30.2 C
Karnataka
Monday, May 25, 2026
    Home Blog Page 102

    ಷೇರುಪೇಟೆಯಲ್ಲಿ ಪ್ರಸ್ತುತ ಸಮಯ ದೀರ್ಘಕಾಲೀನ ಹೂಡಿಕೆಗೆ ಯೋಗ್ಯವೇ?

    ಅಗ್ರಮಾನ್ಯ ಕಂಪನಿಗಳು ತಮ್ಮ ಸಂಪನ್ಮೂಲಗಳನ್ನು ವಿವಿಧ ವಲಯಗಳಲ್ಲಿ ಖ್ಯಾತಿ ಹೊಂದಿರುವ ಸಣ್ಣ ಸಣ್ಣ ಕಂಪನಿಗಳನ್ನು ಕೊಳ್ಳುವ ಮೂಲಕ ತಮ್ಮ ಚಟುವಟಿಕೆಯ ಪಥವನ್ನು ಸುಭದ್ರಗೊಳಿಸಿಕೊಳ್ಳುತ್ತಿವೆ. ಪೇಟೆಯೊಳಗೆ ಹರಿದುಬರುತ್ತಿರುವ ಹಣದ ಹೊಳೆಯ ಕಾರಣ ಷೇರಿನ ದರಗಳು ಹೆಚ್ಚು ಹೆಚ್ಚು ಅಸ್ಥಿರತೆಯನ್ನು ಪ್ರದರ್ಶಿಸುತ್ತಿವೆ. ಈ ಸಂದರ್ಭದಲ್ಲಿ ಅನೇಕ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳು ರಭಸದಿಂದ ಏರಿಕೆ ಕಂಡುಕೊಳ್ಳುತ್ತಿವೆ. ದಾಖಲೆಯನ್ನು ನಿರ್ಮಿಸುತ್ತಿವೆ. ಅನೇಕ ನಕಾರಾತ್ಮಕ ಅಂಶಗಳೂ ಸಹ ಪೇಟೆಯ ಏರಿಕೆಗೆ ತಡೆಯಾಗುತ್ತಿಲ್ಲ.

    • ಇತ್ತೀಚಿನ ಅಂಶಗಳ ಪ್ರಕಾರ ವಾಹನಗಳ ರಿಜಿಸ್ಟ್ರೇಷನ್‌ ಹಿಂದಿನ ತಿಂಗಳು ಸುಮಾರು ಅರ್ಧದಷ್ಟು ಕಡಿಮೆಯಾಗಿವೆ.
    • ಗ್ರಾಹಕ ಬಳಕೆಯ ಸರಕುಗಳ ಮಾರಾಟವು ಕಳೆದ ಮೇ ತಿಂಗಳಲ್ಲಿ ಶೇ.32 ರಷ್ಠು ಇಳಿಕೆಯಾಗಿದೆ ಎಂದು ದೇಶದಾದ್ಯಂತ ಹಲವು ಲಕ್ಷ ರೀಟೇಲ್‌ ಸ್ಟೋರ್‌ ಗಳ ಸಮೀಕ್ಷೆ ನಡೆಸುವ BIZOM ಸಂಸ್ಥೆ ಪ್ರಕಟಿಸಿದೆ ಏಪ್ರಿಲ್‌ ತಿಂಗಳಲ್ಲಿ ಸುಮಾರು ಶೇ. 16 ರಷ್ಟು ಇಳಿಕೆಯಾಗಿತ್ತು.
    • ಬ್ಯಾಂಕ್‌ ಗಳಿಗ ನೀಡಿರುವ ಶೇ.30 ರಷ್ಠು ಆಟೋ ಡೆಬಿಟ್‌ ಇನ್ ಸ್ಟ್ರಕ್ಷನ್‌ ಗಳು ವಿಫಲವಾಗಿವ, ಚೆಕ್‌ ಬೌನ್ಸ್‌ ಹಗರಣಗಳು ಶೇ.25 ರಷ್ಠು ಹೆಚ್ಚಿವೆ.

    ದೇಶದ ಜಿ ಡಿ ಪಿ ಯನ್ನು ಪ್ರತಿಯೊಂದು ಸಂಸ್ಥೆಯು ಮೊಟಕುಗೊಳಿಸುತ್ತಿರುವುದು ಒಂದು ಕಡೆಯಾದರೆ ಮತ್ತೊಂದೆಡೆ ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೆಚ್ಚುತ್ತಿರುವುದು ಗೋಚರವಾಗುತ್ತಿದೆ. ಕಳೆದ 14 ತಿಂಗಳಲ್ಲಿ ಮೊದಲ ಬಾರಿಗೆ ಸುಮಾರು 10 ಸಾವಿರ ಕೋಟಿಗೂ ಹೆಚ್ಚಿನ ಹಣವು ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಗಳ ಮೂಲಕ ಹೂಡಿಕೆಮಾಡಲಾಗಿದೆ. ಹರಿದಾಡುವ ಹಣ ಹೆಚ್ಚಾದ್ದರಿಂದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಗುಣಮಟ್ಟಕ್ಕೆ ಪ್ರಾಧಾನ್ಯತೆಯಿರುವುದಿಲ್ಲ. ಹಾಗಾಗಿ ಕೈಲಿರುವ ಹಣ ತೊಡಗಿಸಲು ಓಡುತ್ತಿರುವ ಕುದುರೆ ಎಂದು ಹಿಡಿಯುವುದರಿಂದ, ಪರಿಸ್ಥಿತಿ ಬದಲಾದಾಗ ಕುದುರೆ ನಿಲ್ಲುತದೆಯೋ ಅಥವಾ ಕುಸಿಯುತ್ತದೆಯೋ ಸಮಯವೇ ನಿರ್ಧರಿಸುತ್ತದೆ. ಹಾಗಾಗಿ ಈಗ ಷೇರುಪೇಟೆಯಲ್ಲಿ ಹೂಡಿಕೆಗಿಂತ ವ್ಯವಹಾರವೇ ಹೆಚ್ಚು ಲಾಭಕರವಾಗಿದೆ.

    ಇತ್ತೀಚೆಗೆ ಷೇರುಪೇಟೆಯ ಚಟುವಟಿಕೆಗಳಲ್ಲಿ ಟೆಕ್ನಿಕಲ್‌ ಶೈಲಿಯ ವಹಿವಾಟು ಹೆಚ್ಚು ಪ್ರದರ್ಶಿತವಾಗುತ್ತಿದ್ದು. ಈ ಮೂಲಕ ಅನೇಕ ಹೂಡಿಕೆದಾರರು ನಿರಾಸೆಗೊಳ್ಳುವುದನ್ನು ಕಾಣಬಹುದು. ಒಂದೇ ದಿಕ್ಕಿನಲ್ಲಿ ಷೇರಿನ ಬೆಲೆ ಚಲಿಸುತ್ತಿದ್ದರೆ ಹಿತವಾಗಿರುತ್ತದೆ ಆದರೆ ಅನಿರೀಕ್ಷಿತವಾದ ರೀತಿ ದಿಶೆ ಬದಲಿಸಿದಾಗ ʼ ಸ್ಟಾಪ್‌ ಲಾಸ್‌ʼ ನಿಯಮ ಪಾಲಿಸುವವರಿಗೆ ಅದು ಟಾಪ್‌ ಲಾಸ್‌ ನಲ್ಲಿ ಕೊನೆಗೊಳ್ಳುವುದು ಅಘಾತಕಾರಿ ಅಂಶವಾಗಿದೆ.

    ಮೆಜೆಸ್ಕೊ ಷೇರಿನ ಚೆಲ್ಲಾಟ:

    ಮೆಜೆಸ್ಕೊ ಕಂಪನಿಯು ಡಿಸೆಂಬರ್‌ ತಿಂಗಳಲ್ಲಿ ರೂ.974 ರಂತೆ ಡಿವಿಡೆಂಡ್‌ ವಿತರಿಸಿದಾಗ ಹಲವಾರು ನಕಾರಾತ್ಮಕವಾದ ವಿಶ್ಲೇಷಣೆಗಳು ಹೊರಬಂದವು. ಈ ಷೇರು ಒಂದು ತಿಂಗಳಲ್ಲಿ ರೂ.73 ರಿಂದ ರೂ.117 ರವರೆಗೂ ಏರಿಕೆ ಕಂಡಿದೆ. ಡಿಸೆಂಬರ್‌ ತಿಂಗಳ ರೂ.12 ರ ಸಮೀಪದಿಂದ ನಿರಂತರವಾಗಿ ಏರಿಕೆ ಕಂಡು ಮಾರ್ಚ್‌ ತಿಂಗಳಲ್ಲಿ ರೂ.122 ಕ್ಕೆ ತಲುಪಿ ನಂತರ ರೂ.65 ಕ್ಕೆ ಕುಸಿದು ಜೂನ್‌ ತಿಂಗಳವರೆಗೂ ರೂ.75 ರವರೆಗೂ ತೆವಳಿಕೊಂಡಿದ್ದು ಕೇವಲ ಒಂದೇ ತಿಂಗಳಲ್ಲಿ ಸುಮಾರು ರೂ.44 ರಷ್ಟು ಏರಿಕೆ ಕಂಡಿದೆ.

    ಈ ಮಧ್ಯೆ ಪ್ರತಿ ಷೇರಿಗೆ ರೂ.77 ರಂತೆ ಬೈ ಬ್ಯಾಕ್‌ ಮಾಡುವ ಆಫರ್‌ 3 ನೇ ತಾರೀಕು ಕೊನೆಗೊಂಡಿದೆ. ಅದು ಕೊನೆಗೊಂಡ ನಂತರ ಚುರುಕಾದ ಏರಿಕೆ ಪ್ರದರ್ಶಿಸಿದೆ. ಇದು ಬೈಬ್ಯಾಕ್‌ ಆಫರ್‌ ನಲ್ಲಿ ಹಿಂದುರುಗಿಸಿದವರಿಗೆ ನಿರಾಶೆಯುಂಟುಮಾಡಿರುವುದಂತು ನಿಜ. ಅದಕ್ಕೂ ಮಿಗಿಲಾದ ಅಂಶ ಎಂದರೆ 11 ರಂದು ಶುಕ್ರವಾರ ದಿನದ ಆರಂಭಿಕ ವಹಿವಾಟಿನಲ್ಲಿ ರೂ.117 ರ ಗರಿಷ್ಠ ಆವರಣಮಿತಿಯಲ್ಲಿದ್ದ ಈ ಷೇರು ಕೇವಲ ಕೆಲವೇ ನಿಮಿಷಗಳಲ್ಲಿ ಭಾರಿ, ಗಜಗಾತ್ರದ ಮಾರಾಟದ ಕಾರಣ ಕನಿಷ್ಠ ಆವರಣಮಿತಿಯತ್ತ ತಿರುಗಿ ದಿನದ ಕೊನೆವರೆಗೂ ಅಲ್ಲಿಯೇ ಸ್ಥಿರವಾಗಿತ್ತು. ಅಂದರೆ ಎರಡು ದಿನದ ಏರಿಕೆಯು ಒಂದೇ ದಿನದ ಇಳಿಕೆ ಪ್ರದರ್ಶಿತವಾಗಿದೆ. ಅಲ್ಲದೆ ಸೋಮವಾರವೂ ಖರೀದಿಸಿದ ಷೇರನ್ನು ಮಾರಾಟಮಾಡಲು ಅವಕಾಶ ದೊರೆಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

    ಸ್ಟ್ರೈಡ್ಸ್‌ ಫಾರ್ಮಾ ಸೈನ್ಸ್ ಅಲೆದಾಟ:

    ಒಂದೇ ವಾರದಲ್ಲಿ ಈ ಷೇರು ರೂ.770 ರ ಸಮೀಪದಿಂದ ರೂ.847 ರವರೆಗೂ ಏರಿಕೆ ಪ್ರದರ್ಶಿಸಿದ ಈ ಕಂಪನಿ ಈ ಎರಡು ಮಿತಿಗಳ ಅಂತರದಲ್ಲಿ ಭಾರಿ ಏರಿಳಿತಗಳನ್ನು ಪ್ರದರ್ಶಿಸಿದೆ. ಜೂನ್‌ 7 ರಂದು ಷೇರಿನ ಬೆಲೆ ರೂ.778 ರಲ್ಲಿದ್ದು ಭಾರಿ ಗಾತ್ರದ ವಹಿವಾಟಿನ ಕಾರಣ ತಟಸ್ಥತೆ ಮುಂದುವರೆದು 8 ರಂದು ರೂ.774 ಕ್ಕೆ ಕುಸಿಯಿತಾದರೂ ದಿಢೀರ್‌ ಖರೀದಿಯ ಕಾರಣ ರೂ.835 ನ್ನು ದಾಟಿತು. ಮತ್ತೆ 9ರಂದು ಹೆಚ್ಚಿನ ಸಂಖ್ಯಾಗಾತ್ರವಿಲ್ಲದೆ ಷೇರಿನ ಬೆಲೆ 798 ಕ್ಕೆ ಕುಸಿಯಿತು, ಶುಕ್ರವಾರ ರೂ.847 ಕ್ಕೆ ಮತ್ತೆ ಜಿಗಿದು ವಾರದ ಗರಿಷ್ಠವನ್ನು ದಾಖಲಿಸಿತು.

    ಅದಾನಿ ಪವರ್ ಲಿಮಿಟೆಡ್‌:

    ಇತ್ತೀಚೆಗೆ ಪವರ್‌ ವಲಯದ ಷೇರುಗಳಲ್ಲಿ ಎಲ್ಲಿಲ್ಲದ ಚೇತರಿಕೆ ಕಂಡುಬಂದಿದೆ. ಈ ಚೇತರಿಕೆಯಲ್ಲಿ ಟಾಟಾ ಪವರ್‌, ಎನ್‌ ಟಿ ಪಿ ಸಿ ಗಳಂತಹವೂ ಭಾಗಿಯಾಗಿವೆ. ಈ ರಭಸದ ಚಟುವಟಿಕೆಯ ವಾತಾವರಣದಲ್ಲಿ ಅದಾನಿ ಪವರ್‌ ಕಂಪನಿಯು ಒಂದೇ ವಾರದಲ್ಲಿ ರೂ.111 ರ ಸಮೀಪದಿಂದ ರೂ.167 ರವರೆಗೂ ಜಿಗಿತ ಕಂಡಿದೆ. ಜಿಗಿತ ಸರಿ ಆದರೆ ಅಲ್ಲಿ ಸ್ಥಿರತೆ ಕಂಡುಕೊಳ್ಳಲು ಅಸಮರ್ಥವಾಗಿದೆ. ಬುಧವಾರದಂದು ಷೇರಿನ ಬೆಲೆ ರೂ.167 ರ ಗರಿಷ್ಠ ತಲುಪಿದಾಗ ಗಜಗಾತ್ರದ ವಹಿವಾಟಿನಿಂದ ರೂ.138 ಕ್ಕೆ ಕುಸಿಯಿತು. ನಂತರ ಚೇತರಿಕೆ ಕಂಡರೂ ಗರಿಷ್ಠ ಮಟ್ಟ ತಲುಪದಾಯಿತು. ರೂ.148 ರಲ್ಲಿ ವಾರಾಂತ್ಯ ಕಂಡಿತು.

    ಟೈಡ್‌ ವಾಟರ್‌ ಆಯಿಲ್‌ ( ಇಂಡಿಯಾ) ಲಿಮಿಟೆಡ್‌ ಉದಾರ ಕೊಡುಗೆ – ಉತ್ತಮ ಸ್ಪಂದನೆ:

    ಪ್ರತಿ ಷೇರಿಗೆ ರೂ.200 ರಂತೆ ಡಿವಿಡೆಂಡ್‌ ಪ್ರಕಟಿಸಿದೆ. ಜೊತೆಗೆ 1:1 ರ ಅನುಪಾತದ ಬೋನಸ್‌ ಷೇರು ಘೋಷಿಸಿದೆ. ಈ ಷೇರಿನ ಮುಖಬೆಲೆಯನ್ನು ರೂ.5 ರಿಂದ ರೂ.2 ಕ್ಕೆ ಸೀಳುವ ಯೋಜನೆಯನ್ನು ಸಹ ಪ್ರಕಟಿಸಿದೆ. ಇದಕ್ಕೆ ಭಾರಿ ಬೆಂಬಲ ದೊರೆತ ಕಾರಣ ಷೇರಿನ ಬೆಲೆ ಶುಕ್ರವಾರ ದಿನದ ಗರಿಷ್ಠ ಆವರಣಮಿತಿಯನ್ನು ತಲುಪಿತ್ತು. ಆದರೆ ಈ ಷೇರಿನ ಬೆಲೆ ವಾರದ ಆರಂಭದಲ್ಲಿ ರೂ.12,990 ರ ವಾರ್ಷಿಕ ಗರಿಷ್ಠದ ಸಮೀಪದಿಂದ ರೂ.10,700 ರವರೆಗೂ ಕುಸಿದು ಶುಕ್ರವಾರ ರೂ.11,457 ಕ್ಕೆ ಪುಟಿದೆದ್ದಿದೆ. ಆದರೆ ಸೋಜಿಗ ಸಂಗತಿ ಎಂದರೆ ಕಳೆದ ಒಂದು ತಿಂಗಳಲ್ಲಿ ರೂ.4,620 ರಿಂದ ರೂ.12,990 ಕ್ಕೆ ಜಿಗಿತ ಕಂಡಿದೆ. ಈ ಪ್ರಮಾಣದ ಏರಿಕೆಯು ಅಪರೂಪವಾದರೂ, ಸ್ಥಿರತೆ ಕಾಣುವುದು ಅತಿ ವಿರಳ ಎನಿಸಿದರೂ ಏರಿಕೆಯು ಆಂತರಿಕ ಸಾಧನೆ ಮತ್ತು ಕಾರ್ಪೊರೇಟ್‌ ಫಲಗಳ ಕಾರಣವಾಗಿದೆ. ಕೆಲವು ದಿನಗಳ ಹಿಂದಷ್ಠೆ ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ ಇದೇ ರೀತಿ ಏರಿಕೆ ಪ್ರದರ್ಶಿಸಿರುವುದನ್ನು ಕಂಡೆವು. ಆದರೆ ಆ ಏರಿಕೆಯು ಭಾಹ್ಯ ಕಾರಣದಿಂದಾಗಿದ್ದು ಈ ವಾರ ರೂ.924 ರ ಗರಿಷ್ಠದಿಂದ ರೂ.772 ಕ್ಕೆ ಜಾರಿತಾದರೂ ಚೇತರಿಕೆಯಿಂದ ರೂ.817 ರ ಸಮೀಪ ಕೊನೆಗೊಂಡಿದೆ.

    ಯುನಿ ಅಬೆಕ್ಸ್‌ ಅಲ್ಲಾಯ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಸ್ಥಿತಿ:

    ಈ ಕಂಪನಿಯು ಕೆಳಮಧ್ಯಮ ವಲಯದಲ್ಲಿದ್ದು ಮಾರ್ಚ್‌ ಅಂತ್ಯದಲ್ಲಿ ಉತ್ತಮ ಅಂಕಿ ಅಂಶಗಳ ಸಾಧನೆ ಪ್ರಕಟಿಸಿದೆ. ಅಲ್ಲದೆ ಪ್ರತಿ ಷೇರಿಗೆ ರೂ.10 ರಂತೆ ಡಿವಿಡೆಂಡ್‌ ಪ್ರಕಟಿಸಿದೆಯಾದರೂ ಹೆಚ್ಚಿನ ಬೆಂಬಲವಿಲ್ಲ. ಸೋಮವಾರ ವಾರ್ಷಿಕ ಗರಿಷ್ಠ ರೂ.677 ನ್ನು ದಾಖಲಿಸಿದ್ದ ಈ ಕಂಪನಿ ಶುಕ್ರವಾರ ರೂ.568 ಕ್ಕೆ ಇಳಿದು ರೂ.570ರಲ್ಲಿ ಕೊನೆಗೊಂಡಿದೆ. ಮಿತವಾದ ಸಂಖ್ಯೆಯ ವಹಿವಾಟಾಗುವ ಈ ಷೇರು ಏರಿಳಿಕೆಗಳಿಗೆ ಸುಲಭವಾಗಿ ಸ್ಫಂಧಿಸುತ್ತದೆ. ಹೆಚ್ಚಿನ ಎಚ್ಚರ ಅಗತ್ಯ.

    ಷೇರುಪೇಟೆಯ ಬುಲ್‌ ರನ್‌ ಹೀಗೆಯೇ ಮುಂದುವರೆಯಬಹುದೇ?

    ಭವಿಷ್ಯದ ಘಟನೆಗಳಿಗೆ ಮೌಲೀಕರಣಮಾಡಿ ವಿಜೃಂಭಿಸುವುದೇ ಷೇರುಪೇಟೆಯ ವೈಶಿ಼ಷ್ಟ್ಯ. ಹೆಚ್ಚಿನ ಕಂಪನಿ ಷೇರುಗಳು ಅರ್ಹತೆಯನ್ನು ಮೀರಿ ಮಿಂಚಿವೆ. ಅಂತರ್ಗತವಾಗಿ ಅಡಕವಾಗಿರುವ ಸಾಧನೆಯಗಳ ಆಧಾರದ ಮೇಲೆ ಹೂಡಿಕೆ ಮಾಡಿದ್ದರೆ ಮುಂದೆಂದಾದರೂ ಆ ಬೆಲೆ ದೊರಕಬಹುದು ಆದರೆ ಕೇವಲ ಗಾಳಿ ಗೋಪುರದಂತೆ ಏರಿಕೆ ಕಂಡಿರುವ ಕಂಪನಿಗಳು ಹೆಚ್ಚು ಅಪಾಯಕಾರಿ. 1999-2000 ದಲ್ಲಿ ಅಗ್ರಮಾನ್ಯ ಪಟ್ಟ ಪಡೆದಿದ್ದ ಟೆಕ್ನಾಲಜಿ ಕಂಪನಿಗಳು ರೂ.3,000 ದಲ್ಲಿದ್ದು ನಂತರದ ವರ್ಷಗಳಲ್ಲಿ ಏಕ ಅಂಕಿ ತಲುಪಿದ ಅನೇಕ ಕಂಪನಿಗಳಿವೆ. ವಹಿವಾಟಿನಿಂದ ಅಮಾನತುಗೊಂಡ ಕಂಪನಿಗಳನೇಕವಿವೆ. ಯಾವುದೂ ಸ್ಥಿರವಲ್ಲ, ಆದರೆ ಆಂತರಿಕ ಅಂಶಗಳು ಸುಭದ್ರವಾಗಿದ್ದಲ್ಲಿ ಹಾನಿ ಪ್ರಮಾಣ ಮಿತವಾಗಿರುತ್ತವೆ.

    ಜೂನ್‌ ನಿಂದ ಸೆಪ್ಟೆಂಬರ್‌ ತಿಂಗಳುಗಳಲ್ಲಿ ಅನೇಕ ಕಂಪನಿಗಳು ತಮ್ಮ ವಾರ್ಷಿಕ ಫಲಿತಾಂಶ ಪ್ರಕಟಿಸಿ, ಡಿವಿಡೆಂಡ್‌ ಘೋಷಿಸುವುದಲ್ಲದೆ ತಮ್ಮ ವಾರ್ಷಿಕ ಸಾಮಾನ್ಯ ಸಭೆ ನಡೆಸುತ್ತವೆ. ಈ ವಾರ್ಷಿಕ ಸಾಮಾನ್ಯ ಸಭೆ ಮುಗಿಯುವವರೆಗೂ ಷೇರುಪೇಟೆಯಲ್ಲಿ ಚಟುವಟಿಕೆ ರಭಸಮಯವಾಗಿರುತ್ತವೆ. ಆದರೆ ಜೂನ್‌ ಅಂತ್ಯದ ತ್ರೈಮಾಸಿಕ ಫಲಿತಾಂಶವು, ಲಾಕ್‌ ಡೌನ್‌ ಕಾರಣ ಪ್ರೋತ್ಸಾಹದಾಯಾಕವಾಗಿರಲಾರದು. ಹಾಗಾಗಿ ಜೂನ್‌ ತ್ರೈಮಾಸಿಕ ಫಲಿತಾಂಶಗಳ ಸಮಯಕ್ಕೆ ಪೇಟೆಯ ಈ ರಭಸವು ಕಡಿಮೆಯಾಗುವ ಸಾಧ್ಯತೆ ಇದೆ.

    ಆ ಸಮಯದಲ್ಲಿ ಬರಗಾಲ, ಪ್ರವಾಹ, ಮುಂಗಾರು ಮುಂತಾದ ಹಲವಾರು ಪ್ರಭಾವಿ ಅಂಶಗಳು ಮುಂಚೂಣಿಯಲ್ಲಿರುತ್ತವೆ. ಆ ಸಮಯದಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳ ಮನಸ್ಥಿತಿಯೂ ಪ್ರಭಾವಿಯಾಗಿರುತ್ತದೆ. ಈ ಎಲ್ಲಾ ಅನಿಶ್ಚತೆಯ ಕಾರಣ ಪ್ರಾಫಿಟ್‌ ಬುಕ್‌ ಗೆ ಹೆಚ್ಚಿನ ಆಧ್ಯತೆ ನೀಡಿ, ಹಣವನ್ನು ಸಿದ್ಧವಾಗಿರಿಸಿಕೊಂಡಿದ್ದಲ್ಲಿ ಅವಕಾಶಗಳ ಲಾಭ ಪಡೆಯಲು ಅನುಕೂಲವಾಗುತ್ತದೆ ಎನ್ನಬಹುದು.

    ನಿಯಂತ್ರಣ ಸಂಸ್ಥೆ ಅಥವಾ ಸ್ವನಿಯಂತ್ರಣ ಸಂಸ್ಥೆಗಳಾದ ಸ್ಟಾಕ್ ಎಕ್ಸ್ ಚೇಂಜ್ ಗಳು ತೆಗೆದುಕೊಳ್ಳುವ ನಿರ್ಧಾರಗಳು ಹೂಡಿಕೆದಾರರ ಬಂಡವಾಳ ಕರಗಿಸಬಹುದು ಎಂಬುದಕ್ಕೆ ಸೋಮವಾರದಿಂದ ಡಿ ಹೆಚ್ ಎಫ್ ಎಲ್ ಷೇರುಗಳು ವಹಿವಾಟಿನಿಂದ ಹಿಂದೆ ಸರಿಯುವ ಕಾರಣ ಆ ಷೇರುಗಳಲ್ಲಿನ ಹೂಡಿಕೆ ಶೂನ್ಯ ವಾಗುವುದು. ಅಪಾಯದ ಅರಿವಿದ್ದರೂ ಆ ಷೇರುಗಳನ್ನು ‘ಬಿ’ ಗುಂಪಿನಲ್ಲಿ ವಹಿವಾಟಿಗೆ ಅವಕಾಶ ನೀಡಿದೆ ‘ಟಿ’ ಗುಂಪಿಗೆ ವರ್ಗಾಯಿಸಬಹುದಿತ್ತು. ಹೀಗೆ ಯಾರು ಗಮನಕ್ಕೂ ಬಾರದೆ ಕೆಲವು ಬೆಳವಣಿಗೆಗಳು ಘಟಿಸುವುದರಿಂದ ಹೂಡಿಕೆದಾರರು ಸ್ವ -ನಿಯಂತ್ರಣ ಅಳವಡಿಸಿಕೊಳ್ಳುವುದೊಂದೇ ಉತ್ತಮ ಮಾರ್ಗ.

    ಕೋವಿಡ್ ಸಂಬಂಧಿಸಿದ ಔಷಧ ಮೇಲಿನ ಜಿಎಸ್ ಟಿ ಕಡಿತಕ್ಕೆ ಶಿಫಾರಸ್ಸು

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ 44ನೇ ಸರಕು ಮತ್ತು ಸೇವಾ ತೆರಿಗೆ ಪರಿಷತ್ತಿನ ಮಹತ್ವದ ಸಭೆ ಶನಿವಾರ ಜರುಗಿತು. ಈ ಸಭೆಯಲ್ಲಿ ಗ್ರೂಪ್ ಆಫ್ ಮಿನಿಸ್ಟರ್ಸ್ ಸಲ್ಲಿಸಿದ ಕೋವಿಡ್ ಪರಿಹಾರ ಸಾಮಗ್ರಿಗಳ ಮೇಲಿನ ಜಿ ಎಸ್ ಟಿ ದರಗಳಲ್ಲಿನ‌‌ ರಿಯಾಯಿತಿ / ವಿನಾಯಿತಿ ಸಂಬಂಧಿಸಿದ ವರದಿಯ ಕುರಿತು ಚರ್ಚೆ ನಡೆಯಿತು.

    ಗ್ರೂಪ್ ಆಫ್ ಮಿನಿಸ್ಟರ್ಸ್ ಕೆಲವು ಔಷಧಗಳ ಮೇಲಿನ ಜಿಎಸ್ ಟಿಯನ್ನು ಶೇಕಡ 5ರಿಂದ ಶೂನ್ಯಕ್ಕೆ, ರೆಮ್ ಡಿಸಿವಿರ್ ಮೇಲಿನ ಜಿ ಎಸ್ ಟಿ ಯನ್ನು ಶೇ. 12ರಿಂದ ಶೇ. 5 ಕ್ಕೆ, ಆಮ್ಲಜನಕ ಉತ್ಪಾದನಾ ಉಪಕರಣ ಹಾಗೂ ಕೋವಿಡ್ ಪರೀಕ್ಷಾ ಕೀಟ್ ಗಳ ಮೇಲಿನ ಶೇಕಡಾ 12ರ ಜಿಎಸ್ ಟಿ ದರವನ್ನು ಶೇ. 5ಕ್ಕೆ ಕಡಿಮೆ ಮಾಡುವುದಕ್ಕೆ ಶಿಫಾರಸ್ಸು ಮಾಡಿರುತ್ತದೆ. ತಾಪಮಾನ ಪರೀಕ್ಷಾ ಉಪಕರಣ ಹಾಗೂ ಶವಾಗಾರ ಗಳಿಗಾಗಿ ಬಳಕೆ ಆಗುವ ಗ್ಯಾಸ್, ಎಲೆಕ್ಟ್ರಿಕ್ ಫರ್ನೇಸ್ ಗಳಿಗೆ ಸಂಬಂಧಿಸಿದಂತೆ ಜಿ ಎಸ್ ಟಿ ಯನ್ನು ಶೇಕಡ 18 ರಿಂದ 12ಕ್ಕೆ ಕಡಿತಗೊಳಿಸಲು ಶಿಫಾರಸು ಮಾಡಿದೆ. ಅಂಬುಲೆನ್ಸ್ ಮೇಲೆ ಯಾವುದೇ ಕಡಿತವನ್ನು ಶಿಫಾರಸ್ಸು ಮಾಡಿರುವುದಿಲ್ಲ.

    ಜಿಎಸ್ಟಿ ಮಂಡಳಿ ಸಭೆಯಲ್ಲಿ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ರಾಜ್ಯದ ಜಿಎಸ್ಟಿ ಪ್ರತಿನಿಧಿ ಹಾಗೂ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಗ್ರೂಪ್ ಆಫ್ ಮಿನಿಸ್ಟರ್ಸ್ ಶಿಫಾರಸುಗಳನ್ನು ಸ್ವಾಗತಿಸಿದರು. ಅದರ ಜೊತೆಗೆ ಇನ್ನಷ್ಟು ತೆರಿಗೆ ಕಡಿತಕ್ಕಾಗಿ ಕೇಂದ್ರ ಹಣಕಾಸು ಸಚಿವರನ್ನು ಕೋರಿದರು.

    ತಾಪಮಾನ ಪರೀಕ್ಷಾ ಉಪಕರಣ, ಹಾಗೂ ಶವಾಗಾರಗಳಿಗಾಗಿ ಬಳಕೆಯಾಗುವ ಗ್ಯಾಸ್, ಎಲೆಕ್ಟ್ರಿಕ್ ಫರ್ನೆಸ್ ವಸ್ತುಗಳ ಮೇಲಿನ ತೆರಿಗೆಯನ್ನು ಶೇ. 18 ರಿಂದ 5 ಕ್ಕೆ ಮತ್ತು ಅಂಬುಲೆನ್ಸ್ ವಾಹನಗಳ ಮೇಲಿನ ತೆರಿಗೆಯನ್ನು ಶೇ. 28ರಿಂದ ಶೇಕಡ 12 ಕ್ಕೆ ಇಳಿಸುವಂತೆ ಮನವಿ ಮಾಡಿದರು.

    The details of recommendations are given below :

    S. No.DescriptionPresent GST RateGST Rate recommended by GST Council
    Medicines
    1.Tocilizumab5%Nil
    2.Amphotericin B5%Nil
    3.Anti-Coagulants like Heparin12%5%
    4.Remdesivir12%5%
    5.Any other drug recommended by Ministry of Health and Family Welfare (MoHFW) and Dept. of Pharma (DoP) for Covid treatmentApplicable Rate 5%
    Oxygen, Oxygen generation equipment and related medical devices
    1.Medical Grade Oxygen12%5%
    2.Oxygen Concentrator/ Generator, including personal imports thereof12%5%
    3.Ventilators12%5%
    4.Ventilator masks / canula / helmet12%5%
    5.BiPAP Machine12%5%
    6.High flow nasal canula (HFNC) device12%5%
    Testing Kits and Machines
    1.Covid Testing Kits12%5%
    2.Specified Inflammatory Diagnostic Kits, namely D-Dimer, IL-6, Ferritin and LDH12%5%
    Other Covid-19 related relief material
    1.Pulse Oximeters, incl personal imports thereof12%5%
    2.Hand Sanitizer18%5%
    3.Temperature check equipment18%5%
    4.Gas/Electric/other furnaces for crematorium, including their installation, etc.18%5%
    5.Ambulances28%12%

    These rate reductions/exemptions shall remain in force upto 30th September 2021

    ಬಸವರಾಜ ಬೊಮ್ಮಾಯಿ ಅವರ ಈ ಮನವಿಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯಲ್ಲಿಯೇ ಅನುಮೋದನೆ ನೀಡಿದರು.

    ಈ ರಿಯಾಯಿತಿಗಳನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲು ಅವರು ಮಾಡಿಕೊಂಡ ಮನವಿಗೂ ಜಿಎಸ್ಟಿ ಮಂಡಳಿ ಒಪ್ಪಿಗೆ ನೀಡಿತು. ಇದಕ್ಕಾಗಿ ಸಚಿವ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಿಗೆ ಧನ್ಯವಾದ ಅರ್ಪಿಸಿದರು.

    2022 ನಂತರದ ಜಿಎಸ್ಟಿ ಪರಿಹಾರಕ್ಕೆ ಸಂಬಂಧಿಸಿದ ವಿಷಯ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಬೊಮ್ಮಾಯಿ ಅವರು ಕೋರಿದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶೀಘ್ರದಲ್ಲಿಯೇ ಸಭೆ ಕರೆಯಲು ಒಪ್ಪಿಕೊಂಡರು.

    ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ ಎಸ್ ಶ್ರೀಕರ್ ಸಭೆಯಲ್ಲಿ ಉಪಸ್ಥಿತರಿದ್ದರು.


    .

    2021- 22 ನೇ ಸಾಲಿಗೆ 18109 ಕೋಟಿ ರೂಪಾಯಿಗಳ ಜಿಎಸ್ಟಿ ಪರಿಹಾರ ಸಾಲಕ್ಕೆ ಅನುಮೋದನೆ ನೀಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಈ ಕ್ರಮ ಕೋವಿಡ್ ವಿರುದ್ಧದ ಸಮರದಲ್ಲಿ ಸಹಕಾರಿಯಾಗುತ್ತದೆ.

    ಬಸವರಾಜ್ ಬೊಮ್ಮಾಯಿ,ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು


    ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಕೋಲ್ಚಿಸಿನ್ ಔಷಧ; 2ನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಸಮ್ಮತಿ

    ಕೋವಿಡ್-19 ರೋಗಿಗಳ ಚಿಕಿತ್ಸೆ ವೇಳೆ ಕೋಲ್ಚಿಸಿನ್ ಔಷಧ ಬಳಕೆಯ ಸುರಕ್ಷತೆ ಮತ್ತು ಪರಿಣಾಮವನ್ನು ನಿರ್ಣಯಿಸಲು ಎರಡು ವಿಧದ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಕೈಗೊಳ್ಳಲು ಡಿಸಿಜಿಐ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಮತ್ತು ಹೈದ್ರಾಬಾದ್ ನ ಲಾಕ್ಸೈ ಲೈಫ್ ಸೈನ್ಸಸ್ ಪ್ರೈವೆಟ್ ಲಿಮಿಟೆಡ್ ಗೆ ಅನುಮೋದನೆ ನೀಡಿದೆ.

    ಸಿಎಸ್ಐಆರ್ ನ ಮಹಾನಿರ್ದೇಶಕ ಡಾ. ಶೇಖರ್ ಸಿ. ಮಂಡೆ ಈ ಔಷಧದ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮೋದನೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸಿಎಸ್ಐಆರ್ ನ ಮಹಾನಿರ್ದೇಶಕರ ಸಲಹೆಗಾರರಾದ ಡಾ. ರಾಮ್ ವಿಶ್ವಕರ್ಮ, ಗುಣಮಟ್ಟದ ಆರೈಕೆಯೊಂದಿಗೆ ಹೃದಯ ಅಸ್ವಸ್ಥತೆ ಹೊಂದಿರುವ ಕೋವಿಡ್-19 ರೋಗಿಗಳಿಗೆ ಕೋಲ್ಚಿಸಿನ್ ಚಿಕಿತ್ಸೆಯು ಸಹಕಾರಿಯಾಗಲಿದೆ ಮತ್ತು ಪ್ರೋಇನ್ ಫ್ಲಾಮೇಟರಿ ಸೈಟೋಕಿನ್ ಗಳನ್ನು ಕಡಿಮೆ ಮಾಡಲು ಮತ್ತು ಆದಷ್ಟು ಬೇಗ ಚೇತರಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

    ಕೋವಿಡ್-19 ಸೋಂಕಿನ ವೇಳೆ ಮತ್ತು ಕೋವಿಡ್ ನಂತರದ ಸಮಯದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಹಲವರು ಸಾವನ್ನಪ್ಪುತ್ತಿದ್ದಾರೆ ಎಂಬುದು ಹಲವು ಜಾಗತಿಕ ಅಧ್ಯಯನಗಳಿಂದ ಇದೀಗ ದೃಢಪಟ್ಟಿದೆ. ಹಾಗಾಗಿ ಹೊಸ ಅಥವಾ ಮರು ಸಂಶೋಧಿಸಲ್ಪಟ್ಟ ಔಷಧವನ್ನು ಕಂಡುಹಿಡಿಯುವುದು ಅತ್ಯವಶ್ಯಕವಾಗಿದೆ.

    ಹೈದ್ರಾಬಾದ್ ನ ಸಿಎಸ್ಐಆರ್-ಐಐಸಿಟಿ ನಿರ್ದೇಶ ಡಾ. ಎಸ್. ಚಂದ್ರಶೇಖರ್ ಮತ್ತು ಜಮ್ಮುವಿನ ಸಿಎಸ್ಐಆರ್-ಐಐಐಎಂ ನಿರ್ದೇಶಕರಾದ ಡಾ. ಡಿ.ಎಸ್. ರೆಡ್ಡಿ ಅವರು, ಈ ಎರಡು ಪಾಲುದಾರ ಸಂಸ್ಥೆಗಳು ಕೋಲ್ಚಿಸಿನ್ ಔಷಧ ಬಳಕೆಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಾಲಯದ ಪರಿಣಾಮದ ಫಲಿತಾಂಶವನ್ನು ಎದುರು ನೋಡುತ್ತಿದ್ದೇವೆ. ಇದು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ನಿರ್ವಹಣೆಯಲ್ಲಿ ಜೀವ ಉಳಿಸಲು ಸಹಕಾರಿಯಾಗಬಹುದು ಎಂದು ಭಾವಿಸಲಾಗಿದೆ ಎಂದಿದ್ದಾರೆ. ಭಾರತ ಈ ಪ್ರಮುಖ ಔಷಧ ಉತ್ಪಾದನೆಯಲ್ಲಿ ಅತಿ ದೊಡ್ಡ ರಾಷ್ಟ್ರವಾಗಿದೆ, ಪ್ರಯೋಗ ಯಶಸ್ವಿಯಾದರೆ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಇದು ಲಭ್ಯವಾಗಲಿದೆ.

    ಲಾಕ್ಸೈ ಸಂಸ್ಥೆಯ ಸಿಇಒ ಡಾ. ರಾಮ್ ಉಪಾಧ್ಯಾಯ, ಭಾರತದಾದ್ಯಂತ ಹಲವು ಕಡೆ ರೋಗಿಗಳ ದಾಖಲಾತಿ ಈಗಾಗಲೇ ಆರಂಭವಾಗಿದೆ ಮತ್ತು ಪ್ರಯೋಗ ಮುಂದಿನ 8 ರಿಂದ 10 ವಾರಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು. ಈ ಪ್ರಯೋಗದ ಫಲಿತಾಂಶವನ್ನು ಆಧರಿಸಿ ಮತ್ತು ನಿಗದಿತ ಅನುಮೋದನೆಗಳ ನಂತರ ಔಷಧವನ್ನು ಭಾರತದ ಬಹುದೊಡ್ಡ ಪ್ರಮಾಣದ ಜನಸಂಖ್ಯೆಗೆ ಲಭ್ಯವಾಗುವಂತೆ ಮಾಡಬಹುದು ಎಂದು ಹೇಳಿದ್ದಾರೆ.

    ಹೃದಯ ಶಸ್ತಚಿಕಿತ್ಸೆಯ ನಂತರ ಹೃತ್ಕರ್ಣದ ಕಂಪನ ತಗ್ಗಿಸುವ ನಂತರದ ಪೆರಿ-ಪ್ರೊಸಿಜರಲ್ ಆಟ್ರಿಯಲ್ ಫಿಬರಿಲೇಷನ್ ಮತ್ತು ಪೋಸ್ಟ್-ಪೆರಿಕಾರ್ಡಿಯೋಟಮಿ ಸಿಂಡ್ರೋಮ್ ಮತ್ತು ಕಂಪನ ದರಗಳಲ್ಲಿ ಇಳಿಕೆಗೆ ಕೋಲ್ಚಿಸಿನ್ ಕಾರಣವಾಗಿದೆ ಎಂದು ಇತ್ತೀಚಿನ ಕ್ಲಿನಿಕಲ್ ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಪ್ರಮುಖ ವೈದ್ಯಕೀಯ ನಿಯತಕಾಲಿಕಗಳಲ್ಲಿ ವರದಿಯಾಗಿದೆ.(ಪಿಐಬಿ)

    ಹೋಗಿ ಬನ್ನಿ ಕವಿಗಳೇ

    ರತ್ನಾ ಶ್ರೀನಿವಾಸ್

    ಯಾರಿಗೆ ಬಂತು ಎಲ್ಲಿಗೆ ಬಂತು 47 ರ  ಸ್ವಾತಂತ್ರ್ಯ ಎಂದು ಹಾಡುತ್ತಾ  ಸಮುದಾಯದ ದನಿಯಾಗಿದ್ದವರು ಶುಕ್ರವಾರ ನಿಧನರಾದ
    ಕವಿ ಸಿದ್ಧಲಿಂಗಯ್ಯ.  ದಲಿತ ಸಮುದಾಯದ ದನಿಯಾಗಿಯೇ ಬಂಡಾಯ ಸಾಹಿತ್ಯ, ಕಾವ್ಯ ಜಗತ್ತಿಗೆ ಹೊಸ ಹಾದಿಯನ್ನು ತೋರಿದವರು ಸಿದ್ಧಲಿಂಗಯ್ಯನವರು. ಸಾಹಿತ್ಯದ ಮೂಲಕ ಜನನಾಡಿಯನ್ನು ಹಿಡಿದು ಅವರು ತುಂಬ ಎತ್ತರಕ್ಕೆ ಬೆಳೆದರು, ಸಮಾಜವನ್ನೂ ಬೆಳೆಯುವಂತೆ ಮಾಡಿದರು.

    1954 ಫೆಬ್ರವರಿ 3 ರಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಶೋಷಣೆ,ತಾರತಮ್ಯ ಅನುಭವಿಸುತ್ತಲೆ ಮಾಗಡಿಯಲ್ಲಿ ಅಕ್ಷರಾಭ್ಯಾಸ ಆರಂಭಿಸಿದರು. 1974 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎ.ಆನರ್ಸ್, 1976 ರಲ್ಲಿ ಡಿ.ಎಲ್. ನರಸಿಂಹಾಚಾರ್ಯ ಸ್ವರ್ಣಪದಕ ಗಳಿಸಿ ಸ್ನಾತಕೋತ್ತರ  ಪದವಿ ಪಡೆದರು. ಡಾ.ಜಿ.ಎಸ್.ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ” ಗ್ರಾಮ ದೇವತೆಗಳು ” ಎಂಬ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್.ಡಿ.ಪದವಿ ಗಳಿಸಿಕೊಂಡರು.

    ವೃತ್ತಿಜೀವನ

    ಬೆಂಗಳೂರು ವಿಶ್ವವಿದ್ಯಾಲಯದಲ್ಲಿ  ಅಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ,ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ರಾಗಿಯೂ ಕಾರ್ಯನಿರ್ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ  ಸ್ಥಾಪಕ ಸದಸ್ಯರಾಗಿದ್ದರು. ಡಾ.ಅಂಬೇಡ್ಕರ್ ಕೃತಿಗಳ ಕನ್ನಡ ಭಾಷಾಂತರ ಮತ್ತು ರಾಮಮನೋಹರ  ಲೋಹಿಯಾ ಕೃತಿಗಳ ಭಾಷಾಂತರ ಮತ್ತು ಸಂಪಾದನಾ ಸಮಿತಿಗಳಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು.

    ಇವರ ಪ್ರಮುಖ ಕೃತಿಗಳು.

    ಕವನ ಸಂಕಲನಗಳು
    * ಹೊಲೆಮಾದಿಗರ ಹಾಡು
    * ಕಪ್ಪುಕಾಡಿನ ಹಾಡು.
    * ಸಾವಿರಾರು ನದಿಗಳು.
    * ಮೆರವಣಿಗೆ
    * ಅಲ್ಲೇ ಕುಂತವರು.
    * ನನ್ನ ಜನಗಳು  ಮುಂತಾದವು.

    ನಾಟಕಗಳು.
    ಪಂಚಮ ಮತ್ತು ನೆಲಸಮ
    ಏಕಲವ್ಯ.
    ಹಕ್ಕಿನೋಟ
    ರಸಗಳಿಗೆಗಳು
    ಎಡ ಬಲ

    ಜನ ಸಂಸ್ಕೃತಿ ಮುಂತಾದವು ಲೇಖನ ಸಂಗ್ರಹಗಳು.
    ಊರುಕೇರಿ ಎಂಬ ಇವರ ಆತ್ಮಕಥನ ಇದು ತಮಿಳು,ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದೆ.

    ಸಿದ್ದಲಿಂಗಯ್ಯನವರ ಪ್ರತಿಭೆಗೆ ಹಲವಾರು  ಪ್ರಶಸ್ತಿಗಳು ದೊರೆತಿವೆ.

    * ಪುಟ್ಟಣ್ಣಕಣಗಾಲ್ ಅವರು ನಿರ್ದೇಶಿಸಿದ ‘ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಬರೆದ ಗೀತೆಗೆ ರಾಜ್ಯ ಪ್ರಶಸ್ತಿ ದೊರೆತಿದೆ.

    ಬಾ ನಲ್ಲೇ ಮಧು ಚಂದ್ರಕೆ ಚಲನ ಚಿತ್ರದ ” ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ ಈ ಗೀತೆ ಅತ್ಯಂತ ಜನಪ್ರಿಯ ಗೀತೆಯಾಗಿದೆ.

    * 1986ರಲ್ಲಿ ರಾಜ್ಯೋತ್ಸವ ಪ್ರಶಸ್ತಿ.
    * 1992 ರಲ್ಲಿ ಡಾ.ಅಂಬೇಡ್ಕರ್ ಶತಮಾನೋತ್ಸವ ಪ್ರಶಸ್ತಿ
    * 1996 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
    * 2001 ರಲ್ಲಿ ಜಾನಪದ ತಜ್ಞ ಪ್ರಶಸ್ತಿ.
    * 2002 ರಲ್ಲಿ ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ.
    * 2005 ರಲ್ಲಿ ಬಾಬು ಜಗಜೀವನ ರಾಂ  ಪ್ರಶಸ್ತಿ.
    * 2007 ರಲ್ಲಿ ನಾಡೋಜ ಪ್ರಶಸ್ತಿ.
    * 2012 ರಲ್ಲಿ ಆಳ್ವಾಸ್ ನುಡಿ ಸಿರಿ ಪ್ರಶಸ್ತಿ.ಹಾಗು ಪ್ರೆಸಿಡೆನ್ಸಿ ಇನ್ಸ್ಟಿಟ್ಯೂಷನ್ ಪ್ರಶಸ್ತಿ.

    ಶ್ರ ವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು

    ಇಷ್ಟೆಲ್ಲಾ ಪದವಿ, ಗೌರವವನ್ನು ಪಡೆದಿದ್ದ ಉಲ್ಲಾಸ, ಉತ್ಸಾಹ,ಅರಿವು ಮತ್ತು ವಿರೋಧಗಳ ಸಮ್ಮಿಶ್ರದಂತೆ ಇದ್ದ ಜೀವವೊಂದು ಇಂದು ನಮ್ಮಿಂದ ದೂರವಾಗಿ ಊರು ಕೇರಿ ಬರಡಾಗಿದೆ.ಇದೊಂದು ಯಾರೂ ತುಂಬಲಾರದ ನಷ್ಟ. ಆ ಮಹಾನ್ ಚೇತನಕ್ಕೆ ನನ್ನೀ ನುಡಿ ನಮನಗಳು.

    ಕಲಾಗ್ರಾಮದಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಅಂತ್ಯಕ್ರಿಯೆ: ಸರಕಾರದ ಪರ ಅಂತಿಮ ನಮನ ಅರ್ಪಿಸಿದ ಡಿಸಿಎಂ

    ಶುಕ್ರವಾರ ನಿಧನರಾದ ಕವಿ ಡಾ.ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ ಶನಿವಾರ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯಿತು.

    ಸರಕಾರಿ ಗೌರವಗಳೊಂದಿಗೆ ಸಿದ್ದಲಿಂಗಯ್ಯ ಅವರಿಗೆ ಅಂತಿಮ ವಿದಾಯ ಹೇಳಲಾಯಿತಲ್ಲದೆ, ಸರಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಅಂತಿಮ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು. ಅವರ ಜತೆಯಲ್ಲಿ ಶಾಸಕ ಮುನಿರತ್ನ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅಗಲಿದ ಚೇತನಕ್ಕೆ ನಮನ ಅರ್ಪಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, “ರಾಜ್ಯ ಕಂಡ ಶ್ರೇಷ್ಠ ಸಾಹಿತಿ. ದಮನಿತರ ದನಿಯಾಗಿದ್ದವರು ಡಾ.ಸಿದ್ದಲಿಂಗಯ್ಯ. ಅವರ ನಿಧನ ಬಹಳ ನೋವಿನ ಸಂಗತಿ. ತಮ್ಮ ಬದುಕು, ನೋವುಗಳನ್ನೇ ಸಾಹಿತ್ಯವಾಗಿ ಬರೆದವರು ಅವರು. ಎರಡು ಅವಧಿಗಳಿಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಸದನದಲ್ಲಿ ವಿಚಾರ ಮಂಡನೆ, ಚರ್ಚೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ನಮಗೆಲ್ಲ ಮಾರ್ಗದರ್ಶಕರಾಗಿದ್ದರು ಎಂದರು.

    ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಕಲಾಗ್ರಾಮದಲ್ಲಿ ನೆರವೇರಿಸಲಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡೋಣ ಎಂದು ಡಿಸಿಎಂ ಹೇಳಿದರು.

    ಬಿಜೆಪಿಯದ್ದು ಪಿಕ್ ಪಾಕೆಟ್ ಸರ್ಕಾರ: ಡಿ.ಕೆ. ಶಿವಕುಮಾರ್ ವಾಗ್ದಾಳಿ

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ‘100 ನಾಟ್ ಔಟ್’ ಆಂದೋಲನ ಆರಂಭಿಸಿದ್ದು, ‘ಬಿಜೆಪಿಯದ್ದು ಪಿಕ್ ಪಾಕೆಟ್ ಸರ್ಕಾರವಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಐದು ದಿನಗಳ ಕಾಲ ನಡೆಯಲಿರುವ ಈ ಪ್ರತಿಭಟನಾ ಆಂದೋಲನಕ್ಕೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ರೆಡ್ಡಿ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಪ್ರತಿಭಟನೆ ಮಾಡಿ ಚಾಲನೆ ನೀಡಿದರು. ಈ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.

    ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

    ‘ಬಹಳ ವಿಶೇಷ ಹಾಗೂ ಐತಿಹಾಸಿಕ ದಿನಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಭಾರತ ಸರ್ಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ಬರೆ ಎಳೆದಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ಕೇವಲ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡು ವಾಹನ ಚಲಾಯಿಸುವವರಿಗೆ ಮಾತ್ರ ಪರಿಣಾಮ ಬೀರುತ್ತಿಲ್ಲ. ಪ್ರತಿ ನಾಗರೀಕನೂ ಖರೀದಿಸುವ ಪ್ರತಿ ವಸ್ತುಗಳು ದುಬಾರಿಯಾಗುವಂತೆ ಬರೆ ಎಳೆದಿದ್ದಾರೆ.

    ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಾಕಷ್ಟು ಹೋರಾಟ ಮಾಡಿದ್ದನ್ನು ನಾವು ನೋಡಿದ್ದೇವೆ. ಇದೇ ಯಡಿಯೂರಪ್ಪ, ಶೋಭ ಕರಂದ್ಲಾಜೆ ಹಾಗೂ ಸಚಿವರೆಲ್ಲರು ಯುಪಿಎ ಸರ್ಕಾರದ ಅವಧಿಯಲ್ಲಿ ಒಂದೆರಡು ರೂಪಾಯಿ ಹೆಚ್ಚಾದಾಗ ಗಲಾಟೆ ಮಾಡಿದ್ದರು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಈ ವರ್ಷ ಜನವರಿಯಿಂದ ಇಲ್ಲಿಯವರೆಗೂ 42 ಕ್ಕೂ ಹೆಚ್ಚು ಬಾರಿ ಬೆಲೆ ಏರಿಕೆ ಮಾಡಿದೆ. ಏಪ್ರಿಲ್ ನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ದರ ಹೆಚ್ಚಾಗಲಿಲ್ಲ. ಅದನ್ನು ಬಿಟ್ಟರೆ ಉಳಿದ ಐದು ತಿಂಗಳೂ ಬೆಲೆ ಹೆಚ್ಚಳ ಮಾಡಿದೆ.

    ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿಸಿ, 20.60 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ಸರ್ಕಾರ ತನ್ನ ಆದಾಯ ವೃದ್ಧಿ ಮಾಡಿಕೊಳ್ಳಲು, ಬೊಕ್ಕಸ ತುಂಬಿಸಿಕೊಳ್ಳಲು ಎಲ್ಲ ಪದಾರ್ಥಗಳ ಬೆಲೆ ಹೆಚ್ಚಳ ಮಾಡುತ್ತಿದೆ. ಇದು ಜನರ ನಿತ್ಯ ಬದುಕಿನಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ. ಕೇಂದ್ರ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದ್ದು, ಇದೊಂದು ಪಿಕ್ ಪಾಕೆಟ್ ಸರ್ಕಾರ. ಇದರ ಬಗ್ಗೆ ನಾವು ಜನರಲ್ಲಿ ತಿಳುವಳಿಕೆ ಮೂಡಿಸಿ, ಹೋರಾಟ ಮಾಡಬೇಕಿದೆ.

    ಈ ಹಿಂದೆ ಇಂಧನ ಬೆಲೆ ಎಷ್ಟಿತ್ತು, ಈಗ ಎಷ್ಟಾಗಿದೆ ಎಂದು ನಾವು ತಿಳಿಸಿದ್ದೇವೆ. ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಇಳಿಸಿ ತೈಲಬೆಲೆಗೆ ಅನುಗುಣವಾಗಿ ದರ ಇಳಿಸಬೇಕು. ಜನರಿಗೆ ಹಣ ವಾಪಸ್ ನೀಡಬೇಕು, ಜನರಿಂದ ದೋಚುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಾವಿಂದು ಪ್ರತಿಭಟನೆ ಆರಂಭಿಸಿದ್ದು, ರಾಜ್ಯದಲ್ಲಿ ಒಟ್ಟು 5 ಸಾವಿರ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಹೋರಾಟ ಐದು ದಿನಗಳ ಕಾಲ ನಡೆಯಲಿದ್ದು, ಇಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ನಾಳೆ ತಾಲೂಕು ಕೇಂದ್ರ, ನಾಡಿದ್ದು ಜಿಲ್ಲಾ ಪಂಚಾಯ್ತಿ ಮತ್ತು ಹೋಬಳಿ ಕೇಂದ್ರಗಳಲ್ಲಿ 14ರಂದು ಗ್ರಾಮಪಂಚಾಯ್ತಿ ವ್ಯಾಪ್ತಿ ಪೆಟ್ರೋಲ್ ಬಂಕ್ ಬಳಿ ಹಾಗೂ 15ರಂದು ಇತರೆ ಕಡೆಗಳಲ್ಲಿ ಪ್ರತಿಭಟನೆ ಮಾಡಲಿದ್ದೇವೆ.

    ನಮ್ಮ ಎಲ್ಲ ನಾಯಕರು ಇದೇ ರೀತಿ ಕೋವಿಡ್ ನಿಯಮ ಪಾಲನೆ ಮಾಡಿಕೊಂಡು ಅಂತರ ಕಾಪಾಡಿಕೊಂಡು ಪ್ರತಿಭಟನೆ ಮಾಡಬೇಕು. ಸರ್ಕಾರ ಕೋವಿಡ್ ಇದ್ದರೂ ಚುನಾವಣೆ ನಡೆಸಿದೆ. ಆದರೂ ಅವರ ಮೇಲೆ ಪ್ರಕರಣ ದಾಖಲಾಗಿಲ್ಲ. ಆದರೆ ನಮಗೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನೀವು ಚುನಾವಣೆ ನಡೆಸಿದ್ದಕ್ಕೆ, ದೇವಾಲಯಕ್ಕೆ ಹೋಗಿದ್ದಕ್ಕೆ ಹಾಗೂ ಹೋಮಗಳನ್ನು ಮಾಡಿದ್ದಕ್ಕೆ ಯಾಕೆ ಪ್ರಕರಣ ಇಲ್ಲ. ನಿಮ್ಮ ಈ ಬೆದರಿಕೆಗೆ ಕಾಂಗ್ರೆಸಿಗರು ಹೆದರುವುದಿಲ್ಲ. ಈ ದೇಶದ ಸ್ವಾತಂತ್ರ್ಯಕ್ಕೆ ಪ್ರಾಣ ಕೊಟ್ಟವರು ನಾವು. ನಮ್ಮ ಹೋರಾಟ ಇದೇ ರೀತಿ ಮುಂದುವರಿಯಲಿದ್ದು, ಜನರೇ ನಿಮ್ಮ ಸರ್ಕಾರವನ್ನು ಕಿತ್ತೊಗೆಯಲಿದೆ.

    ಸಾವಿನಲ್ಲಿ, ಔಷಧಿಯಲ್ಲಿ, ಆಸ್ಪತ್ರೆ ಹಾಸಿಗೆಯಲ್ಲಿ ಹಣ ದೋಚಿದ್ದಲ್ಲದೇ, ಈಗ ಪೆಟ್ರೋಲ್ ಮತ್ತು ಡೀಸೆಲ್ ಮೂಲಕ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದ್ದೀರಿ. ನಾಳೆಯಿಂದ ನಮ್ಮ ನಾಯಕರೆಲ್ಲರೂ ಜಿಲ್ಲೆ, ತಾಲೂಕು, ಪಂಚಾಯ್ತಿ ಮಟ್ಟಕ್ಕೆ ಹೋಗಿ ಸರ್ಕಾರದ ದುರಾಡಳಿತವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಾರೆ.

    ನೆರೆ ರಾಷ್ಟ್ರಗಳಲ್ಲಿ ಇಂಧನ ಬೆಲೆ ನಮಗಿಂತ ಅರ್ಧದಷ್ಟಿದೆ. ನೀವು ಮಾತ್ರ ಜನರಿಂದ ಸುಲಿಗೆ ಮಾಡುತ್ತಲೇ ಇದ್ದೀರಿ. ಇದನ್ನು ನಿಲ್ಲಿಸಿ ಇಂಧನ ಬೆಲೆ ಇಳಿಸಬೇಕು ಎಂದು ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬಿಜೆಪಿ ನಾಯಕರು ಈ ಹಿಂದೆ ಏನೇನು ಮಾತನಾಡಿದ್ದರು ಎಂಬುದೆಲ್ಲವನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ. ಈ ಹಿಂದೆ ಅವರು ಪ್ರತಿಭಟನೆ ಮಾಡಿದ್ದ ಫೋಟೋವನ್ನು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ಕಳುಹಿಸಿ ಕೊಡುತ್ತೇವೆ.’

    ಪ್ರಥಮ‌ ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ

    ಪದವಿಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ಮೊದಲ ಪಿಯು ತರಗತಿಗಳ‌ ವಾರ್ಷಿಕ‌ ಪರೀಕ್ಷೆಗಳನ್ನು ರದ್ದು‌ ಮಾಡಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ‌ ತರಗತಿಗಳಿಗೆ ತೇರ್ಗಡೆ‌ ಮಾಡಿದೆ. ಮುಂದಿನ ವರ್ಷಗಳಲ್ಲಿ ಅವರು ವಿವಿಧ ಇಲಾಖೆ/ಸಂಸ್ಥೆಗಳ ವತಿಯಿಂದ  ಪಡೆಯಬಹುದಾದ ವಿದ್ಯಾರ್ಥಿ ವೇತನ ಸೌಲಭ್ಯ  ಸೇರಿದಂತೆ ಹಲವು ಸವಲತ್ತುಗಳನ್ನು ಪಡೆಯಲು ತೊಂದರೆಯಾಗದೇ ಇರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮುಂದಿನ ತರಗತಿಗಳಿಗೆ ದಾಖಲಾತಿ ಪಡೆಯಲು ಅನುವು ಮಾಡಿಕೊಡುವ ಮೂಲಕ ಅವರ ಕಲಿಕೆಯ ನಿರಂತರತೆಯನ್ನು ಕಾಪಾಡುವ ಉದ್ದೇಶದಿಂದಷ್ಟೇ ಮೌಲ್ಯಮಾಪನವೆಂಬ ಔಪಚಾರಿಕ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟ‌ ಪಡಿಸಿದ್ದಾರೆ.

    ಈ ಕುರಿತಂತೆ ಇಲಾಖೆಯು ಹೊರಡಿಸಿರುವ ಸುತ್ತೋಲೆಯ‌ ಆಶಯಗಳು ಸ್ಪಷ್ಟವಿವೆ. ಇದರಲ್ಲಿ ಪರೀಕ್ಷೆ ನಡೆಸುವ ಆಶಯ ಇಲ್ಲ. ಯಾವುದೇ ವಿದ್ಯಾರ್ಥಿಯು ಭೌತಿಕವಾಗಿ ಕಾಲೇಜಿಗೆ ಹಾಜರಾಗಬಾರದು. ಅಸೈನ್ಮೆಂ ಟ್ ಗಳನ್ನು ವಾಟ್ಸಾಪ್, ಇಮೇಲ್ ಅಲ್ಲದೇ  ಅಂಚೆ ಮೂಲಕವೂ ವಿದ್ಯಾರ್ಥಿಗೆ ತಲುಪಿಸಬಹುದು. ಮಾದರಿ ಪ್ರಶ್ನೆ ಪತ್ರಿಕೆಗಳು ಇಲಾಖೆಯ ವೆಬ್ ಸೈಟ್ ನಲ್ಲಿಯೂ ಲಭ್ಯವಿದೆ. ಇಲಾಖೆಯ ಡಾಟಾಬೇಸ್ ನಲ್ಲಿ ನಮೂದಾಗಿರುವ ವಿದ್ಯಾರ್ಥಿಗಳ‌ ಮೊಬೈಲ್ ಸಂಖ್ಯೆಗೆ ಪ್ರಶ್ನೆ ಪತ್ರಿಕೆಯ ಲಿಂಕ್ ಗಳನ್ನೂ ಕಳುಹಿಸಿಕೊಡಲಾಗಿದೆ.

    ಮನೆಯಲ್ಲಿಯೇ ಕುಳಿತು ಅಸೈನ್ಮೆಂ ಟ್ ಗೆ ಉತ್ತರಗಳನ್ನು ಸಿದ್ಧಪಡಿಸಿದ ಬಳಿಕ, ವಿದ್ಯಾರ್ಥಿಗಳು ಅಂಚೆ, ವಾಟ್ಸಾಪ್, ಇಮೇಲ್ ಹೀಗೆ ಯಾವ ಮಾದರಿಯಲ್ಲಿಯಾದರೂ ತಮ್ಮ‌ ಕಾಲೇಜಿಗೆ ಸಲ್ಲಿಸುವ ಕ್ರಮ ಅನುಸರಿಸಬಹುದಾಗಿದೆ.

    ಕನಿಷ್ಠ ಅಂಕಗಳನ್ನು ನೀಡುವುದಲ್ಲದೇ ಉತ್ತರ ಪತ್ರಿಕೆಗಳನ್ನು ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸೂಕ್ತ ಮೌಲ್ಯಾಂಕನವನ್ನು ನೀಡಲು ಉಪನ್ಯಾಸಕರಿಗೆ ಸೂಚನೆ‌ ನೀಡಲಾಗಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ‌‌ ಇದು ಅತ್ಯವಶ್ಯಕವಾಗಿದೆ.

    ಹಾಗಾಗಿ ಇದನ್ನು‌ ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದಾಗಲೀ, ಪಾಸುಫೇಲು ಎಂದು ತಪ್ಪಾಗಿ ಅರ್ಥೈಸುವುದಾಗಲೀ ಮಾಡಬಾರದೆಂದು ಸಚಿವರು‌‌ ಮನವಿ ಮಾಡಿದ್ದಾರೆ. ಉಪನ್ಯಾಸಕರು-ಪ್ರಾಂಶುಪಾಲರು ತಮ್ಮ ಜವಾಬ್ದಾರಿಯನ್ನು ಅರ್ಥೈಸಿಕೊಂಡು ತಮ್ಮ‌ ವಿದ್ಯಾರ್ಥಿಗಳ‌‌ ಒಳಿತಿಗಾಗಿ ಉದಾತ್ತವಾದ ಮನೋಭಾವದಿಂದ ಈ‌ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಕರೆ‌ ನೀಡಿದ್ದಾರೆ‌.

    ಎಂ ಎಂ ಲೇ ಔಟ್ ನಿವಾಸಿಗಳಿಂದ ನೆರವಿನ ಹಸ್ತ

    ಸದಾ ಕಾಲವೂ ಸಮಾಜದ ಹಿತವನ್ನೇ ಬಯಸುವ ಬೆಂಗಳೂರು ಕಾವಲಬೈರಸಂದ್ರ ಬಡಾವಣೆಗೆ ಸೇರಿದ ಎಂ ಎಂ ಲೇ ಔಟ್ ನಿವಾಸಿಗಳು ಪೌರಕಾರ್ಮಿಕರಿಗೆ ಫುಡ್ ಕಿಟ್ ಗಳನ್ನು ವಿತರಿಸುವ ಮೂಲಕ ಈ ಕೋವಿಡ್ ಸಂಕಷ್ಟ ಕಾಲದಲ್ಲಿ ಅವರಿಗೆ ನೆರವಾಗಿದ್ದಾರೆ.

    ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಪಡಿತರವನ್ನು 140 ಪೌರ ಕಾರ್ಮಿಕರಿಗೆ ವಿತರಿಸಿದ್ದಾರೆ.

    ಈ ಕಾರ್ಯದಲ್ಲಿ ಕೈ ಜೋಡಿಸಿದ ಲೇ ಔಟ್ ನಿವಾಸಿಗಳಿಗೆ ಎಂ ಎಂ ಲೇ ಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ .ಮನೇಗೌಡ, ಪ್ರಧಾನ ಕಾರ್ಯದರ್ಶಿ ಡಾ. ಎಂ ಜಯಪ್ಪ ಹಾಗೂ ಎಲ್ಲಾ ಪದಾಧಿಕಾರಿಗಳು ಧನ್ಯವಾದ ಅರ್ಪಿಸಿದ್ದಾರೆ.


    ಲಾಕ್ಡೌನ್ ವಿನಾಯಿತಿ ಜೂನ್ 14 ರಿಂದ ಜಾರಿ; ಇನ್ನೊಂದು 3-4 ದಿನ ಮನೆಯಲ್ಲೇ ಇರಿ

    ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಇನ್ನೊಂದು 3-4 ದಿನ ಮನೆಯಲ್ಲಿಯೇ ಇದ್ದು ಸಹಕಾರ ನೀಡಿ. ಲಾಕ್ಡೌನ್ ಗೆ ವಿನಾಯಿತಿ ನೀಡಿರುವುದು ಜೂನ್14 ರ ನಂತರ ಎಂಬುದನ್ನು ಅರ್ಥಮಾಡಿಕೊಳ್ಳಿ.

    ಇದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಗೆ ಮಾಡಿಕೊಂಡ ಮನವಿ.

    ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಘೋಷಣೆ ಆಗಿರುವ ಲಾಕ್ಡೌನ್ ವಿನಾಯತಿ ಇಂದಿನಿಂದಲೇ ಜಾರಿಗೆ ಎಂಬಂತೆ ಜನ ವರ್ತಿಸುತ್ತಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಾರೆ. ಇದು ಸರಿಯಲ್ಲ . ಪೊಲೀಸರೊಂದಿಗೆ ಜನ ಸಹಕರಿಸಬೇಕು. ಪೊಲೀಸ್ ಬಲ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದರು.

    ಕೆಲವು ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಿನ್ನೆ ಕೆಲ ರಿಯಾಯಿತಿಗಳನ್ನು ಘೋಷಣೆ ಮಾಡಿದ್ದಾರೆ. ಕೈಗಾರಿಕಾ ಕ್ಷೇತ್ರಗಳಲ್ಲಿ ಶೇಕಡಾ 50ರಷ್ಟು ಸಿಬ್ಬಂದಿಗೆ ಕೆಲಸಕ್ಕೆ ಅನುಮತಿ ನೀಡಿದ್ದಾರೆ. ಕಾರ್ಮಿಕರ ಸಾರಿಗೆ ವ್ಯವಸ್ಥೆಯನ್ನು ಹಾಗೂ ಅವರಿಗೆ ವ್ಯಾಕ್ಸಿನ್ ಕೊಡಿಸುವ ಕೆಲಸವನ್ನು ಮಾಲೀಕರೆ ಮಾಡಬೇಕು. ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದಿನನಿತ್ಯದ ವಸ್ತುಗಳ ಖರೀದಿಗೆ ನಿಗದಿಪಡಿಸಿರುವ ಅವಧಿಯನ್ನು ಮುಂಜಾನೆ 6 ಗಂಟೆಯಿಂದ 02.00 ವರೆಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.

    ಜನನಿಬಿಡ ಪ್ರದೇಶಗಳಾದ ಮಾಲ್, ಬಾರ್, ರೆಸ್ಟೋರೆಂಟ್ ಸೇರಿದಂತೆ ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ ಎಂದು ಅವರು ವಿವರಿಸಿದರು.

    ಬೆಂಗಳೂರಿನಿಂದ ಬಹಳಷ್ಟು ಜನ ಹೊರಗೆ ಹೋಗಿದ್ದಾರೆ. ಅನ್ಲಾಕ್ ಆದ ನಂತರ ಅವರು ಮತ್ತೆ ವಾಪಸ್ ಬೆಂಗಳೂರಿಗೆ ಬರುತ್ತಾರೆ. ಇಂಥ ಸಂದರ್ಭಗಳಲ್ಲಿ ಹೆಚ್ಚು ಜನರು ಸೇರುವ ರೈಲು ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ RAT TEST ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಲು ಯೋಚನೆ ಮಾಡುತ್ತಿರುವುದಾಗಿ ಬಸವರಾಜ್ ಬೊಮ್ಮಾಯಿ ತಿಳಿಸಿದರು

    ಕಾಂಗ್ರೆಸ್ ವಿರುದ್ಧ ಟೀಕೆ

    ಕಾಂಗ್ರೆಸ್ ಪಕ್ಷದವರು ಎಲ್ಲವನ್ನು ಉಲ್ಲಂಘನೆ ಮಾಡುವ ಪ್ರವೃತ್ತಿಯನ್ನು ಹೊಂದಿದೆ. ಮೊದಲು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದರೆ ಯಾಕೆ ಹಾಕಿಸಿಕೊಳ್ಳಬೇಕು ಅಂದರು. ಮೊದಲು ಪ್ರಧಾನಿ ನರೇಂದ್ರ ಮೋದಿ ವ್ಯಾಕ್ಸಿನ್ ಹಾಕಿಸಿಕೊಳ್ಳಲಿ ಅಂದ್ರು.ಈಗ ವ್ಯಾಕ್ಸಿನ್ ಯಾಕೆ ಕೊಟ್ಟಿಲ್ಲ ಅಂತ ಕೇಳುತ್ತಿದ್ದಾರೆ.

    ಬೆಲೆ ಏರಿಕೆ ವಿಚಾರದಲ್ಲಿ ಇಂತಹ ಕೋವಿಡ್ ಸಂದರ್ಭದಲ್ಲಿಯೂ ಮನೆಯಿಂದ ಹೊರಬಂದು ಹೋರಾಟ ಮಾಡುವುದು ಕೋವಿಡ್ ಸಂದರ್ಭವನ್ನು ಉಲ್ಲಂಘಿಸುವ ಪ್ರವೃತ್ತಿಯನ್ನು ತೋರಿಸುತ್ತದೆ. ಇದು ಕಾಂಗ್ರೆಸ್ ಪಕ್ಷದ ನಕಾರಾತ್ಮಕ ಪೊಲಿಟಿಕ್ಸ್ ಎಂದು ಬೊಮ್ಮಾಯಿ ಆರೋಪಿಸಿದರು.

    Photo by Sarah Kilian on Unsplash

    ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಬೋಧನೆ

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಹುಶಿಸ್ತೀಯ ಬೋಧನಾ ಕ್ರಮದಂತೆ  ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಬೋಧಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು  ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ತಜ್ಞರ ಜತೆ ಗುರುವಾರ ಸಮಾಲೋಚನೆ ನಡೆಸಿದರು.

    ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪ್ರಭಾಕರ್‌, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರೊಂದಿಗೆ ಡಿಸಿಎಂ ಮಹತ್ವದ ಚರ್ಚೆ ನಡೆಸಿದರು.

    100 ಕಾಲೇಜುಗಳಲ್ಲಿ ಅವಕಾಶ

    ರಾಜ್ಯದಲ್ಲಿ ಒಟ್ಟು 220 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಈ ಪೈಕಿ 100 ಕಾಲೇಜುಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲಸೌಕರ್ಯಗಳಿವೆ. 4 ವರ್ಷಗಳ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಈ ಕಾಲೇಜುಗಳಲ್ಲಿ ಬೋಧಿಸುವ ಸಾಧ್ಯತೆ ಬಗ್ಗೆ ಜುಲೈ ಅಂತ್ಯದೊಳಗೆ ಒಂದು ನಿರ್ದಿಷ್ಟ ಕಾರ್ಯ ಚೌಕಟ್ಟು (ಕಾರ್ಯಸೂಚಿ) ರೂಪಿಸುವಂತೆ ಪ್ರೊ.ತಿಮ್ಮೇಗೌಡ ಅವರಿಗೆ ಡಿಸಿಎಂ ಸೂಚನೆ ನೀಡಿದರು.

    ಸಾಧ್ಯವಾದರೆ, ಒಂದು ವಾರದಲ್ಲೇ ಕಾರ್ಯ ಚೌಕಟ್ಟಿನ ತಾತ್ಕಾಲಿಕ ವರದಿ ನೀಡಿ ಎಂದು ತಿಮ್ಮೇಗೌಡರಿಗೆ ಹೇಳಿದ ಡಿಸಿಎಂ, ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ಈ ವರ್ಷದಿಂದಲೇ ಈ ಕೋರ್ಸುಗಳನ್ನು ಬೋಧಿಸಲು ಸಾಧ್ಯವೇ? ಅದಕ್ಕೇನಾದರೂ ಕಾನೂನು ತೊಡಕುಗಳು ಇವೆಯೇ? ಎಂಬ ಅಂಶಗಳ ಬಗ್ಗೆ ಪರೀಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

    ಒಂದು ವೇಳೆ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮೂಲ ವಿಜ್ಞಾನ ಬೋಧಿಸಲು ಕಾನೂನು ತೊಡಕಿದ್ದರೆ ಸುಗ್ರೀವಾಜ್ಞೆ ಜಾರಿಗೆ ತರಬೇಕಾಗುತ್ತದೆ. ಗುಣಮಟ್ಟದ ವಿಜ್ಞಾನ ಬೋಧನೆಗೆ ಈ ಉಪ ಕ್ರಮ ಅತ್ಯಗತ್ಯ. ಗಣಿತ, ಅನ್ವಯಿಕ ವಿಜ್ಞಾನ ಸೇರಿ ಯಾವ ಕೋರ್ಸುಗಳನ್ನು ಅಳವಡಿಸಬೇಕು ಎಂಬುದರ ಬಗ್ಗೆಯೂ ಡಿಸಿಎಂ ಮಾತುಕತೆ ನಡೆಸಿದರು.

    ಅಲ್ಲದೆ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನವನ್ನು ಯಾವ ರೀತಿ ಬೋಧಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಿರಿ. ಅದೇ ರೀತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಕಲಿಕೆ ಆಗಬೇಕು ಹಾಗೂ ಹಾಲಿ ಇರುವ ಮೂಲ ಸೌಕರ್ಯದಿಂದಲೇ ಈ ಸುಧಾರಣೆಯನ್ನು ಜಾರಿಗೆ ತರಲು ಸಾಧ್ಯವೇ ಎಂಬುದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡುವಂತೆ ಡಾ.ಅಶ್ವತ್ಥನಾರಾಯಣ ಸೂಚಿಸಿದರು.

    ಡಿಸಿಎಂ ಅವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಪ್ರೊ.ಕರಿಸಿದ್ದಪ್ಪ ಹಾಗೂ ಗೋಪಾಲ ಜೋಷಿ ಆನ್‌ಲೈನ್‌ ಮೂಲಕ ಭಾಗಿಯಾಗಿದ್ದರು.

    Photo by RF._.studio from Pexels

    error: Content is protected !!