ಕೋವಿಡ್-19 ಸಾಂಕ್ರಾಮಿಕ ಸೋಂಕು ವಿಶ್ವಾದ್ಯಂತ ಇಡೀ ಮನುಕುಲವನ್ನೇ ಕಾಡುತ್ತಿದೆ. ಈ ಸೋಂಕು ಹರಡುವುದನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ತಡೆಯಬೇಕಾದರೆ ಪ್ರಾಥಮಿಕವಾಗಿ ಮಾಡಬೇಕಾದ ರಕ್ಷಣಾ ಕ್ರಮಗಳೆಂದರೆ, ನಿಯಮಿತವಾಗಿ ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸುವುದು,ಮಾಸ್ಕ್ ಧರಿಸುವುದು, ಕನಿಷ್ಠ 2 ಗಜ ದೂರ ಭೌತಿಕ ಅಂತರ ಕಾಪಾಡುವುದು ಸೇರಿದಂತೆ ಕೋವಿಡ್ ಸೂಕ್ತ ನಡವಳಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಸೋಂಕಿತ ವ್ಯಕ್ತಿಯಿಂದ ಕೋವಿಡ್-19 ಸೋಂಕು ಹರಡುವುದನ್ನು N95 ಮಾಸ್ಕ್ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಎಂದು ಇದುವರೆಗೆ ಪರಿಗಣಿಸಲಾಗಿತ್ತು. ಆದರೆ ದೀರ್ಘ ಕಾಲದ ಬಳಕೆಗೆ N95 ಮಾಸ್ಕ್ ಬಳಕೆ ಹಿತಕರವಲ್ಲ ಮತ್ತು ಅದನ್ನು ಹೆಚ್ಚಿನ ಬಾರಿಗೆ ವಾಶ್ ಮಾಡಲಾಗದು ಎಂಬುದು ಇದೀಗ ಸಾಬೀತಾಗಿದೆ.
ಈ ನಿಟ್ಟಿನಲ್ಲಿ ಇದಕ್ಕೆ ಪರ್ಯಾಯವಾಗಿ ಬಹು ಪದರದ ಹೈಬ್ರಿಡ್ ಮಾಸ್ಕ್ ಗಳನ್ನು ಅಭಿವೃದ್ಧಿಪಡಿಸುವಂತೆ ಪರಿಶೋಧನಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಕೋರಿತ್ತು. ಇದಕ್ಕೆ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ(ಬಿರಾಕ್) ಮತ್ತು ಐಕೆಪಿ ನಾಲೆಡ್ಜ್ ಪಾರ್ಕ್ ಭಾಗಶ: ಬೆಂಬಲ ನೀಡಿ ಕೇಂದ್ರ ಸರ್ಕಾರದ ಕ್ಷಿಪ್ರ ಕೋವಿಡ್ ನಿಧಿ ಅಡಿ ಆರ್ಥಿಕ ನೆರವು ಒದಗಿಸಲಾಗಿತ್ತು.
SHG-95 ಹೆಸರಿನ ಸಾಮಾಜಿಕ ಮುಖಗವಸುಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಈಗಾಗಲೇ ಚಾಲನೆ ದೊರೆತಿದ್ದು, ಮೇಡ್ ಇನ್ ಇಂಡಿಯಾದ ಈ ಮುಖಗವಸುಗಳು 90% ಜೀವ ಕಣಗಳು ಮತ್ತು ಧೂಳು ಹಾಗೂ 99% ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸುವ ದಕ್ಷತೆ ಹೊಂದಿವೆ. ಈ ಮುಖಗವಸುಗಳು ಸರಾಗವಾಗಿ ಉಸಿರಾಡಲು ಅನುವು ಮಾಡಿಕೊಡಲಿವೆ, ಆರಾಮದಾಯಕ ಕಿವಿ ಕುಣಿಕೆ ಇರುತ್ತದೆ. ಉಷ್ಣವಲಯದ ಪರಿಸ್ಥಿತಿಯಲ್ಲೂ ಬಳಸಲು ಅನುಕೂಲಕರವಾಗಿದೆ. ಏಕೆಂದರೆ ಅವುಗಳನ್ನು ಸಂಪೂರ್ಣ ಕೈಯಿಂದ ನೇಯ್ಗೆ ಮಾಡಿದ ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತಿದೆ. ಈ ಮುಖಗವಸಿಗೆ ವಿಶೇಷ ಶುದ್ಧೀಕರಣ ಪದರ ಅಳವಡಿಸಿರುವುದು ಮತ್ತೊಂದು ಅನುಕೂಲ. ಕೈಯಿಂದ ತೊಳೆಯಬಹುದಾದ, ಮರುಬಳಕೆ ಮಾಡಬಹುದಾದ ಈ ಮಾಸ್ಕ್|ಗಳನ್ನು 50-75 ರೂಪಾಯಿಗೆ ಮಾರಾಟ ಮಾಡಲು ಕಂಪನಿ ಅಂದಾಜಿಸಿದೆ. ಎಲ್ಲರಿಗೂ ಕೈಗೆಟಕುವ ದರಕ್ಕೆ ಮುಖಗವಸು ಒದಗಿಸುವುದು ಕೇಂದ್ರ ಸರ್ಕಾರದ ಪ್ರಮುಖ ಧ್ಯೇಯವಾಗಿದೆ.
ಈಗಾಗಲೇ ಸುಮಾರು 1,45,000ಕ್ಕಿಂತ ಹೆಚ್ಚಿನ ಮುಖಗವಸುಗಳು ಮಾರಾಟವಾಗಿವೆ. ಈ ಉಪಕ್ರಮಕ್ಕೆ ಗ್ರ್ಯಾಂಡ್ ಚಾಲೆಂಜಸ್ ಕೆನಡಾ ಸಂಸ್ಥೆ ಆರ್ಥಿಕ ನೆರವು ಒದಗಿಸಿದೆ. ಕೋವಿಡ್-19 ಸಂಕಷ್ಟ ಪರಿಸ್ಥಿತಿಯ ಬೇಡಿಕೆಗೆ ಅನುಗುಣವಾಗಿ SHG-95 ಹೆಸರಿನ ಮಾಸ್ಕ್|ಗಳನ್ನು ವಿನ್ಯಾಸಗೊಳಿಸಲಾಗಿದೆ. ಹಲವಾರು ಸ್ವಸಹಾಯ ಗುಂಪುಗಳ ಸದಸ್ಯರನ್ನು ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಾಗಿದ್ದು, ಅವರ ಜೀವನಾಧಾರ ಸುಧಾರಣೆಗೆ ಒತ್ತು ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು www.dbtindia.gov.in ಮತ್ತು www.birac.nic.in ಇಲ್ಲಿಂದ ಪಡೆಯಬಹದಾಗಿದೆ. (ವರದಿ ಪಿಐಬಿ)
ದೇಶದಲ್ಲಿ ಕೋವಿಡ್-19 ಸೋಂಕು ಇಳಿಮುಖ ಕಾಣುತ್ತಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಇದೀಗ 9,73,158ಕ್ಕೆ ಇಳಿಕೆ ಕಂಡಿದೆ.
ಸತತ 66 ದಿನಗಳ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ಮಟ್ಟದಿಂದ ಕೆಳಕ್ಕೆ ತಗ್ಗಿದೆ.
ಕಳೆದ 24 ತಾಸುಗಳಲ್ಲಿ ದೇಶದಲ್ಲಿ 70,421 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ, 74 ದಿನಗಳ ನಂತರ ವರದಿಯಾಗಿರುವ ಅತ್ಯಂತ ಕನಿಷ್ಠ ಪ್ರಮಾಣ ಇದಾಗಿದೆ.
ದೇಶಾದ್ಯಂತ ಇಲ್ಲಿಯ ತನಕ 2,81,62,947 ಕೊರೊನಾ ಸೋಂಕಿತರು ರೋಗದಿಂದ ಗುಣಮುಖರಾಗಿದ್ದಾರೆ. 1,19,501 ಸೋಂಕಿತರು ಕಳೆದ 24 ತಾಸುಗಳಲ್ಲಿ ಚೇತರಿಸಿಕೊಂಡಿದ್ದಾರೆ.
ನಿರಂತರ 32ನೇ ದಿನದಲ್ಲಿ ಚೇತರಿಕೆ ಪ್ರಮಾಣವು ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕುತ್ತಿದೆ.
ಚೇತರಿಕೆ ದರ ಇದೀಗ 95.43%ಗೆ ಸುಧಾರಣೆ ಕಂಡಿದೆ.
ವಾರದ ಪಾಸಿಟಿವಿಟಿ ದರ(ಸೋಂಕಿತರ ಪ್ರಮಾಣ) 5% ಮಟ್ಟಕ್ಕಿಂತ ಕೆಳಕ್ಕೆ ತಗ್ಗಿದ್ದು, ಅದೀಗ ಪ್ರಸ್ತುತ 4.54%ಗೆ ಇಳಿಕೆ ಕಂಡಿದೆ.
ದೈನಂದಿನ ಪಾಸಿಟಿವಿಟಿ ದರ ಇದೀಗ 4.72%ಗೆ ತಗ್ಗಿದ್ದು, ಸತತ 21 ದಿನಗಳ ನಂತರ 10% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.
ದೇಶಾದ್ಯಂತ ಗಂಟಲು ದ್ರವ ಪರೀಕ್ಷೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಇಲ್ಲಿಯ ತನಕ 37.96 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಗಿದೆ.
ದೇಶವ್ಯಾಪಿ ನಡೆಸುತ್ತಿರುವ ರಾಷ್ಟ್ರೀಯ ಬೃಹತ್ ಲಸಿಕಾ ಆಂದೋಲನದಲ್ಲಿ ಇದುವರೆಗೆ ಅರ್ಹ ಫಲಾನುಭವಿಗಳಿಗೆ 25.48 ಲಸಿಕಾ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವಿವರ ನೀಡಿದೆ.
ನಿನ್ನೆ ಮಧ್ಯರಾತ್ರಿ ನಿಧನರಾದ ನಿರ್ಮಾಪಕ, ಉದ್ಯಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದ ಕೆ.ಸಿ.ಎನ್.ಚಂದ್ರಶೇಖರ್ ನಿಧನದಿಂದ ಅದ್ಧೂರಿ ಚಲನಚಿತ್ರ ನಿರ್ಮಾಣ, ಚಲನಚಿತ್ರ ರಂಗದ ಸಂಘಟನೆಯ ಮುಂಚೂಣಿಯಲ್ಲಿದ್ದ ಒಬ್ಬ ಪ್ರಮುಖ ನೇತಾರನನ್ನು ಕಳೆದುಕೊಂಡಂತಾಗಿದೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಖ್ಯಾತ ನಿರ್ಮಾಪಕ ಕೆ.ಸಿ.ಎನ್.ಗೌಡ ಹಾಗೂ ನರಸಮ್ಮ ದಂಪತಿಗಳ ಪುತ್ರರಾಗಿದ್ದ ಕೆಸಿಎನ್ ಚಂದ್ರು ಹುಟ್ಟಿದ್ದು 1952ರಲ್ಲಿ. ದೊಡ್ಡಬಳ್ಳಾಪುರ ತಾಲೂಕಿನ ಕೋನೇನಹಳ್ಳಿಯವರು. ಬಾಲ್ಯ ಕಳೆದಿದ್ದು ಮರಳೇನಹಳ್ಳಿ. ಪ್ರೈಮರಿ ಸ್ಕೂಲ್ ವ್ಯಾಸಂಗವೂ ಮರಳೇನಹಳ್ಳಿಯಲ್ಲಿ. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ದೊಡ್ಡಬಳ್ಳಾಪುರದಲ್ಲಿ ಪೂರೈಸಿ ನಂತರ ಅವರು ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ.(ನಾಟಕ)ಯ ಮೊದಲ ಬ್ಯಾಚ್ ಪದವೀಧರರಾಗಿದ್ದರು.
ದೊಡ್ಡಬಳ್ಳಾಪುರದಲ್ಲಿ ಕೆ.ಸಿ.ಎನ್.ಗೌಡರು ಎಂದರೆ ದೊಡ್ಡ ಉದ್ಯಮಿಗಳು. ಸುಮಾರು ಇನ್ನೂರಕ್ಕೂ ಹೆಚ್ಚು ಮಗ್ಗಗಳನ್ನು ಹೊಂದಿದ್ದ ನೂರಾರು ಕಾರ್ಮಿಕರಿಗೆ ಕೆಲಸ ನೀಡಿದ್ದ ಕುಟುಂಬ ಅವರದು. ರೇಷ್ಮೆ ಬಟ್ಟೆ ನೇಯ್ಗೆಯಲ್ಲಿ ಎಷ್ಟು ಪರಿಣಿತಿಯೋ ಕನ್ನಡ ಚಿತ್ರರಂಗದ ಮಹತ್ವದ ಚಲನಚಿತ್ರಗಳ ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಹೆಚ್ಚಿಸಿದವರು ಕೆ.ಸಿ.ಎನ್.ಚಂದ್ರಶೇಖರ್.
ತಂದೆ ಕೆ ಸಿ ಎನ್ ಗೌಡರೊಂದಿಗೆ
ಎರಡು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಚೆನ್ನೈನ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿದ್ದರು. ಕೆ.ಸಿ.ಎನ್.ಚಂದ್ರಶೇಖರ್ ಸಿನಿಮಾ ರಂಗದಲ್ಲಿ, ತಮ್ಮ ವ್ಯಾಪಾರ ರಂಗದಲ್ಲಿ ಎಷ್ಟೇ ಖ್ಯಾತಿ, ಹಣ ಸಂಪಾದಿಸಿದರೂ ಅವರಿಗೆ ತಮ್ಮೂರಿನ ಬಗ್ಗೆ ಅಪಾರ ಅಭಿಮಾನವಿತ್ತು. ಅವರ ಪ್ರಾಥಮಿಕ ಶಿಕ್ಷಣ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿಯಲ್ಲಿ ನಂತರ ಪ್ರೌಢಶಾಲೆಗೆ ದೊಡ್ಡಬಳ್ಳಾಪುರದ ಸರ್ಕಾರಿ ಪ್ರೌಢಶಾಲೆ ಸೇರಿದರು. ನಂತರ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದರು.
ದೊಡ್ಡಬಳ್ಳಾಪುರದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಬಂದರೂ ತಮ್ಮ ಬಂಧುಮಿತ್ರರು ಹಾಗೂ ಗೆಳೆಯರನ್ನು ಮಾತನಾಡಿಸುತ್ತಿದ್ದರು. ದೊಡ್ಡಬಳ್ಳಾಪುರದ ಯಾರಾದರೂ ಅವರ ಮನೆಗೆ ಹೋದರೂ ಪ್ರೀತಿಯಿಂದ ಉಪಚರಿಸುತ್ತಿದ್ದರು. ದೊಡ್ಡಬಳ್ಳಾಪುರ ತಾಲೂಕು ಕುಂಚಿಟಿಗರ ಸಂಘದ ಗೌರವಾಧ್ಯಕ್ಷರಾಗಿದ್ದರು. ಬೆಂಗಳೂರಿನ ವಸಂತನಗರದಲ್ಲಿ ವರ ನೇತೃತ್ವದಲ್ಲಿ ಕುಂಚಿಟಿಗ ವಿದ್ಯಾರ್ಥಿಗಳ ನೆರವಿಗೆ ವಿದ್ಯಾರ್ಥಿ ನಿಲಯ ಕಟ್ಟಿಸಿದ್ದರು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾಳಜಿ ಅವರದಾಗಿತ್ತು. ಬಂಗಾರದ ಮನುಷ್ಯ, ಹುಲಿಯ ಹಾಲಿನ ಮೇವು, ಕಸ್ತೂರಿ ನಿವಾಸ, ಬಭ್ರುವಾಹನ, ಸನಾದಿ ಅಪ್ಪಣ್ಣ, ಭಲೇ ಜೋಡಿ, ದಾರಿ ತಪ್ಪಿದ ಮಗ ಇತ್ಯಾದಿ ಚಿತ್ರಗಳು ರಾಜ್ ಕಮಲ್ ಆರ್ಟ್ಸ್ ದೊಡ್ಡಬಳ್ಳಾಪುರ ಮತ್ತು ಕೆಸಿಎನ್ ಮೂವೀಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿದ್ದವು.
ಅಪಾರ ಸಾಹಿತ್ಯ ಪ್ರೇಮಿಯೂ ಆಗಿದ್ದ ಅವರು ಕಳೆದ ಬಾರಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾದ ಕನ್ನಡ ಜಾಗೃತ ಪರಿಷತ್ತಿನ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲೂ ಭಾಗವಹಿಸಿದ್ದರು. ಕೋನೇನಹಳ್ಳಿಯ ಅವರ ಸೋದರ ಸಂಬಂಧಿ ಆಂಜನಪ್ಪ ಅವರು ಊರಿನಲ್ಲಿ ಕೆ.ಸಿ.ಎನ್. ಕುಟುಂಬದವರು ಆಸ್ಪತ್ರೆ ಕಟ್ಟಿಸಿದ್ದಾರೆ. ಅವರು ಕುಂಚಿಟಿಗರ ಅಭಿವೃದ್ಧಿಗೆ ಅಪಾರ ಶ್ರಮವಹಿಸಿ ಕುಂಚಿಟಿಗರ ವಿದ್ಯಾರ್ಥಿ ನಿಲಯ ನಿರ್ಮಿಸಲು ಶ್ರಮಿಸಿದರು ಎಂದರು.
ದೊಡ್ಡಬಳ್ಳಾಪುರದಲ್ಲಿ ನಡೆದ ಕುಂಚಿಟಿಗರ ಸಂಘದ ಸಭೆಯಲ್ಲಿ ಶ್ರೀರಾಮಯ್ಯ, ಕೆಂಪರಾಜು ಹಾಗೂ ಶಿಕ್ಷಕ ಎಂ.ವಿ.ರಾಜ್ ಕುಮಾರ್ ಅವರೊಂದಿಗೆ ಕೆ.ಸಿ.ಎನ್. ಚಂದ್ರು
ಕೆ.ಸಿ.ಎನ್.ಚಂದ್ರಶೇಖರ್ ಅವರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿದ್ದಾಗ ತಮ್ಮ ಊರಿನ ಹಲವು ವಿದ್ಯಾರ್ಥಿಗಳಿಗೆ ಅಲ್ಲಿ ಸೀಟುಗಳನ್ನು ನೀಡಿ ಉತ್ತೇಜಿಸಿದರು ಎಂದು ಅವರನ್ನು ನೆನೆಯುತ್ತಾರೆ. ಕೆ.ಸಿ.ಎನ್.ಚಂದ್ರಶೇಖರ್ ಅವರು ತಮ್ಮ ಊರಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು ಎಂದು ದೊಡ್ಡಬಳ್ಳಾಪುರ ತಾಲೂಕು ಕುಂಚಿಟಿಗರ ಸಂಘದ ಕಾರ್ಯಾಧ್ಯಕ್ಷ ಆರ್.ಕೆಂಪರಾಜು ಹೇಳುತ್ತಾರೆ.
ತಾಲೂಕು ಕುಂಚಿಟಿಗರ ಸಂಘದ ಗೌರವಾಧ್ಯಕ್ಷರಾಗಿದ್ದ ಅವರು ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದರು ಎಂದು ನೆನೆಯುತ್ತಾರೆ. ಅವರ ಸಂಬಂಧಿಯಾದ ಎಂ.ಶ್ರೀರಾಮಯ್ಯ, ಕೆಸಿಎನ್ ಚಂದ್ರಶೇಖರ್ ಅವರ ಅಜ್ಜ ಕೆ.ಚೌಡಯ್ಯ ತಮ್ಮ ಊರು ಕೋನೇನಹಳ್ಳಿ ಬಿಟ್ಟು ದೊಡ್ಡಬಳ್ಳಾಪುರಕ್ಕೆ ಬಂದು ಅಲ್ಲಿ ರಾಗಿ ಮಿಷನ್ ಹಾಕಿ ಅಲ್ಲಿಂದ ತಮ್ಮ ಉದ್ಯಮ ಪ್ರಾರಂಭಿಸಿದರು. ನಂತರ ಮಗ್ಗಗಳಿಂದ ಸಿನಿಮಾವರೆಗೆ ಅವರು ಅಪಾರವಾಗಿ ಪ್ರಗತಿ ಸಾಧಿಸಿದರು ಎನ್ನುತ್ತಾರೆ.
ಶಾಲಾರಂಭದ ಕುರಿತು ಈಗಾಗಲೇ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆಯಾದರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಲಾಕ್ ಡೌನ್ ಜಾರಿಯಲ್ಲಿದ್ದು, ಶಿಕ್ಷಕರ ಚಲನವಲನಕ್ಕೆ ತೊಂದರೆಯಾಗಿರುವುದರಿಂದ ಶಿಕ್ಷಕರು ಲಾಕ್ ಡೌನ್ ತೆರವಾದ ದಿನದಿಂದಲೇ ಶಾಲೆಗಳಿಗೆ ಭೌತಿಕವಾಗಿ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಂಗಳವಾರದಿಂದ ಶಾಲೆಗಳಿಗೆ ಶಿಕ್ಷಕರು ಹಾಜರಾಗಿ ಮಕ್ಕಳ ನೋಂದಣಿ ಪ್ರಾರಂಭಿಸಬೇಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಶಿಕ್ಷಕರ ಚಲನವಲನಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಪೂರ್ಣಗೊಂಡ ನಂತರ ಶಿಕ್ಷಕರು ಶಾಲೆಗಳಿಗೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮೊದಲ ಪಿಯು ಮೌಲ್ಯಾಂಕನ ಅವಧಿ ವಿಸ್ತರಣೆ
ಹಲವು ಉಪನ್ಯಾಸಕ ಸಂಘಟನೆಗಳ ಕೋರಿಕೆಯ ಮೇರೆಗೆ ಮೊದಲ ಪಿ.ಯು.ಸಿ. ಮೌಲ್ಯಾಂಕನ ಪ್ರಕ್ರಿಯೆಯನ್ನು ಎಲ್ಲ ಜಿಲ್ಲೆಗಳ ಲಾಕ್-ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಸಮಯ ವಿಸ್ತರಿಸಿ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಸಹ ಸಚಿವರು ಹೇಳಿದ್ದಾರೆ. ಈ ಕುರಿತಂತೆ ಪದವಿಪೂರ್ವ ಶಿಕ್ಷಕರಿಗೆ ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ಅವರು ಕ್ರಮ ಜರುಗಿಸಲಿದ್ದಾರೆ ಎಂದು ಅವರು ಹೇಳಿದರು.
ಚೈಲ್ಡ್ ಪ್ರೊಫೈಲ್ ನಿಯಮಿತ ದಾಖಲೆ:
ಈ ಬಾರಿ ನಿಗದಿತ ಅವಧಿಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥವಾಗಿ ಜಾರಿಯಲ್ಲಿಡುವ ಅವಶ್ಯಕತೆ ಇದೆ. ಪ್ರತಿ ಸೂಚಿತ ಅವಧಿಗೆ ವಿದ್ಯಾರ್ಥಿಗಳ ಚೈಲ್ಡ್ ಪ್ರೊಫೈಲ್ ಗಳನ್ನು ನಿಯಮಿತವಾಗಿ ದಾಖಲಿಸುವ, ಕಲಿಕಾ ಸಾಮರ್ಥ್ಯಗಳನ್ನು ಅಳೆಯುವ ಮಾನದಂಡಗಳಾಗಿ ರೂಪಿಸುವ ಸದೃಢ ವ್ಯವಸ್ಥೆಯನ್ನು ಜಾರಿಯಲ್ಲಿಡುವ ವ್ಯವಸ್ಥೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಅತ್ಯವಶ್ಯಕವಾಗಿದ್ದು, ಇಂಥಹ ಸಂದರ್ಭದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಮಂಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ
ಈ ಬಾರಿಯ ಎರಡು ದಿನಗಳ ಎಸ್.ಎಸ್.ಎಲ್.ಸಿ. ಪರೀಕ್ಷೆ ನಿರ್ವಹಣೆ ಕುರಿತಂತೆ ಜೂ. 28 ರಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿಡಿಯೋ ಸಂವಾದ ಸಭೆ ನಡೆಯಲಿದ್ದು, ಸಭೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಇಲಾಖೆಯ ಆಯುಕ್ತರನ್ನು ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಕ್ರಮಗಳ ಕುರಿತು ವಿಸ್ತ್ರತ ಚರ್ಚೆ ನಡೆಸಿ ಮಾರ್ಗದರ್ಶನ ನೀಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಕೊಠಡಿ ಮೇಲ್ವಿಚಾರಕ ಶಿಕ್ಷಕರಿಗೆ ಕೋವಿಡ್ ಲಸಿಕೆ
ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕರುಗಳಿಗೆ ಕೋವಿಡ್ – 19ರ ಲಸಿಕೆಯನ್ನು ನೀಡುವ ಪ್ರಕ್ರಿಯೆಯನ್ನು ಪರೀಕ್ಷೆಗೆ ಮುನ್ನ ಪೂರ್ಣಗೊಳಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ವಹಿಸಬೇಕೆಂದೂ ಸೂಚಿಸಲಾಗಿದೆ ಎಂದೂ ಸಚಿವರು ಹೇಳಿದರು.
ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟ
ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯ ಕುರಿತಂತೆ ನಿಯಮಗಳ ಆಕ್ಷೇಪಣಾ ಸಲ್ಲಿಕೆ ಅವಧಿ ಪೂರ್ಣಗೊಳ್ಳುತಿರುವ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರದ ಅಧಿಸೂಚನೆಯನ್ನು ಹೊರಡಿಸಿ ಸಾಧ್ಯವಾದಷ್ಟು ಶೀಘ್ರವೇ ವರ್ಗಾವಣಾ ಪ್ರಕ್ರಿಯೆ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಯಾವುದೇ ಅಡೆತಡೆಗಳು ಬಾರದ ರೀತಿಯಲ್ಲಿ ತಂತ್ರಜ್ಞಾನಾಧಾರಿತ ವರ್ಗಾವಣಾ ಪ್ರಕ್ರಿಯೆ ನಡೆಸಬೇಕೆಂದು ಸೂಚಿಸಲಾಗಿದೆಯೆಂದರು.
ಪ್ಯಾಕೇಜ್ ಪರಿಹಾರ ನೇರ ಶಿಕ್ಷಕರ ಖಾತೆಗೆ
ಖಾಸಗಿ ಖಾಸಗಿ ಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿಗಳು ಘೋಷಿಸಿರುವ ಪ್ಯಾಕೇಜ್ ಪರಿಹಾರವನ್ನು ಕ್ಲಪ್ತ ಸಮಯದಲ್ಲಿ ಫಲಾನುಭವಿಗಳಿಗೆ ನೇರವಾಗಿ ವಿತರಿಸುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಬೇಕೆಂದೂ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಿಕ್ಷಕರ, ಶಿಕ್ಷಕೇತರರ ಹಾಗೂ ಅತಿಥಿ ಶಿಕ್ಷಕರ ಬ್ಯಾಂಕ್‌ಖಾತೆಗಳ ವಿವರಗಳನ್ನು ಶೀಘ್ರ ಸಂಗ್ರಹಿಸಿ ಅನುದಾನವನ್ನು ನೇರ ಶಿಕ್ಷಕರ ಖಾತೆಗಳಿಗೆ ವರ್ಗಾಯಿಸಬೇಕು. ಅತ್ಯಂತ ಸಮರ್ಪಕವಾಗಿ ಈ ಪ್ರಕ್ರಿಯೆ ನಿರ್ವಹಣೆಯಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್, ಪದವಿಪೂರ್ವ ಶಿಕ್ಷಣ ನಿರ್ದೇಶಕಿ ಸ್ನೇಹಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
ಶನಿವಾರ ರಾತ್ರಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೊಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಚಿಂತಾಜನಕ ಸ್ಥಿತಿಯಲ್ಲೇ ಇದ್ದಾರೆ. ಅವರ ಮೆದುಳು ಸದ್ಯಕ್ಕೆ ಕೆಲಸ ಮಾಡುತ್ತಿಲ್ಲ. ಆದರೆ ಇತರ ಅಂಗಾಗಗಳು ಸುಸ್ಥಿತಿಯಲ್ಲಿವೆ. ಹೀಗಾಗಿ ಸಂಜೆಯ ನಂತರ ನಡೆಯುವ ಮತ್ತೊಂದು ಪರೀಕ್ಷೆ ಅವರ ಆರೋಗ್ಯದ ಸ್ಥಿತಿಯನ್ನು ತಿಳಿಸಲಿದೆ.
ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತ ಜೀವನ್ಮರಣ ಹೋರಾಟ ನಡೆಸುತ್ತಿರುವ ವಿಜಯ್ ಅವರ ಅಂಗಾಂಗಳನ್ನು ದಾನ ಮಾಡುವ ನಿರ್ಧಾರವನ್ನು ಅವರ ಕುಟುಂಬ ಸದಸ್ಯರು ಕೈಗೊಂಡಿದ್ದು, ಸದ್ಯಕ್ಕೆ ಅಪೊಲೋ ವೈದ್ಯರೂ ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಟ ಜಗ್ಗೇಶ ಕೂಡ ಜತೆಯಲ್ಲಿದ್ದರು.
ಕಠಿಣ ಕೋವಿಡ್ ನಿರ್ಬಂಧಗಳಿರುವ 11 ಜಿಲ್ಲೆಗಳ ಶಿಕ್ಷಕರು ನಿರ್ಬಂಧ ಸಡಿಲವಾಗುವವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ .ಇತರ ಜಿಲ್ಲೆಗಳ ಶಿಕ್ಷಕರು ನಾಳೆಯಿಂದಲೇ ಶಾಲೆಗಳಿಗೆ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಇದೇ ಜೂನ್ 15ರಿಂದ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಮತ್ತು ಶಿಕ್ಷಕರು ಶಾಲೆಗೆ ಹಾಜರಾಗಲು ಆದೇಶ ನೀಡಲಾಗಿತ್ತು.ಆದರೆ ಇನ್ನು ಕೆಲ ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧಗಳು ಮುಂದುವರಿದಿರುವುದರಿಂದ ಗೊಂದಲ ಉಂಟಾಗಿತ್ತು . ಹೀಗಾಗಿ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತವಾಗಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ -ಗೈಡ್- ಕೋವಿಡ್ ಸಂಕಷ್ಟದ ಪರಿಹಾರವಾಗಿ ರೂ.5000 ನೀಡವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಪ್ರಕಟಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಲ್ಲಿ 384 ನೋಂದಾಯಿತ ಪ್ರವಾಸಿ ಗೈಡ್‍ಗಳಿದ್ದು, ಅವರೆಲ್ಲರಿಗೂ ಕೋವಿಡ್ ಸಂಕಷ್ಟದ ಸಮಯದಲ್ಲಿ ನೆರವಾಗಲು ನಿರ್ಧರಿಸಲಾಗಿದೆ.ಹೋಟೆಲ್ ಕಾರ್ಮಿಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಯೋಜನೆಯಡಿ ರೂ.3000 ಗಳನ್ನು ನೀಡಲು ಸಹ ಆರ್ಥಿಕ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿ ಸರ್ಕಾರಿ ಆದೇಶ ಹೊರಡಲಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.
ಬೆಂಗಳೂರಿನ ಖನಿಜ ಭವನದಲ್ಲಿರುವ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಕಛೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೋವಿಡ್ ಲಾಕ್‍ಡೌನ್‍ನಿಂದ ಪ್ರವಾಸೋದ್ಯಮ ಕ್ಷೇತ್ರದ ಮೇಲಾಗಿರುವ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು.
ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಪದಾಧಿಕಾರಿಗಳ ಜೊತೆ ಸಹ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸೊಸೈಟಿಯ ಪದಾಧಿಕಾರಿಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಕಷ್ಟಗಳನ್ನು ವಿವರಿಸಿ ಪರಿಹಾರ ನೀಡುವಂತೆ ಮನವಿ ಮಾಡಿದರು.
ಆಸ್ತಿ ತೆರಿಗೆಯನ್ನು ಮನ್ನಾ ಮಾಡಬೇಕು. ಮದ್ಯ ಪರವಾನಗಿ ಶುಲ್ಕವನ್ನು ಶೇ.50 ರಷ್ಟು ಮನ್ನಾ ಮಾಡಿ ಉಳಿದ ಶೇ.50 ರಷ್ಟು ಶುಲ್ಕವನ್ನು ಕಟ್ಟಲು ಈ ವರ್ಷದ ಡಿಸೆಂಬರ್ ಅಂತ್ಯದವರೆಗೆ ಸಮಯ ವಿಸ್ತರಿಸಬೇಕು ಹಾಗೂ ವಿದ್ಯುತ್‍ಚ್ಛಕ್ತಿ ದರದಲ್ಲಿ ರಿಯಾಯಿತಿ ನೀಡಬೇಕು.
ಪ್ರವಾಸೋದ್ಯಮ ವಾಹನಗಳ ತೆರಿಗೆಯನ್ನು ಆರು ತಿಂಗಳ ಅವಧಿಗೆ ಮನ್ನಾ ಮಾಡಬೇಕು. ಪ್ರವಾಸಿ ವಾಹನಗಳನ್ನು ಚಲಾಯಿಸುತ್ತಿರುವ ಚಾಲಕರಿಗೆ ರೂ.3000/-ಗಳ ಕೋವಿಡ್ ಪರಿಹಾರ ಹಣವಾಗಿ ನೀಡಬೇಕು.ರಾಜ್ಯದಲ್ಲಿ ಓಲಾ, ಉಬರ್ ಸೇರಿದಂತೆ ಒಟ್ಟು 3 ಲಕ್ಷ 30 ಸಾವಿರ ಪ್ರವಾಸಿ ವಾಹನ ಚಾಲಕರಿದ್ದು, ಅವರೆಲ್ಲರಿಗೂ ಕೋವಿಡ್ ಪ್ಯಾಕೇಜ್ ಹಣ ನೀಡಬೇಕೆಂದು ಒತ್ತಾಯಿಸಿದರು.
ಇದೇ ತಿಂಗಳ 21 ರಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್‍ಗಳನ್ನು ತೆಗೆಯಲು ಅವಕಾಶ ನೀಡಬೇಕು. ಟೂರ್ ಆಪರೇಟರ್ಸ್ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಬೇಕೆಂದು ಸಹ ಮನವಿ ಮಾಡಿದರು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೆ.ಎಸ್.ಎಫ್.ಸಿ.ಯಿಂದ ತೆಗೆದುಕೊಂಡಿರುವ ಸಾಲದ ಮೇಲಿನ ಬಡ್ಡಿಗೆ ರಿಯಾಯಿತಿ ಕೊಡಿಸಬೇಕು ಎಂದು ಸಹ ಕೋರಿದರು.
ರಾಜ್ಯದಲ್ಲಿರುವ ಎಲ್ಲಾ ಹೋಟೆಲ್‍ಗಳಿಗೂ, ಸ್ಟಾರ್ ಹೋಟೆಲ್‍ಗಳಿಗೆ ನೀಡಿರುವ ಕೈಗಾರಿಕಾ ಸ್ಥಾನಮಾನ ವಿಸ್ತರಿಸಬೇಕೆಂದು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಅಧ್ಯಕ್ಷ ಕೆ.ಶ್ಯಾಮರಾಜ್, ಉಪಾಧ್ಯಕ್ಷ ವಿನಿತ್ ವರ್ಮಾ, ಕಾರ್ಯದರ್ಶಿ ಮಹಾಲಿಂಗಯ್ಯ ಇವರು ಸಚಿವರಿಗೆ ಮನವಿ ಪತ್ರ ನೀಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದರು.
ಜೂನ್ ತಿಂಗಳ ಅಂತ್ಯಕ್ಕೆ ವಿಜಯಪುರ, ಹಂಪಿ, ಬಾದಾಮಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ತ್ರೀ ಸ್ಟಾರ್ ಹೋಟೆಲ್‍ಗಳಿಗೆ ಶಿಲಾನ್ಯಾಸ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ತಿಂಗಳ ಅಂತ್ಯಕ್ಕೆ ಪ್ರವಾಸೋದ್ಯಮ ನೀತಿಗೆ ಮಾರ್ಗಸೂಚಿಗಳನ್ನು ಅಳವಡಿಸಿ, ಸರ್ಕಾರಿ ಆದೇಶ ಹೊರಡಿಸಲು ಹಾಗೂ ಸ್ಟಾರ್ ಹೋಟೆಲ್‍ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿರುವ ಬಗ್ಗೆ ಸಹ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಹೆಲಿಟೂರಿಸಂ, ಸಿ-ಪ್ಲೈನ್ ಹಾಗೂ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ವಾಟರ್ ಸ್ಪೋರ್ಟ್ಸ್ ಆರಂಭಿಸುವುದು, ನಂದಿಬೆಟ್ಟ ಹಾಗು ಇತರ ಕಡೆ ರೋಪ್-ವೇಗಳನ್ನು ನಿರ್ಮಾಣ ಮಾಡುವ ಯೋಜನೆಗಳಿಗೆ ವೇಗ ನೀಡುವಂತೆ ಇದೇ ವೇಳೆ ಅಧಿಕಾರಿಗಳಿಗೆ ಆದೇಶಿಸಿದರು. ಕರಾವಳಿ ಹಾಗು ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಪ್ರವಾಸೋದ್ಯಮ ಯೋಜನೆಗಳಿಗೆ ಆದ್ಯತೆ ಮೇಲೆ ಕ್ರಮ ಕೈಗೊಂಡು ನಿಗಧಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ ಕುಮಾರ್ ಪಾಂಡೆ, ನಿರ್ದೇಶಕಿ ಸಿಂಧು ಬಿ.ರೂಪೇಶ್, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮಾ ಹಾಗೂ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಗತಿ ಪರಿಶೀಲನೆ ಸಭೆಯ ನಂತರ ಸಚಿವರು ಚಿತ್ರಕಲಾ ಪರಿಷತ್‍ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯಿಂದ ಟೂರ್ ಆಪರೇಟರ್ಸ್ ಹಾಗೂ ಚಾಲಕರಿಗೆ ಆಯೋಜಿಸಿದ್ದ ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ, ಸಚಿವರು ಚಾಲನೆ ನೀಡಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಪ್ರಥಮ ಆದ್ಯತೆಯಾಗಿ ಕೋವಿಡ್ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಸಚಿವರು ತಿಳಿಸಿದರು.
ತಮ್ಮ ಜೀವವನ್ನು ಒತ್ತೆ ಇಟ್ಟು ಶತ್ರು ರಾಷ್ಟ್ರದ ವಿರುದ್ಧ ಸೈನಿಕರು ಯುದ್ಧದಲ್ಲಿ ಹೋರಾಡುತ್ತಿದ್ದರು. ಗಾಯಗೊಂಡ ನೂರಾರು ಸೈನಿಕರನ್ನು ಮಿಲಿಟರಿ ಆಸ್ಪತ್ರೆಗೆ ತರಲಾಗುತಿತ್ತು. ಜೀವನ್ಮರಣದ ಹೋರಾಟದಲ್ಲಿದ್ದ ಸೈನಿಕರಿಗೆ ಬ್ಲಡ್ ಬ್ಯಾಂಕ್ ನಿಂದ ರಕ್ತ ತರಿಸಿ ವರ್ಗಾಯಿಸಲಾಗುತಿತ್ತು. ಬ್ಲಡ್ ಬ್ಯಾಂಕ್ ನಲ್ಲಿ ರಕ್ತ ಬಾಟಲ್ಗಳ ಶೇಖರಣೆ ಕಡಿಮೆಯಾಗುತ್ತಿದ್ದಂತೆ ರಕ್ತದಾನಕ್ಕಾಗಿ ಘೋಷಣೆಯನ್ನು ನೀಡಲಾಯಿತು. ಅನೇಕ ಜನರು ಬಂದು ತಮ್ಮ ರಕ್ತವನ್ನು ನೀಡಿದರು. ದಾನಿಗಳ ನೆರವಿನಿಂದ ಸಾವಿನ ಅಂಚಿನಲ್ಲಿದ್ದ ಎಷ್ಟೋ ಸೈನಿಕರನ್ನು ಬದುಕಿಸಲಾಯಿತು.
ಇನ್ನೊಂದು ಘಟನೆ: ರಸ್ತೆ ಅಪಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ತುಂಬ ರಕ್ತಸ್ರಾವ ಆಗಿರುವುದರಿಂದ ತಕ್ಷಣ ರಕ್ತವನ್ನು ನೀಡಬೇಕಾಗಿತ್ತು. ವೈದ್ಯರು ಆತನ ರಕ್ತ ಪರೀಕ್ಷೆ ಮಾಡಿದಾಗ ಅದು ಎಬಿ ನೆಗೆಟಿವ್ (AB−). ಅತಿ ವಿರಳ ಗುಂಪಿನ ಈ ರಕ್ತ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ಸಂಗ್ರಹ ಇರಲಿಲ್ಲ. ರೋಗಿಯ ಕಡೆಯವರಿಗೆ AB− ರಕ್ತವನ್ನು ತುರ್ತಾಗಿ ವ್ಯವಸ್ಥೆ ಮಾಡಲು ಹೇಳಲಾಯಿತು. ಯಾರಲ್ಲಿ ಕೇಳಿದರೂ AB− ರಕ್ತದ ಗುಂಪಿನವರು ಸಿಗಲಿಲ್ಲ. ಚಿಂತೆಗೀಡಾದ ರೋಗಿಯ ಮನೆಯವರು ಸೋಷಿಯಲ್ ಮಾಧ್ಯಮದ ಮೂಲಕ ವಿನಂತಿಸಿಕೊಂಡರು. ಇದನ್ನು ನೋಡಿದ ಅದೇ ರಕ್ತದ ಗುಂಪಿನ ಇಬ್ಬರು ಉದಾರಿಗಳು ಬಂದು ತಮ್ಮ ರಕ್ತವನ್ನು ನೀಡಿದರು. ತಕ್ಷಣಕ್ಕೆ ರಕ್ತದ ವ್ಯವಸ್ಥೆ ಆಗಿರುವುದರಿಂದ ವೈದ್ಯರು ಶಸ್ತ್ರಕ್ರಿಯೆಯನ್ನು ಯಶಸ್ವಿಗೊಳಿಸಿ ರೋಗಿಯನ್ನು ಉಳಿಸಿದರು. ಒಂದು ವೇಳೆ ಆ ಇಬ್ಬರು ಹೃದಯವಂತರು ಬಂದು ರಕ್ತದಾನ ಮಾಡದೆ ಹೋಗಿರದಿದ್ದರೆ ಅಪಘಾತಕ್ಕೆ ಒಳಗಾದ ವ್ಯಕ್ತಿಯ ಪ್ರಾಣಪಕ್ಷಿ ಅಂದೇ ಹಾರಿಹೋಗುತಿತ್ತು.
ಸತ್ಯ ಘಟನೆ ಆಧರಿತ ಈ ಸನ್ನಿವೇಶಗಳು ರಕ್ತದಾನದ ಮಹತ್ವವನ್ನು ಸಾರಿ ಹೇಳುತ್ತದೆ. ವಿಶ್ವದಾದ್ಯಂತ ಪ್ರತಿ ನಿತ್ಯ ಇಂತಹ ಅನೇಕ ಘಟನೆಗಳು ನಡೆಯುತ್ತಾ ಇರುತ್ತವೆ. ಇಂದು ಜೂನ್ 14, ವಿಶ್ವ ರಕ್ತ ದಾನಿಗಳ ದಿನ; ವಿಶ್ವ ಆರೋಗ್ಯ ಸಂಸ್ಥೆಯ ನೇತ್ರತ್ವದಲ್ಲಿ ಜಗತ್ತಿನಾದ್ಯಂತ ರಕ್ತದಾನದ ಮಹತ್ವ, ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲು ಮೀಸಲಾಗಿಟ್ಟಿರುವ ದಿನ. ನಮ್ಮ ದೇಶದಲ್ಲಿ ‘ರಕ್ತದಾನ ಮಹಾದಾನ’ ಎಂಬ ಮಾತಿದೆ. ಇದನ್ನು ಅರಿತವರು ಶಿಬಿರಗಳನ್ನು ಏರ್ಪಡಿಸಿದಾಗ ಅಥವಾ ತುರ್ತು ಅಗತ್ಯತೆ ಇರುವಾಗ ಸ್ವಯಂಪ್ರೇರಿತರಾಗಿ ರಕ್ತ ನೀಡುವ ಲಕ್ಷಾಂತರ ಜನರು ಇರುವುದು ಒಂದು ಅಭಿಮಾನದ ವಿಷಯ.
ವಿಶ್ವ ರಕ್ತದಾನಿಗಳ ದಿನದ ಈ ಸಂದರ್ಭದಲ್ಲಿ ಒಂದಿಷ್ಟು ರಕ್ತದಾನದ ಬಗ್ಗೆ ಅರಿಯೋಣ
ಭಾರತದಲ್ಲಿ ರಕ್ತದಾನಕ್ಕೆ ಸಂಬಂಧಿಸಿದಂತೆ ಒಂದು ಇತಿಹಾಸವಿದೆ. 1942 ರ ಎರಡನೆಯ ಮಹಾಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರನ್ನು ಬದುಕಿಸಲು ರಕ್ತದಾನ ಶಿಬಿರವನ್ನು ಮೊದಲ ಬಾರಿಗೆ ಆಯೋಜಿಸಲಾಯಿತು.
ಭಾರತದಲ್ಲಿ ಪ್ರಥಮ ಬ್ಲಡ್ ಬ್ಯಾಂಕ್ ನ್ನು ರೆಡ್ ಕ್ರಾಸ್ ಸಂಸ್ಥೆಯ ನಿರ್ವಹಣೆಯಲ್ಲಿ ಮಾರ್ಚ್ 1942 ರಲ್ಲಿ ಕೋಲ್ಕತ್ತಾದಲ್ಲಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಹೈಜೀನ್ ಅಂಡ್ ಪಬ್ಲಿಕ್ ಹೆಲ್ತ್ (All India Institute of Hygiene and Public Health) ಸಂಸ್ಥೆಯಲ್ಲಿ ಸ್ಥಾಪಿಸಲಾಯಿತು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯನ್ನು (Indian Red Cross Society) 1920 ರಲ್ಲಿ ಸ್ಥಾಪಿಸಲಾಗಿದ್ದು ಅದು ದೇಶಾದ್ಯಂತ 166 ಬ್ಲಡ್ ಬ್ಯಾಂಕುಗಳನ್ನು ಹೊಂದಿದೆ. ಹಾಗೂ ಅನೇಕ ನಗರ, ಪಟ್ಟಣಗಳಲ್ಲಿ ರಕ್ತದಾನ ಶಿಬಿರಗಳನ್ನು ಸಕ್ರಿಯವಾಗಿ ನಡೆಸುತ್ತಾ ಬರುತ್ತಿದೆ.
ಆರೋಗ್ಯವಂತ ಜನರನ್ನು ರಕ್ತದಾನಕ್ಕೆ ಪ್ರೋತ್ಸಾಹಿಸಲು ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನಾಗಿ (National Voluntary Blood Donation Day) ಆಚರಿಸಲಾಗುತ್ತದೆ.
ಭಾರತೀಯ ಜನಸಂಖ್ಯೆಯಲ್ಲಿ ವಿವಿಧ ರಕ್ತ ಗುಂಪು ವ್ಯಕ್ತಿಗಳ ಶೇಕಡಾವಾರು ಪ್ರಮಾಣ ಹೀಗಿದೆ:
ದಾನಿಗಳ ಜನಸಂಖ್ಯೆಯ 94.61% ರಷ್ಟು Rh+ ಮತ್ತು ಉಳಿದವರು Rh-
ರಕ್ತ ವರ್ಗಾವಣೆಗೆ ಸಂಬಂಧಿಸಿದ ಸೇವೆಗಳು ಮತ್ತು ಸಂಪನ್ಮೂಲಗಳ ಮಾಹಿತಿ ಮತ್ತು ದಾನಿಗಳು ತಮ್ಮ ಅನುಭವಗಳನ್ನು ದಾಖಲಿಸಲು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಒಂದು ರಾಷ್ಟ್ರೀಯ ವೆಬ್ ಪೋರ್ಟಲ್ (ಜಾಲತಾಣ)ನ್ನು ಸ್ಥಾಪಿಸಿದೆ: http://nbtc.naco.gov.in/. ಪ್ರಧಾನಿ ನರೇಂದ್ರ ಮೋದಿ ರಕ್ತದಾನವನ್ನು ಸಮಾಜಕ್ಕೆ ಮಾಡುವ ಬಹು ದೊಡ್ಡ ಸೇವೆ ಎಂದು ಹೇಳಿದ್ದಾರಲ್ಲದೆ ಪ್ರತಿ ರಕ್ತದಾನಿಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ.
On World Blood Donor Day I congratulate every one who keeps donating blood. It is a great service to society.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಕ್ತದಾನ ಮಾಡಲು ಕೆಲವು ಮಾರ್ಗಸೂಚಿಗಳನ್ನು ರೂಪಿಸಿವೆ. ಅದರ ಪ್ರಕಾರ ಬ್ಲಡ್ ಬ್ಯಾಂಕುಗಳು ಮತ್ತು ರಕ್ತದಾನ ಶಿಬಿರಗಳನ್ನು ನಡೆಸುವ ಸಂಸ್ಥೆಗಳು ಅನುಸರಿಸಬೇಕಾಗಿರುವ ಮಾನದಂಡಗಳು ಹೀಗಿವೆ:
ದಾನಿಯು ಸದೃಢ ಮತ್ತು ಆರೋಗ್ಯವಂತನಾಗಿರಬೇಕು ಹಾಗೂ ಯಾವುದೇ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರಬಾರದು.
ದಾನಿಯು 18 ರಿಂದ 65 ವರ್ಷ ವಯಸ್ಸಿನೊಳಗಿನವರಾಗಿರಬೇಕು ಮತ್ತು ಕನಿಷ್ಠ 50 ಕೆ.ಜಿ. ದೇಹ ತೂಕ ಹೊಂದಿರಬೇಕು.
ನಾಡಿ ದರ (Pulse rate) 50 ಮತ್ತು 100 ರ ನಡುವೆ ಇರಬೇಕು.
ಹಿಮೋಗ್ಲೋಬಿನ್ ಮಟ್ಟ ಕನಿಷ್ಠ 12.5 ಗ್ರಾಂ /ಡೆಸಿಲೀಟರ್ ಇರಬೇಕು.
ರಕ್ತದೊತ್ತಡ: ಡಯಾಸ್ಟೊಲಿಕ್: 50–100 mm Hg, ಸಿಸ್ಟೊಲಿಕ್: 100–180 mm Hg ಇರಬೇಕು.
ದೇಹದ ಉಷ್ಣತೆ ಸಾಮಾನ್ಯವಾಗಿರಬೇಕು, ಮೌಖಿಕ ತಾಪಮಾನವು 37.5º C ಗಿಂತ ಮೀರಿರಬಾರದು.
ಒಂದು ರಕ್ತದಾನದಿಂದ ಇನ್ನೊಂದರ ನಡುವಿನ ಅವಧಿ 3 ತಿಂಗಳಿಗಿಂತ ಹೆಚ್ಚು ಇರಬೇಕು.
ಇವಿಷ್ಟು ಅರ್ಹತೆ ಇದ್ದರೆ ಯಾವುದೇ ವ್ಯಕ್ತಿಯು ರಕ್ತದಾನ ಮಾಡಬಹುದು. ಈ ಎಲ್ಲಾ ಮಾನದಂಡಗಳನ್ನು ಪರೀಕ್ಷಿಸಿ ವೈದ್ಯಕೀಯ ಸಿಬ್ಬಂದಿ ದಾನಿಗಳ ರಕ್ತವನ್ನು ಪಡೆಯುತ್ತಾರೆ.
ಈ ಕೆಳಗಿನ ಗುಣಲಕ್ಷಣ /ಅಭ್ಯಾಸ / ಸಮಸ್ಯೆಗಳಿರುವ ವ್ಯಕ್ತಿಗಳು ರಕ್ತದಾನ ಮಾಡಲು ಅನರ್ಹರಾಗಿರುತ್ತಾರೆ.
ಎಚ್ಐವಿ (HIV) ಪಾಸಿಟಿವ್ ಎಂದು ಪರೀಕ್ಷಿಸಲ್ಪಟ್ಟ ವ್ಯಕ್ತಿ.
ಹೃದಯ ಸ್ತಂಭನ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಅಪಸ್ಮಾರ, ಮೂತ್ರಪಿಂಡದ ಕಾಯಿಲೆಗಳು ಮತ್ತು ಮಧುಮೇಹ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು.
ಕಳೆದ 6 ತಿಂಗಳುಗಳಲ್ಲಿ ಕಿವಿ / ದೇಹ ಚುಚ್ಚುವಿಕೆ ಅಥವಾ ಹಚ್ಚೆ ಹಾಕಿಸಿಕೊಂಡ ವ್ಯಕ್ತಿ.
ಕಳೆದ 1 ತಿಂಗಳಲ್ಲಿ ರೋಗನಿರೋಧಕ ಶಕ್ತಿಯನ್ನು (ವ್ಯಾಕ್ಸಿನೇಷನ್) ಪಡೆದ ವ್ಯಕ್ತಿಗಳು.
ಕಳೆದ 6 ತಿಂಗಳುಗಳಲ್ಲಿ ರೇಬೀಸ್‌ಗೆ ಚಿಕಿತ್ಸೆ ಪಡೆದ ಅಥವಾ ಹೆಪಟೈಟಿಸ್ ಬಿ ಲಸಿಕೆ ಪಡೆದ ವ್ಯಕ್ತಿಗಳು.
ಕಳೆದ 24 ಗಂಟೆಗಳಲ್ಲಿ ಮದ್ಯ ಸೇವಿಸಿದ ವ್ಯಕ್ತಿ.
ಥಲಸ್ಸೆಮಿಯಾ ಮತ್ತು ಹಿಮೋಫಿಲಿಯಾದಂತಹ ಆನುವಂಶಿಕ ಕಾಯಿಲೆ ಇರುವ ವ್ಯಕ್ತಿಗಳು ಗರ್ಭಿಣಿಯರು ಅಥವಾ ಸ್ತನ್ಯಪಾನ ಮಾಡುವ ಮಹಿಳೆಯರು.
ಕಳೆದ 1 ತಿಂಗಳಲ್ಲಿ ಪ್ರಮುಖ ದಂತ ಅಥವಾ ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ವ್ಯಕ್ತಿಗಳು.
ಕಳೆದ 6 ತಿಂಗಳಲ್ಲಿ ಗರ್ಭಪಾತಕ್ಕೊಳಗಾದ ಮಹಿಳೆಯರು.
ಈ ಹಿಂದೆ ಅಪಸ್ಮಾರ, ಕ್ಷಯ, ಅಲರ್ಜಿಯ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು.
ಪ್ರಸ್ತುತ ಸಕ್ರಿಯ ರೋಗಲಕ್ಷಣಗಳೊಂದಿಗೆ ಆಸ್ತಮಾ ಹೊಂದಿರುವ ವ್ಯಕ್ತಿಗಳು, ಮತ್ತು ತೀವ್ರವಾದ ಆಸ್ತಮಾ ರೋಗಿಗಳು.
ರಕ್ತದಾನದಬಗ್ಗೆಇರುವಕೆಲವುತಪ್ಪುಕಲ್ಪನೆಗಳು:
ರಕ್ತದಾನಕ್ಕೆ ದಿನವಿಡೀ ಆಸ್ಪತ್ರೆಯಲ್ಲಿ / ಶಿಬಿರದಲ್ಲಿ ಇರಬೇಕಾಗುತ್ತದೆ (ನಿಜಸಂಗತಿ: ರಕ್ತದಾನವು ಸುಮಾರು ಅರ್ಧ ಘಂಟೆಯ ಸಮಯ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಪ್ರಾಥಮಿಕ ತನಿಖೆಗಾಗಿ ಸ್ವಲ್ಪ ಸಮಯ ಬೇಕಾಗಬಹುದು).
ರಕ್ತದಾನ ಮಾಡುವುದರಿಂದ ಸೋಂಕು ಉಂಟಾಗುತ್ತದೆ (ನಿಜಸಂಗತಿ: ದಾನಿಗೆ ಯಾವುದೇ ಸೋಂಕು ಬರದಂತೆ ನೋಡಿಕೊಳ್ಳಲು ಎಲ್ಲಾ ಬ್ಲಡ್ ಬ್ಯಾಂಕ್‌ಗಳಲ್ಲಿ ಮತ್ತು ಶಿಬಿರಗಳಲ್ಲಿ ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ).
ರಕ್ತದಾನ ಮಾಡುವಾಗ ತುಂಬಾ ನೋವು ಉಂಟಾಗುತ್ತದೆ (ನಿಜಸಂಗತಿ: ಸೂಜಿಯನ್ನು ಚುಚ್ಚುವಾಗ ಸ್ವಲ್ಪ ಮಟ್ಟಿನ ನೋವು ಉಂಟಾಗಬಹುದು. ರಕ್ತ ವರ್ಗಾವಣೆಯಾಗುವಾಗ ನೋವಿನ ಅನುಭವ ಆಗುದಿಲ್ಲ).
ರಕ್ತದಾನ ಮಾಡುವುದರಿಂದ ಪುರುಷರಲ್ಲಿ ಪುರುಷತ್ವ ಕಡಿಮೆಯಾಗುತ್ತದೆ ಮತ್ತು ಹೆಂಗಸರಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತದೆ (ನಿಜಸಂಗತಿ: ಈವರೆಗೆ ಈ ನಂಬಿಕೆಗಳಿಗೆ ಯಾವುದೇ ವೈಜ್ಞಾನಿಕ / ವೈದ್ಯಕೀಯ ಪುರಾವೆ ಇಲ್ಲ).
ರಕ್ತದಾನ ಮಾಡಿದ ನಂತರ ಒಂದು ದಿನ ಸಂಪೂರ್ಣ ವಿಶ್ರಾಂತಿ ಬೇಕಾಗುತ್ತದೆ (ನಿಜಸಂಗತಿ: ರಕ್ತದಾನ ಮಾಡಿ ಸ್ವಲ್ಪ ವಿಶ್ರಾಂತಿ ಪಡೆದು ದೈನಂದಿನ ಕೆಲಸಕ್ಕೆ ಹಿಂತಿರುಗಬಹುದು. ರಕ್ತದಾನದ ನಂತರ 24 ಗಂಟೆಗಳ ಒಳಗೆ 8-10 ಗ್ಲಾಸ್ ನೀರು ಕುಡಿಯುವುದು, ನೇರ ಸೂರ್ಯನ ಬೆಳಕಿನಿಂದ ದೂರವಿರುವುದು ಮುಂದಿನ 3-4 ಗಂಟೆಗಳ ಕಾಲ ವಾಹನ ಚಲಾಯಿಸುವುದು, ಧೂಮಪಾನ ಅಥವಾ ಮುಂದಿನ 24 ಗಂಟೆಗಳ ಕಾಲ ಮದ್ಯ ಸೇವನೆ ಮಾಡದಿರುವುದು ಮುಂತಾದ ಕೆಲವು ಮುನ್ನೆಚ್ಚರಿಕೆಗಳು ತೆಗೆದುಕೊಳ್ಳಬೇಕು).
ಭಾರತದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆ 2006-2007ರಲ್ಲಿ 54.4% ರಿಂದ 2011–2012ರಲ್ಲಿ 83.1% ಕ್ಕೆ ಏರಿಕೆಯಾಗಿದೆ. ರಕ್ತದ ಘಟಕಗಳ ಸಂಖ್ಯೆ 2006–2007ರಲ್ಲಿ 4.4 ಮಿಲಿಯನ್ ಯುನಿಟ್‌ಗಳಿಂದ 2012–2013ರಲ್ಲಿ 9.3 ಮಿಲಿಯನ್ ಯೂನಿಟ್‌ಗಳಿಗೆ ಏರಿಕೆ ಆಗಿದೆ. ಆದಾಗ್ಯೂ, ಇತ್ತೀಚಿನ ವರದಿಯ ಪ್ರಕಾರ ಭಾರತವು ವಿಶ್ವದ ಅತಿದೊಡ್ಡ ರಕ್ತದ ಕೊರತೆಯನ್ನು ಹೊಂದಿರುವ ರಾಷ್ಟ್ರ ಎಂದು ಪರಿಗಣಿಸಲಾಗಿದೆ. ಎಲ್ಲಾ ರಾಜ್ಯಗಳು ಒಟ್ಟಾಗಿ 41 ಮಿಲಿಯನ್ ಯುನಿಟ್ಗಳ ಕೊರತೆಯನ್ನು ಎದುರಿಸುತ್ತಿವೆ ಮತ್ತು ಬೇಡಿಕೆಯನ್ನು 400% ಕ್ಕಿಂತ ಹೆಚ್ಚಿಸಿದೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ.
2021ರ ವಿಶ್ವ ರಕ್ತದಾನಿಗಳ ದಿನದ ಘೋಷವಾಕ್ಯ “ರಕ್ತವನ್ನು ನೀಡಿ ಮತ್ತು ಜಗತ್ತು ಸದಾ ಮಿಡಿಯುವಂತೆ ಇಡಿ (Give blood and keep the world beating)”. ಇದರ ಸಂದೇಶ ಇಷ್ಟೇ : ಜೀವ ಉಳಿಸುವ ಮತ್ತು ಇತರರ ಆರೋಗ್ಯವನ್ನು ಸುಧಾರಿಸಲು ರಕ್ತದಾನಿಗಳು ನೀಡುವ ಅತ್ಯಮೂಲ್ಯ ಸೇವೆಯು ಜಗತ್ತು ಸದಾ ಸ್ಪಂದಿಸುವಂತೆ ಮಾಡುತ್ತದೆ. ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು, ಮುಖ್ಯವಾಗಿ ಸದೃಢ ಆರೋಗ್ಯವಂತ ಯುವಕ ಯುವತಿಯರು ನಿಯಮಿತವಾಗಿ ರಕ್ತದಾನ ಮತ್ತು ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡುವ ಜಾಗತಿಕ ಈ ಕೋರಿಕೆಯನ್ನು ಈಡೇರಿಸಲು ಕೈಜೋಡಿಸಬಹುದು.
ಪುಣ್ಯಕೋಟಿ'-ಆ್ಯನಿಮೇಷನ್ ಚಿತ್ರವನ್ನು ಬೆಂಗಳೂರಿನ ವಾಸಿ ಟೆಕ್ಕಿ ರವಿಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದು ಇದು ಈ ವರ್ಷ ಜಪಾನಿನ 2ನೇ ಗೋಲ್ಡನ್ ಹಾರ್ವೆಸ್ಟ್ ಫಿಲ್ಮ್ ಫೆಸ್ಟಿವಲ್ ನಲ್ಲಿಉತ್ತಮ ಆ್ಯನಿಮೇಷನ್ ಚಿತ್ರ’, ಉತ್ತಮ ಫೀಚರ್ ಫಿಲ್ಮ್' ಹಾಗೂಉತ್ತಮ ನಿರ್ದೇಶಕ’ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸಂಸ್ಕೃತ ಭಾಷೆಯಲ್ಲಿನ ಚಿತ್ರಿಸಿದ ಈ ಪುಣ್ಯಕೋಟಿ ಎಂಬ ಕನ್ನಡ ನಾಡಿನ ಸುಪ್ರಸಿದ್ದ ಜನಪ್ರಿಯ ಹಾಡಿಗೆ ಇಷ್ಟು ದೊಡ್ಡ ಪುರಸ್ಕಾರ ದೊರಕಿರುವುದು ಸಂತಸದ ವಿಷಯವೆಂದು ನಿರ್ದೇಶಕ ರವಿಶಂಕರ್ ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೇ `ಪುಣ್ಯಕೋಟಿ’ ಚಿತ್ರವು ಮುಂಬೈನಲ್ಲಿ ನಡೆದ ಆ್ಯನಿಮೇಷನ್ ನೆಟ್ವರ್ಕ್ನ ವಾರ್ಷಿಕ ಸ್ಪರ್ಧೆಯಲ್ಲಿ ಬೆಸ್ಟ್ ಡಿಜಿಟಲ್ ಫಿಲ್ಮ್, ಕ್ಯಾರೆಕ್ಟರ್ ಡಿಸೈನ್, ಧ್ವನಿ ಮತ್ತು ಚಿತ್ರಕತೆಗಾಗಿ ನಾಲ್ಕು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ. ಇಂತಹ ವೈವಿಧ್ಯಮಯ ಚಿತ್ರವನ್ನು ಭಾರತ ಚಿತ್ರರಂಗದ ಹಲವು ದಿಗ್ಗಜರ ಮುಂದೆ ಪ್ರಸ್ತುತ ಪಡಿಸಿ ಭೇಷ್ ಎನಿಸಿಕೊಂಡಿದ್ದಾರೆ.
ಕನ್ನಡದ ಈ ನಾಡಲ್ಲಿ ಪುಣ್ಯಕೋಟಿ' ಕತೆಯು ಮನೆ ಮಾತಾಗಿದೆ. ಕನ್ನಡ ನೆಲದ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ಹಾಡು ಎಲ್ಲರಿಗೂ ಗೊತ್ತಿರುವಂತಹದ್ದೆ ಆಗಿದೆ. ಎಲ್ಲರ ಮನಸ್ಸಿಗೆ ಮುಟ್ಟುವ ಈ ಹಾಡಿನ ಸಾಲುಗಳು ಇಂದಿಗೂ ಜನಜನಿತವಾಗಿದೆ.ಸತ್ಯವೇ ನಮ್ಮ ತಾಯಿ-ತಂದೆ’ ಎನ್ನುವಂತಹ ಸಾಲು, ಸತ್ಯವಾಕ್ಯವನ್ನು ತಪ್ಪುವವರಲ್ಲ ಎನ್ನುವ ಮಾತು ಕನ್ನಡಿಗರ ನಿಷ್ಠೆಯನ್ನು ಸಾರುತ್ತದೆ.
ಮೋಹನ್ದಾಸ್ ಪೈ ಅವರ ವಿಶ್ಬೇರ್ರಿ ಸಂಸ್ಥೆಯ ಮೂಲಕ ಎರಡು ಹಂತದಲ್ಲಿ ಕ್ರೌಡ್ ಫಂಡಿಂಗ್ ಮೂಲಕ ಚಿತ್ರವನ್ನು ಮಾಡಿದ್ದಲ್ಲದೇ ಅಂತಿಮ ಹಂತದಲ್ಲಿ ರವಿಶಂಕರ್ ಅವರ ಪತ್ನಿ ಸಿಂಧೂ ಅವರ ಹಣಕಾಸಿನ ಸಹಾಯದಿಂದ ಚಿತ್ರವನ್ನು ಮುಗಿಸಿದ್ದಾರೆ. ಈ ಚಿತ್ರದ ಟ್ರೈಲರ್ ಅರ್ಧ ಮಿಲಿಯನ್ ವೀಕ್ಷಕರನ್ನು ತಲುಪಿದ್ದು ಈಗ ಇತಿಹಾಸ.
`ಪುಣ್ಯಕೋಟಿ’ ಎಂಬ ಗೋವಿನ ಹಾಡಿನ ಮೂಲಕ ಸತ್ಯದ ತತ್ವವನ್ನು ಜಗಜ್ಜಾಹಿರುಗೊಳಿಸಲು ಬೆಂಗಳೂರಿನ ವಾಸಿ ಟೆಕ್ಕಿ ರವಿಶಂಕರ್ ವೆಂಕಟೇಶ್ವರನ್ ಇನ್ಫೋಸಿಸ್ನ ಕೆಲಸವನ್ನು ಬಿಟ್ಟು ಸತತ ನಾಲ್ಕು ವರ್ಷಗಳು ಶ್ರಮವಹಿಸಿ ನಿರ್ದೇಶಿಸಿದ್ದಾರೆ. ಈ ಆ್ಯನಿಮೇಷನ್ ಚಿತ್ರವನ್ನು ಸಂಸ್ಕೃತ ಭಾಷೆಯಲ್ಲಿ ಮಾಡಿ ಮತ್ತಷ್ಟು ವಿಭಿನ್ನಗೊಳಿಸಿದ್ದಾರೆ. ಈ ನಮ್ಮ ದೇವ ಭಾಷೆಯನ್ನು ಸಾಮಾನ್ಯರತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ.
ಕನ್ನಡದ ಹೆಸರಾಂತ ನಟ, ನಿರ್ದೇಶಕರಾಗಿದ್ದ ಜಿ ವಿ ಅಯ್ಯರ್ ಅವರು ಸಂಸ್ಕೃತದಲ್ಲಿ ಹಲವು ಚಿತ್ರಗಳನ್ನು ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಅವರ ಕಾಲಕ್ಕೇ ನಿಂತು ಹೋಗದಂತೆ ಈಗಿನ ಪೀಳಿಗೆಯವರಾದ ರವಿಶಂಕರ್ ಅವರು ಮತ್ತೆ ಅಯ್ಯರ್ ಅವರು ಹಾಕಿ ಕೊಟ್ಟ ಹಾದಿಯನ್ನು ಮುಂದುವರಿಸುತ್ತಾ ಬಂದಿದ್ದಾರೆ.
ಇಳರಾಜ ಹಾಗೂ ರೇವತಿಯಂತಹ ದಿಗ್ಗಜರ ಸಹಕಾರ:
ಈ ಆ್ಯನಿಮೇಷನ್ ಚಿತ್ರಕ್ಕೆ ಭಾರತೀಯ ಸಂಗೀತ ಲೋಕದ ದಿಗ್ಗಜರಲ್ಲೊಬ್ಬರಾದ ಹಾಗೂ ಈ ಚಿತ್ರದ ನಿರ್ದೇಶಕ ರವಿಶಂಕರ್ ಅವರ ಮಾನಸಗುರುಗಳೂ ಆದ ಇಳಯರಾಜ ಅವರಲ್ಲಿ ಈ ಚಿತ್ರದ ಬಗ್ಗೆ ತಿಳಿಸಿದಾಗ ಅವರು ಮುಕ್ತ ಮನಸ್ಸಿನಿಂದ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಲ್ಲದೇ ಈ ಚಿತ್ರಕ್ಕೆ ಸಂಬಂಧಿಸಿದ ಸಂಸ್ಕೃತ ಹಾಗೂ ಇಂಗ್ಲಿಷ್ ಆವೃತ್ತಿಯ ಪುಸ್ತಕವನ್ನು ಇಳಯರಾಜ ಲೋಕಾರ್ಪಣೆ ಮಾಡಿ ರವಿಶಂಕರ್ ಅವರ ಸತ್ಕಾರ್ಯವನ್ನು ಪ್ರೋತ್ಸಾಹಿಸಿದ್ದಾರೆ.
ಹೆಸರಾಂತ ನಟಿ ರೇವತಿ ಹಾಗೂ ನಟ ರೋಜರ್ ನಾರಾಯಣ್ ಧ್ವನಿಯನ್ನು ಕೊಟ್ಟಿದ್ದಾರೆ. ಸಂಸ್ಕೃತ ನಾಟಕಗಳಲ್ಲಿ ಪಳಗಿರುವ ಪ್ರೊಫೆಸರ್ ಲೀಲಾ ಅವರು ಡಬ್ಬಿಂಗ್ ಕಾರ್ಯವನ್ನು ನಿರ್ವಹಿಸಿದ್ದಾರೆ. ಸಂಸ್ಕೃತದಲ್ಲಿ ಡಬ್ಬಿಂಗ್ ಮಾಡಿದ್ದಾರಲ್ಲದೇ ಇಂಗ್ಲಿಷ್ ಸಬ್ಟೈಟಲ್ ಅನ್ನು ಅಳವಡಿಸಿದ್ದಾರೆ. ವೈದ್ಯರೂ, ಕವಿಗಳೂ ಆದ ಡಾ. ಶಂಕರ್ ರಾಜಾರಾಮ್ ಅವರು ಈ ಚಿತ್ರಕ್ಕಾಗಿ 4 ಹಾಡುಗಳನ್ನು ರಚಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್ ಕನ್ನೋತ್ ಚಿತ್ರದ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಈ ಎಲ್ಲಾ ದಿಗ್ಗಜರ ಕಾರ್ಯವು ಈ ಚಿತ್ರಕ್ಕೆ ಬಲ ತಂದಿದೆ. ಸಂಸ್ಕೃತದಲ್ಲಿರುವ ಈ ಚಿತ್ರವನ್ನು ಆ್ಯನಿಮೇಷನ್ನಿನ ಮೂಲಕ ಪ್ರಸ್ತುತ ಪಡಿಸಿರುವುದರಿಂದ ದೇಶ-ವಿದೇಶಗಳಲ್ಲಿನ ಎಲ್ಲ ವರ್ಗದ ಚಿತ್ರಪ್ರೇಮಿಗಳನ್ನು ತಲುಪಲು ಸಹಕಾರಿಯಾಗಿದೆ ಎಂಬುದು ನಿರ್ದೇಶಕ ರವಿಶಂಕರ್ ಅವರ ಆಶಯ.
ಕನ್ನಡದ ಖ್ಯಾತ ಚಿತ್ರಕಾರ ಗುಜ್ಜಾರ್ ಅವರಿಂದ ಇದು ಆರಂಭವಾಯ್ತು ಎಂಬುದು ಕನ್ನಡಿಗರ ಹೆಗ್ಗಳಿಕೆಯಾಗಿದೆ. ಈ ಚಿತ್ರದ ಮೂಲ ಕರಡು ಚಿತ್ರಗಳನ್ನು ಕನ್ನಡದ ಖ್ಯಾತ ಚಿತ್ರಕಾರ ಬಿ ಜಿ ಗುಜ್ಜಾರ್ ಅವರು ಚಿತ್ರಿಸಿದ್ದರು. ಅದರ ನಂತರ ಕೇರಳದಲ್ಲಿನ ಸ್ಟುಡಿಯೋಗಳಲ್ಲಿ ಆ್ಯನಿಮೇಷನ್ ಕೆಲಸವನ್ನು ಮಾಡಿಸಿದ್ದಾರೆ. ಆ್ಯನಿಮೇಷನ್ ಕಲಾವಿದ ಎ ವಿ ಗಿರೀಶ್ ಅವರು ರವಿಶಂಕರ್ ಅವರ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಮುಂದಾಳತ್ವ ವಹಿಸಿ ಸಫಲರಾಗಿದ್ದಾರೆ. ಕನ್ನಡದ ಹಾಡು ಹಾಗೂ ಹಾಡಿನ ಸತ್ಯದ ಸಾರವನ್ನು ಜಗಜ್ಜಾಹಿರು ಪಡಿಸಲು ಸಹೃದಯ ಪ್ರೇಕ್ಷಕ ಮಹಾಶಯರ ಪ್ರೋತ್ಸಾಹದ ಅವಶ್ಯಕತೆ ಇದೆ.
ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರುವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕರಿಗಂ ಪರಮಾಣುಗಂ ತರಮಾವುದೋ –ಪ್ರಸ್ತುತ ಸಾಲು ಪಂಪನ ‘ವಿಕ್ರಮಾರ್ಜುನ ವಿಜಯ’ದ ದಶಮಾಶ್ವಾಸದಲ್ಲಿ ಉಲ್ಲೇಖವಾಗಿರುವಂಥದ್ದು. ಮಹಾಭಾರತ ಯುದ್ಧ ನಡೆಯುವ ಪೂರ್ವದಲ್ಲಿ ದುರ್ಯೋಧನ ಭೀಷ್ಮರನ್ನು ಉದ್ದೇಶಿಸಿ ಕೃಷ್ಣನನ್ನು, ಪಾಂಡವರನ್ನು ಉದ್ದೇಶಿಸಿ ಹೇಳುವ ಮಾತು. ನಮ್ಮಲ್ಲಿ ವ್ಯಕ್ತಿ, ವಸ್ತುವಿನ ಹೊರಗಾತ್ರವನ್ನು, ಹೊರ ರೂಪವನ್ನು ನೋಡಿ ಅಳೆಯುವಂಥವರೇ ಹೆಚ್ಚು. ಅವರ ಅಂತಃಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. “ಆಕಾರದಲ್ಲಿ ವಾಮನ ಶಕ್ತಿಯಲ್ಲಿ ತ್ರಿವಿಕ್ರಮ” ,“ಕಿರಿದರಲ್ಲಿ ಪಿರಿದರ್ಥ”,”ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು”ಮೊದಲಾದ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
‘ಕರಿ’ ಅಂದರೆ ಆನೆ, ಪರಮಾಣು ಅನ್ನುವುದು ಕಣ್ಣಿಗೆ ಕಾಣುವುದಿಲ್ಲ ಎಂಬುದು ಎಲ್ಲರಿಗು ತಿಳಿದಿರುವಂಥದ್ದೆ. ಚಿಕ್ಕದು ಎಂದು ಹೇಳಲು ಎಳ್ಳಷ್ಟು, ತೃಣಮಾತ್ರ, ಅಣುವಿನಷ್ಟು, ರವಷ್ಟು ಮುಂತಾದ ಪದಗಳನ್ನು ಬಳಸುತ್ತಾರೆ. ಆನೆ ಅಂದರೆ ಪದಶಃ ಗಾತ್ರದಲ್ಲಿ ಹಿರಿದು ಅನ್ನುವ ಅರ್ಥವನ್ನೇ ಕೊಡುತ್ತದೆ.
ದುರ್ಯೋಧನ ತನ್ನ ಗುರು ದ್ರೋಣಾಚಾರ್ಯರ ಮಾತಿನಂತೆ ಭೀಷ್ಮರನ್ನು ಭೇಟಿ ಮಾಡಲು ಹೋದಾಗ ಭೀಷ್ಮರನ್ನು ಕುರಿತು ನೀವೇ ಆತ್ಯಂತಿಕ ಬಲವುಳ್ಳವರು ನಿಮ್ಮೆದರು ಆ ಕೃಷ್ಣನು ನಿಲ್ಲಲಾರ ಎಂಬುದನ್ನು ಹೇಳುವ ಸಂದರ್ಭದಲ್ಲಿ “ಕರಿಗಂ ಪರಮಾಣುಗಂ ತರಮಾವುದೋ” ಎಂಬ ಮಾತನ್ನು ಹೇಳುತ್ತಾನೆ. ಅನೆಯಂಥ ಪರಾಕ್ರಮವುಳ್ಳ ನೀವೆಲ್ಲಿ ಸೂಕ್ಷ್ಮವಾಗಿರುವ ಅಣುವೆಲ್ಲಿ ಅಂದರೆ ಕೃಷ್ಣನೆಲ್ಲಿ? ಅಂಥ ಪರಾಕ್ರಮಿ ಪರಶುರಾಮನೆ ನಿಮ್ಮೊಡನೆ ಹೋರಾಡಿ ಸೋಲಲಿಲ್ಲವೇ ? ಈಗಲೂ ಹಾಗೆಯೇ ಆಗುತ್ತದೆ ಎಂದು ತನ್ನ ಅಹಂಕಾರವನ್ನು ಪ್ರದರ್ಶಿಸುತ್ತಾನೆ. ಈ ವಾಕ್ಯವನ್ನು ಪಂಪ ದುರ್ಯೋಧನನಿಂದ ವಾಚ್ಯಾರ್ಥದಲ್ಲಿ ಆಡಿಸಿರುವುದು. ಲಕ್ಷ್ಯಾರ್ಥವನ್ನು ಗಮನಿಸಿದರೆ ಅಣುವೂ ಎಷ್ಟು ಶಕ್ತಿ ಶಾಲಿ ಎಂಬ ಹೊಳಹು ಮೂಡುತ್ತದೆ.
ಈ ಪ್ರಸಂಗವನ್ನು ಹೊರಗಿಟ್ಟರೆ ಅಜಗಜಾಂತರ ಅನ್ನುವ ಮಾತೂ ಇದೆ . ಅಜ ಎಂದರೆ ಆಡು ಬಲದಲ್ಲಿ ಕನಿಷ್ಟ ಎಂದಾದರೆ ಆನೆ ಮಿಗಿಲು ಎಂದು . ಪ್ರಾಣಿ-ಪಕ್ಷಿ-ಮನುಷ್ಯ ಯಾವುದೇ ಆಗಲಿ ಗಾತ್ರ ನೋಡಿ ಅಳೆಯುವುದಲ್ಲ ಬೌದ್ಧಿಕ ಸಾಮರ್ಥ್ಯವನ್ನೂ ಗಣನೆಗೆ ತೆಗೆದುಕೊಳ್ಳಬೇಕು ಅಲಕ್ಷಿಸಬಾರದು ಅಣು-ಅಣುವಿನಲ್ಲಿ ಅಗಾಧ ಶಕ್ತಿ ಸಂಚಯನವಾಗಿರುತ್ತದೆ.ಹಾಗಾಗಿ ಯಾರನ್ನೂ ಲಘುವಾಗಿ ಪರಿಗಣಿಸಬಾರದು ಎಂಬ ಅರ್ಥವಿದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.