23.5 C
Karnataka
Monday, May 20, 2024

    ಕಾಂಟ್ಯಾಕ್ಟ್ ಟ್ರೇಸಿಂಗ್ ಇಲ್ಲದಿದ್ದರೆ ನಿಯಂತ್ರಣ ಕಷ್ಟ

    Must read

    ಮನುಷ್ಯನೊಬ್ಬನಲ್ಲಿ ಕೊರೋನಾ ಸೋಂಕನ್ನು ಕಂಡು ಹಿಡಿಯುವುದರ ಜೊತೆಗೆ ಅವರ ಸಂಪರ್ಕಕ್ಕೆ ಬಂದ ಎಲ್ಲರ ಜಾಡನ್ನು ಪತ್ತೆ ಹಚ್ಚುವುದನ್ನು ಕಾಂಟ್ಯಾಕ್ಟ್ ಟ್ರೇಸಿಂಗ್ ಅಥವಾ ಸಂಪರ್ಕ ಜಾಲ ಪತ್ತೆ ಎನ್ನುತ್ತಾರೆ.ಈ ವಿಧಾನವನ್ನು ಕೋವಿಡ್ ಗೇ ಅಲ್ಲದೆ ಹಲವು ಹಲವಾರು ರೋಗಗಳ ಹರಡುವಿಕೆಯನ್ನು ತಡೆಯಲು ಈಗಾಗಲೇ ದಶಕಗಳ ಕಾಲದಿಂದಲೂ ಉಪಯೋಗಿಸಿದ್ದಿದೆ. ಉದಾಹರಣೆಗೆ ಸಿಡುಬು ಅಥವ ಸ್ಮಾಲ್ ಪಾಕ್ಸ್  ಖಾಯಿಲೆಯ ನಿಯಂತ್ರಣದಲ್ಲಿ ಮತ್ತು ಇತರೆ ಹಲವು ಖಾಯಿಲೆಗಳ ಅಧ್ಯಯನಗಳಲ್ಲಿ  ಈ ವಿಧಾನವನ್ನು ಬಳಸಲಾಗಿತ್ತು. ಇದೀಗ ಕೊರೊನಾ ಕಾರಣ ಮತ್ತೆ ಈ ಪದ ಮತ್ತು ವಿಧಾನ ಮರುಬಳಕೆಗೆ ಬಂದಿದೆ.

    ಈ ವರ್ಷದ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಶಬ್ದ ಭಾರತದಲ್ಲಿ ಅತ್ಯಂತ  ಬಲವಾಗಿ ಕೇಳಿಬರುತ್ತಿತ್ತು.ಆಗಿನ್ನೂ ಲಾಕ್ ಡೌನ್ ತೆರವಾಗಿರಲಿಲ್ಲ. ಮೊಟ್ಟ ಮೊದಲಿಗೆ ಮಾರ್ಚ್ 24 ರಂದು 21 ದಿನಗಳ ಲಾಕ್ ಡೌನ್ ಜಾರಿಯಾಗುವ ವೇಳೆಗೆ ಭಾರತದಲ್ಲಿ ಸುಮಾರು 500 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಏಪ್ರಿಲ್ 6 ರ ವೇಳೆಗೆ ಪ್ರತಿ ಆರು ದಿನಗಳಿಗೊಮ್ಮೆ ಇವರ ಸಂಖ್ಯೆ ದ್ವಿಗುಣವಾದರೆ, ಏಪ್ರಿಲ್ 18 ರ ವೇಳೆಗೆ ಪ್ರತಿ 8 ಗಂಟೆಗಳಿಗೊಮ್ಮೆ ಇವರ ಸಂಖ್ಯೆ ದ್ವಿಗುಣಿಸಿತ್ತು. ಕೊರೊನ ಸೋಂಕು ಬಹುತೇಕ ನಿಧಾನವಾಗಿದ್ದ ಅಥವಾ ನಿಯಂತ್ರಣದಲ್ಲಿದ್ದ ಕಾಲವದು. ಹಾಗಾಗಿ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸಿ ಕೊರೊನಾವನ್ನು ಹತ್ತಿಕ್ಕುವುದು ಅತ್ಯಂತ ಮುಖ್ಯವಾಗಿತ್ತು.

    ಅದರೆ ಎಲ್ಲರಿಗೂ ಇದ್ದ ಶಂಕೆಯೆಂದರೆ ಅದು ಸ್ವಲ್ಪಕಾಲದ ವಿಚಾರ ಮಾತ್ರವೆನ್ನುವುದು. ಏಕೆಂದರೆ, ಕೊರೊನಾವನ್ನು ನಿಯಂತ್ರಿಸುವುದೆಂದರೆ ಸುಲಭದ ಮಾತಲ್ಲ. ಒಬ್ಬ ಸೋಂಕಿತನಿಂದ ಹತ್ತು ಜನರಿಗೆ ಅವರಿಂದ ನೂರುಜನಕ್ಕೆ ಮಿಂಚಿನಂತೆ ಹರಡಬಲ್ಲ ಸೋಂಕನ್ನು ತಡೆಯಬೇಕೆಂದರೆ ಎಷ್ಟು ಸಾಧ್ಯವೋ ಅಷ್ಟೂ ಜನ ಸೋಂಕಿತರನ್ನು ಪತ್ತೆ ಹಚ್ಚಬೇಕಿತ್ತು. ಆದರೆ ಕಾಣದ ವೈರಸ್ಸಿನಂತೆ ಶೇಕಡಾ 40 ಜನರಲ್ಲಿ ರೋಗ ಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ ಎಂದಿರುವಾಗ ಸೋಂಕಿತರನ್ನು ಪತ್ತೆ ಹಚ್ಚುವುದು ಹೇಗೆ? ಅವರಿಗಿದ್ದ ಒಂದೇ ಒಂದು ದಾರಿಯೆಂದರೆ, ಒಬ್ಬ ಸೋಂಕಿತ ಪತ್ತೆಯಾದ ಕೂಡಲೇ ಅವನ ಸಂಪರ್ಕಕ್ಕೆ ಬಂದವರನ್ನೆಲ್ಲ ಕೊರೊನಾ ಪರೀಕ್ಷೆಗೆ ಒಳಪಡಿಸುವುದು. ಅದರಿಂದ ಇತರೆ ಸೋಂಕಿತರನ್ನು ಪತ್ತೆ ಹಚ್ಚಿ ಅವರನ್ನ ಆರೋಗ್ಯವಂತರಿಂದ ಬೇರ್ಪಡಿಸಿ ಕ್ವಾರಂಟೈನ್ ನಲ್ಲಿಡುವುದು.

    ಇದು ಮೇಲ್ನೋಟಕ್ಕೆ ಸರಳವೆನಿಸಿದರೂ ಸೋಂಕಿತರ ಸಂಪರ್ಕಕ್ಕೆ ಬರುವವರನ್ನು ಪತ್ತೆ ಹಚ್ಚುವುದು ಹೇಗೆ ? ಎನ್ನುವ ದೊಡ್ಡ ಸವಾಲು ಎದುರಾಗಿತ್ತು. ಆ ವೇಳೆಗೆ ಇದನ್ನು ಸಾಧಿಸಲು ಇತರೆ ಹಲವು ದೇಶಗಳು ಟೆಕ್ನಾಲಜಿಯ ಮೊರೆ ಹೋಗಿದ್ದರು. ಇತರೆ ಬೇರೆ ವಿಧಾನಗಳೂ ಜಾರಿಯಲ್ಲಿದ್ದವು. ಈ ದೇಶಗಳಂತೆ ಸಂಪರ್ಕ ಜಾಲದ ಪತ್ತೆಯನ್ನು ಆರಂಭಿಸಲು  ಸರಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು.

    ಕೊರೊನಾ ಸೋಂಕಿತರರ ಜೊತೆ ಬದುಕುವವರ ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನೂ ಪತ್ತೆಹಚ್ಚಿ ಕ್ವಾರಂಟೈನ್ ನಲ್ಲಿಡಲು ಭರದ ತಯಾರಿ ನಡೆಯಿತು. ಸಂಪರ್ಕ ಜಾಲವನ್ನು ಪತ್ತೆ ಹಚ್ಚಲು ಫೋನ್ ಗಳಲ್ಲಿ ಇಳಿಸಿಕೊಳ್ಳಬಹುದಾಗಿದ್ದ ಆರೋಗ್ಯ ಸೇತು ಆಪ್ ಅನ್ನು  ಸರಕಾರ ಜಾರಿಗೆ ತಂದಿತು.ಫೋನ್ ಗಳ ಬ್ಲೂಟೂತ್ ಮತ್ತು ಲೊಕೋಷನ್ ಡೇಟ ಬಳಸುವ ಮೂಲಕ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಈ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡಿರುವ ಜನರು ಬಂದರೇ ಎಂದು ಈ ಆಪ್ ಮೂಲಕ ತಿಳಿಯಲು ಸಾಧ್ಯವಿತ್ತು. ಇದನ್ನು ಸಾಧಿಸಲು ಸೋಂಕಿತರ ಡೇಟಾವನ್ನು ಸರಕಾರ ಹೊಂದಿರಬೇಕಿತ್ತು. ಅದರ ಜೊತೆ ಈ ಆರೋಗ್ಯ ಸೇತು ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡವರ ವಿವರಗಳೂ ಸರಕಾರಕ್ಕೆ ತಿಳಿಯುತ್ತಿತ್ತು. 

    ಸಂಪರ್ಕ ಜಾಲ ಪತ್ತೆಯಲ್ಲಿ ಯಾರನ್ನು ಸಂದರ್ಶಿಸಲಾಗುತ್ತದೆ?

    ಕಾಂಟಾಕ್ಟ್ ಟ್ರೇಸಿಂಗ್ ನಲ್ಲಿ ಈಗಾಗಲೇ ಕೋವಿಡ್ ಪರೀಕ್ಷೆಯ ಮೂಲಕ ಸೋಂಕು ಧೃಡ ಪಟ್ಟ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳ ವಿವರಗಳನ್ನು ಪತ್ತೆ ಹಚ್ಚಿ ಸಂದರ್ಶನವನ್ನು ನಡೆಸಲಾಗುತ್ತದೆ.

    ಪ್ರಾಥಮಿಕ (primary) ಸಂಪರ್ಕಗಳು–  ಇವರು ಸೋಂಕಿತರ ನಿಕಟ ಸಂಪರ್ಕಕ್ಕೆ ಬಂದವರು. ಸೋಂಕಿತರಿಂದ ಆರು ಅಡಿ ಅಂತರಕ್ಕಿಂತ ಕಡಿಮೆ ಹತ್ತಿರ, ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಸಂಪರ್ಕದಲ್ಲಿದ್ದವರು. ಉದಾಹರಣೆಗೆ- ಮನೆಯವರು, ಸ್ನೇಹಿತರು, ಗ್ರಾಹಕರು ಮತ್ತು ಆರೋಗ್ಯ ಸಿಬ್ಬಂದಿ ಇತರರು

    ಮಾಧ್ಯಮಿಕ (Secondary) ಸಂಪರ್ಕಗಳು– 6 ಅಡಿಗಿಂತ ಜಾಸ್ತಿ ದೂರದಲ್ಲಿದ್ದರೂ ಸಾಕಷ್ಟು ಕಾಲ ಸೋಂಕಿತರೊಂದಿಗೆ ಒಂದೇ ಕೋಣೆಯಲ್ಲಿಯೋ  ಅಥವಾ ಸೋಂಕಿತರು ಮುಟ್ಟಿದ ಅವೇ ಪರಿಕರಗಳ ಸಂಪರ್ಕಕ್ಕೆ ಬಂದವರು, ಅದೇ ಕಟ್ಟಡದಲ್ಲಿ ಬದುಕುವವರು ಇತ್ಯಾದಿ.

    ಈ ಎಲ್ಲರಿಗೂ ಕೋವಿಡ್ ಪರೀಕ್ಷೆಯನ್ನು ಮಾಡುವುದು ಆರೋಗ್ಯಸೇತುವಿನ  ಉದ್ದೇಶ. ಪರೀಕ್ಷೆಗಳಲ್ಲಿ ಸೋಂಕು ದೃಢ ಪಟ್ಟವರಿಗೆ ಚಿಕಿತ್ಸೆ ಕೊಡುವುದು ಮತ್ತು ರೋಗದ ಲಕ್ಷಣಗಳಿದ್ದೂ  ಟೆಸ್ಟ್ ನಲ್ಲಿ ನೆಗೆಟಿವ್ ಬಂದವರನ್ನ ಕ್ವಾರಂಟೈನ್ ನಲ್ಲಿಡುವ ವ್ಯವಸ್ಥೆ ಇತ್ಯಾದಿಗಳನ್ನು ಕಲ್ಪಿಸುವುದು ಸಂಪರ್ಕ ಜಾಲ ಪತ್ತೆಯ ಮುಖ್ಯ ಉದ್ದೇಶಗಳು.

    ಲಕ್ಷಣಗಳಿದ್ದು ಕೋವಿಡ್ ಪರೀಕ್ಷೆ ಲಭ್ಯವಿಲ್ಲದಿದ್ದರೆ ಅಂತಹ ಸಂಪರ್ಕಿತರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು. ಅಕಸ್ಮಾತ್ ಸಂಪರ್ಕಿತರಲ್ಲಿ  ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆ ಲಭ್ಯವಿಲ್ಲದಿದ್ದಲ್ಲಿ ಅವರು ಕೂಡ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯ್ತು.

    ಸೋಂಕಿತರ ಸಂಪರ್ಕಕ್ಕೆ ಬಂದವರ ಜಾಲ ಪತ್ತೆಯಾದ ನಂತರ ಕೊರೊನಾ ಸಂಬಂಧಿತ ಅಧಿಕಾರಿಗಳು ಅವರನ್ನು  ಫೋನ್ ಮೂಲಕ ಸಂದರ್ಶಿಸಿ ಅವರು ಏನು ಮಾಡಬೇಕು ಎಂಬ ಮಾರ್ಗದರ್ಶನವನ್ನು ಮತ್ತು ಮಿಕ್ಕ ವಿವರಗಳನ್ನು ನೀಡುತ್ತ ಹೋಗುವ ವ್ಯವಸ್ಥೆಯನ್ನೂ ಕಲ್ಪಿಸಲಾಯ್ತು.

    ಆರೋಗ್ಯ ಸೇತು ಹೇಗೆ ಕೆಲಸ ಮಾಡುತ್ತಿದೆ

    ಸಂಪರ್ಕ ಜಾಲವನ್ನು ಪತ್ತೆ ಹಚ್ಚಲು ಆರೋಗ್ಯ ಸೇತು ಎನ್ನುವ ಮೊಬೈಲ್ ಆಪ್ ನನ್ನು ಸರಕಾರ ಹೊರತಂದ ನಂತರ ಅದನ್ನು ಬಳಸಲು ಜನರನ್ನು ವಿನಂತಿಸಿಕೊಳ್ಳಲಾಯಿತು.

    ಮೊದಲಿಗೆ ಆರೋಗ್ಯ ಸೇತುವನ್ನು  ಸ್ವ ಇಚ್ಛೆಯಿಂದ ಜನರು ಬಳಸಿರೆಂದು ಸರಕಾರ ಹೇಳಿತು. ಆದರೆ ನಂತರ ಎಲ್ಲ ಸರ್ಕಾರೀ  ಸಂಸ್ಥೆಗಳ, ಅರೆ ಸರ್ಕಾರೀ ಕೆಲಸದ ಸ್ಥಳಗಳ, ಖಾಸಗೀ ವಲಯಗಳ ಉದ್ಯೋಗಿಗಳಿಗೆ ಇದನ್ನು ಕಡ್ಡಾಯಗೊಳಿಸಲಾಯಿತು. ಉದಾಹರಣಗೆ, ಹೆಚ್ಚು ಸೋಂಕಿನ ಪ್ರಕರಣಗಳು ಇದ್ದ ದೆಹಲಿಯ ನೊಯ್ಡ ಉಪನಗರದಂತಹ ಕಡೆ ಪ್ರತಿಯೊಬ್ಬರೂ ಇದನ್ನು ಖಡ್ಡಾಯವಾಗಿ ಹೊಂದಿರಬೇಕು ಎಂದು ಆದೇಶಿಸಲಾಯ್ತು, ಇಲ್ಲದಿದ್ದರೆ 6 ತಿಂಗಳ ಜೈಲು ಎಂದು ಕೂಡ ಹೇಳಿತು. 

    ಆರೋಗ್ಯ ಸೇತು ಜಾರಿಗೆ ಬಂದದ್ದು ಏಪ್ರಿಲ್ 2 ರಂದು. ಅಂದರೆ ಲಾಕ್ ಡೌನ್ ಶುರವಾದ ಮೊದಲ ಹತ್ತು ದಿನಗಳಲ್ಲಿ. ಮೊದಲ ಹದಿಮೂರು ದಿನಗಳಲ್ಲಿ ಐವತ್ತು ಮಿಲಿಯನ್ ಜನರು ಇದನ್ನು ಡೌನ್ ಲೋಡ್ ಮಾಡಿಕೊಂಡರು. 40 ದಿನಗಳಲ್ಲಿ ನೂರು ಮಿಲಿಯನ್ ಜನರ ಬಳಕೆಗೆ ಬಂದ ಅತ್ಯಂತ ವೇಗವಾಗಿ ಬೆಳೆದ ಆಪ್ ಎಂತಲೂ ಇದು ದಾಖಲೆಯನ್ನು ಸೃಷ್ಟಿಸಿತು.

    ಆದರೆ ಮೇ ವೇಳೆಗೆ ಇದರಿಂದ ಗೊಂದಲಗಳು ಹುಟ್ಟಿಕೊಂಡವು. ಆರೋಗ್ಯ ಸೇತು ಇದ್ದವರ ವೈಯಕ್ತಿಕ ಮಾಹಿತಿಗಳಿಗೆ ರಕ್ಷಣೆ ಇಲ್ಲವಾಗುತ್ತದೆ ಎಂಬ ದಟ್ಟ ಕಾಳಜಿ ಕೇಳಿಬರತೊಡಗಿತು. ಅಧಿಕಾರಿಗಳು ಸೋಂಕಿತರ ಸಂಪರ್ಕಕ್ಕೆ ಬಂದ ಜನರ ಹೆಸರು ಕೂಡ ಆ ಹಂತಗಳಲ್ಲಿ ತಮಗೆ ತಿಳಿದಿರುವುದಿಲ್ಲ ಎಂದು ಎಷ್ಟೇ ಹೇಳಿದರೂ ಜನರಲ್ಲಿ ಆತಂಕ ಕಾಡಿತು.ಕೋವಿಡ್ ಹೆಸರಲ್ಲಿ ವ್ಯಾಪಕ ವಂಚನೆಗಳು ಫೋನ್ ಮೂಲಕ, ಅಂತರ್ಜಾಲದ ಮೂಲಕ ಶುರುವಾಗಿದ್ದ ಕಾಲವದು.

    ತಮ್ಮ ಪ್ರತ್ಯೇಕತೆಗೆ ಇದರಿಂದ ಧಕ್ಕೆ ಬರುವುದರ ಜೊತೆಗೆ ಸಂಪರ್ಕ ಜಾಲವನ್ನು ಪತ್ತೆ ಹಚ್ಚಲು ಈ ಆಪ್ ಹೆಚ್ಚೇನೂ ಪ್ರಯೋಜನಕ್ಕೆ ಬರುತ್ತಿಲ್ಲವೆಂಬ ವಿವಾದಗಳೊಂದಿಗೆ ಬಹಳಷ್ಟು ಜನ ಇದನ್ನು ವಿರೋಧಿಸಿ ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿದರು.

    ಜೊತೆಗೆ ಆರೋಗ್ಯ ಸೇತುವಿನ ಕಾರ್ಯಕ್ಷಮತೆಯಲ್ಲಿಯೂ ದೋಷಗಳಿದ್ದವು. ಉದಾಹರಣೆಗೆ ಸೋಂಕಿತ ವ್ಯಕ್ತಿ ಒಂದು ಕೋಣೆಯಲ್ಲಿದ್ದು ಮಿಕ್ಕವರು ಮತ್ತೊಂದು ಕೋಣೆಯಲ್ಲಿದ್ದರೂ ಬ್ಲೂಟೂತ್ ಗೆ ಗೋಡೆಗಳ  ತಡೆ ಬರದ ಕಾರಣ ಅವರಿಬ್ಬರೂ ಸಂಪರ್ಕಕ್ಕೆ ಬಂದಿದ್ದರು ಎಂದು ತೋರಿಸುವುದರಿಂದ ಇಡೀ ಆಪ್ನ ನಿಖರತೆಯೇ ಬೇಗುದಿಗೆ ಬಿದ್ದಿತು.

    ಯಾರಾದರೂ ಫೋನನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋಗಿದ್ದಲ್ಲಿ ಅವರು ಸೋಂಕಿತರ ಸಂಪರ್ಕಕ್ಕೆ ಬಂದಿದ್ದರೆ ಅದು ಕೂಡ ತಿಳಿಯುತ್ತಿರಲಿಲ್ಲ. ಇಂತಹ ಹಲವು ಮಿತಿಗಳಿಂದ ಸಂಪರ್ಕ ಜಾಲದ ಪತ್ತೆಯನ್ನು ಟೆಕ್ನಾಲಜಿಯ ಬಳಕೆಯ ಮೂಲಕ ಮಾಡುವ ದೊಡ್ಡ ಅಭಿಯಾನ ಒಂದು ಮಟ್ಟದಲ್ಲಿ ಮುಗ್ಗರಿಸಿತು.

    ಜೊತೆಗೆ ಎಲ್ಲರಲ್ಲೂ ಫೋನ್ ಅಥವಾ ಸ್ಮಾರ್ಟ್ ಫೋನ್ ಇರಲಿಲ್ಲ. ಇದ್ದರೂ ಅದಕ್ಕೆ ಬ್ಲೂಟೂತ್, ಅಂತರ್ಜಾಲ ಇತ್ಯಾದಿ ಇರಬೇಕಿತ್ತು. ಎಷ್ಟು ಜನರ ಫೋನಿನಲ್ಲಿ ಇದೆಲ್ಲ ಇತ್ತೋ ಅವರೆಲ್ಲರೂ ಈ ಆಪ್ ನ್ನು ಬಳಸಲು ಸಿದ್ಧರಿರಲಿಲ್ಲ.

    ಭಾರತದಲ್ಲೇ ಅಲ್ಲದೆ ಇಂತಹ ಸರಕಾರೀ ಆಪ್ ಗಳಿಂದ ಜನರ ಪ್ರೈವಸಿ ಗೆ  ಕುಂದು ಬರುವ ದೊಡ್ಡ ಆತಂಕ ಪ್ರಪಂಚದ ಬಹುತೇಕ ದೇಶಗಳಲ್ಲಿ ಕೇಳಿಬಂತು. ಕೆನಡಾ ಮತ್ತು ಅಮೆರಿಕಾದ ಸಲಹೆಗಾರರು ಪ್ರತ್ಯೇಕ ಸಮ್ಮತಿ ಸೂಚಕ ಪೇಪರಿನ ಮೇಲೆ ಸಹಿ ಮಾಡಿಸಿಕೊಂಡು ನಂತರ ಆಪ್ ಗಳನ್ನು ಬಳಸಬಹುದು ಎಂದರು. ಈ ಎಲ್ಲ ಕೋಟಲೆಗಳನ್ನು ನೋಡಿದ ಸಿಂಗಾಪೋರ್ ತನ್ನ 5.7 ಮಿಲಿಯನ್ ಪ್ರಜೆಗಳು ಪ್ರತ್ಯೇಕ ಸಂಪರ್ಕ ಜಾಲದ ಪತ್ತೆಯನ್ನು ಮಾಡಬಲ್ಲ ಉಪಕರಣವನ್ನು ಧರಿಸಿರಿ ಎಂದಿತು.  ಇಂಗ್ಲೆಂಡಿನಲ್ಲಿಯೂ ಜನರು ತಮ್ಮ ಪ್ರೈವಸಿಯನ್ನು ಪ್ರಶ್ನಿಸಿಸಿದರು. NHS test-and-trace system ನ ಮುಖ್ಯಸ್ಥ ಟೋನಿ ಪ್ರೆಸ್ಟೆಜ್ ಸೆಪ್ಟೆಂಬರಿನವರೆಗೆ ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸದಿರುವ ಬಗ್ಗೆ ಸೂಚಿಸಿದರು. 

    ಆದರೆ ಇದೀಗ ಎರಡನೇ ಅಲೆಯ ಭಯದಲ್ಲಿರುವ ಯು.ಕೆ. ಮತ್ತೊಮ್ಮೆ ಸಂಪರ್ಕ ಜಾಲ ಪತ್ತೆಯ ಮೇಲೆ ಹೆಚ್ಚಿನ ಒತ್ತನ್ನು ನೀಡಿದೆ.ಕೆಲವು ಯೂರೋಪಿಯನ್ ದೇಶಗಳು ಇದಕ್ಕಾಗಿ ಹೆಚ್ಚು ಉತ್ತಮವಾಗಿ ಕೆಲಸಮಾಡಬಲ್ಲ ಹೊಸ ಹೊಸ ಆಪ್ ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ, ಏನೇ ಆದರೂ ಇಂತಹ ಆಪ್ ಗಳನ್ನು ಬಲವಂತವಾಗಿ ಹೇರಲಾಗದ ಕಾರಣ ಅರೆ ಬರೆ ಡೇಟಾ ಪಡೆದು ಕೊರೊನಾ ಹೊಸಸೋಂಕುಗಳ ಸಂಪರ್ಕ ಜಾಲವನ್ನು ಫಲಪ್ರದವೆನ್ನಬಹುದಾದ ಪ್ರಮಾಣದಲ್ಲಿ ಪತ್ತೆ ಹಚ್ಚುವುದು ಸಾಧ್ಯವಾಗದ ಮಾತಾಯಿತು.ಇನ್ನು ಬಡವ -ಶ್ರೀಮಂತರ ನಡುವೆ ಹೆಚ್ಚು ಅಂತರವಿರುವ ಭಾರತ ಮತ್ತಿತರ ದೇಶಗಳಲ್ಲಿ ಎಲ್ಲರಿಗೂ ಈ ಆಧುನಿಕ ಉಪಕರಣಗಳನ್ನು ಒದಗಿಸುವ ಮಾತು ಸುಲಭವಲ್ಲ. 

    ನಮ್ಮ ದೇಶದಲ್ಲಿ ಆರ್ಥಿಕ ಭಯ, ಕ್ವಾರಂಟೈನ್ ಭಯ, ಪರೀಕ್ಷೆಗಳ ಭಯ ಹೀಗೆ ನಾನಾ ಆತಂಕಗಳಿಂದ ಜನರು ತಮ್ಮ ಲಕ್ಷಣಗಳನ್ನು ವರದಿಮಾಡದೆ ಹೋಗಿದ್ದಾರೆ.ಇಲ್ಲದಿದ್ದರೆ ಈ ಮಟ್ಟದಲ್ಲಿ ಸೋಂಕು ಹರಡಲು ಸಾಧ್ಯವೇ ಇರುತ್ತಿರಲಿಲ್ಲ. ಇನ್ನು ಅವರ ಸಂಪರ್ಕಕ್ಕೆ ಬಂದವರ ಪತ್ತೆಯನ್ನು ಹೇಗೆ ಮಾಡಲು ಸಾಧ್ಯ?

    ಜನರನ್ನು ಪ್ರಶ್ನಿಸಿ ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಕ್ವಾರಂಟೈನ್ ಮಾಡುವುದು ಸುಲಭವಲ್ಲ. ಕಾಂಟಾಕ್ಟ್ ಟ್ರೇಸಿಂಗ್ ನ ವಿಚಾರ ಈ ರೀತಿ ಮುಗ್ಗರಿಸುತ್ತಿರುವಾಗಲೇ ನಿಧಾನಕ್ಕೆ ಆರ್ಥಿಕ ಸಂಕಷ್ಟಗಳೊಂದಿಗೆ ಲಾಕ್ ಡೌನ್ ತೆರವುಗೊಳಿಸಲೇ ಬೇಕಾದ ಅಗತ್ಯ ಭಾರತದಲ್ಲಿ ಬೃಹತ್ತಾಗಿ ಬೆಳೆಯಿತು.

    ಹಲವು ಝೋನ್ ಗಳ ವಿಭಜನೆ, ಕಂಟೈನ್ ಮೆಂಟ್ ಪ್ರದೇಶಗಳು, ಅಲ್ಲಿಲ್ಲಿ ಅಲ್ಪ ಸ್ವಲ್ಪ ತೆರವಿನ ಬದಲಾವಣೆ ಇತ್ಯಾದಿ ಹಲವು ಪ್ರಯೋಗಗಳ ನಂತರ ಜೂನ್ 8 ರಂದು ಅನ್ ಲಾಕ್ 1 ಆರಂಭವಾಯ್ತು, ಜುಲೈ 1 -31 ರ ನಲ್ಲಿ  ಅನ್ ಲಾಕ್ 2 ಆರಂಭವಾಯ್ತು. ಆಗಸ್ಟ್ ನಲ್ಲಿ ಅನ್ ಲಾಕ್ 3 ನಡೆಯಿತು. 

    ಇನ್ನು ಮಿಕ್ಕ ವಿಚಾರ ಇಂದಿನದು. ಕಳೆದ ಭಾನುವಾರ 90,802 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ದಿನವೊಂದಕ್ಕೆ ಸಾವಿರಾರು ಜನರು ಸಾಯುತ್ತಿದ್ದಾರೆ. ಭಾರತದಲ್ಲಿ ಇದೀಗ 47 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಂತಹ ದಿನಗಳಲ್ಲಿ ಸಂಪರ್ಕ ಜಾಲದ ಹುಡುಕಾಟ ಮೊದಲಿನ ಬಿಗಿಯನ್ನು ಕಳೆದುಕೊಂಡಿದೆ. ಈ ವಿಧಾನಕ್ಕಿದ್ದ ಪ್ರಾಧಾನ್ಯತೆ ಹಿಂಬದಿಗೆ ಸರಿಯುತ್ತಿದೆ. ಬಹುತೇಕ ರಾಜ್ಯಗಳು ಕಾಂಟಾಕ್ಟ್ ಟ್ರೇಸಿಂಗ್ ವಿಧಾನಕ್ಕೆ ಒತ್ತು ನೀಡುವುದನ್ನು ನಿಲ್ಲಿಸುತ್ತಿವೆ ಅಥವಾ ನಿಲ್ಲಿಸಿವೆ.

    ಸಂಪರ್ಕದ ಜಾಲದ ಪತ್ತೆ- ನಾಪತ್ತೆಯಾಗಿದೆಯೇ?

    ಹಾಗಾದರೆ ಸಂಪರ್ಕ ಜಾಲದ ಪತ್ತೆ  ಪೂರ್ಣ ನಾಪತ್ತೆಯಾಗಿದೆಯೇ? -ಖಂಡಿತ ಇಲ್ಲ.

    ಕರ್ನಾಟಕದಲ್ಲಿ ಇದೇ ತಿಂಗಳ ನಾಲ್ಕನೇ ತಾರೀಖಿನ ವೇಳೆಗೆ ಇದುವರೆಗೆ ಕರ್ನಾಟಕದಲ್ಲಿ ನಡೆಸಿದ ಕಾಂಟ್ಯಾಕ್ಟ್ ಟ್ರೇಸಿಂಗ್ ನ ಸಂಖ್ಯೆಗಳು:

    ಪ್ರಾಥಮಿಕ ಸಂಪರ್ಕಗಳು- 53,5102, ದ್ವಿತೀಯ ಅಥವಾ ಮಾಧ್ಯಮಿಕ ಸಂಪರ್ಕಗಳು- 48,1228 ಎಂದು ವರದಿಯಾಗಿದೆ. ಜೊತೆಗೆ ಇನ್ನು ಮನೆಯಲ್ಲೇ ಸ್ವಯಂ ಕ್ವಾರಂಟೈನ್ ನಲ್ಲಿ ಇನ್ನೂ 47,3307 ರಷ್ಟು ಜನರಿದ್ದಾರೆ ಎಂದು ತಿಳಿದುಬಂದಿದೆ. ಹಲವರ ಸಂಪರ್ಕ ಜಾಲ ಪತ್ತೆ ಈಗಲೂ ಜಾರಿಯಲ್ಲಿದೆ.

    ಕೇರಳದಲ್ಲಿ ಕಟ್ಟು ನಿಟ್ಟಿನ ಸಂಪರ್ಕ ಜಾಲ ಪತ್ತೆಯ ಕಾರಣ ಕೊರೊನ ನಿಯಂತ್ರಣದಲ್ಲಿ ಮೊದಲ ಹಂತದಲ್ಲಿ ಭಾರೀ ಯಶಸ್ಸು ದೊರೆಯಿತು ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಕೋವಿಡ್ ನ ಸೋಂಕಿನ ನಿಯಂತ್ರಣಕ್ಕೆ ’ಸಂಪರ್ಕ ಜಾಲ ಪತ್ತೆಯೇ ಬೆನ್ನೆಲುಬು’ ಎಂದು ಹೇಳಿಕೆ ನೀಡಲಾಗಿದೆ. ಈಗಲೂ ಈ ವಿಧಾನವನ್ನು ಜಾರಿಯಿಡಲಾಗಿದೆ.

    ಇದು ನಿಜವಾದರೂ ಸೋಂಕು ಹಬ್ಬುವಿಕೆ ಮತ್ತು ಸಂಪರ್ಕ ಜಾಲ ಪತ್ತೆ ಒಂದಕ್ಕೊಂದು ಪೂರಕವಾಗಿರಬೇಕು.  ಆದರೆ, ಒಂದೆಡೆ ಆರ್ಥಿಕ ವಹಿವಾಟುಗಳನ್ನು ಸಾಮಾನ್ಯ ಸ್ಥಿತಿಗೆ ತರಲೇ ಬೇಕಾದ ಅಗತ್ಯವಿರುವ ಕಾರಣ  ಸೋಂಕು ಹರಡಲು ಬಿಟ್ಟು ಇನ್ನೊಂದು ಕಡೆ ಸಂಪರ್ಕ ಜಾಲ ಪತ್ತೆ ದಕ್ಷತೆಯಿಂದ ಕೆಲಸಮಾಡಲಿ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗಿಬಿಡುತ್ತದೆ. ಸಧ್ಯಕ್ಕೆ ಭಾರತವಿರುವುದು ಇದೇ ಪರಿಸ್ಥಿತಿಯಲ್ಲಿ.ಆದರೆ ಅದು ಅನಿವಾರ್ಯವೆನ್ನಿಸಿರುವ ಪರಿಸ್ಥಿತಿ.ಹ್

    ಸಂಪರ್ಕ ಜಾಲ ಪತ್ತೆಯ ಅವಶ್ಯಕತೆ ಇನ್ನೂ ಇದೆಯೇ?

    “ಬಹುತೇಕ ಜನರು ಪರಸ್ಪರ ಭೇಟಿಯಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಕಾಂಟಾಕ್ಟ್ ಟ್ರೇಸಿಂಗ್ ನಿಷ್ಪ್ರಯೋಜಕ ಅದರ ಬದಲು ಎಲ್ಲರಿಗೂ ಕೋವಿಡ್ ಪರೀಕ್ಷೆಯನ್ನು ಮಾಡುವುದೇ ಲೇಸು “-  ಎನ್ನುವ ವಾದಗಳಿವೆ.

    ಆದರೆ, ಈ ವಾದಕ್ಕೂ ಬಹಳ ಮಿತಿಗಳಿವೆ. ಉದಾಹರಣೆಗೆ, ನಮ್ಮ ದೇಶದ 1.3 ಬಿಲಿಯನ್ ಜನರಿಗೆ ಕೋವಿಡ್ ಪರೀಕ್ಷೆ ನಡೆಸುವ ಕೆಲಸ ಸಾಮಾನ್ಯದ್ದಲ್ಲ, ಅದರ ಜೊತೆ ಒಮ್ಮೆ ಪರೀಕ್ಷೆ ನಡೆದು ಫಲಿತಾಂಶದಲ್ಲಿ ಸೋಂಕು ಇಲ್ಲ ಎಂದವರಿಗೆ ಸ್ವಲ್ಪ ಸಮಯದ ನಂತರ ಮತ್ತೆ ಸೋಂಕು  ತಗುಲಬಹುದು. ಸೋಂಕು ಇದೆ ಎಂದು ತಿಳಿದು ಚಿಕಿತ್ಸೆ ಪಡೆದು ಗುಣಮುಖರಾದವರಿಗೂ ಮತ್ತೊಮ್ಮೆ ಸೋಂಕು ಬರುವುದಿಲ್ಲ ಎನ್ನುವುದಕ್ಕೆ ಖಾತರಿಯೇನು ಇಲ್ಲ. ಹಾಗಾಗಿ ಎಷ್ಟು ಜನರಿಗೆ ಪದೇ ಪದೇ ಪರೀಕ್ಷೆ ಮಾಡಬೇಕಾಗುತ್ತದೆಯೋ ತಿಳಿದಿಲ್ಲ. ಇವೆಲ್ಲದರ ಜೊತೆ ಕೊರೊನಾ ಎರಡನೇ ಅಲೆ, ಮೂರನೇ ಅಲೆ ಇತ್ಯಾದಿಗಳೂ ಇವೆ. ಹೀಗಾಗಿ ಕೋವಿಡ್ ಪರೀಕ್ಷೆಯೊಂದೇ ಖಂಡಿತ ಸಾಕಾಗುವುದಿಲ್ಲ. ಇದೇ ಕಾರಣಕ್ಕೆ ಸಂಪರ್ಕ ಜಾಲ ಪತ್ತೆಯ ಅಗತ್ಯ ಇದ್ದೇ ಇದೆ ಎನ್ನುವುದು ತಿಳಿದವರ ಅಭಿಪ್ರಾಯ.

    ಭಾರತದಲ್ಲಿ ಮೊದಲ ಅಲೆಯ ಉಬ್ಬರ ನಿರಂತರವಾಗಿ ಏರುತ್ತಲೇ ಇದೆ. ಆದರೆ ಆರು ತಿಂಗಳು ಕಾದಿರುವ ಜನರ ಸಹನೆ ಕರಗಿಹೋಗುತ್ತಿದೆ. ಯಾವುದೋ ಹುಂಬು ಧೈರ್ಯದ ಮೇಲೆ ಸಹಜ ಬದುಕಿನತ್ತ ಒರಳಲು ಬದುಕು ಮಿಡುಕುತ್ತಿದೆ. 

    ಭಾರತದಲ್ಲಿಯೂ ಕರೋನ ಕಡಿಮೆಯಾಗುವ ಕಾಲ ಶುರುವಾಗಿ ದಿನವೊಂದರಲ್ಲಿ ಅತ್ಯಂತ ಕಡಿಮೆ ಹೊಸ ಸೋಂಕಿತರು ಪತ್ತೆಯಾಗುವ ಕಾಲ ಬಂದಾಗ ಸೋಂಕಿನ ಪ್ರಮಾಣವನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ಕಡಿಮೆ ಪ್ರಮಾಣದಲ್ಲಿಯೇ ಇಡಲು ನಮಗೆ ಸಂಪರ್ಕ ಜಾಲ ಪತ್ತೆಯ ಅಗತ್ಯ ಇದ್ದೇ ಇದೆ. ಆಗ ಸಂಪರ್ಕ ಜಾಲ ಪತ್ತೆ ಮತ್ತೆ ಮುಂಚೂಣಿಗೆ ಬರಲಿದೆ. ಹಿನ್ನೆಲೆಯಲ್ಲಿ ಈಗಲೂ ನೆರವು ನೀಡುತ್ತಿದೆ.

    .

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    2 COMMENTS

    1. ಈ ಕರೊನಾ ಇಷ್ಟೊಂದು ಮುಂದುವರೆದ ವೇಳೆಯಲ್ಲೂ,ತನ್ನ ನಿಖರತೆಯನ್ನು ಯಾವ ಪಂಡಿತರಿಗೂ ಬಿಟ್ಟು ಕೊಡದೇ ಇರುವುದು ನನಗೆ ಸೋಜಿಗ. ಮೊದಲ ಲಾಕ್ ಡೌನ್ ಅಂತೂ ಎಲ್ಲರೂ ತುಂಬಾ ಎಚ್ಚರಿಕೆಯಿಂದ ಕನಿಷ್ಠ 30 ದಿನಗಳವರೆಗೆ ಮಾಡಿಯೂ ಇದು ಹೇಗೆ ಬದುಕುಳಿಯಿತು? ಏಕೆಂದರೆ ಆಗ ಪಂಡಿತರು ಹೇಳಿದ್ದು ಇದರ ಆಯಸ್ಸು 15-20 ದಿನ. ಆ ಸಮಯದಲ್ಲಿ ಯಾರೂ ಇದರ ಸಂಪರ್ಕಕ್ಕೆ ಬರದಿದ್ದರೆ,ಇದು ಸಹಜವಾಗಿ ಸಾಯುತ್ತದೆ ಅಂತ. ಆಗಲೂ ಸ್ಯಾನಿಟಿಸರ್,ಮಾಸ್ಕ್ ಹಾಕಿಯೇ ಇದ್ದರು.

      ಅರ್ಧ ಕೋಟಿ ರೋಗಿಗಳನ್ನು ಇಟ್ಟುಕೊಂಡ ಭಾರತ ಇಂದು ನಿರಾಳವಾಗಿದೆ. ಬಂದರೂ ಕೆಮ್ಮು,ನೆಗಡಿಯ ರೀತಿ ವಾರದಲ್ಲಿ ಗುಣಮುಖ ಆಗ್ತಿದೆ. ಹಾಗಂತಾ ಆಸ್ಪತ್ರೆಯಿಂದ ಉಪಚರಿಸಿಕೊಂಡು ಬಂದವರೇ ಹೇಳ್ತಿದ್ದಾರೆ. ಹಾಗಿದ್ದರೆ 100,200 ಇರುವಾಗ ಆ ಮಟ್ಟದ ಲಾಕ್ ಡೌನ್, ಆರ್ಥಿಕತೆಯನ್ನು ಬಲಿ ಕೊಡೋದು ಬೇಕಿತ್ತಾ?

      ಬೇರೆ ಯಾರು ಏನನ್ನೇ ಹೇಳಿ,ವದಂತಿ ಹಬ್ಬಿಸಲಿ ಸರ್ಕಾರ ಮೆಡಿಕಲ್ ಬುಲ್ಲೆಟಿನ್ ಅಂತ ನಿಖರವಾದ ವಿಷಯಗಳನ್ನು ಪ್ರಸಾರ ಮಾಡಲಿಲ್ಲ . ಬಹುತೇಕ TV ವರದಿಯ ಮಾದರಿಯಲ್ಲಿಯೇ ಸರ್ಕಾರದ ಅಭಿಪ್ರಾಯ ಇತ್ತು.
      ಒಂದು ವೇಳೆ ಯುರೋಪ್ ನಲ್ಲಿ ಮೊದಲು ಇದರ ಹೊಡೆತ ನೀಡಿ ,ಅಲ್ಲಿ ಆ ಮಟ್ಟದ ಸಾವು ಆಗದೇ ಏಷ್ಯಾಗಳಲ್ಲಿ ಆಗಿದ್ದರೆ,ಇದಕ್ಕೆ ಈ ರೋಗಕ್ಕೆ ಈ ಮಟ್ಟದ ಮರ್ಯಾದೆ ಸಿಕ್ತಿತ್ತಾ?

    LEAVE A REPLY

    Please enter your comment!
    Please enter your name here

    Latest article

    error: Content is protected !!