ನಾವೆಲ್ಲ ಕಾತುರದಿಂದ ಎದುರು ನೋಡುತ್ತಿರುವ ಐ.ಪಿ.ಎಲ್ ಪಂದ್ಯ ನಾಳೆಯಿಂದ ಶುರುವಾಗುತ್ತಿದೆ. ಕೊರೋನ ಸಾಂಕ್ರಾಮಿಕ ರೋಗದಿಂದ ಭಯಭೀತಿಗೊಂಡ ಜನರ ಮನಸ್ಸನ್ನು ಮನರಂಜನೆಯತ್ತ ಒಯ್ಯುವಲ್ಲಿ ಐಪಿಎಲ್ ಖಂಡಿತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ಬಿಸಿಸಿಐ ನ ಉತ್ಸಾಹ, ವಿಶ್ವಾಸದಿಂದ ಈ ಟೂರ್ನಿ ಸಾಧ್ಯವಾಗುತ್ತಿದೆ.
ಕ್ರಿಕೆಟ್ನಲ್ಲಿ ಐದು ದಿನಗಳ ಟೆಸ್ಟ್ ಪಂದ್ಯವಿದೆ, ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯವಿದೆ ಮತ್ತು 2008 ರಲ್ಲಿ ಬಿಸಿಸಿಐ ಎಲ್ಲಾ ದೇಶಗಳನ್ನೊಳಗೊಂಡ ಲೀಗ್ ಆಧಾರಿತ ಪಂದ್ಯವನ್ನು ಜನರಿಗೆ ಪರಿಚಯಿಸಿತು. ಎರಡೂ ಟೀಂ ಗಳು ಟ್ವೆಂಟಿ 20 ಓವರ್ ಮಾಡಬೇಕು ಮತ್ತು ಆಟವೂ ಬೇಗ ಮುಗಿಯುತ್ತದೆ. ಇದು ಎಷ್ಟು ಜನಪ್ರಿಯವಾಯಿತೆಂದರೆ , 12 ವರ್ಷಗಳ ಕಡಿಮೆ ಅವಧಿಯಲ್ಲಿ ಇದು ವಿಶ್ವದ 10 ಜನಪ್ರಿಯ ಕ್ರೀಡಾ ಲೀಗ್‌ಗಳಲ್ಲಿ 6 ನೇ ಸ್ಥಾನವನ್ನು ಪಡೆದುಕೊಂಡಿತು.
ಲೀಗ್ ಆಟಗಳ ಜನಪ್ರಿಯತೆಯನ್ನು ಕ್ರೀಡಾಂಗಣದಲ್ಲಿ ಸೇರುವ ಪ್ರೇಕ್ಷಕರ ಮತ್ತು ಟಿವಿ ವೀಕ್ಷಕರ ಸಂಖ್ಯೆಯನ್ನು ಪರಿಗಣಿಸಿ ತೀರ್ಮಾನ ಮಾಡಲಾಗುತ್ತದೆ . ಈ ಎರಡು ಅಂಶಗಳನ್ನು ಒಟ್ಟು ಗಮನಿಸಿದಾಗ, ಪ್ರಪಂಚದ ನಾನಾ ದೇಶಗಳಲ್ಲಿ ಆಡುವ ಲೀಗ್ ಪಂದ್ಯಗಳ ಕ್ರಮಾಂಕ ಕೆಳಗಿನಂತಿದೆ:
1. ಯು. ಎಸ್.ಎ – ಎನ್.ಎಫ್.ಎಲ್ (ರಗ್ಬಿ ಲೀಗ್) 2. ಜರ್ಮನ್ – ಬುಂಡೆಸ್ಲಿಂಗ (ಫುಟ್ಬಾಲ್), 3. ಯು.ಎಸ್ – ಕಾಲೇಜ್ ಫುಟ್ಬಾಲ್ ವಿಭಾಗ I , 4. ಇಂಗ್ಲಿಷ್ ಪ್ರೀಮಿಯಂ ಲೀಗ್ (ಫುಟ್ ಬಾಲ್), 5. ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ 6. ಐ ಪಿ ಎಲ್
ಭಾರತದಲ್ಲಿ ಕ್ರಿಕೆಟ್ನಷ್ಟು ಜನಪ್ರಿಯ ಆಟ ಬೇರೊಂದಿಲ್ಲ. ಕಾರಣ ಬ್ಯಾಟೇ ಬೇಕು ಅಂತ ಇಲ್ಲ ಒಂದು ಹಲಗೆ ಮತ್ತು ರಬ್ಬರ್ ಚೆಂಡಿದ್ದರೂ ಸಾಕು ಈ ಆಟ ಆಡಬಹುದು. ಹಾಗಾಗಿ ಗಲ್ಲಿ ಗಲ್ಲಿಗಳಲ್ಲೂ ಈ ಆಟ ಪ್ರಸಿದ್ಧವಾಗಿದೆ . ಬಡವರಿಂದ ಶ್ರೀಮಂತರವರೆಗೂ ಜನಪ್ರಿಯವಾಗಿದೆ. ಐ.ಪಿ.ಎಲ್ ವಿಶ್ವದ ಎಲ್ಲೆಡೆಯೂ ಹೆಚ್ಚು ವೀಕ್ಷಿಸುವ ಲೀಗ್ ಪಂದ್ಯಗಳಲ್ಲಿ ಒಂದಾಗಿದೆ. ಐ.ಪಿ.ಎಲ್ ಪ್ರಸ್ತುತ ಎಂಟು ಫ್ರ್ಯಾಂಚೈಸ್ ಹೊಂದಿದೆ. ಪ್ರತಿ ಪಂದ್ಯದಲ್ಲೂ ಸರಾಸರಿ 32000 ವೀಕ್ಷಕರ ಹಾಜರಾತಿ ಇರುತ್ತದೆ ಎಂದು ಸಮೀಕ್ಷೆ ಹೇಳುತ್ತದೆ. ಐಪಿಎಲ್ ಶುರುವಾಯಿತೆಂದರೆ ಫೀವರ್ ಬಂತು ಅಂತಾನೆ ಲೆಕ್ಕ.
ಐಪಿಎಲ್ ನ 13ನೇ ಆವೃತ್ತಿ 19.09.2020 ರಿಂದ 10.11.2020 ರವರೆಗೆ ಯುನೈಟೆಡ್ ಅರಬ್ ಎಮರೈಟ್ಸ್ ನ ದುಬೈ, ಅಬುದಾಭಿ ಮತ್ತು ಶಾರ್ಜಾ ನಗರಗಳಲ್ಲಿ ನಡೆಯುತ್ತದೆ . ಒಟ್ಟು 53 ದಿನಗಳ ಕಾಲ ನಡೆಯುವ ಈ ಪಂದ್ಯದಲ್ಲಿ 56 ಲೀಗ್ ಪಂದ್ಯಗಳು, 4 ಪ್ಲೇ-ಆಫ್ ಸೇರಿ ಒಟ್ಟು 60 ಪಂದ್ಯಗಳು ನಡೆಯಲಿವೆ. ಐಪಿಎಲ್ ನ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಪಂದ್ಯಾವಳಿಯನ್ನು ಭಾರತದಿಂದ ಹೊರಗೆ ನಡೆಸಲಾಗುತ್ತಿದೆ.
ಮೊದಲು ನಡೆದದ್ದು 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ. ಕಾರಣ ಭಾರತದಲ್ಲಿ ಆಗ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿತ್ತು . ಎರಡನೆಯದು 2014ರಲ್ಲೂ ಚುನಾವಣೆಯ ಕಾರಣಕ್ಕೆ ಮೊದಲ 20 ಪಂದ್ಯ ಗಳನ್ನು ಯುಎಇ ನಲ್ಲಿ ನಡೆಸಿದ್ದರು. ಈ ವರ್ಷ ಕೋವಿಡ್ -19 ಪ್ರಕರಣಗಳು ದೇಶದಲ್ಲಿ ದಿನದಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪುನ: ಯುಎಇ ನಲ್ಲಿ ನಡೆಯುತ್ತಿದೆ.
ಫ್ಯಾಂಟಸಿ ಕ್ರಿಕೆಟ್ ಲೀಗ್ ಪ್ಲಾಟ್‌ಫಾರ್ಮ್ ಡ್ರೀಮ್ 11 ಪ್ರಾಯೋಜಕತ್ವದ ಹಕ್ಕನ್ನು ಪಡೆದಿದ್ದಾರೆ . ಇಂಡಿಯನ್ ಆನ್ಲೈನ್ ಎಜುಕೇಷನ್ ಟೆಕ್ನಾಲಜಿ ಕಂಪನಿ ಅನ್ಅಕ್ಯಾಡಮಿ ಐಪಿಎಲ್ ನ ಅಧಿಕೃತ ಪಾಲುದಾರರಾಗಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಲೈವ್ ಟಿವಿ ಪ್ರಸಾರ ಮತ್ತು ಡಿಸ್ನಿ ಹಾಟ್‌ಸ್ಟಾರ್ ಡಿಜಿಟಲ್ ಪ್ಲಾಟ್ ಫಾರ್ಮ್ ಪ್ರಸಾರದ ಹಕ್ಕನ್ನು ಪಡೆದುಕೊಂಡಿವೆ.
ಟ್ವೆಂಟಿ 20 ಪಂದ್ಯವನ್ನು ನೀವು ಕ್ರೀಡಾಂಗಣಕ್ಕೆ ಹೋಗಿ ನೋಡುವ ಮಜವೇ ಬೇರೆ. ಇಡೀ ಕ್ರೀಡಾಂಗಣದಲ್ಲಿ ಆರ್ ಸಿ ಬಿ, ಆರ್ ಸಿ ಬಿ ಎಂದು ಗಂಟಲು ಹರಿಯುವಂತೆ ಕೂಗಿ ಆಟಗಾರರನ್ನು ವೀಕ್ಷಕರು ಪ್ರೋತ್ಸಾಹಿಸುತ್ತಿದ್ದರೆ ಅದು ನಿಮ್ಮ ಕಿವಿಗೆ ಅಲೆಅಲೆಯಾಗಿ ಬಂದು ಅಪ್ಪಳಿಸುತ್ತಿರುತ್ತದೆ. ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರೂ how is the josh ಎಂದರೆ high sir ಎನ್ನುವಂತಿರುತ್ತದೆ. ಒಟ್ಟಿನಲ್ಲಿ ಇಡೀ ವಾತಾವರಣದಲ್ಲಿ ಕರೆಂಟ್ ಹರಿಯುತ್ತಿರುತ್ತದೆ. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಎರಡೂ ಕಡೆ ಉತ್ಸವದ ವಾತಾವರಣವಿರುತ್ತದೆ.
ಖಾಲಿ ಕ್ರೀಡಾಂಗಣ
ಈ ಬಾರಿಯ ವಿಶೇಷತೆ ಎಂದರೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಅನುಪಸ್ಥಿತಿ. ಈ ಸಲ ಖಾಲಿ ಆಟದ ಮೈದಾನದಲ್ಲಿ ಅಭಿಮಾನಿಗಳ ಬೆಂಬಲವಿಲ್ಲದೆ ಹೇಗೆ ಆಟಗಾರರು ಸ್ಫೂರ್ತಿ ಪಡೆಯುತ್ತಾರೆ ಎನ್ನುವುದೇ ದೊಡ್ಡ ಕುತೂಹಲ. ಬಿಸಿಸಿಐ ಸಹ ಐಪಿಎಲ್ ಅನ್ನು ಕೊರೋನದಿಂದ ಕಾಪಾಡಲು ಸಾಕಷ್ಟು ಕಠಿಣ ಕ್ರಮಗಳನ್ನು ಹಾಗೂ ನಿಯಮಗಳನ್ನು ರೂಪಿಸಿದೆ.
ಈ ಬಾರಿ ಆಡುತ್ತಿರುವ ಎಂಟು ತಂಡಗಳ ನಾಯಕರು ಹೀಗಿದ್ದಾರೆ:
1. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ
2.ಚೆನ್ನೈ ಸೂಪರ್ ಕಿಂಗ್ ನಾಯಕ ಎಂ ಎಸ್ ಧೋನಿ
3.ಕೋಲ್ಕತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್
4.ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ
5. ಕಿಂಗ್ಸ್ 11ಪಂಜಾಬ್ ನಾಯಕ ಕೆ ಎಲ್ ರಾಹುಲ್
6.ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್
7.ರಾಜಸ್ಥಾನ್ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್
8.ಸನ್ ರೈಸರ್ಸ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್.
ಸಮೀಕ್ಷೆಯ ಪ್ರಕಾರ ಅಗ್ರ ಸ್ಥಾನದಲ್ಲಿರುವ ನಾಲ್ಕು ತಂಡಗಳು :
1.ಮುಂಬೈ ಇಂಡಿಯನ್ಸ್ (ಎಂಐ), 2.ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ), 3.ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು 4.ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ).
1983ರ ಆ ಪಂದ್ಯ
ಕ್ರಿಕೆಟ್ ಎಂದ ತಕ್ಷಣ ನನಗೆ ಜ್ಞಾಪಕಕ್ಕೆ ಬರುವುದು 1983ರ ಭಾರತ- ವೆಸ್ಟ್ ಇಂಡೀಸ್ ODI Finals. ಅಬ್ಬಾ ! ನಮ್ಮ ತಂದೆಯವರು ಆದಿನ ನನ್ನ ಗೆಳೆಯರೊಡನೆ ಆಟವನ್ನು ಎಂಜಾಯ್ ಮಾಡಿದ ರೀತಿ ನವಯುವಕರನ್ನೂ ನಾಚಿಸುವಂತಿತ್ತು.
ಒಟ್ಟಿನಲ್ಲಿ ಈ ಸಲದ ಐಪಿಎಲ್ ಪಂದ್ಯವು ಕುತೂಹಲಕಾರಿ, ಮನೋರಂಜನಾ ಮತ್ತು ಸ್ಪರ್ಧಾತ್ಮಕವಾಗಿ ಇರುತ್ತದೆ . ವರ್ತಮಾನಕ್ಕೆ ಯಾವತ್ತೂ ಇತಿಹಾಸ ವ್ಯರ್ಥ ಎಂದು ಸಾಬೀತಾಗುತ್ತದೆ.
ಎಲ್ಲಾ ಟೀಮಿನವರು ಸಮನಾಗಿ ಇರುವ ಕಾರಣ ಯಾರು ಫೈನಲ್ಸ್ ಗೆ ಬಂದರೂ ಆ ದಿನ ಉತ್ತಮವಾಗಿ ಆಡಿದರೆ ಹಾಗೂ ಅವರ ಅದೃಷ್ಟ ಚೆನ್ನಾಗಿದ್ದರೆ ಅವರಿಗೆ ಕಪ್ ಸಿಗುವುದರಲ್ಲಿ ಯಾವ ಸಂದೇಹವೂ ಇಲ್ಲ .
ಆದರೆ ಆರ್ ಸಿ ಬಿ ಹಾರ್ಡ್ ಕೋರ್ ಫ್ಯಾನ್ಸ್ ಎಲ್ಲರಿಗೂ ಈ ಸಲ ಆರ್ ಸಿ ಬಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ದೃಢವಾಗಿದೆ. ನಾವೆಲ್ಲಾ ಟಿವಿಯ ಮುಂದೆ ಕುಳಿತೇ ಆಟಗಾರರನ್ನು ಪ್ರೋತ್ಸಾಹಿಸೋಣ ಅಲ್ಲವೇ?
ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಳಯದ ಬಗ್ಗೆ ಇರುವ ವ್ಯಾಖ್ಯಾನ, ಭವಿಷ್ಯವಾಣಿಗಳು, ನಂಬಿಕೆ, ಅಪನಂಬಿಕೆಗಳು ಏನೇ ಇರಲಿ, ಆದರೆ ವೈಜ್ಞಾನಿಕ ದೃಷ್ಟಿಕೋನದಲ್ಲಿ ಮಾನವ ನಿರ್ಮಿತ ಕಾರಣದಿಂದ ಭೂವಾತಾವರಣದಲ್ಲಿ ಉಂಟಾಗುತ್ತಿದ್ದ ಅನಪೇಕ್ಷಿತ ಬದಲಾವಣೆಯೊಂದನ್ನು ಸುಮಾರು ಐದು ದಶಕಗಳ ಹಿಂದೆ ವಿಜ್ಞಾನಿಯೊಬ್ಬರು ಒಂದು ವೇಳೆ ಗಮನಿಸದೇ ಹೋಗಿರದಿದ್ದರೆ ಪ್ರಾಯಶ: ಪ್ರಳಯ ಸದೃಶ್ಯ ಘಟನೆ ಇಷ್ಟರೊಳಗೆ ನಡೆದೇ ಹೋಗುವ ಸಂಭವ ಇರುತ್ತಿತ್ತು.
ಹೊಸ ಸಹಸ್ರಮಾನ 2000 ಇಸವಿಗೆ ಕಾಲಿಡುತ್ತಿದ್ದಂತೆ ಭೀಕರ ಪ್ರಳಯದಿಂದ ಯುಗ ಅಂತ್ಯವಾಗುತ್ತದೆ ಎಂದು ಯಾವಾಗಲೋ ಕೆಲವು ಜ್ಯೋತಿಷಿಗಳು ‘ಬರೆದಿಟ್ಟಿದ್ದನ್ನು’ ನಂಬಿಕೊಂಡು ತೊಂಬತ್ತರ ದಶಕದಲ್ಲಿ ಜನರನ್ನು ಹುಯಿಲೆಬ್ಬಿಸಲಾಗಿತ್ತು. ಇನ್ನೇನು ಪ್ರಳಯವನ್ನು ಜನರು ಸಂಪೂರ್ಣ ಮರೆತ್ತಿದ್ದರೆನ್ನುವಾಗ ಮತ್ತೊಮ್ಮೆ, “ಡಿಸೆಂಬರ್ 11, 2012 ರಂದು ಪ್ರಳಯ ಸಂಭವಿಸುವುದು ಗ್ಯಾರಂಟಿ, ಈ ಸಲ ಅದು ಸುಳ್ಳಾಗಲು ಸಾಧ್ಯವೇ ಇಲ್ಲ” ಎಂದು ಜ್ಯೋತಿಷಿಗಳು ಮಾಧ್ಯಮಗಳ ಮೂಲಕ ಬೊಂಬ್ಡ ಬಡಿದುಕೊಂಡರೂ ‘ಒಮ್ಮೆ ಮೂರ್ಖರಾಗಿದ್ದು ಸಾಕು’ ಎಂದುಕೊಂಡು ಅದರ ಬಗ್ಗೆ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳಲಿಲ್ಲ (ಜೀವ ಉಳಿಸಿಕೊಳ್ಳಲು ಮತ್ತು ಪ್ರಳಯದ ನಂತರ ಬದುಕಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಕೆಲವು ಜನರ ಸ್ವಾರಸ್ಯಕಾರಿ ದೃಶ್ಯಾವಳಿಗಳು ಆಗಿನ ದಿನಗಳಲ್ಲಿ ಟೀವಿ, ಪತ್ರಿಕೆಗಳಲ್ಲಿ ಬಿತ್ತರವಾಗುತ್ತಿತ್ತು). ಇದಕ್ಕೆ ಸಂಬಂಧಿಸಿದ ‘2012’ ಎಂಬ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಮೂಡಿಬಂದ ಭೀಕರ ಪ್ರಳಯ ಸದೃಶ್ಯಗಳನ್ನು ನೋಡಿ ಮನರಂಜನೆ ಪಟ್ಟರೆ ಹೊರತು ಇನ್ನು ಸ್ವಲ್ಪ ದಿನದಲ್ಲಿ ಹೀಗೆ ಆಗುತ್ತದೆ ಎಂದು ಯಾರೂ ಭಯಪಡುವಷ್ಟು ಮೂರ್ಖರಾಗಲಿಲ್ಲ. ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಳಯದ ಬಗ್ಗೆ ಇರುವ ವ್ಯಾಖ್ಯಾನ, ಭವಿಷ್ಯವಾಣಿಗಳು, ನಂಬಿಕೆ, ಅಪನಂಬಿಕೆಗಳು ಏನೇ ಇರಲಿ, ಆದರೆ ವೈಜ್ಞಾನಿಕ ದೃಷ್ಟಿಕೋನದಲ್ಲಿ ಮಾನವ ನಿರ್ಮಿತ ಕಾರಣದಿಂದ ಭೂವಾತಾವರಣದಲ್ಲಿ ಉಂಟಾಗುತ್ತಿದ್ದ ಅನಪೇಕ್ಷಿತ ಬದಲಾವಣೆಯೊಂದನ್ನು ಸುಮಾರು ಐದು ದಶಕಗಳ ಹಿಂದೆ ವಿಜ್ಞಾನಿಯೊಬ್ಬರು ಒಂದು ವೇಳೆ ಗಮನಿಸದೇ ಹೋಗಿರದಿದ್ದರೆ ಪ್ರಾಯಶ: ಪ್ರಳಯ ಸದೃಶ್ಯ ಘಟನೆ ಇಷ್ಟರೊಳಗೆ ನಡೆದೇ ಹೋಗುವ ಸಂಭವ ಇರುತ್ತಿದ್ದರಬಹುದು…!
ಪ್ರಕೃತಿಯಲ್ಲಿ ಉಂಟಾಗುತ್ತಿರುವ ಒಂದು ಅನಪೇಕ್ಷಿತ ಬದಲಾವಣೆಯ ಹಿಂದಿರುವ ಕಾರಣವನ್ನು ಅರಿತುಕೊಂಡು ಅದನ್ನು ತಡೆಗಟ್ಟಲು 1961 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಂಡ ಒಂದು ಒಡಂಬಡಿಕೆಯು ಮುಂದೆ ಸಂಭವಿಸಬಹುದಾದ ಪ್ರಳಯ ಸನ್ನಿಹಿತ ಘಟನೆಯನ್ನು ತಡೆಯಲು ಸಾಧ್ಯವಾಯಿತು. ಹಾಗಿದ್ದರೆ, ಆ ವಿಜ್ಞಾನಿಯು ಭೂ ವಾತಾವರಣದಲ್ಲಿ ಗಮನಿಸಿದ ಅಂಶ ಯಾವುದು? ಭೂಮಿಯಲ್ಲಿರುವ ಜೀವಿಗಳಿಗೆಲ್ಲ ನಾಶವಾಗುವ ಪ್ರಳಯಸದೃಶ್ಯ ಸನ್ನಿವೇಷ ಹೇಗೆ ತಪ್ಪಿಸಲಾಯಿತು? ಪುಸ್ತತ ಸ್ಥಿತಿ ಹೇಗಿದೆ? ಬನ್ನಿ ನೋಡೋಣ.
ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಒಂದು ಸೇಬುಹಣ್ಣನ್ನು ಉದಾಹರಣೆಯಾಗಿ ತಗೆದುಕೊಳ್ಳೋಣ. ಸೇಬುಹಣ್ಣಿನ ಮೇಲಿರುವ ತೆಳುವಾದ ಸಿಪ್ಪೆಯನ್ನು ಕೆರೆಸಿ ತೆಗೆದು ತೆರೆದ ಸ್ಥಿತಿಯಲ್ಲಿ ಇಟ್ಟರೆ ಸ್ವಲ್ಪ ಹೊತ್ತಿನ ನಂತರ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಇನ್ನೂ ಸ್ವಲ್ಪ ಸಮಯ ಹಾಗೆಯೇ ಬಿಟ್ಟರೆ ಹಣ್ಣು ಸಂಪೂರ್ಣ ಹಾಳಾಗುತ್ತದೆ. ಅಂದರೆ, ಇಡೀ ಸೇಬು ಹಣ್ಣಿನ ನೈಜತೆಯನ್ನು ಕಾಪಾಡಲು ಅದರ ತೆಳುವಾದ ಸಿಪ್ಪೆಯು ರಕ್ಷಾಕವಚದಂತೆ ಇರುತ್ತದೆ. ಅದೇ ರೀತಿ ಭೂಮಿಯಲ್ಲಿರುವ ಎಲ್ಲಾ ಜೀವಸಂಕುಲಗಳನ್ನು ಸೂರ್ಯನಿಂದ ಹೊರಹೊಮ್ಮುವ ಅಪಾಯಕಾರಿ ಅತಿನೇರಳೆ ಕಿರಣಗಳಿಂದ ಕಾಪಾಡಲು ಭೂಮಿಯ ವಾತಾವರಣದಲ್ಲಿ ತೆಳುವಾದ ರಕ್ಷಾಕವಚವೊಂದಿದೆ.
ಆರಕ್ಷಾಕವಚಯಾವುದು?
ಸೌರ ಶಕ್ತಿಯು ಭೂಮಿಯಲ್ಲಿರುವ ಎಲ್ಲಾ ಜೈವಿಕ ಕ್ರಿಯೆಗಳಿಗೆ ಮೂಲ. ಆದರೆ ಎಲ್ಲಾ ಜೀವಿಗಳ ಶಕ್ತಿಯ ಮೂಲವಾದ ಬೆಳಕಿನ ಕಿರಣಗಳ ಜೊತೆಗೆ ಸೂರ್ಯನಿಂದ ಅಪಾಯಕಾರಿಯಾದ ನೇರಳಾತೀತ ವಿಕಿರಣಗಳೂ (Ultraviolet radiation) ಹೊರಹೊಮ್ಮುತ್ತವೆ. ಅಗಾಧ ಪ್ರಮಾಣದಲ್ಲಿ ಸೂರ್ಯನಿಂದ ಉತ್ಸರ್ಜಿತವಾಗುವ ನೇರಳಾತೀತ ಕಿರಣಗಳು ಭೂಮಿಯನ್ನು ತಲುಪಿದರೆ ಇಲ್ಲಿರುವ ಎಲ್ಲಾ ಜೀವಿಗಳು ನಾಶವಾಗುತ್ತವೆ. ಏಕೆಂದರೆ ಅತಿನೇರಳೆ ಕಿರಣವು ಜೈವಿಕ ಅಣುಗಳನ್ನು, ಮುಖ್ಯವಾಗಿ ತಳಿಮಾಹಿತಿಯನ್ನು ಹೊಂದಿರುವ ಡಿ.ಎನ್.ಎ.ಯನ್ನು ಛಿದ್ರಗೊಳಿಸುತ್ತದೆ. ಜೀವಕೋಶದ ಎಲ್ಲಾ ಕ್ರಿಯೆಗಳನ್ನು ನಿಯಂತ್ರಿಸುವ ಡಿಎನ್‍ಎ ಛಿದ್ರವಾದರೆ ಜೀವಕಣಗಳು ಸಾಯುತ್ತವೆ. ಸೂರ್ಯನಿಂದ ಹೊಂಬರುವ ಈ ಅಪಾಯಕಾರಿ ಅತಿನೇರಳಾತೀತ ವಿಕಿರಣಗಳನ್ನು ಆಕಾಶದಲ್ಲೇ ತಡೆಹಿಡಿದು ಭೂಮಂಡಲವನ್ನು ತಲುಪದಂತೆ ನಿರ್ಬಂಧಿಸಲು ಒಂದು ತೆಳುವಾದ ಕವಚ ಇದೆ. ಭೂಮಿಯ ಮೇಲ್ಮೈಯಿಂದ ಸುಮಾರು 12ರಿಂದ 30 ಮೈಲು ದೂರದಲ್ಲಿರುವ ಆ ರಕ್ಷಾ ಕವಚವೇ ಓಝೋನ್.
ಆಮ್ಲಜನಕ ಜೀವಿಗಳ ಉಸಿರಿಗೆ ಎಷ್ಟು ಅಮೂಲ್ಯ ಎಂಬುವುದು ನಮಗೆಲ್ಲ ತಿಳಿದೇ ಇದೆ. ಅದೇ ಆಮ್ಲಜನಕವು ಆಕಾಶದಲ್ಲಿ ಇನ್ನೊಂದು ರೂಪಕ್ಕೆ ಪರಿವರ್ತನೆಗೊಂಡು ಭೂಮಿಯಲ್ಲಿರುವ ಜೀವಸಂಕುಲವನ್ನು ಉಳಿಸುವಲ್ಲಿಯೂ ಅತ್ಯಮೂಲ್ಯ ಪಾತ್ರ ವಹಿಸುತ್ತದೆ.
ಎರಡು ಆಮ್ಲಜನಕದ ಪರಮಾಣುಗಳು ಜೋಡಣೆಗೊಂಡು ಆಗಿರುವ ಆಮ್ಲಜನಕದ (ಆಕ್ಸಿಜನ್) ಅಣು ಸೂತ್ರ O2. ಅದುವೇ ಮೂರು ಆಮ್ಲಜನಕದ ಪರಮಾಣುಗಳನ್ನು ಹೊಂದಿರುವ ಅಣು ಓಝೋನ್; ಇದರ ಅಣು ಸೂತ್ರ O3. ಕುತೂಹಲದ ಸಂಗತಿಯೆಂದರೆ ಅಪಾಯಕಾರಿಯಾದ ನೇರಳಾತೀತ ವಿಕಿರಣಗಳನ್ನು ತಡೆಹಿಡಿಯುವ ಓಝೋನ್ ಪದರ ನಿರ್ಮಾಣವಾಗಲು ಕಾರಣವೂ ಸಹ ಅವೇ ನೇರಳಾತೀತ ವಿಕಿರಣ. ಸಸ್ಯಗಳ ದ್ಯುತಿಸಂಶ್ಲೇಷನೆ ಕ್ರಿಯೆಯ ಮೂಲಕ ಬಿಡುಗಡೆಯಾಗುವ ಆಮ್ಲಜನಕವು ಗಾಳಿಯ ಮೂಲಕ ಭೂಮಿಯ ಮಧ್ಯ ಅಕ್ಷಾಂಶದಿಂದ ಸುಮಾರು 10 ಕಿ. ಮೀ ಅಂತರದಲ್ಲಿರುವ ಸ್ತರಗೋಳವನ್ನು (Stratosphere) ತಲಪುತ್ತದೆ. ಅಲ್ಲಿ ಆಮ್ಲಜನಕದ ಅಣುಗಳು ಅತಿ ಶಕ್ತಿಯ ನೇರಳಾತೀತ ವಿಕಿರಣದ ಪ್ರಭಾವಕ್ಕೆ ಒಳಗಾಗಿ ವಿಭಜನೆಗೊಂಡು ಅದರಲ್ಲಿ ಒಂದು ಆಮ್ಲಜನಕ ಪರಮಾಣು (O) ಇನ್ನೊಂದು ಆಮ್ಲಜನಕ ಅಣುವಿನೊಂದಿಗೆ (O2)ಸಂಯೋಗ ಹೊಂದಿ ಮೂರು ಆಮ್ಲಜನಕ ಪರಮಾಣುಯುಕ್ತ (O3) ಓಝೋನ್ ಅಣುಗಳಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಪಾಯಕಾರಿಯಾದ ಅತಿನೇರಳೆ ಕಿರಣದ ಅಗಾಧವಾದ ಶಕ್ತಿಯು ಶಾಖವಾಗಿ ಪರಿವರ್ತಿನೆಯಾಗುತ್ತದೆ.
ನೇರಳಾತೀತ ಕಿರಣ + ಓಝೋನ್ —-> ಆಮ್ಲಜನಕ ಪರಮಾಣು
+ ಆಮ್ಲಜನಕ ಅಣು —-> ಓಝೋನ್ + ಶಾಖ
ಹೀಗೆ ಉರ್ತ್ಪನ್ನವಾದ ಓಝೋನ್ ಅಣುಗಳಿಗೆ ನೇರಳಾತೀತ ವಿಕಿರಣವು ಸ್ಪರ್ಶವಾದಾಗ ಓಝೋನ್ ಅಣುಗಳು ಪುನ: ಪರಮಾಣು ಆಮ್ಲಜನಕ ಮತ್ತು ಆಮ್ಲಜನಕದ ಅಣುಗಳಾಗುತ್ತವೆ. ನಿರಂತರವಾಗಿ ನಡೆಯುವ ಈ ಪ್ರಕ್ರಿಯೆಯನ್ನು ‘ಆಮ್ಲಜನಕ – ಓಝೋನ್ ಚಕ್ರ’ (Oxygen-Ozone cycle) ಎನ್ನಲಾಗುವುದು. ಹೀಗೆ ಉತ್ಪನ್ನವಾಗುವ ಅನೇಕಾನೇಕ ಓಝೋನ್ ಅಣುಗಳ ಅನಿಲದ ಪದರು ಭೂಮೇಲ್ಮೈನಿಂದ ಸುಮಾರು 12 ರಿಂದ 50 ಮೈಲುಗಳ ಎತ್ತರದಲ್ಲಿ ಸ್ತರಗೋಳದ ಹೊರವಲಯದ ಮೂರನೇ ಎರಡು ಭಾಗದಷ್ಟು ಭೂಮಿಯನ್ನು ಸುತ್ತುವರಿದಿದೆ. ಓಝೋನ್ ಪದರು ಸೂರ್ಯನಿಂದ ಉತ್ಸರ್ಜಿತವಾಗುವ ಮಧ್ಯಮ-ತರಂಗಾಂತರದ (200 – 315 ನ್ಯಾನೊಮೀಟರ್) ಶೇಕಡಾ 97-99 ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ. ಒಂದು ವೇಳೆ ಓಝೋನ್ ಪದರು ಇಲ್ಲದೇ ಹೋಗಿದಲ್ಲಿ ಸೂರ್ಯನ ಅಪಾಯಕಾರಿ ನೇರಳಾತೀತ ವಿಕಿರಣವು ಭೂಮಿಯನ್ನು ಪ್ರವೇಶಿಸಿ ಎಲ್ಲಾ ಜೀವಿಗಳು ಅಪಾಯಕ್ಕೆ ಸಿಲುಕುತ್ತಿತ್ತು.
‘ವಿಶ್ವಸಂಸ್ಥೆ – ಪರಿಸರ ಕಾರ್ಯಕ್ರಮ’ (The United Nations – Environmental program) ಸಂಸ್ಥೆಯು ನಡೆಸಿದ ಸಂಶೋಧನೆಯ ಪ್ರಕಾರ ಓಝೋನ್ ಪದರಿನಲ್ಲಿ ಶೇಕಡ 10 ರಷ್ಟು ಇಳಿಕೆ ಉಂಟಾದರೂ ವರ್ಷಕ್ಕೆ ಮೂರು ಲಕ್ಷ ಜನರು ಚರ್ಮದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ ಮತ್ತು 1.6 ಮಿಲಿಯನ್ ಜನರು ಕಣ್ಣಿನ ಪೊರೆಯ (Cataract) ಸಮಸ್ಯೆಗೆ ಒಳಗಾಗುತ್ತಾರೆ. ಮಾತ್ರವಲ್ಲ ಸಸ್ಯಗಳು, ಬೆಳೆಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಹಾನಿಗೊಳಿಸುತ್ತದೆ. ಇನ್ನು ಓಝೋನ್ ಕವಚ ಸಂಪೂರ್ಣವಾಗಿ ನಾಶವಾದರೆ ನೇರಳಾತೀತ ವಿಕಿರಣಗಳಿಂದ ಯಾವ ಮಟ್ಟದಲ್ಲಿ ಅನಾಹುತಗಳಾಗಬಹುದು. ಇಡೀ ಜೀವಸಂಕುಲವು ನಾಶವಾಗಬಹುದಲ್ಲವೇ…?
ಕುತೂಹಲದ ವಿಷಯ ಏನೆಂದರೆ, ನೇರಳಾತೀತ ವಿಕಿರಣವು ಪುರಾತನ ಭೂಮಿಯಲ್ಲಿ ಜೀವಸೃಷ್ಟಿಯಲ್ಲಿಯೂ ಸಹ ಬಹುಮುಖ್ಯ ಪಾತ್ರ ವಹಿಸಿದೆ ಎಂದು ವೈಜ್ಞಾನಿಕವಾಗಿ ನಂಬಲಾಗಿದೆ. ಶಕ್ತಿಯ ಮೂಲವಾಗಿ ನೇರಳಾತೀತ ವಿಕಿರಣವು ಸಂಕೀರ್ಣಮಯ ಅಣುಗಳ ಜೋಡಣೆಗೆ ಅನುವು ಮಾಡಿಕೊಟ್ಟು ಸಾವಯವ ಪದಾರ್ಥಗಳ ಸಂಶ್ಲೇಷಣೆಗೆ ನಾಂದಿಯಾಗಿ ಜೀವಸೃಷ್ಟಿ ಆಯಿತು. ಯಾವಾಗ, ಅಂದರೆ ಸುಮಾರು 540 ಮಿಲಿಯನ್ ವರ್ಷಗಳ ಹಿಂದೆ ದ್ಯುತಿಸಂಶ್ಲೇಷಣೆ ಸಾಮರ್ಥ್ಯವಿರುವ ಜೀವಿಗಳ ಉಗಮವಾಯಿತೋ ಆವಾಗಿನಿಂದ ಯಥೇಚ್ಛವಾಗಿ ಆಮ್ಲಜನಕ ಅಣುಗಳು ಬಿಡುಗಡೆಯಾಗಲು ಪ್ರಾರಂಭವಾಯಿತು. ವಾತಾವರಣದಲ್ಲಿ ಶೇಕಡ 21 ರಷ್ಟನ್ನು ಮಾತ್ರ ಹಿಡಿದಿಟ್ಟುಕೊಂಡು ಉಳಿದ ಆಮ್ಲಜನಕದ ಅಣುಗಳು ವಾಯುಗೋಳದ ಮೇಲ್ಭಾಗದಲ್ಲಿ (ಸ್ತರಗೋಳ) ಶೇಖರಣೆಗೊಂಡು ಓಝೋನ್ ಪದರು ನಿರ್ಮಾಣವಾಗಲು ಕಾರಣವಾಯಿತು. ಸುಮಾರು 500 ಮಿಲಿಯನ್ ವರ್ಷಗಳ ಹಿಂದೆ ನಿರ್ಮಿತವಾದ ಓಝೋನ್ ಪದರು ಸೂರ್ಯನ ಅಪಾಯಕಾರಿ ನೇರಳಾತೀತ ವಿಕಿರಣವನ್ನು ತಡೆಹಿಡಿಯುವ ರಕ್ಷಾಕವಚ ಆಗುವೂದರ ಜೊತೆಗೆ ಭೂಮಿಯಲ್ಲಿ ವೈವಿಧ್ಯಮಯ ಜೀವಿಗಳ ವಿಕಸನ ಆಗಲು ಅವಕಾಶ ಉಂಟಾಯಿತು.
ವಿಜ್ಞಾನಿಗಳಕೊಡುಗೆಗಳು:
ಕೋಟ್ಯಾನುಕೋಟಿ ವರ್ಷಗಳಿಂದ ಓಝೋನ್ ಪದರು ಭೂಮಂಡಲದಲ್ಲಿ ಇದೆ. ಆದರೆ ಆ ಇರುವಿಕೆಯನ್ನು 1913 ರಲ್ಲಿ ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಚಾರ್ಲ್ಸ್ ಫ್ಯಾಬ್ರಿ (Charles Fabry) ಮತ್ತು ಹೆನ್ರಿ ಬ್ಯೂಸನ್ (Henri Buisson) ಇಬ್ಬರು ಫ್ರೆಂಚ್ ಭೌತವಿಜ್ಞಾನಿಗಳಿಗೆ ಸಲ್ಲುತ್ತದೆ. ಮುಂದೆ 1928 ರಲ್ಲಿ ಜಿ. ಎಂ. ಬಿ. ಡಾಬ್ಸನ್ (G. M. B. Dobson) ಬ್ರಿಟೀಷ್ ಖಗೋಳ ವಿಜ್ಞಾನಿಯು ಓಝೋನ್ ಪದರದ ಮೇಲೆ ಹೆಚ್ಚಿನ ಅಧ್ಯಯನ ನಡೆಸಿ ಭೂಮಿಯಲ್ಲಿದ್ದುಕೊಂಡೇ ಸುಮಾರು 15 ರಿಂದ 35 ಕಿ.ಮೀ. ಎತ್ತರದಲ್ಲಿರುವ ಓಝೋನ್ ಪದರದ ಸಾಂಧ್ರತೆ (ದಪ್ಪವನ್ನು) ಅಳತೆ ಮಾಡುವ ಸಾಧನವನ್ನು ಅನ್ವೇಷಿಸಿದರು. ಅವರ ನೆನಪಿಗಾಗಿ ಈ ಸಾಧನವನ್ನು ‘ಡಾಬ್ಸನ್ ಓಝೋನ್ ಸ್ಪೆಕ್ಟ್ರೋಫೋಟೋಮೀಟರ್ (ಡಾಬ್ಸನ್‌ಮೀಟರ್)’ ಎಂದು ಹೆಸರಿಸಲಾಯಿತು. ಓಝೋನ್ ಕವಚದ ಸಾಂಧ್ರತೆಯ ಮೇಲೆ ಒಂದು ನಿಗಾ ಇಡಲು ‘ಓಝೋನ್ ಮಾನಿಟರಿಂಗ್ ಸ್ಟೇಶನ್’ ಎಂಬ ಕೆಂದ್ರಗಳನ್ನು ವಿಶ್ವದಾದ್ಯಂತ ಅನೇಕ ಕಡೆಗಳಲ್ಲಿ ಸ್ಥಾಪಿಸಿ 1928 ರಿಂದ 1958 ರವರೆಗೆ ಅವರೇ ಸ್ವತ: ಒಂದು ಜಾಗತಿಕ ಜಾಲಬಂಧವನ್ನು (Worldwide Network) ಸ್ಥಾಪಿಸಿ ಓಝೋನ್ ಪದರಿನಲ್ಲಿ ಉಂಟಾಗುವ ಬದಲಾವಣೆಗಳನ್ನು ದಾಖಲಿಸಿದರು. ಭಾರತದಲ್ಲಿ, ಶ್ರೀನಗರ, ನವದೆಹಲಿ, ವಾರಣಾಸಿ, ಕೋಲ್ಕತಾ, ಅಹಮದಾಬಾದ್ ಮತ್ತು ಕೊಡೈಕನಾಲ್ ಗಳಲ್ಲಿ ಡಾಬ್ಸನ್‌ಮೀಟರ್ ಅನುಸ್ಥಾಪಿಸಿ ಒಟ್ಟು ಆರು ನಿಲ್ದಾಣಗಳ ಜಾಲವನ್ನು ಸ್ಥಾಪಿಸಲಾಗಿದೆ. ಆವಾಗ ಸ್ಥಾಪಿಸಿರುವ ಡಾಬ್ಸನ್‌ಮೀಟರ್ ಇವತ್ತಿಗೂ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು,ಓಝೋನ್ ಪದರದಲ್ಲಿ ಉಂಟಾಗುತ್ತಿರುವ ಏರುಪೇರಿನ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತಿದೆ.
ಅಪಾಯದಮುನ್ಸೂಚನೆಗೆಪರಿಹಾರ:
ಪ್ರದೇಶ ಮತ್ತು ಕಾಲಮಾನಕ್ಕೆ ತಕ್ಕಂತೆ ಓಝೋನ್ ಕವಚದ ಸಾಂಧ್ರತೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸ ಆಗುವುದು ಸಹಜ. ಆದರೆ ಅಸಹಜ ರೀತಿಯಲ್ಲಿ ಓಝೋನ್ ಪದರವು ವೇಗವಾಗಿ ಕ್ಷೀಣವಾಗುತ್ತಾ ಬರುತ್ತಿರುವುದನ್ನು ವಿಜ್ಞಾನಿಗಳು ಗಮನಿಸಿದರು. ಆಗಲೇ ಓಝೋನ್ ಪದರದ ಮಹತ್ವವನ್ನು ಅರಿತುಕೊಂಡಿದ್ದ ವಿಜ್ಞಾನಿಗಳು ಇದು ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ಓಝೋನ್ ರಕ್ಷಾಕವಚವು ಸಂಪೂರ್ಣ ನಾಶವಾಗಿ ಭೂಮಿಯಲ್ಲಿರುವ ಜೀವಸಂಕುಲಕ್ಕೆಲ್ಲಾ ಮಹಾ ಅಪಾಯ ಕಾದಿದೆ ಎಂದು ಮನಗಂಡರು. ಅಪಾಯವನ್ನು ತಡೆಗಟ್ಟಲು ಮೊದಲು ಸಮಸ್ಯೆಯ ಮೂಲ ಯಾವುದು ಎಂದು ಪತ್ತೆಹಚ್ಚಬೇಕು. ವಿಜ್ಞಾನಿಗಳು ಓಝೋನ್ ಕ್ಷೀಣತೆ ಆಗುತ್ತಿರುವ ಕಾರಣವನ್ನು ಪತ್ತೆಹಚ್ಚಲು ಬೆಂಬತ್ತಿ ಹೋದಾಗ ತಿಳಿದುಬಂದ ಅಂಶವೇ, ಹ್ಯಾಲೋಜನ್‍ಯುಕ್ತ ರಾಸಾಯನಿಕಗಳು, ಅದರಲ್ಲಿ ಪ್ರಮುಖವಾಗಿ ಕ್ಲೋರೊಫ್ಲೋರೊಕಾರ್ಬನ್‍ಗಳು ಮತ್ತು ಬ್ರೋಮೋಫ್ಲೋರೊಕಾರ್ಬನ್‍ಗಳು. 1974ರಲ್ಲಿ ಫ್ರಾಂಕ್ ಶೆರ್ವುಡ್ ರೋಲ್ಯಾಂಡ್ (Frank Sherwood Rowland) ಮತ್ತು ಮಾರಿಯೋ ಜೆ. ಮೋಲಿನ (Mario J. Molina) ಗುರು-ಶಿಷ್ಯರು ಜಂಟಿಯಾಗಿ ಸಂಶೋಧನೆ ಮಾಡಿ ಓಝೋನ್ ಕುಸಿತಕ್ಕೆ ಕಾರಣವೇನು ಎಂದು ಪತ್ತೆಹಚ್ಚಿದರು. ಅವರ ಈ ಮಹತ್ವದ ಕೊಡುಗೆಗಾಗಿ 1995ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬೆಲ್ ಪಾರಿತೋಷಕವನ್ನು ನೀಡಲಾಯಿತು.
ಓಝೋನ್ ಪದರನ್ನು ಹಾನಿಗೊಳಿಸುವ ಅನಿಲಗಳಾದ ನೈಟ್ರಿಕ್ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಹೈಡ್ರಾಕ್ಸಿಲ್, ಕ್ಲೋರಿನ್ ಮತ್ತು ಬ್ರೋಮಿನ್ ಅಣುಗಳು ಕೆಲವು ನೈಸರ್ಗಿಮೂಲಗಳಿಂದ ಬಿಡುಗಡೆಯಾದರೂ ಅವುಗಳೆಲ್ಲಾ ಒಂದು ಸಮತೋಲನ ಪ್ರಮಾಣದಲ್ಲಿರುವುದರಿಂದ ಓಝೋನ್ ಕವಚವು ಅಪಾಯಕಾರಿ ರೀತಿಯಲ್ಲಿ ಹಾನಿಯಾಗುವುದಿಲ್ಲ. ಏಕೆಂದರೆ, ‘ಓಝೋನ್ ಚಕ್ರ’ ನಿರಂತರವಾಗಿ ನಡೆಯುತ್ತಿದ್ದು ಹೊಸ ಓಝೋನ್ ಅಣುಗಳು ಉತ್ಪತ್ತಿಯಾಗುತ್ತಿರುತ್ತವೆ. ಆದರೆ ಅನೈಸರ್ಗಿಕ ಕಾರಣದಿಂದ ಹಾನಿಕಾರಕ ಅಂಶಗಳ ಪ್ರಮಾಣ ಜಾಸ್ತಿಯಾದರೆ ಓಝೋನ್ ಪದರು ವೇಗವಾಗಿ ಕ್ಷೀಣಿಸುತ್ತದೆ. ಇಲ್ಲಿ ಅನೈಸರ್ಗಿಕ ಕಾರಣ ಎಂದರೆ ಮಾನವ ಸಂಶ್ಲೇಷಿತ ಕ್ಲೋರೊ ಫ್ಲೋರೊಕಾರ್ಬನ್‍ಗಳು (CFCs) ಮತ್ತು ಬ್ರೋಮೋ ಫ್ಲೋರೊಕಾರ್ಬನ್‍ಗಳು(BFCs). ತಂಪಾಗಿಡುವ ವಿಶೇಷ ಗುಣ ಹೊಂದಿರುವ ಈ ರಾಸಾಯನಿಕಗಳನ್ನು ತಂಗಳುಪೆಟ್ಟಿಗೆ (ರೆಫ್ರಿಜರೇಟರ್), ಹವಾ ನಿಯಂತ್ರಿತ ಪೆಟ್ಟಿಗೆಯ ಕಂಪ್ರೆಸರ್‍ನಲ್ಲಿ, ಕಾರ್ಖಾನೆಗಳಲ್ಲಿ ಶುದ್ಧೀಕರಿಸುವ ದ್ರವವಾಗಿ, ಬೆಂಕಿ ನಂದಿಸುವ ಪ್ಲಾಸ್ಟಿಕ್ ನೊರೆಯಾಗಿ, ಸುಗಂಧದೃವ್ಯ, ಕ್ರಿಮಿನಾಶಕ ಮತ್ತು ಬಣ್ಣಗಳನ್ನು ಸಿಂಪಡಿಸಲು ಬಳಸುವ ಕ್ಯಾನ್‍ಗಳಲ್ಲಿ ವಾಯುದ್ರವವಾಗಿಯೂ ಬಳಸಲಾಗುತ್ತದೆ. ಹೀಗೆ ಬಳಸುವಾಗ ಆವಿ ರೂಪದಲ್ಲಿ ವಾತಾವಾರಣಕ್ಕೆ ಬಿಡುಗಡೆಯಾಗಡೆಯಾಗಿ ಗಾಳಿಯ ಮೂಲಕ ಸ್ತರಗೋಳವನ್ನು ತಲುಪುತ್ತವೆ. ಸ್ತರಗೋಳದಲ್ಲಿ ಸೂರ್ಯನ ಅತಿನೇರಳೆ ಕಿರಣದ ಪ್ರಭಾವಕ್ಕೆ ಒಳಗಾಗಿ ಅದರಲ್ಲಿರುವ ಕ್ಲೋರಿನ್ ಮತ್ತು ಬ್ರೋಮಿನ್ ಅಂಶಗಳು (ಸ್ವತಂತ್ರ ರಾಡಿಕಲ್‍ಗಳು) ಬಿಡುಗಡೆಯಾಗುತ್ತವೆ.
ಕ್ಲೋರೊ ಫ್ಲೋರೊಕಾರ್ಬನ್‍ಗಳು ಮತ್ತು ಬ್ರೋಮೋ ಫ್ಲೋರೊಕಾರ್ಬನ್‍ಗಳು ಏಕೆ ಅತ್ಯಂತ ಅಪಾಯಕಾರಿ ಮಾಲಿನ್ಯಕಾರಕಗಳು ಎಂದರೆ ಅವುಗಳಿಂದ ಬಿಡುಗಡೆಯಾಗುವ ಪ್ರತಿ ಕ್ಲೋರಿನ್ ಅಥವಾ ಬ್ರೋಮಿನ್ ರಾಡಿಕಲ್ ಸುಮಾರು ಒಂದು ಲಕ್ಷ ಓಝೋನ್ ಅಣುಗಳನ್ನು ವಿಭಜಿಸಿಬಲ್ಲವು. ಅಂದರೆ, O3 (ಓಝೋನ್) ಅಣುಗಳನ್ನು ಆಮ್ಲಜನಕವಾಗಿ (O2) ಪರಿವರ್ತಿಸುತ್ತದೆ. ಯಾವುದೇ ಅಣು ಇರಬಹುದು ಒಂದು ನಿರ್ಧಿಷ್ಟ ಸಂಖ್ಯೆಯಲ್ಲಿ ಪರಮಾಣುಗಳು ಜೋಡಣೆಯಾಗಿದ್ದರೆ ಮಾತ್ರ ಅದು ತನ್ನಲ್ಲಿರುವ ಗುಣಗಳನ್ನು ಪ್ರದರ್ಶಿಸುತ್ತದೆ. ಮೂರು ಆಮ್ಲಜನಕ ಪರಮಾಣುಗಳನ್ನು ಹೊಂದಿರುವ ಓಝೋನ್ ಮಾತ್ರ ಅತಿನೇರಳೆ ವಿಕಿರಣವನ್ನು ಹೀರಿಕೊಳ್ಳುವ ಗುಣ ಇದೆ. ಈ ಗುಣ ಪ್ರಾಣವಾಯುವಾಗಿರುವ ಆಮ್ಲಜನಕ ಹೊಂದಿಲ್ಲ.
ಭೂಮಿಯ ಉತ್ತರ ಧ್ರುವದಲ್ಲಿ ಕಳೆದ ಎಂಟು ವರ್ಷಗಳಿಂದ ಸರಾಸರಿ ಶೇಕಡಾ 1 ಓಝೋನ್ ಸಾಂಧ್ರತೆಯಲ್ಲಿ ಕಡಿಮೆಯಾಗುತ್ತಿದೆ. 1985 ರಲ್ಲಿ ಅಂಟಾರ್ಟಿಕದಲ್ಲಿ ಓಝೋನ್ ‘ರಂಧ್ರ’ (ಅಂದರೆ ಓಝೋನ್ ಪದರದ ಸಾಂಧ್ರತೆ ಬೇರೆ ಎಲ್ಲಾ ಕಡೆಗಳಿಗಿಂತ ಅತಿ ಹೆಚ್ಚು ಕ್ಷೀಣವಾಗಿರುವುದು) ಇರುವುದನ್ನು ವರದಿ ಮಾಡಲಾಯಿತು. ಓಝೋನ್ ‘ರಂಧ್ರ’ ಎಷ್ಟು ಬೃಹತ್ತಾಗಿತ್ತೆಂದರೆ ಸರಿಸುಮಾರು ಅಮೇರಿಕಾ ದೇಶದ ವಿಸ್ತಾರದಷ್ಟು. 1993ರಲ್ಲಿ ಉಪಗ್ರಹ ಚಿತ್ರವನ್ನು ಅವಲೋಕಿಸಿದಾಗ ರಂಧ್ರದಲ್ಲಿ ಇನ್ನಷ್ಟು ದೊಡ್ಡದಾಗಿರುವುದನ್ನು ದಾಖಲಿಸಲಾಯಿತು. ಅಮೇರಿಕಾದ ಉತ್ತರಾರ್ಧ, ಕೆನಡಾ, ರಷ್ಯಾ ಮತ್ತು, ಯುರೋಪ್ ದೇಶಗಳ ಪ್ರದೇಶಗಳಲ್ಲಿಯೂ ಕೂಡ ಓಝೋನ್ ಪದರಿನಲ್ಲಿ ಕುಸಿತವಾಗಿರುವುದನ್ನು ವರದಿ ಮಾಡಲಾಯಿತು.
ಓಝೋನ್ ಪದರಿನ ಕುಸಿತಕ್ಕೆ ಇತರ ಕಾರಣಾಂಶಗಳು ಇದ್ದರೂ ಸಹ ಸಿಎಫ್‍ಸಿಗಳನ್ನು ಅತಿಯಾಗಿ ಬಳಸುವುದರಿಂದ ಇದರ ಪಾತ್ರ ಪ್ರಮುಖವಾದದ್ದು. ಆದುದರಿಂದ ಓಝೋನ್ ರಕ್ಷಾಕವಚವನ್ನು ಹಾಳುಗೆಡಿಸುವ ಪ್ರಮುಖ ‘ಖಳನಾಯಕ’ ಸಿಎಫ್‍ಸಿಗಳ ಉತ್ಪತ್ತಿ ಹಾಗೂ ಬಳಕೆಯನ್ನು 2000 ಇಸವಿಯೊಳಗೆ ವಿಶ್ವದಾದ್ಯಂತ ಸಂಪೂರ್ಣವಾಗಿ ನಿಲ್ಲಿಸಬೇಕೆಂಬ ಒಂದು ಅಂತರಾಷ್ಟ್ರೀಯ ಮಟ್ಟದ ಒಪ್ಪಂದಕ್ಕೆ ಬರಲಾಯಿತು (1985 ರಲ್ಲಿ, ಅನೇಕ ರಾಷ್ಟ್ರಗಳು ಓಝೋನ್ ಪದರದ ರಕ್ಷಣೆಗಾಗಿ ವಿಯೆನ್ನಾ ಸಮಾವೇಶದ ಮಾಂಟ್ರಿಯಲ್ ಪ್ರೋಟೋಕಾಲ್ ಅಡಿಯಲ್ಲಿ ಅಂಗೀಕರಿಸಲಾಯಿತು). ಸಿಎಫ್‌ಸಿಗಳು ಒಂದು ಹಸಿರುಮನೆ ಅನಿಲ; ಅದು ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗಿದ್ದು ಪರಿಸರದ ಮೇಲೆ ಇತರ ದುಷ್ಪರಿಣಾಮಗಳನ್ನೂ ಉಂಟುಮಾಡುತ್ತದೆ.
ಒಂದುಸಮಾಧಾನದವಿಚಾರ:
2003 ರಲ್ಲಿ ಅಮೇರಿಕನ್ ಜಿಯೋಫಿಸಿಕಲ್ ಯುನಿಯನ್ ಸಂಸ್ಥೆಯು ಉಪಗ್ರಹ ಹಾಗೂ ಜಿ.ಪಿ.ಎಸ್. ತಂತ್ರಜ್ಞಾನವನ್ನು ಬಳಸಿಕೊಂಡು ಬಾಹ್ಯ ವಾತಾವರಣದಲ್ಲಿರುವ ಓಝೋನ್ ಪದರದ ಸಾಂಧ್ರತೆಯನ್ನು ಪರೀಕ್ಷಿಸಿ ನೋಡಿದಾಗ ಒಂದು ಸಮಾಧಾನಕರವಾದ ವಿಷಯ ಗಮನಕ್ಕೆ ಬಂತು. ಏನೆಂದರೆ, ಓಝೋನ್ ಪದರ ಕ್ಷೀಣತೆಯಾಗುತ್ತಿರುವ ಪರಿಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ಓಝೋನ್ ಪದರದ ಸವಕಳಿಗೆ ಕಾರಣವಾಗಿರುವ ರಾಸಾಯನಿಕಗಳ ನಿಯಂತ್ರಣಕ್ಕೆ ಅಂತರಾಷ್ಟ್ರೀಯ ಮಟ್ಟದ ಒಪ್ಪಂದ ನಿಜವಾಗಿಯೂ ಫಲಪ್ರಧವಾಗಿದೆ ಎಂದು ವಿಜ್ಞಾನಿಗಳು ಸಂತಸಪಟ್ಟರು.
ಇನ್ನೂಕಾಯಬೇಕು:
ಆದರೆ ಓಝೋನ್ ಪದರು ಮೊದಲಿನ ಅಂದರೆ ನೈಜ ಸ್ಥಿತಿಗೆ ಮರಳಲು ಇನ್ನೂ 30-40 ವರ್ಷಗಳು ಬೇಕಾಗಬಹುದು. ಏಕೆಂದರೆ, ಅಣುಗಳನ್ನು ವಿಭಜಿಸುವ ರಾಸಾಯನಿಕಗಳನ್ನು ಇನ್ನೂ ಕೆಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಮಾತ್ರವಲ್ಲ, ಈ ಮೊದಲೇ ಬಿಡುಗಡೆಯಾಗಿರುವ ಕ್ಲೋರೊಫ್ಲೋರೊಕಾರ್ಬನ್‍ಗಳ ಆಯುಷ್ಯ ಸುಮಾರು 55 ವರ್ಷಗಳು ಆಗಿರುವುದರಿಂದ ಅವುಗಳು ವಾತಾವರಣದಲ್ಲಿ ಇರುವ ತನಕ ಓಝೋನ್ ಅಣುಗಳನ್ನು ವಿಭಜಿಸುವ ಕೆಲಸ ಮಾಡುತ್ತಿರುತ್ತವೆ.
ಓಝೋನ್ ಕವಚದ ರಕ್ಷಣೆನಮ್ಮಹೊಣೆ:
ಏನೇ ಇರಲಿ, ನೇರಳಾತೀತ ವಿಕಿರಣ ಆರಂಭದಲ್ಲಿ ಭೂಮಿಯಲ್ಲಿ ಜೀವಸೃಷ್ಠಿಗೆ ಪೂರಕವಾಗಿ ತದನಂತರ ಅಪಾಯಕಾರಿಯಾದರೂ ಆಮ್ಲಜನಕ ಅಣುಗಳನ್ನು ಓಝೋನ್ ಅಣುಗಳಾಗಿ ರೂಪಾಂತರಿಸಿ ತಡೆಹಿಡಿದುಕೊಳ್ಳುವುದು ನಿಸರ್ಗದ ಒಂದು ಅಪೂರ್ವ ಕೊಡುಗೆ. ಅಪಾಯಕಾರಿ ಅತಿನೇರಳೆ ಕಿರಣದಿಂದ ಜೀವಸಂಕುಲಗಳನ್ನು ರಕ್ಷಿಸುವ ಓಝೋನ್ ಪದರದ ಅಸ್ಥಿತ್ವ, ಸಾಂದ್ರತೆಯನ್ನು ಅಳೆಯುವ ಸಾಧನದ ಆವಿಷ್ಕಾರ ಹಾಗೂ ಅದರ ಸವಕಳಿಗೆ ಕಾರಣವಾಗುವ ಹಿನ್ನೆಲೆಯನ್ನು ಪತ್ತೆಹಚ್ಚಿ ಆಗಬಹುದಾದ ಅನಾಹುತದಿಂದ ಕಾಪಾಡಿರುವ ವಿಜ್ಞಾನಿಗಳೆಲ್ಲರಿಗೂ ಅಭಿನಂದನೆಗಳು ಮತ್ತು ಕೃತಜ್ಞತೆಗಳು. ಇನ್ನು ಓಝೋನ್ ಪದರವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲಿ ಇದೆ.
ಓಝೋನ್ ಪದರದ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:
ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ಅಂತರರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನ ಎಂದು ಆಚರಿಸಲಾಗುತ್ತದೆ. ವಿಯೆನ್ನಾ ಸಮಾವೇಶದ ನಂತರ 35 ವರ್ಷಗಳ ಜಾಗತಿಕ ಓಝೋನ್ ಪದರ ರಕ್ಷಣೆಯ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಸ್ತುತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಆಂಟೋನಿಯೊ ಗುಟೆರೆಸ್ ಅವರು ನೀಡಿದ ಸಂದೇಶ ಹೀಗಿದೆ, “ಓಝೋನ್ ಪದರವನ್ನು ಸಂರಕ್ಷಿಸಲು ನಾವು ಹೇಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂಬ ಸ್ಫೂರ್ತಿಯೊಂದಿಗೆ ಭೂಗ್ರಹವನ್ನು ಉಪಶಮನಗೊಳಿಸಲು ಹಾಗೂ ಎಲ್ಲ ಮಾನವೀಯತೆಗೆ ಸಮಾನವಾದ ಪ್ರಕಾಶಮಯ ಭವಿಷ್ಯವನ್ನು ರೂಪಿಸಿಕೊಳ್ಳಲು ನಾವೆಲ್ಲರೂ ಕೈಜೋಡಿಸೋಣ”.
ಏನ್ರೀ ವತ್ಸಲ ಏನ್ ಮಾಡಿದ್ರಿ ತಿಂಡಿ ? ನೀವು ತಿಂದ್ರಾ ? ಅಂತ ಪಕ್ಕದ್ಮನೆ ಕಮಲಮ್ಮನವರು ಕೇಳಿದ್ದೇ ತಡ ಮಗೂನ ಕಂಕುಳಲ್ಲಿ ಎತ್ತಿಕೊಂಡಿರುವ ವತ್ಸಲ ಅವರು ….. ಬೆಳಿಗ್ಗೆಯಿಂದ ಬಿಡುವೇ ಇಲ್ಲಾ ಆಂಟಿ . ಇವನನ್ನ ಎತ್ಕೊಂಡು ಸುಧಾರಿಸೋದೇ ದೊಡ್ಡ ಕೆಲಸ ಆಗೋಗಿದೆ ಒಂದು ತುತ್ತೂ ತಿನ್ನಲ್ಲ ಅಂತ ಹಠ ಮಾಡ್ತಾನೆ .ಇವನಿಗೆ ತಿನ್ಸಿ ಸ್ನಾನ ಮಾಡಿಸಿ ಮಲಗ್ಸೋ ಅಷ್ಟರಲ್ಲಿ ನಂದು ಊಟದ್ ಟೈಮೇ ಆಗಿರುತ್ತೆ ಇನ್ ಎಲ್ಲಿ ತಿಂಡಿ ತಿನ್ನೋದು . ಹೀಗೆ ತಮ್ಮ ತೊಳಲಾಟವನ್ನು ಹಂಚಿಕೊಳ್ಳೋ ಈಗಿನ ಮಹಿಳೆಯರ ಮಧ್ಯೆ ನನಗೆ ಆಗಿನ ಮನೆಗಳ ವಾತಾವರಣ ನೆನಪಿಗೆ ಬರುತ್ತೆ.
ಆಗೆಲ್ಲಾ ಮನೆಗಳಲ್ಲಿ ಹೆಂಗಸರು ಎಲ್ಲಾ ಕೆಲಸವನ್ನೂ ಮುಗಿಸಿ , ಬಿಡುವು ಮಾಡಿಕೊಂಡು ವೈರಿನ ಬುಟ್ಟಿ ಹೆಣೆಯೋವ್ರು . ಮಕ್ಕಳಿಗೆ ದೊಡ್ಡೋವ್ರಿಗೆ ಉಲ್ಲನ್ ಸ್ವೆಟರ್ ಹೆಣೆಯೋವ್ರು. ಪ್ರತೀ ಮೂರು ಮನೆಗೊಂದು ಹೊಲಿಗೆ ಯಂತ್ರ ಇರ್ತಿತ್ತು , ಅದರಲ್ಲಿ ಎಲ್ಲಾ ತರಹದ ಬಟ್ಟೆಗಳನ್ನು ಹೊಲಿಯುತ್ತಿದ್ದರು .
ರೋಡಲ್ಲಿ ನಡ್ಕೊಂಡ್ ಹೋಗ್ತಿದ್ರೆ ಒಂದಲ್ಲಾ ಒಂದು ಮನೆಯಿಂದ ಟೈಲರಿಂಗ್ ಮಿಷೀನ್ ತುಳಿಯುತ್ತಿರುವ ಸೌಂಡು ಕಿವೀಗ್ ಬೀಳೋದು . ಅಕ್ಕನೋ ಅಮ್ಮನೋ ಮನೆಯಲ್ಲಿ ಯಾರಾದರೊಬ್ಬರು ಟೈಲರಿಂಗ್ ಕಲ್ತಿರೋವ್ರು . ಟೈಲರಿಂಗ್ ಅನ್ನೋದು ಮಧ್ಯಮ ವರ್ಗದವರು ಕಲಿಯಲೇಬೇಕು ಅನ್ನುವಷ್ಟು ಅಪ್ತವಾಗಿ ಕಡ್ಡಾಯವಾಗಿ ಇರ್ತಿತ್ತು .
ಹೆಣ್ಣು ನೋಡಕ್ಕೆ ಗಂಡು ಕಡೆಯವರು ಬಂದ್ರೆ ಅವರತ್ರ ಹುಡುಗಿಗೆ ಟೈಲರಿಂಗ್ ಬರುತ್ತೆ ಅಂತ ಹೆಮ್ಮೆಯಿಂದ ಹೇಳೋವ್ರು . ಅದನ್ನ ಕೇಳುತ್ತಲೇ ಹುಡುಗನ ಅಮ್ಮನಿಗೆ ತನ್ನ ಕುಪ್ಸ ಇನ್ಮೇಲೆ ಸೊಸೇನೆ ಹೊಲೀತಾಳೆ ಅನ್ನೂ ಹಾಗೆ ಮುಖ ಅರಳೋಗಿರೋದು .
ಸಾಮಾನ್ಯವಾಗಿ ಹೊಲಿಗೆ ಯಂತ್ರ ಮನೆಯ ಹಾಲ್ ನಲ್ಲಿ ಇರೋದು .ಆಕರ್ಷಕವಾದ ವುಡ್ ಟೇಬಲ್ಲಿನ ಮೇಲ್ಭಾಗದಲ್ಲಿ ಉಕ್ಕಿನಿಂದ ಮಾಡಿದ ಕಪ್ಪುಬಣ್ಣದ ಹೆಡ್ಡು ಅದಕ್ಕೊಂದು ಪುಟ್ಟ ಚಕ್ರ ಟೇಬಲ್ಲಿನ ಕೆಳಬಾಗದಲ್ಲಿ ಕಾಲಿನಂತೆ ಸ್ಟ್ಯಾಂಡು ಅದಕ್ಕಂಟಿಕೊಂಡಂತೆ ದೊಡ್ಡ ಚಕ್ರ . ಮೇಲಿನ ಚಿಕ್ಕ ಚಕ್ರ ಕೆಳಗಿನ ದೊಡ್ಡ ಚಕ್ರ ಇವೆರಡನ್ನೂ ಸೇರಿಸಿರುವ ಚರ್ಮದದಾರ. ಪಾದಗಳಿಂದ ತುಳಿಯಲು ವಿಶಾಲವಾದ ಸಿಂಗಲ್ ಪೆಡಲ್ಲು . ಟೇಬಲ್ಲಿನ ಅಡಿಯಲ್ಲಿ ದಾರದ ಡಬ್ಬ ಅದರ ಒಳಗಡೆ ಬಣ್ಣ ಬಣ್ಣದ ದಾರಗಳು . ದಾರಕ್ಕೆ ಚುಚ್ಚಿದ ಸೂಜಿಗಳು, ಅಳತೆಯ ಟೇಪು , ದೊಡ್ಡ ಕತ್ತರಿ ಹೀಗೆ ಬಿಡಿಬಾಗಗಳಿರುತ್ತಿದ್ದವು .
ಮೊದಲು ಸೂಜಿಗೆ ದಾರ ಹಾಕುವುದನ್ನು ಕಲಿಯುವುದೇ ಒಂದು ಕುತೂಹಲ . ಬಾಬಿನ್ ಸೂಜಿ ಅಂತೆಲ್ಲಾ ಪುಟ್ಟ ಮಿಷಿನರಿಗಳ ಒಳಗೆ ಆ ದಾರ ಹಾದು ಹೋಗಿರೋದು . ಅಮ್ಮ ಹೊರಗೋದಾಗ ಎಷ್ಟೋ ಸಲ ಟೈಲರಿಂಗ್ ಕಲಿಯಲು ಪ್ರಯತ್ನಿಸಿದ್ದುಂಟು , ಅದು ಅವರಿಗೆ ಗೊತ್ತಾಗಿ ಸೂಜಿ ಮುರಿದಾಕ್ತೀಯಾ ಅಂತೇಳಿ ಹೊಡಿಯೋವ್ರು . ಸುಮ್ನೆ ಕುತ್ಕೊಂಡು ತುಳಿದ್ರೆ ಖಾಲಿ ಮಷಿನ್ ತುಳೀಬಾರದು ಅಂತ ಬಯ್ಯೋವ್ರು . ನಾವಂತು ಹೊಲಿಗೇ ಯಂತ್ರವನ್ನ ಬಹುಪಯೋಗಿ ಮಾಡ್ಕೊಂಡ್ಬಿಟ್ಟಿದ್ವಿ…..ನಮಗೆ ಟೀವಿ ನೋಡಕ್ಕೆ ಅದೇ ಚೇರು .ಊಟ ಮಾಡಕ್ಕೆ ಅದೇ ಡೈನಿಂಗ್ ಟೇಬಲ್ . ಬರೆಯಕ್ಕೆ ಓದಕ್ಕೆ ಅದೇ ರೀಡಿಂಗ್ ಟೇಬಲ್ . ಬಾಲ್ಯ ಅದರ ಜೊತೇಗೆ ಕಳೆದಿದೀವಿ .
ಟೈಲರಿಂಗ್ ಮಾಡೋ ಮನೆಗಳಲ್ಲಿ ಬಣ್ಣ ಬಣ್ಣದ ಕಟ್ ಪೀಸುಗಳು ಹರಡಿರುತ್ತಿತ್ತು . ಲಂಗ ಬ್ಲೌಸು ಎಮಿಂಗು ಕಟಿಂಗು ಕಾಜಾ ಫಾಲ್ಸು ಎಂಬ ಪದಗಳು ಹರಿದಾಡುತ್ತಿತ್ತು . ಅಮ್ಮನನ್ನು ಪೀಡಿಸಿ ಆಕೆಯಿಂದ ಶಾಲೆಗೆ ಚಿಕ್ಕ ದಿಂಬಿನಾಕಾರದ ಡಸ್ಟರ್ ಹೊಲಿಸಿಕೊಂಡು ಹೋಗುತ್ತಿದ್ದೆವು .
ಆಗಿನ ಸಿನಿಮಾಗಳಲ್ಲಿಯೂ ಸಹ ಹೀರೋ ತಾಯಿ ಟೈಲರಿಂಗ್ ಮಾಡಿಯೇ ಅವನನ್ನು ದೊಡ್ಡವನನ್ನಾಗಿ ಮಾಡುತ್ತಿದ್ದಳು . ಬರೀ ಬಟ್ಟೆಗಳನ್ನಷ್ಟೇ ಅಲ್ಲ ಆಗಿನ ಅದೆಷ್ಟೋ ಹರಿದ ಬದುಕುಗಳನ್ನು ಹೊಲಿಯುತ್ತಿದ್ದಿದ್ದು ಇದೇ ಹೊಲಿಗೆ ಯಂತ್ರ.
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಕೆಲ ದಶಕಗಳ ಹಿಂದೆ ಪ್ರವಾಸ ಎಂದರೆ ಅದೊಂದು ರೋಮಾಂಚನದ ಅನುಭವವಾಗಿರುತ್ತಿತ್ತು. ಅದಕ್ಕಾಗಿ ತಮ್ಮ ತಮ್ಮ ಅಗತ್ಯಗಳ ತಯಾರಿಯಲ್ಲಿ ಮನೆಮಂದಿಯೆಲ್ಲ ಒಂದು ತಿಂಗಳಾದರೂ ಕಳೆಯುತ್ತಿದ್ದರು! ಅದು ತಿಂಡಿಗಳ ತಯಾರಿ, ಬಟ್ಟೆಗಳನ್ನು ಆಯಾ ಸ್ಥಳಗಳಿಗೆ ತಕ್ಕಂತೆ ಜೋಡಿಸಿಕೊಳ್ಳುವುದು, ಮಾರ್ಗದಲ್ಲಿ ಅಂತ್ಯಾಕ್ಷರಿ ಆಡಲು ಹಾಡುಗಳನ್ನು ಪಟ್ಟಿ ಮಾಡಿಕೊಳ್ಳುವುದು, ದಾರಿ ಖರ್ಚಿಗೆ ದುಡ್ಡನ್ನು ಹೊಂದಿಸಿಕೊಳ್ಳುವುದು ..ಮೊದಲಾಗಿ ಹತ್ತು ಹಲವು ಸಣ್ಣ ದೊಡ್ಡ ಬೇಡಿಕೆಗಳು ಪ್ರವಾಸಕ್ಕೆ ಹೊರಡುವವರೆಗೂ ಇರುತ್ತಿದ್ದವು. ಇನ್ನು ಮನೆಯಲ್ಲಿ ಒಂದು ರೋಲ್ ಹಾಕುವ ಕ್ಯಾಮರಾ ಇದ್ದರಂತೂ ನೆನಪುಗಳನ್ನು ದಾಖಲಿಸಿಕೊಳ್ಳಲು ರೋಲ್ ಕೊಳ್ಳುವುದು ಹಾಗೂ ಅಗತ್ಯವಾಗಿ ಬ್ಯಾಟರಿ ಸೆಲ್‌ಗಳನ್ನು ಕೊಳ್ಳುವ ಸಂಭ್ರಮವೇ ಸಂಭ್ರಮ.
ಆಗ ಪ್ರವಾಸ ಹೊರಡುತ್ತಿದ್ದುದೇ ಬಹುತೇಕವಾಗಿ ಬೇಸಿಗೆ ರಜ ಅಥವಾ ದಸರಾ ರಜಗಳ ಸಂದರ್ಭದಲ್ಲಿ. ಆದರೆ ಈಗ ಹಾಗಲ್ಲ. ವಾರದ ಕೊನೆಯಲ್ಲಿ, ಸಾಲು ಹಬ್ಬಗಳ ದೀರ್ಘ ರಜೆಯಲ್ಲಿ, ಶಹರಿಗರಾದರೆ ಲಾಂಗ್ ವೀಕ್ ಎಂಡ್‌ನಲ್ಲಿ , ಬೇಸರವಾದಾಗಲೆಲ್ಲ , ಪ್ರವಾಸದ ಹುಳ ಕಡಿದಾಗಲೆಲ್ಲ ಅಥವಾ ಶೋಕಿಗಾದರೂ ಸರಿಯೇ ರಜೆಗೆ ಅನುಗುಣವಾಗಿ ಸಮೀಪದ ಅಥವಾ ದೂರದ ಸ್ಥಳಗಳಿಗೆ ಹೋಗಿಬಿಡುವುದು ಸಾಮಾನ್ಯ. ಈ ಬಾರಿ ಕೋವಿಡ್ ಇಂಥ ಪ್ರವಾಸಗಳಿಗೆ ತಡೆ ಹಾಕಿತ್ತು. ಆದರೆ ಇಷ್ಟು ದಿನ ಮನೆಯಲ್ಲೇ ಕೂತವರು ನಿಧಾನವಾಗಿ ಮತ್ತೆ ಸುತ್ತಾಡಲು ಆರಂಭಿಸುತ್ತಿದ್ದಾರೆ.
ಇದಕ್ಕೆ ಹೆಚ್ಚಿನ ಪೂರ್ವ ತಯಾರಿಯೂ ಬೇಕಿಲ್ಲ. ಇಂಟರ್‌ನೆಟ್ಟಿನಲ್ಲ ಸ್ಥಳಗಳನ್ನು ಜಾಲಾಡಿ ಅಲ್ಲಿನ ಹೊಟೆಲ್ಲುಗಳಲ್ಲೋ, ಹೋಂ ಸ್ಟೇಗಳಲ್ಲೋ ಸ್ಥಳ ಕಾದಿರಿಸಿದರೆ ಮುಗಿಯಿತು. ಸ್ವಂತ ಕಾರಿಗಾದರೆ ಇಂಧನ ಹಾಕಿಸುವ ಕೆಲಸವಾದರೂ ಇದ್ದೀತು. ಝೂಂ ಕಾರಾದರೆ, ಬಾಡಿಗೆ ಕಾರಾದರೆ ದುಡ್ಡು ತುಂಬುವುದು ಅಷ್ಟೇ. ಸಮೀಪದ ಸ್ಥಳಗಳಾದರೆ ಡಿಕ್ಕಿಯಲ್ಲಿ ಕೆಲವಾರು ಬಟ್ಟೆ ಬರೆಗಳು, ಮೊಬೈಲ್ ಫೋನ್ ಹಾಗೂ ಚಾರ್ಜರ್‌ಗಳು, ಇವುಗಳ ಹೊರತಾಗಿ ಪರ್ಸ ತುಂಬ ದುಡ್ಡು ಅಥವಾ ಕೆಡಿಟ್/ಡೆಬಿಟ್ ಕಾರ್ಡಗಳು ಉಳಿದ ಎಲ್ಲ ಸೇವೆಗಳನ್ನು ಪೂರೈಸಲು ಸನ್ನದ್ಧವಾಗಿರುತ್ತವೆ.
ಇಂಥ ಪ್ರವಾಸಗಳ ದಾಹಕ್ಕೆ ಕರ್ನಾಟಕದಲ್ಲಿ ಗುರಿಯಾದದ್ದು ಕೊಡಗು ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳು. ಅದರಲ್ಲೂ ಕೊಡಗು, ಪ್ರವಾಸಿಗರ ದಾಳಿಗೆ ಹೋಂ ಸ್ಟೇ ಎಂಬ ಹೊಸ ತಂತ್ರವನ್ನು ಹೆಣೆದು ಅವರನ್ನು ಆಕರ್ಷಿಸಿದ್ದಷ್ಟೆ ಅಲ್ಲ. ಆ ಮೂಲಕ ಅಲ್ಲಿನ ಜನ ಸಾಕಷ್ಟು ಆದಾಯವನ್ನೂ ಮಾಡಿಕೊಂಡರು. ಹೀಗೆ ಸ್ಥಿತಿವಂತರಾದವರನ್ನು ಕಂಡು ಸಣ್ಣ ಪುಟ್ಟ ಮನೆಗಳವರೂ ಕೂಡ ಪ್ರವಾಸಿಗರಿಗೆ ಒಂದೆರಡು ದಿನದ ಮಟ್ಟಿಗೆ ತಮ್ಮ ಮನೆಯಲ್ಲಿ ಇದ್ದ ಎರಡನೇ ಕೋಣೆಯನ್ನು ಬಿಟ್ಟುಕೊಟ್ಟು ಕೈಲಾದಷ್ಟು ಗಳಿಸಿಲು ಪ್ರಯತ್ನಿಸಿದರು. ಪ್ರವಾಸದ ಆಕರ್ಷಣೆಯಿಂದ ಕೊಡಗು ಜಿಲ್ಲೆಯಲ್ಲಿ ಬಹಳ ಬದಲಾವಣೆಗಳಾದವು.
ಹೋಟೆಲ್ಲುಗಳು, ಹೋಂ ಸ್ಟೇಗಳು ಹೆಚ್ಚಿದಂತೆ ಸಾರಿಗೆ, ಸಾಗಾಟವೂ ಹೆಚ್ಚಿತು. ಮಹಾ ಪ್ರಳಯ ಸನ್ನಿವೇಶದ ನಂತರ ಕೊಡಗಿಗೆ ಪ್ರವಾಸಿಗರ ಸಂಖ್ಯೆ ಒಮ್ಮೆಲೇ ಕುಸಿದು ಹೋಗಿತ್ತು. ಈಗ ಆ ಸ್ಥಾನವನ್ನು ತುಂಬಿಕೊಡಲು ಸಿದ್ಧವಾಗಿದ್ದು ಚಿಕ್ಕಮಗಳೂರು ಜಿಲ್ಲೆ.
ಸುತ್ತುವರೆದ ಪರ್ವತಗಳ ಕೋಟೆ, ನಿತ್ಯ ಹರಿದ್ವರ್ಣದ ಕಾಡಿನ ನಡುವೆ ತಣ್ಣಗೆ ಹಾಯಾಗಿರುವ ಈ ‘ಸಾಂಬಾರಗಳ ನಾಡು’ ಈಗ ಪ್ರವಾಸಿಗರ ದಾಂಗುಡಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಕಳೆದ ದಸರೆಯ ಸಾಲು ರಜದ ಸಂದರ್ಭದಲ್ಲಿ ಬಾಬಾ ಬುಡನ್‌ಗಿರಿಯ ಬೆಟ್ಟದ ಮೇಲೆ ನಾಲ್ಕು ತಾಸುಗಳ ಟ್ರಾಫಿಕ್ ಜಾಮ್ ಆಗಿದ್ದು ಇದಕ್ಕೆ ಒಂದು ನಿದರ್ಶನ ! ಸಂಸಾರ ಸಮೇತ ಅಲ್ಲಿಗೆ ತೆರಳಿದ್ದ ಬೆಂಗಳೂರಿಗರೊಬ್ಬರು ‘ಬೆಂಗಳೂರಿನ ಟ್ರಾಫಿಕ್ಕನ್ನು ನಾವು ಅಲ್ಲಿಯೂ ಮಿಸ್ ಮಾಡಿಕೊಳ್ಳಲಿಲ್ಲ ‘ ಎಂದು ವ್ಯಂಗ್ಯವಾಡಿದರು.
ಚಿಕ್ಕಮಗಳೂರು, ‘ಎಸ್ಟೇಟ್ ಮಾಲೀಕರ ’ ಊರು ಎಂದೇ ಪ್ರಸಿದ್ಧ. ಸಮೃದ್ಧ ನೀರು, ಮಳೆಯ ಸೌಕರ್ಯದ ಕಾರಣ ಅಡಿಕೆ, ಕಾಳು ಮೆಣಸು, ಇತರ ಸಾಂಬಾರ ಪದಾರ್ಥಗಳು, ಕಾಫಿಯನ್ನು ಬೆಳೆದು ಸ್ಥಿತಿವಂತರಾಗಿರುವ ಇಲ್ಲಿಯ ಜನ ಪ್ರವಾಸೋದ್ಯಮದತ್ತ ಇದುವರೆಗೂ ಅಷ್ಟಾಗಿ ಒಲವು ತರಿಸಿರಲಿಲ್ಲ. ಅಲ್ಲೊಂದು ಇಲ್ಲೊಂದು ಹೋಂ ಸ್ಟೇಗಳು ಬಿಟ್ಟರೆ ದೊಡ್ಡ ಹೊಟೆಲ್ಲುಗಳಾಗಲೀ, ಲಾಡ್ಜುಗಳಾಗಲೀ ಇಲ್ಲಿ ಇಲ್ಲ. ಜಿಲ್ಲಾ ಕೇಂದ್ರವಾದರೂ ಚಿಕ್ಕಮಗಳೂರು ಚಿಕ್ಕ ಪಟ್ಟಣದಂತೆ ಇದೆ. ಆದರೆ ಈ ಜಿಲ್ಲೆಯ ಸುತ್ತಮುತ್ತಲೂ ಪ್ರವಾಸಿಗರನ್ನು ಸೆಳೆಯಬಲ್ಲ ಅನೇಕ ಸ್ಥಳಗಳಿವೆ. ಚಾರಣಿಗರಿಗೆ ಹೇಳಿ ಮಾಡಿಸದಂತಿರುವ ಅನೇಕ ಬೆಟ್ಟಗಳು ಇಲ್ಲಿವೆ. ಇದು ಪ್ರವಾಸೋದ್ಯಮ ಇಲಾಖೆಯನ್ನು ಚುರುಕಾಗಿಸಿದೆ. ಚಿಕ್ಕಮಗಳೂರಿನ ಪ್ರವಾಸಕ್ಕೆ ಕೈಬೀಸಿ ಕರೆಯುವ ಅನೇಕ ಜಾಹಿರಾತುಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿವೆ.
ಚಿಕ್ಕಮಗಳೂರಿನ ವಿಶೇಷತೆಯನ್ನು ಸಾರುವ , ೧೨ ವರ್ಷಗಳಿಗೊಮ್ಮೆ ಅರಳುವ ಕುರಂಜಿ ಹೂವು ಬಾಬಾ ಬುಡನ್‌ಗಿರಿ ಹಾಗೂ ಮುಳ್ಳಯ್ಯನಗಿರಿ ಬೆಟ್ಟಗಳಲ್ಲಿ ಅರಳುವ ಕಾಲ ಈ ವರ್ಷ ಅಕ್ಟೋಬರಿನಿಂದ ಆರಂಭವಾಗುತ್ತದೆ ಎಂದು ಅಂತರ್ಜಾಲದಲ್ಲಿ ನೋಡಿದ ಪ್ರವಾಸಿಗರೆಲ್ಲ ಅಲ್ಲಿಗೆ ಸಾಲುಗಟ್ಟಿ ಹೊರಟಿದ್ದಾರೆ. ಉಳಿದಂತೆ ವಾರದ ಕೊನೆಗೆ ಅಲ್ಲಿ ಸುಮಾರು ೨೦೦-೩೦೦ ಪ್ರವಾಸಿಗರು ಬರುತ್ತಾರೆ. ಚಿಕ್ಕಮಗಳೂರಿನ ಧೋ ಎಂದು ಸುರಿವ ಮಳೆಗಾಲದಲ್ಲೂ ಪ್ರವಾಸಿಗರು ಇದ್ದೇ ಇರುತ್ತಾರೆ ಎನ್ನುವುದು ಅಚ್ಚರಿ ಹುಟ್ಟಿಸುವ ಸಂಗತಿ.
ಪ್ರವಾಸೋದ್ಯಮ ಒಳ್ಳೆಯ ಆದಾಯದ ಮೂಲ ಎಂದು ಮಲೇಷಿಯಾದಂಥ ಪುಟ್ಟ ದೇಶ ಹಾಗೂ ಕೇರಳದಂಥ ಸಣ್ಣ ರಾಜ್ಯ ಜಗತ್ತಿಗೇ ತೋರಿಸಿಕೊಟ್ಟ ಮೇಲೆ ಪ್ರವಾಸೋದ್ಯಮದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಸ್ಥಳೀಯ ಉತ್ಸವ, ಜಾತ್ರೆ, ಊಟ-ತಿಂಡಿ ಮೊದಲಾದ ಎಲ್ಲವನ್ನೂ ಪ್ರವಾಸೋದ್ಯಮದ
ಹೆಸರಿನಲ್ಲಿ ಬಳಸಿಕೊಂಡು ಹಣ ಮಾಡಲಾಗುತ್ತಿದೆ. ಇದು ಒಂದು ಭಾಗದ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಬಹು ಒಳ್ಳೆಯ ಮಾಧ್ಯಮವೂ ಆಗಿರುವುದರ ಜೊತೆಗೆ ಅನೇಕ ಸಂದಿಗ್ಧಗಳನ್ನೂ ತರುತ್ತಿದೆ. ಇದರಲ್ಲಿ ಮುಖ್ಯವಾದದ್ದು ಸುಗಮ ಸಾಗಾಟಕ್ಕಾಗಿ ರಸ್ತೆಯ ನಿರ್ಮಾಣ. ಕಾಡಿನಲ್ಲಿ ರಸ್ತೆ ಮಾಡುವುದು ಎಂದರೆ ಕಾಡೆಂಬ ಅರ್ನಘ್ಯ ರತ್ನವನ್ನು ದೋಚುವುದು. ಇದಕ್ಕೆ ಸರ್ಕಾರಗಳೇ ಮುಂದೆ ನಿಲ್ಲುವುದು ದೊಡ್ಡ ದುರಂತ. ಇಂತಹ ದುರಂತ ಈಗ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ.
ಚಿಕ್ಕಮಗಳೂರಿನಿಂದ ಬಾಬಾ ಬುಡನ್‌ಗಿರಿಗೆ ಸರ್ಕಾರಿ ಬಸ್‌ಗಳು ಇನ್ನೂ ಇಲ್ಲ. ಏಕೆಂದರೆ ಆ ಕಡಿದಾದ , ಕಿರುಹಾದಿಯ, ತೀವೃಏರು ಬೆಟ್ಟಕ್ಕೆ ಮಿನಿ ಬಸ್‌ಗಳು ಮಾತ್ರ ಹೋಗಬಹುದು. ಇದನ್ನು ಬಂಡವಾಳವಾಗಿಸಿಕೊಂಡು ಖಾಸಗಿ ಮಿನಿ ಬಸ್‌ಗಳು ಅಲ್ಲಿಗೆ ಓಡಾಡುತ್ತವೆ. ಅದೂ ನಿಯಮಿತ ಸಮಯದಲ್ಲಿ ಮಾತ್ರ. ರಸ್ತೆಗಳು ತಕ್ಕ ಮಟ್ಟಿಗೆ ವಿಶಾಲವಾಗಿರುವುದರಿಂದ ತಮ್ಮ ಸ್ವಂತ ವಾಹನಗಳಲ್ಲಿ ಅಥವಾ ಬಾಡಿಗೆ ವಾಹನಗಳಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಅಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.
ಆದರೆ ಮುಳ್ಳಯ್ಯನಗಿರಿಯ ರಸ್ತೆಗಳು ಬಹಳ ಕಿರಿದಾಗಿವೆ. ಇದು ಕಾಫಿ ಪ್ಲಾಂಟೇಶನ್ ನಡುವೆ ದಟ್ಟ ಅರಣ್ಯದಲ್ಲೇ ಸಾಗುವ ಹಾದಿ. ಆದ್ದರಿಂದ ಅಲ್ಲಿಗೆ ಯಾವುದೇ ಬಸ್ ವ್ಯವಸ್ಥೆ ಸಾಧ್ಯವಿಲ್ಲ. ಸಮುದ್ರ ಮಟ್ಟದಿಂದ ಸುಮಾರು ೬೩೫೦ ಅಡಿ ಎತ್ತರವಿರುವ ಈ ಮುಳ್ಳಯ್ಯನಗಿರಿ ಈ ಕಾರಣದಿಂದಲೇ ಪ್ರವಾಸಿಗರಿಗೆ ಇದುವರೆಗೂ ಅಪರಿಚಿತವಾಗಿಯೇ ಉಳಿದಿದೆ. ಆದರೆ ಈ ಬಾರಿಯ ಕುರಂಜಿ ಹೂವಿನ ಆಕರ್ಷಣೆ ಹಾಗೂ ಕೊಡಗಿನಲ್ಲಿ ಪ್ರವಾಸೋದ್ಯಮ ಸ್ಥಗಿತವಾಗಿರುವುದು ಪ್ರವಾಸಿಗರು ಮುಳ್ಳಯ್ಯನಗಿರಿಯನ್ನು ಹುಡುಕುವಂತೆ ಮಾಡಿದೆ.
ಚಿಕ್ಕಮಗಳೂರಿನಿಂದ ೨೨ ಕಿ.ಮೀ ದೂರದಲ್ಲಿರುವ ಇಲ್ಲಿಗೆ ಆಟೋಗಳು, ಟ್ಯಾಕ್ಸಿಗಳು ಹಾಗೂ ಸ್ವಂತ ವಾಹನಗಳು ಮಾತ್ರ ಓಡಾಡುತ್ತವೆ. ಈ ಯಾವುದೇ ವಾಹನಗಳಾದರೂ ಬೆಟ್ಟದ ಮಧ್ಯದಲ್ಲಿರುವ ಸೀತಾಳಯ್ಯನಗಿರಿಯ ಬುಡದವರೆಗೆ ಮಾತ್ರ ಹೋಗುತ್ತವೆ. ಅಲ್ಲಿಂದ ೨.೫ ಕಿ.ಮೀ. ದೂರ ನಡೆದು ಹೋಗಬೇಕು ಅಥವಾ ಅಲ್ಲಿ ಕಾಯುತ್ತಿರುವ ಖಾಸಗಿ ಬಾಡಿಗೆ ಜೀಪುಗಳಲ್ಲಿ ಹೋಗಬೇಕು. ತೀರ ಕಿರಿದಾದ ರಸ್ತೆಗಳು, ತೀವೃ ತಿರುವುಗಳು, ಆಳ ಪ್ರಪಾತಗಳು ಎದುರಾಗುವ ಈ ಏರು ರಸ್ತೆಯಲ್ಲಿ ಸ್ವಂತ ವಾಹನಗಳ ಚಾಲನೆ ನಿಜಕ್ಕೂ ಒಂದು ಸವಾಲೇ ಸರಿ. ಜೀಪುಗಳೂ ಕೂಡ ಪ್ರಪಾತ ದರ್ಶನ ಮಾಡಿಸುತ್ತಲೇ ಸಾಗುತ್ತವೆ. ಈ ಎಲ್ಲ ಕಾರಣಗಳಿಂದ ಜನನಿಬಿಡತೆ ಇಲ್ಲಿ ಇಲ್ಲ.
ಈಗ ಸರ್ಕಾರ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಅಗಲ ರಸ್ತೆಗಳ ನಿರ್ಮಾಣ ಮಾಡುತ್ತಿದೆ. ಕೆಂಪು ಜೇಡಿ ಮಣ್ಣಿನ ಆ ರಸ್ತೆಗಳು ಅಲ್ಲಿನ ಭsಮಿಯ ಮೃದುತ್ವವನ್ನು ತೋರಿಸುತ್ತವೆ. ಬೆಟ್ಟದ ಒಂದು ಬದಿಯ ಬದುಗಳನ್ನು ಕ್ರೇನುಗಳಿಂದ ಸವರಿರುವುದರಿಂದ ಕಲ್ಲಿನ ಅನೇಕ ಪದರುಗಳು ಗೋಚರಿಸುತ್ತವೆ. ಈ ಪದರಗಳು ಬೆಟ್ಟದ ದೀರ್ಘ ಆಯುಷ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಬಾಡಿಗೆ ಜೀಪುಗಳು ಬೆಟ್ಟದ ಬುಡದವರೆಗೆ ಮಾತ್ರ
ಕೊಂಡೊಯುತ್ತವೆ. ಅಲ್ಲಿಂದ ಸುಮಾರು ೩೦೦-೪೦೦ ಕಿರಿದಾದ ಮೆಟ್ಟಿಲುಗಳನ್ನು ಏರಿ ಮುಳ್ಳಯ್ಯನ ದರ್ಶನ ಪಡೆಯಬೇಕು. ಈ ಮೆಟ್ಟಿಲುಗಳ ಬದಿಯಲ್ಲಿ ಹಿಡಿಕೆಗಳು ಇಲ್ಲವಾದ್ದರಿಂದ ಕಡಿದಾದ ಬೆಟ್ಟವನ್ನು ಏರುವುದು ಬಹಳ ಕಷ್ಟ. ಬೆಟ್ಟದ ಬುಡದ ಮೆಟ್ಟಿಲುಗಳ ಸಮೀಪ ಎಳೆನೀರು, ಬಿಸ್ಕತ್ತುಗಳು, ಹಣ್ಣುಗಳು, ತಂಪು ಪಾನೀಯಗಳು, ನೀರು, ಐಸ್ಕ್ರೀಂ ಇವಿಷ್ಟು ಮಾತ್ರ ಸಧ್ಯಕ್ಕೆ ಲಭ್ಯ ಇವೆ. ಇವುಗಳನ್ನು ಮೇಲೆ ಸಾಗಿಸಲು ಸಣ್ಣ ಕ್ಯಾರಿಯರ್ ವಾಹನಗಳು ಓಡಾಡುತ್ತವೆ. ಇದು ಇಂದಿನ ಮುಳ್ಳಯ್ಯನಗಿರಿ. ಆದರೆ ಬಹುಬೇಗ ಇದರ ಸ್ವರೂಪ ಬದಲಾಗುವ ಎಲ್ಲ ಲಕ್ಷಣಗಳೂ ಈಗ ಅಲ್ಲಿ ಕಾಣಿಸುತ್ತಿವೆ. ರಸ್ತೆ ಅಗಲೀಕರಣವಾದ ನಂತರ ವಾಹನ ಸಾಗಾಟ ತೀವೃವಾಗಿ ಹೆಚ್ಚಬಹುದು. ಜೊತೆಗೆ ಚಾರಣಿಗರ ಸಂಖ್ಯೆಯೂ ಏರಬಹುದು. ಇದರೊಂದಿಗೆ ತಿಂಡಿ ತಿನಿಸುಗಳ ಮಾರಾಟಗಾರರು, ಹೊಟೆಲ್ಲುಗಳು, ಕೊನೆಗೆ ಲಾಡ್ಜಗಳು ಎಲ್ಲವೂ ಒಂದರ ಹಿಂದೆ ಒಂದು ಬಂದೇ ಬರುತ್ತವೆ. ಈ ಎಲ್ಲ ಬೆಳವಣಿಗೆಗಳಿಗೆ ಬಹಳ ಕಾಲ ಹಿಡಿಯುವುದಿಲ್ಲ. ರಸ್ತೆ ಅಗಲೀಕರಣವಾದ ಕೂಡಲೇ ನೋಡುನೋಡುತ್ತಲೇ ಇವೆಲ್ಲ ಆಗಿ ಬಿಡುತ್ತವೆ. ಆಗ ಮುಳ್ಳಯ್ಯನಗಿರಿಯಲ್ಲಿರುವ ಈಗಿನ ಪ್ರಶಾಂತತೆ, ಸ್ವಚ್ಛತೆ, ಶುದ್ಧ ಗಾಳಿ ಎಲ್ಲವೂ ಮಾಯವಾಗಿ ವ್ಯಾಪಾರೀಕರಣ ತಾಂಡವವಾಡುತ್ತದೆ. ಇದು ನಮ್ಮ ಪ್ರವಾಸೋದ್ಯಮ ಅಭಿವೃದ್ಧಿಯ ಮಾದರಿ!
ಮುಳ್ಳಯ್ಯನಗಿರಿಗೆ ಸರ್ಕಾರ ರಸ್ತೆಗಳನ್ನು ನಿರ್ಮಿಸಿದರೂ ಉಳಿದ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಇನ್ನು ತಿಂಡಿ ತಿನಿಸುಗಳ ಅಂಗಡಿಗಳು, ಹೊಟೆಲ್ಲುಗಳು ಆಗದಂತೆ ನೋಡಿಕೊಂಡರೆ ಒಳಿತು. ಅಲ್ಲಿಂದ ಚಿಕ್ಕಮಗಳೂರೇನು ದೂರವಿಲ್ಲ. ಅಲ್ಲಿ ಈಗಾಗಲೇ ಇರುವ ಹೊಟೆಲ್ಲುಗಳು, ಹೋಂಸ್ಟೇಗಳು ಇದರ ಸದುಪಯೋಗ ಪಡೆಯಬಹುದು. ಕಡಿದಾದ ಬೆಟ್ಟಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಕಡಿದು ನಾಡಾಗಿಸಿದ ದುರಂತವನ್ನು ಈಗಾಗಲೇ ನಾವು ಹರಿದ್ವಾರ, ಕೇದಾರನಾಥ, ಹೃಷಿಕೇಶ, ಕೊಡಗು, ಕೇರಳಗಳಲ್ಲಿ ಕಂಡಿದ್ದೇವೆ. ಇವುಗಳಿಂದ ಪಾಠ ಕಲಿತಾದರೂ ಸರ್ಕಾರಗಳು ಪ್ರವಾಸೋದ್ಯಮ ಅಭಿವೃದ್ಧಿಯ ವ್ಯಾಖ್ಯೆಯನ್ನು ಬದಲಿಸಿಕೊಳ್ಳಬೇಕಾಗಿದೆ.
ರಸ್ತೆ ಅಗಲೀಕರಣ, ಕಾಡು ಕಡಿಯುವುದು, ಬೆಟ್ಟಗಳನ್ನು ಸವರುವುದರಿಂದ ಅಭಿವೃದ್ಧಿಯ ಬದಲಾಗಿ ಅವಘಡಗಳೇ ಆಗಿದ್ದನ್ನು ಕಣ್ಣಾರೆ ಕಂಡೂ ಅದೇ ತಪ್ಪನ್ನು ಮಾಡಬಾರದು. ಕರ್ನಾಟಕದ ಊಟಿಯಾಗಿರುವ ತಂಪು ತಂಪು ಚಿಕ್ಕಮಗಳೂರು ಸಮೃದ್ಧ ಕಾಡು, ನೀರು, ಮಳೆ-ಬೆಳೆಗಳಿಂದ ಸಂಪನ್ನವಾಗಿರಲಿ ಎಂದು ಹಾರೈಸುವ ಸನ್ಮತಿಯನ್ನು ಮುಳ್ಳಯ್ಯ ಹಾಗೂ ಬುಡನ್‌ಗಿರಿಯ ಬಾಬಾ ಎಲ್ಲರಿಗೂ ನೀಡಲಿ.
ಬಲಾಢ್ಯವಾಗುತ್ತಿರುವ ಭಾರತವನ್ನು ಅಷ್ಟು ಸುಲಭವಾಗಿ ಬಗ್ಗು ಬಡಿಯಲು ಅಸಾಧ್ಯ ಎಂಬುದು ಚೀನಾಕ್ಕೆ ಗೊತ್ತಿದೆ. ಅದಕ್ಕಾಗಿಯೇ ಅದು ಲಡಾಕ್ ಗಡಿ ಭಾಗದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದೆ. ಈ ಮೂಲಕ ಈಗಾಗಲೇ ಕೋವಿಡ್ -19 ಸಮಸ್ಯೆಯಿಂದಾಗಿ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಭಾರತಕ್ಕೆ ಮತ್ತಷ್ಟು ಏಟು ನೀಡುವ ಯತ್ನ ಮಾಡಿದೆ. ತನ್ನ ಮನೆಯಲ್ಲೇ ಊಟಕ್ಕೆ ಮಿತಿ ಹಾಕಿರುವ ಚೀನಾ, ಆದರೂ ನನ್ನ ಒಂದು ಕಣ್ಣು ಹೋದರೂ ಸರಿ, ಅವರ ಕಣ್ಣನ್ನೂ ತೆಗೆಯಬೇಕು ಎಂಬ ಕುತಂತ್ರಕ್ಕೆ ಮುಂದಾಗಿದೆ.
ಗಡಿಯಲ್ಲಿ ಸೇನೆಪೂರ್ವ ಲಡಾಕ್ ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಅತಿಕ್ರಮಣದ ದುಸ್ಸಾಹಸ ಮಾಡಿದೆ. ಅದನ್ನು ಬಹುತೇಕ ಭಾರತೀಯ ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿ, ಎತ್ತರದ ಪ್ರದೇಶದ ಮೇಲೆ ಪಾರಮ್ಯ ಸಾಧಿಸಿದ್ದಾರೆ. ಆದರೆ, ಬೀಜಿಂಗ್ ನ ಈ ತಂತ್ರದ ಹಿಂದಿದೆ ಭಾರತದ ಆರ್ಥಿಕತೆಯ ಮೇಲೆ ಹೊಡೆತ ನೀಡುವ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಭಾಗದಲ್ಲಿ ಸುಮಾರು 250ರಿಂದ 300 ಕಿ.ಮೀ. ಗಡಿ ಭಾಗವನ್ನು ಭಾರತ-ಚೀನಾ ಹಂಚಿಕೊಂಡಿದೆ. ಸದ್ಯದ ಮಟ್ಟಿಗೆ 25ರಿಂದ 30 ಸಾವಿರ ಯೋಧರನ್ನು (ಟುಟು, ಘಾತಕ್ ಪಡೆ ಹೊರತು ಪಡಿಸಿ) ನಿಯೋಜಿಸಲಾಗಿದೆ. ಇದರಿಂದ ದೇಶದ ಬೊಕ್ಕಸಕ್ಕೆ ಹಾನಿ ಮಾಡುವ ಏಕಮಾತ್ರ ಉದ್ದೇಶವೇ ಚೀನಾದ ಈ ಗಡಿ ಕಬಳಿಸುವ ಷಡ್ಯಂತ್ರದ ಹಿಂದಿರುವ ಉದ್ದೇಶವಾಗಿದೆ.
1962ಕ್ಕೆ ಹೋಲಿಸಿದರೆ ಈಗ ಭಾರತ ಚೀನಾಕ್ಕಿಂತ ಸೇನಾ ಬಲದಲ್ಲಿ ಕಡಿಮೆಯೇನಿಲ್ಲ. ಹೀಗಾಗಿ ಅದನ್ನು ಮಣಿಸಲು ಕೇವಲ ಸೇನಾ ಸಾಮರ್ಥ್ಯವಲ್ಲ ಬದಲಾಗಿ ಆರ್ಥಿಕ ಒತ್ತಡವನ್ನೂ ಹೇರಬೇಕು ಎಂಬುದು ಚೀನಾದ ಈಗಿನ ಪ್ರತಿಯೊಂದು ನಡೆಯೂ ತೋರಿಸಿಕೊಡುತ್ತಿದೆ. ಈ ಮೂಲಕ ಸಶಸ್ತ್ರ ಹೋರಾಟದ ಬದಲಾಗಿ ಅಡ್ಡ ದಾರಿಯಲ್ಲಿ ಭಾರತವನ್ನು ಮಣಿಸಲು ಅದು ಮುಂದಾಗಿದೆ.
ಆದರೆ, ಭಾರತವೇನೂ ಕಡಿಮೆಯಿಲ್ಲ. ಈಗಾಗಲೇ ಚೀನಾ ಉತ್ಪನ್ನಗಳಾದ ಹಲವಾರು ಆಪ್ ಗಳನ್ನು ನಿಷೇಧಿಸುವ ಮೂಲಕ ತಕ್ಕ ತಿರುಗೇಟು ನೀಡಿದೆ ಬಿಡಿ.ಅಗಾಧ ವೆಚ್ಚಈಗಾಗಲೇ ಕೋವಿಡ್-19 ಸಮಸ್ಯೆಯಿಂದ ಎದುರಾಗಿರುವ ಸಮಸ್ಯೆಯನ್ನು ಭಾರತ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಎದುರಿಸುತ್ತಿವೆ ಎಂಬುದು ಹಗಲಿನಷ್ಟೇ ನಿಚ್ಚಳ. ಈಗ ಮುಂಗಾರು ಕಳೆದು ಚಳಿಗಾಲ ಆರಂಭವಾಗಲಿದೆ. ಉತ್ತರ ಭಾರತದಲ್ಲಿ ಅಕ್ಟೋಬರ್ ಮಧ್ಯ ಭಾಗದಿಂದ ಚಳಿಗಾಲ ಆರಂಭವಾಗುತ್ತಿದ್ದು, ಹಿಮಪಾತವಾಗುತ್ತದೆ.
ಈ ಸಂದರ್ಭದಲ್ಲಿ ಒಂದು ಅಂಶವನ್ನು ನಾವು ನೆನಪಿಸಿಕೊಳ್ಳಲೇಬೇಕು. 1962ರ ಚೀನಾ ಜತೆಗಿನ ಯುದ್ಧದ ಸಮಯದಲ್ಲಿ ನಮ್ಮ ಬಹುತೇಕ ಸೈನಿಕರು ಚೀನಾದ ಆಕ್ರಮಣದಿಂದಲೇ ಸಾವನ್ನಪ್ಪಿಲ್ಲ. ಬದಲಾಗಿ ಹವಾಮಾನದಲ್ಲಾದ ಬದಲಾವಣೆಯಿಂದ ಕೊರೆಯುವ ಚಳಿಯಲ್ಲಿ (ಮೂಲಭೂತ ಸೌಕರ್ಯ ಕೊರತೆಯಿಂದ) ಕೈ-ಕಾಲು ಬೆರಳು ಸೇರಿದಂತೆ ದೇಹದ ಅಂಗಾಂಗಳು ಕೊಳೆತು ಹೋಗಿ ಸತ್ತು ಹೋಗಿದ್ದರು ಎಂದು ಹೇಳಲಾಗುತ್ತದೆ (ಇಂಡಿಯಾಸ್ ಚೈನಾ ವಾರ್ – ನೆವಿಲ್ ಮ್ಯಾಕ್ಸ್ ವೆಲ್ ).
ಈಗ ಹಳೆ ಭಾರತವಲ್ಲ
1962ರ ಭಾರತದ ಪರಿಸ್ಥಿತಿಯನ್ನೇ ಅವಲೋಕಿಸಿ ಮತ್ತೊಮ್ಮೆ ಚೀನಾ ದುಸ್ಸಾಹಸಕ್ಕೆ ಮುಂದಾಗಿದೆ. ಆದರೆ ಈಗ ಸನ್ನಿವೇಶ ಬದಲಾಗಿದೆ. ಭಾರತವು ಬಲಾಢ್ಯವಾಗಿದೆ. ಅಂತಾರಾಷ್ಟ್ರೀಯ ಸಮುದಾಯದ ಸಕಲ ಬೆಂಬಲವನ್ನೂ ಪಡೆದಿದೆ.
ಸುಮಾರು 250ರಿಂದ 300 ಕಿ.ಮೀ. ಉದ್ದವಿರುವ ಗಡಿ ಭಾಗದಲ್ಲಿ ಭಾರತ ಈಗಾಗಲೇ 25ರಿಂದ 30 ಸಾವಿರ ಯೋಧರನ್ನು ನಿಯೋಜಿಸಿದೆ.ಇನ್ನು ಮುಂದೆ ಆರು ತಿಂಗಳು ಅಂದರೆ ಚಳಿಗಾಲದಲ್ಲಿ ಅಲ್ಲಿ ಸೇನೆ ನಿಯೋಜನೆಯನ್ನು (ಐದು ಅಂಶಗಳ ಒಪ್ಪಂದವಾಗಿದ್ದರೂ) ಹಿಂತೆಗೆಯುವ ಪರಿಸ್ಥಿತಿಯಲ್ಲಿ ಭಾರತ ಇಲ್ಲ.ಹೀಗಾಗಿ ಭಾರತ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಬೇಕಾಗಿದೆ.
1993ರಲ್ಲಿ ಚೀನಾವು ಭಾರತದ ಜತೆಗೆ ಒಪ್ಪಂದ ಮಾಡಿಕೊಂಡಿದ್ದರೂ ಬಳಿಕ ಪದೇ ಪದೇ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಈ ಗಡಿ ಭಾಗದಲ್ಲಿ ಬಂಕರ್ ಗಳ ನಿರ್ಮಾಣ, ಹೆದ್ದಾರಿ ರಚನೆ ಸೇರಿದಂತೆ. ಒಪ್ಪಂದವನ್ನು ಉಲ್ಲಂಘನೆ ಮಾಡಿಕೊಂಡೇ ಬಂದಿತ್ತು ಎಂಬುದು ಇಲ್ಲಿ ಗಮನಾರ್ಹ. ಚೀನಾವು ತನ್ನ ರಾಜಕೀಯ ಲಾಭಕ್ಕಾಗಿ ಇಂತಹ ಕೆಲಸವನ್ನು ಮುಂದುವರಿಸುತ್ತಲೇ ಬಂದಿದೆ. ಎಲ್ ಎಸಿ ಸಮೀಪ ಸೇನಾ ಜಮಾವಣೆ ಮಾಡುವುದನ್ನು ಮುಂದುವರಿಸುವ ಮೂಲಕ ಉಭಯ ದೇಶಗಳ ನಡುವಿನ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಬಂದಿದೆ ಎಂದು ನಿವೃತ್ತ ಮಿಲಿಟರಿ ಜನರಲ್ ಹಾಗೂ ಚೀನಾ ವ್ಯವಹಾರಗಳ ಕುರಿತ ತಜ್ಞ ಎ. ಪಿ. ಸಿಂಗ್ ಹೇಳುತ್ತಾರೆ.
ದುಬಾರಿ ಗಡಿ ಕಾವಲು
ಹಾಗೆ ನೋಡಿದರೆ ಭಾರತದ ದುಬಾರಿ ಗಡಿ ಕಾವಲು ಎಂದರೆ ಪಾಕ್ ಗಡಿಗೆ ಹೊಂದಿರುವ ಸಿಯಾಚಿನ್ ಹಿಮಾಚ್ಛಾದಿತ ಪರ್ವತ ಪ್ರದೇಶ. 17,700 ಅಡಿ ಎತ್ತರದ ಈ ಪರ್ವತ ಪ್ರದೇಶವನ್ನು ಕಾಯಲು ಸುಮಾರು 5,000 ಯೋಧರನ್ನು ಪಾಳಿಯಲ್ಲಿ ನಿಯೋಜಿಸಲಾಗಿದೆ. 76 ಕಿ.ಮೀ. ಉದ್ದದ ಈ ಗಡಿಯನ್ನು ಕಾಯಲು ಪ್ರತಿ ದಿನಕ್ಕೆ ಭಾರತ ಸುಮಾರು 4-6 ಕೋಟಿ ರೂ. ಅಂದರೆ ವರ್ಷಕ್ಕೆ ಸುಮಾರು 2,190 ಕೋಟಿ ರೂ. ಖರ್ಚು ಮಾಡುತ್ತಿದೆ.
ಕೇಂದ್ರ ಸರಕಾರ ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ, 1984ರ ಬಳಿಕ ಸಿಯಾಚಿನ್ ನಲ್ಲಿ ಹವಾಮಾನ ವೈಪರೀತ್ಯದಿಂದ 869 ಯೋಧರು ಹುತಾತ್ಮರಾಗಿದ್ದಾರೆ. ಯೋಧರಿಗೆ ರಕ್ಷಣೆ ಒದಗಿಸುವುದಕ್ಕಾಗಿಯೇ ( ಚಳಿಯಿಂದ ರಕ್ಷಿಸಿಕೊಳ್ಳಲುವ ಬಟ್ಟೆ ಸೇರಿದಂತೆ ಇತರ ಪರಿಕರಗಳು) 7,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದೆಲ್ಲ ಅಂಕಿ ಅಂಶಗಳನ್ನು ನೋಡಿದರೆ ಖಚಿತವಾಗಿಯೂ ಚೀನಾವು ಭಾರತದ ಮೇಲೆ ಭೌತಿಕ ಬದಲಾಗಿ ಆರ್ಥಿಕ ಯುದ್ಧವನ್ನೇ ಸಾರಿದೆ ಎಂಬುದರಲ್ಲಿ ಸಂದೇಹವಿಲ್ಲ.
ಪರ್ವತ ಪಡೆಗೆ ಹಣ
ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 90,270 ಯೋಧರ ಸಾಮರ್ಥ್ಯದ 17ನೇ ಪರ್ವತ ಯುದ್ಧ ಯೋಧರ ಬೆಟಾಲಿಯನ್ (ಎಂಎಸ್ಸಿ)ಗೆ ಮುಂದಾಗಿದೆ. ಕಳೆದ ಮೂರು ವರ್ಷಗಳಿಂದ ಹಣಕಾಸು ಮುಗ್ಗಟ್ಟಿನಿಂದಾಗಿ ಈ ಬೆಟಾಲಿಯನ್ ಗೆ ಹೆಚ್ಚಿನ ಚೇತನ ಸಿಕ್ಕಿರಲಿಲ್ಲ. ಸುಮಾರು 60,000 ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಡಲು 2013ರಲ್ಲಿ ಕೇಂದ್ರ ಸರಕಾರ ಒಪ್ಪಿಗೆ ನೀಡಿತ್ತು.
‘ಕೋವಿಡ್ ಇಲ್ಲವೇ ಇಲ್ಲ, ಲಾಕ್ ಡೌನ್ ಎಲ್ಲ ದೊಡ್ಡ ಡ್ರಾಮ… ‘.ಎಂದು ನಂಬುವವರು ಈ ಪ್ರಪಂಚದಲ್ಲಿ ಇದ್ದಾರೆ. ಭೂಗೋಲದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಹರಡಿದ್ದಾರೆ. ಕೋವಿಡ್ -19 ರ ಸೋಂಕಿನಿಂದ ಪ್ರಪಂಚದಲ್ಲಿ ಇದುವರೆಗೆ 9 ಲಕ್ಷ 35 ಸಾವಿರ ಜನರು ಸತ್ತಿರುವುದನ್ನು ಓದಿದ ನಂತರ, 29.6 ಮಿಲಿಯನ್ ಸೋಂಕಿತರು ಇದ್ದಾರೆ ಎಂದು ತಿಳಿದ ನಂತರವೂ ಈ ಜನರ ಗುಂಪು ‘ಕೋವಿಡ್ ಎನ್ನುವುದು ಇಲ್ಲವೇ ಇಲ್ಲ , ಇವೆಲ್ಲ ಮಾಧ್ಯಮಗಳ ಹುನ್ನಾರ ‘- ಎನ್ನುತ್ತಿದ್ದಾರೆ.
ಅಮೆರಿಕಾದಿಂದ ಹಿಡಿದು ಆಸ್ಟ್ರೇಲಿಯಾವರೆಗೆ ಹರಡಿರುವ ಈ ಜನರು ತಮ್ಮ ಈ ನಿರ್ಣಯಕ್ಕೆ ಹೇಗೆ ತಲುಪುತ್ತಾರೆ. ಅವರ ಮಾನಸಿಕ ಪ್ರಪಂಚ ಏನನ್ನು ಒಪ್ಪಬಲ್ಲದು,ಏನನ್ನು ಒಪ್ಪಲು ಹಿಂತೆಗೆಯತ್ತಿದೆ? ಮತ್ತು ಯಾಕೆ?-ಎನ್ನುವುದು ಅತ್ಯಂತ ಸ್ವಾರಸ್ಯಕರ ವಿಚಾರ. ಬೆಟ್ಟದಷ್ಟು ಸಾಕ್ಷಿ ಆಧಾರಗಳಿದ್ದರೂ ಮನುಷ್ಯರಲ್ಲಿ ಹುಟ್ಟುವ ಈ ನಿರಾಕರಣೆ ಅಧ್ಯಯನ ಯೋಗ್ಯ ವಿಷಯವೂ ಹೌದು.
ಸೆಪ್ಟೆಂಬರ್ ಐದನೇ ತಾರೀಕು ಆಸ್ಟ್ರೇಲಿಯಾದ ಮೆಲ್ಬೊರ್ನ್ ನಗರದಲ್ಲಿ ದೊಡ್ಡ ಪ್ರತಿಭಟನೆಗಳಾದವು. ವಿಕ್ಟೋರಿಯಾ ಸ್ಟೇಟ್ ಆಸ್ಟ್ರೇಲಿಯಾದಲ್ಲಿ ಕೊರೋನಾ ಸೋಂಕಿನಿಂದ ಗಂಭೀರವಾಗಿ ಬಳಲಿರುವ ಜಾಗ. ಆದರೆ ಸುಮಾರು ಮುನ್ನೂರು ಮಂದಿ ಇಲ್ಲಿ ಒತ್ತಟ್ಟಿಗೆ ಸೇರಿ ಕೊರೊನಾ ಲಾಕ್ ಡೌನಿನ ವಿರುದ್ಧ ಪ್ರತಿಭಟನೆ ನಡೆಸಿದರು. ಅದು ಹಿಂಸಾತ್ಮಕ ರೂಪ ತಾಳಿತು. ಪೋಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾದವು. ಹಲವರನ್ನು ಪೊಲೀಸರು ಬಂಧಿಸಿದರು. ಅದೇ ದಿನ ಆ ದೇಶದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 748 ಜನರು ಸತ್ತಿದ್ದರು. ಮೆಲ್ಬೋರ್ನಿನ ಆರು ವಾರಗಳ ಲಾಕ್ ಡೌನ್ ಕೊನೆಯಾಗುತ್ತಿದ್ದ ಕಾಲವದು.
ಆಸ್ಟ್ರೇಲಿಯಾ ಲಾಕ್ ಡೌನ್ ವಿರೋಧಿ ಪ್ರತಿಭಟನೆ
ಎಡಿನ್ ಬರ್ಗ್
ಆದರೆ ಇದುವರೆಗಿನ ಆಸ್ಟ್ರೇಲಿಯಾದ ಒಟ್ಟಾರೆ ಕೊರೊನಾ ಸೋಂಕಿಗೆ ವಿಕ್ಟೋರಿಯಾ ರಾಜ್ಯದ ಕೊಡುಗೆ ಶೇಕಡಾ 75 ಇತ್ತು. ಇಡೀ ದೇಶದಲ್ಲಿ ಸತ್ತವರ ಸಂಖ್ಯೆಯಲ್ಲಿ ವಿಕ್ಟೋರಿಯಾ ರಾಜ್ಯದವರೇ ಶೇಕಡಾ 90 ಇದ್ದರು. ಹೀಗೆ ಪ್ರತಿಭಟನೆ ನಡೆಯುತ್ತಿರುವ ದಿನವೇ ಅಲ್ಲಿ 11 ಜನರು ಸತ್ತಿದ್ದರು. ಶೇಕಡಾ 70 ಗಿಂತಲೂ ಹೆಚ್ಚ ಜನರಲ್ಲಿ ಹೊಸ ಸೋಂಕು ಕಾಣಿಸಿಕೊಂಡಿತ್ತು. ಹೀಗಿರುವಾಗ ಕೊರೊನಾದ ಎರಡನೇ ಅಲೆ ಹೆಚ್ಚಾಗುವ ಸಾಧ್ಯತೆಗಳನ್ನು ಹತ್ತಿಕ್ಕಲು ಸರ್ಕಾರ 6 ವಾರಗಳ ಲಾಕ್ ಡೌನ್ ಕ್ರಮವನ್ನು ಅನುಸರಿಸಿದ್ದರಲ್ಲಿ ಯಾವ ಅಶ್ಚರ್ಯವೂ ಇರಲಿಲ್ಲ.ಆದರೆ ಈ ಮುನ್ನೂರು ಜನರು ಅದನ್ನು ವಿರೋಧಿಸಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಪೊಲೀಸರೊಂದಿಗೆ ಘರ್ಷಣೆಗಿಳಿದರು.
ಅದೇ ದಿನ ಸ್ಕಾಟ್ಲ್ಯಾಂಡಿನ ರಾಜಧಾನಿ ಎಡಿನ್ ಬರೋ ದಲ್ಲಿ ಕೂಡ ಪ್ರತಿಭಟನೆಗಳು ನಡೆದವು. ಕೊರೊನಾ ವೈರಸ್ ಇಲ್ಲವೆನ್ನುವವರು, ಲಸಿಕೆಗಳ ಹಿಂದೆ ಒಳಸಂಚಿದೆಯೆಂಬ ಸಿದ್ದಾಂತದವರು ಮಾಸ್ಕ್ ಧಾರಣೆ ವಿರೋಧಿಗಳು ಹೀಗೆ ಒತ್ತಟ್ಟಿಗೆ ಸಾವಿರಕ್ಕೂ ಅಧಿಕ ಜನರು ಸೇರಿ ಘೋಷಣೆಗಳನ್ನು ಕೂಗಿದರು. ಮಾಸ್ಕ್ ಮತ್ತು ವ್ಯಾಕ್ಸಿನ್ ಎರಡನ್ನೂ ಕಡ್ಡಾಯಗೊಳಿಸುವುದನ್ನು ಇವರು ಬಲವಾಗಿ ಖಂಡಿಸಿದರು.
ಆದರೆ ಅದೇ ವಾರ ಸ್ಕಾಟ್ಲ್ಯಾಂಡಿನಲ್ಲಿ ಒಟ್ಟು 994 ಹೊಸ ದೃಡಪಟ್ಟ ಸೋಂಕಿತರ ಪತ್ತೆಯಾಗಿತ್ತು, ಅದರ ಹಿಂದಿನ ವಾರಕ್ಕೆ ಹೋಲಿಸಿದರೆ 507 ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದರು. ಎರಡನೇ ಅಲೆ ಬಲವಾಗುತ್ತಿವೆ ಎಂಬಂತ ಕರಾಳ ವಾತಾವರಣದಲ್ಲೂ ಅವರ ಪ್ರತಿಭಟನೆ ಏಕೆ ನಡೆಯಿತು?
ಸ್ಕಾಟ್ಲ್ಯಾಂಡಿನ ನ್ಯಾಷನಲ್ ಕ್ಲಿನಿಕಲ್ ಡೈರೆಕ್ಟರ್ ಪ್ರೊಫೆಸರ್ ಜೇಸನ್ ಲೀಕ್ ಇವರನ್ನು ಅತ್ಯಂತ ’ಬೇಜವಬ್ದಾರೀ ನಡತೆಯ ಜನರೆಂದು’ ಬಣ್ಣಿಸಿದರು.ಜಗತ್ತಿನ 194 ದೇಶಗಳು ನೂರು ವರ್ಷಗಳಲ್ಲಿ ಥಟ್ಟನೆ ಒತ್ತಟ್ಟಿಗೆ ಬಂದು ಹೀಗೊಂದು ದಂತ ಕಥೆಯನ್ನು ಸೃಷ್ಟಿಸಿದ್ದೇವೆಯೇ? ಕಳೆದ ಆರು ತಿಂಗಳಲ್ಲಿ ನಡೆದಿರುವುದು ನಡೆದಿರಬಾರದಿತ್ತು ಎಂದು ಬಲವಾಗಿ ಆಶಿಸುವವರಲ್ಲಿ ನಾನೂ ಒಬ್ಬ ಆದರೆ ಇವರ ವರ್ತನೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ” -ಎಂದು ಬೇಸರಪಟ್ಟರು.
ಇತ್ತ ಇಂಗ್ಲೆಂಡಿನ ಲೀಡ್ಸ್ ಎನ್ನುವ ನಗರದಲ್ಲಿ ಕೊರೊನಾ ವೈರಸ್ಸಿನ ಸೋಂಕಿತರ ಸಂಖ್ಯೆ ಮೆಲ್ಲಗೆ ಏರುತ್ತಿದ್ದು ಸೆಪ್ಟೆಂಬರ್ ನಾಲ್ಕನೇ ತಾರೀಖಿನಂದು ಈ ನಗರ ವಾಚ್ ಲಿಸ್ಟ್ ನ ಐದನೇ ಸ್ಥಾನಕ್ಕೆ ತಲುಪಿತ್ತು. ಐದನೇ ತಾರೀಖು ಆ ನಗರ ಮತ್ತೆ ಲಾಕ್ ಡೌನ್ ಗೆ ಪ್ರವೇಶಿಸುವುದು ಖಾತರಿಯಾಯಿತು. ಆರನೇ ತಾರೀಕು ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಆಂಟಿ ಮಾಸ್ಕ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಯೋಜನೆ ಪ್ರಕಟವಾಯಿತು.ಆದರೆ ಅದೇ ದಿನ ಇಂಗ್ಲೆಂಡಿನಲ್ಲಿ 2988 ಹೊಸ ಸೋಂಕುಗಳು ಪತ್ತೆಯಾದವು.
ಅತಿ ಬೇಗನೆ ಅಂದರೆ ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಾಗಲೇ ಅಮೆರಿಕಾದ ಹಲವಾರು ನಗರಗಳಲ್ಲಿ ಲಾಕ್ ಡೌನ್ ತಮ್ಮ ಆರ್ಥಿಕತೆಯನ್ನು ನಿಧಾನಗೊಳಿಸಬಲ್ಲದು ಎನ್ನುವ ಕಾರಣಕ್ಕೆ ಪ್ರತಿಭಟನೆಗಳು ಶುರುವಾಗಿದ್ದವು.ಇದನ್ನು ಸ್ವತಃ ಅಮೆರಿಕಾದ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ಮತ್ತು ಆಡಳಿತ ಪಕ್ಷ ಕೂಡ ಪರೋಕ್ಷವಾಗಿ ಅನುಮೋದಿಸಿದರು. ಅವರದೇ ಪಕ್ಷದ ಹಲವು ನಾಯಕರು ಮತ್ತು ಸ್ಥಳೀಯ ಮೇಯರುಗಳು, ಗವರ್ನರುಗಳು ಈ ಬಗೆಯ ಪ್ರತಿಭಟನೆಗಳು ಕೊರೋನಾ ವೈರಸ್ಸನ್ನು ನಿಯಂತ್ರಿಸುವಲ್ಲಿ ದೊಡ್ಡ ತೊಡಕಾಗಬಲ್ಲರೆಂದರು. ಏಪ್ರಿಲ್ 15 ರಂದು ಮಿಶಿಗನ್ ನಲ್ಲಿ ಶುರುವಾದ ಪ್ರತಿಭಟನೆ ಮೇ ಒಂದನೇ ತಾರೀಕಿನ ವೇಳೆಗೆ ಸುಮಾರು ಅರ್ಧದಷ್ಟು ಅಮೆರಿಕನ್ ರಾಜ್ಯಗಳಿಗೆ ಹರಡಿತ್ತು. ಮಿಶಿಗನ್ ಪ್ರತಿಭಟನೆಯಿಂದಲೇ ಇತರರಿಗೆ ಸ್ಪೂರ್ತಿ ಸಿಕ್ಕಿತ್ತು.
ಅಮೆರಿಕಾದಲ್ಲಿ ಮೊದಲಿಗೆ ಶುರುವಾದ ಈ ಪ್ರತಿಭಟನೆಗಳು ಅಂತಾರಾಷ್ಟ್ರೀಯ ಸುದ್ದಿಗಳಾದವು. ಇವರ ರಾಲಿಯನ್ನು ವಿರೋಧಿಸಿದ ಕೆಲವು ವೈದ್ಯರು ಇವರ ವಾಹನಗಳಿಗೆದುರಾಗಿ ನಿಂತು “ ನೀವು ಮುಂದುವರೆಯುವಿರಾದರೆ ನಮ್ಮನ್ನು ಈಗಲೇ ಸಾಯಿಸಿಬಿಡಿ ಏಕೆಂದರೆ ಈಗಲೇ ಆರೋಗ್ಯ ಇಲಾಖೆ ತತ್ತರಿಸಿಹೋಗಿದೆ, ನಾವುಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೋಗಿ ಸಾವನ್ನಪ್ಪುತ್ತಿದ್ದೇವೆ. ಇನ್ನು ಲಾಕ್ ಡೌನ್ ನ್ನು ತೆರೆದುಬಿಟ್ಟಲ್ಲಿ ಈ ಸೋಂಕನ್ನು ನಿಯಂತ್ರಿಸುವುದು ಸಾಧ್ಯವೇ ಇಲ್ಲ “ ಎಂಬ ಸಂದೇಶಗಳನ್ನು ಕಳಿಸಿದರು.
ಮಿಶಿಗನ್ ರಾಲಿಯನ್ನು ತಾವೇ ಸಂಘಟಿಸಿದ್ದೇವೆಂದು ಆಳುವ ಪಕ್ಷ ನೇರವಾಗಿ ಒಪ್ಪಲಿಲ್ಲ. ಆದರೆ ಇದನ್ನು ಸಂಘಟಿಸಿದವರಲ್ಲಿ ಮ್ಯಾಟ್ ಮ್ಯಾಡಕ್ ಎಂಬ ರಿಪಬ್ಲಿಕನ್ ಪಕ್ಷದ ಸದಸ್ಯನ ಹೆಂಡತಿ ಮೆಶ್ವಾನ್ ಮ್ಯಾಡಕ್ ಕೂಡ ಇದ್ದಳು.ಆಕೆ ’ ವುಮೆನ್ ಫಾರ್ ಟ್ರಂಪ್ ’ ಸಂಘದ ಸಲಹಾ ಸಮಿತಿಯ ಸದಸ್ಯೆಯಾಗಿದ್ದಳು. ಈ ಸಂಘದ ಉಪಾಧ್ಯಕ್ಷೆ ಮರಿಯಾನ್ ಶೆರಿಡನ್ ಕೂಡ ಇದರಲ್ಲಿದ್ದಳು.ಇವೇ ಪ್ರತಿಭಟನೆಗಳು ವಾಷಿಂಗ್ಟನ್ ನಲ್ಲಿ ಸಂಘಟಿಸಿದ್ದು ಅಲ್ಲಿನ ಕೌಂತಿ ರಿಪಬ್ಲಿಕನ್ ಪಾರ್ಟಿಯೇ. ಈ ರಾಲಿ ಉದ್ದೇಶಿಸಿ ಮಾತನಾಡಿದವರಲ್ಲಿ ಮೂವರು ರಿಪಬ್ಲಿಕನ್ ಪಾರ್ಟಿ ಲೆಜಿಸ್ಲೇಟರುಗಳು ಇದ್ದರು.
ಪ್ರತಿಭಟಿಸುತ್ತಿದ್ದವರಲ್ಲಿ ಕೆಲವರಿಗೆ ಕೊರೊನಾ ಬರಲಿ,ಬಿಡಲಿ ಬದುಕು ಎಂದಿನಂತೆ ನಡೆಯಬೇಕು ಎಂಬ ವಿಚಿತ್ರ ನಂಬಿಕೆಗಳಿದ್ದವು. ಇನ್ನು ಕೆಲವರು ಲಾಕ್ ಡೌನ್ ತಮ್ಮ ಸ್ವಾತಂತ್ರ್ಯದ ಉಲ್ಲಂಘನೆ ಎಂಬ ಭಾವನೆಯಿತ್ತು. ಮತ್ತೂ ಕೆಲವರಿಗೆ ಟ್ರಂಪ್ ಆಡಳಿತದಲ್ಲಿ ಆರ್ಥಿಕತೆ ಕೆಳಮುಖವಾಗುವುದು ಬೇಡವಾಗಿತ್ತು. ಅವರು ಆತನ ಆಡಳಿತವನ್ನು ಬೆಂಬಲಿಸಲು ಪ್ರತಿಭಟಿಸುತ್ತಿದ್ದರು.
ಈ ಪ್ರತಿಭಟನೆಗಳು ಸಂಘಟಿಸಲ್ಪಟ್ಟಿದ್ದವು ಮತ್ತು ಜೊತೆ ಜೊತೆಯಲ್ಲೇ ಜನರ ನಂಬಿಕೆಗಳು ಮತ್ತು ಆರ್ಥಿಕ ಆತಂಕಗಳೂ ಜೊತೆಗೂಡಿದ್ದವು. ಅಥವಾ ಈ ಆತಂಕ ಮತ್ತು ನಂಬಿಕೆಗಳ ಪ್ರಯೋಜನ ಪಡೆಯಲಾಗಿತ್ತು. ನವೆಂಬರಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಅಮೆರಿಕಾದಲ್ಲಿ ಅತ್ಯಂತ ಬೇಗನೆ ಅನ್ ಲಾಕ್ ಅಭಿಯಾನ ಶುರುಮಾಡಲಾಯಿತು. ಸಾಮಾಜಿಕ ಅಂತರದ ಕಾರಣ ಸೋಂಕು ನಿಯಂತ್ರಣದಲ್ಲಿರುವ ಚಿತ್ರಣ ನೀಡಿ ವ್ಯಾಪಾರ ಮತ್ತು ವಹಿವಾಟುಗಳಿಗೆ ಮೇ ನಲ್ಲಿಯೇ ಚಾಲೂ ನೀಡಿದರೂ ಆರ್ಥಿಕತೆ ದಾಖಲೆ ಪ್ರಮಾಣದಲ್ಲಿ ಕುಸಿಯಿತು. ಇಂದಿಗೂ ಅತ್ಯಂತ ಮುಂದುವರೆದ ದೇಶವಾದ ಅಮೆರಿಕಾ ಕೊರೊನಾ ಸಾವು ಮತ್ತು ಸೋಂಕುಗಳೆರಡರಲ್ಲೂ ಪ್ರಥಮ ಸ್ಥಾನದಲ್ಲಿದೆ.
ವಾಸ್ತವದಲ್ಲಿ ಮಿಶಿಗನ್ನಿನ ಜನಸಂಖ್ಯೆ ಅಮೆರಿಕಾದ ರಾಜ್ಯಗಳಲ್ಲಿ ಹತ್ತನೇ ಸ್ಥಾನದಲ್ಲಿದ್ದರೂ ಆಗಿನ ಕೊರೊನಾ ಪೀಡಿತ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ಅಲ್ಲಿ ವೇಗವಾಗಿ ಸೋಂಕು ಹರಡುತ್ತಿದ್ದ ದಿನಗಳವು. ಗನ್ನು, ಪಿಸ್ತೂಲುಗಳನ್ನಿಡಿದ ಪ್ರತಿಭಟನೆಕಾರರು ಅಲ್ಲಿನ ಗವರ್ನರ್ ನ ಕಚೇರಿಯ ಕಟ್ಟಡವನ್ನು ಅನಧಿಕೃತವಾಗಿ ಪ್ರವೇಶಿಸಿ ಹಿಂಸಾತ್ಮಕ ಬೆದರಿಕೆಗಳನ್ನು ಹಾಕಿದಾಗ್ಯೂ ಟ್ರಂಪ್ ಅವರೊಂದಿಗೆ ’ ಡೀಲ್ ’ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದು ಸ್ವಾರ್ಥದ ಪರಮಾವಧಿಯಾಗಿತ್ತು.
ಕೊರೊನಾ, ಆರ್ಥಿಕತೆ ಮತ್ತು ಚುನಾವಣೆಯ ಮೂರು ಕಲ್ಲಿನ ಒಲೆಯಲ್ಲಿ ಟ್ರಂಪ್ ನ ಕೊರೊನಾ ಸಂಭಾಳಿಸುವಿಕೆ ದೇಶದ ಜನತೆಯಲ್ಲಿ ಆಳ ಅಸಮಾಧಾನಗಳ ಅಡುಗೆಯನ್ನು ಬೇಯಿಸಿತು. ಮೇ 25 ರಂದು ಜಾರ್ಜ್ ಫ್ಲಾಯ್ಡ್ ನ ಹತ್ಯೆಯ ನಂತರ ಜನಾಂಗೀಯ ದ್ವೇಷದ ಬಗ್ಗೆ ಕೋಪದ ಉರಿಯ ನಾಲಗೆಗಳು ಹುಟ್ಟಿಕೊಂಡ ಮೇಲಂತೂ ಅಮೆರಿಕಾದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬೇಗುದಿಯಲ್ಲಿ ಅಮೆರಿಕಾ ಕುದಿಯುತ್ತಲೇ ಇದೆ. ಜನರ ಸಹನೆ ಮೀರುತ್ತಲೇ ಸಾಗಿದೆ. ರಾಜಕೀಯ ಪಕ್ಷಗಳು ಒಬ್ಬರನ್ನೊಬ್ಬರು ನಿಂದಿಸುವುದು ಮುಂದುವರೆದಿವೆ.ಆದರೆ ಟ್ರಂಪ್ ಬೆಂಬಲಿಗರು ಇದೀಗ ಮಾಸ್ಕ್ ವಿರೋಧಿ ಪ್ರತಿಭಟನೆಗಳನ್ನು ಕೈ ಬಿಟ್ಟು ಜನಾಂಗೀಯ ತಾರತಮ್ಯವನ್ನು ವಿರೋಧಿಸುವ ಪ್ರತಿಭಟನೆಕಾರರತ್ತ ತಮ್ಮ ಗಮನವನ್ನು ಹರಿಸಿದ್ದಾರೆ.
ಈ ಮೂರೂ ಮುಂದುವರೆದ ದೇಶಗಳ ರಾಜಕೀಯ ಸಂಸ್ಕೃತಿಗಳು ಅತ್ಯಂತ ಭಿನ್ನವಾದವು.ಆದರೆ ಎಲ್ಲ ದೇಶಗಳ ಗುರಿ ಸಾವಿನ ಸಂಖ್ಯೆಯನ್ನು ಮಿತಗೊಳಿಸುವುದು, ಸೋಂಕನ್ನು ಹತ್ತಿಕ್ಕುವುದು ಮತ್ತು ಆರ್ಥಿಕತೆಯನ್ನು ರಕ್ಷಿಸುವುದೇ ಆಗಿದೆ.ಆದರೆ ಲಾಕ್ ಡೌನ್ ಮತ್ತು ಮಾಸ್ಕ್ ವಿರೋಧಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವವರ ಮಾನಸಿಕ ಸ್ಥಿತಿಯೇನು?
ಲಾಕ್ ಡೌನ್ ವಿರೋಧಿಗಳ ನಿಲುವು
ಮೊದಲಿಗೆ, ಲಾಕ್ ಡೌನನ್ನು ವಿರೋಧಿಸಿ ಪ್ರತಿಭಟನೆ ಮಾಡುವವರ ಸಂಖ್ಯೆ ಸಣ್ಣದು ಎಂಬುದನ್ನು ಗಮನಿಸಿ. ಹಲವು ನೂರರಿಂದ ಹಿಡಿದು ಹಲವು ಸಾವಿರಗಳಲ್ಲಿ ಮಾತ್ರ ಇರುವ ಇವರು ಹಲವು ಮಾನಸಿಕ ಹಿನ್ನೆಲೆಗಳನ್ನು ಹೊಂದಿದವರು. ರಾಜಕೀಯ ನಿಲುವುಗಳನ್ನು ಸಮರ್ಥಿಸುವುದೊಂದೇ ಅಲ್ಲದೆ “ ಕೊರೊನಾ ಎನ್ನುವ ಈ ಸೋಂಕು ಅಂಥ ದೊಡ್ಡ ವಿಚಾರವೇನಲ್ಲ, ಇದೆಲ್ಲ ಮಾಧ್ಯಮಗಳ ಹುನ್ನಾರ ಮಾತ್ರ “ ಎಂದು ನಂಬುವವರ ದೊಡ್ಡ ಗುಂಪೇ ಇವರಲ್ಲಿದೆ. ಇವರ ಪ್ರಕಾರ ಕೊರಾನಾ ಇರುವಿಕೆ ಮತ್ತು ಅವುಗಳ ಸೋಂಕಿನ ಅಪಾಯ ಎರಡೂ ಅಷ್ಟೇನು ದೊಡ್ಡವಲ್ಲ!
ಅತಿ ಕಡಿಮೆ ಕಾಲದಲ್ಲಿ ಎಲ್ಲ ಇತಿ-ಮಿತಿಗಳ ನಡುವೆಯೂ ಹೇಗೋ ಹರಡಿ ಅತ್ಯಂತ ವೇಗವಾಗಿ 190 ದೇಶಗಳಲ್ಲಿ ಕಾಣಿಸಿಕೊಂಡು ಹಲವು ಕೋಟ್ಯಂತರ ಜನರನ್ನು ಆಸ್ಪತ್ರೆಗೆ ಎಡತಾಕಿಸಿದ,ಸುಮಾರು ಒಂದು ಕೋಟಿ ಜನರನ್ನು ಕೊಂದ ಕೊರೊನಾ ಎಂಬ ಹೊಸ ಮಹಾಮಾರಿ ಇವರ ಲೆಕ್ಕದಲ್ಲಿ ಮತ್ತೊಂದು ನೆಗಡಿ-ಕೆಮ್ಮು-ಜ್ವರ ಮಾತ್ರ.
ಕೊರೊನ ಅಂಕಿ ಅಂಶಗಳಿಗೆ ಪ್ರತಿರೋಧ ತೋರುತ್ತ ಲಾಕ್ ಡೌನ್ ಇಲ್ಲದ ಸಮಯದಲ್ಲಿ ಕೇವಲ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆಯನ್ನು ಇವರು ನೀಡುತ್ತಾರೆ. ಹೆಚ್ಚು ವಯಸ್ಸಾದ ಮತ್ತು ಇತರೆ ಖಾಯಿಲೆಗಳಿರುವವರನ್ನೇ ಕೊರೊನ ಹೆಚ್ಚಾಗಿ ಕೊಲ್ಲುವ ಕಾರಣ “ ಅವರು ಹೇಗೂ ಸಾಯುತ್ತಿದ್ದರು… ಬೇಗ ಹೋದರು “ ಎನ್ನುವುದು ಇವರ ಧೋರಣೆ.ಲಾಕ್ ಡೌನ್ ನ ಕಾರಣ ಸಂಭವಿಸುತ್ತಿರುವ ಸದ್ಯದ ಕಷ್ಟ-ನಷ್ಟಗಳು ಮತ್ತು ದೀರ್ಘ ಕಾಲದಲ್ಲಿ ಕಂಡು ಬರುವ ಆರ್ಥಿಕ ದುರಂತಗಳಿಂದ ಸಂಭವಿಸುವ ಅವಘಡಗಳು ಇವರ ಮುಖ್ಯ ಕಾಳಜಿ. ಕೊರೊನ ಸಭಂದಿತ ಎಲ್ಲ ವಿಚಾರಗಳನ್ನು ಉತ್ಪ್ರೇಕ್ಷೆಗೊಳಿಸುತ್ತಿರುವ ಮಾಧ್ಯಮಗಳ ಮೇಲೆ ಇವರ ಕೋಪ. ಈ ಕಾರಣ ಮಾಸ್ಕ್ ಧರಿಸುವುದಕ್ಕೂ ಇವರು ತಯಾರಿರುವುದಿಲ್ಲ.
ಮಾಸ್ಕ್, ಲಾಕ್ ಡೌನ್ ವಿರೋಧಿಗಳ ಮಾನಸಿಕ ಧೋರಣೆಗಳು
ಲಾಕ್ ಡೌನ್ ನ ವಿರೋಧಗಳು ಅಥವಾ ನಿರ್ಲ್ಯಕ್ಷಗಳು ಮೂಲಭೂತ ಅವಶ್ಯಕತೆಗಳ ಕಾರಣ ಹುಟ್ಟಿಕೊಂಡಲ್ಲಿ ಅದು ಕೇವಲ ನಂಬುಗೆ ಅಥವಾ ವಯಕ್ತಿಕ ನಿಲುವುಗಳ ಮಿತಿಯನ್ನು ಮೀರಿ ಬದುಕುಳಿಯುವ ಅವಶ್ಯಕತೆಯನ್ನು ಮಾತ್ರ ಅವಲಂಭಿಸುತ್ತದೆ.
ಉದಾಹರಣೆಗೆ, ಲಾಕ್ ಡೌನ್ ನ ವಿರುದ್ಧದ ಪ್ರತಿಭಟನೆಗಳು ಕೊರೊನ ಸೋಂಕಿನಲ್ಲಿಭಾನುವಾರದವರೆಗೆ ಎರಡನೇ ಸ್ಥಾನದಲ್ಲಿರುವ ಬ್ರೆಝಿಲ್ ನಲ್ಲಿ ನಡೆದಾಗ ಅದಕ್ಕೆ ಜನರ ಹಸಿವಿನ ಝಳವೇ ಮುಖ್ಯ ಕಾರಣವಾಗಿತ್ತು.ಅಲ್ಲಿ ಜನರಿಗೆ “ಆಯ್ಕೆ’ ಗೆ ಅವಕಾಶವಿರಲಿಲ್ಲ. ಹಸಿವು , ಬಡತನಗಳೇ ಅವರನ್ನು ಪ್ರತಿಭಟನೆಯಲ್ಲಿ ತೊಡಗುವಂತೆ ಮಾಡಿತ್ತು.
ಕಳೆದ ಭಾನುವಾರದಿಂದ ಎರಡನೇಸ್ಥಾನಕ್ಕೇರಿರುವ ಭಾರತ ಮೊದಲಿಗೆ ಅಪಾರ ಸಹನೆಯನ್ನು ತೋರಿತು. ತನ್ನ ಮಿತಿಯಲ್ಲಿ ದಕ್ಷವಾದ ಲಾಕ್ ಡೌನ್ ನ್ನು ಯಶಸ್ವಿಯಾಗಿ ನಡೆಸಿ ಸಾವು ಮತ್ತು ಸೋಂಕು ಎರಡನ್ನೂ ನಿಯಂತ್ರಣಕ್ಕೆ ತೆಗೆದುಕೊಂಡು ಜಗತ್ತಿನ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚುಗೆಗೆ ಪಾತ್ರವಾಯಿತು. ಅನಿವಾರ್ಯ ಸ್ಥಿತಿಯಲ್ಲಿ ಅನ್ ಲಾಕ್ ಕ್ರಿಯೆಯನ್ನು ಮಾಡ ತೊಡಗಿದ ನಂತರ ಸೋಂಕೆನ್ನುವುದು ಈಗ ಕಾಳ್ಗಿಚ್ಚಿನಂತೆ ಹರಡುತ್ತಿದೆ.ಆರ್ಥಿಕತೆ ಪಾತಾಳವನ್ನು ಮುಟ್ಟಿದೆ. ಇಂತಹ ಭಾರತದಲ್ಲಿ ಕೂಡ ಇಡೀ ಕೊರೊನಾ ವ್ಯವಹಾರದ ಬಗ್ಗೆ ಆಳ ಅಸಮಾಧಾನಗಳನ್ನು ಹೊಂದಿದ ಜನರಿದ್ದಾರೆ.ಇದೆಲ್ಲ ದೊಡ್ಡ ಬೂಟಾಟಿಕೆ ಎಂದು ಇವರು ದೂರುತ್ತಾರೆ
ಆದರೆ ಮೇಲಿನಂತೆ ಅಪನಂಬಿಕೆಗಳಲ್ಲಿ ಬದುಕುತ್ತಿರುವವರ ವಾದಗಳ ವಿಚಾರವೇ ಬೇರೆಯದ್ದಾಗಿದೆ. ಪ್ರತಿ ವಾದಕ್ಕೆ ಹಲವು ಮುಖಗಳಿರುವಂತೆ, ಇವರ ವಾದಗಳಲ್ಲಿಯೂ ಕೆಲವು ಸತ್ಯಾಂಶಗಳಿದ್ದರೆ ಆ ವಿಚಾರವನ್ನು ಒಪ್ಪಬೇಕಾಗುತ್ತದೆ. ಗೌರವಿಸಲೂ ಬೇಕಾಗುತ್ತದೆ.
ಆದರೆ ಮುಖ್ಯವಾಗಿ ಇವರು ತಮ್ಮ ನಾಯಕರು ಏನನ್ನೂ ಮಾಡಿದರೂ ಖಂಡಿಸಲು ತಯಾರಿರುವವರು. ಇದೇ ಕೋವಿಡ್ ಪರಿಸ್ಥಿತಿಯಲ್ಲಿ ತಮ್ಮ ಸರ್ಕಾರಗಳು ಲಾಕ್ ಡೌನಿನ ತದ್ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡು ಪರಿಸ್ಥಿತಿ ಬಿಗಡಾಯಿಸಿದ್ದರೂ ಮೊದಲು ಪ್ರತಿಭಟನೆಗಿಳಿಯುತ್ತಿದ್ದ ಜನರಿವರು. ಸಾಮಾನ್ಯವಾಗಿ ಇವರಿಗಾಗಲೀ ಅಥವಾ ಇವರ ಹತ್ತಿರದವರಿಗಾಗಲೀ ಕೊರೊನಾ ಸೋಂಕು ಬಂದಿರುವುದಿಲ್ಲ ಅಥವಾ ಬಂದಿದ್ದರೂ ಸಾವುಗಳು ಸಂಭವಿಸಿಲ್ಲದಿರಬಹುದು. ಅಕಸ್ಮಾತ್ ಸತ್ತಿದ್ದರೂ ಅವರು ಇಂತಹವರ ಪ್ರೀತಿ ಪಾತ್ರರೇ ಎನ್ನುವುದು ಮತ್ತು ಇವರ ಭಾವನಾತ್ಮಕ ಸಂಬಂಧಗಳು ಇತರ ಮನುಷ್ಯರೊಡನೆ ಯಾವ ಮಟ್ಟದಲ್ಲಿ ಬೆಸೆದುಕೊಂಡಿದೆ ಎಂಬುದನ್ನು ಕೂಡ ಅಳೆಯಬೇಕಾಗುತ್ತದೆ.
ಹಾಗಾಗಿ ತಮಗೆ ಆಗಿಲ್ಲದ ಆತಂಕ, ಭಯ, ಸಾವು, ನೋವುಗಳು ಇತರರಿಗೆ ಆಗಿಲ್ಲ ಎಂದು ಇವರು ಬಲವಾಗಿ ಮತ್ತು ನಿಜವಾಗಿಯೇ ನಂಬಿರಬಹುದು. ಅದರಲ್ಲೇ ಅವರ ಪಲಾಯನವಾದೀ ವ್ಯಕ್ತಿತ್ವದ ಪರಿಚಯವೂ ಇರಬಹುದು.
ಇವರು ನೀಡುವ ಅಂಕಿ-ಅಂಶಗಳು ನಿಜವಿದ್ದರೂ ದುರಂತವೊಂದನ್ನು ಪೂರ್ಣ ಪ್ರಮಾಣದಲ್ಲಿ ಆಗಲು ಬಿಡುವುದಕ್ಕಿಂತ ಅದನ್ನು ತಡೆಯುವುದಕ್ಕಾಗಿ ಕೆಲವೊಮ್ಮೆ ಹೆಚ್ಚು ಕಷ್ಟವಾದರೂ ಕೆಲಸಗಳನ್ನು ಮಾಡಬೇಕಾಗುತ್ತದೆ ಮತ್ತು ಅದಕ್ಕಾಗಿ ಹೆಚ್ಚು ಖರ್ಚುಮಾಡಬೇಕಾಗಬಹುದೆನ್ನುವುದು, ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವುದುಇವರ ನಂಬಿಕೆಯ ಪರಿಧಿಯ ಹೊರಗಿರಬಹುದು.
ಸಮಾಜದ ವಿವಿಧ ಸ್ಥರಗಳಲ್ಲಿ ಮನುಷ್ಯರು ಒಬ್ಬರನ್ನೊಬ್ಬರು ರಕ್ಷಿಸಲು ಕೆಲವು ಸಣ್ಣ ತ್ಯಾಗಗಳನ್ನು ಮಾಡಬೇಕಾದ ಕಾಲ ಇದೆನ್ನುವುದನ್ನು ಇವರು ನಂಬಬೇಕಾಗುತ್ತದೆ. ಉದಾಹರಣೆಗೆ ಮಾಸ್ಕ್ ಧರಿಸುವ ವಿಚಾರದಲ್ಲಿ ಇವರಿಗೆ ವೈಯಕ್ತಿಕ ನಂಬಿಕೆಗಳಿಲ್ಲದಿದ್ದರೂ ಇತರರ ಒಳಿತಿಗಾಗಿ ಇವರು ಕಾನೂನು ಬದ್ಧವಾಗಿ ನಡೆದುಕೊಳ್ಳಬೇಕಿದೆ.
ಸಾಮಾನ್ಯವಾಗಿ ಆಗುವ ಸಾವು ನೋವುಗಳ ಜೊತೆ ಹೊಸದೊಂದು ಪಿಡುಗು ಸೇರಿದರೆ ಅದರಿಂದ ಆಗಬಹುದಾದ ಜನನಾಶ ಅತ್ಯಂತ ಭೀಕರ ಪರಿಸ್ಥಿತಿಗಳನ್ನು ಕೋಟ್ಯಂತರ ಸಂಸಾರಗಳಲ್ಲಿ ಸೃಷ್ಟಿಸಬಹುದು. ಇನ್ನು ಯಾವ ಎಚ್ಚರಿಕೆಗಳನ್ನೂ ತೆಗೆದುಕೊಳ್ಳದಿದ್ದರೆ ಬದುಕಿ ಬಾಳಬೇಕೆಂಬ ಇಚ್ಛೆಯಿರುವ ಬಹುಸಂಖ್ಯಾತರ ಜೀವಗಳು- ಜೀವನಗಳು ಭಯಾನಕವಾಗಿ ನಲುಗಬಲ್ಲವು ಎಂಬ ವಾಸ್ತವವನ್ನು ಇವರು ಗೌರವಿಸುವುದನ್ನು ಕಲಿಯಬೇಕಿದೆ.
ಲಾಕ್ ಡೌನನ್ನು ಕೇವಲ ವೈಯಕ್ತಿಕ ತಾತ್ವಿಕ ಕಾರಣಗಳಿಗಾಗಿ ವಿರೋಧಿಸುವವರು ಇತರೆ ತರ್ಕಬದ್ದ ಕಾರಣಗಳಿಂದ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡು ಬಿಟ್ಟಿರುತ್ತಾರೆ.ಇದರಿಂದ ಸ್ವತಃ ನೋಯುತ್ತಾರೆ. ಜೊತೆಗೆ ಇನ್ನಷ್ಟು ಸೋಂಕನ್ನು ಹರಡಲು ಕಾರಣರಾಗುತ್ತಾರೆ.
ನೂರಾರು ದೇಶಗಳು ಒಂದೇ ನಿಲವನ್ನು ತೆಗೆದುಕೊಂಡರೂ ತಮ್ಮದೇ ಸ್ವಾರ್ಥಕ್ಕಾಗಿ, ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ ಹಲವು ದೇಶಗಳು, ಗುಂಪುಗಳು ಮತ್ತು ಜನರು ಬೇರೆಯ ನಿಲುವನ್ನು ಕೊರೊನಾ ವಿಚಾರದಲ್ಲಿ ತೋರಿದ್ದಾರೆ. ಇನ್ನು ಕೆಲವರು ನಿಜವಾಗಿಯೂ ಅಂದರೆ “ಲೋಕೋ ಭಿನ್ನ ರುಚಿಃ “ ಎನ್ನುವಂತೆ ತಮ್ಮದೇ ಭಿನ್ನ ಅಭಿಪ್ರಾಯಗಳನ್ನು ಕೊರೊನಾದ ಇರುವಿಕೆ, ಲಾಕ್ ಡೌನ್ ಮತ್ತು ಮಾಸ್ಕ್ ವಿಚಾರಗಳ ಬಗ್ಗೆ ಹೊಂದಿದ್ದಾರೆ.