ಕನ್ನಡದ ಮೊದಲ ಸಾಲಿನಲ್ಲಿ ಗುರುತಿಸಿಕೊಳ್ಳಬಹುದಾದ ಕವಿ ಕೆ. ವಿ. ತಿರುಮಲೇಶ್ ಕಥೆಗಾರರಾಗಿಯೂ ಜನಪ್ರಿಯ. ಅವರ ಜನಪ್ರಿಯ ಕಥೆಗಳಲ್ಲಿ ಒಂದಾದ ಡಾಮಿನಿಕ್ ದ ಡ್ರಮ್ಮರ್ ಒಂದು ಬೇತಾಳ ಕಥೆ ಅನ್ನು ಕನ್ನಡದ ಭರವಸೆಯ ಕವಯತ್ರಿ ನಂದಿನಿ ಹೆದ್ದುರ್ಗ ಇಲ್ಲಿ ವಾಚಿಸಿದ್ದಾರೆ.
ತಿರುಮಲೇಶ್ ಕನ್ನಡದ ಮೊದಲ ಸಾಲಿನಲ್ಲಿ ಗುರುತಿಸಿಕೊಳ್ಳಬಹುದಾದ ಕವಿ. ಅವರು ಕವಿ, ಕಥೆಗಾರ, ಅಂಕಣಕಾರ, ಭಾಷಾ ಶಾಸ್ತ್ರಜ್ಞ, ನಾಟಕಕಾರ ಏನೆಲ್ಲವೂ ಹೌದು.. ಈ ಸೆಪ್ಟೆಂಬರ್ ಹನ್ನೆರಡಕ್ಕೆ ಅಂದರೆ ಇಂದು ಎಂಬತ್ತು ವರ್ಷಗಳನ್ನು ಪೂರೈಸಲಿರುವ ತಿರುಮಲೇಶರೀಗ ಹೈದರಾಬಾದಿನಲ್ಲಿ ವಾಸ. ಅವರ ಅಕ್ಷಯಕಾವ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ವಿಫುಲ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ.ಈ ಹೊತ್ತಿನಲ್ಲಿ ಅವರ ಸಾಹಿತ್ಯ ಲೋಕದಲ್ಲೊಂದು ಸುತ್ತು
ಆಶಾ ಜಗದೀಶ್
ತಿರುಮಲೇಶ್ ಎನ್ನುವ ಹೆಸರಿಗೇ ಒಂದು ಆಕರ್ಷಣೆ ಬಂದಾಗಿತ್ತು. ನಾನಾಗಿನ್ನು ಸಾಹಿತ್ಯ ಪ್ರಪಂಚದಲ್ಲಿ ಕಣ್ಣುಬಿಡುತ್ತಿದ್ದೆ. ಅವರ ಕವಿತೆಯೊದು ಎಲ್ಲೇ ಬರಲಿ, ಅವರ ಲೇಖನವೊಂದು ಎಲ್ಲೇ ಪ್ರಕಟವಾಗಲಿ ಬೆಲ್ಲದ ತುಂಡನ್ನು ಕಂಡಂತೆ ಹಿಡಿದು ಕೂರುತ್ತಿದ್ದೆ. ಕವಿತೆ ಎಂದರೆ ಏನು ಹೇಗೆ ಅಂತ ಕಲಿಯಲು ತಿಳಿಯಲು ಶುರುಮಾಡಿದ್ದೇ ಅವರ ಕವಿತೆಗಳಿಂದ.
ಅವರ ಅಕ್ಷಯ ಕವಿತೆಗಳನ್ನು ಓದುತ್ತಾ ಓದುತ್ತಾ ಅಚ್ಚರಿಗೊಳ್ಳುತ್ತಿದ್ದೆ ಹಲವು ಸಲ. ಅಕಗಷಯ ಕಾವ್ಯ ಒಂದಿ ರೀತಿಯಲ್ಲಿ ಬದುಕಿನ ಹಲವು ಆಯಾಮಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ಅವರ ಕವಿತೆಗಳು ಸರಳ ಮತ್ತು ಸುಂದರ. ಒಂದು ಚಂದದ ಧ್ಯಾನದ ಫಲ. ಅವರ “ಆಳ ನಿರಾಳ” ಎನ್ನುವ ಅಂಕಣ ಬರಹದ ಆಳ ಮತ್ತು ವ್ಯಾಪಕತೆ ಹರವುಳ್ಳದ್ದು. ಮತ್ತೆ ಅವರ ಕಥೆಗಳದ್ದು ಮತ್ತೊಂದೇ ತೂಕ. ಅದೊಂದು ಅದ್ಭುತ ಲೋಕ.
ತಿರುಮಲೇಶರ ಬಿಡಿ ಕಥೆಗಳನ್ನು ಮಾತ್ರ ಓದಿ ಗೊತ್ತಿದ್ದ ನನಗೆ ಅಚಾನಕ್ ಒಂದು ದಿನ ಅವರ “ಜಾಗುವಾ ಮತ್ತು ಇತರರು” ಎನ್ನುವ ಸಂಕಲನ ನನ್ನ ಕಣ್ಣಿಗೆ ಬಿತ್ತು. ಅವರನ್ನು ಮತ್ತಷ್ಟು ಒಳನೋಟಗಳಿಂದ ಅರಿಯಲು ಸಾಧ್ಯವಾಯಿತು. ಸುಮಾರು ಹದಿನೈದು ಕಥೆಗಳಿರುವ ಈ ಸಂಕಲನದ ಒಂದೊಂದು ಕಥೆಯೂ ತನ್ನ ವಸ್ತು ಮತ್ತು ರಾಚನಿಕ ದೃಷ್ಟಿಯಿಂದ ನಮ್ಮನ್ನು ಸೆಳೆಯುತ್ತಾ ಹೋಗುತ್ತವೆ. ರಸ್ಕಿನ್ ಬಾಂಡರದೂ ಒಂದು “Tha bent double begger” ಎನ್ನುವ ಭಿಕ್ಷುಕನೊಬ್ಬನ ಬಗೆಗಿನ ಕಥೆಯಿದೆ. ಎಲ್ಲರೂ ಸಾಮನ್ಯ ಭಿಕ್ಷುಕ ಎಂದು ಪರಿಗಣಿಸುವ ವ್ಯಕ್ತಿಯೊಬ್ಬ ತನ್ನ ವಿಶಿಷ್ಟ ನಡವಳಿಕೆ ಮತ್ತು ಮಾತುಕತೆಯಿಂದ ಜೀವನ ದರ್ಶನ ಮಾಡಿಸುತ್ತಾನೆ. ಕೊನೆಯಲ್ಲಿ ಲೇಖಕರಿಗೆ ಕಾಡುವುದು ನಿಜವಾದ ಭಿಕ್ಷುಕ ಯಾರು ಎನ್ನುವುದು… ಈ ಕಥೆ ನನ್ನನ್ನು ಬಹಳ ಕಾಡಿತ್ತು.
ಅದೇ ರೀತಿಯಲ್ಲಿ ತಿರುಮಲೇಶರ “ಜಾಗುವಾ ಮತ್ತು ಇತರರು” ಸಂಕಲನದ “ಇಬ್ಬರು ಹುಚ್ಚರು” ಎನ್ನುವ ಕಥೆಯೂ ನನ್ನನ್ನು ಬಹಳವಾಗಿ ಕಾಡಿತ್ತು. ಈ ಕಥೆಯಲ್ಲಿ ಬರುವ ಸದಾನಂದ ತನಗೇ ಗೊತ್ತಿಲ್ಲದ ತನ್ನ ನಿರೀಕ್ಷೆಗಳ ಸ್ಪಷ್ಟತೆ ಇಲ್ಲದೆ ಆ ಕ್ಷಣಕ್ಕೆ ತಲೆ ಏರಿದ ಹುಚ್ಚು ಕುದುರೆಯನ್ನು ಸವಾರಿ ಮಾಡುವಂಥವನು. ಅವನಿಗೆ ಸ್ವಾತಂತ್ರ್ಯ ಬೇಕು. ಆದರೆ ಆ ಸ್ವಾತಂತ್ರ್ಯ ಯಾವುದೆನ್ನುವ ಸ್ಪಷ್ಟತೆ ಅವನಿಗಿಲ್ಲ. ಆ ಆ ಇಚ್ಛೆ ಅವನನ್ನು ಹುಚ್ಚನನ್ನಾಗಿಸುತ್ತದೆ. ವಿಚಿತ್ರ ಕೆಲಸಗಳನ್ನು ಅವನಿಂದ ಮಾಡಿಸುತ್ತದೆ. ಅವನು ನಿಜವಾಗಿಯೂ ಹುಚ್ಚನಾ ಅಥವಾ ಹುಚ್ಚನಂತೆ ವರ್ತಿಸುತ್ತಿದ್ದಾನಾ ಎನ್ನುವುದು ಅವರರವರ ತರ್ಕಕ್ಕೆ ನಿಲುಕಿದ್ದು. ಆದರೆ ಸಮಾಜಕ್ಕೆ ಹಾಗಲ್ಲ ಹುಚ್ಚನಾಗಲೀ ಹುಚ್ಚನಂತೆ ವರ್ತಿಸುವವನಾಗಲೀ ಯಾರಾದರೂ ಸರಿ ತಮ್ಮ ವಿಚಿತ್ರ ಕುತೂಹಲಕ್ಕೆ, ತಮ್ಮ ಹೀಗಳಿಕೆಗೆ, ವಿನೋದಕ್ಕೆ, ಕುಚೋದ್ಯಕ್ಕೆ… ಈಡಾಗುವ ಒಂದು ಪ್ರಾಣಿ ಸಿಕ್ಕಿದರೆ ಸಾಕು. ಅವನ ಯಾವ ಬಗೆಯ ಸ್ವಾಸ್ಥ್ಯದ ಕಾಳಜಿ ಅವರಿಗೆ ಬೇಕಿಲ್ಲ.
ಇಲ್ಲಿ ಒಂದು ಸಂದರ್ಭ ಏರ್ಪಡುತ್ತದೆ. ಅದು ಸದಾನಂದ ಹುಚ್ಚ ಸದ್ದು ಆಗಲು ಅನುಕೂಲಕರವೂ ಆಗಿರುತ್ತದೆ. ರೋಗಿ ಬಯಸಿದ್ದೂ ವೈದ್ಯರು ಹೇಳಿದ್ದೂ ಒಂದೇ ಆಯಿತೆನ್ನುವ ಹಾಗೆ. ಸದಾನಂತ ತನ್ನ ಹುಚ್ಚು ಅವತಾರದಿಂದ ತಾನು ಯಾವ ಸ್ವಾತಂತ್ರ್ಯವನ್ನು ಬಯಸಿದ್ದನೋ ಅದನ್ನು ಪಡೆಯುತ್ತಾನೆ. ಕುಟುಂಬದ ಜವಾಬ್ದಾರಿ ನಿರ್ವಹಿಸಲಾಗದ, ದುಡಿದು ಕುಟುಂಬವನ್ನು ಸಾಕಲಾಗದ ಹೇಡಿಯೊಬ್ಬ ಎತ್ತುವ ಹೊಸ ಅವತಾರವೇ ಈ ಹುಚ್ಚನ ಅವತಾರ ಅಂತಲೂ ಅನಿಸುತ್ತದೆ. ಈ ಮಧ್ಯೆ ಆ ಊರಿಗೆ ಮತ್ತೊಬ್ಬ ಹುಚ್ಚನ ಆಗಮನವಾಗುತ್ತದೆ. ಇವನ ಚೇಷ್ಟೆ ಕುಚೇಷ್ಟೆಗಳು ಸದ್ದೂವಿನ ಚೇಷ್ಟೆಗಳ ಹದ್ದನ್ನೂ ಮೀರುವಂತಿರುತ್ತವೆ. ಈಗ ಸದ್ದು ಕಂಗಾಲಾಗಿಬಿಡುತ್ತಾನೆ. ಪೈಪೋಟಿಗೆ ಬೀಳುತ್ತಾನೆ. ಕೊನೆಗೆ ಅವನೊಂದಿಗೆ ಸ್ಪರ್ಧಿಸಲಾಗದೆ ಅವನ ಬಳಿಗೆ ಸಂಧಾನಕ್ಕೆ ಹೋಗುತ್ತಾನೆ. ಆಗ ಅವರಿಬ್ಬರ ನಡುವೆ ನಡೆಯುವ ಮಾತುಕತೆ ಸ್ವಾರಸ್ಯಕರವಾಗಿದೆ. ಒಂದು ಹಂತದಲ್ಲಿ ಈ ಇಬ್ಬರೂ ಹುಚ್ಚರೇ ಅಲ್ಲ. ಹುಚ್ಚರಂತೆ ನಟಿಸುತ್ತಿದ್ದಾರೆ ಎಂದು ಓದುವ ಪ್ರತಿಯೊಬ್ಬರಿಗೂ ಗಾಢವಾಗಿ ಅನ್ನಿಸಿಬಿಡುತ್ತದೆ. ಕೊನೆಗೆ ಹೊಸ ಹುಚ್ಚ ಇವನಿಗೆ “ನೀನು ನಿಜವಾದ ಹುಚ್ಚನಲ್ಲ, ನಿನಗೆ ಹೆಸರಿದೆ, ಕುಟುಂಬವಿದೆ, ಮಲಗಲು ಮನೆಗೆ ಹೋಗುತ್ತೀ… ಆದರೆ ನಾನು ನಿಜವಾದ ಹುಚ್ಚ, ನನಗೆ ಹೆಸರು ಮನೆ ಏನೂ ಇಲ್ಲ” ಎನ್ನುತ್ತಾನೆ. ಅಂದು ರಾತ್ರೋ ರಾತ್ರಿ ಸದ್ದು ಊರಿನಿಂದ ಮಾಯವಾಗುತ್ತಾನೆ. ಒಂದಾರು ತಿಂಗಳು ಕಳೆದು ಮನೆಗೆ ಬರುವ ಸದ್ದುವಿಗೆ ಹುಚ್ಚು ಇಳಿದಿರುತ್ತದೆ. ಬಹುಶಃ ಅವನಿಗೆ ಬದುಕಿನ ಕರಾಳತೆ ಅರ್ಥವಾಗಿರಬೇಕು… ಇದನ್ನೆಲ್ಲಾ ಬಿಟ್ಟು ಮರ್ಯಾದೆಯಿಂದ ಬದುಕೋಣ ಎನಿಸಿರಬೇಕು… ಇವನು ಊರಿಗೆ ಮರಳಿ ಬರುವ ಹೊತ್ತಿಗೆ, ಆ ಹೊಸ ಹುಚ್ಚನೂ ಕಣ್ಮರೆಯಾಗಿರುತ್ತಾನೆ. ಬಹುಶಃ ಅವನಿಗೂ ಇಂತಹುದೇ ಮನಃಪರಿವರ್ತನೆಯಾಗಿರಬೇಕು ಅಂತೆಲ್ಲಾ ಓದುಗರಿಗೆ ಅನಿಸತೊಡಗುತ್ತದೆ. ಅದನ್ನೇ ಕಥೆಯೂ ಹೇಳುತ್ತದೆ. ಒಟ್ಟಾರೆ ಮನುಷ್ಯನಿಗೆ ತೃಪ್ತಿ ಎನ್ನುವುದು ಯಾವುದರಲ್ಲಿಯೂ ಸಿಗುವುದಿಲ್ಲ. ಇರುವುದನ್ನು ಬಿಟ್ಟು ಇಲ್ಲದಿರುವುದಕೆ ಹಲುಬುತ್ತಾ ಕೂರುತ್ತಾನೆ. ಕೊನೆಗೆ ಬದುಕಿನ ನಿಷ್ಠುರತೆಯ ಪೆಟ್ಟು ಬಿದ್ದಾಗಲೇ ಅವನಿಗೆ ಸತ್ಯದರ್ಶನವಾಗುವುದು. ಆಗ ಮರಳಿ ತನ್ನ ಅದೇ ಹಳೇ ಬದುಕಿಗೆ ಬರಲು ಅವನಿಗೆ ಅವಕಾಶವಿದ್ದರೆ ಅದೇ ಅವನ ಪಾಲಿನ ಅದೃಷ್ಟ.
ತಿರುಮಲೇಶರ ಕಥೆಗಳಲ್ಲಿ ವಸ್ತುವಿನ ಆಯ್ಕೆ ಮತ್ತು ಅದನ್ನು ನಿರೂಪಿಸುವ ರೀತಿ ಬಹಳ ಚಂದ. ಅವರ ಕಥೆಗಳಲ್ಲಿ ಓದುಗರಿಗೆ ಸ್ಕೋಪ್ ಇರುತ್ತದೆ. ಯಾಕೆ, ಏನು, ಹೇಗೆ ಎಂದೆಲ್ಲಾ ಓದುಗ ಯೋಚಿಸ ತೊಡಗುತ್ತಾನೆ. ಅವರ ಕಥೆಗಳು ಆಚಾರ ಹೇಳುತ್ತಾ ಹೊರಡುವುದಿಲ್ಲ, ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿ ಓದುಗರ ಯೋಚನೆಯನ್ನು ಮೊಟಕುಗೊಳಿಸುವುದಿಲ್ಲ. ಇದು ಬಹಳ ಮುಖ್ಯ ಎನಿಸುತ್ತದೆ. ಅಲ್ಲದೆ ತಿರುಮಲೇಶರು ಕಥೆ ಮತ್ತು ಪಾತ್ರದ ಆಳಕ್ಕೆ ಓದುಗರನ್ನು ಒಯ್ಯುವ ರೀತಿಯಂತೂ ಅದ್ಭುತ. ಓದುಗನಿಗಂತೂ ಈ ಕಥೆ ಇಲ್ಲೇ ಎಲ್ಲೋ ಪಕ್ಕದಲ್ಲೇ ನಡೆದಿದೆ ಎನಿಸುವಷ್ಟು ಆಪ್ತವಾಗಿಬಿಡುತ್ತದೆ.
ಕಥೆ, ಕವಿತೆ, ಅಂಕಣ ಬರಹ ಹೀಗೆ ಪ್ರತಿಯೊಂದು ಪ್ರಕಾರದಲ್ಲೂ ತಮ್ಮ ವೈಶಿಷ್ಟ್ಯತೆಯ ಛಾಪನ್ನು ಮೂಡಿಸುತ್ತಲೇ ಹೋದವರು ಕೆ.ವಿ.ತಿರುಮಲೇಶರು. ಹಾಗಾಗಿಯೇ ಅವರು ಸವ್ಯಸಾಚಿ. ಅವರಿಗೀಗ ಎಂಭತ್ತರ ಸಂಭ್ರಮ. ಅವರ ಹುಟ್ಟುಹಬ್ಬಗಳು ಅನಂತವಾಗಲಿ ಎನ್ನುವ ಮುಗಿಯದ ಆಸೆಯೊಂದನ್ನು ಎದೆಯಲ್ಲಿ ಹಚ್ಚಿಟ್ಟುಕೊಂಡು ಸದಾ ಖುಷಿಯಿಂದಿರಿ ಸರ್ ಎಂದು ಹಾರೈಸುವೆ.
ಆಶಾ ಜಗದೀಶ್
ಗೌರಿಬಿದನೂರಿನವರಾದ ಆಶಾ ಜಗದೀಶ್ ತಮ್ಮ ಬರಹಗಳಿಂದ ಕನ್ನಡಿಗರಿಗೆ ಪರಿಚತರು. ಹಲವಾರು ಕವನ, ಕಥೆ , ಪ್ರಬಂಧ ಬರೆದಿದ್ದಾರೆ.
ಚೀನಾ ದೇಶದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಕರೋನಾ ವೈರಸ್ (ಕೋವಿಡ್-19) ಪ್ರಪಂಚದ ಎಲ್ಲಾ ದೇಶಗಳಲ್ಲಿಸಾಕಷ್ಟು ಹಾನಿಯುಂಟುಮಾಡಿತು. ಹಾಗೂ ಹಲವಾರು ಸಾವು ನೋವುಗಳ, ಆರ್ಥಿಕ ಹಿಂಜರಿತ ಮತು ಉದ್ಯೋಗ ನಷ್ಟ ಸೃಷ್ಟಿಸಿತು. ಈ ಪರಿಸ್ಥಿತಿ ಇನ್ನೂ ಎಷ್ಟು ದಿನ ಮುಂದುವರೆಯುತ್ತದೆ ಮತ್ತು ಮೊದಲಿನ ಸ್ಥಿತಿ ಯಾವಾಗ ಬರುತ್ತದೆ ಎನ್ನುವ ಪ್ರಶ್ನೆ ಎಲ್ಲರನ್ನುಕಾಡುತ್ತಿದೆ.
ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು ಸಾವಿನ ಪ್ರಮಾಣ ಕಡಿಮೆಯಾಗುತ್ತಿರುವುದು ಒಂದು ಆಶಾಕಿರಣ. ಕರೋನಾ ಸೋಂಕಿನ ಬಗ್ಗೆ ಸ್ಪಷ್ಟ ನಿಖರತೆ ಇಲ್ಲದೆ ಇರುವುದು ಹಲವು ಗೊಂದಲಕ್ಕೀಡುಮಾಡಿದೆ. ಐವತ್ತುವರ್ಷಕ್ಕಿಂತ ಮೇಲಿರುವರು ಮತ್ತು ಐವತ್ತು ವರ್ಷಕ್ಕಿಂತ ಕಡಿಮೆ ಇರುವವರಲ್ಲಿನ ರೋಗ ಲಕ್ಷಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡು ಬರುತ್ತಿಲ್ಲ. ಆರೋಗ್ಯದಿಂದಿರುವವರು ಮತ್ತು ಯುವಕರೂ ಕೂಡ ಕರೋನಾದಿಂದ ಸಾವನ್ನಪ್ಪಿದ್ದಾರೆ. ವಯಸ್ಸಾದವರು ಮತ್ತು ಈಗಾಗಲೇ ಹಲವಾರು ರೋಗಗಳಿಂದ ಬಾಧಿತರಾದವರು ಸೋಂಕಿನಿಂದ ಪಾರಾಗಿ ಬದುಕುಳಿದಿದ್ದಾರೆ.ಇಲ್ಲಿಯವರೆಗೆ ಸುರಕ್ಷಿತದಿಂದಿರುವ ಪ್ರದೇಶಗಳು ಕೂಡ ಹೆಚ್ಚು ಹಾನಿಗೊಳಗಾಗುತ್ತಿವೆ.
ಇಲ್ಲಿಯವರೆಗಿನ ಅಂಕಿ ಅಂಶಗಳನ್ನು ವಿಶ್ಲೇಷಿಸಿದರೆ ವಿಶ್ವದಲ್ಲಿ ಸೋಂಕಿತರ ಸಂಖ್ಯೆಮಾರ್ಚನಲ್ಲಿ 5.7 ಲಕ್ಷವಾಗಿದ್ದು ಈಗ 2.7 ಕೋಟಿಗೆ ತಲುಪಿದೆ. ಮಾರ್ಚನಲ್ಲಿದೈನಂದಿನ ಸೋಂಕಿತರ ಪ್ರಮಾಣ 78,000ವಿದ್ದು ಜೂನ್‌ನಲ್ಲಿ 2,50,000 ಇದ್ದು ನಂತರ 2,80,000ಕ್ಕೆ ಸ್ಥಿರಗೊಳ್ಳುತ್ತಿದೆ. ಸೋಂಕಿತರಲ್ಲಿ ಸಾವಿನ ಪ್ರಮಾಣ ಮಾರ್ಚ್‌ನಲ್ಲಿ ಶೇಕಡಾ 30ರಷ್ಟು ಇದ್ದು ಈಗ ಶೇಕಡಾ 2.5ಕ್ಕೆ ಸ್ಥಿರವಾಗಿದೆ. ನಮ್ಮ ದೇಶದಲಿ ದೈನಂದಿನ ಸೋಂಕಿತರ ಸಂಖ್ಯೆ ಮಾರ್ಚನಲ್ಲಿ 1,800 ಇದ್ದು ಪ್ರಸ್ತುತ 90,000ಕ್ಕೆ ಏರಿದೆ. ಮಾರ್ಚನಲ್ಲಿ ದಿನಕ್ಕೆ ಸಾವಿನ ಸಂಖ್ಯೆ 130 ಇದ್ದು ಜೂನನಲ್ಲಿ 600ಕ್ಕೆ ಏರಿ ಪ್ರಸ್ತುತ ಸುಮಾರು 1000ಕ್ಕೆ ಸ್ಥಿರವಾಗಿದೆ .
ಯಾವುದೇ ರೋಗ ಲಕ್ಷಣಗಳನ್ನು ಉಂಟುಮಾಡಿ ಕೊನೆಗೆ ಸಾವನ್ನುಉಂಟು ಮಾಡುವ ವೈರಸ್‌ನ್ನು ಹಾನಿಕಾರಕ ವೈರಸ್ ಎಂದು ಕರೆಯಲಾಗುತ್ತದೆ. ಇಂಥ ವೈರಸ್ ರೋಗ ನಿರೋಧಕ ಶಕ್ತಿ ಇರುವವರ ದೇಹವನ್ನು ಪ್ರವೇಶಿಸಿದಾಗ ಹೆಚ್ಚಿನ ತಂಟೆ ಮಾಡದೆ ಸೊರಗುತ್ತದೆ. ಹೀಗಾಗಿ ಇಂಥ ವ್ಯಕ್ತಿಗಳಲ್ಲಿ ಯಾವುದೇ ರೋಗ ಲಕ್ಷಣ ಕಾಣುವುದಿಲ್ಲ. ಈ ವ್ಯಕ್ತಿಗಳಲ್ಲಿ ಮೊದಲೆ ಸೊರಗಿದ್ದ ವೈರಸ್ ಮತ್ತೊಬ್ಬರನ್ನು ಪ್ರವೇಶಿಸಿದಾಗ ಮತ್ತಷ್ಟು ಸೊರಗಿರುತ್ತದೆ . ಇದನ್ನೇ Mutation ಎನ್ನಲಾಗುತ್ತದೆ.
ಈ ರೀತಿ ರೂಪಾಂತರಗೊಂಡ ಸೌಮ್ಯ ವೈರಸ್ ಸೋಂಕಿತ ವ್ಯಕ್ತಿಯಲ್ಲಿ ಕಡಿಮೆ ಅಥವಾ ಯಾವುದೇರೋಗ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಹೀಗಾಗಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದ್ದರೂ ಅದರಿಂದ ಆಗುವ ತೀವ್ರ ರೋಗ ಲಕ್ಷಣಗಳು ಮತ್ತು ಸಾವುಗಳು ಕ್ರಮೇಣ ಕಡಿಮೆಯಾಗುತ್ತವೆ ಮತ್ತು ಸಾವುಗಳು ಸಂಖ್ಯೆಯ ತೀರಾ ನಗಣ್ಯವಾಗುತ್ತವೆ ಎನ್ನಬಹುದು.
ಮುಂದಿನ ದಿನಗಳಲ್ಲೂ ಕರೋನಾ ವೈರಸ್ ಸೋಂಕಿತ ವ್ಯಕ್ತಿಗಳು ಇರುತ್ತಾರೆ ಆದರೆ ಅವರೆಲ್ಲರೂ ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರುತ್ತಾರೆ ಅಥವಾ ಯಾವುದೇ ಲಕ್ಷಣಗಳು ಇರುವುದಿಲ್ಲ. ಆದರೆ ಸಾವು ಬಹಳ ಕಡಿಮೆ ಇರುತ್ತದೆ ಎಂದು ಭಾವಿಸಲಾಗಿದೆ
ಸೌಮ್ಯವೈರಸ್‌ನಿಂದ ಸೋಂಕಿತಗೊಂಡ ಸೋಂಕಿತರು ನೈಸರ್ಗಿಕ ವ್ಯಾಕ್ಸಿನೇಷನ್ ಹೊಂದಿದಂತೆ ವೈರಸ್‌ನ್ನು ನಿಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ಈಗಿನ ಸಾವಿನ ಸಂಖ್ಯೆಗೆ ಹೋಲಿಸಿದರೆ ಕೋವಿಡ್-19ನಿಂದಾಗುವ ಸಾವಿನ ಸಂಖ್ಯೆಪ್ರತಿದಿನ 1000ಇದ್ದುಕರೋನಾ ವೈರಸ್ ಇಲ್ಲದ ದಿನಗಳಲ್ಲಿ ಸಾವಿನ ಸಂಖ್ಯೆ ಪ್ರತಿದಿನ 25 000 ಇತ್ತು ಎಂಬುದನ್ನು ಗಮನಿಸಬೇಕು.
ಆದರೆ ಮ್ಯೂಟೇಷನ್ ಆದ ವೈರಸ್ ಉಗ್ರರೂಪ ತಾಳಬಹುದು ಎಂಬ ವಾದವೂ ಇದೆ. ಆದರೆ ಹಿಂದಿನ ಸಾರ್ಸ್ ಮತ್ತು ಚಿಕನ್ ಗುನ್ಯಾ ವೈರಸ್ ಗಳನ್ನು ಗಮನಿಸಿದರೆ ಮ್ಯೂಟೇಷನ್ ಹಂತ ತಲುಪಿದ ನಂತರ ವೈರಸ್ ಗಳು ಸೌಮ್ಯವಾಗುವುದೆ ಹೆಚ್ಚು ಎಂದು ಭಾವಿಸಲಾಗಿದೆ.
ಹಾಗೆಂದು ಮೈ ಮರೆಯದಿರಿ ಸರಕಾರ ಮುಂದೆ ತಿಳಿಸುವವರೆಗೆ ಎಲ್ಲಾ ಸುರಕ್ಷಿತ ಕ್ರಮಗಳನ್ನು ಪಾಲಿಸುವುದನ್ನು ಬಿಡಬಾರದು.
ಇತ್ತೀಚೆಗಷ್ಟೇ ಕಾಂಗ್ರೆಸ್ 23 ನಾಯಕರು ಪ್ರಭಾರಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ನಾಯಕತ್ವ ಬದಲಾವಣೆಯನ್ನು ಒತ್ತಾಯಿಸಿದ್ದರು. ಬಳಿಕ ಅದೊಂದು ಅಘೋಷಿತ ಬಂಡಾಯವನ್ನು ಹತ್ತಿಕ್ಕಲಾಯಿತು ಬಿಡಿ. ಆದರೆ ಇದರ ಹಿಂದೆ ಇನ್ನಷ್ಟು ರಹಸ್ಯಗಳು ಅಡಗಿವೆ ಎಂದು ಈಗ ತಿಳಿದು ಬರುತ್ತಿವೆ.
ಇದೊಂದು ಸೌರವ್ಯೂಹ
ಕಾಂಗ್ರೆಸ್ ಪಕ್ಷವೆಂಬುದು ಒಂದು ರೀತಿಯಲ್ಲಿ ಸೌರವ್ಯೂಹವಿದ್ದಂತೆ. ಅಲ್ಲಿ ನವಗ್ರಹಗಳಲ್ಲದೆ ಅನೇಕ ಉಪಗ್ರಹಗಳು, ಕ್ಷುದ್ರಗ್ರಹಗಳು ಸುತ್ತುತ್ತಿವೆ. ಸೌರವ್ಯೂಹದಲ್ಲಿ ಸೂರ್ಯನೊಬ್ಬನೇ ಕೇಂದ್ರವಾಗಿದ್ದರೆ, ಕಾಂಗ್ರೆಸ್ ನಲ್ಲಿ ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೀಗೆ ಯಾರು ಕೇಂದ್ರವಾಗಬೇಕು ಎಂಬ ಜಿಜ್ಞಾಸೆ ಆರಂಭವಾಗಿದ್ದೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ. ಅಂದರೆ ಅಲ್ಲೀಗ ತಾಯಿ-ಮಗ ಇವರಿಬ್ಬರ ಮಧ್ಯೆ ಯಾರ ಮೇಲೆ ನಿಷ್ಠೆ ತೋರಬೇಕು ಮತ್ತು ಅದರಿಂದ ತಮಗಾಗುವ ಲಾಭ ಏನು ಎಂಬ ಚಿಂತನೆ ಆರಂಭವಾಗಿದೆ ಎಂದೇ ಹೇಳಬೇಕಾಗುತ್ತದೆ.
ಹಿಂದಿನಿಂದಲೂ ನೆಹರು-ಗಾಂಧಿ ಕುಟುಂಬದ ಆಪ್ತವಲಯದಲ್ಲೇ ಭಟ್ಟಂಗಿತನ ಮಾಡುತ್ತಿದ್ದ ಹಳೆಯ ಹುಲಿಗಳು ಹೊಸ ಮುಖದ ಶೋಧನೆಗೆ ತೊಡಗಿರುವ ರಾಹುಲ್ ಗಾಂಧಿಯ ನಡೆಯಿಂದ ಕಂಗೆಟ್ಟಿದ್ದಾರೆ. ಮೋದಿ- ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ನಡೆಸುತ್ತಿರುವ ಹೊಸ ಮುಖಗಳ ಹುಡುಕಾಟ (ಉದಾ-ಯೋಗಿ ಆದಿತ್ಯನಾಥ್ ಅವರನ್ನು ಉ.ಪ್ರ. ಮುಖ್ಯಮಂತ್ರಿಯಾಗಿ ಆರಿಸಿದ್ದು, ಕರ್ನಾಟಕ ವಿಧಾನ ಪರಿಷತ್ ಗೆ ಅನಿರೀಕ್ಷಿತ ಮುಖಗಳನ್ನು ಆಯ್ಕೆ ಮಾಡಿದ್ದು)ವು ರಾಹುಲ್ ಗಾಂಧಿಯವರನ್ನು ಇಂತಹುದೇ ನಡೆಗೆ ಪ್ರೇರೇಪಿಸಿತ್ತು. ಆದರೆ, ಹಳೆ ಹುಲಿಗಳು ಬಿಡಬೇಕಲ್ಲ. ಇದಕ್ಕಾಗಿ ಇಂತಹದ್ದೊಂದು ಪತ್ರ ಅಭಿಯಾನವನ್ನು ಅರಂಭಿಸಿದವು.
ಸೋನಿಯಾ ನಿಷ್ಠರ ಪಡೆ
ಸೋನಿಯಾ ಗಾಂಧಿ ಬಣದಲ್ಲಿ ಹಳೆ ಹುಲಿಗಳಿಗೇ ಪ್ರಾಧಾನ್ಯ. ಮನಮೋಹನ್ ಸಿಂಗ್, ಪಿ. ಚಿದಂಬರಂ, ಜೈರಾಮ್ ರಮೇಶ್, ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ಎ. ಕೆ. ಆಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಅಶೋಕ್ ಗೆಲ್ಹೋಟ್, ಅಭಿಷೇಕ್ ಮನು ಸಿಂಘ್ವಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇವರ ಪೈಕಿ ನಿಜವಾದ ಸ್ಕಾಲರ್ ಆಗಿರುವ ಮನಮೋಹನ್ ಸಿಂಗ್, ಸೋನಿಯಾ ನಿಷ್ಠರಾದರೂ ರಾಜಕಾರಣ ತಂತ್ರ ನಿಪುಣರಲ್ಲ. ಇವುಗಳ ಮಧ್ಯೆ, ಗುಲಾಂ ನಬಿ ಆಜಾದ್, ಕಬಿಲ್ ಸಿಬಲ್, ಆನಂದ್ ಶರ್ಮಾ, ಕರ್ನಾಟಕದವರೇ ಆದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಸೇರಿದಂತೆ ಪತ್ರಕಾರರ 23 ನಾಯಕರಿಗೆ ಸ್ಥಾನವಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯೊಬ್ಬರೇ ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ಸಾಧನೆ ಮಾಡಿದವರು ಎಂದರೆ ಅತಿಶಯೋಕ್ತಿಯಲ್ಲ.
ರಾಹುಲ್ ಬಣ
ರಾಹುಲ್ ಗಾಂಧಿಯವರ ನಿಷ್ಠರತ್ತ ಗಮನ ಹರಿಸಿದರೆ ಮುಖ್ಯವಾಗಿ ಕೇಳಿ ಬರುತ್ತಿರುವ ಹೆಸರು ಸುರ್ಜೇವಾಲಾ, ವೇಣುಗೋಪಾಲ್. ಇವರನ್ನು ಹೊರತು ಪಡಿಸಿದರೆ, ರಾಹುಲ್ ಗಾಂಧಿಯವರ ಟ್ವಿಟರ್ ಅಕೌಂಟ್ ನ ಗೇಟ್ ಕೀಪರ್ ಎಂದೇ ಹೆಸರಾಗಿರುವ ನಿಖಿಲ್ ಆಳ್ವ (ಮಾರ್ಗರೇಟ್ ಆಳ್ವ ಪುತ್ರ), ಮಾಜಿ ಹೂಡಿಕೆ ತಜ್ಞ ಅಲಂಕಾರ್ ಸವಾಯಿ, ವ್ಯೂಹಾತ್ಮಕ ಸಲಹೆಗಾರ ಸಚಿನ್ ರಾವ್, ಆಕ್ಸ್ ಫರ್ಡ್ ವಿವಿ ಖ್ಯಾತಿಯ ಕೌಶಲ್ ಕಿಶೋರ್ ವಿದಾರ್ಥೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕಾಲದಲ್ಲಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದ ಸ್ಯಾಮ್ ಪಿತ್ರೋಡ (ಅಮೆರಿಕದಲ್ಲಿ ಭಾರತೀಯ ಸಂಜಾತರ ಜತೆಗಿನ ಸಂವಾದ ಕಾರ್ಯಕ್ರಮ ಏರ್ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ಪಿತ್ರೋಡ ವಹಿಸಿದ್ದರು).
ಆತಂಕ ಆರಂಭ
ಯಾವಾಗ ರಾಹುಲ್ ಗಾಂಧಿಯವರು (ಅಧ್ಯಕ್ಷರಾಗಿದ್ದ ಸಂದರ್ಭ) ಕೌಶಲ್, ಸವಾಯಿ, ಪಿತ್ರೋಡಾ, ಆಳ್ವ ಮೊದಲಾದವರನ್ನು ಎಐಸಿಸಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲು ಆರಂಭಿಸಿದರೋ ಆಗ ಹಳೆ ಹುಲಿಗಳಿಗೆ ನಡುಕ, ಆತಂಕ ಆರಂಭವಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ.
ಹೀಗಾಗಿ ಕೋರ್ ಟೀಮ್ ರಾಹುಲ್ ಗಾಂಧಿ ಎಂಬ ಹೊಸ ಬಣ ಕಾಂಗ್ರೆಸ್ ನಲ್ಲಿ ಹುಟ್ಟಿಕೊಂಡಿತು. ಅದರಲ್ಲಿ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಪುತ್ರ ಗೌರವ್ ಗೊಗೋಯ್, ಅಜಯ್ ಮಕನ್, ಸುಶ್ಮಿತಾ ದೇವ್ (ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ), ಶ್ರೀನಿವಾಸ ಬಿ.ವಿ, ತಮಿಳುನಾಡಿನಲ್ಲಿ ವೈಕೋ ಅವರನ್ನೇ ಸೋಲಿಸಿದ್ದ ಮಣಿಕಾ ಟಾಗೋರ್, ರಾಜಸ್ತಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಕರ್ನಾಟಕದ ಮಾಜಿ ಸಂಸದ ರಾಜೀವ್ ಗೌಡ ಹೀಗೆ ಯುವ ಪಡೆಯನ್ನೇ ರಚಿಸಿದ ರಾಹುಲ್, ಹಳೆ ಹುಲಿಗಳು ಮತ್ತು ಅವರ ಹಳಸಲು ಚಿಂತನೆಗಳನ್ನು ಹಿಂದಕ್ಕೆ ಹಾಕಿ, ಕಾಂಗ್ರೆಸ್ ಗೆ ಮತ್ತೆ ಜೀವ ಕಳೆ ನೀಡಲು ಮುಂದಾಗಿದ್ದರು. ಇದುವೇ ಪತ್ರಕಾರ ರಾಜಕಾರಣಿಗಳ ಕೋಪಕ್ಕೆ ಕಾರಣವಾಯಿತು.
ಹೀಗಾಗಿ ಸೋನಿಯಾ ಗಾಂಧಿಯವರ ಅನಾರೋಗ್ಯದ ನಡುವೆ ಅವರನ್ನು ಹೊರತು ಪಡಿಸಿ ರಾಹುಲ್ ಗಾಂಧಿ ಅಧ್ಯಕ್ಷ ಪಟ್ಟಕ್ಕೇರಿದರೆ ಖಚಿತವಾಗಿಯೂ ತಮಗೆ ಕಿಮ್ಮತ್ತೂ ಬೆಲೆ ಸಿಗುವುದಿಲ್ಲ ಎಂಬ ಆತಂಕ ಅವರಲ್ಲಿ ಉಂಟಾಗಿದ್ದೇ ಈ ಪತ್ರ ವ್ಯವಹಾರದ ರಾಜಕಾರಣಕ್ಕೆ ಕಾರಣ ಎಂದೇ ಹೇಳಬೇಕಾಗುತ್ತದೆ.
ವಿಶ್ವದ ಅತಿ ಉದ್ದದ ಗಡಿ ಭಾಗವನ್ನು ಹಂಚಿಕೊಂಡಿರುವ ಭಾರತ-ಚೀನಾದ ಈ ಭಾಗದಲ್ಲಿ ಕಳೆದ ಸುಮಾರು 45 ವರ್ಷಗಳಿಂದ ಗುಂಡು ಹಾರಿರಲೇ ಇಲ್ಲ. ಆದರೆ ಈಗ ಗುಂಡಿನ ಮೊರೆತ ಕೇಳಿಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಉಭಯ ದೇಶಗಳು ಕೂಡ ಇದನ್ನು ಅಲ್ಲಗಳೆಯುತ್ತಿವೆ ಮತ್ತು ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.
ಗಡಿ ಇತಿಹಾಸ
ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಮಾಡಿದ ಅನಾಹುತಗಳು ಒಂದೆರಡಲ್ಲ. ಇವುಗಳ ಪೈಕಿ ಭಾರತ-ಚೀನಾ ಗಡಿ ವಿವಾದವೂ ಕೂಡ ಒಂದು. 1914ರಲ್ಲಿ ಬ್ರಿಟಿಷ್ ಅಧಿಕಾರಿ ಹೆನ್ರಿ ಮೆಕ್ ಮಹನ್ ಈ ಗಡಿ ರೇಖೆಯನ್ನು ಸಿದ್ಧ ಪಡಿಸಿದ್ದರು. ಆದರೆ ಆಗಲೂ ಚೀನಾ ಇದನ್ನು ಒಪ್ಪಿರಲಿಲ್ಲ. ಪ್ರಸಕ್ತ ಚೀನಾ ಸುಮಾರು 90,000 ಚದರ ಕಿ.ಮೀ. ಜಾಗವನ್ನು ತನ್ನದೆಂದೇ ಹೇಳಿಕೊಳ್ಳುತ್ತಿದೆ. ಇದು ಬಹುತೇಕ ನಮ್ಮ ಅರುಣಾಚಲ ಪ್ರದೇಶದಲ್ಲಿರುವ ಜಾಗವಾಗಿದೆ. ಇದನ್ನು ಹೊರತು ಪಡಿಸಿದರೆ ಸುಮಾರು 38 ಸಾವಿರ ಚದರ ಕಿಮೀ. ಜಾಗ ಚೀನಾದ ನಿಯಂತ್ರಣದಲ್ಲಿದೆ. ಈಗ ಗದ್ದಲ ನಡೆಯುತ್ತಿರುವ ಲಡಾಕ್ ಪ್ರದೇಶದ ಅಕ್ಸಾ ಚಿನ್ ಅಥವಾ ಅಕ್ಸೈ ಚಿನ್ ಪ್ರದೇಶದ ಭಾಗ ಇದಾಗಿದೆ.
ಅತಿ ಎತ್ತರದ ಗಡಿ
ಭಾರತ ಚೀನಾ ನಡುವಿನ ಗಡಿ ಭಾಗವು ಜಗತ್ತಿನ ಅತಿ ಎತ್ತರದ ಗಡಿ ಭಾಗವೆಂದೇ ಪರಿಗಣಿತವಾಗಿದೆ. ಸುಮಾರು 21,000 ಅಡಿ ಎತ್ತರದಲ್ಲಿರುವ ಈ ಪ್ರದೇಶದ ಹಿಮಾಲಯದ ಕಡಿದಾಡ ಪರ್ವತ ಪ್ರದೇಶ ಮತ್ತು ಅತಿ ಶೀತದಿಂದ ಕೂಡಿರುವ (ಮೈನಸ್ ಡಿಗ್ರಿ ಸೆಲ್ಸಿಯಸ್) ಭಾಗವಾಗಿದೆ. ಈ ಹಿಂದೆ 1962ರಲ್ಲಿ ಭಾರತ-ಚೀನಾ ನಡುವೆ ಯುದ್ಧವಾಗಿತ್ತು. ಆದರೆ ಆ ಬಳಿಕ ಉಭಯ ದೇಶಗಳು ಶಾಂತಿ ಪ್ರಕ್ರಿಯೆಯಲ್ಲಿ ತೊಡಗಿ ಗಡಿ ಭಾಗದಲ್ಲಿ ಅಘೋಷಿತ ಕದನ ವಿರಾಮಕ್ಕೆ ಮುಂದಾಗಿದ್ದವು. 1980ರ ದಶಕದಲ್ಲಿ ನಡೆದ ಒಂದು ಚಿಕ್ಕ ಘಟನೆಯನ್ನು ಬಿಟ್ಟರೆ ಇದುವರೆಗೆ ಚೀನಾ-ಭಾರತ ಗಡಿ ಭಾಗದಲ್ಲಿ ಯೋಧರು ಕೈ-ಕೈ ಮಿಲಾಯಿಸಿದ ಉದಾಹರಣೆಯೇ ಇಲ್ಲ. 2017ರಲ್ಲಿ ಸಂಭವಿಸಿದ ದೋಕ್ಲಾಮ್ ಕೂಡ ಮಾತುಕತೆಯ ಮೂಲಕ ಬಗೆಹರಿಸಿದಿತ್ತು.
ಹಲವು ವಿಭಾಗ
ಭಾರತ-ಚೀನಾ ಗಡಿ ವಿಷಯಕ್ಕೆ ಬಂದರೆ ಇಲ್ಲಿ ಹಲವು ಪ್ರದೇಶಗಳು ಬರುತ್ತವೆ. ಮುಖ್ಯವಾಗಿ ಎದುರಾಗುವುದೇ ಅರುಣಾಚಲ ಪ್ರದೇಶ ಸೇರಿದ ಪೂರ್ವ ವಲಯ. ಚೀನಾದ ಜತೆಗೆ ಇದು 1,129 ಕಿ.ಮೀ. ಗಡಿ ಪ್ರದೇಶವನ್ನು ಹೊಂದಿದೆ. 1962ರ ಯುದ್ಧಕ್ಕೆ ಮೂಲ ಕಾರಣವಾಗಿದ್ದೇ ಚೀನಾ ಇದನ್ನು ತನ್ನ ಭೂಭಾಗವೆಂದು ಪ್ರತಿಪಾದಿಸಿದ್ದು. ಆಗ ಕೆಲವು ಪ್ರದೇಶ ಭಾರತದ ಕೈ ತಪ್ಪಿ ಹೋಗಿತ್ತು. ಹೀಗಾಗಿಯೇ ವಾಸ್ತವ ನಿಯಂತ್ರಣ ರೇಖೆ ಎಂಬ ಹೊಸ ಶಬ್ದದ ಉತ್ಪತ್ತಿಯಾಯಿತು.
ಕೇಂದ್ರ ಭಾಗಕ್ಕೆ ಬಂದರೆ 4,600 ಕಿ.ಮೀ. ಎತ್ತರದಲ್ಲಿರುವ ದೋಕ್ಲಾಮ್. ಸಿಕ್ಕಿಂ ರಾಜ್ಯದ ಗಡಿ ಭಾಗದಲ್ಲಿರುವ ನಾತು ಲಾ ಪಾಸ್ ಮೂಲಕ ಈ ಭಾಗದ ಮೇಲೆ ಹಿಡಿತ ಸಾಧಿಸಲು ಚೀನಾ ಬಯಸಿದೆ. 2017ರಲ್ಲಿ ಭಾರತ-ಚೀನಾ ಯೋಧರ ನಡುವೆ ಚಿಕ್ಕ ಪ್ರಮಾಣದ ಸಂಘರ್ಷ ಬಿಟ್ಟರೆ ಈ ಭಾಗ ಯಾವತ್ತೂ ಶಾಂತಿಯುತವಾಗಿಯೇ ಇದೆ.
ಈಗ ಸಂಘರ್ಷದ ಕೇಂದ್ರ ಬಿಂದುವಾಗಿರುವ ಲಡಾಕ್, ಚೀನಾದ ಜತೆಗಿನ ಗಡಿಯ ಪಶ್ಚಿಮ ವಲಯಕ್ಕೆ ಬರುತ್ತದೆ. 5,300 ಮೀಟರ್ ಎತ್ತರದ ಈ ಭೂ ಪ್ರದೇಶವನ್ನು ಇತ್ತೀಚೆಗಷ್ಟೇ ಭಾರತ ಸರಕಾರ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಹಿಮಾಚಲ ಪ್ರದೇಶ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಇದನ್ನು ಕೇಂದ್ರಾಡಳಿತ ಪ್ರದೇಶವೆಂದು ನರೇಂದ್ರ ಮೋದಿ ಸರಕಾರ ಘೋಷಿಸಿದ ಕೂಡಲೇ, ಪಾಕಿಸ್ತಾನ ಸ್ನೇಹಿಯಾದ ಚೀನಾ ಕೊತ ಕೊತನೆ ಕುದಿಯಲಾರಂಭಿಸಿತು. ಅದಾದ ಬಳಿಕವೇ ಆರಂಭವಾಗಿದ್ದು, ಕೆಂಪು ರಾಷ್ಟ್ರದ ಈ ಹೊಸ ಪ್ರಹಸನ. ಪಂಗಾಗ್ ತ್ಸು ಸರೋವರ, ಗುಲ್ವಾನ್ ಕಣಿವೆ ದೆಪ್ಸಂಗ್, ಡೆಮ್ಚಕ್ ಪ್ರದೇಶದಲ್ಲಿ ಚೀನಿ ಯೋಧರು ಬಂಕರ್ ರಚಿಸಿ, ಶಸ್ತ್ರ ಸಜ್ಜಿತ ವಾಹನಗಳು ಮತ್ತು ಮದ್ದು ಗುಂಡುಗಳನ್ನು ಸಾಗಿಸಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಭಾರತ ಈ ಭಾಗದಲ್ಲಿ ಹೆದ್ದಾರಿ, ವಿಮಾನ ನಿಲ್ದಾಣ (ಯುದ್ಧ ವಿಮಾನ) ಸೇರಿದಂತೆ ಹಲವು ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಿತು. ಆಗಲೇ ಆರಂಭವಾಗಿದ್ದು ಮೊದಲ ಹಂತದ ಸಂಘರ್ಷ.
ಕಾಶ್ಮೀರದಲ್ಲೂ ಹಸ್ತಕ್ಷೇಪ
ಜಮ್ಮು-ಕಾಶ್ಮೀರ ವಿವಾದ ಎಲ್ಲರಿಗೂ ತಿಳಿದಿದ್ದೇ. ಭಾರತ-ಪಾಕಿಸ್ತಾನ ನಡುವೆ ಎರಡು ಪೂರ್ಣ ಪ್ರಮಾಣದ ಯುದ್ಧಗಳಿಗೆ ಕಾರಣವಾದ ಈ ವಿವಾದದ ಜತೆಗೆ ಕೂಡ ಚೀನಾದ ಕುಟಿಲ ನಂಟಿದೆ. ಕಾಶ್ಮೀರದ ತೀರಾ ಚಿಕ್ಕ ಭಾಗವಾದ ಅಕ್ಸೈ ಚಿನ್ ಎಂದು ಕರೆಯಲ್ಪಡುವ ಪ್ರದೇಶದ ಮೇಲೆ ಚೀನಾ ನಿಯಂತ್ರಣ ಹೊಂದಿದೆ ಎಂಬುದು ಇಲ್ಲಿ ಸ್ಮರಣಾರ್ಹ.
ವಟ ವಟ ವಟಾ ಅಂತ ಒಳ್ಳೇ ಹೊಸ ನೀರ್ ಕಪ್ಪೆಗಳ ಥರ ವಟಗುಡ್ತಾಇರ್ತೀರ . ಕಿಟಕೀ ನಲ್ಲೇನ್ ಕೋತಿ ಕುಣೀತಿದೀಯಾ ? ಬರ್ತಾ ಬರ್ತಾ ರಾಯರ್ ಕುದುರೆ ಕತ್ತೆ ಆಯ್ತು . ಹೋಂ ವರ್ಕ್ ಮಾಡದೇ ಮನೇಲ್ ಏನ್ ದನ ಕಾಯ್ತಿರ್ತೀರಾ ? ಬೆಲ್ ಹೊಡೆದಿದ್ದೇ ಕುರಿಗಳ ಥರ ನುಗ್ತೀರಲ್ಲೋ . ರಜೆ ಬಂತೂ ಅಂದ್ರೆ ಸಾಕು ಬೀದಿ ನಾಯಿ ಸುತ್ತಾಡದಂಗ್ ಸುತ್ತಾಡ್ತಾ ಇರ್ತೀರಾ . ಎಷ್ಟು ಹೊಡೆದ್ರೂ ಅಷ್ಟೇ ಬಡೆದ್ರೂ ಅಷ್ಟೇ ಎಮ್ಮೆ ಚರ್ಮ ನಿಮ್ದು . ಒಳ್ಳೇ ಕರ್ಡೀಗಳ ಥರ ಅಗಿದೀರ ನಾಳೆ ಕಟಿಂಗ್ ಮಾಡಿಸ್ಕೊಂಡ್ ಬಂದ್ರೆ ಸರಿ..
ಹೀಗೆ ಸದಾ ಒಂದಿಲ್ಲೊಂದು ಪ್ರಾಣೀನ ಹೋಲಿಸ್ಕೊಂಡು ನಮ್ ಟೀಚರ್ಗಳು ನಮ್ಮನ್ನ ಪಳಗಿಸಿರಲಿಲ್ಲ ಅಂದಿದಿದ್ರೆ ನಾವು ಇಂದು ಮನುಷ್ಯರಾಗಿ ಇರ್ತಿರ್ಲಿಲ್ಲ .
ಇವತ್ತು ನಾವು ಏನಾಗಿದೀವೋ ಅದಕ್ಕೆ ಕಾರಣ ನಮ್ಮ ಶಿಕ್ಷಕರು . ಪ್ರಾಥಮಿಕ ಪ್ರೌಢಶಾಲೆಯಿಂದಿಡಿದು ಪದವಿಪೂರ್ವ ದವರೆಗೂ ತುಂಬಾನೇ ಮುತುವರ್ಜಿ ತೋರುತ್ತಿದ್ದರು …..ಓದು ಬರವಣಿಗೆ.. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು , ತಿದ್ದುತ್ತಿದ್ದರು , ತಿಳಿಸುತ್ತಿದ್ದರು , ಓದಿಸುತ್ತಿದ್ದರು , ಬೋಧಿಸುತ್ತಿದ್ದರು .
ಚೆನ್ನಾಗಿ ಓದಿ ತಂದೆ ತಾಯಿಗೆ ಒಳ್ಳೇ ಹೆಸರು ತಗೊಂಡುಬನ್ನಿ ಅಂತ ನಿಸ್ವಾರ್ಥವಾಗಿ ಕೇಳ್ಕೋತಿದ್ರು . ಓದಿನಲ್ಲೋ ಕ್ರೀಡೆಯಲ್ಲೋ ಫಸ್ಟ್ ಬಂದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು . ಹೌದಲ್ವಾ ….. ಅಪ್ಪ ಅಮ್ಮ ಹೊಟ್ಟೆಗೆ ಊಟ ತುಂಬ್ತಾರೆ ಆದರೆ ಶಿಕ್ಷಕರು ನಮ್ಮಲ್ಲಿ ಸಮಾನತೆ ಸೃಜನಶೀಲತೆ ಸಾಕ್ಷರತೆ ವಿನಯತೆ ವಿಧೇಯತೆ ಔದಾರ್ಯತೆ ಸೌಹಾರ್ದತೆ ಸ್ಪರ್ಧಾತ್ಮಕತೆ ಎಲ್ಲಕ್ಕಿಂತಾ ಹೆಚ್ಚಾಗಿ ಮಾನವೀಯತೇನ ತುಂಬಿ, ಯೋಗ್ಯರನ್ನಾಗಿ ತಯಾರು ಮಾಡಿ ಸಮಾಜದಲ್ಲಿ ಬದುಕಲು ಬಿಡುತ್ತಾರೆ .
ಸ್ಕೂಲಲ್ಲಿ ಟೀಚರ್ಗಳಾಗಿ , ಕಾಲೇಜುಗಳಲ್ಲಿ ಲೆಕ್ಚರರ್ಗಳಾಗಿ , ಕ್ರೀಡೆಯಲ್ಲಿ ಕೋಚ್ ಗಳಾಗಿ , ಸಂಗೀತದಲ್ಲಿ ಗುರುಗಳಾಗಿ , ಕೆಲಸದಲ್ಲಿ ಮಾರ್ಗದರ್ಶಕರಾಗಿ ಸದಾ ನಮ್ಮೊಂದಿಗೆ ಇರ್ತಾರೆ . ಮೂವತ್ತಾರು ಮೂವತ್ತೆಂಟು ವರ್ಷ ನಿಸ್ವಾರ್ಥ ಸೇವೆ ಮಾಡಿ ರಿಟೈರ್ಡ್ ಆಗಿರ್ತಾರೆ.
ಒಂದು ಊರಲ್ಲೋ ಯಾವುದೋ ಕಾರ್ಯಕ್ರಮದಲ್ಲೋ ಸಿಕ್ಕಾಗ ನಾವು ನಮಸ್ಕಾರ ಮಾಡಿ ಪ್ರೀತಿಯಿಂದ ಮಾತಾಡಿಸಿದಾಗ ಅವರು ಕೇಳೋದು ಎರಡೇ ಪ್ರೆಶ್ನೆ ಒಂದು ಏನ್ ಮಾಡ್ಕೊಂಡಿದೀಯಪ್ಪಾ ? ಇನ್ನೊಂದು ತಂದೆ ತಾಯೀನ ಚೆನ್ನಾಗಿ ನೋಡ್ಕೊಪ್ಪ ಅಂತ .
ನಾವು ಗಳಿಸುವ ಆಸ್ತಿ ಶಾಶ್ವತವಲ್ಲ ಆದರೆ ಅವರು ಕಲಿಸುವ ಜ್ಞಾನ ಶಾಶ್ವತ . ಗುರು ಇಲ್ಲದೇ ಬದುಕಿನ ಗುರಿ ಇಲ್ಲ . ಮೊನ್ನೆ ಜರುಗಿದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ನಮ್ಮೆಲ್ಲರ ಗುರುಗಳಿಗೆ.
ಕಿರಣ್ ಮಾಡಾಳು
ಈ ಅಂಕಣದೊಂದಿಗೆ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156
ಭಾರತ-ಚೀನಾ ಗಡಿ ಪ್ರದೇಶ (ವಾಸ್ತವ ನಿಯಂತ್ರಣ ರೇಖೆ)ದಲ್ಲಿ ದಿನೇ ದಿನೇ ಪ್ರಕ್ಷುಬ್ಧ ಪರಿಸ್ಥಿತಿ ಹೆಚ್ಚುತ್ತಿದೆ. ಗುರುವಾರ ಸೆ. 10ರಂದು ಅತ್ಯಾಧುನಿಕ ರಫಲ್ ಯುದ್ಧ ವಿಮಾನ ಭಾರತೀಯ ಸೇನೆಯ ಬತ್ತಳಿಕೆಯನ್ನು ಸೇರಿದೆ. ಹೀಗಾಗಿ ರಫಲ್ ಯುದ್ಧ ವಿಮಾನ ಮತ್ತು ಚೀನಾದ ಇತ್ತೀಚಿನ ನಡವಳಿಕೆಯನ್ನು ಒಂದಿಷ್ಟು ಅವಲೋಕನ ಮಾಡಬೇಕಾಗುತ್ತದೆ.
ಈಗಾಗಲೇ ಟುಟು ರೆಜಿಮೆಂಟ್ ಯೋಧರನ್ನು ನಿಯೋಜಿಸಿರುವ ಭಾರತ ಈ ಮೂಲಕ ಚೀನಾದ ಷಡ್ಯಂತ್ರಕ್ಕೆ ತಕ್ಕ ಪ್ರತ್ಯುತ್ತರವನ್ನೇ ನೀಡಿದೆ. ಮಾತ್ರವಲ್ಲ ಕಾರ್ಗಿಲ್ ಯುದ್ಧದ ಸಮಯದಲ್ಲಿ ಆದ ತಪ್ಪು ಮರುಕಳಿಸದಂತೆ ಮಾಡಿಕೊಂಡಿದೆ. ಆಗ ಪಾಕಿಸ್ತಾನ ಪಡೆಗಳು ರಹಸ್ಯವಾಗಿ ಕಾರ್ಗಿಲ್ ಬೆಟ್ಟದ ತುದಿಯನ್ನು ತಲುಪಿಯಾಗಿತ್ತು. ಅದನ್ನು ಮರು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸೇನೆ ಮುಂದುವರಿದರೆ ಮೇಲೇರುತ್ತಿದ್ದಂತೆಯೇ ಮೇಲಿನಿಂದ ಸುಲಭವಾಗಿ ನಮ್ಮ ಯೋಧರನ್ನು ಟಾರ್ಗೆಟ್ ಮಾಡುತ್ತಿತ್ತು. ಹೀಗಾಗಿಯೇ ಕಾರ್ಗಿಲ್ ಯುದ್ಧ ವಿಜಯಕ್ಕೆ ಭಾರತ ಹರ ಸಾಹಸ ಮಾಡಲೇಬೇಕಾಯಿತು. ಹಲವು ಯೋಧರು ಬಲಿದಾನಗೈಯಬೇಕಾಯಿತು.
ಕಲಿತ ಪಾಠ
ಆದರೆ ಕಾರ್ಗಿಲ್ ಯುದ್ಧದಿಂದ ಭಾರತ ಪಾಠ ಕಲಿತಿದೆ. ಹೀಗಾಗಿಯೇ ಲಡಾಕ್ ವಲಯದಲ್ಲಿ ಚೀನಾ ಸೇನೆಯು ಮುಂದುವರಿಯುತ್ತಿದ್ದಂತೆಯೇ ನಮ್ಮ ಯೋಧರು ಆಯಕಟ್ಟಿನ ಮತ್ತು ಹಿಮಚ್ಛಾದಿತ ಪರ್ವತ ಶ್ರೇಣಿಯ ಎತ್ತರದ ಪ್ರದೇಶವಾದ (ಫಿಂಗರ್-2 ಮತ್ತು 3 ಹಾಗೂ 4, 8) ಪಾಂಗಾಂಗ್ ತ್ಸು ಮೇಲೆ ಹಿಡಿತ ಸಾಧಿಸಿದೆ. ತಡೆಯೊಡ್ಡಲು ಬಂದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಮೇಲೆ ಗುಂಡು ಹಾರಿಸಲು ಹಿಂಜರಿಯಲಿಲ್ಲ. ಅದಕ್ಕಾಗಿ ವಾಸ್ತವ ನಿಯಂತ್ರಣ ರೇಖೆಯನ್ನೂ ದಾಟಿ ಮುಂದೆ ಹೋಗಿತ್ತು ಎಂದು ಹೇಳಲಾಗುತ್ತಿದೆ. ಈ ಕುರಿತು ರಾಜತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಉಭಯ ದೇಶಗಳು ತಮ್ಮದೇ ವಾದ ಮುಂದಿಡುತ್ತಿವೆ .
ಆದರೆ ಭಾರತೀಯ ಸೇನೆ ಆ ಪ್ರದೇಶವನ್ನು ವಶಪಡಿಸಿಕೊಂಡು ತಳವೂರಿದ್ದು ಮಾತ್ರ ನಿಜ. ಸುಮಾರು 8 ಕಿ.ಮೀ. ಉದ್ದದ ಈ ಭಾಗದಲ್ಲಿ ತನ್ನ ಪಾರಮ್ಯ ಸಾಧಿಸುವ ಮೂಲಕ ಚೀನಾಕ್ಕೆ ಭಾರತ ಸರಿಯಾದ ತಿರುಗೇಟು ನೀಡಿದೆ. ಇದರಿಂದಾಗಿ ಚೀನಿಯರು ಬೆಟ್ಟ ಹತ್ತುವ ಸಾಹಸ ಮಾಡುವ ಹಾಗಿಲ್ಲ. ಹಾಗೇನಾದರೂ ಆದರೆ ಮೇಲಿನಿಂದ ಸುಲಭವಾಗಿ ಭಾರತೀಯ ಯೋಧರು, ಕೆಂಪು ಸೇನೆಯನ್ನು ಟಾರ್ಗೆಟ್ ಮಾಡಲು ಸಾಧ್ಯವಾಗುತ್ತದೆ ಮಾತ್ರವಲ್ಲ ಅದರ ಚಲನವಲನವನ್ನು ಕೂಡ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಇದಲ್ಲದೆ ಪರ್ವತ ಪ್ರದೇಶದ ಯುದ್ಧದಲ್ಲಿ ಬಹುಮುಖ್ಯ ಪಾತ್ರ ವಹಿಸಬಹುದಾದ ದೆಪ್ಸಂಗ್- ದೌತ್ ಬೆಗ್ ಆಲ್ಡೀ ಎಂಬ ಆಯಕಟ್ಟಿನ ಪ್ರದೇಶದಲ್ಲಿ ಚೀನಾ ಈಗಾಗಲೇ ಸೇನಾ ಪಡೆಯನ್ನು ನಿಯೋಜಿಸಲು ಆರಂಭಿಸಿದೆ. ಇದಕ್ಕೆಪ್ರತಿಯಾಗಿ ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನುಕಟ್ಟೆಚ್ಚರದಿಂದ ಭಾರತ ನೋಡುತ್ತಿದ್ದು, ಇದಕ್ಕಾಗಿ ಈಗಾಗಲೇ ಅಲ್ಲಿಗೆ ಸಮೀಪದ ಪ್ರದೇಶಕ್ಕೇ ಯುದ್ಧ ಟ್ಯಾಂಕರ್ ಗಳನ್ನು ರವಾನಿಸಿದೆ.
ಸುಮಾರು 14-17 ಸಾವಿರ ಅಡಿ ಎತ್ತರದ ಈ ಪರ್ವತ ಪ್ರದೇಶದಲ್ಲಿ ಏಳು ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದೆ. ಈ ಮೂಲಕ ಚೀನಾ ನಡೆಸುವ ಪ್ರತಿಯೊಂದು ವಿದ್ಯಮಾನ ಭಾರತಕ್ಕೆ ಗೊತ್ತಾಗಲಿದೆ.
ಷಡ್ಯಂತ್ರಕ್ಕೆ ಪ್ರತಿತಂತ್ರ
ಚೀನಾದ ಷಡ್ಯಂತ್ರದ ಅರಿವು ಭಾರತಕ್ಕೆ ಇದ್ದೇ ಇದೆ. ಹೀಗಾಗಿಯೇ ಇಸ್ರೇಲ್ ನಿಂದ ಅತ್ಯಾಧುನಿಕ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿದೆ. ಕಳೆದ ಜೂನ್ 27ರಂದೇ ಈ ಕುರಿತ ಒಪ್ಪಂದವು ಅಂತಿಮ ರೂಪ ಪಡೆದಿದೆ. ಈ ಆಧುನಿಕ ರಕ್ಷಣಾ ವ್ಯವಸ್ಥೆಯು ಶತ್ರು ರಾಷ್ಟ್ರದ ಕಡೆಯಿಂದ ಬರುವ ಯಾವುದೇ ವಿಮಾನ, ಕ್ಷಿಪಣಿ, ದ್ರೋಣ್ ಸೇರಿದಂತೆ ಎಲ್ಲಾ ವಾಯು ಮಾರ್ಗದಲ್ಲಿ ಎದುರಾಗಬಹುದಾದ ದಾಳಿಯನ್ನು ಅರ್ಧ ದಾರಿಯಲ್ಲೇ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇನ್ನೂ ಹೆಸರಿಡದ ಈ ರಕ್ಷಣಾ ವ್ಯವಸ್ಥೆಯನ್ನು ಲಡಾಕ್ ವಲಯದಲ್ಲಿ ಅಳವಡಿಸಲು ಭಾರತ- ಇಸ್ರೇಲ್ ಒಪ್ಪಂದಕ್ಕೆ ಬಂದಿವೆ ಎಂದು ರಕ್ಷಣಾ ಸಚಿವಾಲಯದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಇದೇನಾದರೂ ಸಾಕಾರವಾದರೆ, ಚೀನಾದ ಇಂತಹ ಏರ್ ಬೋರ್ನ್ ಮ್ಯುನಿಶನ್ಸ್ (ಯುದ್ಧ ಸಾಮಗ್ರಿ) ಡಿಸ್ಪೆನ್ಸರ್ ಎಂಬ ಅಸ್ತ್ರ ಅರ್ಧ ದಾರಿಯಲ್ಲೇ ಅಂದರೆ ಭಾರತದ ಗಡಿ ಪ್ರವೇಶಿಸುವ ಮೊದಲೇ ಛಿದ್ರವಾಗುವುದರಲ್ಲಿ ಸಂಶಯವಿಲ್ಲ.
ಸದ್ಯದ ಮಟ್ಟಿಗೆ ಭಾರತದ ವಾಯು ಪಡೆ ಎಸ್ಪಿವೈಡಿಇಆರ್ ಎಂಬ ಭೂಮಿಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ. ಉತ್ತರ ಮತ್ತು ಪಶ್ಚಿಮ ಗಡಿ ಭಾಗದಲ್ಲಿ ಇದನ್ನು ಈಗಾಗಲೇ ನಿಯೋಜಿಸಲಾಗಿದೆ. ಈಗಾಗಲೇ ಪೂರ್ವ ಕರಾವಳಿಯ ಸೂರ್ಯಾಲಂಕಾ ವಾಯು ನೆಲೆಯಿಂದ ಇದನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಬಾಲಕೋಟ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದ ಕ್ಷಿಪಣಿ ವ್ಯವಸ್ಥೆ ಇದು ಎಂಬುದು ಇಲ್ಲಿ ಗಮನಾರ್ಹ.
ಈಗ ಬರಾಕ್-8 ಎಂಬ ವೈಮಾನಿಕ ರಕ್ಷಣಾ ವಸ್ಥೆಯನ್ನು ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿದ್ದು, ಸದ್ಯವೇ ಅದು ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.ಎಲ್ಆರ್ ಎಸ್ಎಂ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು ನೆಲ, ಆಕಾಶ ಮತ್ತು ಸಮುದ್ರ ವಲಯಗಳಲ್ಲೂ ದೇಶಕ್ಕೆ ರಕ್ಷಣೆ ನೀಡುತ್ತವೆ. ಇದಲ್ಲದೆ ಈಗಾಗಲೇ ಭಾರತವು ಅಮರಿಕದ ಪಿಎಸಿ-3, ಎನ್ ಎಎಸ್ ಎಎಂಎಸ್-2 ಮೊದಲಾದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಹೀಗಾಗಿ ಚೀನಾದ ಹೊಸ ದಾಳಿ ತಂತ್ರಕ್ಕೆ ಪ್ರತಿತಂತ್ರವಾಗಿ ಭಾರತ ಇನ್ನಷ್ಟು ಅತ್ಯಾಧುನಿಕ ಶಸ್ತ್ರಗಳನ್ನು ಹೊಂದಿದೆ ಎಂದು ಹೇಳಬಹುದು.
ಚೀನಾದ ತಂತ್ರ
ಚೀನಾವು ಈಗ ಏರ್ ಬೋರ್ನ್ ಮ್ಯುನಿಶನ್ಸ್ (ಯುದ್ಧ ಸಾಮಗ್ರಿ) ಡಿಸ್ಪೆನ್ಸರ್ ಎಂಬ ದ್ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಆಕಾಶದಿಂದ ಭೂಮಿಗೆ ಪ್ರಯೋಗಿಸಲ್ಪಡುವ ಕ್ಷಿಪಣಿಯಾಗಿದ್ದು, ಯುದ್ಧ ವಿಮಾನದ ಮೂಲಕ ರವಾನೆಯಾಗುತ್ತದೆ. ವೈರಿಯ ವಾಯು ನೆಲೆಗಳ ಮೇಲೆ ಏಕ ಕಾಲದಲ್ಲಿ ನೂರಾರು ಬಾಂಬುಗಳನ್ನು ಹಾಕುವ ಸಾಮರ್ಥ್ಯ ಹೊಂದಿದೆ. ಇದರಿಂದ ಶತ್ರು ದೇಶದ ವಾಯು ನೆಲೆಯಲ್ಲಿ ಇರುವ ಜೆಟ್ ವಿಮಾನಗಳು ಧ್ವಂಸಗೊಳ್ಳುವ ಮೂಲಕ ವಾಯು ದಾಳಿಯ ಸಾಮರ್ಥ್ಯವನ್ನು ಶೂನ್ಯಕ್ಕೆ ಇಳಿಸುವ ಸಾಧ್ಯತೆಯಿದೆ.
ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ಈ ಕ್ಷಿಪಣಿಯು ಸುಮಾರು 500 ಕೆ.ಜಿ. ತೂಕದ ಬಾಂಬ್ ಗಳನ್ನು ಹೊತ್ತೊಯ್ಯಬಲ್ಲುದು. ಒಮ್ಮೆ ಕ್ಷಿಪಣಿಯಿಂದ ಬೇರ್ಪಟ್ಟರೆ ಆಗ ನಾನಾ ಗುರಿಗಳಿಗೆ ಬಾಂಬು ಸಿಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ರಾಡಾರ್ ಕಣ್ಣಿಗೂ ಕಾಣದ ರೀತಿಯಲ್ಲಿ ಇದು ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.
ಜೂನ್ ನಿಂದಲೇ ಈ ನಿಟ್ಟಿನಲ್ಲಿ ಜೂನ್ ನಿಂದಲೇ ಪೈಲಟ್ ಗಳ ತರಬೇತಿ ಕಾರ್ಯಕ್ರಮ ಆರಂಭವಾಗಿದೆ ಎಂದು ತಿಳಿದು ಬಂದಿದೆ. ಅದರಲ್ಲೂ ಮುಖ್ಯವಾಗಿ ಶತ್ರುವಿನ ವಾಯುನೆಲೆ ಅಥವಾ ರಕ್ಷಣಾ ನೆಲೆಯನ್ನು ಪ್ರವೇಶಿಸುವ ಮೊದಲೇ ಅಂದರೆ ಸುಮಾರು 60 ಕಿ.ಮೀ. ದೂರದಿಂದಲೇ ಇದು ಬಾಂಬು ಹಾಕಬಲ್ಲುದು ಎಂಬುದು ಇಲ್ಲಿ ಗಮನಾರ್ಹ. ಹಾಗೆಂದು ಭಾರತ ಸುಮ್ಮನೆ ಕುಳಿತಿಲ್ಲ. ಈಗಾಗಲೇ ರಫಲ್ ಯುದ್ಧ ವಿಮಾನವು ಭಾರತದ ವಾಯು ಪಡೆಯ ಸಾಮರ್ಥ್ಯವನ್ನು ಹತ್ತಾರು ಪಟ್ಟು ಹೆಚ್ಚಿಸಿದೆ.
(ಚಿತ್ರ: ರಫಲ್ ಯುದ್ಧ ವಿಮಾನದ ಅಧಿಕೃತ ಸ್ವೀಕಾರ ಸಮಾರಂಭ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಇದ್ದಾರೆ)
ಮನುಷ್ಯನೊಬ್ಬನಲ್ಲಿ ಕೊರೋನಾ ಸೋಂಕನ್ನು ಕಂಡು ಹಿಡಿಯುವುದರ ಜೊತೆಗೆ ಅವರ ಸಂಪರ್ಕಕ್ಕೆ ಬಂದ ಎಲ್ಲರ ಜಾಡನ್ನು ಪತ್ತೆ ಹಚ್ಚುವುದನ್ನು ಕಾಂಟ್ಯಾಕ್ಟ್ ಟ್ರೇಸಿಂಗ್ ಅಥವಾ ಸಂಪರ್ಕ ಜಾಲ ಪತ್ತೆ ಎನ್ನುತ್ತಾರೆ.ಈ ವಿಧಾನವನ್ನು ಕೋವಿಡ್ ಗೇ ಅಲ್ಲದೆ ಹಲವು ಹಲವಾರು ರೋಗಗಳ ಹರಡುವಿಕೆಯನ್ನು ತಡೆಯಲು ಈಗಾಗಲೇ ದಶಕಗಳ ಕಾಲದಿಂದಲೂ ಉಪಯೋಗಿಸಿದ್ದಿದೆ. ಉದಾಹರಣೆಗೆ ಸಿಡುಬು ಅಥವ ಸ್ಮಾಲ್ ಪಾಕ್ಸ್ ಖಾಯಿಲೆಯ ನಿಯಂತ್ರಣದಲ್ಲಿ ಮತ್ತು ಇತರೆ ಹಲವು ಖಾಯಿಲೆಗಳ ಅಧ್ಯಯನಗಳಲ್ಲಿ ಈ ವಿಧಾನವನ್ನು ಬಳಸಲಾಗಿತ್ತು. ಇದೀಗ ಕೊರೊನಾ ಕಾರಣ ಮತ್ತೆ ಈ ಪದ ಮತ್ತು ವಿಧಾನ ಮರುಬಳಕೆಗೆ ಬಂದಿದೆ.
ಈ ವರ್ಷದ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಶಬ್ದ ಭಾರತದಲ್ಲಿ ಅತ್ಯಂತ ಬಲವಾಗಿ ಕೇಳಿಬರುತ್ತಿತ್ತು.ಆಗಿನ್ನೂ ಲಾಕ್ ಡೌನ್ ತೆರವಾಗಿರಲಿಲ್ಲ. ಮೊಟ್ಟ ಮೊದಲಿಗೆ ಮಾರ್ಚ್ 24 ರಂದು 21 ದಿನಗಳ ಲಾಕ್ ಡೌನ್ ಜಾರಿಯಾಗುವ ವೇಳೆಗೆ ಭಾರತದಲ್ಲಿ ಸುಮಾರು 500 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಏಪ್ರಿಲ್ 6 ರ ವೇಳೆಗೆ ಪ್ರತಿ ಆರು ದಿನಗಳಿಗೊಮ್ಮೆ ಇವರ ಸಂಖ್ಯೆ ದ್ವಿಗುಣವಾದರೆ, ಏಪ್ರಿಲ್ 18 ರ ವೇಳೆಗೆ ಪ್ರತಿ 8 ಗಂಟೆಗಳಿಗೊಮ್ಮೆ ಇವರ ಸಂಖ್ಯೆ ದ್ವಿಗುಣಿಸಿತ್ತು. ಕೊರೊನ ಸೋಂಕು ಬಹುತೇಕ ನಿಧಾನವಾಗಿದ್ದ ಅಥವಾ ನಿಯಂತ್ರಣದಲ್ಲಿದ್ದ ಕಾಲವದು. ಹಾಗಾಗಿ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸಿ ಕೊರೊನಾವನ್ನು ಹತ್ತಿಕ್ಕುವುದು ಅತ್ಯಂತ ಮುಖ್ಯವಾಗಿತ್ತು.
ಅದರೆ ಎಲ್ಲರಿಗೂ ಇದ್ದ ಶಂಕೆಯೆಂದರೆ ಅದು ಸ್ವಲ್ಪಕಾಲದ ವಿಚಾರ ಮಾತ್ರವೆನ್ನುವುದು. ಏಕೆಂದರೆ, ಕೊರೊನಾವನ್ನು ನಿಯಂತ್ರಿಸುವುದೆಂದರೆ ಸುಲಭದ ಮಾತಲ್ಲ. ಒಬ್ಬ ಸೋಂಕಿತನಿಂದ ಹತ್ತು ಜನರಿಗೆ ಅವರಿಂದ ನೂರುಜನಕ್ಕೆ ಮಿಂಚಿನಂತೆ ಹರಡಬಲ್ಲ ಸೋಂಕನ್ನು ತಡೆಯಬೇಕೆಂದರೆ ಎಷ್ಟು ಸಾಧ್ಯವೋ ಅಷ್ಟೂ ಜನ ಸೋಂಕಿತರನ್ನು ಪತ್ತೆ ಹಚ್ಚಬೇಕಿತ್ತು. ಆದರೆ ಕಾಣದ ವೈರಸ್ಸಿನಂತೆ ಶೇಕಡಾ 40 ಜನರಲ್ಲಿ ರೋಗ ಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ ಎಂದಿರುವಾಗ ಸೋಂಕಿತರನ್ನು ಪತ್ತೆ ಹಚ್ಚುವುದು ಹೇಗೆ? ಅವರಿಗಿದ್ದ ಒಂದೇ ಒಂದು ದಾರಿಯೆಂದರೆ, ಒಬ್ಬ ಸೋಂಕಿತ ಪತ್ತೆಯಾದ ಕೂಡಲೇ ಅವನ ಸಂಪರ್ಕಕ್ಕೆ ಬಂದವರನ್ನೆಲ್ಲ ಕೊರೊನಾ ಪರೀಕ್ಷೆಗೆ ಒಳಪಡಿಸುವುದು. ಅದರಿಂದ ಇತರೆ ಸೋಂಕಿತರನ್ನು ಪತ್ತೆ ಹಚ್ಚಿ ಅವರನ್ನ ಆರೋಗ್ಯವಂತರಿಂದ ಬೇರ್ಪಡಿಸಿ ಕ್ವಾರಂಟೈನ್ ನಲ್ಲಿಡುವುದು.
ಇದು ಮೇಲ್ನೋಟಕ್ಕೆ ಸರಳವೆನಿಸಿದರೂ ಸೋಂಕಿತರ ಸಂಪರ್ಕಕ್ಕೆ ಬರುವವರನ್ನು ಪತ್ತೆ ಹಚ್ಚುವುದು ಹೇಗೆ ? ಎನ್ನುವ ದೊಡ್ಡ ಸವಾಲು ಎದುರಾಗಿತ್ತು. ಆ ವೇಳೆಗೆ ಇದನ್ನು ಸಾಧಿಸಲು ಇತರೆ ಹಲವು ದೇಶಗಳು ಟೆಕ್ನಾಲಜಿಯ ಮೊರೆ ಹೋಗಿದ್ದರು. ಇತರೆ ಬೇರೆ ವಿಧಾನಗಳೂ ಜಾರಿಯಲ್ಲಿದ್ದವು. ಈ ದೇಶಗಳಂತೆ ಸಂಪರ್ಕ ಜಾಲದ ಪತ್ತೆಯನ್ನು ಆರಂಭಿಸಲು ಸರಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು.
ಕೊರೊನಾ ಸೋಂಕಿತರರ ಜೊತೆ ಬದುಕುವವರ ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನೂ ಪತ್ತೆಹಚ್ಚಿ ಕ್ವಾರಂಟೈನ್ ನಲ್ಲಿಡಲು ಭರದ ತಯಾರಿ ನಡೆಯಿತು. ಸಂಪರ್ಕ ಜಾಲವನ್ನು ಪತ್ತೆ ಹಚ್ಚಲು ಫೋನ್ ಗಳಲ್ಲಿ ಇಳಿಸಿಕೊಳ್ಳಬಹುದಾಗಿದ್ದ ಆರೋಗ್ಯ ಸೇತು ಆಪ್ ಅನ್ನು ಸರಕಾರ ಜಾರಿಗೆ ತಂದಿತು.ಫೋನ್ ಗಳ ಬ್ಲೂಟೂತ್ ಮತ್ತು ಲೊಕೋಷನ್ ಡೇಟ ಬಳಸುವ ಮೂಲಕ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಈ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡಿರುವ ಜನರು ಬಂದರೇ ಎಂದು ಈ ಆಪ್ ಮೂಲಕ ತಿಳಿಯಲು ಸಾಧ್ಯವಿತ್ತು. ಇದನ್ನು ಸಾಧಿಸಲು ಸೋಂಕಿತರ ಡೇಟಾವನ್ನು ಸರಕಾರ ಹೊಂದಿರಬೇಕಿತ್ತು. ಅದರ ಜೊತೆ ಈ ಆರೋಗ್ಯ ಸೇತು ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡವರ ವಿವರಗಳೂ ಸರಕಾರಕ್ಕೆ ತಿಳಿಯುತ್ತಿತ್ತು.
ಸಂಪರ್ಕ ಜಾಲ ಪತ್ತೆಯಲ್ಲಿ ಯಾರನ್ನು ಸಂದರ್ಶಿಸಲಾಗುತ್ತದೆ?
ಕಾಂಟಾಕ್ಟ್ ಟ್ರೇಸಿಂಗ್ ನಲ್ಲಿ ಈಗಾಗಲೇ ಕೋವಿಡ್ ಪರೀಕ್ಷೆಯ ಮೂಲಕ ಸೋಂಕು ಧೃಡ ಪಟ್ಟ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳ ವಿವರಗಳನ್ನು ಪತ್ತೆ ಹಚ್ಚಿ ಸಂದರ್ಶನವನ್ನು ನಡೆಸಲಾಗುತ್ತದೆ.
ಪ್ರಾಥಮಿಕ (primary) ಸಂಪರ್ಕಗಳು– ಇವರು ಸೋಂಕಿತರ ನಿಕಟ ಸಂಪರ್ಕಕ್ಕೆ ಬಂದವರು. ಸೋಂಕಿತರಿಂದ ಆರು ಅಡಿ ಅಂತರಕ್ಕಿಂತ ಕಡಿಮೆ ಹತ್ತಿರ, ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಸಂಪರ್ಕದಲ್ಲಿದ್ದವರು. ಉದಾಹರಣೆಗೆ- ಮನೆಯವರು, ಸ್ನೇಹಿತರು, ಗ್ರಾಹಕರು ಮತ್ತು ಆರೋಗ್ಯ ಸಿಬ್ಬಂದಿ ಇತರರು
ಮಾಧ್ಯಮಿಕ (Secondary) ಸಂಪರ್ಕಗಳು– 6 ಅಡಿಗಿಂತ ಜಾಸ್ತಿ ದೂರದಲ್ಲಿದ್ದರೂ ಸಾಕಷ್ಟು ಕಾಲ ಸೋಂಕಿತರೊಂದಿಗೆ ಒಂದೇ ಕೋಣೆಯಲ್ಲಿಯೋ ಅಥವಾ ಸೋಂಕಿತರು ಮುಟ್ಟಿದ ಅವೇ ಪರಿಕರಗಳ ಸಂಪರ್ಕಕ್ಕೆ ಬಂದವರು, ಅದೇ ಕಟ್ಟಡದಲ್ಲಿ ಬದುಕುವವರು ಇತ್ಯಾದಿ.
ಈ ಎಲ್ಲರಿಗೂ ಕೋವಿಡ್ ಪರೀಕ್ಷೆಯನ್ನು ಮಾಡುವುದು ಆರೋಗ್ಯಸೇತುವಿನ ಉದ್ದೇಶ. ಪರೀಕ್ಷೆಗಳಲ್ಲಿ ಸೋಂಕು ದೃಢ ಪಟ್ಟವರಿಗೆ ಚಿಕಿತ್ಸೆ ಕೊಡುವುದು ಮತ್ತು ರೋಗದ ಲಕ್ಷಣಗಳಿದ್ದೂ ಟೆಸ್ಟ್ ನಲ್ಲಿ ನೆಗೆಟಿವ್ ಬಂದವರನ್ನ ಕ್ವಾರಂಟೈನ್ ನಲ್ಲಿಡುವ ವ್ಯವಸ್ಥೆ ಇತ್ಯಾದಿಗಳನ್ನು ಕಲ್ಪಿಸುವುದು ಸಂಪರ್ಕ ಜಾಲ ಪತ್ತೆಯ ಮುಖ್ಯ ಉದ್ದೇಶಗಳು.
ಲಕ್ಷಣಗಳಿದ್ದು ಕೋವಿಡ್ ಪರೀಕ್ಷೆ ಲಭ್ಯವಿಲ್ಲದಿದ್ದರೆ ಅಂತಹ ಸಂಪರ್ಕಿತರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು. ಅಕಸ್ಮಾತ್ ಸಂಪರ್ಕಿತರಲ್ಲಿ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆ ಲಭ್ಯವಿಲ್ಲದಿದ್ದಲ್ಲಿ ಅವರು ಕೂಡ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯ್ತು.
ಸೋಂಕಿತರ ಸಂಪರ್ಕಕ್ಕೆ ಬಂದವರ ಜಾಲ ಪತ್ತೆಯಾದ ನಂತರ ಕೊರೊನಾ ಸಂಬಂಧಿತ ಅಧಿಕಾರಿಗಳು ಅವರನ್ನು ಫೋನ್ ಮೂಲಕ ಸಂದರ್ಶಿಸಿ ಅವರು ಏನು ಮಾಡಬೇಕು ಎಂಬ ಮಾರ್ಗದರ್ಶನವನ್ನು ಮತ್ತು ಮಿಕ್ಕ ವಿವರಗಳನ್ನು ನೀಡುತ್ತ ಹೋಗುವ ವ್ಯವಸ್ಥೆಯನ್ನೂ ಕಲ್ಪಿಸಲಾಯ್ತು.
ಆರೋಗ್ಯ ಸೇತು ಹೇಗೆ ಕೆಲಸ ಮಾಡುತ್ತಿದೆ
ಸಂಪರ್ಕ ಜಾಲವನ್ನು ಪತ್ತೆ ಹಚ್ಚಲು ಆರೋಗ್ಯ ಸೇತು ಎನ್ನುವ ಮೊಬೈಲ್ ಆಪ್ ನನ್ನು ಸರಕಾರ ಹೊರತಂದ ನಂತರ ಅದನ್ನು ಬಳಸಲು ಜನರನ್ನು ವಿನಂತಿಸಿಕೊಳ್ಳಲಾಯಿತು.
ಮೊದಲಿಗೆ ಆರೋಗ್ಯ ಸೇತುವನ್ನು ಸ್ವ ಇಚ್ಛೆಯಿಂದ ಜನರು ಬಳಸಿರೆಂದು ಸರಕಾರ ಹೇಳಿತು. ಆದರೆ ನಂತರ ಎಲ್ಲ ಸರ್ಕಾರೀ ಸಂಸ್ಥೆಗಳ, ಅರೆ ಸರ್ಕಾರೀ ಕೆಲಸದ ಸ್ಥಳಗಳ, ಖಾಸಗೀ ವಲಯಗಳ ಉದ್ಯೋಗಿಗಳಿಗೆ ಇದನ್ನು ಕಡ್ಡಾಯಗೊಳಿಸಲಾಯಿತು. ಉದಾಹರಣಗೆ, ಹೆಚ್ಚು ಸೋಂಕಿನ ಪ್ರಕರಣಗಳು ಇದ್ದ ದೆಹಲಿಯ ನೊಯ್ಡ ಉಪನಗರದಂತಹ ಕಡೆ ಪ್ರತಿಯೊಬ್ಬರೂ ಇದನ್ನು ಖಡ್ಡಾಯವಾಗಿ ಹೊಂದಿರಬೇಕು ಎಂದು ಆದೇಶಿಸಲಾಯ್ತು, ಇಲ್ಲದಿದ್ದರೆ 6 ತಿಂಗಳ ಜೈಲು ಎಂದು ಕೂಡ ಹೇಳಿತು.
ಆರೋಗ್ಯ ಸೇತು ಜಾರಿಗೆ ಬಂದದ್ದು ಏಪ್ರಿಲ್ 2 ರಂದು. ಅಂದರೆ ಲಾಕ್ ಡೌನ್ ಶುರವಾದ ಮೊದಲ ಹತ್ತು ದಿನಗಳಲ್ಲಿ. ಮೊದಲ ಹದಿಮೂರು ದಿನಗಳಲ್ಲಿ ಐವತ್ತು ಮಿಲಿಯನ್ ಜನರು ಇದನ್ನು ಡೌನ್ ಲೋಡ್ ಮಾಡಿಕೊಂಡರು. 40 ದಿನಗಳಲ್ಲಿ ನೂರು ಮಿಲಿಯನ್ ಜನರ ಬಳಕೆಗೆ ಬಂದ ಅತ್ಯಂತ ವೇಗವಾಗಿ ಬೆಳೆದ ಆಪ್ ಎಂತಲೂ ಇದು ದಾಖಲೆಯನ್ನು ಸೃಷ್ಟಿಸಿತು.
ಆದರೆ ಮೇ ವೇಳೆಗೆ ಇದರಿಂದ ಗೊಂದಲಗಳು ಹುಟ್ಟಿಕೊಂಡವು. ಆರೋಗ್ಯ ಸೇತು ಇದ್ದವರ ವೈಯಕ್ತಿಕ ಮಾಹಿತಿಗಳಿಗೆ ರಕ್ಷಣೆ ಇಲ್ಲವಾಗುತ್ತದೆ ಎಂಬ ದಟ್ಟ ಕಾಳಜಿ ಕೇಳಿಬರತೊಡಗಿತು. ಅಧಿಕಾರಿಗಳು ಸೋಂಕಿತರ ಸಂಪರ್ಕಕ್ಕೆ ಬಂದ ಜನರ ಹೆಸರು ಕೂಡ ಆ ಹಂತಗಳಲ್ಲಿ ತಮಗೆ ತಿಳಿದಿರುವುದಿಲ್ಲ ಎಂದು ಎಷ್ಟೇ ಹೇಳಿದರೂ ಜನರಲ್ಲಿ ಆತಂಕ ಕಾಡಿತು.ಕೋವಿಡ್ ಹೆಸರಲ್ಲಿ ವ್ಯಾಪಕ ವಂಚನೆಗಳು ಫೋನ್ ಮೂಲಕ, ಅಂತರ್ಜಾಲದ ಮೂಲಕ ಶುರುವಾಗಿದ್ದ ಕಾಲವದು.
ತಮ್ಮ ಪ್ರತ್ಯೇಕತೆಗೆ ಇದರಿಂದ ಧಕ್ಕೆ ಬರುವುದರ ಜೊತೆಗೆ ಸಂಪರ್ಕ ಜಾಲವನ್ನು ಪತ್ತೆ ಹಚ್ಚಲು ಈ ಆಪ್ ಹೆಚ್ಚೇನೂ ಪ್ರಯೋಜನಕ್ಕೆ ಬರುತ್ತಿಲ್ಲವೆಂಬ ವಿವಾದಗಳೊಂದಿಗೆ ಬಹಳಷ್ಟು ಜನ ಇದನ್ನು ವಿರೋಧಿಸಿ ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿದರು.
ಜೊತೆಗೆ ಆರೋಗ್ಯ ಸೇತುವಿನ ಕಾರ್ಯಕ್ಷಮತೆಯಲ್ಲಿಯೂ ದೋಷಗಳಿದ್ದವು. ಉದಾಹರಣೆಗೆ ಸೋಂಕಿತ ವ್ಯಕ್ತಿ ಒಂದು ಕೋಣೆಯಲ್ಲಿದ್ದು ಮಿಕ್ಕವರು ಮತ್ತೊಂದು ಕೋಣೆಯಲ್ಲಿದ್ದರೂ ಬ್ಲೂಟೂತ್ ಗೆ ಗೋಡೆಗಳ ತಡೆ ಬರದ ಕಾರಣ ಅವರಿಬ್ಬರೂ ಸಂಪರ್ಕಕ್ಕೆ ಬಂದಿದ್ದರು ಎಂದು ತೋರಿಸುವುದರಿಂದ ಇಡೀ ಆಪ್ನ ನಿಖರತೆಯೇ ಬೇಗುದಿಗೆ ಬಿದ್ದಿತು.
ಯಾರಾದರೂ ಫೋನನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋಗಿದ್ದಲ್ಲಿ ಅವರು ಸೋಂಕಿತರ ಸಂಪರ್ಕಕ್ಕೆ ಬಂದಿದ್ದರೆ ಅದು ಕೂಡ ತಿಳಿಯುತ್ತಿರಲಿಲ್ಲ. ಇಂತಹ ಹಲವು ಮಿತಿಗಳಿಂದ ಸಂಪರ್ಕ ಜಾಲದ ಪತ್ತೆಯನ್ನು ಟೆಕ್ನಾಲಜಿಯ ಬಳಕೆಯ ಮೂಲಕ ಮಾಡುವ ದೊಡ್ಡ ಅಭಿಯಾನ ಒಂದು ಮಟ್ಟದಲ್ಲಿ ಮುಗ್ಗರಿಸಿತು.
ಜೊತೆಗೆ ಎಲ್ಲರಲ್ಲೂ ಫೋನ್ ಅಥವಾ ಸ್ಮಾರ್ಟ್ ಫೋನ್ ಇರಲಿಲ್ಲ. ಇದ್ದರೂ ಅದಕ್ಕೆ ಬ್ಲೂಟೂತ್, ಅಂತರ್ಜಾಲ ಇತ್ಯಾದಿ ಇರಬೇಕಿತ್ತು. ಎಷ್ಟು ಜನರ ಫೋನಿನಲ್ಲಿ ಇದೆಲ್ಲ ಇತ್ತೋ ಅವರೆಲ್ಲರೂ ಈ ಆಪ್ ನ್ನು ಬಳಸಲು ಸಿದ್ಧರಿರಲಿಲ್ಲ.
ಭಾರತದಲ್ಲೇ ಅಲ್ಲದೆ ಇಂತಹ ಸರಕಾರೀ ಆಪ್ ಗಳಿಂದ ಜನರ ಪ್ರೈವಸಿ ಗೆ ಕುಂದು ಬರುವ ದೊಡ್ಡ ಆತಂಕ ಪ್ರಪಂಚದ ಬಹುತೇಕ ದೇಶಗಳಲ್ಲಿ ಕೇಳಿಬಂತು. ಕೆನಡಾ ಮತ್ತು ಅಮೆರಿಕಾದ ಸಲಹೆಗಾರರು ಪ್ರತ್ಯೇಕ ಸಮ್ಮತಿ ಸೂಚಕ ಪೇಪರಿನ ಮೇಲೆ ಸಹಿ ಮಾಡಿಸಿಕೊಂಡು ನಂತರ ಆಪ್ ಗಳನ್ನು ಬಳಸಬಹುದು ಎಂದರು. ಈ ಎಲ್ಲ ಕೋಟಲೆಗಳನ್ನು ನೋಡಿದ ಸಿಂಗಾಪೋರ್ ತನ್ನ 5.7 ಮಿಲಿಯನ್ ಪ್ರಜೆಗಳು ಪ್ರತ್ಯೇಕ ಸಂಪರ್ಕ ಜಾಲದ ಪತ್ತೆಯನ್ನು ಮಾಡಬಲ್ಲ ಉಪಕರಣವನ್ನು ಧರಿಸಿರಿ ಎಂದಿತು. ಇಂಗ್ಲೆಂಡಿನಲ್ಲಿಯೂ ಜನರು ತಮ್ಮ ಪ್ರೈವಸಿಯನ್ನು ಪ್ರಶ್ನಿಸಿಸಿದರು. NHS test-and-trace system ನ ಮುಖ್ಯಸ್ಥ ಟೋನಿ ಪ್ರೆಸ್ಟೆಜ್ ಸೆಪ್ಟೆಂಬರಿನವರೆಗೆ ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸದಿರುವ ಬಗ್ಗೆ ಸೂಚಿಸಿದರು.
ಆದರೆ ಇದೀಗ ಎರಡನೇ ಅಲೆಯ ಭಯದಲ್ಲಿರುವ ಯು.ಕೆ. ಮತ್ತೊಮ್ಮೆ ಸಂಪರ್ಕ ಜಾಲ ಪತ್ತೆಯ ಮೇಲೆ ಹೆಚ್ಚಿನ ಒತ್ತನ್ನು ನೀಡಿದೆ.ಕೆಲವು ಯೂರೋಪಿಯನ್ ದೇಶಗಳು ಇದಕ್ಕಾಗಿ ಹೆಚ್ಚು ಉತ್ತಮವಾಗಿ ಕೆಲಸಮಾಡಬಲ್ಲ ಹೊಸ ಹೊಸ ಆಪ್ ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ, ಏನೇ ಆದರೂ ಇಂತಹ ಆಪ್ ಗಳನ್ನು ಬಲವಂತವಾಗಿ ಹೇರಲಾಗದ ಕಾರಣ ಅರೆ ಬರೆ ಡೇಟಾ ಪಡೆದು ಕೊರೊನಾ ಹೊಸಸೋಂಕುಗಳ ಸಂಪರ್ಕ ಜಾಲವನ್ನು ಫಲಪ್ರದವೆನ್ನಬಹುದಾದ ಪ್ರಮಾಣದಲ್ಲಿ ಪತ್ತೆ ಹಚ್ಚುವುದು ಸಾಧ್ಯವಾಗದ ಮಾತಾಯಿತು.ಇನ್ನು ಬಡವ -ಶ್ರೀಮಂತರ ನಡುವೆ ಹೆಚ್ಚು ಅಂತರವಿರುವ ಭಾರತ ಮತ್ತಿತರ ದೇಶಗಳಲ್ಲಿ ಎಲ್ಲರಿಗೂ ಈ ಆಧುನಿಕ ಉಪಕರಣಗಳನ್ನು ಒದಗಿಸುವ ಮಾತು ಸುಲಭವಲ್ಲ.
ನಮ್ಮ ದೇಶದಲ್ಲಿ ಆರ್ಥಿಕ ಭಯ, ಕ್ವಾರಂಟೈನ್ ಭಯ, ಪರೀಕ್ಷೆಗಳ ಭಯ ಹೀಗೆ ನಾನಾ ಆತಂಕಗಳಿಂದ ಜನರು ತಮ್ಮ ಲಕ್ಷಣಗಳನ್ನು ವರದಿಮಾಡದೆ ಹೋಗಿದ್ದಾರೆ.ಇಲ್ಲದಿದ್ದರೆ ಈ ಮಟ್ಟದಲ್ಲಿ ಸೋಂಕು ಹರಡಲು ಸಾಧ್ಯವೇ ಇರುತ್ತಿರಲಿಲ್ಲ. ಇನ್ನು ಅವರ ಸಂಪರ್ಕಕ್ಕೆ ಬಂದವರ ಪತ್ತೆಯನ್ನು ಹೇಗೆ ಮಾಡಲು ಸಾಧ್ಯ?
ಜನರನ್ನು ಪ್ರಶ್ನಿಸಿ ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಕ್ವಾರಂಟೈನ್ ಮಾಡುವುದು ಸುಲಭವಲ್ಲ. ಕಾಂಟಾಕ್ಟ್ ಟ್ರೇಸಿಂಗ್ ನ ವಿಚಾರ ಈ ರೀತಿ ಮುಗ್ಗರಿಸುತ್ತಿರುವಾಗಲೇ ನಿಧಾನಕ್ಕೆ ಆರ್ಥಿಕ ಸಂಕಷ್ಟಗಳೊಂದಿಗೆ ಲಾಕ್ ಡೌನ್ ತೆರವುಗೊಳಿಸಲೇ ಬೇಕಾದ ಅಗತ್ಯ ಭಾರತದಲ್ಲಿ ಬೃಹತ್ತಾಗಿ ಬೆಳೆಯಿತು.
ಹಲವು ಝೋನ್ ಗಳ ವಿಭಜನೆ, ಕಂಟೈನ್ ಮೆಂಟ್ ಪ್ರದೇಶಗಳು, ಅಲ್ಲಿಲ್ಲಿ ಅಲ್ಪ ಸ್ವಲ್ಪ ತೆರವಿನ ಬದಲಾವಣೆ ಇತ್ಯಾದಿ ಹಲವು ಪ್ರಯೋಗಗಳ ನಂತರ ಜೂನ್ 8 ರಂದು ಅನ್ ಲಾಕ್ 1 ಆರಂಭವಾಯ್ತು, ಜುಲೈ 1 -31 ರ ನಲ್ಲಿ ಅನ್ ಲಾಕ್ 2 ಆರಂಭವಾಯ್ತು. ಆಗಸ್ಟ್ ನಲ್ಲಿ ಅನ್ ಲಾಕ್ 3 ನಡೆಯಿತು.
ಇನ್ನು ಮಿಕ್ಕ ವಿಚಾರ ಇಂದಿನದು. ಕಳೆದ ಭಾನುವಾರ 90,802 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ದಿನವೊಂದಕ್ಕೆ ಸಾವಿರಾರು ಜನರು ಸಾಯುತ್ತಿದ್ದಾರೆ. ಭಾರತದಲ್ಲಿ ಇದೀಗ 47 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಂತಹ ದಿನಗಳಲ್ಲಿ ಸಂಪರ್ಕ ಜಾಲದ ಹುಡುಕಾಟ ಮೊದಲಿನ ಬಿಗಿಯನ್ನು ಕಳೆದುಕೊಂಡಿದೆ. ಈ ವಿಧಾನಕ್ಕಿದ್ದ ಪ್ರಾಧಾನ್ಯತೆ ಹಿಂಬದಿಗೆ ಸರಿಯುತ್ತಿದೆ. ಬಹುತೇಕ ರಾಜ್ಯಗಳು ಕಾಂಟಾಕ್ಟ್ ಟ್ರೇಸಿಂಗ್ ವಿಧಾನಕ್ಕೆ ಒತ್ತು ನೀಡುವುದನ್ನು ನಿಲ್ಲಿಸುತ್ತಿವೆ ಅಥವಾ ನಿಲ್ಲಿಸಿವೆ.
ಸಂಪರ್ಕದ ಜಾಲದ ಪತ್ತೆ- ನಾಪತ್ತೆಯಾಗಿದೆಯೇ?
ಹಾಗಾದರೆ ಸಂಪರ್ಕ ಜಾಲದ ಪತ್ತೆ ಪೂರ್ಣ ನಾಪತ್ತೆಯಾಗಿದೆಯೇ? -ಖಂಡಿತ ಇಲ್ಲ.
ಕರ್ನಾಟಕದಲ್ಲಿ ಇದೇ ತಿಂಗಳ ನಾಲ್ಕನೇ ತಾರೀಖಿನ ವೇಳೆಗೆ ಇದುವರೆಗೆ ಕರ್ನಾಟಕದಲ್ಲಿ ನಡೆಸಿದ ಕಾಂಟ್ಯಾಕ್ಟ್ ಟ್ರೇಸಿಂಗ್ ನ ಸಂಖ್ಯೆಗಳು:
ಪ್ರಾಥಮಿಕ ಸಂಪರ್ಕಗಳು- 53,5102, ದ್ವಿತೀಯ ಅಥವಾ ಮಾಧ್ಯಮಿಕ ಸಂಪರ್ಕಗಳು- 48,1228 ಎಂದು ವರದಿಯಾಗಿದೆ. ಜೊತೆಗೆ ಇನ್ನು ಮನೆಯಲ್ಲೇ ಸ್ವಯಂ ಕ್ವಾರಂಟೈನ್ ನಲ್ಲಿ ಇನ್ನೂ 47,3307 ರಷ್ಟು ಜನರಿದ್ದಾರೆ ಎಂದು ತಿಳಿದುಬಂದಿದೆ. ಹಲವರ ಸಂಪರ್ಕ ಜಾಲ ಪತ್ತೆ ಈಗಲೂ ಜಾರಿಯಲ್ಲಿದೆ.
ಕೇರಳದಲ್ಲಿ ಕಟ್ಟು ನಿಟ್ಟಿನ ಸಂಪರ್ಕ ಜಾಲ ಪತ್ತೆಯ ಕಾರಣ ಕೊರೊನ ನಿಯಂತ್ರಣದಲ್ಲಿ ಮೊದಲ ಹಂತದಲ್ಲಿ ಭಾರೀ ಯಶಸ್ಸು ದೊರೆಯಿತು ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಕೋವಿಡ್ ನ ಸೋಂಕಿನ ನಿಯಂತ್ರಣಕ್ಕೆ ’ಸಂಪರ್ಕ ಜಾಲ ಪತ್ತೆಯೇ ಬೆನ್ನೆಲುಬು’ ಎಂದು ಹೇಳಿಕೆ ನೀಡಲಾಗಿದೆ. ಈಗಲೂ ಈ ವಿಧಾನವನ್ನು ಜಾರಿಯಿಡಲಾಗಿದೆ.
ಇದು ನಿಜವಾದರೂ ಸೋಂಕು ಹಬ್ಬುವಿಕೆ ಮತ್ತು ಸಂಪರ್ಕ ಜಾಲ ಪತ್ತೆ ಒಂದಕ್ಕೊಂದು ಪೂರಕವಾಗಿರಬೇಕು. ಆದರೆ, ಒಂದೆಡೆ ಆರ್ಥಿಕ ವಹಿವಾಟುಗಳನ್ನು ಸಾಮಾನ್ಯ ಸ್ಥಿತಿಗೆ ತರಲೇ ಬೇಕಾದ ಅಗತ್ಯವಿರುವ ಕಾರಣ ಸೋಂಕು ಹರಡಲು ಬಿಟ್ಟು ಇನ್ನೊಂದು ಕಡೆ ಸಂಪರ್ಕ ಜಾಲ ಪತ್ತೆ ದಕ್ಷತೆಯಿಂದ ಕೆಲಸಮಾಡಲಿ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗಿಬಿಡುತ್ತದೆ. ಸಧ್ಯಕ್ಕೆ ಭಾರತವಿರುವುದು ಇದೇ ಪರಿಸ್ಥಿತಿಯಲ್ಲಿ.ಆದರೆ ಅದು ಅನಿವಾರ್ಯವೆನ್ನಿಸಿರುವ ಪರಿಸ್ಥಿತಿ.ಹ್
ಸಂಪರ್ಕ ಜಾಲ ಪತ್ತೆಯ ಅವಶ್ಯಕತೆ ಇನ್ನೂ ಇದೆಯೇ?
“ಬಹುತೇಕ ಜನರು ಪರಸ್ಪರ ಭೇಟಿಯಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಕಾಂಟಾಕ್ಟ್ ಟ್ರೇಸಿಂಗ್ ನಿಷ್ಪ್ರಯೋಜಕ ಅದರ ಬದಲು ಎಲ್ಲರಿಗೂ ಕೋವಿಡ್ ಪರೀಕ್ಷೆಯನ್ನು ಮಾಡುವುದೇ ಲೇಸು “- ಎನ್ನುವ ವಾದಗಳಿವೆ.
ಆದರೆ, ಈ ವಾದಕ್ಕೂ ಬಹಳ ಮಿತಿಗಳಿವೆ. ಉದಾಹರಣೆಗೆ, ನಮ್ಮ ದೇಶದ 1.3 ಬಿಲಿಯನ್ ಜನರಿಗೆ ಕೋವಿಡ್ ಪರೀಕ್ಷೆ ನಡೆಸುವ ಕೆಲಸ ಸಾಮಾನ್ಯದ್ದಲ್ಲ, ಅದರ ಜೊತೆ ಒಮ್ಮೆ ಪರೀಕ್ಷೆ ನಡೆದು ಫಲಿತಾಂಶದಲ್ಲಿ ಸೋಂಕು ಇಲ್ಲ ಎಂದವರಿಗೆ ಸ್ವಲ್ಪ ಸಮಯದ ನಂತರ ಮತ್ತೆ ಸೋಂಕು ತಗುಲಬಹುದು. ಸೋಂಕು ಇದೆ ಎಂದು ತಿಳಿದು ಚಿಕಿತ್ಸೆ ಪಡೆದು ಗುಣಮುಖರಾದವರಿಗೂ ಮತ್ತೊಮ್ಮೆ ಸೋಂಕು ಬರುವುದಿಲ್ಲ ಎನ್ನುವುದಕ್ಕೆ ಖಾತರಿಯೇನು ಇಲ್ಲ. ಹಾಗಾಗಿ ಎಷ್ಟು ಜನರಿಗೆ ಪದೇ ಪದೇ ಪರೀಕ್ಷೆ ಮಾಡಬೇಕಾಗುತ್ತದೆಯೋ ತಿಳಿದಿಲ್ಲ. ಇವೆಲ್ಲದರ ಜೊತೆ ಕೊರೊನಾ ಎರಡನೇ ಅಲೆ, ಮೂರನೇ ಅಲೆ ಇತ್ಯಾದಿಗಳೂ ಇವೆ. ಹೀಗಾಗಿ ಕೋವಿಡ್ ಪರೀಕ್ಷೆಯೊಂದೇ ಖಂಡಿತ ಸಾಕಾಗುವುದಿಲ್ಲ. ಇದೇ ಕಾರಣಕ್ಕೆ ಸಂಪರ್ಕ ಜಾಲ ಪತ್ತೆಯ ಅಗತ್ಯ ಇದ್ದೇ ಇದೆ ಎನ್ನುವುದು ತಿಳಿದವರ ಅಭಿಪ್ರಾಯ.
ಭಾರತದಲ್ಲಿ ಮೊದಲ ಅಲೆಯ ಉಬ್ಬರ ನಿರಂತರವಾಗಿ ಏರುತ್ತಲೇ ಇದೆ. ಆದರೆ ಆರು ತಿಂಗಳು ಕಾದಿರುವ ಜನರ ಸಹನೆ ಕರಗಿಹೋಗುತ್ತಿದೆ. ಯಾವುದೋ ಹುಂಬು ಧೈರ್ಯದ ಮೇಲೆ ಸಹಜ ಬದುಕಿನತ್ತ ಒರಳಲು ಬದುಕು ಮಿಡುಕುತ್ತಿದೆ.
ಭಾರತದಲ್ಲಿಯೂ ಕರೋನ ಕಡಿಮೆಯಾಗುವ ಕಾಲ ಶುರುವಾಗಿ ದಿನವೊಂದರಲ್ಲಿ ಅತ್ಯಂತ ಕಡಿಮೆ ಹೊಸ ಸೋಂಕಿತರು ಪತ್ತೆಯಾಗುವ ಕಾಲ ಬಂದಾಗ ಸೋಂಕಿನ ಪ್ರಮಾಣವನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ಕಡಿಮೆ ಪ್ರಮಾಣದಲ್ಲಿಯೇ ಇಡಲು ನಮಗೆ ಸಂಪರ್ಕ ಜಾಲ ಪತ್ತೆಯ ಅಗತ್ಯ ಇದ್ದೇ ಇದೆ. ಆಗ ಸಂಪರ್ಕ ಜಾಲ ಪತ್ತೆ ಮತ್ತೆ ಮುಂಚೂಣಿಗೆ ಬರಲಿದೆ. ಹಿನ್ನೆಲೆಯಲ್ಲಿ ಈಗಲೂ ನೆರವು ನೀಡುತ್ತಿದೆ.