23.5 C
Karnataka
Monday, May 20, 2024

    ಕೊರೊನಾ ಎಂಬ ಹೊಸ ಮಹಾಮಾರಿ ಇವರ ಲೆಕ್ಕದಲ್ಲಿ ಮತ್ತೊಂದು ನೆಗಡಿ-ಕೆಮ್ಮು-ಜ್ವರ ಮಾತ್ರ!

    Must read

    ‘ಕೋವಿಡ್ ಇಲ್ಲವೇ ಇಲ್ಲ, ಲಾಕ್ ಡೌನ್ ಎಲ್ಲ ದೊಡ್ಡ ಡ್ರಾಮ… ‘.ಎಂದು ನಂಬುವವರು ಈ ಪ್ರಪಂಚದಲ್ಲಿ ಇದ್ದಾರೆ. ಭೂಗೋಲದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಹರಡಿದ್ದಾರೆ. ಕೋವಿಡ್ -19 ರ ಸೋಂಕಿನಿಂದ ಪ್ರಪಂಚದಲ್ಲಿ ಇದುವರೆಗೆ 9 ಲಕ್ಷ 35 ಸಾವಿರ ಜನರು ಸತ್ತಿರುವುದನ್ನು ಓದಿದ ನಂತರ, 29.6 ಮಿಲಿಯನ್ ಸೋಂಕಿತರು ಇದ್ದಾರೆ ಎಂದು ತಿಳಿದ ನಂತರವೂ ಈ ಜನರ ಗುಂಪು  ‘ಕೋವಿಡ್ ಎನ್ನುವುದು ಇಲ್ಲವೇ ಇಲ್ಲ , ಇವೆಲ್ಲ ಮಾಧ್ಯಮಗಳ ಹುನ್ನಾರ ‘- ಎನ್ನುತ್ತಿದ್ದಾರೆ.

    ಅಮೆರಿಕಾದಿಂದ ಹಿಡಿದು ಆಸ್ಟ್ರೇಲಿಯಾವರೆಗೆ ಹರಡಿರುವ ಈ ಜನರು ತಮ್ಮ ಈ ನಿರ್ಣಯಕ್ಕೆ ಹೇಗೆ ತಲುಪುತ್ತಾರೆ. ಅವರ ಮಾನಸಿಕ ಪ್ರಪಂಚ ಏನನ್ನು ಒಪ್ಪಬಲ್ಲದು,ಏನನ್ನು ಒಪ್ಪಲು ಹಿಂತೆಗೆಯತ್ತಿದೆ? ಮತ್ತು ಯಾಕೆ?-ಎನ್ನುವುದು ಅತ್ಯಂತ ಸ್ವಾರಸ್ಯಕರ ವಿಚಾರ. ಬೆಟ್ಟದಷ್ಟು ಸಾಕ್ಷಿ ಆಧಾರಗಳಿದ್ದರೂ ಮನುಷ್ಯರಲ್ಲಿ ಹುಟ್ಟುವ ಈ ನಿರಾಕರಣೆ ಅಧ್ಯಯನ ಯೋಗ್ಯ ವಿಷಯವೂ ಹೌದು.

    ಸೆಪ್ಟೆಂಬರ್ ಐದನೇ ತಾರೀಕು  ಆಸ್ಟ್ರೇಲಿಯಾದ ಮೆಲ್ಬೊರ್ನ್ ನಗರದಲ್ಲಿ ದೊಡ್ಡ ಪ್ರತಿಭಟನೆಗಳಾದವು. ವಿಕ್ಟೋರಿಯಾ ಸ್ಟೇಟ್  ಆಸ್ಟ್ರೇಲಿಯಾದಲ್ಲಿ ಕೊರೋನಾ ಸೋಂಕಿನಿಂದ ಗಂಭೀರವಾಗಿ ಬಳಲಿರುವ ಜಾಗ. ಆದರೆ ಸುಮಾರು ಮುನ್ನೂರು ಮಂದಿ ಇಲ್ಲಿ ಒತ್ತಟ್ಟಿಗೆ ಸೇರಿ ಕೊರೊನಾ ಲಾಕ್ ಡೌನಿನ ವಿರುದ್ಧ ಪ್ರತಿಭಟನೆ ನಡೆಸಿದರು. ಅದು ಹಿಂಸಾತ್ಮಕ ರೂಪ ತಾಳಿತು. ಪೋಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾದವು. ಹಲವರನ್ನು ಪೊಲೀಸರು ಬಂಧಿಸಿದರು. ಅದೇ ದಿನ ಆ ದೇಶದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 748 ಜನರು ಸತ್ತಿದ್ದರು. ಮೆಲ್ಬೋರ್ನಿನ ಆರು ವಾರಗಳ ಲಾಕ್ ಡೌನ್ ಕೊನೆಯಾಗುತ್ತಿದ್ದ ಕಾಲವದು.

    ಆದರೆ ಇದುವರೆಗಿನ ಆಸ್ಟ್ರೇಲಿಯಾದ ಒಟ್ಟಾರೆ  ಕೊರೊನಾ ಸೋಂಕಿಗೆ ವಿಕ್ಟೋರಿಯಾ ರಾಜ್ಯದ ಕೊಡುಗೆ ಶೇಕಡಾ 75 ಇತ್ತು. ಇಡೀ ದೇಶದಲ್ಲಿ ಸತ್ತವರ ಸಂಖ್ಯೆಯಲ್ಲಿ ವಿಕ್ಟೋರಿಯಾ ರಾಜ್ಯದವರೇ ಶೇಕಡಾ 90 ಇದ್ದರು. ಹೀಗೆ ಪ್ರತಿಭಟನೆ ನಡೆಯುತ್ತಿರುವ ದಿನವೇ ಅಲ್ಲಿ 11  ಜನರು ಸತ್ತಿದ್ದರು. ಶೇಕಡಾ 70 ಗಿಂತಲೂ ಹೆಚ್ಚ ಜನರಲ್ಲಿ ಹೊಸ ಸೋಂಕು ಕಾಣಿಸಿಕೊಂಡಿತ್ತು. ಹೀಗಿರುವಾಗ ಕೊರೊನಾದ ಎರಡನೇ ಅಲೆ ಹೆಚ್ಚಾಗುವ ಸಾಧ್ಯತೆಗಳನ್ನು  ಹತ್ತಿಕ್ಕಲು ಸರ್ಕಾರ  6 ವಾರಗಳ ಲಾಕ್ ಡೌನ್  ಕ್ರಮವನ್ನು ಅನುಸರಿಸಿದ್ದರಲ್ಲಿ ಯಾವ ಅಶ್ಚರ್ಯವೂ ಇರಲಿಲ್ಲ.ಆದರೆ ಈ ಮುನ್ನೂರು ಜನರು ಅದನ್ನು  ವಿರೋಧಿಸಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಪೊಲೀಸರೊಂದಿಗೆ ಘರ್ಷಣೆಗಿಳಿದರು.

    ಅದೇ ದಿನ  ಸ್ಕಾಟ್ಲ್ಯಾಂಡಿನ ರಾಜಧಾನಿ ಎಡಿನ್ ಬರೋ ದಲ್ಲಿ ಕೂಡ ಪ್ರತಿಭಟನೆಗಳು ನಡೆದವು. ಕೊರೊನಾ ವೈರಸ್ ಇಲ್ಲವೆನ್ನುವವರು, ಲಸಿಕೆಗಳ ಹಿಂದೆ ಒಳಸಂಚಿದೆಯೆಂಬ ಸಿದ್ದಾಂತದವರು ಮಾಸ್ಕ್ ಧಾರಣೆ ವಿರೋಧಿಗಳು ಹೀಗೆ ಒತ್ತಟ್ಟಿಗೆ ಸಾವಿರಕ್ಕೂ ಅಧಿಕ ಜನರು ಸೇರಿ  ಘೋಷಣೆಗಳನ್ನು ಕೂಗಿದರು. ಮಾಸ್ಕ್ ಮತ್ತು ವ್ಯಾಕ್ಸಿನ್ ಎರಡನ್ನೂ ಕಡ್ಡಾಯಗೊಳಿಸುವುದನ್ನು ಇವರು ಬಲವಾಗಿ ಖಂಡಿಸಿದರು.

    ಆದರೆ ಅದೇ ವಾರ ಸ್ಕಾಟ್ಲ್ಯಾಂಡಿನಲ್ಲಿ ಒಟ್ಟು 994 ಹೊಸ ದೃಡಪಟ್ಟ ಸೋಂಕಿತರ ಪತ್ತೆಯಾಗಿತ್ತು, ಅದರ ಹಿಂದಿನ ವಾರಕ್ಕೆ ಹೋಲಿಸಿದರೆ 507  ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದರು. ಎರಡನೇ ಅಲೆ ಬಲವಾಗುತ್ತಿವೆ ಎಂಬಂತ ಕರಾಳ ವಾತಾವರಣದಲ್ಲೂ ಅವರ ಪ್ರತಿಭಟನೆ ಏಕೆ ನಡೆಯಿತು?

    ಸ್ಕಾಟ್ಲ್ಯಾಂಡಿನ ನ್ಯಾಷನಲ್ ಕ್ಲಿನಿಕಲ್  ಡೈರೆಕ್ಟರ್  ಪ್ರೊಫೆಸರ್ ಜೇಸನ್ ಲೀಕ್ ಇವರನ್ನು ಅತ್ಯಂತ  ’ಬೇಜವಬ್ದಾರೀ ನಡತೆಯ ಜನರೆಂದು’ ಬಣ್ಣಿಸಿದರು.ಜಗತ್ತಿನ 194 ದೇಶಗಳು ನೂರು ವರ್ಷಗಳಲ್ಲಿ ಥಟ್ಟನೆ ಒತ್ತಟ್ಟಿಗೆ ಬಂದು ಹೀಗೊಂದು ದಂತ ಕಥೆಯನ್ನು ಸೃಷ್ಟಿಸಿದ್ದೇವೆಯೇ? ಕಳೆದ ಆರು ತಿಂಗಳಲ್ಲಿ ನಡೆದಿರುವುದು ನಡೆದಿರಬಾರದಿತ್ತು ಎಂದು ಬಲವಾಗಿ ಆಶಿಸುವವರಲ್ಲಿ ನಾನೂ ಒಬ್ಬ ಆದರೆ ಇವರ ವರ್ತನೆ ಅತ್ಯಂತ  ಬೇಜವಾಬ್ದಾರಿಯಿಂದ ಕೂಡಿದೆ” -ಎಂದು ಬೇಸರಪಟ್ಟರು.

    ಇತ್ತ ಇಂಗ್ಲೆಂಡಿನ ಲೀಡ್ಸ್ ಎನ್ನುವ ನಗರದಲ್ಲಿ ಕೊರೊನಾ ವೈರಸ್ಸಿನ ಸೋಂಕಿತರ ಸಂಖ್ಯೆ ಮೆಲ್ಲಗೆ ಏರುತ್ತಿದ್ದು ಸೆಪ್ಟೆಂಬರ್ ನಾಲ್ಕನೇ ತಾರೀಖಿನಂದು ಈ ನಗರ ವಾಚ್ ಲಿಸ್ಟ್ ನ ಐದನೇ ಸ್ಥಾನಕ್ಕೆ ತಲುಪಿತ್ತು. ಐದನೇ ತಾರೀಖು ಆ ನಗರ ಮತ್ತೆ ಲಾಕ್ ಡೌನ್ ಗೆ ಪ್ರವೇಶಿಸುವುದು ಖಾತರಿಯಾಯಿತು. ಆರನೇ ತಾರೀಕು ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಆಂಟಿ ಮಾಸ್ಕ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಯೋಜನೆ ಪ್ರಕಟವಾಯಿತು.ಆದರೆ ಅದೇ ದಿನ ಇಂಗ್ಲೆಂಡಿನಲ್ಲಿ 2988 ಹೊಸ ಸೋಂಕುಗಳು ಪತ್ತೆಯಾದವು.

    ಅತಿ ಬೇಗನೆ ಅಂದರೆ ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಾಗಲೇ ಅಮೆರಿಕಾದ ಹಲವಾರು ನಗರಗಳಲ್ಲಿ ಲಾಕ್ ಡೌನ್ ತಮ್ಮ ಆರ್ಥಿಕತೆಯನ್ನು ನಿಧಾನಗೊಳಿಸಬಲ್ಲದು ಎನ್ನುವ ಕಾರಣಕ್ಕೆ  ಪ್ರತಿಭಟನೆಗಳು ಶುರುವಾಗಿದ್ದವು.ಇದನ್ನು ಸ್ವತಃ ಅಮೆರಿಕಾದ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ಮತ್ತು ಆಡಳಿತ ಪಕ್ಷ ಕೂಡ  ಪರೋಕ್ಷವಾಗಿ ಅನುಮೋದಿಸಿದರು. ಅವರದೇ ಪಕ್ಷದ ಹಲವು ನಾಯಕರು ಮತ್ತು ಸ್ಥಳೀಯ ಮೇಯರುಗಳು, ಗವರ್ನರುಗಳು ಈ ಬಗೆಯ ಪ್ರತಿಭಟನೆಗಳು  ಕೊರೋನಾ ವೈರಸ್ಸನ್ನು ನಿಯಂತ್ರಿಸುವಲ್ಲಿ ದೊಡ್ಡ ತೊಡಕಾಗಬಲ್ಲರೆಂದರು. ಏಪ್ರಿಲ್ 15 ರಂದು ಮಿಶಿಗನ್ ನಲ್ಲಿ ಶುರುವಾದ ಪ್ರತಿಭಟನೆ ಮೇ ಒಂದನೇ ತಾರೀಕಿನ ವೇಳೆಗೆ ಸುಮಾರು ಅರ್ಧದಷ್ಟು ಅಮೆರಿಕನ್ ರಾಜ್ಯಗಳಿಗೆ ಹರಡಿತ್ತು. ಮಿಶಿಗನ್ ಪ್ರತಿಭಟನೆಯಿಂದಲೇ ಇತರರಿಗೆ ಸ್ಪೂರ್ತಿ ಸಿಕ್ಕಿತ್ತು.

    ಅಮೆರಿಕಾದಲ್ಲಿ ಮೊದಲಿಗೆ ಶುರುವಾದ ಈ ಪ್ರತಿಭಟನೆಗಳು ಅಂತಾರಾಷ್ಟ್ರೀಯ ಸುದ್ದಿಗಳಾದವು. ಇವರ ರಾಲಿಯನ್ನು ವಿರೋಧಿಸಿದ ಕೆಲವು ವೈದ್ಯರು ಇವರ ವಾಹನಗಳಿಗೆದುರಾಗಿ ನಿಂತು “ ನೀವು ಮುಂದುವರೆಯುವಿರಾದರೆ ನಮ್ಮನ್ನು ಈಗಲೇ  ಸಾಯಿಸಿಬಿಡಿ ಏಕೆಂದರೆ ಈಗಲೇ ಆರೋಗ್ಯ ಇಲಾಖೆ ತತ್ತರಿಸಿಹೋಗಿದೆ, ನಾವುಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೋಗಿ ಸಾವನ್ನಪ್ಪುತ್ತಿದ್ದೇವೆ. ಇನ್ನು ಲಾಕ್ ಡೌನ್ ನ್ನು ತೆರೆದುಬಿಟ್ಟಲ್ಲಿ ಈ ಸೋಂಕನ್ನು ನಿಯಂತ್ರಿಸುವುದು ಸಾಧ್ಯವೇ ಇಲ್ಲ “ ಎಂಬ ಸಂದೇಶಗಳನ್ನು ಕಳಿಸಿದರು.

    ಮಿಶಿಗನ್ ರಾಲಿಯನ್ನು ತಾವೇ ಸಂಘಟಿಸಿದ್ದೇವೆಂದು ಆಳುವ ಪಕ್ಷ ನೇರವಾಗಿ ಒಪ್ಪಲಿಲ್ಲ. ಆದರೆ ಇದನ್ನು ಸಂಘಟಿಸಿದವರಲ್ಲಿ ಮ್ಯಾಟ್  ಮ್ಯಾಡಕ್ ಎಂಬ ರಿಪಬ್ಲಿಕನ್ ಪಕ್ಷದ ಸದಸ್ಯನ ಹೆಂಡತಿ ಮೆಶ್ವಾನ್ ಮ್ಯಾಡಕ್ ಕೂಡ  ಇದ್ದಳು.ಆಕೆ  ’ ವುಮೆನ್ ಫಾರ್ ಟ್ರಂಪ್ ’ ಸಂಘದ  ಸಲಹಾ ಸಮಿತಿಯ ಸದಸ್ಯೆಯಾಗಿದ್ದಳು. ಈ ಸಂಘದ ಉಪಾಧ್ಯಕ್ಷೆ ಮರಿಯಾನ್ ಶೆರಿಡನ್ ಕೂಡ ಇದರಲ್ಲಿದ್ದಳು.ಇವೇ ಪ್ರತಿಭಟನೆಗಳು ವಾಷಿಂಗ್ಟನ್ ನಲ್ಲಿ ಸಂಘಟಿಸಿದ್ದು ಅಲ್ಲಿನ ಕೌಂತಿ ರಿಪಬ್ಲಿಕನ್ ಪಾರ್ಟಿಯೇ. ಈ ರಾಲಿ ಉದ್ದೇಶಿಸಿ ಮಾತನಾಡಿದವರಲ್ಲಿ ಮೂವರು ರಿಪಬ್ಲಿಕನ್ ಪಾರ್ಟಿ ಲೆಜಿಸ್ಲೇಟರುಗಳು ಇದ್ದರು.

    ಪ್ರತಿಭಟಿಸುತ್ತಿದ್ದವರಲ್ಲಿ ಕೆಲವರಿಗೆ ಕೊರೊನಾ ಬರಲಿ,ಬಿಡಲಿ ಬದುಕು ಎಂದಿನಂತೆ ನಡೆಯಬೇಕು ಎಂಬ ವಿಚಿತ್ರ ನಂಬಿಕೆಗಳಿದ್ದವು. ಇನ್ನು ಕೆಲವರು ಲಾಕ್ ಡೌನ್ ತಮ್ಮ ಸ್ವಾತಂತ್ರ್ಯದ ಉಲ್ಲಂಘನೆ ಎಂಬ ಭಾವನೆಯಿತ್ತು. ಮತ್ತೂ ಕೆಲವರಿಗೆ ಟ್ರಂಪ್ ಆಡಳಿತದಲ್ಲಿ ಆರ್ಥಿಕತೆ ಕೆಳಮುಖವಾಗುವುದು ಬೇಡವಾಗಿತ್ತು. ಅವರು ಆತನ ಆಡಳಿತವನ್ನು ಬೆಂಬಲಿಸಲು ಪ್ರತಿಭಟಿಸುತ್ತಿದ್ದರು.

    ಈ ಪ್ರತಿಭಟನೆಗಳು ಸಂಘಟಿಸಲ್ಪಟ್ಟಿದ್ದವು ಮತ್ತು ಜೊತೆ ಜೊತೆಯಲ್ಲೇ ಜನರ ನಂಬಿಕೆಗಳು ಮತ್ತು ಆರ್ಥಿಕ ಆತಂಕಗಳೂ ಜೊತೆಗೂಡಿದ್ದವು. ಅಥವಾ ಈ ಆತಂಕ ಮತ್ತು ನಂಬಿಕೆಗಳ ಪ್ರಯೋಜನ ಪಡೆಯಲಾಗಿತ್ತು. ನವೆಂಬರಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಅಮೆರಿಕಾದಲ್ಲಿ ಅತ್ಯಂತ ಬೇಗನೆ ಅನ್ ಲಾಕ್ ಅಭಿಯಾನ ಶುರುಮಾಡಲಾಯಿತು. ಸಾಮಾಜಿಕ ಅಂತರದ ಕಾರಣ ಸೋಂಕು ನಿಯಂತ್ರಣದಲ್ಲಿರುವ ಚಿತ್ರಣ ನೀಡಿ ವ್ಯಾಪಾರ ಮತ್ತು ವಹಿವಾಟುಗಳಿಗೆ ಮೇ ನಲ್ಲಿಯೇ ಚಾಲೂ ನೀಡಿದರೂ ಆರ್ಥಿಕತೆ ದಾಖಲೆ ಪ್ರಮಾಣದಲ್ಲಿ ಕುಸಿಯಿತು. ಇಂದಿಗೂ ಅತ್ಯಂತ ಮುಂದುವರೆದ ದೇಶವಾದ ಅಮೆರಿಕಾ ಕೊರೊನಾ ಸಾವು ಮತ್ತು ಸೋಂಕುಗಳೆರಡರಲ್ಲೂ ಪ್ರಥಮ ಸ್ಥಾನದಲ್ಲಿದೆ.

    ವಾಸ್ತವದಲ್ಲಿ ಮಿಶಿಗನ್ನಿನ ಜನಸಂಖ್ಯೆ ಅಮೆರಿಕಾದ ರಾಜ್ಯಗಳಲ್ಲಿ ಹತ್ತನೇ ಸ್ಥಾನದಲ್ಲಿದ್ದರೂ ಆಗಿನ ಕೊರೊನಾ ಪೀಡಿತ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ಅಲ್ಲಿ ವೇಗವಾಗಿ ಸೋಂಕು ಹರಡುತ್ತಿದ್ದ ದಿನಗಳವು. ಗನ್ನು, ಪಿಸ್ತೂಲುಗಳನ್ನಿಡಿದ ಪ್ರತಿಭಟನೆಕಾರರು ಅಲ್ಲಿನ ಗವರ್ನರ್ ನ ಕಚೇರಿಯ ಕಟ್ಟಡವನ್ನು ಅನಧಿಕೃತವಾಗಿ ಪ್ರವೇಶಿಸಿ ಹಿಂಸಾತ್ಮಕ ಬೆದರಿಕೆಗಳನ್ನು ಹಾಕಿದಾಗ್ಯೂ ಟ್ರಂಪ್ ಅವರೊಂದಿಗೆ ’ ಡೀಲ್ ’ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದು ಸ್ವಾರ್ಥದ ಪರಮಾವಧಿಯಾಗಿತ್ತು.

    ಕೊರೊನಾ, ಆರ್ಥಿಕತೆ ಮತ್ತು ಚುನಾವಣೆಯ ಮೂರು ಕಲ್ಲಿನ ಒಲೆಯಲ್ಲಿ ಟ್ರಂಪ್ ನ ಕೊರೊನಾ ಸಂಭಾಳಿಸುವಿಕೆ ದೇಶದ ಜನತೆಯಲ್ಲಿ ಆಳ ಅಸಮಾಧಾನಗಳ ಅಡುಗೆಯನ್ನು ಬೇಯಿಸಿತು. ಮೇ 25 ರಂದು ಜಾರ್ಜ್ ಫ್ಲಾಯ್ಡ್ ನ ಹತ್ಯೆಯ ನಂತರ ಜನಾಂಗೀಯ ದ್ವೇಷದ ಬಗ್ಗೆ ಕೋಪದ ಉರಿಯ ನಾಲಗೆಗಳು  ಹುಟ್ಟಿಕೊಂಡ ಮೇಲಂತೂ ಅಮೆರಿಕಾದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬೇಗುದಿಯಲ್ಲಿ ಅಮೆರಿಕಾ ಕುದಿಯುತ್ತಲೇ ಇದೆ. ಜನರ ಸಹನೆ ಮೀರುತ್ತಲೇ ಸಾಗಿದೆ. ರಾಜಕೀಯ ಪಕ್ಷಗಳು ಒಬ್ಬರನ್ನೊಬ್ಬರು ನಿಂದಿಸುವುದು ಮುಂದುವರೆದಿವೆ.ಆದರೆ ಟ್ರಂಪ್ ಬೆಂಬಲಿಗರು ಇದೀಗ ಮಾಸ್ಕ್ ವಿರೋಧಿ ಪ್ರತಿಭಟನೆಗಳನ್ನು ಕೈ ಬಿಟ್ಟು ಜನಾಂಗೀಯ ತಾರತಮ್ಯವನ್ನು ವಿರೋಧಿಸುವ ಪ್ರತಿಭಟನೆಕಾರರತ್ತ ತಮ್ಮ ಗಮನವನ್ನು ಹರಿಸಿದ್ದಾರೆ.

    ಈ ಮೂರೂ ಮುಂದುವರೆದ ದೇಶಗಳ ರಾಜಕೀಯ ಸಂಸ್ಕೃತಿಗಳು ಅತ್ಯಂತ ಭಿನ್ನವಾದವು.ಆದರೆ ಎಲ್ಲ ದೇಶಗಳ ಗುರಿ ಸಾವಿನ ಸಂಖ್ಯೆಯನ್ನು ಮಿತಗೊಳಿಸುವುದು, ಸೋಂಕನ್ನು ಹತ್ತಿಕ್ಕುವುದು ಮತ್ತು ಆರ್ಥಿಕತೆಯನ್ನು ರಕ್ಷಿಸುವುದೇ ಆಗಿದೆ.ಆದರೆ ಲಾಕ್ ಡೌನ್ ಮತ್ತು ಮಾಸ್ಕ್ ವಿರೋಧಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವವರ ಮಾನಸಿಕ ಸ್ಥಿತಿಯೇನು?

     ಲಾಕ್ ಡೌನ್ ವಿರೋಧಿಗಳ ನಿಲುವು

    ಮೊದಲಿಗೆ, ಲಾಕ್  ಡೌನನ್ನು ವಿರೋಧಿಸಿ ಪ್ರತಿಭಟನೆ ಮಾಡುವವರ ಸಂಖ್ಯೆ ಸಣ್ಣದು ಎಂಬುದನ್ನು ಗಮನಿಸಿ. ಹಲವು ನೂರರಿಂದ ಹಿಡಿದು ಹಲವು ಸಾವಿರಗಳಲ್ಲಿ ಮಾತ್ರ  ಇರುವ ಇವರು ಹಲವು ಮಾನಸಿಕ ಹಿನ್ನೆಲೆಗಳನ್ನು ಹೊಂದಿದವರು. ರಾಜಕೀಯ ನಿಲುವುಗಳನ್ನು ಸಮರ್ಥಿಸುವುದೊಂದೇ ಅಲ್ಲದೆ “ ಕೊರೊನಾ ಎನ್ನುವ ಈ ಸೋಂಕು ಅಂಥ ದೊಡ್ಡ ವಿಚಾರವೇನಲ್ಲ, ಇದೆಲ್ಲ ಮಾಧ್ಯಮಗಳ ಹುನ್ನಾರ ಮಾತ್ರ “ ಎಂದು ನಂಬುವವರ ದೊಡ್ಡ ಗುಂಪೇ ಇವರಲ್ಲಿದೆ. ಇವರ ಪ್ರಕಾರ ಕೊರಾನಾ ಇರುವಿಕೆ ಮತ್ತು ಅವುಗಳ ಸೋಂಕಿನ ಅಪಾಯ ಎರಡೂ ಅಷ್ಟೇನು ದೊಡ್ಡವಲ್ಲ!

    ಅತಿ ಕಡಿಮೆ ಕಾಲದಲ್ಲಿ ಎಲ್ಲ ಇತಿ-ಮಿತಿಗಳ ನಡುವೆಯೂ ಹೇಗೋ ಹರಡಿ ಅತ್ಯಂತ ವೇಗವಾಗಿ 190 ದೇಶಗಳಲ್ಲಿ ಕಾಣಿಸಿಕೊಂಡು ಹಲವು ಕೋಟ್ಯಂತರ ಜನರನ್ನು ಆಸ್ಪತ್ರೆಗೆ ಎಡತಾಕಿಸಿದ,ಸುಮಾರು ಒಂದು ಕೋಟಿ ಜನರನ್ನು ಕೊಂದ ಕೊರೊನಾ ಎಂಬ ಹೊಸ ಮಹಾಮಾರಿ ಇವರ ಲೆಕ್ಕದಲ್ಲಿ ಮತ್ತೊಂದು ನೆಗಡಿ-ಕೆಮ್ಮು-ಜ್ವರ ಮಾತ್ರ.

    ಕೊರೊನ ಅಂಕಿ ಅಂಶಗಳಿಗೆ ಪ್ರತಿರೋಧ ತೋರುತ್ತ ಲಾಕ್ ಡೌನ್ ಇಲ್ಲದ ಸಮಯದಲ್ಲಿ ಕೇವಲ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆಯನ್ನು ಇವರು ನೀಡುತ್ತಾರೆ. ಹೆಚ್ಚು ವಯಸ್ಸಾದ ಮತ್ತು ಇತರೆ ಖಾಯಿಲೆಗಳಿರುವವರನ್ನೇ ಕೊರೊನ ಹೆಚ್ಚಾಗಿ ಕೊಲ್ಲುವ ಕಾರಣ “ ಅವರು ಹೇಗೂ ಸಾಯುತ್ತಿದ್ದರು… ಬೇಗ ಹೋದರು “ ಎನ್ನುವುದು ಇವರ ಧೋರಣೆ.ಲಾಕ್ ಡೌನ್ ನ ಕಾರಣ ಸಂಭವಿಸುತ್ತಿರುವ ಸದ್ಯದ ಕಷ್ಟ-ನಷ್ಟಗಳು ಮತ್ತು ದೀರ್ಘ ಕಾಲದಲ್ಲಿ ಕಂಡು ಬರುವ ಆರ್ಥಿಕ ದುರಂತಗಳಿಂದ ಸಂಭವಿಸುವ ಅವಘಡಗಳು ಇವರ ಮುಖ್ಯ ಕಾಳಜಿ. ಕೊರೊನ ಸಭಂದಿತ ಎಲ್ಲ ವಿಚಾರಗಳನ್ನು ಉತ್ಪ್ರೇಕ್ಷೆಗೊಳಿಸುತ್ತಿರುವ ಮಾಧ್ಯಮಗಳ ಮೇಲೆ ಇವರ ಕೋಪ. ಈ ಕಾರಣ ಮಾಸ್ಕ್ ಧರಿಸುವುದಕ್ಕೂ ಇವರು ತಯಾರಿರುವುದಿಲ್ಲ.

    ಮಾಸ್ಕ್, ಲಾಕ್ ಡೌನ್ ವಿರೋಧಿಗಳ ಮಾನಸಿಕ ಧೋರಣೆಗಳು

    ಲಾಕ್ ಡೌನ್ ನ ವಿರೋಧಗಳು ಅಥವಾ ನಿರ್ಲ್ಯಕ್ಷಗಳು ಮೂಲಭೂತ ಅವಶ್ಯಕತೆಗಳ ಕಾರಣ ಹುಟ್ಟಿಕೊಂಡಲ್ಲಿ ಅದು ಕೇವಲ ನಂಬುಗೆ ಅಥವಾ ವಯಕ್ತಿಕ ನಿಲುವುಗಳ ಮಿತಿಯನ್ನು ಮೀರಿ ಬದುಕುಳಿಯುವ  ಅವಶ್ಯಕತೆಯನ್ನು ಮಾತ್ರ ಅವಲಂಭಿಸುತ್ತದೆ.

    ಉದಾಹರಣೆಗೆ, ಲಾಕ್ ಡೌನ್ ನ ವಿರುದ್ಧದ ಪ್ರತಿಭಟನೆಗಳು ಕೊರೊನ ಸೋಂಕಿನಲ್ಲಿಭಾನುವಾರದವರೆಗೆ ಎರಡನೇ ಸ್ಥಾನದಲ್ಲಿರುವ ಬ್ರೆಝಿಲ್ ನಲ್ಲಿ ನಡೆದಾಗ ಅದಕ್ಕೆ ಜನರ ಹಸಿವಿನ ಝಳವೇ ಮುಖ್ಯ ಕಾರಣವಾಗಿತ್ತು.ಅಲ್ಲಿ ಜನರಿಗೆ  “ಆಯ್ಕೆ’ ಗೆ ಅವಕಾಶವಿರಲಿಲ್ಲ. ಹಸಿವು , ಬಡತನಗಳೇ ಅವರನ್ನು ಪ್ರತಿಭಟನೆಯಲ್ಲಿ ತೊಡಗುವಂತೆ ಮಾಡಿತ್ತು.

    ಕಳೆದ ಭಾನುವಾರದಿಂದ ಎರಡನೇಸ್ಥಾನಕ್ಕೇರಿರುವ  ಭಾರತ ಮೊದಲಿಗೆ ಅಪಾರ ಸಹನೆಯನ್ನು ತೋರಿತು. ತನ್ನ ಮಿತಿಯಲ್ಲಿ ದಕ್ಷವಾದ ಲಾಕ್ ಡೌನ್ ನ್ನು ಯಶಸ್ವಿಯಾಗಿ ನಡೆಸಿ ಸಾವು ಮತ್ತು ಸೋಂಕು ಎರಡನ್ನೂ ನಿಯಂತ್ರಣಕ್ಕೆ ತೆಗೆದುಕೊಂಡು ಜಗತ್ತಿನ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚುಗೆಗೆ ಪಾತ್ರವಾಯಿತು. ಅನಿವಾರ್ಯ ಸ್ಥಿತಿಯಲ್ಲಿ ಅನ್ ಲಾಕ್ ಕ್ರಿಯೆಯನ್ನು ಮಾಡ ತೊಡಗಿದ ನಂತರ ಸೋಂಕೆನ್ನುವುದು ಈಗ ಕಾಳ್ಗಿಚ್ಚಿನಂತೆ ಹರಡುತ್ತಿದೆ.ಆರ್ಥಿಕತೆ ಪಾತಾಳವನ್ನು ಮುಟ್ಟಿದೆ. ಇಂತಹ ಭಾರತದಲ್ಲಿ ಕೂಡ ಇಡೀ ಕೊರೊನಾ ವ್ಯವಹಾರದ ಬಗ್ಗೆ ಆಳ ಅಸಮಾಧಾನಗಳನ್ನು ಹೊಂದಿದ ಜನರಿದ್ದಾರೆ.ಇದೆಲ್ಲ ದೊಡ್ಡ ಬೂಟಾಟಿಕೆ ಎಂದು ಇವರು ದೂರುತ್ತಾರೆ

    ಆದರೆ ಮೇಲಿನಂತೆ ಅಪನಂಬಿಕೆಗಳಲ್ಲಿ  ಬದುಕುತ್ತಿರುವವರ ವಾದಗಳ ವಿಚಾರವೇ ಬೇರೆಯದ್ದಾಗಿದೆ. ಪ್ರತಿ ವಾದಕ್ಕೆ ಹಲವು ಮುಖಗಳಿರುವಂತೆ, ಇವರ ವಾದಗಳಲ್ಲಿಯೂ ಕೆಲವು ಸತ್ಯಾಂಶಗಳಿದ್ದರೆ ಆ ವಿಚಾರವನ್ನು ಒಪ್ಪಬೇಕಾಗುತ್ತದೆ. ಗೌರವಿಸಲೂ ಬೇಕಾಗುತ್ತದೆ.

    ಆದರೆ ಮುಖ್ಯವಾಗಿ ಇವರು ತಮ್ಮ ನಾಯಕರು ಏನನ್ನೂ ಮಾಡಿದರೂ ಖಂಡಿಸಲು ತಯಾರಿರುವವರು. ಇದೇ ಕೋವಿಡ್ ಪರಿಸ್ಥಿತಿಯಲ್ಲಿ ತಮ್ಮ ಸರ್ಕಾರಗಳು ಲಾಕ್ ಡೌನಿನ ತದ್ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡು ಪರಿಸ್ಥಿತಿ ಬಿಗಡಾಯಿಸಿದ್ದರೂ ಮೊದಲು ಪ್ರತಿಭಟನೆಗಿಳಿಯುತ್ತಿದ್ದ ಜನರಿವರು. ಸಾಮಾನ್ಯವಾಗಿ ಇವರಿಗಾಗಲೀ ಅಥವಾ ಇವರ ಹತ್ತಿರದವರಿಗಾಗಲೀ ಕೊರೊನಾ ಸೋಂಕು ಬಂದಿರುವುದಿಲ್ಲ ಅಥವಾ ಬಂದಿದ್ದರೂ ಸಾವುಗಳು ಸಂಭವಿಸಿಲ್ಲದಿರಬಹುದು. ಅಕಸ್ಮಾತ್ ಸತ್ತಿದ್ದರೂ ಅವರು ಇಂತಹವರ ಪ್ರೀತಿ ಪಾತ್ರರೇ ಎನ್ನುವುದು ಮತ್ತು ಇವರ ಭಾವನಾತ್ಮಕ ಸಂಬಂಧಗಳು ಇತರ ಮನುಷ್ಯರೊಡನೆ ಯಾವ ಮಟ್ಟದಲ್ಲಿ ಬೆಸೆದುಕೊಂಡಿದೆ ಎಂಬುದನ್ನು ಕೂಡ ಅಳೆಯಬೇಕಾಗುತ್ತದೆ.

    ಹಾಗಾಗಿ ತಮಗೆ ಆಗಿಲ್ಲದ ಆತಂಕ, ಭಯ, ಸಾವು, ನೋವುಗಳು ಇತರರಿಗೆ ಆಗಿಲ್ಲ ಎಂದು ಇವರು ಬಲವಾಗಿ ಮತ್ತು ನಿಜವಾಗಿಯೇ ನಂಬಿರಬಹುದು. ಅದರಲ್ಲೇ ಅವರ ಪಲಾಯನವಾದೀ ವ್ಯಕ್ತಿತ್ವದ ಪರಿಚಯವೂ ಇರಬಹುದು.

    ಇವರು ನೀಡುವ ಅಂಕಿ-ಅಂಶಗಳು ನಿಜವಿದ್ದರೂ ದುರಂತವೊಂದನ್ನು ಪೂರ್ಣ ಪ್ರಮಾಣದಲ್ಲಿ ಆಗಲು  ಬಿಡುವುದಕ್ಕಿಂತ ಅದನ್ನು ತಡೆಯುವುದಕ್ಕಾಗಿ ಕೆಲವೊಮ್ಮೆ ಹೆಚ್ಚು ಕಷ್ಟವಾದರೂ ಕೆಲಸಗಳನ್ನು ಮಾಡಬೇಕಾಗುತ್ತದೆ ಮತ್ತು ಅದಕ್ಕಾಗಿ ಹೆಚ್ಚು  ಖರ್ಚುಮಾಡಬೇಕಾಗಬಹುದೆನ್ನುವುದು, ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವುದುಇವರ ನಂಬಿಕೆಯ ಪರಿಧಿಯ ಹೊರಗಿರಬಹುದು.

    ಸಮಾಜದ ವಿವಿಧ ಸ್ಥರಗಳಲ್ಲಿ ಮನುಷ್ಯರು ಒಬ್ಬರನ್ನೊಬ್ಬರು ರಕ್ಷಿಸಲು ಕೆಲವು ಸಣ್ಣ ತ್ಯಾಗಗಳನ್ನು ಮಾಡಬೇಕಾದ ಕಾಲ ಇದೆನ್ನುವುದನ್ನು ಇವರು ನಂಬಬೇಕಾಗುತ್ತದೆ. ಉದಾಹರಣೆಗೆ ಮಾಸ್ಕ್ ಧರಿಸುವ ವಿಚಾರದಲ್ಲಿ ಇವರಿಗೆ ವೈಯಕ್ತಿಕ ನಂಬಿಕೆಗಳಿಲ್ಲದಿದ್ದರೂ ಇತರರ ಒಳಿತಿಗಾಗಿ ಇವರು ಕಾನೂನು ಬದ್ಧವಾಗಿ ನಡೆದುಕೊಳ್ಳಬೇಕಿದೆ.

    ಸಾಮಾನ್ಯವಾಗಿ ಆಗುವ ಸಾವು ನೋವುಗಳ ಜೊತೆ ಹೊಸದೊಂದು ಪಿಡುಗು ಸೇರಿದರೆ ಅದರಿಂದ ಆಗಬಹುದಾದ ಜನನಾಶ ಅತ್ಯಂತ ಭೀಕರ ಪರಿಸ್ಥಿತಿಗಳನ್ನು ಕೋಟ್ಯಂತರ ಸಂಸಾರಗಳಲ್ಲಿ ಸೃಷ್ಟಿಸಬಹುದು. ಇನ್ನು ಯಾವ ಎಚ್ಚರಿಕೆಗಳನ್ನೂ ತೆಗೆದುಕೊಳ್ಳದಿದ್ದರೆ ಬದುಕಿ ಬಾಳಬೇಕೆಂಬ ಇಚ್ಛೆಯಿರುವ ಬಹುಸಂಖ್ಯಾತರ ಜೀವಗಳು- ಜೀವನಗಳು ಭಯಾನಕವಾಗಿ ನಲುಗಬಲ್ಲವು ಎಂಬ ವಾಸ್ತವವನ್ನು ಇವರು ಗೌರವಿಸುವುದನ್ನು ಕಲಿಯಬೇಕಿದೆ.

    ಲಾಕ್ ಡೌನನ್ನು ಕೇವಲ ವೈಯಕ್ತಿಕ ತಾತ್ವಿಕ ಕಾರಣಗಳಿಗಾಗಿ ವಿರೋಧಿಸುವವರು ಇತರೆ ತರ್ಕಬದ್ದ ಕಾರಣಗಳಿಂದ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡು ಬಿಟ್ಟಿರುತ್ತಾರೆ.ಇದರಿಂದ ಸ್ವತಃ ನೋಯುತ್ತಾರೆ. ಜೊತೆಗೆ ಇನ್ನಷ್ಟು ಸೋಂಕನ್ನು ಹರಡಲು ಕಾರಣರಾಗುತ್ತಾರೆ.

    ನೂರಾರು ದೇಶಗಳು ಒಂದೇ ನಿಲವನ್ನು ತೆಗೆದುಕೊಂಡರೂ ತಮ್ಮದೇ ಸ್ವಾರ್ಥಕ್ಕಾಗಿ, ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ ಹಲವು ದೇಶಗಳು, ಗುಂಪುಗಳು ಮತ್ತು  ಜನರು ಬೇರೆಯ ನಿಲುವನ್ನು ಕೊರೊನಾ ವಿಚಾರದಲ್ಲಿ ತೋರಿದ್ದಾರೆ. ಇನ್ನು ಕೆಲವರು ನಿಜವಾಗಿಯೂ ಅಂದರೆ  “ಲೋಕೋ ಭಿನ್ನ ರುಚಿಃ “ ಎನ್ನುವಂತೆ ತಮ್ಮದೇ ಭಿನ್ನ ಅಭಿಪ್ರಾಯಗಳನ್ನು ಕೊರೊನಾದ ಇರುವಿಕೆ, ಲಾಕ್ ಡೌನ್ ಮತ್ತು ಮಾಸ್ಕ್ ವಿಚಾರಗಳ ಬಗ್ಗೆ ಹೊಂದಿದ್ದಾರೆ.

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    5 COMMENTS

    1. ಬೇರೆ ಕಡೆ ನಾನಾ ಕಾರಣ ಇರಬಹುದು ಆದರೆ ನಮ್ಮಲ್ಲಿ ತುಂಬಾ ಜನರಿಗೆ ಬದುಕು ಸಾಗಿಸಲೇ ಬೇಕು. ಅದಕೆ ದುಡಿಯಲೇ ಬೇಕಾದ ಅನಿವಾರ್ಯತೆ ಇದೆ. ಎಲ್ಲ ತರದ ಕೆಲಸವನ್ನು ಮನೆಯಿಂದ ಮಾಡಲಾಗಿಲ್ಲ. ಅದೇ ಕಾರಣಕ್ಕೆ ಎಷ್ಟೇ ಭಯ ಇದ್ದರೂ ಹೊರಗೆ ಬರುವ ಧೈರ್ಯ ಮಾಡಿದಾರೆ.

    2. ಸಮಯೋಚಿತ ಎಚ್ಚರಿಕೆಯ ಲೇಖನ. ಇದರ ಅಯೋಮಯತೆಗೆ
      ಬೇಗನೇ ಅಂತ್ಯ ಹಾಡಿದರೆ ಒಳ್ಳೆಯದು.

    3. ಕೊರೋನಾದ ಬಗ್ಗೆ ನಿಮ್ಮಷ್ಟು ವಿವರವಾಗಿ ಕೂಲಂಕುಷವಾಗಿ ವೈಜ್ಞಾನಿಕವಾಗಿ ಸಮಯೋಚಿತವಾಗಿ ಅಂಕಿ ಅಂಶಗಳ ಸಮೇತ ಯಾರೂ ಬರೆದುದನ್ನು ಕಾಣಿ, ಇಂಗ್ಲೀಷ್ ಭಾಷೆಯನ್ನೂ ಸೇರಿಸಿ.

    4. Despite there is an increasing trend in the rate of infection and mortality, now people and governments are least boathered about Coronavirus. The article is eye-opening and timely published.

    LEAVE A REPLY

    Please enter your comment!
    Please enter your name here

    Latest article

    error: Content is protected !!