22.7 C
Karnataka
Tuesday, May 21, 2024

    ಅರ್ಥಪೂರ್ಣ ಕೆಲಸಗಳನ್ನು ಬಿಟ್ಟು ಇಷ್ಟು ದಿನ ನಾವು ಯಾವುದರ ಬೆನ್ನು ಬಿದ್ದು ಓಡುತ್ತಿದ್ದೆವು

    Must read

    ಲಾಕ್ ಡೌನ್ ಸಮಯದಲ್ಲಿಪ್ರಪಂಚದ ಬಹುತೇಕರ ಮೇಲೆ ಧುತ್ತೆಂದು ಸಮಯದ ಸುರಿಮಳೆಯಾಗಿದೆ. “ಮನೆಯಲ್ಲಿಯೇ ಇರಿ, ಹೊರಬರಬೇಡಿ “ ಎನ್ನುವ ಸರ್ಕಾರದ ಅಣತಿಯ ಜೊತೆ ಎಲ್ಲ ಸಾರ್ವಜನಿಕ ಸಮಾರಂಭಗಳು, ಸಮಾವೇಶಗಳು,ಕೆಲಸ ಕಾರ್ಯಗಳು, ಮದುವೆ-ಮುಂಜಿ,ದೇವರ ಕೆಲಸಗಳು, ಪ್ರವಾಸಗಳು, ಓಡಾಟ ಇತ್ಯಾದಿಗಳು ರದ್ದಾಗಿವೆ.

    ದಿನವೊಂದರಲ್ಲಿ ಎಲ್ಲ ಮನುಷ್ಯರಿಗೆ ದೊರಕುವುದು ಕೇವಲ 24 ಗಂಟೆಗಳು ಮಾತ್ರ.ಈ ಸಮಯದಲ್ಲಿ ಪ್ರತಿಯೊಬ್ಬರು ಮಾಡುವ ಮೂಲಭೂತ ಕೆಲಸಗಳು ಒಂದೇ. ಆದರೆ ಪ್ರತಿಯೊಬ್ಬರ ಸಮಯವೂ ಅತ್ಯಂತ ಭಿನ್ನವಾಗಿ ವಿನಿಯೋಗವಾಗುತ್ತದೆ.ಒಂದಷ್ಟು ಜನರಿಗೆ ದಿನದಲ್ಲಿ ಸಾಕಾಗುವಷ್ಟು ಸಮಯವಿರುತ್ತದೆ, ಇತರರಿಗೆ ಮಾಡಬೇಕು ಅಂದುಕೊಂಡ ಕೆಲಸಗಳನ್ನೆಲ್ಲ ಮಾಡಲು ದಿನವೊಂದರ ಸಮಯ ಸಾಕಾಗುವುದಿಲ್ಲ. ಮತ್ತೆ ಕೆಲವರಿಗೆ ಹಗಲು-ರಾತ್ರಿಗಳನ್ನು ಅರೆ-ಬರೆ ಬೆರೆಸಿದರೂ ಕೆಲಸಗಳು ಹರಿಯುವುದಿಲ್ಲ.ಕೆಲಸ ಮತ್ತು ಮನೆಕೆಲಸಗಳ ನಡುವೆ ವೈಯಕ್ತಿಕ ಆಸಕ್ತಿಗಳಿಗಾಗಿ ಸಮಯವನ್ನು ನೀಡಲಾಗದ ಮತ್ತೊಂದು ಸಮುದಾಯವೂ ಇದೆ.“ಅಯ್ಯೋ.. ಬೇರೆಲ್ಲ ಮಾಡೋಕೆ ಸಮಯವೇ ಇಲ್ಲ “ ಎನ್ನುವ ಅಂಬೋಣ ಅತ್ಯಂತ ಸಾಮಾನ್ಯವಾಗಿ ಈ ಎಲ್ಲರಿಂದ ಕೇಳಿಬರುತ್ತಿತ್ತು. ಇಂತವರಿಗೆಲ್ಲ ಲಾಕ್ ಡೌನ್ ನಲ್ಲಿ ಸಿಕ್ಕ ಅಧಿಕ ಬಿಡುವಿನ ಸಮಯ  ಅತ್ಯಂತ ಸ್ವಾಗತಾರ್ಹವಾದ ವಿಚಾರವಾಯ್ತು.

    ಒಂದಿಷ್ಟು ಸಮಯ ಸಿಕ್ಕರೆ ಅಥವಾ ರಜಾ ಹಾಕಿಕೊಂಡರೆ ಆ ಸಮಯದಲ್ಲಿ ಏನನ್ನಾದರೂ ಮಾಡಲು ಪೂರ್ವ ನಿರ್ಧರಿತ ಯೋಜನೆಗಳನ್ನು ಹಾಕಿಕೊಳ್ಳುವುದೇ ಇದುವರೆಗೆ ಎಲ್ಲರ ಅಭ್ಯಾಸವಾಗಿತ್ತು. ರಜೆಯ ಸಮಯವನ್ನು ಪ್ರವಾಸಕ್ಕೋ ಮತ್ತೊಂದಕ್ಕೋ ಮೀಸಲಿಡುತ್ತಿದ್ದ ಜನರೇ ಹೆಚ್ಚಿದ್ದರು.ಇಂಥವರಿಗೆಲ್ಲ ನಿಜವಾದ ಅರ್ಥದಲ್ಲಿ ’ ಬಿಡುವು ’ ಅಂದರೆ ಏನು ಎಂದು ತಿಳಿದುಕೊಳ್ಳುವ ಅತ್ಯಂತ ವಿರಳ ಅವಕಾಶವನ್ನು ಲಾಕ್ ಡೌನ್ ದೊರಕಿಸಿಕೊಟ್ಚಿತ್ತು.

    ಮುಂದಿನ ದಿನಗಳು ಹೇಗೆ? ಎನ್ನುವ ಚಿಂತೆ

    ಪ್ರಪಂಚದೆಲ್ಲೆಡೆ ಬಹುತೇಕರು ಮನೆಯಲ್ಲೇ ಮಾಡಬಹುದಾದ ಕೆಲಸಗಳಿಗೆ ಉತ್ಸಾಹದಿಂದ ಕೈ ಹಾಕಿದರು. ಸಮಯವನ್ನು ಕುಟುಂಬದ ಜೊತೆ ಬೆರೆಯುತ್ತ, ಪ್ರಪಂಚದ ಬಗ್ಗೆ ಮಾತಾಡುತ್ತ ಕಳೆದರು. ಮಾಧ್ಯಮಗಳ ಪೈಪೋಟಿ ಬಿತ್ತರವನ್ನು ಓದುತ್ತ, ಕೇಳುತ್ತ “ಮುಂದಿನ ದಿನಗಳು ಹೇಗೆ?” ಎನ್ನುವ ಚಿಂತೆ ಮಾಡಿದರು. ಸಾವು ಮತ್ತು  ಆರ್ಥಿಕ ನೋವುಗಳನ್ನು ಹಲವರೊಡನೆ ಫೋನಿನಲ್ಲಿಯೂ ಹರಟಿದರು.ಮನೆ,ಕಪಾಟು, ಬಟ್ಟೆ, ಪುಸ್ತಕ ಇತ್ಯಾದಿ ಸ್ವಚ್ಛಗೊಳಿಸಿದರು. ಕುಂಡದಲ್ಲೋ, ಮನೆಯ ತೋಟದಲ್ಲೋ ಕೈ ಮಣ್ಣಾಗಿಸಿಕೊಂಡು ಮುಗಿಸಿದ್ದರು.  ತರಾವರಿ ಅಡುಗೆಗಳನ್ನು ಮನೆಯವರೆಲ್ಲ  ಕೂಡಿ ಮಾಡಿ, ಒಟ್ಟಿಗೆ ಕುಳಿತು ಉಂಡು ಖುಷಿಪಟ್ಟರು.ದೇಹ ತೂಕದ ನಿಯಂತ್ರಣಕ್ಕಾಗಿಮನೆಯಲ್ಲಿಯೇ ಮಾಡಬಹುದಾದಹೊಸ ವ್ಯಾಯಾಮಗಳನ್ನು ಶುರುಮಾಡಿದರು . ಹೆಚ್ಚಿನ ನಿದ್ದೆಯ ಸುಖವನ್ನೂಅನುಭವಿಸಿದರು..ಟೀವಿ, ಸಿನಿಮಾ, ಪುಸ್ತಕಗಳು ಮತ್ತು ಅಂತರ್ಜಾಲಗಳಲ್ಲಿ ಬಹುಕಾಲ ಕಳೆದರು.

    ಸದಾ ಬರೆಯುವ ಜಯಂತ ಕಾಯ್ಕಿಣಿಯಂತವರು “ ಸದಾ ಬರೆಯುತ್ತಿದ್ದವರಿಗೆ ಇದು ಓದುವ ಕಾಲವಾಗಬಹುದು“” ಎಂದರು. ಥಟ್ಟಂತ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರರು “ ಸದಾ ಓದು,ಬರಹ, ರಿಕಾರ್ಡಿಂಗ್ ಗಳಲ್ಲಿ ತೊಡಗಿರುತ್ತಿದ್ದ ನನಗೆ ಇದೀಗ ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ನೋಡಲುಸಮಯಸಿಕ್ಕಿದೆ“ ಎಂದರು.ಒಟ್ಟಾರೆ, ಎಲ್ಲರ ಸಮಯಗಳು ಹೊಸ ದಿಕ್ಕುಗಳಲ್ಲಿ ಚಲಿಸಿದವು.

    ಇಂಗ್ಲೆಂಡಿನಲ್ಲಿ

    ಇಂಗ್ಲೆಂಡಿನಲ್ಲಿ ಇದೀಗ ಬೇಸಿಗೆಯ ಪ್ರವೇಶವಾಗಿರುವ ಕಾರಣ ಮನೆಯ ಕೈ ತೋಟಗಳಲ್ಲಿ ಜನರು ತೊಡಗಿಕೊಂಡಿದ್ದಾರೆ. ಅದೆಷ್ಟರ ಮಟ್ಟಿಗೆಂದರೆ ಪ್ರತಿ ವರ್ಷಕ್ಕಿಂತ ಮೂರುಪಟ್ಟು ಹೆಚ್ಚಿನತೋಟಗಾರಿಕೆಯಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೈ ತೋಟ ಮಾಡಲು ಕೊಳ್ಳಬಹುದಾದ ವಸ್ತುಗಳನ್ನು ಮಾರುವ ಇಲ್ಲಿನ ಮಾರುಕಟ್ಟೆ ಜನರ ಬೇಡಿಕೆಯನ್ನು ಪೂರೈಸಲಾಗದೆ ತತ್ತರಿಸಿದೆ.ಬೇಕಿಂಗ್ ನಲ್ಲಿ ಆಸಕ್ತಿಯಿರುವ ಜನರು ಮನೆಯಲ್ಲಿಯೇ ಬ್ರೆಡ್, ಕೇಕ್, ಪಿಜ್ಜಾ, ಸ್ಕೋನ್ ಗಳನ್ನು ಬೇಕ್ ಮಾಡುವ ಕೆಲಸಕ್ಕಿಳಿದಿದ್ದಾರೆ. ಅದೆಷ್ಟರ ಮಟ್ಟಿಗೆಂದರೆ ಬೇಕಿಂಗ್ ನಲ್ಲಿ ಉಪಯೋಗಿಸುವ ಸಾಮಗ್ರಿಗಳು ಇವತ್ತಿಗೂ ದೊರಕದ ಮಟ್ಟದಲ್ಲಿ ಬೇಡಿಕೆಯಲ್ಲಿವೆ.ಇವರಲ್ಲಿ ಬಿಡುವೆಂದರೆ ’ಬೇಕಿಂಗ್ “ ಎನ್ನುವ ಪರ್ಯಾಯ ಕಲ್ಪನೆ ಇದ್ದೀತೇ ಎಂಬ ಸೋಜಿಗವನ್ನೂ ಹುಟ್ಟುಹಾಕಿದೆ.ಅಷ್ಟೇ ಅಲ್ಲದೆ ’ ಸೈಕ್ಲಿಂಗ್ ನಲ್ಲಿ ಪ್ರತಿದಿನ ತೊಡಗಿಕೊಳ್ಳಬೇಕೆಂದು ಹಂಬಲಿಸುತ್ತಿದ್ದ ಜನರು ಅದೆಷ್ಟು ಶರವೇಗದಲ್ಲಿ ಆ ಕಲ್ಪನೆಯನ್ನು ಸಾಕಾರಕ್ಕೆ ತಂದು ಸವಾರಿ ಮಾಡಿದ್ದಾರೆಂದರೆ ಸೈಕಲ್ ಗಳನ್ನು ಖರೀದಿಸಿದರೂಅವು ತಯಾರಾಗಿ ಬರಲು ಬಹುಕಾಲಕಾಯುವಂತಾಗಿದೆ.

    ಒಟ್ಟಾರೆ ಬದುಕು ಏಕತಾನತೆಯಲ್ಲಿ ಓಡುತ್ತಿದ್ದಾಗ ಜನರು ಯಾವುದಕ್ಕೆ ಆದ್ಯತೆ ನೀಡುತ್ತಿದ್ದರೋ ಈಗ ಅವೆಲ್ಲ ತಮ್ಮ ಬೇಜಾರು ಬರಿಸುವ ಓಘವನ್ನು ಮುರಿದು ಬಿಡುವಿನ ಸಮಯಕ್ಕೆ ಹೊಸ ದಿಸೆಗಳನ್ನು ಕಲ್ಪಿಸಿವೆ.

    ಜನರ ಚಟುವಟಿಕೆಗಳು ಈ ಮೊದಲು ಒಂದು ಬಗೆಯ ಒತ್ತಡದಲ್ಲಿ ಕಳೆಯುತ್ತಿದ್ದವೇ? ಅಥವಾ ಮಾರ್ಕೆಟಿಂಗ್ ಹುನ್ನಾರಗಳ ಒತ್ತಡಕ್ಕೆ ಸಿಲುಕಿ ಅವುಗಳ ಸ್ವರೂಪ ಲಬುಕಿಹೋಗಿತ್ತೇ ಎನ್ನುವ ವಿಚಾರಗಳಿಗೆ ಇಂಬುಕೊಟ್ಟಿವೆ. ನಾವೂ ಎಲ್ಲರಂತೆ ಏನೇನೋ ಮಾಡಬೇಕು ಎನ್ನುವ ’ಮೂಷಿಕ ಸ್ಪರ್ಧೆ’ ಗೆ ನಮ್ಮನ್ನು ನಾವು ಒಡ್ಡಿಕೊಂಡು ಚಡಪಡಿಕೆಗೆ ಬಿದ್ದಿದ್ದೆವೇ ಎನ್ನುವ ಬಗ್ಗೆ ಯೋಚಿಸುವಂತೆ ಮಾಡಿದೆ.ತಮ್ಮ ಮನಸ್ಸು ಮತ್ತು ಮನೆಯಲ್ಲಿ ಮಾಡಬಹುದಾದಎಷ್ಟೊಂದು ಅರ್ಥಪೂರ್ಣ ಕೆಲಸಗಳನ್ನು ಬಿಟ್ಟು ಇಷ್ಟು ದಿನ ನಾವು ಯಾವುದರ ಬೆನ್ನು ಬಿದ್ದು ಓಡುತ್ತಿದ್ದೆವು ಎನ್ನುವ ಪ್ರಶ್ನೆಗಳು ಎದ್ದಿವೆ.

    ಥಟ್ಟನೆ ದೊರೆತ ಈ ಅಧಿಕ ಬಿಡುವಿನ ಸಮಯ ಹಲವು ಗೊಂದಲಗಳನ್ನು ಸೃಷ್ಟಿಸಿದೆ ಎನ್ನುವುದು ಕೂಡ ಸುಳ್ಳಲ್ಲ.  ಯಾಕೆಂದರೆ ಬದಲಾವಣೆಗಳು ಕೆಲವರಲ್ಲಿ ಅಸಾಮಾಧಾನಗಳನ್ನು ಸೃಷ್ಟಿಸಬಲ್ಲವು.

    ಉದ್ಯೋಗಸ್ಥ ಮಹಿಳೆಯರ ಗೃಹಬಂಧನ

    ಮೊದ ಮೊದಲಿನ ಆಘಾತದ ನಡುವೆ, ತಟ್ಟನೆ ಸಿಕ್ಕ ಸಮಯದ ಅವಕಾಶವನ್ನು ಉಪಯೋಗಿಸಿಕೊಂಡು ಉಕ್ಕಿ ಹರಿದ ಸೃಜನಸೀಲ ವಾಟ್ಸಾಪ್ ಮೆಸೇಜುಗಳು,ಕವನಗಳು, ಜೋಕುಗಳು ಇದೀಗ ಹಳಸಲಾಗುತ್ತಿವೆ. ಮನೆಯಲ್ಲೇ ಉಳಿದ ಗಂಡ,ಮಕ್ಕಳಿಗೆ ಮಾಡಿ ಹಾಕಿ ಸುಸ್ತಾದ ಗೃಹಿಣಿಯರು ರೋಸಿಹೋಗಿದ್ದಾರೆ. ಕೆಲಸದ ನಡುವೆಯಾದರೂ ಕೆಲ ಹೊತ್ತು ಬಿಡುವು ಸಿಗುತ್ತಿದ್ದ ಉದ್ಯೋಗಸ್ಥ ಮಹಿಳೆಯರು ಗೃಹಬಂಧನದಲ್ಲಿ ನಲುಗಿದ್ದಾರೆ. ಇನ್ನು ಮನೆಯಲ್ಲಿ ಹೆಚ್ಚು ಸಮಯ ಕಳೆಯದೆ ಹೊರಗೇ ಸುತ್ತುತ್ತಿದ್ದ ಗಂಡಸರು, ತರುಣ, ತರುಣಿಯರ ಕಾಲಿಗೆ ಬೇಡಿ ಬಿದ್ದು ದಿಗ್ಭ್ಹ್ರಾಂತಿ ಸ್ಥಿತಿಯಲ್ಲಿದ್ದಾರೆ. ಟಿ.ವಿ. ಯ ರಿಮೋಟಿಗೂ ಮನೆಗಳಲ್ಲಿ ಜಗಳವಾಗುತ್ತಿವೆ.

    ಸದಾ ಕೆಲಸಗಳಲ್ಲೇ ಮುಳುಗಿ ಅರೆಕ್ಷಣ ವ್ಯರ್ಥವಾದರೂ ಚಡಪಡಿಸುತ್ತಿದ್ದ ಮತ್ತೊಂದಷ್ಟು ಜನರಲ್ಲಿ “ಮನೆಯಲ್ಲಿಯೇ ಇರಿ…” ಎಂಬ ಸಾರ್ವಜನಿಕ ಕರೆ ಬಂದಾಗ ಮೊದ ಮೊದಲಿಗೆ ಆಶ್ಚರ್ಯ, ಹೊಸದೊಂದು ಉತ್ಸಾಹ, ಅನಿರೀಕ್ಷಿತ ಘಟನೆ ನಡೆಯುತ್ತಿರುವ ಉದ್ರೇಕವನ್ನು ಸೃಷ್ಟಿಸಿತು.ಅದರ ಹಿಂದೆಯೇ ’ ’ಸಮಯವಿಲ್ಲ ’ ಎನ್ನುವ ಸಮಸ್ಯೆ  ಬಗೆಹರಿದ ಕೂಡಲೇ ಥಟ್ಟನೆ ದೊರೆತ ಅನಿರೀಕ್ಷಿತ ಸಮಯಕ್ಕೆ ಹೊಂದಿಕೊಳ್ಳಲು ಇವರು ಹೆಣಗಿದ್ದೂ ಉಂಟು!

    ಸಮಯಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುವ ಈ  ಗುಂಪಿನ ಜನರಲ್ಲಿ ತಮ್ಮ ಅಥವಾ ಇತರರ ಸಮಯದ ಬಗ್ಗೆ ಬಹಳ ಗೌರವವಿರುತ್ತದೆ. ಮಾನಸಿಕವಾಗಿ, ಸಮಯ ಎನ್ನುವುದು ಇವರ ಅಧೀನದಲ್ಲಿಲ್ಲದಿದ್ದರೆ ಅಧೀರರಾಗುವ ರೀತಿಯ ಜನರಿವರು. ಸಮಯವನ್ನು ನಿಯಂತ್ರಿಸಲಾಗದಿದ್ದರೆ ಇವರಲ್ಲಿ ಆತಂಕ , ಅಸಮಾಧಾನ, ಕಿರಿ-ಕಿರಿಗಳು ಮೂಡಿ ಒಂದ ಬಗೆಯ ನಿರಾಶೆ ಮತ್ತು ಋಣಾತ್ಮಕ ಭಾವನೆಗಳನ್ನು ಮೂಡಿಸುತ್ತವೆ. ಇವರ ಸಂತೋಷವೆಲ್ಲ ’ಸಮಯ ಯಾನ ’ ದಲ್ಲಿ ತಾವೆಷ್ಟು ಉಪಯಕ್ತ ಅಥವಾ ಉತ್ಪಾದಕ ಕೆಲಸಗಳನ್ನು ಮಾಡಿದೆವು ಎನ್ನುವುದ ಮೇಲೆ ಆಧರಿಸಿರುವ ಕಾರಣ ಉಪಯೋಗವಾಗದೆ ಉರುಳಿಹೋಗುವ ಕ್ಷಣಗಳು ಅವರಲ್ಲಿ ಅಭದ್ರತೆಯನ್ನು ಮೂಡಿಸುತ್ತವೆ.ಒಂದು ರೀತಿಯಲ್ಲಿ, ಕೆಲಸಕ್ಕೆ ದಾಸರಾದ, ಸಮಯಕ್ಕೆ ಕಟ್ಟುಬಿದ್ದ ವ್ಯಸನಿಗಳಿವರು. ಸಮಯ ಮತ್ತು ಕೆಲಸ ಇವರ ಲೆಕ್ಕದಲ್ಲಿ ಯಾವತ್ತೂ ಜಂಟಿ ಪದಗಳು. ಕೆಲಸವಿಲ್ಲದ ಸಮಯ ಇವರಲ್ಲಿ ಸಹಜವಾಗಿಯೇ ಅಸಮಾಧಾನದ ವಿಚಾರವಾಗಿದೆ. ಇಂಥವರಿಗೆ ಲಾಕ್ ಡೌನ್ ಸಮಯ ಹ್ಯಾಬಿಟ್ ಬ್ರೇಕರ್ ( ಹವ್ಯಾಸಗಳನ್ನ ಮುರಿಯುವ ಸಾಧನ) ನಂತೆ ಕೆಲಸ ಮಾಡಿದೆ.

    ಜೊತೆಗೆ ಜೀವನದಲ್ಲಿ ಬ್ಯುಸಿಯಾಗಿರುವುದು ಒಂದು ಬಗೆಯ ಸಾಮಾಜಿಕ  ಘನತೆ ಮತ್ತು ಮಹತ್ವಕ್ಕೆ ತಳುಕುಹಾಕಿಕೊಂಡ ವಿಚಾರ. ಒಂದು ವರ್ಗದ ಜನರಲ್ಲಿ ಇದು  ಫ್ಯಾಶನ್ ಕೂಡ.ಸ್ವಂತ ಉದ್ಯೋಗ ಇರುವವರಿಗೆ ಇದು ಆದಾಯ ಮೂಲದ ಪ್ರಶ್ನೆ. ಮಾಧ್ಯಮಗಳು ಕೂಡ ಅವಿರತ ಕೆಲಸ ಮಾಡುವ ಮತ್ತು ಸಾಧಿಸುವವರನ್ನು ಹೊಗಳುವ ಕಾರಣ ಈ ಕೆಲಸದ ಗಾಣಕ್ಕೆ ಹಲವರು ಆಕರ್ಷಿತರಾಗುವುದೂ ಉಂಟು.ಇಂತಹ ಇನ್ನು ಕೆಲವರು ತಮ್ಮ ಕೈಲಾಗದ ಗುರಿಗಳನ್ನೆಲ್ಲ ಸಿಕ್ಕ ಈ ಸಮಯದಲ್ಲಿ  ಹಾಕಿಕೊಂಡು, ಸಾಧಿಸಲು ಸಾಧ್ಯವಾಗದೆ ಅಪರಾಧೀ  ಮನೋಭಾವದಲ್ಲಿ ಬದುಕಬಹುದು.

    ಹಾಗಂತ ಎಲ್ಲರಿಗೂ ಇವೇ ಗೊಂದಲಗಳಿವೆಯೆಂದು ಹೇಳುತ್ತಿಲ್ಲ. ಮೇಲೆ ಹೇಳಿದಂತೆ ಕೆಲವರು ಸಿಕ್ಕ ಸಮಯದ ಉಪಯೋಗ ಪಡೆದು ಹೊಸ ಯೋಜನೆಗಳಿಗೆ ನಾಂದಿಹಾಡಿದ್ದಾರೆ. ಬಹುದಿನದ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ತಯಾರಾಗಿದ್ದಾರೆ.ಅಂತರ್ಗತ ಲೋಕದ ಅವಲೋಕನಕ್ಕೂ ಕೈ ಹಾಕಿದ್ದಾರೆ.ಹಳೆಯ ಮಧುರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ಸಮಯದ ಜೊತೆ ಮನುಷ್ಯನ ನಂಟು ಹಲವು ಬಗೆಯವಾದರೂ ಅನಿರೀಕ್ಷಿತವಾಗಿ, ಬಲವಂತವಾಗಿ, ಅಸಹಜವಾಗಿ ಜಗತ್ತಿನ ಬಹುತೇಕರಿಗೆ ಒಟ್ಟಿಗೆ ಸಮಯ ದೊರಕಿದರೆ ಅದರ ಪ್ರಯೋಜನ ಬಹಳ ವಿರಲಾರದೇನೋ?-ಎನ್ನುವ ವಾದಗಳೂ ಇವೆ.

    ಮಕ್ಕಳಿಗೆ ಹಲವು ದೊಡ್ಡ ಪರೀಕ್ಷೆಗಳು ರದ್ದಾಗಿ, ಆಟೋಟಗಳು ನಿಂತು ಹೋಗಿ ಆಲಸ್ಯ ಕಾಡಿದೆ. ಅವರಿಗೆ ಗುರಿಯಿಲ್ಲದಂತಾಗಿದೆ. ಸಮಯದ ಪರಿಮಿತಿಯಲ್ಲಿ ನಡೆಸಬೇಕಾದ ಪರೀಕ್ಷೆಯ ತಯಾರಿ, ದೊಡ್ಡ ಪರೀಕ್ಷೆಗಳನ್ನು ಬರೆವ ಅನುಭವ, ಆತಂಕ, ಫಲಿತಾಂಶ, ಸಾಧನೆ ಯಾವುದಕ್ಕೂ ಅವಕಾಶವಿರದ ಈ ವರ್ಷ ಪ್ರಪಂಚದಾದ್ಯಂತ ಒಂದು ತಲೆಮಾರಿನ ಮಕ್ಕಳು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆನ್ ಲೈನ್ ಪಾಠಗಳು ಇತ್ಯಾದಿ ಬಲವಂತದ ’ಹೊಸತು ’ಗಳ ಸವಾಲುಗಳನ್ನು ಎದುರಿಸಿದ್ದಾರೆ.ಜನಸಾಮಾನ್ಯರಿಗೆ ಸಿಕ್ಕಿರುವ ಈ ಅಧಿಕ ಬಿಡುವಿನ ಸಮಯ ನಿಜಕ್ಕೂ ಅವರ ಹಿಡಿತ ಮೀರಿದ ಹಲವು ಫಲಿತಾಂಶಗಳನ್ನು ನೀಡಿ ತೀವ್ರ ಅಸಮಾಧಾನವನ್ನು ಸೃಷ್ಟಿಸಿದೆ.

    ಸಮಯದ ಅಭಾವದಿಂದ ಊಟ ಮಾಡುವುದನ್ನು ಕೂಡ ದಿನದಲ್ಲಿ ಮಾಡಬೇಕಾಗಿದ್ದ ’ ಕೆಲಸಗಳ ಪಟ್ಟಿ’ ಯಲ್ಲಿ ಇಟ್ಟುಕೊಂಡು ಕೆಲಸಮಾಡುತ್ತಿದ್ದ ಮಂದಿಗೆ ಸಮಯ ಸಿಕ್ಕಿದೆ. ಆದರೆ ಸಾವು-ನೋವಿನ ಸುದ್ದಿಗಳ ನಡುವೆ ಅವರುತಮ್ಮ ಊಟವನ್ನು ಸಂತಸದಿಂದ ನುಂಗಲಾಗದೆ ಒಂದಷ್ಟು ಮಟ್ಟಿಗೆ ಗಂಟಲಲ್ಲೇ ಸಿಲುಕಿಕೊಂಡಂತೆ ಹೆಣಗುತ್ತಿದ್ದಾರೆ. ಸರ್ಕಾರವೇ ನೀಡುತ್ತಿರುವ ಬಿಟ್ಟಿ ಊಟಕ್ಕೂ ಸೂತಕದ ಕಳೆಯಿರುವಂತೆನಿಸುತ್ತಿದೆ.

    ಬರವಣಿಗೆಯಲ್ಲಿ ತೊಡಗಿಕೊಂಡವರಿಗೆ ಸಮಯ ಸಿಕ್ಕರೂ ಜೀವನದ ಹಲವು ಮಜಲುಗಳಲ್ಲಿ ದೊರೆವ ಪ್ರೇರೇಪಣೆಯಿಲ್ಲದೆ ನಿರುತ್ಸಾಹ ಕಾಡಿದೆ. ಪುಸ್ತಕ ಪ್ರಕಟಣೆ, ಮಾರಾಟ, ವಿತರಣೆ ಎಲ್ಲವೂ ನಿಂತು ಹೋಗಿ, ಯಾವ ಉದ್ದೇಶಕ್ಕೆ ಬರೆಯುವುದು ಎಂಬಂತಾಗಿದೆ. ಹಲವಾರು ಪತ್ರಿಕೆಗಳ ಪ್ರಕಟಣೆಗಳು ನಿಂತುಹೋಗಿದೆ. ಎಲ್ಲ ಕಷ್ಟಗಳ ನಡುವೆ ಹೊರಬರುತ್ತಿರುವ ದಿನ ಪತ್ರಿಕೆ, ಇನ್ನಿತರ ವಾರಪತ್ರಿಕೆಗಳು ಓಡಾಟಗಳ ನಿರ್ಭಂದಗಳ ನಡುವೆಯೇ ತಮ್ಮ ವೃತ್ತಿ ಧರ್ಮವನ್ನು ಎತ್ತಿ ಹಿಡಿಯಲು ಮತ್ತು ಕೆಲಸಗಾರರ ಆರೋಗ್ಯದ ನಡುವಿನ ಗೊಂದಲಗಳಲ್ಲಿ ಏಗುತ್ತಿವೆ. ಅವುಗಳಲ್ಲಿನ ಕಥೆ, ಕವನ, ಪ್ರವಾಸ, ಸಿನಿಮಾ ಇತ್ಯಾದಿ ಬರಹಗಳು ಕೊರಗುತ್ತಿವೆ.

    ಸಿನಿಮಾ, ನಾಟಕ, ಟಿವಿ ಯ ರೆಕಾರ್ಡಿಂಗ್ ಗಳು ನಿಂತು ಹೋಗಿ ದೃಶ್ಯ ಮಾಧ್ಯಮಗಳ ಸೃಜನಶೀಲತೆಗೂ ಧುತ್ತನೆ ಬ್ರೇಕ್ ಬಿದ್ದಿದೆ. ಕಲಾಕಾರರು, ಹಾಡುಗಾರರು, ನೃತ್ಯಪಟುಗಳು, ಶಿಲ್ಪಿಗಳು,ಆಟೋಟಗಾರರು ಎಲ್ಲರೂ ಇದ್ದಕ್ಕಿದ್ದಂತೆ ದೊರೆತ ಈ ಖಾಲಿ  ಸಮಯದಲ್ಲಿ ಕೈ ಚೆಲ್ಲಿ ಕುಳಿತಿದ್ದಾರೆ.ಇನ್ನು ಈ ಎಲ್ಲ ಉದ್ಯಮಗಳಲ್ಲಿ ತೊಡಗಿದ್ದವರ ದುಡಿಮೆ, ಆರ್ಥಿಕ ಸ್ಥಿತಿಗಳ ಬಗ್ಗೆ ಹೇಳುವಂತೆಯೇ ಇಲ್ಲ

    ಸಾಮಾಜಿಕ ಮತ್ತು ಸಮುದಾಯಗಳ ಸಂಪೂರ್ಣ ಪ್ರೇರೇಪಣೆಯಿಲ್ಲದೆ ಸೃಜನಶೀಲತೆ ಪರಿಪೂರ್ಣ ಪ್ರಮಾಣದಲ್ಲಿ ಅರಳುವುದಿಲ್ಲ. ಸೃಜನಶೀಲತೆಗೆ, ಮನುಷ್ಯನ ಸಂತೋಷಕ್ಕೆ ಸಮಯವೊಂದೇ ತೊಡಕಲ್ಲ. ಜೊತೆಗೇ ಸಮಯವೊಂದು ಮಾತ್ರ ಸಿಕ್ಕಿಬಿಟ್ಟರೆ ಸಾಲುವುದೂ ಇಲ್ಲ ಎನ್ನುವ ಹೊಸದೊಂದು ಹೊಳಹನ್ನು ಈ ವಿಚಾರಗಳು ದಟ್ಟಗೊಳಿಸಿದೆ. ಆ ಮಟ್ಟಕ್ಕೆ ನಮ್ಮದು ಸಂಘಜೀವನ. ಅದು ಎಲ್ಲರೂ ಸಹಜವಾದ, ಸಂತೋಷವಾದ ದಿನಚರಿಯನ್ನು ಹೊಂದಲೆಂದು ಆಶಿಸುತ್ತದೆ.

    ಇದೇ ಕಾರಣಕ್ಕೆ ಲಾಕ್ ಡೌನ್ ಸಮಯದ ಎಲ್ಲ ಕೆಲಸಗಳಲ್ಲಿ ಒಂದು ಬಗೆಯ ಅವಿನಾ ಕೊರತೆ ಎದ್ದು ಕಾಣುತ್ತಿದೆ. ಆತಂಕ,ಸಾವು ನೋವಿನ ಸುದ್ದಿಗಳು ಮಾನಸಿಕವಾಗಿ ಉತ್ಸಾಹವನ್ನು ಕಸಿದಿವೆ. ಪಾಶ್ಚಾತ್ಯ ದೇಶಗಳಲ್ಲಿ ಹೆಣಗಳನ್ನು ಸಮಾಧಿ ಮಾಡಲು ಇರುವ ಫ್ಯೂನರೆಲ್ ಸರ್ವಿಸ್ ನ ದಂಧೆ ನಡೆಸುವವರು ಕೂಡ ಮೊತ್ತ ಮೊದಲ ಬಾರಿಗೆ ತಮ್ಮ ಕೆಲಸವನ್ನು ಬಿಸಾಡಿ ಹೊರನಡೆಯಲು ತಯಾರಾದಂತ ಕಾಲವಿದು. ಸಮಾಧಿ ಮಾಡುವಾಗ ಸಾವಿನ ಘನತೆಯನ್ನು ಎತ್ತಿ ಹಿಡಿಯಲಾಗದ, ಶೋಕ ತಪ್ತ ಕುಟುಂಬದವರನ್ನು ಹತ್ತಿರ ಸೇರಿಸಲಾಗದ ನಿಬಂಧನೆಗಳ ಅಡಿಯಲ್ಲಿ ಅವರ ವೃತ್ತಿಧರ್ಮವೂ ಕುಸಿದ ಭಾವ ಮೂಡಿದ್ದು ಕೂಡ ಈ ಕಾಲದಲ್ಲಿ ದಾಖಲಾಯ್ತು.

    ಸೃಜನಶೀಲ ಕೆಲಸಗಳನ್ನು ಪ್ರದರ್ಶಿಸುವ, ಹಂಚಿಕೊಳ್ಳುವ ಅವಕಾಶಗಳ ಕೊರತೆಯಿದ್ದರೆ ಪ್ರೇರಣೆ ನಿಧಾನವಾಗಿ ಬಲಹೀನವಾಗುತ್ತದೆ. ಮುಂದೇನು? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.ಇಡೀ ಪ್ರಪಂಚವೇ ಒತ್ತಟ್ಟಿಗೆ ರಜಾದಲ್ಲಿರುವ ಹೊತ್ತಿನಲ್ಲಿ ಒಂದು ರೀತಿಯಲ್ಲಿ ಮನುಷ್ಯನ ಮಿದುಳು ಅರೆ ಬರೆ  ನಿಶ್ಕ್ರಿಯೆಗೊಂಡಿದೆ.ಇನ್ನೊಂದು ಅರ್ಥದಲ್ಲಿ ಮನುಷ್ಯನಿಗೆ ವರ್ತಮಾನದಲ್ಲಿ ಮಾಡುವ ಕೆಲಸಗಳಿಗೆ ಭವಿಷ್ಯದ ಕೊಂಡಿಯೆಂಬುದರ ಸಖ್ಯ ನಿಖರವಾಗಿರಬೇಕು. ನಿಚ್ಚಳವಾಗಿ ಕಾಣುತ್ತಿರಬೇಕು. ಅದಿಲ್ಲದಿದ್ದರೆ ವರ್ತಮಾನದ ಅರ್ಥವೇ ಮೊಟಕುಗೊಳ್ಳುತ್ತದೆ.

    ಸಮಯ ಸಿಕ್ಕಿರುವಾಗ ಹೆಚ್ಚು ಆರೋಗ್ಯವಂತರಾಗಿ, ಸೃಜನಶೀಲರಾಗಿ ಈ ಘಟ್ಟದಿಂದ ಹೊರಹೊಮ್ಮಲು ಸಾಧ್ಯವಾಗದಿದ್ದರೆ  “ನಮಗೆ ಸಮಯ ಇರಲಿಲ್ಲ “ ಎಂದು ಹೇಳಬೇಡಿ ಎನ್ನುವಂತ ಎಚ್ಚರಿಕೆಯ,ಉತ್ತೇಜಕ,ಬುದ್ದಿವಂತಿಕೆಯ ಮಾತುಗಳು ಸಂದೇಶಗಳಲ್ಲಿ ಹರಿದಾಡುತ್ತಿದ್ದರೂ ಜಗತ್ತನ್ನು ತನ್ನ ಆತಂಕಕಾರೀ ಮುಷ್ಟಿಯಲ್ಲಿ ಹಿಡಿದಿಟ್ಟಿರುವ ವೈರಾಣು ಸಮಸ್ಯೆ ಜನರ ಉತ್ಸಾಹಕ್ಕೆ ಭಾರೀ ಹೊಡೆತ ನೀಡಿದೆ.

    ಹೆಚ್ಚು ಕಾಲ ಬದುಕಿದಂತೆಲ್ಲ ನಮ್ಮ ಜೀವನದ ಕ್ಷಣಗಳ ಮಹತ್ವವೂ ಮನದಟ್ಟಾಗುತ್ತ ಹೋಗುತ್ತದೆ. ಈ ಕಾರಣ ಸಮಯ ಎನ್ನುವುದು ಅವರವರ ವ್ಯಕ್ತಿತ್ವ, ವಯಸ್ಸು, ಧೋರಣೆಗಳು, ಪ್ರಭುದ್ದತೆ, ಹವ್ಯಾಸ ಮತ್ತು  ಬದ್ದತೆಗಳನ್ನು ಅವಲಂಬಿಸುತ್ತದೆ ಅಂದುಕೊಳ್ಳಬಹುದು.ಆದರೆ ಇಂತಹ ಅತ್ಯಮೂಲ್ಯ ಸಮಯ ಕೋವಿಡ್ ಲಾಕ್  ಡೌನಿನ ಕಾಲದಲ್ಲಿ ಹಲವು ಪರ್ಯಾಯ ತುಲನೆಗಳನ್ನು ಸೃಷ್ಟಿಸಿದ್ದಂತೂ ನಿಜ.

    2008 ರ  ಪ್ರಪಂಚ ಮಟ್ಟದ ಆರ್ಥಿಕ ಕುಸಿತ ನಡೆದ ಕಾಲದಲ್ಲಿ ಕೆಲವರಷ್ಟೇ ಕೆಲಸಕ್ಕೆ ಹಿಂತಿರುಗಿದ್ದು. ಬಹಳಷ್ಟು ಉದ್ಯಮಗಳು ಕುಸಿದ ಕಾರಣ ಕೆಲವೇ ಕೆಲವು ಕೆಲಸಗಾರರು ಸಮಯದ ನಿಗಧಿಯಿಲ್ಲದೆ ಅವಿರತ ಕೆಲಸಮಾಡಿದರು. ಇವರಲ್ಲಿ ವಿರಮಿಸುವ ಸಮಯ ಅಂದರೆ ಏನು? ಎನ್ನುವುದರ ಅರ್ಥ ನಿಧಾನವಾಗಿ ಸಂಕುಚಿಸಿತು. ಒಂದು ಮಟ್ಟಕ್ಕೆ ಅದು ’ಪಾಪ ’ ಅಥವಾ  ’ತಪ್ಪು ’ ಎನ್ನುವ  ಭಾವನೆಗಳೂ ಮೂಡಿದ್ದನ್ನು ಅಧ್ಯಯನಗಳು ಧೃಡಪಡಿಸಿದವು. ಅದರ ಹಿಂದೆ ಅವರ ಮನಸ್ಸಿನಲ್ಲಿ ಮೂಡಿದ್ದ ಅಭದ್ರತೆಯ ಅಧೀರತೆಯೇ ಕಾರಣ ಎಂದು ಕೂಡ ತಿಳಿದುಬಂದಿದೆ.

    ಬದುಕು ಮತ್ತೆ ಸಹಜಸ್ಥಿತಿಗೆ ಬಂದರೂ ನಾವು ಬದುಕುವ ರೀತಿಯೇ ಬದಲಾಗಬಹುದಾದ  ’ಭವಿಷ್ಯ ಕಾಲ ’ದ ಬಗ್ಗೆ ’ಭೂತ ’ ದಲ್ಲಿ ಕಂಡರಿಯದ ಮಟ್ಟದಲ್ಲಿ ”ವರ್ತಮಾನದಲ್ಲಿ’ ಆತಂಕಗಳು ಗೂಡುಕಟ್ಟಿವೆ.ಸಮಯವನ್ನೂ ಸಮಯದ ಜೊತೆಯೇ ತುಲನೆ ಮಾಡುವ ಮನುಷ್ಯನ  ಅಭ್ಯಾಸ ಮುಂದುವರೆದಿದೆ.

    Photo by luizclas from Pexels

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    5 COMMENTS

    1. ಬಿಡುವು ’ ಅಂದರೆ ಏನು ಎಂದು ತಿಳಿದುಕೊಳ್ಳುವ ಅತ್ಯಂತ ವಿರಳ ಅವಕಾಶವನ್ನು ಲಾಕ್ ಡೌನ್ ದೊರಕಿಸಿಕೊಟ್ಚಿತ್ತು.

      ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದೀರಿ…

      ಎಲ್ಲಾ ವರ್ಗದವರನ್ನು ಪರಿಚಯಿಸಿ ವೃದ್ಧರನ್ನು ವೈದ್ಯರು ಮರೆತಂತೆ ಅನಿಸಿತು. ಇರಲಿ ಒಟ್ಟಾರೆ ಚೆನ್ನಾಗಿ ಪರಿಚಯಿಸಿದ್ದೀರಿ.

      • ಧನ್ಯವಾದಗಳು. ನಿಜ ಆದರೆ ವೃದ್ದರಿಗೆ ಬಿಡುವಿನ ಸಮಸ್ಯೆ ಸಾಧಾರಣ ಕಡಿಮೆ . ಆದರೆ ಒಂಟಿತನದ ಸಮಸ್ಯೆ, ಸಮಯ ತಳ್ಳುವ ಸಮಸ್ಯೆ ಕಾಡಿದ್ದು ನಿಜ. ಅದರ ಬಗ್ಗೆ ಮತ್ತೊಂದೇ ಲೇಖನ ಬರೆಯಬಹುದು.
        ಈ ಲೇಖನದ ಬದಲಾದ ಶೀರ್ಷಿಕೆ ಗೊಂದಲ ಹುಟ್ಟಿಸಿರಬಹುದು ಆದರೆ ಈ ಲೇಖನ ಲಾಕ್ ಡೌನ್ ಸಮಯ ನೀಡಿದ ಹೊಸ ಹೊಳಹುಗಳ ’ ಸುತ್ತ ಬರೆದ ಲೇಖನ.

    2. ಡಾ.ಬಿ.ಪ್ರೇಮಲತ ಅವರ ಲೇಖನ ಚೆನ್ನಾಗಿದೆ. ಈಗಿನ ಲಾಕ್ ಡೌನ್ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ವಿವರಿಸಲಾಗಿದೆ. ಈ ರೀತಿಯ ಜೀವನ ಅರವತ್ತು ಮತ್ತು ಎಪತ್ತರ ದಶಕಗಳ ನಂತರ ಪುನರಾವರ್ತನೆ ಆಗುತ್ತಿದೆ. ಲೇಖನದಲ್ಲಿ ಬರೆದಿರುವಂತೆ ಮೂಷಿಕ ಸ್ಪರ್ಧೆ ಎಲ್ಲರ ಜೀವನದಲ್ಲಿ ಅಡಿಯಿಟ್ಟಿತು. ಎಂಭತ್ತರ ದಶಕದಲ್ಲಿ ಜನರಲ್ಲಿ ಕೊಳ್ಳುಬಾಕತನದ ಕಲ್ಚರ್
      ಶುರುವಾಯಿತು.

    3. ವೃದ್ಧರ ಜೀವನದಲ್ಲಿ ಯಾವುದೇ ಹೇಳಿಕೊಳ್ಳುವಂತಹ ಬದಲಾವಣೆಯಾಗಿಲ್ಲ ಹಾಗಾಗಿ, ವೈದ್ಯರು ಅವರನ್ನು ಮರೆತಿಲ್ಲವೆಂದು ನನ್ನ ಭಾವನೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!