ಹಾವ ತುಳಿದೇನೆ ಮಾನಿನಿ, ಹಾವ ತುಳಿದೇನೆ… ಇಡಾ, ಪಿಂಗಳ,ಸುಷುಮ್ನಾ…..ಮೂಲಾ ಧಾರದಿಂದ ….ಆಜ್ನ್ಯಾ ಚಕ್ರದವರೆಗೆ….. ಕುಂಡಲಿನಿ …..ಜಾಗ್ರತೆ ಆದಾಗ….ಹಾವ ತುಳಿದೇನೆ, ಮಾನಿನಿ…..
ಶಿಶುನಾಳ ಶರೀಫಜ್ಜರ ಗೂಡಾರ್ಥಗಳಲ್ಲಿ ಒಂದಾದ ಹಾವ ತುಳಿದೇನೆ ಗೀತೆಯ ಬರುವ ಸಾಲುಗಳನ್ನು ನಾನು ಮೊದಲು ಕೇಳಿದ್ದು ಪ್ರಾಣಾಯಾಮದಲ್ಲಿ. ಪಿಂಗಳ,ಸುಷುಮ್ನಾ ನಾಡಿಗಳ ಜೊತೆ ಮೂಲಾಧಾರ ಸುಪ್ತವಾಗಿರುವ ಹಾವಿನಂತಹ ಕುಂಡಲಿನಿ ಜಾಗ್ರತವಾದಾಗ ಮನುಷ್ಯ ತುಳಿದ ಹಾವಿನಂತಾಗುತ್ತಾನೆ…. ಎಂದು ನಾನು ಪ್ರಥಮವಾಗಿ ಕೇಳಿದ್ದು ಮಲ್ಲಾಡಿಹಳ್ಳಿಯ ಯೋಗ ಶಿಬಿರದಲ್ಲಿ.
ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಯುತ್ತಿದ್ದ 21 ದಿನಗಳ ಯೋಗ ಶಿಬಿರ ದಲ್ಲಿ ಒಂದೊಂದೇ ಆಸನಗಳನ್ನು ಶಿಬಿರದಲ್ಲಿ ಭೌತಿಕವಾಗಿ ಪೂರ್ವಾಚಾರಿ ಮತ್ಚು ವನಿತಾ ಟೀಚರ್ ಪ್ರದರ್ಶಿಸುತ್ತಿದ್ದರೆ ಇತ್ತ ಅವುಗಳ ಮಹತ್ವವನ್ನು ಹೇಳುತ್ತಾ,ಕೆಂಪು ಮಕಮಲ್ ಬಟ್ಟೆಯ ಜಟ್ಟಿ ಚಡ್ಡಿ ಧರಿಸಿ,ಶಿಬಿರಾರ್ಥಿಗಳ ಮಧ್ಯೆ ಪಾದರಸದಂತೆ ಅಡ್ಡಾಡುತ್ತ,ಆಗಾಗ ನಗಿಸುತ್ತ,ಆಸನಗಳ ಆಳಗಳನ್ನು ಮನದಲ್ಲಿ ಸ್ಥಿರಗೊಳಿಸುತ್ತಿದ್ದರು ನಮ್ಮ ಅಭಿನವ ಧನ್ವಂತರಿ,ಯೋಗಾಚಾರ್ಯ ಶ್ರೀ ರಾಘವೇಂದ್ರ ಸ್ವಾಮೀಜಿ.
ಪರಮಾತ್ಮನ ಸಾಕ್ಷಾತ್ಕಾರ
ದೇಹದ ಸುಸ್ಥಿರತೆಗೆ ಲಘು ವ್ಯಾಯಾಮ ಮಾಡಿ ಯೋಗಾಸನಕ್ಕೆ ಅಣಿ ಗೊಳ್ಳಬೇಕು.ಆದಮೇಲೆ ಪ್ರಾಣಾಯಾಮ ಮಾಡಬೇಕು.ಅವರವರ ದೇಹ ಪ್ರಕೃತಿ ಅನುಸರಿಸಿ, ಹೊರಗಿನ ವಾತಾವರಣಕ್ಕೆ ತಕ್ಕಂತೆ ಎಡ, ಬಲ (ಇಡಾ,ಪಿಂಗಳ ಅಥವಾ ಸೂರ್ಯ,ಚಂದ್ರ ನಾಡಿ) ಮೂಗಿನ ಹೊಳ್ಳೆಗಳ ಮುಖಾಂತರ ಉಸಿರು ತೆಗೆದುಕೊಳ್ಳುವುದು, ಹಿಡಿದಿಡುವುದು,ಬಿಡುವುದು…ಈ ಪ್ರಕ್ರಿಯೆಯನ್ನು ಪ್ರಾಣಾಯಾಮ ಎನ್ನುತ್ತಾರೆ. ಈ ಪ್ರಾಣಾಯಾಮದ ಮುಖಾಂತರ ಏಳು ಚಕ್ರಗಳನ್ನು ಜಾಗೃತಗೊಳಿಸಿಕೊಂಡು ಬ್ರಹ್ಮಾನಂದವನ್ನು ಪಡೆಯಬಹುದು.ಇದನ್ನೇ ಪರಮಾತ್ಮನ ಸಾಕ್ಷಾತ್ಕಾರ ಅಂತಾರೆ. ಆತ್ಮವನ್ನು ಪರಮಾತ್ಮನಲ್ಲಿ ಲೀನ ಮಾಡುವ ಹಲವಾರು ಸಾಧನೆಗಳಿಗೆ ಇದೇ ರಾಜಮಾರ್ಗ.ಹೀಗೆ ಸೇರಿಸುವ ವಿಧಾನಕ್ಕೆ ಯೋಗ ಅಂತಾರೆ.ಹಾಗಾಗಿ ಈ ಅಸನಗಳು ಯೋಗಾಸನ ಅಂತ ಅಂತಾರೆ ಎಂದು ಸ್ವಾಮೀಜಿ ಹೇಳುತ್ತಿದ್ದನ್ನು ಕೇಳಿದ ನಮಗೆ ಆ ಕ್ಷಣದಲ್ಲೇ ಸಾಕ್ಷತ್ಕಾರವಾದ ಅನುಭವ.
ಅಸಂಖ್ಯಾತ ಇರುವ ಆಸನಗಳಲ್ಲಿ,ಅವರವರ ದೇಹ ಪ್ರಕೃತಿಗೆ ಹೊಂದುವ ಆಸನಗಳನ್ನು ಅನುಸರಿಸಿ ಸಾಧನೆಗೆ ತೊಡಗಬೇಕು.ಎಲ್ಲರೂ ಸಾಧಕರಾಗಲು ಆಗದಿದ್ದರೂ,ಉತ್ತಮ ಆರೋಗ್ಯಕ್ಕೆ ಇವುಗಳ ಪಾಲನೆ ಅತೀ ಮುಖ್ಯ. ಬರುವ ದಿನಗಳಲ್ಲಿ ಯೋಗದ ಆವಶ್ಯಕತೆ ಮಾನವನಿಗೆ ಅನಿವಾರ್ಯ ಎನ್ನುವಷ್ಟು ಹತ್ತಿರವಾಗುತ್ತದೆ. ಆರೋಗ್ಯದಿಂದ ಇರುವವರು ರೋಗಗಳು ಬರದೇ ಇರಲು, ರೋಗಿಗಳಾದವರಿಗೆ ಆರೋಗ್ಯವಂತರಾಗಲು ಯೋಗ ಅತೀ ಮುಖ್ಯ ಎಂದು ಯೋಗದ ಮಹತ್ವವನ್ನು ನನ್ನಂಥ ಲಕ್ಷಾಂತರ ಗ್ರಾಮೀಣ ಎಳೆ ಮನಸ್ಸುಗಳ ಅರಿವಿಗೆ,ಆಗಲೇ 90 ದಾಟಿದ್ದ ಶ್ರೀ ಗಳು ಹೇಳುತ್ತಿದ್ದರು.

ಆ ಸಮಯದಲ್ಲಿ ನಮಗೆ ಮುದೊಂದು ಅಂತಾರಾಷ್ಟ್ರೀಯ ಯೋಗ ದಿನ ಅಂತ ಜೂನ್ 21ರ ದಿನವನ್ನು ಭಾರತ ಸರ್ಕಾರ ಘೋಷಿಸಿ, ಇಡೀ ವಿಶ್ವಕ್ಕೇ ಯೋಗವನ್ನು ಪರಿಚಯಿಸುತ್ತದೆ ಎಂಬುದನ್ನು ಊಹಿಸುವುದು ಅಸಾಧ್ಯವಾಗಿತ್ತು.1977 ರಿಂದ 1982 ರ ಐದು ವರ್ಷಗಳ ಅವಧಿಯನ್ನು ಶ್ರೀಗಳ ಸನಿಹದಲ್ಲಿ,ಆಶ್ರಯದಲ್ಲಿ ಕಳೆದದ್ದು ನನ್ನ ಭಾಗ್ಯವೇ ಸೈ. ಆಶ್ರಮದ ಇಂಚಿಂಚು ಜಾಗವನ್ನು ಸ್ವಚ್ಛ ಮಾಡಿರುವ ಹೆಮ್ಮೆ ನನ್ನದು. ಎಷ್ಟೋ ಇಡೀ ಭಾನುವಾರಗಳನ್ನು ಆಶ್ರಮದ ಆಗ್ನೇಯ ಮೂಲೆಯಲ್ಲಿದ್ದ ಔಷಧಾಲಯದಲ್ಲಿ ವಿವಿಧ ಗಿಡಮೂಲಿಕೆಗಳನ್ನು,ಕುಟ್ಟಿ,ಪುಡಿ ಮಾಡಿ ಸೋಮವಾರ ಬರುತ್ತಿದ್ದ ರೋಗಿಗಳಿಗಾಗಿ ವಿವಿಧ ರೀತಿಯ ಔಷಧಗಳನ್ನು ಸೂರದಾಸ್ ಅವರ ಉಸ್ತುವಾರಿಕೆಯಲ್ಲಿ ತಯಾರಿಸಿದ್ದೇನೆ ಅಂತ ಹೇಳಲು ಎದೆಯುಬ್ಬಿ ಬರುತ್ತೆ.
ಹಾರುವ ಹಕ್ಕಿಯನ್ನು ಹೋಲುವ ಯೋಗಮಂದಿರ
ಹಾರುವ ಹಕ್ಕಿಯನ್ನು ಹೋಲುವ ಯೋಗಮಂದಿರ ದ ರೆಕ್ಕೆಗಳ ಛಾವಣಿ ಕೆಲಸಕ್ಕೆ ಸಿಮೆಂಟ್ ಕಾಂಕ್ರೀಟ್ ನ್ನು ಹಗಲು,ರಾತ್ರಿ ಕಬ್ಬಿಣದ ಪುಟ್ಟಿಗಳಲ್ಲಿ ತಲೆಮೇಲೆ ಹೊತ್ತು,ಸಾಲಾಗಿ ನಿಂತ ಗೆಳೆಯರೊಂದಿಗೆ ಹಾಕಿದ ಸಾರ್ಥಕತೆ ನನ್ನದು.
ತಾಂತ್ರಿಕ ದೋಷದಿಂದ ಒಮ್ಮೆ ಹಾಕಿದ್ದ ಕಾಂಕ್ರೀಟ್ ಬಿದ್ದು, ಮತ್ತೆ ಹಾಕಿ, ತಮಿಳು ಗುತ್ತೇದಾರನ ಮತ್ತು ಸ್ವಾಮಿಗಳ ಜೊತೆಯಲ್ಲಿ ನಿಂತು,ರೆಕ್ಕೆ ನಿಂತದ್ದು ನೋಡಿ ಸಂಭ್ರಮಿಸಿದ ಕ್ಷಣಕ್ಕೆ ಸಾಕ್ಷಿಯಾದದ್ದು ನನ್ನ ಹೆಮ್ಮೆ. ಯೋಗಮಂದಿರದ ಕಿಟಕಿಗಳಿಗೆ ನಮ್ಮ ಶಾಲೆಯ ವರ್ಕ್ ಷಾಪ್ ನ ಗುಡ್ಡಪ್ಪ, ಸ್ವಾಮಿಗಳ ಯೋಗದ ಭಂಗಿಗಳನ್ನು ಅಳವಡಿಸುತ್ತಿದ್ದನ್ನು ಆಶ್ಚರ್ಯಭರಿತ ಕಣ್ಣುಗಳಿಂದ ನೋಡಿ ಆನಂದಿಸುತತಿದ್ದ ನನಗೆ ಮತ್ತು ಗೆಳೆಯರಿಗೆ ಹತ್ತಿರ ಬರಬೇಡಿ ಅಂತ ಆತ ಗದರಿಸುತ್ತಿದ್ದನ್ನು ಮರೆತಿಲ್ಲ.
ಹತ್ತನೇ ತರಗತಿ ಪಾಸಾದವರಿಗೆ ಮತ್ತು ಪಿಯು 2 ಪಾಸಾದವರಿಗೆ ರಜೆಯಲ್ಲಿ ಇರುತ್ತಿದ್ದ ಶ್ರಮದಾನ ಎನ್ನುವ ಐಶ್ಚಿಕ ಶಿಬಿರದಲ್ಲಿ ತಪೋವನದ ಗಿಡಗಳಿಗೆ ಗುಂಡಿ ತೋಡಿ,ನೆಟ್ಟು,ನೀರು ಹಾಕಿದ್ದು ನನ್ನಲ್ಲಿ ಇನ್ನೂ ಹಸಿರಾಗಿದೆ. ಅಲ್ಲಿಯ ಕೋತಿಗಳಿಗೆ, ಜಿಂಕೆಗಳಿಗೆ,ಪಾರಿವಾಳಗಳಿಗೆ ಅನ್ನ-ನೀರನ್ನು ಇಟ್ಟಿದ್ದು,ದೈಹಿಕ ಶಿಕ್ಷಕ ಎಂ. ನಾಗೇಂದ್ಪಪ್ಪ ಅವರ ಜೊತೆ ಚನ್ನಗಿರಿ ಹತ್ತಿರವಿದ್ದ ಅಮ್ಮನಗುಡ್ಡ ಕ್ಕೆ ಸೌದೆ ತರಲು ಟ್ರಾಕ್ಟರ್ ನಲ್ಲಿ ಹೋದದ್ದು, ಆಶ್ರಮದ ಹೊಲದಲ್ಲಿ ಬಿಳೀ ಜೋಳದ ದಂಟನ್ನು ಕೊರೆಯುವ ಬೆಳಗಿನ ಚಳಿಯಲ್ಲಿ ಕಿತ್ತದ್ದು, ಅದನ್ನು ತಂದು ಗುಡ್ಡೇ ಹಾಕಿ,ಕಣ ಮಾಡಿ ರಾತ್ರಿಯೆಲ್ಲಾ ಕಾಯುತ್ತಾ, ಓದಿ ಪಿಯು2 ಪರೀಕ್ಷೆ ಬರೆದದ್ದು,ಹಗಲಿಡೀ ಕೆಲಸ ಮಾಡಿ,ಸಂಜೆ ವ್ಯಾಯಾಮ ಶಾಲೆ ಸೇರಿ,ರಾತ್ರಿ ಇಡೀ ಮಣ್ಣನ್ನು ಹೊದ್ದು ಮಲಗಿದ್ದ ದಿನಗಳು ಮರೆಯದ ನೆನಪಿನ ಘಟ್ಟಗಳು.
ಶ್ರಮದ,ಶ್ರಮಿಕನ ಬೆಲೆ
ಶ್ರಮದ,ಶ್ರಮಿಕನ ಬೆಲೆಯನ್ನು ಅರ್ಥಪೂರ್ಣವಾಗಿ ಬಾಲ್ಯದಲ್ಲೇ ಮನದಟ್ಟು ಮಾಡಿದ ಆಶ್ರಮದ ಜೀವನ,ನನ್ನಂತಹ ಲಕ್ಷಾಂತರ ಗ್ರಾಮೀಣ ಹುಡುಗ,ಹುಡುಗಿಯರ ಮನಸ್ಟ್ರೈರ್ಯ ಹೆಚ್ಚಿಸಿ, ಇಂದಿನ ಜೀವನಗಳನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಬಹುಮುಖಿಯಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ನಮ್ಮ ಸ್ವಾಮೀಜಿಯವರ ಬದ್ಧತೆ,ರೂಪುರೇಷಗಳು, ಮುಂದಿನ ನೂರಾರು ವರ್ಷಗಳವರೆಗೆ ಬರುವ ಜನಾಂಗಕ್ಕೆ ಮಾದರಿಯಾಗಬಲ್ಲದು. ಅಂತಹ ಅನೇಕ ಮುಖಗಳಲ್ಲಿ, ಯೋಗ ಒಂದೇ ಅಷ್ಟೇ.
ನಿರಂತರ ಪ್ರಾಣಾಯಾಮದಿಂದ ಮೂಲಾಧಾರದಲ್ಲಿ ಸಿಂಬೆ ಸುತ್ತಿಕೊಂಡು ಮಲಗಿರುವ ಹಾವಿನ ತರಹ ಇರುವ ಕುಂಡಲಿನಿ ಶಕ್ತಿ ಜಾಗೃತಗೊಂಡು ಉರ್ಧ್ವಮುಖವಾಗಿ ಚಲಿಸಿ,ಏಳು ಚಕ್ರಗಳನ್ನು ಉದ್ದೀಪನಗೊಳಿಸಿ, ತಲೆಯ ಸುಳಿಯಲ್ಲಿರುವ ಬ್ರಹ್ಮ ರಂಧ್ರದ ಮೂಲಕ ಸಹಸ್ರಾರ ತಲುಪಿದಾಗ ಪಡೆಯುವ ಆನಂದಕ್ಕೆ ಸಮನಾದದ್ದು ಯಾವುದೂ ಇಲ್ಲ.ಇದನ್ನೇ ತಿಳಿದವರು ಬ್ರಹ್ಮಾನಂದ ಎಂದಿದ್ದಾರೆ.ಈ ಸ್ಥಿತಿಯನ್ನು ಪ್ರತಿಯೊಬ್ಬರೂ ಬೇಕಾದಾಗ,ಬೇಕಾದಷ್ಟು ಅನುಭವಿಸುವ ಸಿದ್ಧಿಯನ್ನು ಸಿದ್ಧಿಸಿಕೊಳ್ಳಬಹುದು ಎಂದು ಸ್ವಾಮಿಗಳು ಯೋಗದ ಮಹತ್ವವನ್ನು ಹೇಳುತ್ತಿದ್ದರೆ, ನನಗೆ ಸಾಕ್ಷಾತ್ ಭಗವಂತ ಯೋಗಾಚಾರ್ಯನಾಗಿ ಉಪದೇಶಿಸುತ್ತಿದ್ದಾನೆ ಎನ್ನುವಂತಹ ಅನುಭೂತಿ!
ಆ ಕುಗ್ರಾಮದಲ್ಲಿ ಗ್ರಾಮೀಣ ಶಿಬಿರಾರ್ಥಿಗಳ ಮುಂದೆ ಅವರಾಡುತ್ತಿದ್ದ ಮಾತುಗಳು,ಭಗವಂತನ ಸನ್ನಿಧಿಗೆ ನೇರವಾಗಿ ಇರುವ ರಾಜಮಾರ್ಗ ಆಗಿದ್ದವು ಎಂದು ನಾನು ಅರಿತು,ಆ ಕುರಿತಾಗಿ ಸ್ವಾಮಿಗಳ ಮುಂದೆ ವಿನಮ್ರನಾಗಿ ನನ್ನ ಸಂದೇಹಗಳನ್ನು ಹೇಳಬೇಕು ಎನ್ನುವಷ್ಟರಲ್ಲಿ ನಮ್ಮಿಂದ ಬಹುದೂರ ಹೊರಟು ಹೋಗಿದ್ದರು ನಮ್ಮ ಸ್ವಾಮಿಗಳು.
ಆತ್ಮ,ಪರಮಾತ್ಮ ಬಾಹ್ಯ ಇಂದ್ರಿಯಗಳಿಗೆ ತಾಕದ ವಿಷಯಗಳು,ಅವುಗಳನ್ನು ಏನಿದ್ದರೂ ಅನುಭವಿಸಿಯೇ ಸವಿಯಬೇಕು. ಹಾಗೆಯೇ ಇವುಗಳನ್ನು ಒಂದುಮಾಡಲು ಬೇಕಿರುವ ಸಾಧನೆಯೇ ಯೋಗ. ಇದರಲ್ಲೂ ಇಡ, ಪಿಂಗಳ,ಸುಷುಮ್ನಾ ಎನ್ನುವ ನಾಡಿಗಳೂ, ಏಳು ಚಕ್ರಗಳೂ ಯಾವ ಇಂದ್ರಿಯಗಳಿಗೂ ಕಾಣಲಾರವು,ವಿಜ್ಞಾನದ ಯಾವ ಸಾಮಗ್ರಿಗಳಿಗೂ ಕೂಡ. ಇವೆಲ್ಲವನ್ನೂ ಅನುಭವಿಸಿಯೇ ಆನಂದಿಸಬೇಕು ಎನ್ನುವಂತಹ ಅಪರ ಜ್ಞಾನವನ್ನು ಸರಳವಾಗಿ ತಿಳಿಸಿ,ಆತ್ಮಾಭಿಮಾನದ ಶ್ರದ್ಧೆಯನ್ನು ಕಲಿಸಿದ ,ಅಕ್ಷರಶಃ ಜೋಳಿಗೆ ಹಿಡಿದು,ಭಿಕ್ಷೆ ಬೇಡಿ ನಮ್ಮನ್ನೆಲ್ಲ ಸಾಕಿ ಸಲುಹಿದ ಶ್ರೀ ಗಳನ್ನು ಬರೀ ಭಗವಂತ ಎನ್ನಲೇ? ಸಾಕಾಗಲಿಕ್ಕಿಲ್ಲ,ಅವರ ಪೂರ್ಣ ವಿವರಣೆ ಕೊಡುವ ಏಕ ಶಬ್ದ ಇನ್ನೂ ಯಾವ ಭಾಷೆಯಲ್ಲಿ ಬಂದಿಲ್ಲ.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನನ್ನ ಯೋಗಾಚಾರ್ಯರಿಗೆ ನೆನಪಿನ ಶ್ರದ್ಧಾಂಜಲಿ….
ಇದನ್ನೂ ಓದಿ: ವಿಶ್ವ ಯೋಗ ದಿನದಂದು ಮಲ್ಲಾಡಿಹಳ್ಳಿ ಸ್ವಾಮೀಜಿ ನೆನಪಾದರು



