
ಗತಕಾಲಂ ಲಯಮಾಯ್ತು -ಬದಲಾವಣೆ ಜಗದ ನಿಯಮ ಕತ್ತಲು ಹರಿಸು ಬೆಳಕು ಮೂಡುವಂತೆ ಮನುಷ್ಯನ ಜೀವನದಲ್ಲೂ ಬದಲಾವಣೆಗಳಾಗುತ್ತವೆ. ಕಷ್ಟ ಕೋಟಲೆಗಳು ಕಳೆದು ಸುಖಾಭಾವ ಆವರಿಸುತ್ತದೆ ಎಂಬುದನ್ನು ಪ್ರಸ್ತುತ ವಾಕ್ಯದ ಮೂಲಕ ಅರ್ಥೈಸಿಕೊಳ್ಳಬಹುದು.
“ಗತಕಾಲಂ ಲಯಮಾಯ್ತು ನಿನಗಿನ್ನಮಾಯ್ತಂತ್ಯಕಾಳಂಗಡಾ” ರನ್ನ ಕವಿಯು ಬರೆದಿರುವ ಸಾಹಸ ಭೀಮ ವಿಜಯಂನ ಭೀಮಸೇನಾಡಂಬರಂ ಭಾಗದಿಂದ ಪ್ರಸ್ತುತ ಸಾಲನ್ನು ಆರಿಸಿದೆ.
ಭೀಷ್ಮರ ಆಣತಿಯಂತೆ ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿರುತ್ತಾನೆ. ಅವನ ವೈರಿ ಭೀಮ ಆತನನ್ನು ಮೂದಲಿಕೆಯ ಮಾತುಗಳ ಮೂಲಕ ಹೊರಕ್ಕೆ ಬರುವಂತೆ ಮಾಡುತ್ತಾನೆ. ನಂತರವೂ ಭೀಮ ಮತ್ತು ದುರ್ಯೋಧನನ ನಡುವೆ ಮತ್ತೆ ,ಮಾತಿಗೆ ಮಾತು ಬೆಳೆಯುತ್ತದೆ. ಆ ಸಂದರ್ಭದಲ್ಲಿ ರನ್ನ ದುರ್ಯೋಧನನ ಮೂಲಕ ಅಡುಗೆ ಮಾಡಿ ಭಟ್ಟನಾಗಿದ್ದವನಿಗೆ ಯುದ್ಧ ಮಾಡುವ ಕೆಲಸವನ್ನು ಕೊಟ್ಟವರಾರು ಎಂದು ಹೀಯಾಳಿಸುತ್ತಾನೆ. ಅದಕ್ಕೆ ಪ್ರತ್ಯುತ್ತರವಾಗಿ ಭೀಮ “ಗತಕಾಲಂ ಲಯಮಾಯ್ತು ನಿನಗಿನ್ನಮಾಯ್ತಂತ್ಯಕಾಳಂಗಡಾ” ಎನ್ನುತ್ತಾನೆ ಅಂದರೆ ನಮಗಿದ್ದ ಹಿಂದಿನ ಸ್ಥಿತಿ ಈಗಿಲ್ಲ ಹಿಂದಿನ ದಿನಗಳು ಲಯವಾಗಿ ಹೋಗಿವೆ ಬದಲಾವಣೆಯ ಬೆಳ್ಳಿಗೆರೆಗಳು ಈಗಾಗಲೆ ಮೂಡಿವೆ ಆಶಾದಾಯಕ ಸಹರ್ಷದ ಈ ಬೆಳವಣಿಗೆಯನ್ನು ಯಾರಿಂದಲೂ ಮತ್ತೆ ಕಿತ್ತುಕೊಳ್ಳಲು ಸಾಧ್ಯವಿಲ್ಲ . ಇದೀಗ ನಿನಗೆ ಅಂತ್ಯಕಾಲ ಪ್ರಾರೆಂಭವಾಗಿದೆ ಇಷ್ಟು ದಿನ ಬೆಳಕನ್ನು ಕಂಡ ನೀನು ಕತ್ತಲೆಗೆ ಸರಿಯಲೇ ಬೇಕು ಎನ್ನುತ್ತಾನೆ.
ರನ್ನನ ಪ್ರತಿಭಾಪಾಂಡಿತ್ಯವನ್ನು ಪ್ರಸ್ತುತ ವಾಕ್ಯದಲ್ಲಿ ಲಯ ಮತ್ತು ಅಂತ್ಯ ಎಂಬ ಪದಗಳು ಅರ್ಥವತ್ತಾಗಿ ಲಯಬದ್ಧವಾಗಿ ಬಂದಿವೆ. ಇದು ರನ್ನನ ಪ್ರತಿಭಾಪಾಂಡಿತ್ಯಕ್ಕೆ ಸಮರ್ಥ ಉದಾಹರಣೆ. ಆದಿ-ಅಂತ್ಯ, ಕಪ್ಪು-ಬಿಳಿಪು. ಹಗಲು-ರಾತ್ರಿ, ಸುಖ-ದುಃಖ ಮೊದಲಾದುವು ಸರತಿ ಪ್ರಕಾರ ಬಂದೇ ಬರುತ್ತವೆ . ಹಾಗಾಗಿ ಕತ್ತಲಲ್ಲಿ ಇದ್ದವರನ್ನು ಬೆಳಕಲ್ಲಿದ್ದವರು ಯಾವುದೇ ಕಾರಣಕ್ಕೂ ಹೀಗಳೆಯಬಾರದು. ಬದಲಾವಣೆ ಚಲನಶೀಲತೆಯ ಸಂಕೇತ ಎಂಬುದು ಪ್ರಸ್ತುತ ವಾಕ್ಯದ ಮೂಲಕ ವೇದ್ಯವಾಗುತ್ತದೆ.

ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.


