಬತ್ತಳಿಕೆಯಲ್ಲಿವೆ. ಎಎಚ್ 64
    ಅಪಾಚಿ ಅಟ್ಯಾಕ್ ಹೆಲಿಕಾಪ್ಟರ್ ಗಳಿಂದಲೂ ಸೇನೆ ಸಜ್ಜಿತವಾಗಿದೆ.
    ಇನ್ನು ಚೀನಾ-ಭಾರತ ಗಡಿ ಭಾಗದ ಪ್ರದೇಶ ಎಷ್ಟು ದುರ್ಗಮವಾಗಿದೆ
    ಎಂದರೆ ಕೇವಲ ಹೋರಾಟದ ಜತೆಗೆ ತನ್ನನ್ನು ರಕ್ಷಿಸಿಕೊಳ್ಳುವುದಕ್ಕೂ
    ಸೇನಾ ಪಡೆ ಮಹತ್ವ ನೀಡಬೇಕಾಗುತ್ತದೆ. ಇಂತಹ ಅತಿಯಾದ
    ಆತ್ಮವಿಶ್ವಾಸ ಸದ್ಯದ ಮಟ್ಟಿಗೆ ಚೀನಾದಲ್ಲಿ ಇಲ್ಲ. ಹೀಗಾಗಿಯೇ
    ಬೆದರಿಸುವ ತಂತ್ರ, ಬಳಿಕ ಒಪ್ಪಂದ ಎನ್ನುವ ಸೂತ್ರಕ್ಕೆ ಮೊರೆಯಾಗಿದೆ
    ಎಂಬುದು ರಾಜಕೀಯ ಮತ್ತು ರಕ್ಷಣಾ ತಜ್ಞರ ವಿಶ್ಲೇಷಣೆಯಾಗಿದೆ.

    ಹೊಳಲ್ಕೆರೆ ರೈತನ ಆತ್ಮಹತ್ಯೆ ಯಾವುದರ ಸೂಚನೆ?

    ಕೋವಿಡ್-19 ವೈರಸ್‌ ಕಾಣಿಸಿಕೊಂಡ ನಂತರ ದೇಶದ ಆರ್ಥಿಕ ಸ್ಥಿತಿಯ ಕುರಿತು ಎಲ್ಲರಿಗೂ ತಿಳಿದೇ ಇದೆ.  ಕೈಗಾರಿಕೆಗಳು ನಷ್ಟ ಅನುಭವಿಸುತ್ತಿವೆ.  ನಿರುದ್ಯೋಗ ಪ್ರಮಾಣ ಹೆಚ್ಚಿದೆ.  ಈ ಬಗ್ಗೆ ಆರ್ಥಿಕ ತಜ್ಞರು ಮಾತನಾಡಿದ್ದಾರೆ. ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ. ಆದರೆ ಕೃಷಿ ಕ್ಷೇತ್ರದ ಮೇಲಾದ ಪರಿಣಾಮಗಳ ಕುರಿತು ಯಾರೂ ಹೆಚ್ಚು ಗಮನ ನೀಡಿಲ್ಲ.

    ವಾಸ್ತವವಾಗಿ  ಈ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಏಕೈಕ ಕ್ಷೇತ್ರವೆಂದರೆ ಕೃಷಿ. ಈ ಬಾರಿ ಮುಂಗಾರು ಕೂಡ ಚೆನ್ನಾಗಿ ಆಗುವ ನಿರೀಕ್ಷೆ ಇರುವುದರಿಂದ ಎಲ್ಲರ ಚಿತ್ತ ಕೃಷಿ ಕ್ಷೇತ್ರದತ್ತ ನೆಟ್ಟಿದೆ. ಆದರೆ ದೇಶದ ಒಟ್ಟಾರೆ ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಪಾಲು ಕೇವಲ ಶೇ. 15 ರಷ್ಟಾಗಿರುವುದರಿಂದ ಈ ಕ್ಷೇತ್ರವನ್ನು ಸರ್ಕಾರಗಳು ನಿರ್ಲಕ್ಷಿಸುತ್ತಲೇ ಬಂದಿವೆ.

    ಇದರ ಪರಿಣಾಮವೇ ರೈತರ ಆತ್ಮಹತ್ಯೆ. ಇಡೀ ದೇಶದ ಜನತೆಗೆ ಅನ್ನ ನೀಡುವ ಅನ್ನದಾತನ ಸಂಕಷ್ಟ ಯಾರಿಗೂ ಬೇಡ. ರೈತರ ಆತ್ಮಹತ್ಯೆ ಸಂಖ್ಯೆಯನ್ನು  ಕೃಷಿ ಕ್ಷೇತ್ರದ ಸಂಕಷ್ಟದ ಸೂಚ್ಯಂಕ ಎಂದೇ ಪರಿಗಣಿಸಲಾಗುತ್ತಿದೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಕೆಯ ಹಾದಿ ಹಿಡಿದಿದ್ದರಿಂದ ಕೃಷಿ ಕ್ಷೇತ್ರದ ಆರೋಗ್ಯ ಸುಧಾರಿಸುತ್ತಿದೆ ಎಂದೇ ಭಾವಿಸಲಾಗಿದೆ.

    ಕೊರೊನಾ  ಕೃಷಿ ಕ್ಷೇತ್ರದ ಮೇಲೆ ಯಾವೆಲ್ಲಾ ರೀತಿಯ ಪರಿಣಾಮ ಬೀರಿದೆ ಎಂಬುದರ ಕುರಿತು ಹೆಚ್ಚು ಅಧ್ಯಯನ ನಡೆದಿಲ್ಲ. ವಲಸೆ ಕಾರ್ಮಿಕರು ಹಳ್ಳಿಗಳಿಗೆ ಹಿಂದಿರುಗಿರುವುದರಿಂದ ಕೃಷಿ ಕಾರ್ಮಿಕರ ಸಮಸ್ಯೆ ಒಂದಿಷ್ಟು ಬಗೆಹರಿದಿರುವ ಸುದ್ದಿಗಳಿವೆ. ಆದರೆ ರೈತರ ಜೇಬು ಕೂಡ ಬೇರೆಲ್ಲರ ಹಾಗೆ ಖಾಲಿ ಖಾಲಿ ಯಾಗಿ, ಅವರು ಕೂಡ ಸಂಕಷ್ಟದಲ್ಲಿದ್ದಾರೆ.

    ಕಂಬದದೇವರ ಹಟ್ಟಿಯ ಘಟನೆ

    ಇದಕ್ಕೆ ಸ್ಪಷ್ಟ ಉದಾಹಣೆ ಎಂದರೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಂಬದದೇವರ ಹಟ್ಟಿ ಎಂಬಲ್ಲಿ 65 ವರ್ಷದ ರೈತ ದಾಸಪ್ಪ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವುದು. ಜೂನ್‌ 9, ರ ಪ್ರಜಾವಾಣಿ ವರದಿ ಪ್ರಕಾರ  ಹೆಣ್ಣು  ಮಕ್ಕಳ ಮದುವೆಗೆಂದು ಸಾಲ ಮಾಡಿದ್ದ ದಾಸಪ್ಪ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸದರಿ ರೈತ ಹೊಳಲ್ಕೆರೆ  ಶಾಖೆಯ ಎಸ್ ಬಿ ಐ ನಿಂದ 2.70 ಲಕ್ಷ ರೂ, ಪ್ರಗತಿ ಗ್ರಾಮೀಣ ಬ್ಯಾಂಕಿನಿಂದ 1.10  ಲಕ್ಷ ರೂ.  ಹಾಗೂ ಟ್ರಾಕ್ಟರ್ ಕೊಳ್ಳಲೆಂದು ಚಿತ್ರದುರ್ಗದ  ಮಹೀಂದ್ರ ಫೈನ್ಸಾನ್ಸನಿಂದ 4.50 ಲಕ್ಷ ರೂ. ಸಾಲ ಮಾಡಿದ್ದ. ಸಾಲ ಮಾಡಲು ಕಾರಣ ಏನೇ ಇರಲಿ  ಇವರ ಸಾವು ಕೃಷಿಕರ ಸಂಕಷ್ಟವನ್ನು ಎತ್ತಿ ತೋರಿಸುತ್ತಿಲ್ಲವೇ? ಈ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ.

    ಸಾವಿಗೆ ಬೆಲೆ ಇಲ್ಲ

    ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರ  ನಮ್ಮ ದೇಶದಲ್ಲಿ 2014ರಲ್ಲಿ 12,360  ರೈತರು, 2015ರಲ್ಲಿ12,602, 2016ರಲ್ಲಿ11,379 ಮತ್ತು 2018ರಲ್ಲಿ 10,349 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇವರೇಕೆ ಹೀಗೆ ಆತ್ಮಹತ್ಯೆಗೆ ಶರಣಾಗಿದ್ದರು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ನಡೆದಿದ್ದರೆ ಈಗ ಹೊಳಲ್ಕೆರೆ ರೈತರನ ಆತ್ಮಹತ್ಯೆಯನ್ನು ತಪ್ಪಿಸಬಹುದಾಗಿತ್ತು.

    ಹೌದು ರೈತರ ಆತ್ಮಹತ್ಯೆ ವಿಷಯ  ಸರಳವಾಗಿಲ್ಲ. ಕುರುಡರು ಆನೆಯನ್ನು ಮುಟ್ಟಿ ಅದು ಹೇಗಿದೆ ಎಂದು ವರ್ಣಿಸಿದಂತೆ ರೈತರ ಆತ್ಮಹತ್ಯೆಯ ಬಗ್ಗೆಯೂ ಕೆಲ ತಜ್ಞರು ‘ಇದು ಈ ಕಾರಣಕ್ಕೇ ಆಗುತ್ತಿದೆ’ ಎಂದು ವಿಶ್ಲೇಷಿಸಿ, ಸರ್ಕಾರದ ದಿಕ್ಕು ತಪ್ಪಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿಯೇ ಆತ್ಮಹತ್ಯೆಯ ಸರಣಿ ಆರಂಭವಾಗಿ ಎರಡು ದಶಕಗಳಾದರೂ ಪರಿಹಾರ ಕಾಣುತ್ತಿಲ್ಲ. ಈ ವರ್ಷ ಇಷ್ಟು, ಆ ವರ್ಷ ಅಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರೆಂಬ ಲೆಕ್ಕಾಚಾರದ ಮಾತಿಗೆ ಕೊನೆ ಇಲ್ಲವಾಗಿದೆ. ಈಗ  ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಪೊರೇಟ್‌   ಕಂಪನಿಗಳಿಗೂ ಕೃಷಿ ಕ್ಷೇತ್ರದಲ್ಲಿ ಭಾಗಿಯಾಗಲು  ಅವಕಾಶ ಮಾಡಿಕೊಡುವ ಮೂಲಕ ಆತ್ಮಹತ್ಯೆಗಳಿಗಿದ್ದ ಕಾರಣವನ್ನು ಸರ್ಕಾರ ಹೆಚ್ಚಿಸಿದೆ ಎನ್ನುತ್ತಾರೆ ಕೃಷಿ ಕ್ಷೇತ್ರದ ತಜ್ಞರು.

    ರಾಜ್ಯದ ಸಮಸ್ಯೆ ಮಾತ್ರವಲ್ಲ

    ರೈತರ ಆತ್ಮಹತ್ಯೆ ರಾಜ್ಯದಲ್ಲಿ ಮಾತ್ರ ನಡೆಯುತ್ತಿಲ್ಲ. ದೇಶಾದ್ಯಂತ ಸರಣಿ ಆತ್ಮಹತ್ಯೆಗಳು ನಡೆದೇ ಇದೆ. ಮಹಾರಾಷ್ಟ್ರ ರೈತರ ಆತ್ಮಹತ್ಯೆ ಪ್ರಕರಣಗಳು ರಾಷ್ಟ್ರೀಯಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಲೇ ಇರುತ್ತವೆ. ಹಲವು ರಾಜ್ಯಗಳ ಸರ್ಕಾರಗಳು ಪರಿಹಾರ ಧನ, ಸಹಾಯಧನವನ್ನು ಘೋಷಿಸಿಯೂ ಆಗಿದೆ. ಆದರೂ ರೈತರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ.

    ಕೈಕೊಟ್ಟ ಬೆಳೆಗಳು, ಪ್ರತಿಕೂಲ ಹವಾಮಾನಗಳು ರೈತರನ್ನು ಪ್ರತಿಕೂಲ ಪರಿಸ್ಥಿತಿಗೆ ತಳ್ಳುತ್ತಿದೆ. ಇದರ ಜೊತೆಗೆ, ನೀರಾವರಿ ಬೀಜ, ಗೊಬ್ಬರ, ಕೀಟನಾಶಕ ಮುಂತಾದ ಕೃಷಿಗೆ ಬೇಕಾದ ಹೂಡುವಳಿಗಳು ಸಮಯಕ್ಕೆ ಸರಿಯಾಗಿ ಸರಬರಾಜಾಗದೆ ಇರುವುದು, ಬೇಕಾದ ಪ್ರಮಾಣ, ಗುಣಮಟ್ಟದಲ್ಲಿ ಸಿಗದೆ ಇರುವುದು ರೈತನನ್ನು ದುಃಸ್ಥಿತಿಗೆ ತಳ್ಳಿರುವುದರಲ್ಲಿ ಅನುಮಾನವಿಲ್ಲ. ಆದರೆ ರೈತರಿಗೆ ಸಂಬಂಧಿಸಿದ ಸರಳ ಸಮಸ್ಯೆಗಳನ್ನು ಬಿಡಿಸಿ, ಅರ್ಥಪೂರ್ಣ ಪರಿಹಾರ ರೂಪಿಸುವಲ್ಲಿ ಕೂಡ ನಮ್ಮ ಸರಕಾರಗಳು ಒಂದು ಹೆಜ್ಜೆ ಮುಂದಿಟ್ಟಿಲ್ಲ. ಕುವೆಂಪು ತಮ್ಮ ‘ರೈತಗೀತೆ’ಯಲ್ಲಿ ಹೇಳಿರುವಂತೆ ರೈತರು ‘ಯೋಗಿಯಾಗಿ, ತ್ಯಾಗಿಯಾಗಿ’ ಬದುಕಬೇಕೆಂದು ಬಯಸುತ್ತಿವೆಯೇ ಹೊರತು, ಅವರಿಗೂ ಕನಸುಗಳಿರುತ್ತವೆ ಎಂಬುದನ್ನೇ ಮರೆತು, ಅವರನ್ನು ಶೋಷಿಸುತ್ತಾ ಬಂದಿವೆ.

    ಉತ್ತರವಿಲ್ಲದ ಪ್ರಶ್ನೆಗಳು

    ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಈ ಹಿಂದೆ ಹೇಳಿದ ಹಾಗೆ ಈ ಪ್ರಶ್ನೆಗೆ ಈವರೆಗೆ ನಡೆದ ಯಾವ ಸಂಶೋಧನೆಯೂ ‘ಇದಮಿತ್ಥಂ’ ಎಂಬಂಥ ಉತ್ತರವೊಂದನ್ನು ನೀಡಿಲ್ಲ. ನಮ್ಮ ಸಂಶೋಧನಾ ವಿಧಾನಗಳಿಗೆ ಇಂಥದ್ದೊಂದು ಉತ್ತರವನ್ನು ನೀಡುವ ಶಕ್ತಿಯೂ ಇಲ್ಲ. ಬಿಡಿ, ಅದು ಬೇರೆ ವಿಷಯ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕುವ ಕ್ರಿಯೆ ವಿಶ್ಲೇಷಣಾತ್ಮಕವಾಗಿ ಸಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡವರು ಕುಡಿಯುತ್ತಿದ್ದರೆ?, ಮನೆಯ ಖರ್ಚಿಗೂ ಸಾಲ ಮಾಡಿಕೊಂಡಿದ್ದರೇ? ಬಗೆಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ರೈತರ ಆತ್ಮಹತ್ಯೆಗೆ `ಇತರ ಕಾರಣ’ಗಳೂ ಇವೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. `ಇತರ ಕಾರಣ’ಗಳೂ ಇರುವುದರಿಂದ ರೈತರ ಆತ್ಮಹತ್ಯೆಯ ಕಾರಣ ಅಸ್ಪಷ್ಟವಾಗಿಯೇ ಉಳಿಯುತ್ತದೆ.

    ವಿವಿಧ ಸಂಶೋಧನೆಗಳು ಪಟ್ಟಿ ಮಾಡುವ ಇತರ ಕಾರಣಗಳು ಈಗ ಹುಟ್ಟಿಕೊಂಡವೇನೂ ಅಲ್ಲ. ಈ ಮೊದಲೂ ರೈತರು ಸಾಲ ಮಾಡುತ್ತಿದ್ದರು. ಬೆಳೆ ವಿಫಲವಾಗುತ್ತಿತ್ತು. ಆಗಲೂ ಸಾಲ ಮಾಡಿಯೇ ಮಕ್ಕಳ ಮದುವೆ ಮಾಡುತ್ತಿದ್ದರು ಅಷ್ಟೇಕೆ ಸಾಲ ತಂದೇ ಹಬ್ಬ ಮಾಡುತ್ತಿದ್ದರು. ಆದರೆ ಈ ಸಾಲಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈಗ ಏಕೆ ಅವೇ ಸಮಸ್ಯೆಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ರೈತರ ಆತ್ಮಹತ್ಯೆಗಳ ಸಂಶೋಧನೆ ನಡೆಸುವ ಯಾರಿಗೂ ಈ ಪ್ರಶ್ನೆ ಕಾಡುವುದಿಲ್ಲವೇಕೆ?

    ಎಲ್ಲಾ ಬಗೆಯ ಆತ್ಮಹತ್ಯೆಗಳ ಹಿಂದಿನ ಮುಖ್ಯ ಕಾರಣ ಹತಾಶೆ. ರೈತ ಯಾಕೆ ಹತಾಶನಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಯಾವ ಪ್ಯಾಕೇಜ್ ಘೋಷಿಸಿದರೂ, ಎಷ್ಟು ಪರಿಹಾರ ನೀಡಿದರೂ ಆತ್ಮಹತ್ಯೆಗಳು ಕಡಿಮೆಯಾಗುವ ಸಾಧ್ಯತೆಗಳಿಲ್ಲ. ರೈತನ ಹತಾಶೆಯ ಕಾರಣಗಳನ್ನು ಹುಡುಕುವುದಕ್ಕೆ `ಹೌದು’ ಅಥವಾ `ಇಲ್ಲ’ಗಳಲ್ಲಿ ಉತ್ತರ ಬಯಸುವ ಸಮೀಕ್ಷೆಗಳಿಗೆ ಸಾಧ್ಯವಿಲ್ಲ. ಇನ್ನು ಎಳಸು, ಎಳಸಾಗಿ ವರ್ತಿಸುವ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳಿಂದ ಇದಂತೂ ಸಾಧ್ಯವೇ ಇಲ್ಲ ಬಿಡಿ.

    ಕೈಗಾರಿಕೆಗಳು ನಷ್ಟಕ್ಕೀಡಾದರೆ ಸರ್ಕಾರ ಅವುಗಳ ಸಾಲವನ್ನು ಮನ್ನಾ ಮಾಡುತ್ತದೆ. ಅವುಗಳ ಪುನರುಜ್ಜೀವನಕ್ಕೆ ಮತ್ತೆ ಸಾಲ ನೀಡುತ್ತದೆ! ಆದರೆ ರೈತನೊಬ್ಬ ಸಾಲ ಮಾಡಿಕೊಂಡು ಕಷ್ಟಕ್ಕೆ ಬಿದ್ದರೆ ಅವನ ನೆರವಿಗೆ ಯಾರು ಬರುತ್ತಾರೆ? ಪಡೆದ ಸಾಲವನ್ನು ಮರು ಪಾವತಿ ಮಾಡದಿದ್ದರೆ ಅವನದೇ ಷೇರು ಬಂಡವಾಳದಿಂದ ನಡೆಯುತ್ತಿರುವ ಸಹಕಾರ ಸಂಘ ಕೂಡಾ ಅವನ ಜಮೀನು ಹರಾಜು ಹಾಕುವ ಮಾತನಾಡುತ್ತದೆ. ಮರು ಪಾವತಿಯಿಲ್ಲದೆ ಸಾಲವಿಲ್ಲ ಎಂಬ ಸಹಕಾರ ಸಂಘ ಮತ್ತು ಬ್ಯಾಂಕುಗಳ ನೀತಿಯಿಂದಾಗಿ ರೈತ ಅನಿವಾರ್ಯವಾಗಿ ಸುಲಭದಲ್ಲಿ ಸಾಲಕೊಡುವ ಬಡ್ಡಿ ವ್ಯಾಪಾರಿಗಳ ಬಳಿಗೆ ಹೋಗುತ್ತಾನೆ. ಈ ಸಾಲದ ಮೂಲಕ ಮಾಡಿದ ಹೂಡಿಕೆಯೂ ನಷ್ಟವಾದರೆ? ಈ ಹೊತ್ತಿಗಾಗಲೇ ಚಕ್ರವ್ಯೂಹ ಪ್ರವೇಶ ಮಾಡಿರುವ ರೈತ ಹೊರ ಬರುವ ದಾರಿ ಹುಡುಕುತ್ತಲೇ ಒಂದು ದಿನ ಸತ್ತು ಹೋಗುತ್ತಾನೆ. ಆತ್ಮಹತ್ಯೆ ಸುಲಭ ಬಿಡುಗಡೆಯ ಒಂದು ಮಾರ್ಗ ಎಂದು ಅವನಿಗೆ ಅನಿಸುವುದರ ಹಿಂದೆ ಸರಕಾರಗಳ ಬೇಜವಬ್ದಾರಿ ನಿಮಗೆ ಎದ್ದು ಕಾಣುವುದಿಲ್ಲವೇ?

    ಇನ್ನೊಂದು ಉದಾಹರಣೆ ನೋಡೋಣ. ಭಾರತದಲ್ಲಿರುವ ಖಾಸಗಿ, ಸರಕಾರೀ ಸ್ವಾಮ್ಯದ ಟೆಲಿಫೋನ್ ಕಂಪೆನಿಗಳು ತಮ್ಮ ಸೇವಾದರವನ್ನು ಹೆಚ್ಚಿಸಬೇಕಾದರೆ ಕನಿಷ್ಠ 24 ಗಂಟೆಗಳ ಮೊದಲಾದರೂ ಸೇವೆಯನ್ನು ಪಡೆಯುವರಿಗೆ ಇದರ ವಿವರವನ್ನು ತಿಳಿಸಬೇಕು. ದರ ಹೆಚ್ಚಿಸುವ ಮೊದಲು ಅದನ್ನು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಮುಂದಿಟ್ಟು ಅದರ ಒಪ್ಪಿಗೆ ಪಡೆಯಬೇಕು.

    ರೈತನಿಗೆ ಬೀಜ, ಕೀಟನಾಶಕ ಒದಗಿಸುವ ಹಲವು ದೇಶೀ ಮತ್ತು ವಿದೇಶೀ ಕಂಪೆನಿಗಳು ಭಾರತದಲ್ಲಿವೆ. ಇವುಗಳು ಋತುಮಾನ, ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮೂಗಿನ ನೇರಕ್ಕೆ ಬೀಜದ ಬೆಲೆಯನ್ನು ನಿರ್ಧರಿಸುತ್ತವೆ. ಆ ಬೆಲೆ ಕೊಟ್ಟು ರೈತ ಬೀಜ, ಕೀಟನಾಶಕಗಳನ್ನು ಖರೀದಿಸಬೇಕು. ಈ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ಬೆಲೆ ನಿರ್ಧರಿಸುವುದು ಯಾವ ಆಧಾರದ ಮೇಲೆ ಎಂದು ಯಾರೂ ಕೇಳುವುದಿಲ್ಲ. ಈ ಬೆಲೆಗಳನ್ನು ನಿಯಂತ್ರಿಸುವುದಕ್ಕೂ ಟ್ರಾಯ್ ನಂಥ ಒಂದು ಸಂಸ್ಥೆ ಬೇಡವೇ?

    ರೈತರ ಹೆಸರಿನಲ್ಲಿಯೇ ಗೆದ್ದು ಬರುವ ನಮ್ಮ ರಾಜಕಾರಣಿಗಳಿಗೆ ಇದೆಲ್ಲಾ ಅರ್ಥವಾಗುವಂತೆಯೇ ಕಾಣುತ್ತಿಲ್ಲ. ರೈತನೂ ಅಷ್ಟೇ ಉದ್ದಿಮೆಗಳಂತೆ ತನ್ನ ಸಮಸ್ಯೆಯನ್ನು ಪರಿಹರಿಸಲು ಸರಕಾರ ಬರಲೆಂದು ಕಾಯುವುದಿಲ್ಲ. ಅವನದ್ದೇ ಪರಿಹಾರದ ಹಾದಿ ಹುಡುಕಿಕೊಂಡಿದ್ದಾನೆ. ಅದನ್ನು ಎಲ್ಲರೂ ‘ಆತ್ಮಹತ್ಯೆ’ ಎಂದು ಕರೆಯುತ್ತಿದ್ದಾರೆ. ಆದರೆ ಈಗಲಾದರೂ ನಿಮಗನಿಸುತ್ತಿಲ್ಲವೇ, ಇದು ಆತ್ಮಹತ್ಯೆಯಲ್ಲ, ಈ ವ್ಯವಸ್ಥೆ ಮಾಡುತ್ತಿರುವ ಕೊಲೆ ಎಂದು?

    ರೈತರ ಸ್ವಾತಂತ್ರ್ಯ ಕಿತ್ತುಕೊಂಡಿದ್ದು ಯಾರು?

    ‘ಇಂದು ನಾವು ಸ್ವಾತಂತ್ರರು ಎಂಬ ನಂಬಿಕೆ ರೈತರಿಗಿಲ್ಲ. ನಿರಾಶರಾಗಿರುವ ಅವರ ಸುಸ್ಥಿರ ಬದುಕಿನತ್ತ ಸರಕಾರ ಗಮನಹರಿಸದಿರುವುದು ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಲು ಕಾರಣವಾಗಿದೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ. ಅವರ ಪ್ರಕಾರ, ‘ಹಿಂದೆ ಸ್ವತಂತ್ರವಾಗಿ ಬೆಳೆ ಬೆಳೆಯುತ್ತಿದ್ದ ರೈತ ಇಂದು ಎಲ್ಲದಕ್ಕೂ ಪರರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಕಾರ್ಖಾನೆ ಗಳನ್ನು, ನೀರಿಗಾಗಿ ಮಳೆಯ ನ್ನು ಆಶ್ರಯಿಸಬೇಕಾಗಿದೆ. ಕೊನೆಗೆ ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಹ ಮತ್ತೊಬ್ಬರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಇದು ಅಭಿವೃದ್ಧಿ, ಸ್ವಾತಂತ್ರ್ಯ ಎಂಬಂತೆ ಮೇಲ್ನೋಟಕ್ಕೆ ಕಂಡರೂ ಎಲ್ಲ ಕಾರ್ಯಗಳಿಗೂ ಒಬ್ಬರನ್ನೊಬ್ಬರು ಆಶ್ರಯಿಸಬೇಕಾದ ಪರಿಸ್ಥಿತಿಯನ್ನು ನಮ್ಮ ವ್ಯವಸ್ಥೆ ತಂದೊಡ್ಡಿದೆ. ಪರವಾಲಂಬನೆ ರೈತರ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುತ್ತಿದ್ದು, ಅವರು ನೇಣಿಗೆ ಕೊರಳೊಡ್ಡುವಂತಾಗಿದೆ’.

    ನಾಗೇಶ್ ಹೆಗಡೆಯವರ ಈ ವಿಶ್ಲೇಷಣೆಯನ್ನೇ ಪಿ. ಸಾಯಿನಾಥ್ ಇನ್ನಷ್ಟು ವಿವರಿಸಿ, ಹೀಗೆ ಹೇಳುತ್ತಾರೆ. ‘ಸುಮಾರು 25 ವರ್ಷಗಳ ಹಿಂದೆ ಬಿತ್ತನೆ ಬೀಜದ ಉತ್ಪಾದನೆ ಸಂಪೂರ್ಣವಾಗಿ ರೈತರ ಕೈಯಲ್ಲಿತ್ತು. ಅವು ಸ್ವಾಭಾವಿಕ ಬೀಜಗಳಾಗಿದ್ದ ರಿಂದ ಸಹಜವಾಗಿಯೇ ಶಕ್ತಿಯುತವಾಗಿದ್ದವು. ಬೀಜಗಳ ಮರು ಉತ್ಪಾದನೆ ಹಾಗೂ ರೈತರ ನಡುವೆ ಬೀಜಗಳ ವಿನಿಮಯ ಕೂಡ ನಡೆಯುತ್ತಿತ್ತು. ಆದರೆ ಇಂದು ವಾಣಿಜ್ಯ ಬೆಳೆಗಳ ಬಿತ್ತನೆ ಮಾತ್ರವಲ್ಲದೆ ಆಹಾರ ಬೆಳೆಗಳ ಬಿತ್ತನೆ ಬೀಜಗಳೂ ಸಹ ಕಾರ್ಪೊರೇಟ್ ಕಂಪೆನಿಗಳ ಹಿಡಿತದಲ್ಲಿವೆ. ಬೀಜ ಮಾರುಕಟ್ಟೆಯ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಲಿಕ್ಕಾಗಿ ಈ ಲೂಟಿಕೋರ ಕಂಪೆನಿಗಳು ಬೀಜಗಳ ಮರು ಉತ್ಪಾದನೆಯ ಸಾಮರ್ಥ್ಯವನ್ನೇ ನಾಶಪಡಿಸಿ ದ್ದಾರೆ. ಹಾಗಾಗಿ ಪ್ರತಿ ಬಾರಿ ಬಿತ್ತನೆ ಮಾಡಬೇಕಾದಾಗಲೂ ರೈತರು ಅನಿವಾರ್ಯವಾಗಿ ಈ ಬಹುರಾಷ್ಟ್ರೀಯ ಕಂಪೆನಿಗಳ ಬೀಜಗಳನ್ನೇ ಅವಲಂಬಿಸಬೇಕಾದ ದುಃಸ್ಥಿತಿ ಉಂಟಾಗಿದೆ.

    ಈ ಪರಿಸ್ಥಿತಿ ಹೇಗಾಗಿದೆಯೆಂದರೆ ಕೇವಲ 3 ಅಥವಾ 4 ಕಂಪೆನಿಗಳು ಇಡೀ ಜಗತ್ತಿನ ಬೀಜ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. ಉದಾ: ಮಾನ್ಸೆಂಟೋ ಕಂಪೆನಿಯೊಂದೇ ಜಗತ್ತಿನ ಒಟ್ಟು ಬೀಜ ಮಾರುಕಟ್ಟೆಯ ಶೇ. 30ರಷ್ಟು ಭಾಗವನ್ನು ನಿಯಂತ್ರಿಸುತ್ತಿದೆ. ಹಾಗೆಯೆ ಸ್ವಾಭಾವಿಕವಾದ ಕೀಟನಾಶಕ ವಿಧಾನವನ್ನು ನಾಶಗೊಳಿಸಿ ಕೆಮಿಕಲ್ ಕಂಪೆನಿಗಳ ಕೀಟನಾಶಕಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ. ಕೊಟ್ಟಿಗೆ ಗೊಬ್ಬರ ಬಳಕೆಯಂತಹ ಸರಳ ಹಾಗೂ ಶಕ್ತಿಯುತ ವಿಧಾನಗಳ ಸ್ಥಾನವನ್ನು ಕೆಮಿಕಲ್ ಫರ್ಟಿಲೈಸರ್ಗಳು ಆಕ್ರಮಿಸಿವೆ. ಈ ಫರ್ಟಿಲೈಸರ್ಗಳ ತಯಾರಕರು ಯಾರು? ಭಾರೀ ಬಂಡವಾಳ ಹೂಡಿರುವ ಕಂಪೆನಿಗಳು. ನೀರು, ವಿದ್ಯುತ್ ಎಲ್ಲವೂ ರೈತರಿಗೆ ದುಬಾರಿಯಾಗಿದೆ. ಹಾಗೆಯೇ ಕೃಷಿ ಮಾರುಕಟ್ಟೆಯ ಮೇಲೆ ರೈತರಿಗೆ ಯಾವುದೇ ಹಿಡಿತವಿಲ್ಲ. ಬದಲಿಗೆ ಕಾರ್ಪೊರೇಟ್ ಕಂಪೆನಿಗಳು ಕ್ರಮೇಣ ತಮ್ಮ ಹಿಡಿತ ಸಾಧಿಸುತ್ತಿವೆ. ಈ ಎಲ್ಲಾ ಕಾರ್ಪೊರೇಟ್ ಕಂಪೆನಿಗಳ ಲಾಭ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಅವರ ಕಂಪೆನಿಗಳ ಶೇರುಗಳ ವೌಲ್ಯ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ. ಆದರೆ ಅದೇ ಸಂದರ್ಭದಲ್ಲಿ ಇಡೀ ರೈತಾಪಿಯ ಬದುಕು ಘೋರ ಸಂಕಷ್ಟಕ್ಕೆ ಸಿಲುಕಿದೆ.

    ರೈತರ ಆತ್ಮಹತ್ಯೆಗೆ ಟಾಪ್-5 ಕಾರಣಗಳು

    • ಬೆಲೆ ಮೇಲೆ ನಿಯಂತ್ರಣವೇ ಇಲ್ಲದಿರುವುದು; ಯಾವ ಬೆಳೆಗೆ ಯಾವಾಗ ಎಷ್ಟು ಬೆಲೆ ಇರುತ್ತದೆ ಎಂಬುದು ರೈತರಿಗೇಕೆ, ದೇಶದ ಆರ್ಥಿಕ ತಜ್ಞರಿಗೂ ಅರ್ಥವಾಗುತ್ತಿಲ್ಲ. ಸಾಲ ಮಾಡಿ ಬೆಳೆದ ಬೆಳೆಗೆ ಬೆಲೆ ಸಿಗದಿದ್ದಾಗ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಸರಕಾರಗಳು ಸರಿಯಾಗಿ ಬೆಂಬಲ ಬೆಲೆಯನ್ನೂ ನೀಡುತ್ತಿಲ್ಲ. ಜಾಗತೀಕರಣದಿಂದ ಮಾರುಕಟ್ಟೆ ವಿಕೃತಿಗಳು ಹೆಚ್ಚುತ್ತಿದ್ದು, ಅಂದರೆ, ಅನಾವಶ್ಯಕ ಆಮದು, ರಫ್ತಿಗೆ ನಿರ್ಬಂಧ ಇತ್ಯಾದಿ, ಇದು ಮಾರುಕಟ್ಟೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದ್ದು, ಪರೋಕ್ಷವಾಗಿ ರೈತರನ್ನು ಬಲಿ ಪಡೆಯುತ್ತಿದೆ. ಈಗ ಖಾಸಗಿ ವ್ಯಕ್ತಿಗಳಿಗೆ, ಕಾರ್ಪೊರೇಟ್ ಕಂಪನಿಗಳಿಗೆ ನಿಯಂತ್ರಣವಿಲ್ಲದೆ ಮಾರುಕಟ್ಟೆಗೆ ಲಗ್ಗೆ ಹಾಕಲು ಅವಕಾಶ ಮಾಡಿಕೊಟ್ಟಿರುವುದು ಹೊಸ ಹೊಸ ಶೋಷಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ.
    • ಸಾಲದ ಕುಣಿಕೆ; ತಾವು ರೈತರ ಪರ ಎಂದು ಕೊಚ್ಚಿಕೊಳ್ಳುವ ಸರಕಾರಗಳು ಅಗ್ಗದ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವ ಯೋಜನೆಗಳನ್ನು ಪ್ರಕಟಿಸಿರುವುದೇನೋ ನಿಜ. ಆದರೆ ಈ ಸಾಲ ಪಡೆಯಲು ಬೇಕಾದ ದಾಖಲೆಗಳನ್ನು ನಮ್ಮ ರೈತರು ಹೊಂದಿಲ್ಲ.  ಇದರ ಬಗ್ಗೆ ಜಾಗೃತಿ ಇರದ ಅವರು, ರಗಳೆಯೇ ಬೇಡವೆಂದು ರೈತರು, ಅದರಲ್ಲೂ ಸಣ್ಣ ಮತ್ತು ಅತಿಸಣ್ಣ ರೈತರು ಸ್ಥಳೀಯವಾಗಿ ಬಡ್ಡಿಗೆ ಸಾಲ ನೀಡುವವರ ಹತ್ತಿರ ಸಾಲ ಪಡೆಯುತ್ತಾರೆ. ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಇದನ್ನು ನ್ಯಾಷನಲ್ ಸ್ಯಾಂಪಲ್ ಸರ್ವೇ ಎತ್ತಿ ತೋರಿಸಿದೆ. ಸರಕಾರಗಳ ಬಳಿ ಸರಳವಾಗಿ ಮತ್ತು ನೇರವಾಗಿ ಎಲ್ಲ ರೈತರಿಗೂ ಸಾಂಸ್ಥಿಕ ಸಾಲವನ್ನು ದೊರಕಿಸುವ ಯೋಜನೆಗಳೇ ಇಲ್ಲ.
    • ಏರುತ್ತಿದೆ ಹೂಡಿಕೆ ವೆಚ್ಚ: ಕೃಷಿಯಲ್ಲಿನ ಆದಾಯದ ಬಗ್ಗೆ ಖಚಿತತೆ ಇಲ್ಲದಿದ್ದರೂ, ಬಂಡವಾಳ ಹೂಡಿಕೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ವ್ಯಾಪಾರಿಗಳ ಹಿಡಿತದಲ್ಲಿ ಸಿಲುಕಿರುವ ರಾಸಾಯನಿಕ ಗೊಬ್ಬರ, ಕೀಟ ನಾಶಕ, ಬಿತ್ತನೆ ಬೀಜ, ಇತ್ಯಾದಿಗಳು ರೈತರ ಜೇಬನ್ನು ಖಾಲಿ ಮಾಡುತ್ತಿವೆ. ಇನ್ನೊಂದೆಡೆ ಕೃಷಿ ಕಾರ್ಮಿಕರ ಕೊರತೆ, ವಿದ್ಯುತ್ ಮತ್ತಿತರ ಮೂಲ ಸೌಕರ್ಯಗಳ ಖಚರ್ು ಹೆಚ್ಚುತ್ತಿರುವುದು ರೈತರನ್ನು ಹಣ್ಣುಗಾಯಿ-ನೀರುಗಾಯಿ ಮಾಡಿವೆ.
    • ಸ್ಪಷ್ಟ, ನಿರ್ದಿಷ್ಟ ಕೃಷಿ ನೀತಿ ಇಲ್ಲದಿರುವುದು: ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ಪರಿಷ್ಕೃತ ನೀತಿ ಪ್ರಕಟಿಸಿ, ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಹಪಹಪಿಸುವ ನಮ್ಮ ಸರಕಾರಗಳು ಕೃಷಿಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ರೂಪಿಸುತ್ತಿಲ್ಲ. ಯಾವ ಪ್ರದೇಶದಲ್ಲಿ, ಯಾವ ಬೆಳೆ ಬೆಳೆಯಬೇಕು, ನೀರಾವರಿ ಸೌಲಭ್ಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆಂಬ ಬಗ್ಗೆ ನೀತಿಯೂ ಇಲ್ಲ, ನಿಯಮವೂ ಇಲ್ಲ. ಸಕ್ಕರೆಯ ಮಾರುಕಟ್ಟೆ ಕುಸಿದು ಬಿದ್ದಿದ್ದರೂ, ಕಬ್ಬು ಬೆಳೆಗಾರರ ಕೂಳೆ ನೆಡುತ್ತಲೇ ಇರುತ್ತಾನೆ, ಆತನಿಗೆ ಸರಿಯಾದ ಮಾಹಿತಿ ನೀಡುವ ಜವಾಬ್ದಾರಿ ತನ್ನದೆಂದು ಸರಕಾರ ಎಂದು ಭಾವಿಸಿಯೇ ಇಲ್ಲ!
    • ಆತ್ಮವಿಶ್ವಾಸದ ಕೊರತೆ: ರಾಜರು ಬರಲಿ, ರಾಜರು ಹೋಗಲಿ, ಯೋಗಿಯಾಗಿ, ತ್ಯಾಗಿಯಾಗಿ ಉಳುಮೆ ಮಾಡುತ್ತಿದ್ದ ಅನ್ನದಾತ ಇಂದು ಏಕಾಂಗಿಯಾಗಿದ್ದಾನೆ. ಆತನ ಸುತ್ತಲಿನ ಮಾರುಕಟ್ಟೆ ವ್ಯವಸ್ಥೆ, ಲೋಭ ಸಂಸ್ಕೃತಿ, ಆತನನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಸಾವೊಂದೇ ತನಗೆ ಬಿಡುಗಡೆಯ ದಾರಿ ಎನ್ನಿಸುವಷ್ಟರ ಮಟ್ಟಿಗೆ ಆತನನ್ನು ಕುಗ್ಗಿಸುತ್ತಿರುವ ಸಾಮಾಜ, ಅನ್ನದ ಋಣವನ್ನೇ ಮರೆತಿದೆ. ಆತ್ಮ ವಿಶ್ವಾಸ ತುಂಬಬೇಕಿದ್ದ ಹೋರಾಟಗಳು, ಚಟುವಟಿಕೆಗಳು, ಮಾಧ್ಯಮಗಳ ಮುಂದಷ್ಟೇ ನಡೆಯುತ್ತಿವೆ.

    ಟಾಪ್- 10 ಪರಿಹಾರಗಳು

    • ಕೂಡಲೇ ಎಲ್ಲ ಬೆಳೆಗಳಿಗೂ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಮಾಡಿ, ಜಾರಿಗೆ ತರಬೇಕು. ರೈತನಿಗೆ ನಿರ್ದಿಷ್ಟ ಆದಾಯ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು.
    • ಬಡ್ಡಿ ವ್ಯಾಪಾರಿ ನಿಯಂತ್ರಣ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಸಾಂಸ್ಥಿಕವಲ್ಲದ ಸಾಲದ ಬಡ್ಡಿದರವು ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಬಡ್ಡಿದರಕ್ಕಿಂತ ಹೆಚ್ಚಾಗಿರದಂತೆ ನೋಡಿಕೊಳ್ಳಬೇಕು. ಬಡ್ಡಿಯನ್ನೂ ಸೇರಿದಂತೆ ಸಾಲಗಾರನ ಒಟ್ಟಾರೆ ಸಾಲ ಯಾವ ಕಾರಣಕ್ಕೂ ಮೂಲ ಸಾಲದ ಎರಡುಪಟ್ಟು ಆಗದಂತೆ ನೋಡಿಕೊಳ್ಳಬೇಕು.
    • ಬೆಳೆ ಬೆಳೆಯಲೆಂದು ಮಾಡಿದ ಸಾಲ ತೀರಿಸದಿದ್ದರೆ, ಯಾವುದೇ ಕಾರಣಕ್ಕೂ ಮನೆ ಮತ್ತು ಜಮೀನನ್ನು ಜಫ್ತಿ ಮಾಡಬಾರದು.
    • ಸಹಕಾರಿತತ್ವದ ಆಧಾರದ ಮೇಲೆ ನೀರು, ಟ್ಯಾಕ್ಟರ್, ಟಿಲ್ಲರ್ ಇತ್ಯಾದಿ ಕೃಷಿ ಉಪಯೋಗಿ ಯಂತ್ರೋಪಕರಣಗಳನ್ನು ಮತ್ತು ಭೂಮಿಯನ್ನು ಹಂಚಿಕೊಂಡು ಗುಂಪು ಕೃಷಿ ಮಾಡುವುದನ್ನು ಉತ್ತೇಜಿಸಬೇಕು. ಇದಕ್ಕಾಗಿ ಸರಕಾರವೇ ಹೊಸ ಕಾರ್ಯಕ್ರಮವನ್ನು ರೂಪಿಸಬೇಕು.
    • ಕೃಷಿಯ ಮೇಲೆ ಕಾರ್ಪೊರೇಟ್ ಶಕ್ತಿಗಳು ಹಿಡಿತ ಸಾಧಿಸದಂತೆ ನೋಡಿಕೊಳ್ಳಬೇಕು. ರೈತರ ಜಮೀನನ್ನು ಕಸಿದುಕೊಳ್ಳಬಾರದು ಮತ್ತು ಕಾಂಟ್ರಾಕ್ಟ್ ಫಾರ್ಮಿಂಗ್, ಕಾರ್ಪೊರೇಟ್ ಫಾರ್ಮಿಂಗ್ ನೀತಿಗಳನ್ನು ಕೈಬಿಡಬೇಕು. ನೀತಿ ಆಯೋಗ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರಬಾರದು.
    • ಗ್ರಾಮಮಟ್ಟದಲ್ಲಿ ಕೃಷಿಗೆ ಪೂರಕವಾದ ವೃತ್ತಿಗಳಿಗೆ ಉತ್ತೇಜನ ನೀಡುವ ಮೂಲಕ ಕೃಷಿಕರಿಗೆ ಪರ್ಯಾಯ ದುಡಿಮೆಗೆ ಅವಕಾಶ ಕಲ್ಪಿಸಬೇಕು.
    • ಸರಕಾರ ಒಂದು ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತರಬೇಕು. ರೈತರ ಒಟ್ಟಾರೆ ಕೃಷಿ ಸಾಲದ ಶೇ. 90ರಷ್ಟು ಭಾಗವಾದರೂ ಸಾಂಸ್ಥಿಕ ಮೂಲಗಳಿಂದ ಪಡೆಯುವಂತಾಗಲು ಸೂಕ್ತ ಕ್ರಮಗಳನ್ನು ತೆಗದುಕೊಳ್ಳಬೇಕು.
    • ಗ್ರಾಮೀಣ ಭಾಗಕ್ಕೆ ಅನಾವಶ್ಯಕ ಸೌಕರ್ಯಗಳನ್ನು ಒದಗಿಸುವುದಕ್ಕಿಂತ ಹೆಚ್ಚಾಗಿ, ಕೃಷಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದರತ್ತ ಗಮನ ನೀಡಬೇಕು. ಉದಾಹರಣೆಗೆ ವಿದ್ಯುತ್. ರೈತರಿಗೆ (ಬೆಂಗಳೂರಿಗರಿಗಲ್ಲ!) ಅಗತ್ಯವಾಗಿರುವಾಗೆಲ್ಲಾ ವಿದ್ಯುತ್ ದೊರೆಯುವಂತೆ ನೋಡಿಕೊಳ್ಳಬೇಕು.
    • ತಂತ್ರಜ್ಞಾನ, ಹೊಸ ಕೃಷಿ ವಿಧಾನಗಳ ಬಳಕೆಗೆ ಅತಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜತೆಗೆ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ, ಮಾರುಕಟ್ಟೆ ಸಿದ್ಧಪಡಿಸುವ ಸಣ್ಣ ಸಣ್ಣ ಕೈಗಾರಿಕೆಗಳನ್ನು ಗ್ರಾಮೀಣ ಭಾಗದಲ್ಲಿಯೇ ತೆರೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಲು ಅವಕಾಶ ಮಾಡಿಕೊಡುವ ಹೈಟೆಕ್ ಮಾರುಕಟ್ಟೆ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಭಾಗದಲ್ಲಿಯೂ ರೂಪಿಸಬೇಕು.
    • ರೈತರಿಗೆ ಕಾಲಕಾಲಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಬೇಕು. ರೈತರಾಗಿ ದುಡಿಯುವುದು ಹೆಮ್ಮೆಯ ಉದ್ಯೋಗ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಮಾತೆತ್ತಿದರೆ ಐಟಿ-ಬಿಟಿ ಎನ್ನುವುದನ್ನು ನಿಲ್ಲಿಸಬೇಕು!
    error: Content is protected !!